ನಾನು ಮೆಚ್ಚಿದ ವಾಟ್ಸಪ್

Monday, August 12, 2019

ಇಂದಿನ ಇತಿಹಾಸ History Today ಆಗಸ್ಟ್ 12

2019:  ಶಿರಸಿ/ ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಡಗೋಡ ಬಳಿಯ ಚಿಗಳ್ಳಿ ಜಲಾಶಯ (ಚಿಗಳ್ಳಿ ಚೆಕ್ ಡ್ಯಾಮ್) ಒಡೆದು, ಸಾವಿರಾರು ಎಕರೆ ಬೆಳೆ ಸರ್ವ ನಾಶವಾಯಿತು. ಜಲಾಶಯ ಒಡೆದ ಒಡೆದ ಪರಿಣಾಮವಾಗಿ ಹುಬ್ಬಳ್ಳಿ-ಶಿರಸಿ-ಮುಂಡಗೋಡು ರಸ್ತೆ ಸಂಪರ್ಕ ಬಂದ್ ಆಯಿತು.  ನಾಲ್ಕೈದು ದಿನಗಳಿಂದ ಮುಂಡಗೋಡ ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗಿತ್ತು. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ ೯ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು. ಜಲಾಶಯಗಳಿಗೆ ಯಾವುದೇ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನೀರನ್ನು ಹೊರಬಿಡಲಾಗುತ್ತಿತ್ತು. ಆದರೆ ಈದಿನ ಬೆಳಗ್ಗೆ ನೀರಿನ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಚಿಗಳ್ಳಿ ಜಲಾಶಯ ಒಡೆಯಿತು. ಜಲಾಶಯ ಒಡೆದ ಪರಿಣಾಮ ಚಿಗಳ್ಳಿ, ಹಿರೇಹಳ್ಳಿ, ಹನುಮಾಪುರ ಭಾಗದಲ್ಲಿ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಶಿರಸಿ-ಮುಂಡಗೋಡ ಹೆದ್ದಾರಿ ಬಂದ್ ಆಯಿತು. ಜಲಾಶಯದ ಒಡ್ಡು ಒಡೆದಿದ್ದು, ಕೆಳಭಾಗದ ಜನರಿಗೆ ಎಚ್ಚರಿಕೆ ನೀಡಿದ್ದೇವೆ. ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಜಲಾಶಯದ ನೀರಿನಿಂದ ಕೃಷಿ ಭೂಮಿಗೆ ಹಾನಿಯಾಗಿದೆ. ಜನವಸತಿ ಪ್ರದೇಶಗಳಿಗೆ ಹಾನಿಯಾಗಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ್ ತಿಳಿಸಿದರು.

2019: ವಿಶಾಖಪಟ್ಟಣ: ಬಂಗಾಳಕೊಲ್ಲಿಯಲ್ಲಿ ಕರಾವಳಿ ಬೆಂಬಲನೌಕೆಯಾಗಿ ಕಾರ್ಯ ನಿರ್ವಹಿಸುವ ಕರಾವಳಿ ಜಾಗ್ವಾರ್ ಹಡಗಿನಲ್ಲಿ  ಬೆಂಕಿ ಕಾಣಿಸಿಕೊಂಡು ಸಂಭವಿಸಿದ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಮೃತನಾಗಿ,  ಅಪಾಯದಲ್ಲಿ ಸಿಲುಕಿದ್ದ ೨೮ ಮಂದಿಯನ್ನು ರಕ್ಷಿಸಲಾಯಿತು.  ಪೂರ್ವ ನೌಕಾ ಕಮಾಂಡ್ ಅಧಿಕೃತ ವಕ್ತಾರರ ಪ್ರಕಾರ ಬೆಳಗ್ಗೆ ೧೧.೩೦ರ ಸುಮಾರಿಗೆ ವಿಶಾಖ ಪಟ್ಟಣದ ಹೊರಬಂದರಿನಲ್ಲಿ ದುರಂತ ಸಂಭವಿಸಿತು. ದುರಂತ ಘಟನೆ ಸಂಭವಿಸಿದಾಗ ಹಡಗಿನಲ್ಲಿ ೨೯ ಮಂದಿ ಸಿಬ್ಬಂದಿ ಇದ್ದರು. ಕಣ್ಮರೆಯಾಗಿರುವ ವ್ಯಕ್ತಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಹೇಳಲಾಯಿತು.  ದುರ್ಘಟನೆಯಲ್ಲಿ ಒಬ್ಬ ಸಿಬ್ಬಂದಿ ಮೃತನಾಗಿದ್ದು, ಇತರ ೨೮ ಮಂದಿಯನ್ನು ರಕ್ಷಿಸಲಾಯಿತು ಎಂದು ವಕ್ತಾರರು ಹೇಳಿದರು. ಕರಾವಳಿ ಜಾಗ್ವಾರ್ ಸಿಬ್ಬಂದಿ ತಮ್ಮ ರಕ್ಷಣೆಗಾಗಿ, ಬೆಂಕಿ ವ್ಯಾಪಿಸಿಕೊಂಡಿದ್ದ ತಮ್ಮ ಹಡಗನ್ನು ತ್ಯಜಿಸಿ ನೀರಿಗೆ ನೆಗೆಯಬೇಕಾಯಿತು ಎಂದು ವಕ್ತಾರ ನುಡಿದರು.  ಕರಾವಳಿ ಜಾಗ್ವಾರ್ ನೌಕೆಯಲ್ಲಿ ಮೊದಲು ಭಾರೀ ಸ್ಫೋಟದ ಸದ್ದು ಕೇಳಿಸಿತು ಮತ್ತು ಬೆನ್ನಲ್ಲೇ ಹಡಗಿನಿಂದ ಭಾರೀ ಹೊಗೆ ಏಳುತ್ತಿರುವುದು ಕಾಣಿಸಿತು. ಅದರ ಜೊತೆಗೆ ಬೆಂಕಿಯ ಜ್ವಾಲೆಗಳೂ ಕಾಣಿಸಿದವು ಎಂದು ವಕ್ತಾರ ಹೇಳಿದರು. ಬೆಂಕಿ ಅನಾಹುತಕ್ಕೆ ನಿರ್ದಿಷ್ಟ ಕಾರಣವನ್ನು ಇನ್ನೂ ಪತ್ತೆ ಹಚ್ಚಬೇಕಾಗಿದೆ ಎಂದು ಅವರು ನುಡಿದರು. ಪ್ರದೇಶದಲ್ಲಿ ಸನಿಹದಲ್ಲಿಯೇ ಭಾರತೀಯ ಕರಾವಳಿ ಕಾವಲು ಪಡೆಯ (ಐಸಿಜಿಎಸ್) ರಾಣಿ ರಶ್ಮೋನಿ ಇತ್ತು. ತತ್ ಕ್ಷಣವೇ ಅದನ್ನು ರಕ್ಷಣಾ ಕಾರ್ಯಾಚರಣೆಗೆ ಸಹಕಾರ ನೀಡಲು ಕಳುಹಿಸಲಾಯಿತು. ರಾಣಿ ರಶ್ಮೋನಿಯು ವಿಶಾಕ ಪಟ್ಟಣ ಬಂದರು ಟ್ರಸ್ಟಿನ (ವಿಪಿಟಿ) ದೋಣಿಗಳ ಜೊತೆ ಸಮನ್ವಯದೊಂದಿಗೆ ಶ್ರಮಿಸಿ ಸಿಬ್ಬಂದಿಯನ್ನು ರಕ್ಷಿಸಿತು.  ಐಸಿಜಿಎಸ್ ಸಮುದ್ರ ಪಹರೆದಾರ, ಐಸಿಜಿ ಹೆಲಿಕಾಪ್ಟರ್ ಮತ್ತು ಐಸಿಜಿಎಸ್ ಸಿ-೪೩೨ ಗಳನ್ನೂ ರಕ್ಷಣಾ ಕಾರ್ಯಕ್ಕೆ ನಿಯೋಜಿಸಿತು. ಸಿಬ್ಬಂದಿ ಸಮುದ್ರಕ್ಕೆ ನೆಗೆಯವ ವೇಳೆಯಲ್ಲಿ ಜೋರಾಗಿ ಕೂಗಿಕೊಂಡರು. ಕರಾವಳಿ ಕಾವಲು ಪಡೆಯ ಹಡಗು ದೋಣಿಗಳು ತತ್ ಕ್ಷಣವೇ ಅವರನ್ನು ರಕ್ಷಿಸಿದರು. ಕರಾವಳಿ ಜಾಗ್ವಾರ್ ಹಡಗು ದುರಸ್ತಿಯ ಸಲುವಾಗಿ ಹೊರಟಿತ್ತು. ಕಚ್ಚಾ ತೈಲ ಸಾಗಣೆ ಸಲುವಾಗಿ ಹಡಗನ್ನು ಹಿಂದುಸ್ಥಾನ ಪೆಟ್ರೋ ಕೆಮಿಕಲ್ ಲಿಮಿಟೆಡ್ (ಎಚ್ಪಿಸಿಎಲ್) ಗುತ್ತಿಗೆಗೆ ಪಡೆದಿತ್ತು. ಗಾಯಗೊಂಡಿರುವ ೧೬ ಮಂದಿ ಸಿಬ್ಬಂದಿ ಸದಸ್ಯರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.  ಹಡಗಿಗೆ ಶೇಕಡಾ ೭೦ರಷ್ಟು ಹಾನಿಯಾಗಿದೆ ಎಂದು ಮೂಲಗಳು ಹೇಳಿದವು.

2019: ನವದೆಹಲಿ: ದಕ್ಷಿಣ ಭಾರತವನ್ನು ನಲುಗಿಸಿರುವ ಕುಂಭದ್ರೋಣ ಮಳೆ ಇದೀಗ ಉತ್ತರಾಖಂಡಕ್ಕೂ ಕಾಲಿರಿಸಿ,  ಚಮೋಲಿ ಜಿಲ್ಲೆಯಲ್ಲಿ ಬೆಳಗ್ಗೆ ಎರಡು ಮನೆಗಳನ್ನು ಬಲಿತೆಗೆದುಕೊಂಡಿತು. ಮೇಘಸ್ಫೋಟದೊಂದಿಗೆ ಸುರಿದ ಮಳೆಗೆ ಉಂಟಾದ ದಿಢೀರ್ ಪ್ರವಾಹದಲ್ಲಿ ಮನೆ ಕುಸಿದು ಕೊಚ್ಚಿ ಹೋದಾಗ ಒಬ್ಬ ಮಹಿಳೆ ಮತ್ತು ಒಂಬತ್ತು ವರ್ಷದ  ಆಕೆಯ ಪುತ್ರಿ ಸಾವನ್ನಪ್ಪಿದರು ಮತ್ತು ಇನ್ನೊಬ್ಬ ವ್ಯಕ್ತಿ ಪ್ರವಾಹದಲ್ಲಿ ಕೊಚ್ಚಿಹೋದ ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿತು. ಮನೆ ಕುಸಿದು ಕೊಚ್ಚಿ ಹೋದ ಪರಿಣಾಮವಾಗಿ ಸಾವನ್ನಪ್ಪಿದ ಮಹಿಳೆಯನ್ನು ರೂಪಾದೇವಿ (35) ಎಂಬುದಾಗಿ ಗುರುತಿಸಲಾಯಿತು. ಈದಿನ ಸೋಮವಾರ ನಸುಕಿನಲ್ಲಿ ಈ ದುರ್ಘಟನೆ ಸಂಭವಿಸಿತು. ಉತ್ತರಾಖಂಡದ ಚಮೋಲಿ ಜಿಲ್ಲೆಯ ಲಂಖಿ ಗ್ರಾಮದ ವಿಕಾಸ್ ಖಂಡ್ ಘಟ್ಟದಲ್ಲಿ ಪ್ರವಾಹಕ್ಕೆ ತುತ್ತಾಗಿ ಮನೆ ಕೊಚ್ಚಿ ಹೋಗುತ್ತಿರುವ  ಈ ವಿಡಿಯೋ  ವೈರಲ್ ಆಯಿತು. ಸ್ಥಳೀಯ ನಿವಾಸಿಗಳು ಮತ್ತು  ವಿಕೋಪ ಸ್ಪಂದನಾ ಪಡೆ (ಎಸ್ ಡಿಆರ್ ಎಫ್) ತಂಡ ಸ್ಥಳಕ್ಕೆ ಧಾವಿಸಿ, ಶೋಧ, ರಕ್ಷಣಾ ಕಾರ್ಯಾಚರಣೆ ನಡೆಸಿದರು.
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತದ ಕ್ರಮದ ಹಿನ್ನೆಲೆಯಲ್ಲಿ ಲಾಹೋರ್-ದೆಹಲಿ ನಡುವಣ ಬಸ್ಸು ಸಂಚಾರವನ್ನು ಪಾಕಿಸ್ತಾನವು ಸ್ಥಗಿತಗೊಳಿಸಿದ್ದನ್ನು ಅನುಸರಿಸಿ, ದೆಹಲಿ ಸಾರಿಗೆ ನಿಗಮವು (ಡಿಟಿಸಿ) ಈದಿನ ದೆಹಲಿ-ಲಾಹೋರ್ ಬಸ್ಸು ಸೇವೆಯನ್ನು ಅಮಾನತುಗೊಳಿಸಿತು ಎಂದು ಸಾರಿಗೆ ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಸಂಜೌತಾ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಭಾರತ  ಹಿಂದಿನ ದಿನ ರದ್ದು ಪಡಿಸಿತ್ತು. ಪಾಕಿಸ್ತಾನದ ಹಿರಿಯ ಸಚಿವರೊಬ್ಬರು  ಮೈತ್ರಿಬಸ್ಸಿನ ಸೇವೆಯನ್ನು  ಆಗಸ್ಟ್ 12ರ ಸೋಮವಾರದಿಂದ ಅಮಾನತುಗೊಳಿಸಲಾಗುವುದು ಎಂದು ಪ್ರಕಟಿಸಿದ್ದರು. ದೆಹಲಿ ಸಾರಿಗೆ ನಿಗಮದ ಬಸ್ಸು ಲಾಹೋರಿಗೆ ಸೋಮವಾರ ಬೆಳಗ್ಗೆ ಗಂಟೆಗೆ ಹೊರಡಬೇಕಾಗಿತ್ತು. ಏನಿದ್ದರೂ ಬಸ್ಸು ಸೇವೆ ಅಮಾನತಿಗೆ ಪಾಕಿಸ್ತಾನ ನಿರ್ಧರಿಸಿದ್ದನ್ನು ಅನುಸರಿಸಿ ದೆಹಲಿಯಿಂದ ಹೊರಡಬೇಕಾಗಿದ್ದ ಬಸ್ಸು ಹೊರಡಲಿಲ್ಲ ಎಂದು ಅಧಿಕಾರಿ ಹೇಳಿದರು. ಪಾಕಿಸ್ತಾನವು ದೆಹಲಿ-ಲಾಹೋರ್ ಬಸ್ಸು ಸೇವೆ ಅಮಾನತುಗೊಳಿಸಲು ನಿರ್ಧರಿಸಿದ ಪರಿಣಾಮವಾಗಿ, ಬಸ್ಸು ಕಳುಹಿಸಲು ಡಿಟಿಸಿಗೆ ಸಾಧ್ಯವಾಗುತ್ತಿಲ್ಲ ಎಂದು ಸಾರಿಗೆ ನಿಗಮದ ಹೇಳಿಕೆ ತಿಳಿಸಿತು. ಪಾಕಿಸ್ತಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಪಿಟಿಡಿಸಿ) ಬಸ್ಸು ಸೇವೆ ಅಮಾನತು ವಿಚಾರವನ್ನು ದೂರವಾಣಿ ಮೂಲಕವೂ ಡಿಟಿಸಿಗೆ ತಿಳಿಸಿತ್ತು. ಲಾಹೋರಿಗೆ ಕೊನೆಯ ಬಸ್ಸು ಆಗಸ್ಟ್ 10ರ ಶನಿವಾರ ಬೆಳಗ್ಗೆ ಕೇವಲು ಇಬ್ಬರು ಪ್ರಯಾಣಿಕರೊಂದಿಗೆ ಹೊರಟಿತ್ತು. ಲಾಹೋರಿನಿಂದ ವಾಪಸಾಗುವ ಬಸ್ಸು ೧೯ ಮಂದಿ ಪ್ರಯಾಣಿಕರೊಂದಿಗೆ ಅದೇ ದಿನ ಸಂಜೆ ರಾಜಧಾನಿಯನ್ನು ತಲುಪಿತ್ತು.  ದೆಹಲಿ-ಲಾಹೋರ್ ಬಸ್ಸು ಸೇವೆಯು ಮೊತ್ತ ಮೊದಲಿಗೆ ೧೯೯೯ರ ಫೆಬ್ರುವರಿಯಲ್ಲಿ ಆರಂಭವಾಗಿತ್ತು, ಆದರೆ ೨೦೦೧ರ ಸಂಸತ್ ಮೇಲಿನ ದಾಳಿ ಬಳಿಕ ಅಮಾನತುಗೊಂಡಿತ್ತು. ೨೦೦೩ರ ಜುಲೈಯಲ್ಲಿ ಸಂಚಾರ ಪುನಾರಂಭಗೊಂಡಿತ್ತು. ಏನಿದ್ದರೂ, ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಫೆಬ್ರುವರಿ ತಿಂಗಳಲ್ಲಿ ಪಾಕಿಸ್ತಾನದ ಬಾಲಾಕೋಟ್ ಉಗ್ರ ತರಬೇತಿ ಶಿಬಿರದ ಮೇಲೆ ನಡೆದ ಸರ್ಜಿಕಲ್ ದಾಳಿಯ ಬಳಿಕ ಪ್ರಯಾಣಿಕರ ಸಂಖ್ಯೆ ಇಳಿಮುಖಗೊಂಡಿತ್ತು. ಆದರೂ ಬಸ್ಸು ಸಂಚಾರ ನಿಂತಿರಲಿಲ್ಲ.  ಲಾಹೋರ್-ದೆಹಲಿ ಬಸ್ಸು ದೆಹಲಿ ಗೇಟ್ ಸಮೀಪದ ಅಂಬೇಡ್ಕರ್ ಸ್ಟೇಡಿಯಂ ಟರ್ಮಿನಲ್ನಿಂದ ಹೊರಡುತ್ತಿತು. ದೆಹಲಿ ಸಾರಿಗೆ ನಿಗಮದ ಬಸ್ಸುಗಳು ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ದೆಹಲಿಯಿಂದ ಹೊರಟರೆ, ಪಿಟಿಡಿಸಿ ಬಸ್ಸುಗಳು ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ದೆಹಲಿಯಿಂದ ಲಾಹೋರಿಗೆ ಹೊರಡುತ್ತಿದ್ದವು.  ಮರುಪಯಣದಲ್ಲಿ ಡಿಟಿಸಿ ಬಸ್ಸು ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಲಾಹೋರಿನಿಂದ ದೆಹಲಿಗೆ ಹೊರಟರೆ, ಪಿಟಿಡಿಸಿ ಬಸ್ಸುಗಳು ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಲಾಹೋರಿನಿಂದ ದೆಹಲಿಗೆ ಹೊರಡುತ್ತಿದ್ದವು.

2019: ಬೀಜಿಂಗ್:  ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ಸವಲತ್ತುಗಳ ವಿಸ್ತರಣೆ ಸೇರಿದಂತೆ ಪರಸ್ಪರ ಬಾಂಧವ್ಯ ವೃದ್ಧಿಯ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲು ಭಾರತ ಮತ್ತು ಚೀನಾ ನಿರ್ಧರಿಸಿದವು. ಚೀನಾದ ವಿದೇಶಾಂಗ ಸಚಿವ ವಾಂಗ್ ಅವರ ಜೊತೆಗೆ ಇಲ್ಲಿ ಇಡೀ ದಿನ ನಡೆದ ನಿಯೋಗ ಮಟ್ಟದ ಮಾತುಕತೆಗಳ ಬಳಿಕ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ವಿಚಾರವನ್ನು ಪ್ರಕಟಿಸಿದರು.  ಹೊಸ ಮತ್ತು ಹಳೆಯ ಪ್ರಕ್ಷುಬ್ಧತೆಗಳ ಮಧ್ಯೆ, ಪರಸ್ಪರ ಬಾಂಧವ್ಯ ವೃದ್ಧಿಯ ಮಾರ್ಗಗಳನ್ನು ಅನ್ವೇಷಿಸಿದ ಉಭಯ ರಾಷ್ಟ್ರಗಳುಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ಸವಲತ್ತು ವಿಸ್ತರಣೆ ಸೇರಿದಂತೆ ಹಲವಾರು ಉಪಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳಲಿವೆ. ಮಾನಸ ಸರೋವರ ಯಾತ್ರೆ ವಿಸ್ತರಣೆಯ ಪ್ರಸ್ತಾಪವನ್ನು ಚೀನಾ ಮಾಡಿದ್ದು ಇದು ಅತ್ಯಂತ ಶ್ಲಾಘನೀಯಎಂದು ಜೈಶಂಕರ್ ಹೇಳಿದರು.  ಮ್ಯೂಸಿಯಂ ನಿರ್ವಹಣೆ, ಶಿಕ್ಷಣ, ಚಿಂತಕರ ಚಾವಡಿ ಮತ್ತು ಚಲನಚಿತ್ರ ಮತ್ತು ಪ್ರಸಾರ ಕ್ಷೇತ್ರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಾವು ಸಂಘಟಿಸಲಿದ್ದೇವೆ. ಇದು ಸಾಂಸ್ಕೃತಿಕ ಮತ್ತು ಜನರಿಂದ ಜನರ ನಡುವಣ ವಿನಿಮಯಗಳನ್ನು ಪ್ರತಿಫಲಿಸಲಿದೆ ಎಂದು ಜೈಶಂಕರ್ ಹೇಳಿದರು.  ಪರಿಣಾಮವಾಗಿ ಜನರ ನಡುವಣ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ೧೦೦ ಕಾರ್ಯಕ್ರಮಗಳನ್ನು ಸಂಘಟಿಸಲು ನಾವು ಒಪ್ಪಿದ್ದೇವೆ. ನಾವು ಜಂಟಿಯಾಗಿ ಚಲನಚಿತ್ರ ಸಪ್ತಾಹವನ್ನು ಈದಿನವೇ ಉದ್ಘಾಟಿಸುವ ಮೂಲಕ ಚಟುವಟಿಕೆಗಳನ್ನು ನಾವು ಆರಂಭಿಸುತ್ತಿದ್ದೇವೆಎಂದೂ ಜೈಶಂಕರ್ ಹೇಳಿದರು.  ಉಭಯ ರಾಷ್ಟ್ರಗಳು ನಮ್ಮ ಬಾಂಧವ್ಯ  ವೃದ್ಧಿಯನ್ನು ಸುರಳೀತಗೊಳಿಸುವ ಸಲುವಾಗಿ ಗಡಿಯಲ್ಲಿ ಶಾಂತಿ ಮತ್ತು ಪ್ರಶಾಂತತೆ ಕಾಯ್ದುಕೊಳ್ಳಲು ಉಭಯ ರಾಷ್ಟ್ರಗಳು ಒಪ್ಪಿವೆ. ಇದಕ್ಕಾಗಿ ಉಭಯ ಸಶಸ್ತ್ರ ಪಡೆಗಳು ಸಂಪರ್ಕವನ್ನು ವಿಸ್ತರಿಸಿಕೊಂಡು ವಿಶ್ವಾಸ ವರ್ಧನೆಯ ವಿವಿಧ ಕ್ರಮಗಳನ್ನೂ ಕೈಗೊಳ್ಳಲಿವೆ ಎಂದು ಜೈಶಂಕರ್ ನುಡಿದರು.

2019: ಬೀಜಿಂಗ್: ಜಮ್ಮು ಮತ್ತು ಕಾಶ್ಮೀರದ ಇತ್ತೀಚಿನ ಬೆಳವಣಿಗೆಗಳಿಂದ ಉಂಟಾಗಿರುವ ಪ್ರಾದೇಶಿಕ ಪ್ರಕ್ಷುಬ್ಧತೆ ಮತ್ತು ಅವುಗಳ ಪರಿಣಾಮಗಳನ್ನು  ಚೀನಾವು ಅತ್ಯಂತ ನಿಕಟವಾಗಿ ಪರಿಶೀಲಿಸುತ್ತಿದೆ ಎಂದು ಚೀನಾ  ಇಲ್ಲಿ ಹೇಳಿತು. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ಬೆಳಗ್ಗೆ ಇಡೀದಿನದ ಮಾತುಕತೆ ಆರಂಭಿಸಿದವು.  ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಭಿನ್ನಾಭಿಪ್ರಾಯಗಳು ವಿವಾದಗಳಾಗಬಾರದು ಎಂಬುದಾಗಿ ಉಭಯ ರಾಷ್ಟ್ರಗಳ ನಾಯಕತ್ವಗಳು ಸರ್ವಾನುವತದ ಅಭಿಪ್ರಾಯಕ್ಕೆ ಬಂದಿವೆ ಎಂದು ಭಾರತ ಹೇಳಿತು. ಭಾರತೀಯ ತಂಡದ ನೇತೃತ್ವವನ್ನು ವಹಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರುಭಾರತ ಮತ್ತು ಚೀನಾ ಜಾಗತಿಕ ರಾಜಕೀಯದಲ್ಲಿ ವಿಶಿಷ್ಠ ಬಾಂಧವ್ಯವನ್ನು ಹೊಂದಿವೆ ಮತ್ತು ಉಭಯ ರಾಷ್ಟ್ರಗಳೂ ಪರಸ್ಪರರ ಪ್ರಮುಖ ಕಾಳಜಿಗಳ ಬಗ್ಗೆ ಸೂಕ್ಷ್ಮತೆ ಹೊಂದಿವೆಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಅವರಿಗೆ ಹೇಳಿದರು.  ನಿಮಗೆ ಗೊತ್ತಿರುವಂತೆ, ಭಾರತ-ಚೀನಾ ಬಾಂಧವ್ಯವು ಜಾಗತಿಕ ರಾಜಕೀಯದಲ್ಲಿ ವಿಶಿಷ್ಠ ಸ್ಥಾನವನ್ನು ಹೊಂದಿವೆ. ಎರಡು ವರ್ಷಗಳ ಹಿಂದೆ ನಮ್ಮ ನಾಯಕರು (ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಕ್ಷಿ ಜಿನ್ಪಿಂಗ್) ವಾಸ್ತವವನ್ನು ಮಾನ್ಯ ಮಾಡಿ, ಜಾಗತಿಕ ಅಸ್ಥಿರತೆಯ ಸಮಯದಲ್ಲಿ ಭಾರತ-ಚೀನಾ ಬಾಂಧವ್ಯವು ಸ್ಥಿರತೆಯ ಅಂಶವಾಗಿದೆ ಎಂದು ಅಸ್ತಾನದಲ್ಲಿ ನಡೆದ ಮಾತುಕತೆಯಲ್ಲಿ ಸಹಮತದ ತೀರ್ಮಾನಕ್ಕೆ ಬಂದಿದ್ದರುಎಂದು ಹೇಳಿದರು.  ನಮ್ಮೊಳಗಿನ ಭಿನ್ನಾಭಿಪ್ರಾಯಗಳು ಏನಿದ್ದರೂ ಅವು ವಿವಾದಗಳಾಗಬಾರದು ಎಂಬುದಾಗಿ ಖಾತರಿ ನೀಡುವ ಅಗತ್ಯವಿದೆಎಂದು ಜೈಶಂಕರ್ ಅವರು ವಾಂಗ್ ಜೊತೆಗಿನ ನಿಯೋಗ ಮಟ್ಟದ ಮಾತುಕತೆಯ ಆರಂಭದಲ್ಲೇ ಹೇಳಿದರು.  ಮೋದಿ ಮತ್ತು ಕ್ಷಿ ಅವರು ೨೦೧೭ರಲ್ಲಿ ಕಜಕಸ್ತಾನದ ಅಸ್ತಾನದಲ್ಲಿ ಶಾಂಘಾಯಿ ಸಹಕಾರ ಸಂಘಟನೆಯ (ಎಸ್ಸಿಒ) ಶೃಂಗಸಭೆಯ ಕಾಲದಲ್ಲಿ ಭೇಟಿ ಆಗಿದ್ದಾಗ ಮಾತು ಹೇಳಿದ್ದರು.  ಕಳೆದ ವರ್ಷ ನಡೆದ ವುಹಾನ್ ಶೃಂಗಸಭೆಯ ಕಾಲದಲ್ಲಿ ಉಭಯ ನಾಯಕರ ಮಧ್ಯೆ ಅತ್ಯಂತ ಆಳವಾದ ಮತ್ತು ರಚನಾತ್ಮಕವಾದ ಮುಕ್ತ ಅಭಿಪ್ರಾಯಗಳ ವಿನಿಮಯ ನಡೆದ್ದು ಅತ್ಯಂತ ತೃಪ್ತಿಯ ವಿಷಯ. ನಮ್ಮ ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ನಾವು ಅದರ ಛಾಯೆಯನ್ನು ಕಂಡಿದ್ದೇವೆ ಎಂದು ಜೈಶಂಕರ್ ಹೇಳಿದರು.  ನಾಯಕರು ಬಾಂಧವ್ಯ ವೃದ್ಧಿಗೆ ಮಾರ್ಗದರ್ಶನ ನೀಡುವಾಗ, ಸಾರ್ವಜನಿಕರು ಬಾಂಧವ್ಯ ವೃದ್ಧಿಗೆ ಬೆಂಬಲ ನೀಡುವುದೂ ಮುಖ್ಯವಾಗುತ್ತದೆ ಎಂದು ಜೈಶಂಕರ್ ಹೇಳಿದರು. ಹಿಂದಿನ ವರ್ಷಗಳಲ್ಲಿ ನಾವು ಮಾಡಿರುವಂತೆ ಪರಸ್ಪರಿಗೆ ಸೂಕ್ಷ್ಮವಾದ ಪ್ರಮಖ ಕಾಳಜಿಗಳ ಬಗ್ಗೆ ಗಮನ ಹರಿಸಿ ಭಿನ್ನಾಭಿಪ್ರಾಯಗಳನ್ನು ಇತ್ಯರ್ಥ ಪಡಿಸಿಕೊಳ್ಳುವ ನಿಟ್ಟಿನಲ್ಲಿ ರಚನಾತ್ಮಕ ಕೆಲಸ ಮಾಡುವುದಕ್ಕೆ ಸಾರ್ವಜನಿಕ ಬೆಂಬಲ ವೃದ್ಧಿ ಪಡಿಸುವುದು ಕೂಡಾ ಮುಖ್ಯ ಎಂದು ಅವರು ನುಡಿದರು. ನಮ್ಮ ಬಾಂಧವ್ಯಗಳು ಹೆಚ್ಚು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯ ಮೂಲಕ ಸಹಯೋಗಗಳಾಗಿ ಪರಿವರ್ತನೆಗೊಳ್ಳಬೇಕು ಎಂದು ಅವರು ಹೇಳಿದರು. ಭಾರತ- ಪಾಕ್ ಪ್ರಕ್ಷುಬ್ಧತೆಯನ್ನು ಪ್ರಸ್ತಾಪಿಸಿದ ಚೀನೀ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭಾರತವು ರಚನಾತ್ಮಕ ಪಾತ್ರ ವಹಿಸಬೇಕು ಎಂದು ನುಡಿದರು.  ಭಾರತ ಮತ್ತು ಪಾಕಿಸ್ತಾನದ ನಡುವಣ ಪ್ರಾದೇಶಿಕ ಪ್ರಕ್ಷುಬ್ಧತೆಯ ವಿಷಯಕ್ಕೆ ಬಂದಾಗ ಮತ್ತು ಅದರ ಪರಿಣಾಮಗಳ ವಿಚಾರ ಬಂದಾಗ ನಾವು ಬೆಳವಣಿಗೆಗಳನ್ನು ನಿಕಟವಾಗಿ ಪರಿಶೀಲಿಸುತ್ತೇವೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಭಾರತ ಕೂಡಾ ರಚನಾತ್ಮಕ ಪಾತ್ರ ವಹಿಸಬೇಕು ಎಂದು ವಾಂಗ್ ಜೈಶಂಕರ್ ಅವರಿಗೆ ಸೂಚಿಸಿದರು.  ಜೈಶಂಕರ್ ಅವರ ಎರಡು ದಿನಗಳ ಚೀನಾ ಭೇಟಿ ಕಾರ್ಯಕ್ರಮವನ್ನು, ಭಾರತವು ಆಗಸ್ಟ್ ೫ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕ್ರಮಕ್ಕೂ ಮುಂಚಿತವಾಗಿ ನಿರ್ಧರಿಸಲಾಗಿತ್ತು.  ಕಾಶ್ಮೀರ ಬೆಳವಣಿಗೆಗಳ ಬಳಿಕ ಪಾಕಿಸ್ತಾನವು ತನ್ನ ಸರ್ವಋತು ಮಿತ್ರ ರಾಷ್ಟ್ರವಾದ ಚೀನಾಕ್ಕೆ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರನ್ನು ಕಳೆದ ವಾರ ವಾಂಗ್ ಅವರ ಜೊತೆ ವಿಷಯದ ಮಾತುಕತೆಗಾಗಿ ಕಳಿಸಿತ್ತು. ಲಡಾಖ್ ಸ್ಥಾನಮಾನವನ್ನು ಕೇಂದ್ರಾಡಳಿತ ಪ್ರದೇಶವಾಗಿ ಬದಲಾಯಿಸುವ ಭಾರತದ ನಿರ್ಣಯವನ್ನುಅಂಗೀಕರಿಸಲಾಗದುಎಂದು ಚೀನಾ ಪ್ರತಿಕ್ರಿಯಿಸಿತ್ತು.  ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತವು ಕಳೆದ ವಾರ ತನ್ನ ನಿರ್ಣಯವನ್ನು ಪ್ರಕಟಿಸಿದ ಬಳಿಕ ಚೀನಾವು ಎರಡು ಹೇಳಿಕೆಗಳ ಮೂಲಕ ಅದಕ್ಕೆ ಪ್ರತಿಕ್ರಿಯಿಸಿತ್ತು. ಲಡಾಖ್ನ್ನು ಕೇಂದ್ರಾಡಳಿತವಾಗಿ ಪರಿವರ್ತಿಸಿದ್ದನ್ನು ಆಕ್ಷೇಪಿಸಿದ ಚೀನಾ, ಇದರಿಂದ ತನ್ನ ಪ್ರಾದೇಶಿಕ ಸಾರ್ವಭೌಮತೆಗೆ ಧಕ್ಕೆಯಾಗುತ್ತದೆ ಎಂದು ಹೇಳಿತ್ತು. ಕಾಶ್ಮೀರಕ್ಕೆ ಸಂಬಂಧಿಸಿದ ತನ್ನ ಎರಡನೇ ಹೇಳಿಕೆಯಲ್ಲಿ ಪ್ರದೇಶದ ಹಾಲಿ ಪರಿಸ್ಥಿತಿ ಬಗ್ಗೆ ಗಂಭೀರ ಕಳವಳ ವ್ಯಕ್ತ ಪಡಿಸಿದ ಚೀನಾ ಉಭಯ ರಾಷ್ಟ್ರಗಳೂ ಸಂಯಮ ತೋರಿಸಬೇಕಾದ ಮತ್ತು ಪ್ರೌಢತ್ವದಿಂದ ವರ್ತಿಸಬೇಕಾದ ಅಗತ್ಯ ಇದೆ ಎಂದು ಹೇಳಿತ್ತು. ಇದಕ್ಕೆ ಮುನ್ನ ಜೈಶಂಕರ್ ಅವರು ಚೀನಾದ ಉಪಾಧ್ಯಕ್ಷ ವಾಂಗ್ ಖಿಶಾನ್ ಅವರನ್ನು ಭೇಟಿ ಮಾಡಿದ್ದರು. ಚೀನಾ -ಭಾರತ ದ್ವಿಪಕ್ಷೀಯ ಬಾಂಧವ್ಯಕ್ಕೆ ಇನ್ನಷ್ಟು ಒತ್ತು ಲಭಿಸಲಿ ಎಂದು ವಾಂಗ್ ಖಿಶಾನ್ ಹೇಳಿದ್ದರು. ಚೀನಾ ಭೇಟಿ ಕಾಲದಲ್ಲಿ ಜೈಶಂಕರ್ ಅವರು ಅಕ್ಟೋಬರ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಅವರ ಭಾರತ ಭೇಟಿಯ ಸಿದ್ಧತೆಗಳನ್ನೂ ಅಂತಿಮಗೊಳಿಸಲಿದ್ದಾರೆ.


No comments:

Post a Comment