ನಾನು ಮೆಚ್ಚಿದ ವಾಟ್ಸಪ್

Saturday, September 8, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 08

ಇಂದಿನ ಇತಿಹಾಸ History Today ಸೆಪ್ಟೆಂಬರ್ 08

2018: ನವದೆಹಲಿ: ೨೦೧೯ರ ಲೋಕಸಭಾ ಚುನಾವಣೆಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನಾಯಕತ್ವದಲ್ಲಿಯೇ ಎದುರಿಸಲು ಸಾಧ್ಯವಾಗುವಂತೆ ಮಾಡುವ ಸಲುವಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ತನ್ನ ಸಾಂಸ್ಥಿಕ ಚುನಾವಣೆಗಳನ್ನು ಮುಂದೂಡಿದೆ ಎಂದು ಪಕ್ಷ ಮೂಲಗಳು ತಿಳಿಸಿದವು. ಶಾ ಅವರ ಅಧಿಕಾರಾವಧಿ ೨೦೧೯ರ ಜನವರಿಗೆ ಮುಕ್ತಾಯಗೊಳ್ಳಬೇಕಾಗಿದ್ದು, ಅವರ ಅವಧಿ ವಿಸ್ತರಣೆ ಸಂಬಂಧಿತ ನಿರ್ಧಾರವನ್ನು ದೆಹಲಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿದವು. 2೦೧೪ರ ಆಗಸ್ಟ್ ತಿಂಗಳಲ್ಲಿ ಆಗಿನ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ಗೃಹ ಸಚಿವರಾಗಿ ಸೇರ್ಪಡೆಯಾದ ಬಳಿಕ ಅಮಿತ್ ಶಾ ಅವರನ್ನು ರಾಜನಾಥ್ ಸಿಂಗ್ ಅವರ ಸ್ಥಾನಕ್ಕೆ ನೇಮಿಸಲಾಗಿತ್ತು. ಸಿಂಗ್ ಅವರ ಮೂರು ವರ್ಷಗಳ ಅಧಿಕಾರಾವದಿಯಲ್ಲಿ ಉಳಿದಿದ್ದ ಅವಧಿಯನ್ನು ಶಾ ಅವರು ಪೂರ್ಣಗೊಳಿಸಿದ್ದರು. ಬಳಿಕ ೨೦೧೬ರಲ್ಲಿ ಮೂರು ವರ್ಷಗಳ ಪೂರ್ಣಾವಧಿಯನ್ನು ಅಮಿತ್ ಶಾ ಪಡೆದಿದ್ದರುಬಿಜೆಪಿ ಸಂವಿಧಾನದ ಪ್ರಕಾರ ವ್ಯಕ್ತಿಯೊಬ್ಬರು ಮೂರು ವರ್ಷಗಳ ಪೂರ್ಣ ಅವಧಿಗೆ ಪಕ್ಷಾಧ್ಯಕ್ಷರಾಗಿ ಎರಡು ಬಾರಿ ಅಧಿಕಾರ ಪಡೆಯಬಹುದು. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷವು ಮುಂದಿನ ವರ್ಷದ ಚುನಾವಣೆಯಲ್ಲಿ ೨೦೧೪ರ ವಿಜಯವನ್ನೂ ಮೀರಿಸುವಂತಹ ವಿಜಯ ಸಾಧಿಸಿ ಅಧಿಕಾರಕ್ಕೆ ಮರಳುವಂತೆ ಶ್ರಮಿಸಬೇಕು ಎಂಬ ಶಪಥವನ್ನು ತೊಡಲಾಯಿತು. ೨೦೧೪ರಲ್ಲಿ ಪಕ್ಷವು ಮೊತ್ತ ಮೊದಲ ಬಾರಿಗೆ ಸ್ವಂತ ಬಲದಲ್ಲೇ ಬಹುಮತವನ್ನು ಪಡೆದಿತ್ತು. ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ರಾಜ್ಯ ಘಟಕಗಳ ಅಧ್ಯಕ್ಷರು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿಅಜೇಯ ಬಿಜೆಪಿ ಘೋಷಣೆಯನ್ನು ಅಂಗೀಕರಿಸಿದರು. ಪಂಚರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ವಿಜಯಕ್ಕಾಗಿ ಶ್ರಮಿಸುವ ಪಣ ತೊಟ್ಟ ಅವರು ತೆಲಂಗಾಣ ಚುನಾವಣೆಗೆ ಹೆಚ್ಚಿನ ಒತ್ತು ನೀಡುವ ನಿರ್ಧಾರ ಕೈಗೊಂಡರು. ವಿಧಾನಸಭೆ ವಿಸರ್ಜನೆಯ ಹಿನ್ನೆಲೆಯಲ್ಲಿ ತೆಲಂಗಾಣದಲ್ಲೂ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳ ಜೊತೆಗೇ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಚುನಾವಣೆಗಳಿಗೆ ಮುಂಚಿತವಾಗಿಯೇ ಜಾತಿ ಲೆಕ್ಕಾಚಾರಗಳನ್ನು ನಿರ್ವಹಿಸುವ ಬಗ್ಗೆ ಉನ್ನತ ಪಕ್ಷವು ನೀಡಲಿರುವ ರಾಜಕೀಯ ಸಂದೇಶವನ್ನು  ರಾಷ್ಟ್ರೀಯ ಕಾರ್ಯಕಾರಿಣಿಯು ಸೂಕ್ಷ್ಮವಾಗಿ ಪರಿಶೀಲಿಸಿದೆ. ಇತ್ತೀಚೆಗೆ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ (ದೌರ್ಜನ್ಯ ತಡೆ) ಕಾಯ್ದೆಯಲ್ಲಿ ಕಠಿಣವಾದ ಜಾಮೀನು ವಿಧಿಗಳನ್ನು ಉಳಿಸಿಕೊಳ್ಳಲು ಮಾಡಲಾದ ಸಂವಿಧಾನ ತಿದ್ದುಪಡಿಯು ಮಧ್ಯಪ್ರದೇಶ, ರಾಜಸ್ಥಾನ, ಬಿಹಾರದಲ್ಲಿ ವಾರಾರಂಭದಲ್ಲಿ ಮೇಲ್ಜಾತಿಯ ಗುಂಪುಗಳ ಪ್ರತಿಭಟನೆಯನ್ನು ಹುಟ್ಟು ಹಾಕಿತ್ತು. ೧೯೮೯ರಲ್ಲಿ ರೂಪಿಸಲಾಗಿದ್ದ ಕಾಯ್ದೆಯ ಕಠಿಣ ಜಾಮೀನು ವಿಧಿಗಳನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಅವುಗಳನ್ನು ಮತ್ತೆ ಊರ್ಜಿತಪಡಿಸುವಂತೆ ಎನ್ ಡಿಎ ಮಿತ್ರ ಪಕ್ಷಗಳು ಮತ್ತು ಸಂಸತ್ ಸದಸ್ಯರು ಸರ್ಕಾರವನ್ನು ಆಗ್ರಹಿಸಿದ್ದರುಕೋರ್ಟ್ ತೀರ್ಪಿನ ವಿರುದ್ಧ ದಲಿತ ಸಮೂಹಗಳು ಏಪ್ರಿಲ್ ಮೊದಲ ವಾರದಲ್ಲಿ ನಡೆಸಿದ್ದ ಪ್ರತಿಭಟನೆಗಳು ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ವ್ಯಾಪಕ ಹಿಂಸೆಗೆ ತಿರುಗಿದ್ದವು.
ಮೊದಲು ಆಗಸ್ಟ್ ತಿಂಗಳಿಗೆ ನಿಗದಿಯಾಗಿದ್ದ ಕಾರ್ಯಕಾರಿಣಿ ಸಭೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಕಾರಣ ಮುಂದೂಡಲಾಗಿತ್ತು. ರಾಷ್ಟ್ರೀಯ ಕಾರ್ಯಕಾರಣಿ ಸಭೆಯ ತಾಣಕ್ಕೆ ಪಕ್ಷದ ದಿವಂಗತ ನಾಯಕನ ಗೌರವಾರ್ಥಅಟಲ್ ಸ್ಥಳ ಎಂಬುದಾಗಿ ಹೆಸರು ಇಡಲಾಗಿತ್ತು. ಪೂರ್ಣಾವಧಿಯನ್ನು ಪೂರೈಸಿದ್ದ ಪ್ರಪ್ರಥಮ ಕಾಂಗ್ರೆಸ್ಸೇತರ ಪ್ರಧಾನಿಯ ಭಾವಚಿತ್ರಗಳು, ಪೋಸ್ಟರ್ಗಳಿಗೆ ಹೆಚ್ಚಿನ ಮಹತ್ವ ನೀಡಿ ಪ್ರದರ್ಶಿಸಿದ್ದು ಮೇಲ್ಜರ್ಜೆ ಸಮೂಹಗಳ ಅಶಾಂತಿಯನ್ನು ಎದುರಿಸಲು ನಡೆಸಿದ ಯತ್ನ ಎಂದು ಭಾವಿಸಲಾಯಿತು. ಪಕ್ಷ ಕಾರ್ಯಕಾರಿಣಿಯು ರಾಷ್ಟ್ರದ ಹಾಲಿ ರಾಜಕೀಯ ಸ್ಥಿತಿಗತಿ ಹಾಗೂ ಮೋದಿ ಸರ್ಕಾರದ ಯೋಜನೆಗಳಿಗೆ ಒತ್ತು ನೀಡಿ ಮೂರು  ನಿರ್ಣಯಗಳನ್ನು ಅಂಗೀಕರಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿದವು..

2018: ನವದೆಹಲಿ: ವಿಪಕ್ಷಗಳಮಹಾಘಟಬಂಧನ್ (ಮಹಾಮೈತ್ರಿ) ಸುಳ್ಳುಗಳ ಮೇಲೆ ನಿರ್ಮಾಣಗೊಂಡಿದ್ದು ೨೦೧೯ರ ಮಹಾ ಚುನಾವಣೆಯಲ್ಲಿ ಬಿದ್ದುಹೋಗಲಿದೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಅಮಿತ್ ಶಾ ಅವರು ಇಲ್ಲಿ ಹೇಳಿದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಶಾ, ವಿಪಕ್ಷಗಳ  ಉದ್ದೇಶಿತ ಮೈತ್ರಿಯನ್ನುತೋರಿಕೆಯ ಮೈತ್ರಿ ಎಂದು ಬಣ್ಣಿಸಿ ಇದುಕಣ್ಣೊರೆಸುವ ತಂತ್ರ ಎಂದು ಹೇಳಿದರು. ಬಿಜೆಪಿಯು ೨೦೧೪ರ ಮಹಾಚುನಾವಣೆಯ ಬಳಿಕ ನಡೆದ ಚುನಾವಣೆಗಳಲ್ಲಿ ಒಂದರೆ ಹಿಂದೆ ಒಂದರಂತೆ ವಿಪಕ್ಷಗಳನ್ನು ಸೋಲಿಸುತ್ತಲೇ ಸಾಗಿದೆ ಎಂದು ಶಾ ನುಡಿದರು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನುಡಿದರು.  ಪತ್ರಿಕಾಗೋಷ್ಠಿಯಲ್ಲಿ ಅಮಿತ್ ಶಾ ಭಾಷಣದ ವಿವರಗಳನ್ನು ನೀಡಿದ ನಿರ್ಮಲಾ ಅವರು, ವಿಪಕ್ಷ ಮೈತ್ರಿಯಸತ್ಯ ಮತ್ತು ನರೇಂದ್ರ ಮೋದಿ ಸರ್ಕಾರವು ಅಧಿಕಾರಕ್ಕೆ ಬಂದಂದಿನಿಂದ ಆಗಿರುವ ಸಾಧನೆಗಳನ್ನು ಜನರಿಗೆ ವಿವರಿಸುವಂತೆ ಶಾ ಪಕ್ಷ ಕಾರ್ಯಕರ್ತರಿಗೆ ಸೂಚಿಸಿದರು ಎಂದು ಹೇಳಿದರು. ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಾ, ತಮ್ಮ ಸಾವಿನಿಂದ ಅಟಲ್ ಅವರು ಉಳಿಸಿ ಹೋಗಿರುವ ಶೂನ್ಯವನ್ನು ಎಂದೂ ತುಂಬಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ತಮ್ಮ ದುಃಖ ವ್ಯಕ್ತ ಪಡಿಸಿದರು ಎಂದು ಸೀತಾರಾಮನ್ ನುಡಿದರು. ಕೇರಳ ಮತ್ತು ಇತರ ಕಡೆಗಳಲ್ಲಿ ಸಂಭವಿಸಿದ ಭೀಕರ ಪ್ರವಾಹಗಳ ಬಗೆಗೂ ಮಾತನಾಡಿದ ಅಧ್ಯಕ್ಷರು ತೊಂದರೆಗೊಳಗಾದ ಜನರಿಗೆ ಪರಿಹಾರ ಹಾಗೂ ಪುನರ್ ವಸತಿ ಒದಗಿಸುವ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಎಲ್ಲವರ್ಗಗಳಿಗೂ ಮನವಿ ಮಾಡಿದರು ಎಂದು ನಿರ್ಮಲಾ ಹೇಳಿದರು.

2018: ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವು ಆಮದನ್ನು ತುಟ್ಟಿಯಾಗಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರ  ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಇದೇ ಮೊದಲ ಬಾರಿಗೆ ಲೀಟರಿಗೆ ೮೦ ರೂಪಾಯಿಗಳ ಗಡಿ ದಾಟಿತು. ಈದಿನ ಪೆಟ್ರೋಲ್ ಬೆಲೆ ಲೀಟಿರಿಗೆ ೩೯ ಪೈಸೆಯಷ್ಟು ಮತ್ತು ಡೀಸೆಲ್ ಬೆಲೆ ೪೪ ಪೈಸೆಯಷ್ಟು ಏರಿದೆ ಎಂದು ರಾಜ್ಯ್ಯ ಇಂಧನ ಬಿಡಿ ವ್ಯಾಪಾರಿಗಳು ನೀಡಿರುವ ಇಂಧನ ದರ ಪ್ರಕಟಣೆ ತಿಳಿಸಿತು. ದರ ಏರಿಕೆಯ ಪರಿಣಾಮವಾಗಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ೮೦.೩೮ ರೂಪಾಯಿಗೆ ತಲುಪಿತು. ಇದೇ ರೀತಿ ಡೀಸೆಲ್ ಬೆಲೆ ಕೂಡಾ ಲೀಟರಿಗೆ ಗರಿಷ್ಠ ಮಟ್ಟ ಅಂದರೆ ೭೨.೫೧ ರೂಪಾಯಿಗೆ ತಲುಪಿತು. ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ೮೭.೭೭ ರೂಪಾಯಿಗಳಿಗೆ ಮತ್ತು ಡೀಸೆಲ್ ಬೆಲೆ ೭೬.೯೮ಕ್ಕೆ ತಲುಪಿದೆ ಎಂದು ಪ್ರಕಟಣೆ ಹೇಳಿತು. ಎಲ್ಲ ಮೆಟ್ರೋಗಳ ಪೈಕಿ ದೆಹಲಿಯಲ್ಲಿನ ಇಂಧನ ಬೆಲೆಗಳು ಅಗ್ಗವಾಗಿವೆ. ಅದೇ ರೀತಿ ತೆರಿಗೆ ಕಡಿಮೆ ಇರುವ ಕಾರಣ ದೆಹಲಿಯಲ್ಲಿ ರಾಜ್ಯ ರಾಜಧಾನಿಗಳಿಗಿಂತ ಇಂಧನ ದರ ಕಡಿಮೆ ಇದೆ. ಮೆಟ್ರೋಗಳ ಪೈಕಿ ಮುಂಬೈಯಲ್ಲಿ ಅತ್ಯಧಿಕ ದರವಿದೆ. ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುತ್ತಿರುವುದನ್ನು ಪ್ರತಿಭಟಿಸಿ ಸೆಪ್ಟೆಂಬರ್ ೧೦ರ ಸೋಮವಾರ ಭಾರತ ಬಂದ್ ಆಚರಿಸಲು ವಿರೋಧ ಪಕ್ಷಗಳು ಕರೆಕೊಟ್ಟವು. ಇಂಧನ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಅಬಕಾರಿ ಸುಂಕ ಕಡಿತಗೊಳಿಸಬೇಕು ಎಂಬ ಆಗ್ರಹಕ್ಕೆ ಮರುಜೀವ ಬಂದಿದೆ. ಆದರೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಗ್ಗೆ ಬದ್ಧತೆ ವ್ಯಕ್ತ ಪಡಿಸಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆಗಳು ಚಂಚಲವಾಗಿವೆ ಮತ್ತು ಯಾವುದೇ ಒಂದೇ ದಿಕ್ಕಿನ ಕಡೆಗಿನ ಚಲನೆಯನು ತೋರಿಸುತ್ತಿಲ್ಲ ಎಂದು ಅವರು ಹೇಳಿದರು. ಆಗಸ್ಟ್ ಮಧ್ಯಾವಧಿಯಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಆಮದು ವೆಚ್ಚ ಹೆಚ್ಚಿದ ಪರಿಣಾಮವಾಗಿ ಪೆಟ್ರೋಲ್ ದರ ಲೀಟರಿಗೆ .೨೪ ರೂಪಾಯಿಯಷ್ಟು ಹಾಗೂ ಡೀಸೆಲ್ ದರ ಲೀಟರಿಗೆ .೭೪ ರೂಪಾಯಿಯಷ್ಟು ಏರಿತು. ಕಳೆದ ವರ್ಷ ಜೂನ್ ಮಧ್ಯಾವಧಿಯಲ್ಲಿ ಅನುದಿನದ ಬೆಲೆ ಪರಿಷ್ಕರಣೆ ವ್ಯವಸ್ಥೆ ಜಾರಿಗೆ ಬಂದ ಬಳಿಕ ಇಂಧನ ಬೆಲೆ ಇಷ್ಟೊಂದು ಪ್ರಮಾಣದಲ್ಲಿ ಏರಿದ್ದು ಇದೇ ಮೊದಲು. ಪೆಟ್ರೋಲ್ ಮತ್ತು ಡೀಸೆಲ್ ದರದ ಅರ್ಧದಷ್ಟು ಹಣ ಕೇಂದ್ರ ಮತ್ತು ರಾಜ್ಯ ತೆರಿಗೆಗಳಿಗೆ ಹೋಗುತ್ತದೆಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರುಪೆಟ್ರೋಲ್ ಮತ್ತು ಡೀಸೆಲ್ ನಿರಂತರ ಬೆಲೆ ಏರಿಕೆ ಅನಿವಾರ್ಯವಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅತಿಯಾದ ತೆರಿಗೆ ಹೇರಲಾಗುತ್ತಿದೆ. ತೆರಿಗೆಗಳನ್ನು ಕಡಿತ ಮಾಡಿದರೆ ದರಗಳು ಗಮನಾರ್ಹ ಮಟ್ಟದಲ್ಲಿ ಇಳಿಯಬಲ್ಲುದು ಎಂದು ಹೇಳಿದ್ದರು.

2018: ನವದೆಹಲಿ:  ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೭ನ್ನು ಸುಪ್ರಿಂಕೋರ್ಟ್ ಭಾಗಶಃ ರದ್ದು ಪಡಿಸಿದ ಒಂದು ದಿನದ ಬಳಿಕ ಭಾರತದ ಸಲಿಂಗಿಗಳು, ದ್ವಿಲಿಂಗಿಗಳು ಮತ್ತು ಲಿಂಗ ಪರಿವರ್ತಿತ ಸಮುದಾಯದವರು (ಎಲ್ ಜಿ ಬಿಟಿಕ್ಯೂ) ಸಲಿಂಗಿ ಮದುವೆ, ಆಸ್ತಿ ಉತ್ತರಾಧಿಕಾರ ಮತ್ತು ವಿಮಾ ಹಂಚಿಕೆ ಇತ್ಯಾದಿ ನಾಗರಿಕ ಹಕ್ಕುಗಳಿಗಾಗಿ ಹೋರಾಟಕ್ಕೆ ಸನ್ನದ್ಧರಾಗುತ್ತಿದ್ದು, ಕೇಂದ್ರ ಸರ್ಕಾರವು ಸಲಿಂಗಿ ಮದುವೆಯನ್ನು ವಿರೋಧಿಸಲು ಸಜ್ಜಾಗಿದೆ ಎಂದು ಹೇಳಲಾಯಿತು. ಸೆಕ್ಷನ್ ೩೭೭ನ್ನು ಸುಪ್ರೀಂಕೋರ್ಟಿನ ವಿವೇಚನಾಧಿಕಾರಕ್ಕೆ ಬಿಟ್ಟಿದ್ದ ಕೇಂದ್ರ ಸರ್ಕಾರವು ಸಲಿಂಗಿ ಮದುವೆಗೆ ಶಾಸನಬದ್ಧ ಸ್ಥಾನಮಾನ ಕೋರಿ ಸಲ್ಲಿಸಲಾಗುವ ಯಾವುದೇ ಅರ್ಜಿಯನ್ನು ವಿರೋಧಿಸುವ ಬಗ್ಗೆ ಸುಳಿವು ನೀಡಿತು. ಸಲಿಂಗಿಗಳು, ದ್ವಿಲಿಂಗಿಗಳು ಮತ್ತು ಲಿಂಗ ಪರಿವರ್ತಿತ ಸಮುದಾಯದ ವ್ಯಕ್ತಿಗಳ ಸಮಾನತೆಯು ಈಗ ಮೂಲಭೂತ ಹಕ್ಕಾದರೆ, ಆಗ ಮದುವೆ, ಆಸ್ತಿ ಉತ್ತರಾಧಿಕಾರತ್ವ ಮತ್ತು ವೈದ್ಯಕೀಯ ವಿಮೆ ಹಾಗೂ ಜೀವ ವಿಮಾ ಹಂಚಿಕೊಳ್ಳುವಿಕೆಯ ಹಕ್ಕುಗಳು ಇದರ ಭಾಗವಾಗುತ್ತವೆ. ಹಕ್ಕುಗಳನ್ನು ಗೌರವಿಸುವಂತೆ ಮತ್ತು ಘನತೆಯಿಂದ ಕಾಣುವಂತೆ ನಾವು ಕೇಳುತ್ತಿದ್ದೇವೆ. ಇವುಗಳನ್ನು ನಿರಾಕರಿಸುವುದು ಸಂವಿಧಾನಬಾಹಿರವಾಗುತ್ತದೆ. ನಮಗೆ ಹಕ್ಕುಗಳು ಸಿಗಲು ಸಾಧ್ಯವಿಲ್ಲ ಎಂದು ಕೆಲವರು ಹೇಳುವುದು ನನಗೆ ಅಚ್ಚರಿ ಉಂಟು ಮಾಡುತ್ತಿದೆ ಎಂದು ಸೆಕ್ಷನ್ ೩೭೭ ಪ್ರಕರಣದಲ್ಲಿ ಅರ್ಜಿದಾರರಾಗಿದ್ದ ಸುನೀಲ್ ಮೆಹ್ತಾ ಅವರು ಇಲ್ಲಿ ಹೇಳಿದರು. ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರುಸಲಿಂಗ ಕಾಮವನ್ನು ನಿರಪರಾಧವನ್ನಾಗಿ ಮಾಡುವುದು ಒಳ್ಳೆಯದು. ಆದರೆ ಸಲಿಂಗಿ ಮದುವೆಯ ಬೇಡಿಕೆಯನ್ನು ಸರ್ಕಾರವು ವಿರೋಧಿಸಲಿದೆ ಎಂದು ಹೇಳಿದರು. ಇದೇ ನಿಲುವನ್ನು ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕ ಮುಖವಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಕೂಡಾ ಪ್ರತಿಧ್ವನಿಸಿದೆ. ’ಸಲಿಂಗಿ ಮದುವೆಗಳು ನಿಸರ್ಗ ನಿಯಮಗಳಿಗೆ ಅನುಗುಣವಾಗಿಲ್ಲ. ಆದ್ದರಿಂದ ನಾವು ಅವುಗಳನ್ನು ಬೆಂಬಲಿಸಲಾಗದು. ಭಾರತೀಯ ಸಮಾಜ ಕೂಡಾ ಇಂತಹ ಬಾಂಧವ್ಯಗಳನ್ನು ಮಾನ್ಯ ಮಾಡುವ ಪರಂಪರೆಯನ್ನು ಹೊಂದಿಲ್ಲ ಎಂದು ಆರೆಸ್ಸೆಸ್ ವಕ್ತಾರ ಅರುಣ್ ಕುಮಾರ್ ಹೇಳಿದ್ದರು. ತನ್ನ ೪೯೩ ಪುಟಗಳ ಐತಿಹಾಸಿಕ ತೀರ್ಪಿನಲ್ಲಿ ಗುರುವಾರ ಸುಪ್ರೀಂಕೋರ್ಟ್ ನಾಗರಿಕ ಹಕ್ಕುಗಳ ಬಗ್ಗೆ ಆಳವಾಗಿ ಪರಿಶೀಲಿಸದೆಯೇ ಸಾಮಾಜಿಕ ಮಿತಿಗಳು ಸಂವಿಧಾನಬದ್ಧ ಸ್ವಾತಂತ್ರ್ಯವನ್ನು ಹೇಗೆ ನಿಯಂತ್ರಿಸಲಾರವು ಎಂದು ವಿವರಿಸಿದೆ. ಸೆಕ್ಷನ್ ೩೭೭ಕ್ಕೆ ಮಾತ್ರ ಪ್ರಕರಣದ ವಿಚಾರಣೆಯನ್ನು ಮಿತಿಗೊಳಿಸಿಕೊಳ್ಳುವಂತೆ ಮತ್ತು ನಾಗರಿಕ ಹಕ್ಕುಗಳಿಗೆ ಅದನ್ನು ವಿಸ್ತರಿಸದಂತೆ ಕೇಂದ್ರದ ಸರ್ಕಾರಿ ವಕೀಲರು ಸುಪ್ರೀಂಕೋರ್ಟಿಗೆ ಮನವಿ ಮಾಡಿದ್ದರು. ಕಳೆದ ಒಂದು ದಶಕದಲ್ಲಿ ಹಲವಾರು ದ್ವಿಲಿಂಗಿಗಳು ಮತ್ತು ಲಿಂಗಪರಿವರ್ತಿತ ವ್ಯಕ್ತಿಗಳು ಸಾಮೂಹಿಕ ಮದುವೆ ಸಮಾರಂಭಗಳಲ್ಲಿ ವಿವಾಹವಾಗಿದ್ದರೆ, ಇತರ ಹಲವರು ಮದುವೆ ಸಲುವಾಗಿ ಸಲಿಂಗಿ ಮದುವೆಯನ್ನು ಮಾನ್ಯ ಮಾಡಿರುವ ರಾಷ್ಟ್ರಗಳಿಗೆ ತೆರಳಿದ್ದರು. ವಾಸ್ತವವಾಗಿ ಸೆಕ್ಷನ್ ೩೭೭ಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ ಒಬ್ಬ ಅರ್ಜಿದಾರರು ಮದುವೆಗಾಗಿ ತಾವು ಹೇಗೆ ಸಲಿಂಗ ಬಾಂಧವ್ಯಗಳು ಶಾಸನಬದ್ಧವಾಗಿರುವ ಅಮೆರಿಕ, ಇಂಗ್ಲೆಂಡಿನಂತಹ ದೇಶಗಳಿಗೆ ತೆರಳುವ ಯೋಜನೆ ರೂಪಿಸಿಕೊಂಡಿರುವುದಾಗಿಯೂ ವಿವರಿಸಿದ್ದರು. ದೇಶಗಳಲ್ಲಿ ಸಲಿಂಗಿ ಮದುವೆ, ದತ್ತು ಸ್ವೀಕಾರ, ಆಸ್ತಿ ಉತ್ತರಾಧಿಕಾರತ್ವ ಮತ್ತಿತರ ಹಕ್ಕುಗಳಿಗೆ ಕಾನೂನಿನ ಮಾನ್ಯತೆ ಇರುವುದನ್ನು ಅವರು ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದರುಲಲಿತ್ ಹೊಟೇಲ್ ಸರಣಿಯನ್ನು ಹೊಂದಿರುವ ದೆಹಲಿ ಮೂಲದ ಲಲಿತ್ಸೂರಿ ಹಾಸ್ಪಿಟಾಲಿಟಿ ಸಮೂಹದ ಕಾರ್ಯಕಾರಿ ನಿರ್ದೇಶಕ ಕೇಶವ ಸೂರಿ ಅವರು ತಮ್ಮ ಪಾಲುದಾರ ಕ್ರಿರಿಲ್ ಫ್ಯುಯಿಲ್ಬೋಯಿಸ್ ಅವರನ್ನು ಜೂನ್ ತಿಂಗಳಲ್ಲಿ ಪ್ಯಾರಿಸ್ಸಿನಲ್ಲಿ ಮದುವೆಯಾಗಿದ್ದರು. ’ನನಗೆ ಅವರ ರಾಷ್ಟ್ರದಲ್ಲಿ ನಾನು ತನ್ನ ತಾಯ್ನಾಡು ಎಂದು ಹೇಳಿಕೊಳ್ಳುತ್ತಿರುವ ದೇಶದಲ್ಲಿ ಇರುವುದಕ್ಕಿಂತ ಹೆಚ್ಚಿನ ಹಕ್ಕುಗಳಿವೆ. ನಾನು ಅವರ ರಾಷ್ಟ್ರದಲ್ಲಿ ಸಮಾನ ನಾಗರಿಕನಾಗಿದ್ದೇನೆ. ಆದರೆ ಅವರು ನನ್ನ ದೇಶದಲ್ಲಿ ಸಮಾನ ನಾಗರಿಕನಲ್ಲ. ಆದರೆ ನಿನ್ನೆ ಸುಪ್ರೀಂಕೋರ್ಟ್ ನನಗೆ ಭರವಸೆಯನ್ನು ನೀಡಿದೆ ಮತ್ತು ಭಾರತೀಯನೆಂದು ಹೇಳಿಕೊಳ್ಳಲು ನಾನು ಹೆಮ್ಮೆ ಪಡುವಂತೆ ಮಾಡಿದೆ. ನಾನು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಬಗ್ಗೆ ಪರಿಶೀಲಿಸುತ್ತಿದ್ದೇನೆ ಎಂದು ಕೇಶವ ಸೂರಿ ನುಡಿದರು.  ಸೆಕ್ಷನ್ ೩೭೭ನ್ನು ಭಾಗಶಃ ರದ್ದು ಪಡಿಸಿದ ಸುಪ್ರೀಂಕೋರ್ಟ್ ಆದೇಶವನ್ನು ಕಾಂಗ್ರೆಸ್ ಗುರುವಾರ ಸ್ವಾಗತಿಸಿತ್ತು. ಶುಕ್ರವಾರ ನಾಗರಿಕ ಹಕ್ಕುಗಳ ಬಗ್ಗೆ ನಿಮ್ಮ ನಿಲುವೇನು ಎಂಬುದಾಗಿ ಕೇಳಲಾದ ಪ್ರಶ್ನೆಗೆ ಕಾಂಗ್ರೆಸ್ ಮುಖ್ಯ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೆವಾಲ ಅವರು ಬಗ್ಗೆ ಸರ್ಕಾರ ತನ್ನ ನಿಲುವನ್ನು ಹೇಳಬೇಕು. ನಾವು ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುತ್ತೇವೆ ಎಂದು ಹೇಳಿದರು. ದ್ವಿಲಿಂಗಿಗಳ ವಿರುದ್ಧ ಮದುವೆ ಮತ್ತು ಲೈಂಗಿಕ ಹಲ್ಲೆಗಳನ್ನು ಆಯುಧಗಳಾಗಿ ಬಳಸಲಾಗುತ್ತದೆ. ಇಂತಹ ಹಿಂಸಾಚಾರಗಳಿಂದ ತನ್ನ ನಾಗರಿಕರೇ ಆಗಿರುವ ಇವರಿಗೆ ರಕ್ಷಣೆಯ ಖಾತರಿಯನ್ನು ಸರ್ಕಾರ ಒದಗಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಸುಪ್ರೀಂಕೋರ್ಟಿನ ಹಿರಿಯ ವಕೀಲ ಹಾಗೂ ಪ್ರಕರಣದಲ್ಲಿ ವಕೀಲರಾಗಿರುವ ಆನಂದ ಗ್ರೋವರ್ ಅವರು ನಾಗರಿಕ ಹಕ್ಕುಗಳ ವಿಚಾರ ನ್ಯಾಯಾಲಯದಲ್ಲಿ ಬರುವ ನಿರೀಕ್ಷೆ ಇದೆ ಎಂದು ಹೇಳಿದರು. ಆದರೆ ಖಾಸಗಿ ರಂಗದಲ್ಲಿ ಕೆಲಸದ ಸ್ಥಳದಲ್ಲಿ ತಾರತಮ್ಯ, ಲೈಂಗಿಕ ಕಿರುಕುಳ ವಿರೋಧಿ ಕಾಯ್ದೆಗಳಿಂದ ಹಿಡಿದು ಅತ್ಯಾಚಾರ ಕಾನೂನು, ಮದುವೆ, ದತ್ತು ಸ್ವೀಕಾರ ಮತ್ತು ಆಸ್ತಿ ಹಕ್ಕುಗಳು ಸೇರಿದಂತೆ ಇವುಗಳ ವ್ಯಾಪ್ತಿ ವಿಶಾಲವಾಗಿದೆ ಎಂದು ಅವರು ನುಡಿದರು. ಸಮುದಾಯದಿಂದ ಬೇಡಿಕೆ ಬಂದಿದೆ. ನಾವು ಸಿದ್ಧರಾಗಿರಬೇಕು ಮತ್ತು ನಾವು ಪ್ರಕರಣದಲ್ಲಿ ಭಾಗಿಗಳಾಗಬೇಕು ಎಂದು ಅವರು ಹೇಳಿದರು. ನಾಗರಿಕ ಹಕ್ಕುಗಳಿಗಾಗಿ ಹೋರಾಟ ಹೊಸದಾಗಿ ಶುರುವಾಗುತ್ತದೆ. ಆದರೆ ಸಂಭ್ರಮಾಚರಣೆಯ ಕ್ಷಣದಲ್ಲಿ ಸೆಕ್ಷನ್ ೩೭೭ರ ನಿರಪರಾಧೀಕರಣವು ಮೊದಲ ಹೆಜ್ಜೆಯಾಗಿದೆ. ಮದುವೆ ಮತ್ತು ಇತರ ನಾಗರಿಕ ಹಕ್ಕುಗಳು ಎರಡನೆಯದಾಗಿವೆ ಎಂದು ಅರ್ಜಿದಾರರ ಪರ ವಕೀಲರಲ್ಲ ಒಬ್ಬರಾದ ಗೌತಮ್ ಯಾದವ್ ನುಡಿದರು

2018: ಚಿಕಾಗೋ:  ‘ಎಲ್ಲವೂ ಹುಚ್ಚಾಟ, ಭಾರತ ಮತ್ತು ಚೀನಾದಂತಹ ಪ್ರವರ್ಧಮಾನ ರಾಷ್ಟ್ರಗಳಿಗೆ ನೀಡಲಾಗುತ್ತಿರುವ ಸಬ್ಸಿಡಿಗಳನ್ನು ಸ್ಥಗಿತಗೊಳಿಸಲು ನಾನು ಬಯಸುತ್ತೇನೆ. ನಾವು ಅದನ್ನು ಮಾಡುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುಟುರು ಹಾಕಿದರು. ಉತ್ತರ ಡಕೋಟಾದ ಫಾರ್ಗೋ ಸಿಟಿಯಲ್ಲಿ ನಡೆದ ನಿಧಿ ಸಂಗ್ರಹ ಸಮಾರಂಭದಲ್ಲಿ ಮಾತನಾಡುತ್ತಿದ್ದ ಟ್ರಂಪ್, ತಮ್ಮ ದೃಷ್ಟಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿರುವ ಅಮೆರಿಕ ಇತರೆಲ್ಲರಿಗಿಂತ ವೇಗವಾಗಿ ಬೆಳವಣಿಗೆ ಹೊಂದಬೇಕಾಗಿದೆ ಎಂದು ಹೇಳಿದರು. ವಿಶ್ವ ವ್ಯಾಪಾರ ಸಂಘಟನೆಯು (ಡಬ್ಲ್ಯೂಟಿಒ) ಚೀನಾಕ್ಕೆ  ‘ಮಹಾನ್ ಆರ್ಥಿಕ ಶಕ್ತಿಯಾಗಿ ಬೆಳೆಯಲು ಅವಕಾಶ ನೀಡುತ್ತಿದೆ ಎಂದು ಅವರು ಟೀಕಿಸಿದರು.  ‘ತಮ್ಮನ್ನು ತಾವು ಪ್ರವರ್ಧಮಾನ ರಾಷ್ಟ್ರಗಳು ಎಂದು ಪರಿಗಣಿಸಿರುವ ಕೆಲವು ರಾಷ್ಟ್ರಗಳಿವೆ. ಕೆಲವು ರಾಷ್ಟ್ರಗಳು ಇನ್ನೂ ಪ್ರಬುದ್ಧವಾಗಿಲ್ಲ, ಆದ್ದರಿಂದ ನಾವು ಅವರಿಗೆ ಸಬ್ಸಿಡಿ ಕೊಡುತ್ತಿದ್ದೇವೆ. ಎಲ್ಲವೂ ಬರೀ ಹುಚ್ಚಾಟವಾಗಿದೆ. ಭಾರತ, ಚೀನಾ ಮತ್ತು ಇತರರು ಹೇಳುವಂತೆಯೇ ನಾವು ಕೂಡಾಅವರು ನಿಜವಾಗಿಯೂ ಬೆಳೆಯುತ್ತಿರುವವರು ಎಂದು ಹೇಳುತ್ತಿದ್ದೇವೆ ಎಂದು ಟ್ರಂಪ್ ನುಡಿದರು.  ‘ಅವರು ತಮ್ಮನ್ನು ತಾವೇ ಪ್ರವರ್ಧಮಾನ ರಾಷ್ಟ್ರಗಳು ಎಂದು ಹೇಳಿಕೊಳ್ಳುತ್ತಿವೆ ಮತ್ತು ವರ್ಗದಲ್ಲಿ ಸಬ್ಸಿಡಿಗಳನ್ನು ಪಡೆಯುತ್ತಿವೆ. ನಾವು ಅವರಿಗೆ ಹಣ ಕೊಡಬೇಕು. ಎಲ್ಲ ಹುಚ್ಚಾಟ, ಆದರೆ ನಾವು ಇದನ್ನು ಸ್ಥಗಿತ ಗೊಳಿಸಲಿದ್ದೇವೆ. ನಾವು ಅದನ್ನು ಸ್ಥಗಿತಗೊಳಿಸಿದ್ದೇವೆ ಎಂದು ಟ್ರಂಪ್ ಹೇಳಿದರು.  ‘ನಾವು ಕೂಡಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೇ, ಸರಿಯೇ? ನಾವು ಕೂಡಾ. ನನ್ನ ದೃಷ್ಟಿಯಲ್ಲಿ ನಾವು ಅಭಿವೃದ್ಧಿ ಹೊಂದುತ್ತಿರುವ ದೇಶ. ನಾವೂ ಅಭಿವೃದ್ಧಿ ಹೊಂದುತ್ತಿರುವವರಾದ್ದರಿಂದ ಕೆಟಗರಿಯನ್ನೇ ರದ್ದು ಪಡಿಸಬೇಕು ಎಂದು ನಾನು ಬಯಸುತ್ತೇನೆ. ನಾವು ಬೇರೆ ಎಲ್ಲರಿಗಿಂತ ವೇಗವಾಗಿ ಅಭಿವೃದ್ಧಿ ಹೊಂದ ಬಯಸುತ್ತೇವೆಎಂದು ಟ್ರಂಪ್ ಅವರು ಪ್ರೇಕ್ಷಕರ ಹರ್ಷೋದ್ಘಾರಗಳ ಮಧ್ಯೆ ನುಡಿದರು. ವಿಶ್ವ ವ್ಯಾಪಾರ ಸಂಘಟನೆಯನ್ನು ತರಾಟೆಗೆ ತೆಗೆದುಕೊಂಡ ಅಮೆರಿಕದ ಅಧ್ಯಕ್ಷರುವಿಶ್ವ ವ್ಯಾಪಾರ ಸಂಸ್ಥೆಯು  ಅತ್ಯಂತ ಕೆಟ್ಟದ್ದು ಎಂದು ನಾನು ಭಾವಿಸುತ್ತೇನೆ. ಆದರೆ ಬಹಳಷ್ಟು ಜನರಿಗೆ ಇದು ಏನು ಎಂದು ಗೊತ್ತಿಲ್ಲ. ಇದು ಚೀನಾಕ್ಕೆ ಮಹಾನ್ ಆರ್ಥಿಕ ಶಕ್ತಿಯಾಗಲು ಅವಕಾಶ ನೀಡಿದೆ ಎಂದು ಟೀಕಿಸಿದರು. ಅಮೆರಿಕ ಮತ್ತು ಚೀನಾ ನಡುವಣ ವ್ಯಾಪಾರ ಕೊರತೆ ಬಗ್ಗೆ ಪ್ರಸ್ತಾಪಿಸಿದ ಅವರುಇದು ವಿಶ್ವದ ಎರಡು ಉನ್ನತ ಆರ್ಥಿಕತೆಗಳ ನಡುವಣಟಾರಿಫ್ ವಾರ್ಗೆ  ಎಡೆ ಮಾಡಿಕೊಟ್ಟಿದೆ. ನಾನು ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರ ದೊಡ್ಡ ಅಭಿಮಾನಿ, ಆದರೆ ನಾವು ನ್ಯಾಯೋಚಿತವಾಗಿ ಇರಬೇಕು ಎಂದು ನಾನು ಅವರಿಗೆ ಹೇಳಿದ್ದೇನೆ ಎಂದು ನುಡಿದರುನಾವು ಚೀನಾಕ್ಕೆ ವರ್ಷ ಒಂದಕ್ಕೆ ೫೦೦ ಬಿಲಿಯನ್ (೫೦೦೦೦ ಕೋಟಿ) ಡಾಲರ್ ಹಣ ಅಮೆರಿಕದಿಂದ ಹರಿದು ಹೋಗುವಂತೆ ಬಿಟ್ಟು ಬಿಡಲು ಸಾಧ್ಯವಿಲ್ಲ. ನಾವು ಸ್ವತಃ ನಮ್ಮ ದೇಶವನ್ನು ಮರುನಿರ್ಮಾಣ ಮಾಡಬೇಕಾಗಿದೆ ಎಂದು ಅವರು ಹೇಳಿದರು. ಸಮೃದ್ಧ ರಾಷ್ಟ್ರಗಳನ್ನು ಹೊರಗಿನಿಂದ ಹಾನಿಯಾಗದಂತೆ ಸಂರಕ್ಷಿಸುತ್ತಿರುವುದಕ್ಕಾಗಿ ಅಮೆರಿಕವು ಹಣ ಪಡೆಯಬೇಕು ಎಂದೂ ಅಧ್ಯಕ್ಷರು ನುಡಿದರು. ‘ಇದು ಚೆನ್ನಾಗಿದೆ, ಆದರೆ ಅವರು ಇದಕ್ಕಾಗಿ ನಮಗೆ ಪಾವತಿ ಮಾಡಬೇಕು. ನಾವು ಇಡೀ ಜಗತ್ತನೇ ನೋಡಿಕೊಳ್ಳುತ್ತಿದ್ದೇವೆ ಮತ್ತು ಅವರು ಇದು ತಮಗೆ ಮಂಜೂರಾಗಿರುವಂತಹುದು ಎಂದು ಅವರು ಭಾವಿಸಿದ್ದಾರೆ ಎಂದು ಟ್ರಂಪ್ ಹೇಳಿದರು. ವರ್ಷ ವರ್ಷವೂ ನಾವು ರಾಷ್ಟ್ರಗಳನ್ನು ಸಂರಕ್ಷಿಸುತ್ತಾ ಬಂದಿದ್ದೇವೆ. ಅವರು ಇದರ ಲಾಭ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಮಿಲಿಟರಿ ವೆಚ್ಚವೂ ಕಡಿಮೆ. ನಮಗೆ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಹಣ ಮಿಲಿಟರಿ ವೆಚ್ಚಕ್ಕಾಗಿ ಖರ್ಚಾಗುತ್ತಿದೆ. ವೆಚ್ಚದ ಬಹುತೇಕ ಹಣ ಬೇರೆ ರಾಷ್ಟ್ರಗಳ ಸಂರಕ್ಷಣೆಗಾಗಿ ಹೋಗುತ್ತಿದೆ. ಅವರಲ್ಲಿ ಕೆಲವರು ನಮ್ಮಷ್ಟೇ ಪ್ರಭಾವಶಾಲಿಗಳು ಎಂದು ಟ್ರಂಪ್ ನುಡಿದರು.

2016: ಚೆನ್ನೈ: ಹವಾಮಾನ ಕುರಿತಂತೆ ವಿವಿಧ ಮಾಹಿತಿಗಳನ್ನು ರವಾನಿಸುವ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಯ ಇನ್ಸ್ಯಾಟ್ 3ಡಿಆರ್ ಹವಾಮಾನ ಉಪಗ್ರಹವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈದಿನ ಉಡಾವಣೆ ಮಾಡಲಾಯಿತು. ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ 4.10ಕ್ಕೆ ಉಡಾವಣೆ ಆಗಬೇಕಿದ್ದ ಉಪಗ್ರಹ 40 ನಿಮಿ ತಡವಾಗಿ ಗಗನಕ್ಕೆ ಚಿಮ್ಮಿತು. ಭಾರತ ಅಭಿವೃದ್ಧಿಪಡಿಸಿದ ಜಿಎಸ್ಎಲ್ವಿ -ಎಫ್ 05ನಲ್ಲಿ ಉಡಾವಣೆ ಮಾಡಲಾಯಿತು.  ಇಸ್ರೋದ ಅತ್ಯಾಧುನಿಕ ಹವಾಮಾನ ಇಸ್ರೋದ ಅತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್-3ಡಿಆರ್ ಉಡಾವಣೆಗೆ 29 ಗಂಟೆಗಳ ಕ್ಷಣಗಣನೆ ಸೆಪ್ಟೆಂಬರ್ 7ರ ಬುದವಾರ ಬೆಳಗ್ಗೆ 11.10 ಗಂಟೆಗೆ ಆರಂಭವಾಗಿತ್ತು. . ಜಿಎಸ್ಎಲ್ವಿ-ಎಫ್05 ಮೂಲಕ ಇನ್ಸಾಟ್ -3 ಡಿಆರ್  ಈದಿನ ಕಕ್ಷೆಗೆ ಏರಿತು... ಹವಾಮಾನ ದೃಷ್ಟಿಯಿಂದ ಅತ್ಯಂತ ಉಪಯುಕ್ತವಾಗಲಿರುವ ಉಪಗ್ರಹ ಇದಾಗಿದೆ ಎಂದು ಇಸ್ರೋ ತಿಳಿಸಿತುಹವಾಮಾನ ಕುರಿತಂತೆ ಕರಾರುವಾಕ್ಕಾದ ಮಾಹಿತಿ ನೀಡುವಇನ್ಸ್ಯಾಟ್-3 ಡಿಆರ್ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಇಸ್ರೋತನ್ನ ಸಾಧನೆಯ ಸಂಪುಟಕ್ಕೆ ಹೊಸ ಅಧ್ಯಾಯವೊಂದನ್ನು ಸೇರಿಸಿದೆ. ಇದು ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲಾದ ಉಪಗ್ರಹ ಎಂಬುದಿಲ್ಲಿ ಹೆಮ್ಮೆಗೆ ಕಾರಣವಾಗಿರುವ ಅಂಶ. ಮೋಡ ಮತ್ತು ಮಂಜು ಮುಸುಕಿರುವ ಸಂದರ್ಭದಲ್ಲೂ ಉತ್ತಮ ಗುಣಮಟ್ಟದ ಛಾಯಾಚಿತ್ರ ಒದಗಿಸಲಿರುವ ಉಪಗ್ರಹ ಸಮುದ್ರದ ಮೇಲ್ಮೈ ತಾಪಮಾನ, ಮೋಡಗಳ ಚಲನೆ, ಮಳೆಯ ಸಾಧ್ಯತೆಗಳ ಕುರಿತು ನಿಖರ ಮಾಹಿತಿ ಒದಗಿಸುತ್ತದೆ, ಚಂಡಮಾರುತದ ಎಚ್ಚರಿಕೆಯನ್ನೂ ನೀಡುತ್ತದೆ 

2016: ನವದೆಹಲಿ: ಭಾರತೀಯ ಗುಪ್ತಚರ ಸಂಸ್ಥೆಗಳೇ ತನಗೆ ನಕಲಿ ಪಾಸ್ಪೋರ್ಟ್ ನೀಡಿದ್ದು ಎಂದು ಪಾತಕಿ ಚೋಟಾ ರಾಜನ್ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾನೆ. 16 ವರ್ಷಗಳ ಹಿಂದೆ ಬ್ಯಾಂಕಾಕ್ನಲ್ಲಿ  ಭೂಗತ ಪಾತಕಿ  ದಾವೂದ್ ಇಬ್ರಾಹಿಂನ ಸಹಚರರು ತನ್ನನ್ನು ಹತ್ಯೆ ಮಾಡುಲ ಸಂಚು ಹೂಡಿದ್ದಾಗ ತನಗೆ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ಪಾಸ್ಪೋರ್ಟ್ ನೀಡಲಾಗಿತ್ತು ಎಂದು ದೆಹಲಿ ತಿಹಾರ್ ಜೈಲಿನಲ್ಲಿರುವ ರಾಜನ್ ಹೇಳಿದ್ದಾನೆ. ಭಯೋತ್ಪಾದಕರ ವಿರುದ್ಧ ನಾನು ಹೋರಾಡುತ್ತಿದ್ದೆ. ಭಾರತ ವಿರೋಧಿಗಳು ಅಮಾಯಕರನ್ನು ಹತ್ಯೆ ಮಾಡಿ ದೇಶಕ್ಕೆ ಹಾನಿಯುಂಟು ಮಾಡುತ್ತಿದ್ದರು. ದೇಶದ ಹಿತ ಕಾಪಾಡಲು ನಾನು ಹೋರಾಟ ಮಾಡಿದ್ದು, ಆಗ ನನಗೆ ಸಹಾಯ ಮಾಡಿದ ಜನರ ಹೆಸರನ್ನು ನಾನೀಗ ಹೇಳಲಾರೆ ಎಂದು ಹೆಸರು ಬಹಿರಂಗ ಪಡಿಸಲು ನಿರಾಕರಿಸಿದ್ದಾನೆ. ನಕಲಿ ಪಾಸ್ ಪೋರ್ಟ್ ಹೊಂದಿರುವ ಆರೋಪದಲ್ಲಿ ಚೋಟಾ ರಾಜನ್  ಅವರನ್ನು ಕಳೆದ ವರ್ಷ ಇಂಡೋನೇಷ್ಯಾದಲ್ಲಿ ಬಂಧಿಸಲಾಗಿತ್ತು.

2016: ನವದೆಹಲಿ
: ಸರಕು ಮತ್ತು ತೆರಿಗೆ (ಜಿಎಸ್ಟಿ) ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈದಿನ ಅಂಕಿತ ಹಾಕಿದರು. ರಾಷ್ಟ್ರಪತಿ ಅಂಕಿತಕ್ಕೆ ಕನಿಷ್ಠ 16 ರಾಜ್ಯಗಳ ವಿಧಾನಸಭೆಗಳಲ್ಲಿ ಅನುಮೋದನೆಯ ಅಗತ್ಯವಿತ್ತು.  ಇದೀಗ 16 ರಾಜ್ಯಗಳು ಮಸೂದೆಗೆ ತಮ್ಮ  ಒಪ್ಪಿಗೆ ನೀಡಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಅವರು ಮಸೂದೆಗೆ ಸಹಿ ಮಾಡಿದರು.


2016: ನವದೆಹಲಿ
: ರಾಜಧಾನಿ, ಶತಾಬ್ಧಿ ಮತ್ತು ದುರೊಂತೊ ಎಕ್ಸ್ಪ್ರೆಸ್ ರೈಲುಗಳ ಪ್ರಯಾಣ ದರವನ್ನು ಶೇಕಡಾ 30ರಿಂದ 40ರಷ್ಟು ಹೆಚ್ಚಿಸಲು ಮತ್ತು ವಿಶೇಷ ರೈಲುಗಳಿಗೂ ಪರಿಷ್ಕೃತ ದರದಲ್ಲಿಯೇ ಟಿಕೆಟ್ ನೀಡಲು ರೈಲ್ವೇ ಇಲಾಖೆ ನಿರ್ಧರಿಸಿತು.  ಸೆಪ್ಟೆಂಬರ್ 9ರಿಂದಲೇ ಪರಿಷ್ಕೃತ ದರ
ಜಾರಿಯಾಗಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಹಿರಿಯ ಸದಸ್ಯ ಮೊಹದ್ ಜಮ್ಷೆಡ್ ತಿಳಿಸಿದರು.  ಎಕ್ಸಿಕ್ಯೂಟಿವ್ ಕ್ಲಾಸ್ ಮತ್ತು 1ಎಸಿ ವಿಭಾಗದ ದರಗಳಲ್ಲಿ ಯಾವುದೇ ವ್ಯತ್ಯಾಸ ಮಾಡಲಾಗಿಲ್ಲ. ಉಳಿದ ಎಲ್ಲಾ ದರ್ಜೆಯ ಟಿಕೆಟ್ ದರಗಳಲ್ಲಿ ಬದಲಾವಣೆ ಮಾಡಲಾಯಿತು.  ಆರಂಭದ ಶೆ.10ರಷ್ಟು ಟಿಕೆಟ್ಗಳ ದರ ಈಗಿರುವಂತೆಯೇ ಇರುತ್ತದೆ. ಆನಂತರ ಮೂರು ಹಂತದಲ್ಲಿ ಅಂದರೆ 20,30 ಮತ್ತು ಗರಿಷ್ಠ 40 ಟಿಕೆಟ್ಗಳ ದರದಲ್ಲಿ ತಲಾ ಶೇಕಡಾ 10ರಷ್ಟು ಜಾಸ್ತಿಯಾಗಲಿದೆ. ರೈಲ್ವೆ ಸೇವೆ ಆದಾಯವನ್ನು 500ಕೋಟಿ ರೂ.ಗೆ ಹೆಚ್ಚಿಸಲೇಬೇಕಾದ ಅನಿವಾರ್ಯತೆ ಇರುವ ಕಾರಣ ಪರಿಷ್ಕೃತ ದರ ಪ್ರಕಟಿಸಲಾಗುತ್ತಿದೆ ಎಂದು ಇಲಾಖೆ ಹೇಳಿದೆ. ರಿಸರ್ವೇಷನ್ ಟಿಕೆಟ್ಗಳ ದರದಲ್ಲಿ, ಸೂಪರ್ ಫಾಸ್ಟ್ ರೈಲುಗಳ ದರದಲ್ಲಿ, ರೈಲಿನಲ್ಲಿನ ಆಹಾರಗಳ ಮೇಲಿನ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಇಲಾಖೆ ತಿಳಿಸಿತು.

2016: ಲಾವೋಸ್: ಮೂಲಭೂತ ಸೌಲಭ್ಯ ಒದಗಿಸುವುದು, ಶಾಂತಿ ಕಾಪಾಡಿಕೊಳ್ಳುವುದು ಹಾಗೂ ಸ್ಥರತೆ ಮತ್ತು ಸಮೃದ್ಧಿಯ ಕಡೆಗೆ ಹೆಚ್ಚಿನ ಒತ್ತು ಕೊಡುವುದಕ್ಕೆ ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.. ವಿಯೆಂಟಿಯಾನ್ನಲ್ಲಿ ನಡೆದ 14ನೆ ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಆಸಿಯಾನ್ ರಾಷ್ಟ್ರಗಳೊಂದಿಗಿನ ಸಂಬಂಧ ವೃದ್ಧಿಸಿಕೊಳ್ಳುವುದಕ್ಕೆ ಭಾರತ ಸದಾ ಸಿದ್ಧವಿರುವುದಾಗಿ ಹೇಳಿದರು. ಆರ್ಥಿಕ ಬಲವೃದ್ಧಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಅನುಭವಗಳನ್ನು ತೆರೆದಿಡುವ ಇಂಗಿತ ವ್ಯಕ್ತಪಡಿಸಿರುವ ಮೋದಿ, ವಿಶ್ವ ಎದುರಿಸುತ್ತಿರುವ ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಸದಾ ಒಂದು ಹೆಜ್ಜೆ ಮುಂದಿರಲಿದೆ. ಯಾವುದೇ ಸಮಯದಲ್ಲೂ ಉಗ್ರವಾದವನ್ನು ಸಹಿಸುವುದಿಲ್ಲ ಎಂದು ಹೇಳಿದರು. ದೇಶದ ಗಡಿಯಿಂದಾಚೆಯಿರುವ ಭಯೋತ್ಪಾದನೆ, ಹೆಚ್ಚುತ್ತಿರುವ ತೀವ್ರಗಾಮಿ ಧೋರಣೆ ಮತ್ತು ಅತಿಯಾದ ಗಲಭೆಗಳಿಂದ ಆಸಿಯಾನ್ ದೇಶಗಳು ಬೆದರಿಕೆ ಎದುರಿಸುತ್ತಿವೆ ಎಂದು ಅವರು ಹೇಳಿದರು.  
.
2016: ದೌಸಾ: ಯುವತಿಯೊಬ್ಬಳನ್ನು ಚುಡಾಯಿಸಿ ಮಾತನಾಡಿಸಿದ ಎನ್ನುವ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನೊಬ್ಬನ ಕೈಗಳನ್ನು ಹಗ್ಗದಿಂದ ಕಟ್ಟಿ, ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಇಲ್ಲಿನ ಬಲಿಯಾನ್ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಯಿತು. ಇದೇ ಗ್ರಾಮದ ದಲಿತ ಯುವಕ ಮಂಗಲ್ ರಾಮ್ ಹಲ್ಲೆಗೊಳಗಾದವರು. ಮಂಗಲ್ ರಾಮ್ ಊರಿನ ಯುವತಿಯನ್ನು ಮಾತನಾಡಿಸಿದ್ದೇ ತಪ್ಪು ಎಂದು ಆರೋಪಿಸಿದ ಗ್ರಾಮಸ್ಥರು ಮಾನವೀಯತೆಯನ್ನೇ ಮರೆತು ಶೂಗಳನ್ನ ಕೊರಳಿಗೆ ಕಟ್ಟಿ, ಊರೆಲ್ಲಾ ಮೆರವಣಿಗೆ ಮಾಡಿ ಹಲ್ಲೆ ನಡೆಸಿದರು. ಗ್ರಾಮಸ್ಥರು ಆರೋಪಿಸುತ್ತಿರುವ ಪ್ರಕಾರ, ಮಂಗಲ್ ರಾಮ್ ಕಳೆದ ಕೆಲ ದಿನಗಳಿಂದ ಯುವತಿಗೆ ಕಿರುಕುಳ ನೀಡುತ್ತಿದ್ದ. ಚುಡಾಯಿಸಿ ಹಿಂದೆ ಬಿದ್ದು, ಆಕೆಯನ್ನು ಶಿಕ್ಷಿಸಿದ್ದ. ಇದೇ ಕಾರಣಕ್ಕಾಗಿ ಆತನಿಗೆ ಒಮ್ಮೆ ಎಚ್ಚರಿಸಲಾಗಿತ್ತು. ಆದರೂ ಮತ್ತೆ ತನ್ನ ಕೃತ್ಯ ಮುಂದುವರಿಸಿದ್ದ ಎನ್ನಲಾಯಿತು. ಈ ಸಂಬಂಧ ಲವಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಯಿತು.
2008: ಗೋದ್ನಾದಲ್ಲಿ 1200 ಮೆಗಾವಾಟ್ ಸಾಮರ್ಥ್ಯದ ಬೃಹತ್ ಶಾಖೋತ್ಪನ್ನ ವಿದ್ಯುತ್ ಘಟಕವನ್ನು ಆರಂಭಿಸುವ ಸಂಬಂಧ ಕರ್ನಾಟಕ ಮತ್ತು ಛತ್ತೀಸ್ ಗಢ ರಾಜ್ಯಗಳು ರಾಯಪುರದಲ್ಲಿ ಚಾರಿತ್ರಿಕ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದವು. ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಛತ್ತೀಸ್ ಗಢ ಮುಖ್ಯಮಂತ್ರಿ ಡಾ. ರಮಣ್ ಸಿಂಗ್ ಸಮ್ಮುಖದಲ್ಲಿ ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್. ಎಂ. ಜಾಮದಾರ್, ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಜೈರಾಜ್, ಛತ್ತೀಸ್ ಗಢ ರಾಜ್ಯ ವಿದ್ಯುತ್ ಮಂಡಳಿಯ ಕಾರ್ಯದರ್ಶಿ ಸುಯೋಗ್ ಮಿಶ್ರಾ, ಇಂಧನ ಇಲಾಖೆ ಕಾರ್ಯದರ್ಶಿ ವಿವೇಕ್ ದಾಂಡ್ ಪರಸ್ಪರ ಒಡಂಬಡಿಕೆ ಪತ್ರಗಳನ್ನು ಹಸ್ತಾಂತರಿಸಿಕೊಂಡರು. ಜಿಂಜಗಿರಿ ಜಿಲ್ಲೆಯ ಗೋದ್ನಾದಲ್ಲಿ ಒಟ್ಟು 2000 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ಕರ್ನಾಟಕ ವಿದ್ಯುತ್ ನಿಗಮ ನಿರ್ಮಿಸಲಿದ್ದು ಮೊದಲ ಹಂತದಲ್ಲೇ 1200 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಂಬಂಧ ಒಡಂಬಡಿಕೆ ಏರ್ಪಟ್ಟಿತು. ನಂತರ ಎರಡನೇ ಹಂತದಲ್ಲಿ 800 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ.

2007: ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಗೌಡನಪಾಳ್ಯದಲ್ಲಿ ಲಘು ವಿಮಾನವೊಂದು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಪರಿಣಾಮವಾಗಿ ಪೈಲಟ್ ಸಹಿತ ನಾಲ್ವರು ಮೃತರಾದರು. ಮೃತರನ್ನು ಪಟ್ನಾದ ಪೈಲಟ್ ಸಂತೋಷ್, ಸಹ ಪೈಲಟ್ ಕೊಯಮತ್ತೂರಿನ ಷಣ್ಮುಗಂ, ಕೊಟ್ಟಾಯಂನ ಸುನೀಲ್ ಜೋಸೆಫ್ ಮತ್ತು ಚೆನ್ನೈನ ಮೊಹಮ್ಮದ್ ಶಬೀರ್ ಎಂದು ಗುರುತಿಸಲಾಯಿತು. ಕೇರಳದ ಆಲೂಕಾಸ್ ಜ್ಯುಯೆಲರಿ ಗ್ರೂಪಿಗೆ ಸೇರಿದ ಪಿ68/ಸಿ ಲಘು ವಿಮಾನ ಬೆಂಗಳೂರಿನಿಂದ ಕೊಚ್ಚಿಗೆ ಹೊರಟಿತ್ತು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಎಚ್ ಎಎಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಕೆಲವೇ ನಿಮಿಷಗಳಲ್ಲಿ (3.14ಕ್ಕೆ) ನಿಯಂತ್ರಣ ಕಳೆದುಕೊಂಡಿತು. ಗೌಡನಪಾಳ್ಯದಲ್ಲಿರುವ ತೆಂಗಿನ ಮರವೊಂದಕ್ಕೆ ಮೊದಲು ಡಿಕ್ಕಿ ಹೊಡೆದು, ನಂತರ ಕೆರೆಗೆ ಬಿತ್ತು.

2007: ಇಂಗ್ಲೆಂಡಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಅಂತ್ಯಗೊಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತು. ಬೌಲರ್ ಹಾಗೂ ಬ್ಯಾಟ್ಸ್ ಮನ್ ಗಳ ಸೊಗಸಾದ ಪ್ರದರ್ಶನದ ನೆರವಿನಿಂದ ಏಳು ವಿಕೆಟ್ ಗೆಲುವು ಸಾಧಿಸಿದ ಆತಿಥೇಯ ಇಂಗ್ಲೆಂಡ್ 4-3ರಲ್ಲಿ ಸರಣಿ ಗೆದ್ದು ಬೀಗಿತು. ಸರಣಿಯಲ್ಲಿ 70.33 ಸರಾಸರಿಯಲ್ಲಿ ಒಟ್ಟು 422 ರನ್ ಪೇರಿಸಿದ ಇಯಾನ್ ಬೆಲ್ `ಸರಣಿ ಶ್ರೇಷ್ಠ' ಎನಿಸಿದರು. ಕಾಲಿಂಗ್ ವುಡ್ ಗೆ `ಪಂದ್ಯ ಪುರುಷೋತ್ತಮ' ಗೌರವ ಲಭಿಸಿತು.

2007: ಬ್ರಿಟನ್ನಿನ ಪ್ರಧಾನಿ ಬ್ರೌನ್ ಅವರ ಪತ್ನಿ ಸಾರಾ ಬ್ರೌನ್ ಅವರಿಗೆ ವೊಲ್ವರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿತು. ಕುಲಪತಿ ಲಾರ್ಡ್ ಸ್ವರಾಜ್ ಪಾಲ್  ವಿವಿ ಘಟಿಕೋತ್ಸವದಲ್ಲಿ ಲಾರಾಗೆ ಪದವಿ ಪ್ರದಾನ ಮಾಡಿದರು.

2007: ಮೊಬೈಲ್ ಸಂಸ್ಥೆ ಹಚ್ ಮೊಟ್ಟಮೊದಲ ಬಾರಿಗೆ ಕರೆ ನಿರ್ಬಂಧಿಸುವ (ಕಾಲ್ ಫಿಲ್ಟರ್) ಸೇವೆ ಆರಂಭಿಸಿತು. ಈ ಸೌಲಭ್ಯದಡಿಯಲ್ಲಿ ಗ್ರಾಹಕರು ನಿರ್ದಿಷ್ಟವಾದ ಸಂಖ್ಯೆಗಳಿಂದ ಒಳಬರುವ ಕರೆಗಳನ್ನು ತಡೆಯಬಹುದು. ಅನಗತ್ಯವಾದ ಸಂಖ್ಯೆಗಳಿಂದ ಒಳಬರುವ ಕರೆ ಬಂದಾಗ, ಕರೆ ಮಾಡಿದವರಿಗೆ ಪ್ರಸ್ತುತ ಹಚ್ ಚಂದಾದಾರರು ನಿಮ್ಮ ಕರೆ ಸ್ವೀಕರಿಸಲು ಇಚ್ಛಿಸುವುದಿಲ್ಲ, ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ ಎಂಬ ಸಂದೇಶ ಕೇಳಿಸುತ್ತದೆ. ಈ ಸೇವೆಯಿಂದ ಗ್ರಾಹಕರಿಗೆ ತಮಗೆ ಬರುವ ಕರೆಗಳ ಮೇಲೆ ಸಂಪೂರ್ಣ ನಿಯಂತ್ರಣ ದೊರೆಯುತ್ತದೆ. ಸ್ವೀಕರಿಸದ ಕರೆಗಳ ಬಗ್ಗೆ  ನೀಡುವ ಮಾಹಿತಿ (ಮಿಸ್ಡ್ ಕಾಲ್ ಅಲರ್ಟ್) ತಡೆಹಿಡಿಯಲಾದ ಸಂಖ್ಯೆಗಳಿಂದ ಬಂದ ಕರೆಗಳ ಕುರಿತು ನೀಡಲಾಗುತ್ತದೆ. ತಡೆಹಿಡಿಯಲಾದ ಸಂಖ್ಯೆಯಿಂದ ಮತ್ತೆ ಕರೆ ಬರುವಂತೆ ಸಹ ಚಂದಾದಾರರು ಮಾಡಿಕೊಳ್ಳಲು ಅವಕಾಶವಿರುತ್ತದೆ. ಕಪ್ಪು ಪಟ್ಟಿಯಿಂದ ಆ ಸಂಖ್ಯೆಗಳನ್ನು ತೆಗೆದುಹಾಕಿ ಒಳಬರುವ ಕರೆಗಳನ್ನು ಪುನಃ ಪಡೆಯಬಹುದು.

2007: ಲಾಹೋರಿನಲ್ಲಿ ನಡೆದ ಪ್ರಥಮ ದಕ್ಷಿಣ ಏಷ್ಯಾ ಈಜು ಮತ್ತು ವಾಟರ್ ಪೋಲೊ ಚಾಂಪಿಯನ್ಶಿಪ್ ನಲ್ಲಿ ಭಾರತದ ಪುರುಷರು ಒಟ್ಟಾರೆ ಹತ್ತೊಂಬತ್ತು ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಅಗ್ನೀಶ್ವರ್ ಜಯಪ್ರಕಾಶ್ ಅವರು ಮುಕ್ತ ವಿಭಾಗದಲ್ಲಿ ಎರಡು ಬಂಗಾರದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಅವರು 400 ಮೀ. ವೈಯಕ್ತಿಕ ಮೆಡ್ಲೆಯಲ್ಲಿ 4 ನಿಮಿಷ 48 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಅವರಿಗೆ ನಿಕಟ ಪೈಪೋಟಿ ನೀಡಿದ ಭಾರತದವರೇ ಆದ ಆದಿತ್ಯ ಸಾಂಗ್ವೇಕರ್ 4 ನಿಮಿಷ  ಹಾಗೂ 51.67 ಸೆಕೆಂಡುಗಳಲ್ಲಿ ನಿಗದಿತ ಅಂತರವನ್ನು ಕ್ರಮಿಸಿ, ಎರಡನೇ ಸ್ಥಾನ ಪಡೆದರು. ಕಂಚಿನ ಪದಕವು ಆತಿಥೇಯ ಪಾಕಿಸ್ತಾನದ ಆದಿಲ್ ಬೇಗ್ ಅವರ ಪಾಲಾಯಿತು. ಅವರು 5 ನಿಮಿಷ ಹಾಗೂ 11.46 ಸೆಕೆಂಡುಗಳಲ್ಲಿ ಗುರಿ ತಲುಪಿದರು. 100 ಮೀ. ಬ್ರೆಸ್ಟ್ ಸ್ಟ್ರೋಕಿನಲ್ಲಿಯೂ ಅಗ್ನೀಶ್ವರ್ಗೆ (1:07.73 ಸೆ.) ಅಗ್ರಸ್ಥಾನದ ಗೌರವ ಸಿಕ್ಕಿತು. ಪಾಕಿಸ್ಥಾನದ ಅಬ್ದುಲ್ ಅಜೀಜ್ (1:10.25 ಸೆ.) ಹಾಗೂ ಶ್ರೀಲಂಕಾದ ಎಂ.ಎ.ಚಣಕಾ (1:12.03 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದರು.

2007:  ಮೊಹಮ್ಮದ್ ಆಸಿಫ್ ಗೆ ಬ್ಯಾಟಿನಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯು ಶೋಯಬ್ ಅಖ್ತರ್ ಮೇಲೆ ಅನಿರ್ಧಿಷ್ಟ ಅವಧಿಯ ನಿಷೇಧ ಹೇರಿತು. ಟ್ವೆಂಟಿ-20 ವಿಶ್ವಕಪ್ ಕ್ರಿಕೆಟಿನಲ್ಲಿ ಆಡುವ ಪಾಕಿಸ್ಥಾನ ತಂಡದಲ್ಲಿ ಇದ್ದ  ಶೋಯಬ್ ಅಭ್ಯಾಸದ ಸಂದರ್ಭದಲ್ಲಿ ಆಸಿಫ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದರು. ಆನಂತರ ಕೋಪದಿಂದ ಬ್ಯಾಟಿನಿಂದ ಹೊಡೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ, ಪಿಸಿಬಿ ನಿಷೇಧ ಶಿಕ್ಷೆ ವಿಧಿಸಿತು.

2006: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸೂಕ್ಷ್ಮ ಪಟ್ಟಣವಾದ ಮಾಲೆಗಾಂವ್ ನ ಮಸೀದಿ ಹಾಗೂ ಮುಶಾವರಾತ್ ಮಾರುಕಟ್ಟೆ ಪ್ರದೇಶದಲ್ಲಿ ಶಕ್ತಿಶಾಲಿ ತ್ರಿವಳಿ ಸ್ಫೋಟಗಳು ಸಂಭವಿಸಿದ ಪರಿಣಾಮವಾಗಿ 38 ಜನ ಮೃತರಾಗಿ 100ಕ್ಕೂ ಹೆಚ್ಚು ಜನ ಗಾಯಗೊಂಡರು. ನೂರಾನಿ ಮಸೀದಿ ಬಳಿಯ ಬಡಾ ಖಬರಸ್ಥಾನ ಪ್ರದೇಶದ ಹೊರಗೆ ಹಾಗೂ ನಗರದ ಹೃದಯ ಭಾಗದಲ್ಲಿ ಜನರು ಶುಕ್ರವಾರದ ಪ್ರಾರ್ಥನೆ ಮುಗಿಸಿ ಹೊರಡುತ್ತಿದ್ದಾಗ ಮಧ್ಯಾಹ್ನ 1.50 ರ ಸಮಯದಲ್ಲಿ ಈ ಸ್ಫೋಟಗಳು ಸಂಭವಿಸಿದವು.

2006: ಅಮೆರಿಕದ ಸೇನೆಗಾಗಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಲ್ಲಿ ಬಳಸಲು ಉಪಯುಕ್ತವಾದ `ಮಾದರಿ ಮಾನ್ಯತೆ' (ಪ್ಯಾಟರ್ನ್ ರೆಕಗ್ನಿಷನ್) ಭಾಗಗಳನ್ನು ಅಭಿವೃದ್ಧಿ ಪಡಿಸಿದ ಭಾರತದ ಅಸ್ಸಾಂ ಮೂಲದ ಅಮೆರಿಕ ವಿಜ್ಞಾನಿ ಅಭಿಜಿತ್ ಮಹಾಲನೋಬಿಸ್ ಅವರನ್ನು ಪ್ರತಿಷ್ಠಿತ ಎಮರಾಲ್ಡ್ ಆನರ್ಸ್ ಸಂಸ್ಥೆಯು `ವರ್ಷದ ವಿಜ್ಞಾನಿ' ಗೌರವಕ್ಕೆ ಆಯ್ಕೆ ಮಾಡಿತು. ಪ್ರತಿಷ್ಠಿತ ಎಮರಾಲ್ಡ್ ಆನರ್ಸ್ ಸಂಸ್ಥೆಯು ಅಲ್ಪಸಂಖ್ಯಾತ ವಿಜ್ಞಾನಿಗಳ ಸಾಧನೆಯನ್ನು ಗುರುತಿಸಿ ಈ ಗೌರವವನ್ನು ನೀಡುತ್ತದೆ. ಅಮೆರಿಕ ಸೇನೆಯ ಲಕ್ಹೀಡ್ ಮಾರ್ಟಿನ್ ಕ್ಷಿಪಣಿ ಮತ್ತು ಅಗ್ನಿ ನಿಯಂತ್ರಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಸ್ಸಾಂ ಮೂಲದ ಮಹಾಲನೋಬಿಸ್ ಅವರು ಮನುಷ್ಯರು ಮತ್ತು ಪ್ರಾಣಿಗಳ ಪ್ರಮುಖ ಜೋಡಣೆಗಳ ವಿಶ್ಲೇಷಣೆ ಮಾಡಲು ಸಾಧ್ಯವಾಗುವಂತಹ ಕಂಪ್ಯೂಟರ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದರು. ಇದು ಕಂಪ್ಯೂಟರೀಕೃತ ಕ್ಷಿಪಣಿ ಬ್ಯಾಟರಿಗಳು ಗುರಿ ತಪ್ಪುವುದುನ್ನು ನಿವಾರಿಸಲು ಅನುಕೂಲವಾಗುವಂತಹ `ಮಾದರಿ ಮಾನ್ಯತೆ ವ್ಯವಸ್ಥೆ' ಅಭಿವೃದ್ಧಿ ಪಡಿಸಲು ಅನುಕೂಲ ಒದಗಿಸಿತು. ಮಹಾಲನೋಬಿಸ್ ಅವರ `ಆಟೋಮ್ಯಾಟಿಕ್ ಟಾರ್ಗೆಟ್ ರೆಕಗ್ನಿಷನ್ ಸಿಸ್ಟಮ್' ಕ್ಷಿಪಣಿ ಮತ್ತು ಅಮೆರಿಕ ಸೇನೆಯ ಅಗ್ನಿ ನಿಯಂತ್ರಣ ವ್ಯವಸ್ಥೆಗೆ ಅಡಿಪಾಯ ಒದಗಿಸಿತು. ಅಷ್ಟೇ ಅಲ್ಲ, ಭವಿಷ್ಯದ ಎಲ್ಲ ಸೇನಾ ಕಂಪ್ಯೂಟರ್ ಮಾನ್ಯತಾ ವ್ಯವಸ್ಥೆಗಳಿಗೆ ಒಂದು ಮಾದರಿಯನ್ನು ಒದಗಿಸಿತು ಎಂದು `ಸೈನ್ಸ್ ಸ್ಪ್ರೆಕ್ಟಮ್' ಬರೆಯಿತು.

2006: ವಿವಾದಕ್ಕೆ ಎಡೆ ಮಾಡಿದ್ದ ಕರ್ನಾಟಕದ ಧಾರ್ಮಿಕ ದತ್ತಿ ಕಾಯ್ದೆಯನ್ನು ಹೈಕೋರ್ಟ್ ರದ್ದು ಪಡಿಸಿತು. ಈ ಕಾಯ್ದೆ ಹಿಂದುಗಳಲ್ಲಿ ಒಡುಕುಂಟು ಮಾಡುವಂತಹುದು ಎಂದು ಕೋರ್ಟ್ ಹೇಳಿತು. ಮಠಗಳು, ಜೈನರು ಮತ್ತು ಸಿಖ್ ಧಾರ್ಮಿಕ ಸಂಸ್ಥೆಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟ ಸರ್ಕಾರದ ನಿಲುವು ಅಸಮಾನತೆಯಿಂದ ಕೂಡಿದೆ ಎಂದು ನ್ಯಾಯಮೂರ್ತಿ ಗುರುರಾಜನ್ ಮತ್ತು ನ್ಯಾಯಮೂರ್ತಿ ಸಿ.ಆರ್. ಕುಮಾರ ಸ್ವಾಮಿ ಅವರನ್ನು ಒಳಗೊಂಡ ಪೀಠ ತಿಳಿಸಿತು.

2006: ಆಸ್ಟ್ರೇಲಿಯಾದ ಖ್ಯಾತ ಮೋಟಾರ್ ರೇಸಿಂಗ್ ಚಾಲಕ ಪೀಟರ್ ಬ್ರೋಕ್ ಅವರು ಸಿಡ್ನಿಯಲ್ಲಿ ನಡೆದ ಮೋಟಾರ್ ರ್ಯಾಲಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತರಾದರು.

2006: ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದ ಯುರೇಕಾ ಅರಣ್ಯದಲ್ಲಿ ಇತ್ತೀಚೆಗೆ ಪತ್ತೆಯಾದ ಮೂರು ರೆಕ್ ವುಡ್ ಮರಗಳು (ಕೆಂಪು ಬಣ್ಣದ ಮಂಜತ್ತಿ ಮರ) ವಿಶ್ವದಲ್ಲೇ ಅತಿ ಎತ್ತರ ಎಂದು ತಜ್ಞರು ಅಂದಾಜು ಮಾಡಿದರು. ಈ ಮೂರು ಮರಗಳಲ್ಲಿ ಒಂದು ಮರ ಸುಮಾರು 378.1 ಅಡಿ (115.2 ಮೀಟರ್) ಎತ್ತರವಿದ್ದು, ಇದಕ್ಕೆ `ಹೈಪೀರಿಯನ್' ಎಂದು ಹೆಸರಿಡಲಾಗಿದೆ.

2001: ಬಾಂಗ್ಲಾದೇಶದ ಬ್ಯಾಟ್ಸ್ ಮನ್ ಮಹಮ್ಮದ್ ಆಶ್ರಫುಲ್ ಅವರು ಕೊಲಂಬೋದಲ್ಲಿ ನಡೆದ ಒಂದು ದಿನದ ಏಷಿಯನ್ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಶ್ರೀಲಂಕಾ ವಿರುದ್ಧ 114 ರನ್ನುಗಳನ್ನು ಗಳಿಸಿ, ಕ್ರಿಕೆಟ್ ಇತಿಹಾಸದಲ್ಲೇ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ತಮ್ಮ 17ನೇ ಜನ್ಮದಿನದ ಮುನ್ನಾದಿನ ಅವರು ಈ ಸಾಧನೆ ಮಾಡಿದರು. 1960-61ರಲ್ಲಿ ಮುಸ್ತಾಕ್ ಮಹಮ್ಮದ್ ಅವರು 17 ವರ್ಷ 81 ದಿನಗಳ ವಯಸ್ಸಿನಲ್ಲಿ ಭಾರತ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ಬಾರಿಸಿ ಅತ್ಯಂತ ಕಿರಿಯ ಆಟಗಾರ ಎನಿಸಿದ್ದರು.

1999: ಪಂಜಾಬಿನ ಮುಖ್ಯಮಂತ್ರಿಯಾಗಿ ಹರಿಚರಣ್ ಸಿಂಗ್ ಬ್ರಾರ್ ಅಧಿಕಾರ ಸ್ವೀಕಾರ.

1988: ತಮ್ಮ ಮೈಕ್ರೋ ಲೈಟ್ ಸಿಂಗಲ್ ಎಂಜಿನ್ ವಿಮಾನದಲ್ಲಿ ಲಂಡನ್ನಿನಿಂದ ಅಹಮದಾಬಾದಿಗೆ 21 ದಿನಗಳಲ್ಲಿ ಕ್ರಮಿಸುವ ಮೂಲಕ ಕೈಗಾರಿಕೋದ್ಯಮಿ ವಿಜಯಪತ್ ಸಿಂಘಾನಿಯಾ ಅವರು ವಿಮಾನಯಾನದಲ್ಲಿ ದಾಖಲೆ ನಿರ್ಮಿಸಿದರು.

1982: ಕಾಶ್ಮೀರಿ ನಾಯಕ ಷೇಕ್ ಅಬ್ದುಲ್ಲ ಅವರು ಶ್ರೀನಗರದಲ್ಲಿ ತಮ್ಮ 76ನೇ ವಯಸ್ಸಿನಲ್ಲಿ ನಿಧನರಾದರು.

1952: ಎರ್ನೆಸ್ಟ್ ಹೆಮಿಂಗ್ವೇ ಅವರ `ದಿ ಓಲ್ಡ್ ಮ್ಯಾನ್ ಅಂಡ್ ದಿ ಸೀ' ಕಾದಂಬರಿ ಪ್ರಕಟಗೊಂಡಿತು. ಈ ಕಾದಂಬರಿ ಹೆಮಿಂಗ್ವೇ ಅವರಿಗೆ `ಪುಲಿಟ್ಜರ್ ಪ್ರಶಸ್ತಿ'ಯನ್ನು ತಂದು ಕೊಟ್ಟಿತಲ್ಲದೆ, 1954ರಲ್ಲಿ ಸಾಹಿತ್ಯಕ್ಕಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು.

1949: ಸಾಹಿತಿ ಜರಗನಹಳ್ಳಿ ಶಿವಶಂಕರ್ ಜನನ.

1945: ಸಾಹಿತಿ ಕವಿತಾ ಕೃಷ್ಣ ಜನನ.

1942: ಸಾಹಿತಿ ಬಿ.ಎಸ್. ಸ್ವಾಮಿ ಜನನ.

1939: ಸಾಹಿತಿ ಕುಲಶೇಖರಿ ಜನನ.

1938: ಕೃಷಿ, ಪರಿಸರ ಕಾಳಜಿ, ಸಾಹಿತ್ಯ, ವಿಜ್ಞಾನ, ಮಾನವ ಶಾಸ್ತ್ರ ಇತ್ಯಾದಿ ಕ್ಷೇತ್ರಗಳಲ್ಲಿ ಅಪಾರ ಅಧ್ಯಯನ ನಡೆಸಿ ಪಾಂಡಿತ್ಯ ಪಡೆದ ಕೆ.ಪಿ. ಪೂರ್ಣಚಂದ್ರ್ರ ತೇಜಸ್ವಿ ಅವರು ಕುವೆಂಪು (ಕೆ.ವಿ. ಪುಟ್ಟಪ್ಪ) - ತಾಯಿ ಹೇಮಾವತಿ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಈದಿನ ಜನಿಸಿದರು. ನವೋದಯ, ನವ್ಯ, ನವ್ಯೋತ್ತರ, ಆಧುನಿಕ ಕನ್ನಡ ಸೇರಿದಂತೆ ಕನ್ನಡ ಸಾಹಿತ್ಯದ ಎಲ್ಲ ಘಟ್ಟಗಳಲ್ಲೂ ಸಾಹಿತ್ಯ ಕೃತಿ ರಚಿಸಿದ ತೇಜಸ್ವಿ ಅವರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದವರು.

1933: ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಜನನ. 925ಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಿಗೆ ಹಿನ್ನೆಲೆ ಗಾಯನ ನೀಡಿರುವ ಆಶಾ ಅವರು ಲತಾ ಮಂಗೇಶ್ಕರ್ ಅವರ ಸಹೋದರಿ. ಸಿನಿಮಾ, ಪಾಪ್, ಘಜಲ್, ಭಜನ್, ಭಾರತದ ಶಾಸ್ತ್ರೀಯ ಸಂಗೀತ, ಜಾನಪದ ಗೀತೆಗಳು, ಕವ್ವಾಲಿ ಮತ್ತು ರಬೀಂದ್ರ ಸಂಗೀತವನ್ನು ಹಾಡುವುದರಲ್ಲಿ ಆಶಾ ನಿಷ್ಣಾತರು. ಹಿಂದಿ, ಮರಾಠಿ, ಗುಜರಾತಿ, ತಮಿಳು, ಕನ್ನಡ, ಇಂಗ್ಲಿಷ್, ರಷ್ಯನ್, ಮಲಯ ಸೇರಿದಂತೆ 14 ಭಾಷೆಗಳಲ್ಲಿ ಹಾಡಿದ ಹೆಗ್ಗಳಿಕೆ ಇವರದು. ಇವರು ಹಾಡಿರುವ ಹಾಡುಗಳ ಒಟ್ಟು ಸಂಖ್ಯೆ 12,000ಕ್ಕೂ ಹೆಚ್ಚು ಎಂದು ಅಂದಾಜು.

1928: ಸಾಹಿತಿ ಟಿ. ಮಹಾಬಲೇಶ್ವರ ಭಟ್ಟ ಜನನ.

1664: ಡಚ್ಚರು ನ್ಯೂ ಆಮ್ ಸ್ಟರ್ ಡ್ಯಾಮನ್ನು ಬ್ರಿಟಿಷರಿಗೆ ಒಪ್ಪಿಸಿದರು. ಬ್ರಿಟಿಷರು ಅದಕ್ಕೆ ಯಾರ್ಕಿನ ಡ್ಯೂಕ್ ಭವಿಷ್ಯದ ದೊರೆ ಎರಡನೇ ಜೇಮ್ಸ್  ಗೌರವಾರ್ಥ `ನ್ಯೂಯಾರ್ಕ್' ಎಂದು ಹೆಸರಿಟ್ಟರು.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment