ಇಂದಿನ ಇತಿಹಾಸ History Today ಸೆಪ್ಟೆಂಬರ್ 27
2016: ನವದೆಹಲಿ: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು
ರಾಜ್ಯಗಳ ಸಭೆ ಕರೆಯುವಂತೆ ಹಾಗೂ ಮುಂದಿನ ಎರಡು ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡುವಂತೆ ನಿರ್ದೇಶಿಸಿದ ಸುಪ್ರೀಂಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿತು.
ಮುಂದಿನ ಎರಡು ದಿನಗಳ ಕಾಲ ಒಟ್ಟು 12,000 ಕ್ಯೂಸೆಕ್ ನೀರು ಬಿಡುವಂತೆ ಪೀಠ ಕರ್ನಾಟಕಕ್ಕೆ ಸೂಚಿಸಿತು. ಉಭಯ ರಾಜ್ಯಗಳ ಮತ್ತು ಕೇಂದ್ರ ಸರ್ಕಾರದ ಕಾರ್ಯ ನಿರ್ವಾಹಕ ಮುಖ್ಯಸ್ಥರ ಸಭೆಗೆ ವ್ಯವಸ್ಥೆ ಮಾಡುವಂತೆ ಪೀಠವು ಅಟಾರ್ನಿ ಜನರಲ್ ಅವರಿಗೆ ನಿರ್ದೇಶನ ನೀಡಿತು ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ನಡೆದ ವಿಚಾರಣೆಯಲ್ಲಿ ಕಾವೇರಿ ನೀರು ಬಿಡುವುದಿಲ್ಲ ಎಂಬುದಾಗಿ ಕರ್ನಾಟಕ ವಿಧಾನ ಮಂಡಲ ಕೈಗೊಂಡ ನಿರ್ಣಯವನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್ ಆದೇಶ ಪಾಲಿಸದೇ ಇರುವುದಕ್ಕಾಗಿ ಕರ್ನಾಟಕದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಮತ್ತು ಯು.ಯು. ಲಲಿತ್ ಅವರ ಪೀಠ ಪ್ರಕರಣದ ವಿಚಾರಣೆ ನಡೆಸಿ, ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ಕರ್ನಾಟಕ ವಿಧಾನ ಮಂಡಲ ನಿರ್ಣಯ ಅಂಗೀಕರಿಸಿದೆ ಎಂದು ಪ್ರಶ್ನಿಸಿದರು. ಸುಪ್ರೀಂಕೋರ್ಟ್ ಘನತೆ ಎತ್ತಿ ಹಿಡಿಯಿರಿ ಎಂದೂ ಪೀಠ ಕರ್ನಾಟಕದ ಪರ ವಕೀಲ ಫಾಲಿ ನಾರಿಮನ್ ಅವರಿಗೆ ಸೂಚಿಸಿತು. ಕರ್ನಾಟಕ ವಿಧಾನ ಮಂಡಳ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಆದ್ದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ನಾರಿಮನ್ ಕೋರ್ಟಿಗೆ ತಿಳಿಸಿದರು.
2016: ನವದೆಹಲಿ: ಉರಿ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಪಟ್ಟುಗಳನ್ನು ಇನ್ನಷ್ಟು ಬಿಗಿಗೊಳಿಸಿದ ಭಾರತ ಆ ರಾಷ್ಟ್ರಕ್ಕೆ ನೀಡಲಾಗಿದ್ದ ‘ಅತ್ಯಂತ ಒಲವಿನ ರಾಷ್ಟ್ರ’ (ಮೋಸ್ಟ್ ಫೇವರ್ಡ್ ನೇಷನ್) ಸ್ಥಾನಮಾನವನ್ನು ಮುಂದುವರೆಸಬೇಕೇ ಅಥವಾ ಹಿಂತೆಗೆದುಕೊಳ್ಳಬೇಕೆ ಎಂದು ಈಗ ನಿರ್ಧರಿಸಲು ತೀರ್ಮನಿಸಿತು. ಈ ಕುರಿತು ರ್ಚಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸೆ.29ರಂದು ಉನ್ನತ ಅಧಿಕಾರಿಗಳ ಸಭೆ ಕರೆದರು. ಭಾರತವು 1996ರಲ್ಲಿ ಏಕ ಪಕ್ಷೀಯವಾಗಿ ಪಾಕಿಸ್ತಾನಕ್ಕೆ ‘ಅತ್ಯಂತ ಒಲವಿನ ರಾಷ್ಟ್ರ’ ಸ್ಥಾನಮಾನವನ್ನು ನೀಡಿತ್ತು. ಭಾರತದ ನಿಲುವಿಗೆ ಪಾಕಿಸ್ತಾನದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ದಿನ
ಪಾಕಿಸ್ತಾನ
ಜೊತೆಗಿನ ಸಿಂಧು ಜಲ ಒಪ್ಪಂದವನ್ನು ನಾಟಕೀಯವಾಗಿ ಮರುಪರಿಶೀಲನೆ ನಡೆಸುವ ವಿಚಾರವೂ ಸೇರಿದಂತೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ಎಸ್. ಜೈ ಶಂಕರ್ ಅವರ ಜೊತೆಗೆ ಸಮಾಲೋಚಿಸಿದ್ದರು. ‘ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂದು ಹೇಳಿದ ಪ್ರಧಾನಿ ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುವ ಬಗ್ಗೆ ಚಿಂತಿಸಲು ಸೂಚಿಸಿದ್ದರು.
2016: ನವದೆಹಲಿ: ದಿವಂಗತ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಭಾರತದಲ್ಲಿ ಪ್ರಮುಖ ಆರ್ಥಿಕ ಬದಲಾವಣೆಗೆಳನ್ನು ತಂದರು ಆದರೆ ಅವರಿಗೆ ಈ ಕಾರ್ಯದಲ್ಲಿ ಬೆಂಬಲವಾಗಿ ನಿಂತದ್ದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಹೊರತು ಕಾಂಗ್ರೆಸ್ ಪಕ್ಷವಲ್ಲ ಎಂದು ಮಾಜಿ ಪ್ರಧಾಮಿ ಮನಮೋಹನ್ ಸಿಂಗ್ ಅವರ ಸಲಹೆಗಾರರಾಗಿದ್ದ ಸಂಜಯ್ ಬರು ಅವರು ಇಲ್ಲಿ ಹೇಳಿದರು. ‘1991 ಹೌ ಪಿವಿ. ನರಸಿಂಹರಾವ್ ಮೇಡ್ ಹಿಸ್ಟರಿ’ ಪುಸ್ತಕದಲ್ಲಿ ಸಂಜಯ್ ಬರು ಈ ವಿಷಯವನ್ನು ಬರೆದಿದ್ದಾರೆ. ನರಸಿಂಹ ರಾವ್ ಅವರು ಕಾಂಗ್ರೆಸ್ ಪಕ್ಷದ ಚುನಾಯಿತ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಪಕ್ಷವನ್ನು 5 ವರ್ಷ ಕಾಲ ಮುನ್ನಡೆಸಿದ್ದರು. ಆದರೆ ಕಾಂಗ್ರೆಸ್ ಪಕ್ಷವು ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿತು. ಅವರು ನಿಧನರಾದಾಗ ಅವರ ಪಾರ್ಥಿವ ಶರೀರವನ್ನು ಪಕ್ಷದ ಕೇಂದ್ರ ಕಚೇರಿಗೆ ತರಲು ಮತ್ತು ದೆಹಲಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ಅವಕಾಶ ನೀಡಲಿಲ್ಲ ಎಂದು ಬರು ನುಡಿದರು. ಇದಕ್ಕೂ ಮುನ್ನ 90ರ ದಶಕದಲ್ಲಿ ವಿ.ಪಿ.ಸಿಂಗ್ ಅವರ ಸರ್ಕಾರ ಉರುಳಿದಾಗ, ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಅಲ್ಪಸಂಖ್ಯಾತ ರಚನೆಗೆ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವಕಾಶ ನೀಡಿದರು. ಆದರೆ ಚಂದ್ರಶೇಖರ್ ಅವರಿಗೆ ಬೆಂಬಲದ ಭರವಸೆ ನೀಡಿದ್ದ ರಾಜೀವ್ ಗಾಂಧಿ ಅವರು ಮುಂಗಡ ಪತ್ರ ಮಂಡನೆಗೆ ಒಂದು ವಾರ ಮುಂಚಿತವಾಗಿ ಬೆಂಬಲ ಹಿಂಪಡೆದರು. ಕಾಂಗ್ರೆಸ್ ಪಕ್ಷದ ಈ ನಿರ್ಧಾರ ವಸ್ತುತಃ ರಾಷ್ಟ್ರವನ್ನು ಬಿಕ್ಕಟ್ಟಿನ ಅಂಚಿಗೆ ತಳ್ಳಿತ್ತು ಎಂದು ಬರು ಹೇಳಿದರು. ವಿ ಪಿ ಸಿಂಗ್ ಅವರ ರಾಜಕೀಯ ನಿರ್ವಹಣೆ ಮತ್ತು ರಾಜೀವ ಗಾಂಧಿ ಅವರ ಆರ್ಥಿಕ ನಿರ್ವಹಣೆಯಲ್ಲಿ ಸಮಸ್ಯೆಗಳಿದ್ದವು ಎಂದರು.
2016: ನವದೆಹಲಿ: ಭಾರತದ ವಿದೇಶಾಂಗ ಕಾರ್ಯದರ್ಶಿಯವರು ಭಾರತದಲ್ಲಿನ ಪಾಕಿಸ್ತಾನ ಹೈಕಮೀಷನರ್ ಅಬ್ದುಲ್ ಬಸಿತ್ ಅವರನ್ನು ಕರೆಸಿಕೊಂಡು ಉರಿ ದಾಳಿಗೆ ಸಂಬಂಧಿಸಿದ ಗಡಿಯಾಚಿನ ಪ್ರಚೋದನೆ, ನೆರವಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಹಸ್ತಾಂತರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಇಲ್ಲಿ ತಿಳಿಸಿದರು. ನುಸುಳುವಿಕೆಗೆ ನೆರವಾದ ಇಬ್ಬರು ಗೈಡ್ಗಳನ್ನು ಸ್ಥಳೀಯ ಗ್ರಾಮಸ್ಥರು ವಶಕ್ಕೆ ತೆಗೆದುಕೊಂಡಿದ್ದು ಅವರು ಈಗ ಪೊಲೀಸ್ ವಶದಲ್ಲಿದ್ದಾರೆ. ಅವರನ್ನು ಫೈಜಲ್ ಹುಸೇನ್ ಅವಾನ್ (20) ಮತ್ತು ಯಾಸೀನ್ ಖುರ್ಷಿದ್ (19) ಎಂಬುದಾಗಿ ಗುರುತಿಸಲಾಗಿದೆ. ಇವರಿಬ್ಬರೂ ಮುಜಾಫ್ಪರಾಬಾದ್ನವರು ಎಂದು ಸ್ವರೂಪ ನುಡಿದರು. ಪ್ರಾಥಮಿಕ ತನಿಖೆಯಿಂದ ಹತ ಭಯೋತ್ಪಾದಕರಲ್ಲಿ ಒಬ್ಬನನ್ನು ಮುಜಾಫ್ಪರಾಬಾದಿನ ದರ್ಭಾಂಗದ ನಿವಾಸಿ ಫೆರೋಜ್ ಎಂಬಾತನ ಪುತ್ರ ಹಫೀಜ್ ಅಹ್ಮದ್ ಎಂಬುದಾಗಿ ಪತ್ತೆ ಹಚ್ಚಲಾಗಿದೆ ಎಂದು ಅವರು ಹೇಳಿದರು.
2016: ನವದೆಹಲಿ: ಉರಿ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂಬ ಕಾರಣಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಪಾಕ್ ಕಲಾವಿದರು ಭಾರತ ತೊರೆಯಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದರಿಂದ . ಭಾರತದಲ್ಲಿರುವ ಹಲವು ಪಾಕಿಸ್ತಾನಿ ಕಲಾವಿದರು ಆತಂಕಕ್ಕೆ ಒಳಗಾದರು. ಇದಕ್ಕೆ ಬಾಲಿವುಡ್ ನಟ ಫವಾದ್ ಖಾನ್ ಕೂಡ ಹೊರತಾಗಿಲ್ಲ. ಕರಣ್ ಜೋಹರ್ ನಿದೇಶನದ ‘ಏ ದಿಲ್ ಹೈ ಮುಶ್ಕಿಲ್’ ಚಿತ್ರದಲ್ಲಿ ಬ್ಯುಸಿಯಾಗಿರುವ ಪಾಕ್ ನಟ ಫವಾದ್ ಜೀವ ಭಯದಲ್ಲಿ ಕಣ್ಮರೆಯಾದರು.
ಉರಿ ದಾಳಿಯಲ್ಲಿ ಭಾರತದ 18 ಸೈನಿಕರು ಮರಣ ಹೊಂದಿದ್ದಾರೆ. ಉಗ್ರರ ಈ ದಾಳಿಗೆ ಪಾಕ್ನ ಕುಮ್ಮಕ್ಕಿದೆ ಎನ್ನುವುದಕ್ಕೆ ಈಗಾಗಲೇ ಕೆಲವು ಪ್ರಾಥಮಿಕ ಸಾಕ್ಷ್ಯಳು ಸಹ ದೊರಕಿವೆ. ಇದರಿಂದ ಕೆರಳಿದ ಎಮ್ನ್ಎಸ್, ಪಾಕ್ ಕಲಾವಿದರು ದೇಶ ತೊರೆಯಲಿ ಎಂದು ಆಗ್ರಹಿಸಿತ್ತು.
ಅಷ್ಟೇ ಅಲ್ಲ ನೀವಾಗಿ ದೇಶ ತೊರೆಯದಿದ್ದಲ್ಲಿ ನಾವೇ ಕತ್ತು ಹಿಡಿದು ಹೊರದಬ್ಬಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಿತ್ತು.
2016: ನವದೆಹಲಿ: ಸಗಟು ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮತ್ತು ಅವರ ಪತ್ನಿಯ ವಿರುದ್ಧ ಹೂಡಲಾದ ಕ್ರಿಮಿನಲ್ ಕ್ರಮಗಳನ್ನು ರದ್ದು ಪಡಿಸುವಂತೆ ಕರ್ನಾಟಕ ಹೈಕೋರ್ಟ್ 2011ರಲ್ಲಿ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತು. ಇದರೊಂದಿಗೆ ಕುಮಾರ ಸ್ವಾಮಿ ಅವರಿಗೆ ಹಿನ್ನಡೆಯಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ವಿಚಾರಣೆ ಎದುರಿಸಿ ಎಂದು ಸುಪ್ರೀಂಕೋರ್ಟ್ ಮಾಜಿ ಮುಖ್ಯಮಂತ್ರಿಗೆ ನಿರ್ದೇಶನ ನೀಡಿತು. ವಿಚಾರಣಾ ನ್ಯಾಯಾಲಯದಲ್ಲಿ ಕುಮಾರ ಸ್ವಾಮಿ ಮತ್ತು ಅವರ ಪತ್ನಿಯ ವಿರುದ್ಧ ಹೂಡಲಾದ ಖಟ್ಲೆ ‘ರಾಜಕೀಯ ದುರುದ್ದೇಶದ್ದು’ ಎಂದು ಹೇಳಿದ ನ್ಯಾಯಮೂರ್ತಿ ವಿ. ಜಗನ್ನಾಥನ್ ನೇತೃತ್ವದ ಹೈಕೋರ್ಟ್ ಪೀಠ, ದಂಪತಿ ವಿರುದ್ಧದ ಕ್ರಿಮಿನಲ್ ಕ್ರಮಗಳನ್ನು ರದ್ದು ಪಡಿಸಿತ್ತು. ವಕೀಲರೊಬ್ಬರು ಸಲ್ಲಿಸಿದ ಖಾಸಗಿ ದೂರಿನ ಹಿಂದೆ ‘ಕಾಣದ ಕೈಗಳ’ ಕೈವಾಡವಿದೆ ಎಂದು ನ್ಯಾಯಮೂರ್ತಿ ಹೇಳಿದ್ದರು. ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
2016: ಶ್ರೀನಗರ: ಭಾರತೀಯ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ದೋಡಾ ಜಿಲ್ಲೆಯಲ್ಲಿ ಉಗ್ರಗಾಮಿಗಳ ಅಡಗುದಾಣದ ಮೇಲೆ ದಾಳಿ ನಡೆಸಿ, ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ ಪಡಿಸಿಕೊಂಡರು. ವರದಿಗಳ ಪ್ರಕಾರ ವಶಪಡಿಸಿಕೊಳ್ಳಲಾದ ಸಾಮಗ್ರಿಗಳಲ್ಲಿ 1 ಎಕೆ 47, 8ರಿಂದ 12 ಬೋರ್ ರೈಫಲ್, 3 ಗ್ರೆನೇಡ್ಗಳು, 2 ಪಿಸ್ತೂಲ್ಗಳು, 2263 ಸುತ್ತು ಮದ್ದು ಗುಂಡು, 2 ರೇಡಿಯೋ ಸೆಟ್ಗಳು ಮತ್ತು 2 ನಕ್ಷೆಗಳು ಸೇರಿವೆ.
2016: ನವದೆಹಲಿ: ಭ್ರಷ್ಟಾಚಾರ ಆರೋಪದ ಮೇಲೆ ಕಳೆದ ಜುಲೈನಲ್ಲಿ ಬಂಧನಕ್ಕೊಳಗಾಗಿದ್ದ ಮಾಜಿ
ಅಧಿಕಾರಿ ಬಿ.ಕೆ.ಬನ್ಸಲ್ ಅವರು 25 ವರ್ಷದ ಮಗನೊಂದಿಗೆ ಹಿಂದಿನ ದಿನ ಆತ್ಮಹತ್ಯೆ ಮಾಡಿಕೊಂಡರು.. ಬನ್ಸಲ್ ಕಳೆದ ಜುಲೈನಲ್ಲಿ ಬಂಧನಕ್ಕೊಳಗಾದ ಸಂದರ್ಭದಲ್ಲಿ ಅವರ ಮಗಳು ಮತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಪುತ್ರನ ಜತೆ ಬನ್ಸಲ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿ ತಿಳಿಸಿತು. ಬಂಧನಕ್ಕೊಳಗಾದ ಸಮಯದಲ್ಲಿ ಬನ್ಸಲ್ ಅವರು ಕಾರ್ಪೆರೇಟ್ ವ್ಯವಹಾರಗಳ ಸಚಿವಾಲಯದ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬನ್ಸಲ್ ಅವರು ಕಳೆದ ಆಗಸ್ಟ್ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು2016: ನವದೆಹಲಿ: ಭ್ರಷ್ಟಾಚಾರ ಆರೋಪದ ಮೇಲೆ ಕಳೆದ ಜುಲೈನಲ್ಲಿ ಬಂಧನಕ್ಕೊಳಗಾಗಿದ್ದ ಮಾಜಿ
2008: ರಾಜಧಾನಿ ದೆಹಲಿ ಎರಡು ವಾರಗಳ ಬಳಿಕ ಮತ್ತೊಮ್ಮೆ ಬಾಂಬ್ ಸ್ಫೋಟದಿಂದ ತಲ್ಲಣಿಸಿತು. ದಕ್ಷಿಣ ದೆಹಲಿಯ ಐತಿಹಾಸಿಕ ಕುತುಬ್ ಮಿನಾರ್ ಸಮೀಪ ಮೆಹರೋಲಿಯಲ್ಲಿನ ಸರಾಯ್ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಈದಿನ ಮಧ್ಯಾಹ್ನ ಸಂಭವಿಸಿದ ಬಾಂಬ್ ಸ್ಫೋಟದಿಂದ ಬಾಲಕನೊಬ್ಬ ಮೃತನಾಗಿ 17ಕ್ಕೂ ಅಧಿಕ ಮಂದಿ ಗಾಯಗೊಂಡರು. ಮಧ್ಯಾಹ್ನ 2.15ರ ಸುಮಾರಿಗೆ ಎಲೆಕ್ಟ್ರಾನಿಕ್ ಅಂಗಡಿಯೊಂದರ ಮುಂಭಾಗಕ್ಕೆ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ಯುವಕರು ಕಪ್ಪು ಪ್ಲಾಸ್ಟಿಕ್ ಚೀಲವೊಂದನ್ನು ರಸೆಯಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾದರು. ಬಾಂಬಿನ ಅರಿವಿಲ್ಲದೆ ಬಾಲಕ ಅದನ್ನು ಎತ್ತಿಕೊಂಡಾಗ ಅದು ಸ್ಫೋಟಿಸಿತು.
2008: ಚೀನಾದ ಗಗನಯಾನಿ ಜೈ ಜಿಗಾಂಗ್ ಗಗನನೌಕೆಯಿಂದ ಹೊರ ಬಂದು ಬಾಹ್ಯಾಕಾಶದಲ್ಲಿ ಇದೇ ಮೊದಲ ಬಾರಿಗೆ ನಡಿಗೆ ಆರಂಭಿಸಿ ಚೀನಾದ ಧ್ವಜವನ್ನು ಪ್ರದರ್ಶಿಸಿದರು.
2008: ಅಪಹರಣಕಾರರು ಪಶ್ಚಿಮ ಅಫ್ಘಾನಿಸ್ಥಾನದಲ್ಲಿ 118 ಮಂದಿ ಕಾರ್ಮಿಕ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು..
2008: ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ಎರಡು ಬಾರಿ ಪ್ರಬಲ ಭೂಕಂಪನ ಸಂಭವಿಸಿತು. ಮೊದಲ ಭೂಕಂಪನವು ರಿಕ್ಟರ್ ಮಾಪಕದಲ್ಲಿ 5.3ರಷ್ಟು ಇತ್ತು. ಮಿಂಡೋರೊ ಬಟಾನಾದಲ್ಲಿ ಸಂಭವಿಸಿದ ಎರಡನೇ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪನದಲ್ಲಿ 6.5ರಷ್ಟಿತ್ತು ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿದವು.
2008: ಸೈಬೀರಿಯಾದ ರಾಜಧಾನಿ ಡಮಾಸ್ಕಸ್ಸಿನಲ್ಲಿ ಕಾರು ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ 17 ಮಂದಿ ಮೃತರಾಗಿ ಹಲವರು ಗಾಯಗೊಂಡರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯ ಪ್ರಮುಖ ವೃತ್ತದಲ್ಲಿ ಈ ಕಾರು ಬಾಂಬ್ ಸ್ಫೋಟಿಸಿತು..
2007: 2007ರ ಏಪ್ರಿಲ್ 1ರಿಂದ ಎಲ್ಲ ಬಗೆಯ ಲಾಟರಿ ನಿಷೇಧ ಮಾಡಿ ಸರ್ಕಾರ ಕಳೆದ ಮಾರ್ಚ್ 27ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟಿನ ವಿಭಾಗೀಯ ಪೀಠ ಎತ್ತಿಹಿಡಿಯಿತು. ಸರ್ಕಾರದ ಅಧಿಸೂಚನೆಯನ್ನು ಕಳೆದ ಮೇ 8ರಂದು ಎತ್ತಿಹಿಡಿದ ಏಕಸದಸ್ಯಪೀಠದ ತೀರ್ಪನ್ನು ಪ್ರಶ್ನಿಸಿ ಅನೇಕ ಲಾಟರಿ ಮಾಲೀಕರು, ಏಜೆಂಟರು ಸಲ್ಲಿಸಿದ್ದ ಅರ್ಜಿ, ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಕೆ.ಶ್ರೀಧರ ರಾವ್ ಹಾಗೂ ನಾರಾಯಣ ಸ್ವಾಮಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾ ಮಾಡಿತು. `ಇದು ಸರ್ಕಾರದ ನೀತಿಗೆ ಸಂಬಂಧಪಟ್ಟ ವಿಚಾರ. ಲಾಟರಿಗೆ ನಿಷೇಧ ಹೇರುವ ವಿಚಾರ ಬಜೆಟ್ಟಿನಲ್ಲಿ ಪ್ರಸ್ತಾಪ ಆಗಿದ್ದು ಎರಡೂ ಸದನಗಳು ಅದಕ್ಕೆ ಅನುಮತಿ ನೀಡಿವೆ. ಅಲ್ಲದೇ ಲಾಟರಿ ಕಾಯ್ದೆಯು ಸಂಸತ್ತಿನಲ್ಲಿಯೂ ಅಂಗೀಕಾರ ಪಡೆದಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಪರಾಮರ್ಶೆ ಸಲ್ಲದು' ಎಂದು ಪೀಠ ಸ್ಪಷ್ಟಪಡಿಸಿತು. `ವೈಯಕ್ತಿಕ ಹಿತಾಸಕ್ತಿಗಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯ. ಕೆಲ ಲಾಟರಿ ಮಾಲೀಕರು ಅಥವಾ ಏಜೆಂಟರ ಹಿತಾಸಕ್ತಿಗಿಂತ ಲಾಟರಿ ಆಟವಾಡಿ ನಾಶವಾಗುತ್ತಿರುವ ಅನೇಕ ಕುಟುಂಬಗಳನ್ನು ರಕ್ಷಿಸುವಂಥ ಸಾರ್ವಜನಿಕ ಹಿತಾಸಕ್ತಿಯನ್ನು ಸರ್ಕಾರ ಗಮನದಲ್ಲಿ ಇಟ್ಟುಕೊಂಡಿದೆ. ಈ ಕಾರಣದಿಂದ ಲಾಟರಿ ನಿಷೇಧ ಕಾನೂನು ಬಾಹಿರ ಎನ್ನಲಾಗದು' ಎಂದು ಕೋರ್ಟ್ ಹೇಳಿತು.
2007: ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಕಂಪೆನಿಗೆ (ನೈಸ್) ನೀಡಲಾಗಿದ್ದ ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆ (ಬಿಎಂಐಸಿ) ಗುತ್ತಿಗೆಯನ್ನು ರದ್ದುಗೊಳಿಸಿ ಹೊಸ ಟೆಂಡರ್ ಕರೆಯುವ ರಾಜ್ಯ ಸರ್ಕಾರದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. `ನ್ಯಾಯಾಲಯದ ಮುಂದಿರುವ ಅರ್ಜಿ ಇತ್ಯರ್ಥಗೊಳ್ಳುವವರೆಗೆ ಹೊಸ ಟೆಂಡರ್ ಕರೆಯಲು ರಾಜ್ಯಸರ್ಕಾರ ಸೆಪ್ಟೆಂಬರ್ 17 ರಂದು ಹೊರಡಿಸಿರುವ ಅಧಿಸೂಚನೆ ಮೇಲೆ ಕ್ರಮಕೈಗೊಳ್ಳಬಾರದು' ಎಂದು ನ್ಯಾಯಮೂರ್ತಿ ಬಿ.ಎನ್.ಅಗರ್ವಾಲ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಹೇಳಿತು. ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಮ ಕೈಗೊಳ್ಳುವಂತೆ ಕೋರಿ ಅಶೋಕ್ ಖೇಣಿ ಅವರ ನೈಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಆದೇಶ ನೀಡಿತು.
2007: ಒರಿಸ್ಸಾ, ಉತ್ತರ ಪ್ರದೇಶ ಸರ್ಕಾರಗಳು `ರಿಲಯನ್ಸ್ ಹಣ್ಣು ಮತ್ತು ತರಕಾರಿ ಚಿಲ್ಲರೆ ಮಾರಾಟ ಮಳಿಗೆಗಳನ್ನು' (ರಿಲಯನ್ಸ್ ಫ್ರೆಶ್) ಮುಚ್ಚುವಂತೆ ಆದೇಶದ ನೀಡಿದ ಹಿನ್ನೆಲೆಯಲ್ಲಿ, ರಿಲಯನ್ಸ್ ಕಂಪೆನಿ ಈ ರಾಜ್ಯಗಳಲ್ಲಿ ಹೂಡಬೇಕಾಗಿದ್ದ ಅಂದಾಜು 13000 ಕೋಟಿ ರೂಪಾಯಿ ಬಂಡವಾಳದ ಯೋಜನೆಯನ್ನು ಸ್ಥಗಿತಗೊಳಿಸಿತು. ಡೆಹ್ರಾಡೂನಿನಲ್ಲೂ ಸಣ್ಣ ವ್ಯಾಪಾರಸ್ಥರ ಒಕ್ಕೂಟದವರು ರಿಲಯನ್ಸ್ ಫ್ರೆಶ್ ಮಳಿಗೆಗಳ ಮೇಲೆ ದಾಳಿ ನಡೆಸಿದರು. ಡೂನ್ ಉದ್ಯೋಗ ವ್ಯಾಪಾರ ಮಂಡಲ್ ಮತ್ತು ಲಘು ವ್ಯಾಪಾರ ಅಸೋಸಿಯೇಷನ್ ಸಂಸ್ಥೆಗಳು ಸೇರಿ ಮಳಿಗೆಗಳ ಮೇಲೆ ದಾಳಿ ನಡೆಸಿದವು.
2007: ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಅ.6 ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಪ್ರಧಾನಿ ಶೌಕತ್ ಅಜೀಜ್ ನೇತೃತ್ವದಲ್ಲಿ ಹಲವು ಸಚಿವರು ಹಾಗೂ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಆಡಳಿತರೂಢ ಪಾಕಿಸ್ಥಾನ ಮುಸ್ಲಿಂ ಲೀಗ್-ಕ್ಯೂ ಪಕ್ಷದ ಪ್ರಮುಖ ನಾಯಕರು ಮುಷರಫ್ ಪರವಾಗಿ ನಾಮಪತ್ರವನ್ನು ಮುಖ್ಯ ಚುನಾವಣಾ ಆಯುಕ್ತ ಫಾರೂಕ್ ಅವರಿಗೆ ಸಲ್ಲಿಸಿದರು.
2007: ವಿಶ್ವವಿದ್ಯಾಲಯದ 12 ಯುವತಿಯರನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ ಮೂವರು ದುಷ್ಕರ್ಮಿಗಳನ್ನು ಇರಾನಿನಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಲಾಯಿತು. ಸಹಸ್ರಾರು ಜನರ ಸಮ್ಮುಖದಲ್ಲಿ ಅವರನ್ನು ನೇಣುಬಿಗಿದು ಸಾಯಿಸಲಾಯಿತು.
2006: ಫ್ರೆಂಚ್ ವೈದ್ಯರು ತೂಕರಹಿತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ 10 ನಿಮಿಷಗಳ ಅವಧಿಯ ಮೊತ್ತ ಮೊದಲ ಶಸ್ತ್ರಚಿಕಿತ್ಸೆ ನಡೆಸಿದರು. ಬೋರ್ಡಿಯಕ್ಸ್ ವಿಶ್ವವಿದ್ಯಾಲಯ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಘಟಕದ ಮುಖ್ಯಸ್ಥ ಡೊಮಿನಿಕ್ ಮಾರ್ಟಿನ್ ನೇತೃತ್ವದ ನಾಲ್ವರು ವೈದ್ಯರ ತಂಡವು ಪಾರಾಬೋಲಿಕ್ ಫ್ಲೈಟ್- 25 ವಿಮಾನದಲ್ಲಿ 22 ಸೆಕೆಂಡುಗಳ ತೂಕರಹಿತ ಸ್ಥಿತಿಯಲ್ಲಿ ರೋಗಿಯ ಕೈಯ ಶಸ್ತ್ರಚಿಕಿತ್ಸೆ ನೆರವೇರಿಸಿದರು. ಈ ಶಸ್ತ್ರಚಿಕಿತ್ಸೆಗಾಗಿ ಏರ್ಬಸ್ ಎ 300 ವಿಮಾನವನ್ನು ಸಜ್ಜುಗೊಳಿಸಲಾಗಿತ್ತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ(ಐಎಸ್ಎಸ್) ಗಗನಯಾತ್ರಿಗಳಿಗಾಗಿ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿ ಪಡಿಸಲು ಈ ಪ್ರಯೋಗ ನೆರವಾಗುವುದು.
2006: ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಸಂಚುಗಾರ ಟೈಗರ್ ಮೆಮನ್ ನ ಸಹಚರರಲ್ಲಿ ಒಬ್ಬನಾದ ಮೊಹಮ್ಮದ್ ಮುಸ್ತಫಾ ಮುಸಾ ತರಾನಿಯನ್ನು ಟಾಡಾ ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿತು. ಈತನ ವಿರುದ್ಧದ ಎಲ್ಲ 12 ಆರೋಪಗಳೂ ಸಾಬೀತಾಗಿವೆ ಎಂದು ನ್ಯಾಯಾಲಯ ಹೇಳಿತು.
2006: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಜಿ ಆಟಗಾರ ದಿಲೀಪ್ ವೆಂಗ್ ಸರ್ಕಾರ್ ಆಯ್ಕೆಯಾದರು.
2006: ಬೆಳಗಾವಿಗೆ ರಾಜ್ಯದ ಎರಡನೇ ರಾಜಧಾನಿಯ ಸ್ಥಾನಮಾನ ನೀಡಲಾಗುವುದು. ಜೊತೆಗೆ ಅಲ್ಲಿ ಸುವರ್ಣ ವಿಧಾನ ಸೌಧ ನಿರ್ಮಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗಾವಿಯಲ್ಲಿ ನಡೆದ ಚಾರಿತ್ರಿಕ ವಿಧಾನ ಮಂಡಲ ಅಧಿವೇಶನ ಕಾಲದಲ್ಲಿ ವಿಧಾನಪರಿಷತ್ತಿನಲ್ಲಿ ಪ್ರಕಟಿಸಿದರು.
1998: ಸೋಷಿಯಲ್ ಡೆಮಾಕ್ರಾಟ್ ಸದಸ್ಯ ಗೆರ್ಹಾರ್ಡ್ ಶ್ರೋಡರ್ ಅವರು ಜರ್ಮನಿಯ ಚಾನ್ಸಲರ್ ಆಗಿ ಚುನಾಯಿತರಾದರು. ಇದರೊಂದಿಗೆ ಜರ್ಮನಿಯಲ್ಲಿ 16 ವರ್ಷಗಳ ಕನ್ಸರ್ವೇಟಿವ್ ಆಡಳಿತ ಕೊನೆಗೊಂಡಿತು.
1998: ಕೆನಡಾದ ಓಟಗಾರ ಬೆನ್ ಜಾನ್ಸನ್ ಅವರು ನಿಷೇಧಿತ ಸ್ಟೀರಾಯಿಡ್ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ರುಜುವಾತಾಗಿರುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿತು. ಸೋಲ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾನ್ಸನ್ ಪಡೆದುಕೊಂಡಿದ್ದ ಸ್ವರ್ಣ ಪದಕವನ್ನು ಕಿತ್ತುಕೊಂಡ ಸುದ್ದಿ ಜಗತ್ತಿನಾದ್ಯಂತ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಯಿತು. ಜಾನ್ಸನ್ ತಾನು ಸ್ಟೀರಾಯಿಡ್ ಸೇವಿಸಿದ್ದು ಹೌದೆಂದೂ, ಸಾರ್ವಜನಿಕರ ಎದುರು ತಾನು ಸೇವಿಸಿಲ್ಲ ಎಂದು ಸುಳ್ಳು ಹೇಳ್ದಿದುದಾಗಿಯೂ 1989ರ ಜೂನ್ ತಿಂಗಳಲ್ಲಿ ಒಪ್ಪಿಕೊಂಡ.
1996: ತಾಲಿಬಾನ್ ಬಂಡುಕೋರರು ಆಫ್ಘಾನಿ ಅಧ್ಯಕ್ಷ ಬರ್ ಹಾನ್ದುದೀನ್ ರಬ್ಬಾನಿ ಅವರ ಸರ್ಕಾರವನ್ನು ಪದಚ್ಯುತಿಗೊಳಿಸಿ, ರಾಜಧಾನಿ ಕಾಬೂಲನ್ನು ವಶಪಡಿಸಿಕೊಂಡರು. ಮಾಜಿ ನಾಯಕ ಮಹಮ್ಮದ್ ನಜೀಬುಲ್ಲಾ ಅವರನ್ನು ಗಲ್ಲಿಗೇರಿಸಿ, ಆಫ್ಘಾನಿಸ್ಥಾನವನ್ನು `ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರ' ಎಂಬುದಾಗಿ ಘೋಷಿಸಿದರು.
1989: ಹಿನ್ನೆಲೆ ಮತ್ತು ಸಂಗೀತ ನಿರ್ದೇಶಕ ಹೇಮಂತ ಕುಮಾರ್ ಮುಖರ್ಜಿ ನಿಧನರಾದರು.
1968: ಪೋರ್ಚುಗಲ್ ಪ್ರಧಾನಮಂತ್ರಿ ಆಂಟೋನಿಯೋ ಸಾಲಝಾರ್ ಅವರು ತಮ್ಮ 36 ವರ್ಷ 84 ದಿನಗಳ ಸುದೀರ್ಘ ಆಳ್ವಿಕೆಯ ಬಳಿಕ ನಿವೃತ್ತರಾದರು.
1958: ಮಿಹಿರ್ ಸೆನ್ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ದಾಟಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಡೋವರಿನಿಂದ ಕ್ಯಾಲಯಿಸ್ ವರೆಗಿನ 34 ಕಿ.ಮೀ. ದೂರವನ್ನು 14 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಿದರು.
1833: ಭಾರತದ ಧಾರ್ಮಿಕ, ಸಾಮಾಜಿಕ, ಶಿಕ್ಷಣ ಸುಧಾರಕ ರಾಜಾ ರಾಮ್ ಮೋಹನ ರಾಯ್ ಅವರು ಗ್ಲೌಸ್ಟರ್ ಶೈರ್ ನ ಬ್ರಿಸ್ಟಲಿನಲ್ಲಿ ತಮ್ಮ 61ನೇ ವಯಸಿನಲ್ಲಿ ನಿಧನರಾದರು.
1931: ಕೆಳದಿ ಸಂಸ್ಥಾನದ ಬಗ್ಗೆ ಸಂಶೋಧನೆ ನಡೆಸಿ ವಿಶ್ವ ಭೂಪಟದಲ್ಲಿ ಕೆಳದಿಯ ಹೆಸರು ಮೂಡಿಸಿದ ಗುಂಡಾ ಜೋಯಿಸ ಅವರು ನಂಜುಂಡಾ ಜೋಯಿಸರು- ಮೂಕಾಂಬಿಕೆ ದಂಪತಿಯ ಮಗನಾಗಿ ಸಾಗರ ತಾಲ್ಲೂಕಿನ ಕೆಳದಿಯಲ್ಲಿ ಜನಿಸಿದರು. ಕೆಳದಿಗೆ ಸಂಬಂಧಿಸಿದಂತೆ 35ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ ಅವರು ಗ್ರಾಮಾಂತರ ಕ್ಷೇತ್ರದಲ್ಲಿ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ ಪ್ರಾರಂಭಿಸಿ ಆಯುರ್ವೇದ, ಸಂಗೀತ, ಜ್ಯೋತಿಷ್ಯಕ್ಕೆ ಸಂಬಂಧಿಸಿದ 2000ಕ್ಕೂ ಹೆಚ್ಚು ಓಲೆಗರಿ, 120 ಚಾರಿತ್ರಿಕ ದಾಖಲೆಗಳು, 2-3 ಸಾವಿರ ವಿವಿಧ ಭಾಷಾ ಗ್ರಂಥಗಳು, ಕೃಷ್ಣದೇವರಾಯನ ಕಾಲದ ದಿನಚರಿಯ ಓಲೆಗಳು, ಸರ್ವಜ್ಞನ ಪೂರ್ವೋತ್ತರದ ತಾಡಪತ್ರಿಗಳು, ಮಹಾಭಾರತದ ಸೂಕ್ಷ್ಮ ವರ್ಣಚಿತ್ರಗಳು ಇತ್ಯಾದಿಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ.
1927: ಕೇಶವ ಬಲಿರಾಂ ಹೆಡ್ಗೇವಾರ್ ಅವರು ತಮ್ಮ ಕೆಲವು ಗೆಳೆಯರನ್ನು ಸೇರಿಸಿಕೊಂಡು ಮಹಾರಾಷ್ಟ್ರದ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ಸ್ಥಾಪಿಸಿದರು.
1907: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ (27-9-1907ರಿಂದ 24-3-1931) ಜನ್ಮದಿನ. ಅವಿಭಜಿತ ಭಾರತದ ಲಾಯಲ್ ಪುರದ ಪಶ್ಚಿಮ ಪಂಜಾಬಿಗೆ ಸೇರಿದ ಬಾಂಗಾ (ಈಗ ಪಾಕಿಸ್ಥಾನದಲ್ಲಿದೆ) ಗ್ರಾಮದಲ್ಲಿ ಈದಿನ ಜನಿಸಿದ ಭಗತ್ ಸಿಂಗ್ ಗೆ ತಂದೆ ಮತ್ತು ಚಿಕ್ಕಪ್ಪನಿಂದಲೇ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ. 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸ್ಥಳಕ್ಕೆ ಭೇಟಿ ನೀಡಿದ ಅವರು 12ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದ ದೀಕ್ಷೆ ಪಡೆದರು. ಸೈಮನ್ ಚಳವಳಿಯಲ್ಲಿ ಲಾಲಾ ಲಜಪತ್ ರಾಯ್ ಅವರ ಸಾವಿಗೆ ಕಾರಣನಾದ ಬ್ರಿಟಿಷ್ ಅಧಿಕಾರಿಯನ್ನು ಗುಂಡಿಟ್ಟು ಕೊಂದರು. 1929 ರಲ್ಲಿ ಸಂವಿಧಾನ ಸಭೆಗೆ ಬಾಂಬ್ ಹಾಕಿ ಬಂಧನಕ್ಕೆ ಒಳಗಾದರು. ಬ್ರಿಟಿಷ್ ವಿರೋಧಿ ಆರೋಪದಲ್ಲಿ ಅವರನ್ನು 1931ರ ಮಾರ್ಚ್ 24ರಂದು ಗಲ್ಲಿಗೇರಿಸಲಾಯಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment