ನಾನು ಮೆಚ್ಚಿದ ವಾಟ್ಸಪ್

Wednesday, August 28, 2019

370ನೇ ವಿಧಿ ರದ್ದು: 5 ಸದಸ್ಯ ಸಂವಿಧಾನ ಪೀಠಕ್ಕೆ

370ನೇ ವಿಧಿ ರದ್ದು: 5 ಸದಸ್ಯ ಸಂವಿಧಾನ ಪೀಠಕ್ಕೆ
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ ೩೭೦ ನೇ ವಿಧಿ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು  ಸುಪ್ರೀಂ ಕೋರ್ಟಿನ  ಐವರು ನ್ಯಾಯಾಧೀಶರ ಪೀಠವು ಅಕ್ಟೋಬರ್ ಆರಂಭದಲ್ಲಿ ವಿಚಾರಣೆ ನಡೆಸಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ 2019 ಆಗಸ್ಟ್ 28ರ ಬುಧವಾರ ಪ್ರಕಟಿಸಿದರು.

ಸಂವಿಧಾನದ  ೩೭೦ ನೇ ವಿಧಿಯನ್ನು ರದ್ದುಪಡಿಸುವುದರ ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಧ್ಯಮಗಳ ಮೇಲಿನ ನಿರ್ಬಂಧಗಳ ಕುರಿತಾದ ಅರ್ಜಿಗಳಿಗೆ  ಉತ್ತರ ನೀಡುವಂತೆಯೂ ಮುಖ್ಯ ನ್ಯಾಯಮೂರ್ತಿ ಗೊಗೋಯಿ ಸರ್ಕಾರಕ್ಕೆ ನೋಟಿಸ್ ನೀಡಿದರು.
ವಿಚಾರಣೆಯ ಸಮಯದಲ್ಲಿ, ಕೇಂದ್ರದ ಉನ್ನತ ಎರಡನೇ ಹಿರಿಯ ಕಾನೂನು ಅಧಿಕಾರಿ ತುಷಾರ್ ಮೆಹ್ತ ಅವರು ಸರ್ಕಾರಕ್ಕೆ ಔಪಚಾರಿಕ ನೋಟಿಸ್ ನೀಡದಂತೆ ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಉನ್ನತ ನ್ಯಾಯಾಲಯವನ್ನು ಕೋರಿದರು.
ಉನ್ನತ ನ್ಯಾಯಾಲಯದ ನೋಟೀಸ್ "ಗಡಿಯಾಚೆ ಪರಿಣಾಮಗಳನ್ನು" ಬೀರುತ್ತದೆ ಮತ್ತು ಅದರ ದುರುಪಯೋಗವಾಗಬಹುದು  ಎಂದು ಮೆಹ್ತಾ ವಾದಿಸಿದ್ದರು. ರಾಜಕೀಯ ಧುರೀಣರು ಸರ್ಕಾರವನ್ನು ಗುರಿಯಾಗಿಸಲು ನ್ಯಾಯಾಲಯದ ನೋಟಿಸನ್ನು ಬಳಸಬಹುದು ಎಂದೂ ಮೆಹ್ತ ಪ್ರತಿಪಾದಿಸಿದರು.

 " ವಿಷಯಕ್ಕೆ ಸಂಬಂಧಿಸಿದಂತೆ ಏನೇ ಘಟಿಸಿದರೂ  ಇತರ ರಾಜಕೀಯ ಮುಖಂಡರು ಅದನ್ನು ದೊಡ್ಡ ವಿಷಯವನ್ನಾಗಿ ಮಾಡಲು ಯೋಜಿಸುತ್ತಾರೆ" ಎಂದು ಅವರು ಹೇಳಿದರು.

ಆದರೆ ಉನ್ನತ ನ್ಯಾಯಾಲಯವು ಮನವಿಯನ್ನು ನಿರಾಕರಿಸಿತು. "ನಾವು ಆದೇಶವನ್ನು ನೀಡಿದ್ದಾಗಿದೆ.. ಅದನ್ನು ಬದಲಾಯಿಸುವುದಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಗೊಗೋಯಿ ಹೇಳಿದರು.

ಸಂವಿಧಾನದ ೩೭೦ ನೇ ವಿಧಿಯನ್ನು ಹಿಂತೆಗೆದುಕೊಂಡ  ಸಂಸತ್ತಿನ ಮೂರು ವಾರಗಳ ಹಿಂದಿನ ನಿರ್ಧಾರವನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿರುವ  ಅರ್ಜಿಗಳು ಪ್ರಶ್ನಿಸಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್  ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ  ಬಳಿಕ  ಅರ್ಜಿಗಳನ್ನು ಸಲ್ಲಿಸಲಾಗಿದೆ.

ಜಮ್ಮು-ಕಾಶ್ಮೀರ ಮತ್ತು ಲಡಾಖ್ – ಈ  ಎರಡು ಕೇಂದ್ರಾಡಳಿತ ಪ್ರದೇಶಗಳು ಅಕ್ಟೋಬರ್ ೩೧ ರಂದು ಅಸ್ತಿತ್ವಕ್ಕೆ ಬರಲಿವೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಆಗಸ್ಟ್ 5ರ ನಸುಕಿನಿಂದ ಸಂಚಾರ ನಿರ್ಬಂಧ ಜಾರಿ ಹಾಗೂ ದೂರವಾಣಿ, ಅಂತರ್ಜಾಲ  ಸ್ಥಗಿತಗೊಳ್ಳುವುದರೊಂದಿಗೆ ಅಸಹನೆ ಆರಂಭವಾಗಿತ್ತು.
ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ನೂರಾರು ರಾಜಕೀಯ ಕಾರ್ಯಕರ್ತರನ್ನು ಸರ್ಕಾರ ಅಡ್ಡಗಟ್ಟಿ ವಶಕ್ಕೆ ತೆಗೆದುಕೊಂಡಿತ್ತು. ರಾಜಕೀಯ ನಾಯಕರು ಜನರನ್ನು ಪ್ರಚೋದಿಸದಂತೆ ನೋಡಿಕೊಳ್ಳಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು  ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದರು.
ಆ ಬಳಿಕ ಮೂರು ವಾರಗಳಲ್ಲಿ, ಕಾನೂನಿನ ವಿವಿಧ ಅಂಶಗಳನ್ನು ಪ್ರಶ್ನಿಸಿ ಸುಮಾರು ೧೦ ಅರ್ಜಿಗಳನ್ನು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾಗಿತ್ತು. ಕಾಶ್ಮೀರದ ಜಾಮಿಯಾ ವಿದ್ಯಾರ್ಥಿಯೊಬ್ಬ ತನ್ನ ಕುಟುಂಬದ ಸ್ಥಿತಿಗತಿ ಪರಿಶೀಲಿಸಲು  ಮನೆಗೆ ಹೋಗಲು ಅನುಮತಿ ನೀಡಬೇಕೆಂದು ಅರ್ಜಿ ಸಲ್ಲಿಸಿದರೆ, ಜಮ್ಮು – ಕಾಶ್ಮೀರ ಮೂಲದ ಪತ್ರಕರ್ತರು ಮಾಧ್ಯಮ ನಿರ್ಬಂಧಗಳ ಬಗ್ಗೆ ದೂರು ಸಲ್ಲಿಸಿದ್ದರು.
ಸಿಪಿಎಂ
ನಾಯಕ ಸೀತಾರಾಮ್ ಯೆಚೂರಿ ಅವರು  ಕಾಶ್ಮೀರಿ ರಾಜಕಾರಣಿ ಮತ್ತು ಪಕ್ಷದ ಮಾಜಿ ಶಾಸಕ ಮೊಹಮ್ಮದ್  ಯೂಸುಫ್ ತಾರಿಗಾಮಿ ಅವರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದರು. ಇತರ ಹಲವರು  ೩೭೦ ನೇ ವಿಧಿ ರದ್ಧತಿಯನ್ನು ಪ್ರಶ್ನಿಸಿ ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದರು. ಅವುಗಳಲ್ಲಿ ನಿವೃತ್ತ ಸೇನಾ  ಅಧಿಕಾರಿ ಮತ್ತು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಸೇರಿದಂತೆ ಅಧಿಕಾರಿ ವರ್ಗದವರು ಸಲ್ಲಿಸಿದ್ದ ಅರ್ಜಿಗಳೂ ಸೇರಿವೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರಿಗೆ ಜಮ್ಮು ಕಾಶ್ಮೀರಕ್ಕೆ ತೆರಳಿ ಪಕ್ಷ ಸಹೋದ್ಯೋಗಿ ಯೂಸುಫ್ ತಾರಿಗಾಮಿ ಅವರನ್ಉ ಭೇಟಿ ಮಾಡಲು ಕೂಡಾ ಸುಪ್ರೀಂಕೋರ್ಟ್ ಅನುಮತಿ ನೀಡಿತು. ಏನಿದ್ದರೂ ಯೆಚೂರಿ ಅವರು ತಾರಿಗಾಮಿ ಅವರ ಭೇಟಿಯನ್ನು ಮಾತ್ರವೇ ಮಾಡಬಹುದು, ಈ ಅವಕಾಶವನ್ನು ಯಾವುದೇ ರಾಜಕೀಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂದೂ ಪೀಠವು ಶರತ್ತು ವಿಧಿಸಿತು. ಯೆಚೂರಿ ಅವರು ಏನಾದರೂ ರಾಜಕೀಯ ಚಟುವಟಿಕೆ ನಡೆಸಿದರೆ, ಅಧಿಕಾರಿಗಳು ಈ ಬಗ್ಗೆ ಸುಪ್ರೀಂಕೋರ್ಟಿಗೆ ವರದಿ ಮಾಡಲು ಮುಕ್ತರಾಗಿದ್ದಾರೆ ಎಂದು ಪೀಠ ಹೇಳಿತು.

ಜಾಮಿಯಾ ವಿದ್ಯಾರ್ಥಿಗೂ ತನ್ನ ಮನೆಗೆ ಭೇಟಿ ನೀಡುವಂತೆಯೂ, ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆಯೂ ಪೀಠ ನಿರ್ದೇಶಿಸಿತು. ವಿದ್ಯಾರ್ಥಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಡಳಿತಕ್ಕೆ ನಿರ್ದೇಶನವನ್ನೂ ಪೀಠ ನೀಡಿತು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ


No comments:

Post a Comment