2019: ಬಯಾರಿಟ್ಜ್ (ಫ್ರಾನ್ಸ್): ’ಸ್ಫೋಟಕ ಕಾಶ್ಮೀರ ವಿಷಯದ’ ಬಗ್ಗೆ ಮಧ್ಯಸ್ಥಿಕೆಯ ಕೊಡುಗೆಯನ್ನು ಹಲವಾರು ಬಾರಿ ಮುಂದಿಟ್ಟಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು
ಈದಿನ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಮಾತುಕತೆ ನಡೆಸಿದ ಬಳಿಕ ಮಧ್ಯಸ್ಥಿಕೆಯ ಪ್ರಸ್ತಾವ ಹಿಂತೆಗೆದುಕೊಂಡಿದ್ದು, ಕಾಶ್ಮೀರ ವಿಷಯವನ್ನು ದ್ವಿಪಕ್ಷೀಯವಾಗಿಯೇ ಭಾರತ ಮತ್ತು ಪಾಕಿಸ್ತಾನ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಹೇಳಿದರು.ಫ್ರಾನ್ಸಿನಲ್ಲಿ ಜಿ-೭ ಶೃಂಗ ಸಭೆಯ ಸಂದರ್ಭದಲ್ಲಿ ನಡೆದ ಟ್ರಂಪ್ ಜೊತೆಗಿನ ಮಾತುಕತೆಯ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ’ಕಾಶ್ಮೀರ ವಿಷಯ ಸಂಪೂರ್ಣವಾಗಿ ದ್ವಿಪಕ್ಷೀಯ ವಿಚಾರವಾಗಿದ್ದು, ಅದರ ಇತ್ಯರ್ಥಕ್ಕಾಗಿ ನಾವು ಯಾವುದೇ ಮೂರನೇ ರಾಷ್ಟ್ರಕ್ಕೆ ಕಷ್ಟ ಕೊಡುವುದಿಲ್ಲ’ ಎಂಬುದಾಗಿ ಖಡಾ ಖಂಡಿತ ಮಾತುಗಳಲ್ಲಿ ಸ್ಪಷ್ಟ ಪಡಿಸಿದ ಬಳಿಕ, ಟ್ರಂಪ್ ಅವರು ಕಾಶ್ಮೀರ ಮಧ್ಯಸ್ಥಿಕೆ ಪ್ರಸ್ತಾವದಿಂದ ಹಿಂದೆ ಸರಿದಿರುವುದನ್ನು ದೃಢ ಪಡಿಸಿದರು.ಜಮ್ಮು -ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತದ ಕ್ರಮದ ವಿರುದ್ಧ ಜಾಗತಿಕ ಬೆಂಬಲ ಪಡೆಯಲು ಪಾಕಿಸ್ತಾನವು ನಡೆಸುತ್ತಿರವ ಯತ್ನಗಳ ಹಿನ್ನೆಲೆಯಲ್ಲಿ ’ಕಾಶ್ಮೀರವು ದ್ವಿಪಕ್ಷೀಯ ವಿಷಯ’ ಎಂಬುದಾಗಿ ಟ್ರಂಪ್ ಅವರು ಒಪ್ಪಿಕೊಂಡಿರುವುದು ಭಾರತಕ್ಕೆ ಲಭಿಸಿದ ದೊಡ್ಡ ವಿಜಯವಾಗಿದೆ. ‘ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳೂ ದ್ವಿಪಕ್ಷೀಯ ಸ್ವರೂಪದವು, ಆದ್ದರಿಂದ ಬೇರೆ ಯಾವುದೇ ರಾಷ್ಟ್ರವು ಅದರ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ’ ಎಂದು ಟ್ರಂಪ್ ಹೇಳಿದರು. ಕಾಶ್ಮೀರದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂಬುದಾಗಿ ಮೋದಿ ಅವರು ತಮಗೆ ತಿಳಿಸಿದ್ದಾರೆ ಎಂದೂ ಟ್ರಂಪ್ ನುಡಿದರು.ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ, ತೃತೀಯ ರಾಷ್ಟ್ರಗಳ ಮಧ್ಯಪ್ರವೇಶಕ್ಕೆ ಯಾವುದೇ ಅವಕಾಶವೂ ಇಲ್ಲ ಎಂಬುದಾಗಿ ಖಂಡ ತುಂಡವಾಗಿ ಹೇಳಿದ ಪ್ರಧಾನಿ ಮೋದಿ, ’ಉಭಯ ರಾಷ್ಟ್ರಗಳು ಚರ್ಚಿಸಿ ಎಲ್ಲ ವಿಷಯಗಳನ್ನು ಕೂಡಾ ದ್ವಿಪಕ್ಷೀಯವಾಗಿ ಇತ್ಯರ್ಥ ಪಡಿಸಿಕೊಳ್ಳಬಹುದು. ಯಾವುದೇ ಮೂರನೇ ರಾಷ್ಟ್ರಕ್ಕೆ ಈ ವಿಚಾರವಾಗಿ ತೊಂದರೆ ನೀಡಲು ನಾವು ಬಯಸುವುದಿಲ್ಲ’ ಎಂದು ಹೇಳಿದರು. ಅಧ್ಯಕ್ಷ ಟ್ರಂಪ್ ಅವರ ಜೊತೆಗಿನ ಸಂವಹನ ಕಾಲದಲ್ಲಿ ಜಂಟಿಯಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮೋದಿ ಕಾಶ್ಮೀರ ಕುರಿತ ಭಾರತದ ನಿಲುವನ್ನು ಸ್ಪಷ್ಟ ಪದಗಳಲ್ಲಿ ಸಾರಿದರು. ಇದಕ್ಕೆ ಮುನ್ನ ಟ್ರಂಪ್ ಅವರು ಫ್ರಾನ್ಸಿನ ಬಯಾರಿಟ್ಜ್ ನಲ್ಲಿ ಜಿ-೭ ಶೃಂಗ ಸಭೆಯ ಸಂದರ್ಭದಲ್ಲಿ ತಾವು ಪ್ರಧಾನಿ ಮೋದಿ ಜೊತೆಗೆ ಕಾಶ್ಮೀರ ವಿಷಯವನ್ನು ಚರ್ಚಿಸುವುದಾಗಿ ಹೇಳಿದ್ದರು. ಇತ್ತೀಚಿನ ದಿನಗಳಲ್ಲಿ ಅಮೆರಿಕದ ಅಧ್ಯಕ್ಷರು ಹಲವಾರು ಬಾರಿ ಕಾಶ್ಮೀರದ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ತಾವು ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದರು.’ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಹಲವಾರು ದ್ವಿಪಕ್ಷೀಯ ವಿಷಯಗಳಿವೆ ಮತ್ತು ನಾವು ಮೂರನೇ ರಾಷ್ಟ್ರಕ್ಕೆ ತೊಂದರೆ ಕೊಡಲು ಬಯಸುವುದಿಲ್ಲ. ನಾವು ಚರ್ಚಿಸಿ ವಿಷಯಗಳನ್ನು ದ್ವಿಪಕ್ಷೀಯವಾಗಿಯೇ ಇತ್ಯರ್ಥ ಪಡಿಸಿಕೊಳ್ಳಬಹುದು’ ಎಂದು ಮೋದಿ ಹೇಳಿದರು.೧೯೪೭ಕ್ಕೆ ಮುನ್ನ ಭಾರತ ಮತ್ತು ಪಾಕಿಸ್ತಾನ ಒಟ್ಟಾಗಿಯೇ ಇದ್ದವು. ಉಭಯ ನೆರೆರಾಷ್ಟ್ರಗಳು ತಮ್ಮ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳಬಹುದು ಎಂಬ ವಿಶ್ವಾಸ ನನಗಿದೆ ಎಂದು ಮೋದಿ ನುಡಿದರು.ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಜೊತೆಗಿನ ದೂರವಾಣಿ ಮಾತುಕತೆ ವೇಳೆಯಲ್ಲಿ ಉಭಯ ರಾಷ್ಟ್ರಗಳನ್ನು ಕಾಡುತ್ತಿರುವ ಬಡತನ ಮತ್ತಿತರ ಹಲವಾರು ವಿಷಯಗಳಿವೆ. ಉಭಯು ದೇಶಗಳು ಜನರ ಕಲ್ಯಾಣಕ್ಕಾಗಿ ಒಟ್ಟಾಗಿ ದುಡಿಯಬೇಕು ಎಂಬುದಾಗಿ ಹೇಳಿದ್ದುದಾಗಿ ಮೋದಿ ನುಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್ ಅವರು ’ಮೋದಿಯವರು ಹಿಂದಿನ ರಾತ್ರಿ ಕಾಶ್ಮೀರದ ಬಗ್ಗೆ ಮಾತನಾಡಿದ್ದು, ಭಾರತ ಮತ್ತು ಪಾಕಿಸ್ತಾನ ಅದನ್ನು ನಿವಾರಿಸಿಕೊಳ್ಳಬಹುದು ಎಂಬುದು ನನ್ನ ಭಾವನೆ’ ಎಂದು ಹೇಳಿದರು.ಕಾಶ್ಮೀರ ಮತ್ತು ವಾಣಿಜ್ಯ ವ್ಯವಹಾರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮೋದಿ ಮತ್ತು ಟ್ರಂಪ್ ಚರ್ಚಿಸಿದರು.’ನಾವು ವ್ಯಾಪಾರ, ಸೇನೆ ಮತ್ತು ಇತರ ಹಲವಾರು ವಿಷಯಗಳ ಬಗೆಗೂ ಚರ್ಚಿಸಿದೆವು. ಭಾರತ ಮತ್ತು ಅಮೆರಿಕದ ಮಧ್ಯೆ ವ್ಯಾಪಾರ ವಿಸ್ತರಣೆಗೆ ನಾವು ಯತ್ನಿಸುತ್ತಿದ್ದೇವೆ. ನಾವು ಮಹತ್ವದ ಮಾತುಕತೆ ನಡೆಸಿದ್ದೇವೆ. ಕಳೆದ ರಾತ್ರಿ ಊಟದ ವೇಳೆಯಲ್ಲೂ ನಾವು ಜೊತೆಗಿದ್ದೆವು ಮತ್ತು ಭಾರತಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ನಾನು ತಿಳಿದುಕೊಂಡೆ’ ಎಂದು ಟ್ರಂಪ್ ನುಡಿದರು.ಪ್ರಧಾನಿ ಮೋದಿ ಜೊತೆಗಿನ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಟ್ರಂಪ್ ಅವರು ಮೋದಿ ಕುರಿತು ಹಾಸ್ಯ ಚಟಾಕಿ ಕೂಡಾ ಹಾರಿಸಿದರು. ’ಅವರು (ಪ್ರಧಾನಿ ಮೋದಿ) ನಿಜವಾಗಿ ಒಳ್ಳೆಯ ಇಂಗ್ಲಿಷ್ ಮಾತನಾಡುತ್ತಾರೆ, ಆದರೆ ಅವರು ಮಾತನಾಡಲು ಬಯಸುವುದಿಲ್ಲ ಅಷ್ಟೆ’ ಎಂದು ಟ್ರಂಪ್ ಹೇಳಿದರು.ಅಮೆರಿಕವು ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಅತ್ಯುತ್ತಮ ಗೆಳೆತನ ಹೊಂದಿದೆ ಎಂದು ಡೊನಾಲ್ಡ್ ಟ್ರಂಪ್ ನುಡಿದರು.ಭಾರತ ಮತ್ತು ಪಾಕಿಸ್ತಾನ ಶೀಘ್ರದಲ್ಲೇ ಭಿನ್ನಾಭಿಪ್ರಾಯಗಳನ್ನು ಇತ್ಯರ್ಥಗೊಳಿಸಿಕೊಳ್ಳಲಿವೆ. ಕಾಶ್ಮೀರ ವಿಷಯ ಸಂಪೂರ್ಣ ನಿಯಂತ್ರಣದಲ್ಲಿದೆ ಎಂಬುದಾಗಿ ಪ್ರಧಾನಿ (ಮೋದಿ) ಅಭಿಪ್ರಾಯಪಟ್ಟಿದ್ದಾರೆ. ಅವರು ಪಾಕಿಸ್ತಾನದ ಜೊತೆ ಮಾತನಾಡಬಲ್ಲರು ಮತ್ತು ಏನಾದರೂ ಅತ್ಯುತ್ತಮವಾದುದನ್ನು ಸಾಧಿಸಲು ಅವರು ಸಮರ್ಥರು ಎಂಬ ಬಗ್ಗೆ ನನಗೆ ಖಚಿತವಿದೆ ಎಂದೂ ಟ್ರಂಪ್ ನುಡಿದರು.
ಆಗಸ್ಟ್ ೫ರಂದು ಭಾರತ ಸರ್ಕಾರವು ಜಮ್ಮ ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಹಿನ್ನೆಲೆಯಲ್ಲಿ ಟ್ರಂಪ್ ಮತ್ತು ಮೋದಿ ಸಭೆ ನಡೆಯಿತು.ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ಭಾರತವು ರದ್ದು ಪಡಿಸಿದ ಬಳಿಕ, ಪಾಕಿಸ್ತಾನವು ಇದರ ವಿರುದ್ಧ ಪ್ರಬಲ ಪ್ರತಿಕ್ರಿಯೆ ನೀಡುವುದರೊಂದಿಗೆ ಭಾರತ-ಪಾಕಿಸ್ತಾನದ ನಡುವಣ ಉದ್ವಿಗ್ನತೆ ತೀವ್ರಗೊಂಡಿತ್ತು.
ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿರುವುದು ಭಾರತದ ಆಂತರಿಕ ವಿಷಯ ಎಂಬುದಾಗಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತವು ಖಂಡತುಂಡವಾಗಿ ಹೇಳಿದ್ದು, ವಾಸ್ತವವನ್ನು ಅಂಗೀಕರಿಸುವಂತೆ ಪಾಕಿಸ್ತಾನಕ್ಕೆ ಸಲಹೆ ಮಾಡಿತ್ತು.ಭಾರತವು ಜಿ೭ಸಮೂಹದ ಸದಸ್ಯನಲ್ಲವಾದರೂ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ವೈಯಕ್ತಿಕ ಆಹ್ವಾನದ ಮೇರೆಗೆ ಶಂಗದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ತೆರಳಿದ್ದು ಭಾನುವಾರ ಬಯಾರಿಟ್ಜ್ ತಲುಪಿದ್ದರು.
ಜ್ವಲಂತ ಜಾಗತಿಕ ವಿಷಯಗಳಾದ ಪರಿಸರ, ಹವಾಮಾನ, ಡಿಜಿಟಲ್ ಪರಿವರ್ತನೆಗಳ ಬಗ್ಗೆ ಮೋದಿ ಅವರು ಶೃಂಗದಲ್ಲಿ ಮಾತನಾಡುವ ನಿರೀಕ್ಷೆ ಇದೆ.ಶೃಂಗ ಸಭೆಯ ಹೊರಗೆ, ಜರ್ಮನ್ ಚಾನ್ಸಲರ್ ಅಂಗೇಲಾ ಮರ್ಕೆಲ್ ಮತ್ತು ಚಿಲಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೇರಾ ಜೊತೆಗೆ ಮಾತುಕತೆ ಬಳಿಕ ಮೋದಿಯವರು ಟ್ರಂಪ್ ಜೊತೆಗೆ ಮಾತನಾಡಿದರು. ತಮ್ಮ ತ್ರಿರಾಷ್ಟ್ರ ಪ್ರವಾಸದ ಅಂಗವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಹರೇನ್ ಮತ್ತು ಫ್ರಾನ್ಸ್ ಪ್ರವಾಸ ಮುಗಿಸಿದ ಬಳಿಕ ಫ್ರಾನ್ಸಿನ ಬಯಾರಿಟ್ಜ್ಗೆ ಮೋದಿ ತಲುಪಿದ್ದಾರೆ. ಯುಎಇ ಮತ್ತು ಬಹರೇನ್ ಪ್ರವಾಸದ ವೇಳೆಯಲ್ಲಿ ಕೊಲ್ಲಿ ಪ್ರದೇಶದ ಅತ್ಯಂತ ಹಳೆಯ ದೇವಾಲಯವಾದ ಶ್ರೀನಾಥಜಿ ದೇವಾಲಯದಲ್ಲಿ ಮೋದಿ ಪ್ರಾರ್ಥನೆ ಸಲ್ಲಿಸಿದ್ದರು. ಜಿ೭ ಶೃಂಗ ಸಭೆಗೆ ಆಗಮಿಸುವಂತೆ ಮ್ಯಾಕ್ರೋನ್ ಅವರು ಮೋದಿ ಅವರಿಗೆ ನೀಡಿದ ಆಹ್ವಾನವು ಭಾರತವನ್ನು ಪ್ರಮುಖ ಆರ್ಥಿಕ ಶಕ್ತಿಯಾಗಿ ಮಾನ್ಯ ಮಾಡಿರುವುದರ ಸೂಚನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತ್ತು.ಇಂಗ್ಲೆಂಡ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕ ಜಿ೭ ಸಮೂಹದ ಸದಸ್ಯರಾಷ್ಟ್ರಗಳಾಗಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದಿನ ಬಳಿಕ ಪಾಕಿಸ್ತಾನದ ದೂರಿನ ಹಿನ್ನೆಲೆಯಲ್ಲಿ ಚೀನಾ ಆಗ್ರಹದ ಮೇರೆಗೆ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ವಿಶೇಷ ರಹಸ್ಯಸಭೆಯಲ್ಲಿ ಭಾರತದ ಪ್ರಬಲ ಬೆಂಬಲಿಗರ ರಾಷ್ಟ್ರಗಳಲ್ಲಿ ಅಮೆರಿಕವೂ ಒಂದಾಗಿತ್ತು. ಸಭೆಯಲ್ಲಿ ಭಾರತದ ನಿಲುವನ್ನು ಬೆಂಬಲಿಸಿದ ಅಮೆರಿಕ ಮತ್ತು ಫ್ರಾನ್ಸ್, ಇದೇ ವೇಳೆಗೆ ಕಾಶ್ಮೀರದಲ್ಲಿನ ಸಂಪರ್ಕ ನಿರ್ಬಂಧಗಳನ್ನು ತೆರವು ಪಡಿಸುವಂತೆ ಕರೆ ನೀಡಿದ್ದವು.
2019: ನವದೆಹಲಿ: ತನ್ನ ಬಳಿ ಇರುವ ಹೆಚ್ವುವರಿ ನಿಧಿಯನ್ನು ಭಾರತ ಸರ್ಕಾರಕ್ಕೆ ವರ್ಗಾವಣೆ ಮಾಡುವಂತೆ ಬಿಮಲ್ ಜಲನ್ ಸಮಿತಿ ಮಾಡಿದ್ದ ಶಿಫಾರಸುಗಳನ್ನು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ಕೇಂದ್ರೀಯ ಮಂಡಳಿ ಅಂಗೀಕರಿಸಿತು. ಭಾರತೀಯ
ರಿಸರ್ವ್ ಬ್ಯಾಂಕ್ ತನ್ನ ಬಳಿ ಇರುವ ೧,೭೬,೦೫೧ ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ವರ್ಗಾಯಿಸಲಿದೆ. ಇದರಲ್ಲಿ ೨೦೧೮-೧೯ರ ಸಾಲಿನ ೧,೨೩,೪೧೪ ಕೋಟಿ ರೂಪಾಯಿ ಹೆಚ್ಚುವರಿ ನಿಧಿಯೂ ಸೇರಿದೆ.’ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ಕೇಂದ್ರೀಯ ಮಂಡಳಿಯು ೧,೭೬,೦೫೧ ಕೋಟಿ ರೂಪಾಯಿಗಳನ್ನು ಭಾರತ ಸರ್ಕಾರಕ್ಕೆ ವರ್ಗಾಯಿಸಲು ಈದಿನ ನಿರ್ಧರಿಸಿದೆ. ಇದರಲ್ಲಿ ೧,೨೩,೪೧೪ ಕೋಟಿ ರೂಪಾಯಿಗಳ ೨೦೧೮-೧೯ರ ಹೆಚ್ಚುವರಿ ನಿಧಿ ಮತ್ತು ಪರಿಷ್ಕೃತ ಆರ್ಥಿಕ ಬಂಡವಾಳ ಚೌಕಟ್ಟಿನ (ಇಸಿಎಫ್) ಪ್ರಕಾರ ಗುರುತಿಸಲಾದ ೫೨,೬೩೭ ಕೋಟಿ ರೂಪಾಯಿಗಳ ಹೆಚ್ಚುವರಿ ನಿಧಿ ಸೇರಿದೆ ಎಂದು ಆರ್ಬಿಐ ಹೇಳಿಕೆಯೊಂದರಲ್ಲಿ ತಿಳಿಸಿತು.
ರಿಸರ್ವ್ ಬ್ಯಾಂಕ್ ಜುಲೈ - ಜೂನ್ ಆರ್ಥಿಕ ವರ್ಷವನ್ನು ಅನುಸರಿಸುತ್ತದೆ ಮತ್ತು ಲಾಭಾಂಶವನ್ನು (ಡಿವಿಡೆಂಡ್) ಸಾಮಾನ್ಯವಾಗಿ ವಾರ್ಷಿಕ ಲೆಕ್ಕಪತ್ರ ಅಂತಿಮಗೊಂಡ ಬಳಿಕ ಆಗಸ್ಟ್ ತಿಂಗಳಲ್ಲಿ ವಿತರಿಸಲಾಗುತ್ತದೆ.ಆರ್ಬಿಐ ಉಳಿಸಿಕೊಳ್ಳಬೇಕಾದ ಸೂಕ್ತ ಮೀಸಲುಧನ ಮತ್ತು ಸರ್ಕಾರಕ್ಕೆ ಪಾವತಿ ಮಾಡಬೇಕಾದ ಲಾಭಾಂಶವನ್ನು ಸೂಚಿಸುವ ಸಲುವಾಗಿ ಬಿಮಲ್ ಜಲನ್ ಸಮಿತಿಯನ್ನು ರಚಿಸಲಾಗಿತ್ತು. ಜಲನ್ ಸಮಿತಿಯು ತನ್ನ ವರದಿಯನ್ನು ಆರ್ಬಿಐ ಗವರ್ನರ್ ಅವರಿಗೆ 2019 ಆಗಸ್ಟ್ 23ರ ಶುಕ್ರವಾರ ಸಲ್ಲಿಸಿತ್ತು.
2019: ಬೆಂಗಳೂರು : ಬಿಜೆಪಿ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ 17 ಸಚಿವರ ಖಾತೆ ಹಂಚಿಕೆಯ ಅಂತಿಮ ಪಟ್ಟಿ ಬಿಡುಗಡೆಗೊಂಡಿತು. ಇದರೊಂದಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರ ಖಾತೆ ಹಂಚಿಕೆಯ ಗೊಂದಲ ಕೊನೆಗೂ ಅಂತ್ಯಕಂಡಿತು. ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್ ಹಾಗೂ ಲಕ್ಷ್ಮಣ್ ಸವದಿ ಸೇರಿ ಮೂವರಿಗೆ ಉಪಮುಖ್ಯಮಂತ್ರಿ ಪಟ್ಟ ಲಭಿಸಿತು. ಇದರೊಂದಿಗೆ ಡಿಸಿಎಂ ಪಟ್ಟ ಯಾರಿಗೆ ಒಲಿಯುತ್ತದೆ ಎಂಬ ಕುತೂಹಲಕ್ಕೆ ತೆರೆಬಿದ್ದಿತು. ಯಾರಿಗೆ ಯಾವ ಖಾತೆ : ಕೆಎಸ್ ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಬಸವರಾಜ್ ಬೊಮ್ಮಾಯಿ – ಗೃಹ ಸಚಿವ, ಗೋವಿಂದ ಕಾರಜೋಳ – ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಅಶ್ವಥ್ ನಾರಾಯಣ – ಉನ್ನತ ಶಿಕ್ಷಣ, ಐಟಿ /ಬಿಟಿ, ಜಗದೀಶ್ ಶೆಟ್ಟರ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಲಕ್ಷ್ಮಣ ಸವದಿ – ಸಾರಿಗೆ ಸಚಿವ, ಆರ್.ಅಶೋಕ್- ಕಂದಾಯ, ವಿ.ಸೋಮಣ್ಣ- ವಸತಿ, ಜೆಸಿ ಮಾಧುಸ್ವಾಮಿ – ಕಾನೂನು, ಸಣ್ಣ ನೀರಾವರಿ, ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೋಟ ಶ್ರೀನಿವಾಸ ಪೂಜಾರಿ – ಬಂದರು ಮತ್ತು ಮೀನುಗಾರಿಕೆ, ಸಿಸಿ ಪಾಟೀಲ್- ಗಣಿ ಮತ್ತು ಭೂವಿಜ್ಞಾನ, ಸುರೇಶ್ ಕುಮಾರ್ – ಪ್ರಾಥಮಿಕ, ಪ್ರೌಢ ಶಿಕ್ಷಣ, ಪ್ರಭು ಚೌಹಾಣ್ – ಪಶು ಸಂಗೋಪನೆ, ಹೆಚ್ ನಾಗೇಶ್ – ಅಬಕಾರಿ ಶ್ರೀರಾಮುಲು – ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿ ಟಿ ರವಿ – ಪ್ರವಾಸೋದ್ಯಮ, ಕನ್ನಡ ಮತ್ತು ಸಾಹಿತ್ಯ ಇಲಾಖೆ. 17 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಯಿತು. ಉಳಿದ ಬಹುತೇಕ ಪ್ರಮುಖ ಖಾತೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಳಿಯೇ ಉಳಿಸಿಕೊಳ್ಳಲಾಯಿತು. ಬಿಜೆಪಿ ಹೈಕಮಾಂಡ್ ಹಾಗೂ ಆರ್ಎಸ್ಎಸ್ ಅಳೆದು ತೂಗಿ ಕೊನೆಗೂ ಖಾತೆ ಹಂಚಿಕೆ ಮಾಡಿತು. ಅಂತಿಮವಾದ ಖಾತೆ ಹಂಚಿಕೆ ಪಟ್ಟಿಯನ್ನು ರಾಜ್ಯಪಾಲರಿಗೆ ರವಾನೆ ಮಾಡಲಾಗಿದ್ದು ರಾಜ್ಯಪಾಲರ ಅಂಕಿತ ಬಿದ್ದಿದೆ. ರಾಜಭವನದಿಂದ ಮುಖ್ಯ ಕಾರ್ಯದರ್ಶಿಗೆ ಈ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.
2019: ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ವಿತ್ತ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ
ಸಿಬಿಐ ಕಸ್ಟಡಿಯನ್ನು ಆಗಸ್ಟ್ ೩೦ರವರೆಗೆ ವಿಸ್ತರಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿತು.
ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಕೆಲವೇ ಗಂಟೆಗಳಲ್ಲಿ ಸಿಬಿಐ ನ್ಯಾಯಾಲಯ ಈ ಆದೇಶ ನೀಡಿತು.
ಇದರೊಂದಿಗೆ ಚಿದಂಬರಂ ಅವರಿಗೆ ಸಿಬಿಐ ನ್ಯಾಯಾಲಯ ಮತ್ತು ಸುಪ್ರೀಂಕೋರ್ಟ್ ಎರಡೂ ಕಡೆ ನಿರಾಳತೆ ಲಭಿಸಲಿಲ್ಲ.ಸುಪ್ರೀಂಕೋರ್ಟ್ ತೀರ್ಪಿನ ಬಳಿಕ, ಐಎನ್ಎಕ್ಸ್ ಮೀಡಿಯಾ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಲಯವು ಚಿದಂಬರಂ ಅವರ ಸಿಬಿಐ ಕಸ್ಟಡಿಯನ್ನು ಆಗಸ್ಟ್ ೩೦ರವರೆಗೆ ವಿಸ್ತರಿಸಿತು. ಚಿದಂಬರಂ ಅವರನ್ನು ಇನ್ನೂ ಐದು ದಿನಗಳ ಅವಧಿಗೆ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಮನವಿ ಮಾಡಿದ ಬಳಿಕ ನ್ಯಾಯಾಲಯ ತನ್ನ ಆದೇಶ ನೀಡಿತು. ಮಾಜಿ ಸಚಿವರು ತನಿಖೆಯಲ್ಲಿ ಸಹಕರಿಸುತ್ತಿಲ್ಲವಾದ್ದರಿಂದ ತನಿಖೆ ಅಪೂರ್ಣಗೊಂಡಿದೆ ಎಂದು ತನಿಖಾ ಸಂಸ್ಥೆಯು ಇದಕ್ಕೆ ಮುನ್ನ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರಿಗೆ ತಿಳಿಸಿತು.ಆಗಸ್ಟ್ ೨೧ರಂದು ಬಂಧಿಸಿದ ಬಳಿಕ ಚಿದಂಬರಂ ಅವರಿಗೆ ನೀಡಲಾಗಿದ್ದ ೪ ದಿನಗಳ ಸಿಬಿಐ ಕಸ್ಟಡಿಯು ಮುಕ್ತಾಯಗೊಂಡಿತ್ತು. ಸಿಬಿಐ ವಶದಲ್ಲೇ ತನಿಖೆ ಮುಂದುವರೆಸುವ ಸಲುವಾಗಿ ಸಿಬಿಐ ಕಸ್ಟಡಿ ವಿಸ್ತರಿಸಲು ಸಾಕಷ್ಟು ನೆಲೆಗಳಿವೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತ ನ್ಯಾಯಾಲಯಕ್ಕೆ ವಿವರಿಸಿದರು. ‘ಅವರನ್ನು ಇನ್ನೊಬ್ಬ ಆರೋಪಿಯ ಮುಂದೆ ತನಿಖೆಗೆ ಗುರಿ ಪಡಿಸಲಾಯಿತು. ಆದರೆ ತನಿಖೆ ಅಪೂರ್ಣವಾಯಿತು. ತನಿಖೆಯನ್ನು ಮುಂದುವರೆಸಲು ನಮಗೆ ಇನ್ನೂ ಐದು ದಿನಗಳ ಕಾಲಾವಕಾಶ ಬೇಕು’ ಎಂದು ಮೆಹ್ತ ಹೇಳಿದರು.ಸಿಬಿಐ ನ್ಯಾಯಾಲಯದ ನಿರ್ಧಾರಕ್ಕೆ ಕೆಲವು ಗಂಟೆಗಳ ಮುನ್ನ ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತಮ್ಮ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ವಜಾಗೊಳಿಸಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.ಆಗಸ್ಟ್ ೨೬ರ ಸೋಮವಾರದವರೆಗೆ ಚಿದಂಬರಂ ಅವರನ್ನು ಬಂಧಿಸದಂತೆ ಜಾರಿ ನಿರ್ದೇಶನಾಲಯವನ್ನು ನಿರ್ಬಂಧಿಸಿದ್ದ ಸುಪ್ರೀಂಕೋರ್ಟ್, ಅದೇ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆಯನ್ನು ಆಗಸ್ಟ್ ೨೭ರ ಮಂಗಳವಾರದವರೆಗೆ ಮುಂದುವರೆಸಿತ್ತು.
2019: ನವದೆಹಲಿ: ತಮ್ಮ ಅನರ್ಹತೆ ಪ್ರಶ್ನಿಸಿ ಅರ್ಜಿ
ಸಲ್ಲಿಸಿ ತುರ್ತು ವಿಚಾರಣೆಗೆ ಮನವಿ ಮಾಡಿದ್ದ
ಅನರ್ಹ ಶಾಸಕರ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿತು.
ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟ
ಸೇರಲು ಕಾತರರಾಗಿದ್ದ
ಅನರ್ಹ ಶಾಸಕರ ಆಸೆಗೆಈ ಮೂಲಕ ಸುಪ್ರೀಂಕೋರ್ಟ್ ತಣ್ಣೀರೆರಚಿತು.
ತಮ್ಮನ್ನು ಅನರ್ಹಗೊಳಿಸಿದ್ದ ಮಾಜಿ ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ಅವರ ಆದೇಶ ಪ್ರಶ್ನಿಸಿ ಅನರ್ಹ
ಶಾಸಕರು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ
ಅರ್ಜಿ ವಿಳಂಬವಾಗುತ್ತಿರುವುದರಿಂದ ಈಗಾಗಲೇ ಆತಂಕಗೊಂಡಿರುವ ಅನರ್ಹ ಶಾಸಕರಿಗೆ ಸುಪ್ರೀಂ
ಕೋರ್ಟಿನಲ್ಲಿ ಇವರ ಪರ ವಾದ ಮಾಡುತ್ತಿರುವ
ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು
ಪ್ರಕರಣವನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಲು ನಿರಾಕರಿಸಿದ್ದು ಮೊದಲ ಆಘಾತವಾದರೆ, ನಂತರ ಕಿರಿಯ ವಕೀಲರು ’ತುರ್ತು ವಿಚಾರಣೆ ನಡೆಸಿ’ ಎಂದು ಮಾಡಿಕೊಂಡ ಮನವಿಯನ್ನು
ಪೀಠವು ನಿರಾಕರಿಸಿದ್ದು ಎರಡನೇ ಆಘಾತವಾಯಿತು.
ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ತುರ್ತು ಅರ್ಜಿ ವಿಚಾರಣೆ
ನಡೆಸುವಂತೆ ಮುಕುಲ್ ರೋಹ್ಟಗಿ ಬದಲಾಗಿ
ಅವರ ತಂಡದ ಕಿರಿಯ ವಕೀಲರು ಮನವಿ ಮಾಡಿ
ಕೊಂಡರು. ಆದರೆ ನ್ಯಾಯಮೂರ್ತಿ ಎನ್.ವಿ. ರಮಣ ತುರ್ತು ವಿಚಾರಣೆಗೆ ನಿರಾಕರಿಸಿದರು. ಈ
ಹಿಂದೆ ನ್ಯಾಯಮೂರ್ತಿ
ಅರುಣ್ ಮಿಶ್ರಾ ನೇತೃತ್ವದ ಪೀಠದ ಮುಂದೆ ಕೂಡ ತುರ್ತು ವಿಚಾರಣೆಗೆ
ಮನವಿ ಮಾಡಲಾಗಿತ್ತು.
ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್
ಪರಿಶೀಲನೆ ನಡೆಸಿ ವಿಚಾರಣೆಗೆ ದಿನ ನಿಗದಿ
ಮಾಡಲಿ ಎಂದು ಪೀಠವು ಆದೇಶಿಸಿತ್ತು. ಇದಾದ
ಬಳಿಕ ಅನರ್ಹ ಶಾಸಕರ ಪರ ವಕೀಲರು ಮೌಖಿಕ
ವಾಗಿ ರಿಜಿಸ್ಟ್ರಾರ್
ಬಳಿ ತುರ್ತು ವಿಚಾರಣೆಗೆ ಮನವಿ
ಮಾಡಿದ್ದರು. ಆದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೂರುದಾರರು ವಕೀಲರ ಮೇಲೆ ಒತ್ತಡ
ಹೇರಲಾರಂಭಿಸಿದರು. ಶಾಸಕರ ಅರ್ಜಿ ತಿರಸ್ಕೃತವಾಗಲಿದೆ ಎನ್ನುವುದು ಅರಿವಿತ್ತು. ಹೀಗಾಗಿ
ಅದನ್ನು ಪ್ರಸ್ತಾಪಿಸಲು ಮುಂದಾಗಲಿಲ್ಲ.ಆದ್ದರಿಂದ ಕಿರಿಯ ವಕೀಲರು ಅರ್ಜಿ ಸಲ್ಲಿಸಿದ್ದರು
ಎಂದು ಅನರ್ಹ ಶಾಸಕರ ಪರ ವಕೀಲ ಮುಕುಲ್
ರೋಹ್ಟಗಿ ತಿಳಿಸಿದರು.
2019: ವಾಷಿಂಗ್ಟನ್: ೨೦೨೯ ರಲ್ಲಿ ಭೂಮಿಯ ಸಮೀಪಕ್ಕೆ ೧೯,೦೦೦ ಮೈಲುಗಳಷ್ಟು ದೂರದಲ್ಲಿ
‘ಗಾಡ್
ಆಫ್ ಚೋಸ್’ ಎಂಬ ದೈತ್ಯಾಕಾರದ ಕ್ಷುದ್ರ ಗ್ರಹವೊಂದು ಹಾದುಹೋಗಲಿದೆ; ಇದು ಭೂಮಿಗೆ
ಅಪ್ಪಳಿಸುವ ಸಾಧ್ಯತೆಗಳಿದ್ದು, ಇದರಿಂದ ವಿನಾಶ
ಖಂಡಿತ ಎಂದು ವಿಜ್ಞಾನಿಗಳು ತಿಳಿಸಿದರು.
ಈ ಕ್ಷುದ್ರಗ್ರಹಕ್ಕೆ
‘೯೯೯೪೨- ಅಪೊಫಿಸ್ ಎಂದು
ಹೆಸರಿಡಲಾಗಿದ್ದು, ಇದು ಕಕ್ಷೆಯಲ್ಲಿರುವ ಸಂವಹನ
ಮತ್ತು ಹವಾಮಾನ ಉಪಗ್ರಹಗಳ ಅಡಿಯಲ್ಲಿ
ಹಾದುಹೋಗಲಿದೆ. ಈ ಕ್ಷುದ್ರಗ್ರಹ ಸುಮಾರು
ಗಂಟೆಗೆ ೨೫,೦೦೦ ಮೈಲುಗಳಷ್ಟು (ಎಂಪಿಎಚ್)ರಾಕೆಟ್ ವೇಗದಲ್ಲಿ ಚಲಿಸಲಿದೆ. ಹೀಗಾಗಿ ಮುಂದಿನ
ಹತ್ತು ವರ್ಷಗಳ ಕಾಲ ಅಪೊಫಿಸ್ ಕ್ಷುದ್ರಗ್ರಹದ
ಮೇಲೆ ಅನೇಕ ವಿಜ್ಞಾನಿಗಳು ಹದ್ದಿನ ಕಣ್ಣಿಟ್ಟು ಅದರ
ಮೇಲ್ಮೈ ಲಕ್ಷಣವನ್ನು ಅಭ್ಯಸಿಸಲಿದ್ದಾರೆ. ಈ ಕ್ಷುದ್ರ
ಗ್ರಹ ಎಷ್ಟು ಹತ್ತಿರದಲ್ಲಿ ಹಾದುಹೋಗಲಿದೆ ಎಂದರೆ,ಕಕ್ಷೆಯಲ್ಲಿರುವ ಹವಾಮಾನ ಉಪಗ್ರಹಗಳು
ಮತ್ತು ಭೂಮಿಯ ನಡುವೆ ಹಾದುಹೋಗಲಿದೆ! ೨೭ ಶತಕೋಟಿ (ಬಿಲಿಯನ್) ಕೆಜಿ.ಗಳಷ್ಟು
ಭಾರವಿರುವ ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ
ಒಂದು ಮೈಲಿಗಿಂತಲೂ ಹೆಚ್ಚು ಅಗಲ ಮತ್ತು ೫೧೮
ಮೀಟರ್ ಆಳದ ಕುಳಿ ನಿರ್ಮಾಣವಾಗಬಹುದು
ಎಂದು ವಿಜ್ಞಾನಿಗಳು
ಅಂದಾಜು ಮಾಡಿದ್ದಾರೆ. ೩೭೦ ಮೀಟರ್ ಅಗಲದ ಕ್ಷುದ್ರಗ್ರಹವು ಭೂಮಿಯ ಘರ್ಷಣೆಗೆ ಕಾರಣವಾಗಲಿದೆ ಎಂಬ ನಾಸಾದ
ಈ ಮಾತನ್ನು ಸಂಪೂರ್ಣ ತಳ್ಳಿಹಾಕಲು ಸಾಧ್ಯವಿಲ್ಲ. ಯಾಕೆಂದರೆ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಅದರ ಪರಿಣಾಮ ೮೮೦ ದಶಲಕ್ಷ ಟನ್ಗಳಷ್ಟು ಟಿಎನ್ಟಿ ಸ್ಫೋಟಗೊಳ್ಳುವುದಕ್ಕೆ ಸಮನಾಗಿರುತ್ತದೆಯಂತೆ! ಅಂದರೆ ಹಿರೋಷಿಮಾದ ಮೇಲೆ
ಪರಮಾಣು ಬಾಂಬ್ ಹಾಕಿದ್ದಕ್ಕಿಂತ ೬೫,೦೦೦
ಪಟ್ಟು ಶಕ್ತಿಶಾಲಿ ಎನ್ನಲಾಗಿದೆ.ಕ್ಷುದ್ರಗ್ರಹಗಳು ಖಗೋಳದಲ್ಲಿ ಸೂರ್ಯನನ್ನು
ಸುತ್ತುವ ಸಣ್ಣ ಕಲ್ಲಿನ ವಸ್ತುಗಳಾಗಿವೆ. ಇವು
ಸೂರ್ಯನನ್ನು ಸುತ್ತುತ್ತವೆಯಾದರೂ ಅವು
ಗ್ರಹಗಳಿಗಿಂತ ಚಿಕ್ಕದಾಗಿದೆ. ಕ್ಷುದ್ರಗ್ರಹಗಳು
ಭೂಮಿಗೆ ಅಪ್ಪಳಿಸಿದರೆ
ವಿನಾಶವಾಗುವ ಸಾಧ್ಯತೆ ಹೆಚ್ಚು.
ಕ್ಷುದ್ರಗ್ರಹವೊಂದು ಭೂಮಿಗೆ ಬೀಳುವ
ಪರಿಣಾಮ ಸುನಾಮಿಗಳು, ಭೀಕರ ಮಾರುತಗಳು
ಸೇರಿದಂತೆ ಹಲವು ದುರಂತಗಳಾಗಬಹುದು.ಗುರುತ್ವಾಕರ್ಷಣ ಶಕ್ತಿಗಳ ಕಾರಣದಿಂದಾಗಿ
ಕ್ಷುದ್ರಗ್ರಹಗಳು ಭೂಮಿಯ ಕಡೆಗೆ ತಲುಪಬಹುದು.ಬಾಹ್ಯಾಕಾಶ ಟೆಲಿಸ್ಕೋಪ್ ವರದಿಯಂತೆ
ಖಗೋಳದಲ್ಲಿ ೭ ಲಕ್ಷಕ್ಕೂ ಹೆಚ್ಚು ಕ್ಷುದ್ರಗ್ರಹಗಳು
ಇವೆ. ಮಂಗಳ ಮತ್ತು ಗುರು ಗ್ರಹದ ಕಕ್ಷೆಗಳ
ನಡುವೆ ಇರುವ ಪ್ರದೇಶದಲ್ಲಿ ಈ ಕ್ಷುದ್ರಗ್ರಹಗಳು
ಇವೆ ಎನ್ನಲಾಗಿದೆ.ಮುಂದೊಂದು ದಿನ ಈ ಕ್ಷುದ್ರಗ್ರಹಗಳಿಂದ
ಭೂಮಿಗೆ ಅಪಾಯ ತಪ್ಪಿದ್ದಲ್ಲ ಎಂಬ ಆತಂಕ ಮನುಕುಲವನ್ನು ಕಾಡುತ್ತಿದೆ. 2019: ವಾಷಿಂಗ್ಟನ್: ೨೦೨೯ ರಲ್ಲಿ ಭೂಮಿಯ ಸಮೀಪಕ್ಕೆ ೧೯,೦೦೦ ಮೈಲುಗಳಷ್ಟು ದೂರದಲ್ಲಿ
ಇಂದಿನ ಇತಿಹಾಸ History Today ಆಗಸ್ಟ್ 26
(2018+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment