ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಗೆ ಸಿಂಹಿಣಿ ಆಶ್ರಯ!
ಗುಜರಾತಿನ ಗಿರ್ ಅರಣ್ಯದಲೊಂದು ವಿಸ್ಮಯ
ಅಹಮದಾಬಾದ್: ಬೆಕ್ಕಿನ ಮರಿಗೆ ನಾಯಿ ಹಾಲೂಡಿಸುವುದು, ಆಡಿನ ಮರಿಗೆ ಆಕಳು ಹಾಲು ಕೊಡುವುದೇ ಇತ್ಯಾದಿಗಳನ್ನು ನೀವು ಕಂಡಿರಬಹುದು. ಆದರೆ ಕಾಡಿನ ರಾಜ ಸಿಂಹ ತನ್ನ ಪ್ರತಿಸ್ಪರ್ಧಿ ಚಿರತೆಗೆ ಆಶ್ರಯ ಕೊಟ್ಟದ್ದನ್ನು ಕೇಳಿದ್ದೀರಾ?
ಹೌದು ಇಂತಹ ಒಂದು ವಿಸ್ಮಯದ ಘಟನೆ ಗುಜರಾತಿನ ಗಿರ್ ಅರಣ್ಯದಲ್ಲಿ ಬೆಳಕಿಗೆ ಬಂದಿದೆ. ತಾಯಿಯಿಂದ ಬೇರ್ಪಟ್ಟಿರುವ ಚಿರತೆಯ ಮರಿಯೊಂದನ್ನು ಸಿಂಹಿಣಿಯೊಂದು ’ದತ್ತು’ ಪಡೆದುಕೊಂಡು ಪಾಲಿಸಿ ಪೋಷಿಸುತ್ತಿದೆ.
ತಾಯಿಯಿಂದ ಬೇರ್ಪಟ್ಟಿರುವ ಸುಮಾರು ಒಂದೂವರೆ ತಿಂಗಳ ಚಿರತೆ ಮರಿಯನ್ನು ಸಿಂಹಿಣಿಯೊಂದು ತನ್ನ ಎರಡು ಮರಿಗಳ ಜೊತೆ ಸೇರಿಸಿಕೊಂಡು ಪಾಲಿಸುತ್ತಿರುವುದು ಗಿರ್ - ಪಶ್ಚಿಮ ವಿಭಾಗದ ಅರಣ್ಯದಲ್ಲಿ ಪತ್ತೆಯಾಗಿದೆ. ಅಷ್ಟೇ ಅಲ್ಲ ಚಿರತೆ ಮರಿಯ ಮೇಲೆ ಸುತ್ತಮುತ್ತಲಿನ ಇತರ ಸಿಂಹಗಳು ದಾಳಿ ನಡೆಸಿ ಕೊಲ್ಲದಂತೆ ನಿರಂತರ ನಿಗಾ ಇಟ್ಟುಕೊಂಡು ಕಾಯುತ್ತಿದೆ ಎಂದು ಗಿರ್- ಪಶ್ಚಿಮ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಧೀರಜ್ ಮಿತ್ತಲ್ ಹೇಳಿದ್ದಾರೆ.
ಸಿಂಹಿಣಿ ಮತ್ತು ಚಿರತೆ ಮರಿ ನಡುವಣ ಈ ಅಪರೂಪದ ಬಾಂಧವ್ಯ ಮೊತ್ತ ಮೊದಲಿಗೆ ಆರು ದಿನಗಳ ಹಿಂದೆ ಅರಣ್ಯ ಸಿಬ್ಬಂದಿಯ ಕಣ್ಣಿಗೆ ಬಿದ್ದಿತ್ತು ಎಂದು ಅವರು ನುಡಿದರು.
ಮಿತ್ರಲ್ ಅವರು ಸಿಂಹಿಣಿ ಮತ್ತು ಚಿರತೆ ಮರಿಯ ಅಸಾಧಾರಣ, ವಿಶಿಷ್ಠ ಬಾಂಧವ್ಯದ ಚಿತ್ರಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
’ಖಂಡಿತವಾಗಿ ಇದೊಂದು ಅಪರೂಪದ ವಿದ್ಯಮಾನ. ಏಕೆಂದರೆ ಸಿಂಹಗಳು ಸದಾಕಾಲ ಚಿರತೆಗಳನ್ನು ಕೊಂದು ಹಾಕುವ ಮನಃಸ್ಥಿತಿಯಲ್ಲೇ ಇರುತ್ತವೆ. ಈ ಪ್ರಕರಣದಲ್ಲಿ ಇದು ತದ್ವಿರುದ್ಧವಾಗಿದೆ. ಇಲ್ಲಿ ಸಿಂಹಿಣಿಯು ಚಿರತೆ ಮರಿಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿರುವುದೂ ಕಂಡು ಬಂದಿದೆ. ಅದು ಚಿರತೆಯ ಮರಿಯನ್ನು ತಾನು ಇರುವ ಪ್ರದೇಶದಲ್ಲೇ ಕಾದುಕೊಂಡು ಕುಳಿತು ರಕ್ಷಿಸುತ್ತಿದೆ’ ಎಂದು ಮಿತ್ರಲ್ ಹೇಳಿದರು.
ಮಿತ್ತಲ್ ಅವರು ಹಂಚಿಕೊಂಡಿರುವ ಚಿತ್ರಗಳಲ್ಲಿ ಚಿರತೆ ಮರಿಯು ತನ್ನ ಮನೆಯಲ್ಲಿ ಇರುವಷ್ಟೇ ಖುಶಿಯಲ್ಲಿ ಸಿಂಹಿಣಿ ಮತ್ತು ಅದರ ಮರಿಗಳ ಜೊತೆ ಇರುವುದು ಕಾಣಿಸುತ್ತದೆ. ಕೆಲವು ಚಿತ್ರಗಳು ಸಿಂಹಿಣಿಯು ಅದಕ್ಕೆ ಹಾಲೂಡಿಸುತ್ತಿರುವುದನ್ನೂ ತೋರಿಸಿವೆ.
’ಸಿಂಹಿಣಿ ತಾಯಿಯ ಸಂಜ್ಞೆಗಳು ಮತ್ತು ಶಬ್ಧಗಳನ್ನು ಚಿರತೆ ಮರಿಯು ಹೇಗೆ ಅರ್ಥ ಮಾಡಿಕೊಳ್ಳುತ್ತಿದೆ ಎಂಬುದೂ ನಮ್ಮನ್ನು ಅಚ್ಚರಿಗೊಳಿಸಿದೆ. ಸುತ್ತಾಡುವಾಗ ಸಿಂಹಿಣಿಯು ಚಿರತೆ ಮರಿಯತ್ತ ಹೆಚ್ಚಿನ ಗಮನ ನೀಡುತ್ತದೆ. ಚಿರತೆ ಮರಿಗೆ ತನ್ನ ಹಾಗೂ ತನ್ನ ಮರಿಗಳ ವೇಗದ ಜೊತೆಗೆ ಹೊಂದಾಣಿಕೆ ಆಗದಿರಬಹುದು ಎಂಬ ಕಾರಣಕ್ಕೆ ಅದು ಈ ರೀತಿ ಚಿರತೆ ಮರಿಯನ್ನು ಗಮನಿಸುತ್ತಿರಬಹುದು’ ಎಂದು ಮಿತ್ರಲ್ ಹೇಳಿದರು.
ಚಿರತೆ ಮರಿಯ ತಾಯಿ ಎಲ್ಲಿರಬಹುದು ಎಂಬ ಪ್ರಶ್ನೆಗೆ ’ಅದು ತನ್ನ ಮರಿಯನ್ನು ತ್ಯಜಿಸಿರಬಹುದು ಅಥವಾ ಆಕಸ್ಮಿಕವಾಗಿ ಕಳೆದುಕೊಂಡಿರಬಹುದು. ಸಿಂಹಿಣಿಯ ಬಳಿಗೆ ಹೋಗಲು ಅದಕ್ಕೆ ಅಂಜಿಕೆ ಇರಲೂಬಹುದು’ ಎಂದು ಮಿತ್ರಲ್ ಹೇಳಿದರು.
ಈ ಅಪರೂಪದ ಬಾಂಧವ್ಯದ ಬಗ್ಗೆ ಅರಣ್ಯ ಸಿಬ್ಬಂದಿ ನಿಗಾ ಇಟ್ಟಿದ್ದಾರೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಟಿ. ವಸವಡ ಹೇಳಿದರು.
’ಚಿರತೆ ಮರಿಯನ್ನು ಬೇರ್ಪಡಿಸುವ ಇರಾದೆ ನಮಗಿಲ್ಲ. ಪ್ರಕೃತಿಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ನಾವು ಸಿಂಹಿಣಿಯ ಮೇಲೆ ನಿಗಾ ಇಟ್ಟಿರುತ್ತೇವೆ’ ಎಂದು ಜುನಾಗಢ ವನ್ಯ ವಲಯದ ಮುಖ್ಯಸ್ಥರೂ ಆಗಿರುವ ವಸವಡ ಹೇಳಿದರು.
ವಿಡಿಯೋ
ವೀಕ್ಷಿಸಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ
No comments:
Post a Comment