Thursday, August 29, 2019

ಪಾಕಿಸ್ತಾನದಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಪರೀಕ್ಷೆ

ಪಾಕಿಸ್ತಾನದಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಪರೀಕ್ಷೆ
ನವದೆಹಲಿ: ಯುದ್ಧೋನ್ಮತ್ತ  ಪಾಕಿಸ್ತಾನವು ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಖಂಡಾಂತರ ಘಜ್ನವಿ ಕ್ಷಿಪಣಿಯ ರಾತ್ರಿ ತರಬೇತಿ ಪರೀಕ್ಷೆಯನ್ನು  2019 ಆಗಸ್ಟ್ 29ರ  ಗುರುವಾರ ನಸುಕಿನಲ್ಲಿ ನಡೆಸಿತು. 

ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ಸಮಸ್ಯೆಯನ್ನಾಗಿ ಮಾಡುವ ತನ್ನ ಯತ್ನಗಳ ನಡುವೆಯೇ ಪಾಕಿಸ್ತಾನ
ಅಣ್ವಸ್ತ್ರ ಸಾಗಣೆ ಶಕ್ತಿಯನ್ನು ಹೊಂದಿರುವ ಕ್ಷಿಪಣಿ ಪರೀಕ್ಷೆಯನ್ನು ನಡೆಸಿದೆ.
ಕ್ಷಿಪಣಿ ಉಡಾವಣೆ ಯಶಸ್ವಿಯಾಗಿದೆ ಎಂದು ಪಾಕಿಸ್ತಾನ ಸಶಸ್ತ್ರ ಪಡೆಗಳ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿದರು.
ಘಜ್ನವಿ ಖಂಡಾಂತರ ಕ್ಷಿಪಣಿಯು ೨೯೦ ಕಿ.ಮೀ ವರೆಗೆ  ಹಲವಾರು ಮಾದರಿಯ ಸಿಡಿತಲೆಗಳನ್ನು ತಲುಪಿಸುವ ಸಾಮರ್ಥ್ಯ ಹೊಂದಿದೆ ಎಂದು ಮಿಲಿಟರಿ ವಕ್ತಾರರು ತಿಳಿಸಿದರು.

 ಪಾಕಿಸ್ತಾನದ  ಅಧ್ಯಕ್ಷ ಆರಿಫ್ ಅಲ್ವಿ ಮತ್ತು ಪ್ರಧಾನಿ ಇಮ್ರಾನ್ ಖಾನ್  ಈ ಸಾಧನೆಗಾಗಿ ವಿಜ್ಞಾನಿಗಳ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ರಾಷ್ಟ್ರವನ್ನು ಅಭಿನಂದಿಸಿದ್ದಾರೆ ಎಂದು ಗಫೂರ್  ಹೇಳಿದರು.

ಪಾಕಿಸ್ತಾನವು ಮಿಲಿಟರಿ ಕ್ಷಿಪಣಿ ಉಡಾವಣೆಯ ೩೦ ಸೆಕೆಂಡುಗಳ ವಿಡಿಯೋ ತುಣುಕನ್ನು ಮತ್ತು ಉಡಾವಣೆಗೆ ಮುನ್ನ ಕ್ಷಿಪಣಿಯೊಂದಿಗೆ ಪೋಸ್ ನೀಡಿದ ಮಿಲಿಟರಿ ಅಧಿಕಾರಿಗಳ ಗುಂಪನ್ನು ಸಹ ಟ್ವೀಟ್ ಮಾಡಿತು.
ಕಾಶ್ಮೀರ ಸಮಸ್ಯೆಯನ್ನು ರಾಜತಾಂತ್ರಿಕ ಮಟ್ಟದಲ್ಲಿ ಅಂತರರಾಷ್ಟ್ರೀಯವನ್ನಾಗಿ ಮಾಡುವ ಹಾಗೂ ಉಭಯ ದೇಶಗಳ ನಡುವೆ ಪರಮಾಣು ಯುದ್ಧ ಭೀತಿಯನ್ನು ಹೆಚ್ಚಿಸುವ  ದ್ವಿಮುಖ ಪ್ರಯತ್ನದ ಭಾಗವಾಗಿ ಈ ಕ್ಷಿಪಣಿ ಪರೀಕ್ಷೆ ನಡೆದಿದೆ ಎಂದು ರಾಜತಾಂತ್ರಿಕ ವಲಯಗಳು ಭಾವಿಸಿವೆ.

No comments:

Post a Comment