ನಾನು ಮೆಚ್ಚಿದ ವಾಟ್ಸಪ್

Wednesday, August 14, 2019

ಇಂದಿನ ಇತಿಹಾಸ History Today ಆಗಸ್ಟ್ 14


2019: ನವದೆಹಲಿ: ಪುಲ್ವಾಮ ದಾಳಿ ಬಳಿಕ ಪಾಕಿಸ್ತಾನ ವಶದಲ್ಲಿ ಸಿಲುಕಿ ಸುರಕ್ಷಿತವಾಗಿ ದೇಶಕ್ಕೆ ಮರಳಿದ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ಸರ್ಕಾರವು ವೀರ ಚಕ್ರ ಗೌರವವನ್ನು ಘೋಷಿಸಿತು. ಭಾರತದ ಸ್ವಾತಂತ್ರ್ಯ ದಿನಾಚರಣೆ ವೇಳೆಯಲ್ಲಿ ರಾಷ್ಟ್ರಪತಿ ರಾಮನಾಥ  ಕೋವಿಂದ್ ಅವರು ಪೈಲಟ್ ಅಭಿನಂದನ್ ಅವರಿಗೆ  ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ಬಳಿಕ ಭಾರತದ ವಾಯುಗಡಿ ಉಲ್ಲಂಘಿಸಿ ನುಗ್ಗಲು ಯತ್ನಿಸಿದ್ದ ಪಾಕ್ ಯುದ್ಧ ವಿಮಾನವನ್ನು ವಿಂಗ್ ಕಮಾಂಡರ್ ಅಭಿನಂದನ್ ಹೊಡೆದುರುಳಿಸಿದ್ದರು. ಈ ವೇಳೆ ಪಾಕ್ ವಿಮಾನವನ್ನು ಬೆನ್ನತ್ತಿ ಹೋದ ಅಭಿನಂದನ್ ಅವರನ್ನು ಪಾಕಿಸ್ತಾನ ಸೇನೆ ಸೆರೆ ಹಿಡಿದಿತ್ತು. ಎರಡು ದಿನಗಳ ಬಳಿಕ ಅವರು ಬಿಡುಗಡೆಯಾಗಿದ್ದರು. ಇವರ ಸಾಹಸಕ್ಕೆ ಮೆಚ್ಚಿ ಕೇಂದ್ರ ಸರ್ಕಾರ ಇವರಿಗೆ ಈಗ ಈ ಗೌರವ ಘೋಷಿಸಿತು.  ಪಾಕ್ ವಶದಲ್ಲಿದ್ದಾಗ ಮಾನಸಿಕ ಹಿಂಸೆ ನೀಡಿದರೂ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದ ಅಭಿನಂದನ್ ದೇಶದ ಹೀರೋ ಆಗಿದ್ದರು. ತಮಿಳುನಾಡು ಮೂಲದ ಅಭಿನಂದನ್ ತೋರಿದ ಸಾಹಸಕ್ಕೆ ಇಡೀ ದೇಶವೇ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು.

2019: ನವದೆಹಲಿ: ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಜೈಶ್-ಇ-ಮೊಹಮ್ಮದ್  ಉಗ್ರರ ತರಬೇತಿ ಶಿಬಿರದ ಮೇಲೆ ಬಾಂಬ್ ದಾಳಿ ಮಾಡಿದ್ದ ಭಾರತದ ವಾಯುಸೇನೆ ಪೈಲಟ್‌ಗಳಿಗೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ವಾಯುಸೇನಾ ಪದಕಗಳನ್ನು ಘೋಷಿಸಿ  ಗೌರವಿಸಲಾಯಿತು.  ಬಾಲಾಕೋಟ್ ವಾಯುದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ವಿಂಗ್ ಕಮಾಂಡರ್ ಅಮಿತ್ ರಂಜನ್ ಮತ್ತು ಸ್ಕ್ವಾಡ್ರನ್ ಲೀqರ್‌ಗಳಾದ ರಾಹುಲ್ ಬಸೋಯಾ, ಪಂಕಜ್ ಭುಜಾಡೆ, ಬಿಕೆಎನ್ ರೆಡ್ಡಿ ಮತ್ತು ಶಶಾಂಕ್ ಸಿಂಗ್ ಅವರಿಗೆ ವಾಯು ಸೇನಾ ಪದಕ ಘೋಷಿಸಲಾಯಿತು.  ಈ ಐವರೂ ಕೂಡ ಆ ಕಾರ್ಯಾಚರಣೆಯಲ್ಲಿ ಮಿರಾಜ್ ೨೦೦೦ ಫೈಟರ್ ವಿಮಾನದ ಪೈಲಟ್‌ಗಳಾಗಿ ಕಾರ್ಯನಿರ್ವಹಿಸಿದ್ದರು. ಕ್ಷಿಪ್ರಗತಿಯಲ್ಲಿ, ಶರವೇಗದಿಂದ ಸಾಗಿ ತಮ್ಮ ಕಾರ್ಯಾಚರಣೆಯನ್ನು ನಿಖರವಾಗಿ ಮಾಡಿ ಮುಗಿಸಿ ಇವರು ವಾಪಸ್ ಬಂದಿದ್ದರು. ೪೦ ಭಾರತೀಯ ಯೋಧರನ್ನು ಬಲಿತೆಗೆದುಕೊಂಡ ಪುಲ್ವಾಮ ಉಗ್ರ ದಾಳಿ ಘಟನೆಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ೨೦೧೬ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್ ಗೆ ನುಗ್ಗಿ  ವಾಯುದಾಳಿ ನಡೆಸಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಒಳಗಿರುವ ಪಖ್ತುಂಕ್ವ ಪ್ರಾಂತ್ಯದೊಳಗಿರುವ ಬಾಲಾಕೋಟ್‌ನಲ್ಲಿ ಜೈಶ್ ಉಗ್ರರ ಶಿಬಿರವನ್ನು  ಗುರಿ ಮಾಡಲಾಗಿತ್ತು. ಈ ಐವರು ವಾಯುಪಡೆ ಪೈಲಟ್‌ಗಳು ತಮ್ಮ ಕಾರ್ಯಾಚರಣೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದರು.  ಬಾಲಾಕೋಟ್‌ನಲ್ಲಿ ಭಾರತದಿಂದ ವಾಯುದಾಳಿಯಾದ ಒಂದು ದಿನದ ಬಳಿಕ ಪಾಕಿಸ್ತಾನೀ ಸೇನೆಯ ವಿಮಾನಗಳು ಭಾರತದ ಗಡಿಯೊಳಗೆ ನುಗ್ಗಲು ಪ್ರಯತ್ನಿಸಿದ್ದವು. ಆಗ ನಡೆದ ಘರ್ಷಣೆಯಲ್ಲಿ ಭಾರತೀಯ ಯುದ್ಧವಿಮಾನಗಳು ಪಾಕಿಸ್ತಾನೀಯರನ್ನು ಹಿಮ್ಮೆಟ್ಟಿಸಿದವು. ಹಳೆಯ ಮಿಗ್-೨೧ ಬೈಸನ್ ಯುದ್ಧವಿಮಾನ ಚಲಾಯಿಸುತ್ತಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕಿಸ್ತಾನದ ಅಮೆರಿಕ ನಿರ್ಮಿತ ಎಫ್-೧೬ ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಪಾಕಿಸ್ತಾನದ ಗಡಿಭಾಗದೊಳಗೆ ಇಳಿದ ಅಭಿನಂದನ್ ಅವರನ್ನು ಪಾಕಿಸ್ತಾನೀಯರು ಬಂಧಿಸಿದರು. ೩ ದಿನಗಳ ಬಳಿಕ ಅವರನ್ನು ಪಾಕ್ ಬಿಡುಗಡೆಗೊಳಿಸಿತು. ಅಭಿನಂದನ್ ಅವರ ಧೈರ್ಯವನ್ನು ಪರಿಗಣಿಸಿ ಅವರಿಗೆ ವೀರ ಚಕ್ರ ಪ್ರಶಸ್ತಿ ಘೋಷಿಸಲಾಗಿದೆ. ಹಾಗೆಯೇ, ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್ ಅವರಿಗೂ  ಯುದ್ಧ ಸೇವಾ ಪದಕ ಘೋಷಿಸಲಾಯಿತು.

2019: ನವದೆಹಲಿ: ಸ್ವಾತಂತ್ರ್ಯೋತ್ಸವ ದಿನ ಭಾರತ ಪಾಲಿಗೆ ಸಂತಸದ ದಿನ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಬಣ್ಣಿಸಿದರು. ಭಾರತದ ೭೩ ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು ದೇಶದ ಜನತೆಗೆ ಶಾಂತಿ ,ಸಾಮರಸ್ಯ ಮತ್ತು ಸಾದ್ಭಾವನೆಯ ಸಂದೇಶ ನೀಡಿದರು. ಗಾಂಧೀಜಿ ಮಾರ್ಗದರ್ಶನ ಇಂದಿಗೂ ನಮಗೆ ಪ್ರಸ್ತುತವಾಗಿದೆ. ಸ್ವಾತಂತ್ರ್ಯೋತ್ಸವ ಅಂಗವಾಗಿ ಕ್ರಾಂತಿಕಾರಿಗಳನ್ನು ಸ್ಮರಿಸುತ್ತೇವೆ.  ಭಾರತ ಸ್ವತಂತ್ರವಾಗಿರಲು ಹೋರಾಡಿದ ಪೀಳಿಗೆಯು ಭಾರತೀಯರಿಗೆ ರಾಜಕೀಯ ಶಕ್ತಿಯ ಬಗ್ಗೆ ಮಾತ್ರವಲ್ಲ, ಸಮಾಜದ ಅಭಿವೃದ್ಧಿ ಮತ್ತು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆಸಕ್ತಿ ಹೊಂದಿದೆ ಎಂದು ಅವರು ಹೇಳಿದರು. ದೇಶದ ಸಂಪತ್ತನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ರಾಷ್ಟ್ರಪತಿ ನುಡಿದರು. ಜಮ್ಮು-ಕಾಶ್ಮೀರ,ಲಡಾಕ್ ವಿಭಜನೆಯಿಂದ ಅಲ್ಲಿನ ಜನತೆ ಖುಷಿಯಲ್ಲಿ ಇದ್ದಾರೆ. ಚುನಾವಣೆಯಲ್ಲಿ ಈ ಬಾರಿ ಮತ್ತೆ ಜನತೆಯಿಂದ ವಿಶ್ವಾಸ ಮೂಡಲಿದೆ.ಜಮ್ಮ-ಕಾಶ್ಮೀರದಲ್ಲಿ ಶಿಕ್ಷಣ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳೂ ಸಿಗಲಿವೆ ಎಂದು ಕೋವಿಂದ್ ಹೇಳಿದರು.  ನಮ್ಮ ಗುರಿ ಏನಿದ್ದರೂ ರಾಷ್ಟ್ರದ ಅಭಿವೃದ್ಧಿಯ ವೇಗ ಹೆಚ್ಚಿಸುವುದು. ಸಾಮಾನ್ಯ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಹೆಚ್ಚಳಕ್ಕೆ ಕ್ರಮ. ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಅಲ್ಲದೇ ಪ್ರತಿ ಮನೆಯಲ್ಲೊಂದು ಶೌಚಾಲಯದ ವ್ಯವಸ್ಥೆಯಾಗ ಬೇಕಿದೆ ಎಂದು ರಾಷ್ಟ್ರಪತಿ ಹೇಳಿದರು.

2019: ಆಳ್ವಾರ್ (ರಾಜಸ್ಥಾನ): ದೇಶಾದ್ಯಂತ ಕುತೂಹಲ ಕೆರಳಿಸಿದ್ದ,  ರಾಜಸ್ಥಾನದ ಆಳ್ವಾರ್‌ನಲ್ಲಿ ೨೦೧೭ರ ಏಪ್ರಿಲ್ ೧ರಂದು ಸಂಭವಿಸಿದ್ದ ಗುಂಪು ದಾಳಿ ಪ್ರಕರಣದಲ್ಲಿ ಹರಿಯಾಣದ ಹೈನು ರೈತ ಪೆಹ್ಲು ಖಾನ್ ಅವರ ಹತ್ಯೆಗೈದರೆಂದು ಆರೋಪಿಸಲಾಗಿದ್ದ ಎಲ್ಲ ಆರೂ ಮಂದಿ ಆಪಾದಿತರನ್ನು ಆಳ್ವಾರ್‌ನ ನ್ಯಾಯಾಲಯವು ಸಂಶಯದ ಲಾಭ ನೀಡಿ ಖುಲಾಸೆ ಮಾಡಿತು. ಪ್ರಕರಣದ ವಿಚಾರಣೆ ಆಗಸ್ಟ್ ೭ರಂದು ಮುಕ್ತಾಯಗೊಂಡಿತ್ತು.  ವ್ಯಕ್ತಿಯ ಸಾವು ಸಂಭವಿಸಿದ ಗುಂಪುದಾಳಿ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಜೀವಾವಧಿ ಸಜೆ ಮತ್ತು ೫ ಲಕ್ಷ ರೂಪಾಯಿಗಳವರೆಗಿನ ದಂಡ ವಿಧಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ರಾಜಸ್ಥಾನ ವಿಧಾನಸಭೆಯು ಅಂಗೀಕರಿಸಿದ ೧೦ ದಿನಗಳಿಗೂ ಕಡಿಮೆ ಅವಧಿಯಲ್ಲಿ ಜಿಲ್ಲಾ ನ್ಯಾಯಾಲಯದ ಈ ತೀರ್ಪು ಬಂದಿತು. 5೫ ವರ್ಷದ ಪೆಹ್ಲು ಖಾನ್ ಅವರ ಮೇಲೆ ಗೋರಕ್ಷಕರೆಂದು ಆಪಾದಿಸಲಾದ ಜನರ ಗುಂಪು,  ೨೦೧೭ರ ಏಪ್ರಿಲ್ ೧ರಂದು ಆಳ್ವಾರಿನಲ್ಲಿ ಜೈಪುರ-ದೆಹಲಿ ರಾಷ್ಟೀಯ ಹೆದ್ದಾರಿಯಲ್ಲಿ, ಖಾನ್ ಮತ್ತು ಇತರ ಐವರು ಜೈಪುರದ ಜಾನುವಾರು ಸಂತೆಯಿಂದ ತಮ್ಮ ಗ್ರಾಮವಾದ ಹರಿಯಾಣದ ನುಹ್ ಗೆ ಜಾನುವಾರುಗಳನ್ನು ಸಾಗಿಸುತ್ತಿದಾಗ ಹಲ್ಲೆ ನಡೆಸಿತ್ತು. ರಂಜಾನ್ ಕಾಲದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಿಕೊಳ್ಳುವ ಸಲುವಾಗಿ ಜಾನುವಾರುಗಳನ್ನು ಖರೀದಿಸಿ ಒಯ್ಯುತ್ತಿರುವುದಾಗಿ ಹೇಳಿದ್ದ ಖಾನ್, ಜಾನುವಾರು ಖರೀದಿಯ ರಶೀದಿಗಳನ್ನು ತೋರಿಸಿ, ಕಬ್ಬಿಣ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿದ್ದವರಿಂದ ಪಾರಾಗಲು ಯತ್ನಿಸಿದ್ದರು. ಗುಂಪುದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೆಹ್ಲು ಖಾನ್ ೨೦೧೭ರ ಏಪ್ರಿಲ್ ೩ರಂದು ಸಾವನ್ನಪ್ಪಿದ್ದರು.  ಗುಂಪು ಹಲ್ಲೆ ಘಟನೆಯ ಬಳಿಕ ವೈರಲ್ ಆಗಿದ್ದ ಗುಂಪುದಾಳಿಯ ವಿಡಿಯೋವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸದ ಕಾರಣ ಸಾಕ್ಷ್ಯವಾಗಿ ಅಂಗೀಕರಿಸುವಂತಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದರು.  ತೀರ್ಪಿನ ಅಧ್ಯಯನದ ಬಳಿಕ ಅದರ ವಿರುದ್ಧ  ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅಡಿಷನಲ್ ಪಬ್ಲಿಕ್ ಪ್ರಾಸೆಕ್ಯೂಟರ್ ಯೋಗೇಂದ್ರ ಖತಾನ ಹೇಳಿದರು.   ‘ನ್ಯಾಯಾಲಯವು ಗುಂಪುಹಲ್ಲೆಯ ಆಪಾದನೆಗಳಿಗೆ ಸಂಬಂಧಿಸಿದಂತೆ ಸಂಶಯದ ಲಾಭ ನೀಡಿ ಎಲ್ಲ ಆರೂ ಮಂದಿ ಆರೋಪಿಗಳನ್ನು ಖುಲಾಸೆ ಮಾಡಿದೆ. ನಮಗೆ ನ್ಯಾಯಾಲಯದ ಆದೇಶದ ಪ್ರತಿ ಲಭಿಸಿಲ್ಲ. ನಾವು ಕಾದು ಅದನ್ನು ಅಧ್ಯಯನ ಮಾಡಿದ ಬಳಿಕ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಖತಾನ ನುಡಿದರು.  ಪೆಹ್ಲು ಖಾನ್ ವಿರುದ್ಧ ಗೋವುಗಳ ಕಳ್ಳಸಾಗಣೆಗಾಗಿ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ದಾಖಲಿಸಿದ್ದಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಖಾನ್ ಕುಟುಂಬಸ್ಥರು ತಮಗೆ ಅನ್ಯಾಯವಾಗಿದೆ ಎಂದು ಆಪಾದಿಸಿ ಪ್ರತಿಭಟಿಸಿದ್ದರು. ಖಾನ್ ಅವರ ಹೇಳಿಕೆಯನ್ನು ಆಧರಿಸಿ, ಪೊಲೀಸರು ಶಂಕಿತರಾದ ಓಂ ಯಾದವ್ (೪೫), ಹುಕುಂ ಚಂದ್ ಯಾದವ್ (೪೪), ಸುಧೀರ್ ಯಾದವ್ (೪೫), ಜಗ್ಮಲ್ ಜಗ್ಮಲ್ ಯಾದವ್ (೭೩), ನವೀನ್ ಶರ್ಮ (೪೮) ಮತ್ತು ರಾಹುಲ್ ಸೈನಿ (೨೪) ಮತ್ತು ೨೦೦ಕ್ಕೂ ಹೆಚ್ಚು ಮಂದಿ ನಿರಾಯುಧ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ತನಿಖೆಯ ಬಳಿಕ ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ಶಾಖೆಯು ೬ ಮಂದಿಗೆ ಕ್ಲೀನ್ ಚಿಟ್ ನೀಡಿತ್ತು ಹಾಗೂ ಇತರ ಆರು ಮಂದಿಯ (ವಿಪಿನ್ ಯಾದವ್, ಕಲುರಾಮ್, ದಯಾನಂದ ಯಾದವ್, ರವೀಂದ್ರ ಕುಮಾರ್, ಯೋಗೇಶ ಕುಮಾರ್, ಭೀಮರಥಿ ಮತ್ತು ದೀಪಕ್ ಯಾನೆ ಗೋಲು ಯಾದವ್)  ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಿತ್ತು.  ಈ ಆರು ಮಂದಿಯ ವಿರುದ್ಧ ಕೊಲೆ, ಗಲಭೆ, ಆಸ್ತಿಪಾಸ್ತಿ  ಹಾನಿ, ನಿರ್ಬಂಧ ಸೃಷ್ಟಿ ಮತ್ತು ಕಳ್ಳತನದ ಆರೋಪಗಳನ್ನು ಹೊರಿಸಲಾಗಿತ್ತು.  ರಾಜ್ಯ ಪೊಲೀಸ್ ಇಲಾಖೆಯು ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದ ಈ ಆರೂ ಮಂದಿಯನ್ನು ೨೦೧೭ರ ಜುಲೈ ಮತ್ತು ಸೆಪ್ಟೆಂಬರ್ ನಡುವಣ ಅವಧಿಯಲ್ಲಿ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿತ್ತು. ರಾಜಸ್ಥಾನ ಪೊಲೀಸರು ಖಾನ್ ಮತ್ತು ಅವರ ಮಕ್ಕಳಾದ ೨೫ರ ಹರೆಯದ ಇರ್ಶಾದ್ ಮತ್ತು ೨೨ರ ಹರೆಯದ ಆರಿಫ್ ವಿರುದ್ಧ ೨೦೧೭ರ ಏಪ್ರಿಲ್ ೧ರಂದು ಗೋವುಗಳ ಕಳ್ಳಸಾಗಣೆ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷ ಮೇ ೨೯ರಂದು ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಮಧ್ಯೆ ಪ್ರಕರಣಕ್ಕೆ ಲಭಿಸಿದ ಟ್ವಿಸ್ಟ್ ಒಂದರಲ್ಲಿ, ಪೆಹ್ಲು ಖಾನ್ ಅವರ ಇಬ್ಬರು ಮಕ್ಕಳು ಸೇರಿದಂತೆ ಮೂವರ ವಿರುದ್ಧ ದಾಖಲಿಸಲಾಗಿದ್ದ ಗೋವು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆ ನಡೆಸುವುದಾಗಿ ರಾಜಸ್ಥಾನ ಪೊಲೀಸರು ಜುಲೈ ತಿಂಗಳಲ್ಲಿ ಪ್ರಕಟಿಸಿದ್ದರು. ನ್ಯಾಯಾಲಯವು ಪ್ರಕರಣದ ತನಿಖೆ ಮುಂದುವರೆಸಲು ಒಪ್ಪಿಗೆ ನೀಡಿದ ಬಳಿಕ ಪೊಲೀಸರು ಪ್ರಕರಣಕ್ಕೆ ತಿರುವು ನೀಡುವಂತಹ ಈ ಪ್ರಕಟಣೆ ಮಾಡಿದ್ದರು. ಬಹ್ರೋರಿನ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಅವರ ನ್ಯಾಯಾಲಯದಲ್ಲಿ ಪ್ರಕರಣದ ಮರುತನಿಖೆಗೆ ಅವಕಾಶ ನೀಡುವಂತೆ ಕೋರಿ ತಾವು ಜುಲೈ ೫ರಂದು ಅರ್ಜಿ ಸಲ್ಲಿಸಿದ್ದುದಾಗಿ ಜೈಪುರ ವಲಯದ ಇನ್ ಸ್ಪೆಕ್ಟರ್ ಜನರ್ ಎಸ್. ಸೆಂಗಾಥೀರ್ ಅವರು ಹೇಳಿದ್ದರು.  ಪೊಲೀಸ್ ತನಿಖೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ವಾಸ್ತವಾಂಶಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಇರ್ಶಾದ್ ಮತ್ತು ಆರಿಫ್ ಜುಲೈ ೫ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

2019: ನವದೆಹಲಿ: ಭಾರತವು ತನ್ನ ೭೩ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ೬ನೇ ನೇರ ಭಾಷಣವನ್ನು ಮಾಡುವ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರ ದಾಖಲೆಗೆ ಸರಿಗಟ್ಟಲು ಸಿದ್ಧತೆ ನಡೆಸಿದರು. ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ತಮ್ಮ ಸರ್ಕಾರವು ಕೈಗೊಂಡ ಚಾರಿತ್ರಿಕ ನಿರ್ಧಾರದಿಂದ ಹಿಡಿದು ದೇಶದ ಆರ್ಥಿಕ ಸ್ಥಿತಿಯವರೆಗೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸುವ ನಿರೀಕ್ಷೆಯಿದೆ.
ಪ್ರಚಂಡ ಜನಾದೇಶದೊಂದಿಗೆ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ಮೋದಿಯವರು ಮಾಡುತ್ತಿರುವ ಆಗಸ್ಟ್ ೧೫ರ ಸಂದರ್ಭದ ಮೊದಲ ಭಾಷಣ ಇದಾಗಿದೆ. ಪ್ರಧಾನಿ ಮೋದಿಯವರು ’ಸ್ವಚ್ಛ ಭಾರತ, ’ಆಯುಷ್ಮಾನ್ ಭಾರತ ಮತ್ತು ಭಾರತದ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶ ಪಯಣದ ಯೋಜನೆಗಳಂತಹ ತಮ್ಮ ಸರ್ಕಾರದ ಪ್ರಮುಖ ಯೋಜನೆಗಳನ್ನು ಪ್ರಕಟಿಸಲು ಈ ವಾರ್ಷಿಕ ಸಮಾರಂಭವನ್ನು ಬಳಸಿದ್ದರು. ಅಲ್ಲದೆ ತಮ್ಮ ಅಧಿಕಾರಾವಧಿಯಲ್ಲಿನ ಕಾರ್‍ಯ ನಿರ್ವಹಣೆಯ ವರದಿಯನ್ನು ಜನರ ಮುಂದಿಟ್ಟು ರಾಷ್ಟ್ರ ಹೇಗೆ ಅಭಿವೃದ್ಧಿ ಹೊಂದಿದೆ ಎಂಬುದಾಗಿ ಜನತೆಗೆ ವಿವರಿಸಲು ಈ ಅವಕಾಶವನ್ನು ಬಳಸಿದ್ದರು. ಇತ್ತೀಚಿನ ಮಹಾಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ವಿಜಯದ ಬಳಿಕ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ ೩೭೦ನೇ ವಿಧಿಯ ಅಡಿಯಲ್ಲಿ ಒದಗಿಸಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ತನ್ನ ಪ್ರೀತಿಯ ವಿವಾದಾತ್ಮಕ ವಿಷಯಕ್ಕೆ ಸಂಸತ್ತಿನ ಅನುಮೋದನೆ ಪಡೆಯುವಲ್ಲಿ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿದ್ದು, ಇದು ಪ್ರಧಾನಿಯವರ ಭಾಷಣದ ಮುಖ್ಯ ತಿರುಳು ಆಗಿರಲಿದೆ ಎಂದು ಪಕ್ಷದ ನಾಯಕರು ನಂಬಿದ್ದಾರೆ.  ಕಳೆದ ವಾರ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ತಮ್ಮ ಭಾಷಣದಲ್ಲಿ ಪ್ರಧಾನಿಯವರು ಕಣಿವೆಯ ಜನತೆಗೆ ಅಭಿವೃದ್ಧಿ ಮತ್ತು ಶಾಂತಿಯ ಭರವಸೆಯನ್ನು ನೀಡಿದ್ದರು ಮತ್ತು ತನ್ಮೂಲಕ ರಾಜ್ಯದ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕ್ರಮದಿಂದ ಜನರಲ್ಲಿ ಉದ್ಭವಿಸಿದ ಕಳವಳವನ್ನು  ನಿವಾರಿಸಲು ಯತ್ನಿಸಿದ್ದರು. ಕಾಶ್ಮೀರ ಇನ್ನೂ ಸಹಜ ಸ್ಥಿತಿಗೆ ಹಿಂತಿರುಗಿಲ್ಲ. ಬಿಗಿ ಭದ್ರತಾ ಕ್ರಮಗಳು ಮತ್ತು ಸಂಪರ್ಕದ ಮೇಲಿನ ನಿರ್ಬಂಧಗಳು ಇನ್ನೂ ಮುಂದುವರೆದಿವೆ.  ಈ ಬಾರಿಯ ಭಾಷಣವು ಮೋದಿಯವರ ಆಗಸ್ಟ್ ೧೫ರ  ಸಂದರ್ಭದ ಕೆಂಪುಕೋಟೆ ಮೇಲಿನಿಂದ ಮಾಡುವ ಆರನೇ ಭಾಷಣವಾಗಲಿದ್ದು, ಇದು ಅಟಲ್ ಬಿಹಾರಿ ವಾಜಪೇಯಿ ಅವರು ಕೆಂಪುಕೋಟೆಯ ಮೇಲಿನಿಂದ ಮಾಡಿದ್ದ ಭಾಷಣಗಳನ್ನು ಸರಿಗಟ್ಟಲಿದೆ. ಕೆಂಪುಕೋಟೆಯ ಮೇಲಿನಿಂದ ಇಷ್ಟು ಬಾರಿ ಭಾಷಣ ಮಾಡಿದ್ದ ಬಿಜೆಪಿಯ ಏಕೈಕ ಪ್ರಧಾನಿ ಎಂಬ ಹೆಗ್ಗಳಿಕೆಗೆ ಈವರೆಗೆ ಅಟಲ್ ಬಿಹಾರಿ ವಾಜಪೇಯಿ ಅವರು ಪಾತ್ರರಾಗಿದ್ದರು. ೧೯೯೮-೨೦೦೩ರ ಅವಧಿಯಲ್ಲಿ ಅವರು ೬ ಬಾರಿ ಕೆಂಪುಕೋಟೆಯಿಂದ ನೇರ ಭಾಷಣ ಮಾಡಿದ್ದರು.  ಬಿಜೆಪಿಗೆ ಯಾವುದೇ ಗಂಭೀರ ಸವಾಲು ಹಾಕಲು ಅಸಾಧ್ಯವಾದ ಸ್ಥಿತಿಯಲ್ಲಿ ಇರುವ ವಿರೋಧ ಪಕ್ಷಗಳ ನಿರುತ್ಸಾಹ, ೨೦೧೪ರ ಪ್ರಚಂಡ ಜಯವನ್ನೂ ಮೀರಿಸಿ ಮತ್ತೆ ಅಧಿಕಾರಕ್ಕೆ ಮೋದಿಯವರ ಪುನರಾಗಮನದ ಹಿನ್ನೆಲೆಯಲ್ಲಿ ಈ ಬಾರಿ ಪ್ರಧಾನಿಯವರು ಸಮಾಜದ ವಿವಿಧ ವರ್ಗಗಳಿಗೆ ಅನುಕೂಲವಾಗುವಂತಹ ರಿಯಾಯ್ತಿಗಳು ಮತ್ತು ಸುಧಾರಣೆಗಳನ್ನು ಪ್ರಕಟಿಸಲು ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಬಳಸಿಕೊಳ್ಳಬಹುದು ಎಂದು ಹಲವರು ನಂಬಿದ್ದಾರೆ. ಆರ್ಥಿಕತೆಯ ನಿಧಾನಗತಿಯ ಬಗೆಗಿನ ಕಳವಳ ಬಗೆಗೂ ಪ್ರಧಾನಿಯವರು ಮಾತನಾಡಬಹುದು ಎಂದೂ ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಸ್ವಚ್ಛತೆಯಿಂದ ಹಿಡಿದು ಸ್ತ್ರೀ ಭ್ರೂಣಹತ್ಯೆ ಕೊನೆಗೊಳಿಸುವವರೆಗಿನ ತಮ್ಮ ಹಲವಾರು ಪ್ರಿಯ ಯೋಜನೆಗಳಿಗೆ ಜನರ ಬೆಂಬಲವನ್ನು ಕ್ರೋಡೀಕರಿಸಲು ಮೋದಿಯವರು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಗಳನ್ನು ಹಿಂದೆ ಉಲ್ಲೇಖಿಸಿದ್ದರು. ಈ ಬಾರಿ, ತಮ್ಮ ಎರಡನೇ ಅವಧಿಯಲ್ಲಿ ಅಗ್ರ ಪ್ರಾಶಸ್ತ್ಯ ನೀಡಿರುವ ಜಲ ಸಂರಕ್ಷಣೆಗೆ ಪ್ರಧಾನಿಯವರು ಇದನ್ನು ಬಳಸಿಕೊಳ್ಳಬಹುದು ಎಂದು ಭಾವಿಸಲಾಗಿದೆ.  ಪ್ರಧಾನಿಯವರ ಭಾಷಣದಲ್ಲಿ ಅಚ್ಚರಿಯ ಅಂಶಗಳು ಹಿಂದೆ ಇರುತ್ತಿದ್ದುದನ್ನು ಪ್ರಸ್ತಾಪಿಸಿರುವ ಕೆಲವು ಬಿಜೆಪಿ ನಾಯಕರು ಈ ಸ್ವಾತಂತ್ರ್ಯೋತ್ಸವ ಭಾಷಣ ಇದಕ್ಕೆ ಭಿನ್ನವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

2019: ನವದೆಹಲಿ: ಜಮ್ಮು-ಕಾಶ್ಮೀರದ ರಾಜಕಾರಣಿಯಾಗಿ ಬದಲಾವಣೆಗೊಂಡಿರುವ ಮಾಜಿ ಐಎಎಸ್ ಅಧಿಕಾರಿ ಶಾ ಫಸಲ್ ಅವರನ್ನು  ಈದಿನ  ಬೆಳಗ್ಗೆ ಶ್ರೀನಗರದಿಂದ ಬರುತ್ತಿದ್ದಂತೆಯೇ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಕಾಶ್ಮೀರಕ್ಕೆ ವಾಪಸ್ ಕಳುಹಿಸಲಾಯಿತು. ಫಸಲ್ ಅವರನ್ನು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ಶ್ರೀನಗರಕ್ಕೆ ವಿಮಾನದಲ್ಲಿ ವಾಪಸ್ ಕಳುಹಿಸಲಾಯಿತು ಎಂದು ಫಸಲ್ ಅವರ ಗೆಳೆಯರೊಬ್ಬರು ಹೇಳಿದರು.  ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್ ಅಧ್ಯಕ್ಷ ಫಸಲ್ ಅವರನ್ನು ಈದಿನ  ಬೆಳಗ್ಗೆ ೫.೩೦ಕ್ಕೆ ದೇಶದಿಂದ ಹೊರಕ್ಕೆ ವಿಮಾನ ಮೂಲಕ ಹೋಗದಂತೆ ತಡೆಯಲಾಯಿತು.  ‘ಅವರು ವಿದೇಶಕ್ಕೆ ಹೋಗುವ ವಿಮಾನ ಏರಲು ಸಜ್ಜಾಗಿದ್ದರು. ಅದೇ ವೇಳೆಗೆ ಅವರನ್ನು ಬಂಧಿಸಲಾಯಿತು. ಅವರು ಹಾರ್ವರ್ಡ್‌ಗೆ ಹೋಗುವ ಹಾದಿಯಲ್ಲಿದ್ದರು ಎಂದು ಫಸಲ್ ಗೆಳೆಯ ಹೇಳಿದರು. ಶ್ರೀನಗರದಲ್ಲಿ ಇತರ ರಾಜಕಾರಣಿಗಳೊಂದಿಗೆ ಫಸಲ್ ಅವರನ್ನೂ ಬಂಧನದಲ್ಲಿ ಇರಿಸಲಾಯಿತು. ವಿಮಾನ ನಿಲ್ದಾಣದ ಡಿಸಿಪಿ ಸಂಜಯ್ ಭಾಟಿಯಾ ಅವರು ’ಅವರ ಬಂಧನ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.  ವಲಸೆ ಇಲಾಖೆಯ ಮೂಲವೊಂದು ಕೂಡಾ ಫಸಲ್ ಬಂಧನದ ಬಗ್ಗೆ ಯಾವುದೇ ಮಾಹಿತಿಯನ್ನು ನಿರಾಕರಿಸಿತು. ಅವರ ಬಂಧನದಲ್ಲಿ ಬೇರೆ ಯಾವುದಾದರೂ ಸಂಸ್ಥೆಯ ಪಾತ್ರವಿದೆಯೇ ಎಂಬುದು ತಮಗೆ ಗೊತ್ತಿಲ್ಲ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.  ಸ್ವಂತ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದ ಮಾಜಿ ಐಎಎಸ್ ಅಧಿಕಾರಿ ಫಸಲ್ ಅವರು ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿದ ಕೇಂದ್ರದ ಕ್ರಮವನ್ನು ಜಮ್ಮು - ಕಾಶ್ಮೀರದಲ್ಲಿ ಪ್ರಬಲವಾಗಿ ವಿರೋಧಿಸಿದ್ದರು. ಸಾಮಾಜಿಕ ಮಾಧ್ಯಮಗಳ ಮೂಲಕ ಅವರು ತಮ್ಮ ಭಿನ್ನಮತವನ್ನು ವ್ಯಕ್ತ ಪಡಿಸುತ್ತಿದ್ದರು.  ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಕೇಂದ್ರದ ಕ್ರಮವು ಪ್ರದೇಶದಲ್ಲಿ ರಾಜಕಾರಣದ ಮುಖ್ಯಪ್ರವಾಹಕ್ಕೆ ಇದ್ದ ಅವಕಾಶವನ್ನು ಕೊನೆಗೊಳಿಸಿದೆ ಎಂದು ಫಸಲ್ ಅವರು ಟ್ವೀಟ್ ಮಾಡಿದ್ದರು.   ‘೩೭೦ನೇ ವಿಧಿಯ ರದ್ದತಿಯು ಮುಖ್ಯಪ್ರವಾಹವನ್ನು ಕೊನೆಗೊಳಿಸಿದೆ. ಸಾಂವಿಧಾನಿಕವಾದಿಗಳು ಹೋಗಿದ್ದಾರೆ. ಆದ್ದರಿಂದ ನೀವು ಈಗ ಗುಲಾಮನಾಗಿರಬೇಕು ಅಥವಾ ಪ್ರತ್ಯೇಕತಾವಾದಿಯಾಗಿರಬೇಕು. ಬೂದು ಛಾಯೆಗಳು ಇಲ್ಲ ಎಂದು ಫಸಲ್ ಟ್ವೀಟ್ ಹೇಳಿತ್ತು. ಕಿತ್ತುಕೊಳ್ಳಲಾಗಿದೆ ಎಂದು ಆಪಾದಿಸಲಾಗಿರುವ ರಾಜಕೀಯ ಹಕ್ಕುಗಳ ಪುನಃಸ್ಥಾಪನೆ ಮಾಡುವಂತೆಯೂ ಅವರ ಟ್ವೀಟ್ ಕರೆಕೊಟ್ಟಿತ್ತು. ’ರಾಜಕೀಯ ಹಕ್ಕುಗಳ ಪುನಸ್ಥಾಪನೆಗಾಗಿ ಕಾಶ್ಮೀರಕ್ಕೆ ಸುದೀರ್ಘವಾದ, ಸುಸ್ಥಿರವಾದ, ಅಹಿಂಸಾತ್ಮಕ ರಾಜಕೀಯ ಸಾಮೂಹಕ ಚಳವಳಿಯ ಅಗತ್ಯವಿದೆ ಎಂದು ಅವರು ಹೇಳಿದ್ದರು.  ಕೆಲವೇ ಕೆಲವು ತಿಂಗಳುಗಳ ಹಿಂದೆ ತಮ್ಮ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದ ಶಾ ಫಸಲ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಮುಖ್ಯ ರಾಜಕೀಯ ಪಕ್ಷಗಳು ಜಂಟಿ ತಂತ್ರವನ್ನು ರೂಪಿಸಬೇಕು ಎಂದೂ ಸೂಚಿಸಿದ್ದರು. ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ ಫಸಲ್ ಅವರನ್ನು ಬಂಧಿಸಲಾಯಿತು ಎಂದು ಸುದ್ದಿ ಸಂಸ್ಥೆಯ ವರದಿ ತಿಳಿಸಿತು. ೭೦ ವರ್ಷಗಳಷ್ಟು ಹಳೆಯದಾದ ಜಮ್ಮುಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರಾಜ್ಯವನ್ನು ವಿಭಜಿಸಿದ ಕ್ರಮವನ್ನು ವಿರೋಧಿಸಲು ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ. ಚಿದಂಬರಮ್ ಅವರು ಆಗಸ್ಟ್ ೭ರಂದು ಫಸಲ್ ಟೀಕೆಗಳನ್ನು ಉಲ್ಲೇಖಿಸಿದ್ದರು.  ‘ಶಾ ಫಸಲ್ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಐಎಎಸ್‌ಗೆ ಸೇರ್ಪಡೆಯಾಗಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಸರ್ಕಾರದ ಕ್ರಮಗಳನ್ನು ಅವರು ’ಅತಿದೊಡ್ಡ ದ್ರೋಹ ಎಂದು ಕರೆದಿದ್ದರು ಎಂದು ಚಿದಂಬರಮ್ ಟ್ವೀಟ್ ಮಾಡಿದ್ದರು. ’ಶಾ ಫಸಲ್ ಅವರು ಈ ರೀತಿಯಾಗಿ ಯೋಚಿಸುವುದಾಗಿದ್ದರೆ, ಜಮ್ಮು ಮತ್ತು ಕಾಶ್ಮೀರದ ಲಕ್ಷಾಂತರ ಮಂದಿ ಸಾಮಾನ್ಯರು ಹೇಗೆ ಯೋಚಿಸಬಹುದು ಎಂದು ಕಲ್ಪಿಸಿಕೊಳ್ಳಿ ಎಂದು ಚಿದಂಬರಮ್ ಬರೆದಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಜನರ ಸಂಚಾರ ಮತ್ತು ಸಂಪರ್ಕದ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಬುಧವಾರ ಜಮ್ಮುವಿನಲ್ಲಿ ಸಂಪೂರ್ಣ ತೆರವುಗೊಳಿಸಲಾಗಿದೆ. ಆದರೆ ಕಾಶ್ಮೀರದ ಕೆಲವು ಭಾಗಗಳಲ್ಲಿ ಮುಂದುವರೆಸಲಾಯಿತು.

2019: ನವದೆಹಲಿ: ಭಾರತೀಯ ಸೇನೆಯ ಪಂಜಾಬೀ ಯೋಧರು ಕಾಶ್ಮಿರದಲ್ಲಿ ಕಾರ್ಯನಿರ್ವಹಿಸಲು ನಿರಾಕರಿಸಬೇಕು ಎಂಬುದಾಗಿ ಪಾಕಿಸ್ತಾನೀ ಸಚಿವ ಫವಾದ್ ಚೌಧರಿ ನೀಡಿದ್ದ ಹೇಳಿಕೆ ಇದೀಗ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತು.  ಪಾಕ್ ಸಚಿವನ ಹೇಳಿಕೆಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೂಡಾ ಆಕ್ರೋಶ ವ್ಯಕ್ತಪಡಿಸಿದರು. 
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪಂಜಾಬಿ ಯೋಧರಲ್ಲಿ ನಾನು ಮನವಿ ಮಾಡಿಕೊಳ್ಳುವುದು ಏನೆಂದರೆ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಲು ನಿರಾಕರಿಸಬೇಕು’ ಎಂದು ಫವಾದ್ ಚೌಧರಿ ಟ್ವೀಟ್ ಮಾಡಿದ್ದರು.  ಚೌಧರಿ ಟ್ವೀಟಿಗೆ ಪ್ರತಿಕ್ರಿಯಿಸಿದ  ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀದರ್ ಸಿಂಗ್  ಅವರು , ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದರೆ ಜಾಗ್ರತೆ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.  ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿರುವ ಯೋಧರಾಗಿದ್ದು ಇದೀಗ ಪಂಜಾಬಿನ ಮುಖ್ಯಮಂತ್ರಿಯಾಗಿದ್ದಾರೆ.  ಪವಾದ್ ಚೌಧರಿ ಮನವಿಯು ಭಾರತೀಯ ಸೇನೆಯ ಯಾವುದೇ ಯೋಧರ ಮೇಲೆ ಪರಿಣಾಮವನ್ನೂ  ಬೀರುವುದಿಲ್ಲ. ನಮ್ಮ ಸೇನೆ ಶಿಸ್ತು ಮತ್ತು ದೇಶಪ್ರೇಮಕ್ಕೆ ಬದ್ಧವಾಗಿದೆ ಎಂದು ಪಾಕ್ ಸಚಿವನಿಗೆ ಕ್ಯಾಪ್ಟನ್ ಸಿಂಗ್ ಎದಿರೇಟು ಕೊಟ್ಟರು.


No comments:

Post a Comment