Sunday, September 2, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 02

ಇಂದಿನ ಇತಿಹಾಸ History Today ಸೆಪ್ಟೆಂಬರ್ 02

2018: ವಾಷಿಂಗ್ಟನ್: ಉಗ್ರ ನಿಗ್ರಹಕ್ಕೆ ಸಂಬಂಧಿಸಿದಂತೆ ಅಮೆರಿಕದ ಪ್ರಾದೇಶಿಕ ನೀತಿಯನ್ನು ಬೆಂಬಲಿಸುವಲ್ಲಿ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳದ ಕಾರಣಕ್ಕಾಗಿ ಪಾಕಿಸ್ತಾನಕ್ಕೆ ನೀಡಲಾಗುವ ನೆರವನ್ನು ೩೦೦ ಮಿಲಿಯ (೩೦ ಕೋಟಿ) ಡಾಲರ್ ಗಳಿಗೆ ಮರುನಿಗದಿ ಮಾಡಲು ಅಮೆರಿಕ ಸೇನೆ ಕೋರಿದೆ ಎಂದು ಪೆಂಟಗಾನ್ ತಿಳಿಸಿತು. ಪಾಕಿಸ್ತಾನದಲ್ಲಿನ ಉಗ್ರಗಾಮಿಗಳ ಸುರಕ್ಷಿತ ’ಸ್ವರ್ಗಗಳ ಮೇಲೆ ಪರಿಣಾಮಕಾರಿ ದಾಳಿ ನಡೆಸಬೇಕು ಎಂದು ಆಗ್ರಹಿಸುತ್ತಿರುವ ಅಮೆರಿಕ ಈ ವರ್ಷದ ಆರಂಭದಲ್ಲಿ ೨ ಬಿಲಿಯನ್ (೨೦೦ ಕೋಟಿ) ಡಾಲರ್ ಮೊತ್ತದ ನೆರವನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಿಸಿತ್ತು.  ‘ಅಮೆರಿಕದ ದಕ್ಷಿಣ ಏಷ್ಯಾ ನೀತಿಯನ್ನು ಬೆಂಬಲಿಸುವಲ್ಲಿ ನಿರ್ಣಾಯಕ ಕ್ರಮ ಕೈಗೊಳ್ಳದ ಕಾರಣ ಪಾಕಿಸ್ತಾನಕ್ಕೆ ನೀಡಲಾಗುವ ನೆರವನ್ನು ೩೦ ಕೋಟಿ ಡಾಲರ್ ಗಳಿಗೆ (ವಾಸ್ತವವಾಗಿ ೩೨೩.೬ ಮಿಲಿಯ ಡಾಲರ್‌ನಲ್ಲಿ ಪಾಕಿಸ್ತಾನೇತರ ನೆರವೂ ಸೇರಿದೆ) ಇಳಿಸಿ ಮರುನಿಗದಿ ಮಾಡಿ ೨೦೧೮ರ ಜೂನ್/ ಜುಲೈ ತಿಂಗಳ ಇತರ ತುರ್ತು ಆದ್ಯತೆಗಳಿಗೆ ನೀಡಲು ಅಮೆರಿಕದ ರಕ್ಷಣಾ ಇಲಾಖೆ ತೀರ್ಮಾನಿಸಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಕೋನೆ ಫೌಲ್ಕನರ್ ಹೇಳಿದರು. ಪಾಕಿಸ್ತಾನಕ್ಕೆ ನೀಡಲಾಗುವ ನೆರವಿನ ಮರುನಿಗದಿ ಪ್ರಸ್ತಾಪಕ್ಕೆ ಕಾಂಗ್ರೆಸ್ ಅನುಮೋದನೆ ನೀಡುವುದೇ ಅಥವಾ ನಿರಾಕರಿಸುವುದೇ ಎಂಬುದಾಗಿ ರಕ್ಷಣಾ ಇಲಾಖೆ ಕಾಯುತ್ತಿದೆ ಎಂದು ಫೌಲ್ಕನರ್ ನುಡಿದರು. ಪಾಕಿಸ್ತಾನದಲ್ಲಿನ ಉಗ್ರಗಾಮಿ ಗುಂಪುಗಳ ವಿರುದ್ಧ ತಾನು ಭೀಕರ ಹೋರಾಟ ನಡೆಸಿದ್ದು, ಸಹಸ್ರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಕೋಟಿ ಗಟ್ಟಲೆ ಡಾಲರುಗಳನ್ನು ಈ ಭಯೋತ್ಪಾದನೆ ವಿರುದ್ಧದ ಸಮರಕ್ಕಾಗಿ ಬಳಸಿದೆ ಎಂದು ಪಾಕಿಸ್ತಾನ ಪ್ರತಿಪಾದಿಸಿತ್ತು. ಆದರೆ ಪಾಕಿಸ್ತಾನದ ಗಡಿಯಲ್ಲಿನ ಸುರಕ್ಷಿತ ತಾಣಗಳ ಮೂಲಕ ಆಫ್ಘಾನಿಸ್ಥಾನದಲ್ಲಿ ನಡೆಯುತ್ತಿರುವ ಉಗ್ರರ ದಾಳಿಗಳನ್ನು ಪಾಕಿಸ್ತಾನ ನಿರ್ಲಕ್ಷಿಸಿದೆ ಎಂದು ಅಮೆರಿಕದ ಅಧಿಕಾರಿಗಳು ಆಪಾದಿಸಿದರು. ಪಾಕಿಸ್ತಾನದ ಇಂಟರ್ -ಸರ್ವೀಸಸ್ ಏಜೆನ್ಸಿ ಮತ್ತು ಇತರ ಸೇನಾ ಸಂಸ್ಥೆಗಳು ಸೈದ್ಧಾಂತಿಕ ಕಾರಣಗಳಿಗಾಗಿ ಮತ್ತು ಆಫ್ಘಾನಿಸ್ಥಾನದಲ್ಲಿ ಭಾರತದ ಪ್ರಭಾವ ಬೆಳೆಯದಂತೆ ನೋಡಿಕೊಳ್ಳುವ ಸಲುವಾಗಿ, ತಾಲಿಬಾನ್‌ಗೆ ಹಣ ಮತ್ತು ಶಸ್ತ್ರಾಸ್ತ್ರ ನೆರವು ನೀಡುತ್ತಿದೆ ಎಂದು ಶ್ವೇತಭವನ ನಂಬಿತು. ಆಫ್ಘಾನಿಸ್ಥಾನದಲ್ಲಿ ಉಗ್ರಗಾಮಿಗಳ ವಿರುದ್ಧ ನಡೆಸಲಾಗುತ್ತಿರುವ ದೀರ್ಘ ಕಾಲದ ಸಮರವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನವು ದೇಶದೊಳಗಿನ ಉಗ್ರರ ದಮನಕ್ಕಾಗಿ ನಡೆಸುವ ಕಾರ್ಯಾಚರಣೆಗಳು ನಿರ್ಣಾಯಕವಾಗಿ ಅನುಕೂಲಕರವಾಗುತ್ತವೆ ಎಂದು ಅಮೆರಿಕ ಭಾವಿಸಿತು. ಪಾಕಿಸ್ತಾನದ ಬಗೆಗಿನ ಅಮೆರಿಕದ ಭ್ರಮನಿರಸನ ಈ ಹಿಂದೆಯೂ ಸ್ಫೋಟಗೊಂಡಿತ್ತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪೂರ್ವಾಧಿಕಾರಿ ಬರಾಕ್ ಒಬಾಮಾ ಅವರೂ ಪಾಕಿಸ್ತಾನದಲ್ಲಿನ ಉಗ್ರಗಾಮಿಗಳ ಸುರಕ್ಷಿತ ತಾಣಗಳ ಮೇಲೆ ಡ್ರೋನ್ ದಾಳಿ ನಡೆಸಲು ಅನುಮತಿ ನೀಡಿದ್ದರು ಮತ್ತು ಅಬ್ಬೊಟ್ಟಾಬಾದ್ ಅಡಗುತಾಣದಲ್ಲಿ ಅವಿತಿದ್ದ ಜೆಹಾದಿ ನಾಯಕ ಒಸಾಮಾ ಬಿನ್ ಲಾಡೆನ್ ಮೇಲೆ ದಾಳಿ ನಡೆಸಲು ಅಮೆರಿಕದ ಕಮಾಂಡೋಗಳನ್ನು ಕಳುಹಿಸಿದ್ದರು. ಆದರೆ ಇದಕ್ಕಿಂತಲೂ ಹೆಚ್ಚಾಗಿ ಟ್ರಂಪ್ ಅವರ ಆಕ್ರಮಣಕಾರಿ ಭಾಷೆ ಪಾಕಿಸ್ತಾನಿ ಅಧಿಕಾರಿಗಳ ರಕ್ತ ಕುದಿಸಿತ್ತು.  ‘ಅಮೆರಿಕವು ಮೂರ್ಖನಂತೆ ಪಾಕಿಸ್ತಾನಕ್ಕೆ ೩೩ ಬಿಲಿಯನ್ (೩೩೦ ಕೋಟಿ) ಡಾಲರ್‌ಗಳನ್ನು ಕಳೆದ ೧೫ ವರ್ಷಗಳ ಅವಧಿಯಲ್ಲಿ ನೀಡಿತು. ಇದಕ್ಕೆ ಪ್ರತಿಫಲವಾಗಿ ಅವರು ನಮಗೆ ಸುಳ್ಳುಗಳು ಮತ್ತು ವಂಚನೆಗಳನ್ನು ಬಿಟ್ಟು ಬೇರೆ ಏನನ್ನೂ ಕೊಡಲಿಲ್ಲ, ನಮ್ಮ ನಾಯಕರನ್ನು ಅವರು ಮೂರ್ಖರು ಎಂದು ಭಾವಿಸಿದರು ಎಂದು ಈ ವರ್ಷದ ಆರಂಭದಲ್ಲಿ ಟ್ರಂಪ್ ಟ್ವೀಟ್ ಮಾಡಿದ್ದರು.  ‘ಅವರು ಭಯೋತ್ಪಾದಕರಿಗೆ ಸುರಕ್ಷಿತ ನೆಲೆಗಳನ್ನು ಒದಗಿಸಿದರು, ನಾವು ಆಫ್ಘಾನಿಸ್ಥಾನದಲ್ಲಿ ಅತ್ಯಂತ ಕಡಿಮೆ ಬೆಂಬಲದೊಂದಿಗೆ ಭಯೋತ್ಪಾದಕರ ಬೇಟೆಯಾಡಬೇಕಾಯಿತು ಎಂದೂ ಟ್ರಂಪ್ ಟ್ವೀಟ್ ಮಾಡಿದ್ದರು. ಟ್ರಂಪ್ ಅವರು ಹೇಳಿದ ೩೩ ಬಿಲಿಯನ್ ನೆರವಿನ ಮೊತ್ತದ ಬಗ್ಗೆ ಪಾಕಿಸ್ತಾನಿ ನಾಯಕರು ಆಕ್ಷೇಪಿಸಿದರು. ಇದರ ಅರ್ಧದಷ್ಟು ಹಣವು ಮರುಪಾವತಿ ಮೊತ್ತಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಪಾಕಿಸ್ತಾನ ಹೇಳಿತು. ಅಲ್ಲದೆ ಟ್ರಂಪ್ ಅವರು ಉಗ್ರಗಾಮಿಗಳ ವಿರುದ್ಧದ ಸಮರದಲ್ಲಿ ಪಾಕಿಸ್ತಾನವು ಮಾಡಿದ ಮಹಾನ್ ಬಲಿದಾನಗಳನ್ನು ಟ್ರಂಪ್ ನಿರ್ಲಕ್ಷಿಸಿದ್ದಾರೆ ಎಂದೂ ಅದು ಆಪಾದಿಸಿತ್ತು.  ಮಾರ್ಚ್ ತಿಂಗಳಲ್ಲಿ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ’ಪಾಕಿಸ್ತಾನವು ನಮ್ಮ ಮನವಿಗಳಿಗೆ ಅತ್ಯಂತ ಕನಿಷ್ಠ ಪ್ರಮಾಣದ ಸ್ಪಂದನೆ ನೀಡಿದೆ ಎಂದು ಹೇಳಿದ್ದರು ಮತ್ತು ಇನ್ನೂ ಕಾರ್ಯಾಚರಿಸುತ್ತಿರುವ ಉಗ್ರಗಾಮಿ ಗುಂಪುಗಳ ವಿರುದ್ಧ ಪಾಕಿಸ್ತಾನದ ಶೂನ್ಯ ಕ್ರಮಗಳು ಕಳವಳ ಮೂಡಿಸುತ್ತದೆ ಎಂದು ಹೇಳಿದ್ದರು.  ‘ಎಲ್ಲ ಉಗ್ರಗಾಮಿ ಗುಂಪುಗಳನ್ನು ಯಾವುದೇ ತಾರತಮ್ಯ ಇಲ್ಲದೆ ದಮನಿಸಿ ಎಂಬುದಾಗಿ ಪಾಕಿಸ್ತಾನದ ಮೇಲೆ ಒತ್ತಡ ತರುವುದನ್ನು ನಾವು ಮುಂದುವರೆಸುತ್ತೇವೆ ಎಂದು ಫೌಲ್ಕನರ್ ನುಡಿದರು.

2018: ನವದೆಹಲಿ: ಶಿಸ್ತಿಗಾಗಿ ಕರೆ ಕೊಡುವುದನ್ನು ಈಗಿನ ದಿನಗಳಲ್ಲಿ ’ನಿರಂಕುಶಾಧಿಕಾರ ಎಂಬುದಾಗಿ ಬಿಂಬಿಸಲಾಗುತ್ತದೆ ಎಂದು ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ’ಶಿಸ್ತಿನ ವ್ಯಕ್ತಿ ಆಗಿರುವುದಕ್ಕಾಗಿ ಶ್ಲಾಘಿಸಿದರು. ಉಪರಾಷ್ಟ್ರಪತಿಯಾಗಿ ಮತ್ತು ರಾಜ್ಯಸಭೆಯ ಸಭಾಪತಿಯಾಗಿ ನಾಯ್ಡು ಮೊದಲ ವರ್ಷದ ಅನುಭವಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗಿದ್ದು, ಅದನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಮೋದಿ ’ನಾಯ್ಡು ಅವರು ಯಾವುದೇ ಹೊಣೆಗಾರಿಕೆಯನ್ನು ವಹಿಸಿಕೊಂಡಾಗಲೂ ಮುನ್ನೋಟದ ನಾಯಕತ್ವವನ್ನು ನೀಡುತ್ತಾರೆ ಎಂದು ಹೇಳಿದರು.  ‘ವೆಂಕಯ್ಯ ಜಿ ಅವರು ಒಬ್ಬ ಶಿಸ್ತಿನ ವ್ಯಕ್ತಿ, ಆದರೆ ನಮ್ಮ ರಾಷ್ಟ್ರದ ಪರಿಸ್ಥಿತಿ ಹೇಗಿದೆ ಎಂದರೆ ಈಗ ಶಿಸ್ತನ್ನು ಪ್ರಜಾಪ್ರಭುತ್ವ ವಿರೋಧಿ ಎಂಬುದಾಗಿ ಹೇಳುವುದು ಅತ್ಯಂತ ಸುಲಭವಾಗಿ ಬಿಟ್ಟಿದೆ. ಯಾರಾದರೂ ಒಬ್ಬರು ಶಿಸ್ತಿಗೆ ಕರೆಕೊಟ್ಟರೆ ಅವರನ್ನು ನಿರಂಕುಶಾಧಿಕಾರಿ ಎಂಬುದಾಗಿ ಬಿಂಬಿಸಲಾಗುತ್ತದೆ. ಇಡೀ ಶಬ್ದಕೋಶವನ್ನೇ ತೆರೆಯಲಾಗುತ್ತದೆ. ಆದರೆ ವೆಂಕಯ್ಯ ಜಿ ಅರು ತಾವು ಕರೆಕೊಡುವ ಶಿಸ್ತನ್ನು ಸ್ವತಃ ಪಾಲಿಸುತ್ತಾರೆ ಎಂದು ಎಂದು ಪ್ರಧಾನಿ ಹೇಳಿದರು. ನಾಯ್ಡು ಅವರು ಯಾವುದೇ ಕರ್ತವ್ಯವನ್ನು ನಿರ್ವಹಿಸಿದರೂ ಅತ್ಯಂತ ಶ್ರದ್ಧೆಯಿಂದ ಅದನ್ನು ನಿರ್ವಹಿಸುತ್ತಾರೆ ಮತ್ತು ಅತ್ಯಂತ ಸಮಾಧಾನದೊಂದಿಗೆ ಸರಾಗವಾಗಿ ಆ ಪಾತ್ರವನ್ನು ವಹಿಸುತ್ತಾರೆ ಎಂದು ಮೋದಿ ನುಡಿದರು. ‘ಅವರು ಕಳೆದ ೫೦ ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಇದ್ದಾರೆ. ಹತ್ತು ವರ್ಷ ವಿದ್ಯಾರ್ಥಿ ರಾಜಕೀಯದಲ್ಲಿ ಮತ್ತು ೪೦ ವರ್ಷಗಳನ್ನು ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಕಳೆದಿದ್ದಾರೆ ಎಂದು ಪ್ರಧಾನಿ ಹೇಳಿದರು. ‘ಮೂವಿಂಗ್ ಆನ್... ಮೂವಿಂಗ್ ಫಾರ್ವರ್ಡ್: ಎ ಈಯರ್ ಇನ್ ಆಫೀಸ್ ಶೀರ್ಷಿಕೆಯ ೨೪೫ ಪುಟಗಳ ಪುಸ್ತಕವು ನಾಯ್ಡು ಅವರು ನವಭಾರತ ನಿರ್ಮಾಣದ ಯೋಜನೆಯಲ್ಲಿ ರಾಷ್ಟ್ರಾದ್ಯಂತ ವಿವಿಧ ವ್ಯಕ್ತಿ, ಸಂಘಟನೆಗಳ ಜೊತೆ ನಾಲ್ಕು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ನಡೆಸಿದ ಮಾತುಕತೆ, ಚಟುವಟಿಕೆಗಳಿಗೆ ಸಂಬಂಧಿಸಿದ ಪುಸ್ತಕವಾಗಿದೆ. ಕಳೆದ ವರ್ಷ ಆಗಸ್ಟ್ ೧೧ರಂದು ತಾವು ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದಂದಿನಿಂದ ನಾಯ್ಡು ಅವರು ನಾಲ್ಕು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಅನುಭವ ಗಳಿಸಲು ನಡೆಸಿದ ರಾಷ್ಟ್ರವ್ಯಾಪಿ ಪ್ರವಾಸ ಮತ್ತು ಸಾರ್ವಜನಿಕರೊಂದಿಗಿನ  ಸಂವಾದ, ಸಾರ್ವಜನಿಕ ಭಾಷಣಗಳು ಪುಸ್ತಕದ ರೂಪ ಪಡೆದಿವೆ. ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಾಯ್ಡು ಅವರಿಗೆ ತಮ್ಮ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬಯಸಿದ್ದರು. ಆದರೆ ನಾಯ್ಡು ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಬೇಕು ಎಂಬುದಾಗಿ ತಾವು ಬಯಸಿರುವುದಾಗಿ ಅವರು ಹೇಳಿದ್ದರು ಎಂದು ಮೋದಿ ನುಡಿದರು.  ‘ವೆಂಕಯ್ಯ  ಜಿ ಅವರ ಹೃದಯದಿಂದಲೇ ರೈತ. ರೈತರ ಕಲ್ಯಾಣ ಮತ್ತು ಕೃಷಿ ಅವರ ಆಪ್ತ ವಿಷಯವಾಗಿತ್ತು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯು ನಾಯ್ಡು ಅವರ ಪ್ರಯತ್ನಗಳ ಫಲವಾಗಿಯೇ ರೂಪಿಸಲ್ಪಟ್ಟು ಅನುಷ್ಠಾನಗೊಂಡಿತು. ರಾಜಕೀಯ ಚರ್ಚೆಗಳು ರೈಲು ನಿಲುಗಡೆಗಳ ಬಗ್ಗೆ ಮಾತ್ರ ಕೇಂದ್ರೀಕೃತವಾಗಿದ್ದ ಸಮಯದಲ್ಲಿ ವೆಂಕಯ್ಯ ಜಿ ಅವರು ರಸ್ತೆಗಳು ಮತ್ತು ಸಂಪರ್ಕದ ಇತರ ವಿಧಾನಗಳ ಬಗ್ಗೆ ನಾಯಕರು ಚಿಂತನೆ ಆರಂಭಿಸುವಂತೆ ಮಾಡಿದರು ಎಂದು ಪ್ರಧಾನಿ ವಿವರಿಸಿದರು. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್, ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್, ಎಚ್.ಡಿ. ದೇವೇಗೌಡ, ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಆನಂದ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

2018: ಮಥುರಾ: ೧೨೬ ಯುದ್ಧ ವಿಮಾನಗಳ ಅಗತ್ಯ ಇದ್ದಾಗ ಸರ್ಕಾರವು ಫ್ರಾನ್ಸಿನ ಡಸ್ಸಾಲ್ಟ್ ಎವಿಯೇಷನ್ ಕಂಪೆನಿ ಜೊತೆಗೆ ಕೇವಲ ೩೬ ವಿಮಾನಗಳಿಗಾಗಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು ಹೇಗೆ ಏಕೆ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಪ್ರಶ್ನಿಸಿತು. ‘ಏನಾದರೂ ತುರ್ತು ಇದ್ದಿದ್ದರೆ  ಎಲ್ಲ ವಿಮಾನಗಳನ್ನೂ ಏಕಕಾಲಕ್ಕೆ ಸರಬರಾಜು ಮಾಡುವಂತೆ ಫ್ರೆಂಚ್ ಕಂಪೆನಿಗೆ ಏಕೆ ಸೂಚಿಸಲಿಲ್ಲ?’ ಎಂದು ಪಕ್ಷದ ರಾಷ್ಟ್ರೀಯ ವಕ್ತಾರರಾದ ಪ್ರಿಯಾಂಕಾ ಚತುರ್ವೇದಿ ಅವರು ಪ್ರಶ್ನಿಸಿದರು. ಮೊದಲ ಕಂತಿನ ವಿಮಾನಗಳು ೨೦೧೯ರಲ್ಲಿ ಸರಬರಾಜು ಆಗಲಿವೆ. ಉಳಿದವು ೨೦೨೨ರಲ್ಲಿ ಸರಬರಾಜು ಆಗಲಿವೆ. ಏನಾದರೂ ತುರ್ತು ಇದ್ದಿದ್ದರೆ ಎಲ್ಲ ವಿಮಾನಗಳನ್ನೂ ೨೦೧೯ರ ಒಳಗೆ ಸರಬರಾಜು ಮಾಡುವಂತೆ ಸೂಚಿಸಬೇಕಾಗಿತ್ತು ಎಂದು ಅವರು ನುಡಿದರು. ವ್ಯವಹಾರವು ನ್ಯಾಯೋಚಿತವಾಗಿದ್ದರೆ ಸರ್ಕಾರಕ್ಕೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಬಗ್ಗೆ ಅಂಜಿಕೆ ಏಕೆ ಎಂದೂ ಚಟುರ್ವೇದಿ ಕೇಳಿದರು. ಒಟ್ಟು ೧೨೬ ವಿಮಾನಗಳ ಅಗತ್ಯವಿತ್ತು, ಆದರೆ ಎನ್ ಡಿಎ ಸರ್ಕಾರವು ಕೇವಲ ೩೬ ವಿಮಾನಗಳಿಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ವಿಚಿತ್ರ ಎಂದು ಅವರು ನುಡಿದರು. ಸರ್ಕಾರವು ಲಕ್ಷಾಧೀಶ ಗೆಳೆಯನಿಗೆ ಅನುಕೂಲ ಅನುಕೂಲ ಮಾಡಿಕೊಡಲು ರಾಷ್ಟ್ರದ ಹಿತಾಸಕ್ತಿಗಳನ್ನು ಬಲಿಗೊಟ್ಟಿದೆ ಎಂದು ಅವರು ಆಪಾದಿಸಿದರು. ವಿಮಾನದ ಬೆಲೆಯ ಬಗ್ಗೆ ಕೂಡಾ ಪ್ರಸ್ತಾಪಿಸಿದ ಅವರು ತಲಾ ವಿಮಾನ ಬೆಲೆ ೫೨೬ ಕೋಟಿ ರೂಪಾಯಿಗಳಿಂದ ೧,೬೭೦ ಕೋಟಿ ರೂಪಾಯಿಗಳಿಗೆ ಏರಿದ್ದು ಹೇಗೆ ಎಂದೂ ಪ್ರಶ್ನಿಸಿದರು. ೭೦ ವರ್ಷಗಳ ಸ್ವಚ್ಛ ದಾಖಲೆ ಇರುವ ಸರ್ಕಾರಿ ರಂಗದ ಸಂಸ್ಥೆಯನ್ನು ನಿರ್ಲಕ್ಷಿಸಿದ ಸರ್ಕಾರ ಅನುಭವವೇ ಇಲ್ಲದ ಕೇವಲ ೧೨ ದಿನಗಳ ಕಂಪೆನಿಗೆ ಗುತ್ತಿಗೆ ವ್ಯವಹಾರ ವಹಿಸಿದ್ದು ಏಕೆ ಎಂದು ಪ್ರಧಾನಿ ವಿವರಿಸಬೇಕು ಎಂದು ಚತುರ್ವೇದಿ ನುಡಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ವ್ಯವಹಾರವನ್ನು ಜಾರಿಗೊಳಿಸಲು ಸಾಧ್ಯವಾಗದೇ ಇದ್ದರೂ, ಅದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲೂ  ಪಾರದರ್ಶಕತೆಯ ಖಾತರಿಯನ್ನು ಅದು ನೀಡಿತ್ತು ಎಂದು ಕಾಂಗ್ರೆಸ್ ನಾಯಕಿ ಹೇಳಿದರು.  ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಇದಕ್ಕೆ ಮುನ್ನ, ತಮ್ಮ ಸರ್ಕಾರವು ಖರೀದಿಸಲಿರುವ ಸಂಪೂರ್ಣ ಶಸ್ತ್ರಸಜ್ಜಿತವಾದ ಯುದ್ಧ ವಿಮಾನಗಳು ಹಿಂದಿನ ಯುಪಿಎ ಸರ್ಕಾರವು ಅಂದಾಜು ಮಾಡಿದ್ದ ದರಕ್ಕಿಂತ ಶೇಕಡಾ ೨೦ರಷ್ಟು ಅಗ್ಗವಾಗಿವೆ ಎಂದು ಪ್ರತಿಪಾದಿಸಿದ್ದರು.  ೨೦೧೫ರಲ್ಲಿ ಆಗಿನ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ಅತ್ಯಂತ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ೧೨೬ ಫ್ರೆಂಚ್ ವಿಮಾನಗಳನ್ನು ಖರೀದಿಸುವ ಹಿಂದಿನ ಯೋಜನೆಯನ್ನು ರದ್ದು ಪಡಿಸಿ ಕೇವಲ ೩೬ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ನಿರ್ಧರಿಸಿದೆ ಎಂದು ಪ್ರಕಟಿಸಿದ್ದರು.  

2018: ನವದೆಹಲಿ: ಸ್ವೀಡಿಶ್ ಗೃಹ ಪೀಠೋಪಕರಣ ದೈತ್ಯ ಸಂಸ್ಥೆಯು ಭಾರತದಲ್ಲಿ ಆರಂಭಿಸಿದ ಐಕೆಇಎ ರೆಸ್ಟೋರೆಂಟಿನ ವೆಜಿಟೇಬಲ್ ಬಿರಿಯಾಣಿಯಲ್ಲಿ ಕಂಬಳಿ ಹುಳ ಪತ್ತೆಯಾಗಿದ್ದು, ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಷನ್ (ಜಿಎಚ್ ಎಂಸಿ) ಇದಕ್ಕಾಗಿ ಐಕೆಇಎ ರೆಸ್ಟೋರೆಂಟ್ ಗೆ ೧೧,೫೦೦ ರೂಪಾಯಿಗಳ ದಂಡ ವಿಧಿಸಿತು. ಹೈದರಾಬಾದಿನಲ್ಲಿರುವ ಐಕೆಇಎ ರೆಸ್ಟೋರೆಂಟಿನಲ್ಲಿ ನೀಡಲಾದ ತನ್ನ ವೆಜಿಟೇಲ್ ಬಿರಿಯಾಣಿಯಲ್ಲಿ ಕಂಬಳಿ ಹುಳ ಇತ್ತು ಎಂಬುದಾಗಿ ತೆಲಂಗಾಣದ ವ್ಯಕ್ತಿಯೊಬ್ಬರು ದೂರು ನೀಡಿದ್ದು, ಕಂಪೆನಿಗೆ ಸುತ್ತಿಕೊಂಡ ಚೊಚ್ಚಲ ವಿವಾದ ಇದು. ಅಬೀದ್ ಮುಹಮ್ಮದ್ ಎಂಬ ವ್ಯಕ್ತಿ ತಮಗೆ ನೀಡಲಾದ ವೆಜಿಟೇಬಲ್ ಬಿರಿಯಾಣಿ ತಟ್ಟೆಯಲ್ಲಿ ಕಂಬಳಿ ಹುಳ ಇದ್ದ ಚಿತ್ರವನ್ನು ಬಿಲ್ ಚಿತ್ರ ಸಹಿತವಾಗಿ ಟ್ವೀಟ್ ಮಾಡಿ ಅದನ್ನು ಹೈದರಾಬಾದ್ ಪೊಲೀಸ್, ಕೈಗಾರಿಕೆ ಮತ್ತು ವಾಣಿಜ್ಯ ಸಚಿವರು, ಮುನಿಸಿಪಲ್ ಆಡಳಿತ ಮತ್ತು ನಗರಾಭಿವೃದ್ಧಿ ಕೆಟಿಆರ್, ಐಕೆಇಎ ಹೈದರಾಬಾದ್ ಮತ್ತಿತರರಿಗೆ ಲಿಂಕ್ ಮಾಡಿದರು.  ‘ಐಕೆಇಎಹೈದರಬಾದ್ ಈದಿನ ನನಗೆ ನನ್ನ ವೆಜಿಟೇಬಲ್ ಬಿರಿಯಾಣಿ ಜೊತೆಗೆ ಕಂಬಳಿಹುಳ ಲಭಿಸಿತು. ಅತ್ಯಂತ ಅನ್ಯಾಯದ ಆಹಾರ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಜೊತೆಗೆ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಷನ್ ಗೂ ಅವರು ದೂರು ನೀಡಿದರು. ಮುನಿಸಿಪಲ್ ಕಾರ್ಪೋರೇಷನ್ ಐಕೆಇಎ ರೆಸ್ಟೋರೆಂಟ್ ಮ್ಯಾನೇಜರ್ ಮತ್ತು ವೆಜ್ ಬಿರಿಯಾಣಿ ಮಾರಾಟಗಾರರಾದ ನಾಗಪುರದ ಹಲ್ದೀರಾಮ್‌ಗೆ ನೋಟಿಸ್ ಗಳನ್ನು ಜಾರಿ ಮಾಡಿತು. ಐಕೆಇಎ ಹಲ್ದೀರಾಮ್ ಅವರಿಂದ ವೆಜ್ ಬಿರಿಯಾಣಿಯನ್ನು ಪಡೆದು ಸರಬರಾಜು ಮಾಡುತ್ತದೆ ಎಂದು ಹೇಳಲಾಯಿತು. ವ್ಯಕ್ತಿಯೊಬ್ಬರು ಮಾಡಿದ ಟ್ವೀಟನ್ನು ಗಮನಕ್ಕೆ ತೆಗೆದುಕೊಂಡ ಜಿಎಚ್ ಎಂಸಿ ಅಧಿಕಾರಿಗಳು ಐಕೆಇಎ ರೆಸ್ಟೋರೆಂಟಿನ ಅಡುಗೆಕೋಣೆ ಮತ್ತು ಫುಡ್ ಕೋರ್ಟ್‌ಗಳಲ್ಲಿ ತಪಾಸಣೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ೫೦ ಮೈಕ್ರೋನ್ ಗಳಿಗಿಂತ ಕೆಳಗಿನ ಗುಣಮಟ್ಟದ ಪ್ಲಾಸ್ಟಿಕ್ ಬಳಸುತ್ತಿದ್ದುದು ಸೇರಿದಂತೆ ಹಲವಾರು ಉಲ್ಲಂಘನೆಗಳು ಬೆಳಕಿಗೆ ಬಂದವು. ಈ ಹಿನ್ನೆಲೆಯಲ್ಲಿ ಜಿಎಚ್‌ಎಂಸಿ  ೧೧,೫೦೦ ರೂಪಾಯಿ ದಂಡ ವಿಧಿಸಿತು.  ಐಕೆಇಎ ಆಡಳಿತ ಆಡಳಿತ ಆ ಬಳಿಕ ಗ್ರಾಹಕನ ಬಳಿ ಕ್ಷಮೆ ಯಾಚಿಸಿತು. ‘ನಾವು ಘಟನೆಗಾಗಿ ವಿಷಾದಿಸುತ್ತೇವೆ ಮತ್ತು ಈ ದುರದೃಷ್ಟಕರ ಅನುಭವಕ್ಕಾಗಿ ನಮ್ಮ ಗ್ರಾಹಕನ ಬಳಿ ಕ್ಷಮೆ ಯಾಚಿಸುತ್ತೇವೆ. ಹೀಗೇಕಾಯಿತು ಎಂಬುದಾಗಿ ತಿಳಿಯಲು ನಾವು ವಿಷಯದ ಬಗ್ಗೆ ಗಮನ ಹರಿಸಿದ್ದೇವೆ ಮತ್ತು ಮುಂದಕ್ಕೆ ತಪ್ಪಾಗದಂತೆ ತತ್ ಕ್ಷಣವೇ ಕ್ರಮ ಕೈಗೊಳ್ಳುತ್ತೇವೆ. ಆಹಾರದ ಸುರಕ್ಷೆ ಮತ್ತು ಗುಣಮಟ್ಟದ ವಿಚಾರದಲ್ಲಿ ಐಕೆಇಎಯಲ್ಲಿ ಅತ್ಯಂತ ಬಿಗಿ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲಾಗುತ್ತದೆ, ಅದೇ ರೀತಿ ಗ್ರಾಹಕರ ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಆಳವಾದ ಎಚ್ಚರಿಕೆ ವಹಿಸಲಾಗುತ್ತದೆ ಎಂಬುದಾಗಿ ಈ ಗ್ರಾಹಕ ಹಾಗೂ ಇತರರಿಗೆ  ಆಶ್ವಾಸನೆ ನೀಡಲು ಬಯಸುತ್ತೇವೆ ಎಂದು ಐಕೆಇಎ ವಕ್ತಾರರು ಹೇಳಿದರು.

2018: ಹೈದರಾಬಾದ್: ದೆಹಲಿ ಪಕ್ಷಗಳನ್ನು ಸೋಲಿಸಲು ನಾವು ತಮಿಳುನಾಡಿನಂತೆ ಒಟ್ಟಾಗಬೇಕು ಎಂಬುದಾಗಿ ಕರೆ ನೀಡಿದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ವಿಧಾನಸಭೆ ಚುನಾವಣೆಗಾಗಿ ಪಕ್ಷದ ಪ್ರಣಾಳಿಕೆ ರೂಪಿಸಲು ಸಮಿತಿಯೊಂದನ್ನು ರಚಿಸುವುದಾಗಿ ಪ್ರಕಟಿಸಿದರು.  ‘ಕೆಲವು ಟಿವಿ ಮಾಧ್ಯಮಗಳು ಕೆಸಿಆರ್ ಅವರು ಸರ್ಕಾರವನ್ನು ವಿಸರ್ಜಿಸುತ್ತಾರೆ ಎಂದು ಹೇಳುತ್ತಿವೆ. ತೆಲಂಗಾಣದ ಭವಿಷ್ಯದ ಬಗ್ಗೆ ನಿರ್ಧರಿಸುವ ಅವಕಾಶವನ್ನು ಟಿಆರ್ ಎಸ್ (ತೆಲುಗು ರಾಷ್ಟ್ರ ಸಮಿತಿ) ಸದಸ್ಯರು ನನಗೆ ನೀಡಿದ್ದಾರೆ. ನಾನು ನಿರ್ಧಾರ ಕೈಗೊಂಡಾಗ ನಿಮಗೆ ತಿಳಿಸುವೆ ಎಂದು ಹೈದರಾಬಾದ್ ಹೊರವಲಯದಲ್ಲಿ ಸಂಘಟಿಸಲಾಗಿದ್ದ ಬೃಹತ್ ಕೊನಗರ ಕಲನ್ ರ್‍ಯಾಲಿಯಲ್ಲಿ ಅವರು ಹೇಳಿದರು.  ಸುಮಾರು ಎರಡು ಗಂಟೆಯಷ್ಟು ತಡವಾಗಿ ಆಗಮಿಸಿದ ಮುಖ್ಯಮಂತ್ರಿ ಅದಕ್ಕೆ ಮುನ್ನ ಹೈದರಾಬಾದಿನಲ್ಲಿ ಸಚಿವ ಸಂಪುಟ ಸಭೆ ನಡೆಸಿದರು. ಸಚಿವ ಸಂಪುಟ ಸಭೆಯಲ್ಲಿ ಕೆಸಿಆರ್ ಅವರು ವಿಧಾನಸಭೆ ವಿಸರ್ಜಿಸಿ, ಶೀಘ್ರ ಚುನಾವಣೆಗೆ ಶಿಫಾರಸು ಮಾಡುವ ನಿರ್ಧಾರ ಕೈಗೊಳ್ಳುವರು ಎಂಬ ವ್ಯಾಪಕ ವದಂತಿಗಳು ಹರಡಿದ್ದವು. ಆದರೆ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಧಾರ ಆಗಿಲ್ಲ ಎನ್ನಲಾಗಿದ್ದು, ಈ ಬಗ್ಗೆ ನಿರ್ಧರಿಸಲು ಶೀಘ್ರದಲ್ಲೇ ಇನ್ನೊಮ್ಮೆ ಸಂಪುಟ ಸಭೆ ನಡೆಯಬಹುದು ಎಂದು ಹೇಳಲಾಯಿತು. ಏನಿದ್ದರೂ, ಸರ್ಕಾರವು ಹೊರಡಿಸಿರುವ ಇತ್ತೀಚಿನ ಸುತ್ತೋಲೆಯಲ್ಲಿ ಮುಖ್ಯ ಕಾರ್‍ಯದರ್ಶಿಯವರು ಎಲ್ಲ ಇಲಾಖೆಗಳಿಗೆ ಸೆಪ್ಟೆಂಬರ್ ೪ರ ಮಂತ್ರಿಮಂಡಲ ಸಭೆಗೆ ಮುಂಚಿತವಾಗಿ ತಮ್ಮ ಪ್ರಸ್ತಾವಗಳನ್ನು ಸಲ್ಲಿಸುವಂತೆ ಸೂಚಿಸಿದರು. ಈದಿನದ ಸಂಪುಟ ಸಭೆಯಲ್ಲಿ ಅರ್ಚಕರ ನಿವೃತ್ತಿ ವಯಸ್ಸು ಏರಿಕೆ, ಆಶಾ ಕಾರ್‍ಯಕರ್ತರು ಮತ್ತು ವೈದ್ಯಕೀಯ ಇಲಾಖೆಯ ಕಾಂಟ್ರಾಕ್ಟ್ ಸಿಬ್ಬಂದಿಯ ವೇತನ ಏರಿಕೆ ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ವರದಿಗಳು ಹೇಳಿದವು. ಪ್ರಗತಿ ನಿವೇದನಾ ಸಭಾ ಸಭೆಯಲ್ಲಿ ಯಾವುದೇ ರಾಜಕೀಯ ಪ್ರಕಟಣೆಗಳನ್ನು ಮಾಡದ ಮುಖ್ಯಮಂತ್ರಿ ತಮ್ಮ ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಮಾತನಾಡಿದರು.  ‘ವಿರೋಧ ಪಕ್ಷಗಳ ಭರವಸೆಗಳಿಗೆ ಮರುಳಾಗಬೇಡಿ. ತೆಲಂಗಾಣವು ತಮಿಳುನಾಡಿನಂತೆ ಇರಬೇಕು. ದೆಹಲಿ ಆಧಾರಿತ ರಾಜಕೀಯವನ್ನು ವಿರೋಧಿಸಲು ಜನರು ಒಗ್ಗಟ್ಟಾಗಬೇಕು ಎಂದು ಅವರು ನುಡಿದರು.
ಆರ್ಥಿಕ ಪ್ರಗತಿಯಲ್ಲಿ ತೆಲಂಗಾಣ ನಂ.೧ ರಾಜ್ಯವಾಗಿದೆ. ರಾಜ್ಯವು ಶೇಕಡಾ ೧೭.೧೭ರಷ್ಟು ಬೆಳವಣಿಗೆ ದಾಖಲಿಸಿದೆ. ಪುನಃ ಅಧಿಕಾರಕ್ಕೆ ಬರಬೇಕು ಎಂದು ಜನರು ಟಿಆರ್ ಎಸ್ ಗೆ ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.  ಈವರೆಗೆ ೨೨,೦೦೦ ಗ್ರಾಮಗಳು ಶುದ್ಧ ನೀರನ್ನು ಪಡೆದಿವೆ. ಉಳಿದ ೧೩೦೦ ಗ್ರಾಮಗಳಿಗೆ ಮುಂದಿನ ೭-೮ ದಿನದಲ್ಲಿ ಶುದ್ಧ ನೀರು ಸಿಗಲಿದೆ. ಈ ಮನೆಗಳಿಗೆ ನೀರು ಬಂದ ಬಳಿಕವೇ ನಾನು ಓಟು ಕೇಳುತ್ತೇನೆ ಎಂದು ಅವರು ನುಡಿದರು. ರೈತುಬಂಧು ಯೋಜನೆಯ ಅಡಿಯಲ್ಲಿ ೫,೫೦೦ ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ. ಎರಡನೆ ಕಂತಿನ ಚೆಕ್ ಗಳನ್ನು ನವೆಂಬರ್ ತಿಂಗಳಲ್ಲಿ ವಿತರಿಸಲಾಗುವುದು ಎಂದು ರಾವ್ ಹೇಳಿದರು. ಮುಂದಿನ ಎರಡು ವರ್ಷಗಳಲ್ಲಿ ಎರಡು ಕೋಟಿ ಎಕರೆ ಭೂಮಿಗೆ ನೀರಾವರಿ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸುವುದು ಎಂದು ಅವರು ಹೇಳಿದರು. ತೆಲಂಗಾಣದಲ್ಲಿ ೪೬೫ ಕಲ್ಯಾಣ ಯೋಜನೆಗಳನ್ನು ಆರಂಭಿಸಲಾಗಿದೆ. ಕುರುಬರಿಗೆ ೭೦ ಲಕ್ಷ ಕುರಿಗಳನ್ನು ವಿತರಿಸಲಾಗಿದೆ. ಇದರಿಂದ ಅವರಿಗೆ ೧೫೦೦ ಕೋಟಿ ರೂಪಾಯಿಯಷ್ಟು ಅನುಕೂಲವಾಗುವುದು ಎಂದು ನುಡಿದ ಅವರು, ಕಾಕತೀಯ ಮಿಷನ್ ಮತ್ತಿತರ ಯೋಜನೆಗಳ ಬಗೆಗೂ ಮಾತನಾಡಿದರು.  ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವನ್ನು ರಚಿಸಿದ ಕತೆಯನ್ನೂ ನೆನಪಿಸಿದ ಅವರು ’ನಾನು ತೆಲಂಗಾಣ ರಾಜ್ಯ ರಚನೆ ಬಗ್ಗೆ ಮನವೊಲಿಸಲು ಸಿಪಿಎಂ ಕಚೇರಿಗೆ ೩೮ ಸಲ ಹೋಗಿದ್ದೆ. ೩೬ ಪಕ್ಷಗಳ ಬೆಂಬಲ ಗಳಿಸುವುದು ಅತ್ಯಂತ ಕಠಿಣ ಕೆಲಸವಾಗಿತ್ತು. ಆದರೆ ಅವರೆಲ್ಲರೂ ಜನರ ಹೃದಯ ಗೆದ್ದರು ಎಂದು ಕೆಸಿಆರ್ ಹೇಳಿದರು. ಕಾಂಗ್ರೆಸ್ ಟೀಕೆ: ಈ ಮಧ್ಯೆ ಕಾಂಗ್ರೆಸ್ ಪಕ್ಷವು ಟಿಆರ್ ಎಸ್ ರ್‍ಯಾಲಿಯನ್ನು ಕಟುವಾಗಿ ಟೀಕಿಸಿ, ರ್‍ಯಾಲಿಗೆ  ೩೦೦ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿತು.


2016: ನವದೆಹಲಿಮಾಜಿ ಸಂಸದ ನವಜ್ಯೋತ್ ಸಿಂಗ್ ಸಿಧು ಅವರುಆವಾಜ್‌–ಪಂಜಾಬ್‌’ ಹೆಸರಿನ ನೂತನ ಪಕ್ಷ ಸ್ಥಾಪನೆಗೆ ಮುಂದಾದರು. ರಾಜ್ಯಸಭೆಗೆ ಬಿಜೆಪಿಯಿಂದ ನಾಮಕರಣಗೊಂಡ ಬಳಿಕ, ಸ್ಥಾನಕ್ಕೆ ರಾಜೀನಾಮೆ ನೀಡಿ, ಎಎಪಿ ಸೇರುತ್ತಾರೆ ಎಂಬ ಸುದ್ದಿಯೊಂದಿಗೆ ಕುತೂಹಲ ಮೂಡಿಸಿದ್ದ ಸಿಧುಪಂಜಾಬ್ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆ. ಕುರಿತು ಮೂರ್ನಾಲ್ಕು ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿದವು. ಪರ್ಗತ್ಸಿಂಗ್ಹಾಗೂ ಪಕ್ಷೇತರ ಶಾಸಕರಾದ ಸಿಮ್ರಜಿತ್ಸಿಂಗ್ಬೈನ್ಸ್ಮತ್ತು ಬಲ್ವಿಂದರ್ಸಿಂಗ್ಬೈನ್ಸ್ಸಹೋದರರೊಂದಿಗೆ ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂದು ನವಜ್ಯೋತ್ ಸಿಂಗ್ ಸಿಧು ಅವರ ಪತ್ನಿ ನವಜ್ಯೋತ್ಕೌರ್ಸಿಧು ತಿಳಿಸಿದರು.
2016: ಪಣಜಿಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿ ಕೊಳ್ಳಲು ಗೋವಾ ಸರ್ಕಾರ ಸಿದ್ಧವಿದೆ ಎಂದು ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ ಪರ್ಸೇಕರ್ಹೇಳಿದರು. ಮಹಾದಾಯಿ ನದಿ ನೀರು ಹಂಚಿಕೆ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿ ಕೊಳ್ಳಲು ಮುಂದಾಗಬಹುದುಎಂದು ಮಹದಾಯಿ ನ್ಯಾಯಮಂಡಳಿಯು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ ಬೆನ್ನಲ್ಲೇ ಗೋವಾ ಸಿಎಂ ಹೇಳಿಕೆ ನೀಡಿದರು. ಕುರಿತು ಮಹಾರಾಷ್ಟ್ರ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲು ನಾನು ಸಿದ್ಧ. ಸೌಹಾರ್ದಯುತವಾಗಿ ಇತ್ಯರ್ಥಕ್ಕೆ ನಮ್ಮದೇನು ಅಡ್ಡಿಯಿಲ್ಲ ಎಂದು ಪರ್ಸೇಕರ್ಹೇಳಿದರು. ಮಹಾದಾಯಿ ನೀರು ತಿರುವು ಸಂಬಂಧ ಮಹಾರಾಷ್ಟ್ರ, ಕರ್ನಾಟಕದ ಯೋಜನೆಗಳಿಗೆ ಗೋವಾ ವಿರೋಧ ವ್ಯಕ್ತಪಡಿಸಿತ್ತು.
2016: ನವದೆಹಲಿ: ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಪಡೆದಿದ್ದ ಯೋಗೇಶ್ವರ್ ದತ್ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಫೇಲಾದ ಬೆಸಿಕ್ ಕುಡಖೊವ್ ಅವರ ಬೆಳ್ಳಿ ಪದಕ ವರ್ಗಾವಣೆಗೊಂಡು ಯೋಗಿ ರಜತ ಪದಕಕ್ಕೆ ಪಾತ್ರರಾಗಿದ್ದರು. ಇದೀಗ ವರ್ಲ್ಡ್ ಆಂಟಿ ಡೋಪಿಂಗ್ ಏಜೆನ್ಸಿ (ವಿಶ್ವ ಉದ್ದೀಪನಾ ಮದ್ದು ನಿಯಂತ್ರಣ ಸಂಸ್ಥೆ) ಲಂಡನ್ ಒಲಿಂಪಿಕ್ ಚಿನ್ನದ ಪದಕ ವಿಜೇತ ತೊಗ್ರಲ್ ಅಸ್ಗರೊವ್ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಸ್ಪರ್ಧೆ (ಯುಡಬ್ಲೂಡಬ್ಲೂ) ಯಲ್ಲಿ ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾಗಿದ್ದು ಪರಿಣಾಮವಾಗಿ ಅವರ ಒಲಿಂಪಿಕ್ ಚಿನ್ನದ ಪದಕ ವಾಪಸ್ ಪಡೆಯಬಹುದಾದ ಸಾಧ್ಯತೆಯಿದೆ. ಇದೇ ಚಿನ್ನದ ಪದಕವನ್ನು ಇದೀಗ ಬೆಳ್ಳಿ ಪದಕಧಾರಿಯಾಗಿರುವ ಯೋಗೇಶ್ವರ್ ದತ್ಗೆ ದೊರೆಯುವ ಲಕ್ಷಣಗಳಿವೆ. ಎಂದು ಮೂಲಗಳು ತಿಳಿಸಿದವು. 2012 ಲಂಡನ್ ಒಲಿಂಪಿಕ್ನಲ್ಲಿ ಯೋಗೇಶ್ವರ್ ದತ್ರಿಂದ ಪಡೆದಿದ್ದ ಸ್ಯಾಂಪಲ್ ಪರೀಕ್ಷೆ ಒಳಪಡಿಸಿದ ನಂತರವಷ್ಟೆ ಪದಕದ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿದವು..

2016: ನವದೆಹಲಿ: ಚೀನಾದ ಅತ್ಯಾಧುನಿಕ ಜೆ-20 ರಹಸ್ಯ ಯುದ್ಧ ವಿಮಾನವನ್ನು ಜಗತ್ತಿನ ಅತಿ ಎತ್ತರದ (ಸಮುದ್ರ ಮಟ್ಟದಿಂದ 14,000 ಅಡಿ) ವಾಯುನೆಲೆಯಾಗಿರುವ ಟಿಬೆಟಿನ ದಾವೊಚೆಂಗ್ ಯಾದಿಂಗ್ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಇಲ್ಲಿಂದ ಭಾರತದ ಅರುಣಾಚಲ ಪ್ರದೇಶ ಗಡಿ ಪ್ರದೇಶ ತೀರಾ ಸಮೀಪವಿದೆ. ಗಡಿಯಲ್ಲಿ ಭಾರತದ ಸೂಪರ್ಸಾನಿಕ್ ಕ್ಷಿಪಣಿ ಬ್ರಹ್ಮೋಸ್ ನಿಯೋಜನೆ ಮಾಡುವ ಭಾರತದ ನಿರ್ಧಾರಕ್ಕೆ ಕಿಡಿಕಾರಿದ್ದ ಚೀನಾಕ್ಕೆ ಆಂತರಿಕ ಭದ್ರತೆ ವಿಷಯದಲ್ಲಿ ತಲೆ ಹಾಕದಂತೆ ಭಾರತ ತಾಕೀತು ಮಾಡಿತ್ತು. ಇದೀಗ ಅದಕ್ಕೆ ಪ್ರತೀಕಾರ ಎಂಬಂತೆ ಟಿಬೆಟ್ ವಾಯುನೆಲೆಯಲ್ಲಿ ಜೆ-20 ವಿಮಾನ ನಿಯೋಜಿಸಿ ತಿರುಗೇಟು ನೀಡುವ ತವಕದಲ್ಲಿದೆ. ದಕ್ಷಿಣ ಚೀನಾ ಸಮುದ್ರ ಬಿಕ್ಕಟ್ಟಿನಲ್ಲಿರುವ ಚೀನಾದ ವಿರೋಧಿ ರಾಷ್ಟ್ರ ವಿಯೆಟ್ನಾಂಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡುವ ವೇಳೆಗೆ ಸರಿಯಾಗಿ ಚೀನಾ ಈ ಕ್ರಮ ಕೈಗೊಂಡಿತು.

2016: ನವದೆಹಲಿ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಏಐಟಿಸಿ) ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಲಾಗಿದೆ ಎಂದು ಭಾರತದ ಚುನಾವಣಾ ಆಯೋಗ ಶುಕ್ರವಾರ ದೃಢ ಪಡಿಸಿದೆ.

2016: ರಾಜಗಿರ್: ಗಡಿ ಪ್ರಕ್ಷುಬ್ಧತೆಯನ್ನು ನಿರ್ಲಕ್ಷಿಸಿ, ಬಿಹಾರದ ನಲಂದಾ ವಿಶ್ವವಿದ್ಯಾಲಯವು ಪಾಕಿಸ್ತಾನದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಮುಂದಾಯಿತು. ಪ್ರವೇಶಾತಿ ಉಸ್ತುವಾರಿ ವಹಿಸಿರುವ ಸೌರಭ್ ತಿವಾರಿ ಪ್ರಕಾರ ವರ್ಷ ವಿಶ್ವದ 13 ದೇಶದ 83 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅದರಲ್ಲಿ ಇಬ್ಬರು ಪಾಕಿಸ್ತಾನಿ ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ತಿಳಿಸಿದರು..ಸದ್ಯ 80 ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಪಡೆದಿದ್ದು, ಇಬ್ಬರು ಪಾಕಿಸ್ತಾನಿ ಮತ್ತು ಒರ್ವ ಮ್ಯಾನ್ಮಾರ್ ದೇಶದ ವಿದ್ಯಾರ್ಥಿ ಪ್ರವೇಶ ಪಡೆಯುವುದು ಬಾಕಿ ಇದೆ ಎಂದು ಅವರು ತಿಳಿಸಿದರು. ಭಾರತದ ಪುರಾತನ ವಿಶ್ವವಿದ್ಯಾಲಯ ಸೇರಲು ಉತ್ಸುಕರಾಗಿರುವ ಇಬ್ಬರು ಪಾಕ್ವಿದ್ಯಾರ್ಥಿಗಳಿಗೆ ಅವಕಾಶ ನೀಡಿರುವುದಾಗಿ ಸೌರಭ್ ಸ್ಪಷ್ಟಪಡಿಸಿದರು. ಪರಿಸರ ಮತ್ತು ಪರಿಸರ ವಿಜ್ಞಾನ ವಿಭಾಗಕ್ಕೆ ಪ್ರವೇಶ ಕೋರಿ ಪಾಕಿಸ್ತಾನಿ ವಿದ್ಯಾರ್ಥಿಗಳು ನಲಂದಾ ವಿಶ್ವವಿದ್ಯಾಲಯಕ್ಕೆ ಆಗಮಿಸಿದರು.
2016: ನವದೆಹಲಿ: ಸಮಾಜ ಸುಧಾರಣೆಯ ಹೆಸರಿನಲ್ಲಿ ಧಾರ್ಮಿಕ ಸ್ವಾತಂತ್ರ್ಯ ದಲ್ಲಿ ಹಸ್ತಕ್ಷೇಪ ಮಾಡುವ ಮತ್ತು ವೈಯಕ್ತಿಕ ಕಾನೂನುಗಳನ್ನು ಮತ್ತೆ ಬರೆಯುವ ಅಧಿಕಾರ ಸುಪ್ರೀಂಕೋರ್ಟಿಗೆ ಇಲ್ಲ ಎಂದು ಭಾರತದ ಮುಸ್ಲಿಮರಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಉನ್ನತ ಸಂಸ್ಥೆ ಮುಸ್ಲಿಮ್ ಕಾನೂನು ಮಂಡಳಿಯುತ್ರಿವಳಿ ತಲಾಖ್ವಿಚ್ಛೇದನವನ್ನು ಸಮರ್ಥಿಸಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ ದಾಖಲೆಯೊಂದರಲ್ಲಿ ಪ್ರತಿಪಾದಿಸಿತು. ತ್ರಿವಳಿ ತಲಾಖ್ ಸಿಂಧುತ್ವವನ್ನು ಸುಪ್ರೀಂಕೋರ್ಟ್ ನಿರ್ಧರಿಸುವಂತಿಲ್ಲಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ನ್ಯಾಯಾಲಯಕ್ಕೆ ಹೇಳಿತು. ನಿರ್ಧಾರ ಕೈಗೊಳ್ಳಲು ಯೋಗ್ಯನಾದ ಸ್ಥಾನದಲ್ಲಿ ಗಂಡ ಇರುವುದರಿಂದ ಇಸ್ಲಾಮಿನಲ್ಲಿ ತ್ರಿವಳಿ ತಲಾಖ್ಗೆ ಅನುಮತಿ ನೀಡಲಾಗಿದೆ. ಆತ ಅವಸರದ ನಿರ್ಧಾರ ಕೈಗೊಳ್ಳುವಂತಿಲ್ಲ. ಸಮಂಜಸ ನೆಲೆ ಇದ್ದಾಗ ಮಾತ್ರವೇ ಇದನ್ನು ಬಳಸಬಹುದು ಎಂದು ಮಂಡಳಿ ತಿಳಿಸಿತು. ಪ್ರಶ್ನಿಸಲು ಸಾಧ್ಯವಿರುವಂತಹ ಕಾನೂನುಗಳ ವ್ಯಾಖ್ಯೆಯ ಒಳಗೆ ಧರ್ಮಗ್ರಂಥಗಳು ಬರುವುದಿಲ್ಲ. ಮದುವೆ, ವಿಚ್ಛೇದನ ಮತ್ತು ನಿರ್ವಹಣೆಯಂತಹ ವಿಷಯಗಳು ಧರ್ಮದಿಂದ ಧರ್ಮಕ್ಕೆ ಬದಲಾಗುತ್ತವೆ. ಒಂದು ಧರ್ಮದ ಹಕ್ಕುಗಳ ಸಿಂಧುತ್ವವನ್ನು ನ್ಯಾಯಾಲಯವು ಪ್ರಶ್ನಿಸುವಂತಿಲ್ಲ. ಖುರಾನ್ ಪ್ರಕಾರ ವಿಚ್ಛೇದನ ಅನಿವಾರ್ಯ ಅಗತ್ಯವಲ್ಲ ಆದರೆ ಅಗತ್ಯ ಬಿದ್ದಲ್ಲಿ ಅವಕಾಶ ನೀಡಬಹುದಾದಂತಹ ವಿಚಾರಎಂದು ಮಂಡಳಿ ನ್ಯಾಯಾಲಯಕ್ಕೆ ತಿಳಿಸಿತು
2016: ನವದೆಹಲಿ: ‘ಬದುಕಿ ಮತ್ತು ಬದುಕಲು ಬಿಡಿಎಂದು ಸುಪ್ರೀಂಕೋರ್ಟ್  ಕರ್ನಾಟಕಕ್ಕೆ ಕಿವಿಮಾತು ಹೇಳಿತು. ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ತಮಿಳ್ನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕಾಲದಲ್ಲಿ ಮಾತು ಹೇಳಿದ ಸುಪ್ರೀಂಕೋರ್ಟ್, ನೆರೆಯ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಬಗ್ಗೆ ಪರಿಗಣಿಸಿ ಎಂದು ಸಲಹೆ ಮಾಡಿತು. ತಮಿಳುನಾಡಿಗೆ ಎಷ್ಟು ನೀರು ಬಿಡುಗಡೆ ಮಾಡಬಹುದು ಎಂಬುದಾಗಿ ಸೋಮವಾರ ತಿಳಿಸಿ ಎಂದೂ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ನಿರ್ದೇಶಿಸಿತು. ಜಲ ವಿವಾದದ ವಿಷಯದಲ್ಲಿ ಕರ್ನಾಟಕ ತ್ತು ತಮಿಳುನಾಡು ಸೌಹಾರ್ದ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು. ನ್ಯಾಯಾಲಯದಿಂದ ನೇಮಕಗೊಂಡ ನ್ಯಾಯಾಧಿಕರಣದ ಆದೇಶದ ಹೊರತಾಗಿಯೂ ಕರ್ನಾಟಕ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ತಮಿಳುನಾಡಿನ ರೈತರು ಕರ್ನಾಟಕದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ರಾಜ್ಯದ  ನೀರಿನ ಸಮಸ್ಯೆಯನ್ನು ನ್ಯಾಯಾಲಯಕ್ಕೆ ವಿವರಿಸಿದ ಕರ್ನಾಟಕ ಪರ ವಕೀಲರುರಾಜ್ಯದಲ್ಲಿ ನೀರಿಗೆ ತುಂಬಾ ಸಮಸ್ಯೆ ಇದೆಎಂದು ಹೇಳಿದರು. ನೀರಿನ ಬಿಡುಗಡೆಯಲ್ಲಿ ಕೊರತೆ ಆದಾಗ ತಮಿಳುನಾಡಿನ ಜನ ಬದುಕಿ ಉಳಿಯುವಂತೆ ಮಾಡಲು ಕರ್ನಾಟಕ ಕೆಲವು ಪ್ರಯತ್ನಗಳನ್ನು ಮಾಡಬೇಕು ಎಂದು ನ್ಯಾಯಾಲಯ ಹೇಳಿತು.

2016: ಟಾಸ್ಕೆಂಟ್: ತೀವ್ರವಾದ ಪಾರ್ಶ್ವವಾಯು ಸಮಸ್ಯೆಗೆ ತುತ್ತಾಗಿದ್ದ ಉಜ್ಬೇಕಿಸ್ತಾನದ ಅಧ್ಯಕ್ಷ ಇಸ್ಲಾಂ ಕರಿಮೋವ್ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.. ಪ್ರಭಾವಿ ವ್ಯಕ್ತಿತ್ವ ಬೆಳೆಸಿಕೊಂಡಿದ್ದ ಇಸ್ಲಾಂ ಕರಿಮೋವ್ ಪಾರ್ಶ್ವವಾಯು ಸಮಸ್ಯೆಗೆ ತುತ್ತಾಗಿ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದರು.
 ದಿನದ ಹಿಂದೆ ಅಧ್ಯಕ್ಷ ಇಸ್ಲಾಂ ಕರಿಮೋವ್ ಆನಾರೋಗ್ಯದಿಂದ ಬಳಲುತ್ತಿದ್ದಾರೆ. ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆಎಂದು ಉಜ್ಬೇಕಿಸ್ತಾನ ಸರ್ಕಾರ ತನ್ನ ವೆಬ್ಸೈಟ್ನಲ್ಲಿ ಬಗ್ಗೆ ಮಾಹಿತಿ ಪ್ರಕಟಿಸಿತ್ತು. 78 ವರ್ಷದ ಇಸ್ಲಾಂ ಕರಿಮೋವ್ ಕಳೆದ 25 ವರ್ಷಗಳಿಂದ ಅಧಿಕಾರದಲ್ಲಿದ್ದು, ಸಾಕಷ್ಟು ಮಂದಿಗೆ ಹತ್ತಿರವಾಗಿದ್ದರು.

2016: ಮರ್ಡೆನ್: ನೈಋತ್ಯ ಪಾಕಿಸ್ತಾನದ ಜಿಲ್ಲಾ ನ್ಯಾಯಾಲಯದ ಸಮೀಪದ ಸರಣಿ ಬಾಂಬ್ ಸ್ಫೋಟ ಸಂಭವಿಸಿ, 11ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು.  50ಕ್ಕೂ ಹೆಚ್ಚು ಮಂದಿ ಗಾಯಗೊಂಡರು.. ಒಂದು ಗಂಟೆಗಳ ಅವಧಿಯಲ್ಲಿ ಒಂದೇ ಪ್ರದೇಶದ ಎರಡು ಕಡೆ ಸ್ಫೋಟ ಸಂಭವಿಸಿತು. ಮೊದಲು ಸಾಮಾನ್ಯ ತೀವ್ರತೆಯ ಸ್ಫೋಟ ಸಂಭವಿಸಿದ್ದು, ಬಳಿಕ ಭಾರಿ ತೀವ್ರತೆಯ ಸ್ಫೋಟ ಸಂಭವಿಸಿದೆ ಎಂದು ರಕ್ಷಣಾ ಪಡೆ ಮುಖ್ಯಸ್ಥರೊಬ್ಬರು ತಿಳಿಸಿದರು. .

2016: ನವದೆಹಲಿ: ‘ಭಾರತ ಮತ್ತು ಈಜಿಪ್ಟ್ ಬಾಂಧವ್ಯದ ಹಲವಾರು ಸ್ಥಂಭಗಳನ್ನು ನಿರ್ಮಿಸಲು ನಾನು ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾಹ್ ಎಲ್-ಸಿಸಿ ಒಪ್ಪಿಕೊಂಡಿದ್ದೇವೆ. ಕೃಷಿ, ನೈಪುಣ್ಯ ವೃದ್ಧಿ ಮತ್ತು ಆರೋಗ್ಯ
ರಂಗಗಳಲ್ಲಿ ಸಹಕಾರ ವಿಸ್ತರಿಸಲೂ ತೀರ್ಮಾನಿಸಿದ್ದೇವೆಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಈಜಿಪ್ಟ್ ಅಧ್ಯಕ್ಷರ ಜೊತೆಗೆ ಮಾತುಕತೆಗಳ ಬಳಿಕ ಜಂಟಿ ಹೇಳಿಕೆ ನೀಡಿದ ಪ್ರಧಾನಿತೀವ್ರ ಸ್ವರೂಪದಲ್ಲಿ ಬೆಳೆಯುತ್ತಿರುವ ಭಯೋತ್ಪಾದನೆಯು ನಮ್ಮ ಎರಡು ರಾಷ್ಟ್ರಗಳಿಗೆ ಮಾತ್ರವೇ ಅಲ್ಲ, ಇಡ ಜಗತ್ತಿದೆ ಬೆದರಿಕೆಯನ್ನು ಒಡ್ಡಿದೆ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ. ಹಿನ್ನೆಲೆಯಲ್ಲಿ ರಕ್ಷಣೆ ಮತ್ತು ಸುರಕ್ಷತೆ, ಭಯೋತ್ಪಾದನೆ ನಿಗ್ರಹ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಮತ್ತು ಕಾರ್ಯಾಚರಣೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ಮೋದಿ ನುಡಿದರು. ಇಂದಿನ ವಾಸ್ತವತೆಗಳನ್ನು ಬಿಂಬಿಸಲು ಸಾಧ್ಯವಾಗುವಂತೆ ವಿಶ್ವ ಸಂಸ್ಥೆಯಲ್ಲಿ ಸುಧಾರಣೆಗಳು ಆಗಬೇಕಾಗಿವೆ ಎಂಬುದನ್ನ ಉಭಯ ನಾಯಕರೂ ಒಪ್ಪಿದ್ದೇವೆ ಎಂದೂ ಪ್ರಧಾನಿ ಹೇಳಿದರು.

2016: ಮೆಲ್ಬೋರ್ನ್ : ಭೂಮಿಯು 370 ಕೋಟಿ ವರ್ಷಗಳ ಹಿಂದೆಯೇ ಜೀವಪೋಷಕವಾಗಿತ್ತೇ? ‘ಹೌದುಎಂದು ಹೇಳುತ್ತಿದ್ದಾರೆ ವಿಜ್ಞಾನಿಗಳುಜಗತ್ತಿನ ಅತ್ಯಂತ ಹಳೆಯದಾದ, ಅಂದರೆ 370 ಕೋಟಿ ವರ್ಷಗಳಷ್ಟು ಹಿಂದಿನ ಸ್ಟ್ರೊಮಾಟೊಲೈಟ್ಪಳೆಯುಳಿಕೆಗಳನ್ನು ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ಪ್ರಕಟಿಸಿದರು. ಆ ಕಾಲದಲ್ಲಿಯೇ ಭೂಮಿಯಲ್ಲಿ ಜೀವಿಗಳು ಇದ್ದವು ಎಂಬುದಕ್ಕೆ ಇವು ಸಾಕ್ಷ್ಯವನ್ನು ನೀಡಿವೆಇಷ್ಟು ಹಳೆಯದಾದ  ಪಳೆಯುಳಿಕೆ ಗಳು ಪತ್ತೆಯಾದದ್ದು ಇದೇಮೊದಲು. ‘ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದ್ದ 22 ಕೋಟಿ ವರ್ಷಗಳ ಹಿಂದಿನ ಪಳೆಯುಳಿಕೆಗಳು, ಇದುವರೆಗೆ ಭೂಮಿ ಮೇಲೆ ಕಂಡು ಬಂದಿದ್ದ ಅತ್ಯಂತ ಹಳೆಯ ಪಳೆಯುಳಿಕೆಯಾಗಿದ್ದವುಎಂದು ಅಧ್ಯಯನದ ನೇತೃತ್ವ ವಹಿಸಿದ್ದ ವೊಲ್ಲೊಂಗಾಂಗ್ವಿಶ್ವವಿದ್ಯಾಲಯದ  ಅಲೆನ್ನಟ್ಮನ್ಹೇಳಿದರು. ಭೂಮಿಯ ಆರಂಭ ಕಾಲದ ಜೀವ ವೈವಿಧ್ಯವನ್ನು ಅರ್ಥಮಾಡಿಕೊಳ್ಳಲು ಪಳೆಯುಳಿಕೆಗಳು ನೆರವಾಗಲಿವೆ. ಜೊತೆಗೆ, ಮಂಗಳಗ್ರಹದಲ್ಲಿ ಜೀವಿಗಳ ಅಸ್ತಿತ್ವದ ಕುರಿತ ನಮ್ಮ ಗ್ರಹಿಕೆಯ ಮೇಲೂ ಇವುಗಳು ಪ್ರಭಾವ ಬೀರಲಿದೆಎಂದು ವಿಜ್ಞಾನಿಗಳು ಹೇಳಿದ್ದಾರೆಭೂಮಿ ಆರಂಭದ ಕಾಲದಿಂದಲೂ ಇಲ್ಲಿ ಜೀವಿಗಳು ನೆಲೆಸಿವೆ ಎಂಬುದಕ್ಕೆ ಪುರಾವೆಗಳನ್ನು ಆವಿಷ್ಕಾರ ಒದಗಿಸಿತು.


2008: ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ರಾಜೀವ್ ಗಾಂಧಿ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಹಾಗೂ ಇಂದಿರಾ ಗಾಂಧಿ ಅವರ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದ ಮೈಸೂರಿನ ಎಚ್. ವೈ. ಶಾರದಾ ಪ್ರಸಾದ್ (84) ನವದೆಹಲಿಯಲ್ಲಿ ನಿಧನರಾದರು. ಶಾರದಾ ಪ್ರಸಾದ್ ಅವರು ಇಂದಿರಾ ಗಾಂಧಿ ಅವರು ಅಧಿಕಾರದಲ್ಲಿ ಇದ್ದ ಅವಧಿಯುದ್ದಕ್ಕೂ (15 ವರ್ಷ) ಮಾಧ್ಯಮ ಸಲಹೆಗಾರರಾಗಿದ್ದುದು ಮಾತ್ರವಲ್ಲದೆ ಅವರಿಗೆ ಭಾಷಣ ಬರೆದುಕೊಡುವವರೂ ಆಗಿದ್ದರು. ಜೊತೆಗೆ ಇಂದಿರಾ ಅವರ ಅತ್ಯಂತ ನಿಕಟ ರಾಜಕೀಯ ವಿಶ್ವಾಸಪಾತ್ರರಲ್ಲಿ ಒಬ್ಬರಾಗಿದ್ದರು. ಅವರಿಗೆ 2000ದಲ್ಲಿ ಪದ್ಮಭೂಷಣ ಮತ್ತು
2001ರಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಏಕತಾ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿತ್ತು.

2007: ಭಾರತದ ಅತ್ಯಾಧುನಿಕ `ಇನ್ಸಾಟ್- 4ಸಿಆರ್' ಸಂಪರ್ಕ ಉಪಗ್ರಹವನ್ನು ಹೊತ್ತ `ಜಿಎಸ್ಎಲ್ವಿ- ಎಫ್04' ಉಡಾವಣಾ ನೌಕೆ ನಿಗದಿತ ಸಮಯಕ್ಕಿಂತ ಎರಡು ತಾಸು ವಿಳಂಬದ ನಂತರ ಸಂಜೆ 6.21ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿತು. ದಟ್ಟ ಹೊಗೆಯ ಮೋಡವನ್ನು ಉಗುಳಿ ಆಕಾಶಕ್ಕೆ ನೆಗೆದ 49 ಮೀಟರ್ ಉದ್ದದ ನೌಕೆ ಉಡಾವಣೆಗೊಂಡ 16 ನಿಮಿಷ 40 ಸೆಕೆಂಡುಗಳ ನಂತರ ಈ ಮೊದಲೇ ನಿಗದಿಪಡಿಸಲಾದ 248 ಕಿ.ಮೀ. ಎತ್ತರದಲ್ಲಿನ ಭೂ ಸಮಾನಾಂತರ ಕಕ್ಷೆಗೆ ಉಪಗ್ರಹವನ್ನು ಕೂರಿಸಿತು. 2130 ಕೆಜಿ ತೂಕದ ಇನ್ಸಾಟ್ ಉಪಗ್ರಹದಲ್ಲಿ 12 ಶಕ್ತಿಯುತ ಕ್ಯು-ಬ್ಯಾಂಡ್ ಟ್ರಾನ್ಸ್ಪಾಂಡರುಗಳಿದ್ದು ಇವು ಡಿಟಿಎಚ್ ಸೇವೆ, ವಿಡಿಯೋ ಚಿತ್ರಗಳ ರವಾನೆ ಹಾಗೂ ಡಿಜಿಟಲ್ ಸುದ್ದಿ ಸಂಗ್ರಹಕ್ಕೆ ನೆರವಾಗುವುವು. ಇದರ ಆಯಸ್ಸು 10 ವರ್ಷ. ಇದು ಕಳೆದ 9 ತಿಂಗಳಲ್ಲಿ ಯಶಸ್ವಿಯಾಗಿ ಉಡಾವಣೆಗೊಂಡ ಮೂರನೇ ಉಪಗ್ರಹ. 2006ರ ಡಿಸೆಂಬರ್ 22ರಂದು ಇನ್ಸಾಟ್-4ಎ ಹಾಗೂ 2007ರ ಮಾರ್ಚ್ 12ರಂದು ಇನ್ಸಾಟ್-4ಬಿ ಯನ್ನು ಯಶಸ್ವಿಯಾಗಿ ಹಾರಿಸಲಾಗಿತ್ತು. ಜಿಎಸ್ಎಲ್ವಿ-ಎಫ್ 04 ಈ ಸರಣಿಯಲ್ಲಿ ಐದನೇ ಉಡಾವಣಾ ನೌಕೆ. 2006ರ ಜುಲೈ 10ರಂದು ಕೈಗೊಂಡ ಉಡಾವಣೆ ವಿಫಲವಾಗಿ 56 ಸೆಕೆಂದುಗಳಲ್ಲೇ ಅದು ಹೊತ್ತೊಯ್ದಿದ್ದ ಇನ್ಸಾಟ್-4 ಸಿ ಉಪಗ್ರಹ ಸ್ಫೋಟಗೊಂಡು ಕಡಲ ಪಾಲಾಗಿತ್ತು.

2007: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಚಿವರೂ ಆದ ಶಾಸಕ ಮೆರಾಜುದ್ದೀನ್ ಪಟೇಲ್ ಅವರನ್ನು ಜೆಡಿ (ಎಸ್) ರಾಜ್ಯ ಘಟಕದ ನೂತನ ಅಧ್ಯಕ್ಷರನ್ನಾಗಿ ದಿಢೀರ್ ನೇಮಕ ಮಾಡಲಾಯಿತು. ಬೆಂಗಳೂರಿನಲ್ಲಿ ಜೆಡಿ (ಎಸ್) ಕಚೇರಿಯಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶ ಉದ್ಘಾಟಿಸಿದ ಬಳಿಕ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಈ ವಿಷಯ ಪ್ರಕಟಿಸಿದರು.

2007: ಕೀನ್ಯಾದ ಅಲ್ ಫ್ರೆಡ್ ಕಿರ್ವಾ ಯೆಗೊ ಅವರಿಗೆ ಈದಿನ ಸದಾ ನೆನಪಿಸಿಕೊಳ್ಳುವ ದಿನ. ಒಸಾಕಾದಲ್ಲಿ ನಡೆದ 11ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 800 ಮೀಟರ್ ಓಟದಲ್ಲಿ ಅವರು ಬಂಗಾರದ ಪದಕ ಗೆದ್ದರು. ಕೂದಲೆಳೆ ಅಂತರದಲ್ಲಿ ಅಲ್ ಫ್ರೆಡ್ ಈ ಸಾಧನೆ ಮಾಡಿದರು. ಕೆನಡಾದ ಗ್ಯಾರಿ ರೀಡ್ ಮೊದಲ ಸ್ಥಾನ ಪಡೆದ ಕೀನ್ಯಾದ ಸ್ಪರ್ಧಿಗೆ ತೀವ್ರ ಪೈಪೋಟಿ ನೀಡಿದರು.

2007: ಡೆಹರಾಡೂನ್ (ಯುಎನ್ಐ): ಉತ್ತರಖಂಡ ಮುಖ್ಯಮಂತ್ರಿ ಮತ್ತು ಬಿಜೆಪಿ ಅಭ್ಯರ್ಥಿ ಮೇಜರ್ ಜನರಲ್ (ನಿವೃತ್ತ) ಭುವನಚಂದ್ರ ಖಂಡೂರಿ ಅವರು ಧುಮಕೊಟ್ ವಿಧಾನಸಭೆ ಉಪಚುನಾವಣೆಯಲ್ಲಿ ಜಯಗಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಸುರೇಂದ್ರ ಸಿಂಗ್ ನೇಗಿ ಅವರನ್ನು ಖಂಡೂರಿ 14,171 ಮತಗಳ ಅಂತರದಲ್ಲಿ ಸೋಲಿಸಿದರು. ಈ ವಿಜಯದೊಂದಿಗೆ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ದೊರೆತಂತಾಯಿತು.

2007: ಅಂಗವಿಕಲರು ಮತ್ತು ಮಹಿಳೆಯರನ್ನು ಜಾತಿ ಆಧಾರಿತ ಮೀಸಲಾತಿ ಅಡಿ ತರುವಂತಿಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆದರೆ ಮಹಿಳೆಯರು, ಅಂಗವಿಕಲರು, ಅಂಧರು ಮತ್ತಿತರ ವಿಶೇಷ ವರ್ಗಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವುದಕ್ಕಾಗಿ ಶೇ 50ರ ಗರಿಷ್ಠ ಮಿತಿಯನ್ನೂ ಮೀರಬಹುದು ಎಂದು ಅದು ಹೇಳಿತು. 1992ರ ಮಂಡಲ್ ಆಯೋಗ ಪ್ರಕರಣದಲ್ಲಿ (ಇಂದಿರಾ ಸಾಹ್ನಿ ಪ್ರಕರಣ), ಯಾವುದೇ ಸಂದರ್ಭದಲ್ಲಿಯೂ ಮೀಸಲಾತಿ ಪ್ರಮಾಣ ಶೇ 50ನ್ನು ಮೀರಬಾರದು ಎಂದು ಕೋರ್ಟ್ ನಿರ್ಬಂಧ ಹೇರಿತ್ತು. ಆದರೆ ಈಗ ಅದನ್ನು ಸಡಿಲಿಸಿದಂತಾಯಿತು.

2007: `ಜೆಡಿಎಸ್ ಜತೆ ಸಮ್ಮಿಶ್ರ ಸರ್ಕಾರ ಮುಂದುವರಿಸುವುದಕ್ಕಿಂತ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸುವುದೇ ಒಳ್ಳೆಯದು' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸಭೆ ಮೈಸೂರಿನಲ್ಲಿ ಅಭಿಪ್ರಾಯಪಡುವ ಮೂಲಕ ತನ್ನ ರಾಜಕೀಯ ದಾಳವನ್ನು ಉರುಳಿಸಿತು.

2006: ಸತ್ಯಾಗ್ರಹ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಲಾದ `ಸತ್ಯಾಗ್ರಹ ಶತಮಾನೋತ್ಸವ ಪ್ರದರ್ಶವನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಉದ್ಘಾಟಿಸಿದರು.

2006: ಮಾಹಿತಿ ತಂತ್ರಜ್ಞಾನ ಕುರಿತ ವಿಶೇಷ ಚಿಂತನಾ ತಂಡದ ಅಧ್ಯಕ್ಷರಾಗುವಂತೆ ರಾಜ್ಯ ಸರ್ಕಾರ ನೀಡಿದ್ದ ಆಹ್ವಾನವನ್ನು ಇನ್ಫೋಸಿಸ್ ಮುಖ್ಯಸ್ಥ ಎನ್. ಆರ್. ನಾರಾಯಣಮೂರ್ತಿ ಒಪ್ಪಿಕೊಂಡರು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಾರಾಯಣಮೂರ್ತಿ ಧರ್ಮಸಿಂಗ್ ಸರ್ಕಾರದ ಅವದಿಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರೊಂದಿಗೆ ಮುನಿಸಿಕೊಂಡು ಬಿಐಎಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2006: ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪರಿಸ್ಕರಿಸಲಿರುವ 6ನೇ ವೇತನ ಆಯೋಗದ ಅಧ್ಯಕ್ಷರಾಗಿ ಮೂಲತಃ ಕರ್ನಾಟಕದವರಾದ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರನ್ನು ನೇಮಿಸಲಾಯಿತು. ಐಐಎಂ ಪ್ರಾಚಾರ್ಯ ರವೀಂದ್ರ ಧೋಲಾಕಿಯ, ಮಾಜಿ ಹೆಚ್ಚುವರಿ ಕಾರ್ಯದರ್ಶಿ (ಬಜೆಟ್) ಜೆ.ಎಸ್. ಮಾಹುರ್ ಮತ್ತು ವೆಚ್ಚ ಸುಧಾರಣೆ ಆಯೋಗದ ಎಸ್. ನಾಥ್ ಆಯೋಗದ ಇತರ ಸದಸ್ಯರಾಗಿ ನೇಮಕಗೊಂಡರು.

2006: ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಸುರೇಶ ಮೆಹ್ತಾ ಅವರು ಅಡ್ಮಿರಲ್ ಅರುಣ್ ಪ್ರಕಾಶ್ ಸ್ಥಾನಕ್ಕೆ ನೇಮಕಗೊಂಡರು.

2006: ಖಂಡಾಂತರ ಕ್ಷಿಪಣಿಗಳನ್ನು ಮಾರ್ಗ ಮಧ್ಯದಲ್ಲೇ ಹೊಡೆದು ಉರುಳಿಸುವ ಪ್ರಯೋಗ ಯಶಸ್ವಿಯಾಗಿದೆ ಎಂದು ಅಮೆರಿಕ ಪ್ರಕಟಿಸಿತು. ಅಲಾಸ್ಕಾದ ಕೊಡಿಯಾಕಿನಿಂದ ಗುರಿಯತ್ತ ಹಾರಿಬಿಡಲಾದ ದೂರಗಾಮೀ ಖಂಡಾಂತರ ಕ್ಷಿಪಣಿ ಮಾದರಿಯನ್ನು ಕ್ಯಾಲಿಫೋರ್ನಿಯಾದಿಂದ ಉಡಾಯಿಸಲಾದ ಸಾಧನವು ಕರಾರುವಾಕ್ಕಾಗಿ ಹೊಡೆದು ಉರುಳಿಸಿತು ಎಂದು ಅಮೆರಿಕದ ಕ್ಷಿಪಣಿ ರಕ್ಷಣಾ ಸಂಸ್ಥೆಯ ಮೂಲಗಳು ಪ್ರಕಟಿಸಿದವು.

2001: ಡಾ. ಕ್ರಿಸ್ಟಿಯನ್ ಬರ್ನಾರ್ಡ್ ಅವರು ಸೈಪ್ರಸ್ಸಿನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾಗ ತಮ್ಮ 78ನೇ ವಯಸ್ಸಿನಲ್ಲಿ ಅಸ್ತಮಾ ಕಾಯಿಲೆಯಿಂದಾಗಿ ನಿಧನರಾದರು. ಮೊತ್ತ ಮೊದಲ `ಹೃದಯ ಕಸಿ' ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಅವರು ಖ್ಯಾತಿ ಪಡೆದಿದ್ದರು.

1999: ಭಾರತೀಯ ಈಜುಗಾರ್ತಿ ಬುಲಾ ಚೌಧುರಿ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಎರಡು ಬಾರಿ ಈಜಿದ ಮೊದಲ ಏಷ್ಯನ್ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.

1984: ಪಂಜಾಬಿನ ಅಮೃತಸರದ ಸರ್ಣಮಂದಿರದಲ್ಲಿ ಸರ್ಕಾರಿ ಪಡೆಗಳು ಬೀಡು ಬಿಟ್ಟ್ದದ್ದನ್ನು ಪ್ರತಿಭಟಿಸಿ ಸಹಸ್ರಾರು ಸಿಖ್ಖರು ಮಂದಿರದ ಬಳಿ ಬೃಹತ್ ರ್ಯಾಲಿ ನಡೆಸಿದರು.

1946: ಅವಿಭಜಿತ ಭಾರತದ ಮಧ್ಯಂತರ ಸರ್ಕಾರದ ಪ್ರಧಾನ ಮಂತ್ರಿಯಾಗಿ ಜವಾಹರಲಾಲ್ ನೆಹರೂ ಅಧಿಕಾರ ಸ್ವೀಕಾರ.

1945: ಯುಎಸ್ಎಸ್ ಮಿಸ್ಸೌರಿ ನೌಕೆಯಲ್ಲಿ ನಡೆದ ಸಮಾರಂಭದ್ಲಲಿ ಜಪಾನ್ ಔಪಚಾರಿಕವಾಗಿ ತನ್ನ ಶರಣಾಗತಿಯನ್ನು ಪ್ರಕಟಿಸಿತು. ಇದರೊಂದಿಗೆ ಎರಡನೇ ಜಾಗತಿಕ ಸಮರ ಅಂತ್ಯಗೊಂಡಿತು. ಈ ದಿನವನ್ನು ಜಪಾನ್ ಮೇಲಿನ ವಿಜಯ ದಿನವಾಗಿ ಆಚರಿಸಲಾಯಿತು.

1945: ಹನೋಯಿಯ ಬಾ ದಿನ್ಹ್ ಚೌಕದಲ್ಲಿ ಸಮಾವೇಶಗೊಂಡಿದ್ದ ಬೃಹತ್ ಜನಸಮುದಾಯದ ಮುಂದೆ ಹೊ ಚಿ ಮಿನ್ಹ್ ಅವರು ವಿಯೆಟ್ನಾಂ ಒಂದು ಸ್ವತಂತ್ರ ಗಣರಾಜ್ಯ ಎಂದು ಘೋಷಿಸಿದರು. 25 ವರ್ಷಗಳ ಬಳಿಕ ಇದೇ ದಿನ ಅವರು ಹನೋಯಿಯಲ್ಲಿ ತಮ್ಮ 79ನೇ ವಯಸ್ಸಿನಲ್ಲಿ ಮೃತರಾದರು. ವಿಯೆಟ್ನಾಮಿನ ರಾಷ್ಟ್ರೀಯ ಚಳವಳಿಯ ಧುರೀಣರಾಗಿ ಅಷ್ಟೇ ಅಲ್ಲ, ಎರಡನೇ ಜಾಗತಿಕ ಸಮರದ ಬಳಿಕ ಏಷ್ಯಾದಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಚಳವಳಿಗೆ ಚಾಲನೆ ನೀಡಿದ ನಾಯಕರಲ್ಲಿ ಒಬ್ಬರಾಗಿಯೂ ಅವರು ಖ್ಯಾತಿ ಪಡೆದರು.

1930: ಯುರೋಪಿನಿಂದ ಮೊದಲ ತಡೆರಹಿತ ವಿಮಾನ (37) ಗಂಟೆ ಹಾರಾಟ.

1923: ಸಾಹಿತಿ ಜಿ. ನಾರಾಯಣ ಜನನ.

1917: ಸಾಹಿತಿ ನಾಗಾನಂದ ಜನನ.

1911: ನಟ, ನಿರ್ದೇಶಕ, ನಾಟಕಕಾರ, `ಪರ್ವತವಾಣಿ' ಎಂದೇ ಹೆಸರಾದ ಪಿ. ನರಸಿಂಗರಾವ್ (2-9-1911ರಿಂದ 17-3-1994) ಅವರು ಗೋಪಾಲರಾಯ- ರುಕ್ಮಣಮ್ಮ ದಂಪತಿಯ ಮಗನಾಗಿ ತಮಿಳುನಾಡಿನ ಹೊಸೂರು ಸಮೀಪದ ಮಾರಂಡ ಪಟ್ಟಿ ಹತ್ತಿರದ ಪರ್ವತವಾಡಿಯಲ್ಲಿ ಜನಿಸಿದರು. ಎಂಬತ್ತಕ್ಕೂ ಹೆಚ್ಚು ನಾಟಕ ಕೃತಿಗಳನ್ನು ರಚಿಸಿದ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

1862: ಸಾಹಿತಿ ತಮ್ಮಣ್ಣಪ್ಪ ಚಿಕ್ಕೋಡಿ ಜನನ.

1666: ಲಂಡನ್ನಿನಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿತು. ಈ ದುರಂತದಲ್ಲಿ ಸಹಸ್ರಾರು ಮನೆಗಳು ಅಗ್ನಿಗೆ ಆಹುತಿಯಾದವು ಆದರೆ ಅತಿ ಸ್ವಲ್ಪ ಪ್ರಮಾಣದಲ್ಲಿ ಸಾವು ಸಂಭವಿಸಿತು. ಲಂಡನ್ನಿನ ಇತಿಹಾಸದಲ್ಲೇ ಅತಿ ಭೀಕರ ಎಂದು ಪರಿಗಣಿಸಲಾದ ಈ ಅಗ್ನಿ ಅನಾಹುತದಲ್ಲಿ ನಾಗರಿಕ ಕಟ್ಟಡಗಳು, ಸೇಂಟ್ ಪೌಲ್ಸ್ ಕೆಥೆಡ್ರಲ್, 87 ಇಗರ್ಜಿಗಳು (ಚರ್ಚ್ಗಳು), 13,000 ಮನೆಗಳು ಸೇರಿದಂತೆ ಲಂಡನ್ ನಗರದ ಬಹುತೇಕ ಭಾಗ ಭಸ್ಮವಾಯಿತು. ಲಂಡನ್ ಸೇತುವೆ ಸಮೀಪದ ಪಡ್ಡಿಂಗ್ ಲೇನಿನ ಕಿಂಗ್ಸ್ ಬೇಕರ್ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತು. ನಾಲ್ಕುದಿನಗಳ ಕಾಲ ಬೆಂಕಿ ಅವ್ಯಾಹತವಾಗಿ ಉರಿಯಿತು. ಕೊನೆಗೆ ಬೆಂಕಿ ಹರಡದಂತೆ ತಡೆಯಲು ಹಲವು ಮನೆಗಳನ್ನು ಸ್ಫೋಟಿಸಬೇಕಾಯಿತು.

No comments:

Post a Comment