ಇಂದಿನ ಇತಿಹಾಸ History Today ಸೆಪ್ಟೆಂಬರ್ 14
2016: ರಿಯೋ ಡಿ’ಜನೈರೋ: ರಿಯೋದಲ್ಲಿ ನಡೆಯುತ್ತಿರುವ 2016ರ ಪ್ಯಾರಾಲಿಂಪಿಕ್ಸ್
ಕ್ರೀಡಾಕೂಟದಲ್ಲಿ ಭಾರತದ ದೇವೇಂದ್ರ ಜಜ್ಹಾರಿಯ ಅವರು ಜಾವೆಲಿನ್ ಎಸೆತ ಎಫ್46 ಕ್ರೀಡೆಯಲ್ಲಿ ತಮ್ಮದೇ ವಿಶ್ವದಾಖಲೆಯನ್ನು ಮುರಿಯುವುದರೊಂದಿಗೆ ಭಾರತಕ್ಕೆ 2ನೇ ಸ್ವರ್ಣ ಪದಕವನ್ನು ತಂದುಕೊಟ್ಟರು. 63.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ತಮ್ಮದೇ ದಾಖಲೆ ಮುರಿಯುವ ಮೂಲಕ ಭಾರತಕ್ಕೆ ಎರಡನೇ ಸ್ವರ್ಣ ಪದಕವನ್ನು ತಂದ ದೇವೇಂದ್ರ ಅವರು ಎರಡು ಪ್ಯಾರಾಲಿಂಪಿಕ್ ಸ್ವರ್ಣ ಪದಕಗಳನ್ನು ಬಗಲಿಗೆ ಹಾಕಿಕೊಂಡ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ವಿಶ್ವ ಶ್ರೇಯಾಂಕದಲ್ಲಿ ಪ್ರಸ್ತುತ ಮೂರನೇ ಸ್ಥಾನದಲ್ಲಿ ಇರುವ ದೇವೇಂದ್ರ ತಮ್ಮ ಈದಿನದ ಸಾಧನೆಯೊಂದಿಗೆ ರಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಗಳಿಸಿದ ಪದಕಗಳ ಸಂಖ್ಯೆಯನ್ನು 4ಕ್ಕೆ ಏರಿಸಿದರು. ಈ ಪದಕಗಳಲ್ಲಿ ಸ್ವರ್ಣ ಮತ್ತು ತಲಾ ಒಂದು ಬೆಳ್ಳಿ ಹಾಗೂ ಕಂಚಿನ ಪದಕಗಳು ಸೇರಿವೆ. ದೇವೇಂದ್ರ ಜಜ್ಹಾರಿಯ ಅವರು 2004ರ ಅಥೆನ್ಸ್ ಕ್ರೀಡಾಕೂಟದಲ್ಲಿ 62.15 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು.2016: ಜಿನೇವಾ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿಶ್ವ ಸಂಸ್ಥೆ ಮಾನವ ಹಕ್ಕುಗಳ
ಮಂಡಳಿಯ ಮುಖ್ಯಸ್ಥ (ಯುಎನ್ಎಚ್ಸಿಎಚ್ಆರ್) ಮಾಡಿದ ಪ್ರಸ್ತಾಪಕ್ಕೆ ಇನ್ನೊಮ್ಮೆ ಕಟು ಉತ್ತರ ನೀಡಿದ ಭಾರತ, ವಿಶ್ವ ಸಂಸ್ಥೆಯ ಆಡಳಿತದ ಬಗೆಗಿನ ನಿರಂತರ ದ್ವಂದ್ವಗಳ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಗಡಿಯಾಚೆಯಿಂದ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಪುನರುಚ್ಚರಿಸಿತು. ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದ ಭಾರತ, ‘ಭದ್ರತಾ ಪಡೆಗಳನ್ನೇ ಗುರಿಯಾಗಿಟ್ಟುಕೊಂಡು ಆಕ್ರಮಣ ನಡೆಸುವಂತೆ ಸೂಚನೆ ಪಡೆದು ಗಡಿಯೊಳಕ್ಕೆ ಬಂದ ಭಯೋತ್ಪಾದಕರು ಪ್ರತಿಭಟನಾ ನಿರತ ಗುಂಪಿನ ಒಳಗೆ ಸೇರಿಕೊಂಡು ಅವರನ್ನು ಮಾನವ ಗುರಾಣಿಗಳಂತೆ ಬಳಸುತ್ತಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಭಾರತ ಹಂಚಿಕೊಂಡಿದೆ’ ಎಂದು ಒತ್ತಿ ಹೇಳಿತು.
ಭಯೋತ್ಪಾದನೆ ಮಾನವ ಹಕ್ಕುಗಳ ಅತ್ಯಂತ ಕೆಟ್ಟ ಸ್ವರೂಪದ ಉಲ್ಲಂಘನೆಯಾಗಿದೆ ಎಂಬುದನ್ನು ನಾನು ಒತ್ತಿ ಹೇಳುತ್ತೇನೆ’ ಎಂದು ವಿಶ್ವ ಸಂಸ್ಥೆಯಲ್ಲಿ ಭಾರತದ ರಾಯಭಾರಿ ಹಾಗೂ ಜಿನೇವಾದಲ್ಲಿ ವಿಶ್ವ ಸಂಸ್ಥೆಯ ಕಾಯಂ ಪ್ರತಿನಿಧಿಯಾಗಿರುವ ಅಜಿತ್ ಕುಮಾರ್ ಮಾನವ ಹಕ್ಕುಗಳ ಮಂಡಳಿಯ 33ನೇ ಅಧಿವೇಶನದಲ್ಲಿವಿಶ್ವ ಸಂಸ್ಥೆ ಮಾನವ ಹಕ್ಕುಗಳ ಹೈಕಮೀಷನರ್ ನ ಅಧ್ಯಕ್ಷ ಜೀದ್ ರಾದ್ ಅಲ್-ಹುಸೈನ್ ಮಾಡಿದ ಪ್ರಸ್ತಾಪಕ್ಕೆ ಉತ್ತರ ನೀಡುತ್ತಾ ಸ್ಪಷ್ಟ ಪಡಿಸಿದರು. ಅಧಿವೇಶನ ಉದ್ಘಾಟಿಸಿ ಮಾತನಾಡಿದ ಹುಸೈನ್ ‘ಜಮ್ಮು ಮತ್ತು ಕಾಶ್ಮೀರದಲ್ಲಿನ ಭಾರತ-ಪಾಕ್ ಗಡಿಯ ಉಭಯ ಕಡೆಗಳ ಸ್ಥಿತಿಗತಿ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ಅಧ್ಯಯನ ನಡೆಸಬೇಕು ಮತ್ತು ಅದರ ವರದಿ ಅಂತಿಮವಾಗಬೇಕು ಎಂಬರ್ಥದ ಭಾಷಣ ಮಾಡಿದ್ದರು.
2016: ನವದೆಹಲಿ/ ಕಾಠ್ಮಂಡು: ತನ್ನ ಬಂದರುಗಳ ಜೊತೆಗೆ ಉತ್ತಮ ಸಂಪರ್ಕ ಹೊಂದಲು
ಅನುಕೂಲವಾಗುವಂತೆ ಆಗ್ನೇಯ ರೈಲ್ವೇ ಹಳಿ ಅಭಿವೃದ್ಧಿ ಪಡಿಸಿಕೊಳ್ಳಲು ನೇಪಾಳಕ್ಕೆ ನೆರವಾಗುವ ಮೂಲಕ ನೇಪಾಳದ ನೂತನ ಪ್ರಧಾನಿ ಪ್ರಚಂಡ (ಪುಷ್ಪ ಕಮಲ್ ದಹಲ್) ಅವರನ್ನು ಸೆಳೆಯುವ ಯತ್ನವನ್ನು ಭಾರತ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿದವು. ಪ್ರಚಂಡ ಅವರು ಈ ವಾರ ಭಾರತಕ್ಕೆ ತಮ್ಮ ಚೊಚ್ಚಲ ಭೇಟಿ ನೀಡಲಿದ್ದು ಈ ಸಂದರ್ಭದಲ್ಲಿ ಭಾರತ ಆಗ್ನೇಯ ರೈಲ್ವೆ ಸಂಪರ್ಕ ಅಭಿವೃದ್ಧಿಯ ಕೊಡುಗೆ ಮುಂದಿಡುವ ಸಾಧ್ಯತೆಗಳಿವೆ. ಈ ಹಿಂದೆ ಮಾವೋವಾದಿ ಬಂಡಾಯ ಕಮಾಂಡರ್ ಆಗಿದ್ದ ಪ್ರಚಂಡ ಅವರು ತಮ್ಮ ಚೊಚ್ಚಲ ವಿದೇಶ ಪ್ರವಾಸಕ್ಕೆ ಭಾರತವನ್ನೇ ಆಯ್ಕೆ ಮಾಡಿಕೊಂಡಿದ್ದು, ಮಾಜಿ ಪ್ರಧಾನಿ ಕೆ.ಪಿ. ಒಲಿ ಅವರ ಚೀನಾ ಪರ ನಿಲುವಿನಿಂದ ಭಾರತ- ನೇಪಾಳ ಬಾಂಧವ್ಯಕ್ಕೆ ಆದ ಧಕ್ಕೆಯನ್ನು ನಿವಾರಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಕೆಲ ಸಮಯದಿಂದ ಭಾರತ- ನೇಪಾಳ ಬಾಂಧವ್ಯಕ್ಕೆ ಅಡಚಣೆಯಾಗಿದೆ. ಕಹಿ ಭಾವನೆಗಳನ್ನು ನಿವಾರಿಸಲು ನಾನು ಬಯಸಿದ್ದೇನೆ ಎಂದು ಪ್ರಚಂಡ ಅವರು ಕಾಠ್ಮಂಡುವಿನಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ‘ಭಾರತವು ಕಷ್ಟದ ಸಂದರ್ಭಗಳಲ್ಲಿ ನೇಪಾಳಕ್ಕೆ ಸಹಾಯ ಮಾಡಬಯಸಿದೆ’ ಎಂದು ಅವರು ನುಡಿದರು.
2016: ಮಿರ್ಜಾಪುರ (ಉತ್ತರ ಪ್ರದೇಶ): ಮಂಚಗಳನ್ನು ಒಯ್ಯಬೇಡಿ ಎಂಬುದಾಗಿ ಧ್ವನಿ ವರ್ಧಕಗಳ
2016: ಬೆಂಗಳೂರು: ಬೆಂಗಳೂರು ನಗರದ 16 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಜಾರಿಗೊಳಿಸಲಾಗಿದ್ದ
ಕರ್ಫ್ಯೂ ವನ್ನು ಪೊಲೀಸರು ಹಿಂತೆಗೆದುಕೊಂಡಿದ್ದು ಹಿಂಸಾಚಾರದಿಂದ ಬಳಲಿದ್ದ ನಗರ ಸಹಜ ಸ್ಥಿತಿಗೆ ಹಿಂತಿರುಗಿತು. ತಮಿಳುನಾಡಿಗೆ ಕಾವೇರಿ ನೀರು ಹಂಚಿಕೊಳ್ಳುವ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೆ.12ರಂದು ಭುಗಿಲೆದ್ದ ಹಿಂಸಾಚಾರ ಸೆ.13ರಂದು ನಿಯಂತ್ರಣಕ್ಕೆ ಬಂದಿದ್ದರೂ ಉದ್ರಿಕ್ತ ಪರಿಸ್ಥಿತಿ ಮುಂದುವರೆದಿತ್ತು. ನಗರದ ರಸ್ತೆಗಳಲ್ಲಿ ಸಾಮೂಹಿಕ ಸಾರಿಗೆ ಸೇವೆ ಪುನಾರಂಭಗೊಂಡು, ಅಂಗಡಿ, ಮುಂಗಟ್ಟುಗಳು ಎಂದಿನಂತೆಯೇ ತಮ್ಮ ವ್ಯವಹಾರ ನಡೆಸಿದವು.. ಅಹಿತಕರ ಘಟನೆಗಳು ಮರುಕಳಿಸದಂತೆ ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ನುಡಿದರು. ಹಿಂಸಾಚಾರಗಳನ್ನು ಅನುಸರಿಸಿ ಬೆಂಗಳೂರಿನಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೂ ಹಿಂಸಾಚಾರಗಳು ತೀವ್ರಗೊಂಡದ್ದನ್ನು ಅನುಸರಿಸಿ ರಾತ್ರಿಯ ವೇಳೆಗೆ 16 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು.2016: ರಾಂಚಿ (ಜಾರ್ಖಂಡ್): ಆಧಾರ್ ಆಧಾರಿತ ಪಡಿತರ ವ್ಯವಸ್ಥೆ ಜಾರಿಗೊಳಿಸಿದ ಮುಂಚೂಣಿ
ರಾಜ್ಯಗಳಲ್ಲಿ ಒಂದಾದ ಜಾರ್ಖಂಡಿನಲ್ಲಿ ಈ ವ್ಯವಸ್ಥೆಯ ಭಾರಿ ಲೋಪದೋಷ ಬೆಳಕಿಗೆ ಬಂದಿತು. ಜಾರ್ಖಂಡಿನ ರಾಂಚಿಯಲ್ಲಿ ಕಳೆದ ಮೂರು ತಿಂಗಳುಗಳಿಂದ 50ಕ್ಕೂ ಹೆಚ್ಚು ಕುಷ್ಠ ರೋಗಿಗಳಿಗೆ ಪಡಿತರ ವ್ಯವಸ್ಥೆಯಲ್ಲಿ ಆಹಾರ ಧಾನ್ಯ ಮತ್ತಿತರ ಪದಾರ್ಥಗಳ ಪೂರೈಕೆ ಸ್ಥಗಿತಗೊಂಡಿತು. ಬಯೋಮೆಟ್ರಿಕ್ ಗುರುತನ್ನು ದೃಢಪಡಿಸಲು ತಮ್ಮ ಹೆಬ್ಬೆರಳು ಮತ್ತು ಇತರ ಬೆರಳುಗಳು ಕಳೆದುಹೋಗಿರುವುದು ಇದಕ್ಕೆ ಕಾರಣ ಎಂದು 50 ಮಂದಿ ಕುಷ್ಠ ರೋಗಿಗಳು ದೂರು ನೀಡಿದರು. ತಮ್ಮ ವಾರ್ಡ್ ಕೌನ್ಸಿಲರ್ ಮನೆಗೆ ಬಂದ ಈ ಕುಷ್ಠ ರೋಗಿಗಳು ಅಲ್ಲಿ ತಮ್ಮ ಸಂಕಷ್ಟವನ್ನು ಹೇಳಿಕೊಂಡರು. ಮಹಿಳೆಯರೂ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಕುಷ್ಠ ರೋಗಿಗಳು 43ನೇ ವಾರ್ಡ್ ಕೌನ್ಸಿಲರ್ ಚಂದಾ ದೇವಿ ಅವರಿಗೆ ದೂರು ನೀಡಿ ತಮಗೆ ಬದುಕು ದುಸ್ತರವಾಗಿದೆ ಎಂದು ಗೋಳಾಡಿದರು. ರೇಷನ್ ಕಮ್ ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿಗಳಿಗೆ ಪ್ರತಿ ತಿಂಗಳು 1 ಕಿ.ಗ್ರಾಂ ಉಪ್ಪು, 2 ಲೀಟರ್ ಸೀಮೆಎಣ್ಣೆ, 2 ಕೆಜಿ ಸಕ್ಕರೆ, 3 ಕೆಜಿ ಅಕ್ಕಿ, 3 ಕೆಜಿ ಗೋಧಿಯನ್ನು ಭಾರಿ ಸಬ್ಸಿಡಿ ದರದಲ್ಲಿ ಒದಗಿಸಲಾಗುತ್ತದೆ. ಇಂದಿರಾನಗರದಲ್ಲಿ ವಾಸವಾಗಿರುವ ಸುಮಾರು 450ಕ್ಕೂ ಹೆಚ್ಚು ಮಂದಿ ಕುಷ್ಠ ರೋಗಿಗಳ ಪೈಕಿ ಬಹಳಷ್ಟು ಮಂದಿ ಹೆಬ್ಬೆರಳು ಮತ್ತು ಇತರ ಬೆರಳುಗಳನ್ನು ಕಳೆದುಕೊಂಡಿದ್ದಾರೆ. ರೋಗದ ಪರಿಣಾಮವಾಗಿ ತಮ್ಮ ಬೆರಳುಗಳನ್ನು ಕಳೆದುಕೊಂಡಿರುವ ಈ ರೋಗಿಗಳಿಗೆ ಈಗ ಅಧಿಕೃತ ದಾಖಲೆಗಳು ಇದ್ದರೂ ಪಡಿತರ ಧಾನ್ಯ ಮತ್ತಿತರ ಪದಾರ್ಥಗಳ ವಿತರಣೆಯನ್ನು ತಡೆ ಹಿಡಿಯಲಾಗಿದೆ.
2016: ನವದೆಹಲಿ/ ಅಮೃತಸರ: ಕ್ರಿಕೆಟ್ ಆಟಗಾರ ನವಜೋತ್ ಸಿಂಗ್ ಸಿಧು ಮತ್ತು ಅವರ ಪತ್ನಿ
ನವಜೋತ್ ಕೌರ್ ಸಿಧು ಅವರು ಅವರು ಈದಿನ ಭಾರತೀಯ ಜನತಾ ಪಕ್ಷದ ಸದಸ್ಯತ್ವಕ್ಕೆ ಔಪಚಾರಿಕ ರಾಜೀನಾಮೆ ಸಲ್ಲಿಸಿದರು. ‘ನಾನು ಒಬ್ಬ ವ್ಯಕ್ತಿ, ನನ್ನ ವಲಯದ ವಿಷಯಗಳನ್ನು ಮಾತ್ರ ನಾನು ಎತ್ತಿಕೊಳ್ಳುತ್ತಿದ್ದ. ಇದಕ್ಕೆ ಪಕ್ಷ ಅವಕಾಶ ನೀಡಲಿಲ್ಲ. ಇದು ಪ್ರಜಾಪ್ರಭುತ್ವವಲ್ಲ, ಸರ್ವಾಧಿಕಾರ. ನಾನು ಸಾಮಾಜಿಕ ವಿಷಯಗಳನ್ನು ಪ್ರಸ್ತಾಪಿಸಿದರೆ ಅದು ಹೇಗೆ ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ?’ ಎಂದು ರಾಜೀನಾಮೆ ನೀಡಿದ ಬಳಿಕ ನವಜೋತ್ ಕೌರ್ ಸಿಧು ಪ್ರಶ್ನಿಸಿದರು. ಜುಲೈ ತಿಂಗಳಲ್ಲಿ ರಾಜ್ಯ ಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಸಿಧು ಅವರು ಆಮ್ ಆದ್ಮಿ ಪಕ್ಷ ಸೇರುವರು ಎಂಬ ವದಂತಿಗಳು ಹರಡಿದ್ದವು. ಆದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಿಧು ಅವರು ’ಆವಾಜ್-ಇ-ಪಂಜಾಬ್’ ಹೆಸರಿನಲ್ಲಿ ಹೊಸ ಪಕ್ಷವನ್ನು ಮಾಜಿ ಹಾಕಿ ಕ್ಯಾಪ್ಟನ್ ಪರಗತ್ ಸಿಂಗ್ ಮತ್ತು ಪಂಜಾಬಿನ ಶಾಸಕರಾದ ಸಿಮರ್ಜಿತ್ ಸಿಂಗ್ ಬೈನ್ಸ್ ಮತ್ತು ಬಲವಂತ ಸಿಂಗ್ ಬೈನ್ಸ ಅವರ ಜೊತೆಗೂಡಿ ಸ್ಥಾಪಿಸಲಿದ್ದಾರೆ ಎಂಬ ಸುದ್ದಿ ಬಂದಿತ್ತು.
2016: ಚೆನ್ನೈ: ಕಾವೇರಿ ನೀರು ಹಂಚಿಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 16ರಂದು ತಮಿಳುನಾಡು
ಬಂದ್ಗೆ ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳು ಬೆಂಬಲ ಸೂಚಿಸಿದವು. ರೈತರು, ವರ್ತಕರು ಸೇರಿದಂತೆ ಹಲವು ಸಂಘಟನೆಗಳು ಕರೆಕೊಟ್ಟಿರುವ ತಮಿಳುನಾಡು ಬಂದ್ಗೆ ಡಿಎಂಕೆ ಪಕ್ಷವು ಬೆಂಬಲ ನೀಡುತ್ತಿರುವುದಾಗಿ ಪಕ್ಷದ ಅಧ್ಯಕ್ಷ ಎಂ.ಕರುಣಾನಿಧಿ ತಿಳಿಸಿದರು. ಕರ್ನಾಟಕದಲ್ಲಿ ತಮಿಳರನ್ನು ಗುರಿಯಾಗಿಸಿಕೊಂಡು ನಡೆದಿರುವ ಹಿಂಸಾಚಾರ ಹಾಗೂ ಕಾವೇರಿ ನೀರು ಹಂಚಿಕೆ ಸಂಬಂಧಿಸಿದಂತೆ ದೀರ್ಘಾವಧಿ ಪರಿಹಾರಕ್ಕಾಗಿ ಆಗ್ರಹಿಸಿ ಬಂದ್ ನಡೆಸಲಾಗುತ್ತಿದೆ. ಬಂದ್ ದಿನ ತಮಿಳುನಾಡಿನಲ್ಲಿ 22 ಲಕ್ಷ ಅಂಗಡಿಗಳು ಮುಚ್ಚಲಿದ್ದು, 11 ಲಕ್ಷ ಲಾರಿಗಳು ಸಂಚಾರ ಸ್ಥಗಿತಗೊಳಿಸಲಿವೆ. 4600 ಇಂಧನ ಕೇಂದ್ರಗಳು ತೆರೆಯುವುದಿಲ್ಲ. ರೈತರು ಹಾಗೂ ರಾಜಕೀಯ ಪಕ್ಷಗಳ ಸದಸ್ಯರು ರೈಲು ತಡೆ ನಡೆಸಲಿದ್ದಾರೆ ಎಂದು ತಮಿಳುನಾಡು ಅಖಿಲ ರೈತರ ಸಂಘದ ಸಹಯೋಗ ಸಮಿತಿಯ ಅಧ್ಯಕ್ಷರಾದ ಪಿ.ಆರ್.ಪಾಂಡಿಯನ್ ತಿಳಿಸಿದರು. ವಿಸಿಕೆ, ಎಂಡಿಎಂಕೆ, ಪಿಎಂಕೆ ಹಾಗೂ ಸಿಪಿಐ(ಎಂ) ಸೇರಿದಂತೆ ಇತರೆ ಪಕ್ಷಗಳು ಬಂದ್ಗೆ ಬೆಂಬಲ ಸೂಚಿಸಿದವು.
2016: ಕಲಬುರ್ಗಿ: ತಾಪಮಾನ ಹೆಚ್ಚು ಎಂಬ ಕಾರಣಕ್ಕೆ ಹೆಲ್ಮೆಟ್ ಧರಿಸುವುದನ್ನು ಕೈಬಿಡುವ ಬೈಕ್
ಸವಾರರಿಗಾಗಿ ಕಲಬುರ್ಗಿ ನಗರದ ತಾಂತ್ರಿಕ ಸಂಶೋಧಕರೊಬ್ಬರು ಹವಾನಿಯಂತ್ರಕ (ಎ.ಸಿ), ಇಂಡಿಕೇಟರ್ ವ್ಯವಸ್ಥೆ ಇರುವ ಹೆಲ್ಮೆಟ್ ಸಿದ್ಧಪಡಿಸುವ ಮೂಲಕ ಗಮನ ಸೆಳೆದರು. ಬಿಹಾರ ಮೂಲದ ರೂಪಂದಾಸ್ ಅವರು ಈ ಎ.ಸಿ ಹೆಲ್ಮೆಟ್ ರೂವಾರಿ. ಪ್ರೌಢಶಾಲಾ ಶಿಕ್ಷಣವನ್ನು ಬಿಹಾರದಲ್ಲಿ ಪೂರೈಸಿ, ಪಿಯುಸಿ ಹಾಗೂ ಎಂಜಿನಿಯರಿಂಗ್ ಶಿಕ್ಷಣವನ್ನು ಕಲಬುರ್ಗಿಯಲ್ಲಿ ಪಡೆದ ದಾಸ್, ಸುಪ್ರೀಂಕೋರ್ಟ್ ಹೆಲ್ಮೆಟ್ ಕಡ್ಡಾಯ ಮಾಡಿದ್ದರೂ ಕಲಬುರ್ಗಿಯ ಜನರು ಬಿಸಿಲಿನ ನೆಪವೊಡ್ಡಿ ಅದರಿಂದ ದೂರ ಉಳಿಯುತ್ತಿರುವುದನ್ನು ಮನಗಂಡುಈ ಹೆಲ್ಮೆಟ್ ಸಿದ್ಧಪಡಿಸಿದರು. ಇಂಟೆಲ್ ಎಡಿಷನ್‌ನ ಸಾಫ್ಟ್‌ವೇರ್, ಸೆನ್ಸರ್, 12 ವೋಲ್ಟ್ ಬ್ಯಾಟರಿ, ಹವಾನಿಯಂತ್ರಕದಂತೆ ಕೆಲಸ ನಿರ್ವಹಿಸುವ ಸಾಧನ (ಪೆಲ್ಟಿಯರ್ ಮಾಡುಲ್), ವೈ–ಫೈ, 3ಜಿ ಮೂಲಕ ಮೊಬೈಲ್ಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಈ ಹೆಲ್ಮೆಟ್‌ನಲ್ಲಿದೆ. ಎ.ಸಿ ಅಳವಡಿಕೆ ಯಿಂದ ಸಾಮಾನ್ಯ ಹೆಲ್ಮೆಟ್ಗಿಂತ ಸುಮಾರು 800 ಗ್ರಾಂ ತೂಕ ಹೆಚ್ಚಾಗ ಲಿದ್ದು, ಅಂದಾಜು ₹2 ಸಾವಿರದಲ್ಲಿ ಎ.ಸಿ ಹೆಲ್ಮೆಟ್ ಲಭ್ಯವಾಗಲಿದೆ.
2016: ಸಿಂಗೂರ್: ಟಾಟಾದ ನ್ಯಾನೊ ಕಾರು ಉತ್ಪಾದನಾ ಘಟಕ ಸ್ಥಾಪಿಸುವ ಸಲುವಾಗಿ ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ 2006ರಲ್ಲಿ ರೈತರಿಂದ ವಶಪಡಿಸಿಕೊಳ್ಳಲಾಗಿದ್ದ ಭೂಮಿಯ ದಾಖಲೆಗಳನ್ನು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರೈತರಿಗೆ ಹಿಂದಿರುಗಿಸಿದರು. ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಅವರು ಈ ಕ್ರಮ ಕೈಗೊಂಡರು.
‘ನಮಗೆ ಕೈಗಾರಿಕೆ ಅವಶ್ಯಕವಾಗಿದೆ. ಕೈಗಾರಿಕೆಗಳಿಗೆ ನಮ್ಮಲ್ಲಿ ಸ್ವಾಗತವಿದೆ. ಆದರೆ ಬಲವಂತವಾಗಿ ಭೂಸ್ವಾಧೀನ ಮಾಡಿ ಕೈಗಾರಿಕೆ ಸ್ಥಾಪಿಸುವುದು ಬೇಕಾಗಿಲ್ಲ’ ಎಂದು ಮಮತಾ ಹೇಳಿದರು. ಸಿಂಗೂರಿನಲ್ಲಿ ಮಾಡಿದ್ದ ಭೂಸ್ವಾಧೀನ ಅಕ್ರಮವಾದದ್ದು. ಅದನ್ನು 12 ವಾರಗಳ ಒಳಗಾಗಿ ರೈತರಿಗೆ ವಾಪಸ್ ನೀಡಬೇಕು ಎಂದು ಆ. 31ಕ್ಕೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಭೂಸ್ವಾಧೀನಕ್ಕೆ ರೈತರಿಂದ ವ್ಯಾಪಕ ಪ್ರತಿಭಟನೆಯೂ ವ್ಯಕ್ತವಾಗಿತ್ತು.
2016: ಜೇರುಸಲೇಂ: ರೋಮನ್ ದೊರೆ ನೀರೊ ಮುಖ ಚಿತ್ರ ಹೊಂದಿರುವ ಅಪರೂಪದ ಚಿನ್ನದ ನಾಣ್ಯವನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದರು.
ಕ್ರಿ.ಶ. 70ರಲ್ಲಿ ಜೆರುಸಲೇಂ ಸಾಮ್ರಾಜ್ಯ ಅವನತಿ ಹೊಂದುವುದಕ್ಕಿಂತಲೂ ಮೊದಲು ಈ ನಾಣ್ಯ ಚಲಾವಣೆಯಲ್ಲಿದ್ದಿರಬಹುದು ಎಂದು ಅಂದಾಜಿಸಲಾಯಿತು.
ಜೆರುಸಲೇಂನ ಮೌಂಟ್ ಜಿಯಾನ್‌ನಲ್ಲಿರುವ ನಾರ್ಥ್ ಕ್ಯಾರೊಲಿನೊ ವಿಶ್ವವಿದ್ಯಾಲಯದ ಚಾರ್ಲೊಟ್ಟೆ ಪುರಾತತ್ವ ಉತ್ಖನನ ಸ್ಥಳದಲ್ಲಿ ಈ ನಾಣ್ಯ ಪತ್ತೆಯಾಯಿತು.
‘ಜೇರುಸಲೇಂನಲ್ಲಿ ವೈಜ್ಞಾನಿಕ ವಾಗಿ ನಡೆಸಿದ ಉತ್ಖನನದ ವೇಳೆ ಈ ನಾಣ್ಯ ದೊರೆತಿದೆ’ ಎಂದು ಉತ್ಖನನದ ಉಸ್ತುವಾರಿ ನೋಡಿ ಕೊಳ್ಳುತ್ತಿರುವ ಡಾ. ಶಿಮಾನ್ ಗಿಬ್ಸನ್ ಹೇಳಿದರು.
2015: ನವದೆಹಲಿ: ಭಾರತದಲ್ಲಿ ವಿಶ್ವ ಬ್ಯಾಂಕ್ ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ 1ನೇ ಸ್ಥಾನ ಪಡೆದಿದ್ದರೆ, ಕರ್ನಾಟಕ 9ನೇ ಸ್ಥಾನ ಪಡೆಯಿತು. ಉದ್ಯಮ ಸ್ಥಾಪಿಸಲು ಪೂರಕ ವಾತಾವರಣ, ಜಾಗದ ಲಭ್ಯತೆ, ಕಾರ್ಮಿಕರು ಮತ್ತು ಪರಿಸರ ಇಲಾಖೆ ಪರವಾನಗಿ, ರಾಜ್ಯ ಸರ್ಕಾರಗಳ ಸಹಕಾರ, ತೆರಿಗೆ ಪಾವತಿ ನಿಯಮಾವಳಿಗಳು, ಮೂಲಸೌಕರ್ಯ, ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಂತೆ ವಿಶ್ವಬ್ಯಾಂಕ್ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಆಂಧ್ರಪ್ರದೇಶ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದು, ಜಾರ್ಖಂಡ್ 3ನೇ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಛತ್ತೀಸ್ಗಢ (4ನೇ), ಮಧ್ಯಪ್ರದೇಶ (5ನೇ), ರಾಜಸ್ಥಾನ (6ನೇ), ಒಡಿಸ್ಸಾ (7ನೇ), ಮಹಾರಾಷ್ಟ್ರ (8ನೇ), ಕರ್ನಾಟಕ (9ನೇ) ಮತ್ತು ಉತ್ತರ ಪ್ರದೇಶ(10ನೇ) ಸ್ಥಾನ ಪಡೆದವು. ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಮಿಜೋರಾಮ್ ಕೊನೆಯ ಸ್ಥಾನ ಪಡೆದಿದ್ದು, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ, ನಾಗಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳು ನಂತರದ ಸ್ಥಾನ ಪಡೆದಿವೆ. ಪಶ್ಚಿಮ ಬಂಗಾಳ (11ನೇ), ತಮಿಳುನಾಡು (12ನೇ), ಹರ್ಯಾಣ (14ನೇ), ದೆಹಲಿ (15ನೇ), ಪಂಜಾಬ್ (16ನೇ), ಹಿಮಾಚಲ ಪ್ರದೇಶ (17ನೇ), ಕೇರಳ (18ನೇ), ಗೋವಾ (19ನೇ), ಬಿಹಾರ (21ನೇ) ಮತ್ತು ಅಸ್ಸಾಂ (22ನೇ) ಸ್ಥಾನ ಪಡೆದವು. ವಿಶ್ವಮಟ್ಟದಲ್ಲಿ ವಿಶ್ವಬ್ಯಾಂಕ್ 182 ದೇಶಗಳಲ್ಲಿ ಸಮೀಕ್ಷೆ ನಡೆಸಿತ್ತು. ಉದ್ಯಮ ಸ್ನೇಹಿ ವಾತಾವರಣ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 142ನೇ ಸ್ಥಾನ ಪಡೆದಿದೆ. ಕೇಂದ್ರ ಸರ್ಕಾರವು ದೇಶವನ್ನು ಉದ್ಯಮಸ್ನೇಹಿ ದೇಶವಾಗಿಲು ಕೆಲವೊಂದು ಅಗತ್ಯ ಕ್ರಮ ತೆಗೆದುಕೊಂಡಿದೆ.
2015: ನವದೆಹಲಿ: ಭಾರತದಲ್ಲಿ ವಿಶ್ವ ಬ್ಯಾಂಕ್ ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ 1ನೇ ಸ್ಥಾನ ಪಡೆದಿದ್ದರೆ, ಕರ್ನಾಟಕ 9ನೇ ಸ್ಥಾನ ಪಡೆಯಿತು. ಉದ್ಯಮ ಸ್ಥಾಪಿಸಲು ಪೂರಕ ವಾತಾವರಣ, ಜಾಗದ ಲಭ್ಯತೆ, ಕಾರ್ಮಿಕರು ಮತ್ತು ಪರಿಸರ ಇಲಾಖೆ ಪರವಾನಗಿ, ರಾಜ್ಯ ಸರ್ಕಾರಗಳ ಸಹಕಾರ, ತೆರಿಗೆ ಪಾವತಿ ನಿಯಮಾವಳಿಗಳು, ಮೂಲಸೌಕರ್ಯ, ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಂತೆ ವಿಶ್ವಬ್ಯಾಂಕ್ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಆಂಧ್ರಪ್ರದೇಶ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದು, ಜಾರ್ಖಂಡ್ 3ನೇ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಛತ್ತೀಸ್ಗಢ (4ನೇ), ಮಧ್ಯಪ್ರದೇಶ (5ನೇ), ರಾಜಸ್ಥಾನ (6ನೇ), ಒಡಿಸ್ಸಾ (7ನೇ), ಮಹಾರಾಷ್ಟ್ರ (8ನೇ), ಕರ್ನಾಟಕ (9ನೇ) ಮತ್ತು ಉತ್ತರ ಪ್ರದೇಶ(10ನೇ) ಸ್ಥಾನ ಪಡೆದವು. ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಮಿಜೋರಾಮ್ ಕೊನೆಯ ಸ್ಥಾನ ಪಡೆದಿದ್ದು, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ, ನಾಗಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳು ನಂತರದ ಸ್ಥಾನ ಪಡೆದಿವೆ. ಪಶ್ಚಿಮ ಬಂಗಾಳ (11ನೇ), ತಮಿಳುನಾಡು (12ನೇ), ಹರ್ಯಾಣ (14ನೇ), ದೆಹಲಿ (15ನೇ), ಪಂಜಾಬ್ (16ನೇ), ಹಿಮಾಚಲ ಪ್ರದೇಶ (17ನೇ), ಕೇರಳ (18ನೇ), ಗೋವಾ (19ನೇ), ಬಿಹಾರ (21ನೇ) ಮತ್ತು ಅಸ್ಸಾಂ (22ನೇ) ಸ್ಥಾನ ಪಡೆದವು. ವಿಶ್ವಮಟ್ಟದಲ್ಲಿ ವಿಶ್ವಬ್ಯಾಂಕ್ 182 ದೇಶಗಳಲ್ಲಿ ಸಮೀಕ್ಷೆ ನಡೆಸಿತ್ತು. ಉದ್ಯಮ ಸ್ನೇಹಿ ವಾತಾವರಣ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 142ನೇ ಸ್ಥಾನ ಪಡೆದಿದೆ. ಕೇಂದ್ರ ಸರ್ಕಾರವು ದೇಶವನ್ನು ಉದ್ಯಮಸ್ನೇಹಿ ದೇಶವಾಗಿಲು ಕೆಲವೊಂದು ಅಗತ್ಯ ಕ್ರಮ ತೆಗೆದುಕೊಂಡಿದೆ.
2015: ನವದೆಹಲಿ: ಭರವಸೆಯ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ಈದಿನ ಬಿಡುಗಡೆಯಾದ ಸಿಂಗಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ 125ನೇ ಸ್ಥಾನ ಪಡೆಯುವ ಮೂಲಕ ಜೀವಮಾನ ಶ್ರೇಷ್ಟ ಸಾಧನೆ ಮಾಡಿದರು. ಇತ್ತೀಚೆಗೆ ಯೂಕಿ ಎಟಿಪಿ ಶಾಂಘಯ್ ಚಾಲೆಂಜರ್ ಪ್ರಶಸ್ತಿ ಜಯಿಸಿದ್ದರು. ಆ ಜಯದೊಂದಿಗೆ 80 ಪಾಯಿಂಟ್ ಪಡೆದಿದ್ದ ಯೂಕಿ 20 ಸ್ಥಾನ ಮೇಲೇರಿ 125 ನೇ ಸ್ಥಾನ ಪಡೆದಿದ್ದಾರೆ. ಶಾಂಘಯ್ ಚಾಲೆಂಜರ್ನ ಮೊದಲ ಸುತ್ತಿನಲೇ ಹೊರಬಿದ್ದಿದ್ದ ಮತ್ತೊಬ್ಬ ಭರವಸೆಯ ಆಟಗಾರ ಸೋಮದೇವ್ 12 ಸ್ಥಾನ ಕುಸಿತ ಕಂಡು 164ನೇ ಸ್ಥಾನ ಪಡೆದರು. ಉಳಿದಂತೆ ಸಿಂಗಲ್ಸ್ ವಿಭಾಗದಲ್ಲಿ ಸಾಕೇತ್ ಮ್ಯಾನೆನಿ 195ನೇ ಸ್ಥಾನ, ರಾಮಕುಮಾರ್ ರಾಮನಾಥನ್ 218ನೇ ಸ್ಥಾನ ಪಡೆದರು. ಡಬಲ್ಸ್ನಲ್ಲಿ ರೋಹನ್ ಭೋಪಣ್ಣ 13ನೇ ಸ್ಥಾನ ಪಡೆದಿದ್ದು, ಲಿಯಾಂಡರ್ ಪೇಸ್ 33ನೇ ಸ್ಥಾನ ಪಡೆದರು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ತಮ್ಮ ಪ್ರಾಬಲ್ಯ ಮುಂದುವರೆಸಿ ಮೊದಲ ಸ್ಥಾನದಲ್ಲಿ ಮುಂದುವರೆದರು. ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಹಿಂದಿನ ದಿನ ನಡೆದ ಯುಎಸ್ಓಪನ್ ಡಬಲ್ಸ್ ಫೈನಲ್ಸ್ನಲ್ಲಿ ಜಯಗಳಿಸುವ ಮೂಲಕ ಪ್ರಶಸ್ತಿ ಪಡೆದಿದ್ದರು.
2015: ನವದೆಹಲಿ: ಸರ್ಕಾರಿ ಜಾಹಿರಾತುಗಳಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಪಕ್ಷದ ಮುಖಂಡರ ಭಾವಚಿತ್ರ ಬಳಕೆಗೆ ನಿರ್ಬಂಧ
ವಿಧಿಸಿ ನೀಡಿರುವ ಆದೇಶವನ್ನು ಮರುಪರಿಶೀಲನೆ ಮಾಡುವಂತೆ ಕೋರಿ ಕರ್ನಾಟಕ, ತಮಿಳು ನಾಡು, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿತು. ಜೊತೆಗೇ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ತ ಮಂಡಳಿ ಮತ್ತು ಎನ್ಜಿಒ ಕಾಮನ್ ಕಾಸ್ಗೂ ನೋಟಿಸ್ ನೀಡಿತು. ಸಾರ್ವಜನಿಕರ ತೆರಿಗೆ ಹಣದಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಮಂತ್ರಿಗಳ ಭಾವಚಿತ್ರಗಳನ್ನೊಳಗೊಂಡ ಸರ್ಕಾರಿ ಜಾಹಿರಾತುಗಳನ್ನು ಬಳಸಲಾಗುತ್ತಿದೆ. ಇದರಿಂದ ವೈಯುಕ್ತಿಕ ಪ್ರಚಾರಕ್ಕಾಗಿ ತೆರಿಗೆ ಹಣ ಬಳಕೆಯಾಗುತ್ತಿದೆ ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರಿಂ ಕೋರ್ಟ್ ಈ ಆದೇಶ ನೀಡಿತ್ತು. ಆದರೆ ಕೇಂದ್ರ ಸರ್ಕಾರಕ್ಕೆ ಮಾತ್ರ ವಿನಾಯಿತಿ ನೀಡಲಾಗಿತ್ತು. ಅದರಂತೆ ಕೇಂದ್ರ ಸರ್ಕಾರಿ ಜಾಹೀರಾತುಗಳಲ್ಲಿ ಪ್ರಧಾನಿ, ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿಗಳ ಭಾವಚಿತ್ರ ಬಳಕೆಗೆ ಅವಕಾಶ ನೀಡಲಾಗಿತ್ತು. ಈ ವಿನಾಯಿತಿ ಪ್ರಶ್ನಿಸಿರುವ ನಾಲ್ಕು ರಾಜ್ಯಗಳು ಇದೀಗ ತೀರ್ಪು ಮರು ಪರಿಶೀಲನೆಗೆ ಒತ್ತಾಯಿಸಿದ್ದವು. ಅಕ್ಟೋಬರ್ 13ರಂದು ಹಾಜರಾಗಿ ತನ್ನ ಅಭಿಪ್ರಾಯ ಹೇಳುವಂತೆ ನ್ಯಾಯಮೂರ್ತಿ ರಂಜನ್ ಗೊಗಾಯ್ ಹಾಗೂ ಪಿನಕಿ ಚಂದ್ರ ಘೋಷ್ ಕೇಂದ್ರ ಹಾಗೂ ಸರ್ಕಾರೇತರ ಸಂಸ್ಥೆಗೆ ನೋಟೀಸ್ ಜಾರಿ ಮಾಡಿದರು.
2015: ನವದೆಹಲಿ: ಅಖಂಡ ಹಿಂದು ರಾಷ್ಟ್ರದ ಕಲ್ಪನೆ ನೀಡಿದ ಸ್ವಾತಂತ್ರ್ಯ ಸೇನಾನಿ, ಕಟ್ಟಾ ಹಿಂದುತ್ವವಾದಿ ವೀರ ಸಾವರ್ಕರ್ಗೆ ದೇಶದ ಪರಮೋಚ್ಛ ಗೌರವವಾದ ‘ಭಾರತ ರತ್ನ’ ನೀಡುವಂತೆ ಶಿವಸೇನೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು. ಈ ಹಿಂದಿನ ಸರ್ಕಾರ ವೀರ ಸಾವರ್ಕರ್ ಅವರ ಕೊಡುಗೆಯನ್ನು ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸಿದೆ. ಆಗಿರುವ ಲೋಪಗಳನ್ನು ಸರಿಪಡಿಸಿ ವಿನಾಯಕ ದಾಮೋದರ ಸಾವರ್ಕರ್ಗೆ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿ ಶಿವಸೇನೆ ಮುಖಂಡ ಸಂಜಯ್ ರಾವತ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರು. ಹಿಂದು ರಾಷ್ಟ್ರ ನಿರ್ಮಾಣದ ಹೋರಾಟಕ್ಕೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಸಾವರ್ಕರ್ ಅವರ ಸಾಧನೆ, ಕೊಡುಗೆಗಳನ್ನು ಹಿಂದಿನ ಸರ್ಕಾರ ಮರೆಮಾಚಿದೆ. ಸಾವರ್ಕರ್ಗೆ ಮರಣೋತ್ತರವಾಗಿ ದೇಶದ ಪರಮೋಚ್ಛ ಗೌರವ ದೊರಕಬೇಕು ಎನುವುದು ಈ ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ರಾಜ್ಯ ಸಭೆ ಸದಸ್ಯರೂ ಆಗಿರುವ ರಾವತ್ ಪತ್ರದಲ್ಲಿ ಕೋರಿದರು.
2015: ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿ ಸಂಘಟನೆಗಳ ನಡುವೆ ಸಂಘರ್ಷ ಏರ್ಪಟ್ಟಿದ್ದು, ಹಿಜ್ಬುಲ್ ಮುಜಾಹಿದೀನ್ನಿಂದ ಬೇರೆಯಾಗಿ ತಮ್ಮದೇ ಸಂಘಟನೆ ಕಟ್ಟಿದ್ದ ಇಬ್ಬರನ್ನು ಮತ್ತು ಮತ್ತೊಬ್ಬ ಅಜ್ಞಾತ ವ್ಯಕ್ತಿಯನ್ನು ಹಿಜ್ಬುಲ್ ಉಗ್ರರು ಹತ್ಯೆ ಮಾಡಿದರು. ಈದಿನ ಬೆಳಗ್ಗೆ ಬಾರಾಮುಲ್ಲಾ ಜಿಲ್ಲೆಯ ಪಟ್ಟನ್ ಪ್ರದೇಶದಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದ್ದವು. ಅದರಲ್ಲಿ ಇಬ್ಬರನ್ನು ಗುರುತಿಸಲಾಗಿದ್ದು, ಒಬ್ಬ ವ್ಯಕ್ತಿ ಸೋಪುರೆಯ ಅಮೀರ್ ಖ್ವದಿರ್ ರಿಷಿ ಮತ್ತು ಪಟ್ಟನ್ನ ಲೋಲಿಪೊರದ ಆಶಿಕ್ ವಾನಿ ಎಂದು ಪೊಲೀಸರು ತಿಳಿಸಿದರು.. ರಿಷಿ ಮತ್ತು ವಾನಿ ಲಷ್ಕರ್ ಎ ಇಸ್ಲಾಮ್ ಎಂಬ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂಘಟನೆಯು ಹಿಜ್ಬುಲ್ ಮುಜಾಹಿದೀನ್ ಸಂಘಟನೆಯಿಂದ ಬೇರ್ಪಟ್ಟು ತನ್ನದೇ ಅಸ್ಥಿತ್ವ ಕಂಡು ಕೊಳ್ಳುತ್ತಿತ್ತು. ವಾನಿ ಕಳೆದ ವರ್ಷದಿಂದ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದ, ರಿಷಿ ಜುಲೈನಲ್ಲಿ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಯಾಗಿದ್ದ. ಹಿಜ್ಬುಲ್ ಮುಜಾಹಿದೀನ್ನಲ್ಲಿ ಒಡಕುಂಟಾಗಿದ್ದು, ನಜ್ಜರ್ ಎಂಬ ಸಂಘಟನೆ ಬೇರ್ಪಟ್ಟಿದೆ. ಈ ಸಂಘಟನೆ ಜಮ್ಮು ಮತ್ತು ಕಾಶ್ಮೀರದ ಟೆಲಿಫೋನ್ ಟವರ್ ಮತ್ತು ಟೆಲಿಫೋನ್ ಅಂಗಡಿಗಳು ಮತ್ತು ಆಫೀಸಿನ ಮೇಲೆ ದಾಳಿ ನಡೆಸಿತ್ತು. ಹಿಜ್ಬುಲ್ ಮುಜಾಹಿದೀನ್ ಮತ್ತು ಅದರಿಂದ ಬೇರ್ಪಟ್ಟ ಇತರ ಸಂಘಟನೆಗಳ ನಡುವೆ ಘರ್ಷಣೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಮೂವರ ಹತ್ಯೆ ನಡೆದಿರಬಹುದು ಎಂದು ಪೊಲೀಸರು ತಿಳಿಸಿದರು. ಮೂವರ ಮೃತದೇಹ ಪತ್ತೆಯಾದ ನಂತರ ಜನತೆ ಪ್ರತಿಭಟನೆ ನಡೆಸಿದರು. ಪಟ್ಟನ್, ಪಲಹಾಲ್ ನಗರಗಳು ಮತ್ತು ಶ್ರೀನಗರ-ಬಾರಮುಲ್ಲಾ ಹೆದ್ದಾರಿಯನ್ನು ತಡೆದಿದ್ದರು.
2015: ನ್ಯೂಯಾರ್ಕ್: ಸೆರ್ಬಿಯಾದ ನೊವಾಕ್ ಜೋಕೋವಿಕ್ ಹಿಂದಿನ ದಿನ ತಡರಾತ್ರಿ ನಡೆದ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಸ್ವಿಜರ್ಲೆಂಡ್ನ ರೋಜರ್ ಫೆಡರರ್ ಅವರನ್ನು 6-4, 5-7, 6-4, 6-4ರಿಂದ ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು. ಜೋಕೋವಿಕ್ಗೆ 2015ನೇ ಟೆನಿಸ್ ಋತುವಿನ 3ನೇ ಹಾಗೂ ಒಟ್ಟಾರೆ ವೃತ್ತಿಜೀವನದ 10ನೇ ಗ್ರಾಂಡ್ಸ್ಲಾಂ ಪ್ರಶಸ್ತಿ ಇದು. ತನ್ಮೂಲಕ ಅವರು 10 ಗ್ರಾಂಡ್ಸ್ಲಾಂ ಪ್ರಶಸ್ತಿ ಸಾಧನೆ ಮಾಡಿದ್ದ ಅಮೆರಿಕದ ಬಿಲ್ ಟಿಲ್ಡೆನ್ ಅವರ ಸಾಲಿಗೆ ಸೇರ್ಪಡೆಗೊಂಡರು. ಮೂರು ಗಂಟೆಗಳ ಕಾಲ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆವುಂಟಾಗಿತ್ತು. ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಫೆಡರರ್ ಅವರ ಅಭಿಮಾನಿ ಬಳಗದ ನಡುವೆ ಏಕಾಂಗಿ ಹೋರಾಟ ನಡೆಸಿದ ವಿಶ್ವ ನಂ.1 ಆಟಗಾರ, ವಿಶ್ವ ನಂ.2 ಆಟಗಾರನನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಈ ಬಾರಿಯ ಫ್ರೆಂಚ್ ಓಪನ್ ಫೈನಲ್ನಲ್ಲಿ ಸ್ವಿಜರ್ಲೆಂಡ್ನ ಸ್ಟಾನ್ಸಿಲಾಸ್ ವಾವ್ರಿಂಕಾ ವಿರುದ್ಧ ಸೋಲದೇ ಹೋಗಿದ್ದಲ್ಲಿ ಸೆರ್ಬಿಯಾ ಆಟಗಾರ ಅತಿ ಅಪರೂಪದ ಕ್ಯಾಲೆಂಡರ್ ಗ್ರಾಂಡ್ಸ್ಲಾಂ ಸಾಧನೆ ಮಾಡಿದ ಶ್ರೇಯಕ್ಕೆ ಪಾತ್ರರಾಗಿರುತ್ತಿದ್ದರು. ಮಳೆಯಿಂದಾಗಿ ತೇವಗೊಂಡಿದ್ದ ಕೋರ್ಟ್ನಲ್ಲಿ ಚುರುಕಾಗಿ ಚಲಿಸಲು ಪರದಾಡುತ್ತಿದ್ದ ಜೋಕೋವಿಕ್ ಬಿದ್ದು ಬಲ ಮಂಡಿ ಹಾಗೂ ಮೊಣಕೈಗೆ ಗಾಯ ಮಾಡಿಕೊಂಡರು. ಆದರೆ ಗಾಯಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡ ಅವರು ಪುಟಿದೆದ್ದು ಆಟಕ್ಕೆ ಮರಳಿದ ಅವರು ಪ್ರಶಸ್ತಿಗೆ ಮುತ್ತಿಕ್ಕಿದರು.
2015: ಗುವಾಹತಿ: ಕಳೆದ ವರ್ಷ ನಡೆದ ಆದಿವಾಸಿ ಹತ್ಯಾಕಾಂಡದಲ್ಲಿ ಷಾಮೀಲಾಗಿದ್ದನೆಂದು ಆಪಾದಿಸಲಾಗಿರುವ ಎನ್ಡಿಎಫ್ಬಿ (ಎಸ್) ಉಗ್ರಗಾಮಿಯೊಬ್ಬನನ್ನು ಅಸ್ಸಾಮಿನ ಚಿರಾಂಗ್ ಜಿಲ್ಲೆಯಲ್ಲಿ ಶಸ್ತ್ರಗಳು ಮತ್ತು ಮದ್ದು ಗುಂಡು ಸಹಿತವಾಗಿ ಬಂಧಿಸಲಾಯಿತು. ಉಗ್ರಗಾಮಿಯನ್ನು ಅಜೆ ನದಿ ಸಮೀಪದ ಧಾಲಿಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಿಂದಿನ ದಿನ ತಡರಾತ್ರಿಯಲ್ಲಿ ಬಂಧಿಸಲಾಯಿತು ಎಂದು ಐಜಿಪಿ ಎಲ್.ಆರ್. ಬಿಷ್ನೋಯಿ ಹೇಳಿದರು. ಬಂಧಿತ ಉಗ್ರಗಾಮಿಯನ್ನು ಥೋಪ್ಸಾ ನಝುರಿ (28) ಎಂಬುದಾಗಿ ಗುರುತಿಸಲಾಗಿದ್ದು, ಈತ ಕಳೆದ ವರ್ಷ ಡಿಸೆಂಬರ್ 23ರಂದು ಸುಮಾರು 80 ಆದಿವಾಸಿಗಳನ್ನು ಬಲಿಪಡೆದುಕೊಂಡ ಹತ್ಯಾಕಾಂಡದಲ್ಲಿ ಷಾಮೀಲಾಗಿದ್ದ. ಹಲವಾರು ಅಪಹರಣ ಕೃತ್ಯಗಳಲ್ಲೂ ಈತ ಷಾಮೀಲಾಗಿದ್ದ ಎಂದು ಬಿಷ್ನೋಯಿ ನುಡಿದರು. ಒಂದು 7.65 ಪಿಸ್ತೂಲ್, ಎರಡು ಸುತ್ತು ಮದ್ದುಗುಂಡು ಮತ್ತು ಒಂದು ಗ್ರೆನೇಡ್ನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.
2015: ಭೋಪಾಲ್: ಜಬುವಾದ ಹೋಟೆಲ್ ಒಂದರಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಕೆಲ ದಿನಗಳ ಹಿಂದಷ್ಟೇ ಸಿಲಿಂಡರ್ ಸ್ಪೋಟಗೊಂಡು ಹೋಟೆಲ್ನ ಕಟ್ಟಡದ ಮೇಲ್ಛಾವಣಿಯೇ ಕುಸಿದು ಬಿದ್ದ ಪರಿಣಾಮ 88 ಮಂದಿ ಸಾವನ್ನಪ್ಪಿದ್ದರು. 100ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಘಟನೆಯ ಬಳಿಕ ಇಡೀ ಪ್ರಕರಣ ಕೆಲವೊಂದು ಅನುಮಾನಗಳಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪೋಟಕ್ಕೆ ಕಾರಣವೇನು ಎನ್ನುವುದರ ತನಿಖೆಗೆ ಸರ್ಕಾರ ವಿಶೇಷ ತಂಡ ರಚಿಸಿದೆ. ಈ ಕುರಿತು ಭೋಪಾಲ್ನಲ್ಲಿ ಸೋಮವಾರ ಪ್ರತಿಕ್ರಿಯಿಸಿರುವ ಸಿಎಂ ಚೌಹಾಣ್, ಸಿಟ್ ತನಿಖೆ ನಡೆಸುವುದಾಗಿ ಹೇಳಿದರು.
2015: ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಗಳಿಗಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್ಡಿಎ) ಸ್ಥಾನ ಹೊಂದಾಣಿಕೆಯನ್ನು ಬಿಜೆಪಿ ಅಂತಿಮಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ದೆಹಲಿಯಲ್ಲಿ ಪ್ರಕಟಿಸಿದರು. ಸ್ಥಾನ ಹೊಂದಾಣಿಕೆ ಪ್ರಕಾರ 243 ಸ್ಥಾನಗಳ ಪೈಕಿ ಬಿಜೆಪಿ 160, ಎಲ್ಜೆಪಿ 40, ಎಲ್ಎಸ್ಪಿ 23 ಮತ್ತು ಜಿತನ್ ರಾಂ ಮಾಂಝಿ ಅವರ ಎಚ್ಎಎಂ 20 ಸ್ಥಾನಗಳಿಗೆ ಸ್ಪರ್ಧಿಸಲಿವೆ ಎಂದು ಷಾ ಹೇಳಿದರು. ಬಿಹಾರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರಥ್ಯ ವಹಿಸುವರು. ಎನ್ಡಿಎ ಅಂಗ ಪಕ್ಷಗಳ ಪರವಾಗಿಯೂ ಅವರು ಪ್ರಚಾರ ಮಾಡಲಿದ್ದಾರೆ ಎಂದು ಷಾ ಹೇಳಿದರು.
2015: ಮುಂಬೈ: ಸೆಪ್ಟೆಂಬರ್ 17ರಂದು ಮಾಂಸ ಮಾರಾಟದ ಮೇಲೆ ವಿಧಿಸಲಾದ ನಿಷೇಧಕ್ಕೆ ಬಾಂಬೆ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿತು. ಆದರೆ ಆದಿನ ಪ್ರಾಣಿಗಳ ವಧೆ ಮೇಲೆ ವಿಧಿಸಲಾದ ನಿಷೇಧ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. ಎರಡು ದಿನಗಳ ಕಾಲ ಮಾಂಸ ಮಾರಾಟವನ್ನು ನಿಷೇಧಿಸುವ ಸುತ್ತೋಲೆಯನ್ನು ಸರ್ಕಾರ 2004ರಲ್ಲೇ ಹೊರಡಿಸಿದ್ದರೂ, ಅದನ್ನು ಸಂಪೂರ್ಣವಾಗಿ ಎಂದೂ ಜಾರಿಗೊಳಿಸಿಲ್ಲ ಎಂದು ಹೈಕೋರ್ಟ್ ಹೇಳಿತು.
2015: ಹೈದರಾಬಾದ್: ಪಶ್ಚಿಮ ಗೋದಾವರಿ ಜಿಲ್ಲೆಯ ಗುಂಡೆಪಲ್ಲಿ ಬಳಿ ಕಾರ್ವಿುಕರನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿ ಹೊಡೆದ ಪರಿಣಾಮ 18 ಕಾರ್ವಿುಕರು ಸ್ಥಳದಲ್ಲೇ ಮೃತರಾದರು. ಸುಮಾರು 17ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ನಿದ್ದೆ ಮಂಪರಿನಲ್ಲಿದ್ದ ಲಾರಿ ಚಾಲಕ ತೂಕಡಿಸಿದಾಗ ಆತನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆಯಿತು.. ಅದೃಷ್ಟವಶಾತ್ ಬಚಾವಾದ ಲಾರಿ ಚಾಲಕ ಮತ್ತು ಕ್ಲೀನರ್ ಪೊಲೀಸರಿಗೆ ಶರಣಾದರು. ವಿಜಯವಾಡದಿಂದ ವಿಶಾಖಪಟ್ಟಣಕ್ಕೆ ಲಾರಿಯಲ್ಲಿ ಹಾರು ಬೂದಿಯನ್ನು ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಲಾರಿ ಪಲ್ಟಿ ಹೊಡೆದ ಪರಿಣಾಮ, ಅದರಲ್ಲಿದ್ದ ಕಾರ್ವಿುಕರು ಹಾರುಬೂದಿಯೊಳಗೆ ಸಿಲುಕಿಕೊಂಡು ಮೃತರಾದರು. ಹತ್ತಿರದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ವಿುಕರು ಪಾಳಿ ಮುಗಿಸಿಕೊಂಡು ತಮ್ಮ ಊರಿಗೆ ತೆರಳಲು ಏಲೂರು ಬಳಿ ಲಾರಿಯನ್ನು ಹತ್ತಿದ್ದರು.
2015: ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ವಿಷ್ಣು ಅವತಾರ ವಿವಾದಕ್ಕೆ ಸಂಬಂಧಿಸಿದಂತೆ ಧೋನಿ ವಿರುದ್ಧ ಕ್ರಿಮಿನಲ್ ಖಟ್ಲೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು.
2015: ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆಯುವ ತನ್ನ ಸುದೀರ್ಘ ಹೋರಾಟದಲ್ಲಿ ಭಾರತದ ಪಾಲಿಗೆ ಈದಿನ (ಸೋಮವಾರ) ನಿರ್ಣಾಯಕ ದಿನವಾಯಿತು ವಿಶ್ವಸಂಸ್ಥೆಯ 200 ಸದಸ್ಯರ ರಾಷ್ಟ್ರಗಳು ಭದ್ರತಾ ಮಂಡಳಿಯನ್ನು ಸುಧಾರಿಸಲು ಕರೆ ನೀಡುವ ದಾಖಲೆಗೆ ಸರ್ವಾನುಮತದ ಸಮ್ಮದಿ ನೀಡಿದವು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸೇರ್ಪಡೆಯಾಗುವ ಭಾರತದ ಯತ್ನದಲ್ಲಿ ಇನ್ನೊಂದು ಹೆಜ್ಜೆಯ ಮುನ್ನಡೆಯಾಯಿತು. ವಿಶ್ವಸಂಸ್ಥೆಯ ಉನ್ನತ ನೀತಿ ನಿರೂಪಕ ಸಂಸ್ಥೆಯಾದ ಭದ್ರತಾ ಮಂಡಳಿ ಪ್ರಸ್ತುತ 15 ಸದಸ್ಯರನ್ನು ಹೊಂದಿವೆ. ಈ ಪೈಕಿ ಚೀನಾ, ರಷ್ಯಾ ಮತ್ತು ಅಮೆರಿಕ ಸೇರಿದಂತೆ ಐದು ರಾಷ್ಟ್ರಗಳು ಕಾಯಂ ಸದಸ್ಯ ರಾಷ್ಟ್ರಗಳು. ಇದೇ ಮೊತ್ತ ಮೊದಲ ಬಾರಿಗೆ ವಿವಿಧ ರಾಷ್ಟ್ರಗಳು ಭದ್ರತಾ ಮಂಡಳಿಯ ಸುಧಾರಣೆಗೆ ಸಂಬಂಧಿಸಿದಂತೆ ’ನಿರ್ಣಯವು ಏನು ಹೇಳಬೇಕು’ ಎಂಬ ಬಗ್ಗೆ ಲಿಖಿತ ಸಲಹೆಗಳನ್ನು ಸಲ್ಲಿಸಿವೆ. ಭಾರತದ ಯತ್ನವನ್ನು ವಿಫಲಗೊಳಿಸುವ ಯತ್ನವಾಗಿ ಎಂಬಂತೆ ಅಮೆರಿಕ, ಚೀನಾ ಮತ್ತು ರಷ್ಯಾ ಈ ಕೆಲಸದಲ್ಲಿ ಭಾಗಿಯಾಗಿರಲಿಲ್ಲ. ದಾಖಲೆ ಕುರಿತ ಮಾತುಕತೆಗಳನ್ನು ಔಪಚಾರಿಕವಾಗಿ ಇನ್ನೊಂದು ವರ್ಷಕ್ಕೆ ವಿಸ್ತರಿಸಬೇಕೇ ಎಂಬ ಬಗ್ಗೆ ವಿಶ್ವಸಂಸ್ಥೆಯು ಪರಿಶೀಲಿಸಿತು.. ಆದರೆ ಭದ್ರತಾ ಮಂಡಳಿ ವಿಸ್ತರಣೆಗೆ ಚೀನಾ ಪ್ರಬಲ ವಿರೋಧ ವ್ಯಕ್ತ ಪಡಿಸಿತ್ತು.
2015: ಬೆಂಗಳೂರು: ರಾಜ್ಯದಲ್ಲಿ ಮಳೆ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಾಗುವುದಿಲ್ಲವೆಂದು ರಾಜ್ಯ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ತಮಿಳುನಾಡು ಸಿಎಂಗೆ ಪತ್ರ ಬರೆದರು.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ತಮಿಳುನಾಡು ಸಿಎಂ ಜಯಲಲಿತಾ, ತಾವು ಮಧ್ಯಪ್ರವೇಶಿಸಿ ನ್ಯಾಯಾಧಿಕರಣದ ತೀರ್ಪಿನನ್ವಯ ಕಾವೇರಿ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿರುವ ಮುಖರ್ಜಿ, ಸಂಕಟ ಸೂತ್ರದನ್ವಯ ತಮಿಳುನಾಡಿಗೆ ಸಾಕಷ್ಟು ಕಾವೇರಿ ನೀರನ್ನು ಬಿಡಲಾಗಿದೆ. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಹೆಚ್ಚಿನ ನೀರು ಹರಿಸಲು ಸಾಧ್ಯವಾಗುವುದಿಲ್ಲವೆಂದು ಸ್ಪಷ್ಟಪಡಿಸಿದರು.
2015: ಹಾಸನ: ಶ್ರವಣಬೆಳಗೊಳ ಹೋಬಳಿ ರಾಚೇನಹಳ್ಳಿಯಲ್ಲಿ ಹೇಮಾವತಿ ಎಡದಂಡೆ ನಾಲೆ ಒಡೆದು, ಅಪಾರ ಪ್ರಮಾಣದ ನೀರು ಪೋಲಾಯಿತು. ಜೊತೆಗೆ ಸಮೀಪದಲ್ಲಿರುವ ಹೊಲಗದ್ದೆಗಳಿಗೆ ನೀರು ನುಗ್ಗಿದ್ದು ಭಾರಿ ಪ್ರಮಾಣದ ಬೆಳೆ ನಷ್ಟವಾಯಿತು. ಮಂಡ್ಯ ಜಿಲ್ಲೆಗೆ ನೀರು ಪೂರೈಸುವ ನಾಲೆ ಇದು. ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು.
2015: ಬೆಂಗಳೂರು: ಖ್ಯಾತ ಚಿತ್ರಕಲಾವಿದ ಕೆ.ಎನ್. ರಾಮಚಂದ್ರನ್ ಈದಿನ ಬೆಳಗ್ಗೆ ನಿಧನರಾದರು. ಬಸವೇಶ್ವರ ನಗರದಲ್ಲಿರುವ ಪವಿತ್ರಾ ಪ್ಯಾರಡೈಸ್ ಹೋಟೆಲ್ ಬಳಿಯ ಶಾರದಾ ಕಾಲೋನಿಯಲ್ಲಿನ ಇವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಯಿತು. ಸಂಜೆ ಹರಿಶ್ಚಂದ್ರ ಘಾಟ್ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
2015: ನವದೆಹಲಿ: ಸಗಟು ಸೂಚ್ಯಂಕ ಆಧಾರಿತ ಹಣದುಬ್ಬರ ಕುಸಿತ ಪ್ರವೃತ್ತಿ ಸತತ 10ನೇ ತಿಂಗಳಲ್ಲೂ ಮುಂದುವರೆದು, ಆಗಸ್ಟ್ ತಿಂಗಳಲ್ಲಿ ಚಾರಿತ್ರಿಕ ಶೇಕಡಾ (-)4.95ರಷ್ಟು ಇಳಿಯಿತು. ಜುಲೈ ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಶೇಕಡಾ (-)4.05 ಇತ್ತು. 2014ರ ನವೆಂಬರ್ನಿಂದ ಇದು ಕುಸಿತದ ಹಾದಿಯಲ್ಲೇ ಮುಂದುವರೆದಿತ್ತು. 2014ರ ಆಗಸ್ಟ್ನಲ್ಲಿ ಹಣದುಬ್ಬರ ದರ ಶೇಕಡಾ 3.85 ಇತ್ತು. ಏನಿದ್ದರೂ ಈರುಳ್ಳಿ ಮತ್ತು ದ್ವಿದಳ ಧಾನ್ಯಗಳು ಆಗಸ್ಟ್ ತಿಂಗಳಲ್ಲಿ ಕ್ರಮವಾಗಿ ಶೇಕಡಾ 65.29 ಮತ್ತು 36.40 ರಷ್ಟು ಹಣದುಬ್ಬರದೊಂದಿಗೆ ತುಟ್ಟಿಯಾಯಿತು. ಒಟ್ಟಾರೆ ಆಹಾರ ಉತ್ಪನ್ನಗಳ ಹಣದುಬ್ಬರ ಸತತ ಎರಡನೇ ತಿಂಗಳಲ್ಲೂ ಕುಸಿತದ (ಶೇಕಡಾ (-)1.13 ಹಾದಿಯಲ್ಲೇ ಮುಂದುವರೆಯಿತು. ತರಕಾರಿಗಳ ಹಣದುಬ್ಬರ ಶೇಕಡಾ (-)21.21ಗೆ ಕುಸಿದಿವೆ. ಆಲೂಗಡ್ಡೆ ಹಣದುಬ್ಬರ ಶೇಕಡಾ (-)51.71ರಷ್ಟಕ್ಕೆ ಇಳಿಯಿತು.
2015: ಲಂಡನ್: ತನ್ನ ಜೊತೆಗೆ ಸಹಾಯಕ ನಾಯಿಯನ್ನು (ಗೈಡ್ ಡಾಗ್) ಇರಿಸಿಕೊಂಡದ್ದಕ್ಕಾಗಿ 19ರ ಹರೆಯದ ಅಂಧ ತರುಣಿಯೊಬ್ಬಳು ಕಣ್ಣೀರು ಹಾಕುತ್ತಾ ಥಾಯ್ ರೆಸ್ಟೋರೆಂಟ್ ಒಂದರಿಂದ ನಿರ್ಗಮಿಸಬೇಕಾಗಿ ಬಂದ ವಿವಾದಾಸ್ಪದ ಘಟನೆ
ಇಂಗ್ಲೆಂಡ್ನಲ್ಲಿ ಘಟಿಸಿತು. ರೆಸ್ಟೋರೆಂಟ್ ಫೇಸ್ ಬುಕ್ನಲ್ಲಿ ಈ ಘಟನೆ ಬಗ್ಗೆ ಟೀಕೆಗಳ ವಿನಿಮಯವಾಯಿತು. ಸಹಾಯಕ ನಾಯಿಯೊಂದಿಗೆ ಇರಲು ಅವಕಾಶ ಇಲ್ಲ ಎಂದು ಹೇಳಿ ರೆಸ್ಟೋರೆಂಟ್ ಸಿಬ್ಬಂದಿ ಆಕೆಯನ್ನು ರೆಸ್ಟೋರೆಂಟ್ನಿಂದ ಹೊರಕ್ಕೆ ಕಳುಹಿಸಿದರು ಎಂದು ವರದಿಗಳು ತಿಳಿಸಿದವು. ‘ನನ್ನ ದಾರಿ ತಪ್ಪಿಸಬೇಡಿ, ನಾನು ಕೆಲಸ ಮಾಡುವ ನಾಯಿ’ ಎಂಬುದಾಗಿ ಸೂಚಿಸುವ ಬರಹ ಹೊತ್ತಿದ್ದ ಎರಡು ವರ್ಷದ ಲ್ಯಾಬ್ರಡೋರ್ ರಿಟ್ರೀವರ್ ನಾಯಿ ಅಂಧ ತರುಣಿಯ ನೆರವಿಗಾಗಿ ಇದ್ದಂತಹ ಪ್ರಾಣಿ ಎಂಬುದಾಗಿ ಸ್ಪಷ್ಟವಾಗಿದ್ದರೂ ರೆಸ್ಟೋರೆಂಟ್ ಮ್ಯಾನೇಜರ್ ತರುಣಿಯನ್ನು ಉಪಾಹಾರ ಗೃಹದಿಂದ ಬಲಾತ್ಕಾರವಾಗಿ ಹೊರಗಟ್ಟಿದ ಎಂದು ವರದಿ ತಿಳಿಸಿದತು. ‘ಲೀವರ್ಪೂಲ್ನ ಯೀ ರಾಹ್ ಥಾಯ್ ರೆಸ್ಟೋರೆಂಟ್ನ ಮ್ಯಾನೇಜರ್ ಬಲಾತ್ಕಾರವಾಗಿ ಹೊರಕ್ಕೆ ಕಳುಹಿಸಿದ ಬಳಿಕ ನನ್ನ ಪುತ್ರಿ ಭ್ರಮನಿರಸನಗೊಂಡಿದ್ದಾಳೆ’ ಎಂದು ಆಕೆಯ ತಾಯಿಯ ಹೇಳಿದರು. ‘ಎಲ್ಲಾ ರೆಸ್ಟೋರೆಂಟ್ಗಳೂ ನಗರದ ಎಲ್ಲಾ ಜನರಿಗೂ ಲಭ್ಯವಾಗಬೇಕು. ಜನ ಈ ರೀತಿ ವರ್ತಿಸುವುದು ಭ್ರಮನಿರಸನದಾಯಕ’ ಎಂದು ಅವರು ಪ್ರತಿಕ್ರಿಯಿಸಿದರು. ‘ನನ್ನ ಪುತ್ರಿಯ ಜೊತೆಗಿದ್ದ ನಾಯಿ ಆಕೆಯ ಸಹಾಯಕ ಪ್ರಾಣಿಯಾಗಿ ಕೆಲಸ ಮಾಡುತ್ತಿತ್ತು ಎಂಬುದು ಸ್ಪಷ್ಟವಾಗಿತ್ತು. ಆದರೆ ಮ್ಯಾನೇಜರ್ ‘ನಾನಿದೆಲ್ಲವನ್ನೂ ಲೆಕ್ಕಿಸುವುದಿಲ್ಲ. ನೀನು ಹೊರಕ್ಕೆ ಹೋಗಲೇ ಬೇಕು ಎಂದು ಬಲಾತ್ಕರಿಸಿದ. ಬೇಕಿದ್ದರೆ ನಾಯಿಯ ಜೊತೆಗೆ ಹೊರಗೆ ಕುಳಿತುಕೊಳ್ಳಬಹುದು ಎಂದೂ ಆತ ಹೇಳಿದ. ದುಃಖಿತಳಾದ ಪುತ್ರಿ ಭ್ರಮನಿರಸನಗೊಂಡು ಮನೆಗೆ ಹಿಂತಿರುಗಿದಳು’ ಎಂದು ತಾಯಿ ಹೇಳಿದರು. ‘ಸಹಾಯಕ ನಾಯಿಗಳನ್ನು ನಮ್ಮ ರೆಸ್ಟೋರೆಂಟ್ಗಳ ಒಳಗೆ ಬಿಡಬಹುದು ಎಂಬುದು ನಮ್ಮ ಕಂಪೆನಿಯ ನೀತಿ. ನಮ್ಮ ಮತ್ತು ಅತಿಥಿ ಮಧ್ಯೆ ನಡೆದ ಸಂಭಾಷಣೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಈ ರಾಹ್ ರೆಸ್ಟೋರೆಂಟ್ಗಳ ಬ್ರಾಂಡ್ ಮ್ಯಾನೇಜರ್ ರಚಾಯೆಲ್ ಕ್ಲಾರ್ಕ್ ಸ್ಪಷ್ಟನೆ ನೀಡಿದರು.
2015: ಕಾಬೂಲ್: ಮಾನವ ಬಾಂಬರ್ಗಳು ಮತ್ತು ಶಸ್ತ್ರಧಾರಿಗಳ ಜೊತೆಗೆ ಆಫ್ಘಾನಿಸ್ತಾನದ ಘಜನಿ ಸೆರೆಮನೆಯ ಮೇಲೆ ನಸುಕಿನ 2 ಗಂಟೆ ವೇಳೆಗೆ ದಾಳಿ ನಡೆಸಿದ ತಾಲಿಬಾನ್ ಉಗ್ರಗಾಮಿಗಳು ಕನಿಷ್ಠ 4 ಮಂದಿ ಪೊಲೀಸರನ್ನು ಕೊಂದು, 150 ಮಂದಿ ತಾಲಿಬಾನಿಗಳು ಸೇರಿದಂತೆ 352 ಕೈದಿಗಳನ್ನು ಬಿಡುಗಡೆ ಮಾಡಿದರು. ಅತ್ಯಂತ ಪ್ರಮುಖ ಸೇನಾ ಮುಜಾಹಿದೀನ್ನನ್ನು ಬಿಡುಗಡೆ ಮಾಡಲಾಗಿದೆ ಎಂದು ಉಗ್ರಗಾಮಿ ಗುಂಪು ಪ್ರತಿಪಾದಿಸಿತು. ಶಂಕಿತ ಮಾನವ ಬಾಂಬರ್ಗಳ ಕನಿಷ್ಠ ಎರಡು ಶವಗಳು ಮತ್ತು ಸ್ಪೋಟಗೊಂಡ ಕಾರು ದಾಳಿಯ ಬಳಿಕ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದವು.ದಾಳಿ ಕಾಲದಲ್ಲಿ ಶಿಕ್ಷೆಗೆ ಗುರಿಯಾಗಿದ್ದ 150 ಮಂದಿ ತಾಲಿಬಾನ್ ಸದಸ್ಯರು ಸೇರಿದಂತೆ 352 ಮಂದಿ ಕೈದಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಘಜನಿಯ ಡೆಪ್ಯುಟಿ ಗವರ್ನರ್ ಮೊಹಮ್ಮದ್ ಅಲಿ ಅಹ್ಮದಿ ಹೇಳಿದರು. ನಾಲ್ವರು ಆಫ್ಘನ್ ಭದ್ರತಾ ಗಾರ್ಡ್ಗಳು ಮತ್ತು 7 ಮಂದಿ ತಾಲಿಬಾನಿ ದಾಳಿಕೋರರು ಘರ್ಷಣೆಯಲ್ಲಿ ಹತರಾಗಿದ್ದಾರೆ ಎಂದು ಅಹ್ಮದಿ ಹೇಳಿದರು.
2015: ತಿರುವನಂತಪುರ: ವಿಶ್ವದೆಲ್ಲೆಡೆ ಆಯಾ ಭಾಷೆಗೆ ಸಂಬಂಧಿಸಿದಂತೆ ಚಲನಚಿತ್ರ ಸಂಘಗಳಿರುವುದು ಹಳೆ ಸುದ್ದಿ. ಆದರೇ ಕೇರಳ ಚಿತ್ರೋದ್ಯಮದಲ್ಲೀಗ ಮಹಿಳಾ ಚಿತ್ರ ನಟಿಯರ ಸಂಘ ಅಸ್ತಿತ್ವಕ್ಕ್ಕೆ ಬರುತ್ತಿರುವುದು ಹೊಸ ಸುದ್ದಿ. ಇಲ್ಲಿನ ‘ಸ್ತ್ರೀ ಪಾದಮ್ ಕೇಂದ್ರಮ್ ಎಂಬ ಸಂಸ್ಥೆ ಮಹಿಳಾ ಚಿತ್ರ ಸಂಘವನ್ನು ಸೆಪ್ಟೆಂಬರ್ 15 ರಂದು ಅಧಿಕೃತವಾಗಿ ಆರಂಭಿಸುವುದಾಗಿ ಪ್ರಕಟಿಸಿತು. ಈಗಾಗಲೆ ಕಳೆದ ಕೆಲವು ವರ್ಷಗಳಿಂದ ವಾರ್ಷಿಕ ಚಲನ ಚಿತ್ರೋತ್ಸವ ಆಯೋಜಿಸುತ್ತಿರುವ ಸ್ತ್ರೀ ಪಾದಮ್ ಕೇಂದ್ರಮ್ ಮುಂದಿನ ವರ್ಷದಿಂದ ಮಹಿಳಾ ಚಿತ್ರ ಸಂಘದ ಮೂಲಕ ಮಹಿಳಾ ಪ್ರಧಾನ ಚಿತ್ರಗಳನ್ನು ಹಾಗೂ ಮಹಿಳೆಯರು ನಿರ್ದೇಶಿಸಿದ ಚಿತ್ರಗಳನ್ನು ಮುಖ್ಯವಾಗಿರಿಸಿಕೊಂಡು ಚಲನ ಚಿತ್ರೋತ್ಸವ ಸಂಘಟಿಸಲು ಮುಂದಾಯಿತು.
2015: ನ್ಯೂಯಾರ್ಕ್: ಕಳೆದ ಎರಡು ವಾರಗಳ ಕಾಲ ಸಾಕಷ್ಟು ಅಚ್ಚರಿ, ಆಘಾತಕಾರಿ ಫಲಿತಾಂಶಕ್ಕೆ ಕಾರಣವಾಗಿದ್ದ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಕಣದಲ್ಲಿ ಇಟಲಿಯ ಫ್ಲಾವಿಯಾ ಪೆನೆಟ್ಟಾ ಚಾಂಪಿಯನ್ ಆದರು. ಹಿಂದಿನ ದಿನ ನಡೆದ ಪ್ರಶಸ್ತಿ ಹೋರಾಟದಲ್ಲಿ 33 ವರ್ಷದ ಆಟಗಾರ್ತಿ ತನ್ನ ಆಪ್ತ ಗೆಳತಿ, ದೇಶಬಾಂಧವೆ ರಾಬರ್ಟಾ ವಿನ್ಸಿಯನ್ನು ಮಣಿಸುವ ಮೂಲಕ ಮುಕ್ತ ಯುಗದಲ್ಲಿ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಹಿರಿಯ ಆಟಗಾರ್ತಿ ಎನ್ನುವ ಶ್ರೇಯ ಸಂಪಾದಿಸಿದರು. ಆರ್ಥರ್ ಆಶ್ ಕೋರ್ಟ್ನಲ್ಲಿ ನಡೆದ ‘ಆಲ್ ಇಟಾಲಿಯನ್’ ಫೈನಲ್ ಪಂದ್ಯದಲ್ಲಿ 16 ವರ್ಷಗಳ ಕಾಲ ಗ್ರಾಂಡ್ ಸ್ಲಾಂ ಕಣದಲ್ಲಿ ಆಡಿದ್ದ ಫ್ಲಾವಿಯಾ ಪೆನೆಟ್ಟಾ 7-6 (7), 6-2 ರಿಂದ ರಾಬರ್ಟಾ ವಿನ್ಸಿಯನ್ನು ಸೋಲಿಸಿದರು. ಟ್ರೋಫಿ ಪ್ರದಾನ ಸಮಾರಂಭದಲ್ಲಿ ಟೆನಿಸ್ ಅಭಿಮಾನಿಗಳಿಗೆ ಮತ್ತೊಂದು ಆಘಾತ ನೀಡಿದ ಪೆನೆಟ್ಟಾ, ಇದೇ ನನ್ನ ಕೊನೇ ಗ್ರಾಂಡ್ ಸ್ಲಾಂ ಟೂರ್ನಿ ಎಂದು ಘೊಷಿಸಿದ್ದಲ್ಲದೆ, ಈ ವರ್ಷಾಂತ್ಯದಲ್ಲಿ ಟೆನಿಸ್ನಿಂದ ನಿವೃತ್ತಿಯಾಗುತ್ತಿರುವುದಾಗಿ ಪ್ರಕಟಿಸಿದರು.
2008: ರಷ್ಯಾದ ಪಶ್ಚಿಮ ಭಾಗದಲ್ಲಿರುವ ಪರ್ಮ್ ನಗರಕ್ಕೆ ಹೊರಟಿದ್ದ ಏರೋಕ್ರಾಫ್ಟ್ ಏರ್ ಲೈನ್ಸಿಗೆ ಸೇರಿದ ಬೋಯಿಂಗ್ 737- 500 ವಿಮಾನ ಈದಿನ ಮುಂಜಾನೆ ಅಪಘಾತಕ್ಕೀಡಾಗಿ ಅದರಲ್ಲಿದ್ದ 7 ಮಕ್ಕಳು, 21 ವಿದೇಶಿಯರು ಸೇರಿದಂತೆ ಎಲ್ಲಾ 88 ಮಂದಿ ಮೃತರಾದರು. ವಿಮಾನ ಮಾರ್ಗ ಮಧ್ಯೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮುಂಜಾನೆ 3.15ರ ಸುಮಾರಿಗೆ ಜನನಿಬಿಡ ಪ್ರದೇಶಕ್ಕೆ ಅಪ್ಪಳಿಸಿತು.
2015:
ಕಠ್ಮಂಡು: ನೇಪಾಳವನ್ನು ಹಿಂದು ರಾಷ್ಟ್ರವೆಂದು ಘೋಷಿಸಬೇಕೆಂಬ ವಿಧೇಯಕಕ್ಕೆ ನೇಪಾಳ ಸಂಸತ್ತಿನಲ್ಲಿ ಸೋಲುಂಟಾಯಿತು. ಹೀಗಾಗಿ ನೇಪಾಳ ಜಾತ್ಯತೀತ ರಾಷ್ಟ್ರವಾಗಿ ಮುಂದುವರೆಯಲಿದೆ ಎಂದು ಸಂಸತ್ತು ತಿಳಿಸಿತು. ಹಿಂದೂಗಳ ಸಂಖ್ಯೆ ಹೆಚ್ಚಾಗಿರುವನೇಪಾಳವನ್ನು ಹಿಂದು ರಾಷ್ಟ್ರವೆಂದು ಘೋಷಿಸಬೇಕೆಂದು ಪ್ರದರ್ಶನಗಳು ನಡೆದಿದ್ದವು. ಇದೇ ಸಂದರ್ಭದಲ್ಲಿ ನೇಪಾಳದಹಿಂದು ಪರ ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ (ಆರ್ಪಿಪಿ-ಎನ್)ಅಧ್ಯಕ್ಷ ಕಮಲ್ ಥಾಪ ಸಂಸತ್ತಿನಲ್ಲಿ ಹಿಂದು ರಾಷ್ಟ್ರ ವಿಧೇಯಕಮಂಡಿಸಿದ್ದರು. ಕಾನೂನಿನಲ್ಲಿ ತಿದ್ದುಪಡಿ ತರುವ ಮೂಲಕ ನೇಪಾಳವನ್ನು ಹಿಂದು ರಾಷ್ಟ್ರವೆಂದು ಘೋಷಿಸಲು ಒತ್ತಾಯಿಸಿತ್ತು. 601 ಸದಸ್ಯ ಬಲದ ನೇಪಾಳ ಸಂಸತ್ತಿನಲ್ಲಿ ಸೋಮವಾರ 2/3 ಬಹುಮತದಿಂದ ವಿಧೇಯಕಕ್ಕೆ ಸೋಲುಂಟಾಯಿತು.. 2008ರಲ್ಲಿ ನೇಪಾಳ ಸಂಸತ್ತು ನೇಪಾಳವನ್ನು ಜಾತ್ಯತೀತ ರಾಷ್ಟ್ರವೆಂದು ಘೋಷಿಸಿತ್ತು. ಅದೇ ಸ್ಥಾನಮಾನವನ್ನು ಮುಂದುವರೆಸುವುದಾಗಿ ಸಂಸತ್ತು ತಿಳಿಸಿತು. ಜುಲೈನಲ್ಲಿ ನಡೆದಿದ್ದ ಜನಮತ ಸಂಗ್ರಹದಲ್ಲಿ ಬಹುಪಾಲು ಜನರು ಹಿಂದು ಅಥವಾ ಧಾರ್ಮಿಕ ಸ್ವಾತಂತ್ರ್ಯ ಹೊಂದಿರುವ ರಾಷ್ಟ್ರ ಬೇಕೆಂದು ತಿಳಿಸಿದ್ದರು.
2008: ಜರ್ಮನಿಯ ಸೆಬಾಸ್ಟಿಯನ್ ವೆಟೆಲ್ ಅವರು ಫಾರ್ಮುಲಾ ಒನ್ ರೇಸ್ ಗೆದ್ದ ವಿಶ್ವದ ಅತಿ ಕಿರಿಯ ಚಾಲಕ ಎಂಬ ಹೆಸರು ತಮ್ಮದಾಗಿಸಿದರು. ಮೊಂಜಾದಲ್ಲಿ ನಡೆದ ಇಟಾಲಿಯನ್ ಗ್ರ್ಯಾಂಡ್ ಪ್ರಿ ರೇಸ್ ಗೆಲ್ಲುವ ಮೂಲಕ ಟೊರೊ ರೊಸೊ ತಂಡದ ವೆಟೆಲ್ ಈ ಗೌರವ ಸಂಪಾದಿಸಿದರು, ವೆಟೆಲ್ ಅವರಿಗೆ ಈಗ 21 ವರ್ಷ ಹಾಗೂ 74 ದಿನಗಳು. ಅವರು ಫೆರ್ನಾಂಡೋ ಅಲೊನ್ಸೊ (22 ವರ್ಷ 26 ದಿನಗಳು) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಪೋಲ್ ಪೊಸಿಷನ್ನಿನಿಂದ ಸ್ಪರ್ಧೆ ಆರಂಭಿಸಿದ್ದ ವೆಟೆಲ್ ಮೆಕ್ ಲಾರೆನ್ ಮರ್ಸಿಡಿಸ್ ತಂಡದ ಹೈಕಿ ಕೊವಲೈನೆನ್ ಅವರಿಂದ ಪ್ರಬಲ ಪೈಪೋಟಿ ಎದುರಿಸಿದರೂ ಅಂತಿಮವಾಗಿ ಗೆಲುವಿನ ನಗು ಬೀರಿದರು.
2007: ಸೇತುಸಮುದ್ರಂ ಕಡಲ್ಗಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ರಾಮ ಹಾಗೂ ರಾಮಸೇತು ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ಕೇಂದ್ರ ಸರ್ಕಾರವು ಹಿಂದಕ್ಕೆ ಪಡೆಯಿತು. ದೇಶಾದ್ಯಂತ ಕಂಡು ಬಂದ ಭಾರೀ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಈ ಕ್ರಮ ಕೈಗೊಂಡಿತು. ಜೊತೆಗೆ ರಾಮಸೇತು ರಕ್ಷಣೆಯ ದೃಷ್ಟಿಯಿಂದ ಸೇತುಸಮುದ್ರಂ ಕಾಲುವೆ ಯೋಜನೆಯ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿಯೂ ಸರ್ಕಾರ ಹೇಳಿತು. ರಾಮ ಹಾಗೂ ರಾಮ ಸೇತು ಇತ್ತೆಂದು ಹೇಳಲು ಯಾವುದೇ ಐತಿಹಾಸಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್ಐ) ಇಲಾಖೆ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿತ್ತು. ಪ್ರಮಾಣ ಪತ್ರದ ಆಕ್ಷೇಪಾರ್ಹ ಹೇಳಿಕೆಗಳನ್ನು ವಾಪಸ್ ಪಡೆಯಲು ಸಮ್ಮತಿಸಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಪೀಠವು, ರಾಮ ಸೇತು ಪ್ರದೇಶದಲ್ಲಿ ಯಾವುದೇ ರೀತಿಯ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ ಆಗಸ್ಟ್ 31ರಂದು ನೀಡಿದ್ದ ಮಧ್ಯಂತರ ತಡೆಯಾಜ್ಞೆ ಮುಂದುವರಿಯುತ್ತದೆ ಎಂದು ಹೇಳಿ, ವಿಚಾರಣೆಯನ್ನು 2008ರ ಜನವರಿ ಮೊದಲ ವಾರಕ್ಕೆ ಮುಂದೂಡಿತು.
2007: ನವದೆಹಲಿಯ ವಿಜ್ಞಾನಭವನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ 53ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ವಿತರಿಸಿದರು. ದಾದಾಸಾಹೇಬ್ ಪ್ರಶಸ್ತಿ ಪಡೆದ ಕರ್ನಾಟಕ ಮೂಲದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್, ತೀರ್ಪುಗಾರರ ಮಂಡಳಿ ಅಧ್ಯಕ್ಷರಾದ ಹಿರಿಯ ತಾರೆ ಬಿ. ಸರೋಜಾದೇವಿ, ಡಬಲ್ ಪ್ರಶಸ್ತಿ ಪಡೆದ ಕನ್ನಡ ಖ್ಯಾತ ಲೇಖಕ ಮತ್ತು ಚಿತ್ರನಿರ್ದೇಶಕ ಬರಗೂರು ರಾಮಚಂದ್ರಪ್ಪ, ನಿರಂತರವಾಗಿ ನಾಲ್ಕನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ನಿರ್ದೇಶಕ ಪಿ.ಶೇಷಾದ್ರಿ, ನಿರ್ಮಾಪಕಿಯಾಗಿ ಎರಡನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ನಟಿ ಜಯಮಾಲಾ ಮತ್ತು ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ಮಿಸುತ್ತಿರುವ ನಟಿಯರ ಗುಂಪಿಗೆ ಇನ್ನೊಂದು ಸೇರ್ಪಡೆಯಾಗಿರುವ ನಟಿ ಪ್ರಮೀಳಾ ಜೋಷಾಯ್ ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು. ಶ್ಯಾಮ್ ಬೆನಗಲ್ ಅವರು ಫಾಲ್ಕೆ ಪ್ರಶಸ್ತಿ ಪಡೆದರೆ, ಕನ್ನಡದ ಅತ್ಯುತ್ತಮ ಪ್ರಾದೇಶಿಕ ಚಿತ್ರ `ತಾಯಿ'ಯ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ, ಆ ಚಿತ್ರದ ಹಾಡಿನ ಸಾಹಿತ್ಯಕ್ಕಾಗಿಯೂ ನೀಡುವ ಪ್ರಶಸ್ತಿ ಸೇರಿ ಡಬ್ಬಲ್ ಪ್ರಶಸ್ತಿ ಪಡೆದರು. ಹಿಂದೆ `ಸಂಗೀತ' ಚಿತ್ರಕ್ಕಾಗಿ ಪೋಷಕ ನಟಿಯ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ನಟಿ ಪ್ರಮೀಳಾ ಜೋಷಾಯ್ `ತಾಯಿ' ಚಿತ್ರದ ನಿರ್ಮಾಪಕಿಯಾಗಿ ಪ್ರಶಸ್ತಿ ಪಡೆದರು. ಯುವ ನಿರ್ದೇಶಕ ಪಿ.ಶೇಷಾದ್ರಿ ಸತತ ನಾಲ್ಕನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮೂಲಕ ದಾಖಲೆಯೊಂದನ್ನು ನಿರ್ಮಿಸಿದರು. ಮೊದಲು `ಮುನ್ನುಡಿ' ನಂತರ `ಅತಿಥಿ' ಕಳೆದ ಬಾರಿ `ಬೇರು' ಈಗ `ತುತ್ತೂರಿ' ಅವರಿಗೆ ಪ್ರಶಸ್ತಿ ತಂದುಕೊಟ್ಟ ಚಿತ್ರಗಳು. ಪರಿಸರ ರಕ್ಷಣೆಯ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಚಿತ್ರ ನಿರ್ಮಾಪಕಿ ಜನಪ್ರಿಯ ನಟಿ ಡಾ.ಜಯಮಾಲಾ `ತಾಯಿ ಸಾಹೇಬ' ಚಿತ್ರದ ನಿರ್ಮಾಪಕಿಯಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. ಈ ಸಲ ಇವರು ಎರಡನೇ ಬಾರಿ 'ತುತ್ತೂರಿ' ನಿರ್ಮಾಣಕ್ಕಾಗಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದರು.
2007: ರಾಮ ಸೇತು ಕುರಿತು ಎದ್ದಿರುವ ಗದ್ದಲವನ್ನೇ ನೆಪವಾಗಿರಿಸಿಕೊಂಡು ಉತ್ತರಖಂಡ ಸರ್ಕಾರ, ರಾಮ ಸೇತು ಕುರಿತಾದ ಕತೆಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಮುಂದಾಯಿತು. ಸರ್ಕಾರದ ಈ ಕ್ರಮ `ಶಿಕ್ಷಣದ ಕೇಸರಿಕರಣ' ಎಂದು ಕಾಂಗ್ರೆಸ್ ಟೀಕಿಸಿತು.
2007: ಇಂಡೋನೇಷ್ಯಾದ ಸುಮಾತ್ರಾದಲ್ಲಿ ಮತ್ತೊಮ್ಮೆ ಪ್ರಬಲ ಭೂಕಂಪ ಸಂಭವಿಸಿ ಕನಿಷ್ಠ 13 ಜನ ಮೃತರಾಗಿ ಹಲವಾರು ಕಟ್ಟಡಗಳು ಜಖಂಗೊಂಡವು. ಅಧಿಕಾರಿಗಳು ಸುನಾಮಿ ಮುನ್ನೆಚ್ಚರಿಕೆ ನೀಡಿ ನಂತರ ಅದನ್ನು ವಾಪಸ್ ಪಡೆದರು.
2007: ರಷ್ಯಾ ಸಂಸತ್ತಿನಲ್ಲಿ 450 ಮತಗಳ ಪೈಕಿ 381 ಮತಗಳಿಸಿದ 66 ವರ್ಷದ ವಿಕ್ಟರ್ ಜುಬ್ಕೊವ್ ಅವರು ರಷ್ಯಾದ ನೂತನ ಪ್ರಧಾನಿಯಾಗಿ ಆಯ್ಕೆಯಾದರು. ಮಿಖಾಯಿಲ್ ಪಕೊವ್ ಅವರ ನೇತೃತ್ವದ ಸರ್ಕಾರ ವಿಸರ್ಜನೆಯಾದ ಎರಡು ದಿನಗಳ ನಂತರ ಪ್ರಧಾನಿ ಸ್ಥಾನಕ್ಕೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮಾಡಿದ ವಿಕ್ಟೋರ್ ಜುಬ್ಕೊವ್ ನೇಮಕವನ್ನು ರಷ್ಯಾ ಸಂಸತ್ ಈ ಮೂಲಕ ಅಂಗೀಕರಿಸಿತು. ಜಬ್ಕೊವ್ ಹಿರಿಯ ಹಣಕಾಸು ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
2007: ಪ್ರತಿ ಸೆಕೆಂಡಿಗೆ ಕನಿಷ್ಠ ಒಂದು ಸಾವಿರ ಶತಕೋಟಿ ಗಣಿತ ಸಮಸ್ಯೆಗಳನ್ನು ಬಿಡಿಸುವ (ಒಂದು ಟೆರಾಫ್ಲಾಪ್ ವೇಗದ) ಸೂಪರ್ ಕಂಪ್ಯೂಟರನ್ನು ವಿಪ್ರೊ ಇನ್ಫೊಟೆಕ್ ಈದಿನ ಬೆಂಗಳೂರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಕ್ಯಾಲಿಫೋರ್ನಿಯಾ ಮೂಲದ ಜಿ- ರಿಸರ್ಚ್ ಇಂಕ್ ನ ಸಹಯೋಗದಲ್ಲಿ ಅತ್ಯಧಿಕ ವೇಗದಲ್ಲಿ ಕಾರ್ಯ ನಿರ್ವಹಿಸುವ ಮತ್ತು ಗರಿಷ್ಠ ಸ್ಮರಣ ಶಕ್ತಿಯ ಸಾಮರ್ಥ್ಯದ ಸೂಪರ್ ಕಂಪ್ಯೂಟರ್ ಹಾಗೂ ಅಸಂಖ್ಯ ಪೆಟಾಬೈಟ್ಸ್ಗಳಷ್ಟು ಮಾಹಿತಿ, ದತ್ತಾಂಶ ಸಂಗ್ರಹಿಸುವ ಸಾಮರ್ಥ್ಯದ ಸೂಪರ್ ಸ್ಟೋರೇಜ್ (`ವಿಪ್ರೊ ಸೂಪರ್ನೋವಾ') ಸಾಧನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವಿಪ್ರೊ ವೈಯಕ್ತಿಕ ಕಂಪ್ಯೂಟರ್ ವಿಭಾಗದ ಉಪಾಧ್ಯಕ್ಷ ಅಶುತೋಷ್ ವೈದ್ಯ ಅವರು ಪ್ರಕಟಿಸಿದರು. ಈ ಮೊದಲಿನ ಸೂಪರ್ ಕಂಪ್ಯೂಟರುಗಳ ದಶಲಕ್ಷ ಡಾಲರುಗಳ ದುಬಾರಿ ಬೆಲೆಗೆ ಹೋಲಿಸಿದರೆ ಈ ಕಂಪ್ಯೂಟರ್, ಕೈಗೆಟುಕುವ ಬೆಲೆಗೆ (ವಿಲಾಸಿ ಕಾರಿನ ಬೆಲೆಯಲ್ಲಿ) ರೂ 25 ಲಕ್ಷಕ್ಕೆ ಲಭ್ಯವಾಗಲಿದೆ. ಇದು ಆರಂಭಿಕ ಬೆಲೆ. ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ರೂಪಿಸುವ ಸೂಪರ್ ಕಂಪ್ಯೂಟರುಗಳ ಗರಿಷ್ಠ ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆ ಬದಲಾಗುತ್ತದೆ. ಎಂಜಿನಿಯರಿಂಗ್ ಕಾಲೇಜು, ಉನ್ನತ ಶೈಕ್ಷಣಿಕ ಸಂಸ್ಥೆಗಳು, ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಗಂಭೀರವಾಗಿ ಪರಿಗಣಿಸಿದ ಉದ್ದಿಮೆ ಸಂಸ್ಥೆಗಳು ಈ ಸೂಪರ್ ಕಂಪ್ಯೂಟರ್ ಬಳಸಬಹುದು. ಇದೊಂದು ಗರಿಷ್ಠ ಕಾರ್ಯಕ್ಷಮತೆಯ, ಬಹುಪಯೋಗಿ ಮತ್ತು ಸುಲಭವಾಗಿ ನಿರ್ವಹಿಸಬಹುದಾದ ಸೂಪರ್ ಕಂಪ್ಯೂಟರ್ ಆಗಿದ್ದು, ಭಾರತಕ್ಕೆ ಸೂಪರ್ ಕಂಪ್ಯೂಟರ್ ತರುವ ಕನಸು ಇದರಿಂದ ನನಸಾಗಿದೆ ಎಂದು ವೈದ್ಯ ಹೇಳಿದರು.
2007: ಬಾಹ್ಯಾಕಾಶ ಅಧ್ಯಯನ ಹಾಗೂ ತಂತ್ರಜ್ಞಾನಕ್ಕೆ ಒತ್ತು ನೀಡುವುದರ ಜೊತೆಗೆ ಇಸ್ರೋದ ಮಾನವ ಸಂಪನ್ಮೂಲ ಬೇಡಿಕೆ ಪೂರೈಸುವ ಭಾರತೀಯ ಬಾಹ್ಯಾಕಾಶ ಮತ್ತು ತಂತ್ರಜ್ಞಾನ (ಐಐಎಸ್ಟಿ) ಸಂಸ್ಥೆಯನ್ನು ಇಸ್ರೋ ಅಧ್ಯಕ್ಷ ಡಾ.ಜಿ.ಮಾಧವನ್ ನಾಯರ್ ತಿರುವನಂತಪುರದಲ್ಲಿ ಉದ್ಘಾಟಿಸಿದರು. ಉದ್ಘಾಟನೆಯಾದ ಸಂಸ್ಥೆಯು ಏವಿಯಾನಿಕ್ ಹಾಗೂ ಬಾಹ್ಯಾಕಾಶ ಎಂಜಿನಿಯರಿಂಗಿನಲ್ಲಿ ಪರಿಣಿತಿ ಸೇರಿದಂತೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪದವಿ ನೀಡಲಿದೆ. ಬಾಹ್ಯಾಕಾಶ ವಿಷಯಕ್ಕೆ ಸಂಬಂಧಿಸಿದಂತೆ ಅನ್ವಯಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಈ ಸಂಸ್ಥೆ ನೀಡಲಿದೆ.
2007: ಡರ್ಬಾನಿನ ಕಿಂಗ್ಸ್ ಮೇಡ್ ಕ್ರೀಡಾಂಗಣದಲ್ಲಿ ನಡೆದ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಪಾಕ್ ತಂಡವನ್ನು ಬೌಲ್ ಔಟಿನಲ್ಲಿ 3-0ರಲ್ಲಿ ಸೋಲಿಸಿದ ಭಾರತ ಸೂಪರ್ ಏಯ್ಟ್ ಹಂತ ಪ್ರವೇಶಿಸಿತು.
2007: ಅಚ್ಚರಿಯ ದಿಢೀರ್ ಬೆಳವಣಿಗೆಯೊಂದರಲ್ಲಿ ರಾಹುಲ್ ದ್ರಾವಿಡ್ ಅವರು ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನವದೆಹಲಿಯಲ್ಲಿ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ದ್ರಾವಿಡ್ ಬಿಸಿಸಿಐಗೆ ರಾಜೀನಾಮೆ ಪತ್ರ ಸಲ್ಲಿಸಿ, ನಾಯಕತ್ವದಿಂದ ಮುಕ್ತಗೊಳಿಸಲು ಕೋರಿದರು. 2005ರಲ್ಲಿ ನಾಯಕನಾಗಿ ನೇಮಕಗೊಂಡ ರಾಹುಲ್ ದ್ರಾವಿಡ್ ಸತತ 16 ಬಾರಿ ಏಕದಿನ ಪಂದ್ಯ ಚೇಸ್ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದರೂ, 2007ರ ವಿಶ್ವಕಪ್ ನಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದ್ದರು. ಪಾಕ್, ವಿಂಡೀಸ್, ಬಾಂಗ್ಲಾ ಹಾಗೂ ಇಂಗ್ಲೆಂಡಿನಲ್ಲಿ ಟೆಸ್ಟ್ ಸರಣಿ ಗೆಲುವು ಅವರ ಮಹತ್ವದ ಪಂದ್ಯಗಳು. ಸೌರವ್ ಗಂಗೂಲಿ ಅವರನ್ನು ಕೆಳಗಿಳಿಸಿದ ನಂತರ ಅಂದರೆ 2005ರಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಆಯ್ಕೆ ಆದ ದ್ರಾವಿಡ್ 20 ಟೆಸ್ಟ್ ಹಾಗೂ 62 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. 33 ವರ್ಷ ವಯಸ್ಸಿನ ದ್ರಾವಿಡ್ ನಾಯಕತ್ವದಲ್ಲಿ `ಟೀಮ್ ಇಂಡಿಯಾ' ಟೆಸ್ಟಿನಲ್ಲಿ ಯಶಸ್ಸು ಗಳಿಸಿತ್ತು. ಆದರೆ ಏಕದಿನ ಕ್ರಿಕೆಟಿನಲ್ಲಿ ಆರಂಭದ ಯಶಸ್ಸನ್ನು ಕಾಯ್ದುಕೊಳ್ಳಲು ಆಗಲಿಲ್ಲ. ಸತತ 16 ಏಕದಿನ ಪಂದ್ಯಗಳಲ್ಲಿ ಎದುರಾಳಿ ನೀಡಿದ ಗುರಿಯನ್ನು ಬೆನ್ನುಹತ್ತಿ ಗೆಲುವು ಸಾಧಿಸಿದ್ದು ವಿಶೇಷ. ಆದರೆ ತಂಡ ಕೆರಿಬಿಯನ್ ದ್ವೀಪದಲ್ಲಿ ಮಾರ್ಚ್ -ಏಪ್ರಿಲ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿ ಆಕ್ರೋಶಕ್ಕೆ ಒಳಗಾಗಿತ್ತು. ಅವರ ನಾಯಕತ್ವದ ಅವಧಿಯಲ್ಲಿ ಭಾರತ ಟೆಸ್ಟಿನಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಸರಣಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿತು. ಆದರೆ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟಿನಲ್ಲಿ ಅವರು ಫಾಲೋಆನ್ ನೀಡಿರಲಿಲ್ಲ. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
2007: ಪಂಕಜ್ ಅಡ್ವಾಣಿ ಅವರು ಸಿಂಗಪುರದ ಆರ್ಕಿಡ್ ಕಂಟ್ರಿ ಕ್ಲಬ್ಬಿನಲ್ಲಿ ಮುಕ್ತಾಯವಾದ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಲ್ಲಿ ನೂತನ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ನಿಕಟ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಹುಡುಗ ಪಂಕಜ್ 1963-1489 ಪಾಯಿಂಟುಗಳ ಅಂತರದಿಂದ ಭಾರತದ ಮತ್ತೊಬ್ಬ ಆಟಗಾರ ಧ್ರುವ ಸೀತಾವಾಲಾ ಅವರನ್ನು ಸೋಲಿಸಿದರು. ಇದು ಪಂಕಜ್ ಪಾಲಿಗೆ ವೃತ್ತಿ ಜೀವನದ ನಾಲ್ಕನೇ ವಿಶ್ವ ಚಾಂಪಿಯನ್ ಶಿಪ್ ಗೆಲುವು.
2006: ಲಾಭದಾಯಕ ಹುದ್ದೆ ತಿದ್ದುಪಡಿ ಕಾಯ್ದೆಯ (2006) ಸಂವೈಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ಈ ತಿದ್ದುಪಡಿ ಕಾಯ್ದೆಯನ್ನು ಪೂರ್ವಾನ್ಯವಾಗಿ ಜಾರಿ ಮಾಡುವುದನ್ನು ತಡೆಹಿಡಿಯಬೇಕು ಮತ್ತು ಲಾಭದ ಹುದ್ದೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಮುಂದಿರುವ ದೂರುಗಳನ್ನು ಈ ತಿದ್ದುಪಡಿ ಅನ್ವಯ ತೀರ್ಮಾನಿಸದಂತೆ ನಿರ್ದೇಶನ ನೀಡಬೇಕು ಎಂದು ಗ್ರಾಹಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಅರ್ಜಿ ಸಲ್ಲಿಸಿತು.
2006: ಮುಂಬೈ ಸರಣಿ ಬಾಂಬ್ ಸ್ಫೋಟದ ಎರಡನೇ ಕಂತಿನ ತೀರ್ಪಿನಲ್ಲಿ ಝವೇರಿ ಬಜಾರಿನಲ್ಲಿ ಬಾಂಬ್ ಇಟ್ಟಿದ್ದ ಮೊಹಮ್ಮದ್ ಶೋಯೆಬ್ ಘನ್ಸಾರ್ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ನಿಯೋಜಿತ ಟಾಡಾ ನ್ಯಾಯಾಲಯ ತೀರ್ಪು ನೀಡಿತು. ಶೋಯೆಬ್ ಟೈಗರ್ ಮೆಮನ್ನ ಆಪ್ತ ಬಂಟನಾಗಿದ್ದು, ಈತನೇ ಝವೇರಿ ಬಜಾರ್ ಸ್ಫೋಟದ ರೂವಾರಿ ಎಂದು ನ್ಯಾಯಾಲಯ ಹೇಳಿತು.
2006: ಇಂಡೋನೇಷ್ಯಾದ ಡೆನ್ಪಸರ್ ನ್ಯಾಯಾಲಯವು ಬಾಲಿ ಬಾಂಬ್ ಸ್ಫೋಟದಲ್ಲಿ ಭಾಗಿಯಾದ ಆರೋಪ ಹೊತ್ತ ಇಸ್ಲಾಮಿಕ್ ಉಗ್ರಗಾಮಿ ಅನೀಫ್ ಸೊಲ್ಚನುದ್ದೀನ್ ಗೆ 15 ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಿತು.
2006: ಜಾರ್ಖಂಡಿನಲ್ಲಿ ಒಂಬತ್ತು ದಿನಗಳ ರಾಜಕೀಯ ಅಸ್ಥಿರತೆಗೆ ತೆರೆ ಬಿತ್ತು. ಬಿಜೆಪಿ- ಜೆಡಿಯು ಮೈತ್ರಿಕೂಟದ ಮುಖ್ಯಮಂತ್ರಿ ಅರ್ಜುನ್ ಮುಂಡಾ ರಾಜೀನಾಮೆ ನೀಡಿದರು. ಯುಪಿಎ ಧುರೀಣ ಮಧು ಕೋಡಾ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಸಂಪುಟದ ನಾಲ್ವರು ಸಚಿವರ ರಾಜೀನಾಮೆ ಬಳಿಕ ಮುಂಡಾ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು.
1975: ಮದರ್ ಎಲಿಜಬೆತ್ ಆನ್ ಬೇಲೀ ಸೆಟನ್ ಅವರು ಮೊತ್ತ ಮೊದಲ ಅಮೆರಿಕ ಸಂಜಾತ ಸಂತಳೆಂದು ಪೋಪ್ 6ನೇ ಪಾಲ್ ಅವರು ಘೋಷಿಸಿದರು.
1974: ಗುರುಗ್ರಹದ 13ನೇ ಉಪಗ್ರಹ ಪತ್ತೆಯಾಯಿತು.
1965: ಪಾಕಿಸ್ತಾನಿ ವಾಯುಪಡೆಗಳಿಂದ ಕಲ್ಕತ್ತ (ಈಗಿನ ಕೋಲ್ಕತಾ) ಹಾಗೂ ಅಗರ್ತಲ ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಯಿತು.
1953: ಆಂಧ್ರಪ್ರದೇಶ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಕರ್ನೂಲು ಬದಲಿಗೆ ಹೈದರಾಬಾದನ್ನು ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು.
1952: ಸಾಹಿತಿ ಗುರುರಾಜ ಮಾರ್ಪಳ್ಳಿ ಜನನ.
1949: ಹಿಂದಿ ಭಾಷೆಯನ್ನು ಭಾರತದ ರಾಷ್ಟ್ರಭಾಷೆಯಾಗಿ ಈದಿನ ಘೋಷಿಸಲಾಯಿತು. ಸಂವಿಧಾನ ಸಮಿತಿ ಈ ಬಗ್ಗೆ ಮೂರು ದಿನಗಳ ಕಾಲ ಚರ್ಚಿಸಿತ್ತು. ಭಾರತದಲ್ಲಿ 18 ಕೋಟಿ ಜನ ಹಿಂದಿಯನ್ನು ಭಾಷೆಯಾಗಿ ಬಳಸುತ್ತಿದ್ದಾರೆ. ಇತರ 30 ಕೋಟಿ ಜನ ಇದನ್ನು ದ್ವಿತೀಯ ಭಾಷೆಯಾಗಿ ಬಳಸುತ್ತಿದ್ದಾರೆ.ಭಾರತವಲ್ಲದೆ ಇತರ ರಾಷ್ಟ್ರಗಳಲ್ಲೂ ಹಿಂದಿ ಮಾತನಾಡುವವರು ಇದ್ದಾರೆ. ಉರ್ದು ಪ್ರಾಬಲ್ಯ ಇರುವ ಪಾಕಿಸ್ಥಾನದಲ್ಲೂ 4.1 ಕೋಟಿ ಜನ ಹಿಂದಿ ಮಾತನಾಡುತ್ತಾರೆ. ನೇರವಾಗಿ ಸಂಸ್ಕೃತದಿಂದ ಹುಟ್ಟಿರುವ ಹಿಂದಿ, ದ್ರಾವಿಡ ಭಾಷೆಗಳು, ಟರ್ಕಿ, ಅರಬ್ಬಿ, ಪೋರ್ಚುಗೀಸ್ ಮತ್ತು ಇಂಗ್ಲಿಷ್ ಭಾಷೆಗಳ ಪ್ರಭಾವಕ್ಕೆ ಒಳಗಾಗಿ ಬೆಳೆದಿದೆ. ಮಧ್ಯ ಯುಗದಿಂದಲೇ ಬಳಕಯಲ್ಲಿರುವ ಈ ಭಾಷೆಯಲ್ಲಿ ವಿಧವಿಧ ಸಾಹಿತ್ಯವೂ ರಚನೆಗೊಂಡಿದೆ.
1930: ಜರ್ಮನಿ ಚುನಾವಣೆಯಲ್ಲಿ ನಾಝಿಗಳಿಗೆ 107 ಸ್ಥಾನಗಳಲ್ಲಿ ವಿಜಯ ಲಭಿಸಿತು.
1927: ಆಧುನಿಕ ನೃತ್ಯಕಲಾವಿದೆ ಇಸಾಡೋರಾ ಡಂಕನ್ ಅವರು ಫ್ರಾನ್ಸಿನ ನೈಸ್ ನಗರದಲ್ಲಿ ಸ್ಪೋರ್ಟ್ಸ್ ಕಾರು ಅಪಘಾತದಲ್ಲಿ ಮೃತರಾದರು. ಅವರು ತಲೆಗೆ ಸುತ್ತಿಕೊಂಡಿದ್ದ ಸ್ಕಾರ್ಫ್ ಕಾರಿನ ಚಕ್ರಕ್ಕೆ ಸಿಕ್ಕಿಹಾಕಿಕೊಂಡ ಪರಿಣಾಮವಾಗಿ ಈ ಅಪಘಾತ ಸಂಭವಿಸಿತು.
1926: ವೈಜ್ಞಾನಿಕ ಕೃತಿಗಳ ಕರ್ತೃ, ಗಣಿತ ಉಪನ್ಯಾಸಕ, ಸಾಹಿತಿ ಜಿ.ಟಿ. ನಾರಾಯಣ ರಾವ್ ಅವರು ಗುಡ್ಡೆಹಿತ್ಲು ತಿಮ್ಮಪ್ಪಯ್ಯ- ವೆಂಕಟಲಕ್ಷ್ಮಿ ದಂಪತಿಯ ಮಗನಾಗಿ ಮಡಿಕೇರಿಯಲ್ಲಿ ಜನಿಸಿದರು. ಬಾಲ್ಯದಿಂದಲೇ ಸಂಗೀತ, ಸಾಹಿತ್ಯದತ್ತ ಒಲವು ಬೆಳೆಸಿಕೊಂಡ ಇವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ವಿಭಾಗದ ಸಂಪಾದಕತ್ವ ವಹಿಸಿಕೊಂಡಿದ್ದರು. ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ನಾರಾಯಣರಾವ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸ.ಸ. ಮಾಳವಾಡ ಪ್ರಶಸ್ತಿಗಳು ಲಭಿಸಿವೆ.
1923: ಹಿರಿಯ ಕಾನೂನು ತಜ್ಞ ರಾಂ ಜೇಠ್ಮಲಾನಿ ಜನನ.
1917: ಸಾಹಿತಿ ಗುಡಿಬಂಡೆ ರಾಮಾಚಾರ್ ಜನನ.
1814: ಅಮೆರಿಕದ ರಾಷ್ಟ್ರಗೀತೆ `ದಿ ಸ್ಟಾರ್ ಸ್ಪಾಂಗಲ್ಡ್ ಬ್ಯಾನರ್' ಮುಂಬೈಯ ಜೆಮ್ ಶೆಡ್ ಜಿ ಬೊಮಾನ್ ಜಿ ವಾಡಿಯಾ ಸಂಸ್ಥೆಯು ನಿಮರ್ಿಸಿದ ಎಚ್ ಎಂ ಎಸ್ ಮಿನ್ ಡನ್ ಹಡಗಿನಲ್ಲಿ ಜನಿಸಿತು. ಅಮೆರಿಕನ್ ವಕೀಲ ಫ್ರಾನ್ಸಿಸ್ ಸ್ಕಾಟ್ ಕೀ ಅವರು ಈ ಕವನವನ್ನು ಅವಸರ ಅವಸರವಾಗಿ ಲಕೋಟೆಯೊಂದರ ಮೇಲೆ ಬರೆದರು. ಗೆಳೆಯನನ್ನು ಬಿಡಿಸುವ ಸಲುವಾಗಿ ಮಾತುಕತೆಗೆಂದು ಹೋಗಿದ್ದ ಫ್ರಾನ್ಸಿಸ್ ಅವರು ಫೋರ್ಟ್ ಮೆಕ್ ಹೆನ್ರಿ ಮೇಲೆ ರಾತ್ರಿ ಇಡೀ ಶೆಲ್ ದಾಳಿ ನಡೆಯುತ್ತಿದ್ದುದರಿಂದ ಹಡಗಿನಲ್ಲೇ ಕಾಲ ಕಳೆಯಬೇಕಾಯಿತು. ತೀವ್ರ ಶೆಲ್ ದಾಳಿಯ ಬಳಿಕವೂ ಮರುದಿನ ಬೆಳಿಗ್ಗೆ ಫೋರ್ಟ್ ಮೆಕ್ ಹೆನ್ರಿಯ ಮೇಲೆ ಅಮೆರಿಕದ ರಾಷ್ಟ್ರಧ್ವಜ ಹಾರಾಡುತ್ತಿದ್ದುದನ್ನು ಕಂಡು ಹರ್ಷಗೊಂಡ ಫ್ರಾನ್ಸಿಸ್ ಅವಸರ ಅವಸರವಾಗಿ ಈ ಕವನ ರಚಿಸಿದರು.
1812: ರಷ್ಯದ ಮೇಲೆ ದಾಳಿ ಮುಂದುವರೆಸುತ್ತಾ ನೆಪೋಲಿಯನ್ ಮಾಸ್ಕೋ ಪ್ರವೇಶಿಸಿದ. ಆತನ ಸೇನೆ ಮುಂದೊತ್ತಿ ಬರದಂತೆ ತಡೆಯಲು ತ್ಸಾರ್ ಮೊದಲನೆಯ ಅಲೆಗ್ಸಾಂಡರ್, ನೆಪೋಲಿಯನ್ ಸೇನೆ ಮುನ್ನುಗ್ಗುತ್ತಿದ್ದ ಕಡೆಯಿಂದ ಮಾಸ್ಕೊ ನಗರಕ್ಕೆ ಬೆಂಕಿ ಹಚ್ಚಿಸಿದ.
1752: ಹನ್ನೊಂದು ದಿನಗಳನ್ನು ತೆಗೆದುಹಾಕಲಾದ ಗ್ರೆಗೋರಿಯನ್ ಕ್ಯಾಲೆಂಡರನ್ನು ಬ್ರಿಟನ್ ಅಂಗೀಕರಿಸಿತು. 2 ಮತ್ತು 14ನೇ ದಿನಾಂಕಗಳ ನಡುವಣ 11 ದಿನಗಳು ಇತಿಹಾಸದಲ್ಲಿ ನಷ್ಟವಾದವು ಎಂದು ಪರಿಗಣಿಸಲಾಯಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment