Wednesday, September 5, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 05

ಇಂದಿನ ಇತಿಹಾಸ History Today ಸೆಪ್ಟೆಂಬರ್ 05
2018: ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ ೨೮ರಂದು ಬಂಧಿಸಲ್ಪಟ್ಟ ಐವರು ಕಾರ್ರ್ಯಕರ್ತರು ಸರ್ಕಾರದ ವಿರುದ್ಧ ಸಶಸ್ತ್ರ ಬಂಡಾಯಕ್ಕಾಗಿ ವ್ಯಾಪಕ ಹಿಂಸಾಚಾರಕ್ಕೆ ಯೋಜನೆ ರೂಪಿಸುತ್ತಿದ್ದ ನಿಷೇಧಿತ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಅವರಿಗೆ ವಿಧಿಸಲಾಗಿರುವ ಗೃಹ ಬಂಧನದ ಆದೇಶವನ್ನು ತೆರವುಗೊಳಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟಿಗೆ ಮನವಿ ಮಾಡಿತು. ಕವಿ ವರವರ ರಾವ್, ವಕೀಲರಾದ ಸುಧಾ ಭಾರದ್ವಾಜ್, ಕಾರ್ಯಕರ್ತರಾದ ಅರುಣ್ ಫೆರೇರಿಯಾ, ವೆರ್ನೋನ್ ಗೋನ್ಸಾಲ್ವೆಸ್ ಮತ್ತು ಗೌತಮ್ ನವಲಖ ಅವರ ಗೃಹ ಬಂಧನವು ದೈಹಿಕವಾಗಿ ಮಾತ್ರ ಅವರನ್ನು ನಿಯಂತ್ರಸಬಲ್ಲುದು, ಅವರು ತಮ್ಮ ವೇಳೆಯನ್ನು ಸಾಕ್ಷ್ಯನಾಶಕ್ಕೆ ಬಳಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟಿಗೆ ತಿಳಿಸಿದ ಮಹಾರಾಷ್ಟ್ರ ಸರ್ಕಾರವು ಐದೂ ಮಂದಿಯನ್ನು ವಿಚಾರಣೆ ನಡೆಸಲು ಸಾಧ್ಯವಾಗುವಂತೆ ಪೊಲೀಸ್ ವಶಕ್ಕೆ ನೀಡಬೇಕು ಎಂದು ಕೋರಿತು. ಮುಕ್ತ ಭಾಷಣ ಮತ್ತು ಭಿನ್ನಮತದ ಸ್ವಾತಂತ್ರ್ಯದ ಪ್ರಕರಣ ಇದಲ್ಲ ಎಂದು ಮಹಾರಾಷ್ಟ್ರವು ಸುಪ್ರೀಂಕೋರ್ಟಿಗೆ ಸಲ್ಲಿಸಿದ ತನ್ನ ಪ್ರಮಾಣ ಪತ್ರದಲ್ಲಿ (ಅಫಿಡವಿಟ್) ತಿಳಿಸಿತು. ಭಿನ್ನಮತವನ್ನು ತಾನು ಸ್ವಾಗತಿಸುವುದಾಗಿ ಹೇಳಿದ ಮಹಾರಾಷ್ಟ್ರ ಸರ್ಕಾರ, ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳನ್ನು ಆತನು ಸರ್ಕಾರದ ನೀತಿಗಳ ಕಟು ಟೀಕಾಕಾರನಾಗಿದ್ದರೂ ಸಂರಕ್ಷಿಸಲೂ ತಾನು ಬದ್ಧ ಎಂದು ಹೇಳಿತು.  ‘ಬಂಧಿತ ಕಾರ್ಯಕರ್ತರು ಸಮಾಜದಲ್ಲಿ ಅರಾಜಕತೆ ಉಂಟು ಮಾಡುವ ಸಲುವಾಗಿ ವ್ಯಾಪಕ ಹಿಂಸಾಚಾರ, ಆಸ್ತಿನಾಶದ ಸಲುವಾಗಿ ಮಾವೋವಾದಿ ಕಮ್ಯೂನಿಸ್ಟ್ ಪಕ್ಷದಿಂದ ರೂಪಿಸಲಾಗಿದ್ದ ಸಂಚಿನ ಭಾಗವಾಗಿದ್ದಾರೆ. ಭಯೋತ್ಪಾದಕ ಸಂಘಟನೆಯನ್ನು ೨೦೦೯ರಲ್ಲಿ ನಿಷೇಧಿಸಲಾಗಿತ್ತು ಎಂದು ಸರ್ಕಾರ ತಿಳಿಸಿತು. ಡಿಸೆಂಬರ್ ೩೧ರಂದು ಕಬೀರ್ ಕಲಾ ಮಂಚ್ ಹೆಸರಿನ ಸಂಘಟನೆಯ ಮೂಲಕ ಭೀಮಾ ಕೋರೆಗಾಂವ್ ಗ್ರಾಮದಲ್ಲಿಎಲ್ಗಾರ್ ಪರಿಷದ್ ಸಮಾವೇಶ ಸಂಘಟಿಸಲು ಯೋಜಿಸಲಾಗಿತ್ತು. ನಿರ್ದಿಷ್ಟ ಸಮುದಾಯದ ಭಾವನೆಗಳ ಜೊತೆ ಆಟವಾಡುವ ಸಲುವಾಗಿಯೇ ಸಮಾವೇಶವನ್ನು ಸಂಘಟಿಸಲಾಗಿತ್ತು ಎಂಬುದು ತನಿಖೆಗಳಿಂದ ಬೆಳಕಿಗೆ ಬಂದಿದೆ ಎಂದು ಸರ್ಕಾರ ಕೋರ್ಟಿಗೆ ತಿಳಿಸಿತು. ಪ್ರತಿವರ್ಷವೂ ಪೇಶ್ವಾಗಳ ವಿರುದ್ಧದ ಸಮಯರದಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದ ಮಹರ್ ರೆಜಿಮೆಂಟಿನ ಯೋಧರ ಶೌರ್ಯವನ್ನು ಗೌರವಿಸುವ ಸಲುವಾಗಿ, ಅತ್ಯಂತ ಶಾಂತಿಯುತವಾಗಿ ನಡೆಸುತ್ತಾ ಬರಲಾಗುವ ವಿಜಯ್ ದಿವಸ್ ಮುನ್ನಾದಿನ ಉದ್ದೇಶ ಪೂರ್ವಕವಾಗಿಯೇ ಸಮಾವೇಶವನ್ನು ಸಂಘಟಿಸಲಾಗಿತ್ತು. ’ಎಲ್ಗಾರ್ ಎಂಬ ಪದವುದಾಳಿ ಎಂಬ ಅರ್ಥವನ್ನು ಕೊಡುವಎಲ್ಗಾರ್ ಪದದ ಅಪಭ್ರಂಶವಾಗಿರುವಂತೆ ಕಾಣುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿತು.  ಏಪ್ರಿಲ್ ಮತ್ತು ಜೂನ್ ತಿಂಗಳ ಅವಧಿಯಲ್ಲಿ ನಡೆಸಲಾದ ದಾಳಿಗಳ ಕಾಲದಲ್ಲಿ ವಶಪಡಿಸಿಕೊಳ್ಳಲಾಗಿರುವ ಲ್ಯಾಪ್ ಟ್ಯಾಪ್ ಗಳು, ಪೆನ್ ಡ್ರೈವ್ಗಳಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳು ಲಭಿಸಿವೆ. ಪೊಲೀಸ್ ಕಿರುಕುಳ ಎಂಬುದಾಗಿ ಭವಿಷ್ಯದಲ್ಲಿ ಬಿಂಬಿಸದಂತೆ ಮುನ್ನೆಚ್ಚರಿಕೆಯಾಗಿ ಎಲ್ಲ ದಾಳಿ ಕಾರ್ಯಾಚರಣೆಗಳ ವಿಡಿಯೋ ಮಾಡಿಕೊಳ್ಳಲಾಗಿದೆ. ಇವೆಲ್ಲವನ್ನೂ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ಹಸ್ತಾಂತರಿಸಲಾಗಿದ್ದು ಸುಪ್ರೀಂಕೋರ್ಟಿಗೆ ಸಾಕ್ಷ್ಯವಾಗಿ ಒದಗಿಸಲು ಸರ್ಕಾರ ಬಯಸಿದೆ ಎಂದೂ ಪ್ರಮಾಣಪತ್ರ ಹೇಳಿತು. ಆರೋಪಿಗಳು ಭೂಗತ ಕಾರ್ಯಕರ್ತರಿಗೆ ಸಂಘರ್ಷ ಪ್ರದೇಶಕ್ಕೆ ತೆರಳಲು, ಹಣ ವಿತರಣೆ, ಶಸ್ತ್ರಾಸ್ತ್ರ ಖರೀದಿ, ಶಸ್ತ್ರಾಸ್ರಗಳ ದರ ನಿಗದಿ ಇತ್ಯಾದಿ ವಿಷಯಗಳಲ್ಲಿ ಮಾರ್ಗದರ್ಶನ ಮಾಡುವ ಕೃತ್ಯಗಳಲ್ಲಿ ಶಾಮೀಲಾಗಿದ್ದರು ಎಂಬುದನ್ನು ಸಂಗ್ರಹಿಸಲಾಗಿರುವ ಸಾಕ್ಷ್ಯಗಳು ಸ್ಪಷ್ಟವಾಗಿ ಸಾಬಿತು ಪಡಿಸಿವೆ. ಭಾರತಕ್ಕೆ ಇಂತಹ ಶಸ್ತ್ರಾಸ್ತ್ರಗಳನ್ನು ತರುವ ಮಾರ್ಗಗಳ ಬಗೆಗೂ ಆರೋಪಿಗಳಲ್ಲಿ ಕೆಲವರು ಸಲಹೆಗಳನ್ನು ನೀಡುತ್ತಿದ್ದರು ಎಂದೂ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು. ಚರಿತ್ರೆಕಾರ ರೊಮೀಲಾ ಥಾಪರ್ ಸೇರಿದಂತೆ ಐವರು ಗಣ್ಯರು ಸಂವಿಧಾನದ ೩೨ನೇ ಪರಿಚ್ಛೇದದ ಅಡಿಯಲ್ಲಿ ಸಲ್ಲಿಸಿದ ಅರ್ಜಿಗೆ ನೀಡಿದ ಉತ್ತರದಲ್ಲಿ ಸಶಸ್ತ್ರ ಬಂಡಾಯದ ಗುರಿ ಈಡೇರಿಸಲು ಆಯಕಟ್ಟಿನ ಸಲಹೆಗಳನ್ನು ಆರೋಪಿಗಳು ಕೊಡುತ್ತಿದ್ದರು ಎಂದು ತಿಳಿಸಿದ ಸರ್ಕಾರ, ಕ್ರಿಮಿನಲ್ ಸಾಕ್ಷ್ಯಾಧಾರಗಳನ್ನು ಆಧರಿಸಿ ಬಂಧಿಸಲಾದ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ಹೊರಗಿನ ಗಣ್ಯರು ಅರ್ಜಿ ಸಲ್ಲಿಸಿದ್ದನ್ನೂ ಪ್ರಶ್ನಿಸಿತು.

2018: ನವದೆಹಲಿ: ಎಡಪಂಥೀಯ ರೈತ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ರಾಮಲೀಲಾ ಮೈದಾನದಿಂದ ಸಂಸತ್ ಮಾರ್ಗದವರೆಗೆ ಸಂಘಟಿಸಿದ ಬೃಹತ್ ಮಜ್ದೂರ್ ಕಿಸಾನ್ ಸಂಘರ್ಷ ಮೆರವಣಿಗೆ ಪರಿಣಾಮವಾಗಿ ರಾಜಧಾನಿಯ ಹಲವಡೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸಂಸತ್ ಮಾರ್ಗ, ಜನಪಥ್ ಮತ್ತು ಕೆಜಿ ಮಾರ್ಗಗಳನ್ನು ವಾಹನಗಳು ಸಂಚರಿಸದಂತೆ ಬಂದ್ ಮಾಡಲಾಗಿದ್ದು, ವಾಹನ ಚಾಲಕರಿಗೆ ಪರ್ಯಾಯ ಮಾರ್ಗಗಳಲ್ಲಿ ಸಾಗುವಂತೆ ಸೂಚಿಸಲಾಗಿದೆ ಎಂದು ದೆಹಲಿ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದರು.  ಇದೊಂದು ಚಾರಿತ್ರಿಕ ಸಮಾವೇಶ. ಇದೇ ಮೊದಲ ಬಾರಿಗೆ ಬೃಹತ್ ಸಂಖ್ಯೆಯಲ್ಲಿ ಕಾರ್ಮಿಕರು ಮತ್ತು ರೈತರು ಒಟ್ಟಾಗಿ ಸರ್ಕಾರದ ನೀತಿಗಳನ್ನು ಪ್ರತಿಭಟಿಸಲು ಮೆರವಣಿಗೆ ನಡೆಸಿದ್ದಾರೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ತಪನ್ ಸೆನ್ ಹೇಳಿದರು.ಸಣ್ಣ ರೈತರ ಸಾಲಮನ್ನಾ, ಬೆಳೆಗಳಿಗೆ ಉನ್ನತ ಬೆಂಬಲ ಬೆಲೆ, ೧೮,೦೦೦ ರೂಪಾಯಿಗಳ ಕನಿಷ್ಠ ವೇತನ, ಕಾರ್ಮಿಕ ವಿರೋಧಿ ಸುಧಾರಣಾ ಕ್ರಮಗಳ ರದ್ದು ಮತ್ತು ಎಲ್ಲರಿಗೂ ಸಾಮಾಜಿಕ ಭದ್ರತೆ ಮತ್ತು ಆಹಾರ ಭದ್ರತೆಯ ಲಾಭದ ವರ್ಗಾವಣೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಮಜ್ದೂರ್ ಕಿಸಾನ್ ಸಂಘರ್ಷ   ಮೆರವಣಿಗೆ ಸಂಘಟಿಸಲಾಗಿತ್ತು. ವರ್ಷ ಗ್ರಾಮೀಣ ಕೃಷಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ (ಎಂಜಿ ನರೇಗಾ) ಲಭಿಸಿದ್ದು ೨೭ ದಿನಗಳ ಕೆಲಸ ಮಾತ್ರ. ಮೋದಿ ಸರ್ಕಾರದಅಚ್ಛೇದಿನ್ ಭರವಸೆ ಏನಾಯಿತು? ಕಾರ್ಪೋರೇಟ್ಗಳಿಗೆ ಮಾತ್ರ ಅಚ್ಛೇದಿನ್ ಬಂದಿದೆ, ನಮ್ಮಂತಹ ಜನರಿಗಲ್ಲ ಎಂದು ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘದ ಅಧ್ಯಕ್ಷ ಎಸ್. ತಿರುನಾವುಕ್ಕರಸು ಟೀಕಿಸಿದರುಸಂಸತ್ ಮಾರ್ಗದಲ್ಲಿ ವರ್ಷ ನಡೆದ ಅತಿ ದೊಡ್ಡ ಪ್ರತಿಭಟನೆ ಇದು ಎಂದು ದೆಹಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕನಿಷ್ಠ . ಲಕ್ಷ ಮಂದಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಂಘಟಕರು ಪ್ರತಿಪಾದಿಸಿದರುರೈತ ನಾಯಕರು ಮತ್ತು ಅವರನ್ನು ಬೆಂಬಲಿಸಿರುವ ರಾಜಕೀಯ ನಾಯಕರು ೨೦೧೯ರ ಮಹಾಚುನಾವಣೆಗೆ ಮುನ್ನ ಇದಕ್ಕಿಂತಲೂ ಬೃಹತ್ತಾದ ಪ್ರತಿಭಟನಾ ಪ್ರದರ್ಶನಗಳನ್ನು ಸಂಘಟಿಸುವ ಬಗ್ಗೆ ಚಿಂತಿಸಿದರು.  ‘ನವೆಂಬರ್ ೨೮ರಿಂದ ೩೦ರವರೆಗೆ ನಾವು ಅವಕಾಶ ವಂಚಿತರ ಮಹಾಯಾತ್ರೆಯನ್ನು ಸಂಘಟಿಸುತ್ತೇವೆ. ಇದರಲ್ಲಿ ರೈತರು ಮಾತ್ರವೇ ಅಲ್ಲ, ಭೂರಹಿತರು, ಆದಿವಾಸಿಗಳು, ದಲಿತರು, ಕಾರ್ಮಿಕರು ದೆಹಲಿಯ ನಾಲ್ಕೂ ಮೂಲೆಗಳಿಂದ ರಾಜಧಾನಿಗೆ ಲಗ್ಗೆ ಇಡಲಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್ ಹೇಳಿದರು. ವಿಜೂ ಕೃಷ್ಣ್ ನಾಸಿಕ್ನಿಂದ ಮುಂಬೈಗೆ ಬೃಹತ್ ಕಿಸಾನ್ ಯಾತ್ರೆ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನವೆಂಬರ್  ಪ್ರದರ್ಶನದಲ್ಲಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಮಧ್ಯೆ ರಾಕೇಶ್ ಟಿಕಾಯತ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ ತಾನು ಸೆಪ್ಟೆಂಬರ್ ೨೩ರಿಂದ ಅಕ್ಟೋಬರ್ ೨ರವರೆಗೆ ಹರಿದ್ವಾರದಿಂದ ದೆಹಲಿಯವರೆಗೆ ಕಿಸಾನ್ ಕ್ರಾಂತಿ ಪಾದಯಾತ್ರೆ ಸಂಘಟಿಸುವುದಾಗಿ ಪ್ರತ್ಯೇಕವಾಗಿ ಪ್ರಕಟಿಸಿದೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ರೈತ ಮಿತ್ರ ಬೆಳೆ ವಿಮಾ ಮತ್ತು ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಆದಾಯ ಬೆಂಬಲ ಯೋಜನೆ ಜಾರಿಗೆ ಆಗ್ರಹಿಸುವುದು ಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ಈದಿನ ಮಜ್ದೂರ್ ಕಿಸಾನ್ ಸಂಘರ್ಷ ಪ್ರದರ್ಶನಕ್ಕೆ  ಕಾಂಗ್ರೆಸ್ ಪಕ್ಷ ಕೂಡಾ ಬೆಂಬಲ ವ್ಯಕ್ತ ಪಡಿಸಿತ್ತು.

2018: ನವದೆಹಲಿ: ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳಿಂದ ತೀವ್ರ ದಾಳಿಗೆ ಗುರಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಚಿವ ಸಂಪುಟಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಕ್ಷಣಾ ಕಾರ್ಯದರ್ಶಿ ಸಂಜಯ್ ಮಿತ್ರ ಅವರು ವಿಪಕ್ಷ ದಾಳಿ ಎದುರಿಸುವ ಬಗೆ ಹೇಗೆಂಬ ಬಗ್ಗೆ ಪಾಠ ಮಾಡಿದರು. ಭದ್ರತಾ ಅಧಿಕಾರಿಗಳು ಫ್ರಾನ್ಸ್ ಜೊತೆಗಿನ ಒಪ್ಪಂದಕ್ಕೆ ಸಂಬಂಧಪಟ್ಟ ವಾಸ್ತವಾಂಶಗಳನ್ನು ಸಚಿವ ಸಂಪುಟ ಸದಸ್ಯರ ಸಭೆಯಲ್ಲಿ ವಿವರಿಸಿ, ವಿರೋಧಿ ಆರೋಪಗಳನ್ನು ಎದುರಿಸುವ ವಿಧಾನ ಬಗ್ಗೆ ೧೫೦ ನಿಮಿಷಗಳ ಪ್ರಸಂಟೇಷನ್ ಮೂಲಕ ಮನದಟ್ಟು ಮಾಡಿದರು ಎಂದು ಮೂಲಗಳು ತಿಳಿಸಿದವು. ಸಭೆ ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ನಡೆಯಿತು.ಒಪ್ಪಂದವು ಎರಡು ಸರ್ಕಾರಗಳ ಮಧ್ಯೆ ಆಗಿರುವ ಒಪ್ಪಂದವಾಗಿದ್ದು, ಯಾರೇ ಖಾಸಗಿ ವ್ಯಕ್ತಿಗಳು ಇದರಲ್ಲಿ ಶಾಮೀಲಾಗಿಲ್ಲ, ಹೀಗಾಗಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ ಎಂಬುದನ್ನು ಸಚಿವರಿಗೆ ಅಧಿಕಾರಿಗಳು ವಿವರಿದರು. ವಿಮಾನಗಳ ಸಾಮರ್ಥ್ಯವು ಭಾರತೀಯ ವಾಯುಪಡೆಯನ್ನು ಬಲಾಢ್ಯಗೊಳಿಸುವುದು ಮತ್ತು ಯುದ್ಧ ವಿಮಾನಗಳನ್ನು ವಾಯುಪಡೆಗೆ ಆಸ್ತಿಯನ್ನಾಗಿ ಮಾಡುವುದು ಎಂದು ಅಧಿಕಾರಿಗಳು ವಿವರಿಸಿದರು ಎಂದು ಮೂಲಗಳು ಹೇಳಿದವು. ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ನಿರಂತರ ದಾಳಿ ನಡೆಸುತ್ತಿವೆ. ಯುದ್ಧ ವಿಮಾನಗಳಿಗೆ ದುಬಾರಿ ಬೆಲೆ ತರಲಾಗುತ್ತಿದ್ದು, ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಬದಲಿಗೆ ಫ್ರಾನ್ಸಿನ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವ ಮೂಲಕ ಖಾಸಗಿ ಭಾರತೀಯ ವ್ಯವಹಾರಸ್ಥರಿಗೆ ಲಾಭ ಮಾಡಿಕೊಡಲಾಗಿದೆ ಎಂದು ವಿಪಕ್ಷಗಳು ಆಪಾದಿಸಿವೆ. ಪ್ರಸೆಂಟೇಷನ್ ಸಭೆಯು ಎಲ್ಲ ಮಿತ್ರ ಪಕ್ಷಗಳನ್ನು ಒಟ್ಟಿಗೆ ಒಯ್ಯುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನಗಳ ಮಹತ್ವವನ್ನೂ ಒತ್ತಿ ಹೇಳಿದೆ. ಲೋಕಸಭಾ ಚುನಾವಣೆಗೆ ಇನ್ನು ಕೇವಲ ತಿಂಗಳುಗಳು ಇರುವ ಹಿನ್ನೆಲೆಯಲ್ಲಿ ವಿಪಕ್ಷಗಳನ್ನು ಹೇಗೆ ಮಣಿಸಬಹುದು ಎಂಬುದಾಗಿ ಸರ್ಕಾರ ಯೋಜಿಸಿತು. ಸರ್ಕಾರದ ಮಹತ್ವಾಕಾಂಕ್ಷಿ  ’ಆಯುಷ್ಮಾನ್ ಭಾರತ ಯೋಜನೆ, ಬಡವರಿಗೆ ಆರೋಗ್ಯ ವಿಮಾ ರಕ್ಷಣೆ ಮತ್ತು ಸ್ವಚ್ಛ ಭಾರತ ಯೋಜನೆ ಬಗೆಗೂ ಪ್ರತ್ಯೇಕ ಪ್ರಸಂಟೇಷನ್ ಗಳನ್ನು ಮಾಡಲಾಯಿತು ಎಂದು ಮೂಲಗಳು ಹೇಳಿದವು.

2018: ನವದೆಹಲಿ: ವಯಸ್ಕರು ಪರಸ್ಪರ ಒಪ್ಪಿಗೆಯೊಂದಿಗೆ ನಡೆಸಲಾಗುವ ಸಲಿಂಗ ರತಿಯನ್ನು ಅಪರಾಧವನ್ನಾಗಿ ಮಾಡುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೩೭೭ರ ಸಿಂಧುತ್ವ ಕುರಿತು ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಅಕ್ಟೋಬರ್ 11ರ ಗುರುವಾರ ತನ್ನ ತೀರ್ಪು ಪ್ರಕಟಿಸುವ ಸಾಧ್ಯತೆಗಳಿವೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ಜುಲೈ ೨೭ರಂದು ಕಾಯ್ದಿರಿಸಿತ್ತುಅರ್ಜಿಗಳಿಗೆ ಸಂಬಂಧಿಸಿದಂತೆ ತನ್ನ ಪ್ರತಿಕ್ರಿಯೆ ಸಲ್ಲಿಸಲು ಮೊದಲಿಗೆ ಕಾಲಾವಕಾಶ ಕೋರಿದ್ದ ಕೇಂದ್ರವು ಬಳಿಕ ಪರಸ್ಪರ ಸಮ್ಮತಿಯೊಂದಿಗೆ ಇಬ್ಬರು ವಯಸ್ಕರು ನಡೆಸುವ ಸಲಿಂಗರತಿಯನ್ನು ಅಪರಾಧವನ್ನಾಗಿ ಮಾಡುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಸಿಂಧುತ್ವದ ವಿಚಾರವನ್ನು ನ್ಯಾಯಾಲಯದ ವಿವೇಚನೆಗೆ ಬಿಟ್ಟು ಬಿಡುವುದಾಗಿ ತಿಳಿಸಿತ್ತು. ಅಪ್ರಾಪ್ತರು ಮತ್ತು ಪ್ರಾಣಿಗಳಿಗೆ ಸಂಬಂಧಿಸಿದಂತೆ ಸೆಕ್ಷನ್ ವಿಧಿಸಿರುವ ದಂಡನಾತ್ಮಕ ಅಂಶಗಳು ಹಾಗೆಯೇ ಮುಂದುವರೆಯಲು ಬಿಡಬೇಕು ಎಂದು ಕೇಂದ್ರವು ಮನವಿ ಮಾಡಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೭ ಅಸಹಜ ಅಪರಾಧಗಳಿಗೆ ಸಂಬಂಧಿಸಿದೆ. ಯಾರೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ನಿಸರ್ಗ ನಿಯಮಕ್ಕೆ ವಿರುದ್ಧವಾಗಿ ರತಿಕ್ರಿಯೆ ನಡೆಸುವ ವ್ಯಕ್ತಿಗೆ ಜೀವಾವಧಿ ಸಜೆ ಅಥವಾ ೧೦ ವರ್ಷಗಳವರೆಗೆ ವಿಸ್ತರಿಸಬಹುದಾದ ನಿರ್ದಿಷ್ಟ ಅವಧಿಯ ಸೆರೆವಾಸ ಮತ್ತು ದಂಡವನ್ನು ವಿಧಿಸಬಹುದು ಎಂಬುದಾಗಿ ಸೆಕ್ಷನ್ ಹೇಳುತ್ತದೆಸೆಕ್ಷನ್ ೩೭೭ರ ಸಿಂಧುತ್ವದ ಪ್ರಶ್ನೆಯನ್ನು ಸರ್ಕಾರೇತರ ಸಂಘಟನೆ ನಾಜ್ ಫೌಂಡೇಶನ್ ೨೦೦೧ರಲ್ಲಿ ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಮೊತ್ತ ಮೊದಲಿಗೆ ಪ್ರಶ್ನಿಸಿತ್ತು. ದೆಹಲಿ ಹೈಕೋರ್ಟ್ ವಯಸ್ಕರ ನಡುವಣ ಸಮ್ಮತಿಯ ಸಲಿಂಗ ರತಿಯನ್ನು ಅಪರಾಧವನ್ನಾಗಿ ಮಾಡುವ ವಿಧಿ ಅಕ್ರಮ ಎಂದು ತೀರ್ಪು ನೀಡಿತ್ತು. ೨೦೦೯ರಲ್ಲಿ ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್ ೨೦೧೩ರಲ್ಲಿ ಅನೂರ್ಜಿತಗೊಳಿಸಿತ್ತು. ತನ್ನ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನೂ ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಸುಪ್ರೀಂಕೋರ್ಟಿನ ತೀರ್ಪು ಸಲಿಂಗ ರತಿಯನ್ನು ಅಪರಾಧವನ್ನಾಗಿ ಮಾಡುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೭ನ್ನು ಮತ್ತೆ ಊರ್ಜಿತಗೊಳಿಸಿತ್ತುಪಂಚ ಸದಸ್ಯ ಸಂವಿಧಾನಪೀಠವು ತಾನು ಕ್ಯುರೇಟಿವ್ ಅರ್ಜಿಗಳನ್ನು ಪರಿಶೀಲಿಸುವುದಿಲ್ಲ ಮತ್ತು ವಿಷಯಕ್ಕೆ ಸಂಬಂಧಿಸಿದ ಹೊಸ ಅರ್ಜಿಗಳನ್ನು ಮಾತ್ರವೇ ಇತ್ಯರ್ಥ ಪಡಿಸುವುದಾಗಿ ಜುಲೈ ೧೦ರಂದು  ಸ್ಪಷ್ಟ ಪಡಿಸಿತ್ತು. ರಿಟ್ ಅರ್ಜಿಗಳನ್ನು ಅಪೊಸ್ಟೋಲಿಕ್ ಅಲಯನ್ಸ್ ಆಫ್ ಚರ್ಚಸ್, ಉತ್ಕಲ್ ಕ್ರಿಶ್ಚಿಯನ್ ಅಸೋಸಿಯೇಶನ್ ಮತ್ತು ಇತರ ಕೆಲವು ಸರ್ಕಾರೇತರ ಸಂಘಟನೆಗಳು ಹಾಗೂ ಸುರೇಶ್ ಕುಮಾರ್ ಕೌಶಲ್ ಸೇರಿದಂತೆ ಕೆಲವು ವ್ಯಕ್ತಿಗಳು ಸಲ್ಲಿಸಿದ್ದರು. ಸುರೇಶ್ ಕುಮಾರ್ ಕೌಶಲ್ ಅವರು ೨೦೦೯ರ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದರು.

2018: ಮುಂಬೈ: ಪದ್ಮ ವಿಭೂಷಣ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಚಿತ್ರನಟ ದಿಲೀಪ್ ಕುಮಾರ್ ಅವರು ಅಸ್ವಸ್ಥರಾದರು. ಅವರನ್ನು ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೃದಯ ಸೋಂಕಿನ ಕಾರಣ ಅಸ್ವಸ್ಥರಾದ ದಿಲೀಪ್ ಕುಮಾರ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂಬುದಾಗಿ ದಿಲೀಪ್ ಕುಮಾರ್ ಅವರ ಟ್ವಟ್ಟರ್ ಖಾತೆಯಲ್ಲಿ ಬಂದ ಟ್ವೀಟಿನೊಂದಿಗೆ ದಿಲೀಪ್ ಕುಮಾರ್ ಅವರು ಅಸ್ವಸ್ಥರಾಗಿರುವ ವಿಚಾರ ಗೊತ್ತಾಯಿತು೯೫ರ ಹರೆಯದ ನಟ ದಿಲೀಪ್ ಕುಮಾರ್ ಅವರು ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂಬುದು ತತ್ ಕ್ಷಣಕ್ಕೆ ಗೊತ್ತಾಗಿಲ್ಲ, ಆದರೆ ಚಿಂತಿಸಲು ಕಾರಣಗಳಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದರು. ಹಿರಿಯ ನಟ ದೀರ್ಘ ಕಾಲದಿಂದ ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ತೀವ್ರ ನಿರ್ಜಲೀಕರಣ ಪರಿಣಾಮವಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.  ಕ್ವಿಲಾ ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದ ದಿಲೀಪ್ ಕುಮಾರ್ ೧೯೯೪ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ, ೨೦೧೫ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ದೇವದಾಸ್, ಮುಘಲ್ --ಆಜಂ ಮತ್ತು ಕರ್ಮ ಚಿತ್ರಗಳಲ್ಲಿನ ನಟನೆ ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತ್ತು. ೨೦ ವರ್ಷಗಳ ಹಿಂದೆ, ೧೯೬೬ರಲ್ಲಿ ದಿಲೀಪ್ ಅವರು ಸಾಯಿರಾ ಬಾನು ಅವರನ್ನು ಮದುವೆಯಾಗಿದ್ದರು.


2016: ನವದೆಹಲಿ: ಕೆಆರ್ಎಸ್ನಿಂದ 50 ಟಿ.ಎಂ.ಸಿ. ಅಡಿ ನೀರು ಬಿಡಬೇಕು ಎಂದು ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಈದಿನ  ನಡೆದು, ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಹಿನ್ನಡೆಯಾಯಿ.ತು. ಅರ್ಜಿ ವಿಚಾರಣೆ ಮಾಡಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಯು.ಯು. ಲಲಿತ್ ಅವರ ದ್ವಿಸದಸ್ಯ ಪೀಠವು, ಮುಂದಿನ 10 ದಿನಗಳ ಕಾಲ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿತು. ಕಾವೇರಿ ಕಣಿವೆಯಲ್ಲಿ ಮಳೆ ಬೀಳದಿರುವುದರಿಂದ ಯಾವುದೇಜಲಾಶಯಗಳು ಭರ್ತಿಯಾಗಿಲ್ಲ. ಎಲ್ಲಾಜಲಾಶಯಗಳಲ್ಲಿಯೂ ಸೇರಿ 51 ಟಿ.ಎಂ.ಸಿ. ಅಡಿ ನೀರು ಸಂಗ್ರಹವಿದೆ. ಇದರಲ್ಲಿ 40 ಟಿಎಂಸಿ ಅಡಿ ನೀರು ಕುಡಿಯುವ  ಉದ್ದೇಶಕ್ಕೆ ಅತ್ಯಗತ್ಯವಾಗಿ ಬೇಕಾಗಿದೆ. ಸಂಕಷ್ಟಕರ  ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಪರಿಸ್ಥಿತಿ ಇಲ್ಲ ಎಂದು ಸುಪ್ರೀಂಕೋರ್ಟ್ಗೆ ಕರ್ನಾಟಕ ಮನವರಿಕೆ ಮಾಡಿತ್ತು . ಆದರೆ, 'ಬದುಕಿ, ಬದುಕಲು ಬಿಡಿ' ಎಂದು ಈಮೊದಲೇ ಸೂಚಿಸಿದ್ದ ಸುಪ್ರೀಂಕೋರ್ಟ್ನ್ಯಾಯಮೂರ್ತಿಗಳು  ಉಭಯ ರಾಜ್ಯಗಳ ವಾದ ಆಲಿಸಿದ ಬಳಿಕ 10 ದಿನಗಳ ಕಾಲ ಪ್ರತಿದಿನ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿದರು. ತಮಿಳುನಾಡಿನ ಸುತ್ತಲೂ ನೀರಿದೆ. ಆದರೆ ಕುಡಿಯಲು ಒಂದು ಹನಿ ನೀರಿಲ್ಲ ಎಂಬ ಪರಿಸ್ಥಿತಿ. ಆದ್ದರಿಂದ ಕರ್ನಾಟಕ ತಮಿಳುನಾಡಿಗೆ ನೀರು ಬಿಡುವ ಮೂಲಕ ಅಲ್ಲಿನ ಜನರಿಗೆ ಸಹಾಯ ಮಾಡಬೇಕು ಎಂದು ನ್ಯಾಯಪೀಠ ಹೇಳಿತು. ಅಲ್ಲದೆ, ಹಿಂದೆ ನೀರು ಹಂಚಿಕೆ ಕುರಿತು ನ್ಯಾಯಾಧೀಕರಣ ನೀಡಿದ್ದ ಆದೇಶದ ಬಗ್ಗೆ 4 ದಿನಗಳೊಳಗೆ ಮೇಲ್ವಿಚಾರಣಾ ಸಮಿತಿಯನ್ನು ಸಂಪರ್ಕಿಸುವಂತೆ ತಮಿಳುನಾಡಿಗೆ ಸೂಚಿಸಿತು. 10 ದಿನಗಳ ಒಳಗೆ ತಮಿಳುನಾಡಿನ ಅರ್ಜಿಯನ್ನು ಇತ್ಯರ್ಥ ಪಡಿಸುವಂತೆ ಗಡುವನ್ನೂ ವಿಧಿಸಿತು.

2016: ಹಾಂಗ್
ಜೊವು: ಆರ್ಥಿಕ ಅಪರಾಧವನ್ನೆಸಗುವವರ ರಹಸ್ಯ ತಾಣಗಳನ್ನು ನಿರ್ನಾಮ ಮಾಡಬೇಕು
ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಿ 20 ಶೃಂಗಸಭೆಯಲ್ಲಿ ಆಗ್ರಹಿಸಿದರು. ಉತ್ತಮ ಆಡಳಿತಕ್ಕಾಗಿ ಸಮರ್ಪಣಾ ಭಾವ ಬೇಕು. ಭ್ರಷ್ಟಾಚಾರ ಮತ್ತು ಆರ್ಥಿಕ ಅಪರಾಧಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಉತ್ತಮ ಆಡಳಿತ ನಡೆಸಲು ಭ್ರಷ್ಟಾಚಾರ, ಕಪ್ಪು ಹಣ, ತೆರಿಗೆ ವಂಚನೆ ಮೊದಲಾದ ಸಮಸ್ಯೆಗಳ ವಿರುದ್ಧ ಹೋರಾಡ ಬೇಕಾಗಿದೆ. ಅದಲ್ಲದೆ, ಆರ್ಥಿಕ ಅಪರಾಧಿಗಳನ್ನು ಎಸಗುವವರು ಸುರಕ್ಷಿತ ತಾಣಗಳನ್ನು ಅರಸಿ ತಪ್ಪಿಸಿಕೊಳ್ಳುತ್ತಾರೆ. ಹೀಗೆ ಅವರು ಅವಿತುಕೊಳ್ಳುವ ರಹಸ್ಯ ತಾಣಗಳನ್ನು ಕೆಡವಿ, ಅವರ ಬ್ಯಾಂಕ್ ವ್ಯವಹಾರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೋದಿ ಅಭಿಪ್ರಾಯ ಪಟ್ಟರು.

2016: ಮಂಡ್ಯ: ತಮಿಳುನಾಡಿಗೆ 15000 ಕ್ಯೂಸೆಕ್ ನೀರು ಬಿಡಬೇಕು ಎಂಬುದಾಗಿ ಸುಪ್ರೀಂಕೋರ್ಟ್ ಈದಿನ ನೀಡಿದ ಆದೇಶವನ್ನು ಖಂಡಿಸಿ ಮಂಡ್ಯದಲ್ಲಿ ತೀವ್ರ ಪ್ರತಿಭಟನೆ ಭುಗಿಲೆದ್ದಿತು. ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ, ಜಿಲ್ಲೆಯ ಶ್ರೀರಂಗಪಟ್ಟಣ, ಬೆಳಗೋಳ, ಕೆಆರ್ಎಸ್ ಬಳಿ ರೈತ ಸಂಘ, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಶ್ರೀರಂಗಪಟ್ಟಣದ ಬಳಿ ರೈತರು ಕಾವೇರಿ ನದಿಗೆ ಇಳಿದು ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ನಮಗೆ ನೀರಿಲ್ಲ. ಆದ್ದರಿಂದ ತಮಿಳುನಾಡಿಗೆ ನೀರು ಬಿಡಬಾರದು ಎಂದು ಮಾಜಿ ಸಂಸದ ಜಿ. ಮಾದೇಗೌಡ ಒತ್ತಾಯಿಸಿದರು.

2016:  ನವದೆಹಲಿ: ನಿಯತಕಾಲಿಕ  ಒಂದರ  ಮುಖಪುಟದಲ್ಲಿ ವಿಷ್ಣು ಅವತಾರದಲ್ಲಿ ಕಾಣಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಗೈ ಬ್ಯಾಟ್ಸ್ಮನ್‌, ವಿಕೆಟ್‌-ಕೀಪರ್ಮಹೇಂದ್ರ ಸಿಂಗ್ ಧೋನಿ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್  ಖಟ್ಲೆಯನ್ನು  ಸುಪ್ರೀಂಕೋರ್ಟ್  ರದ್ದುಪಡಿಸಿತು. ಇದರೊಂದಿಗೆ ಧೋಣಿ ಅವರಿಗೆ ಭಾರಿ ನಿರಾಳತೆ ಲಭಿಸಿತು.  ವಿಷ್ಣು ಅವತಾರದಲ್ಲಿ ಫೋಸ್ ನೀಡಿರುವುದರಿಂದ ಯಾವುದೇ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿಲ್ಲ ಎಂದು ಸುಪ್ರೀಂ ಪೀಠ ತನ್ನ ಆದೇಶದಲ್ಲಿ ತಿಳಿಸಿತು.  ವಿಷ್ಣುವಿನ ಅವತಾರದಲ್ಲಿ ಫೋಸ್ ನೀಡುವ ಮೂಲಕ ಧೋನಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕದ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ್  ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಧೋನಿ ವಿರುದ್ಧ ಕ್ರಿಮಿನಲ್  ಖಟ್ಲೆ ದಾಖಲಿಸುವಂತೆ ಸೂಚನೆ ನೀಡಿತ್ತು. ತನ್ನ ವಿರುದ್ಧದ ಕ್ರಿಮಿನಲ್ ಖಟ್ಲೆ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಧೋನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿತ್ತು. ಬಳಿಕ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಹಾಗೂ ತನ್ನ ವಿರುದ್ಧ ದಾಖಲಿಸಲಾದ ಕ್ರಿಮಿನಲ್ ಖಟ್ಲೆಯನ್ನು ರದ್ದುಪಡಿಸುವಂತೆ ಕೋರಿ ಎಂಎಸ್ ಧೋನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

2016: ಮುಂಬೈ
: ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದರೆ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ
ಸಯ್ಯದ್ ಸಲಾಹುದ್ದೀನ್ಗೆ ಬುರ್ಹಾನ್ ವನಿಯದ್ದೇ ಗತಿ ಬರಲಿದೆ ಎಂದು ಭಾರತೀಯ ಜನತಾ ಪಕ್ಷ ಎಚ್ಚರಿಕೆ ನೀಡಿತು. ಕಾಶ್ಮೀರ ಕಣಿವೆಯನ್ನು ಯೋಧರ ಪಾಲಿನ ಸ್ಮಶಾನವಾಗಿ ಪರಿವರ್ತಿಸುತ್ತೇವೆ ಎಂದು ಸಲಾಹುದ್ದೀನ್ ಬೆದರಿಕೆ ಹಾಕಿದ್ದ. ಈ ಹೇಳಿಕೆಯನ್ನು ಖಂಡಿಸಿದ ಬಿಜೆಪಿ ವಕ್ತಾರೆ ಶೈನಾ, ಕಾಶ್ಮೀರವನ್ನು ಸ್ಮಶಾನವಾಗಿ ಪರಿವರ್ತಿಸುತ್ತೇನೆ ಎಂದು ಹೇಳಿ ಹಿಂಸಾಚಾರಕ್ಕೆ ಪ್ರೇರೇಪಿಸುವ ಮುನ್ನ ಬುರ್ಹಾನ್ ವನಿಯ ಗತಿ ಏನಾಯಿತು? ಎಂಬುದರ ಬಗ್ಗೆ ಸಲಾಹುದ್ದೀನ್ ಚಿಂತಿಸುವುದೊಳಿತು. ಪರಿಸ್ಥಿತಿಯನ್ನು ಹೇಗೆ ಸಂಭಾಳಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ಗೊತ್ತಿದೆ. ಕೇಂದ್ರ ಸರಕಾರದ ಸಾಮರ್ಥ್ಯವನ್ನು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಹೇಳಿದರು.


2016: ಬೆಂಗಳೂರು: ಸೌರಶಕ್ತಿ ಸಂಗ್ರಹ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿ ಇರುವ ಜಾಗತಿಕ ಕಂಪೆನಿ ಎಬಿಬಿಯ ಸೌರಶಕ್ತಿ ಸಂಗ್ರಹ ಸಾಧನಗಳ (ಇನ್ವರ್ಟರ್‌) ಹೊಸ ತಯಾರಿಕಾ ಘಟಕ ವಿಧ್ಯುಕ್ತವಾಗಿ ಕಾರ್ಯಾರಂಭ ಮಾಡಿತು.  ನೆಲಮಂಗಲ ಬಳಿ  ನಿರ್ಮಿಸಲಾಗಿರುವ ಕಾರ್ಖಾನೆಯನ್ನು ಎಬಿಬಿ ಇಂಡಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ಶರ್ಮಾ ಮತ್ತು ವಿದ್ಯುತ್ಪರಿವರ್ತನ ವಿಭಾಗದ ಜಾಗತಿಕ ವ್ಯವಸ್ಥಾಪಕ ನಿರ್ದೇಶಕ ರಾಬರ್ಟ್‌  ಐಷ್ನರ್ಉದ್ಘಾಟಿಸಿದರು. ‘ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ ಪೂರೈಸಲು ಮತ್ತೊಂದು ಘಟಕ ತೆರೆಯಲಾಗಿದೆ. ಇನ್ವರ್ಟರ್ಗಳ ತಯಾರಿಕಾ  ಸಾಮರ್ಥ್ಯ ದ್ವಿಗುಣಗೊಳ್ಳಲಿದೆಎಂದು ಶರ್ಮಾ  ತಿಳಿಸಿದರು. ‘ವಾಣಿಜ್ಯ ಮತ್ತು ಕೃಷಿ ಬಳಕೆಗೆ  ಪೂರಕವಾಗಿರುವ ರಿಯಾಕ್ಟ್‌, ಟ್ರಯೊ ಮತ್ತು ದೇಶದಲ್ಲಿ ಜನಪ್ರಿಯವಾಗಿರುವ ಪಿವಿ ಸರಣಿಯ ಪಿವಿಎಸ್‌–800 ಸೌರಶಕ್ತಿ ಸಂಗ್ರಹ ಸಾಧನಗಳನ್ನು (ಇನ್ವ್ರ್ಟರ್‌) ಬೆಂಗಳೂರಿನ ಘಟಕದಲ್ಲಿ ತಯಾರಿಸಲಾಗುವುದುಎಂದು ಅವರು ಹೇಳಿದರು.  ಗೃಹಬಳಕೆ, ಕೃಷಿಸಾರಿಗೆ, ಉದ್ಯಮ, ವಾಣಿಜ್ಯ ಬಳಕೆಯ ಉದ್ದೇಶಕ್ಕಾಗಿ 2ಕಿಲೊ ವಾಟ್ನಿಂದ  2 ಮೆಗಾವಾಟ್‌  ಸಂಗ್ರಹ ಸಾಮರ್ಥ್ಯದ ಇನ್ವರ್ಟರ್ಗಳನ್ನು ಘಟಕದಲ್ಲಿ ತಯಾರಿಸಲಾಗುತ್ತದೆ.

1888: ಇಂದು ಶಿಕ್ಷಕರ ದಿನ. 1888ರಲ್ಲಿ ಈದಿನ ಸರ್ವಪಳ್ಳಿ ರಾಧಾಕೃಷ್ಣನ್ ಜನಿಸಿದರು. ವಿದ್ವಾಂಸ ಹಾಗೂ ಮುತ್ಸದ್ಧಿಯಾಗಿದ್ದ ಅವರು 1962ರಿಂದ 1967ರವರೆಗೆ ಭಾರತದ ರಾಷ್ಟ್ರಪತಿಯಾಗಿದ್ದರು. ಅವರ ಜನ್ಮದಿನವನ್ನು `ಶಿಕ್ಷಕರ ದಿನ'ವಾಗಿ ಆಚರಿಸಲಾಗುತ್ತದೆ.

2008: ಭಾರತದ ಪಂಕಜ್ ಅಡ್ವಾಣಿ ಅವರು ಬೆಂಗಳೂರಿನಲ್ಲಿ ಮುಕ್ತಾಯವಾದ ಐ ಬಿ ಎಸ್ ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ನ ಪಾಯಿಂಟ್ ಫಾರ್ಮ್ಯಾಟಿನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಕೆ ಎಸ್ ಬಿ ಎ ಹಾಲಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಕಜ್ ಅಡ್ವಾಣಿ ಅವರು 150-90, 151-00, 150-24, 150-00, 86-150, 150-72, 150-12ರಲ್ಲಿ ಅನುಭವಿ ಆಟಗಾರ ಗೀತ್ ಸೇಥಿ ಅವರನ್ನು ಪರಾಭವಗೊಳಿಸಿದರು. ಪಂಕಜ್ ಅವರು ಪಾಯಿಂಟ್ ಫಾರ್ಮ್ಯಾಟಿನಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಈ ಹಿಂದೆ 2005ರಲ್ಲಿ ಅವರು ಕಿರೀಟ ಮುಡಿಗೇರಿಸಿದ್ದರು.

2008: ನೌಕಾ ಪಡೆಯ ನಿವೃತ್ತ ಮುಖ್ಯಸ್ಥ ಎಸ್. ಎಂ. ನಂದಾ ಅವರ ಮೊಮ್ಮಗ ಸಂಜೀವ್ ನಂದಾ ಅವರಿಗೆ ಬಿಎಂಡಬ್ಲ್ಯೂ ಕಾರು ಅಪಘಾತ ಪ್ರಕರಣದಲ್ಲಿ ಆರು ಮಂದಿಯ ಸಾವಿಗೆ ಕಾರಣವಾಗಿರುವುದಕ್ಕಾಗಿ  ದೆಹಲಿ  ನ್ಯಾಯಾಲಯವು  ಐದು ವರ್ಷ ಜೈಲು ಶಿಕ್ಷೆ ವಿಧಿಸಿತು. ಒಂಬತ್ತು ವರ್ಷದ ಹಿಂದೆ 1999ರ ಜನವರಿ 10ರ  ರಾತ್ರಿ  ಸಂತೋಷ ಕೂಟವೊಂದರಲ್ಲಿ ಭಾಗವಹಿಸಿದ್ದ ಸಂಜೀವ್ ನಂದಾ ಪಾನಮತ್ತನಾಗಿ ಬಿಎಂಡಬ್ಲ್ಯು ಕಾರನ್ನು ಅತಿ ವೇಗದಲ್ಲಿ ಚಲಾಯಿಸಿಕೊಂಡು ಬರುತ್ತಿದ್ದಾಗ ದಕ್ಷಿಣ ದೆಹಲಿಯ ಲೋಧಿ ಕಾಲೋನಿ ಬಳಿ ಅಪಘಾತ ಸಂಭವಿಸಿ ಮೂವರು ಪೊಲೀಸರು ಸೇರಿದಂತೆ ಆರು ಮಂದಿ ಮೃತರಾಗಿದ್ದರು. 

2007: ಇರಾನಿನಲ್ಲಿ ಈದಿನ ಒಂದೇ ದಿನ 21 ಅಪರಾಧಿಗಳನ್ನು ಸಾಮೂಹಿಕವಾಗಿ ಗಲ್ಲಿಗೇರಿಸಲಾಯಿತು. ಆಫ್ಘಾನಿಸ್ಥಾನ ಮತ್ತು ತುರ್ಕ್ಮೆನಿಸ್ಥಾನದ ಗಡಿಯಲ್ಲಿರುವ ಈಶಾನ್ಯ ಪ್ರಾಂತ್ಯವಾದ ಖೊರಸಾನ್ ರಜವಿಯಲ್ಲಿ ಹೆರಾಯಿನ್ ಮತ್ತಿತರ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 17 ಮಂದಿಯನ್ನು ಮತ್ತು ಇವರೊಂದಿಗೆ ದಕ್ಷಿಣದ ಶಿರಾಜ್ ನಗರದಲ್ಲಿ ಇತರ ನಾಲ್ವರು ಅಪರಾಧಿಗಳನ್ನು ನೇಣಿಗೇರಿಲಾಯಿತು. ಇದೇ ರೀತಿ ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳು ಅತ್ಯಾಚಾರ, ದರೋಡೆ ಮತ್ತು ಅಪಹರಣ ಕೃತ್ಯಗಳಿಗೆ ಸಂಬಂಧಿಸಿ 21 ಮಂದಿಯನ್ನು ಇರಾನ್ ಸರ್ಕಾರ ಗಲ್ಲಿಗೇರಿಸಿತ್ತು.

2007: ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆಯನ್ನು ಜಾರಿಗೊಳಿಸದಿರುವ ಕೇಂದ್ರ ಸರ್ಕಾರವನ್ನು  ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತು. ತಂಪು ಪಾನೀಯ ಬಾಟಲಿ ಮೇಲೆ ಉತ್ಪನ್ನದ ವಿವರ ಮುದ್ರಿಸುವುದನ್ನು ಕಂಪೆನಿಗಳಿಗೆ ಕಡ್ಡಾಯಗೊಳಿಸುವಂತೆ ಸೂಚಿಸಿರುವ ಆದೇಶವನ್ನು ಡಿಸೆಂಬರ್ ಅಂತ್ಯದೊಳಗೆ ಜಾರಿಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಿ.ಕೆ. ಥಕ್ಕರ್ ಹಾಗೂ ದಲ್ವೀರ್ ಭಂಡಾರಿ ಅವರನ್ನೊಳಗೊಂಡ ಪೀಠ ತಾಕೀತು ಮಾಡಿತು. ತಂಪು ಪಾನೀಯಗಳಾದ ಪೆಪ್ಸಿ ಮತ್ತು ಕೋಕಾ ಕೋಲಾದಲ್ಲಿ ಕೀಟನಾಶಕ ಮತ್ತು ರಾಸಾಯನಿಕ ವಸ್ತುಗಳನ್ನು ಬಳಸುವುದರಿಂದ ಇವು ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತವೆ. ಹೀಗಾಗಿ ಇವುಗಳನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ನಿರ್ದೇಶನ ನೀಡಿತು.

2007: ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿ ಮಾರ್ಗದಲ್ಲಿ ಖಾಸಗಿ ಬಸ್ ಉರುಳಿ ಸಂಭವಿಸಿದ ಭೀಕರ ದುರಂತದಲ್ಲಿ ಇಬ್ಬರು ಮಹಿಳೆಯರು ಸೇರಿ 9 ಮಂದಿ ಮೃತರಾಗಿ, 28 ಜನ ಗಾಯಗೊಂಡರು.

2007: ದಾವಣಗೆರೆ ಜಿಲ್ಲೆಯ ಹರಿಹರ ವಿಧಾನ ಸಭಾ ಕ್ಷೇತ್ರಕ್ಕೆ 2004ರ ಏಪ್ರಿಲ್ 20ರಂದು  ನಡೆದ ಚುನಾವಣೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿತು. ಹತ್ತು ದಿನಗಳ ಒಳಗೆ ಒಬ್ಬ ಅಧಿಕಾರಿಯನ್ನು ನೇಮಿಸಿ, ಈ ಕ್ಷೇತ್ರದ ಮತ ಎಣಿಕೆ ಕಾರ್ಯವನ್ನು ಮತ್ತೆ ನಡೆಸಿ, ಒಂದು ತಿಂಗಳ ಒಳಗೆ ಫಲಿತಾಂಶ ಪ್ರಕಟಿಸಬೇಕು ಎಂದು ನ್ಯಾಯಾಲಯವು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿತು. 569 ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಾ. ವೈ. ನಾಗಪ್ಪ ಅವರ ವಿರುದ್ಧ ಪರಾಭವಗೊಂಡ ಜೆಡಿ (ಎಸ್) ಅಭ್ಯರ್ಥಿ ಶಿವಪ್ಪ ಅವರ ಚುನಾವಣಾ ಏಜೆಂಟ್ ಎಸ್. ಪ್ರಸನ್ನ ಕುಮಾರ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಗೋಪಾಲಗೌಡ ಈ ಆದೇಶ ಹೊರಡಿಸಿದರು.

2006: ರಾಷ್ಟ್ರನಿರ್ಮಾಣ ಚಟುವಟಿಕೆಗಳಿಗೆ ನೀಡಿದ ಅಪಾರ ಕೊಡುಗೆಗಾಗಿ ಸಾರ್ವಜನಿಕ ಕ್ಷೇತ್ರದ ಭಾರತ ಹೆವಿ ಎಲೆಕ್ಟ್ರಿಕಲ್ಸ್ (ಬಿಎಚ್  ಇಎಲ್) ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಸೇರ್ಪಡೆಯಾಯಿತು. ಲಿಮ್ಕಾ ಪುಸ್ತಕದ `ಡೂಯಿಂಗ್ ಇಂಡಿಯಾ ಪ್ರೌಡ್' ವಿಭಾಗದಲ್ಲಿ ಬಿ ಎಚ್ ಇ ಎಲ್ ಗೆ ಮಾನ್ಯತೆ ಲಭಿಸಿತು. ದೇಶದ ವಿದ್ಯುತ್ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಸ್ಥೆ ನೀಡಿದ ಕೊಡುಗೆ ಪರಿಗಣಿಸಿ ಈ ಗೌರವ ನೀಡಲಾಯಿತು.

2006: ಶಾಂತಿ ಪಾಲನಾ ಪಡೆಯ ಅಂಗವಾಗಿ ಲೆಬನಾನಿನಲ್ಲಿ ಕಾರ್ಯ ನಿರ್ವಹಿಸಿದ ಸಿಖ್ ರೆಜಿಮೆಂಟಿನ 4ನೇ ಬೆಟಾಲಿಯನ್ ಗೆ ವಿಶ್ವಸಂಸ್ಥೆಯ ಫೋರ್ಸ್ ಕಮಾಂಡರ್ಸ್ ಪುರಸ್ಕಾರ ಲಭಿಸಿತು. ತುಕಡಿಯ 73 ಯೋಧರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಭಾರತೀಯ ಯೋಧರು ಇಸ್ರೇಲ್ ಮತ್ತು ಲೆಬನಾನ್ ನಡುವಣ 34 ದಿನಗಳ ಸಂಘರ್ಷ ಕಾಲದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಮಾನವೀಯ ಸೇವೆ ಕೈಗೊಂಡಿದ್ದರು.

2006: ಕರ್ನಾಟಕದ ರಾಜಕಾರಣಿಗಳು ಮತ್ತು ಪೊಲೀಸರು ತನ್ನಿಂದ 2000 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿರುವುದಾಗಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿ ಮಂಪರು ಪರೀಕ್ಷೆಯಲ್ಲಿ ಹೇಳಿರುವ ವಿಚಾರ ಬಹಿರಂಗಗೊಂಡಿತು. 2003ರ ಡಿಸೆಂಬರ್ 29ರಂದು ತೆಲಗಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಂದೂವರೆ ತಾಸು ಕಾಲ ನಡೆದ ಈ ವಿಚಾರಣೆಯನ್ನು ವಿಡಿಯೋ ಸಿ.ಡಿ.ಗಳಲ್ಲಿ ಧ್ವನಿಮುದ್ರಿಸಲಾಗಿದ್ದು ಈ ಸಿ.ಡಿ.ಗಳು ಈ ದಿನ ಪತ್ರಿಕಾಲಯಗಳಿಗೆ ತಲುಪಿ ವಿಷಯ ಬಹಿರಂಗಗೊಂಡಿತು.

2006: `ಸಿದ್ದ' ಚಿಕಿತ್ಸೆ ಪದ್ಧತಿಯಲ್ಲಿ ಹೆಸರುವಾಸಿಯಾದ ಕೇರಳದ ಅಲಪ್ಪುಳ ಜಿಲ್ಲೆಯ ಚಾಂದಿರೂರ್ ಗ್ರಾಮವನ್ನು ದೇಶದ ಮೊದಲ ಸಿದ್ದ ಗ್ರಾಮ' ಎಂದು ಘೋಷಿಸಲಾಯಿತು. ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರು ಈ ಪ್ರಕಟಣೆ ಮಾಡಿದರು. ತಿರುವಂತಪುರ ಮೂಲದ ಶಾಂತಿಗಿರಿ ಆಶ್ರಮ ಈ ಗ್ರಾಮವನ್ನು ಆಯ್ಕೆ ಮಾಡಿ ಗ್ರಾಮಸ್ಥರಿಗೆ `ಸಿದ್ದ ವೈದ್ಯ ಪದ್ಧತಿ' ಬಗ್ಗೆ ಉಚಿತ ತಿಳುವಳಿಕೆ ನೀಡಿತ್ತು.

2006: `ನಡೆದಾಡುವ ವಿಶ್ವಕೋಶ' ಎಂದು ಖ್ಯಾತರಾಗಿದ್ದ ಉರ್ದು ಸಾಹಿತಿ ಪ್ರೊ. ಅಬ್ದುಲ್ ಮಘನಿ (70) ಈದಿನ ಬಿಹಾರಿನ ಪಟ್ನಾದಲ್ಲಿ ನಿಧನರಾದರು. ಉರ್ದು ಭಾಷೆಯಲ್ಲಿ ಅಪಾರ ಪ್ರೌಢಿಮೆ ಹೊಂದಿದ್ದ ಮಘನಿ, ಖ್ಯಾತ ಉರ್ದು ಕವಿ ಇಕ್ಬಾಲ್ ಬರಹಗಳ ಕುರಿತು ಒಂದು ಸಂಪುಟ ಸಹಿತ 18 ಪುಸ್ತಕಗಳನ್ನು ಪ್ರಕಟಿಸಿದ್ದರು. `ಕುರಾನ್' ಗ್ರಂಥವನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದರು. ಮಿಥಿಲಾ ವಿಶ್ವವಿದ್ಯಾಲಯದ ಕುಲಪತಿಯಾಗಿ, ಬಿಹಾರಿನ `ಅಂಜುಮನ್ ತಾರಿಖಿ' ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2006: ಹೆಸರಾಂತ ಪಕ್ಕವಾದ್ಯ ಕಲಾವಿದ ಅಲಿಪ್ಪರಂಬು ಶಿವರಾಮ ಪೊದುವಾಳ್ (82) ಅವರು ಕೇರಳದ ಚೆರಪುಲ್ಲಸೇರಿ ಪಟ್ಟಣದ ತಮ್ಮ ನಿವಾಸದಲ್ಲಿ ನಿಧನರಾದರು. ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದ ಅವರು `ಚೆಂಡೆ ವಾದನ'ದಲ್ಲಿ ಪ್ರಾವೀಣ್ಯ ಸಾದಿಸಿದ್ದರು.

1997: ಮದರ್ ತೆರೇಸಾ ಅವರು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.

1986: ಪ್ರಾಣಾಪಾಯವನ್ನು ಲೆಕ್ಕಿಸದೆ ಅಪಹೃತರಿಗೆ ನೆರವು ನೀಡಿದ್ದಕ್ಕಾಗಿ ಗಗನಸಖಿ ನೀರಜಾ ಭಾನೋಟ್ ಬಲಿದಾನ ಮಾಡಬೇಕಾಗಿ ಬಂದ ದಿನವಿದು. ಮುಂಬೈಯಿಂದ ಪಾಕಿಸ್ಥಾನದ ಕರಾಚಿಗೆ ಅಪಹರಿಸಲಾದ ಅಮೆರಿಕದ ಪಾನ್ ಆಮ್ 73 ವಿಮಾನದ ಗಗನಸಖಿ ನೀರಜಾ ಅವರನ್ನು ಭಯೋತ್ಪಾದಕರು ಪ್ರಯಾಣಿಕರಿಗೆ ಪಾರಾಗಲು ಮಾರ್ಗದರ್ಶನ ಮಾಡಿದ್ದಕ್ಕಾಗಿ ಗುಂಡಿಟ್ಟು ಕೊಂದರು. 394 ಜನರಿದ್ದ ಈ ವಿಮಾನ ಅಪಹರಣದ ನಾಟಕ 16 ಗಂಟೆಗಳ ಬಳಿಕ ಕೊನೆಗೊಂಡಾಗ 19 ಜನರ ಸತ್ತು  130 ಜನ ಗಾಯಗೊಂಡಿದ್ದರು. ರಾಷ್ಟ್ರವು ನೀರಜಾ ಬಾನೋಟ್ ಅವರನ್ನು `ಮರಣೋತ್ತರ ಅಶೋಕ ಚಕ್ರ' ಪ್ರಶಸ್ತಿ ನೀಡಿ ಗೌರವಿಸಿತು.

1980: ಪ್ರಪಂಚದ ಅತಿ ಉದ್ದದ ಸ್ವಯಂಚಾಲಿತ ಸುರಂಗಮಾರ್ಗ ಸ್ವಿಜರ್ಲೆಂಡಿನಲ್ಲಿ (ಸ್ವಿಸ್) ಆರಂಭ.

1972: ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದ ರಕ್ತರಂಜಿತ ದಿನ ಇದು. `ಬ್ಲಾಕ್ ಸೆಪ್ಟೆಂಬರ್' ಗುಂಪಿನ ಅರಬ್ ಭಯೋತ್ಪಾದಕರು ಮ್ಯೂನಿಕ್ ಒಲಿಂಪಿಕ್ ಕ್ರೀಡಾಗ್ರಾಮಕ್ಕೆ ನುಗ್ಗಿ ಇಬ್ಬರು ಇಸ್ರೇಲಿ ಅಥ್ಲೆಟ್ ಗಳನ್ನು ಕೊಂದು ಇತರ 9 ಜನರನ್ನು ಒತ್ತೆಯಾಳುಗಳನ್ನಾಗಿ ಹಿಡಿದಿಟ್ಟುಕೊಂಡರು. ನಂತರ ನಡೆದ ಗುಂಡಿನ ಘರ್ಷಣೆಯಲ್ಲಿ ಒಬ್ಬ ಜರ್ಮನ್ ಪೊಲೀಸ್ ಸೇರಿದಂತೆ ಒತ್ತೆಯಾಳುಗಳು ಹಾಗೂ ಭಯೋತ್ಪಾದಕರು ಮೃತರಾದರು.

1967: ಪ್ರಧಾನಿ ಅಧ್ಯಕ್ಷತೆಯಲ್ಲಿ ಕೇಂದ್ರೀಯ ಹಿಂದಿ ಸಮಿತಿ ರಚನೆಯಾಯಿತು.

1958: ಮೊದಲ ಕಲರ್ ವಿಡಿಯೋ ರೆಕಾರ್ಡಿಂಗ್ ಕ್ಯಾಸೆಟ್ ಬಿಡುಗಡೆ.

1953: ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಜನನ.

1948: ಸಾಹಿತಿ ಶ್ರೀಕಂಠ ಕೂಡಿಗೆ ಜನನ.

1919: ಸಾಹಿತಿ ಕೃಷ್ಣಮೂರ್ತಿ ಪುರಾಣಿಕ ಜನನ.

1872: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಚಿದಂಬರಂ ಪಿಳ್ಳೈ (1872-1936) ಜನ್ಮದಿನ. 1909ರಲ್ಲಿ ಇವರು `ಸ್ವದೇಶಿ ಶಿಪ್ಪಿಂಗ್ ಕಂಪೆನಿ' ಹೆಸರಿನಲ್ಲಿ ಭಾರತದಲ್ಲಿ ಮೊತ್ತ ಮೊದಲ ಶಿಪ್ಪಿಂಗ್ ಕಂಪೆನಿಯನ್ನು ಸ್ಥಾಪಿಸಿದರು.

1844: ಮೈಸೂರು ತಾತಯ್ಯ ಎಂದೇ ಖ್ಯಾತರಾಗಿದ್ದ ಸಮಾಜ ಸೇವಕ, ಸಾಹಿತಿ, ಪತ್ರಿಕೋದ್ಯಮಿ ಎಂ. ವೆಂಕಟಕೃಷ್ಣಯ್ಯ (5-9-1844ರಿಂದ 8-11-1933) ಅವರು ಸುಬ್ಬಯ್ಯ- ಭಾಗೀರಥಮ್ಮ ದಂಪತಿಯ ಮಗನಾಗಿ ಹೆಗ್ಗಡದೇವನಕೋಟೆ ತಾಲ್ಲೂಕಿನ ಮಗ್ಗೆ ಗ್ರಾಮದಲ್ಲಿ ಜನಿಸಿದರು.

1612: ಈಸ್ಟ್ ಇಂಡಿಯಾ ಕಂಪೆನಿಯ ನೌಕಾದಳ ಅಸ್ತಿತ್ವಕ್ಕೆ ಬಂದಿತು.

No comments:

Post a Comment