Friday, August 16, 2019

ಇಂದಿನ ಇತಿಹಾಸ History Today ಆಗಸ್ಟ್ 16

2019: ನವದೆಹಲಿ: ಭಾರತ ಸರ್ಕಾರವು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ  ರದ್ದುಗೊಳಿಸಿದ ವಿಚಾರವಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅತಿ ಅಪರೂಪದ ರಹಸ್ಯ ಸಭೆ ಈದಿನ  ನಡೆಯಿತು. ಮಂಡಳಿಯ  ಐವರು ಖಾಯಂ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ರಹಸ್ಯ  ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ವ್ಯಕ್ತವಾದ ವಿಚಾರಗಳು ಅಧಿಕೃತವಾಗಿ ಬಹಿರಂಗವಾಗದಿದ್ದರೂ ಕೆಲವು ವಿಷಯಗಳು ಬೆಳಕಿಗೆ ಬಂದವು. ಅದರ ಪ್ರಕಾರ, ಸಭೆಯಲ್ಲಿ ಪಾಕಿಸ್ತಾನಕ್ಕೆ ಚೀನಾದ ಬೆಂಬಲ ಮಾತ್ರವೇ ಸಿಕ್ಕಿತು. ಉಳಿದ ನಾಲ್ಕು ರಾಷ್ಟ್ರಗಳು ಭಾರತದ ನಿಲುವಿಗೆ ಬೆಂಬಲ ನೀಡಿವೆ ಎನ್ನಲಾಯಿತು. ಒಟ್ಟಾರೆಯಾಗಿ, ಜಮ್ಮು-ಕಾಶ್ಮೀರ ವಿಚಾರದಲ್ಲಿ ಎಲ್ಲೆ ಮೀರದಂತೆ ಸಂಯಮ ವಹಿಸಬೇಕೆಂದು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ಭದ್ರತಾ ಮಂಡಳಿ ಕಿವಿಮಾತು ಹೇಳಿತು. ಅಮೆರಿಕ, ರಶ್ಯಾ, ಫ್ರಾನ್ಸ್, ಬ್ರಿಟನ್ ಮತ್ತು ಚೀನಾ ದೇಶಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳು. ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪ್ರಾರಂಭವಾದ ಸಭೆ ಸುಮಾರು 70 ನಿಮಿಷಗಳ ಕಾಲ ನಡೆಯಿತು. ಕಾಶ್ಮೀರದ  ಬೆಳವಣಿಗೆಯಿಂದ ಉಭಯ ದೇಶಗಳ ಮಧ್ಯೆ ಸೃಷ್ಟಿಯಾಗಿರುವ ಪ್ರಕ್ಷುಬ್ದ ವಾತಾವರಣದ ಬಗ್ಗೆ ಮಂಡಳಿ ಆತಂಕ ವ್ಯಕ್ತಪಡಿಸಿತು.
ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಕೈಮೀರಿ ಹೋಗುವಂತಹ  ಚಟುವಟಿಕೆಗಳನ್ನು ನಡೆಸಬಾರದು. ವಿಶ್ವಸಂಸ್ಥೆ ಸನ್ನದು (ಚಾರ್ಟರ್) ಪ್ರಕಾರ, ಉಭಯ ರಾಷ್ಟ್ರಗಳು ದ್ವಿಪಕ್ಷೀಯ ಒಪ್ಪಂದದ ಆಶಯದಂತೆ ನೇರ ಮಾತುಕತೆ ಮೂಲಕ ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಎಲ್ಲಾ ಐದು ದೇಶಗಳೂ ಕರೆ ನೀಡಿದವು. ಹಾಗೆಯೇ, ದಕ್ಷಿಣ ಏಷ್ಯಾದ ಸೂಕ್ಷ್ಮ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಲು ಭದ್ರತಾ ಮಂಡಳಿಯ ಸದಸ್ಯರು ನಿರ್ಧರಿಸಿದರು. ಜಮ್ಮು-ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆ ಮೊದಲಾದ ಅಂತಾರಾಷ್ಟ್ರೀಯ ವೇದಿಕೆಯ ಮುಂದೆ ತರಲು ಪಾಕಿಸ್ತಾನ ಮೊದಲಿಂದಲೂ ಪ್ರಯತ್ನಿಸುತ್ತಲೇ ಇತ್ತು. ಆದರೆ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ಇನ್ನಷ್ಟು ಜೋರು ಧ್ವನಿಯಲ್ಲಿ ಮಾತನಾಡಲು ತೊಡಗಿತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ವಿಚಾರ ಚರ್ಚೆಯಾಗಬೇಕೆಂದು ಪಾಕಿಸ್ತಾನ ಮನವಿ ಕೂಡ ಮಾಡಿಕೊಂಡಿತು. ಅದಕ್ಕಾಗಿ ಚೀನಾದ ಮೂಲಕ ಲಾಬಿಯನ್ನೂ ಮಾಡಿಸಿತು. ಚೀನಾದ ಪ್ರಯತ್ನದಿಂದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈದಿನ ರಹಸ್ಯ ಸಭೆ ನಡೆಯಿತುವಿಶ್ವಸಂಸ್ಥೆಯ ಸಭೆ ನಡೆಯುವ ಮುನ್ನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕ ಅಧ್ಯಕ್ಷರಿಗೆ ಫೋನ್ ಮಾಡಿ ಒಂದಷ್ಟು ಹೊತ್ತು ಮಾತುಕತೆಯನ್ನೂ ನಡೆಸಿದರು. ಆದರೆ, ಅಮೆರಿಕದಿಂದ ನೇರವಾಗಿ ಯಾವುದೇ ಬೆಂಬಲದ ಆಶ್ವಾಸನೆ ಪಾಕಿಸ್ತಾನಕ್ಕೆ ಸಿಗಲಿಲ್ಲ.
ಪಾಕಿಸ್ತಾನದ ಪಾಲಿಗೆ ಸರ್ವಕಾಲದ ಆಪ್ತಮಿತ್ರ ಎನಿಸಿರುವ ಚೀನಾ ದೇಶ ಮಾತ್ರವೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಹಸ್ಯ  ಸಭೆಯಲ್ಲಿ ಪಾಕಿಸ್ತಾನದ ಪರವಾಗಿ ಮಾತನಾಡಿತು. ಉಳಿದ ನಾಲ್ಕು ರಾಷ್ಟ್ರಗಳು ಕಾಶ್ಮೀರವನ್ನು ದ್ವಿಪಕ್ಷೀಯ ವಿಚಾರವೆಂದು ಪರಿಗಣಿಸಿ ಭಾರತದ ನಿಲುವಿಗೆ ಪರೋಕ್ಷ ಬೆಂಬಲ ನೀಡಿದವು. ಇದರಿಂದ ಹೆಚ್ಚೂಕಡಿಮೆ ಪಾಕಿಸ್ತಾನಕ್ಕೆ ಮುಖಭಂಗವಾದಂತಾಯಿತು. ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಚೀನಾದ ರಾಯಭಾರಿ, ಕಾಶ್ಮೀರ ವಿಚಾರದಲ್ಲಿ ಭಾರತ ಅಕ್ರಮ ರೀತಿಯಲ್ಲಿ ಏಕಪಕ್ಷೀಯ ಕ್ರಮ ಕೈಗೊಂಡಿದೆ. ಇದು ದ್ವಿಪಕ್ಷೀಯ ಒಪ್ಪಂದದ ನಿಯಮಗಳ ಉಲ್ಲಂಘನೆ ಎಂದು ಭಾರತದ ವಿರುದ್ಧ ನೇರವಾಗಿ ಕುಟುಕಿದರು. ಉಳಿದ ನಾಲ್ಕು ದೇಶಗಳು ಭಾರತದ ನಿಲುವಿಗೆ ಪೂರಕವಾಗಿ ಮಾತನಾಡಿದವು. ಇದೇ ವೇಳೆ, ವಿಶ್ವಸಂಸ್ಥೆಗೆ ಭಾರತದ ಖಾಯಂ ರಾಯಭಾರಿಯಾಗಿರುವ ಸೈಯ್ಯದ್  ಅಕ್ಬರುದ್ದೀನ್ ಅವರು ಪಾಕಿಸ್ತಾನದ ವಿರುದ್ಧ ಹರಿಹಾಯ್ದರು. ಕಾಶ್ಮೀರದ ಸಮಸ್ಯೆಯನ್ನು ದ್ವಿಪಕ್ಷೀಯ ಮಾತುಕತೆಯಿಂದ ಬಗೆಹರಿಸಿಕೊಳ್ಳುವುದನ್ನು ಬಿಟ್ಟು ಪಾಕಿಸ್ತಾನವು ಜಗತ್ತಿಗೆ ಸುಳ್ಳು ಹೇಳಹೊರಟಿದೆ. ಭಯೋತ್ಪಾದನೆ ತ್ಯಜಿಸಿ ಮಾತುಕತೆಗೆ ಬನ್ನಿ. ನಾವು ಶಿಮ್ಲಾ ಒಪ್ಪಂದಕ್ಕೆ ಬದ್ಧರಾಗಿದ್ದೇವೆ ಎಂದು ಅಕ್ಬರುದ್ದೀನ್ ಅವರು ಪಾಕಿಸ್ತಾನಕ್ಕೆ ಸವಾಲು ಹಾಕಿದರು.

2019: ನವದೆಹಲಿ: ಭಾರತೀಯ ರೈಲ್ವೇ ಇಲಾಖೆ ವಿವಿಧ ರೀತಿಯ ರಿಯಾಯಿತಿಗಳನ್ನು ಪ್ರಯಾಣಿಕರಿಗೆ ನೀಡಲು ಮುಂದಾಯಿತು. ರೋಗಿಗಳು, ವಿದ್ಯಾರ್ಥಿಗಳು, ಸಂದರ್ಶನಕ್ಕೆ ಹೋಗುವವರು,  ಹಿರಿಯ ನಾಗರಿಕರು ಸೇರಿದಂತೆ ಹಲವರಿಗೆ ಹಲವು ರೀತಿಯ ರಿಯಾಯಿತಿ ನೀಡಲು ರೈಲ್ವೇ ಇಲಾಖೆ ನಿರ್ಧರಿಸಿತು. ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಟಿಕೆಟ್​​ ಮೇಲೆ ರಿಯಾಯಿತಿ ನೀಡಲು ಮುಂದಾಯಿತು. ಕೆಲವರಿಗೆ ಮಾತ್ರ ನೂರಕ್ಕೆ ಶೇಕಡ ನೂರರಷ್ಟು ರಿಯಾಯಿತಿ ನೀಡಲಿದೆ. ರೈಲಿನಲ್ಲಿ ಪ್ರಯಾಣಿಸುವವರಿಗೆ ಕೆಟಗಿರಿ ಆಧಾರದ ಮೇಲೆ ರಿಯಾಯಿತಿ ನೀಡಲಾಗುವುದು. ಬಗ್ಗೆ ಸಂಪೂರ್ಣ ಮಾಹಿತಿ http://www.indianrailways.gov.in ವೆಬ್​​ಸೈಟ್​​ನಲ್ಲಿ ದೊರೆಯಲಿದೆ. ವಿದ್ಯಾರ್ಥಿಗಳಿಗೆ 12ನೇ ತರಗತಿಯವರೆಗೆ ಉಚಿತ ಸೆಕೆಂಡ್ ಕ್ಲಾಸ್ ಮಾಸಿಕ ಸೀಜನ್ ಟಿಕೆಟ್ ಪಡೆಯಬಹುದು. ಪೈಕಿ ಸಾಮಾನ್ಯ ಮತ್ತು ಹಿಂದುಳಿದವರಿಗೆ ಶೇ.50, ದಲಿತರಿಗೆ ಶೇ.75 ರಿಯಾಯಿತಿ ಸಿಗಲಿದೆಗ್ರಾಮೀಣ ವಿದ್ಯಾರ್ಥಿಗಳು ಸರ್ಕಾರ ಆಯೋಜಿಸಿದ ಶಿಬಿರಗಳು, ವಿಚಾರಗೋಷ್ಠಿಗಳು ಅಥವಾ ಐತಿಹಾಸಿಕ ತಾಣಗಳಿಗೆ ಪ್ರವಾಸ ಹೋಗಲು ದ್ವಿತೀಯ ದರ್ಜೆ  ಮತ್ತು ಸ್ಲೀಪರ್ ಕ್ಲಾಸ್ನಲ್ಲಿ ಶೇ.75 ರಷ್ಟು ರಿಯಾಯಿತಿ ಪಡೆಯಬಹುದು. ಯುಪಿಎಸ್ಸಿ ಮತ್ತು ಎಸ್ಎಸ್ಸಿ ಪರೀಕ್ಷೆಗಳಿಗೆ ತೆರಳುತ್ತಿರುವ ಸಂದರ್ಭದಲ್ಲಿ ಸೆಕೆಂಡ್ ಕ್ಲಾಸ್ನಲ್ಲಿ ಶೇ.50 ರಷ್ಟು ರಿಯಾಯಿತಿ ಲಭಿಸುವುದು. 60 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಎಲ್ಲಾ ಕ್ಲಾಸ್ಗಳಲ್ಲಿ ಶೇ.40 ರಷ್ಟು ರಿಯಾಯಿತಿ ಪಡೆಯಬಹುದು. 58 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಎಲ್ಲಾ ಕ್ಲಾಸ್ಗಳಲ್ಲಿ ಶೇ.50 ರಷ್ಟು ರಿಯಾಯಿತಿ ಪಡೆಯಬಹುದು. ರೋಗಿಗಳು ಡಯಾಲಿಸಿಸ್ ಅಥವಾ ಹೃದಯ ರೋಗಕ್ಕೆ ಚಿಕಿತ್ಸೆ ಅಥವಾ ಕಿಡ್ನಿ ಜೋಡಣೆಗಾಗಿ ತೆರಳುತ್ತಿರುವವರಿಗೆ ರಿಯಾಯಿತಿ. ಮೊದಲ ಮತ್ತು ದ್ವಿತೀಯ ದರ್ಜೆಗಳಲ್ಲಿ, 3ಎಸಿ ಮತ್ತು ಚೇರ್ ಕಾರ್‌‌ನಲ್ಲಿ ಶೇ.75 ರಷ್ಟು ರಿಯಾಯಿತಿ, ರೋಗಿಗಳೊಂದಿಗೆ ಪ್ರಯಾಣಿಸುವವರಿಗೂ ಶೇ.75 ರಷ್ಟು ರಿಯಾಯಿತಿ. ಸೇನೆಯಲ್ಲಿ ಕಾರ್ಯನಿರ್ವಹಿಸುವಾಗ ಹುತಾತ್ಮರಾದ ಕುಟುಂಬದವರು ದ್ವಿತೀಯ ದರ್ಜೆ  ಮತ್ತು ಸ್ಲೀಪರ್ ಕ್ಲಾಸ್ಗಳಲ್ಲಿ ಶೇ.75 ರಷ್ಟು ರಿಯಾಯಿತಿ ಪಡೆಯಬಹುದು.

2019: ನವದೆಹಲಿ: ಪಾಕಿಸ್ತಾನದ ಜೊತೆಗಿನ ದ್ವಿಪಕ್ಷೀಯ ಪ್ರಕ್ಷುಬ್ಧತೆ ಹೆಚ್ಚುತ್ತಿರುವುದರ ಮಧ್ಯೆಯೇ, ’ಮೊದಲು ಅಣ್ವಸ್ತ್ರ ಪ್ರಯೋಗಿಸುವುದಿಲ್ಲ ಎಂಬ ತನ್ನ ನೀತಿಯನ್ನು ಭಾರತ ಬದಲಿಸಿಕೊಳ್ಳುವ ಸಾಧ್ಯತೆ ಇದೆ ಎಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸುಳಿವು ನೀಡಿದರು.  ‘ಇಲ್ಲಿಯವರೆಗೆ,  ಮೊದಲು ಅಣ್ವಸ್ತ್ರ ಪ್ರಯೋಗಿಸುವುದಿಲ್ಲ ಎಂಬುದು ನಮ್ಮ ನೀತಿಯಾಗಿತ್ತು. ಭವಿಷ್ಯದಲ್ಲಿ ನಾವು ಮೊದಲು ದಾಳಿ ನಡೆಸಬಾರದು ಎಂಬ ಧೋರಣೆ ಕೈಬಿಟ್ಟು ಭಾರತವು ಸನ್ನಿವೇಶವನ್ನು ಅವಲಂಬಿಸಿ ನಿರ್ಧಾರ ಕೈಗೊಳ್ಳಬಹುದು ಎಂದು ಸಚಿವರು ನುಡಿದರು. ಸಚಿವರು ಈ ಮಾತು ಹೇಳುವಾಗ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಪಕ್ಕದಲ್ಲೇ ಕುಳಿತಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲನೇ ಪುಣ್ಯತಿಥಿಯ ಸಂದರ್ಭದಲ್ಲಿ ಪ್ರೋಖ್ರಾನ್‌ನಲ್ಲಿ, ಸಿಂಗ್ ಅವರು ಈ ಹೇಳಿಕೆ ನೀಡಿದರು. ಸೇನಾ ಸ್ಕೌಟ್ ಮಾಸ್ಟರ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದರು.  ೧೯೯೮ರಲ್ಲಿ ಇದೇ ಪೋಖ್ರಾನಿನಲ್ಲಿ ಭಾರತವು ರಹಸ್ಯವಾಗಿ ಐದು ಪರಮಾಣು ಪರೀಕ್ಷೆಗಳನ್ನು ನಡೆಸಿತ್ತು. ಯಶಸ್ವೀ ಪರೀಕ್ಷೆಯ ಬಳಿಕ ಆಗಿನ ಪ್ರಧಾನಿ ವಾಜಪೇಯಿ ಅವರು ಅದನ್ನು ಜಗತ್ತಿಗೆ ಸಾರಿದ್ದರು. ಆ ಬಳಿಕ ’ಮೊದಲು ಅಣ್ವಸ್ತಗಳನ್ನು ಪ್ರಯೋಗಿಸುವುದಿಲ್ಲ್ಲ ಎಂಬ ನೀತಿಯನ್ನು ಭಾರತ ಅನುಸರಿಸಿತ್ತು.  ‘ಮೊದಲು ಅಣ್ವಸ್ತ್ರ ಪ್ರಯೋಗಿಸುವುದಿಲ್ಲ ಎಂಬ ತನ್ನ ನೀತಿಗೆ ಭಾರತ ಈವರೆಗೂ ದೃಢವಾದ ಬದ್ಧತೆ ವ್ಯಕ್ತ ಪಡಿಸಿತ್ತು, ಆದರೆ ಭವಿಷ್ಯದಲ್ಲಿ ಟ್ವೀಟ್ ಮೂಲಕವೂ ಇದನ್ನು ಬದಲಿಸಬಹುದು ಎಂದು ಸಿಂಗ್ ಹೇಳಿದರು. ಭವಿಷ್ಯದಲ್ಲಿ ಭಾರತ ಅಣ್ವಸ್ತ್ರ ದಾಳಿಗೆ ಸಂಬಂಧಿಸಿದಂತೆ ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳಲಿದೆ ಎಂದು ಸುದ್ದಿಗಾರ ಜೊತೆ ಮಾತನಾಡುತ್ತಾ ಅವರು ಹೇಳಿದರು. ವೈರಿ ರಾಷ್ಟ್ರವು ಅಣ್ವಸ್ತ್ರ ಬಳಸಿ ದಾಳಿ ಮಾಡದ ಹೊರತು ತಾನು ಅಣ್ವಸ್ತ್ರಗಳನ್ನು ಬಳಸಬಾರದು ಎಂಬುದಾಗಿ ಕೈಗೊಳ್ಳುವ   ಪ್ರತಿಜ್ಞೆಗೆ ’ಮೊದಲು ಪ್ರಯೋಗ ಇಲ್ಲ (ಎನ್‌ಎಫ್‌ಯು) ನೀತಿ ಎಂಬುದಾಗಿ ಕರೆಯಲಾಗುತ್ತದೆ. ಅಣ್ವಸ್ತ್ರಗಳು ನಿರೋಧಕ್ಕಾಗಿ ಮಾತ್ರ ಎಂಬುದು ಸರ್ಕಾರ ಈವರೆಗೂ ಅನುಸರಿಸುತ್ತಾ ಬಂದ ನೀತಿಯಾಗಿತ್ತು. ಸೇಡು ತೀರಿಸಲು ಮಾತ್ರವೇ ಅದನ್ನು ಬಳಸಬೇಕು ಎಂಬ ನೀತಿಯನ್ನು ಭಾರತ ಅನುಸರಿಸುತ್ತಾ ಬಂದಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ೨೦೧೪ರ ಲೋಕಸಭಾ ಚುನಾವಣೆಗೆ ಮುನ್ನ ಅಣ್ವಸ್ತ್ರಗಳನ್ನು ಮೊದಲು ಬಳಸುವ ಸಾಧ್ಯತೆಗಳನ್ನು ತಳ್ಳಿಹಾಕಿದ್ದರು. ಭಾರತದ ಬತ್ತಳಿಕೆಯಲ್ಲಿ ಇರುವ ಶಸ್ತ್ರಾಸ್ತ್ರಗಳು ಸ್ವಯಂ ರಕ್ಷಣೆ ಮತ್ತು ಭದ್ರತೆಗಾಗಿ ಮಾತ್ರ, ಯಾರನ್ನೂ ದಮನಿಸುವುದಕ್ಕಾಗಿ ಅಲ್ಲ ಎಂದು ಅವರು ಹೇಳಿದ್ದರು. ಇದೀಗ ಭಾರತ ಮೊದಲು ಅಣ್ವಸ್ತ್ರ ಉಪಯೋಗಿಸುವುದಿಲ್ಲ ಎಂಬ ಧೋರಣೆ ಕೈಬಿಟ್ಟು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಬದ್ಧವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು. ರಾಜಸ್ಥಾನದ ಪೋಕ್ರಾನ್‌ನಲ್ಲಿ ಆರ್ಮಿ ಸ್ಕೌಟ್ ಮಾಸ್ಟರ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ನಂತರ ರಾಜನಾಥ ಸಿಂಗ್ ಅವರು ಪರಮಾಣು ಪರೀಕ್ಷಾ ಸ್ಥಳಕ್ಕೆ ಭೇಟಿ ನೀಡಿದರು.  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಥಮ ಪುಣ್ಯತಿಥಿ ದಿನದಂದು ಅವರಿಗೆ ಗೌರವ ಸಲ್ಲಿಸಿದ ಸಿಂಗ್ ಪೋಕ್ರಾನ್ ಗೆ ಭೇಟಿ ನೀಡಿ ಅಟಲ್ ಅವರ ಸಾಧನೆಯನ್ನು ಸ್ಮರಿಸಿಕೊಂಡರು.  ೧೯೭೪ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ಭಾರತ ಪೋಕ್ರಾನ್‌ನಲ್ಲಿ ಚೊಚ್ಚಲ ಪರಮಾಣು ಪರೀಕ್ಷೆ ನಡೆಸಿತ್ತು. ಪರಮಾಣು ಸರಬರಾಜುದಾರರ ಸಮೂಹದ ಸದಸ್ಯನಲ್ಲದೇ ಇದ್ದರೂ ಮತ್ತು  ಪರಮಾಣು ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕದೇ ಇದ್ದರೂ ಕೂಡಾ ಅಮೆರಿಕದ ಜೊತೆಗೆ ಒಪ್ಪಂದ ಮಾಡಿಕೊಂಡ ಬಳಿಕ, ಭಾರತಕ್ಕೆ ನಾಗರಿಕ ಪರಮಾಣು ತಂತ್ರಜ್ಞಾನವನ್ನು ಪಡೆಯಲು ’ಮೊದಲು ಪ್ರಯೋಗ ಇಲ್ಲ ನೀತಿಯು ನೆರವಾಗಿತ್ತು. ಏನಿದ್ದರೂ ಇತ್ತೀಚಿನ ದಿನಗಳಲ್ಲಿ ಪರಮಾಣು ಭದ್ರತಾ ಸಂಸ್ಥೆಯ ಹಲವಾರು ಹಾಲಿ ಮತ್ತು ನಿವೃತ್ತ ಹಿರಿಯ ಸದಸ್ಯರು ಎನ್‌ಎಫ್‌ಯು ನೀತಿಯನ್ನು ಪ್ರಶ್ನಿಸಿದ್ದರು. ಮಾಜಿ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರುಕೂಡಾ ೨೦೧೬ರ ನವೆಂಬರ್ ತಿಂಗಳಲ್ಲಿ ಎನ್‌ಎಫ್‌ಯು ಉಪಯುಕ್ತತೆಯನ್ನು ಪ್ರಶ್ನಿಸಿದ್ದರು. ರಾಷ್ಟ್ರೀಯ ಭದ್ರತೆಗಾಗಿ ಹೆಚ್ಚು ತೋಳ್ಬಲ ಪ್ರದರ್ಶಿಸುವ ಧೋರಣೆಯತ್ತ ಆಡಳಿತಾರೂಢ ಬಿಜೆಪಿ ವಾಲುತ್ತಿರುವುದು ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಈ ಫೆಬ್ರುವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ನಡೆಸಿದ ವಾಯುದಾಳಿಯಿಂದ ಖಚಿತಪಟ್ಟಿದೆ. ೧೯೭೧ರ ಸಮರದ ಬಳಿಕ ಭಾರತೀಯ ವಾಯುಪಡೆ ವಿಮಾನಗಳು ಇದೇ ಮೊದಲ ಬಾರಿಗೆ ಗಡಿದಾಟಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಭಯೋತ್ಪಾದಕ ನೆಲೆಯ ಮೇಲೆ ವೈಮಾನಿಕ ಬಾಂಬ್ ದಾಳಿ ನಡೆಸಿದ್ದವು.  ಪಾಕಿಸ್ತಾನದ ಜೊತೆಗೆ ಪ್ರಕ್ಷುಬ್ಧತೆಗಳು ಹೆಚ್ಚುತ್ತಿರುವುದರೊಂದಿಗೆ, ೨೦೦೩ರಲ್ಲಿ ರೂಪಿಸಲಾದ ಭಾರತದ ಅಣ್ವಸ್ತ್ರ ನೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂಬ ಆಗ್ರಹಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚ ತೊಡಗಿದ್ದವು.  ಪಾಕಿಸ್ತಾನವು ’ಮೊದಲು ಪ್ರಯೋಗ ಇಲ್ಲ (ಎನ್‌ಎಫ್‌ಯು) ನೀತಿಯನ್ನು ಅನುಸರಿಸುತ್ತಿಲ್ಲ ಮತ್ತು ಭಾರತವನ್ನು ತಡೆಯಲು ಮತ್ತು ಭಾರತದ ಸೇನೆಯನ್ನು ತಟಸ್ಥಗೊಳಿಸಲು ಅಣ್ವಸ್ತ್ರ ನಿರ್ಮಾಣ ಕಾರ್ಯಕ್ರಮವನ್ನು ರೂಪಿಸಿದೆ. ರಾಷ್ಟ್ರದ ರಾಜಕೀಯ ಮತ್ತು ಸೇನಾ ವ್ಯವಸ್ಥೆ ಮೂಲಕ ತನ್ನ ಶಸ್ತ್ರಾಸ್ತ್ರ ಹಾಗೂ ಸಂಯಮ ರಹಿತ ನೀತಿಯನ್ನು ಮಾತುಕತೆಗಾಗಿ ಬ್ಲಾಕ್ ಮೇಲ್ ಮಾಡಲೂ ಆಗಾಗ ಬಳಸಿದೆ. ಇನ್ನೊಂದೆಡೆಯಲ್ಲಿ ದೊಡ್ಡ ಸೇನೆಯನ್ನು ಹೊಂದಿರುವ ಮತ್ತು ಅತ್ಯಾಧುರಿಕ ಆಯಕಟ್ಟಿನ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಚೀನಾ ಕೂಡಾ ಭಾರತಕ್ಕೆ ಚಿಂತೆ ಹುಟ್ಟಿಸುತ್ತಿರುವ ರಾಷ್ಟ್ರವಾಗಿದೆ.

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಲಾಗಿರುವ ಸಂಪರ್ಕ ತಡೆ ಹಾಗೂ ಸಂಚಾರ ನಿರ್ಬಂಧಗಳನ್ನು ಮುಂದಿನ ಕೆಲವು ದಿನಗಳಲ್ಲಿ ಹಂತ ಹಂತವಾಗಿ ರದ್ದು ಪಡಿಸಲು ಸರ್ಕಾರ ನಿರ್ಧರಿಸಿತು. ಸರ್ಕಾರಿ ಕಚೇರಿಗಳು ಈದಿನ (ಶುಕ್ರವಾರ) ಕಾರ್ಯ ನಿರ್ವಹಣೆ ಆರಂಭಿಸಿದ್ದು, ದೂರವಾಣಿಗಳು ರಾತ್ರಿಯಿಂದ ಮರುಸಂಪರ್ಕ ಪಡೆಯಲಿವೆ. ಶಾಲೆಗಳು ವಿವಿಧ ಪ್ರದೇಶಗಳಲ್ಲಿ ಒಂದಾದ ಬಳಿಕ ಒಂದರಂತೆ 2019  ಆಗಸ್ಟ್ 19ರ ಸೋಮವಾರದಿಂದ ಪುನಾರಂಭಗೊಳ್ಳಲಿವೆ ಎಂದು ರಾಜ್ಯದ ಉನ್ನತ ಅಧಿಕಾರಿಯೊಬ್ಬರು ಇಲ್ಲಿ ತಿಳಿಸಿದರು. ನಿರ್ಬಂಧಗಳು ಹಂತ ಹಂತವಾಗಿ ರದ್ದಾಗಲಿವೆ ಎಂದು ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಹ್ಮಣ್ಯಂ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ದಾಳಿಗಳನ್ನು ನಡೆಸಿ ತೊಂದರೆಗಳನ್ನು ಉಂಟು ಮಾಡಲು ಪ್ರಯತ್ನಿಸಲಿವೆ ಎಂಬ ವಿಶ್ವಾಸಾರ್ಹ ಮಾಹಿತಿಯನ್ನು ಅನುಸರಿಸಿ ನಿರ್ಬಂಧಗಳನ್ನು ಹೇರಲಾಗಿತ್ತು ಎಂದು ಅವರು ನುಡಿದರು.  ‘ಜೀವಹಾನಿಯಾಗದಂತೆ ಖಾತರಿ ನೀಡುವುದು ನಮ್ಮ ಪ್ರಾಥಮಿಕ ಹೊಣೆಗಾರಿಕೆ. ಪಾಕಿಸ್ತಾನಿ ಮೂಲದ ಭಯೋತ್ಪಾದಕ ಸಂಘಟನೆಗಳ ಯತ್ನಗಳ ಹೊರತಾಗಿಯೂ ಒಂದೇ ಒಂದು ಪ್ರಾಣಹಾನಿ ಅಥವಾ ಯಾರೊಬ್ಬರಿಗೂ ಗಂಭೀರ ಗಾಯಗಳಾಗಿಲ್ಲ ಎಂಬುದಾಗಿ ನುಡಿದ ಅಧಿಕಾರಿ, ಭದ್ರತಾ ಪಡೆಗಳು ಕೈಗೊಂಡ ಕ್ರಮದ ಜೊತೆಗೆ ಜನತೆ ನೀಡಿದ ಸಹಕಾರವೂ ಇದಕ್ಕೆ ಕಾರಣ ಎಂದು ಹೇಳಿದರು. ಬೇಸಿಗೆ ರಾಜಧಾನಿ ಜಮ್ಮುವಿನಲ್ಲಿ ಅಧಿಕಾರಿಗಳು ನಿರ್ಬಂಧಗಳನ್ನು ಸಡಿಲಿಸಿದ್ದರೂ, ಕಾಶ್ಮೀರವು ಶುಕ್ರವಾರ ೧೨ನೇ ದಿನವೂ ಸಂಪೂರ್ಣ ಬಂದ್ ಆಗಿತ್ತು. ಕೇಂದ್ರವು ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಇದೇ ಮೊದಲ ಬಾರಿಗೆ ಜಮ್ಮುವಿನಲ್ಲಿ ಜನರಿಗೆ ಮುಕ್ತವಾಗಿ ಸಂಚರಿಸಲು ಅವಕಾಶ ನೀಡಲಾಯಿತು. ಕೇಂದ್ರ ಸರ್ಕಾರವು ನಿರ್ಬಂಧಗಳನ್ನು ಕೆಲ ದಿನಗಳಲ್ಲೇ ತೆರವುಗೊಳಿಸಲಿದೆ ಎಂಬುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ಭರವಸೆ ನೀಡಿದ ಕೆಲವೇ ಗಂಟೆಗಳಲ್ಲಿ ಬಿವಿಆರ್ ಸುಬ್ರಹ್ಮಣ್ಯಂ ಅವರು ಪತ್ರಿಕಾಗೋಷ್ಠಿಯಲ್ಲಿ ಹಂತ ಹಂತವಾಗಿ ನಿರ್ಬಂಧ ತೆರವುಗೊಳಿಸುವ ಕ್ರಮಗಳನ್ನು ಪ್ರಕಟಿಸಿದರು. ಇದಕ್ಕೆ ಮುನ್ನ ಸುಪ್ರೀಂಕೋರ್ಟಿನಲ್ಲಿ ಕೆಲದಿನಗಳಲ್ಲೇ ಕ್ರಮ ಕ್ರಮವಾಗಿ ನಿರ್ಬಂಧಗಳನ್ನು ತೆರವುಗೊಳಿಸಲಾಗುವುದು, ಆದರೆ ಭದ್ರತಾ ಸಂಸ್ಥೆಗಳ ಕಾರ್‍ಯ ನಿರ್ವಹಣೆಯ ಮೇಲೆ ವಿಶ್ವಾಸ ಇಡಿ ಎಂದು ಸರ್ಕಾರ ತಿಳಿಸಿತ್ತು.  ‘ಮುಂದಿನ ಕೆಲವು ದಿನಗಳಲ್ಲಿ ನಿರ್ಬಂಧಗಳನ್ನು ಸಡಿಸಲಾಗುವುದು. ಶಾಲೆಗಳು ಈ ವಾರಾಂತ್ಯದ ಬಳಿಕ ಸೋಮವಾರದಿಂದ ಪುನಾರಂಭಗೊಳ್ಳಲಿವೆ. ಕ್ರಮೇಣ ಸರ್ಕಾರಿ ಸಾರಿಗೆಗೆ ಅವಕಾಶ ನೀಡಲಾಗುವುದು ಮತ್ತು ಎಲ್ಲ ಸರ್ಕಾರಿ ಕಚೇರಿಗಳು ಇಂದಿನಿಂದ (ಶುಕ್ರವಾರ) ಪೂರ್ಣವಾಗಿ ಕಾರ್ಯ ನಿರ್ವಹಿಸಲಿವೆ. ಶುಕ್ರವಾರದ ಪ್ರಾರ್ಥನೆಯ ಬಳಿಕವೂ ಪರಿಸ್ಥಿತಿ ಸಂಪೂರ್ಣ ಶಾಂತವಾಗಿತ್ತು’ ಎಂದು ಸುಬ್ರಹ್ಮಣ್ಯಂ ಹೇಳಿದರು. ರಾಜ್ಯದ ೨೨ ಜಿಲ್ಲೆಗಳ ಪೈಕಿ ೧೨ ಜಿಲ್ಲೆಗಳು ಮಾಮೂಲಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಮತ್ತು ಯಾವುದೇ ಜೀವನಷ್ಟ ಅಥವಾ ಯಾರಿಗೂ ಗಂಭೀರ ಗಾಯವಾಗದಂತೆ ಕಟ್ಟೆಚ್ಚರ ವಹಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ನುಡಿದರು. ಭಯೋತ್ಪಾದಕ ಸಂಘಟನೆಗಳ ನಿರಂತರ ಬೆದರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ದೂರಸಂಪರ್ಕವನ್ನು ಹಂತಹಂತವಾಗಿ ಪುನಸ್ಥಾಪನೆ ಮಾಡಲಾಗುವುದು ಎಂದು ಅವರು ಹೇಳಿದರು. ರಾಜ್ಯಪಾಲರ ಸೂಚನೆ: ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ಶ್ರೀನಗರದ ನಾಗರಿಕ ಸಚಿವಾಲಯ ಮತ್ತು ಸರ್ಕಾರಿ ಕಚೇರಿಗಳು ಈದಿನದಿಂದ ಮಾಮೂಲಿಯಾಗಿ ಕಾರ್ಯಾರಂಭ ಮಾಡುವಂತೆ ನಿರ್ದೇಶನ ನೀಡಿದರು. ವಿವಿಧ ಜಿಲ್ಲಾ ಕೇಂದ್ರಗಳು ಮತ್ತು ಇತರ ಸ್ಥಳಗಳು ಸೇರಿದಂತೆ ರಾಜ್ಯಾದ್ಯಂತ ಶಾಂತಿಯುತವಾಗಿ ನಡೆದ ಸ್ವಾತಂತ್ರ್ಯ ಉತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಭದ್ರತಾ ಪರಿಸ್ಥಿತಿಯ ಪುನರ್ ಪರಿಶೀಲನೆ ನಡೆಸಿದ ಬಳಿಕ ರಾಜ್ಯಪಾಲ ಮಲಿಕ್ ಅವರು ಈ ನಿರ್ಧಾರ ಕೈಗೊಂಡರು ಎಂದು ವಕ್ತಾರರು ಹೇಳಿದರು. ತನ್ಮಧ್ಯೆ,  ಕಣಿವೆಯಲ್ಲಿ ನಿರ್ಬಂಧ ಸಡಿಲಿಕೆ ಮತ್ತು ಸಂಪರ್ಕ ಪುನಾರಂಭ ಕುರಿತ ನಿರ್ಧಾರವನ್ನು ಸಂಬಂಧ ಪಟ್ಟ ಜಿಲ್ಲಾ ಆಡಳಿತಗಳು ಪರಿಸ್ಥಿತಿಯನ್ನು ಗಮನಿಸಿಕೊಂಡು ನಿರ್ಧಾರ ಕೈಗೊಳ್ಳುತ್ತವೆ ಎಂದು ದೆಹಲಿಯಲ್ಲಿ ಗೃಹ ಸಚಿವಾಲಯ ಅಧಿಕಾರಿಗಳು ಹೇಳಿದರು. ಏನಿದ್ದರೂ ಇಂಟರ್ ನೆಟ್ ಮೇಲಿನ ನಿರ್ಬಂಧ ಇನ್ನು ಕೆಲವು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ, ಆದರೆ ಲ್ಯಾಂಡ್‌ಲೈನ್ ಸೇವೆ ಹಂತ ಹಂತವಾಗಿ ಪುನಾರಂಭಗೊಳ್ಳುವುದು ಎಂದು ಮೂಲಗಳು ಹೇಳಿದವು. ಸುಪ್ರೀಂ ಕೋರ್ಟಿನಲ್ಲಿ ಏನಾಯಿತು? ಸಂವಿಧಾನದ ೩೭೦ನೇ ವಿಧಿ ರದ್ದು ಮತ್ತು ಆ ಬಳಿಕದ ಘಟನಾವಳಿಗಳ ವಿಷಯಗಳನ್ನು ಗಂಭೀರವಾದವು ಎಂಬುದಾಗಿ ಬಣ್ಣಿಸಿದ ಸುಪ್ರೀಂಕೋರ್ಟ್, ಇವುಗಳನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಿರುವ ಅರ್ಜಿದಾರರು ಏಕೆ ಸಮರ್ಪಕವಾಗಿ ನಿಯಮಗಳ ಪ್ರಕಾರ ಅರ್ಜಿಗಳನ್ನು ಸಲ್ಲಿಸಿಲ್ಲ ಎಂದು ಪ್ರಶ್ನಿಸಿತು. ತ್ರಿಸದಸ್ಯ ಪೀಠವು ಒಂದಾದ ನಂತರ ಒಂದರಂತೆ ಐದು ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳುತ್ತಿದ್ದಂತೆಯೇ ’ಇಂತಹ ಗಂಭೀರವಾದ ವಿಷಯಕ್ಕೆ ಸಂಬಂಧಿಸಿದಂತೆ ಜನರು ದೋಷಪೂರಿತ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹೇಳಿದರು. ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ ಮತ್ತು ಎಸ್ ಎ ನಜೀರ್ ಅವರನ್ನೂ ಒಳಗೊಂಡ ಪೀಠವು, ಈ ಅರ್ಜಿಗಳು ತಾಂತ್ರಿಕದೋಷಗಳಿಂದ ಮುಕ್ತವಾಗಿಲ್ಲ. ಆದ್ದರಿಂದ ಅರ್ಹತೆಯ ಮೇಲೆ ಅವುಗಳನ್ನು ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಹೇಳಿ, ನ್ಯೂನತೆಗಳನ್ನು ಸರಿಪಡಿಸಿ ಎಂದು ವಕೀಲರಿಗೆ ಸೂಚಿಸಿತು.  ‘ಕಾಶ್ಮೀರ ಟೈಮ್ಸ್ ಪತ್ರಿಕೆಯ ಕಾರ್ಯಕಾರಿ ಸಂಪಾದಕ ಅನುರಾಧ ಭಾಸಿನ್ ಅವರು ಮಾಧ್ಯಮಗಳ ಮೇಲೆ ವಿಧಿಸಿರುವ ನಿರ್ಬಂಧಗಳಿಂದಾಗಿ  ಕಣಿವೆಯಲ್ಲಿ ಪತ್ರಿಕೆಗಳು ಕಾರ್‍ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಯಾವುದೇ ದೂರವಾಣಿ ಸಂಪರ್ಕ, ಮೊಬೈಲ್ ನೆಟ್ ವರ್ಕ್ ಸಿಗುತ್ತಿಲ್ಲ. ಹಿಂದೆಯೂ ನಾವು ನಿರ್ಬಂಧಗಳ ಅಡಿಯಲ್ಲಿ ಕೆಲಸ ಮಾಡಿದ್ದೇವೆ. ಆದರೆ ಈ ಬಾರಿ ನಿರ್ಬಂಧಗಳು ಭೀಕರವಾಗಿವೆ ಎಂದು ನ್ಯಾಯಾಲಯದಲ್ಲಿ ದೂರಿದರು. ಭಾಸಿನ್ ಅವರ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ಅವರು ’ಲ್ಯಾಂಡ್ ಲೈನುಗಳು ಕೆಲಸ ಮಾಡುತ್ತಿವೆ, ನಾನು ಈದಿನ ಬೆಳಗ್ಗೆ ಮುಖ್ಯ ನ್ಯಾಯಮೂರ್ತಿಯವರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು. ಆಗ ಸರ್ಕಾರವನ್ನು ಪ್ರತಿನಿಧಿಸಿದ ಎಸ್ ಜಿ ತುಷಾರ ಮೆಹ್ತ ಅವರು ’ನಿಮ್ಮ ಭದ್ರತಾ ಸಂಸ್ಥೆಗಳ ಮೇಲೆ ನಂಬಿಕೆ ಇಡಿ. ನಾವು ಸದುದ್ಧೇಶದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.  ‘ಪರಿಸ್ಥಿತಿ ಸುಧಾರಿಸುತ್ತಿದ್ದು, ಕೆಲವು ದಿನಗಳಲ್ಲಿ ನಿರ್ಬಂಧಗಳು ಸಡಿಲಗೊಳ್ಳಲಿವೆ ಎಂದು ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು.  ‘ಸರ್ಕಾರಕ್ಕೆ ಕೆಲವು ದಿನಗಳ ಕಾಲಾವಕಾಶ ಕೊಡುವ ಅಗತ್ಯವಿದೆ ಎಂದು ಹೇಳಿದ ಪೀಠ ವಿಚಾರಣೆಗಳನ್ನು ಮುಂದಿನವಾರಕ್ಕೆ ಮುಂದೂಡಿತು. ಅದಕ್ಕೆ ಮುನ್ನ ೩೭೦ನೇ ವಿಧಿಯನ್ನು ರದ್ದು ಪಡಿಸಿದ ಕೇಂದ್ರದ ಕ್ರಮವನ್ನು ಪ್ರಶ್ನಿಸಿದ ನಿಮ್ಮ ಅರ್ಜಿ ’ಅರ್ಥರಹಿತವಾದದ್ದು ಎಂದು ಅರ್ಜಿದಾರ ವಕೀಲ ಎಂಎಲ್ ಶರ್ಮ ಅವರನ್ನು ತರಾಟೆಗೆ ತೆಗೆದುಕೊಂಡ ಪೀಠ, ’ಯಾವ ಮಾದರಿಯ  ಅರ್ಜಿ ಇದು? ನಿಮ್ಮ ಅರ್ಜಿ ವಿಚಾರಣೆಗೂ ಯೋಗ್ಯವಲ್ಲ. ನಾವು ಇದನ್ನು ವಜಾಮಾಡಬಹುದಾಗಿತ್ತು. ಆದರೆ ಅದರಿಂದ ಇತರ ಅರ್ಜಿಗಳ ಮೇಲೆ ಪರಿಣಾಮವಾಗುತ್ತದೆ ಎಂದು ಹೇಳಿದರು.  ಕಾಶ್ಮೀರಿ ವಕೀಲ ಶಕೀರ್ ಶಬೀರ್ ಅವರು ಸಲ್ಲಿಸಿದ ಅರ್ಜಿಯೂ ಸಲ್ಲಿಸುವಾಗ ದೋಷಪೂರಿತವಾಗಿತ್ತು. ದೋಷಗಳನ್ನು ಬುಧವಾರ ಸಂಜೆಯಷ್ಟೆ ನಿವಾರಿಸಲಾಗಿದೆ ಎಂದು ಪೀಠ ಹೇಳಿತು. ಅರ್ಜಿಯ ವಿಚಾರಣೆಗೆ ಶಬೀರ್ ಅವರು ಆಗ್ರಹಿಸಿದಾಗ ನ್ಯಾಯಮೂರ್ತಿ ಗೊಗೋಯಿ ಅವರು ’ನೀವು ದೋಷಗಳನ್ನು ಬುಧವಾರ ಸಂಜೆ ನಿವಾರಿಸಿದ್ದೀರಿ. ನಿನ್ನೆ ರಜಾದಿನ. ನೀವು ಯಾಕೆ ದೋಷಪೂರಿತ ಅರ್ಜಿಗಳನ್ನು ಸಲ್ಲಿಸುತ್ತೀರಿ? ದೋಷಪೂರಿತ ಅರ್ಜಿ ಸಲ್ಲಿಸಿ, ತತ್ ಕ್ಷಣ ವಿಚಾರಣೆ ಆಗಬೇಕು ಎಂದು ಕೋರುತ್ತೀರಿ? ’ ಎಂದು ಗದರಿದರು.

2019: ನವದೆಹಲಿ: ರಾಜಧಾನಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ಚಿಕಿತ್ಸೆ ಪಡೆಯುತ್ತಿರುವ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭೇಟಿ ಮಾಡಿದರು. ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಮತ್ತು ಅವರ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳೂ ರಾಷ್ಟ್ರಪತಿಯವರ ಜೊತೆಗಿದ್ದರು. ರಾತ್ರಿ ಜೇಟ್ಲಿ ಅವರ ಆರೋಗ್ಯ ಸ್ಥಿತಿ ವಿಷಮಿಸಿದ್ದನ್ನು ಅನುಸರಿಸಿ  ಗೃಹ ಸಚಿವ  ಅಮಿತ್ ಶಾ ಅವರು ಸಚಿವ ಹರ್ಷವರ್ಧನ್ ಅವರ ಜೊತೆಗೆ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದರು ೬೭ರ ಹರೆಯದ ಜೇಟ್ಲಿ ಅವರು ಉಸಿರಾಟದ ಸಮಸ್ಯೆ, ದೌರ್ಬಲ್ಯ ಮತ್ತು ಆರೋಗ್ಯ ಏರುಪೇರಿನ ಕಾರಣಕ್ಕಾಗಿ ಆಗಸ್ಟ್ ೯ರಂದು ಏಮ್ಸ್ ಆಸ್ಪತ್ರೆಗೆ ದಾಖಲಾದಂದಿನಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ‘ಏಮ್ಸ್‌ನಲ್ಲಿನ ವೈದ್ಯರು ತಮಗೆ ಸಾಧ್ಯವಿರುವ ಅತ್ಯುತ್ತಮ ಚಿಕಿತ್ಸೆಯನ್ನು ನೀಡುತ್ತಿದ್ದಾರೆ ಎಂದು ಡಾ. ಹರ್ಷವರ್ಧನ್ ಅವರು ಹೇಳಿದರು. ಇದಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಮತ್ತು ಭಾರತೀಯ ಜನತಾ ಪಕ್ಷದ ಇತರ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಜೇಟ್ಲಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಜೇಟ್ಲಿ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಏಮ್ಸ್ ಅಧಿಕಾರಿಗಳು ಹೇಳಿದರು. ಅಂತಸ್ರಾವ ತಜ್ಞ, ಮೂತ್ರಪಿಂಡ ತಜ್ಞ ಮತ್ತು ಹೃದ್ರೋಗ ತಜ್ಞರನ್ನು ಒಳಗೊಂಡ ವೈದ್ಯರ ತಂಡವು ೬೭ರ ಹರೆಯದ ಜೇಟ್ಲಿ ಅವರನ್ನು ನೋಡಿಕೊಳ್ಳುತ್ತಿದೆ.

2019: ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಗೆ ಮುನ್ನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡಿ ಕಾಶ್ಮೀರ ಪ್ರದೇಶದ ಪರಿಸ್ಥಿತಿ ಕುರಿತ ತಮ್ಮ ಕಳವಳ ಬಗ್ಗೆ ಮಾತನಾಡಿದರು ಎಂದು ದೇಶದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಅವರು ತಿಳಿಸಿದರು. ಪ್ರದೇಶವನ್ನು ವಿಭಜಿಸುವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಆಗಾಗ ಘರ್ಷಣೆಗಳು ಸಂಭವಿಸುತ್ತಿವೆ. ಆದರೆ ಭಾರತವು ಏನಾದರೂ ದಾಳಿ ನಡೆಸಿದರೆ ಅದಕ್ಕೆ ಸೂಕ್ತ ಉತ್ತರ ನೀಡಲು ತಾನು ಸಿದ್ಧ ಎಂಬುದಾಗಿ ಪಾಕಿಸ್ತಾನ ಎಚ್ಚರಿಕೆ ನೀಡಿದ ಬಳಿಕ ಗಡಿ ನಿಯಂತ್ರಣ ರೇಖೆಯಲ್ಲಿ ಸಾವುಗಳು ಸಂಭವಿಸಿರುವ ಬಗ್ಗೆ ವರದಿಗಳು ಬಂದಿದ್ದವು.  ‘ಈದಿನ (ಖಾನ್) ಅವರು ಅಧ್ಯಕ್ಷ ಟ್ರಂಪ್ ಜೊತೆಗೆ ಮಾತನಾಡಿದರು. ಪ್ರದೇಶದ ಬಗ್ಗೆ ನಿರ್ದಿಷ್ಟವಾಗಿ ಕಾಶ್ಮೀರದ ಪರಿಸ್ಥಿತಿ ಬಗ್ಗೆ ಅಭಿಪ್ರಾಯಗಳ ವಿನಿಮಯ ಮಾಡಿಕೊಳ್ಳಲಾಯಿತು ಎಂದು ವಿದೇಶಾಂಗ ಸಚಿವ ಖುರೇಶಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅಮೆರಿಕವು ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಿರುವ ಆಫ್ಘಾನಿಸ್ಥಾನದ ಬಗೆಗೂ ಟ್ರಂಪ್ ಮತ್ತು ಖಾನ್ ಚರ್ಚಿಸಿದರು ಮತ್ತು ನಿರಂತರ ಸಂಪರ್ಕದಲ್ಲಿ ಇರಲು ನಿರ್ಧರಿಸಿದರು ಎಂದು ಖುರೇಶಿ ಹೇಳಿದರು. ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಮೋದಿ ಅವರು ತಮ್ಮ ಬಳಿ ಹೇಳಿದ್ದರು ಎಂದು ಜುಲೈ ತಿಂಗಳಲ್ಲಿ ಇಮ್ರಾನ್ ಖಾನ್ ಜೊತೆಗಿನ ಭೇಟಿ ಕಾಲದಲ್ಲಿ ಟ್ರಂಪ್ ಹೇಳಿದ್ದರು. ಭಾರತ ಸರ್ಕಾರವು ತತ್ ಕ್ಷಣವೇ ಇದನ್ನು ನಿರಾಕರಿಸಿತ್ತು.  ಕಾಶ್ಮೀರ ವಿಷಯವನ್ನು ಪಾಕಿಸ್ತಾನದ ಜೊತೆಗೆ ದ್ವಿಪಕ್ಷೀಯ ಮಾತುಕತೆ ಮೂಲಕ ಮಾತ್ರವೇ ಇತ್ಯರ್ಥಪಡಿಸಿಕೊಳ್ಳಲು ಸಾಧ್ಯ ಎಂಬುದಾಗಿ ಭಾರತ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ.

2019: ಕೌಲಾಲಂಪುರ: ವಿವಾದಿತ ಮುಸ್ಲಿಂ ಧರ್ಮಗುರು ಝಾಕಿರ್ ನಾಯ್ಕ್ ಗೆ ಮಲೇಷ್ಯಾದಲ್ಲೂ ಸಂಕಷ್ಟ ಎದುರಾಯಿತು.  ಮಲೇಷ್ಯಾದಲ್ಲಿರುವ ಹಿಂದೂಗಳ ಕುರಿತಾಗಿ ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಕಾರಣಕ್ಕಾಗಿ ಝಾಕಿರ್ ನಾಯ್ಕ್ ಅವರನ್ನು ಆಗಸ್ಟ್ 16 ಮತ್ತು 18ರಂದು ನಡೆಯಲಿರುವ ಇಸ್ಲಾಂ ಕಾರ್ಯಕ್ರಮವೊಂದರಲ್ಲಿ ಮಾತನಾಡದಂತೆ ಅಲ್ಲಿನ ಪೊಲೀಸರು ನಿಷೇಧ ವಿಧಿಸಿದರು. ಹಿಂದಿನ ವಾರ ಝಾಕಿರ್ ನೀಡಿದ  ಜನಾಂಗೀಯ ಹೇಳಿಕೆಗೆ ಸ್ಪಷ್ಟನೆಯನ್ನು ಬಯಸಿ ಅವರಿಗೆ ಸಮನ್ಸ್ ಕೂಡಾ ನೀಡಲಾಗುವುದು ಎಂದು ಮಲೇಷ್ಯಾ ಸರ್ಕಾರದ ಸಚಿವರೊಬ್ಬರು ತಿಳಿಸಿದರು.  ಆಗಸ್ಟ್ 8ರಂದು ಝಾಕಿರ್ ಮಾಡಿರುವ ಭಾಷಣದ ವಿಡಿಯೋ ಒಂದು ಇದೀಗ ವಿವಾದಿತ ಧರ್ಮಪ್ರಚಾರಕನಿಗೆ ಸಂಕಷ್ಟ ತಂದೊಡ್ಡಿತು. ಅದರಲ್ಲಿ ಝಾಕಿರ್ ಅವರುಮಲೇಷ್ಯಾದ ಹಿಂದೂಗಳು ಭಾರತದ ಪ್ರಧಾನ ಮಂತ್ರಿಗೆ ಹೆಚ್ಚು ನಿಷ್ಠರಾಗಿರುವಂತಿದೆಎಂದು ಹೇಳಿದ್ದರು.


No comments:

Post a Comment