ನವದೆಹಲಿ: ಬಹು ನಿರೀಕ್ಷಿತ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಈದಿನ ಘೋಷಣೆಯಾಗಿದ್ದು, ಕನ್ನಡ ಚಿತ್ರರಂಗ ಈ ಬಾರಿ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತು. ಸ್ಯಾಂಡಲ್ ವುಡ್ ನಲ್ಲಿ ಗಲ್ಲಾಪೆಟ್ಟಿಗೆ ದೋಚಿದ್ದ ನಟ ಯಶ್ ಅಭಿನಯದ ಕೆಜಿಎಫ್ ಅತ್ಯುತ್ತಮ ಆ್ಯಕ್ಷನ್ ಚಿತ್ರ ಎಂಬ ಪ್ರಶಸ್ತಿ ಪಡೆಯಿತು. ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸದ್ದು ಮಾಡಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗಿಟ್ಟಿಸಿಕೊಂಡಿತು.. ಅಲ್ಲದೇ ಒಂದಲ್ಲ ಎರಡಲ್ಲ, ನಾತಿಚರಾಮಿ ಚಿತ್ರಗಳೂ ರಾಷ್ಟ್ರಪ್ರಶಸ್ತಿಗೆ ಭಾಜನವಾಯಿತು. ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರಗಳ ವಿಭಾಗವಾರು ವಿವರ:
ಶ್ರುತಿ ಹರಿಹರನ್ ಅಭಿನಯದ ನಾತಿಚರಾಮಿ ಅತ್ಯುತ್ತಮ ಪ್ರಾದೇಶಿಕ ಚಿತ್ರ. ಬಿಂದು ಮಾಲಿನಿ ಅತ್ಯುತ್ತಮ ಗಾಯಕಿ(ನಾತಿಚರಾಮಿ). ಅತ್ಯುತ್ತಮ ಸಂಕಲನ-ನಾತಿಚರಾಮಿ. ಅತ್ಯುತ್ತಮ ಸಾಹಸ ಚಿತ್ರ-ಕೆಜಿಎಫ್. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು-ಅತ್ಯುತ್ತಮ ಮಕ್ಕಳ ಚಿತ್ರ ಮೂಕಜ್ಜಿಯ ಕನಸು- ಅತ್ಯುತ್ತಮ ಚಿತ್ರ. ಒಂದಲ್ಲಾ, ಎರಡಲ್ಲಾ-ಅತ್ಯುತ್ತಮ ಬಾಲ ಕಲಾವಿದ ವಿಶೇಷ ಪ್ರಶಸ್ತಿ-ಶ್ರುತಿ ಹರಿಹರನ್-ನಾತಿಚರಾಮಿ. ಅತ್ಯುತ್ತಮ ಸಿನಿಮಾ: ರಾಜಸ್ಥಾನಿ ಸಿನಿಮಾ ಟರ್ಟಲ್. ಭೋಂಗಾ ಮರಾಠಿ ಸಿನಿಮಾ. ಬಾರಾಮ್ ತಮಿಳು ಚಿತ್ರ. ಅಂದಾದುನ್ ಹಿಂದಿ ಸಿನಿಮಾ. ಹಮೀದ್ ಉರ್ದು ಸಿನಿಮಾ. ಏಕ್ ಜೆ ಚಿಲೋ ರಾಜಾ ಬಂಗಾಲಿ ಸಿನಿಮಾ. ಸುಡಾನಿ ಫ್ರಂ ನೈಜೀರಿಯಾ ಮಲಯಾಳಂ ಸಿನಿಮಾ. ಮಹಾನಟಿ ತೆಲುಗು ಸಿನಿಮಾ. ನಾತಿಚರಾಮಿ ಕನ್ನಡ ಸಿನಿಮಾ. ಅಮೋರಿ ಕೊಂಕಣಿ ಸಿನಿಮಾ. ಬುಲ್ ಬುಲ್ ಕ್ಯಾನ್ ಸಿಂಗ್ ಅಸ್ಸಾಮಿ ಸಿನಿಮಾ. ಹರ್ಜೀತಾ ಪಂಜಾಬಿ ಸಿನಿಮಾ ರೇವಾ ಗುಜರಾತಿ ಸಿನಿಮಾ.
2019: ನವದೆಹಲಿ: ಮುಂಗಾರು ಮಹಾಮಳೆಗೆ ದಕ್ಷಿಣ ಭಾರತ ತತ್ತರಿಸಿದ್ದು ಕರ್ನಾಟಕ, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ಒಟ್ಟು ೮೦ಕ್ಕೂ ಹೆಚ್ಚು ಮಂದಿ ಬಲಿಯಾದರು. ಈ ರಾಜ್ಯಗಳ ಬಹುತೇಕ ನದಿಗಳು ಭೋರ್ಗರೆದವು.. ನದಿ ಆಸುಪಾಸಿನ ಸ್ಥಳಗಳು ಜಲಾವೃತಗೊಂಡವು.. ಲಕ್ಷಾಂತರ ಮಂದಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದರು. ಇಲ್ಲಿಗೆ ಬಂದಿರುವ ವರದಿಗಳ ಪ್ರಕಾರ ಕೇರಳದಲ್ಲಿ ೩೦, ಕರ್ನಾಟಕದಲ್ಲಿ ೨೬, ಮಹಾರಾಷ್ಟ್ರದ ಪುಣೆಯಲ್ಲಿ ೨೯ ಮಂದಿ ಪ್ರಾಣ ಕಳೆದುಕೊಂಡಿದ್ದು, ಕೇರಳದ ವಯನಾಡಿನ ಪುದುಮಲೈ ಗ್ರಾಮ ಸಂಪೂರ್ಣವಾಗಿ ಕಣ್ಮರೆಯಾಯಿತು. ಪುಣೆಯಲ್ಲಿ ೬ ಮಂದಿ ಕೊಚ್ಚಿ ಹೋಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ ೨೯ಕ್ಕೆ ಏರಿತು. ಕೇರಳದಲ್ಲಿ ಭೂಕುಸಿತದಲ್ಲಿ ಹಲವಾರು ಮಂದಿ ನೆಲಸಮಾಧಿಯಾಗಿರುವ ವರದಿಗಳು ಬಂದವು. ಕೇರಳದ ಕೋಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲ ವಿಮಾನ ಸಂಚಾರಗಳನ್ನು ಸ್ಥಗಿತಗೊಳಿಸಿದ ಬಳಿಕ, ನೌಕಾಪಡೆ ವಿಮಾನ ನಿಲ್ದಾಣ ಐಎನ್ ಎಸ್ ಗರುಡವನ್ನು ನಾಗರಿಕ ವಿಮಾನಯಾನಕ್ಕಾಗಿ ತೆರೆಯಲಾಯಿತು. ಕೋಚಿ ವಿಮಾನ ನಿಲ್ದಾಣದ ರನ್ ವೇ ಸಂಪೂರ್ಣ ಜಲಾವೃತಗೊಂಡಿತು. ಮೈಸೂರು, ಕೊಡಗು ಮೂಲಕ ಕೇರಳಕ್ಕೆ ಹೋಗುವ ಕರ್ನಾಟಕದ ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಂಡಿತು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯಾದ್ಯಂತ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಎರ್ನಾಕುಲಂ, ಇಡುಕ್ಕಿ, ತ್ರಿಶ್ಯೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಿಲಾಯಿತು. ಕೇರಳ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರವು ಜಲಾವೃತ ಸ್ಥಳಗಳಿಂದ ೨೨,೧೬೫ ಮಂದಿಯನ್ನು ತೆರವುಗೊಳಿಸಿ ೩೧೫ ಸಂತ್ರಸ್ಥ ಶಿಬಿರಗಳಿಗೆ ರವಾನಿಸಿತು. ಕೇರಳದ ನಿಲಂಬೂರಿನಲ್ಲಿ ಭೂಕುಸಿತದ ಬಳಿಕ ೩೦ ಕುಟುಂಬಗಳು ಕಣ್ಮರೆಯಾಗಿರುವರೆಂದು ಭೀತಿ ಪಡಲಾಯಿತು.. ಮಲಪ್ಪುರಂ ಜಿಲ್ಲೆಯ ನಿಲಂಬೂರಿನ ಕವಲಪ್ಪಾರದಲ್ಲಿ ಹಿಂದಿನ ರಾತ್ರಿ ಈ ಭೂಕುಸಿತ ಸಂಭವಿಸಿತ್ತು. ರಕ್ಷಣಾ ತಂಡ ಈದಿನ ಸ್ಥಳಕ್ಕೆ ತಲುಪಿ ಶೋಧ ಕಾರ್ಯಾಚರಣೆ ನಡೆಸಿತು. ಕೇರಳದ ಕಣ್ಣೂರಿನಲ್ಲಿ ಭದ್ರತಾ ಸಿಬ್ಬಂದಿ ಒಂಬತ್ತು ತಿಂಗಳ ಗರ್ಭಿಣಿಯೊಬ್ಬರು ಸೇರಿದಂತೆ ೧೫೦ ಮಂದಿಯನ್ನು ರಕ್ಷಿಸಿದರು. ೨೫೦ ಮಂದಿಯನ್ನು ಈವರೆಗೆ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತು. ಒಬ್ಬ ಮಹಿಳೆ, ಒಂದು ಮಗು ಸೇರಿದಂತೆ ೬ ಜನರ ಶವಗಳನ್ನು ಈವರೆಗೆ ಭದ್ರತಾ ಪಡೆಗಳು ಪತ್ತೆ ಹಚ್ಚಿದವು. ರಕ್ಷಿಸಲ್ಪಟ್ಟ ಗರ್ಭಿಣಿ ಕೇರಳದ ವಯನಾಡು ಜಿಲ್ಲೆಯ ಪುತುಮಲ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿದ್ದರು. ಮಹಾರಾಷ್ಟ್ರದ ಪುಣೆ ವಿಭಾಗದಲ್ಲಿ ೬ ಮಂದಿ ಕಣ್ಮರೆಯಾಗಿರುವ ವರದಿ ಬಂದಿದ್ದು, ಸೋಲಾಪುರ, ಸಾಂಗ್ಲಿ, ಸತಾರಾ, ಕೊಲ್ಹಾಪುರ ಮತ್ತು ಪುಣೆಯಲ್ಲಿ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ೨೯ಕ್ಕೆ ಏರಿತು. ೨.೮೫ ಲಕ್ಷ ಮಂದಿಯನ್ನು ಜಲಾವೃತ ಪ್ರದೇಶಗಳಿಂದ ತೆರವುಗೊಳಿಸಲಾಗಿದೆ ಎಂದು ವರದಿಗಳು ಹೇಳಿದವು. ಕರ್ನಾಟಕದಲ್ಲಿ ಈವರೆಗೆ ಮಳೆಗೆ ಬಲಿಯಾದವರ ಸಂಖ್ಯೆ ೨೬ಕ್ಕೆ ಏರಿತು. ಇತರ ಹಲವಾರು ಪ್ರದೇಶಗಳ ಜೊತೆಗೆ ವಿಶ್ವ ಪಾರಂಪರಿಕ ತಾಣವಾಗಿರುವ ಪಟ್ಟದಕಲ್ಲು ಕೂಡಾ ಭಾರೀ ಮಳೆಯಿಂದಾಗಿ ಜಲಾವೃತಗೊಂಡಿತು. ೧೨೦೦-೧೩೦೦ ವರ್ಷಗಳಷ್ಟು ಹಳೆಯದಾದ, ಚಾಲುಕ್ಯ ದೊರೆಗಳಿಂದ ನಿರ್ಮಿತವಾದ ಹಿಂದು, ಜೈನ ದೇವಾಲಯಗಳು ಇಲ್ಲಿವೆ. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ವತಃ ಪ್ರವಾಹ ಪೀಡಿತ ಸ್ಥಳಗಳಲ್ಲಿ ಸಂಚರಿಸುತ್ತಿದ್ದು, ಮೃತರ ಕುಟುಂಬಗಳಿಗೆ ತಲಾ ೫ ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದರು. ಕೇರಳದಲ್ಲಿ ಮಹಾಮಳೆಗೆ ಬಲಿಯಾದವರ ಸಂಖ್ಯೆ ೩೦ಕ್ಕೆ ಏರಿತು. ಈವರೆಗೆ ೧೫,೭೪೮ ಕುಟುಂಬಗಳ ೬೪,೦೧೩ ಮಂದಿಯನ್ನು ಜಲಾವೃತ ತಾಣಗಳಿಂದ ರಕ್ಷಿಸಲಾಯಿತು. ಅವರನ್ನು ೭೩೮ ಪರಿಹಾರ ಶಿಬಿರಗಳಿಗೆ ರವಾನಿಸಲಾಯಿತು. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮಾಮಿಡಿಕುಡೂರು ಮಂಡಲದ ಅಪ್ಪನಪಲ್ಲಿ ಗ್ರಾಮದಲ್ಲ್ಲಿ ಮೂವರು ಯುವಕರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಒಬ್ಬನನ್ನು ರಕ್ಷಿಸಲಾಯಿತು. ಉಳಿದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಅಪಾಯ ಮಟ್ಟ ಮೀರಿದ ನರ್ಮದಾ: ನರ್ಮದಾ ನದಿಯು ಉಕ್ಕಿ ಹರಿಯುತ್ತಿದ್ದು ಮಧ್ಯಪ್ರದೇಶದ ಭರ್ವಾನಿ ಮತ್ತು ಧಾರ್ ಜಿಲ್ಲೆಗಳಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯಿತು.. ಇದರಿಂದಾಗಿ ಸರ್ದಾರ ಸರೋವರ ಅಣೆಕಟ್ಟಿನ ಜಲಾನಯನ ಪ್ರದೇಶದ ಸುಮಾರು ೧೦೦೦ ಮಂದಿಯನ್ನು ತೆರವುಗೊಳಿಸಲಾಯಿತು. ಒಡಿಶಾದಲ್ಲೂ ಮಳೆಯ ಅಬ್ಬರ ಜೋರಾಗಿದ್ದು ಮೂವರು ಪ್ರವಾಹದಲ್ಲಿ ಕೊಚ್ಚಿ ಹೋದರು. ಒಂಬತ್ತು ಜಿಲ್ಲೆಗಳಲ್ಲಿ ೧.೩ ಲಕ್ಷ ಮಂದಿ ಜಲಾವೃತರಾಗಿ ಸಂಕಷ್ಟದಲ್ಲಿ ಸಿಲುಕಿದರು. ಇತರ ಇಬ್ಬರು ಕೂಡಾ ಕಣ್ಮರೆಯಾಗಿದ್ದಾರೆ ಎಂದು ವರದಿಗಳು ಹೇಳಿದವು. ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆ (ಎನ್ ಡಿಆರ್ ಎಫ್) ಸಿಬ್ಬಂದಿ ಅವಿಶ್ರಾಂತವಾಗಿ ನೆರೆಯಲ್ಲಿ ಸಿಲುಕಿದವರ ರಕ್ಷಣೆಗಾಗಿ ಶ್ರಮಿಸುತ್ತಿದ್ದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಅನೇಕ ಹಿರಿಯರನ್ನು ಪ್ರವಾಹದಿಂದ ರಕ್ಷಿಸಿದರು ಎಂದು ವರದಿಗಳು ಹೇಳಿದವು.
2019: ನವದೆಹಲಿ: ರಾಜ್ಯದ ವಿಶೇಷ ಸ್ಥಾನಮಾನ ರದ್ದಿನ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಶುಕ್ರವಾರದ ಪ್ರಾರ್ಥನೆ ಸಲುವಾಗಿ ಸಡಿಲಿಸಲಾಯಿತು. ಜನರು ಶಾಂತಿಯುತವಾಗಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆಗೆ ಜಮ್ಮು ಪ್ರದೇಶದಲ್ಲಿ ವಿಧಿಸಲಾಗಿದ್ದ ಸೆಕ್ಷನ್ ೧೪೪ನ್ನು ರದ್ದು ಪಡಿಸಲಾಯಿತು. ಆಗಸ್ಟ್ 10ರಿಂದ ಜಮ್ಮು ಪ್ರದೇಶದಲ್ಲಿ ಶಾಲೆ, ಕಾಲೇಜುಗಳು ಆರಂಭವಾಗಲಿವೆ. ಉಭಯ ಪ್ರದೇಶಗಳಲ್ಲೂ ನಿಷೇಧಾಜ್ಞೆ ರದ್ದಾಗಿದ್ದರೂ ಕಟ್ಟೆಚ್ಚರ ಮುಂದುವರೆಯಿತು. ಜಮ್ಮು ಪ್ರದೇಶದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಹಿಂತಿರುಗಿದ್ದನ್ನು ಅನುಸರಿಸಿ ನಿಷೇಧಾಜ್ಞೆಯನ್ನು ಸಡಿಲಿಸಲಾಗಿದೆ ಎಂದು ಜಮ್ಮು ಜಿಲ್ಲೆಯ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ತಿಳಿಸಿದರು. ಈ ಮಧ್ಯೆ,, ಭಾರತದ ಕ್ರಮಗಳನ್ನು ವಿರೋಧಿಸಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡು ಸಂಜೌತಾ ಎಕ್ಸ್ಪ್ರೆಸ್ ಬಳಿಕ ಥಾರ್ ಎಕ್ಸ್ಪ್ರೆಸ್ ರೈಲ್ವೇ ಸೇವೆಯನ್ನು ಸ್ಥಗಿತಗೊಳಿಸಿದ ಪಾಕಿಸ್ತಾನಕ್ಕೆ ವಾಸ್ತವವನ್ನು ಅಂಗೀಕರಿಸುವಂತೆ ಭಾರತ ಕಿವಿಮಾತು ಹೇಳಿತು. ಹಾಗೆಯೇ ಶಾಂತಿ ಕದಡದಂತೆ ಭಾರತದ ಸೇನಾ ಮುಖ್ಯಸ್ಥರು ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನೂ ನೀಡಿದರು.
ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವು ಕೈಗೊಳ್ಳುತ್ತಿರುವ ಕ್ರಮಗಳು ಏಕಪಕ್ಷೀಯ ಕ್ರಮಗಳು ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ ಕುಮಾರ್ ಅವರು ನವದೆಹಲಿಯಲ್ಲಿ ಬಣ್ಣಿಸಿ, ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಾಕಿಸ್ತಾನವನ್ನು ಆಗ್ರಹಿಸಿದರು. ‘ಪಾಕಿಸ್ತಾನದ ಕ್ರಮಗಳು ಏಕಪಕ್ಷೀಯ. ನಮ್ಮ ಜೊತೆಗೆ ಸಮಾಲೋಚಿಸದೆಯೇ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅವರ ನಿರ್ಧಾರಗಳನ್ನು ಮರುಪರಿಶೀಲನೆ ಮಾಡುವಂತೆ ನಾವು ಅವರನ್ನು ಆಗ್ರಹಿಸಿದ್ದೇವೆ. ಪಾಕಿಸ್ತಾನವು ಏನನ್ನೆಲ್ಲ ಮಾಡುತ್ತಿದೆಯೇ ಅವೆಲ್ಲವೂ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆಯಾಗುತ್ತಿದೆ ಎಂಬಂತೆ ಕೇವಲ ಹುಯಿಲೆಬ್ಬಿಸುವ ತಂತ್ರಗಳಾಗಿವೆ’ ಎಂದು ಅವರು ನುಡಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿ ಭಾರತೀಯ ಕಾನೂನುಗಳಲ್ಲಿ ಮಾಡಲಾಗಿರುವ ಬದಲಾವಣೆಗಳು ಆಂತರಿಕ ವಿಚಾರವಾಗಿದ್ದು ಪಾಕಿಸ್ತಾನ ಹಸ್ತಕ್ಷೇಪ ಮಾಡಬೇಕಾದ ಅಗತ್ಯವಿಲ್ಲ ಎಂದು ಭಾರತ ಪ್ರತಿಪಾದಿಸಿತು. ‘ವಾಸ್ತವವನ್ನು ಅಂಗೀಕರಿಸಲು ಪಾಕಿಸ್ತಾನಕ್ಕೆ ಇದೀಗ ಸಕಾಲ. ಇತರ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿ’ ಎಂದು ರವೀಶ ಕುಮಾರ್ ಪಾಕಿಸ್ತಾನಕ್ಕೆ ಸೂಚಿಸಿದರು. ಪರಿಸ್ಥಿತಿ ನಿಯಂತ್ರಣದಲ್ಲಿ: ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಸುವ್ಯವಸ್ಥೆ) ಮುನೀರ್ ಖಾನ್ ಅವರು ಕಥುವಾದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಜಮ್ಮುವಿನಲ್ಲಿ ಪರಿಸ್ಥಿತಿ ಮಾಮೂಲಿಯಾಗಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಾನೂನು ಸುವ್ಯವಸ್ಥೆ ಪಾಲನೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ನುಡಿದರು. ಇದಕ್ಕೆ ಮುನ್ನ ತಮ್ಮ ತಮ್ಮ ಸ್ಥಳೀಯ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುವಂತೆ ಕಣಿವೆಯಲ್ಲಿ ನಿರ್ಬಂಧಕಾಜ್ಞೆಗಳನ್ನು ತೆರವುಗೊಳಿಸಲಾಗಿತ್ತು. ಭಾರೀ ಬಂದೋಬಸ್ಸಿನ ಹಿನ್ನೆಲೆಯಲ್ಲಿ ಬಹುತೇಕ ಮನೆಗಳ ಒಳಗೇ ಇರುತ್ತಿದ್ದ ಜನರಿಗೆ ಈದಿನ ಸ್ಥಳೀಯ ಮಸೀದಿಗಳಿಗೆ ತೆರಳಲು ಅವಕಾಶ ನೀಡಲಾಗಿತ್ತು. ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಯಾವುದೇ ಅಹಿತರಕರ ಘಟನೆಗಳು ಸಂಭವಿಸಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿತು. ಉತ್ತರ ಕಾಶ್ಮೀರದಲ್ಲಿ ಶ್ರೀನಗರದಿಂದ ೫೦ ಕಿಮೀ ದೂರದಲ್ಲಿರುವ ಸೊಪೋರ್ ಪಟ್ಟಣದಲ್ಲಿ ಕಲ್ಲೆಸದ ಸಣ್ಣ ಪುಟ್ಟ ಘಟನೆಗಳು ವರದಿಯಾಗಿವೆ. ತತ್ ಕ್ಷಣವೇ ಗುಂಪನ್ನು ಚದುರಿಸಲಾಯಿತು ಎಂದು ವರದಿ ಹೇಳಿತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಕಾಶ್ಮೀರಿಗಳಿಗೆ ಯಾವುದೇ ಕಿರುಕುಳವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೂ ಗುರುವಾರ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ತಮ್ಮ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಧಾನವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವುದು ಎಂದು ಭರವಸೆ ಕೊಟ್ಟಿದ್ದರು. ಕಾಶ್ಮೀರದಲ್ಲಿ ಶಿಬಿರ ಹೂಡಿರುವ ದೋವಲ್ ಅವರು ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿ ಜೊತೆಗೆ ಸಂವಹನ ನಡೆಸಿದರು. ಸೂಕ್ಷ್ಮವಾದ ಕೆಳಪಟ್ಟಣಕ್ಕೆ ಅವರು ದಿಢೀರ್ ಭೇಟಿ ನೀಡಿದ್ದರು. ತಮ್ಮ ಸಹಾಯಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಈದ್ಗಾ ಪ್ರದೇಶಕ್ಕೆ ಭೇಟಿ ನೀಡಿದ ದೋವಲ್ ಅವರು ವಿವಿಧ ಕಡೆಗಳಲ್ಲಿ ಜನರ ಜೊತೆಗೆ ಸಂವಹನ ನಡೆಸುವ ಸಲುವಾಗಿ ತಮ್ಮ ವಾಹನದಿಂದ ಇಳಿದಿದ್ದರು. ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿ ಜೊತೆಗೆ ಮಾತನಾಡಿ ಕಾನೂನು ಸುವ್ಯವಸ್ಥೆ ಕಾಯ್ದುಕೊಂಡ ಅವರ ಅದ್ಭುತ ಕೆಲಸಕ್ಕಾಗಿ ಧನ್ಯವಾದ ಅರ್ಪಿಸಿದರು. ಯಾವುದೇ ಸಂಭಾವ್ಯ ಪ್ರತಿಭಟನೆ ಅಥವಾ ಅಹಿತಕರ ಘಟನೆಗಳನ್ನು ತಡೆಯುವ ಸಲುವಾಗಿ ಕಾಶ್ಮೀರ ಕಣಿವೆಯಾದ್ಯಂತ ಭದ್ರತಾ ಪಡೆಗಳನ್ನು ಕಟ್ಟೆಚ್ಚರದಲ್ಲಿ ಇರಿಸಲಾಯಿತು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದು ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯವನು ಲಡಾಖ್ ಹಾಗೂ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಪಸ್ತಾಪಕ್ಕೆ ಕೇಂದ್ರವು ಒಪ್ಪಿಗೆ ನೀಡುವುದಕ್ಕೆ ಕೆಲಗಂಟೆಗಳ ಮುನ್ನ ಸೋಮವಾರ ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆ ನಿಯೋಜನೆ ಜೊತೆಗೆ ದೂರವಾಣಿ ಮತ್ತು ಇಂಟರ್ನೆಟ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿತ್ತು. ದೂರದರ್ಶನ ಸೇರಿದಂತೆ ಮೂರು ಸುದ್ದಿ ವಾಹಿನಿಗಳು ಮಾತ್ರವೇ ಕಣಿವೆಯಲ್ಲಿ ಕೇಬಲ್ ಜಾಲಗಳ ಮೂಲಕ ಲಭ್ಯವಿದ್ದವು.
2019: ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಭಾರತದ ಕ್ರಮಕ್ಕೆ ಪ್ರತಿಯಾಗಿ ತನ್ನ ಏಕಪಕ್ಷೀಯ ಕ್ರಮಗಳನ್ನು ಮುಂದುವರೆಸಿದ ಪಾಕಿಸ್ತಾನ ಸಂಜೌತಾ ಎಕ್ಸ್ ಪ್ರೆಸ್ ರೈಲುಗಾಡಿ ಸೇವೆಯನ್ನು ಅಮಾನತುಗೊಳಿಸಿದ ಒಂದು ದಿನದ ಬಳಿಕ ಈದಿನ ಜೋಧಪುರ-ಕರಾಚಿ-ಥಾರ್ ಲಿಂಕ್ ಎಕ್ಸ್ಪ್ರೆಸ್ ಸೇವೆಯನ್ನೂ ಅಮಾನತುಗೊಳಿಸಿರುವುದಾಗಿ ಪ್ರಕಟಿಸಿತು. ಇದರೊಂದಿಗೆ, ಭಾರತಕ್ಕೆ ಇದ್ದ ಕೊನೆಯ ರೈಲು ಸೇವೆಯನ್ನೂ ಪಾಕಿಸ್ತಾನ ಸ್ಥಗಿತಗೊಳಿಸಿದಂತಾಯಿತು. ಲಾಹೋರ್-ದೆಹಲಿ ನಡುವಣ ಸಂಜೌತಾ ಎಕ್ಸ್ಪ್ರೆಸ್ ಸೇವೆಯನ್ನು ಪಾಕಿಸ್ತಾನ ಹಿಂದಿನ ದಿನ ಅಮಾನತುಪಡಿಸಿತ್ತು. ‘ನಾವು ಥಾರ್ ಎಕ್ಸ್ಪ್ರೆಸ್ ಸೇವೆಯನ್ನು ಕೂಡಾ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಪಾಕಿಸ್ತಾನದ ರೈಲ್ವೇ ಸಚಿವ ಶೇಖ್ ಅಹಮದ್ ರಶೀದ್ ವರದಿಗಾರರಿಗೆ ತಿಳಿಸಿದರು. ಪಾಕಿಸ್ತಾನದ ಖೋಕ್ರಪಾರ್ ಮತ್ತು ಭಾರತದ ಬರ್‍ಮೇರ್‌ನ ಮುನಬಾವೊ ಪಟ್ಟಣಗಳ ಮಧ್ಯೆ ಈ ರೈಲು ವಾರದಲ್ಲಿ ಒಂದು ಬಾರಿ ಓಡಾಡುತ್ತಿತ್ತು. ‘ನಾನು ರೈಲ್ವೇ ಸಚಿವನಾಗಿರುವವರೆಗೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯಾವುದೇ ರೈಲು ಕೂಡಾ ಓಡಾಟ ನಡೆಸುವುದಿಲ್ಲ’ ಎಂದೂ ರಶೀದ್ ಘೋಷಿಸಿದರು. ೧೯೭೬ರಲ್ಲಿ ಆರಂಭವಾಗಿದ್ದ ಸಂಜೌತಾ ಎಕ್ಸ್ಪ್ರೆಸ್ ರೈಲುಗಾಡಿಯ ಓಡಾಟವನ್ನು ಅಮಾನತುಗೊಳಿಸಿರುವುದಾಗಿ ರಶೀದ್ ಅಹಮದ್ ಗುರುವಾರ ಪ್ರಕಟಿಸಿದ್ದರು. ಸಂಜೌತಾ ಎಕ್ಸ್ಪ್ರೆಸ್ ವಾರದಲ್ಲಿ ಎರಡು ದಿನ ಓಡಾಟ ನಡೆಸುತ್ತಿತ್ತು. ’ನಾವು ಸಂಜೌತಾ ಎಕ್ಸ್ಪ್ರೆಸ್ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ. ನಾನು ರೈಲ್ವೇ ಸಚಿವನಾಗಿರುವವರೆಗೆ ಸಂಜೌತಾ ಎಕ್ಸ್ಪ್ರೆಸ್ ಓಡಾಟ ನಡೆಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಪಾಕಿಸ್ತಾನದ ಸೇನಾ ನ್ಯಾಯಾಲಯವು ಗೂಢಚರ್ಯ ಆಪಾದನೆಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿರುವ ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ್ ಯಾದವ್ ಅವರಿಗೆ ರಾಯಭಾರ ನೆರವು ಕಲ್ಪಿಸುವ ಕುರಿತ ಮಾತುಕತೆ ಸ್ಥಗಿತದಂತಹ ಇತರ ಪ್ರತಿಭಟನಾತ್ಮಕ ಕ್ರಮಗಳಿಗೆ ಅನುಗುಣವಾಗಿ ರೈಲುಸೇವೆ ಸ್ಥಗಿತದ ನಿರ್ಧಾರದ ಕ್ರಮವನ್ನು ಕೂಡಾ ಕೈಗೊಂಡಿತು. ಇದಲ್ಲದೆ ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ಕೂಡಾ ಪಾಕಿಸ್ತಾನ ನಿಷೇಧಿಸಿತು. ಹಿಂದಿನ ದಿನ ತಡರಾತ್ರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನವು ಯುದ್ಧವನ್ನು ಬಯಸುತ್ತಿಲ್ಲ. ಆದರೆ ಭಾರತದ ಅದನ್ನು ಹೇರಿದರೆ ತಕ್ಕ ಉತ್ತರವನ್ನು ನೀಡುತ್ತದೆ ಎಂದೂ ಹೇಳಿದ್ದರು.
2019: ನವದೆಹಲಿ/ ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ ೩೭೦ ಮತ್ತು ೩೫ಎ ವಿಧಿಗಳು ಬರೇ ಕಪಟ, ರಾವಲ್ಪಿಂಡಿಯು ಅದನ್ನು ಎಂದಿಗೂ ಮಾನ್ಯ ಮಾಡಿರಲಿಲ್ಲ ಎಂದು ಭಾರತವು ಅವುಗಳನ್ನು ರದ್ದು ಪಡಿಸಿದ ಬಳಿಕ ಪಾಕಿಸ್ತಾನದ ಸೇನೆ ಬಹಿರಂಗವಾಗಿ ಘೋಷಿಸಿತು. ಇದೇ ವೇಳೆಗೆ ಅವುಗಳನ್ನು ರದ್ದು ಮಾಡಿದ ಭಾರತದ ಕ್ರಮದ ವಿರುದ್ಧ ತನ್ನ ಹುಯಿಲೆಬ್ಬಿಸುವುದನ್ನೂ ಮುಂದುವರೆಸಿತು. ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಪಾಕಿಸ್ತಾನ ಮಾಡಿದ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿ, ಶಿಮ್ಲಾ ಒಪ್ಪಂದ ಅಡಿಯಲ್ಲಿ ದ್ವಿಪಕ್ಷೀಯವಾಗಿ ವಿಷಯವನ್ನು ಬಗೆ ಹರಿಸಿಕೊಳ್ಳುವಂತೆ ಮತ್ತು ಪ್ರದೇಶದಲ್ಲಿ ಪರಿಸ್ಥಿತಿ ಹದಗೆಡಿಸುವಂತಹ ಯಾವುದೇ ಏಕಪಕ್ಷಿಯ ಕ್ರಮಗಳನ್ನು ಕೈಗೊಳ್ಳದಂತೆ ಉಭಯ ದೇಶಗಳಿಗೂ ಸೂಚಿಸಿತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ ಮತ್ತು ೩೫ಎ ವಿಧಿಗಳನ್ನು ರದ್ದು ಪಡಿಸುವ ಮತ್ತು ರಾಜ್ಯವನ್ನು ಜಮ್ಮು - ಕಾಶ್ಮೀರ ಹಾಗೂ ಲಡಾಖ್ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಣಯವನ್ನು ಭಾರತೀಯ ಸಂಸತ್ತು ಮೂರನೇ ಎರಡು ಬಹುಮತದಿಂದ ಅಂಗೀಕರಿಸಿತ್ತು.ಭಾರತದ ಈ ಕ್ರಮವನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಪಾಕಿಸ್ತಾನ ಭಾರತದ ರಾಯಭಾರಿಯನ್ನು ಉಚ್ಚಾಟಿಸಿ ರಾಯಭಾರ ಸಂಬಂಧ ಕಡಿದುಕೊಂಡದ್ದಲ್ಲದೆ, ವ್ಯಾಪಾರ ಬಾಂಧವ್ಯವನ್ನೂ ಅಮಾನತುಗೊಳಿಸಿತು. ಸಾಲದ್ದಕ್ಕೆ ದಶಕಗಳಿಂದ ಉಭಯ ದೇಶಗಳ ಸ್ನೇಹ ಸಂಕೇತವಾಗಿ ಓಡುತ್ತಿದ್ದ ಸಂಜೌತಾ ಎಕ್ಸ್ ಪ್ರೆಸ್ರೈಲು ಗಾಡಿಯ ಸಂಚಾರವನ್ನೂರದ್ದು ಪಡಿಸಿತು. ಇಷ್ಟೆಲ್ಲ ಕ್ರಮಗಳ ಮಧ್ಯೆ, ಪಾಕಿಸ್ತಾನದ ಸಶಸ್ತ್ರ ಪಡೆಗಳ ಮಾಧ್ಯಮ ಘಟಕವಾಗಿರುವ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ ಆಗಸ್ಟ್ ೬ರಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ‘ಜಮ್ಮು ಮತ್ತು ಕಾಶ್ಮೀರವನ್ನು ಅತಿಕ್ರಮಿಸಿಕೊಂಡಿರುವ ಭಾರತ, ದಶಕಗಳ ಹಿಂದೆ ತನ್ನ ಅತಿಕ್ರಮಣವನ್ನು ಕಾನೂನುಬದ್ಧಗೊಳಿಸಲು ವಿಧಿ ೩೭೦ ಮತ್ತು ೩೫ಎ ಮೂಲಕ ನಡೆಸಿದ್ದ ಕಪಟ ಯತ್ನಗಳನ್ನು ಪಾಕಿಸ್ತಾನ ಎಂದೂ ಮಾನ್ಯ ಮಾಡಿರಲಿಲ್ಲ. ಈಗ ಭಾರತವೇ ಅದನ್ನು ಹಿಂತೆಗೆದುಕೊಂಡಿದೆ’ ಎಂದು ಹೇಳಿತು!. ರಾವಲ್ಪಿಂಡಿಯ ಸರ್ಕಾರಿ ಕೇಂದ್ರ ಕಚೇರಿಯಲ್ಲಿ (ಜಿಎಚ್ಕ್ಯೂ) ನಡೆದ ಕೋರ್ ಕಮಾಂಡರ್ಗಳ ಸಭೆಯ ಬಳಿಕ ಈ ಹೇಳಿಕೆ ಬಿಡುಗಡೆ ಮಾಡಲಾಗಿತ್ತು. .ಪಾಕಿಸ್ತಾನದ ಭೂಸೇನಾ ದಂಡನಾಯಕ ಜನರಲ್ ಖಮರ್ ಜಾವೇದ್ ಬಜ್ವಾ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಾಕಿಸ್ತಾನ ಸೇನೆಯ ಹೇಳಿಕೆಯಂತೆ ವಿಧಿ ೩೭೦, ೩೫ಎ ಯನ್ನು ಅದು ಮಾನ್ಯವೇ ಮಾಡಿಲ್ಲ ಎಂದಾದರೆ, ಭಾರತದ ಜೊತೆಗಿನ ರಾಜತಾಂತ್ರಿಕ ಬಾಂಧವ್ಯ ಕಡಿತ, ವಿಶ್ವ ಸಂಸ್ಥೆಗೆ ದೂರುಗಳ ಮೂಲಕ ಭಾರv ಕೈಗೊಂಡಿರುವ ನಿರ್ಣಯದ ವಿರುದ್ಧ ಹುಯಿಲೆಬ್ಬಿಸುತ್ತಿರುವುದಾದರೂ ಏಕೆ ಎಂದು ಹೆಸರು ಹೇಳಲು ಇಚ್ಛಿಸದ ಭಾರತ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಪಾಕ್ ಸೇನೆಯ ಹೇಳಿಕೆಗೆ ತಿರುಗೇಟು ನೀಡಿದರು. ಈ ಮಧ್ಯೆ ಕಾಶ್ಮೀರ ಕುರಿತ ಭಾರತದಕ್ರಮವನ್ನು ವಿರೋಧಿಸಿ ವಿಶ್ವಸಂಸ್ಥೆಗೆ ಪಾಕಿಸ್ತಾನ ನೀಡಿರುವದೂರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರ್ರೆಸ್ ತಿರಸ್ಕರಿಸಿದರು. ಭಾರತ ಮತ್ತು ಪಾಕಿಸ್ತಾನ ಶಿಮ್ಲಾ ಒಪ್ಪಂದದ ಪ್ರಕಾರ ಕಾಶ್ಮೀರ ವಿಷಯವನ್ನು ದ್ವಿಪಕ್ಷೀಯವಾಗಿ ಇತ್ಯರ್ಥ ಪಡಿಸಿಕೊಳ್ಳಬೇಕು, ಪರಿಸ್ಥಿತಿ ಉಲ್ಬಣಿಸುವಂತಹ ಯಾವುದೇ ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಅವರು ಹೇಳಿದರು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿ ಮತ್ತು ೩೫ಎ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ಬೆನ್ನಲ್ಲೇ ಜಮ್ಮು-ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಪಾಕಿಸ್ತಾನ ವಿಶ್ವಸಂಸ್ಥೆಯ ಕದ ಬಡಿದಿತ್ತು. ಜಮ್ಮು-ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ೧೯೭೨ರ ಶಿಮ್ಲಾ ಒಪ್ಪಂದದಂತೆ ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದ ಅಗತ್ಯವಿದೆ. ಅಲ್ಲದೇ ಎರಡೂ ದೇಶಗಳು ಗರಿಷ್ಠ ಪ್ರಮಾಣದಲ್ಲಿ ಸಂಯಮದಿಂದ ಇರಬೇಕಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರ್ರಸ್ ತಿಳಿಸಿದರು. ಜಮ್ಮು-ಕಾಶ್ಮೀರ ಸಮಸ್ಯೆ ಕುರಿತಂತೆ ಭಾರತ, ಪಾಕಿಸ್ತಾನ ವಿಶ್ವಸಂಸ್ಥೆಯ ಸನ್ನದು ಪ್ರಕಾರ ಶಾಂತಿಯುತವಾಗಿಯೇ ಬಗೆಹರಿಸಿಕೊಳ್ಳಬೇಕೆಂಬುದು ತಮ್ಮ ಅಭಿಪ್ರಾಯ ಎಂಟು ಆಂಟೋನಿಯೋ ಅವರು ಸ್ಪಷ್ಟಪಡಿಸಿರುವುದಾಗಿ ಸುದ್ದಿ ಸಂಸ್ಥೆ ವರದಿ ತಿಳಿಸಿತು. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ೧೯೭೨ರಲ್ಲಿ ಏರ್ಪಟ್ಟ ಶಿಮ್ಲಾ ಒಪ್ಪಂದದ ಪ್ರಕಾರ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿ ಇತ್ಯರ್ಥ ಪಡಿಸಲು ಒಪ್ಪಲಾಗಿದೆ. ಅದರ ಪ್ರಕಾರವೇ ಶಾಂತಿಯುತವಾಗಿ ಇದು ಇತ್ಯರ್ಥಗೊಳ್ಳಬೇಕಿದೆ ಎಂದು ಗುಟೆರ್ರೆಸ್ ಹೇಳಿಕೆ ತಿಳಿಸಿತು. ಏನಿದು ಶಿಮ್ಲಾ ಒಪ್ಪಂದ? ೧೯೭೨ರ ಜುಲೈ ೨ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆಗಿನ ಭಾರತದ ಪ್ರಧಾನಿ ಇಂದಿರಾಗಾಂಧಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಝುಲ್ಫಿಕರ್ ಅಲಿ ಭುಟ್ಟೋ ಶಿಮ್ಲಾ ಒಪ್ಪಂದಕ್ಕೆ ಸಹಿಹಾಕಿದ್ದರು. ೧೯೭೧ರಲ್ಲಿ ಸ್ವತಂತ್ರ ಬಾಂಗ್ಲಾಕ್ಕಾಗಿ ನಡೆದ ಯುದ್ಧದಲ್ಲಿ ಭಾರತ ಕೂಡಾ ನೆರವು ನೀಡಿದ್ದು, ಇದರ ಪರಿಣಾಮ ಬಾಂಗ್ಲಾ ಸ್ವತಂತ್ರಗೊಂಡಿತ್ತು. ಈ ಯುದ್ಧ ಭಾರತ-ಪಾಕ್ ಯುದ್ಧಕ್ಕೂ ನಾಂದಿ ಹಾಡಿತ್ತು. ಇದಕ್ಕೂ ಮುನ್ನ ಬಾಂಗ್ಲಾವನ್ನು ಪೂರ್ವ ಪಾಕಿಸ್ತಾನ ಎಂದೇ ಕರೆಯಲಾಗತ್ತಿತ್ತು. ಯುದ್ಧದ ಬಳಿಕ ೧೯೭೨ರಲ್ಲಿ ಶಿಮ್ಲಾ ಒಪ್ಪಂದ ಏರ್ಪಟ್ಟಿತ್ತು. ಈ ಒಪ್ಪಂದದ ಪ್ರಕಾರ, ಬಾಂಗ್ಲಾದೇಶಕ್ಕೆ ಮಾನ್ಯತೆ, ಜಮ್ಮು-ಕಾಶ್ಮೀರದ ವಿಚಾರದಲ್ಲಿ ವಿಶ್ವಸಂಸ್ಥೆ (ಮೂರನೇಯವರು) ಮಧ್ಯಪ್ರವೇಶಿಸುವಂತಿಲ್ಲ ಮತ್ತು ಕದನ ವಿರಾಮದ ಗಡಿರೇಖೆಯನ್ನು ಗಡಿ ನಿಯಂತ್ರಣ ರೇಖೆಯಾಗಿ (ಎಲ್ಒಸಿ) ಪರಿಗಣಿಸಲು ಒಪ್ಪಿಗೆ ನೀಡಲಾಗಿತ್ತು. ಶಿಮ್ಲಾ ಒಪ್ಪಂದದ ಪ್ರಕಾರ ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆ ಮೂಲಕ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ೧೯೭೨ರ ಶಿಮ್ಲಾ ಒಪ್ಪಂದದ ಪ್ರಕಾರವೇ ಭಾರತವು ಕಾಶ್ಮೀರ ವಿವಾದವನ್ನು ದ್ವಿಪಕ್ಷೀಯ ಮಾತುಕತೆ ಮೂಲಕವೇ ಬಗೆಹರಿಸಲು ಹಲವು ಬಾರಿ ಪ್ರಯತ್ನಿಸಿತ್ತು.
2019: ನವದೆಹಲಿ: ಸಂಜೋತಾ ಎಕ್ಸ್ ಪ್ರೆಸ್ ರೈಲು ಹಾಗೂ ಜೋಧ್ ಪುರ ಮತ್ತು ಕರಾಚಿ ನಡುವೆ ಸಂಪರ್ಕ ಸೇವೆ ಕಲ್ಪಿಸುತ್ತಿದ್ದ ಥಾರ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ದೆಹಲಿ ಮತ್ತು ಲಾಹೋರ್ ನಡುವೆ ಸಂಚರಿಸುತ್ತಿದ್ದ ಬಸ್ ಸೇವೆಯನ್ನೂ ಸಹ ರದ್ದುಗೊಳಿಸಿತು. ಪಾಕಿಸ್ಥಾನದ ಸಾರಿಗೆ ಒಕ್ಕೂಟ ಸಚಿವ ಮುರಾದ್ ಸಯೀದ್ ಅವರು ದ್ವಿರಾಷ್ಟ್ರಗಳ ನಡುವಿನ ಬಸ್ಸು ಸಂಚಾರವನ್ನು ರದ್ದುಗೊಳಿಸಳಾಗಿದೆ ಎಂದು ಪ್ರಕಟಿಸಿದರು. ಲಾಹೋರ್ ಮತ್ತು ನವದೆಹಲಿ ನಡುವೆ ಓಡಾಟ ನಡೆಸುತ್ತಿದ್ದ ಸಂಜೋತಾ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ರದ್ದುಗೊಳಿಸಿರುದಾಗಿ ಪಾಕಿಸ್ಥಾನದ ರೈಲ್ವೇ ಸಚಿವ ಶೇಖ್ ರಶೀದ್ ಅವರು ಹಿಂದಿನ
ದಿನ ಘೋಷಿಸಿದ್ದರು.
ಇಂದಿನ ಇತಿಹಾಸ History Today ಆಗಸ್ಟ್ 09 (2018+ಹಿಂದಿನವುಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment