ಇಂದಿನ ಇತಿಹಾಸ History Today ಸೆಪ್ಟೆಂಬರ್ 04
2018: ನವದೆಹಲಿ: ರಾಷ್ಟ್ರವನ್ನು ಮುನ್ನಡೆಸಲು ಯೋಗ್ಯ ವ್ಯಕ್ತಿ ಯಾರು ಎಂಬುದಾಗಿ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಐ-ಪಿಎಸಿ) ರಾಷ್ಟ್ರೀಯ ಕಾರ್ಯಸೂಚಿ ವೇದಿಕೆ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ ೪೮ ಮತಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿ ಸ್ಥಾನವನ್ನು ಗಳಿಸಿದರು. ಪ್ರಶಾಂತ್ ಕಿಶೋರ್ ಅವರ ಈ ಅಂತರ್ಜಾಲ ಸಮೀಕ್ಷೆಯಲ್ಲಿ ೫೭ ಲಕ್ಷ ಮಂದಿ ಪಾಲ್ಗೊಂಡಿದ್ದು, ಶೇಕಡಾ ೧೧.೨ ಮತಗಳೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡನೇ ಸ್ಥಾನ ಗಳಿಸಿದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶೇಕಡಾ ೯.೩ ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು. ಶೇಕಡಾ ೭ ಮತಗಳೊಂದಿಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ೪ನೇ ಸ್ಥಾನ, ಶೇಕಡಾ ೪.೨ ಮತಗಳೊಂದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ೫ನೇ ಸ್ಥಾನ, ಶೇಕಡಾ ೩.೧ ಮತಗಳೊಂದಿಗೆ ಬಿಎಸ್ಪಿ ನಾಯಕಿ ಮಾಯಾವತಿ ೬ನೇ ಸ್ಥಾನ ಪಡೆದರು. ಮಹಾತ್ಮಾ ಗಾಂಧಿ ಅವರ ೧೫೦ನೇ ಜನ್ಮ ದಿನಾಚರಣೆಗೆ ಮುಂಚಿತವಾಗಿ ‘’ಸ್ವರಾಜ್’ ಮಾದರಿಯಲ್ಲಿ ಹೊಸ ರಾಷ್ಟ್ರೀಯ ಕಾರ್ಯಸೂಚಿ (ನ್ಯಾಷನಲ್ ಅಜೆಂಡಾ) ರೂಪಿಸುವ ಸಲುವಾಗಿ ಐ-ಪಿಎಸಿಯು ಈ ವರ್ಷ ಜುಲೈ ತಿಂಗಳಲ್ಲಿ ಅಭಿಯಾನವನ್ನು ಆರಂಭಿಸಿತ್ತು. ರಾಷ್ಟ್ರೀಯ ಕಾರ್ಯಸೂಚಿಯನ್ನು ಜಾರಿಗೊಳಿಸಲು ಅತ್ಯುತ್ತಮ ನಾಯಕ ಯಾರು ಎಂಬುದಾಗಿ ’ಮತದಾನ’ ಮಾಡುವಂತೆಯೂ ಐ-ಪಿಎಸಿ ಅಂತರ್ಜಾಲ ಬಳಕೆದಾರರಿಗೆ ಸೂಚಿಸಿತ್ತು. ಸಮೀಕ್ಷೆಯ ಅಂಗವಾಗಿ ಮುಂಬರುವ ೨೦೧೯ರ ಮಹಾ ಚುನಾವಣೆಯಲ್ಲಿ ನಾಯಕನ ಆಯ್ಕೆಗೆ ಸಮೀಕ್ಷೆ ನಡೆಸುತ್ತಿರುವ ಸ್ವಯಂ ಸೇವಕರು ನೆರವಾಗಿದ್ದಾರೆ. ಭಾರತದ ೫೦೦ ಜಿಲ್ಲೆಗಳಿಂದ ೧೫೦೦ ಕಾಲೇಜುಗಳ ೨೫,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಐ-ಪಿಎಸಿ ಪ್ರತಿಪಾದಿಸಿತು. ಸಮೀಕ್ಷೆಯು ಮತದಾರರಿಗೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್ಪಿ ನಾಯಕಿ ಮಾಯಾವತಿ, ಪ್ರಧಾನಿ ನರೇಂದ್ರ ಮೋದಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಸಿಪಿಐ (ಎಂ) ಪ್ರಧಾನ ಕಾರ್ಯದಶಿ ಸೀತಾರಾಂ ಯೆಚೂರಿ ಇವರ ಪೈಕಿ ಅತ್ಯುತ್ತಮ ನಾಯಕನನ್ನು ಆಯ್ಕೆ ಮಾಡಲು ಅವಕಾಶ ನೀಡಿತ್ತು. ಈ ಪಟ್ಟಿಯಲ್ಲಿ ಇಲ್ಲದ ಹೆಸರನ್ನು ಸೇರ್ಪಡೆ ಮಾಡುವ ಅವಕಾಶವನ್ನೂ ಮತದಾರರಿಗೆ ಸಮೀಕ್ಷೆ ನೀಡಿತ್ತು. ಪಟ್ಟಿಯು ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್ ಮತ್ತು ನಿತೀಶ್ ಕುಮಾರ್ ಈ ನಾಲ್ವರು ’ಟಾಪ್ ಮುಖ್ಯಮಂತ್ರಿ’ಗಳನ್ನು ಪಟ್ಟಿಯಲ್ಲಿ ಹೆಸರಿಸಿತ್ತು. ೨೮ ವಿಷಯಗಳಲ್ಲಿ ೧೦ ಆದ್ಯತೆಗಳನ್ನು ಆಯ್ಕೆ ಮಾಡುವಂತೆಯೂ ಸಮೀಕ್ಷೆ ಮತದಾರರಿಗೆ ತಿಳಿಸಿತ್ತು. ೧೦ ಆದ್ಯತೆಯ ವಿಷಯಗಳಲ್ಲಿ ಮಹಿಳಾ ವಿಷಯಗಳು, ರೈತರ ವಿಷಯಗಳು, ಆರ್ಥಿಕ ಅಸಮಾನತೆ, ವಿದ್ಯಾರ್ಥಿಗಳ ವಿಷಯಗಳು, ಆರೋಗ್ಯ ಮತ್ತು ನೈರ್ಮಲ್ಯ ಕುರಿತ ಶಿಕ್ಷಣ, ಸಮುದಾಯದ ಏಕತೆ, ಪ್ರಾಂತೀಯ ಭಾಷೆಗಳ ಅಭಿವೃದ್ಧಿ, ಮೂಲ ಶಿಕ್ಷಣ, ಗ್ರಾಮೀಣ ಸ್ವಚ್ಛತೆ ಮತ್ತು ವಯಸ್ಕ ಶಿಕ್ಷಣ ವಿಷಯಗಳ ಬಗ್ಗೆ ಗರಿಷ್ಠ ಗಮನ ನೀಡುವಂತೆ ಸೂಚಿಸಲಾಗಿತ್ತು. ಮಹಾತ್ಮ ಗಾಂಧೀಜಿ ಅವರ ’ಸ್ವರಾಜ್’ ಕಲ್ಪನೆಯ ಬಗ್ಗೆ ಉಪನ್ಯಾಸಗಳನ್ನು ಆರಂಭಿಸುವ ಸಲುವಾಗಿ ’ರಾಷ್ಟ್ರೀಯ ಕಾರ್ಯಸೂಚಿ ವೇದಿಕೆ’ ಹೆಸರಿನ ಈ ಅಂತರ್ಜಾಲ ಸಮೀಕ್ಷೆಯನ್ನು ಐ-ಪಿಎಸಿ ನಡೆಸುತ್ತಿದೆ. ರಾಷ್ಟ್ರವು ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮದಿನಾಚರಣೆಯನ್ನು ಆಚರಿಸಲಿರುವುದರಿಂದ ಅವರ ರಚನಾತ್ಮಕ ಕಾರ್ಯಕ್ರಮಗಳ ಸುತ್ತ ಚರ್ಚೆ ನಡೆಸುವ ಮೂಲಕ ಅವರಿಗೆ ಸೂಕ್ತ ಗೌರವ ಸಲ್ಲಿಸಲು ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಐ-ಪಿಎಸಿ) ಉದ್ದೇಶಿಸಿದೆ. ೧೯೪೫ರಲ್ಲಿ ಮಹಾತ್ಮ ಗಾಂಧಿಯವರು ಸ್ವತಂತ್ರ ಭಾರತಕ್ಕಾಗಿ ೧೮ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಪ್ರಮುಖ ಆದ್ಯತೆಗಳನ್ನು ಗುರುತಿಸಿದ್ದರು ಮತ್ತು ಅವುಗಳತ್ತ ಗಮನ ಹರಿಸಿ ಶ್ರಮಿಸುವಂತೆ ಪ್ರಜೆಗಳನ್ನು ಒತ್ತಾಯಿಸಿದ್ದರು ಎಂದು ಐ-ಪಿಎಸಿ ಹೇಳಿಕೆಯೊಂದರಲ್ಲಿ ತಿಳಿಸಿತು.
2018: ಆಗ್ರಾ:
ಅಲಿಘಡದ ಮಡ್ರಕ್ ಪಟ್ಟಣದ ಬಳಿ ಆಗ್ರಾ ರಸ್ತೆಯಲ್ಲಿ ಒಂದು ಖಾಸಗಿ ಬಸ್ ಮತ್ತು ಮಿನಿ ಬಸ್ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದ ಕೆಲವು ಶಿಕ್ಷಕರು ಸೇರಿದಂತೆ ೯ ಮಂದಿ ಮಂಗಳವಾರ ಸಾವನ್ನಪ್ಪಿ, ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಸುಮಾರು ೪ ಡಜನ್ ಮಂದಿಯನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿತು. ಮುಸ್ಲಿಂ ಮದುವೆ ದಿಬ್ಬಣವನ್ನು ಒಯ್ಯುತ್ತಿದ್ದ ಖಾಸಗಿ ಬಸ್ಸು ಅಲಿಘಡದಿಂದ ಫಿರೋಜಾಬಾದ್ ಕಡೆಗೆ ಹೊರಟಿತ್ತು. ಪ್ರಯಾಣಿಕರಿಂದ ಕಿಕ್ಕಿರಿದಿದ್ದ ಮಿನಿ ಬಸ್ ಸಾಸ್ನಿಯಿಂದ ಅಲಿಘಡದತ್ತ ಹೊರಟಿತ್ತು. ಮಿನಿಬಸ್ ವಾಹನವೊಂದನ್ನು ಹಿಂದಕ್ಕೆ ಹಾಕಿ ಮುಂದಕ್ಕೆ ಧಾವಿಸುವಾಗ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆಯಿತು ಎಂದು ಮೂಲಗಳು ಹೇಳಿದವು. ಅಪಘಾತದಲ್ಲಿ ಉಭಯ ವಾಹನಗಳೂ ತೀವ್ರವಾಗಿ ಹಾನಿಗೊಂಡಿದ್ದು, ಪರಿಣಾಮವಾಗಿ ಐವರು ಘಟನಾ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದರು.
2018: ಕೋಲ್ಕತ:
ದಕ್ಷಿಣ ಕೋಲ್ಕತದ ಅಲಿಪೋರಾದ ವಾಹನ ನಿಬಿಡ ಡೈಮಂಡ್ ಹಾರ್ಬರ್ ರಸ್ತೆಯಲ್ಲಿನ ಮಜೇರ್ ಹಟ್ ಸೇತುವೆಯ ಒಂದು ಭಾಗವು ಈದಿನ ಸಂಜೆ ಕುಸಿದು ಬಿದ್ದು ಕನಿಷ್ಠ ಒಬ್ಬ ವ್ಯಕ್ತಿ ಮೃತನಾಗಿ ಐದಕ್ಕಿಂತಲೂ ಹೆಚ್ಚು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದರು. ಸಂಜೆ ೪.೪೫ರ ಸುಮಾರಿಗೆ ಸೇತುವೆಯ ಒಂದು ಭಾಗ ಕುಸಿಯಿತು. ಸೇತುವೆಯ ಮಧ್ಯದಲ್ಲಿ ಒಂದು ಭಾಗ ಕುಸಿದ ಪರಿಣಾಮವಾಗಿ ಕೆಲವು ಕಾರುಗಳು, ದ್ವಿಚಕ್ರ ವಾಹನಗಳು ಮತ್ತು ಒಂದು ಬಸ್ ಸೇತುವೆ ಅವಶೇಷಗಳೊಂದಿಗೆ ಕೆಳಕ್ಕೆ ಬಿದ್ದಿವೆ ಎಂದು ವರದಿ ತಿಳಿಸಿದೆ. ಎಷ್ಟು ವಾಹನಗಳು ಅಥವಾ ಪಾದಚಾರಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂದು ಅಧಿಕಾರಿಗಳು ದೃಢ ಪಡಿಸಲಿಲ್ಲ. ‘ನಾನು ವಿವರಗಳನ್ನು ನೀಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ನಾನು ಇಲ್ಲಿಂದಲೇ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದೇನೆ. ಮೊದಲು ನಾವು ವ್ಯಕ್ತಿಗಳನ್ನು ರಕ್ಷಿಸಬೇಕು ಮತ್ತು ಪರಿಹಾರ ಕಲ್ಪಿಸಬೇಕು. ದುರ್ಘಟನೆ ಹೇಗಾಯಿತು ಎಂದು ನಾವು ಆ ಬಳಿಕ ಖಂಡಿತವಾಗಿ ಚರ್ಚಿಸುತ್ತೇವೆ’ ಎಂದು ಪ್ರಸ್ತುತ ಡಾರ್ಜಿಲಿಂಗ್ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. ‘ಸೇತುವೆಯ ಒಂದು ಭಾಗ ಕುಸಿದಾಗ ನನ್ನ ಕಾರು ಸೇತುವೆ ಮೇಲಿತ್ತು. ನನ್ನ ವಾಹನ ಚಾಲಕ ತುರ್ತಾಗಿ ಬ್ರೇಕ್ ಹಾಕಿ ಕಾರಿನಿಂದ ಕೆಳಗಿಳಿಯುವಂತೆ ಹೇಳಿದ. ನಾನು ಕಾರಿನಿಂದ ಕೆಳಗಿಳಿದಾಗ ಇಡೀ ಸೇತುವೆ ನಡುಗುತ್ತಿತ್ತು. ಕೆಲವು ನಿರ್ಮಾಣ ಕಾರ್ಮಿಕರು ಕನಿಷ್ಠ ಐವರನ್ನು ರಕ್ಷಿಸಿದರು’ ಎಂದು ಪ್ರತ್ಯಕ್ಷದರ್ಶಿ ಶಿಶಿರ್ ಚಕ್ರಬೊರ್ತಿ ಹೇಳಿದರು. ಸೇತುವೆಯು ರೈಲ್ವೆ ಹಳಿಗಳ ಮೇಲೆ ಕುಸಿದಿದ್ದರೆ, ಹೈಟೆನ್ಷನ್ ತಂತಿಗಳು ಕಡಿದು ಇನ್ನೂ ದೊಡ್ಡ ದುರಂತ ಸಂಭವಿಸುತ್ತಿತು’ ಎಂದು ಅವರು ನುಡಿದರು. ವಿಪತ್ತು ನಿರ್ವಹಣಾ ತಂಡ ಮತ್ತು ಸೇನಾ ಪೊಲೀಸರು ಮಜೇರ್ ಹಟ್ ಸೇತುವೆ ಕುಸಿದ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿದವು. ಮಜೇರ್ಹಟ್ ಸೇತುವೆಯ ಕೆಳಭಾಗದಲ್ಲೇ ವಾಸ್ತವ್ಯ ಹೂಡಿದ್ದ ಮೆಟ್ರೋ ಕಾರ್ಮಿಕರೂ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ. ಸೇತುವೆ ಕೆಳಭಾಗದಿಂದ ಹಲವಾರು ಮಂದಿಯ ಆಕ್ರಂದನ ತಮಗೆ ಕೇಳಿಸಿದೆ ಎಂದು ರಕ್ಷಣಾ ಕಾರ್ಯದಲ್ಲಿ ನಿರತವಾಗಿರುವವರು ಹೇಳಿದರು. ಪ್ರಧಾನಿ ಮೋದಿ ಪ್ರಾರ್ಥನೆ: ಪ್ರಧಾನಿ ನರೇಂದ್ರ ಮೋದಿ ಅವರು ಮಜೇರ್ ಹಟ್ ಸೇತುವೆ ಕುಸಿತದಲ್ಲಿ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡವರ ಸುರಕ್ಷತೆಗಾಗಿ ತಾವು ಪ್ರಾರ್ಥಿಸುವುದಾಗಿ ಟ್ವೀಟ್ ಮಾಡಿದರು. ‘ಕೋಲ್ಕತದಲ್ಲಿ ಸೇತುವೆಯ ಭಾಗವೊಂದು ಕುಸಿದಿರುವುದು ಅತ್ಯಂತ ದುರದೃಷ್ಟಕರ. ನಾನು ಸಂತ್ತಸ್ಥರ ಕುಟುಂಬಗಳ ಜೊತೆಗೆ ಇದ್ದೇನೆ. ಗಾಯಾಳುಗಳು ಶೀಘ್ರ ಚೇತರಿಸಲಿ ಎಂದು ನಾನು ಪ್ರಾರ್ಥಿಸುವೆ’ ಎಂದು ಮೋದಿ ಟ್ವೀಟ್ ಮಾಡಿದರು. ‘ಸೇತುವೆ ದಿಢೀರನೆ ಕುಸಿದಾಗ ನಾನು ಸೇತುವೆಯ ಕೆಳಗೆ ಚಹಾದ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದೆ. ನಾನು ಪವಾಡಸದೃಶವಾಗಿ ಪಾರಾದೆ. ಹಲವಾರು ಮಂದಿ ಕೆಳಗೆ ಸಿಕ್ಕಿಹಾಕಿಕೊಂಡಿದ್ದಾರೆ’ ಎಂದು ಘಟನೆಯಲ್ಲಿ ಗಾಯಗೊಂಡು ಎಸ್ ಎಸ್ ಕೆಎಂ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕರ ಸಿಂಗ್ ಹೇಳಿದರು. ಸೇತುವೆ ಕುಸಿತದ ಪರಿಣಾಮವಾಗಿ ಅದರ ಮೂಲಕ ಸಂಪರ್ಕ ಪಡೆದಿದ್ದ ನಗರದ ನೈಋತ್ಯ ಭಾಗ ಮತ್ತು ದಕ್ಷಿಣ ೨೪ ಪರಗಣಗಳ ಜಿಲೆಯ ಹಲವು ಭಾಗಗಳಿಗೆ ಸಂಚಾರ ಸೇವೆ ಸ್ಥಗಿತಗೊಂಡಿತು. ಹಿಂದಿನ ದುರಂತ: ೨೦೧೬ರ ಮಾರ್ಚ್ ೩೧ರಂದು ನಗರದ ಬುರ್ರಾ ಬಜಾರಿನ ವ್ಯಾಪಾರಿ ಸ್ಥಳದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯ ಸುಮಾರು ೫೦೦ ಅಡಿಗಳಷ್ಟು ಭಾಗ ಕುಸಿದಿತ್ತು. ಈ ದುರಂತದಲ್ಲಿ ೨೭ ಜನ ಸಾವನ್ನಪ್ಪಿ ೮೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ೨೦೧೩ರ ಮಾರ್ಚ್ ೩ರಂದು ವಿಐಪಿ ರಸ್ತೆ ಮತ್ತು ಇ.ಎಂ. ಬೈಪಾಸ್ನ್ನು ಸಂಪರ್ಕಿಸುವ ಮೇಲ್ಸೇತುವೆಯು ಗೂಡ್ಸ್ ಟ್ರಕ್ ಚಲಿಸುತ್ತಿದ್ದಾಗ ಕುಸಿದಿತ್ತು. ಈ ದುರ್ಘಟನೆ ರಾತ್ರಿ ಹೊತ್ತಿನಲ್ಲಿ ಸಂಭವಿಸಿದ್ದರಿಂದ ಭಾರಿ ಸಾವು ನೋವು ತಪ್ಪಿತ್ತು.
2018: ನವದೆಹಲಿ:
ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೋಯಿ ಅವರನ್ನು ಶಿಫಾರಸು ಮಾಡಿ ಹಾಲಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ಅವರು ಬರೆದ ಪತ್ರಕ್ಕೆ ಕಾನೂನು ಸಚಿವಾಲಯ ಅನುಮೋದನೆ ನೀಡಿದ್ದು, ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ಅಕ್ಟೋಬರ್ ೩ರಂದು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಂದಿನ ಸಿಜೆಐ ಕುರಿತ ಎಲ್ಲ ಊಹಾಪೋಹಗಳ ಮಧ್ಯೆ, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಪರಂಪರೆಗೆ ಅನುಗುಣವಾಗಿ ಹಿರಿತನದ ಸೂತ್ರಕ್ಕೆ ಮಣೆ ಹಾಕಿ, ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರ ಹೆಸರಿಗೆ ಸಮ್ಮತಿಯ ಮುದ್ರೆ ಒತ್ತಿ, ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಪತ್ರ ಕಳುಹಿಸಿದರು. ಸುಪ್ರೀಂಕೋರ್ಟಿನ ಅತ್ಯಂತ ಹಿರಿಯ ನ್ಯಾಯಮೂರ್ತಿಯವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸುವುದು ನಡೆದು ಬಂದಿರುವ ಸಂಪ್ರದಾಯ. ನ್ಯಾಯಮೂರ್ತಿ ಗೊಗೋಯಿ ಅವರು ತಮ್ಮ ಹಿರಿತನದ ಕಾರಣದಿಂದ ಸಿಜೆಐ ಹುದ್ದೆಯ ಅಭ್ಯರ್ಥಿಗಳ ಸಾಲಿನಲ್ಲಿ ಮುಂದಿದ್ದರು. ಈ ವಾರಾರಂಭದಲ್ಲಿ ಕಾನೂನು ಸಚಿವಾಲಯವು ನ್ಯಾಯಮೂರ್ತಿ ಮಿಶ್ರ ಅವರಿಗೆ ತಮ್ಮ ಉತ್ತರಾಧಿಕಾರಿಯನ್ನು ಸೂಚಿಸುವಂತೆ ಔಪಚಾರಿಕ ಪತ್ರ ಕಳುಹಿಸಿತ್ತು. ಈ ಪತ್ರಕ್ಕೆ ಉತ್ತರವಾಗಿ ಸಿಜೆಐ ಅವರು ನ್ಯಾಯಮೂರ್ತಿ ಗೊಗೋಯಿ ಅವರನ್ನು ಹೆಸರಿಸಿದರು. ನ್ಯಾಯಮೂರ್ತಿ ಮಿಶ್ರ ಅವರು ಅಕ್ಟೋಬರ್ ೨ರಂದು ನಿವೃತ್ತರಾಗುತ್ತಿದ್ದಾರೆ. ೧೯೯೩ರ ಎರಡನೇ ನ್ಯಾಯಾಧೀಶರ ಪ್ರಕರಣದಲ್ಲಿ ಸಿಜೆಐ ಹುದ್ದೆಗೆ ಸುಪ್ರೀಂಕೋರ್ಟಿನ ಅತ್ಯಂತ ಹಿರಿಯ ನ್ಯಾಯಮೂರ್ತಿಯನ್ನು ನೇಮಿಸಬೇಕು ಎಂದು ಬಹುಮತದ ತೀರ್ಪು ನೀಡಲಾಗಿತ್ತು. ನ್ಯಾಯಮೂರ್ತಿ ಗೊಗೋಯಿ ಅವರು ಈ ವರ್ಷ ಜನವರಿಯಲ್ಲಿ ಅಭೂತಪೂರ್ವ ಪತ್ರಿಕಾಗೋಷ್ಠಿ ನಡೆಸಿದ್ದ ಸುಪ್ರೀಂಕೋರ್ಟಿನ ನಾಲ್ವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದು, ಈ ನಾಲ್ವರೂ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟಿನ ಆಡಳಿತ ಮತ್ತು ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದರು. ಹಿಂದೆಂದೂ ಘಟಿಸದೇ ಇದ್ದ ಈ ಘಟನೆಯ ಹಿನ್ನೆಲೆಯಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಮುಖ್ಯ ನ್ಯಾಯಮೂರ್ತಿ ಹುದ್ದೆಯ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದ ನ್ಯಾಯಮೂರ್ತಿ ಗೊಗೋಯ್ ಅವರ ಹೆಸರನ್ನು ಶಿಫಾರಸು ಮಾಡಬಹುದೇ ಎಂಬ ಊಹಾಪೋಹಗಳು ಎದ್ದಿದ್ದವು. ಗೊಗೋಯಿ ಅವರ ಬದಲಿಗೆ ಬೇರೆ ಕಿರಿಯ ನ್ಯಾಯಮೂರ್ತಿಯನ್ನು ಸಿಜೆಐ ಸ್ಥಾನಕ್ಕೆ ಶಿಫಾರಸು ಮಾಡಬಹುದು ಎಂಬ ವದಂತಿಯೂ ಹರಡಿತ್ತು. ನ್ಯಾಯಮೂರ್ತಿ ಗೊಗೋಯಿ ಅವರು ಅಸ್ಸಾಮಿನವರಾಗಿದ್ದು, ಅಸ್ಸಾಮಿನಲ್ಲಿ ನೆಲೆಸಿರುವ ಅಕ್ರಮ ವಿದೇಶೀಯರನ್ನು ಗುರುತಿಸುವ ಸಲುವಾಗಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಪ್ರಕ್ರಿಯೆಯ ಉಸ್ತವಾಗಿ ನೋಡಿಕೊಳ್ಳುವ ವಿಶೇಷ ಪೀಠದ ಮುಖ್ಯಸ್ಥರಾಗಿದ್ದಾರೆ. ನ್ಯಾಯಮೂರ್ತಿ ಗೊಗೋಯಿ ಪೀಠದ ಆದೇಶದ ಮೇರೆಗೇ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ರೂಪಿಸಲಾಗಿತ್ತು. ಕೋರ್ಟ್ ತೀರ್ಪಿನಂತೆ ತಯಾರಿಸಲಾದ ಎನ್ ಆರ್ ಸಿ ಪಟ್ಟಿಯಲ್ಲಿ ೪೦ ಮಂದಿಯನ್ನು ಕೈಬಿಡಲಾಗಿದ್ದು, ಪ್ರಕರಣ ಇನ್ನೂ ಅಂತಿಮವಾಗಿ ಇತ್ಯರ್ಥ ಆಗಬೇಕಾಗಿದೆ. ಸುಪ್ರೀಂಕೋರ್ಟ್ ನೀಡಿದ ಹಲವಾರು ಪ್ರಮುಖ ತೀರ್ಪುಗಳಲ್ಲಿ ಗೊಗೋಯಿ ಅವರ ಕಾಣಿಕೆ ಇದೆ. ಲೋಕಪಾಲ ಮತ್ತು ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದ ಪ್ರಕರಣವನ್ನು ಅವರ ಪೀಠವೇ ಪರಿಶೀಲಿಸುತ್ತಿದೆ. ತಮ್ಮ ತೀರ್ಪೊಂದರಲ್ಲಿ ನ್ಯಾಯಮೂರ್ತಿ ಗೊಗೋಯಿ ಅವರು ರಾಜಕಾರಣಿಗಳನ್ನು ವೈಭವೀಕರಿಸುವ ಸಾರ್ವಜನಿಕ ಜಾಹೀರಾತುಗಳ ಮೇಲೆ ನಿಯಂತ್ರಣ ಹೇರಿದ್ದರು ಮತ್ತು ಈ ಬಗ್ಗೆ ಹೊಸ ನಿಯಮಾವಳಿಗಳನ್ನು ರಚಿಸಿದ್ದರು.
ನ್ಯಾಯಮೂರ್ತಿ ಕರ್ಣನ್ ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ನ್ಯಾಯಮೂರ್ತಿ ಗೊಗೋಯಿ ಅವರು ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರ ಜೊತೆಗೆ ನ್ಯಾಯಾಂಗದ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಅಗತ್ಯ ಸುಧಾರಣೆಗಳನ್ನು ತರುವ ಅಗತ್ಯವನ್ನು ಪ್ರತಿಪಾದಿಸಿದ್ದರು. ಇನ್ನೊಂದು ತೀರ್ಪಿನಲ್ಲಿ ನ್ಯಾಯಮೂರ್ತಿ ಗೊಗೋಯಿ ಅವರು ಹಿಂದುಳಿದಿರುವಿಕೆಯನ್ನು ನಿರ್ಣಯಿಸುವ ಮಾನದಂಡವನ್ನು ಪರಿಷ್ಕರಿಸುವಂತೆ ಮತ್ತು ನಿಜವಾಗಿ ಹಿಂದುಳಿದವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೂ ಅನುಕೂಲಗಳು ಲಭಿಸುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸಲಹೆ ಮಾಡಿದ್ದರು.
೪೦ ವರ್ಷಗಳ ಹಿಂದೆ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ಮೃದುಭಾಷಿ. ಕೆಲವು ತಿಂಗಳುಗಳ ಹಿಂದೆ ’ಸ್ವತಂತ್ರ ಪತ್ರಕರ್ತರು ಮತ್ತು ಕೆಲವೊಮ್ಮೆ ಗದ್ದಲವೆಬ್ಬಿಸುವ ನ್ಯಾಯಾಧೀಶರು ಪ್ರಜಾಪ್ರಭುತ್ವದ ಮೊದಲ ಸಾಲಿನ ರಕ್ಷಕರು’ ಎಂದು ಹೇಳಿದ್ದರು. ಇದೇ ಉಪನ್ಯಾಸದಲ್ಲಿ ಅವರು ’ನ್ಯಾಯಾಂಗವು ಕಡು ಚೂಟಿಯಾಗಿರಬೇಕು’ ಎಂದು ಸಲಹೆ ಮಾಡಿದ್ದರು. ‘ಕಾನೂನುಗಳನ್ನು ಅರ್ಥೈಸುವಲ್ಲಿ ಸಂಸ್ಥೆಯು (ನ್ಯಾಯಾಂಗ) ಹೆಚ್ಚು ಕ್ರಿಯಾತ್ಮಕವಾಗಿರಬೇಕು’ ಎಂದು ವಿವರಿಸಿದ್ದ ಅವರು, ಖ್ಯಾತ ನ್ಯಾಯವಾದಿ ಸೋಲಿ ಸೊರಾಬ್ಜಿ ಅವರನ್ನು ’ಸ್ವತಂತ್ರ, ಬುದ್ಧಿವಂತ ಮತ್ತು ದಿಟ್ಟ’ ವ್ಯಕ್ತಿ ಎಂದು ಬಣ್ಣಿಸಿದ್ದರು. ೨೦೧೬ರಲ್ಲಿ ನ್ಯಾಯಮೂರ್ತಿ ಗೊಗೋಯ್ ಅವರು ನಿವೃತ್ತ ನ್ಯಾಯಮೂರ್ತಿ ಮಾರ್ಕಾಂಡೇಯ ಕಟ್ಜು ಅವರಿಗೆ ತಾವು ನ್ಯಾಯಾಲಯ ನಿಂದನೆ ನೋಟಿಸ್ ನೀಡುವ ವೇಳೆಯಲ್ಲಿ ಅತ್ಯಂತ ಉದ್ವಿಗ್ನರಾಗಿದ್ದರು. ನ್ಯಾಯಮೂರ್ತಿ ಕಟ್ಜು ಅವರು ಫೇಸ್ ಬುಕ್ ಪೋಸ್ಟ್ ನಲ್ಲಿ ಸೌಮ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯು ಅತ್ಯಾಚಾರದ ತಪ್ಪಿತಸ್ಥ ಆದರೆ ಕೊಲೆಗಡುಕನಲ್ಲ ಎಂಬುದಾಗಿ ನೀಡಿದ ಸುಪ್ರೀಂಕೋರ್ಟ್ ತೀರ್ಪನ್ನು ಟೀಕಿಸಿದ್ದರು. ನ್ಯಾಯಮೂರ್ತಿ ಗೊಗೋಯಿ ನೇತೃತ್ವದ ಪೀಠವು ಈ ತೀರ್ಪನ್ನು ನೀಡಿತ್ತು. ನ್ಯಾಯಮೂರ್ತಿ ಕಟ್ಜು ಅವರು ನ್ಯಾಯಮೂರ್ತಿ ಗೊಗೋಯಿ ಅವರ ನ್ಯಾಯಾಲಯದಲ್ಲಿ ಹಾಜರಾಗಿ ಫೇಸ್ ಬುಕ್ ಪೋಸ್ಟ್ ಗಾಗಿ ಕ್ಷಮೆ ಕೇಳುವ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದ್ದರು.
2018:
ಮುಂಬೈ: ಡಾಲರ್ಎದುರು ರೂಪಾಯಿಯ ಬೆಲೆ ನಿರಂತರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಚಿನ್ನಕ್ಕೆ ಬೆಲೆ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಹೆಚ್ಚು ಕಡಿಮೆ ೯ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ೨೦೧೭-೧೮ರ ಹಣಕಾಸು ವರ್ಷದಲ್ಲಿ ೮.೪೬ ಟನ್ ಚಿನ್ನವನ್ನು ಖರೀದಿಸಿತು. ೨೦೧೮ರ ಜೂನ್ ೩೦ರ ವೇಳೆಗೆ ಭಾರತೀಯ ರಿಸರ್ವ್ ಬ್ಯಾಂಕ್ ೫೬೬.೨೩ ಟನ್ಚಿನ್ನವನ್ನು ಹೊಂದಿತ್ತು. ೨೦೧೭ರ ಜೂನ್ ೩೦ರ ವೇಳೆಗೆ ಆರ್ ಬಿ ಐ ಹೊಂದಿದ್ದ ಚಿನ್ನದ ಪ್ರಮಾಣ ೫೫೭.೭೭ ಟನ್ ಮಾತ್ರ. ಅಂದರೆ ಒಂದು ವರ್ಷದ ಅವಧಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಚಿನ್ನದ ಸಂಗ್ರಹವನ್ನು ೮.೪೬ ಟನ್ನಿನಷ್ಟು ಹೆಚ್ಚಿಸಿಕೊಂಡಿದೆ ಎಂದು ಬ್ಯಾಂಕಿನ ೨೦೧೭-೧೮ರ ವಾರ್ಷಿಕ ವರದಿ ತಿಳಿಸಿತು. ಈ ಹಿಂದೆ, ೨೦೦೯ರ ನವೆಂಬರಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನ ಖರೀದಿಸಿತ್ತು. ಆಗ ಅದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್) ೨೦೦ ಟನ್ನಿನಷ್ಟು ಹಳದಿ ಲೋಹವನ್ನು ಖರೀದಿಸಿತ್ತು. ಬ್ಯಾಂಕಿಂಗ್ ಇಲಾಖೆ ಆಸ್ತಿಯ ರೂಪದಲ್ಲಿ ಹೊಂದಿರುವ ಚಿನ್ನದ ಮೌಲ್ಯ ೨೦೧೮ರ ಜೂನ್ ೩೦ರ ವೇಳೆಗೆ ಶೇಕಡಾ ೧೧.೧೨ ರಷ್ಟು ಅಂದರೆ ೬೯,೬೭೪ ಕೋಟಿ ರೂಪಾಯಿಗಳಿಗೆ ಏರಿದೆ. ೨೦೧೭ರ ಜೂನ್ ೩೦ರ ವೇಳೆಗೆ ಇದು ೬೨,೭೦೨ ಕೋಟಿ ರೂಪಾಯಿ ಆಗಿತ್ತು. ಮೂಲತಃ ಡಾಲರ್ಎದುರು ರೂಪಾಯಿ ಬೆಲೆ ಕುಸಿದ ಪರಿಣಾಮವಾಗಿ ಮತ್ತು ಈ ವರ್ಷದಲ್ಲಿ ೮.೪೪ ಟನ್ ಚಿನ್ನದ ಸೇರ್ಪಡೆಯ ಪರಿಣಾಮವಾಗಿ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿರುವ ಆಸ್ತಿ ರೂಪದ ಚಿನ್ನದ ಮೌಲ್ಯ ಹೆಚ್ಚಿದೆಎಂದು ರಿಸರ್ವ್ ಬ್ಯಾಂಕ್ ವಾರ್ಷಿಕ ವರದಿ ಹೇಳಿದೆ. ಮುಂದುವರೆದ ರೂಪಾಯಿ ಬೆಲೆ ಕುಸಿತ: ಈ ಮಧ್ಯೆ ಈದಿನವೂ ಡಾಲರ್ ಎದುರು ರೂಪಾಯಿಯ ಬೆಲೆ ಕುಸಿತ ಮುಂದುವರೆದಿದ್ದು, ಈದಿನ ಅದು ಸಾರ್ವಕಾಲಿಕ ಕುಸಿತವನ್ನು ಕಂಡಿದ್ದು ೭೧.೫೪ಕ್ಕೆ ಇಳಿದಿದೆ. ಮಂಗಳವಾರ ವಹಿವಾಟು ಆರಂಭದ ವೇಳೆಯಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು ೭೧.೨೪ ಇತ್ತು. ಮಧ್ಯಾಹ್ನದ ವೇಳೆಗೆ ರೂಪಾಯಿಯ ಮೌಲ್ಯ ಕುಸಿತ ಮುಂದುವರೆಯಿತು ಎಂದು ವರದಿಗಳು ಹೇಳಿವೆ.
2018: ಹೈದರಾಬಾದ್: ಹೈದರಾಬಾದಿನಲ್ಲಿ ೨೦೦೭ರಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಐವರು ಆರೋಪಿಗಳ ಪೈಕಿ ಇಬ್ಬರು ತಪ್ಪಿತಸ್ಥರು ಎಂದು ಚೆರ್ಲಪಲ್ಲಿ ಕೇಂದ್ರೀಯ ಸೆರೆಮನೆಯಲ್ಲಿ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. ಅವಳಿ ಸ್ಫೋಟಗಳಲ್ಲಿ ೪೪ ಮಂದಿ ಮೃತರಾಗಿ, ಇತರ ೬೮ ಮಂದಿ ಗಾಯಗೊಂಡಿದ್ದರು. ಮೊಹಮ್ಮದ್ ರಿಯಾಜ್ ಭಟ್ಕಳ್, ಆತನ ಹಿರಿಯ ಸಹೋದರ ಮೊಹಮ್ಮದ್ ಇಕ್ಬಾಲ್ ಭಟ್ಕಳ್ ಅವರ ಸಹಚರರಾದ ಅನಿಖ್ ಶಫೀಖ್ ಸಯೀದ್ ಮತ್ತು ಮೊಹಮ್ಮದ್ ಅಕ್ಬರ್ ಇಸ್ಮಾಯಿಲ್ ಚೌಧರಿ ಅವರು ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ. ಇವರಿಬ್ಬರೂ ಇಂಡಿಯನ್ ಮುಜಾಹಿದೀನ್ (ಐಎಂ) ಕಾರ್ಯಕರ್ತರು. ಚೆರ್ಲಪಲ್ಲಿ ಕೇಂದ್ರೀಯ ಸೆರೆಮನೆಯಲ್ಲೇ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಎರಡನೇ ಅಡಿಷನಲ್ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೩೦೨ (ಕೊಲೆ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಇತರ ವಿಧಿಗಳ ಅಡಿಯಲ್ಲಿ ಇಬ್ಬರೂ ಆರೋಪಿಗಳು ತಪ್ಪಿತಸ್ಥರು ಎಂದು ಹೇಳಿತು. ನ್ಯಾಯಾಧೀಶ ಟಿ. ಶ್ರೀನಿವಾಸ ರಾವ್ ಅವರು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದರು. ಇತರ ಇಬ್ಬರು ಆರೋಪಿಗಳಾದ ಫರೂಖ್ ಶರ್ಫುದ್ದೀನ್ ಟರ್ಕಾಶ್ ಮತ್ತು ಮೊಹಮ್ಮದ್ ಸಾದಿಕ್ ಇಸ್ರಾರ್ ಅಹಮದ್ ಶೇಖ್ ಅವರನ್ನು ಖುಲಾಸೆಗೊಳಿಸಲಾಗಿದೆ
ಎಂದು ನ್ಯಾಯಾಧೀಶರು ನುಡಿದರು. ನಾಂಪಲ್ಲಿ ನ್ಯಾಯಾಲಯ ಸಮುಚ್ಚಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಭದ್ರತಾ ಕಾರಣಗಳಿಗಾಗಿ ಈ ವರ್ಷ ಜೂನ್ ತಿಂಗಳಲ್ಲಿ ಚೆರ್ಲಪಲ್ಲಿ ಕೇಂದ್ರೀಯ ಸೆರೆಮನೆಯ ಕೋರ್ಟ್ ಹಾಲ್ ಗೆ ಸ್ಥಳಾಂತರಿಸಲಾಗಿತ್ತು. ತೆಲಂಗಾಣ ಪೊಲೀಸರ ಗುಪ್ತಚರ ದಳವು ಏಳು ಮಂದಿ ಆರೋಪಿಗಳ ವಿರುದ್ಧ ಪ್ರತ್ಯೇಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಇತರ ಮೂವರು ಆರೋಪಿಗಳಾದ ರಿಯಾಜ್ ಭಟ್ಕಳ್, ಆತನ ಸಹೋದರ ಇಕ್ಬಾಲ್ ಭಟ್ಕಳ್ ಮತ್ತು ಅಮೀರ್ ರಜಾ ಖಾನ್ ಇನ್ನೂ ತಲೆಮರೆಸಿಕೊಂಡಿದ್ದರು.
ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕರು ೨೦೦೭ರ ಆಗಸ್ಟ್ ೨೫ರಂದು ನಗರದಲ್ಲಿ ಮೂರು ಸುಧಾರಿತ ಸ್ಫೋಟಕ ಸಾಧನಗಳನ್ನು ಅವಿತಿಟ್ಟಿದ್ದರು. ಅವುಗಳ ಪೈಕಿ ಎರಡು ಸ್ಪೋಟಕಗಳು ಲುಂಬಿಣಿ ಪಾರ್ಕ್ ಮತ್ತು ಗೋಕುಲ್ ಚಾಟ್ ಭಂಡಾರ್ನಲ್ಲಿ ಸ್ಫೋಟಗೊಂಡಿದ್ದವು. ದಿಲ್ ಸುಖ್ ನಗರ ಪಾದಚಾರಿ ಸೇತುವೆಯ ಕೆಳಗೆ ಇರಿಸಲಾಗಿದ್ದ ಸ್ಫೋಟಗೊಳ್ಳದ ಬಾಂಬ್ ನ್ನು ಪೊಲೀಸರು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದರು. ಪ್ರಕರಣದ ವಿಚಾರಣೆ ಕಾಲದಲ್ಲಿ ೧೬೦ಕ್ಕೂ ಹೆಚ್ಚು ಸಾಕ್ಷಿಗಳನ್ನು ಪರಿಶೀಲಿಸಲಾಗಿತ್ತು ಮತ್ತು ಪಾಟೀ ಸವಾಲಿಗೆ ಒಳಪಡಿಸಲಾಗಿತ್ತು.
2018: ಮುಂಬೈ:
ಹುಡುಗಿಯರು ಪ್ರಸ್ತಾವ ತಿರಸ್ಕರಿಸಿದರೆ, ಹುಡುಗರಿಗಾಗಿ ಕನ್ಯೆಯರನ್ನು ಅಪಹರಿಸುವ ವಿವಾದಾಸ್ಪದ ಕೊಡುಗೆಯನ್ನು ಘಾಟ್ಕೋಪರ್ ಬಿಜೆಪಿ ಶಾಸಕ ರಾಮ್ ಕದಂ ಮುಂದಿಟ್ಟರು. ಮುಂಬೈಯಲ್ಲಿನ ತಮ್ಮ ದಹಿ ಹಂಡಿ ಆಚರಣೆ ವೇಳೆ ಶಾಸಕರು ಈ ಕೊಡುಗೆ ಪ್ರಕಟಿಸಿದರು. ಈ ಕೊಡುಗೆ ಬಗ್ಗೆ ತಾವು ಅತ್ಯಂತ ಗಂಭೀರವಾಗಿರುವುದಾಗಿಯೂ ಹೇಳಿರುವ ಕದಂ, ಹುಡುಗಿಯ ಅಪಹರಣಕ್ಕೆ ತಮ್ಮ ನೆರವು ಪಡೆಯಲು ಮೊಬೈಲ್ ನಂಬರ್ ಇಟ್ಟುಕೊಳ್ಳಿ ಎಂಬುದಾಗಿ ಬಹಿರಂಗ ಸಮಾರಂಭದಲ್ಲಿ ಹೇಳಿ ತಮ್ಮ ಮೊಬೈಲ್ ನಂಬರನ್ನು ಪ್ರಕಟಿಸಿದರು. ‘ಏನಾದರೂ ನೆರವು ಬೇಕಿದ್ದರೆ ನೀವು ನನಗೆ ಕರೆ ಮಾಡಬಹುದು. ನೀವು ನನಗೆ ಕರೆ ಮಾಡಿ ಹುಡುಗಿಗೆ ಪ್ರಸ್ತಾವ ಮುಂದಿಟ್ಟಿದ್ದು, ಆಕೆ ತಿರಸ್ಕರಿಸಿದ್ದಾಳೆ, ದಯವಿಟ್ಟು ಸಹಾಯ ಮಾಡಿ ಎಂಬುದಾಗಿ ಹೇಳಿದರೆ, ನಾನು ಖಂಡಿತವಾಗಿ ನಿಮಗೆ ನೆರವಾಗುವೆ. ನೀವು ಮೊದಲು ನಿಮ್ಮ ಪಾಲಕರಿಗೆ ಕರೆ ಮಾಡಿ ಮತ್ತು ಅವರು ಹುಡುಗಿಯನ್ನು ತಾವು ಮೆಚ್ಚಿಕೊಂಡಿರುವುದಾಗಿ ಹೇಳಿದರೆ, ಆಗ ನಾನು ಹುಡುಗಿಯನ್ನು ಅಪಹರಿಸಿ, ನಿಮಗೆ ತಂದುಕೊಡುವೆ. ಈಗ ನನ್ನ ಫೋನ್ ನಂಬರ್ ತೆಗೆದುಕೊಳ್ಳಿ’ ಎಂದು ಶಾಸಕ ಹೇಳಿದರು. ಶಾಸಕರ ವಿವಾದಾತ್ಮಕ ಹೇಳಿಕೆಯ ವಿಡಿಯೋವನ್ನು ಎನ್ ಸಿಪಿ ಶಾಸಕ ಜಿತೇಂದ್ರ ಅವದ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಅದೀಗ ವೈರಲ್ ಆಯಿತು. ಶಾಸನಕರ್ತರು ಕೂಡಾ ಈ ರೀತಿ ಚಿಂತಿಸಿದರೆ ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಭದ್ರತೆ ಹೇಗೆ ಸಿಗುತ್ತದೆ ಎಂದು ಅವದ್ ಪ್ರಶ್ನಿಸಿದ್ದರೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಬಿಜೆಪಿ ನಾಯಕರ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ. ಈ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತರಾಗಿ ಇರುವುದು ಹೇಗೆ? ಎಂದು ಅವರು ಕೇಳಿದರು. ಏನಿದ್ದರೂ, ತಾವು ಇಂತಹ ಹೇಳಿಕೆ ನೀಡಿರುವುದನ್ನು ಕದಂ ಅವರು ನಿರಾಕರಿಸಿದ್ದಾರೆ. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅವರು ಪ್ರತಿಪಾದಿಸಿದರು.
‘ಮಕ್ಕಳು ತಮ್ಮ ಪಾಲಕರ ಬಳಿ ಸಮಾಲೋಚಿಸಬೇಕು ಎಂದು ನಾನು ಹೇಳಿದ್ದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಭಾವಿಸಲಾಗಿದೆ. ಇದು ನನ್ನ ವಿರುದ್ಧ ಹೆಣೆಯಲಾಗಿರುವ ವಿರೋಧ ಪಕ್ಷಗಳ ರಾಜಕೀಯ ಷಡ್ಯಂತ್ರ’ ಎಂದು ಅವರು ಹೇಳಿದರು. ಘಾಟ್ಕೋಪರ್ ನಲ್ಲಿ ದಹೀ ಹಂಡಿ ಆಚರಣೆ ಸಂಘಟಿಸುವುದಕ್ಕಾಗಿ ಕದಂ ಅವರು ಖ್ಯಾತರು. ಕದಂ ಅವರು ಸಂಘಟಿಸುವ ದಹಿ ಹಂಡಿ ಆಚರಣೆಗಳಲ್ಲಿ ಹಿಂದಿ ಚಿತ್ರರಂಗದ ಹಲವಾರು ಗಣ್ಯರು ಮತ್ತು ರಾಜಕೀಯ ನಾಯಕರೂ ಪಾಲ್ಗೊಳ್ಳುತ್ತಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕದಂ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದರು.
2016: ನವದೆಹಲಿ/ ಸೂರಜ್ ಕುಂಡ: ಚಿನ್ನದ ಹುಡುಗನೆಂದೆ ಕರೆಸಿಕೊಳ್ಳುವ ಶೂಟರ್ ಅಭಿನವ್ ಬಿಂದ್ರಾ(33) ಈದಿನ ಅಧಿಕೃತವಾಗಿ ಶೂಟಿಂಗ್ ಸ್ಪರ್ಧೆಗೆ ನಿವೃತ್ತಿ ಘೋಷಿಸಿದರು. ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಏಕೈಕ ಭಾರತೀಯ ಅಭಿನವ್ ಬಿಂದ್ರಾ. ‘ಯುವ ಪೀಳಿಗೆಗೆ ಅವಕಾಶ ಕಲ್ಪಿಸಿ ಮುಂದೆ ಸಾಗಲು ಇದು ಸರಿಯಾದ ಸಮಯ. 2016ರ ರಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವಲ್ಲಿ ವಿಫಲನಾದರೂ, ನಾಲ್ಕನೇ ಸ್ಥಾನ ಪಡೆದೆ. ಎರಡು ದಶಕ ಕಾಲ ಸ್ಪರ್ಧೆಗಳಲ್ಲಿ ಭಾಗವಹಿಸಿ ನಿವೃತ್ತಿ ಹೊಂದುತ್ತಿದ್ದೇನೆ’ ಎಂದು ಅಭಿನವ್ ಬಿಂದ್ರಾ ತಿಳಿಸಿದರು.: ರಿಯೋ ಒಲಿಂಪಿಕ್ಸ್ಗೂ ಮೊದಲೇ ಬಿಂದ್ರಾ ನಿವೃತ್ತಿಯ ಸೂಚನೆ ನೀಡಿದ್ದರು. ನಾನು ವಿದಾಯ ಹೇಳುವ ಸಮಯ ಈಗ ಬಂದಿದೆ. ಭಾರತದ ಭವಿಷ್ಯದ ಶೂಟಿಂಗ್ ತಾರೆಗಳಿಗೆ ನಾನು ಅವಕಾಶ ಮಾಡಿಕೊಡಬೇಕಿದೆ. ನಾನು ರಿಯೋದಲ್ಲಿ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೂ ನಾಲ್ಕನೇ ಸ್ಥಾನ ಪಡೆದೆ. ಇದು ನನಗೆ ತೃಪ್ತಿ ನೀಡಿದೆ ಎಂದು ಅಭಿನವ್ ಬಿಂದ್ರಾ ಈದಿನ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ತಮ್ಮ ವಿದಾಯ ಭಾಷಣದಲ್ಲಿ ತಿಳಿಸಿದ್ದಾದರು. 2000ನೇ ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್ನಲ್ಲಿ ಮೊದಲ ಬಾರಿಗೆ ಬಿಂದ್ರಾ ಪಾಲ್ಗೊಂಡಿದ್ದರು. ನಂತರ ನಡೆದ ನಾಲ್ಕು ಒಲಿಂಪಿಕ್ಸ್ಗಳಲ್ಲೂ ಬಿಂದ್ರಾ ಭಾಗವಹಿಸಿದ್ದರು. 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಜಯಿಸಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು.
2016: ಮ್ಯಾಕೆ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ನಡೆದ ನಾಲ್ಕು ತಂಡಗಳ ಏಕದಿನ ಸರಣಿಯ ಫೈನಲ್ನಲ್ಲಿ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಪಳಗಿರುವ ಭಾರತ ಎ ತಂಡ ಆಸ್ಟ್ರೇಲಿಯಾ ಎ ತಂಡದ ವಿರುದ್ಧ 57 ರನ್ಗಳ ಭರ್ಜರಿ ಜಯ ಗಳಿಸುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತು. ಮನದೀಪ್ ಸಿಂಗ್ (95) ಮತ್ತು ಮನೀಷ್ ಪಾಂಡೆ (61) ಗಳಿಸಿದ ಭರ್ಜರಿ ಅರ್ಧ ಶತಕದ ನೆರವಿನಿಂದ ಭಾರತ ಎ ತಂಡ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತು. 267 ರನ್ ಗುರಿ ಬೆನ್ನತ್ತಿದ ಆಸ್ಟ್ರೆಲಿಯಾ ಎ ತಂಡ 44.5 ಓವರ್ಗಳಲ್ಲಿ 209ರನ್ಗಳಿಗೆ ಆಲೌಟಾಯಿತು. ಚಹಾಲ್ (34 ಕ್ಕೆ 4), ಧವಳ್ ಕುಲಕರ್ಣಿ (22 ಕ್ಕೆ 2), ಕರುಣ್ ನಾಯರ್ (29 ಕ್ಕೆ 2), ಅಕ್ಷರ್ ಪಟೇಲ್ (33 ಕ್ಕೆ 2) ವಿಕೆಟ್ ಪಡೆದು ಮಿಂಚಿದರು. ಈ ಟೂರ್ನಿಯಲ್ಲಿ ಭಾರತ ಎ, ಆಸ್ಟ್ರೇಲಿಯಾ ಎ, ದಕ್ಷಿಣ ಆಫ್ರಿಕಾ ಎ ಮತ್ತು ಆಸ್ಟ್ರೇಲಿಯಾದ ಎನ್ಪಿಎಸ್ ತಂಡಗಳು ಭಾಗವಹಿಸಿದ್ದವು.
2016: ಕಂದಹಾರ್: ಆಫ್ಘಾನಿಸ್ತಾನದ ದಕ್ಷಿಣದಲ್ಲಿರುವ ಜಬುಲ್ ಪ್ರಾಂತ್ಯದಲ್ಲಿ ಬಸ್ ಮತ್ತು ಇಂಧನ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 35 ಜನರು ಮೃತರಾಗಿ 20 ಜನರು ಗಾಯಗೊಂಡರು. ಕಂದಹಾರದಿಂದ
ಕಾಬೂಲ್ಗೆ ತೆರಳುತ್ತಿದ್ದ ಬಸ್ ಇಂಧನ ಟ್ಯಾಂಕ್ಗೆ ಮುಖಾಮುಖಿ ಡಿಕ್ಕಿಯಾಯಿತು. ಅಪಘಾತದ ತೀವ್ರತೆಗೆ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹಲವರು ಬೆಂಕಿಯಲ್ಲಿ ಸುಟ್ಟು ಹೋದರು. ಸುಮಾರು 20 ಜನರಿಗೆ ಸುಟ್ಟಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಬೂಲ್ ಪ್ರಾಂತ್ಯದ ಗವರ್ನರ್ ಬಿಸ್ಮಿಲ್ಲಾ ಅಫ್ಘನ್ವಾಲ್ ತಿಳಿಸಿದರು.
2016: ನವದೆಹಲಿ: ನನ್ನ ಪತಿ ಅಮಾಯಕರಾಗಿದ್ದು, ಪರ ಸ್ತ್ರೀಯೊಂದಿಗೆ ಯಾವುದೇ ರೀತಿಯ ಸೆಕ್ಸ್
ನಲ್ಲಿ ಭಾಗಿಯಾಗಿಲ್ಲ ಎಂದು ಸೆಕ್ಸ್ ವಿಡಿಯೋ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸಂದೀಪ್ ಕುಮಾರ್ ಅವರ ಪತ್ನಿ ರಿತು ಕುಮಾರ್ ಭಾನುವಾರ ಹೇಳಿಕೆ ನೀಡಿದರು.. ಪ್ರಕರಣದಲ್ಲಿ ರಾಜಕೀಯ ಪಿತೂರಿ ನಡೆದಿದೆ. ನಾನು ಕೊನೆಯವರೆಗೂ ಪತಿಯ ಜತೆಗೆ ನಿಂತು, ನ್ಯಾಯಾಲಯದಲ್ಲಿ ಸತ್ಯಕ್ಕಾಗಿ ಹೋರಾಡುವೆ. ನನ್ನ ಪತಿಯ ಬಗ್ಗೆ ಸಂಪೂರ್ಣ ನಂಬಿಕೆಯಿದೆ. ಇನ್ನು ಪಕ್ಷದಿಂದ ಉಚ್ಛಾಟಿಸಿರುವ ಕುರಿತು ಸಧ್ಯ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದರು.. ಸೆಕ್ಸ್ ಸಿಡಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೆ ಸಂದೀಪ್ ಕುಮಾರ್ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸ್ಥಾನದಿಂದ ಉಚ್ಛಾಟಿಸಲಾಗಿತ್ತು. ಸಿಡಿಯಲ್ಲಿದ್ದ ಮಹಿಳೆ ಸಂದೀಪ್ ವಿರುದ್ದ ದೂರು ದಾಖಲಿಸಿದ್ದರು. ಇದರಿಂದಾಗಿ ಪೊಲೀಸರು ಸಂದೀಪ್ರನ್ನು ಬಂಧಿಸಲಾಯಿತು.
2016: ನವದೆಹಲಿ: ಐವತ್ತೆಂಟರ ಹರೆಯದ ಆಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯ್ ಅವರು ನಾಲ್ಕನೇ ಮಗುವಿಗೆ ತಂದೆಯಾದರು. ಸೆ.3ರ ನಸುಕಿನಲ್ಲಿ ಡಾ. ಜೀನತ್ ಕುರೈಶಿ ಕರ್ಜಾಯ್
ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆಸ್ಪತ್ರೆಗೆ ಭೇಟಿ ನೀಡಿದ ಹಮೀದ್ ಕರ್ಜಾಯ್ ತಮ್ಮ ಮಗುವನ್ನು ಎತ್ತಿಕೊಂಡು, ಹರಸಿದರು. ಈ ಸಂದರ್ಭ ಪತ್ನಿಯ ಆರೋಗ್ಯವನ್ನು ವಿಚಾರಿಸಿದರು. ಈ ದಂಪತಿಗೆ 2007ರಲ್ಲಿ ಮೊದಲ ಮಗುವಿನ ಜನನವಾಗಿತ್ತು.
2016: ಲಂಡನ್: ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಬ್ರಿಟನ್ನ ಭಾರತೀಯ ಮೂಲದ ಸಂಸತ್ ಸದಸ್ಯ ಕೀತ್ ವಾಜ್ (59)ಅವರು ಹೌಸ್ ಆಫ್ ಕಾಮನ್ಸ್ನ ಪ್ರಬಲ ಗೃಹ ವ್ಯವಹಾರಗಳ ಸಮಿತಿಯಿಂದ ಹೊರಬರುವುದಾಗಿ ಪ್ರಕಟಿಸಿದರು. 1987ರಿಂದ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಕೀತ್ ಅವರು ಸಲಿಂಗಕಾಮೀ ಪುರುಷರಿಗೆ ಹಣ ನೀಡುತ್ತಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ತಲೆದಂಡ ತೆರಬೇಕಾಗಿ ಬಂದಿದೆ ಎಂದು ವರದಿಗಳು ಹೇಳಿದವು. ಲೀಸೆಸ್ಟರ್ ಕ್ಷೇತ್ರವನ್ನು ಸುಮಾರು 29 ವರ್ಷಗಳಿಂದ ಪ್ರತಿನಿಧಿಸುತ್ತಿರುವ ಕೀತ್ ವಿವಾಹಿತರಾಗಿ ಇಬ್ಬರು ಮಕ್ಕಳ ತಂದೆಯಾಗಿದ್ದು, ಕಳೆದ ತಿಂಗಳು ಒಂದು ಸಂಜೆ ಲಂಡನ್ನಲ್ಲಿ ತಾನು ಹೊಂದಿರುವ ಫ್ಲ್ಯಾಟ್ನಲ್ಲಿ ತಾನು ಭೇಟಿ ನೀಡುವ ವೇಳೆಗೆ ಸಲಿಂಗಕಾಮೀ ಪುರುಷನನ್ನು ಕರೆಸಿಕೊಂಡು ಹಣ ನೀಡಿದ್ದರು ಎಂದು ಸಂಡೆ ಮಿರರ್ ವರದಿ ಮಾಡಿತ್ತು. ಕೀತ್ ಅವರು ಗೋವಾ ಮೂಲದವರಾಗಿದ್ದು, ಪತ್ರಿಕಾ ವರದಿಯ ಬೆನ್ನಲ್ಲೇ ಹುದ್ದೆಯಿಂದ ಕೆಳಗಿಳಿವ ಪ್ರಕಟಣೆ ಮಾಡಿದರು.
2016: ನವದೆಹಲಿ: 2013 ರ ಪ್ಯಾರಾಲಿಂಪಿಕ್ ಎರಡು ರಜತ ಪದಕ ವಿಜೇತ ಆದಿತ್ಯ ಮೆಹ್ತಾ ಅವರಿಗೆ ರಿಯೋ ಪ್ರಯಾಣದ ಮಾರ್ಗ ಮಧ್ಯೆ ನವದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ ಕೃತಕ ಕಾಲನ್ನು ತೆಗೆದು ಮುಂದೆ ಸಾಗುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಸೂಚಿಸಿ ಆಟಗಾರನ ತೇಜೋವಧೆ ಮಾಡಿದ ಘಟನೆ ಘಟಿಸಿದ್ದು ಬೆಳಕಿಗೆ ಬಂದಿತು. ಈ ವಿಚಾರವನ್ನು ಆದಿತ್ಯ ಮೆಹ್ತಾ ಅವರು ಬೇಸರದಿಂದ ಸ್ವತಃ ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡರು. ಬೆಂಗಳೂರಿನಿಂದ ಚಂಡೀಗಢಕ್ಕೆ ಪ್ರಯಾಣಿಸುವಾಗಲೂ ಕೂಡ ಇದೇ ರೀತಿ ಸಮಸ್ಯೆ ಎದುರಿಸಿದ್ದಾಗಿ ಆದಿತ್ಯ ಹೇಳಿದ್ದಾರೆ. ಸೈಕ್ಲಿಂಗ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ಯಾರಾಲಿಂಪಿಕ್ಸ್ ಪಟು ಆದಿತ್ಯ ರಿಯೋದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳುತ್ತಿದ್ದರು. ಘಟನೆ ಬಗ್ಗೆ ಸಿಐಎಸ್ಎಫ್ ಮೊರೆ ಹೋಗಿರುವ ಆದಿತ್ಯ ಒಲಿಂಪಿಕ್ ಕ್ರೀಡಾಪಟುಗಳಿಗೆ ಈ ಸ್ಥಿತಿ ಬಂದಿರುವುದು ದುರದೃಷ್ಟಕರ ಎಂದರು.
2016: ಬಾಸ್ಟನ್: ತೃತೀಯ ಲಿಂಗಿಯೊಬ್ಬರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಅಮೆರಿಕದ ಬಾಸ್ಟನ್ನಲ್ಲಿ ಘಟಿಸಿತು. ಅಷ್ಟೆ ಅಲ್ಲದೇ ಸ್ವ ಸ್ತನಪಾನ ಮಾಡಿಸಿ ಅಚ್ಚರಿ ಮೂಡಿಸಿದರು. 16 ವರ್ಷದ ಹಿಂದೆ ತೃತೀಯ ಲಿಂಗಿಯಾಗಿ ಪರಿವರ್ತನೆಗೊಂಡಿದ್ದ ಇವಾನ್ (35) ಸ್ವಂತ ಮಗು ಪಡೆಯುವ ಆಸೆ ಬಿಟ್ಟಿರಲಿಲ್ಲ. ಇದೀಗ ಈ ಆಸೆ ಪೂರೈಸಿದ್ದು, ವೈದ್ಯಲೋಕದಲ್ಲಿ ಇದೊಂದು ಅಪ್ರತಿಮ ಸಾಧನೆಯಾಗಿದೆ. ಹಾಮೋನ್ ಚಿಕಿತ್ಸೆಗೆ ಒಳಪಟ್ಟು ತೃತೀಯ ಲಿಂಗಿಯಾಗಿದ್ದ ಇವಾನ್ ತಮ್ಮ ಗುಪ್ತಾಂಗ ಮತ್ತು ಸ್ತನವನ್ನು ಮಾತ್ರ ಹಾಗೆ ಉಳಿಸಿಕೊಂಡಿದ್ದರು. ಕೃತಕ ಗರ್ಭಧಾರಣೆ ಮೂಲಕ ಮಗು ಪಡೆಯುವ ಯೋಜನೆಗೆ ಮುಂದಾಗಿ ಕಡೆಗೆ ಮಗುವಿಗೆ ಜನ್ಮ ನೀಡಿ ತಾವೆ ಮಡಿಲಲ್ಲಿ ಹಾಲುಣಿಸಿದರು.
2008: ಭಾರತದ ಲಿಯಾಂಡರ್ ಪೇಸ್ ಅವರು ಜಿಂಬಾಬ್ವೆಯ ಕಾರಾ ಬ್ಲಾಕ್ ಅವರೊಂದಿಗೆ ಯು.ಎಸ್. ಓಪನ್ ಟೆನಿಸ್ ಚಾಂಪಿಯನ್ ಶಿಪ್ನ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಪೇಸ್ ಮತ್ತು ಬ್ಲಾಕ್ ಜೋಡಿ ನ್ಯೂಯಾರ್ಕಿನಲ್ಲಿ ನಡೆದ ಫೈನಲಿನಲ್ಲಿ ಮರ್ರೆ ಮತ್ತು ಹಬೆರ್ ಜೋಡಿಯನ್ನು 7-6, 6-4ರಿಂದ ಸೋಲಿಸಿತು. ಲಿಯಾಂಡರ್ ಪೇಸ್ ಅವರು ಟೆನಿಸ್ ಬದುಕಿನ 8ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಇದು. ಸೆಮಿಫೈನಲಿನಲ್ಲಿ ಪೇಸ್ ಜೋಡಿ 6-2, 6-0ಯಿಂದ ಅರ್ಜೆಂಟೀನಾದ ಮ್ಯಾಕ್ಸಿಮ್ ಮತ್ತು ಜೂನ್ ಮೊನಾಕೊ ಜೋಡಿಯನ್ನು ಮಣಿಸಿತ್ತು.
2007: ಕಳೆದ ತಿಂಗಳು ಹೈದರಾಬಾದಿನ ಲುಂಬಿನಿ ಪಾರ್ಕ್ ಹಾಗೂ ಗೋಪಾಲ್ ಚಾಟ್ ಭಂಡಾರದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆಂಧ್ರದ ವಿಶೇಷ ತನಿಖಾ ತಂಡವು ಬಾಂಗ್ಲಾದೇಶದ ವಿದ್ಯಾರ್ಥಿನಿ ಶಾಹಿ ಲಜ್ಜಾಜಿನಿ ಎಂಬಾಕೆಯನ್ನು ತಮಿಳುನಾಡಿನ ವೆಲ್ಲೂರಿನಲ್ಲಿ ಬಂಧಿಸಿತು. ಲಜ್ಜಾಜಿನಿ ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಎಂದು ಹೇಳಲಾಗಿತ್ತು. ಆದರೆ ತನಿಖೆಯ ವೇಳೆ ಈಕೆ ವೆಲ್ಲೂರಿನ 2008ರ ಆಕ್ಸಿಲಿಯಮ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ (ಇಂಗ್ಲಿಷ್ ಸಾಹಿತ್ಯ) ವ್ಯಾಸಂಗ ಮಾಡುತ್ತಿರುವ ವಿಷಯ ಬಹಿರಂಗೊಂಡಿತು.
2007: ಕೊಳೆರೋಗದಿಂದ ತೀವ್ರ ನಷ್ಟಕ್ಕೆ ಒಳಗಾಗಿರುವ ಅಡಿಕೆ ಬೆಳೆಗಾರರ ನೆರವಿಗೆ ಬಂದ ರಾಜ್ಯ ಸರ್ಕಾರ, ತತ್ ಕ್ಷಣದ ಕ್ರಮವಾಗಿ 10 ಕೋಟಿ ರೂಪಾಯಿಗಳ ಸಬ್ಸಿಡಿ ಪ್ರಕಟಿಸಿತು. ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕದ 7 ಜಿಲ್ಲೆಗಳಿಂದ ಆಗಮಿಸಿದ ಅಡಿಕೆ ಬೆಳೆಗಾರರು ಮತ್ತು ಅಡಿಕೆ ಮಾರಾಟ ಸಹಕಾರ ಸಂಘಗಳ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಉಪಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.
2007: ರಾಜ್ಯದ ಒಟ್ಟು 208 ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಿಗೆ ಸೆಪ್ಟೆಂಬರ್ 28ರಂದು ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿತು.
2007: ವಿಶಾಖ ಪಟ್ಟಣದಿಂದ 130 ನಾಟಿಕಲ್ ಮೈಲು ದೂರ ಕಡಲಿನಲ್ಲಿ ಈದಿನ ಪ್ರಾರಂಭವಾದ ಜಂಟಿ ಸಮರಾಭ್ಯಾಸದಲ್ಲಿ ಅಮೆರಿಕ, ಭಾರತ, ಜಪಾನ್, ಆಸ್ಟ್ರೇಲಿಯ ಹಾಗೂ ಸಿಂಗಪುರದ 26 ಯುದ್ಧ ನೌಕೆ ಪಾಲ್ಗೊಂಡವು.
2007: ರಾವಲ್ಪಿಂಡಿಯ ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ಈದಿನ ಸಂಭವಿಸಿದ ಎರಡು ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 29 ಜನರು ಮೃತರಾದರು. ಪಾಕಿಸ್ಥಾನದ ಅಣುಶಕ್ತಿ ಆಯೋಗದ ನೌಕರರನ್ನು ಖಾಸೀಂ ಬಜಾರ್ ಪ್ರದೇಶದಲ್ಲಿನ ಕಚೇರಿಗೆ ಕರೆದೊಯ್ಯುತ್ತಿದ್ದ ಸೇನಾ ಪಡೆಯ ಬಸ್ಸಿನಲ್ಲಿ ಮೊದಲ ಸ್ಫೋಟ ಬೆಳಿಗ್ಗೆ 7.30ರ ಸಮಯದಲ್ಲಿ ಸಂಭವಿಸಿ, ಕನಿಷ್ಠ 17 ಮಂದಿ ಮೃತರಾದರು. ನಂತರ ಆರ್. ಎ. ಬಜಾರಿನಲ್ಲಿ ಮೋಟಾರ್ ಬೈಕಿನಲ್ಲಿಟ್ಟ ಬಾಂಬ್ ಸ್ಫೋಟಗೊಂಡು ಕನಿಷ್ಠ 12 ಜನರು ಅಸುನೀಗಿದರು.
2007: ಖಾಸಗಿ ವಿಮಾನಯಾನ ಕಂಪೆನಿ ಜೆಟ್ ಏರ್ ವೇಸ್, ನವದೆಹಲಿಯಿಂದ ಟೊರಾಂಟೊಗೆ ನೇರ ವಿಮಾನ ಸೇವೆ ಆರಂಭಿಸಿತು.
2006: ಅತ್ಯದ್ಭುತ ಸಾಹಸಗಳಿಂದ ವನ್ಯಜೀವಿಗಳ ನಿಗೂಢ ಲೋಕವನ್ನು ಜಗತ್ತಿಗೆ ತೆರೆದಿಟ್ಟಿದ್ದ ಆಸ್ಟ್ರೇಲಿಯಾದ ಸಾಹಸಿಗ `ಕ್ರೊಕೊಡೈಲ್ ಹಂಟರ್' (ಮೊಸಳೆ (ಚಿತ್ರ) ಹಿಡಿಯುವವ) ಸ್ಟೀವ್ ಇರ್ವಿನ್ (44) ಅವರು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಸಮೀಪದ ಸಾಗರದಲ್ಲಿ ಜಲಚರಗಳ ಚಿತ್ರೀಕರಣದಲ್ಲಿ ತೊಡಗಿದ್ದಾಗ ವಿಷಪೂರಿತ `ಸ್ಟಿಂಗ್ ರೆ' ಮೀನಿನ ದಾಳಿಗೆ ಗುರಿಯಾಗಿ ದುರ್ಮರಣವನ್ನಪ್ಪಿದರು. ಮೀನಿನ ವಿಷಪೂರಿತ ಬಾಣ ಅವರ ಎದೆಗೆ ನಾಟಿ ಸಾಗರಗರ್ಭದಲ್ಲೇ ಅವರು ಅಸು ನೀಗಿದರು. ಮೊಸಳೆಗಳ ಜೀವನ, ಆಹಾರ ಅಭ್ಯಾಸಗಳ ಬಗ್ಗೆ ಇರ್ವಿನ್ ನಿರ್ಮಿಸಿದ ಚಿತ್ರವನ್ನು 1992 ರಲ್ಲಿ ಪ್ರಸಾರ ಮಾಡಲಾಗಿತ್ತು. ಆ ಬಳಿಕ ಅವರು ಅತ್ಯಂತ ಜನಪ್ರಿಯರಾಗಿ ಮನೆ ಮಾತಾಗಿದ್ದರು. ವನ್ಯ ಜೀವಿಗಳ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿದ್ದ ಇರ್ವಿನ್ ಅಪರೂಪದ ವನ್ಯಜೀವಿಗಳ ಸಾಕ್ಷ್ಯಚಿತ್ರ ನಿರ್ಮಿಸಿ ಅವುಗಳ ನಿಗೂಢ ಲೋಕವನ್ನು ವೀಕ್ಷಕರ ಎದುರು ಅನಾವರಣ ಗೊಳಿಸಿದ್ದರು. ದೈತ್ಯಾಕಾರದ ಮೊಸಳೆ, ವಿಷಪೂರಿತ ಹಾವುಗಳು, ಹುಲಿ, ಸಿಂಹಗಳ ಜೊತೆಗಿನ ಅವರ ಒಡನಾಟದ ದೃಶ್ಯಗಳು ವೀಕ್ಷಕರಲ್ಲಿ ನಡುಕ ಉಂಟು ಮಾಡುತ್ತಿದ್ದವು. ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಅವುಗಳನ್ನು ಪ್ರೀತಿಸುವ ಹೊಸ ಪೀಳಿಗೆಯನ್ನೇ ಇರ್ವಿನ್ ಸೃಷ್ಟಿಸಿದ್ದರು. ಆಸ್ಟ್ರೇಲಿಯಾದಲ್ಲಿ ಸರೀಸೃಪಗಳ ಉದ್ಯಾನವನ್ನೂ ನಿರ್ವಹಿಸುತ್ತಿದ್ದರು.
2006: ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ತನ್ನ ಸಾಹಸ, ಚಾಣಾಕ್ಷತೆಯಿಂದ ಇಂಗ್ಲೆಂಡ್ ಮತ್ತು ಫ್ರಾನ್ಸಿನ ಪ್ರಶಂಸೆಗೆ ಪಾತ್ರರಾಗಿದ್ದ ಭಾರತೀಯ ಮೂಲದ ಗೂಢಚಾರಿಣಿ ನೂರುನ್ನೀಸಾ ಇನಾಯತ್ ಖಾನ್ ಅವರನ್ನು ಭಾರತ ಸರ್ಕಾರವು ಆರು ದಶಕಗಳ ಬಳಿಕ ಸ್ಮರಿಸಿಕೊಂಡು ಗೌರವ ಸಲ್ಲಿಸಿತು. ಅಧಿಕೃತ ಪ್ರವಾಸದ ಮೇಲೆ ಫ್ರಾನ್ಸಿಗೆ ಆಗಮಿಸಿದ ರಕ್ಷಣಾ ಸಚಿವ ಪ್ರಣವ್ ಮುಖರ್ಜಿ ಪ್ಯಾರಿಸ್ಸಿನಲ್ಲಿ ನೂರುನ್ನೀಸಾ ವಾಸಿಸುತ್ತಿದ್ದ ನಿವಾಸಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಎರಡನೇ ಮಹಾಯುದ್ಧ ಕಾಲದಲ್ಲಿ ನೂರುನ್ನೀಸಾ ಇಂಗ್ಲಿಷ್ ಸೇನೆ ಪರ ಗೂಢಚಾರಿಣಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರನ್ನು ಜರ್ಮನ್ ಸೈನಿಕರು ಹತ್ಯೆ ಮಾಡಿದ್ದರು. ಈ ಭಾರತೀಯ ಸಂಜಾತೆಗೆ ಬ್ರಿಟನ್ ಸರ್ಕಾರ ಜಾರ್ಜ್ ಕ್ರಾಸ್ ಹಾಗೂ ಫ್ರಾನ್ಸ್ ಸರ್ಕಾರ ಕ್ರೋಯಿಕ್ಸ್ ಡಿ ಗ್ಯುರ್ರೆ ಪ್ರಶಸ್ತಿಗಳನ್ನು ಮರಣೋತ್ತರವಾಗಿ ನೀಡಿ ಗೌರವಿಸಿವೆ.
2006: ಕ್ರಿಮಿನಾಶಕ ಅಂಶಗಳಿರುವ ತಂಪು ಪಾನೀಯಗಳನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಹೊರಡಿಸಿರುವ ಸುತ್ತೊಲೆ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ ಹೈಕೋರ್ಟ್ ಶಾಲಾ ಕಾಲೇಜುಗಳನ್ನು ಹೊರತು ಪಡಿಸಿ ಉಳಿದೆಡೆಗಳಲ್ಲಿ ಮಾರಾಟ ಮಾಡಲು ಅನುಮತಿ ನೀಡಿತು.
2006: ವಿಶ್ವ ಚಾಂಪಿಯನ್ ಮಾನವ ಜಿತ್ ಸಿಂಗ್ ಸಂಧು ಅವರು ಸಿಂಗಪುರದಲ್ಲಿ ನಡೆದ ಏಷ್ಯನ್ ಕ್ಲೇ ಶೂಟಿಂಗ್ ಚಾಂಪಿಯನ್ ಶಿಪ್ ನ ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.
2006: ಬಿಹಾರದ ಮಾಜಿ ಮುಖ್ಯಮಂತ್ರಿ ಸತ್ಯೇಂದ್ರ ನಾರಾಯಣ ಸಿನ್ಹ (89) ಪಟ್ನಾದಲ್ಲಿ ಈದಿನ ನಿಧನರಾದರು. `ಛೋಟೆ ಸಾಹೇಬ್' ಎಂದೇ ಹೆಸರಾಗಿದ್ದ ಸಿನ್ಹ 1952ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರಥಮ ಲೋಕಸಭೆಗೆ ಔರಂಗಾಬಾದಿನಿಂದ ಆಯ್ಕೆಯಾಗಿದ್ದರು. ನಂತರ ಇದೇ ಕ್ಷೇತ್ರದಿಂದ ಅವರು 7 ಬಾರಿ ಲೋಕಸಭೆಗೆ ಆಯ್ಕೆಯಾದರು. ಬಿಹಾರ ರಾಜಕೀಯದಲ್ಲೂ ಮಿಂಚಿದ ಅವರು 1961ರಲ್ಲಿ ವಿವೇಕಾನಂದ ಝಾ ಸಂಪುಟದಲ್ಲಿ, 1963ರಲ್ಲಿ ಕೆ.ಬಿ. ಸಹಾಯ್ ಸಂಪುಟದಲ್ಲಿ ಸಚಿವರಾಗಿದ್ದರು. 1989ರಲ್ಲಿ ಆಗಿನ ಮುಖ್ಯಮಂತ್ರಿ ಭಗವತ್ ಝಾ ಆಜಾದ್ ವಿರುದ್ಧ ಬಂಡೆದ್ದು ತಾವೇ ಮುಖ್ಯಮಂತ್ರಿಯಾದರು.
2006: ರಾಜಸ್ಥಾನದ ರಾಜಧಾನಿ ಜೈಪುರದಿಂದ 30 ಕಿ.ಮೀ. ದೂರದ ಬೆನಾಡ್ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಒಂದರ ಅಡಿಗೆ ಸಿಲುಕಿ ಕರಿಯ ನಾಗರ ಒಂದು ಈದಿನ ಮೃತಪಟ್ಟಿತು. ಗ್ರಾಮಸ್ಥರು ಚಿತೆ ನಿರ್ಮಿಸಿ ಅದರ ಅಂತ್ಯ ಸಂಸ್ಕಾರದ ವ್ಯವಸ್ಥೆ ಮಾಡಿದರು. ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ಎಲ್ಲಿಂದಲೋ ಬಂದ ಹೆಣ್ಣು ಹಾವೊಂದು ಛಂಗನೆ ಚಿತೆಗೆ ಜಿಗಿದು `ಸತಿ ಸಹಗಮನ' ಮಾಡಿತು. ಸಂಗಾತಿಯ ಅಗಲಿಕೆಯ ನೋವು ತಾಳಲಾಗದೆ ನಾಗಿಣಿ ಸಹಗಮನ ಮಾಡಿಕೊಂಡ ಈ ಗ್ರಾಮ ಭಕ್ತಾದಿಗಳಿಗೆ ಪವಿತ್ರ ಕ್ಷೇತ್ರವಾಗಿ ಮಾರ್ಪಟ್ಟಿತು.
2001: ಮಾನವ ಎಂಬ್ರಿಯೋನಿಕ್ ಸ್ಟೆಮ್ ಸೆಲ್ ಗಳನ್ನು ರಕ್ತ ಕಣಗಳಾಗಿ (ರಕ್ತಕೋಶ) ಪರಿವರ್ತಿಸಬಹುದು ಎಂದು ಅಮೆರಿಕನ್ ವಿಜ್ಞಾನಿಗಳು ಮೊತ್ತ ಮೊದಲ ಬಾರಿಗೆ ಪ್ರಕಟಿಸಿದರು. ವೈದ್ಯಕೀಯ ಚಿಕಿತ್ಸೆಗಳಿಗೆ ರಕ್ತ ಸರಬರಾಜು ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಯಿತು. ಚಿಕಿತ್ಸೆ ಅಥವಾ ಟ್ರಾನ್ಸ್ ಫ್ಯೂಷನ್ ಗಳಿಗೆ ಲ್ಯಾಬೋರೋಟರಿಯಲ್ಲಿ ಅಭಿವೃದ್ಧಿ ಪಡಿಸಲಾದ ರಕ್ತವನ್ನು ರಕ್ತಕೋಶಗಳ ಬದಲಿಗೆ ಬಳಸಬಹುದಾದ ವಿಧಾನದ ಬಗ್ಗೆ ಉತ್ತಮ ತಿಳುವಳಿಕೆ ಹೊಂದಲು ಈ ಸಾಧನೆ ನೆರವಾಗಲಿದೆ ಎಂದು ಯುನಿವರ್ಸಿಟಿಆಫ್ ವಿಸ್ ಕೊನ್ ಸಿನ್ ನ ಸಂಶೋಧಕರು ಹೇಳಿದರು.
2001: `ಕಂಪ್ಯೂಟರ್ ದೈತ್ಯ' ಹ್ಯೂಲೆಟ್- ಪ್ಯಾಕಾರ್ಡ್ ಸಂಸ್ಥೆಯು ಕಾಂಪಾಕ್ ಕಂಪ್ಯೂಟರ್ಸ್ ಸಂಸ್ಥೆಯನ್ನು 250ಕೋಟಿ ಡಾಲರುಗಳಿಗೆ ಖರೀದಿಸಲು ಒಪ್ಪಿತು. `ನ್ಯೂ ಎಚ್-ಪಿ'ಯ ಒಟ್ಟು ಆದಾಯ 870 ಕೋಟಿ ಡಾಲರುಗಳು ಆಗಬಹುದು ಎಂದು ನಿರೀಕ್ಷಿಸಲಾಯಿತು. ಇದರಿಂದಾಗಿ ಕಂಪ್ಯೂಟರ್ ಉದ್ಯಮದ ನಾಯಕನೆಂಬ ಹೆಸರಿದ್ದ ಐಬಿಎಮ್ ಗೆ ತೀವ್ರ ಸ್ಪರ್ಧೆ ಎದುರಾಯಿತು.
1997: ಖ್ಯಾತ ಪತ್ರಕರ್ತ ಧರ್ಮವೀರ್ ಭಾರತಿ ನಿಧನ.
1981: ಬಾಂಬೆಹೈ ಸಮೀಪ ಹೊಸ ತೈಲ ನಿಕ್ಷೇಪ ಒಂದನ್ನು ಪತ್ತೆ ಹಚ್ಚಲಾಗಿದೆ ಎಂದು ಪೆಟ್ರೋಲಿಯಂ ಮತ್ತು ರಾಸಾಯನಿಕ ಸಚಿವ ಪಿ.ಸಿ. ಸೇಠಿ ಪ್ರಕಟಿಸಿದರು. ಬಾಂಬೆ ಹೈನ ಪೂರ್ವಕ್ಕೆ 35 ಕಿ.ಮೀ. ದೂರದಲ್ಲಿ ಈ ಹೊಸ ನಿಕ್ಷೇಪ ಪತ್ತೆಯಾಗಿದೆ.
1972: ಅಮೆರಿಕದ ಈಜುಗಾರ ಮಾರ್ಕ್ ಸ್ಪಿಟ್ಜ್ ಅವರು ಮ್ಯೂನಿಕ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 400 ಮೀಟರುಗಳ ಮೆಡ್ಲೆ ರಿಲೇಯಲ್ಲಿ ಏಳನೇ ಚಿನ್ನದ ಪದಕ ಗೆದ್ದುಕೊಂಡರು. ಇದರೊಂದಿಗೆ ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಏಳು ಚಿನ್ನದ ಪದಕಗಳನ್ನು ಹೆಗಲಿಗೆ ಏರಿಸಿಕೊಂಡ ಪ್ರಪ್ರಥಮ ಈಜುಗಾರ ಎಂಬ ಖ್ಯಾತಿ ಇವರದಾಯಿತು.
1967: ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟು ಕೇಂದ್ರಿತ ಭೂಕಂಪದಲ್ಲಿ 200 ಜನರ ಸಾವು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.5ರಷ್ಟಿತ್ತು.
1962: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಕಿರಣ್ ಮೋರೆ ಗುಜರಾತಿನ ಬರೋಡದ್ಲಲಿ ಈದಿನ ಜನಿಸಿದರು.
1933: ಕವಿ, ನಾಟಕಕಾರ, ವಿಮರ್ಶ, ಅನುವಾದಕ ಬುದ್ದಣ್ಣ ಹಿಂಗಮಿರೆ ಅವರು ಬಾಬು-ದುಂಡವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ರಾಜಾಪುರದಲ್ಲಿ ಜನಿಸಿದರು.
1888: ಜಾರ್ಜ್ ಈಸ್ಟ್ ಮನ್ ಅವರಿಗೆ ಅವರ `ರೋಲ್ ಫಿಲ್ಮ್ ಕ್ಯಾಮರಾ'ಕ್ಕೆ ಪೇಟೆಂಟ್ ಸಿಕ್ಕಿತು. ಅವರು ಅದನ್ನು `ಕೊಡಕ್' ಟ್ರೇಡ್ ಮಾರ್ಕಿನಲ್ಲಿ ನೋಂದಣಿ ಮಾಡಿಸಿದರು.
1880: ಬಂಗಾಳಿ ಸಾಹಿತಿ ಭೂಪೇಂದ್ರನಾಥ ದತ್ತ ಜನನ.
1825: ದಾದಾಭಾಯಿ ನವರೋಜಿ ಜನ್ಮದಿನ. ಭಾರತದ ರಾಷ್ಟ್ರೀಯವಾದಿಯೂ, ಬ್ರಿಟಿಷರು ಭಾರತದಲ್ಲಿ ಅನುಸರಿಸುತ್ತಿದ್ದ ಆರ್ಥಿಕ ನೀತಿಯ ಉಗ್ರ ಟೀಕಾಕಾರರೂ ಆಗಿದ್ದ ನವರೋಜಿ ಭಾರತೀಯ ರಾಷ್ಟ್ರೀಯ ಚಳವಳಿಯ `ಪಿತಾಮಹ' ಎಂದೇ ಖ್ಯಾತರಾಗಿದ್ದಾರೆ. `ಸ್ವರಾಜ್' ಪದವನ್ನು ಜನಪ್ರಿಯಗೊಳಿಸಿದವರು ನವರೋಜಿ ಅವರೇ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment