2019: ನವದೆಹಲಿ: ಭಾರತದ ೭೩ನೇ ಸ್ವಾತಂತ್ರ್ಯ ದಿನೋತ್ಸವದ ದಿನ ದೆಹಲಿಯ ಚಾರಿತ್ರಿಕ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪುನರಾಯ್ಕೆಗೊಂಡ ತಮ್ಮ ನೂತನ ಸರ್ಕಾರವು ಕಳೆದ ೭೫ ದಿನಗಳಲ್ಲಿ ಕೈಗೊಂಡ
ಕಾರ್ಯಗಳ ಪ್ರಗತಿ ಚಿತ್ರವನ್ನು ಜನರ ಮುಂದಿಟ್ಟರು. ಜೊತೆಗೇ ಜಲಸಂರಕ್ಷಣೆಗಾಗಿ ’ಜಲ ಜೀವನ ಮಿಷನ್’ ಹಾಗೂ
ಕಾರ್ಗಿಲ್ ಯುದ್ದ ಕಾಲದಿಂದ ಎರಡು ದಶಕಗಳ ಕಾಲ ನೆನೆಗುದಿಯಲಿದ್ದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್ -ಸಿಡಿಎಸ್) ಹುದ್ದೆ ಸೃಷ್ಟಿಯ ಮಹತ್ವದ ಪ್ರಕಟಣೆಯನ್ನು ಮಾಡಿದರು. ಕೆಂಪುಕೋಟೆಯ
ಮೇಲಿನಿಂದ ತಮ್ಮ ಆರನೇ ಭಾಷಣ ಮಾಡುವ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರ ದಾಖಲೆಯನ್ನು ಸರಿಗಟ್ಟಿದ ಮೋದಿ, ಕುಟುಂಬ ಯೋಜನೆ ದೇಶಭಕ್ತಿಯ ಸೂಚಕ ಎಂಬುದಾಗಿ ಹೇಳುವ ಮೂಲಕ ಜನಸಂಖ್ಯಾ ಸ್ಫೋಟದ ಬಗ್ಗೆ ಕಳವಳ ವ್ಯಕ್ತ ಪಡಿಸಿ ಅದಕ್ಕೆ ಕಡಿವಾಣ ಹಾಕುವ ಸಾಮಾಜಿಕ ಕಾರ್ಯಸೂಚಿಯನ್ನು ಮುಂದಿಟ್ಟರು. ಆದರೆ ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಕ್ರಮದ ವಿರುದ್ಧ ಕಾಲುಕೆರೆಯುತ್ತಿರುವ ಪಾಕಿಸ್ತಾನದ ಬಗ್ಗೆ ಒಂದು ಅಕ್ಷರವನ್ನೂ ಉಲ್ಲೇಖಿಸದೆ ಅದರ ಬಗ್ಗೆ ’ದಿವ್ಯ ನಿರ್ಲಕ್ಷ್ಯ’ ನೀತಿಯನ್ನು
ಅನುಸರಿಸಿದರು. ಮೋದಿ
ಭಾಷಣದ ಎರಡು ಪ್ರಮುಖ ಪ್ರಕಟಣೆಗಳಲ್ಲಿ ಮೊದಲನೆಯದು: ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್) ನೇಮಕಾತಿಯ ಪ್ರಕಟಣೆ. ಕಾರ್ಗಿಲ್ ಸಮರದ ಬಳಿಕ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಕಾಲದಿಂದಲೇ ಸಿಡಿಎಸ್ ನೇಮಕಾತಿಯ ಬೇಡಿಕೆ ಇತ್ತು. ಸಿಡಿಎಸ್ ನೇಮಕಾತಿಯಿಂದ ರಕ್ಷಣಾ ಸಿದ್ಧತೆ ಮೇಲೆ ದೂರಗಾಮೀ ಪರಿಣಾಮಗಳಾಗುವುದಷ್ಟೇ ಅಲ್ಲ ಪದಾತಿದಳ, ನೌಕಾದಳ ಮತ್ತು ವಾಯುದಳ - ಈ ಮೂರೂ ಪಡೆಗಳ
ಮಧ್ಯೆ ಸಮನ್ವಯ ಸುಗಮಗೊಳ್ಳುವುದು. ಪ್ರಧಾನಿ
ಭಾಷಣದ ಎರಡನೇ ಪ್ರಮುಖ ಪ್ರಕಟಣೆ: ಜಲ ಸಂರಕ್ಷಣೆಗಾಗಿ ಮತ್ತು
ಜಲಮೂಲಗಳ ಪುನರುಜ್ಜೀವನಕ್ಕಾಗಿ ’ಜಲ ಜೀವನ ಮಿಷನ್’ ಸೃಷ್ಟಿ
ಮತ್ತು ಇದಕ್ಕಾಗಿ ೩.೫ ಲಕ್ಷ
ಕೋಟಿ ರೂಪಾಯಿಗಳ ಅನುದಾನ ಹಂಚಿಕೆ. ’ಭಾರತವನ್ನು ಮಾಲಿನ್ಯ ಮುಕ್ತಗೊಳಿಸಲು ಸ್ವಚ್ಛತಾ ಮಿಷನ್ನಲ್ಲಿ ಪಾಲ್ಗೊಳ್ಳಲು ರಾಷ್ಟ್ರಕ್ಕೆ ಕರೆ ನೀಡಿದಂತೆಯೇ ಜಲ ಜೀವನ್ ಮಿಷನ್ನಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮನ್ನು ಕೋರುತ್ತೇನೆ. ಜನರ ಸಾಮೂಹಿಕ ಪಾಲ್ಗೊಳ್ಳುವಿಕೆಯ ವಿನಃ ಇದು ಯಶಸ್ವಿಯಾಗದು’ ಎಂದು
ಪ್ರಧಾನಿ ನುಡಿದರು. ೭೫
ದಿನಗಳ ಪ್ರಗತಿ ಚಿತ್ರ: ಜಮ್ಮು ಮತ್ತು ಕಾಶ್ಮೀರಕ್ಕೆ ಒದಗಿಸಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಪುನರ್ ವಿಂಗಡಣೆ ಮಾಡಿದ್ದು ಹಾಗೂ ತ್ರಿವಳಿ ತಲಾಖ್ ಮಸೂದೆ ಅಂಗೀಕಾರದ ಬಗ್ಗೆ ವಿಸ್ತೃತವಾಗಿ ಮಾತನಾಡಿದ ಪ್ರಧಾನಿ, ’ಸರ್ಕಾರಕ್ಕೆ ಸಮಸ್ಯೆಗಳ ಸೃಷ್ಟಿ ಅಥವಾ ಅವುಗಳನ್ನು ಉದ್ದಕ್ಕೆಳೆಯುವುದರಲ್ಲಿ ನಂಬಿಕೆ ಇಲ್ಲ. ಬದಲಿಗೆ ನಿರ್ಣಾಯಕ ಹೆಜ್ಜೆಗಳನ್ನು ಇಟ್ಟು ಪರಿಹಾರ ಹುಡುಕಲು ಗಮನ ಹರಿಸುವುದು ಎಂದು ಹೇಳಿದರು. ‘೩೭೦ನೇ
ವಿಧಿಯನ್ನು ಬೆಂಬಲಿಸುವವರನ್ನು ನಾನು ಪ್ರಶ್ನಿಸುತ್ತಿದ್ದೇನೆ, ಇದು ಅಷ್ಟೊಂದು ಮಹತ್ವದ್ದು ಹಾಗೂ ಜೀವನ ಪರಿವರ್ತಿಸುವಂತಹುದಾಗಿದ್ದರೆ ಈ ವಿಧಿಯನ್ನು ಏಕೆ
ಕಾಯಂ ಮಾಡಲಿಲ್ಲ? ಭಾರೀ ಜನಾದೇಶ ಪಡೆದಿದ್ದವುರು ೩೭೦ನೇ ವಿಧಿಯ ತಾತ್ಕಾಲಿಕ ಸ್ಥಾನಮಾನವನ್ನು ಕಿತ್ತು ಹಾಕಬಹುದಾಗಿತ್ತಲ್ಲ?’ ಎಂದು ಅವರು ಕೇಳಿದರು. ಜಮ್ಮು
ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಿನಿಂದ ರಾಜ್ಯದಲ್ಲಿ ಸಮಾಜದ ಹಿಂದುಳಿದ ವರ್ಗಗಳು ಹಾಗೂ ಭಾರತ
ವಿಭಜನೆಯ ಬಳಿಕ ರಾಜ್ಯಕ್ಕೆ ಬಂದಿರುವ ಲಕ್ಷಾಂತರ ಮಂದಿ ವಲಸೆಗಾರರಿಗೆ ನ್ಯಾಯ ಹಾಗೂ ಅಭಿವೃದ್ಧಿಯ ಖಾತರಿ ಲಭಿಸಿದೆ.. ’ಈಗ ನಾವು ಒಂದು
ರಾಷ್ಟ್ರ, ಒಂದು ಸಂವಿಧಾನ ಎಂಬುದಾಗಿ ಹೆಮ್ಮೆಯಿಂದ ಹೇಳಬಹುದು’
ಎಂದು ಪ್ರಧಾನಿ ನುಡಿದರು. ‘ಸಾಮಾಜಿಕ
ಅನಿಷ್ಠಗಳಾದ ’ಸತಿ’ ಪದ್ಧತಿಯನ್ನು ರದ್ದು ಪಡಿಸಬಹುದಾಗಿದ್ದರೆ, ತ್ರಿವಳಿ ತಲಾಖ್ ನಿರ್ಮೂಲನದ ಮೂಲಕ ನ್ಯಾಯ ಪಡೆಯಲು ಮುಸ್ಲಿಂ ಸಹೋದರಿಯರೂ ಅರ್ಹತೆ ಹೊಂದಿದ್ದಾರೆ’ ಎಂಬುದಾಗಿ
ಹೇಳುವ ಮೂಲಕ ತ್ರಿವಳಿ ತಲಾಖ್ ಮಸೂದೆ ಅಂಗೀಕಾರಕ್ಕೆ ಪ್ರಬಲವಾದ ಒತ್ತನ್ನು ಪ್ರಧಾನಿ ನೀಡಿದರು. ಪರಿಸರ
ಕಾಳಜಿ, ಜನಸಂಖ್ಯಾ ಸ್ಫೋಟ: ಪರಿಸರಕ್ಕೆ ಸಂಬಂಧಿಸಿದಂತೆ ವಿಶೇಷ ಕಾಳಜಿಯನ್ನು ವ್ಯಕ್ತ ಪಡಿಸಿದ ಪ್ರಧಾನಿ ಇದನ್ನು ಸಾಧಿಸಲು ಜನರು ತಮ್ಮ ವರ್ತನೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು. ’ಜನಸಂಖ್ಯಾ ನಿಯಂತ್ರಣದ ಪ್ರಬಲ ಪ್ರತಿಪಾದನೆ ಮಾಡಿದ ಮೋದಿ, ಸಣ್ಣ ಕುಟುಂಬದ ಮಿತಿ ಅನುಸರಿಸುವುದು ದೇಶಪ್ರೇಮದ ದ್ಯೋತಕ’ ಎಂದು ಬಣ್ಣಿಸಿದರು. ’ರಾಷ್ಟ್ರದಲ್ಲಿನ ಜನಸಂಖ್ಯಾ ಸ್ಫೋಟವು ಮುಂಬರುವ ತಲೆಮಾರುಗಳಿಗೆ ವಿವಿಧ ಸಮಸ್ಯೆಗಳನ್ನು ಸೃಷ್ಟಿಸಲಿದೆ. ಸಣ್ಣ ಕುಟುಂಬಗಳ ನೀತಿಯನ್ನು ಪಾಲಿಸುತ್ತಿರುವವರು ರಾಷ್ಟ್ರದ ಅಭಿವೃದ್ಧಿಗೆ ಕಾಣಿಕೆ ನೀಡುತ್ತಿದ್ದು, ಇದು ಕೂಡಾ ದೇಶಪ್ರೇಮದ ಒಂದು ವಿಧವಾಗಿದೆ’
ಎಂದು ಅವರು ನುಡಿದರು. ಪ್ಲಾಸ್ಟಿಕ್ ನಿರ್ಮೂಲನೆ: ಮಹಾತ್ಮಾ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ ೨ರಿಂದ ಪ್ಲಾಸ್ಟಿಕ್ಕನ್ನು ಒಂದೇ ಬಾರಿ ಬಳಸುವುದರಿಂದಲೂ ಮುಕ್ತಿ ಪಡೆಯುವ ಗುರಿಯನ್ನು ಅವರು ಒತ್ತಿ ಹೇಳಿದರು. ತಮ್ಮ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿರುತ್ತೇಜನಗೊಳಿಸುವಂತೆ ವ್ಯಾಪಾರಿಗಳನ್ನು ಒತ್ತಾಯಿಸಿದ ಪ್ರಧಾನಿ, ಈ ಸಲದ ದೀಪಾವಳಿ
ಕಾಲದಲ್ಲಿ ಬಟ್ಟೆಯ ಚೀಲಗಳಲ್ಲಿ ’ಕೊಡುಗೆ’ ಕೊಡುವಂತೆ ಜನರಿಗೆ ಮನವಿ ಮಾಡಿದರು. ರಾಸಾಯನಿಕ
ಆಧಾರಿತ ರಸಗೊಬ್ಬರಗಳನ್ನು ತ್ಯಜಿಸುವಂತೆ ರೈತರಿಗೆ ವಿಶೇಷ ಮನವಿ ಮಾಡಿದ ಪ್ರಧಾನಿ ತಮ್ಮ ಹಿಡುವಳಿಯಲ್ಲಿ ಕನಿಷ್ಠ ಶೇಕಡಾ ೨೦-೨೫ರಷ್ಟು ಭೂಮಿಯನ್ನು
ರಾಸಾಯನಿಕ ರಸಗೊಬ್ಬರಗಳಿಂದ ಮುಕ್ತಗೊಳಿಸಿ ಎಂದು ಕೋರಿದರು. ’ಭಾರತ್ ಮಾತಾ ಕೀ ಜಯ್ ಎಂಬುದಾಗಿ
ನಾವು ಘೋಷಿಸುವಾಗ ತಾಯ್ನಾಡಿನ ಆರೋಗ್ಯದ ಕಡೆಗೂ ನಾವು ಕಾಳಜಿ ವಹಿಸಬೇಕು’
ಎಂದು ಮೋದಿ ನುಡಿದರು. ಜನರ
ದೈನಂದಿನ ಬದುಕಿನಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆಗೊಳಿಸುವ ವಿಧಿ ವಿಧಾನಗಳನ್ನು ಕಂಡುಕೊಳ್ಳುವಂತೆ ತಮ್ಮ ಸರ್ಕಾರದ ಆಡಳಿತಗಾರರು, ಸಿಬ್ಬಂದಿಗೂ ಪ್ರಧಾನಿ ಒತ್ತಾಯಿಸಿದರು. ರಾಷ್ಟ್ರದ
ಬಗ್ಗೆ ಚೆನ್ನಾಗಿ ತಿಳಿಯುವುದಕ್ಕಾಗಿ ಮಾತ್ರವೇ ಅಲ್ಲ, ಪ್ರವಾಸೋದ್ಯಮ ರಂಗಕ್ಕೆ ಒತ್ತ ಕೊಡುವ ಸಲುವಾಗಿ, ಮುಂದಿನ ವರ್ಷ ಭಾರತದ ಕನಿಷ್ಠ ೧೫ ಸ್ಥಳಗಳಿಗೆ ಪ್ರವಾಸ
ಮಾಡುವಂತೆ ಪ್ರಧಾನಿ ಯುವಕರಿಗೆ ವಿಶೇಷ ಮನವಿ ಮಾಡಿದರು. ಪಾಕಿಸ್ತಾನದ
ಬಗ್ಗೆ ದಿವ್ಯ ನಿರ್ಲಕ್ಷ್ಯ: ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ನೆರೆ ರಾಷ್ಟ್ರವಾದ ಪಾಕಿಸ್ತಾನದ ಬಗ್ಗೆ ಒಂದೇ ಒಂದು ಅಕ್ಷರವನ್ನೂ ಉಸುರಲಿಲ್ಲ. ಆದರೆ, ಭಾರತದಂತೆ ತಮ್ಮ ಗಡಿಯಾಚೆಗಳಿಂದ ಭಯೋತ್ಪಾದನೆಯ ಹಾವಳಿಗೆ ತುತ್ತಾಗುತ್ತಿರುವ ಬಾಂಗ್ಲಾದೇಶ, ಶ್ರೀಲಂಕಾ ಮತ್ತಿತರ ನೆರೆಯ ರಾಷ್ಟ್ರಗಳ ಬಗ್ಗೆ ಪ್ರಸ್ತಾಪ ಮಾಡಿದರು. ಆಫ್ಘಾನಿಸ್ಥಾನಕ್ಕೆ ಅದರ ಸ್ವಾತಂತ್ರ್ಯ ಶತಮಾನೋತ್ಸವಕ್ಕಾಗಿ ಪ್ರಧಾನಿ ಶುಭ ಹಾರೈಸಿದರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಬುಧವಾರ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಕಾಶ್ಮೀರದ ಜೊತೆ ಸಮಗ್ರತಾ ದಿನವಾಗಿ ಆಚರಿಸಿದ್ದಲ್ಲದೆ, ’ಭಾರತ ತಮ್ಮ ವಿರುದ್ಧ ಕ್ರಮ ಕೈಗೊಳ್ಳಲಿ, ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ’ ಎಂಬುದಾಗಿ
ಕೆಣಕುವಂತಹ ಮಾತುಗಳನ್ನು ಆಡಿದ್ದರು. ರಾಷ್ಟ್ರದ
ಆರ್ಥಿಕ ಸ್ಥಿತಿಗತಿ ಸ್ವಲ್ಪ ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರು ಆರ್ಥಿಕತೆಯ ಅಡಿಪಾಯ ಭದ್ರವಾಗಿದೆ ಮತ್ತು ತಮ್ಮ ಸಕಾರ ಮುಂದಿನ ಐದು ವರ್ಷಗಳಲ್ಲಿ ೧೦೦ ಲಕ್ಷ ಕೋಟಿ ರೂಪಾಯಿಗಳನ್ನು ಮೂಲಸವಲತ್ತು ಕ್ಷೇತ್ರದಲ್ಲಿ ಹೂಡಿಕೆಗಾಗಿ ಮೀಸಲಿರಿಸಿದೆ, ಇದು ಆರ್ಥಿಕತೆಯನ್ನು ಮೇಲೆತ್ತಲಿದೆ ಎಂದು ಹೇಳಿದರು. ’ಭಾರತ ಇನ್ಕ್ರಿಮೆಂಟ್ ಆಧಾರಿತ ಪ್ರಗತಿಯನ್ನು ಬಯಸುವುದಿಲ್ಲ. ಹೈಜಂಪ್‌ನ ಅಗತ್ಯವಿದೆ. ನಮ್ಮ
ಯೋಚನಾ ಪ್ರಕ್ರಿಯೆ ವಿಸ್ತರಣೆಯಾಗಬೇಕಾಗಿದೆ. ಜಗತ್ತಿನ ಅತ್ಯುತ್ತಮ ಅಭ್ಯಾಸಗಳು ಮತ್ತು ಉತ್ತಮ ವ್ಯವಸ್ಥೆಗಳನ್ನು ನಾವು ಮನಸ್ಸಿನಲ್ಲಿ ಇರಿಸಿಕೊಳ್ಳಬೇಕಾಗಿದೆ’ ಎಂದು
ಮೋದಿ ನುಡಿದರು.
2019: ನವದೆಹಲಿ: ಎರಡನೇ ಅವಧಿಯ ತಮ್ಮ ಚೊಚ್ಚಲ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೇನೆಗೆ ಸಂಬಂಧಿಸಿದಂತೆ ’ರಕ್ಷಣಾ
ಸಿಬ್ಬಂದಿ ಮುಖ್ಯಸ್ಥ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್ -ಸಿಡಿಎಸ್) ಸೃಷ್ಟಿಯ ಮಹತ್ವದ ಸುಧಾರಣಾ ಕ್ರಮವನ್ನು ಪ್ರಕಟಿಸಿದರು. ಈ
ಅಧಿಕಾರಿಯು ಭಾರತದ ಭೂ, ವಾಯು, ನೌಕಾಪಡೆ ಮುಖ್ಯಸ್ಥರಿಗಿಂತ ಮೇಲಿನ ಸ್ಥಾನ ಪಡೆಯಲಿದ್ದು, ರಕ್ಷಣಾ ಸಚಿವರ ಏಕೈಕ ರಕ್ಷಣಾ ಸಲಹೆಗಾರರಾಗಲಿದ್ದಾರೆ. ಭಾರತೀಯ
ಸೇನೆಗೆ ಸಂಬಂಧಿಸಿದಂತೆ ಇದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದ್ದು ಎರಡು ದಶಕಗಳಿಗೂ ಹೆಚ್ಚು ಕಾಲ ಈ ಕುರಿತ ಪ್ರಸ್ತಾಪ
ನೆನೆಗುದಿಯಲ್ಲಿತ್ತು. ’ಸುಧಾರಣೆ
ಕೂಡಾ ಅಗತ್ಯ. ರಕ್ಷಣಾ ಸುಧಾರಣೆ ಸುದೀರ್ಘ ಕಾಲದಿಂದ ನೆನೆಗುದಿಯಲ್ಲಿತ್ತು. ಹಲವಾರು ಬಾರಿ ವರದಿಗಳು ಮಂಡನೆಯಾಗಿದ್ದವು. ಯುದ್ಧದ ನಿಯಮಗಳು ಬದಲಾಗುತ್ತಿದ್ದು ಭಾರತದ ಯೋಚನೆ ನೀರ್ಗುಳ್ಳೆಯಾಗಬಾರದು. ನಮ್ಮ ಪಡೆಗಳು ಭಾರತದ ಹೆಮ್ಮೆ. ನಮ್ಮ ಪಡೆಗಳ ಮಧ್ಯೆ ಸಮನ್ವಯವನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ಸಲುವಾಗಿ, ಪ್ರಮುಖ ತೀರ್ಮಾನವನ್ನು ಕೆಂಪುಕೋಟೆಯಿಂದ ಪ್ರಕಟಿಸಲು ನಾನು ಬಯಸಿದ್ದೇನೆ. ಭಾರತವು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನು (ಸಿಡಿಎಸ್) ಹೊಂದಲಿದೆ’
ಎಂದು ಪ್ರಧಾನಿ ಗುರುವಾರ ತಮ್ಮ ಭಾಷಣದಲ್ಲಿ ಪ್ರಕಟಿಸಿದರು. ಮೂರು
ಸಶಸ್ತ್ರ ಪಡೆಗಳ ಮಧ್ಯೆ ದೈನಂದಿನ ಮತ್ತು ಸಂಕಷ್ಟ ಕಾಲದಲ್ಲಿನ ಆಡಳಿತ ನಿರ್ವಹಣೆ, ತರಬೇತಿ, ಸಾಗಣೆ, ಯೋಜನೆ ಮತ್ತು ದಾಸ್ತಾನು ವಿಚಾರದಲ್ಲಿ ಸಮನ್ವಯ ಸಾಧಿಸಲು ಏಕ ಕೇಂದ್ರ ಸಂಪರ್ಕ
ವ್ಯವಸ್ಥೆ ಸೃಷ್ಟಿಸುವ ಉದ್ದೇಶದ ಈ ಕ್ರಮ ದಶಕಗಳಿಂದ
ಬಾಕಿ ಬಿದ್ದಿತ್ತು. ಆಗ ಮೂರೂ ಪಡೆಗಳ
ಮುಖ್ಯಸ್ಥರಾಗಿದ್ದ ನೌಕಾ ಪಡೆ ಮುಖ್ಯಸ್ಥ ಚೀಫ್ ಅಡ್ಮಿರಲ್ ಸುನಿಲ್ ಲಂಬಾ, ಸೇನಾ ದಂಡನಾಯಕ ಬಿಪಿನ್ ರಾವತ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ
ಅವರು ಕಳೆದ ವರ್ಷ ಸಭೆ
ಸೇರಿದ್ದಾಗ ಸಿಡಿಎಸ್ ಕಲ್ಪನೆ ಜಾರಿಯಾಗುವ ಲಕ್ಷಣಗಳು ಕಂಡು ಬಂದಿದ್ದವು. ಆಗ ರಕ್ಷಣಾ ಸಚಿವರಾಗಿದ್ದ
ಮನೋಹರ ಪರಿಕ್ಕರ್ ಮತ್ತು ಪ್ರಧಾನಿ ಮೋದಿ ಸಭೆಯ ನೇತೃತ್ವ ವಹಿಸಿದ್ದರು. ಮೂರೂ
ಪಡೆಗಳ ಮಧ್ಯೆ ಜಂಟಿ ತರಬೇತಿಗಾಗಿ ಸಮನ್ವಯ ಸಾಧನೆ ಸಲುವಾಗಿ ನಾಲ್ಕನೇ ನಾಲ್ಕು ಸ್ಟಾರ್ ಜನರಲ್ ಹುದ್ದೆ ಸೃಷ್ಟಿಸುವ ಕುರಿತ ಸುಧಾರಣಾ ಪ್ರಸ್ತಾಪದ ಬಗ್ಗೆ ಆಗ ಚರ್ಚೆ ನಡೆದಿತ್ತು.
ಸಿಡಿಎಸ್ ಅವರ ಅಧಿಕಾರ, ಹೊಣೆಗಾರಿಕೆಗಳು, ಶ್ರೇಣಿ ಮತ್ತು ಖಾತೆಗಳ ಬಗ್ಗೆ ತತ್ ಕ್ಷಣಕ್ಕೆ ಯಾವುದೇ ಸ್ಪಷ್ಟತೆ ಇಲ್ಲವಾದರೂ, ಈ ನಿಟ್ಟಿನಲ್ಲಿ ಮೋದಿ
ಅವರು ದಾಳ ಉರುಳಿಸಿದ್ದಾರೆ. ಈ
ಕುರಿತ ಔಪಚಾರಿಕ ಪ್ರಕಟಣೆ ಶೀಘ್ರದಲ್ಲೇ ಬರುವ ನಿರೀಕ್ಷೆ ಇದೆ. ಮೂರು ಪಡೆಗಳ ಪ್ರಸ್ತುತ ಮುಖ್ಯಸ್ಥರಲ್ಲಿ ಯಾರನ್ನು ಸಿಡಿಎಸ್ ಆಗಿ ನೇಮಿಸಬಹುದು ಎಂಬುದೂ ತತ್ ಕ್ಷಣಕ್ಕೆ ಸ್ಪಷ್ಟವಿಲ್ಲ. ಏರ್ ಚೀಫ್ ಮಾರ್ಷಲ್ ಬಿ ಎಸ್ ಧನೋವಾ
ಅವರು ಮೂರು ಪಡೆಗಳ ಮುಖ್ಯಸ್ಥರ ಪೈಕಿ ಅತ್ಯಂತ ಹಿರಿಯರಾಗಿದ್ದು, ಡಿಸೆಂಬರ್ ೩೧ರಂದು ನಿವೃತ್ತರಾಗಲಿರುವ ಜನರಲ್ ಬಿಪಿನ್ ರಾವತ್ ಅವರು ಏರ್ ಚೀಫ್ ಮಾರ್ಷಲ್ ಅವರ ನಿವೃತ್ತಿಯ ಬಳಿಕ ಈ ಹುದ್ದೆಗಾಗಿ ಮುಂಚೂಣಿಯಲ್ಲಿದ್ದಾರೆ
ಎನ್ನಲಾಯಿತು. ಯಾವಾಗಿನ ಕಲ್ಪನೆ? ೧೯೯೯ರ
ಕಾರ್ಗಿಲ್ ಯುದ್ಧದ ಬಳಿಕ, ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಷ್ಟ್ರದ
ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ಅಧ್ಯಯನ ಮಾಡಲು ರಚಿಸಲಾಗಿದ್ದ ಅಂತಾರಾಷ್ಟ್ರೀಯ ವ್ಯೂಹ ತಜ್ಞ ಕೆ. ಸುಬ್ರಮಣ್ಯಂ ನೇತೃತ್ವದ ಉನ್ನತ ಸಮಿತಿಯು ಮೂರೂ ಪಡೆಗಳು ಏಕೈಕ ರಕ್ಷಣಾ ಸಿಬ್ಬಂದಿ ಮುಖ್ಯಸ್ಥನನ್ನು ಹೊಂದಿರಬೇಕು ಎಂದು ಶಿಫಾರಸು ಮಾಡಿತ್ತು. ಸಿಡಿಎಸ್
ಅವರು ಪಂಚ ತಾರಾ ಸೇನಾ ಅಧಿಕಾರಿ (ಫೈವ್ ಸ್ಟಾರ್ ಮಿಲಿಟರಿ ಆಫೀಸರ್) ಆಗಿರಬೇಕು ಮತ್ತು ರಕ್ಷಣಾ ಸಚಿವರ ಏಕೈಕ ಸೇನಾ ಸಲಹೆಗಾರರಾಗಿರಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಇದಲ್ಲದೆ, ೨೦೦೧ರಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸುಧಾರಣೆ ಕ್ರಮಗಳ ಅನ್ವೇಷಣೆಗಾಗಿ ರಚಿಸಲಾಗಿದ್ದ ಸಚಿವರ ತಂಡ ಕೂಡಾ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಹುದ್ದೆ ಸೃಷ್ಟಿಸಲು ಒಲವು ವ್ಯಕ್ತ ಪಡಿಸಿತ್ತು. ಪ್ರಧಾನಿಯವರ ಕಚೇರಿ ಮತ್ತು ರಕ್ಷಣಾ ಸಚಿವಾಲಯದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ ಮಾಜಿ ಆಡಳಿತ ಅಧಿಕಾರಿ ನರೇಶ ಚಂದ್ರ ನೇತೃತ್ವದ ೧೪ ಮಂದಿಯ ಇನ್ನೊಂದು
ಸಮಿತಿ ಕೂಡಾ ಸಿಬ್ಬಂದಿ ಮುಖ್ಯಸ್ಥರ ಸಮಿತಿಗೆ (ಚೀಫ್ಸ್ ಆಫ್ ಸ್ಟಾಫ್ ಕಮಿಟಿ- ಸಿಒಎಸ್ಸಿ) ಕಾಯಂ ಅಧ್ಯಕ್ಷ ಹುದ್ದೆ ಸೃಷ್ಟಿಸಲು ಶಿಫಾರಸು ಮಾಡಿತ್ತು. ಸಿಒಎಸ್ಸಿಯು ರಾಷ್ಟ್ರೀಯ ಭದ್ರತಾ ಸಲಹೆಗಾರರು ಹೊಂದಿರುವ ಹುದ್ದೆಯಾಗಿದ್ದು, ಅದನ್ನು ಪೂರ್ಣಕಾಲಿಕ ಹುದ್ದೆಯನ್ನಾಗಿ ಮೂರೂ ಪಡೆಗಳ ಹಿರಿಯ ವ್ಯಕ್ತಿ ಹೊಂದಿರಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಬಳಿಕ ೨೦೧೬ರಲ್ಲಿ ನಿವೃತ್ತ ಸೇನಾ ದಂಡನಾಯಕ ಎನ್ ಸಿ ವಿಜ್ ಅವರು
ಸರ್ಕಾರಕ್ಕೆ ರಾಷ್ಟ್ರೀಯ ಭದ್ರತೆಯ ವಿಚಾರಗಳಲ್ಲಿ ಸಲಹೆ ನೀಡುವ ಏಕೈಕ ಕೇಂದ್ರವಾಗಿ ಸಿಡಿಎಸ್ ಸೃಷ್ಟಿಯ ಬಗ್ಗೆ ಸಲಹೆ ಮಾಡಿದ್ದರು. ಏನಿದ್ದರೂ,
ಈವರೆಗಿನ ಯಾವುದೇ ಸರ್ಕಾರಕ್ಕೂ ಈ ವಿಚಾರದಲ್ಲಿ ಕಳೆದ
ಎರಡು ದಶಕಗಳಿಂದ ರಾಜಕೀಯ ಸಹಮತ ರೂಪಿಸಲು ಸಾಧ್ಯವಾಗಿರಲಿಲ್ಲ. ೨೦೦೧ರಲ್ಲಿ ರಚಿಸಲಾಗಿದ್ದ ಸಚಿವರ ಸಮಿತಿಯು ಸಿಡಿಎಸ್ ಹುದ್ದೆ ಸೃಷ್ಟಿಗೆ ಒಲವು ವ್ಯಕ್ತ ಪಡಿಸಿದರೂ ಇದನ್ನು ರಾಜಕೀಯ ಸಹಮತದೊಂದಿಗೆ ಮಾಡಬೇಕು ಎಂದು ಹೇಳಿತ್ತು. ಎಲ್ಲ ಪಕ್ಷಗಳು ಸ್ಪಂದಿಸದ ಕಾರಣ ಸಮಾಲೋಚನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ೨೦೧೬ರಲ್ಲಿ ಸರ್ಕಾರವು ಸಂಸತ್ತಿಗೆ ತಿಳಿಸಿತ್ತು. ಆದರೆ
ವಾಸ್ತವವಾಗಿ, ರಾಜಕಾರಣಿಗಳ ವರ್ಗದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ
ಇದ್ದ ಅನುಮಾನವನ್ನು ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎಚ್.ಎಸ್. ಪನಾಗ್ ಅವರು ಇತ್ತೀಚೆಗೆ ಲೇಖನವೊಂದರಲ್ಲಿ ಹೀಗೆ ಉಲ್ಲೇಖಿಸಿದ್ದರು: ’ಸಶಸ್ತ್ರ ಪಡೆಗಳ ಮೇಲೆ ರಾಜಕೀಯ ನಿಯಂತ್ರಣ ಇರುವುದು ಸಂವಿಧಾನದಲ್ಲೇ ಖಚಿತವಾಗಿರುವುದರ ಹೊರತಾಗಿಯೂ, ರಾಜಕಾರಣಿಗಳಿಗೆ ಇಂತಹುದೊಂದು ಅನುಮಾನವಿದೆ. ಅವರು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಎಂಬ ಒಬ್ಬ ವ್ಯಕ್ತಿಯ ಕೈಗಳಲ್ಲಿ ಸೇನೆಯ ಕಾರ್‍ಯ ನಿರ್ವಹಣಾ ಶಕ್ತಿಯು
ಕೇಂದ್ರೀಕೃತವಾಗುವುದನ್ನು
ಅವರು ಬಯಸುತ್ತಿಲ್ಲ’. ಪೀಪಲ್ಸ್ ಲಿಬರೇಶನ್ ಆರ್ಮಿಯು (ಪಿಎಲ್ ಎ) ಸಿಡಿಎಸ್ ಮಾದರಿ
ಹುದ್ದೆ ಸೃಷ್ಟಿಯತ್ತ ಸಾಗುತ್ತಿದ್ದಾಗ ಚೀನೀ ಅಧಿಕಾರಿಯೊಬ್ಬರು ತಮ್ಮ ಸಲಹೆ ಪಡೆದಿದ್ದರು ಎಂದೂ ಪನಾಗ್ ಅವರು ಬರೆದಿದ್ದರು. ’ಪಿಎಲ್‌ಎ, ಸೇನೆ, ನೌಕಾಪಡೆ,
ವಾಯುಪಡೆ ಮತ್ತು ರಾಕೆಟ್ ಪಡೆಗಳು ಐವರು ಮುಖ್ಯಸ್ಥರನ್ನು ಹೊಂದಿದ್ದು ಅವರೆಲ್ಲರೂ ’ಉರುಂಕಿ’ಯಲ್ಲಿ ಜಂಟಿ ಮುಖ್ಯಸ್ಥನನ್ನು ಹೊಂದಿದ್ದಾರೆ. ಅವರು ಕೇಂದ್ರೀಯ ಮಿಲಿಟರಿ ಕಮೀಷನ್ ಅಡಿಯಲ್ಲಿ ಕಾರ್‍ಯ ನಿರ್ವಹಿಸುತ್ತಾರೆ.
ನಾವೂ ಮೂರು ಪಡೆಗಳನ್ನು ಹೊಂದಿದ್ದು, ಮೂರು ಪಡೆಗಳು ಅವರಂತೆಯೇ -ಪಶ್ಚಿಮ, ಕೇಂದ್ರ, ಪೂರ್ವ ಮತ್ತು ಪಶ್ಚಿಮ ಈ ನಾಲ್ಕು ಹೆಸರುಗಳಲ್ಲಿ
ವಿವಿಧ ಕೇಂದ್ರಗಳನ್ನು ಹೊಂದಿವೆ’ ಎಂದು ಪನಾಗ್ ಬರೆದಿದ್ದರು. ಹಿಂದಿನ ರಾಜಕೀಯ ನಾಯಕರಿಗೆ ವ್ಯತಿರಿಕ್ತವಾಗಿ, ದೀರ್ಘ ಕಾಲದಿಂದ ನೆನೆಗುದಿಯಲ್ಲಿದ್ದ ಬೇಡಿಕೆ ಈಡೇರಿಕೆಯತ್ತ ಹಿಂದಿನ ನಾಯಕರು ಪ್ರದರ್ಶಿಸದೇ ಇದ್ದ ಆತ್ಮವಿಶ್ವಾಸ ಮತ್ತು ದಿಟ್ಟ ನಡೆಯನ್ನು ಪ್ರಧಾನಿ ಮೋದಿಯವರು ಇದೀಗ ಪ್ರದರ್ಶಿಸಿದರು. ಪ್ರಧಾನಿಯವರ ಪ್ರಕಟಣೆಗೆ ಪ್ರತಿಕ್ರಿಯಿಸಿದ ಕಾರ್ಗಿಲ್ ಸಮರ ಕಾಲದಲ್ಲಿ ಸೇನಾ ಮುಖ್ಯಸ್ಥರಾಗಿದ್ದ ಜನರಲ್ (ನಿವೃತ್ತ) ವಿ ಪಿ ಮಲಿಕ್
ಅವರು ’ಸಿಡಿಎಸ್ ಸಂಸ್ಥೆಯ ಸೃಷ್ಟಿಯೆಡೆಗೆ ಚಾರಿತ್ರಿಕ ಹೆಜ್ಜೆಯನ್ನು ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು ಪ್ರಧಾನಿ ಮೋದಿ. ಈ ಕ್ರಮವು ನಮ್ಮ
ರಾಷ್ಟ್ರೀಯ ಭದ್ರತೆಯನ್ನು ಇನ್ನಷ್ಟು ಪರಿಣಾಮಕಾರಿ ಮತ್ತು ಹೆಚ್ಚು ಮಿತವ್ಯಯಕಾರಿಯನ್ನಾಗಿ ಮಾಡಲಿದೆ. ಉತ್ತಮ ಜಂಟಿ ಕಾರ್ಯನಿರ್ವಹಣೆ ಮತ್ತು ಬಹುಶಿಸ್ತಿನ ಸಮನ್ವಯದ ಖಾತರಿಯನ್ನು ಇದು ನೀಡಲಿದೆ. ವಂದನೆಗಳು’
ಎಂದು ಟ್ವೀಟ್ ಮಾಡಿದರು.
2019: ವಿಶ್ವಸಂಸ್ಥೆ/ ಇಸ್ಲಾಮಾಬಾದ್:
ಪಾಕಿಸ್ತಾನದ ಸಾರ್ವಕಾಲಿಕ ಮಿತ್ರರಾಷ್ಟ್ರವಾಗಿರುವ ಚೀನಾದ ಆಗ್ರಹದ ಮೇರೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಭಾರತದ ಕ್ರಮದ ಬಗ್ಗೆ ಶುಕ್ರವಾರ (2019 ಆಗಸ್ಟ್ ೧೬) ರಹಸ್ಯ ಸಮಾಲೋಚನೆ ನಡೆಸಲಿದೆ ಎಂದು ವಿಶ್ವಸಂಸ್ಥೆಯ ಉನ್ನತ ರಾಜತಂತ್ರಜ್ಞರೊಬ್ಬರು ತಿಳಿಸಿದರು. ಪಾಕಿಸ್ತಾನವು ಭದ್ರತಾ ಮಂಡಳಿ ಅಧ್ಯಕ್ಷರಿಗೆ ಬರೆದ ಪತ್ರದ ಹಿನ್ನೆಲೆಯಲ್ಲಿ, ಚೀನಾವು ಇತ್ತೀಚೆಗೆ ರಹಸ್ಯ ಸಭೆಗಾಗಿ ಮನವಿ ಪತ್ರ ಸಲ್ಲಿಸಿದ್ದು ಶುಕ್ರವಾರ ಬೆಳಗ್ಗೆ ಸಭೆಯ ನಡೆಯುವ ಸಾಧ್ಯತೆ ಇದೆ ಎಂದು ಅನಾಮಧೇಯರಾಗಿ ಉಳಿಯಬಯಸಿದ ರಾಜತಂತ್ರಜ್ಞ ಹೇಳಿದರು.
ಭದ್ರತಾ ಮಂಡಳಿ ಕಾರ್ಯಸೂಚಿಯಲ್ಲಿ ’ಭಾರತ-ಪಾಕಿಸ್ತಾನ ಪ್ರಶ್ನೆ ಬಗ್ಗೆ ರಹಸ್ಯ ಸಮಾಲೋಚನೆ ನಡೆಸುವಂತೆ ಚೀನಾ ಕೋರಿದೆ. ಪಾಕಿಸ್ತಾನವು ಭದ್ರತಾ ಮಂಡಳಿ ಅಧ್ಯಕ್ಷರಿಗೆ ಬರೆದ ಪತ್ರವನ್ನು ಉಲ್ಲೇಖಿಸಿ ಚೀನಾ ಈ ಮನವಿ ಮಾಡಿದೆ
ಎಂದು ರಾಜತಂತ್ರಜ್ಞ ತಿಳಿಸಿದರು.
ಆಗಸ್ಟ್ ತಿಂಗಳಿಗೆ
ಮಂಡಳಿಯ ಅಧ್ಯಕ್ಷರಾಗಿರುವ ಪೋಲಂಡ್ ಸಭೆಗೆ ದಿನಾಂಕ ಮತ್ತು ಸಮಯ ನಿಗದಿ ಪಡಿಸುವ ಮುನ್ನ ಮಂಡಳಿಯ ಇತರ ಸದಸ್ಯರ ಜೊತೆ ಸಮಾಲೋಚಿಸಬೇಕಾಗಿದೆ ಎಂದು ರಾಜತಂತ್ರಜ್ಞ ಹೇಳಿದರು. ಸಭೆಯ ಸಮಯ ಬಗ್ಗೆ ಅಂತಿಮ ನಿರ್ಧಾರವನ್ನು ಇನ್ನೂ ಕೈಗೊಳ್ಳಲಾಗಿಲ್ಲ. ಮತ್ತು 16ರಂದು ಶುಕ್ರವಾರ ಬೆಳಗ್ಗೆ ಬೇಗನೇ ಸಭೆ ನಡೆಸುವುದು ಇರುವ ಆಯ್ಕೆಯಾಗಿದ ಎಂದು ಅಧಿಕಾರಿ ನುಡಿದರು. ಏನಿದ್ದರೂ, ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಜಮ್ಮು ಮತ್ತು ಕಾಶ್ಮೀರ ಪರಿಸ್ಥಿತಿಯ ಬಗ್ಗೆ ಆಗಸ್ಟ್ ೧೬ರಂದು ರಹಸ್ಯವಾಗಿ ಚರ್ಚಿಸುವ ಸಾಧ್ಯತೆಗಳಿವೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷರಾದ ಪೋಲಂಡಿನ ಜೊಯನ್ನಾ ರೊನೆಕಾ ಅವರನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿಯೊಂದು ತಿಳಿಸಿತು. ಸಮಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಜೊಯನ್ನಾ ಅವರು ’ಗುರವಾರ ಮಂಡಳಿಯು ಕಾರ್ಯ ನಿರ್ವಹಿಸುವುದಿಲ್ಲವಾದ್ದರಿಂದ ಬಹುತೇಕ ಶುಕ್ರವಾರ ಸಭೆ ನಡೆಯಬಹುದು’
ಎಂದು ಹೇಳಿದರು ಎಂದು ವರದಿ ತಿಳಿಸಿತು.
2019: ಶ್ರೀನಗರ: ಪಾಕಿಸ್ಥಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತವೂ ದಿಟ್ಟ ಉತ್ತರ ನೀಡಿದ
ಪರಿಣಾಮವಾಗಿ ಮೂವರು ಪಾಕ್ ಸೈನಿಕರು ಹತರಾದರು. ಉರಿ ಮತ್ತು ರಜೌರಿ ವಿಭಾಗದಲ್ಲಿ ಈ ಘಟನೆ ಸಂಭವಿಸಿತು. ಇದೇ ವೇಳೆ ಪಾಕ್ ಸೇನೆಯ ವಕ್ತಾರರು ಟ್ವೀಟ್ ಮಾಡಿ ಭಾರತದ ಐವರು ಸೈನಿಕರು ಹತರಾಗಿದ್ದಾಗಿ ಹೇಳಿಕೊಂಡರು.
ಭಾರತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಇದರಿಂದ ಮೂವರು ಸೈನಿಕರು ಮೃತರಾಗಿದ್ದಾರೆ.
ಪ್ರತೀಕಾರದಲ್ಲಿ ಆ ಕಡೆಯ ಐವರು ಮೃತರಾಗಿ ಬಂಕರುಗಳು
ನಾಶವಾಗಿವೆ ಎಂದು ಅವರು ಹೇಳಿದರು. ಆದರೆ ಇದನ್ನು ಭಾರತೀಯ ಭೂ ಸೇನೆ ನಿರಾಕರಿಸಿತು.
ಮೃತ ಪಾಕ್ ಸೈನಿಕರನ್ನು ನಾಯ್ಕ ತನ್ವೀರ್, ಸಿಪಾಯಿ ರಮ್ಜಾನ್, ಲ್ಯಾನ್ಸ್ ನಾಯ್ಕ ತೈಮೂರ್ ಎಂದು ಗುರುತಿಸಲಾಯಿತು.
2019:
ಮುಂಬಯಿ: ಹಿಂದಿ ಚಲನಚಿತ್ರರಂಗದ ಹಿರಿಯ ಹಾಗೂ ಮನೋಜ್ಞ ಅಭಿನಯದ ಮೂಲಕ ಚಿತ್ರರಸಿಕರ ಮನದಲ್ಲಿ ಮನೆ ಮಾಡಿದ್ದ ನಟಿ ವಿದ್ಯಾ ಸಿನ್ಹಾ (71) ಈದಿನ ನಿಧನರಾದರು. 1970ರ ದಶಕದಲ್ಲಿ ಹಲವಾರು ಪ್ರಮುಖ ಚಿತ್ರಗಳಲ್ಲಿ ಗಮನಾರ್ಹವಾಗಿ ಅಭಿನಯ ಮಾಡಿ ತಮ್ಮದೇ ಛಾಪು ಮೂಡಿಸಿದ್ದ ವಿದ್ಯಾಸಿನ್ಹಾ ಕಳೆದ ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮುಂಬಯಿಯ ಕ್ರಿಟಿಕೇಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿದ್ಯಾಸಿನ್ಹಾ ವೃತ್ತಿ ಜೀವನದ ಪ್ರಮುಖ ಚಿತ್ರಗಳಲ್ಲಿ ರಜನಿಗಂಧ ಒಂದು.
1974ರಲ್ಲಿ ಬಸು ಚಟರ್ಜಿ ನಿರ್ಮಾಣದ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ವಿದ್ಯಾ ಸಿನ್ಹಾ ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದ್ದರು.
15, ನವೆಂಬರ್ 1947ರಲ್ಲಿ ಜನಿಸಿದ್ದ ವಿದ್ಯಾಸಿನ್ಹಾ ಸ್ವಾತಂತ್ರ್ಯ ದಿನದಂದೇ ಇಹಲೋಕ ತ್ಯಜಿಸಿದರು.
18ನೇ ವಯಸ್ಸಿನಲ್ಲಿಯೇ ಮಾಡೆಲಿಂಗ್ ಕ್ಷೇತ್ರಕ್ಕೆ ಧುಮುಕಿದ ವಿದ್ಯಾ ಸಿನ್ಹಾ, ಮಿಸ್ ಬಾಂಬೆ ಕೂಡ ಆಗಿದ್ದರು.
ಛೋಟಿ ಸಿ ಬಾತ್, ರಜನಿಗಂಧ, ಪತಿ ಪತ್ನಿ ಔರ್ ವೋ, ರಾಜಾ ಕಾಕ, ಜೋಶ್ ಚಿತ್ರಗಳಲ್ಲಿ ನಟಿಸಿದ್ದರು. 12 ವರ್ಷಗಳ ತಮ್ಮ ವೃತ್ತಿ ಬದುಕಿನಲ್ಲಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿದ್ಯಾ ಸಿನ್ಹಾ ನಟಿಸಿದ್ದರು. 2011ರಲ್ಲಿ ಸಲ್ಮಾನ್ ಖಾನ್ ನಟನೆಯ ಬಾಡಿಗಾರ್ಡ್ ಚಿತ್ರದಲ್ಲಿಯೂ ವಿದ್ಯಾ ನಟಿಸಿದ್ದರು. ಚಲನಚಿತ್ರದ ನಂತರ ಟಿವಿ ಸೀರಿಯಲ್ಗಳಲ್ಲಿಯೂ ವಿದ್ಯಾ ಸಿನ್ಹಾ ತಮ್ಮ ನಟನಾ ಕೌಶಲ್ಯ ತೋರಿದ್ದರು. ಖೂಬುಲ್ ಹೈ, ಜಿಂದಗಿ ವಿನ್ಸ್,
ಕುಲ್ಫಿ ಕುಮಾರ್ ಬಜೇವಾಲಾ ಸೀರಿಯಲ್‌ನಲ್ಲಿ ವಿದ್ಯಾ ಸಿನ್ಹಾ ನಟಿಸಿದ್ದರು.
2019: ಕ್ವೆಟ್ಟಾ: ಭಾರತದ
73ನೇ ಸ್ವಾತಂತ್ರ್ಯ ದಿನಾಚರಣೆಯಂದು ಪಾಕಿಸ್ತಾನದ
ಬಲೂಚಿಸ್ತಾನ ಪ್ರಾಂತ್ಯದ ನಾಗರಿಕರು ಭಾರತೀಯರಿಗೆ ಶುಭಾಶಯ ಕೋರುವ ಜತೆಗೆ, ನಮ್ಮನ್ನು ಪಾಕ್‌ನ ಹಿಡಿತದಿಂದ ಪಾರು ಮಾಡಿ ಎಂದು ಮನವಿ ಮಾಡಿದರು.
ಪಾಕ್ ಸರಕಾರ ಮತ್ತು ಸೇನೆಯ ಪ್ರಾಬಲ್ಯದಿಂದ ಬಲೂಚಿಸ್ತಾನ ಪ್ರಾಂತ್ಯ ಮುಕ್ತಗೊಳ್ಳಬೇಕು. ಕಳೆದ
70 ವರ್ಷಗಳಲ್ಲಿ ಭಾರತೀಯ ಸಹೋದರರು ಮಾಡಿರುವ ಸಾಧನೆಗೆ ನಾವು ಹೆಮ್ಮೆಪಡುತ್ತೇವೆ. ವಿಶ್ವಾದ್ಯಂತ ಭಾರತೀಯರಿಗೆ ಗೌರವವಿದೆ. ಹಾಗಾಗಿ ಅವರು ಹೆಮ್ಮೆಯಿಂದ ಇದ್ದಾರೆ. ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಅವರು ಧ್ವನಿ ಏರಿಸಿ ನಮಗೆ ನೆರವು ನೀಡಬೇಕು ಎಂದು ಕೋರುತ್ತೇವೆ ಎಂದು ಮುಕ್ತ ಬಲೂಚಿಸ್ತಾನ ಚಳವಳಿ ಕಾರ್ಯಕರ್ತ ಅಟ್ಟಾ ಬಲೂಚ್ ಹೇಳಿದರು.
ವಿಶ್ವಸಂಸ್ಥೆಯಲ್ಲಿ ಕೂಡ ಭಾರತದ ಪ್ರತಿನಿಧಿಗಳು ಬಲೂಚಿಸ್ತಾನದಲ್ಲಿ ನಮ್ಮ ಮೇಲಿನ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಲಿ. ಸದ್ಯ ಪಾಕ್‌ನ ಹಿಡಿತದಲ್ಲಿ ಬಲೂಚಿಸ್ತಾನ ನರಳಾಡುತ್ತಿದೆ ಎಂದು ಮತ್ತೊಬ್ಬ ಮುಕ್ತ ಬಲೂಚಿಸ್ತಾನ ಚಳವಳಿ ಕಾರ್ಯಕರ್ತ ಅಶ್ರಫ್ ಶೇರ್ಜಾನ್ ಮನವಿ ಮಾಡಿದರು.
ಭಾರತೀಯರಿಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು. ಕಳೆದ ಎರಡು ದಶಕಗಳಲ್ಲಿ ನಮ್ಮ ಸ್ನೇಹ ಗಣನೀಯವಾಗಿ ವೃದ್ಧಿಯಾಗಿದೆ. ರಕ್ಷಣಾ ವಲಯ ಹಾಗೂ ಉಗ್ರ ನಿಗ್ರಹಕ್ಕಾಗಿ ನಾವು ಈಗ ಒಬ್ಬರನ್ನೊಬ್ಬರು ಸಹಕರಿಸುತ್ತಿದ್ದೇವೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿಯೂ ಪರಸ್ಪರ ನೆರವಾಗುತ್ತಿದ್ದೇವೆ ಎಂದು
ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪೆಯೋ ಹೇಳಿದರು.
ಇಂದಿನ ಇತಿಹಾಸ History Today ಆಗಸ್ಟ್ 15 (2018+ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ History Today ಆಗಸ್ಟ್ 15 (2018+ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)
No comments:
Post a Comment