Monday, August 19, 2019

ಇಂದಿನ ಇತಿಹಾಸ History Today ಆಗಸ್ಟ್ 19

2019: ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರು  ಈದಿನ  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡಿ ೩೦ ನಿಮಿಷಗಳ ಕಾಲ ದ್ವಿಪಕ್ಷೀಯ ವಿಷಯಗಳು ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕದ ಅಧ್ಯಕ್ಷರಿಗೆ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ದೂರವಾಣಿ ಕರೆ ಮಾಡಿದ ಎರಡು ದಿನಗಳ ಬಳಿಕ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷರಿಗೆ ಫೋನ್ ಮಾಡಿದರು. ‘ಪ್ರದೇಶದ ಕೆಲವು ನಾಯಕರು ಭಾರತ ವಿರೋಧಿ ಹಿಂಸೆಯನ್ನು ಪ್ರಚೋದಿಸುತ್ತಿದ್ದು ಇದು ಶಾಂತಿ ಪಾಲನೆಯ ಮಾರ್ಗಕ್ಕೆ ವಿರುದ್ಧವಾಗಿದೆಎಂದು ಹೆಸರು ಹೇಳದೆಯೇ ಇಮ್ರಾನ್ ಖಾನ್ ವಿರುದ್ಧ ಮೋದಿ ಅವರು ಟೀಕಿಸಿದರು.  ಭಯೋತ್ಪಾದನೆ ಮತ್ತು ಹಿಂಸಾಚಾರ ಮುಕ್ತ ಪರಿಸರ ಸೃಷ್ಟಿಯ ಮಹತ್ವವನ್ನು ಒತ್ತಿ ಹೇಳಿದ ಅವರು ಗಡಿಯಾಚೆಯಿಂದ ಭಯೋತ್ಪಾದನೆಗೆ ಪ್ರಚೋದನೆ ನೀಡುವುದು ಸ್ಥಗಿತಗೊಳ್ಳಬೇಕು ಎಂದು ಆಗ್ರಹಿಸಿದರು ಎಂದು ಮೂಲಗಳು ತಿಳಿಸಿದವು. ಬಡತನ, ಅನಕ್ಷರತೆ ಮತ್ತು ರೋಗ ರುಜಿನಗಳ ವಿರುದ್ಧದ ಹೋರಾಟಕ್ಕೆ ಭಾರತದ ಬದ್ಧತೆಯನ್ನು ಕೂಡಾ ಪ್ರಧಾನಿ ಪುನರುಚ್ಚರಿಸಿದರು2019 ಆಗಸ್ಟ್ 17ರ ಶನಿವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಹಸ್ಯ ಸಭೆಗೆ ಮುನ್ನ ಪಾಕ್ ಪ್ರಧಾನಿ ಇಮ್ರಾನ್ ಖಾನ್  ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಮೋದಿ ಅವರು ತಮ್ಮ ಮಾತುಕತೆಯ ವೇಳೆಯಲ್ಲಿ ಆಫ್ಘಾನಿಸ್ಥಾನದ ಬಗೆಗೂ ಪ್ರಸ್ತಾಪಿಸಿದರು. ಆಫ್ಘಾನಿಸ್ಥಾನವು  2019 ಆಗಸ್ಟ್ 19ರ ಸೋಮವಾರ  ತನ್ನ ಸ್ವಾತಂತ್ರ್ಯ ಶತಮಾನೋತ್ಸವವನ್ನು ಆಚರಿಸಿತು.  ಸಂಯುಕ್ತ, ಸುಭದ್ರ, ಪ್ರಜಾತಾಂತ್ರಿಕ ಮತ್ತು ಸ್ವತಂತ್ರ ಆಫ್ಘಾನಿಸ್ಥಾನಕ್ಕಾಗಿ ದುಡಿಯುವ ಭಾರತದ ಬದ್ಧತೆಯನ್ನು ಪ್ರಧಾನಿ ಮಾತುಕತೆ ವೇಳೆ ಪುನರುಚ್ಚರಿಸಿದರು.

2019: ನವದೆಹಲಿ: ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಅವರ ಸೇವಾ ಅವಧಿಯನ್ನು ಪ್ರಾದೇಶಿಕ ಭದ್ರತೆಯ ಕಾರಣ ನೀಡಿ ಇನ್ನೂ ವರ್ಷ ವಿಸ್ತರಿಸಲು ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ನಿರ್ಧರಿಸಿತು. ಬಜ್ವಾ ಸೇವಾವಧಿಯನ್ನು ಅದೇ ಹುದ್ದೆಯಲ್ಲಿ ವಿಸ್ತರಿಸುವ ಬಗೆ ಪಾಕಿಸ್ತಾನ ಪ್ರಧಾನಮಂತ್ರಿಗಳ ಕಾರ್ಯಾಲಯ ಅಧಿಸೂಚನೆ ಹೊರಡಿಸಿತು.  ‘ಪ್ರಸ್ತುತ ಸೇನಾ ಮುಖ್ಯಸ್ಥರಾಗಿರುವ ಖಮರ್ ಜಾವೇದ್ ಬಜ್ವಾ ಅವರನ್ನು ಅವರ ಸೇವಾ ಅವಧಿ ಪೂರ್ಣಗೊಳಿಸಿದ ದಿನಾಂಕದಿಂದ ಮೂರು ವರ್ಷದ ಅವಧಿಗೆ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರೆಯುವಂತೆ ಸೂಚನೆ ನೀಡಲಾಗಿದೆ. ಪ್ರಾದೇಶಿಕ ಭದ್ರತಾ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಅಧಿಸೂಚನೆ ತಿಳಿಸಿತುಭಾರತದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ ನೇ ವಿಧಿಯನ್ನು ರದ್ದುಪಡಿಸಿದ ಸಂದರ್ಭದಲ್ಲಿ ಬಜ್ವಾ ಅವರು ಭಾರತದ ವಿರುದ್ಧ ಪ್ರಬಲ ಟೀಕಾಪ್ರಹಾರ ನಡೆಸಿದ್ದರು.  ‘ಕಾಶ್ಮೀರಿಗಳಿಗೆ ಸಹಾಯ ಮಾಡಲು ನಮ್ಮ ಸೇನೆ ಯಾವುದೇ ಮಟ್ಟಕ್ಕೆ ಹೋಗಲೂ ಸಿದ್ದವಾಗಿದೆ. ಪಾಕಿಸ್ತಾನದ ಸೈನ್ಯವು ಕಾಶ್ಮೀರಿಗಳ ಅಂತಿಮ ಹೋರಾಟದಲ್ಲಿ ಜೊತೆಯಾಗಿ ನಿಲ್ಲುತ್ತದೆ. ಅಲ್ಲದೆ, ನಮ್ಮ ಜವಾಬ್ದಾರಿಗಳನ್ನು ಪೂರೈಸಲು ನಾವು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧರಿದ್ದೇವೆಎಂದು ಖಮರ್ ಜಾವೇದ್ ಬಜ್ವಾ ಭಾರತಕ್ಕೆ ಎಚ್ಚರಿಕೆ ನೀಡಿದ್ದರು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜಾವೇದ್ ಬಜ್ವಾ ಹೀಗೆ ಹೇಳಿಕೆ ನೀಡಿದ ಒಂದೇ ವಾರದಲ್ಲಿ ಅವರ ಸೇವಾ ಅವಧಿಯನ್ನು ಮತ್ತೆ ಮೂರು ವರ್ಷಗಳಿಗೆ ಮುಂದುವರೆಸಿರುವುದು ಹತ್ತಾರು ಅನುಮಾನಗಳನ್ನು ಹುಟ್ಟು ಹಾಕಿತು.
2019: ನವದೆಹಲಿ: ವಿದೇಶಕ್ಕೆ ತೆರಳಲು ಮುಂದಾಗಿದ್ದ ತಮ್ಮನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ವಾಪಸ್ ಜಮ್ಮು-ಕಾಶ್ಮೀರಕ್ಕೆ ಕಳುಹಿಸಿದ್ದ ದೆಹಲಿ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಜಮ್ಮು - ಕಾಶ್ಮೀರದ ರಾಜಕಾರಣಿಯಾಗಿ ಬದಲಾಗಿರುವ ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್  ದೆಹಲಿ ನ್ಯಾಯಾಲಯದ  ಮೆಟ್ಟಿಲೇರಿದರು. ತಮ್ಮ ಬಂಧನ ಪ್ರಶ್ನಿಸಿ ಅವರು ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಆಗಸ್ಟ್ ೧೪-೧೫ರ ನಡುವಣ ರಾತ್ರಿ ತಮ್ಮ ಶಿಕ್ಷಣ ಮುಂದುವರೆಸುವ ಸಲುವಾಗಿ ಬೋಸ್ಟನ್ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಪಯಣ ಹೊರಟಿದ್ದ ತಮ್ಮನ್ನು ದೆಹಲಿ ಪೊಲೀಸರು ತಡೆದು, ಬಲಾತ್ಕಾರವಾಗಿ ಕಾಶ್ಮೀರಕ್ಕೆ ವಾಪಸ್ ಕಳುಹಿಸಿದರು ಎಂದು ಫೈಸಲ್ ಹೈಕೋರ್ಟಿಗೆ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ ತಿಳಿಸಿದರು.  ಅಕ್ರಮವಾಗಿ ತಮ್ಮನ್ನು ಶ್ರೀನಗರಕ್ಕೆ ಒಯ್ಯುವ ಮುನ್ನ ದೆಹಲಿ ಪೊಲೀಸರು ಯಾವುದೇ ಟ್ರಾನ್ಸಿಟ್ ರಿಮಾಂಡ್ ಪಡೆದಿರಲಿಲ್ಲ ಎಂದು ಫೈಸಲ್ ಹೇಳಿದರು. ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ಅವರ ಪೀಠದ ಮುಂದೆ ತುರ್ತಾಗಿ ಪ್ರಸ್ತಾಪಿಸಲಾಯಿತು ಮತ್ತು ಭೋಜನ ವಿರಾಮದ ಬಳಿಕ ವಿಚಾರಣೆಗೆ ಎತ್ತಿಕೊಳ್ಳಲು ಪಟ್ಟಿ ಮಾಡಲಾಯಿತು. ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಸಂಗೀತಾ ಧೀಂಗ್ರ ಸೆಹಗಲ್ ಅವರ ಪೀಠವು ಬಳಿಕ ಫಸಲ್ ಅವರ ವಕೀಲರ ಅಹವಾಲನ್ನು ಆಲಿಸಿ, ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ನಿರ್ದೇಶಿಸಿತು. ಏನಿದ್ದರೂ, ಕೇಂದ್ರ ಸರ್ಕಾರದ ಕಾನೂನು ಅಧಿಕಾರಿಯ ಮನವಿ ಮೇರೆಗೆ ನ್ಯಾಯಾಲಯವು ಔಪಚಾರಿಕ ನೋಟಿಸನ್ನು ಜಾರಿಮಾಡಲಿಲ್ಲ.  ಎರಡು ದಿನಗಳಲ್ಲಿ ಫಸಲ್ ಅರ್ಜಿಗೆ ಉತ್ತರ ಸಲ್ಲಿಸುವುದಾಗಿ ಸರ್ಕಾರ ಪೀಠಕ್ಕೆ ತಿಳಿಸಿತು. ಆಗಸ್ಟ್ ೧೪ರಂದು ದೆಹಲಿ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಹೊರಟಿದ್ದ ಫಸಲ್ ಅವರನ್ನು ಸಾರ್ವಜನಿಕ ಭದ್ರತಾ ಕಾಯ್ದೆಯ ಅಡಿ ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರನ್ನು ಶ್ರೀನಗರದ ಸೆಚ್ಯೂರಿ ಹೊಟೇಲಿನಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ೩೬ ವರ್ಷದ ಷಾ ಫೈಸಲ್ ಅವರು ೨೦೦೯ರ ಐಎಎಸ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಐಎಎಸ್ ಟಾಪರ್ ಆದ ಮೊದಲ ಕಾಶ್ಮೀರಿ ಅವರಾಗಿದ್ದಾರೆ. ೧೦ ವರ್ಷಗಳ ಬಳಿಕ ಅವರು ಐಎಎಸ್ ಹುದ್ದೆ ತ್ಯಜಿಸಿ ರಾಜಕಾರಣಕ್ಕೆ ಧುಮುಕಿದ್ದರು. ಕಾಶ್ಮೀರದಲ್ಲಿ ಹತ್ಯಾಕಾಂಡ ನಡೆಯುತ್ತಿದೆ ಎಂದು ಆರೋಪಿದಸಿ ಅವರು ರಾಜಕಾರಣ ಮೂಲಕ ಹೋರಾಟ ಮಾಡಲು ರಾಜಕೀಯ ರಂಗ ಪ್ರವೇಶ ಮಾಡಿದ್ದರು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿಯನ್ನು ರದ್ದು ಮಾಡಿದ್ದ ಕ್ರಮವನ್ನು ಫಸಲ್ ಟೀಕಿಸಿದ್ದರು, ಕಾಶ್ಮೀರ ಕಣಿವೆಯಲ್ಲಿ ಏಕಾಏಕಿ ನಿರ್ಬಂಧ ಹೇರಿದ್ದನ್ನು ಕೂಡಾ ಅವರು ಖಂಡಿಸಿದ್ದರು.

2019: ಪಾಟ್ನಾ (ಬಿಹಾರ): ಬಹುಕಾಲದಿಂದ ವಯೋ ಸಹಜ ಅಸ್ವಸ್ಥತೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರ್ರ (೮೨ಅವರು ಚಿಕಿತ್ಸೆ ಫಲಕಾರಿಯಾಗದೆ  ದೆಹಲಿಯಲ್ಲಿ ನಿಧನರಾದರು. ಮೂರು ಅವಧಿಗೆ ಬಿಹಾರದ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಜಗನ್ನಾಥ ಮಿಶ್ರ ಅವರು ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ ಆಡಳಿತಾವಧಿಯಲ್ಲಿ ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ರಾಷ್ಟ್ರೀಯ ಜನತಾದಳದ (ಆರ್ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಾಜಕೀಯದಲ್ಲಿ ಉತ್ತುಂಗಕ್ಕೆ ಏರುವುದಕ್ಕೆ ಮುನ್ನ  ಮಿಶ್ರ ಅವರು ಮೂರು ಅವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಲಾಲು ಪ್ರಸಾದ್ ಉತ್ತುಂಗಕ್ಕೆ ಏರುವ ಮುನ್ನ ಬಿಹಾರದ ಅತ್ಯುನ್ನತ ರಾಜಕಾರಣಿಯಾಗಿದ್ದ ಮಿಶ್ರ, ಅತ್ಯಂತ ದೀರ್ಘಕಾಲ ರಾಜ್ಯದ ಪ್ರಭಾವಿ ವ್ಯಕ್ತಿಯಾಗಿದ್ದರು.  ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಜಗನ್ನಾಥ ಮಿಶ್ರ ಅವರಿಗೆ ವೈದ್ಯಕೀಯ ಚಿಕಿತ್ಸೆ ಸಲುವಾಗಿ ೨೦೧೮ರ ಜುಲೈ ತಿಂಗಳಲ್ಲಿ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.  ಬಹುಕಾಲದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಮಿಶ್ರ ಅವರು ಗುರುಗ್ರಾಮದಲ್ಲಿ ಕ್ಯಾನ್ಸರ್ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಬಿಹಾರದ ಮಾಜಿ ಮುಖ್ಯಮಂತ್ರಿ  ಜಗನ್ನಾಥ ಮಿಶ್ರ ನಿಧನಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದರು. ಜಗನ್ನಾಥ ಮಿಶ್ರ ಗೌರವಾರ್ಥ ಬಿಹಾರದಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಲಾಗಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಮಿಶ್ರ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ನಿತೀಶ್ ಕುಮಾರ್ ತಿಳಿಸಿದರು.

2019: ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಸುಮಾರು ೧೫ ದಿನಗಳ ಬಳಿಕ ಈದಿನ  ಸರ್ಕಾರಿ ಶಾಲೆಗಳು  ಪುನಾರಂಭಗೊಂಡಿದ್ದು ಶ್ರೀನಗರದಲ್ಲಿ  ಸುಮಾರು ೧೯೦ ಪುನಾರಂಭವಾದವು.  ಬಹುತೇಕ ಶಾಲೆಗಳಲ್ಲಿ  ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು ಎಂದು ವರದಿಗಳು ಹೇಳಿದವು. ಈ ಮಧ್ಯೆ, ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕಣಿವೆ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದರು. ಕಣಿವೆಯಲ್ಲಿ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಲಿಲ್ಲ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ ವಿಧಿ ಹಾಗೂ ೩೫ಎ ವಿಧಿಯನ್ನು ರದ್ದುಗೊಳಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕೇಂದ್ರ ಸರ್ಕಾರದ ಕ್ರಮದ ಬಳಿಕ ಮುಂಜಾಗ್ರತಾ ಕ್ರಮವಾಗಿ ಕಣಿವೆ ರಾಜ್ಯದಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಪರಿಸ್ಥಿತಿ ಅವಲೋಕನದ ಬಳಿಕ ಹಂತ, ಹಂತವಾಗಿ ಕಣಿವೆಯಲ್ಲಿ ನಿರ್ಬಂಧವನ್ನು ಸಡಿಲಿಸಿ ಶ್ರೀನಗರದಲ್ಲಿ ಶಾಲೆಗಳನ್ನು ಪುನಾರಂಭಿಸಲಾಯಿತು. ಜಿಲ್ಲೆಯ ಶಾಲೆಗಳ ಮುಖ್ಯಸ್ಥರು, ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಶ್ರೀನಗರದ ಜಿಲ್ಲಾಧಿಕಾರಿ ಡಾ.ಶಾಹಿದ್ ಇಕ್ಬಾಲ್ ಸಭೆ ನಡೆಸಿ, ಶಾಲೆ ಆರಂಭಿಸುವಂತೆ ಸೂಚಿಸಿದ್ದರು. ಆದರೆ  ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಮಾತ್ರ ತೀರಾ ಕಡಿಮೆ ಇತ್ತು ಎಂದು ವರದಿ ತಿಳಿಸಿತು. ಮಧ್ಯೆ, ಕಳೆದ ಎರಡು ದಿನಗಳಿಂದ ಅಲ್ಲಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಯಾವುದೇ ಖಾಸಗಿ ಶಾಲೆಗಳು ಆರಂಭಗೊಳ್ಳಲಿಲ್ಲ. ಬೇಮಿನಾದಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆ ಮತ್ತು ಕೆಲವು ಕೇಂದ್ರೀಯ ವಿದ್ಯಾಲಯಗಳು ಮಾತ್ರ ಪುನಾರಂಭಗೊಂಡವು ಎಂದು ವರದಿ ಹೇಳಿತು. ಕಣಿವೆಯಲ್ಲಿ ಇನ್ನೂ ಭಯಗ್ರಸ್ತ ಹಾಗೂ ಅನಿಶ್ಚಿತತೆಯ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆ ಎಂಬುದೇ ನಮ್ಮ ಪ್ರಶ್ನೆಯಾಗಿದೆ ಎಂದು ಪೋಷಕರಾದ ಫಾರೂಖ್ ಅಹ್ಮದ್ ದಾರ್ ಹೇಳಿದರು. ಶ್ರೀನಗರದಲ್ಲಿ ಒಟ್ಟು ೯೦೦ ಶಾಲೆಗಳಿದ್ದು, ೧೯೬ ಶಾಲೆಗಳು ಮಾತ್ರ  ಪುನಾರಂಭಗೊಂಡವು ಎಂದು ವರದಿಗಳು ಹೇಳಿದವುಶಾಲೆಗಳ ಪುನಾರಂಭದ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದ ಎಲ್ಲ ಕಡೆ ಭದ್ರತಾ ಪಡೆಗಳನ್ನು ರಕ್ಷಣೆಗೆ ನೇಮಿಸಲಾಗಿತ್ತು. ಆದರೆ, ಕಳೆದ ಎರಡು ದಿನಗಳಿಂದ ಹಿಂಸಾತ್ಮಕ ಪ್ರತಿಭಟನೆ ನಡೆದ ಕಾರಣ ಭದ್ರತಾ ದೃಷ್ಟಿಯಿಂದ ಖಾಸಗಿ ಶಾಲೆಗಳನ್ನು ಇನ್ನೂ ತೆರೆಯಲಾಗಿಲ್ಲ ಎಂದು ಭದ್ರತಾ ಮೂಲಗಳು ತಿಳಿಸಿದವುಪಟಾನ್, ಪಲ್ಹಾನ್, ಸಿಂಗ್ಪೋರ್, ಬಾರಾಮುಲ್ಲಾ ಮತ್ತು ಸೊಪೋರ್ ಪಟ್ಟಣಗಳಲ್ಲಿ ನಿರ್ಬಂಧವನ್ನು ಯಥಾಸ್ಥಿತಿ ಮುಂದುವರೆಸಲಾಗಿತ್ತು. ಜಿಲ್ಲೆಯ ಉಳಿದ ಭಾಗಗಳಲ್ಲಿ ಪ್ರಾಥಮಿಕ ಶಾಲೆಗಳು ತೆರೆದಿದ್ದವು. ತರಗತಿ ಆರಂಭವಾದ ಶಾಲೆಗಳಲ್ಲಿ ಎಷ್ಟು ಮಕ್ಕಳು ಹಾಜರಾಗಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರುಶ್ರೀನಗರದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಹಳೇ ನಗರ ಮತ್ತು ಸಿವಿಲ್ ಲೈನ್ಸ್ ಭಾಗಗಳಲ್ಲಿ ಎರಡು ದಿನಗಳಿಂದ ಹಿಂಸಾಚಾರ ಇದ್ದುದರಿಂದ ಅಲ್ಲಿನ ಶಾಲೆಗಳನ್ನು ಆರಂಭಿಸಿಲ್ಲ ಎಂದು ಹೇಳಿದರು.  ಸರ್ಕಾರಿ ಕಚೇರಿ ಮತ್ತು ಪ್ರಾಥಮಿಕ ಶಾಲೆಗಳನ್ನು ಮರುಆರಂಭಿಸಲು ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದರು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿದ ಕೇಂದ್ರ ಸರ್ಕಾರ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು.. ಆಬಳಿಕ ರಾಜ್ಯದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರದಂತೆ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಇದೀಗ ಶ್ರೀನಗರದಲ್ಲಿ ಪರಿಸ್ಥಿತಿ ಶಾಂತವಾಗಿರುವುದರಿಂದ ರಸ್ತೆ ಅಡ್ಡಗಟ್ಟೆಗಳನ್ನು ತೆರೆವುಗೊಳಿಸಲಾಯಿತು. ಸಾರ್ವಜನಿಕ ಸಾರಿಗೆ ಓಡಾಟವನ್ನು ನಿರ್ಬಂಧಿಸಿರುವುದರಿಂದ ಕಣಿವೆಯ ಮಾರುಕಟ್ಟೆ ಸ್ತಬ್ಧವಾಗಿತ್ತು. ನಿರ್ಬಂಧವನ್ನು ಸಡಿಲಿಸಿದ ಬಳಿಕ ಖಾಸಗಿ ವಾಹನಗಳ ಓಡಾಟ ಹೆಚ್ಚಾಯಿತು.

2019: ಜೈಪುರ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು.  ರಾಜಸ್ಥಾನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಪಕ್ಷದ ಹಿರಿಯ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಮನಮೋಹನ್ ಸಿಂಗ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು.  ಸತತ ಎರಡು ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಭಾರತೀಯ ಜನತಾ ಪಕ್ಷ (ಬಿಜೆಪಿ) ನಿರ್ಧರಿಸಿತ್ತು. ಹೀಗಾಗಿ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಮನಮೋಹನ್ ಸಿಂಗ್ ಅವರ ಆಯ್ಕೆಯಾಗುತ್ತಿದ್ದಂತೆಯೇ ಟ್ವೀಟ್ ಮಾಡಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರುರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದ ಮನಮೋಹನ್ ಸಿಂಗ್ ಅವರಿಗೆ ಅಭಿನಂದನೆಗಳು. ಮನಮೋಹನ್ ಸಿಂಗ್ ಅವರು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಅವರ ಅಪಾರ ಜ್ಞಾನ ಹಾಗೂ ಅನುಭವದಿಂದ ರಾಜಸ್ಥಾನ ಜನತೆಗೆ ಅನುಕೂಲವಾಗಲಿದೆಎಂದು ಹೇಳಿದರು.

2019: ನವದೆಹಲಿ: ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತವನ್ನು ತತ್ತರಗೊಳಿಸಿದ ಮುಂಗಾರು ಮಳೆ ಇದೀಗ ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ಸೇರಿದಂತೆ ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ ತಲ್ಲಣ ಸೃಷ್ಟಿಸಿತು.  ಮೇಘಸ್ಫೋಟ ಸಹಿತವಾದ ಮಹಾಮಳೆಗೆ ಕನಿಷ್ಠ ೩೦ ಮಂದಿ ಬಲಿಯಾಗಿ,  ೨೨ ಮಂದಿ ಕಣ್ಮರೆಯಾದರು.  ನೂರಾರು ಎಕರೆ ಫಸಲು, ಮನೆಗಳು ಜಲಾವೃತಗೊಂಡಿದ್ದು, ಭೋರ್ಗರೆಯುತ್ತಿರುವ ಯಮುನಾ ನದಿ ದೆಹಲಿಯಲ್ಲಿ ಅಪಾಯದ ಮಟ್ಟದ ಸನಿಹಕ್ಕೆ ಬಂದಿತು. ಈದಿನ ಸಂಜೆಯ ವೇಳೆಗೆ ಯುಮನೆ ಅಪಾಯದ ಮಟ್ಟ (೨೦೫.೩೩ ಮೀಟರ್) ದಾಟುವ ಸಾಧ್ಯತೆ ಇರುವುದರಿಂದ ತತ್ ಕ್ಷಣ ಎತ್ತರದ ಸುರಕ್ಷಿತ ತಾಣಗಳಿಗೆ ತೆರಳುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜನರಿಗೆ ಮನವಿ ಮಾಡಿದರು.  ರಾಜ್ಯದ ಪ್ರವಾಹ ಸಂತ್ರಸ್ಥರಿಗೆ ನೆರವು ಹಾಗೂ ಪುನರ್ ವಸತಿಗಾಗಿ ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ೧೦೦ ಕೋಟಿ ರೂಪಾಯಿಗಳ ತುರ್ತು ಪರಿಹಾರವನ್ನು ಘೋಷಿಸಿದರು. ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬಿನಲ್ಲಿ ಅಪಾರ ಜನರ ಸಾವು- ಕಣ್ಮರೆಯ ಹಿನ್ನೆಲೆಯಲ್ಲಿ ಕಟ್ಟೆಚ್ಚರ ಘೋಷಿಸಲಾಯಿತು.  ಯುಮನಾ ಮತ್ತು ಇತರ ನದಿಗಳು ಉಕ್ಕೇರುತ್ತಿರುವ ಹಿನ್ನೆಲೆಯಲ್ಲಿ ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚಿನ ಎಚ್ಚರ ವಹಿಸುವಂತೆ ಜನರಿಗೆ ಸೂಚಿಸಲಾಯಿತು.  ಯಮುನಾ ನದಿಯ ಹಥಿನಿ ಕುಂಡ ಅಣೆಕಟ್ಟಿನಿಂದ .೧೪ ಲಕ್ಷ ಕ್ಯುಸೆಕ್ ನೀರನ್ನು ಹೊರಬಿಟ್ಟ ಬಳಿಕ ನೆರವಿಗಾಗಿ ಸಜ್ಜಾಗಿರುವಂತೆ ಹರಿಯಾಣದಲ್ಲಿ ಸೇನೆಗೆ ಸೂಚನೆ ನೀಡಲಾಯಿತು. ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿತ ದುರಂತಗಳಲ್ಲಿ ಇಬ್ಬರು ನೇಪಾಳೀಯರು ಸೇರಿದಂತೆ ಕನಿಷ್ಠ ೨೨ ಮಂದಿ ಮೃತರಾಗಿ, ಇತರ ಮಂದಿ ಗಾಯಗೊಂಡರು.  ಉತ್ತರಾಖಂಡದಲ್ಲಿ ಮಂದಿ ಸಾವನ್ನಪ್ಪಿದ್ದುಮೇಘ ಸ್ಫೋಟದ ಬಳಿಕ ೨೨ ಮಂದಿ ಕಣ್ಮರೆಯಾದರು. ಪಂಜಾಬಿನಲ್ಲಿ ಮಹಾಮಳೆಗೆ ಮಂದಿ ಬಲಿಯಾದರು. ಯಮುನಾ ನದಿಯ ನೀರಿನ ಮಟ್ಟ ಏರಿದ ಹಿನ್ನೆಲೆಯಲ್ಲಿ ಲೋಹೇ ಕಾ ಪುಲ್ ಎಂಬುದಾಗಿ ಪರಿಚಿತವಾಗಿರುವ ಹಳೆ ಯಮುನಾ ಸೇತುವೆಯನ್ನು ಮುಚ್ಚಲಾಯಿತು.  ದೆಹಲಿಯ ತಗ್ಗು ಪ್ರದೇಶಗಳ ಜನರಿಗೆ ಎತ್ತರ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಶೆಡ್ಗಳಿಗೆ ಸ್ಥಳಾಂತರಗೊಳ್ಳುವಂತೆ ಕೇಜ್ರಿವಾಲ್ ಮನವಿ ಮಾಡಿದರು. ಪರಿಸ್ಥಿತಿಯು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇರುವುದರಿಂದ ಮುಂದಿನ ಎರಡು ದಿನಗಳು ನಿರ್ಣಾಯಕವಾಗಿದ್ದು ತಮ್ಮ ಸರ್ಕಾರವು ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಹರಿಯಾಣವು ದಾಖಲೆ ಪ್ರಮಾಣದ .೨೮ ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಅವಲೋಕನ ಮತ್ತು ಅಪಾಯ ಎದುರಿಸುವ ಸಿದ್ಧತೆಗಳ ಬಗ್ಗೆ ಚರ್ಚಿಸಲು ಕೇಜ್ರಿವಾಲ್ ಅವರು ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿದರು. ಮಹಾಮಳೆಯಿಂದ ತತ್ತರಿಸಿದ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಹಾಪುರದಲ್ಲಿ ನೂರಾರು ಕಬ್ಬಿನ ಫಸಲು ಜಲಾವೃತಗೊಂಡಿದ್ದರೆ, ಹಾನಿಗೊಂಡ ಮನೆಗಳಲ್ಲಿ ಸತ್ತ ಪ್ರಾಣಿಗಳ ಛಿದ್ರ ಅವಶೇಷ ಸಹಿತವಾದ ಕೆಸರು ತುಂಬಿಕೊಂಡಿದ್ದು, ಅವುಗಳನ್ನು ಸ್ವಚ್ಛಗೊಳಿಸಲು ಜನರು ಹರಸಾಹಸ ಪಡುತ್ತಿರುವ ದೃಶ್ಯಗಳು ಕಂಡು ಬಂದವು. ಉತ್ತರಾಖಂಡ ಮತ್ತು ಪಂಜಾಬಿನಲ್ಲಿ ಅಧಿಕಾರಿಗಳು ಜಲಾವೃತಗೊಂಡಿರುವ ಸ್ಥಳಗಳಿಂದ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಯುಮುನಾ ನದಿಯು ಪ್ರಸ್ತುತ ೨೦೩.೩೭ ಮೀಟರಿನಷ್ಟು ಎತ್ತರಕ್ಕೆ ಹರಿಯಿತು.  ಸಂಜೆಯ ವೇಳೆಗೆ ಅದು ಅಪಾಯದ ಮಟ್ಟ (೨೦೫.೩೩ ಮೀಟರ್) ದಾಟುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದರು.  ಹರಿಯಾಣದ ಹಥಿನಿ ಕುಂಡ ಅಣೆಕಟ್ಟಿನಿಂದ  ,೨೮,೦೦೦ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಿರುವುದರಿಂದ ಯಮುನೆಯು ೨೦೭ ಮೀಟರ್ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದರುಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಮಳೆ- ಪ್ರವಾಹದಿಂದ ಅತಿಯಾದ ಹಾನಿಯಾಗಿದೆ. ಹಿಮಾಲಯ ವಲಯದಲ್ಲಿರುವ ಉತ್ತರಾಖಂಡದಲ್ಲಿ ಬಿಡುವಿಲ್ಲದಂತೆ ಜಡಿಮಳೆ ಸುರಿಯುತ್ತಿದೆ ಎಂದು ವರದಿಗಳು ಹೇಳಿದವು.  ಜಡಿಮಳೆಯಿಂದಾಗಿ ಪ್ರದೇಶದಲ್ಲಿ ಭೂ ಕುಸಿತ, ರಸ್ತೆ ಸಂಪಕ್ ಕಡಿತ, ಜಲ ವಿದ್ಯುತ್ ಯೋಜನೆಗಳ ಸ್ಥಗಿತ, ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟ ಪರಿಣಾಮವಾಗಿ ನೂರಾರು ಮಂದಿ ಜಲದಿಗ್ಬಂಧನಕ್ಕೆ ಒಳಗಾದ ಬಗೆಗಿನ ವರದಿಗಳು ಬಂದವು.  ಹಿಮಾಚಲದಲ್ಲಿ ಮಳೆ ಸಂಬಂಧಿತ ಘಟನೆಗಲ್ಲಿ ಸತ್ತವರ ಸಂಖ್ಯೆ ೨೩ಕ್ಕೆ ಏರಿದ್ದರೆ,   ಉತ್ತರಾಖಂಡದಲ್ಲಿ ನಾಲ್ವರು ಮೃತರಾಗಿ ಡಜನ್ ಗಟ್ಟಲೆ ಮಂದಿ ಗಾಯಗೊಂಡಿದ್ದರು. ಪಂಜಾಬಿನ ಅಹೋಲ್ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಮನೆಯ ಛಾವಣಿ ಕುಸಿದು ಸಾವನ್ನಪ್ಪಿದ್ದರು. ಉತ್ತರಾಖಂಡದ ಮೋರಿ ತೆಹ್ಸಿಲ್ ಅರಕೋಟಿನಲ್ಲಿ ಮೇಘಸ್ಫೋಟದಿಂದಾಗಿ ನೀರಿನ ಮಧ್ಯೆ ಸಿಕ್ಕಿಹಾಕಿಕೊಂಡ ಇಬ್ಬರನ್ನು ವಿಮಾನದ ಮೂಲಕ ಮೇಲಕ್ಕೆ ಎತ್ತಿ ರಕ್ಷಿಸಿ, ಡೆಹ್ರಾಡೂನಿನ ಸಹಸ್ರಧಾರಾ ಹೆಲಿಪ್ಯಾಡಿಗೆ ತರಲಾಯಿತು. ಮೇಘಸ್ಫೋಟದಿಂದಾಗಿ ಹಲವಾರು ಗ್ರಾಮಗಳಲ್ಲಿ ಕನಿಷ್ಠ ೧೦ ಮಂದಿ ಕಣ್ಮರೆಯಾದ ವರದಿಗಳು ಬಂದವು.  ಉತ್ತರಕಾಶಿ ಜಿಲ್ಲೆಯ  ಅರಕೋಟ್, ಮಕುರಿ ಮತ್ತು  ಟಿಕೋಚಿ ಗ್ರಾಮಗಳಲ್ಲಿ ಹಲವಾರು ಮನೆಗಳು ಹಾನಿಗೊಂಡಿದ್ದು,   ಪ್ರದೇಶ ರಾಜ್ಯದಲ್ಲಿ ಅತ್ಯಂತ ಹೆಚ್ಚು ಹಾನಿಗೆ ಒಳಗಾಯಿತು. ನೂರಾರು ಮಂದಿಯನ್ನು ತಗ್ಗು ಪ್ರದೇಶಗಳಿಂದ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು.  ಮಳೆ-ಪ್ರವಾಹದಿಂದ ರಸ್ತೆಗಳು ಹಾನಿಗೊಂಡದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಗಳೂ ಎದುರಾದವು. ಪಂಜಾಬಿನ ಜಲಂಧರ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಮತ್ತು ರಾಷ್ಟ್ರೀಯ ವಿಕೋಪ ಪರಿಹಾರ ಪಡೆ (ಎನ್ ಡಿಆರ್ ಎಫ್) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದವು.  ಭಾರೀ ಮಳೆಯ ಬಳಿಕ ಜಲಂಧರದ ಭೋಲೆವಾಲ್, ಮೆಒವಾಲ್ ಮತ್ತು ಪಿಲ್ಲೌರ್ ಉಪವಿಭಾಗದ ಇತರ ಹಳ್ಳಿಗಳಲ್ಲಿನ ಸಟ್ಲೆಜ್ ನದಿ ದಂಡೆಯಲ್ಲಿ ಹಲವಾರು ಕಡೆ ಭಾರೀ ಬಿರುಕುಗಳು ಕಂಡು ಬಂದು,  ಅಲ್ಲಿನ ಜನರನ್ನು ಬೇರೆ ಕಡೆಗಳಿಗೆ ಸ್ಥಳಾಂತರಿಸಲಾಯಿತು. ನವಾನ್ ಖೇರಾ ಗ್ರಾಮದಲ್ಲಿ ಎನ್ ಡಿಆರ್ ಎಫ್ ತಂಡಗಳು ನಾಲ್ವರನ್ನು ರಕ್ಷಿಸಿದ್ದು, ೨೦ಕ್ಕೂ ಹೆಚ್ಚು ಮಂದಿ ನೀರಿನ ಮಧ್ಯೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿದವು. ಪಿಲ್ಲೌರ್ ಉಪವಿಭಾಗದ ಕನಿಷ್ಠ ೧೩ ಗ್ರಾಮಗಳ ಜನರನ್ನು ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ ಎಂದು ಜಲಂಧರ್ ಜಿಲ್ಲಾಧಿಕಾರಿ ವೀರೇಂದರ್ ಕುಮಾರ್ ಶರ್ಮ ಹೇಳಿದರು. ಇಲ್ಲಿನ ೬೩ ಗ್ರಾಮಗಳಲ್ಲಿ ಕಟ್ಟೆಚ್ಚರ ಘೋಷಿಸಲಾಯಿತು.  ಸಟ್ಲೆಜ್ ನದಿಗೆ . ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಸಾಧ್ಯತೆ ಹಿನ್ನೆಲೆಯಲ್ಲಿ ಶಾಹಕೋಟ್ ನಿವಾಸಿಗಳಿಗೆ ಸುರಕ್ಷಿತ ತಾಣಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಶರ್ಮ ಮನವಿ ಮಾಡಿದರು. ಹಿಮಾಚಲ ಪ್ರದೇಶದ ಬುಕಟ್ಟು ಲಾಹುಲ್ ಮತ್ತು ಸ್ಪಿಟಿ ಜಿಲೆಗಳಲ್ಲಿ ಹಿಮಪಾತದ ಕಾರಣವೂ ನೂರಾರು ಪ್ರವಾಸಿಗರು ದಿಗ್ಬಂಧನಕ್ಕೆ ಒಳಗಾಗಿದ್ದಾರೆ. ರಕ್ಷಣಾ ತಂಡಗಳು ಅವರನ್ನು ರಕ್ಷಿಸಲು ಚಂದ್ರತಲದತ್ತ ಹೊರಟರು. ಹಿಮಾಚಲ ಪ್ರದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ಸುರಿದ ಮಳೆ ೭೦ ವರ್ಷಗಳ ಹಿಂದಿನ ದಾಖಲೆಯನ್ನು ಮುರಿಯಿತು.  ರಾಜ್ಯದಲ್ಲಿ ೧೦೨. ಮಿಮೀ ಮಳೆಯಾಗಿದ್ದು ಇದು ಸಹಜ ಮಳೆಗಿಂತ ಶೇಕಡಾ ,೦೬೫ರಷ್ಟು ಹೆಚ್ಚು ಎಂದು ಹವಾಮಾನ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿತು. ಉತ್ತರ ಪ್ರದೇಶದಲ್ಲಿ ಗಂಗಾ, ಯಮುನಾ ಮತ್ತು ಘಾಗ್ರಾ ನದಿಗಳು ಉಕ್ಕೇರುತ್ತಿವೆ. ಗಂಗಾನದಿಯು ಬದೌನ್, ಗರ್ಹಮುಕುಟೇಶ್ವರ, ನರೌರ ಮತ್ತು ಫರೂಖಾಬಾದಿನಲ್ಲಿ ಅಪಾಯ ಮಟ್ಟವನ್ನು ಮೀರಿ ಹರಿಯಿತು. ದೇಶಾದ್ಯಂತ ಜೂನ್ ೧ರಂದು ಮುಂಗಾರು ಆರಂಭವಾದ ಬಳಿಕ, ಆಗಸ್ಟ್ ೧೫ರ ವೇಳೆಗೆ ಮಳೆ, ಪ್ರವಾಹ ಸಂಬಂಧಿತ ದುರಂತಗಳಿಗೆ ಸಿಲುಕಿ ,೦೫೮ ಜನರು ಸಾವನ್ನಪ್ಪಿದರು.  ಇದರಲ್ಲಿ ಒಂದನೇ ನಾಲ್ಕರಷ್ಟು (ಕಾಲು ಭಾಗ) ಸಾವುಗಳು ಮಹಾರಾಷ್ಟ್ರದಿಂದ ವರದಿಯಾದವು.
-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment