ಇಂದಿನ ಇತಿಹಾಸ History Today ಸೆಪ್ಟೆಂಬರ್ 03
2018: ನವದೆಹಲಿ: ಭಾರತದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳ ಸುಸ್ತಿಸಾಲ ಶೇಕಡಾ ೧೦೦ರಷ್ಟು ಹೆಚ್ಚಿರುವುದು ಮತ್ತು ವರ್ಷದಿಂದ ವರ್ಷಕ್ಕೆ ಅನುತ್ಪಾದಕ ಆಸ್ತಿ (ಮರು ವಸೂಲಿಯಾಗದ ಸಾಲ) ಹೆಚ್ಚುತ್ತಿರುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಕಾರಣ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಇಲ್ಲಿ ಟೀಕಿಸಿದರು. ರಘುರಾಮ್ ರಾಜನ್ ಅವರ ನೀತಿಗಳಿಂದಾಗಿ ಬ್ಯಾಂಕುಗಳಿಂದ ಉದ್ಯಮಗಳಿಗೆ ಸಾಲ ಲಬಿಸುವುದು ಸ್ಥಗಿತಗೊಂಡಿತು ಎಂದು ಅವರು ನುಡಿದರು. ಬೆಳವಣಿಗೆ ಕುಸಿತದ ಪ್ರವೃತ್ತಿ ಮುಂದುವರೆದಿದೆ ಮತ್ತು ಬ್ಯಾಂಕಿಂಗ್ ರಂಗದಲ್ಲಿ ಅನುತ್ಪಾದಕ ಆಸ್ತಿ (ಮರುವಸೂಲಿಯಾಗದ ಸಾಲ) ಹೆಚ್ಚುತ್ತಿರುವ ಕಾರಣ ಬೆಳವಣಿಗೆ ಕುಸಿತದ ಪ್ರಮಾಣ ಹೆಚ್ಚುತ್ತಿದೆ ಎಂದು ರಾಜೀವ್ ಕುಮಾರ್ ಹೇಳಿದರು. ‘ಈ ಸರ್ಕಾರ ಅಧಿಕಾರಕ್ಕೆ ಬಂದಾಗ ಮರುವಸೂಲಿಯಾಗದ ಸಾಲದ ಪ್ರಮಾಣ ೪ ಲಕ್ಷ ಕೋಟಿ ರೂಪಾಯಿಯಾಗಿತ್ತು.
೨೦೧೭ರ ಮಧ್ಯಾವಧಿಯ ವೇಳೆಗೆ ಅದು ೧೦.೫ ಕೋಟಿ ರೂಪಾಯಿಗಳಿಗೆ ಏರಿತು. ಮಾಜಿ ಆರ್ ಬಿಐ ಗವರ್ನರ್ ರಾಜನ್ ಅವರು ಒತ್ತಡಕ್ಕೆ ಒಳಗಾದ ಮತ್ತು ಅನುತ್ಪಾದಕ ಆಸ್ತಿಗಳನ್ನು ಗುರುತಿಸಲು ವ್ಯವಸ್ಥೆಗಳನ್ನು
ಗುರುತಿಸಿದ್ದು ಇದಕ್ಕೆ ಕಾರಣ. ಪರಿಣಾಮವಾಗಿ ಬ್ಯಾಂಕುಗಳು ಕೈಗಾರಿಕೆಗಳಿಗೆ ಸಾಲ ಕೊಡುವುದನ್ನು ನಿಲ್ಲಿಸಿದವು’ ಎಂದು ಕುಮಾರ್ ವಿಶ್ಲೇಷಿಸಿದರು.
ನೋಟು ಅಮಾನ್ಯೀಕರಣದ ಬಳಿಕ ಬೆಳವಣಿಗೆ ನಿಧಾನವಾದದ್ದು ಏಕೆ ಎಂಬ ಪ್ರಶ್ನೆಗೆ ಕುಮಾರ್ ಉತ್ತರಿಸುತ್ತಿದ್ದರು.
ಬೆಳವಣಿಗೆ ನಿಧಾನಗೊಂಡದ್ದಕ್ಕೆ
೫೦೦ ಮತ್ತು ೧೦೦೦ ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಿರ್ಧಾರ ಕಾರಣವಲ್ಲ. ರಘುರಾಮ್ ರಾಜನ್ ಅವರ ನೀತಿಗಳು ಇದಕ್ಕೆ ಕಾರಣ. ೨೦೧೫-೧೬ರ ಕೊನೆಯ ತ್ರೈಮಾಸಿಕದಿಂದಲೇ
ಭಾರತದ ಆರ್ಥಿಕತೆಯ ಇಳಿಮುಖ ಪ್ರವೃತ್ತಿ ಆರಂಭವಾಗಿತ್ತು. ಪ್ರಗತಿ ದರವು ನಂತರದ ಆರು ತ್ರೈಮಾಸಿಕಗಳಲ್ಲಿ
ನಿರಂತರವಾಗಿ ಕುಸಿಯುತ್ತಲೇ ಹೋಯಿತು ಎಂದು ಅವರು ನುಡಿದರು. ಬ್ಯಾಂಕಿಂಗ್ ರಂಗದ ಬಿಕ್ಕಟ್ಟನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಬಿಕ್ಕಟ್ಟಿನಿಂದ ಗುರುತಿಸಬಹುದು. ಭಾರತದ ಸಾಲ ನೀಡುವ ಅತಿದೊಡ್ಡದಾದ ಸರ್ಕಾರಿ ಸ್ವಾಮ್ಯದ ಎರಡನೇ ಸಂಸ್ಥೆಯಾಗಿರುವ ಈ ಬ್ಯಾಂಕ್ ೨೦೧೮-೧೯ರ ಮೊದಲ ತ್ರೈಮಾಸಿಕದಲ್ಲಿ
ತನ್ನ ಆರ್ಥಿಕ ಫಲಿತಾಂಶವನ್ನು ನೀಡಿದ್ದು, ಅದರ ಒಟ್ಟು ನಷ್ಟ ೯೪೦ ಕೋಟಿ ರೂಪಾಯಿಗಳು ಎಂದು ವರದಿ ತಿಳಿಸಿದೆ. ೨೦೧೮ರ ಜೂನ್ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ಸ್ಥಿರತೆ ವರದಿಯಲ್ಲಿ, ಸುಧಾರಿಸುವುದಕ್ಕೆ ಮುನ್ನವೇ ಪರಿಸ್ಥಿತಿ ಕುಲಗೆಡಬಹುದು ಎಂದು ಎಚ್ಚರಿಕೆ ನೀಡಿತು. ೨೦೧೮ರ ಮಾರ್ಚ್ ತಿಂಗಳಲ್ಲಿ ಎಲ್ಲ ವಾಣಿಜ್ಯ ಬ್ಯಾಂಕುಗಳ ಮರುವಸೂಲಿಯಾಗದ ಮುಂಗಡ ಸಾಲಗಳು ಶೇಕಡಾ ೧೧.೬ರಷ್ಟಿದ್ದವು. ಒಂದು ವರ್ಷದ ಅವಧಿಯಲ್ಲಿ ಮರುವಸೂಲಿಯಾಗದ ಸಾಲದ ಪ್ರಮಾಣ ಶೇಕಡಾ ೧೨.೨ರಷ್ಟಕ್ಕೆ ಏರಬಹುದು, ಅತ್ಯಂತ ನಿಕೃಷ್ಟ ಎಂದರೆ ಶೇಕಡಾ ೧೩.೩ಕ್ಕೆ ಏರಬಹುದು ಎಂದು ರಿಸರ್ವ್ ಬ್ಯಾಂಕ್ ಅಂದಾಜು ಮಾಡಿತ್ತು. ವಿಶೇಷವಾಗಿ, ಸಣ್ಣ ಪ್ರಮಾಣದ ವ್ಯವಹಾರದಲ್ಲಿ ಸಾಲ ಪ್ರಮಾಣ ಕುಸಿಯಿತು. ಈ ಎಲ್ಲ ವರ್ಷಗಳಲ್ಲಿ ಋಣಾತ್ಮಕ ಬೆಳವಣಿಗೆ ಸಂಭವಿಸಿತು. ದೊಡ್ಡ ಉದ್ಯಮಗಳ ಬೆಳವಣಿಗೆ ಕೂಡಾ ಶೇಕಡಾ ೧.೫ರಿಂದ ಶೇಕಡಾ ೨ರಷ್ಟಕ್ಕೆ ಕುಸಿಯಿತು. ಕೆಲವೆಡೆ ಇದು ಇನ್ನೂ ಋಣಾತ್ಮಕವಾಗಿತ್ತು.
ರಾಷ್ಟ್ರದ ಆರ್ಥಿಕ ಇತಿಹಾಸದಲ್ಲೇ ವಾಣಿಜ್ಯ ರಂಗದಲ್ಲಿನ ಅತ್ಯಂತ ಗರಿಷ್ಠ ಪ್ರಮಾಣದ ಕುಸಿತ ಇದಾಗಿತ್ತು. ಹಿಂದೆಂದೂ ಈ ರೀತಿ ವರ್ಷದಿಂದ ವರ್ಷಕ್ಕೆ ಸಾಲ ಪ್ರಮಾಣ ಈ ರೀತಿ ನಿರಂತರವಾಗಿ ಕುಸಿದಿರಲಿಲ್ಲ ಎಂದು ಕುಮಾರ್ ಹೇಳಿದರು. ಬೆಳವಣಿಗೆಯ ಕುಸಿತಕ್ಕೆ ಇದೇ ಪ್ರಾಥಮಿಕ ಕಾರಣ. ಹಾಲಿ ಸರ್ಕಾರವು ಸರ್ಕಾರಿ ಬಂಡವಾಳ ವೆಚ್ಚವನ್ನು ಇಳಿಸಲು ಇದೇ ಕಾರಣ ಎಂದೂ ಅವರು ನುಡಿದರು.ಹಾಲಿ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಹೂಡಿಕೆ ಶೇಕಡಾ ೧೦ರಷ್ಟು ಹೆಚ್ಚಿದೆ. ಇದು ಹಿಂದಿನ ವಿತ್ತ ವರ್ಷದ ಕೊನೆಯ ತ್ರೈಮಾಸಿಕದ ಶೇಕಡಾ
೧೪.೪ಕ್ಕಿಂತ ಕಡಿಮೆಯೇ. ಆದರೂ ಈ ಹೂಡಿಕೆ ಹೆಚ್ಚಳದ ಪರಿಣಾಮವಾಗಿ ಮೊದಲ ತ್ರೈಮಾಸಿಕದಲ್ಲಿ ಕೇಂದ್ರ
ಸರ್ಕಾರದ ಬಂಡವಾಳ ವೆಚ್ಚ ಶೇಕಡಾ ೨೭.೪ರಷ್ಟು ಹೆಚ್ಚಲು ಸಾಧ್ಯವಾಯಿತು ಎಂದು ಅವರು ಹೇಳಿದರು.
2018: ನವದೆಹಲಿ: ಅಮೆರಿಕ ದಿಗ್ಬಂಧನದ ಪರಿಣಾಮವಾಗಿ ತೈಲ ಆಮದು ಸ್ಥಗಿತಗೊಳಿಸಿದ್ದ ಉನ್ನತ ಹಿಪ್ಪರ್ ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಸ್ ಸಿಐ) ಸೇರಿದಂತೆ ಇತರ ತೈಲ ವಾಣಿಜ್ಯೋದ್ಯಮಗಳಿಗೆ ಇರಾಕಿನಿಂದ ತೈಲ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. ಅಮೆರಿಕದ ದಿಗ್ಬಂಧನವನ್ನು ಉಲ್ಲಂಘಿಸುವ ವಿಚಾರದಲ್ಲಿ ಭಾರತ ಕೂಡಾ ಚೀನಾದ ಹಾದಿಯನ್ನೇ ಅನುಸರಿಸಿತು. ಮತ್ತೆ ಖರೀದಿದಾರರು ತಮ್ಮ ಎಲ್ಲ ಇರಾನಿನಿಂದ ತೈಲ ಆಮದುಗಳನ್ನು ಇರಾನ್ ರಾಷ್ಟ್ರೀಯ ಟ್ಯಾಂಕರ್ ಕಂಪೆನಿ ಮಾಲೀಕತ್ವದ ಹಡಗುಗಳಿಗೆ ವಹಿಸಿತು. ಟೆಹರಾನಿನ ಪೆಟ್ರೋಲಿಯಂ ರಂಗದ ವಿರುದ್ಧ ಅಮೆರಿಕ ದಿಗ್ಬಂಧನ ಹೇರುವ ಸಂದರ್ಭದಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ನವೆಂಬರ್ ನಿಂದ ತನ್ನ ಜಾಗತಿಕ ತೈಲ ಮಾರುಕಟ್ಟೆಯನ್ನು
ಪೂರ್ತಿಯಾಗಿ ಸ್ಥಗಿತಗೊಳಿಸಿರಲಿಲ್ಲ ಎಂಬುದು ಇರಾನಿನ ಕಚ್ಛಾತೈಲ ವ್ಯವಹಾರವನ್ನು ಈ ಎರಡು ರಾಷ್ಟ್ರಗಳು ಕುದುರಿಸಿದ್ದರಿಂದ
ಸ್ಪಷ್ಟವಾಯಿತು.
ಇರಾನ್ ಮತ್ತು
ಆರು ಜಾಗತಿಕ ಶಕ್ತಿಗಳೊಂದಿಗೆ ೨೦೧೫ರ ಅಣ್ವಸ್ತ್ರ ಒಪ್ಪಂದದಿಂದ ತಾನು ಹಿಂದೆ ಸರಿದ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಿದ್ದರು. ಇರಾನ್ ಜೊತೆಗೆ ವ್ಯವಹಾರ ನಡೆಸುವವರ ಜೊತೆಗೆ ಅಮೆರಿಕ ವ್ಯವಹರಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದರು. ಬಹುತೇಕ ವಿಮಾ ಸಂಸ್ಥೆಗಳು ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಸೇರಿದಂತೆ ತೈಲ ಸರಬರಾಜು ಕಂಪೆನಿಗಳಿಗೆ ವಿಮಾ ರಕ್ಷಣೆ ಸ್ಥಗಿತಗೊಳಿಸಿದ ಬಳಿಕ ಚೀನಾದಂತೆ ಭಾರತ ಕೂಡಾ ತೈಲ ಸರಬರಾಜಿಗೆ ಇರಾನ್ ರಾಷ್ಟ್ರೀಯ ಟ್ಯಾಂಕರ್ ಕಂಪೆನಿಯತ್ತ ಮುಖ ಮಾಡಿತು.
2018: ಭೋಪಾಲ್: ಮಧ್ಯಪ್ರದೇಶ ಐಟಿ ಸೆಲ್ನ್ನು ಪುನರ್ರಚಿಸಿದ ಬಳಿಕ ಮಧ್ಯ ಪ್ರದೇಶ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೋರುವವರು ಹೊಂದಿರಬೇಕಾದ ಅರ್ಹತೆಯ ಮಾನದಂಡವನ್ನು ಬದಲಾಯಿಸಿತು. ಕಾಂಗೆಸ್ ಟಿಕೆಟ್ ಕೋರುವವರು ಫೇಸ್ ಬುಕ್ ಪುಟಗಳಲ್ಲಿ ಕನಿಷ್ಠ ೧೫,೦೦೦ ಲೈಕ್ ಗಳನ್ನ ಹೊಂದಿರಬೇಕು ಮತ್ತು ಟ್ವಿಟ್ಟರಿನಲ್ಲಿ ಕನಿಷ್ಠ ೫೦೦೦ ಮಂದಿ ಬೆಂಬಲಿಗರನ್ನು (ಫಾಲೋವರ್ಸ್) ಹೊಂದಿರಬೇಕು ಎಂದು ಪಕ್ಷವು ಸೂಚಿಸಿತು. ಚುನಾವಣಾ ವರ್ಷದಲ್ಲಿ ಮಧ್ಯಪ್ರದೇಶದಲ್ಲಿನ ಪಕ್ಷದ ಐಟಿ ಸೆಲ್ ವಿರುದ್ಧ ಕಳಪೆ ಕಾರ್ಯ ನಿರ್ವಹಣೆಗಾಗಿ ರಾಜ್ಯ ಅಧ್ಯಕ್ಷ ಕಮಲ್ ನಾಥ್ ಅವರು ಕಟು ಟೀಕೆ ಮಾಡಿದ ಬೆನ್ನಲ್ಲೇ ಪಕ್ಷದಿಂದ ಈ ಆದೇಶ ಹೊರಬಿದ್ದಿತು. ಇದಕ್ಕೂ ಮುನ್ನ ಐಟಿ ಸೆಲ್ ಮುಖ್ಯಸ್ಥ ಧರ್ಮೇಂದ್ರ ವಾಜಪೇಯಿ ಅವರ ತಲೆದಂಡ ಪಡೆದ ಕಾಂಗ್ರೆಸ್, ವಾಜಪೇಯಿ ಸ್ಥಾನಕ್ಕೆ ಅಭಯ್ ತಿವಾರಿ ಅವರನ್ನು ನೇಮಕ ಮಾಡಿತ್ತು. ಅಭಯ್ ತಿವಾರಿ ಅವರು ಕಳೆದ ವರ್ಷ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಪಕ್ಷದ ಆನ್ ಲೈನ್ ಪ್ರಚಾರದ ನೇತೃತ್ವ ವಹಿಸಿದ್ದರು. ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೋರುವವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸಬೇಕು ಎಂದು ಪಕ್ಷವು ಐಟಿ ಸೆಲ್ ಮುಖ್ಯಸ್ಥನ ಬದಲಾವಣೆ ಮಾಡಿದ ಬಳಿಕ ನೂತನ ಆದೇಶ ನೀಡಿತು. ಚುನಾವಣಾ ಟಿಕೆಟ್ ಕೋರುವ ಪ್ರತಿಯೊಬ್ಬ ಅಭ್ಯರ್ಥಿಯೂ ಟ್ವಿಟ್ಟರ್ ಖಾತೆ ಹೊಂದಿರಬೇಕು, ಫೇಸ್ ಬುಕ್ನಲ್ಲಿ ತನ್ನ ಪುಟ ಹೊಂದಿರಬೇಕು ಮತ್ತು ತಮ್ಮ ಕ್ಷೇತ್ರಗಳ ಬೂತ್ ಮಟ್ಟದಲ್ಲಿ ವಾಟ್ಸಪ್ ಗೂಪ್ ಗಳಲ್ಲಿ ಉಪಸ್ಥಿತಿಯನ್ನು ಸಾಬೀತು
ಪಡಿಸಬೇಕು ಎಂದು ಪಕ್ಷದ ಆದೇಶ ತಿಳಿಸಿತು. ಇಷ್ಟೇ ಅಲ್ಲ, ಈ ಫೇಸ್ ಬುಕ್ ಪುಟಗಳು ಕನಿಷ್ಠ ೧೫,೦೦೦
ಲೈಕ್ ಗಳನ್ನು ಹೊಂದಿರಬೇಕು ಮತ್ತು ತಮ್ಮ ಟ್ವಿಟ್ಟರ್ ಪ್ರೊಫೈಲ್ ನಲ್ಲಿ ೫೦೦೦ ಮಂದಿ ಫಾಲೋವರ್ಸ್ (ಬೆಂಬಲಿಗರು)
ಇರಬೇಕು ಎಂದು ಆದೇಶ ಪತ್ರ ಹೇಳಿತು. ಇದರ ಜೊತೆಗೆ ಪಕ್ಷದ ಅಧಿಕೃತ ಫೇಸ್ ಬುಕ್ ಮತ್ತು ಟ್ವಿಟ್ಟರ್
ಖಾತೆಗಳಲ್ಲಿ ಬರುವ ಟ್ವೀಟ್‌ಗಳು ಮತ್ತು ಪೋಸ್ಟ್ ಗಳನ್ನು ಪ್ರತಿಯೊಬ್ಬ ಅಭ್ಯರ್ಥಿಯೂ ಕಡ್ಡಾಯವಾಗಿ
ಲೈಕ್ ಮತ್ತು ಶೇರ್ ಮಾಡಬೇಕು ಎಂದೂ ಪಕ್ಷದ ಆದೇಶ ಹೇಳಿತು. ಸೆಪ್ಟೆಂಬರ್ ೧೫ರ ಒಳಗಾಗಿ ತಮ್ಮ ಟ್ವಿಟ್ಟರ್
ಖಾತೆ ಮತ್ತು ಫೇಸ್ ಬುಕ್ ಪುಟದ ವಿವರಗಳನ್ನು ಸಲ್ಲಿಸುವಂತೆಯೂ ಪಕ್ಷದ ಪದಾಧಿಕಾರಿಗಳು ಮತ್ತು ಶಾಸಕಸ್ಥಾನದ ಆಕಾಂಕ್ಷಿಗಳಿಗೆ ಐಟಿ ಸೆಲ್ ನಿರ್ದೇಶನ ನೀಡಿತು.
ಕಾಂಗ್ರೆಸ್ ಪಕ್ಷದೊಳಗಿನ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಸಹಕಾರ ವ್ಯವಹಾರಗಳ ಸಚಿವ ವಿಶ್ವಾಸ್
ಸಾರಂಗ್ ಅವರು ’ಕಾಂಗ್ರೆಸ್ ಪಕ್ಷವು ಮಧ್ಯ ಪ್ರದೇಶದಲ್ಲಿ ತನ್ನ ನೆಲೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ’ ಎಂದು ಹೇಳಿದರು. ನೈಜ
ಜಗತ್ತಿನಲ್ಲಿ ಚುನಾವಣಾ ಹೋರಾಟಕ್ಕಾಗಿ ಪ್ರಧಾನಿ ಮೋದಿ ಅವರ ಪುಸ್ತಕದ ಪುಟವೊಂದನ್ನು ಕಾಂಗ್ರೆಸ್ ತೆಗೆದುಕೊಳ್ಳುತ್ತಿದೆಯೇ
ಎಂದು ಪ್ರಶ್ನಿಸಿದ ಸಾರಂಗ್, ’ವಿಷಯ ಇದಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಸಂಪೂರ್ಣ ಬೆಂಬಲವನ್ನು
ಕಳೆದುಕೊಂಡಿರುವುದು ಪಕ್ಷದ ಇಂತಹ ಆದೇಶಕ್ಕೆ ಕಾರಣ’ ಎಂದು ಹೇಳಿದರು. ಪಕ್ಷ
ಸದಸ್ಯರನ್ನು ಉತ್ತಮ ಸಮನ್ವಯಕ್ಕಾಗಿ ಒಂದೇ ನೆಲೆಗೆ ತರಲು ಈ ಕ್ರಮ ಕೈಗೊಳ್ಳಲಾಗಿದೆ . ಈ ಮೂಲಕ ಅಭ್ಯರ್ಥಿಗಳಿಗೆ
ಸ್ಥಳೀಯ ವಿಷಯಗಳ ಬಗ್ಗೆ ಗಮನ ಸೆಳೆಯಲು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಥಳೀಯ ವಿಷಯಗಳ ಬಗ್ಗೆ
ಹೋರಾಟಕ್ಕೆ ಅನುಕೂಲವಾಗುವಂತೆ ಮಾಡಲು ಪಕ್ಷವು ಬಯಸಿದೆ ಎಂದು ಅಭಯ್ ತಿವಾರಿ ನುಡಿದರು. ಗ್ರಾಮೀಣ ಪ್ರದೇಶಗಳ ಅಭ್ಯರ್ಥಿಗಳಿಗೆ ಈ ಕ್ರಮದಿಂದ
ತೊಂದರೆಯಾಗಬಹುದೇ ಎಂಬ ಪ್ರಶ್ನೆಗೆ, ಪ್ರತಿಯೊಬ್ಬರ ಬಳಿಯೂ ಆಂಡ್ರಾಯಿಡ್ ಮತ್ತು ಇಂಟರ್ ನೆಟ್ ಇರುವುದರಿಂದ
ಈ ದಿನಗಳಲ್ಲಿ ಸಂಪರ್ಕ ಸಾಧನೆ ದೊಡ್ಡ ವಿಷಯವೇ ಅಲ್ಲ ಎಂದು ತಿವಾರಿ ಹೇಳಿದರು.
2018: ನವದೆಹಲಿ: ವಿವಿಧ ರಾಜ್ಯಗಳಲ್ಲಿನ ಮಾವೋವಾದಿ ನಕ್ಸಲೀಯರಿಗೆ ಬೆಂಬಲ ನೀಡುತ್ತಿರುವವರ ವಿರುದ್ಧ ಇದೇ ಮೊದಲ ಬಾರಿಗೆ ವ್ಯಾಪಕ ಶಿಸ್ತುಕ್ರಮ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಛತ್ತೀಸ್ ಗಢ ಒಂದರಲ್ಲೇ ಕಳೆದ ಒಂದು ವರ್ಷದ ಅವಧಿಯಲ್ಲಿ ಇಂತಹ ೫೦೦ಕ್ಕೂ ಹೆಚ್ಚು ಬೆಂಬಲಿರನ್ನು ಭದ್ರತಾ ಪಡೆಗಳು ಬಂಧಿಸಿದವು. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ನಕ್ಸಲ್ ವಿರೋಧಿ ಕಾರ್ಯಾಚರಣೆ ದಳದ ರಾಷ್ಟ್ರೀಯ ಮುಖ್ಯಸ್ಥ, ಸಿ.ಆರ್.ಪಿಎಫ್ ಮಹಾನಿರ್ದೇಶಕ ಜನರಲ್ ಆರ್. ಆರ್. ಭಟ್ನಾಗರ್ ಅವರು ಇಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಪೊಲೀಸ್ ಪಡೆಗಳ ಸಮನ್ವಯದೊಂದಿಗೆ ಎಡಪಂಥೀಯ ಉಗ್ರವಾದಿಗಳು ತಮ್ಮ ಜಾಲ ವಿಸ್ತರಿಸದಂತೆ ನೋಡಿಕೊಳ್ಳುವ ಸಲುವಾಗಿ ಈ ಬೃಹತ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅವರು ನುಡಿದರು. ಕೇಂದ್ರೀಯ ಮೀಸಲು ಪೊಲೀಸ್ ಪಡೆಯು (ಸಿಆರ್ ಪಿಎಫ್) ವಿವಿಧ ರಾಜ್ಯಗಳಲ್ಲಿನ ಎಡಪಂಥೀಯ ಉಗ್ರವಾದವನ್ನು ನಿಭಾಯಿಸುವ ಸಲುವಾಗಿ ಸುಮಾರು ಒಂದು ಲಕ್ಷ ಮಂದಿ ಸಿಬ್ಬಂದಿಯನ್ನು ಶಸ್ತ್ರಾಸ್ತ್ರ ಸಹಿತವಾಗಿ ನಿಯೋಜಿಸಿದೆ ಎಂದು ಅವರು ಹೇಳಿದರು. ‘ನಾವು ಈಗ ಹಳ್ಳಿಗಳಿಗೆ ಹೋಗುತ್ತಿದ್ದೇವೆ ಮತ್ತು ಸಮಾಜದಲ್ಲಿನ ಅವರ (ಮಾವೋವಾದಿಗಳ) ಬೆಂಬಲಿಗರು ಮತ್ತು ’ಜನ ಮಿಲೀಷಿಯಾ’ದ ಕಾರ್ಯಕರ್ತರು ಹಾಗೂ ಅವರಿಗೆ ಬೌದ್ಧಿಕ ಮತ್ತು ಸ್ಥಳೀಯ ಬೆಂಬಲ ಒದಗಿಸುತ್ತಿರುವ ಇತರ ಜನರ ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸುತ್ತಿದ್ದೇವೆ’ ಎಂದು ಅವರು ನುಡಿದರು. ನಾವು ಸ್ಥಳೀಯ ಪೊಲೀಸರ ಜೊತೆಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಜನ ಮಿಲೀಷಿಯಾ ಜೊತೆಗೆ ಗುರುತಿಸಿಕೊಂಡಿರುವ ಅಥವಾ ಬೇರೆ ಪ್ರಕರಣಗಳಲ್ಲಿ ಬೇಕಾಗಿರುವ ವ್ಯಕ್ತಿಗಳನ್ನು ಅವರು (ಪೊಲೀಸರು) ಬಂಧಿಸುತ್ತಾರೆ. ಛತ್ತೀಸ್ ಗಢ ರಾಜ್ಯ ಒಂದರಲ್ಲಿಯೇ ನಮ್ಮ ಬೆಂಬಲದೊಂದಿಗೆ ೫೦೦ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಕಳೆದ ಒಂದು ವರ್ಷದಲ್ಲಿ ಬಂಧಿಸಿದ್ದಾರೆ. ಅವರ (ನಕ್ಸಲೀಯರ) ಒಟ್ಟಾರೆ ಬೆಂಬಲ ಕೂಡಾ ಈಗ ಇಳಿಮುಖವಾಗಿದೆ’ ಎಂದು ಮಹಾನಿರ್ದೇಶಕರು ಹೇಳಿದರು. ನಕ್ಸಲೀಯರಿಗೆ ಭದ್ರತಾ ಪಡೆಗಳ ಮೇಲಿನ ದಾಳಿಗಳಿಗೆ ಯೋಜನೆ ರೂಪಿಸುವುದು ಮತ್ತು ದಾಳಿ ಕಾರ್ಯಾಚರಣೆ ಅನುಷ್ಠಾನಕ್ಕೆ ನೆರವು ನೀಡಿದ ವ್ಯಕ್ತಿಗಳ ಮೇಲೆ ಹದ್ದುಗಣ್ಣು ಇಡಲಾಗಿದ್ದು, ಎಡಪಂಥೀಯ ಉಗ್ರವಾದಿಗಳ ಸವಾಲು ಮಟ್ಟ ಹಾಕುವ ನೂತನ ತಂತ್ರಕ್ಕೆ ಅನುಗುಣವಾಗಿ ಇಂತಹ ಬೆಂಬಲಿರನ್ನು ಪತ್ತೆ ಹಚ್ಚಿ ಬಂಧಿಸಲಾಗುತ್ತಿದೆ ಎಂದು ಅವರು ನುಡಿದರು. ಛತ್ತೀಸ್ ಗಢದಲ್ಲಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ತೆಲಂಗಾಣ ಗಡಿಗಳಲ್ಲಿ ಇರುವ ದಕ್ಷಿಣ ಬಸ್ತಾರಿನ ದಟ್ಟಾರಣ್ಯಗಳಲ್ಲಿ ನಕ್ಸಲೀಯರ ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ ಅರೆ ಸೇನಾ ಪಡೆಗಳು ತಮ್ಮ ಹೆಜ್ಜೆ ಗುರುತು ಮೂಡಿಸಿದ್ದು ಕನಿಷ್ಠ ೧೫ ಶಿಬಿರಗಳನ್ನು ನಿರ್ಮಿಸಿವೆ ಎಂದು ಅವರು ಹೇಳಿದರು. ಈ ವರ್ಷದ ಅಂಕಿ ಅಂಶಗಳನ್ನು ಗಮನಿಸಿದರೆ, ಕನಿಷ್ಠ ೧೬೦ ನಕ್ಸಲೀಯರು ವಿವಿಧ ರಾಜ್ಯಗಳಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳ ಪರಿಣಾಮವಾಗಿ ತಟಸ್ಥರಾಗಿದ್ದಾರೆ ಎಂದು ಅವರು ನುಡಿದರು. ಕಳೆದ ಕೆಲವು ವರ್ಷಗಳಲ್ಲಿ ನಕ್ಸಲೀಯರ ನಿಯಂತ್ರಣದಲ್ಲಿದ್ದ ಜಿಲ್ಲೆಗಳ ಸಂಖ್ಯೆ ಕುಗ್ಗಿದೆ. ನಕ್ಸಲೀಯ ಹಿಂಸಾಚಾರವೂ ಶೇಕಡಾ ೪೦ರಷ್ಟು ಇಳಿದಿದೆ ಎಂದು ಅಧಿಕಾರಿ ಹೇಳಿದರು. ಗಡಿ ಪ್ರದೇಶದ ಕೆಲವು ಪ್ರದೇಶಗಳನ್ನು ಬಿಟ್ಟು ಪಶ್ಚಿಮ ಬಂಗಾಳ ಬಹುತೇಕ ನಕ್ಸಲೀಯ ಹಾವಳಿಯಿಂದ ಮುಕ್ತವಾಗಿದೆ. ತೆಲಂಗಾಣದಲ್ಲಿ ಹೆಚ್ಚಿನ ಯಶಸ್ಸು ಲಭಿಸಿದೆ. ಇಲ್ಲಿ ಈಗ ನಕ್ಸಲ್ ಚಟುವಟಿಕೆ ಛತ್ತೀಸ್ ಗಢದ ಗಡಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದು ಅವರು ವಿವರಿಸಿದರು.
2018: ಲಂಡನ್: ಬ್ರಿಟನ್ ಭಾರತಕ್ಕೆ
ಸಾಂಪ್ರದಾಯಿಕ ನೆರವು ನೀಡುವುದನ್ನು ಕೆಲವು ವರ್ಷಗಳ ಹಿಂದೆಯೇ ಕೊನೆಗೊಳಿಸಿದೆ, ಆದರೆ ಕೆಲವು ರಾಜ್ಯಗಳಲ್ಲಿನ
ಯೋಜನೆಗಳಿಗೆ ಹಣ ಒದಗಿಸುವುದನ್ನು ಮುಂದುವರೆಸಿದೆ. ಇದು ಈಗ ಅಲ್ಲಿನ ಆಡಳಿತಾರೂಢ ಪಕ್ಷದ ಸಂಸತ್ ಸದಸ್ಯರನ್ನು
ರೊಚ್ಚಿಗೆಬ್ಬಿಸಿತು. ’ಭಾರತವು ಚಂದ್ರಯಾನ ಯೋಜನೆಗೆ
ಹಣಕಾಸು ನೀಡಲು ಶಕ್ತವಾಗಿರುವಾಗ, ಇಂಗ್ಲೆಂಡಿಗೆ ಅಗತ್ಯವಾಗಿ ಬೇಕಾಗಿರುವ ಹಣವನ್ನು ಅಲ್ಲಿಗೆ ಏಕೆ
ನೀಡಬೇಕು?’ ಎಂದು ಅವರು ಪ್ರಶ್ನಿಸಿದರು. ಇಂಗ್ಲೆಂಡಿನ ಡೈಲಿ ಎಕ್ಸ್‌ಪ್ರೆಸ್ ಮತ್ತು ಡೈಲಿ ಮೇಲ್ ಟ್ಯಾಬ್ಲಾಯಿಡ್
ಪತ್ರಿಕೆಗಳು ’ಭಾರತಕ್ಕೆ ೯೮ ಮಿಲಿಯನ್ (೯೮೦ ಲಕ್ಷ) ಪೌಂಡ್ ನೆರವು ನೀಡಿಕೆಗೆ ಕೋಪ’ ಮತ್ತು ’ನಾವು ಅವರ ಚಂದ್ರಯಾನಕ್ಕೆ ಹಣದ ನೆರವು
ನೀಡುತ್ತಿದ್ದೇವೆ’ ಶೀರ್ಷಿಕೆಗಳ ಅಡಿಯಲ್ಲಿ ಬ್ರಿಟನ್ ಶಾಸನಕರ್ತರ
ಆಕ್ರೋಶವನ್ನು ವರದಿ ಮಾಡಿದವು. ಅಂತಾರಾಷ್ಟ್ರೀಯ ಅಭಿವೃದ್ಧಿ ಇಲಾಖೆಯ (ಡಿಎಫ್ ಐಡಿ) ಪ್ರಕಾರ, ಪ್ರಸ್ತುತ
ಹಣಕಾಸು ವರ್ಷದ ಅದರ ಬಜೆಟಿನಲ್ಲಿ ೨೦೧೯-೨೦ರ ಸಾಲಿನಲ್ಲಿ ಭಾರತಕ್ಕೆ ನೀಡಲಾಗುವ ೫೨ ಮಿಲಿಯನ್ ಪೌಂಡ್
ಮತ್ತು ೪೬ ಮಿಲಿಯನ್ ಪೌಂಡ್ ನೆರವೂ ಸೇರಿದೆ. ಸಮೃದ್ಧಿ ಸಾಧನೆ, ಉದ್ಯೋಗ ಸೃಷ್ಟಿ, ಕೌಶಲಗಳ ಅಭಿವೃದ್ಧಿ
ಮತ್ತು ಉಭಯ ರಾಷ್ಟ್ರಗಳಿಗಾಗಿ ಹೊಸ ಮಾರುಕಟ್ಟೆ ಸೃಷ್ಟಿಗಾಗಿ ಈ ಹಣದ ನೆರವು ನೀಡಲಾಗುತ್ತದೆ. ಇದೀಗ
ಬ್ರಿಟನ್ ಟ್ಯಾಬ್ಲಾಯಿಡ್ ಗಳು ಭಾರತಕ್ಕೆ ನೆರವು ನೀಡುವ ಬಗ್ಗೆ ಅಲ್ಲಿನ ಸಂಸತ್ ಸದಸ್ಯರ ಕೋಪ-ತಾಪಗಳನ್ನು
ವರದಿ ಮಾಡಿದವು. ಭಾರತ ಸರ್ಕಾರವು ಚಂದ್ರಯಾನ -೨ ಕಾರ್ಯಕ್ರಮಕ್ಕೆ ೯೮ ಮಿಲಿಯನ್ ಪೌಂಡ್ ಹಣಕ್ಕೆ ಬ್ರಿಟನ್
ಒದಗಿಸುವ ನೆರವಿನ ಮೊತ್ತ ಸರಿಮವಾಗಿರುವುದನ್ನು ಗಮನಿಸಿ ಸಂಸದರು ಟೀಕೆಗಳ ಸುರಿಮಳೆ ಗೈದರು. ಇತ್ತೀಚಿನ ವರ್ಷಗಳಲ್ಲಿ ಭಾರತವು ದಾನಿ ರಾಷ್ಟ್ರವಾಗಿದ್ದು,
ದಾನ ಸ್ವೀಕರಿಸುವ ದೀನ ರಾಷ್ಟ್ರವಾಗಿಲ್ಲ ಎಂದೂ ಅವರು ಹೇಳಿದರು. ’ಭಾರತೀಯರಿಗೆ ನಮ್ಮ ಹಣದ
ಅಗತ್ಯ ಇಲ್ಲ. ವಾಸ್ತವವಾಗಿ ನಾವು ಅವರ ಚಂದ್ರಯಾನಕ್ಕೆ ನೆರವು ನೀಡುತ್ತಿದ್ದೇವೆ’ ಎಂದು ಕನ್ಸರ್ ವೇಟಿವ್ ಪಕ್ಷದ ಸಂಸತ್ ಸದಸ್ಯ ಡೇವಿಡ್ ಡೇವಿಸ್ ಹೇಳಿದರು. ಹಣದ ಕೊರತೆಯಿಂದಾಗಿ
ಆರೋಗ್ಯದಂತಹ ನಮ್ಮ ಸಾರ್ವಜನಿಕ ಸೇವೆಗಳು ತೊಂದರೆಗೆ ಒಳಗಾಗಿವೆ ಎಂದು ಅವರು ಟೀಕಿಸಿದರು ‘ಡಿಎಫ್ ಐಡಿ ೨೦೧೫ರಲ್ಲೇ ಭಾರತಕ್ಕೆ ನೀಡುವ ತನ್ನ ಸಾಂಪ್ರದಾಯಿಕ
ನೆರವನ್ನು ನಿಲ್ಲಿಸಿದೆ. ಇಂಗ್ಲೆಂಡ್ ಈಗ ಸಮೃದ್ಧಿ, ಉದ್ಯೋಗ ಸೃಷ್ಟಿ, ಮಾರುಕಟ್ಟೆ ಸೃಷ್ಟಿ ಇತ್ಯಾದಿಗಾಗಿ
ಮಾತ್ರ ನೆರವು ನೀಡುತ್ತಿದೆ’ ಎಂದು ಡಿಎಫ್ ಐಡಿ ವಕ್ತಾರರು
ಹೇಳಿದರು. ‘ಇಲ್ಲಿ ನಮಗೆ ಹಣ ವಾಪಸ್ ಬರುತ್ತದೆ. ಬ್ರಿಟಿಷ್
ತೆರಿಗೆದಾತರ ನಯಾಪೈಸೆ ಹಣ ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಹೋಗಿಲ್ಲ. ಆದ್ದರಿಂದ ಇದು ನಮ್ಮ ಹಿತಾಸಕ್ತಿಗಳಿಗೆ
ಪೂರಕ’ ಎಂದು ಡಿಎಫೈಡಿ ವಕ್ತಾರ ಪ್ರತಿಪಾದಿಸಿದರು.
ಇಂಗ್ಲೆಂಡ್ ತನ್ನ ರಾಷ್ಟ್ರೀಯ ಆದಾಯದ ಶೇಕಡಾ ೦.೭
ಹಣವನ್ನು ಅಂತಾರಾಷ್ಟ್ರೀಯ ನೆರವಿಗಾಗಿ ವಿನಿಯೋಗಿಸುತ್ತದೆ. ೨೦೧೦ರಿಂದ ಇತರ ಇಲಾಖೆಗಳಿಗೆ ನಿಧಿ ಕಡಿತವಾಗಿದ್ದರೂ,
ಡಿಎಫ್ ಐಡಿಗೆ ನಿಧಿಯ ಕಡಿತವಾಗಿಲ್ಲ. ‘ತನ್ನದೇ ಬಾಹ್ಯಾಕಾಶ
ಯಾನದ ಯೋಜನೆಯನ್ನು ಹೊಂದಿರುವುದಷ್ಟೇ ಅಲ್ಲ ಹೊರದೇಶಗಳಿಗೆ ನೆರವು ಕಾರ್ಯಕ್ರಮವನ್ನೂ ಹೊಂದಿರುವ ರಾಷ್ಟ್ರಕ್ಕಾಗಿ
ನಾವು ಹಣ ವೆಚ್ಚ ಮಾಡುತ್ತಿದ್ದೇವೆ. ಪ್ರಾಮಾಣಿಕವಾಗಿ
ಹೇಳಬೇಕೆಂದರೆ ಸರ್ಕಾರವು ತನ್ನ ತೆರಿಗೆದಾತರ ಹಣ ವೆಚ್ಚ ಮಾಡುವ ಬಗೆಗೆ ಸಮರ್ಪಕ ದೃಷ್ಟಿ ಹೊಂದಿರಬೇಕಾದ
ಅಗತ್ಯ ಇದೆ. ಭಾರತಕ್ಕೆ ಹಣಕೊಡುತ್ತಿರುವುದು ಅಸಮರ್ಥನೀಯ ಅಷ್ಟೇ ಅಲ್ಲ, ಮೂರ್ಖತನದ್ದು ಕೂಡಾ’ ಎಂದು ಅವರು ನುಡಿದರು.
2016: ಹನೊಯ್: ಭಾರತ ಮತ್ತು ವಿಯೆಟ್ನಾಂ ಪರಸ್ಪರ ರಕ್ಷಣಾ ಸಹಕಾರವನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಿ 12 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದವು. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಯೆಟ್ನಾಂ ಪ್ರಧಾನಿ ಗುಯೆನ್ ಕ್ಸುವಾನ್ ಫು ಇಲ್ಲಿ ಮಾತುಕತೆ ನಡೆಸಿ, ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಗೆ ಹಲವಾರು ಕ್ರಮಗಳನ್ನು ಪ್ರಕಟಿಸಿದರು. ವಿಯೆಟ್ನಾಂ ರಕ್ಷಣಾ ಕ್ಷೇತ್ರಕ್ಕೆ ₹ 3,300 ಕೋಟಿ ಆರ್ಥಿಕ ನೆರವು ನೀಡುವುದಾಗಿ ಮೋದಿ ಈ ಸಂದರ್ಭದಲ್ಲಿ ಘೋಷಿಸಿದರು. ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾಕ್ಕೆ ತೆರಳುವ ಹಾದಿಯಲ್ಲಿ ಮೋದಿ ಅವರು ಎರಡು ದಿನಗಳ ವಿಯೆಟ್ನಾಂ ಭೇಟಿ ಕೈಗೊಂಡಿದ್ದರು. ‘ಭವಿಷ್ಯವನ್ನು ದೃಷ್ಟಿಯಲ್ಲಿಕೊಟ್ಟುಕೊಂಡು ನಾವು ರಕ್ಷಣಾ ಸಹಕಾರ ವೃದ್ಧಿಗೆ ಸಮ್ಮತಿ ಸೂಚಿಸಿದ್ದೇವೆ. ಇದು ನಮ್ಮ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ದಿಶೆಯನ್ನು ತೋರಿಸಲಿದೆ’ ಎಂದು ಮೋದಿ ಹೇಳಿದರು. ವಿಯೆಟ್ನಾಂ ಈ ಹಿಂದೆ ರಷ್ಯಾ ಮತ್ತು ಚೀನಾ ದೇಶಗಳ ಜತೆ ಮಾತ್ರ ಸಮಗ್ರ ರಕ್ಷಣಾ ಸಹಕಾರ ಹೊಂದಿತ್ತು. ಮೋದಿ ಮತ್ತು ಗುಯೆನ್ ಅವರ ಸಮ್ಮುಖದಲ್ಲಿ ಎರಡೂ ದೇಶಗಳ ಪ್ರತಿನಿಧಿಗಳು ರಕ್ಷಣೆ, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಸೈಬರ್ ಭದ್ರತೆ ಕ್ಷೇತ್ರಗಳು ಒಳಗೊಂಡಂತೆ ಒಟ್ಟು 12 ಒಪ್ಪಂದಗಳಿಗೆ ಸಹಿ ಹಾಕಿದರು. ವಿಯೆಟ್ನಾಂ ಕರಾವಳಿ ಪಡೆಗೆ ಅತ್ಯಾಧುನಿಕ ಗಸ್ತು ಬೋಟ್ಗಳನ್ನು ನಿರ್ಮಿಸಿಕೊಡುವ ಒಪ್ಪಂದವೂ ಇದರಲ್ಲಿ ಸೇರಿದೆ. ನಾ ತಾಂಗ್‌ನಲ್ಲಿರುವ ಟೆಲಿಕಮ್ಯುನಿಕೇಷಕ್ಸ್ ಯೂನಿವರ್ಸಿಟಿಯಲ್ಲಿ ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣಕ್ಕೆ ₹ 33 ಕೋಟಿ ಅನುದಾನವನ್ನು ಮೋದಿ ಅವರು ಪ್ರಕಟಿಸಿದರು. ವಿಯೆಟ್ನಾಂ ಪ್ರಧಾನಿ ಜತೆ ‘ಫಲಪ್ರದ’ ಮಾತುಕತೆ ನಡೆಯಿತು ಎಂದ ಮೋದಿ, ‘ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಮ್ಮತಿ ಸೂಚಿಸಿದ್ದೇವೆ. ಭಾರತ ಮತ್ತು ವಿಯೆಟ್ನಾಂ ಈ ವಲಯದ ಎರಡು ಪ್ರಮುಖ ದೇಶಗಳಾಗಿವೆ. ಆದ್ದರಿಂದ ಸಮಾನ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ಸಾಧಿಸಬೇಕು’ ಎಂದು ಮೋದಿ ಹೇಳಿದರು.
2016: ನವದೆಹಲಿ: ವಿವಿಧ ಚುನಾವಣೆಗಳ ಸ್ಪರ್ಧೆ ವೇಳೆ ಪದವಿ ವಿದ್ಯಾರ್ಹತೆ ಬಗ್ಗೆ ಸುಳ್ಳು ಮಾಹಿತಿ ಪ್ರಮಾಣಪತ್ರ ಸಲ್ಲಿಕೆ ಆರೋಪದ ಮೇಲೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ದಾಖಲಾಗಿದ್ದ ದೂರಿನ ತೀರ್ಪನ್ನು ದೆಹಲಿ ಕೋರ್ಟ್ ಕಾಯ್ದಿರಿಸಿತು. ದೂರುದಾರ ಮತ್ತು ಲೇಖಕ ಅಮೀರ್ ಖಾನ್ ಅವರ ವಾದ ಆಲಿಸಿದ ಬಳಿಕ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ವಿಂದರ್ ಸಿಂಗ್ ಅವರು ಸೆ. 15ಕ್ಕೆ ತೀರ್ಪನ್ನು ಕಾಯ್ದಿರಿಸಿದರು. ಇರಾನಿ ಅವರ ಶೈಕ್ಷಣಿಕ ಪದವಿ ಬಗ್ಗೆ ಚುನಾವಣಾ ಆಯೋಗ ಮತ್ತು ದೆಹಲಿ ವಿಶ್ವವಿದ್ಯಾಲಯ ಸಲ್ಲಿಸಿದ ವರದಿಗಳ ಆಧಾರದ ಮೇಲೆ ತೀರ್ಪು ಹೊರಬೀಳಲಿದೆ. ಚುನಾವಣೆ ವೇಳೆ ಸ್ಮೃತಿ ಇರಾನಿ ಅವರು ನೀಡಿದ್ದ ದಾಖಲಾತಿಗಳನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಕೋರ್ಟ್ ಈ ಹಿಂದೆಯೇ ಹೇಳಿತ್ತು. ಆದರೆ, ಈ ಮಾಹಿತಿಯು ತನ್ನ ವೆಬ್ಸೈಟ್ನಲ್ಲಿ ಲಭ್ಯವಿದೆ ಎಂದು ಚುನಾವಣಾ ಆಯೋಗ ಹೇಳಿತ್ತು. ಅಲ್ಲದೇ ಕೋರ್ಟ್ ಸೂಚನೆಯಂತೆ ದೆಹಲಿ ವಿವಿಯು 1996ರಲ್ಲಿ ಇರಾನಿ ಅವರು ಪಡೆದ ಬಿಎ ಪದವಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿತ್ತು. ಉದ್ದೇಶಪೂರ್ವಕವಾಗಿಯೇ ಇರಾನಿ ಅವರು 2004, 2011, 2014ರಲ್ಲಿ ಚುನಾವಣೆಗಳಲ್ಲಿ ಹೊಂದಾಣಿಕೆ ಇಲ್ಲದ ಶೈಕ್ಷಣಿಕ ಅರ್ಹತೆಯ ಮಾಹಿತಿಯನ್ನು ಆಯೋಗಕ್ಕೆ ನೀಡಿದ್ದಾರೆ. ಜತೆಗೆ ಈ ಬಗ್ಗೆ ವಿವಾದ ಭುಗಿಲೆದ್ದ ಬಳಿಕವೂ ಯಾವುದೇ ಸ್ಪಷ್ಟೀಕರಣಕ್ಕೆ ಅವರು ಮುಂದಾಗಿಲ್ಲ ಎಂದು ದೂರುದಾರ ಅಮೀರ್ ಖಾನ್ ವಾದಿಸಿದರು.
2008: ಇದೇ ವರ್ಷ ಮೇ ತಿಂಗಳಲ್ಲಿ ಚೀನಾದ ಸಿಚುವಾನ್ ಪ್ರಾಂತದಲ್ಲಿ ಸಂಭವಿಸಿದ ದಾರುಣ ಭೂಕಂಪದಲ್ಲಿ ಕನಿಷ್ಠ 87,000 ಜನರು ಮೃತರಾಗಿರಬಹುದೆಂದು ಹೊಸದಾಗಿ ಮತ್ತೊಮ್ಮೆ ಅಂದಾಜು ಮಾಡಲಾಯಿತು. ಭೂಕಂಪದಲ್ಲಿ 69 ಸಾವಿರ ಜನ ಸತ್ತಿದ್ದಾರೆ, 18 ಸಾವಿರ ಜನ ಕಾಣೆಯಾಗಿದ್ದಾರೆ ಎಂದು ಜೂನ್ ತಿಂಗಳ ಮಧ್ಯದಲ್ಲಿ ಅಂದಾಜು ಮಾಡಲಾಗಿತ್ತು. ದಾರುಣ ಭೂಕಂಪ ಸಂಭವಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ಕಾಣೆಯಾದವರು ಇನ್ನೂ ಬದುಕಿರುತ್ತಾರೆ ಎಂಬ ವಿಶ್ವಾಸ ಉಳಿದಿಲ್ಲ ಎಂದು ಭೂಕಂಪ ತಜ್ಞರ ಸಮಿತಿ ತಿಳಿಸಿತು. ರಿಕ್ಟರ್ ಮಾಪಕದಲ್ಲಿ ಎಂಟರಷ್ಟು ಪ್ರಮಾಣದಲ್ಲಿದ್ದ ಭೂಕಂಪದಿಂದ 42 ದಶಲಕ್ಷ ಜನ ತೊಂದರೆಗೀಡಾದರು. ಒಟ್ಟು 40 ಸಾವಿರ ಚದುರ ಕಿ.ಮೀ ಪ್ರದೇಶದ ವ್ಯಾಪ್ತಿಯಲ್ಲಿದ್ದ ಜನರು ಅದರ ಪರಿಣಾಮ ಎದುರಿಸಬೇಕಾಯಿತು. ಭೂಕಂಪದಿಂದ 121 ಶತಕೋಟಿ ಡಾಲರಿನಷ್ಟು ಮೌಲ್ಯದ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿತ್ತು.
2007: ಪ್ರಸಿದ್ಧ ಪರಿಸರವಾದಿ ಡಾ. ಉಲ್ಲಾಸ ಕಾರಂತ ಅವರು ಪರಿಸರ ಸಂರಕ್ಷಣಾ ನಾಯಕತ್ವಕ್ಕೆ ನೀಡಲಾಗುವ `ವಿಶ್ವ ವನ್ಯಮೃಗ ನಿಧಿ' (ಡಬ್ಲ್ಯುಡಬ್ಲ್ಯುಎಫ್)ಯ ಪ್ರತಿಷ್ಠಿತ `ಜೆ. ಪೌಲ್ ಗ್ರೆಟ್ಟಿ ಪ್ರಶಸ್ತಿ'ಗೆ ಪಾತ್ರರಾದರು. ಪ್ರಶಸ್ತಿಯ ಜತೆ ನೀಡಲಾಗುವ ಎರಡು ಲಕ್ಷ ಡಾಲರ್ (ಸುಮಾರು 82 ಲಕ್ಷ ರೂ) ಹಣವನ್ನು ತಮ್ಮ ಆಯ್ಕೆಯ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪರಿಸರ ಸಂಬಂಧಿ ವಿಷಯಗಳ ಅಧ್ಯಯನಕ್ಕಾಗಿ ಫೆಲೋಶಿಪ್ ಕಾರ್ಯಕ್ರಮ ಪ್ರಾರಂಭಿಸಲು ಡಾ.ಕಾರಂತರು ಬಳಸಬಹುದು. ಸಂಶೋಧನೆ, ಪ್ರಕಟಣೆ ಮತ್ತು ಹೋರಾಟದ ಮೂಲಕ ವನ್ಯಮೃಗ ಸಂರಕ್ಷಣೆಯ ಕ್ಷೇತ್ರದಲ್ಲಿ ಮಾಡಿದ ಸುದೀರ್ಘ ಕಾಲದ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು. ಪಶ್ಚಿಮಘಟ್ಟದ ಮೂರು ಕಡೆಗಳಲ್ಲಿ ಅಭಿವೃದ್ಧಿಪಡಿಸಿರುವ ಏಷ್ಯಾದ ಆನೆ ಮತ್ತು ಹುಲಿಗಳ ಸಂರಕ್ಷಣಾಧಾಮಗಳು ಹಾಗೂ ಜನತೆ ಮತ್ತು ವನ್ಯಮೃಗಗಳಿಗೆ ಅನೂಕೂಲವಾಗುವ ರೀತಿಯಲ್ಲಿ ರೂಪಿಸಲಾಗಿರುವ ಸ್ವಇಚ್ಛೆಯ ಪುನರ್ವಸತಿ ಕಾರ್ಯಕ್ರಮಗಳನ್ನು ವಿಶ್ವ ವನ್ಯಮೃಗ ನಿಧಿ ವಿಶೇಷವಾಗಿ ಉಲ್ಲೇಖಿಸಿತು. ಜೀವವೈವಿಧ್ಯತೆಯ ಸಂರಕ್ಷಣೆಯೂ ಸೇರಿದಂತೆ ಭಾರತದ ಪರಿಸರ ನೀತಿ ರಚನೆ ಮತ್ತು ಭಾರತೀಯ ಪರಿಸರ ವಿಜ್ಞಾನಿಗಳ ಶಿಕ್ಷಣದ ಮೇಲೆ ಡಾ.ಕಾರಂತರು ಅಪಾರ ಪ್ರಭಾವ ಬೀರಿದ್ದಾರೆ ಎಂದು ಅದು ಹೇಳಿತು.
2007: ಹೈದರಾಬಾದ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ರಿಜ್ವಾನನನು ಕರ್ನಾಟಕ ಮತ್ತು ಹೈದರಾಬಾದ್ ಪೊಲೀಸರು ಬೆಂಗಳೂರಿನಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡರು. ಸಿಸಿಬಿ ಭಯೋತ್ಪಾದಕ ನಿಗ್ರಹ ದಳ ಮತ್ತು ಹೈದರಾಬಾದ್ ವಿಶೇಷ ತನಿಖಾ ತಂಡದ (ಎಸ್ಐಟಿ) ಸದಸ್ಯರು ಜಂಟಿ ಕಾರ್ಯಾಚರಣೆ ನಡೆಸಿ, ಮೈಕೋ ಲೇಔಟ್ ಸಮೀಪದ ಹಳೆಗುರಪ್ಪನಪಾಳ್ಯದ ಮನೆಯೊಂದರಲ್ಲಿ ವಾಸವಾಗಿದ್ದ ರಿಜ್ವಾನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ರಿಜ್ವಾನನೊಂದಿಗೆ ಇದ್ದ ಬಾಂಗ್ಲಾದೇಶ ಮೂಲದ ಶಿಯಾಕ್ ಎಂಬ ಮಹಿಳೆಯನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡರು.
2007: ಜನತಾದಳ(ಎಸ್) ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಮೆರಾಜ್ದುದೀನ್ ಪಟೇಲ್ ಹಾಗೂ ಯುವ ಘಟಕದ ಅಧ್ಯಕ್ಷರಾಗಿ ಅರವಿಂದ ದಳವಾಯಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು.
2007: `ತನಿಖೆ' ಚಿತ್ರದ ಮೂಲಕ ಸುದ್ದಿಯಾಗಿದ್ದ ನಟ ಗುಲ್ಜಾರ್ ಖಾನ್ (55) ಈದಿನ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು 15 ದಿನದ ಹಿಂದೆ ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದರು. 1988ರಲ್ಲಿ `ಅಪ್ಪಿಕೋ ನನ್ನ' ಎಂಬ ಚಿತ್ರ ನಿರ್ಮಿಸುವ ಪ್ರಯತ್ನಕ್ಕೆ ಕೈಹಾಕಿದ್ದ ಗುಲ್ಜಾರ್ ಖಾನ್ ಅದನ್ನು ಪೂರ್ಣವಾಗಿಸಲಾರದೆ ದುಬೈಗೆ ಹೋಗಿದ್ದರು. ಅಲ್ಲಿಂದ ಮರಳಿದ ಮೇಲೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡು ಸಿನಿಮಾ ಪ್ರೀತಿಯನ್ನೂ ಬೆಳೆಸಿಕೊಂಡರು. ಅದರ ಪರಿಣಾಮವಾಗಿ ಸಿದ್ಧಗೊಂಡದ್ದು `ತನಿಖೆ'. ಈ ಚಿತ್ರದ ನಿರ್ಮಾಣ, ನಿರ್ದೇಶನ, ಹಾಡುಗಾರಿಕೆ, ಸಾಹಿತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅವರು ಕೈಯಾಡಿಸಿದ್ದರು. ನಂತರ `ಸಾರಥಿ' ಎಂಬ ಚಿತ್ರ ನಿರ್ಮಿಸುವುದು ಅವರ ಕನಸಾಗಿತ್ತು. ಆದರೆ, ಹಾಡುಗಳ ಧ್ವನಿಮುದ್ರಣದ ನಂತರ ಅವರು ಕೊಲೆ ಪ್ರಕರಣವೊಂದರ ಆರೋಪಿಯಾದರು. ಆ ಚಿತ್ರಕ್ಕೆ ಡಾ. ರಾಜ್ ಕುಮಾರ್ ಕೂಡಾ ಒಂದು ಹಾಡು ಹಾಡಿದ್ದರು. 1994ರಲ್ಲಿ ಇಬ್ಬರು ಸಹಚರರೊಂದಿಗೆ ಸೇರಿ ತಿಮ್ಮರಾಜು ಎಂಬ ವ್ಯಕ್ತಿಯನ್ನು ಗುಲ್ಜಾರ್ ಕೊಲೆ ಮಾಡಿದ್ದಾರೆಂದು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಒಂದು ವರ್ಷದ ಹಿಂದೆ ಈ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಈ ಹಿಂದೆ ಸಹ ಒಮ್ಮೆ ಪೆರೋಲ್ ಮೇಲೆ ಹೊರಬಂದು ಚಿಕಿತ್ಸೆ ಪಡೆದಿದ್ದರು.
2007: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ಸಿನ ಮಾಹಿತಿ ತಂತ್ರಜ್ಞಾನ ಸೇವಾ ಸಂಸ್ಥೆ `ಸಿಎಂಸಿ ಲಿಮಿಟೆಡ್' ನ ಪ್ರಥಮ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ. ಆರ್. ನರಸಿಂಹನ್ (82) ಈದಿನ ಬೆಂಗಳೂರಿನಲ್ಲಿ ನಿಧನರಾದರು. ಟಾಟಾ ಮೂಲಭೂತ ಸಂಶೋಧನಾ ಕೇಂದ್ರ (ಟಿಐಎಫ್ಆರ್) ಪ್ರಾಧ್ಯಾಪಕರಾಗಿದ್ದ ನರಸಿಂಹನ್, 1990ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಭಾರತದ ಮೊದಲ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ `ಟಿಐಎಫ್ ಆರ್ ಎಸಿ'ನ ನಿರ್ಮಾಣ ತಂಡದಲ್ಲೂ ಕಾರ್ಯ ನಿರ್ವಹಿಸಿದ್ದರು. 1976ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ನರಸಿಂಹನ್, ಜವಾಹರಲಾಲ್ ನೆಹರು ಫೆಲೋಶಿಪ್, ಹೋಮಿ ಜಹಾಂಗೀರ್ ಭಾಭಾ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದರು. ಅವರು ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ(ಸಿಎಸ್ಐ)ದ ಮೊದಲ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಫೆಲೋಶಿಪ್ ಪಡೆದಿದ್ದ ನರಸಿಂಹನ್, ಕೃತಕ ಜ್ಞಾನ ಮತ್ತು ಭಾಷಾ ವಿಜ್ಞಾನದ ವಿಷಯಗಳಲ್ಲಿ ನಾಲ್ಕು ಕೃತಿಗಳನ್ನು ರಚಿಸಿದ್ದರು. ಕ್ಯಾಲಿಫೋರ್ನಿಯಾ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವಿ ಅಧ್ಯಯನ ಮಾಡಿದ್ದ ಅವರು, ಗಣಿತ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದರು.
2007: ಖ್ಯಾತ ವಿಜ್ಞಾನಿ ಹಾಗೂ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ ಐಆರ್) ಮಾಜಿ ಪ್ರಧಾನ ನಿರ್ದೇಶಕ ಎ.ಪಿ.ಮಿತ್ರಾ ನವದೆಹಲಿಯಲ್ಲಿ ನಿಧನರಾದರು. ಕಾಸ್ಮಿಕ್ ಕಿರಣ, ವಾತಾವರಣ ಹಾಗೂ ಉಷ್ಣಾಂಶ ಕುರಿತು ಅವರು ನಡೆಸಿದ ಸಂಶೋಧನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದವು. ಅವರ ಸಂಶೋಧನೆಯನ್ನು ರೇಡಿಯೋ ಪ್ರಸಾರ ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿ ಬಳಸಿಕೊಳ್ಳಲಾಗಿದೆ. ಪದ್ಮಭೂಷಣ, ಎಸ್. ಎಸ್. ಭಟ್ನಾಗರ್ ಪ್ರಶಸ್ತಿ, ಸಿ.ವಿ.ರಾಮನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳನ್ನು ಅವರು ಪಡೆದಿದ್ದರು.
2007: ಮಂಜೇಶ್ವರದ ಹೊಸಂಗಡಿಯಲ್ಲಿ ಈದಿನ ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರು ತುಳು ಅಕಾಡೆಮಿಯನ್ನು ಉದ್ಘಾಟಿಸಿದರು. ದಿನೇ ದಿನೇ ಮೂಲ ಬೇರಿನಿಂದ ದೂರ ಸರಿಯುವ ಅಸಹಾಯಕತೆಯಲ್ಲಿರುವ ಮಂಜೇಶ್ವರದ ಬಹುಸಂಖ್ಯಾತ `ತುಳು' ಭಾಷಿಗರ ಸಾಂಸ್ಕೃತಿಕ ಕನಸಿಗೆ `ಅಕಾಡೆಮಿ' ಎಂಬ ಸೌಧ ಕಟ್ಟಿದ ಕೇರಳ ಸರ್ಕಾರ, ತುಳು ಭಾಷಾ ಸಂಸ್ಕೃತಿಯ ಉಳಿವಿಗೆ ಪಣತೊಟ್ಟಿತು. ಆ ಮೂಲಕ ಮಲೆಯಾಳೀಕರಣದ ಪ್ರಭಾವದಿಂದ ಕನ್ನಡ ಮಾಯವಾಗುತ್ತಿರುವ ಈ `ಗಡಿಕನ್ನಡ'ದ ನಾಡಿನಲ್ಲಿ ಮೂಲತಃ ಕನ್ನಡಿಗರೇ ಆಗಿರುವ ತುಳುಭಾಷಿಗರಿಗೆ `ಸರ್ಕಾರಿ ಮಾನ್ಯತೆ' ನೀಡಿ ಪ್ರೋತ್ಸಾಹಿಸುವ ಭರವಸೆ ನೀಡಿತು. ಕೇವಲ ಒಬ್ಬ ಶಾಸಕನ (ಮಂಜೇಶ್ವರ ಶಾಸಕ- ಸಿ.ಎಚ್. ಕುಂಞಂಬು) ಹಠ, ಹೋರಾಟದ ಫಲಶ್ರುತಿಯಾಗಿ 20 ಲಕ್ಷ ರೂ. ಮಂಜೂರಾತಿಯೊಂದಿಗೆ ತುಳು ಅಕಾಡೆಮಿಗೆ ರೂಪು ಬಂದಿತು. ಕಳೆದ ಬಜೆಟ್ ಅಧಿವೇಶನದಲ್ಲಿ ಈ ಶಾಸಕ ಮುಂದಿಟ್ಟ ಬೇಡಿಕೆಗೆ ಎಡರಂಗ ಸರ್ಕಾರ ಹಸಿರು ನಿಶಾನೆ ತೋರಿತು. ಅಷ್ಟೇ ಅಲ್ಲ, ಅಕಾಡೆಮಿ ರಚನೆಯನ್ನು ಘೋಷಿಸಿ, ವರ್ಷ ಪೂರ್ತಿಯಾಗುವ ಮೊದಲೇ ಅಧಿಕೃತವಾಗಿ ಚಾಲನೆಯನ್ನೂ ನೀಡಿತು. ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸುವುದು ಅಕಾಡೆಮಿಯ ಕಾರ್ಯತಂತ್ರ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ ಎನ್ನುವುದು ಅಚ್ಯುತಾನಂದನ್ ಅವರ ಗಟ್ಟಿ ಮಾತು. ತುಳು ಭಾಷೆಯ ಸಾಹಿತ್ಯ ಕೃತಿಗಳು ಈಗ ಕನ್ನಡ ಲಿಪಿಯಲ್ಲಿ ಲಭ್ಯವಿವೆ. ಆದರೆ ತುಳು ಭಾಷೆಗೂ ಈಗ ಲಿಪಿ ಪತ್ತೆಯಾಗಿದೆ. ಹೀಗಾಗಿ ತುಳು ಲಿಪಿಯನ್ನು ಜನಪ್ರಿಯಗೊಳಿಸುವ ಕೆಲಸವಾಗಬೇಕು. ತುಳು ಸಾಹಿತ್ಯದ ಪ್ರಧಾನ ಕೃತಿಗಳು ತುಳು ಲಿಪಿಯಲ್ಲೇ ಮರುಮುದ್ರಣಗೊಳ್ಳಬೇಕು. ಅಲ್ಪಸಂಖ್ಯಾತರ ಭಾಷೆ ಎಂಬ ಕಾರಣಕ್ಕೆ ತುಳು ಭಾಷೆಯನ್ನು ಶಾಲೆಗಳಲ್ಲಿ ಕಲಿಸುವ ಬಗ್ಗೆ ಚಿಂತನೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ಕಳೆದ 10 ವರ್ಷಗಳಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ತುಳು ಅಕಾಡೆಮಿಯ ಜತೆ ಸೇರಿ ಕೇರಳ ತುಳು ಅಕಾಡೆಮಿ ಕಾರ್ಯಕ್ರಮ ರೂಪಿಸಲಿದೆ ಎಂದು ಅವರು ಹೇಳಿದರು. ಕೇರಳದ ಶಿಕ್ಷಣ ಮತ್ತು ಸಾಂಸ್ಕೃತಿಕ ಸಚಿವ ಎಂ.ಎ. ಬೇಬಿ ಅಧ್ಯಕ್ಷತೆ ವಹಿಸಿದ್ದರು.. ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗರಾಜ ಶೆಟ್ಟಿ, ಕಾಸರಗೋಡು ಸಂಸದ ಪಿ.ಕರುಣಾಕರನ್ ಹಾಜರಿದ್ದರು.
2006: ಎರಡು ಬಾರಿ ಒಲಿಂಪಿಕ್ ಡೆಕಾತ್ಲಾನ್ ಚಾಂಪಿಯನ್ ಆಗಿದ್ದ ಅಮೆರಿಕದ ಬಾಬ್ ಮಥಾಯಿಸ್ (75) ಕ್ಯಾಲಿಫೋರ್ನಿಯಾದಲ್ಲಿ ನಿಧನರಾದರು. 1948ರ ಲಂಡನ್ ಒಲಿಂಪಿಕ್ಸಿನಲ್ಲಿ ಮಥಾಯಿಸ್ ತಮ್ಮ ಮೊದಲ ಚಿನ್ನ ಗೆದ್ದಿದ್ದರು. 17ನೇ ವಯಸ್ಸಿನಲ್ಲಿ ಈ ಸಾಧನೆ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. 1952ರ ಹೆಲ್ಸಿಂಕಿ ಒಲಿಂಪಿಕ್ಸಿನಲ್ಲೂ ಮಥಾಯಿಸ್ ಡೆಕಾತ್ಲಾನ್ ಸ್ವರ್ಣವನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದರು.
2006: ನ್ಯೂಯಾರ್ಕಿನಲ್ಲಿ ನಡೆದ ಅಮೆರಿಕ ಓಪನ್ ಟೆನಿಸ್ ಚಾಂಪಿಯನ್ ಶಿಪ್ ನ ಪುರುಷರ ಸಿಂಗಲ್ಸಿನ ಮೂರನೇ ಸುತ್ತಿನ ಪಂದ್ಯದದಲ್ಲಿ ಜರ್ಮನಿಯ ಬೆಂಜಮಿನ್ ಬೆಕ್ಕರ್ ಎದುರಿನಲ್ಲಿ ಪರಾಭವ ಅನುಭವಿಸುವುದರೊಂದಿಗೆ ಅಮೆರಿಕದ ಅಪ್ರತಿಮ ಟೆನಿಸ್ ಆಟಗಾರ ಆ್ಯಂಡ್ರೆ ಅಗಾಸ್ಸಿ ಟೆನಿಸ್ ರಂಗಕ್ಕೆ ವಿದಾಯ ಹೇಳಿದರು.
2006: ಅಮೆರಿಕದ ಬಾಲ್ಟಿಮೋರ್ಸಿನಲ್ಲಿ ನಡೆದ ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ತೆರೆಬಿತ್ತು.
2006: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾಜಿ ಉಪ ಮುಖ್ಯಮವಂತ್ರಿ ಸಿದ್ದರಾಮಯ್ಯ ನೇತೃತ್ವದ ಅಖಿಲ ಭಾರತ ಪ್ರಗತಿಪರ ಜನತಾದಳವು ಕಾಂಗ್ರೆಸ್ ಪಕ್ಷದಲ್ಲಿ ವಿಧ್ಯುಕ್ತವಾಗಿ ವಿಲೀನಗೊಂಡಿತು.
2006: ವೋಲ್ಕರ್ ಸಮಿತಿ ಬಹಿರಂಗಪಡಿಸಿದ ಇರಾಕಿನ ಆಹಾರಕ್ಕಾಗಿ ತೈಲ ಹಗರಣ ಕುರಿತು ತನಿಖೆ ಆರಂಭಿಸಿದ 10 ತಿಂಗಳ ಬಳಿಕ ಕೊನೆಗೂ ಜಾರಿ ನಿರ್ದೇಶನಾಲವವು ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್, ಪುತ್ರ ಜಗತ್ ಮತ್ತಿತರರಿಗೆ ನೋಟಿಸ್ ಜಾರಿ ಮಾಡಿತು.
1994: ಇಪ್ಪತ್ತೊಂದು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆಯಲು ಕೇಂದ್ರ ಸರ್ಕಾರದ ನಿರ್ಧಾರ.
1976: ಅಮೆರಿಕದ ಪ್ರಪ್ರಥಮ ಮಾನವ ರಹಿತ ಬಾಹ್ಯಾಕಾಶ ನೌಕೆ ವೈಕಿಂಗ್ 2 ಮಂಗಳ ಗ್ರಹದಲ್ಲಿ ಇಳಿಯಿತು. ಭೂಮಿಯಿಂದ ಹೊರಟು ಹೆಚ್ಚು ಕಡಿಮೆ ಒಂದು ವರ್ಷ ಕಾಲ ಪ್ರಯಾಣ ನಡೆಸಿದ ಬಳಿಕ ಮಂಗಳ ಗ್ರಹ ತಲುಪಿದ ಈ ಬಾಹ್ಯಾಕಾಶ ನೌಕೆ ಮೊತ್ತ ಮೊದಲ ಬಾರಿಗೆ ಈ ಗ್ರಹದ ಸಮೀಪದಿಂದ ವರ್ಣ ಛಾಯಾಚಿತ್ರಗಳನ್ನು ತೆಗೆದು ಭೂಮಿಗೆ ಕಳುಹಿಸಿತು. ಗ್ರಹದ ಮೇಲಿನ ವಾತಾವರಣ, ಮೇಲ್ಮೈ ಬಗೆಗಿನ ವಿವರಗಳನ್ನೂ ಸಂಗ್ರಹಿಸಿತು.
1967: ರಸ್ತೆಯ ಬಲಬದಿಯಲ್ಲಿ ವಾಹನ ಚಲಿಸಲು ಸ್ವೀಡನ್ನಿನಲ್ಲಿ ಒಪ್ಪಿಗೆ.
1947: ಸಾಹಿತಿ ಎನ್.ಎಸ್. ತಿಮ್ಮೇಗೌಡ ಜನನ.
1939: ಬ್ರಿಟನ್, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ಮತ್ತು ಫ್ರಾನ್ಸ್ ಜರ್ಮನಿಯ ವಿರುದ್ಧ ಸಮರ ಘೋಷಣೆ ಮಾಡಿದವು. ಅದೇ ದಿನ ಮಹಿಳೆಯರು ಮತ್ತು ಮಕ್ಕಳನ್ನು ಅಮೆರಿಕಕ್ಕೆ ಒಯ್ಯುತ್ತಿದ್ದ ಅಥೇನಿಯಾ ನೌಕೆಯನ್ನು ಯು-ಬೋಟ್ ಮೂಲಕ ನೀರೊಳಗಿಂದ ಬಾಂಬ್ ಸ್ಫೋಟಿಸಿ ಮುಳುಗಿಸಲಾಯಿತು. ನೌಕೆಯಲ್ಲಿದ್ದ 112 ಜನ ಮೃತರಾದರು.
1929: ಸಾಹಿತಿ ಗೋಪಾಲಕೃಷ್ಣ ಪಿ. ನಾಯಕ್ ಜನನ.
1899: ಸಾಹಿತಿ ಹಾಗೂ ತತ್ವಶಾಸ್ತ್ರದ ಪ್ರಖ್ಯಾತ ಪ್ರಾಧ್ಯಾಪಕರಾಗಿದ್ದ ಯಮುನಾಚಾರ್ಯ (3-9-1899ರಿಂದ 4-1-1970) ಅವರು ನಾರಾಯಣ ಅಯ್ಯಂಗಾರ್- ಮಾಣಿಕ್ಕಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ತತ್ವಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಕೃತಿಗಳನ್ನು ರಚಿಸಿದ ಯಮುನಾಚಾರ್ಯ ಅವರು ತಮ್ಮ ಸಂಪಾದಕತ್ವದಲ್ಲಿ ಪ್ರಕಟಿಸಿದ 20 ಸಂಪುಟಗಳ ಗಾಂಧಿ ಸಾಹಿತ್ಯವು ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ. ದೆಹಲಿಯ ಗಾಂಧಿ ಪೀಸ್ ಪೌಂಡೇಷನ್ ಅಧ್ಯಕ್ಷರಾಗಿಯೂ ಹಲವಾರು ವರ್ಷಗಳ ಸೇವೆ ಸಲ್ಲಿಸಿದ್ದರು.
1783: ಸ್ವತಂತ್ರ ಅಮೆರಿಕದ ಜನ್ಮದಿನವಿದು. ಅಮೆರಿಕ ಮತ್ತು ಗ್ರೇಟ್ ಬ್ರಿಟನ್ ನಡುವಣ `ಪ್ಯಾರಿಸ್ ಒಪ್ಪಂದ'ವು (ಟ್ರೀಟಿ ಆಫ್ ಪ್ಯಾರಿಸ್) ಕ್ರಾಂತಿಕಾರಿ ಯುದ್ಧಕ್ಕೆ ಮಂಗಳ ಹಾಡಿ ಅಮೆರಿಕವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಸ್ಥಾಪನೆ ಮಾಡಿತು. ಬೆಂಜಮಿನ್ ಫ್ರಾಂಕ್ಲಿನ್, ಜಾನ್ ಆಡಮ್ಸ್ ಮತ್ತು ಜಾನ್ ಜೇ ಅವರು ಮಾತುಕತೆಯಲ್ಲಿ ಅಮೆರಿಕನ್ನರನ್ನು ಪ್ರತಿನಿಧಿಸಿದ್ದರು.
1658: ಇಂಗ್ಲೆಂಡಿನ ಲಾರ್ಡ್ ಪ್ರೊಟೆಕ್ಟರ್ ಒಲಿವರ್ ಕ್ರಾಮ್ ವೆಲ್ ಲಂಡನ್ನಿನ ವೈಟ್ ಹಾಲಿನಲ್ಲಿ ಮೃತರಾದರು. ಅವರ ಪುತ್ರ ರಿಚರ್ಡ್ ಇಂಗ್ಲೆಂಡಿನ ನೂತನ ಪ್ರೊಟೆಕ್ಟರ್ ಆದರು.
No comments:
Post a Comment