Friday, April 6, 2018

ಇಂದಿನ ಇತಿಹಾಸ History Today ಏಪ್ರಿಲ್ 05

ಇಂದಿನ ಇತಿಹಾಸ History Today ಏಪ್ರಿಲ್ 05

2018: ಜೋಧಪುರ: ಚಿತ್ರ ನಟ ಸಲ್ಮಾನ್ ಖಾನ್ ಅವರಿಗೆ ಜೋಧಪರ ನ್ಯಾಯಾಲಯವು 20 ವರ್ಷಗಳಷ್ಟು ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಸೆರೆವಾಸವನ್ನು ವಿಧಿಸಿತು.  ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರನ್ನು ತಪ್ಪಿತಸ್ಥ ಎಂಬುದಾಗಿ ಘೋಷಿಸಿದ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಜೋಧಪುರ ಗ್ರಾಮಾಂತರ) ಅವರು ಸೆರೆವಾಸದ ಜೊತೆಗೆ ೧೦,೦೦೦ ರೂಪಾಯಿಗಳ ದಂಡವನ್ನೂ ಖಾನ್ ಅವರಿಗೆ ವಿಧಿಸಿದರು.  ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರ ನಾಲ್ವರು ಸಹನಟರಾದ ಸೈಫ್ ಅಲಿಖಾನ್, ಟಬು, ಸೋನಾಲಿ ಬೇಂದ್ರೆ ಮತ್ತು ನೀಲಂ ಹಾಗೂ ಜೋಧಪುರದ ನಿವಾಸಿ ದುಷ್ಯಂತ ಸಿಂಗ್ ಅವರಿಗೆ ಸಂಶಯದ ಲಾಭವನ್ನು ನೀಡಿದ ನ್ಯಾಯಾಲಯ ಅವರ ವಿರುದ್ಧದ ಸಾಕ್ಷ್ಯಾಧಾರಗಳು ಪ್ರಬಲವಾಗಿಲ್ಲ ಎಂದು ಹೇಳಿ ಅವರನ್ನು ಖುಲಾಸೆ ಮಾಡಿತು.  ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ ಸಲ್ಮಾನ್ ಖಾನ್ ಅವರನ್ನು ನ್ಯಾಯಾಲಯದ ಆವರಣದಲ್ಲೇ ಬಂಧಿಸಿ ಜೋಧಪುರದ ಕೇಂದ್ರೀಯ ಸೆರೆಮನೆಗೆ ಒಯ್ಯಲಾಯಿತು.  ಸಲ್ಮಾನ್ ಖಾನ್ ಅವರಿಗೆ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ನ್ಯಾಯಾಲಯ ನೀಡಿದೆ ಎಂದು ವರದಿಗಳು ತಿಳಿಸಿವೆ.  ಸಲ್ಮಾನ್ ಖಾನ್ ಅವರು ಕೃಷ್ಣಮೃಗ/ ಜಿಂಕೆ ಬೇಟೆಗೆ ಸಂಬಂಧಿಸಿದಂತೆ ೪ ಪ್ರಕರಣಗಳಲ್ಲಿ ಶಾಮೀಲಾಗಿದ್ದರು. ರಾಜಸ್ಥಾನದ ಭಾವದ್ ಗ್ರಾಮದಲ್ಲಿ ೧೯೯೮ರ ಸೆಪ್ಟೆಂಬರ್ ತಿಂಗಳಲ್ಲಿ ೨ ಜಿಂಕೆಗಳನ್ನು, ನಂತರದ ತಿಂಗಳಲ್ಲಿ ರಾಜ್ಯದ ಘೋಡಾ ಫಾರ್ಮ್ಸನಲ್ಲಿ ಒಂದು ಜಿಂಕೆಯನ್ನು ಮತ್ತು ಅದೇ ತಿಂಗಳಲ್ಲಿ ಕಂಕಣಿ ಗ್ರಾಮದ ಬಳಿ ಎರಡು ಕೃಷ್ಣ ಮೃಗಗಳ ಬೇಟೆಯಲ್ಲಿ ಖಾನ್ ಶಾಮೀಲಾಗಿದ್ದರು.  ಇದಲ್ಲದೆ ಪರವಾನಗಿ ಮುಗಿದಿದ್ದ ಎರಡು ಬಂದೂಕುಗಳನ್ನು ಬಳಸಿದ ಆಪಾದನೆಯೂ ಸಲ್ಮಾನ್ ಅವರ ಮೇಲಿತ್ತು.  ಈದಿನ  ನೀಡಿದ ತೀರ್ಪು ಎರಡು ಕೃಷ್ಣಮೃಗಗಳ ಬೇಟೆಗೆ ಸಂಬಂಧಿಸಿದ್ದು. ೧೯೯೮ರ ಅಕ್ಟೋಬರ್ ೧ ಮತ್ತು ೨ನೇ ದಿನಾಂಕಗಳ ನಡುವಣ ರಾತ್ರಿ ಹಮ್ ಸಾತ್ ಸಾತ್ ಹೈ ಚಿತ್ರದ ಚಿತ್ರೀಕರಣ ವೇಳೆಯಲ್ಲಿ ಖಾನ್ ಅವರು ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ್ದರು ಎಂದು ಆಪಾದಿಸಲಾಗಿತ್ತು.  ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಅವರ ಪರ ವಕೀಲ ಹಸ್ತಿಮಲ್ ಸರಸ್ವತ್ ಅವರ ವಾದಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಭವಾನಿ ಸಿಂಗ್ ಅವರು ಉತ್ತರ ನೀಡಿದರು. ಉಳಿದ ನಟರ ಪರವಾಗಿ ಕೃಷ್ಣ ವ್ಯಾಸ್ ಅವರು ವಾದಿಸಿದ್ದರು.  ಉಳಿದ ನಟರ ಖುಲಾಸೆ ಬಗ್ಗೆ ತಾವು ಸರ್ಕಾರದ ಜೊತೆ ಮಾತನಾಡಿ ಸೆಷನ್ಸ್ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸುವುದಾಗಿ ಭವಾನಿ ಸಿಂಗ್ ನುಡಿದರು.  ಖಾನ್ ಅವರನ್ನು ವನ್ಯಮಗ ರಕ್ಷಣಾ ಕಾಯ್ದೆಯೆ ಸೆಕ್ಷನ್ ೯ ಮತ್ತು ೫೧ರ ಅಡಿಯಲ್ಲಿ ಶಿಕ್ಷಿಸಲಾಗಿದೆ. ಕಾಯ್ದೆಯ ಅಡಿಯಲ್ಲಿ ಗರಿಷ್ಠ ೬ ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಬಹುದಾಗಿದೆ.  ಸಲ್ಮಾನ್ ಖಾನ್ ಅವರ ವಕೀಲರು ಅಡಿಷನಲ್ ಸೆಷನ್ಸ್ ನ್ಯಾಯಾಧೀಶರ ಮುಂದೆ ಜಾಮೀನು ಅರ್ಜಿಯಲ್ಲಿ ದಾಖಲಿಸಿದ್ದು, ಅದು ಏಪ್ರಿಲ್  6ರ ಶುಕ್ರವಾರ ವಿಚಾರಣೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಅವರು ಈದಿನ ರಾತ್ರಿಯನ್ನು ಜೋಧಪುರ ಕೇಂದ್ರೀಯ ಸೆರೆಮನೆಯಲ್ಲೇ ಕಳೆದರು. ಈ ಮಧ್ಯೆ, ಸುಭಾಶ್ ಘಾಯ್ ಮತ್ತು ಜಯಾ ಬಚ್ಚನ್ ಸೇರಿದಂತೆ ಚಿತ್ರರಂಗದ ಹಲವಾರು ಮಂದಿ ಸಲ್ಮಾನ್ ಖಾನ್ ಅವರ ರಕ್ಷಣೆಗೆ ಮುಂದಾಗಿದ್ದು, ಶಿಕ್ಷೆ ತುಂಬಾ ಕಠಿಣವಾಯಿತು ಎಂದು ಅಭಿಪ್ರಾಯ ಪಟ್ಟರು. ’ಅವರು (ಖಾನ್) ಈಗಾಗಲೇ ಸಾಕಷ್ಟು ಅನುಭವಿಸಿದ್ದಾರೆ’ ಎಂದು ಚಿತ್ರರಂಗದ ಮಂದಿ ಹೇಳಿದರು.  ಇತರ ಕೆಲವರು ಸಲ್ಮಾನ್ ಖಾನ್ ಅವರ ಮಾನವೀಯ ಕಾರ್‍ಯಗಳನ್ನು ಉಲ್ಲೇಖಿಸಿದರು.  ’ಸಲ್ಮಾನ್ ಖಾನ್ ಅವರು ಅತ್ಯಂತ ಪ್ರೀತಿಪಾತ್ರ ವ್ಯಕ್ತಿ. ಅವರನ್ನು ಸೆರೆಮನೆಗೆ ಹೋಗದಂತೆ ರಕ್ಷಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು’ ಎಂದು ಅವರು ಹೇಳಿದರು. 

2018 : ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ) : ವಿಶ್ವ ಚಾಂಪಿಯನ್ ವೇಟ್ ಲಿಫ್ಟರ್ ಸೈಖೋಮ್
ಮೀರಾಬಾಯಿ ಚಾನು (೪೮ ಕೆಜಿ ವಿಭಾಗ) ಅವರು ತಮ್ಮ ವಿಭಾಗದ ಎಲ್ಲ ಮೂರು ಸ್ಪರ್ಧೆಗಳಲ್ಲಿ ಅತ್ಯದ್ಭುತ ನಿರ್ವಹಣೆಯನ್ನು ದಾಖಲಿಸಿ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಚಿನ್ನದ ಪದಕವನ್ನು ಭಾರತಕ್ಕೆ ಗೆದ್ದು ಕೊಟ್ಟರು.  ಮೀರಾ ಬಾಯಿ ಚಾನು ಅವರು ತನ್ನ ಎಲ್ಲ ಮೂರು ಯತ್ನಗಳಲ್ಲಿ (೮೦ ಕೆಜಿ, ೮೪ ಕೆಜಿ ಮತುತ ೮೬ ಕೆಜಿ) ಕ್ಲೀನ್ ಲಿಫ್ಟ್ ಸಾಧಿಸಿ ಈ ಹಿಂದಿನ ಕಾಮನ್ವೆಲ್ತ್ ಕ್ರೀಡಾಕೂಟದ ಮತ್ತು ಗೇಮ್ಸ್ ದಾಖಲೆಯನ್ನು ಮುರಿದರು.   ಮೀರಾ ಬಾಯಿ ಅವರು ಅನಂತರ ತನ್ನ ದುಪ್ಪಟ್ಟು ದೇಹ ತೂಕವನ್ನು ಮೀರಿ (೧೦೩ ಕೆಜಿ, ೧೦೭ ಕೆಜಿ ಮತು ೧೧೦ ಕೆಜಿ) ಎಲ್ಲ ಮೂರು ಯಶಸ್ವೀ ಯತ್ನಗಳಲ್ಲಿ ಕ್ಲೀನ್ ಆಂಡ್ ಜರ್ಕ್ ಮತ್ತು ಒಟ್ಟಾರೆ ಗೇಮ್ಸ್ ದಾಖಲೆಗಳನ್ನು ಹೊಸದಾಗಿ ಬರೆಯುವಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದರು.  ಮೀರಾ ಬಾಯಿ ಚಾನು ಅವರು ೨೦೧೪ರ ಗ್ಲಾಸ್ಗ್ಪೊ ಸಿಡಬ್ಲ್ಯುಜಿ ಯಲ್ಲಿ ಬೆಳ್ಳಿ ಪದಕ  ಗೆದ್ದ ಸಂದರ್ಭದಲ್ಲಿ ದಾಖಲಿಸಿದ್ದ ನಿರ್ವಹಣೆಯನ್ನು ಇಲ್ಲಿ ಇನ್ನೂ ಉತ್ತಮ ಪಡಿಸಿ ಚಿನ್ನದ ಪದಕ ಗೆದ್ದುಕೊಂಡು ಭಾರತಕ್ಕೆ ಅತೀವ ಹೆಮ್ಮೆ ತಂದರು.  ಮೀರಾ ಬಾಯಿ ಅವರು ಅಂತಿಮವಾಗಿ ೧೯೬ ಕೆಜಿ ಸ್ಕೋರ್ (೮೬ + ೧೧೦ ಕೆಜಿ) ದಾಖಲಿಸಿ ಕೆರಾರಾ ನ್ಪೋರ್ಟ್ಸ್ ಮತ್ತು ಲೀಶರ್ ಸೆಂಟರಿನಲ್ಲಿ ಜಮಾಯಿಸಿದ್ದ ಕ್ರೀಡಾಭಿಮಾನಗಳಿಂದ ಭಾರಿ ಕರತಾಡನ ಗಿಟ್ಟಿಸಿಕೊಂಡರು.  ಈ ಸಾಧನೆಗಾಗಿ ನಾನು ನಿಜವಾಗಿಯೂ ಅತ್ಯಂತ ಕಷ್ಟಪಟ್ಟಿದ್ದೇನೆ. ನನಗೆ ತೃಪ್ತಿ ಲಭಿಸಿದೆ. ನನ್ನ ಮುಂದಿನ ಕಣ್ಣು ಏಷ್ಯನ್ ಕ್ರೀಡಾಕೂಟದ ಕಡೆಗೆ ಎಂದು ಮೀರಾಬಾಯಿ ಚಾನು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.  ಮಾರಿಷಸ್ ನ ಮೇರಿ ರಾನೈವೊಸೊವ (೭೬ ಕೆಜಿ +೯೪ ಕೆಜಿ) ಬೆಳ್ಳಿ ಪದಕವನ್ನು ಪಡೆದರೆ, ಶ್ರೀಲಂಕೆಯ ದಿನುಶಾ ಗೋಮ್ಸ್ (೭೦ಕೆಜಿ + ೮೫ ಕೆಜಿ) ಕಂಚಿನ ಪದಕ ಗಳಿಸಿದರು. ಇದಕ್ಕೆ ಮುನ್ನ ಪಿ. ಗುರುರಾಜ ಅವರು ಪುರುಷರ ೫೬ ಕೆಜಿ ವಿಭಾಗದಲ್ಲಿ ಭಾಋತದ ಮೊದಲ ಸ್ವರ್ಣ ಪದಕವನ್ನು ತಂದು ಕೊಟ್ಟಿದ್ದರು.

ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ):  ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ನಡೆದ 2018ರ ಸಾಲಿನ  ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕನ್ನಡಿಗ ಕುಂದಾಪುರ ಮೂಲದ ಗುರುರಾಜ್ ಪೂಜಾರಿ ಅವರು ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟರು. ಈದಿನ  ಆರಂಭವಾದ ಕ್ರೀಡಾಕೂಟದಲ್ಲಿ ಪುರುಷರ 56 ಕೆಜಿ ಭಾರ ಎತ್ತುವ ವಿಭಾಗದಲ್ಲಿ ಗುರುರಾಜ್ ಬೆಳ್ಳಿ ಪದಕ ಗೆದ್ದರು.  ಸ್ನ್ಯಾಚ್ನಲ್ಲಿ 111 ಕೆ.ಜಿ ಭಾರ ಎತ್ತಿದ ಗುರುರಾಜ್, ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ ಅಂತಿಮ ಪ್ರಯತ್ನದಲ್ಲಿ 138 ಕೆ.ಜಿಯೊಂದಿಗೆ ಒಟ್ಟು 249 ಕೆಜಿ ಭಾರ ಎತ್ತಿದ ಸಾಧನೆ ಮಾಡಿದರು.  ಮಲೇಷಿಯಾದ ಮುಹಮ್ಮದ್ ಇಜಾರ್ ಅಹ್ಮದ್ ಒಟ್ಟು ದಾಖಲೆಯ 261 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರು. ಶ್ರೀಲಂಕಾದ ಚತುರಂಗ ಲಕ್ಮಲ್ ಒಟ್ಟು 248 ಕೆ.ಜಿ ಎತ್ತುವ ಮೂಲಕ ಕಂಚಿನ ಪದಕ ಗೆದ್ದರು. ಪಿಕ್ಅಪ್ ಟ್ರಕ್ ಚಾಲಕನ ಪುತ್ರನಾಗಿರುವ 28 ಹರೆಯದ ಗುರುರಾಜ್ ಅವರು ಉಡುಪಿಯ ಕುಂದಾಪುರ ಮೂಲದವರಾಗಿದ್ದು, ಮೊದಲು ಕುಸ್ತಿಪಟುವಾಗಿದ್ದರು. ಬಳಿಕ ವೇಟ್ಲಿಫ್ಟಿಂಗ್ನಲ್ಲಿ ಆಸಕ್ತಿ ತೋರಿದ್ದರು. ಇಲ್ಲಿ ಗಮನಾರ್ಹ ಅಂಶವೆಂದರೆ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ವೆಲ್ತ್ ಚಾಂಪಿಯನ್ಶಿಪ್ಸ್ನಲ್ಲಿ ಕಂಚಿನ ಪದಕ ಸಾಧನೆ ಮಾಡಿದ್ದರು. ಭಾರತೀಯ ವಾಯುಪಡೆಯ ಉದ್ಯೋಗಿ ಆಗಿರುವ ಗುರುರಾಜ್ 2010ರಲ್ಲಿ ಭಾರ ಎತ್ತಲು ಆರಂಭಿಸಿದ್ದರು. 2016ರಲ್ಲಿ ಪೆನಾಂಗ್ನಲ್ಲಿ ಕಾಮನ್ವೆಲ್ತ್ ಹಿರಿಯ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ವೈಯಕ್ತಿಕ ಶ್ರೇಷ್ಠ 249 ಕೆ.ಜಿ ಭಾರ ಎತ್ತುವ (108+141) ಮೂಲಕ ಚಿನ್ನದ ಪದಕ ಜಯಿಸಿದ್ದರು. ದಕ್ಷಿಣ ಏಷ್ಯಾ ಗೇಮ್ಸ್ನಲ್ಲೂ ಗುರುರಾಜ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.

2018: ನವದೆಹಲಿ:  ಹನ್ನೊಂದು ಬ್ಯಾಂಕುಗಳಿಗೆ ೨,೬೫೪ ಕೋಟಿ ರೂಪಾಯಿಗಳಷ್ಟು ಸಾಲವಂಚನೆ ಮಾಡಿರುವ ಸಂಬಂಧವಾಗಿ ವಡೋದರಾ ಮೂಲದ ಡೈಮಂಡ್ ಪವರ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಡಿಪಿಐಎಲ್) ಕಂಪೆನಿ ಮತ್ತು ಅದರ ನಿರ್ದೆಶಕರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ವಂಚನೆ ಪ್ರಕರಣ ದಾಖಲಿಸಿತು.  ೨೦೧೬-೧೭ರ ಸಾಲಿನಲ್ಲಿ ಬ್ಯಾಂಕುಗಳು ಈ ಕಂಪೆನಿಯ ಸಾಲವನ್ನು ವಸೂಲಾಗದ ಸಾಲ (ಅನುತ್ಪಾದಕ ಸಾಲ- ಎನ್ ಪಿಎ) ಎಂಬುದಾಗಿ ಘೋಷಿಸಿದ್ದವು.  ಕಂಪೆನಿ ಮತ್ತು ಅದರ ಆಡಳಿತ ಮಂಡಳಿ ಸದಸ್ಯರ ಕಚೇರಿ, ಮನೆ ಆವರಣಗಳಲ್ಲಿ ಸಿಬಿಐ ಈದಿನ ಶೋಧ ಕಾರ್‍ಯಾಚರಣೆ ಕೈಗೊಂಡಿತು. ಖಪಿಐಎಲ್ ನ್ನು ಅಭಿವೃದ್ಧಿ ಪಡಿಸಿದ ಎಸ್. ಎನ್. ಭಟ್ನಾಗರ್ ಮತ್ತು ಅವರ ಮಕ್ಕಳು ಹಾಗೂ ಕಂಪೆನಿಯ ಆಡಳಿತ ನಿರ್ದೇಶಕರೂ, ಜಂಟಿ ಆಡಳಿತ ನಿರ್ದೇಶಕರೂ ಆದ ಅಮಿತ್ ಮತ್ತು ಸುಮಿತ್ ಭಟ್ನಾಗರ್ ಅವರು ವಂಚನೆಯಲ್ಲಿ ಶಾಮೀಲಾಗಿದ್ದಾರೆ ಎಂದು ಸಿಬಿಐ ಆಪಾದಿಸಿದೆ.  ಕಂಪೆನಿಯು ಕೇಬಲ್ ಗಳು ಮತ್ತು ಇತರ ಎಲೆಕ್ಟ್ರಿಕಲ್ ಸಲಕರಣೆಗಳ ಉತ್ಪಾದನೆ ಮಾಡುತ್ತಿತ್ತು. ’ತನ್ನ ಆಡಳಿತ ಮಂಡಳಿಯ ಮೂಲಕ ಡಿಪಿಐಎಲ್ ೧೧ ಬ್ಯಾಂಕುಗಳ ಒಕ್ಕೂಟದಿಂದ (ಸರ್ಕಾರಿ ಮತ್ತು ಖಾಸಗಿ ರಂಗದ ಬ್ಯಾಂಕುಗಳು) ೨೦೦೮ರಿಂದ ಸಾಲಸವಲತ್ತುಗಳನ್ನು ಅವುಗಳನ್ನು ವಂಚಿಸಿ ಪಡೆಯುತ್ತಾ ಬಂದಿತ್ತು. ೨೦೧೬ರ ಜೂನ್ ೨೯ರ ವೇಳೆಗೆ ಕಂಪೆನಿಯ ಒಟ್ಟು ಸಾಲ ೨,೬೫೪.೪೦ ಕೋಟಿ ರೂಪಾಯಿಗಳಿಗೆ ಬೆಳೆದಿತ್ತು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದರು.  ಭಾರತೀಯ ರಿಸರ್ವ್ ಬ್ಯಾಂಕ್ ಪಟ್ಟಿಯಲ್ಲಿ ಮತ್ತು ಇಜಿಜಿಸಿ ಎಚ್ಚರಿಕೆ ಪಟ್ಟಿಯಲ್ಲಿ ಸುಸ್ತಿದಾರರು ಎಂಬುದಾಗಿ ತಮ್ಮ ಹೆಸರುಗಳು ಬಂದಿದ್ದುದರ ಹೊರತಾಗಿಯೂ ಸಾಲ ಮತ್ತು ಸಾಲಸವಲತ್ತುಗಳನ್ನು ಪಡೆಯುವಲ್ಲಿ ಕಂಪೆನಿ ಮತ್ತು ಅದರ ನಿರ್ದೇಶಕರು ಯಶಸ್ವಿಯಾಗಿದ್ದರು ಎಂದು ಆಪಾದಿಸಲಾಯಿತು. ೨೦೦೮ರಲ್ಲಿ ಬ್ಯಾಂಕುಗಳ ಒಕ್ಕೂಟ ರಚಿಸುವ ವೇಳೆಯಲ್ಲಿ ಅವಧಿ ಸಾಲ ನೀಡಲು ಆಕ್ಸಿಸ್ ಬ್ಯಾಂಕ್ ಮುಂಚೂಣಿ ಬ್ಯಾಂಕ್ ಆಗಿದ್ದರೆ, ನಗದು ಸಾಲ ಮಿತಿಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಆಫ್ ಇಂಡಿಯಾ ಮುಂಚೂಣಿ ಬ್ಯಾಂಕ್ ಆಗಿತ್ತು. ಕಂಪೆನಿಯು ವಿವಿಧ ಬ್ಯಾಂಕುಗಳ ಅಧಿಕಾರಿಗಳ ಜೊತೆ ಶಾಮೀಲಾಗಿ ತನ್ನ ಸಾಲ ಸವಲತ್ತುಗಳನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗಿತ್ತು ಎಂದು ಆಪಾದಿಸಲಾಯಿತು. ೨೦೧೧ರಲ್ಲಿನ ತನ್ನ ವಹಿವಾಟು ೨೧೯೭.೬೦ ಕೋಟಿ ರೂಪಾಯಿ ಎಂದು ಡಿಪಿಐಎಲ್ ೨೦೧೨ರಲ್ಲಿ ಪ್ರಕಟಿಸಿತ್ತು. ಆದರೆ ೨೦೧೧ರ ಸಾಲಿನಲ್ಲಿ ಅದರ ನೈಜ ವಹಿವಾಟು ಇದ್ದುದು ೧,೨೬೭.೬೦ ಕೋಟಿ ರೂಪಾಯಿ ಮಾತ್ರ. ಅಂದಾಜಿಗಿಂತ ದೊಡ್ಡ ಮೊತ್ತದ ವಹಿವಾಟನ್ನು ಘೋಷಿಸಿಕೊಂಡು ಅದನ್ನು ಸಾಧಿಸುವಲ್ಲಿ ವಿಫಲವಾಗಿದ್ದರೂ, ಸಾಲ ವಿಮರ್ಶೆ ನಡೆಸುತ್ತಿದ್ದ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಸಾಲಮಿತಿಯನ್ನು ಕಡಿತಗೊಳಿಸಿರಲಿಲ್ಲ.  ಉತ್ಪೇಕ್ಷಿತ ಮಾರಾಟ ಅಂಕಿಅಂಶಗಳನ್ನು ನೀಡಿದ್ದರೂ ಅದನ್ನು ಆಧರಿಸಿದ ಸಾಲ ಮಿತಿ ಮೊತ್ತವನ್ನು ಬದಲಾಯಿಸದ ಬ್ಯಾಂಕ್ ಅದನ್ನು ೪೮೦ ಕೋಟಿ ರೂಪಾಯಿಗಳಲ್ಲೇ ಮುಂದುವರೆಸಿತ್ತು ಎಂದು ಸಿಬಿಐ ಆಪಾದಿಸಿತು. ಮುಂಚೂಣಿ ಬ್ಯಾಂಕಿಗೆ ಕಂಪೆನಿಯು ಸುಳ್ಳು ದಾಸ್ತಾನು ಹೇಳಿಕೆಗಳನ್ನು ಸಲ್ಲಿಸುತ್ತಿತ್ತು ಎಂದೂ ಸಿಬಿಐ ಹೇಳಿತು.

2018: ನವದೆಹಲಿ: ೨೦೧೯ರ ಹಣಕಾಸು ವರ್ಷದ ಮೊದಲ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸತತ ನಾಲ್ಕನೇ ಬಾರಿಗೆ ತನ್ನ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿತು.  ಹೀಗಾಗಿ ಬ್ಯಾಂಕ್ ಸಾಲಗಾರರಿಗೆ ಯಾವುದೇ ಪರಿಹಾರ ಲಭಿಸಲಿಲ್ಲ.  ಆರ್ ಬಿ ಐ ಗವರ್ನರ್ ಊರ್ಜಿತ್ ಪಟೇಲ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಬ್ಯಾಂಕ್‌ಗಳಿಗೆ ಅಲ್ಪಾವಧಿಗೆ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿ ದರವಾಗಿರುವ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೋ ದರವನ್ನು ಈಗಿನ ಶೇ.೬ರಲ್ಲೂ, ರಿವರ್ಸ್ ರೆಪೋ ದರವನ್ನು ಈಗಿನ ಶೇ.೫.೭೫ರಲ್ಲೂ  ಯಥಾವತ್ ಆಗಿ ಉಳಿಸಿಕೊಳ್ಳಲು ಸಮಿತಿ ನಿರ್ಧರಿಸಿತು.  ಈ ಬಡ್ಡಿ ದರಗಳನ್ನು ಯಥಾವತ್ ಉಳಿಸಿಕೊಳ್ಳಲು ೫-೧ ಮತಗಳ ಅಂತರದಲ್ಲಿ ತೀರ್ಮಾನಿಸಲಾಯಿತು. ದೇಶದ ಆರ್ಥಿಕತೆಯು ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಪರಿಗಣಿಸಿ ಅಗತ್ಯ ಬೆಂಬಲ ನೀಡುವ ನಿಟ್ಟಿನಲ್ಲಿ ಬಡ್ಡಿ ದರಗಳನ್ನು ಯಥಾವತ್ ಉಳಿಸಿಕೊಳ್ಳಲು ನಿರ್ಧರಿಸಲಾಯಿತು ಎಂದು ಸಮಿತಿ ಹೇಳಿತು.  ರಿಸರ್ವ್ ಬ್ಯಾಂಕ್ ಕಳೆದ ವರ್ಷ  ಆಗಸ್ಟ್ ತಿಂಗಳಲ್ಲಿ ಶೇ.೦.೨೫ರಷ್ಟು ಕಡಿತ ಮಾಡುವ ಮೂಲಕ ರಿಪೋ ದರವನ್ನು ಶೇ.೬ಕ್ಕೆ ಇಳಿಸಿತ್ತು. ೨೦೧೫ರಲ್ಲಿ ಅಸಾಮಾನ್ಯ ಕಡಿಮೆ ಹಣದುಬ್ಬರದ ಲಾಭವನ್ನು ಎತ್ತಿಕೊಂಡು ರಿಸರ್ವ್ ಬ್ಯಾಂಕ್ ಒಟ್ಟಾರೆಯಾಗಿ ೨೦೦ ಮೂಲಾಂಕದಷ್ಟು ಬಡ್ಡಿ ದರ ಕಡಿತ ಮಾಡಿತ್ತು.  ೨೦೧೮-೧೯ರ ಸಾಲಿನ ಮೊದಲ  ಅರ್ಧ ವರ್ಷದಲ್ಲಿ ಹಣದುಬ್ಬರವು ಶೇ.೪.೭ - ಶೇ.೫.೧ರ ಒಳಗೆ ಮತ್ತು ಎರಡನೇ ಅರ್ಧ ವರ್ಷದಲ್ಲಿ ಶೇ.೪.೪ರ ಹಣದುಬ್ಬರ ಇರುವುದೆಂದು ರಿಸರ್ವ್ ಬ್ಯಾಂಕ್ ತನ್ನ ತಾಜಾ ಹಣಕಾಸು ನೀತಿಯಲ್ಲಿ ಅಂದಾಜು ಮಾಡಿತು. ೨೦೧೯ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ.೭.೪ಕ್ಕೆ ಹಿಗ್ಗುವುದೆಂದು ಅಂದಾಜು ಮಾಡಿತು.  ೨೦೧೭-೧೮ರಲ್ಲಿ ಜಿಡಿಪಿ ಶೇ.೬.೬ ರಷ್ಟು  ದಾಖಲಾಗಿದೆ. ಹಾಲಿ ಹಣಕಾಸು ಸಾಲಿನ ಮೊದಲ ಅರ್ಧ ವರ್ಷದಲ್ಲಿ ಜಿಡಿಪಿ ಶೇ.೭.೩ -ಶೇ. ೭.೪ರಲ್ಲೂ ಎರಡನೇ ಅರ್ಧ ವರ್ಷದಲ್ಲಿ ಶೇ.೭.೩ - ಶೇ.೭.೬ರಲ್ಲೂ ದಾಖಲಾಗುವ ನಿರೀಕ್ಷೆಯನ್ನು ರಿಸರ್ವ್ ಬ್ಯಾಂಕ್  ಹೊಂದಿರುವುದಾಗಿ ಹಣಕಾಸು ನೀತಿ ಹೇಳಿತು.

2018: ನವದೆಹಲಿ: ಸುಮಾರು ೮೦೦೦ ಜನರನ್ನು ವಂಚಿಸಿದ್ದಾನೆ ಎನ್ನಲಾಗಿರುವ ೨೦೦೦ ಕೋಟಿ
ರೂಪಾಯಿಗಳ ಬಿಟ್ ಕಾಯಿನ್ ವಂಚನೆಗೆ ಸಂಬಂಧಿಸಿದಂತೆ ಪುಣೆ ಪೊಲೀಸರು ದೆಹಲಿ ಮೂಲದ ಬಿಟ್ ಕಾಯಿನ್ ಉದ್ಯಮಿ ಅಮಿತ್ ಭಾರದ್ವಾಜ್ ಎಂಬ ವ್ಯಕ್ತಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು. ಈ ಮಧ್ಯೆ ಬಿಟ್ ಕಾಯಿನ್ ಹಾವಳಿಯನ್ನು ತಡೆಯುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ವತಃ ’ಫಿಯೆಟ್ ಡಿಜಿಟಲ್ ಕರೆನ್ಸಿ
ಬಿಡುಗಡೆ ಮಾಡುವ ಬಗ್ಗೆಯೂ ಪರ್ಯಾಲೋಚಿಸುತ್ತಿದ್ದು, ಈ ಬಗ್ಗೆ ಅಧ್ಯಯನ ತಂಡ ರಚಿಸಿ, ೩ ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿತು. ಏಳು ಮಂದಿ ನಿಕಟವರ್ತಿಗಳ ಬಂಧನದ ಬಳಿಕ ಬ್ಯಾಂಕಾಕಿಗೆ ತೆರಳಲು ಸಜ್ಜಾಗಿದ್ದ ಭಾರದ್ವಾಜನನ್ನು  ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು. ಭಾರದ್ವಾಜ್ ಆನ್ ಲೈನ್ ಚಿಲ್ಲರೆ ಮಾರುಕಟ್ಟೆಯನ್ನು ತೆರೆದು ೨೦೧೪ರಿಂದ ಭಾರತದಲ್ಲಿ ಬಿಟ್ ಕಾಯಿನ್ ಸ್ವೀಕರಿಸುತ್ತಿದ್ದ ಎನ್ನಲಾಯಿತು.  ‘ಆತ ಬಿಟ್ ಕಾಯಿನ್ ವ್ಯವಹಾರ ಕಾರ್ಯಾಚರಣೆಯ ಸರಣಿಯನ್ನು ಹೊಂದಿದ್ದ. ಚೀನಾದಲ್ಲಿ ಬಿಟ್ ಕಾಯಿನ್ ವ್ಯವಹಾರ ನಡೆಸುತ್ತಿರುವುದಾಗಿ ಹೇಳಿಕೊಂಡ  ಗೈನ್ ಬಿಟ್ ಕಾಯಿನ್, ಹಾಂಕಾಂಗಿನ  ಜಿಬಿ ಮೈನರ್‍ಸ್ ಮತ್ತು ಇತ್ತೀಚೆಗೆ ಆರಂಭವಾಗಿದ್ದ ಎಂಸಿಎಪಿ ಭಾರದ್ವಾಜನ ಜೊತೆ ಸಂಪರ್ಕದಲ್ಲಿದ್ದ ಬಿಟ್ ಕಾಯಿನ್ ವ್ಯವಹಾರ ಸಂಸ್ಥೆಗಳು ಎಂದು ಹೇಳಲಾಯಿತು. ಭಾರದ್ವಾಜ್ ಜೊತೆಗೆ ವ್ಯವಹಾರ ನಡೆಸುತ್ತಿದ್ದ ಬ್ಯಾಂಕಾಕಿನ ಸ್ಥಳೀಯ ಸಂಸ್ಥೆಯೊಂದು ನೀಡಿದ ಸುಳಿವಿನ ಸಹಾಯದಿಂದ ಭಾರದ್ವಾಜನನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿದವು. ಭಾರದ್ವಾಜ್ ಬಹುಹಂತದ ವಿಸ್ತೃತ ಮಾರುಕಟ್ಟೆಯನ್ನು ಸ್ಥಾಪಿಸಿ, ಹೆಚ್ಚಿನ ಆದಾಯ ದೊರಕಿಸುವುದಾಗಿ ಹೇಳಿ ಬಿಟ್ ಕಾಯಿನ್ ಗಳನ್ನು ತನಗೆ ನೀಡುವಂತೆ ಹೂಡಿಕೆದಾರರ ಮನವೊಲಿಸುತ್ತಿದ್ದ. ಬಿಟ್ ಕಾಯಿನ್ ಹೂಡಿಕೆದಾರರಿಗೆ ಶೇಕಡಾ ೧೦ರಷ್ಟು ಲಾಭ ಒದಗಿಸುವುದಾಗಿ ಆತ ಬಿಟ್ ಕಾಯಿನ್ ಹೂಡಿಕೆದಾರರಿಗೆ ಭರವಸೆ ನೀಡುತ್ತಿದ್ದ.  ಬಿಟ್ ಕಾಯಿನ್ ಶೋಧ ಹಾರ್ಡ್‌ವೇರ್ ಒದಗಿಸುವ ಇನ್ನೊಂದು ಆಯ್ಕೆಯನ್ನೂ ಭಾರದ್ವಾಜ್ ಬಿಟ್ ಕಾಯಿನ್ ಹೂಡಿಕೆದಾರರಿಗೆ ನೀಡುತ್ತಿದ್ದ. ಈ ಹಾರ್ಡ್ ವೇರ್ ಪಡೆದವರು ಸ್ವತಃ ಬಿಟ್ ಕಾಯಿನ್‌ಗಳನ್ನು ಶೋಧಿಸಿಕೊಳ್ಳಬಹುದು ಎಂದು ಆತ ಆಮಿಷ ಒಡ್ಡಿದ್ದ.   ಆತ ದುಬೈಯಲ್ಲಿ ಒಂದು ಕಚೇರಿ ಸ್ಥಾಪಿಸಿದ್ದ ಮತ್ತು ಅದರ ಮೂಲಕ ತನ್ನ ವ್ಯವಹಾರಗಳನ್ನು ನಡೆಸುತ್ತಿದ್ದ. ಪ್ರಸ್ತುತ ಭಾರದ್ವಾಜ್ ವಿರುದ್ಧ ಒಂದೇ ಒಂದು ಎಫ್ ಐ ಆರ್ ಕೂಡಾ ನಮ್ಮ ಘಟಕದಲ್ಲಿ ದಾಖಲಾಗಿಲ್ಲ. ಪ್ರಶಾಂತ ವಿಹಾರದಲ್ಲಿ ಪ್ರಕರಣ ಒಂದು ದಾಖಲಾಗಿದೆ ಎಂದು ಉಪ ಪೊಲೀಸ್ ಕಮೀಷನರ್ (ಸೈಬರ್ ಮತ್ತು ಎಫ್ ಐ ಸಿಎನ್ ) ಭೀಷ್ಮ ಸಿಂಗ್ ಹೇಳಿದರು. ಭಾರದ್ವಾಜ್ ದೆಹಲಿಯ ಶಾಲಿಮಾರ್ ಬಾಗ್ ನಲ್ಲಿ ತನ್ನ ’ಬಿಟ್ ಕಾಯಿನ್ ವ್ಯವಹಾಋ ಶುರು ಮಾಡಿದ್ದ. ಬಳಿಕ ತನ್ನ ಕಾರ್‍ಯಾಚರಣೆಯನ್ನು ಚೀನಾಕ್ಕೆ ವಿಸ್ತರಿಸಿದ ಮತ್ತು ಬಹುಹಂತದ ಮಾರುಕಟ್ಟೆ ಯೋಜನೆ ಮೂಲಕ ಹೊಸ ಹೊಸ ಹೂಡಿಕೆದಾರರನ್ನು ಗಳಿಸಿದ ಎಂದು ಮೂಲಗಳು ಹೇಳಿದವು.  ರಿಸರ್ವ್ ಬ್ಯಾಂಕಿನಿಂದ ಡಿಜಿಟಲ್ ಕರೆನ್ಸಿ?: ಈ ಮಧ್ಯೆ ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ ಬಿಟ್ ಕಾಯಿನ್‌ನಂತಹ ನೈಜ ಕರೆನ್ಸಿಗಳ ಬಳಕೆಯನ್ನು ನಿರುತ್ಸಾಹಗೊಳಿಸುವ ಸಲುವಾಗಿ ನಿಯಮಗಳನ್ನು ಬಿಗಿ ಗೊಳಿಸಿದೆ. ಫಿಯಟ್ ಡಿಜಿಟಲ್ ಕರೆನ್ಸಿ ಪರಿಚಯಿಸುವವರನ್ನು ಪತ್ತೆ ಹಚ್ಚಲು ಅಧ್ಯಯನ ಆರಂಭಿಸಲಾಗಿದೆ ಎಂದೂ ರಿಸರ್ವ್ ಬ್ಯಾಂಕ್ ಪ್ರಕಟಿಸಿತು. ಅಧ್ಯಯನ ಸಲುವಾಗಿ ರಚಿಸಲಾಗಿರುವ ಅಂತರ ಇಲಾಖಾ ತಂಡವು ಈ ಬಗ್ಗೆ ಅಧ್ಯಯನ ನಡೆಸಿ ’ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅಳವಡಿಸುವ ಸಾಧ್ಯತೆ ಬಗ್ಗೆ ಮಾರ್ಗದರ್ಶನ ಮಾಡಲಿದೆ ಮತ್ತು ಜೂನ್ ವೇಳೆಗೆ ತನ್ನ ವರದಿ ನೀಡಲಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿತು.  ಫಿಯೆಟ್ ಡಿಜಿಟಲ್ ಕರೆನ್ಸಿ ಆರಂಭಿಸುವ ಸಾಧ್ಯತೆಗಳ ಬಗ್ಗೆ ಹಲವಾರು ಬ್ಯಾಂಕುಗಳ ಜೊತೆಗೂ ಚರ್ಚಿಸಲಾಗುತ್ತಿದೆ. ಖಾಸಗಿ ಡಿಜಿಟಲ್ ಕರೆನ್ಸಿಗಳನ್ನು ವಿರೋಧಿಸಲಾಗುವ ಕಾರಣ, ಇಂತಹ ಕರೆನ್ಸಿಯನ್ನು ರಿಸರ್ವ್ ಬ್ಯಾಂಕ್ ಸ್ವತಃ ಬಿಡುಗಡೆ ಮಾಡಲಿದೆ. ರಿಸರ್ವ್ ಬ್ಯಾಂಕಿನ ಹೊಣೆಗಾರಿಕೆ ಸಲುವಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ನಮ್ಮ ಪೇಪರ್ ಕರೆನ್ಸಿ ಜೊತೆಗೇ ಇವುಗಳನ್ನೂ ಚಲಾವಣೆಗೆ ತರಬಹುದು ಎಂದು ಡೆಪ್ಯುಟಿ ಗವರ್ನರ್ ಬಿ ಪಿ ಕನುಂಗೊ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.  ಇಂತಹ ಕರೆನ್ಸಿಗಳನ್ನು ಚಲಾವಣೆಗೆ ತರುವುದರಿಂದ ಪೇಪರ್ ಕರೆನ್ಸಿಯ ಮುದ್ರಣ ಮತ್ತು ವಿತರಣಾ ವೆಚ್ಚವೂ ತಗ್ಗಬಲ್ಲುದು ಎಂದು ಅವರು ನುಡಿದರು.

2018: ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿನ ೧೩,೫೭೮ ಕೋಟಿ ರೂಪಾಯಿ ಹಗರಣಕ್ಕೆ
ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ ಬಿಐ) ಮೂವರು ಮುಖ್ಯ ಜನರಲ್ ಮ್ಯಾನೇಜರ್ ಗಳು ಮತ್ತು ಒಬ್ಬ ಜನರಲ್ ಮ್ಯಾನೇಜರ್ ಅವರನ್ನು ಕೇಂದ್ರೀಯ ತನಿಖಾದಳ (ಸಿಬಿಐ) ಪ್ರಶ್ನಿಸಿತು.  ಬ್ಯಾಂಕಿನ ಕಾನೂನುಬದ್ಧ ಅಡಿಟ್ ನಲ್ಲಿನ ಯಾವ ಲೋಪಗಳ ಕಾರಣ ನ್ಯೂನತೆಗಳು ಪತ್ತೆಯಾಗಲಿಲ್ಲ ಎಂಬ ಬಗ್ಗೆ ಅಂದಾಜು ಮಾಡುವ ಸಲುವಾಗಿ ತನಿಖಾ ಸಂಸ್ಥೆಯು ರಿಸರ್ವ್ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದೆ ಎಂದು ಹೇಳಲಾಯಿತು. ೨೦೧೩-೧೪ರ ಸಾಲಿನ ೮೦: ೨೦ ದಾಮಾಶಯದ ಚಿನ್ನ ಆಮದು ಯೋಜನೆಯ ಹಿನ್ನೆಲೆಯಲ್ಲಿ ವರ್ತಕ ಮೆಹುಲ್ ಚೊಕ್ಸಿ ಸಮೂಹ ಕಂಪೆನಿಗಳಿಗೆ ಒದಗಿಸಲಾಗಿದ್ದ ಅನುಕೂಲಗಳ ಕುರಿತ ಆಪಾದನೆಗೆ ಸಂಬಂಧಿಸಿದಂತೆಯೂ ಅಧಿಕಾರಿಗಳನ್ನು ಪ್ರಶ್ನಿಸಲಾಯಿತು ಎಂದು ಹೇಳಲಾಯಿತು. ಯೋಜನೆಯು ತಾರಾ ವರ್ಚಸ್ಸಿನ ಮುಂಚೂಣಿಯ ವ್ಯಾಪಾರಿ ಸಂಸ್ಥೆಗಳಿಗೆ ಯೋಜನೆಯ ಅಡಿಯಲ್ಲಿ ಚಿನ್ನ ಆಮದು ಮಾಡಿಕೊಳ್ಳಲು ಹಲವಾರು ಪ್ರೋತ್ಸಾಹಗಳನ್ನು ನೀಡಿತ್ತು. ಆಮದು ಮಾಡಿಕೊಂಡ ಚಿನ್ನದಲ್ಲಿ ಶೇಕಡಾ ೨೦ನ್ನು ರಫ್ತು ಮಾಡಲಾಗುವುದು ಎಂಬ ಷರತ್ತಿನ ಮೇರೆಗೆ ಯೋಜನೆಯ ಅಡಿಯಲ್ಲಿ ಚಿನ್ನ ಆಮದು ಮಾಡಿಕೊಳ್ಳಲು ಮುಂಚೂಣಿ ವ್ಯಾಪಾರಿ ಸಂಸ್ಥೆಗಳಿಗೆ ಅವಕಾಶ ನೀಡಲಾಗಿತ್ತು. ಮೆಹುಲ್ ಚೊಕ್ಸಿ ಸಮೂಹ ಕಂಪೆನಿಗಳು ಮುಂಚೂಣಿಯ ವ್ಯಾಪಾರಿ ಸಂಸ್ಥೆಗಳಾಗಿದ್ದವು ಎಂದು ಅಧಿಕಾರಿ ನುಡಿದರು.

2018: ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರೋಡ್ ಶೋ ನಡೆಸುತ್ತಿದ್ದ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೊರಳನ್ನು ತೂರಿ ಬಂದ ಹಾರವೊಂದು ಅಲಂಕರಿಸಿದ ಘಟನೆ ಘಟಿಸಿತು.  ಈ ಘಟನೆಯನ್ನು ಚಿತ್ರಿಸಿದ ವಿಡಿಯೋ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲಿ ವೈರಲ್ ಆಯಿತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏಪ್ರಿಲ್ 4ರ ಬುಧವಾರ ತುಮಕೂರಿನಲ್ಲಿ ರೋಡ್ ಶೋ ನಡೆಸುತ್ತಿದ್ದಾಗ ಈ ಘಟನೆ ಘಟಿಸಿತು.  ತುಮಕೂರಿನಲ್ಲಿ ರೋಡ್ ಶೋ ನಡೆಸುತ್ತಿದ್ದ ರಾಹುಲ್ ಗಾಂಧಿ ಅವರು ಬಸ್ಸೊಂದರ ಟಾಪ್ ನಲ್ಲಿ ನಿಂತುಕೊಂಡು ಜನರತ್ತ ಕೈ ಬೀಸುತ್ತಿದ್ದಾಗ, ದಿಢೀರನೆ ಕೈ ಒಂದು ಹಾರವೊಂದನ್ನು ಅವರತ್ತ ಎಸೆದದ್ದು ವಿಡಿಯೋದಲ್ಲಿ ದಾಖಲಾಗಿತ್ತು. ಹಾರ ನೇರವಾಗಿ ರಾಹುಲ್ ಗಾಂಧಿ ಅವರ ಕೊರಳಿಗೆ ಬಿತ್ತು. ಏನಾಯಿತು ಎಂದು ಕ್ಷಣಕಾಲ ದಂಗಾದ ರಾಹುಲ್ ಗಾಂಧಿ ಮರುಕ್ಷಣವೇ ಸಾವರಿಸಿಕೊಂಡು ಹಾರವನ್ನು ಕೊರಳಿನಿಂದ ತೆಗೆದದ್ದೂ ವಿಡಿಯೋದಲ್ಲಿ ದಾಖಲಾಗಿತ್ತು. ಇದು  ಭದ್ರತಾ ಲೋಪವೇ ಅಥವಾ ಅಲ್ಲವೇ ಎಂದು ಪೊಲೀಸರು ತನಿಖೆ ನಡೆಸಿದರು. ರಾಹುಲ್ ಗಾಂಧಿ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆಯುವ ಸಲುವಾಗಿ ತುಮಕೂರಿಗೆ ಭೇಟಿ ನೀಡಿದ್ದರು.  ಕರ್ನಾಟಕದಲ್ಲಿ ತಮ್ಮ ಎರಡು ದಿನಗಳ ಚುನಾವಣಾ ಪ್ರವಾಸದ ಐದನೇ ಹಂತದಲ್ಲಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಧ್ಯಕ್ಷರು ೧೧೧ ವರ್ಷ ವಯೋಮಾನದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರೂ ರಾಹುಲ್ ಗಾಂಧಿ ಜೊತೆಗಿದ್ದರು.  ರಾಜ್ಯದಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಸಿದ್ದರಾಮಯ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಮಠಕ್ಕೆ ಭೇಟಿ ನೀಡಿದ್ದು ಮಹತ್ವವಾಗಿತ್ತು. ರಾಜ್ಯ ಜನಸಂಖ್ಯೆಯ ಶೇಕಡಾ ೧೭ರಷ್ಟು ಇರುವ ಲಿಂಗಾಯತರ ಮತಗಳನ್ನು ಒಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಆಪಾದಿಸಿದೆ. ಬಿಜೆಪಿಯು ಲಿಂಗಾಯತ ಸಮುದಾಯಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನೇ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿತ್ತು. ತಮ್ಮ ಹಿಂದಿನ ಎಲ್ಲ ಪ್ರವಾಸಗಳಲ್ಲೂ ರಾಹುಲ್ ಗಾಂಧಿ ಅವರು ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಅವರೂ ಸಿದ್ಧಗಂಗಾ ಸ್ವಾಮೀಜಿ ಮತ್ತು ಇತರ ಲಿಂಗಾಯತ ಹಾಗೂ ವೀರಶೈವ ಸ್ವಾಮೀಜಿಗಳನ್ನು ತಮ್ಮ ಪ್ರವಾಸ ಕಾಲದಲ್ಲಿ ಭೇಟಿ ಮಾಡಿದರು.  ಶಾ  ಅವರು ದಲಿತ ಮತ್ತು ಹಿಂದುಳಿದ ಸಮುದಾಯಗಳ ಸ್ವಾಮೀಜಿಗಳನ್ನೂ ಭೇಟಿ ಮಾಡುವ ಮೂಲಕ ಆ ಸಮುದಾಯಗಳನ್ನು ತಲುಪುವ ಯತ್ನ ನಡೆಸಿದರು.

2009: ಎಲ್‌ಟಿಟಿಇಯನ್ನು ಸಂಪೂರ್ಣವಾಗಿ ಕೊನೆಗಾಣಿಸುವಲ್ಲಿ ಶ್ರೀಲಂಕಾ ಸೇನೆ ಬಹುತೇಕ ಯಶಸ್ವಿಯಾಯಿತು. ತಮಿಳು ಉಗ್ರರ ಕೊನೆಯ ನೆಲೆಯಾದ ಪುದುಕುಡಿಯುರಿಯಿರಿಪ್ಪುವನ್ನು ಅದು ವಶಪಡಿಸಿಕೊಂಡಿತು. ದ್ವೀಪದ ಉತ್ತರ ಭಾಗದಲ್ಲಿ ತಮಿಳು ಬಂಡುಕೋರರು ಹಾಗೂ ಶ್ರೀಲಂಕಾ ಸೈನಿಕರ ನಡುವೆ ನಡೆದ ಘೋರ ಸಂಘರ್ಷದಲ್ಲಿ 420 ಜನ ಉಗ್ರರು ಮೃತರಾದರು. ಜನ ವಸತಿ ಇರುವ 20 ಚದರ ಕಿ.ಮೀ. ಸುರಕ್ಷಿತ ವಲಯದಲ್ಲಿ ಅಳಿದುಳಿದ ಉಗ್ರರು ಅವಿತುಕೊಂಡಿದ್ದಾರೆ ಎಂದು ಶಂಕಿಸಲಾಯಿತು. ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್, ಎರಡನೇ ನಾಯಕ ಪೊಟ್ಟು ಅಮ್ಮಾನ್ ಹಾಗೂ ಇತರ ಕಮಾಂಡರ್‌ಗಳು ಕೂಡ ಇಲ್ಲಿಯೆ ಅಡಗಿಕೊಂಡಿದ್ದಾರೆ ಎಂದು ನಂಬಲಾಯಿತು. ಥೀಪನ್, ರುಬೆನ್, ನಾಗೇಶ್, ಗಡಫೈ (ಪ್ರಭಾಕರನ್ ಮಾಜಿ ಅಂಗರಕ್ಷಕ), ವಿದುಷಾ (ಎಲ್‌ಟಿಟಿಇ ಮಹಿಳಾ ವಿಭಾಗದ ಮುಖ್ಯಸ್ಥೆ), ದುರ್ಗಾ, ಕಮಲಿನಿ ಹಾಗೂ ಇನ್ನಿತರ ಕಮಾಂಡರ್‌ಗಳು ಸೈನಿಕರ ಗುಂಡಿಗೆ ಬಲಿಯಾದರು ಎಂದು ಸೇನೆ ತಿಳಿಸಿತು.

2009: ಮುಂಬೈದಾಳಿಗೆ ತುತ್ತಾದ ಛತ್ರಪತಿ ಶಿವಾಜಿ ಟರ್ಮಿನಸ್ (ಸಿಟಿಎಸ್) ರೈಲ್ವೆ ನಿಲ್ದಾಣವನ್ನು ಫ್ರಾನ್ಸ್ ತಜ್ಞರಿಂದ ಮರುವಿನ್ಯಾಸಗೊಳಿಸಲು ಭಾರತೀಯ ರೈಲ್ವೆ ನಿರ್ಧರಿಸಿತು. ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಸಿಟಿಎಸ್ ಅನ್ನು ವಿಶ್ವದರ್ಜೆಯ ನಿಲ್ದಾಣವಾಗಿ ರೂಪಿಸುವ ಪ್ರಯತ್ನ ನಡೆದಿದ್ದು ಈ ಸಂಬಂಧ ಫ್ರಾನ್ಸ್ ರೈಲ್ವೆ ಇಲಾಖೆಯ ಅಂಗ ಸಂಸ್ಥೆ ಎಆರ್‌ಇಪಿ ಟರ್ಮಿನಸ್‌ನ ವಾಸ್ತು ವಿನ್ಯಾಸದ ಅಧ್ಯಯನ ನಡೆಸುವುದು ಎಂದು ರೈಲ್ವೇ ಮೂಲಗಳು ತಿಳಿಸಿದವು.

2009: ಮಾಹಿತಿ ಹಕ್ಕು ಕಾಯ್ದೆಯಡಿ ರಾಷ್ಟ್ರಪತಿ, ಪ್ರಧಾನಿಗಳ ಆರೋಗ್ಯ ಸ್ಥಿತಿ ಕುರಿತ ವಿವರಗಳನ್ನಾಗಲಿ ಅಥವಾ ಆಸ್ಪತ್ರೆ ಖರ್ಚು ವೆಚ್ಚಗಳನ್ನಾಗಲೀ ಬಹಿರಂಗಪಡಿಸುವುದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತು. ಮಾಹಿತಿ ಹಕ್ಕು ಕಾಯ್ದೆಯಡಿ ಹಾಲಿ ಮತ್ತು ಹಿಂದಿನ ಎಲ್ಲಾ ಪ್ರಧಾನಮಂತ್ರಿಗಳ ಮತ್ತು ರಾಷ್ಟ್ರಪತಿಗಳ ಆರೋಗ್ಯದ ವಿವರ ಮತ್ತು ಚಿಕಿತ್ಸೆಯ ಖರ್ಚುವೆಚ್ಚ ಕುರಿತು ವಿವರ ನೀಡಬೇಕೆಂದು ಅರ್ಜಿದಾರರೊಬ್ಬರು ಪ್ರಧಾನಿ ಕಚೇರಿಗೆ ಮನವಿ ಸಲ್ಲಿಸಿದ್ದರು. ನಂತರ ಅರ್ಜಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಇಲಾಖೆ ಪ್ರಧಾನಿಗಳಿಗೆ ಒದಗಿಸಲಾಗಿರುವ ಆರೋಗ್ಯ ಯೋಜನೆಯಡಿ ಈ ಮಾಹಿತಿಗಳು ವರ್ಗೀಕೃತ ದಾಖಲೆಗಳ ಪಟ್ಟಿಗೆ ಬರುತ್ತವೆ. ಹೀಗಾಗಿ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಪ್ರಸ್ತಾಪಿಸಲಾಗಿರುವಂತೆ ವರ್ಗೀಕೃತ ದಾಖಲೆಗಳನ್ನು ನೀಡಲು ಅವಕಾಶವಿಲ್ಲ ಎಂದು ತಿಳಿಸಿತು. ಹೀಗಿದ್ದರೂ ಇಲಾಖೆ ಅರ್ಜಿ ತಿರಸ್ಕಾರದ ವೇಳೆ ಮಾಹಿತಿ ಕಾಯ್ದೆಯ ಯಾವುದೇ ನಿಗದಿತ ಸೆಕ್ಷನ್ ಅನ್ನು ಉಲ್ಲೇಖಿಸಲಿಲ್ಲ. ಇದೇ ವೇಳೆ ರಾಷ್ಟ್ರಪತಿಗಳ ಕಾರ್ಯದರ್ಶಿ ಕೂಡ ದೇಶದ ಪ್ರಥಮ ಪ್ರಜೆಯ ಆರೋಗ್ಯ ವಿವರ ನೀಡಲು ನಿರಾಕರಿಸಿದರು.

2009: ದೇಶೀಯ ನಿರ್ಮಿತ ಎಂಜಿನ್ ಅಳವಡಿಸಿಕೊಂಡು ಪರೀಕ್ಷಾರ್ಥ ಹಾರಾಟ ಹಂತದಲ್ಲಿರುವ 'ನಿಶಾಂತ್' ಮಾನವ ರಹಿತ ವಿಚಕ್ಷಣಾ ವಿಮಾನಕ್ಕೆ ಬೆಂಗಳೂರಿನಲ್ಲಿ ನಡೆದ ಪ್ರಥಮ ಹಾರಾಟದಲ್ಲಿ ಯಶಸ್ಸು ದೊರಕಿತು. ಇದರೊಂದಿಗೆ ರಕ್ಷಣಾ ವ್ಯವಸ್ಥೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಯಿತು.. ಈ ವಿಮಾನಕ್ಕೆ ಈವರೆಗೂ ವಿದೇಶಿ ನಿರ್ಮಿತ ಎಂಜಿನ್ ಬಳಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯ (ಎನ್‌ಎಎಲ್), ಅಹಮದ್‌ನಗರದ ವೆಹಿಕಲ್ ರಿಸರ್ಚ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ವಿಆರ್‌ಡಿಇ) ಮತ್ತು ಬೆಂಗಳೂರಿನ ವೈಮಾಂತರಿಕ್ಷ ಅಭಿವೃದ್ಧಿ ಕೇಂದ್ರಗಳ (ಎಡಿಇ) ಸಹಯೋಗದಲ್ಲಿ ರೂಪಿಸಿದ ದೇಶೀಯ ಎಂಜಿನ್ ಬಳಸಲಾಯಿತು. ನೂತನ ಎಂಜಿನ್ ಅಳವಡಿಸಿದ ಬಳಿಕ 40 ನಿಮಿಷಗಳ ಕಾಲ ಪ್ರಥಮ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿದ ವಿಮಾನ ನಿಗದಿತ ಸ್ಥಳದಲ್ಲಿ ಕೆಳಗಿಳಿಯಿತು.

2009: ರಾಜಧಾನಿ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯ ಹೆಸರಿನೊಂದಿಗೆ ತಳುಕು ಹಾಕಿಕೊಂಡ ಐತಿಹಾಸಿಕ 'ಕಾಫಿಹೌಸ್' ಸೇವೆಗೆ ಈದಿನ ಪೂರ್ಣವಿರಾಮ ಬಿದ್ದಿತು. ಇನ್ನು ಮುಂದೆ ಎಂ.ಜಿ.ರಸ್ತೆಯಲ್ಲಿ ಚಿಕೋರಿ ಇಲ್ಲದ ಫಿಲ್ಟರ್ ಕಾಫಿಯ ಘಮ ಘಮ ಪರಿಮಳ ನಿರೀಕ್ಷಿಸುವಂತಿಲ್ಲ. ಆತ್ಮೀಯರೊಂದಿಗೆ ಕಾಫಿ ಹೀರುತ್ತಾ ಹರಟೆ ಹೊಡೆಯುವುದೆಲ್ಲ ಕೇವಲ ನೆನಪಾಗಿ ಉಳಿಯಿತು. ಕಾಫಿಹೌಸ್ ಒಂದು ಹೋಟೆಲ್‌ನಂತಿರಲಿಲ್ಲ. ಬದಲಿಗೆ ಒಂದು ಭಾವನಾತ್ಮಕ ಸಂಬಂಧ ಬೆಸೆಯುವ ಆಕರ್ಷಕ ತಾಣ ಎನಿಸಿತ್ತು. ಇಲ್ಲಿನ ಕಾಫಿ ಸವಿಯದ ಹೊರತು ಎಂ.ಜಿ. ರಸ್ತೆಯ ಭೇಟಿ ಅಪೂರ್ಣವೆನಿಸುವಂತಾಗಿತ್ತು. ಈ ಎಲ್ಲ ಬಗೆಯ ಆಕರ್ಷಣೆ, ಸಂಬಂಧ, ಪ್ರತಿಷ್ಠೆ ಈದಿನ ಅಂತ್ಯ ಕಂಡಿತು. ಹತ್ತಾರು ವರ್ಷಗಳಿಂದ ಇಲ್ಲಿ ಕಾಫಿ ಸಿದ್ಧಪಡಿಸುತ್ತಿದ್ದ ಹನುಮಯ್ಯ ಅವರು ಹಾಕಿದ ಡಿಕಾಕ್ಷನ್, ಸಕ್ಕರೆ ಹಾಗೂ ಹಾಲಿನ ಮಿಶ್ರಣದ ರುಚಿ ಎಂದಿಗೂ ಕೆಟ್ಟದ್ದಲ್ಲ. 25 ವರ್ಷಗಳಿಂದ ಮಾಣಿಯಾಗಿ ಸೇವೆ ಸಲ್ಲಿಸುತ್ತಿದ್ದ ಪೀಟರ್ ಜಾನ್ ಅವರು ಹಲವು ಗ್ರಾಹಕರಿಗೆ ಸ್ನೇಹಿತರಂತೆ ಇದ್ದರು.

2009: ಉದಯೋನ್ಮುಖ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಅವರು ಮಿಯಾಮಿಯಲ್ಲಿ ಮುಕ್ತಾಯವಾದ ಮಿಯಾಮಿ ಡಬ್ಲೂಟಿಎ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಸದ್ಯ ಅರಿಜೋನಾದಲ್ಲಿ ನೆಲೆಸಿದ ಬೆಲಾರೂಸ್ ಮೂಲದ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಅವರು 6-3, 6-1ರಲ್ಲಿ ವಿಶ್ವದ ಅಗ್ರಶ್ರೇಯಾಂಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರನ್ನು ಸೋಲಿಸಿದರು. ಎಪ್ಪತ್ತೆರಡು ನಿಮಿಷಗಳಲ್ಲಿ ಮುಕ್ತಾಯವಾದ ಪಂದ್ಯದಲ್ಲಿ ಬೆಲಾರೂಸ್ ಮೂಲದ ಆಟಗಾರ್ತಿ ಸೆರೆನಾ ಅವರಿಗೆ ಸತತ ಆರನೇ ಪ್ರಶಸ್ತಿ ಕಳೆದುಕೊಂಡರು. ಅದ್ಭುತ ಆಟದ ಪ್ರದರ್ಶನ ತೋರಿದ ಅಜರೆಂಕಾ ಅವರು ಮನಮೋಹಕ ಕ್ರಾಸ್ ಕೋರ್ಟ್ ಹೊಡೆತಗಳು ಹಾಗೂ ಚಾಣಾಕ್ಷ ಡ್ರಾಪ್‌ಗಳನ್ನು ಹಾಕುವ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

2008: ಕೆಲವು ಮೂಲ ಭಂಗಿಗಳು ಮತ್ತು ಪ್ರಾಣಾಯಾಮಾದಿಂದ ದೇಹದ ಮೇಲಿನ ನಿಯಂತ್ರಣ ಹಾಗೂ ಸ್ಥಿರತೆಯನ್ನು ವೃದ್ಧಿಸಿ ಕೊಳ್ಳಲು ಸಾಧ್ಯ ಎಂದು ಫಿಲಿಡೆಲ್ಫಿಯಾದ ಟೆಂಪಲ್ ಮೆಡಿಕಲ್ ಸ್ಕೂಲಿನ ಸಂಶೋಧನೆಯಿಂದ ದೃಢಪಟ್ಟಿತು. ಅಲ್ಪಮಟ್ಟದ ಯೋಗ ಮಾಡಿದರೂ ಸಾಕು. ವಯಸ್ಸಾದ ಮಹಿಳೆಯರು ಆಯ ತಪ್ಪಿ ಜಾರಿ ಬೀಳುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಂಶೋಧನೆ ಹೇಳಿತು. 65ಕ್ಕೂ ಹೆಚ್ಚು ವಯಸ್ಸಾದ ಮಹಿಳೆಯರ ಮೇಲೆ 2 ತಿಂಗಳ ಕಾಲ ಈ ಸಂಶೋಧನೆ ನಡೆಸಲಾಗಿತ್ತು. ಇವರೆಲ್ಲಾ ಯೋಗ ತರಬೇತಿ ಪಡೆದ ನಂತರ ತಮ್ಮ ದೈಹಿಕ ನಿಯಂತ್ರಣದ ಮೇಲೆ ಗಮನಾರ್ಹ ಹತೋಟಿ ಸಾಧಿಸಿದ್ದು ಕಂಡು ಬಂದಿತು ಎಂದು ಲಂಡನ್ನಿನ ಅಯ್ಯಂಗಾರ್ ಯೋಗ ತರಬೇತಿ ಮುಖ್ಯಸ್ಥ ಡಾ. ಜಿನ್ಸುಪ್ ಸಾಂಗ್ ತಿಳಿಸಿದರು. ನಿವೃತ್ತ ಮುದುಕ-ಮುದುಕಿಯರು ವರ್ಷದಲ್ಲಿ ಕನಿಷ್ಠ ಒಂದು ಬಾರಿಯಾದರೂ ಆಯತಪ್ಪಿ ಬೀಳುವ ಸಂಭವಗಳು ಹೆಚ್ಚಿರುತ್ತವೆ. ಇಂತಹವರು ನಿರಂತರ ಪ್ರಾಣಾಯಾಮ ಮತ್ತು ಕೆಲವು ನಾಜೂಕಾದ ಆಸನಗಳನ್ನು ಅಭ್ಯಾಸ ಮಾಡುವುದರಿಂದ ಉತ್ತಮ ದೃಢತೆ ಸಾಧಿಸಬಹುದು ಎಂದು ಅಧ್ಯಯನ ಹೇಳಿತು.

2008: ಹೊಗೇನಕಲ್ ಯೋಜನೆಯಿಂದ ತಲೆದೋರಿದ ಉದ್ವಿಗ್ನ ಸ್ಥಿತಿಯನ್ನು ಶಾಂತಗೊಳಿಸುವ ಯತ್ನವಾಗಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕಷ್ಣ ಅವರ ವಿನಂತಿಯನ್ನು ಮನ್ನಿಸಿ ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬರುವ ತನಕ ಈ ಯೋಜನೆಯನ್ನು ಸ್ಥಗಿತಗೊಳಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿತು. ಇದೇ ವೇಳೆ ಡಿಎಂಕೆ ಸರ್ಕಾರ ಅಥವಾ ಕೇಂದ್ರದ ಯುಪಿಎ ಸರ್ಕಾರಗಳು ಆಘಾತಕ್ಕೊಳಗಾದರೂ ಈ ವಿಷಯವನ್ನು ಸುಪ್ರೀಂ ಕೋರ್ಟಿಗೆ ಕೊಂಡೊಯ್ಯುವುದಾಗಿ ಎಸ್. ಎಂ. ಕೃಷ್ಣ ಘೋಷಿಸಿದರು.

2008: ಕರ್ನಾಟಕ ರಾಜ್ಯದಲ್ಲಿ ಜನಪ್ರಿಯ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ವಿವಾದಿತ ಹೊಗೇನಕಲ್ ಯೋಜನೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಏಪ್ರಿಲ್ 10ರಂದು ನಡೆಸಲು ಉದ್ದೇಶಿಸಿದ್ದ ರಾಜ್ಯ ಬಂದ್ ಕರೆಯನ್ನು ಕನ್ನಡಪರ ಸಂಘಟನೆಗಳು ಹಿಂದಕ್ಕೆ ಪಡೆದವು.

2008: ಮಧುರೆ ಬಳಿಯ ಒಂದು ಕುಟುಂಬದ ಸದಸ್ಯ ವೀರುಮಂಡಿ ಎಂಬ ವ್ಯಕ್ತಿಯ ಡಿ ಎನ್ ಎ ಪರೀಕ್ಷೆಯ ಫಲಿತಾಂಶ ಆದಿಮಾನವರ ವಂಶವಾಹಿಯನ್ನು ಹೋಲುತ್ತದೆ ಎಂಬ ಸಂಗತಿ ಪ್ರಕಟವಾಗುವುದರೊಂದಿಗೆ ಆದಿ ಮಾನವ ಸ್ಥಳದಿಂದ ಸ್ಥಳಕ್ಕೆ ವಾಸ ಬದಲಿಸುತ್ತಾ ಆಫ್ರಿಕಾದಿಂದ ತಮಿಳುನಾಡಿಗೂ ಬಂದಿದ್ದಿರಬೇಕು ಎಂಬುದು ಬೆಳಕಿಗೆ ಬಂತು. ಮಧುರೆ ವಿಶ್ವವಿದ್ಯಾಲಯದ ವಂಶವಾಹಿ ವಿಜ್ಞಾನ ವಿಭಾಗದ ತಜ್ಞರು ನಡೆಸಿದ ಸಂಶೋಧನಾತ್ಮಕ ಅಧ್ಯಯನಕ್ಕೆ ಪೂರಕವಾಗಿ ವೀರುಮಂಡಿಯ ಡಿ ಎನ್ ಎ ತಪಾಸಣೆ ನಡೆದಾಗ ಈ ಅಂಶ ಬೆಳಕಿಗೆ ಬಂದಿತು. ಮಾರ್ಕರ್- ಎಂ130: ಇದು, ಆದಿಮಾನವರ ವಂಶವಾಹಿ! ಮಧುರೆ ಬಳಿಯ ಜೋಧಿಮಣಿಕ್ಕನ್ ಎಂಬಲ್ಲಿ ವಾಸವಿರುವ `ಪೆರಿಮಲಿಕಲ್ಲಾರ್' ಸಮುದಾಯಕ್ಕೆ ಸೇರಿದ `ತೇವಾರ್' ಕುಟುಂಬದ ಸದಸ್ಯ ವೀರುಮಂಡಿ ಅವರಲ್ಲಿ ಪತ್ತೆಯಾಗಿರುವುದೂ ಇದೇ ವಂಶವಾಹಿ!! ಕುಟುಂಬದಲ್ಲಿ 13 ಮಂದಿ ಇದ್ದು, ರಕ್ತ ಸಂಬಂಧಿಗಳಾದ ಕಾರಣ ಅವರ ಡಿಎನ್ಎ ತಪಾಸಣೆ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

2008: ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರ ವೈದ್ಯಕೀಯ ವೆಚ್ಚವನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಪ್ರಸಂಗ ನಡೆಯಿತು. ಅಧಿಕಾರಿ ಅರ್. ವಿವೇಕಾನಂದ ಸ್ವಾಮಿ ಅವರಿಗೆ 2000ನೇ ಇಸವಿಯಲ್ಲಿ ಹೃದಯದ ಶಸ್ತ್ರಚಿಕಿತ್ಸೆಗಾಗಿ 1,50,600 ರೂಪಾಯಿ ವೆಚ್ಚವಾಗಿತ್ತು. ಆದರೆ ಅವರು ಖಾಸಗಿ ಆಸ್ಪತ್ರೆಯಲ್ಲಿ (ವೊಕಾರ್ಟ್, ಬೆಂಗಳೂರು) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ನೆಲೆಯಲ್ಲಿ ರಾಜ್ಯ ಸರ್ಕಾರ ಕೇವಲ 39,207 ರೂಪಾಯಿ ಮಾತ್ರ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ ನ್ಯಾಯಮೂರ್ತಿಗಳಾದ ಎಸ್. ಬಿ. ಸಿನ್ಹಾ ಮತ್ತು ವಿ. ಎಸ್. ಸಿರ್ಪೂರ್ಕರ್ ಅವರು ಈ ಆದೇಶ ನೀಡಿದರು. ಸರ್ಕಾರಿ ನೌಕರರಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಸಂಬಂಧದ ನಿಯಮದಂತೆ `ಅಧಿಕೃತ ಆಸ್ಪತ್ರೆ'ಗಳು ಮತ್ತು `ವೈದ್ಯಕೀಯ ಸಂಸ್ಥೆ'ಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೂ ಅದರ ವೆಚ್ಚವನ್ನು ಸರ್ಕಾರ ನೀಡಬೇಕು, ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಶಸ್ತ್ರಚಿಕಿತ್ಸೆ ನಡೆಸುವುದಾದರೆ ಅದನ್ನು ಉಚಿತವಾಗಿ ನೀಡಬೇಕು ಎಂದು ಇದೆ. ಹೀಗಾಗಿ ರಾಜ್ಯ ಸರ್ಕಾರ ವೈದ್ಯಕೀಯ ವೆಚ್ಚದ ಹಣ ನೀಡಬೇಕು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿತು.

2008: ಮುಂಬೈಯ ಸಿಮ್ರಾನ್ ಕೌರ್ ಅವರು 2008ನೆ ಸಾಲಿನ ಫೆಮಿನಾ ಭಾರತ ಸುಂದರಿ ಸ್ಪರ್ಧೆಯಲ್ಲಿ ಭಾರತದ ಭುವನ ಸುಂದರಿಯಾಗಿ ಆಯ್ಕೆಯಾದರು. ಮುಂಬೈಯಲ್ಲಿ ನಡೆದ ಫೆಮಿನಾ ಭಾರತ ಸುಂದರಿ ಸ್ಪರ್ಧೆಯಲ್ಲಿ (ಎಡದಿಂದ) ಹರ್ಷಿತಾ ಸಕ್ಸೇನಾ, ಪಾರ್ವತಿ ಮತ್ತು ಸಿಮ್ರಾನ್ ಕೌರ್ ಹೆಮ್ಮೆಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

2008: ಏಡ್ಸ್ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗ ಎಂಬುದನ್ನು ಅರಿತಿದ್ದೂ ಈ ಬಗ್ಗೆ ಯಾವುದೇ ಮುಂಜಾಗ್ರತೆ ವಹಿಸದೆ ಬೇರೆಯವರೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ ಆರೋಪದ ಮೇಲೆ ನ್ಯಾಯಾಲಯವು ಕೆನಡಾದ ಕಾರ್ಲ್ ಲಿಯೋನ್ ಎಂಬ ವ್ಯಕ್ತಿಗೆ 18 ವರ್ಷ ಜೈಲು ಶಿಕ್ಷೆ ವಿಧಿಸಿತು. ಈತನಿಗೆ ಎಚ್ ಐ ವಿ ಸೋಂಕು ತಗುಲಿದ್ದು 1997ರಲ್ಲಿಯೇ ಪತ್ತೆಯಾಗಿತ್ತು. ವಿಷಯ ಗೊತ್ತಿದ್ದರೂ 32 ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ. ಅವರಲ್ಲಿ 15 ಮಂದಿಗೆ ಏಡ್ಸ್ ಸೋಂಕು ತಗುಲಿದ್ದು ಪತ್ತೆಯಾಯಿತು. ಲೈಂಗಿಕ ಕ್ರಿಯೆ ನಡೆಸುವ ಮುನ್ನ ಈತ ಅವರಾರಿಗೂ ತನ್ನ ಸಮಸ್ಯೆಯನ್ನು ಹೇಳಿಕೊಂಡಿರಲಿಲ್ಲ. ಇದೇ ಆರೋಪದ ಹಿನ್ನೆಲೆಯಲ್ಲಿ ಇವನನ್ನು 2004ರ ಜೂನ್ 6 ರಂದು ಬಂಧಿಸಲಾಗಿತ್ತು.

2008: ಭಾರತೀಯ ನೆಲದಲ್ಲಿ ನಿರ್ಮಾಣಗೊಂಡ ಧಾರಾವಾಹಿಗಳು ಮುಸ್ಲಿಮೇತರ ಎಂಬ ಕಾರಣಕ್ಕೆ ಆಫ್ಘಾನಿಸ್ಥಾನ ಸರ್ಕಾರ ಅವುಗಳ ಪ್ರಸಾರವನ್ನು ನಿಲ್ಲಿಸಲು ಕ್ರಮ ಕೈಗೊಂಡವು. ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಬಗ್ಗೆ ಹಲವಾರು ದೂರುಗಳು ಬಂದಿವೆ. ಈ ಬಗ್ಗೆ ಸಂಸದರ ಸಭೆಯಲ್ಲಿಯೂ ಚರ್ಚಿಸಲಾಗಿದೆ ಎಂದು ಆಫ್ಘಾನಿಸ್ಥಾನದ ಸಂಸ್ಕೃತಿ ಹಾಗೂ ಮಾಹಿತಿ ಸಚಿವಾಲಯದ ವಕ್ತಾರರು ತಿಳಿಸಿದರು. ಇಸ್ಲಾಮಾಬಾದಿನ ಖಾಸಗಿ ಟಿವಿ ವಾಹಿನಿಗಳು ಭಾರತದ 6 ಜನಪ್ರಿಯ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿವೆ. ಇವು ಮುಸ್ಲಿಮರ ಮನಸ್ಸಿಗೆ ಘಾಸಿ ಮಾಡುತ್ತಿವೆ ಎಂದು ಅವರು ತಿಳಿಸಿದರು.

2008: ಪ್ರಸಕ್ತ ಸಾಲಿನ ಎಸ್. ವಿ. ನಾರಾಯಣ ಸ್ವಾಮಿರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಪಿಟೀಲು ವಿದ್ವಾಂಸ ಟಿ.ಎನ್. ಕೃಷ್ಣನ್ ಅವರು ಆಯ್ಕೆಯಾದರು. ಬೆಂಗಳೂರು ನಗರದ ಚಾಮರಾಜಪೇಟೆಯ ರಾಮಸೇವಾ ಮಂಡಲಿಯ ಸಂಸ್ಥಾಪಕ ಎಸ್.ವಿ. ನಾರಾಯಣ ಸ್ವಾಮಿರಾವ್ ಅವರ ಸ್ಮರಣಾರ್ಥ ಸ್ಥಾಪಿಸಲಾದ ಪ್ರಶಸ್ತಿಯನ್ನು ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದವರಿಗೆ ಎಂಟು ವರ್ಷಗಳಿಂದ ನೀಡಲಾಗುತ್ತಿತ್ತು.

2007: ತಮ್ಮ ವಿಶಿಷ್ಟ ಕಥೆ, ಕಾದಂಬರಿ ಹಾಗೂ ವೈಜ್ಞಾನಿಕ ಬರಹಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಸಂಚಲನೆ ಮೂಡಿಸಿದ್ದ, ಪಂಪ ಪ್ರಶಸ್ತಿ ಪುರಸ್ಕೃತ ಹಿರಿಯ ಬಹುಮುಖ ಪ್ರತಿಭೆ, ಬಹುಮುಖ ವ್ಯಕ್ತಿತ್ವದ ಸಾಹಿತಿ, ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ (69) ಅವರು ಈದಿನ ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲೆಯ ಹಳೆ ಮೂಡಿಗೆರೆ ನಿಂಬೆಮೂಲೆಯಲ್ಲಿನ ತಮ್ಮ ಸ್ವಗೃಹ `ನಿರುತ್ತರ'ದಲ್ಲಿ ಹೃದಯಾಘಾತದಿಂದ ನಿಧನರಾದರು. 1938ರ ಸೆಪ್ಟೆಂಬರ್ 28ರಂದು ಹಿರಿಯ ಸಾಹಿತಿ ಕುವೆಂಪು ಅವರ ಪುತ್ರನಾಗಿ ಜನಿಸಿದ ತೇಜಸ್ವಿ ಕೇಂದ್ರ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೂ ಭಾಜನರಾಗಿದ್ದವರು. ಕರ್ವಾಲೋ, ಚಿದಂಬರ ರಹಸ್ಯ, ಅಣ್ಣನ ನೆನಪು, ಕಿರಗೂರಿನ ಗಯ್ಯಾಳಿಗಳು, ಜುಗಾರಿ ಕ್ರಾಸ್ ಅವರು ಪ್ರಮುಖ ಕೃತಿಗಳಲ್ಲಿ ಕೆಲವು. ಅವರ ತಬರನ ಕಥೆ, ಅಬಚೂರಿನ ಪೋಸ್ಟಾಫೀಸ್, ಕುಬಿ ಮತ್ತು ಇಯಾಲ ಕೃತಿಗಳು ಚಲನಚಿತ್ರಗಳಾಗಿದ್ದವು. ಪತ್ನಿ ರಾಜೇಶ್ವರಿ ಜೊತೆ 1978ರಿಂದ ಅವರು `ನಿರುತ್ತರ'ದಲ್ಲಿ ವಾಸವಾಗಿದ್ದರು.

2007: ವಿಶೇಷ ಆರ್ಥಿಕ ವಲಯ (ಎಸ್ ಇ ಜೆಡ್) ರಚನೆಗೆ ರಾಜ್ಯ ಸರ್ಕಾರಗಳು ಭೂಸ್ವಾಧೀನ ಪಡಿಸಿಕೊಳ್ಳುವಂತಿಲ್ಲ ಹಾಗೂ ಈ ವಲಯವು ಐದು ಸಾವಿರ ಹೆಕ್ಟೇರ್ ಪ್ರದೇಶ ಮೀರುವಂತಿಲ್ಲ ಎಂದು ಕೇಂದ್ರ ಸರ್ಕಾರವು ನಿರ್ಬಂಧ ಹೇರಿತು. ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ನೇತೃತ್ವದ ಉನ್ನತಾಧಿಕಾರ ಸಚಿವರ ತಂಡವು ನಡೆಸಿದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

2007: ಒಂದು ಕಡತ ವಿಲೇವಾರಿ ಮಾಡಲು ಪ್ರತಿದಿನ ಸಾಮಾನ್ಯ ನಾಗರಿಕರಿಂದ ಲಂಚ ಕೇಳುವ ಸರ್ಕಾರದ ಭ್ರಷ್ಟ ಸಿಬ್ಬಂದಿಯನ್ನು `ಶೂನ್ಯ ನೋಟು' ನೀಡಿ ಬೆಚ್ಚಿ ಬೀಳಿಸಲು ತಮಿಳುನಾಡಿನ ಚೆನ್ನೈಯ ನಾಗರಿಕರ ಹಕ್ಕುಗಳಿಗಾಗಿ ಹೋರಾಡುವ `ಫಿಪ್ತ ಪಿಲ್ಲರ್' ಎಂಬ ಸಂಘಟನೆ ಸಲಹೆ ಮಾಡಿತು. `ಅಸಹಕಾರ ಚಳವಳಿ' ಕಾದಂಬರಿ ಬಿಡುಗಡೆ ಮಾಡಿದ ಈ ಸಂಘಟನೆ ಗಾಂಧಿ ಚಿತ್ರವುಳ್ಳ 50 ರೂಪಾಯಿ ನೋಟಿನ ಮಾದರಿಯ `ಶೂನ್ಯ ನೋಟು' ಹೊರತಂದಿದ್ದು, ಅದರ ಒಂದು ಬದಿಯಲ್ಲಿ ಚಳವಳಿಯ ಸೂಚನೆ, ಸಲಹೆಗಳನ್ನು ಹಾಗೂ `ಲಂಚ ನೀಡುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ' ಎಂಬ ಬರಹವನ್ನು ಇನ್ನೊಂದು ಬದಿಯಲ್ಲೂ ಬರೆದು ಅಲ್ಲಿ ಆರ್ ಬಿ ಐ ಗವರ್ನರ್ ಸಹಿ ಇರುವಂತೆ ಮುದ್ರಿಸಿತು.

2007: ಉತ್ತರ ಪ್ರದೇಶದ ಮುಸ್ಲಿಮರನ್ನು ಇನ್ನು ಮುಂದೆ ಅಲ್ಪಸಂಖ್ಯಾತರು ಎಂದು ಪರಿಗಣಿಸುವಂತಿಲ್ಲ. ಉತ್ತರ ಪ್ರದೇಶದ ಜನಸಂಖ್ಯೆಯ ಶೇಕಡಾ 18.5ರಷ್ಟು ಇರುವ ಕಾರಣ ಅವರು ಅಲ್ಪಸಂಖ್ಯಾತರಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಗಾಜಿಪುರದ ಅಂಜುಮನ್ ಮದ್ರಸಾ ನೂರುಲ್ ಇಸ್ಲಾಮ್ ದೆಹ್ರಾ ಕಲನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಎನ್. ಶ್ರೀವಾಸ್ತವ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ನೀಡಿತು.

2007: ಉತ್ತರ ಪ್ರದೇಶ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿರುವ ವಿವಾದಾತ್ಮಕ ಸಿ.ಡಿ.ಯು ಬಿಜೆಪಿಗೆ `ಭೂತ'ದಂತೆ ಕಾಡತೊಡಗಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನಾಯಕ ಲಾಲ್ ಜಿ ಟಂಡನ್ ಮತ್ತು ಇತರರ ವಿರುದ್ಧ ಜನತಾ ಪ್ರಾತಿನಿಧ್ಯ ಕಾಯ್ದೆಯ 125ನೇ ಕಲಂ ಅಡಿ ಲಖನೌನ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ಪ್ರಥಮ ಮಾಹಿತಿ ವರದಿ ಸಲ್ಲಿಸಲಾಯಿತು. ಜೊತೆಗೆ 1968ರ ಚುನಾವಣಾ ಲಾಂಛನಗಳು (ಮೀಸಲು ಮತ್ತು ಮಂಜೂರಾತಿ) ಕಾಯ್ದೆಯ ಅಡಿಯಲ್ಲಿ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಚುನಾವಣಾ ಆಯೋಗವು ಬಿಜೆಪಿಗೆ ನೋಟಿಸ್ ಕೂಡಾ ಜಾರಿ ಮಾಡಿತು. ಮುಸ್ಲಿಮರ ವಿರುದ್ಧ ಮಾಡಿರುವ ಕಟು ಟೀಕೆ, ಬಾಬರಿ ಮಸೀದಿ ಮತ್ತು ಗೋಧ್ರಾ ರೈಲು ದುರಂತದ ಪ್ರಸ್ತಾಪ ಮಾಡಿದ್ದಕ್ಕಾಗಿ ಪಕ್ಷಕ್ಕೆ ನೀಡಲಾಗಿರುವ ಮಾನ್ಯತೆ ರದ್ದು ಪಡಿಸಬೇಕು ಎಂಬುದಾಗಿ ಕೇಳಿಬಂದ ತೀವ್ರ ಆಗ್ರಹದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿತು.

2006: ಲಾಭದ ಹುದ್ದೆ ವಿವಾದದ ಪರಿಣಾಮವಾಗಿ ರಾಷ್ಟ್ರೀಯ ಸಲಹಾ ಸಮಿತಿ ಹಾಗೂ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪ್ರತಿಷ್ಠಿತ ಜಲಿಯನ್ ವಾಲಾಬಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದರು.

2006: ಮಾನವನಿಗೆ ಬೇಕಾದ ಕೃತಕ ಅಂಗಾಂಶಗಳನ್ನು ಆತನ ಜೀವಕೋಶಗಳಿಂದಲೇ ಸೃಷ್ಟಿಸಿ ಜೋಡಿಸುವಲ್ಲಿಅಮೆರಿಕದ ಬೋಸ್ಟನ್ನಿನ ಮಕ್ಕಳ ಆಸ್ಪತ್ರೆಯ ವಿಜ್ಞಾನಿಗಳು ಯಶಸ್ವಿಯಾದರು. ರೋಗಕ್ಕೆ ತುತ್ತಾದ ಮೂತ್ರಕೋಶದ ಚೀಲವನ್ನು ತೆಗೆದುಹಾಕಿ ಅಲ್ಲಿ ರೋಗಿಯ ಅಂಗಾಂಶದಿಂದಲೇ ಸೃಷ್ಟಿಸಿದ ಮೂತ್ರಕೋಶ ಚೀಲವನ್ನು ಅಳವಡಿಸುವ ಮೂಲಕ ಅವರು ಈ ಸಾಧನೆ ಮಾಡಿದರು. ಈ ಪ್ರಯೋಗವು ಭವಿಷ್ಯದಲ್ಲಿ ರೋಗಿಗೆ ಕಿಡ್ನಿ, ರಕ್ತನಾಳ, ಹೃದಯ ಮುಂತಾದ ಅಂಗಾಂಶಗಳನ್ನು ಸೃಷ್ಟಿಸಿ ಅಳವಡಿಸಲು ಅನುಕೂಲವಾಗುವುದು. ಇದರಿಂದಾಗಿ ಬೇರೆಯವರಿಂದ ಪಡೆದ ಅಂಗಾಂಗಗಳನ್ನು ಅಳವಡಿಸುವಾಗ ಅದು ರೋಗಿಯ ಹೊಂದಾಣಿಕೆಯಾಗದೇ ಉಂಟಾಗುತ್ತಿದ್ದ ಸಮಸ್ಯೆ ನಿವಾರಣೆ ಆಗುವುದು.

2006: ವಿರೋಧ ಪಕ್ಷಗಳ ಸಭಾತ್ಯಾಗ, ಪ್ರತಿಭಟನೆಯ ಮಧ್ಯೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವಿದ್ಯಾರ್ಥಿಗಳಿಗೆ ಶೇಕಡಾ 50 ಮೀಸಲಾತಿ ಕಲ್ಪಿಸುವ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಮಸೂದೆಯನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿತು.

1975: ಚೀನೀ ಧುರೀಣ ಚಿಯಾಂಗ್ ಕೈ-ಷೇಕ್ 87ನೇ ವಯಸ್ಸಿನಲ್ಲಿ ಮೃತರಾದರು.

1958: ಕಲಾವಿದ ಶಿವಾನಂದಯ್ಯ ಸಿ. ಜನನ.

1957: ಭಾರತದ ಪ್ರಪ್ರಥಮ ಕಮ್ಯೂನಿಸ್ಟ್ ಪ್ರಾಂತೀಯ ಸರ್ಕಾರವು ಕೇರಳದ ತಿರುವನಂತಪುರದಲ್ಲಿ ಈದಿನ ಮಧ್ಯಾಹ್ನ 12.30ಕ್ಕೆ ಅಧಿಕಾರಕ್ಕೆ ಏರಿತು. ಮುಖ್ಯಮಂತ್ರಿ ಇ.ಎಂ. ಶಂಕರನ್ ನಂಬೂದಿರಿಪಾಡ್ ಮತ್ತು ನೂತನ ಸಂಪುಟದ ಇತರ ಸಚಿವರು ರಾಜ್ಯಪಾಲ ಡಾ. ಬಿ. ರಾಮಕೃಷ್ಣ ರಾಯರ ಸಮ್ಮುಖದಲ್ಲಿ ಅಧಿಕಾರ ಪಾಲನೆಯ ಪ್ರಮಾಣ ವಚನ ಸ್ವೀಕರಿಸಿದರು.

1949: ಬಾಲಕರ ಸ್ಕೌಟ್ಸ್ ಮತ್ತು ಬಾಲಕಿಯರ ಗೈಡ್ಸ್ ಗಳನ್ನು ಒಂದುಗೂಡಿಸಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾಪಿಸಲಾಯಿತು.

1940: ಕಲಾವಿದ ಹನುಮಯ್ಯ ದೊ.ತಿ. ಜನನ.

1938: ಕಲಾವಿದ ತುಕಾರಾಂ ಸಾ ವಿಠಲ್ ಸಾ ಕಬಾಡಿ ಜನನ.

1919: ಸಿಂಧಿಯಾ ಸ್ಟೀಮ್ ನೆವಿಗೇಷನ್ ಕಂಪೆನಿಯ `ಲಿಬರ್ಟಿ' ನೌಕೆ ತನ್ನ ಚೊಚ್ಚಲ ಯಾನ ಆರಂಭಿಸುವುದರೊಂದಿಗೆ ಭಾರತದ ಆಧುನಿಕ ನೌಕಾಯಾನ ಆರಂಭಗೊಂಡಿತು. 1964ರಿಂದ ಈ ದಿನವನ್ನು `ರಾಷ್ಟ್ರೀಯ ನೌಕಾಯಾನ ದಿನ'ವಾಗಿ ಆಚರಿಸಲಾಗುತ್ತಿದೆ.

1917: ರಂಗಭೂಮಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು `ರೇಡಿಯೋಕಾರ' ಎಂದೇ ಖ್ಯಾತರಾದ ಜಿ.ವಿ. ಹಿರೇಮಠ ಅವರು ಗದಗ ತಾಲ್ಲೂಕಿನ ಡಂಬಳದಲ್ಲಿ ಜನಿಸಿದರು.

1908: ಬಾಬು ಜಗಜೀವನರಾಮ್ (1908-1986) ಹುಟ್ಟಿದ ದಿನ. ಇವರು ಉಪಪ್ರಧಾನಿ ಸ್ಥಾನವೂ ಸೇರಿದಂತೆ ಭಾರತದ ರಾಜಕೀಯದಲ್ಲಿ ದೀರ್ಘ ಕಾಲ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಪರಿಶಿಷ್ಟ ನಾಯಕ.

1827: ಬ್ರಿಟಿಷ್ ಸರ್ಜನ್ ಹಾಗೂ ವೈದ್ಯಕೀಯ ವಿಜ್ಞಾನಿ ಸರ್ ಜೋಸೆಫ್ ಲಿಸ್ಟರ್ (1827-1912) ಜನ್ಮದಿನ. ಈತ ನಂಜು ನಿರೋಧಕ (ಆಂಟಿಸೆಪ್ಟಿಕ್) ಔಷಧಿಯನ್ನು ಕಂಡು ಹಿಡಿದ.

1649: ಎಲಿಹು ಯಾಲೆ (1649-1721) ಹುಟ್ಟಿದ ದಿನ. ಇಂಗ್ಲಿಷ್ ವರ್ತಕ ಹಾಗೂ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಯಾಗಿದ್ದ ಈತ ಮದ್ರಾಸಿನಲ್ಲಿ ಫೋರ್ಟ್ ಸೇಂಟ್ ಜಾರ್ಜಿನ (ಈಗಿನ ಚೆನ್ನೈ) ಗವರ್ನರ್ ಆಗಿದ್ದ. ಈತನ ನೆರವಿನಿಂದ ಯಾಲೆ ಕಾಲೇಜು ನಿರ್ಮಾಣಗೊಂಡಿತು. ಮುಂದೆ ಈ ಕಾಲೇಜು ಯಾಲೆ ವಿಶ್ವವಿದ್ಯಾಲಯವಾಯಿತು.

No comments:

Post a Comment