Thursday, August 22, 2019

ಇಂದಿನ ಇತಿಹಾಸ History Today ಆಗಸ್ಟ್ 22

2019: ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ -2 ಯೋಜನೆ ಅಂದುಕೊಂಡಂತೆ ಸಾಗಿತು. ಎರಡು ದಿನಗಳ ಹಿಂದೆಯಷ್ಟೇ ಚಂದ್ರಯಾನ ನೌಕೆಯನ್ನು ಚಂದಿರನ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದ ಇಸ್ರೋ ವಿಜ್ಞಾನಿಗಳು ಇದೀಗ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ನೌಕೆಯಿಂದ ಚಂದ್ರನ ಮೊದಲ ಚಿತ್ರಗಳನ್ನು ನಿಯಂತ್ರಣ ಕೇಂದ್ರಕ್ಕೆ ತರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಚಂದ್ರನ ಅಂಗಳದಿಂದ ಸುಮಾರು 2,650 ಕಿಲೋ ಮೀಟರ್ ಗಳಷ್ಟು ಎತ್ತರದಿಂದ ವಿಕ್ರಂ ಲ್ಯಾಂಡರ್ ನೌಕೆ ತೆಗೆದಿರುವ ಸುಸ್ಪಷ್ಟ ಮತ್ತು ಹೊಳೆಯುವ ಚಿತ್ರವನ್ನು ಇಸ್ರೋ ಇಂದು ಬಿಡುಗಡೆ ಮಾಡಿತು.

2019: ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ  ರಾತ್ರಿ ನಾಟಕೀಯವಾಗಿ ಬಂಧಿಸಲ್ಪಟ್ಟಿದ್ದ ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರನ್ನು ಈದಿನ ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯವು ಆಗಸ್ಟ್ ೨೬ರವರೆಗೆ ನಾಲ್ಕು ದಿನಗಳ ಅವಧಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ವಶಕ್ಕೆ ಒಪ್ಪಿಸಿತು.ಏನಿದ್ದರೂ, ಪ್ರತಿದಿನವೂ ೩೦ ನಿಮಿಷಗಳ ಕಾಲ ಕುಟುಂಬ ಸದಸ್ಯರು ಮತ್ತು ವಕೀಲರಿಗೆ ಚಿದಂಬರಂ ಅವರನ್ನು ಭೇಟಿ ಮಾಡಲು ನ್ಯಾಯಾಲಯ ಅವಕಾಶ ನೀಡಿತು. ಚಿದಂಬರಂ ಅವರನ್ನು ಐದು ದಿನಗಳ ಅವಧಿಗೆ ತನ್ನ ವಶಕ್ಕೆ ಒಪ್ಪಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಇದಕ್ಕೆ ಮುನ್ನ ಮನವಿ ಮಾಡಿತ್ತು. ಮಾಜಿ ಕೇಂದ್ರ ಸಚಿವರು ದಶಕದಷ್ಟು ಹಳೆಯದಾದ ಭ್ರಷ್ಟಾಚಾರ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬುದಾಗಿ ಆಪಾದಿಸಿದ ಕೇಂದ್ರೀಯ ತನಿಖಾ ಸಂಸ್ಥೆಯ ಮನವಿ ಮೇರೆಗೆ, ದೆಹಲಿಯ ನ್ಯಾಯಾಲಯವು ಹಿರಿಯ ರಾಜಕಾರಣಿಯನ್ನು ಸಿಬಿಐ ವಶಕ್ಕೆ ಒಪ್ಪಿಸುವಂತೆ ಆದೇಶ ನೀಡಿತು. ಚಿದಂಬರಂ ಅವರನ್ನು ವೈದ್ಯಕೀಯ ತಪಾಸಣೆಯ ಬಳಿಕ ಮಧ್ಯಾಹ್ನ ಗಂಟೆಗೆ ರೌಸ್ ಅವೆನ್ಯೂ ನ್ಯಾಯಾಲಯ ಸಮುಚ್ಚಯಕ್ಕೆ ಕರೆತರಲಾಯಿತು. ಅವರ ಪತ್ನಿ ನಳಿನಿ ಮತ್ತು ಪುತ್ರ ಕಾರ್ತಿ, ಕುಟುಂಬ ಸದಸ್ಯರು ಸಾಕಷ್ಟು ಮುಂಚಿತವಾಗಿಯೇ ಅಲ್ಲಿಗೆ ಆಗಮಿಸಿದ್ದರು. ಅದೇ ರೀತಿ ಹಿರಿಯ ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಸೇರಿದಂತೆ ಚಿದಂಬರಂ ಅವರ ತಂಡದ ವಕೀಲರೂ ಸಾಕಷ್ಟು ಮುಂಚಿತವಾಗಿಯೇ ಬಂದಿದ್ದರು. ವಕೀಲರ ಜೊತೆಗೆ ಸಂಕ್ಷಿಪ್ತ ಮಾತುಕತೆ ನಡೆಸಿದ ಚಿದಂಬರಂ ಅವರು ಬಳಿಕ ನೇರವಾಗಿ ಆರೋಪಿಗಳ ಕಟಕಟೆಗೆ ತೆರಳಿ ನ್ಯಾಯಾಧೀಶ ಅನಿಲ್ ಕುಮಾರ ಕುಹದ್ ಅವರು ಕಲಾಪ ಆರಂಭಿಸಲು ಕಾದರು. ನ್ಯಾಯಾಧೀಶರು ಸುಮಾರು ಒಂದೂವರೆ ಗಂಟೆಗಳಿಗೂ ಹೆಚ್ಚುಕಾಲ ಪರ - ವಿರೋಧ ವಾದವನ್ನು ಆಲಿಸಿದರು. ಸರ್ಕಾರದ ಎರಡನೇ ಅತ್ಯಂತ ಹಿರಿಯ ಕಾನೂನು ಅಧಿಕಾರಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಸಿಬಿಐ ಪರ ಪ್ರಬಲವಾದ ವಾದ ಮಂಡನೆ ಮಾಡಿ, ಮಾಜಿ ಸಚಿವರು ತನಿಖಾಧಿಕಾರಿಗಳಿಗೆ ನೀಡಿದ ಉತ್ತರಗಳು ಜಾರಿಕೊಳ್ಳುವಂತಹ ಉತ್ತರಗಳಾಗಿದ್ದುದರಿಂದ ಸಿಬಿಐ ವಶದಲ್ಲಿಯೇ ತನಿಖೆ ನಿರ್ಣಾಯಕವಾಗಿದೆ. ಆದ್ದರಿಂದ ಅವರನ್ನು ಸಿಬಿಐ ವಶಕ್ಕೆ ನೀಡಬೇಕು ಎಂದು ಕೋರಿದರು. ’ಮೌನವಾಗಿರುವ ಹಕ್ಕು ಸಾಂವಿಧಾನಿಕ ಹಕ್ಕು ಮತ್ತು ಇದಕ್ಕೆ ನನ್ನ ತಕರಾರು ಇಲ್ಲ, ಆದರೆ ಸಹಕಾರ ನೀಡುತ್ತಿಲ್ಲ. ಅವರು ಪ್ರಶ್ನೆಗಳಿಗೆ ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದಾರೆಎಂದು ಹೇಳಿದ ಮೆಹ್ತ, ಐಎನ್ಎಕ್ಸ್ ಮೀಡಿಯಾ ಪ್ರಕರಣವು ಹಣ ವರ್ಗಾವಣೆಯ ಅತ್ಯುತ್ಕೃಷ್ಟ ಪ್ರಕರಣವಾಗಿದೆ ಎಂದು ಬಣ್ಣಿಸಿದರು.  ನಾವು ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಪೂರ್ವ ಹಂತದಲ್ಲಿ ಇದ್ದೇವೆ ಮತ್ತು ವಸ್ತುಗಳು ಅವರ ಬಳಿ ಇವೆ... ಅವರು ತನಿಖೆಗೆ ಸಹಕರಿಸುತ್ತಿಲ್ಲ. ದಾಖಲೆ ಪತ್ರಗಳ ಸಹಿತವಾಗಿ ಅವರನ್ನು ಪ್ರಶ್ನಿಸಬೇಕಾಗಿದೆಎಂದು ಮೆಹ್ತ ವಿವರಿಸಿದರು.ಚಿದಂಬರಂ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ನ್ಯಾಯಾಲಯವನ್ನು ಕೋರಿದ ಕಪಿಲ್ ಸಿಬಲ್ ಅವರು ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಕೂಡಾ ಆರೋಪಿಯಾಗಿದ್ದು, ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ. ಹಾಗಿರುವಾಗ ಅವರ ತಂದೆಯನ್ನು ವಶದಲ್ಲಿ ಇಟ್ಟುಕೊಳ್ಳುವುದಕ್ಕೆ  ಯಾವುದೆ ಕಾರಣವಿಲ್ಲಎಂದು ವಾದಿಸಿದರು. ಯಾವುದೇ ಕಾರಣಕ್ಕೂ ಸಿಬಿಐ ವಶಕ್ಕೆ ಒಪ್ಪಿಸಿ ವಿಚಾರಣೆ ನಡೆಸಲು ಅವಕಾಶ ನೀಡಬಾರದು. ಇಂದ್ರಾಣಿ ಮುಖರ್ಜಿ ಹೇಳಿಕೆ ಆಧರಿಸಿದ ಪ್ರಕರಣ ಇದಾಗಿದೆ. ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲ ಎಂದೂ ಅವರು ವಾದಿಸಿದರು.ವಿಚಾರಣೆ ಕಾಲದಲ್ಲಿ ಚಿದಂಬರಂ ಅವರು ತಮಗೆ ನ್ಯಾಯಾಲಯದಲ್ಲಿ ಮಾತನಾಡಲು ಅವಕಾಶ ಬೇಕು ಎಂದು ಕೋರಿದರು. ಸಾಲಿಸಿಟರ್ ಜನರಲ್ ಮೆಹ್ತ ಅವರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದರೂ, ನ್ಯಾಯಾಲಯ ಚಿದಂಬರಂ ಅವರಿಗೆ ಮಾತನಾಡಲು ಅವಕಾಶ ನೀಡಿತು. ಚಿದಂಬರಂ ಅವರು ತಾವು ನಿರಪರಾಧಿಯಾಗಿದ್ದು, ತಮ್ಮ ವಿರುದ್ಧವಾಗಲೀ ತಮ್ಮ ಕುಟುಂಬ ಸದಸ್ಯರ ವಿರುದ್ಧವಾಗಲೀ ಯಾವುದೇ ಆರೋಪವನ್ನೂ ಹೊರಿಸಲಾಗಿಲ್ಲ ಎಂದು ಹೇಳಿದರು. ಸಿಬಿಐ ಸಮನ್ಸ್ ವೇಳೆ ಹಾಜರಾಗಿದ್ದ ಚಿದಂಬರಂ ಅವರು ಸಿಬಿಐ ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಹೀಗಿರುವಾಗ ಅಸಹಕಾರದ ಪ್ರಶ್ನೆ ಎಲ್ಲಿ ಬರುತ್ತದೆ ಎಂದು ಚಿದಂಬರಂ ಪರ ವಕೀಲರೂ ನ್ಯಾಯಾಲಯದಲ್ಲಿ ಪ್ರತಿಪಾದಿಸಿದರು.೭೩ರ ಹರೆಯದ ರಾಜಕಾರಣಿಯನ್ನು ಹಿಂದಿನ ರಾತ್ರಿ ಅವರು ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಟೆಲಿವಿಷನ್ ಕ್ಯಾಮರಾಗಳ ಎದುರು ಅಚ್ಚರಿದಾಯಕವಾಗಿ ಪ್ರತ್ಯಕ್ಷರಾದ ೯೦ ನಿಮಿಷಗಳ ಬಳಿಕ ಬಂಧಿಸಲಾಗಿತ್ತು. ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ಟೀಕೆಗಳನ್ನು ನಿರಾಕರಿಸುವ ಸಲುವಾಗಿ ತಾವು ಮಾಧ್ಯಮಗಳ ಮುಂದೆ ಬಂದಿರುವುದಾಗಿ ಅವರು ಹೇಳಿದ್ದರು. ’ನನ್ನ ವಿರುದ್ಧವಾಗಲೀ ನನ್ನ ಕುಟುಂಬ ಸದಸ್ಯರ ವಿರುದ್ಧವಾಗಿ ಯಾವುದೇ ಆರೋಪವೂ ಇಲ್ಲಎಂದು ಚಿದಂಬರಂ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದ್ದರು. ಹಿರಿಯ ಸುಪ್ರೀಂಕೋರ್ಟ್ ವಕೀಲರೂ ಪಕ್ಷ ಸಹೋದ್ಯೋಗಿಗಳೂ ಆದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ  ಅವರ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿದಂಬರಂಜಾಮೀನು ಕೋರಿಕೆ ಅರ್ಜಿಯ ಸಲುವಾಗಿ ಇಡೀ ರಾತ್ರಿ ನಾನು ನನ್ನ ವಕೀಲರ ಜೊತೆಗೆ ಕೆಲಸ ಮಾಡುತ್ತಿದ್ದೆ ಮತ್ತು ಈದಿನ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಸಿದ್ಧ ಪಡಿಸುತ್ತಿದ್ದೆಎಂದು ಚಿದಂಬರಂ ಹೇಳಿದ್ದರು. ಮಾಧ್ಯಮ ಗೋಷ್ಠಿಯ ಬಳಿಕ ಅವರು ನೇರವಾಗಿ ತಮ್ಮ ನಿವಾಸಕ್ಕೆ ತೆರಳಿದ್ದರು. ಅಲ್ಲಿ ಅವರನ್ನು ಬಂಧಿಸಲಾಗಿತ್ತು. ಕಾಂಗ್ರೆಸ್ ನಾಯಕನ ಬಂಧನವು ಚಿದಂಬರಂ ಪಕ್ಷದಿಂದ ಸರ್ಕಾರದ ವಿರುದ್ಧ ವ್ಯಾಪಕ ಟೀಕೆಯನ್ನು ಹುಟ್ಟು ಹಾಕಿತ್ತು. ಡಿಎಂಕೆಯ ಸ್ಟಾಲಿನ್ ಅವರಿಂದ ಹಿಡಿದು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವಾರು ವಿರೋಧಿ ನಾಯಕರೂ ಚಿದಂಬರಂ ಅವರನ್ನು ಬಂಧಿಸಿದ ವೈಖರಿಯನ್ನು ಟೀಕಿಸಿದ್ದರು. ಸಿಬಿಐ ವಿಶೇಷ ನ್ಯಾಯಾಲಯವು ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸುವುದಕ್ಕೆ ಮುನ್ನ ಸಿಬಿಐ ವಕ್ತಾರರು ಚಿದಂಬರಂ ಅವರನ್ನು ಸಂಬಂಧಪಟ್ಟ ನ್ಯಾಯಾಲಯವು ನೀಡಿದ್ದ ವಾರಂಟ್ ಆಧಾರದಲ್ಲಿಯೇ ಬಂಧಿಸಲಾಗಿದೆ ಎಂದು ತಿಳಿಸಿದ್ದರು. ಬಂಧನದ ಬಳಿಕ ರಾಮಮನೋಹರ ಲೋಹಿಯಾ ಆಸ್ಪತ್ರೆಯ ವೈದ್ಯರು ಸಿಬಿಐ ಕೇಂದ್ರ ಕಚೇರಿಯಲ್ಲಿ ಚಿದಂಬರಂಅವರ ವೈದ್ಯಕೀಯ ತಪಾಸಣೆ ನಡೆಸಿದ್ದರು. ಚಿದಂಬರಂ ಅವರನ್ನು ರಾತ್ರಿ ಸಿಬಿಐ ಕೇಂದ್ರ ಕಚೇರಿಯ ಅತಿಥಿಗೃಹದ ನೆಲಮಹಡಿಯಲ್ಲಿನ ೫ನೇ ನಂಬರ್ ಕೊಠಡಿಯಲ್ಲಿ ಇರಿಸಲಾಗಿತ್ತು ಎಂದು ಮೂಲಗಳು ಹೇಳಿದವು. ಬೆಳಗ್ಗೆ ದೆಹಲಿಗೆ ಆಗಮಿಸಿದ ಪುತ್ರ ಕಾರ್ತಿ ಚಿದಂಬರಂ ಅವರು ತಮ್ಮ ತಂದೆಯ ಬಂಧನವನ್ನು ಖಂಡಿಸಿದರು. ’ನಾನು ೧೧ ದಿನಗಳ ಕಾಲ ಸಿಬಿಐ ಅತಿಥಿಯಾಗಿದ್ದೆ ಮತ್ತು ಇಲ್ಲಿಯವರೆಗೂ ನನ್ನ ವಿರುದ್ಧವೇ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಲಾಗಿಲ್ಲ. ನಿನ್ನೆ ನಡೆದ ನಾಟಕ ಕೆಲವರನ್ನು ಮೆಚ್ಚಿಸಲು ಮತ್ತು ಟಿವಿಗಳಲ್ಲಿ ಪ್ರಸಾರದ ಸಲುವಾಗಿ ನಡೆದಿದೆ. ನನ್ನ ತಂದೆಯವರು ಸಿಬಿಐ ಪ್ರತಿಬಾರಿ ಸಮನ್ಸ್ ಕಳುಹಿಸಿದಾಗಲೂ ಹಾಜರಾಗಿದ್ದರುಎಂದು ಕಾರ್ತಿ ಚಿದಂಬರಂ ನುಡಿದರು. ದೆಹಲಿ ಹೈಕೋರ್ಟ್ ಪಿ. ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಮಂಗಳವಾರದಿಂದ ಸಿಬಿಐ ೭೩ರ ಹರೆಯದ ನಾಯಕರ ಬಂಧನಕ್ಕಾಗಿ ಕಾದಿತ್ತು.

2019: ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಬಂಧನದ ಹಿನ್ನೆಲೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೇಲೆ ಪ್ರಬಲ ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ವಿರುದ್ಧ ಈದಿನ ಇಲ್ಲಿ ತೀವ್ರವಾಗಿ ಹರಿಹಾಯ್ದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ವಿರೋಧ ಪಕ್ಷವುಭ್ರಷ್ಟಾಚಾರವನ್ನು ಕ್ರಾಂತಿಯನ್ನಾಗಿ ಪರಿವರ್ತಿಸಲು ಯತ್ನಿಸುತ್ತಿದೆಎಂದು ಎದಿರೇಟು ನೀಡಿದರು.ಕಾಂಗ್ರೆಸ್ ಪಕ್ಷವು ನಕಾರಾತ್ಮಕ ಮನಸ್ಥಿತಿಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ’ಅವರು ಭ್ರಷ್ಟಾಚಾರವನ್ನು ಕ್ರಾಂತಿಯನ್ನಾಗಿ ಪರಿವರ್ತಿಸಿದ್ದಾರೆ. ಭ್ರಷ್ಟಾಚಾರವು ಕ್ರಾಂತಿಯಾಗಿ ಪರಿವರ್ತನೆಯಾಗುತ್ತಿರುವುದು ಇದೇ ಪ್ರಪ್ರ್ರಥಮ. ಇಲ್ಲಿಯವರೆ ಭ್ರಷ್ಟಾಚಾರದ ವಿರುದ್ಧ ಕ್ರಾಂತಿ ನಡೆದಿತ್ತು, ಈಗ ಭ್ರಷ್ಟಾಚಾರದ ಪರವಾಗಿ ಕ್ರಾಂತಿಯನ್ನು ನಡೆಸಲಾಗುತ್ತಿದೆಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ನುಡಿದರು. ತನ್ನ ಪುತ್ರಿಯನ್ನೇ ಕೊಲೆಗೈದ ಆರೋಪಕ್ಕೆ ಗುರಿಯಾಗಿರುವ ಮಹಿಳೆಯೊಬ್ಬಳು ನೀಡಿದ ಹೇಳಿಕೆಯನ್ನು ಆಧರಿಸಿ ಹಿರಿಯ ರಾಜಕಾರಣಿಯನ್ನು ಬಂಧಿಸಲಾಗಿದೆ ಎಂಬ ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ನಡೆಸುತ್ತಿರುವ ಅವ್ಯಾಹತ ಟೀಕಾ ಪ್ರಹಾರಕ್ಕೆ ಸಚಿವರು ಉತ್ತರ ನೀಡಿದರು.ಐಎನ್ಎಕ್ಸ್ ಮೀಡಿಯಾದ ಸಹ ಸಂಸ್ಥಾಪಕಿ ಇಂದ್ರಾಣಿ ಮುಖರ್ಜಿ ಕಳೆದ ವರ್ಷ ಸಿಬಿಐಗೆ ನೀಡಿದ ಹೇಳಿಕೆಯೊಂದರಲ್ಲಿ ತಾನು ಮತ್ತು ತನ್ನ ಪತಿ ಪೀಟರ್ ಮುಖರ್ಜಿ ಹಾಗೂ ಕಾರ್ತಿ ಚಿದಂಬರಂ ಅವರ ಮಧ್ಯೆ ವಿದೇಶೀ ಬಂಡವಾಳ ಹೂಡಿಕೆಗೆ ಅನುಮೋದನೆ ಪಡೆಯುವ ಸಲುವಾಗಿ ೧೦ ಲಕ್ಷ ಡಾಲರ್ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ತಿಳಿಸಿದ್ದರು. ಇದನ್ನು ಆಧರಿಸಿ ಸಿಬಿಐ ತನ್ನ ತನಿಖೆಯನ್ನು ತೀವ್ರಗೊಳಿಸಿತ್ತು.ತಮ್ಮ ಬಂಧನಕ್ಕೆ ೯೦ ನಿಮಿಷ ಮುಂಚಿತವಾಗಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಚಿದಂಬರಂ ಅವರು ತಮ್ಮ ಮುಗ್ಧತನವನ್ನು ಪ್ರತಿಪಾದಿಸಿ, ಹಲವರು ನಂಬಿದಂತೆ ತಾನು ಅಡಗಿ ಕುಳಿತಿಲ್ಲ, ಬದಲಿಗೆ ಕಾನೂನಿನ ರಕ್ಷಣೆ ಕೋರುತ್ತಿದ್ದೇನೆ ಎಂಬುದಾಗಿ ಹೇಳಿದ್ದನ್ನು ಕಾಂಗ್ರೆಸ್ ಪ್ರತಿಧ್ವನಿಸಿತ್ತು. ಬಂಧನಕ್ಕೆ ಮುನ್ನ ಚಿದಂಬರಂ ಅವರ ವಕೀಲರ ತಂಡವು ಬಂಧನ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳುವಂತೆ ಮನವಿ ಮಾಡಲು ಎರಡು ಬಾರಿ ಸುಪ್ರೀಂಕೋರ್ಟನ್ನು ಸಂಪರ್ಕಿಸಿತ್ತು. ಆದರೆ ನ್ಯಾಯಾಲಯವು ಅರ್ಜಿಯನ್ನು ಆಗಸ್ಟ್ 23ರ ಶುಕ್ರವಾರ ವಿಚಾರಣೆಗೆ ನಿಗದಿ ಪಡಿಸಿತ್ತು. ಸುಪ್ರೀಂಕೋರ್ಟ್ ತಮ್ಮ ಮಧ್ಯಂತರ ಅರ್ಜಿಯ ಬಗ್ಗೆ ತೀರ್ಪು ನೀಡುವವರೆಗೆ ಕಾದು ಬಳಿಕ ತಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಂಧನಕ್ಕೆ ಕೆಲವೇ ನಿಮಿಷಗಳ ಮುನ್ನ ಚಿದಂಬರಂ ಅವರು ಸಿಬಿಐಗೆ ಮನವಿ ಮಾಡಿದ್ದರು. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮಾತ್ರವೇ ಮಾಡುತ್ತಿದ್ದಾರೆ ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು. ’ಕಾನೂನು ಜಾರಿ ಸಂಸ್ಥೆಗಳು ತಮ್ಮ ಕೆಲಸ ಮಾಡುತ್ತವೆ ಮತ್ತು ನ್ಯಾಯಾಲಯಗಳೂ ಅವುಗಳ ಕೆಲಸ ಮಾಡುತ್ತವೆ. ಆದರೆ, ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕತ್ವವು ಭ್ರಷ್ಟಾಚಾರವನ್ನು ಕ್ರಾಂತಿಯಾಗಿ ಪರಿವರ್ತಿಸಲು ಯತ್ನಿಸುತ್ತಿದೆಎಂದು ನಖ್ವಿ ಟೀಕಿಸಿದರು.ಇನ್ನೊಂದೆಡೆಯಲ್ಲಿ ಕಿರಿಯ ಶಿಕ್ಷಣ ಸಚಿವ ಸತ್ಯಪಾಲ್ ಸಿಂಗ್ ಅವರು ಆರೋಪಿ ಚಿದಂಬರಂ ಅವರು ನಾಡಿನ ಕಾನೂನನ್ನು ಗೌರವಿಸುತ್ತಿಲ್ಲ, ಬದಲಿಗೆ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು. ’ಏನು ಆಗಿದೆಯೋ ಅದು ಒಳ್ಳೆಯದಲ್ಲ, ಅವರು ಮೊದಲೇ ಶರಣಾಗತರಾಗಿದ್ದರೆ, ಅವರ ಘನತೆಗೆ ಯಾವುದೇ ಚ್ಯುತಿ ಬರುತ್ತಿರುಲಿಲ್ಲಎಂದು ನಿವೃತ್ತ ಮುಂಬೈ ಪೊಲೀಸ್ ಕಮೀಷನರ್ ಸತ್ಯಪಾಲ್ ಸಿಂಗ್ ಅವರು ನುಡಿದರು. ’ಚಿದಂಬರಂ ಜಿ ಅವರು ಕೇಂದ್ರದ ಮಾಜಿ ವಿತ್ತ ಹಾಗೂ ಗೃಹ ಸಚಿವರು. ಅವರು ಒಬ್ಬ ಬುದ್ಧಿಜೀವಿ ಮತ್ತು ಕಾನೂನನ್ನು ಚೆನ್ನಾಗಿ ತಿಳಿದುಕೊಂಡಿರುವವರು. ಯಾರು ಕೂಡಾ ಕಾನೂನಿನಿಂದ ದೂರ ಓಡಲು ಸಾಧ್ಯವಿಲ್ಲಎಂದು ಸಿಂಗ್ ಹೇಳಿದರು. ಯುಪಿಎ ಆಡಳಿತಾವಧಿಯಲ್ಲಿ ಪ್ರಮುಖ ಸಚಿವರಲ್ಲಿ ಒಬ್ಬರಾಗಿದ್ದ ಚಿದಂಬರಂ ಅವರನ್ನು ಆಗಸ್ಟ್ 21ರ ಬುಧವಾರ ರಾತ್ರಿ ಜೋರ್ ಬಾಗ್ ನಲ್ಲಿನ ಅವರ ಮನೆಯ ಕಾಪೌಂಡ್ ಗೋಡೆ ಏರಿ ಮನೆ ಒಳಕ್ಕೆ ಪ್ರವೇಶಿಸಿದ್ದ ಸಿಬಿಐ ಅಧಿಕಾರಿಗಳು ಬಂಧಿಸಿ ಬಳಿಕ ಸಿಬಿಐ ಕೇಂದ್ರ ಕಚೇರಿಗೆ ಒಯ್ದಿದ್ದರು. ಸಿಬಿಐ ಅಧಿಕಾರಿಗಳು ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ಬಂಧಿಸಿದರು.
2019: ಶ್ರೀನಗರ: ಕಾಶ್ಮೀರದ ಬಹುತೇಕ ಭಾಗ ಶಾಂತವಾಗಿದ್ದು, ನಿರ್ಬಂಧಗಳನ್ನು ತೆರವುಗೊಳಿಸಲಾಯಿತು. ರಸ್ತೆಗಳಲ್ಲಿ ಅಡೆತಡೆಗಳನ್ನು ತೆಗೆದುಹಾಕಲಾಗಿದ್ದು ಜನಸಂಚಾರ ಮತ್ತು ವಾಹನ ಸಂಚಾರ ಕ್ರಮೇಣ ಹೆಚ್ಚಿತು. ಆದರೆ, ಮಾರುಕಟ್ಟೆಗಳು ಮುಚ್ಚಿದ್ದು ಮೊಬೈಲ್ ಮತ್ತು ಅಂತರ್ಜಾಲ (ಇಂಟರ್ ನೆಟ್) ಸೇವೆಗಳು ಸತತ ೧೮ನೇ ದಿನವೂ ಅಮಾನತುಗೊಂಡವು. ಪರಿಸ್ಥಿತಿ ಬಹುತೇಕ ಶಾಂತವಾಗಿದ್ದು, ಕಾಶ್ಮೀರ ಕಣಿವೆಯ ಯಾವುದೇ ಕಡೆಯಿಂದಲೂ ಯಾವುದೇ ಅಹಿತರಕ ಘಟನೆ ವರದಿಯಾಗಿಲ್ಲಎಂದು ಅಧಿಕಾರಿಗಳು ಹೇಳಿದರು. ಪರಿಸ್ಥಿತಿ ಸುಧಾರಣೆಯ ಹಿನ್ನೆಲೆಯಲ್ಲಿ ನಗರ ಮತ್ತು ಕಣಿವೆಯ ಇತರ ಜಿಲ್ಲಾ ಕೇಂದ್ರಗಳಲ್ಲಿ ಜನರ ಚಲನವಲನ ಮತ್ತು ವಾಹನ ಸಂಚಾರ ನಿಧಾನವಾಗಿ ಹೆಚುತ್ತಿದೆ ಎಂದು ಅವರು ನುಡಿದರು. ಸಾರ್ವಜನಿಕ ವಾಹನಗಳ ಓಡಾಟ ಇನ್ನೂ ಆರಂಭವಾಗಿಲ್ಲ, ಆದರೆ ಕೆಲವು ಅಂತರ ಜಿಲ್ಲಾ ಕ್ಯಾಬ್ಗಳು ಮತ್ತು ಆಟೋರಿಕ್ಷಾಗಳು  ಕೆಲವು ಪ್ರದೇಶಗಳಲ್ಲಿ ಸಂಚರಿಸುವುದು ಕಂಡು ಬಂದಿದೆ. ಮಾಧ್ಯಮಿಕ ಶಾಲಾ ಮಟ್ಟದವರೆಗಿನ ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿ ಹೆಚ್ಚಿದೆ. ಹಾಗೆಯೇ ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಸುಧಾರಿಸುತ್ತಿದೆ. ಏನಿದ್ದರೂ ಹಾಲಿ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗಳಿಂದ ದೂರವೇ ಉಳಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.ಕಣಿವೆಯಾದ್ಯಂತ ಪ್ರಾಥಮಿಕ ಶಾಲೆಗಳನ್ನು ಸೋಮವಾರದಿಂದ ಮತ್ತು ಮಾಧ್ಯಮಿಕ ಶಾಲೆಗಳನ್ನು ಬುಧವಾರದಿಂದ ಪುನಾರಂಭ ಮಾಡುವಂತೆ ಸರ್ಕಾರ ಆದೇಶ ನೀಡಿತ್ತು. ಶ್ರಿನಗರದ ಬಹುತೇಕ ಭಾಗ ಸೇರಿದಂತೆ, ಕಾಶ್ಮೀರ ಕಣಿವೆಯ ಹಲವಾರು ಪ್ರದೇಶಗಳಲ್ಲಿ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು. ಶ್ರೀನಗರ ಮೇಲ್ಬಾಗ ಮತ್ತು ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಹಾಗೂ ಇತರ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಬ್ಯಾರಿಕೇಡ್ಗಳನ್ನು ತೆರವು ಮಾಡಲಾಗಿದೆ. ಏನಿದ್ದರೂ ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಸಲುವಾಗಿ ಭದ್ರತಾ ಪಡೆಗಳ ನಿಯೋಜನೆ ಮುಂದುವರೆದಿದೆ ಎಂದು ಅಧಿಕಾರಿಗಳು ನುಡಿದರು.ಜಮ್ಮು  ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ಕೇಂದ್ರವು ಆಗಸ್ಟ್ ೫ರಂದು ರದ್ದು ಪಡಿಸಿದಂದಿಂದ ಕಣಿವೆಯ ಬಹುತೇಕ ಸ್ಥಳಗಳಲ್ಲಿ ಮುಚ್ಚಿದ್ದ ಮಾರುಕಟ್ಟೆಗಳು ಈದಿನವೂ ಹಾಗೆಯೇ ಮುಂದುವರೆದಿದ್ದವು ಎಂದು ಅವರು ನುಡಿದರು. ಪ್ರತ್ಯೇಕತಾವಾದಿಗಳು ಅಥವಾ ಇತರ ಸಂಘಟನೆಗಳಿಂದ ಯಾವುದೇ ಕರೆ ಇಲ್ಲದೇ ಇದ್ದರೂ ಅಂಗಡಿಗಳು ಮತ್ತು ವ್ಯಾಪಾರ ಮುಂಗಟ್ಟುಗಳು ಬಾಗಿಲೆಳೆದುಕೊಂಡಿವೆ. ಮೊಬೈಲ್ ಸೇವೆಗಳು ಮತ್ತು ಅಂತರ್ಜಾಲ ಅಮಾನತು ಮುಂದುವರೆದಿದೆ. ಬಹುತೇಕ ಕಡೆಗಳಲ್ಲಿ ಸ್ಥಿರ ದೂರವಾಣಿ ಮಾರ್ಗಗಳು ಪುನರಾಂಭಗೊಂಡಿವೆ. ಆದರೆ ಶ್ರೀನಗರದ ವಾಣಿಜ್ಯ ಕೇಂದ್ರವಾದ ಲಾಲ್ ಚೌಕ ಮತ್ತು ಪ್ರೆಸ್ ಎನ್ಕ್ಲೇವ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಅವುಗಳ ಅಮಾನತು ಮುಂದುವರೆದಿದೆ ಎಂದು ಅಧಿಕಾರಿಗಳು ನುಡಿದರು.

2019: ಸುಪೌಲ್ (ಬಿಹಾರ): ಬಿಹಾರದ ಸುಪೌಲ್ ಜಿಲ್ಲಾ ಪೊಲೀಸರು ರಾಜ್ಯ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರ ಅವರ ಅಂತ್ಯಕ್ರಿಯೆಯ ವೇಳೆಯಲ್ಲಿ ದಿವಂಗತ ನಾಯಕನಿಗೆ ಸಾಂಪ್ರದಾಯಿಕ ೨೧ -ಗನ್ ಸೆಲ್ಯೂಟ್ ಗೌರವ ನೀಡುವಲ್ಲಿ ವಿಫಲಗೊಂಡ ಘಟನೆ ಹಿಂದಿನ ದಿನ ಘಟಿಸಿತು. ಜಗನ್ನಾಥ ಮಿಶ್ರ ಅವರ ಅಂತ್ಯಕ್ರಿಯೆಯು ಅವರ ಹುಟ್ಟೂರು ಬಲುವಾ ಬಜಾರ್ ಗ್ರಾಮದಲ್ಲಿ ನಡೆಯಿತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹಾಗೂ ಇತರ ನಾಯಕರು, ಸಚಿವರು ಸಂದರ್ಭದಲ್ಲಿ ಹಾಜರಿದ್ದರು. ಮೂರು ಬಾರಿ ಬಿಹಾರ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಮಿಶ್ರ ಆಗಸ್ಟ್ ೧೯ರ ಸೋಮವಾರ ದೆಹಲಿಯಲ್ಲಿ ನಿಧನರಾಗಿದ್ದರು. ಬಂದೂಕುಗಳಲ್ಲಿನ ಕಾಡತೂಸುಗಳು ಸರಿ ಇಲ್ಲದ ಕಾರಣ ಗೌರವ ವಂದನೆಗಾಗಿ ಗುಂಡು ಹಾರಿಸುವಂತೆ ತಾವು ಆದೇಶ ನೀಡಲಿಲ್ಲ ಎಂದು ಅಂತ್ಯಕ್ರಿಯೆಯ ವೇಳೆಯಲ್ಲಿ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಕೋಸಿ ವಲಯ) ಸುರೇಶ ಚೌಧರಿ ಅವರು ಸುಪೌಲ್ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದರು ಎಂದು ಹೇಳಲಾಯಿತು. ಪಿಪ್ರಾದ (ಸುಪೌಲ್) ರಾಷ್ಟ್ರೀಯ ಜನತಾದಳ (ಆರ್ಜೆಡಿ) ಶಾಸಕ ಯದುವಂಶ ಕುಮಾರ್ ಯಾದವ್ಇದು ದಿವಂಗತ ನಾಯಕನಿಗೆ ತೋರಿರುವ ಅಗೌರವ ಮತ್ತು ಅವಮಾನ. ವಿಷಯದ ಬಗ್ಗೆ ವಿಸ್ತೃತ ತನಿಖೆಯಾಗಬೇಕುಎಂದು ಆಗ್ರಹಿಸಿದರು. ’ಇದು ಸಾಮಾನ್ಯ ವಿಷಯವಲ್ಲ. ಬಿಹಾರಕ್ಕೆ ಹೊಸ ದಿಕ್ಕನ್ನು ನೀಡಿದ ದಿವಂಗತ ನಾಯಕನಿಗೆ ನೀಡಬೇಕಾಗಿದ್ದ ಅರ್ಹ ಗೌರವವನ್ನು ನೀಡದೇ ಇರುವ ಘಟನೆ ಸರ್ಕಾರ ಮತ್ತು ಆಡಳಿತದ ಸಂಪೂರ್ಣ ವೈಫಲ್ಯಎಂದು ಅವರು ನುಡಿದರು. ಡಾಕ್ಟರ್ ಸಾಹಿಬ್ ಎಂದೇ ಪರಿಚಿತರಾಗಿದ್ದ ಜಗನ್ನಾಥ ಮಿಶ್ರ ಅವರು ದೀರ್ಘ ಕಾಲದ ಅಸ್ವಸ್ಥತೆಯ ಬಳಿಕ ದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಪಾಟ್ನಾಕ್ಕೆ ತಂದು ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್, ಸಚಿವರು ಮತ್ತು ವಿವಿಧ ಪಕ್ಷಗಳ ನಾಯಕರು ಸೇರಿದಂತೆ ಭಾರೀ ಸಂಖ್ಯೆಯ ಮಂದಿ ಮಿಶ್ರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದ್ದರು. ಬಳಿಕ ಮಿಶ್ರ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಿಗೆ ದರ್ಭಾಂಗ, ಸಮಷ್ಠಿಪುರ ಮೂಲಕ ಒಯ್ಯಲಾಯಿತು. ಈನಗರಗಳಲ್ಲೂ ಜನರು ಮಿಶ್ರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು. ದಿವಂಗತ ನಾಯಕನ ಹಿರಿಯ ಪುತ್ರ ಸಂಜೀವ ಮಿಶ್ರ ಅವರು ಬಲುವ ಬಜಾರಿನ ಪಂಚಮುಖಿ ಹನುಮಾನ್ ಮಂದಿರದ ಆವರಣದಲ್ಲಿ ಸಹಸ್ರಾರು ಮಂದಿ ದುಃಖ ಸಂತೃಪ್ತರ ಸಮ್ಮುಖದಲ್ಲಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

2019: ಲಾಹೋರ್: ಭಾರತದ ಟಿ.ವಿ. ಚಾನೆಲ್ ಗಳನ್ನು ಮತ್ತು ಸುದ್ದಿಗಳನ್ನು ಪ್ರಸಾರ ಮಾಡದಂತೆ ಪಾಕಿಸ್ಥಾನದ ಎಲೆಕ್ಟ್ರಾನಿಕ್ ಮೀಡಿಯಾ ವಾಚ್ ಡಾಗ್ ಲಾಹೋರ್ ಭಾಗದ ಕೇಬಲ್ ಟಿ.ವಿ. ಅಪರೇಟರ್ ಗಳಿಗೆ ಎಚ್ಚರಿಕೆ ನೀಡಿತು. ಭಾರತದ ಚಾನೆಲ್ ಗಳನ್ನು ಪ್ರಸಾರ ಮಾಡುವ ಕೇಬಲ್ ಅಪರೇಟರುಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಕಿಸ್ಥಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥ ಮುಹಮ್ಮದ್ ಸಲೀಂ ಬೈಗ್ ಅವರು ತಿಳಿಸಿದರು. ಅಪರೇಟರ್ ಗಳು ಸುಪ್ರೀಂ ಕೋರ್ಟ್ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಇದೇ ಸಂದರ್ಭದಲ್ಲಿ ಲಾಹೋರ್ ಕೇಬಲ್ ಅಪರೇಟರ್ ಗಳಿಗೆ ತಾಕೀತು ಮಾಡಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಅಂತಹ ಅಪರೇಟರ್ ಗಳ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು ಹಾಗೂ ಎಫ್..ಆರ್. ದಾಖಲಿಸಿಕೊಳ್ಳಲಾಗುವುದು ಎಂದೂ ಮುಹಮ್ಮದ್ ಅವರು ಎಚ್ಚರಿಕೆ ನೀಡಿದರು.

2019:  ಇಸ್ಲಾಮಾಬಾದ್: ಭಾರತ ಮಾತುಕತೆಗೆ ಬರುತ್ತಿಲ್ಲ ಎಂದು ಈವರೆಗೆ ಗೋಳಿಡುತ್ತಿದ್ದ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಈಗ ಬೇರೆಯದೇ ಆದ ವರಾತ ಶುರುಮಾಡಿದರು. ನಾವು ಭಾರತದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ. ಇದರ ಬಗ್ಗೆ ನಮಗೆ ಯಾವುದೇ ಆಸಕ್ತಿಯೂ ಇಲ್ಲ ಎಂದು ಅವರು ಹೇಳಿದರು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖಾನ್, ಪದೇ ಪದೇ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತುಕತೆಗೆ ಮನವಿ ಮಾಡಿದ್ದೆ. ಆದರೆ ಅವರು ಅದನ್ನು ತಿರಸ್ಕರಿಸಿದರು. ನಾನು ಶಾಂತಿ ಸ್ಥಾಪನೆಗೆ ಮಾತುಕತೆಗೆ ಮುಂದಾದರೂ ಅದನ್ನು ರದ್ದುಪಡಿಸಲಾಯಿತು. ಆದ್ದರಿಂದ ಇನ್ನು ಮಾಡುವುದೇನಿಲ್ಲ ಎಂದು ಹೇಳಿದರು. ಅಲ್ಲದೇ ಎರಡೂ ದೇಶಗಳು ಅಣ್ವಸ್ತ್ರ ಸಜ್ಜಿತ ದೇಶಗಳಾಗಿರುವುದರಿಂದ ಮುಂದಿನ ದಿನಗಳ ಬಗ್ಗೆ ಆತಂಕಿತನಾಗಿದ್ದೇನೆ ಎಂದು ಅವರು ನುಡಿದರು.


No comments:

Post a Comment