Thursday, September 6, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 06

ಇಂದಿನ ಇತಿಹಾಸ History Today ಸೆಪ್ಟೆಂಬರ್ 06
2018: ನವದೆಹಲಿ: ಪರಸ್ಪರ ಸಮ್ಮತಿಯೊಂದಿಗೆ ವಯಸ್ಕ ವ್ಯಕ್ತಿಗಳಿಬ್ಬರು ನಡೆಸುವ ಸಲಿಂಗಕಾಮ ಅಪರಾಧವಲ್ಲ ಎಂಬುದಾಗಿ ಸುಪ್ರೀಂಕೋರ್ಟಿನ ಪಂಚಸದಸ್ಯ ಪೀಠವು ಸರ್ವಾನುಮತದ ಐತಿಹಾಸಿಕ ತೀರ್ಪು ನೀಡಿತು. ಪ್ರಕ್ರಿಯೆಯಲ್ಲಿ ಸಲಿಂಗ ಕಾಮವನ್ನು ದಂಡನಾರ್ಹ ಅಪರಾಧ ಎಂಬುದಾಗಿ ಹೇಳಿದ್ದ ತನ್ನದೇ ತೀರ್ಪನ್ನು ಸುಪ್ರೀಂಕೋರ್ಟ್ ಅನೂರ್ಜಿತಗೊಳಿಸಿತು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೩೭೭ರ ಅಡಿಯಲ್ಲಿನ ೧೫೮ ವರ್ಷಗಳಷ್ಟು ಹಳೆಯದಾದ ಬ್ರಿಟಿಷ್ ವಸಾಹತುಶಾಹಿ ಕಾನೂನಿನಲ್ಲಿ ಪರಸ್ಪರ ಸಮ್ಮತಿಯ ಸಲಿಂಗ ಕಾಮವನ್ನು ಅಪರಾಧವನ್ನಾಗಿ ಮಾಡುವ ಭಾಗವನ್ನು ಪೀಠವು ಸರ್ವಾನುಮತದಿಂದ ರದ್ದು ಪಡಿಸಿತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಸಂವಿಧಾನಪೀಠವು ಅಸಹಜ ಸಲಿಂಗ ಕಾಮವನ್ನು ಅಪರಾಧವನ್ನಾಗಿ ಮಾಡುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೭ರ ಭಾಗವು ತರ್ಕಹೀನ, ಅಸಮರ್ಥನೀಯ ಮತ್ತು ನಿರಂಕುಶ ಎಂದು ಬಣ್ಣಿಸಿತು.  ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, .ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರ ಅವರನ್ನೂ ಒಳಗೊಂಡ ಪೀಠವು ಸೆಕ್ಷನ್ ೩೭೭ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿ ಅದನ್ನು ಭಾಗಶಃ ರದ್ದು ಪಡಿಸಿತುಪ್ರತ್ಯೇಕವಾದ ನಾಲ್ಕು, ಆದರೆ ಸಹಮತದ ತೀರ್ಪುಗಳಲ್ಲಿ ಸುಪ್ರೀಂಕೋರ್ಟ್ ಸುರೇಶ್ ಕೌಶಲ್ ಪ್ರಕರಣದಲ್ಲಿ ತಾನೇ ನೀಡಿದ್ದ ತೀರ್ಪನ್ನು ಅಮಾನ್ಯಗೊಳಿಸಿತು. ಪ್ರಕೃತಿ ವ್ಯವಸ್ಥೆಗೆ ವಿರುದ್ಧವಾಗಿ ಯಾರೇ ವ್ಯಕ್ತಿಯು ಪುರುಷ, ಮಹಿಳೆ ಅಥವಾ ಪ್ರಾಣಿಗಳ ಜೊತೆ ನಡೆಸುವ ಲೈಂಗಿಕತೆಯು ಅಸಹಜ ಅಪರಾಧ ಎಂಬುದಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೭ ಹೇಳುತ್ತದೆ ಮತ್ತು ಅಪರಾಧಕ್ಕೆ ಜೀವಾವಧಿ ಸಜೆ ಅಥವಾ ೧೦ ವರ್ಷಗಳವರೆಗೆ ವಿಸ್ತರಿಸಬಹುದಾದ ಸೆರೆವಾಸ ಮತ್ತು ದಂಡವನ್ನು ವಿಧಿಸಬಹುದು ಎಂದು ಹೇಳುತ್ತದೆ.
ಏನಿದ್ದರೂ, ಪ್ರಾಣಿಗಳು ಮತ್ತು ಮಕ್ಕಳ ಜೊತೆಗಿನ ಅಸಹಜ ಲೈಂಗಿಕತೆಗೆ ಸಂಬಂಧಿಸಿದಂತೆ ವ್ಯವಹರಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೩೭೭ರ ಇತರ ಅಂಶಗಳು ಹಾಗೆಯೇ ಮುಂದುವರೆಯುತ್ತವೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ನೃತ್ಯ ಕಲಾವಿದ ನವತೇಜ್ ಜೌಹರ್, ಪತ್ರಕರ್ತ ಸುನಿಲ್ ಮೆಹ್ರಾ, ಚೆಫ್ ರಿತು ದಾಲ್ಮಿಯಾ, ಹೋಟೆಲ್ ಉದ್ಯಮಿಗಳಾದ ಅಮನ್ ನಾಥ್ ಮತ್ತು ಕೇಶವ್ ಸುರಿ ಮತ್ತು ಬಿಸಿನೆಸ್ ಎಕ್ಸಿಕ್ಯೂಟಿವ್ ಆಯೇಶಾ ಕಪೂರ್ ಹಾಗೂ ೨೦ ಮಂದಿ ಮಾಜಿ ಮತು ಹಾಲಿ ಐಐಟಿ ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳಿಗೆ ಸಂಬಂಧಿಸಿದ ವಿಚಾರಣೆಯ ಬಳಿಕ ಸುಪ್ರೀಂಕೋಟ್ ತೀರ್ಪು ನೀಡಿತುಐಪಿಸಿಯ ಸೆಕ್ಷನ್ ೩೭೭ನ್ನು ಅಕ್ರಮ ಮತ್ತು ಸಂವಿಧಾನ ಬಾಹಿರ ಎಂಬುದಾಗಿ ಘೋಷಿಸುವ ಮೂಲಕ ವಯಸ್ಕರಿಬ್ಬರು ನಡೆಸುವ ಪರಸ್ಪರ ಸಮ್ಮತಿಯ ಸಲಿಂಗ ಕಾಮವನ್ನು ನಿರಪರಾಧವನ್ನಾಗಿ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರುಸರ್ಕಾರೇತರ ಸಂಘಟನೆ ನಾಜ್ ಫೌಂಡೇಶನ್ ವಿಷಯವನ್ನು ಮೊತ್ತ ಮೊದಲಿಗೆ ೨೦೦೧ರಲ್ಲಿ ದೆಹಲಿ ಹೈಕೋರ್ಟಿಗೆ ತಂದಿತ್ತು. ೨೦೦೯ರಲ್ಲಿ ದೆಹಲಿ ಹೈಕೋರ್ಟ್ ವಯಸ್ಕರು ನಡೆಸುವ ಪರಸ್ಪರ ಸಮ್ಮತಿಯ ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಕಾಯ್ದೆಯಲ್ಲಿನ ದಂಡ ವಿಧಿಸುವ ಭಾಗವು ಅಕ್ರಮ ಎಂದು ತೀರ್ಪು ಹೇಳಿತ್ತು. ದೆಹಲಿ ಹೈಕೋರ್ಟಿನ ತೀರ್ಪನ್ನು ಸುಪ್ರೀಂಕೋರ್ಟ್ ೨೦೧೩ರಲ್ಲಿ ಅನೂರ್ಜಿತಗೊಳಿಸಿತ್ತು. ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಮನವಿಗಳನ್ನೂ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಸುಪ್ರೀಂಕೋರ್ಟಿನ ತೀರ್ಪಿನ ವಿರುದ್ಧ ಸಲ್ಲಿಸಲಾದ ಕುರೇಟಿವ್ ಅರ್ಜಿಗಳನ್ನು ಸಲ್ಲಿಸಲಾಗಿದ್ದು ಅವು ಇನ್ನೂ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಸೆಕ್ಷನ್ ೩೭೭ರ ವಿರುದ್ಧ ಸಲ್ಲಿಸಲಾದ ರಿಟ್ ಅರ್ಜಿಗಳನ್ನು ಅಪೊಸ್ಟೋಲಿಕ್ ಅಲಯನ್ಸ್ ಆಫ್ ಚರ್ಚಸ್ ಮತ್ತು ಉತ್ಕಲ್ ಕ್ರಿಶ್ಚಿಯನ್ ಅಸೋಸಿಯೇಶನ್ ಹಾಗೂ ಇತರ ಕೆಲವು ಸರ್ಕಾರೇತರ ಸಂಘಟನೆಗಳು ಮತ್ತು ಸುರೇಶ್ ಕುಮಾರ್ ಕೌಶಲ್ ಸೇರಿದಂತೆ ಇತರ ವ್ಯಕ್ತಿಗಳು ವಿರೋಧಿಸಿದ್ದರು.

2018: ನವದೆಹಲಿ: ಪರಸ್ಪರ ಸಮ್ಮತಿಯ ಸಲಿಂಗ ಕಾಮ ಅಪರಾಧವಲ್ಲ ಎಂಬುದಾಗಿ ಹೇಳಿ, ಭಾರತೀಯ ದಂಡ ಸಂಹಿತೆಯ ೩೭೭ನೇ ಸೆಕ್ಷನನ್ನು ಭಾಗಶಃ ರದ್ದು ಪಡಿಸಿದ  ಸುಪ್ರೀಂಕೋರ್ಟಿನ ಐತಿಹಾಸಿಕ ತೀರ್ಪಿಗೆ ವಿವಿಧೆಡೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.  ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿ ಸಲಿಂಗಕಾಮಿ ಕಾರ್ಯಕರ್ತರು ಸುಪ್ರೀಂ ಕೋರ್ಟ್ ಆವರಣದಲ್ಲೇಹಿಪ್ ಹಿಪ್ ಹುರ್ರೇ ಎಂದು ಕೂಗುತ್ತಾ ಸಂಭ್ರಮಿಸಿದರೆ, ವಿಶ್ವಸಂಸ್ಥೆ, ಅಮ್ನೆಸ್ಟಿ ಇಂಟರ್ ನ್ಯಾಷನಲ್ ಮತ್ತು ಕಾಂಗ್ರೆಸ್ ಪಕ್ಷ ಸ್ವಾಗತಿಸಿದವು.  ಜಮಾತ್--ಇಸ್ಲಾಮೀ ಹಿಂದ್ ತೀರ್ಪಿನ ಬಗ್ಗೆ ದಿಗಿಲು ವ್ಯಕ್ತ ಪಡಿಸಿದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿತು. ಜಮಾತ್--ಇಸ್ಲಾಮೀ ಹಿಂದ್:   ಜಮಾತ್--ಇಸ್ಲಾಮೀ ಹಿಂದ್ (ಜೆಐಎಚ್) ತೀರ್ಪಿನ ಬಗ್ಗೆ ತೀವ್ರ ಭ್ರಮ ನಿರಸನ ವ್ಯಕ್ತ ಪಡಿಸಿತು.  ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಜೆಐಎಚ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಲೀಮ್ ಎಂಜಿನಿಯರ್ ಅವರುಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಜಮಾತ್--ಇಸ್ಲಾಮೀ ಹಿಂದ್ ದಿಗಿಲಾಗಿದೆ ಮತ್ತು ಭ್ರಮನಿರಸನಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅನೂರ್ಜಿತಗೊಳಿಸಿ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು  ಜೆಐಎಚ್ ಸಹಿತ ವಿವಿಧ ಧಾರ್ಮಿಕ ಸಂಘಟನೆಗಳ ನಾಯಕರು ಸ್ವಾಗತಿಸಿದ್ದರು. ತೀರ್ಪಿನ ಮೂಲಕ ಸುಪ್ರೀಂಕೋರ್ಟ್ ರಾಷ್ಟ್ರವನ್ನು ನೈತಿಕ ಅಧಃಪತನದತ್ತ ಸಾಗದಂತೆ ರಕ್ಷಿಸಿತ್ತು, ಸಲಿಂಗ ಕಾಮವನ್ನು ಅಪರಾಧ ಎಂದು ಹೇಳಿತ್ತು. ಆದರೆ ಈದಿನ ಸುಪ್ರೀಂಕೋರ್ಟ್ ಮಾನವ ಲೈಂಗಿಕತೆಯು ಜೋಡಿಗಷ್ಟೇ ಸೀಮಿತವಲ್ಲ ಮತ್ತು ಸಲಿಂಗಕಾಮವು ಮಾನಸಿಕ ಅಸ್ವಸ್ಥತೆಯಲ್ಲ ಎಂದು ಹೇಳಿದೆ.. ಸಲಿಂಗಕಾಮವನ್ನು ನಿರಪರಾಧವನ್ನಾಗಿ ಮಾಡುವ ಮೂಲಕ ಹಾಗೂ ಪುರುಷ-ಪುರುಷ, ಮಹಿಳೆ-ಮಹಿಳೆ ವಿವಾಹಕ್ಕೆ ಅನುಮತಿ ನೀಡುವ ಮೂಲಕ ಕುಟುಂಬ ವ್ಯವಸ್ಥೆ ನಾಶವಾಗಲಿದೆ ಮತ್ತು ಮಾನವ ಸಂತತಿಯ ನೈಸರ್ಗಿಕ ವಿಕಾಸಕ್ಕೆ ತಡೆ ಬೀಳಲಿದೆ ಎಂದು ಹೇಳಿದರು. ಅಮ್ನೆಸ್ಟಿ ಇಂಟರ್ ನ್ಯಾಷನಲ್: ನ್ಯಾಯ ಮತ್ತು ಸಮಾನತೆಗಾಗಿ ಹೋರಾಡುವ ಪ್ರತಿಯೊಬ್ಬನಿಗೂ ಸುಪ್ರೀಂಕೋರ್ಟ್ ತೀರ್ಪು ಭರವಸೆಯನ್ನು ನೀಡಿದೆ ಎಂದು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಹೇಳಿತು.  ‘ಈ ತೀರ್ಪು ಭಾರತೀಯ ಇತಿಹಾಸದ ಕರಾಳ ಅಧ್ಯಾಯದ ಬಾಗಿಲನ್ನು ಮುಚ್ಚಲಿದೆ. ಭಾರತದ ಲಕ್ಷಾಂತರ ಮಂದಿಗೆ ಸಮಾನತೆಯ ಹೊಸ ಯುಗವನ್ನು ಅದು ತೆರೆಯಲಿದೆ. ಗಮನಾರ್ಹ ವಿಜಯವು ಎಲ್ ಜಿಬಿಟಿಐ ಸಮುದಾಯ ಮತ್ತು ಅದರ ಮಿತ್ರರ ದಶಕದಷ್ಟು ಹಳೆಯದಾದ ಹೋರಾಟದಲ್ಲಿ ಒಂದು ಮೈಲಿಗಲ್ಲು ಎಂದು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯಕ್ರಮಗಳ ನಿರ್ದೇಶಕಿ ಅಸ್ಮಿತಾ ಬಸು ಹೇಳಿದರು.  ಆರೆಸ್ಸೆಸ್ ಎಚ್ಚರಿಕೆಯ ಪ್ರತಿಕ್ರಿಯೆ: ಸುಪ್ರೀಂಕೋರ್ಟ್ ತೀರ್ಪಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಎಚ್ಚರಿಕೆಯ ಪ್ರತಿಕ್ರಿಯೆ ನೀಡಿತು. ಸಲಿಂಗ ಕಾಮವು ಅಪರಾಧವಲ್ಲ ಎಂಬ ಸುಪ್ರೀಂಕೋರ್ಟ್ ನಿಲುವನ್ನು ತಾನು ಒಪ್ಪುವುದಾಗಿ ಹೇಳಿರುವ ಆರೆಸ್ಸೆಸ್, ಆದರೆ ಸಲಿಂಗ ಕಾಮವು ಪ್ರಕೃತಿ ಮತ್ತು ಸಾಮಾಜಿಕ ನಂಬಿಕೆಗಳಿಗೆ ವಿರುದ್ಧವಾಗಿರುವುದರಿಂದ ತಾನು ಅದನ್ನು ಮಾನ್ಯ ಮಾಡಲಾಗದು ಎಂದು ಹೇಳಿತು.   ‘ಸುಪ್ರೀಂಕೋರ್ಟಿನಂತೆಯೇ ನಾವು ಕೂಡಾ ಇದನ್ನು ಅಪರಾಧ ಎಂಬುದಾಗಿ ಪರಿಗಣಿಸುವುದಿಲ್ಲ. ಆದರೆ ಸಲಿಂಗ ಮದುವೆ, ಮತ್ತು ಸಲಿಂಗ ಬಾಂಧವ್ಯಗಳು ಪ್ರಕೃತಿಗೆ ಅನುಗುಣವಾಗಿ ಇಲ್ಲವಾದ ಕಾರಣ ಸಲಿಂಗ ಕಾಮವನ್ನು ನಾವು ಬೆಂಬಲಿಸುವುದಿಲ್ಲ. ಸಾಂಪ್ರದಾಯಿಕವಾಗಿ ಕೂಡಾ ಭಾರತೀಯ ಸಮಾಜವು ಇಂತಹ ಬಾಂಧವ್ಯಗಳನ್ನು ಅಂಗೀಕರಿಸುವುದಿಲ್ಲ ಎಂದು ಆರೆಸ್ಸೆಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ ಅರುಣ್ ಕುಮಾರ್ ಹೇಳಿದರು.  ರಣ್ ದೀಪ್ ಸುರ್ಜೆವಾಲ: ಸೆಕ್ಷನ್ ೩೭೭ಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್ ತೀರ್ಪು ಮಹತ್ವಪೂರ್ಣ. ಇದು ಉದಾರವಾದ, ಸಹನೆಯುಕ್ತ ಸಮಾಜದ ಕಡೆಗೆ ಮಹತ್ವದ ಹೆಜ್ಜೆ ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೆವಾಲ ಹೇಳಿದರು. ವಸುಧೇಂದ್ರ ಪ್ರತಿಕ್ರಿಯೆ: ಎಲ್ ಜಿ ಬಿಟಿಕ್ಯೂ ಕಾರ್ಯಕರ್ತ ಹಾಗೂ ಕನ್ನಡ ಬರಹಗಾರ, ಸಲಿಂಗಕಾಮಿ ಸಣ್ಣಕತೆಗಳ ಸಂಗ್ರಹಮೋಹನಸ್ವಾಮಿ ಕರ್ತೃ ವಸುಧೇಂದ್ರ ಅವರು ಸುಪ್ರೀಂಕೋರ್ಟ್ ತೀರ್ಪನ್ನುಅಪೂರ್ವ ಎಂಬುದಾಗಿ ಬಣ್ಣಿಸಿದರು.  ‘ನನ್ನ ಪಾಲಿಗೆ ಬ್ರಿಟಿಶ್ ಕಾನೂನು ಕಡೆಗೂ ಕೊನೆಗೊಂಡಿದೆ. ನಮಗೆ ಇಂದು ನಿಜವಾಗಿ ಸ್ವಾತಂತ್ರ್ಯ ಲಭಿಸಿದೆ ಎಂದು ಅವರು ಹೇಳಿದರು. ವಿಶ್ವಸಂಸ್ಥೆ: ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ವಿಶ್ವ ಸಂಸ್ಥೆಯು, ಎಲ್ಜಿಬಿಟಿಐ ವ್ಯಕ್ತಿಗಳಿಗೆ ಸಂಪೂರ್ಣ ಮೂಲಭೂತ ಹಕ್ಕುಗಳನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ ಎಂಬುದಾಗಿ ಬಣ್ಣಿಸಿತು.  ಎಲ್ ಜಿಬಿಟಿಐ ಸಮುದಾಯದ ಮಂದಿ ವಿಶ್ವಾದ್ಯಂತ ಹಿಂಸಾತ್ಮಕ ದಾಳಿಗಳಿಗೆ ಗುರಿಯಾಗಿದ್ದಾರೆ ಮತ್ತು ವಯಸ್ಸು, ಲಿಂಗ, ಜನಾಂಗ, ಅಸಾಮರ್ಥ್ಯ ಮತ್ತು ಸಾಮಾಜಿಕ ಸ್ಥಾನಮಾನಗಳ ಆಧಾರದಲ್ಲಿ ತಾರತಮ್ಯಗಳಿಗೆ ಒಳಗಾಗಿದ್ದಾರೆ. ಭಾರತದ ಸುಪ್ರೀಂಕೋರ್ಟಿನ ತೀರ್ಪು ಎಲ್ ಜಿಬಿಟಿಐ ವ್ಯಕ್ತಿಗಳಿಗೆ ಪೂರ್ಣ ಪ್ರಮಾಣದ ಮೂಲಭೂತ ಹಕ್ಕುಗಳ ಖಾತರಿ ನೀಡುವ ನಿಟ್ಟಿನ ಮೊದಲ ಹೆಜ್ಜೆ ಎಂಬುದಾಗಿ ವಿಶ್ವ ಸಂಸ್ಥೆ ಆಶಯ ವ್ಯಕ್ತ ಪಡಿಸುತ್ತದೆ. ಎಲ್ ಜಿಬಿಟಿಐ ವ್ಯಕ್ತಿಗಳ ವಿರುದ್ಧದ ವಿವಿಧ ನೆಲೆಗಳ ತಾರತಮ್ಯ, ಹಿಂಸಾಚಾರದ ಕಲೆಯನ್ನು ನಿವಾರಿಸಿ, ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಯತ್ನಗಳನ್ನು ತೀವ್ರಗೊಳಿಸಲು ತೀರ್ಪು ನೆರವಾಗುತ್ತದೆ ಎಂದು ವಿಶ್ವಸಂಸ್ಥೆ ಪ್ರಾಮಾಣಿಕವಾಗಿ ಭಾವಿಸುತ್ತದೆ ಎಂದು ವಿಶ್ವಸಂಸ್ಥೆಯ ಹೇಳಿಕೆ ತಿಳಿಸಿತು.
ಕಾಂಗ್ರೆಸ್ ನಾಯಕ ಶಶಿ ತರೂರ್, ಬಾಲಿವುಡ್ ಸಿಲೆಬ್ರಿಟಿಗಳಾದ ಚಿತ್ರ ನಿರ್ಮಾಪಕ ಕರಣ್ ಜೋಹರ್, ಚಿತ್ರ ನಟ ಸ್ವರಭಾಸ್ಕರ್ ಮತ್ತಿತರರೂ ತೀರ್ಪನ್ನು ಸ್ವಾಗತಿಸಿದರು. ಕಾಂಗ್ರೆಸ್:  ’ಪೂರ್ವಾಗ್ರಹದ ಮೇಲಿನ ವಿಜಯಕ್ಕಾಗಿ ಭಾರತದ ಜನತೆ ಮತ್ತು ಎಲ್ ಜಿಬಿಟಿಕ್ಯೂ ಐಎ ಮತ್ತು ಸಮುದಾಯದ ಜೊತೆಗೆ ನಾವೂ ಸೇರುತ್ತೇವೆ. ಸುಪ್ರೀಂಕೋರ್ಟಿನ ಪ್ರಗತಿಪರ ಮತ್ತು ನಿರ್ಣಾಯಕ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಮತ್ತು ಇದು ಸಮಾಜದಲ್ಲಿ ಇನ್ನಷ್ಟು ಹೆಚಿನ ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಾಣದ ಆರಂಭವಾಗುವುದು ಎಂದು ಹಾರೈಸುತ್ತದೆ ಎಂದು ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿತು.


2018: ಡೆಹ್ರಾಡೂನ್: ಉತ್ತರಾಖಂಡದ ನಿತಿ ಕಣಿವೆಯಲ್ಲಿನ ಮಂದಾಕಿನಿ ನದಿಯ ಜಲಾನಯನ ಪ್ರದೇಶದ ಮೇಲ್ಭಾಗದಲ್ಲಿ ಬೃಹತ್ ಹಿಮ ಸರೋವರ ರೂಪುಗೊಳ್ಳುತ್ತಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ. ಸರೋವರದ ವಿಸ್ತಾರ ಹೆಚ್ಚುತ್ತಿರುವುದನ್ನು ಉಪಗ್ರಹ ಚಿತ್ರಗಳು ತೋರಿಸುತ್ತಿದ್ದು, ಸರೋವರದ ನೀರು ಹೊರ ಹೋಗದಿದ್ದರೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದರು. ಧೋಲಿ ಗಂಗಾ ಮತ್ತು ಮಹಾನದಿ ಕಣಿವೆಯ ಮೇಲಿನ ಜಲಾನಯನ ಪ್ರದೇಶದಲ್ಲಿ ಪಶ್ಚಿಮ ಕಮೆಟ್ ಮತ್ತು ರಾಯ್ಕಂಡ ಹಿಮರಾಶಿ ಸಂಗಮಿಸುವ ಸ್ಥಳದಲ್ಲಿ ಹಿಮ ಸರೋವರ ರೂಪುಗೊಳ್ಳುತ್ತಿರುವುದು ಕಂಡು ಬಂದಿದೆ ಎಂದು ಉತ್ತರಾಖಂಡ ಬಾಹ್ಯಾಕಾಶ ಅನ್ವಯ ಕೇಂದ್ರದ (ಯುಎಸ್ ಎಸಿ) ನಿರ್ದೇಶಕ ಡಾ. ಎಂಪಿಎಸ್ ಬಿಶ್ತ್ ಹೇಳಿದರು. ಹಿಮ ಸರೋವರ ಸೃಷ್ಟಿಯಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಯುಎಎಸ್ ಎಸಿ ಸರ್ಕಾರಿ ಅಧಿಕಾರಿಗಳಿಗೆ ವರದಿಯೊಂದನ್ನು ಸಲ್ಲಿಸಿದ್ದು, ವಾಡಿಯಾ ಇನ್ ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ಮೂಲಕ ಹೆಚ್ಚಿನ ಪರೀಕ್ಷೆ ನಡೆಸುವುದು ಉತ್ತಮ ಎಂದು ಸಲಹೆ ಮಾಡಿತು. ೨೦೦೧ರಿಂದ ಲಭ್ಯವಿರುವ ಉಪಗ್ರಹ ಮಾಹಿತಿಗಳ ವಿಶ್ಲೇಷಣೆಯಿಂದ ಬೃಹತ್ ಹಿಮಸರೋವರ ರೂಪುಗೊಳ್ಳುತ್ತಿರುವುದನ್ನು ಮತ್ತು ಅದರ ಗಾತ್ರ ವಿಸ್ತಾರಗೊಳ್ಳುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದು ನಮಗೆ ಕಳವಳ ಹುಟ್ಟಿಸುವ ವಿಷಯ ಎಂದು ಬಿಶ್ತ್ ಹೇಳಿದರು. ೨೦೦೧ರಿಂದಲೇ ಕಾಣಿಸುತ್ತಿರುವ ಸರೋವರದ ಗಾತ್ರ ವರ್ಷಗಳಲ್ಲಿ ಕುಗ್ಗಿಲ್ಲ. ಹಿಮ ಸರೋವರ ನಿರ್ಮಾಣ ಆಗಾಗ ಆಗುತ್ತಿರುತ್ತದೆ. ಆದರೆ ನಿಯಮಿತವಾಗಿ ಇಂತಹ ಸರೋವರಗಳಿಂದ ನೀರು ಹೊರಕ್ಕೆ ಹರಿದು ಹೋಗದೇ ಇದ್ದಲ್ಲಿ ಅಪಾಯವಾಗುವ ಸಂಭವ ಹೆಚ್ಚು ಎಂದು ವಾಡಿಯಾ ಇನ್ ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ತಜ್ಞರೊಬ್ಬರು ಹೇಳಿದರು. ಚೌರಾಬಾರಿ ಹಿಮರಾಶಿಯ ಉದಾಹರಣೆಯನ್ನು ನಾವು ಕಂಡಿದ್ದೇವೆ. ನೀರ್ಗಲ್ಲಿನ ಬೃಹತ್ ತುಂಡೊಂದು ಬಿದ್ದ ಬಳಿಕ ಸರೋವರದಲ್ಲಿ ಭಾರಿ ಬಿರುಕು ಉಂಟಾಗಿ ಅದರಿಂದ ಹೊರಕ್ಕೆ ಹರಿದ ಬೃಹತ್ ಪ್ರಮಾಣದ ನೀರು ೨೦೧೩ರಲ್ಲಿ ಕೇದಾರನಾಥ ಕಣಿವೆಯಲ್ಲಿ ಅನಾಹುತಗಳನ್ನು ಉಂಟು ಮಾಡಿತ್ತು ಎಂದು ಹಿರಿಯ ವಿಜ್ಞಾನಿ ದೊಭಾಯಿ ಹೇಳಿದರು. ವಾಸ್ತವವಾಗಿ ವರ್ಷದ ಆದಿಯಲ್ಲಿ ಗೌಮುಖ್ ಹಿಮರಾಶಿಯಲ್ಲಿ ಇಂತಹುದೇ ಹಿಮ ಸರೋವರನ್ನು ಗುರುತಿಸಲಾಗಿತ್ತು. ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ತಜ್ಞರ ತಂಡವೊಂದು ಹಿಮ ಸರೋವರದಿಂದ ತತ್ ಕ್ಷಣಕ್ಕೆ ಅಪಾಯವಿಲ್ಲ ಎಂಬುದಾಗಿ ವರದಿ ನೀಡಿತ್ತು.


2018: ನವದೆಹಲಿ: ತೆಲಂಗಾಣ ವಿಧಾನಸಭೆ ವಿಸರ್ಜನೆಗೆ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಶಿಫಾರಸು ಮಾಡಿದ್ದು, ರಾಜ್ಯಪಾಲ ಇಎಸ್ ಎಲ್ ನರಸಿಂಹನ್ ಅವರು ಶಿಫಾರಸನ್ನು ಅಂಗೀಕರಿಸಿ, ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಕೆಸಿಆರ್ ಅವರಿಗೆ ಸೂಚಿಸಿದರು. ಸಂಕ್ಷಿಪ್ತ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿಯವರು ಸಲ್ಲಿಸಿದ ಶಿಫಾರಸನ್ನು ರಾಜ್ಯಪಾಲರು ಅಂಗೀಕರಿಸಿದ್ದು, ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಕೆಸಿಆರ್ ಅವರಿಗೆ ಸೂಚಿಸಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿತು. ರಾಜ್ಯ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಅಸೆಂಬ್ಲಿ ವಿಸರ್ಜನೆ ಕುರಿತ ಊಹಾಪೋಹಗಳಿಗೆ ತೆರೆ ಎಳೆದು ರಾಜ್ಯದಲ್ಲಿ ತುರ್ತು ಚುನಾವಣೆಗೆ ಮಾರ್ಗ ಸುಗಮಗೊಳಿಸಿದರು. ಶೀಘ್ರ  ಚುನಾವಣೆಯ ಪ್ರಸ್ತಾವವನ್ನು ಅಂತಿಮಗೊಳಿಸಲು ರಾಜ್ಯ ಸಚಿವ ಸಂಪುಟವು ಗುರುವಾರ ಮಧ್ಯಾಹ್ನ ಹೈದರಾಬಾದಿನಲ್ಲಿ ಸಭೆ ಸೇರಿತ್ತು. ಔಪಚಾರಿಕ ಸಭೆ ೧೫ ನಿಮಿಷ ಕಾಲ ನಡೆಯಿತು. ತೆಲಂಗಾಣ ವಿಧಾನಸಭೆಯ ಅವಧಿ ಮುಂದಿನ ವರ್ಷ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿತ್ತು. ಜ್ಯೋತಿಷ್ಯದಲ್ಲಿ ಅಚಲ ವಿಶ್ವಾಸ ಹೊಂದಿರುವ ಕೆ ಸಿ ಚಂದ್ರಶೇಖರ ರಾವ್ ಬೆಳಗ್ಗೆ .೪೫ ಗಂಟೆಗೆಅಜ ಏಕಾದಶಿ ಮುಹೂರ್ತದಲ್ಲಿ ಸಂಪುಟ ಸಭೆ ನಡೆಸುವರು ಎಂಬುದಾಗಿ ಮುನ್ನ ವರದಿಗಳು ತಿಳಿಸಿದ್ದವು. ಅಜ ಏಕಾದಶಿ ಮುಹೂರ್ತವು ಬೆಳಗ್ಗೆ .೩೧ಕ್ಕೆ ಅಂತ್ಯವಾಗಲಿತ್ತು. ಜ್ಯೋತಿಷಿಗಳ ಪ್ರಕಾರ ಕೆ ಸಿ ಆರ್ ಅವರ ಅದೃಷ್ಟ ಸಂಖ್ಯೆ . ಹೀಗಾಗಿ ಇದೇ ದಿನ ಅವರು ನೂತನ ಚುನಾವಣೆಗಾಗಿ ದಾಳ ಉರುಳಿಸಿದ್ದಾರೆ ಎನ್ನಲಾಗಿದೆಕೆಸಿ ಚಂದ್ರಶೇಖರ ರಾವ್ ಅವರು ಸಂಪುಟ ಸಭೆಯ ಬಳಿಕ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರನ್ನು ಭೇಟಿ ಮಾಡಿ ವಿಧಾನಸಭೆ ವಿಸರ್ಜನೆಯ ನಿರ್ಧಾರವನ್ನು ತಿಳಿಸಿದರು. ಹುತಾತ್ಮರಿಗೆ ಶ್ರದ್ಧಾಂಜಲಿ: ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಚಂದ್ರಶೇಖರ ರಾವ್ ಅವರು ರಾಜ್ಯ ವಿಧಾನಸಭೆಯ ಮುಂಭಾಗದ ಗನ್ ಪಾರ್ಕಿನಲ್ಲಿರುವ ತೆಲಂಗಾಣ ಹುತಾತ್ಮರ ಸ್ಮಾರಕಕ್ಕೆ ತೆರಳಿ ಪ್ರತ್ಯೇಕ ತೆಲಂಗಾಣ ಹೋರಾಟದಲ್ಲಿ ತಮ್ಮ ಪ್ರಾಣಗಳನ್ನು ಬಲಿದಾನ ಮಾಡಿದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ವಿಧಾನಸಭೆ ವಿಸರ್ಜನೆಯ ನಿರ್ಧಾರವನ್ನು ಜನತೆಗೆ ತಿಳಿಸಲು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಕೆಸಿಆರ್ ಅವರು ವಿಧಾನಸಭಾ ಚುನಾವಣೆಗಾಗಿ ತಮ್ಮ ಪಕ್ಷದ ೧೦೫ ಅಭ್ಯರ್ಥಿಗಳ ಪಟ್ಟಿಯನ್ನೂ ಪ್ರಕಟಿಸಿದರು. ಇಂದು ಚುನಾವಣಾ ಕಹಳೆ: ಶುಕ್ರವಾರ ಕೆಸಿಆರ್ ಅವರು ಸಿದ್ದಿಪೇಟ್ ಜಿಲ್ಲೆಯ ಹುಸ್ನಾಬಾದಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ೨೦೧೪ರ ಚುನಾವಣೆಗಾಗಿ ಕೆಸಿಆರ್ ಅವರು ಇಲ್ಲಿಂದಲೇ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದರು. ಅವರ ಪಕ್ಷವು ಸಭೆಯನ್ನುಪ್ರಜಾ ದೀವೆನ ಸಭಾ (ಜನ ಆಶೀರ್ವಾದ ಸಭೆ) ಎಂದು ಕರೆದಿತ್ತು.  ‘೨೦೧೪ರಲ್ಲಿ ಕೆಸಿಆರ್ ಅವರು ಹುಸ್ನಾಬಾದಿನಿಂದ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದರು. ಈಗ ಅವರು ಇದೇ ಸ್ಥಳದಿಂದ ಮತ್ತೆ ಚುನಾವಣಾ ಕಹಳೆ ಮೊಳಗಿಸಲಿದ್ದಾರೆ. ಅವರು ೫೦ ದಿನಗಳ ಅವಧಿಯಲಿ ಸುಮಾರು ೧೦೦ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಸಿಆರ್ ಅಳಿಯ ಹಾಗೂ ಹೊರಹೋಗುತ್ತಿರುವ ಸಂಪುಟದ ನೀರಾವರಿ ಸಚಿವ ಟಿ.ಹರೀಶ ರಾವ್ ಹೇಳಿದರು. ಆಂಧ್ರಪ್ರದೇಶದಿಂದ ವಿಭಜನೆಗೊಂಡ ಬಳಿಕ ೨೦೧೪ರಲ್ಲಿ ನಡೆದ ಮೊದಲ ತೆಲಂಗಾಣ ಚುನಾವಣೆಯಲ್ಲಿ ಕೆಸಿಆರ್ ಅವರ ಪಕ್ಷ ಸ್ಪಷ್ಟ ಬಹುಮತ ಪಡೆದಿತ್ತು. ಕಳೆದ ಭಾನುವಾರ ರಾಜ್ಯ ರಾಜಧಾನಿಯಲ್ಲಿ ಬೃಹತ್ ರ್ಯಾಲಿ ನಡೆಸಿದ್ದ ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ನಾಲ್ಕೂವರೆ ವರ್ಷಗಳ ತಮ್ಮ ಸರ್ಕಾರದಪ್ರಗತಿ ಪತ್ರವನ್ನು ಜನತೆಯ ಮುಂದಿಟ್ಟಿದ್ದರು. ೨೦೧೯ರ ಲೋಕಸಭಾ ಸಭಾ ಚುನಾವಣೆ ಜೊತೆಗೆ ನಡೆಯಬೇಕಾಗಿರುವ ವಿಧಾನಸಭೆ ಚುನಾವಣೆಯನ್ನು ಪ್ರತ್ಯೇಕಿಸುವ ಬಗ್ಗೆ ಪಕ್ಷವು ನಿರ್ಧರಿಸಬಹುದು ಎಂಬ ಸುಳಿವನ್ನು ಅವರು ಸಂದರ್ಭದಲ್ಲಿ ನೀಡಿದ್ದರು. ಕಾಂಗ್ರೆಸ್ ವಿರೋಧ: ಮಧ್ಯೆ ತ್ವರಿತ ಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ವಿರೋಧಿಸಿದೆ. ಪರಿಷ್ಕೃತ ಮತದಾರರ ಯಾದಿ ಪ್ರಕಟಗೊಳ್ಳುವವರೆಗೆ ಚುನಾವಣೆಗಳನ್ನು ನಡೆಸುವುದರ ವಿರುದ್ಧ ನ್ಯಾಯಾಲಯಗಳು ಮತ್ತು ಚುನಾವಣಾ ಆಯೋಗವನ್ನು ಸಂಪರ್ಕಿಸುವುದಾಗಿ ಕಾಂಗ್ರೆಸ್ ತಿಳಿಸಿತು. ತೆಲಂಗಾಣ ಚುನಾವಣೆಯನ್ನು ಡಿಸೆಂಬರಿನಲ್ಲಿ ನಡೆಯಲಿರುವ ನಾಲ್ಕು ರಾಜ್ಯಗಳ ಚುನಾವಣೆ ಜೊತೆಗೆ ಜೋಡಿಸದಂತೆ ಮತ್ತು ಮತದಾರರ ಪಟ್ಟಿ ನಮಗೆ ಲಭಿಸುವವರೆಗೆ ಚುನಾವಣೆಗಳನ್ನು ವಿಳಂಬಿಸುವಂತೆ ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಎಂ. ಶಶಿಧರ್ ರೆಡ್ಡಿ ಮುನ್ನ ಮಾಧ್ಯಮಗಳಿಗೆ ತಿಳಿಸಿದ್ದರು. ನಮ್ಮ ಮನವಿಗಳನ್ನು ಈಡೇರಿಸದೇ ಇದ್ದರೆ ನಾವು ಕೋರ್ಟಿನ ಮೊರೆಹೋಗುತ್ತೇವೆ ಎಂದು ಅವರು ಹೇಳಿದ್ದರು. ವರ್ಷ ಡಿಸೆಂಬರಿನಲ್ಲಿ ನಡೆಯಲಿರುವ ರಾಜಸ್ಥಾನ, ಮಧ್ಯ ಪ್ರದೇಶ, ಛತೀಸ್ ಗಢ ವಿಧಾನಸಭಾ ಚುನಾವಣೆಗಳ ಜೊತೆಗೇ ರಾಜ್ಯ ವಿಧಾನಸಭಾ ಚುನಾವಣೆಯನ್ನೂ ನಡೆಸಲು ಟಿಆರ್ ಎಸ್ ಇಚ್ಛಿಸಿದೆ೧೯೯೯ರಿಂದ ಅವಿಭಜಿತ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ಲೋಕಸಭಾ ಚುನಾವಣೆ ಜೊತೆಗೇ ನಡೆಸುತ್ತಿದ್ದಂತೆಯೇ, ತೆಲಂಗಾಣ ವಿಧಾನಸಭಾ ಚುನಾವಣೆಯನ್ನೂ ಲೋಕಸಭಾ ಚುನಾವಣೆ ಜೊತೆಗೇ ನಡೆಸಬಹುದು. ಆಗ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಬಿಂಬಿಸುವ ಸಾಧ್ಯತೆಯಿದ್ದು, ತನಗೆ ಇದು ಪ್ರತಿಕೂಲವಾಗಬಹುದು ಎಂಬುದು ಕೆಸಿಆರ್ ಲೆಕ್ಕಾಚಾರ ಎನ್ನಲಾಯಿತು. ತೆಲಂಗಾಣದಲ್ಲಿ ಬಿಜೆಪಿಯು ಪ್ರಬಲ ಪಕ್ಷವಲ್ಲವಾದ್ದರಿಂದ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮಾಡುವರಿಸ್ಕ್ ತೆಗೆದುಕೊಳ್ಳಲು ಕೆಸಿಆರ್ ಬಯಸುವುದಿಲ್ಲ ಎಂದೂ ಹೇಳಲಾಯಿತು. ಭೌಗೋಳಿಕ ಕಾರಣಗಳಿಗಾಗಿ ಬಿಜೆಪಿಯ ತನ್ನ ರಾಜಕೀಯ ಹೆಜ್ಜೆಗಳ ಗುರುತು ಮೂಡಿಸಲು ಯತ್ನಿಸುತ್ತಿರುವ ಮೂರು ಈಶಾನ್ಯ ರಾಜ್ಯಗಳ ಚುನಾವಣೆ ಜೊತೆಗೇ ತೆಲಂಗಾಣ ಚುನಾವಣೆಯ ನಡೆಸುವ ಸಾಧ್ಯತೆಯೂ ಇಲ್ಲದಿಲ್ಲ. ಮಧ್ಯೆ ಪಕ್ಷವು ಲೋಕಸಭಾ ಚುನಾವಣೆಗಾಗಿ ಬಿಜೆಪಿ ಜೊತೆಗೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬುದಾಗಿ ಹರಡಿರುವ ವದಂತಿಗಳನ್ನು ತಳ್ಳಿಹಾಕುವ ಯತ್ನವಾಗಿ ಸಭೆಯಲ್ಲಿ  ರಾವ್ ಅವರುದೆಹಲಿ ಪಕ್ಷಗಳ ವಿರುದ್ಧ ತೆಲಂಗಾಣ ಆತ್ಮಗೌರವ ಮಂತ್ರವನ್ನು ಪಠಿಸಿದ್ದರು.


2018: ವಾಷಿಂಗ್ಟನ್: ಪ್ರಸ್ತುತ 140ರಿಂದ 150 ಪರಮಾಣು ಸಿಡಿತಲೆಗಳನ್ನು ಹೊಂದಿರುವ ಪಾಕಿಸ್ತಾನ 2025 ವೇಳೆಗೆ ಪರಮಾಣು ಸಿಡಿತಲೆಗಳ ದಾಸ್ತಾನನ್ನು 220-250ಕ್ಕೆ ಏರಿಸಿಕೊಳ್ಳುವ ನಿರೀಕ್ಷೆಯಿದ್ದು ವಿಶ್ವದ 5ನೇ ಅತಿದೊಡ್ಡ ಅಣ್ವಸ್ತ್ರ ರಾಷ್ಟ್ರವಾಗುವ ಹಾದಿಯಲ್ಲಿದೆ. ವಿವಿಧ ರಾಷ್ಟ್ರಗಳ ಅಣ್ವಸ್ತ್ರ ತಯಾರಿ ಮೇಲೆ ಕಣ್ಣಿಟ್ಟಿರುವ ಅಮೆರಿಕದ ತಜ್ಞರ ವರದಿಯೊಂದು ಅಂಶವನ್ನು ಹೊರಗೆಡವಿತು. 1999 ಅಮೆರಿಕದ ರಕ್ಷಣಾ  ಗುಪ್ತಚರ ಸಂಸ್ಥೆಯು ಪಾಕಿಸ್ತಾನವು  2020 ವೇಳೆಗೆ 60-80 ಪರಮಾಣು ಸಿಡಿತಲೆಗಳನ್ನು ಹೊಂದಬಹುದು ಎಂದು ಊಹಿಸಿತ್ತು. ಆದರೆ  ಪಾಕಿಸ್ತಾನ ಈಗಲೇ 140-150 ಪರಮಾಣು ಸಿಡಿತಲೆಗಳನ್ನು ಹೊಂದಿರುವುದು ಅಮೆರಿಕದ ತಜ್ಞರ ನಿರೀಕ್ಷೆಗಳನ್ನು ಮೀರಿಸಿತು.


2016: ನವದೆಹಲಿ: ಸ್ಪೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ (145*) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧದ ಪ್ರಥಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯ ದಾಖಲೆಯ 263 ರನ್ ಸಿಡಿಸಿತು. ಪಲ್ಲೆಕೆಲೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಅಭಿಮಾನಿಗಳಗೆ ರಸಧೌತಣ ನೀಡಿದರು. ನಿಗದಿತ 20 ಓವರ್ಗೆ ಆಸ್ಟ್ರೇಲಿಯಾ ಮೂರು ವಿಕೆಟ್ ಕಳೆದುಕೊಂಡು 263 ರನ್ ಸಿಡಿಸಿತು. ಮೂಲಕ ಟಿ20 ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ತಂಡ ಎಂಬ ಗೌರವಕ್ಕೆ ಆಸ್ಟ್ರೇಲಿಯಾ ಪಾತ್ರವಾದರೆ, ಮ್ಯಾಕ್ಸ್ವೆಲ್ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಎರಡನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಮ್ಯಾಕ್ಸ್ವೆಲ್ ಸಿಡಿಸಿದ 145ರನ್ನಲ್ಲಿ ಹದಿನಾಲ್ಕು ಬೌಂಡರಿ ಹಾಗೂ ಆರು ಸಿಕ್ಸರ್ ಸೇರಿವೆ. 2013ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರನ್ ಫಿಂಚ್ 156 ರನ್ ಸಿಡಿಸಿದ್ದರು.
2016: ಮಂಡ್ಯ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರೈತರ ಪ್ರತಿಭಟನೆ ಕಾವು ಹೆಚ್ಚುತ್ತಿರುವುದು ಮತ್ತು ಕನ್ನಡಪರ ಸಂಘಟನೆ, ರೈತರು ಸಪ್ಟೆಂಬರ್ 9ರಂದು ಕರ್ನಾಟಕ ಬಂದ್ಗೆ ಕರೆ ನೀಡಿರುವುದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಇನ್ನೆರಡು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದರು. ಇತ್ತ ಬೆಂಗಳೂರಿನಲ್ಲಿ ಇಂದು ನಡೆದ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡುವುದರಿಂದ ನ್ಯಾಯ ಸಿಗುವುದಿಲ್ಲ. ಪ್ರತಿಭಟನಾಕಾರ ರೈತರು ತಾಳ್ಮೆಯಿಂದ ಪ್ರತಿಭಟನೆ ಡೆಸಬೇಕು ಎಂದು ಮನವಿ ಮಾಡಿಕೊಂಡರು..

2016: ನವದೆಹಲಿ: 2012 ಲಂಡನ್ ಒಲಿಂಪಿಕ್ಸಿನಲ್ಲಿ ಕಂಚು ಪದಕ ಗೆದ್ದ ಭಾರತದ ಯೋಗೇಶ್ವರ್
ದತ್ ಅವರಿಗೆ ಸ್ವರ್ಣ ಪದಕ ದೊರೆಯುತ್ತದೆ ಎಂಬ ಕೋಟ್ಯಾಂತರ ಭಾರತೀಯರ ಕನಸು ಭಗ್ನವಾಯಿತು. ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯು.ಡಬ್ಲ್ಯೂ.ಡಬ್ಲ್ಯೂ) ಅಜರ್ಬೆಜಾನ್ನ ಕುಸ್ತಿ ಪಟು ತೊಗ್ರುಲ್ ಅಸ್ಗರೋವ್ ಅವರಿಗೆ ಡೋಪಿಂಗ್ ಟೆಸ್ಟ್ನಲ್ಲಿ ಕ್ಲೀನ್ ಚಿಟ್ ನೀಡಿತು.  60ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತ ರಷ್ಯಾದ ಬೇಸಿಕ್ ಕುಡುಖೋವ್ ಡೋಪ್ ಟೆಸ್ಟ್ನಲ್ಲಿ ವೈಫಲ್ಯ ಹೊಂದಿದ ಹಿನ್ನಲೆಯಲ್ಲಿ ಭಾರತದ ಯೋಗೇಶ್ವರ ದತ್ಗೆ ಬೆಳ್ಳಿ ಪದಕದ ಭಡ್ತಿ ದೊರೆತಿತ್ತು. ನಂತರ ಬಂಗಾರ ಪದಕ ವಿಜೇತ ಅಸ್ಗರೋವ್ ಅವರು ನಿಷೇಧಿತ ಉದ್ದೀಪನ ಮದ್ದು ಸೇವನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಕಂಚು ಪದಕಕ್ಕೆ ನಡೆದ ಹೋರಾಟದಲ್ಲಿ ಯೋಗೇಶ್ವರ್ ದತ್ ದಕ್ಷಿಣ ಕೋರಿಯಾದ ರೀ ಜೊಂಗ್ ಮೈಯಂಗ್ ವಿರುದ್ಧ ಜಯಿಸಿ, ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು.


2016: ನವದೆಹಲಿ: ಭಾರತದ ಅಸ್ಸಾಮ್ ರಾಜ್ಯದ ಮಜುಲಿ ದ್ವೀಪವನ್ನು ಇತ್ತೀಚೆಗೆ ಗಿನ್ನೆಸ್ ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂಬ ಸುದ್ದಿ ವಿಶ್ವಸನೀಯ ಮೂಲದಿಂದ ತಿಳಿದು ಬಂದಿತು.. ಬ್ರಹ್ಮಪುತ್ರ ನದಿ ಅಂಗಳದ ದ್ವೀಪ 340 ಮೈಲಿ ದೂರ ವ್ಯಾಪಿಸಿದೆ. ಕಳೆದ 30-40 ವರ್ಷದಿಂದ ನಿರಂತರ ನೆರೆ ಹಾವಳಿಯಿಂದ ಭೂ ಸವೆತ ಉಂಟಾಗಿ ಬ್ರಹ್ಮಪುತ್ರ ನದಿ ತನ್ನ ಜಾಲ ವ್ಯಾಪಿಸುತ್ತ ಸಾಗಿದೆ. ನದಿಪಾತ್ರದಲ್ಲಿ ಅಸ್ಸಾಮಿನ ಬುಡಕಟ್ಟು ಜನಾಂಗದ 1,60,000 ಜನ ತಮ್ಮ ಸೂರು ಕಂಡುಕೊಂಡಿದ್ದಾರೆ. ಅಲ್ಲದೇ ಅನೇಕ ಪ್ರಾಣಿ-ಪಕ್ಷಿ ಪ್ರಭೇದಗಳಿಗೆ ಆಶ್ರಯ ನೀಡಿದೆ. ಇದಕ್ಕೂ ಮೊದಲು ಜಗತ್ತಿನ ವಿಶಾಲ ದ್ವೀಪ ಸಮೂಹದ ಶ್ರೇಯಕ್ಕೆ ಬ್ರೆಜಿಲ್ ಮರಾಜೊ ದ್ವೀಪ ಪಾತ್ರವಾಗಿತ್ತು. ಇದೀಗ ಭಾರತದ ಮಜುಲಿ ದ್ವೀಪ ಜಗತ್ತಿನ ವಿಶಾಲ ದ್ವೀಪ ಎಂಬ ಪಟ್ಟಿಗೆ ದಾಖಲಾಗಿದೆ ಎಂಬ ವರದಿ ಇದೆ.

2016: ಕೋಲ್ಕತ: ಬ್ರಿಟಿಷ್ ಭಾರತದಿಂದ ಜರ್ಮನಿಗೆ ಮಹಾನ್ ಪರಾರಿ ನಡೆಸಲು ಭಾರತದ ಕ್ರಾಂತಿಕಾರಿ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬಳಸಿದ್ದ 4 ಬಾಗಿಲಿನ ಜರ್ಮನ್ ವಾಂಡರರ್ ಸೆಡನ್ ಕಾರಿಗೆ 75 ವರ್ಷಗಳ ಬಳಿಕ ಮರುಜೀವ ಬರಲಿದೆ. ಸಧ್ಯ ನೇತಾಜಿ ಅವರ ಪೂರ್ವಜರ ಮನೆಯಲ್ಲಿ ಇರುವ ಕಾರನ್ನು ಶೀಘ್ರದಲ್ಲೇ ದುರಸ್ತಿ ಪಡಿಸಿ ಮರುಸ್ಥಾಪನೆ ಮಾಡಲಾಗುವುದು  ನೇತಾಜಿ ರೀಸರ್ಚ್ ಬ್ಯೂರೋ (ಎನ್ಆರ್ಬಿ) ನಿರ್ವಹಣೆಯಲ್ಲಿ ಇರುವ ನೇತಾಜಿ ಭವನದ ನೆಲಮಹಡಿಯಲ್ಲಿ ಬಿಎಲ್ 7169 ನಂಬರಿನ 1937 ಮಾಡೆಲ್ ಕಾರನ್ನು ಗಾಜಿನ ಕೋಣೆಯಲ್ಲಿ ಪಾರ್ಕ್ ಾಡಲಾಗಿದೆ. ಕಾರಿಗೆ ಮರುಜೀವ ನೀಡಲು ಬ್ಯೂರೋ ಜೊತೆಗೆ ಜರ್ಮನ್ ಆಟೋ ಮೇಕರ್ ಆಡಿ ಕಂಪೆನಿ ಸಹಯೋಗ ನೀಡಲಿದೆ. ಕಾರಿನ ದುರಸ್ತಿ ಕೆಲಸ ನಡೆಯುತ್ತಿದೆ. ಅದರ ಎಲ್ಲಾ ಭಾಗಗಳನ್ನೂ ದುರಸ್ತಿಗೊಳಿಸಿ ಅದರ ಮೂಲ ರೂಪದಲ್ಲೇ ಪುನಃಸ್ಥಾಪನೆ ಮಾಡಲಾಗುವುದು ಎಂದು ಎನ್ಆರ್ಬಿ ಅಧ್ಯಕ್ಷರಾದ ಕೃಷ್ಣ ಬೋಸ್ ನುಡಿದರು. ವಿಂಟೇಜ್ ಕಾರು ತಜ್ಞ ಪಲ್ಲಬ್ ರಾಯ್ ಮಾರ್ಗದರ್ಶನದಲ್ಲಿ ದುರಸ್ತಿ ಮಾಡಲಾಗುತ್ತಿದ್ದು ಡಿಸೆಂಬರ್ ವೇಳೆಗೆ ದುರಸ್ತಿ ಕಾರ್ಯ ಮುಗಿಯಲಿದೆ. 1941 ಜನವರಿ 16 ರಾತ್ರಿ ದಕ್ಷಿಣ ಕೋಲ್ಕತದ (ಆಗಿನ ಕಲ್ಕತ್ತ) ಎಲಿಜಿನ್ ರಸ್ತೆಯಲ್ಲಿ ಗೃಹಬಂಧನದಲ್ಲಿ ಇದ್ದ ಮನೆಯಿಂದ ಬೋಸ್ ಅವರು ಇದೇ ಕಾರಿನ ಮೂಲಕ ತಪ್ಪಿಸಿಕೊಂಡು ನಾಜಿ ಜರ್ಮಾನಿಗೆ ಪರಾರಿಯಾಗಿದ್ದರು. ನೇತಾಜಿ ಅವರ ಸಹೋದರ ಸಂಬಂಧಿ ಸಿಸಿರ್ ಬೋಸ್ ಅವರು ಕಾರನ್ನು ಕೋಲ್ಕತದಿಂದ ಈಗ ಜಾರ್ಖಂಡ್ನಲ್ಲಿ ಇರುವ ಗೋಮೋಹ್ಗೆ ಬ್ರಿಟಿಷ್ ಸರ್ಪಗಾವಲನ್ನು ಭೇದಿಸಿ ಕರೆದೊಯ್ದಿದ್ದರು. ಅಲ್ಲಿಂದ ನೇತಾಜಿ ಕಾಬೂಲ್ ಮತ್ತು ಮಾಸ್ಕೋ ಮೂಲಕವಾಗಿ ಜರ್ಮನಿ ತಲುಪಿದ್ದರು.

2016: ಟೋಕಿಯೋ: ನಾನು ಭಾರತೀಯಳಲ್ಲ. ಆದರೆ ಅರೆ ಭಾರತೀಯಳು. ನನ್ನ ಅಪ್ಪ ಭಾರತೀಯ ಬಗ್ಗೆ ನನಗೆ ಹೆಮ್ಮೆ ಇದೆ. ಭಾರತದಿಂದ ಹರಸಿ ಬರುತ್ತಿರುವ ಸಂದೇಶ, ಮತ್ತು ಭಾರತೀಯರ ಪ್ರೀತಿಗಾಗಿ ಆಭಾರಿಯಾಗಿದ್ದೇನೆ ಎಂದು ಅಮೆರಿಕದಲ್ಲಿ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪ್ರತಿನಿಧಿಸಲಿರುವ ಜಪಾನ್ ಸುಂದರಿ ಪ್ರಿಯಾಂಕಾ ಯೊಶಿಕಾವಾ ಹೇಳಿದರು. ಪ್ರಿಯಾಂಕಾ ಹಿಂದಿನ ದಿನ ಜಪಾನ್ ಸುಂದರಿಯಾಗಿ ಆಯ್ಕೆಯಾಗಿದ್ದರು. ಭಾರತೀಯ ಅಪ್ಪ ಹಾಗೂ ಜಪಾನೀ ಅಮ್ಮನನ್ನು ಹೊಂದಿರುವ ಪ್ರಿಯಾಂಕಾ ಯೊಶಿಕಾವಾ ಅವರನ್ನು ಮಾಧ್ಯಮಗಳು ಅರೆ ಭಾರತೀಯ ಚೆಲುವೆ ಎಂದೇ ಬಣ್ಣಿಸಿದವು.  ಪ್ರಿಯಾಂಕಾ ಯೊಶಿಕಾವಾ ಅವರ ತಂದೆ ಮೂಲತಃ ಭಾರತದ ಕೋಲ್ಕತದವರಾಗಿದ್ದು, ಹಿನ್ನೆಲೆಯಲ್ಲಿ 22 ಹರೆಯದ ಚೆಲುವೆ ಪ್ರಿಯಾಂಕಾ ಅವರಿಗೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಯಶಸ್ಸು ಕೋರಿ ಭಾರತದಿಂದ ಸಂದೇಶಗಳ ಸುರಿಮಳೆಯಾಯಿತು. ಆನೆ ತರಬೇತುದಾರರಾಗಿರುವ ಕೋಲ್ಕತ ನಿವಾಸಿಯಾದ ಪ್ರಿಯಾಂಕಾಳ ತಂದೆ ಜಪಾನ್ಗೆ ವಿದ್ಯಾಭ್ಯಾಸಕ್ಕೆ ಹೋಗಿದ್ದಾಗ ಜಪಾನೀ ಮಹಿಳೆಯನ್ನು ಭೇಟಿಯಾಗಿ ಮದುವೆಯಾಗಿದ್ದರು. ಪ್ರಿಯಾಂಕಾಗೆ ಜಪಾನ್ ಸುಂದರಿ ಕಿರೀಟ ನೀಡಿರುವ ಬಗ್ಗೆ ಅಸಮಾಧಾನಗಳೂ ವ್ಯಕ್ತವಾದವು.. ಜಪಾನ್ ಸುಂದರಿ ಕಿರೀಟ ಸಂಪೂರ್ಣ ಜಪಾನೀಯಳಿಗೆ ಸಿಗಬೇಕಿತ್ತು, ಅರೆ ಭಾರತೀಯಳಿಗೆ ಅಲ್ಲ ಎಂದು ಜಪಾನಿನಲ್ಲಿ ಹಲವರು ಮೂಗು ಮುರಿದರು. ಇದಕ್ಕೂ ಮೊದಲು ಅರಿಯಾನ ಮಿಯಾಮೊಟೊ ಕಪ್ಪು ಸುಂದರಿಯಾಗಿ ಮಿಸ್ ಜಪಾನ್ ಮುಕುಟ ಅಲಂಕರಿಸಿದ್ದರು. ಸ್ಪರ್ಧೆಯಲ್ಲಿ ಅವರು ಬಾಲಿವುಡ್ ಮಾದರಿ ವೇಷಭೂಷಣ ಧರಿಸಿದ್ದು ತಮ್ಮ ಗೆಲುವಿಗೆ ಕಾರಣವಾಯಿತು ಎಂದು 5.8 ಅಡಿ ಎತ್ತರದ ಪ್ರಿಯಾಂಕಾ ಹೇಳಿದರು.

2016: ಶ್ರೀರಂಗಪಟ್ಟಣ
: ಸುಪ್ರೀಂ ಆದೇಶ ವಿರೋಧಿಸಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ
ಕೆಆರ್ಎಸ್ ಜಲಾಶಯದ ಬಳಿ ಬಿಜೆಪಿ ಮತ್ತು ರೈತ ಸಂಘಟನೆಗಳು ಧರಣಿ ನಡೆಸಿದವು.  ಪ್ರತಿಭಟನಾಕಾರರು ಜಲಾಶಯಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು ಪೊಲೀಸರು ಅವರನ್ನು ತಡೆ ಹಿಡಿದರು.  ಕನ್ನಡಪರ ಸಂಘಟನೆಗಳು ವಿವಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಮಾಜಿ ಸಂಸದೆ ರಮ್ಯಾ ವಿರುದ್ಧ ಘೋಷಣೆ ಕೂಗಿದರು. ರಮ್ಯಾ ಅವರಿಗೆ ರೈತರ ನರಕ ಕಾಣುತ್ತಿಲ್ಲ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು ಆಕೆಯ ಪೋಸ್ಟರ್ಗೆ ಬೆಂಕಿ ಹಚ್ಚಿದರು.
2016: ರಾಳೇಗಣ ಸಿದ್ಧಿ : ಅರವಿಂದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾದಾಗ ಮೂಡಿಸಿದ್ದ ನಿರೀಕ್ಷೆ
ಹುಸಿಯಾಯಿತು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಿರಾಸೆ ವ್ಯಕ್ತ ಪಡಿಸಿದರು. ಕೇಜ್ರಿವಾಲ್ ನನ್ನೊಡನೆ ಲೋಕಪಾಲ ಹೋರಾಟ ನಡೆಸುತ್ತಿದ್ದಾಗಗ್ರಾಮ ಸ್ವರಾಜ್ಯಕುರಿತಾಗಿ ಪುಸ್ತಕ ಬರೆದಿದ್ದರು. ಆದರೆ ದೆಹಲಿ ಶಾಸಕರು ಹಾಗು ಮಂತ್ರಿ ಮಂಡಲವನ್ನು ನೋಡಿದರೆ ಗ್ರಾಮ ಸ್ವರಾಜ್ಯವೆಂದರೆ ಇದೇನಾ? ಎಂಬ ಪ್ರಶ್ನೆ ಮೂಡುತ್ತಿದೆ. ಕೇಜ್ರಿವಾಲ್ ಅವರಲ್ಲಿ ನಾನು ಇರಿಸಿದ್ದ ನಿರೀಕ್ಷೆಗಳೆಲ್ಲ ಹುಸಿಯಾಗಿವೆ ಎಂದು ತಿಳಿಸಿದರು. ಕೇಜ್ರಿವಾಲ್ ರವರ ಸಹೋದ್ಯೋಗಿಗಳು ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರುತ್ತಿರುವುದು ನೋವಿನ ಸಂಗತಿ. ಇದಕ್ಕೆಲ್ಲಾ ಅವರು ಉತ್ತರಿಸುವ ಅವಶ್ಯಕತೆಯಿಲ್ಲ. ರಾಜಕೀಯದಲ್ಲಿ ಇಂತಹ ಸಮಸ್ಯೆಗಳು ಅವರು ಪಕ್ಷ ಸ್ಥಾಪಿಸುವ ಮುನ್ನವೂ ಇದ್ದವು. ಹಾಗಾಗಿ ಅನುಭವವೇ ಅವುಗಳಿಗೆಲ್ಲ ಉತ್ತರ ನೀಡಿದೆ ಎಂದು ಹೇಳಿದರು.

2016: ನವದೆಹಲಿ: ದೇಶದಲ್ಲಿ ರಕ್ತ ವರ್ಗಾವಣೆಯಿಂದ ಸುಮಾರು 2,234 ಜನರಿಗೆ ಎಚ್ಐವಿ
ಸೋಂಕು ತಗುಲಿರುವ  ಅಘಾತಕಾರಿ ಅಂಶ ಹೊರಬಿದ್ದಿತು. ಅಕ್ಟೋಬರ್ 2014 ರಿಂದ ಮಾರ್ಚ್ 2016 ನಡುವೆ ವಿವಿಧ ಆಸ್ಪತ್ರೆಗಳಲ್ಲಿ ನಡೆದಿರುವ ರಕ್ತ ವರ್ಗಾವಣೆ ಪ್ರಕ್ರಿಯೆಯಿಂದಾಗಿ 2,234 ಜನರು ಎಚ್ಐವಿ ಸೋಂಕಿಗೆ ತುತ್ತಾಗಿದ್ದಾರೆ. ಕುರಿತು  ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ(ಎನ್ಎಸಿಒ) ಮಾಹಿತಿ ನೀಡಿದೆಸಾಮಾಜಿಕ ಕಾರ್ಯಕರ್ತ ಚೇತನ್ ಕೊಠಾರಿ ಅವರು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಕೋರಿದ್ದ ಮನವಿಗೆ ಎನ್ಎಸಿಒ ಮಾಹಿತಿ ನೀಡಿತು. ರಕ್ತ ವರ್ಗಾವಣೆ ಪ್ರಕ್ರಿಯೆಯಲ್ಲಿ ರಾಷ್ಟ್ರದ ಬಹಳಷ್ಟು ಜನರು ಎಚ್ಐವಿ ಸೋಂಕು ಪೀಡಿತರಾಗುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಕಾಂಗ್ರೆಸ್ ಸಂಸತ್ಸದಸ್ಯ ಜ್ಯೋತಿರಾದಿತ್ಯ ಸಿಂದಿಯಾ ಅವರು ಕೇಳಿದ್ದ ಪ್ರಶ್ನೆಗೆ ಕೇಂದ್ರ ಆರೋಗ್ಯ ಸಚಿವರು  ‘ಇಲ್ಲಎಂದು ಉತ್ತರಿಸಿದ್ದರು.   ರಕ್ತ ಸಂಗ್ರಹಿಸುವ ಬ್ಯಾಂಕ್ ಗಳಲ್ಲಿ ರಕ್ತದಲ್ಲಿ ಎಚ್ಐವಿ ಸೋಂಕಿನ ಪರೀಕ್ಷೆ ನಡೆಸಲು ಇರುವ ಕ್ರಮಗಳ ಮಿತಿಯಿಂದಾಗಿ ಸೋಂಕು ಹರಡಿರಲು ಸಾಧ್ಯ ಎಂಬ ಮಾಹಿತಿ ಲಭ್ಯವಾಯಿತು.

2008: ಆಡಳಿತಾರೂಢ ಪಾಕಿಸ್ಥಾನ ಪೀಪಲ್ಸ್ ಪಕ್ಷದ ಮುಖಂಡ ಹಾಗೂ ದಿವಂಗತ ಬೆನಜೀರ್ ಭುಟ್ಟೋ ಪತಿ
ಆಸೀಫ್ ಅಲಿ ಜರ್ದಾರಿ ಪಾಕಿಸ್ಥಾನದ 13ನೇ ಅಧ್ಯಕ್ಷರಾಗಿ ಭಾರಿ ಬಹುಮತದಿಂದ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಇಸ್ಲಾಮಾಬಾದಿನಲ್ಲಿ ನಡೆದ ಚುನಾವಣೆಯಲ್ಲಿ ಜರ್ದಾರಿ ತಮ್ಮ ಸಮೀಪದ ಪ್ರತಿಸ್ಫರ್ಧಿಗಳಾದ ಪಿಎಂಎಲ್-ಎನ್  ಪಕ್ಷದ ಅಭ್ಯರ್ಥಿ ಸಯೀದ್-ಉಜ್- ರಹಮಾನ್ ಹಾಗೂ ಪಿಎಂಎಲ್-ಕ್ಯೂ ಅಭ್ಯರ್ಥಿ ಮುಷಾಹಿದ್ ಹುಸೇನ್ ಸಯೀದ್ ಅವರನ್ನು ಹಿಮ್ಮೆಟ್ಟಿಸಿ ಭಾರಿ ಜಯ ಸಾಧಿಸಿದರು.

2008: ಪರಮಾಣು ಪೂರೈಕೆ ಮಾಡುವ 45 ದೇಶಗಳ ಗುಂಪಾದ `ಎನ್ ಎಸ್ ಜಿ'ಯು ವಿಯೆನ್ನಾದಲ್ಲಿ ತನ್ನ ಮಾರ್ಗದರ್ಶಿ ಸೂತ್ರಗಳಿಗೆ ತಿದ್ದುಪಡಿ ಮಾಡಿಕೊಂಡು ಭಾರತಕ್ಕೆ ತನ್ನ ನಿಯಮಾವಳಿಗಳಿಂದ `ಸಂಪೂರ್ಣ ವಿನಾಯಿತಿ' ನೀಡಿತು. ಈ ಮೂಲಕ ಭಾರತ- ಅಮೆರಿಕ ಪರಮಾಣು ಒಪ್ಪಂದಕ್ಕೆ ಹಾಗೂ ಭಾರತಕ್ಕೆ ಇತರ ದೇಶಗಳೊಂದಿಗೆ ಪರಮಾಣು ವಹಿವಾಟು ನಡೆಸಲು ರಹದಾರಿ ನಿರ್ಮಾಣವಾಯಿತು. ಎನ್ ಎಸ್ ಜಿ ಯ ಈ ಒಪ್ಪಿಗೆ ಸಿಗುವುದರೊಂದಿಗೆ,  ಅಮೆರಿಕದ ಜತೆಗಿನ ಅಣು ಒಪ್ಪಂದ ಪ್ರಕ್ರಿಯೆಯ ಮುಂದಿನ ನಡೆಯು ಅಮೆರಿಕದ ಸಂಸತ್ತಿಗೆ ವರ್ಗಾವಣೆಯಾಯಿತು.

2007: ಕಜಕಿಸ್ತಾನದಲ್ಲಿನ ಬೈಕಾನುರ್ ಉಡಾವಣಾ ಕೇಂದ್ರದಿಂದ ರಷ್ಯಾದ ರಾಕೆಟ್ ಮೂಲಕ ಉಡಾವಣೆಯಾದ ಪಾನ್ ದೂರಸಂಪರ್ಕ ಉಪಗ್ರಹ `ಜೆಸಿಸ್ಯಾಟ್-11' ನಭಕ್ಕೆ ಚಿಮ್ಮಿದ ಸ್ವಲ್ಪ ಸಮಯದಲ್ಲೇ ಸ್ಫೋಟಗೊಂಡಿತು. ಆದರೆ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಲಿಲ್ಲ. ಈ ಉಪಗ್ರಹವು ಜಪಾನ್, ಏಷ್ಯಾ ಪೆಸಿಫಿಕ್ ಪ್ರದೇಶ ಮತ್ತು ಹವಾಯಿ ದ್ವೀಪ ಸಮೂಹದಲ್ಲಿ ಟೆಲಿವಿಷನ್ ಪ್ರಸಾರಕ್ಕೆ ಸಹಾಯವಾಗುವ ಮರುಪ್ರಸಾರ ಕಾರ್ಯವನ್ನು ನಿರ್ವಹಿಸುವ ಉದ್ದೇಶ ಹೊಂದಿತ್ತು.

2007: ಡೆನ್ ಡೆನ್ ಹಡಗು ಮುಳುಗಿದ ದುರಂತ ನೆನಪಿನಿಂದ ಮಾಸುವ ಮುನ್ನವೇ ಮಂಗಳೂರಿನ ತಣ್ಣೀರುಬಾವಿ ಕಡಲ ತೀರದ ಅದೇ ಸ್ಥಳದಲ್ಲಿ ಚೀನಾ ಮೂಲದ ಚಾಂಗ್-ಲೆ-ಮೆನ್ ಎಂಬ ಹಡಗಿನ ತಳ ಈದಿನ ಮಧ್ಯಾಹ್ನ ಮರಳಿನಲ್ಲಿ ಹುದುಗಿ, ಲಂಬಕ್ಕಿಂತ 15 ಡಿಗ್ರಿಯಷ್ಟು ವಾಲಿತು. ತಣ್ಣೀರುಬಾವಿ ತೀರದಲ್ಲಿ ಕೆಲವೇ ವರ್ಷಗಳಲ್ಲಿ ತೊಂದರೆಗೆ ಸಿಲುಕಿದ ಮೂರನೇ ಹಡಗು ಇದು. ಕೆರಿಬಿಯನ್ ದ್ವೀಪ ಸಮೂಹದ ಸೇಂಟ್ ವಿನ್ಸೆಂಟ್ ದ್ವೀಪದಲ್ಲಿ ನೋಂದಣಿ ಹೊಂದಿದ ಹಡಗು ಇದು. ಕ್ಯಾಪ್ಟನ್ ಸೇರಿದಂತೆ ಒಟ್ಟು 28 ಮಂದಿ ಇದರಲ್ಲಿದ್ದರು. ಮಂಗಳೂರಿನ ಎನ್ಎಂಪಿಟಿ ಬಂದರಿನಿಂದ ಅಲ್ವಾರಿಸ್ ಥಾಮ್ಸನ್ ಎಂಬ ಕಂಪೆನಿಯಿಂದ 16,100 ಟನ್ ಕಬ್ಬಿಣದ ಅದಿರು ತುಂಬಿಕೊಂಡು ಮಧ್ಯಾಹ್ನ 11ಕ್ಕೆ ಚೀನಾಕ್ಕೆ ಪ್ರಯಾಣ ಆರಂಭಿಸಿತ್ತು. ಸಂಚಾರ ಆರಂಭಿಸಿದ ಕೆಲವೇ ಗಂಟೆಯೊಳಗೆ ಹಡಗಿನ ತಳಪಾಯ ಮರಳಿನಲ್ಲಿ ಹುದುಗಿ, ತಾಂತ್ರಿಕ ತೊಂದರೆ ಎದುರಾಯಿತು. ನವಮಂಗಳೂರು ಬಂದರಿನಿಂದ ಏಳು ನಾಟಿಕಲ್ ಮೈಲಿ ದೂರ ಹಡಗು ಸಿಲುಕಿಕೊಂಡಿತು.

2007: ಭಾರತದ ಪ್ರಪ್ರಥಮ ಮೂಳೆ ಬ್ಯಾಂಕ್ ಚೆನ್ನೈಯ ಜನರಲ್ ಆಸ್ಪತ್ರೆಯಲ್ಲಿ ಅಸ್ತಿತ್ವಕ್ಕೆ ಬರಲಿದೆ. ಮೃತದೇಹಗಳಿಂದ ಪಡೆದ ಮೂಳೆಗಳನ್ನು ಇಲ್ಲಿ ಸಂಗ್ರಹಿಸಿಡಲಾಗುವುದು ಎಂದು ಆಸ್ಪತ್ರೆಯ ಮೂಳೆತಜ್ಞ ಎಂ. ನಟರಾಜನ್ ಬಹಿರಂಗಪಡಿಸಿದರು. ಅಪಘಾತದಲ್ಲಿ ಗಾಯಗೊಂಡವರು, ಕ್ಯಾನ್ಸರ್ ರೋಗಿಗಳಿಗೆ ಮೂಳೆ ಬ್ಯಾಂಕ್ ಹೊಸ ಆಶಾಕಿರಣವಾಗಲಿದೆ. ದಾನಿಗಳಿಂದ ಅಥವಾ ವಿದೇಶಗಳ ಕಳೇಬರದಿಂದ ಪಡೆದ ಮೂಳೆಗಳನ್ನು ಇದಕ್ಕಾಗಿ ಆಮದು ಮಾಡಿಕೊಳ್ಳಲಾಗುವುದು. ಆಮದು ಮೂಳೆಗಳ ಬೆಲೆ ಸ್ವಲ್ಪ ದುಬಾರಿ. 15ರಿಂದ 20 ಸೆ.ಮೀ. ಉದ್ದದ ತೊಡೆಯ ಮೂಳೆಗೆ ಸುಮಾರು ನಾಲ್ಕರಿಂದ ಐದು ಸಾವಿರ ಡಾಲರುಗಳಾಗಬಹುದು. ಶ್ರೀಲಂಕಾದಲ್ಲಿ ಮೂಳೆಗಳು ಸುಲಭವಾಗಿ ದೊರೆಯುತ್ತವೆ. ಕೃತಕ ಮೂಳೆಗಳಿಗಿಂತ ಕಳೇಬರಗಳಿಂದ ಪಡೆದ ಮೂಳೆಗಳು ಹೆಚ್ಚು ಉತ್ತಮ ಎಂಬುದು ನಟರಾಜನ್ ಅಭಿಪ್ರಾಯ.

2007: ಬೆಳಗಾವಿ ಜನತೆಗೆ ದುಃಸ್ವಪ್ನವಾಗಿದ್ದ ಬಾಡಿಗೆ ಹಂತಕ ಪ್ರವೀಣ ಶಿಂತ್ರೆ (32) ಕರಾಳ  ಅಧ್ಯಾಯ ಪೊಲೀಸ್ ಎನ್ಕೌಂಟರಿನಲ್ಲಿ ಅಂತ್ಯ ಕಂಡಿತು. ಕೊಲೆ, ಅತ್ಯಾಚಾರದಂತಹ ಕುಕೃತ್ಯಗಳಿಗೆ  ತಾನು ಬಳಸಿಕೊಂಡಿದ್ದ ಬಂಗಲೆಯಲ್ಲೇ ಪೊಲೀಸರ ಗುಂಡಿಗೆ ಈತ ಬಲಿಯಾದ. ಸುಪಾರಿ ಸರಣಿ ಕೊಲೆ ಸೇರಿದಂತೆ ದರೋಡೆ, ಅತ್ಯಾಚಾರ ಮೊದಲಾದ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಿಂತ್ರೆಯನ್ನು ವಿಚಾರಣೆ ಸಲುವಾಗಿ ಈದಿನ ಬೆಳಗಿನ ಜಾವ ಬೆಳಗಾವಿ ನಗರದ `ರಾಜದೀಪ' ಹೆಸರಿನ ಬಂಗಲೆಗೆ ಕರೆತರಲಾಗಿತ್ತು.

 2007: ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳು ಹಾಗೂ ಗುಲ್ಬರ್ಗ ನಗರದ ಕೆಲವೆಡೆ ಈದಿನ ಮಧ್ಯಾಹ್ನ 12.39ರ ಸುಮಾರಿಗೆ ಲಘು ಭೂಕಂಪ ಸಂಭವಿಸಿ, ಜನ ಗಾಬರಿಯಾದರು. ಆಳಂದ ತಾಲ್ಲೂಕಿನ ಖಜೂರಿ, ಚಿತ್ತಾಪುರ ತಾಲ್ಲೂಕಿನ ಶಹಾಬಾದ್, ಚಿಂಚೋಳಿ ಹಾಗೂ ಸೇಡಂನಲ್ಲೂ ಭೂಮಿ ಕಂಪಿಸಿತು. ಭೂಮಿ ಕಂಪಿಸಿದಾಗ ಕೆಲ ಸೆಕೆಂಡುಗಳ ಕಾಲ ಅದರ ಅನುಭವವಾಯಿತು. ಮೇಜಿನ ಮೇಲಿನ ವಸ್ತುಗಳು ಅಲುಗಾಡಿದವು. ಲಾತೂರಿನಲ್ಲಿ ಕೂಡಾ ಲಘು ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.1ರಷ್ಟಿತ್ತು. ಕೆಲವು ವರ್ಷಗಳ ಹಿಂದೆ ಇಲ್ಲಿ ಭಾರೀ ಭೂಕಂಪ ಸಂಭವಿಸಿತ್ತು.

2006: ಮುಂಬೈ ಮಾಜಿ ಪೊಲೀಸ್ ಆಯುಕ್ತ ಆರ್. ಎಸ್. ಶರ್ಮಾ ನೇಮಕದಲ್ಲಿ ಛಾಪಾ ಹಣ ಬಳಕೆಯಾಗಿದ್ದು ಕಾಂಗ್ರೆಸ್ ಹಾಗೂ ಎನ್ಸಿಪಿಯ ಪ್ರಮುಖ ನಾಯಕರು ಹಗರಣದಲ್ಲಿ ಪಾಲುದಾರರಾಗಿದ್ದಾರೆ ಎಂಬ ಅಂಶವು ಕನ್ನಡಿಗೆ ಪೊಲೀಸ್ ಅಧಿಕಾರಿ ದಿಲೀಪ್ ಕಾಮತ್ ಅವರು ನಡೆಸಿದ `ಬ್ರೈನ್ ಮ್ಯಾಪಿಂಗ್' ಪರೀಕ್ಷೆಯಲ್ಲಿ ಬಹಿರಂಗಗೊಂಡಿತು. ಎರಡು ಕಡೆ ದಾಳಿ ನಡೆಸಿದ್ದ ಕಾಮತ್ ಸಾಕಷ್ಟು ನಕಲಿ ಛಾಪಾಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

2006: ಚಿತ್ರದುರ್ಗದ ಮುರುಘಾಮಠ ನೀಡುವ ಪ್ರತಿಷ್ಠಿತ `ಬಸವಶ್ರೀ' ಪ್ರಶಸ್ತಿಗೆ ರಾಜ್ಯಸಭೆ ಸದಸ್ಯೆ ಖ್ಯಾತ ನಟಿ ಶಬಾನಾ ಆಜ್ಮಿ ಆಯ್ಕೆಯಾದರು. `ಬಸವಶ್ರೀ' ಪ್ರಶಸ್ತಿ ಸಿನೆಮಾ ತಾರೆಯೊಬ್ಬರಿಗೆ ಲಭಿಸಿದ್ದು ಇದೇ ಮೊದಲು.

1995: ಬಾಲಿವುಡ್ಡಿನ ಖ್ಯಾತ ಸಂಗೀತ ನಿರ್ದೇಶಕ ಸಲೀಲ್ ಚೌಧರಿ ನಿಧನ.

1990: ಪ್ರಸಾರ ಭಾರತಿ ಮಸೂದೆಗೆ ಸಂಸತ್ ಒಪ್ಪಿಗೆ.

1988: ದಕ್ಷಿಣ ಲಂಡನ್ನಿನ ಹನ್ನೊಂದು ವರ್ಷ ಹನ್ನೊಂದು ದಿನ ವಯಸ್ಸಿನ ಥಾಮಸ್ ಗ್ರೆಗೋರಿ ಇಂಗ್ಲಿಷ್ ಕಡಲ್ಗಾಲುವೆಯನ್ನು 11 ಗಂಟೆ 54 ನಿಮಿಷಗಳಲ್ಲಿ ಈಜಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ.

1972: ಖ್ಯಾತ ಹಿಂದುಸ್ತಾನಿ ಸಂಗೀತಗಾರ ಉಸ್ತಾದ್ ಅಲಾವುದ್ದೀನ್ ಖಾನ್ ಅವರು ತಮ್ಮ 110ನೇ ವಯಸ್ಸಿನಲ್ಲಿ ನಿಧನರಾದರು.

1963: ಖ್ಯಾತ ಸಾಹಿತಿ ಮಂಜೇಶ್ವರ ಗೋವಿಂದ ಪೈ ನಿಧನ.

1960: ಭಾರತದ ಮಿಲ್ಖಾಸಿಂಗ್ ರೋಮ್ ಒಲಿಂಪಿಕ್ ಕ್ರೀಡಾಕೂಟದಲ್ಲಿ 400 ಮೀಟರ್ ಓಟದ ಒಲಿಂಪಿಕ್ ದಾಖಲೆಯನ್ನು ಮುರಿದರು. ಆದರೆ ದಕ್ಷಿಣ ಆಫ್ರಿಕಾದ ಮಾಲ್ಕೋಮ್ ಸ್ಪೆನ್ಸ್ ಅವರಿಂದ 0.1 ಸೆಕೆಂಡುಗಳಷ್ಟು ಹಿಂದೆ ಬಿದ್ದು ಕಂಚಿನ ಪದಕ ಕಳೆದುಕೊಂಡರು. ಇದೊಂದು ಅತ್ಯದ್ಭುತ ಓಟದ ಸ್ಪರ್ಧೆಯಾಗಿತ್ತು. ಮೊದಲ ಇಬ್ಬರು ಜಾಗತಿಕ ದಾಖಲೆಗಳನ್ನು ಮುರಿದರೆ, ಅವರನ್ನು ಹಿಂಬಾಲಿಸಿದ್ದ ಮೂವರು ಒಲಿಂಪಿಕ್ ದಾಖಲೆಗಳನ್ನು ಮುರಿದರು. ರಾಷ್ಟ್ರದ 38 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ 400 ಮೀಟರ್ ಓಡಿದ ಮಿಲ್ಖಾಸಿಂಗ್ ಒಲಿಂಪಿಕ್ಸಿನಲ್ಲಿ ಅಥ್ಲೆಟಿಕ್ಸಿನ ಅಂತಿಮ ಸ್ಪರ್ಧೆಗೆ ಅರ್ಹತೆಪಡೆದ ಪ್ರಥಮ ಭಾರತೀಯ ಎಂಬ ಕೀರ್ತಿಗೆ ಭಾಜನರಾದರು.

1956: ರಾಜ್ಯಗಳ ಪುನರ್ ವಿಂಗಡಣಾ ಯೋಜನೆ ಜಾರಿಗೆ ತರುವ ಶಾಸನಾಂಶವಾದ ರಾಜ್ಯಾಂಗ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಸರ್ವಾನುಮತದಿಂದ ಅಂಗೀಕರಿಸಿತು. ಈ ಯೋಜನೆ ನವೆಂಬರ್ 1ರಂದು ಜಾರಿಗೆ ಬರಲಿದ್ದು ದೇಶದ ಎಲ್ಲ ಜನರ, ಎಲ್ಲ ರಾಜಕೀಯ ಪಕ್ಷಗಳ ಸಹಕಾರ ದೊರೆಯುವ ನಂಬಿಕೆ ಇದೆ ಎಂದು ಗೃಹ ಸಚಿವ ಪಂಡಿತ ಗೋವಿಂದ ವಲ್ಲಭ ಪಂತ್ ಹೇಳಿದರು.

1956: ಕೊಡಗು ವಿಧಾನಸಭೆಯ ಅಂತಿಮ ಅಧಿವೇಶನವು `ಕೊಡಗು ಕಾಫಿ ಹೊಟ್ಟು ಹತೋಟಿ (ತಿದ್ದುಪಡಿ) ಮಸೂದೆ'ಯನ್ನು ಅಂಗೀಕರಿಸಿತು. ವಿಧಾನಸಭಾಧ್ಯಕ್ಷ ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು.

1948: ನೆದರ್ಲೆಂಡ್ಸ್ ರಾಣಿಯಾಗಿ ಜೂಲಿಯಾನಾ ಆಯ್ಕೆ.

1941: ಜರ್ಮನ್ ಆಕ್ರಮಿತ ಪ್ರದೇಶಗಳಲ್ಲಿ ಆರು ವರ್ಷ ಮೀರಿದ ಎಲ್ಲ ಯಹೂದಿಗಳು ಡೇವಿಡ್ ನ ಹಳದಿ ನಕ್ಷತ್ರಗಳನ್ನು ಧರಿಸಬೇಕು ಎಂದು ಆಜ್ಞಾಪಿಸಲಾಯಿತು.

1889: ಕಾಂಗ್ರೆಸ್ ನಾಯಕ, ದೇಶಭಕ್ತ, ವಕೀಲ ಶರತ್ ಚಂದ್ರ ಬೋಸ್ (6-9-1889ರಿಂದ 20-2-1950) ಅವರು ಬಂಗಾಳದ ಕಲ್ಕತ್ತಾದಲ್ಲಿ ಜಾನಕಿನಾಥ ಅವರ ಮಗನಾಗಿ ಜನಿಸಿದರು. ಇವರು ಉಗ್ರ ರಾಷ್ಟ್ರೀಯವಾದಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಸಹೋದರ. ಬಂಗಾಳ ವಿಧಾನಸಭೆಯಲ್ಲಿ  ಕಾಂಗ್ರೆಸ್ ನಾಯಕರಾಗಿ ಮತ್ತು ಫಾರ್ವರ್ಡ್ ಬ್ಲಾಕ್ ನೇತಾರರಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ದುಡಿದ ಶರತ್ ಚಂದ್ರ ಬೋಸ್ 1936ರಲ್ಲಿ ಬಂಗಾಳ ಕಾಂಗ್ರೆಸ್ ಅಧ್ಯಕ್ಷರಾದರು. 1936ರಿಂದ 1945ರವರೆಗೆ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಬಂಗಾಳ ವಿಭಜನೆಗೆ ಅವರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು.

1888: ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ತಂದೆ ವರ್ತಕ ಹಾಗೂ ಗ್ರೇಟ್ ಬ್ರಿಟನ್ನಿಗೆ 1937-40ರಲ್ಲಿ ರಾಯಭಾರಿಯಾಗಿದ್ದ ಜೋಸೆಫ್ ಪ್ಯಾಟ್ರಿಕ್ ಕೆನಡಿ (1888-1969) ಜನ್ಮದಿನ.

1880: ಲಂಡನ್ನಿನ ಓವಲ್ ನಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾ ಜೊತೆಗೆ ಕ್ರಿಕೆಟ್ ಆಟವಾಡಿತು. ಇದು ಇಂಗ್ಲೆಂಡಿನಲ್ಲಿ ನಡೆದ ಮೊತ್ತ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ.

No comments:

Post a Comment