Saturday, August 17, 2019

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚೀನಾ ಒಂದೇ ಬೆಂಬಲಿಗ..! ಕನ್ನಡಿ ಹಿಡಿದ ಪಾಕ್ ಪತ್ರಿಕೆ ‘ಡಾನ್’

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚೀನಾ ಒಂದೇ ಬೆಂಬಲಿಗ..! 

ಕನ್ನಡಿ ಹಿಡಿದ ಪಾಕ್ ಪತ್ರಿಕೆ ‘ಡಾನ್’

ನವದೆಹಲಿ:   ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ  (ಯುಎನ್ಎಸ್ಸಿ) ಚೀನಾ ಮಾತ್ರ ಪಾಕಿಸ್ತಾನವನ್ನು "ಬಹಿರಂಗವಾಗಿ ಬೆಂಬಲಿಸುತ್ತಿದೆ" ಎಂದು ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ಡಾನ್’  ಟೀಕಿಸಿದ್ದು, ವಿಶ್ವ ವಿಶೇಷ ಸಂಸ್ಥೆಯ ಪ್ರಸ್ತುತ ಸಂಯೋಜನೆಯ ಉನ್ನತ ಅಂಗವು ಇಸ್ಲಾಮಾಬಾದಿಗೆ  ಅನುಕೂಲಕರವಾಗಿ ಕಾಣುತ್ತಿಲ್ಲ ಎಂದು ಇಮ್ರಾನ್ ಖಾನ್ ಸರ್ಕಾರಕ್ಕೆ ಕನ್ನಡಿ ಹಿಡಿದು ತೋರಿಸಿದೆ..

 ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ನಂತರ ವಿಶ್ವಸಂಸ್ಥೆ ಭದ್ರತಾ ಮಂಡಳಿಯು  2019 ಆಗಸ್ಟ್ 16ರ ಶುಕ್ರವಾರ  ಕಾಶ್ಮೀರ ಬೆಳವಣಿಗೆಗೆ ಸಂಬಂಧಿಸಿದಂತೆ  ಅಪರೂಪದ  ರಹಸ್ಯ ಸಭೆ ನಡೆಸಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ  ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮೂಲಕ ಭಾರತವು ಪಾಕಿಸ್ತಾನದ ಜೊತೆ ಹೊಸ ವಿವಾದ ಹುಟ್ಟು ಹಾಕಿದೆ ಎಂದು ಆಪಾದಿಸಿ ಪಾಕಿಸ್ತಾನವು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದಿತ್ತು.
ಮುಚ್ಚಿದ ಬಾಗಿಲುಗಳ ಹಿಂದೆ  ನಡೆದ ರಹಸ್ಯ ಸಭೆಯಲ್ಲಿ ಕೇವಲ ಐದು ಖಾಯಂ ಸದಸ್ಯರು ಮತ್ತು ೧೦ ಖಾಯಮೇತರ ಸದಸ್ಯರು ಮಾತ್ರ ಹಾಜರಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ  ವಿಶೇಷ ಸ್ಥಾನಮಾನವನ್ನು  ನೀಡಿದ್ದ ಭಾರತೀಯ  ಸಂವಿಧಾನದ ೩೭೦ ನೇ ವಿಧಿಯನ್ನು ರದ್ದುಪಡಿಸುವ  ಕ್ರಮವು ಆಂತರಿಕ ವಿಷಯವಾಗಿದೆ  ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ  ಖಡಾಖಂಡಿತವಾಗಿ  ಹೇಳಿದ್ದ ಭಾರತ  ವಾಸ್ತವವನ್ನು ಒಪ್ಪಿಕೊಳ್ಳುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು.
ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಭಾರತದ ನಿರ್ಧಾರವು ದಕ್ಷಿಣ ಏಷ್ಯಾದ ಶಾಂತಿ ಮತ್ತು ಸ್ಥಿರತೆಗೆ ಹೇಗೆ ಧಕ್ಕೆ ತರುತ್ತದೆ ಎಂಬುದಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯರಿಗೆ ನಾಟುವಂತೆ ತಿಳಿಹೇಳಲು ಪಾಕಿಸ್ತಾನದ  ವಿಶ್ವಸಂಸ್ಥೆಯಲ್ಲಿನ ರಾಯಭಾರಿ ಮಲೀಹಾ ಲೋಧಿ ಮತ್ತು ಅವರ ತಂಡವು ತಿಂಗಳ ಆರಂಭದಿಂದಲೂ  ದಣಿವರಿವು ಇಲ್ಲದೆ  ಕೆಲಸ ಮಾಡಿತ್ತು ಎಂದು ವಿಶ್ವಸಂಸ್ಥೆ ಕೇಂದ್ರ  ಕಚೇರಿಯಿಂದ  ಮಾಡಲಾದ ಡಾನ್’ ವರದಿ ತಿಳಿಸಿದೆ.
"ಆದರೆ ಮಂಡಳಿಯ ಪ್ರಸ್ತುತ ಸಂಯೋಜನೆಯು ಪಾಕಿಸ್ತಾನಕ್ಕೆ ಒಲವು ತೋರುತ್ತಿಲ್ಲ" ಎಂದು ಪತ್ರಿಕೆ ಬರೆದಿದೆ.
ಜಮ್ಮು ಮತ್ತು ಕಾಶ್ಮೀರದ ಹಾಲಿ  ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಇಸ್ಲಾಮಾಬಾದ್  ಮಾಡಿದ ಮನವಿಯ ಮೇರೆಗೆ ಪಾಕಿಸ್ತಾನದ  ಸಾರ್ವಕಾಲಿಕ  ಮಿತ್ರ ಚೀನಾ  ಮಂಡಳಿಯು ರಹಸ್ಯ ಸಭೆಗೆ ಆಗ್ರಹಿಸಿತ್ತು.
"ಐವರು ಖಾಯಂ ಸದಸ್ಯರಲ್ಲಿ ಒಬ್ಬರಾದ  ಚೀನಾ ಚೀನಾ  ಬಹಿರಂಗವಾಗಿ ಪಾಕಿಸ್ತಾನವನ್ನು ಬೆಂಬಲಿಸಿತು’  ಎಂದು ಡಾನ್ ವರದಿ  ಹೇಳಿತು.

ಉಳಿದ ನಾಲ್ಕು ಖಾಯಂ ಸದಸ್ಯರಾದ ಬ್ರಿಟನ್, ಫ್ರಾನ್ಸ್, ರಶ್ಯಾ ಮತ್ತು  ಅಮೆರಿಕ ಕಾಶ್ಮೀರ ವಿವಾದವನ್ನು  ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕ  ಪರಿಹರಿಸಬೇಕೆಂದು ಬಯಸಿದವು  ಎಂದು ‘ಡಾನ್’ ಹೇಳಿತು.
ಭಾರತವೂ  ಇದೇ  ತಾಳಿದ್ದರೂ, ಕಾಶ್ಮೀರದ ಬಗ್ಗೆ ಯಾವುದೇ ಮಾತುಕತೆ ನಡೆಸಲು ನಿರಾಕರಿಸುತ್ತಿದೆ. ಕಾಶ್ಮೀರ ಸಮಸ್ಯೆಯನ್ನು ಆಂತರಿಕ ವಿಷಯವೆಂದು ಅದು ಹೇಳುತ್ತಿದೆ  ಎಂದು ವರದಿ ತಿಳಿಸಿದೆ.

ಬೆಲ್ಜಿಯಂ, ಕೋಟ್ ಡಿ ಐವೊಯಿರ್, ಡೊಮಿನಿಕನ್ ರಿಪಬ್ಲಿಕ್, ಈಕ್ವಟೋರಿಯಲ್ ಗಿನಿಯಾ, ಜರ್ಮನಿ, ಇಂಡೋನೇಷ್ಯಾ, ಕುವೈತ್, ಪೆರು, ಪೋಲೆಂಡ್ ಮತ್ತು ದಕ್ಷಿಣ ಆಫ್ರಿಕಾಇವು ವಿಶ್ವಸಂಸ್ಥೆ ಸಾಮಾನ್ಯ ಸಭೆಯಿಂದ  ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿರುವ ಭದ್ರತಾ ಮಂಡಳಿಯ  ೧೦ ಖಾಯಮೇತರ ಸದಸ್ಯರು

ಇವರ ಪೈಕಿ  ಇಂಡೋನೇಷ್ಯಾ ಮತ್ತು ಕುವೈತ್  ಇವರಿಬ್ಬರು ಈ ಹಿಂದೆ ಪಾಕಿಸ್ತಾನದ ಬಗ್ಗೆ ಸಹಾನುಭೂತಿ  ಹೊಂದಿದ್ದರೂ,  ಚೀನಾದ ಕೋರಿಕೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಇತರರನ್ನು ಮನವೊಲಿಸುವುದು ಕಷ್ಟಕರ ಎಂದು ಡಾನ್ ವರದಿ ತಿಳಿಸಿದೆ.

ಈಮಧ್ಯೆ, ಪಾಕಿಸ್ತಾನ ಸರ್ಕಾರವು ಜಾಗತಿಕ ಬೆಂಬಲವನ್ನು ಕ್ರೋಡೀಕರಿಸಲು  ಹೊರಟಿದ್ದರೂ, ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ) ಮತ್ತು ಮುಸ್ಲಿಮ್  ರಾಷ್ಟ್ರಗಳಿಂದ ಪ್ರತ್ಯೇಕವಾಗಿ  ಲಭ್ಯವಾದ  ಪ್ರತಿಕ್ರಿಯೆಗಳು ಮತ್ತು ಬೆಂಬಲ ದುರ್ಬಲವಾಗಿವೆ ಎಂದು ‘ ದಿ ನ್ಯೂಸ್ ಇಂಟರ್ನ್ಯಾಷನಲ್’  ಪತ್ರಿಕೆ ತಿಳಿಸಿದೆ.
ಸುಮಾರು ೫೦ ವರ್ಷದ ಒಐಸಿಯು ಬಿಡುಗಡೆ ಮಾಡಿರುವ  ರಾಜತಾಂತ್ರಿಕ ಪರಿಭಾಷೆಯ ಕೆಲವು ಹೇಳಿಕೆಗಳು ಯಾವುದೇ ಬದ್ಧತೆಯನ್ನೂ ವ್ಯಕ್ತ ಪಡಿಸಿಲ್ಲ ಎಂದು  ಪತ್ರಿಕೆಯಲ್ಲಿನ ಲೇಖನವೊಂದು ತಿಳಿಸಿದೆ.

ಒಐಸಿ ಸದಸ್ಯ ರಾಷ್ಟ್ರಗಳ ಜೊತೆಗಿನ  ಭಾರತೀಯ ವ್ಯಾಪಾರ ಮತ್ತು ವ್ಯವಹಾರದ ಶಕ್ತಿಯು, ಅದರ ವ್ಯಾಪಾರ ಪಾಲುದಾರರು ನಿರ್ಲಕ್ಷಿಸಲಾಗದಷ್ಟು ಪ್ರಬಲವಾಗಿದೆ, ಅವರಲ್ಲಿ ಯಾರೂ ಪಾಕಿಸ್ತಾನದ  ಪ್ರಸ್ತುತ ಮನವಿಯತ್ತ ಯಾವುದೇ ಗಮನವನ್ನೂ ಹರಿಸುತ್ತಿಲ್ಲ ಎಂದು ಪತ್ರಿಕೆ ಹೇಳಿದೆ.

No comments:

Post a Comment