Friday, September 7, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 07

ಇಂದಿನ ಇತಿಹಾಸ History Today ಸೆಪ್ಟೆಂಬರ್ 07

2018: ನವದೆಹಲಿ: ಮಾಲಿನ್ಯ ಮುಕ್ತವಾದಚಲನಶೀಲ ರಸ್ತೆ ನಕ್ಷೆಯನ್ನು ಇಲ್ಲಿ ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡುವಂತೆ ಮತ್ತು ಸಂಚಾರಕ್ಕೆ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸುವಂತೆ ಕೋರಿದರು. ಆರ್ಥಿಕ ಮತ್ತು ಪರಿಸರ ದಟ್ಟಣೆಯ ವೆಚ್ಚಗಳನ್ನು ಇಳಿಸುವ ನಿಟ್ಟಿನಲ್ಲಿ ದಟ್ಟಣೆ ಮುಕ್ತ ಚಲನಶೀಲ ರಸ್ತೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಭಾರತೀಯ ಆರ್ಥಿಕತೆಯು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಅರ್ಥಿಕತೆಯಾಗಿದ್ದು ೧೦೦ಕ್ಕೂ ಹೆಚ್ಚು ಸ್ಮಾರ್ಟ್ ಸಿಟಿಗಳ ಅಭಿವೃದ್ದಿಯ ಜೊತೆಗೆ ರಸ್ತೆಗಳು, ವಿಮಾನ ನಿಲ್ದಾಣಗಳು, ರೈಲ್ವೇ ಹಳಿಗಳು ಮತ್ತು ಬಂದರುಗಳನ್ನು ಅತ್ಯಂತ ತ್ವರಿತ ಗತಿಯಲ್ಲಿ ನಿರ್ಮಿಸುತ್ತಿದೆ ಎಂದು ಮೋದಿ ಅವರು ಜಾಗತಿಕ ಚಲನಶೀಲತಾ ಶೃಂಗ ಸಭೆಯಲ್ಲಿ (ಮೂವ್ಮಾತನಾಡುತ್ತಾ ಹೇಳಿದರು. ಸ್ವಚ್ಛ ಇಂಧನದ ಬಲದ ಸ್ವಚ್ಛ ಚಲಶೀಲತೆಯು ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಅತ್ಯಂತ ಪ್ರಬಲ ಆಯುಧವಾಗಿದೆ. ಅಂದರೆ ಮಾಲಿನ್ಯ ಮುಕ್ತ ಸ್ವಚ್ಛತಾ ಅಭಿಯಾನವು ಪರಿಸರವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಜನರ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದು ಪ್ರಧಾನಿ ನುಡಿದರು.  ‘ಕ್ಲೀನ್ ಕಿಲೋಮೀಟರ್ಸ್’ ಕಲ್ಪನೆಯನ್ನು ನಾವು ಬೆಂಬಲಿಸಬೇಕು. ಭಾರತದ ಭವಿಷ್ಯದ ಚಲನಶೀಲತೆಯ ಕುರಿತ ನನ್ನ ದೃಷ್ಟಿಯು ಕಾಮನ್ (ಸಾಮಾನ್ಯ), ಕನೆಕ್ಟೆಡ್ (ಜೋಡಿಸಲ್ಪಟ್ಟದ್ದು), ಕನ್ವೀನಿಯೆಂಟ್ (ಅನುಕೂಲಕರ), ಕಂಜೆಷನ್ ಫ್ರೀ (ದಟ್ಟಣೆ ಮುಕ್ತ), ಚಾರ್ಜ್ಡ್ (ಚೈತನ್ಯ ಭರಿತ), ಕ್ಲೀನ್ (ಸ್ವಚ್ಛ), ಕಟ್ಟಿಂಗ್-ಎಜ್ (ನಿರ್ಣಾಯಕ) ೭ಸಿ ಗಳನ್ನು ಆಧರಿಸಿದೆ ಎಂದು ಮೋದಿ ಹೇಳಿದರು. ದಟ್ಟಣೆ ಮುಕ್ತ ಚಲನಶೀಲತೆ: ಕಾರುಗಳು, ಸ್ಕೂಟರುಗಳು ಮತ್ತು ರಿಕ್ಷಾಗಳಂತಹ ವಾಹನಗಳಿಂದಾಚೆಗೆ ನಾವು ಗಮನ ಹರಿಸಬೇಕು. ಸಾಮಾನ್ಯ ಸಾರ್ವಜನಿಕ ಸಾರಿಗೆಯು ನಮ್ಮ ಚಲನಶೀಲತಾ ಉಪಕ್ರಮಗಳಲ್ಲಿ ತಿರುವುಗಲ್ಲಾಗಬೇಕು ಎಂದು ಪ್ರಧಾನಿ ನುಡಿದರುಖಾಸಗಿ ವಾಹನ ಬಳಕೆಯಲ್ಲಿ ಸುಧಾರಣೆ ತರುವ ಸಲುವಾಗಿವೆಹಿಕಲ್ ಪೂಲಿಂಗ್ ಪೂರ್ಣ ಅವಕಾಶಗಳ ಬಳಕೆ ಮಾಡಿಕೊಳ್ಳಬೇಕು. ಚಲನಶೀಲತೆಯು ಸುರಕ್ಷಿತ, ಕೈಗೆಟಕುವಂತಹ ಮತ್ತು ಸಮಾಜದ ಎಲ್ಲ ವರ್ಗಗಳಿಗೂ ಲಭಿಸುವಂತಹುದಾಗಿರಬೇಕು ಎಂದು ಮೋದಿ ಹೇಳಿದರು. ವಿದ್ಯುತ್ ಚಾಲಿತ ಚಲನಶೀಲತೆಯು ನಮ್ಮ ಮುಂದಿರುವ ಮಾರ್ಗವಾಗಿದ್ದು, ಸರ್ಕಾರವು ಬ್ಯಾಟರಿಗಳಿಂದ ಹಿಡಿದು ಪುಟ್ಟ ಪುಟ್ಟ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಹೂಡಿಕೆಗೆ ಜನರ ಗಮನವನ್ನು ಸೆಳೆಯಲು ಸರ್ಕಾರ ಬಯಸುತ್ತದೆ ಎಂದು ಪ್ರಧಾನಿ ನುಡಿದರು. ಖಾಸಗಿ ವಾಹನ ಸಾರಿಗೆ ವ್ಯವಸ್ಥೆ ಬದಲಿಗೆ ಸಾರ್ವಜನಿಕ ಸಾರಿಗೆ ಬಗ್ಗೆ ನಾವು ಖಚಿತತೆ ನೀಡುವ ಅಗತ್ಯ ಇದೆ ಎಂದು ಅವರು ಹೇಳಿದರು. ಅಂತರ್ಜಾಲ ಆಧಾರಿತ ಸಂಪರ್ಕಿತ ಹಂಚಿಕೊಳ್ಳುವ ಆರ್ಥಿಕತೆಯು ಚಲನಚೀಲತೆಯ ಆನಿಕೆ ಅಥವಾ ಊರುಗೋಲಾಗುತ್ತಿದೆ ಎಂದು ಮೋದಿ ನುಡಿದರು. ಚಲನಶೀಲತೆಯು ಆರ್ಥಿಕತೆಯ ಮುಖ್ಯ ಚಾಲಕ ಎಂದು ನುಡಿದ ಪ್ರಧಾನಿ, ’ಉತ್ತಮ ಚಲನಶೀಲತೆಯು ಪ್ರಯಾಣ ಮತ್ತು ಸಆಗಣೆಯ ಹೊರೆಯನ್ನು ಇಳಿಸುತ್ತದೆ ಮತ್ತು ಆರ್ಥಿಕ ಪ್ರಗತಿಗೆ ಒತ್ತು ನೀಡುತ್ತದೆ. ಇದು ಈಗಾಗಲೇ ಪ್ರಮುಖ ಉದ್ಯೋಗ ಸೃಷ್ಟಿಯ ಮೂಲವಾಗಿದ್ದು, ಮುಂದಿನ ತಲೆಮಾರಿಗೆ ಉದ್ಯೋಗ ನೀಡುವ ಮುಖ್ಯ ಕ್ಷೇತ್ರವಾಗಲಿದೆ ಎಂದು ಹೇಳಿದರು.    ಹೆದ್ದಾರಿ ನಿರ್ಮಾಣ ಕಾರ್ಯ ದುಪ್ಪಟ್ಟಾಗಿದೆ, ಗ್ರಾಮೀಣ ರಸ್ತೆ ನಿರ್ಮಾಣ ಕಾರ್ಯಕ್ರಮಕ್ಕೆ ಮರು ಚೇತನ ನೀಡಲಾಗಿದೆ, ಇಂಧನ ದಕ್ಷತೆಯ ಮತ್ತು ಸ್ವಚ್ಚ ಇಂಧನ ವಾಹನಗಳಿಗೆ ಒತ್ತು ನೀಡಲಾಗುತ್ತಿದೆ ಕಡಿಮೆ ವೆಚ್ಚದಲ್ಲಿನ ವಿಮಾನ ಸಂಪರ್ಕ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಮೋದಿ ಹೇಳಿದರು.

2018: ನವದೆಹಲಿ: ಗುಂಪು ಹತ್ಯೆ ಮತ್ತು ಗೋಸಂರಕ್ಷಣೆ ಹೆಸರಿನಲ್ಲಿ ನಡೆಯುವ ದಾಳಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ನಿರ್ದೇಶಿಸಿ ತಾನು ನೀಡಿದ ಆದೇಶವನ್ನು ಪಾಲಿಸಿದ ಬಗೆಗೆ ೨೯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ೧೧ರಾಜ್ಯಗಳು ಮಾತ್ರವೇ ವರದಿ ಸಲ್ಲಿಸಿವೆ ಎಂದು ತೀವ್ರ ಗರಂ ಆದ ಸುಪ್ರೀಂಕೋರ್ಟ್, ಆದೇಶ ಪಾಲನಾ ವರದಿ ಸಲ್ಲಿಕೆಗೆ ಒಂದು ವಾರದ ಗಡುವು ನೀಡಿತು. ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ .ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ಆದೇಶ ಪಾಲನಾ ವರದಿ ಸಲ್ಲಿಸದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವರದಿ ಸಲ್ಲಿಸಲು ಕೊನೆಯ ಅವಕಾಶದೊಂದಿಗೆ ಎಚ್ಚರಿಕೆ ನೀಡಿತು.
ಒಂದು ವಾರದ ಒಳಗಾಗಿ ವರದಿ ಸಲ್ಲಿಸದೇ ಇದ್ದಲ್ಲಿ ರಾಜ್ಯ ಇಲ್ಲವೇ ಕೇಂದ್ರಾಡಳಿತ ಪ್ರದೇಶಗಳ ಗೃಹ ಕಾರ್ಯದರ್ಶಿಗಳೇ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಬೇಕಾಗುತ್ತದೆ ಎಂದು ಪೀಠ ಎಚ್ಚರಿಸಿತು. ಪ್ರಕರಣದ ವಿಚಾರಣೆ ಕಾಲದಲ್ಲಿ ಕೇಂದ್ರ ಸರ್ಕಾರವು ಗೋಸಂರಕ್ಷಕರ ದಾಳಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶವನ್ನು ಅನುಸರಿಸಿ ಗುಂಪು ದಾಳಿಗಳ ನಿಗ್ರಹಕ್ಕಾಗಿ ಕಾನೂನು ರೂಪಿಸುವ ನಿಟ್ಟಿನಲಿ ಸಚಿವರ ಸಮಿತಿಯನ್ನು ರಚಿಸಿದೆ ಎಂದು ತಿಳಿಸಿತು. ಜುಲೈ ೨೦ರಂದು ಜಾನುವಾರು ಸಾಕಣೆ ರೈತ ರಕ್ಬರ್ ಖಾನ್ ಅವರನ್ನು ಗುಂಪುದಾಳಿ ನಡೆಸಿ ಹತ್ಯೆಗೈದ ಪ್ರಕರಣದಲ್ಲಿ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ವರಿಷ್ಠರು ಸೇರಿದಂತೆ ರಾಜಸ್ಥಾನದ ಅಧಿಕಾರಿಗಳ ವಿರುದ್ಧ ನ್ಯಾಯಾಲಯ ನಿಂದನೆ ಕ್ರಮ ಕೈಗೊಳ್ಳಬೇಕು ಕೋರಿ ಕಾಂಗ್ರೆಸ್ ನಾಯಕ ತೆಹ್ಸೀನ್ ಪೂನಾವಾಲ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸಿತ್ತು. ನೆಲದ ಕಾನೂನನ್ನು ಧಿಕ್ಕರಿಸಿ ಗುಂಪುದಾಳಿಯಂತಹ ಭಯಾನಕ ಕೃತ್ಯಗಳನ್ನು ಎಸಗಲು ಅವಕಾಶ ನೀಡಲಾಗದು ಎಂದು ಸುಪ್ರೀಂಕೋರ್ಟ್ ಜುಲೈ ೧೭ರಂದು ತನ್ನ ಆದೇಶದಲ್ಲಿ ಖಡಕ್ಕಾಗಿ ತಿಳಿಸಿತ್ತು ಮತ್ತು ಗುಂಪು ಹತ್ಯೆ ಹಾಗೂ ಗೋಸಂಕ್ಷಣೆ ಹೆಸರಿನಲ್ಲಿ ನಡೆಯುವ ದಾಳಿಗಳನ್ನು ನಿಗ್ರಹಿಸುವ ಸಂಬಂಧ ಮಾರ್ಗದರ್ಶಿ ಸೂತ್ರಗಳನ್ನು ನೀಡಿತ್ತು. ಇಂತಹ ಘಟನೆಗಳ ಬಗ್ಗೆ ಕಠಿಣವಾಗಿ ವ್ಯವಹರಿಸಲು ಕಾನೂನು ರೂಪಿಸುವ ಬಗ್ಗೆ ಪರಿಶೀಲಿಸವಂತೆ ಕೇಂದ್ರ ಸರ್ಕಾರಕ್ಕೂ ಸುಪ್ರೀಂಕೋರ್ಟ್ ಸೂಚಿಸಿತ್ತು.

2018: ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಚಾರಿತ್ರಿಕ ಕೆಂಪುಕೋಟೆಯ ಬಳಿ ಠಳಾಯಿಸುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಇಸ್ಲಾಮಿಕ್ ಸ್ಟೇಟ್ (ಐಎಸ್ ಜೆಕೆ) ಭಯೋತ್ಪಾದಕರೆಂದು ಆಪಾದಿಸಲಾದ ಇಬ್ಬರನ್ನು ದೆಹಲಿ ವಿಶೇಷ ಪೊಲೀಸರು ಬಂಧಿಸಿದರು. ಶಂಕಿತರಿಬ್ಬರೂ ಕಾಶ್ಮೀರದ ಶೋಪಿಯಾನ್ ನಿವಾಸಿಗಳು ಎಂದು ಮೂಲಗಳು ಹೇಳಿದವು. ಬಂಧಿತರನ್ನು ಪರ್ವೇಜ್ ರಶೀದ್ ಮತ್ತು ಜಮ್ಶೆಡ್ ಜಹೂರ್ ಎಂಬುದಾಗಿ ಗುರುತಿಸಲಾಯಿತು. ಬಂಧಿತರ ಬಂಧುಗಳು ಹಿಂದೆ ಭದ್ರತಾ ಪಡೆಗಳ ಜೊತೆಗಿನ ಘರ್ಷಣೆಯಲ್ಲಿ ಹತರಾಗಿದ್ದರು ಎಂದು ಪೊಲೀಸ್ ಮೂಲಗಳು ಹೇಳಿದವು. ಐಎಸ್ ಜಿಕೆಯು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಆಧೀನ ಸಂಘಟನೆ ಎಂದು ಗುರುತಿಸಲಾಗಿದೆ. ಬಂಧಿತರಿಬ್ಬರ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಉಭಯ ವ್ಯಕ್ತಿಗಳನ್ನೂ ನವದೆಹಲಿಯ ಕಾಶ್ಮೀರ್ ಗೇಟ್ ಬಳಿ ಬಂಧಿಸಲಾಗಿದ್ದು, ಅವರು ಯಾವ ಅಕ್ರಮ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದರು ಮತ್ತು ಯಾವ ಸಂದರ್ಭದಲ್ಲಿ ಅವರನ್ನು ಬಂಧಿಸಲಾಯಿತು ಎಂಬ ಬಗೆಗಿನ ಮಾಹಿತಿಗಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ಹೇಳಿದವು.

2018: ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಗರದ ಐತಿಹಾಸಿಕ ಜಾಮಾ ಮಸೀದಿ ಬಳಿ ಪೊಲೀಸರು, ಭದ್ರತಾ ಪಡೆಗಳ ಮೇಲೆ ಕಲ್ಲೆಸೆಯುತ್ತಿದ್ದ ನಿಜವಾದ ಅಪರಾಧಿಗಳನ್ನು ಹಿಡಿಯಲು ಹೊಸ ತಂತ್ರ ಪ್ರಯೋಗಿಸಿದರು. ಶುಕ್ರವಾರದ ಪ್ರಾರ್ಥನೆಯ ನಂತರ, ಮಸೀದಿಯ ಒಳಗಿನಿಂದ ಬಂದ ಜನರ ಗುಂಪು ಪೊಲೀಸರು ಮತ್ತು ಸಿಆರ್ ಪಿಎಫ್  ಸಿಬ್ಬಂದಿ ಮೇಲೆ  ಕಲ್ಲುಗಳನ್ನು ತೂರಲು ಪ್ರಾರಂಭಿಸಿತು ಆದರೆ ಬಾರಿ ಪೊಲೀಸರು, ಸಿಆರ್ ಪಿಎಫ್ ಕಡೆಯಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ. ಲಾಠಿಪ್ರಹಾರವಾಗಲೀ, ಅಶ್ರುವಾಯ ಶೆಲ್ ಪ್ರಯೋಗವಾಗಲೀ ನಡೆಯಲಿಲ್ಲ. ಪ್ರತಿಭಟನಕಾರರ ಗುಂಪು ೧೦೦ಕ್ಕಿಂತಲೂ ಹೆಚ್ಚಾದಾಗ  ಇಬ್ಬರು ಕಲ್ಲೇಟಿಗರು ಮೆರವಣಿಗೆಯ ಮುಂದಾಳುತ್ವ ವಹಿಸಿಕೊಂಡು ಮುಂದುವರೆದರು. ಆಗ ಮೊದಲ ಬಾರಿಗೆ ಗುಂಪನ್ನು ಚದುರಿಸಲು ಆಶ್ರುವಾಯು ಶೆಲ್ ಸಿಡಿಸಲಾಯಿತು. ಈ ಮಧ್ಯೆ ಮಫ್ತಿಯಲ್ಲಿದ್ದುಕೊಂಡು ಕಲ್ಲೇಟಿಗರಂತೆ ಮುಖಕ್ಕೆ ಮುಸುಕು ಹಾಕಿಕೊಂಡು ನಟಿಸುತ್ತಾ ದಾಳಿಕೋರರ ನಡುವೆ ಸೇರಿಕೊಂಡಿದ್ದ ಪೊಲೀಸರು ಆಟಿಕೆ ಪಿಸ್ತೂಲು ತೋರಿಸುತ್ತಾ ಮೆರವಣಿಗೆಯ ನೇತೃತ್ವ ವಹಿಸಿದ್ದ ನೈಜ ಕಲ್ಲೇಟಿರಿಬ್ಬರನ್ನು ದಬಕ್ಕನ್ನೆ ಹಿಡಿದು ವಾಹನಕ್ಕೆ ಎಳೆದೊಯ್ದರು. ದಿಢೀರ್ ಬೆಳವಣಿಗೆಯಿಂದ ದಿಗಿಲು ಬಿದ್ದ ಕಲ್ಲೇಟಿಗರು ತಮ್ಮ ಪ್ರತಿಭಟನೆಯನ್ನು ಅರ್ಧಕ್ಕೆ ನಿಲ್ಲಿಸಿ ಸ್ಥಳ ಬಿಟ್ಟು ಚದುರಿದರು. ಪೊಲೀಸರು ತಮ್ಮ ವರಸೆ ಬದಲಿಸಿದ್ದರಿಂದ ಪ್ರತಿಭಟನಕಾರರು ಬೇಸ್ತು ಬಿದ್ದಿದ್ದರು೨೦೧೦ರಲ್ಲಿ ಕೂಡಾ ನಿಜವಾದ ಕಲ್ಲೇಟಿಗರನ್ನು  ಪತ್ತೆ ಹಚ್ಚಲು ಭಾರೀ ಸಂಖ್ಯೆಯಲ್ಲಿ ಪೊಲೀಸರು ಮಫ್ತಿ ವೇಷ ಧರಿಸಿಕೊಂಡು ಜನರ ಗುಂಪಿನ ಮಧ್ಯೆ ಸೇರಿ ಇದೇ ಮಾದರಿ ಕಾರ್ಯಾಚರಣೆ ನಡೆಸಿದ್ದರು.



2016:  ಪ್ಯಾರಿಸ್: ವಿಶ್ವದ ಚೊಚ್ಚಲ ಭಾಗಶಃ ಮುಖಕಸಿಗೆ ಒಳಗಾಗಿದ್ದ ಫ್ರೆಂಚ್ ಮಹಿಳೆ ಇಸಬೆಲ್ಲ ಡಿನೊಯಿರ್ ಅವರು ಸುದೀರ್ಘ ಕಾಲದ ಅಸ್ವಸ್ಥತೆಯ ಬಳಿಕ ತಮ್ಮ 49ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂಬುದು ಬೆಳಕಿಗೆ ಬಂದಿತು.  ಇಸಬೆಲ್ಲ ಅವರು ನಾಯಿ ಕಚ್ಚಿದ ಪರಿಣಾಮವಾಗಿ ತಮ್ಮ ಬಾಯಿ ಮತ್ತು ಮೂಗು ಕಳೆದುಕೊಂಡಿದ್ದರು. ಆದರೆ ಮೆದುಳು ಸಾವು ಸಂಭವಿಸಿದ್ದ ಮಹಿಳೆಯೊಬ್ಬರ ಅಂಗಾಂಶವನ್ನು ಬಳಸಿ ತಮ್ಮ ಮುಖಕ್ಕೆ ಭಾಗಶಃ ಕಸಿ ಮಾಡಿಸಿಕೊಳ್ಳುವ ಮೂಲಕ 2005ರಲ್ಲಿ ಇತಿಹಾಸ ನಿರ್ಮಿಸಿದ್ದರು. ಅಮೀನ್ಸ್ ಪಿಕಾರ್ಡೀ ಆಸ್ಪತ್ರೆಯಲ್ಲಿ 15 ಗಂಟೆಗಳ  ಶಸ್ತ್ರಚಿಕಿತ್ಸೆ ನಡೆದಿತ್ತು. ಇಸಬೆಲ್ಲ ಅವರು ಏಪ್ರಿಲ್ ತಿಂಗಳಲ್ಲಿ ಮೃತರಾಗಿದ್ದಾರೆ ಎಂದು ಲೆ ಫಿಗಾರೋ ವರದಿ ಮಾಡಿದ್ದು, ಅಮೀನ್ಸ್ ಆಸ್ಪತ್ರೆಯ ವೈದ್ಯರು ಇದನ್ನು ದೃಢ ಪಡಿಸಿದ್ದಾರೆ. ಇಸಬೆಲ್ಲ ಅವರ ಕುಟುಂಬದ ಗೌಪ್ಯತೆಯನ್ನು ರಕ್ಷಿಸುವ ಸಲುವಾಗಿ ಸಾವಿನ ಸುದ್ದಿಯನ್ನು ವೈದ್ಯರು ಬಹಿರಂಗ ಪಡಿಸಿರಲಿಲ್ಲ. ಇಸಬೆಲ್ಲ ಸಾವಿಗೆ ನಿರ್ದಿಷ್ಟವಾದ ಕಾರಣ ಏನು ಎಂಬುದನ್ನು ವೈದ್ಯರು ಬಹಿರಂಗ ಪಡಿಸಿಲ್ಲ. ಕಸಿ ಭಾಗವನ್ನು ಇಸಬೆಲ್ಲಳ ದೇಹ ಕಳೆದ ವರ್ಷ ತಿರಸ್ಕರಿಸಿದ್ದು, ತುಟಿಗಳ ಬಳಕೆ ಶಕ್ತಿಯನ್ನು ಆಕೆ ಕಳೆದುಕೊಂಡಿದ್ದರು ಎಂದು ವರದಿ ಲೆ ಫಿಗಾರೋ ವರದಿ ತಿಳಿಸಿತು..

2016: ಲಾಸ್ ಏಂಜಲೀಸ್ ಸಿಟಿ ಆಫ್ ಗೋಲ್ಡ್‌’, ‘ಸೆಂಟ್ರಲ್ ಸ್ಟೇಷನ್ಚಲನಚಿತ್ರಗಳ ನಿರ್ಮಾಪಕ ಬ್ರಿಟನ್ ಡೊನಾಲ್ಡ್ ರಾನ್ವಾಡ್ (62) ನಿಧನರಾದರು. ಮೊಂಟೇರಿಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರ ಮೇಳದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರು ಹಠಾತ್ತಾಗಿ ನಿಧನರಾದರು. ಅವರ ಶವ  ಮೊಂಟೇರಿಯ ಹೋಟೆಲ್ ರೂಮ್ನಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ರೇಡಿಯೊ ವರದಿ ಮಾಡಿತು. ಡೊನಾಲ್ಡ್ ಅವರು,‘ಸೆಂಟ್ರಲ್  ಆಫ್ ಬ್ರಸಿಲ್’,‘ಫ್ಯಾಮಿಲಿಯಾ ರೊಡಾಂಟೆ’, ‘ಝಾಂಗೋ’,‘ಬ್ಯಾಬಿಲೋನಿಯಾ 2000’ ಸೇರಿದಂತೆ ಅನೇಕ ಚಲಚಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದರು.

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಸಂವಿಧಾನವನ್ನು (ಯುಎನ್
ಚಾರ್ಟರ್ ) ಸಂಸ್ಕೃತಕ್ಕೆ ಭಾಷಾಂತರ ಮಾಡಲಾಯಿತು. ಡಾ. ಜೆ.ಕೆ. ತ್ರಿಪಾಠಿ ಅವರು ವಿಶ್ವಸಂಸ್ಥೆ ಸಂವಿಧಾನವನ್ನು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ. ಭಾರತದಲ್ಲಿನ ಹಸ್ತಪ್ರತಿಗಳ ರಾಷ್ಟ್ರೀಯ ಮಿಷನ್ ಕಾರ್ಯಕ್ಕೆ ಅಗತ್ಯ ನೆರವು ನೀಡಿದೆ. ‘ಪ್ರಶಂಸಾರ್ಹವಾದ ಚೊಚ್ಚಲ ಯತ್ನಕ್ಕೆ ಎಲ್ಲೆಡೆಯಲ್ಲೂ ಮಾನ್ಯತೆ ಲಭಿಸಬೇಕು. ನಾವು ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ತಿಳಿಸಿದರು. ವಿಶ್ವಸಂಸ್ಥೆಯ ಲಿಖಿತ ಸಂವಿಧಾನವನ್ನು ಸಂಸ್ಕೃತಕ್ಕೆ ತರುವಲ್ಲಿ ಶ್ರಮಿಸಿದ  ಡಾ.ಜಿತೇಂದ್ರ ಕುಮಾರ್ ತ್ರಿಪಾಠಿ ಅವರಿಗೆ ಧನ್ಯವಾದಗಳು ಎಂದು ಅಕ್ಬರುದ್ದಿನ್ ಟ್ವೀಟ್ಮಾಡಿದರು. ಡಾ.ಜಿತೇಂದ್ರ ಕುಮಾರ್ ತ್ರಿಪಾಠಿ ಅವರು ಲಖನೌ ಮೂಲದ ಅಖಿಲ ಭಾರತೀಯ ಸಂಸ್ಕೃತ ಪರಿಷತ್ತಿನ  ಕಾರ್ಯದರ್ಶಿ. ವಿಶ್ವ ಸಂಸ್ಥೆಯ ಲಿಖಿತ ಸಂವಿಧಾನ ಆರು ಅಧಿಕೃತ ಭಾಷೆಗಳಲ್ಲಿ ಲಭ್ಯವಿದೆ. ಅರಾಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್ ಹಾಗೂ ಸ್ಪ್ಯಾನಿಷ್ ಭಾಷೆಗಳನ್ನು ವಿಶ್ವ ಸಂಸ್ಥೆ ಅಧಿಕೃತ ಭಾಷೆಗಳಾಗಿ ಸ್ವೀಕರಿಸಿದೆ. ಹಿನ್ನೆಲೆ: ವಿಶ್ವ ಸಂಸ್ಥೆಯ ಸಂವಿಧಾನ (ಮೂಲ ಒಪ್ಪಂದ)ಕ್ಕೆ 1945 ಜೂನ್ 26ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಹಿ ಹಾಕಲಾಗಿತ್ತು. ಅಂತರರಾಷ್ಟ್ರೀಯ ಸಂಸ್ಥೆಗಳ ಕುರಿತಾದ ವಿಶ್ವ ಸಂಸ್ಥೆಯ ಸಭೆಯಲ್ಲಿ ಒಪ್ಪಂದಕ್ಕೆ ಬರಲಾಗಿತ್ತು. 1945 ಅಕ್ಟೋಬರ್ 24ರಿಂದ ಒಪ್ಪಂದ ಕಾರ್ಯ ರೂಪಕ್ಕೆ ಬಂದಿತು.

2016: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸೇನಾ ತುಕಡಿಯ ಮೇಲೆ ಈದಿನ ಬೆಳಗ್ಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ ಮೂವರು ಯೋಧರು ಗಾಯಗೊಂಡರು. ಮೂವರ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ವಿಮಾನದ ಮೂಲಕ ಶ್ರೀನಗರದ ಸೇನಾ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಹಂದ್ವಾರ ಪಟ್ಟಣದ ಕ್ರಲ್ಗುಂಡ ಸಮೀಪ ಭಯೋತ್ಪಾದಕರು ಸೇನಾ ತುಕಡಿಯ ಮೇಲೆ ದಾಳಿ ನಡೆಸಿದರು. ಸೇನೆ ಪ್ರತಿ ದಾಳಿ ನಡೆಸಿತು. ಆದರೆ ಭಯೋತ್ಪಾದಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಪ್ರದೇಶಕ್ಕೆ ಸೇನೆ ಮುತ್ತಿಗೆ ಹಾಕಿದ್ದು ಶೋಧ ಕಾರ್ಯಾಚರಣೆ ಮುಂದುವರೆದಿದೆ. ಜುಲೈ 8ರಂದು ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಬುರ್ಹಾನ್ ವಲಿ ಹತ್ಯೆಯ ಬಳಿಕ ಸೇನಾ ತುಕಡಿಯ ಮೇಲೆ ನಡೆದ ಎರಡನೆಯ ಭಯೋತ್ಪಾದಕ ದಾಳಿ ಇದು.

2016: ಚೆನ್ನೈ: ಪ್ರವಾಹದ ಸಂದರ್ಭದಲ್ಲಿ ತಮಿಳುನಾಡಿಗೆ ಕರ್ನಾಟಕ ನೀಡಿದ ಸಹಕಾರವನ್ನು ತಮಿಳುನಾಡು ಸರ್ಕಾರ  ಮರೆಯಬಾರದು ಎಂಬ ಚಿತ್ರ ನಟಿ ನಗ್ಮಾ ಹೇಳಿಕೆ ವಿವಾದವನ್ನು ತಮಿಳುನಾಡಿನಲ್ಲಿ ವಿವಾದವನ್ನು ಹುಟ್ಟು ಹಾಕಿತು. ಕಾಂಗ್ರೆಸ್ಪಕ್ಷದ ನಾಯಕಿಯೂ ಆಗಿರುವ ನಗ್ಮಾ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ, ಕರ್ನಾಟಕದಿಂದ ಅದರಲ್ಲೂ ಬೆಂಗಳೂರಿನಿಂದ ತಮಿಳುನಾಡು ಸಾಕಷ್ಟು ಸಹಾಯ ಪಡೆದುಕೊಂಡಿದೆ. ನಾವು ಅದನ್ನು ಮರೆಯಬಾರದು ಎಂದರು. ಕಾಂಗ್ರೆಸ್ಪಕ್ಷ ಕರ್ನಾಟಕ, ಕೇರಳ ಹಾಗೂ ತಮಿಳು ನಾಡು ರಾಜ್ಯಗಳನ್ನು ಸಮಾನವಾಗಿ ಕಾಣುತ್ತದೆ. ನೀರಿನ ಸಮಸ್ಯೆಯ ಪ್ರಕರಣ ಕ್ಲಿಷ್ಟಕರವಾಗದಂತೆ ಬಗೆಹರಿಸಿಕೊಳ್ಳಬೇಕು ಎಂದು  ನಗ್ಮಾ  ಪ್ರತಿಕ್ರಿಯಿಸಿದರು.

2016: ನವದೆಹಲಿ
: ಪಾಕಿಸ್ತಾನದಲ್ಲಿನ ಭಾರತೀಯ ಹೈ ಕಮೀಷನರ್ ಗೌತಮ್ ಬಂಬಾವಲೆ ಅವರನ್ನು ಕೆಟ್ಟದಾಗಿ
ನಡೆಸಿಕೊಂಡದ್ದನ್ನು ಪ್ರತಿಭಟಿಸಲು ಭಾರತದಲ್ಲಿನ ಪಾಕಿಸ್ತಾನಿ ಹೈಕಮೀಷನರ್ ಅಬ್ದುಲ್ ಬಸಿತ್ ಅವರಿಗೆ ಭಾರತವು ಬುಲಾವ್ ನೀಡಿ, ತ್ನ ಪ್ರತಿಭಟನೆಯನ್ನು ವ್ಯಕ್ತ ಪಡಿಸಿತು.  ಕರಾಚಿಯಲ್ಲಿ ಬಂಬಾವಲೆ ಅವರು ಪಾಲ್ಗೊಳ್ಳಬೇಕಾಗಿದ್ದ ಕಾರ್ಯಕ್ರಮವೊಂದು ರದ್ದಾಗಿದೆ ಎಂದು ಕಡೆ ಕ್ಷಣದಲ್ಲಿ ತಿಳಿಸಿ ಅವರಿಗೆ ಮುಜುಗರ ಉಂಟಾಗುವಂತೆ ಪಾಕಿಸ್ತಾನ ಮಾಡಿತ್ತು. ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಹಸ್ತಕ್ಷೇಪವನ್ನು ಬಂಬಾವಲೆ ಅವರು ವಿರೋಧಿಸಿ ಹೇಳಿಕೆ ನೀಡಿದ್ದಕ್ಕಾಗಿಪಾಕಿಸ್ತಾನ ರೀತಿ ವರ್ತಿಸಿತು ಎಂದು ಆಪಾದಿಸಲಾಗಿತ್ತು. ಮಂಗಳವಾರ ಕರಾಚಿ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಂಬಾವಲೆ ಅವರ ಸಮಾರಂಭ ರದ್ದಾಗಿದೆ ಎಂದು ಬಂಬಾವಲೆ ಅವರಿಗೆ ಕಾರ್ಯಕ್ರಮಕ್ಕೆ ಕೇವಲ ಅರ್ಧ ಗಂಟೆ ಇದ್ದಾಗ ತಿಳಿಸಲಾಗಿತ್ತು. ಕೆಲವು ವಾರಗಳ ಹಿಂದೆಯೇ ಬಂಬಾವಲೆ ಅವರು ಕಾರ್ಯಕ್ರಮದ ಆಹ್ವಾನವನ್ನು ಸ್ವೀಕರಿಸಿದ್ದರು.

2016: ಚೆನ್ನೈ: ಇಸ್ರೋದ ಅತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್-3ಡಿಆರ್ ಉಡಾವಣೆಗೆ 29 ಗಂಟೆಗಳ ಕ್ಷಣಗಣನೆ ಬೆಳಗ್ಗೆ 11.10 ಗಂಟೆಗೆ ಆರಂಭವಾಯಿತು. . ಜಿಎಸ್ಎಲ್ವಿ-ಎಫ್05 ಮೂಲಕ ಇನ್ಸಾಟ್ -3 ಡಿಆರ್ ಕಕ್ಷೆಗೆ ಏರಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತಿಳಿಸಿತು. ಇದಕ್ಕೆ ಮುನ್ನ ಯೋಜನೆ ಸಿದ್ಧತಾ ಪುನರ್ವಿಮರ್ಶಾ ಸಮಿತಿ ಮತ್ತು ಉಡಾವಣಾ ಅನುಮೋದನೆ ಮಂಡಳಿ ಕ್ಷಣಗಣನೆ ಎಣಿಕೆಗೆ ಅನುಮತಿ ನೀಡಿದವು. ‘ಸೆಪ್ಟೆಂಬರ್ 7 ಬೆಳಗ್ಗೆ 11.10 ಗಂಟೆಗೆ ಜಿಎಸ್ಎಲ್ವಿ-ಎಫ್05/ಇನ್ಸಾಟ್-3ಡಿಆರ್ ಮಿಷನ್ ಕಾರ್ಯಾಚರಣೆಯ 29 ಗಂಟೆಗಳ ಕ್ಷಣಗಣನೆ ಪ್ರಾರಂಭಗೊಂಡಿದೆಎಂದು ಇಸ್ರೋ ಹೇಳಿತು. ಚೆನ್ನೈಗೆ 110 ಕಿಮೀ ದೂರದ ಶ್ರೀಹರಿಕೋಟಾದ 2ನೇ ಉಡಾವಣಾ ವೇದಿಕೆಯಿಂದ ಉಪಗ್ರಹವನ್ನು ಉಡಾಯಿಸಲಾಗುವುದು. ಹವಾಮಾನ ದೃಷ್ಟಿಯಿಂದ ಅತ್ಯಂತ ಉಪಯುಕ್ತವಾಗಲಿರುವ ಉಪಗ್ರಹ ಇದಾಗಿದೆ ಎಂದು ಇಸ್ರೋ ತಿಳಿಸಿತು.

2016: ನವದೆಹಲಿ: ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಏಕಾಂಗಿಗಳನ್ನಾಗಿಸಬೇಕು, ಅವರ ಜೊತೆಗೆ ಪ್ರತ್ಯೇಕವಾಗಿಯೇ ವ್ಯವಹರಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸರ್ವ ಪಕ್ಷ ಸಂಸದೀಯ ನಿಯೋಗದ ಕೆಲವು ಸದಸ್ಯರು ಸಲಹೆ ಮಾಡಿದರು.  ಭೇಟಿ ಬಳಿಕ ಕೆಲವು ಸದಸ್ಯರು ತಮ್ಮ ಟಿಪ್ಪಣಿ ಹಾಗೂ ಅಭಿಪ್ರಾಯಗಳನ್ನು ಸರ್ಕಾರಕ್ಕೆ ಸಲ್ಲಿಸಿದರು.. ಈದಿನ ಗೃಹ ಸಚಿವರುವ ಕರೆದ ಸರ್ವ ಪಕ್ಷ ಸಭೆ ಆರಂಭಗೊಳ್ಳುವುದಕ್ಕೆ ಮುಂಚೆಯೇ ಸದಸ್ಯರು ತಮ್ಮ ಟಿಪ್ಪಣಿ, ಅಭಿಪ್ರಾಯಗಳನ್ನು ಸರ್ಕಾರಕ್ಕೆ ಸಲ್ಲಿಸಿದರು.. ಲಭ್ಯ ಮೂಲಗಳ ಪ್ರಕಾರಪ್ರತಿಭಟನಾಕಾರರಿಗೆ ಪಾಕಿಸ್ತಾನವು ಪ್ರತ್ಯೇಕತಾವಾದಿಗಳ ಹೆಸರಿನಲ್ಲಿ ಪ್ರತಿದಿನವೂ ಪ್ರತಿಭಟನಾ ದಿನಸೂಚಿಯನ್ನು ಕಳುಹಿಸಿಕೊಡುತ್ತದೆ ಎಂದು ಕೆಲವು ಸಂಸದರು ತಮ್ಮ ಅಭಿಪ್ರಾಯದಲ್ಲಿ ತಿಳಿಸಿದರು. ಇತರ ಕೆಲವು ಸದಸ್ಯರು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಅಶಾಂತಿಯೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುವಲ್ಲಿ ವಿಫಲವಾಗಿದೆ ಎಂದು ಆಪಾದಿಸಿದ್ದು, ಇತರ ಕೆಲವರು ರಾಜ್ಯ ನಾಯಕರು ಜನರನ್ನು ದಾರಿ ತಪ್ಪಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.

2016: ನವದೆಹಲಿ: ಕಟ್ಟಡ ನಿರ್ಮಾಣಗಾರನ ಪರಿಸ್ಥಿತಿ ಕೆಟ್ಟಿದೆ ಎಂಬ ಕಾರಣಕ್ಕಾಗಿ ಫ್ಲ್ಯಾಟ್ ಬುಕ್ ಮಾಡುವ ಸಲುವಾಗಿ ತಮ್ಮ ಕಠಿಣ ದುಡಿಮೆಯ ಹಣವನ್ನು ವಿನಿಯೋಗಿಸಿದ ವ್ಯಕ್ತಿಗಳು ಒದ್ದಾಡುವಂತಿಲ್ಲ ಎಂದು ಹೇಳಿದ ಸುಪ್ರೀಂಕೋರ್ಟ್ ನೋಯ್ಡಾದಲ್ಲಿನ ಎಮರಾಲ್ಡ್ ಟವರ್ಸ್ ಯೋಜನೆಯಲ್ಲಿ ಹಣ ಹೂಡಿದವರಿಗೆ ಹಣ ಮರುಪಾವತಿ ಮಾಡುವಂತೆ ಸೂಪರ್ಟೆಕ್ ರಿಯಲ್ ಎಸ್ಟೇಟ್ ಕಂಪನಿಗೆ ಆದೇಶಿಸಿತು. ನೀವು ಮುಳುಗ್ತೀರೋ ಅಥವಾ ಸಾಯ್ತೀರೋ ನಮಗೆ ಸಂಬಂಧವಿಲ್ಲ. ಮನೆ ಕೊಂಡವರಿಗೆ ನೀವು ಹಣ ಮರುಪಾವತಿ ಮಾಡಲೇಬೇಕು. ನಿಮ್ಮ ಹಣಕಾಸು ಪರಿಸ್ಥಿತಿ ಬಗ್ಗ ನಾವು ಚಿಂತಿಸುವುದಿಲ್ಲಎಂದು ಹೇಳಿದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಮತ್ತು .ಕೆ. ಗೋಯಲ್ ಅವರನ್ನು ಒಳಗೊಂಡ ಪೀಠ, ಮನೆ ಖರೀಸಿದ 17 ಮಂದಿಗೆ ಕಂಪೆನಿಯು ಹಿಂದೆ ನೀಡಿದ ಭರವಸೆ ಪ್ರಕಾರ ನಾಲ್ಕು ವಾರಗಳ ಒಳಗಾಗಿ ಹಣ ಮರುಪಾವತಿ ಮಾಡಬೇಕು ಎಂದು ಆದೇಶ ನೀಡಿತು. 17 ಮಂದಿ ಖರೀದಿದಾರರಿಗೆ ಮಾಡಿದ ಮರುಪಾವತಿ ಸಂಬಂಧಿತ ಪಾವತಿ ಪಟ್ಟಿಯನ್ನು ಪ್ರಕರಣದ ಮುಂದಿನ ವಿಚಾರಣೆಯ ದಿನ ಸಲ್ಲಿಸಬೇಕು ಎಂದೂ ಕೋರ್ಟ್ ನಿರ್ದೇಶಿಸಿತು.
2016: ನವದೆಹಲಿ: 14ನೇ ಭಾರತ - ಅಸಿಯಾನ್ ಶೃಂಗ ಸಭೆ ಮತ್ತು 11ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ರಾಜಧಾನಿಯಿಂದ ಲಾವೋಸ್ಗೆ ಪ್ರಯಾಣ ಬೆಳೆಸಿದರು. ಮೋದಿ ಅವರು  ಭಾರತ- ಆಗ್ನೇಯ ಏಷ್ಯಾ ರಾಷ್ಟ್ರಗಳ (ಅಸಿಯಾನ್) ಒಕ್ಕೂಟದ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಗ್ನೇಯ ಏಷ್ಯಾದ ಇಂಡೋನೇಷ್ಯ, ಫಿಲಿಪ್ಪೈನ್ಸ್, ಸಿಂಗಾಪುರ, ಬ್ರೂನಿ, ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್, ವಿಯೆಟ್ನಾಮ್ ಮತ್ತು ಥಾಯ್ಲೆಂಡ್ ರಾಷ್ಟ್ರಗಳ ನಾಯಕರು ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು. ಮರುದಿನ ನಡೆಯುವ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ 10 ಅಸಿಯಾನ್ ರಾಷ್ಟ್ರಗಳು ಮತ್ತು ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಅಮೆರಿಕ ಮತ್ತು ರಷ್ಯಾ ದೇಶಗಳ ಧುರೀಣರು ಪಾಲ್ಗೊಳ್ಳುವರು.

1927: ಇದು ಟೆಲಿವಿಷನ್ ಜನ್ಮದಿನ. 1927ರಲ್ಲಿ ಅಮೆರಿಕದ ಸಂಶೋಧಕ ಫಿಲೋ ಟಿ ಫ್ರಾನ್ಸ್ ವರ್ಥ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ `ಇಮೇಜ್ ಡಿಸೆಕ್ಟರ್' ಎಂಬ ಉಪಕರಣವನ್ನು ಬಳಸಿ ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಮೂಲಕ ಚಿತ್ರವನ್ನು ರವಾನಿಸುವಲ್ಲಿ ಯಶಸ್ವಿಯಾದರು. `ನೀನು  ಎಲೆಕ್ಟ್ರಾನಿಕ್ ಟೆಲಿವಿಷನ್!' ಎಂದು ಈ ಸಂದರ್ಭದಲ್ಲಿ ಅವರು ಉದ್ಘರಿಸಿದರು.

2008: ಜೈಲಿನಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ಜೈಲಿನಲ್ಲಿದ್ದ 69 ಕೈದಿಗಳ ಸಾಮೂಹಿಕ ಹತ್ಯೆಯಲ್ಲಿ ಭಾಗಿಯಾಗಿದ್ದ ಜೈಲಿನ ನಿವೃತ್ತ ಅಧಿಕಾರಿಯೊಬ್ಬನಿಗೆ ಹೊಂಡುರಾಸ್ ನ್ಯಾಯಾಲಯ 1,035 ವರ್ಷ ಸೆರೆವಾಸ ವಿಧಿಸಿ ಆದೇಶ ಹೊರಡಿಸಿತು. 2003ರ ಏಪ್ರಿಲಿನಲ್ಲಿ ಕೆರಿಬೀನ್ ಪ್ರಾಂತ್ಯದ ಅಟಲಾಂಟದ ಎಲ್ ಪೋರ್ವೆನೀರ್ ಜೈಲಿನಲ್ಲಿ ನಡೆದ ಸಾಮೂಹಿಕ ಹತ್ಯೆಯಲ್ಲಿ ಭಾಗಿಯಾಗಿದ್ದ 21ಜನ ಸಿಬ್ಬಂದಿಗೆ ಹೊಂಡುರಾಸಿನ ಲಾ ಸೀಬಾ ಪ್ರಾಂತ್ಯದ ನ್ಯಾಯಾಲಯ ವಿವಿಧ ಕಾನೂನುಗಳ ಅಡಿಯಲ್ಲಿ ಸೆರೆವಾಸದ ಶಿಕ್ಷೆ ವಿಧಿಸಿತು ಎಂದು ಅಟಾರ್ನಿ ಜನರಲ್ ಕಚೇರಿ ತಿಳಿಸಿತು. ಪೊಲೀಸ್ ಸಿಬ್ಬಂದಿ, ಸೇನೆ, ಜೈಲು ಅಧಿಕಾರಿಗಳು ಮತ್ತು ಕೈದಿಗಳು ಈ ಶಿಕ್ಷೆಗೆ ಒಳಗಾದವರು.

2007: ಲಾರಿಯೊಂದು ಕಣಿವೆಗೆ ಉರುಳಿ 128 ಜನ ಮೃತರಾಗಿ ಸುಮಾರು ನೂರು ಮಂದಿ ಗಾಯಗೊಂಡ ಘಟನೆ ಈದಿನ ರಾತ್ರಿ ಎಂಟು ಗಂಟೆಗೆ ರಾಜಸ್ಥಾನದ ಉದಯಪುರಕ್ಕೆ 150 ಕಿಲೋ ಮೀಟರ್ ದೂರವಿರುವ ರಾಜಸಮುಂದ್ ಜಿಲ್ಲೆಯ ದೆಸುರಿ ಕಿ ನಾಲ್ ಗ್ರಾಮದ ಬಳಿ ನಡೆಯಿತು. ಚಾಲಕನ ನಿಯಂತ್ರಣ ತಪ್ಪಿ ಲಾರಿಯು ರಸ್ತೆ ಪಕ್ಕದ ರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದು ಕಡಿದಾದ ಕಣಿವೆಗೆ ಉರುಳಿದ್ದರಿಂದ ಈ ದುರ್ಘಟನೆ ಸಂಭವಿಸಿತು. ಹಿಂದೂ ಮುಸ್ಲಿಂ ಸಮುದಾಯದ ನೂರಾರು ಭಕ್ತರನ್ನು ಕರೆದುಕೊಂಡ ಈ ಲಾರಿಯು ಜೈಸಲ್ಮೇರಿನಲ್ಲಿರುವ ಸೂಫಿ ಸಂತ ರಾಮ್ ದೇವ್ರಾ ಜಾತ್ರೆಗೆ ಹೊರಟಿತ್ತು.

2007: ಆಂಧ್ರಪ್ರದೇಶದ ಚಿತ್ವೇಡ್ ಗ್ರಾಮದಲ್ಲಿ ಶಂಕಿತ ಮಾವೋವಾದಿ ನಕ್ಸಲರು ನಡೆಸಿದ ಶಕ್ತಿಶಾಲಿ ನೆಲಬಾಂಬ್ ಸ್ಫೋಟದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಎನ್. ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಹಾಲಿ ಸಚಿವೆ ಎನ್. ರಾಜ್ಯಲಕ್ಷ್ಮಿ ಪಾರಾದರು. ಅವರ ಜೊತೆಗಿದ್ದ ಕಾಂಗ್ರೆಸ್ಸಿನ ಮೂವರು ಕಾರ್ಯಕರ್ತರು ಸಾವನ್ನಪ್ಪಿದರು. ಬೆಳಗಿನ ಜಾವ 6.30ಕ್ಕೆ ಭಾರಿ ಬೆಂಗಾವಲು ಪಡೆಯೊಂದಿಗೆ ತಮ್ಮ ಗ್ರಾಮದ ಮನೆಯಿಂದ ತಿರುಪತಿಯತ್ತ ಹೊರಟಿದ್ದ ರೆಡ್ಡಿ ಅವರ ಹತ್ಯೆ ಉದ್ದೇಶದಿಂದಲೇ ರಿಮೋಟ್ ಸಾಧನ ಬಳಸಿ ಸೇತುವೆಯೊಂದರ ಬಳಿ ಈ ಸ್ಫೋಟ ನಡೆಸಲಾಯಿತು. 70 ವರ್ಷ ವಯಸ್ಸಿನ ಜನಾರ್ದನ ರೆಡ್ಡಿ 1992ರಲ್ಲಿ ನಕ್ಸಲರ ಮೇಲೆ ನಿಷೇಧ ಹೇರಿದಾಗ ಆಂಧ್ರ ಮುಖ್ಯಮಂತ್ರಿಯಾಗಿದ್ದರು. ಆಗಿನಿಂದಲೂ ಅವರನ್ನು ಕೊಲ್ಲಲು ಮಾವೋವಾದಿ ನಕ್ಸಲರು ಯತ್ನಿ ನಡೆಸಿದ್ದರು. 2003ರಲ್ಲಿ ಅವರ ಮೇಲೆ ಇಂತಹುದೇ ಹತ್ಯೆ ಯತ್ನ ನಡೆದಿತ್ತು.

2007: ನಿಕರಾಗುವದ ಪೊರ್ಟೊ ಕ್ಯಾಬೆಜಾಸ್ ಪ್ರದೇಶದಲ್ಲಿ ಬೀಸಿದ ಬಲಶಾಲಿಯಾದ 'ಫೆಲಿಕ್ಸ್' ಚಂಡಮಾರುತಕ್ಕೆ 98 ಮಂದಿ ಬಲಿಯಾದರು.

2007: ಆಸ್ಪತ್ರೆ ಬಳಿ ಮೊಬೈಲ್ ಫೋನ್ ಬಳಸುವುದರಿಂದ ಆಸ್ಪತ್ರೆಯಲ್ಲಿನ ರೋಗಿಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಉಪಕರಣಗಳಾದ ಪೇಸ್ ಮೇಕರ್ (ಹೃದಯ ನಿಯಂತ್ರಕ ವಿದ್ಯುದುಪಕರಣ), ವೇಂಟಿಲೇಟರುಗಳಿಗೆ (ವಾಯು ಸಂಚಾರಕ ಸಲಕರಣೆ) ಹಾನಿ ಉಂಟಾಗುತ್ತದೆ ಎಂದು ಡಚ್ ಸಂಶೋಧನೆ ಮಂಡಳಿಯ ಸಂಶೋಧನೆ ಹೇಳಿತು. ಆಸ್ಪತ್ರೆಗಳಲ್ಲಿ ಮೊಬೈಲ್ ಫೋನ್ ಬಳಕೆಯಿಂದಾಗುವ ಪರಿಣಾಮ ಕುರಿತಂತೆ 50 ಪ್ರಕರಣಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಮೊಬೈಲ್ ಫೋನಿನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ತರಂಗಗಳಿಂದ ಶೇ 75ರಷ್ಟು ಅಪಾಯ ಉಂಟಾಗುತ್ತದೆ ಎಂದು ಆಮ್ ಸ್ಟರ್ ಡ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದರು. ಇದೇ ವರ್ಷದ ಆರಂಭದಲ್ಲಿ ಮಯೊ ಕ್ಲಿನಿಕ್ಕಿನ ಸಂಶೋಧಕರು ಪ್ರಮುಖ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಉಪಕರಣಗಳ ಮೇಲೆ ಮೊಬೈಲ್ ಬಳಕೆಯಿಂದ ಯಾವುದೇ ಆಪಾಯ ಆಗುವುದಿಲ್ಲ ಎಂದು ಪ್ರಕಟಿಸಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇತ್ತೀಚೆಗೆ ನಡೆಸಿದ  ಸಂಶೋಧನೆಯಿಂದ ಆಧುನಿಕ ತಂತ್ರಜ್ಞಾನದ ಜನರಲ್ ಪಾಕೇಟ್ ರೇಡಿಯೊ ಸರ್ವೀಸ್ (ಜಿಪಿಆರ್ ಎಸ್) ತರಂಗಗಳು ಮತ್ತು ನಿಸ್ತಂತು ಅಂತರ್ಜಾಲ ವ್ಯವಸ್ಥೆಯಿಂದ ಅಪಾಯ ಉಂಟಾಗುತ್ತದೆ ಎಂದು ತಿಳಿದುಬಂತು.

2007: ಮಹಾತ್ಮಗಾಂಧಿ ಪಾತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದ ನಟ ಸರ್ ಬೆನ್ ಕಿಂಗ್ ಸ್ಲೆ ತಮಗಿಂತ ಅರ್ಧದಷ್ಟು ವಯಸ್ಸಿನ ಬ್ರೆಜಿಲ್ ನಟಿಯೊಬ್ಬರನ್ನು ಗುಟ್ಟಾಗಿ ಮದುವೆಯಾದರು. ಇದು ಕಿಂಗ್ ಸ್ಲೆ ಅವರಿಗೆ ನಾಲ್ಕನೇ ಮದುವೆ. 63 ವರ್ಷದ ಬೆನ್ 34 ವರ್ಷದ ಡೇ ನಿಯಲಾ ಕಾರ್ನ್ ನಿರೋ ಅವರನ್ನು ವಿವಾಹವಾದರು. ಸ್ಪೆಲ್ಸ್ ಬರಿಯಲಿರುವ ಬೆನ್ ಅವರ ನಿವಾಸ ಆಕ್ಸ್ ಫರ್ಡ್ ಶಿರೆಯಿಂದ ಅನತಿ ದೂರ ಐನ್ ಶಾಮ್ ಹಾಲಿನಲ್ಲಿ ಈ ವಿವಾಹ ಸಮಾರಂಭ ನಡೆಯಿತು.

2007: ವೃತ್ತಿಜೀವನದ ಎಂಟನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲಬೇಕು ಎಂಬ ಭಾರತದ ಲಿಯಾಂಡರ್ ಪೇಸ್ ಅವರ ಕನಸು ನುಚ್ಚುನೂರಾಯಿತು. ನ್ಯೂಯಾರ್ಕಿನಲ್ಲಿ ನಡೆಯುತ್ತಿರುವ ಅಮೆರಿಕಾ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಫೈನಲಿನಲ್ಲಿ ಪೇಸ್- ಮೇಗನ್ ಶಾಗ್ನೆಸಿ ಜೋಡಿ ಮುಗ್ಗರಿಸಿತು. ಅಂತಿಮ ಪಂದ್ಯದಲ್ಲಿ ಬೆಲಾರಸ್ ನ ಮ್ಯಾಕ್ಸ್ ಮಿರ್ನಿ ಮತ್ತು ವಿಕ್ಟೋರಿಯಾ ಅಜರೆಂಕಾ ಜೋಡಿ 6-4, 7-5 ರಲ್ಲಿ ಭಾರತ- ಅಮೆರಿಕ ಜೋಡಿ ವಿರುದ್ಧ ಗೆಲುವು ಪಡೆದು ಪ್ರಶಸ್ತಿ ಜಯಿಸಿತು. 30ರ ಹರೆಯದ ಮ್ಯಾಕ್ಸ್ ಮಿರ್ನಿಗೆ ಇದು ಏಳನೇ ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಪ್ರಶಸ್ತಿ. ಇದೇ ವೇಳೆ 18ರ ಹರೆಯದ ಅಜರೆಂಕಾ ತಮ್ಮ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಟ್ರೋಫಿಗೆ ಮುತ್ತಿಕ್ಕಿದರು.

2006: ವಂದೇ ಮಾತರಂ ಗೀತೆ ರಚನೆಯ ಶತಮಾನ ದಿನವನ್ನು ಭಾರತದಾದ್ಯಂತ ಆಚರಿಸಲಾಯಿತು. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಬಹುಪಾಲು ಮುಸ್ಲಿಂ  ಶಿಕ್ಷಣ ಸಂಸ್ಥೆಗಳು ಈ ಗೀತೆಯನ್ನು ಹಾಡದೆ ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿದವು. ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ವಂದೇ ಮಾತರಂ ಗಾಯನದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಪಾಲ್ಗೊಳ್ಳಲ್ಲಿಲ.

1997: ಜೈರೆಯ ಮಾಜಿ ಸರ್ವಾಧಿಕಾರಿ ಮೊಬುಟು ಸೆಸೆ ಸೆಕೊ ಅವರು ದೇಶಭ್ರಷ್ಟರಾಗಿದ್ದಾಗ ಮೊರಾಕ್ಕೊದಲ್ಲಿ ತಮ್ಮ 66ನೇ ವಯಸ್ಸಿನಲ್ಲಿ ಮೃತರಾದರು.

1986: ಡೆಸ್ಮಂಡ್ ಟುಟು ಅವರು ಕೇಪ್ ಟೌನಿನ ಆರ್ಚ್ ಬಿಷಪ್ ಆಗಿ ನೇಮಕಗೊಂಡರು. ದಕ್ಷಿಣ ಆಫ್ರಿಕದ ಆಂಗ್ಲಿಕನ್ ಚರ್ಚ್ ಮುನ್ನಡೆಸುವ ಪ್ರಪ್ರಥಮ ಕರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದಾಯಿತು.

1969: ಸಾಹಿತಿ ಡಾ. ಶ್ರೀನಿವಾಸ ಕಾ.ವೆಂ. ಜನನ.

1908: ಖ್ಯಾತ ಸಾಹಿತಿ, ಕನ್ನಡ ನಾಡು ನುಡಿಯ ಮೌನ ಸೇವಾವ್ರತಿ, ಸಾಮಾಜಿಕ ಕಾರ್ಯಕರ್ತ ಬಿ. ದಾಮೋದರ ಬಾಳಿಗ (7-9-1908ರಿಂದ 21-5-1985) ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದರು. ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಹಲವಾರು ಕೃತಿಗಳನ್ನು ರಚಿಸಿದ ಇವರು ಗೋವಿಂದ ಪೈಗಳ ಗೋಲ್ಗೊಥಾ, ವೈಶಾಖಿ, ಹೆಬ್ಬೆರಳು, ಚಿತ್ರಭಾನು ಇತ್ಯಾದಿಗಳನ್ನು ಪ್ರಕಟಿಸಿದವರು. ಗೋಲ್ಗೊಥಾವನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ ಹೆಮ್ಮೆ ಕೂಡಾ ಇವರದು.

1903: ನ್ಯೂಯಾರ್ಕಿನಲ್ಲಿ ಅಮೆರಿಕನ್ ಸೈಕ್ಲಿಸ್ಟ್ ಒಕ್ಕೂಟ ರಚನೆಯಾಯಿತು.

1900: ಸಾಹಿತಿ ಚನ್ನಬಸಪ್ಪ ಎಲ್ಲಪ್ಪ ಕವಲಿ ಜನನ.

1822: ಪೋರ್ಚುಗಲ್ಲಿನಿಂದ ಬೇರ್ಪಟ್ಟ ಬ್ರೆಜಿಲ್ ಸ್ವತಂತ್ರ ರಾಷ್ಟ್ರವಾಯಿತು.

1813: ನ್ಯೂಯಾರ್ಕಿನ ಟ್ರಾಯ್ ಪೋಸ್ಟ್ ತನ್ನ ಸಂಪಾದಕೀಯದಲ್ಲಿ ಅಮೆರಿಕವನ್ನು ಸಾಂಕೇತಿಕವಾಗಿ ಉಲ್ಲೇಖಿಸಲು ಮೊತ್ತ ಮೊದಲ ಬಾರಿಗೆ `ಅಂಕಲ್ ಸ್ಯಾಮ್' ಅಡ್ಡ ಹೆಸರನ್ನು ಬಳಸಿತು. `ಅಂಕಲ್ ಸ್ಯಾಮ್' ಶಬ್ದವು ನ್ಯೂಯಾರ್ಕಿನ ವರ್ತಕ ಸ್ಯಾಮುವೆಲ್ ವಿಲ್ಸನ್ ಗೆ ಸಂಬಂಧಿಸಿದ್ದು. 1812ರಲ್ಲಿ ಸೇನೆಗೆ ಆತ ಸರಬರಾಜು ಮಾಡುತ್ತಿದ್ದ ಮಾಂಸದ ಬ್ಯಾರೆಲ್ಲುಗಳಿಗೆ ಸರ್ಕಾರಿ ಆಸ್ತಿ ಎಂದು ಸೂಚಿಸಲು `ಯು.ಎಸ್.' ಎಂದು ಬರೆಯಲಾಗುತ್ತಿತ್ತು. ಈ ಗುರುತು ಅಮೆರಿಕವನ್ನು `ಅಂಕಲ್ ಸ್ಯಾಮ್' ಎಂಬ ಅಡ್ಡ ಹೆಸರಿನಿಂದಲೇ ಗುರುತಿಸಲು ಕಾರಣವಾಯಿತು. 1961ರಲ್ಲಿ ಕಾಂಗ್ರೆಸ್ ಅಂಗೀಕರಿಸಿದ ನಿರ್ಣಯವೊಂದು ವಿಲ್ಸನ್ ಅವರನ್ನು ರಾಷ್ಟ್ರೀಯ ಸಂಕೇತಕ್ಕೆ ಕಾರಣಕರ್ತ ಎಂದು  ಮಾನ್ಯ ಮಾಡಿತು.

1812: ಜನರಲ್ ಕುಟುಝೊವ್ ನೇತೃತ್ವದಲ್ಲಿ ರಷ್ಯದ ಸೇನೆ ಮಾಸ್ಕೊದಿಂದ 110 ಕಿ.ಮೀ. ಪಶ್ಚಿಮಕ್ಕಿರುವ ಬೊರೊಡಿನೊ ಕದನದಲ್ಲಿ ನೆಪೋಲಿಯನ್ನನ್ನು ಸೋಲಿಸಿತು. ನೆಪೋಲಿಯನ್ ಒಂದು ವಾರದ ಬಳಿಕ ಮಾಸ್ಕೊ ಪ್ರವೇಶಿಸಿದ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment