2019: ನವದೆಹಲಿ: ಸ್ವಿಜರ್ಲೆಂಡ್‌ನಲ್ಲಿ ಭಾರತೀಯರು ಹೊಂದಿದ ಬ್ಯಾಂಕ್ ಖಾತೆಗಳ ವಿವರ ಸೆ.1ರಿಂದ ಸಂಪೂರ್ಣವಾಗಿ ಲಭ್ಯವಾಗಲಿದೆ. ಭಾರತ ಹಾಗೂ ಸ್ವಿಜರ್ಲೆಂಡ್ ಮಧ್ಯೆ ನಡೆದ ಒಪ್ಪಂದದ ಫಲವಾಗಿ ಈ ಮಾಹಿತಿ ಲಭ್ಯವಾಗಲಿದೆ. ಇದು ಕಪ್ಪುಹಣದ ವಿರುದ್ಧ ಭಾರತ ಸರ್ಕಾರದ ಹೋರಾಟಕ್ಕೆ ಮಹತ್ವದ ಜಯವಾಗಿದ್ದು, ಸ್ವಿಸ್ ಬ್ಯಾಂಕ್‌ನ ಗೌಪ್ಯತೆಯ ಶಕೆಯೂ ಇದರೊಂದಿಗೆ ಮುಕ್ತಾಯವಾಗಲಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಈ ಕುರಿತು ಪೂರ್ವತಯಾರಿಯ ಮೇಲ್ವಿಚಾರಣೆಗಾಗಿ ಸ್ವಿಜರ್ಲೆಂಡ್‌ನ ನಿಯೋಗವು ನೇರ ತೆರಿಗೆ ಮಂಡಳಿ ಮುಖ್ಯಸ್ಥ ಪಿ ಸಿ ಮೋದಿಯರವನ್ನು ಭೇಟಿ ಮಾಡಿತು.. ಈ ವೇಳೆ ಎರಡೂ ದೇಶಗಳ ಒಪ್ಪಂದಕ್ಕೆ ಅನುಗುಣವಾಗಿ ಮಾಹಿತಿ ವಿನಿಮಯದ ಅಂತಿಮ ಸಿದ್ಧತೆಯನ್ನು ಪರಿಶೀಲನೆ ನಡೆಸಲಾಯಿತು. 2018ರಿಂದ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಹೊಂದಿರುವ ಖಾತೆಗಳ ಮಾಹಿತಿಯನ್ನು ಇದು ಒಳಗೊಂಡಿರಲಿದ್ದು, ಇದರಿಂದ ಭಾರತೀಯ ತೆರಿಗೆ ಅಧಿಕಾರಿಗಳು ಇಂತಹ ಖಾತೆಗಳ ಪರಿಶೀಲನೆ ನಡೆಸಲು ಅನುವಾಗಲಿದೆ.
2019: ಗುವಾಹತಿ: ಅಸ್ಸಾಮಿನ ಅಂತಿಮ ರಾಷ್ಟ್ರೀಯ ಪೌರತ್ವ ನೋಂದಣಿ ಅಥವಾ
ಎನ್ಆರ್ಸಿಯನ್ನು ಈದಿನ ಪ್ರಕಟಿಸಲಾಗಿದ್ದು, ಅದು ೩.೧೧ ಕೋಟಿ ಮಂದಿಯನ್ನು ಅಸ್ಸಾಮಿನ ಕಾನೂನು ಬದ್ಧ ನಿವಾಸಿಗಳು ಎಂಬುದಾಗಿ ಪಟ್ಟಿಗೆ ಸೇರ್ಪಡೆ ಮಾಡಿತು. ೧೯ ಲಕ್ಷಕ್ಕಿಂತಲೂ (೧.೯ ಮಿಲಿಯನ್) ಮಂದಿಯನ್ನು ಅಕ್ರಮ ವಲಸೆಗಾರರು ಎಂಬುದಾಗಿ ಗುರುತಿಸಿ ಪಟ್ಟಿಯಿಂದ ಹೊರಕ್ಕೆ ಹಾಕಿತು.
೬೮ ವರ್ಷಗಳ ಬಳಿಕ ಅಸ್ಸಾಮಿನ ಪೌರತ್ವ ಪಟ್ಟಿಯನ್ನು ನವೀಕರಿsಸುವ ಮೂಲಕ, ಅಕ್ರಮ ವಲಸೆಗಾರರನ್ನು ಪತ್ತೆ ಹಚ್ಚುವಂತೆ ೪ ದಶಕಗಳಷ್ಟು ಹಿಂದಿನ ಬೇಡಿಕೆಯನ್ನು ಈಡೇರಿಸುವ ಅತ್ಯಂತ ಕ್ಲಿಷ್ಟಕರ ಕಾರ್ಯವನ್ನು
ಪೂರೈಸಲಾಯಿತು. ಎನ್ ಆರ್ ಸಿಯ ರಾಜ್ಯ ಸಮನ್ವಯಕಾರರು ಒದಗಿಸಿರುವ ಮಾಹಿತಿಯ ಪ್ರಕಾರ ತಮ್ಮನ್ನು ಭಾರತೀಯ ನಾಗರಿಕರು ಎಂಬುದಾಗಿ ಗುರುತಿಸಿ ರಾಷ್ಟ್ರೀಯ ಪೌರತ್ವ ನೋಂದಣಿಗೆ ಸೇರ್ಪಡೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ೩.೨೯ ಕೋಟಿ (೩೨.೯ ಮಿಲಿಯನ್) ಜನರ ಪೈಕಿ ಒಟ್ಟು ೧೯,೦೬,೬೫೭ ಅರ್ಜಿದಾರರು ತಾವು ಭಾರತದ ಕಾನೂನುಬದ್ಧ ಪೌರರು ಎಂಬುದನ್ನು ಸಾಬೀತು ಪಡಿಸುವಲ್ಲಿ ವಿಫಲರಾದರು.
ಈಗಾಗಲೇ ಸೇರ್ಪಡೆ ಮಾಡಲಾಗಿರುವ ಎಲ್ಲ ವ್ಯಕ್ತಿಗಳ ಪ್ರತಿಪಾದನೆಗಳು ಮತ್ತು ಆಕ್ಷೇಪಗಳ ಪರಿಗಣನೆಯ ಬಳಿಕ ೩,೧೧,೨೧,೦೦೪ ಮಂದಿ ಅಂತಿಮ ಎನ್ ಆರ್ ಸಿಯಲ್ಲಿ ಸೇರ್ಪಡೆಗೆ ಅರ್ಹರು ಎಂಬುದು ಸ್ಪಷ್ಟವಾಯಿತು. ತಮ್ಮ ಪ್ರತಿಪಾದನೆ ಪುಷ್ಟೀಕರಿಸಲು ಸಮರ್ಪಕ ದಾಖಲೆ ಒದಗಿಸಲು ವಿಫಲರಾದವರು ಸೇರಿದಂತೆ ೧೯,೦೬,೬೫೭ ಮಂದಿಯನ್ನು ಅಂತಿಮ ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ಕೈಬಿಡಲಾಯಿತು ಎಂದು ಎನ್ ಆರ್ ಸಿ ಪತ್ರಿಕಾ ಪ್ರಕಟಣೆ ತಿಳಿಸಿತು. ಹಿಂದಿನ ಕರಡು ಪಟ್ಟಿಗಳಲ್ಲಿ ಸೇರ್ಪಡೆಗೊಳ್ಳದವರ ಹಾಗೂ ಸೇರ್ಪಡೆಯಾಗಿದ್ದೂ ಆಕ್ಷೇಪಗಳು ಕೇಳಿ ಬಂದವರ ಹೆಸರುಗಳನ್ನು ಪರಿಶೀಲಿಸುವ ಸಲುವಾಗಿ ಈ ವರ್ಷದ ಜುಲೈ ತಿಂಗಳಲ್ಲಿ ವಿಚಾರಣೆ ನಡೆಸಿ ಮರುಪರಿಶೀಲಿಸಿದ ಬಳಿಕ ತಯಾರಿಸಲಾದ ಸೇರ್ಪಡೆಯಾದವರು ಮತ್ತು ಪಟ್ಟಿಯಿಂದ ಕೈಬಿಡಲಾದವರ ಹೆಸರುಗಳನ್ನು ಒಳಗೊಂಡ ಪೂರಕ ಪಟ್ಟಿಯಾಗಿದೆ ಈ ಎನ್ ಆರ್ ಸಿ ಅಂತಿಮ ಪಟ್ಟಿ. ಎನ್ ಆರ್ ಸಿ ರಾಜ್ಯ ಸಮನ್ವಯಕಾರ ಪ್ರತೀಕ್ ಹಜೇಲಾ ಅವರು ಪತ್ರಿಕಾ ಪ್ರಕಟಣೆಗೆ ಸಹಿ ಮಾಡಿದರು. ಸಂಪೂರ್ಣ ಎನ್ ಆರ್ ಸಿ ಪ್ರಕ್ರಿಯೆಯನ್ನು ಪ್ರತಿಯೊಬ್ಬ ವ್ಯಕ್ತಿಗೂ ಅಹವಾಲು ಪ್ರತಿಪಾದನೆನಗೆ ಸಾಕಷ್ಟು ಅವಕಾಶವನ್ನು ನೀಡುವ ಮೂಲಕ ವಸ್ತುನಿಷ್ಠವಾಗಿ ಮತ್ತು ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಅವರು ಹೇಳಿದರು. ಎನ್ ಆರ್ ಸಿ ನವೀಕರಣವು ಒಂದು ಭಾರೀ ಕಸರತ್ತಾಗಿದ್ದು ಸುಮಾರು ೫೨,೦೦೦ ರಾಜ್ಯ ಸರ್ಕಾರಿ ಅಧಿಕಾರಿಗಳು ಸುದೀರ್ಘ ಕಾಲ ಈ ಪ್ರಕ್ರಿಯೆಯಲ್ಲಿ ಶ್ರಮ ವಹಿಸಿದ್ದಾರೆ. ಹೆಸರುಗಳ ಸೇರ್ಪಡೆ ಮತು ಕೈಬಿಡುವ ಬಗೆಗಿನ ನಿರ್ಧಾರಗಳನ್ನು ಈ ಸ್ಥಾಯೀ ಅಧಿಕಾರಿಗಳು ಕೈಗೊಂಡಿದ್ದಾರೆ. ಅತ್ಯಂತ ವಸ್ತುನಿಷ್ಠವಾಗಿ ಮತ್ತು ಪಾರದರ್ಶಕವಾಗಿ ಈ ಜವಾಬ್ದಾರಿಯುತ ಕಾರ್ಯವನ್ನು
ನಿರ್ವಹಿಸಲಾಗಿದೆ. ಎಲ್ಲ ವ್ಯಕ್ತಿಗಳಿಗೂ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಅವರ ಮಾತುಗಳನ್ನು ಆಲಿಸಲು ಅವಕಾಶ ಒದಗಿಸಲಾಗಿದೆ. ಸ್ಥಾಯೀ ವಿಧಿಗಳಿಗೆ ಅನುಗುಣವಾಗಿ ಎಲ್ಲರಿಗೂ ಅಹವಾಲು ಆಲಿಕೆಯ ಸೂಕ್ತ ಅವಕಾಶಗಳನ್ನು ಒದಗಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿತು. ಎನ್ ಆರ್ ಸಿ ಸೇವಾ ಕೇಂದ್ರಗಳು, (ಎನ್ ಎಸ್ ಕೆ), ವಲಯ ಅಧಿಕಾರಿಗಳ ಕಚೇರಿಗಳು ಮತ್ತು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಅಥವಾ ಎನ್ ಆರ್ ಸಿ ಅಧಿಕೃತ ವೆಬ್ ಸೈಟಿಗೆ ಲಾಗ್ ಆನ್ ಮಾಡುವ ಮೂಲಕ ಅರ್ಜಿದಾರರು ತಮ್ಮ ಅರ್ಜಿಗಳ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದು ಎಂದು ಪ್ರಕಟಣೆ ಹೇಳಿತು. ಈದಿನ ಬೆಳ್ಳಂಬೆಳಗ್ಗೆಯೇ ಸಹಸ್ರಾರು ಮಂದಿ ಅರ್ಜಿದಾರರು ರಾಜ್ಯಾದ್ಯಂತ ತಮಗೆ ಸಮೀಪದ ಎನ್ ಆರ್ ಸಿ ಸೇವಾ ಕೇಂದ್ರಗಳಿಗೆ ದೌಡಾಯಿಸಿ ಅಂತಿಮ ಪಟ್ಟಿಯಲ್ಲಿ ತಮ್ಮ ಹಣೆಬರಹ ಏನಾಗಿದೆ ಎಂದು ತಿಳಿಯಲು ಸಾಲುಗಟ್ಟಿ ನಿಂತಿದ್ದರು. ಭದ್ರತೆಯನ್ನು ಬಲ ಪಡಿಸಲಾಗಿದ್ದು ಕೇಂದ್ರೀಯ ಅರೆ ಸೇನಾ ಪಡೆಗಳ ೨೧೮ ಕಂಪೆನಿಗಳನ್ನು ಶಾಂತಿ ಪಾಲನೆ ಸಲುವಾಗಿ ನಿಯೋಜಿಸಲಾಗಿದೆ. ಬೆಳಗ್ಗೆ ೧೦ ಗಂಟೆಗೆ ಅಂತಿಮ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಈವರೆಗೆ ಯಾವುದೇ ಅಹಿತರಕರ ಘಟನೆ ವರದಿಯಾಗಲಿಲ್ಲ.
ಊಹಾಪೋಹ ಅಥವಾ ಗೊಂದಲಕಾರೀ ವರದಿಗಳಿಗೆ ವ್ಯತಿರಿಕ್ತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಅಂತಿಮ ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ ಹೊರಗಿಡಲಾದ ವ್ಯಕ್ತಿಗಳನ್ನು ವಿದೇಶೀಯರು ಎಂಬುದಾಗಿ ಘೋಷಿಸಲಾಗುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದವು.
ಪಟ್ಟಿಯಿಂದ ಹೊರಬಿದ್ದ ಎಲ್ಲರಿಗೂ ೧೨೦ ದಿನಗಳ ಒಳಗಾಗಿ ವಿದೇಶೀಯರ ನ್ಯಾಯಾಧೀಕರಣಗಳಲ್ಲಿ (ಫಾರಿನರ್ಸ್
ಟ್ರಿಬ್ಯೂನಲ್ಸ್) ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಈ ನ್ಯಾಯಾಧಿಕರಣವು ಅವರ ಪೌರತ್ವ ಸ್ಥಿತಿಗತಿಯನ್ನು ವಿದೇಶೀಯರ ಕಾಯ್ದೆ, ೧೯೪೬ ಮತ್ತು ವಿದೇಶೀ (ನ್ಯಾಯಾಧಿಕರಣಗಳು) ಆದೇಶ, ೧೯೬೪ರ ವಿಧಿಗಳಿಗೆ ಅನುಗುಣವಾಗಿ ನಿರ್ಧರಿಸುತ್ತದೆ. ಆಡಳಿತಾರೂಢ ಬಿಜೆಪಿ, ವಿರೋಧಿ ಕಾಂಗ್ರೆಸ್ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಡ್ ಮತ್ತು ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್ ಯು) ಅಂತಿಮ ಪಟ್ಟಿಯಲ್ಲಿ ಹೊರಬಿದ್ದವರಿಗೆ ಮೇಲ್ಮನವಿ ಸಲ್ಲಿಸಲು ನೆರವಾಗುವ ಭರವಸೆ ನೀಡಿದ್ದವು.
ಕೇವಲ ಅಸ್ಸಾಂ ರಾಜ್ಯಕ್ಕಾಗಿ ೧೯೫೧ರಲ್ಲಿ ಮೊತ್ತ ಮೊದಲಿಗೆ ಸಿದ್ಧ ಪಡಿಸಲಾಗಿದ್ದ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಸುಪ್ರೀಂಕೋರ್ಟ್ ನಿರ್ದೇಶನಗಳ ಮೇರೆಗೆ ೨೦೧೫ರಿಂದೀಚೆಗೆ ನವೀಕರಿಸಲಾಗಿದೆ. ಅಕ್ರಮ ವಲಸೆಗಾರರನ್ನು ಗುರುತಿಸಿ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಬೇಕು ಮತ್ತು ಗಡೀಪಾರು ಮಾಡಬೇಕು ಎಂಬ ಆಗ್ರಹ ೧೯೭೯ರಲ್ಲಿ ಎಎಎಸ್ಯು
ನೇತೃತ್ವದಲ್ಲಿ ನಡೆದ ೬ ವರ್ಷಗಳ ಚಳವಳಿಯ ಆರಂಭದೊಂದಿಗೆ ಪ್ರಾರಂಭವಾಗಿತ್ತು. ೨೦೧೮ರ ಜುಲೈ ತಿಂಗಳಲ್ಲಿ ಸಂಪೂರ್ಣ ಕರಡು ಎನ್ ಆರ್ ಸಿಯನನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ೪ ಲಕ್ಷ ಅರ್ಜಿದಾರರ ಹೆಸರುಗಳನ್ನು ಬಿಟ್ಟು ಬಿಡಲಾಗಿತ್ತು. ಈ ವರ್ಷ ಜೂನ್ ತಿಂಗಳಲ್ಲು ಪೂರಕ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಯಿತು. ಅದರಲ್ಲಿ ೧,೦೦,೦೦೦ ಮಂದಿಯ ಹೆಸರುಗಳನ್ನು ಕೈಬಿಡಲಾಗಿದ್ದು, ಇದರೊಂದಿಗೆ ಎನ್ ಆರ್ ಸಿಯಲ್ಲಿ ಹೊರಗಿಡಲಾದವರ ಹೆಸರುಗಳ ಸಂಖ್ಯೆ ೪೧ ಲಕ್ಷಕ್ಕೆ (೪.೧ ಮಿಲಿಯನ್) ಏರಿತ್ತು.
2019: ಮುಂಬೈ: ರಾಸಾಯನಿಕ ಉತ್ಪಾದನಾ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿ ೫8ಕ್ಕೂ ಮಂದಿಗೆ ಗಾಯಗಳಾಗಿದ್ದು, ೭೦ಕ್ಕೂ ಹೆಚ್ಚು ಮಂದಿ ದುರಂತ ಸ್ಥಳದಲ್ಲಿ ಸಿಕ್ಕಿಹಾಕಿಕೊಂದ್ದಾರೆ ಎಂಬುದಾಗಿ ಶಂಕಿಸಲಾದ ಘಟನೆ ಮಹಾರಾಷ್ಟ್ರದ ಧುಲೆಯ ಶಿರ್ಪುರ ಸಮೀಪದ ವಾಘಾಡಿ ಗ್ರಾಮದಲ್ಲಿ ಈದಿನ ಬೆಳಗ್ಗೆ ಘಟಿಸಿತು.
ಕಾರ್ಖಾನೆಯಲ್ಲಿ ಬೆಳಗ್ಗೆ ೯.೪೫ರ ಸುಮಾರಿಗೆ ಅನೇಕ ಅನಿಲ ಸಿಲಿಂಡರುಗಳ ಸರಣೀ ಸ್ಫೋಟ ಸಂಭವಿಸಿ, ಕಾರ್ಖಾನೆ ಹಾಗೂ ಆಸುಪಾಸಿನಲ್ಲಿ ಭಾರೀ ಬೆಂಕಿ ವ್ಯಾಪಿಸಿದೆ. ದುರ್ಘಟನೆ ಸಂಭವಿಸಿದ ವೇಳೆಯಲ್ಲಿ ಕಾರ್ಖಾನೆಯಲ್ಲಿ ೧೦೦ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದರು ಎಂದು ತಿಳಿದುಬಂದಿತು.
ಕಾರ್ಖಾನೆ ಸುತ್ತಮುತ್ತ ದಟ್ಟ ಹೊಗೆ ಆವರಿಸಿತು. ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಪ್ರಯತ್ನ ಮಾಡುತ್ತಿದೆ. ಸ್ಥಳದಲ್ಲಿ ಪೊಲೀಸರು, ವಿಪತ್ತು ನಿರ್ವಹಣಾ ತಂಡ ಕೂಡ ಆಗಮಿಸಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಎಂಟು ಶವಗಳನ್ನು ಹೊರತೆಗೆಯಲಾಗಿದೆ ಎಂದು ವರದಿಗಳು ಹೇಳಿದವು.
ಅನೇಕ ಸಿಲಿಂಡರುಗಳು ಸ್ಪೋಟಿಸಿದ ಹಿನ್ನೆಲೆಯಲ್ಲಿ ಗಾಯಾಳುಗಳ ಸಂಖ್ಯೆ ಇನ್ನು ಹೆಚ್ಚುವ ಸಾಧ್ಯತೆ ಇದೆ. ಜೊತೆಗೆ ಕಾರ್ಖಾನೆಯಲ್ಲಿನ ವಿಷಕಾರಿಕ ಅನಿಲಗಳು ವಾತಾವರಣವನ್ನು ಸೇರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಯಿತು.
ಸ್ಫೋಟದ ತೀವ್ರತೆಯು ಸುತ್ತಮುತ್ತಣ ಗ್ರಾಮಗಳ ಜನರಲ್ಲಿ ಭೂಕಂಪನದ ಅನುಭವ ಮೂಡಿಸಿತ್ತು ಎಂದು ವರದಿ ತಿಳಿಸಿತು.
ಸ್ಫೋಟದಿಂದಾಗಿ ಇಡೀ ಪ್ರದೇಶದಲ್ಲಿ ಕಪ್ಪು ಹೊಗೆ ಆವರಿಸಿಕೊಂಡಿತು. ೭೦ ಮಂದಿ ಕಾರ್ಖಾನೆಯ ಒಳಗೆ ಸಿಕ್ಕಿಹಾಕಿಕೊಂಡಿರುವುದನ್ನು ಅಧಿಕಾರಿಗಳು ದೃಢ ಪಡಿಸಿದರು. ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆಯನ್ನು (ಎನ್ ಡಿಆರ್ ಎಫ್) ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಯಿತು.
ಪ್ರಾಥಮಿಕ ವರದಿಗಳ ಪ್ರಕಾರ, ಶಿರ್ಪುರದ ಮಹಾರಾಷ್ಟ್ರ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಕಾರ್ಪೋರೇಷನ್ನಿನ (ಎಂಐಡಿಸಿ) ರಾಸಾಯನಿಕ ಕಂಪೆನಿಯ ಆವರಣದಲ್ಲಿ ಸ್ಫೋಟ ಸಂಭವಿಸಿತು.
ಇಡೀ ಪ್ರದೇಶವನ್ನು ಆವರಿಸಿರುವ ದಟ್ಟವಾದ ಹೊಗೆ ಮತ್ತು ಪರಿಸರ ಸೇರಿರುವ ರಾಸಾಯನಿಕ ಅನಿಲಗಳು ಪ್ರದೇಶದ ಜನರಿಗೆ ಅಪಾಯ ಉಂಟುಮಾಡುವ ಸಾಧ್ಯತೆಗಳಿವೆ ಎಂದೂ ಅಧಿಕಾರಿಗಳು ಭೀತಿ ವ್ಯಕ್ತ ಪಡಿಸಿದರು. ಎಂಐಡಿಸಿ ಆವರಣವು ನಗರದಿಂದ ದೂರ ಇರುವ ಕಾರಣ, ಹಲವಾರು ಕಾರ್ಮಿಕರು ಕಂಪನಿ ಆವರಣದಲ್ಲಿ ಕುಟುಂಬ ಸದಸ್ಯರ ಸಹಿತವಾಗಿ ವಾಸವಾಗಿದ್ದರು.
ಗಾಯಾಳುಗಳಲ್ಲಿ ಕಾರ್ಖಾನೆಯ ಆವರಣದಲ್ಲಿ ವಾಸವಾಗಿರುವ ಹಲವಾರು ಅಪ್ರಾಪ್ತ ಮಕ್ಕಳೂ ಸೇರಿದ್ದರು.
ಸ್ಫೋಟದ ಬಗ್ಗೆ ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ ಬೆಳಗ್ಗೆ ೧೦.೨೦ರ ವೇಳೆಗೆ ಕರೆ ಬಂದಿತು. ಸರಣಿ ಸ್ಫೋಟಗಳು ಸಂಭವಿಸುವ ಸಾಧ್ಯತೆ ಇದೆ ಎಂಬುದಾಗಿ ಭೀತಿ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿಕಿತ್ಸೆ ಮತ್ತು ರಕ್ಷಣಾ ಕಾರ್ಯ ವಿಳಂಬಗೊಂಡಿತು ಎಂದು ವರದಿಗಳು ಹೇಳಿದವು.
ಗಾಯಾಳುಗಳನ್ನು ಉಪ-ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಗಂಭೀರ ಸ್ಥಿತಿಯಲ್ಲಿ ಇರುವವರನ್ನು ಪ್ರದೇಶದ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು.
ರಾಸಾಯನಿಕ ತಜ್ಞರು ಮತ್ತು ವೈದ್ಯರ ತಂಡವನ್ನು ತತ್ ಕ್ಷಣವೇ ಸ್ಥಳಕ್ಕೆ ರವಾನಿಸಲಾಯಿತು ಎಂದು ಧುಲೆಯ ಉಸ್ತುವಾರಿ ಸಚಿವ ಗಿರೀಶ್ ಮಹಾಜನ್ ಹೇಳಿದರು. ಸಿಲಿಂಡರುಗಳ ಸ್ಫೋಟವೇ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ದುರಂತಕ್ಕೆ ಕಾರಣ ಎಂಬುದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ. ಸ್ಫೋಟಕ್ಕೆ ಕಾರಣವೇನು ಮತ್ತು ರಾಸಾಯನಿಕ ಕಂಪೆನಿಯ ಮಾಲೀಕರು ಯಾರು ಎಂಬ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಲಾಗಿಲ್ಲ. ಏನಿದ್ದರೂ, ಅಪಾಯಕಾರಿ ರಾಸಾಯನಿಕ ಕಾರ್ಖಾನೆಗಳಲ್ಲಿ ಪಾಲಿಸಲಾಗುತ್ತಿರುವ ಸುರಕ್ಷತಾ ಕ್ರಮಗಳ ಬಗ್ಗೆ ಈ ದುರಂತದಿಂದಾಗಿ ಪ್ರಶ್ನೆಗಳು ಎದ್ದವು.
ದುರಂತ ಸಂಭವಿಸಿರುವ ವಾಘಾಡಿ ಗ್ರಾಮವು ಧುಲೆಯಿಂದ ೬೦ ಕಿಮೀ ಹಾಗೂ ಮುಂಬೈಯಿಂದ ೪೦೦ ಕಿಮೀ ದೂರದಲ್ಲಿತ್ತು.
2019: ನ್ಯೂಯಾರ್ಕ್: ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಸಂಘಟನೆಯ ಪರವಾಗಿ ನ್ಯೂಯಾರ್ಕ್ ನಗರದಲ್ಲಿ ಮಾರಕ ದಾಳಿಗಳನ್ನು ನಡೆಸಲು ಪಾಕಿಸ್ತಾನಿ ಅಮೆರಿಕನ್ ಹದಿಹರೆಯದ ತರುಣನೊಬ್ಬ ಯೋಜನೆ ರೂಪಿಸಿದ್ದ ಮತ್ತು ಇತರರಿಗೆ ಇಂತಹ ದಾಳಿಗಳನ್ನು ನಡೆಸಲು ಪ್ರೇರಣೆ ನೀಡಲು ಬಯಸಿದ್ದ ಎಂಬುದಾಗಿ ಅಮೆರಿಕದ ಅಧಿಕಾರಿಗಳು ಬಹಿರಂಗ ಪಡಿಸಿದರು.
೧೯ರ ಹರೆಯದ ಅವಾಯಿಸ್ ಚೌಧರಿಯು ಐಸಿಸಿ ಪರವಾಗಿ ನ್ಯೂಯಾರ್ಕಿನಲ್ಲಿ ಮಾರಕ ದಾಳಿಗಳನ್ನು ನಡೆಸಲು ಯೋಜಿಸಿದ್ದ ಎಂದು ರಾಷ್ಟ್ರೀಯ ಭದ್ರತಾ ಸಹಾಯಕ ಅಟಾರ್ನಿ ಜನರಲ್ ಜಾನ್ ಸಿ ಡೆಮೆರ್ಸ್
ಹಿಂದಿನ ದಿನ ಇಲ್ಲಿ ಬಹಿರಂಗ ಪಡಿಸಿದರು. ಚೌಧರಿಯನ್ನು ಫೆಡರಲ್ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ಆತನ ವಿರುದ್ಧ ಐಸಿಸ್ಗೆ
ವಸ್ತು-ವಿಷಯ ಬೆಂಬ ಒದಗಿಸಲು ಯತ್ನಿಸುತ್ತಿದ್ದ ಆಪಾದನೆಯನ್ನು ಹೊರಿಸಲಾಗಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಜೇಮ್ಸ್ ಓರೆನಸ್ಟೀನ್ ಅವರು ಆತನನ್ನು ಜಾಮೀನು ರಹಿತ ಬಂಧನದಲ್ಲಿ ಇಡಲು ಆಜ್ಞೆ ಮಾಡಿದರು. ‘ಚೌಧರಿಯು
ಇತರಿಗೆ ದಾ:ಳಿಗಳನ್ನು ನಡೆಸಲು ಸ್ಫೂರ್ತಿ ನೀಡುವ ಆಶಯದೊಂದಿಗೆ ರಕ್ತಪಾತ ಉಂಟು ಮಾಡಲು ಬಯಸಿದ್ದ’
ಎಂದು ಫೆಡರಲ್ ಪ್ರಾಸೆಕ್ಯೂಟರ್ ರಿಚರ್ಡ್ ಡೊನೆಗ್ಯೂ ಹೇ:ಳಿದರು. ಚೌಧರಿಯನ್ನು ಗುರುವಾರ ಆತ ಆನ್ ಲೈನ್ ಅಂಗಡಿಯೊಂದಕ್ಕೆ ಹೋಗಿ, ತನ್ನ ಯೋಜಿತ ದಾಳಿಗಳನ್ನು ರೆಕಾರ್ಡ್ ಮಾಡುವಂತೆ ಆದೇಶ ನೀಡಿದ್ದ ವೇಳೆಯಲ್ಲಿ ಬಂಧಿಸಲಾಯಿತು. ‘ಅವಾಯಿಸ್
ಚೌಧರಿ ನ್ಯೂಯಾರ್ಕ್ ಪ್ರಜೆಗಳನ್ನು ಕೊಲ್ಲಲು ಐಸಿಸ್ನಿಂದ
ತನಗೆ ಕರೆ ಬಂದಿದ್ದುದನ್ನು ಒಪ್ಪಿಕೊಂಡಿದ್ದಾನೆ’
ಎಂದು ನಗರ ಪೊಲೀಸ್ ಕಮೀಷನರ್ ಜೇಮ್ಸ್ ಒ’ನೀಲ್ ಹೇಳಿದರು. ನ್ಯೂಯಾರ್ಕ್ ಪೊಲೀಸ್ ಜಂಟಿ ಭಯೋತ್ಪಾದನಾ ಕಾರ್ಯಪಡೆ ಮತ್ತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್
(ಎಫ್ ಬಿಐ) ಬಂಧಿಸುವುದಕ್ಕೆ ಮುನ್ನ ಚೌಧರಿ ಗುರಿಯ ಆಯ್ಕೆ, ಶಸ್ತ್ರಾಸ್ತ್ರ ಸಂಗ್ರಹ ಪ್ರಕ್ರಿಯೆ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡಿದ್ದ. ದಾಳಿ ನಡೆಸುವುದು ಮಾತ್ರವೇ ಆತನ ಯೋಜನೆಯಲ್ಲಿ ಬಾಕಿ ಉಳಿದಿದ್ದ ವಿಚಾರವಾಗಿತ್ತು ಎಂದು ಒ’ನೀಲ್ ಹೇಳಿದರು. ನ್ಯಾಯಾಲಯದ ದಾಖಲೆಗಳ ಪ್ರಕಾರ ಚೌಧರಿಯನ್ನು ಟೆಕ್ಸ್ ಸಂದೇಶಗಳ ಮೂಲಕ ತನ್ನ ಯೋಜನೆಗಳ ವಿವರ ನೀಡಿದ್ದ ಕಾನೂನು ಜಾರಿ ಸಿಬ್ಬಂದಿಯನ್ನು ಗುರುತಿಸುವ ಸಲವಾಗಿ ಚೌಧರಿಯ ಮುಖಕ್ಕೆ ಹಾಕಲಾಗಿದ್ದ ಮುಸುಕನ್ನು ತೆಗೆಯಲಾಯಿತು ಎಂದು ಹೇಳಲಾಗಿದೆ. ಜಾಗತಿಕ ಮರೀನಾ ಉತ್ಸವ ಸೇರಿದಂತೆ ಹಲವಡೆಗಳಲ್ಲಿ ಬಾಂಬ್ ಎಸೆಯುವ ಹಾಗೂ ಇರಿತಗಳನ್ನು ನಡೆಸುವ ಯೊಜನೆಯನ್ನು ಐಸಿಸಿ ಪರವಾಗಿ ಸಂಘಟಿಸುವ ತನ್ನ ಗುರಿಯನ್ನು ಆತ ತಿಳಿಸಿದ್ದ. ಪ್ರಮುಖ ರಸ್ತೆಯೊಂದರ ಪಾದಚಾರಿ ಮಾರ್ಗದಲ್ಲಿ ಬಾಂಬ್ ಎಸೆದು ಭಾರೀ ಸಂಖ್ಯೆಯಲ್ಲಿ ಪಾದಚಾರಿಗಳನ್ನು ಹತ್ಯೆಗೈಯುವ ಸಂಚು ಕೂಡಾ ಆತನ ಬತ್ತಳಿಕೆಯಲ್ಲಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ದಾಳಿ ನಡೆಸಬೇಕಾದ ಸ್ಥಳಗಳ ಬಗಿನ ಮತ್ತು ಬಳಸಬೇಕಾದ ಚೂರಿಯಿಂದ ತಿವಿಯುವ ವಿಧಾನ ಕುರಿತ ಸೂಚನೆಗಳಿದ್ದ ಸ್ಕ್ರೀನ್ ಶಾಟ್ ಗಳನ್ನು ಪಡೆಯಲು ಆತ ಏಜೆಂಟನೊಬ್ಬನನ್ನೂ ಕಳುಹಿಸಿದ್ದ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದಾಖಲೆಗಳು ವಿವರಿಸಿದವು.
2019: ಮುಂಬೈ : ಘರ್ಕುಲ್ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಾಣ ಹಗರಣದಲ್ಲಿ ಆರೋಪಿಯಾಗಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಶಿವಸೇನಾ ನಾಯಕ ಸುರೇಶ್ ಜೈನ್ ಸೇರಿದಂತೆ ಇಬ್ಬರಿಗೆ ದುಲೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತು. .ಜಿಲ್ಲಾ ಸೆಷನ್ಸ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಸೃಷ್ಟಿ ನೀಲಕಾಂತ್ ಅವರು ಆರೋಪಿ ಸುರೇಶ್ ಜೈನ್ ಅವರಿಗೆ 7 ವರ್ಷ ಜೈಲು ಹಾಗೂ 100 ಕೋಟಿ ದಂಡವನ್ನು ವಿಧಿಸಿದರು. ಇದೇ ರೀತಿ ಎನ್ ಸಿಪಿ ಪಕ್ಷದ ನಾಯಕ ಗುಲಾಬ್ರಾವ್ ದೇವೋಕರ್ ಅವರಿಗೆ ಐದು ವರ್ಷ ಜೈಲು ಶಿಕ್ಷೆ. ಉಳಿದ 46 ಆರೋಪಿಗಳಿಗೆ 3 ಹಾಗೂ 7 ವರ್ಷ ಶಿಕ್ಷೆಯನ್ನು ವಿಧಿಸಲಾಯಿತು. ಸುರೇಶ್ ಜೈನ್ ಹಾಗೂ ಗುಲಾಬ್ ರಾವ್ ದೇವೋಕರ್ ಅವರಲ್ಲದೇ ಆರೋಪಿಗಳಲ್ಲಿ ಕೆಲವರು ಹಾಲಿ ಹಾಗೂ ಮಾಜಿ ಪುರಸಭಾ ಸದಸ್ಯರು. ನ್ಯಾಯಾಲಯ ತೀರ್ಪು ಘೋಷಿಸಿದ ಕೂಡಲೇ 48 ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಸುರೇಶ್ ಜೈನ್ ಅವರನ್ನು ಮಾರ್ಚ್ 2012ರಲ್ಲಿ ಪೊಲೀಸರು ಬಂಧಿಸಿದ್ದರು. 1990ರಲ್ಲಿ ಒಟ್ಟು 29 ಕೋಟಿ ರೂಪಾಯಿ ಹಗರಣದಲ್ಲಿ ಸಚಿವರು ಬಾಗಿಯಾಗಿದ್ದರು ಎನ್ನಲಾಗಿತ್ತು. ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆಯುವ ಮೊದಲು ಅವರು ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಎನ್ ಸಿಪಿ ನಾಯಕ ಗುಲಾಬ್ರಾವ್ ಡಿಯೋಕರ್ ಅವರನ್ನು ಮೇ 2012ರಲ್ಲಿ ಬಂಧಿಸಿದ್ದರು. ಜಾಮೀನು ಪಡೆಯುವ ಪೂರ್ವದಲ್ಲಿ ಮೂರು ವರ್ಷ ಜೈಲಿನಲ್ಲಿದ್ದರು. ಇವರು1995 ಮತ್ತು 2000 ನಡುವೆ ಜಲ್ವಾಂಗ್ ಪುರಸಭೆಯಲ್ಲಿ ಸದಸ್ಯರಾಗಿದ್ದರು. ಈ ಹಗರದಲ್ಲಿ ಬಿಲ್ಡರ್ ಪರವಾಗಿ ಒಲವು ತೋರಿ 29 ಕೋಟಿ ಅಕ್ರಮದಲ್ಲಿ ಬಾಗಿಯಾಗಿದ್ದರು. ಸುರೇಶ್ ಜೈನ್ ಅವರು ಖಂಡೇಶ್ ಬಿಲ್ಡರ್ಸ್ ಗೆ ಒಲವು ತೋರಿದ್ದರು ಎನ್ನಲಾಗಿತ್ತು. ಈ ಕಾರಣಕ್ಕಾಗಿ ಘರ್ಕುಲ್ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಇವರಿಗೆ ಗುತ್ತಿಗೆ ನೀಡಲಾಯಿತು. ಜಲಗಾಂವ್ನ ಮಾಜಿ ಪುರಸಭೆ ಆಯುಕ್ತ ಪ್ರವೀಣ ಗೆದಮ್ ಅವರು ಈ ಸಂಬಂಧ ಫೆಬ್ರುವರಿ 2006ರಲ್ಲಿ ದೂರು ದಾಖಲಿಸಿದ್ದರು. ಜಲಗಾಂವ್ ಹೊರವಲಯದಲ್ಲಿ ನಿರ್ಮಾಣವಾಗಬೇಕಿದ್ದ 5000 ಮನೆಗಳಲ್ಲಿ 1500 ಮನೆಗಳನ್ನು ಮಾತ್ರ ಪೂರ್ಣಗೊಳಿಸಲಾಗಿತ್ತು.
ಇಂದಿನ ಇತಿಹಾಸ History Today ಆಗಸ್ಟ್ 31 (2018+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment