ಇಂದಿನ ಇತಿಹಾಸ History
Today
ಜೂನ್ 20
2020: ನವದೆಹಲಿ: ಭಾರತ ಮತ್ತು ಚೀನಾ ನಡುವೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಗಡಿ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಯಾವುದೇ ತುರ್ತು ಸ್ಥಿತಿ ಎದುರಿಸಲು ಭಾರತದ ಪಡೆಗಳು ಸನ್ನದ್ಧವಾಗಿವೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ 2020 ಜೂನ್ 20ರ ಶನಿವಾರ ಹೇಳಿದರು. ಹೈದರಾಬಾದಿನಲ್ಲಿ ಜಂಟಿ ತರಬೇತಿ ಮುಕ್ತಾಯ ಸಮಾರಂಭದಲ್ಲಿ ಮಾತನಾಡುತ್ತಿದ್ದ ಭದೌರಿಯಾ, ’ನಾವು ಸಂಪೂರ್ಣ ಸಜ್ಜಾಗಿದ್ದೇವೆ ಮತ್ತು ಯಾವುದೇ ತುರ್ತು ಪರಿಸ್ಥಿತಿ ಎದುರಿಸುವ ಸಲುವಾಗಿ ಸೂಕ್ತ ಸ್ಥಳಗಳಲ್ಲಿ ಪಡೆಗಳನ್ನು ನಿಯೋಜಿಸಿದ್ದೇವೆ. ನಾವು ತಕ್ಕ ಶಾಸ್ತಿ ಮಾಡುತ್ತೇವೆ, ನಮ್ಮ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂಬುದಾಗಿ ನಾನು ದೇಶಕ್ಕೆ ಭರವಸೆ ನೀಡುತ್ತೇನೆ’ ಎಂದು ಹೇಳಿದರು. ಕಾರ್ಯಾಚರಣಾ ಸಿದ್ಧತೆಗಳ ಪರಿಶೀಲನೆಗಾಗಿ ಏರ್ ಚೀಫ್ ಮಾರ್ಷಲ್ ಭದೌರಿಯಾ ಅವರು ಲಡಾಖ್ ಮತ್ತು ಕಾಶ್ಮೀರದ ಮುಂಚೂಣಿಯ ನೆಲೆಗಳಿಗೆ ಬುಧವಾರ ಮತ್ತು ಗುರುವಾರ ಸದ್ದುಗದ್ದಲವಿಲ್ಲದ ಭೇಟಿ ನೀಡಿದ್ದರು. ವಾಯುಪಡೆಯು ತನ್ನ ಮುಂಚೂಣಿಯ ಸಮರ ವಿಮಾನಗಳು ಮತ್ತು ಹೆಲಿಕಾಪ್ಟರುಗಳನ್ನು ಚೀನಾಕ್ಕೆ ಎದುರಾಗಿರುವ ಮುಂಚೂಣಿಯ ನೆಲೆಗಳತ್ತ ರವಾನಿಸಿದೆ. ಸುಖೋಯ್-೩೦ ಎಂಕೆಐ, ಮಿಗ್-೨೯ ಮತ್ತು ಜಾಗ್ವಾರ್ ಇವುಗಳಲ್ಲಿ ಸೇರಿವೆ. ಭಾರತೀಯ ವಾಯುಪಡೆಯು (ಐಎಎಫ್) ಅಪಾಚೆ ಮತ್ತು ಚಿನೂಕ್ ಹೆಲಿಕಾಪ್ಟರುಗಳನ್ನು ಹೊಸದಾಗಿ ತನ್ನ ಬತ್ತಳಿಕೆಗೆ ಸೇರ್ಪಡೆ ಮಾಡಿದ್ದು, ಇವುಗಳು ಕೂಡಾ ಲಡಾಖ್ ಬಾನಂಗಳದಲ್ಲಿ ಕಂಡು ಬಂದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಚೀನಾದ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ವಿಚಾಟ್, ಪ್ರಸ್ತುತ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತೀಯ ರಾಯಭಾರ ಕಚೇರಿಯ (ಇಒಐ) ನವೀಕೃತ ಮಾಹಿತಿಗಳನ್ನು 2020 ಜೂನ್ 20ರ ಶನಿವಾರ ಕಿತ್ತು ಹಾಕಿದೆ. ಇದರಲ್ಲಿ ೨೦ ಭಾರತೀಯ ಸೇನಾ ಸೈನಿಕರು ಸಾವನ್ನಪ್ಪಿದ ಘರ್ಷಣೆಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ನೀಡಿದ ಹೇಳಿಕೆ ಕೂಡಾ ಸೇರಿದೆ. ಸಾಮಾಜಿಕ ಜಾಲತಾಣದ ಪೋಸ್ಟ್ಗಳನ್ನು ತೆಗೆದುಹಾಕಲು ನೀಡಲಾದ ಕಾರಣಗಳಲ್ಲಿ ರಾಜ್ಯ ರಹಸ್ಯಗ ಬಹಿರಂಗ ಪಡಿಸಿದ್ದು ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟು ಮಾಡುವಂತಹುದು ಎಂಬ ಕಾರಣಗಳು ಬಹುಮುಖ್ಯ ಕಾರಣಗಳಾಗಿವೆ. ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ವಿಚಾಟ್ನಲ್ಲಿ ಪ್ರಕಟವಾದ ನವೀಕೃತ ಮಾಹಿತಿಗಳಲ್ಲಿ ಭಾರತ-ಚೀನಾ ಗಡಿ ಪರಿಸ್ಥಿತಿ ಕುರಿತು ಮೋದಿಯವರ ಹೇಳಿಕೆ, ಟೀಕೆಗಳು, ಗುರುವಾರ ನಡೆದ ಭಾರತೀಯ ಮತ್ತು ಚೀನಾದ ವಿದೇಶಾಂಗ ಸಚಿವರ ನಡುವಣ ದೂರವಾಣಿ ಕರೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರರ ಹೇಳಿಕೆ ಸೇರಿದ್ದವು. ಒಂದು ದಿನ ಮುಂಚಿತವಾಗಿ, ಎಂಇಎ ವಕ್ತಾರರ ಅದೇ ಹೇಳಿಕೆಯನ್ನು ಅಳಿಸಿದ ನಂತರ ಇಒಐ ತನ್ನ ಚೀನೀ ಟ್ವಿಟರ್ ತರಹದ ವೀಬೊ ಖಾತೆಯಲ್ಲಿ ಸ್ಪಷ್ಟೀಕರಣವನ್ನು ನೀಡಬೇಕಾಗಿ ಬಂದಿತ್ತು. ರಾಯಭಾರ ಕಚೇರಿಯ ಅಧಿಕಾರಿಗಳು ಅದರ ಓದುಗರಿಗೆ ಈ ಪೋಸ್ಟ್ನ್ನು ತೆಗೆದುಹಾಕಿಲ್ಲ ಎಂದು ಸ್ಪಷ್ಟಪಡಿಸಿ, ಚೀನೀ ಭಾಷೆಯಲ್ಲಿ ಹೇಳಿಕೆಯ ಸ್ಕ್ರೀನ್ ಶಾಟ್ ಅನ್ನು ಮರು ಪ್ರಕಟಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಯಾರೊಬ್ಬರೂ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿಲ್ಲ ಅಥವಾ ಪ್ರಸ್ತುತ ಭಾರತೀಯ ಪ್ರದೇಶದಲ್ಲಿ ಯಾರೂ ಇಲ್ಲ ಮತ್ತು ಭಾರತದ ಯಾವುದೇ ಠಾಣೆಯನ್ನೂ (ಪೋಸ್ಟ್) ಯಾರೂ ವಶಪಡಿಸಿಕೊಂಡಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸರ್ವ ಪಕ್ಷ ಸಭೆಯಲ್ಲಿ ನೀಡಿದ ಹೇಳಿಕೆ ಬಗ್ಗೆ ಕಟಕಿಯಾಡಿದ ಕಾಂಗ್ರೆಸ್ ಟೀಕೆಗಳನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯವು 2020 ಜೂನ್ 20ರ ಶನಿವಾರ ತರಾಟೆಗೆ ತೆಗೆದುಕೊಂಡಿತು. ಪ್ರಧಾನಿಯವರ ಹೇಳಿಕೆ ಹೊರಬಂದ ಕ್ಷಣದಿಂದ ಕಾಂಗ್ರೆಸ್ ನಾಯಕರು ಪ್ರಧಾನಿಯವರನ್ನು ಪ್ರಶ್ನಿಸಿ ಸರಣಿ ಟ್ವೀಟ್ಗಳನ್ನು ಮಾಡುತ್ತಿದ್ದಾರೆ. ಹಿಂಸಾತ್ಮಕ ಘರ್ಷಣೆ ಸಂಭವಿಸಿದ ಗಲ್ವಾನ್ ಪ್ರದೇಶ ಭಾರತೀಯ ಪ್ರದೇಶವಾಗಿರಲಿಲ್ಲವೇ? ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ. ಪ್ರಧಾನಿಯವರ ಹೇಳಿಕೆಯನ್ನು ಮೊತ್ತ ಮೊದಲನೆಯವರಾಗಿ ಪ್ರಶ್ನಿಸಿದ ಕಾಂಗ್ರೆಸ್ಸಿನ ಹಿರಿಯ ನಾಯಕ ರಾಹುಲ್ ಗಾಂಧಿ, ’ಪ್ರಧಾನಿಯವರು ಭಾರತೀಯ ಪ್ರದೇಶವನ್ನು ಚೀನೀ ದಾಳಿಗೆ ಒಪ್ಪಿಸಿದ್ದಾರೆ. ಭೂಮಿಯು ಚೀನೀಯರದ್ದಾಗಿದ್ದರೆ ನಮ್ಮ ಸೈನಿಕರು ಏಕೆ ಹತರಾದರು? ಅವರನ್ನು ಎಲ್ಲಿ ಕೊಲ್ಲಲಾಯಿತು?’ ಎಂದು ಟ್ವೀಟ್ ಮಾಡಿದರು. ಈ ಟೀಕೆಯನ್ನು ’ಪ್ರಧಾನಿ ಮೋದಿ ಅವರ ಹೇಳಿಕೆಗಳಿಗೆ ತಪ್ಪು ಅರ್ಥ ನೀಡಲು ನಡೆಸಲಾಗಿರುವ ಕುಚೇಷ್ಟೆಯ ಯತ್ನ’ ಎಂದು ಸರ್ಕಾರದ ಹೇಳಿಕೆ ಬಣ್ಣಿಸಿತು. ಮೋದಿಯವರ ಹೇಳಿಕೆಯು ೨೦ ಮಂದಿ ಭಾರತೀಯ ಸೈನಿಕರನ್ನು ಹುತಾತ್ಮರನ್ನಾಗಿಸಿರುವ ಭಾರತ ಮತ್ತು ಚೀನೀ ಸೈನಿಕರ ಮಧ್ಯೆ ಗಲ್ವಾನಿನಲ್ಲಿ ನಡೆದ ಮುಖಾಮುಖಿ ಬಗ್ಗೆ ಬೆಳಕು ಚೆಲ್ಲಿತ್ತು ಎಂದು ಪ್ರಧಾನ ಮಂತ್ರಿಗಳ ಕಚೇರಿ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೆಹಲಿಯ ಪ್ರತಿ ಕೋವಿಡ್ -೧೯ ಪ್ರಕರಣದಲ್ಲೂ ಐದು ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಿ ಲೆಪ್ಟಿನೆಂಟ್ ಗವರ್ನರ್ (ಎಲ್ ಜಿ) ಅನಿಲ್ ಬೈಜಾಲ್ ಅವರು ಹೊರಡಿಸಿದ ಆದೇಶವನ್ನು ತೀವ್ರ ವಿವಾದ ಮತ್ತು ಅರವಿಂದ ಕೇಜ್ರಿವಾಲ್ ಸರ್ಕಾರದ ವಿರೋಧದ ಬಳಿಕ 2020 ಜೂನ್ 20ರ ಶನಿವಾರ ಸಂಜೆ ಹಿಂಪಡೆಯಲಾಯಿತು. ಈ ಮಧ್ಯೆ, ಹೊಸದಾಗಿ ೧೪,೫೧೬ ಸೋಂಕಿನ ಪ್ರಕರಣಗಳು ದಾಖಲಾಗುವುದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ೩,೯೫,೦೪೮ಕ್ಕೆ ಮತ್ತು ಸಾವಿನ ಸಂಖ್ಯೆ ೧೨,೯೪೮ಕ್ಕೆ ಏರಿತು. ೨,೧೩,೮೩೧ ಜನರು ವೈರಸ್ನಿಂದ ಚೇತರಿಸಿಕೊಂಡಿದ್ದಾರೆ. ತೀವ್ರ ವಿವಾದಕ್ಕೆ ಸಿಲುಕಿದ ಐದು ದಿನಗಳ ಕಡ್ಡಾಯ ಕ್ವಾರಂಟೈನ್ ಆದೇಶವನ್ನು ಹಿಂಪಡೆಯುವಂತೆ ಕೇಜ್ರಿವಾಲ್ ಸರ್ಕಾರವು ಇದಕ್ಕೆ ಮುನ್ನ ಲೆಫ್ಟಿನೆಂಟ್ ಗವರ್ನರ್ ಅವರನ್ನು ತೀವ್ರವಾಗಿ ಒತ್ತಾಯಿಸಿತ್ತು. ದೆಹಲಿ ಸರ್ಕಾರದ ಹಿರಿಯ ಮಂತ್ರಿಗಳು ಎರಡನೇ ಬಾರಿಗೆ ಶನಿವಾರ ಸಂಜೆ ೫ ಗಂಟೆಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಭೇಟಿ ಮಾಡಿದ್ದರು. ಮಧ್ಯಾಹ್ನ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರು ಈ ವಿಷಯದಲ್ಲಿ ಒಪ್ಪಿಕೊಳ್ಳಲು ವಿಫಲವಾದ ನಂತರ ಸಭೆ ನಡೆಯಿತು. "ಸಾಂಸ್ಥಿಕ ಕ್ವಾರಂಟೈನ್ಗೆ ಸಂಬಂಧಿಸಿದಂತೆ, ಕ್ಲಿನಿಕಲ್ ಮೌಲ್ಯಮಾಪನದ ಮೇಲೆ ಆಸ್ಪತ್ರೆಗೆ ಅಗತ್ಯವಿಲ್ಲದ ಮತ್ತು ಮನೆ ಪ್ರತ್ಯೇಕವಾಸಕ್ಕೆ (ಹೋಮ್ ಕ್ವಾರಂಟೈನ್) ಸಾಕಷ್ಟು ಸೌಲಭ್ಯಗಳನ್ನು ಹೊಂದಿರದ ಕೊವಿಡ್ ಪಾಸಿಟಿವ್ ಪ್ರಕರಣಗಳು ಮಾತ್ರ ಸಾಂಸ್ಥಿಕ ಪ್ರತ್ಯೇಕತೆಗೆ ಒಳಗಾಗಬೇಕಾಗುತ್ತದೆ" ಎಂದು ಬೈಜಾಲ್ ಸಭೆಯ ನಂತರ ಟ್ವೀಟ್ ಮಾಡಿದರು. ಮುಖ್ಯಮಂತ್ರಿಯವರ ಕಚೇರಿಯು ಸಂಜೆ ಎಲ್ ಜಿ ಆದೇಶ ವಾಪಸ್ ಬೆಳವಣಿಗೆಯನ್ನು ದೃಢಪಡಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೋವಿಡ್ -೧೯ ಲಾಕ್ ಡೌನ್ ಸಮಯದಲ್ಲಿ ತಮ್ಮ ರಾಜ್ಯಗಳಿಗೆ ಮರಳಿದ ವಲಸೆ ಕಾರ್ಮಿಕರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2020 ಜೂನ್ 20ರ ಶನಿವಾರ ೫೦,೦೦೦ ಕೋಟಿ ರೂ.ಮೊತ್ತದ ಮೆಗಾ ಉದ್ಯೋಗ ಯೋಜನೆಗೆ ಚಾಲನೆ ನೀಡಿದರು. ಬಿಹಾರದ ಖಗಾರಿಯಾ ಜಿಲ್ಲೆಯಿಂದ ಪ್ರಾರಂಭವಾಗುವ ಮೆಗಾ ಉದ್ಯೋಗ ಯೋಜನೆಯನ್ನು ೧೧೬ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಇದು ನಗರ ಕೇಂದ್ರಗಳಿಂದ ಬಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಹೊಂದಿರುತ್ತದೆ. "ಕೋವಿಡ್-೧೯ರಿಂದಾಗಿ ಸಂಕಷ್ಟಕ್ಕೆ ಒಳಗಾದ ಅನೇಕರೊಂದಿಗೆ ಸಂವಹನ ನಡೆಸಲು ನನಗೆ ಸಾಧ್ಯವಾಗಿರುವುದಕ್ಕಾಗಿ ನನಗೆ ಖುಷಿಯಾಗಿದೆ. ವಲಸಿಗರಿಗೆ ಮನೆಗೆ ಹೋಗಲು ರೈಲುಗಳನ್ನು ಒದಗಿಸುವ ಮೂಲಕ ಅವರಿಗೆ ಸಹಾಯ ಮಾಡಲು ನಮಗೆ ಸಾಧ್ಯವಾಯಿತು. ಕೊರೋನಾ ಸೋಂಕು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಿz. ಆದರೆ ನೀವು ಧೈರ್ಯವನ್ನು ತೋರಿಸಿದ್ದೀರಿ. ನಮ್ಮ ಹಳ್ಳಿಗಳು ವೈರಸ್ ವಿರುದ್ಧ ಹೇಗೆ ಹೋರಾಡಬೇಕೆಂದು ನಗರಗಳಿಗೆ ತೋರಿಸಿ ಕೊಟ್ಟಿವೆ’ ಎಂದು ಪ್ರಧಾನಿ ವಿಡಿಯೋ ಸಂವಹನ ಮೂಲಕ ಯೋಜನೆಗೆ ಚಾಲನೆ ನೀಡುತ್ತಾ ಹೇಳಿದರು. ಇತ್ತೀಚೆಗೆ, ಕೋವಿಡ್ -೧೯ ಸಾಂಕ್ರಾಮಿಕ ರೋಗದ ಕಾರಣ ಗಣನೀಯ ಸಂಖ್ಯೆಯ ವಲಸೆ ಕಾರ್ಮಿಕರು ನಗರ ಮತ್ತು ಕೈಗಾರಿಕಾ ಕೇಂದ್ರಗಳಿಂದ ತಮ್ಮ ರಾಜ್ಯಗಳಿಗೆ ಮರಳಿದ್ದಾರೆ. ಈ ಯೋಜನೆ ವಲಸೆ ಕಾರ್ಮಿಕರಿಗೆ ತಮ್ಮ ಮನೆಗಳ ಹತ್ತಿರದಲ್ಲಿ ಉದ್ಯೋಗ ಹುಡುಕಲು ಸಹಾಯ ಮಾಡುತ್ತದೆ ಎಂದು ಮೋದಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment