ಇಂದಿನ ಇತಿಹಾಸ History Today ಸೆಪ್ಟೆಂಬರ್ 12
2018: ನವದೆಹಲಿ: ೨೦೧೬ರ ಸೆಪ್ಟೆಂಬರ್ ತಿಂಗಳಲ್ಲಿ ಗಡಿ ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದ ಭಾರತೀಯ ಸೇನೆ ಈ ದಾಳಿಯನ್ನು ಯಶಸ್ವಿಗೊಳಿಸಲು ಚಿರತೆ ಮಲ, ಮೂತ್ರವನ್ನು
ಬಳಸಿಕೊಂಡಿತ್ತು. ನಿವೃತ್ತ ನೊಗ್ರೋಟಾ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಜೇಂದ್ರ ನಿಂಬೋರ್ಕರ್ ಅವರು ಪುಣೆಯಲ್ಲಿ ಬುಧವಾರ ಈ ವಿಚಾರವನ್ನು ಬಹಿರಂಗ ಪಡಿಸಿದರು. ‘ಗ್ರಾಮದಲ್ಲಿನ ನಾಯಿಗಳು ಸರ್ಜಿಕಲ್ ದಾಳಿ ಮಾರ್ಗದಲ್ಲಿ ಸಾಗುತ್ತಿದ್ದ ನಮ್ಮನ್ನು ಕಂಡು ಬೊಗಳುವ ಸಾಧ್ಯತೆಗಳಿದ್ದವು.
ಆದರೆ ನಾಯಿಗಳು ಚಿರತೆಗಳಿಗೆ ಹೆದರುತ್ತವೆ ಎಂಬುದು ನಮಗೆ ಗೊತ್ತಿತ್ತು. ಹೀಗಾಗಿ ನಾವು ನಮ್ಮ ಜೊತೆಗೆ ಚಿರತೆ ಮೂತ್ರವನ್ನು ಒಯ್ದಿದ್ದೆವು. ಅದು ಕೆಲಸ ಮಾಡಿತು. ನಾಯಿಗಳು ನಮ್ಮತ್ತ ಸುಳಿಯುವ ಧೈರ್ಯ ಮಾಡಲೇ ಇಲ್ಲ’ ಎಂದು ಲೆಫ್ಟಿನೆಂಟ್ ಜನರಲ್ ನಿಂಬೋರ್ಕರ್ ನುಡಿದರು. ಪುಣೆಯ ನಗರ ಮೂಲದ ಥೋರ್ಲೆ ಬಾಜಿರಾವ್ ಪೇಶ್ವೆ ಪ್ರತಿಷ್ಠಾನವು ಸಂಘಟಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಂಬೋರ್ಕರ್ ಅವರು ಮಾತನಾಡುತ್ತಿದ್ದರು.
೨೦೧೬ರ ಸೆಪ್ಟೆಂಬರಿನಲ್ಲಿ
ಭಾರತೀಯ ಸೇನೆಯು ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರದ ಒಳಕ್ಕೆ ೬ ಭಯೋತ್ಪಾದಕ ನೆಲೆಗಳನ್ನು ಧ್ವಂಸ ಗೊಳಿಸಿದ್ದಲ್ಲದೆ,
ಪಾಕ್ ಸೇನಾ ಸಮವಸ್ತ್ರದಲ್ಲಿದ ಕೆಲವು ಭಯೋತ್ಪಾದಕರೂ ಸೇರಿದಂತೆ ೪೫ ಮಂದಿ ಭಯೋತ್ಪಾದರಕರನ್ನು ಸದೆ ಬಡಿದಿತ್ತು. ಸೆಪ್ಟೆಂಬರ್ ೧೮ರಂದು ಉರಿಯಲ್ಲಿ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿದ್ದ ಪಾಕ್ ಉಗ್ರಗಾಮಿಗಳು ೧೯ ಮಂದಿ ಯೋಧರನ್ನು ಬಲಿತೆಗೆದುಕೊಂಡದ್ದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳಲು ಭಾರತೀಯ ಸೇನೆ ಈ ಕ್ರಮ ಕೈಗೊಂಡಿತ್ತು. ಪಾಕ್ ಉಗ್ರಗಾಮಿಗಳು ಉರಿಯಲ್ಲಿ ಭಾರತೀಯ ಯೋಧರ ಮೇಲೆ ಮಾರಕ ದಾಳಿ ನಡೆಸಿದ ಒಂದು ವಾರದ ಒಳಗಾಗಿ ’ಭಾರತವು ಈ ಕೃತ್ಯವನ್ನು ಕ್ಷಮಿಸುವುದಿಲ್ಲ ಅಥವಾ ಮರೆಯುವುದೂ ಇಲ್ಲ’ ಎಂದು
ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದರು. ಪ್ರಧಾನಿಯ ಈ ಮಾತು ಮಾಮೂಲಿ ಹೇಳಿಕೆಯಾಗಿರಲಿಲ್ಲ. ಈ ಘೋಷಣೆ ಮಾಡುವ ವೇಳೆಗಾಗಲೇ ಪ್ರಧಾನಿ ಗಡಿ ನಿಯಂತ್ರಣೆ ರೇಖೆಯಾಚೆಗಿನ ಪಾಕಿಸ್ತಾನಿ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲು ಒಪ್ಪಿಗೆ ನೀಡಿಯಾಗಿತ್ತು. ಪಾಕಿಸ್ತಾನವನ್ನು
ಶಿಕ್ಷಿಸಬೇಕೆಂಬ ಸಂದೇಶವನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಸೆಪ್ಟೆಂಬರ್ ೨೩ರಂದು ನೀಡಲಾಗಿತ್ತು. ಸೆಪ್ಟೆಂಬರ್ ೨೪ರಿಂದಲೇ ಕಾರ್ಯಾಚರಣೆಯ ತಯಾರಿ ಶುರುವಾಗಿತ್ತು. ಭದ್ರತಾ ಸಲಹೆಗಾರ ದೋವಲ್ ಅವರು ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ ಮುಖ್ಯಸ್ಥರ ಜೊತೆಗೆ ದಾಳಿಯ ಆಯ್ಕೆಗಳ ಬಗ್ಗೆ ಸಮಾಲೋಚಿಸಿದ ಬಳಿಕ ಸರ್ಜಿಕಲ್ ದಾಳಿಯ ಆಯ್ಕೆಯನ್ನು ಸೆಪ್ಟೆಂಬರ್ ೨೩ರ ವೇಳೆಗೆ ಅಂತಿಮಗೊಳಿಸಲಾಗಿತ್ತು.
2018: ಲಂಡನ್: ’ಗಡೀಪಾರು ಕೋರಿಕೆ’ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಹಾಜರಾಗಿ ಹೊರಬಂದ ಬಳಿಕ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರು ದೇಶ ಬಿಡುವ ಮುನ್ನ ತಾವು ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದುದಾಗಿ ಪ್ರತಿಪಾದಿಸಿದರು. ಅರುಣ್
ಜೇಟ್ಲಿ ಅವರು ಇದನ್ನು ನಿರಾಕರಿಸಿ ತತ್ ಕ್ಷಣವೇ ಹೇಳಿಕೆ ನೀಡಿದರು. ‘ಜಿನೇವಾದಲ್ಲಿ ನಿಗದಿಯಾಗಿದ್ದ ಸಭೆಯಲ್ಲಿ ಪಾಲ್ಗೊಳ್ಳಬೇಕಿದ್ದುದರಿಂದ ನಾನು ಭಾರತದಿಂದ ಹೊರಟಿದ್ದೆ. ಭಾರತ ಬಿಡುವ ಮುನ್ನ ನಾನು ವಿತ್ತ ಸಚಿವರನ್ನು ಭೇಟಿ ಮಾಡಿ ಇತ್ಯರ್ಥದ ಕೊಡುಗೆ (ಬ್ಯಾಂಕುಗಳ ಜೊತೆಗಿನ ವಿಷಯ)’ ಎಂದು ಮಲ್ಯ ಅವರು ಸಚಿವರ ಹೆಸರನ್ನು ಉಲ್ಲೇಖಿಸದೆಯೇ ಹೇಳಿದರು. ಮಲ್ಯ ಅವರ ಪ್ರತಿಪಾದನೆಗೆ ಜೇಟ್ಲಿ ಅವರು ತತ್ ಕ್ಷಣವೇ ಪ್ರತಿಕ್ರಿಯಿಸಿ, ’ಈ ಹೇಳಿಕೆ ತಪ್ಪು’ ಎಂದು
ಹೇಳಿದರು. ತಮ್ಮ ಫೇಸ್ ಬುಕ್ ಬ್ಲಾಗ್ ಪೋಸ್ಟಿನಲ್ಲಿ ಅವರು
’ಇತ್ಯರ್ಥದ ಕೊಡುಗೆಯೊಂದಿಗೆ ವಿಜಯ್ ಮಲ್ಯ ಅವರು ನನ್ನನ್ನು ಭೇಟಿ ಮಾಡಿರುವುದಾಗಿ ನೀಡಿರುವ ಹೇಳಿಕೆಯ ಬಗ್ಗೆ ನನ್ನ ಗಮನ ಸೆಳೆಯಲಾಗಿದೆ. ಈ ಹೇಳಿಕೆ ವಾಸ್ತವಿಕವಾಗಿ ತಪ್ಪು, ಏಕೆಂದರೆ ಅದು ಸತ್ಯವನ್ನು ಪ್ರತಿಫಲಿಸಿಲ್ಲ’ ಎಂದು ಜೇಟ್ಲಿ ಬರೆದರು. ’೨೦೧೪ರಿಂದ ನಾನು ಅವರಿಗೆ ನನ್ನನ್ನು ಭೇಟಿ ಮಾಡಲು ಯಾವುದೇ ಅಪಾಯಿಂಟ್ ಮೆಂಟ್ ಕೊಟ್ಟಿಲ್ಲ. ಆದ್ದರಿಂದ ಅವರನ್ನು ಭೇಟಿ ಮಾಡುವ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಏನಿದ್ದರೂ, ಅವರು ರಾಜ್ಯಸಭೆಯ ಸದಸ್ಯರಾಗಿದ್ದುದರಿಂದ , ಯಾವಾಗಲಾದರೂ ಅವರು ಸದನಕ್ಕೆ ಹಾಜರಾಗುತ್ತಿದ್ದರು.
ಒಂದು ಸಂದರ್ಭದಲ್ಲಿ ಸದನದಿಂದ ನಾನು ಕೊಠಡಿಯತ್ತ ಹೋಗುತ್ತಿದ್ದಾಗ ಇಂತಹ ಅವಕಾಶವನ್ನು ಅವರು ದುರುಪಯೋಗಿಸಿಕೊಂಡರು’ ಎಂದು ಜೇಟ್ಲಿ ಬ್ಲಾಗ್ ಪೋಸ್ಟಿನಲ್ಲಿ ತಿಳಿಸಿದರು. ‘ನಾನು ಕೊಠಡಿಯತ್ತ ನಡೆದುಕೊಂಡು ಹೋಗುತ್ತಿದ್ದಾಗ ನನ್ನತ್ತ ಧಾವಿಸಿ ಬಂದ ಅವರು ’ನಾನು ಇತ್ಯರ್ಥದ ಕೊಡುಗೆ ಕೊಡುತ್ತಿದ್ದೇನೆ’ ಎಂಬ ಒಂದು ವಾಕ್ಯವನ್ನು ಉಸುರಿದರು. ಅವರ ಹಿಂದಿನ ’ಬೊಗಳೆ ಕೊಡುಗೆ’ಗಳ ಬಗ್ಗೆ ಪೂರ್ಣ ಅರಿವಿದ್ದ ನಾನು ಹೆಚ್ಚಿನ ಸಂಭಾಷಣೆಗೆ ಅವಕಾಶ ಕೊಡದೆ ’ನನ್ನ ಬಳಿ ಮಾತನಾಡುವುದರಲ್ಲಿ
ಅಥವಿಲ್ಲ. ಕೊಡುಗೆಗಳನ್ನು ನೀವು ಬ್ಯಾಂಕುಗಳಿಗೆ ನೀಡಬೇಕು ಎಂದು ನಾನು ಹೇಳಿದ್ದೆ’ ಎಂದು
ಜೇಟ್ಲಿ ಬ್ಲಾಗ್ ಪೋಸ್ಟಿನಲ್ಲಿ ವಿವರಿಸಿದರು. ವಿಜಯ್
ಮಲ್ಯ ಪ್ರತಿಪಾದನೆಯ ಬೆನ್ನಲ್ಲೇ ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜಿವಾಲ ಅವರು ಟ್ವೀಟ್ ಮೂಲಕ ಬಿಜೆಪಿ ಮೇಲೆ ದಾಳಿ ನಡೆಸಿದರು. ’ತಮ್ಮ ಸುಲಲಿತ ಪರಾರಿಗೆ ಮುನ್ನ ಹಣಕಾಸು ತಪ್ಪು ನಿರ್ವಹಣಾ ಬ್ಲಾಗ್ ಸಚಿವ ಶ್ರೀ ಜೇಟ್ಲಿ ಅವರ ಜೊತೆ ಸಮಾಲೋಚನಾ ಸಭೆಗಳನ್ನು ನಡೆಸಿರುವ ಬಗ್ಗೆ ಮಲ್ಯ ಬಹಿರಂಗ ಪಡಿಸಿದ ಬಳಿಕ ’ಲೂಟಿ ಮಾಡಿ ಓಡುವ ಮತ್ತು ವಿದೇಶದಲ್ಲಿ ನೆಲೆಸುವ ಬ್ರಿಗೇಡಿಗೆ ನೆರವಾಗುವ ಪ್ರವಾಸೀ ಮತ್ತು ವಲಸೆ ಏಜೆನ್ಸಿಯನ್ನು ಬಿಜೆಪಿಯು ನಡೆಸುತ್ತಿದೆ ಎಂಬ ಒಂದು ವಿಷಯ ಸ್ಪಷ್ಟವಾಗಿದೆ’ ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೆವಲ ಟ್ವೀಟ್ ಮಾಡಿದರು. ‘ವಿತ್ತ ಸಚಿವರು ಇಲ್ಲಿಯವರೆಗೆ ಈ ವಿಷಯವನ್ನು ಬಚ್ಚಿಟ್ಟದ್ದು ಏಕೆ?’ ಎಂದು ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಟ್ವಿಟ್ಟರಿನಲ್ಲಿ ಪ್ರಶ್ನಿಸಿದರು. ೨೦೧೬ರಲ್ಲಿ ಮಲ್ಯ ಅವರು ಭಾರತ ತ್ಯಜಿಸುವಾಗ ಅರುಣ್ ಜೇಟ್ಲಿ ವಿತ್ತ ಸಚಿವರಾಗಿದ್ದರು. ಗಡೀಪಾರು ಪ್ರಕರಣ: ಗಡೀಪಾರು ಕೋರಿಕೆ ಪ್ರಕರಣದಲ್ಲಿ ನ್ಯಾಯಾಧೀಶರು ’ಮಲ್ಯ ಅವರನ್ನು ಮುಂಬೈಯ ಆರ್ಥರ್ ಜೈಲಿನಲ್ಲಿ ಇರಿಸಲಾಗುವ ಕೊಠಡಿಯ ಸ್ಥಿತಿಗತಿಯನ್ನು ತೋರಿಸುವ ವಿಡಿಯೋವನ್ನು ಪರಿಶೀಲಿಸಬಯಸುವುದಾಗಿ’ ಹೇಳಿದ್ದರು. ನ್ಯಾಯಾಲಯದ ಒಳಕ್ಕೆ ಬರುವ ಮುನ್ನವೇ ಮಲ್ಯ ಅವರು ವರದಿಗಾರರ ಜೊತೆ ಮಾತನಾಡುತ್ತಾ ತಾವು ಸಮಗ್ರ ಇತ್ಯರ್ಥದ ಕೊಡುಗೆ ಮುಂದಿಟ್ಟಿದ್ದುದಾಗಿ
ಹೇಳಿದರು. ’ನಾನು ಭಾರತದಲ್ಲಿನ ಕರ್ನಾಟಕ ಹೈಕೋರ್ಟಿನಲ್ಲಿ ಸಮಗ್ರ ಇತ್ಯರ್ಥದ ಕೊಡುಗೆ ಮುಂದಿಟ್ಟಿದ್ದೇನೆ. ಗೌರವಾನ್ವಿತ ನ್ಯಾಯಮೂರ್ತಿಗಳು ಅದನ್ನು ಪರಿಗಣಿಸುವರು ಎಂದು ಹಾರೈಸಿದ್ದೇನೆ. ಎಲ್ಲರಿಗೂ ಹಣ ಸಂದಾಯವಾಗುತ್ತದೆ.
ಅದೇ ಪ್ರಾಥಮಿಕ ಉದ್ದೇಶ ಎಂಬುದು ನನ್ನ ಭಾವನೆ’ ಎಂದು
ಅವರು ನುಡಿದರು. ೬೨ರ ಹರೆಯದ ಕಿಂಗ್ ಫಿಶರ್ ಏರ್ ಲೈನ್ಸಿನ ಮಾಜಿ ಮುಖ್ಯಸ್ಥ ಕಳೆದ ವರ್ಷ ಏಪ್ರಿಲ್ ನಲ್ಲಿ ಬಂಧನ ವಾರಂಟ್ ಜಾರಿಯ ಬಳಿಕ ಗಡೀಪಾರು ಕೋರಿಕೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಸುಮಾರು ೯೦೦೦ ಕೋಟಿ ರೂಪಾಯಿ ಹಣ ವರ್ಗಾವಣೆ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಗಡೀಪಾರು ಕೋರಿಕೆ ಅರ್ಜಿ ವಿರುದ್ಧ ಮಲ್ಯ ಹೋರಾಡುತ್ತಿದ್ದಾರೆ.
ಮುಂಬೈಯ ಆರ್ಥರ್ ರಸ್ತೆಯ ಜೈಲಿನ ೧೨ನೇ ಬ್ಯಾರಕ್ಕಿಲ್ಲಿ ಸಾಕಷ್ಟು ಗಾಳಿ ಬೆಳಕು ಇದೆಯೇ ಎಂಬುದನ್ನು ಪರಿಶೀಲಿಸಲು ಸಮಗ್ರ ವಿಡಿಯೋ ವೀಕ್ಷಿಸಲು ತಾವು ಬಯಸುವುದಾಗಿ ನ್ಯಾಯಾಧೀಶರಾದ ಎಮ್ಮಾ ಅರ್ಬುತ್ನಾಟ್ ಅವರು ಭಾರತೀಯ ಅಧಿಕಾರಿಗಳಿಗೆ ಪ್ರಕರಣದ ಹಿಂದಿನ ವಿಚಾರಣೆ ಕಾಲದಲ್ಲಿ ಹೇಳಿದ್ದರು. ಭಾರತ ಸರ್ಕಾರದ ಪರ ವಾದಿಸುತ್ತಿರುವ ಕ್ರೌನ್ ಪ್ರಾಸೆಕ್ಯೂಷನ್ ಸರ್ವೀಸ್ (ಸಿಪಿಎಸ್) ಅದಕ್ಕೆ ಒಪ್ಪಿದ್ದು, ವಿಡಿಯೋವನ್ನು ನ್ಯಾಯಾಲಯಕ್ಕೆ ಒಪ್ಪಿಸಿದೆ. ಮಲ್ಯ ವಕೀಲರು ಸೆರೆಮನೆಯ ಪ್ರತ್ಯಕ್ಷ ತಪಾಸಣೆ ನಡೆಸಬೇಕು ಎಂದು ವಾದಿಸಿದರು.
2018: ಅಹ್ಮದಾಬಾದ್ (ಗುಜರಾತ್): ಪಾಟೀದಾರ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಮತ್ತು ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಆರಂಭಿಸಿದ್ದ ತಮ್ಮ ಅನಿರ್ದಿಷ್ಟ ನಿರಶನವನ್ನು ಚಳವಳಿ ಮುಖಂಡ ಹಾರ್ದಿಕ್ ಪಟೇಲ್ ಅವರು ನಿರಶನದ ೧೯ನೇ ದಿನವಾದ ಕೊನೆಗೊಳಿಸಿದರು. ಚಳವಳಿ ನಿರತ ನಾಯಕ ಮತ್ತು ಗುಜರಾತ್ ಸರ್ಕಾರದ ಮಧ್ಯೆ ಪಾಟೀದಾರರಿಗೆ ಮೀಸಲಾತಿ ನೀಡುವ ಹಾಗೂ ರೈತರ ಸಾಲಮನ್ನಾ ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ಮಾತುಕತೆ ನಡೆಯದಿದ್ದರೂ, ಪಾಟೀದಾರ ಸಮುದಾಯದ ನಾಯಕರಾದ ನರೇಶ್ ಪಟೇಲ್ ಮತ್ತು ಸಿಕೆ ಪಟೇಲ್ ಅವರು ನೀಡಿದ ನಿಂಬೆ ಪಾನಕವನ್ನು ಸ್ವೀಕರಿಸುವ ಮೂಲಕ ಹಾರ್ದಿಕ್ ಪಟೇಲ್ ಅವರು ತಮ್ಮ ನಿರಶನವನ್ನು ಮುಕ್ತಾಯಗೊಳಿಸಿದರು. ನಿರಶನ ಮುಕ್ತಾಯಗೊಳಿಸಿದ ಬಳಿಕ ಮೀಸಲು ಚಳವಳಿ ನಾಯಕ ’ಸಮುದಾಯದ ಮೀಸಲು ಬೇಡಿಕೆ ಮತ್ತು ರೈತ ಸಾಲಮನ್ನಾ ಬೇಡಿಕೆ ಸಲುವಾಗಿ ಹೋರಾಟ ಮುಂದುವರೆಯುವುದು’ ಎಂದು ಹೇಳಿದರು. ಹಾರ್ದಿಕ್ ಪಟೇಲ್ ಅವರು ಆಗಸ್ಟ್ ೨೫ರಂದು ತಮ್ಮ ನಿವಾಸದಲ್ಲೇ ಅನಿರ್ದಿಷ್ಟ ನಿರಶನ ಆರಂಭಿಸಿದ್ದರು. ಪಾಟೀದಾರರಿಗೆ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವರ್ಗದ ಅಡಿಯಲ್ಲಿ ಮೀಸಲಾತಿ ಒದಗಿಸಬೇಕು ಮತ್ತು ಗುಜರಾತ್ ರೈತರ ಸಾಲಮನ್ನಾ ಮಾಡಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದರು. ಬಳಿಕ ರಾಷ್ಟ್ರದ್ರೋಹದ ಆಪಾದನೆಯಲ್ಲಿ ಬಂಧಿಸಲ್ಪಟ್ಟ ತಮ್ಮ ನಿಕಟವರ್ತಿ ಅಲ್ಪೇಶ್ ಖಥೇರಿಯಾ ಬಿಡುಗಡೆ ಬೇಡಿಕೆಯನ್ನೂ ಅವರು ತಮ್ಮ ಬೇಡಿಕೆಗಳ ಪಟ್ಟಿಗೆ ಸೇರಿಸಿದ್ದರು. ಆಮರಣ
ನಿರಶನದ ೧೪ನೇ ದಿನ ದೇಹಾರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ೨೫ರ ಹರೆಯದ ಮೀಸಲು ಚಳವಳಿ ನಾಯಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡು ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದ ಬಳಿಕ ತಮ್ಮ ನಿವಾಸಕ್ಕೆ ವಾಪಸಾದ ಹಾರ್ದಿಕ್ ಪಟೇಲ್ ಮತ್ತೆ ಮನೆಯಲ್ಲೇ ನಿರಶನ ಮುಂದುವರೆಸಿದ್ದರು.
ಆಸ್ಪತ್ರೆಯಲ್ಲಿ ದ್ರವಾಹಾರವನ್ನು ತೆಗೆದುಕೊಳ್ಳುವಾಗ ಅವರಿಗೆ ಗ್ಲುಕೋಸನ್ನೂ ನೀಡಲಾಗಿತ್ತು. ಆದರೆ ನಿರಶನದ ಅವಧಿಯಲ್ಲಿ ತಾವು ಯಾವುದೇ ಘನ ಆಹಾರ ತೆಗೆದುಕೊಂಡಿಲ್ಲ
ಎಂದು ಪಾಟೀದಾರ ನಾಯಕ ಪ್ರತಿಪಾದಿಸಿದರು. ಸೆಪ್ಟೆಂಬರ್ ೪ರಂದು ನಿರಶನದ ಬಗ್ಗೆ ಪ್ರತಿಕ್ರಿಯಿಸಿದ
ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಗುಜರಾತ್ ಸರ್ಕಾರವು ’ಪಟೇಲ್ ಅವರ ಮೀಸಲು ಚಳವಳಿ ರಾಜಕೀಯ ಪ್ರೇರಿತ ಚಳವಳಿಯಾಗಿದ್ದು,
ಕಾಂಗ್ರೆಸ್ ಅದನ್ನು ಬೆಂಬಲಿಸುತ್ತಿದೆ’ ಎಂದು ಹೇಳಿತ್ತು. ರಾಜ್ಯದ ಇಂಧನ ಸಚಿವ ಸೌರಭ್ ಪಟೇಲ್ ಅವರು ’ಸರ್ಕಾರದ ಬಾಗಿಲುಗಳು ಮಾತುಕತೆಗಳಿಗೆ ಸದಾ ತೆರೆದಿವೆ’ ಎಂದು ಹೇಳಿದ್ದರು. ಆದರೆ ಯಾವುದೇ ಸಂಧಾನವೂ ನಡೆಯಲಿಲ್ಲ.
2018: ತಿರುವನಂತಪುರಂ: ಕ್ರೈಸ್ತ ಸನ್ಯಾಸಿನಿ ಮಾಡಿದ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಜಲಂಧರದ ಬಿಷ್ ಫ್ರಾಂಕೋ ಮುಲಕ್ಕಲ್ ಅವರಿಗೆ ಸೆಪ್ಟೆಂಬರ್ ೧೯ರಂದು ತನ್ನ ಮುಂದೆ ತನಿಖೆಗೆ ಹಾಜರಾಗುವಂತೆ ಕೇರಳ ಪೊಲೀಸರು ನೋಟಿಸ್ ಜಾರಿ ಮಾಡಿದರು. ಎರ್ನಾಕುಲಂ ವಲಯದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ವಿಜಯ್ ಸಖ್ರೆ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಜಲಂಧರದ ಬಿಷಪ್ ಜೇಮ್ಸ್ ಫ್ರಾಂಕೋ ಮುಲಕ್ಕಲ್ ಅವರಿಗೆ ತನಿಖೆಗಾಗಿ ಹಾಜರಾಗುವಂತೆ ಸಮನ್ಸ್ ನೀಡಲು ನಿರ್ಧರಿಸಲಾಯಿತು.
ಕೊಟ್ಟಾಯಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಶಂಕರ್ ಮತ್ತು ವೈಕೋಮ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಕೆ ಸುಭಾಶ್ ಅವರೂ ಪಾಲ್ಗೊಂಡಿದ್ದ ಸಭೆಯು ಮುಲಕ್ಕಲ್ ವಿರುದ್ಧ ಕ್ರಮಕ್ಕೆ ಒತ್ತಡ ಹೆಚ್ಚಿದ್ದನ್ನು ಅನುಸರಿಸಿ ಸಮನ್ಸ್ ಕಳುಹಿಸಲು ನಿರ್ಧರಿಸಿತು. ೨೦೧೪ರಿಂದ ೨೦೧೬ರ ನಡುವಣ ಅವಧಿಯಲ್ಲಿ ಕ್ರೈಸ್ತ ಸನ್ಯಾಸಿನಿಯ ಮೇಲೆ ಹಲವಾರು ಬಾರಿ ಅತ್ಯಾಚಾರ ನಡೆಸಿದ ಆರೋಪ ಮುಲಕ್ಕಲ್ ಅವರ ಮೇಲಿದೆ. ಆದರೆ ಮುಲಕ್ಕಲ್ ಅವರು ಆಪಾದನೆಯನ್ನು ’ಬುಡರಹಿತ ಮತ್ತು ಕಪೋಲ ಕಲ್ಪಿತ ಸೃಷ್ಟಿ’ ಎಂಬುದಾಗಿ ತಳ್ಳಿ ಹಾಕಿದ್ದಾರೆ. ’ಮಾಡದ ತಪ್ಪಿಗಾಗಿ ನಾನು ತಪ್ಪಿತಸ್ಥ ಎಂಬುದಾಗಿ ತೀರ್ಮಾನವಾದರೆ ನನಗೆ ಶಿಕ್ಷೆಯಾಗುವ ಸಾಧ್ಯತೆ ಇದೆ. ಪೊಲೀಸರಿಂದ ಸಮನ್ಸ್ ಬಂದರೆ ನಾನು ಅವರ ಎದುರು ಹಾಜರಾಗುವೆ. ನಾನು ಕಾನೂನು ಪಾಲಿಸುವ ನಾಗರಿಕ’ ಎಂದು
ಅವರು ಕ್ರೈಸ್ತ ಸನ್ಯಾಸಿನಿ ವ್ಯಾಟಿಕನ್ ಗೆ ಪತ್ರ ಬರೆದ ಸುದ್ದಿ ಬಂದ ಬಳಿಕ ಹೇಳಿದ್ದರು. ಕಾನೂನು ಕ್ರಮ ಕೈಗೊಳ್ಳುವ ಹಕ್ಕು ತನಗಿದೆ ಎಂದೂ ಅವರು ಪ್ರತಿಪಾದಿಸಿದ್ದರು.
ತಮ್ಮ ವಿರುದ್ಧದ ಆಪಾದನೆಗಳನ್ನು ಗಂಭೀರ ಎಂಬುದಾಗಿ ಬಣ್ಣಿಸಿದ ಬಿಷಪ್, ’ಮೂವರಿಗೆ ಮಾತ್ರ ಸತ್ಯ ಗೊತ್ತಿದೆ. ದೂರು ನೀಡಿರುವ ಸಿಸ್ಟರ್, ನನಗೆ ಮತ್ತು ದೇವರಿಗೆ’ ಎಂದು ಹೇಳಿದ್ದರು. ಕ್ರೈಸ್ತ ಸನ್ಯಾಸಿನಿ ತಮ್ಮನ್ನು ಬ್ಲಾಕ್ ಮೇಲ್ ಮಾಡುತ್ತಿರುವುದಾಗಿಯೂ ಆಪಾದಿಸಿದ್ದ ಬಿಷಪ್ ’ಮೊದಲಿಗೆ ಆಕೆ ಮದರ್ ಸುಪೀರಿಯರ್ ಗೆ ಪತ್ರ ಬರೆದು ಕೆಲವು ಬೇಡಿಕೆಗಳನ್ನು ಮುಂದಿಟ್ಟರು. ಬಿಹಾರ ಚರ್ಚ್ನ್ನು ಪ್ರತ್ಯೇಕ ಪ್ರದೇಶವಾಗಿ ಪರಿಗಣಿಸಬೇಕು ಮತ್ತು ತನ್ನನ್ನು ಸುಪೀರಿಯರ್ ಆಫ್ ದಿ ಹೌಸ್ ಆಗಿ ನೇಮಿಸಬೇಕು ಎಂಬುದಾಗಿ ಆಕೆ ಕೋರಿದ್ದರು. ಇದು ಸ್ಪಷ್ಟವಾದ ಬ್ಲಾಕ್ ಮೇಲ್ ಪ್ರಕರಣ’ ಎಂದು ಅವರು ವಾದಿಸಿದ್ದರು.
ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ
ಮೇಲೆ ದಾಳಿ ನಡೆಸಿದ ಬಿಷಪ್, ’ನನ್ನ ವಿರುದ್ಧ ಹಲವಾರು ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗುತ್ತಿದೆ.
ಯಾರಾದರೂ ಚಿಂತಿಸಿದ್ದಾರೆಯೇ?
ನಾನು ಒಬ್ಬ ವ್ಯಕ್ತಿ ಮತ್ತು ನಾಗರಿಕ ಕೂಡಾ. ನಾನು ಆರೋಪಿಯಾಗಿದ್ದರೂ,
ನನ್ನ ಚಾರಿತ್ರ್ಯ ಹನನಕ್ಕೆ ಯಾರಿಗೂ ಲೈಸೆನ್ಸ್ ಕೊಟ್ಟಿಲ್ಲ’ ಎಂದು
ಹೇಳಿದ್ದರು. ವ್ಯಾಟಿಕನ್ ನ ಭಾರತದ ಪ್ರತಿನಿಧಿಯಾಗಿರುವ ಗಿಯಾಂಬಟ್ಟೀಸಾ ಡಿಕ್ವಾಟ್ರೋ ಅವರಿಗೆ ಪತ್ರ ಬರೆದ ಸನ್ಯಾಸಿನಿ, ಬಿಷಪ್ ಅವರು ರಾಜಕೀಯ ಮತ್ತು ಹಣ ಬಲವನ್ನು ಬಳಸಿಕೊಂಡು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆಪಾದಿಸಿ, ಅವರನ್ನು ಹುದ್ದೆಯಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದ್ದರು. ಈ ಮಧ್ಯೆ ಕಾಂಗ್ರೆಸ್ ನಾಯಕ ವಿಎಂ ಸುಧೀರನ್ ಅವರು ಹುದ್ದೆಯಿಂದ ಕೆಳಗಿಳಿದು ಕಾನೂನು ಕ್ರಮ ಎದುರಿಸುವಂತೆ ಮುಲಕ್ಕಲ್ ಅವರನ್ನು ಆಗ್ರಹಿಸಿದರು. ಬಿಷಪ್ ಬಂಧನಕ್ಕೆ ಒತ್ತಾಯಿಸಿ ಕೋಚಿಯಲ್ಲಿ ಧರಣಿ ನಡೆಸುತ್ತಿರುವ ಕೆಲವು ಕ್ರೈಸ್ತ ಸನ್ಯಾಸಿನಿಯರಿಗೆ
ಬೆಂಬಲ ವ್ಯಕ್ತ ಪಡಿಸಲು ತಿರುವನಂತಪುರಂನಲ್ಲಿ ನಡೆದ
ಜನತಾ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಅಧ್ಯಕ್ಷ ಸುಧೀರನ್ ಅವರು ’ಯಾರೂ ಕಾನೂನಿಗಿಂತ ಮೇಲಲ್ಲ. ಸತ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ’ ಎಂದು
ಹೇಳಿ ಈ ಪ್ರತಿಭಟನೆ ಚರ್ಚ್ ವಿರುದ್ಧ ಅಲ್ಲ ಎಂದೂ ಸ್ಪಷ್ಟ ಪಡಿಸಿದರು.
2018: ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರದ ಹಿನ್ನೆಲೆಯಲ್ಲಿ ಪುಣೆ ಪೊಲೀಸರು ಬಂಧಿಸಿದ ಐವರು ಪ್ರಮುಖ ಹಕ್ಕು ಕಾರ್ಯಕರ್ತರ ಗೃಹ ಬಂಧನವನ್ನು ಸುಪ್ರೀಂಕೋರ್ಟ್ ಸೆಪ್ಟೆಂಬರ್ ೧೭ರವರೆಗೆ ವಿಸ್ತರಿಸಿತು. ಆಗಸ್ಟ್ ೨೮ರಂದು ಐದು ನಗರಗಳಲ್ಲಿ ನಡೆಸಲಾದ ದಾಳಿ ಕಾರ್ಯಾಚರಣೆಯಲ್ಲಿ
ಈ ಐವರು ಹಕ್ಕು ಕಾರ್ಯಕರ್ತರನ್ನು
ಬಂಧಿಸಲಾಗಿತ್ತು. ಎಡಪಂಥೀಯ ಬಂಡುಕೋರರಾದ ನಕ್ಸಲೀಯರು ಅಥವಾ ಮಾವೋವಾದಿ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಆಪಾದನೆಯಲ್ಲಿ ವಕೀಲರೂ ಕಾರ್ಮಿಕ ಸಂಘಟನಾ ಕಾರ್ಯಕರ್ತೆಯೂ ಆದ ಸುಧಾ ಭಾರದ್ವಾಜ್, ತೆಲುಗು ಕವಿ ಪಿ. ವರವರ ರಾವ್, ಕಾರ್ಯಕರ್ತ ಗೌತಮ್ ನವಲಖ ಮತ್ತು ವಕೀಲರಾದ ಅರುಣ್ ಫೆರೇರಿಯಾ ಮತ್ತು ವೆರ್ನೋನ್ ಗೋನ್ಸಾಲ್ವೆಸ್ ಅವರನ್ನು ಬಂಧಿಸಲಾಗಿತ್ತು.
ಪುಣೆಯಲ್ಲಿ ೨೦೧೭ರ ಡಿಸೆಂಬರ್ ೩೧ರಂದು ನಡೆದ ಎಲ್ಗಾರ್ ಪರಿಷದ್ ಕುರಿತು ನಡೆಸಿದ ತನಿಖೆಯ ಅಂಗವಾಗಿ ತಾವು ಈ ಬಂಧನಗಳನ್ನು ನಡೆಸಿರುವುದಾಗಿ ಪೊಲೀಸರು ತಿಳಿಸಿದರು. ಎಲ್ಗಾರ್ ಪರಿಷದ್ ಸಮಾವೇಶದಲ್ಲಿ ಕಾರ್ಯಕರ್ತರು ಮತ್ತು ದಲಿತ ಸಂಘಟನೆಗಳು ಪಾಲ್ಗೊಂಡಿದ್ದರು.
ಮರುದಿನ ಪುಣೆಯಿಂದ ೪೦ ಕಿಮೀ ದೂರದ ಭೀಮಾ ಕೋರೆಗಾಂವ್ ನಲ್ಲಿ, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದ ಬ್ರಿಟಿಷ್ ಸೇನೆ ಮತ್ತು ರಾಜ್ಯದ ಪೇಶ್ವಾ ಆಡಳಿತಗಾರರ ಸೇನೆಗಳ ನಡುವೆ ನಡೆದಿದ್ದ ೧೮೧೮ರ ಸಮರದ ೨೦೦ನೇ ವರ್ಷದ ಅಚರಣೆ ನಡೆಸಲು ಸಹಸ್ರಾರು ಸಂಖ್ಯೆಯಲ್ಲಿ ದಲಿತರು ಸಮಾವೇಶಗೊಂಡಿದ್ದಾಗ
ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರವನ್ನು ನಿಗ್ರಹಿಸಿದ ಪೊಲೀಸ್ ಕಾರ್ಯಾಚರಣೆಯನ್ನು ವಿರೋಧಿ ನಾಯಕರು ಮತ್ತು ಇತರ ಗಣ್ಯರು ನಾಗರಿಕ ಹಕ್ಕುಗಳ ಮೇಲಿನ ದಾಳಿ ಎಂಬುದಾಗಿ ಖಂಡಿಸಿದ್ದರು.
’ಭಿನ್ನಮತವು ಪ್ರಜಾಪ್ರಭುತ್ವದ ಸುರಕ್ಷತಾ ಕವಾಟ. ಸುರಕ್ಷತಾ ಕವಾಟಕ್ಕೆ ಅವಕಾಶ ನೀಡದೇ ಇದ್ದಲ್ಲಿ ಪ್ರೆಷರ್ ಕುಕರ್ ಸ್ಫೋಟಗೊಳ್ಳುತ್ತದೆ’ ಎಂದು ಸುಪ್ರೀಂಕೋರ್ಟ್ ಹಿಂಸಾಚಾರದ ಸುಮಾರು ೯ ತಿಂಗಳ ಬಳಿಕ ಹಕ್ಕು ಕಾರ್ಯಕರ್ತರ ಬಂಧನ ಪ್ರಕರಣದ ವಿಚಾರಣೆ ಕಾಲದಲ್ಲಿ ಆಗಸ್ಟ್ ೨೯ರಂದು ಹೇಳಿತ್ತು. ಬಂಧಿತ ಹಕ್ಕು ಕಾರ್ಯಕರ್ತರವನ್ನು ಗೃಹ ಬಂಧನದಲ್ಲಿ ಇಡುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಸೆಪ್ಟೆಂಬರ್ ೬ರಂದು ಬಂಧಿತರ ಗೃಹ ಬಂಧನವನ್ನು ಸುಪ್ರೀಂಕೋರ್ಟ್ ವಿಸ್ತರಿಸಿದ ಸುಪ್ರೀಂಕೋರ್ಟ್,
ಕಾರ್ಯಕರ್ತರ ವಿರುದ್ಧದ ತಮ್ಮ ತನಿಖೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಕ್ಕಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು.
ಬಂಧಿತರಿಗೆ ನಿಷೇಧಿತ ಸಿಪಿಐ (ಮಾವೋವಾದಿ) ಗುಂಪಿನ ಸಂಪರ್ಕವಿರುವುದು
ಸಾಕ್ಷ್ಯಾಧಾರಗಳಿಂದ ಖಚಿತಪಟ್ಟ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಬಂದಿಸಲಾಗಿದೆ ಹೊರತು ಭಿನ್ನಮತದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿರುವುದಕ್ಕಾಗಿ ಅಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಮತ್ತು ಪೊಲೀಸರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಕಾರ್ಯಕರ್ತರನ್ನು ಗೃಹಬಂಧನದಲ್ಲಿ ಇರಿಸಿದರೆ ಅವರ ವಿರುದ್ಧ ಪೊಲೀಸರು ನಡೆಸುತ್ತಿರುವ ತನಿಖೆಗೆ ಧಕ್ಕೆಯಾಗುತ್ತದೆ ಎಂದು ರಾಜ್ಯದ ವಕೀಲರು ಪ್ರತಿಪಾದಿಸಿದ್ದರು.ಸುಪ್ರೀಂಕೋರ್ಟ್ ಆದೇಶದ ಪರಿಣಾಮವಾಗಿ ಭಾರದ್ವಾಜ್ ಅವರು ದೆಹಲಿಯಲ್ಲಿ, ವರ ವರ ರಾವ್ ಹೈದರಾಬಾದಿನಲ್ಲಿ, ನವಲಖಾ ಅವರು ದೆಹಲಿಯಲ್ಲಿ ಫೆರೇರಿಯಾ ಮತ್ತು ಗೋನ್ಸಾಲ್ವೆಸ್ ಅವರು ಮುಂಬಯಿಯಲ್ಲಿ ತಮ್ಮ ತಮ್ಮ ಮನೆಗಳಲ್ಲೇ ’ಗೃಹ ಬಂಧನ’ದಲ್ಲಿ ಇದ್ದರು.
2018: ಲಂಡನ್: ಬ್ಯಾಂಕ್ ಹಣ ವರ್ಗಾವಣೆ ಮತ್ತು ವಂಚನೆ ಆರೋಪ ಪ್ರಕರಣಗಳ ಹಿನ್ನೆಲೆಯಲ್ಲಿ ಉದ್ಯಮಿ ವಿಜಯ್ ಮಲ್ಯ ಅವರನ್ನು ಬ್ರಿಟನ್ನಿನಿಂದ ಭಾರತಕ್ಕೆ ಗಡೀಪಾರು ಮಾಡುವಂತೆ ಕೋರಿ ಭಾರತ ಸರ್ಕಾರವು ಸಲ್ಲಿಸಿರುವ ಅರ್ಜಿಯ ಬಗ್ಗೆ ಡಿಸೆಂಬರ್ ೧೦ರಂದು ತೀರ್ಪು ನೀಡುವುದಾಗಿ ಇಂಗ್ಲೆಂಡಿನ ಮುಖ್ಯ ಮ್ಯಾಜಿಸ್ಟ್ರೇಟ್ ಎಮ್ಮಾ ಅರ್ಬುತ್ನಾಟ್ ಅವರು ಪ್ರಕಟಿಸಿದರು.
2016: ರಿಯೊ ಡಿ ಜನೈರೊ: ಭಾರತದ ದೀಪಾ ಮಲಿಕ್ ಅವರು ಮಹಿಳೆಯರ ಶಾಟ್ಪುಟ್ನಲ್ಲಿ ಹರಿಯಾಣ ಕ್ರೀಡಾ ಯೋಜನೆಯಲ್ಲಿ ದೀಪಾ ಅವರಿಗೆ ₹ 4 ಕೋಟಿ ಪುರಸ್ಕಾರ ನೀಡಲಾಗುವುದು ಎಂದು ಹರಿಯಾಣ ಸರ್ಕರ ಪ್ರಕಟಿಸಿತು. ಪ್ಯಾರಾಲಿಂಪಿಕ್ಸ್ ಅಂಗಳದಲ್ಲಿ ಪುಟಿದೆದ್ದ ಅಮೆರಿಕ: 15 ವರ್ಷಗಳ ಹಿಂದಿನ ಕರಾಳ ಘಟನೆಯ ನೆನಪು ಮನಕಲಕಿದ ಸಂದರ್ಭದಲ್ಲಿ ರಿಯೊ ಪ್ಯಾರಾಲಿಂಪಿಕ್ಸ್ ಗ್ರಾಮದಲ್ಲಿ ಅಮೆರಿಕದ ರಾಷ್ಟ್ರಗೀತೆ ಮೊಳಗಿತು. ಸೆ.11ರ ರಾತ್ರಿ ಅಮೆರಿಕದ ಅಲೀಸಾ ಸೀಲಿ, ಹೀಲಿ ಡೆನಿಸವಿಜ್ ಮತ್ತು ಮೆಲಿಸಾ ಸ್ಟಾಕ್ವೆಲ್ ಅವರು ರಿಯೊ ಪ್ಯಾರಾಲಿಂಪಿಕ್ಸ್‌ನ ಟ್ರಯಥ್ಲಾನ್ ಸ್ಪರ್ಧೆಯ ಪಿಟಿ 2 ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳನ್ನು ಗೆದ್ದರು.
2016: ಬೆಂಗಳೂರು: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿಗೆ ಇನ್ನಷ್ಟು ನೀರು
ಹರಿಸುವಂತೆ
ಸುಪ್ರೀಂಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಪರಿಣಾಮ ಸುಮಾರು ನೂರಕ್ಕೂ ಹೆಚ್ಚು ಬಸ್ಸು ಲಾರಿಗಳು ಬೆಂಗಳೂರಿನ ಮೈಸೂರು ಹಾಗೂ ತುಮಕೂರು ರಸ್ತೆಗಳಲ್ಲಿ ಅಕ್ಷರಶಃ ಹೊತ್ತಿ ಉರಿದವು. ಹಿಂಸಾರೂಪದ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿ, ಲಘು ಲಾಠಿ ಪ್ರಹಾರವನ್ನೂ ನಡೆಸಿದರು. ವಾಹನಗಳಿಗೆ ಬೆಂಕಿ ಹಚ್ಚಿದ ಸುದ್ದಿ ತಿಳಿದು ಭೀತಿಗೊಂಡ ವ್ಯಾಪಾರಿಗಳು ಅಂಗಡಿಗಳ ಬಾಗಿಲು ಮುಚ್ಚಿದರು. ಮಾಲ್ಗಳು, ಚಿತ್ರಮಂದಿರಗಳು ಬಂದ್ ಆದವು. ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡಿತು. ಶಾಲೆಗಳು ಅರ್ಧದಲ್ಲೇ ರಜೆ ಘೋಷಿಸಿದರೆ, ಐ.ಟಿ ಕಂಪೆನಿಗಳು ಮಧ್ಯಾಹ್ನವೇ ಕೆಲಸ ನಿಲ್ಲಿಸಿದವು. ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಯಿತು. ಕಚೇರಿಗಳಲ್ಲಿದ್ದ ಜನ ಮನೆಯತ್ತ ಧಾವಿಸಿದರು. ಇದರಿಂದ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಯಿತು. ‘ತಮಿಳುನಾಡಿನ ರಾಮೇಶ್ವರದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಲಾಗಿದೆ’ ಎಂಬ ಸುದ್ದಿ ಬೆಳಿಗ್ಗೆ ಕಾಡ್ಗಿಚ್ಚಿನಂತೆ ಹರಡಿದ್ದರಿಂದ ಬೀದಿಗಿಳಿದ ಸಾವಿರಾರು ಜನ, ತಮಿಳುನಾಡು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಮಧ್ಯಾಹ್ನ ಸುಪ್ರೀಂ ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ವಾಹನಗಳಿಗೆ ಬೆಂಕಿ ಹಚ್ಚುವ ಮಟ್ಟಕ್ಕೆ ತಲುಪಿತು. ರಾತ್ರಿ
ಕೆಪಿಎನ್ ಟ್ರಾವಲ್ಸ್ ಬಸ್ ಡಿಪೋದಲ್ಲಿದ್ದ ಬಸ್ಸುಗಳಿಗೆ ಬೆಂಕಿ ಹಚ್ಚುವುದರೊಂದಿಗೆ ಪರಿಸ್ಥಿತಿ
ತೀವ್ರ ವಿಕೋಪಕ್ಕೆ ಹೋದಾಗ 16 ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಯಿತು.
2016: ನವದೆಹಲಿ (ಪಿಟಿಐ): ಹೊಸ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಲ್ಲಿ ತೆರಿಗೆ
ದರ ನಿರ್ಧರಿಸುವ ಜಿಎಸ್ಟಿ ಮಂಡಳಿ ರಚನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿತು. ಜಿಎಸ್‌ಟಿಯನ್ನು 2017ರ ಏಪ್ರಿಲ್ 1ರಿಂದ ಜಾರಿಗೆ ತರಲು ಕೇಂದ್ರ ಸರ್ಕಾರ ಯೋಜಿಸಿದೆ. ಜಿಎಸ್ಟಿ ಮಂಡಳಿಯಲ್ಲಿ ಕೇಂದ್ರ ಹಣಕಾಸು ಸಚಿವ, ಕಂದಾಯ ಇಲಾಖೆಯ ಹೊಣೆ ಇರುವ ರಾಜ್ಯ ಖಾತೆ ಸಚಿವ, ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರದ ವಕ್ತಾರರು ತಿಳಿಸಿದರು. ಇದೇ 22 ಮತ್ತು 23ರಂದು ಮಂಡಳಿಯ ಮೊದಲ ಸಭೆ ನಡೆಯಲಿದೆ. ಜಿಎಸ್ಟಿ ವ್ಯಾಪ್ತಿಗೆ ಬರುವ ಸರಕು ಮತ್ತು ಸೇವೆಗಳು, ತೆರಿಗೆ ದರ ನಿಗದಿ ಮತ್ತು ಇತರ ಪ್ರಮುಖ ವಿಚಾರಗಳ ಬಗ್ಗೆ ಮಂಡಳಿಯು ಶಿಫಾರಸುಗಳನ್ನು ಮಾಡಲಿದೆ. ಜಿಎಸ್ಟಿ ಕಾರ್ಯಾಲಯವೊಂದು ಸ್ಥಾಪನೆಯಾಗಲಿದ್ದು ಕೇಂದ್ರ ಸರ್ಕಾರ ಅದರ ವೆಚ್ಚವನ್ನು ಭರಿಸಲಿದೆ. ಕೇಂದ್ರ ಮತ್ತು ರಾಜ್ಯ ಸೇವೆಯಲ್ಲಿರುವ ಅಧಿಕಾರಿಗಳನ್ನು ನಿಯೋಜನೆ ಮೇಲೆ ಇಲ್ಲಿ ನೇಮಿಸಲಾಗುವುದು.2008: ಜನತಾಪರಿವಾರದ ಹಿರಿಯ ಕೊಂಡಿ, ಹೋರಾಟಗಾರ ಹಾಗೂ ಸರಳಜೀವಿ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ಪ್ರೊ. ಎ.ಲಕ್ಷ್ಮೀಸಾಗರ್ (77) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮೂಲತಃ ಕೋಲಾರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮದವರಾದ ಲಕ್ಷ್ಮಿಸಾಗರ್ 1983 ರಿಂದ 89ರವರೆಗೆ ಜನತಾರಂಗ, ಜನತಾಪಕ್ಷದ ಸರ್ಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ವಸತಿ ಮತ್ತು ನಗರಾಭಿವೃದ್ಧಿ, ರೇಷ್ಮೆ, ಕಂದಾಯ ಖಾತೆಗಳ ಸಚಿವರಾಗಿದ್ದರು. 1996 ರಿಂದ 2002ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು. ಅವಿವಾಹಿತರಾಗಿಯೇ ಉಳಿದಿದ್ದ ಅವರು ಗಾಂಧಿನಗರದ ಮುರುಘರಾಜೇಂದ್ರ ಮಠದ ಆವರಣದಲ್ಲಿರುವ ಪುಟ್ಟ ಮನೆಯಲ್ಲಿಯೇ ವಾಸಿಸುತ್ತಿದ್ದರು.
2008: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಪಹರೆ ವಾಹನಗಳ ಮೇಲಿನ ದಾಳಿಯಿಂದ ಅನೇಕ ಯೋಧರು ಜೀವ ಕಳೆದುಕೊಂಡ ಹಿನ್ನೆಲೆಯಲ್ಲಿ ಹೊಸ ಜೀವ ರಕ್ಷಕ ಸಾಧನವನ್ನು ಸಂಶೋಧಿಸಲಾಗಿದೆ ಎಂದು ಸೇನೆಯ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಉಧಮ್ ಪುರದಲ್ಲಿಬಹಿರಂಗಪಡಿಸಿದರು. ಭಯೋತ್ಪಾದಕರು ದೂರ ನಿಯಂತ್ರಣ ಸಾಧನಗಳ ಮೂಲಕ ನೆಲದಲ್ಲಿ ಹುದುಗಿಸಿದ ಬಾಂಬ್ ಸ್ಫೋಟಿಸಿ ಚಲಿಸುವ ವಾಹನಗಳನ್ನು ನಾಶ ಮಾಡುವುದನ್ನು ತಡೆಯಲು ತಯಾರಿಸಲಾಗಿರುವ ಸಾಧನಕ್ಕೆ `ಅಶಿ' ಎಂದು ಹಾಗೂ ವಾಹನದ ಮೇಲೆ ಸಿಡಿ ತಲೆಗಳನ್ನು ಬಳಸಿ ದಾಳಿ ಮಾಡಿದಾಗ ಅದನ್ನು ಪ್ರತಿರೋಧಿಸುವ ಯಂತ್ರಕ್ಕೆ 'ಇಂದರ್ ಪಿಳ್ಳೈ' ಎಂದು ಹೆಸರಿಡಲಾಗಿದೆ. ಸೇನೆಯ ಉತ್ತರ ವಿಭಾಗದ ಅಡ್ವಾನ್ಸ್ ಬೇಸ್ ವರ್ಕ್ ಶಾಫಿನಲ್ಲಿ ಈ ಸಾಧನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು.
2007: ಶ್ರೀರಾಮಚಂದ್ರ ಅಥವಾ ರಾಮಾಯಣದ ಇತರ ವ್ಯಕ್ತಿತ್ವಗಳ ಅಸ್ತಿತ್ವವನ್ನು ಸಾಬೀತುಪಡಿಸುವಂತಹ ಯಾವುದೇ ಚಾರಿತ್ರಿಕ ಸಾಕ್ಷ್ಯಾಧಾರಗಳೂ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು. ಸೇತು ಸಮುದ್ರಂ ಯೋಜನೆಯ ಮೇಲೆ ಭುಗಿಲೆದ್ದ ರಾಜಕೀಯ ವಿವಾದದ ಮಧ್ಯೆ ಸುಪ್ರೀಂಕೋರ್ಟಿಗೆ ಸೆಪ್ಟೆಂಬರ್ 11ರಂದು ಸಲ್ಲಿಸಲಾಗಿರುವ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ಇದನ್ನು ಹೇಳಿತು. ಸೇತು ಸಮುದ್ರಂ ಯೋಜನೆಯ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ `ರಾಮಸೇತು' ಅಸ್ತಿತ್ವದಲ್ಲಿದೆ ಎಂಬ ಪ್ರತಿಪಾದನೆಗಳನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಮಾಪತ್ರದಲ್ಲಿ ಭಾರತೀಯ ಪ್ರಾಕ್ತನ ಸಮೀಕ್ಷೆಯು (ಎಎಸ್ಐ) ನಿರಾಕರಿಸಿತು. ಬಹುಕೋಟಿ ರೂಪಾಯಿಗಳ ವೆಚ್ಚದ ಸೇತು ಸಮುದ್ರಂ ಯೋಜನೆಯು ರಾಮೇಶ್ವರ ಹಾಗೂ ಶ್ರೀಲಂಕಾ ಮಧ್ಯೆ ಸಮೀಪದ ಸಮುದ್ರ ಮಾರ್ಗ ರೂಪಿಸುವ ಉದ್ದೇಶವನ್ನು ಹೊಂದಿದೆ. ರಾಮಾಯಣದ ಬಗ್ಗೆ ಪ್ರಸ್ತಾಪಿಸಿದ ಪ್ರಮಾಣಪತ್ರವು `ಇದಕ್ಕೆ ಸಂಬಂಧಿಸಿದ ವ್ಯಕ್ತಿತ್ವಗಳ ಅಸ್ತಿತ್ವವನ್ನು ಅಥವಾ ಅಲ್ಲಿ ವರ್ಣಿಸಲಾಗಿರುವ ಘಟನೆಗಳು ಸಂಭವಿಸಿದ್ದನ್ನು ನಿಸ್ಸಂದಿಗ್ಧವಾಗಿ ಋಜುವಾತು ಪಡಿಸುವಂತಹ `ಚಾರಿತ್ರಿಕ ದಾಖಲೆ' ಇಲ್ಲ' ಎಂದು ಹೇಳಿತು. ಯುಪಿಎ ಸರ್ಕಾರದ ಈ ಹೇಳಿಕೆಯನ್ನು `ದೈವನಿಂದನೆ' ಎಂದು ಬಿಜೆಪಿ ಟೀಕಿಸಿತು. ಸೇತುಸಮುದ್ರಂ ಯೋಜನೆ ಮುಂದುವರಿಸುವ ಕೇಂದ್ರದ ನಿರ್ಧಾರವನ್ನ್ನು ಪ್ರತಿಭಟಿಸಿ ವಿಶ್ವಹಿಂದೂ ಪರಿಷತ್ ದೇಶವ್ಯಾಪಿ ಪ್ರತಿಭಟನೆ ಸಂಘಟಿಸಿತು.
2007: ಕೋಮು ಸೌಹಾರ್ದವನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯುವ ಪ್ರಯತ್ನವಾಗಿ ಹಳೆದೆಹಲಿಯ ಓಕ್ಲಾದಲ್ಲಿರುವ ಮದ್ರಸಾವು ಮೂರು ತಿಂಗಳ ಸಂಸ್ಕೃತ ಕೋರ್ಸ್ ಆರಂಭಿಸಿದ್ದು, 18 ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆದರು.
2007: ರಾಣಿ ಚೆನ್ನಮ್ಮನ ನಾಯಕತ್ವದಲ್ಲಿ 1824ರಲ್ಲಿ ನಡೆದ `ಕಿತ್ತೂರು ಸಂಗ್ರಾಮ ದೇಶದ ಪ್ರಥಮ ಸ್ವಾತಂತ್ರ್ಯಹೋರಾಟ ಎಂಬುದಾಗಿ ಮಾನ್ಯತೆ ನೀಡಬೇಕು ಎಂದು ಕರ್ನಾಟಕದ ದಾವಣಗೆರೆ ಬಸವಕೇಂದ್ರ ವಿರಕ್ತಮಠದ ಜಯಮೃತ್ಯುಂಜಯ ಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. 1857ರಲ್ಲಿ ನಡೆದ ಸಿಪಾಯಿದಂಗೆಯನ್ನು ಪ್ರಥಮ ಸ್ವಾತಂತ್ರ್ಯಹೋರಾಟ ಎಂದು ಕೇಂದ್ರ ಸರ್ಕಾರ ಪರಿಗಣಿಸಿದೆ. ಆದರೆ ಅದಕ್ಕಿಂತ 33 ವರ್ಷ ಮೊದಲು ಕರ್ನಾಟಕದ ಮಹಿಳೆಯೊಬ್ಬಳು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ವೀರ ಸಂಗೊಳ್ಳಿ ರಾಯಣ್ಣನ ನೆರವಿನಿಂದ ಬ್ರಿಟಿಷ್ ಸೇನಾಪತಿ ಥಾಕರೆಯನ್ನು ಕೊಂದಾಗ ಬ್ರಿಟಿಷ್ ಸಾಮ್ರಾಜ್ಯ ದಂಗು ಬಡಿದಿತ್ತು. ಆದರೆ ಪೂರ್ವಾಗ್ರಹಪೀಡಿತ ಇತಿಹಾಸಕಾರರು ಈ ಹೋರಾಟಕ್ಕೆ ಮಾನ್ಯತೆ ನೀಡಿಲ್ಲ ಎಂದು ಅವರು ದೂರಿದರು. ರಾಜ್ಯ ಸರ್ಕಾರ ಸ್ಥಾಪಿಸಿರುವ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇಂದ್ರ ಸರ್ಕಾರ ನೆರವಾಗಬೇಕು, ಕೇಂದ್ರ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳಲ್ಲಿ ರಾಣಿ ಚೆನ್ನಮ್ಮ ಮತ್ತು ಕಿತ್ತೂರು ಸಂಗ್ರಾಮದ ಪರಿಚಯವನ್ನು ಸೇರಿಸಬೇಕು ಮತ್ತು ಅಕ್ಟೋಬರ್ 23 ರ ದಿನಾಂಕವನ್ನು ಚೆನ್ನಮ್ಮ ವಿಜಯೋತ್ಸವ ದಿನವಾಗಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಆಚರಿಸಬೇಕು ಎಂದು ಅವರು ಆಗ್ರಹಿಸಿದರು.
2007: ಕೇರಳ ಸರ್ಕಾರವು ಖ್ಯಾತ ಚಿತ್ರಕಲಾವಿದ ಎಮ್.ಎಫ್. ಹುಸೇನ್ ಅವರಿಗೆ ನೀಡಲು ನಿರ್ಧರಿಸಿದ `ರಾಜಾ ರವಿವರ್ಮ' ಪ್ರಶಸ್ತಿಯನ್ನು ನೀಡದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿತು. ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಮತ್ತು ಕೆ.ಟಿ ಶಂಕರನ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಮಧ್ಯಂತರ ಆದೇಶವನ್ನು ನೀಡಿತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಎರ್ನಕುಲಂನ ರವಿವರ್ಮ ಎಂಬವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
2007: ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಆರೋಪಕ್ಕಾಗಿ ಫಿಲಿಪ್ಪೀನ್ಸಿನ ಮಾಜಿ ಅಧ್ಯಕ್ಷ ಜೊಸೆಫ್ ಎಸ್ಟ್ರೆಡಾ ಅವರಿಗೆ ಮನಿಲಾದ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಅಲ್ಲದೆ ಇನ್ನು ಮುಂದೆ ಯಾವುದೇ ಸಾರ್ವಜನಿಕ ಹುದ್ದೆ ಅಲಂಕರಿಸದಂತೆಯೂ ನಿಷೇಧಿಸಿತು. ಭ್ರಷ್ಟಾಚಾರ ಆರೋಪ ಹೊತ್ತಿದ್ದ ಅವರ ಪುತ್ರ ಸೆನೆಟ್ ಸದಸ್ಯ ಜಿಂಗಾಯ್ ಅವರನ್ನು ಆರೋಪ ಮುಕ್ತಗೊಳಿಸಲಾಯಿತು. 2001ರ ಸೇನಾ ಕ್ರಾಂತಿಯಲ್ಲಿ ಎಸ್ಟ್ರೆಡಾ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿತ್ತು. ರಾಜಕೀಯ ಪ್ರವೇಶಿಸುವ ಮುನ್ನ ಎಸ್ಟ್ರೆಡಾ ಜನಪ್ರಿಯ ಚಿತ್ರ ತಾರೆಯಾಗಿದ್ದರು.
2007: ಜಪಾನ್ ಮತ್ತು ರಷ್ಯದಲ್ಲಿ ಈದಿನ ನಡೆದ ದಿಢೀರ್ ರಾಜಕೀಯ ಬೆಳವಣಿಗೆಗಳಲ್ಲಿ ಉಭಯ ರಾಷ್ಟ್ರಗಳ ಪ್ರಧಾನಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವರ್ಷದ ಹಿಂದೆಯಷ್ಟೇ ಜಪಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಶಿಂಝೋ ಅಬೆ ಅವರು, ತಮ್ಮ ಸುಧಾರಣಾ ಕ್ರಮಗಳಿಗೆ ದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದರು. ಎರಡನೇ ಯುದ್ಧದ ನಂತರ ಜಪಾನಿನ ಅತ್ಯಂತ ಕಿರಿಯ ಪ್ರಧಾನಿ ಎಂಬ ಅಗ್ಗಳಿಕೆಗೆ ಅಬೆ ಪಾತ್ರರಾಗಿದ್ದರು. ರಷ್ಯದಲ್ಲಿ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಅವರಿಗೆ ಉತ್ತರಾಧಿಕಾರಿ ಆಯ್ಕೆ ಸುಗಮಗೊಳಿಸಿಕೊಳ್ಳುವ ಸಲುವಾಗಿ ಪ್ರಧಾನಿ ಮಿಖಾಯಿಲ್ ಪ್ರಾಕೋವ್ ತಮ್ಮ ಸಚಿವ ಸಂಪುಟದ ರಾಜೀನಾಮೆಯನ್ನು ಪುಟಿನ್ ಅವರಿಗೆ ಸಲ್ಲಿಸಿದರು.
2007: ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವ್ಯಾಪ್ತಿಯ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ ನೀಡುವ 2004-05ನೇ ಸಾಲಿನ ಭಾಷಾ ಭಾರತಿ ಸನ್ಮಾನಕ್ಕೆ ಖ್ಯಾತ ರಂಗಕರ್ಮಿ, ಲೇಖಕ ಡಾ.ನಾ.ದಾಮೋದರ ಶೆಟ್ಟಿ ಆಯ್ಕೆಯಾದರು.
2006: ಮುಂಬೈಯಲ್ಲಿ 1993ರ ಡಿಸೆಂಬರ್ 12ರಂದು ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳ ಸಂಚಿನಲ್ಲಿ ಟೈಗರ್ ಮೆಮನ್ ಕುಟುಂಬದ ನಾಲ್ವರು (ಯಾಕೂಬ್ ಮೆಮನ್, ಎಸ್ಸಾ ಮೆಮನ್, ಯೂಸುಫ್ ಮೆಮನ್, ರುಬೀನಾ ಮೆಮನ್) ನೇರವಾಗಿ ಭಾಗಿಯಾಗಿದ್ದು ಅವರು ತಪ್ಪಿತಸ್ಥರು ಎಂದು ನಿಯೋಜಿತ ಟಾಡಾ ನ್ಯಾಯಾಲಯ ತೀರ್ಪು ನೀಡಿತು. ಇದೇ ಕುಟುಂಬದ ಇತರ ಮೂವರಿಗೆ ಸಂಶಯದ ಲಾಭ ಸಿಕ್ಕಿದ್ದು ಅವರನ್ನು ಖುಲಾಸೆ ಗೊಳಿಸಲಾಯಿತು. ಮೆಮನ್ ತಾಯಿ ಹನೀಫಾ ಮೆಮನ್, ಒಬ್ಬ ಸಹೋದರ ಸುಲೇಮಾನ್ ಮೆಮನ್ ಮತ್ತು ಕಿರಿಯ ಸೊಸೆ ರಾಹಿ ಮೆಮನ್ ಗೆ ಸಂಶಯದ ಲಾಭ ನೀಡಲಾಗಿದ್ದು ಈ ಮೂವರು ನಿರ್ದೋಷಿಗಳು ಎಂದು ನಿಯೋಜಿತ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ ತೀರ್ಪು ನೀಡಿದರು. 1993ರ ಡಿಸೆಂಬರ್ 12ರಂದು ಸಂಭವಿಸಿದ 13 ಸ್ಫೋಟಗಳಲ್ಲಿ 257 ಜನ ಮೃತರಾಗಿದ್ದರು. ಪ್ರಕರಣದಲ್ಲಿ 683 ಸಾಕ್ಷಿಗಳು ಒಟ್ಟು 13,000 ಪುಟಗಳ ಸಾಕ್ಷ್ಯ ನೀಡ್ದಿದರು. ಒಟ್ಟು 199 ಆರೋಪಿಗಳು ಇದ್ದ ಈ ಪ್ರಕರಣದ ತೀರ್ಪು 13 ವರ್ಷಗಳ ಬಳಿಕ ಹೊರಬಿತ್ತು.
2006: ಸವರ್ಾಧಿಕಾರಿ ಅಡಾಲ್ಫ್ ಹಿಟ್ಲರನ ಜೀವನ ಚರಿತ್ರೆ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದ ಜರ್ಮನಿಯ ಇತಿಹಾಸಕಾರ, ಪ್ರಕಾಶಕ ಜೋಚಿಮ್ ಫೆಸ್ಟ್ (79) ಬಲರ್ಿನ್ನಿನಲ್ಲಿ ನಿಧನರಾದರು. ನಾಜಿ ಸಿದ್ಧಾಂತದ ಬಗ್ಗೆ ಅಪಾರ ಜ್ಞಾನ ಹೊಂದಿದ್ದಫೆಸ್ಟ್, ಹಿಟ್ಲರ್ ಜೀವನ ಚರಿತ್ರೆಯಿಂದಾಗಿ ವಿಶ್ವಾದ್ಯಂತ ಹೆಸರು ಮಾಡಿದ್ದರು. ಹಿಟ್ಲರನ ವರ್ಚಸ್ಸು ಮತ್ತು ರಾಜಕೀಯ ಚತುರತೆಯ ಬಗ್ಗೆ ಫೆಸ್ಟ್ ವಿಶದವಾಗಿ ಬರೆದಿದ್ದರು. ಆದರೆ ಇತಿಹಾಸಕಾರರಂತೆ ಯುದ್ಧದ ಬಗ್ಗೆ ಹೆಚ್ಚು ಒತ್ತು ನೀಡಿರಲ್ಲಿಲ. ಹಿಟ್ಲರ್ ಕೊನೆಯ ದಿನಗಳ ಬಗ್ಗೆ ಅವರು ಬರೆದ ಪುಸ್ತಕವನ್ನು ಆಧರಿಸಿ ನಿರ್ಮಿಸಿದ ಜರ್ಮನ್ ಚಿತ್ರ `ದಿ ಡೌನ್ಫಾಲ್' ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿತ್ತು. ಹಿಟ್ಲರನ ಆಪ್ತಮಿತ್ರ ಅಲ್ಬರ್ಟ್ ಸ್ಟೀರ್ನ ಕೊಲೆಗೆ ನಡೆದ ಯತ್ನ ಇತ್ಯಾದಿ ವಿಷಯಗಳ ಬಗೆಗೂ ಫೆಸ್ಟ್ ಚಿತ್ರಣ ನೀಡಿದ್ದರು.
2006: ಕೊಲಂಬಿಯಾ ಬಾಹ್ಯಾಕಾಶ ನೌಕೆ ದುರಂತದ ಬಳಿಕ 2003ರಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ದುರಸ್ತಿ ಕಾರ್ಯ ಪುನರಾರಂಭಗೊಂಡಿತು. ಮೂರು ಹಂತಗಳ ಗಗನ ನಡಿಗೆಯ ಮೊದಲ ಹಂತವಾಗಿ ಅಟ್ಲಾಂಟದ ಗಗನಯಾತ್ರಿಗಳಾದ ಜೋ ಟ್ಯಾನರ್ ಮತ್ತು ಹೀಡ್ ಮೇರಿ ಸ್ಟಿಫನ್ ಶಿನ್ ಪೈಪರ್ ಬಾಹ್ಯಾಕಾಶ ನಡಿಗೆ ಆರಂಭಿಸಿ ಬಾಹ್ಯಾಕಾಶ ನಿಲ್ದಾಣಕ್ಕೆ ಪವರ್ ಕೇಬಲ್ ಅಳವಡಿಸುವ ಕಾರ್ಯದಲ್ಲಿ ಮಗ್ನರಾದರು. ದುರಸ್ತಿ ಕಾರ್ಯವು ಚಂದ್ರ ಹಾಗೂ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಅಮೆರಿಕದ ಮಹತ್ವಾಕಾಂಕ್ಷಿ ಯೋಜನೆಯ ಸಾಕಾರದತ್ತ ಇಟ್ಟ ದೊಡ್ಡ ಹೆಜ್ಜೆ.
2006: ಇಟಲಿಯ ಫುಟ್ ಬಾಲ್ ತಂಡದ ರಕ್ಷಣಾ ಆಟಗಾರ ಮಾರ್ಕೊ ಮಾಟೆರಾಜಿ ಅವರು ಫ್ರಾನ್ಸಿನ ಆಟಗಾರ ಜಿನೇಡಿನ್ ಜಿಡಾನ್ ರ ಸಹೋದರಿ ಜಿಡಾಜಿನ್ ಅವರ ಕ್ಷಮೆ ಯಾಚಿಸಿದರು. ಜಿಡಾಜಿನ್ ಅವರ ಜೊತೆ ಗೆಳೆತನಕ್ಕೂ ಸಿದ್ಧ ಎಂದು `ಸನ್' ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು. ಜರ್ಮನಿಯಲ್ಲಿ ನಡೆದ ವಿಶ್ವಕಪ್ ಫುಟ್ ಬಾಲ್ ಚಾಂಪಿಯನ್ ಶಿಪ್ ಫೈನಲಿನಲ್ಲಿ ಫ್ರಾನ್ಸ್ ವಿರುದ್ಧದ ಪಂದ್ಯದಲ್ಲಿಮಾಟೆರಾಜಿ ಅವರು ಜಿಡಾನ್ ಸಹೋದರಿಯನ್ನು ನಿಂದಿಸಿದ್ದರು.
2006: ಪ್ರತ್ಯೇಕ ತೆಲಂಗಾಣ ರಾಷ್ಟ್ರ ಸಮಿತಿ (ಟಿ.ಆರ್.ಎಸ್) ಮುಖಂಡ ಕೆ. ಚಂದ್ರಶೇಖರ ರಾವ್ ಅವರು ತಮ್ಮ ಕರೀಂನಗರ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒತ್ತಾಯಿಸಿ ಮೂರು ವಾರಗಳ ಹಿಂದೆ ಕೇಂದ್ರದ ಯುಪಿಎ ಕಾರ್ಮಿಕ ಸಚಿವ ಸ್ಥಾನದಿಂದ ಅವರು ಹೊರಬಂದಿದ್ದರು.
1977: ದಕ್ಷಿಣ ಆಫ್ರಿಕದ ಸವರ್ಣೀಯ ವಿದ್ಯಾರ್ಥಿ ನಾಯಕ ಸ್ಟೀವನ್ ಬಿಕೊ ಪೊಲೀಸ್ ವಶದಲ್ಲಿದ್ದಾಗ ಮೃತರಾದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆಗಳಿಗೆ ಕಾರಣವಾಯಿತು.
1971: ಸಾಹಿತಿ ಮಠಪತಿ ಆರ್. ಜಿ. ಜನನ.
1966: ವೃತ್ತಿಯಿಂದ ವಕೀಲರಾದ ಮಿಹಿರ್ ಸೇನ್ ಅವರು ಡಾರ್ಡ್ ನೆಲ್ಸ್ ಜಲಸಂಧಿಯಿಂದ ಗ್ಯಾಲಿಪೊಲಿಯವರೆಗೆ 40 ಕಿ.ಮೀ. ಈಜಿದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಗೆ ಅವರು 13 ಗಂಟೆ, 55 ನಿಮಿಷಗಳನ್ನು ತೆಗೆದುಕೊಂಡರು. 1916ರ ನವೆಂಬರ್ 16ರಂದು ಜನಿಸಿದ ಮಿಹಿರ್ ಸೇನ್ 1997ರಲ್ಲಿ ನಿಧನರಾದರು. ಈಜುವುದರಲ್ಲಿ ಹಲವಾರು ದಾಖಲೆಗಳನ್ನು ಮಿಹಿರ್ ಸೇನ್ ನಿರ್ಮಿಸಿದ್ದಾರೆ. 1958ರ ಸೆಪ್ಟೆಂಬರ್ 27ರಂದು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಪ್ರಥಮ ಭಾರತೀಯ ಎನಿಸಿದರು. 1966ರಲ್ಲಿ ಶ್ರೀಲಂಕಾ ಮತ್ತು ಭಾರತದ ನಡುವಣ ಪಾಕ್ ಜಲಸಂಧಿಯನ್ನು ಈಜಿದ ಮೊದಲಿಗ ಎನಿಸಿದರು. ಇದೇ ವರ್ಷ ಪಾಕ್ ಜಲಸಂಧಿ, ಗಿಬ್ರಾಲ್ಟರ್ ಜಲಸಂಧಿ, ಡಾರ್ಡನೆಲ್ಸ, ಬೊಸ್ಫೋರಸ್ ಮತ್ತು ಪನಾಮಾ ಕಾಲುವೆಗಳನ್ನು ಈಜಿ ಐದು ದಾಖಲೆಗಳನ್ನು ನಿರ್ಮಿಸಿದ ಹೆಗ್ಗಳಿಕೆ ಕೂಡಾ ಇವರದಾಯಿತು. ಈ ಎಲ್ಲ ಸಾಧನೆಗಾಗಿ 1959ರಲ್ಲಿ ಪದ್ಮಶ್ರೀ, 1967ರಲ್ಲಿ ಪದ್ಮಭೂಷಣ ಪ್ರಶಸ್ತಿಗಳ ಗೌರವ ಇವರಿಗೆ ಲಭಿಸಿತು. ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕದ್ಲಲೂ ಇವರ ಹೆಸರು ನಮೂದಾಯಿತು.
1946: ಸಾಹಿತಿ ಕೆ. ಸರೋಜ ಜನನ.
1943: ಇಟಲಿ ಸರ್ಕಾರವು ಹೊಟೇಲ್ ಒಂದರಲ್ಲಿ ಇರಿಸಿದ್ದ ಬೆನಿಟೊ ಮುಸ್ಸೋಲಿನಿ ಅವರನ್ನು ಜರ್ಮನ್ ಪಾರಾಟ್ರೂಪರುಗಳು ತಮ್ಮ ವಶಕ್ಕೆ ತೆಗೆದುಕೊಂಡರು.
1942: ಸಾಹಿತಿ ಪದ್ಮಾ ಗುರುರಾಜ್ ಜನನ.
1941: ಎರಡನೇ ಮಹಾಯುದ್ಧದಲ್ಲಿ ಅಮೆರಿಕ ನೌಕಾಪಡೆಯಿಂದ ಮೊದಲ ಜರ್ಮನ್ ಹಡಗು ವಶ.
1940: ಐವರು ಬಾಲಕರು ಫ್ರಾನ್ಸಿನ ಮೊಂಟಿಗ್ನಾಕ್ ನ ಲಾಸ್ ಕಾಕ್ಸ್ ನಲ್ಲಿದ್ದ ಗುಹೆಗಳನ್ನು ಪತ್ತೆ ಮಾಡಿದರು. ಈ ಗುಹೆಗಳು ಇತಿಹಾಸ ಪೂರ್ವ ಕಲೆಗಳಿಗೆ ಅತ್ಯುತ್ತಮ ಉದಾಹರಣೆಗಳು ಎಂದು ನಂಬಲಾಗಿದೆ.
1940: ಖ್ಯಾತ ಸಾಹಿತಿ ಕೆ.ವಿ. ತಿರುಮಲೇಶ್ ಜನನ.
1931: ಖ್ಯಾತ ಸಾಹಿತಿ ಹಾ.ಮಾ. ನಾಯಕ (12-9-1931ರಿಂದ 10-11-2000) ಅವರು ಶ್ರೀನಿವಾಸ ನಾಯಕ- ರುಕ್ಮಿಣಿಯಮ್ಮ ದಂಪತಿಯ ಮಗನಾಗಿ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಸಾಹಿತ್ಯದ ಗೀಳು ಹಿಡಿಸಿಕೊಂಡು ಅಸಂಖ್ಯಾತ ಕೃತಿಗಳನ್ನು ರಚಿಸಿರುವ ನಾಯಕ ಅವರಿಗೆ ಸ.ಸ. ಮಾಳವಾಡ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮೈಸೂರು ವಿವಿಯ ಸುವರ್ಣ ಮಹೋತ್ಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ ಹಲವಾರು ಪ್ರಶಸ್ತಿಗಳು ಲಭಿಸಿವೆ.
1913: ಅಮೆರಿಕದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೆಟಿಕ್ ಜೇಮ್ಸ್ ಕ್ಲೀವ್ ಲ್ಯಾಂಡ್ `ಜೆಸ್ಸೀ' ಓವೆನ್ಸ್ (1913-80) ಜನ್ಮದಿನ. 1936ರ ಬರ್ಲಿನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈತ 4 ಚಿನ್ನದ ಪದಕಗಳನ್ನು ಗೆದ್ದುಕೊಂಡ. ಆಟವನ್ನು `ಆರ್ಯರ ಶ್ರೇಷ್ಠತೆ' ಪ್ರದರ್ಶನವನ್ನಾಗಿ ಮಾಡಲು ಉದ್ದೇಶಿಸಿದ್ದ ಅಡಾಲ್ಫ್ ಹಿಟ್ಲರನ ಉದ್ದೇಶಕ್ಕೆ ಇದರಿಂದ ಭಾರೀ ಧಕ್ಕೆ ಉಂಟಾಯಿತು.
1910: ಲಾಸ್ ಏಂಜೆಲಿಸ್ ನ ಸಾಮಾಜಿಕ ಕಾರ್ಯಕರ್ತೆ ಅಲೀಸ್ ವೆಲ್ಸ್ ಅವರನ್ನು ಅಮೆರಿಕದ ಪ್ರಥಮ ಮಹಿಳಾ ಪೊಲೀಸ್ ಆಗಿ ನೇಮಕ ಮಾಡಲಾಯಿತು. ಅವರಿಗೆ ಬಂಧಿಸುವ ಅಧಿಕಾರವನ್ನೂ ನೀಡಲಾಗಿತ್ತು. ಅವರು 30 ವರ್ಷಗಳ ಸೇವೆಯ ನಂತರ 1940ರಲ್ಲಿ ನಿವೃತ್ತರಾದರು.
1899: ಕರ್ನಟಕ ಶಾಸ್ತ್ರೀಯ ಸಂಗೀತ ವಿದ್ವಾಂಸ ಟಿ.ಎನ್. ಸ್ವಾಮಿನಾಥನ್ ಜನನ.
1898: ಹಿಂದಿ ಸಾಹಿತಿ ಬಲದೇವ್ ಮಿಶ್ರ ಜನನ.
1818: ಅಮೆರಿಕನ್ ಸಂಶೋಧಕ ರಿಚರ್ಡ್ ಜೋರ್ಡಾನ್ ಗ್ಯಾಟ್ಲಿಂಗ್ (1818-1903) ಜನ್ಮದಿನ. ಇವರು ಗ್ಯಾಟ್ಲಿಂಗ್ ಗನ್ (ಮಲ್ಟಿ ಬ್ಯಾರೆಲ್ ಮೆಷಿನ್ ಗನ್) ಸಂಶೋಧಿಸಿ 1862ರಲ್ಲಿ ಅದಕ್ಕೆ ಪೇಟೆಂಟ್ ಪಡೆದರು. ಚೋದ್ಯದ ಸಂಗತಿ ಏನು ಗೊತ್ತೆ: ಇವರ ಹೆಸರಿನಲ್ಲಿ ಬರುವ `ಗ್ಯಾಟ್' ನ ಅರ್ಥ `ಗನ್' ಎಂದು!
1812: ಅಮೆರಿಕನ್ ಸಂಶೋಧಕ ರಿಚರ್ಡ್ ಮಾರ್ಚ್ ಹೊ (1812-86) ಜನ್ಮದಿನ. ಇವರು ಮೊತ್ತ ಮೊದಲ ರೋಟರಿ ಪ್ರಿಂಟಿಂಗ್ ಪ್ರಸ್ಸನ್ನು ಯಶಸ್ವಿಯಾಗಿ ನಿರ್ಮಿಸಿದರು.
1779: ಸಂತ ಕಬೀರರ ಅನುಯಾಯಿ ಗರಿಬ್ದಾಸ್ ನಿಧನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment