Saturday, August 24, 2019

ಇಂದಿನ ಇತಿಹಾಸ History Today ಆಗಸ್ಟ್ 24

2019: ನವದೆಹಲಿ: ಭಾರತೀಯ ಜನತಾ ಪಕ್ಷದಟ್ರಬಲ್ ಶೂಟರ್ಎಂದೇ ಪರಿಗಣಿತರಾಗಿದ್ದ ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್ ಮಹಾರಾಜ್ ಕಿಶನ್ ಜೇಟ್ಲಿ ಅವರು ಬಹು ಅಂಗಾಂಗ ವೈಫಲ್ಯದ ಪರಿಣಾಮವಾಗಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ಈದಿನ ಮಧ್ಯಾಹ್ನ ನಿಧನರಾದರು. ಅವರಿಗೆ ೬೬ ವರ್ಷ ವಯಸ್ಸಾಗಿತ್ತು. ಬಿಜೆಪಿಯ ಹಿರಿಯ ನಾಯಕರಾದ ಜೇಟ್ಲಿ ಅವರನ್ನು ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಆಗಸ್ಟ್ ೯ರಂದು ಏಮ್ಸ್ ಗೆ ದಾಖಲಿಸಲಾಗಿತ್ತು. ಜೇಟ್ಲಿ ಅವರು ಶನಿವಾರ ಮಧ್ಯಾಹ್ನ ೧೨.೦೭ ಗಂಟೆಗೆ ಕೊನೆಯುಸಿರು ಎಳೆದರು ಎಂದು ಏಮ್ಸ್ ಮಾಧ್ಯಮ ಮತ್ತು ಶಿಷ್ಟಾಚಾರ ವಿಭಾಗವು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ತಿಳಿಸಿತು. ’ಶ್ರೀ ಅರುಣ್ ಜೇಟ್ಲಿ, ಸಂಸತ್ತಿನ ಗೌರವಾನ್ವಿತ ಸದಸ್ಯರು ಮತ್ತು ಮಾಜಿ ವಿತ್ತಸಚಿವರು, ಭಾರತ ಸರ್ಕಾರ ಅವರು ೨೦೧೯ರ ಆಗಸ್ಟ್ ೨೪ರ ಮಧ್ಯಾಹ್ನ ೧೨.೦೭ ಗಂಟೆಗೆ ವಿಧಿವಶರಾದರೆಂದು ಅತ್ಯಂತ ದುಃಖದೊಂದಿಗೆ ತಿಳಿಸುತ್ತಿದ್ದೇವೆ. ಶ್ರೀ ಅರುಣ್ ಜೇಟ್ಲಿ ಅವರನ್ನು ೨೦೧೯ರ ಆಗಸ್ಟ್ ೦೯ರಂದು ನವದೆಹಲಿಯ ಏಮ್ಸ್ ಗೆ ದಾಖಲಿಸಲಾಗಿತ್ತು. ವಿವಿಧ ವಿಷಯಗಳಲ್ಲಿ ತಜ್ಞರಾದ ಹಿರಿಯ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಿತ್ತುಎಂದು ಹೇಳಿಕೆ ತಿಳಿಸಿತು. ಜೇಟ್ಲಿ ಅವರನ್ನು ಏಮ್ಸ್ ತೀವ್ರ ನಿಗಾ ಘಟಕಕ್ಕೆ ದಾಖಲು ಮಾಡಲಾಗಿತ್ತು ಮತ್ತು ಹಿರಿಯ ವೈದ್ಯರ ತಂಡ ಅವರನ್ನು  ನೋಡಿಕೊಳ್ಳುತ್ತಿತ್ತು. ಆರೋಗ್ಯದಲ್ಲಿ ಅಸಹಜತೆ ಕಾಣುತ್ತಿದೆ ಎಂಬುದಾಗಿ ಹೇಳಿದ ಬಳಿಕ ಏಮ್ಸ್ ದಾಖಲಾಗಿದ್ದ  ಜೇಟ್ಲಿ ಅವರನ್ನು ದೇಹಸ್ಥಿತಿ ತೀವ್ರವಾಗಿ ವಿಷಮಿಸಿದ ಬಳಿಕ ಜೀವ ರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ ಡಿಎ) ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದಾಗ ಅನಾರೋಗ್ಯದ ಹಿನ್ನೆಲೆಯಲ್ಲಿ ಜೇಟ್ಲಿ ಅವರು ಸಂಪುಟದಿಂದ ಹೊರಗುಳಿದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಅರುಣ್ ಜೇಟ್ಲಿ ನಿಧನಕ್ಕೆ ಅತ್ಯಂತ ಅಮೂಲ್ಯ ಗೆಳೆಯನನ್ನು ತಾನು ಕಳೆದುಕೊಂಡಿರುವುದಾಗಿ ಹೇಳುವ ಮೂಲಕ ಶೋಕ ವ್ಯಕ್ತ ಪಡಿಸಿದರು.  ಅರುಣ್ ಜೇಟ್ಲಿ ಜಿ ನಿಧನದೊಂದಿಗೆ, ನಾನು ದಶಕಗಳಿಂದ ಪರಿಚಿತರಾಗಿದ್ದ ಅಮೂಲ್ಯ ಗೆಳೆಯನನ್ನು ಕಳೆದುಕೊಂಡಿದ್ದೇನೆ.  ವಿಷಯಗಳಿಗೆ ಸಂಬಂಧಿಸಿದಂತೆ ಅವರಿಗೆ ಇದ್ದ ಒಳನೋಟ, ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಿದ್ದ ಅವರ ಜ್ಞಾನ ಸಾಟಿ ಇಲ್ಲದಂತಹುದಾಗಿತ್ತು. ನಮ್ಮನ್ನು ಅಸಂಖ್ಯಾತವಾದ ಸವಿನೆನಪುಗಳಲ್ಲಿ ಮುಳುಗಿಸುತ್ತಾ ಅವರು ಜೀವಿಸಿದ್ದರು. ನಾವು ಅವರನ್ನು ಕಳೆದುಕೊಂಡಿದ್ದೇವೆಎಂದು ತ್ರಿರಾಷ್ಟ್ರ ಪ್ರವಾಸದ ಎರಡನೇ ದಿನ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ (ಯುಎಇ) ಇರುವ ಪ್ರಧಾನಿ ಮೋದಿ ಟ್ವೀಟ್ ಮಾಡಿದರು. ವಿವಿಧ ರಾಜಕೀಯ ನಾಯಕರು ಪಕ್ಷಭೇದವಿಲ್ಲದೆ ಬಿಜೆಪಿ ನಾಯಕನ ನಿಧನಕ್ಕಾಗಿ ಶೋಕ ವ್ಯಕ್ತ ಪಡಿಸಿದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರುಸಾರ್ವಜನಿಕ ಬದುಕಿಗೆ ಅವರು ಕೊಟ್ಟಿರುವ ಕೊಡುಗೆ ಸದಾಕಾಲಕ್ಕೂ ನೆನಪು ಇಡುವಂತಹುದುಎಂದು ಹೇಳುವ ಮೂಲಕ ಶೋಕ ವ್ಯಕ್ತ ಪಡಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರುಅರುಣ್ ಜೇಟ್ಲಿ ಜಿ ನಿಧನದಿಂದ ಅತ್ಯಂತ ಬೇಸರಗೊಂಡಿದ್ದೇನೆ.  ಅಪ್ರತಿಮ ಸಂಸದೀಯ ಪಟು ಮತ್ತು ಪ್ರತಿಭಾವಂತ ವಕೀಲರಾದ ಅವರು ಪಕ್ಷಾತೀತರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಭಾರತೀಯ ಪ್ರಜಾಪ್ರಭುತ್ವಕ್ಕೆ ಅವರ ಕೊಡುಗೆ ಎಂದೆಂದಿಗೂ ಸ್ಮರಣೀಯ. ಅವರ ಪತ್ನಿ, ಮಕ್ಕಳು, ಗೆಳೆಯರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳುಎಂದು ಹೇಳಿದರು. ಬಿಜೆಪಿಯಲ್ಲಿ ನರೇಂದ್ರ ಮೋದಿ ಅವರ ಸಾಮರ್ಥ್ಯವನ್ನು ಮೊತ್ತ ಮೊದಲಿಗೆ ಗುರುತಿಸಿದ್ದ ನಾಯಕರಲ್ಲಿ ಜೇಟ್ಲಿ ಒಬ್ಬರಾಗಿದ್ದರು. ಅವರಿಬ್ಬರೂ ದಶಕಗಳಿಂದ ಒಟ್ಟಾಗಿದ್ದರು. ೨೦೧೪ರಲ್ಲಿ ಪ್ರಧಾನಿಯಾದ ಬಳಿಕ ಮೋದಿಯವರು ಹಣಕಾಸು, ರಕ್ಷಣೆ ಮತ್ತು ಕಾರ್ಪೋರೇಟ್ ವ್ಯವಹಾರಗಳ ಖಾತೆಗಳನ್ನು ಜೇಟ್ಲಿಯವರಿಗೆ ವಹಿಸಿದ್ದು ಅವರ ಮೇಲೆ ಇಟ್ಟಿದ್ದ ವಿಶ್ವಾಸದ ಸ್ಪಷ್ಟ ಸಂಕೇತವಾಗಿತ್ತು. ಖಾತೆಗಳ ಜೊತೆಗೆ ಮಾಹಿತಿ ತಂತ್ರಜ್ಞಾನ ವಿಭಾಗವನ್ನೂ ಜೇಟ್ಲಿ ನಿಭಾಯಿಸಿದ್ದರು.  ಬಿಜೆಪಿ ಸರ್ಕಾರದಲ್ಲಿ ಯಾವುದೇ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದಟ್ರಬಲ್ ಶೂಟರ್ಅವರಾಗಿದ್ದರು. ಜೇಟ್ಲಿ ಅವರು ಮಧುಮೇಹ ಮತ್ತು ಮೂತ್ರಪಿಂಡ (ಕಿಡ್ನಿ) ವೈಫಲ್ಯದ ಸಮಸ್ಯೆ ಎದುರಿಸಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ಅವರು ಕಿಡ್ನಿ ಕಸಿಗೆ ಒಳಗಾಗಿದ್ದರು ಮತ್ತು ೨೦೧೪ರ ಸೆಪ್ಟೆಂಬರಿನಲ್ಲಿ ಬರಿಯಾಟ್ರಿಕ್ ಸರ್ಜರಿಗೆ ಒಳಗಾಗಿದ್ದರು. ಅನಾರೋಗ್ಯದ ಕಾರಣ ಜೇಟ್ಲಿಯವರು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ವರ್ಷ ಮೇ ತಿಂಗಳಲ್ಲಿ ಅವರು ಏಮ್ಸ್ಗೆ ಚಿಕಿತ್ಸೆ ಸಲುವಾಗಿ ದಾಖಲಾಗಿದ್ದರು. ವರ್ಷದ ಆರಂಭದಲ್ಲಿಯೇ ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ದ ಜೇಟ್ಲಿ, ಬಳಿಕ ಭಾರತದಲ್ಲಿಯೇ ಚಿಕಿತ್ಸೆ ಮುಂದುವರೆಸಿದ್ದರು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದು ಮೋದಿ ಸರ್ಕಾರ ಅಧಿಕಾರಕ್ಕೆ ಮರಳುತ್ತಿದ್ದಂತೆಯೇ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದ ಜೇಟ್ಲಿ ತಮ್ಮನ್ನು ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದರು. ಅಲ್ಲದೆ ಸರ್ಕಾರಿ ಬಂಗಲೆಯನ್ನು ತತ್ ಕ್ಷಣವೇ ಖಾಲಿ ಮಾಡಿ ತಮ್ಮ ಸ್ವಂತ ಮನೆಗೆ ತೆರಳಿದ್ದರು. ಅವರ ವರ್ತನೆ ಸರ್ವತ್ರ ಪ್ರಶಂಸೆಗೆ ಪಾತ್ರವಾಗಿತ್ತು. ೨೦೧೪ರ ಮೊದಲ ಅವಧಿಯಲ್ಲಿ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮೂಲಕ ತೆರಿಗೆ ಸುಧಾರಣೆ, ಆರ್ಬಿಐ ನೀತಿ ನಿರೂಪಣೆ ಸೇರಿದಂತೆ ಹಲವಾರು ಚಾರಿತ್ರಿಕ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ವಿಶೇಷವಾಗಿ ನೋಟು ಅಮಾನ್ಯೀಕರಣದ ಬಳಿಕದ ಪರಿಸ್ಥಿತಿ ನಿಭಾಯಿಸುವಲ್ಲಿ ಆರ್ಥಿಕ ಶಿಸ್ತು ಹಳಿ ತಪ್ಪದಂತೆ ನೋಡಿಕೊಂಡ ಜೇಟ್ಲಿ ಅವರ ವಿತ್ತ ಜ್ಞಾನಕ್ಕೆ ಎಲ್ಲರೂ ತಲೆದೂಗಿದ್ದರು. ಬಿಜೆಪಿ ಚಿಂತಕರ ತಂಡದಲ್ಲಿ ಪ್ರಮುಖರಾಗಿದ್ದ ಜೇಟ್ಲಿ ಪಕ್ಷದ ಸೈದ್ಧಾಂತಿಕ ನಿಲುವನ್ನು ಅತ್ಯಂತ ಗಟ್ಟಿಯಾಗಿ ಪ್ರತಿಪಾದಿಸಿದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಕಳೆದ ವರ್ಷ ಮೇ ೧೪ ರಂದು ಏಮ್ಸ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿಗೆ ಒಳಗಾಗಿದ್ದಾಗ, ರೈಲ್ವೇ ಸಚಿವ ಪೀಯೂಶ್ ಗೋಯಲ್ ಅವರು ಹಣಕಾಸು ಖಾತೆಯನ್ನು ನಿಭಾಯಿಸಿದ್ದರು. ಕಳೆದ ವರ್ಷ ಏಪ್ರಿಲ್ ಆದಿಯಿಂದ ಕಚೇರಿಗೆ ಹಾಜರಾಗುವುದನ್ನು ನಿಲ್ಲಿಸಿದ್ದ ಜೇಟ್ಲಿಯವರು ೨೦೧೮ರ ಆಗಸ್ಟ್ ೨೩ರಿಂದ ಮತ್ತು ವಿತ್ತ ಸಚಿವಾಲಯ ಕಚೇರಿಗೆ ಬರಲಾರಂಭಿಸಿದ್ದರು. ಮಧು ಮೇಹದ ಪರಿಣಾಮವಾಗಿ ಏರಿದ ತೂಕವನ್ನು ಇಳಿಸಿಕೊಳ್ಳುವ ಸಲುವಾಗಿ ೨೦೧೪ರ ಸೆಪ್ಟೆಂಬರಿನಲ್ಲಿ ಅವರು ಬರಿಯಾಟ್ರಿಕ್ ಸರ್ಜರಿಗೆ ಒಳಗಾಗಿದ್ದರು. ೧೯೮೨ರಲ್ಲಿ ಜೇಟ್ಲಿ ಅವರು ಜಮ್ಮು ಮತ್ತು  ಕಾಶ್ಮೀರದ ಸಚಿವರ ಗಿರಿಧಾರಿ ಲಾಲ್ ಡೋಗ್ರಾ ಅವರ ಪುತ್ರಿ ಸಂಗೀತಾ ಅವರನ್ನು ಮದುವೆಯಾಗಿದ್ದರು. ಅವರ ಪುತ್ರ ರೋಹನ್ ಜೇಟ್ಲಿ ಮತ್ತು ಪುತ್ರಿ ಸೋನಾಲಿ ಜೇಟ್ಲಿ ಇಬ್ಬರೂ ವಕೀಲಿ ವೃತ್ತಿ ನಡೆಸುತ್ತಿದ್ದಾರೆ.ರಾಜಕೀಯ ಜಾಣ್ಮೆ, ವಾಕ್ಪಟುತ್ವ ಮತ್ತು ಎಲ್ಲರನ್ನೂ ಸಂಭಾಳಿಸುವ ಗುಣಗಳಿಂದಾಗಿ ಜೇಟ್ಲಿ ಅವರು ಎಲ್ಲ ಕಡೆಗಳಲ್ಲೂ ಸಲ್ಲುತ್ತಿದ್ದ ವ್ಯಕ್ತಿಯಾಗಿದ್ದರು. ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರನ್ನು ಕಳೆದುಕೊಂಡ ಬಿಜೆಪಿ ಬಡವಾಗಿದೆ ಎಂಬುದಂತೂ ಸತ್ಯ. ಅರುಣ್ ಜೇಟ್ಲಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ ಸಿಂಗ್, ನಿರ್ಮಲಾ ಸೀತಾರಾಮನ್, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಭೇದ ಮರೆತು ಕಂಬನಿ ಮಿಡಿದರು.
2019: ನವದೆಹಲಿ: ಇತಿಹಾಸದ ಪುಟಕ್ಕೆ ಈದಿನ ಸರಿದ ಅರುಣ್ ಜೇಟ್ಲಿ ಅವರ ಜೀವನ ಹಾದಿ ವೈವಿಧ್ಯಮಯವಾಗಿದ್ದು, ಹಂತಹಂತವಾಗಿ ಅವರು ಸಾಮಾಜಿಕ ಜೀವನದಲ್ಲಿ ಮೇಲಕ್ಕೆ ಏರಿದ್ದರು. ೧೯೫೨ರ  ಡಿಸೆಂಬರ್ ೨೮ ರಂದು ಮಹಾರಾಜ್ ಕಿಶನ್ ಜೇಟ್ಲಿ ಹಾಗೂ ರತನ್ ಪ್ರಭಾ ಜೇಟ್ಲಿ ದಂಪತಿಯ ಪುತ್ರನಾಗಿ ದೆಹಲಿಯಲ್ಲಿ ಜನಿಸಿದ್ದ ಅರುಣ್ ಜೇಟ್ಲಿ ಅವರ ತಂದೆ ಕೂಡಾ ವಕೀಲರಾಗಿದ್ದರು.ಅರುಣ್ ಅವರು ೧೯೬೯-೭೦ರ ಅವಧಿಯಲ್ಲಿ ದೆಹಲಿಯ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಅಭ್ಯಾಸ ಮಾಡಿದರು. ಬಳಿಕ ೧೯೭೩ರಲ್ಲಿ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. ೧೯೭೭ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಕಾನೂನು ವಿಭಾಗದಲ್ಲಿ ಅಧ್ಯಯನ ಮಾಡಿ ಕಾನೂನು ಪದವಿ ಪಡೆದರು. ತಮ್ಮ ವಿದ್ಯಾರ್ಥಿ ಜೀವನದಲ್ಲೇ ಅವರು ವಿದ್ಯಾಭ್ಯಾಸದ ಮೂಲಕ ಉತ್ತಮ ಮಟ್ಟದ ಸಾಧನೆ ಮಾಡಿ ಪ್ರಶಸ್ತಿಗಳನ್ನು ಗಳಿಸಿದ್ದರು.ಜೇಟ್ಲಿಯವರು ೧೯೮೨ರಲ್ಲಿ ಸಂಗೀತಾ ಜೇಟ್ಲಿಯವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ರಾಜಕೀಯ ಜೀವನ: ವಿದ್ಯಾರ್ಥಿ ಸಂಘದ ನಾಯಕನಾಗಿ ಜೇಟ್ಲಿ ಅವರು ತಮ್ಮ ರಾಜಕೀಯ ಜೀವನದ ಆರಂಭಿಸಿದ್ದರು. . ಎಪ್ಪತ್ತರ ದಶಕದಲ್ಲೇ ದೆಹಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಜೇಟ್ಲಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಾಯಕನಾಗಿದ್ದರು. ನಂತರ ೧೯೭೪ರಲ್ಲಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು.೧೯೭೫ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ೧೯ ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದ್ದ ಜೇಟ್ಲಿ,  ೧೯೭೩-೭೪ರಲ್ಲಿ ರಾಜ್ ನರೇನ್ ಹಾಗೂ ಲೋಕನಾಯಕ ಜಯ ಪ್ರಕಾಶ ನಾರಾಯಣ್ (ಜೆಪಿ)ಅವರ ನೇತೃತ್ವದಲ್ಲಿ ಆರಂಭವಾದ ಭ್ರಷ್ಟಾಚಾರ ವಿರೋಧೀ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ೧೯೭೭ರಲ್ಲಿ ಜಯ ಪ್ರಕಾಶ್ ನಾರಾಯಣ್ ಅರು ಜೇಟ್ಲಿಯವರನ್ನು ವಿದ್ಯಾರ್ಥಿಗಳ ಲೋಕತಾಂತ್ರಿಕ ಯುವ ಮೋರ್ಚಾದ ರಾಷ್ಟೀಯ ಸಮಿತಿ ಸಂಚಾಲಕರನ್ನಾಗಿ ನೇಮಕ ಮಾಡಿದ್ದರು. ಸತೀಶ್ ಝಾ ಹಾಗೂ ಸ್ಮಿತು ಕೊಠಾರಿ ಅವರೊಂದಿಗೆ ಸೇರಿ ನಾಗರೀಕ ಹಕ್ಕು ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅವರು ಪಿಯುಸಿಎಲ್ ಬುಲೆಟಿನ್ ಹೊರತಂದಿದ್ದರು.  ಸೆರೆಮನೆಯಿಂದ ಹೊರಬಂದ ಬಳಿಕ ಅವರು ಜನಸಂಘವನ್ನು ಸೇರಿದರು. ಕಾನೂನು ವೃತ್ತಿ: ಜೇಟ್ಲಿಯವರು ೧೯೭೭ರಿಂದ ವಕೀಲ ವೃತ್ತಿ ಆರಂಭಿಸಿದ್ದರು. ದೇಶದ ಹಲವಾರು ಹೈಕೋರ್ಟ್ಗಳು ಹಾಗೂ   ಸುಪ್ರೀಂಕೋರ್ಟಿನಲ್ಲಿ ವಕೀಲ ವೃತ್ತಿ ಮಾಡಿದ್ದರು.. ೧೯೮೯ರಲ್ಲಿ ವಿ.ಪಿ. ಸಿಂಗ್ ಸರ್ಕಾರದಲ್ಲಿ ಅವರನ್ನು ಅಡಿಷನಲ್ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಲಾಗಿತ್ತು. ಬೋಫೋರ್ಸ್ ಹಗರಣದ ಎಲ್ಲಾ ಕಾಗದ ವ್ಯವಹಾರಗಳ ಸಂಬಂಧಿತ ಕಾರ್ಯವನ್ನು ಜೇಟ್ಲಿಯವರೇ ಮಾಡಿದ್ದರು. ಜನತಾ ದಳದ ಶರದ್ ಯಾದವ್ ಅವರಿಂದ ಹಿಡಿದು, ಕಾಂಗ್ರೆಸ್ ಮಾಧವ್ರಾವ್ ಸಿಂಧಿಯಾ, ಬಿಜೆಪಿಯ ಎಲ್.ಕೆ. ಅಡ್ವಾಣಿ ಅವರವರೆಗಿನ ಹಲವಾರು ನಾಯಕರಿಗೆ ಜೇಟ್ಲಿ ವಕೀಲರಾಗಿದ್ದರು. ಅರುಣ್ ಜೇಟ್ಲಿ ಅವರು ಕಾನೂನು ಹಾಗೂ ಪ್ರಸ್ತುತ ವ್ಯವಹಾರಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ "ಭಾರತದಲ್ಲಿ ಅಪರಾಧಗಳು" ಎಂಬ ವಿಷಯಾಧಾರಿತ ಪತ್ರಗಳನ್ನು ಇಂಡೋ-ಬ್ರಿಟಿಷ್ ಲೀಗಲ್ ಫೋರಂ ಮುಂದೆ  ಮಂಡಿಸಿದ್ದರು. ೧೯೯೮ರ ಜೂನ್ ತಿಂಗಳಲ್ಲಿ ಮಾದಕ ದ್ರವ್ಯ (ಡ್ರಗ್ಸ್) ಮತ್ತು ಹಣ ವರ್ಗಾವಣೆ ಹಗರಣಗಳ ಸಂಬಂಧ ನಡೆದ ವಿಶ್ವಸಂಸ್ಥೆ ಮಹಾಸಭೆಯಲ್ಲಿ ಭಾರತ ಸರ್ಕಾರದ ಪ್ರತಿನಿಧಿಯಾಗಿ ಜೇಟ್ಲಿ ಪಾಲ್ಗೊಂಡಿದ್ದರು.ಆರ್ಎಸ್ಎಸ್ ನಂಟು: ಅರುಣ್ ಜೇಟ್ಲಿ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯ ಸದಸ್ಯರಾಗಿದ್ದರು. ೧೯೯೯ರ ಚುನಾವಣೆಯ ಸಮಯದಲ್ಲಿ ಬಿಜೆಪಿ ವಕ್ತಾರರಾದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಅಡಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಮಾಹಿತಿ ಹಾಗೂ ಪ್ರಸಾರದ ಖಾತೆ ರಾಜ್ಯ ಮಂತ್ರಿಯಾಗಿ ಜೇಟ್ಲಿ ನೇಮಕಗೊಂಡಿದ್ದರು. ಬಳಿಕ, ೨೦೦೦ರಲ್ಲಿ ಜುಲೈ ೨೩ರಂದು ಜೇಟ್ಲಿಯವರು ಅಟಲ್ ಸರ್ಕಾರದಲ್ಲಿ ಕಾನೂನು ಸಚಿವರಾದರು. ಹಾಗೆಯೇ, ನ್ಯಾಯಾಂಗ ಹಾಗೂ ಕಂಪೆನಿಗಳ ವ್ಯವಹಾರ ಖಾತೆ ವಹಿಸಿಕೊಂಡು ಹೆಚ್ಚಿನ ಹೊಣೆಗಾರಿಕೆ ತೆಗೆದುಕೊಂಡಿದ್ದರು. ೨೦೦೩ ಜನವರಿ ೯ರಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾಗಿದ್ದರು. ಚುನಾವಣಾ ಉಸ್ತುವಾರಿ: ೨೦೦೨ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಜೇಟ್ಲಿ ನೆರವಾಗಿದ್ದರು. ಚುನಾವಣೆಯಲ್ಲಿ ಬಿಜೆಪಿ ಗುಜರಾತ್ ವಿಧಾನಸಭೆಯ ಒಟ್ಟು ೧೮೨ ಸ್ಥಾನಗ ಪೈಕಿ ೧೨೬ ಸ್ಥಾನಗಳನ್ನು ಗೆದ್ದಿತ್ತು. ಬಳಿಕ ಗುಜರಾತಿನಿಂದಲೇ ಜೇಟ್ಲಿ ರಾಜ್ಯಸಭೆಗೆ ಆಯ್ಕೆಯಾದರು. ೨೦೦೭ರಲ್ಲಿ ಕಾಂಗ್ರೆಸ್ ವಿರೋಧಿ ಚಳುವಳಿ ಕಟ್ಟುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗುವಂತೆ ಮಾಡುವಲ್ಲಿ ಜೇಟ್ಲಿ ಸಹಕರಿಸಿದ್ದರು. ಮಧ್ಯೆ, ೨೦೦೩ರಲ್ಲಿ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯ ಉಸ್ತುವಾರಿಯನ್ನೂ ಜೇಟ್ಲಿ ಹೊತ್ತುಕೊಂಡಿದ್ದರು. ಉಮಾ ಭಾರತಿಯವರ ಜೊತೆಗೂಡಿ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು ೨೩೦ ಸ್ಥಾನಗಳಲ್ಲಿ ೧೭೩ ಸ್ಥಾನಗಳಲ್ಲಿ ಪಕ್ಷವು ಜಯಭೇರಿ ಭಾರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ೨೦೦೪ರಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ವಿಶೇಷ ಉಸ್ತುವಾರಿಯನ್ನು ಅವರಿಗೆ ನೀಡಲಾಗಿತ್ತು. ಇಲ್ಲಿಯೂ ದಕ್ಷಿಣ ಭಾರತದ ಪೈಕಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಉತ್ತಮ ಸ್ಥಾನಗಳಿಸಲು ಅವರು ಸಹಾಯ ಮಾಡಿದ್ದರು. ಒಟ್ಟಿನಲ್ಲಿ ಬಿಜೆಪಿಯ ಸದಸ್ಯರಾಗಿ ರಾಜಕೀಯ ಜೀವನ  ಆರಂಭಿಸಿದ್ದ ಜೇಟ್ಲಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಹಲವ ವರ್ಷ ಕೆಲಸ ಮಾಡಿದ್ದರು. ಅಲ್ಲದೇ ಭಾರತ ಸರ್ಕಾರದಲ್ಲಿ ವಾಣಿಜ್ಯ, ಕೈಗಾರಿಕೆ, ಕಾನೂನು ಹಾಗೂ ನ್ಯಾಯಾಂಗ ಖಾತೆಗಳನ್ನು ನಿಭಾಯಿಸಿದ ಬಳಿಕ ಪ್ರಧಾನಿ ಮೋದಿ ಸರ್ಕಾರದಲ್ಲಿ ರಕ್ಷಣೆ, ಕಾರ್ಪೋರೇಟ್, ವಿತ್ತ ಖಾತೆಗಳನ್ನು ನಿಭಾಯಿಸಿದರು.

2019: ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ  ‘ಆರ್ಡರ್ ಆಫ್ ಜಯೀದ್’ ಪುರಸ್ಕಾರ ನೀಡಿ ಗೌರವಿಸಲಾಯಿತು. ದ್ವಿಪಕ್ಷೀಯ ಸಹಕಾರ ಸಂಬಂಧ ವೃದ್ಧಿಸಲು ಹಾಗೂ ಅಸಾಧಾರಣ ಕ್ರಮಗಳನ್ನು ಕೈಗೊಂಡಿರುವ ಮೋದಿಯವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರದಾನ ಮಾಡಿ ಸನ್ಮಾನಿಸಿತು. ಯುಎಇ ಸಂಸ್ಥಾಫಕ ಶೇಖ್ ಜಯೀದ್ ಬಿನ್ ಸುಲ್ತಾನ್ ಅಲ್ ನೆಹ್ಯಾನ್ ಹೆಸರಿನಲ್ಲಿ ಪ್ರಶಸ್ತಿ ವಿತರಣೆ ಮಾಡಲಾಯಿತು. ಜಯೀದ್ ಅವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ಮೋದಿಗೆ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಯುಎಇ ತಿಳಿಸಿತು.  ಹಿಂದೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ರಾಣಿ ಎಲಿಜಬೆತ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ನೀಡಿ ಗೌರವಿಸಲಾಗಿತ್ತು. 2015ರಲ್ಲಿ ಪ್ರಧಾನಿ ಮೋದಿ ಯುಎಇಗೆ ಭೇಟಿ ನೀಡಿದ್ದರು. ಸಂದರ್ಭದಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ಸಹಕಾರ ಸಂಬಂಧ ವೃದ್ಧಿಸಲು ಹಲವಾರು ಕ್ರಮಗಳನ್ನು ಮೋದಿ ಪ್ರಕಟಿಸಿದ್ದರು.
2019: ನವದೆಹಲಿ: ಕಾಶ್ಮೀರ ಕಣಿವೆಯ ಪರಿಸ್ಥಿತಿ ಅಂದಾಜು ಮಾಡುವ ಸಲುವಾಗಿ ತೆರಳಿದ್ದ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ವಿರೋಧ ಪಕ್ಷ ನಾಯಕರ ನಿಯೋಗವನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ಶ್ರೀನಗರ ವಿಮಾನ ನಿಲ್ದಾಣದಲ್ಲೇ ತಡೆದು ದೆಹಲಿಗೆ ವಾಪಸ್ ಕಳುಹಿಸಿತು.ರಾಹುಲ್ ಗಾಂಧಿ ಅವರ ಹೊರತಾಗಿ ಗುಲಾಂ ನಬಿ ಆಜಾದ್, ಡಿ. ರಾಜಾ, ಶರದ್ ಯಾದವ್, ಮನೋಜ್ ಝಾ, ಮಜೀದ್ ಮೆಮನ್ ಮತ್ತು ಇತರರು ನಿಯೋಗದಲ್ಲಿ ಇದ್ದರು.ಕಾಶ್ಮೀರ ಕಣಿವೆಯ ಪರಿಸ್ಥಿತಿ ಅಂದಾಜು ಮಾಡುವ ಸಲುವಾಗಿ ವಿರೋಧ ಪಕ್ಷಗಳ ನಾಯಕರ ನಿಯೋಗ ವಿಮಾನದ ಮೂಲಕ ದೆಹಲಿಯಿಂದ ಹೊರಟು ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು.ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕ್ರಮದ ಬಳಿಕ ಸರ್ಕಾರವು ಯಾವುದೇ ರಾಜಕೀಯ ನಾಯಕರಿಗೆ ಹೊಸದಾಗಿ ಸೃಷ್ಟಿಸಲಾದ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರವೇಶಿಸಲು ಅವಕಾಶ ನೀಡಿರಲಿಲ್ಲ. ಹಿನ್ನೆಲೆಯಲ್ಲಿ ನಿರೀಕ್ಷಿಸಿದ್ದಂತೆಯೇ ವಿರೋಧ ಪಕ್ಷಗಳ ನಾಯಕರ ನಿಯೋಗವನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ದೆಹಲಿಗೆ ವಾಪಸ್ ಕಳುಹಿಸಿತು. ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ ಬಳಿಕ ಪ್ರದೇಶದ ವಾಸ್ತವ ಸ್ಥಿತಿ ಏನು ಎಂಬುದನ್ನು ಪರಿಶೀಲಿಸುವ ಯತ್ನವಾಗಿ ರಾಹುಲ್ ಗಾಂಧಿ ನೇತೃತ್ವದ ವಿರೋಧ ಪಕ್ಷಗಳ ನಾಯಕರು ತಂಡವು ಶ್ರೀನಗರಕ್ಕೆ ತೆರಳಿತ್ತು ಎಂದು ಕಾಂಗ್ರೆಸ್ ಟ್ವೀಟ್ ಮಾಡಿತು.ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಹಿಂದೆ ಎರಡು ಬಾರಿ - ಒಮ್ಮೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಹಾಗೂ ಮತ್ತೊಮ್ಮೆ ಜಮ್ಮು ವಿಮಾನ ನಿಲ್ದಾಣದಲ್ಲಿ ತಡೆ ಹಿಡಿಯಲಾಗಿತ್ತು. ಸಿಪಿಐ ನಾಯಕ ಡಿ. ರಾಜಾ ಅವರನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಲಾಗಿತ್ತು. ಆಗಸ್ಟ್ ೫ರಂದು ರಾಜ್ಯದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ರಾಜ್ಯವನ್ನು ವಿಭಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕ್ರಮವನ್ನು ಅನುಸರಿಸಿ ನಿರ್ಬಂಧಗಳನ್ನು ವಿಧಿಸಲಾಗಿದ್ದ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತವು ಕ್ರಮ ಕೈಗೊಂಡಿತ್ತು. ಈದಿನದ ಭೇಟಿಗೆ ಮುನ್ನ ಪರಿಸ್ಥಿತಿ ಮಾಮೂಲಿಯಾಗಿದೆ ಎಂಬುದಾಗಿ ಪ್ರತಿಪಾದಿಸುತ್ತಿರುವ ಸರ್ಕಾರವು ಕಣಿವೆ ಭೇಟಿಗೆ ಜನರಿಗೆ ಅವಕಾಶ ನಿರಾಕರಿಸುವ ಮೂಲಕ ದ್ವಂದ್ವ ವರ್ತನೆ ತೋರುತ್ತಿದೆ ಎಂದು ಕಾಂಗ್ರೆಸ್ ನಾಯಕ ಆಜಾದ್ ಅವರು ಆಪಾದಿಸಿದ್ದರು.’ಒಂದೆಡೆಯಲ್ಲಿ ಸರ್ಕಾರವು ಪರಿಸ್ಥಿತಿ ಸಹಜವಾಗಿದೆ ಎಂದು ಹೇಳುತ್ತದೆ, ಇನ್ನೊಂದೆಡೆಯಲ್ಲಿ ಅವರು ಯಾರಿಗೂ ಅಲ್ಲಿಗೆ ಹೋಗಲು ಬಿಡುತ್ತಿಲ್ಲ. ಇಂತಹ ದ್ವಂದ್ವಗಳನ್ನು ಎಂದೂ ಕಂಡಿಲ್ಲ. ಪರಿಸ್ಥಿತಿ ಸಹಜವಾಗಿದ್ದರೆ, ರಾಜಕೀಯ ನಾಯಕರನ್ನು ಏಕೆ ಗೃಹ ಬಂಧನದಲ್ಲಿ ಇಡಲಾಗಿದೆ?’ ಎಂದು ಆಜಾದ್ ಪ್ರಶ್ನಿಸಿದರು.ತಮ್ಮನ್ನು ವಾಪಸ್ ಕಳುಹಿಸಿದ ಜಮ್ಮು ಮತ್ತು ಕಾಶ್ಮೀರ ಆಡಳಿತದ ಕ್ರಮವು ಅಲ್ಲಿ (ಜಮ್ಮು ಮತ್ತು ಕಾಶ್ಮೀರ) ಕಾನೂನು ಮತ್ತು ಸುವ್ಯವಸ್ಥೆ ಮಾಮೂಲಿಯಾಗಿಲ್ಲ ಎಂಬುದನ್ನು ಸಾಬೀತು ಪಡಿಸಿದೆಎಂದು ರಾಹುಲ್ ಗಾಂಧಿ ಬಳಿಕ ನುಡಿದರು. ’ನಾವು ಜನರ ಮನಸ್ಥಿತಿ ಅರಿಯಲು ಮತ್ತು ಸಾಧ್ಯವಿದ್ದರೆ ನಮ್ಮಿಂದ ಸಾಧ್ಯವಾದ ನೆರವು ನೀಡಲು ಬಯಸಿದ್ದೆವು. ಆದರೆ ದುರದೃಷ್ಟವಶಾತ್ ನಮ್ಮನ್ನು ವಿಮಾನ ನಿಲ್ದಾಣದಿಂದ ಆಚೆಗೆ ಹೋಗಲೂ ಬಿಡಲಿಲ್ಲಎಂದು ರಾಹುಲ್ ಹೇಳಿದರು. ನಮ್ಮ ಜೊತೆಗಿದ್ದ ಪತ್ರಕರ್ತರ ಮೇಲೆ ಕೈ ಮಾಡಿ ಥಳಿಸಲಾಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜವಾಗಿಲ್ಲ ಎಂಬುದು ಸುಸ್ಪಷ್ಟಎಂದು ರಾಹುಲ್ ನುಡಿದರು. ‘ನಾವು ಸಮಸ್ಯೆ ಸೃಷ್ಟಿಸಬಹುದು ಎಂಬ ಆಡಳಿತದ ಭೀತಿ ಬುಡರಹಿತವಾದದ್ದುಎಂದು ನಿಯೋಗದ ಇನ್ನೊಬ್ಬ ಸದಸ್ಯ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮಜೀದ್ ಮೆಮನ್ ಹೇಳಿದರು. ’ನಮ್ಮ ಉದ್ದೇಶ ತೊಂದರೆ ಸೃಷ್ಟಿಸಲು ಹೋಗುವುದಲ್ಲ. ನಾವು ಸರ್ಕಾರದ ವಿರೋಧಿಗಳಾಗಿ ಹೋಗುತ್ತಿಲ್ಲ, ನಾವು ಸರ್ಕಾರಕ್ಕೆ ಬೆಂಬಲವಾಗಿ ಹೋಗುತ್ತಿದ್ದೇವೆ, ಏನು ಮಾಡಬೇಕಾಗಿದೆ ಎಂಬುದಾಗಿ ಸಲಹೆಗಳನ್ನು ನೀಡಲು ನಮಗೂ ಇದರಿಂದ ಸಾಧ್ಯವಾಗುತ್ತದೆಎಂದು ಮೆಮನ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು. ಭೇಟಿಗೂ ಮುನ್ನ ಟ್ವೀಟ್ ಮಾಡಿದ್ದ ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕ ದಿನೇಶ್ ತ್ರಿವೇದಿ ಅವರು ಇತರ ವಿರೋಧಿ ನಾಯಕರ ಜೊತೆಗೆ ತಾವೂ ಶ್ರೀನಗರಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದರು. ೩೭೦ನೇ ವಿಧಿ ರದ್ದಿನ ಬಳಿಕ ಕಣಿವೆಯಲ್ಲಿ ಎಂತಹ ಪರಿಸ್ಥಿತಿ ಇದೆ ಎಂಬುದಾಗಿ ಖುದ್ದು ನೋಡಲು ನಾವು ಹೋಗುತ್ತಿದ್ದೇವೆ ಎಂದು ತ್ರಿವೇದಿ ಟ್ವೀಟಿನಲ್ಲಿ ತಿಳಿಸಿದ್ದರು. ನಿಯೋಗದಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ನಾಯಕರಿದ್ದಾರೆ ಎಂದು ರಾಜಾ ಹೇಳಿದ್ದರು. ’ನಾವು ಸಾರ್ವಜನಿಕ ಪ್ರತಿನಿಧಿಗಳು. ಆದ್ದರಿಂದ ನಮ್ಮನ್ನು ತಡೆಯಬಾರದು ನಾವು ಅಲ್ಲಿ ಇಳಿದಾಗ ಅವರು ನಮ್ಮ ಮೇಲೆ ಗುಂಡು ಹಾರಿಸುತ್ತಾರೆಯೇ?’ ಎಂದು ರಾಜಾ ಪ್ರಶ್ನಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಆಡಳಿತವು ನಿಯೋಗಕ್ಕೆ ಭೇಟಿಯನ್ನು ರದ್ದು ಪಡಿಸುವಂತೆ ಸೂಚಿಸಿತ್ತು.  ಇಂತಹ ಭೇಟಿಯಿಂದ ಜನರಿಗೆ ಅನಾನುಕೂಲವಾಗುತ್ತದೆ ಎಂದು ಆಡಳಿತ ಹೇಳಿತ್ತು. ’ನಿಮ್ಮ ಭೇಟಿಯಿಂದ ಇನ್ನೂ ಹಲಡೆಗಳಲ್ಲಿ ಇರುವ ನಿರ್ಬಂಧಗಳ ಉಲ್ಲಂಘನೆಯಾಗುತ್ತದೆ. ಹಿರಿಯ ನಾಯಕರು ಅರ್ಥ ಮಾಡಿಕೊಳ್ಳಬೇಕು ಮತ್ತು ಶಾಂತಿ ಸುವ್ಯವಸ್ಥೆ ಪಾಲನೆಗೆ ಮತ್ತು ಮಾನವ ಪ್ರಾಣ ನಷ್ಟ ತಡೆಯಲು ಅಗ್ರ ಪ್ರಾಶಸ್ತ್ಯ ನೀಡಬೇಕುಎಂದು ಆಡಳಿತ ಟ್ವೀಟ್ ಮಾಡಿತ್ತು. ’ರಾಜ್ಯದ ಜನರನ್ನು ಗಡಿಯಾಚೆಯ ಭಯೋತ್ಪಾದನೆ ಮತ್ತು ಉಗ್ರಗಾಮಿಗಳು ಹಾಗೂ ಪ್ರತ್ಯೇಕತಾವಾದಿಗಳ ದಾಳಿಯ ಬೆದರಿಕೆಯಿಂದ ರಕ್ಷಿಸಲು ಮಾಡುತ್ತಿರುವ ನಮ್ಮ ಪ್ರಯತ್ನಗಳಿಗೆ ರಾಜಕೀಯ ನಾಯಕರು ಅಡ್ಡಿ ಪಡಿಸಬಾರದುಎಂದೂ ಆಡಳಿತ ಹೇಳಿತ್ತು. ಕಾಶ್ಮೀರಕ್ಕೆ  ಸಂಬಂಧಿಸಿದ ಆತಂಕಗಳನ್ನು ನಿವಾರಿಸುವಂತೆ ರಾಹುಲ್ ಗಾಂಧಿಯವರು ಕಳೆದವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದರು. ರಾಹುಲ್ ಗಾಂಧಿ ಅವರ ಆತಂಕವನ್ನು ತಳ್ಳಿಹಾಕಿದ್ದ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ರಾಜ್ಯದಲ್ಲಿ ಪ್ರವಾಸ ಮಾಡುವಂತೆ ರಾಹುಲ್ ಅವರನ್ನು ಆಹ್ವಾನಿಸಿದ್ದರು. ರಾಹುಲ್ ಗಾಂಧಿಯವರಿಗೆ ವಿಮಾನ ಒದಗಿಸುವುದಾಗಿಯೂ ಅವರು ಹೇಳಿದ್ದರು. ಆದರೆ, ತಾವು ಮತ್ತು ಇತರ ವಿರೋಧ ಪಕ್ಷಗಳ ನಾಯಕರು ಕಾಶ್ಮೀರಕ್ಕೆ ಭೇಟಿ ನೀಡುವುದಾಗಿ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿದ ಬಳಿಕ ಮಲಿಕ್ ಅವರು ತಮ್ಮ ಆಹ್ವಾನವನ್ನು ಹಿಂತೆಗೆದುಕೊಂಡಿದ್ದರು. ’ನಮಗೆ ವಿಮಾನ ಬೇಕಾಗಿಲ್ಲ, ಆದರೆ ಪ್ರಯಾಣ ಮಾಡಲು ಮತ್ತು ಜನರು, ಮುಖ್ಯ ನಾಯಕರು ಮತ್ತು ನಮ್ಮ ಯೋಧರನ್ನು ಭೇಟಿ ಮಾಡಲು ಸ್ವಾತಂತ್ರ್ಯ ಬೇಕುಎಂದು ರಾಹುಲ್ ಅವರು ರಾಜ್ಯಪಾಲ ಮಲಿಕ್ ಆಹ್ವಾನಕ್ಕೆ ಉತ್ತರಿಸಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಫರೂಕ್ ಅಬ್ದುಲ್ಲ, ಒಮರ್ ಅಬ್ದುಲ್ಲ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ಪ್ರಾದೇಶಿಕ ಪಕ್ಷಗಳ ಹಲವಾರು ನಾಯಕರು ರಾಜ್ಯದಲ್ಲಿ ಗೃಹ ಬಂಧನದಲ್ಲಿ ಇದ್ದರು.

No comments:

Post a Comment