ನಾನು ಮೆಚ್ಚಿದ ವಾಟ್ಸಪ್

Sunday, December 30, 2018

ಇಂದಿನ ಇತಿಹಾಸ History Today ಡಿಸೆಂಬರ್ 30

ಇಂದಿನ ಇತಿಹಾಸ History Today ಡಿಸೆಂಬರ್  30
2018: ಪೋರ್ಟ್ ಬ್ಲೇರ್: ಪೋರ್ಟ್ ಬ್ಲೇರ್‌ನಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ತ್ರಿವರ್ಣ ಧ್ವಜ ಹಾರಿಸಿದ ’ಅಮೃತ ಮಹೋತ್ಸವ’ (೭೫ನೇ ವರ್ಷಾಚರಣೆ) ಸಂದರ್ಭದಲ್ಲಿ ಮೂರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮರುನಾಮಕರಣ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿಗೆ ರಾಷ್ಟ್ರದ ಗೌರವವನ್ನು ಸಲ್ಲಿಸಿದರು. ರೋಸ್ ಐಲ್ಯಾಂಡಿಗೆ ’ನೇತಾಜಿ ಸುಭಾಶ್ ಚಂದ್ರ ಬೋಸ್ ದ್ವೀಪ’,  ನೀಲ್ ಐಲ್ಯಾಂಡಿಗೆ ’ಶಹೀದ್ ದ್ವೀಪ’ ಮತ್ತು ಹ್ಯಾವ್‌ಲಾಕ್ ದ್ವೀಪಕ್ಕೆ ’ಸ್ವರಾಜ್ ದ್ವೀಪ’ ಎಂಬುದಾಗಿ ಈಗ ಮರುನಾಮಕರಣ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ಪ್ರಧಾನಿಯವರು ಈ ಸಂದರ್ಭದಲ್ಲಿ ಒಂದು ಸ್ಮಾರಕ ಅಂಚೆ ಚೀಟಿ, ಅಂಚೆ ಚೀಟಿಯ ಮೊದಲ ದಿನದ ಲಕೋಟೆ ಮತ್ತು ೭೫ ರೂಪಾಯಿಗಳ ನಾಣ್ಯವನ್ನೂ ಈ ವಿಶೇಷ ದಿನದ ಅಂಗವಾಗಿ ಬಿಡುಗಡೆ ಮಾಡಿದರು. ಬೋಸ್ ಅವರ ಹೆಸರಿನಲ್ಲಿ ಡೀಮ್ಡ್ ವಿಶ್ವ ವಿದ್ಯಾಲಯ ಆರಂಭಿಸುವುದಾಗಿಯೂ ಅವರು ಪ್ರಕಟಿಸಿದರು. ಇದಕ್ಕೆ ಮುನ್ನ ಮೋದಿಯವರು ಇಲ್ಲಿನ ಮರೀನಾ ಪಾರ್ಕಿಗೆ ಭೇಟಿ ನೀಡಿ ೧೫೦ ಅಡಿ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿದರು.

2018: ಡಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಮಹಾಚುನಾವಣೆಯಲ್ಲಿ ಪ್ರಚಂಡ ವಿಜಯದೆಡೆಗೆ ಸಾಧಿಸಿದರು ಎಂದು ಸ್ಥಳೀಯ ಟಿವಿಗಳು ವರದಿ ಮಾಡಿದವು. ವರದಿಗಳ ಪ್ರಕಾರ ಚುನಾವಣೆ ಮುಗಿದ ಬೆನ್ನಲ್ಲೇ ಆರಂಭವಾದ ಮತಗಳ ಎಣಿಕೆಯಲ್ಲಿ ಹಸೀನಾ ಅವರು ೧೯ ಸ್ಥಾನಗಳಲ್ಲಿ ಸ್ಪಷ್ಟ ಮುನ್ನಡೆ ದಾಖಲಿಸಿ, ವಿವಾದಾತ್ಮಕವಾದ ನಾಲ್ಕನೇ ಅವಧಿಗೆ ಚಾರಿತ್ರಿಕ ಜಯ ಸಾಧಿಸುವ ಮುನ್ಸೂಚನೆ ನೀಡಿದರು. ವಿರೋಧ ಪಕ್ಷಗಳು ಶೂನ್ಯ ಸಾಧನೆಯೊಂದಿಗೆ ಹಿಂದೆ ಬಿದ್ದಿವೆ ಎಂದು ಚಾನೆಲ್ ೨೪ ವರದಿ ಮಾಡಿತು. ಈದಿನ  ಬೆಳಗಿನಿಂದ ಸಂಜೆಯವರೆಗೆ ನಡೆದ ಚುನಾವಣೆ ವೇಳೆಯಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಕನಿಷ್ಠ ೧೦ ಜನ ಬಲಿಯಾಗಿದ್ದು, ಅದಕ್ಕೆ ದೇಶವು ರಕ್ತಸಿಕ್ತ ಪ್ರಚಾರವನ್ನು ಕಂಡಿತ್ತು. ಹಿಂಸಾಚಾರವನ್ನು ಅನುಸರಿಸಿ ಹಸೀನಾ ಅವರು ವಿಪಕ್ಷಗಳ ವಿರುದ್ಧ ಕಠಿಣ ಕ್ರಮಗಳ ಮೂಲಕ ದಮನಿಸಿದ್ದರು.  ಚುನಾವಣೆ ವೇಳೆಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಆಡಳಿತಾರೂಢ ಬಾಂಗ್ಲಾದೇಶ ಅವಾಮೀ ಲೀಗ್ ಮತ್ತು ವಿರೋಧಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ ಪಿ) ಕಾರ್‍ಯಕರ್ತರ ನಡುವೆ ಸಂಭವಿಸಿದ ಘರ್ಷಣೆಗಳಲ್ಲಿ ೬ ಮಂದಿ ಹತರಾದರೆ, ಪೊಲೀಸ್ ಗುಂಡಿಗೆ ಮೂವರು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗನ್ ಮತ್ತು ಲಾಠಿಗಳೊಂದಿಗೆ ಸಜ್ಜಿತರಾದ ವಿರೋಧೀ ಕಾರ್‍ಯಕರ್ತರ ದಾಳಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದರು.  ಸತತ ಒಂದು ದಶಕದ ಆಡಳಿತದಲ್ಲಿ ಏಷ್ಯಾದ ಬಡ ರಾಷ್ಟ್ರದಲ್ಲಿ ಆರ್ಥಿಕ ಪ್ರಗತಿ ಸಾಧನೆ ಮಾಡಿದ್ದಕ್ಕಾಗಿ ಮತ್ತು ನೆರೆಯ ಮ್ಯಾನ್ಮಾರ್‌ನಲ್ಲಿ ನಡೆದ ಸೇನಾ ದಮನಕಾರ್‍ಯದಿಂದ ಕಂಗೆಟ್ಟು ಓಡಿ ಬಂದ ರೊಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡಿದ್ದಕ್ಕಾಗಿ ಬಾಂಗ್ಲಾದೇಶದ ನಾಯಕ ಹಸೀನಾ ಶ್ಲಾಘನೆಗೆ ಪಾತ್ರರಾಗಿದ್ದರು. ಆದರೆ ಟೀಕಾಕಾರರು ಆಕೆಯ ಸರ್ವಾಧಿಕಾರತ್ವ ಮತ್ತು ಕಟ್ಟಾ ವಿರೋಧಿ ಖಲೀದಾ ಜಿಯಾ ಅವರ ಪಕ್ಷ ಸೇರಿದಂತೆ ವಿರೋಧ ಪಕ್ಷಗಳನ್ನು ದಮನಿಸಿ, ಅಧಿಕಾರಕ್ಕೆ ಅಂಟಿಕೊಂಡದ್ದಕ್ಕಾಗಿ ಕಟು ಟೀಕೆ ಮಾಡಿದರು.  ಅವರ ಪ್ರಬಲ ಪ್ರತಿಸ್ಪರ್ಧಿ ಖಲೀದಾ ಜಿಯಾ ಕಳೆದ ೧೭ ವರ್ಷಗಳಿಂದ ಭ್ರಷ್ಟಾಚಾರದ ಆಪಾದನೆಯಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. 

2018: ನವದೆಹಲಿ: ಭಾರತ ಜೊತೆಗಿನ ತನ್ನ ಗಡಿಯುದ್ಧಕ್ಕೂ ಸೇನಾ ಬಲವನ್ನು ವೃದ್ಧಿ ಪಡಿಸುವುದಕ್ಕಾಗಿ ರಷ್ಯಾದಿಂದ ಟಿ-೯೦ ಟ್ಯಾಂಕುಗಳು ಸೇರಿದಂತೆ ೬೦೦ ಸಮರ ಟ್ಯಾಂಕ್‌ಗಳನ್ನು ಖರೀದಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪಾಕಿಸ್ತಾನ ರೂಪಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿದವು. ಪಾಕಿಸ್ತಾನವು ಪಡೆಯುತ್ತಿರುವ ಟ್ಯಾಂಕ್‌ಗಳಲ್ಲಿ ಬಹುತೇಕ ಟ್ಯಾಂಕ್‌ಗಳು ೩ರಿಂದ ೪ ಕಿಮೀ ದೂರಕ್ಕೆ ಗುಂಡು ಹಾರಿಸಬಲ್ಲ ಸಾಮರ್ಥ್ಯ ಹೊಂದಿದ ಟ್ಯಾಂಕ್‌ಗಳು ಎಂದು ಮೂಲಗಳು ಹೇಳಿದವು. ಮರ ಟ್ಯಾಂಕ್‌ಗಳ ಹೊರತಾಗಿ ಪಾಕಿಸ್ತಾನಿ ಸೇನೆಯು ೨೪೦ರಷ್ಟು ೧೫೦ ಎಂಎಂ ಎಸ್ ಪಿ ಮೈಕ್ -೧೦ ಗನ್ ಗಳನ್ನು ಇಟಲಿಯಿಂದ ಪಡೆಯುತ್ತಿದ್ದು ಇವುಗಳ ಪೈಕಿ ೧೨೦ ಗನ್ ಗಳು ಈಗಾಗಲೇ ಪಾಕಿಸ್ತಾನ ತಲುಪಿವೆ ಎಂದು ಮೂಲಗಳು ತಿಳಿಸಿದವು. ಭಾರತೀಯ ಸೇನಾ ತುಕಡಿಗಳು ಹೊಂದಿರುವ ಟಿ-೯೦ ಸಮರ ಟ್ಯಾಂಕ್‌ಗಳನ್ನು ರಷ್ಯಾದಿಂದ ಖರೀದಿಸುವತ್ತ ಪಾಕಿಸ್ತಾನ ತನ್ನ ದೃಷ್ಟಿ ನೆಟ್ಟಿದ್ದು, ಮಾಸ್ಕೋ ಜೊತೆಗೆ ರಕ್ಷಣೆ ವಿಚಾರದಲ್ಲಿ ಆಳವಾದ ಬಾಂಧವ್ಯ ಸ್ಥಾಪಿಸುವ ಯತ್ನ ನಡೆಸಿತು. ರಷ್ಯಾವು ಸ್ವಾತಂತ್ರ್ಯಾ ನಂತರದ ವರ್ಷಗಳಲ್ಲಿ ಭಾರತದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸೀ ರಕ್ಷಣಾ ಪೂರೈಕೆದಾರ ರಾಷ್ಟ್ರವಾಗಿದ್ದು, ಈಗ ಅದರ ಕಡೆಗೆ ಪಾಕಿಸ್ತಾನದ ಕಣ್ಣು ಬಿದ್ದಿತು. ೨೦೨೫ರ ವೇಳೆಗೆ ತನ್ನ ಸೇನೆಯ ಬಲವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳುವ ಮಹಾನ್ ಯೋಜನೆಯ ಅಂಗವಾಗಿ, ಪಾಕಿಸ್ತಾನವು ಕನಿಷ್ಠ ೨೬೦ ಸಮರ ಟ್ಯಾಂಕ್‌ಗಳನ್ನು ವಿಶ್ವದ ವಿವಿಧೆಡೆಗಳಿಂದ ಪಡೆಯಲು ನಿರ್ಧರಿಸಿದ್ದು, ಜೊತೆಗೇ ೨೨೦ ಟ್ಯಾಂಕ್‌ಗಳನ್ನು ನಿಕಟ ಮಿತ್ರ ಚೀನಾದ ನೆರವಿನೊಂದಿಗೆ ದೇಶೀಯವಾಗಿ ನಿರ್ಮಿಸಲು ಉದ್ದೇಶಿಸಿದೆ ಎಂದು ಮೂಲಗಳು ಹೇಳಿದವು. ಜಮ್ಮು ಮತ್ತು ಕಾಶ್ಮೀರದ ನೈಜ ನಿಯಂತ್ರಣ ರೇಖೆಯಲ್ಲಿ ಕಳೆದ ಒಂದು ವರ್ಷದಿಂದ ನಿರಂತರ ಘರ್ಷಣೆ ಸಂಭವಿಸುತ್ತಿರುವ ಹೊತ್ತಿನಲ್ಲೇ ತನ್ನ ಪದಾತಿದಳದ ಬಲವೃದ್ಧಿಯತ್ತ ಪಾಕಿಸ್ತಾನಿ ಸೇನೆ ಗಮನ ಹರಿಸಿರುವ ವಿಚಾರ ಗಮನಾರ್ಹ ಬೆಳವಣಿಗೆ ಎಂದು ಗುಪ್ತಚರ ಮೂಲಗಳು ಅಭಿಪ್ರಾಯ ಪಟ್ಟವು. ಪಾಕಿಸ್ತಾನದ ಕಡೆಯಿಂದ ನಡೆಯುತ್ತಿರುವ ಪ್ರತಿಯೊಂದು ಅಪ್ರಚೋದಿತ ಗುಂಡಿನ ದಾಳಿಗೂ ಭಾರತೀಯ ಸೇನೆ ಪ್ರಬಲ ಉತ್ತರ ನೀಡುತ್ತಿದೆ. ಆದರೆ ಭಾರತವು ಭಯೋತ್ಪಾದನೆ ನಿಗ್ರಹ ಕಡೆಗೆ ತನ್ನ ಗಮನ ಹರಿಸಿದಾಗ ಪಾಕಿಸ್ತಾನಿ ಸೇನೆಯು ಭಾರತೀಯ ಸೇನೆ ಜೊತೆಗಿನ ತನ್ನ ಸಾಂಪ್ರದಾಯಿಕ ಸಮರವನ್ನು ಮಂದಗೊಳಿಸುವ ತಂತ್ರ ಅನುಸರಿಸುತ್ತಿದೆ ಎಂದು ಮೂಲಗಳು ಹೇಳಿದವು. ಭಾರತದ ಸೇನೆ ಕೂಡಾ ತನ್ನ ಪದಾತಿ ದಳ ಮತ್ತು ಸಶಸ್ತ್ರ ಪಡೆಯನ್ನು ಆಧುನೀಕರಿಸುವ ಮಹಾ ಯೋಜನೆಯನ್ನು ರೂಪಿಸಿದೆ.  ಏನಿದ್ದರೂ, ಭಾರತದ ೬೦,೦೦೦ ಕೋಟಿ ರೂಪಾಯಿಗಳ ಫ್ಯೂಚರಿಸ್ಟಿಕ್ ಇನ್ ಫೆಂಟ್ರಿ ಕಂಬಾಟ್ ವೆಹಿಕಲ್ (ಎಫ್ ಐಸಿವಿ) ಕಾರ್‍ಯಕ್ರಮ ಸೇರಿದಂತೆ ಬಹುತೇಕ ಶಸ್ತ್ರಾಸ್ತ್ರ ಸಂಗ್ರಹ ಯೋಜನೆಗಳಿಗೆ ಕಾರಣಾಂತರಗಳಿಂದ ತಡೆ ಬಿದ್ದಿದೆ. ಪ್ರಸ್ತುತ ಭಾರತದ ಸಶಸ್ತ್ರ ತುಕಡಿಗಳು ಮುಖ್ಯವಾಗಿ ಟಿ-೯೦, ಟಿ-೭೨ ಮತ್ತು ಅರ್ಜುನ ಟ್ಯಾಂಕುಗಳನ್ನು ಹೊಂದಿವೆ. ಇವು ಪಾಕಿಸ್ತಾನದ ಟ್ಯಾಂಕುಗಳಿಗೆ ಹೋಲಿಸಿದರೆ ಉತ್ಕೃಷ್ಟ ದರ್ಜೆಯವು. ಆದರೆ ಪಾಕಿಸ್ತಾನವು ಈ ಅಂತರವನ್ನು ಆದಷ್ಟೂ ಶೀಘ್ರವಾಗಿ ಕಡಿಮೆಗೊಳಿಸಲು ಗಂಭೀರ ಯೋಜನೆ ರೂಪಿಸುತ್ತಿದೆ ಎಂದು ಮೂಲಗಳು ಹೇಳಿದವು. ಭಾರತೀಯ ಸೇನೆಯ ೬೭ ಸಶಸ್ತ್ರ ರೆಜಿಮೆಂಟ್‌ಗಳಿಗೆ ವಿರುದ್ಧವಾಗಿ ಪಾಕಿಸ್ತಾನವು ಪ್ರಸ್ತುತ ಇಂತಹುದೇ ೫೧ ರೆಜಿಮೆಂಟ್ ಗಳನ್ನು ಹೊಂದಿದೆ ಎಂದು ಮೂಲಗಳು ಹೇಳಿದವು. ಪ್ರಸ್ತುತ ಪಾಕಿಸ್ತಾನದ ಶಸ್ತ್ರಾಗಾರದಲ್ಲಿ ಇರುವ ಶೇಕಡಾ ೭೦ಕ್ಕೂ ಹೆಚ್ಚಿನ ಟ್ಯಾಂಕ್‌ಗಳು ರಾತ್ರಿ ವೇಳೆಯಲ್ಲಿ ಕಾರ್‍ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿವೆ, ಇದು ಕಳವಳಕಾರಿ ವಿಷಯ ಎಂದು ಮೂಲಗಳು ತಿಳಿಸಿದವು. ಟಿ-೯೦ ಟ್ಯಾಂಕುಗಳನ್ನು ಪಡೆಯುವತ್ತ ಕಣ್ಣಿಟ್ಟಿರುವುದರ ಹೊರತಾಗಿ, ಪಾಕಿಸ್ತಾನಿ ಸೇನೆಯು ಚೀನಾದ ವಿಟಿ-೪ ಟ್ಯಾಂಕುಗಳು ಮತ್ತು ಒಪ್ಲೋಡ್-ಪಿ ಟ್ಯಾಂಕ್‌ಗಳನ್ನು ಉಕ್ರೇನಿನಿಂದ ಪಡೆಯುವ ಪ್ರಕ್ರಿಯೆಯನ್ನೂ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಒಪ್ಲೋಡ್ ಮತ್ತು ವಿಟಿ-೪ ಟ್ಯಾಂಕುಗಳ ಪರೀಕ್ಷೆಯನ್ನು ಪಾಕಿಸ್ತಾನಿ ಸೇನೆ ಈಗಾಗಲೇ ನಡೆಸಿದೆ ಎಂದು ಮೂಲಗಳು ಹೇಳಿದವು. ಪ್ರಸ್ತುತ ಪಾಕಿಸ್ತಾನವು ಚೀನಾದ ಮೂಲ ಟಿ-೫೯ ಮತ್ತು ಟಿ-೬೯ ಟ್ಯಾಂಕುಗಳ ಸುಮಾರು ೧೭ ಘಟಕಗಳನ್ನು ಹೊಂದಿದೆ. ಇವು ಒಟ್ಟು ಟ್ಯಾಂಕ್ ಬಲದ ಶೇಕಡಾ ೩೦ರಷ್ಟು ಆಗುತ್ತವೆ. ಇದಲ್ಲದೆ, ಅಲ್-ಜಹರ್ ಟ್ಯಾಂಕುಗಳ ೧೨ ರೆಜಿಮೆಂಟ್‌ಗಳನ್ನು ಪಾಕಿಸ್ತಾನ ಹೊಂದಿದ್ದು ಇವು ಟ್ಯಾಂಕ್ ಬಲದ ಶೇಕಡಾ ೨೦ರಷ್ಟು ಆಗುತ್ತವೆ. ಉಕ್ರೇನಿನ ಮೂಲ ಟಿ೮೦ -ಯುಡಿ ಮತ್ತು ಟಿ-೮೫ ಯುಡಿ ಟ್ಯಾಂಕ್‌ಗಳು ಮತ್ತು ಮೇಲ್ದರ್ಜೆಗೆ ಏರಿಸಲಾದ ಟಿ-೫೯ ಟ್ಯಾಂಕುಗಳು ಉಳಿದ ಶೇಕಡಾ ೫೦ರಷ್ಟು ಆಗುತ್ತದೆ ಎಂದು ಮೂಲಗಳು ತಿಳಿಸಿದವು. ಪಾಕಿಸ್ತಾನಿ ಸೇನೆಯು ತನ್ನ ಸಶಸ್ತ್ರ ಪಡೆಗಳನ್ನು ಆಧುನೀಕರಿಸುವ ಕಾಲಮಿತಿಯ ಕಾರ್‍ಯ,ಕ್ರಮವನ್ನು ಹಮ್ಮಿಕೊಂಡಿದೆ. ಆದರೆ ಭಾರತದ ಸಿದ್ಧತೆ ಇದಕ್ಕೆ ಅನುಗುಣವಾಗಿಲ್ಲ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ತಜ್ಞರೊಬ್ಬರು ಹೇಳಿದರು.  ಪಾಕಿಸ್ತಾನವು ತನ್ನ ಟ್ಯಾಂಕ್ ದಳವನ್ನು ಅಧುನೀಕರಿಸುತ್ತಿರುವ ರೀತಿ ಕಳವಳ ಹುಟ್ಟಿಸುವ ವಿಷಯ ಎಂದು ಅವರು ನುಡಿದರು.  ಭಾರತ ಕೂಡಾ ತನ್ನ ಸ್ವತಂತ್ರ ಟ್ಯಾಂಕ್ ಬ್ರಿಗೇಡನ್ನು ಹೊಂದಿದ್ದು, ಲಡಾಖ್ ನಲ್ಲಿ ಅದನ್ನು ಇರಿಸಿದೆ, ಅದರೆ ಇದು ಸಾಲದು ಎಂದು ತಜ್ಞ ನುಡಿದರು.

2018: ಉಡುಪಿ: ಉದಯವಾಣಿ ಸಾಪ್ತಾಹಿಕ ಪುರವಣೆಯ ಮಾಜಿ ಸಂಪಾದಕ, ಛಾಯಾಗ್ರಾಹಕ ಅನಂತಪುರ ಈಶ್ವರಯ್ಯ  ಬೆಳಗ್ಗೆ ವಿಧಿವಶರಾದರು. ಕೆಲ ತಿಂಗಳುಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರುಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಆಂಗ್ಲ ಭಾಷೆಯಲ್ಲಿ ಪದವಿಯನ್ನು ಉಡುಪಿ ಪಡೆದಿದ್ದ ಅವರು, ಹಲವು ಪ್ರತಿಭೆಗಳ ಗಣಿ. ಅವರ ಜ್ಞಾನ ಹಲವು ಮುಖಗಳದ್ದು. ಅವರೊಬ್ಬರು ತುಂಬಿದ ಕೊಡ. ಅನುಭವೀ ಪತ್ರಕರ್ತರು. ಕಲಾಪ್ರೇಮಿ ಹಾಗೂ ಕಲಾವಿಹಾರಿಗಳು.ಸಂಗೀತ ಮತ್ತು ಛಾಯಾಚಿತ್ರ ಗ್ರಹಣಗಳೆರಡರಲ್ಲೂ ಸಿದ್ಧಹಸ್ತರು. ಒಳ್ಳೆಯ ಬರಹಗಾರರಾದ ಅವರು ಗಂಭೀರವಾಗಿಯೂ ಸರಸ ಶೈಲಿಯಲ್ಲಿಯೂ ಬರೆಯಬಲ್ಲವರು. ಉತ್ತಮ ವಾಗ್ಮಿಯಾಗಿರುವ ಅವರು ತಮ್ಮ ಮಾತಿನ ಮೋಡಿಯಿಂದ ಸಭಿಕರನ್ನು ಗಂಟೆಗಟ್ಟಲೆ ಸೆರೆಹಿಡಿಯಬಲ್ಲವರು. ಒಳ್ಳೆಯ ಓದುಗರಾಗಿರುವ ಅವರು ಸಮರ್ಥ ವಿಮರ್ಶಕರೂ ಆಗಿದ್ದರು. ಪೊಲ್ಯ ಯಕ್ಷಗಾನ ಪ್ರಶಸ್ತಿ (1994), ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ (2000), ರಾಜ್ಯಮಟ್ಟದ ಸಂದೇಶ ಪತ್ರಿಕೋದ್ಯಮ ಸಮ್ಮಾನ ಪ್ರಶಸ್ತಿ (2001), ರಂಗವಾಚಸ್ಪತಿ ಬಿರುದು (2003), ಪರಶುರಾಮ ಪ್ರಶಸ್ತಿ (2003), ವ್ಯಾಸ ಸಾಹಿತ್ಯ ಪ್ರಶಸ್ತಿ (2008), ನುಡಿಸಿರಿ ರಾಜ್ಯ ಪ್ರಶಸ್ತಿ ಮೊದಲಾದ ಶ್ರೇಷ್ಠ ಪ್ರಶಸ್ತಿಗಳು ಈಶ್ವರಯ್ಯನವರಿಗೆ ಪ್ರಾಪ್ತವಾಗಿದ್ದವು. 
2018: ಕೋಲ್ಕತ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಮೃಣಾಲ್ ಸೇನ್ ನಿಧನ
ರಾದರು. ಅವರಿಗೆ ೯೫ ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಜಾನೆ ೧೦.೩೦ರ ಸುಮಾರಿಗೆ ತಮ್ಮ ನಿವಾಸ ಕೋಲ್ಕತಾದ ಭವಾನಿಪೋರೆಯಲ್ಲಿ ಕೊನೆಯುಸಿರೆಳೆದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ, ಮೃಣಾಲ್ ಸೇನ್ ಸಾವಿಗೆ ಸಂತಾಪ ಸೂಚಿಸಿದರು.  ೧೯೨೩ ಮೇ ೧೪ರಂದು ಬಾಂಗ್ಲಾದೇಶದ ಫರಿದಾಪುರದಲ್ಲಿ ಜನಿಸಿದ್ದ ಅವರು ಪ್ರೌಢ ಶಿಕ್ಷಣ ಮುಗಿಸಿದ ನಂತರ ಕೋಲ್ಕತಕ್ಕೆ ಆಗಮಿಸಿದ್ದರು. ಬಳಿಕ ಸ್ಕಾಟಿಶ್ ಚರ್ಚ್ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡಿದ ಅವರು ಕೋಲ್ಕತಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಚಲನಚಿತ್ರ ನಿರ್ಮಾಪಕರಾಗಿದ್ದ ಇವರು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಿನಿಮಾದ ಮಹಾನ್ ರಾಯಭಾರಿಗಳ ಪೈಕಿ ಒಬ್ಬರಾಗಿದ್ದರು.  ಭುವನ್ ಶೋವತ, ಮೃಗಯಾ, ಅಕಾಲೆರ್ ಸಂಧಾನೆ ಮತ್ತು ಕೊಲ್ಕತಾ ೭೧ ಚಿತ್ರಗಳ ಮೂಲಕ ಇವರು ಖ್ಯಾತಿ ಗಳಿಸಿದ್ದರು.  "ಏಕ್ ದಿನ್ ಅಚಾನಕ್", "ಪದಾತಿಕ್", "ಮೃಗಯಾ " ದಂತಹಾ ಪ್ರಸಿದ್ದ ಚಿತ್ರಗಳನ್ನು ನೀಡಿದ್ದರು. ಕಳೆದ ವ? ಅವರ ಪತ್ನಿ ನಿಧನರಾಗಿದ್ದು, ಅವರ ಪುತ್ರ ಕುನಾಲ್ ಸೇನ್ ಅವರು ಚಿಕಾಗೋದಲ್ಲಿ ನೆಲೆಸಿದ್ದಾರೆ.  ೨೦೦೩ ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಲಾಗಿತ್ತು. ಅವರ ಸಮಕಾಲೀನರಾದ ಸತ್ಯಜಿತ್ ರೇ ಮತ್ತು ರಿತ್ವಿಕ್ ಘಾಟಕ್ ಅವರೊಂದಿಗೆ, ಅವರು ಜಾಗತಿಕ ಹಂತದಲ್ಲಿ ಬಂಗಾಳಿ ಸಮಾನಾಂತರ ಸಿನಿಮಾದ ಮಹಾನ್ ರಾಯಭಾರಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.
 2017: ನವದೆಹಲಿ: ಸಿಂಧೂ ನದಿ ನೀರು ಬಳಕೆ ಕುರಿತು ಪರಾಮರ್ಶೆ ನಡೆಸಲು ಭಾರತ  ಸರ್ಕಾರ ಮುಂದಾಗಿದ್ದು, ಹಿಂದಿನಂತೆ ಇನ್ನು ಮುಂದೆಯೂ ಪಾಕಿಸ್ತಾನಕ್ಕೆ ಯಾವುದೇ ರಿಯಾಯಿತಿ ತೋರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.  ಪಾಕಿಸ್ತಾನ ಎಲ್ಲಿಯ ವರೆಗೆ ಭಯೋತ್ಪಾದನೆಯ ರಫ್ತು ನಿಲ್ಲಿಸುವುದಿಲ್ಲವೋ, ಅಲ್ಲಿಯವರೆಗೂ ಸಿಂಧೂ ನದಿ ನೀರು ಹರಿಸುವ ವಿಚಾರದಲ್ಲಿ ಭಾರತದಿಂದ ಔದಾರ್ಯವನ್ನು ನಿರೀಕ್ಷಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತು. ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಜಲಸಂಗ್ರಹಣೆ ಯೋಜನೆಗಳನ್ನು ತ್ವರಿತವಾಗಿ ಮುಂದುವರಿಸಲು ಭಾರತ ನಿರ್ಧರಿಸಿತು.  ಸಿಂಧೂ ಜಲ ಒಪ್ಪಂದ (ಐಡಬ್ಲ್ಯುಟಿ)ದಲ್ಲಿ ಭಾರತ ತನ್ನ ಹಕ್ಕುಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ತ್ವರಿತ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಉಝ್ಬಹು ಉದ್ದೇಶಿತ ಯೋಜನೆಯ ಬಗ್ಗೆ ವಿಸ್ತೃತ ವರದಿ ಸಿದ್ಧಪಡಿಸಿದ್ದು, ಗಡಿಯಾಚೆಗೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಬಳಸಿಕೊಳ್ಳಲು ಮುಂದಾಗಿದೆ. ಯೋಜನಾ ವರದಿಯನ್ನು ಜಮ್ಮು ಮತ್ತು ಕಾಶ್ಮೀರ ಸರಕಾರಕ್ಕೆ ಸಲ್ಲಿಸಲಾಗಿದ್ದು, ಅಣೆಕಟ್ಟು ನಿರ್ಮಾಣ ಕಾರ್ಯ ಶೀಘ್ರವೇ ಆರಂಭವಾಗಲಿದೆ.  ಕಥುವಾ ಜಿಲ್ಲೆಯಲ್ಲಿ ಜಾರಿಗೊಳ್ಳಲಿರುವ ಯೋಜನೆ ಪೂರ್ಣಗೊಂಡ ಬಳಿಕ 6.5 ಲಕ್ಷ ಎಕರೆ ಅಡಿ ನೀರು ಉಝ್ನದಿಯಿಂದ (ರಾವಿ ನದಿಯ ಉಪನದಿ) ಲಭ್ಯವಾಗಲಿದೆ.ಇದರಿಂದ 30,000 ಹೆಕ್ಟೇರ್ಭೂಮಿಗೆ ನೀರು ಒದಗಿಸಬಹುದು ಮತ್ತು 200 ಮೆಗಾ ವ್ಯಾಟ್ವಿದ್ಯುತ್ಉತ್ಪಾದಿಸಬಹುದು. ಉರಿಯಲ್ಲಿನ ಸೇನಾ ಶಿಬಿರದ ಮೇಲೆ ಪಾಕ್ಭಯೋತ್ಪಾದಕರು 2016ರಲ್ಲಿ ದಾಳಿ ನಡೆಸಿದ ಬಳಿಕ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಮರುಪರಿಶೀಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. 1960ರಲ್ಲಿ ಸಿಂಧೂ ಜಲ ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅದರನ್ವಯ ರಾವಿ ನದಿಯ ನೀರನ್ನು ಭಾರತಕ್ಕೆ ಒದಗಿಸಲಾಗಿದೆ. ಹೀಗಾಗಿ ಒಪ್ಪಂದದ ಅನ್ವಯವೇ ರಾವಿ ನದಿಯಿಂದ ಗರಿಷ್ಠ ನೀರು ಬಳಸಿಕೊಳ್ಳಲು ಭಾರತ ಮುಂದಾಯಿತು.

2017: ನವದೆಹಲಿ: ದೀಪಿಕಾ ಪಡುಕೋಣೆ ಅವರು ನಟಿಸಿರುವ ಸಂಜಯ್ ಲೀಲಾ ಭನ್ಸಾಲಿ ಅವರಪದ್ಮಾವತಿ ಚಲನ ಚಿತ್ರಕ್ಕೆ ಸೆನ್ಸಾರ್ ಮಂಡಳಿ (ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ- ಸಿಬಿಎಫ್ ಸಿ) ಕಡೆಗೂ ಹಸಿರು ನಿಶಾನೆ ತೋರಿಸಿದ್ದು, ಯು/ ಸರ್ಟಿಫಿಕೇಟ್ ನೊಂದಿಗೆಪದ್ಮಾವತ್ ಎಂಬ ಹೊಸ ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಚಿತ್ರದಲ್ಲಿ ೨೬ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಬೇಕು, ಚಿತ್ರದ ಪ್ರಾರಂಭ ಮತ್ತು ಮಧ್ಯಂತರ ವಿರಾಮದ ಬಳಿಕ ಇದು ಕಲ್ಪನೆಯ ಕಥೆಯಾಗಿದ್ದು ಯಾವುದೇ ಚಾರಿತ್ರಿಕ ವ್ಯಕ್ತಿತ್ವಗಳಿಗೆ ಸಂಬಂಧಿಸಿದ್ದಲ್ಲ ಎಂಬ ಸ್ಪಷ್ಟನೆಯನ್ನು ಪ್ರಕಟಿಸಬೇಕು ಎಂದು ಮಂಡಳಿ ಚಿತ್ರ ನಿರ್ಮಾಪಕರಿಗೆ ಸೂಚಿಸಿತು.  ರಜಪೂತ ಗುಂಪುಗಳ ತೀವ್ರ ಪ್ರತಿಭಟನೆ ಮತ್ತು ಬೆದರಿಕೆಗಳ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಯನ್ನು ಹಿಂದೆ ಸ್ಥಗಿತಗೊಳಿಸಲಾಗಿತ್ತು. ಚಿತ್ರ ನಿರ್ಮಾಪಕರು ಮತ್ತು ಸಮಾಜವನ್ನು ಗಮನದಲ್ಲಿ ಇಟ್ಟುಕೊಂಡು ಸಮತೋಲಿತ ದೃಷ್ಟಿಯಿಂದ ಚಿತ್ರವನ್ನು ಪರಿಶೀಲಿಸಲಾಗಿದೆ. ಚಿತ್ರಕ್ಕೆ ಸಂಬಂಧಿಸಿದ ಸಂಕೀರ್ಣತೆಗಳು ಮತ್ತು ಕಾಳಜಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡ ಸಿಬಿಎಫ್ ಸಿಯ ವಿಶೇಷ ಸಮಿತಿಯು ಮುನ್ನೋಟವನ್ನು ಇಟ್ಟುಕೊಂಡು ಅಂತಿಮ ನಿರ್ಧಾರವನ್ನು ಕೈಗೊಂಡಿದೆ ಎಂದು ಮಂಡಳಿ ತಿಳಿಸಿತು. ಯು/ ಸರ್ಟಿಫಿಕೇಟ್ ಅಂದರೆ ಎಲ್ಲ ವಯೋಮಾನದವರು ವೀಕ್ಷಿಸಬಹುದಾದ ಚಿತ್ರ ಎಂದ ಅರ್ಥ. ಏನಿದ್ದರೂ ಮುಂದಿನ ತಿಂಗಳು ಇನ್ನೊಂದು ಸುತ್ತಿನ ಸಭೆಯ ಬಳಿಕ ಸೆನ್ಸಾರ್ ಮಂಡಳಿಯು ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿದವು. ರಾಜಸ್ಥಾನದ ಖ್ಯಾತ ರಾಣಿ ಪದ್ಮಿನಿಯ ವ್ಯಕ್ತಿತ್ವವನ್ನು ಬಿಂಬಿಸುವಲ್ಲಿ ನಿರ್ದೇಶಕರು ಮತ್ತು ನಿರ್ಮಾಪಕರು ಇತಿಹಾಸವನ್ನು ತಿರುಚಿದ್ದಾರೆ ಎಂದು ಆಪಾದಿಸಿ ಕರ್ಣಿಸೇನಾ ಸೇರಿದಂತೆ ವಿವಿಧ ರಜಪೂತ ಗುಂಪುಗಳು ಮತ್ತು ಬಲಪಂಥೀಯ ಸಂಘಟನೆಗಳು ಸಂಜಯ್ ಲೀಲಾ ಭನ್ಸಾಲಿ ಅವರ ಚಿತ್ರಕ್ಕೆ ಉಗ್ರ ವಿರೋಧ ವ್ಯಕ್ತ ಪಡಿಸಿದ್ದವು. ಸಂಸದೀಯ ಸಮಿತಿಯ ಮುಂದೆ ಹಾಜರಾಗಿದ್ದ ಭನ್ಸಾಲಿ ಅವರು ಮಲಿಕ್ ಮೊಹಮ್ಮದ್ ಜಯಸಿ ರಚಿಸಿದ ೧೬ನೇ ಶತಮಾನದ ಮಹಾಕಾವ್ಯಪದ್ಮಾವತ್ ಆಧರಿಸಿ ನಿರ್ಮಿಸಲಾಗಿರುವ ಚಿತ್ರಕ್ಕಾಗಿ ತಾವು ೧೫೦ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿರುವುದಾಗಿ ತಿಳಿಸಿದ್ದರು. ರಣವೀರ ಸಿಂಗ್ ಅವರು ನಟಿಸಿದ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದ ಜೊತೆಗೆ ದೀಪಿಕಾ ಅವರ ಪಾತ್ರ ಪರದೆಯಲ್ಲಿ ಬರುವುದಿಲ್ಲ ಎಂದು ಅವರು ಹೇಳಿದ್ದರು. ಸೆನ್ಸಾರ್ ಮಂಡಳಿಯು ಡಿಸೆಂಬರ್ ೨೮ರಂದು ರಾಜಸ್ಥಾನ ಮೂಲದ ಇಬ್ಬರು ಪ್ರಾಧ್ಯಾಪಕರು ಮತ್ತು ಮೇವಾಡ ರಾಜಕುಟುಂಬದ ಸದಸ್ಯರಿಗೆ ವಿವಾದಾತ್ಮಕ ಚಿತ್ರವನ್ನು ತೋರಿಸಿತ್ತು. ನವೆಂಬರ್ ೨೮ರಂದು ಸಲ್ಲಿಸಲಾಗಿದ್ದ ಅಂತಿಮ ಅರ್ಜಿ ಬಗೆಗೆ ಡಿಸೆಂಬರ್ ೨೮ರಂದು ನಡೆದ ಸಮಿತಿಯ ಸಭೆಯಲ್ಲಿ ಪರಿಶೀಲಿಸಿದ ಬಳಿಕ ಚಿತ್ರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಶನಿವಾರ ಮಧ್ಯಾಹ್ನ ಬಂದ ಮಿಂಚಂಚೆ (-ಮೇಲ್) ತಿಳಿಸಿತು. ಸತಿ ಪದ್ಧತಿಯ ವೈಭವೀಕರಣ ಮಾಡಬಾರದು ಎಂಬ ಸೂಚನೆಯ ಜೊತೆಗೆಘೂಮರ್ ಹಾಡಿನಲ್ಲೂ ಬದಲಾವಣೆಗಳನ್ನು ಮಾಡಲು ತಿಳಿಸಲಾಗಿದೆ. ಸೂಚಿತ ಬದಲಾವಣೆಗಳನ್ನು ಮಾಡಿ ಮಂಡಳಿಗೆ ಸಲ್ಲಿಸಿದ ಬಳಿಕ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಮಂಡಳಿ ಹೇಳಿತು. ರಜಪೂತ ಸಮುದಾಯದ ಮುಖ್ಯಸ್ಥರು, ಇತಿಹಾಸ ಮತ್ತು ಶಿಕ್ಷಣ ತಜ್ಞರು ಚಲನಚಿತ್ರವನ್ನು ವೀಕ್ಷಿಸುವಂತೆ ಚಿತ್ರ ನಿರ್ಮಾಪಕರಾದ ಭನ್ಸಾಲಿ ಪ್ರೊಡಕ್ಷನ್ಸ್ ನವರು ಮಂಡಳಿಗೆ ಲಿಖಿತ ಮನವಿ ಮಾಡಿದ್ದರು ಎಂದು ಸಿಬಿಎಫ್ ಸಿ ಮಿಂಚಂಚೆಯಲ್ಲಿ ತಿಳಿಸಿತು.

 2017: ಅಹಮದಾಬಾದ್: ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪ್ರಮುಖ ಪಾಟೀದಾರ ನಾಯಕ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಖಾತೆ ಹಂಚಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸುವುದರೊಂದಿಗೆ ಗುಜರಾತ್ ಸರ್ಕಾರ ಬಿಕ್ಕಟ್ಟನ್ನು ಎದುರಿಸಿದ್ದು, ತಮಗಾದ ಅನ್ಯಾಯ ಸರಿಪಡಿಸಲು ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗೆ ಮೂರು ದಿನಗಳ ಗಡುವು ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.  ‘ಹಿಂದೆ ತಾವು ಹೊಂದಿದ್ದ ಹಣಕಾಸು, ಪೆಟ್ರೋ ಕೆಮಿಕಲ್ಸ್ ಮತ್ತು ನಗರಾಭಿವೃದ್ಧಿ ಇಲಾಖೆಯಂತಹ ಪ್ರಬಲ ಖಾತೆಗಳನ್ನುದರೋಡೆ ಮಾಡಲಾಗಿದೆ ಎಂದು ಅತೃಪ್ತರಾಗಿರುವ ಪಟೇಲ್ ಅವರು ರಾಜೀನಾಮೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಪಾಟೀದಾರ ಸಂಘಟನೆ ಸರ್ದಾರ್ ಪಟೇಲ್ ಗುಂಪು ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ಮೆಹ್ಸಾನದಲ್ಲಿ ಸೋಮವಾರ ಬಂದ್ ಆಚರಿಸಲು ಕರೆ ನೀಡಿತು.  ಪಟೇಲ್ ಅತೃಪ್ತಿಯ ವರದಿಗಳು ಬರುತ್ತಿದ್ದಂತೆಯೇ ನಿತಿನ್ ಪಟೇಲ್ ಅವರು ತಮ್ಮ ಬೆಂಬಲಿಗ ಶಾಸಕರೊಂದಿಗೆ ಬಿಜೆಪಿಯಿಂದ ಹೊರಬರಬೇಕು ಮತ್ತು ಕಾಂಗ್ರೆಸ್ ಪಕ್ಷವನ್ನು ಸೇರಬೇಕು ಎಂದು ಪಾಟೀದಾರ ನಾಯಕ ಹಾರ್ದಿಕ ಪಟೇಲ್ ಸಲಹೆ ಮಾಡಿದರು.  ನಿತಿನ್ ಪಟೇಲ್ ಅವರು ಈದಿನ ತಮ್ಮ ಕಚೇರಿಗೆ ಬರಲಿಲ್ಲ ಮತ್ತು ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಉಪಮುಖ್ಯಮಂತ್ರಿಯಾಗಿದ್ದರೂ ತಮಗೆ ಕಡಿಮೆ ತೂಕದ ಖಾತೆಗಳನ್ನು ನೀಡಿರುವ ಬಗೆಗಿನ ತಮ್ಮ ಅತೃಪ್ತಿಯನ್ನು ನಿತಿನ್ ಪಟೇಲ್ ಬಿಜೆಪಿ ವರಿಷ್ಠ ಮಂಡಳಿಗೆ ತಿಳಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿದವು.  ನೂತನ ಸರ್ಕಾರದಲ್ಲಿ ಪಟೇಲ್ ಅವರಿಗೆ ರಸ್ತೆಗಳು ಹಾಗೂ ಕಟ್ಟಡಗಳು, ನರ್ಮದಾ, ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಹಣಕಾಸು ಯೋಜನೆಗಳ ಖಾತೆಗಳನ್ನು ನೀಡಲಾಗಿತ್ತು. ಸಂಧಾನ ನಡೆಸಿ ಬಿಕ್ಕಟ್ಟನ್ನು ಕೊನೆಗೊಳಿಸಲು ವರಿಷ್ಠ ನಾಯಕತ್ವವು ಹಿರಿಯ ನಾಯಕರೊಬ್ಬರನ್ನು ಕಳುಹಿಸುತ್ತಿದೆ ಎಂದು ಪಕ್ಷ ಮೂಲಗಳು ತಿಳಿಸಿದವು.
ಬಿಜೆಪಿಯೊಳಗಿನ ಅಸಮಾಧಾನದ ಹೊಸ ವಿದ್ಯಮಾನ ಬೆಳಕಿಗೆ ಬರುತ್ತಿದ್ದಂತೆಯೇ ಮೀಸಲಾತಿ ಚಳವಳಿಯ ನಾಯಕ ಹಾರ್ದಿಕ್ ಪಟೇಲ್ ಅವರು ಪಾಟೀದಾರ ಸಮುದಾಯಕ್ಕೆ ನ್ಯಾಯ ಒದಗಿಸುವ ಸಲುವಾಗಿ ತಾವು ನಡೆಸುತ್ತಿರುವ ಚಳವಳಿ ಸೇರುವಂತೆ ನಿತಿನ್ ಪಟೇಲ್ ಅವರಿಗೆ ಆಹ್ವಾನ ನೀಡಿದರು. ‘ನಿತಿನ್ ಭಾಯಿ ನ್ಯಾಯಕ್ಕಾಗಿ ನಡೆಸುವ ನಮ್ಮ ಹೋರಾಟದಲ್ಲಿ ಜೊತೆಗೂಡಬಹುದು. ಏನಿದ್ದರೂ ಬಿಜೆಪಿಯಲ್ಲಿ ಅವರಿಗೆ ಕೇವಲ ಲಾಲಿಪೊಪ್ ಗಳನ್ನು ನೀಡಲಾಗಿದೆ ಎಂದು ೨೪ರ ಹರೆಯದ ಹಾರ್ದಿಕ್ ಪಟೇಲ್ ಬೊಟಾಡ್ ನಲ್ಲಿ ಪಾಟೀದಾರ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್ -ಪಾಸ್) ಸಭೆಯಲ್ಲಿ ಮಾತನಾಡುತ್ತಾ ಹೇಳಿದರು. ಚಳವಳಿಯ ಮುಂದಿನ  ತಂತ್ರ ರಚನೆಗಾಗಿ ಸಭೆಯನ್ನು ಅವರು ಸಂಘಟಿಸಿದ್ದರು.  ನಿತಿನ್ ಭಾಯಿ ಅವರು ತಮ್ಮ ಶಾಸಕರ ಜೊತೆಗೆ ಬಿಜೆಪಿಯಿಂದ ಹೊರಬರಬೇಕು ಮತ್ತು ಅವರನ್ನು ಬೆಂಬಲಿಸುವಂತೆ ನಾವು ಕಾಂಗ್ರೆಸ್ ಜೊತೆ ಮಾತನಾಡುತ್ತೇವೆ ಎಂದು ಅವರು ನುಡಿದರು. ಹಾರ್ದಿಕ್ ಪಟೇಲ್ ಅವರು ಶೀಘ್ರದಲ್ಲೇ ಉಪ ಮುಖ್ಯಮಂತ್ರಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಸರ್ದಾರ್ ಪಟೇಲ್ ಗುಂಪಿನ (ಎಸ್ ಪಿಜಿ) ಮುಖ್ಯಸ್ಥ ಲಾಲ್ಜಿ ಪಟೇಲ್ ಅವರು ನಿತಿನ್ ಪಟೇಲ್ ಅವರನ್ನು ಭೇಟಿ ಮಾಡಿದ್ದಾರೆ. ಎಸ್ ಪಿಜಿ ಮತ್ತು ಪಾಸ್ ಜಂಟಿಯಾಗಿ ೨೦೧೫ರಲ್ಲಿ ಮೀಸಲಾತಿ ಚಳವಳಿಯನ್ನು ಆರಂಭಿಸಿದ್ದವು.   ಮಧ್ಯೆ ಪಾಟೀದಾರ ಸಮುದಾಯದ ನಾಯಕರು ನಿತೀನ್ ಪಟೇಲ್ ಅವರನ್ನು ಭೇಟಿ ಮಾಡಲು ಅಹಮದಾಬಾದಿಗೆ ದೊಡ್ಡ ಪ್ರಮಾಣದಲ್ಲಿ ಬರುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ರೂಪಾನಿ ಜೊತೆ ಭಿನ್ನಮತ: ನಿತಿನ್ ಪಟೇಲ್ ಮತ್ತು ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ನಡುವೆ ಗುರುವಾರ ಮೊದಲ ಸಂಪುಟ ಸಭೆಗೆ ಮುನ್ನವೇ ಭಿನ್ನಮತ ಭುಗಿಲೆದ್ದಿತ್ತು.  ಸಭೆಯಲ್ಲಿ ಸಚಿವರಿಗೆ ಖಾತೆ ಹಂಚಿಕೆ ಮಾಡಬೇಕಾಗಿತ್ತು. ಭಿನ್ನಮತದ ಪರಿಣಾಮವಾಗಿ ಸಂಜೆ ಗಂಟೆಗೆ ನಡೆಯಬೇಕಾಗಿದ್ದ ಸಂಪುಟ ಸಭೆ ಮುಖ್ಯಮಂತ್ರಿ ಮನೆಯಲ್ಲಿ ಸುದೀರ್ಘ ಮಾತುಕತೆಗಳ ಬಳಿಕ ರಾತ್ರಿ ಗಂಟೆಗೆ ಆರಂಭವಾಯಿತು. ಮುಖ್ಯಮಂತ್ರಿ ಮನೆಯಲ್ಲಿ ನಡೆದ ಮಾತುಕತೆಯಲ್ಲಿ ರೂಪಾನಿ, ನಿತೀಶ್ ಪಟೇಲ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಿತು ವಘಾನಿ ಅವರು ಪಕ್ಷದ ವರಿಷ್ಠರ ಜೊತೆಗೆ ಸಮಾಲೋಚಿಸಿ ಖಾತೆಗಳ ಹಂಚಿಕೆ ಮಾಡಿದ್ದರು. ‘ಹಣಕಾಸು ಖಾತೆ ಸಿಗದೇ ಇರುವುದರಿಂದ ನಿತಿನ್ ಭಾಯಿ ಅಸಮಾಧಾನಗೊಂಡಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರುಉಪಮುಖ್ಯಮಂತ್ರಿ ಯಾಗಿದ್ದರೂ ಗೃಹ, ಸಾಮಾನ್ಯ ಆಡಳಿತ, ಕೈಗಾರಿಕೆ, ಗಣಿಗಾರಿಕೆ, ಖನಿಜಗಳು, ಹಣಕಾಸು ಮತ್ತು ನಗರಾಭಿವೃದ್ಧಿ ಅಥವಾ ಕಂದಾಯದಂತಹ ಪ್ರಮುಖ ಇಲಾಖೆಗಳು ಸಿಕ್ಕಿಲ್ಲ ಎಂದು ನಿತಿನ್ ಭಾಯಿ  ಭ್ರಮನಿರಸನಗೊಂಡಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.  ಸಂಪುಟ ಸಭೆಯ ಬಳಿಕ ರೂಪಾನಿ ಮತ್ತು ನಿತಿನ್ ಪಟೇಲ್ ಹಾಗೂ ವಘಾನಿ ಅವರು ಪತ್ರಿಕಾಗೋಷ್ಠಿ ನಡೆಸಿದ್ದರು.  ಅದರಲ್ಲಿ ರೂಪಾನಿ ಭಿನ್ನಮತದ ವದಂತಿಯನ್ನು ನಿರಾಕರಿಸಿದರು. ಆದರೆ ಅಲ್ಲೆ ಇದ್ದ ನಿತಿನ್ ಪಟೇಲ್ ಏನೂ ಮಾತನಾಡದೆ ಮೌನ ತಾಳಿದ್ದರು.

2017: ಕೈರೋ: ನ್ಯಾಯಾಂಗವನ್ನು ಅವಹೇಳನ ಮಾಡಿದ್ದಕ್ಕಾಗಿ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಮತ್ತು ಇತರ ೧೮ ಮಂದಿಗೆ ಈಜಿಪ್ಟ್ ನ್ಯಾಯಾಲಯವೊಂದು ಮೂರು ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿತು.  ಹಕ್ಕುಗಳ ಪ್ರಮುಖ ಚಳವಳಿಕಾರ ಅಲಾ ಅಬ್ದೆಲ್ ಫತಾಹ್ ಮತ್ತು ರಾಜಕೀಯ ವಿಶ್ಲೇಷಣೆಕಾರ ಅಮರ್ ಹಮಾಝವಿ ಇಬ್ಬರಿಗೂ ನ್ಯಾಯಾಲಯ ೩೦,೦೦೦ ಈಜಿಪ್ಟ್ ಪೌಂಡ್ ದಂಡ ವಿಧಿಸಿತು.  ೨೦೧೩ ಅಕ್ರಮ ಪ್ರತಿಭಟನೆಗಳಲ್ಲಿ ಪಾಲ್ಗೊಂಡದ್ದಕ್ಕಾಗಿ ಅಬ್ದೆಲ್ ಅವರು ಐದು ವರ್ಷಗಳ ಸೆರೆವಾಸ ಅನುಭವಿಸುತ್ತಿದ್ದಾರೆ. ಹಮಾಝವಿ ದೇಶಭ್ರಷ್ಟರಾಗಿ ಬದುಕುತಿದ್ದಾರೆ.  ಈದಿನ  ನೀಡಲಾದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಎಂದು ನ್ಯಾಯಾಲಯ ತಿಳಿಸಿತು. ಈಜಿಪ್ಟಿನಲ್ಲಿ ಮೊತ್ತ ಮೊದಲ ಮುಕ್ತ ಚುನಾವಣೆಯಲ್ಲಿ ಚುನಾಯಿತರಾಗಿದ್ದ ಪ್ರಥಮ ಅಧ್ಯಕ್ಷ ಮೊರ್ಸಿ ಅವರನ್ನು ೨೦೧೩ರಲ್ಲಿ ಸೇನೆಯು ಪದಚ್ಯುತಗೊಳಿಸಿತ್ತು. ಅವರ ಒಂದು ವರ್ಷದ ವಿಭಜನಕಾರಿ ಆಡಳಿತದ ವಿರುದ್ಧ ನಡೆದ ಭಾರಿ ಪ್ರತಿಭಟನೆಗಳ ಬಳಿಕ ಸೇನೆ ಅವರನ್ನು ಪದಚ್ಯತಿಗೊಳಿಸಿತ್ತು. ೨೦೧೩ರಿಂದ ಈಜಿಪ್ಟ್ ಇಸ್ಲಾಮೀ ಉಗ್ರಗಾಮಿಗಳ ವಿರುದ್ಧ ತೀವ್ರ ದಮನ ಕಾರ್ಯಾಚರಣೆ ನಡೆಸಿತ್ತು. ತೀವ್ರಗಾಮಿಗಳಲ್ಲದೆ ಜಾತ್ಯತೀತರು ಮತ್ತು ಉದಾರವಾದಿ ಕಾರ್ಯಕರ್ತರನ್ನು ಅವಧಿಯಲ್ಲಿ ಸೆರೆಮನೆಗೆ ದಬ್ಬಲಾಗಿತ್ತು.


2017: ನವದೆಹಲಿ: ಕರ್ನಾಟಕದ ಏಳು ನಗರಗಳು ಸೇರಿದಂತೆ ದೇಶಾದ್ಯಂತ ೬೦ ಸ್ಮಾರ್ಟ್ ಸಿಟಿಗಳಿಗಾಗಿ ಸ್ಮಾರ್ಟ್ ಸಿಟಿ ಮಿಷನ್ ಅಡಿ ಬಿಡುಗಡೆಯಾಗಿದ್ದ ,೮೬೦ ಕೋಟಿ ರೂಪಾಯಿಗಳಲ್ಲಿ ಶೇಕಡಾ ೭ರಷ್ಟು ಅಂದರೆ ಸುಮಾರು ೬೪೫ ಕೋಟಿ ರೂಪಾಯಿಗಳು ಮಾತ್ರ ಈವರೆಗೆ ವೆಚ್ಚವಾಗಿದ್ದು, ನಗರ ವ್ಯವಹಾರಗಳ ಸಚಿವಾಲಯವು ಇದರಿಂದ ಕಳವಳಗೊಂಡಿತು. ತಲಾ ೧೯೬ ಕೋಟಿ ರೂಪಾಯಿ ಬಿಡುಗಡೆಯಾಗಿರುವ ಸುಮಾರು ೪೦  ನಗರಗಳ ಪೈಕಿ ಅಹಮದಾಬಾದ್ ಗರಿಷ್ಠ ಮೊತ್ತವನ್ನು ಬಳಸಿಕೊಂಡಿದ್ದು ಅದು ೮೦.೧೫ ಕೋಟಿ ರೂಪಾಯಿ ವೆಚ್ಚ ಮಾಡಿದೆ. ೭೦.೬೯ ಕೋಟಿ ರೂಪಾಯಿ ವೆಚ್ಚ ಮಾಡಿರುವ ಇಂದೋರ್ ಎರಡನೇ ಸ್ಥಾನದಲ್ಲಿದೆ. ೪೩.೪೧ ಕೋಟಿ ರೂ. ವೆಚ್ಚದೊಂದಿಗೆ ಸೂರತ್ ಮೂರನೇ ಸ್ಥಾನವನ್ನೂ, ೪೨.೮೬ ಕೋಟಿ ರೂ. ವೆಚ್ಚದೊಂದಿಗೆ ಭೂಪಾಲ್ ೪ನೇ ಸ್ಥಾನವನ್ನೂ ಪಡೆದಿವೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೇಳಿತು..
ಇನ್ನೊಂದೆಡೆಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಕೇವಲ ೫೪ ಲಕ್ಷ ರೂಪಾಯಿಗಳನ್ನು, ರಾಂಚಿಯು ಕೇವಲ ೩೫ ಲಕ್ಷ ರೂಪಾಯಿಗಳನ್ನು ಮತು ಔರಂಗಾಬಾದ್ ಕೇವಲ ೮೫ ಲಕ್ಷ ರೂಪಾಯಿಗಳನ್ನು ಬಳಸಿಕೊಂಡಿವೆ ಎಂದೂ ಅಂಕಿಅಂಶಗಳು ತಿಳಿಸಿದವು. ವಸತಿ ಮತ್ತು ನಗರ ವ್ಯವಹಾರಗಳ ಅಧಿಕಾರಿಯೊಬ್ಬರು ಇತ್ತೀಚೆಗೆ ಕೆಲವು ನಗರಗಳಲ್ಲಿ ಯೋಜನೆಯ ಅತೃಪ್ತಿಕರ ಪ್ರಗತಿ ಬಗ್ಗೆ ಸಚಿವಾಲಯ ಕಳವಳಗೊಂಡಿದೆ ಎಂದು ಹೇಳಿದ್ದರು. ಯೋಜನೆ ಅನುಷ್ಠಾನದಲ್ಲಿ ಹಿಂದುಳಿದಿರುವ ನಗರಗಳಲ್ಲಿ ತ್ವರಿತ ಅನುಷ್ಠಾನಕ್ಕೆ ಇರುವ ಅಡಚಣೆಗಳೇನು ಎಂಬುದನ್ನು ಪತ್ತೆ ಹಚ್ಚಲು ಸಚಿವಾಲಯವು ಅಂತಹ ನಗರಗಳನ್ನು ಶೀಘ್ರದಲ್ಲೇ ಸಂಪರ್ಕಿಸಲಿದೆ ಎಂದು ಹೇಳಿದ್ದರು.  ಕೇಂದ್ರದಿಂದ ತಲಾ ೧೧೧ ಕೋಟಿ ರೂಪಾಯಿಗಲನ್ನು ಪಡೆದಿರುವ ನಗರಗಳ ಪೈಕಿ ವಡೋದರ ೨೦.೬೨ ಕೋಟಿ ರೂಪಾಯಿಗಳನ್ನು ಬಳಸಿಕೊಂಡಿದೆ. ಸಿಕ್ಕಿಮ್ ನಮ್ಚಿ .೮೦ ಕೋಟಿ ರೂಪಾಯಿಗಳನ್ನು ಬಳಸಿದ್ದರೆ, ತಮಿಳುನಾಡಿದ ತಂಜಾವೂರು, ವೆಲ್ಲೂರು, ಸೇಲಂ ಕ್ರಮವಾಗಿ ರೂ.೧೯ ಲಕ್ಷ,  ರೂ. ಲಕ್ಷ ಮತ್ತು ರೂ. ಲಕ್ಷ ವೆಚ್ಚ ಮಾಡಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸರ್ಕಾರದಿಂದ ಈವರೆಗೆ ಆಯ್ಕೆಯಾಗಿರುವ ೯೦ ನಗರಗಳು ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ತಲಾ ೫೦೦ ಕೋಟಿ ರೂಪಾಯಿಗಳ ಕೇಂದ್ರ ನೆರವನ್ನು ಪಡೆಯುತ್ತವೆ. ಕೇಂದ್ರದಿಂದ ಹಣ ಪಡೆಯಲು ನಗರಗಳು ವಿಶೇಷ ಉದ್ದೇಶ ವಾಹನಗಳನ್ನು (ಸ್ಪೆಶ್ಯಲ್ ಪರ್ಪಸ್ ವೆಹಿಕಲ್ಸ್ -ಎಸ್ ಪಿವಿ) ಸ್ಥಾಪಿಸುವ ಅಗತ್ಯವಿದೆ. ಇತ್ತೀಚೆಗೆ ನಡೆದ ಪರಿಶೀಲನಾ ಸಭೆಯಲ್ಲಿ ಮಧ್ಯ ಪ್ರದೇಶ, ಛತ್ತೀಸ್ ಗಢ, ಉತ್ತರ ಪ್ರದೇಶ ಮತ್ತು ಬಿಹಾರಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ್ದು ಬೆಳಕಿಗೆ ಬಂತು. ಆದರೆ ಪಂಜಾಬ್, ಹಿಮಾಚಲ ಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರ ಅನುಷ್ಠಾನ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕಾದ ಅಗತ್ಯ ಇದೆ ಎಂದು ಕಂಡು ಬಂದಿತು ಎಂದು ಅಧಿಕಾರಿ ನುಡಿದರು.
ಕೈಗೆತ್ತಿಕೊಂಡಿರುವ ಯೋಜನೆಗಳ ಪರಿಣಾಮ ಮುಂದಿನ ವರ್ಷ ಮಧ್ಯಾವಧಿ ವೇಳೆಗೆ ಸ್ಪಷ್ಟವಾಗಬಲ್ಲುದು ಎಂದು ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ (ಸ್ವತಂತ್ರ ಹೊಣೆಗಾರಿಕೆ) ಹರ್ ದೀಪ್ ಸಿಂಗ್ ಪುರಿ ತಿಂಗಳ ಆದಿಯಲ್ಲಿ ಹೇಳಿದ್ದರು. ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಗರಗಳ ಮಧ್ಯೆ ಸ್ಪರ್ಧಾತ್ಮಕತೆ ಮೂಡಿಸಲು ಕೇಂದ್ರವು ಮುಂದಿನ ವರ್ಷ ಜೂನ್ ತಿಂಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ನಗರಗಳಿಗೆಸ್ಮಾರ್ಟ್ ಸಿಟಿ ಪ್ರಶಸ್ತಿಗಳನ್ನು ನೀಡಲಿದೆ. ಆಗಸ್ಟ್ ೩೦ರಂದು ನಡೆದ ಸ್ಮಾರ್ಟ್ ಸಿಟಿ ಮಿಷನ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗುರುತಿಸಲಾದ ೯೦ ನಗರಗಳಲ್ಲಿ ಯೋಜನೆಯ ತ್ವರಿತ ಅನುಷ್ಠಾನವನ್ನು ಖಾತರಿಗೊಳಿಸುವುದು ಈಗ ಪ್ರತಿಯೊಬ್ಬರ ಮುಂದಿರುವ ಸವಾಲು ಎಂದು ಹೇಳಿದ್ದರು. ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದ್ದವು. ಕರ್ನಾಟಕದ ವಿವಿಧ ನಗರಗಳಲ್ಲಿ ಸ್ಮಾರ್ಟ್ ಸಿಟಿ ಸಲುವಾಗಿ ಬಿಡುಗಡೆಯಾದ ಹಣ, ವೆಚ್ಚವಾದ ಹಣ ಮತ್ತು ಅದರ ಶೇಕಡಾವಾರು ವಿವರ ಹೀಗಿದೆ:  ಬೆಂಗಳೂರು- ಬಿಡುಗಡೆ ರೂ.100 ಕೋಟಿ, ವೆಚ್ಚ 000, ಶೇಕಡಾವಾರು 000, ಬೆಳಗಾವಿ- ಬಿಡುಗಡೆ ರೂ. 400 ಕೋಟಿ, ವೆಚ್ಚ ರೂ 5 ಕೋಟಿ, ಶೇಕಡಾವಾರು 1.25, ಹುಬ್ಬಳ್ಳಿ-ಧಾರವಾಡ- ಬಿಡಗಡೆ ರೂ. 269 ಕೋಟಿ, ವೆಚ್ಚ ರೂ.4.47 ಕೋಟಿ, ಶೇಕಡಾವಾರು 1.66, ದಾವಣಗೆರೆ- ಬಿಡುಗಡೆ ರೂ. 394 ಕೋಟಿ, ವೆಚ್ಚ ರೂ.10 ಕೋಟಿ, ಶೇಕಡಾವಾರು 2.53, ತುಮಕೂರು – ಬಿಡುಗಡೆ ರೂ.261 ಕೋಟಿ, ವೆಚ್ಚ ರೂ. 24.82 ಕೋಟಿ,  ಶೇಕಡಾವಾರು 17.5 , ಮಂಗಳೂರು- ಬಿಡುಗಡೆ ರೂ. 300 ಕೋಟಿ, ವೆಚ್ಚ ರೂ. 100 ಕೋಟಿ, ಶೇಕಡಾವಾರು 33.3, ಒಟ್ಟು – ರೂ.1924 ಕೋಟಿ, ವೆಚ್ಚ ರೂ.179.29 ಕೋಟಿ, ಶೇಕಡಾವಾರು 9.31
2017: ಇಸ್ಲಾಮಾಬಾದ್: ೨೦೧೮ರ ಜನವರಿ ೧ರಿಂದ ೮ರವರೆಗೆ ನಡೆಯುವ ಹಜರತ್ ಖ್ವಾಜಾ ನಿಜಾಮುದ್ದೀನ್ ಔಲಿಯಾ ಉರುಸ್ ನಲ್ಲಿ ಪಾಲ್ಗೊಳ್ಳುವ ಸಲುವಾಗಿ ದೆಹಲಿಗೆ ತಲುಪಬೇಕಾಗಿದ್ದ ಪಾಕಿಸ್ತಾನದ ೧೯೨ ಮಂದಿ ಯಾತ್ರಿಕರ (ಝರೀನ್) ವೀಸಾ ಅರ್ಜಿಗಳನ್ನು ಭಾರತ ತಿರಸ್ಕರಿಸಿದೆ ಎಂದು ಪಾಕಿಸ್ತಾನ ಆಪಾದಿಸಿತು. ಭಾರತ-ಪಾಕಿಸ್ತಾನದ ನಡುವಣ ೧೯೭೪ರ ಶಿಷ್ಟಾಚಾರ ವಿಧಿಗಳಿಗೆ ಅನುಗುಣವಾಗಿ ಪ್ರತಿವರ್ಷ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಅವಕಾಶವಿದೆ.  ಭಾರತದ ನಿರ್ಧಾರದ ಪರಿಣಾಮವಾಗಿ ಪಾಕಿಸ್ತಾನಿ ಝರೀನ್ಗಳು ಉರುಸ್ ಪಾಲ್ಗೊಳ್ಳುವಿಕೆಯಿಂದ  ವಂಚಿತರಾಗುತ್ತಾರೆ. ಇದು ದುರದೃಷ್ಟಕರ ಮತ್ತು ೧೯೭೪ರ ಶಿಷ್ಟಾಚಾರದ ಸ್ಫೂರ್ತಿಗೆ ವಿರುದ್ಧ ಎಂದು ಪಾಕ್ ವಿದೇಶಾಂಗ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿತು. ಈ ವರ್ಷದ ಆದಿಯಲ್ಲಿ ಮಹಾರಾಜ ರಣಜಿತ್ ಸಿಂಗ್ ಅವರ ವಾರ್ಷಿಕ ಪುಣ್ಯ ದಿನಾಚರಣೆ ಮತ್ತು ಗುರು ಅರ್ಜುನ್ ದೇವ್ ಅವರ ಹುತಾತ್ಮ ದಿನಾಚರಣೆಯಲ್ಲಿ ಸಿಖ್ ಯಾತ್ರಿಕರಿಗೆ ಪಾಲ್ಗೊಳ್ಳಲು ಅನುಕೂಲವಾಗುವಂತೆ ವಿಶೇಷ ರೈಲು ಕಳುಹಿಸುವುದಾಗಿ ಪಾಕ್ ಕಳುಹಿಸಿದ್ದ ಪ್ರಸ್ತಾವವನ್ನು ಭಾರತ ನಿರಾಕರಿಸಿತ್ತು. ಪರಿಣಾಮವಾಗಿ ಸಿಖ್ ಯಾತ್ರಿಕರಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಹೇಳಿತು.  ಶಿಷ್ಟಾಚಾರದ ಉಲ್ಲಂಘನೆ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಮಾನವ ಹಕ್ಕುಗಳಿಗೂ ಇಂತಹ ಕ್ರಮಗಳಿಂದ ಧಕ್ಕೆಯಾಗಿ, ಜನರ ನಡುವಣ ಬಾಂಧವ್ಯ ವೃದ್ಧಿಯ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತದೆ. ಸಮುದಾಯಗಳ ಏಕತೆಗಾಗಿ ಶ್ರಮಿಸಿದ್ದ ಹಜತರ್ ನಿಜಾಮುದ್ದೀನ್ ಔಲಿಯಾ ಅವರ ಉರುಸ್ ಸಂದರ್ಭದಲ್ಲೇ ಹೀಗೆ ಆಗುತ್ತಿರುವುದು ವ್ಯಂಗ್ಯಾತ್ಮಕ ಎಂದು ವಿದೇಶಾಂಗ ಕಚೇರಿ ಹೇಳಿಕೆ ತಿಳಿಸಿತು.

2017: ನವದೆಹಲಿ: ಭಾರತದೊಂದಿಗಿನ ತನ್ನ ಭಾಂಧವ್ಯವನ್ನು ದೃಢಪಡಿಸಿದ ಪ್ಯಾಲೆಸ್ತೈನ್ಭಯೋತ್ಪಾದನೆ ವಿರುದ್ಧದ ಭಾರತದ ಸಮರವನ್ನು ಬೆಂಬಲಿಸಿ ಪಾತಕಿ ಹಫೀಜ್ ಸಯೀದ್ ಜೊತೆ ವೇದಿಕೆ ಹಂಚಿಕೊಂಡಿದ್ದ ಪ್ಯಾಲೆಸ್ತೈನಿ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿತು.  ಪಾಕಿಸ್ತಾನದಲ್ಲಿನ ತನ್ನ ರಾಯಭಾರಿ ವಾಲಿದ್ ಅಬು ಅಲಿ ಅವರನ್ನು ಮುಂಬೈ ಭಯೋತ್ಪಾದಕ ದಾಳಿಗಳ ಸಂಚುಕೋರ ಹಫೀಜ್ ಸಯೀದ್ ಜೊತೆ ವೇದಿಕೆ ಹಂಚಿಕೊಂಡದ್ದಕ್ಕಾಗಿ ವಾಪಸ್ ಕರೆಸಿಕೊಂಡಿದೆ ಎಂದು ಭಾರತದಲ್ಲಿನ ಪ್ಯಾಲೆಸ್ತೈನಿ ರಾಯಭಾರಿ ಅದ್ನನ್ ಅಬು ಅಲ್ ಹೈಜಾ ಶನಿವಾರ ಭಾರತ ಸರ್ಕಾರಕ್ಕೆ ತಿಳಿಸಿದರು.  ‘ವಾಲಿದ್ ಅಬು ಅಲಿ ಅವರು ಮಾಡಿದ್ದು ನನ್ನ ಸರ್ಕಾರಕ್ಕೆ ಸ್ವೀಕಾರಾರ್ಹ ಅಲ್ಲ. ಪ್ಯಾಲೆಸ್ತೈನ್ ಭಾರತದೊಂದಿಗೆ ನಿಕಟ ಬಾಂಧವ್ಯ ಹೊಂದಿದೆ ಮತ್ತು ಭಾರತವು ಭಯೋತ್ಪಾದನೆ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಯಾವಾಗಲೂ ಬೆಂಬಲಿಸುತ್ತದೆ. ಪರಿಣಾಮವಾಗಿ ಸರ್ಕಾರವು (ರಾಯಭಾರಿ ಅಲಿ) ಅವರನ್ನು ರಮಲ್ಲಾಕ್ಕೆ ಹಿಂದಕ್ಕೆ ಕರೆಸಿಕೊಂಡಿದೆ ಎಂದು ಹೈಜಾ ಹೇಳಿದರು.  ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಆರ್ಥಿಕ ಬಾಂಧವ್ಯಗಳ ಕಾರ್ಯದರ್ಶಿ ವಿಜಯ್ ಗೋಖಲೆ ಅವರನ್ನು ಈದಿನ ಭೇಟಿ ಮಾಡಿದ್ದ  ಅಲ್  ಹೈಜಾ ಅವರ ಜೊತೆ ವಾಲಿದ್ ಅಬು ಅಲಿ ಅವರ ವರ್ತನೆಯನ್ನು ಭಾರತ ಪ್ರಬಲವಾಗಿ ಖಂಡಿಸುವ ತನ್ನ ಸಂದೇಶವನ್ನು ನೀಡಿತ್ತು. ವಾಲಿದ್ ಅಬು ಅಲಿ ಅವರು ೨೦೧೭ರ ಡಿಸೆಂಬರ್ ೨೯ರಂದು ರಾವಲ್ಪಿಂಡಿಯ ಲಿಯಾಖತ್ ಬಾಗ್ ನಲ್ಲಿ ಹಫೀಜ್ ಸಯೀದನ ದಿಫಾ--ಪಾಕಿಸ್ತಾನ್ ಸಂಘಟಿಸಿದ್ದ ಸಮಾರಂಭ ಒಂದರಲ್ಲಿ ವಿಶ್ವ ಸಂಸ್ಥೆಯಿಂದ ಭಯೋತ್ಪಾದಕ ಎಂಬುದಾಗಿ ಘೋಷಿತನಾಗಿರುವ ಹಫೀಜ್ ಸಯೀದ್ ಜೊತೆ ವೇದಿಕೆ ಹಂಚಿಕೊಂಡದ್ದಲ್ಲದೆ ಆತನ ಜೊತೆಗೆ ಫೋಟೋ ಕೂಡಾ ತೆಗೆಸಿಕೊಂಡಿದ್ದರು. ಪ್ಯಾಲೆಸ್ತೈನಿ ರಾಯಭಾರಿಯ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತ ಪಡಿಸಿದ ಪ್ಯಾಲೆಸ್ತೈನ್ ಭಾರತ ಸರ್ಕಾರಕ್ಕೆ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿತ್ತು. ಜೆರುಸಲೇಮ್ ನಗರವನ್ನು ಇಸ್ರೇಲಿನ ರಾಜಧಾನಿಯಾಗಿ ಮಾನ್ಯತೆ ನೀಡಿದ ಅಮೆರಿಕದ ಕ್ರಮವನ್ನು ಟೀಕಿಸಿ, ವಿಶ್ವಸಂಸ್ಥೆಯಲ್ಲಿ ಕೈಗೊಳ್ಳಲಾದದ್ವಿರಾಷ್ಟ್ರ ನಿರ್ಣಯಕ್ಕೆ ಭಾರತ ಬೆಂಬಲ ನೀಡಿದ ಬೆನ್ನಲ್ಲೇ ಪ್ಯಾಲೆಸ್ತೈನ್ ಕ್ರಮ ಕೈಗೊಂಡಿರುವುದು ಗಮನಾರ್ಹವಾಗಿದೆ. ಭಾರತದ ನಿಲುವನ್ನು ಸ್ವಾಗತಿಸಿದ್ದ ಪ್ಯಾಲೆಸ್ತೈನ್ಭಾರತ ಮತ್ತು ಅದರ ಮೈತ್ರಿ ಬಗ್ಗೆ ತನಗೆ ಹೆಮ್ಮೆ ಇದೆ ಎಂದು ಹೇಳಿದ್ದಲ್ಲದೆ, ಭಾರತವು ನಡೆಸುತ್ತಿರುವ ಭಯೋತ್ಪಾದನೆ ವಿರೋಧಿ ಹೋರಾಟವನ್ನು ಬೆಂಬಲಿಸುವುದಾಗಿ ಹೇಳಿತ್ತು. ಇಸ್ರೇಲಿಗೆ ಭಾರತದ ನಿಲುವು ಇರುಸು ಮುರುಸು ಉಂಟು ಮಾಡಿದರೂ, ಅದು ತಾಜತಾಂತ್ರಿಕವಾಗಿ ಮೌನ ಪ್ರತಿಭಟನೆ ಸಲ್ಲಿಸಿತ್ತು.


2016: ಲಖನೌ: ಸಮಾಜವಾದಿ ಪಕ್ಷದಲ್ಲಿ ಯಾದವೀ ಕಲಹ ತಾರಕಕ್ಕೇರಿ, ಈದಿನ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರನ್ನು ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ 6 ವರ್ಷಗಳವರೆಗೆ ಪಕ್ಷದಿಂದ ಉಚ್ಛಾಟಿಸಿದರು. ವಿಧಾನಸಭೆ ಚುನಾವಣೆಗೆ ಪ್ರತ್ಯೇಕ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಅಖಿಲೇಶ್ ಯಾದವ್ ಮತ್ತು ರಾಮ್ ಗೋಪಾಲ್ ಅವರನ್ನು ಉಚ್ಛಾಟಿಸಲಾಯಿತು. ಲಖನೌದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಪಕ್ಷದ ತೀರ್ಮಾನವನ್ನು ಪ್ರಕಟಿಸಿದರು. ಸುದ್ದಿ ಬಹಿರಂಗವಾಗುತ್ತಿದ್ದಂತೆ ಉತ್ತರಪ್ರದೇಶದಾದ್ಯಂತ ಅಖಿಲೇಶ್ ಯಾದವ್ ಬೆಂಬಲಿಗರು ಪ್ರತಿಭಟನೆ ನಡೆಸಿದರು. ನಾವು ಕಷ್ಟ ಪಟ್ಟು ಕಟ್ಟಿದ ಪಕ್ಷವನ್ನು ಉಳಿಸಲು ಕಠಿಣ ತೀರ್ಮಾನ ತೆಗೆದುಕೊಂಡಿದ್ದೇವೆ. ಪಕ್ಷ ಮೊದಲು ನಂತರ ಕುಟುಂಬದ ಸದಸ್ಯರು. ಪಕ್ಷ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವಾಗ ಅಖಿಲೇಶ್ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದ್ದಾರೆ. ಮೂಲಕ ಪಕ್ಷವನ್ನು ಸರ್ವನಾಶ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಅಖಿಲೇಶ್ ಮತ್ತು ರಾಮ್ ಗೋಪಾಲ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಎಂದು ಮುಲಾಯಂ ತಿಳಿಸಿದರು.
2016: ನವದೆಹಲಿ: 500 ರೂ. ಮತ್ತು 1000 ರೂ. ನೋಟುಗಳನ್ನು ರದ್ದುಗೊಳಿಸಿದ ನಂತರ ಡಿಜಿಟಲ್ ಹಣ ಪಾವತಿ ವ್ಯವಸ್ಥೆಯ ಬಳಕೆಯನ್ನು ಉತ್ತೇಜಿಸಲು ಕೆಂದ್ರ ನಡೆಸಿದ ಪ್ರಯತ್ನದ ಅಂಗವಾಗಿ ಡಿಜಿಧನ್ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿಭೀಮ್ (BHIM) ಮೊಬೈಲ್ ಆಪ್ ಅನ್ನು ಲೋಕಾರ್ಪಣೆ ಮಾಡಿದರು. ನವದೆಹಲಿಯ ತಲ್ಕಟೋರಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಮೊಬೈಲ್ ಆಪ್ಗೆ ಚಾಲನೆ ನೀಡಿದರು. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹಿಬ್ ಅಂಬೇಡ್ಕರ್ ಅವರ ಗೌರವಾರ್ಥ ಮೊಬೈಲ್ ಆಪ್ಗೆಭೀಮ್ ಎಂದು ಹೆಸರಿಡಲಾಗಿದೆ. ಇದು ದೇಶದ ಜನರಿಗೆ ಹೊಸ ವರ್ಷದ ಉಡುಗೊರೆಯಾಗಿದ್ದು, ಭೀಮ್ ಎಂದರೆ ಭಾರತ್ ಇಂಟರ್ಫೇಸ್ ಫಾರ್ ಮನಿ ಎಂದರ್ಥ. ಆಪ್ ವಿಶ್ವದಲ್ಲೇ ಅತ್ಯಂತ ವಿಶಿಷ್ಟವಾಗಿದ್ದು, ಇದನ್ನು ಎಲ್ಲಾ ವಿಧದ ಸ್ಮಾರ್ಟ್ ಫೋನ್ಗಳಲ್ಲಿ ಬಳಕೆ ಮಾಡಬಹುದು. ಆಪ್ ಅನ್ನು ಇಂಟರ್ನೆಟ್ ಇಲ್ಲದೆಯೂ ಬಳಕೆ ಮಾಡಬಹುದಾಗಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲಾ ವರ್ಗಗಳ ಜನರ ದಿನನಿತ್ಯದ ವಹಿವಾಟಿನ ಭಾಗವಾಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ನಗದು ರಹಿತ ಹಣ ವರ್ಗಾವಣೆ ವ್ಯವಸ್ಥೆಯ ವ್ಯಾಪಕ ಬಳಕೆಯಿಂದ ಭಾರತದ ಆರ್ಥಿಕತೆ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಹಣ ವರ್ಗಾವಣೆಗೆ ಫೋನ್ ಕೂಡಾ ಬೇಕಾಗುವುದಿಲ್ಲ, ಕೇವಲ ನಿಮ್ಮ ಹೆಬ್ಬರಳನ್ನು ಉಪಯೋಗಿಸಿ ನೀವು ಹಣ ವರ್ಗಾವಣೆ ಮಾಡಬಹುದು. ಇನ್ನು ಎರಡು ವಾರಗಳಲ್ಲಿ ನೂತನ ಯೋಜನೆಗೆ ಚಾಲನೆ ಸಿಗಲಿದೆ ಎಂದು ನರೇಂದ್ರ ಮೋದಿ ಆಪ್ ಲೋಕಾರ್ಪಣೆ ಮಾಡಿದ ನಂತರ ತಿಳಿಸಿದರು. ಪ್ರಧಾನಿ ಮೋದಿ ಡಿಜಿಧನ್ ಲಕ್ಕಿ ಗ್ರಾಹಕ ಯೋಜನೆ ಮತ್ತು ಡಿಜಿಧನ ವ್ಯಾಪಾರ ಯೋಜನೆಯ ಮೊದಲ ಡ್ರಾದಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಿದರು.
2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಬಿಡುಗಡೆ ಮಾಡಿದ ನೂತನ ಆ್ಯಪ್ - ಭೀಮ್ ಆ್ಯಪ್ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಇಲ್ಲಿದೆ  ಮಾಹಿತಿ. ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್) ಮೂಲಕ ಹಣ ಪಾವತಿ ಮಾಡಲು ಬಳಸುವ ಆ್ಯಪ್ ಇದಾಗಿದೆ. ಸದ್ಯ ಅಂಡ್ರಾಯ್ಡ್ನಲ್ಲಿ ಮಾತ್ರ ಆ್ಯಪ್ ಲಭ್ಯವಿದೆ. ಆ್ಯಪ್ ಮೂಲಕ ಹಣ ವರ್ಗಾವಣೆ ಮಾಡುವಾಗ ಯಾವುದೇ ರೀತಿಯ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ. ಎಸ್ಬಿಐ, ಹೆಚ್ಡಿಎಫ್‌‍ಸಿ, ಐಸಿಐಸಿಐಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೌತ್ ಇಂಡಿಯಾ  ಬ್ಯಾಂಕ್, ಕರ್ನಾಟಕ ಬ್ಯಾಂಕ್, ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್  ಮೊದಲಾದ 30 ಬ್ಯಾಂಕ್ಗಳ ಗ್ರಾಹಕರು ಆ್ಯಪ್  ಮೂಲಕ ವಹಿವಾಟು ನಡೆಸಬಹುದಾಗಿದೆ. ಪ್ಲೇ ಸ್ಟೋರ್ ನಲ್ಲಿ  BHIM UPI ಎಂದು ಸರ್ಚ್ ಮಾಡಿದರೆ ಆ್ಯಪ್ ಲಭ್ಯವಾಗುತ್ತದೆ.
2016: ನವದೆಹಲಿ: ನೋಟು ರದ್ದತಿಯ ನಂತರ ದೇಶದ ಜನರು ನಗದು ರಹಿತ ವ್ಯವಸ್ಥೆಗೆ ಮೊರೆ ಹೋಗಿದ್ದು, ಯುಎಸ್ಎಸ್ಡಿ, ಮೊಬೈಲ್ ವ್ಯಾಲೆಟ್ಗಳು, ರೂಪೇ ಜತೆಗೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದರಿಂದಾಗಿ ಡಿಜಿಟಲ್
ಹಣ ವರ್ಗಾವಣೆ ವ್ಯವಸ್ಥೆ ಬಳಕೆದಾರರ ಪ್ರಮಾಣ ನೂರಾರು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತು. ಯುಎಸ್ಎಸ್ಡಿ ಬಳಕೆದಾರರ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದ್ದು, ಮೊಬೈಲ್ ಮೂಲಕ ಹೆಚ್ಚಿನ ಜನರು ಹಣ ವರ್ಗಾವಣೆ ಮಾಡುತ್ತಿದ್ದಾರೆ. ನವೆಂಬರ್ 8 ಕ್ಕೆ ಡಿಸೆಂಬರ್ 25 ರಂದು ಯುಎಸ್ಎಸ್ಡಿ ಬಳಕೆದಾರರ ಪ್ರಮಾಣ 5,135 ಪಟ್ಟು ಹೆಚ್ಚಾಗಿದೆ. ನವೆಂಬರ್ 8 ರಂದು ಯುಎಸ್ಎಸ್ಡಿ ಮೂಲಕ 1 ಕೋಟಿ ರೂ. ವರ್ಗಾವಣೆ ಆಗುತ್ತಿತ್ತು, ಡಿಸೆಂಬರ್ 25 ರಂದು ಅದರ ಪ್ರಮಾಣ 46 ಕೋಟಿ ರೂ.ಗೆ ತಲುಪಿದೆ. ಇದೇ ಸಂದರ್ಭದಲ್ಲಿ ಯುಪಿಐ ಹಣ ವರ್ಗಾವಣೆ ವ್ಯವಸ್ಥೆಯ ಬಳಕೆಯಲ್ಲೂ ಸಹ ಸಾಕಷ್ಟು ಏರಿಕೆ ಕಂಡು ಬಂದಿದ್ದು, ಡಿ.25 ರಂದು ಪ್ರತೀ ದಿನ 53,648 ಜನರು ವ್ಯವಸ್ಥೆಯ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಇದರ ಮೊತ್ತ ಸುಮಾರು 14 ಕೋಟಿ ರೂ. ಇದೆ. ಡಿ. 25 ರಂದು 21 ಲಕ್ಷ ಜನರು ರೂ ಪೇ ಕಾರ್ಡ್ ಬಳಸಿ 247 ಕೋಟಿ ರೂ. ವರ್ಗಾವಣೆ ಮಾಡಿದ್ದರೆ, 67 ಲಕ್ಷ ಜನರು ಮೊಬೈಲ್ ವ್ಯಾಲೆಟ್ಗಳನ್ನು ಬಳಸಿ 184 ಕೋಟಿ ರೂ. ಗಳನ್ನು ವರ್ಗಾವಣೆ ಮಾಡಿದ್ದಾರೆ. ಜತೆಗೆ ಚೆಕ್ ಮೂಲಕ ಹಣ ವರ್ಗಾವಣೆ ವ್ಯವಸ್ಥೆಯಲ್ಲೂ ಸಹ ಶೇ. 67 ರಷ್ಟು ಹೆಚ್ಚಳ ಕಂಡು ಬಂದಿದ್ದು, 51 ಲಕ್ಷ ಜನರು 27,032 ಕೋಟಿ ರೂ. ಹಣವನ್ನು ಚೆಕ್ ಮೂಲಕ ವರ್ಗಾವಣೆ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರ ತನ್ನ ವರದಿಯಲ್ಲಿ ತಿಳಿಸಿತು.
2016: ನವದೆಹಲಿ: ಪರಿಸ್ಥಿತಿ ದೊಡ್ಡ ಪ್ರಮಾಣದಲ್ಲಿ ಸಹಜ ಸ್ಥಿತಿಗೆ ಬಂದಿದೆ. ಡಿಸೆಂಬರ್ 31 ಬಳಿಕ ಡಿಸೆಂಬರ್ 10 ಕ್ಯೂಗಳನ್ನು ತೋರಿಸಬೇಡಿ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು  ಮಾಧ್ಯಮಗಳಿಗೆ ಮನವಿ ಮಾಡಿದರು. ನಗದು ಜಾಲಗಳಲ್ಲಿ ಕೆಲವರು ಷಾಮೀಲಾಗಿರುವ ರೀತಿ ಮತ್ತು ಪ್ರಮಾಣವೇ ಪ್ರಧಾನಿಯವರ ನವೆಂಬರ್ 8 ನಿರ್ಧಾರವನ್ನು ಸಮರ್ಥಿಸುತ್ತದೆ ಎಂದು ಅವರು ನುಡಿದರು. 2016 ಮೇ 10ರಂದು ನಾವು ಮಾರಿಷಸ್ ಜೊತೆಗಿನ ಡಿಟಿಎಎ, 1916 ನವೆಂಬರ್ 18ರಂದು ಸೈಪ್ರಸ್ ಜೊತೆಗಿನ ಡಿಟಿಎಎಯನ್ನು ನಾವು ತಿದ್ದುಪಡಿ ಮಾಡಿದ್ದೆವು. ಇಂದು ಸಿಂಗಾಪುರ ಜೊತೆಗಿನ ಡಿಟಿಎಎ ತಿದ್ದುಪಡಿ ಮಾಡಿದ್ದೇವೆ ಎಂದು ವಿತ್ತ ಸಚಿವರು ಪ್ರಕಟಿಸಿದರು. 2016ರಲ್ಲಿ ನಾವು ಮೂರು ದ್ವಂದ್ವ ತೆರಿಗೆ ನಿವಾರಣಾ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ್ದೇವೆ. ಒಪ್ಪಂದಗಳು ತೆರಿಗೆ ವಂಚನೆಯ ಮಾರ್ಗಗಳಿಗೆ ಬೀಗ ಜಡಿದಿವೆ ಎಂದು ಅವರು ವಿವರಿಸಿದರು. 2019ರಿಂದ ಭಾರತೀಯರು ಅಥವಾ ಭಾರತೀಯ ಸಂಸ್ಥೆಗಳು ಸ್ವಿಜರ್ಲೆಂಡ್ನಲ್ಲಿ 2018ರಲ್ಲಿ ಮಾಡುವ ಹೂಡಿಕೆಗಳ ಬಗ್ಗೆ ಸ್ವಿಜರ್ಲೆಂಡ್ ರಿಯಲ್ ಟೈಮ್ ಮಾಹಿತಿ ನೀಡಲು ಆರಂಭಿಸುತ್ತದೆ ಎಂದು ಜೇಟ್ಲಿ ಹೇಳಿದರು.
ಮುಂಬೈ: ಡಿಸೆಂಬರ್ 30ರಂದು ಬ್ಯಾಂಕಿಂಗ್ ವಹಿವಾಟು ಮುಗಿದ ತತ್ ಕ್ಷಣವೇ ಎಲ್ಲ ಬ್ಯಾಂಕುಗಳೂ ತಾವು ಸಂಗ್ರಹಿಸಿದ ಹಳೆನೋಟುಗಳ ವಿವರವನ್ನು ಬಗ್ಗೆ ಮಿಂಚಂಚೆ (-ಮೇಲ್) ಮೂಲಕ ಸಲ್ಲಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ದೇಶನ ನೀಡಿತು. ಡಿಸಿಸಿಬಿ ಹೊರತು ಪಡಿಸಿ ಉಳಿದ ಎಲ್ಲ ಬ್ಯಾಂಕುಗಳೂ 2016 ಡಿಸೆಂಬರ್ 30 ಸಂಜೆ ವಹಿವಾಟು ಮುಕ್ತಾಗೊಳಿಸುವವರೆಗೆ ಸಂಗ್ರಹಿಸಿದ ನಿರ್ದಿಷ್ಟ ನೋಟುಗಳನ್ನು ಡಿಸೆಂಬರ್ 31ರಂದೇ ಭಾರತೀಯ ರಿಸರ್ವ್ ಬ್ಯಾಂಕಿನ ವಿತರಣಾ ಕಚೇರಿ ಅಥವಾ ಕರೆನ್ಸಿ ಚೆಸ್ಟ್ನಲ್ಲಿ ಜಮಾ ಮಾಡಬೇಕು ಎಂದು ಆರ್ಬಿಐ ಸೂಚಿಸಿತು. 2016 ಡಿಸೆಂಬರ್ 31 ಬಳಿಕ ನಿರ್ದಿಷ್ಟ ನೋಟುಗಳು (ಎಸ್ಬಿಎನ್) ಬ್ಯಾಂಕುಗಳ ನಗದು ಬ್ಯಾಲೆನ್ಸ್ ಭಾಗವಾಗುವಂತಿಲ್ಲ ಎಂದು ಆರ್ಬಿಐ ಸ್ಪಷ್ಟ ಪಡಿಸಿತು. ಈ ಮಧ್ಯೆ ಕೋಲ್ಕತದಲ್ಲಿ ರಿಸರ್ವ್ ಬ್ಯಾಂಕ್ ಶಾಖೆ ಮುಂದೆ ಹಳೆ ನೋಟು ವಿನಿಮಯಕ್ಕಾಗಿ ಜನರ ಭಾರಿ ಉದ್ದದ ಸರದಿ ಸಾಲು ಕಂಡು ಬಂತು.
2016: ನವದೆಹಲಿ: ಡೆಹ್ರಾಡೂನಿನಲ್ಲಿ ವಾರಾಂತ್ಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಚಿತ್ರನಟಿ ಅನುಷ್ಕಾ ಶರ್ಮ ಅವರ ನಿಶ್ಚಿತಾರ್ಥ ನಡೆಯಲಿದೆ ಎಂಬ ವರದಿಗಳನ್ನು ಉಭಯರೂ   ತಳ್ಳಿ ಹಾಕಿದರು.ಅದನ್ನು ಮುಚ್ಚಿಡುವುದಿಲ್ಲಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದು, ಅನುಷ್ಕಾ ಶರ್ಮ ಅದನ್ನು ರಿಟ್ವೀಟ್ ಮಾಡಿದರು.. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಅವರು ಅರ್ಚಕರೊಬ್ಬರ ಜೊತೆಗೆ ಇದ್ದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಜನವರಿ 1ರಂದು ಉಭಯರ ನಿಶ್ಚಿತಾರ್ಥ ನಡೆಯಲಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿದ್ದವು. ‘ನಮ್ಮ ನಿಶ್ಚಿತಾರ್ಥ ನಡೆಯುತ್ತಿಲ್ಲ ಮತ್ತು ನಿಶ್ಚಿತಾರ್ಥ ಮಾಡಿಕೊಳ್ಳುವುದಿದ್ದರೆ ನಾವು ಅದನ್ನು ಬಚ್ಚಿಡುವುದಿಲ್ಲ. ಇದು ಅತ್ಯಂತ ಸರಳ. ಸುದ್ದಿ ವಾಹಿನಿಗಳು ವದಂತಿಗಳನ್ನು ಹರಡುತ್ತಿರುವುದರಿಂದ ಮತ್ತು ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತಿರುವುದರಿಂದ, ನಾವು ಗೊಂದಲಕ್ಕೆ ಇತಿಶ್ರೀ ಹಾಡುತ್ತಿದ್ದೇವೆಎಂದು ವಿರಾಟ್ ಕೊಹ್ಲಿ (28) ಈದಿನ ಬೆಳಗ್ಗೆ ಟ್ವೀಟ್ ಮಾಡಿದರು. ಕೆಲವೇ ನಿಮಿಷಗಳಲ್ಲಿ ಅನುಷ್ಕಾ ಶರ್ಮ ಅವರು ಕೊಹ್ಲಿ ಟ್ವೀಟ್ನ್ನು ರಿ ಟ್ವೀಟ್ ಮಾಡಿದರು. ಹಲವು ವರ್ಷಗಳ ಕಾಲ ತಮ್ಮ ಸಂಬಂಧದ ವಿಚಾರವಾಗಿ ಮೌನ ಕಾಪಾಡಿಕೊಂಡಿದ್ದ ವಿರಾಟ್ ಕೊಹ್ಲಿ ಕೊನೆಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮರನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ನಿಶ್ಚಯಿಸಿದ್ದಾರೆ. ಹೊಸ ವರ್ಷಾರಂಭದಲ್ಲೆ ಹೊಸ ಜೀವನಕ್ಕೆ ಮುಹೂರ್ತ ನಿಗದಿಯಾಗಿದೆ. ಮೂಲಗಳ ಪ್ರಕಾರ ಕ್ರಿಕೆಟ್-ಸಿನಿಮಾ ನಂಟಿನ ಹಾಟ್ ಪೇರ್ ಜನವರಿ 1ರಂದು ಡೆಹ್ರಾಡೂನಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆಎಂದು ವಾಹಿನಿಗಳು ಮುನ್ನ ವರದಿ ಮಾಡಿದ್ದವು. ‘ಕ್ರಿಸ್ ಮಸ್ ಹಾಗೂ ಹೊಸ ವರ್ಷದ ರಜೆಯನ್ನು ಕಳೆಯಲು ವಾರದ ಆರಂಭದಲ್ಲಿಯೆ ವಿರಾಟ್ ಹಾಗೂ ಅನುಷ್ಕಾ ಉತ್ತರಾಖಂಡದ ಡೆಹ್ರಾಡೂನಿಗೆ ತೆರಳಿದ್ದು, ಸರಳವಾಗಿ ನಡೆಯಲಿರುವ ನಿಶ್ಚಿತಾರ್ಥ ಸಮಾರಂಭ ನರೇಂದ್ರ ನಗರದ ಆನಂದಾ ಹೊಟೆಲ್ನಲ್ಲಿ ನಡೆಯಲಿದೆಎಂದೂ ವರದಿಗಳು ಹೇಳಿದ್ದವು. ಸಾಮಾಜಿಕ ಜಾಲ ತಾಣದ ಪುಟದಲ್ಲಿ ಇಬ್ಬರೂ ಡೆಹ್ರಾಡೂನಿನಲ್ಲಿ ಕಳೆಯುತ್ತಿರುವ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದರು. ನಡುವೆ, ಬಿಗ್ ಬಿ ಅಮಿತಾಭ್ ಬಚ್ಚನ್, ಜಯಾ ಬಚ್ಚನ್ ಹಾಗೂ ಅನಿಲ್ -ಟೀನಾ ಅಂಬಾನಿ ಗುರುವಾರ ಡೆಹ್ರಾಡೂನ್ ತಲುಪಿದ್ದು ಸುದ್ದಿಗೆ ಇನ್ನಷ್ಟು ಬಲ ನೀಡಿತ್ತು. ಉತ್ತರಾಖಂಡದ ಥೆರಿಯಲ್ಲಿರುವ ಅನುಷ್ಕಾ ಕುಟುಂಬ ಹಾಗೂ ನವದೆಹಲಿಯಲ್ಲಿರುವ ವಿರಾಟ್ ತಾಯಿ ಕೂಡ ಹೊಸ ವರ್ಷವನ್ನು ವಿರಾಟ್-ಅನುಷ್ಕಾ ಜತೆಗೂಡಿ ಆಚರಿಸಲಿದ್ದಾರೆ ಎಂದು ವರದಿಗಳು ಹೇಳಿದ್ದವು.
2016: ಗುವಾಹಟಿ: ರಾಜಕೀಯ ಅಸ್ಥಿರತೆಯಿಂದ ಕಂಗೆಟ್ಟಿರುವ ಅರುಣಾಚಲ ಪ್ರದೇಶಕ್ಕೆ ನೂತನ ಮುಖ್ಯಮಂತ್ರಿ ಆಗಿ ಅತ್ಯಂತ ಶ್ರೀಮಂತ ಶಾಸಕ ಎಂದೇ ಹೆಸರಾಗಿರುವ ತಾಕಮ್ ಪರಿಯೋ ಅವಿರೋಧವಾಗಿ ಆಯ್ಕೆಯಾದರು. ಈದಿನ ನಡೆದ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (ಪಿಪಿಎ) ಪಕ್ಷದ ಉನ್ನತ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಪರಿಯೋ ಕಾಂಗ್ರೆಸ್ ಸಂಸದ ತಾಕಮ್ ಸಂಜಯ್ ಸಹೋದರ. ಪಿಪಿಎ ಜತೆಗೆ ಕೈಜೋಡಿಸಿರುವ ಬಿಜೆಪಿಯ 12 ಶಾಸಕರು ತಾಕಮ್ ಸರ್ಕಾರದಲ್ಲೂ ಸಹಕಾರ ಮುಂದುವರಿಸಲಿದ್ದಾರೆ ಎನ್ನಲಾಯಿತಾದರೂ ಬಳಿಕ ಬಿಜೆಪಿ ತನ್ನ ಬೆಂಬಲ ಪೆಮಾ ಖಂಡುವಿಗೆ ಮಾತ್ರ ಎಂದು ಸ್ಪಷ್ಟ ಪಡಿಸಿತು. ರಾತ್ರಿಯ ವೇಳೆಗೆ ಪೆಮಾ ಖಂಡು ಆಪ್ತರು ಖಂಡು ಬಳಿ ಬಹುಮತ ಇರುವುದಾಗಿ ಪ್ರತಿಪಾದಿಸಿದರು. ಹಿಂದಿನ ದಿನ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಸಿಎಂ ಪೆಮಾಖಂಡು ಸೇರಿದಂತೆ ಉಪಮುಖ್ಯಮಂತ್ರಿ ಚವ್ನಾ ಮೇ ಹಾಗೂ ಇತರೆ ಐವರು ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲ 5 ವರ್ಷಗಳ ಅವಧಿಗೆ ಅಮಾನತು ಮಾಡಲಾಗಿದೆ. ಆಡಳಿತದಲ್ಲಿ ಬಿಜೆಪಿ ಹಸ್ತಕ್ಷೇಪ ಹೆಚ್ಚಿದ ಹಿನ್ನೆಲೆ ಪಿಪಿಎ ಕ್ರಮಕ್ಕೆ ಕೈಗೊಂಡಿದೆ ಎನ್ನಲಾಯಿತು. ಹಿಂದೆ ಸೆ.16ರಂದು ಕಾಂಗ್ರೆಸ್ನಿಂದ ಸಿಎಂ ಆಗಿದ್ದ ಪೆಮಾಖಂಡು ಅನಿರೀಕ್ಷಿತ ಬೆಳವಣಿಗೆಯಲ್ಲಿ 43 ಶಾಸಕರ ಜತೆ ಪಕ್ಷ ತೊರೆದು ಎನ್ಡಿಎ ಅಂಗ ಪಕ್ಷ ಪಿಪಿಎ ಸೇರ್ಪಡೆಗೊಂಡಿದ್ದರು.
2016: ರಾಂಚಿ: ಜಾರ್ಖಂಡಿನ ಗೊಡ್ಡಾ ಜಿಲ್ಲೆಯ ಕಲ್ಲಿದ್ದಲು ಗಣಿಯೊಂದು ಹಿಂದಿನ  ರಾತ್ರಿ ಕುಸಿದುಬಿದ್ದು ಹಲವು ಕಾರ್ವಿುಕರು ಜೀವ ಕಳೆದುಕೊಂಡರು. ರಕ್ಷಣಾ ಕಾರ್ಯ ಸಾಗಿದ್ದು, 10 ಶವಗಳನ್ನು ಹೊರತೆಗೆಯಲಾಗಿದೆ ಎಂದು ವರದಿಗಳು ತಿಳಿಸಿದವು. ಸುಮಾರು 200 ಅಡಿ ಆಳದಲ್ಲಿ ಗಣಿಗಾರಿಕೆ ಕೆಲಸ ನಡೆಯುತ್ತಿತ್ತು. ಭೂ ಕುಸಿತ ಪರಿಣಾಮ ಗಣಿಯೊಳಗೆ 20 ಕಾರ್ವಿುಕರು ಸಿಲುಕಿದ್ದಾರೆ ಎಂದು ಶಂಕಿಸಲಾಯಿತು. ಗಣಿಯಲ್ಲಿ 40-50 ಮಂದಿ ಕಾರ್ವಿುಕರು ಕೆಲಸ ಮಾಡುತ್ತಿದ್ದರು. ಘಟನಾ ಸ್ಥಳದಲ್ಲಿದ್ದ 3 ಎಕ್ಸ್ಕವೇಟರ್ಗಳು ಮತ್ತು 7 ಟಿಪ್ಪರಗಳು ಪಾತಾಳ ಸೇರಿವೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಯಿತು. ಜಾರ್ಖಂಡ ಮುಖ್ಯಮಂತ್ರಿ ರಘುವರ ದಾಸ್ ಘಟನೆ ಬಗ್ಗೆ ತೀವ್ರ ನಿಗಾ ವಹಿಸಿದ್ದು ರಕ್ಷಣಾ ಕಾರ್ಯಕ್ಕೆ ಆದೇಶಿಸಿ,, ಮೃತರ ಕುಟುಂಬಕ್ಕೆತಲಾ  2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 25 ಸಾವಿರ ರೂ. ಪರಿಹಾರ ಘೋಷಿಸಿದರು.

2016: ನವದೆಹಲಿ: ಪೂರ್ವ ದೆಹಲಿಯ ಪತ್ಪರಗಂಜ್ನಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರ ಕಚೇರಿಗೆ ಹಿಂದಿನ ರಾತ್ರಿ ಕನ್ನ ಕೊರೆಯಲಾಗಿದ್ದು ಕಂಪ್ಯೂಟರ್ಗಳು ಮತ್ತು ದಾಖಲೆಗಳನ್ನು ಕಳವು ಮಾಡಲಾಗಿದೆ. ಕನ್ನ ಕೊರೆದ ಘಟನೆ ಬಗ್ಗೆ ದೆಹಲಿ ಪೊಲೀಸರಿಗೆ ಈದಿನ ಬೆಳಗ್ಗೆ ಮಾಹಿತಿ ನೀಡಲಾಯಿತು. ಹಲವಾರು ದಾಖಲೆಗಳು, ಲೆಟರ್ ಹೆಡ್ಗಳು ಮತ್ತು ಕಂಪ್ಯೂಟರ್ಗಳನ್ನು ಸಿಸಿಟಿವಿ ದೃಶ್ಯಾವಳಿಗಳ ಸಹಿತವಾಗಿ ಕಳವು ಮಾಡಲಾಗಿದೆ. ಉಪ ಮುಖ್ಯಮಂತ್ರಿಯವರು ತಮ್ಮ ಕಚೇರಿಯನ್ನು ಪತ್ಪರಗಂಜ್ನಿಂದ ವಿನೋದ ನಗರಕ್ಕೆ ಬದಲಾಯಿಸುತ್ತಿದ್ದರು. ಪೊಲೀಸ್ ತಂಡವೊಂದು ಬೆಳಗ್ಗೆ ಸಿಸೋಡಿಯಾ ಕಚೇರಿಗೆ ಆಗಮಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ವರದಿಗಳು ಹೇಳಿದವು.
2008: ಏಳು ತಿಂಗಳಿಂದ ಪಕ್ಷೇತರರ ಕೃಪೆಯಲ್ಲಿದ್ದ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಭಾರಿ ಗೆಲುವಿನ ಹೆಮ್ಮೆ. ವಿಧಾನಸಭೆಯ ಎಂಟು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಐದು ಕಡೆ ಗೆಲ್ಲುವುದರ ಮೂಲಕ ಬಿಜೆಪಿ ತನ್ನ ಕಾಲ ಮೇಲೆ ತಾನು ನಿಂತುಕೊಂಡಿತು.. ಉಳಿದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದರೆ, ಕಾಂಗ್ರೆಸ್ ಒಂದೂ ಸ್ಥಾನ ಗಳಿಸದೆ ತೀವ್ರ ಮುಖಭಂಗ ಅನುಭವಿಸಿತು. ಸಚಿವರಾದ ಬಿಜೆಪಿಯ ಉಮೇಶ್ ಕತ್ತಿ (ಹುಕ್ಕೇರಿ), ಬಾಲಚಂದ್ರ ಜಾರಕಿಹೊಳಿ (ಅರಭಾವಿ), ಆನಂದ ಅಸ್ನೋಟಿಕರ್ (ಕಾರವಾರ), ಶಿವನಗೌಡ ನಾಯಕ (ದೇವದುರ್ಗ), ಕೊಳಚೆ ನಿರ್ಮೂಲನ ಮಂಡಳಿ ಅಧ್ಯಕ್ಷ ಜೆ.ನರಸಿಂಹಸ್ವಾಮಿ (ದೊಡ್ಡಬಳ್ಳಾಪುರ) ಮತ್ತು ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ (ಮಧುಗಿರಿ), ಎಂ.ಟಿ.ಕೃಷ್ಣಪ್ಪ (ತುರುವೇಕೆರೆ) ಮತ್ತು ಕಲ್ಪನಾ ಸಿದ್ಧರಾಜು (ಮದ್ದೂರು) ಜಯಗಳಿಸಿದರು.

2008: ಒಮರ್ ಅಬ್ದುಲ್ಲಾ ಅವರನ್ನು ಜಮ್ಮು ಮತ್ತು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಕಾಂಗ್ರೆಸ್ ನಿರ್ಧರಿಸುವುದರೊಂದಿಗೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಬಗೆಗೆ ಇದ್ದ ಗೊಂದಲ ನಿವಾರಣೆಯಾಯಿತು. ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷರಾದ ಒಮರ್ ಅಬ್ದುಲ್ಲಾ ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ ಬಳಿಕ ಎರಡೂ ಪಕ್ಷಗಳ ನಾಯಕರು ಮೈತ್ರಿ ಸರ್ಕಾರ ರಚನೆ ವಿಷಯ ಪ್ರಕಟಿಸಿದರು.

2008: ಬಾಂಗಾದ್ಲೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ವಾಜಿದ್ ನೇತೃತ್ವದ ಅವಾಮಿ ಲೀಗ್ ಮತ್ತು ಮಿತ್ರ ಪಕ್ಷಗಳು ಪ್ರಚಂಡ ವಿಜಯ ಸಾಧಿಸಿದವು. 299 ಕ್ಷೇತ್ರಗಳ ಪೈಕಿ 259 ಕ್ಷೇತ್ರಗಳನ್ನು ಈ ಪಕ್ಷಗಳು ಗೆದ್ದುಕೊಂಡವು. ಅವಾಮಿ ಲೀಗ್ ಒಂದೇ 230 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಹಸೀನಾ ಅವರ ಬದ್ಧ ಎದುರಾಳಿ ಹಾಗೂ ಮತ್ತೊಬ್ಬ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ನೇತೃತ್ವದ ಬಾಂಗಾದ್ಲೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಕೇವಲ 29 ಕ್ಷೇತ್ರಗಳಿಗಷ್ಟೇ ತೃಪ್ತಿಪಟ್ಟುಕೊಂಡರೆ, ಅವರ ಮಿತ್ರಪಕ್ಷ ಜಮಾತ್-ಎ- ಇಸ್ಲಾಮಿ (ಜೆಇಎಲ್) ಕೇವಲ 2 ಸ್ಥಾನಗಳನ್ನು ಗಳಿಸಿತು.

2008: ವೃತ್ತಿ ರಂಗಭೂಮಿಯ ಹಿರಿಯ ನಟಿ ಜಿ.ವಿ.ಮಾಲತಮ್ಮ (84) ಬೆಂಗಳೂರಿನಲ್ಲಿ ನಿಧನರಾದರು. ಕನ್ನಡ ರಂಗಭೂಮಿಯ ದಂತಕಥೆಯಾದ ಗುಬ್ಬಿ ವೀರಣ್ಣ ಅವರ ದ್ವಿತೀಯ ಪುತ್ರಿಯಾದ ಮಾಲತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಂದೆಯವರ ನಾಟಕ ಕಂಪೆನಿಯ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿ ಸೀತೆ, ಮಂಡೋದರಿ ಪಾತ್ರಗಳಲ್ಲಿ ದೊಡ್ಡ ಹೆಸರು ಮಾಡಿದರು. ತೆಲುಗು ನಾಟಕಗಳಲ್ಲೂ ಅವರು ಅಭಿನಯಿಸಿದ್ದರು. 'ಲವಕುಶ' ನಾಟಕ ನಡೆದಿದ್ದಾಗ ಒಮ್ಮೆ ಎಲೆಕ್ಟ್ರಿಕಲ್ ವೈರ್ ಮೇಲೆ ಕಾಲಿಟ್ಟರು. ಪರಿಣಾಮವಾಗಿ ತಮ್ಮ ವೃತ್ತಿ ಜೀವನದ ತಾರುಣ್ಯದಲ್ಲಿಯೇ ಎರಡೂ ಕಾಲುಗಳನ್ನು ಕಳೆದುಕೊಂಡರು. ನಂತರದ ಅವರ ಕಲಾಜೀವನಕ್ಕೆ ಬಹುದೊಡ್ಡ ಪೆಟ್ಟು ಬಿತ್ತು. ಪತಿ ಹಾಗೂ ಹೆಸರಾಂತ ನಟ ಬಸವರಾಜು ಅವರೂ ಕೂಡ ರಾತ್ರಿಯೆಲ್ಲ ನಿದ್ದೆಗೆಟ್ಟು ಮರುದಿನ ಸ್ಕೂಟರ್ ಓಡಿಸುವಾಗ ಅಪಘಾತದಲ್ಲಿ ಮಡಿದು ಇಂತಹದೇ ದುರಂತ ಕಂಡಿದ್ದರು. ಮಾಲತಮ್ಮ 2006ರ ಗುಬ್ಬಿ ವೀರಣ್ಣ ಪ್ರಶಸ್ತಿ ಹಾಗೂ 1999ರ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಹೆಸರಾಂತ ರಂಗನಟಿ ಬಿ.ಜಯಶ್ರೀ ಹಾಗೂ ಬಿ.ಪದ್ಮಶ್ರೀ ಮಾಲತಮ್ಮನವರ ಪುತ್ರಿಯರು.

2007: ಹಿಮಾಚಲ ಪ್ರದೇಶದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ನಿಚ್ಚಳ ಬಹುಮತ ಪಡೆಯುವಲ್ಲಿ ಪ್ರಧಾನ ಪಾತ್ರ ವಹಿಸಿದ ಪ್ರೇಮ್ ಕುಮಾರ್ ಧುಮಾಲ್ ಅವರು ಈದಿನ ಬೆಳಿಗ್ಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶಿಮ್ಲಾದ ಐತಿಹಾಸಿಕ ರಿಜ್ ಮೈದಾನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯಪಾಲ ವಿ ಎಸ್ ಕೊಕ್ಜೆ 63ರ ಹರೆಯದ ಧುಮಾಲ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 1971ರಲ್ಲಿ ಆಸ್ತಿತ್ವಕ್ಕೆ ಬಂದ ಹಿಮಾಚಲ ಪ್ರದೇಶದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿದ ಧುಮಾಲ್ ಅವರು ಹಿಂದೆ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿದ್ದರು. ಮಾಜಿ ಸೈನಿಕನ ಪುತ್ರರಾದ ಧುಮಾಲ್ ಅವರಿಗೆ ಸಂಖ್ಯೆ ಒಂಬತ್ತರ ಮೇಲೆ ವಿಪರೀತ ನಂಬಿಕೆ. ಇದು ಅದೃಷ್ಟ ತಂದು ಕೊಟ್ಟಿದೆ ಎಂದೇ ಅವರ ಅನಿಸಿಕೆ. ಇವರ ಬದುಕಿನಲ್ಲಿ ಹಲವು ಪ್ರಮುಖ ಸಂಗತಿಗಳು ಸಂಖ್ಯೆ 9ರೊಂದಿಗೆ ಹೊಂದಿಕೊಳ್ಳುತ್ತವೆ. ಇವರ ಕಾರಿನ ಸಂಖ್ಯೆಯಲ್ಲಿ ಕೂಡಾ ಸಂಖ್ಯೆ 9 ಎದ್ದು ಕಾಣುತ್ತದೆ. ಅಧಿಕಾರ ಸ್ವೀಕರಿಸಿದ್ದು ಕೂಡಾ ಬೆಳಗ್ಗೆ 1.25ಕ್ಕೆ. ಅಂದರೆ (1+1ಥ2+5) ಒಟ್ಟು ಸಂಖ್ಯೆ 9ಆಗುತ್ತದೆ.

2007: ಹತ್ಯೆಗೀಡಾದ ಬೆನಜೀರ್ ಭುಟ್ಟೊ ಅವರ ಪುತ್ರ ಬಿಲಾವಲ್ ಅವರನ್ನು ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷರನ್ನಾಗಿ ಪಕ್ಷವು ಆಯ್ಕೆ ಮಾಡಿತು. ಬೆನಜೀರ್ ಅವರ ಪತಿ ಆಸಿಫ್ ಅಲಿ ಜರ್ದಾರಿ, ಮಖದ್ದುಮ್ ಫಾಹಿಂ ಮತ್ತು ಶಹಾ ಮೆಹಮೂದ್ ಅವರನ್ನು ಸಹ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

2007: ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯ ಸಿಲ್ವನ್ ಕಡಲತೀರದಲ್ಲಿ ರಚಿಸಿದ ಏಸುಕ್ರಿಸ್ತನ ಕಲಾಕೃತಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆಯಿತು. ಸುದರ್ಶನ್ ಅವರು ಮರಳಿನಲ್ಲಿ ಪ್ರಪಂಚದಲ್ಲಿಯೇ ದೊಡ್ಡದಾದ ಏಸುಕ್ರಿಸ್ತನ ಕಲಾಕೃತಿಯನ್ನು ರಚಿಸಿದ್ದು, ಈ ಮರಳು ಕಲಾಕೃತಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿರುವ ಬಗ್ಗೆ ತಮಗೆ ಪತ್ರ ಬಂದಿರುವುದಾಗಿ ಪ್ರಕಟಿಸಿದರು. ಗೋಲ್ಡನ್ ಮರಳು ಕಲಾಕೃತಿ ಸಂಸ್ಥೆಯ 15 ವಿದ್ಯಾರ್ಥಿಗಳ ನೆರವಿನಿಂದ ತಾವು 60 ಅಡಿ ಉದ್ದ, 30 ಅಡಿ ಅಗಲ ಮತ್ತು 22 ಅಡಿ ಎತ್ತರದ ಏಸುಕ್ರಿಸ್ತನ ಬೃಹತ್ ಕಲಾಕೃತಿ ನಿರ್ಮಿಸಲು ಸಾಧ್ಯವಾಯಿತು. 600 ಟನ್ ಮರಳು ಬಳಸಿ 25 ಗಂಟೆಗಳಲ್ಲಿ ಕಲಾಕೃತಿ ನಿರ್ಮಿಸಲಾಯಿತು ಎಂದು ಅವರು ವಿವರಿಸಿದರು.

2007: ಕೀನ್ಯಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಕಿಬಾಕಿ ಅವರು ಮರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೊಗ ನೈರೋಬಿಯಲ್ಲಿ ಪ್ರಕಟಿಸಿತು.

2007: ನವದೆಹಲಿಯ ಸ್ವರ್ಣ ಜಯಂತಿ ಪಾರ್ಕಿನಲ್ಲಿ ಸಂಘಟಿಸಲಾಗಿದ್ದ ಪ್ರದರ್ಶನದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ವಿಶ್ವ ಹಿಂದು ಪರಿಷತ್ ಮತ್ತು ಇತರ ಹಿಂದು ಸಂಘಟನೆಗಳ ಸುಮಾರು ಆರು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ರಾಮಸೇತು ಯೋಜನೆ ಕೈಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಆರೆಸ್ಸೆಸ್ಸಿನ ಮುಖ್ಯಸ್ಥ ಕೆ.ಎಸ್. ಸುದರ್ಶನ್, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸ್ಗಢದ ಮುಖ್ಯಮಂತ್ರಿ ರಮಣ ಸಿಂಗ್, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ, ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ವಿ ಎಚ್ ಪಿ ನಾಯಕ ಪ್ರವೀಣ್ ತೊಗಾಡಿಯಾ ಮತ್ತು ಇತರ ನಾಯಕರು ರ್ಯಾಲಿಯಲ್ಲಿ ಪಾಲ್ಗೊಂಡ್ದಿದರು. ಬಿಜೆಪಿಯ ಹಿರಿಯ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರ್ಯಾಲಿಗೆ ಶುಭ ಕೋರಿ ಸಂದೇಶ ರವಾನಿಸಿದ್ದರು.

2006: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಅವರನ್ನು ಬಾಗ್ದಾದಿನಲ್ಲಿ ಭಾರತೀಯ ಕಾಲಮಾನ ಬೆಳಗ್ಗೆ 8.30ಕ್ಕೆ (ಗ್ರೀನ್ ವಿಚ್ ಕಾಲಮಾನ 3 ಗಂಟೆ) ಗಲ್ಲಿಗೇರಿಸಲಾಯಿತು. 1982ರಲ್ಲಿ ದುಜೈಲಿನಲ್ಲಿ ನಡೆದ 148 ಶಿಯಾಗಳ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಸದ್ದಾಮ್ ಅವರಿಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿತ್ತು. ನಂತರ ಮೇಲ್ಮನವಿ ನ್ಯಾಯಾಲಯ ಈ ತೀರ್ಪನ್ನು ದೃಢಪಡಿಸಿತ್ತು. ತಮ್ಮ ಹತ್ಯೆಗೆ ನಡೆದ ಯತ್ನಕ್ಕೆ ಸೇಡಿನ ಕ್ರಮವಾಗಿ ಸದ್ದಾಮ್ ಶಿಯಾಗಳ ಮಾರಣ ಹೋಮ ನಡೆಸಿದ್ದರು.ಸದ್ದಾಮ್ ಹುಸೇನ್ ಅವರು ಇರಾಕಿನ ಟಿಕ್ರಿತ್ ಬಳಿಯ ಪುಟ್ಟ ಅವ್ಜಾಹ್ ಗ್ರಾಮದಲ್ಲಿ 1937ರ ಏಪ್ರಿಲ್ 28ರಂದು ಜನಿಸಿದರು. ಅವರು 1957ರಲ್ಲಿ ಬಾತ್ ಪಕ್ಷವನ್ನು ಸೇರಿದರು. 1968ರಲ್ಲಿ ದಂಗೆಯಲ್ಲಿ ಶಾಮೀಲಾದರು. ಈ ದಂಗೆಯಲ್ಲಿ ಬಾತ್ ಪಕ್ಷ ಅಧಿಕಾರಕ್ಕೆ ಬಂತು. 1969ರಲ್ಲಿ ಇರಾಕಿನ ಉಪಾಧ್ಯಕ್ಷರಾದರು. 1979ರಲ್ಲಿ ಇರಾಕಿನ ಅಧ್ಯಕ್ಷರಾದರು. 1980-1988ರ ಅವಧಿಯಲ್ಲಿ ಇರಾನಿನ ವಿರುದ್ಧ ಯುದ್ಧ ನಡೆಸಿದರು. 1990-1991ರಲ್ಲಿ ಕುವೈತ್ ಮೇಲೆ ದಾಳಿನಡೆಸಿ ಕೊಲ್ಲಿ ಸಮರಕ್ಕೆ ನಾಂದಿ ಹಾಡಿದರು. ಅಮೆರಿಕದ ದಾಳಿಯ ಬಳಿಕ 2003ರ ವಸಂತ ಕಾಲದಲ್ಲಿ ಇರಾಕ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತರಾದರು. 2003ರ ಡಿಸೆಂಬರ್ 13ರಂದು ಟಿಕ್ರಿತ್ ಸಮೀಪ ಅಮೆರಿಕ ಸೇನೆಗೆ ಕೈಸೆರೆಯಾದರು. 2004ರ ಜುಲೈ 1ರಂದು ಮಾನವೀಯತೆ ವಿರುದ್ಧದ 7 ಅಪರಾಧಗಳಿಗೆ ಸಂಬಂಧಿಸಿದಂತೆ ಅವರು ಮತ್ತು ಸಹಚರರ ವಿರುದ್ಧ ದೋಷಾರೋಪ ಹೊರಿಸಲಾಯಿತು. 2005ರ ಅಕ್ಟೋಬರ್ 19ರಂದು ದುಜೈಲಿನಲ್ಲಿ 1982ರಲ್ಲಿ ನಡೆದ 148 ಶಿಯಾಗಳ ಹತ್ಯಾಕಾಂಡದ ವಿಚಾರಣೆ ಆರಂಭವಾಯಿತು. 2006ರ ಆಗಸ್ಟ್ 21ರಂದು 1987-1988ರ ಅರಾಫಲ್ ಕಾರ್ಯಾಚರಣೆ ಹಾಗೂ ಕುರ್ದರ ಜನಾಂಗಹತ್ಯೆ ಕುರಿತ ವಿಚಾರಣೆ ಆರಂಭವಾಯಿತು. 1979-2003ರ ತಮ್ಮ ಆಡಳಿತ ಅವಧಿಯಲ್ಲಿ ಸದ್ದಾಮ್ ಹುಸೇನ್ ನಡೆಸಿದ್ದರೆಂದು ಆಪಾದಿಸಲಾದ ಪ್ರಮುಖ ದೌರ್ಜನ್ಯಗಳ ವಿವರಗಳು: 1982- ಸದ್ದಾಮ್ ಹತ್ಯೆಯತ್ನದ ವಿರುದ್ಧ ಸೇಡಿನ ಕ್ರಮವಾಗಿ ದುಜೈಲಿನಲ್ಲಿ 148 ಶಿಯಾಗಳ ಹತ್ಯೆ. 1983 ಕುರ್ದಿಸ್ಥಾನದ ಬಲಾಢ್ಯ ಬರ್ಝಾನಿ ಜನಾಂಗದ 8000 ಸದಸ್ಯರಿಗೆ ಗಲ್ಲು. 1988 ಈಶಾನ್ಯ ಇರಾಕಿನ ಹಲಬ್ ಜಾದ್ಲದಲ್ಲಿ ಕುರ್ದರ ವಿರುದ್ಧ ರಾಸಾಯನಿಕ ಅಸ್ತ್ರಗಳ ಬಳಕೆ, 5000 ಕುರ್ದರ ಹತ್ಯೆ. 1991 ದಕ್ಷಿಣ ಇರಾಕಿನಲ್ಲಿ ಶಿಯಾಗಳ ವಿರುದ್ಧ ದಾಳಿ, 1000 ಸಾವು. 1987-1989 ಅನ್ ಫಲ್ ಅಭಿಯಾನ, ರಾಸಾಯನಿಕ ಅಸ್ತ್ರಗಳ ಬಳಕೆ, ಅಂದಾಜು 1,82,000 ಸಾವು, ಕುರ್ದರ ಸಾಮೂಹಿಕ ವಲಸೆ.

2006: ಅರುವತ್ತಮೂರು ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 600 ಜನರನ್ನು ಒಯ್ಯುತ್ತಿದ್ದ `ಸೇನಾಪತಿ' ಹೆಸರಿನ ನೌಕೆಯು ಡಿಸೆಂಬರ್ 29ರ ನಡುರಾತ್ರಿ ಕೇಂದ್ರ ಜಾವಾ ಕರಾವಳಿಯ ಸಮೀಪ ಸಮುದ್ರದಲ್ಲಿ ಮುಳುಗಿ, ನೂರಾರು ಮಂದಿ ಜಲಸಮಾಧಿಯಾಗಿರುವ ಭೀತಿ ಇದೆ ಎಂದು ಇಂಡೋನೇಷ್ಯಾದ ರೇಡಿಯೊ ವರದಿ ಮಾಡಿತು. ನೌಕಾ ಅಧಿಕಾರಿಗಳು ನೌಕೆಯಲ್ಲಿದ್ದ ಜನ 600 ಎಂದು ದೃಢಪಡಿಸಿದರು. ಕೇಂದ್ರ ಜಾವಾದ ಬೋರ್ನಿಯೋದ ಸುಮರಂಗ್ನಿಂದ ಕೇಂದ್ರ ಕಲಿಮಂತನ್ ಪ್ರಾಂತ್ಯದ ಕುಮಾಯಿ ಬಂದರಿಗೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿತು. ಈ ನೌಕೆಯ ಸಾಮರ್ಥ್ಯ 850. ಇಂಡೋನೇಷ್ಯಾದ 17,000 ದ್ವೀಪಗಳ ಮಧ್ಯೆ ಸಂಚಾರಕ್ಕೆ ಹಡಗುಗಳು ಮತ್ತು ತೆಪ್ಪಗಳು ಜನಪ್ರಿಯ ಸಾಧನಗಳಾಗಿದ್ದು, ವಿಮಾನಯಾನಕ್ಕಿಂತ ಅಗ್ಗ ಕೂಡಾ. ಆದರೆ ಹಡಗು, ತೆಪ್ಪಗಳನ್ನು ಬಳಸುವಾಗ ಸುರಕ್ಷತೆಗೆ ಸಂಬಂಧಿಸಿದ ಯಾವುದೇ ನಿಯಮಗಳನ್ನು ಬಿಗಿಯಾಗಿ ಅನುಸರಿಸದಿರುವುದೇ ದುರಂತಕ್ಕೆ ಕಾರಣ.

2006: ವಿಜಯ ಕರ್ನಾಟಕ ಪತ್ರಿಕೆಯ ಓದುಗರ ವರ್ಷದ ಅಗ್ರಮಾನ್ಯ 10 ಸಾಧಕರ ಪಟ್ಟಿಯಲ್ಲಿ ಗೋವಿನ ಸಂರಕ್ಷಣೆಯ ಕುರಿತು ನಡೆಸಿದ ಅಭಿಯಾನಕ್ಕಾಗಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮೊದಲ ಸ್ಥಾನ ಅಲಂಕರಿಸಿದರು. ಶ್ರೀಗಳು ದೇಶೀಯ ಗೋ ತಳಿಗಳ ಸಂರಕ್ಷಣೆಗೆ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಲಚಲ, ಶ್ರೀಶ್ರೀ ರವಿಶಂಕರ ಗುರೂಜಿ, ಡಾ. ವೀರೇಂದ್ರ ಹೆಗ್ಗಡೆ, ಡಾ. ಜಿ.ಎಸ್. ಶಿವರುದ್ರಪ್ಪ, ರಾಹುಲ್ ದ್ರಾವಿಡ್, ನಿಸಾರ್ ಅಹಮದ್, ವಿಷ್ಣು ವರ್ಧನ್, ವಿ.ಕೆ. ಪಾಟೀಲ್ ಮತ್ತು ಸಿದ್ದರಾಮಯ್ಯ ಅಗ್ರಮಾನ್ಯ ಸಾಧಕರ ಪಟ್ಟಿಗೆ ಸೇರ್ಪಡೆಯಾದ ಇತರರು.

2006: ಹಿರಿಯ ಕನ್ನಡ ಚಲನಚಿತ್ರ ನಟ, ನಿರ್ದೇಶಕ ಪೇ.ಕೆ.ಟಿ. ಶಿವರಾಂ (92) ತಮಿಳುನಾಡಿನ ಚೆನ್ನೈಯಲ್ಲಿ ನಿಧನರಾದರು. ಎಂಟು ಕನ್ನಡ ಚಿತ್ರಗಳನ್ನು ನಿರ್ದೇಶಿದ್ದ ಅವರು 85ಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿನಟಿಸಿದ್ದರು.

2005: ವಿಶ್ವ ಖ್ಯಾತಿಯ `ಟೈಗರ್' ಕಾರ್ಟೂನ್ ಚಿತ್ರ ಸರಣಿಯ ಸೃಷ್ಟಿಕರ್ತ ಬಡ್ ಬ್ಲೇಕ್ (87) ಪೋರ್ಟ್ ಲ್ಯಾಂಡಿನಲ್ಲಿ ನಿಧನರಾದರು. ನ್ಯೂಯಾರ್ಕಿನ ಜಾಹೀರಾತು ಏಜೆನ್ಸಿಯೊಂದರಲ್ಲಿ ಉದ್ಯೋಗದಲ್ಲಿದ್ದ ಬ್ಲೇಕ್ 1965ರಲ್ಲಿ ಉದ್ಯೋಗ ತೊರೆದು 'ಟೈಗರ್' ಚಿತ್ರ ಸರಣಿ ರಚಿಸಲು ಆರಂಭಿಸಿದ್ದರು. 11 ರಾಷ್ಟ್ರಗಳ 120 ಪತ್ರಿಕೆಗಳಲ್ಲಿ 'ಟೈಗರ್' ಕಾರ್ಟೂನ್ ಸರಣಿ ಈಗಲೂ ಪ್ರಕಟಗೊಳ್ಳುತ್ತಿದೆ.

2005: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆಗೆ ಸಂಬಂಧ ಬಲಪಡಿಸಿಕೊಳ್ಳುವ ಸಂದೇಶದೊಂದಿಗೆ ಪ್ರಾರಂಭಗೊಂಡ ಭಾರತೀಯ ಜನತಾ ಪಕ್ಷದ ರಜತ ಮಹೋತ್ಸವ, ಆದರ್ಶವಾದ ಮತ್ತು ವಿಚಾರಧಾರೆಗಳ ಮೂಲಕ್ಕೆ ಮರಳುವ ನಿರ್ಧಾರದೊಂದಿಗೆ ಅಂತ್ಯಗೊಂಡಿತು.

1971: ಖ್ಯಾತ ಅಣುವಿಜ್ಞಾನಿ ವಿಕ್ರಮ್ ಅಂಬಾಲಾಲ್ ಸಾರಾಭಾಯಿ ನಿಧನರಾದರು.

1968: ನಾರ್ವೆಯ ರಾಜಕಾರಣಿ, ರಾಜತಾಂತ್ರಿಕ ಟ್ರೈಗ್ವೆ ಲೀ ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು. ಅವರು 1946-1952ರ ಅವಧಿಯಲ್ಲಿ ವಿಶ್ವಸಂಸ್ಥೆಯ ಮೊದಲ ಮಹಾಕಾರ್ಯದರ್ಶಿ (ಸೆಕ್ರೆಟರಿ ಜನರಲ್) ಆಗಿದ್ದರು.

1935: ಭಾರತದ ಚೆಸ್ ಆಟಗಾರ ಮ್ಯಾನ್ಯುಯೆಲ್ ಅರೋನ್ ಹುಟ್ಟಿದ ದಿನ. ಇವರು 1961ರಲ್ಲಿ ಭಾರತದ ಮೊತ್ತ ಮೊದಲ (ಹಾಗೂ ಏಷ್ಯಾದ ಎರಡನೇ) ಅಂತಾರಾಷ್ಟ್ರೀಯ ಚೆಸ್ ಮಾಸ್ಟರ್ ಹೆಗ್ಗಳಿಕೆಗೆ ಪಾತ್ರರಾದರು.

1930: ಸಾಹಿತಿ ಸುಲೋಚನಾ ದೇವಿ ಆರಾಧ್ಯ ಜನನ.

1922: ರಷ್ಯ, ಟ್ರಾನ್ಸ್ ಕಾಕೇಸಿಯನ್ ಸೋವಿಯತ್ ಫೆಡರೇಟೆಡ್ ರಿಪಬ್ಲಿಕ್ಸ್, ಉಕ್ರೇನ್ ಹಾಗೂ ಬೆಲೊರಷ್ಯನ್ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ ಈ ನಾಲ್ಕು ಗಣರಾಜ್ಯಗಳು ಒಟ್ಟಾಗಿ `ಸೋವಿಯತ್ ಒಕ್ಕೂಟ'ವನ್ನು (ಸೋವಿಯತ್ ಯೂನಿಯನ್) ಸ್ಥಾಪಿಸಿದವು.

1906: ಭಾರತದ ಮುಸ್ಲಿಮರ ಹಕ್ಕುಗಳ ರಕ್ಷಣೆಗಾಗಿ ಆಲ್ ಇಂಡಿಯಾ ಮುಸ್ಲಿಂ ಲೀಗನ್ನು ಸ್ಥಾಪಿಸಲಾಯಿತು. ಢಾಕಾದ ನವಾಬ್ ಸಲೀಮುಲ್ಲಾ ಖಾನ್ ಇದರ ಸ್ಥಾಪಕ ಅಧ್ಯಕ್ಷರಾಗಿದ್ದರು. ಹಲವು ವರ್ಷಗಳ ಕಾಲ ಮುಸ್ಲಿಂ ಲೀಗ್ ಹಿಂದು-ಮುಸ್ಲಿಮರ ಏಕತೆಗಾಗಿಯೇ ಕರೆ ನೀಡಿತ್ತು. 1940ರಲ್ಲಿ ಮಾತ್ರ ಅದು ಭಾರತದಿಂದ ಪ್ರತ್ಯೇಕವಾದ ಮುಸ್ಲಿಂ ರಾಷ್ಟ್ರದ ರಚನೆಗೆ ಕರೆ ನೀಡಿತು.

1902: ಡಾ. ರಘುವೀರ (1902-1963) ಹುಟ್ಟಿದ ದಿನ. ಅವರು ಭಾರತ, ಚೀನಾ, ಜಪಾನ್ ಮತ್ತಿತರ ಪೂರ್ವ ಏಷ್ಯಾದ ಭಾಷೆಗಳ ಅಧ್ಯಯನ ನಡೆಸಿ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ಸಂಸ್ಕೃತ, ಹಿಂದಿ ವಿದ್ವಾಂಸರು. ಭಾರತೀಯ ಜನಸಂಘದ ಅಧ್ಯಕ್ಷರಾಗಿದ್ದರು.

1896: ಕನ್ನಡ ಸಾಹಿತ್ಯಕ್ಕೆ ಹಾಸ್ಯದ ಸ್ಪರ್ಶ ನೀಡಿದ ಪ್ರಮುಖರಲ್ಲಿ ಒಬ್ಬರಾದ ಪಡುಕೋಣೆ ರಮಾನಂದರಾಯ (30-12-1896ರಿಂದ 13-2-1983) ಅವರು ನರಸಿಂಗ ರಾಯ- ಚಂದ್ರಭಾಗಿ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪಡುಕೋಣಯಲ್ಲಿ ಜನಿಸಿದರು.

1887: ಭಾರತೀಯ ವಿದ್ಯಾಭವನದ ಸ್ಥಾಪಕ, ಸ್ವಾತಂತ್ರ್ಯ ಹೋರಾಟಗಾರ, ವಕೀಲ ಕನ್ಹಯ್ಯಲಾಲ್ ಮಣೇಕ್ ಲಾಲ್ ಮುನ್ಶಿ `ಕೆ.ಎಂ. ಮುನ್ಶಿ' (1887-1971) ಅವರು ಹುಟ್ಟಿದ ದಿನ.

1879: ಭಾರತದ ಖ್ಯಾತ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾದ ರಮಣ ಮಹರ್ಷಿ (1879-1950) ಅವರು ಹುಟ್ಟಿದ್ದು ಇದೇ ದಿನ.

No comments:

Post a Comment