2019: ನವದೆಹಲಿ: ಜಾಗತಿಕ ಆರ್ಥಿಕತೆಯ ಕುಸಿತ ಭಾರತದ ಮೇಲೂ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಗೆ ಪುನಃಶ್ಚೇತನ ನೀಡಲು ಈದಿನ ಮಹತ್ವದ ಕ್ರಮಗಳನ್ನು ಪ್ರಕಟಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕಿಂಗ್ ಕ್ಷೇತ್ರಕ್ಕೆ ೭೦,೦೦೦ ಕೋಟಿ ರೂಪಾಯಿಗಳ ನೆರವಿನ ಕೊಡುಗೆ ಘೋಷಿಸಿದರು. ಮುಂಗಡಪತ್ರದಲ್ಲಿ ವಿಧಿಸಲಾಗಿದ್ದ ಕೆಲವು ತೆರಿಗೆಗಳನ್ನೂ ರದ್ದು ಪಡಿಸಿದ ಅವರು ದೇಶ ಮತ್ತು ವಿದೇಶೀ ಹೂಡಿಕೆದಾರರ ಮೇಲೆ ವಿಧಿಸಲಾಗಿದ್ದ ’ಸೂಪರ್ ರಿಚ್’ ಸರ್ಚಾರ್ಜ್‌ನ್ನು (ಹೆಚ್ಚುವರಿ ಮೇಲ್ತೆರಿಗೆ) ಹಿಂತೆಗೆದುಕೊಳ್ಳಲಾಗಿದೆ ಎಂದೂ ಪ್ರಕಟಿಸಿದರು.ನೀತಿ ಆಯೋಗದ ಉಪಾಧ್ಯಕ್ಷ ರಾಜೀವ ಕುಮಾರ್ ಅವರು ದೇಶದ ಆರ್ಥಿಕ ಹಿಂಜರಿತವು ಕಳೆದ ೭೦ ವರ್ಷಗಳಲ್ಲೇ ಹಿಂದೆಂದೂ ಕಾಣದಂತಹುದು ಎಂಬುದಾಗಿ ಹೇಳಿದ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ವಿತ್ತ ಸಚಿವೆ, ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕ ಪ್ರಗತಿ ಗಣನೀಯವಾಗಿ ಏರಿಕೆಯಲ್ಲಿದೆ ಎಂದು ಪ್ರತಿಪಾದಿಸಿದರು. ಜಾಗತಿಕ ಆರ್ಥಿಕ ಸ್ಥಿತಿಗತಿ ಅವಲೋಕನ ಮಾಡಿದ ಸೀತಾರಾಮನ್ ಅವರು ’ವಿದೇಶೀ ಹೂಡಿಕೆದಾರರ (ಫಾರಿನ್ ಪೋರ್ಟ್ಫೋಲಿಯೋ ಇನ್ವೆಸ್ಟರ್ಸ್- ಎಫ್ಪಿಐ) ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ ಶುಲ್ಕವನ್ನು ರದ್ದು ಪಡಿಸಲಾಗುವುದು ಎಂದು ಹೇಳಿದರು. ಆಟೋಮೊಬೈಲ್ ಕ್ಷೇತ್ರ ಕುಸಿಯುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದೂ ಸೀತಾರಾಮನ್ ಹೇಳಿದರು. ವಾರ್ಷಿಕ ೨ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ತೆರಿಗೆ ವಿಧಿಸಬಹುದಾದ ಆದಾಯ ಹೊಂದಿರುವವರ ಮೇಲಿನ ತೆರಿಗೆ ಯನ್ನು ಶೇಕಡಾ ೩ರಷ್ಟು ಮತ್ತು ೫ ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿರುವವರ ಮೇಲಿನ ತೆರಿಗೆಯನ್ನು ಶೇಕಡಾ ೭ರಷ್ಟು ಹೆಚ್ಚಿಸಲಾಗಿತ್ತು. ವಿದೇಶೀ ಹೂಡಿಕೆದಾರರು ಅತಿ ಶ್ರೀಮಂತರ (ಸೂಪರ್ ರಿಚ್) ಮೇಲೆ ವಿಧಿಸಲಾದ ಈ ಸರ್ಚಾಜ್‌ಗೆ ಅನುದ್ದೇಶಿತ ಗುರಿಯಾಗಿದ್ದರು. ಪರಿಣಾಮವಾಗಿ ಈ ಹೂಡಿಕೆದಾರರು ಭಾರತೀಯ ಷೇರು ವಿನಿಮಯ ಕೇಂದ್ರಗಳಿಂದ ೩ ಬಿಲಿಯನ್ (೩೦೦ ಕೋಟಿ) ಡಾಲರುಗಳನ್ನು ಹಿಂತೆಗೆದುಕೊಳ್ಳಲು ಮುಂದಾಗಿದ್ದರು. ವಿತ್ತ ಸಚಿವರ ಪತ್ರಿಕಾಗೋಷ್ಠಿಯ ಸುದ್ದಿ ಹರಡುತ್ತಿದ್ದಂತೆಯೇ ಷೇರು ಕೇಂದ್ರಗಳಲ್ಲಿ ಸಚಿವರು ಸೂಪರ್ ರಿಚ್ ಸರ್ಚಾರ್ಜ್ ಇಳಿಸಬಹುದು ಎಂಬ ನಿರೀಕ್ಷೆ ಮುಗಿಲು ಮುಟ್ಟಿತ್ತು. ’ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ, ೨೦೧೯ರ ವಿತ್ತ (ನಂ.೨) ಕಾಯ್ದೆಯ ಮೂಲಕ ಇಕ್ವಿಟಿ, ಶೇರು/ ಯುನಿಟ್ಗಳ ವರ್ಗಾವಣೆಯಿಂದ ಬರುವ ದೀರ್ಘಾವಧಿ ಮತ್ತು ಅಲ್ಪಾವಧಿಯ ಲಾಭಗಳಿಕೆ ಮೇಲೆ (ಸೆಕ್ಷನ್ ೧೧೧ಎ ಮತ್ತು ೧೧೨ಎ ಅಡಿಯಲ್ಲಿ) ವಿಧಿಸಲಾಗಿದ್ದ ಹೆಚ್ಚುವರಿ ಮೇಲ್ತೆರಿಗೆಯನ್ನು (ಎನ್ ಹ್ಯಾನ್ಸಡ್ ಸರ್ಚಾರ್ಜ್) ಹಿಂಪಡೆಯಲು ನಿರ್ಧರಿಸಲಾಗಿದೆ’ ಎಂದು ಸೀತಾರಾಮನ್ ಪ್ರಕಟಿಸಿದರು. ದೇಶೀಯ ಮತ್ತು ವಿದೇಶೀ ಹೂಡಿಕೆದಾರರ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ ಸರ್ಚಾರ್ಜ್ನ್ನು ಕಿತ್ತು ಹಾಕಲಾಗಿದ್ದು, ಅವರಿಗೆ ಮುಂಗಡಪತ್ರಕ್ಕೆ ಮುನ್ನ ಇದ್ದ ತೆರಿಗೆ ದರವನ್ನಷ್ಟೇ ಮರುಜಾರಿಗೊಳಿಸಲಾಗಿದೆ ಎಂದು ಸಚಿವರು ಹೇಳಿದರು. ವ್ಯವಹಾರ ನಡೆಸುವುದನ್ನು ಸುಲಭ, ಸರಳ ಮತ್ತು ಅಗ್ಗವನ್ನಾಗಿ ಮಾಡುವಂತಹ ಇತರ ಹಲವಾರು ಕ್ರಮಗಳನ್ನೂ ವಿತ್ತ ಸಚಿವೆ ಪ್ರಕಟಿಸಿದರು.ಜಾಗತಿಕ ಆರ್ಥಿಕ ಹಿಂಜರಿಕೆಯ ಮಧ್ಯೆಯೂ ಭಾರತೀಯ ಆರ್ಥಿಕತೆಯು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಮತ್ತು ಇದೇ ತಾನೇ ಮೇಲೆ ಬರುತ್ತಿರುವ ಇತರ ಆರ್ಥಿಕತೆಗಳಿಗಿಂತ ಉತ್ತಮವಾಗಿದೆ ಎಂದು ಸೀತಾರಾಮನ್ ಹೇಳಿದರು.ಸರ್ಕಾರವು ಸುಧಾರಣಾ ಕ್ರಮಗಳನ್ನು ಮುಂದುವರೆಸುವುದು ಎಂದೂ ಅವರು ಸ್ಪಷ್ಟ ಪಡಿಸಿದರು.ಜಾಗತಿಕ ಜಿಡಿಪಿಯನ್ನು ಶೇಕಡಾ ೩.೨ಕ್ಕೆ ನಿಗದಿ ಪಡಿಸಲಾಗಿದೆ ಮತ್ತು ಭಾರತವು ಅಮೆರಿಕ ಮತ್ತು ಜರ್ಮನಿಯಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎಂದು ಅವರು ಹೇಳಿದರು.ಜಾಗತಿಕವಾಗಿ ದುರ್ಬಲ ಬೇಡಿಕೆಯು ಬಳಕೆ ಪ್ರಮಾಣವು ಕಡಿಮೆಯಾಗುತ್ತಿರುವುದರ ಮುನ್ಸೂಚನೆ ನೀಡಿದೆ.ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಭಾರತದ ಜಿಡಿಪಿ ಬೆಳವಣಿಗೆಯು ೨೦೧೯ರ ವರ್ಷದಲಿ ಹಿಂದೆ ಅಂದಾಜು ಮಾಡಿದ್ದ ಶೇಕಡಾ ೬.೮ರ ಬದಲಿಗೆ ಶೇಕಡಾ ೬.೨ಕ್ಕೆ ಇಳಿಯಲಿದೆ ಎಂದು ಅಂದಾಜು ಮಾಡಿರುವ ಹಿನ್ನೆಲೆಯಲ್ಲಿ ಸಚಿವರು ಮಾತನಾಡಿದರು.ಸರ್ಕಾರವು ತನ್ನ ಸುಧಾರಣಾ ಕಾರ್ಯಸೂಚಿ ಮತ್ತು ವ್ಯವಹಾರವನ್ನು ಸುರಳೀತಗೊಳಿಸಲು ಕಾರ್ಮಿಕ ಸುಧಾರಣೆ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸೀತಾರಾಮನ್ ಹೇಳಿದರು.ಕಾರ್ಪೊರೇಟ್ ಸಾಮಾಜಿಕ ಬದ್ಧತೆ ಉಲ್ಲಂಘನೆ ಮಾಡುವುದು ಯಾವುದೇ ರೀತಿಯಲ್ಲೂ ಅಪರಾಧ ಅಲ್ಲ ಎಂದು ಹಣಕಾಸು ಸಚಿವರು ಸ್ಪಷ್ಟಪಡಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೊ ದರ ಕಡಿತಗೊಳಿಸಿದೆ. ಹೀಗಾಗಿ ಬ್ಯಾಂಕುಗಳು ಗ್ರಾಹಕರಿಗೆ ಬಡ್ಡಿದರ ಕಡಿತ ಮಾಡಲು ನಿರ್ಧರಿಸಿವೆ, ಇದರಿಂದ ಗೃಹ ಮತ್ತು ವಾಹನ ಸಾಲ ಬಡ್ಡಿದರ ಕಡಿಮೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ಈ ಬಾರಿಯ ವಿಜಯದಶಮಿಯ ದಿನದಿಂದ ಹಲವಾರು ಸುಧಾರಣೆ ಕ್ರಮಗಳನ್ನು ಜಾರಿಗೆ ತರಲಾಗುವುದು. ಉದ್ಯಮಿಗಳಿಗೆ, ತೆರಿಗೆದಾರರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಅವರು ನುಡಿದರು.ಜಾಗತಿಕ ಆರ್ಥಿಕತೆ ಕುಸಿದಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇದರಿಂದ ಭಾರತದ ಆರ್ಥಿಕ ಪ್ರಗತಿಯ ಮೇಲೂ ಪರಿಣಾಮ ಬೀರಿರುವುದು ಸತ್ಯ. ಆದರೂ ಭಾರತ ವಿಶ್ವದ ಬಲಿಷ್ಠ ದೇಶಗಳಿಗಿಂತಲೂ ಮುಂದಿದೆ ಎಂದು ತಿಳಿಸಿದರು. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರದಿಂದಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕತೆಗೆ ಸಮಸ್ಯೆಯಾಗಿದೆ. ಆದರೆ ಇದಕ್ಕೆ ಭಾರತ ಪರಿಣಾಮಕಾರಿ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ತಿಳಿಸಿದರು. ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಇತರೆ ದೇಶಗಳಿಗಿಂತಲೂ ಉತ್ತಮವಾಗಿದೆ. ಇತರೆ ದೇಶಗಳಿಗಿಂತಲೂ ಭಾರತದ ಜಿಡಿಪಿ ಏರು ಗತಿಯಲ್ಲಿz. ಆರ್ಥಿಕತೆಯ ಏರಿಳಿತಗಳು ಇದ್ದೇ ಇರುತ್ತದೆ. ಹಾಗೆಂದ ಮಾತ್ರಕ್ಕೆ ಆರ್ಥಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದೇವೆ ಎಂದು ವದಂತಿ ಹಬ್ಬಿಸುವ ಅಗತ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು. ಸೀತರಾಮನ್ ಘೋಷಣೆಯ ಮುಖ್ಯಾಂಶಗಳು: ೧. ನವೋದ್ಯಮಗಳಿಗೆ (ಸ್ಟಾರ್ಟಪ್) ವಿಧಿಸಿದ್ದ ಏಂಜೆಲ್ ಟ್ಯಾಕ್ಸ್ ರದ್ದು. ಸೆಕ್ಷನ್ ೫೬(೨) ಡಿಪಿಐಐಟಿ ಅಡಿ ನೋಂದಣಿಯಾದ ಸ್ಟಾರ್ಟಪ್ಗಳಿಗೆ ಅನ್ವಯಿಸದು. ನವೋದ್ಯಮಗಳ ನೈಜ ಸಮಸ್ಯೆಗಳ ನಿವಾರಣೆಗಾಗಿ ಕೇಂದ್ರವು ಸಿಬಿಡಿಟಿ ಸದಸ್ಯರೊಬ್ಬರ ನೇತೃತ್ವದ ಸೆಲ್ ಆರಂಭಿಸಲಿದೆ. ಆದಾಯ ತೆರಿಗೆ ಸಮಸ್ಯೆ ಉಳ್ಳವರು ಈ ಸಮಿತಿಯನ್ನು ಸಂಪರ್ಕಿಸಬಹುದು. ೨.ವಿದೇಶೀ ಹೂಡಿಕೆದಾರರ (ಫಾರಿನ್ ಪೋರ್ಟ್ಫೋಲಿಯೋ) ಮೇಲೆ ಮುಂಗಡಪತ್ರದಲ್ಲಿ ವಿಧಿಸಲಾಗಿದ್ದು ಹೆಚ್ಚುವರಿ ಮೇಲ್ತೆರಿಗೆ ವಾಪಸ್.೩.ಇಕ್ವಿಟಿ ಶೇರುಗಳ ವರ್ಗಾವಣೆಯಿಂದ ಬರುವ ಅಲ್ಪಾವಧಿಯ ಅಥವಾ ದೀರ್ಘಾವಧಿಯ ಬಂಡವಾಳ ಲಾಭದ ಮೇಲಿನ ಸರ್ಚಾರ್ಜ್ ವಾಪಸ್. ಮುಂಗಡಪತ್ರ ಪೂರ್ವದ ತೆರಿಗೆ ವ್ಯವಸ್ಥೆ ಜಾರಿ. ೪.ಬ್ಯಾಂಕುಗಳಿಗೆ ೭೦,೦೦೦ ಕೋಟಿ ರೂಪಾಯಿಗಳ ನೆರವಿನ ಕೊಡುಗೆ ಪ್ರಕಟಣೆ. ಎಂಸಿಎಲ್ಆರ್ ಇಳಿಕೆ ಮೂಲಕ ಬ್ಯಾಂಕುಗಳಿಂದ ಬಡ್ಡಿ ದರ ಕಡಿತ. ಹೆಚ್ಚುವರಿ ಸಾಲಕ್ಕೆ ಅನುಕೂಲ.೫.ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದಿಂದ ಮರುಪಾವತಿ ಆಗಬೇಕಾಗಿರುವ ಜಿಎಸ್ಟಿ ಬಾಕಿ ಈದಿನದಿಂದ ೩೦ ದಿನಗಳ ಒಳಗಾಗಿ ಪಾವತಿ. ಭವಿಷ್ಯದಲ್ಲಿ ಪ್ರತಿ ೬೦ ದಿನಗಳಿಗೆ ಒಮ್ಮೆ ಮರುಪಾವತಿ. ೬. ಟ್ರೇಡ್ ರಿಸೀವೇಬಲ್ ಡಿಸ್ಕೌಂಟಿಂಗ್ ಸಿಸ್ಟಮ್ (ಟಿಆರ್ ಇಡಿಎಸ್) ಇಂದ ಜಿಎಸ್ ಟಿ ಜಾಲ ವ್ಯವಸ್ಥೆಯ ಬಳಕೆ. ಎಂಎಸ್ ಎಂಇ ಗಳಿಗೆ ಏಕರೂಪದ ವ್ಯಾಖ್ಯಾನ ನೀಡುವ ಬಗ್ಗೆ ಪರಿಶೀಲನೆ.೭.೩೧.೦೩.೨೦೨೦ರವರೆಗೆ ಖರೀದಿಸಲಾದ ಬಿಎಸ್ ೪ ವಾಹನಗಳು ಅವುಗಳ ನೋಂದಣಿ ಅವಧಿಯವರೆಗೂ ಮುಂದುವರೆಯುತ್ತವೆ. ಏಕಕಾಲದ ನೋಂದಣಿ ಶುಲ್ಕದ ಪರಿಷ್ಕರಣೆಯನ್ನು ೨೦೨೦ರ ಜೂನ್ವರೆಗೆ ಮುಂದೂಡಲಾಗಿದೆ. ಎಲ್ಲ ವಾಹನಗಳಿಗೂ ೨೦೨೦ರ ಮಾರ್ಚ್ ೩೧ರವರೆಗೆ ಶೇಕಡಾ ೧೫ರಷ್ಟು ಹೆಚ್ಚುವರಿ (ಒಟ್ಟು ಶೇಕಡಾ ೩೦) ಡಿಪ್ರಿಸಿಯೇಶನ್ ಲಭಿಸಲಿದೆ. ಹೊಸ ವಾಹನಗಳ ಖರೀದಿ ಮೇಲಿನ ನಿಷೇಧ ತೆರವು. ೮. ವಿಜಯದಶಮಿಯ ಬಳಿಕ ತೆರಿಗೆ ತಪಾಸಣೆ ಕಿರುಕುಳ ಇಲ್ಲ. ರಿಟನ್ಸ್ ಫೈಲಿಂಗ್ ಸರಳೀಕರಣ. ತೆರಿಗೆ ವ್ಯವಸ್ಥೆಯಲ್ಲಿ ಆಟವಾಡುವವರ ವಿರುದ್ಧ ಕ್ರಮ. ೯.ಗ್ರಾಹಕರ ಸಾಲ ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಪರಿಶೀಲಿಸಲಾಗುವುದು. ಸಾಲ ತೀರಿಸಿದ ೧೫ ದಿನಗಳ ಒಳಗಾಗಿ ಸಾಲ ದಾಖಲೆ ಹಿಂದಿರುಗಿಸಲು, ಕಿರುಕುಳ ತಪ್ಪಿಸಲು, ದಕ್ಷತೆ ಹೆಚ್ಚಿಸಲು ಕ್ರಮ. ಬ್ಯಾಂಕುಗಳಿಂದ ರೆಪೋ ಆಧಾರದಲ್ಲಿ ಬಡ್ಡಿದರ ಇಳಿಸಲು ಕ್ರಮ. ಅಂದರೆ ವಸತಿ ಸಾಲಗಳ ಇಎಂಐ ಇಳಿಕೆ. ವರ್ಕಿಂಗ್ ಕ್ಯಾಪಿಟಲ್ ಅಗ್ಗ.೧೦. ಐಟಿ ಸಮನ್ಸ್ ಜಾರಿ ಕೇಂದ್ರೀಕೃತ ವ್ಯವಸ್ಥೆಯ ವ್ಯಾಪ್ತಿಗೆ. ತೆರಿಗೆ ಪಾವತಿದಾರರಿಗೆ ಕಿರುಕುಳ ತಪ್ಪಿಸಲು ಈ ಕ್ರಮ. ಈವರೆಗಿನ ಹಳೆ ನೋಟಿಸುಗಳನ್ನು ಒಂದೂವರೆ ತಿಂಗಳ ಒಳಗೆ ಇತ್ಯರ್ಥ ಪಡಿಸಬೇಕು.೧೧.ಕಾಪೋರೇಟ್ ಸಾಮಾಜಿಕ ಹೊಣೆಗಾರಿಕೆ ಉಲ್ಲಂಘನೆಯನ್ನು ಕ್ರಿಮಿನಲ್ ಅಪರಾಧವಾಗಿ ನೋಡಲಾಗುವುದಿಲ್ಲ ಬದಲಿಗೆ ಸಿವಿಲ್ ಅಪರಾಧವಾಗಿ ಪರಿಗಣಿಸಲಾಗುವುದು.
2019: ನವದೆಹಲಿ: ’ಮೋದಿ ಹೈ ತೊ ಮಮ್ಕಿನ್ ಹೈ’ (ಮೋದಿ ಇದ್ದರೆ ಸಾಧ್ಯ) ಘೋಷಣೆಗಳ ಮಧ್ಯೆ ಪ್ಯಾರಿಸ್ಸಿನ ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪುನರಾಯ್ಕೆಯ ಬಳಿಕ ಮೊದಲ ೭೫ ದಿನಗಳಲ್ಲಿ ತಮ್ಮ ಸರ್ಕಾರ ಕೈಗೊಂಡ ’ಬೃಹತ್ ನಿರ್ಣಯ’ಗಳಿಗೆ ೧೨೫ ಕೋಟಿ ಭಾರತೀಯರು ನೀಡಿದ ಶಕ್ತಿಯೇ ಕಾರಣ’ ಎಂದು ಹೇಳಿದರು.ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಮುನ್ನ ಪ್ರಧಾನಿಯವರು ೧೯೫೦ ಮತ್ತು ೧೯೬೦ರಲ್ಲಿ ಫ್ರಾನ್ಸಿನಲ್ಲಿ ಸಂಭವಿಸಿದ ಎರಡು ಏರ್ ಇಂಡಿಯಾ ವಿಮಾನ ದುರಂತಗಳಲ್ಲಿ ಮೃತರಾದವರ ಗೌರವಾರ್ಥ ನಿರ್ಮಿಸಲಾದ ಸ್ಮಾರಕವನ್ನು ಉದ್ಘಾಟಿಸಿದರು. ಮೊಂಟ್ ಬ್ಲಾಂಕ್ ಪರ್ವತದಲ್ಲಿ ಸಂಭವಿಸಿದ್ದ ಈ ದುರಂತಗಳಲ್ಲಿ ಭಾರತದ ಪರಮಾಣು ಕಾರ್ಯಕ್ರಮದ ಜನಕ ಹೋಮಿ ಜೆ ಭಾಭಾ ಸೇರಿದಂತೆ ಹಲವಾರು ಭಾರತೀಯರು ನಿಧನರಾಗಿದ್ದರು. ಮೌಂಟ್ ಬ್ಲಾಂಕ್ ತಪ್ಪಲಿನ ನಿಡ್ ಡಿ’ಐಗೆಲ್ ನಲ್ಲಿ ನಿರ್ಮಿಸಲಾಗಿರುವ ಸ್ಮಾರಕವನ್ನು ಭಾಭಾ ಮತ್ತು ವಿಮಾನ ದುರಂತಗಳಲ್ಲಿ ಮಡಿದ ಇತರ ಭಾರತೀಯರಿಗೆ ಸಮರ್ಪಿಸಲಾಯಿತು.
’ತ್ರಿವಳಿ ತಲಾಖ್’ ಪದ್ಧತಿಯನ್ನು ದಂಡನೀಯ ಅಪರಾಧವನ್ನಾಗಿ ಮಾಡಿದ್ದು, ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ತಾತ್ಕಾಲಿಕವಾದ ೩೭೦ನೇ ವಿಧಿಯನ್ನು ರದ್ದು ಪಡಿಸಿದ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿದ ಪ್ರಧಾನಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ತಮ್ಮ ಸರ್ಕಾರ ಕೈಗೊಂಡ ’ದೊಡ್ಡ ಕಾರ್ಯಕ್ರಮಗಳು’ ಎಂಬುದಾಗಿ ಪಟ್ಟಿ ಮಾಡಿದರು.‘ತ್ರಿವಳಿ ತಲಾಖ್ ಒಂದು ಅಮಾನವೀಯ ಪದ್ಧತಿಯಾಗಿತ್ತು. ಹಲವಾರು ವರ್ಷಗಳಿಂದ ಸಹಸ್ರಾರು ಮುಸ್ಲಿಮ್ ಮಹಿಳೆಯರ ತಲೆಯ ಮೇಲೆ ತೂಗುಕತ್ತಿಯಂತೆ ಇದ್ದ ಈ ಪದ್ಧತಿಯನ್ನು ನಾವು ಕೊನೆಗೊಳಿಸಿದ್ದೇವೆ’ ಎಂದು ನುಡಿದ ಮೋದಿ, ಹಿಂದೆ ಸಾಧಿಸಲು ಸಾಧ್ಯವಿಲ್ಲ ಎಂಬುದಾಗಿ ಪರಿಗಣಿಸಲಾಗಿದ್ದ ಹಲವಾರು ಗುರಿಗಳನ್ನು ತಮ್ಮ ಸರ್ಕಾರ ಇಟ್ಟುಕೊಂಡಿದೆ’ ಎಂದು ಹೇಳಿದರು. ಭಾರತವು ೨೦೩೦ ರ ವೇಳೆಗೆ ಹವಾಮಾನ ಬದಲಾವಣೆ, ೨೦೨೫ರ ಒಳಗಾಗಿ ಕ್ಷಯದಿಂದ ಮುಕ್ತಿ ಸಾಧನೆಯ ಗುರಿ ಇಟ್ಟುಕೊಂಡಿದೆ ಎಂದು ಅವರು ನುಡಿದರು.ಪ್ರಧಾನ ಮಂತ್ರಿಯವರ ಕೇಂದ್ರೀಯ ಆರೋಗ್ಯ ಯೋಜನೆಯ ಅಡಿಯಲ್ಲಿನ ಫಲಾನುಭವಿಗಳು ಮತ್ತ ದಾಖಲೆ ಸಂಖ್ಯೆಯ ಹೊಸ ಬ್ಯಾಂಕ್ ಖಾತೆಗಳು ಕೆಲವೊಂದು ಮೈಲಿಗಲ್ಲುಗಳು ಎಂಬುದಾಗಿ ಪ್ರಧಾನಿ ಪಟ್ಟಿ ಮಾಡಿದರು.ನಾವು ಕಳೆದ ಐದು ವರ್ಷಗಳಲ್ಲಿ ಅನಿಷ್ಠ ಸಾಮಾಜಿಕ ಪದ್ಧತಿಗಳಿಗೆ ಕೆಂಪುಚೀಟಿ ತೋರಿಸಿದ್ದೇವೆ. ನವ ಭಾರತದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜನರ ಹಣದ ಲೂಟಿ, ಭಯೋತ್ಪಾದನೆ ವಿರುದ್ಧ ಕೈಗೊಳ್ಳಲಾಗಿರುವಂತಹ ಕ್ರಮಗಳನ್ನು ಈ ಹಿಂದೆಂದೂ ತೆಗೆದುಕೊಂಡಿರಲಿಲ್ಲ’ ಎಂದು ಮೋದಿ ಹೇಳಿದರು.’ಭಾರತದಲ್ಲಿ ತಾತ್ಕಾಲಿಕ ಎಂಬುದಕ್ಕೆ ಅವಕಾಶವಿಲ್ಲ. ತಾತ್ಕಾಲಿಕವನ್ನು ಕಿತ್ತು ಹಾಕಲು ನಮಗೆ ೭೦ ವರ್ಷ ಬೇಕಾಯಿತು’ ಎಂಬುದಾಗಿ ಹೇಳುವ ಮೂಲಕ ಪರೋಕ್ಷವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ’ತಾತ್ಕಾಲಿಕ’ ವಿಧಿ ೩೭೦ನ್ನು ರದ್ದು ಪಡಿಸಿದ್ದನ್ನು ಪ್ರಧಾನಿ ಉಲ್ಲೇಖಿಸಿದರು. ೧೨೫ ಕೋಟಿ ಜನರು ಇರುವ ಭಾರತದಲ್ಲಿ, ಮಹಾತ್ಮಾ ಗಾಂಧಿ, ಗೌತಮ ಬುದ್ಧ, ರಾಮ, ಕೃಷ್ಣರ ನೆಲದಲ್ಲಿ ’ತಾತ್ಕಾಲಿಕ’ವನ್ನು ಕಿತ್ತು ಹಾಕಲು ೭೦ ವರ್ಷ ಬೇಕಾಯಿತು’ ಎಂದು ಅವರು ನುಡಿದರು.೨೦೧೯ರ ಚುನಾವಣೆಯಲ್ಲಿ ತಮಗೆ ನೀಡಲಾಗಿರುವ ಜನಾದೇಶ ’ಕೇವಲ ಭಾರತವನ್ನು ನಡೆಸುವುದಕ್ಕೆ ಕೊಟ್ಟದ್ದಲ್ಲ, ಬದಲಿಗೆ ನವಭಾರತ ಸೃಷ್ಟಿಗಾಗಿ ಕೊಟ್ಟದ್ದು’ ಎಂದು ಹೇಳಿದ ಪ್ರಧಾನಿ ’ರಾಷ್ಟ್ರವು ಕಳೆದ ಐದು ವರ್ಷಗಳಲ್ಲಿ ಹಲವಾರು ಧನಾತ್ಮಕ ಬೆಳವಣಿಗೆಗಳನ್ನು ಕಂಡಿದೆ. ಈ ಅವಧಿಯಲ್ಲಿ ಯುವಕರು, ಮಹಿಳೆಯರು, ರೈತರು ಮತ್ತು ಬಡವರು ಸರ್ಕಾರದ ಕಾರ್ಯಕ್ರಮಗಳ ಕೇಂದ್ರ ಬಿಂದುವಾಗಿದ್ದರು’ ಎಂದು ನುಡಿದರು. ಭಾರತದಿಂದ ಬಡತನವು ತ್ವರಿತವಾಗಿ ಕಾಲುಕೀಳುತ್ತಿದೆ ಎಂಬುದನ್ನ ಹಲವಾರು ಅಧ್ಯಯನಗಳೂ ದೃಢ ಪಡಿಸಿವೆ ಎಂದೂ ಪ್ರಧಾನಿ ಹೇಳಿದರು.ಫ್ರಾನ್ಸಿಗೆ ಒಂದು ದಿನದ ಭೇಟಿಗಾಗಿ ಆಗಮಿಸಿದ ಪ್ರಧಾನಿ, ಭಾರತ-ಫ್ರಾನ್ಸ್ ಬಾಂಧವ್ಯ ಗೆಳೆತನವನ್ನು ಮೀರಿದ್ದು ಎಂದು ಹೇಳಿದರು. ಎರಡು ರಾಷ್ಟ್ರಗಳು ಒಟ್ಟಿಗೆ ಕೆಲಸ ಮಾಡಿದ ಒಂದೇ ಒಂದು ವೇದಿಕೆ ಜಗತ್ತಿನಲ್ಲಿ ಇಲ್ಲ. ಆದ್ದರಿಂದ, ನಾನು ಈ ದಿನವನ್ನು ಭಾರತ -ಫ್ರಾನ್ಸ್ ಬಾಂಧವ್ಯಕ್ಕಾಗಿ ಅರ್ಪಿಸುತ್ತೇನೆ’ ಎಂದು ಅವರು ಹೇಳಿದರು.ಭಾರತ ಮತ್ತು ಫ್ರಾನ್ಸ್ ಪಾಲುದಾರಿಕೆಯನ್ನು ’ಇನ್’ (ಭಾರತ) ಮತ್ತು ’ಫ್ರಾ’ (ಫ್ರಾನ್ಸ್) ಬಳಸಿ ’ಇನ್‌ಫ್ರಾ’ ರಚಿಸುವ ಮೂಲಕ ಸಂಕೇತಿಸಬಹುದು. ಇನ್ಫ್ರಾವು (ತಳಹದಿ) ’ಸೋಲಾರ್ ಇನ್ಫ್ರಾ’ (ಸೌರ ತಳಹದಿ), ’ಟೆಕ್ನಿಕಲ್ ಇನ್ಫ್ರಾ’ (ತಾಂತ್ರಿಕ ತಳಹದಿ) ಮತ್ತು ’ಸ್ಪೇಸ್ ಇನ್‌ಫ್ರಾ’ (ಬಾಹ್ಯಾಕಾಶ ತಳಹದಿ) ಸಹಿತ ವಿವಿಧ ಕ್ಷೇತ್ರಗಳಲ್ಲಿ ಜಂಟಿ ಪ್ರಯತ್ನವನ್ನು ಪ್ರತಿನಿಧಿಸುತ್ತದೆ ಎಂದು ಅವರು ನುಡಿದರು.ಭಾರತವು ಸಾಮ್ರಾಜ್ಯವಾದ, ಫ್ಯಾಸಿಸಂ, ಮತ್ತು ಉಗ್ರವಾದದ ವಿರುದ್ಧ ರಾಷ್ಟ್ರದಲ್ಲಿ ಮಾತ್ರವೇ ಅಲ್ಲ ಫ್ರಾನ್ಸಿನ ಮಣ್ಣಿನಿಂದಲೂ ಹೋರಾಟ ನಡೆಸಿದೆ ಎಂದು ಮೋದಿ ಹೇಳಿದರು.
2019: ವಾಷಿಂಗ್ಟನ್: ಕಳೆದ ಕೆಲದಿನಗಳಿಂದ ಅನ್ಯ ಗ್ಯಾಲಕ್ಸಿಯಿಂದ ನಿಗೂಢ ಸಂದೇಶಗಳು ಭೂಮಿಗೆ ಬರಲು ಶುರುವಾಗಿವೆ. ಈ ಸಿಗ್ನಲ್‌ಗಳು ಏನು ಎಂದು ಅರಿಯದೆ ಇದೀಗ ವಿಜ್ಞಾನಿಗಳು ತಲೆಕೆರೆದುಕೊಳ್ಳುವಂತಾಗಿದೆ. ಶಕ್ತಿಯ ಸ್ಫೋಟ ಅಥವಾ ಫಾಸ್ಟ್ ರೇಡಿಯೋ ಬರ್ಸ್ಡ್- ಎಫ್ಆರ್ಬಿ ಎಂದು ಕರೆಯಲಾಗುವ ಇಂತಹ 8 ಸಂದೇಶಗಳು ಭೂಮಿಯಲ್ಲಿರುವ ರೇಡಿಯೋ ಟೆಲಿಸ್ಕೋಪ್ಗ್ಳಿಗೆ ಬಂದಿವೆ. ಆದರೆ ಇವುಗಳು ಎಲ್ಲಿಂದ ಬಂದಿವೆ ಮತ್ತು ಏನು ಎಂಬುದನ್ನು ಪತ್ತೆಹಚ್ಚಲು ವಿಜ್ಞಾನಿಗಳು ಮುಂದಾದರು. 2007ರಲ್ಲಿ ಮೊದಲ ಬಾರಿಗೆ ಇಂತಹ ಸಂದೇಶಗಳು ಬಂದಿದ್ದು, ಬಳಿಕ 12ರಷ್ಟು ಸಿಗ್ನಲ್‌ಗಳನ್ನು ಸ್ವೀಕರಿಸಲಾಗಿದೆ. ಆದರೆ ಇದು ಅಂದು ಬಂದಿದ್ದ ಸಿಗ್ನಲ್ ರೀತಿಯದ್ದೇ, ಏನಾದರೂ ವ್ಯತ್ಯಾಸವಿದೆಯೇ ಎಂದು ನೋಡಬೇಕಿದೆ. ಪದೇ ಪದೇ ಎಫ್ಆರ್‌ಬಿ ಸಿಗ್ನಲ್‌ಗಳು ಬರುತ್ತಿರುವುದರಿಂದ ಅವುಗಳು ಎಲ್ಲಿನವು ಎಂಬ ಕುತೂಹಲ ಹೆಚ್ಚಾಗಿದೆ. ವಿಜ್ಞಾನಿಗಳ ಪ್ರಕಾರ ಬ್ರಹ್ಮಾಂಡದಲ್ಲಿ ಭೂಮಿಗೆ ಅತಿ ಸನಿಹದಿಂದಲೇ ಈ ಸಿಗ್ನಲ್‌ಗಳು ಬರುತ್ತಿವೆ. ನಾವಿರುವ ಮಿಲ್ಕಿ ವೇ ಗ್ಯಾಲೆಕ್ಸಿಗೆ ಸನಿಹದ ಗ್ಯಾಲೆಕ್ಸಿಯಿಂದಲೇ ಬಂದಿರಬಹುದು ಎಂದೂ ಊಹಿಸಲಾಯಿತು, ಕೆನಡಾದ ಹೈಡ್ರೋಜನ್ ಇಂಟೆನ್ಸಿಟಿ ಮ್ಯಾಪಿಂಗ್ ಎಕ್ಸರಿಮೆಂಟ್‌ನ ಟೆಲಿಸ್ಕೋಪ್‌ಗೆ ಹೊಸ ಸಂದೇಶಗಳು ಸಿಕ್ಕಿವೆ. ಈವರೆಗೆ ಎಫ್ಆರ್ಬಿಗಳು ಎಲ್ಲಿಂದ ಬರುತ್ತಿವೆ ಮತ್ತು ಅವುಗಳು ಏನು ಎಂಬುದು ಜಗತ್ತಿನ ಯಾವ ವಿಜ್ಞಾನಿಗಳಿಗೂ ತಿಳಿದಿಲ್ಲ. ಇವುಗಳು ನಕ್ಷತ್ರಗಳು ಕಪ್ಪುರಂಧ್ರಗಳಾಗುವುದು ಅಥವಾ ಅನ್ಯಗ್ರಹ ಜೀವಿಗಳು ಕಳುಹಿಸುತ್ತಿರುವ ಸಂದೇಶಗಳಾಗಿರಬಹುದೇ ಎಂಬ ಪ್ರಶ್ನೆ ಕಾಡಿದೆ. ಈ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ವಿಜ್ಞಾನಿಗಳು ಇಂತಹುದೇ ಸಂದೇಶಗಳ ಬಗ್ಗೆ ಶೋಧನೆ ನಡೆಸಿದರು.
2019: ಚೆನ್ನೈ: ಆರು ಜನ ಲಷ್ಕರ್ ಉಗ್ರರು ಶ್ರೀಲಂಕಾ ಮೂಲಕ ಕೊಯಂಬತ್ತೂರಿಗೆ ನುಸುಳಿದ್ದಾರೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿತು. ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧರಿಸಿ ತಮಿಳುನಾಡು ಪೊಲೀಸರು ಈ ವಿಷಯನ್ನು ಬಹಿರಂಗಪಡಿಸಿದರು ಮತ್ತು ಕೊಯಂಬತ್ತೂರಿನಲ್ಲಿ ಕಟ್ಟೆಚ್ಚರ ಘೋಷಿಸಲಾಯಿತು. ಐದು ಜನ ಲಂಕಾ ತಮಿಳರು ಮತ್ತು ಮತ್ತು ಓರ್ವ ಪಾಕಿಸ್ಥಾನಿ ನಾಗರಿಕ ಒಳಗೊಂಡಿರುವ ತಂಡ ನಗರಕ್ಕೆ ನುಸುಳಿದೆ ಎಂಬ ಗುಪ್ತಚರ ಮಾಹಿತಿಯನ್ನು ಆಧರಿಸಿ ತಮಿಳುನಾಡು ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದರು. ಈ ಸೂಚನೆಯನ್ನು ಆಧರಿಸಿ ಚೆನ್ನೈನಲ್ಲೂ ಸಹ ಪೊಲೀಸ್ ಗಸ್ತನ್ನು ಹೆಚ್ಚಿಸಲಾಯಿತು. ತಮಿಳುನಾಡಿಗೆ ನುಸುಳಿರುವ ಶಂಕಿತರಿಬ್ಬರ ಭಾವಚಿತ್ರಗಳನ್ನು ಕೊಯಮುತ್ತೂರು ಪೊಲೀಸರು ಬಿಡುಗಡೆಗೊಳಿಸಿದರು. ರಾಜ್ಯಾದ್ಯಂತ ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಡಿಜಿಪಿ ಅವರು ಪ್ರಕಟನೆಯಲ್ಲಿ ತಿಳಿಸಿದರು. ವಸತಿಗೃಹಗಳ ತಪಾಸಣೆ, ಸ್ಪೋಟಕ ವಸ್ತುಗಳ ಸಾಗಾಟ ತಡೆಗೆ ವಾಹನಗಳ ತಪಾಸಣೆ, ಪೊಲೀಸ್ ಗಸ್ತು ಮತ್ತು ತಪಾಸಣೆ, ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಗಳಿಗೆ ಲುಕ್ ಔಟ್ ನೋಟೀಸ್, ರೈಲ್ವೇ ನಿಲ್ದಾಣಗಳು, ಬಸ್ ಸ್ಟ್ಯಾಂಡ್ ಗಳು ಮತ್ತು ವಿಮಾನ ನಿಲ್ದಾಣಗಳ ತಪಾಸಣೆ, ಪ್ರಮುಖ ದೇವಸ್ಥಾನಗಳಲ್ಲಿ ಸುರಕ್ಷತಾ ಪರಿಶೀಲನೆ.
ಇಂದಿನ ಇತಿಹಾಸHistory Today ಆಗಸ್ಟ್ 23 (2018+ಹಿಂದಿನವುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment