2019: ನವದೆಹಲಿ: ಸ್ವಿಜರ್ಲೆಂಡಿನ ಬಾಸೆಲ್ ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಕೂಟದಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನ ಗೆದ್ದು ಮಹಿಳಾ ಬ್ಯಾಡ್ಮಿಂಟನ್ ಲೋಕದ ಚಾಂಪಿಯನ್ ಪಟ್ಟ ಅಲಂಕರಿಸಿದ ಸಾಧನೆ ಮಾಡಿದ ಪಿ.ವಿ. ಸಿಂಧು ಅವರು ಈದಿನ ಭಾರತಕ್ಕೆ ವಾಪಸಾದರು. ಈ ಸಂದರ್ಭದಲ್ಲಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.ಬಳಿಕ ಸಿಂಧು ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಸಿಂಧು ಅವರು ಕೇವಲ ದೇಶದ ಹೆಮ್ಮೆ ಮಾತ್ರವಲ್ಲ ಅವರು ವಿಶ್ವ ಬ್ಯಾಡ್ಮಿಂಟನ್ ಲೋಕದ ಹೆಮ್ಮೆ ಎಂದು ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ಸಿಂಧು ಸಾಧನೆಯನ್ನು ಶ್ಲಾಘಿಸಿದರು.ಸಿಂಧು ಅವರ ಜೊತೆ ಅವರ ದೀರ್ಘಕಾಲೀನ ತರಬೇತುದಾರ ಹಾಗೂ ಪ್ರಸ್ತುತ ರಾಷ್ಟ್ರೀಯ ಬ್ಯಾಡ್ಮಿಂಟನ್ ತರಬೇತುದಾರರಾಗಿರುವ ಪುಲ್ಲೇಲ ಗೋಪಿಚಂದ್, ಸಿಂಧು ಅವರ ಈಗಿನ ತರಬೇತುದಾರರಾದ ಕಿಮ್ ಜಿ ಹ್ಯೂನ್ ಮತ್ತು ಸಿಂಧು ಅವರ ತಂದೆ ಪಿ.ವಿ. ರಮಣ ಅವರೂ ಸಹ ಇದ್ದರು.ಪ್ರಧಾನಿಯವರನ್ನು ಭೇಟಿಯಾಗುವುದಕ್ಕೂ ಮುನ್ನ ಇಂದು ಬೆಳಿಗ್ಗೆ ಈ ನಾಲ್ವರಿಗೆ ಕೇಂದ್ರ ಕ್ರೀಡಾ ಸಚಿವ ಕಿರೆಣ್ ರಿಜಿಜು ಅವರು ಉಪಹಾರ ಕೂಟವನ್ನು ಏರ್ಪಡಿಸಿದ್ದರು. ಸಿಂಧು ಅವರ ಈ ಐತಿಹಾಸಿಕ ಸಾಧನೆಗಾಗಿ ಸಚಿವ ರಿಜೆಜು ಅವರು ಸಿಂಧು ಅವರಿಗೆ ಹತ್ತು ಲಕ್ಷ ರೂಪಾಯಿಗಳ ಚೆಕ್ ಅನ್ನು ಇದೇ ಸಂದರ್ಭದಲ್ಲಿ ನೀಡಿ ಗೌರವಿಸಿದರು.
2019: ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲಯದ (ಇಡಿ) ಬಂಧನ
ವಿರುದ್ಧ ಒದಗಿಸಲಾಗಿದ್ದ ರಕ್ಷಣೆಯನ್ನು ಸುಪ್ರೀಂಕೋರ್ಟ್ ಒಂದು ದಿನದ ಮಟ್ಟಿಗೆ ವಿಸ್ತರಿಸಿತು. ಇದರೊಂದಿಗೆ ಚಿದಂಬರಂ ಅವರಿಗೆ ಸುಪ್ರೀಂಕೋರ್ಟಿನಿಂದ ತಾತ್ಕಾಲಿಕ ನಿರಾಳತೆ ಲಭಿಸಿತು.ಬಂಧನಪೂರ್ವ ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿರುವ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರ ವಕೀಲರ ತಂಡವು ’ತನಿಖಾ ಸಂಸ್ಥೆಗಳ ಬಳಿ ಪ್ರಶ್ನಿಸಲು ’ಚುಚ್ಚುವಂತಹ’ ಯಾವ ಪ್ರಶ್ನೆಗಳೂ ಇಲ್ಲ, ವಶಕ್ಕೆ ತೆಗೆದುಕೊಳ್ಳುವ ಉದ್ದೇಶ ತೇಜೋವಧೆ ಮಾತ್ರ’ ಎಂಬುದಾಗಿ ತಿಳಿಸಿದ ಬಳಿಕ ನ್ಯಾಯಮೂರ್ತಿಗಳಾದ ಆರ್. ಭಾನುಮತಿ ಮತ್ತು ಎ.ಎಸ್. ಬೋಪಣ್ಣ ಅವರ ಪೀಠವು ಚಿದಂಬರಂ ಅವರನ್ನು ಬಂಧಿಸದಂತೆ ಜಾರಿ ನಿರ್ದೇನಾಲಯಕ್ಕೆ ನೀಡಿದ್ದ ಆದೇಶವನ್ನು ಆಗಸ್ಟ್ 28ರ ಬುಧವಾರದವರೆಗೆ ವಿಸ್ತರಿಸಿತು.ರಿಮಾಂಡ್ ಅದೇಶಗಳನ್ನು ಪ್ರಶ್ನಿಸಿದ ಅರ್ಜಿ ಸೇರಿದಂತೆ ಚಿದಂಬರಂ ಅವರು ಸಲ್ಲಿಸಿದ ಎರಡು ಅರ್ಜಿಗಳ ಮೇಲೆ ಜಾರಿ ನಿರ್ದೇಶನಾಲಯದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ವಾದವನ್ನು ಪೀಠವು ಆಗಸ್ಟ್
28ರ ಬುಧವಾರ ಆಲಿಸಲಿದೆ. ಚಿದಂಬರಂ ಅವರ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ’ಕಳೆದ ವರ್ಷ ಡಿಸೆಂಬರ್ ೧೯ ಮತ್ತು ಈ ವರ್ಷ ಜನವರಿ ೨೧ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ಪ್ರಶ್ನಿಸಿದ್ದ ತನಿಖಾ ಕಲಾಪದ ನಕಲನ್ನು (ಟ್ರಾನ್ಸ್ಕ್ರಿಪ್ಟ್) ಹಾಜರು ಪಡಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಬೇಕು’ ಎಂದು ಅರ್ಜಿ ಸಲ್ಲಿಸಿದರು. ತನಿಖಾ ಕಲಾಪದ ಈ ನಕಲು, ಜಾರಿ ನಿರ್ದೇಶನಾಲಯವು ಪ್ರಶ್ನಿಸಿದ್ದ ವೇಳೆಯಲ್ಲಿ ಚಿದಂಬರಂ ಅವರು ಕೊಟ್ಟಿದ್ದ ಉತ್ತರಗಳು ಜಾರಿ ನಿರ್ದೇಶನಾಲಯ ಆಪಾದಿಸಿರುವಂತೆ ’ಹಾರಿಕೆಯವು ಆಗಿದ್ದವೇ’ ಎಂಬುದನ್ನು ತೋರಿಸುತ್ತವೆ ಎಂದು ಅವರು ನುಡಿದರು.ಚಿದಂಬರಂ ಅವರ ವಶವನ್ನು ಕೋರಿ, ಜಾರಿ ನಿರ್ದೇಶನಾಲಯವು ದಾಖಲೆಗಳನ್ನು ನ್ಯಾಯಾಲಯದ ಮುಂದೆ ಯಾದೃಚ್ಛಿಕವಾಗಿ ಮಂಡಿಸುವಂತಿಲ್ಲ ಎಂದು ಸಿಬಲ್ ಹೇಳಿದರು.’ಅವರು ಯಾದೃಚ್ಛಿಕವಾಗಿ ದಾಖಲೆಗಳನ್ನು ಹಾಜರು ಪಡಿಸುತ್ತಿದ್ದಾರೆ ಮತ್ತು ಇದು ಪ್ರಕರಣದ ದಿನಚರಿಯ ಭಾಗ ಎನ್ನುತ್ತಿದ್ದಾರೆ. ಆರೋಪಿಯನ್ನು ವಶಕ್ಕೆ ನೀಡುವಂತೆ ಕೋರಲು ಅವರು ಹಿಂದಿನಿಂದ ದಾಖಲೆಗಳನ್ನು ಹಾಜರುಪಡಿಸುವಂತಿಲ್ಲ’ ಎಂದು ಸಿಬಲ್ ವಾದಿಸಿದರು.ಚಿದಂಬರಂ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸಂವಿಧಾನದ ೨೧ನೇ ವಿಧಿಯ ಅಡಿಯಲ್ಲಿ ನಾಗರಿಕರು ಹೊಂದಿರುವ ಮೂಲಭೂತ ಹಕ್ಕುಗಳನ್ನು (ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕು) ಅಮಾನತುಗೊಳಿಸುವಂತಿಲ್ಲ ಎಂದು ಸಾಂವಿಧಾನಿಕ ಮತ್ತು ಶಾಸನಾತ್ಮಕ ವಿಧಿಗಳನ್ನು ಉಲ್ಲೇಖಿಸಿ ವಾದಿಸಿದರು.ಹಣ ವರ್ಗಾವಣೆ ತಡೆ ಕಾಯ್ದೆಯನ್ನು (ಪಿಎಂಎಲ್ ಎ) ೨೦೦೯ರಲ್ಲಿ ತಿದ್ದುಪಡಿ ಮಾಡಲಾಗಿದೆ. ಆದರೆ ಪ್ರಕರಣದಲ್ಲಿನ ಆಪಾದನೆಗಳು ೨೦೦೭-೨೦೦೮ಕ್ಕೆ ಸಂಬಂಧಿಸಿದವು. ಸಿವಿಲ್ ಕಾನೂನುಗಳಂತೆ ಕ್ರಿಮಿನಲ್ ಕಾನೂನನ್ನು ಪೂವಾನ್ವಯವಾಗಿ ಅನ್ವಯಿಸಲು ಬರುವುದಿಲ್ಲ’ ಎಂದು ಸಿಂಘ್ವಿ ಹೇಳಿದರು.’ನೀವು ವ್ಯಕ್ತಿಯನ್ನು ಕಿಂಗ್ಪಿನ್ ಎಂಬುದಾಗಿ ಚಿತ್ರಿಸಲು ಯತ್ನಿಸುತ್ತಿದ್ದೀರಿ, ಆದರೆ ಈ ಸಮಯದಲ್ಲಿ ಆಪಾದಿತ ಅಪರಾಧಗಳು ಇರಲೇ ಇಲ್ಲ’ ಎಂದು ಸಿಂಘ್ವಿ ವಾದಿಸಿದರು.ಪೀಠವು ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯವು ದಾಖಲಿಸಿದ ಐಎನ್ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂ ಅವರನ್ನು ಮಂಗಳವಾರದವರೆಗೆ ಬಂಧಿಸದಂತೆ ಸುಪ್ರೀಂಕೋರ್ಟ್ ರಕ್ಷಣೆಯನ್ನು ವಿಸ್ತರಿಸಿತ್ತು. ಚಿದಂಬರಂ ಅವರು ೨೦೦೪ರಿಂದ ೨೦೧೪ರವರೆಗೆ ಯುಪಿಎ ೧ ಮತ್ತು ಯುಪಿಎ ೨ ಸರ್ಕಾರಗಳಲ್ಲಿ ವಿತ್ತ ಹಾಗೂ ಗೃಹ ಸಚಿವರಾಗಿದ್ದರು.ಚಿದಂಬರಂ ಅವರು ವಿತ್ತ ಸಚಿವರಾಗಿದ್ದಾಗ ೨೦೦೭ರಲ್ಲಿ ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ ೩೦೫ ಕೋಟಿ ರೂಪಾಯಿ ವಿದೇಶೀ ಬಂಡವಾಳ ಪಡೆಯಲು ವಿದೇಶೀ ಹೂಡಿಕೆ ಅಭಿವೃದ್ದಿ ಮಂಡಳಿಯ (ಎಫ್ಐಪಿಬಿ) ಅನುಮತಿ ನೀಡುವಲ್ಲಿ ಅಕ್ರಮಗಳು ನಡೆದಿದ್ದವು ಎಂದು ಆಪಾದಿಸಿ ಸಿಬಿಐ ೨೦೧೭ರ ಮೇ ೧೫ರಂದು ಎಫ್ಐಆರ್ ದಾಖಲಿಸಿತ್ತು. ಜಾರಿ ನಿರ್ದೇಶನಾಲಯವು ೨೦೧೭ರಲ್ಲಿ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು.೭೩ರ ಹರೆಯದ ರಾಜಕಾರಣಿಗೆ ಕೇಳಲು ’ಚುಚ್ಚುವಂತಹ’ ಯಾವ ಪ್ರಶ್ನೆಗಳು ತನಿಖಾ ಸಂಸ್ಥೆಗಳ ಬಳಿ ಇಲ್ಲ. ಅವು ತೇಜೋವಧೆ ಮಾಡುವ ಏಕೈಕ ಉದ್ದೇಶದಿಂದ ಅವುಗಳು ಅವರನ್ನು ತಮ್ಮ ವಶಕ್ಕೆ ಪಡೆಯಲು ಬಯಸಿವೆ’ ಎಂದು ಚಿದಂಬರಂ ಅವರ ವಕೀಲರ ತಂಡ ಪ್ರತಿಪಾದಿಸಿತು.ಜಾರಿ ನಿರ್ದೇಶನಾಲಯದ ಹಿಂದಿನ ತನಿಖಾ ಕಲಾಪದ ನಕಲುಗಳನ್ನು ನ್ಯಾಯಾಲಯಕ್ಕೆ ತರಿಸುವಂತೆ ಅರ್ಜಿ ಸಲ್ಲಿಸಿದ ಅಭಿಷೇಕ್ ಮನು ಸಿಂಘ್ವಿ ಅವರು ’ನಿರೀಕ್ಷಣಾ ಜಾಮೀನು ಮನವಿಯನ್ನು ಮೂರು ಮಾನದಂಡಗಳನ್ನು ಆಧರಿಸಿ ಪರೀಕ್ಷಿಸಬೇಕು. ಅಸಹಕಾರ, ವಿಮಾನ ಯಾನದ ಅಪಾಯ ಮತ್ತು ಸಾಕ್ಷ್ಯದಲ್ಲಿ ಕೈಯಾಡಿಸುವ ಸಾಧ್ಯತೆ. ಈ ಪ್ರಕರಣದಲ್ಲಿ ಇವು ಯಾವುವೂ ಇಲ್ಲ’ ಎಂದು ಸಿಂಘ್ವಿ ಹೇಳಿದರು. ’ನಾನು (ಚಿದಂಬರಂ) ಅವರು ಸಾಕ್ಷ್ಯದಲ್ಲಿ ಕೈಯಾಡಿಸಬಯಸಿದ್ದರೆ, ನಾನು ೨೦೦೭ರಿಂದ ೨೦೧೭ರ ನಡುವಣ ಅವಧಿಯಲ್ಲಿ ಅದನ್ನು ಮಾಡುತ್ತಿದ್ದೆ. ೨೦೧೪ರವರೆಗೂ ನಾನು ಅಧಿಕಾರದಲ್ಲಿ ಇದ್ದೆ’ ಎಂದು ಸಿಂಘ್ವಿ ನುಡಿದರು.’ಇಲ್ಲಿ ವಶಕ್ಕೆ ಪಡೆಯುವ ಏಕೈಕ ಉದ್ದೇಶ ತೇಜೋವಧೆಗೆ ಗುರಿ ಪಡಿಸುವುದು’ ಎಂದು ಸಿಂಘ್ವಿ ಪೀಠಕ್ಕೆ ತಿಳಿಸಿದರು.ಹಿಂದೆ ಪ್ರಶ್ನಿಸುತ್ತಿದ್ದ ವೇಳೆಯಲ್ಲಿ ಚಿದಂಬರಂ ಅವರಿಗೆ ’ಅವರು ವಿದೇಶೀ ಖಾತೆಯನ್ನು ಹೊಂದಿದ್ದರೆ’ ಎಂಬುದಾಗಿ ಪದೇ ಪದೇ ಕೇಳಿದ್ದ ಪ್ರಶ್ನೆಯನ್ನೇ ಕೇಳಲಾಗಿತ್ತು ಎಂದು ಸಿಂಘ್ವಿ ಹೇಳಿದರು. ಚಿದಂಬರಂ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವಾರು ವಿದೇಶೀ ಖಾತೆಗಳನ್ನು ತಾನು ಪತ್ತೆ ಹಚ್ಚಿರುವುದಾಗಿ ಜಾರಿ ನಿರ್ದೇಶನಾಲಯ ಪ್ರತಿಪಾದಿಸಿತ್ತು. ಆದರೆ ಈ ಆರೋಪವನ್ನು ಚಿದಂಬರಂ ಕುಟುಂಬ ದೃಢವಾಗಿ ನಿರಾಕರಿಸಿತ್ತು.ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದ ಎರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ಬಳಿಕ, ನಾಟಕೀಯ ಬೆಳವಣಿಗೆಗಳ ಮಧ್ಯೆ ಜೋರ್ ಬಾಗ್ ನಿವಾಸದಲ್ಲಿ ಸಿಬಿಐ ಚಿದಂಬರಂ ಅವರನ್ನು ಬಂಧಿಸಿತ್ತು.ಚಿದಂಬರಂ ಅವರನ್ನು ಹಗರಣ ’ಕಿಂಗ್ ಪಿನ್’ ಎಂಬುದಾಗಿ ಬಣ್ಣಿಸಿದ್ದ ಹೈಕೋರ್ಟ್ ತನಿಖಾ ಸಂಸ್ಥೆಗಳ ಪ್ರಶ್ನೆಗಳಿಗೆ ಅವರು ಹಾರಿಕೆಯ ಉತ್ತರ ನೀಡುತ್ತಿದ್ದರು ಎಂಬ ಆರೋಪವನ್ನು ಉಲ್ಲೇಖಿಸಿತ್ತು.’ನಿಮ್ಮ ಪ್ರಶ್ನೆಗಳನ್ನು ಉತ್ತರಿಸುವುದಿಲ್ಲ ಎಂಬ ದರ್ಪದ ಉತ್ತರವನ್ನು ನಾನು ನೀಡಿಲ್ಲ. ನಾನು ಲಭ್ಯವಿದ್ದಷ್ಟೂ ಕಾಲ ನಾನು ಇಚ್ಛಿಸಿದ ಉತ್ತರ ನೀಡಿದ್ದೇನೆ, ಜಾರಿ ನಿರ್ದೇಶನಾಲಯ ಬಯಸುತ್ತಿದ್ದ ಉತ್ತರವನ್ನಲ್ಲ’ ಎಂದು ಅವರು ನುಡಿದರು. ಹೈಕೋರ್ಟ್ ನ್ಯಾಯಮೂರ್ತಿಯವರು ಪ್ರಯೋಗಿಸಿದ ಪದಗಳನ್ನೂ ಅಭಿಷೇಕ್ ಸಿಂಘ್ವಿ ಪ್ರಶ್ನಿಸಿದರು. 2019: ನವದೆಹಲಿ: ದೆಹಲಿ ವಿಧಾನಸಭೆ ಹತ್ತಿರ ಬರುತ್ತಿದ್ದಂತೆಯೇ ಭರಪೂರ ಕೊಡುಗೆಗಳು
2019: ಬೆಂಗಳೂರು; ರಾಜ್ಯದ ಹಿರಿಯ ರಾಜಕಾರಣಿ ಎ ಕೆ ಸುಬ್ಬಯ್ಯ ಈದಿನ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕರ್ನಾಟಕ ರಾಜ್ಯ ಜನಸಂಘದ ಪ್ರಥಮ ಅಧ್ಯಕ್ಷರಾಗಿದ್ದ ಎ ಕೆ ಸುಬ್ಬಯ್ಯ ಅವರು ನಂತರ ಪಕ್ಷ ತೊರೆದಿದ್ದರು.ಕೊಡಗಿನವರಾದ ಅಜ್ಜಿಕುಟ್ಟಿರ ಕರಿಯಪ್ಪ ಸುಬ್ಬಯ್ಯ ತನ್ನ ರಾಜಕೀಯದ ಅರಂಭದ ದಿನಗಳಲ್ಲಿ ಫೈರ್ ಬ್ರ್ಯಾಂಡ್ ರಾಜಕಾರಣಿ ಎಂದು ಹೆಸರಾಗಿದ್ದರು.ಅಂದಿನ ಕಾಲದಲ್ಲಿ ಎ.ಬಿ. ವಾಜಪೇಯಿ ಅಂದರೆ ಅಖಿಲ ಭಾರತ ವಾಜಪೇಯಿ, ಎ.ಕೆ. ಸುಬ್ಬಯ್ಯ ಅಂದರೆ ಅಖಿಲ ಕರ್ನಾಟಕ ಸುಬ್ಬಯ್ಯ ಅಂತ ಜನಪ್ರಿಯರಾಗಿದ್ದರು.ಕರ್ನಾಟಕ ಜನಸಂಘದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಆರ್. ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಬಯಲುಗೆಳೆದಿದ್ದರು. ಅದರಲ್ಲಿ ಸಚಿವರಾಗಿದ್ದ ಸಿ ಎಂ ಇಬ್ರಾಹಿಂ ಅವರ ʼ ರೋಲೆಕ್ಸ್ ಹಗರಣʼ ಪ್ರಮುಖವಾಗಿತ್ತು. ಸುಬ್ಬಯ್ಯ ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 2017ರ ಜನವರಿಯಿಂದ ಡಯಾಲಿಸಿಸ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆರೋಗ್ಯ ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರನ್ನು ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಪುತ್ರ ಸಹಾಯಕ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ, ಐವರು ಪುತ್ರರನ್ನು ಸುಬ್ಬಯ್ಯ ಅಗಲಿದರು. ಅಜ್ಜಿಕುಟೀರ ಕಾರ್ಯಪ್ಪ ಸುಬ್ಬಯ್ಯ (ಎ.ಕೆ.ಸುಬ್ಬಯ್ಯ) ಕೇವಲ ರಾಜಕಾರಣಿ ಆಗಿರಲಿಲ್ಲ. ಧ್ವನಿಯಿಲ್ಲದವರ ಪಾಲಿಗೆ ಹೋರಾಟದ ಮೂಲಕ ‘ಬೆಳಕು’ ಕಲ್ಪಿಸಿದ ನಾಯಕ. ಪ್ರಖರ ವಿಚಾರವಾದಿ, ಕಾನೂನು ತಜ್ಞ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಶಾಶ್ವತ ವಿರೋಧ ಪಕ್ಷದ ನಾಯಕರಂತೆ ಚಾಟಿ ಬೀಸುತ್ತಿದ್ದ ಹೋರಾಟಗಾರ.ಬದುಕಿನ ಹಾದಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಹುದಿಕೇರಿ ಗ್ರಾಮದ ಕೋಣಗೇರಿ ಅಜ್ಜಿಕುಟೀರ ಕಾರ್ಯಪ್ಪ ಹಾಗೂ ಚಿನ್ನಮ್ಮ ದಂಪತಿ ಏಕೈಕ ಪುತ್ರ ಎ.ಕೆ.ಸುಬ್ಬಯ್ಯ. 1934ರ ಆಗಸ್ಟ್ 9ರಂದು ಜನಿಸಿದರು. ಚಿಕ್ಕಂದಿನಿಂದಲೇ ಶೋಷಣೆಯ ವಿರುದ್ಧ ಧ್ವನಿಯೆತ್ತಲು ಆರಂಭಿಸಿದರು. ಕೊನೆಯ ತನಕವೂ ಹೋರಾಟಕ್ಕೆ ವಿರಾಮ ಹಾಕಲಿಲ್ಲ.ಸುಬ್ಬಯ್ಯ ಚಿಕ್ಕವರಿದ್ದಾಗಲೇ ಅವರ ತಂದೆ ತೀರಿಕೊಂಡಿದ್ದರಿಂದ ಸೋದರ ಮಾವನ ಮನೆಯಲ್ಲಿ ಬೆಳೆದರು. ಹರಿಹರ ಸಮೀಪದ ಶಾಲೆಯಲ್ಲಿ ಸುಬ್ಬಯ್ಯ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗ ಸಹಪಾಠಿಗಳು ಗೇಲಿ ಮಾಡುತ್ತಿದ್ದರು. ಆಗ ಹೋರಾಟದ ಕಿಚ್ಚು ಬೆಳೆಯಿತು. ಶ್ರೀಮಂಗಲ ಕಂದಾಯ ಕಚೇರಿಯಲ್ಲಿ ರೈತರಿಗೆ ಕಿರುಕುಳ ನೀಡುತ್ತಿದ್ದ ಮಾಹಿತಿ ಸುಬ್ಬಯ್ಯ ಕಿವಿಗೆ ಬಿದ್ದಿತ್ತು. ವಿದ್ಯಾರ್ಥಿ ದಿನದಲ್ಲಿ ಪಾರುಪತ್ಯೆಗಾರರನ್ನು ಪ್ರಶ್ನಿಸಿದ್ದರ ಪರಿಣಾಮ ಹಲವರ ಕೆಂಗಣ್ಣಿಗೂ ಗುರಿಯಾಗಿದ್ದರು.ಸೋಮವಾರಪೇಟೆ ತಾಲ್ಲೂಕಿನ ಗೆಜ್ಜೆಹನಗೋಡಿನ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ನಂತರ, ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸ್ವಲ್ಪ ಸಮಯ ಕೆಲಸ ಮಾಡಿದ್ದರು. ಮಡಿಕೇರಿಯಲ್ಲಿ ಬಿಎಸ್ಸಿ ಪದವಿಗೆ ಕಾಲೇಜು ಸೇರಿದರು. ಆಗ ಬಿಎ ವ್ಯಾಸಂಗ ಮಾಡುತ್ತಿದ್ದ ಮಾಜಿ ಸಚಿವ ಎಂ.ಸಿ.ನಾಣಯ್ಯ ವಿರುದ್ಧ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಸುಬ್ಬಯ್ಯ ಸೋಲು ಕಂಡಿದ್ದರು.
ನಂತರ, ಕಾನೂನು ಪದವಿಗೆ ಮೈಸೂರಿನತ್ತ ಹೊರಟರು. 1963ರಲ್ಲಿ ಶಾರದಾ ವಿಲಾಸ ಕಾಲೇಜಿನಲ್ಲಿ ಕಾನೂನು ಪದವಿ ಪದೆದು ವಿರಾಜಪೇಟೆಯಲ್ಲಿ ವಕೀಲ ವೃತ್ತಿ ಆರಂಭಿಸಿದರು. ಆಗ ರಾಜಕೀಯದತ್ತಲೂ ಆಸಕ್ತಿ ಬೆಳೆಯಿತು. 1959ರಲ್ಲಿ ನಡೆದ ಚುನಾವಣೆಯಲ್ಲಿ ‘ಪ್ರಜಾ ಸೋಷಿಯಲಿಸ್ಟ್ ಪಾರ್ಟಿ’ ಅಭ್ಯರ್ಥಿ ಪರ ವಿರಾಜಪೇಟೆಯಲ್ಲಿ ಪ್ರಚಾರ ನಡೆಸಿದ್ದರು. ಮೊದಲ ಬಾರಿಗೆ 1966ರಲ್ಲಿ ಜನಸಂಘದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
2019: ಬೆಂಗಳೂರು: ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಸಂಸದ ನಳೀನ್ ಕುಮಾರ್ ಕಟೀಲು ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನೂತನ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಪಕ್ಷದ ಬಾವುಟ ನೀಡಿ ಅಧಿಕಾರ ಹಸ್ತಾಂತರಿಸಿದರು. ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರ ನಡೆಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಇತರ ಸಚಿವರು, ಹಲವು ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇಂದಿನ ಇತಿಹಾಸ History Today ಆಗಸ್ಟ್ 27 (2018+ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)





No comments:
Post a Comment