2019: ನವದೆಹಲಿ: ಕಾಂಗ್ರೆಸ್
ಅಧ್ಯಕ್ಷಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು
ಮಾಡಿದ ಸರ್ವಾನುಮತದ ಮನವಿಯನ್ನು ರಾಹುಲ್ ಗಾಂಧಿಯವರು ಪುನಃ ತಿರಸ್ಕರಿಸಿದ ಬಳಿಕ ಅವರ ರಾಜೀನಾಮೆಯನ್ನು
ಅಂಗೀಕರಿಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಯುಪಿಎ
ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನೇ ಪಕ್ಷದ ಹಂಗಾಮೀ ಅಧ್ಯಕ್ಷರಾಗಿ ಈದಿನ ರಾತ್ರಿ ಹೆಸರಿಸಿತು. ಇದರೊಂದಿಗೆ
ಸೋನಿಯಾ ಗಾಂಧಿಯವರು 20 ತಿಂಗಳುಗಳ ಬಳಿಕ ಪುನಃ ಪಕ್ಷದ ವರಿಷ್ಠ ಸ್ಥಾನಕ್ಕೆ ಏರಿದರು. ಇದಕ್ಕೆ ಮುನ್ನ ಐದು ವಲಯವಾರು ಗುಂಪುಗಳನ್ನು ರಚಿಸಿ ಸಮಾಲೋಚನೆಗಳನ್ನು ನಡೆಸುವ ಮೂಲಕ ಪಕ್ಷದ ನೂತನ ಅಧ್ಯಕ್ಷನ ಆಯ್ಕೆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಶನಿವಾರ ಒಂದು ಹೆಜ್ಜೆ ಮುಂದೆ ಸರಿಯಿತು, ಆದರೆ ವಲಯವಾರು ಸಮಾಲೋಚನೆಗಳಲ್ಲಿ ಬಹುತೇಕ ನಾಯಕರು ’ರಾಹುಲ್ ಗಾಂಧಿ ಬಿಟ್ಟರೆ ಬೇರೆ ಯಾರೂ ಇಲ್ಲ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ಸಂಚಾಲಕತ್ವದಲ್ಲಿ ನಡೆದ ಈ ವಲಯವಾರು ಗುಂಪುಗಳ
ಸಭೆಗಳಲ್ಲಿ ಬಹುತೇಕ ನಾಯಕರು ’ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿ ರಾಹುಲ್ ಗಾಂಧಿ, ಅವರನ್ನು ಬಿಟ್ಟರೆ ಬೇರೆ ಯಾರೂ ಇಲ್ಲ’ ಎಂಬುದಾಗಿ ಸ್ಪಷ್ಟ ಪಡಿಸಿದರು ಎಂದು
ವರದಿಗಳು ಹೇಳಿದವು. ದೆಹಲಿಯ ೨೪ ಅಕ್ಬರ್ ರಸ್ತೆಯ
ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಯಿಂದಲೇ ನಡೆದ
ಸಮಾಲೋಚನೆಗಳಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುನಿಲ್ ಜಾಖಡ್, ಗುರುದಾಸಪುರದ ಮಾಜಿ ಸಂಸದ ಪ್ರತಾಪ್ ಸಿಂಗ್ ಬಜ್ವಾ ಮತ್ತು ಪಂಜಾಬಿನ ಇತರ ನಾಯಕರು ರಾಜೀನಾಮೆ ಹಿಂಪಡೆಯುವಂತೆ ರಾಹುಲ್ ಗಾಂಧಿಯವರ ಮನವೊಲಿಸಬೇಕು ಎಂದು ಆಗ್ರಹಿಸಿದರು ಎಂದು ಸುದ್ದಿ ಮೂಲಗಳು ಹೇಳಿವೆ. ಬಹಳಷ್ಟು
ಮಂದಿ ಈಗಾಗಲೇ ಪಕ್ಷ ಬಿಟ್ಟಿದ್ದಾರೆ. ರಾಹುಲ್ ಗಾಂಧಿಯವರು ಪಕ್ಷಾದ್ಯಕ್ಷ ಪದ ತ್ಯಜಿಸುವ ನಿರ್ಧಾರ
ಹಿಂಪಡೆಯದಿದ್ದರೆ ಇನ್ನಷ್ಟು ಮಂದಿ ಬಿಡಲಿದ್ದಾರೆ’ ಎಂದು
ಅವರು ಹೇಳಿದರು. ‘ದೇಶಕ್ಕಾಗಿ
ಅಷ್ಟೊಂದು ತ್ಯಾಗ ಮಾಡಿದ ಕುಟುಂಬದಲ್ಲಿ ಹುಟ್ಟಿದ್ದರೆ ಅದು ರಾಹುಲ್ ಗಾಂಧಿಯವರ ತಪ್ಪಲ್ಲ’ ಎಂದು ರಾಹುಲ್ ನಾಯಕತ್ವ ಮುಂದುವರಿಕೆಗೆ ಆಗ್ರಹಿಸಿದ ಪಂಜಾಬಿನ ನಾಯಕರು ಹೇಳಿದರು ಎಂದು ಮೂಲ ತಿಳಿಸಿತು. ಪಕ್ಷದ ಏಕತೆ ಉಳಿಯಬೇಕಾಗಿದ್ದರೆ ರಾಹುಲ್ ಗಾಂಧಿಯವರ ನಾಯಕತ್ವ ಅತಿ ಮುಖ್ಯ. ರಾಹುಲ್ ಗಾಂಧಿ ಹೊರತಾಗಿ ಬೇರೆ ಯಾರ ಕೈಕೆಳಗೂ ಕೆಲಸ ಮಾಡಲು ನಾವು ಸಿದ್ಧರಿಲ್ಲ ಎಂದು ಜಾಖರ್ ಮತ್ತು ಬಜ್ವಾ ಹೇಳಿದರು ಎಂದೂ ಮೂಲ ತಿಳಿಸಿತು. ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೊರತಾಗಿ ಕೇಳಿಬಂದ ಇತರ ಹೆಸರುಗಳನ್ನು ಕೂಡಾ ಅವರು ತಿರಸ್ಕರಿಸಿದರು. ಖರ್ಗೆ ಹೆಸರು ಅಂಗೀಕರಿಸಲು ಯೋಗ್ಯ ಎಂದು ಅವರು
ಹೇಳಿದರು. ಪಂಜಾಬಿನ ನಾಯಕರು ಮಾತನಾಡುವಾಗ ಪ್ರಿಯಾಂಕಾ ಗಾಂಧಿ ಅವರೂ ಇದ್ದರು. ಹಿಂದಕ್ಕೆ
ಬರುವಂತೆ ರಾಹುಲ್ ಗಾಂಧಿಯವರ ಮನವೊಲಿಸಿ ಎಂದೂ ಅವರು ಪ್ರಿಯಾಂಕಾ ಅವರಿಗೂ ಮನವಿಮಾಡಿದರು ಎಂದು ವರದಿ ಹೇಳಿತು. ಬಿಜೆಪಿ
ವಿರುದ್ದ ’ಆರ್‌ಪಿಜಿ’ ಯೇ ಸರಿ ಎಂದೂ
ಅವರು ಆಗ್ರಹಿಸಿದರು. ದಕ್ಷಿಣದ ಗುಂಪಿನಲ್ಲೂ ಇದೇ ಅಭಿಪ್ರಾಯ ಮೂಡಿಬಂತು. ಹಿರಿಯ ನಾಯಕ ಆನಂದ ಶರ್ಮ ಅವರು ’ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಳೆದ ರಾತ್ರಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾಡಿದ ಇಂತಹುದೇ ಮನವಿಯನ್ನು ಕೂಡಾ ರಾಹುಲ್ ಗಾಂಧಿಯವರು ತಿರಸ್ಕರಿಸಿದ್ದಾರೆ’ ಎಂದು
ಹೇಳಿದರೂ, ನಾಯಕರು ರಾಹುಲ್ ಅವರನ್ನೇ ಮನವೊಲಿಸಬೇಕು ಎಂದು ಪಟ್ಟು ಹಿಡಿದರು ಎಂದು ಮೂಲ ಹೇಳಿತು. ದಕ್ಷಿಣ ವಲಯದ ಗುಂಪಿನಲ್ಲಿದ್ದ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್
ಅವರು ರಾಹುಲ್ ಅವರು ಇನ್ನೂ ಪಟ್ಟು ಬಿಡದೇ ಇದ್ದಲ್ಲಿ ೧೦-೧೫ ವರ್ಷಗಳ
ಅನುಭವ ಇರುವ ನಾಯಕನನ್ನು ಪರಿಗಣಿಸಬಹುದು ಎಂದು ಹೇಳಿದರು. ಅನುಭವ ಮುಖ್ಯ ಆದರೆ ಹಿರಿಯ ಮತ್ತು ಕಿರಿಯರು ಪರಸ್ಪರ ಕಿತ್ತಾಡಬಾರದು ಎಂದು ದಕ್ಷಿಣ ವಲಯದ ನಾಯಕರು ಆಗ್ರಹಿಸಿದರು ಎಂದು ಮೂಲ ಹೇಳಿತು. ವಲಯವಾರು ಸಮಾಲೋಚನೆಗಳ ವೇಳೆಯಲ್ಲಿ ಹೊರ ಹೋಗಿದ್ದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಬಳಿಕ ರಾತ್ರಿ ಮತ್ತೆ ಸಮಾವೇಶಗೊಂಡ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಗೆ ಆಗಮಿಸಿದರು. ಮನಮೋಹನ್ ಸಿಂಗ್, ಚಿದಂಬರಮ್, ಗುಲಾಂ ನಬಿ ಆಜಾದ್, ಜ್ಯೋತಿರಾದಿತ್ಯ ಸಿಂಧಿಯಾ, ಪ್ರಿಯಾಂಕಾ ಗಾಂಧಿ ಮತ್ತಿತರರೂ ಸಭೆಯಲ್ಲಿ ಪಾಲ್ಗೊಂಡಿದ್ದರು.
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿರುವ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಪಡಿಸಿ ಹೊರಡಿಸಲಾದ ರಾಷ್ಟ್ರಪತಿ ಅಧಿಸೂಚನೆಯನ್ನು ಬೆಂಬಲಿಸುವ ನಿರ್ಣಯ ಮತ್ತು ರಾಜ್ಯವನ್ನು ಲಡಾಖ್ ಹಾಗೂ ಜಮ್ಮು-ಕಾಶ್ಮೀರ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳು ಆಗಸ್ಟ್ ೫ ಮತ್ತು ೬ರಂದು
ಮೂರನೇ ಎರಡು ಬಹುಮತದಿಂದ ಅಂಗೀಕರಿಸಿದ್ದವು. ನ್ಯಾಷನಲ್
ಕಾನ್ಫರೆನ್ಸ್ ನಾಯಕರಾದ ಮೊಹಮ್ಮದ್ ಅಕ್ಬರ್ ಲೋನ್ ಮತ್ತು ಹಸ್ನೈನ್ ಮಹ್ಸೂದ್ ಅವರು ಪಕ್ಷದ ಪರವಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಜಮ್ಮು
ಮತ್ತು ಕಾಶ್ಮೀರದ ವಿಭಜನೆಯನ್ನು ಪ್ರಶ್ನಿಸಿದ ನ್ಯಾಷನಲ್ ಕಾನ್ಫರೆನ್ಸ್ ’ಜಮ್ಮುಮತ್ತು ಕಾಶ್ಮೀರ (ಮರುವಿಂಗಡಣಾ) ಕಾಯ್ದೆ, ೨೦೧೯ ಸಂವಿಧಾನಬಾಹಿರ’ ಎಂದು
ಅರ್ಜಿಯಲ್ಲಿ ಹೇಳಿತು. ಅರ್ಜಿಯು ಇನ್ನಷ್ಟು
ಕಾನೂನಿನ ಪ್ರಶ್ನೆಗಳನ್ನೂ ಎತ್ತಿತು. ’ಸಂವಿಧಾನದ
ವಿಧಿ ೩೭೦(೧)(ಡಿ) ಜಮ್ಮು
ಮತ್ತು ಕಾಶ್ಮೀರದ ಸಂವಿಧಾನವನ್ನೇ ಸಾರಾಸಗಟು ಬದಲಾಯಿಸುವ ಅಧಿಕಾರವನ್ನು ಹೊಂದಿಲ್ಲ’
ಎಂದು ಅರ್ಜಿ ವಾದಿಸಿತು. ‘ಕೇಂದ್ರ ಸರ್ಕಾರದ
ನಿರ್ಣಯವು, ರಾಷ್ಟ್ರಪತಿ ಅಧಿಸೂಚನೆಯನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರ ಒಪ್ಪಿಗೆಯೊಂದಿಗೆ ಅಂಗೀಕರಿಸಿದ ಕಾರಣ ’ತನ್ನದೇ ಒಪ್ಪಿಗೆಯನ್ನು’ ಪಡೆದುಕೊಂಡಂತಾಗಿದೆ
ಎಂದು ಅರ್ಜಿ ಹೇಳಿತು. ‘ರಾಷ್ಟ್ರಪತಿ ಅಧಿಸೂಚನೆಯು ಸರ್ಕಾರದ
ಒಪ್ಪಿಗೆಗೆ ಬದಲಾಗಿ ರಾಜ್ಯಪಾಲರ ಸಮ್ಮತಿಯನ್ನು ಪಡೆದಿದೆ (ಮತ್ತು ಪರಿಣಾಮವಾಗಿ (ರಾಷ್ಟ್ರಪತಿಯವರ ಮೂಲಕ ಕಾರ್ಯಾಚರಿಸುತ್ತಿರುವ) ಕೇಂದ್ರ ಸರ್ಕಾರವು ಒಕ್ಕೂಟ
ಘಟಕದ ಸ್ವರೂಪವನ್ನೂ ಬದಲಾಯಿಸಲು ತನ್ನದೇ ಒಪ್ಪಿಗೆ (ರಾಷ್ಟ್ರಪತಿಯವರ ಆಳ್ವಿಕೆಯ ಅಡಿಯಲ್ಲಿ) ಪಡೆದಂತಾಗಿದೆ ಎಂದು ಅರ್ಜಿ ಹೇಳಿತು. ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನವನ್ನು (ವಿಧಾನಸಭೆಯ)
ಚುನಾಯಿತ ಸದಸ್ಯರ ಮೂಲಕ ರಾಜ್ಯದ ಜನರ ಸಮ್ಮತಿ ಪಡೆಯದೆ ಮರುಪರಿವರ್ತಿಸಲಾಗದಂತೆ ಬದಲಾಯಿಸಲಾಗಿದೆ. ಆದ್ದರಿಂದ ಇದು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಖಾತರಿ ನೀಡಲಾದ ಪ್ರಜಾತಾಂತ್ರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ರಾತ್ರೋರಾತ್ರಿ ರದ್ದು ಪಡಿಸಿದ್ದಕ್ಕೆ ಸಮವಾಗಿದೆ ಎಂದು ಅರ್ಜಿ ವಾದಿಸಿತು. ಒಕ್ಕೂಟ ತತ್ವದ ಅಡಿಯಲ್ಲಿ, ಭಾರತೀಯ ಸಂವಿಧಾನವು ರಾಜ್ಯದ ಸ್ಥಾನಮಾನವನ್ನು ಇಳಿಸಲು ಸಂಸತ್ತಿಗೆ ಅನುಮತಿ ನೀಡುವುದಿಲ್ಲ. ಭಾರತೀಯ ಸಂವಿಧಾನದಲ್ಲಿ ಒಕ್ಕೂಟ ತತ್ವವನ್ನು ವಿವರಿಸುವ ವಿಧಿ ೧ ಮತ್ತು ವಿಧಿ
೩ ರಾಜ್ಯದ ಸ್ಥಾನಮಾನವನ್ನು ಜನಪ್ರತಿನಿಧಿ ರಹಿತವಾದ ಕೇಂದ್ರಾಡಳಿತ ಪ್ರದೇಶವಾಗಿ ಕೆಳಗಿಳಿಸಲು ಅನುಮತಿ ನೀಡುವುದಿಲ್ಲ ಎಂದು ರಾಜ್ಯವನ್ನು ವಿಭಜಿಸಿದ ಜಮ್ಮು ಮತ್ತು ಕಾಶ್ಮೀರ ಮರುವಿಂಗಡಣಾ ಕಾಯ್ದೆ, ೨೦೧೯ನ್ನು ಅರ್ಜಿ ಪ್ರಶ್ನಿಸುತ್ತಾ ವಾದಿಸಿತು. ನ್ಯಾಷನಲ್ ಕಾನ್ಫರೆನ್ಸ ನಾಯಕ ಒಮರ್ ಅಬ್ದುಲ್ಲ ಅವರು ರಾಜ್ಯಸಭೆಯಲ್ಲಿ ಮಸೂದೆಗೆ ಒಪ್ಪಿದೆ ನೀಡಿದ ದಿನ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಕ್ರಮವನ್ನು
ಅವರು ’ವಂಚನೆ ಮತ್ತು ನಿಗೂಢ ನಡೆ’ ಎಂದು ಬಣ್ಣಿಸಿ,’ಇದು ಗಂಡಾಂತರಕಾರಿ ಪರಿಣಾಮಗಳನ್ನು ಉಂಟು ಮಾಡುವುದು’
ಎಂದು ಎಚ್ಚರಿಸಿದ್ದರು. ಭಾರತ
ಸರ್ಕಾರದ ಏಕಪಕ್ಷೀಯ ಮತ್ತು ಆಘಾತಕಾರಿ ನಿರ್ಣಯಗಳು ಜಮ್ಮು ಮತ್ತು ಕಾಶ್ಮೀರದ ಜನತೆ ೧೯೪೭ರಲ್ಲಿ ವಿಲೀನ ಕಾಲದಲ್ಲಿ ಭಾರತದ ಮೇಲೆ ಇರಿಸಿದ್ದ ವಿಶ್ವಾಸಕ್ಕೆ ಬಗೆದ ದ್ರೋಹ. ಈ ಗಂಡಾಂತರಕಾರೀ ನಿರ್ಣಯದ
ಸಲುವಾಗಿ ಭಾರತ ಸರ್ಕಾರವು ವಂಚನೆ ಮತ್ತು ನಿಗೂಢ ನಡೆಯನ್ನು ಪ್ರದರ್ಶಿಸಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹೇಳಿಕೆಯೊಂದರಲ್ಲಿ
ಟೀಕಿಸಿದ್ದರು. ಗೃಹ ಸಚಿವ ಅಮಿತ್ ಶಾ ಅವರು ಆಗಸ್ಟ್
೫ರಂದು ರಾಜ್ಯಸಭೆಯಲ್ಲಿ ನಿರ್ಣಯವನ್ನು ಮಂಡಿಸಿದ್ದರು. ಇನ್ನೊಬ್ಬ ಪ್ರಾದೇಶಿಕ ನಾಯಕಿ ಪಿಡಿಪಿಯ ಮೆಹಬೂಬಾ ಮುಫ್ತಿ ಅವರೂ ಈ ಕ್ರಮಕ್ಕಾಗಿ ಕೇಂದ್ರದ
ಮೇಲೆ ಹರಿಹಾಯ್ದಿದ್ದರು. ’ಭಾರತೀಯ
ಪ್ರಜಾಪ್ರಭುತ್ವದಲ್ಲಿ ಕರಾಳ ದಿನ’ ಎಂದು ಅವರು ಹೇಳಿದ್ದರು. ಪಿಡಿಪಿಯ ಸಂಸತ್ ಸದಸ್ಯರಾದ ನಜೀರ್ ಅಹ್ಮದ್ ಲಾಯೆ ಮತ್ತು ಎಂಎಂ ಫಯಾಜ್ ಅವರು ಮಸೂದೆ ಮಂಡನೆಯದಾಗ ಭಾರತದ ಸಂವಿಧಾನವನ್ನು ಸದನದಲ್ಲಿ ಹರಿದು ಚಿಂದಿಮಾಡಲು ಯತ್ನಿಸಿದ್ದರು. ಕ್ರಮವನ್ನು ಪ್ರತಿಭಟಿಸಲು ಫಯಾಜ್ ಅವರು ತಮ್ಮ ಕುರ್ತಾವನ್ನೇ ಹರಿದುಕೊಂಡಿದ್ದರು. ಕಾನೂನು
ಪಂಡಿತರಲ್ಲೂ ಕೇಂದ್ರ ಕ್ರಮದ ಕಾನೂನುಬದ್ಧತೆ ವಿಚಾರದಲ್ಲಿ ಭಿನ್ನಮತ ವ್ಯಕ್ತವಾಗಿತ್ತು. ಕೆಲವರು ವಿಸರ್ಜನೆಗೊಂಡಿರುವ ವಿಧಾನಸಭೆಯ ಅನುಪಸ್ಥಿತಿಯಲ್ಲಿ ೩೭೦ನೇ ವಿಧಿ ರದ್ದು ಮಾಡುವಂತೆ ಶಿಫಾರಸು ಮಾಡುವ ಅಧಿಕಾರ ರಾಜ್ಯಪಾಲರಿಗೆ ಇದೆ ಎಂದು ವಾದಿಸಿದರೆ, ಇದರ ಕೆಲವು ಇದು ವಿಧಿಯ ಸ್ಫೂರ್ತಿಗೆ ವಿರುದ್ಧ ಎಂದು ವಾದಿಸಿದ್ದರು. ೩೭೦ನೇ ವಿಧಿಯನ್ನು ಕಾಯಂ ಎಂಬುದಾಗಿ ಪರಿಗಣಿಸಬೇಕೆ? ಅಥವಾ ತಾತ್ಕಾಲಿಕ ಎಂಬುದಾಗಿ ಪರಿಗಣಿಸಬೇಕೆ ಎಂಬ ಬಗ್ಗೆ ಕಾನೂನು ತಜ್ಞರು ಮತ್ತು ರಾಜಕೀಯ ಪಕ್ಷಗಳು ವ್ಯಾಪಕವಾಗಿ ಚರ್ಚಿಸಿದ್ದವು. ೩೭೦ನೇ ವಿಧಿಯು ಭಾರತದೊಂದಿಗೆ ಜಮ್ಮು ಮತ್ತು ಕಾಶ್ಮೀರದ ಸೇರ್ಪಡೆಗೆ ಅವಕಾಶ ಕಲ್ಪಿಸಿದೆ. ಅದನ್ನು ರದ್ದು ಪಡಿಸುವುದರಿಂದ ರಾಜ್ಯದ ಸೇರ್ಪಡೆ ಮೇಲೆ ಕರಿನೆರಳು ಬಿದ್ದಂತಾಗಿದೆ ಎಂದು ಜಮ್ಮು-ಕಾಶ್ಮೀರದ ರಾಜಕೀಯ ಪಕ್ಷಗಳು ಅಭಿಪ್ರಾಯ ಪಟ್ಟಿದ್ದವು. ಸಂವಿಧಾನದ ೩೭೦ನೇ ವಿಧಿಯ
ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಸಂಪೂರ್ಣ ಸ್ವಾಯತ್ತತೆಯನ್ನು ಪಡೆದಿತ್ತು ಮತ್ತು ರಾಜ್ಯ ಶಾಸನಸಭೆಯು ಸಂಪರ್ಕ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳನ್ನು ಹೊರತು ಪಡಿಸಿ, ಎಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ ಕಾನೂನು ರೂಪಿಸುವ ಮುಕ್ತ ಸ್ವಾತಂತ್ರ್ಯ ಹೊಂದಿತ್ತು. ರಾಜ್ಯದ ನಾಗರಿಕರಲ್ಲದವರನ್ನು ರಾಜ್ಯದಲ್ಲಿ
ಭೂಮಿ ಖರೀದಿ ಮಾಡದಂತೆ ಅದು ನಿಷೇಧಿಸಿತ್ತು.
2019: ಚಂಡೀಗಢ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಹೊರಹೋಗುತ್ತಿರುವ ರಾಹುಲ್ ಗಾಂಧಿ ಅವರು ’ತಿರುಚಿದ ಸುದ್ದಿಗಳಿಗೆ’ ಪ್ರತಿಕ್ರಿಯಿಸಬಾರದು
ಎಂದು ಹರಿಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಇಲ್ಲಿ
ಎದಿರೇಟು ನೀಡಿದರು. ಜಮ್ಮು ಮತ್ತು ಮತ್ತು ಕಾಶ್ಮೀರದ ಮಹಿಳೆಯರ ಬಗ್ಗೆ ಖಟ್ಟರ್ ಅವರು ಅವಮಾನಕಾರೀ ಉಲ್ಲೇಖ ಮಾಡಿದ್ದಾರೆ ಎಂದು ಆಪಾದಿಸಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿಯವರು, ಖಟ್ಟರ್ ಹೇಳಿಕೆಯನ್ನು ’ತುಚ್ಛ’ ಎಂಬುದಾಗಿ ಬಣ್ಣಿಸಿ, ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ತರಬೇತಿಯ ಪ್ರತಿಫಲನ’
ಎಂದು ಹೇಳಿದ್ದರು. ‘ಹರಿಯಾಣದ
ಮುಖ್ಯಮಂತ್ರಿ ಖಟ್ಟರ್ ಅವರು ಕಾಶ್ಮೀರಿ ಮಹಿಳೆಯರ ಬಗ್ಗೆ ಮಾಡಿರುವ ಟೀಕೆ ತುಚ್ಛವಾದದ್ದು ಮತ್ತು ದುರ್ಬಲ,
ಅಭದ್ರ ಮತ್ತು ದಯನೀಯ ಮನುಷ್ಯನ ಮನಸ್ಸಿಗೆ ಕೊಟ್ಟ ವರ್ಷಾನುಗಟ್ಟಲೆಯ ತರಬೇತಿಯನ್ನು ತೋರಿಸುತ್ತದೆ. ಪುರುಷರು ಸ್ವಾಮ್ಯ ಹೊಂದಲು ಮಹಿಳೆಯರು ಸೊತ್ತುಗಳಲ್ಲ’ ಎಂದು
ರಾಹುಲ್ ಟ್ವೀಟ್ ಮಾಡಿದ್ದರು. ಹರಿಯಾಣದ
ಮುಖ್ಯಮಂತ್ರಿ ಖಟ್ಟರ್ ಅವರ ಪಕ್ಷವಾದ ಬಿಜೆಪಿಗೆ ಆರ್ಎಸ್ಎಸ್ ಸ್ಫೂರ್ತಿಯ ಚಿಲುಮೆಯಾಗಿದೆ. ರಾಹುಲ್
ಗಾಂಧಿ ಅವರ ಟ್ವೀಟ್ ಪ್ರಕಟವಾದ ಬೆನ್ನಲ್ಲೇ, ಟ್ವೀಟ್ ಮೂಲಕವೇ ಉತ್ತರ ನೀಡಿದ ಖಟ್ಟರ್ ತಮ್ಮ ಭಾಷಣದ ಪೂರ್ತಿ ವಿಡಿಯೋವನ್ನು ಅದಕ್ಕೆ ಲಗತ್ತಿಸಿ ಮಾತಿನ ಸಂದರ್ಭವನ್ನು ಸ್ವತಃ ತೀರ್ಮಾನಿಸಿಕೊಳ್ಳುವಂತೆ ಸೂಚಿಸಿದರು. ‘ತಿರುಚಿದ
ಸುದ್ದಿಗಳಿಗೆ’ ಪ್ರತಿಕ್ರಿಯಿಸಬೇಡಿ
ಎಂದು ರಾಹುಲ್ ಗಾಂಧಿಯವರಿಗೆ ಸೂಚಿಸಿದ ಖಟ್ಟರ್ ’ಪ್ರಿಯ ರಾಹುಲ್ ಗಾಂಧೀ ಜಿ, ಕನಿಷ್ಠ ನಿಮ್ಮ ಮಟ್ಟದಲ್ಲಿ, ನೀವು ತಿರುಚಿದ ಸುದ್ದಿಗಳಿಗೆ ಪ್ರತಿಕ್ರಿಯಿಸಬಾರದು. ನಾನು ವಾಸ್ತವವಾಗಿ ಹೇಳಿದ್ದು ಏನು, ಯಾವ ಸಂದರ್ಭದಲ್ಲಿ ಹೇಳಿದೆ ಎಂಬುದನ್ನು ತೋರಿಸುವ ವಿಡಿಯೋವನ್ನು ಲಗತ್ತಿಸಿದ್ದೇನೆ. ಸ್ವತಃ ನೋಡಿಕೊಳ್ಳಿ. ನಿಮ್ಮ ಮನಸ್ಸಿಗೆ ಸುಸ್ಪಷ್ಟತೆ ಲಭಿಸಬಹುದು’
ಎಂದು ಬರೆದರು. ಪತೇಹಾಬಾದಿನ ಸಮಾರಂಭ ಒಂದರಲ್ಲಿ ಹರಿಯಾಣದ ಮುಖ್ಯಮಂತ್ರಿ ಮಾಡಿದ ಭಾಷಣವು ರಾಜಕೀಯ ವಿವಾದವನ್ನು ಹುಟ್ಟು ಹಾಕಿತ್ತು. ಲಿಂಗ ಅನುಪಾತದ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸದಿದ್ದರೆ ಹರಿಯಾಣದ ಪುರುಷರಿಗೆ ಮದುವೆಯಾಗಲು ಜಮ್ಮು ಮತ್ತು ಕಾಶ್ಮೀರದ ಮಹಿಳೆಯರು ಬೇಕಾಗಿ ಬರಬಹುದು ಎಂದು ಖಟ್ಟರ್ ಹೇಳಿದ್ದರು. ತತ್ ಕ್ಷಣವೇ ಅವರು ’ಇಂತಹ ಸಲಹೆಗಳನ್ನು ತಮಾಷೆಯಾಗಿ ಮಾಡಲಾಗುತ್ತಿದೆ. ಆದರೆ ಲಿಂಗ ಅಸಮತೋಲನದ ಸಮಸ್ಯೆಯ ಗಂಭೀರತೆಯಿಂದ ನಮ್ಮನ್ನು ಇಂತಹ ಮಾತುಗಳು ದಿಕ್ ಚ್ಯುತಿ ಮಾಡಬಾರದು ಎಂದು ಖಟ್ಟರ್ ಹೇಳಿದ್ದರು. ‘ನಮ್ಮ
ಸಚಿವ ಒ.ಪಿ. ಧನ್ಕರ್ ಅವರು ನಾವು ಬಿಹಾರದಿಂದ ಸೊಸೆಯರನ್ನು ತರಬೇಕಾಗುತ್ತದೆ ಎಂದು ಹೇಳುತ್ತಾರೆ. ನಮಗೆ
ಹುಡುಗಿಯರನ್ನು ಕಾಶ್ಮೀರದಿಂದ ತರಲು ಮಾರ್ಗ ಮುಕ್ತವಾಗಿದೆ ಎಂದು ಜನರು ಈಗ ಹೇಳಲು ಆರಂಭಿಸಿದ್ದಾರೆ,
ಇಂತಹ ತಮಾಷೆಗಳನ್ನು ಬದಿಗಿಟ್ಟು ಸಮಾಜದಲ್ಲಿ ಲಿಂಗ ಅನುಪಾತವನ್ನು ಸರಿಸಪಡಿಸಿದಾಗ ಮಾತ್ರ ಸಮತೋಲನ ಸಾಧ್ಯವಾಗುತ್ತದೆ’ ಎಂದೂ
ಖಟ್ಟರ್ ಹೇಳಿದ್ದರು. ಸಂವಿಧಾನದ ೩೭೦ನೇ ವಿಧಿ ರದ್ಧತಿಯ ಹಿನ್ನೆಲೆಯಲ್ಲಿ ಖಟ್ಟರ್ ಅವರಿಂದ ಈ ಹೇಳಿಕೆ ಬಂದಿತ್ತು.
ಕಾಂಗ್ರೆಸ್ಸಿನ ಮಹಿಳಾ ವಿಭಾಗದ ಮುಖ್ಯಸ್ಥೆ ಸುಶ್ಮಿತಾ
ದೇವ್ ಅವರು ಖಟ್ಟರ್ ಅವರನ್ನು ಟೀಕಿಸುವಲ್ಲಿ ರಾಹುಲ್ ಗಾಂಧಿಯವರ ಜೊತೆ ಸೇರಿದ್ದರು ಮತ್ತು ಈ ಟೀಕೆಗಳಿಗಾಗಿ ಖಟ್ಟರ್
ಅವರನ್ನು ಖಂಡಿಸಬೇಕು ಎಂದು ಹೇಳಿದ್ದರು.
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸುವ ಹಾಗೂ ರಾಜ್ಯವನ್ನು ವಿಭಜಿಸುವ ಪ್ರಸ್ತಾವನೆಗಳನ್ನು ಅಂಗೀಕರಿಸಲು ನಡೆದ ಸಚಿವ ಸಂಪುಟ ಸಭೆಯು ಕೇವಲ ೭ ನಿಮಿಷ ಕಾಲ
ನಡೆದಿತ್ತು. ಗೃಹ ಸಚಿವ ಅಮಿತ್ ಶಾ ಅವರು ಈ
ಬಗ್ಗೆ ಮಾಡಿದ ಉಲ್ಲೇಖವನ್ನು ಹಾಜರಿದ್ದ ಇತರ ಸಚಿವರು ಪ್ರಚಂಡ ಹರ್ಷೋದ್ಘಾರಗಳೊಂದಿಗೆ ಸ್ವಾಗತಿಸಿದರು ಎಂದು ವಿಶ್ವಾಸಾರ್ಹ ಮೂಲಗಳು ಈದಿನ ತಿಳಿಸಿದವು.
ನರೇಂದ್ರ ಮೋದಿ ಸರ್ಕಾರವು ಭಾರತೀಯ ಜನತಾ ಪಕ್ಷದ ದೀರ್ಘ ಕಾಲದ ಭರವಸೆಯಾದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯವನ್ನು ವಿಭಜನೆ ಮಾಡಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸುವ ಮೂಲಕ ಕಾನೂನು, ಸುವ್ಯವಸ್ಥೆ ಮತ್ತು ಇತರ ನಿರ್ಣಾಯಕ ವಿಷಯಗಳಲ್ಲಿ ಕೇಂದ್ರದ ನೇರ ನಿಯಂತ್ರಣಕ್ಕೆ ಪ್ರದೇಶವನ್ನು ಒಳಪಡಿಸುವ ಪ್ರಸ್ತಾಪಗಳಿಗೆ ಸಂಸತ್ತು ಈ ವಾರಾರಂಭದಲ್ಲಿ ಅನುಮೋದನೆ
ನೀಡಿತ್ತು. ‘ಅಮಿತ್
ಶಾ ಅವರು ೩೭೦ನೇ ವಿಧಿಯ ಉಲ್ಲೇಖ ಮಾಡುತ್ತಿದ್ದಂತೆಯೇ ಸಚಿವರು ಮೇಜುಗಳನ್ನು ಕುಟ್ಟ ತೊಡಗಿದರು. ಸಚಿವ ಸಂಪುಟ ಸಭೆಯಲ್ಲಿ ಅದೊಂದು ಭಾವಪೂರ್ಣ ಕ್ಷಣವಾಗಿತ್ತು’ ಎಂದು
ವಿಷಯವನ್ನು ತಿಳಿಸಿದ ವ್ಯಕ್ತಿ ಹೇಳಿದರು. ‘ಮೋದಿ
ಸಂಪುಟದಲ್ಲಿರುವ ಬಹುತೇಕ ಮಂದಿ ಕಾಶ್ಮೀರವನ್ನು ಭಾರತದ ಇತರ ಭಾಗಗಳ ಜೊತೆಗೆ ಸಮಗ್ರವಾಗಿ ಸೇರ್ಪಡೆ ಮಾಡಬೇಕೆಂಬ ಹೋರಾಟಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ್ದ ಶ್ಯಾಮ ಪ್ರಸಾದ ಮುಖರ್ಜಿ ಅವರ ಸಿದ್ಧಾಂತದ ಬೆಂಬಲಿಗರಾಗಿದ್ದರು’ ಎಂದು
ಅವರು ನುಡಿದರು. ಮೋದಿ, ಶಾ ಮತ್ತು ಇತರ
ಕೆಲವರು ಮಾತ್ರ ಈ ಕ್ರಮವನ್ನು ಅತ್ಯಂತ
ರಹಸ್ಯವಾಗಿ ಕಾಯ್ದಿರಿಸಿಕೊಂಡಿದ್ದರು. ರಾಷ್ಟ್ರಪತಿ ಅಧಿಸೂಚನೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವುದಕ್ಕೆ ಕೆಲ ದಿನಗಳ ಮುನ್ನವಷ್ಟೇ ಇನ್ನಷ್ಟು ಜನರನ್ನು ಈ ಪ್ರಕ್ರಿಯೆಯಲ್ಲಿ ಪಾಲುದಾರರನ್ನಾಗಿ
ಮಾಡಲಾಗಿತ್ತು. ವಿರೋಧ
ಪಕ್ಷವನ್ನು ಸಂಪೂರ್ಣವಾಗಿ ಅಚ್ಚರಿಯಲ್ಲಿ ಕೆಡಹುವ ಸಲುವಾಗಿ ಸರ್ಕಾರಕ್ಕೆ ಬಹುಮತ ಇಲ್ಲದೇ ಇರುವ ರಾಜ್ಯಸಭೆಯಲ್ಲಿ ವಿಷಯವನ್ನು ಮೊದಲು ತರುವ ನಿರ್ಧಾರವನ್ನು ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸಿ ಕೈಗೊಳ್ಳಲಾಗಿತ್ತು. ವಿರೋಧ ಪಕ್ಷಕ್ಕೆ ಈ ಬಗ್ಗೆ ಲವಲೇಶ
ಸುಳಿವೂ ಇರಲಿಲ್ಲ. ಇದೇ ನಮ್ಮ ಉದ್ದೇಶವಾಗಿತ್ತು ಎಂದು ಪಕ್ಷದ ಮೂಲ ಹೇಳಿದೆ. ಸಂಸತ್ತಿನಲ್ಲಿ
ಸದನದ ನಿರ್ವಾಹಕರು ರಾಜ್ಯಸಭೆಯಲಿ ಕೆಲವು ವಿರೋಧ ಪಕ್ಷಗಳಿಗೆ ಮುಂಚಿತವಾಗಿಯೇ ಮಹತ್ವದ ಕಲಾಪ ನಡೆಯಲಿದೆ ಎಂಬ ಸೂಚನೆ ನೀಡಿದ್ದರು. ಆದರೆ ’ವಿಷಯ’ವನ್ನು ಪ್ರಸ್ತಾಪಕ್ಕೆ ಸಂಪುಟದ ಒಪ್ಪಿಗೆ ಲಭಿಸಿದ ಬಳಿಕವೇ ಅವರಿಗೆ ತಿಳಿಸಲಾಗಿತ್ತು. ‘ನಮ್ಮನ್ನು
ಬೆಂಬಲಿಸಿದ ವಿರೋಧ ಪಕ್ಷಗಳ ನಾಯಕರು ನಮ್ಮ ಕ್ರಮದ ಸೂಚ್ಯಾರ್ಥವನ್ನು ಗ್ರಹಿಸಿದರು ಮತ್ತು ಅದನ್ನು ಬೆಂಬಲಿಸಲು ನಿರ್ಧರಿಸಿದರು’ ಎಂದು
ನಂಬರ್ಲಹ ವ್ಯಕ್ತಿ ಹೇಳಿದರು. ನ್ಯಾಯಾಲಯದ
ಯಾವುದೇ ಪರಾಮರ್ಶೆಯಲ್ಲಿ ಗೆಲ್ಲುವಂತೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಮುಂಚಿತವಾಗಿಯೇ ಚಿಂತಿಸಿ ಅತ್ಯಂತ ಎಚ್ಚರಿಕೆಯಿಂದ ಮಸೂದೆಯನ್ನು ರಚಿಸಲಾಗಿತ್ತು ಎಂದು ಹಿರಿಯ ಸಚಿವರೊಬ್ಬರು ತಿಳಿಸಿದರು. ಬಿಜೆಪಿ ಆಡಳಿತ ಇರುವ ರಾಜ್ಯಗಳ ವಿಧಾನಸಭೆಗಳಲ್ಲಿ ಮೋದಿ ಮತ್ತು ಶಾ ಅವರನ್ನು ಶ್ಲಾಘಿಸಿ
ನಿರ್ಣಯಗಳನ್ನು ಅಂಗೀಕರಿಸುವುದೂ ಸೇರಿದಂತೆ, ನಿರ್ಣಯದ ಸಂಭ್ರಮಾಚರಣೆಗಾಗಿ ಬಿಜೆಪಿಯು ವಿಸ್ತೃತ ಹಾಗೂ ವ್ಯವಸ್ಥಿತ ಕಾರ್ಯಕ್ರಮವನ್ನು ರೂಪಿಸಿಕೊಂಡಿತ್ತು. ನಿರ್ಣಯ
ಅಂಗೀಕಾರಗೊಳ್ಳುತ್ತಿದ್ದಂತೆಯೇ
ಸಂಸತ್ ಭವನ ದೀಪಾಲಂಕಾರದಿಂದ ಝಗಮಗಿಸಿತ್ತು.
2019: ನವದೆಹಲಿ:
ಮುಂಗಾರು ವರುಣಾರ್ಭಟವು ಈದಿನವೂ ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ಮುಂದುವರೆದು, ಸಾವಿನ
ಸಂಖ್ಯೆ 100ನ್ನು ದಾಟಿತು. ಕೇರಳ ಮತ್ತು ಕರ್ನಾಟಕದಲ್ಲಿ ಪರಿಸ್ಥಿತಿ ಈದಿನವೂ ವಿಷಮವಾಗಿಯೇ ಇತ್ತು. 100 ಹೆಚ್ಚು ಸಾವಿನ ಜೊತೆಗೆ ಮಹಾರಾಷ್ಟ್ರದಲ್ಲಿ 4 ಲಕ್ಷಕ್ಕೂ
ಹೆಚ್ಚು ಮಂದಿಯನ್ನು ಈವರೆಗೆ ಜಲಾವೃತ ಪ್ರದೇಶದಿಂದ
ತೆರವುಗೊಳಿಸಲಾಯಿತು. ಕೇರಳದಲ್ಲಿ 80ಕ್ಕೂ ಹೆಚ್ಚು ಭೂಕುಸಿತಗಳು ಸಂಭವಿಸಿತು.
ಇಂದಿನ ಇತಿಹಾಸ History Today ಆಗಸ್ಟ್ 10
(2018+ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ಕಿಸಿ)
No comments:
Post a Comment