ನಾನು ಮೆಚ್ಚಿದ ವಾಟ್ಸಪ್

Tuesday, April 10, 2018

ಇಂದಿನ ಇತಿಹಾಸ History Today ಏಪ್ರಿಲ್ 09

ಇಂದಿನ ಇತಿಹಾಸ History Today ಏಪ್ರಿಲ್ 09
 2018: ಚಂಡೀಗಢ:  ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಶಾಲಾ ಬಸ್ಸೊಂದು ೧೦೦ ಅಡಿ ಆಳದ ಕಣಿವೆಗೆ ಉರುಳಿದ ಪರಿಣಾಮವಾಗಿ ಸಂಭವಿಸಿದ ಭೀಕರ ದುರಂತದಲ್ಲಿ ೧೦ ವರ್ಷಕಿಂತ ಕೆಳಗಿನ ೨೭ ಮಕ್ಕಳು ಸೇರಿದಂತೆ ಕನಿಷ್ಠ ೩೦ ಜನ ಸಾವನ್ನಪ್ಪಿದರು. ಬಸ್ಸಿನ ಚಾಲಕ ಮತ್ತು ಇಬ್ಬರು ಮಹಿಳಾ ಶಿಕ್ಷಕಿಯರೂ ಮಧ್ಯಾಹ್ನ ಸಂಭವಿಸಿದ ಈ ದುರಂತದಲ್ಲಿ ಮೃತರಾದರು.  ದುರಂತ ಸ್ಥಳಕ್ಕೆ ಎನ್ ಡಿ ಆರ್ ಎಫ್ ತಂಡವೊಂದು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು. ಬಹುತೇಕ ೫ನೇ ತರಗತಿಗಿಂತ ಕೆಳಗಿನ ತರಗತಿಗಳ ಈ ಮಕ್ಕಳು ವಜೀರ್ ರಾಮ್ ಸಿಂಗ್ ಪಠಾನಿಯಾ ಸ್ಮಾರಕ ಸಾರ್ವಜನಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಶಾಲೆಯಿಂದ ಮನೆಗೆ ಹೊರಟಿದ್ದರು. ರಾಜ್ಯ ರಾಜಧಾನಿಯಿಂದ ೩೦೦ ಕಿಮೀ ದೂರದ ಗುರ್ಚಲ್ ಗ್ರಾಮದಲಿ ನೂರ್‍ಪುರ-ಛಂಬಾ ರಸ್ತೆಯಲ್ಲಿ ಈ ದುರಂತ ಸಂಭವಿಸಿತು. ರಾಜ್ಯ ಸರ್ಕಾರವು ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ತಲಾ ೫ ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿತು.  ಗಾಯಗೊಂಡಿರುವ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿಯೂ ಅದು ಪ್ರಕಟಿಸಿತು. ಮೊದಲಿಗೆ ಹಿಮಾಚಲ ಮುಖ್ಯಮಂತ್ರಿ ಜೈರಾಮ್ ಥಾಕೂರ್ ಅವರು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೯ ಎಂದು ಹೇಳಿದ್ದರು. ಆದರೆ ಬಳಿಕ ಇನ್ನಷ್ಟು ಶವಗಳು ಪತ್ತೆಯಾದವು. ‘ಒಂಭತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಹಲವರು ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ನನಗೆ ತಿಳಿಸಲಾಗಿತ್ತು. ನಾನು ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ ಮತ್ತು ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ಎನ್ ಡಿ ಆರ್ ಎಫ್ ತಂಡವನ್ನು ತತ್ ಕ್ಷಣವೇ ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು ಸ್ಥಳೀಯರು ನೆರವಾಗುತ್ತಿದ್ದಾರೆ. ದುರಂತದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆಜ್ಞಾಪಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.  ಬಸ್ಸಿನಲ್ಲಿ ೩೫ ಮಂದಿ ಶಾಲಾ ಮಕ್ಕಳು ಇದ್ದುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಶಂಕಿಸಲಾಯಿತು.  ಚಾಲಕನಿಗೆ ಬಸ್ಸಿನ ಮೇಲೆ ನಿಯಂತ್ರಣ ತಪ್ಪಿದ್ದರಿಂದ ಅದು ಜಾರಿ ಕಣಿವೆಗೆ ಉರುಳಿಸಬಹುದು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದರು. ದುರಂತಕ್ಕೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರೂ ಶೋಕ ವ್ಯಕ್ತ ಪಡಿಸಿದ್ದಾರೆ. ರಾಜ್ಯದ ಸಂಪುಟ ಸಚಿವ ಕಿಷನ್ ಕಪೂರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಯವರು ಕಾಂಗ್ರಾ ಜಿಲ್ಲಾಧಿಕಾರಿಗೆ ಕರೆ ಮಾಡಿ ಘಟನೆ ಬಗ್ಗೆ ತನಿಖೆ ನಡೆಸುವಂತೆ ಮತ್ತು ರಕ್ಷಣೆ ಮತ್ತು ಪರಿಹಾರ ಕಾರ್‍ಯ್ಯಾಚರಣೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
2018: ನವದೆಹಲಿ:  ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತಾನು ನೀಡಿದ್ದ ಮಾರ್ಚ್ ೨೯ರ ಗಡುವಿನ ಒಳಗಾಗಿ ’ಸ್ಥೂಲನಕ್ಷೆ (ಸ್ಕೀಮ್)/ ಯೋಜನೆ ರಚಿಸದೇ ಇರುವುದಕ್ಕಾಗಿ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠವು ಮೇ ೩ರ ಒಳಗಾಗಿ ನ್ಯಾಯಾಲಯಕ್ಕೆ ಕರಡು ಸ್ಥೂಲನಕ್ಷೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತು.
ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಸುಪ್ರೀಂಕೋರ್ಟ್ ವಿಧಿಸಿದ ಗಡುವಿನ ಒಳಗಾಗಿ ಸ್ಥೂಲ ನಕ್ಷೆ ಸಲ್ಲಿಸುವುದಾಗಿ ಒಪ್ಪಿದರು.  ‘ಸುಪ್ರೀಂಕೋರ್ಟಿನ ನಿರ್ದೇಶನಗಳನ್ನು ಪಾಲಿಸಬೇಕು. ನಿಮ್ಮಿಂದ ಸ್ಥೂಲನಕ್ಷೆ ರಚನೆ ಆಗಿಲ್ಲ ಎಂಬುದನ್ನು ತಿಳಿದು ಅಚ್ಚರಿಯಾಯಿತು. ನೀವು ಒಪ್ಪಿಕೊಂಡಿದ್ದಿರಿ. ನಾವು ಅತ್ಯಂತ ಕಷ್ಟದಿಂದ ತೀರ್ಪು ನೀಡಿದ್ದೆವು ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ ನುಡಿದರು.  ಸ್ಥೂಲನಕ್ಷೆಗೆ ಅಂತಿಮ ಮೊಹರು ಒತ್ತಲು ಸುಪ್ರೀಂಕೋರ್ಟಿಗೆ ಅವಕಾಶ ನೀಡುವ ಸಲುವಾಗಿ ಶಾಂತಿ ಕಾಪಾಡುವಂತೆ ಸುಪ್ರೀಂಕೋರ್ಟ್ ಪೀಠವು ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಜನತೆಯನ್ನು ಆಗ್ರಹಿಸಿತು.  ‘ಕಾವೇರಿ ಸ್ಥೂಲನಕ್ಷೆ ತಯಾರಿಸುವ ಮೂಲಕ ಅಂತರರಾಜ್ಯ ವಿವಾದ ಇತ್ಯರ್ಥಕ್ಕೆ ನಿಮಗಿರುವ ವಿಶ್ವಾಸಾರ್ಹತೆಯನ್ನು ಸಾಬೀತು ಪಡಿಸಿ ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ ಹೇಳಿದರು.  ‘ದಯವಿಟ್ಟು ನೆನಪಿಡಿ. ನಮ್ಮ ಆದೇಶದ ಪಾಲನೆಯಾಗಬೇಕು. ಪ್ರತಿಬಾರಿಯೂ ನ್ಯಾಯಾಲಯ ನಿಗಾ ಇಡಲಾಗುವುದಿಲ್ಲ. ಹೀಗಾಗಿಯೇ ನೀವು ಸ್ಥೂಲ ನಕ್ಷೆ ತಯಾರಿಸಬೇಕು ಎಂದು ಕೋರ್ಟ್ ಅಪೇಕ್ಷಿಸಿತು. ನೀವು ಸ್ಥೂಲನಕ್ಷೆ ರಚಿಸಿ ನಮ್ಮ ಮುಂದಿಡಿ. ನೀವು ನಮ್ಮ ಡಿಕ್ರಿ ಆದೇಶವನ್ನು ಜಾರಿಗೊಳಿಸಬೇಕು ಎಂದು ಪೀಠ ಹೇಳಿತು.  ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂಬ ತಮಿಳುನಾಡಿದ ಒತ್ತಾಯಕ್ಕೆ ’ಸ್ಥೂಲನಕ್ಷೆ (ಸ್ಕೀಮ್) ಅಂದರೆ ಏನು ಎಂದು ಕಾನೂನು ಹೇಳುತ್ತದೆ. ನಮ್ಮ ತೀರ್ಪು ’ಸ್ಕೀಮ್ ಎಂದು ಹೇಳಿದೆ ಎಂದು ಮುಖ್ಯ ನ್ಯಾಯಮೂರ್ತಿ ಉತ್ತರಿಸಿದರು.  ‘ಆದರೆ ಸ್ಥೂಲನಕ್ಷೆ ಅಂತಿಮವಾಗಿ ಮಂಡಳಿಯನ್ನು ಅಥವಾ ತೀರ್ಪು ಜಾರಿ ಪ್ರಾಧಿಕಾರವನ್ನು ಒದಗಿಸಬೇಕು ಎಂದು ತಮಿಳುನಾಡಿನ ವಕೀಲರು ಹೇಳಿದಾಗ ಮುಖ್ಯ ನ್ಯಾಯಮೂರ್ತಿ ಅದನ್ನು ಒಪ್ಪಿದರು.  ‘ನಿಮಗೆ ಏನಾದರೂ ಸಂಶಯ ಇದ್ದರೆ ಮೊದಲೇ ನಮ್ಮನ್ನು ಏಕೆ ಭೇಟಿ ಮಾಡಲಿಲ್ಲ?’ ಎಂದೂ ಸುಪ್ರೀಂಕೋರ್ಟ್ ಈ ಸಂದರ್ಭದಲ್ಲಿ ಕೇಂದ್ರವನ್ನು ಪ್ರಶ್ನಿಸಿತು. ಇಲ್ಲಿಯವರೆಗೆ ನೀವು ಏಕೆ ಸ್ಥೂಲನಕ್ಷೆಯನ್ನು ಅಂತಿಮಗೊಳಿಸಲಿಲ್ಲ ಎಂದು ನಮಗೆ ಗೊತ್ತಿಲ್ಲ. ನೀವು ತತ್ ಕ್ಷಣ ಅದನ್ನು ತಯಾರಿಸಿ ನಮಗೆ ಒಪ್ಪಿಸಿ ಎಂದು ಪೀಠವು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರಿಗೆ ಸೂಚಿಸಿತು.  ಕೇಂದ್ರ ಸರ್ಕಾರವು ಸ್ಪಷ್ಟನೆ ಕೇಳಿ ಅರ್ಜಿ ಸಲ್ಲಿಸಿರುವುದನ್ನು ಉಲ್ಲೇಖಿಸಿದ ವೇಣುಗೋಪಾಲ್ ಅವರು, ಇಂತಹ ಸ್ಥೂಲ ನಕ್ಷೆಯ ಕಲ್ಪನೆ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಹೀಗಾಗಿ ಈ ಸ್ಥೂಲನಕ್ಷೆಯು ಕಾವೇರಿ ನ್ಯಾಯಾಧಿಕರಣದ ತೀರ್ಪಿಗೆ ಒಳಪಟ್ಟಿರಬೇಕೇ ಎಂಬ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಬೇಕಾಗಿದೆ ಎಂದು ಹೇಳಿದರು.  ನ್ಯಾಯಾಧಿಕರಣದ ಆದೇಶವು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ವಿಲೀನವಾಗಿದೆ ಎಂದು ಪೀಠ ಪ್ರತಿಕ್ರಿಯಿಸಿತು.  ‘ನ್ಯಾಯಾಧಿಕರಣದ ಆದೇಶದ ಬಗ್ಗೆ ಈಗ ಏಕೆ ನೀವು ಮಾತನಾಡುತ್ತಿದ್ದೀರಿ? ನಾವು ಸಮಗ್ರ ಸ್ಕೀಮ್ ಎಂಬುದಾಗಿ ಹೇಳಿದ್ದೇವೆ. ನೀವು ಅದನ್ನು ರಚಿಸಲೇಬೇಕು. ಹೀಗೆ ಪ್ರತಿಬಾರಿ ಆಗುವಂತಿಲ್ಲ. ನೀವು ನಮಗೆ ಸ್ಥೂಲ ನಕ್ಷೆಯನ್ನು ಒಪ್ಪಿಸಬೇಕು. ಬಳಿಕ ನಾವು ಅದಕ್ಕೆ ನಮ್ಮ ಅಂಗೀಕಾರ ಮುದ್ರೆ ಒತ್ತುತ್ತೇವೆ. ನಾವು ಅದನ್ನು ಅವರಿಗೆ (ತಮಿಳುನಾಡು, ಕರ್ನಾಟಕ ಮತ್ತು ಇತರ ರಾಜ್ಯಗಳು) ತೋರಿಸುತ್ತೇವೆ ಮತ್ತು ನಿರ್ಧರಿಸುತ್ತೇವೆ. ಈ ನ್ಯಾಯಾಲಯದ ಅದೇಶ ಜಾರಿಯಾಗಬೇಕು ಎಂದು ಪೀಠವು ಹೇಳಿತು.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಯಾವುದೇ ಸುದೀರ್ಘ ವಿಚಾರಣೆ ಇರುವುದಿಲ್ಲ ಎಂದೂ ಪೀಠ ಸ್ಪಷ್ಟ ಪಡಿಸಿತು.  ‘ವರ್ಷ ಪೂರ್ತಿ ನಮ್ಮ ಆದೇಶದ ಜಾರಿ ಬಗ್ಗೆ ನಾವು ನಿಗಾ ಇಡಲಾಗುವುದಿಲ್ಲ. ಈ ಕಾರಣದಿಂದಲೇ ನಾವು ಸ್ಥೂಲನಕ್ಷೆ ರಚಿಸಬೇಕು ಎಂದು ಹೇಳಿದ್ದು. ತಮಿಳುನಾಡು ಅದರ ಪಾಲಿನ ನೀರನ್ನು ಪಡೆಯಲೇಬೇಕು ಎಂದು ನ್ಯಾಯಾಲಯ ಹೇಳಿತು.  ರಾಜ್ಯಗಳ ಮಧ್ಯೆ ನೀರು ಹಂಚಿಕೆಯನ್ನು ನಿಭಾಯಿಸಲು ಕಾನೂನಿಗೆ ಅನುಗುಣವಾಗಿ ಸ್ಥೂಲನಕ್ಷೆ ತಯಾರಿಸಬೇಕಾದ ಬಾಧ್ಯತೆ ಕೇಂದ್ರ ಸರ್ಕಾರದ ಮೇಲಿದೆ ಎಂದು ಪೀಠ ಹೇಳಿತು.  ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಶಾಂತಿ ಕಾಯ್ದುಕೊಳ್ಳುವಂತೆಯೂ ಪೀಠವು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿತು.
ಕರ್ನಾಟಕ ನೀರು ಬಿಡದೇ ಇರುವ ಕಾರಣ ತಮಿಳುನಾಡಿನ ಜನರು ಉದ್ವಿಗ್ನರಾಗಿದ್ದಾರೆ ಎಂದು ತಮಿಳುನಾಡಿನ ವಕೀಲ ಶೇಖರ್ ನಫಡೆ ಹೇಳಿದಾಗ, ’ಕೋರ್ಟ್ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಸಂಬಂಧಪಟ್ಟವರು ನೋಡಿಕೊಳ್ಳಬೇಕು ಎಂದು ಪೀಠ ಹೇಳಿತು. ಕರ್ನಾಟಕ ಚುನಾವಣೆ ಎದುರಿಸುವುದಕ್ಕೆ ೧೦ ದಿನ ಮುಂಚಿತವಾಗಿ ಮೇ ೩ರಂದು ಪ್ರಕರಣದ ಮುಂದಿನ ವಿಚಾರಣೆಗೆ ಪೀಠವು ದಿನ ನಿಗದಿ ಪಡಿಸಿತು.

2018: ಬೀಜಿಂಗ್:  ದೇಶಭ್ರಷ್ಟ ಭಾರತೀಯ ವಜ್ರ ವ್ಯಾಪಾರಿ ನೀರವ್ ಮೋದಿ ಅವರನ್ನು ಬಂಧಿಸಬೇಕೆಂಬ ಭಾರತದ ಮನವಿಯನ್ನು ಸ್ಥಳೀಯ ಕಾನೂನುಗಳು ಮತ್ತು ಪರಸ್ಪರ ನ್ಯಾಯಾಂಗ ನೆರವು ಒಪ್ಪಂದಗಳಿಗೆ ಅನುಗುಣವಾಗಿ ಹಾಂಕಾಂಗ್ ಒಪ್ಪಿಕೊಳ್ಳಬಹುದು ಎಂದು ಚೀನಾ ಹೇಳಿತು.  ಭಾರತದ ವಿದೇಶಾಂಗ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರು ಕಳೆದ ವಾರ ಸಂಸತ್ತಿನಲ್ಲಿ ’ನೀರವ್ ದೀಪಕ್ ಮೋದಿ ಅವರನ್ನು ಬಂಧಿಸುವಂತೆ ಪೀಪಲ್ಸ್ ರಿಪಬ್ಲಿಕ್ ಚೀನಾದ ಹಾಂಕಾಂಗ್ ವಿಶೇಷ ಆಡಳಿತ ಪ್ರದೇಶ (ಎಚ್ ಕೆ ಎಸ್ ಎಆರ್) ಸರ್ಕಾರವನ್ನು ಕೋರಲಾಗಿದೆ ಎಂದು ತಿಳಿಸಿದ್ದರು.  ಭಾರತದ ಮನವಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ಚೀನೀ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಅವರು ’ಒಂದು ರಾಷ್ಟ್ರ ಎರಡು ವ್ಯವಸ್ಥೆಗಳು ಮತ್ತು ಎಚ್ ಕೆ ಎಸ್ ಎಆರ್ ಮೂಲ ಕಾನೂನು ಪ್ರಕಾರ ಕೇಂದ್ರ ಸರ್ಕಾರದ ನೆರವು ಮತ್ತು ಒಪ್ಪಿಗೆಯೊಂದಿಗೆ ಇತರ ರಾಷ್ಟ್ರಗಳ ಪರಸ್ಪರ ನ್ಯಾಯಾಂಗ ಸಹಕಾರ ವ್ಯವಸ್ಥೆಯಂತೆ ಎಚ್ ಕೆ ಎಸ್ ಎಆರ್ ಈ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಮಾಡಬಹುದು ಎಂದು ಹೇಳಿದರು.  ಭಾರತವು ಎಚ್ ಕೆ ಎಸ್ ಎಆರ್ ಗೆ ತತ್ಸಂಬಂಧ ಮನವಿ ಮಾಡಿದರೆ, ಎಚ್ ಕೆ ಎಸ್ ಎ ಆರ್ ಮೂಲ ಕಾನೂನನ್ನು ಅನುಸರಿಸುವುದು ಮತ್ತು ಭಾರತದ ಜೊತೆಗಿನ ಸಂಬಂಧಿತ ನ್ಯಾಯಾಂಗ ಒಪ್ಪಂದಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು ಎಂದು ಅವರು ನುಡಿದರು.  ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಲಾದ ೧೨,೭೦೦ ಕೋಟಿ ರೂಪಾಯಿಗಳ ಹಗರಣದಲ್ಲಿ ಬೇಕಾಗಿರುವ ಆರೋಪಿ ನೀರವ್ ಮೋದಿ ಹಾಂಕಾಂಗಿನಲ್ಲಿ ಇದ್ದಾರೆ ಎಂದು ಹೇಳಲಾಗಿದೆ.

2018: ನವದೆಹಲಿ:  ದೆಹಲಿಯ ರಾಜಘಾಟ್ ನಲ್ಲಿ ಪ್ರತಿಭಟನಾ ನಿರಶನ ವೇದಿಕೆಗೆ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ಆಗಮಿಸುವುದಕ್ಕೆ ಮುನ್ನವೇ ಪಕ್ಷದ ಹಿರಿಯ ನಾಯಕರಾದ ಜಗದೀಶ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಅವರನ್ನು ವೇದಿಕೆಯಿಂದ ಆಚೆಗೆ ಹೋಗುವಂತೆ ಸೂಚಿಸುವ ಮೂಲಕ ಕಾಂಗ್ರೆಸ್ ಪಕ್ಷವು ವರ್ಚಸ್ಸು ಬೆಳೆಸಿಕೊಳ್ಳುವ ಇನ್ನೊಂದು ಕಸರತ್ತನ್ನು ನಡೆಸಿತು. ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಇಬ್ಬರೂ ೧೯೮೪ರ ಸಿಖ್ ವಿರೋಧಿ ದಂಗೆಯಲ್ಲಿನ ಪಾತ್ರಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಪ್ರತಿಭಟನಾ ನಿರಶನ ಕಾರ್ಯಕ್ರಮದಿಂದ ದೂರ ಇರುವಂತೆ ಉಭಯ ನಾಯಕರಿಗೂ ಪಕ್ಷವು ಸೂಚಿಸಿತು ಎಂದು ಹೇಳಲಾಯಿತು.  ಏಪ್ರಿಲ್ ೨ರ ಭಾರತ ಬಂದ್ ಕಾಲದಲ್ಲಿ ಸಂಭವಿಸಿದ ಜಾತಿ ಹಿಂಸಾಚಾರದ ಹಿನ್ನೆಲೆಯಲ್ಲಿ ಸಾಮಾಜಿಕ ಸೌಹಾರ್ದ ವೃದ್ಧಿಗಾಗಿ ಇಡೀ ದಿನದ ನಿರಶನ ಕಾರ್‍ಯಕ್ರಮವನ್ನು ದೆಹಲಿ ಪ್ರದೇಶ ಕಾಂಗ್ರೆಸ್ ಹಮ್ಮಿಕೊಂಡಿತ್ತು.  ಬಳಿಕ ಕಾರ್‍ಯಕ್ರಮದಲ್ಲಿ ಸಜ್ಜನ್ ಕುಮಾರ್ ಕಾಣಿಸಲಿಲ್ಲ. ಆದರೆ ಟೈಟ್ಲರ್ ಅವರು ಪಕ್ಷ ಕಾರ್‍ಯಕರ್ತರ ಸಮೂಹದಲ್ಲಿ ಇದ್ದುದು ಕಾಣಿಸಿತು. ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ಪಕ್ಷವು ನಿರ್ದೇಶಿಸಿದೆಯೇ ಎಂಬ ಪ್ರಶ್ನೆಗೆ ಟೈಟ್ಲರ್ ನಿರಾಕರಣೆಯ ಉತ್ತರ ನೀಡಿದ ಅವರು ’ನಾನು ಸ್ವತಃ ಕಾರ್ಯಕರ್ತರ ಜೊತೆಗೆ ಇರಬೇಕೆಂಬ ನಿರ್ಧಾರ ಕೈಗೊಂಡೆ ಎಂದು ಹೇಳಿದರು.  ರಾಹುಲ್ ಗಾಂಧಿ ಅವರ ಜೊತೆಗೆ ದೆಹಲಿಯ ಮಾಜಿ ಸಚಿವರು ಮತ್ತು ಹಿರಿಯ ನಾಯಕರು ಮಾತ್ರ ಇರುವಂತೆ ಸೂಚಿಸಲಾಗಿತ್ತು ಎಂದು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಮಾಕನ್ ಹೇಳಿದರು.  ಏನಿದ್ದರೂ ಪಕ್ಷದ ಸಂಪರ್ಕ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜಿವಾಲಾ ಅವರು ’ಇದು ಸೌಹಾರ್ದ ವೃದ್ಧಿಗಾಗಿ ಏರ್ಪಡಿಸಲಾದ ಕಾರ್‍ಯಕ್ರಮ. ಇದರಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಸ್ವಾಗತ ಇದೆ. ಕೆಲವು ವ್ಯಕ್ತಿಗಳ ಸಹೋದರತ್ವದ ಪರಿಸರವನ್ನು ಹಾಳುಮಾಡುವ ಸಂಚು ಹೂಡಿದ್ದಾರೆ ಎಂದು ನುಡಿದರು.  ರಾಹುಲ್ ಗಾಂಧಿ ಅವರು ವೇದಿಕೆಗೆ ಬರುವುದಕ್ಕೆ ಮುನ್ನವೇ ಅಜಯ್ ಮಾಕನ್ ಅವರು ಟೈಟ್ಲರ್ ಜೊತೆಗೆ ಮಾತನಾಡುವುದು ಕಂಡು ಬಂದಿತ್ತು. ಬಳಿಕ ಟೈಟ್ಲರ್ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಹಿತ ಪಕ್ಷದ ಹಿರಿಯ ನಾಯಕರು ಆಸೀನರಾಗಿದ್ದ ವೇದಿಕೆ ಬಿಟ್ಟು ಕೆಳಗಿಳಿದುದು ಕಂಡು ಬಂದಿತ್ತು.  ‘ಇದು ಪಕ್ಷದ ಧರ್ಮ. ಅವರು ಮಾನದಂಡಕ್ಕೆ ಸರಿ ಹೊಂದುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಅರವಿಂದರ್ ಲೊವ್ಲಿ ನುಡಿದರು.  1984ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ಬಳಿಕ ದೆಹಲಿಯಲ್ಲಿ ಸಂಭವಿಸಿದ್ದ ಸಿಖ್ ವಿರೋಧಿ ದಂಗೆಗಳಲ್ಲಿ ಟೈಟ್ಲರ್ ಆರೋಪಿಯಾಗಿದ್ದರು.  ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಟೈಟ್ಲರ್ ಅವರು ೧೯೮೪ರ ಸಿಖ್ ದಂಗೆಗಳ ಬಳಿಕ ಪರಿಸ್ಥಿತಿಯ ಅಂದಾಜು ನಡೆಸಲು ರಾಜೀವ್ ಗಾಂಧಿಯವರು ತಮ್ಮ ಜೊತೆಗೇ ಉತ್ತರ ದೆಹಲಿಯಲ್ಲಿ ಹಲವಾರು ಸುತ್ತು ಸಂಚಾರ ಮಾಡಿದ್ದರು ಎಂದು ಹೇಳಿಕೊಂಡಿದ್ದರು.  ನಾನಾವತಿ ಆಯೋಗವು ದಶಕಗಳ ಹಿಂದೆ ನೀಡಿದ್ದ ವರದಿಯಲ್ಲಿ ಟೈಟ್ಲರ್ ಅವರು ದಂಗೆಗಳನ್ನು ಸಂಘಟಿಸಿವರಲ್ಲಿ ಒಬ್ಬರಾಗಿದದ್ರು ಎಂದು ತಿಳಿಸಿತ್ತು. ಗಲಭೆ ಕಾಲದಲ್ಲಿ ತಮ್ಮ ಉತ್ತರ ದೆಹಲಿ ಕ್ಷೇತ್ರದ ಗುರುದ್ವಾರ ಪುಲ್ಬಂಗಶ್ ಹೊರಭಾಗದಲ್ಲಿ ಮೂವರು ಸಿಕ್ಖರನ್ನು ಕೊಂದ ಪ್ರಕರಣದಲ್ಲಿ ಅವರು ಆರೋಪಿ ಕೂಡಾ ಆಗಿದ್ದರು.  ಕೇಂದ್ರೀಯ ತನಿಖಾ ದಳವು (ಸಿಬಿಐ) ಈವರೆಗೂ ಟೈಟ್ಲರ್ ವಿರುದ್ಧದ ಆರೋಪಗಳನ್ನು ಸಾಬೀತು ಪಡಿಸುವಲ್ಲಿ ವಿಫಲವಾಗಿದ್ದವು. ಆದರೆ ದೆಹಲಿಯ ನ್ಯಾಯಾಲಯಗಳು ಕಾಲ ಕಾಲಕ್ಕೆ ಟೈಟ್ಲರ್ ಪಾತ್ರದ ಬಗ್ಗೆ ಇನ್ನಷ್ಟು ತನಿಖೆ ನಡೆಸುವಂತೆ ಆಜ್ಞಾಪಿಸಿದವು.

2018: ನವದೆಹಲಿ:  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೆಹಲಿಯ ರಾಜಘಾಟಿನಲ್ಲಿ ರಾಷ್ಟ್ರವ್ಯಾಪಿ ’ನಿರಶನದ ಅಂಗವಾಗಿ ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿದರೆ, ಪಕ್ಷದ ಕೆಲವು ನಾಯಕರು ಉಪವಾಸಕ್ಕೆ ಮುನ್ನ ’ಚೋಲೆ ಭತೂರೆ ಉಪಾಹಾರ ಸವಿದ ಚಿತ್ರ ಅಂತರ್ಜಾಲದಲ್ಲಿ ವೈರಲ್ ಆಗಿ ಪಕ್ಷಕ್ಕೆ ಮುಜುಗರ ಉಂಟು ಮಾಡಿತು.  ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಮಾಕನ್ ಅವರ ಜೊತೆಗೆ ಪಕ್ಷದ ಕಾರ್ಯಕರ್ತರು ಸಿಬಿಎಸ್ ಇ ಪ್ರಶ್ನೆ ಪತ್ರಿಕೆ ಸೋರಿಕೆ, ಬಹುಕೋಟಿ ಪಿಎನ್ ಬಿ ಹಗರಣ, ಕಾವೇರಿ ವಿಷಯ, ಎಸ್ ಸಿ / ಎಸ್ ಟಿ ಕಾಯ್ದೆಯನ್ನು ದುರ್ಬಲಗೊಳಿಸಿದ ಆರೋಪ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಇತ್ಯಾದಿ ವಿಷಯಗಳನ್ನು ಎತ್ತಿಕೊಂಡು ರಾಜಘಾಟಿನಲ್ಲಿ ಈದಿನ ಸಾಂಕೇತಿಕ ನಿರಶನ ನಡೆಸಿದರು.  ಇದೇ ವೇಳೆಗೆ ಬಿಜೆಪಿ ನಾಯಕ ಹರೀಶ್ ಖುರಾನಾ ಅವರು ಟ್ವೀಟ್ ಒಂದರಲ್ಲಿ ಕಾಂಗ್ರೆಸ್ ನಾಯಕರು ನಿರಶನ ಕುಳಿತುಕೊಳ್ಳುವುದಕ್ಕೆ ಮುನ್ನ ದೆಹಲಿಯ ರೆಸ್ಟೋರೆಂಟಿನಲ್ಲಿ ಉಪಾಹಾರ ಸವಿದರು ಎಂದು ಪ್ರತಿಪಾದಿಸಿದರು.  ‘ಕಾಂಗ್ರೆಸ್ ನಾಯಕರು ರಾಜಘಾಟಿನಲ್ಲಿ ನಿರಶನ ನಡೆಸಲು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಆದರೆ ತಾವು ರೆಸ್ಟೋರೆಂಟ್ ಒಂದರಲ್ಲಿ ಚೋಲೆ ಭತೂರೆ ಉಪಾಹಾರ ಸವಿದು ಎಲ್ಲರನ್ನೂ ಮೂರ್ಖರನ್ನಾಗಿಸಿದರು ಎಂದು ಖುರಾನಾ ಫೊಟೋ ಸಹಿತ ಟ್ವೀಟ್ ಮಾಡಿದರು.  ‘ಚಿತ್ರ ಈದಿನ ಬೆಳಗ್ಗೆ ತೆಗೆದದ್ದು ಎಂದು ಅವರು ಪತ್ರಿಕೆಗಳಿಗೆ ಸ್ಪಷ್ಟ ಪಡಿಸಿದರು. ’ಅಜಯ್ ಮಾಕನ್ ಸೇರಿದಂತೆ ಕಾಂಗ್ರೆಸ್ ಮುಖಂಡರು ದೆಹಲಿಯ ಚಾಂದನಿ ಚೌಕ ಪ್ರದೇಶದಲ್ಲಿನ ಚೈನಾ ರಾಮ್ ಸ್ವೀಟ್ಸ್ ನಲ್ಲಿ ಬೆಳಗ್ಗೆ ೯.೩೫ರಿಂದ ೧೦.೩೦ರ ಅವಧಿಯಲ್ಲಿ ಕುಳಿತಿದ್ದರು ಎಂದು ಅವರು ನುಡಿದರು.  ಆದರೆ ಇದೇ ಚಿತ್ರದಲ್ಲಿದ್ದ ಕಾಂಗ್ರೆಸ್ ನಾಯಕ ಎಎಸ್ ಲೊವ್ಲಿ ಅವರು ’ಸಾಂಕೇತಿಕ ನಿರಶನ ಇದ್ದದ್ದು ಬೆಳಗ್ಗೆ ೧೦.೩೦ರಿಂದ ಸಂಜೆ ೪.೩೦ರವರೆಗೆ. ಈ ಚಿತ್ರ ಬೆಳಗಿನ ೮ ಗಂಟೆಯದ್ದು, ಇದು ಬಿಜೆಪಿ ಜನ ಮಾಡುತ್ತಿರುವ ತಪ್ಪು. ರಾಷ್ಟ್ರವನ್ನು ಸುಸೂತ್ರವಾಗಿ ನಡೆಸುವ ಬದಲಿಗೆ ಅವರು ನಾವೇನು ತಿನ್ನುತ್ತಿದ್ದೇವೆ ಎಂಬುದರತ್ತ ಗಮನ ಕೇಂದ್ರೀಕರಿಸಿದ್ದಾರೆ ಎಂದು ಹೇಳಿದರು. ಏನಿದ್ದರೂ, ಅಷ್ಟರಲ್ಲಾಗಲೇ ಹಾನಿ ಆಗಿಯೇ ಬಿಟ್ಟಿತ್ತು. ಕಾಂಗ್ರೆಸ್ಸಿನ ಫೀಸ್ಟಿಂಗ್ ಬಿಫೋರ್ ಫಾಸ್ಟ್ ಚಿತ್ರಕ್ಕೆ ಟ್ಟಿಟ್ಟರಿನಲ್ಲಿ ಟೀಕೆಗಳ ಸುರಿಮಳೆಯಾಗಿತ್ತು.

2018: ನವದೆಹಲಿ: ಕೆಲವು ಸಮೂಹಗಳು ಏಪ್ರಿಲ್ ೧೦ರ ಮಂಗಳವಾರ ಭಾರತ್ ಬಂದ್ ಆಚರಿಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಭದ್ರತೆಯನ್ನು ಬಿಗಿಗೊಳಿಸುವಂತೆ ಮತ್ತು  ಅಗತ್ಯ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೋಮವಾರ ಎಲ್ಲ ರಾಜ್ಯಗಳಿಗೆ  ಸೂಚನೆ ನೀಡಿತು.  ‘ಏಪ್ರಿಲ್ ೧೦ರಂದು ಇನ್ನೊಂದು ಭಾರತ್ ಬಂದ್ ನಡೆಯಲಿದೆ ಎಂಬ ಹಲವಾರು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿರುವ ಕೇಂದ್ರ ಗೃಹ ಸಚಿವಾಲಯ, ಎಲ್ಲ ರಾಜ್ಯ ಸರ್ಕಾರಗಳಿಗೆ ಭದ್ರತೆಯನ್ನು ಬಿಗಿಗೊಳಿಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿದವು.  ಏಪ್ರಿಲ್ ೨ರಂದು ದಲಿತ ಸಮೂಹಗಳಿಂದ ನಡೆದ ಭಾರತ್ ಬಂದ್ ವೇಳೆಯಲ್ಲಿ  ವ್ಯಾಪಕ ಹಿಂಸೆ, ಆಸ್ತಿಪಾಸ್ತಿ ನಷ್ಟ ಸಂಭವಿಸಿರುವುದನ್ನು ಪ್ರತಿಭಟಿಸಲು,  ಇತರ ಕೆಲವು ಸಮೂಹಗಳು ಮೀಸಲಾತಿ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಲ ಏಪ್ರಿಲ್ ೧೦ರಂದು ಭಾರತ್ ಬಂದ್ ನಡೆಸಲು ಕರೆ ನೀಡಿವೆ ಎನ್ನಲಾಯಿತು. ಈ ಮಧ್ಯೆ ರಾಜಸ್ಥಾನದಲ್ಲಿನ ವಿವಿದ ಸಮುದಾಯಗಳ ಪ್ರತಿನಿಧಿಗಳು ಭಿಲ್ವಾರಾದಲ್ಲಿನ ಜಿಲ್ಲಾಡಳಿತಕ್ಕೆ ಏಪ್ರಿಲ್ ೧೦ರ ಭಾರತ್ ಬಂದ್ ಗೆ ತಮ್ಮ ಬೆಂಬಲ ಇಲ್ಲ ಎಂದು ತಿಳಿಸಿದರು.   ರಾಜಸ್ಥಾನದ ಕರ್ಣಿ ಸೇನಾ, ಜಾಟ್ ಸಮಾಜ್ ಸೇವಾ ಸಂಸ್ಥಾನ್ ಮತ್ತು ಅಖೀಲ ಭಾರತೀಯ ಗುರ್ಜರ್ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಏಪ್ರಿಲ್ ೧೦ರ ಭಾರತ್ ಬಂದ್ ಗೆ ತಮ್ಮ ಬೆಂಬಲ ಇಲ್ಲವೆಂದು ಜಿಲ್ಲಾಡಳಿತಕ್ಕೆ ತಿಳಿಸಿದರು.

2018: ನವದೆಹಲಿ:  ಭಾರತದ ಕ್ಷಿಪಣಿಗಳ ಬಗ್ಗೆ ವಿವಿಧ ರಾಷ್ಟ್ರಗಳಲ್ಲಿ ಆಸಕ್ತಿ ಹೆಚ್ಚುತ್ತಿದೆ ಮತ್ತು ಮಿತ್ರ ರಾಷ್ಟ್ರಗಳಿಗೆ ಅವುಗಳನ್ನು ಮಾರಾಟ ಮಾಡಲು ಸರ್ಕಾರ ಬಯಸಿದೆ ಎಂದು ಕೇಂದ್ರ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಅವರು ಇಲ್ಲಿ ಹೇಳಿದರು.  ‘ಭಾರತೀಯ ಕ್ಷಿಪಣಿಗಳ ಬಗ್ಗೆ ಆಸಕ್ತಿ ನಿಶ್ಚಿತವಾಗಿ ಹೆಚ್ಚಿದೆ. ನಾವು ಅದನ್ನು ಗಮನಿಸುತ್ತಿದ್ದೇವೆ ಎಂದು ಅವರು ನುಡಿದರು. ’ವಿಯೆಟ್ನಾಮ್‌ನಂತಹ ರಾಷ್ಟ್ರಗಳು ಭಾರತದಿಂದ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಲು ಆಸಕ್ತಿ ಹೊಂದಿವೆ ಎಂದು ಅವರು ಹೇಳಿದರು. ವೆಚ್ಚದಂತಹ ಅಂಶಗಳ ಬಗೆಗಿನ ಮಾತುಕತೆಗಳನ್ನು ಉಲ್ಲೇಖಿಸಿದ ಸಚಿವೆ, ’ಕೆಲವೊಮ್ಮ ವ್ಯವಹಾರದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಭ್ರಮನಿರಸನದಾಯಕ, ಆದರೆ ಭಾರತೀಯ ಕ್ಷಿಪಣಿಗಳ ಬಗೆಗಿನ ಆಸಕ್ತಿ ಮಾತ್ರ ಮುಂದುವರೆದಿದೆ ಎಂದು ಹೇಳಿದರು.  ಭಾರತೀಯ ಉದ್ಯಮ ಮಹಾಒಕ್ಕೂಟ ಸಂಘಟಿಸಿದ್ದ ಕಾರ್‍ಯಕ್ರಮ ಒಂದರಲ್ಲಿ  ಸೀತಾರಾಮನ್ ಅವರು ಮಾತನಾಡುತ್ತಿದ್ದರು.  ವಿದೇಶಗಳಲ್ಲಿನ ಭಾರತೀಯ ರಾಜತಾಂತ್ರಕ ಕಚೇರಿಗಳ ರಕ್ಷಣಾ ವಿಭಾಗಗಳಿಗೆ ಭಾರತದ ಉತ್ಪಾದನಾ ತಜ್ಜರ ಸಾಮರ್ಥ್ಯಗಳ ಬಗ್ಗೆ ಪರಿಚಯಿಸಲು ಪ್ರೋತ್ಸಾಹ ನೀಡಲಾಗುವುದು ಎಂದು ಸಚಿವರು ನುಡಿದರು.  ಎಲ್ಲ ರಾಷ್ಟ್ರಗಳ ರಾಜರಾಂತ್ರಿಕ ಕಚೇರಿಗಳು ಮತ್ತು ರಾಯಭಾರ ಕಚೇರಿಗಳು ರಕ್ಷಣಾ ವಿಭಾಗಗಳನ್ನು ಹೊಂದಿರುತ್ತವೆ. ಹಿರಿಯ ಸಶಸ್ತ್ರ ಪಡೆಗಳ ಅಧಿಕಾರಿ ತಮ್ಮ ರಾಷ್ಟ್ರದ ರಕ್ಷಣಾ ಅಗತ್ಯಗಳ ಬಗ್ಗೆ ಗಮನ ಹರಿಸಲು ಅಲ್ಲಿ ಇರುತ್ತಾರೆ. ಭಾರತದ ಕಚೇರಿಗಳಲ್ಲೂ ಇದೇ ವ್ಯವಸ್ಥೆ ಇದೆ.  ‘ನಾನು ಅವರಿಗೆ ಮಾರುಕಟ್ಟೆ ತಜ್ಞರಾಗಿ ಎಂದು ಸೂಚಿಸುತ್ತಿಲ್ಲ. ಆದರೆ ಅವರು ಭಾರತದ ರಕ್ಷಣಾ ಉತ್ಪನ್ನಗಳ ಬಗ್ಗೆ, ರಾಷ್ಟ್ರದ ಸಶಸ್ತ್ರ ಪಡೆಗಳ ಸಾಮರ್ಥ್ಯ ಬಗ್ಗೆ ಮಾತನಾಡಲು ಸಮರ್ಥರಾಗಿರಬೇಕು ಎಂದು ಸೀತಾರಾಮನ್ ಹೇಳಿದರು.   ಇದು ವಿವಿಧ ರಾಷ್ಟ್ರಗಳಲ್ಲಿ ಭಾರತೀಯ ರಕ್ಷಣಾ ಉಪಕರಣ ತಯಾರಕರ ಸಾಮರ್ಥ್ಯಗಳ ಬಗ್ಗೆ ಆಸಕ್ತಿ ಹುಟ್ಟಿಸುತ್ತದೆ. ಈ ಮೂಲಕ ಭಾರತ ಮಾರುಕಟ್ಟೆ ತಜ್ಞರಿಲ್ಲದೆಯೇ ಭಾರತಕ್ಕೆ ತನ್ನ ರಕ್ಷಣಾ ಸಾಧನಗಳನ್ನು ಮಾರಲು ಸಾಧ್ಯವಾಗುತ್ತದೆ ಎಂದು ಅವರು ನುಡಿದರು.  ರಕ್ಷಣಾ ವಿಭಾಗಗಳು ನಮಗೆ ಖರೀದಿಸಲು ಬೇಕಾದ ರಕ್ಷಣಾ ಸಾಧನಗಳನ್ನು ಗುರುತಿಸುವುದಲ್ಲ. ಅವರು ನಾವು ಏನನ್ನು ಉತ್ಪಾದಿಸುತ್ತಿದ್ದೇವೆ ಎಂಬ ಬಗ್ಗೆ ಮಾತನಾಡಲೂ ಸಮರ್ಥರಾಗಿರಬೇಕು. ಇದರಿಂದ ಹೊರಗಿನ ದೇಶಗಳು ಭಾರತವನ್ನು ಖರೀದಿ ದೇಶವನ್ನಾಗಿ ಮಾತ್ರವಲ್ಲ ರಕ್ಷಣಾ ಮಾರುಕಟ್ಟೆ ರಾಷ್ಟ್ರವಾಗಿಯೂ  ನೋಡಲು ಸಾಧ್ಯವಾಗುತ್ತದೆ ಎಂದು ನಿರ್ಮಲಾ ಹೇಳಿದರು.

2017: ನವದೆಹಲಿ: ಶ್ರೀನಗರದ ಲೋಕಸಭಾ ಕ್ಷೇತ್ರ ಮತ್ತು ಕರ್ನಾಟಕ ಸೇರಿದಂತೆ 8 ರಾಜ್ಯಗಳ 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತದಾನ ಸಂಜೆ ವೇಳೆಗೆ ಮುಕ್ತಾಯಗೊಂಡಿತು. ಮತದಾನದ ವೇಳೆ ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಮತ್ತು ಮಧ್ಯಪ್ರದೇಶದ ಭಿಂಡ್ಜಿಲ್ಲೆಯಲ್ಲಿ ಹಿಂಸಾಚಾರ ಸಂಭವಿಸಿದ್ದು, ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ 8 ಮಂದಿ ಬಲಿಯಾಗಿ ಹಲವರು ಗಾಯಗೊಂಡರು. ಶ್ರೀನಗರದ ಲೋಕಸಭಾ ಕ್ಷೇತ್ರದಲ್ಲಿ ಇತಿಹಾಸದಲ್ಲೇ ಅತ್ಯಂತ ಕಡಿಮೆ ಕೇವಲ ಶೇಕಡ 7ರಷ್ಟು ಮತದಾನವಾಯಿತು. ಶ್ರೀನಗರದ ಬಡಗಮ್ ಮತಗಟ್ಟೆ ಬಳಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ಸಂಭವಿಸಿದ ಘರ್ಷಣೆಯಲ್ಲಿ ಒಟ್ಟು 8 ಮಂದಿ ಮೃತರಾದರು. ಪಖಾರ್‍‍ಪೊರದಲ್ಲಿ ಮತಗಟ್ಟೆ ಸುತ್ತುವರಿಯಲು ಮುಂದಾದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಹರಸಾಹಸಪಟ್ಟರು. ಕೊನೆಗೆ ಪ್ರತಿಭಟನಾಕಾರರತ್ತ ಗುಂಡು ಹಾರಿಸಲಾಯಿತು. ಘಟನೆಯಲ್ಲಿ ಆರು ಮಂದಿ ಗಾಯಗೊಂಡರು. ಸುಮಾರು 70 ಮತಗಟ್ಟೆಗಳನ್ನು ಹಿಂಸಾಚಾರದಿಂದಾಗಿ ಮುಚ್ಚಲಾಗಿತ್ತು. ಕೆಲವು ಮತಗಟ್ಟೆಗಳಲ್ಲಿ ಪ್ರತಿಭಟನಾಕಾರರು ಮತಯಂತ್ರಗಳಿಗೆ ಬೆಂಕಿ ಹಚ್ಚಿದರು. ಮಧ್ಯಪ್ರದೇಶದಲ್ಲೂ ಘರ್ಷಣೆ: ಮಧ್ಯಪ್ರದೇಶದ ಅಟೇರ್ ವಿಧಾನಸಭಾ ಕ್ಷೇತ್ರ ಮತ್ತು ಭಿಂಡ್ನಲ್ಲಿ ಘರ್ಷಣೆ ಸಂಭವಿಸಿತು. ಅಟೇರ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ ತಾರಕಕ್ಕೇರಿದಾಗ ಅದನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರು. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.
2017: ನವದೆಹಲಿ : ಗೋ ರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸಾಚಾರವನ್ನು ಆರ್ಎಸ್ಎಸ್ಮುಖ್ಯಸ್ಥ ಮೋಹನ್ಭಾಗವತ್ಖಂಡಿಸಿದರು. ಈ ರೀತಿಯ ಹಿಂಸೆ ಗೋರಕ್ಷಣೆಯ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂದು ಹೇಳಿದ ಅವರು, ದೇಶದಾದ್ಯಂತ ಗೋಹತ್ಯೆಯನ್ನು ನಿಷೇಧಿಸಬೇಕು ಎಂದೂಆಗ್ರಹಿಸಿದರು. ಗೋರಕ್ಷಣೆಯ ಅಭಿಯಾನವನ್ನು ಇನ್ನಷ್ಟು ಶಕ್ತಗೊಳಿಸಬೇಕು. ಅಭಿಯಾನಕ್ಕೆ  ಇನ್ನಷ್ಟು ಜನರು ಸೇರ್ಪಡೆಯಾಗಬೇಕು. ಆದರೆ ಪ್ರಯತ್ನದಲ್ಲಿ ಕಾನೂನು ಮತ್ತು ಸಂವಿಧಾನವನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ಅವರು ಹೇಳಿದರು. ಬಿಜೆಪಿ ಆಳ್ವಿಕೆಯ ರಾಜಸ್ತಾನದ ಅಲ್ವಾರ್ನಲ್ಲಿ ಗೋರಕ್ಷಕರು ದನ ಸಾಗಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಇತ್ತೀಚೆಗೆ ಸಾಯಿಸಿ ಘಟನೆಯ ಹಿನ್ನೆಲೆಯಲ್ಲಿ ಭಾಗವತ್ ಹೇಳಿಕೆ ಮಹತ್ವ ಪಡೆಯಿತು.
2009: 1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ನಡೆದ ಸಿಖ್ ವಿರೋಧಿ ಗಲಭೆಯಲ್ಲಿ ಭಾಗವಹಿಸಿದ್ದರೆಂಬ ವಿವಾದ ತಾರಕಕ್ಕೆ ಏರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಅವರು ಲೋಕಸಭಾ ಚುನಾವಣೆ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದರು. ಪಕ್ಷಕ್ಕೆ ತಮ್ಮಿಂದ ಮುಜುಗರ ಉಂಟಾಗಬಾರದು ಎಂಬ ಕಾರಣಕ್ಕೆ ತಾವು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಸಿಖ್ ವಿರೋಧಿ ಗಲಭೆ ವಿವಾದ ತಾರಕಕ್ಕೆ ಏರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಟೈಟ್ಲರ್ ಅವರನ್ನು ಸ್ಪರ್ಧಾ ಕಣದಿಂದ ವಾಪಸ್ ಕರೆಸಿಕೊಳ್ಳಲು ನಿರ್ಧರಿಸುವ ಸಾಧ್ಯತೆ ಇದೆ ಎಂಬ ವದಂತಿ ದಟ್ಟವಾಗಿ ಹರಡಿದ ಮಧ್ಯದಲಿಯೇ ಸ್ವತಃ ಟೈಟ್ಲರ್ ಈ ನಿರ್ಧಾರ ಪ್ರಕಟಿಸಿದರು.

2009: ವಿವಾದದ ಸುಳಿಯಲ್ಲಿ ಸಿಲುಕಿರುವ ಮೇತಾಸ್ ಕಂಪೆನಿಗೆ ಅಧ್ಯಕ್ಷರನ್ನಾಗಿ ಕೆ.ರಾಮಲಿಂಗಂ ಅವರನ್ನು ಸರ್ಕಾರ ನೇಮಿಸಿತು. ಕೆ. ರಾಮಲಿಂಗಂ ಅವರು ಅಧ್ಯಕ್ಷರಲ್ಲದೇ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುವರು. ಇವರ ಜೊತೆ ಅನಿಲ್ ಕೆ ಅಗರ್‌ವಾಲ್ ಅವರನ್ನು ಸಹ ನಿರ್ದೇಶಕರನ್ನಾಗಿ ಸರ್ಕಾರ ನೇಮಿಸಿತು. ಕೆ.ರಾಮಲಿಂಗಂ ಅವರು ಇದಕ್ಕೂ ಮುಂಚೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಈ ನೇಮಕ ಮಾಡಿತು.

2008: ಧಾರವಾಡ ಜಿಲ್ಲೆಯನ್ನು ದೇಶದ ಪ್ರಥಮ `ಗೋ ಅಭಯ ಜಿಲ್ಲೆ'ಯಾಗಿ ಪರಿವರ್ತಿಸುವ, ಭಾರತೀಯ ಗೋ ತಳಿಯನ್ನು ಉಳಿಸಿ ಬೆಳೆಸುವ ವೀರ ಸಂಕಲ್ಪವನ್ನು ಸಾವಿರಾರು ಗೋ ಪ್ರೇಮಿಗಳು ಕೈಗೊಂಡರು. ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ, ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಮೂರು ಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆದ `ದೀಪಗೋಪುರ' ಸಮಾರಂಭದಲ್ಲಿ `ಗೋಮಾತೆಯ ರಕ್ಷಣೆಗೆ ನಾವು ಬದ್ಧ'ಎಂಬ ಸಂಕಲ್ಪ ಪ್ರಕಟಿಸಿದರು. ``ಭಾರತಮಾತೆಯ ಪವಿತ್ರ ಮಣ್ಣಿಗೆ ಅಂಟಿರುವ ಗೋಮಾತೆಯ ರಕ್ತವನ್ನು ತೊಳೆಯುವ ಪ್ರಯತ್ನ ಮಾಡೋಣ. ಗೋಪ್ರೇಮ ಬಂದು ಹೋಗುವ ಮಳೆಯಾಗದೇ ನಿರಂತರ ಹೊಳೆಯಾಗಿ ಹರಿದು ಇಡೀ ದೇಶಕ್ಕೆ ಮಾದರಿಯಾಗಲಿ'' ಎಂದು ಶ್ರೀ ರಾಘವೇಶ್ವರ ಸ್ವಾಮೀಜಿ ಸಲಹೆ ಮಾಡಿದರು. ಸ್ವಾಮೀಜಿಯವರ ಸನ್ಯಾಸ ಸ್ವೀಕಾರ ದಿನವನ್ನು ಜೀವನದಾನ ದಿನವಾಗಿ ಇದೇ ಸಂದರ್ಭದಲ್ಲಿ ಆಚರಿಸಲಾಯಿತು. ಹೊನ್ನಾವರ ತಾಲ್ಲೂಕು ಕೆಕ್ಕಾರಿನ ಅನಿತಾ ಎಂಬ ವಿಧವೆಯ ಕುಟುಂಬವನ್ನು ಶ್ರೀಮಠ ದತ್ತು ತೆಗೆದುಕೊಂಡಿತು. ಇಡೀ ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನು ಶ್ರೀಮಠವೇ ವಹಿಸಿಕೊಳ್ಳಲಿದೆ ಎಂದು ಸ್ವಾಮೀಜಿ ನುಡಿದರು. ನಂತರ ಸಾವಿರಾರು ಮಹಿಳೆಯರು ಗೋಮಾತೆಗೆ ದೀಪದಾರತಿ ಬೆಳಗಿದರು.

2008: ಕನ್ನಡ ಚಲನಚಿತ್ರ ನಿರ್ದೇಶಕ ರಾಜ್ ಕಿಶೋರ್ (49) ಮಹಾರಾಷ್ಟ್ರದ ಶಿರಡಿಯಲ್ಲಿ ನಿಧನರಾದರು. ಪೂಜೆಗೆಂದು ಕುಟುಂಬ ಸಮೇತ ಶಿರಡಿಗೆ ತೆರಳಿದ್ದ ಅವರು ಬೆಳಿಗ್ಗೆ ಹೃದಯಾಘಾತಕ್ಕೆ ತುತ್ತಾದರು. ವಿಷ್ಣುವರ್ಧನ್ ಅಭಿನಯದ `ಆಸೆಯ ಬಲೆ', ಅಂಬರೀಷ್ ಅಭಿನಯದ `ಮಲ್ಲಿಗೆ ಹೂವೇ', ಜಗ್ಗೇಶ್ ಅಭಿನಯದ 'ಭಂಡ ನನ್ನ ಗಂಡ', `ಬೇಡ ಕೃಷ್ಣ ರಂಗಿನಾಟ', ಯೋಗೇಶ್ವರ್ ಅಭಿನಯದ `ಉತ್ತರ ಧ್ರುವದಿಂ ದಕ್ಷಿಣ ಧ್ರುವಕು', ಪ್ರಭಾಕರ್ ಅಭಿನಯದ `ತ್ರಿನೇತ್ರ', ಸೃಜನ್ ಲೊಕೇಶ್, ರಾಧಿಕಾ ಅಭಿನಯದ 'ನೀಲ ಮೇಘಶ್ಯಾಮ ಸೇರಿದಂತೆ 24 ಕನ್ನಡ ಚಲನಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಅವರು ನಿರ್ದೇಶಿಸಿದ ಕೊನೆಯ ಚಿತ್ರ `ಸಿರಿಚಂದನ'. ಇದು ಯಂಡಮೂರಿ ಅವರ ಕಾದಂಬರಿ ಆಧರಿಸಿದ ಚಿತ್ರವಾಗಿತ್ತು. ರಾಜೇಂದ್ರಸಿಂಗ್ ಬಾಬು ಅವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದ ರಾಜ್ಕಿಶೋರ್ ನಂತರದ ದಿನಗಳಲ್ಲಿ ಬಹುತೇಕ ದ್ವಾರಕೀಶ್ ಚಿತ್ರ ನಿರ್ಮಾಣದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. `ನೀ ಬರೆದ ಕಾದಂಬರಿ'ಯಿಂದ `ಆಪ್ತಮಿತ್ರ' ಚಿತ್ರದವರೆಗೂ ಅವರು ದ್ವಾರಕೀಶ್ ಅವರ ಸಹಾಯಕರಾಗಿಯೇ ಶ್ರಮಿಸಿದರು.

2008: ಭಾರತೀಯ ನೌಕಾಪಡೆಯು ದಟ್ಟ ಹಿಮಹಾಸಿನ, ಮೈ ಕೊರೆಯುವ ಥಂಡಿಯ, ಮನುಷ್ಯನ ಸಾಹಸ ಪ್ರವೃತ್ತಿಗೆ ಸವಾಲೊಡ್ಡುವ ಭೂಗೋಳದ `ಉತ್ತರ ಧ್ರುವ'ವನ್ನು ಮೆಟ್ಟಿನಿಂತಿತು.! ಈದಿನ ಭಾರತೀಯ ಕಾಲಮಾನ ರಾತ್ರಿ 8.16ಕ್ಕೆ ಈ ಸಾಧನೆ ಮಾಡಿ, ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿತು. ಇದರೊಂದಿಗೆ ನೌಕಾಪಡೆಯು ಜಗತ್ತಿನ ಎಲ್ಲಾ ಮೂರು ಧ್ರುವಗಳನ್ನು (ಉತ್ತರ ಧ್ರುವ, ದಕ್ಷಿಣ ಧ್ರುವ ಮತ್ತು ಶಿಖರ ಧ್ರುವವೆಂದು ಹೆಸರಾದ ಮೌಂಟ್ ಎವರೆಸ್ಟ್) ಮುಟ್ಟಿದ ಭಾರತದ ಮೊದಲ ತಂಡ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿತು. ಕಮಾಂಡರ್ ಸತ್ಯವ್ರತ ದಾಮ್ ಈ ತಂಡದ ನೇತೃತ್ವ ವಹಿಸಿದ್ದರು. ದಾಮ್ ಮತ್ತು ಇತರ ಒಂಬತ್ತು ಜನರ ತಂಡವು ಮಾರ್ಚ್ 24ರಂದು ಓಸ್ಲೋವನ್ನು ತಲುಪಿತ್ತು. ಅಲ್ಲಿಂದ ಲಾಂಗ್ ಇಯರ್ ಬೈಯನ್ಗೆ ವಿಮಾನದಲ್ಲಿ ಹಾರಿ ಮುಂದಕ್ಕೆ ಆರ್ಕಟಿಕ್ ಧ್ರುವ ಪ್ರದೇಶಕ್ಕೆ ಸಾಹಸ ಯಾತ್ರೆ ಕೈಗೊಂಡಿತ್ತು. `ಭೂಗೋಳದ ಉತ್ತರ ದಿಕ್ಕಿನ 90 ಡಿಗ್ರಿಗೆ ಇರುವ ಜಾಗದಲ್ಲಿ ಬಿಡಾರದೊಳಗೆ ಕೂತು ನಾನು ನಿಮ್ಮ ಜೊತೆ ಮಾತನಾಡುತ್ತಿದ್ದೇನೆ. ಸೂರ್ಯನು ಆಕಾಶದಲ್ಲಿ ಕೆಳಗೇ ಇದ್ದಾನೆ, ಇಲ್ಲಿ ಮಬ್ಬು ಕವಿದ ವಾತಾವರಣ ಇದ್ದರೂ, ಸೂರ್ಯನು ದಿಗಂತದ ಮೇಲೆ 20 ಡಿಗ್ರಿ ಕೋನದಿಂದ ಚೆಲ್ಲುತ್ತಿರುವ ಕಿತ್ತಳೆ ಕಿರಣಗಳು ಮಂಜಿನಲ್ಲಿ ಪ್ರತಿಫಲಿಸುತ್ತಿವೆ. ಇದರ ಮಧ್ಯೆಯೇ ಭಾರತದ ಧ್ವಜ ಹಾರಾಡುತ್ತಿದೆ. ಬಿರುಗಾಳಿಯ ಹೊಡೆತ, ಮರಗಟ್ಟಿಸುವ ತಾಪಮಾನ, ಹಿಮಸಾಗರದ ಸೆಳೆತಗಳನ್ನೆಲ್ಲಾ ಯಶಸ್ವಿಯಾಗಿ ದಾಟಿ ಈ ಸಾಧನೆ ಮಾಡಿದ್ದೇವೆ. ಇಲ್ಲಿ ನಾವು ನೋಡಲು ಬಯಸಿದ್ದ ಹಿಮಕರಡಿ ಮಾತ್ರ ಎಲ್ಲೂ ಕಣ್ಣಿಗೆ ಬೀಳಲೇ ಇಲ್ಲ' ಎಂದು ಧಾಮ್ ಅವರು ದೂರವಾಣಿ ಮೂಲಕ ಮಾಧ್ಯಮಗಳ ಜೊತೆ ಮಾತನಾಡುತ್ತಾ ಉದ್ಘರಿಸಿದರು.

2008: ಏಷ್ಯಾ ಖಂಡದಲ್ಲೇ ಪ್ರಥಮವಾದ ಅಪರೂಪದ ಶಸ್ತ್ರಚಿಕಿತ್ಸೆಯೊಂದನ್ನು ನಡೆಸಿ ರೋಗಿಯೊಬ್ಬರಿಗೆ ರಕ್ತ ಸರಬರಾಜು ಮಾಡುವ ಉಪಕರಣವನ್ನು ಅಳವಡಿಸಿದ ವಿಚಾರವನ್ನು ಬೆಂಗಳೂರಿನ ನಾರಾಯಣ ಹೃದಯಾಲಯದ ವೈದ್ಯರು ಪ್ರಕಟಿಸಿದರು. ಯಂತ್ರವನ್ನು ಅಳವಡಿಸಿರುವ ಐವತ್ತೈದು ವರ್ಷದ ವೆಂಕಟಕೃಷ್ಣಯ್ಯನವರ ಮುಖದಲ್ಲಿ ಹಲವು ವರ್ಷಗಳಿಂದ ಮರೆಯಾಗಿದ್ದ ನಗು ಮರುಕಳಿಸಿತು. ಕೆಪಿಟಿಸಿಎಲ್ನ ನಿವೃತ್ತ ಸಹಾಯಕ ಎಂಜಿನಿಯರ್ ವೆಂಕಟಕೃಷ್ಣಯ್ಯ ಅವರು ಸೇವೆಯಲ್ಲಿದ್ದಾಗ ಐದು ಬಾರಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಸ್ವಯಂ ನಿವೃತ್ತಿ ಪಡೆದರು. ಇತ್ತೀಚೆಗೆ ನಾರಾಯಣ ಹೃದಯಾಲಯಕ್ಕೆ ಚಿಕಿತ್ಸೆಗೆಂದು ದಾಖಲಾಗಿದ್ದರು. ವೈದ್ಯರ ಸಲಹೆಯಂತೆ `ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸ್' (ವಿಎಡಿ) ಉಪಕರಣ ಅಳವಡಿಸಿಕೊಳ್ಳಲು ಅವರು ಒಪ್ಪಿದರು. ಆಸ್ಟ್ರೇಲಿಯಾದ ವೆಂಟ್ರಾಕೋರ್ ಸಂಸ್ಥೆಯು ಈ ಉಪಕರಣವನ್ನು ಸಂಶೋಧಿಸಿದೆ. ಅಮೆರಿಕದ ಮಿನೆಸುಟ ವಿಶ್ವವಿದ್ಯಾಲಯವು ಈ ಶಸ್ತ್ರಚಿಕಿತ್ಸಾ ವಿಧಾನವನ್ನು ರೂಪಿಸಿದೆ. ಅದರಂತೆ ನಾರಾಯಣ ಹೃದಯಾಲಯದ ತಜ್ಞರ ತಂಡ ನಾಲ್ಕು ವರ್ಷಗಳಿಂದ ಅಲ್ಲಿ ತರಬೇತಿ ಪಡೆದು ಇದೇ ಮೊದಲ ಬಾರಿಗೆ ಅಳವಡಿಸುವಲ್ಲಿ ಯಶಸ್ವಿಯಾಯಿತು. ವೆಂಕಟಕೃಷ್ಣಯ್ಯ ಅವರಿಗೆ `ಲೆಫ್ಟ್ ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸ್' (ಎಲ್ ವಿ ಎ ಡಿ) ಉಪಕರಣ ಅಳವಡಿಸಲಾಯಿತು. ಹೃದಯವನ್ನು ಹೊರ ತೆಗೆಯದೇ ಅದರ ಕೆಳಭಾಗದಲ್ಲೇ ಉಪಕರಣವನ್ನು ಅಳವಡಿಸಲಾಯಿತು. ಲೋಹದಿಂದ ಸಿದ್ಧಪಡಿಸಲಾದ ಈ ಉಪಕರಣದ ತೂಕ 298 ಗ್ರಾಂ. ಈ ಉಪಕರಣ ಒಂದು ನಿಮಿಷಕ್ಕೆ 10 ಲೀಟರ್ ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಬ್ಯಾಟರಿ ಚಾಲಿತ ಉಪಕರಣವಾಗಿದ್ದು, ಪ್ರತಿ ನಾಲ್ಕು ಗಂಟೆಗೊಮ್ಮೆ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬೇಕು.

2008: ಮಾರ್ಚ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಮೆಣಸಿನಕಾಯಿ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಒಂಬತ್ತು ಮಂದಿ ರೈತರು ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡರು

2008: ಬರಿ ಬೀದಿಗಳಲ್ಲಿ ಪಡ್ಡೆ ಹುಡುಗರ ನಡುವೆ ಇದ್ದ `ರಾಕ್ ಎನ್ ರೋಲ್' ಸಂಗೀತವನ್ನು ಸಭಾಂಗಣಗಳಲ್ಲೂ ರಿಂಗಣಿಸುವಂತೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ ಗೀತರಚನಾಕಾರ ಬಾಬ್ ದೈಲನ್ ನ್ಯೂಯಾರ್ಕಿನಲ್ಲಿ ಪ್ರತಿಷ್ಠಿತ `ಪುಲಿಟ್ಜರ್ ಪ್ರಶಸ್ತಿ'ಸ್ವೀಕರಿಸಿದರು. `ಜನಪ್ರಿಯ ಸಂಗೀತ ಮತ್ತು ಅಮೆರಿಕ ಸಂಸ್ಕೃತಿಯ ಮೇಲೆ ದೊಡ್ಡ ಪ್ರಭಾವವನ್ನೇ ಬೀರಿದ ಬಾಬ್, ತಮ್ಮ ಗೀತರಚನೆಗಳ ಮೂಲಕ ಅತ್ಯದ್ಭುತವಾದ ಕಾವ್ಯರಸಧಾರೆ ಹರಿಸಿದ್ದಾರೆ' ಎಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರನ್ನು ಹಾಡಿಹೊಗಳಲಾಯಿತು.

2008: 240 ವರ್ಷಗಳಷ್ಟು ಹಳೆಯದಾದ ರಾಜಸತ್ತೆಗೆ ಇತಿಶ್ರೀ ಹಾಡಿ ಪ್ರಜಾಪ್ರಭುತ್ವ ಮಾದರಿ ಸರ್ಕಾರ ರಚಿಸಲು ನೇಪಾಳದಲ್ಲಿ ಇದೇ ಮೊದಲ ಬಾರಿ ಐತಿಹಾಸಿಕ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಅಲ್ಲಲ್ಲಿ ನಡೆದ ಚುನಾವಣಾ ಪೂರ್ವ ಹಿಂಸೆಗೆ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ರಿಷಿ ಪ್ರಸಾದ್ ಶರ್ಮಾ ಸೇರಿದಂತೆ ಒಟ್ಟು ಎಂಟು ಮಂದಿ ಮಾವೊ ಉಗ್ರರು ಬಲಿಯಾದರು.

2008: ಜಮೀನಿನ ಮರು ಖರೀದಿದಾರರಿಗೆ ಭೂಸ್ವಾಧೀನ ಪ್ರಕ್ರಿಯೆಯ ಸಿಂಧುತ್ವವನ್ನು ಪ್ರಶ್ನಿಸುವ ಹಕ್ಕು ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು. ಬೆಂಗಳೂರು ನಗರದ ಹಳೆ ಮದ್ರಾಸ್ ರಸ್ತೆಯಲ್ಲಿನ ಕೆ.ಆರ್. ಪುರ ಹೋಬಳಿಯ ಮಾನವರ್ತೆಕಾವಲ್ ಗ್ರಾಮದ ಬಳಿ ಮೆಟ್ರೋ ರೈಲು ಯೋಜನೆಗೆ ನಡೆಸಲಾದ ಭೂಸ್ವಾಧೀನ ಪ್ರಕ್ರಿಯೆಯನ್ನು ಊರ್ಜಿತಗೊಳಿಸಿದ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಈ ಆದೇಶ ಹೊರಡಿಸಿದರು. 2.35ಲಕ್ಷ ಚದರ ಅಡಿಯ ಈ ಪ್ರದೇಶವನ್ನು 2006ರ ಜನವರಿ 17ರಂದು ಕೈಗಾರಿಕಾ ಪ್ರದೇಶವೆಂದು ಘೋಷಿಸಿ ನಂತರ ಅದನ್ನು ಭೂಸ್ವಾಧೀನ ಮಾಡಿಕೊಳ್ಳಲು ಹೊರಡಿಸಲಾದ ಅಧಿಸೂಚನೆ ರದ್ದತಿ ಕೋರಿ ಪೂರ್ವಾಂಕರ ಪ್ರಾಜೆಕ್ಟ್ ಲಿಮಿಟೆಡ್ ನಿರ್ದೇಶಕ ನಾಣಿ ಚಾಕ್ಸೆ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳು ವಜಾ ಮಾಡಿದರು.

2008: ಕಾಂಗ್ರೆಸ್ ಸಂಸತ್ ಸದಸ್ಯ ಅಧೀರ್ ಚೌಧರಿ ಮತ್ತು ಇತರ ಐವರನ್ನು ಮುರ್ಷಿದಾಬಾದಿನ ಕ್ಷಿಪ್ರ ವಿಚಾರಣಾ ನ್ಯಾಯಾಲಯವು ಕೊಲೆ ಆರೋಪದಿಂದ ಮುಕ್ತಗೊಳಿಸಿತು. ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಸೋಮನಾಥ ಬ್ಯಾನರ್ಜಿ ಅವರು ಸಾಕ್ಷ್ಯಾಧಾರಗಳ ಅಭಾವದ ಕಾರಣ ಆರೋಪಿಗಳನ್ನು ಖುಲಾಸೆ ಮಾಡಿದರು. ಕಾಂಗ್ರೆಸ್ ಮತ್ತು ಸಿಪಿಎಂ ಬೆಂಬಲಿಗರು 2005ರ ಜನವರಿ 6ರಂದು ಭಾಗೀರಥಿ ಕೋ ಆಪರೇಟಿವ್ ಮಿಲ್ಕ್ ಯೂನಿಯನ್ ಚುನಾವಣೆ ಸಂದರ್ಭದಲ್ಲಿ ಪರಸ್ಪರ ಘರ್ಷಿಸಿದ್ದರು.

2007: ಖ್ಯಾತ ಸಂಗೀತ ವಿದುಷಿ ಗಂಗೂಬಾಯಿ ಹಾನಗಲ್ ಅವರು 2006ರ ಸಾಲಿನ `ಸ್ವರ-ಲಯ ಪುರಸ್ಕಾರ'ಕ್ಕೆ ಪಾತ್ರರಾದರು. ಭಾರತೀಯ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಅನುಪಮ ಸಾಧನೆಯನ್ನು ಗೌರವಿಸಿ ಗಂಗೂಬಾಯಿ ಹಾನಗಲ್ ಅವರಿಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು ಎಂದು `ಸ್ವರ- ಲಯ' ಸಂಸ್ಥೆ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ಬಾಲಕೃಷ್ಣ ಎರಾಡಿ ನವದೆಹಲಿಯಲ್ಲಿ ಪ್ರಕಟಿಸಿದರು..

2007: ಅರುಣಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ದೋರ್ಜಿ ಖಂಡು ಅವರು ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದಿನ ಮುಖ್ಯಮಂತ್ರಿ ಗೆಗಾಂಗ್ ಅಪಾಂಗ್ ಸಚಿವ ಸಂಪುಟದಲ್ಲಿ ಖಂಡು ವಿದ್ಯುತ್ ಸಚಿವರಾಗಿದ್ದರು. ಕಾಂಗ್ರೆಸ್ಸಿನ 33 ಶಾಸಕರಲ್ಲಿ 25 ಮಂದಿ ಗೆಗಾಂಗ್ ವಿರುದ್ಧ ಬಂಡೆದ್ದ ಎರಡು ವಾರಗಳ ಬಳಿಕ ಶಾಸಕರು ಖಂಡು ಅವರನ್ನು ನಾಯಕನನ್ನಾಗಿ ಆರಿಸಿದರು. ಗೆಗಾಂಗ್ ಅವರು ದೇಶದಲ್ಲಿಯೇ ದೀರ್ಘ ಅವಧಿಗೆ ಅಂದರೆ 1980ರಿಂದ ಈವರೆಗೆ ಆರು ಬಾರಿ ಒಟ್ಟು 23 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು.. ಅತಿ ಹೆಚ್ಚು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇದ್ದವರ ಪೈಕಿ ಗೆಗಾಂಗ್ ಅವರದು ಎರಡನೆಯ ಸ್ಥಾನ.

2007: ಶ್ರೇಷ್ಠ ಗಾಯಕಿ ಆಶಾ ಬೋಂಸ್ಲೆ ಮತ್ತು ಸಂಗೀತ ನಿರ್ದೇಶಕ ಇಳಯರಾಜಾ ಸೇರಿದಂತೆ ಐವರು ಸಾಧಕರಿಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪ್ರತಿಷ್ಠಿತ ಸಂಗೀತ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು. ಗಾಯಕರಾದ ಬಾಲಮುರಳಿ ಕೃಷ್ಣ, ಗಿರಿಜಾದೇವಿ ಪ್ರಶಸ್ತಿ ಪಡೆದ ಇತರರು. ಸರೋದ್ ಮಾಂತ್ರಿಕ ಅಲಿ ಅಕ್ಬರ್ ಖಾನ್ (84) ಪ್ರಶಸ್ತಿಗೆ ಆಯ್ಕೆ ಆಗಿದ್ದರೂ ಅನಾರೋಗ್ಯ ಕಾರಣ ಸಮಾರಂಭಕ್ಕೆ ಆಗಮಿಸಿರಲಿಲ್ಲ.

2007: ಪ್ರಸ್ತುತ ಸಾಲಿನ ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿಯು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಲತಾ ಅವರ ಸಹೋದರ ಹೃದಯನಾಥ ಮಂಗೇಶ್ಕರ್ ಅವರಿಗೆ ದೊರೆಯಿತು. ಮಧ್ಯ ಪ್ರದೇಶ ಸರ್ಕಾರವು 1984ರಲ್ಲಿ ರಾಜ್ಯದವರೇ ಆದ ಗಾಯಕ ಲತಾ ಮಂಗೇಶ್ಕರ್ ಗೌರವಾರ್ಥ ಸ್ಥಾಪಿಸಿದ ಈ ಪ್ರಶಸ್ತಿಯು ಕಳೆದ ಬಾರಿ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರಿಗೆ ಲಭಿಸಿತ್ತು.

2007: ಬೆಂಗಳೂರಿನ ಅನಕೃ- ನಿರ್ಮಾಣ್ ಪ್ರತಿಷ್ಠಾನವು ನೀಡುವ ಪ್ರಸಕ್ತ ಸಾಲಿನ `ಅನಕೃ- ನಿರ್ಮಾಣ್' ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ. ಚನ್ನವೀರ ಕಣವಿ ಆಯ್ಕೆಯಾದರು.

2007: ಖ್ಯಾತ ವ್ಯಂಗ್ಯಚಿತ್ರಕಾರ ಜಾಹ್ನಿ ಹರ್ಟ್ ಅವರು ನ್ಯೂಯಾರ್ಕಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರ ಪ್ರಶಸ್ತಿ ವಿಜೇತ ವ್ಯಂಗ್ಯಚಿತ್ರ ಸರಣಿ `ಬಿ.ಸಿ.' ವಿಶ್ವದಾದ್ಯಂತ 1300 ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಅವರು `ಬಿ.ಸಿ.' ಕಾರ್ಟೂನ್ ಸ್ಟ್ರಿಪ್ 1958ರಲ್ಲಿ ಆರಂಭಿಸಿದರು. ಅದು ಮುಂದೆ 1300 ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಂಡು ಹರ್ಟ್ ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿತು.

2006: ರೂ. 10,520ವರೆಗೆ ನಿವೃತ್ತಿ ವೇತನ (ಪಿಂಚಣಿ) ನೀಡಲು ಸರ್ಕಾರ ಒಪ್ಪಿಕೊಂಡ್ದದನ್ನು ಅನುಸರಿಸಿ ಒಂದು ವಾರದಿಂದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಅಧಿಕಾರಿಗಳು ಮತ್ತು ನೌಕರರು ನಡೆಸುತ್ತಿದ್ದ ಮುಷ್ಕರ ಕೊನೆಗೊಂಡಿತು.

2006: ಮೆಲ್ಬೋರ್ನ್ ಕಾಮನ್ ವೆಲ್ತ್ ಕೂಟದ ಅವಧಿಯಲ್ಲಿ ಉದ್ದೀಪನ ಮದ್ದು ಸೇವನೆ ವಿವಾದದಲ್ಲಿ ಸಿಲುಕಿದ ಭಾರತದ ವೇಯ್ಟ್ ಲಿಫ್ಟರುಗಳಾದ ತೇಜೀಂದರ್ ಸಿಂಗ್ ಮತ್ತು ಎಡ್ವಿನ್ ರಾಜು ಅವರಿಗೆ ಜೀವಮಾನದ ಅವಧಿಗೆ ನಿಷೇಧ ಹೇರಲಾಗಿದೆ ಎಂದು ಭಾರತೀಯ ವೇಯ್ಟ್ ಲಿಫ್ಟಿಂಗ್ ಒಕ್ಕೂಟ ಪ್ರಕಟಿಸಿತು.

1975: ಕಲಾವಿದೆ ಅನುರಾಧ ಪ್ರಕಾಶ್ ಜನನ.

1959: ಅಮೆರಿಕದ ಮೊದಲ 7 ಮಂದಿ ಗಗನಯಾನಿಗಳ ಹೆಸರನ್ನು ನಾಸಾ ಪ್ರಕಟಿಸಿತು. ಸ್ಕಾಟ್ ಕಾರ್ಪೆಂಟರ್, ಜೋರ್ಡನ್ ಕೂಪರ್, ಜಾನ್ ಗ್ಲೆನ್, ಗಸ್ ಗ್ರಿಸ್ಸೊಮ್, ವಾಲಿ ಸಚಿರ್ರಾ, ಆಲನ್ ಶೆಫರ್ಡ್ ಹಾಗೂ ಡೊನಾಲ್ಡ್ ಸ್ಲೇಟನ್ ಇವರೇ ಆ ಗಗನಯಾನಿಗಳು.

1959: ಭರತನಾಟ್ಯ, ಸಂಗೀತ, ಯೋಗ, ಕ್ರೀಡೆ, ಸಾಹಿತ್ಯ ಮತ್ತಿತರ ಸಾಂಸ್ಕೃತಿಕ ಕಲೆಗಳ ಜೊತೆಗೆ ಅಬಲೆಯರ ಸ್ವಾವಲಂಬನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದುಡಿಯುತ್ತಿರುವ ಲಕ್ಷ್ಮಿ ಎನ್. ಮೂರ್ತಿ ಅವರು ಶ್ರೀಕಂಠಯ್ಯ- ಗೌರಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು. ಈಕೆ ಬಿಎಂಶ್ರೀ ಮೊಮ್ಮಗಳು.

1948: ಖ್ಯಾತ ಬಾಲಿವುಡ್ ತಾರೆ ಹಾಗೂ ನಟ ಅಮಿತಾಭ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಹುಟ್ಟಿದ ದಿನ.

1939: ಕಲಾವಿದ ನಟರಾಜು ವಿ. ಜನನ.

1926: ಹಗ್ ಹೆಫ್ನರ್ ಹುಟ್ಟಿದ ದಿನ. ಈತ ಅಮೆರಿಕಾದ `ಪ್ಲೇಬಾಯ್' ಮ್ಯಾಗಜಿನ್ ನ ಪ್ರಕಾಶಕ. ಮ್ಯಾಗಜಿನ್ ನ ಮೊದಲ ಸಂಚಿಕೆಯಲ್ಲಿ ಈತ ತನ್ನ ಹೆಸರು ಹಾಕಿರಲಿಲ್ಲ. ಇದಕ್ಕೆ ಕಾರಣ ಮ್ಯಾಗಜಿನ್ ವಿಫಲಗೊಳ್ಳಬಹುದೆಂಬ ಹೆದರಿಕೆ. ಹಣಕಾಸು ತೊಂದರೆ ಪರಿಣಾಮವಾಗಿಯೂ ಎರಡನೇ ಸಂಚಿಕೆ ಪ್ರಕಟಗೊಳ್ಳುವ ಬಗ್ಗೆ ಭೀತಿ ಆತನಿಗಿತ್ತು!

1903: ಅಮೆರಿಕದ ವಿಜ್ಞಾನಿ ಗ್ರೆಗೊರಿ ಪಿನ್ ಕಸ್ (1903-67) ಜನ್ಮದಿನ. ಈತನ ಸಂಶೋಧನೆಗಳು ಜಗತ್ತಿನ ಮೊತ್ತ ಮೊದಲ ಜನನ ನಿಯಂತ್ರಣ ಗುಳಿಗೆಗಳ ಅಭಿವೃದ್ಧಿಗೆ ಮೂಲವಾದವು.

1899: ಜೇಮ್ಸ್ ಎಸ್. ಮೆಕ್ ಡೊನ್ನೆಲ್ (1899-1980) ಹುಟ್ಟಿದ ದಿನ. ಅಮೆರಿಕಾದ ವಿಮಾನ ನಿರ್ಮಾಣಗಾರನಾದ ಈತ 1938ರಲ್ಲಿ ಮೆಕ್ ಡೊನ್ನೆಲ್ ವಿಮಾನ ಕಂಪೆನಿ ಹುಟ್ಟು ಹಾಕಿದ ವ್ಯಕ್ತಿ.

1806: ಇಸಾಂಬರ್ಡ್ ಕಿಂಗ್ ಡಮ್ ಬ್ರೂನೆಲ್ (1806-1859) ಹುಟ್ಟಿದ ದಿನ. ಬ್ರಿಟಿಷ್ ಸಿವಿಲ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರ್ ಆದ ಈತ ಮೊತ್ತ ಮೊದಲ ಟ್ರಾನ್ಸ್- ಅಟ್ಲಾಂಟಿಕ್ ಸ್ಟೀಮರಿನ ವಿನ್ಯಾಸಗಾರ.

1756: ಬಂಗಾಳದ ನವಾಬ ಅಲಿವರ್ದಿ ಖಾನ್ ತನ್ನ 80ನೇ ವಯಸಿನಲ್ಲಿ ಮೃತನಾದ. ಆತನ ಕಿರಿಯ ಪುತ್ರಿಯ ಮಗ ಸಿರಾಜ್ - ಉದ್ - ದೌಲ್ ಆತನ ಉತ್ತರಾಧಿಕಾರಿಯಾದ.

No comments:

Post a Comment