2019: ನವದೆಹಲಿ: ಮುಂಗಾರು ಮಹಾ ಪ್ರವಾಹಕ್ಕೆ ನಲುಗಿರುವ ದಕ್ಷಿಣ
ಹಾಗೂ ಪಶ್ಚಿಮ ಭಾರತದ ರಾಜ್ಯಗಳಲ್ಲಿ ಮೃತರ ಸಂಖ್ಯೆ 178ಕ್ಕೆ ಏರಿತು. ನಾಲ್ಕು ದಿನಗಳಿಂದ ಬಿಡದೆ ಸುರಿಯುತ್ತಿರುವ
ಜಡಿಮಳೆಗೆ ಕೇರಳ ಮತ್ತು ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತಿನ ನದಿಗಳು ಉಕ್ಕಿ ಹರಿಯುತ್ತಿದ್ದು ಬಹಳಷ್ಟು ಭಾಗಗಳು ಜಲಾವೃತಗೊಂಡವು.
ಕರ್ನಾಟಕದಲ್ಲಿ ಬಳ್ಳಾರಿಯಲ್ಲಿ ತುಂಗಭದ್ರಾ ನದಿ ದಂಡೆಯಲ್ಲಿರುವ ಯುನೆಸ್ಕೋ ಜಾಗತಿಕ ಪರಂಪರೆಯ ತಾಣವಾಗಿರುವ ಹಂಪಿ, ಜಲಾಶಯದಿಂದ
1.70 ಕ್ಯುಸೆಕ್ ನೀರು ಬಿಡುಗಡೆ ಮಾಡಿದ ಪರಿಣಾಮವಾಗಿ ಜಲಾವೃತಗೊಂಡಿತು ಹಂಪಿಯಲ್ಲಿದ್ದ ಪ್ರವಾಸಿಗರನ್ನು
ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಯಿತು. ಕೇಂದ್ರ
ಗೃಹ ಸಚಿವ ಅಮಿತ್
ಶಾ ಅವರು ಕರ್ನಾಟಕ ಮತ್ತು
ಮಹಾರಾಷ್ಟ್ರದ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈದಿನ
ವೈಮಾನಿಕ ಸಮೀಕ್ಷೆ ನಡೆಸಿದರು. ಮುಂಗಾರು ಮಹಾಮಳೆಗೆ
ನಲುಗಿರುವ ಕೇರಳದಲ್ಲಿ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ಭಾನುವಾರ ೬೮ಕ್ಕೆ ಏರಿತು. ಭಾರೀ
ಭೂಕುಸಿತಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿರುವ ಮಲಪ್ಪುರಂನ ಕಾವಲಪಾರ ಪ್ರದೇಶದಲ್ಲಿ ಅಧಿಕಾರಿಗಳು ಸೇನೆಯನ್ನು ನಿಯೋಜಿಸಿದರು. ಮಳೆ ಸ್ವಲ್ಪ ಕಡಿಮೆಯಾಗಿದ್ದರೂ, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ ಮುಂದುವರೆಯಿತು. ಭಾರೀ
ಮಳೆಯಿಂದಾಗಿ ರಾಜ್ಯದಲ್ಲಿ ಸತತ ಎರಡನೇ ವರ್ಷ ಭಾರೀ ಪ್ರವಾಹ ಪರಿಸ್ಥಿತಿ ಉಂಟಾಗಿ, ಎರಡು
ಲಕ್ಷಕ್ಕೂ ಹೆಚ್ಚು ಮಂದಿಯನ್ನು ಜಲಾವೃತ ಪ್ರದೇಶಗಳಿಂದ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ೨.೨೫ ಲಕ್ಷಕ್ಕೂ ಹೆಚ್ಚು
ಮಂದಿ ೧೫೫೦ ಪರಿಹಾರ ಶಿಬಿರಗಳಲ್ಲಿ ಇದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವರದಿಗಾರಿಗೆ ತಿಳಿಸಿದರು. ನೈಸರ್ಗಿಕ ವಿಕೋಪದ ಈ ಸಂದರ್ಭದಲ್ಲಿ ಎಲ್ಲ
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸಮಾಧಿ ಮಾಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಗಮನ ಕೊಡಬೇಕಾದ ಅಗತ್ಯ ಇದೆ ಎಂದು ವಿಜಯನ್ ಹೇಳಿದರು. ಯಾವ
ರಾಜಕೀಯ ಪಕ್ಷಗಳಿಗೆ ಸೇರಿದವರು ಎಂಬುದಾಗಿ ತೋರಿಸಿಕೊಳ್ಳುವಂತಹ ಸಮಯ ಇದಲ್ಲ. ಲಾಂಛನ ಮತ್ತು ಘೋಷಣೆಗಳನ್ನು ಬರೆದ ಟಿ- ಶರ್ಟ್ ಧರಿಸಿದ ಜನರನ್ನು ನಿರುತ್ಸಾಹಗೊಳಿಸಲಾಗುವುದು. ಹಲವಾರು ಕಡೆಗಳಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಡೆಮಾಕ್ರಟಿಕ್ ಯುತ್ ಫೆಡರೇಶನ್ ಆಫ್ ಇಂಡಿಯಾ, ಸೇವಾಭಾರತಿ ಧ್ವಜಗಳು ಮತ್ತು ಟಿ-ಶರ್ಟ್ ಧರಿಸಿದವರು
ಕಂಡು ಬಂದಿದ್ದಾರೆ ಎಂದು ವಿಜಯನ್ ಹೇಳಿದರು. ವಯನಾಡಿನ ಭಾಣಾಸುರಸಾಗರ ಅಣೆಕಟ್ಟಿನ ತೂಬುಗಳನ್ನು ಮಧ್ಯಾಹ್ನ ತೆರೆಯಲಾಗಿದ್ದು, ಹೆಚ್ಚುವರಿ ನೀರು ಹರಿದು ಹೋಯಿತು. ವಯನಾಡು ತಲುಪಿದ
ರಾಹುಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ವಯನಾಡಿಗೆ ಆಗಮಿಸಿ ಪರಿಹಾರ ಶಿಬಿರಗಳ ಪರಿಶೀಲನೆ ನಡೆಸಿದ್ದಲ್ಲದೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿಜನರ ಜೊತೆ ಮಾತುಕತೆ ನಡೆಸಿದರು. ‘ಮುಂದಿನ
ಕೆಲವು ದಿನಗಳವರೆಗೆ ನಾನು ನನ್ನ ಲೋಕಸಭಾ ಕ್ಷೇತ್ರವಾದ ಪ್ರವಾಹ ಪೀಡಿತ ವಯನಾಡಿನಲ್ಲಿಯೇ ವಾಸ್ತವ್ಯ ಇರುತ್ತೇನೆ. ನಾನು ವಯನಾಡಿನಾದ್ಯಂತ ಪರಿಹಾರ ಶಿಬಿರಗಳನ್ನು ಸಂದರ್ಶಿಸುತ್ತೇನೆ ಮತ್ತು ಜಿಲ್ಲೆ ಹಾಗೂ ರಾಜ್ಯ ಅಧಿಕಾರಿಗಳ ಜೊತೆ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸುತ್ತೇನೆ’ ಎಂದು ರಾಹುಲ್ ನುಡಿದರು. ಸೇನೆ, ವಾಯುಪಡೆ ಮತ್ತು ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆ (ಎನ್ಡಿಆರ್ಎಫ್) ವಿಪರೀತ ಮಳೆಯಿಂದಾಗಿ ಪ್ರವಾಹ ತೀವ್ರಗೊಂಡಿರುವ ಕೇರಳ ರಾಜ್ಯದಲ್ಲಿ ವ್ಯಾಪಕ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದವು.
2019: ನವದೆಹಲಿ: ತನ್ನ ನೆಲದಲ್ಲಿ ಭಾರತ-ಪಾಕಿಸ್ತಾನದ ಸ್ನೇಹದ ಪ್ರತೀಕವಾಗಿದ್ದ ಸಂಜೌತಾ ಎಕ್ಸ್ಪ್ರೆಸ್ ರೈಲುಸೇವೆಯನ್ನು ಅಮಾನತುಗೊಳಿಸಿರುವುದಾಗಿ ಪಾಕಿಸ್ತಾನವು ಪ್ರಕಟಿಸಿದ ಕೆಲವು ದಿನಗಳ ಬಳಿಕ, ಪಾಕಿಸ್ತಾನಕ್ಕೆ ಹೋಗುತ್ತಿದ್ದ ಸಂಜೌತಾ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಭಾರತವು ಈದಿನ ರದ್ದು ಪಡಿಸಿತು. ಜಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಲು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಭಾರತ ಸರ್ಕಾರವು ನಿರ್ಧರಿಸಿದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಸಂಜೌತಾ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಅಮಾನತುಗೊಳಿಸಿತ್ತು. ಸಂವಿಧಾನದ ೩೭೦ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ್ದರಿಂದ ಭಯೋತ್ಪಾದನೆ ಅಂತ್ಯಗೊಳ್ಳಲಿದ್ದು ಪ್ರದೇಶದ ಪ್ರಗತಿಯಾಗಲಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ
ಚೆನ್ನೆಯಲ್ಲಿ ದೃಢಪಡಿಸಿದ್ದರು. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಕುರಿತ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ
ಮಾತನಾಡಿದ ಅವರು ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸುವುದರಿಂದ ರಾಷ್ಟ್ರಕ್ಕೆ ಹಿತವಾಗಲಿದೆ ಎಂಬುದನ್ನು ತಾವು ದೃಢವಾಗಿ ನಂಬಿರುವುದಾಗಿ ಹೇಳಿದ್ದರು. ಉತ್ತರ
ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ (ಸಿಪಿಆರ್ಒ) ದೀಪಕ್ ಕುಮಾರ್
ಅವರು ’ಪಾಕಿಸ್ತಾನದ ನಿರ್ಧಾರದ ಹಿನ್ನೆಲೆಯಲ್ಲಿ ಲಾಹೋರ್ ಮತ್ತು ಅಟ್ಟಾರಿ ಮಧ್ಯೆ ಸಂಚರಿಸುತ್ತಿದ್ದ ಸಂಜೌತಾ ಎಕ್ಸ್ ಪ್ರೆಸ್ (ನಂ.೧೪೬೦೭/೧೪೬೦೮)
ಮತ್ತು ದೆಹಲಿ ಹಾಗೂ ಅಟ್ಟಾರಿ ಮಧ್ಯೆ ಸಂಚರಿಸುತ್ತಿದ್ದ ಲಿಂಕ್ ಎಕ್ಸ್ ಪ್ರೆಸ್ ರೈಲುಗಾಡಿಯನ್ನು (ನಂಬರ್ ೧೪೦೦೧/೧೪೦೦೨) ರದ್ದು
ಪಡಿಸಲಾಗಿದೆ’ ಎಂದು
ಹೇಳಿದರು. ಪರಿಸ್ಥಿತಿ
ಶಾಂತ: ಈ ಮಧ್ಯೆ, ರಾಜ್ಯದಲ್ಲಿ
ಪರಿಸ್ಥಿತಿ ಸಂಪೂರ್ಣ ಶಾಂತವಾಗಿದೆ ಮತ್ತು ಯಾವುದೇ ಅಹಿತಕರ ಘಟನೆ ಕಳೆದ ಒಂದು ವಾರದಲ್ಲಿ ವರದಿಯಾಗಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದರು. ‘ಒಂದು ಸಣ್ಣ
ಕಲ್ಲೆಸೆತದ ಘಟನೆಯನ್ನು ಹೊರತು ಪಡಿಸಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಈ ಕಲ್ಲೆಸೆತದ ಘಟನೆಯನ್ನೂ
ಮೂಲದಲ್ಲೇ ಚಿವುಟಲಾಯಿತು’ ಎಂದು
ಪೊಲೀಸ್ ಮಹಾ ನಿರ್ದೇಶಕ ದಿಲ್ ಬಾಗ್ ಸಿಂಗ್ ಹೇಳಿದ್ದರು.
ಕಣಿವೆಯಲ್ಲಿ ಗೋಲೀಬಾರ್ ಘಟನೆಗಳು ಘಟಿಸಿವೆ ಎಂಬ ನಕಲಿ ದುರುದ್ದೇಶಪೂರಿತ ಸುದ್ದಿಗಳನ್ನು ನಂಬದಂತೆ ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಮಣ್ಯಂ ಅವರು ಮನವಿ ಮಾಡಿರುವುದಾಗಿ ಸರ್ಕಾರದ ಹೇಳಿಕೆ ತಿಳಿಸಿತು. ಕಳೆದ ಆರು ದಿನಗಳಲ್ಲಿ ಯಾವುದೇ ಗುಂಡುಹಾರಾಟದ ಘಟನೆ ಘಟಿಸಿಲ್ಲ. ಪರಿಸ್ಥಿತಿ ಸಂಪೂರ್ಣ ಶಾಂತವಾಗಿದ್ದು, ಜನರು ಸಹಕರಿಸುತ್ತಿದ್ದಾರೆ. ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಸಲುವಾಗಿ ನಿಯಂತ್ರಣಗಳನ್ನೂ ಸಡಿಲಿಸಲಾಗಿದೆ ಎಂದು ಹೇಳಿಕೆ ತಿಳಿಸಿತು. ಶ್ರೀನಗರ
ಮತ್ತು ಇತರ ಪಟ್ಟಣಗಳಲ್ಲಿ ಈದ್ ಹಬ್ಬದ ಪ್ರಯುಕ್ತ ಖರೀದಿ ಸಲುವಾಗಿ ಒಳ್ಳೆಯ ಜನ ಸಂಚಾರ ಕಂಡು
ಬಂದಿತ್ತು. ಇದಕ್ಕೆ
ಮುನ್ನ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ್ದರ ವಿರುದ್ಧ ಕಳೆದ ಕೆಲವು ದಿನಗಳಿಂದ ಕಾಶ್ಮೀರ ಕಣಿವೆಯಲ್ಲಿ ಕೆಲವು ವಿರಳ ಪ್ರತಿಭಟನೆಗಳು ನಡೆದಿವೆ, ಆದರೆ ಇವುಗಳಲ್ಲಿ ೨೦ಕ್ಕಿಂತ ಹೆಚ್ಚಿನ ಜನರು ಪಾಲ್ಗೊಂಡಿರಲಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿತು.’ಶ್ರೀನಗರ/ ಬಾರಾಮುಲ್ಲಾದಲ್ಲಿ ಕೆಲವು ವಿರಳ ಪ್ರತಿಭಟನೆಗಳು ನಡೆದಿವೆ. ಇವುಗಳಲ್ಲಿ ೨೦ಕ್ಕಿಂತ ಹೆಚ್ಚು ಮಂದಿ ಪಾಲ್ಗೊಂಡಿರಲಿಲ್ಲ’ ಎಂದು
ಸಚಿವಾಲಯದ ವಕ್ತಾರರು ಹೇಳಿದರು. ಕಾಶ್ಮೀರದಲ್ಲಿ ೧೦,೦೦೦ ಮಂದಿಯಿಂದ
ಪ್ರತಿಭಟನೆ ನಡೆಯಿತು ಎಂಬ ಮಾಧ್ಯಮ ವರದಿಯನ್ನು ’ಸೃಷ್ಟಿತ ಮತ್ತು ಸರಿಯಲ್ಲ’ ಎಂದು ವಕ್ತಾರರು ಹೇಳಿದರು. ‘ಶುಕ್ರವಾರದ
ನಮಾಜ್ ಪ್ರಾರ್ಥನೆಗಾಗಿ ನಿರ್ಬಂಧಕಾಜ್ಞೆಯನ್ನು ಸಡಿಸಿಲಿದ್ದ ಸಂದರ್ಭದಲ್ಲಿ ಸಣ್ಣ ಘಟನೆಯೊಂದು ಸಂಭವಿಸಿತ್ತು. ನಮಾಜ್ ಮುಗಿಸಿ ಜನರು ಶಾಂತವಾಗಿ ಚದುರುತ್ತಿದ್ದಾಗ ಕೆಲವು ದುಷ್ಕರ್ಮಿಗಳು ಅದರ ಲಾಭ ಪಡೆಯಲು ಯತ್ನಿಸಿ ಅಲ್ಲಿ ನಿಯೋಜಿತರಾಗಿದ್ದ ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲೆಸೆಯಲು ಯತ್ನಿಸಿದರು. ಕನಿಷ್ಠ ಬಲಪ್ರಯೋಗಿಸಿ ಪರಿಸ್ಥಿತಿಯನ್ನು ನಿಭಾಯಿಸಲಾಯಿತು. ಯಾವ ಸಾವೂ ಇಲ್ಲ, ಗಂಭೀರ ಗಾಯಗಳೂ ಆಗಿಲ್ಲ. ಪೆಲ್ಲೆಟ್ಳಿಂದ ಒಬ್ಬನ ಕಾಲಿಗೆ ಗಾಯಗಳಾಗಿದ್ದು ಅದು ಗಂಭೀರವಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ ಬಾಗ್ ಸಿಂಗ್ ಹೇಳಿದರು. ಸರ್ಕಾರವು
ಸಾಕಷ್ಟು ಪ್ರಮಾಣದಲ್ಲಿ ಅಗತ್ಯ ವಸ್ತುಗಳ ಸಂಗ್ರಹವನ್ನು ಮಾಡಿದೆ. ೬೫ ದಿನಗಳಿಗೆ ಸಾಕಾಗುವಷ್ಟು
ಗೋಧಿ, ೫೫ ದಿನಗಳಿಗೆ ಸಾಕಾಗುವಷ್ಟು
ಅಕ್ಕಿ, ೧೭ ದಿನಗಳಿಗೆ ಸಾಕಾಗುವಷ್ಟು
ಮಾಂಸ, ೧ ತಿಂಗಳಿಗೆ ಸಾಕಾಗುವಷ್ಟು
ಕೋಳಿ, ೩೫ ದಿನಗಳಿಗೆ ಆಗುವಷ್ಟು
ಸೀಮೆ ಎಣ್ಣೆ, ೧ ತಿಂಗಳಿಗೆ ಸಾಕಾಗುವಷ್ಟು
ಎಲ್ಪಿಜಿ, ೨೮ ದಿನಗಳಿಗೆ ಆಗುವಷ್ಟು
ಹೈಸ್ಪೀಡ್ ಡೀಸೆಲ್ (ಎಚ್ಎಸ್ಡಿ) ಮತ್ತು ಪೆಟ್ರೋಲ್ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಜಮ್ಮು-ಕಾಶ್ಮೀರ ನಾಗರಿಕ ಆಡಳಿತ ತಿಳಿಸಿತು. ಈ ಮಧ್ಯೆ ಈದಿನ ನಿರ್ಬಂಧಕಾಜ್ಞೆಯನ್ನು
ಸಡಿಲಿಸಿದ್ದ ಆಡಳಿತ ಸಂಜೆಯ ಬಳಿಕ ಶ್ರೀನಗರದಲ್ಲಿ ಕರ್ಫ್ಯೂವನ್ನು ಮರುಜಾರಿ ಮಾಡಿತು. ರಾಜ್ಯಪಾಲರಿಂದ ಈದ್ ಶುಭಾಶಯ: ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಈದ್-ಉಲ್-ಆಝಾ ಪವಿತ್ರ ಹಬ್ಬ ಆಚರಣೆಯ ಸಂದರ್ಭದಲ್ಲಿ ಜನರಿಗೆ ಶುಭಾಶಯ ಹಾಗೂ ಸಮೃದ್ಧಿಯನ್ನು ಕೋರಿದರು.
2019: ಚೆನ್ನೈ: ಕಾಶ್ಮೀರ
ಕಣಿವೆಯ ಹಲವಾರು ಭಾಗಗಳಲ್ಲಿ ನಿಯಂತ್ರಣಗಳನ್ನು ಸಡಿಲಗೊಳಿಸಲಾಗಿದ್ದು, ಜನರು ಮನೆಯಿಂದ ಹೊರಬಂದು ಖರೀದಿಗಾಗಿ ರಸ್ತೆಗಿಳಿದರು. ಇದೇ ವೇಳೆಗೆ ಗೃಹ
ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಜಮ್ಮು
ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿ ರದ್ದಿನಿಂದ ಭಯೋತ್ಪಾದನೆ ಕೊನೆಗೊಂಡು ಅಭಿವೃದ್ಧಿಯ ಯುಗ ಆರಂಭವಾಗಲಿದೆ ಎಂದು ಪುನುರಚ್ಚರಿಸಿದರು. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು
ಅವರು ರಾಷ್ಟಪತಿಯಾಗಿ ಅಧಿಕಾರ ವಹಿಸಿಕೊಂಡು ಎರಡನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಈದ್
ಮುನ್ನಾದಿನ ಅವರ ಕುರಿತ ಪುಸ್ತಕದ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ ’ಗುಜರಾತಿನ ಶಾಸಕನಾಗಿ, ನಾನು ಈ ಸಾಂವಿಧಾನಿಕ ವಿಧಿಯನ್ನು
ರದ್ದು ಪಡಿಸುವುದರ ಪರವಾಗಿದ್ದೆ. ಹೀಗಾಗಿ ಗೃಹ ಸಚಿವನಾದ ಬಳಿಕ ಕೂಡಾ ಅದರ ಪರಿಣಾಮಗಳ ಬಗ್ಗೆ ನನಗೆ ಯಾವುದೇ ಗೊಂದಲ, ಅಂಜಿಕೆ ಇರಲಿಲ್ಲ’ ಎಂದು ಹೇಳಿದರು. ೩೭೦ನೇ ವಿಧಿಯು ಜಮ್ಮು ಮತ್ತು ಕಾಶ್ಮೀರಕ್ಕಾಗಲೀ, ರಾಷ್ಟ್ರಕ್ಕಾಗಲೀ ಲಾಭದಾಯಕವಾಗಿರಲಿಲ್ಲ. ಅದು ಕಾಶ್ಮೀರದ ಪ್ರಗತಿಗೆ ಅಡಚಣೆಯಾಗಿತ್ತು ಎಂದು ಅವರು ನುಡಿದರು. ‘ಈ
ವಿಧಿಯನ್ನು ಸಂವಿಧಾನದಿಂದ ಕಿತ್ತು ಹಾಕಬೇಕು ಎಂಬ ಬಗ್ಗೆ ನಾನು ದೃಢವಾಗಿದ್ದೆ. ಈಗ ಅದನ್ನು ಕಿತ್ತು
ಹಾಕಿರುವುದರಿಂದ ಭಯೋತ್ಪಾದನೆಯ ಅಂತ್ಯವನ್ನು ಕಾಶ್ಮೀರ ಕಾಣಲಿದೆ. ಆಷ್ಟೇ ಅಲ್ಲ, ಜಮ್ಮು ಕಾಶ್ಮೀರವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಿದೆ ಎಂದು ಗೃಹ ಸಚಿವರು ಸ್ಪಷ್ಟ ಪಡಿಸಿದರು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟವು (ಎನ್ಡಿಎ) ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿದ್ದುದರ ಹೊರತಾಗಿಯೂ ಮಸೂದೆಯನ್ನು ಮೊದಲು ಸಂಸತ್ತಿನ ಮೇಲ್ಮನೆಯಲ್ಲಿ ಮೊದಲು ಮಂಡಿಸಲಾಯಿತು ಮತ್ತು ಅದನ್ನು ಅಂಗೀಕರಿಸಲಾಯಿತು. ತಮ್ಮ ಯೋಚನೆಯ ಪ್ರಕಾರ ಅದೊಂದು ಜೂಜಾಟವಾಗಿತ್ತು ಮತ್ತು ಸರ್ಕಾರ ಅದರಲ್ಲಿ ಯಶಸ್ವಿಯಾಯಿತು ಎಂದು ಅಮಿತ್ ಶಾ ಹೇಳಿದರು. ಉಪರಾಷ್ಟ್ರಪತಿ
ಅವರ ಮೇಲೆ ಪ್ರಶಂಶೆಯ ಸುರಿಮಳೆಗೈದ ಶಾ,
’ನಾನು ಇಲ್ಲಿಗೆ ಗೃಹಸಚಿವನಾಗಿ ಬಂದಿಲ್ಲ, ಬದಲಿಗೆ ವೆಂಕಯ್ಯ ನಾಯ್ಡು
ಅವರ ವಿನೀತ ಶಿಷ್ಯನಾಗಿ ಬಂದಿದ್ದೇನೆ’ ಎಂದು
ಹೇಳಿದರು. ’ಕಾಲೇಜು ವಿದ್ಯಾರ್ಥಿಯಾಗಿದ್ದಾಗಿನಿಂದ ಉಪರಾಷ್ಟ್ರಪತಿಯಾಗುವವರೆಗಿನ ಅವರ ಬದುಕು ಸ್ವತಃ ಪ್ರತಿಯೊಬ್ಬನಿಗೂ ಒಂದು ಪಾಠವಾಗಿದೆ. ನಾನು ಬಹಳಷ್ಟನ್ನು ಅವರಿಂದ ಕಲಿತಿದ್ದೇನೆ’ ಎಂದು
ಅವರು ನುಡಿದರು. ಸಮಾವೇಶವನ್ನು
ಉದ್ದೇಶಿಸಿ ತಮಿಳಿನಲ್ಲಿ ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ವಿಷಾದಿಸುತ್ತೇನೆ ಎಂದು ನುಡಿದ ಗೃಹ ಸಚಿವರು ’ಅಧಿಕೃತ ಕೆಲಸಗಳ ಒತ್ತಡದ ಪರಿಣಾಮವಾಗಿ ನನಗೆ ಭಾಷೆಯನ್ನು ಕಲಿಯಲಾಗದಿದ್ದರೂ. ಒಂದು ದಿನ ಖಂಡಿತ ತಮಿಳಿನಲ್ಲಿ ಮಾತನಾಡುವೆ’
ಎಂದು ಹೇಳಿದರು. ಈ
ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಟ ರಜನೀಕಾಂತ್ ಅವರು
ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೈಗೊಂಡ ದಿಟ್ಟ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಶ್ರೀಕೃಷ್ಣ
ಮತ್ತು ಅರ್ಜುನನಿಗೆ ಹೋಲಿಸಿದರು. ಕೇಸರಿ ಪಕ್ಷದ ನಾಯಕತ್ವಕ್ಕೆ ನಿಕಟವಾಗಿರುವ’ಮಿಷನ್
ಕಾಶ್ಮೀರ’ ಕಾರ್ಯಾಚರಣೆಗಾಗಿ
ಗೃಹ
ಸಚಿವ ಅಮಿತ್ ಶಾ ಅವರಿಗೆ ವಂದನೆಗಳು
ಮತ್ತು ಈ ಸಾಹಸಕ್ಕಾಗಿ ನನ್ನ
ಹೃದಯ ಪೂರ್ವಕ ಅಭಿನಂದನೆಗಳು. ನೀವು ಈ ವಿಷಯವನ್ನು ನಿಭಾಯಿಸಿದ
ಬಗೆ ಅದ್ಭುತ ಮತ್ತು ಮಸೂದೆಯನ್ನು ಮಂಡಿಸುತ್ತಾ ನೀಡುವ ಮಾಡಿದ ಭಾಷಣ ಅಮೋಘ, ಅಮೋಘ ಸಾರ್’ ಎಂದು ದಕ್ಷಿಣ ಭಾರತದ ಸೂಪರ್ ಸ್ಟಾರ್ ಹೇಳಿದರು. ಮೋದಿ ಮತ್ತು ಶಾ ಅವರನ್ನು ಕೃಷ್ಣ
ಮತ್ತು ಅರ್ಜುನರು ಎಂಬುದಾಗಿ ಹೇಳಿದರೂ, ಯಾರು ಕೃಷ್ಣ ಮತ್ತು ಯಾರು ಅರ್ಜುನ ಎಂದು ಅವರು ವಿವರಿಸಲಿಲ್ಲ. ’ಉಭಯ ನಾಯಕರಿಗೂ ತಾವು ಯಾರು ಎಂಬುದು ಗೊತ್ತು’ ಎಂದು ರಜನಿಕಾಂತ್ ನುಡಿದರು. ವೆಂಕಯ್ಯ ನಾಯ್ಡು ಅವರನ್ನು ಕೂಡಾ ರಜನೀಕಾಂತ್ ಅವರು ’ಸಂಪೂರ್ಣ ಆಧ್ಯಾತ್ಮಿಕ ವ್ಯಕ್ತಿ’ ಮತ್ತು ಬಡವರ ಕಲ್ಯಾಣದ ಬಗ್ಗೆ ಕಾಳಜಿ ಹೊಂದಿರುವ ಮಾನವೀಯ ನಾಯಕ ಎಂದು ಶ್ಲಾಘಿಸಿದರು. ಇದಕ್ಕೆ ಮುನ್ನ ಬೆಳಗ್ಗೆ ಪಕ್ಷದ ನಾಯಕ ಡಾ. ತಮಿಳಿಸಾಯಿ ಸೌಂದರರಾಜನ್ ಸೇರಿದಂತೆ ತಮಿಳುನಾಡು ಬಿಜೆಪಿ ನಾಯಕರು ರಾಜಭವನದಲ್ಲಿ ಶಾ ಅವರನ್ನು ಭೇಟಿ
ಮಾಡಿದರು. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಕೂಡಾ ಪ್ರತ್ಯೇಕವಾಗಿ ಗೃಹ ಸಚಿವರನ್ನು ಭೇಟಿ ಮಾಡಿದರು.
2019: ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ೧೦ ಮತ್ತು
೧೨ನೇ ತರಗತಿಗಳ ಮಂಡಳಿ ಪರೀಕ್ಷಾ ಶುಲ್ಕಗಳನ್ನು ಏರಿಸಿತು. ಪರಿಶಿಷ್ಟ
ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ೨೪ ಪಟ್ಟಿನಷ್ಟು ಅಂದರೆ
೫೦ ರೂಪಾಯಿಗಳಿಂದ ೧,೨೦೦ ರೂಪಾಯಿಗಳಿಗೆ
ಏರಿಸಲಾಗಿದ್ದರೆ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಶುಲ್ಕವನ್ನು ದುಪ್ಪಟ್ಟು ಅಂದರೆ ೧,೫೦೦ ರೂಪಾಯಿಗಳಿಗೆ
ಏರಿಸಲಾಯಿತು. ೧೦ನೇ ತರಗತಿಗೆ ಮಂಡಳಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಾವು ೯ನೇ ತರಗತಿಯಲ್ಲಿ ಇದ್ದಾಗಲೇ ಈ ಪರೀಕ್ಷೆಗಾಗಿ ನೋಂದಣಿ
ಮಾಡಿದ್ದರೆ, ೧೨ನೇ ತರಗತಿಯ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ೧೧ನೇ ತರಗತಿಯಲ್ಲಿ ಇದ್ದಾಗಲೇ ಪರೀಕ್ಷೆಗಾಗಿ ನೋಂದಣಿ ಮಾಡಿರುತ್ತಾರೆ. ಮಂಡಳಿಯು ಕಳೆದ ವಾರ ಪರೀಕ್ಷಾ ಶುಲ್ಕ ಪರಿಷ್ಕರಣೆಯನ್ನು ಮಾಡಿದ್ದು, ಹಳೆ ಕ್ರಮದಂತೆ ನೋಂದಣಿ ವೇಳೆ ಶುಲ್ಕ ಪಡೆದ ವಿದ್ಯಾರ್ಥಿಗಳಿಂದ ಹೊಸ ಕ್ರಮದ ಪ್ರಕಾರ ಲೆಕ್ಕ ಹಾಕಿ ಬಾಕಿ ಹಣ ಪಡೆಯುವಂತೆ ಮಂಡಳಿ
ಸೂಚಿಸಿತು.
ಇಂದಿನ ಇತಿಹಾಸHistory Today ಆಗಸ್ಟ್ 11 (2018+ಹಿಂದಿನವುಗಳಿಗಾಗಿಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment