Saturday, January 19, 2019

ಇಂದಿನ ಇತಿಹಾಸ History Today ಜನವರಿ 19

ಇಂದಿನ ಇತಿಹಾಸ History Today ಜನವರಿ 19
2019: ಕೋಲ್ಕತ: ’ಇಪ್ಪತ್ಮೂರು ಪಕ್ಷಗಳು ವಿಪಕ್ಷ ಮಹಾರಾಲಿಯಲ್ಲಿ ಪಾಲ್ಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಗಡುವು ದಿನಾಂಕ ಮುಗಿದಿದೆ ಎಂದು ಕೋಲ್ಕತದ ಚಾರಿತ್ರಿಕ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಸಮಾವೇಶಗೊಂಡ ಲಕ್ಷಾಂತರ ಮಂದಿಯ ರಾಲಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಗುಡುಗಿದರು. ಲೋಕಸಭಾ ಚುನಾವಣೆಗೆ ಮುಂಚಿತವಾಗಿ ನಡೆದ ಮಹಾರಾಲಿಯಲ್ಲಿ ಪಾಲ್ಗೊಂಡ ಬಹುತೇಕ ಭಾಷಣಕಾರರು ಮೊಳಗಿಸಿದ ಘೋಷಣೆಗಳ ಸಾರ  ’ಮೋದಿಯನ್ನು  ಉಚ್ಚಾಟಿಸಿ (’ಮೋದಿ ಹಠಾವೋ)   ಎಂಬುದಾಗಿತ್ತು.  ’ಪ್ರಜಾಪ್ರಭುತ್ವಕ್ಕೆ ಇದು ಪರೀಕ್ಷೆಯ ಸಮಯ ಎಂದು ಅವರು ಹೇಳಿದರು. ವಿಪಕ್ಷಗಳ ಚುನಾವಣಾ ಪ್ರಚಾರ ಅಭಿಯಾನಕ್ಕೆ ವಸ್ತುಶಃ ನಾಂದಿ ಹಾಡಿದಂತಿದ್ದ ರಾಲಿಯ ಸಂಪೂರ್ಣ ಸಂಚಾಲನೆಯ ಕಾರ್ಯವನ್ನು ಸ್ವತಃ ನೆರವೇರಿಸಿದ ಮಮತಾ ಬ್ಯಾನರ್ಜಿ ಅವರು ಮೋದಿ ಸರ್ಕಾರದ ವಿರುದ್ದ ನೇರ ದಾಳಿ ನಡೆಸಿದರು.  ‘ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಮತ್ತು ನಿತಿನ್ ಗಡ್ಕರಿಯಂತಹ ಹಿರಿಯ ನಾಯಕರು ಬಿಜೆಪಿಯಲ್ಲಿ ನಿರ್ಲಕ್ಷಿಸಲ್ಪಟ್ಟಿದ್ದಾರೆ. ೨೦೧೯ರ ಚುನಾವಣೆಯಲ್ಲಿ ಬಿಜೆಪಿ ವಿಜಯಗಳಿಸಿದರೆ ನಾಯಕರೆಲ್ಲರೂ ಮತ್ತೆ ಮೂಲೆಗುಂಪಾಗುತ್ತಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ನುಡಿದರುತಮ್ಮ ಭಾಷಣವನ್ನುಬಿಜೆಪಿ ಹಟಾವೋ, ದೇಶ್ ಬಚಾವೋ ಮತ್ತು ಜೈ ಹಿಂದ್, ವಂದೇ ಮಾತರಂ ಘೋಷಣೆಯೊಂದಿಗೆ ಮುಕ್ತಾಯಗೊಳಿಸಿದ ಮಮತಾ ಬ್ಯಾನರ್ಜಿ, ರಾಲಿಯನ್ನು ಉದ್ದೇಶಿಸಿ ಚುಟುಕು ಭಾಷಣ ಮಾಡುವಂತೆ ಮನವಿ ಮಾಡಿ ಹಾಜರಾಗಿದ್ದ ವಿವಿಧ ಪಕ್ಷಗಳ ನಾಯಕರನ್ನು ಸ್ವತಃ ಆಹ್ವಾನಿಸುವ ಮೂಲಕ ರಾಲಿಯ ಸಂಚಾಲನೆ ಮಾಡಿದರುನಾಯಕ ಗಡಣ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಕೇಂದ್ರ ಸಚಿವರಾದ ಯಶವಂತ ಸಿನ್ಹ, ಶತ್ರುಘ್ನ ಸಿನ್ಹ ಮತ್ತು ಅರುಣ್ ಶೌರಿ, ಮೂವರು ಹಾಲಿ ಮುಖ್ಯಮಂತ್ರಿಗಳಾದ ದೆಹಲಿಯ ಅರವಿಂದ ಕೇಜ್ರಿವಾಲ್, ಕರ್ನಾಟಕದ ಎಚ್.ಡಿ. ಕುಮಾರಸ್ವಾಮಿ ಮತ್ತು ಆಂಧ್ರಪ್ರದೇಶದ ಚಂದ್ರ ಬಾಬು ನಾಯ್ಡು, ಮಾಜಿ ಮುಖ್ಯಮಂತ್ರಿಗಳಾದ ನ್ಯಾಷನಲ್ ಕಾನ್ಫರೆನ್ಸ್ ಧುರೀಣರಾದ ಫರೂಕ್ ಅಬ್ದುಲ್ಲ ಮತ್ತು ಒಮರ್ ಅಬ್ದುಲ್ಲ (ಜಮ್ಮು ಮತ್ತು ಕಾಶ್ಮೀರ), ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (ಉತ್ತರ ಪ್ರದೇಶ), ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಶರದ್ ಪವಾರ್, ಮತ್ತು ಅರುಣಾಚಲ ಪ್ರದೇಶದ ಮಾಜಿ ಸಿಎಂ ಗೆಗಾಂಗ್ ಅಪಾಂಗ್ ಸೇರಿದಂತೆ ೨೦ಕ್ಕೂ ಹೆಚ್ಚು ರಾಷ್ಟ್ರೀಯ ನಾಯಕರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರುಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಅವರ ತಾಯಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ರಾಲಿಯಲ್ಲಿ ಪಾಲ್ಗೊಳ್ಳಲಿಲ್ಲ. ಆದರೆ ಅವರು ರಾಲಿಗೆ ಬೆಂಬಲ ವ್ಯಕ್ತಪಡಿಸುವುದರೊಂದಿಗೆ ಪಕ್ಷದ ಲೋಕಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಪಕ್ಷದ ಪರವಾಗಿ ನಿಯೋಜಿಸಿದ್ದರು. ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರೂ  ಪಾಲ್ಗೊಳ್ಳಲಿಲ್ಲ. ಅವರು ತಮ್ಮ ಪ್ರತಿನಿಧಿಯಾಗಿ ಪಕ್ಷದ ಹಿರಿಯ ನಾಯಕ ಸತೀಶ್ ಮಿಶ್ರ ಅವರನ್ನು ಕಳುಹಿಸಿದ್ದರುಪಾಟೀದಾರ್ ಮೀಸಲು ಚಳವಳಿಯ ನಾಯಕ ಹಾರ್ದಿಕ್ ಪಟೇಲ್ ಮತ್ತು ಜಿಗ್ಣೇಶ ಮೇವಾನಿ ವೇದಿಕೆ ಮೇಲಿದ್ದ ಅತ್ಯಂತ ಕಿರಿಯ ನಾಯಕರಾಗಿದ್ದರು. ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಡು ವಿರೋಧಿ ಹಾಗೂ ಪ್ರಬಲ ಟೀಕಾಕಾರರಾಗಿ ಪರಿವರ್ತನೆಗೊಂಡಿರುವ ಬಿಜೆಪಿಯ ಬಂಡಾಯ ಸಂಸದ ಶತ್ರುಘ್ಘ ಸಿನ್ಹಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಯಶವಂತ ಸಿನ್ಹ ಮತ್ತು ಅರುಣ್ ಶೌರಿ ರಾಲಿಯಲ್ಲಿ ಪಾಲ್ಗೊಂಡು ಮಿಂಚಿದರು. ಯಶವಂತ ಸಿನ್ಹ: ’ಬಿಜೆಪಿಯನ್ನು ದೂಳೀಪಟಗೊಳಿಸಲು ಅದರ ವಿರುದ್ಧ ಏಕೈಕ ಸಂಯುಕ್ತ ವಿರೋಧಿ ಅಭ್ಯರ್ಥಿ ಇರಬೇಕು ಎಂದು ಯಶವಂತ ಸಿನ್ಹ ಹೇಳಿದರುಇದು ಕೇವಲ ಒಬ್ಬ ವ್ಯಕ್ತಿಯನ್ನು (ಪ್ರಧಾನಿ ನರೇಂದ್ರ ಮೋದಿ) ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸುವ ಪ್ರಶ್ನೆಯಲ್ಲ. ನಾವೆಲ್ಲ ಒಗ್ಗಟ್ಟಾಗಿ ಬಲಪಂಥೀಯ ಸಿದ್ದಾಂತವನ್ನು ಸೋಲಿಸಬೇಕಾಗಿದೆ. ನಿಜಕ್ಕೂ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಸತ್ಯಾಂಶವನ್ನು ತಿಳಿದುಕೊಳ್ಳಬೇಕಾಗಿದೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರಕ್ಕೆ ಬೇಕಾಗಿರುವುದು ಸಮಾಜ ಮತ್ತು ದೇಶವನ್ನು ಒಡೆಯುವ ಕೆಲಸ ಎಂದು ಅವರು ಆಪಾದಿಸಿದರುಅರುಣ್ ಶೌರಿ: ’ನಮಗೆ (ವಿರೋಧ ಪಕ್ಷಗಳು ಮತ್ತು ಮುಖಂಡರು) ಕೇವಲ ಒಂದೇ ಒಂದು ಗುರಿ. ಅದೇನೆಂದರೆ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯುವುದು. ದೇಶಕ್ಕಾಗಿ ನಾವು ತ್ಯಾಗ ಮಾಡಲೇಬೇಕಾಗಿದ್ದು, ಅದನ್ನು ನಾವು ಪ್ರೀತಿಯಿಂದಲೇ ಮಾಡಬೇಕಾಗಿದೆ. ಯಾವ ಸರ್ಕಾರವೂ ಇಷ್ಟೊಂದು ಸುಳ್ಳನ್ನು ಹೇಳಿರಲಿಲ್ಲ ಎಂದು ಮಾಜಿ ಬಿಜೆಪಿ ಮುಖಂಡ ಅರುಣ್ ಶೌರಿ ಹೇಳಿದರುಅಖಿಲೇಶ್ ಯಾದವ್: ’ರಾಷ್ಟ್ರವು ಹೊಸ ಪ್ರಧಾನಿಗಾಗಿ ಕಾಯುತ್ತಿದೆ ಎಂದು ಅಖಿಲೇಶ್ ಯಾದವ್ ನುಡಿದರು. ’ನೀವು ಉತ್ತರಪ್ರದೇಶದಿಂದ ಬಿಜೆಪಿಯನ್ನು ಉಚ್ಚಾಟಿಸಿ, ನಾವು ಅದನ್ನು ಬಂಗಾಳದಲ್ಲಿ ಮಾಡುತ್ತೇವೆ ಎಂದು ಮಮತಾ ಬ್ಯಾನರ್ಜಿ ಅಖಿಲೇಶ್ ಯಾದವ್ ಗೆ ಹೇಳಿದರು. ಅರವಿಂದ ಕೇಜ್ರಿವಾಲ್: ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು೨೦೧೯ರ ಚುನಾವಣೆಯಲ್ಲಿ ಯಾವುದೇ ಬೆಲೆ ತೆತ್ತಾದರೂ ಬಿಜೆಪಿಯನ್ನು ಪರಾಭವಗೊಳಿಸಬೇಕು ಎಂದು ಹೇಳಿದರು. ’ಪಾಕಿಸ್ತಾನಕ್ಕೆ ೭೦ ವರ್ಷಗಳಲ್ಲಿ ಭಾರತವನ್ನು ತುಂಡು ತುಂಡು (ಟುಕಡೆ ಟುಕಡೆ) ಮಾಡಲು ಸಾಧ್ಯವಾಗಲಿಲ್ಲ, ಆದರೆ ಅದನ್ನು ಮೋದಿ ಮಾಡಿದರು ಎಂದು ಅವರು ಟೀಕಿಸಿದರು. ಅಭಿಷೇಕ್ ಮನು ಸಿಂಘ್ವಿ: ಕಾಂಗ್ರೆಸ್ಸಿನ ಅಭಿಷೇಕ್ ಮನು ಸಿಂಘ್ವಿ ಅವರು ಮತಗಳು ವಿಭಜನೆಗೊಳ್ಳುವುದರ ವಿರುದ್ಧ ಎಚ್ಚರಿಸಿದರು. ’ಕರಿಯ ಮೋಡಗಳ ಜಾಗದಲ್ಲಿ ೨೨ ಪಕ್ಷಗಳ ಕಾಮನಬಿಲ್ಲು ಉದಯಿಸಿದೆ ಎಂದು ಅವರು ಬಣ್ಣಿಸಿದರು. ಮೈತ್ರಿ ಮಾಡಿಕೊಳ್ಳುವ ಕಾಲ ಈಗ ಸನ್ನಿಹಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವುದೇ ಟೀಕೆಯನ್ನು ಸಹಿಸಿಕೊಳ್ಳುವುದಿಲ್ಲ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜನರ ದಿಕ್ಕು ತಪ್ಪಿಸಿ ಮತ ಪಡೆಯುವ ಹುನ್ನಾರ ನಡೆಸಿದ್ದಾರೆ. ಹೀಗಾಗಿ ನಾನು ಮಮತಾ ದೀದಿ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಮಹಾಘಟಬಂಧನ್ನಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಘ್ವಿ ಆಗ್ರಹಿಸಿದರು. ಎಚ್.ಡಿ. ದೇವೇಗೌಡ: ’ಬಹಳಷ್ಟು ನಾಯಕರು ಇಲ್ಲಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ಹೋಗಬೇಕಾಗಿದೆ. ಪ್ರಾದೇಶಿಕ ಪಕ್ಷಗಳು ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಬೇಕು. ನನ್ನ ಅನುಭವದ ಪ್ರಕಾರ ಒಗ್ಗಟ್ಟಾಗಿ ಹೋಗೋದು ತುಂಬಾ ಕಷ್ಟದ ಕೆಲಸ. ಹೀಗಾಗಿ ನಾವು ಒಗ್ಗಟ್ಟಾಗಿ ಬಿಜೆಪಿಯನ್ನು ಎದುರಿಸಬೇಕಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರುಎಚ್.ಡಿ. ಕುಮಾರಸ್ವಾಮಿ: ಬಂಗಾಲಿ ಭಾಷೆಯಲ್ಲಿ ತಮ್ಮ ಭಾಷಣ ಆರಂಭಿಸಿ ಬಳಿಕ ಇಂಗ್ಲಿಷಿನಲ್ಲಿ ಅದನ್ನು ಮುಂದುವರೆಸಿದ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರುನನ್ನ ಪ್ರಕಾರ ಇದು ಕೇವಲ ಆರಂಭವಷ್ಟೇ. ದೀದಿ ಸರಳತೆಯ ಸ್ವರೂಪವಾಗಿದ್ದಾರೆ. ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಿವೆ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ. ನಿಟ್ಟಿನಲ್ಲಿ ವೇದಿಕೆಯನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಪ್ರಾದೇಶಿಕ ಪಕ್ಷಗಳ ಶಕ್ತಿ ಬಿಜೆಪಿಗೆ ಗೊತ್ತಾಗಿದೆ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ: ’ದೇಶದಲ್ಲಿ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಅಷ್ಟೇ ಅಲ್ಲ ರಾಜಕೀಯವಾಗಿ ದೇಶದ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ನಿಟ್ಟಿನಲ್ಲಿ ನಾವು ಮಹಾಘಟಬಂಧನ್ ಮೂಲಕ ಒಗ್ಗಟ್ಟಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಾದ ಕಾಲ ಬಂದಿದೆ ಎಂದು ಕಾಂಗ್ರೆಸ್ಸಿನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರುಎಂ.ಕೆ. ಸ್ಟಾಲಿನ್: ’ಮೋದಿಯನ್ನು ಮನೆಗೆ ಕಳುಹಿಸಿ, ರಾಷ್ಟ್ರವನ್ನು ರಕ್ಷಿಸಿ ಎಂದು ೧೨ನೇ ಭಾಷಣಕಾರ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ತಮಿಳಿನಲ್ಲಿ ಮಾತನಾಡುತ್ತಾ ಹೇಳಿದರು. ’ತಮ್ಮ ಪರಾಭವ ಖಚಿತ ಎಂಬುದು ಮೋದಿ ಅವರಿಗೆ ಅರ್ಥವಾಗಿದೆ ಎಂದು ಅವರು ನುಡಿದರು. ತಮಗೆ ಮೋದಿ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಇಲ್ಲ, ಆದರೆ ಅವರ ನೀತಿಗಳನ್ನು ವಿರೋಧಿಸುವುದಾಗಿ ನುಡಿದ ಸ್ಟಾಲಿನ್, ಮೋದಿಯವರು ರಾಷ್ಟ್ರವನ್ನುಪ್ರೈವೇಟ್ ಲಿಮಿಟೆಡ್ ಕಂಪೆನಿಯಾಗಿ ಪರಿವರ್ತಿಸಿದ್ದು ತಾವು ಅದರ ಆಡಳಿತ ನಿರ್ದೇಶಕ (ಎಂಡಿ) ಆಗಿದ್ದಾರೆ ಎಂದು ಟೀಕಿಸಿದ ಸ್ಟಾಲಿನ್ ರಬೀಂದ್ರನಾಥ್ ಟ್ಯಾಗೋರ್ ಅವರ ಕವನವನ್ನು ವಾಚಿಸಿದರು.  ಹಾರ್ದಿಕ್ ಪಟೇಲ್: ಮೊತ್ತ ಮೊದಲನೆಯ ಭಾಷಣಕಾರರಾಗಿ ಮಮತಾ ಬ್ಯಾನರ್ಜಿ ಅವರು ಪಾಟೀದಾರ್ ಮೀಸಲು ಚಳವಳಿಯ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಕರೆದರು. ಹಾರ್ದಿಕ್ ಪಟೇಲ್ ಅವರು ಸುಭಾಶ್ ಚಂದ್ರ ಬೋಸ್ ಕುರಿತು ಮಾತನಾಡಿದರುಗಾಯಕರು, ಕವಿಗಳು, ಬಂಗಾಳಿ ಚಲನಚಿತ್ರ ಮತ್ತು ಟೆಲಿವಿಷನ್ ಉದ್ಯಮದ ಗಣ್ಯರು ಸಭೆಯಲ್ಲಿ ಹಾಜರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎರಡನೇ ಅವಧಿಗೆ ಅಧಿಕಾರ ಕೋರಲು ಸಜ್ಜಾಗುತ್ತಿರುವ ವೇಳೆಯಲ್ಲೇ ವಿಪಕ್ಷ ಮಹಾರ್ಯಾಲಿಯನ್ನು ಸಂಘಟಿಸಿದ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಸಂಯುಕ್ತ ರಂಗ ರಚನೆಯ ಯತ್ನಕ್ಕೆ ವೇಗ ನೀಡಿದರು. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅದರ ಇತಿಹಾಸದಲ್ಲೇ ಅತ್ಯಂತ ಕನಿಷ್ಠ, ೪೪ ಸ್ಥಾನಗಳಿಗೆ ಇಳಿಸಿದ್ದ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಏರಿತ್ತು. ಬಿಜೆಪಿಯ ಮೋದಿ ಅಲೆಗೆ ಎದುರಾಗಿ ಈಜಿದ್ದ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ೪೨ ಲೋಕಸಭಾ ಸ್ಥಾನಗಳ ಪೈಕಿ ೩೪ ಸ್ಥಾನಗಳನ್ನು ಗೆದ್ದುಕೊಂಡಿದ್ದರು. ಹೀಗಾಗಿ ಲೋಕಸಭೆಯಲ್ಲಿ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಮೂರನೇ ದೊಡ್ಡ ಪಕ್ಷದ ಸ್ಥಾನವನ್ನು ಗಳಿಸಿತ್ತು.  

2018: ಕೋಲ್ಕತ: ೨೦೧೯ರ ಲೋಕಸಭಾ ಮಹಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ  ವಿರೋಧ ಪಕ್ಷಗಳು ತಮ್ಮ ಭಿನ್ನಭಿಪ್ರಾಯಗಳನ್ನು ಮರೆತು ಬಿಜೆಪಿ ವಿರುದ್ಧ ಸಂಘಟಿತ ಹೋರಾಟಕ್ಕಾಗಿ ಒಟ್ಟಾಗಬೇಕು ಎಂದು ಮಾಜಿ ಪ್ರಧಾನಿ ಜನತಾದಳ (ಎಸ್) ನಾಯಕ ಎಚ್.ಡಿ. ದೇವೇಗೌಡ ಅವರು  ಇಲ್ಲಿ ಸೂಚಿಸಿದರು. ಉತ್ತಮ ಆಡಳಿತದ ಖಾತ್ರಿಗಾಗಿ ಮಾರ್ಗನಕ್ಷೆ ರೂಪಿಸಲು ಹಿರಿಯ ನಾಯಕರ ಸಣ್ಣ ತಂಡವೊಂದನ್ನು ರಚಿಸಬೇಕು ಎಂದು ದೇವೇಗೌಡ ಅವರು ಸಲಹೆ ಮಾಡಿದರು. ಮುಂಬರುವ ಲೋಕಸಭಾ ಚುನಾವಣೆಗಾಗಿ ಸೀಟು ಹಂಚಿಕೆಯಹರ್ಕ್ಯೂಲಿಯನ್ ಕೆಲಸವು ಬಿಜೆಪಿ ವಿರುದ್ಧ ನೇರ ಹೋರಾಟದ ಖಾತರಿಯನ್ನು ಗಮನದಲ್ಲಿ ಇಟ್ಟುಕೊಂಡು ನಡೆಯಬೇಕು ಎಂದು ಅವರು ಹೇಳಿದರು. ಜನತೆ ಹೊಸ ಸರ್ಕಾರವನ್ನು ಬಯಸುತ್ತಿದ್ದಾರೆ ಎಂದು ಕೋಲ್ಕತದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಮಮತಾ ಬ್ಯಾನರ್ಜಿ ಅವರು ಸಂಘಟಿಸಿದ ಬೃಹತರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ದೇವೇಗೌಡ ನುಡಿದರು. ‘ಪ್ರಬಲ ರಾಷ್ಟ್ರ ನಿರ್ಮಾಣಕ್ಕೆ ದೃಢ ಸರ್ಕಾರದ ಅಗತ್ಯವಿದೆ, ೨೦೧೪ರ ಚುನಾವಣೆಯಲ್ಲಿ ೨೮೨ ಸ್ಥಾನಗಳನ್ನು ಗೆದ್ದ ಬಳಿಕ, ನರೇಂದ್ರ ಮೋದಿಯವರು ರಾಷ್ಟ್ರ ನಿರ್ಮಾಣ ಮಾಡುವ ಬದಲು ರಾಷ್ಟ್ರದ ಜಾತ್ಯತೀತ ಸ್ವರೂಪವನ್ನು ನಾಶಮಾಡಬಯಸಿದರು ಮತ್ತು ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ನಾಶ ಮಾಡಬಯಸಿದರು ಎಂದು ಮಾಜಿ ಪ್ರಧಾನಿ ಹೇಳಿದರು. ‘ಮೋದಿ ಅವರ ಬಳಿಕ ಯಾರು ಪ್ರಧಾನಿಯಾಗುತ್ತಾರೆ ಎಂಬ ಪ್ರಶ್ನೆಯನ್ನು ಪದೇ ಪದೇ ಕೇಳಿ ನೀಡಲಾಗುತ್ತಿರುವ ಹೇಳಿಕೆಯನ್ನು ಪ್ರಸ್ತಾಪಿಸಿದ ದೇವೇಗೌಡ, ’ವಿರೋಧ ಪಕ್ಷಗಳು ಐದು ವರ್ಷಗಳ ಅವಧಿಗೆ ಸ್ಥಿರ ಸರ್ಕಾರವನ್ನು ತಾವು ಕೊಡಬಲ್ಲೆವು ಎಂಬ ಆತ್ಮವಿಶ್ವಾಸವನ್ನು ಹೊಂದಿರಬೇಕು. ರ್ಯಾಲಿಯಲ್ಲಿ ಪಾಲ್ಗೊಂಡಿರುವ ನಾಯಕರು ಗುಂಪು ವಿಚಾರವನ್ನು ಖಚಿತಪಡಿಸಬೇಕು ಎಂದು ನುಡಿದರು. ಸಮ್ಮಿಶ್ರ ಸರ್ಕಾರ ಅಸ್ಥಿರವಾದ ಸರ್ಕಾರ, ಅದು ಯಾವ ಸಾಧನೆಯನ್ನೂ ಮಾಡಲಾರದು ಎಂದು ಮೋದಿ ಪ್ರತಿಪಾದಿಸುತ್ತಾರೆ. ಆದರೆ ವಿರೋಧ ಪಕ್ಷಗಳು ತಾವು ಸ್ಥಿರ ಸರ್ಕಾರವನ್ನು ನೀಡಬಲ್ಲೆವು ಮತ್ತು ರಾಷ್ಟ್ರವನ್ನು ಅಭಿವೃದ್ಧಿ ಪಡೆಸಬಲ್ಲೆವು ಎಂಬುದನ್ನು ತೋರಿಸಬೇಕು ಎಂದು ದೇವೇಗೌಡ ಹೇಳಿದರು. ೧೯೯೬ರ ಜೂನ್ನಿಂದ ೧೯೯೭ರ ಏಪ್ರಿಲ್ವರೆಗಿನ ತಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉಲ್ಲೇಖಿಸಿದ ಮಾಜಿ ಪ್ರಧಾನಿ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಅಸ್ಸಾಮಿನ ಬೋಗಿಬೀಲ್ ಸೇತುವೆಯನ್ನು ಮಂಜೂರು ಮಾಡಿದ್ದು ತಾವು ಎಂದು ನೆನಪಿಸಿದರು. ದೆಹಲಿ ಮೆಟ್ರೋ ಯೋಜನೆಗೆ ಕೂಡಾ ಒಪ್ಪಿಗೆ ನೀಡಿದ್ದು ನನ್ನ ಸರ್ಕಾರ. ೩೬ ಕೋಟಿ ಬಡಜನರಿಗೆ ಅಕ್ಕಿ, ಗೋಧಿ ಮತ್ತು ಸೀಮೆ ಎಣ್ಣೆಯನ್ನು ಸಬ್ಸಿಡಿ ದರದಲ್ಲಿ ಒದಗಿಸುವ ಕೆಲಸವನ್ನೂ ನನ್ನ ಸರ್ಕಾರ ಮಾಡಿತ್ತು ಎಂದು ನುಡಿದ ಅವರು ಸಮ್ಮಿಶ್ರ ಸರ್ಕಾರವು ಜನರ ಕಲ್ಯಾಣ ಮತ್ತು ರಾಷ್ಟ್ರದ ಅಭಿವೃದ್ಧಿ ಸಾಧಿಸಬಲ್ಲುದು ಎಂಬ ಖಾತರಿಯನ್ನು ನೀಡುವ ಅಗತ್ಯವನ್ನು ಒತ್ತಿ ಹೇಳಿದರು.

2019: ಸಿಲ್ವಾಸ್ಸ (ದಾದ್ರ ಮತ್ತು ನಗರ್ ಹವೇಲಿ): ಮಮತಾ ಬ್ಯಾನರ್ಜಿ ಅವರು ಕೋಲ್ಕತದಲ್ಲಿ ಸಂಘಟಿಸಿದ ವಿಪಕ್ಷ ಮಹಾರಾಲಿಯಲ್ಲಿ ತೀವ್ರ ಟೀಕೆಗಳ ಗುರಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಗಡಿಯ ಪಶ್ಚಿಮ ಭಾರತದ ದಾಮನ್ ಗಂಗಾ ನದಿ ದಂಡೆಯಲ್ಲಿನ ಸಿಲ್ವಾಸ್ಸದಲ್ಲಿ, ವಿರೋಧ ಪಕ್ಷಗಳು ತಮ್ಮ ವಿರುದ್ಧ ಗ್ಯಾಂಗ್ ಕಟ್ಟುವುದರ ವಿರುದ್ಧ ಪ್ರಬಲ ವಾಗ್ದಾಳಿ ನಡೆಸಿದರು. ಸಿಲ್ವಾಸ್ಸದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ’ವಿಪಕ್ಷ ನಾಯಕರು ಮತ್ತು ನನಗೆ ಇರುವ ದೊಡ್ಡ ವ್ಯತ್ಯಾಸ ಏನೆಂದರೆ ಅವರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದಾರೆ, ನಾನು ಜನರ ಹಿತಾಸಕ್ತಿಗಳಿಗಾಗಿ ವೇಳೆ ವ್ಯಯಿಸುತ್ತಿದ್ದೇನೆ ಅಷ್ಟೆ ಎಂದು ಹೇಳಿದರು. ಪ್ರಧಾನಿ ಮೋದಿಯವರು ಬೆಳಗ್ಗೆ ಕೆ ಸ್ವಯಂ ಚಾಲಿತ ಹೊವಿಟ್ಜರ್ ಬಂದೂಕುಗಳನ್ನು ನಿರ್ಮಿಸುವ ದೇಶದ ಮೊತ್ತ ಮೊದಲ ಖಾಸಗಿ ಸವಲತ್ತು ಸೇರಿದಂತೆ ಒಟ್ಟು ೧೮೯ ಕೋಟಿ ರೂಪಾಯಿ ಮೊತ್ತದ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು. ‘ಭ್ರಷ್ಟಾಚಾರದ ವಿರುದ್ಧದ ನನ್ನ ಕ್ರಮಗಳು ಕೆಲವು ವ್ಯಕ್ತಿಗಳನ್ನು ಸಿಟ್ಟಿಗೆಬ್ಬಿಸಿವೆ. ಅವರು ಸಿಟ್ಟಿಗೇಳುವುದು ಸಹಜ. ಏಕೆಂದರೆ ನಾನು ಅವರನ್ನು ಸಾರ್ವಜನಿಕರ ಹಣವನ್ನು ಲೂಟಿ ಮಾಡದಂತೆ ತಡೆದೆ. ಪರಿಣಾಮವಾಗಿ ಅವರುಮಹಾಘಟಬಂಧನ್ ಹೆಸರಿನ ಮೈತ್ರಿಯನ್ನು ರಚಿಸಿದ್ದಾರೆ ಎಂದು ಮೋದಿ ನುಡಿದರು. ‘ ಮಹಾಮೈತ್ರಿ ಕೇವಲ ನನ್ನ ವಿರುದ್ಧವಲ್ಲ. ಜನರ ವಿರುದ್ಧ ಕೂಡಾ. ಅವರೆಲ್ಲರೂ ಇನ್ನೂ ಒಗ್ಗೂಡಿಲ್ಲ, ಆದರೆ ಈಗಾಗಲೇ ಅಧಿಕಾರ ಹಂಚಿಕೊಳ್ಳುವ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಕೋಲ್ಕತದಲ್ಲಿ ವಿಪಕ್ಷ ಮಹಾರ್ಯಾಲಿ ನಡೆಯುತ್ತಿರುವ ವೇಳೆಯಲ್ಲೇ ಮಾತನಾಡುತ್ತಾ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ರ್ಯಾಲಿಯನ್ನು ತರಾಟೆಗೆ ತೆಗೆದುಕೊಳ್ಳುವ ಹೊತ್ತಿನಲ್ಲಿ ಕೋಲ್ಕತದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಪಕ್ಷ ಮಹಾರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಿಲ್ವಾಸ್ಸ, ದಾದ್ರ ಮತ್ತು ನಗರ್ ಹವೇಲಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ, ಕೋಲ್ಕತದಲ್ಲಿ ತಮ್ಮ ವಿರುದ್ಧ ಆಯೋಜನೆಗೊಂಡ ವಿಪಕ್ಷ ಮಹಾರಾಲಿಯನ್ನು ಹಲವಾರು ಬಾರಿ ಉಲ್ಲೇಖಿಸಿದರು. ಒಂದು ಹಂತದಲ್ಲಿ ಅವರುಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಏಕೈಕ ಶಾಸಕನನ್ನು ಹೊಂದಿರುವ ಬಿಜೆಪಿಯನ್ನು ಬಂಗಾಳದಲ್ಲಿ ದಾಂಗುಡಿ ಇಡದಂತೆ ತಡೆಯುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ನೆರವಾಗುವ ಸಲುವಾಗಿ ದೇಶಾದ್ಯಂತದ ವಿರೋಧಿ ನಾಯಕರು ಕೋಲ್ಕತದಲ್ಲಿ ಜಮಾಯಿಸಿದ್ದಾರೆ ಎಂದೂ ಟೀಕಿಸಿದರು.  ‘ಒಬ್ಬ ಶಾಸಕನನ್ನು ಹೊಂದಿರುವ ಪಕ್ಷವು ಅವರಿಗೆ ಎಂತಹ ನಿದ್ದೆ ರಹಿತ ರಾತ್ರಿಗಳನ್ನು ಸೃಷ್ಟಿಸಿದೆ ಎಂದರೆ, ಅವರುಬಚಾವೋ ಬಚಾವೋ (ನಮ್ಮನ್ನು ರಕ್ಷಿಸಿ, ನಮ್ಮನ್ನು ರಕ್ಷಿಸಿ) ಎಂದು ಬೊಬ್ಬಿರಿಯುತ್ತಿದ್ದಾರೆ ಎಂದು ಮೋದಿ ಛೇಡಿಸಿದರು. ಬಿಜೆಪಿ ರಥಯಾತ್ರೆಗೆ ಮಮತಾ ಬ್ಯಾನರ್ಜಿ ಸರ್ಕಾರ ನಿರಾಕರಿಸಿದ್ದನ್ನೂ ಪ್ರಧಾನಿ ತರಾಟೆಗೆ ತೆಗೆದುಕೊಂಡರು. ’ತಮ್ಮ ಸ್ವಂತ ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ದಮನಿಸಿದವರು ಈಗ ಪ್ರಜಾಪ್ರಭುತ್ವವನ್ನು ರಕ್ಷಿಸುವ ಬಗ್ಗೆ ಉಪನ್ಯಾಸ ನೀಡುತಿರುವುದು ವ್ಯಂಗ್ಯ ಎಂದು ಪ್ರಧಾನಿ ಮಮತಾ ಬ್ಯಾನರ್ಜಿ ಅವರನ್ನು ಚುಚ್ಚಿದರು. ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಮೋದಿ, ಹಿಂದಿನ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ಕೇವಲ ೨೫ ಲಕ್ಷ ಮನೆಗಳನ್ನು ನಿರ್ಮಿಸಲು ಸಮರ್ಥವಾಗಿದ್ದರೆ, ಕಳೆದ ಐದು ವರ್ಷಗಳಲ್ಲಿ ನಾವು .೨೫ ಲಕ್ಷ ಮನೆಗಳನ್ನು ನಿರ್ಮಿಸಿದ್ದೇವೆ. ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ಯೋಜನೆಆಯುಷ್ಮಾನ್ ಭಾರತ ಯೋಜನೆಯನ್ನುಮೋದಿಕೇರ್ ಎಂಬುದಾಗಿ ಕರೆಯಲಾಗುತ್ತಿದೆ. ಯೋಜನೆಯಡಿಯಲ್ಲಿ ಪ್ರತಿದಿನ ಸುಮಾರು ೧೦,೦೦೦ ಮಂದಿ ಬಡವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು. ಮೋದಿ ಅವರಿಂತ ಮುನ್ನ ಸಿಲ್ವಾಸ್ಸ ಪ್ರವಾಸದಲ್ಲಿ ಪ್ರಧಾನಿಯವರಿಗೆ ಸಾಥ್ ನೀಡಿರುವ ಪಕ್ಷದ ಹಿರಿಯ ನಾಯಕರು ಮತ್ತು ಸಂಪುಟ ಸಚಿವರಾದ ನಿತಿನ್ ಗಡ್ಕರಿ ಮತ್ತು ಥಾವರ್ ಚಂದ್ ಗೆಹ್ಲೋಟ್ ಮಾತನಾಡಿದರು.

2019: ನವದೆಹಲಿ: ಜೆ ಎನ್ ಯು ರಾಷ್ಟ್ರದ್ರೋಹ ಪ್ರಕರಣದಲ್ಲಿ ಕಾನೂನು ಇಲಾಖೆಯ ಅನುಮೋದನೆ ಪಡೆಯದೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಸಂಘದ (ಜೆಎನ್ಯುಎಸ್ಯು) ಮಾಜಿ ಅಧ್ಯಕ್ಷ ಕನ್ನಯ್ಯ ಕುಮಾರ್ ಮತ್ತು ಇತರರ ವಿರುದ್ಧ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದಕ್ಕಾಗಿ ದೆಹಲಿಯ ನ್ಯಾಯಾಲಯವೊಂದು ದೆಹಲಿ ಪೊಲೀಸರನ್ನು ಝಾಡಿಸಿತು. ‘ನಿಮ್ಮ ಬಳಿ ಕಾನೂನು ಇಲಾಖೆಯ ಅನುಮೋದನೆ ಇಲ್ಲ, ಅನುಮೋದನೆ ಇಲ್ಲದೆ ಏಕೆ ಚಾರ್ಜ್ಶೀಟ್ ದಾಖಲಿಸಿದ್ದೀರಿ?’ ಎಂದು ನ್ಯಾಯಾಲಯವು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು. ೧೦ ದಿನಗಳ ಒಳಗಾಗಿ ಕಾನೂನು ಇಲಾಖೆಯ ಅನುಮೋದನೆ ಪಡೆದುಕೊಳ್ಳುವಂತೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೀಪ್ ಶೆರಾವತ್ ಅವರು ಪೊಲೀಸರಿಗೆ ಆಜ್ಞಾಪಿಸಿದರು. ಪ್ರಕರಣದ ವಿಚಾರಣೆಯನ್ನು ಫೆಬ್ರುವರಿ ೬ನೇ ದಿನಾಂಕಕ್ಕೆ ನಿಗದಿ ಪಡಿಸಿ ನ್ಯಾಯಾಲಯ, ಅಷ್ಟರ ಒಳಗಾಗಿ ಅಗತ್ಯ ಅನುಮೋದನೆ ಪಡೆದುಕೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿತು. ಕನ್ನಯ್ಯ ಕುಮಾರ್ ಮತ್ತು ಉಮರ್ ಖಲೀದ್, ಅನಿರ್ಬನ್ ಭಟ್ಟಾಚಾರ್ ಸೇರಿದಂತೆ ಇತರ ಮಂದಿ ವಿರುದ್ಧ ಭಾರತ ವಿರೋಧಿ ಘೋಷಣೆ ಕೂಗಿದ್ದಕ್ಕಾಗಿ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿದ ಮೂರು ವರ್ಷಗಳ ಬಳಿಕ ಜನವರಿ ೧೪ರಂದು ದೆಹಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಶ್ವ ವಿದ್ಯಾಲಯ ಆವರಣದಲ್ಲಿ ನಡೆದ ಕಾರ್ಯಕ್ರiವೊಂದರಲ್ಲಿ ಭಾರತ ವಿರೋಧಿ ಘೋಷಣೆ ಕೂಗಲಾಯಿತು ಎಂದು ಪೊಲೀಸರು ಆಪಾದಿಸಿದ್ದರು. ಸಂಸತ್ತಿನ ಮೇಲೆ ನಡೆದ ದಾಳಿ ಪ್ರಕರಣದ ಅಪರಾಧಿ ಅಫ್ಜಲ್ ಗುರುವಿಗೆ ಮರಣದಂಡನೆ ವಿಧಿಸಿದ್ದನ್ನು ಪ್ರತಿಭಟಿಸಿ ೨೦೧೬ರ ಫೆಬ್ರುವರು ೯ರಂದು ಜೆಎನ್ಯು ಆವರಣದಲ್ಲಿ ಸಂಘಟಿಸಲಾಗಿದ್ದ ಕಾರ್ಯಕ್ರಮದ ಕುರಿತ ರಾಷ್ಟ್ರದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟಿಯಾಲ ಹೌಸ್ ನ್ಯಾಯಾಲಯಕ್ಕೆ ಪೊಲೀಸರು ೧೨೦೦ ಪುಟಗಳ ದೋಷಾರೋಪ ಪಟ್ಟಿಯನ್ನು ಟ್ರಂಕಿನಲ್ಲಿ ತುಂಬಿಕೊಂಡು ಬಂದು ಸಲ್ಲಿಸಿದ್ದರು. ಲೋಕಸಭಾ ಚುನಾವಣೆಗೆ ಮುಂಚಿತವಾಗಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು ರಾಜಕೀಯ ದುರುದ್ದೇಶದ ಕ್ರಮ ಎಂದು ಕನ್ನಯ್ಯ ಕುಮಾರ್ ಆಪಾದಿಸಿದ್ದರುರಾಷ್ಟ್ರದಲ್ಲಿನ ಭಿನ್ನಮತವನ್ನು ದಮನಿಸಲು ಸರ್ಕಾರವು ರಾಷ್ಟ್ರದ್ರೋಹ ಕಾಯ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕಪಿಲ್ ಸಿಬಲ್ ಆಪಾದಿಸುವುದರೊಂದಿಗೆ ಚಾರ್ಜ್ಶೀಟ್ ಸಲ್ಲಿಕೆಯ ಕ್ರಮ ಕಾಂಗ್ರೆಸ್ ಪಕ್ಷದ ಟೀಕೆಗೂ ಗುರಿಯಾಗಿತ್ತು.

2019: ಕೋಲ್ಕತ: ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವುದರ ಮಧ್ಯೆಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಕೋಲ್ಕತದಲ್ಲಿ ಮಾಧ್ಯಮ ಒಂದರ ಜೊತೆಗೆ ಮಾತನಾಡುತ್ತಾ ತಮ್ಮ ಸರ್ಕಾರವುಅಪಾಯದಲ್ಲಿದೆ ಎಂದು ಒಪ್ಪಿಕೊಂಡರು.. ಆದರೆ ತಮಗೆ ಚಿಂತೆ ಇರುವುದು ಬಿಜೆಪಿಯು ಶಾಸಕರಬೇಟೆಯಲ್ಲಿ ಯಶಸ್ವಿಯಾಗಬಹುದು ಎಂಬ ಕಾರಣಕ್ಕಲ್ಲ ಎಂದು ಅವರು ಹೇಳಿದರು.  ‘ಪ್ರಸ್ತುತ ಅದು (ರಾಜಕೀಯ ಬಿಕ್ಕಟ್ಟು) ಇದೆ.. ಅವರು (ಬಿಜೆಪಿ) ಸರ್ಕಾರವನ್ನು ಅಪಾಯಕ್ಕೆ ಒಡ್ಡಲು ಯತ್ನಿಸುತ್ತಿದ್ದಾರೆ. ಆದರೆ ನನಗೆ ಅದರಿಂದ ಚಿಂತೆಯಿಲ್ಲ. ಅವರು ಶಾಸಕರನ್ನು ಸೆಳೆಯಲು ನಡೆಸುತ್ತಿರುವ ಯತ್ನ ಯಶಸ್ವಿಯಾಗುವುದಿಲ್ಲ. ಕಾಂಗ್ರೆಸ್ಸಿನ ನಾಲ್ವರು ಅತೃಪ್ತ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂಬ ಊಹಾಪೋಹಗಳಿವೆ. ಬೆಳಗಾವಿ ರಾಜಕೀಯದ ಕಾರಣಕ್ಕಾಗಿ ಅವರಿಗೆ ತಮ್ಮ ಪಕ್ಷದಲ್ಲಿ ಅಸಮಾಧಾನ ಇದ್ದರೂ, ನನ್ನ ಜೊತೆಗೆ ಒಳ್ಳೆಯ ಸಂಬಂಧ ಇದೆ. ಹೀಗಾಗಿ ಅವರು ಎಲ್ಲಿಗೂ ಹೋಗುವುದಿಲ್ಲ ಎಂದು ಕುಮಾರ ಸ್ವಾಮಿ ನುಡಿದರು. ಆದರೆ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂತೆಗೆದುಕೊಂಡಿರುವ ಇಬ್ಬರು ಪಕ್ಷೇತರ ಶಾಸಕರ (ಮುಳಬಾಗಲಿನ ಎಚ್. ನಾಗೇಶ್ ಮತ್ತು ರಾಣೆಬೆನ್ನೂರಿನ ಆರ್. ಶಂಕರ್) ವಿಚಾರದಲ್ಲಿ ನನಗೆ ಅನುಮಾನವಿದೆ. ಅವರು ಯಾವಾಗಲಾದರೂ ಕೈಕೊಡಬಹುದು ಎಂದು ನಾನು ಕಾಂಗ್ರೆಸ್ಸಿಗೆ ಹೇಳಿದ್ದೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ನುಡಿದರು.


2019: ಗಾಂಧಿನಗರ: ಒಂದೆಡೆ ಕೋಲ್ಕತ್ತಾದಲ್ಲಿ ಮಹಾಘಟ್ ಬಂಧನ್ ಮೂಲಕ ವಿಪಕ್ಷಗಳು ಶಕ್ತಿಪ್ರದರ್ಶನ ಮಾಡಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿ ಸಿದರೆ, ಮತ್ತೊಂದೆಡೆ ಶಾಂತಿಚಿತ್ತರಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಲಿ ರೈಡ್ ಮಾಡಿದರು.  ಅದೂ ಅಂತಿಂಥ ವಾಹನದಲ್ಲಲ್ಲ. ಭಾರತೀಯ ಸೇನೆಯ ಶಕ್ತಿಶಾಲಿ ಕೆ- ವಜ್ರ ಟ್ಯಾಂಕರ್ನಲ್ಲಿ ಒಂದ್ ರೌಂಡ್ ಹಾಕಿ ಸಖತ್ ಎಂಜಾಯ್ ಮಾಡಿದರು.  ಗುಜರಾತ್ ಹಜೀರಾದಲ್ಲಿ ಮೋದಿ, ಲಾರ್ಸನ್ ಆಂಡ್ ಟರ್ಬೋ(ಎಲ್&ಟಿ) ಫಿರಂಗಿ ಬಂದೂಕು ತಯಾರಿಕಾ ಘಟಕವನ್ನು ಲೋಕಾರ್ಪಣೆ ಮಾಡಿದರು. ಸಂಸ್ಥೆಯು ಮೇಕ್ ಇನ್ ಇಂಡಿಯಾ ಯೋಜನೆಯಡಿ ಸ್ವಯಂಚಾಲಿತ ಫಿರಂಗಿಗಳನ್ನು ಹೊಂದಿ ರುವ ಕೆ೯ ವಜ್ರಾ-ಟಿ ಹೆಸರಿನಲ್ಲಿ ೧೦೦ ಯುದ್ಧ ಟ್ಯಾಂಕರ್ ಳನ್ನ ತಯಾರಿಸಲಿದೆ. ಟ್ಯಾಂಕರ್ನಲ್ಲಿ ಮೋದಿ ಒಂದು ರೌಂಡ್ ಹಾಕುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾದ ಯಶಸ್ಸನ್ನು ತೆರೆದಿಟ್ಟರು.  ಕೆ- ವಜ್ರ ಟ್ಯಾಂಕರ್ ಪರಿಶೀಲಿಸಿ ಸವಾರಿ ಮಾಡಿದ ಬಳಿಕ ಪ್ರಧಾನಿ ಮೋದಿ ೧೦ ಸೆಕೆಂಡ್ಗಳ ವಿಡಿಯೋವೊ ಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ, ಕೆ- ಟ್ಯಾಂಕರ್ ತಯಾರಿಸಿರುವ ಎಲ್ & ಟಿ ತಂಡಕ್ಕೆ ಅಭಿನಂದನೆಗಳು. ಇದು ಭಾರತೀಯ ಸೇನೆಯ ಲ್ಲಿ ಮೈಲುಗಲ್ಲು ಸಾಧಿಸಿದಂತಾಗಿದೆ. ಸೇನಾ ಕ್ಷೇತ್ರಕ್ಕೆ ಮತ್ತ? ಬಲ ಬಂದಂತಾಗಿದೆ. ದೇಶದ ರಕ್ಷಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ ಎಂಬ ಸಂದೇಶವನ್ನೂ ಮೋದಿ ಅಪ್ಲೋಡ್ ಮಾಡಿದರು. ಎಲ್&ಟಿ ಸಂಸ್ಥೆ ೨೦೧೭ರಲ್ಲಿ, ಭಾರತೀಯ ಸೇನೆಗಾಗಿ ೪೫೦೦ ಕೋಟಿ ರೂ. ಮೊತ್ತದ ೧೦೦ ಕೆ೯ ವಜ್ರಾ-ಟಿ ಟ್ಯಾಂಕರ್ ತಯಾರಿಕೆಯ ಕಾಂಟ್ರಾಕ್ಟ್ ತನ್ನದಾಗಿಸಿಕೊಂಡಿತ್ತು. ಇದೀಗ ಸಂಸ್ಥೆಯು ಹಜೀರಾದಲ್ಲಿ ಉತ್ಪಾದಕ ಘಟಕವನ್ನ ಸ್ಥಾಪಿಸಿದೆ. ಘಟಕ ಸೂರತ್ನಿಂದ ೩೦ ಕಿ.ಮೀ ದೂರದಲ್ಲಿದೆ.  ಗನ್ಗಳ ತಯಾರಿಕೆಗಾಗಿ ದಕ್ಷಿಣ ಕೊರಿಯಾದ ಹಾನ್ವಾ ಟೆಕ್ವಿನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಎಲ್&ಟಿ ಸಂಸ್ಥೆ ಕಳೆದ ? ಜುಲೈನಲ್ಲಿ ಘೋಷಿಸಿತ್ತು. ೧೦೦ ಗನ್ಗಳಲ್ಲಿ ಮೊದಲ ೧೦ ಗನ್ಗಳನ್ನ ಪುಣೆಯ ತಲೆಗಾಂವ್ ಘಟಕದಲ್ಲಿ ತಯಾರಿಸಲಾಗುತ್ತದೆ. ಉಳಿದ ೯೦ ಗನ್ ಳನ್ನು ಹಜೀರಾದಲ್ಲಿ ತಯಾರಿಸಲಾಗುತ್ತದೆ ಎಂದು ಹೇಳಿತ್ತು. ೪೨ ತಿಂಗಳಲ್ಲಿ ಸಂಸ್ಥೆಯು ಗನ್ಗಳನ್ನ ಬಿಡುಗಡೆ ಮಾಡಬೇಕಾಗಿದೆ.

2018: ನವದೆಹಲಿ: ಚುನಾವಣಾ ಆಯೋಗವು ಲಾಭದ ಹುದ್ದೆ ಹೊಂದಿರುವುದಕ್ಕಾಗಿ ಅನರ್ಹಗೊಳಿಸಿದ ೨೦ ಮಂದಿ ಆಮ್ ಆದ್ಮಿ ಪಕ್ಷದ (ಎಎಪಿ- ಆಪ್) ಶಾಸಕರಿಗೆ ಯಾವುದೇ ಪರಿಹಾರ ಒದಗಿಸಲು ದೆಹಲಿ ಹೈಕೋರ್ಟ್ ನಿರಾಕರಿಸುವುದರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಹಿನ್ನಡೆಯಾಯಿತು. ಚುನಾವಣಾ ಆಯೋಗದ ಕ್ರಮದ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿತು. ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂಬ ಏಕೈಕ ಕಾರಣಕ್ಕಾಗಿ ಚುನಾವಣಾ ಆಯೋಗದ ವಿಚಾರಣಾ ಕಲಾಪದಲ್ಲಿ ಪಾಲ್ಗ್ಗೊಳ್ಳದೇ ಇದ್ದದ್ದು ಏಕೆ ಎಂದು ನ್ಯಾಯಾಲಯ ಆಪ್ ಶಾಸಕರನ್ನೇ ಪ್ರಶ್ನಿಸಿತು.  ಮಾಧ್ಯಮ ವರದಿಗಳನ್ನು ಆಧರಿಸಿ ಅರ್ಜಿ ಸಲ್ಲಿಸಲಾಗಿದೆ. ಆದ್ದರಿಂದ ತಾನು ಯಾವುದೇ ಪರಿಹಾರ ಒದಗಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತು.  ಮಾಧ್ಯಮ ವರದಿಗಳು ಸತ್ಯವೇ ಅಲ್ಲವೇ ಎಂಬುದಾಗಿ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಜನವರಿ 22ರ ಸೋಮವಾರ ತಿಳಿಸುವವರೆಗೆ ಕಾಯಿರಿ ಎಂದು ಹೈಕೋರ್ಟ್ ಆಪ್ ಶಾಸಕರಿಗೆ ಸೂಚಿಸಿತು. ಇದಕ್ಕೆ ಮುನ್ನ ಲಾಭದಾಯಕ ಹುದ್ದೆ ಹೊಂದಿರುವ ಆರೋಪಕ್ಕೆ ಗುರಿಯಾದ ಆಮ್ ಆದ್ಮಿ ಪಕ್ಷದ ೨೦ ಮಂದಿ ಶಾಸಕರನ್ನು ಅನರ್ಹಗೊಳಿಸುವಂತೆ ಕೇಂದ್ರೀಯ ಚುನಾವಣಾ ಆಯೋಗವು ರಾಷ್ಟ್ರಪತಿ ರಾಮನಾಥ್ ಗೋವಿಂದ್ ಅವರಿಗೆ ಶಿಫಾರಸು ಮಾಡಿ ವರದಿ ಕಳುಹಿಸಿತ್ತು. ಆಮ್ ಆದ್ಮಿ ಪಕ್ಷದ ೨೧ ಶಾಸಕರನ್ನು ಅನರ್ಹಗೊಳಿಸುವಂತೆ ೨೦೧೬ರ ಜೂನ್ ೯ರಂದು ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಂಡಿತು. ರಾಷ್ಟ್ರಪತಿಯವರು ಶಿಫಾರಸನ್ನು ಅಂಗೀಕರಿಸಿದರೆ, ದೆಹಲಿ ವಿಧಾನಸಭೆಯ ೨೦ ಸ್ಥಾನಗಳಿಗೆ ಮಿನಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮೊದಲಿಗೆ ೨೧ ಮಂದಿ ಶಾಸಕರ ಹೆಸರನ್ನು ಅನರ್ಹಗೊಳಿಸುವಂತೆ ಹೆಸರಿಸಲಾಗಿತ್ತು. ರಾಜೌರಿ ಗಾರ್ಡನ್ ಶಾಸಕ ಜರ್ನೇಲ್ ಸಿಂಗ್ ಅವರು ಪಂಜಾಬ್ ಚುನಾವಣೆಯಲ್ಲಿ ಪ್ರಕಾಶ ಸಿಂಗ್ ಬಾದಲ್ ವಿರುದ್ಧ ಸ್ಪರ್ಧಿಸುವ ಸಲುವಾಗಿ ದೆಹಲಿ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಈ ಸಂಖ್ಯೆ ೨೦ಕ್ಕೆ ಇಳಿದಿತ್ತು. ಹೊಸ ವಿದ್ಯಮಾನದಿಂದಾಗಿ ದೆಹಲಿಯ ಆಮ್ ಆದ್ಮಿ ಪಕ್ಷ ಬಹುಮತ ಕಳೆದುಕೊಳ್ಳುವ ಭೀತಿ ಎದುರಿಸಿತು. ಚುನಾವಣಾ ಆಯೋಗ ಬಿಜೆಪಿ ಏಜೆಂಟ್: ಚುನಾವಣಾ ಆಯೋಗ ಬಿಜೆಪಿಯ ಏಜೆಂಟ್ ಮಾದರಿಯಲ್ಲಿ ವರ್ತಿಸುತ್ತಿರುವಂತೆ ಕಾಣುತ್ತಿದೆ ಎಂಬುದಾಗಿ ಆಪಾದಿಸಿರುವ ಆಮ್ ಆದ್ಮಿ ಪಕ್ಷವು ನಮ್ಮ ಶಾಸಕರ ’ಮಾಟಬೇಟೆ’ ಮಾಡಲಾಗುತ್ತಿದೆ ಎಂದು ಆಪಾದಿಸಿತು. ವಿಶ್ವದ ಎಲ್ಲೆಡೆಯಲ್ಲೂ ಯಾವುದೇ ಆರೋಪ ಹೊರಿಸಲ್ಪಟ್ಟಾಗ, ಆರೋಪಿಗಳಿಗೆ ತಮ್ಮ ವಾದ ಮಂಡನೆಗೆ ಅವಕಾಶ ನೀಡಲಾಗುತ್ತದೆ. ಆದರೆ ಚುನಾವಣಾ ಆಯೋಗವದು ಈವರೆಗೆ ನಮ್ಮ ಶಾಸಕರಿಗೆ ತಮ್ಮ ವಿವರಣೆ ನೀಡಲು ಅವಕಾಶವನ್ನೇ ಕೊಟ್ಟಿಲ್ಲ ಎಂದು ಗ್ರೇಟರ್ ಕೈಲಾಶ್ನ ಆಪ್ ಶಾಸಕ ಸೌರಭ ಭಾರಧ್ವಾಜ್ ದೂರಿದರು. ಕೇಜ್ರಿವಾಲ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ:  ಚುನಾವಣಾ ಆಯೋಗವು ಅವರಿಗೆ ಬೇಕಾದಷ್ಟು ಅವಕಾಶಗಳನ್ನು ನೀಡಿತ್ತು ಮತ್ತು ಹಲವಾರು ಅರ್ಜಿಗಳನ್ನು ಆಲಿಸಿತ್ತು. ೨೦ ಮಂದಿ ಶಾಸಕರು ಅನರ್ಹತೆಯಿಂದ ತಪ್ಪಿಸಿಕೊಳ್ಳುವ ಮಾರ್ಗವೇ ಇಲ್ಲ. ಅವರ ನೇಮಕಾತಿ ಪತ್ರಗಳು ಅವರು ಅಧಿಕಾರಿಗಳು, ಸಿಬ್ಬಂದಿ ಮತ್ತು ಕಾರನ್ನು ಪಡೆಯುತ್ತಾರೆ ಎಂದು ತಿಳಿಸಿದೆ ಎಂದು ದೆಹಲಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ಮಾಕನ್ ಹೇಳಿದರು.


2018: ಬೀಜಿಂಗ್: ಡೊಕ್ಲಾಮ್ ಪ್ರದೇಶದಲ್ಲಿ ತಾನು ನಡೆಸುತ್ತಿರುವ ವ್ಯಾಪಕ ನಿರ್ಮಾಣ ಚಟುವಟಿಕೆಗಳನ್ನು ಚೀನಾವು ಬಲವಾಗಿ ಸಮರ್ಥಿಸಿಕೊಂಡಿತು. ತನ್ನದೇ ಪ್ರದೇಶದಲ್ಲಿ ವಾಸವಾಗಿರುವ ಜನ ಮತ್ತು ತನ್ನ ಪಡೆಗಳ ಜೀವನ ಮಟ್ಟ ಸುಧಾರಣೆ ಸಲುವಾಗಿ ಈ ನಿರ್ಮಾಣ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಅದು ಹೇಳಿಕೊಂಡಿತು.  ಭಾರತದೊಂದಿಗೆ ವಿವಾದದಲ್ಲಿ ಇರುವ ಡೊಕ್ಲಾಮ್ ಪ್ರದೇಶದಲ್ಲಿ ಚೀನಾ ಬೃಹತ್ ಸೇನಾ ಸಮುಚ್ಚಯವನ್ನು ನಿರ್ಮಿಸುತ್ತಿದೆ ಎಂಬುದಾಗಿ ಉಪಗ್ರಹ ಚಿತ್ರಗಳನ್ನು ಆಧರಿಸಿ ಬಂದಿರುವ ವರದಿಗಳಿಗೆ ಪ್ರತಿಕ್ರಿಯೆ ನೀಡಿದ ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ಲು ಕಂಗ್ ಅವರು ’ನಾನು ಕೂಡಾ ಸಂಬಂಧಿತ ವರದಿಯನ್ನು ನೋಡಿದ್ದೇನೆ. ಇಂತಹ ಫೊಟೋಗಳನ್ನು ಯಾರು ಕೊಟ್ಟರು ಎಂದು ನನಗೆ ಗೊತ್ತಿಲ್ಲ’ ಎಂದು ಹೇಳಿದರು. ಆದರೆ ಈ ಬಗ್ಗೆ ತಮ್ಮ ಬಳಿ ಹೆಚ್ಚಿನ ಮಾಹಿತಿ ಇಲ್ಲ ಎಂದೂ ಅವರು ನುಡಿದರು. ಭಾರತದೊಂದಿಗೆ ಇನ್ನೊಂದು ಘರ್ಷಣೆಗೆ ಚೀನಾ ಸನ್ನದ್ಧವಾಗುತ್ತಿದೆ ಎಂಬುದಾಗಿ ವರದಿಗಳು ಕಳವಳ ವ್ಯಕ್ತ ಪಡಿಸಿದ್ದವು. ’ಏನಿದ್ದರೂ, ಡೊಂಗ್ಲಾಂಗ್ (ಡೊಕ್ಲಾಮ್) ಪ್ರದೇಶ ಯಾವಾಗಲೂ ಚೀನಾಕ್ಕೆ ಸೇರಿದ್ದಾಗಿದ್ದು, ಚೀನಾದ ವ್ಯಾಪ್ತಿಯಲ್ಲಿಯೇ ಇದೆ ಎಂಬುದು ಚೀನಾದ ಸ್ಪಷ್ಟ ನಿಲುವು. ಈ ವಿಚಾರದಲ್ಲಿ ವಿವಾದ ಇಲ್ಲವೇ ಇಲ್ಲ ಎಂದು ಅವರು ಪ್ರತಿಪಾದಿಸಿದರು. ಭೂತಾನ್ ತನ್ನದು ಎಂಬುದಾಗಿ ಪ್ರತಿಪಾದಿಸಿದ ಪ್ರದೇಶದ ಮೇಲೂ ಚೀನಾ ಸಾರ್ವಭೌಮತ್ವ ಹೊಂದಿದೆ ಎಂದು ಅವರು ಹೇಳಿದರು. ಈ ಪ್ರದೇಶದಲ್ಲಿ ವಾಸವಾಗಿರುವ ಜನ ಮತ್ತು ಸೇನಾ ಸಿಬ್ಬಂದಿಯ ಬದುಕು ಸುಧಾರಣೆ ಸಲುವಾಗಿ ಚೀನಾ ಮೂಲ ಸವಲತ್ತುಗಳನ್ನು ನಿರ್ಮಿಸುತ್ತಿದೆ ಎಂದು ಅವರು ನುಡಿದರು. ’ನಮ್ಮ ಗಡಿಯ ಪಹರೆಗೆ ಮತ್ತು ಗಡಿ ಪಡೆಗಳು ಹಾಗೂ ನಿವಾಸಿಗಳ ಬದುಕಿನ ಸ್ಥಿತಿ ಸುಧಾರಣೆಗಾಗಿ ಡೊಂಗ್ಲಾಂಗ್ ಪ್ರದೇಶದಲ್ಲಿ ರಸ್ತೆಗಳು ಸೇರಿದಂತೆ ಮೂಲಸವಲತ್ತುಗಳನ್ನು ಚೀನಾ ನಿರ್ಮಿಸುತ್ತಿದೆ’ ಎಂದು ಲು ಹೇಳಿದರು. ಇಡೀ ಪ್ರದೇಶದ ಮೇಲೆ ಚೀನಾ ತನ್ನ ಸಾರ್ವಭೌಮತ್ವವನ್ನು ಹೊಂದಿದೆ. ಭಾರತವು ತನ್ನ ಪ್ರದೇಶದಲ್ಲಿ ಮೂಲಸವಲತ್ತು ನಿರ್ಮಿಸುವುದು ಹೇಗೆ ಕಾನೂನುಬದ್ಧವೋ ಹಾಗೆಯೇ ಇದು ಕೂಡಾ ಕಾನೂನುಬದ್ಧ ಮತ್ತು ಸಮರ್ಥನೀಯ. ಚೀನಾವು ತನ್ನ ಪ್ರದೇಶದಲ್ಲಿ ಮೂಲಸವಲತ್ತು ನಿರ್ಮಾಣ ಮಾಡುವ ಬಗ್ಗೆ ಇತರ ರಾಷ್ಟ್ರಗಳು ಪ್ರತಿಕ್ರಿಯಿಸುವುದಿಲ್ಲ ಎಂದು ನಾವು ಹಾರೈಸುತ್ತೇವೆ ಎಂದು ಅವರು ಹೇಳಿದರು. ಡೊಕ್ಲಾಮ್ ಪ್ರದೇಶದಲ್ಲಿ ಭಾರತದೊಂದಿಗೆ ಇನ್ನೊಂದು ಘರ್ಷಣೆಗೆ ಚೀನಾ ಸಿದ್ಧವಾಗುತ್ತಿದೆಯೇ ಎಂಬ ಪ್ರಶ್ನೆಗೆ, ಭಾರತದ ಚಿಕನ್ ನೆಕ್ ಕಾರಿಡಾರ್ ಸಮೀಪ ರಸ್ತೆ ನಿರ್ಮಾಣವನ್ನು ತಡೆಯಲು ಸೇನಾ ಹಸ್ತಕ್ಷೇಪ ನಡೆಸುವ ಮೂಲಕ ಭಾರತ ದ್ವಿಪಕ್ಷೀಯ ಬಾಂಧವ್ಯವನ್ನು ತೀವ್ರ ಪರೀಕ್ಷೆಗೆ ಒಡ್ಡಿದೆ ಎಂದು ಅವರು ಉತ್ತರಿಸಿದರು.
2018: ನವದೆಹಲಿ: ಸಂಜಯ್ಲೀಲಾ ಭನ್ಸಾಲಿ ಅವರ ವಿವಾದಿತ ಐತಿಹಾಸಿಕ ಕಥಾ ಚಿತ್ರ "ಪದ್ಮಾವತ್‌'ಗೆ ಕೇಂದ್ರ ಸೆನ್ಸಾರ್ಮಂಡಳಿ ನೀಡಿರುವ ಸರ್ಟಿಫಿಕೇಟನ್ನು ರದ್ದು ಮಾಡುವಂತೆ ತುರ್ತು ವಿಚಾರಣೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ಇಂದು ತಿರಸ್ಕರಿಸಿತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಆಯಾ ರಾಜ್ಯ ಸರಕಾರಗಳಿಗೆ ಸಂಬಂಧಿಸಿದ ವಿಷಯ; ಅದನ್ನು ನಿಭಾಯಿಸುವುದು ಅವುಗಳ ಬದ್ಧತೆ ಎಂದು ಸುಪ್ರೀಂ ಕೋರ್ಟ್ಹೇಳಿತು. ಜನವರಿ 18ರ ಗುರುವಾರವಷ್ಟೆ ಸುಪ್ರೀಂ ಕೋರ್ಟ್ಪದ್ಮಾವತ್ಚಿತ್ರದ ದೇಶವ್ಯಾಪಿ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿತ್ತಲ್ಲದೆ ಸೆನ್ಸಾರ್ಸರ್ಟಿಫಿಕೇಟ್ಪಡೆದ ಚಿತ್ರವನ್ನು ಯಾವುದೇ ರಾಜ್ಯ ಸರಕಾರ ಬಹಿಷ್ಕರಿಸುವಂತಿಲ್ಲ ಎಂದು ಹೇಳಿತ್ತು ನಡುವೆ ಪದ್ಮಾವತ್ವಿರುದ್ಧ ಮತ್ತೆ ಪ್ರಬಲ ಪ್ರತಿಭಟನೆಗೆ ಮುಂದಾಗಿರುವ ರಾಜಪೂತ ಕರ್ಣಿ ಸೇನೆ, ಸೆನ್ಸಾರ್ಮಂಡಳಿ ಮುಖ್ಯಸ್ಥ ಪ್ರಸೂನ್ಜೋಷಿ ಅವರಿಗೆ ನಾವು ರಾಜಸ್ಥಾನಕ್ಕೆ ಕಾಲಿಡಲು ಬಿಡುವುದಿಲ್ಲ' ಎಂದು ಎಚ್ಚರಿಕೆ ನೀಡಿತು. ಕರ್ಣಿ ಸೇನೆಯ ಸದಸ್ಯರಾಗಿರುವ ಸುಖದೇವ್ಸಿಂಗ್ಅವರು ಬೆದರಿಕೆಯನ್ನು ಹಾಕಿದರು. "ಪದ್ಮಾವತ್‌' ಐತಿಹಾಸಿಕ ಕಥಾ ಚಿತ್ರಕ್ಕೆ ಸುಪ್ರೀಂ ಕೋರ್ಟ್ಕ್ಲೀನ್ಚಿಟ್ನೀಡಿರುವ ಹೊರತಾಗಿಯೂ ರಾಜಪೂತ್ಕರ್ಣಿ ಸೇನಾ ಕಾರ್ಯಕರ್ತರು ಈದಿನ ಬಿಹಾರದ ಮುಜಫರನಗರದಲ್ಲಿನ ಚಿತ್ರಮಂದಿವೊಂದರ ಮೇಲೆ ದಾಳಿ ನಡೆಸಿ ಹಾನಿ ಉಂಟುಮಾಡಿದ್ದರುಪದ್ಮಾವತ್ಚಿತ್ರಕ್ಕೆ ಕ್ಲೀನ್ಚಿಟ್ನೀಡಿರುವ ಸುಪ್ರೀಂ ಕೋರ್ಟ್ತೀರ್ಪಿನ ವಿರುದ್ಧ ನಾವು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಕರ್ಣಿ ಸೇನಾ ಹೇಳಿತ್ತು. ಇದೇ ಜನವರಿ 25ರಂದು ಪದ್ಮಾವತ್ಚಿತ್ರ ತೆರೆ ಕಾಣಲಿದೆ.
2018: ಅಹಮದಾಬಾದ್: ’ಪದ್ಮಾವತ್’ ಚಿತ್ರ ಬಿಡುಗಡೆಗೆ ಇನ್ನೂ ಒಂದು ವಾರ ಬಾಕಿ ಉಳಿದಿರುವಂತೆಯೇ ರಜಪೂತ ಸಂಘಟನೆಗಳು ಚಿತ್ರ ಬಿಡುಗಡೆ ವಿರುದ್ಧ ತಮ್ಮ ಚಳವಳಿಯನ್ನು ತೀವ್ರಗೊಳಿಸಿದವು. ಚಲನಚಿತ್ರವನ್ನು ನಿಷೇಧಿಸಿರುವ ೪ ರಾಜ್ಯಗಳಿಗೆ ಚಲನಚಿತ್ರ ಬಿಡುಗಡೆ ಬಗ್ಗೆ ಖಾತರಿ ನೀಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವುದರ ಹೊರತಾಗಿಯೂ ರಜಪೂತ ಸಂಘಟನೆಗಳು ಚಿತ್ರ ಬಿಡುಗಡೆಗೆ ತಮ್ಮ ತೀವ್ರ ವಿರೋಧ ವ್ಯಕ್ತ ಪಡಿಸಿದವು. ಈ ಮಧ್ಯೆ ಗುಜರಾತ್ ಸರ್ಕಾರ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಮುನ್ನ ತಾನು ಸುಪ್ರೀಂಕೋರ್ಟ್ ಆದೇಶವನ್ನು ಅಧ್ಯಯನ ಮಾಡುವುದಾಗಿ ಹೇಳಿತು. ಕರ್ಣಿ ಸೇನಾ ಮತ್ತು ಮಹಾಕಾಳ ಸೇನಾ ಈ ಎರಡು ರಜಪೂತ ಸಂಘಟನೆಗಳು ಗುಜರಾತಿನಲ್ಲಿ ಚಲನಚಿತ್ರ ಬಿಡುಗಡೆ ವಿರೋಧಿ ಹೋರಾಟದ ನೇತೃತ್ವ ವಹಿಸಿವೆ.. ಇದರ ಜೊತೆಗೆ ಏಳು ಕ್ಷತ್ರಿಯ ಸಂಘಟನೆಗಳು ಪದ್ಮಾವತ್ ಚಿತ್ರ ಬಿಡುಗಡೆ ಮಾಡದಂತೆ ಚಿತ್ರ ಮಂದಿರಗಳಿಗೆ ಪತ್ರಗಳನ್ನು ನೀಡಿದವು. ’ಈ ವಿಷಯ ರಜಪೂತ ಸಮುದಾಯದ ಭಾವನೆಗಳಿಗೆ ಸಂಬಂಧಿಸಿದ್ದು. ಗುಜರಾತ್ ಸರ್ಕಾರ ನಮ್ಮ ಬೇಡಿಕೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸಿತ್ತು. ಈಗ ಸುಪ್ರೀಂಕೋರ್ಟ್ ಚಿತ್ರ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿರುವ ಕಾರಣ ಸರ್ಕಾರ ಚಿತ್ರ ಬಿಡುಗಡೆಯಾಗದಂತೆ ಖಾತರಿ ನೀಡಲು ಕ್ರಮ ಕೈಗೊಳ್ಳಬೇಕು. ನಿರ್ದೇಶನ ನೀಡುವಾಗ ಸುಪ್ರೀಂಕೋರ್ಟ್ ರಜಪೂತ ಸಮುದಾಯಗಳ ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ’ ಎಂದು ಕರ್ಣಿ ಸೇನಾ ಸಂಚಾಲಕ ರಾಜ್ ಶೇಖಾವತ್ ಹೇಳಿದರು.
2018: ರಾಮನಗರ: ಸೌರಶಕ್ತಿ ಆಧಾರಿತ ನೀರಾವರಿ ಪಂಪ್ ಸೆಟ್ ಚಾಲನೆಯಸೂರ್ಯ ರೈತಯೋಜನೆಗೆ ಕನಕಪುರ ತಾಲ್ಲೂಕಿನ ಹಾರೋಬೆಲೆ ಗ್ರಾಮದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.‌ ಪಾಟೀಲ ಚಾಲನೆ ನೀಡಿದರು. ರೈತರ ಹೊಲದಲ್ಲಿಯೇ ಸೌರಶಕ್ತಿ ಫಲಕಗಳ ಮೂಲಕವಿದ್ಯುತ್ ಉತ್ಪಾದನೆ ಮಾಡುವುದು. ಅದರಿಂದಲೇ ಕೃಷಿ ಪಂಪ್ಸೆಟ್ಗೆ ವಿದ್ಯುತ್ ಪೂರೈಕೆ ಮಾಡುವುದು ಇದರ ವಿಶೇಷ. ಅಲ್ಲದೆ, ಹೆಚ್ಚುವರಿಯಾಗಿ ಉತ್ಪಾದನೆ ಆಗುವ  ವಿದ್ಯುತ್ ನೇರವಾಗಿ ಬೆಸ್ಕಾಂ ಲೇನ್ ಸೇರಿ ರೈತರಿಗೆ ಆದಾಯವನ್ನು ತಂದುಕೊಡಲಿದೆ. ಹಾರೋಬೆಲೆ ಗ್ರಾಮ ಪಂಚಾಯಿತಿಯ 310 ಕೃಷಿ ಪಂಪ್ ಸೆಟ್ ಗಳಿಗೆ ಇಂತಹ ಸೌರ ಘಟಕಗಳನ್ನು ಅಳವಡಿಸುವ ಕಾರ್ಯ ನಡೆದಿದ್ದು, 250 ಘಟಕಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಇದಕ್ಕಾಗಿ ಇಂಧನ ಇಲಾಖೆಯು ₹ 24.36 ಕೋಟಿ ವ್ಯಯಿಸುತ್ತಿದೆ. ‘ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಯೋಜನೆಯೊಂದು ಜಾರಿಗೊಳ್ಳುತ್ತಿದೆ. ದೇಶ ವಿದೇಶಗಳ ಪ್ರತಿನಿಧಿಗಳು ಭೇಟಿ ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ತಿಳಿಸಿದರು.

2017: ಕಟಕ್: ಪಂದ್ಯದ ಅಂತಿಮ ಕ್ಷಣದವರೆಗೂ ಕುತೂಹಲವನ್ನು ಕಾಯ್ದುಕೊಂಡಿದ್ದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಭಾರತ ತಂಡ 15 ರನ್ಗಳ ರೋಚಕ ಗೆಲುವು ಪಡೆಯುವ ಮೂಲಕ 3 ಏಕದಿನ ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯನ್ನು ತನ್ನದಾಗಿಸಿಕೊಂಡಿತು. ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿ ಗೆಲುವು ಪಡೆಯಲು ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ (102) ಮತ್ತು ಜೇಸನ್ ರಾಯ್ (82) ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ತಂಡ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 366 ರನ್ ಗಳಿಸುವ ಮೂಲಕ 15 ರನ್ಗಳಿಂದ ಭಾರತಕ್ಕೆ ಶರಣಾಯಿತು. ಬೃಹತ್ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ 28 ರನ್ಗಳಿಗೆ ಹಾಲೆಸ್ (14) ವಿಕೆಟ್ ಕಳೆದುಕೊಂಡಿತ್ತು. ಹಂತದಲ್ಲಿ ಜತೆಗೂಡಿ ಜೇಸನ್ ರಾಯ್ (82) ಮತ್ತು ಜೋ ರೂಟ್ (54) ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಬಂದ ನಾಯಕ ಇಯಾನ್ ಮೋರ್ಗನ್ ಅಬ್ಬರದ ಬ್ಯಾಟಿಂಗ್ ಮಾಡಿ ಭಾರತೀಯ ಬೌಲರ್ಗಳ ಮೇಲೆ ಒತ್ತಡ ಹೇರಿದರು. ಮಾರ್ಗನ್ಗೆ ಮೋಯಿನ್ ಅಲಿ (55) ಉತ್ತಮ ಸಾಥ್ ನೀಡುವ ಮೂಲಕ ತಂಡದ ಮೊತ್ತವನ್ನು 300 ಗಡಿ ದಾಟಿಸಿದರು. ಮಾರ್ಗನ್ ಕ್ರೀಸ್ನಲ್ಲಿರುವವರೆಗೆ ಇಂಗ್ಲೆಂಡ್ ಗೆಲುವಿನ ಆಸೆ ಹೊಂದಿತ್ತು. ಆದರೆ ಮಾರ್ಗನ್ ಔಟಾದ ನಂತರ ಉಳಿದ ಬ್ಯಾಟ್ಸ್ಮನ್ಗಳು ಗೆಲುವಿಗೆ ಅಗತ್ಯವಿದ್ದ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ಗೆಲುವಿನ ನಗೆ ಬೀರಿತು. ಭಾರತದ ಪರ ಅಶ್ವಿನ್ 3, ಬೂಮ್ರಾ 2, ಭುವನೇಶ್ವರ ಕುಮಾರ್ ಮತ್ತು ಜಡೇಜಾ ತಲಾ 1 ವಿಕೆಟ್ ಪಡೆದರು. ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ಯುವರಾಜ್ ಸಿಂಗ್ (150) ಮತ್ತು ಮಹೇಂದ್ರ ಸಿಂಗ್ ಧೋನಿ (134) ಗಳಿಸಿದ ಶತಕಗಳ ನೆರವಿನಿಂದ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 381 ರನ್ ಕಲೆ ಹಾಕಿತ್ತು. ಇನಿಂಗ್ಸ್ ಆರಂಭಿಸಿದ ಭಾರತ ಕ್ರಿಸ್ ವೋಕ್ಸ್ ದಾಳಿಗೆ ಸಿಲುಕಿ 25 ರನ್ ಗಳಿಸುವಷ್ಟರಲ್ಲಿ ನಾಯಕ ವಿರಾಟ್ ಕೊಹ್ಲಿ (8), ಆರಂಭಿಕ ಆಟಗಾರರಾದ ಶಿಖರ್ ಧವನ್ (11) ಮತ್ತು ಕೆ.ಎಲ್.ರಾಹುಲ್ (5) ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಹಂತದಲ್ಲಿ ಕ್ರೀಸ್ಗಿಳಿದ ಯುವರಾಜ್ ಸಿಂಗ್ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 4 ನೇ ವಿಕೆಟ್ಗೆ ಅಮೋಧ 256 ರನ್ ಜತೆಯಾಟವಾಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆಕರ್ಷಕ ಆಟವಾಡಿದ ಯುವರಾಜ್ ಸಿಂಗ್ ಕೇವಲ 98 ಬಾಲ್ಗಳಲ್ಲಿ ಶತಕ ಸಿಡಿಸುವ ಮೂಲಕ 6 ವರ್ಷದ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಶತಕ ಗಳಿಸಿದ ಸಂಭ್ರಮವನ್ನು ಆಚರಿಸಿದರು. ಮತ್ತೊಂದೆಡೆ ಕೂಲ್ ಆಗಿ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಸಹ 3 ವರ್ಷದ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಶತಕ ಸಿಡಿಸಿದರು. ಧೋನಿ 122 ಬಾಲ್ಗಳಲ್ಲಿ 6 ಸಿಕ್ಸರ್ ಮತ್ತು 10 ಬೌಂಡರಿ ಒಳಗೊಂಡ 134 ರನ್ ಸಿಡಿಸಿದರು. ಯುವರಾಜ್ ಸಿಂಗ್ ಔಟಾದ ನಂತರ ಕೇದಾರ್ ಜಾಧವ್ ಜತೆಗೂಡಿದ ಧೋನಿ ತಂಡದ ಮೊತ್ತವನ್ನು 300 ಗಡಿ ದಾಟಿಸಿ ಔಟಾದರು. ಇಂಗ್ಲೆಂಡ್ ಪರ ಪರಿಣಾಮಕಾರಿ ಬೌಲಿಂಗ್ ಮಾಡಿದ ಕ್ರಿಸ್ ವೋಕ್ಸ್ 4 ವಿಕೆಟ್ ಪಡೆದರೆ, ಫ್ಲುಂಕೆಟ್ 2 ವಿಕೆಟ್ ಪಡೆದರುಸಂಕ್ಷಿಪ್ತ ಸ್ಕೋರ್: ಭಾರತ 50 ಓವರ್ 381 ಕ್ಕೆ 6(ಯುವರಾಜ್ ಸಿಂಗ್ 150, ಧೋನಿ 134, ವೋಕ್ಸ್ 60 ಕ್ಕೆ 4, ಫ್ಲುಂಕೆಟ್ 91 ಕ್ಕೆ 2). ಇಂಗ್ಲೆಂಡ್ 50 ಓವರ್ 366 ಕ್ಕೆ 8 (ಮಾರ್ಗನ್ 102, ಜೇಸನ್ ರಾಯ್ 82, ಅಶ್ವಿನ್ 65 ಕ್ಕೆ 3, ಬೂಮ್ರಾ 81 ಕ್ಕೆ 2)
2017: ಕಟಕ್: ಭಾರತ ತಂಡ ಅತಿಹೆಚ್ಚು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 350ಕ್ಕಿಂತ ಹೆಚ್ಚು ಸ್ಕೋರ್ ಮಾಡಿದ ದಾಖಲೆ ನಿರ್ವಿುಸಿತು.  ಒಟ್ಟು 23 ಪಂದ್ಯಗಳಲ್ಲಿ 350ಕ್ಕಿಂತ ಹೆಚ್ಚು ರನ್ ಗಳಿಸಿ ದಕ್ಷಿಣ ಆಫ್ರಿಕಾ ತಂಡದ ಹೆಸರಲ್ಲಿದ್ದ ದಾಖಲೆ ಅಳಿಸಿಹಾಕಿತು. ಈದಿನ  ಕಟಕ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 381 ರನ್ಗಳಿಸಿವ ಮೂಲಕ ನೂತನ ಸಾಧನೆ ಮಾಡಿತು.  ದಕ್ಷಿಣ ಆಫ್ರಿಕಾ ತಂಡ ಇದುವರೆಗೆ 22 ಏಕದಿನ ಪಂದ್ಯಗಳಲ್ಲಿ 350ಕ್ಕಿಂತ ಹೆಚ್ಚು ರನ್ ದಾಖಲಿಸಿತ್ತು. ಭಾರತ ಕಂಡ ಯಶಸ್ವಿ ನಾಯಕ ಸೌರವ್ ಗಂಗೂಲಿ ನೇತೃತ್ವದಲ್ಲಿ 1999 ವಿಶ್ವಕಪ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ಮೊದಲ ಬಾರಿಗೆ 350 ರನ್ಗಳ ಗಡಿ ದಾಟಿದ ಸಾಧನೆ ಮಾಡಿತ್ತು. ನಾಯಕ ಗಂಗೂಲಿ(183) ಮತ್ತು ರಾಹುಲ್ ದ್ರಾವಿಡ್(145) ಅಮೋಘ 318 ರನ್ಗಳ ಜತೆಯಾಟದ ಮೂಲಕ ಇತಿಹಾಸ ನಿರ್ವಿುಸಿದ್ದರು. ಅದೇ ವರ್ಷ ಹೈದರಾಬಾದ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 376 ರನ್ಗಳನ್ನು ಪೇರಿಸಿದ್ದರು. ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್(186*) ಮತ್ತು ರಾಹುಲ್ ದ್ರಾವಿಡ್(153) ಜೋಡಿ ಮೋಡಿ ಮಾಡಿತ್ತು. ಸಚಿನ್-ದ್ರಾವಿಡ್ ಜತೆಯಾಟದಲ್ಲಿ 331 ರನ್ಗಳು ಸೇರ್ಪಡೆಗೊಂಡಿತ್ತು. 8 ವರ್ಷಗಳ ನಂತರ 2007 ವಿಶ್ವಕಪ್ನಲ್ಲಿ 400 ರನ್ಗಳ ಗಡಿ ದಾಟುವ ಮೂಲಕ ಭಾರತ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ದಾಖಲೆ ಸೃಷ್ಟಿಸಿತು. ಟ್ರಿನಿಡಡ್ ಬಮುಡಾದಲ್ಲಿ ನಡೆದ ಪಂದ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 413 ರನ್ಗಳನ್ನು ಬಾರಿಸಿತ್ತು. ನಂತರದ ದಶಕದಲ್ಲಿ ಅನೇಕ ಬಾರಿ 350 ರನ್ಗಳ ಗಡಿ ದಾಟುವಲ್ಲಿ ಭಾರತ ಯಶಸ್ವಿಯಾಯಿತು.
2017: ನವದೆಹಲಿ: ಪರಮಾಣು ಪ್ರಸರಣ ತಡೆ ನೀತಿಗೆ ಬದ್ಧವಾಗಿದ್ದು, ಇದರ ಅನುಸಾರವಾಗಿ ಭಾರತ ಪರಮಾಣು ಪೂರೈಕೆದಾರರ ಒಕ್ಕೂಟ(ಎನ್ಎಸ್ಜಿ) ಸೇರ್ಪಡೆ ಬಯಸುತ್ತದೆ. ಉಡುಗೊರೆ ರೂಪದಲ್ಲಿ ಬಯಸುತ್ತಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಚೀನಾಕ್ಕೆ ತಿರುಗೇಟು ನೀಡಿತು. ಜನವರಿ 16ರಂದು ಎನ್ಪಿಟಿಗೆ ಸಹಿ ಮಾಡದ ರಾಷ್ಟ್ರಗಳನ್ನು ಎನ್ಎಸ್ಜಿ ಸೇರ್ಪಡೆಗೊಳಿಸಲು ಅದೇನು ಬೀಳ್ಕೊಡುಗೆ ಸಮಾರಂಭದ ಕೊಡುಗೆಯಲ್ಲ ಎಂದು ಚೀನಾ ಪ್ರತಿಕ್ರಿಯಿಸಿತ್ತು. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಅಧಿಕಾರವಧಿ ಅಂತಿಮಗೊಳ್ಳುತ್ತಿರುವ ಬೆನ್ನಲ್ಲೇ ಚೀನಾ ಹೇಳಿಕೆ ನೀಡಿತ್ತು. ಭಾರತವನ್ನು ಎನ್ಎಸ್ಜಿ ಸೇರ್ಪಡೆಗೊಳಿಸಲು ಒಬಾಮ ನಡೆಸಿದ ಪ್ರಯತ್ನಕ್ಕೆ ಬೀಳ್ಕೊಡುಗೆ ಉಡುಗೊರೆ ಎಂದು ವ್ಯಂಗ್ಯವಾಡಿತ್ತು. ಎನ್ಎಸ್ಜಿ ಸೇರ್ಪಡೆಗೆ ಭಾರತ ಸಲ್ಲಿಸಿರುವ ಅರ್ಜಿ ಕುರಿತು ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹು ಚುನ್ಯಿುಂಗ್, ಎನ್ಪಿಟಿಗೆ ಸಹಿ ಮಾಡದ ರಾಷ್ಟ್ರಗಳನ್ನು ಎನ್ಎಸ್ಜಿಗೆ ಸೇರಿಸಿಕೊಳ್ಳುವ ವಿಚಾರವಾಗಿ ಚೀನಾ ತನ್ನ ನಿಲುವನ್ನು ಮೊದಲೇ ತಿಳಿಸಿದೆ. ಅದನ್ನೇ ಮತ್ತೆ ಮತ್ತೆ ಹೇಳಲು ಸಾಧ್ಯವಿಲ್ಲ. ಎನ್ಎಸ್ಜಿ ಸೇರ್ಪಡೆಗೊಳ್ಳುವುದು ಬೀಳ್ಕೊಡುಗೆ ಸಮಾರಂಭದಲ್ಲಿ ಉಡುಗೊರೆಯನ್ನು ಹಂಚಿಕೊಂಡಂತಲ್ಲ ಎಂದಿದ್ದರು.
2017: ನವದೆಹಲಿ: ಪ್ಯಾನ್ ಕಾರ್ಡ್ ಮೂಲಕ ನಡೆಸುವ ನಗದು ವ್ಯವಹಾರಕ್ಕೆ ಮಿತಿ ಹೇರಲು ಕೇಂದ್ರ ಸರ್ಕಾರ ಮುಂದಾಯಿತು.. 30,000 ರೂ.ಗಿಂತ ಹೆಚ್ಚಿನ ನಗದು ವಹಿವಾಟು ನಡೆಸಲು ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಲು ಚಿಂತನೆ ನಡೆಸಿತು. ಪ್ರಸ್ತುತ 50,000 ರೂ.ಗಿಂತ ಹೆಚ್ಚಿನ ನಗದು ವ್ಯವಹಾರಕ್ಕೆ ಪ್ಯಾನ್ ಕಾರ್ಡ್ ಕಡ್ಡಾಯ. ಜತೆಗೆ ವರ್ತಕರು ಪಾನ್ ಕಾರ್ಡ್ ಬಳಸಿ ನಡೆಸಬಹುದಾದ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ವ್ಯವಹಾರಗಳಿಗೂ ಮಿತಿ ಹೇರಲು ಕೇಂದ್ರ ಮುಂದಾಯಿತು. ನೋಟು ನಿಷೇಧದ ಬಳಿಕ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ ನಗದು ವ್ಯವಹಾರದ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಇತ್ತೀಚೆಗಷ್ಟೇ ದೊಡ್ಡ ಬೆಲೆಯ ನೋಟುಗಳ ವಿತ್ಡ್ರಾ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ತಿಳಿಸಿತ್ತು. ಜತೆಗೆ ಹೆಚ್ಚಿನ ಮೊತ್ತದ ನಗದು ಪಾವತಿ ಮೇಲೆ ಶುಲ್ಕ ವಿಧಿಸಲು ಕೇಂದ್ರ ಮುಂದಾಗಿದೆ. ಎಟಿಎಂಗಳಲ್ಲಿ ದಿನದ ವಿತ್ಡ್ರಾ ಮಿತಿಯನ್ನು 10,000 ರೂ.ಗೆ ಏರಿಕೆ ಮಾಡುವ ಮೂಲಕ ಜನರಲ್ಲಿ ನಿರಾಳತೆ ಒದಗಿಸಿತ್ತು.
2017: ಲಖನೌ: ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತಿತರ ಪಕ್ಷಗಳ ಜತೆ ಮಹಾಮೈತ್ರಿ ಬಗ್ಗೆ ಸಿಎಂ ಅಖಿಲೇಶ್ ಯಾದವ್ ಒಲವು ತೋರಿದ ಬೆನ್ನಲ್ಲೇ ಪೋಸ್ಟರ್ಗಳಲ್ಲಿ ಕೃಷ್ಣಾರ್ಜುನರಾಗಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ರಾರಾಜಿಸಿದರು. ಪೋಸ್ಟರ್ಗಳಲ್ಲಿ ಕೃಷ್ಣನಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅರ್ಜುನನಾಗಿ ಎಸ್ಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅಖಿಲೇಶ್ ಯಾದವ್ ಅವರನ್ನು ಬಿಂಬಿಸಲಾಗಿದ್ದು ಕಾಂಗ್ರೆಸ್ ಮತ್ತು ಎಸ್ಪಿ ನಡುವಿನ ಮೈತ್ರಿ ಬಹುತೇಕ ಖಚಿತ ಎನ್ನಲಾಗಿದೆ. ಪೋಸ್ಟರ್ನಲ್ಲಿ ಎಸ್ಪಿ ಚಿಹ್ನೆ ಸೈಕಲ್ ಬಳಸಲಾಯಿತು. ವಿಕಾಸ ಮತ್ತು ವಿಜಯದ ಹಾದಿಯಲ್ಲಿ ಇಬ್ಬರು ಮಹಾರಥಿಗಳು ಮುನ್ನುಗ್ಗುತ್ತಿದ್ದಾರೆ ಎಂಬ ಘೋಷವಾಕ್ಯವನ್ನು ಬಳಸಲಾಯಿತು. ಈಗಾಗಲೇ ಕಾಂಗ್ರೆಸ್ ಮುಖ್ಯಮಂತ್ರಿಯಾಗಬೇಕಿದ್ದ ಮಾಜಿ ಸಿಎಂ ಶೀಲಾ ದೀಕ್ಷಿತ್ ಸಂಪೂರ್ಣವಾಗಿ ಅಖಿಲೇಶ್ಗೆ ಸಹಮತ ವ್ಯಕ್ತಪಡಿಸಿದ್ದರು. ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ತಂದೆ ಮುಲಾಯಂ ಸಿಂಗ್ ಯಾದವ್ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್ ವಿರುದ್ಧ ಸೈಕಲ್ ಚಿಹ್ನೆಗಾಗಿ ಪೈಪೋಟಿ ನಡೆಸಿ ಗೆದ್ದಿದ್ದ ಅಖಿಲೇಶ್ ಕಾಂಗ್ರೆಸ್ ಜತೆಗೆ ಮೈತ್ರಿ ಸಾಧಿಸುವತ್ತ ಹೆಜ್ಜೆ ಇರಿಸಿದ್ದರು.

2017: ಬೆಂಗಳೂರು: 9000 ಕೋಟಿ ರೂ. ಸಾಲ ಮಾಡಿ ವಿದೇಶಕ್ಕೆ ಹಾರಿರುವ ರುವ ಉದ್ಯಮಿ ವಿಜಯ್ ಮಲ್ಯ ಅವರಿಂದ ಬಾಕಿ ಸಾಲದ ಮೊತ್ತವನ್ನು ವಸೂಲು ಮಾಡಲು ಸಾಲ ಮರುಪಾವತಿ ನ್ಯಾಯಾಧಿಕರಣ(ಡಿಆರ್ಟಿ) ಬ್ಯಾಂಕ್ಗಳಿಗೆ ಅನುಮತಿ ನೀಡಿತು. 6,203.35 ಕೋಟಿ ರೂ. ಮೊತ್ತವನ್ನು ಪ್ರಮುಖ ಪಾಲುದಾರರಾದ ಕಿಂಗ್ಫಿಶರ್ ಏರ್ಲೈನ್ಸ್, ಯುನೈಟೆಡ್ ಬ್ರೆವೆರೀಸ್ ಹೋಲ್ಡಿಂಗ್ಸ್, ವಿಜಯ್ ಮಲ್ಯ ಮತ್ತು ಕಿಂಗ್ಫಿಶರ್ ಫಿನ್ವೆಸ್ಟ್ ಸಂಸ್ಥೆಗಳಿಂದ ವಾರ್ಷಿಕ ಶೇ.11.5 ಬಡ್ಡಿದರದಲ್ಲಿ ಸಾಲ ವಸೂಲಾತಿ ಮಾಡಿಕೊಳ್ಳಬಹುದು ಎಂದು ಡಿಆರ್ಟಿ ತಿಳಿಸಿತು. ಮಲ್ಯ ಸಾಲ ಮಾಡಿದ್ದ ಬ್ಯಾಂಕ್ಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಡಿಆರ್ಟಿ ನೂತನ ತೀರ್ಪು ನೀಡಿತು. ಕಿಂಗ್ಫಿಶರ್ ಏರ್ಲೈನ್ಸ್ನಿಂದಾದ ನಷ್ಟದಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದ ಕಾರಣದಿಂದ ವಿಜಯ್ ಮಲ್ಯಾ ವಿರುದ್ಧ ಎಸ್ಬಿಐ ಡಿಆರ್ಟಿ ಮೊರೆ ಹೋಗಿತ್ತು. ಕಳೆದ ವರ್ಷ ಮಾರ್ಚ್ನಲ್ಲಿ 2ನೇ ಬಾರಿಗೆ ಎಸ್ಬಿಐ ಡಿಆರ್ಟಿಗೆ ದೂರು ನೀಡಿತ್ತು. ವಿಜಯ್ ಮಲ್ಯ ಅವರ  ಪಾಸ್ಪೋರ್ಟ್ ರದ್ದುಪಡಿಸುವಂತೆ, ಮಲ್ಯ ಅವರ ಸಂಪೂರ್ಣ ಆಸ್ತಿಪಾಸ್ತಿಗಳ ವಿವರಗಳನ್ನು ನೀಡುವಂತೆ ಕೋರಿತ್ತು. ಕಳೆದ ವರ್ಷ ಮಾರ್ಚ್ 2ರಂದು ಮಲ್ಯಾ ಭಾರತ ತೊರೆದು ಬ್ರಿಟನ್ಗೆ ತೆರಳಿದ್ದರು.
2009: ಬೆಳಗಾವಿ ಗಡಿ ವಿವಾದವನ್ನು ಪದೇ ಪದೇ ಕೆದಕದಂತೆ ಮಹಾರಾಷ್ಟ್ರಕ್ಕೆ ಕೇಂದ್ರ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಆಗ್ರಹಿಸಿದರು. 'ಕರ್ನಾಟಕದ ಒಂದಿಂಚು ನೆಲವನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಗಡಿವಿಚಾರದಲ್ಲಿ ಮಹಾಜನ ವರದಿಯೇ ಅಂತಿಮ ಎಂದು ಒಪ್ಪಿಕೊಂಡ ಮೇಲೆ ಅದರ ಅನುಷ್ಠಾನಕ್ಕೆ ಸೂಕ್ತ ನಿರ್ದೇಶನ ನೀಡಬೇಕಾದ್ದು ಕೇಂದ್ರದ ಜವಾಬ್ದಾರಿ. ಕರ್ನಾಟಕದಲ್ಲಿ ಯಾವ ಭಾಷೆಯ ಬಂಧುಗಳಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಮಹಾರಾಷ್ಟ್ರದಲ್ಲೂ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದ್ದು ಅಲ್ಲಿನ ಸರ್ಕಾರದ ಹೊಣೆ' ಎಂದು ಹೇಳಿದರು.

2009: ಪುಟ್ಟುಕುಡಿಯೂರುಪ್ಪುವಿನ ಪೂರ್ವ ಮತ್ತು ವಾಯವ್ಯ ಭಾಗದ ಹಲವು ಎಲ್‌ಟಿಟಿಇ ನೆಲೆಗಳು ಸೇನೆಯ ವಶವಾಗಿವೆ. ಅಪಾರ ಸಂಖ್ಯೆಯ ಎಲ್‌ಟಿಟಿಇ ಉಗ್ರರು ಸತ್ತಿರುವ ಅಥವಾ ಸ್ಥಳದಿಂದ ಕಾಲ್ಕಿತ್ತಿರುವ ಸಂಭವ ಇದೆ ಎಂದು ಶ್ರಿಲಂಕಾ ಸೇನೆ ಪ್ರಕಟಿಸಿತು. ದೇಶದ ಈಶಾನ್ಯ ಭಾಗದ ಮುಲೈತೀವು ಜಿಲ್ಲೆಯ ಎಲ್‌ಟಿಟಿಇ ನೆಲೆಗಳತ್ತ ನುಗ್ಗಿದ ಶ್ರೀಲಂಕಾ ಸೇನೆ ಹಲವು ನೆಲೆಗಳನ್ನು ತನ್ನ ವಶ ಮಾಡಿಕೊಂಡಿತು. ಈ ಪೈಕಿ ಗುಡಿಸಲುಗಳ ನಡುವೆ ನಿರ್ಮಿಸಿದ್ದ ಎಲ್‌ಟಿಟಿಇ ನಾಯಕ ವಿ. ಪ್ರಭಾಕರನ್ನನ ಹವಾನಿಯಂತ್ರಿತ ಬಂಕರ್ ಕೂಡಾ ಸೇರಿತ್ತು.

2009: ಜಾರ್ಖಂಡಿನಲ್ಲಿ ಮುಖ್ಯಮಂತ್ರಿ ಶಿಬು ಸೊರೇನ್ ಉಪಚುನಾವಣೆಯಲ್ಲಿ ಸೋಲನುಭವಿಸಿದ ಕಾರಣ ಉದ್ಭವಿಸಿದ ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ವಿಧಿಸಲು ನಿರ್ಧರಿಸಿತು. ಕೇಂದ್ರ ಸಂಪುಟವು ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಸೇರಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ವಿಧಿಸುವಂತೆ ಮತ್ತು ವಿಧಾನಸಭೆಯನ್ನು ಅನಿರ್ದಿಷ್ಟಾವಧಿಯವರೆಗೆ ಅಮಾನತಿನಲ್ಲಿಡುವಂತೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಲು ತೀರ್ಮಾನಿಸಿತು. ಸೊರೇನ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರದ ಆರು ತಿಂಗಳಲ್ಲಿ ಉಪಚುನಾವಣೆ ಮೂಲಕ ವಿಧಾನಸಭೆಗೆ ಆಯ್ಕೆಯಾಗಲು ವಿಫಲರಾದ ಹಿನ್ನೆಲೆಯಲ್ಲಿ ಜನವರಿ 12ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಆದರೆ ಆನಂತರ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಮಿತ್ರಪಕ್ಷಗಳಲ್ಲಿ ಒಮ್ಮತ ಮೂಡದೆ ರಾಜಕೀಯ ಅನಿಶ್ಚಿತತೆ ಉಂಟಾದ ಪರಿಣಾಮ ರಾಜ್ಯಪಾಲ ಸೈಯದ್ ಸಿಬ್ತೆ ರಜೀ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ವಿಧಿಸಲು ಭಾನುವಾರ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು.

2009: ಲೋಕಸಭೆ ಚುನಾವಣೆ ಹತ್ತಿರವಾದ ಬೆನ್ನಲ್ಲೇ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಬಿಜೆಪಿಗೆ ರಾಜೀನಾಮೆ ಸಲ್ಲಿಸಿ, ಇನ್ನೆಂದಿಗೂ ಆ ಪಕ್ಷಕ್ಕೆ ಮರಳಿ ಮರಳುವುದಿಲ್ಲ ಎಂದು ಘೋಷಿಸಿದರು. ಬೇರೆ ಪಕ್ಷ ಸೇರುವ ಬಗ್ಗೆಯಾಗಲೀ, ಹೊಸ ಪಕ್ಷ ಕಟ್ಟುವ ಬಗ್ಗೆಯಾಗಲೀ ಪ್ರತಿಕ್ರಿಯೆ ನೀಡದ ಕಲ್ಯಾಣ್ ಸಿಂಗ್, ಬಿಜೆಪಿ ತಮ್ಮನ್ನು ತೀವ್ರವಾಗಿ ನಿರ್ಲಕ್ಷಿಸಿತ್ತು, ಪಕ್ಷದಲ್ಲಿ ಅವಮಾನ ತಾಳಲಾರದೆ ರಾಜಿನಾಮೆ ಸಲ್ಲಿಸಿರುವುದಾಗಿ ಹೇಳಿದರು.

2008: ಪರ್ತಿನ ಡಬ್ಲ್ಯೂಸಿಎಯಲ್ಲಿ ಮೂರನೇ ಕ್ರಿಕೆಟ್ ಟೆಸ್ಟಿನ ನಾಲ್ಕನೇ ದಿನವೇ ಭಾರತವು 72 ರನ್ನುಗಳ ಅಂತರದಿಂದ ಅತಿಥೇಯ ಆಸ್ಟ್ರೇಲಿಯಾವನ್ನು ಪರಾಭವಗೊಳಿಸಿತು. ಇದು ಭಾರತದ `ಸಿಡ್ನಿ' ನೋವನ್ನು ಮರೆಸಿತು. ಭಾರತ ತಂಡ ಒಡ್ಡಿದ 413 ರನ್ನುಗಳ ಸವಾಲನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು 340 ರನ್ನುಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಈ ವಿಜಯದಿಂದ ಭಾರತವು ನಾಲ್ಕು ಟೆಸ್ಟ್ ಸರಣಿಯಲ್ಲಿ ಅಂತರವನ್ನು 2-1ಕ್ಕೆ ಇಳಿಸಿತು. ಪಂದ್ಯ ಪುರುಷೋತ್ತಮನಾಗಿ ಇರ್ಫಾನ್ ಪಠಾಣ್ ಅವರನ್ನು ಆರಿಸಲಾಯಿತು.

2008: ರಾಜ್ಯಸಭೆ ಸದಸ್ಯ ಶಾಂತಾರಾಮ ನಾಯಕ್ ಅವರು, ಅಖಿಲ ಭಾರತ ಕೊಂಕಣಿ ಪರಿಷತ್ತಿನ ಅಧ್ಯಕ್ಷರಾಗಿ ಚುನಾಯಿತರಾದರು. ದಕ್ಷಿಣ ಗೋವೆಯ ಕುಂಕಳೀಮಿನಲ್ಲಿ ಜನಿಸಿದ ನಾಯಕ್ ಅವರು ಕಲೆ ಮತ್ತು ಕಾನೂನು ವಿಷಯಗಳಲ್ಲಿ ಪದವೀಧರರು. ಗೋವೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕೊಂಕಣಿಗೆ ಶಾಸನಬದ್ಧ ಮಾನ್ಯತೆಗಾಗಿ ನಡೆದ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. 2006ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ಶಾಂತಾರಾಮ್ ಅವರು ಲೋಕಸಭೆ ಸದಸ್ಯರಾಗಿ 1989ರಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಕೊಂಕಣಿಯಲ್ಲಿ ಮಾತನಾಡಿ ಇತಿಹಾಸ ನಿರ್ಮಿಸಿದ್ದರು.

2008: ಸರ್ಕಾರ ಮತ್ತು ಮಹಾನಗರ ಪಾಲಿಕೆಗಳ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ವಿಮೆ ಒದಗಿಸುವ `ಆರೋಗ್ಯ ಚೇತನ' ಎಂಬ ವಿಶಿಷ್ಟ ಯೋಜನೆಗೆ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಕೇಂದ್ರದ ಮಾಜಿ ಸಚಿವ ಅನಂತಕುಮಾರ ಅವರ ತಾಯಿ ಗಿರಿಜಾ ಶಾಸ್ತ್ರಿ ಅವರ ಸ್ಮರಣಾರ್ಥ ಸ್ಥಾಪಿಸಿರುವ `ಅದಮ್ಯ ಚೇತನ' ಸಂಸ್ಥೆಯು ದಿ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪೆನಿಯ ಸಹಯೋಗದೊಂದಿಗೆ ಈ ವಿಮಾ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿತು. ಈ ಯೋಜನೆಯಡಿಯಲ್ಲಿ ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ 35 ರೂಪಾಯಿಯಂತೆ ವಿಮಾ ಕಂತನ್ನು ನಿಗದಿ ಮಾಡಲಾಯಿತು. ಸದ್ಯ ಸಂಸ್ಥೆಯು 1ರಿಂದ 10ನೇ ತರಗತಿವರೆಗಿನ ಹತ್ತು ಸಾವಿರ ಮಕ್ಕಳಿಗೆ ಉಚಿತವಾಗಿ ಈ ವಿಮಾ ಸೌಲಭ್ಯ ಕಲ್ಪಿಸಿತು. ಮುಂದಿನ ದಿನಗಳಲ್ಲಿ ಸರ್ಕಾರಿ/ ಪಾಲಿಕೆ ಶಾಲೆಗಳ ಮಕ್ಕಳು ತಲಾ 10 ರೂಪಾಯಿ ನೀಡಿದರೆ ಉಳಿದ ಹಣವನ್ನು ಸಂಸ್ಥೆಯೇ ಭರಿಸುವುದು. ಸಂಸ್ಥೆಯು ಈಗಾಗಲೇ ಅನ್ನಪೂರ್ಣ ಯೋಜನೆ ಅಡಿಯಲ್ಲಿ ಊಟ ನೀಡುತ್ತಿರುವ ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಮತ್ತು ರಾಜಸ್ಥಾನದ ಜೋಧ್ ಪುರದ ವಿವಿಧ ಶಾಲೆಗಳ ಎರಡೂವರೆ ಲಕ್ಷ ಮಕ್ಕಳನ್ನು ಆರೋಗ್ಯ ವಿಮೆ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗುವುದು. ಖಾಸಗಿ ಇಂಗ್ಲಿಷ್ ಮಾಧ್ಯಮ ಸೇರಿದಂತೆ ಯಾವುದೇ ಶಾಲಾ ಮಕ್ಕಳು ಈ ವಿಮಾ ವ್ಯಾಪ್ತಿಗೆ ಬರಬಹುದು. ಅವರು 35 ರೂಪಾಯಿ ವಿಮಾ ಕಂತು ಪಾವತಿಸಬೇಕು. ವಿಮಾ ಪಾಲಿಸಿ ಪಡೆದುಕೊಂಡ ವಿದ್ಯಾರ್ಥಿಗಳು ಬೆಂಗಳೂರಿನ 369 ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ತಲಾ 10 ಸಾವಿರ ರೂಪಾಯಿವರೆಗಿನ ವೆಚ್ಚದ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಬಹುದು. 10 ಸಾವಿರಕ್ಕಿಂತ ಹೆಚ್ಚು ವೆಚ್ಚದ ಚಿಕಿತ್ಸೆ ಬೇಕಾಗುವ ಮಕ್ಕಳಿಗೆ ಹೆಚ್ಚುವರಿ ಸಹಾಯ ಮಾಡಲು ಸಂಸ್ಥೆಯು ಹತ್ತು ಲಕ್ಷ ರೂಪಾಯಿ ನಿಧಿಯನ್ನು ಸ್ಥಾಪಿಸಿದೆ.

2008: ಮೆಲ್ಬೋರ್ನಿನ ರಾಡ್ ಲೆವರ್ ಎರಿನಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸಿನ ಮೂರನೇ ಸುತ್ತಿನ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಅಮೆರಿಕದ ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರು 7-6(7-0), 6-4ರಲ್ಲಿ ಮೂವತ್ತೊಂದನೇ ಶ್ರೇಯಾಂಕದ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ಪರಾಭವಗೊಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಪಂದ್ಯದಲ್ಲಿ ವಿಲಿಯಮ್ಸ್ ಅವರು ಏಳು ಬಾರಿ ಏಸ್ ಸಿಡಿಸಿದರೆ, ಭಾರತದ ಹುಡುಗಿ ಕೇವಲ ಒಂದು ಬಾರಿ ಮಾತ್ರ ಈ ಸಾಧನೆ ಮಾಡಿದರು. ಇದರೊಂದಿಗೆ ಸಾನಿಯಾ ಮಿರ್ಜಾ ಅವರ ಆಸ್ಟ್ರೇಲಿಯಾ ಓಪನ್ ಟೆನಿಸ್ ಚಾಂಪಿಯನ್ ಶಿಪ್ಪಿನ ಸಿಂಗಲ್ಸ್ ವಿಭಾಗದಲ್ಲಿನ ಓಟಕ್ಕೆ ತೆರೆ ಬಿದ್ದಿತು.

2008: ಸಂಗ್ರಾಜ್ ಥೈರೋ ಎಂಬ ಬೌದ್ಧ ಭಿಕ್ಷುವೊಬ್ಬರ ಕೊಲೆ ನಡೆದ ಒಂದು ವಾರದ ಬಳಿಕ ಮುಂಬೈಯ ಗೋವಂದಿ ಪ್ರದೇಶದಲ್ಲಿ ಇನ್ನೊಬ್ಬ ಬೌದ್ಧ ಭಿಕ್ಷುವಿನ ಶವ ಪತ್ತೆಯಾಯಿತು. ಭದಂತ್ ಕಶ್ಯಪ್ ಹೆಸರಿನ ಬೌದ್ಧ ಭಿಕ್ಷು ವಿಷ ಸೇವಿಸಿ ತಮ್ಮ ಬದುಕು ಕೊನೆಗೊಳಿಸಿಕೊಂಡರು. ತನ್ನ ಸಹಭಿಕ್ಷುವಿನ ಮರಣದ ಬಳಿಕ ತನಿಖೆ ಬಗ್ಗೆ ಅತೃಪ್ತರಾಗಿ, ಭ್ರಮನಿರಸನಗೊಂಡಿರುವುದಾಗಿ ಈ ಬೌದ್ಧ ಭಿಕ್ಷು ಆತ್ಮಹತ್ಯೆಗೆ ಮುಂಚೆ ಬರೆದಿಟ್ಟ ಪತ್ರದಲ್ಲಿ ತಿಳಿಸಿದ್ದರು.

2008: ಬಂಡಾಯ ಎದ್ದಿದ್ದ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಶಾಸಕರ ಎಲ್ಲ ಷರತ್ತುಗಳಿಗೆ ಕಾಂಗ್ರೆಸ್ ಹೈಕಮಾಂಡ್ ತಲೆಬಾಗಿದ್ದರಿಂದ ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ನೇತೃತ್ವದ ಸರ್ಕಾರ ನಾಲ್ಕು ದಿನಗಳಿಂದ ಎದುರಿಸುತ್ತಿದ್ದ ಪತನದ ಭೀತಿಯಿಂದ ಪಾರಾಯಿತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಂಡಾಯ ಎದ್ದಿದ್ದ ಎನ್ಸಿಪಿಯ ಶಾಸಕರ ಷರತ್ತುಗಳ ಈಡೇರಿಕೆಗೆ ಒಪ್ಪಿದರು.

2008: ಸಾರ್ವಜನಿಕ ಆರಂಭಿಕ ಕೊಡುಗೆ (ಐಪಿಒ)ಯ ಮೂಲಕ ಅತಿ ಹೆಚ್ಚು ಬಂಡವಾಳ ಸಂಗ್ರಹಿಸಿ ಜಾಗತಿಕ ಇತಿಹಾಸ ನಿರ್ಮಿಸಿದ ರಿಲಯನ್ಸ್ ಪವರ್ ಲಿಮಿಟೆಡ್, ಪ್ರತಿ ಷೇರು ದರವನ್ನು ರೂ 450ಕ್ಕೆ ನಿಗದಿ ಗೊಳಿಸಿತು. ಸಾಮಾನ್ಯ ಹೂಡಿಕೆದಾರರಿಗೆ ಪ್ರತಿ ಷೇರಿಗೆ ರೂ 20 ರಿಯಾಯಿತಿ ಘೋಷಣೆ ಮಾಡಲಾಯಿತು. ಇದರಿಂದಾಗಿ ಪ್ರತಿ ಷೇರಿಗೆ 430 ರೂಪಾಯಿ ನಿಗದಿಯಾಯಿತು.

2008: ಕೋಲ್ಕತದ ಭೀರ್ ಭುಮ್ ಜಿಲ್ಲೆಯ ಶಿಯುರಿ ಉಪ ವಿಭಾಗದ ಮೊಹಮ್ಮದ್ ಬಜಾರ್ ಪ್ರದೇಶಕ್ಕೆ ಕೋಳಿಜ್ವರ ಹೊಸದಾಗಿ ಹರಡಿತು. ಜಿಲ್ಲೆಯಲ್ಲಿ ಇಲ್ಲಿವರೆಗೆ 80,000 ಕೋಳಿಗಳನ್ನು ಕೊಂದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿದವು.

2007: ವಿಶ್ವಸಂಸ್ಥೆಯಲ್ಲಿನ ಬಾಂಗ್ಲಾದೇಶದ ಕಾಯಂ ಪ್ರತಿನಿಧಿ ಇಫ್ತಿಕರ್ ಅಹ್ಮದ್ ಚೌಧರಿ ಅವರನ್ನು ರಾಷ್ಟ್ರದ ಉಸ್ತುವಾರಿ ಸರ್ಕಾರದ ಸಲಹೆಗಾರರಾಗಿ ನೇಮಿಸಲಾಯಿತು.

2007: ಮುಂಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಪ್ರವಾಸ ಮಾಡಿದ್ದ ಖ್ಯಾತ ಉದ್ಯಮಿ ನುಸ್ಲಿ ವಾಡಿಯಾ ಅವರ ಬ್ಯಾಗಿನಿಂದ ಪಿಸ್ತೂಲು ಮತ್ತು 30 ಗುಂಡುಗಳನ್ನು ದುಬೈ ವಿಮಾನ ನಿಲ್ದಾಣದ ಪೊಲೀಸರು ವಶಪಡಿಸಿಕೊಂಡರು.

2007: ಸೆಲೆಬ್ರಿಟಿ ಬಿಗ್ ಬ್ರದರ್ ಕಾರ್ಯಕ್ರಮದ ಅಂಗವಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಜೊತೆಗೆ ಒಂದೇ ಕೋಣೆಯಲ್ಲಿದ್ದ ಸಹಸ್ಪರ್ಧಿಗಳಾದ ಜೇಡ್ ಗೂಡಿ ಮತ್ತು ಡೇನಿಯಲ್ ಲಾಯ್ಡ್ ಅವರು ಜನಾಂಗೀಯ ನಿಂದನೆ ಮಾಡಿದ್ದಕ್ಕಾಗಿ ಶಿಲ್ಪಾಶೆಟ್ಟಿ ಅವರ ಕ್ಷಮೆ ಕೋರಿದರು.

2007: ಮೋನಾಲಿಸಾ ಅವರು 1542ರ ಜುಲೈ 15ರಂದು ಮೃತಳಾಗಿದ್ದು, ಆಕೆ ತನ್ನ ಅಂತಿಮ ದಿನಗಳನ್ನು ಕಳೆದ ಸೆಂಟ್ರಲ್ ಫ್ಲಾರೆನ್ಸಿನಲ್ಲಿ ಆಕೆಯನ್ನು ಸಮಾಧಿ ಮಾಡಲಾಯಿತು. ಇದಕ್ಕೆ ಸಂಬಂಧಿಸಿದ ದಾಖಲೆ ತಮಗೆ ಲಭಿಸಿದೆ ಎಂದು ಮೋನಾಲಿಸಾ ಕುರಿತು ವಿಶೇಷ ಅಧ್ಯಯನ ನಡೆಸಿದ ಗಿಯಾಸುಪ್ಪೆ ಪಲ್ಲಾಂಟಿ ಪ್ರಕಟಿಸಿದರು. ಫ್ಲಾರೆನ್ಸಿನ ಇಗರ್ಜಿಯೊಂದರಲ್ಲಿ ಈ ದಾಖಲೆ ಲಭಿಸಿರುವುದಾಗಿ ಅವರು ಹೇಳಿದರು.

2006: ಜನವರಿ 27 ಅಥವಾ ಅದಕ್ಕೂ ಮೊದಲು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕು ಎಂಬುದಾಗಿ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ಸೂಚನೆ ನೀಡಿರುವುದಾಗಿ ರಾಜ್ಯಪಾಲ ಟಿ.ಎನ್. ಚತುರ್ವೇದಿಪ್ರಕಟಿಸಿದರು.

2006: ರೋಗ ನಿರ್ಧಾರ ಹಾಗೂ ಚಿಕಿತ್ಸಾ ಪದ್ಧತಿ ಸುಧಾರಣೆಯಲ್ಲಿ ಕಂಪ್ಯೂಟರೀಕೃತ ಮಾಹಿತಿ ಬಳಸುವ ಹೊಸ ವಿಧಾನ ಅಭಿವೃದ್ಧಿ ಪಡಿಸಿದ್ದಕ್ಕಾಗಿ ಭಾರತಿಯ ಸಂಜಾತ ಅಮೆರಿಕದ ವಿಜ್ಞಾನಿ ಆರ್. ಭರತ್ ರಾವ್ ಅವರಿಗೆ ಸೀಮೆನ್ಸಿನ ವರ್ಷದ ಸಂಶೋಧಕ ಪ್ರಶಸ್ತಿ ಲಭಿಸಿತು.

2000: ಫಕ್ರುದ್ದೀನ್ ತಾಕುಲ್ಲಾ ರಾಜಧಾನಿ ಎಕ್ಸ್ ಪ್ರೆಸ್ ಮೂಲಕ ಮುಂಬೈಯಿಂದ ದೆಹಲಿಗೆ ಪ್ರಯಾಣ ಬೆಳೆಸಿದರು. ಈ ಪ್ರಯಾಣಕ್ಕೆ ಅವರು ಬಳಸಿದ್ದು 26 ವರ್ಷಗಳ ಹಿಂದೆ 1973ರ ಜುಲೈ 15ರಂದು ತಾವು ಖರೀದಿಸಿದ್ದ ಟಿಕೆಟನ್ನು! ಭಾರತೀಯ ರೈಲ್ವೆಯು ಒದಗಿಸಿದ್ದ `ಮಿತಿ ರಹಿತ ಬುಕ್ಕಿಂಗ್' ಸವಲತ್ತನ್ನು ಬಳಸಿಕೊಂಡು ಭಾರತದ 50ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ ಈ ಟಿಕೆಟನ್ನು ಫಕ್ರುದ್ದೀನ್ ಖರೀದಿಸಿದ್ದರು.. ರೈಲ್ವೆ ಇಲಾಖೆಯು ಈಗ ಈ ಸವಲತ್ತುನ್ನು ಹಿಂತೆಗೆದುಕೊಂಡಿದೆ.

1990: ಭಾರತದ ಆಧ್ಯಾತ್ಮಿಕ ಧುರೀಣ ಭಗವಾನ್ ಶ್ರೀ ರಜನೀಶ್ ತಮ್ಮ 58ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನರಾದರು. ತಮ್ಮ ಬೋಧನೆಗಳಿಂದಾಗಿ ತೀವ್ರ ವಿವಾದಗಳಿಗೂ ಕಾರಣರಾಗಿದ್ದ ರಜನೀಶ್ ಅವರು ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಹೆಸರನ್ನು `ಓಶೊ' ಎಂಬುದಾಗಿ ಬದಲಾಯಿಸಿಕೊಂಡಿದ್ದರು.

1937: ಲಾಸ್ ಏಂಜೆಲಿಸ್ನಿಂದ ನ್ಯೂಜೆರ್ಸಿಯ ನ್ಯೂಯಾರ್ಕಿಗೆ 7 ಗಂಟೆ 28 ನಿಮಿಷ, 25 ಸೆಕೆಂಡುಗಳಲ್ಲಿ ತನ್ನ ಮಾನೋಪ್ಲೇನನ್ನು ಹಾರಿಸುವ ಮೂಲಕ ಲಕ್ಷಾಧೀಶ ಹೊವರ್ಡ್ ಹಗ್ಸ್ ಖಂಡಾಂತರ ವಿಮಾನ ಹಾರಾಟ ದಾಖಲೆ ನಿರ್ಮಿಸಿದರು.

1931: ಲಂಡನ್ನಿನಲ್ಲಿ ಪ್ರಥಮ ದುಂಡುಮೇಜಿನ ಪರಿಷತ್ತು ಮುಕ್ತಾಯಗೊಂಡಿತು.

1920: ಜೇವಿಯರ್ ಪೆರೆಜ್ ಡಿ ಕ್ಯೂಲರ್ ಹುಟ್ಟಿದ ದಿನ. ಪೆರುವಿನ ರಾಜತಂತ್ರಜ್ಞರಾದ ಇವರು 1982-91ರ ಅವದಿಯಲ್ಲಿ ವಿಶ್ವಸಂಸ್ಥೆಯ 5ನೇ ಪ್ರಧಾನ ಕಾರ್ಯದರ್ಶಿಯಾಗಿದರ್ಶಿಯಾಗಿದ್ದರು..

1905: ಮಹರ್ಷಿ ದೇಬೇಂದ್ರನಾಥ ಟ್ಯಾಗೋರ್ (1817-1905) ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು. ರಬೀಂದ್ರನಾಥ ಟ್ಯಾಗೋರ್ ಅವರ ತಂದೆಯಾದ ದೇಬೇಂದ್ರನಾಥ ಟ್ಯಾಗೋರ್ ವಿದ್ವಾಂಸ ಹಾಗೂ ಧಾರ್ಮಿಕ ಸುಧಾರಕರಾಗಿದ್ದವರು.

1736: ಸ್ಕಾಟಿಷ್ ಸಂಶೋಧಕ ಜೇಮ್ಸ್ ವಾಟ್ (1736-1819) ಹುಟ್ಟಿದ. ಈತ ಸಂಶೋಧಿಸಿದ ಹಬೆ ಯಂತ್ರ (ಸ್ಟೀಮ್ ಎಂಜಿನ್) ಕೈಗಾರಿಕಾ ಕ್ರಾಂತಿಗೆ ಮಹತ್ವದ ಕೊಡುಗೆ ನೀಡಿತು.

No comments:

Post a Comment