ಇಂದಿನ ಇತಿಹಾಸ History Today ಸೆಪ್ಟೆಂಬರ್ 13
2016: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಮೂರು ದಿನಗಳಿಂದ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ಮಧ್ಯೆ ನಡೆಯುತ್ತಿದ್ದ ಗುಂಡಿನ ಘರ್ಷಣೆಗೆ ತೆರೆ ಬಿದ್ದಿತು., ಇನ್ನಿಬ್ಬರು ಭಯೋತ್ಪಾದಕರು ಹತರಾದರು.
ಭದ್ರತಾ ಪಡೆ ಯೋಧರು ಈದಿನ ಸಂಜೆ ಭಯೋತ್ಪಾದಕರು ಅವಿತುಕೊಂಡಿದ್ದ ಕಟ್ಟಡದ ಗೋಡೆಯನ್ನು ಸ್ಪೋಟಿಸಿ, ಕಟ್ಟಡದ ಆವರಣಕ್ಕೆ ನುಗ್ಗಿದರು. ಕಟ್ಟಡದಲ್ಲಿ ಇನ್ನೂ ಇಬ್ಬರು ಭಯೋತ್ಪಾದಕರ ಶವಗಳು ಆಗ ಪತ್ತೆಯಾದವು. ಇದಕ್ಕೆ ಮುನ್ನ ಮೂರನೇ ದಿನವಾದ ಇಂದೂ ಕಟ್ಟಡದ ಒಳಗಿನಿಂದ ಭಯೋತ್ಪಾದಕರ ಜೊತೆಗೆ ಗುಂಡಿನ ಘರ್ಷಣೆ ಮುಂದುವರೆದಿತ್ತು. ಇನ್ನಿಬ್ಬರ ಸಾವಿನೊಂದಿಗೆ ಪೂಂಚ್ ಕದನದಲ್ಲಿ ಒಟ್ಟು 4 ಭಯೋತ್ಪಾದಕರು ಹತರಾದಂತಾಗಿದ್ದು, ಒಬ್ಬ ಪೊಲೀಸ್ ಸಿಬ್ಬಂದಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು. ಕನಿಷ್ಠ ಇಬ್ಬರು ಯೋಧರು ಗುಂಡಿನ ಸಮರದಲ್ಲಿ ಗಾಯಗೊಂಡು
ಆಸ್ಪತ್ರೆಗೆ ದಾಖಲಿಸಲಾದರು.
2016: ಬೆಂಗಳೂರು: ಹಿಂಸಾರೂಪಕ್ಕೆ ತಿರುಗಿದ್ದ ಕಾವೇರಿ ಪ್ರತಿಭಟನೆಯಲ್ಲಿ ಹಿಂದಿನ
ದಿನ ನಡೆದ ಗೋಲಿಬಾರ್ ವೇಳೆ ಕಟ್ಟಡದ ಮೇಲಿಂದ ಬಿದ್ದು ಗಾಯಗೊಂಡಿದ್ದ ಕುಮಾರ್ ಚಿಕಿತ್ಸೆ ಫಲಿಸದೆ ಈದಿನ ಸಾವಿಗೀಡಾದರು. ಇದರೊಂದಿಗೆ ಮೃತರ ಸಂಖ್ಯೆ ಎರಡಕ್ಕೇರಿತು. ಪ್ರತಿಭಟನೆ ತೀವ್ರಸ್ವರೂಪ ಪಡೆದ ವೇಳೆ ಭದ್ರತಾ ಸಿಬ್ಬಂದಿ ಗೋಲಿಬಾರ್ ನಡೆಸಲು ಮುಂದಾದಾಗ, ಓಡಿ ಹೋಗುವ ಸಮಯದಲ್ಲಿ ಕುಮಾರ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದರು. ಅವರನ್ನು ತಕ್ಷಣ ಸಮೀಪದ ಲಕ್ಷ್ಮೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಟ್ಟಡದ ಮೂರನೇ ಮಹಡಿಯಿಂದ ಬಿದ್ದಿದ್ದು, ಬೆನ್ನು ಮೂಳೆ ಹಾಗೂ ಕಾಲು ಮುರಿದಿತ್ತು. ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಕುಮಾರ್, ಮಾಗಡಿ ತಾಲ್ಲೂಕಿನ ಬ್ಯಾಡರಹಳ್ಳಿ ಕೆಂಪೇಗೌಡ ನಗರದ ನಿವಾಸಿ. ಸೆ.12ರ ಸೋಮವಾರ ಪೊಲೀಸರ ಗುಂಡೇಟಿನಿಂದ ಕುಣೀಗಲ್ ಮೂಲದ ಉಮೇಶ್ (25) ಸಾವನ್ನಪ್ಪಿದ್ದರು.
2016: ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಹಿಂದಿನ ದಿನ ನೀಡಿರುವ ಆದೇಶವು
ಬರುವ ಅಂತಿಮ ಆದೇಶ ಗಮನದಲ್ಲಿಟ್ಟುಕೊಂಡು, ಸಾಧಕ, ಬಾಧಕ ತುಲನೆ ಮಾಡಿ ‘ಸುಪ್ರೀಂ ಆದೇಶ ಪಾಲನೆ’ ಮಾಡಲು ಈದಿನ ನಡೆದ ತುರ್ತು ಸಂಪುಟ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಯಿತು ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸಂವಿಧಾನದ ಚೌಕಟ್ಟಿನಲ್ಲಿ ರಚನೆಯಾದ ಸರ್ಕಾರ ಸುಪ್ರೀಂ ಆದೇಶ ಉಲ್ಲಂಘನೆ ಹಾಗೂ ತಿರಸ್ಕಾರ ಮಾಡುವುದು ಕಷ್ಟದ ಕೆಲಸ ಹಾಗೂ ಸಂವಿಧಾನ ಬಾಹಿರವಾಗುತ್ತದೆ. ಆದ್ದರಿಂದ ನ್ಯಾಯಾಲಯದ ಆದೇಶದಂತೆ ನೀರು ಹರಿಸಲೇ ಬೇಕಿದೆ ಎಂದರು. ಸುಪ್ರೀಂಕೋರ್ಟ್ ನೀಡಿದ ಆದೇಶದಿಂದ ಪ್ರತಿ ದಿನ 12 ಸಾವಿರದಂತೆದಂತೆ ಸೆ.20ರವರಗೆ ನೀರು ಹರಿಸಿದರೆ ಒಟ್ಟು 18 ಸಾವಿರ ಕ್ಯೂಸೆಕ್ ನೀರು ಹೆಚ್ಚುವರಿಯಾಗಿ ಬಿಡಬೇಕಾಗುತ್ತದೆ. ಇದು ನಮಗೆ ದೊಡ್ಡ ಹೊಡೆತ, ಆದರೂ ಕೂಡ ಸುಪ್ರೀಂ ಆದೇಶ ಪಾಲನೆ ಅನಿವಾರ್ಯ. ಆದ್ದರಿಂದ ಪಾಲನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ನುಡಿದರು.
2016; ಬೆಂಗಳೂರು: ಸೆಪ್ಟೆಂಬರ್ 14ರಂದು ನಡೆಯಬೇಕಾಧ ತನ್ನ ಮದುವೆಗಾಗಿ
ಮದುಮಗಳೊಬ್ಬಳು ವಾಹನ ಸಂಚಾರ ಸ್ಥಗಿತಗೊಂಡ ಪರಿಣಾಮವಾಗಿ ತನ್ನ ಕುಟುಂಬ ಸದಸ್ಯರ ಜೊತೆಗೆ ವಧುವಿನ ಉಡುಪಿನಲ್ಲೇ ಬೆಂಗಳೂರಿನಿಂದ ತಮಿಳುನಾಡಿಗೆ ತಾಸುಗಟ್ಟಲೆ ನಡೆದ ಘಟನೆ ಘಟಿಸಿತು. ಆರ್. ಪ್ರೇಮಾ ಎಂಬ 25ರ ಹರೆಯದ ಈ ತರುಣಿಯ ಮದುವೆ ತಮಿಳುನಾಡಿನ ವರನ ಜೊತೆಗೆ ಸೆ.14ಕ್ಕೆ ನಿಗದಿಯಾಗಿದ್ದು, ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ನಡುವಿನ ವಾಹನ ಸಂಚಾರ ಸ್ಥಗಿತಗೊಂಡದ್ದರಿಂದ ಕಂಗಾಲಾಗಿ, ನಡೆಯುತ್ತಲೇ ಮದುವೆ ನಡೆಯಬೇಕಾದ ತಾಣ ಸೇರಲು ಈ ಕುಟುಂಬ ಪಾದಯಾತ್ರೆ ನಡೆಸಿತು. ರೇಷ್ಮೆ ಸೀರೆ ಉಟ್ಟುಕೊಂಡು ಚಿನ್ನಾಭರಣಧಾರಿಯಾಗಿ ಕುಟುಂಬದ ಸುಮಾರು 20 ಸದಸ್ಯರ ಜೊತೆಗೆ ಪಯಣ ಹೊರಟ ಪ್ರೇಮಾ, ಸ್ವಲ್ವ ದೂರ ಬಸ್ಸಿನಲ್ಲಿ, ಸ್ವಲ್ಪ ದೂರ ಆಟೋದಲ್ಲಿ ಕ್ರಮಿಸಿ, ಬಳಿಕ ತಮಿಳುನಾಡಿನ ಹೊಸೂರು ಕಡೆಗೆ ಈಗ ಪಾದಯಾತ್ರೆ ಮಾಡಿದರು.
2016: ನವದೆಹಲಿ: ಶಾಂತಿ ಕಾಪಾಡುವಂತೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಜನತೆಗೆ
ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿವೇಚನೆ ಪ್ರದರ್ಶಿಸುವಂತೆ ಮತ್ತು ಪೌರ ಹೊಣೆಗಾರಿಕೆಗಳನ್ನು ಗಮನದಲ್ಲಿ ಇಟ್ಟುಕೊಂಡು ವರ್ತಿಸುವಂತೆ ಕೋರಿದರು. ‘ರಾಷ್ಟ್ರದ ಹಿತಾಸಕ್ತಿಯನ್ನು ನೀವು ಇಟ್ಟುಕೊಳ್ಳುತ್ತೀರಿ ಎಂದು ನಾನು ನಂಬುವೆ. ರಾಷ್ಟ್ರ ನಿರ್ಮಾಣ ಎಲ್ಲಕ್ಕಿಂತ ದೊಡ್ಡದು. ಹಿಂಸೆಯನ್ನು ತ್ಯಜಿಸಿ, ಸೌಹಾರ್ದ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಆದ್ಯತೆ ನೀಡಿ’ ಎಂದು ಮೋದಿ ಮನವಿ ಮಾಡಿದರು. ‘ಬೆಳವಣಿಗೆಗಳಿಂದ ನನಗೆ ವೈಯಕ್ತಿಕವಾಗಿ ಅಪಾರ ನೋವಾಗಿದೆ. ಪ್ರಜಾಪ್ರಭುತ್ವದಲ್ಲಿ ಸಮಸ್ಯೆಗಳಿಗೆ ಪರಿಹಾರವನ್ನು ನಿಯಂತ್ರಣ ಮತ್ತು ಪರಸ್ಪರ ಮಾತುಕತೆ ಮೂಲಕ ಮಾತ್ರವೇ ಕಂಡುಕೊಳ್ಳಬಹುದು’ ಎಂದು ಅವರು ಹೇಳಿದರು2015: ಬೀಜಿಂಗ್: ಚೀನಾದ ನಾಗಚಿನ್ ಎಂಬಲ್ಲಿ ಸಾಮ್ರಾಟ ಅಶೋಕ ಸ್ಥಾಪಿಸಿದ್ದ ಸುಮಾರು 2000 ವರ್ಷಗಳ ಹಳೆಯ ಸ್ತೂಪವನ್ನು ಜೀಣೋದ್ಧಾರ ಮಾಡಲಾಗಿದ್ದು, ಸೆಪ್ಟೆಂಬರ್ 15ರ ಮಂಗಳವಾರ ಸ್ತೂಪ ಉದ್ಘಾಟನೆಗೆ ಸಜ್ಜಾಯಿತು. ಲಡಾಖ್ ಮೂಲಕ ದ್ರುಕ್ಪ ಬೌದ್ಧ ಪರಂಪರೆಯ ಧಾರ್ಮಿಕ ಗುರು ಗ್ಯಾಲ್ ವಾಂಗ್ ದ್ರುಕ್ಪ ಉದ್ಘಾಟನೆ ಮಾಡುವರು. ಸುಮಾರು 2000
2015: ನ್ಯೂಯಾರ್ಕ್: ಲಿಯಾಂಡರ್ ಪೇಸ್ ಯುಎಸ್ ಓಪನ್ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಬೆನ್ನಲ್ಲೇ ಮಹಿಳಾ ಡಬಲ್ಸ್ನಲ್ಲಿ ಸಾನಿಯಾ ಮಿರ್ಜಾ, ಸ್ವಿಸ್ ಜತೆಗಾರ್ತಿ ಮಾರ್ಟಿನಾ ಹಿಂಗಿಸ್ರೊಂದಿಗೆ ಪ್ರಶಸ್ತಿ ಜಯಿಸಿದರು. ಆರ್ಥರ್ ಆಶ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಇಂಡೋ-ಸ್ವಿಸ್ ಜೋಡಿ 1 ಗಂಟೆ 10 ನಿಮಿಷಗಳ ಕಾಲ ಸಾಗಿದ ಪಂದ್ಯದಲ್ಲಿ 6-3, 6-3 ರಿಂದ 4ನೇ ಶ್ರೇಯಾಂಕದ ಆಸ್ಟ್ರೇಲಿಯಾದ ಸೀಸಿ ಡೆಲೆಕ್ವಾ ಹಾಗೂ ಕಜಾಕಿಸ್ತಾನದ ಯಾರೋಸ್ಲಾವ ಶ್ವೆಡೋವ ಜೋಡಿಯನ್ನು ಮಣಿಸಿತು. ಸಾನಿಯಾ ಮಿರ್ಜಾಗೆ ಇದು ಮೊದಲ ಯುಎಸ್ ಓಪನ್ ಪ್ರಶಸ್ತಿಯಾಗಿದ್ದರೆ, ಮಾರ್ಟಿನಾ ಹಿಂಗಿಸ್ 1998ರ ಬಳಿಕ ಮೊದಲ ಬಾರಿಗೆ ಯುಎಸ್ ಚಾಂಪಿಯನ್ ಎನಿಸಿದರು. ಅಲ್ಲದೆ, ಸಾನಿಯಾ-ಹಿಂಗಿಸ್ ಜೋಡಿಗೆ ಇದು ಸತತ 2ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ. ಇದಕ್ಕೂ ಮುನ್ನ ಜುಲೈನಲ್ಲಿ ನಡೆದಿದ್ದ ವಿಂಬಲ್ಡನ್ನಲ್ಲಿ ಕೂಡ ಪ್ರಶಸ್ತಿ ಜಯಿಸಿತ್ತು. 3.77: ಸಾನಿಯಾ-ಹಿಂಗಿಸ್ ಜೋಡಿ ಟ್ರೋಫಿಯೊಂದಿಗೆ 3.77 ಕೋಟಿ ರೂ. ಮೊತ್ತವನ್ನು ಬಹುಮಾನವನ್ನಾಗಿ ಪಡೆದುಕೊಂಡಿತು.
2015:ನವದೆಹಲಿ: ವ್ಯಾಪ್ತಿಗೆ ಸಂಬಂಧಿಸಿದಂತೆ ಸದಾ ಗುದ್ದಾಡುತ್ತಿರುವ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಯಮುನಾ ನದಿ ಸ್ವಚ್ಛತೆಗಾಗಿ ಒಂದೇ ಸಂಸ್ಥೆಯೊಂದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪರಸ್ಪರ ಸಹಕರಿಸುವ ಲಕ್ಷಣಗಳು ಕಂಡುಬಂದವು. ರಾಜಧಾನಿಗೆ ಬೇಕಾಗುವ ನೀರಿನ ಶೇಕಡಾ 70ರಷ್ಟನ್ನು ಯಮುನಾ ನದಿಯೇ ಪೂರೈಸುತ್ತಿದೆಯಾದರೂ ಅದರ ಸ್ವಚ್ಛತೆ ಮಾತ್ರ ಬಹಳಷ್ಟು ಸಂಸ್ಥೆಗಳ ಅಸಹಕಾರ ಪರಿಣಾಮವಾಗಿ ದೀರ್ಘ ಕಾಲದಿಂದ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿದೆ. ಈಗ ಉಭಯ ಸರ್ಕಾರಗಳೂ ಪರಸ್ಪರ ಸಹಕರಿಸಿ ದೆಹಲಿ ಮೆಟ್ರೊ ರೈಲು ನಿಗಮದ ಮಾದರಿಯಲ್ಲಿ, ಕೇಂದ್ರ ಹಾಗೂ ದೆಹಲಿ
ಸರ್ಕಾರಗಳ ಜಂಟಿ ಆಡಳಿತಕ್ಕೆ ಒಳಪಟ್ಟ ‘ದೆಹಲಿ ಯಮುನಾ ಅಭಿವೃದ್ಧಿ ಪ್ರಾಧಿಕಾರ’ (ಡಿವೈಡಿಎ) ಸ್ಥಾಪನೆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ. ಯಮುನಾ ನದಿಯ ಪುನರುಜ್ಜೀವನ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ವಿವಿಧ ಸಂಸ್ಥೆಗಳ ಸಹಕಾರ ಬೇಕಾಗಿದ್ದುದರಿಂದ ಈ ಕೆಲಸವೊಂದು ದೊಡ್ಡ ಸಮಸ್ಯೆಯಾಗಿತ್ತು ಎಂದು ದೆಹಲಿ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಸ್ತುತ ದೆಹಲಿ ಸರ್ಕಾರದ ಕಂದಾಯ ಇಲಾಖೆ, ನೀರಾವರಿ ಮತ್ತು ಪ್ರವಾಹ ಇಲಾಖೆ, ದೆಹಲಿ ಜಲ ಮಂಡಳಿ, ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಮತ್ತು ಇತರ ಸ್ಥಳೀಯ ಸಂಸ್ಥೆಗಳ ಹತ್ತಾರು ಅಧಿಕಾರಿಗಳು ನದಿಗೆ ಸಂಬಂಧಿಸಿದ ವಿಚಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಈ ಸಂಸ್ಥೆಗಳು ಪರಸ್ಪರರ ದಾರಿಗೆ ಅಡ್ಡವಾಗಿ ವರ್ತಿಸುತ್ತಿವೆ. ಹೀಗಾಗಿ 1993ರಷ್ಟು ಹಿಂದೆಯೇ ಯಮುನಾ ಸ್ವಚ್ಛತೆಗೆ ಕಾರ್ಯಯೋಜನೆಗಳು ರೂಪಿಸಲ್ಪಟ್ಟು 1500 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ವೆಚ್ಚವಾಗಿದ್ದರೂ ಯಮುನಾ ನದಿಯನ್ನು ಸ್ವಚ್ಛ ಗೊಳಿಸಲು ಸಾಧ್ಯವಾಗಿಲ್ಲ. ಆಪ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಯಮುನಾ ನದಿ ಸ್ವಚ್ಛಗೊಳಿಸುವ ಭರವಸೆ ಕೊಟ್ಟಿವೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದು, ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಸಂಪುಟದ ಜಲ ಇಲಾಖಾ ಸಚಿವ ಕಪಿಲ್ ಮಿಶ್ರಾ ಅವರು ಕೇಂದ್ರ ಸಚಿವರಾದ ಉಮಾ ಭಾರತಿ, ಎಂ. ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ್ದು, ಯಮುನಾ ನದಿಗಾಗಿ ಸಾಮಾನ್ಯ ಕಾರ್ಯಯೋಜನೆ ರೂಪಿಸುವ ಬಗ್ಗೆ ಚರ್ಚಿಸಿ ಈ ವಿಶೇಷ ಉದ್ದೇಶಕ್ಕಾಗಿಯೇ ಪ್ರತ್ಯೇಕ ಸಂಸ್ಥೆ ಸ್ಥಾಪಿಸಲು ಉಭಯರೂ ನಿರ್ಧರಿಸಿದ್ದಾರೆ. ಇದಕ್ಕಾಗಿ ವಿಸõತ ನೀಲ ನಕ್ಷೆಯನ್ನೂ ಸಿದ್ಧ ಪಡಿಸಲಾಗುತ್ತಿದೆ.2015:ನವದೆಹಲಿ: ವ್ಯಾಪ್ತಿಗೆ ಸಂಬಂಧಿಸಿದಂತೆ ಸದಾ ಗುದ್ದಾಡುತ್ತಿರುವ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಯಮುನಾ ನದಿ ಸ್ವಚ್ಛತೆಗಾಗಿ ಒಂದೇ ಸಂಸ್ಥೆಯೊಂದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪರಸ್ಪರ ಸಹಕರಿಸುವ ಲಕ್ಷಣಗಳು ಕಂಡುಬಂದವು. ರಾಜಧಾನಿಗೆ ಬೇಕಾಗುವ ನೀರಿನ ಶೇಕಡಾ 70ರಷ್ಟನ್ನು ಯಮುನಾ ನದಿಯೇ ಪೂರೈಸುತ್ತಿದೆಯಾದರೂ ಅದರ ಸ್ವಚ್ಛತೆ ಮಾತ್ರ ಬಹಳಷ್ಟು ಸಂಸ್ಥೆಗಳ ಅಸಹಕಾರ ಪರಿಣಾಮವಾಗಿ ದೀರ್ಘ ಕಾಲದಿಂದ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿದೆ. ಈಗ ಉಭಯ ಸರ್ಕಾರಗಳೂ ಪರಸ್ಪರ ಸಹಕರಿಸಿ ದೆಹಲಿ ಮೆಟ್ರೊ ರೈಲು ನಿಗಮದ ಮಾದರಿಯಲ್ಲಿ, ಕೇಂದ್ರ ಹಾಗೂ ದೆಹಲಿ
2015: ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ ಬಳಿ ಈದಿನ ರಾತ್ರಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ಮತ್ತು ರಾಕೆಟ್ ದಾಳಿ ನಡೆಸಿತು. ರಾಜೌರಿ ಬಳಿ ದಾಳಿಯಲ್ಲಿ ಬಿಎಸ್ಎಫ್ ಅಧಿಕಾರಿಯೊಬ್ಬರು ಮೃತರಾದರು. ನವದೆಹಲಿಯಲ್ಲಿ 3 ದಿನಗಳ ಕಾಲ ನಡೆದ ಬಿಎಸ್ಎಫ್ ಮತ್ತು ಪಾಕಿಸ್ತಾನಿ ರೇಂಜರ್ಸ್ ಮಹಾ ನಿರ್ದೇಶಕರು (ಡಿಜಿ)ಗಳ ಸಭೆಯಲ್ಲಿ ಕದನ ವಿರಾಮ ಉಲ್ಲಂಘನೆ ನಿಲ್ಲಿಸುವುದು ಸೇರಿದಂತೆ ಉಭಯ ದೇಶಗಳ ನಡುವೆ ಬಾಂಧವ್ಯ ವೃದ್ಧಿಗೆ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದವು. ಆದರೆ ಸಭೆ ಮುಗಿದ ಮಾರನೇ ದಿನವೇ ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘಿಸಿದವು. ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಬೆಳಗ್ಗೆ 3 ಸುತ್ತು ಗುಂಡು ಹಾರಿಸಿದ್ದ ಪಾಕಿಸ್ತಾನಿ ಪಡೆಗಳು ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ನಿರಂತರವಾಗಿ ಗುಂಡಿನ ದಾಳಿ ನಡೆಸಿದವು. ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸುತ್ತಿಲ್ಲ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದರು.
2015: ನವದೆಹಲಿ/ಅಹಮದಾಬಾದ್: ಯುದ್ಧಪೀಡಿತ ಯೆಮೆನ್ನ ಖೋಖ್ರಾ ಬಂದರಿನಲ್ಲಿ ಗುಜರಾತ್ನ 70 ನಾವಿಕರು ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕ್ರಮ ತೆಗೆದುಕೊಂಡಿತು. ಯೆಮೆನ್ನಲ್ಲಿರುವ ಪರಿಸ್ಥಿತಿಯ ಅರಿವಿದೆ. ಜಿಬೌಟಿಯಲ್ಲಿರುವ ಭಾರತೀಯ ಕಚೇರಿಯು ಯೆಮೆನ್ನಲ್ಲಿ ಸಿಲುಕಿರುವ ಮೀನುಗಾರರನ್ನು ಸುರಕ್ಷಿತರವಾಗಿ ಕರೆತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದರು. ಗುಜರಾತಿನ ಜಾಮ್ ನಗರ ಜಿಲ್ಲೆಯ ಜೋಡಿಯಾ ಮತ್ತು ಸಲಯಾ ಗ್ರಾಮಗಳ ಹಾಗೂ ಕಚ್ ಜಿಲ್ಲೆಯ ಮಾಂಡವಿ ಗ್ರಾಮದ ಸುಮಾರು 70 ನಾವಿಕರು 15 ದಿನಗಳ ಹಿಮದ ಯೆಮೆನ್ ಖೋಖ್ರಾ ಬಂದರಿಗೆ 5 ದೋಣಿಗಳಲ್ಲಿ ಕೆಲವೊಂದು ಅಗತ್ಯ ಸರಕು ತುಂಬಿಸಿಕೊಂಡು ತೆರಳಿದ್ದರು. ಕೆಲವು ದಿನಗಳ ಹಿಂದೆ ಸೌದಿ ಅರೇಬಿಯಾದ ವಾಯುದಾಳಿಗೆ ಸಿಲುಕಿದ ದೋಣಿಯೊಂದು ಮುಳುಗಿ 6 ಭಾರತೀಯರು ಮೃತಪಟ್ಟಿದ್ದರು. ಕಳೆದ ರಾತ್ರಿ ಸೌದಿ ಪಡೆಗಳು ನಡೆಸಿದ ರಾಕೆಟ್ ಮತ್ತು ವಾಯು ದಾಳಿಯಿಂದ ನಾವಿಕರು ಪಾರಾಗಿದ್ದಾರೆ. ಈ ಕುರಿತು ಕಚ್ನ ಮಾಂಡವಿ ಗ್ರಾಮದ ಸಿಕಂದರ್ ಎಂಬುವವರು ಸಂದೇಶ ಕಳುಹಿಸಿದ್ದಾರೆ. ಕಳೆದ ಮಾರ್ಚ್ನಲ್ಲಿ ಯೆಮೆನ್ನಲ್ಲಿ ಸರ್ಕಾರ ಮತ್ತು ಬಂಡುಕೋರರ ನಡುವೆ ಯುದ್ಧ ಪ್ರಾರಂಭವಾದ ಸಂದರ್ಭದಲ್ಲಿ ಭಾರತ ಸರ್ಕಾರ ಯೆಮೆನ್ನಲ್ಲಿದ್ದ ಸುಮಾರು 4500 ಕ್ಕೂ ಹೆಚ್ಚು ಭಾರತೀಯನ್ನು ವಾಯುಮಾರ್ಗ ಮತ್ತು ಸಮುದ್ರ ಮಾರ್ಗದ ಮೂಲಕ ಸುರಕ್ಷಿತವಾಗಿ ರಕ್ಷಿಸಿತ್ತು.
2015: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹಾಫ್ ಮ್ಯಾರಥಾನ್ನಲ್ಲಿ ಗಲಭೆ ಉಂಟಾಗಿದ್ದು, ಮಹಿಳೆಯರನ್ನು ಚುಡಾಯಿಸಿದ ಮತ್ತು ಅಥ್ಲಿಟ್ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 12 ಜನರನ್ನು ಬಂಧಿಸಲಾಯಿತು. ಮ್ಯಾರಥಾನ್ ಮುಗಿದ ನಂತರ ಹಜರತ್ಬಾಲ್ನಲ್ಲಿರುವ ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಶ್ರೀನಗರದ ದಾಲ್ ಸರೋವರ ರಕ್ಷಣೆ ಕುರಿತ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೆಲವು ಯುವಕರು ಭಾರತ ವಿರೋಧಿ ಘೊಷಣೆ ಕೂಗಿದರು ಮತ್ತು ಪಾಕಿಸ್ತಾನಿ ಧ್ವಜವನ್ನು ಪ್ರದರ್ಶಿಸಿದರು. ಪೊಲೀಸರು ಮತ್ತು ಆಯೋಜಕರ ಮೇಲೆ ಕಲ್ಲು ತೂರಿ ಗಲಭೆ ಉಂಟು ಮಾಡಿದರು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ಮತ್ತು ಅಶೃವಾಯು ಸಿಡಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಸಂದರ್ಭವನ್ನು ರಾಜಕೀಯವಾಗಿ ಬಳಸಿಕೊಲ್ಳುತ್ತಿರುವ ಪಿಡಿಪಿ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದವು. ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಭದ್ರತಾ ವೈಫಲ್ಯದಿಂದ ಈ ಘಟನೆ ನಡೆದಿದೆ ಎಂದು ಟ್ವಿಟ್ ಮಾಡಿದರು. ನಾಗರಿಕ ಸಮಾಜದಲ್ಲಿ ಇಂತಹ ಘಟನೆಗಳು ನಡೆಯುವುದು ದುರದೃಷ್ಟಕರ. ರಾಜ್ಯದ ನಾಗರಿಕರು ಇಂತಹ ಮನಸ್ಥಿತಿ ಹೊಂದಿರುವವರ ವಿರುದ್ಧ ಒಗ್ಗೂಡಬೇಕು. ಈ ಕಾರ್ಯಕ್ರಮದಲ್ಲಿ ಕೆಲವರು ನಮ್ಮ ಹೆಣ್ಣುಮಕ್ಕಳ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪಿಡಿಪಿ ಅಧ್ಯಕ್ಷ ಮೆಹಬೂಬಾ ಮುಫ್ತಿ ತಿಳಿಸಿದರು. 21 ಕಿ.ಮೀ.ಗಳ ಹಾಫ್ ಮ್ಯಾರಥಾನ್ ಓಟವನ್ನು ದಾಲ್ ಸರೋವರ ಉಳಿಸಿ ಎಂಬ ಆಶಯದೊಂದಿಗೆ ಆಯೋಜಿಸಲಾಗಿತ್ತು. ಈ ಓಟದಲ್ಲಿ ಕೆಲವು ಅಂತಾರಾಷ್ಟ್ರೀಯ ಓಟಗಾರರು ಪಾಲ್ಗೊಂಡಿದ್ದರು ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಸಹ ಪಾಲ್ಗೊಂಡಿದ್ದರು.
2015: ಪಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ, ಎನ್ಡಿಎ ಮಿತ್ರ ಪಕ್ಷ ಹಿಂದುಸ್ತಾನ್ ಅವಾಮೀ ಮೋರ್ಚಾ ಅಧ್ಯಕ್ಷರಾದ ಜಿತನ್ ರಾಮ್ ಮಾಂಝಿ ಅವರ ಕಿರಿಯ ಪುತ್ರ ಪ್ರವೀಣ್ ಮಾಂಝಿ ಅವರನ್ನು 4.65 ಲಕ್ಷ ರೂಪಾಯಿ ನಗದು ಹಣ ಒಯ್ಯುತ್ತಿದ್ದುದಕ್ಕಾಗಿ ಪೊಲೀಸರು ಬಂಧಿಸಿದರು. ಜೆಹಾನಾಬಾದ್ ಜಿಲ್ಲೆಯ ಮಖ್ದುಂಪುರ ಪೊಲೀಸ್ ಠಾಣೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಮಾಂಝಿ ಪುತ್ರ ನಗದು ಹಣ ಒಯ್ಯುತ್ತಿದ್ದುದು ಪತ್ತೆಯಾಯಿತು ಎಂದು ಮೂಲಗಳು ಹೇಳಿದವು. ಅಕ್ಟೋಬರ್ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಅದಾಯ ತೆರಿಗೆ ಇಲಾಖೆ ಮತ್ತು ರಾಜ್ಯ ಪೊಲೀಸರು ಕಪ್ಪುಹಣ ಮತ್ತು ಲೆಕ್ಕಕ್ಕಿಡದ ನಗದು ಹಣ ಬಳಕೆಯನ್ನು ತಡೆಯಲು ತಪಾಸಣೆ ತೀವ್ರಗೊಳಿಸಿದರು. ಮಾದರಿ ನೀತಿ ಸಂಹಿತೆಯ ಪ್ರಕಾರ ಯಾರೂ ಸಮರ್ಪಕ ವಿವರಣೆ ಇಲ್ಲದೆ 50,000 ರೂಪಾಯಿಗಳಿಗಿಂತ ಹೆಚ್ಚಿನ ನಗದು ಹಣ ಒಯ್ಯುವಂತಿಲ್ಲ. ನಿರ್ಮಾಣ ಹಂತದಲ್ಲಿ ಇರುವ ಮನೆಯ ಕಾಮಗಾರಿ ಸಂಬಂಧ ಪಾವತಿ ಸಲುವಾಗಿ ಕುಟುಂಬದಿಂದ ಹಣ ಒಯ್ಯುತ್ತಿರುವುದಾಗಿ ಪ್ರವೀಣ್ ಮಾಂಝಿ ಪೊಲೀಸರಿಗೆ ತಿಳಿಸಿದರು ಎಂದು ವರದಿ ಹೇಳಿತು.
2015: ನವದೆಹಲಿ: ಶಂಕಿತ ಡೆಂಗೆ ಜ್ವರದಿಂದ ಸಾವನ್ನಪ್ಪಿದ ಏಳು ವರ್ಷದ ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ನವದೆಹಲಿಯ ಎರಡು ಆಸ್ಪತ್ರೆಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ದೆಹಲಿಯ ಆರೋಗ್ಯ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿದವು. ಡೆಂಗೆ ರೋಗಿಗಳಿಗೆ ಚಿಕಿತ್ಸೆ ನೀಡದೆ ಹಿಂದಕ್ಕೆ ಕಳುಹಿಸುತ್ತಿರುವುದಕ್ಕಾಗಿ ಇತರ ಮೂರು ಆಸ್ಪತ್ರೆಗಳಿಗೂ ದೆಹಲಿ ಆರೋಗ್ಯ ಇಲಾಖೆ ಶೋಕಾಸ್ ನೋಟಿಸ್ ಕಳುಹಿಸಿತು. 7 ವರ್ಷದ ಮಗು ಅವಿನಾಶನನ್ನು ಕಳೆದುಕೊಂಡ ದುಃಖದಲ್ಲಿ ಆತನ ತಂದೆ ಮತ್ತು ತಾಯಿ ದಕ್ಷಿಣ ದೆಹಲಿಯ ಲಾದೋ ಸರಾಯಿಯ ನಾಲ್ಕಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ದೆಹಲಿ ಸರ್ಕಾರ ಈ ಕ್ರಮ ಕೈಗೊಂಡವು. ಸೆಪ್ಟೆಂಬರ್ 14ರ ಒಳಗಾಗಿ ವರದಿ ಸಲ್ಲಿಸುವಂತೆ ದೆಹಲಿ ಸರ್ಕಾರಕ್ಕೆ ತಮ್ಮ ಸಚಿವಾಲಯವು ಸೂಚಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಹೇಳಿದರು. ತಪ್ಪಿತಸ್ತರನ್ನು ರಕ್ಷಿಸಲಾಗದು. ಡೆಂಗೆಗೆ ನೀಡಬೇಕಾದ ಕ್ರಮದ ಅಡಿಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸುವ ಯಾರನ್ನೂ ಬಿಟ್ಟು ಬಿಡಲಾಗುವುದಿಲ್ಲ ಎಂದು ಅವರು ಹೇಳಿದರು. ಆಗಸ್ಟ್ 28ರಂದು ತಮ್ಮ ಸರ್ಕಾರ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸುವವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಸಚಿವ ಸತ್ಯೇಂದರ್ ಜೈನ್ ಎಚ್ಚರಿಕೆ ನೀಡಿದರು. ಡೆಂಗೆ ಜ್ವರದಿಂದ ಬಳಲುವ ಯಾರೇ ರೋಗಿ ಬಂದರೂ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡುವುದನ್ನು ಎಲ್ಲಾ ಆಸ್ಪತ್ರೆಗಳಿಗೂ ದೆಹಲಿ ಸರ್ಕಾರ ಕಡ್ಡಾಯಗೊಳಿಸಿದೆ.
2015: ಮುಂಬೈ: ಮಹಾರಾಷ್ಟ್ರ ಸರ್ಕಾರ ಬ್ಯಾಂಕ್ ಆಫ್ ಮಹಾರಾಷ್ಟ್ರ ಮೂಲಕ ರಾಜ್ಯದ ರೈತರಿಗಾಗಿ ಮಣ್ಣು ಮತ್ತು ನೀರಿನ ಹೆಲ್ತ್ ಕಾರ್ಡ್ ವಿತರಣೆ ಆರಂಭಿಸಿತು. ಮಣ್ಣಿನ ಉತ್ಪಾದನಾ ಶಕ್ತಿ ಹೆಚ್ಚಿಸಲು ಹಾಗೂ ಮಣ್ಣಿನ ಫಲವತ್ತತೆಯನ್ನು ಖಚಿತ ಪಡಿಸಿಕೊಳ್ಳಲು ಈ ಹೆಲ್ತ್ ಕಾರ್ಡ್ ನೆರವಿಗೆ ಬರಲಿದೆ. ಅಲ್ಲದೇ ರೈತರ ಜಮೀನಿನ ಮಣ್ಣಿನ ಪೌಷ್ಠಿಕತೆಯ ಪ್ರಮಾಣ ಕಂಡುಕೊಳ್ಳಬಹುದು. ಹಾಗೂ ಮಣ್ಣಿನ ಫಲವತ್ತತೆಗೆ ತಕ್ಕಂತೆ ಸಮ ಪ್ರಮಾಣದಲ್ಲಿ ಅಗತ್ಯವಿದ್ದಷ್ಟು ಮಾತ್ರ ಗೊಬ್ಬರ ಬಳಕೆ ಮಾಡಬಹುದು. ಇದರಿಂದ ಮಣ್ಣಿನ ಫಲವತ್ತತೆ ಹಾಗೂ ಬೆಳೆ ಇಳುವರಿ ಹೆಚ್ಚಾಗಲಿದೆ ಎಂದು ಬ್ಯಾಂಕ್ನ ನಿರ್ದೇಶಕ ಆರ್.ಕೆ.ಗುಪ್ತಾ ತಿಳಿಸಿದರು. ಪ್ರಸಕ್ತ ವರ್ಷ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಹೆಲ್ತ್ ಕಾರ್ಡ್ ಯೋಜನೆ ಆರಂಭಿಸಲಾಯಿತು.. ಈಗಾಗಲೇ ಕೃಷಿ ಸಂಶೋಧನೆ ಮತ್ತು ಗ್ರಾಮೀಣಾಭಿವೃದ್ಧಿ ಫೌಂಡೇಶನ್ ಮೂಲಕ 500 ಕಾರ್ಡ್ಗಳನ್ನು ಪುಣೆಯ ಭಿಗ್ವಾನ್ನಲ್ಲಿ ವಿತರಿಸಲಾಯಿತು.
2015: ಜಬುವಾ (ಮಧ್ಯಪ್ರದೇಶ): ಸುಮಾರು 98 ಜನರ ಸಾವಿಗೆ ಕಾರಣವಾದ ಸೆಪ್ಟೆಂಬರ್ 12 ಶನಿವಾರದ ಜಬುವಾ ಜಿಲ್ಲೆಯಲ್ಲಿನ ಅವಳಿ ಸ್ಫೋಟಕ್ಕೆ ಜಿಲೆಟಿನ್ ಕಡ್ಡಿಗಳು ಕಾರಣವೇ ಹೊರತು ಸನಿಹದ ರೆಸ್ಟೋರೆಂಟ್ನ ಅಡುಗೆ ಅನಿಲ ಸಿಲಿಂಡರ್ ಅಲ್ಲ ಎಂದು ಪೊಲೀಸರು ತಿಳಿಸಿದರು. ಜಿಲೆಟಿನ್ ಕಡ್ಡಿಗಳನ್ನು ದಾಸ್ತಾನು ಮಾಡಿ ಇಡಲಾಗಿದ್ದ ಅಂಗಡಿಯಲ್ಲಿ ಶಾರ್ಟ್ ರ್ಸಟ್ ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡು ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದರು. ಗಣಿಗಾರಿಕೆ ಸಲುವಾಗಿ ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹಿಸಿ ಇಟ್ಟಿದ್ದ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಆತ ತಲೆತಪ್ಪಿಸಿಕೊಂಡಿದ್ದು, ಅಂಗಡಿ ಮತ್ತು ಮನೆಗೆ ಬೀಗ ಮುದ್ರೆ ಮಾಡಲಾಯಿತು. ರಾಜಧಾನಿಯಿಂದ 300 ಕಿಮೀ. ದೂರದ ಪಟ್ಲವಾಡದ ಬಸ್ಸು ನಿಲ್ದಾಣ ಸಮೀಪದ ವಸತಿ ಪ್ರದೇಶದಲ್ಲಿ ಈ ರೆಸ್ಟೋರೆಂಟ್ ಇದೆ. ಹಿಂದಿನ ದಿನ ಬೆಳಗ್ಗೆ 9 ಗಂಟೆ ಸುಮಾರಿಗೆ ದುರಂತ ಸಂಭವಿಸಿತ್ತು. ಸುಮಾರು 98 ಜನ ಮೃತರಾಗಿ 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಎರಡಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಅಧಿಕಾರಿಗಳು ಮೊದಲು ಅಡುಗೆ ಅನಿಲ ಸಿಲಿಂಡರ್ ಸ್ಫೋಟದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದ್ದರು.
2015: ಹುಬ್ಬಳ್ಳಿ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡ ಚಿತ್ರರಂಗದ ದಿಗ್ಗಜರು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶ ನಡೆಸಿದರು. ಇಲ್ಲಿನ ಮೂರು ಸಾವಿರ ಮಠ ಗುರು ಸಿದ್ದೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆ ಆರಂಭಿಸಲಾಯಿತು. ನಾಲ್ಕು ತೆರೆದ ವಾಹನಗಳಲ್ಲಿ ನಟ, ನಟಿ, ನಿರ್ದೇಶಕರು, ನಿರ್ಮಾಪಕರು,, ಚಿತ್ರ ವಿತರಕರು, ಪ್ರದರ್ಶಕರು ಪಾಲ್ಗೊಂಡರು. ಪ್ರಮುಖರಾದ ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ಉಪೇಂದ್ರ, ದರ್ಶನ್, ಶರಣ್, ರವಿಶಂಕರ್, ದುನಿಯಾ ವಿಜಯ್, ಯಶ್, ವಿಜಯ್ ರಾಘವೇಂದ್ರ, ರಂಗಾಯಣ ರಘು, ನೀನಾಸಂ ಸತೀಶ್, ಸಾಧು ಕೋಕಿಲ, ಧನಂಜಯ್, ಗಣೇಶ್, ಭಾರತಿ, ಶೃತಿ, ಪೂಜಾಗಾಂಧಿ, ಜಯಮಾಲಾ ಮತ್ತಿತರರು ಸೇರಿ 50ಕ್ಕೂ ಹೆಚ್ಚು ಮಂದಿ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.. ಮಹದಾಯಿ ನೀರಿಗಾಗಿ ನರಗುಂದದ ರೈತ ವೀರಗಲ್ಲಿನ ಎದುರು ಆರಂಭವಾದ ಸತ್ಯಾಗ್ರಹ 60ನೇ ದಿನ ಪೂರೈಸಿದ್ದು, ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕನ್ನಡ ಚಿತ್ರರಂಗ ಬೃಹತ್ ಪ್ರಮಾಣದಲ್ಲಿ ಹುಬ್ಬಳ್ಳಿಯಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿರುವುದು ಇಡೀ ಉತ್ತರ ಕರ್ನಾಟಕದಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಿತು.
2015: ಲಾಸ್ ವೆಗಾಸ್: ಇಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಷಿಪ್ನಲ್ಲಿ ಪುರುಷರ 74 ಕೆಜಿ ಫ್ರೀಸ್ಟೈಲ್ ವರ್ಗದಲ್ಲಿ ಕಂಚಿನ ಪದಕ ಗೆಲ್ಲುವುದರೊಂದಿಗೆ ಭಾರತದ ನರಸಿಂಗ್ ಪಂಚಮ್ ಯಾದವ್ ಅವರು ಭಾರತಕ್ಕೆ ಒಲಿಂಪಿಕ್ ಕೋಟಾ ಗಟ್ಟಿ ಮಾಡಿಕೊಂಡರು. ಪ್ರತಿಷ್ಠಿತ ವಿಶ್ವ ಚಾಂಪಿಯನ್ ಷಿಪ್ ಕ್ರೀಡಾಕೂಟದಲ್ಲಿ ಮೂರನೇ ಸ್ಥಾನ ಗಳಿಸಿಕೊಳ್ಳುವುದರೊಂದಿಗೆ ನರಸಿಂಗ್ ಅವರು ಪದಕ ಗೆದ್ದ ಏಕೈಕ ಭಾರತೀಯ ಎನಿಸಿಕೊಂಡರು. ಜೊತೆಗೇ 2016ರ ರಿಯೋ ಕ್ರೀಡೆಗಳಿಗೆ ತಮ್ಮ ಸ್ಥಾನ ಗಳಿಸಿಕೊಂಡರು. ಲಾಸ್ ವೆಗಾಸ್ ಕ್ರೀಡಾಕೂಟದಲ್ಲಿ ಪ್ರತಿಯೊಂದು ವರ್ಗದಲ್ಲೂ ಮೊದಲ 6 ಸ್ಥಾನಗಳ ಗೆಲುವು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆಯನ್ನು ತಂದುಕೊಡುತ್ತದೆ. ವಿಶ್ವ ಚಾಂಪಿಯನ್ ಷಿಪ್ನಲ್ಲಿ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಗೆ ಪ್ರವೇಶ ಪಡೆದುಕೊಂಡದ್ದು ಇದೇ ಪ್ರಪ್ರಥಮ. ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿದ್ದ ಸುಶೀಲ್ ಕುಮಾರ್ ಅವರ ಗೈರುಹಾಜರಿಯು ನರಸಿಂಗ್ ಅವರಿಗೆ 74 ಕೆಜಿ ವಿಭಾಗದಲ್ಲಿ ಪದಕ ಗೆಲ್ಲಲು ಅನುಕೂಲ ಮಾಡಿಕೊಟ್ಟಿತು.
2015: ಲಾಸ್ ವೆಗಾಸ್ನ ಎಂಜಿಎಂ ಗ್ರಾಂಡ್ ಗಾರ್ಡನ್ ಅರೇನಾದಲ್ಲಿ ನಡೆದ ಶತಮಾನದ ಬಾಕ್ಸಿಂಗ್ ಪಂದ್ಯದಲ್ಲಿ ತಮ್ಮ ವೃತ್ತಿ ಬದುಕಿನ ಕೊನೆ ಪಂದ್ಯವನ್ನಾಡಿದ ಬಾಕ್ಸಿಂಗ್ ಜಗತ್ತಿನ ಶ್ರೇಷ್ಠ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಗೆಲುವು ಸಾಧಿಸಿದರು. ಈ ಮೂಲಕ ವೃತ್ತಿ ಜೀವನದ ಕೊನೆಯ ಪಂದ್ಯವನ್ನು ಮೇವೆದರ್ ಶತಮಾನದ ಗೆಲುವಿನ ಮೂಲಕ ಅಭಿಮಾನಿಗಳಿಗೆ ಅವಿಸ್ಮರಣಿಯವಾಗಿಸಿದರು. ಭಾರತೀಯ ಕಾಲಮಾನ ಬೆಳಗ್ಗೆ 8.30ಕ್ಕೆ ಆರಂಭವಾದ ಪಂದ್ಯದಲ್ಲಿ ಮೇವೆದರ್ ಅಮೆರಿಕದವರೇ ಆದ ಆಂಡ್ರೆ ಬೆಟೋ ವಿರುದ್ಧ ಸೆಣಸಿ ಗೆಲುವಿನ ನಗೆ ಬೀರಿದರು.
2015: ಮೆಕ್ಕಾ: 107 ಜನರ ಸಾವಿಗೆ ಕಾರಣವಾದ ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ಸಂಭವಿಸಿದ ಕ್ರೇನ್ ಕುಸಿತದ ಘಟನೆ ದೇವರ ಆಟವೆಂದು ಎಂಜಿನಿಯರ್ ನೀಡಿರುವ ಹೇಳಿಕೆ ನೀಡಿದರು. ಗ್ರ್ಯಾಂಡ್ ಮಸೀದಿಯ ನವೀಕರಣ ಹಾಗೂ ಅಗಲೀಕರಣದ ಗುತ್ತಿಗೆ ಪಡೆದಿರುವ ಸೌದಿ ಬಿನ್ಲಾಡಿನ್ ಸಮೂಹದ ಇಂಜಿನಿಯರ್ ಆಗಿರುವ ಈತ, ಕ್ರೇನ್ಗಳನ್ನು ಸರಿಯಾಗಿಯೇ ಅಳವಡಿಸಲಾಗಿತ್ತು. ಎಲ್ಲಿಯೂ ಕೂಡ ತಾಂತ್ರಿಕ ದೋಷವಿರಲಿಲ್ಲ. ಆದರೂ ಕ್ರೇನ್ ಕುಸಿದಿದೆ. ಇದಕ್ಕೆ ದೇವರ ಕೋಪವೇ ಕಾರಣವಾಗಿರಬಹುದೆಂದು ಎಂಜಿನಿಯರ್ ಹೇಳಿದರು. ಇದೇ ವೇಳೆ, ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಹಜ್ ಯಾತ್ರೆಗೆ ಆಗಮಿಸುತ್ತಾರೆಂದು ಗೊತ್ತಿದ್ದರೂ, ಗ್ರ್ಯಾಂಡ್ ಮಾಸ್ಕ್ನ ನಿರ್ವಹಣೆಕಾರರು ಸುರಕ್ಷತೆಗೆ ಆದ್ಯತೆ ನೀಡದೆ ಮನಬಂದಂತೆ ಕ್ರೇನ್ಗಳನ್ನು ಅಳವಡಿಸುತ್ತಿರುವ ಬಗ್ಗೆ ಇಸ್ಲಾಮಿಕ್ ಪಾರಂಪರಿಕ ಸಂಶೋಧನಾ ಪ್ರತಿಷ್ಠಾನದ ಸಹಸಂಸ್ಥಾಪಕ ಇರ್ಫಾನ್ ಅಲ್ ಅಲ್ವಿ ಆಕ್ರೋಶ ವ್ಯಕ್ತಪಡಿಸಿದರು. ಪಾರಂಪರಿಕ ಕಟ್ಟಡದ ಸುರಕ್ಷತೆಯನ್ನು ಕೂಡ ನಿರ್ಲಕ್ಷಿಸಿ, ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗಿದೆ. ಮನಬಂದಂತೆ ಮಸೀದಿಯ ತುಂಬೆಲ್ಲಾ ಕ್ರೇನ್ಗಳನ್ನು ಅಳವಡಿಸಲಾಗಿದೆ. ಯಾತ್ರಿಕರ ಸುರಕ್ಷತೆಯನ್ನು ಕೂಡ ಕಡೆಗಣಿಸಿ, ಕಾಮಗಾರಿ ನಡೆಸಲಾಗುತ್ತಿದೆ. ಇದು ಅನಾಹುತಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಸೌದಿ ಅರೇಬಿಯಾದ ರಾಜ ಸಲ್ಮಾನ್, ಶನಿವಾರ ನಡೆದಿರುವ ಕ್ರೇನ್ ಕುಸಿತದ ಘಟನೆಗೆ ಮೂಲಕಾರಣವೇನೆಂಬುದನ್ನು ಪತ್ತೆ ಮಾಡಲಾಗುವುದೆಂದು ಹೇಳಿದರು.ಘಟನೆಗೆ ಕಾರಣವೇನೆಂಬುದನ್ನು ಎಲ್ಲಾ ರೀತಿಯಲ್ಲೂ ತನಿಖೆ ಮಾಡಲಾಗುವುದು. ಬಳಿಕ ಸಾರ್ವಜನಿಕರಿಗೆ ತನಿಖೆಯ ಕಾರಣವನ್ನು ವಿವರಿಸಲಾಗುವುದೆಂದು ಘೋಷಿಸಿದರು.
2008: ರಾಜಧಾನಿ ದೆಹಲಿಯಲ್ಲಿ ಈದಿನ ಸಂಜೆ ಮೂರು ಪ್ರಮುಖ ಜನನಿಬಿಡ ಮಾರುಕಟ್ಟೆ ಪ್ರದೇಶಗಳಾದ ಕರೋಲ್ ಬಾಗಿನ ಗಫಾರ್ ಮಾರುಕಟ್ಟೆ, ಕನ್ನಾಟ್ ಪ್ಲೇಸ್ ಮತ್ತು ಗ್ರೇಟರ್ ಕೈಲಾಸದಲ್ಲಿ 45 ನಿಮಿಷಗಳ ಅಂತರದಲ್ಲಿ ಮೂರು ಶಕ್ತಿಶಾಲಿ ಬಾಂಬುಗಳು ಸ್ಫೋಟಿಸಿದ್ದರಿಂದ 30 ಜನರು ಸತ್ತು, ಕನಿಷ್ಠ 90 ಮಂದಿ ಗಾಯಗೊಂಡರು. ಭಯೋತ್ಪಾದಕರ ಈ ಪೈಶಾಚಿಕ ಕೃತ್ಯದಿಂದ ಇಡೀ ರಾಜಧಾನಿ ನಡುಗಿತು. ಮೂರೂ ಪ್ರದೇಶಗಳಲ್ಲಿ ಒಂದರ ಹಿಂದೆ ಒಂದರಂತೆ ಕೆಲವೇ ನಿಮಿಷಗಳ ಅಂತರದಲ್ಲಿ ಬಾಂಬ್ ಸ್ಛೋಟಗೊಂಡಿತು.
2008: ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಕಣ್ಣಿಗೆ ಕಾಣದಷ್ಟು ದೂರ ಗಗನದಿಂದ ಗಗನಕ್ಕೆ ಚಿಮ್ಮುವ ಸಾಮರ್ಥ್ಯದ `ಅಸ್ತ್ರ' ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಭಾರತವು ರಕ್ಷಣಾ ರಂಗದಲ್ಲಿ ಇನ್ನೊಂದು ದಾಪುಗಾಲು ಹಾಕಿತು. ಒರಿಸ್ಸಾದ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಲ್ಲಿ (ಐಟಿಆರ್)ಅಸ್ತ್ರದ ಪ್ರಯೋಗ ಯಶಸ್ವಿಯಾಗಿ ನೆರವೇರಿತು. ಐಟಿಆರ್ ನ ಎರಡನೇ ಚಿಮ್ಮು ಹಲಗೆಯ ಮೇಲಿನಿಂದ ಅಸ್ತ್ರ ಕ್ಷಿಪಣಿಯನ್ನು ಮಧ್ಯಾಹ್ನ 12 ಗಂಟೆ 5 ನಿಮಿಷಕ್ಕೆ ಸರಿಯಾಗಿ ಗಗನದತ್ತ ಚಿಮ್ಮಿಸಲಾಯಿತು.
2007: ಶ್ರೀರಾಮಚಂದ್ರ ಅಥವಾ ರಾಮಾಯಣದ ಪಾತ್ರಗಳ ಅಸ್ತಿತ್ವವನ್ನು ಸಮರ್ಥಿಸುವ ಚಾರಿತ್ರಿಕ ಪುರಾವೆಗಳಿಲ್ಲ ಎಂಬುದಾಗಿ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದ ಕೇಂದ್ರ ಸರ್ಕಾರವು ಅದರಲ್ಲಿನ ಆಕ್ಷೇಪಾರ್ಹ ಭಾಗಗಳನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿತು. ಸೇತುಸಮುದ್ರಂ ಕಡಲ್ಗಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರವನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದ ಬಳಿಕ ಸಂಘ ಪರಿವಾರದಿಂದ ತೀವ್ರ ವಾಗ್ದಾಳಿಗೆ ತುತ್ತಾದ ಸರ್ಕಾರ ಈದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಧ್ಯಪ್ರವೇಶದ ಬಳಿಕ ಈ ನಿರ್ಧಾರಕ್ಕೆ ಬಂದಿತು. ಕಾನೂನು ಸಚಿವ ಭಾರದ್ವಾಜ್ ಪ್ರಮಾಣ ಪತ್ರದಲ್ಲಿರುವ ಆಕ್ಷೇಪಾರ್ಹ ಭಾಗಗಳನ್ನು ಹಿಂದಕ್ಕೆ ಪಡೆಯುವುದಾಗಿಯೂ ಶುಕ್ರವಾರ ಈ ಸಂಬಂಧ ನ್ಯಾಯಾಲಯಕ್ಕೆ ಪೂರಕ ಪ್ರಮಾಣಪತ್ರ ಸಲ್ಲಿಸುವುದಾಗಿಯೂ ಪ್ರಕಟಿಸಿದರು.
2007: ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಈದಿನ ಸರಣಿ ಭೂಕಂಪಗಳು ಸಂಭವಿಸಿ, ಕನಿಷ್ಠ 6 ಜನ ಮೃತರಾದರು. ಈ ಹಿನ್ನೆಲೆಯಲ್ಲಿ ಇಲ್ಲಿನ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಯಿತು. ಒಂದೇ ಒಂದು ದಿನದಲ್ಲಿ ರಿಕ್ಟರ್ ಮಾಪಕದಲ್ಲಿ 4.9ರಿಂದ 8.4ರವರೆಗಿನ 19 ಕಂಪನಗಳು ಸಂಭವಿಸಿದವು. ರಿಕ್ಟರ್ ಮಾಪಕದಲ್ಲಿ 8.4ರಷ್ಟಿದ್ದ ಈದಿನ ರಾತ್ರಿಯ ಭೂಕಂಪ, ವಿಶ್ವದಾದ್ಯಂತ ಈ ವರ್ಷ ಸಂಭವಿಸಿದ ಭೂಕಂಪಗಳಲ್ಲೇ ಅತಿ ಪ್ರಬಲವಾದದ್ದು ಎನ್ನಲಾಗಿತ್ತು. ಈ ಭೂಕಂಪದಲ್ಲಿ ನೂರಾರು ಮಂದಿ ಗಾಯಗೊಂಡರು.
2007: ಚುನಾವಣೆಯ ಸುಳಿವಿನ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಮತ್ತು ಕ್ರೈಸ್ತರಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿಗೆ ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತು. ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗದವರಿಗೆ ನೀಡಲಾಗುತ್ತಿರುವ ಶೇ 30ರಷ್ಟು ಮೀಸಲಾತಿಯಲ್ಲಿ ಮುಸ್ಲಿಂ ಹಾಗೂ ಕ್ರೈಸ್ತರಿಗೆ ಪ್ರತ್ಯೇಕವಾಗಿ ಶೇ. 3.5ರಷ್ಟು ಮೀಸಲಾತಿ ಕಲ್ಪಿಸಲು ಸರ್ಕಾರ ನಿರ್ಧರಿಸಿತು ಎಂದು ಎಂದು ಮುಖ್ಯಮಂತ್ರಿ ಎಂ.ಕರುಣಾನಿಧಿ ಪ್ರಕಟಿಸಿದರು.
2007: ಅಸ್ಸಾಮಿನ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕಿ ಮತ್ತು ಉಲ್ಫಾ ಶಾಂತಿ ಸಂಧಾನದ ರೂವಾರಿ ಇಂದಿರಾ ಗೋಸ್ವಾಮಿ ಅವರಿಗೆ ಲಘು ಪಾಶ್ರ್ವವಾಯು ತಗುಲಿತು. ತತ್ ಕ್ಷಣ ಅವರನ್ನು ಗುವಾಹಟಿಯ ಸ್ಥಳೀಯ ನರ್ಸಿಂಗ್ ಹೋಮ್ ಗೆ ದಾಖಲಿಸಲಾಯಿತು. ಇಂದಿರಾ ಗೋಸ್ವಾಮಿಯವರು ಅಸ್ಸಾಂ ಬಂಡುಕೋರರ ಸಮಸ್ಯೆ ಕುರಿತಂತೆ ಕೇಂದ್ರ ಸರ್ಕಾರದೊಡನೆ ನಡೆಸಿದ ಮಾತುಕತೆಯಲ್ಲಿ ಉಲ್ಫಾ ಸಂಘಟನೆಯ ಪರಗಿ ಭಾಗವಹಿಸಿದ್ದರು. ಪರಿಣಾಮವಾಗಿ ಜನತಾ ಸಮಾಲೋಚನಾ ತಂಡ (ಪಿಸಿಜಿ) ರಚಿಸಲಾಗಿತ್ತು.
2007: ಮಂಗಳೂರಿನ ತಣ್ಣೀರುಬಾವಿ ತೀರದ ಸಮೀಪ ಕಡಲಲ್ಲಿ ಎಂಟು ದಿನಗಳಿಂದ ವಾಲಿಕೊಂಡು ಅತಂತ್ರ ಸ್ಥಿತಿಯಲ್ಲಿದ್ದ ಚೀನಾ ಮೂಲದ ಹಡಗು `ಚಾಂಗ್-ಲೆ-ಮೆನ್' ಕಡೆಗೂ ಈದಿನ ಬೆಳಿಗ್ಗೆ ಯಶಸ್ವಿಯಾಗಿ ಆಳ ಸಮುದ್ರಕ್ಕೆ ಇಳಿಯಿತು. ಹಡಗನ್ನು ಸಮತೋಲನಕ್ಕೆ ತರುವ ನಿರಂತರ ಆರು ದಿನಗಳ ಕಾರ್ಯಾಚರಣೆ ಹಿಂದಿನ ರಾತ್ರಿ ಯಶಸ್ವಿಯಾಗಿದ್ದು, ಸುಮಾರು 16 ಡಿಗ್ರಿ ವಾಲಿಕೊಂಡಿದ್ದ ಹಡಗು ಸಮಸ್ಥಿತಿಗೆ ಬಂದಿತ್ತು. ಧಾರಾಕಾರ ಮಳೆ ಸುರಿದದ್ದೂ ಸಮುದ್ರತೀರದಲ್ಲಿ ಮಟ್ಟ ಏರಿಕೆಗೆ ಕಾರಣವಾಗಿ ಹಡಗನ್ನು ಆಳಸಮುದ್ರಕ್ಕೆ ಇಳಿಸಲು ಅನುಕೂಲವಾಯಿತು. ಸಾಲ್ವೇಜ್ (ವಿಮೋಚನಾ) ತಂಡ, ಎನ್ ಎಂಪಿಟಿ ಸಿಬ್ಬಂದಿ ಹಾಗೂ ಯೋಜನಾ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿಯಿತು. ಒಟ್ಟು 28 ಪಯಣಿಗರೊಂದಿಗೆ 16,100 ಟನ್ ಹೊತ್ತು ಸೆ.6 ರಂದು ಮಂಗಳೂರಿನ ಎನ್ ಎಂಪಿಟಿಯಿಂದ ಹೊರಟ ಚಾಂಗ್-ಲೆ-ಮೆನ್ ಕೇವಲ ಏಳು ನಾಟಿಕಲ್ ಮೈಲ್ ದೂರದ ಯಾನದಲ್ಲೇ ವಾಲಲು ಆರಂಭಗೊಂಡ ಪರಿಣಾಮ ತಣ್ಣೀರುಬಾವಿ ತೀರ ಸಮೀಪ ಮರಳಿನಲ್ಲಿ ಸಿಕ್ಕಿಹಾಕಿಕೊಂಡಿತ್ತು.
2007: ವಾಯವ್ಯ ಪಾಕಿಸ್ತಾನದ ಗುಡ್ಡಗಾಡು ಪ್ರದೇಶದ ಜಹನಾಬಾದ್ ಗ್ರಾಮದಲ್ಲಿನ ಬೃಹದಾಕಾರದ ಬುದ್ಧನ ಪ್ರತಿಮೆಯನ್ನು ಸ್ಫೋಟಿಸಲು ಶಂಕಿತ ತಾಲಿಬಾನ್ ಉಗ್ರರು ಯತ್ನಿದರು. ಇದರಿಂದ ಪ್ರತಿಮೆಗೆ ಸ್ವಲ್ಪಪ್ರಮಾಣದ ಹಾನಿಯಾಯಿತು. ಆಫ್ಘಾನಿಸ್ಥಾನ ಗಡಿಯಲ್ಲಿನ ಜಹನಾಬಾದ್ ಗ್ರಾಮವು ತಾಲಿಬಾನ್ ಪರ ಉಗ್ರರ ಪ್ರಬಲ ಹಿಡಿತದಲ್ಲಿದೆ. 2001 ರಲ್ಲಿ ತಾಲಿಬಾನ್ ಉಗ್ರರು ಆಫ್ಘಾನಿಸ್ಥಾನದಲ್ಲಿನ ಬೃಹದಾಕಾರದ ಬುದ್ಧನ ಪ್ರತಿಮೆಯನ್ನು ನಾಶಪಡಿಸಿದ್ದರು. ಪಾಕಿಸ್ಥಾನದಲ್ಲಿ ಇಂತಹ ಕೃತ್ಯಕ್ಕೆ ಉಗ್ರರು ಯತ್ನಿಸಿದ್ದು ಇದೇ ಮೊದಲ ಬಾರಿ.
2007: ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು ಅತ್ಯುತ್ತಮ ಸಂಸದೀಯಪಟು ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಂಸದರು ಎಂಬ ಹೆಗ್ಗಳಿಕೆಗೆ ಇದೀಗ ಪಾತ್ರರಾದರು. ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರತಿಭಾ ಪಾಟೀಲ್ ಅವರಿಂದ ಸುಷ್ಮಾ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಸಚಿವರಾದ ಪಿ. ಚಿದಂಬರಂ, ಶರದ್ ಪವಾರ್, ಮಣಿಶಂಕರ್ ಅಯ್ಯರ್ ಅವರಿಗೂ ಇದೇ ಸಂದರ್ಭದಲ್ಲಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಪ್ರದಾನ ಮಾಡಲಾಯಿತು.
2007: ಐತಿಹಾಸಿಕ ಕೆಂಪು ಕೋಟೆ ಮೇಲೆ ಏಳು ವರ್ಷಗಳ ಹಿಂದೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್-ಎ-ತೋಯ್ಬಾ ಉಗ್ರ ಮೊಹಮ್ಮದ್ ಅಷ್ಫಾಕನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಒಳಗಾಗಿದ್ದ ಇತರ ಆರು ಜನ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಅಷ್ಫಾಕ್ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಆರ್.ಎಸ್. ಸೋಧಿ ಹಾಗೂ ಪಿ.ಕೆ. ಭಾಸಿನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿಯಿತು. ದೆಹಲಿಯ ಕೆಂಪು ಕೋಟೆ ಮೇಲೆ 2000ನೇ ಇಸ್ವಿಯ ಡಿಸೆಂಬರ್ 22ರಂದು ದಾಳಿ ಮಾಡಿ ಇಬ್ಬರು ಸೈನಿಕರು ಸೇರಿದಂತೆ ಮೂವರನ್ನು ಹತ್ಯೆಗೈದ ಆರೋಪದ ಮೇಲೆ ಅಷ್ಫಾಕನನ್ನು ಬಂಧಿಸಲಾಗಿತ್ತು.
2006: ಬೆಂಗಳೂರು ಮಹಾನಗರ ಪಾಲಿಕೆ, ಏಳು ನಗರಸಭೆಗಳು ಮತ್ತು ಒಂದು ಪುರಸಭೆಯನ್ನು ಸೇರಿಸಿ `ಗ್ರೇಟರ್ ಬೆಂಗಳೂರು' ರಚಿಸುವ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿತು. ರಾಜ್ಯೋತ್ಸವದ ಒಳಗಾಗಿ ಇದಕ್ಕೆ ಸ್ಪಷ್ಟ ಸ್ವರೂಪ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದರು.
2006: ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಜೀವನದ ಮೊತ್ತ ಮೊದಲ ಸಾಧನೆಯನ್ನು ವಿಶ್ವಕ್ಕೆ ಎತ್ತಿ ತೋರಿಸಿದ ಖ್ಯಾತ ಕ್ರಿಕೆಟ್ ಅಂಕಿ ಅಂಶ ತಜ್ಞ ಡಾ. ವಸಂತ ನಾಯಕ್ (82) ಇಂಗ್ಲೆಂಡಿನಲ್ಲಿ ತಮ್ಮ ನಿವಾಸದ್ಲಲಿಯೇ ನಿಧನರಾದರು. 1987-88ರಲ್ಲಿ ಸಚಿನ್ ಮತ್ತು ವಿನೋದ ಕಾಂಬ್ಳಿ ಅವರು ಶಾಲಾ ಮಟ್ಟದ ಪಂದ್ಯವೊಂದರಲ್ಲಿ ವಿಶ್ವ ದಾಖಲೆ ಮಟ್ಟದ ಜೊತೆಯಾಟ ಆಡಿದ್ದರು. ಹ್ಯಾರಿಸ್ ಶೀಲ್ಡ್ ಟೂರ್ನಿಯಲ್ಲಿ ಮುಂಬೈನ ಈ ಇಬ್ಬರು ಬ್ಯಾಟ್ಸ್ ಮನ್ನರು 664 ರನ್ ಸೇರಿಸಿದ್ದರು. ಇದು ತೆಂಡೂಲ್ಕರ್ ಕ್ರಿಕೆಟ್ ಜೀವನದ ಮೊತ್ತ ಮೊದಲ ದಾಖಲೆ. ಇದನ್ನು ವಿಶ್ವದ ಗಮನಕ್ಕೆ ಬರುವಂತೆ ಮಾಡಿದ್ದ ವಸಂತ್ ನಾಯಕ್. ಅವರ ಪ್ರಯತ್ನದ ಫಲವಾಗಿ ತೆಂಡೂಲ್ಕರ್ ಅವರ ಈ ಸಾಧನೆ ವಿಸ್ಡನ್ ಕ್ರಿಕೆಟರ್ಸ್ ಅಲ್ಮೆನಾಕ್ ಮತ್ತು ಗಿನ್ನೆಸ್ ವಿಶ್ವದಾಖಲೆ ಪುಸ್ತಕಗಳಿಗೆ ಸೇರ್ಪಡೆಯಾಗಿತ್ತು. ಹೀಗಾಗಿಯೇ ವಸಂತ್ ವಿಶ್ವದ ಖ್ಯಾತ ಅಂಕಿ ಅಂಶ ತಜ್ಞರ ಸಾಲಿನಲ್ಲಿ ಸ್ಥಾನ ಪಡೆದಿದ್ದರು. `ಹಿಸ್ಟರಿ ಆಫ್ ವರ್ಲ್ಡ್ ಕ್ರಿಕೆಟ್' ಪುಸ್ತಕವು ಕ್ರಿಕೆಟ್ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆ. ವೃತ್ತಿಯಿಂದ ವೈದ್ಯರಾಗಿದ್ದರೂ ಕ್ರಿಕೆಟಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ವಸಂತ್ 1996ರಲ್ಲಿ ಇಂಗ್ಲೆಂಡಿಗೆ ವಲಸೆ ಹೋಗಿ ಅಲ್ಲಿಯೇನೆಲಸಿದ್ದರು.
2006: ದುರಂತ ಸಂಭವಿಸಿದ 22 ವರ್ಷಗಳ ಬಳಿಕ ಕಟ್ಟ ಕಡೆಯ ಪರಿಹಾರ ಚೆಕ್ಕನ್ನು ಭೋಪಾಲಿನ ಯೂನಿಯನ್ ಕಾರ್ಬೈಡ್ ವಿಷಾನಿಲ ದುರಂತದ ಸಂತ್ರಸ್ತನಿಗೆ ನೀಡಲಾಯಿತು. ಇದರೊಂದಿಗೆ ವಿಷಾನಿಲ ದುರಂತ ಸಂತ್ರಸ್ತರಿಗೆ ಪರಿಹಾರ ಪಾವತಿ ಪ್ರಕ್ರಿಯೆ ಪೂರ್ಣಗೊಂಡಿತು. ಸಂತ್ರಸ್ತರಿಗೆ ಒಟ್ಟು 3040 ಕೋಟಿ ರೂಪಾಯಿಗಳನ್ನು 5.74 ಲಕ್ಷ ಸಂತ್ರಸ್ತರಿಗೆ ಎರಡು ಕಂತುಗಳಲ್ಲಿ ವಿತರಿಸಲಾಯಿತು. ಪ್ರತಿಯೊಬ್ಬ ಸಂತ್ರಸ್ತನಿಗೆ ಸರಾಸರಿ 50,000 ರೂಪಾಯಿ ಪರಿಹಾರ ನೀಡಲಾಯಿತು. 1987ರಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಮತ್ತು ಭಾರತ ಸರ್ಕಾರದ ಮಧ್ಯೆ ಅಂತಿಮಗೊಳಿಸಲಾದ ಒಪ್ಪಂದದ ಮೇರೆಗೆ ಕಂಪೆನಿಯಿಂದ ಪಾವತಿ ಮಾಡಲಾದ 470 ದಶಲಕ್ಷ ಡಾಲರ್ ಹಣದಿಂದ ಈ ಪರಿಹಾರಗಳನ್ನು ನೀಡಲಾಯಿತು. ಕೇಂದ್ರ ಸರ್ಕಾರವು ಮಸೂದೆಯೊಂದರ ಮೂಲಕ ಸಂತ್ರಸ್ತರ ಪರವಾಗಿ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ವಿರುದ್ಧ ಖಟ್ಲೆ ಹೂಡುವ ಹಕ್ಕು ಪಡೆದುಕೊಂಡಿತ್ತು. ಕಾರ್ಪೊರೇಷನ್ ಹಣಸಂದಾಯ ಮಾಡಿದ ಬಳಿಕವೂ ಸಂತ್ರಸ್ತರಿಗೆ ಪರಿಹಾರ ಧನ ವಿತರಿಸಲು 6 ವರ್ಷಗಳು ಬೇಕಾದವು. 1984ರ ಡಿಸೆಂಬರ್ 3ರ ರಾತ್ರಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಸೋರಿಕೆಯಾದ ವಿಷಾನಿಲ ನಗರದ 36 ಮತ್ತು 56ನೇ ವಾರ್ಡುಗಳಲ್ಲಿ ಹರಡಿ 5.72 ಲಕ್ಷಕ್ಕೂ ಹೆಚ್ಚು ಮಂದಿ ನಿವಾಸಿಗಳು ತೀವ್ರ ತೊಂದರೆಗೆ ಈಡಾದರು. ಸಹಸ್ರಾರು ಮಂದಿ ಅಸು ನೀಗಿದರೆ ಬಹಳಷ್ಟು ಮಂದಿಯ ಆರೋಗ್ಯ ಹದಗೆಟ್ಟಿತು.
2006: ಉಡುಪಿ ತಾಲ್ಲೂಕಿನ ಹಳ್ಳಿಹೊಳೆ ಬಳಿಯ ಬೊಮ್ಮನಹಳ್ಳದ ದಟ್ಟ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರು ಮತ್ತು ಪೊಲೀಸರ ಮಧ್ಯ ಗುಂಡಿನ ಚಕಮಕಿ ನಡೆಯಿತು. ಆದರೆ ಯಾವುದೇ ಸಾವು ನೋವು ಸಂಭವಿಸಲಿಲ್ಲ.
2006: ನವಜಾತ ಶಿಶುಗಳಲ್ಲಿ ಹೃದಯದ ತೊಂದರೆಯ ಬಗ್ಗೆ ಸಂಶೋಧನೆ ನಡೆಸಿದ ಭಾರತೀಯ ಮೂಲದ ವಿಜ್ಞಾನಿ ಮಾಲಾ ಆರ್. ಚಿನಾಯ್ ಅವರನ್ನು 2006ನೇ ಸಾಲಿನ ಪ್ರತಿಷ್ಠಿತ `ಸೈನ್ಸ್ ಸ್ಪೆಕ್ಟ್ರಮ್ ಟ್ರಯಲ್ ಬ್ಲೇಜರ್ ಪ್ರಶಸ್ತಿಗೆೆ ಆಯ್ಕೆ ಮಾಡಲಾಯಿತು. ವಾಷಿಂಗ್ಟನ್ನ ಪೆನ್ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಚಿನಾಯ್ ಟ್ರಯಲ್ ಬ್ಲೇಜರ್ ಪ್ರಶಸ್ತಿ ಪಡೆದ ಐವರು ಭಾರತೀಯ ಮೂಲದ ವಿಜ್ಞಾನಿಗಳಲ್ಲಿ ಒಬ್ಬರು. ವೀಣಾ ರಾವ್, ಶರ್ಮಿಳಾ ಮಜುಂದಾರ್, ಸತ್ಯೇಂದ್ರ ಗುಪ್ತ, ಮತ್ತು ಸತೀಶ ಗದ್ದೆ ಪ್ರಶಸ್ತಿ ಪಡೆದ ಇತರ ಪ್ರತಿಭಾವಂತರು.
2006: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯು ಬ್ಯಾರೆಲ್ ಒಂದಕ್ಕೆ ಈ ಹಿಂದೆ ದಾಖಲಾಗಿದ್ದ ಅತಿ ಹೆಚ್ಚು ಬೆಲೆಯಿಂದ 16 ಡಾಲರುಗಳಷ್ಟು ಭಾರಿ ಇಳಿಕೆ ಕಂಡಿತು. ಇದು ಕಳೆದ 16 ವರ್ಷಗಳಲ್ಲಿನ ಅತಿ ಹೆಚ್ಚಿನ ಕುಸಿತ ಎಂದು ಸಿಂಗಪುರ ಮಾರುಕಟ್ಟೆ ಮೂಲಗಳು ತಿಳಿಸಿದವು. ಆಗಸ್ಟ್ 8ರಂದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯು ಬ್ಯಾರೆಲ್ಲಿಗೆ 78.65 ಡಾಲರ್ ಇತ್ತು. ಇದು ಈಗ 63 ಡಾಲರಿಗೆ ಕುಸಿದಿದೆ. 1990ರಲ್ಲಿ ಕುವೈಟನ್ನು ಇರಾಕ್ ಆಕ್ರಮಿಸಿದ್ದ ಸಂದರ್ಭ 40 ಡಾಲರುಗಳಷ್ಟಿದ್ದ ತೈಲ ಬೆಲೆ 16 ಡಾಲರಿಗೆ ಕುಸಿದುದೇ ಇದುವರೆಗಿನ ಅತಿ ಹೆಚ್ಚಿನ ಇಳಿಕೆಯಾಗಿತ್ತು.
2000: ಅಯೋಡೀಕೃತವಲ್ಲದ ಉಪ್ಪಿನ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿತು.
1996: ಲೋಕಸಭೆಯಲ್ಲಿ ಲೋಕಪಾಲ ಮಸೂದೆ ಮಂಡಿಸಲಾಯಿತು.
1992: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಚನೆಗೆ ಕೇಂದ್ರ ಸರ್ಕಾರದ ನಿರ್ಧಾರ.
1984: ಸ್ವಾತಂತ್ರ್ಯ ಸೇನಾನಿ ಸ್ವಾಮಿ ಬ್ರಹ್ಮಾನಂದ (4-12-1894ರಿಂದ 13-9-1984)ಅವರು ನಿಧನರಾದರು. ಉತ್ತರ ಪ್ರದೇಶದ ಹಮೀರಪುರದಲ್ಲಿ ಜನಿಸಿದ್ದ ಬ್ರಹ್ಮಾನಂದ ಅವರು 1918ರಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿ, ದಂಡಿ ಸತ್ಯಾಗ್ರಹ, ಅಸಹಕಾರ ಚಳವಳಿ ಹಾಗೂ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಲವಾರು ಬಾರಿ ಸೆರೆಮನೆ ಸೇರಿದ್ದರು. ದುರ್ಬಲರ ಏಳಿಗೆಗಾಗಿಯೂ ದುಡಿದ ಬ್ರಹ್ಮಾನಂದ ಅವರು ಬ್ರಹ್ಮಾನಂದ ಇಂಟರ್ ಕಾಲೇಜು (1943), ಬ್ರಹ್ಮಾನಂದ ಮಹಾ ವಿದ್ಯಾಲಯ (1960) ಇತ್ಯಾದಿ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಿದ್ದರು.
1971: ವಿಶ್ವ ಹಾಕಿ ಸಂಘದ ರಚನೆಯಾಯಿತು.
1954: ಸಾಹಿತಿ ನಾಗತ್ನಕುಮಾರಿ ಬಿ.ಎಸ್. ಜನನ.
1943: ಸಾಹಿತಿ ಕೆ.ಪಿ. ಪುತ್ತೂರಾಯ ಜನನ.
1936: ವಿದ್ವಾಂಸ, ಭಾಷಾ ವಿಜ್ಞಾನಿ, ಪ್ರಾಧ್ಯಾಪಕ ಡಾ. ಬಿ.ನಂ. ಚಂದ್ರಯ್ಯ ಅವರು ನಂಜುಂಡಾರಾಧ್ಯ- ಅಕ್ಕ ಹೊನ್ನಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆಯ ಕೆಸ್ತೂರಿನಲ್ಲಿ ಜನಿಸಿದರು., ಕಾದಂಬರಿ, ಖಂಡಕಾವ್ಯ, ಜೀವನಚರಿತ್ರೆ ಸೇರಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಚಂದ್ರಯ್ಯ ಅವರಿಗೆ ಡಾ. ಜ.ಚ.ನಿ. ವಿದ್ಯಾಸಂಸ್ಥೆಯ ಭಾರತೀಯ ಭಾಷಾ ವಿಜ್ಞಾನಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ದೇವಾಂಗ ಸಂಸ್ಥಾನ ಮಠದ ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ, ಅಲಹಾಬಾದ್ ಸಂಸ್ಥೆಯಿಂದ ಸಾಹಿತ್ಯ ಮಹೋಪಾಧ್ಯಾಯ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಲಭಿಸಿವೆ.
1934: ಸಾಹಿತಿ ರೋಹಿತ ದಾಸಮಹಾಲೆ ಜನನ.
1929: ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ದಾಸ್ ಅವರು ತಮ್ಮ ನಿರಶನ ಸತ್ಯಾಗ್ರಹದ 63ನೇ ದಿನ ಲಾಹೋರ್ ಸೆರೆಮನೆಯಲ್ಲಿ ಅಸುನೀಗಿದರು. ಸೆರೆಮನೆಯಲ್ಲಿನ ನಿಕೃಷ್ಠ ಪರಿಸ್ಥಿತಿ ಹಾಗೂ ವಿಚಾರಣಾಧೀನ ರಾಜಕೀಯ ಕೈದಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಪ್ರತಿಭಟಿಸಿ ಸೆರೆಮನೆಯೊಳಗೇ ಅವರು ಉಪವಾಸ ಆರಂಭಿಸಿದ್ದರು. ಅವರ ಪಾರ್ಥಿವ ಶರೀರವನ್ನು ಲಾಹೋರಿನಿಂದ ಕಲ್ಕತ್ತಕ್ಕೆ (ಇಂದಿನ ಕೋಲ್ಕತ್ತಾ) ರೈಲಿನಲ್ಲಿ ಒಯ್ಯುವಾಗ ಪ್ರತಿ ನಿಲ್ದಾಣದಲ್ಲೂ ಸಹಸ್ರಾರು ಮಂದಿ ನೆರೆದು ತಮ್ಮ ಗೌರವ ಅರ್ಪಿಸಿದರು. ಕಲ್ಕತ್ತದದಲ್ಲಿ 6 ಲಕ್ಷ ಮಂದಿ ಅವರ ಅಂತ್ಯ ಸಂಸ್ಕಾರ ಮೆರವಣಿಗೆಯಲ್ಲಿ ಪಾಲ್ಗೊಂಡರು.
1922: ಲಿಬಿಯಾದ ಎಲ್ ಅಜೀಜಿಯಾದಲ್ಲಿ 136.4 ಡಿಗ್ರಿ ಫ್ಯಾರನ್ ಹೀಟ್ ಅಥವಾ 58 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆ ದಾಖಲಾಯಿತು. ಇದು ಗರಿಷ್ಠ ದಾಖಲೆಯ ಉಷ್ಣತೆ.
1906: ಯುರೋಪಿನಲ್ಲಿ ಮೊದಲ ವಿಮಾನ ಹಾರಾಟ ನಡೆಯಿತು.
1893: ಪ್ರಾರ್ಥನಾ ಸಮಾಜದ ಸ್ಥಾಪಕರಲ್ಲಿ ಒಬ್ಬರಾದ ಮಾಮಾ ಪರಮಾನಂದ ನಿಧನ.
1857: ಅಮೆರಿಕದ ಉತ್ಪಾದಕ ಹಾಗೂ ದಾನಿ ಮಿಲ್ಟನ್ ಸ್ನಾವೆಲ್ ಹರ್ಷ್ (1857-1945) ಜನ್ಮದಿನ. ಇವರು ಸ್ಥಾಪಿಸಿದ ಹರ್ಷ್ ಚಾಕೋಲೆಟ್ ಕಾರ್ಪೊರೇಷನ್ ಜಗತ್ತಿನಾದ್ಯಂತ ಚಾಕೋಲಟನ್ನು ಜನಪ್ರಿಯಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.
1813: ಡೇನಿಯಲ್ ಮ್ಯಾಕ್ ಮಿಲನ್ (1813-57) ಜನ್ಮದಿನ. ಸ್ಕಾಟ್ಲೆಂಡಿನ ಪುಸ್ತಕ ವ್ಯಾಪಾರಿ ಹಾಗೂ ಪ್ರಕಾಶಕರಾದ ಇವರು
1843ರಲ್ಲಿ ಮ್ಯಾಕ್ ಮಿಲನ್ ಅಂಡ್ ಕಂಪೆನಿ ಪುಸ್ತಕದ ಅಂಗಡಿಯನ್ನು ಸ್ಥಾಪಿಸಿದರು. ಇದು ಜಗತ್ತಿನ ಅತ್ಯಂತ ದೊಡ್ಡ ಪ್ರಕಾಶನ ಕಂಪೆನಿಗಳಲ್ಲಿ ಒಂದಾಗಿ ಬೆಳೆಯಿತು.
1788: ನ್ಯೂಯಾರ್ಕಿಗೆ ಅಮೆರಿಕದ ರಾಜಧಾನಿ ಪಟ್ಟ ಲಭಿಸಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment