Tuesday, September 11, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 11

ಇಂದಿನ ಇತಿಹಾಸ History Today ಸೆಪ್ಟೆಂಬರ್ 11
2018: ಹೈದರಾರಾದ್: ಜಗ್ತಿಯಾಲ್ ಜಿಲ್ಲೆಯ ಕೊಂಡಗತ್ತು ಘಟ್ಟದಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಟಿಎಸ್ ಆರ್ ಟಿಸಿ) ಬಸ್ಸೊಂದು ಕಮರಿಗೆ ಉರುಳಿದ ಪರಿಣಾಮವಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಹಳಷ್ಟು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ೫೨ ಜನ ಪ್ರಯಾಣಿಕರು ಅಸು ನೀಗಿ, ೨೦ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಜಗ್ತಿಯಾಲ್ ಪ್ರದೇಶದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದ ಗಾಯಾಳುಗಳಲ್ಲಿ ಕೆಲವರು ಅಸು ನೀಗುವುದರೊಂದಿಗೆ ಸಾವಿನ ಸಂಖ್ಯೆ ಏರಿದೆ ಎಂದು ವರದಿಗಳು ಹೇಳಿದವು. ಜಗ್ತಿಯಾಲ್ ಡಿಪೋಕ್ಕೆ ಸೇರಿದ ನತದೃಷ್ಟ ಬಸ್ಸಿನಲ್ಲಿ ಗುಡ್ಡಗಾಡು ಪ್ರದೇಶದಲ್ಲಿರುವ ಕೊಂಡಗತ್ತುವಿನ ಖ್ಯಾತ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಾಪಸ್ ಹೊರಟಿದ್ದ ಸುಮಾರು ೬೦ಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಇದ್ದರು ಎಂದು ಹೇಳಲಾಯಿತು. ಬಸ್ಸು ಜಗ್ತಿಯಾಲ್ನಿಂದ ಕೊಂಡಗತ್ತು ಘಟ್ಟ ಮತ್ತು ಮುತ್ಯಂಪೇಟ ಗ್ರಾಮದ ರಸ್ತೆಯ ಮೂಲಕ ಶನಿವಾರಂಪೇಟ ಗ್ರಾಮಕ್ಕೆ ಹೊರಟಿತ್ತು. ದುರಂತದಲ್ಲಿ ಸುಮಾರು ಎರಡು ಡಜನ್ಗೂ ಹೆಚ್ಚು ಮಂದಿ ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರ ಶವಗಳನ್ನು ಬಸ್ಸಿನ ಅವಶೇಷಗಳಿಂದ ಹೊರತೆಗೆಯಲಾಯಿತು. ಬಸ್ಸಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರಿದ್ದರು ಎಂದು ವರದಿ ತಿಳಿಸಿತು. ಪ್ರಾಥಮಿಕ ವರದಿಗಳ ಪ್ರಕಾರ, ಮೂರನೇ ತಿರುವಿನಲ್ಲಿ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮವಾಗಿ ಬಸ್ಸು ಕಮರಿಗೆ ಉರುಳಿತು ಎಂದು ಹೇಳಲಾಯಿತು. ಬಸ್ಸು ಚಾಲಕನ ನಿಯಂತ್ರಣ ತಪ್ಪಿದಾಗ ಬಸ್ಸಿನಲ್ಲಿದ್ದ ಪ್ರಯಾಣಕರು ಆಯ ತಪ್ಪಿ ಬಸ್ಸಿನ ಬಲಬದಿಗೆ ವಾಲಿ ಬಿದ್ದರು. ಆಗ ಬಸ್ಸು ಕಮರಿಗೆ ಉರುಳಿತು. ಪ್ರಯಾಣಿಕರು ಒಬ್ಬರ ಮೇಲೊಬ್ಬರು ಬಿದ್ದ ಕಾರಣ ಹಲವರು ಉಸಿರುಕಟ್ಟಿ ಸಾವನ್ನಪ್ಪಿದರು ಎಂದು ವರದಿಗಳು ಹೇಳಿದವು. ಬ್ರೇಕ್ ವಿಫಲಗೊಂಡದ್ದು ದುರಂತಕ್ಕೆ ಕಾರಣ ಇರಬಹುದು ಎಂದೂ ವರದಿಗಳು ಹೇಳಿದವು. ಬಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಂಡ ಚಾಲಕ ಇನ್ನೊಂದು ಬಸ್ಸಿಗೆ ಡಿಕ್ಕಿ ಹೊಡೆಯದಂತೆ ತಪ್ಪಿಸಲು ಯತ್ನಿಸಿದ. ವೇಳೆಯಲ್ಲಿ ಬಸ್ಸು ಕಣಿವೆ ಉರುಳಿತು ಎಂದು ಹೇಳಲಾಯಿತು. ಮೃತರಲ್ಲಿ ೨೫ ಮಂದಿ ಮಹಿಳೆಯರು ಮತ್ತು ಮಂದಿ ಮಕ್ಕಳು.  ಬಸ್ಸಿನ ಹಿಂದಿನಿಂದಲೇ ಬರುತ್ತಿದ್ದ ಕೆಲವು ವಾಹನಗಳಲ್ಲಿದ್ದ ಮಂದಿ ದುರಂತ ಸಂಭವಿಸುತ್ತಿದ್ದಂತೆಯೇ ತಮ್ಮ ವಾಹನಗಳನ್ನು ನಿಲ್ಲಿಸಿ ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದರು. ತೀವ್ರವಾಗಿ ಗಾಯಗೊಂಡಿದ್ದವರನ್ನು ಜಗ್ತಿಯಾಲ್ ಪ್ರದೇಶದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಒಯ್ಯಲಾಯಿತು. ಜಗ್ತಿಯಾಲ್ ಜಿಲ್ಲಾಧಿಕಾರಿ . ಶರತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಂಧು ಶರ್ಮಾ ಮತ್ತು ಕರೀಮ್ ನಗರ ಪೊಲೀಸ್ ಕಮೀಷನರ್ ಕಮಲ್ಹಾಸನ್ ರೆಡ್ಡಿ ಮತ್ತು ಇತರ ಅಧಿಕಾರಿಗಳು ಸುದ್ದಿ ತಿಳಿಯುತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಜಗ್ತಿಯಾಲ್ ಆಸ್ಪತ್ರೆಗೆ ಒಯ್ಯಲು ನೆರವಾದರು. ಮುಖ್ಯಮಂತ್ರಿ ಕೆಸಿಆರ್ ಆಘಾತತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಅಪಘಾತದ ಸುದ್ದಿ ಕೇಳಿ ಆಘಾತ ವ್ಯಕ್ತ ಪಡಿಸಿದರು. ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತ ಪಡಿಸಿದ ಅವರು ಗಾಯಾಳುಗಳಿಗೆ ತುರ್ತು ವೈದ್ಯಕೀಯ ನೆರವು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮೃತರ ಕುಟುಂಬಗಳಿಗೆ ತಲಾ ಲಕ್ಷ ರೂಪಾಯಿಗಳ ಪರಿಹಾರವನ್ನು ಅವರು ಪ್ರಕಟಿಸಿದರು. ವಿತ್ತ ಹಾಗೂ ನಾಗರಿಕ ಸರಬರಾಜು ಸಚಿವ ಎತಾಲ ರಾಜೇಂದ್ರ ಅವರು ಘಟನೆಗೆ ಆಘಾತ ಮತ್ತು ದುಃಖ ವ್ಯಕ್ತ ಪಡಿಸಿ, ಅಗತ್ಯ ವೈದ್ಯಕೀಯ ನೆರವು ಒದಗಿಸಲು ಸರ್ವ ಕ್ರಮಗಳನ್ನೂ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಿಜಾಮಾಬಾದ್ ಸಂಸತ್ ಸದಸ್ಯೆ ಕವಿತಾ ಅವರೂ ದುಃಖ ವ್ಯಕ್ತ ಪಡಿಸಿದರು.
  
2018: ಹೈದರಾಬಾದ್: ವಿಧಾನಸಭೆ ವಿಸರ್ಜನೆಯ ಬಳಿಕ ತೆಲಂಗಾಣದ ಉಸ್ತುವಾರಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಿಸಿಕೊಳ್ಳುತ್ತಿದ್ದು ಅಕ್ರಮ ಹಾಗೂ ಸಂವಿಧಾನ ಬಾಹಿರ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ತತ್ ಕ್ಷಣ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್, ತೆಲುಗುದೇಶಂ (ಟಿಡಿಪಿ) ಮತ್ತು ಎಡಪಕ್ಷಗಳು ರಾಜ್ಯಪಾಲ ಇಎಸ್ ಎಲ್ ನರಸಿಂಹನ್ ಅವರಿಗೆ ಜಂಟಿ ಮನವಿ ಸಲ್ಲಿಸಿದವು. ಮುಂಬರುವ ವಿಧಾನಸಭಾ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪರಿಶೀಲಿಸುತ್ತಿರುವ ಮೂರು ಪಕ್ಷಗಳುಚುನಾವಣೆಗೆ ಮುಂಚಿತವಾಗಿ ತಮ್ಮ ಪಕ್ಷವಾದ ತೆಲುಗು ರಾಷ್ಟ್ರ ಸಮಿತಿಗೆ (ಟಿಆರ್ ಎಸ್) ಅನುಕೂಲವಾಗುವ ರೀತಿಯಲ್ಲಿ ಕೆಸಿಆರ್ ಅವರು ಅಕ್ರಮಗಳನ್ನು ಎಸಗುತ್ತಿದ್ದಾರೆ ಎಂದು ಹೇಳಿದವು. ಮೂರೂ ವಿರೋಧ ಪಕ್ಷಗಳು ತಮ್ಮ ಪತ್ರದಲ್ಲಿ ಸರ್ಕಾರಿ ಹಸ್ತಕ್ಷೇಪದ ಮೂರು ಅಂಶಗಳಿಗೆ ಒತ್ತು ನೀಡಿ ವಿವರಿಸಿದವು.  ಮೊದಲನೆಯದಾಗಿ ೧೨ ಮಂದಿ ಸಲಹೆಗಾರರ ನೇಮಕಾತಿಯು ಈಗ ಮುಂದುವರೆಯಬೇಕಾಗಿಲ್ಲ. ಆಡಳಿತವು ಅವರಿಗೆ ವೇತನ ಮತ್ತು ಭತ್ಯೆಗಳನ್ನು ಈಗಲೂ ನೀಡಲಾಗುತ್ತಿದೆ ಎಂದು ಪತ್ರ ತಿಳಿಸಿತು. ಅದೇ ರೀತಿ ಯೋಜನಾ ಮಂಡಳಿಯ ಸದಸ್ಯರು ಕೂಡಾ ಅಧಿಕಾರದಲ್ಲಿ ಮುಂದುವರೆಯುತ್ತಿದ್ದು ಸರ್ಕಾರದ ಅಧಿಕಾರಗಳನ್ನು ಅನುಭವಿಸುತ್ತಿದ್ದಾರೆ. ಕೆಲವು ಶಾಸಕರಿಗೆ ಸಂಪುಟ ದರ್ಜೆಯನ್ನು ನೀಡಲಾಗಿದ್ದು ಅವರು ವಿವಿಧ ನಿಗಮಗಳ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಇವರಲ್ಲಿ ಕೆಲವರು ಟಿಆರ್ ಎಸ್ ಟಿಕೆಟಿನಿಂದ ಸ್ಪರ್ಧಿಸುತ್ತಿದ್ದಾರೆ. ಇದು ಅಕ್ರಮ ಮತ್ತು ಸಂವಿಧಾನ ಬಾಹಿರ ಎಂದು ಪತ್ರ ವಿವರಿಸಿತು. ಈ ಅಪ್ರಜಾಸತ್ತಾತ್ಮಕ ಕ್ರಮಗಳು ಸಂಸ್ಥೆಗಳಲ್ಲಿ ಆಡಳಿತ ಮತ್ತು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಡೆಸುವ ಹಸ್ತಕ್ಷೇಪವಾಗುತ್ತದೆ. ಇದು ಮತದಾರರ ಮೇಲೆ ಪ್ರಭಾವವನ್ನೂ ಬೀರುತ್ತದೆ ಎಂದು ಮೂರೂ ಪಕ್ಷಗಳು ಹೇಳಿವೆಕಳೆದ ಗುರುವಾರ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿದ ಬಳಿಕ ತೆಲಂಗಾಣ ಮುಖ್ಯಮಂತ್ರಿಯವರು ನವೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದ್ದು ಡಿಸೆಂಬರ್ ತಿಂಗಳಲ್ಲಿ ತಾವು ಅಧಿಕಾರಕ್ಕೆ ಮರಳುವುದಾಗಿ ಘೋಷಿಸಿದ್ದು, ವಿರೋಧ ಪಕ್ಷಗಳು ಇದಕ್ಕೂ ಆಕ್ಷೇಪ ವ್ಯಕ್ತ ಪಡಿಸಿದವು.  ‘ಇದು ಪ್ರಜಾಪ್ರಭುತ್ವದ ತತ್ವಗಳಿಗೆ ಮತ್ತು ಭಾರತೀಯ ಸಂವಿಧಾನದ ಪರಿಚ್ಛೇದಗಳಿಗೆ ವಿರುದ್ಧ. ಏಕೆಂದರೆ ಚುನಾವಣೆಗಳನ್ನು ನಡೆಸುವುದು ಮತ್ತು ಸರ್ಕಾರದ ರಚನೆ ಸಾಂವಿಧಾನಿಕ ಸಂಸ್ಥೆಯ ಕರ್ತವ್ಯ ಎಂದು ಪತ್ರ ಹೇಳಿತು. ರಾಜ್ಯದಲ್ಲಿ ಯಾವಾಗ ಚುನಾವಣೆ ನಡೆಸಬಹುದು ಎಂಬ ಬಗ್ಗೆ ಪ್ರಸ್ತುತ ಪರಿಶೀಲಿಸುತ್ತಿರುವ ಚುನಾವಣಾ ಆಯೋಗವು ಚುನಾವಣಾ ಸಿದ್ಧತೆ ಬಗ್ಗೆ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯ ಬಳಿ ವಿಚಾರಿಸಿತು. ಟಿಆರ್ ಎಸ್ ಮತ್ತು ಎಐಎಂಐಎಂ ಈಗಾಗಲೇ ತಮ್ಮ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಕಾಂಗ್ರೆಸ್ ಪಕ್ಷವು ಎಡ ಪಕ್ಷಗಳು ಮತ್ತು ಟಿಡಿಪಿ ಜೊತೆ ಮೈತ್ರಿ ರಚನೆ ಬಗ್ಗೆ ಮಾತುಕತೆ ನಡೆಸುತ್ತಿದೆ. ಮೈತ್ರಿಕೂಟ ರಚನೆಯನ್ನು ಚಂದ್ರಬಾಬು ನಾಯ್ಡು ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಎಸ್. ಸುಧಾಕರ ರೆಡ್ಡಿ ಅವರು ಸ್ವಾಗತಿಸಿದ ಬಳಿಕ ಕಾಂಗ್ರೆಸ್ ಪಕ್ಷವು ಚುನಾವಣಾ ತಂತ್ರ ಹೆಣೆಯುವ ಬಗ್ಗೆ ಪಂಚ ಸದಸ್ಯ ಸಂಚಾಲನಾ ಸಮಿತಿಯೊಂದನ್ನು ರಚಿಸಿದೆ.

2018: ನವದೆಹಲಿ: ಕೆಟ್ಟ ಸಾಲಗಳು (ಮರುಪಾವತಿಯಾಗದ ಸಾಲಗಳು) ಹುಟ್ಟಿದ್ದೇ ೨೦೦೬ ಮತ್ತು ೨೦೦೮ರ ನಡುವಣ ಯುಪಿಎ ಸರ್ಕಾರದ ಆಡಳಿತದಲ್ಲಿ ಎಂಬುದಾಗಿ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ನೀಡಿದ ಹೇಳಿಕೆಗೆ ಕಾಂಗ್ರೆಸ್ ಕೆಂಡಾಮಂಡಲವಾಗಿದ್ದು, ಕೆಟ್ಟ ಸಾಲಗಳು ಕುಲಗೆಟ್ಟದ್ದು ಪ್ರಧಾನಿ ನರೇಂದ್ರಮೋದಿ ಆಡಳಿತದಲ್ಲೇ ಎಂದು ತಿರುಗೇಟು ನೀಡಿತು. ಮರುಪಾವತಿಯಾಗದ ಸಾಲದ ಹಾವಳಿಗೆ ನರೇಂದ್ರ ಮೋದಿ ಸರ್ಕಾರವನ್ನೂ ಹೊಣೆ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತು. ೨೦೧೪ರಲ್ಲಿ ಯುಪಿಎ ಅಧಿಕಾರದಿಂದ ಕೆಳಗಿಳಿದಾಗ ಇದ್ದ ಮರುಪಾವತಿಯಾಗದ ಸಾಲದ (ಅನುತ್ಪಾದಕ ಆಸ್ತಿ- ಎನ್ ಪಿಎ) ಮೊತ್ತ .೮೩ ಲಕ್ಷ ಕೋಟಿ ರೂಪಾಯಿ ಮಾತ್ರ. ಎನ್ ಡಿಎ ಆಡಳಿತದ ಅಡಿಯಲ್ಲಿ ಅದು ೧೨ ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೆವಾಲ ಹೇಳಿದರು. ೨೦೧೮ರ ಮಾರ್ಚ್ವೇಳೆಗೆ ಮರುಪಾವತಿಯಾಗದ ಸಾಲದ ಮೊತ್ತ ೧೦. ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ. ಈಗ ಅನುತ್ಪಾದಕ ಆಸ್ತಿಯ ಮೊತ್ತ ೧೨ ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಆದ್ದರಿಂದ ಸರಳ ಗಣಿತವು .೧೭ ಲಕ್ಷ ಕೋಟಿ ರೂಪಾಯಿ ಮೊತ್ತದ ಮರುಪಾವತಿಯಾಗದ ಸಾಲ ಮೋದಿ ಸರ್ಕಾರದ ೫೬ ತಿಂಗಳುಗಳಲ್ಲೇ ಆಗಿದೆ ಎಂಬುದನ್ನು ನಮಗೆ  ಹೇಳುತ್ತದೆ ಎಂದು ಸುರ್ಜೆವಾಲ ನುಡಿದರುಕೆಟ್ಟ ಸಾಲಗಳು ಹುಟ್ಟಿದ್ದೇ ೨೦೦೬ರಲ್ಲಿ ಎಂಬುದಾಗಿ ರಘುರಾಮ್ ರಾಜನ್ ಅವರು ಹೇಳಿದ್ದು ಸತ್ಯ ಎಂಬುದಾಗಿ ಪರಿಗಣಿಸಿದರೂ, ಯುಪಿಎ ಅಧಿಕಾರದಿಂದ ಇಳಿಯುವವರೆಗೂ ಕೆಟ್ಟ ಸಾಲಗಳ ಮೊತ್ತು ಕೇವಲ .೮೩ ಲಕ್ಷ ರೂಪಾಯಿಗಳಷ್ಟೇ ಆಗಿದ್ದವು. ಮೊತ್ತ ನಿರ್ವಹಿಸಲು ಸಾಧ್ಯ ಇರುವಂತಹುದಾಗಿತ್ತು ಎಂದು ಕಾಂಗ್ರೆಸ್ ನಾಯಕ ಹೇಳಿದರು.  ‘.೮೩ ಲಕ್ಷ ಕೋಟಿ ರೂಪಾಯಿ ಅನುತ್ಪಾದಕ ಆಸ್ತಿಗೆ ಯುಪಿಎ ಸರ್ಕಾರವನ್ನು ಹೊಣೆ ಮಾಡಿ. ಆದರೆ .೧೭ ಲಕ್ಷ ಕೋಟಿ ರೂಪಾಯಿ ಅನುತ್ಪಾದಕ ಆಸ್ತಿಗಾಗಿ ಪ್ರಧಾನಿ ಮೋದಿ ಸರ್ಕಾರವನ್ನು ನೀವು ಹೊಣೆ ಮಾಡುತ್ತೀರೇನು?’ ಎಂದು ಸುರ್ಜೆವಾಲ ಪ್ರಶ್ನಿಸಿದರು. ಯುಪಿಎ ನೀತಿ ನಿಷ್ಕ್ರಿಯತೆ ಕಾರಣ: ಸಂಸದೀಯ ಅಂದಾಜು ಸಮಿತಿಗೆ ನೀಡಿದ ಟಿಪ್ಪಣಿ ಒಂದರಲ್ಲಿ ರಘುರಾಮ್ ರಾಜನ್ ಅವರು ೨೦೧೪ರ ಚುನಾವಣೆಗಿಂತ ಮುಂಚಿನನೀತಿ ನಿಷ್ಕ್ರಿಯತೆ (ನೀತಿ ಲಕ್ವಾ) ಅಥವಾ ನಿರ್ಧಾರ ಕೈಗೊಳ್ಳುವಲ್ಲಿನ ಸರ್ಕಾರದ ವಿಳಂಬನೀತಿಯ ಪರಿಣಾಮವಾಗಿ ಕೆಟ್ಟ ಸಾಲ ಹೆಚ್ಚಳದ ಹಾವಳಿ ಹುಟ್ಟಿಕೊಂಡಿತು ಎಂಬುದಾಗಿ ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಖಾರವಾಗಿ ಪ್ರತಿಕ್ರಿಯಿಸಿತು.  ‘ಇದರ ಜೊತೆಗೆ ಶಂಕಿತ ಕಲ್ಲಿದ್ದಲು ಗಣಿ ಹಂಚಿಕೆಯಂತಹ ಆಡಳಿತಾತ್ಮಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತನಿಖಾ ಭೀತಿಯಿಂದಾಗಿ ಸರ್ಕಾರ ಯುಪಿಎ ಮತ್ತು ನಂತರದ ಎನ್ ಡಿಎ ಅವಧಿಯಲ್ಲಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ವಿಳಂಬಗೊಂಡದ್ದು ಯೋಜನೆಗಳ ಯೋಜನಾ ವೆಚ್ಚಗಳು ಹಲವಾರು ಪಟ್ಟು ಬೆಳೆಯುವಂತೆ ಮಾಡಿತು ಎಂದೂ ರಾಜನ್ ಹೇಳಿದ್ದರುರಾಜನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರುಭಾರತೀಯ ಮೂಲ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಸರ್ಕಾರವೇ ದಾಳಿ ನಡೆಸಿತ್ತು ಎಂದು ಹೇಳಿದ್ದರು.  ಮೋದಿ ಸರ್ಕಾರವು ಅದರಿಂದ ತೊಂದರೆ ಇಲ್ಲವೆಂಬಂತೆ ತೋರಿಸಿಕೊಳ್ಳುತ್ತಿತ್ತು. ಆದರೆ ವರ್ಷ  ಜನವರಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಬೆಳಕಿಗೆ ಬಂದಾಗ ಕೆಟ್ಟ ಸಾಲದ ಬಲೂನು ಒಡೆದಿತ್ತು. ಪಿಎನ್ ಬಿ ವಂಚನೆ ಹಗರಣದ ಆರೋಪಿ ಮೆಹುಲ್ ಚೊಕ್ಸಿಯನ್ನು ಬಂಧಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದೂ ಸುರ್ಜೆವಾಲ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು. ಚೊಕ್ಸಿ ವಿಡಿಯೋ: ಮಧ್ಯೆತಮ್ಮ ಮೇಲಿನ ಆರೋಪಗಳೆಲ್ಲವೂ ಬುಡರಹಿತ ಎಂಬುದಾಗಿ ಮೆಹುಲ್ ಚೊಕ್ಸಿ  ಬಿಡುಗಡೆ ಮಾಡಿದ ವಿಡಿಯೋ ಒಂದರಲ್ಲಿ ಪ್ರತಿಪಾದಿಸಿದ್ದಾರೆ. ಭಾರತೀಯ ಅಧಿಕಾರಿಗಳು ತಮ್ಮ ಪಾಸ್ ಪೋರ್ಟನ್ನು ಅಮಾನತುಗೊಳಿಸಿರುವುದರಿಂದ ತಾವು ಶರಣಾಗಲೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದರುಆಂಟಿಗುವಾ ಕೆರಿಬಿಯನ್ ದ್ವೀಪದಲ್ಲಿನ ತಮ್ಮ ಅಡಗುದಾಣದಿಂದ ಚೊಕ್ಸಿ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಕಳೆದ ವರ್ಷ ಆಂಟಿಗುವಾದ ಪೌರತ್ವವನ್ನು ಅವರು ಪಡೆದಿದ್ದರು. ಕಳೆದ ಏಪ್ರಿಲ್ ತಿಂಗಳಿನಿಂದ ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳಲು ಭಾರತ ಯತ್ನಿಸುತ್ತಿದೆ. ‘ಚೊಕ್ಸಿ ಭಾರತದಿಂದ ಪರಾರಿಯಾಗಿಲ್ಲ. ಮೋದಿ ಸರ್ಕಾರವು ವಂಚನೆಯಲ್ಲಿ ಸಹಭಾಗಿಯಾಗಿರುವುದರಿಂದ ಚೊಕ್ಸಿಗೆ ದೇಶ ತ್ಯಜಿಸಲು ಅವಕಾಶ ನೀಡಲಾಗಿದೆ ಎಂದೂ ಕಾಂಗ್ರೆಸ್ ನಾಯಕ ಹೇಳಿದರು.  ‘ಚೊಕ್ಸಿ ಮತ್ತು ಹಗರಣದ ಇನ್ನೊಬ್ಬ ಆರೋಪಿ ನೀರವ್ ಮೋದಿ ಬಗ್ಗೆ ಗೊತ್ತಿದ್ದರೂ ಪ್ರಧಾನ ಮಂತ್ರಿಗಳ ಸಚಿವಾಲಯ ಏನೂ ಕ್ರಮ ಕೈಗೊಂಡಿಲ್ಲ ಎಂದು ಸುರ್ಜೆವಾಲ ನುಡಿದರು.

2018: ನವದೆಹಲಿ: ದೇಣಿಗೆಗಳ ಬಗ್ಗ ಅಸಮರ್ಪಕ ಮಾಹಿತಿ ನೀಡಿದ್ದಕ್ಕೆ ವಿವರಣೆ ನೀಡುವಂತೆ ಕೋರಿ ಚುನಾವಣಾ ಆಯೋಗವು ಆಮ್ ಆದ್ಮಿ ಪಕ್ಷಕ್ಕೆ (ಆಪ್) ಶೋ-ಕಾಸ್ ನೋಟಿಸ್ ಜಾರಿ ಮಾಡಿತು. ಕೇಂದ್ರಿಯ  ನೇರ ತೆರಿಗೆಗಳ ಮಂಡಳಿಯು ಮಂಡಳಿಯು ಪಕ್ಷವು ದೇಣಿಗೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡದೇ ಬಚ್ಚಿಟ್ಟಿರುವ ಬಗ್ಗೆ ವರದಿ ನೀಡಿದ್ದನ್ನು ಅನುಸರಿಸಿ ಚುನಾವಣಾ ಆಯೋಗ ಕ್ರಮ ಕೈಗೊಂಡಿತು. ತನ್ನ ಕಾನೂನು ರೀತ್ಯಾ ನಿರ್ದೇಶನಗಳನ್ನು ಪಾಲಿಸಲು ವಿಫಲವಾಗಿರುವುದಕ್ಕಾಗಿ ೧೯೬೮ರ ಚುನಾವಣಾ ಚಿಹ್ನೆ (ಮೀಸಲು ಮತ್ತು ಹಂಚಿಕೆ) ಆದೇಶದ ೧೬ಎ ಪ್ಯಾರಾದ ಅಡಿಯಲ್ಲಿ ಪಕ್ಷದ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಚುನಾವಣಾ ಆಯೋಗವು ನೋಟಿಸಿನಲ್ಲಿ ಕೇಳಿದ್ದು, ೨೦ ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿತು. ‘ನಿಮ್ಮ ಉತ್ತರವು ಆಯೋಗದ ಕಚೇರಿಗೆ ನೋಟಿಸ್ ತಲುಪಿದ ದಿನಾಂಕದಿಂದ ೨೦ ದಿನಗಳ ಒಳಗಾಗಿ ತಲುಪಬೇಕು. ವಿಫಲವಾದಲ್ಲಿ ದಾಖಲೆಗಳಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಅರ್ಹತೆ ಮೇರೆಗೆ ವಿಷಯವನ್ನು ಇತ್ಯರ್ಥ ಪಡಿಸಲಾಗುವುದು ಎಂದು ನೋಟಿಸ್ ತಿಳಿಸಿತು. ೨೦೧೪-೧೫ರ ಸಾಲಿಗಾಗಿ ಆಪ್ ತನ್ನ ಮೂಲ ದೇಣಿಗೆ ವರದಿಯನ್ನು ಚುನಾವಣಾ ಆಯೋಗಕ್ಕೆ ೨೦೧೫ರ ಸೆಪ್ಟೆಂಬರ್ ೩೦ರಂದು ಸಲ್ಲಿಸಿತ್ತು. ಬಳಿಕ ೨೦೧೭ರ ಮಾರ್ಚ್ ೨೦ರಂದು ಪರಿಷ್ಕೃತ ವರದಿಯನ್ನು ಪಕ್ಷ ಸಲ್ಲಿಸಿತ್ತು. ಮೂಲ ವರದಿಯಲ್ಲಿ ,೬೯೬ ದೇಣಿಗೆದಾರರ ಪಟ್ಟಿ ಇದ್ದು ಒಟ್ಟು ೩೭.೪೫ ಕೋಟಿ ರೂಪಾಯಿ ದೇಣಿಗೆ ಸ್ವೀಕರಿಸಿದ ಪ್ರಸ್ತಾಪವಿತ್ತು. ಪರಿಷ್ಕೃತ ವರದಿಯು ,೨೬೪ ದಾನಿಗಳಿಂದ ಒಟ್ಟು ೩೭.೬೦ ಕೋಟಿ ರೂಪಾಯಿ ದೇಣಿಗೆ ಬಂದಿರುವುದಾಗಿ ತಿಳಿಸಿತ್ತು.  ಸಿಬಿಟಿಡಿ ವರದಿ ಆಧರಿಸಿ ಕ್ರಮ: ಏನಿದ್ದರೂ ಆಮ್ ಆದ್ಮಿ ಪಕ್ಷವು (ಆಪ್) ೨೦೧೪-೧೫ರ ಹಣಕಾಸು ವರ್ಷದಲ್ಲಿ ಸಲ್ಲಿಸಿದ ದೇಣಿಗೆಗಳ ಮಾಹಿತಿಯನ್ನು ಬಚ್ಚಿಟ್ಟಿರುವುದು ಹಾಗೂ ಇತರ ಲೋಪದೋಷಗಳ ಬಗ್ಗೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಟಿಡಿ) ೨೦೧೮ರ ಜನವರಿಯಲ್ಲಿ ತನ್ನ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು. ಸಿಬಿಟಿಡಿಯು ತನ್ನ ವರದಿಯಲ್ಲಿ ದೇಣಿಗೆ ವಿವರ ಮುಚ್ಚಿಟ್ಟ ಬಗ್ಗೆ ಆಪಾದಿಸಿತ್ತು. ಆಮ್ ಆದ್ಮಿ ಪಕ್ಷದ ಬ್ಯಾಂಕ್ ದಾಖಲೆಯ ಪ್ರಕಾರ ಒಟ್ಟು ೬೭.೬೭ ಕೋಟಿ ರೂಪಾಯಿ ಜಮಾ ಆಗಿರುವುದಾಗಿ ಆಪ್ ದಾಖಲಿಸಿದೆ. ಇದರಲ್ಲಿ ೬೪.೪೪ ಕೋಟಿ ರೂಪಾಯಿಗಳ ದೇಣಿಗೆ ಕೂಡಾ ಸೇರಿದೆ ಎಂಬುದಾಗಿ ತಿಳಿಸಲಾಗಿದೆ. ಏನಿದ್ದರೂ, ಪಕ್ಷವು ತನ್ನ ಆಡಿಟ್ ಮಾಡಲಾದ ಲೆಕ್ಕಪತ್ರಗಳಲ್ಲಿ ಒಟ್ಟು ಆದಾಯವನ್ನು ೫೪.೧೫ ಕೋಟಿ ರೂಪಾಯಿಗಳು ದೇಣಿಗೆಯಿಂದ ಬಂದದ್ದು ಎಂಬುದಾಗಿ ತಿಳಿಸಿದೆ ಎಂದು ಚುನಾವಣಾ ಆಯೋಗ ಹೇಳಿತು. ಆದ್ದರಿಂದ .೧೩.೧೬ ಕೋಟಿ ರೂಪಾಯಿಗಳನ್ನು ಪಕ್ಷವು ಲೆಕ್ಕ ಹಾಕಿಲ್ಲ. ಮತ್ತು ದೇಣಿಗೆಗಳು ಅಪರಿಚಿತ ಮೂಲಗಳಿಂದ ಬಂದಿದೆ ಎಂಬುದಾಗಿ ಅಸೆಸಿಂಗ್ ಅಧಿಕಾರಿ ಹೇಳಿದ್ದಾರೆ ಎಂದು ಸಿಬಿಟಿಡಿ ವರದಿ ಹೇಳಿತು.

2018: ನವದೆಹಲಿ: ಮಹಿಳೆಯರ ಪಾಲಿಗೆ ಚರ್ಚ್ ರಕ್ಷಣೆ ನೀಡುವ ಮಾತೆಯಾಗಿ ಉಳಿದಿಲ್ಲ, ಬದಲಿಗೆ ಮಲತಾಯಿಯಾಗಿದೆ ಎಂದು ಜಲಂಧರದ ಬಿಷಪ್ ಜೇಮ್ಸ್ ಫ್ರಾಂಕೋ ಮುಲಕ್ಕಲ್ ಅವರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಆರೋಪ ಮಾಡಿರುವ ಕೇರಳದ ಕ್ರೈಸ್ತ ಸನ್ಯಾಸಿನಿ ಪೋಪ್ ಅವರ ರಾಯಭಾರಿಯಾಗಿರುವ ಭಾರತದ ಅಪೊಸ್ಟೋಲಿಕ್ ನನ್ಸಿಯೊ ಗಿಯಾಮ್ಬಟ್ಟಿಸ್ಟಾ ಡಿಕ್ವಾಟ್ರೊ ಅವರಿಗೆ ಪತ್ರ ಬರೆದರು. ಪತ್ರದಲ್ಲಿ ಅವರು ತಮ್ಮ ದೂರನ್ನು ನಿಭಾಯಿಸುವಲ್ಲಿನ ಚರ್ಚ್ ವೈಫಲ್ಯವನ್ನು ವಿವರಿಸಿದರು. ಸೆಪ್ಟೆಂಬರ್ ೮ರಂದು ಕಳುಹಿಸಿರುವ ತಮ್ಮ ಏಳು ಪುಟಗಳ ಪರಿಣಾಮಕಾರಿ ಪತ್ರದಲ್ಲಿ ಕ್ರೈಸ್ತ ಸನ್ಯಾಸಿನಿ, ’ಹಲವಾರು ಸಿಸ್ಟರ್ ಗಳು ತಮ್ಮ ಬಗ್ಗೆ ಕಾಳಜಿ ವಹಿಸಬೇಕಾದ ವ್ಯಕ್ತಿಗಳಿಂದಲೇ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ಪ್ರತಿಭಟಿಸಲು ಸಾಧ್ಯವಾಗದೇ ಮೌನವಾಗಿ ನರಳುತ್ತಿದ್ದಾರೆ ಎಂದು ಬರೆದರು. ಪತ್ರದಲ್ಲಿ ತಮ್ಮ ಕಷ್ಟಗಳನ್ನು ವಿವರಿಸಿದ ಸನ್ಯಾಸಿನಿ, ನೆರವಿಗಾಗಿ ಸ್ವತಃ ಪೋಪ್ ಸೇರಿದಂತೆ ನಾನು ಪ್ರತಿಯೊಬ್ಬನಿಗೂ ಮೊರೆ ಇಟ್ಟೆ. ಆದರೆ ಅತ್ಯಾಚಾರ ಆರೋಪಕ್ಕೆ ಒಳಗಾಗಿರುವ ಬಿಷಪ್ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸುವ ಮೂಲಕ ನನ್ನ ಕಷ್ಟಗಳ ಬಗ್ಗೆ ಅವರೆಲ್ಲರೂ ಕಣ್ಮುಚ್ಚಿಕೊಂಡರು ಎಂದು ಹೇಳಿದರು.  ‘ಬಾಲ್ಯದಿಂದಲೇ ನಮಗೆ ಚರ್ಚ್ ನಮ್ಮ ತಾಯಿ ಎಂಬುದಾಗಿ ಕಲಿಸಿಕೊಡಲಾಗುತ್ತಿತ್ತು. ಆದರೆ ನನ್ನ ಅನುಭವದ ಬೆಳಕಿನಿಂದ ಮಹಿಳೆಯರಿಗೆ ಮತ್ತು ಶ್ರೀಸಾಮಾನ್ಯರಿಗೆ ಚರ್ಚ್ ತಾಯಿಯಲ್ಲ, ಮಲತಾಯಿ ಎಂಬುದಾಗಿ ನಾನು ಅರಿತುಕೊಂಡಿಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದರು.  ‘ನಾನೊಬ್ಬಳೇ ಬಲಿಪಶು ಅಲ್ಲ, ಇತರ ಹಲವರು ಬಲಿಪಶುಗಳಾಗಿದ್ದಾರೆ. ಹಲವಾರು ಸಿಸ್ಟರ್ ಗಳು ಮತ್ತು ಮಹಿಳೆಯರು ಯಾರು ತಮ್ಮ ಬಗ್ಗೆ ಕಾಳಜಿ ವಹಿಸಬೇಕಾಗಿತ್ತೋ, ಮತ್ತು ಯಾರನ್ನು ಗೌರವದಿಂದ ಕಾಣುತ್ತಿದ್ದರೋ ಅಂತಹ ವ್ಯಕ್ತಿಗಳಿಂದಲೇ ನಡೆಯುತ್ತಿರುವ ಲೈಂಗಿಕ ಶೋಷಣೆಯನ್ನು ಪ್ರತಿಭಟಿಸಲಾಗದೆ ಮೌನವಾಗಿ ನರಳುತ್ತಿದ್ದಾರೆ. ಚರ್ಚ್ ಅಧಿಕಾರಿಗಳ ಮೌನ ಮತ್ತು ಅಪರಾಧ ಎಸಗುವ ಮಂದಿಗೆ ನೀಡುತ್ತಿರುವ ರಕ್ಷಣೆಯು ಸಮಾಜದ ಮುಂದೆ ಚರ್ಚ್ ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿಯನ್ನು ಸೃಷ್ಟಿಸಲಿದೆ ಎಂದು ಅವರು ಪತ್ರದಲ್ಲಿ ತಿಳಿಸಿದರು.  ಇದು ಭಾರತೀಯ ಚರ್ಚ್ನಲ್ಲಿ ಮಹಿಳೆಯರ ಮೇಲೆ ಪ್ರತಿಕೂಲ ಪರಿಣಾಮವನ್ನೂ ಬೀರಬಹುದು,. ಮನುಷ್ಯರಾಗಿ ತಮ್ಮ ಘನತೆ ಗೌರವದ ರಕ್ಷಣೆಗಾಗಿ ಕ್ಯಾಥೋಲಿಕ್ ಮತದ ಮೇಲಿನ ಅವರ ವಿಶ್ವಾಸವನ್ನೇ ದೂರಮಾಡಬಹುದು ಎಂದು ಸನ್ಯಾಸಿನಿ ಬರೆದಿದ್ದಾರೆ. ಇತರ ಸಿಸ್ಟರ್ಗಳ ಅನಿವಾರ್ಯತೆಯ ದುರುಪಯೋಗವನ್ನೂ ಬಿಷಪ್ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆಪಾದಿಸಿದರು. ಅತ್ಯಾಚಾರಿ ಆರೋಪಿತ ಬಿಷಪ್ ತನಗೆ ಪ್ರಬಲ ಹೋರಾಟ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ ಎಂದೂ ಆಕೆ ಬರೆದರು.  ’ಬಿಷಪ್ ಫ್ರಾಂಕೋ ಅವರು ಹಲವಾರು ಬಾರಿ ನನ್ನನ್ನು ಲೈಂಗಿಕವಾಗಿ ದುರುಪಯೋಗಿಸಿಕೊಂಡಿದ್ದರೂ, ನನ್ನ ಸುಪೀರಿಯರ್ ಜನರಲ್ ಅಥವಾ ಕೌನ್ಸಿಲರ್ ಗಳಿಗೆ ಪೂರ್ತಿ ಕಥೆಯನ್ನು ಹೇಳಲು ನನಗೆ ಸಾಧ್ಯವಿರಲಿಲ್ಲ. ಅವರೊಂದಿಗೆ ಮಲಗಲು ಪ್ರತಿಭಟಿಸಿದ ಒಂದೇ ಕಾರಣಕ್ಕಾಗಿ ಬಿಷಪ್ ಅವರು ಹಲವಾರು ಶಿಸ್ತುಕ್ರಮಗಳನ್ನು ನನ್ನ ಮೇಲೆ ಕೈಗೊಂಡಿದ್ದಾರೆ ಎಂದು ನಾನು ಪದೇ ಪದೇ ಅವರಿಗೆ ಹೇಳಿದ್ದೇನೆ. ನನ್ನ ಮಾತುಗಳ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಲು ಅವರು ವಿಫಲರಾದ್ದರಿಂದ, ಇದಕ್ಕಿಂತ ಹೆಚ್ಚೇನನ್ನೂ ಹೇಳಲು ನನಗೆ ಸಾಧ್ಯವಾಗಲಿಲ್ಲ. ಬಿಷಪ್ ಫ್ರಾಂಕೋ ಅವರು ನನ್ನ ಸುಪೀರಿಯರ್ ಗಳ ಬೆಂಬಲದೊಂದಿಗೆ ನನಗೆ ತೊಂದರೆ ಮಾಡಬಹುದು ಎಂಬ ಭೀತಿಯೂ ನನಗಿತ್ತು. ಕಳೆದ ಐದು ವರ್ಷಗಳಲ್ಲಿ ಮಿಷನರೀಸ್ ಆಫ್ ಜೇಸಸ್ ಗೆ ಆಗಿರುವ ನಷ್ಟವು (೨೦ ಸಿಸ್ಟರ್ ಗಳು ಬಿಟ್ಟಿದ್ದಾರೆ) ಸಿಸ್ಟರುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಇಲ್ಲಿ ಪರಿಹಾರವಿಲ್ಲ ಎಂಬುದನ್ನು ಸಾಬೀತು ಮಾಡಿದೆ ಎಂದು ಪತ್ರದಲ್ಲಿ ಸನ್ಯಾಸಿನಿ ಬರೆದರು.  ‘ಪಾದ್ರಿಗಳು ಮತ್ತು ಬಿಪಷ್ಗಳಿಗೆ ಪ್ಯಾರಿಶ್ ಹೌಸ್, ಪ್ಯಾಸ್ಟೋರಲ್ ಸೆಂಟರ್ ಇತ್ಯಾದಿ ಸವಲತ್ತುಗಳು ಇದ್ದರೂ ಅವರಿಗೆ ಕಾನ್ವೆಂಟ್ಗಳಲ್ಲಿ ರಾತ್ರಿಗಳನ್ನು ಕಳೆಯಲು ಅವಕಾಶ ನೀಡಲಾಗುತ್ತಿರುವ ಬಗ್ಗೆ ನನಗೆ ಕಳವಳ ಇದೆ. ಬಿಷಪ್ ಫ್ರಾಂಕೋ ಅವರ ಕುಕೃತ್ಯಗಳನ್ನು  ಮುಚ್ಚಿಟ್ಟು ಅವರ ಮತ್ತು ಚರ್ಚ್ ಘನತೆಯನ್ನು ರಕ್ಷಿಸಲು ಕಟಿಬದ್ಧವಾಗಿರುವ ಚರ್ಚ್ ಅಧಿಕಾರಿಗಳು ನನಗೆ ನಾನು ಕಳೆದುಕೊಂಡದ್ದನ್ನು ಹಿಂದಿರುಗಿಸಬಲ್ಲರೇ? ’ಹದಿಮೂರು ಬಾರಿ ಲೈಂಗಿಕ ಶೋಷಣೆಗೆ ನಾನು ಬಿಟ್ಟದ್ದು ಏಕೆ ಎಂಬ ಅವರ ಪ್ರಶ್ನೆಗಳನ್ನು ನೋಡುತ್ತಿದ್ದರೆ ಕ್ಯಾಥೋಲಿಕ್ ಚರ್ಚ್ ಈಗಲೂ ನಾನು ಹೇಳುತ್ತಿರುವ ಸತ್ಯವನ್ನು ಶಂಕಿಸುತ್ತಿದೆ ಎಂದು ನನಗೆ ಅನ್ನಿಸುತ್ತಿದೆ. ಇದನ್ನು ಹೊರಗೆ ಹೇಳಲು ನನಗೆ ಅತಿಯಾದ ಭೀತಿ ಮತ್ತು ನಾಚಿಕೆ ಕಾಡುತ್ತಿತ್ತು. ಸಭೆಯಲ್ಲಿ ನನ್ನನ್ನು ದಮನಿಸಬಹುದು ಮತ್ತು ನನ್ನ ಕುಟುಂಬ ಸದಸ್ಯರಿಗೆ ಬೆದರಿಕೆ ಒಡ್ಡಬಹುದು ಎಂಬ ಭಯ ನನಗಿತ್ತು. ಇದೇ ವೇಳೆಗೆ ಅವರ ಕೃತ್ಯವನ್ನು ಸ್ಥಗಿತಗೊಳಿಸುವ ಧೈರ್ಯವನ್ನು ನಾನು ಪ್ರದರ್ಶಿಸಿದ ಸತ್ಯದ ಬಗ್ಗೆ ಚರ್ಚ್ ಏಕೆ ಕಣ್ಮುಚ್ಚಿಕೊಂಡಿದೆ ಎಂದು ನನಗೆ ಅಚ್ಚರಿಯಾಗುತ್ತದೆ ಎಂದೂ ಸನ್ಯಾಸಿನಿ ಬರೆದರು.

2018: ಲಂಡನ್: ಸೆರೆವಾಸಕ್ಕೆ ಗುರಿಯಾದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಪತ್ನಿ ಬೇಗಮ್ ಕುಲ್ ಸೂಮ್ ಅವರು ದೀರ್ಘ ಕಾಲದ ಅಸ್ವಸ್ಥತೆಯ ಬಳಿಕ ಲಂಡನ್ನಿನಲ್ಲಿ ನಿಧನರಾದರು ಎಂದು ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ಅಧ್ಯಕ್ಷ ಶೆಹಬಾಜ್ ಶರೀಫ್ ತಿಳಿಸಿದರು. ಕುಲ್ ಸೂಮ್ ಅವರು ಲಂಡನ್ನಿನ ಹಾರ್ಲೆ ಸ್ಟ್ರೀಟ್ ಕ್ಲಿನಿಕ್ ನಲ್ಲಿ ೨೦೧೪ರ ಜೂನ್ ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯ ಹದಗೆಟ್ಟದ್ದರಿಂದ ಮಂಗಳವಾರ ಬೆಳಗ್ಗೆ ಅವರಿಗೆ ಜೀವರಕ್ಷಕ ವ್ಯವಸ್ಥೆ ಒದಗಿಸಲಾಗಿತ್ತು.

೬೮ ವರ್ಷದ ಪಾಕಿಸ್ತಾನ ಮಾಜಿ ಪ್ರಥಮ ಮಹಿಳೆಗೆ ೨೦೧೭ರಲ್ಲಿ ಗಂಟಲ ಕ್ಯಾನ್ಸರ್ (ಲಿಂಫೋಮಾ) ಇರುವುದು ಪತ್ತೆಯಾಗಿತ್ತು. ಅವರು ೧೯೭೧ರಲ್ಲಿ ನವಾಜ್ ಶರೀಫ್ ಅವರನ್ನು ಮದುವೆಯಾಗಿದ್ದರು.


2016: ಮುಂಬೈ: ರಾಜಧಾನಿ ದೆಹಲಿಯಿಂದ ಸೆಪ್ಟೆಂಬರ 10ರ ಶನಿವಾರ ಮಧ್ಯಾಹ್ನ 2.45 ಗಂಟೆಗೆ ಪಯಣ ಆರಂಭಿಸಿದ ಸ್ಪಾನಿಶ್ ಟಾಲ್ಗೋ ರೈಲುಗಾಡಿಯು 12 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ದೆಹಲಿ-ಮುಂಬೈ ರಾಜಧಾನಿ ಮಾರ್ಗವನ್ನು ಕ್ರಮಿಸಿದ್ದು, ಈದಿನ ನಸುಕಿನ 2.34 ಗಂಟೆಗೆ ಮುಂಬೈ ತಲುಪುವ ಮೂಲಕ ತನ್ನ ಅಂತಿಮ ಪರೀಕ್ಷಾ ಸಂಚಾರದಲ್ಲಿ ಯಶಸ್ವಿಯಾಯಿತು. ಜೊತೆಗೆ ರಾಷ್ಟ್ರದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಟಾಲ್ಗೋ ರೈಲಿನ ಅಂತಿಮ ಪರೀಕ್ಷಾ ಸಂಚಾರವು ದೆಹಲಿ ಮತ್ತು ಮುಂಬೈ ಪಯಣವನ್ನು 4 ಗಂಟೆಗಳಷ್ಟು ಇಳಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ದೆಹಲಿ- ಮುಂಬೈ ರೈಲು ಪಯಣದ ಅವಧಿ 16 ಗಂಟೆಗಳು. ನವದೆಹಲಿ ರೈಲ್ವೇ ನಿಲ್ದಾಣವನ್ನು ಶನಿವಾರ ಮಧ್ಯಾಹ್ನ 2.45 ಗಂಟೆಗೆ ಬಿಟ್ಟ ರೈಲು ಗಂಟೆಗೆ 150 ಕಿಮೀ ವೇಗದಲ್ಲಿ ಪಯಣಿಸಿತು. ಸ್ಪಾನಿಶ್ ಕಂಪನಿ ಟಾಲ್ಗೋ ನಿರ್ಮಿಸಿರುವ ರೈಲುಗಾಡಿಯು ಅತ್ಯಂತ ಹಗುರವಾದ 9 ಬೋಗಿಗಳನ್ನು ಹೊಂದಿದ್ದು, ಗಂಟೆಗೆ 200 ಕಿಮೀ ದೂರದಲ್ಲಿ ಸಾಗಬಲ್ಲ ಸಾಮರ್ಥ್ಯ ವನ್ನು ಹೊಂದಿದೆ. ರೈಲು-ಬೋಗಿಗಳನ್ನು ಏಪ್ರಿಲ್ ತಿಂಗಳಲ್ಲಿ ಮುಂಬೈಗೆ ಆಮದು ಮಾಡಲಾಗಿತ್ತು. ಮಧ್ಯೆ ಟಾಲ್ಗೋ ರೈಲು ಶನಿವಾರ ತನ್ನ ಮೂರನೇ ಪರೀಕ್ಷಾ ಸಂಚಾರದಲ್ಲಿ ಮುಂಬೈಗೆ ಬರುವಾಗ 18 ನಿಮಿಷಗಳಷ್ಟು ವಿಳಂಬವಾಗಿತ್ತು.

2016:  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಈದಿನ ಮೂರು ಕಡೆ ನುಸಳುವಿಕೆ ಯತ್ನ ಸೇರಿದಂತೆ 4 ಕಡೆ ಭದ್ತತಾ ಪಡೆಗಳು ಮತ್ತು ಭಯೋತ್ಪಾದಕರ ಮಧ್ಯೆ ಗುಂಡಿನ ಘರ್ಷಣೆ ನಡೆಯಿತು.. ನೌಗಾಮ್ ನಲ್ಲಿ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ನುಸುಳಲು ಯತ್ನಿಸಿದ 4 ಉಗ್ರಗಾಮಿಗಳು ಭಾರತೀಯ ಸೇನೆಗೆ ಬಲಿಯಾದರು., ತಂಗ್ಧರ್ ಮತ್ತು ಗುರೆಜ್ ವಿಭಾಗಗಳಲ್ಲೂ ಭಯೋತ್ಪಾದಕರ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಯಿತು. ಪೂಂಚ್ ನಲ್ಲಿ ಗುಂಡಿನ ಘರ್ಷಣೆಯಲ್ಲಿ ಒಬ್ಬ ಭಯೋತ್ಪಾದಕ ಹತನಾಗಿದ್ದು,ಮೂವರ ಅಟ್ಟಹಾಸವನ್ನು ಬಗ್ಗು ಬಡಿಯಲಾಯಿತು. ಒಬ್ಬ ಪೊಲೀಸ್ ಸಿಬ್ಬಂದಿ ಹುತಾತ್ಮರಾದರು.. ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡರು.. ನೌಗಾಮ್ ವಿಭಾಗದಲ್ಲಿ ನಾಲ್ವರು ಭಯೋತ್ಪಾದಕರನ್ನು ಗುಂಡಿನ ಘರ್ಷಣೆಯಲ್ಲಿ  ಕೊಂದು ಹಾಕಿರುವ ಭಾರತೀಯ ಸೇನಾ ಪಡೆ ಹತ ಭಯೋತ್ಪಾದಕರ ಬಳಿ ಇದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು ಗುಂಡುಗಳನ್ನು ವಶ ಪಡಿಸಿಕೊಂಡಿತು.

2016:  ನವದೆಹಲಿ: ಭಯೋತ್ಪಾದಕರ ಹಾವಳಿ ದಿಢೀರನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ನಿವಾಸದಲ್ಲಿ ತುರ್ತಾಗಿ ಉನ್ನತ ಮಟ್ಟದ ಸಭೆ ಕರೆದು ಪರಿಸ್ತಿಯ ವಿಶ್ಲೆಷಣೆ ನಡೆಸಿದರು. ಕಾಶ್ಮೀರ ವಿಷಯದ ಬಗ್ಗೆ ಚರ್ಚಿಸಿದ  ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಂಸ್ಥೆ, ಗುಪ್ತಚರ ದಳ ಮುಖ್ಯಸ್ಥರು, ಗಡಿ ಭದ್ರತಾ ಪಡೆ ಮಹಾ ನಿರ್ದೇಶಕರು ಮತ್ತು ಗೃಹ ಕಾರ್ಯದರ್ಶಿ  ಪಾಲ್ಗೊಂಡರು..

2016: ನವದೆಹಲಿ: ಟೂತ್ ಪೇಸ್ಟ್, ನೂಡಲ್ಸ್ ಇನ್ನಿತರ ದಿನಬಳಕೆಯ ವಸ್ತುಗಳನ್ನು ಪರಿಚಯಿಸಿರುವ ಬಾಬಾ ರಾಮದೇವ್ ಅವರ ಪತಂಜಲಿ ಬ್ರಾಂಡ್, ಇದೀಗ ದೇಸಿ ಜೀನ್ಸ್  ಸೇರಿದಂತೆ
ಸಾಂಪ್ರದಾಯಿಕ ವಸ್ತ್ರಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ಪ್ರಕಟಿಸಿತು. ಸುದ್ದಿಮಾಧ್ಯಮವೊಂದರಲ್ಲಿ ಸಂದರ್ಶನ ನೀಡಿದ ರಾಮದೇವ್, ಭಾರತದಲ್ಲಿ ಮಾತ್ರವಲ್ಲ ಆಫ್ರಿಕಾ, ಯುರೋಪ್ ಮತ್ತು ಅಮೆರಿಕದಲ್ಲಿಯೂ ತಮ್ಮ ಹೊಸ ಉಡುಪುಗಳ ಮಾರುಕಟ್ಟೆಯನ್ನು ವಿಸ್ತರಿಸಲು ತೀರ್ಮಾನಿಸಿರುವುದಾಗಿ ಹೇಳಿದರು. ಯೋಗಾಭ್ಯಾಸ ಮಾಡಲು ಪತಂಜಲಿಯ ಉಡುಗೆಗಳನ್ನು ಯಾಕೆ ಮಾರುಕಟ್ಟೆಗೆ ಪರಿಚಯಿಸಬಾರದು ಎಂದು ನನ್ನ ಅನುಯಾಯಿಗಳು ಕೇಳುತ್ತಿದ್ದರು.ಯೋಗದ ಉಡುಗೆಗಳಷ್ಟೇ ಯಾಕೆ ಎಲ್ಲ ರೀತಿಯ ಪರಿಧಾನ್ (ಉಡುಗೆ)ಗಳನ್ನು ಯಾಕೆ ನಾವು ಮಾರುಕಟ್ಟೆಗೆ ಪರಿಚಯಿಸಬಾರದು ಎಂದು ನಾನು ಯೋಚಿಸಿದೆ. ಮೂಲಕ ದೇಶದ ಗಾರ್ಮೆಂಟ್ಸ್ ಮಾರುಕಟ್ಟೆಯಲ್ಲಿಯೂ ದೇಸಿ ಉತ್ಪನ್ನಗಳು ಸಿಗುವಂತಾಗುತ್ತದೆ. ದೇಸಿ ಸೊಗಡಿನ ಉಡುಗೆಗಳೊಂದಿಗೆ ಆಧುನಿಕ ಉಡುಗೆಗಳನ್ನು ಪರಿಚಯಿಸುತ್ತಿರುವ ಬಾಬಾ ದೇಸಿ ಜೀನ್ಸ್, ಸಾಂಪ್ರದಾಯಿಕ ಉಡುಗೆಗಳ ವಿಭಿನ್ನ ಶ್ರೇಣಿ ಮೂಲಕ ಜಾಗತಿಕ ಮಟ್ಟದಲ್ಲಿ ವಸ್ತ್ರಲೋಕಕ್ಕೆ ಪ್ರವೇಶ ಮಾಡಲಿದ್ದಾರೆ.
2016: ಪ್ರತಾಪಗಢ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ತಾವು ಪ್ರಯಾಣ ಮಾಡುತ್ತಿದ್ದ ವಾಹನ ಹಾಗೂ ಬೆಂಗಾವಲು ವಾಹನಗಳ ಮೇಲೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದರು ಎಂದು ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರು ಪ್ರತಾಪಗಢದಲ್ಲಿ ಆಪಾದಿಸಿದರು.

2016: ಲಂಡನ್: ಗ್ಯಾಟ್ ವಿಕ್ ನಿಂದ ಹೊರಟಿದ್ದ ವಿಮಾನದ ಪ್ರಯಾಣಿಕರು ಹಠಾತ್ತನೆ ವಿಮಾನದಲ್ಲಿಅಲ್ಲಾಹು ಅಕ್ಬರ್ಘೊಷಣೆ ಮೊಳಗತೊಡಗಿದ ಪರಿಣಾಮವಾಗಿ ಬೆದರಿ ಕಂಗಾಲಾದ ಘಟನೆ ಘಟಿಸಿತು. ಗ್ಯಾಟ್ ವಿಕ್ ನಿಂದ ವೆನಿಸ್ಗೆ ಹೊರಟಿದ್ದ ಈಸಿ ಜೆಟ್ ಇಝುಡ್ವೈ 5263 ವಿಮಾನದಲ್ಲಿ ಘಟನೆ ಘಟಿಸಿರುವುದಾಗಿ ಡೈಲಿ ಮೇಲ್ ವರದಿ ಮಾಡಿತು. ಕೈಗಳಿಗೆ ಕೋಳ ಇದ್ದ ವಲಸೆಗಾರನೊಬ್ಬ ಕೃತ್ಯ ಎಸಗಿದ ಎಂದು ವರದಿ ಹೇಳಿತು. ವ್ಯಕ್ತಿಯನ್ನು ಗ್ಯಾಟ್ವಿಕ್ ನಿಂದ ವೆನಿಸ್ಗೆ ಬ್ರಿಟಿಷ್ ಹೋಮ್ ಆಫೀಸ್ ಅಧಿಕಾರಿಗಳು ಒಯ್ಯುತ್ತಿದ್ದಾಗ ವಲಸೆಗಾರಅಲ್ಲಾಹು ಅಕ್ಬರ್’, ‘ಸಾವು ಬರುತ್ತಾ ಇದೆ’, ‘ನಾವೆಲ್ಲರೂ ಸಾಯುತ್ತೇವೆಎಂದು ಘೊಷಣೆಗಳನ್ನು ಕೂಗತೊಡಗಿದ. ಈತನ ಘೊಷಣೆಗಳಿಂದ ವಿಮಾನ ಪ್ರಯಾಣಿಕರು ಕಂಗಾಲಾದರೆ, ಮಕ್ಕಳ ಕಣ್ಣುಗಳಿಂದ ಕಣ್ಣೀರು ಇಳಿಯತೊಡಗಿತು. ಪಕ್ಕದಲ್ಲೇ ಕುಳಿತಿದ್ದ ಪ್ರಯಾಣಿಕನೊಬ್ಬ ಈತನ ಘೊಷಣೆಯ ಆಡಿಯೋ ರೆಕಾರ್ಡಿಂಗ್ ಮಾಡಿದ್ದು, ಅದರ ಪ್ರಕಾರ ಆತ ಅಲ್ಲಾಹು ಅಕ್ಬರ್ ಎಂಬುದಾಗಿ 29 ಬಾರಿ, ಸಾವು ಬರುತ್ತಾ ಇದೆ ಎಂಬುದಾಗಿ 17 ಬಾರಿ ಮತ್ತು ನಾವೆಲ್ಲಾ ಸಾಯುತ್ತೇವೆ ಎಂಬುದಾಗಿ 9 ಬಾರಿ ಕೂಗಿದ್ದು ದಾಖಲಾಗಿದೆ. ಬ್ರಿಟಿಷ್ ಹೋಮ್ ಆಫೀಸ್ ಅಧಿಕಾರಿ ಆತನನ್ನು ತಣ್ಣಗಾಗಿಸಲು ಹರ ಸಾಹಸ ಪಡಬೇಕಾಯಿತು ಎಂದು ವರದಿ ತಿಳಿಸಿತು..

2016: ನವದೆಹಲಿ: ಆಂಧ್ರಪ್ರದೇಶದ ವಿಶಾಖ ಪಟ್ಟಣದ ಸಿಹಿ ತಯಾರಿಸುವ ಸಂಸ್ಥೆಯೊಂದು ವರ್ಷದ ಗಣೇಶ ಚತುರ್ಥಿ ಉತ್ಸವಕ್ಕೆ ಅತ್ಯಂತ ದೊಡ್ಡ ಲಡ್ಡು ತಯಾರಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಲು ಮುಂದಾಯಿತು. 78 ಅಡಿ ಎತ್ತರದ ಬೃಹತ್ ಗಣಪ ವಿಗ್ರಹಕ್ಕೆ ಸಹಿ ತಯಾರಿಕಾ ಸಂಸ್ಥೆಯು 29.5 ಟನ್ ತೂಕದ ಲಡ್ಡು ತಯಾರಿಸಿ ಅರ್ಪಿಸುವ ಸಿದ್ಧತೆ ನಡೆಸಿತು. ಲಡ್ಡು ತಯಾರಿ ಭರದಿಂದ ಸಾಗಿದ್ದು, ಅಂತಿಮ ಹಂತಕ್ಕೆ ಬಂದಿದೆ. ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಸಲುವಾಗಿಯೇ ಬೃಹತ್ ಗಣೇಶನನ್ನೂ ಬಾರಿ ಕೂರಿಸಲಾಗಿದ್ದು, ಲಡ್ಡು ಮತ್ತು ಗಣಪನ ಗಾತ್ರದ ಮೌಲ್ಯ ಮಾಪನ ಮುಂದಕ್ಕೆ ನಡೆಯಲಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.

2016: ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರ ಪ್ರವೀಣ್ ಕುಮಾರ್ ರಾಜಕೀಯ ಪ್ರವೇಶ ಮಾಡಿದರು.  29 ವರ್ಷದ ಪ್ರವೀಣ್ ಕುಮಾರ್ ಭಾನುವಾರ ಲಖನೌನಲ್ಲಿ ಕೆಲವು ಧುರೀಣರ ಸಮ್ಮುಖದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದರು. 2017 ಚುನಾವಣೆಯನ್ನು ಗುರಿಯಾಗಿಸಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗಿರುವ ಅವರು ಮೀರಟ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರವೀಣ್ ಕುಮಾರ್, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿದ ಬಳಿಕ ಸಮಾಜವಾದಿ ಪಕ್ಷ ಸೇರ್ಪಡೆ ಸಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದರು.

 2016: ನ್ಯೂಯಾರ್ಕ್: ಜರ್ಮನಿಯ ಏಂಜಲಿಕ್ ಕೆರ್ಬರ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ನಲ್ಲಿ ಜೆಕ್ಗಣರಾಜ್ಯದ ಕರೋಲಿನಾ ಪ್ಲಿಸ್ಕೋವ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು.. ಕೆರ್ಬರ್ಗೆ ಇದು ವರ್ಷದ ಎರಡನೇ ಗ್ರಾಂಡ್ ಸ್ಲಾಂ ಪ್ರಶಸ್ತಿ. ತೀವ್ರ ಹಣಾಹಣಿಯ ಪಂದ್ಯದಲ್ಲಿ ಕೆರ್ಬರ್ 6-3, 4-6, 6-4 ಅಂತರದಿಂದ ಜಯ ದಾಖಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದುಕೊಂಡಿದ್ದರು.



 
2016:  ಬುಸಾನ್ (ಉತ್ತರ ಕೊರಿಯಾ): ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯಗಳ ವಿರುದ್ಧ ಉತ್ತರ ಕೊರಿಯಾದ ಬುಸಾನ್ ಬಂದರು ನಗರದಲ್ಲಿ ಬಲೂಚ್ ರಿಪಬ್ಲಿಕನ್ ಪಾರ್ಟಿಯ ಸದಸ್ಯರು ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿ ಪ್ತತಿಭಟಿಸಿದರು

2008: `ಬ್ರಹ್ಮಾಂಡ' ಸೃಷ್ಟಿ ಪುನರಾವರ್ತನೆ ವೀಕ್ಷಿಸಲು ವಿಜ್ಞಾನಿಗಳು `ಮಹಾಸ್ಫೋಟ' ನಡೆಸಿದ ಬೆನ್ನಲ್ಲೇ, ಅಮೆರಿಕದ ಅಬ್ರಹಾಂ ಸ್ಟ್ರೂಕ್ಸ್ ನೇತೃತ್ವದ ವಿಜ್ಞಾನಿಗಳ ತಂಡ ತಮ್ಮ ಪ್ರಯೋಗಾಲಯದಲ್ಲಿ `ಕೃತಕ ಮರ' ಬೆಳೆಸಿ ದಾಖಲೆ ಮಾಡಿದ್ದನ್ನು ಬಹಿರಂಗಪಡಿಸಿದರು. `ಮರದ ಉಸಿರಾಟವನ್ನೇ ತದ್ರೂಪಗೊಳಿಸಿ, ಅತಿ ಹೆಚ್ಚು ಎತ್ತರದ ಟೊಂಗೆಗಳಿಗೆ ತೇವಾಂಶ ಸರಬರಾಜು ಮಾಡುವ ಯತ್ನವನ್ನೂ ತಂಡ ಮಾಡಿದ್ದು, ಇದು ವಿನೂತನ ಪ್ರಯೋಗ. `ವಿಶ್ವದಲ್ಲೇ ಮೊದಲ ಕೃತಕ ಮರ (ಸಿಂಥೆಟಿಕ್ ಟ್ರೀ)' ಎಂಬ ಹೆಗ್ಗಳಿಕೆಗೆ ಈ ಮರ ಪಾತ್ರವಾಯಿತು. ಸಂಶೋಧಕರು ಸಸ್ಯ-ಮರಗಳು ಲೋಮನಾಳಗಳ ಮೂಲಕ ಉಸಿರಾಟ ನಡೆಸುವ ಸಿದ್ಧಾಂತವನ್ನೇ ಈ ಪ್ರಯೋಗಕ್ಕೆ ಬಳಸಿಕೊಂಡಿದ್ದು `ಇದೊಂದು ಭೌತವಿಜ್ಞಾನದ ಪ್ರಕ್ರಿಯೆ, ಇದಕ್ಕೆ ಜೈವಿಕ ಶಕ್ತಿ ಅಗತ್ಯವಿಲ್ಲ' ಎಂದು ಅಭಿಪ್ರಾಯಪಟ್ಟರು.

2007: ಸ್ವಾತಂತ್ರ್ಯ ಹೋರಾಟದ ವೀರ ವನಿತೆ ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮ ಅವರ ಪಂಚಲೋಹದ ಪ್ರತಿಮೆಯನ್ನು ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ದೆಹಲಿಯ ಸಂಸತ್ ಭವನದ ಆವರಣದಲ್ಲಿ ಅನಾವರಣಗೊಳಿಸಿದರು. ಮೀರಜಿನ ಶಿಲ್ಪಿ  ವಿಜಯ ಗುಜ್ಜರ್ ಕೆತ್ತಿರುವ ತಲಾ 13.7 ಅಡಿ ಎತ್ತರ ಮತ್ತು ಉದ್ದದ ಈ ಅಶ್ವಾರೋಹಿ ರಾಣಿ ಚೆನ್ನಮ್ಮನ ಆಕರ್ಷಕ ಪ್ರತಿಮೆಯ ತೂಕ ಹತ್ತು ಟನ್. ಸುಮಾರು ಹದಿನೈದು ಲಕ್ಷ ರೂಪಾಯಿ ವೆಚ್ಚದಲ್ಲಿ ರಚನೆಗೊಂಡ ಈ ಪ್ರತಿಮೆಯು ಮಹೇಂದ್ರ ಕಂಠಿ ಕಾರ್ಯಾಧ್ಯಕ್ಷರಾಗಿರುವ  ಮತ್ತು ಡಾ.ಸರೋಜಿನಿ ಶಿಂತ್ರಿ ಅಧ್ಯಕ್ಷರಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಸ್ಮಾರಕ ಸಮಿತಿಯ ಕೊಡುಗೆ. ರಾಜ್ಯ ಸರ್ಕಾರ ಇದಕ್ಕೆ ಹತ್ತು ಲಕ್ಷ ರೂಪಾಯಿ ಅನುದಾನ ನೀಡಿತ್ತು.

2007: ಹದಿನಾರು ವರ್ಷದೊಳಗಿನ ಮಕ್ಕಳು ಇನ್ನು ಮುಂದೆ ಮೊಬೈಲ್ ಬಳಸುವಂತಿಲ್ಲ. `ಮೊಬೈಲ್ ಬಳಕೆಯಿಂದ ಅವರ ಮನಸ್ಸು ಮತ್ತು ದೇಹದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದು ತಜ್ಞರು ಎಚ್ಚರಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹಾಗೂ ಆರೋಗ್ಯ ಸಚಿವ ಆರ್.ಅಶೋಕ್ ಈದಿನ ಬೆಂಗಳೂರಿನಲ್ಲಿ ಪ್ರಕಟಿಸಿದರು. `ಮೊಬೈಲ್ ಬಳಕೆಯಿಂದ ಮಕ್ಕಳ ಕಿವಿ, ಮೆದುಳು, ಹೃದಯ ಮತ್ತಿತರ ಅಂಗಗಳಿಗೆ ಹಾನಿಯಾಗುತ್ತದೆ.  ಕ್ಯಾನ್ಸರಿನಂತಹ ಮಾರಕ ಕಾಯಿಲೆಗಳಿಗೂ ದಾರಿಯಾಗುತ್ತದೆ. ತತ್ ಕ್ಷಣ ಕೆಟ್ಟ ಪರಿಣಾಮ ಗೊತ್ತಾಗಿ ಬಿಡುವುದಿಲ್ಲ. ನಿಧಾನಗತಿಯಲ್ಲಿ ತೊಂದರೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ ಎಂಬುದು ತಜ್ಞರ ಅಭಿಮತ ಎಂದು ಅವರು ತಿಳಿಸಿದರು.

2007: ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರವಾಲ್ ಅವರ ವಿರುದ್ಧ ಸತತವಾಗಿ ಬರೆದು ಪ್ರಕಟಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ ಆರೋಪದ ಮೇಲೆ `ಮಿಡ್ ಡೇ' ಪತ್ರಿಕೆಯ ಸಂಪಾದಕ, ಪ್ರಕಾಶಕ, ಸ್ಥಾನಿಕ ಸಂಪಾದಕ ಹಾಗೂ ವ್ಯಂಗ್ಯಚಿತ್ರಗಾರನನ್ನು ತಪ್ಪಿತಸ್ಥರೆಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತು. ಆರೋಪಿಗಳು ನ್ಯಾಯಾಂಗ ನಿಂದನೆ ಮಾಡಿರುವುದಕ್ಕೆ ಸಾಕಷ್ಟು ಪುರಾವೆಗಳಿದ್ದು ಸುಪ್ರೀಂಕೋರ್ಟ್ ನ್ಯಾಯಪೀಠ ವಿಧಿಸಿದ್ದ ಲಕ್ಷಣರೇಖೆಯನ್ನು ದಾಟಿ ಬರವಣೆಗೆಗಳನ್ನು ಪ್ರಕಟಿಸಿರುವುದಾಗಿ ನ್ಯಾಯಮೂರ್ತಿಗಳಾದ ಆರ್.ಎಸ್. ಸೋಧಿ ಮತ್ತು ಬಿ.ಎನ್. ಚತುರ್ವೇದಿ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟಿತು.

2007: ಟೆಹರಾನಿನಲ್ಲಿ ಈದಿನ ಮುಕ್ತಾಯಗೊಂಡ ಏಷ್ಯನ್ ಮಹಿಳಾ ಚೆಸ್ ಚಾಂಪಿಯನ್ ಶಿಪ್ನಲ್ಲಿ ಭಾರತದ ತಾನಿಯಾ ಸಚ್ ದೇವ್ ಪ್ರಶಸ್ತಿ ಗಳಿಸಿದರು. ಅವರು ಚೀನಾದ ಜು. ವೆಂಜನ್ ವಿರುದ್ಧ ಡ್ರಾ ಸಾಧಿಸಿ ಈ ಹಿರಿಮೆಯನ್ನು ತಮ್ಮದಾಗಿಸಿಕೊಂಡರು.

2007: ಭಾರತೀಯ ವಾಯುಪಡೆಯ `ಕಿರಣ್' ತರಬೇತಿ ವಿಮಾನ ಬೆಳಗಿನ ಜಾವ ಹೈದರಾಬಾದ್ ನಗರದ ಹೊರವಲಯದಲ್ಲಿ ಹಕೀಂಪೇಟೆ ವಾಯುಪಡೆ ಅಕಾಡೆಮಿಯಿಂದ 10 ಕಿ.ಮೀ. ದೂರದ ಬಯಲಿನಲ್ಲಿ ನೆಲಕ್ಕಪ್ಪಳಿಸಿದ ಪರಿಣಾಮ ಪೈಲಟ್ ಜಗತ್ (33) ಹಾಗೂ ಯು.ಸಿ.ಪತಿ (26) ಎಂಬ ಇಬ್ಬರು ಪೈಲಟ್ ಗಳು ಸಾವಿಗೀಡಾದರು. ಎಂದಿನ ತರಬೇತಿಯಲ್ಲಿದ್ದಾಗ ಈ ದುರಂತ ಸಂಭವಿಸಿತು.

2007: ಜೋಹಾನ್ಸ್ ಬರ್ಗಿನಲ್ಲಿ ನಡೆದ ನಾಲ್ಕನೇ ಐಸಿಸಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಭಾರತೀಯ ಮಹಿಳಾ ಕ್ರಿಕೆಟ್ ಕ್ರೀಡಾಪಟು ಜುಲನ್ ಗೋಸ್ವಾಮಿ ಅವರು ವರ್ಷದ ಮಹಿಳಾ ಕ್ರಿಕೆಟ್ ಕ್ರೀಡಾಪಟು ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತದ ಹಿರಿಮೆಯನ್ನು ಎತ್ತಿ ಹಿಡಿದರು. ಐಸಿಸಿ ಪ್ರಶಸ್ತಿಗಳು ಕ್ರಿಕೆಟ್ ಕ್ಷೇತ್ರದ ಆಸ್ಕರ್ ಪ್ರಶಸ್ತಿ ಎಂದೇ ಪರಿಗಣಿತವಾಗಿವೆ. ಆಸ್ಟ್ರೇಲಿಯಾದ ಕ್ಯಾಪ್ಟನ್ ರಿಕಿ ಪಾಂಟಿಂಗ್ ಸತತ ಎರಡನೇ ಬಾರಿಗೆ ವರ್ಷದ ಕ್ರಿಕೆಟ್ ಕ್ರೀಡಾಪಟು ಪ್ರಶಸ್ತಿಯನ್ನು ಗೆದ್ದುಕೊಂಡರು. ವರ್ಷದ ಕ್ಯಾಪ್ಟನ್ ಎಂಬ ಹೆಗ್ಗಳಿಕೆಯೂ ಅವರಿಗೆ ಲಭಿಸಿತು. ಇಂಗ್ಲೆಂಡಿನಲ್ಲಿ ಕಳೆದ ವರ್ಷ ನಡೆದ ಮಹಿಳಾ ಕ್ರಿಕೆಟ್ ಟೆಸ್ಟಿನಲ್ಲಿ ಮೊದಲ ಬಾರಿಗೆ ಭಾರತ ಇಂಗ್ಲೆಂಡನ್ನು ಸೋಲಿಸಿದಾಗ ಜುಲನ್ ಗೋಸ್ವಾಮಿ ಅವರು 10 ವಿಕೆಟ್ಟುಗಳನ್ನು ಬಗಲಿಗೆ ಹಾಕಿಕೊಂಡು ಅಪೂರ್ವ ಸಾಧನೆ ಮೆರೆದಿದ್ದರು.

2006: ಟಿಚ್ಯೋನ್ ಎಂಬ ಸಂಸ್ಥೆ ಅಭಿವೃದ್ಧಿ ಪಡಿಸಿದ ಸುಧಾರಿತ, ಅತ್ಯಂತ ಸರಳವಾದ ಲಿಪ್ಯಂತರ ತಂತ್ರಾಂಶ `ಕ್ವಿಲ್ ಪ್ಯಾಡ್' ನ್ನು ಕೇಂದ್ರ ಯೋಜನಾ ಖಾತೆ ಸಚಿವ ಎಂ.ವಿ. ರಾಜಶೇಖರನ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಕ್ವಿಲ್ ಪ್ಯಾಡ್ `ಸ್ವಂತ ಬುದ್ಧಿ' ಇರುವ ತಂತ್ರಾಂಶ. ಇಂಗ್ಲಿಷ್ ಲಿಪಿಯಲ್ಲಿ ಕನ್ನಡವನ್ನು ಬರೆಯಲು ತಡಕಾಡಬೇಕಿಲ್ಲ. ಇಂಗ್ಲಿಷ್ ಅಕ್ಷರಗಳನ್ನು ಪೋಣಿಸಿದ ಕೂಡಲೇ ಕನ್ನಡದಲ್ಲಿನ ಅದಕ್ಕೆ ಅರ್ಥ ಬರುವ ಪದವನ್ನು ಹುಡುಕಿ ಮುದ್ರಿಸುತ್ತದೆ ಈ ತಂತ್ರಜ್ಞಾನ. ಹಿಂದಿ, ತಮಿಳು, ತೆಲಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಈ ಬಗೆಯ ತಂತ್ರಜ್ಞಾನ ರೂಪಿಸಲಾಗಿದೆ. ಕನ್ನಡದಲ್ಲಿ ಇದೇ ಮೊದಲಿಗೆ ಬಿಡುಗಡೆಯಾಯಿತು. ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಕುಳಿತ ಗೆಳೆಯನ ಜೊತೆ ಈ ತಂತ್ರಾಂಶ ಬಳಸಿ ಶುದ್ಧ ಕನ್ನಡದಲ್ಲೇ `ಹರಟೆ' (ಚಾಟ್) ಹೊಡೆಯಬಹುದು ಎನ್ನತ್ತಾರೆ ಕ್ವಿಲ್ಪ್ಯಾಡ್ ರೂವಾರಿಗಳಲ್ಲಿ ಒಬ್ಬರಾದ ಕನ್ನಡಿಗ ರಾಮ್ ಪ್ರಕಾಶ್. http://quillpad.in/kannada ಅಂತರ್ಜಾಲದಲ್ಲಿ ಕ್ವಿಲ್ ಪ್ಯಾಡ್ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ ಎಂದರವರು. (ಫೋನ್: 080-41311932).

2006: ಸ್ವಿಜರ್ಲೆಂಡಿನ ಅಗ್ರ ಶ್ರೇಯಾಂಕಿತ ರೋಜರ್ ಫೆಡರರ್ ಅವರು ನ್ಯೂಯಾರ್ಕಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಓಪನ್ ಟೆನಿಸ್ ಟೂರ್ನಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಸತತ ಮೂರನೇ ಬಾರಿಗೆ ಗೆದ್ದುಕೊಂಡರು. ಆಂಡಿ ರಾಡಿಕ್ ಅವರನ್ನು ಫೆಡರರ್ 6-2, 6-7, 61ರ ಅಂತರದಲ್ಲಿ ಮಣಿಸಿದರು.

2006: ಕಳೆದ ಮಾರ್ಚ್ 31ರಂದು ಕೊನೆಗೊಂಡ 2005-06ನೇ ಹಣಕಾಸು ವರ್ಷದಲ್ಲಿ (ಮಾರ್ಚ್ 31ರ ವೇಳೆಗೆ) ಭಾರತದ ವಿದೇಶೀ ಸಾಲ 125.2 ಶತಕೋಟಿ ಡಾಲರುಗಳಷ್ಟಾಗಿತ್ತು ಎಂದು ಸರ್ಕಾರ ಅಧಿಕೃತವಾಗಿ ಪ್ರಕಟಿಸಿತು. 2004-05ರ ಹಣಕಾಸು ವರ್ಷದ ಅಂತ್ಯಕ್ಕೆ ಸಾಲದ ಮೊತ್ತ 123.2 ಶತಕೋಟಿ ಡಾಲರುಗಳಾಗಿದ್ದವು. ಒಂದು ವರ್ಷದಲ್ಲಿ ಹೆಚ್ಚಿದ ವಿದೇಶೀ ಸಾಲದ ಮೊತ್ತ 2 ಶತಕೋಟಿ ಡಾಲರುಗಳು.

2006: ಸುಮಾರು 100 ವರ್ಷಗಳ ಇತಿಹಾಸ ಹೊಂದಿದ್ದ ಬೆಂಗಳೂರು ಜನರಲ್ ಕಾರಿಯಪ್ಪ ರಸ್ತೆಯ (ರೆಸಿಡೆನ್ಸಿ ರಸ್ತೆ) `ಕ್ಯಾಷ್ ಫಾರ್ಮೆಸಿ' ಕಟ್ಟಡ (1908-2006) ಇತಿಹಾಸದ ಪುಟಗಳನ್ನು ಸೇರಿತು. 12 ವರ್ಷಗಳ ವಿವಾದ ಬಗೆಹರಿದ ಹಿನ್ನೆಲೆಯಲ್ಲಿ ಕಟ್ಟಡವನ್ನು ಈದಿನ ಕೆಡವಲಾಯಿತು. ಈ ಜಾಗದಲ್ಲಿ ಪ್ರೆಸ್ಟೀಜ್ ಸಮೂಹದ ಸಂಸ್ಥೆ ಮೂರು ಮಹಡಿಗಳ ಕಟ್ಟಡ ನಿರ್ಮಿಸಲಿದ್ದು ಅದರ ತಳಮಹಡಿಯಲ್ಲಿ `ಹೊಸ ಕ್ಯಾಷ್ ಫಾರ್ಮೆಸಿ' ತಲೆ ಎತ್ತುವುದು.

2006: ತಮಿಳು ಚಿತ್ರರಂಗದ ಯಶಸ್ವಿ ಜೋಡಿ ಸೂರ್ಯ ಮತ್ತು ಜ್ಯೋತಿಕಾ ಈದಿನ ಚೆನ್ನೈಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸತಿ ಪತಿಗಳಾದರು. ಸೂರ್ಯ ಅವರು ಖ್ಯಾತ ತಮಿಳು ನಟ ಶಿವಕುಮಾರ್ ಪುತ್ರ. ಜ್ಯೋತಿಕಾ ಅವರು ನಟಿ ನಗ್ಮಾ ಅವರ ಸಹೋದರಿ. ಇವರಿಬ್ಬರೂ ಚಿತ್ರರಂಗದಲ್ಲಿ ಭಾರಿ ಬೇಡಿಕೆಯಲ್ಲಿ ಇರುವ ಕಲಾವಿದರು. ಉಪೇಂದ್ರ ಅಭಿನಯದ `ನಾಗರಹಾವು' ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲೂ ಜ್ಯೋತಿಕಾ ನಟಿಸಿದ್ದಾರೆ.

2006: ಖ್ಯಾತ ಉರ್ದು ಕವಿ ಸಯೀದ್ ಖಾನ್ (83) ಅವರ ದೀರ್ಘ ಕಾಲದ ಅಸ್ವಸ್ಥತೆಯ ಬಳಿಕ  ಭೋಪಾಲಿನಲ್ಲಿ ನಿಧನರಾದರು. ಮಧ್ಯ ಪ್ರದೇಶ ಸರ್ಕಾರದ `ಇಕ್ಬಾಲ್ ಪ್ರಶಸ್ತಿ', ಮಧ್ಯಪ್ರದೇಶ ಉರ್ದು ಅಕಾಡೆಮಿಯ `ಮೀರ್ ಟಾಕಿ ಮೀರ್' ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದರು.

2006:  ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗುಜರಾತಿ ಸಾಹಿತಿ ಪ್ರೊಫೆಸರ್ ರಮಣಲಾಲ್ ಜೋಷಿ ಅವರು ಅಹಮದಾಬಾದಿನಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಗುಜರಾತ್ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಗುಜರಾತ್ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ರಮಣಲಾಲ್ ಜೋಷಿ ಅವರು ಗುಜರಾತಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಂದಾಗಿ ಅಪಾರ ಜನಮನ್ನಣೆ ಗಳಿಸಿದವರು. ಮೆಹ್ಸಾನಾ ಜಿಲ್ಲೆಯ ವಿಜಾಪುರ ತಾಲ್ಲೂಕಿನ ಹೀರ್ ಪುರ ಗ್ರಾಮದಲ್ಲಿ 1926ರ ಮೇ ತಿಂಗಳಲ್ಲಿ ಜನಿಸಿದ ಜೋಷಿ ಅವರು ಖ್ಯಾತ ಸಾಹಿತಿ ಉಮಾಶಂಕರ ಜೋಷಿಯಂತಹವರ ಮಾರ್ಗದರ್ಶನ ಪಡೆದಿದ್ದರು.

2001: ಜಗತ್ತಿನ ಇತಿಹಾಸದಲ್ಲೇ ಅತಿ ಭೀಕರ ಭಯೋತ್ಪಾದಕ ದಾಳಿ ನಡೆದ ದಿನ ಇದು. ಎರಡು ಅಪಹೃತ ಅಮೆರಿಕನ್ ವಿಮಾನಗಳನ್ನು ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರಿನ ಅವಳಿ ಗೋಪುರಗಳಿಗೆ ಡಿಕ್ಕಿ ಹೊಡೆಸಲಾಯಿತು. ಇದೇ ವೇಳೆಗೆ ಇನ್ನೊಂದು ಅಪಹೃತ ವಿಮಾನವನ್ನು ವಾಷಿಂಗ್ಟನ್ನಿನಲ್ಲಿ ಪೆಂಟಗಾನ್ ಗೆ ಡಿಕ್ಕಿ ಹೊಡೆಸಲಾಯಿತು. ರಾಜಧಾನಿ ಮತ್ತು ಶ್ವೇತಭವನದಿಂದ ಜನರನ್ನು ತೆರವುಗೊಳಿಸಲಾಯಿತು. ಸುಮಾರು 3000ಕ್ಕೂ ಹೆಚ್ಚು ಜನ ಹತರಾದರು. ಅಧ್ಯಕ್ಷ ಬುಷ್ ಅವರು ಈ ಕೃತ್ಯವನ್ನು `ಅಮೆರಿಕ ವಿರುದ್ಧ ಸಮರ' ಎಂದು ಬಣ್ಣಿಸಿದರು. ಆಫ್ಘಾನಿಸ್ಥಾನದಲ್ಲಿ ನೆಲೆ ಹೊಂದಿದ್ದ ಮುಲ್ಲಾ ಒಮರ್ ಮತ್ತು ಒಸಾಮಾ ಬಿನ್ ಲಾಡೆನ್ ನೇತೃತ್ವದ `ಅಲ್ ಖೈದಾ' ಭಯೋತ್ಪಾದಕ ಸಂಘಟನೆ ಈ ದಾಳಿಗಳನ್ನು ಯೋಜಿಸಿತ್ತು.

1998: ಅಧ್ಯಕ್ಷ ಕ್ಲಿಂಟನ್ ಮೇಲಿನ ಲೈಂಗಿಕ ದುರ್ವರ್ತನೆ, ನ್ಯಾಯಾಧೀಶರ ವಿರುದ್ಧ ಮಾಡಲಾದ ಆಪಾದನೆಗಳು ಹಾಗೂ ನ್ಯಾಯದಾನಕ್ಕೆ ಅಡ್ಡಿ ಕುರಿತ ಕೆನ್ನೆತ್ ಸ್ಟಾರ್ ಅವರ ವರದಿಯನ್ನು ಅಮೆರಿಕನ್ ಕಾಂಗ್ರೆಸ್ ಬಿಡುಗಡೆ ಮಾಡಿತು.

1973: ಚಿಲಿಯ ಅಧ್ಯಕ್ಷ ಸಾಲ್ವಡೋರ್ ಅಲ್ಲೆಂಡೆ ಅವರ ಸರ್ಕಾರವನ್ನು ಸೇನಾ ಕ್ರಾಂತಿ ಒಂದರಲ್ಲಿ ಕಿತ್ತೆಸೆಯಲಾಯಿತು. ಸಾಲ್ವಡೋರ್ ಅವರು ಸೇನಾ ದಾಳಿಯ ಸಂದರ್ಭದಲ್ಲಿ ಅಧ್ಯಕ್ಷೀಯ ಅರಮನೆಯಲ್ಲಿ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಆದರೆ 1990ರಲ್ಲಿ ಸಮಾಧಿಯೊಂದರಿಂದ ಅವರ ಕಳೇಬರವನ್ನು ಹೊರತೆಗೆದು  ಸ್ಯಾಂಟಿಯಾಗೋದಲ್ಲಿ ಅಧಿಕೃತವಾಗಿ ಸಮಾಧಿ ಮಾಡುವವರೆಗೆ ಆತ್ಮಹತ್ಯೆಯ ವಿಚಾರವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲಿಲ್ಲ.

1967: ಸಿಕ್ಕಿಂ- ಟಿಬೆಟ್ ಗಡಿಯಲ್ಲಿ ಚೀನಾ ಮತ್ತು ಭಾರತ ರಕ್ಷಣಾ ಪಡೆಗಳ ಭಾರಿ ಪ್ರಮಾಣದ ಗುಂಡಿನ ಘರ್ಷಣೆ.

1956: ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಮೃತಪಟ್ಟರೆ ಎಂಬ ಬಗ್ಗೆ ತನಿಖೆ ನಡೆಸಲು ರಚಿಸಲಾಗಿದ್ದ ನೇತಾಜಿ ತನಿಖಾ ಸಮಿತಿಯ ಅಭಿಪ್ರಾಯವನ್ನು ಲೋಕಸಭೆಯಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಪ್ರಕಟಿಸಿದರು. 1945ರ ಆಗಸ್ಟ್ 15ರಂದು ಫಾರ್ಮೋಸಾದಲ್ಲಿನ ತೈಹೋಕು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಮೃತರಾದದ್ದು ನಿಜ,  ಟೋಕಿಯೋದ ರೆಂಕೋಜಿ ದೇವಾಲಯದಲ್ಲಿ ಇರಿಸಲಾಗಿರುವ ಚಿತಾಭಸ್ಮ ನೇತಾಜಿ ಅವರದ್ದೇ ಎಂದು ನೇತಾಜಿ ಸುಭಾಶ್ ಚಂದ್ರ ಬೋಸ್ ತನಿಖಾ ಸಮಿತಿ ನಿರ್ಧಾರಕ್ಕೆ ಬಂದಿದೆ. ಸಮಿತಿಯು ಸಂಗ್ರಹಿಸಿರುವ ಸಾಕ್ಷ್ಯಾಧಾರಗಳ ಹಿನ್ನೆಲಯಲ್ಲಿ ಈ ತೀರ್ಮಾನವನ್ನು ಅಂಗೀಕರಿಸಬೇಕು ಎಂಬುದು ಸರ್ಕಾರದ ಭಾವನೆ ಎಂದು ನೆಹರೂ ಹೇಳಿದರು.

1948: ಹೈದರಾಬಾದ್ ರಾಜ್ಯಕ್ಕೆ ಭಾರತ ಸರ್ಕಾರದ ಪಡೆಗಳ ಪ್ರವೇಶ.

1948: ಪಾಕಿಸ್ಥಾನದ ಮೊದಲ ಗವರ್ನರ್ ಜನರಲ್ ಮಹಮ್ಮದ್ ಆಲಿ ಜಿನ್ನಾ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾದರು. ಭಾರತದ ವಿಭಜನೆಗೆ ಇವರೇ ಕಾರಣರೆಂದು ವ್ಯಾಪಕವಾಗಿ ನಂಬಲಾಗಿದೆ.

1913: ಖ್ಯಾತ ಸಾಹಿತಿ ಗೌರೀಶ ಕಾಯ್ಕಿಣಿ ಜನನ.

1906: ದಕ್ಷಿಣ ಆಫ್ರಿಕದಲ್ಲಿನ ವರ್ಣಭೇದ ನೀತಿ ವಿರೋಧಿಸಿ ಜೋಹಾನ್ಸ್ ಬರ್ಗಿನ ಎಂಪೈರ್ ಥಿಯೇಟರ್ ಮುಂದೆ 3000 ಭಾರತೀಯರನ್ನು ಸೇರಿಸಿಕೊಂಡು ಗಾಂಧೀಜಿ ಅವರು `ಸತ್ಯಾಗ್ರಹ' ಎಂಬ ಹೊಸ ಬಗೆಯ ಪ್ರತಿಭಟನೆ ಆರಂಭಿಸಿದರು. ಗಾಂಧೀಜಿ ಮೊದಲಿಗೆ ಈ ಹೋರಾಟವನ್ನು `ಪರೋಕ್ಷ ಪ್ರತಿರೋಧ' (ಪ್ಯಾಸೀವ್ ರೆಸಿಸ್ಟೆನ್ಸ್) ಎಂದು ಕರೆಯುತ್ತಿದ್ದರು. ಆದರೆ ಪ್ಯಾಸೀವ್ ರೆಸಿಸ್ಟೆನ್ಸಿನಲ್ಲಿ ಪ್ರತಿಭಟಿಸುವವರು ದುರ್ಬಲರೆಂಬ ಸೂಚನೆ ಇತ್ತು, ಜೊತೆಗೆ ಅದು ಹಿಂಸೆಗೂ ತಿರುಗಲೂ ಅವಕಾಶವಿತ್ತು. ಇದನ್ನು ನಿವಾರಿಸಲು ಈ ಹೋರಾಟಕ್ಕೆ ಹೊಸ ಹೆಸರು ಇಡಲು ಅಪೇಕ್ಷಿಸಿದ ಗಾಂಧೀಜಿ ಹೆಸರು ಸೂಚಿಸಿದವರಿಗೆ ಬಹುಮಾನ ಕೊಡುವ ಸ್ಪರ್ಧೆ ಇಟ್ಟರು. ಆಗ ಹೊರಹೊಮ್ಮಿದ ಹೆಸರೇ 'ಸತ್ಯಾಗ್ರಹ'. ಮಗನ್ ಲಾಲ್ ಗಾಂಧಿ ಎಂಬ ವ್ಯಕ್ತಿಗೆ ಈ ಬಹುಮಾನ ಲಭಿಸಿತು. ಮಗನ್ ಲಾಲ್ ಸೂಚಿಸಿದ `ಸದಾಗ್ರಹ' ಪದವನ್ನು ಗಾಂಧೀಜಿ `ಸತ್ಯಾಗ್ರಹ' ಎಂದು ಬದಲಿಸಿಕೊಂಡರು. `ಸತ್ಯವು ಪ್ರೀತಿಯನ್ನೂ ಆಗ್ರಹವು ಬಲವನ್ನೂ ಸೂಚಿಸುತ್ತದೆ. ಒಟ್ಟಾರೆಯಾಗಿ ಸತ್ಯಾಗ್ರಹ ಎಂದರೆ ಅಹಿಂಸೆ ಹಾಗೂ ಸತ್ಯದಿಂದ ಹುಟ್ಟಿದ ಪ್ರೀತಿಯ ಮೂಲಕ ನಡೆಸುವ ಹೋರಾಟ. ಉಪವಾಸ ಈ ಹೋರಾಟದ ಮುಖ್ಯ ಅಂಗ ಎಂದು ಗಾಂಧೀಜಿ ಬಣ್ಣಿಸಿದರು.

1893: ಶಿಕಾಗೋದ ಧಾರ್ಮಿಕ ಸಂಸತ್ತಿನಲ್ಲಿ ಸ್ವಾಮೀ ವಿವೇಕಾನಂದರು ತಮ್ಮ ಪ್ರಥಮ ಭಾಷಣವನ್ನು ಮಾಡಿದರು. 'ಸಹೋದರ ಸಹೋದರಿಯರೇ' ಎಂಬ ಶಬ್ಧಗಳೊಂದಿಗೆ ಅವರು ಆರಂಭಿಸಿದ ಈ ಭಾಷಣ ಇಡೀ ಪ್ರಪಂಚದ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸಿತು. ಅವರ ಈ ಭಾಷಣದಿಂದ ಹಿಂದೂ ಧರ್ಮದ ಮಹತ್ವ ಮತ್ತೊಮ್ಮೆ ವಿಶ್ವ ವ್ಯಾಪಕತೆ ಪಡೆದುಕೊಂಡಿತು.

1877: ಸಾಹಿತಿ ತೋನ್ಸೆ ಮಂಗೇಶರಾಯರ ಜನ್ಮದಿನ.

1862: ಸಂಸ್ಕೃತ, ತಮಿಳು, ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದ ಹಳೆಗನ್ನಡ ವಿದ್ವಾಂಸ ಎಸ್. ಜಿ. ನರಸಿಂಹಾಚಾರ್
(11-9-1862ರಿಂದ 22-12-1907) ಅವರು ಅಳಸಿಂಗಾಚಾರ್ಯರು- ಸೀತಮ್ಮ ದಂಪತಿಯ ಮಗನಾಗಿ ಶ್ರೀರಂಗಪಟ್ಟಣದಲ್ಲಿ ಜನಿಸಿದರು. ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನದ ಪ್ರಥಮಾಧ್ಯಕ್ಷರಾಗಿದ್ದ ಅವರು ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ ಇತ್ಯಾದಿ ಗ್ರಂಥಗಳಲ್ಲದೆ ಶಾಲಾ ಪಠ್ಯಗಳಾದ ಷಟ್ಪದಿ ಕಾವ್ಯಗಳು, ಘೋಷಿತ ಪ್ರಿಯ, ಸಮಾಗಮಂ, ಗೋಲ್ಡ್ ಸ್ಮಿತ್ ನ `ದಿ ಹರ್ಮಿಟ್', 9 ವೀರಪುಂಗವರ ವೃತ್ತಾಂತ ಇತ್ಯಾದಿಗಳನ್ನು ರಚಿಸಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment