ಇಂದಿನ ಇತಿಹಾಸ History Today ಸೆಪ್ಟೆಂಬರ್ 10
2018: ನವದೆಹಲಿ: ಇಂಧನ ಬೆಲೆಗಳು ನಿರಂತರ
ಏರುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ನೀಡಿದ ’ಭಾರತ ಬಂದ್’ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು,
ಕಾಂಗ್ರೆಸ್ ಪಕ್ಷವು ಬಂದ್ ಯಶಸ್ವಿಯಾಗಿದೆ ಎಂದು ಪ್ರತಿಪಾದಿಸಿದರೆ, ಬಿಜೆಪಿಯು ಬಂದ್‌ಗೆ ಜನರಿಂದ
ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪ್ರತಿಪಾದಿಸಿತು. ಬಂದ್ ವೇಳೆಯಲ್ಲಿ ಹಲವಡೆಗಳಲ್ಲಿ ಹಿಂಸಾಚಾರ ಸಂಭವಿಸಿದವು.
ಜನರ ಬೆಂಬಲ ಸಿಗದ ಕಾರಣವೇ ವಿಪಕ್ಷಗಳು ಹಿಂಸಾಚಾರಕ್ಕೆ
ಇಳಿದವು ಎಂದು ಬಿಜೆಪಿ ಆಪಾದಿಸಿತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಭಾರತ ಬಂದ್ ಯಶಸ್ವಿಯಾಗಿದೆ
ಎಂಬುದಾಗಿ ಸಂಜೆ ಪ್ರತಿಪಾದಿಸಿದ ಕಾಂಗ್ರೆಸ್ ಪಕ್ಷವು
ಪೆಟ್ರೀಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಮತ್ತು ಕಸ್ಟಮ್ಸ್ ಸುಂಕವನ್ನು ತತ್ ಕ್ಷಣ ಕಡಿತಗೊಳಿಸಬೇಕು
ಎಂದು ನರೇಂದ್ರ ಮೋದಿ ಸರ್ಕಾರವನ್ನು ಒತ್ತಾಯಿಸಿತು. ಕಾಂಗ್ರೆಸ್ ಪಕ್ಷದ ವಕ್ತಾರ ರಣ್ ದೀಪ್ ಸುರ್ಜೆವಾಲ
ಅವರು ಮಾಧ್ಯಮಗಳ ಜೊತೆ ಮಾತನಾಡಿ ’ಇಂಧನ ಬೆಲೆಗಳು ಅತಿಯಾಗಿ ಏರಿರುವುದಕ್ಕೆ ಕೇಂದ್ರ ಸರ್ಕಾರವು ಜಾಗತಿಕ
ನೆಪಗಳ ಹಿಂದೆ ಅವಿತುಕೊಳ್ಳುವಂತಿಲ್ಲ. ಏಕೆಂದರೆ ಇಂಧನ ಬೆಲೆ ಅತಿಯಾಗಿ ಏರಿರುವುದು ಕಳೆದ ಕೆಲವು ವರ್ಷಗಳಲ್ಲಿ
ಸರ್ಕಾರ ಮಾಡಿರುವ ದೊಡ್ಡ ಪ್ರಮಾಣದ ತೆರಿಗೆ ಹೆಚ್ಚಳದಿಂದಾಗಿ’ ಎಂದು ಹೇಳಿದರು. ರಾಷ್ಟ್ರವ್ಯಾಪಿ
ಮುಷ್ಕರದಲ್ಲಿ ಸಹಭಾಗಿಗಳಾದದ್ದಕ್ಕಾಗಿ ೨೦ಕ್ಕೂ ಹೆಚ್ಚು ವಿರೋಧ ಪಕ್ಷಗಳಿಗೆ ಧನ್ಯವಾದಗಳನ್ನೂ ಅವರು
ಸಲ್ಲಿಸಿದರು. ಇದಕ್ಕೆ ಮುನ್ನ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಬಂದ್ ಪರಿಣಾಮವಾಗಿ
ಬಿಹಾರದಲ್ಲಿ ಪುಟ್ಟ ಬಾಲಕಿಯೊಬ್ಬಳು ಸಾವನ್ನು ಅಪ್ಪಿದ್ದಕ್ಕಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್
ಪಕ್ಷವನ್ನು ಪ್ರಶ್ನಿಸಿದ್ದರು. ಎರಡು ವರ್ಷದ ಬಾಲಕಿ ಜೆಹಾನಾಬಾದಿಗೆ ನಾಗರಿಕ ಆಸ್ಪತ್ರೆಗೆ ಕರೆದೊಯ್ಯವಾಗ
ಬಂದ್ ಬೆಂಬಲಿಗರು ರಸ್ತೆ ತಡೆ ನಡೆಸಿದ್ದರಿಂದ ಮಾರ್ಗ ಮಧ್ಯೆ ಸಿಕ್ಕಿಹಾಕಿಕೊಂಡು ಮೃತಳಾಗಿದ್ದಳು.
ತಮ್ಮ ವಾಹನವನ್ನು ಮುಂದಕ್ಕೆ ಹೋಗಲು ಬಿಟ್ಟಿದ್ದರೆ ತಮ್ಮ ಮಗುವಿನ ಪ್ರಾಣ ಉಳಿಯುತ್ತಿತ್ತು ಎಂದು ಬಾಲಕಿಯ
ಹೆತ್ತವರು ಹೇಳಿದ್ದರು. ಬಾಲಕಿ ಸಾವಿನ ಪ್ರಶ್ನೆಯನ್ನು ಹಿಡಿದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ
ತೆಗೆದುಕೊಂಡ ರವಿ ಶಂಕರ ಪ್ರಸಾದ್ ’ರಾಷ್ಟ್ರದಲ್ಲಿ ಭೀತಿಯ ಪರಿಸರವನ್ನು ಸೃಷ್ಟಿಸಲಾಗುತ್ತಿದೆ. ಮಗುವಿನ
ಸಾವಿನ ಹೊಣೆಯನ್ನು ಯಾರು ತೆಗೆದುಕೊಳ್ಳುತ್ತಾರೆ? ಕಾಂಗ್ರೆಸ್ ಉತ್ತರಿಸಬೇಕು’ ಎಂದು ಆಗ್ರಹಿಸಿದ್ದರು. ಇಂಧನ ಬೆಲೆ ಏರಿಕೆ
ಮತ್ತು ರೂಪಾ ಮೌಲ್ಯ ಕುಸಿತವನ್ನು ಪ್ರತಿಭಟಿಸಲು ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಈದಿನದ ಭಾರತ್ ಬಂದ್
ಆಚರಿಸಲು ಪ್ರತ್ಯೇಕವಾಗಿಯೇ ಕರೆ ಕೊಟ್ಟಿದ್ದವು. ಜನತಾದಳ (ಜಾತ್ಯತೀತ- ಜೆಡಿ-ಎಸ್), ಸಮಾಜವಾದಿ ಪಕ್ಷ
(ಎಸ್ಪಿ), ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ರಾಷ್ಟ್ರೀಯ ಜನತಾದಳ (ಆರ್ ಜೆಡಿ), ಮಹಾರಾಷ್ಟ್ರ
ನವ ನಿರ್ಮಾಣ ಸೇನಾ (ಎಂಎನ್ ಎಸ್) ರಾಷ್ಟ್ರವ್ಯಾಪಿ ಹರತಾಳಕ್ಕೆ ಬೆಂಬಲ ನೀಡಿದ್ದವು. ಆಮ್ ಆದ್ಮಿ ಪಕ್ಷ
(ಆಪ್), ಬಿಜು ಜನತಾದಳ (ಬಿಜೆಡಿ) , ಶಿವಸೇನಾ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರತಿಭಟನೆಯಿಂದ
ದೂರ ಉಳಿಯಲು ನಿರ್ಧರಿಸಿದ್ದವು. ಏರಿದ ಇಂಧನ ಬೆಲೆ:
ರೂಪಾಯಿ ಮೌಲ್ಯ ಕುಸಿತದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವ
ತೈಲ ಬೆಲೆಗಳು ಮುಂಬರುವ ದಿನಗಳಲ್ಲಿ ಒತ್ತಡ ಕಡಿಮೆಯಾಗುತ್ತಿದ್ದಂತೆಯೇ ಇಳಿಯುವುದು ಎಂದು ಸರ್ಕಾರ
ನಿರೀಕ್ಷಿಸಿದೆ. ವ್ಯಾಟ್ ದರ ಕಡಿಮೆ ಇರುವ ದೆಹಲಿಯಲ್ಲಿ ಮೆಟ್ರೋ ನಗರಗಳ ಪೈಕಿ ಪೆಟ್ರೋಲ್ ದರ ಇತರ
ಮೆಟ್ರೋಗಳಿಗಿಂತ ಕಡಿಮೆ ಇದ್ದರೂ, ಈದಿನ ಸಾರ್ವಕಾಲಿಕ
ದಾಖಲೆಯನ್ನು ಮುರಿದು ಲೀಟರಿಗೆ ೮೦.೭೩ ರೂಪಾಯಿಗಳಿಗೆ ಏರಿತು. ಇದೇ ವೇಳೆಗೆ ಡೀಸೆಲ್ ದರ ಲೀಟರಿಗೆ
೭೨.೮೩ ರೂಪಾಯಿಗೆ ತಲುಪುವ ಮೂಲಕ ಹೊಸ ದಾಖಲೆ ಸೃಷ್ಟಿಯಾಯಿತು.
2016: ರಿಯೊ ಡಿ ಜನೈರೋ: ರಿಯೊದಲ್ಲಿ ನಡೆದ ಅಂಗವಿಕಲರ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ವಿಭಾಗದ ಟಿ42 ಹೈಜಂಪ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಒಲಿಯಿತು. ಕ್ರೀಡಾಕೂಟ ಆರಂಭವಾದ ಎರಡನೇ ದಿನ ಹೈಜಂಪ್ ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು ಅವರು ಚಿನ್ನದ ಪದಕವನ್ನು ಗೆದ್ದಿದ್ದು, ವರುಣ್ ಭಾಟಿ ಕಂಚಿನ ಪದಕ ಬಗಲಿಗೆ ಹಾಕಿಕೊಂಡರು. 1.89 ಮೀಟರ್ ಜಿಗಿದು ತಂಗವೇಲು ಪ್ರಥಮ ಸ್ಥಾನ ಪಡೆದಿದ್ದು, ಭಾಟಿ ಅವರು 1.86 ಮೀಟರ್ ಎತ್ತರಕ್ಕೆ ಜಿಗಿದರು.: ಪ್ಯಾರಾಲಿಂಪಿಕ್ಸ್ ಎತ್ತರ ಜಿಗಿತದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಇದಾಗಿದ್ದು, ಈ ಮೊದಲು 1992ರ ಪ್ಯಾರಾಲಿಂಪಿಕ್ಸ್ನಲ್ಲಿ ಮುರಳಿಕಾಂತ್ ಪಾರ್ಕರ್ ಈಜಿನಲ್ಲಿಯೂ, 2004ರ ಅಥೆನ್ಸ್ ಪ್ಯಾರಾಲಂಪಿಕ್ಸ್ನ ಜಾವೆಲಿನ್ ಎಸೆತದಲ್ಲಿ ದೇವೇಂದ್ರ ಜಾಜಾರಿಯಾ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.
2018: ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ, ೨೦೧೧-೧೨ರ
ತಮ್ಮ ತೆರಿಗೆ ಅಸೆಸ್ ಮೆಂಟನ್ನು ಮರುಪರಿಶೀಲನೆ ಮಾಡುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕರಾದ ಸೋನಿಯಾ
ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ವಜಾ
ಮಾಡಿತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಅವರ ಪಕ್ಷ ಸಹೋದ್ಯೋಗಿ ಆಸ್ಕರ್ ಫರ್ನಾಂಡಿಸ್ ಅವರು
ತೆರಿಗೆ ಮರು ಅಸೆಸ್ ಮೆಂಟ್ ಕೋರಿ ಮಾರ್ಚ್ ತಿಂಗಳಲ್ಲಿ ನೀಡಲಾದ ಆದಾಯ ತೆರಿಗೆ ಇಲಾಖೆಯ ನೋಟಿಸನ್ನು
ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆಯಲ್ಲಿ ಪೀಠ ಈ ಆದೇಶವನ್ನು ಮಾಡಿತು. ೨೦೧೧-೧೨ರ ತಮ್ಮ
ಆದಾಯ ತೆರಿಗೆ ವಿವರಗಳಲ್ಲಿ ಸದರಿ ಕಾಂಗ್ರೆಸ್ ನಾಯಕರು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ (ವೈ
ಐ) ಮೂಲಕ ಬಂದ ಆದಾಯವನ್ನು ಬಹಿರಂಗ ಪಡಿಸಿಲ್ಲ ಎಂದು ಆಪಾದಿಸಲಾಗಿತ್ತು. ನ್ಯಾಯಮೂರ್ತಿಗಳಾದ ಎಸ್.
ರವೀಂದ್ರ ಭಟ್ ಮತ್ತು ಎ.ಕೆ. ಚಾವ್ಲಾ ಅವರನ್ನು ಒಳಗೊಂಡ ಪೀಠವು ’ರಿಟ್ ಅರ್ಜಿಗಳು ವಿಫಲಗೊಂಡಿವೆ’ ಎಂದು ಹೇಳಿದರು. ಈ ಮಧ್ಯೆ, ’ಕಾಂಗ್ರೆಸ್ ಅನಾವರಣಗೊಂಡಿದೆ’ ಎಂಬುದಾಗಿ ಹೇಳುವ ಮೂಲಕ ಬಿಜೆಪಿಯು ಕಾಂಗ್ರೆಸ್
ಮೇಲೆ ದಾಳಿ ನಡೆಸಿತು. ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು
ಗುರಿಮಾಡಿ ವಾಗ್ದಾಳಿ ನಡೆಸಿದ್ದು, ಪ್ರಕರಣದಲ್ಲಿ ಅವರೂ ಸಹಭಾಗಿಯಾಗಿದ್ದಾರೆ ಎಂದು ಆಪಾದಿಸಿದರು.
ಕಾಂಗ್ರೆಸ್ ಪಕ್ಷವು ತನ್ನ ಆತ್ಮಸಾಕ್ಷಿಯನ್ನೇ ಮಾರಿಕೊಂಡಿದೆ ಎಂದು ಅವರು ಟೀಕಿಸಿದರು. ಆರೋಪಿಗಳು
ತೆರಿಗೆ ತಪ್ಪಿಸುವ ಸಲುವಾಗಿ ಮಾಹಿತಿಯನ್ನು ಬಚ್ಚಿಟ್ಟರು ಎಂದು ಆದಾಯ ತೆರಿಗೆ ಇಲಾಖೆ ನ್ಯಾಯಾಲಯಕ್ಕೆ
ತಿಳಿಸಿತು. ಯಂಗ್ ಇಂಡಿಯನ್ ಸಂಸ್ಥೆಯಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಪ್ರಮುಖ ಪಾಲುದಾರರಾಗಿದ್ದು,
ಅದು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ನ್ಯಾಷನಲ್
ಹೆರಾಲ್ಡ್ ವೃತ್ತ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಪ್ರಕಟಿಸುತ್ತಿತ್ತು. ಇದಕ್ಕೆ
ಮುನ್ನ ೨೦೧೧-೧೨ರ ಸಾಲಿಗೆ ತೆರಿಗೆ ಅಸೆಸ್ ಮೆಂಟಿಗಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ೧೫೬ರ ಅಡಿಯಲ್ಲಿ
ತೆರಿಗೆ ಮತ್ತು ಬಡ್ಡಿ ವಸೂಲಿಗಾಗಿ ೨೦೧೭ರ ಡಿಸೆಂಬರ್ ೨೭ರಂದು ಜಾರಿ ಮಾಡಿದ ನೋಟಿಸ್ ಪ್ರಕಾರ ೨೪೯.೧೫
ಕೋಟಿ ರೂಪಾಯಿ ಮೊತ್ತದ ತೆರಿಗೆ ಮತ್ತು ಬಡ್ಡಿ ವಸೂಲು ಮಾಡದಂತೆ ತಡೆಯಾಜ್ಞೆ ನೀಡಬೇಕು ಎಂದು ಯಂಗ್
ಇಂಡಿಯನ್ ನ್ಯಾಯಾಲಯಕ್ಕೆ ಮಾರ್ಚ್ ತಿಂಗಳಲ್ಲಿ ಮನವಿ ಮಾಡಿತ್ತು. ಕಂಪೆನಿಯು ತಾನು ದತ್ತಿ ಸಂಸ್ಥೆಯಾಗಿದ್ದು, ಯಾವುದೇ ಆದಾಯವನ್ನೂ
ಹೊಂದಿಲ್ಲ. ಆದಾಯ ತೆರಿಗೆ ಅಧಿಕಾರಿಗಳು ತಪ್ಪಾಗಿ ಲೆಕ್ಕಹಾಕಿ ೨೦೧೧-೧೨ರ ಸಾಲಿಗೆ ೨೪೯ ಕೋಟಿ ರೂಪಾಯಿಗಳ
ತೆರಿಗೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಕಂಪೆನಿ ನ್ಯಾಯಾಲಯಕ್ಕೆ ತಿಳಿಸಿತ್ತು. ಮಾರ್ಚ್
೧೯ರಂದು ತನ್ನ ವಿರುದ್ಧದ ೨೪೯.೧೫ ಕೋಟಿ ರೂಪಾಯಿಗಳ ಆದಾಯ ತೆರಿಗೆ ಖಟ್ಲೆಗೆ ಸಂಬಂಧಿಸಿದಂತೆ ೧೦ ಕೋಟಿ
ರೂಪಾಯಿಗಳ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ಯಂಗ್ ಇಂಡಿಯನ್ ಗೆ ನಿರ್ದೇಶಿಸಿತ್ತು. ಎಜೆಎಲ್ ಸ್ವಾಧೀನದಲ್ಲಿನ ವಂಚನೆ ಕುರಿತು ಭಾರತೀಯ ಜನತಾ ಪಕ್ಷದ
(ಬಿಜೆಪಿ) ನಾಯಕ ಸುಬ್ರಮಣಿಯನ್ ಸ್ವಾಮಿ ದೂರು ದಾಖಲಿಸಿದ್ದರು. ೫೦ ಲಕ್ಷ ರೂಪಾಯಿಗಳನ್ನು ಪಾವತಿ ಮಾಡುವ
ಮೂಲಕ ಎಜೆಎಲ್ ಕಾಂಗ್ರೆಸ್ಸಿಗೆ ಪಾವತಿ ಮಾಡಬೇಕಾಗಿದ್ದ ೯೦.೨೫ ಕೋಟಿ ರೂಪಾಯಿಗಳನ್ನು ಪಡೆಯುವ ಅಧಿಕಾರವನ್ನು
ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಪಡೆದುಕೊಂಡಿದ್ದು, ತನ್ಮೂಲಕ ವಂಚನೆ ಹಾಗೂ ಹಣ ದುರುಪಯೋಗಕ್ಕೆ
ಸಂಚು ಹೆಣೆಯಲಾಗಿತ್ತು ಎಂದು ಸ್ವಾಮಿ ಆಪಾದಿಸಿದ್ದರು. ಮೋತಿಲಾಲ್
ವೋರಾ, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಯಂಗ್ ಇಂಡಿಯನ್ ಪ್ರಕರಣದ ಇತರ ಆರೋಪಿಗಳು. ಕೆಲವು
ವಿಷಯಗಳನ್ನು ವರದಿ ಮಾಡದಂತೆ ಮಾಧ್ಯಮಗಳ ಮೇಲೆ ನಿಯಂತ್ರಣಗಳನ್ನು ವಿಧಿಸಬೇಕು ಎಂಬುದಾಗಿ ಸೋನಿಯಾ ಹಾಗೂ
ರಾಹುಲ್ ಗಾಂಧಿ ಅವರು ಮಾಡಿದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿತು.
2018: ನವದೆಹಲಿ: ’ಪ್ರಧಾನಿ ನರೇಂದ್ರ
ಮೋದಿ ಅವರು ಜ್ವಲಂತ ಸಮಸ್ಯೆಗಳ ಬಗ್ಗೆ ಗಾಢ ಮೌನ ತಳೆದಿದ್ದು, ಸ್ವಚ್ಛ ಭಾರತದ ಬಗ್ಗೆ ಮಾತನಾಡುತ್ತಾ
ಕಾಲ ಕಳೆಯುತ್ತಿದ್ದಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ
ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷವು ಭಾರತ
ಬಂದ್ ಅಂಗವಾಗಿ ರಾಮಲೀಲಾ ಮೈದಾನದಲ್ಲಿ ಸಂಘಟಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕಾಂಗ್ರೆಸ್
ಅಧ್ಯಕ್ಷರು ’ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಅಡಿಯಲ್ಲಿ ರಾಷ್ಟ್ರಾದ್ಯಂತ ದ್ವೇಷವನ್ನು ಹರಡಲಾಗುತ್ತಿದೆ
ಮತ್ತು ರಾಷ್ಟ್ರವನ್ನು ವಿಭಜಿಸಲಾಗುತ್ತಿದೆ’ ಎಂದು ಟೀಕಿಸಿದರು. ಇಂಧನ
ಬೆಲೆ ಏರಿಕೆ ಮತ್ತು ರಫೇಲ್ ಯುದ್ಧ ವಿಮಾನ ವ್ಯವಹಾರ ಬಗ್ಗೆ ಪ್ರಧಾನಿ ಮೋದಿ ಅವರು ತಾಳಿರುವ ಮೌನವನ್ನು
ಪ್ರಶ್ನಿಸಿದ ರಾಹುಲ್, ’ಅವರು ಕೇವಲ ಸ್ವಚ್ಛ ಭಾರತ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಹೇಳಿದರು. ‘೭೦ ವರ್ಷಗಳ ಆಳ್ವಿಕೆಯಲ್ಲಿ ಆಗದೇ ಇದ್ದದ್ದು ಕಳೆದ ನಾಲ್ಕು
ವರ್ಷಗಳಲ್ಲಿ ಆಗಿದೆ ಎಂಬುದಾಗಿ ಪ್ರಧಾನಿ ಆಗಾಗ ಹೇಳುತ್ತಿರುವುದು ನಿಜವೇ ಆಗಿದೆ. ದ್ವೇಷವನ್ನು ಹರಡಲಾಗುತ್ತಿದೆ.
ಒಬ್ಬ ಭಾರತೀಯ ಇನ್ನೊಬ್ಬನೊಂದಿಗೆ ಜಗಳಾಡುತ್ತಿದ್ದಾನೆ. ರಾಷ್ಟ್ರವನ್ನು ವಿಭಜಿಸಲಾಗುತ್ತಿದೆ’ ಎಂದು ರಾಹುಲ್ ನುಡಿದರು. ಇದಕ್ಕೆ
ಮುನ್ನ ಕಾಂಗ್ರೆಸ್ ಅಧ್ಯಕ್ಷರು ಇಂಧನ ಬೆಲೆ ಏರಿಕೆ ವಿರುದ್ಧ ಸಂಘಟಿಸಲಾದ ರಾಷ್ಟ್ರವ್ಯಾಪಿ ಪ್ರತಿಭಟನಾ
ಬಂದ್‌ಗೆ ಚಾಲನೆ ನೀಡಿ ರಾಜಭವನದಿಂದ ಝಕೀರ್ ಹುಸೇನ್ ಕಾಲೇಜಿನವರೆಗೆ ೧.೮ ಕಿಮೀ ಪಾದಯಾತ್ರೆ ನಡೆಸಿದರು.
ರಾಹುಲ್ ಗಾಂಧಿಯವರು ಮೊದಲು ರಾಜಘಾಟ್ ನಲ್ಲಿ ಮಹಾತ್ಮ
ಗಾಂಧಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೋಟ್, ಆನಂದ ಶರ್ಮ,
ಅಂಬಿಕಾ ಸೋನಿ, ಅಹ್ಮದ್ ಪಟೇಲ್, ರಣದೀಪ್ ಸುರ್ಜೆವಾಲ, ಅಭಿಷೇಕ್ ಮನು ಸಿಂಘ್ವಿ, ಶೈಲಜಾ ಕುಮಾರಿ,
ಮೀರಾ ಕುಮಾರ್, ಜೈರಾಮ್ ರಮೇಶ್, ಎನ್ ಸಿಪಿಯ ತಾರಿಖ್ ಅನ್ವರ್, ಎಲ್ ಜೆಡಿಯ ಶರದ್ ಯಾದವ್ ಮತ್ತು ಆರ್
ಜೆಡಿಯ ಮನೋಜ್ ಝಾ ಮತ್ತಿತರ ವಿಪಕ್ಷ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಕ್ಕೆ ಮುನ್ನ, ತಾವು ಕೈಲಾಸದ ಮಾನಸ ಸರೋವರದಿಂದ ತಂದಿದ್ದ ನೀರನ್ನು ಎಲ್ಲರಿಗೂ
ಅವರು ಹಂಚಿದರು. ಮಾನಸ ಸರೋವರ ಯಾತ್ರೆಯಿಂದ ಹಿಂತಿರುಗಿದ ಬಳಿಕ ರಾಹುಲ್ ಗಾಂಧಿ ಅವರು ಬಹಿರಂಗವಾಗಿ
ಕಾಣಿಸಿಕೊಂಡದ್ದು ಇದೇ ಪ್ರಥಮ. ಆಗಸ್ಟ್ ೩೧ರಂದು ಅವರು ಯಾತ್ರೆಗೆ ತೆರಳಿದ್ದರು. ಪ್ರತಿಭಟನಾ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಮೊದಲು ನಿರಾಕರಿಸಿದ್ದ
ದೆಹಲಿಯ ಆಡಳಿತಾರೂಢ ಆಪ್ ಕೂಡಾ ಬಳಿಕ ಪಕ್ಷದ ನಾಯಕ ಸಂಜಯ್ ಸಿಂಗ್ ಅವರನ್ನು ಪ್ರತಿಭಟನೆಗೆ ಕಳುಹಿಸಿಕೊಟ್ಟಿತ್ತು.
ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾರ್ವಕಾಲಿಕ ದಾಖಲೆ ಸ್ಥಾಪಿಸಿದ
ಬಳಿಕ ಅದರ ವಿರುದ್ಧ ಕಾಂಗ್ರೆಸ್ ಮತ್ತು ಎಡಪಕ್ಷಗಳು ’ಭಾರತ ಬಂದ್’ ಪ್ರತಿಭಟನೆಗೆ ಕರೆ ಕೊಟ್ಟಿದ್ದವು. ಪಾದಯಾತ್ರೆಯ
ಬಳಿಕ ಎಲ್ಲ ವಿರೋಧಿ ನಾಯಕರೂ ರಾಮಲೀಲಾ ಮೈದಾನದ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಸಮಾವೇಶಗೊಂಡರು.
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಲ್ಲಿ ಪ್ರತಿಭಟನಕಾರ
ಧುರೀಣರ ಜೊತೆ ಸೇರಿದರು. ಬಳಿಕ ೨೦೦ಕ್ಕೂ ಹೆಚ್ಚು ರಾಜಕೀಯ ನಾಯಕರು ಮತ್ತು ಬೆಂಬಲಿಗರು ರಾಮಲೀಲಾ ಮೈದಾನದಲ್ಲಿ
ಪ್ರತಿಭಟನಾ ಸಭೆ ನಡೆಸಿದರು. ಮನಮೋಹನ್ ಸಿಂಗ್ ಮತ್ತು ಇತರರು ಮಾತನಾಡಿ ಬೆಲೆ ಏರಿಕೆ ತಡೆಯುವಲ್ಲಿ
ವಿಫಲವಾದುದಕ್ಕಾಗಿ ಕೇಂದ್ರ ಸರ್ಕಾರವನ್ನು ಖಂಡಿಸಿದರು. ಯದ್ವಾತದ್ವ ಏರುತ್ತಿರುವ ಬೆಲೆಗಳು ಮತ್ತು
ಕುಸಿಯುತ್ತಿರುವ ರೂಪಾಯಿ ಮೌಲ್ಯವು ಮೋದಿ ಸರ್ಕಾರವು ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ
ಸೋತಿದೆ ಎಂಬುದನ್ನು ತೋರಿಸುತ್ತಿವೆ ಎಂದು ಕಾಂಗ್ರೆಸ್ ಪಕ್ಷವು ಇದಕ್ಕೆ ಮುನ್ನ ಟ್ವೀಟ್ ಮಾಡಿತ್ತು.
2018: ನವದೆಹಲಿ: ಅಯೋಧ್ಯೆಯ ಬಾಬರಿ
ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ೨೦೧೯ರ ಏಪ್ರಿಲ್ ತಿಂಗಳ ಗಡುವಿನ ಒಳಗಾಗಿ ಹೇಗೆ ಪೂರ್ಣಗೊಳಿಸಲು
ಉದ್ದೇಶಿಸಿದ್ದೀರಿ ಎಂಬುದಾಗಿ ವರದಿ ನೀಡುವಂತೆ ಹಿರಿಯ ಬಿಜೆಪಿ ನಾಯಕರಾದ ಎಲ್.ಕೆ. ಅಡ್ವಾಣಿ, ಎಂ.ಎಂ.
ಜೋಶಿ, ಉಮಾ ಭಾರತಿ ಮತ್ತಿತರರನ್ನು ಒಳಗೊಂಡಿರುವ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸೆಷನ್ಸ್ ನ್ಯಾಯಾಧೀಶರಿಗೆ
ಸುಪ್ರೀಂಕೋರ್ಟ್ ನಿರ್ದೇಶಿಸಿತು. ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಮತ್ತು ಇಂದು ಮಲ್ಹೋತ್ರ
ಅವರ ಪೀಠವು ವಿಚಾರಣಾ ನ್ಯಾಯಾಧೀಶ ಎಸ್.ಕೆ. ಯಾದವ್ ಅವರ ಅರ್ಜಿಯ ವಿಚಾರಣೆ ನಡೆಸಿ ಪ್ರತಿಕ್ರಿಯೆ ನೀಡುವಂತೆ
ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತು. ವಿಚಾರಣೆಯನ್ನು ಪೂರ್ಣಗೊಳಿಸುವಂತೆ ತಮಗೆ ಸುಪ್ರೀಂಕೋರ್ಟ್
ನಿರ್ದೇಶಿಸಿದೆ ಎಂಬ ನೆಲೆಯಲ್ಲಿ ತಮ್ಮ ಬಡ್ತಿಯನ್ನು ಅಲಹಾಬಾದ್ ಹೈಕೋರ್ಟ್ ತಡೆ ಹಿಡಿದಿದೆ ಎಂದು ಹೇಳಿ
ಸುಪ್ರೀಂಕೋರ್ಟಿಗೆ ನ್ಯಾಯಾಧೀಶ ಎಸ್.ಕೆ. ಯಾದವ್ ಅರ್ಜಿ ಸಲ್ಲಿಸಿದ್ದರು. ಮೊಹರು ಮಾಡಿದ ಲಕೋಟೆಯಲ್ಲಿ ವರದಿಯನ್ನು ಕಳುಹಿಸುವಂತೆ ಸುಪ್ರೀಂಕೋರ್ಟ್
ಪೀಠವು ಯಾದವ್ ಅವರಿಗೆ ನಿರ್ದೇಶಿಸಿತು. ಬಿಜೆಪಿ
ಪ್ರಮುಖರಾದ ಅಡ್ವಾಣಿ, ಜೋಶಿ ಮತ್ತು ಉಮಾಭಾರತಿ ಅವರ ವಿರುದ್ಧ ೧೯೯೨ರ ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಗಂಭೀರವಾದ ಕ್ರಿಮಿನಲ್ ಸಂಚು ಅಪರಾಧದಕ್ಕೆ ಸಂಬಂಧಿಸಿದಂತೆ ಕಾನೂನು
ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ೨೦೧೭ರ ಏಪ್ರಿಲ್ ೧೯ರಂದು ನಿರ್ದೇಶಿಸಿತ್ತು. ಪ್ರತಿದಿನವೂ
ವಿಚಾರಣೆ ನಡೆಸಿ ೨ ವರ್ಷದ ಒಳಗೆ ಅಂದರೆ ೨೦೧೯ರ ಏಪ್ರಿಲ್ ೧೯ರ ಒಳಗೆ ವಿಚಾರಣೆಯನ್ನು ಪೂರ್ಣಗೊಳಿಸಬೇಕು
ಎಂದೂ ಸುಪ್ರೀಂಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತ್ತು. ಮಧ್ಯಯುಗದ ಸ್ಮಾರಕವನ್ನು ಧ್ವಂಸಗೊಳಿಸಿದ ಪ್ರಕರಣವನ್ನು
’ಅಪರಾಧ’ ಎಂಬುದಾಗಿ ವರ್ಣಿಸಿದ್ದ ಸುಪ್ರೀಂಕೋರ್ಟ್
ಇದು ಸಂವಿಧಾನದ ಜಾತ್ಯತೀತ ಸ್ವರೂಪವನ್ನೇ ಅಲುಗಾಡಿಸಿದೆ ಎಂದು ಹೇಳಿ, ವಿವಿಐಪಿ ಆರೋಪಿಗಳ ವಿರುದ್ಧ
ಕ್ರಿಮಿನಲ್ ಸಂಚು ಆರೋಪ ಪ್ರಕರಣಕ್ಕೆ ಮರುಚಾಲನೆ ನೀಡಬೇಕು ಎಂಬುದಾಗಿ ಸಿಬಿಐ ಮಾಡಿದ್ದ ಮನವಿಯನ್ನು
ಪುರಸ್ಕರಿಸಿತ್ತು. ‘ಹೊಸ ವಿಚಾರಣೆ ಮಾಡಬೇಕಿಲ್ಲ.
ಪೂರ್ಣ ವಿಚಾರಣೆ ಮುಗಿಯುವವರೆಗೆ ನ್ಯಾಯಾಧೀಶರನ್ನು ಬದಲಿಸಬೇಕಾಗಿಲ್ಲ. ನಿರ್ದಿಷ್ಟ ದಿನದಂದು ವಿಚಾರಣೆ
ನಡೆಸಲು ಸಾಧ್ಯವಿಲ್ಲ ಎಂದು ಸೆಷನ್ಸ್ ನ್ಯಾಯಾಲಯಕ್ಕೆ ಮನವರಿಕೆಯಾದ ಹೊರತು ಬೇರೆ ಯಾವುದೇ ಕಾರಣಕ್ಕೂ
ವಿಚಾರಣೆಯನ್ನು ಮುಂದೂಡಬಾರದು’ ಎಂದು ಸುಪ್ರೀಂಕೋರ್ಟ್
ಆಗ ಹೇಳಿತ್ತು. ೧೯೯೨ರಲ್ಲಿ
ವಿವಾದಿತ ಕಟ್ಟಡದ ಧ್ವಂಸಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಮೊದಲನೆಯ
ಪ್ರಕರಣವು ಹೆಸರು ಇಲ್ಲದ ’ಕರಸೇವಕರ’ ವಿಚಾರಣೆಗೆ ಸಂಬಂಧಿಸಿದ್ದು,
ಲಕ್ನೋ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇನ್ನೊಂದು ಪ್ರಕರಣ ರಾಯ್ ಬರೇಲಿ ಕೋರ್ಟಿನ
ಮುಂದಿರುವ ನಾಯಕರಿಗೆ ಸಂಬಂಧಿಸಿದ ಪ್ರಕರಣ. ರಾಯ್
ಬರೇಲಿ ಮತ್ತು ಲಕ್ನೋ ವಿಚಾರಣಾ ನ್ಯಾಯಾಲಯಗಳಲ್ಲಿ ಇರುವ ಪ್ರತೇಕ ಪ್ರಕರಣಗಳನ್ನು ಒಟ್ಟುಗೂಡಿಸಿ ಲಕ್ನೋ
ನ್ಯಾಯಾಲಯದಲ್ಲಿ ನಡೆಸಬೇಕು ಎಂದೂ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅಡ್ವಾಣಿ, ಎಂ.ಎಂ. ಜೋಶಿ ಮತ್ತು
ಉಮಾಭಾರತಿ ಸೇರಿದಂತೆ ೧೩ ಮಂದಿ ಆರೋಪಿಗಳ ವಿರುದ್ಧ ರಾಯ್ ಬರೇಲಿ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ
ಒಳಸಂಚು ಪ್ರಕರಣವನ್ನು ಕೈಬಿಡಲಾಗಿತ್ತು.
ಧ್ವಂಸಗೊಳಿಸಲಾದ
ವಿವಾದಿತ ಕಟ್ಟಡದ ಸನಿಹ ಇದ್ದ ಅಪರಿಚಿತ ಕರಸೇವಕರ ವಿರುದ್ಧ ದಾಖಲಿಸಲಾಗಿದ್ದ ಎರಡನೇ ಪ್ರಕರಣದ ವಿಚಾರಣೆಯನ್ನು
ಲಕ್ನೋಕೋರ್ಟ್ ನಡೆಸುತ್ತಿದೆ. ಉನ್ನತ
ಬಿಜೆಪಿ ನಾಯಕರು ಸೇರಿದಂತೆ ೨೧ ಮಂದಿ ಆರೋಪಿಗಳ ವಿರುದ್ಧದ
ಒಳಸಂಚು ಪ್ರಕರಣವನ್ನು ಕೈಬಿಟ್ಟದ್ದನ್ನು ಪ್ರಶ್ನಿಸಿ ಹಾಜಿ ಮಹಬೂಬ್ ಅಹಮದ್ (ಈಗ ನಿಧನರಾಗಿದ್ದಾರೆ)
ಮತ್ತು ಸಿಬಿಐ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿದ್ದರು. ೨೧ ಮಂದಿ ಆರೋಪಿಗಳ ಪೈಕಿ ೮ ಮಂದಿ ನಿಧನರಾಗಿದ್ದಾರೆ. ೮ ಜನರ ವಿರುದ್ಧ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಆದರೆ ಧ್ವಂಸಕ್ಕಾಗಿ ಒಳಸಂಚು ಹೂಡಿದ ಆರೋಪದಿಂದ ಮುಕ್ತರಾದ ೧೩ ಮಂದಿಯ ವಿರುದ್ಧ ಪೂರಕ ದೋಷಾರೋಪ ಪಟ್ಟಿ
ಸಲ್ಲಿಸಿರಲಿಲ್ಲ. ಬಿಜೆಪಿ ನಾಯಕರಾದ ಅಡ್ವಾಣಿ, ಜೋಶಿ,
ಉಮಾ ಭಾರತಿ ಹೊರತಾಗಿ ಕಲ್ಯಾಣ್ ಸಿಂಗ್ (ಪ್ರಸ್ತುತ ರಾಜಸ್ಥಾನದ ರಾಜ್ಯಪಾಲ), ಶಿವಸೇನಾ ಮುಖ್ಯಸ್ಥ
ಬಾಳ್ ಠಾಕ್ರೆ ಮತ್ತು ವಿಎಚ್ ಪಿ ನಾಯಕ ಆಚಾರ್‍ಯ ಗಿರಿರಾಜ್ ಕಿಶೋರ್ ಇಬ್ಬರೂ ನಿಧನರಾಗಿದ್ದಾರೆ) ಅವರ
ವಿರುದ್ಧದ ಪ್ರಕರಣಗಳನ್ನೂ ಕೈಬಿಡಲಾಗಿತ್ತು. ಸಂಚು
ಆರೋಪದಿಂದ ಮುಕ್ತರಾಗಿದ್ದ ಇತರರು: ವಿನಯ್ ಕಟಿಯಾರ್, ವಿಷ್ಣು ಹರಿ ದಾಲ್ಮಿಯಾ, ಸತೀಶ್ ಪ್ರಧಾನ್,
ಸಿ.ಆರ್. ಬನ್ಸಲ್, ಅಶೋಕ ಸಿಂಘಾಲ್ (ಈಗ ನಿಧನರಾಗಿದ್ದಾರೆ), ಸಾಧ್ವಿ ಋತಂಭರಾ, ಮಹಂತ ಅವೈದ್ಯನಾಥ್
(ಈಗ ನಿಧನರಾಗಿದ್ದಾರೆ), ಆರ್.ವಿ. ವೇದಾಂತಿ, ಪರಮಹಂಸ ರಾಮಚಂದ್ರ ದಾಸ್ (ಈಗ ನಿಧನರಾಗಿದ್ದಾರೆ),
ಜಗದೀಶ್ ಮಉನಿ ಮಹಾರಾಜ್, ಬಿ.ಎಲ್. ಶರ್ಮ, ನೃತ್ಯ ಗೋಪಾಲ್ ದಾಸ್, ಧರಮ್ ದಾಸ್, ಸತೀಶ್ ನಗರ ಮತ್ತು
ಮೋರೇಶ್ವರ ಸವೆ (ಈಗ ನಿಧನರಾಗಿದ್ದಾರೆ).
ವಿಶೇಷ
ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯುವ ಸಂದರ್ಭದಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್
೧೨೦ ಬಿ ಅಡಿಯಲ್ಲಿ ದಾಖಲಿಸಲಾಗಿದ್ದ ಪ್ರಕರಣವನ್ನು ಕೈಬಿಟ್ಟ ಅಲಹಾಬಾದ್ ಹೈಕೋರ್ಟಿನ ೨೦೧೦ರ ಮೇ ೨೦ರ
ಆದೇಶವನ್ನು ರದ್ದು ಪಡಿಸುವಂತೆ ಮೇಲ್ಮನವಿಯಲ್ಲಿ ಕೋರಲಾಗಿತ್ತು. ಅಡ್ವಾಣಿ ಮತ್ತು ಇತರ ೨೦ ಮಂದಿ ವಿರುದ್ಧ
ಇತರ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿದ್ದ ಸಿಬಿಐ ಬಳಿಕ ಕ್ರಿಮಿನಲ್ ಸಂಚು ಅಪರಾಧಕ್ಕೆ ಸಂಬಂಧಿಸಿದ
ಸೆಕ್ಷನ್ ೧೨೦ ಅಡಿಯಲ್ಲಿ ಆರೋಪಗಳನ್ನು ಹೊರಿಸಿತ್ತು. ವಿಶೇಷ ನ್ಯಾಯಾಲಯ ಇದನ್ನು ರದ್ದು ಪಡಿಸಿತ್ತು.
ವಿಶೇಷ ನ್ಯಾಯಾಲಯದ ಈ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ರಾಯ್ ಬರೇಲಿಯಲ್ಲಿನ ವಿಚಾರಣೆ ಕಾಲದಲ್ಲಿ ಯಾವುದೇ ವೇಳೆಯಲ್ಲಿ
ಅಥವಾ ತನ್ನ ಮರುಪರಿಶೀಲನಾ ಅರ್ಜಿಯಲ್ಲಿ ಎಂದೂ ಸಿಬಿಐ ನಾಯಕರ ವಿರುದ್ಧ ಕ್ರಿಮಿನಲ್ ಒಳಸಂಚು ಬಗ್ಗೆ
ಹೇಳಿರಲಿಲ್ಲ ಎಂದು ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯುವ ವೇಳೆಯಲ್ಲಿ ಹೈಕೋರ್ಟ್ ಹೇಳಿತ್ತು.
2018: ನವದೆಹಲಿ: ತಾವು ಕರೆ ನೀಡಿದ ಹರತಾಳಕ್ಕೆ
ಜನರ ಬೆಂಬಲ ಸಿಗದೇ ಇದ್ದ ಕಾರಣ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಹಿಂಸಾಚಾರಕ್ಕೆ ಇಳಿದವು
ಎಂದು ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಇಂಧನ ಬೆಲೆ ಏರಿಕೆ ವಿರುದ್ಧ ವಿಪಕ್ಷ ಪ್ರಾಯೋಜಿತ ’ಭಾರತ್
ಬಂದ್’ ಕುರಿತು ಚಾಟಿ ಬೀಸಿತು. ಕಾನೂನು ಸಚಿವ ರವಿ ಶಂಕರ ಪ್ರಸಾದ್ ಅವರು ಇಂಧನ ಬೆಲೆ ಏರಿಕೆಯು
’ಕ್ಷಣಿಕ ಕಾಲದ ಕಷ್ಟ’ ಎಂದು ವಿವರಿಸಿದರು.
ಆದರೆ ಕೇಂದ್ರದಿಂದ ಸುಂಕ ಕಡಿತದ ಸಾಧ್ಯತೆ ಬಗ್ಗೆ ಯಾವುದೇ ಸುಳಿವನ್ನೂ ನೀಡಲಿಲ್ಲ. ಕೇಂದ್ರ ಸರ್ಕಾರವು ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲೇ ೨ ರೂಪಾಯಿಯಷ್ಟು ಕಡಿತಗೊಳಿಸಿದೆ. ಈಗ ಪೆಟ್ರೋಲ್ ಮತ್ತು ಡೀಸೆಲ್
ಮೇಲಿನ ರಾಜ್ಯ ತೆರಿಗೆಗಳನ್ನು ಇಳಿಸುವ ಕ್ರಮ ತೆಗೆದುಕೊಳ್ಳುವುದು ರಾಜ್ಯಗಳ ಕೆಲಸ ಎಂದು ಸಚಿವರು ನುಡಿದರು. ‘ಭಾರತ ಬಂದ್ ಕರೆಗೆ ಭಾರತದ ಜನ ನಿರ್ಲಕ್ಷ್ಯ ವಹಿಸಿದ್ದು
ಏಕೆ? ಇಂಧನ ಬೆಲೆ ಏರಿಕೆ ತಾತ್ಕಾಲಿಕವಾಗಿದ್ದು ಭಾರತ ಸರ್ಕಾರ ಮತ್ತು ಸಾಮಾನ್ಯ ಜನರ ನಿಯಂತ್ರಣ ಮೀರಿದ
ಕಾರಣಗಳಿಂದ ಆಗಿದೆ ಎಂಬುದರ ಸ್ಪಷ್ಟ ಅವರಿಗೆ ಇದೆ’ ಎಂದು ರವಿ ಶಂಕರ ಪ್ರಸಾದ್
ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದರು. ಇಂಧನ ಬೆಲೆ ಏರಿಕ ’ಕ್ಷಣಿಕ ಕಾಲದ ಕಷ್ಟ’ ಎಂದು ಅವರು ಬಣ್ಣಿಸಿದರು. ‘ಇದು ಕಾಂಗ್ರೆಸ್
ಮತ್ತು ಇತರ ವಿರೋಧ ಪಕ್ಷಗಳ ಧೃತಿಗೆಡಿಸಿದೆ. ಹೀಗಾಗಿ ಅವು ಹಿಂಸಾಚಾರಕ್ಕೆ ಇಳಿದವು’ ಎಂದು ಸಚಿವರು ಹೇಳಿದರು. ’ಪ್ರತಿಯೊಬ್ಬನಿಗೂ ಪ್ರತಿಭಟಿಸುವ ಹಕ್ಕಿದೆ. ಆದರೆ
ಇಂದು ಏನಾಗುತ್ತಿದೆ? ಪೆಟ್ರೋಲ್ ಪಂಪ್ ಗಳು ಮತ್ತು ಬಸ್ಸುಗಳಿಗೆ ಬೆಂಕಿ ಹಚ್ಚಲಾಗುತ್ತಿದೆ, ತನ್ಮೂಲಕ
ಜೀವಗಳನ್ನು ಅಪಾಯಕ್ಕೆ ತಳ್ಳಲಾಗುತ್ತಿದೆ’ ಎಂದು ಕಾನೂನು ಸಚಿವರು,
ಕಾಂಗ್ರೆಸ್ ನೇತೃತ್ವದ ಪ್ರತಿಭಟನೆಯು ರಾಷ್ಟ್ರದ ರಾಜಧಾನಿಯಲ್ಲಿ ವಿಪಕ್ಷ ಏಕತೆಯ ಪ್ರದರ್ಶನವಾಗಿ ಮಾರ್ಪಟ್ಟ
ಬಳಿಕ ಹೇಳಿದರು.
ಜೆಹಾನಾಬಾದಿನಲ್ಲಿ
ಪ್ರತಿಭಟನೆಗಳ ಮಧ್ಯೆ ಸಿಕ್ಕಿಹಾಕಿಕೊಂಡ ಆಂಬುಲೆನ್ಸಿನಲ್ಲಿ ಇದ್ದ ಮಗು ಸಾವನ್ನಪ್ಪಿದ ಕುರಿತ ವರದಿಗಳನ್ನೂ
ಉಲ್ಲೇಖಿಸಿದ ಸಚಿವರು ’ಈ ಮಗುವಿನ ಸಾವಿನ ಹೊಣೆಯನ್ನು ಯಾರು ಹೊರುತ್ತಾರೆ?’ ಎಂದು ಪ್ರಶ್ನಿಸಿದರು.
ತೆರಿಗೆಗಳನ್ನು ಕಡಿತಗೊಳಿಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುವುದಿಲ್ಲ.
ನಾವು ಅದನ್ನು ಅವರ ವಿವೇಚನೆ, ಮತ್ತು ಸಮಾನ ಮಹತ್ವವನ್ನು ಹೊಂದಿರುವ ಸಾಮಾಜಿಕ ಅಭಿವೃದ್ಧಿಯ ಅವರ ಒತ್ತಡಗಳಿಗೆ
ಬಿಡುತ್ತೇವೆ’ ಎಂದು ಕೇಂದ್ರ ಸಚಿವರು ನುಡಿದರು.
ಇದಕ್ಕೆ
ಮುನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅತಿಯಾದ ಇಂಧನ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ
ಕುಸಿತಕ್ಕೆ ಪ್ರಧಾನಿಯ ನೀತಿಗಳೇ ಕಾರಣ ಎಂಬುದಾಗಿ ಸರ್ಕಾರದ ಮೇಲೆ ಪ್ರಹಾರ ನಡೆಸಿದ್ದರು. ‘ಸ್ವಾತಂತ್ರ್ಯಾನಂತರದ ೭೦ ವರ್ಷಗಳಲ್ಲಿ ಎಂದೂ ರೂಪಾಯಿ ಇಷ್ಟೊಂದು
ದುರ್ಬಲವಾಗಿರಲೇ ಇಲ್ಲ’ ಎಂದು ಸುಮಾರು ೨೧ ರಾಜಕೀಯ
ಪಕ್ಷಗಳು ಪಾಲ್ಗೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ ಹೇಳಿದ್ದರು. ಅದಕ್ಕೂ
ಮುನ್ನ ಅದೇ ವೇದಿಕೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ’ಪರಿಸ್ಥಿತಿ ಸರ್ಕಾರದ
ನಿಯಂತ್ರಣವನ್ನು ಮೀರಿದೆ ಎಂಬುದನ್ನು ಈಗಿನ ಸಂದರ್ಭಗಳು ತೋರಿಸುತ್ತಿವೆ’ ಎಂದು ಹೇಳಿದ್ದರು. ‘ರೈತರು, ವರ್ತಕರು, ಯುವಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ
ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಸಾಮಾನ್ಯ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ
ಸರ್ಕಾರ ದಯನೀಯ ವೈಫಲ್ಯವನ್ನು ಕಂಡಿದೆ. ಕೇಂದ್ರದಲ್ಲಿನ ಪಕ್ಷವನ್ನು ಬದಲಾಯಿಸಬೇಕಾದ ಸಮಯ ಬಂದಿದೆ
ಮತ್ತು ಶೀಘ್ರವೇ ಇದು ಘಟಿಸಲಿದೆ’ ಎಂದು ಮಾಜಿ ಪ್ರಧಾನಿ
ರಾಮಲೀಲಾ ಮೈದಾನದಲ್ಲಿ ಪ್ರತಿಭಟನಾ ಪ್ರದರ್ಶನವನ್ನು
ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದರು. ‘ಮೋದಿ ಸರ್ಕಾರವು
ರಾಷ್ಟ್ರದ ಹಿತಾಸಕ್ತಿಗೆ ಪೂರಕವಲ್ಲದ ಬಹಳಷ್ಟು ಕೆಲಸಗಳನ್ನು ಮಾಡಿದೆ. ಈಗ ಅದು ತನ್ನ ಮಿತಿಗಳನ್ನು
ಮೀರಿ ಹೋಗುತ್ತಿದೆ. ಆದ್ದರಿಂದ ಅದನ್ನು ಬದಲಾಯಿಸಬೇಕಾದ ಕಾಲ ಬಂದಿದೆ’ ಎಂದೂ ಮನಮೋಹನ್ ಸಿಂಗ್ ಹೇಳಿದ್ದರು. ಮನಮೋಹನ್ ಸಿಂಗ್ ದಾಳಿಗೆ ಉತ್ತರಿಸಿದ ಕಾನೂನು ಸಚಿವ ರವಿ
ಶಂಕರ ಪ್ರಸಾದ್ ’ಕಾಂಗ್ರೆಸ್ ಅಧ್ಯಕ್ಷರ ಹೊಡೆದು ಓಡುವ ಧೋರಣೆಯ ಬದಲಿಗೆ ರಾಷ್ಟ್ರದ ಆರ್ಥಿಕತೆಯ ಸ್ಥಿತಿಗತಿ
ಬಗ್ಗೆ ಸಂಸತ್ತಿನಲ್ಲಿ ಪೂರ್ಣ ಪ್ರಮಾಣದ ಚರ್ಚೆ ನಡೆಸೋಣ’ ಎಂದು ಸವಾಲು ಎಸೆದರು.
2016: ರಿಯೊ ಡಿ ಜನೈರೋ: ರಿಯೊದಲ್ಲಿ ನಡೆದ ಅಂಗವಿಕಲರ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ವಿಭಾಗದ ಟಿ42 ಹೈಜಂಪ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಒಲಿಯಿತು. ಕ್ರೀಡಾಕೂಟ ಆರಂಭವಾದ ಎರಡನೇ ದಿನ ಹೈಜಂಪ್ ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು ಅವರು ಚಿನ್ನದ ಪದಕವನ್ನು ಗೆದ್ದಿದ್ದು, ವರುಣ್ ಭಾಟಿ ಕಂಚಿನ ಪದಕ ಬಗಲಿಗೆ ಹಾಕಿಕೊಂಡರು. 1.89 ಮೀಟರ್ ಜಿಗಿದು ತಂಗವೇಲು ಪ್ರಥಮ ಸ್ಥಾನ ಪಡೆದಿದ್ದು, ಭಾಟಿ ಅವರು 1.86 ಮೀಟರ್ ಎತ್ತರಕ್ಕೆ ಜಿಗಿದರು.: ಪ್ಯಾರಾಲಿಂಪಿಕ್ಸ್ ಎತ್ತರ ಜಿಗಿತದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಇದಾಗಿದ್ದು, ಈ ಮೊದಲು 1992ರ ಪ್ಯಾರಾಲಿಂಪಿಕ್ಸ್ನಲ್ಲಿ ಮುರಳಿಕಾಂತ್ ಪಾರ್ಕರ್ ಈಜಿನಲ್ಲಿಯೂ, 2004ರ ಅಥೆನ್ಸ್ ಪ್ಯಾರಾಲಂಪಿಕ್ಸ್ನ ಜಾವೆಲಿನ್ ಎಸೆತದಲ್ಲಿ ದೇವೇಂದ್ರ ಜಾಜಾರಿಯಾ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.
2016: ರಿಯೋಡಿಜನೈರೋ: ರಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ತಮಿಳುನಾಡು ಮೂಲದ ಮರಿಯಪ್ಪನ್ ತಂಗವೇಲು ಭಾರತ ಕೀರ್ತಿ
ಪತಾಕೆ ಹಾರಿಸಿದರು. ಹೈಜಂಪ್ನಲ್ಲಿ 1.86 ಮೀಟರ್ ಜಿಗಿದು ಚಿನ್ನ ಗೆದ್ದ ಈ ಯುವಕನ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗುವಂತದ್ದು, ಸೇಲಂನ ಪುಟ್ಟ ಹಳ್ಳಿಯೊಂದರ ಹುಡುಗ ರಿಯೊದಲ್ಲಿ 'ಬಂಗಾರ' ಗೆದ್ದ ಸಾಧನೆಯ ಕಥೆ ಇಲ್ಲಿದೆ: 16 ವರುಷಗಳ ಹಿಂದೆ ಸಂಭವಿಸಿದ ಬಸ್ ಅಪಘಾತದಲ್ಲಿ ತಂಗವೇಲುವಿನ ಬಲ ಕಾಲಿಗೆ ತೀವ್ರ ಪೆಟ್ಟು ಬಿದ್ದಿತ್ತು. ಪರಿಣಾಮ ಮಂಡಿಯ ಕೆಳಗಿನ ಭಾಗವನ್ನು ಕತ್ತರಿಸಬೇಕಾಗಿ ಬಂತು. ವಾಲಿಬಾಲ್ ಆಟದಲ್ಲಿ ಚುರುಕಾಗಿದ್ದ ಈತನಿಗೆ ಒಂದ ಕಾಲು ಕಳೆದುಕೊಂಡಾಗ ಬದುಕೇ ದುಸ್ತರವೆನಿಸಿಬಿಟ್ಟಿತ್ತು. ಆ ಹೊತ್ತಲ್ಲಿ ತಂಗವೇಲುವಿನ ಅಮ್ಮ ಸರೋಜಾ ಮಗನಿಗೆ ಧೈರ್ಯ ತುಂಬಿದರು. ಅಪ್ಪ ಬಿಟ್ಟು ಹೋದ ಕುಟುಂಬದಲ್ಲಿ ಅಮ್ಮನೇ ಆಧಾರ ಸ್ತಂಬವಾಗಿದ್ದರು, ಬೇರೆ ಯಾರ ಸಹಾಯವಿಲ್ಲದೆಯೇ ಸರೋಜಾ ತನ್ನ ಮಕ್ಕಳನ್ನು ಬೆಳೆಸಿದರು. ತರಕಾರಿ ಮಾರಿ, ಮನೆಕೆಲಸ ಮಾಡಿ ದಿನ ಸಾಗಿಸುತ್ತಿದ್ದ ಸರೋಜಾ, ಮಗ ಮತ್ತೆ ಆಟದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಿದರು. ವಯಸ್ಸಿನಲ್ಲಿ ನಡೆದ ಕ್ರೀಡಾ ಸ್ಪರ್ಧೆಯೊಂದರಲ್ಲಿ ತಂಗವೇಲು ಎರಡನೇ ಸ್ಥಾನ ಗಳಿಸಿದ್ದರು. ಹುಡುಗನ ಸಾಮರ್ಥ್ಯವನ್ನು ಗುರುತಿಸಿ ಸತ್ಯನಾರಾಣ ಎಂಬ ಕೋಚ್, ಈತನಿಗೆ ಮುಂದಿನ ತರಬೇತಿ ನೀಡಿದರು. ಇದರ ಫಲವಾಗಿ ತಂಗವೇಲು ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು
ಸಾಧ್ಯವಾಯಿತು. ಆಗ
ತಂಗವೇಲುವಿಗೆ 18 ವರ್ಷ! ಆನಂತರ ಬೆಂಗಳೂರಿನಲ್ಲಿ ತರಬೇತಿ ಪಡೆದ ಈತ 2015ರಲ್ಲಿ ಸೀನಿಯರ್ ಲೆವೆಲ್ ಸ್ಪರ್ಧೆಯಲ್ಲಿ ನಂಬರ್ 1 ಸ್ಥಾನಕ್ಕೇರಿದರು. ಐಪಿಸಿ ಟ್ಯುನೀಸಿಯಾ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ 1.78 ಮೀಟರ್ ಜಿಗಿದು ಚಿನ್ನದ ಪದಕ ಗೆಲ್ಲುವ ಮೂಲಕ ಈತ ಪ್ಯಾರಾಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡರು.
2016: ಬೀಜಿಂಗ್: ದೇಶಾದ್ಯಂತ 20 ಸಾವಿರ ಕಿ.ಮೀ. ಬುಲೆಟ್ ರೈಲು ಸಂಪರ್ಕ ಜಾಲವನ್ನು ನಿರ್ಮಿಸುವ ಮೂಲಕ ಚೀನಾ ಜಗತ್ತಿನ ಅತಿ ಉದ್ದದ ಬುಲೆಟ್ ರೈಲು ಸಂಪರ್ಕ ವ್ಯವಸ್ಥೆ ಹೊಂದಿರುವ ರಾಷ್ಟ್ರವೆನಿಸಿತು. ಝೆಂಗ್‌ಜೋವ್‌ನಿಂದ ಕ್ಸುಜೋವ್ ಪ್ರಾಂತ್ಯದ ನಡುವೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಈದಿನ ಉದ್ಘಾಟನೆಗೊಂಡಿತು. ಈ ಮಾರ್ಗದಲ್ಲಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಬುಲೆಟ್ ರೈಲು ಚಲಿಸುತ್ತಿದ್ದು ಪ್ರಯಾಣ ಸಮಯದಲ್ಲಿ ಅರ್ಧದಷ್ಟು ಉಳಿತಾಯವಾಯ ಆಗುವಂತಾಗಿದೆ. ಭಾರತ ಸೇರಿದಂತೆ ಜಾಗತಿಕವಾಗಿ ಅತಿ ವೇಗದ ರೈಲ್ವೆ ಮಾರುಕಟ್ಟೆಯಲ್ಲಿ ಜಪಾನ್ನೊಂದಿಗೆ ಚೀನಾ ಸ್ಪರ್ಧೆಗಿಳಿದಿದೆ. ಈ ಹಿಂದೆ ಮುಂಬೈ– ಅಹ್ಮದಾಬಾದ್ ನಡುವಿನ ಅತಿ ವೇಗದ ರೈಲ್ವೆ ಸಂಪರ್ಕ ಕಾಮಗಾರಿಯ ಗುತ್ತಿಗೆಯನ್ನು ಜಪಾನ್ ಪಡೆದುಕೊಂಡಿದ್ದು, ಚೆನ್ನೈ ಮತ್ತು ನವದೆಹಲಿ ನಡುವೆ ಬುಲೆಟ್ ರೈಲು ಸಂಪರ್ಕದ ಕಾರ್ಯಸಾಧ್ಯತೆಯ ಪರಿಶೀಲನೆಯಲ್ಲಿ ಚೀನಾ ತೊಡಗಿದೆ.
2016: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದದಲ್ಲಿ ಮತ್ತೆ ಆರಂಭವಾದ ಹಿಂಸಾಚಾರ ಘರ್ಷಣೆಗಳಿಗೆ ಇಬ್ಬರು ಬಲಿಯಾದರು. ಇದರೊಂದಿಗೆ ಕಾಶ್ಮೀರ ಗಲಭೆಯಲ್ಲಿ ಸಾವಿಗೀಡಾದವರ ಸಂಖ್ಯೆ 75ಕ್ಕೇರಿತು. .ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಪೆಲ್ಲೆಟ್ ಗನ್ ತಾಗಿ ಒಬ್ಬ ಸಾವನ್ನಪ್ಪಿದರೆ, ನೆರೆಯ ಶೋಪಿಯಾನ್ ಜಿಲ್ಲೆಯಲ್ಲಿ ಅಶ್ರುವಾಯು ಷೆಲ್ ಬಡಿದು ಪ್ರತಿಭಟನಾಕಾರನೊಬ್ಬ ಸಾವನ್ನಪ್ಪಿದ. ಶೋಪಿಯಾನ್ನ ಟುಕ್ರೂ ಎಂಬಲ್ಲಿ ಭದ್ರತಾ ಸಿಬ್ಬಂದಿ ಪ್ರಯೋಗಿಸಿದ ಅಶ್ರುವಾಯು ಷೆಲ್ ತಲೆಗೆ ಬಡಿದ ಪರಿಣಾಮವಾಗಿ ಸಾಯರ್ ಅಹಮದ್ ಷೇಕ್ (25) ಎಂಬ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ಒಯ್ಯುವ ಮಾರ್ಗದಲ್ಲಿ ಸಾವನ್ನಪ್ಪಿದ. ಭದ್ರತಾ ಪಡೆಗಳತ್ತ ಕಲ್ಲು ತೂರುತ್ತಿದ್ದ ಪ್ರತಿಭಟನಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದಾಗ ಈ ಘಟನೆ ಘಟಿಸಿತು. ಅನಂತನಾಗ್ ಜಿಲ್ಲೆಯ ಬೊಟೆಂಗೂ ಎಂಬಲ್ಲಿ ಕಲ್ಲು ತೂರುತ್ತಿದ್ದವರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಪೆಲ್ಲೆಟ್ ಗನ್ ಹಾರಿಸಿದಾಗ 23ರ ಹರೆಯದ ಯಾವರ್ ಭಟ್ ಎಂಬಾತ ಸಾವನ್ನಪ್ಪಿದ. ಎಂದು ಪೊಲೀಸರು ತಿಳಿಸಿದ್ದಾರೆ.
2016: ಢಾಕಾ: ಫ್ಯಾಕ್ಟರಿಯಲ್ಲಿದ್ದ ನೀರಿನ ಬಾಯ್ಲರ್ ಸ್ಪೋಟಗೊಂಡು 20 ಮಂದಿ ಸಾವನ್ನಪ್ಪಿದ ದುರ್ಘಟನೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಘಟಿಸಿತು. ಇನ್ನೂ ಅನೇಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದರು. ಗಾಝೀಪುರದ ಟ್ಯಾಪಕೋ ಫಾಯಿಲ್ ಫ್ಯಾಕ್ಟರಿಯಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ಸ್ಪೋಟದ ತೀವ್ರತೆಗೆ ಫ್ಯಾಕ್ಟರು ಕಟ್ಟಡ ಕುಸಿದುಬಿದ್ದಿರುವುದಾಗಿ ಪೊಲೀಸರು ತಿಳಿಸಿದರು. ಚಿಂತಾಜನಕ ಸ್ಥಿತಿಯಲ್ಲಿದ್ದ 17 ಮಂದಿಯನ್ನು ಢಾಕಾದ ಟಾಂಗಿ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡೈಲಿ ಸ್ಟಾರ್ ವರದಿಮಾಡಿತು.. ಘಟನೆಯಲ್ಲಿ 74ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿತು.
2016: ಭಾಗಲ್ಪುರ: ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳದ ಸದಸ್ಯ, ಸಿವಾನ್ ಕ್ಷೇತ್ರ ಮಾಜಿ ಸಂಸತ್ ಸದಸ್ಯ ಮೊಹಮ್ಮದ್ ಷಹಾಬುದ್ದೀನ್ ಅವರು 11 ವರ್ಷಗಳ ಸುದೀರ್ಘ ಸೆರೆವಾಸದ ಬಳಿಕ ಸೆರೆಮನೆಯಿಂದ ಹೊರಕ್ಕೆ ಬಂದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರದ ಆದಿಯಲ್ಲಿ ಷಹಾಬುದ್ದೀನ್ ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು. ಬಿಹಾರಿನ ಭಾಗಲ್ಪುರ ಸೆರೆಮನೆಯ ಹೊರಭಾಗದಲ್ಲಿ ಸಹಸ್ರಾರು ಮಂದಿ ಬೆಂಬಲಿಗರು ಜಮಾಯಿಸಿ ಷಹಾಬುದ್ದೀನ್ ಹೊರಬಂದಾಗ ಸ್ವಾಗತಿಸಿದ್ದಲ್ಲದೆ ಸಿವಾನ್ನ ಅವರ ಗ್ರಾಮ ಪ್ರತಾಪುರದವರೆಗೆ ಅವರಿಗೆ ಎಸ್ಯುುವಿ ಬೆಂಗಾವಲನ್ನೂ ಒದಗಿಸಿದರು. ಸಿವಾನ್ ಕ್ಷೇತ್ರದಿಂದ ನಾಲ್ಕು ಅವಧಿಗೆ ಸಂಸತ್ ಸದಸ್ಯರಾಗಿದ್ದ ಷಹಾಬುದ್ದೀನ್ 40 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದು, ಕೊಲೆ ಪ್ರಕರಣ ಒಂದರಲ್ಲಿ ಜೀವಾವಧಿ ಸಜೆಗೆ ಗುರಿಯಾಗಿದ್ದಾರೆ. ಸೆರೆಮನೆಯಿಂದ ಹೊರಬರುತ್ತಿದ್ದಂತೆಯೇ ಲಾಲೂ ಪ್ರಸಾದ್ ಅವರನ್ನು ‘ನನ್ನ ನಾಯಕ’ ಎಂದು ಹೊಗಳಿದ ಷಹಾಬುದ್ದೀನ್ ನಿತೀಶ್ ಕುಮಾರ್ ಅವರನ್ನು ‘ಸಂದರ್ಭಗಳ ನಾಯಕ’ ಎಂದು ಚುಚ್ಚಿದರು.
2016: ಟರ್ಬತ್ (ಬಲೂಚಿಸ್ತಾನ): ಬಲೂಚ್ ನ್ಯಾಷನಲ್ ಫ್ರಂಟ್ ಸದಸ್ಯರು ಶನಿವಾರ ಬಲೂಚ್ ಕಾರ್ಯಕರ್ತರ ಮೇಲೆ ಪಾಕಿಸ್ತಾನಿ ಸೇನೆ ಮತ್ತು ಐಎಸ್ಯು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಪ್ರತಿಭಟನಾ ಪ್ರದರ್ಶನ ನಡೆಸಿದರು.
2016: ಬಾಗ್ದಾದ್: ಇರಾಕ್ನ ರಾಜಧಾನಿ ಬಾಗ್ದಾದ್ನ ಪ್ರತಿಷ್ಠಿತ ಮಾಲ್ ಬಳಿ ಎರಡು ಆತ್ಮಾಹುತಿ ಕಾರು ಬಾಂಬ್ ಸ್ಫೋಟ ಸಂಭವಿಸಿ 11 ಮಂದಿ ಮೃತರಾಗಿ, 29 ಮಂದಿ ಗಂಭೀರವಾಗಿ ಗಾಯಗೊಂಡ
ಘಟನೆ ಇಲ್ಲಿನ ಪ್ಯಾಲಿಸ್ಟೇನ್ ಸ್ಟ್ರೀಟ್ನ ನಖಿಲ್ ಮಾಲ್ ಬಳಿ ಘಟಿಸಿತು. ಘಟನೆಯಲ್ಲಿ ಅಕ್ಕಪಕ್ಕದಲ್ಲಿರುವ ಇನ್ನಷ್ಟು ಕಾರುಗಳು ಹಾನಿಗೀಡಾದವು. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ಕೈಗೊಂಡರು. ಈ ವರೆಗೆ ಯಾವುದೇ ಉಗ್ರ ಸಂಘಟನೆ ಸ್ಪೋಟದ ಹೊಣೆ ಹೊತ್ತುಕೊಂಡಿಲ್ಲ. ಆದರೆ ಐಸಿಸ್ ಸಂಘಟನೆ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದರು.
2016: ನವದೆಹಲಿ: ವಿವಾದಿತ ಮುಸ್ಲಿಮ್ ಧಾರ್ಮಿಕ ಪ್ರವಚನಕಾರ ಜಾಕೀರ್ ನಾಯಕ್ಗೆ ಸೇರಿದ ಸರ್ಕಾರೇತರ ಸಂಘಟನೆ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್ 2011ರಲ್ಲಿ ರಾಜೀವ್ ಗಾಂಧಿ ಫೌಂಡೇಷನ್ಗೆ 50 ಲಕ್ಷ ರೂಪಾಯಿಗಳನ್ನು ನೀಡಿದೆ, ಇದನ್ನು ಯಾಕೆ ಹಿಂತಿರುಗಿಸಲಿಲ್ಲ ಎಂದು ಕಾಂಗ್ರೆಸ್ ವಿವರಿಸಬೇಕು ಎಂದು ಬಿಜೆಪಿ ಆಗ್ರಹಿಸಿತು. ತಾನು ಹಣ ನೀಡಿದ್ದನ್ನು ಸ್ವತಃ ಜಾಕೀರ್ ನಾಯಕ್ ಈಗ ಬಹಿರಂಗ ಪಡಿಸಿದ್ದಾನೆ. ಆದರೆ ಕಾಂಗ್ರೆಸ್ ಮೊದಲಿಗೆ ಇದನ್ನು ನಿರಾಕರಿಸಿತ್ತು ಎಂದು ಬಿಜೆಪಿ ಆಪಾದಿಸಿತು. ರಾಜೀವ್ ಗಾಂಧಿ ಫೌಂಡೇಷನ್ ವಿದೇಶೀ ದೇಣಿಗೆ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ನೋಂದಣಿಯಾಗಿದೆಯೇ? ಆಗಿದ್ದರೆ ನೋಂದಣಿಯ ಷರತ್ತುಗಳು ಏನು? ವಿದೇಶದಿಂದ ಹಣ ಪಡೆಯಬಹುದು ಎಂಬುದು ಷರತ್ತುಗಳಲ್ಲಿ ಸೇರಿವೆಯೇ? ವಿದೇಶದಿಂದ ಹಣ ಪಡೆಯುವ ಸರ್ಕಾರೇತರ ಸಂಸ್ಥೆಯಿಂದಲೂ ನೀವು ಹಣ ಪಡೆಯಬಹುದೇ? ಎಂದು ಬಿಜೆಪಿ ಪ್ರಶ್ನೆಗಳ ಸುರಿಮಳೆ ಗೈದಿತು. ಭದ್ರತಾ ಸಂಸ್ಥೆಗಳು ಪೀಸ್ ಟಿವಿ ಸೇರಿದಂತೆ 24 ಟಿವಿ ವಾಹಿನಿಗಳನ್ನು ಭದ್ರತಾ ಪರಿಸರಕ್ಕೆ ಅಪಾಯಕಾರಿ ಎಂಬುದಾಗಿ ಗುರುತಿಸಿದ್ದು, ಈ ಹಿನ್ನೆಲೆಯಲ್ಲಿ ಪೀಸ್ ಟಿವಿಯ ಜಾಕೀರ್ ನಾಯಕ್ ನೀಡಿದ 50 ಲಕ್ಷ ರೂಪಾಯಿ ದೇಣಿಗೆಯನ್ನು ಯಾಕೆ 2012ರಲ್ಲೇ ಹಿಂದಿರುಗಿಸಲಾಗಿಲ್ಲ ಎಂದು ಕಾಂಗ್ರೆಸ್ ವಿವರಿಸಬೇಕು ಎಂದು ಬಿಜೆಪಿ ಒತ್ತಾಯಿಸಿತು.
2016: ನವದೆಹಲಿ: ದೆಹಲಿ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಂಘದ (ಡಿಯುಎಸ್ ಯು) ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೂರು ಸ್ಥಾನಗಳನ್ನು ಗೆದ್ದುಕೊಂಡಿತು. ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ ಎಸ್ ಯುಐ) ಜಂಟಿ ಕಾರ್ಯದರ್ಶಿ ಸ್ಥಾನವನ್ನು ಗೆಲ್ಲುವ ಮೂಲಕ ಎರಡು ವರ್ಷಗಳ ಬಳಿಕ ಮತ್ತೆ ಡಿಯುಎಸ್ ಯು ಪ್ರವೇಶ ಮಾಡಿತು. ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ಹುದ್ದೆಗಳನ್ನು ಎಬಿವಿಪಿ ತನ್ನ ಬಗಲಿಗೆ ಹಾಕಿಕೊಂಡಿತು. ವಿದ್ಯಾರ್ಥಿ ಸಂಘದ ಪದಾಧಿಕಾರಿ ಹುದ್ದೆಗಳಿಗೆ ಹಿಂದಿನ ದಿನ ಚುನಾವಣೆ ನಡೆದಿತ್ತು.
2007: ಸ್ವಿಜರ್ಲೆಂಡಿನ ರೋಜರ್ ಫೆಡರರ್ ನಾಗಾಲೋಟಕ್ಕೆ ತಡೆಯೊಡ್ಡಬಲ್ಲ ಟೆನಿಸಿಗನೊಬ್ಬ ಇನ್ನೂ ಹುಟ್ಟಿಬಂದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ನ್ಯೂಯಾರ್ಕಿನ ಅರ್ಥರ್ ಆಷ್ ಕ್ರೀಡಾಂಗಣದಲ್ಲಿ ಕೊನೆಗೊಂಡ ಅಮೆರಿಕಾ ಓಪನ್ ಟೂರ್ನಿಯಲ್ಲಿ 12ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿದ ವಿಶ್ವದ ಅಗ್ರ ರ್ಯಾಂಕಿಂಗ್ ಆಟಗಾರ ಫೆಡರರ್ ವಿಶ್ವ ಟೆನಿಸ್ ನಲ್ಲಿ ತಮ್ಮ ಮೇಧಾವಿತ್ವ ಪ್ರಚುರಪಡಿಸಿದರು. ಫೈನಲಿನಲ್ಲಿ ಅವರು 7-6, 7-6, 6-4 ಅಂತರದಲ್ಲಿ ಸರ್ಬಿಯಾದ ಯುವ ಪ್ರತಿಭೆ ನೊವಾಕ್ ಜೊಕೊವಿಕ್ ಅವರನ್ನು ಮಣಿಸಿದರು. ಈ ಮೂಲಕ 14 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಅಮೆರಿಕದ ಪೀಟ್ ಸಾಂಪ್ರಾಸ್ ಅವರ ದಾಖಲೆ ಮುರಿಯುವ ನಿಟ್ಟಿನಲ್ಲೂ ಮತ್ತೊಂದು ಹೆಜ್ಜೆ ಮುಂದಿಟ್ಟರು. ಬಿಲ್ ಟಿಲ್ಡನ್ ಅವರು 1920 ರಿಂದ 25ರವರೆಗೆ ಸತತ ಆರು ವರ್ಷಗಳ ಕಾಲ ಅಮೆರಿಕಾ ಓಪನ್ ಪ್ರಶಸ್ತಿ ಗೆದ್ದಿದ್ದರು. ಆ ಬಳಿಕ ಆಟಗಾರನೊಬ್ಬ ಇಲ್ಲಿ ಸತತ ನಾಲ್ಕು ಬಾರಿ ಪ್ರಶಸ್ತಿ ಗೆದ್ದದ್ದು ಇದೇ ಮೊದಲು.
2007: ಪಾಕಿಸ್ಥಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರಿಗೆ ರಾಜಕೀಯ ಸವಾಲು ಹಾಕುವ ರೀತಿಯಲ್ಲಿ ಏಳು ವರ್ಷಗಳ ನಂತರ ಈದಿನ ಸ್ವದೇಶಕ್ಕೆ ಮರಳಿದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಪಾಕ್ ಸರ್ಕಾರ ಬಂಧಿಸಿ, ಕೆಲ ಗಂಟೆಗಳಲ್ಲೇ ಸೌದಿ ಅರೇಬಿಯಾಕ್ಕೆ ಗಡೀಪಾರು ಮಾಡಿತು. ಇದರಿಂದಾಗಿ ವಿಶ್ವದಾದ್ಯಂತ ಕುತೂಹಲ ಕೆರಳಿಸಿದ್ದ ಈ `ರಾಜಕೀಯ ಪ್ರಹಸನ' ಐದು ಗಂಟೆಗಳಲ್ಲಿ ಅಂತ್ಯಗೊಂಡಿತು. ಬೆಳಗಿನ ವೇಳೆಯಲ್ಲಿ ಲಂಡನ್ನಿನಿಂದ ಆಗಮಿಸಿದ ನವಾಜ್ ಷರೀಫ್ ಅವರನ್ನು ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಿ, 90 ನಿಮಿಷ ಕಾಲ ವಿಮಾನದಲ್ಲಿಯೇ ಇರಿಸಲಾಯಿತು. ನಂತರ ವಿಮಾನದಿಂದ ಇಳಿದ ಷರೀಫ್ಗೆ ಬಂಧನದ ವಾರಂಟ್ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು, ಅವರ ತೋಳು ಹಿಡಿದು ವಶಕ್ಕೆ ತೆಗೆದುಕೊಂಡರು. ಹೆಲಿಕಾಪ್ಟರಿನಲ್ಲಿ ಕೂರಿಸಿ, ಅಜ್ಞಾತ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಆನಂತರ ಹೆಲಿಕಾಪ್ಟರ್ ಇಸ್ಲಾಮಾಬಾದಿಗೆ ಮರಳಿ ಬಂತು. ನವಾಜರನ್ನು ವಿಶೇಷ ವಿಮಾನದಲ್ಲಿ ಬಲವಂತವಾಗಿ ಕೂರಿಸಲಾಯಿತು. ಅವರನ್ನು ಸೌದಿ ಅರೇಬಿಯಾದ ಜೆಡ್ಡಾಗೆ ಗಡೀಪಾರು ಮಾಡಲಾಗಿದೆ ಎಂದು ಕೆಲ ನಿಮಿಷಗಳಲ್ಲೇ ಅಧಿಕೃತವಾಗಿ ಪ್ರಕಟಿಸಲಾಯಿತು. 1999ರ ಅಕ್ಟೋಬರಿನಲ್ಲಿ ಸೇನಾ ಕ್ರಾಂತಿಯ ನಂತರ ಮುಷರಫ್, ನವಾಜ್ ಷರೀಫರನ್ನು ಪ್ರಧಾನಿ ಪಟ್ಟದಿಂದ ಪದಚ್ಯುತಗೊಳಿಸಿದ್ದರು. ಭ್ರಷ್ಟಾಚಾರದ ಆರೋಪದ ಮೇಲೆ ಜೂನ್ 2000ದಲ್ಲಿ ಪಾಕ್ ನ್ಯಾಯಾಲಯ ಷರೀಫ್ ಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. 21 ವರ್ಷಗಳ ಕಾಲ ಸಾರ್ವಜನಿಕ ಹುದ್ದೆ ವಹಿಸಿಕೊಳ್ಳದಂತೆ ನಿರ್ಬಂಧಿಸಿತ್ತು. ಪಾಕ್ ಸರ್ಕಾರ ಹಾಗೂ ಸೌದಿ ಅರೇಬಿಯಾ ರಾಜಮನೆತನದ ನಡುವೆ ಆದ ಒಪ್ಪಂದದಂತೆ ಷರೀಫ್ 2000ನೇ ಇಸ್ವಿ ಡಿಸೆಂಬರಿನಲ್ಲಿ ತಮ್ಮ ಕುಟುಂಬದ 20 ಸದಸ್ಯರೊಂದಿಗೆ ಜೆಡ್ಡಾದಲ್ಲಿ ಭೂಗತರಾದರು. ಈ ವರ್ಷ ಆಗಸ್ಟ್ 23ರಂದು ಪಾಕ್ ಸುಪ್ರೀಂಕೋರ್ಟ್ ನವಾಜ್ ಷರೀಫ್ ತಾಯ್ನಾಡಿಗೆ ಮರಳಬಹುದು ಎಂದು ತೀರ್ಪು ನೀಡಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ಮುಷರಫ್ ವಿರುದ್ಧ ಸಮರ ಸಾರಲು ತಾಯ್ನಾಡಿಗೆ ಮರಳುವುದಾಗಿ ಷರೀಫ್ ಘೋಷಿಸಿದ್ದರು.
2007: ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರ ಒಪ್ಪಂದದ ಪರಿಶೀಲನೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವಂತೆ ಆಗ್ರಹಿಸಿ ಸತತ ಎರಡನೇ ವಾರವೂ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದ ಪರಿಣಾಮ ಸಂಸತ್ತಿನ ಉಭಯ ಸದನಗಳನ್ನು ಯಾವುದೇ ಕಲಾಪ ನಡೆಸಲಾಗದೆ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಯಿತು. ಲೋಕಸಭೆಯಲ್ಲಿ ಬಿಜೆಪಿ ಸದಸ್ಯರು ಜೆಪಿಸಿ ರಚನೆಗೆ ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿದ ಸಂದರ್ಭದಲ್ಲಿಯೇ ಯಾವುದೇ ಚರ್ಚೆ ಇಲ್ಲದೆ ವೈಮಾನಿಕ (ತಿದ್ದುಪಡಿ) ಮಸೂದೆ-2006ನ್ನು ಅಂಗೀಕರಿಸಲಾಯಿತು. ಇದರೊಂದಿಗೆ ಏಜೆಂಟರು ಮತ್ತು ಕೊರಿಯರ್ ಏಜೆನ್ಸಿಗಳನ್ನು ಒಳಗೊಂಡಂತೆ ರಸ್ತೆ ಮೇಲಿನ ಸರಕು ಸಾಗಾಟವನ್ನು ನಿಯಂತ್ರಿಸುವ ಮತ್ತು ಬೆಲೆ ನಿಗದಿಪಡಿಸುವ ಪ್ರಮುಖ ಮಸೂದೆಗೂ ಲೋಕಸಭೆ ಅಂಗೀಕಾರ ನೀಡಿತು.
2007: ಆರು ತಿಂಗಳಿಂದ ದೇಶದಲ್ಲಿ ಆಂತರಿಕ ರಾಜಕೀಯದ ಮೇಲೆ ಹೇರಿದ್ದ ನಿಷೇಧವನ್ನು ಬಾಂಗ್ಲಾದೇಶದ ಸೇನಾ ಬೆಂಬಲಿತ ಹಂಗಾಮಿ ಸರ್ಕಾರ ರಾಜಧಾನಿ ಢಾಕಾದಲ್ಲಿ ಮಾತ್ರ ಹಿಂತೆಗೆದುಕೊಂಡಿತು. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಕಚೇರಿಗಳ ಬಾಗಿಲನ್ನು ಮತ್ತೆ ತೆರೆದವು. ದೇಶವನ್ನು ಉದ್ದೇಶಿಸಿ ಮಾತನಾಡಿದ ಸರ್ಕಾರದ ಮುಖ್ಯ ಸಲಹೆಕಾರ ಫಕ್ರುದ್ದೀನ್ ಅಹ್ಮದ್ ಅವರು, 2008ರೊಳಗೇ ದೇಶದಲ್ಲಿ ಸಂಸತ್ ಚುನಾವಣೆ ನಡೆಸುವುದಾಗಿ ಹೇಳಿದರು.
2007: ಕೊಲಂಬಿಯಾದ ಪಶ್ಚಿಮ ಕಡಲ ತೀರದ ಬಳಿ ಈದಿನ ರಾತ್ರಿ ರಿಕ್ಟರ್ ಮಾಪನದಲ್ಲಿ 6.8 ರಷ್ಟಿದ್ದ ಪ್ರಬಲ ಭೂಕಂಪ ಸಂಭವಿಸಿತು.
2006: ರಷ್ಯಾದ ಮರಿಯಾ ಶೆರ್ಪೋವಾ ಅವರು ಅಮೆರಿಕದ ನ್ಯೂಯಾರ್ಕಿನ ಫ್ಲಷಿಂಗ್ ಮಿಡೋಸ್ನ ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ ಓಪನ್ ಟೆನಿಸ್ ಚಾಫಿಯನ್ ಶಿಪ್ ನ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
2006: ಅಮೆರಿಕದ ಮೆಸಾಚ್ಯುಸೆಟ್ಸ್ ತಂತ್ರಜ್ಞಾನ ವಿಶ್ವವಿದ್ಯಾಲಯದ `ಟೆಕ್ನಾಲಜಿ ರಿವ್ಯೂ' ನಿಯತಕಾಲಿಕದ ಪ್ರತಿಷ್ಠಿತ ಪ್ರಶಸ್ತಿಗೆ ಭಾರತೀಯ ಮೂಲದ 6 ಮಂದಿ ಅಮೆರಿನ್ನರೂ ಸೇರಿದಂತೆ 35 ವಿಜ್ಞಾನಿಗಳನ್ನು ಆಯ್ಕೆ ಮಾಡಲಾಯಿತು. ಪೃಥ್ವೀಸ್ ಬಸು (ಬಿಬಿಎನ್ ಟೆಕ್ನಾಲಜೀಸ್), ರಾಮಕೃಷ್ಣಮೂರ್ತಿ (ಇಂಟೆಲ್), ಅಶೋಕ ಮಲೈಕಲ್ (ಲ್ಯೂಸೆಂಟ್ ಟೆಕ್ನಾಲಜೀಸ್), ಆನಂದ ರಘುನಾಥನ್ (ಎನ್ ಇಸಿ ಲ್ಯಾಬೋರೇಟರೀಸ್), ಜಯ್ ಶೆಂದುರೆ (ಹಾರ್ವರ್ಡ್ ಮೆಡಿಕಲ್ ಸ್ಕೂಲ್) ಮತ್ತು ಸುಮಿತ್ ಸಿಂಗ್ (ಸಿಸ್ಕೊ) ಈ ಗೌರವಕ್ಕೆ ಪಾತ್ರರಾದವರು.
1999: ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸಿದರು.
1988: ಯು.ಎಸ್. ಓಪನ್ ಪಂದ್ಯದಲ್ಲಿ ಸ್ಟೆಫಿ ಗ್ರಾಫ್ ಅವರು ಗ್ಯಾಬ್ರೀಲಾ ಸಬಾಟಿನಿ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ಟೆನಿಸ್ ಗ್ರ್ಯಾಂಡ್ ಸ್ಲಾಮ್ ಗೆದ್ದುಕೊಂಡ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
1981: ಇಪ್ಪತ್ತನೇ ಶತಮಾನದ ಶ್ರೇಷ್ಠ ವರ್ಣಚಿತ್ರ್ರ ಎನ್ನಲಾದ ಪಾಬ್ಲೊ ಪಿಕಾಸೋ ಅವರ `ಗುಯೆರ್ನಿಕಾ' ವರ್ಣಚಿತ್ರವು ಮ್ಯಾಡ್ರಿಡ್ ನ ಪ್ರಾಡೋ ಮ್ಯೂಸಿಯಂಗೆ ಹಿಂತಿರುಗಿತು. 1940ರಲ್ಲಿ ಸುರಕ್ಷಿತವಾಗಿ ಇಡುವ ಸಲುವಾಗಿ ಪಿಕಾಸೋ ಅದನ್ನು ನ್ಯೂಯಾರ್ಕಿಗೆ ಕಳುಹಿಸಿದ್ದರು.
1976: ಯುಗೋಸ್ಲಾವಿಯಾದ ವಾಯುನೆಲಯಲ್ಲಿ ಹಾರಾಡುತ್ತಿದ್ದ ಎರಡು ಪ್ರಯಾಣಿಕರ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು 176 ಪ್ರಯಾಣಿಕರು ಅಸು ನೀಗಿದರು.
1966: ಹರಿಯಾಣ ಮತ್ತು ಪಂಜಾಬನ್ನು ಪ್ರತ್ಯೇಕ ರಾಜ್ಯಗಳಾಗಿ ವಿಭಜಿಸುವ ಪಂಜಾಬ್ ಪುನರ್ರಚನಾ ಮಸೂದೆಗೆ ಸಂಸತ್ ಒಪ್ಪಿಗೆ.
1951: ಸಾಹಿತಿ ಕರೀಗೌಡ ಬೀಚನಹಳ್ಳಿ ಜನನ.
1946: ಡಾರ್ಜಿಲಿಂಗ್ ಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕೋಲ್ಕತ್ತಾದ ಮದರ್ ತೆರೇಸಾ ಅವರಿಗೆ ಅನಾಥರ ಸೇವೆ ಕೈಗೆತ್ತಿಕೊಳ್ಳುವಂತೆ `ದೈವ ಪ್ರೇರಣೆ'ಯಾಯಿತು.
1937: ಸಾಹಿತಿ ಬಿ.ಜಿ. ಸತ್ಯಮೂರ್ತಿ ಜನನ.
1936: ಭಾರತದ ಮಾಜಿ ಉಪರಾಷ್ಟ್ರಪತಿ ಬಸಪ್ಪ ದಾನಪ್ಪ ಜತ್ತಿ (ಬಿ.ಡಿ. ಜತ್ತಿ) (10-9-1936ರಿಂದ 7-6-2002) ಜನ್ಮದಿನ. ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿಯವರಾದ ಜತ್ತಿ ಸ್ವ ಸಾಮರ್ಥ್ಯದಿಂದ ತಮ್ಮ ಬದುಕು ರೂಪಿಸಿಕೊಂಡು ಭಾರತದ ಉಪರಾಷ್ಟ್ರಪತಿ ಸ್ಥಾನದವರೆಗಿನ ಉನ್ನತ ಸ್ಥಾನಕ್ಕೆ ಏರಿದವರು. ರಾಷ್ಟ್ರಪತಿ ಫಕ್ರುದ್ದೀನ್ ಆಲಿ ಅಹ್ಮದ್ ಅವರು ನಿಧನರಾದಾಗ ಸ್ವಲ್ಪ ಕಾಲ ಹಂಗಾಮಿ ರಾಷ್ಟ್ರಪತಿಯಾಗಿಯೂ ಜತ್ತಿ ಕಾರ್ಯ ನಿರ್ವಹಿಸಿದ್ದರು. ಗುಡ್ಡಗಾಡು ಪ್ರದೇಶದ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ 1943ರಲ್ಲಿಸಾವಳಗಿಯ ಗ್ರಾಮ ಪಂಚಾಯ್ತಿ ಸದಸ್ಯರಾದ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. 1940ರಲ್ಲಿ ನ್ಯಾಯವಾದಿಯಾಗಿ ಬದುಕು ಆರಂಭಿಸಿದ ಅವರು ರಾಜಕಾರಣಿಯಾಗಿ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿಕೊಂಡರು. ಅವರು ಹೊಂದಿದ್ದ ಪ್ರಮುಖ ಹುದ್ದೆಗಳಲ್ಲಿ ಕೆಲವು: ಮುಂಬೈ ವಿಧಾನಸಭೆಯ ಶಾಸಕ (1949), ಮುಂಬೈ ರಾಜ್ಯದ ಉಪ ಮುಖ್ಯಮಂತ್ರಿ (1955), ಭೂಸುಧಾರಣಾ ಮಂಡಲದ ಅಧ್ಯಕ್ಷ (1957), ರಾಜ್ಯ ಪುನರ್ ವಿಂಗಡಣೆಯ ಬಳಿಕ ಕರ್ನಾಟಕದ ಮುಖ್ಯಮಂತ್ರಿ (1958), ಪಾಂಡಿಚೇರಿಯ (ಈಗಿನ ಪುದುಚೆರಿ) ಲೆಫ್ಟಿನೆಂಟ್ ಗವರ್ನರ್ (1968), ಒರಿಸ್ಸಾ ರಾಜ್ಯದ ರಾಜ್ಯಪಾಲ (1972), ಭಾರತದ ಉಪರಾಷ್ಟ್ರಪತಿ (1974). ಭಾರತದ ಹಂಗಾಮೀ ರಾಷ್ಟ್ರಪತಿ (11-2-1977ರಿಂದ 25-7-1977).
1935: ಸಾಹಿತಿ ಆರ್. ರಾಚಪ್ಪ ಜನನ.
1926: ಸಾಹಿತಿ ಎ.ಎಂ. ಮುತ್ತಯ್ಯ ಜನನ.
1924: ಖ್ಯಾತ ಹಿಂದಿ ಬರಗಾರ ಕೆ.ಟಿ. ಗೋಪಾಲಕೃಷ್ಣನ್ ಜನನ.
1920: ತಮಿಳು ಭಾಷೆಯ ರಾಷ್ಟ್ರಕವಿ, ಉತ್ತಮ ವಾಗ್ಮಿ, ಸಂಪಾದಕ, ತತ್ವಜ್ಞಾನಿ, ಕ್ರಾಂತಿಕಾರಿ ಸುಬ್ರಹ್ಮಣ್ಯ ಭಾರತಿ ಜನನ.
1915: ಜತೀಂದ್ರನಾಥ ಮುಖರ್ಜಿ ಯಾನೆ ಬಾಘಾ ಜತಿನ್ ಅವರು ಒರಿಸ್ಸಾದ ಬಾಲಸೋರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಒಂದು ದಿನ ಮೊದಲು ಅವರು ಕಪ್ಟಿಪಾಡಾದಲ್ಲಿ ಬ್ರಿಟಿಷ್ ಪೊಲೀಸರ ಜೊತೆಗೆ ಗುಂಡಿನ ಘರ್ಷಣೆ ನಡೆಸಿದ್ದರು.
1909: ಅಣಕು ಸಾಹಿತ್ಯ, ಚುಟುಕು ಪದ್ಯಗಳ ಮೂಲಕ ಜನಮನ ಸೂರೆಗೊಂಡ `ಚುಟುಕು ಬ್ರಹ್ಮ' ದಿನಕರ ದೇಸಾಯಿ (10-9-1909ರಿಂದ 6-11-1982) ಅವರು ದತ್ತಾತ್ರೇಯ- ಅಂಬಿಕೆ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಅಂತರವಳ್ಳಿ ಗ್ರಾಮದ ಹಂಡದೊಕ್ಕಲ ದೇಸಾಯರ ಮನೆಯಲ್ಲಿ ಜನಿಸಿದರು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಇವರ ಬರವಣಿಗೆ ಆರಂಭ. ಕುಮಟಾದಿಂದ ಪ್ರಕಟವಾಗುತ್ತಿದ್ದ `ಕಾನಡಾ ಧುರೀಣ' ಪತ್ರಿಕೆಯಲ್ಲಿ ಸಂಪಾದಕ ಶ್ರೀರಾಮ ಸೋಮಯಾಜಿ ಅವರು ದಿನಕರ ದೇಸಾಯಿ ಬರೆದ ಕವನಗಳನ್ನು ಪ್ರಕಟಿಸಿ ಪ್ರೋತ್ಸಾಹ ನೀಡಿದರು. ಮುಂದೆ ವಿ.ಸೀ., ಬಿ.ಎಂ.ಶ್ರೀ. ಮಾರ್ಗದರ್ಶನ. ಅಣಕು ಸಾಹಿತ್ಯದ ಮೂಲಕ ಸಮಾಜ ಪರಿವರ್ತನೆಗೆ ಯತ್ನಿಸಿದ ದಿನಕರ ದೇಸಾಯಿ, ಭಾರತ ಸೇವಾ ಸಮಾಜ, ಕೆನರಾ ವೆಲ್ ಫೇರ್ ಟ್ರಸ್ಟುಗಳ ಮೂಲಕ ಕಾರ್ಮಿಕ ಸಂಘಟನೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಗ್ರ ಶಿಕ್ಷಣ ಅಭಿವೃದ್ಧಿಗೆ ಯತ್ನಿಸಿದರು. ಇದಕ್ಕಾಗಿ ಹೈಸ್ಕೂಲು, ಹೈಯರ್ ಸೆಕೆಂಡರಿ ಶಾಲೆ, ಕಾಲೇಜುಗಳು ಸೇರಿದಂತೆ 21 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಆರು ಸಮಾಜ ಸೇವಾ ಸಂಸ್ಥೆಗಳ ಸ್ಥಾಪನೆ ಜೊತೆಗೆ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು.
1894: ಸಾಹಿತಿ ಪಿ.ಆರ್. ರಾಮಯ್ಯ ಜನನ.
1887: ಭಾರತದ ರಾಷ್ಟ್ರೀಯ ನಾಯಕ ಗೋವಿಂದ ವಲ್ಲಭ ಪಂತ್ ಜನ್ಮದಿನ. ಸ್ವಾತಂತ್ರ್ಯಾನಂತರ ಇವರು ಉತ್ತರ ಪ್ರದೇಶದ ಪ್ರಥಮ ಮುಖ್ಯಮಂತ್ರಿಯಾದರು.
1872: ಜಗತ್ತಿನ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ನವನಗರದ ಸರ್ ರಣಜಿತ್ ಸಿನ್ಹಜಿ ವಿಭಾಜಿ ಮಹಾರಾಜ (1872-1933) ಜನ್ಮದಿನ. ಇವರ ಗೌರವಾರ್ಥ ಭಾರತದಲ್ಲಿ `ರಣಜಿ ಟ್ರೋಫಿ' ಸ್ಥಾಪಿಸಲಾಗಿದೆ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment