ಜಮ್ಮು
ವರದಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಹೆಲಿಕಾಪ್ಟರ್ ಒಂದು ಗಡಿ ನಿಯಂತ್ರಣ ರೇಖೆಯಲ್ಲಿ ವಾಯು ಪ್ರದೇಶವನ್ನು ಉಲ್ಲಂಘಿಸಿ ಕೆಲ ಕಾಲ ಹಾರಾಟ ನಡೆಸಿದ ಘಟನೆ ಭಾನುವಾರ ಮಧ್ಯಾಹ್ನ ಘಟಿಸಿದೆ.
ಬಿಳಿ ಬಣ್ಣದ ಪಾಕಿಸ್ತಾನಿ ಹೆಲಿಕಾಪ್ಟರ್ ಮಧ್ಯಾಹ್ನ ೧೨.೧೩ರ ವೇಳೆಯಲ್ಲಿ ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿ ಸ್ವಲ್ಪ ಹೊತ್ತು ಹಾರಾಟ ನಡೆಸಿತು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೆಂದರ್ ಆನಂದ್ ಹೇಳಿದರು.
ಅದು ನಾಗರಿಕ ಹೆಲಿಕಾಪ್ಟರ್ ಆಗಿರುವ ಸಾಧ್ಯತೆ ಇದೆ ಎಂದು ಸೇನಾ ಅಧಿಕಾರಿ ನುಡಿದರು.
ಭಾರತ ಗಡಿಯ ಮುಂಚೂಣಿ ಪ್ರದೇಶದ ಏರ್ ಸೆಂಟ್ರಿಗಳು ಸಣ್ಣ ಶಸ್ತ್ರಗಳಿಂದ ಹೆಲಿಕಾಪ್ಟರಿನತ್ತ ಗುಂಡು ಹಾರಿಸಿದರು. ಪೈಲಟ್ ಗೆ ವಾಯುಪ್ರದೇಶದ ಉಲ್ಲಂಘನೆ ಆಗಿರುವ ಬಗ್ಗೆ ಎಚ್ಚರಿಸಿ ಹಿಂದಕ್ಕೆ ಹೋಗುವಂತೆ ಒತ್ತಡ ಹಾಕುವ ಸಲುವಾಗಿ ಹೆಲಿಕಾಪ್ಟರಿನತ್ತ ಗುಂಡು ಹಾರಿಸಲಾಯಿತು ಎಂದು ಅವರು ನುಡಿದರು.
ಜಮ್ಮು ಮತ್ತು ಕಾಶ್ಮೀರದ ಕೃಷ್ಣಾ ಘಾಟಿ ವಿಭಾಗದಲ್ಲಿ ಗುಲ್ಪುರ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಮಧ್ಯಾಹ್ನ ೧೨.೧೩ರ ವೇಳೆಗೆ ಹೆಲಿಕಾಪ್ಟರ್ ವಾಯು ಗಡಿಯನ್ನು ಉಲ್ಲಂಘಿಸಿ ಭಾರತೀಯ ಪ್ರದೇಶದಲ್ಲಿ ಹಾರಾಟ ನಡೆಸಿತು ಎಂದು ರಕ್ಷಣಾ ಮೂಲಗಳು ಹೇಳಿದವು. ಪ್ರತಿರೋಧದ ಬಳಿಕ ಹೆಲಿಕಾಪ್ಟರ್ ಪಾಕಿಸ್ತಾನಿ ವಾಯುಪ್ರದೇಶಕ್ಕೆ ಹಿಂತಿರುಗಿತು.
ಭಾರತೀಯ ವಾಯುಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಿದ ೩೦ ಸೆಕೆಂಡ್ ಗಳ ವಿಡಿಯೋವನ್ನು ಎಎನ್ ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿತು.
ನೆರೆ ರಾಷ್ಟ್ರಗಳ ಬಾಂಧವ್ಯ ಕದಡಿರುವ ವೇಳೆಯಲ್ಲಿ ಈ ಘಟನೆ ಘಟಿಸಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಶನಿವಾರವಷ್ಟೇ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಅದು ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುವುದರ ಜೊತೆಗೆ ಅವರನ್ನು ವೈಭವೀಕರಿಸುತ್ತಿದೆ ಎಂದು ಆಪಾದಿಸಿದ್ದರು. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕದೇ ಇದ್ದಲ್ಲಿ ಅದು ಮಹಾಜ್ವಾಲೆಯಾದೀತು ಎಂದೂ ಅವರು ಎಚ್ಚರಿಸಿದ್ದರು.
ಪಾಕ್ ಹೆಲಿಕಾಪ್ಟರ್ ವಾಯುಪ್ರದೇಶ ಉಲ್ಲಂಘಿಸುವುದಕ್ಕೆ ಕೇವಲ ಒಂದು ಗಂಟೆ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ’ಮನ್ ಕಿ ಬಾತ್’ ಮಾಸಿಕ ಬಾನುಲಿ ಕಾರ್ಯಕ್ರಮದಲ್ಲಿ ಶಾಂತಿ ಬಗೆಗಿನ ಭಾರತದ ಬದ್ಧತೆಯನ್ನು ಒತ್ತಿ ಹೇಳಿದ್ದರು. ಇದೇ ವೇಳೆಗೆ ಶಾಂತಿಗಾಗಿ ನಮ್ಮ ರಾಷ್ಟ್ರದ ಆತ್ಮಗೌರವ ಮತ್ತು ಸಮಗ್ರತೆಯನ್ನು ಬಲಿಗೊಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.
’ನಮ್ಮ ರಾಷ್ಟ್ರದ ಪ್ರಗತಿ ಮತ್ತು ಶಾಂತಿಯ ಪರಿಸರವನ್ನು ಹಾಳುಗೆಡವಲು ಯಾರೇ ಪ್ರಯತ್ನ ಮಾಡಿದರೂ ಅದಕ್ಕೆ ನಮ್ಮ ಯೋಧರು ತಕ್ಕ ಉತ್ತರ ನೀಡಬೇಕು ಎಂದು ಈಗ ನಿರ್ಧರಿಸಲಾಗಿದೆ’ ಎಂದು ಮೋದಿ ಸಂದೇಶ ನೀಡಿದ್ದರು. ಮೋದಿ ಅವರ ಎಚ್ಚರಿಕೆ ಪಾಕಿಸ್ತಾನವನ್ನು ಗುರಿಇಟ್ಟೇ ನೀಡಿದ ಎಚ್ಚರಿಕೆ ಎಂದೇ ವ್ಯಾಖ್ಯಾನಿಸಲಾಗಿದೆ.
ಈ ವರ್ಷ ಫೆಬ್ರುವರಿಯಲ್ಲಿ ಪಾಕಿಸ್ತಾನಿ ಸೇನಾ ಹೆಲಿಕಾಪ್ಟರ್ ಒಂದು ಪೂಂಚ್ ಜಿಲ್ಲೆಯ ಖಾರಿ ಕರ್ಮಾರ ಪ್ರದೇಶದಲ್ಲಿ ಅಪಾಯಕಾರಿ ಮಟ್ಟದಲ್ಲಿ ಹಾರಾಟ ನಡೆಸಿತ್ತು. ಜನವರಿ ೧೮ರಂದು ಭಾರೀ ಶಸ್ತ್ರಾಸ್ತ್ರ ಹೊಂದಿದ್ದ ಭಯೋತ್ಪಾದಕನನ್ನು ಕೊಲ್ಲುವ ಮೂಲಕ ಪಾಕಿಸ್ತಾನದ ಗಡಿ ಕಾರ್ಯಾಚರಣಾ ತಂಡದ (ಬಿಎಟ್) ದಾಳಿಯನ್ನು ವಿಫಲಗೊಳಿಸಿತ್ತು.
ಪಾಕಿಸ್ತಾನಿ ಹೆಲಿಕಾಪ್ಟರ್ ಗಡಿ ನಿಯಂತ್ರಣ ರೇಖೆಯನ್ನು ದಾಟಿ ೩೦೦ ಮೀಟರುಗಳಷ್ಟು ಭಾರತೀಯ ವಾಯುಪ್ರದೇಶದಲ್ಲಿ ನುಗ್ಗಿ ಬಂದಿತ್ತು ಎಂದು ಗುಪ್ತಚರ ಅಧಿಕಾರಿಯೊಬ್ಬರು ಆಗ ಹೇಳಿದ್ದರು. ಇದು ಅಂತಾರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಅವರು ಹೇಳಿದ್ದರು.
ಭಾನುವಾರ ಬೆಳಗ್ಗೆ ಕುಪ್ವಾರ ಜಿಲ್ಲೆಯ ತಂಗ್ ಧರ್ ವಿಭಾಗದಲ್ಲಿ ಪಾಕಿಸ್ತಾನಿ ಸೇನೆಯ ಬೆಂಬಲದೊಂದಿಗೆ ನಡೆದ ನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಕದನ ವಿರಾಮ ಉಲ್ಲಂಘನೆ ಮತ್ತು ನುಸುಳುವಿಕೆ ಯತ್ನಕ್ಕೆ ಭಾರತ ಪ್ರಬಲ ಉತ್ತರ ನೀಡಿತ್ತು.
ಭಾರತ-ಪಾಕಿಸ್ತಾನ ನಡುವಣ ಒಪ್ಪಂದದ ಪ್ರಕಾರ ಉಭಯ ದೇಶಗಳ ವಾಯುಪ್ರದೇಶವನ್ನು ಉಲ್ಲಂಘಿಸಿ ಹೆಲಿಕಾಪ್ಟರ್, ವಿಮಾನಗಳು ಹಾರಾಟ ನಡೆಸುವಂತಿಲ್ಲ.
No comments:
Post a Comment