ನಾನು ಮೆಚ್ಚಿದ ವಾಟ್ಸಪ್

Thursday, January 10, 2019

ಇಂದಿನ ಇತಿಹಾಸ History Today ಜನವರಿ 10

ಇಂದಿನ ಇತಿಹಾಸ History Today ಜನವರಿ 10
2019: ನವದೆಹಲಿ: ಸಿಬಿಐ ಮುಖ್ಯಸ್ಥ ಅಲೋಕ್ ವರ್ಮ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತ್ರಿಸದಸ್ಯ ಉನ್ನತಾಧಿಕಾರ ಆಯ್ಕೆ ಸಮಿತಿಯು ವಜಾಗೊಳಿಸಿದತು.  ಬಗ್ಗೆ ಸಮಿತಿಯು : ಬಹುಮತದ ತೀರ್ಮಾನ ಕೈಗೊಂಡಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಜನವರಿ ೩೧ರಂದು ತಮ್ಮ ಸೇವೆಯಿಂದ ನಿವೃತ್ತರಾಗಲಿರುವ ವರ್ಮ ಅವರಿಗೆ ಅಗ್ನಿಶಾಮಕ ಸೇವೆಯ ಮಹಾನಿರ್ದೇಶಕ ಹುದ್ದೆಯನ್ನು ವಹಿಸಲಾಯಿತು. ಹೀಗಾಗಿ ಸುಪ್ರೀಂಕೋರ್ಟಿನಲ್ಲಿ ಗೆದ್ದು, ಅದರ ತೀರ್ಪಿನಂತೆ ಪುನಃ ಅಧಿಕಾರ ವಹಿಸಿಕೊಂಡ ೨೪ ಗಂಟೆಗಳ ಒಳಗಾಗಿ ವರ್ಮ ಅವರು ತಮ್ಮ ಸಿಬಿಐ ಮುಖ್ಯಸ್ಥ ಸ್ಥಾನವನ್ನು ಕಳೆದುಕೊಂಡರು. ಸಿಬಿಐ ಇತಿಹಾಸದಲ್ಲೇ ಹೀಗಾದದ್ದು ಇದೇ ಪ್ರಥಮ ಎನ್ನಲಾಯಿತು. ಉನ್ನತಾಧಿಕಾರ ಆಯ್ಕೆ ಸಮಿತಿಯ ಎರಡು ಗಂಟೆಗಳಿಗೂ ಹೆಚ್ಚಿನ ಸಭೆಯ ಬಳಿಕ ಅಲೋಕ್ ವರ್ಮ ಅವರನ್ನು ವಜಾಗೊಳಿಸುವ ನಿರ್ಧಾರವನ್ನು ಕೈಗೊಂಡಿತು ಎಂದು ಮೂಲಗಳು ಹೇಳಿದವು. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಮತ್ತು ಲೋಕಸಭೆಯ ದೊಡ್ಡ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಮಿತಿಯ ಇನ್ನಿಬ್ಬರು ಸದಸ್ಯರಾಗಿದ್ದರು. ವರ್ಮ ಪ್ರಕರಣದ ಕುರಿತು ಚರ್ಚಿಸಿ ಅವರನ್ನು ಮುಂದುವರೆಸಬೇಕೇ ಅಥವಾ ಬೇಡವೇ ಎಂಬುದಾಗಿ ಒಂದು ವಾರದ ಒಳಗಾಗಿ ನಿರ್ಧರಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ ಬಳಿಕ ಆಯ್ಕೆ ಸಮಿತಿಯ ಎರಡನೇ ಸಭೆ ಈದಿನ  ನಡೆದಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರೀಯ ಜಾಗೃತಾ ಆಯೋಗವು ವಿಷಯಕ್ಕೆ ಸಂಬಂಧಿಸಿದಂತೆ ನಡೆಸಿದ್ದ ತನಿಖೆಯ ವರದಿ ಸೇರಿದಂತೆ ಕೆಲವು ದಾಖಲೆಗಳನ್ನು ಕೇಳಿದ್ದರಿಂದ ಸಮಿತಿಯ ಮೊದಲ ಸಭೆ ಅಪೂರ್ಣಗೊಂಡಿತ್ತು.  ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಭೆಯಲ್ಲಿ ಹಾಜರಾಗಿದ್ದ ಕಾಂಗ್ರೆಸ್ಸಿನ ಲೋಕಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರಿಂದ ನೇಮಕಗೊಂಡ ನ್ಯಾಯಮೂರ್ತಿ .ಕೆ. ಸಿಕ್ರಿ ಅವರನ್ನು ಒಳಗೊಂಡ ಸಮಿತಿಯ ಮುಂದೆ ಸಿವಿಸಿ ವರದಿಯಲ್ಲಿ ವರ್ಮ ವಿರುದ್ಧ ಮಾಡಲಾಗಿದ್ದ ಆರೋಪಗಳನ್ನು ಮಂಡಿಸಲಾಯಿತು. ಪ್ರಧಾನಿ ಮತ್ತು ನ್ಯಾಯಮೂರ್ತಿ .ಕೆ. ಸಿಕ್ರಿ ಅವರು ವರ್ಮ ಅವರನ್ನು ಹುದ್ದೆಯಲ್ಲಿ ಮುಂದುವರೆಸುವುದು ಸಂಸ್ಥೆಯ ಸಮಗ್ರತೆಗೆ ಹಾನಿಕರ ಎಂಬುದಾಗಿ ಅಭಿಪ್ರಾಯಪಟ್ಟರು, ಖರ್ಗೆ ಅವರು ವರ್ಮ ವಜಾವನ್ನು ತೀವ್ರವಾಗಿ ವಿರೋಧಿಸಿದರು ಎಂದು ಮೂಲಗಳು ಹೇಳಿವೆ. ಖರ್ಗೆ ಅವರು ನಿರ್ಧಾರವನ್ನು ಅಮಾನತಿನಲ್ಲಿ ಇಡಬೇಕು ಎಂದು ಬಯಸಿದರು, ಆದರೆ ಉಳಿದಿಬ್ಬರು ಸದಸ್ಯರು ಅದರ ವಿರುದ್ಧ ತೀರ್ಮಾನ ಕೈಗೊಂಡರು ಎಂದು ಮೂಲಗಳು ಹೇಳಿದವು. ಪರಿಶೀಲನಾ ಸಮಿತಿಯ ಮೂಲಕ ಪರಿಶೀಲಿಸದ ಹೊರತು ಆರೋಪಗಳನ್ನು ನಂಬಲು ಹೇಗೆ ಸಾಧ್ಯ ಎಂಬುದಾಗಿ ವಜಾ ನಿರ್ಣಯವನ್ನು ವಿರೋಧಿಸುತ್ತಾ ಖರ್ಗೆ ಅವರು ಪ್ರಶ್ನಿಸಿದರು. ಅವರು ಸಿವಿಸಿ ವರದಿಯನ್ನೂ ಪ್ರಶ್ನಿಸಿದರು ಎಂದು ಮೂಲಗಳು ಹೇಳಿದವು. ಕಾಂಗ್ರೆಸ್ ಪಕ್ಷವು ಟ್ವಿಟ್ಟರಿನಲ್ಲಿ ನಿರ್ಧಾರದ ಕುರಿತ ತನ್ನ ಅಸಮ್ಮತಿಯನ್ನು ಪ್ರಕಟಿಸಿತು. ಅಲೋಕ್ ವರ್ಮ ಅವರಿಗೆ ತಮ್ಮ ಅಹವಾಲು ಮುಂದಿಡಲು ಅವಕಾಶ ನಿರಾಕರಿಸುವ ಮೂಲಕ ಪ್ರಧಾನಿ ಮೋದಿ ಅವರು ಪುನಃ ಸಿಬಿಐ ನಿರ್ದೇಶಕರು ಅಥವ ಜೆಪಿಸಿ ಮೂಲಕ ಸಂಸತ್ತಿನ ತನಿಖೆ ಎದುರಿಸಲು ತಾವು ಅಂಜಿರುವುದನ್ನು ತೋರಿಸಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತು.  ‘ನಾನು ಸರ್ಕಾರದಿಂದ ವಿಷಯಕ್ಕೆ ಸಂಬಂಧಿಸಿದಂತೆ ಸಿವಿಸಿ ತನಿಖಾ ವರದಿ ಸೇರಿದಂತೆ ಕೆಲವು ದಾಖಲೆಗಳನ್ನು ಕೇಳಿದ್ದೇನೆ ಎಂದು ಖರ್ಗೆ ಇದಕ್ಕೆ ಮುನ್ನ ಹೇಳಿದ್ದರು. ಸರ್ಕಾರಕ್ಕೆ ಬರೆದ ಪತ್ರ ಒಂದರಲ್ಲಿ ಖರ್ಗೆ ಅವರು ತಾವು ಲೋಕಸಭಾ ಕಲಾಪದಲ್ಲಿ ಮಗ್ನರಾಗಿದ್ದುದರಿಂದ ಅಲೋಕ್ ವರ್ಮ ಅವರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಅಧ್ಯಯನ ಮಾಡಲಾಗಿಲ್ಲ ಆದ್ದರಿಂದ ಸಭೆಯನ್ನು ಎರಡು ದಿನಗಳ ಮಟ್ಟಿಗೆ ಮುಂದೂಡಬೇಕು ಎಂದೂ ಕೋರಿದ್ದರು. ತೀರ್ಪಿನ ಅಧ್ಯಯನಕ್ಕೆ ತಮಗೆ ಸಮಯ ಬೇಕಾಗಿರುವುದರಿಂದ ಜನವರಿ ೧೧ರಂದು ಸಭೆ ನಡೆಸುವಂತೆಯೂ ಖರ್ಗೆ ಅವರು ತಮ್ಮ ಪತ್ರದಲ್ಲಿ ಕೋರಿದ್ದರು. ತೀರ್ಪಿನ ಅಧ್ಯಯನದ ಬಳಿಕ ಮಾತ್ರವೇ ತಾವು ತಮ್ಮ ಪಕ್ಷದ ಅಭಿಪ್ರಾಯ ಮಂಡಿಸಲು ಸಾಧ್ಯ ಎಂದು ಅವರು ತಿಳಿಸಿದ್ದರು. ವರ್ಮ ಅವರನ್ನು ಹಿಂದೆ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತಮ್ಮ ಸಹಾಯಕ ಅಧಿಕಾರಿ ರಾಕೇಶ್ ಅಸ್ತಾನ ಜೊತೆಗಿನ ಆಂತರಿಕ ಘರ್ಷಣೆಯನ್ನು ಅನುಸರಿಸಿ ರಾತ್ರೋರಾತ್ರಿ ಕೈಗೊಳ್ಳಲಾದ ಕ್ರಮದಲ್ಲಿ ಕರ್ತವ್ಯದಿಂದ ಮುಕ್ರಗೊಳಿಸಿ ರಜೆಯಲ್ಲಿ ಕಳುಹಿಸಲಾಗಿತ್ತು. ವರ್ಮ ಅವರನ್ನು ರಜೆಯಲ್ಲಿ ಕಳುಹಿಸಿದ ಸರ್ಕಾರದ ಅಕ್ಟೋಬರ್ ೨೩ರ ಆದೇಶವನ್ನು ರದ್ದು ಪಡಿಸಿದ ಸುಪ್ರೀಂಕೋರ್ಟ್ ಯಾವುದೇ ಮಹತ್ವದ ನೀತಿ ನಿರ್ಧಾರಗಳನ್ನು ಕೈಗೊಳ್ಳದಂತೆ ವರ್ಮ ಅವರಿಗೆ ಷರತ್ತು ವಿಧಿಸಿ ದೈನಂದಿನ ಕರ್ತವ್ಯಗಳನ್ನು ಮಾತ್ರ ನಿರ್ವಹಿಸುವಂತೆ ನಿರ್ದೇಶನ ನೀಡಿತ್ತು. ಸುಪ್ರೀಂಕೋರ್ಟ್ ಆದೇಶದ ಒಂದು ದಿನದ ಬಳಿಕ ಬುಧವಾರ ತಮ್ಮ ಕಚೇರಿಗೆ ಮತ್ತೆ ಹಾಜರಾದ ವರ್ಮ ಅವರು ಹಂಗಾಮೀ ನಿರ್ದೇಶಕ ಎಂ. ನಾಗೇಶ್ವರ ರಾವ್ ಅವರು ಜಾರಿಗೊಳಿಸಿದ್ದ ವರ್ಗಾವಣೆ ಆದೇಶಗಳನ್ನು ರದ್ದು ಪಡಿಸಿ ಆದೇಶ ಹೊರಡಿಸಿದ್ದರು.
  
2019: ನವದೆಹಲಿ: ಪಂಚ ಸದಸ್ಯ ಸಾಂವಿಧಾನಿಕ ಪೀಠದ ರಚನೆಯೊಂದಿಗೆ ಈ ದಿನ ವಿಚಾರಣೆ ಪುನಾರಂಭಗೊಳ್ಳವುದೆಂದು ನಿರೀಕ್ಷಿಸಲಾಗಿದ್ದ ಅಯೋಧ್ಯಾ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಪ್ರಕರಣ ಪೀಠದ ನ್ಯಾಯಮೂರ್ತಿ ಉದಯ್ ಯು. ಲಲಿತ್ ನಿರ್ಗಮನದ ಪರಿಣಾಮವಾಗಿ ಜನವರಿ ೨೯ಕ್ಕೆ ಮುಂದೂಡಿಕೆಯಾಯಿತು.  ಮುಂದಿನ ವಿಚಾರಣೆಗಾಗಿ ಹೊಸ ಪೀಠದ ರಚನೆಯಾಗಲಿದೆ. ಕಕ್ಷಿದಾರರೊಬ್ಬರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ರಾಜೀವ್ ಧವನ್ ಅವರು ಸಾಂವಿಧಾನಿಕ ಪೀಠದ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಎರಡು ದಶಕಗಳ ಹಿಂದೆ ಕಕ್ಷಿದಾರರೊಬ್ಬರ ಪರ ವಕೀಲರಾಗಿ ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದರು ಎಂಬುದಾಗಿ ಗಮನ ಸೆಳೆದಾಗ, ನ್ಯಾಯಮೂರ್ತಿ ಲಲಿತ್ ಅವರು ತಾವು ಪೀಠದಿಂದ ಹಿಂದೆ ಸರಿಯುವುದಾಗಿ ಹೇಳಿದರು. ಹೀಗಾಗಿ ಹೊಸ ಪೀಠದ ರಚನೆ ಅನಿವಾರ್ಯವಾಯಿತು. ಪಂಚ ಸದಸ್ಯ ಪೀಠವು ಪ್ರಕರಣದ ವಿಚಾರಣೆಗೆ ದಿನಾಂಕ ಮತ್ತು ವೇಳಾಪಟ್ಟಿಯನ್ನು ತಯಾರಿಸುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದಕ್ಕೆ ಮುನ್ನವೇ ರಾಜೀವ್ ಧವನ್ ಅವರು ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದ ನ್ಯಾಯಾಲಯ ನಿಂದನೆ ಪ್ರಕರಣ ಒಂದರಲ್ಲಿ ವಕೀಲರಾಗಿ ಕಕ್ಷಿದಾರರೊಬ್ಬರನ್ನು ಪ್ರತಿನಿಧಿಸಿದ್ದರು ಎಂದು ಬೊಟ್ಟು ಮಾಡಿದರು. ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರನ್ನು ಒಂದು ದಿನದ ಅವಧಿಗೆ ಸೆರೆಮನೆಗೆ ಕಳುಹಿಸಲಾಗಿತ್ತು. ತಮ್ಮ ಆಕ್ಷೇಪವೇನೂ ಇಲ್ಲ, ಆದರೆ ಇದನ್ನು ಗಮನಿಸುವುದು ನ್ಯಾಯಮೂರ್ತಿ ಲಲಿತ್ ಅವರಿಗೆ ಬಿಟ್ಟ ವಿಚಾರ ಎಂದು ಧವನ್ ಹೇಳಿದರು.
ಮಾಹಿತಿಯನ್ನು ನ್ಯಾಯಾಲಯದ ಗಮನಕ್ಕೆ ತಂದುದಕ್ಕಾಗಿ ವಿಷಾದಿಸುವೆ ಎಂದೂ ಧವನ್ ನುಡಿದರು. ಅದರೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ವಿಷಾದ ವ್ಯಕ್ತ ಪಡಿಸುವ ಅಗತ್ಯವಿಲ್ಲ ಏಕೆಂದರೆ ಅವರು ವಾಸ್ತವಾಂಶವನ್ನು ಒತ್ತಿ ಹೇಳಿದ್ದಾರೆ ಅಷ್ಟೆ ಎಂದು ನುಡಿದರು. ಆಗ ನ್ಯಾಯಮೂರ್ತಿ ಲಲಿತ್ ಅವರು ತಾವು ಪ್ರಕರಣದಲ್ಲಿ ಒಬ್ಬ ಕಕ್ಷಿದಾರರನ್ನು ಪ್ರತಿನಿಧಿಸಿದ್ದು ಹೌದು ಎಂದು ಹೇಳಿ, ಪೀಠದಿಂದ ಹಿಂದೆ ಸರಿಯುವ ಕೊಡುಗೆ ಮುಂದಿಟ್ಟರುರಾಮಲಲ್ಲಾ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದ ವಕೀಲ ಹರೀಶ್ ಸಾಳ್ವೆ ಅವರು ತಾವು ಸಂಪೂರ್ಣವಾಗಿ ರಾಜೀವ್ ಧವನ್ ಅವರನ್ನು ಬೆಂಬಲಿಸುವುದಾಗಿ ಹೇಳಿದರು. ರಿಟ್ ಅರ್ಜಿಯೊಂದರಲ್ಲಿ ನೀಡಲಾಗಿದ್ದ ಆದೇಶವನ್ನು ಉಲ್ಲಂಘಿಸಿದ್ದರಿಂದ ನ್ಯಾಯಾಲಯ ನಿಂದನೆಯಾಗಿತ್ತು, ಆಗಿನ ಮುಖ್ಯಮಂತ್ರಿಯವರು ನಿವೇಶನದಲ್ಲಿ ಯಥಾಸ್ಥಿತಿ ಪಾಲನೆಯ ಆದೇಶವನ್ನು ಪಾಲಿಸಲು ವಿಫಲರಾಗಿದ್ದರು ಎಂದು ಅವರು ನುಡಿದರು. ’ಇವು ಸಿವಿಲ್ ಖಟ್ಲೆಗಳು. ಇದು ಸಮಸ್ಯೆಯಾಗಬೇಕು ಎಂದು ನಾನು ಭಾವಿಸುವುದಿಲ್ಲ ಎಂದು ಸಾಳ್ವೆ ನುಡಿದರು. ಇದು ಯಾರಿಗಾದರೂ ಸಮಸ್ಯೆ  ಆಗುವ ಪ್ರಶ್ನೆಯಲ್ಲ. ವಿಷಯವನ್ನು ನಮ್ಮ ಮುಂದೆ ಪ್ರಸ್ತಾಪಿಸಲಾಗಿದೆ. ಆದ್ದರಿಂದ ಪೀಠದಲ್ಲಿ ಪಾಲ್ಗೊಳ್ಳುವುದು ತಮಗೆ ಸರಿಯಾಗುವುದಿಲ್ಲ ಎಂಬುದು ನ್ಯಾಯಮೂರ್ತಿ ಲಲಿತ್ ಅವರ ಅಭಿಪ್ರಾಯವಾಗಿದೆ ಎಂದು ಸಿಜೆ ಹೇಳಿದರು. ಧವನ್ ಅವರು ನಿವೃತ್ತ ಸಿಜೆಐ ದೀಪಕ್ ಮಿಶ್ರ ನೇತೃತ್ವದ ಪೀಠವು ನ್ಯಾಯಾಂಗ ಆದೇಶ ಒಂದರಲ್ಲಿ ಪ್ರಕರಣವನ್ನು ಪಂಚ ಸದಸ್ಯ ಪೀಠಕ್ಕೆ ಕಳುಹಿಸುವಂತೆ ಮಾಡಿದ್ದ ಮನವಿಯನ್ನು ತಿರಸ್ಕರಿದ್ದಾಗ, ಆಡಳಿತಾತ್ಮಕ ಆದೇಶದ ಮೂಲಕ ಪಂಚ ಸದಸ್ಯ ಪೀಠವನ್ನು ರಚಿಸಿದ ಮುಖ್ಯ ನ್ಯಾಯಮೂರ್ತಿ ಗೊಗೋಯಿ ಅವರ ಕ್ರಮದ ಬಗ್ಗೆ ಊಹಾಪೋಹಗಳಿವೆ ಎಂಬುದಾಗಿ ಕೂಡಾ ರಾಜೀವ್ ಧವನ್ ಗಮನ ಸೆಳೆದರು. ಸುಪ್ರೀಂಕೋರ್ಟ್ ನಿಯಮಾವಳಿಗಳು ಪ್ರಕರಣದ ಮಹತ್ವವನ್ನು ಗಮನದಲ್ಲಿ ಇಟ್ಟುಕೊಂಡು ಪೀಠಕ್ಕೆ ನೇಮಿಸುವ ಅಧಿಕಾರವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಅವರಿಗೆ ನೀಡಿವೆ. ಆದ್ದರಿಂದ ವಿವಾದದ ಇತ್ಯರ್ಥಕ್ಕಾಗಿ ಸಂವಿಧಾನ ಪೀಠ ರಚನೆ ಯಾವುದೇ ದೃಷ್ಟಿಯಿಂದಲೂ ಹಿಂದಿನ ತ್ರಿಸದಸ್ಯ ಪೀಠವು ವಿಶಾಲ ಪೀಠಕ್ಕೆ ಭೂವಿವಾದವನ್ನು ಕಳುಹಿಸಲು ನಿರಾಕರಿಸಿದ  ಆದೇಶಕ್ಕೆ ವ್ಯತಿರಿಕ್ತವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹೇಳಿದರು. ಅಯೋಧ್ಯಾ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದವು ೨೦೧೦ರಿಂದ ಸುಪ್ರೀಂಕೋರ್ಟಿನ ಮುಂದೆ ಬಾಕಿ ಇದೆ. ಅಲಹಾಬಾದ್ ಹೈಕೋರ್ಟ್ ೨೦೧೦ರ ಸೆಪ್ಟೆಂಬರ್ ೩೦ರಂದು ಅಯೋಧ್ಯೆಯ .೭೭ ಎಕರೆ ಭೂಮಿಯನ್ನು ಕಕ್ಷಿದಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮ ಮಂದಿರ ನಿರ್ಮಾಣಕ್ಕಾಗಿ ರಚನೆಯಾಗಿರುವ ಹಿಂದೂ ಮಹಾಸಭಾ ಪ್ರತಿನಿಧಿಸಿರುವ ರಾಮಲಲ್ಲಾ ಅಥವಾಬಾಲ ರಾಮ ಮಧ್ಯೆ ಸಮಾನವಾಗಿ ಹಂಚಿಕೆ ಮಾಡಬೇಕು ಎಂಬುದಾಗಿ ನೀಡಿದ್ದ ತೀರ್ಪಿನ ವಿರುದ್ಧ ೧೪ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟ್ ಅಕ್ಟೋಬರ್ ತಿಂಗಳಲ್ಲಿ ಪ್ರಕರಣದ ವಿಚಾರಣೆ ಆರಂಭಿಸಬೇಕಾಗಿತ್ತು. ಆದರೆ ಪ್ರಕರಣದ ತ್ವರಿತ ವಿಚಾರಣೆ ನಡೆಸಬೇಕು ಎಂಬುದಾಗಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಸಿಜೆಐ ಗೊಗೋಯಿ ಅವರು ನ್ಯಾಯಾಲಯಕ್ಕೆತನ್ನದೇ ಆದ್ಯತೆಗಳಿವೆ ಎಂದು ಹೇಳಿದ್ದರು. ಪ್ರಕರಣವನ್ನು ರೀತಿಯಾಗಿ ಮುಂದೂಡಿದ್ದು ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಬಲಪಂಥೀಯ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಿಸಲು ಅನುಕೂಲವಾಗುವಂತೆ ಕಾನೂನು ಅಥವಾ ಸುಗ್ರೀವಾಜ್ಞೆ (ಎಕ್ಸಿಕ್ಯೂಟಿವ್ ಆದೇಶ) ಹೊರಡಿಸುವಂತೆ ಸಂಘಟನೆಗಳು ಆಗ್ರಹಿಸಿದ್ದವು. ಆದರೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಪ್ರಕ್ರಿಯೆ ಮುಗಿದು ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಕಾಯುವುದು ಎಂದು ಹೇಳಿದ್ದರು. ಜನವರಿ ೪ರಂದು ಪ್ರಕರಣವನ್ನು ಎತ್ತಿಕೊಂಡಿದ್ದ ಸಿಜೆಐ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿ ಎಸ್ ಕೆ ಕೌಲ್ ಅವರ ಪೀಠವು, ಉಭಯ ಕಡೆಗಳ ವಕೀಲರಿಗೂ ಮಾತನಾಡಲು ಅವಕಾಶವನ್ನೇ ನೀಡದೆ, ಕೇವಲ ೧೦ ಸೆಕೆಂಡ್ ಕಲಾಪ ನಡೆಸಿ, ಜನವರಿ ೧೦ರ ವೇಳೆಗೆ ಹೊಸ ತ್ರಿಸದಸ್ಯ ಪೀಠವನ್ನು ರಚಿಸಲಾಗುವುದು ಮತ್ತು ಅದು ಅಯೋಧ್ಯಾ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ಯಾವುದೇ ಆದೇಶವನ್ನು ಹೊರಡಿಸುವುದು ಎಂದು ಹೇಳಿತ್ತು. ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಹಿಂದೆ ಸರಿದ ಬಳಿಕ ಅವರ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಿ, ಜನವರಿ ೨೯ರಿಂದ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಆದೇಶ ನೀಡಿತು. ವಿಚಾರಣೆಗೆ ಮುನ್ನ ದಾಖಲೆಗಳ ಅನುವಾದವೂ ಆಗಬೇಕಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಸಂಸ್ಕೃತ, ಹಿಂದಿ, ಉರ್ದು, ಪರ್ಶಿಯನ್, ಗುರುಮುಖಿ, ಅರೇಬಿಯನ್ ಇತ್ಯಾದಿ ಭಾಷೆಗಳಲ್ಲಿ ಇವೆ. ಇವುಗಳನ್ನು ಭಾಷಾಂತರ ಮಾಡಬೇಕಾಗಿದ್ದು, ಅಧಿಕೃತ ಭಾಷಾಂತರಗಾರರ ನೆರವು ಪಡೆಯುವಂತೆ ನ್ಯಾಯಾಲಯ ರಿಜಿಸ್ಟ್ರಾರ್ ಅವರಿಗೆ ನಿರ್ದೇಶಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ೮೮ ಸಾಕ್ಷಿಗಳ ಹೇಳಿಕೆಯನ್ನು ಅಲಹಾಬಾದ್ ಹೈಕೋರ್ಟ್ ದಾಖಲಿಸಿತ್ತು. ದಾಖಲೆಗಳು ,೮೮೬ ಪುಟಗಳಷ್ಟಿವೆ. ೨೫೭ ದಾಖಲೆಗಳನ್ನು ಹೈಕೋರ್ಟ್ ಪರೀಶೀಲನೆಗೆ ಒಳಪಡಿಸಿತ್ತು. ಹೈಕೋರ್ಟ್ ಆದೇಶವೇ ,೩೦೪ ಪುಟಗಳಷ್ಟಿದ್ದು, ಅನುಬಂಧಗಳು ಸೇರಿ ೮೦೦೦ ಪುಟಗಳನ್ನು ಮೀರಿದೆ. ಇವೆಲ್ಲದರ ಮೇಲೂ ನ್ಯಾಯಪೀಠ ಕಣ್ಣಾಡಿಸಬೇಕಾಗಿದೆ. ವಕೀಲರಾದ ತುಷಾರ್ ಮೆಹ್ತ, ಹರೀಶ್ ಸಾಳ್ವೆ, ಸಿ.ಎಸ್. ವೈದ್ಯನಾಥನ್, ಪಿಎಸ್ ನರಸಿಂಹ ಅವರು ಹಿಂದುಗಳ ಪರ ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದರೆ, ರಾಜೀವ್ ಧವನ್, ರಾಜು ರಾಮಚಂದ್ರನ್, ದುಷ್ಯಂತ ದವೆ, ಶೇಖರ್ ನಫಡೆ, ಮೀನಾಕ್ಷಿ ಅರೋರಾ ಮುಸ್ಲಿಮ್ ಕಕ್ಷಿದಾರರ ಪರ ವಾದ ಮಾಡುತ್ತಿದ್ದಾರೆ.

2019: ನವದೆಹಲಿ: ಸಾಮಾನ್ಯ ವರ್ಗದ ಬಡವರಿಗೆ ನೌಕರಿ ಮತ್ತು ಶಿಕ್ಷಣದಲ್ಲಿ ಶೇಕಡಾ ೧೦ ಮೀಸಲಾತಿ ಕಲ್ಪಿಸಿದ ೧೨೪ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು (೨೦೧೯) ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಯಿತು. ತಿದ್ದುಪಡಿಯು ಸುಪ್ರೀಂಕೋರ್ಟ್ ಮೀಸಲಾತಿ ಮೇಲೆ ವಿಧಿಸಿದ್ದ ಶೇಕಡಾ ೫೦ರ ಮಿತಿಯನ್ನು ಉಲ್ಲಂಘಿಸಿದೆ ಎಂದು ಯುತ್ ಫಾರ್ ಈಕ್ವಾಲಿಟಿ ಸಮೂಹ ಮತ್ತು ಡಾ. ಕೌಶಲ್ ಕಾಂತ್ ಮಿಶ್ರ ಅವರು ಸಲ್ಲಿಸಿರುವ ಅರ್ಜಿಯು ಹೇಳಿತು.  ಸಂವಿಧಾನಕ್ಕೆ ಅಳವಡಿಸಲಾಗುತ್ತಿರುವ ನಾಲ್ಕು ಷರತ್ತುಗಳಲ್ಲಿ ಪ್ರತಿಯೊಂದು ಕೂಡಾ ಸಂವಿಧಾನದ ಒಂದಲ್ಲ ಒಂದು ಮೂಲ ಲಕ್ಷಣವನ್ನು ಉಲ್ಲಂಘಿಸುತ್ತದೆ ಮತ್ತು ಅದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದೆ. ಸುಪ್ರೀಂಕೋರ್ಟಿನ ೧೩ ನ್ಯಾಯಮೂರ್ತಿಗಳ ಪೀಠವೊಂದು ೧೯೭೩ರಲ್ಲಿಮೂಲ ರಚನೆ ಸಿದ್ಧಾಂತವನ್ನು ಪ್ರತಿಪಾದಿಸಿದ್ದು, ಸಂಸತ್ತು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು ಆದರೆ ಅದರ ಮೂಲ ಹಾಗೂ ಅತ್ಯಗತ್ಯ ಅತ್ಯಗತ್ಯ ವೈಶಿಷ್ಟ್ಯಗಳನ್ನು ಬದಲಾಯಿಸುವಂತಿಲ್ಲ ಎಂದು ಹೇಳಿತ್ತು ಎಂದು ಅರ್ಜಿ ಪ್ರತಿಪಾದಿಸಿತು. ಅರ್ಜಿಯ ಪ್ರಕಾರ ಮಸೂದೆಯ ನಾಲ್ಕು ಪ್ರಮುಖ ಲಕ್ಷಣಗಳು ಯಾವುವು ಎಂದರೆ ಅದು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಕ್ಕೆ ಸೇರದ ಯಾವುದೇ ಆರ್ಥಿಕ ದುರ್ಬಲ ವರ್ಗದ ನಾಗರಿಕರಿಗೆ ಮೀಸಲಾತಿಯನ್ನು ಕಲ್ಪಿಸುತ್ತದೆ. ತಿದ್ದುಪಡಿಯ ಪ್ರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡಾ ಬಡವರ್ಗಗಳಿಗೆ ಶೇಕಡಾ ೧೦ರಷ್ಟು ಸ್ಥಾನಗಳನ್ನು ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆಮಸೂದೆಯು ಕೇವಲ ಸಾಮಾನ್ಯ ವರ್ಗದ ಬಡ ವರ್ಗಗಳಿಗೆ ಸ್ಥಾನಗಳನ್ನು ಮೀಸಲು ಇಡುವಂತಿಲ್ಲ, ಬದಲಾಗಿ ಎಲ್ಲ ಸಮುದಾಯಗಳನ್ನೂ ಇದಕ್ಕೆ ಸೇರ್ಪಡೆ ಮಾಡಬೇಕಾಗಿತ್ತು ಎಂದು ಅರ್ಜಿ ಪ್ರತಿಪಾದಿಸಿತು. ಕಳೆದ ಎರಡೇ ಎರಡು ದಿನಗಳ ಅವಧಿಯಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಿ ಅನುಮೋದನೆ ಪಡೆದಿರುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ರಾಜಕೀಯ ಪಕ್ಷಗಳು ವ್ಯಾಪಕವಾಗಿ ಬೆಂಬಲಿಸಿದ್ದವು. ಆದರೆ, ಮಸೂದೆಯನ್ನು ಹೆಚ್ಚಿನ ಪರಾವರ್ಶೆ ಮತ್ತು ಅಗತ್ಯ ಬದಲಾವಣೆಗಳ ಸಲುವಾಗಿ ಸಂಸದೀಯ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂಬ ಒತ್ತಾಯಗಳು ಕೇಳಿ ಬಂದಿದ್ದವು. ಮಸೂದೆಗೆ ರಾಜ್ಯಸಭೆಯ ಅನುಮೋದನೆಯೊಂದಿಗೆ ಬುಧವಾರ ಸಂಸತ್ತಿನ ಸಮ್ಮತಿ ಮುದ್ರೆ ಬಿದ್ದ ತತ್ ಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಅವರುಇದು ಸಂವಿಧಾನ ನಿರ್ಮಾಪಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಸಲ್ಲಿಸಿದ ಶ್ರದ್ಧಾಂಜಲಿ ಎಂದು ಹೇಳಿದ್ದರು. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಇತರರು ಮೀಸಲಾತಿ ಮೇಲೆ ಸುಪ್ರೀಂಕೋರ್ಟ್ ವಿಧಿಸಿರುವ ಶೇಕಡಾ ೫೦ರ ಮಿತಿಯು ಜಾತಿ ಅಥವಾ ಸಮುದಾಯದ ಆಧಾರದಲ್ಲಿ ಮೀಸಲಿಡಲಾದ ಸ್ಥಾನಗಳಿಗೆ ಮಾತ್ರ ಅನ್ವಯಿಸುತ್ತದೆ, ಆರ್ಥಿಕ ಸ್ಥಿತಿಗತಿಯ ಮೇಲೆ ಅಲ್ಲ ಎಂದು ಪ್ರತಿಪಾದಿಸಿದ್ದರುವಿರೋಧ ಪಕ್ಷಗಳು ಒಂದು ವಿಷಯದ ಬಗ್ಗೆ ಸಂಪೂರ್ಣವಾಗಿ ಸಮಾಧಾನಗೊಂಡಿರಲಿಲ್ಲಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು ಮಸೂದೆಯು ಮೂಲಭೂತ ದೋಷಗಳಿಂದ ಕೂಡಿದೆ ಎಂದು ಟೀಕಿಸಿ, ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದ ಕಾನೂನು ಅಧಿಕಾರಿಯನ್ನು ಹೆಸರಿಸಿ ಎಂದು ಸರ್ಕಾರವನ್ನು ಆಗ್ರಹಿಸಿದ್ದರು. ಇತರ ವಿರೋಧೀ ನಾಯಕರೂ ಮಸೂದೆಯು ನ್ಯಾಯಾಂಗ ಪರಾಮರ್ಶೆಯನ್ನು ತಾಳಿಕೊಳ್ಳಬಲ್ಲುದೇ ಎಂಬುದಾಗಿ ಸರ್ಕಾರದಿಂದ ತಿಳಿಯಬಯಸಿದ್ದರು. ಲೋಕಸಭಾ ಚುನಾವಣೆಗಳಿಗೆ ಕೆಲವೇ ತಿಂಗಳುಗಳ ಮುನ್ನ ಮಸೂದೆ ಅಂಗೀಕರಿಸಿದ್ದೇವೆ ಎಂಬುದಾಗಿ ಪ್ರತಿಪಾದಿಸಿಕೊಳ್ಳಲು ಆಡಿರುವ ಆಟ ಇದಲ್ಲವೇ ಎಂದೂ ಅವರು ಟೀಕಿಸಿದ್ದರು. ಶೇಕಡಾ ೧೦ರ ಮೀಸಲಾತಿಯು ಸಾಮಾನ್ಯ ವರ್ಗದ ೧೯ ಕೋಟಿ ಜನರಿಗೆ ಅನ್ವಯಿಸುತ್ತದೆ. ಮತ್ತು ಮೀಸಲಾತಿಗಾಗಿ ಆಗ್ರಹಿಸುತ್ತಿದ್ದ ಪಾಟೀದಾರರು, ಜಾಟರು, ಗುಜ್ಜಾರರು ಮತ್ತು ಮರಾಠರು ಮತ್ತಿತರ ಪ್ರಮುಖ ಸಮುದಾಯಗಳ ಮೇಲ್ವರ್ಗದ ಜಾತಿಗಳನ್ನು ತಲುಪಲು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತಿಕ ಮೈತ್ರಿಕೂಟ ನಡೆಸಿರುವ ಯತ್ನ ಇದು ಎಂದು ಭಾವಿಸಲಾಗಿತ್ತು.  ರಾಜಸ್ಥಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತಿತರ ಉತ್ತರ ಮತ್ತು ಕೇಂದ್ರ ಭಾರತದ ರಾಜ್ಯಗಳ ಜನಸಂಖ್ಯೆಯಯಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಮೇಲ್ವರ್ಗಗಳ ಜನರಿದ್ದಾರೆ. ಹರಿಯಾಣ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟರು ಮತ್ತು ಗುಜ್ಜಾರರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ.
ಜನವರಿ , ಮತ್ತು ೧೦ ಮೂರು ದಿನಾಂಕಗಳ ದಿನಗಳಲ್ಲಿ ಕ್ರಮವಾಗಿ ದಿಢೀರನೆ ಕೇಂದ್ರ ಸಚಿವ ಸಂಪುಟಲೋಕಸಭೆ ಮತ್ತು ರಾಜ್ಯಸಭೆಯಿಂದ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಪಡೆಯುವಲ್ಲಿ ಸಫಲವಾದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕ್ರಮವನ್ನು  ’ಮಾಸ್ಟರ್ ಸ್ಟ್ರೋಕ್ ಮತ್ತುಆಟ ಬದಲಿಸಬಲ್ಲ ದಾಳ ಎಂಬುದಾಗಿ ಸರ್ಕಾರದ ಧುರೀಣರು ಅಭಿಪ್ರಾಯ ಪಟ್ಟಿದ್ದರು.

2019: ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.  ಅಜಯ್ ಮಾಕನ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರಿಂದ ಸ್ಥಾನ ತೆರವಾಗಿತ್ತುಶೀಲಾ ದೀಕ್ಷಿತ್ ಅವರನ್ನು ದೆಹಲಿ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆಯಾಗಿ ನೇಮಕ ಮಾಡಿದ ಬಗ್ಗೆ ಪ್ರಕಟಣೆ ನೀಡಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ದೆಹಲಿ ಘಟಕದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಿ.ಸಿ.ಚಾಕೋ ಅವರುದೀಕ್ಷಿತ್ ಅವರಿಗೆ ದೇವೇಂದರ್ ಯಾದವ್, ಹರೂನ್ ಯೂಸುಫ್ ಮತ್ತು ರಾಜೇಶ್ ಲಿಲೋಟಿಯಾ ಮೂವರು ಕಾರ್ಯಾಧ್ಯಕ್ಷರು ನೆರವಾಗಲಿದ್ದಾರೆ ಎಂದು ಹೇಳಿದರು. ಆಮ್ ಆದ್ಮಿ ಪಾರ್ಟಿ (ಆಪ್) ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ದೆಹಲಿ ಘಟಕದಲ್ಲಿ ಯಾವುದೇ ಮಾತುಕತೆ ನಡೆದಿಲ್ಲ. ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಸ್ವಂತವಾಗಿ ಸ್ಪರ್ಧಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ಚಾಕೋ ನುಡಿದರು.  ನೂತನ ಮುಖ್ಯಸ್ಥೆ ಶೀಲಾ ದೀಕ್ಷಿತ್ ಅವರನ್ನು ಅಭಿನಂದಿಸಿರುವ ಅಜಯ್ ಮಾಕನ್ ಅವರು, ದೀಕ್ಷಿತ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ರಾಷ್ಟ್ರದ ರಾಜಧಾನಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ ಮತ್ತು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿರುದ್ಧ ಬಲಾಢ್ಯ ಪ್ರತಿಪಕ್ಷದ ಪಾತ್ರವನ್ನು  ನಿರ್ವಹಿಸಲಿದೆ ಎಂದು ಹೇಳಿದರು. ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಶೀಲಾ ದೀಕ್ಷಿತ್ ಅವರಿಗೆ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು. ಸಂಸದೀಯ ಕಾರ್ಯದರ್ಶಿ ಮತ್ತು ಸಂಪುಟ ಸಚಿವನಾಗಿ ಅವರ ಕೈಕೆಳಗೆ ಕೆಲಸ ಮಾಡುವ ಸದವಕಾಶ ನನಗೆ ಪ್ರಾಪ್ತವಾಗಿತ್ತು. ಅವರ ನಾಯಕತ್ವದಲ್ಲಿ ಪಕ್ಷವು ಮೋದಿ ಮತ್ತು ಕೇಜ್ರಿವಾಲ್ ಸರ್ಕಾರಗಳ ವಿರುದ್ಧ ಬಲಾಢ್ಯ ವಿರೋಧ ಪಕ್ಷದ ಪಾತ್ರ ವಹಿಸುವುದು ಎಂದು ನಾನು ನಂಬುವೆ ಎಂದು ಮಾಕನ್ ಟ್ವೀಟ್ ಮಾಡಿದರು. ಎಂಬತ್ತರ ಹರೆಯದ ಶೀಲಾ ದೀಕ್ಷಿತ್ ಅವರು ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದರು.


2018: ನವದೆಹಲಿ:  ಅತ್ಯಂತ ಸಾಹಸಪೂರ್ಣ ಕ್ರೀಡೆಯಾದ ಸ್ಕೀಯಿಂಗ್ನಲ್ಲಿ ಆಂಚಲ್ ಠಾಕೂರ್ ಭಾರತದ ಚೊಚ್ಚಲ ಅಂತರಾಷ್ಟ್ರೀಯ ಪದಕ ಗೆದ್ದ ಸಾಧನೆ ಮಾಡಿದರು. ಮೂಲಕ ವಿಶ್ವ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದರು.  ಆಂಚಲ್ ಸಾಧನೆಗೆ ಮನ ಸೋತಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕ್ರೀಡಾ ಸಚಿವ ರಾಜ್ವರ್ಧನ್ ಸಿಂಗ್ ರಾಥೋಡ್ ಅಭಿನಂದನೆಗಳನ್ನು ಸಲ್ಲಿಸಿದರು. ಟರ್ಕಿಯಲ್ಲಿ ಫೇಡರೇಷನ್ ಇಂಟರ್ನ್ಯಾಷನಲ್ ಡೆ ಸ್ಕಿ (FIS) ಆಯೋಜಿಸಿರುವ ಆಲ್ಪೈನ್ ಎಡ್ಜರ್ 3200 ಕಪ್ ಸ್ಲಾಲೋಮ್ ರೇಸ್ ವಿಭಾಗದಲ್ಲಿ ಆಂಚಲ್ ಕಂಚಿನ ಪದಕ ಗೆದ್ದರು. ಕ್ರಿಕೆಟ್ ಪ್ರಿಯ ಭಾರತದಲ್ಲಿ ಮೂಲ ಸೌಕರ್ಯಗಳ ಕೊರತೆಯ ಹೊರತಾಗಿಯೂ ಸ್ಕೀಯಿಂಗ್ನಲ್ಲಿ 21 ಹರೆಯದ ಮನಾಲಿ ಯುವತಿ ಆಂಚಲ್ ಸ್ಫೂರ್ತಿದಾಯಕ ಸಾಧನೆ ಮಾಡಿದರು.

2018: ನವದೆಹಲಿ: ಖಾಸಗಿತನಕ್ಕೆ ಧಕ್ಕೆ ಬರುತ್ತದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಮ್ ಪರಿಶೀಲನೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ೧೨ ಸಂಖ್ಯೆಗಳ ಬಯೋಮೆಟ್ರಿಕ್ ಐಡಿ (ವಿಶಿಷ್ಟ ಸಂಖ್ಯೆ) ನೀಡುವ ಬದಲಿಗೆ ಆಧಾರ್ ಕಾರ್ಡುದಾರರೇ ಸ್ವತಃ ಸೃಷ್ಟಿಸಬಹುದಾದವಾಸ್ತವ ಐಡಿಯನ್ನು (ವರ್ಚುವಲ್ ಐಡಿ) ಇನ್ನು ಮುಂದೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾದ ವೆಬ್ ಸೈಟಿನಿಂದ ಪಡೆದು ನೀಡಬಹುದು.   ಹೊಸ ವ್ಯವಸ್ಥೆಯನ್ನು ಪ್ರಾಧಿಕಾರ ಈದಿನದಿಂದಲೇ  ಅಳವಡಿಸಿದೆ. ಹೊಸ ವ್ಯವಸ್ಥೆಯು ಬಳಕೆದಾರರಿಗೆ ದೃಢೀಕರಣ ಸಂದರ್ಭದಲ್ಲಿ ಆಧಾರ್ ನಂಬರ್ ನೀಡುವ ಅನಿವಾರ್ಯತೆಯನ್ನು ತಪ್ಪಿಸುತ್ತದೆ.  ವಾಸ್ತವ ಐಡಿಯು  ಬಳಕೆದಾರನ ಬಯೋಮೆಟ್ರಿಕ್ ಗುರುತುಗಳ ಜೊತೆಗೆ ೧೬ ಸಂಖ್ಯೆಗಳನ್ನು ಹೊಂದಿರುತ್ತದೆ. ವಾಸ್ತವ ಐಡಿಯು ಮೊಬೈಲ್ ಕಂಪೆನಿಯಂತಹ ಯಾವುದೇ ಏಜೆನ್ಸಿಗೆ ಹೆಸರು, ವಿಳಾಸ ಮತ್ತು ಫೊಟೋದಂತಹ ಪರಿಶೀಲನೆಗಷ್ಟೇ ಸಾಕಾಗುವ ವಿವರಗಳನ್ನು ಮಾತ್ರ ನೀಡುತ್ತದೆ.  ಬಳಕೆದಾರರು ಅವರು ಬಯಸುವಷ್ಟುವಾಸ್ತವ ಐಡಿಗಳನ್ನು ಸೃಷ್ಟಿಸಬಹುದು. ಹೊಸ ಐಡಿ ಸೃಷ್ಟಿ ಆಗುತ್ತಿದ್ದಂತೆಯೇ ಹಳೆ ಐಡಿ ತಾನೇ ತಾನಾಗಿ ರದ್ದಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.  ಪ್ರಾಧಿಕಾರವುಸೀಮಿತ ಕೆವೈಸಿ ವ್ಯವಸ್ಥೆಯನ್ನೂ ಜಾರಿಗೆ ತಂದಿತು.  ಇದರ ಅಡಿಯಲ್ಲಿ ಬಳಕೆದಾರರು ನಿರ್ದಿಷ್ಟ ಸೇವೆ ನೀಡುವ ಅಧಿಕೃತ ಸಂಸ್ಥೆಗೆ ಅಗತ್ಯ ಆಧಾರಿತ ಸೀಮಿತ ಕೆವೈಸಿಯನ್ನಷ್ಟೇ ನೀಡಿದರೆ ಸಾಕು.  ವಾಸ್ತವ ಐಡಿ ತಾತ್ಕಾಲಿಕವಾದುದಾಗಿದ್ದು, ವ್ಯಕ್ತಿಯ ಆಧಾರ್ ನಂಬರನ್ನು ಅನುಸರಿಸಿ ಅದನ್ನು ವಿನ್ಯಾಸಗೊಳಿಸಲಾಗಿದೆ. ನಂಬರನ್ನು ಹಿಂಪಡೆಯಲು ಸಾಧ್ಯವಿದೆ. ಆಧಾರ್ ನೀಡುವ ಸಂಸ್ಥೆಯು ೨೦೧೮ರ ಮಾರ್ಚ್ ೧ರಿಂದ  ವಾಸ್ತವ ಐಡಿಗಳನ್ನು ಸ್ವೀಕರಿಸಲಿದೆ.  ೨೦೧೮ರ ಜೂನ್ ೧ರಿಂದ ದೃಢೀಕರಣ ಬಯಸುವ ಎಲ್ಲ ಸಂಸ್ಥೆಗಳೂ ಬಳಕೆದಾರರಿಂದ ಕಡ್ಡಾಯವಾಗಿವಾಸ್ತವ ಐಡಿಗಳನ್ನು ಪಡೆಯುವುದು ಕಡ್ಡಾಯವಾಗಲಿದೆ. ಹೊಸ ಹೆಚ್ಚುವರಿ ವ್ಯವಸ್ಥೆಯನ್ನು ನಿಗದಿತ ಗಡುವಿನ ಒಳಗೆ ಅಳವಡಿಸಿಕೊಳ್ಳದ ಸಂಸ್ಥೆಗಳು ಆರ್ಥಿಕ ಪ್ರೋತ್ಸಾಹಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆಧಾರ್ ನಂಬರ್ ಹೊಂದಿರುವವರು ಆಧಾರ್ ಸಂಖ್ಯೆಗೆ ಬದಲಾಗಿವಾಸ್ತವ ಐಡಿಯನ್ನು ದೃಢಪಡಿಸಬೇಕಾದ ಯಾವುದೇ ಸಂದರ್ಭದಲ್ಲಿ ಅಥವಾ ಕೆವೈಸಿ ಸೇವೆಗಳಿಗೆ ಬೇಕಾದಾಗ ಬಳಸಬಹುದು. ಆಧಾರ್ ನಂಬರನ್ನು ಬಳಸುವ ರೀತಿಯಲ್ಲೇವಾಸ್ತವ ಐಡಿಯನ್ನು ಬಳಸಿ ದೃಢೀಕರಣ ಮಾಡಬಹುದು ಎಂದು ಪ್ರಾಧಿಕಾರದ ಸುತ್ತೋಲೆ ತಿಳಿಸಿತು. ವ್ಯಕ್ತಿಗಳ ವೈಯಕ್ತಿಕ ಹಾಗೂ ಜನಾಂಗ ಮಾಹಿತಿಯ ಸಂಗ್ರಹ ಮತ್ತು ದಾಸ್ತಾನು ಮಾಡುವ ಬಗೆಗೆ ವ್ಯಕ್ತವಾದ ತೀವ್ರ ಕಳವಳದ ಹಿನ್ನೆಲೆಯಲ್ಲಿ ಪ್ರಾಧಿಕಾರ ಕ್ರಮವನ್ನು ಕೈಗೊಂಡಿದೆ. ದೃಢೀಕರಣದ ಸಂದರ್ಭದಲ್ಲಿ ತಮ್ಮ ಬೆರಳಚ್ಚುಗಳ ಜೊತೆಗೆವಾಸ್ತವ ಐಡಿಯನ್ನು ಜನರು ನೀಡಬಹುದು. ವ್ಯಕ್ತಿಯ ಆಧಾರ್ ನಂಬರಿಗೆ ಅನುಗುಣವಾಗಿಯೇವಾಸ್ತವ ಐಡಿ ಸೃಷ್ಟಿಯಾಗುವುದರಿಂದ ದೃಢೀಕರಣಕ್ಕೆ ಆಧಾರ್ ನಂಬರನ್ನೇ ನೀಡಬೇಕಾದ ಅಗತ್ಯದ ನಿವಾರಣೆ ಆಗಲಿದೆ. ಇದರಿಂದ ವಿವಿಧ ಸಂಸ್ಥೆಗಳು ಆಧಾರ್ ನಂಬರ್ ಸಂಗ್ರಹಿಸುವುದೂ ಕಡಿಮೆಯಾಗಲಿದೆ.  ಬಳಕೆದಾರರಷ್ಟೇವಾಸ್ತವ ಐಡಿ ಸೃಷ್ಟಿಸಬಹುದು: ಪ್ರಾಧಿಕಾರದ ಪ್ರಕಾರ ದೃಢೀಕರಣ ಮಾಡುವ ಸಂಸ್ಥೆಗಳು ಆಧಾರ್ ಕಾರ್ಡುದಾರನ ಪರವಾಗಿವಾಸ್ತವ ಐಡಿಯನ್ನು ಸೃಷ್ಟಿಸುವಂತಿಲ್ಲ. ಬಳಕೆದಾರನಷ್ಟೇ ತನ್ನವಾಸ್ತವ ಐಡಿಯನ್ನು ಸೃಷ್ಟಿಸಿಕೊಳ್ಳಬಹುದು. ಬಳಕೆದಾರರಿಗೆವಾಸ್ತವ ಐಡಿಯನ್ನು ಒದಗಿಸಲು ಸಾಧ್ಯವಾಗುವಂತೆ ಖಚಿತಪಡಿಸಲು ತನ್ನ ಎಲ್ಲ ದೃಢೀಕರಣ ಸಂಸ್ಥೆಗಳು ಮತ್ತು ಕೆವೈಸಿ ಸೇವೆಗಳನ್ನು ನೀಡುವ ಸಂಸ್ಥೆಗಳಿಗೆ ಪ್ರಾಧಿಕಾರ ಸೂಚನೆಗಳನ್ನು ನೀಡುತ್ತಿದೆ. ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಗುರುತಿನ ಸಾಕ್ಷ್ಯವಾಗಿ ನೀಡಬೇಕಾಗಿರುವುದು ಅನಿವಾರ್ಯವಾದ್ದರಿಂದ, ಈವರೆಗೆ ಪ್ರಾಧಿಕಾರವು ೧೧೯ ಕೋಟಿ ಬಯೋಮೆಟ್ರಿಕ್ ಗುರುತಿನ ಸಂಖ್ಯೆಗಳನ್ನು ನೀಡಿದೆ. ಉದಾಹರಣೆಗೆ: ಕಪ್ಪು ಹಣವನ್ನು ಕಿತ್ತು ಹಾಕುವ ಸಲುವಾಗಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸಲು ಸರ್ಕಾರ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಕಡ್ಡಾಯಗೊಳಿಸಿದೆ. ಇದೇ ರೀತಿ ಮೊಬೈಲ್ ಫೋನ್ ಬಳಕೆದಾರರನ್ನು ಗುರುತಿಸುವ ಸಲುವಾಗಿ ಸಿಮ್ ಗಳಿಗೂ ಅದನ್ನು ಜೋಡಿಸಿದೆ.

2018: ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್ ದಾಖಲೆಯನ್ನು ಅಪಘಾನಿಸ್ತಾನದ ಯುವ ಬ್ಯಾಟ್ಸ್ಮನ್ ಬಾಹೀರ್ ಶಾ ಮುರಿದರು. 18 ಹರೆಯದ ಯುವ ಆಟಗಾರ, ಏಳು ಪಂದ್ಯಗಳ12 ಇನ್ನಿಂಗ್ಸ್ಗಳಲ್ಲಿ ಬರೋಬ್ಬರಿ 121.77 ಸರಾಸರಿ 1096 ರನ್ ಪೇರಿಸಿದರು.  ಮೂಲಕ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ಸಂದರ್ಭದಲ್ಲಿ ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಕಾಯ್ದುಕೊಂಡ ದಾಖಲೆಗೆ ಪಾತ್ರರಾದರು. ಸ್ಪೀನ್ ಘಾರ್ ರಿಜಿಯನ್ ಪರ ಕನಸಿನ ಡೆಬ್ಯು ಮಾಡಿಕೊಂಡಿರುವ ಬಾಹೀರ್ ಶಾ, ಎಮೊ ರಿಜಿಯನ್ ವಿರುದ್ಧದ ಪಂದ್ಯದಲ್ಲಿ 256 ರನ್ ಚಚ್ಚಿದ್ದರು. ಇದು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಅಮೊಲ್ ಮಜುಮ್ದಾರ್ ಬಾರಿಸಿದ 260 ರನ್ ನಂತರದ ಎರಡನೇ ಅತಿ ದೊಡ್ಡ ವೈಯಕ್ತಿಕ ಮೊತ್ತವಾಗಿತ್ತು. ಈಗಾಗಲೇ ಐದು ಶತಕ ಹಾಗೂ ಎರಡು ಅರ್ಧಶತಕಗಳನ್ನು ಬಾರಿಸಿರುವ ಬಾಶೀರ್, ತ್ರಿಶತಕ ಸಾಧನೆಯನ್ನು ಮಾಡಿದ್ದರು. ಮೂಲಕ ಜಾವೇದ್ ಮಿಯಾಂದಾದ್ ಬಳಿಕ ಪ್ರಥಮ ದರ್ಜೆಯಲ್ಲಿ ತ್ರಿಶತಕ ಬಾರಿಸಿದ ಎರಡನೇ ಅತಿ ಕಿರಿಯ ಬ್ಯಾಟ್ಸ್ಮನ್ ಎಂದೆನಿಸಿಕೊಂಡಿದ್ದರು.

2018: ನವದೆಹಲಿ: ಒಂದೇ ಬ್ರಾಂಡಿನ ಚಿಲ್ಲರೆ ವಹಿವಾಟು ಮತ್ತು ನಿರ್ಮಾಣ ಅಭಿವೃದ್ಧಿಗಳಿಗೆ ಸರ್ಕಾರದ ಯಾವುದೇ ಅನುಮತಿ ಇಲ್ಲದೆಯೇ ಶೇಕಡಾ ೧೦೦ರಷ್ಟು ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಮಾಡಲು ಸಾಗರದಾಚೆಯ ಹೂಡಿಕೆದಾರರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತು. ವಿದೇಶೀ ವಿಮಾನಯಾನ ಸಂಸ್ಥೆಗಳಿಗೆ ಏರ್ ಇಂಡಿಯಾದಲ್ಲಿ ಶೇಕಡಾ ೪೯ರಷ್ಟು ಹೂಡಿಕೆ ಮಾಡಲು ಅನುಮತಿ ನೀಡುವ ಸಂಬಂಧ ವಿದೇಶೀ ನೇರ ಬಂಡವಾಳ ಹೂಡಿಕೆ ನಿಯಮಾವಳಿಗಳಲ್ಲಿ ಬದಲಾವಣೆಗಳಿಗೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. ಆದರೆ ವಿಚಾರದಲ್ಲಿ ಎರಡು ಷರತ್ತುಗಳನ್ನು ವಿಧಿಸಲಾಯಿತು: () ವಿದೇಶೀ ಏರ್ಲೈನ್ (ಗಳು) ಸೇರಿದಂತೆ ವಿದೇಶೀ ಬಂಡವಾಳ ಹೂಡಿಕೆಯು ನೇರವಾಗಿ ಅಥವಾ ಪರೋಕ್ಷವಾಗಿ ಶೇಕಡಾ ೪೯ನ್ನು ಮೀರಬಾರದು. () ಏರ್ ಇಂಡಿಯಾ ಮಾಲೀಕತ್ವ ಮತ್ತು ಪರಿಣಾಮಕಾರಿ ನಿಯಂತ್ರಣವು ಭಾರತೀಯ ರಾಷ್ಟ್ರೀಯನಲ್ಲಿಯೇ ಮುಂದುವರೆಯುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿತು. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕುರಿತ ನಿರ್ಧಾರಗಳನ್ನು ಈದಿನ ತೆಗೆದುಕೊಳ್ಳಲಾಯಿತು. ಭಾರತದಲ್ಲಿ ವ್ಯವಹಾರ ನಡೆಸುವುದನ್ನು ಸರಳ-ಸುಲಭಗೊಳಿಸಲು ನಿರ್ಧಾರಗಳು ನೆರವಾಗಲಿವೆ. ಜೊತೆಗೇ ದೊಡ್ಡ ಪ್ರಮಾಣದಲ್ಲಿ ವಿದೇಶೀ ನೇರ ಬಂಡವಾಳ ಹರಿದುಬರಲು ಅನುಕೂಲವಾಗಲಿದೆ. ಇದರಿಂದ ಹೂಡಿಕೆ ವೃದ್ಧಿಯ ಜೊತೆಗೇ ಆದಾಯ ಮತ್ತು ಉದ್ಯೋಗಾವಕಾಶ ಹೆಚ್ಚಲಿದೆ ಎಂದು ಹೇಳಿಕೆ ತಿಳಿಸಿತು.  ರಿಯಲ್ ಎಸ್ಟೇಟ್ ಬ್ರೋಕಿಂಗ್ ಸೇವೆಯು ರಿಯಲ್ ಎಸ್ಟೇಟ್ ವ್ಯವಹಾರ ಆಗುವುದಿಲ್ಲ. ಆದ್ದರಿಂದ ಅದು ನೇರವಾಗಿ ಸರ್ಕಾರಿ ಅನುಮತಿ ರಹಿತವಾದ ಶೇಕಡಾ ೧೦೦ರ ಬಂಡವಾಳ ಹೂಡಿಕೆಗೆ ಅರ್ಹವಾಗಲಿದೆ. ವಿದ್ಯುತ್ ವಿನಿಮಯಗಳಲ್ಲಿ ಹೂಡಿಕೆ: ವಿದ್ಯುತ್ ವಿನಿಮಯಗಳಲ್ಲಿ ಪ್ರಾಥಮಿಕ ಮಾರುಕಟ್ಟೆಗಳ ಮೂಲಕ ಎಫ್ಐಐಗಳು/ ಎಫ್ಪಿಐ ಹೂಡಿಕೆಗೆ ಅನುಮತಿ ನೀಡಲೂ ಸಚಿವ ಸಂಪುಟ ನಿರ್ಧರಿಸಿತು. ಈವರೆಗೆ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ (ವಿದ್ಯುತ್ ಮಾರುಕಟ್ಟೆ) ನಿಯಮಾವಳಿಗಳು. ೨೦೧೦ರ ಅಡಿಯಲ್ಲಿ ವಿದ್ಯುತ್ ವಿನಿಮಯಗಳಲ್ಲಿ ಸರ್ಕಾರದ ಅನುಮತಿ ರಹಿತವಾಗಿ ಶೇಕಡಾ ೪೯ರಷ್ಟು ನೇರ ವಿದೇಶೀ ಬಂಡವಾಳ (ಎಫ್ ಡಿಐ) ಹೂಡಿಕೆಗೆ ಅವಕಾಶವಿತ್ತು. ಏನಿದ್ದರೂ, ಎಫ್ ಐಐ/ ಎಫ್ ಪಿಐ ಖರೀದಿಗಳನ್ನು ಅನಂತರದ ಮಾರುಕಟ್ಟೆಗಳಿಗೆ ಮಾತ್ರ ಮಿತಿಗೊಳಿಸಲಾಯಿತು.

2018: ನವದೆಹಲಿ: ಶಾಸನಕರ್ತರು ವಕೀಲರಾಗಿಯೂ ಮುಂದುವರೆಯಬಹುದೇ ಎಂಬುದಾಗಿ ಪರಿಶೀಲಿಸುವ ಸಲುವಾಗಿ ಭಾರತದ ಬಾರ್ ಕೌನ್ಸಿಲ್ (ಬಾರ್ ಕೌನ್ಸಿಲ್ ಆಫ್ ಇಂಡಿಯಾ- ಬಿಸಿಐ) ತಜ್ಞರ ಸಮಿತಿಯೊಂದನ್ನು ರಚಿಸಿದ್ದು, ವಕೀಲರಾಗಿರುವ ಸುಮಾರು ೫೦೦ಕ್ಕೂ ಹೆಚ್ಚು ಸಂಸದರು, ವಿಧಾನಸಭಾ ಸದಸ್ಯರು ಮತ್ತು ವಿಧಾನಪರಿಷತ್ ಸದಸ್ಯರಿಗೆ ನೋಟಿಸ್ ಗಳನ್ನು ಜಾರಿಮಾಡಲು ತೀರ್ಮಾನಿಸಿತು.  ಬಿಸಿಐ ದಾಖಲಾತಿಗಳನ್ನು ರದ್ದು ಪಡಿಸಿದರೆ ಆಗ ಅವರು ಸಹಜ ನ್ಯಾಯದ ಉಲ್ಲಂಘನೆಯಾಗಿದೆ ಎಂದು ಪ್ರತಿಪಾದಿಸುವಂತಿಲ್ಲ ಎಂಬ ಕಾರಣಕ್ಕಾಗಿ ಅವರಿಗೆ ನೋಟಿಸ್ ಗಳನ್ನು ಜಾರಿಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಜ್ಞರ ಸಮಿತಿಯ ಅಧ್ಯಕ್ಷ ವಕೀಲ ಮನನ್ ಕುಮಾರ್ ಮಿಶ್ರ ಹೇಳಿದರು. ನೋಟಿಸ್ ಒಂದು ದಿನದಲ್ಲಿ ವೃತ್ತ ಪತ್ರಿಕೆಗಳಲ್ಲಿ ಬರಲಿದ್ದು, ಒಂದು ವಾರದ ಒಳಗಾಗಿ ಅವರು ಅದಕ್ಕೆ ಉತ್ತರಗಳನ್ನು ನೀಡಬೇಕು. ಜನವರಿ ೨೨ರಂದು ಅಂತಿಮ ವಿಚಾರಣೆ ನಡೆಯುವುದು.
ವಕೀಲರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಜನಪ್ರತಿನಿಧಿಗಳಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ, ಕೆಟಿಎಸ್ ತುಳಸಿ, ಪಿ. ಚಿದಂಬರಮ್, ವಿವೇಕ್ ತಂಖಾ, ಕೆ. ಪರಾಶರನ್, ಭೂಪೇಂದ್ರ ಯಾದವ್, ಮೀನಾಕ್ಷಿ ಲೇಖಿ, ಪಿನಾಕಿ ಮಿಶ್ರ, ಸತೀಶ ಮಿಶ್ರ ಮತ್ತು ಅಶ್ವಿನಿ ಕುಮಾರ ಮತ್ತಿತರರ ಹೆಸರುಗಳು ಪರಿಶೀಲನೆಯ ವ್ಯಾಪ್ತಿಯಲ್ಲಿ ಇವೆ. ‘ಗಂಭೀರ ಹಿತಾಸಕ್ತಿ ಘರ್ಷಣೆ ಸಮಸ್ಯೆ ಎದುರಾಗಬಹುದು ಎಂಬುದಾಗಿ ಅರ್ಜಿದಾರರೊಬ್ಬರು ಆಕ್ಷೇಪಿಸಿದ ಬಳಿಕ ಸಂಸತ್ ಸದಸ್ಯರು ಮತ್ತು ಶಾಸಕರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ವಕೀಲರನ್ನು ಅನರ್ಹಗೊಳಿಸುವ ಕುರಿತ ತನ್ನ ವರದಿಯನ್ನು ಸಮಿತಿ ವಿಳಂಬಗೊಳಿಸಿತು.
ವಕೀಲರನ್ನು ಡಿಬಾರ್ ಮಾಡುವಂತೆ ಮನವಿ ಸಲ್ಲಿಸಿದ್ದ ಬಿಜೆಪಿ ನಾಯಕ ಮತ್ತು ಸುಪ್ರೀಂಕೋರ್ಟ್ ವಕೀಲ ಅಶ್ವನಿ ಉಪಾಧ್ಯಾಯ ಅವರುಸಂಸತ್ ಸದಸ್ಯರು ಮತ್ತು ಶಾಸಕರು ನ್ಯಾಯಾಧೀಶರ ವಿರುದ್ಧ ದೋಷಾರೋಪ ಮಾಡುವ ಅಧಿಕಾರ ಹೊಂದಿರುವುದರಿಂದ ಹಿತಾಸಕ್ತಿ ಘರ್ಷಣೆಯಾಗುವುದು ನಿಶ್ಚಿತ ಎಂದು ಹೇಳಿದ್ದರು. ‘ಸಂಸತ್ ಸದಸ್ಯರಿಗೆ ನ್ಯಾಯಾಧೀಶರ ವಿರುದ್ಧ ದೋಷಾರೋಪ ಹೊರಿಸುವ ಪ್ರಕ್ರಿಯೆ ಆರಂಭಿಸುವ ಅಧಿಕಾರವಿದೆ. ಅಂದರೆ ಯಾವುದಾದರೂ  ಪ್ರಕರಣದಲ್ಲಿ ಅವರ ಮುಂದೆ ಅರ್ಜಿ ಸಲ್ಲಿಸಿದಾಗ ತಮ್ಮ ಪರವಾದ ತೀರ್ಪು ನೀಡುವಂತೆ ಒತ್ತಡ ಹಾಕುವ ಶಕ್ತಿ ಅವರಿಗಿದೆ. ಇದು ಖಂಡಿತವಾಗಿ ಹಿತಾಸಕ್ತಿ ಘರ್ಷಣೆಯಾಗುತ್ತದೆ ಎಂದು ಉಪಾಧ್ಯಾಯ ಅವರು ಜನವರಿ ರಂದು ಸಲ್ಲಿಸಿದ ಹೆಚ್ಚುವರಿ ಹೇಳಿಕೆಯಲ್ಲಿ ತಿಳಿಸಿದ್ದರು.  ‘ಹೆಚ್ಚುವರಿ ಹೇಳಿಕೆಯನ್ನು ಸಲ್ಲಿಸಿರುವುದರಿಂದ ವರದಿಯನ್ನು ಈದಿನ ಮಂಡಿಸಲು ಸಾಧ್ಯವಾಗಿಲ್ಲ. ಮುಂದಿನ ಬುಧವಾರದ ವೇಳೆಗೆ ವರದಿ ಮಂಡನೆಯಾಗುವುದೆಂದು ನಾವು ನಿರೀಕ್ಷಿಸಿದ್ದೇವೆ ಎಂದು ಬಿಸಿಐ ಅಧ್ಯಕ್ಷರು ಹೇಳಿದರು. ಅರ್ಜಿಯನ್ನು ಪರಿಶೀಲಿಸುತ್ತಿರುವ ಸಮಿತಿಯಲ್ಲಿ ಭಾರತದ ಬಾರ್ ಕೌನ್ಸಿಲ್ ಉನ್ನತ ವಕೀಲರು ಹಾಗೂ ಪದಾಧಿಕಾರಿಗಳಾದ ಭೋಜ್ ಚಂದರ್ ಥಾಕುರ್, ರಮೇಶ್ಚಂದ್ರ ಜಿ. ಶಾ ಮತ್ತು ಡಿಪಿ ಧಲ್ ಅವರಿದ್ದಾರೆ. ‘ಸಂಸತ್ ಸದಸ್ಯರು ಮತ್ತು ಶಾಸಕರು ಭಾರತದ ಸಂಚಿತ ನಿಧಿಯಿಂದ ತಮ್ಮ ವೇತನಗಳನ್ನು ಪಡೆಯುತ್ತಾರೆ, ಆದ್ದರಿಂದ ಅವರು ರಾಜ್ಯದ/ ರಾಷ್ಟ್ರದ ನೌಕರ ವ್ಯಾಪ್ತಿಗೆ ಬರುತ್ತಾರೆ ಎಂದು ಅಶ್ವನಿ ಉಪಾಧ್ಯಾಯ ಪ್ರತಿಪಾದಿಸಿದ್ದರು. ಹಲವಾರು ಸಂಸದರು ಮತ್ತು ಶಾಸಕರು ಸಂಸತ್ತು ಮತ್ತು ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗಲೂ ವಕೀಲರಾಗಿ ನ್ಯಾಯಾಲಯಗಳಿಗೆ ಹಾಜರಾಗುತ್ತಾರೆ. ದೇಶದ ಆರ್ಥಿಕ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವಂತಹ ವಿಷಯಗಳಿಗೆ ಸಂಬಂಧಪಟ್ಟಂತೆ ತಮ್ಮ ನಿರೀಕ್ಷಿತ ಉದ್ಯೋಗದಾತರ ಜೊತೆಗೆ ಅವರು ನ್ಯಾಯಾಲಯಗಳಿಗೆ ಬರುತ್ತಾರೆ ಎಂದು ಅಶ್ವನಿ ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದರು. ಸಂಸದ/ ಶಾಸಕರಾದವರು ತಮ್ಮ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (ಎಂಪಿಎಲ್ ಎಡಿಎಸ್) ಅಡಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಹುದು. ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಸಂಸದನಿಗೂ ತನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಿಲು ಪ್ರತಿವರ್ಷ ಕೋಟಿ ರೂಪಾಯಿ ಅನುದಾನ ಲಭಿಸುತ್ತದೆ ಎಂದು ಉಪಾಧ್ಯಾಯ ಹೇಳಿದ್ದಾರೆ. ವಕೀಲರಾಗಿ ಹಾಜರಾಗುವುದು ಅವರ ಸಂವಿಧಾನಬದ್ಧ ಜನಾದೇಶಕ್ಕೆ ಶೋಭಿಸುವುದಿಲ್ಲ. ಆದ್ದರಿಂದ ಅವರನ್ನು ಸಾರ್ವಜನಿಕ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿರುವಾಗ ವಕೀಲರಾಗಿ ಪ್ರಾಕ್ಟೀಸ್ ಮಾಡದಂತೆ ನಿಷೇಧಿಸಬೇಕು ಎಂದು ಉಪಾಧ್ಯಾಯ ಪ್ರತಿಪಾದಿಸಿದ್ದಾರೆ. ಸಂವಿಧಾನದ ೧೪ ಮತ್ತು ೧೫ನೇ ಪರಿಚ್ಛೇದಗಳ ಆಶಯಗಳಿಗೆ ವಿರುದ್ಧವಾಗಿರುವುದರಿಂದ ಸಂಸದರು ಮತ್ತು ಶಾಸಕರನ್ನು ವಕೀಲರಾಗಿ ಪ್ರಾಕ್ಟೀಸ್ ಮಾಡದಂತೆ ನಿಷೇಧಿಸಬೇಕು ಎಂಬುದಾಗಿ ಕೋರಿದ ಅರ್ಜಿಯ ಪರಿಶೀಲನೆಗಾಗಿ ಡಿಸೆಂಬರ್ ೨೧ರಂದು ಭಾರತದ ಬಾರ್ ಕೌನ್ಸಿಲ್ ತಜ್ಞರ ಸಮಿತಿಯನ್ನು ನೇಮಿಸಿತ್ತು.

2018: ನವದೆಹಲಿ: ೧೯೮೪ರಲ್ಲಿ ನಡೆದ ಸಿಖ್ ವಿರೋಧಿ ದಂಗೆ ಪ್ರಕರಣಗಳ ತನಿಖೆಗೆ ಮೂವರು ಸದಸ್ಯರನ್ನೊಳಗೊಂಡ ತನ್ನದೇ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವುದಾಗಿ ಸುಪ್ರೀಂಕೋರ್ಟ್ ಪ್ರಕಟಿಸಿತು. ಕೇಂದ್ರ ಸರ್ಕಾರದ ವಿಶೇಷ ತನಿಖಾ ತಂಡ ತನಿಖೆ ಮುಂದುವರೆಸದೇ ಇರುವ ೧೮೬ ಪ್ರಕರಣಗಳ ತನಿಖೆಯನ್ನು ಸುಪ್ರೀಂಕೋರ್ಟಿನ ವಿಶೇಷ ತನಿಖಾ ತಂಡ ನಡೆಸಲಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಎಸ್ಐಟಿ ಒಟ್ಟು ೧೮೬ ಪ್ರಕರಣಗಳ ತನಿಖೆ ನಡೆಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ವಿಭಾಗೀಯ ಪೀಠ ಹೇಳಿತು. ಸಮಿತಿಯು, ದೆಹಲಿಯಲ್ಲಿ ಲಭ್ಯವಿರುವ ಕರ್ತವ್ಯನಿರತ ಡಿಐಜಿ ಶ್ರೇಣಿಯ ನಿವೃತ್ತ ಪೊಲೀಸ್ ಅಧಿಕಾರಿಗಳನ್ನೂ ಹಾಗೂ ಒಳಗೊಂಡಿರುತ್ತಾರೆ. ಸರ್ಕಾರದ ಮನವಿ ಮೇರೆಗೆ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ ೧೧ಕ್ಕೆ ಪೀಠವು ಮುಂದೂಡಿತು. ವೇಳೆಗೆ ವಿಶೇಷ ತನಿಖಾ ತಂಡಕ್ಕೆ ಸದಸ್ಯರ ಹೆಸರುಗಳನ್ನು ಸೂಚಿಸುವಂತೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಮತ್ತು ಹಿರಿಯ ವಕೀಲ ಎಚ್.ಎಸ್. ಫೂಲ್ಕ ಅವರಿಗೆ ಸೂಚಿಸಿತು. ಪ್ರಕರಣದ ಗಂಭೀರತೆಯ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳದ ಪ್ರಕರಣಗಳ ತನಿಖೆಗೆ ಸುಪ್ರೀಂಕೋರ್ಟ್ ಸ್ವತಃ ವಿಶೇಷ ತನಿಖಾ ತಂಡವನ್ನು ರಚಿಸುವುದು ಉತ್ತಮ ಎಂದು ತಾನು ಭಾವಿಸಿರುವುದಾಗಿ ಪೀಠ ಹೇಳಿತು. ಇಂತಹ ವಿಶೇಷ ತನಿಖಾ ತಂಡಗಳನ್ನು ಹಿಂದೆ ಆಕ್ಷೇಪಗಳನ್ನು ಪರಿಗಣಿಸಿ ರದ್ದು ಪಡಿಸಲಾಗಿತ್ತು ಎಂಬುದಾಗಿ ದಂಗೆಯ ಸಂತ್ರಸ್ಥರು ನ್ಯಾಯಾಲಯದ ಗಮನಕ್ಕೆ ತಂದಾಗಅದು ಪೊಲೀಸ್ ಕೋಟೆ, ನ್ಯಾಯಾಲಯವಲ್ಲ. ಅದು ಇತಿಹಾಸ. ಇದು ನಾವು (ಸುಪ್ರೀಂಕೋರ್ಟ್) ಈಗ ಮಾಡುತ್ತಿದ್ದೇವೆ ಎಂದು ನ್ಯಾಯಮೂರ್ತಿ ಮಿಶ್ರ ನುಡಿದರು. ದಂಗೆಯ ತನಿಖೆಗೆ ಸಂಬಂಧಿಸಿದಂತೆ ಕೋರ್ಟ್ ೨೦೧೭ರ ಆಗಸ್ಟ್ನಲ್ಲಿ ನೇಮಿಸಿದ್ದ ಉನ್ನತ ಮಟ್ಟದ ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ರಾಧಾಕೃಷ್ಣನ್ ಮತ್ತು ಜೆ.ಎಂ. ಪಂಚಲ್ ನೇತೃತ್ವದ ಸಮಿತಿಯ ರಹಸ್ಯ ವರದಿಯನ್ನು ಪರಿಗಣಿಸಿ, ಹೊಸ ಎಸ್ ಐಟಿ ರಚಿಸಲು ಸುಪ್ರೀಂಕೋರ್ಟ್ ಪೀಠ ತೀರ್ಮಾನಿಸಿತು. ಸಮಿತಿಗೆ ಸರ್ಕಾರದ ಎಸ್ ಐಟಿ ಸಮಾಪ್ತಿಗೊಳಿಸಿದ್ದ ೨೪೧ ಸಿಖ್ ವಿರೋಧಿ ಪ್ರಕರಣಗಳ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿತ್ತು. ಇವುಗಳ ಪೈಕಿ ೧೮೬ ಪ್ರಕರಣಗಳು ಪ್ರಕರಣಗಳ ಭಾಗಗಳಾಗಿದ್ದವು. ಕಳೆದ ವರ್ಷ ಆಗಸ್ಟ್ ೧೬ರಂದು ನ್ಯಾಯಾಲಯವು ೨೪೧ ಪ್ರಕರಣಗಳ ದಾಖಲೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಮತ್ತು ಅವುಗಳ ಬಗ್ಗೆ ಹೆಚ್ಚೇನನ್ನೂ ಮಾಡಬೇಕಾಗಿಲ್ಲವೇ ಹೇಗೆ ಎಂದು ದೃಢಪಡಿಸಿಕೊಳ್ಳಲು ತೀರ್ಮಾನಿಸಿತ್ತು. ಆಗಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕ ೧೯೮೪ ಅಕ್ಟೋಬರ್ ೩೧ರಂದು ಹತ್ಯೆ ಮಾಡಿದ ನಂತರ ಸಿಖ್ ವಿರೋಧಿ ದಂಗೆ ಶುರುವಾಗಿತ್ತು. ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳ ಒಟ್ಟು ,೩೨೫ ಸಾವನ್ನಪ್ಪಿದ್ದರು. ಅವರ ಪೈಕಿ ದೆಹಲಿಯೊಂದರಲ್ಲೇ ,೭೩೩ ಮಂದಿ ಬಲಿಯಾಗಿದ್ದರು.  ನ್ಯಾಯಮೂರ್ತಿ (ನಿವೃತ್ತ) ಜಿ.ಪಿ. ಮಾಥುರ್ ಸಮಿತಿಯ ಶಿಫಾರಸನ್ನು ಅನುಸರಿಸಿ ಕೇಂದ್ರ ಸರ್ಕಾರವು ೨೦೧೫ರ ಫೆಬ್ರುವರಿ ೧೨ರಂದು ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ೧೯೮೬ರ ತಂಡದ ಐಪಿಎಸ್ ಅಧಿಕಾರಿ ಪ್ರಮೋದ್ ಅಸ್ತಾನ ನೇತೃತ್ವದಲ್ಲಿ ರಚಿಸಿತ್ತು. ತಂಡದಲ್ಲಿ ನಿವೃತ್ತ ಜಿಲ್ಲೆ ಹಾಗೂ ಸೆಷನ್ಸ್ ನ್ಯಾಯಾಧೀಶ ರಾಕೇಶ್ ಕಪೂರ್ ಮತ್ತು ದೆಹಲಿಯ ಅಡಿಷನಲ್ ಡೆಪ್ಯುಟಿ ಪೊಲೀಸ್ ಕಮೀಷನರ್ ಕುಮಾರ್ ಜ್ಯಾನೇಶ್ ಅವರೂ ಇದ್ದರು. ತಂಡವು ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರನ್ನು ಜನಕಪುರಿ ದಂಗೆಯ ಬಗ್ಗೆ ಬಾರಿ ಪ್ರಶ್ನಿಸಿತ್ತು. ತನಿಖೆಯ ಬಳಿಕ ೨೯೩ ಪ್ರಕರಣಗಳ ಪೈಕಿ ೨೪೧ ಪ್ರಕರಣಗಳ ಬಗ್ಗೆ ಪರಿಸಮಾಪ್ತಿ ವರದಿಯನ್ನು ಎಸ್ ಐಟಿ ಸಲ್ಲಿಸಿತ್ತು.

2018: ಇಸ್ಲಾಮಾಬಾದ್: ಭಾರತೀಯ ಮೂಲದ ಟಿವಿಯ ಇಸ್ಲಾಮಾಬಾದ್ ಬ್ಯೂರೋ ಮುಖ್ಯಸ್ಥ ತಹ ಸಿದ್ದಿಕಿ ಅವರನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಲು ಯತ್ನಿಸಿದ ಘಟನೆ ಘಟಿಸಿತು. ಲಂಡನ್ ಗೆ ತೆರಳುವ ವಿಮಾನ  ಏರುವ ಸಲುವಾಗಿ ಇಸ್ಲಾಮಾಬಾದ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದಾಗ ಘಟನೆ ಘಟಿಸಿತು.  ಅಪಹರಣ ಯತ್ನವನ್ನು ಪ್ರತಿಭಟಿಸಿದಾಗ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರ ಮೊಬೈಲ್ ಫೋನನ್ನು ಕಿತ್ತುಕೊಳ್ಳಲಾಯಿತು. ಪತ್ರಕರ್ತ ನೀಡಿದ ದೂರನ್ನು ಅನುಸರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ದೃಢಪಡಿಸಿದರು.  ದೂರಿನ ಪ್ರಕಾರ ಭಾರತ ಮೂಲದ ವಿಯೋನ್ ಟಿವಿಯ ಇಸ್ಲಾಮಾಬಾದ್ ಬ್ಯೂರೋ ಮುಖ್ಯಸ್ಥರಾದ ತಹ ಅವರು ಉಬರ್ ಟ್ಯಾಕ್ಸಿ ಮೂಲಕ ವಿಮಾನ ನಿಲ್ದಾಣಕ್ಕೆ ಹೊರಟಿದ್ದಾಗ ಕೈಗಳಲ್ಲಿ ಪಿಸ್ತೂಲುಗಳನ್ನು ಹಿಡಿದುಕೊಂಡಿದ್ದ ನಾಲ್ವರು ಕಾರೊಂದರಲ್ಲಿ ಬಂದು ಅಡ್ಡಗಟ್ಟಿ ಕಾರಿನ ಬಾಗಿಲು ತೆಗೆಯಲು ಯತ್ನಿಸಿದರು. ಕಾರಿನ ಜೊತೆಗೇ ನಂಬರ್ ಪ್ಲೇಟ್ ಇಲ್ಲದ ಟಯೋಟ ವಿಗೊ ಕೂಡಾ ಇತ್ತು. ಅವರು ತಹ ಅವರನ್ನು ಹೊರಕ್ಕೆ ಎಳೆದು ಒಯ್ಯಲು ಯತ್ನಿಸಿದರು. ಆದರೆ ತಹ ಅವರು ಪ್ರತಿಭಟಿಸಿ, ನೆರವಿಗಾಗಿ ಕೂಗಿದರು. ಬಳಿಕ ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು.
ಬಳಿಕ ಪತ್ರಕರ್ತ ಮಿತ್ರ ಸಿರಿಲ್ ಅಲ್ಮೀಡಾ ಅವರ ಟ್ವಿಟ್ಟರ್ ಮೂಲಕ ತಹ ಅವರು ಘಟನೆಯ ವಿವರಗಳನ್ನು ಪ್ರಕಟಿಸಿದರು. ಪಾಕಿಸ್ತಾನ ಮಿಲಿಟರಿ ಬಗ್ಗೆ ಖಾರವಾಗಿ ಮಾತನಾಡುತ್ತಿದ್ದ ಹಿರಿಯ ಪತ್ರಕರ್ತ ತಹ ಅವರ ಅಪಹರಣ ಯತ್ನವನ್ನು ರಾವಲ್ಪಿಂಡಿಯ ಪತ್ರಕರ್ತರ ಸಂಘ ಪ್ರತಿಭಟಿಸಿತು.

2018: ಪುಲ್ಬನಿ (ಒಡಿಶಾ): ಬಿಹಾರಿನ ದಶರಥ ಮಾಂಝಿ ಎಂಬ ವ್ಯಕ್ತಿಯೊಬ್ಬ ತನ್ನ ಜೀವಮಾನದ ೨೨ ವರ್ಷಗಳನ್ನು ಸವೆಸಿ ಏಕಾಂಗಿಯಾಗಿ ೩೬೦ ಅಡಿಗಳ ರಸ್ತೆ ನಿರ್ಮಿಸಿಬೆಟ್ಟದ ಮನುಷ್ಯ ಎಂಬ ಹೆಸರು ಪಡೆದದ್ದು ನೆನಪಿರಬಹುದು. ಇದೀಗ ಒಡಿಶಾದ ಗುಮ್ಸಾಹಿ ಗ್ರಾಮದ ವ್ಯಕ್ತಿಯೊಬ್ಬ ಕಂಧಮಲ್ ಪುಲ್ಬಾನಿ ಪಟ್ಟಣದ ಮುಖ್ಯರಸ್ತೆಯನ್ನು ಸಂಪರ್ಕಿಸುವ ಸಲುವಾಗಿ ಏಕಾಂಗಿಯಾಗಿ ೧೫ ಕಿಮೀ ಉದ್ದದ ರಸ್ತೆ ನಿರ್ಮಿಸಲು ಎರಡು ವರ್ಷಗಳಿಂದ ಬೆಟ್ಟ ಅಗೆಯುತ್ತಿರುವುದು ಬೆಳಕಿಗೆ ಬಂದಿತು.  ಜಲಂಧರ್ ನಾಯಕ್ ಎಂಬ ತರಕಾರಿ ಮಾರುವ ವ್ಯಕ್ತಿ ಕಳೆದ ಎರಡು ವರ್ಷಗಳಲ್ಲಿ ಪ್ರತಿದಿನ ಗಂಟೆ ಕಾಲ ಎರಡು ಬೆಟ್ಟಗಳ ನಡುವೆ ಹಾರೆ ಪಿಕಾಸಿ ಹಿಡಿದುಕೊಂಡು ಏಕಾಂಗಿಯಾಗಿ ಅಗೆಯುತ್ತಿದ್ದಾನೆ. ಈತನ ಬಗ್ಗೆ ಅರಿತ ಜಿಲ್ಲಾಡಳಿತ ಆತನ ಪೂರ್ತಿ ಶ್ರಮಕ್ಕೆ ಪ್ರತಿಯಾಗಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಹಣ ಒದಗಿಸಲು ತೀರ್ಮಾನಿಸಿತು. ಬೆಟ್ಟವನ್ನು ಏಕಾಂಗಿಯಾಗಿ ಅಗೆಯುವ ನಾಯಕ್ ಅವರ ದೃಢನಿರ್ಧಾರ ನನ್ನನ್ನು ಮೂಕವಿಸ್ಮಿತಳನ್ನಾಗಿ ಮಾಡಿದೆ. ಅವರ ಇಷ್ಟು ಸಮಯದ ಶ್ರಮಕ್ಕೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಪೂರ್ತಿ ಹಣ ಒದಗಿಸಲಾಗುವುದು ಮತ್ತು ಇನ್ನಷ್ಟು ಜನರನ್ನು ಒದಗಿಸಿ ಉಳಿದ ಕಿಮೀ ರಸ್ತೆಯನ್ನು ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಬೃಂದಾ ಡಿ ಪತ್ರಕರ್ತರಿಗೆ ತಿಳಿಸಿದರು. ನಾಯಕ್ ಅವರನ್ನು ಸ್ವತಃ ತಮ್ಮ ಕಚೇರಿಗೆ ಕರೆಸಿಕೊಂಡು ಅವರ ಶ್ರಮವನ್ನು ಬೃಂದಾ ಅವರು ಶ್ಲಾಘಿಸಿದರು. ೪೫ರ ಹರೆಯದ ಬುಡಕಟ್ಟು ಜನಾಂಗದ ವ್ಯಕ್ತಿ ಓದು ಬರಹ ಕಲಿತವರಲ್ಲ. ಶಾಲೆಗೆ ತಲುಪಲು ತನ್ನ ಮೂವರು ಮಕ್ಕಳು ಬೆಟ್ಟದ ಹಾದಿಯಲ್ಲಿ ಸಾಗುವಾಗ ಪಡುತ್ತಿದ್ದ ಕಷ್ಟವನ್ನು ಕಂಡು ರಸ್ತೆ ನಿರ್ಮಿಸುವ ನಿರ್ಧಾರಕ್ಕೆ ಬಂದ ಅವರು ಹಾರೆ, ಪಿಕಾಸಿ ಕೈಗೆತ್ತಿಕೊಂಡರು. ನಾಯಕ್ ಯತ್ನ 2018 ರ ಜನವರಿ 9ರ ಮಂಗಳವಾರದವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ. ಹೋಗಿ ಬರಲು ಸಮರ್ಪಕ ರಸ್ತೆ ಇಲ್ಲವೆಂದು ಊರ ಜನರೂ ಗ್ರಾಮವನ್ನು ತ್ಯಜಿಸಿದ್ದರು. ಆದರೆ ಊರಿನಲ್ಲೇ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದ ನಾಯಕ್ ಪರಿಶ್ರಮವನ್ನು ಸ್ಥಳೀಯ ಪತಿಕಾ ವರದಿಯಿಂದ ಅರಿತ ಜಿಲ್ಲಾಧಿಕಾರಿ ಬೃಂದಾ ಜನವರಿ 9ರಂದು ನಾಯಕ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡರು. ಉಳಿದ ಮಾರ್ಗ ಪೂರೈಸಲು ಅಗತ್ಯ ನೆರವು ಒದಗಿಸುವಂತೆ ಪುಲ್ಬಾನಿಯ ಬಿಡಿಒ ಅವರಿಗೆ ಸೂಚನೆ ನೀಡಿದರು. ತಮ್ಮ ಶ್ರಮವನ್ನು ಗುರುತಿಸಿದ್ದಕ್ಕಾಗಿ ನಾಯಕ್ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.

2017: ನವದೆಹಲಿ:  ತೇಜ್ ಬಹದೂರ್ ಯಾದವ್ ಹೆಸರಿನ ಯೋಧ ಕಳಪೆ ಆಹಾರ ಪೂರೈಕೆ ಮಾಡಿರುವುದರ ಬಗ್ಗೆ ವಿಡಿಯೋ ತುಣುಕುಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಸುದ್ದಿಯಾದರು. ವಿಡಿಯೋದಲ್ಲಿ, ಸೈನಿಕರಿಗೆ ಕಳಪೆ ಗುಣಮಟ್ಟದ ಊಟ ಒದಗಿಸಲಾಗುತ್ತಿದೆ. ಕೆಲ ಅಧಿಕಾರಿಗಳು ನಮಗೆ ನೀಡುವ ಆಹಾರವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕೆಲವೊಮ್ಮೆ ಹಸಿದ ಹೊಟ್ಟೆಯಲ್ಲೇ ಇರಬೇಕಾಗುತ್ತದೆ. ಬಗ್ಗೆ ಪ್ರಧಾನಿ ಮೋದಿ ಅವರು ತನಿಖೆಗೆ ಆದೇಶಸಬೇಕುಎಂದು ಮನವಿ ಮಾಡಿಕೊಂಡರು..ಸರ್ಕಾರ ಬದಲಾಗುತ್ತದೆ. ಆದರೆ ನಮ್ಮ ಪರಿಸ್ಥಿತಿ ಮೊದಲಿನಂತೇ ಮುಂದುವರಿಯುತ್ತದೆ. ಬೆಳಗ್ಗೆ ಪರೋಟ ಹಾಗೂ ಟೀ ಮಾತ್ರ ನೀಡಲಾಗುತ್ತದೆ. ಪರೋಟಕ್ಕೆ ಹಚ್ಚಿಕೊಳ್ಳಲು ಉಪ್ಪಿನಕಾಯಿ ಸಹ ನೀಡುವುದಿಲ್ಲ. ಮಧ್ಯಾಹ್ನದ ಊಟಕ್ಕೆ ದಾಲ್ ಹಾಗೂ ಉಪ್ಪು ಜತೆಗೆ ರೊಟ್ಟಿ ನೀಡುತ್ತಾರೆ. ಇದನ್ನು ತಿಂದು ನಾವು 11 ಗಂಟೆಗಳಕಾಲ ಅವರಿತವಾಗಿ ಗಡಿಯಲ್ಲಿ ನಿಂತೇ ಇರಬೇಕು. ಹೀಗಿರುವಾಗ ಸೈನಿಕರು ಕರ್ತವ್ಯ ನಿರ್ವಹಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು. ಈ ಸಂಬಂಧ ಟ್ವಿಟರ್ನಲ್ಲಿ ತಕ್ಷಣ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಜನಾಥ್ ಸಿಂಗ್, ಕುರಿತು ಕೂಡಲೇ ಸಂಪೂರ್ಣ ಮಾಹಿತಿ ಕಲೆಹಾಕಿ ವರದಿ ಕೊಡುವಂತೆ ಆದೇಶಿಸಿರುವುದಾಗಿ ಹೇಳಿದರು.
2017: ಜಮ್ಮು: ಯೋಧರಿಗೆ ಕಳಪೆ ಆಹಾರ ಪೂರೈಸಲಾಗುತ್ತಿದೆ ಎಂಬುದಾಗಿ ವಿಡಿಯೋ ಮೂಲಕ ಬಿಎಸ್ಎಫ್ ಯೋಧ ತೇಜ್ ಬಹಾದ್ದೂರ್ ಯಾದವ್ ಮಾಡಿರುವ ಆಪಾದನೆ ಸಂಬಂಧ ಸಮಗ್ರ ತನಿಖೆ ನಡೆಸಲಾಗುವುದು ಮತ್ತು ಆಪಾದನೆಯಲ್ಲಿ ಹುರುಳಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಸ್ಎಫ್ ಇನ್ಸ್ಪೆಕ್ಟರ್ ಜನರಲ್ ಡಿ.ಕೆ. ಉಪಾಧ್ಯಾಯ ಮತ್ತು ಡಿಐಜಿ ಎಂಡಿಎಸ್ ಮಾನ್ ಪ್ರಕಟಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಡಿಯೋ ಮಾಡಿರುವ ಯೋಧ ಕರ್ತವ್ಯ ನಿರತನಾಗಿದ್ದಾಗ ತನ್ನ ಜೊತೆಗೆ ಮೊಬೈಲ್ ಇಟ್ಟುಕೊಂಡಿದ್ದುದು ಏಕೆ ಎಂಬ ಬಗೆಗೂ ತನಿಖೆ ನಡೆಸಲಾಗುವುದು. ರೀತಿ ಮೊಬೈಲ್ ಇಟ್ಟುಕೊಳ್ಳುವುದು ಶಿಸ್ತು ಸೂಚಿಗಳಿಗೆ ವಿರುದ್ಧ ಎಂದು ಅವರು ನುಡಿದರು. ಡಿಐಜಿ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಹಾರ ಮತ್ತಿತರ ಸವಲತ್ತುಗಳ ಬಗ್ಗೆ ಯೋಧನೂ ಸೇರಿದಂತೆ ಎಲ್ಲರನ್ನೂ ಖುದ್ದು ವಿಚಾರಿಸಿದ್ದರು. ಆದರೆ ಯಾವುದೇ ದೂರುಗಳು ಇರಲಿಲ್ಲ. ಈಗ ಹಠಾತ್ತನೆ ಇಂತಹ ಆರೋಪ ಮಾಡಿರುವುದರ ಹಿನ್ನೆಲೆ, ಉದ್ದೇಶ ಬಹುಶಃ ಬೇರೆಯೇ ಇರಬಹುದು. ಆದರೆ ಈಗ ಏನೂ ಹೇಳಲಾಗದು, ತನಿಖೆಯ ಬಳಿಕವೇ ಗೊತ್ತಾಗಬಹುದು ಎಂದು ಅವರು ಹೇಳಿದರು. ನಿಷ್ಪಕ್ಷಪಾತ ತನಿಖೆ ನಡೆಸುವ ಸಲುವಾಗಿ ಮತ್ತು ಯಾರು ಕೂಡಾ ಆತನ ಮೇಲೆ ಒತ್ತಡ ಹಾಕದಿರಲಿ ಎಂಬ ಕಾರಣಕ್ಕಾಗಿ ಬೇರೆ ಕೇಂದ್ರ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಅವರು ನುಡಿದರು. 2010ರಲ್ಲಿ ಅಶಿಸ್ತಿನ ಕಾರಣಕ್ಕಾಗಿ ಯೋಧನನ್ನು ಕೋರ್ಟ್ ಮಾರ್ಷಲ್ಗೆ ಗುರಿಪಡಿಸಲಾಗಿತ್ತು. ಆದರೆ ಕುಟುಂಬಕ್ಕೆ ತೊಂದರೆಯಾಗದಿರಲಿ ಎಂದು ವಜಾಗೊಳಿಸಿರಲಿಲ್ಲ. 4 ವರ್ಷಗಳಿಂದ ಯೋಧನ ವರ್ತನೆಯಲ್ಲಿ ಸಮಸ್ಯೆಗಳಿದ್ದವು, ಬಡ್ತಿ ಸಿಕ್ಕಿರಲಿಲ್ಲ. ಹೀಗಾಗಿ ಭ್ರಮನಿರಸನ ಆಗಿದ್ದಿರಬಹುದು. ಆತನಿಗೆ ನಿಯಮಿತ ಕೌನ್ಸೆಲಿಂಗ್ ಕೂಡಾ ಮಾಡಲಾಗುತ್ತಿತ್ತು ಎಂದೂ ಅಧಿಕಾರಿಗಳು ವಿವರಿಸಿದರು.
2017: ಬಂಡಿಪೋರ: ಗಡಿ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಬೆಳಗಿನಜಾವ ಉಗ್ರವಾದಿಗಳು ಅಟ್ಟಹಾಸ ಮೆರೆಯಲು ಮುಂದಾದರು. ಕ್ಷಿಪ್ರ ಕಾಯಾಚರಣೆ ನಡೆಸಿದ ಭಾರತೀಯ ಯೋಧರು ಓರ್ವ ಉಗ್ರನನ್ನು ಹೊಡೆದುರುಳಿಸಿದರು. ಬಂಡಿಪೋರದ ಪರ್ರೀ ಮೊಹಲ್ಲಾ ಹಜಿನ್ ಪ್ರದೇಶದಲ್ಲಿ ಘಟನೆ ಸಂಭವಿಸಿತು. ಮೂವರು ಉಗ್ರವಾದಿಗಳು ಅಡಗಿ ಕುಳಿತ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು, ಯೋಧರು ಕ್ಷಿಪ್ರಗತಿಯ ಕಾರ್ಯಾಚರಣೆಗೆ ಮುಂದಾದರು. ಇದನ್ನರಿತ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಇದನ್ನು ದಿಟ್ಟವಾಗಿ ಎದುರಿಸಿದ ಯೋಧರು ಎನ್ಕೌಂಟರ್ನಲ್ಲಿ ಓರ್ವ ಉಗ್ರನನ್ನು ಹತ್ಯೆಗೈದರು.. ಕಾರ್ಯಾಚರಣೆಯ ವೇಳೆ ಇಬ್ಬರು ಯೋಧರಿಗೆ ಗಾಯಗಳಾಗಿದ್ದು, ಆರ್ವಿು ಆಸ್ಪತ್ರೆಗೆ ದಾಖಲಿಸಲಾಯಿತು.. ಅಡಗಿರುವ ಇನ್ನಿಬ್ಬರು ಉಗ್ರರಿಗಾಗಿ ಶೋಧ ಕಾರ್ಯ ನಡೆಯಿತು. ಹಿಂದಿನ ದಿನವಷ್ಟೇ ಜಮ್ಮುವಿನ ಅಖ್ನೂರ್ ಪ್ರದೇಶದಲ್ಲಿನ ಜನರಲ್ ರಿಸರ್ವ್ ಇಂಜಿನಿಯರ್ಸ್ ಪೋರ್ಸ್ (ಜಿಆರ್ಇಎಫ್)ಗೆ ಸೇರಿದ ನೆಲೆಗಳ ಮೇಲೆ ಉಗ್ರವಾದಿಗಳು ದಾಳಿ ನಡೆಸಿ ಮೂವರು ಕಾರ್ವಿುಕರನ್ನು ಸಾಯಿಸಿದ್ದರು.
2017: ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2016ನೇ ಸಾಲಿನ  ಸಾಹಿತ್ಯ ಆಕಾಡೆಮಿ ಗೌರವ ಪ್ರಶಸ್ತಿಗಳು  ಮತ್ತು  ಪುಸ್ತಕ ಬಹುಮಾನ  ಪ್ರಶಸ್ತಿಗಳು ಪ್ರಕಟವಾದವು. ನಾಗೇಶ್ಹೆಗಡೆ (ವಿಜ್ಞಾನ ಸಾಹಿತ್ಯ), ಡಾ.ಎಚ್‌.ಎಸ್‌. ಶ್ರೀಮತಿ (ವಿಮರ್ಶಕರು, ಅನುವಾದಕರು), ಪ್ರೊ. .ಎಲ್. ನಾಗಭೂಷಣಸ್ವಾಮಿ (ವಿಮರ್ಶಕರು), ಬಸವರಾಜು ಕುಕ್ಕರಹಳ್ಳಿ (ಕಥೆಗಾರ), ಡಾ. ಬಾಳಾಸಾಹೇಬ ಲೋಕಾಪುರ (ಕಾದಂಬರಿ, ಕಥೆಗಾರಅವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಇದರ ಜತೆಯಲ್ಲಿ 16 ಪುಸ್ತಕ ಬಹುಮಾನ ಪ್ರಶಸ್ತಿ ಹಾಗೂ 7 ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಯಿತು.
2017: ನವದೆಹಲಿ: ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ರಾಜಕೀಯ ನಾಯಕರ ಅಥವಾ ಪಕ್ಷಗಳ ಸಾಧನೆಗಳನ್ನು ಬಿಂಬಿಸುವ ಸಲುವಾಗಿ ಹಾಕಲಾಗಿರುವ ಎಲ್ಲ ಫಲಕ, ಜಾಹೀರಾತು, ಫ್ಲೆಕ್ಸ್,, ಹೋರ್ಡಿಂಗ್ ಗಳಲ್ಲಿನ ರಾಜಕೀಯ ನಾಯಕರ ಫೊಟೋಗಳನ್ನು ಕಿತ್ತು ಹಾಕುವಂತೆ ಅಥವಾ ಕಾಣಿಸದಂತೆ ಮುಚ್ಚುವಂತೆ ಚುನಾವಣಾ ಆಯೋಗ ಚುನಾವಣಾ ಸಿಬ್ಬಂದಿಗೆ ನಿರ್ದೇಶನ ನೀಡಿತು. 2004 ಡಿಸೆಂಬರ್ 12ರಂದು ನೀಡಲಾಗಿದ್ದ ತನ್ನ ಸೂಚನೆಗಳನ್ನು ಪುನರುಚ್ಚರಿಸುತ್ತಾ ಹೊಸ ನಿರ್ದೇಶನಗಳನ್ನು ಚುನಾವಣಾ ಆಯೋಗ ನೀಡಿದೆ. ಜನವರಿ 4ರಂದು ಚುನಾವಣೆ ಪ್ರಕಟಣೆಯಾದ ಬಳಿಕ ಗೋವಾದ ಮುಖ್ಯ ನಿರ್ವಚನಾಧಿಕಾರಿ ಹೋರ್ಡಿಂಗ್ಗಳ ವಿಚಾರ ಪ್ರಸ್ತಾಪಿಸಿದ್ದನ್ನು ಅನುಸರಿಸಿ ಆಯೋಗ ಹೊಸ ನಿರ್ದೇಶನಗಳನ್ನು ನೀಡಿತು. ಜಾಹೀರಾತುಗಳು ಅಥವಾ ಫಲಕಗಳಲ್ಲಿನ ಇದೇ ಮಾದರಿಯ ಫೊಟೋಗಳನ್ನು ಕೂಡಾ ಕಿತ್ತು ಹಾಕಬೇಕು ಅಥವಾ ಸೂಕ್ತವಾಗಿ ಮುಚ್ಚಬೇಕು ಎಂದೂ ಆಯೋಗ ತಿಳಿಸಿದೆ. ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಫೆಬ್ರುವರಿ ತಿಂಗಳಲ್ಲಿ   ಚುನಾವಣೆ ನಡೆಯುವುದರಿಂದ ಐದು ರಾಜ್ಯಗಳಲ್ಲಿ ಹೋರ್ಡಿಂಗ್ಗಳು, ಫ್ಲೆಕ್ಸ್ಗಳು, ಬ್ಯಾನರ್ಗಳು ಹಾಗೂ ಜಾಹಿರಾತು ಫಲಕಗಳನ್ನು ತೆರವುಗೊಳಿಸಲು ಸೂಚಿಸಲಾಯಿತು. ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಪ್ರಧಾನ ಮಂತ್ರಿಯವರ ಹೋರ್ಡಿಂಗ್ಗಳು ರಾರಾಜಿಸುತ್ತಿದ್ದು ಅವುಗಳನ್ನು ತೆರವುಗೊಳಿಸುವಂತೆ ಸೂಚಿಸಲು ಕಾಂಗ್ರೆಸ್ ಪಕ್ಷ ಚುನಾವಣಾ  ಆಯೋಗಕ್ಕೆ ಮನವಿ ಮಾಡಿತ್ತು
2017: ಗಾಂಧಿನಗರ (ಗುಜರಾತ್): ನಾವು ಈಗ ವಿಶ್ವದಲ್ಲೇ ಅತ್ಯಂತ ಡಿಜಿಟಲೀಕೃತ ಆರ್ಥಿಕತೆಯ ಅಂಚಿನಲ್ಲಿದ್ದೇವೆ. ಜಾಗತಿಕ ಆರ್ಥಿಕತೆ ಮಂದವಾಗಿದ್ದರೂ ನಾವು ಅದ್ಭುತ ಬೆಳವಣಿಗೆಯನ್ನು ದಾಖಲಿಸಿದ್ದೇವೆ. ವಿಶ್ವ ಆರ್ಥಿಕತೆಯಲ್ಲಿ ಈಗ ಬೆಳ್ಳಿ ಚುಕ್ಕಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು. ಎರಡು ವರ್ಷಗಳಿಗೆ ಒಮ್ಮೆ ನಡೆಯುವ ವೈಬ್ರೆಂಟ್ ಗುಜರಾತ್ ಶೃಂಗ ಸಮ್ಮೇಳನದ 8ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿನನ್ನ ಸರ್ಕಾರ ಭಾರತೀಯ ಆರ್ಥಿಕತೆಯ ಸುಧಾರಣೆ ಮುಂದುವರೆಸಲು ಕಟಿ ಬದ್ಧವಾಗಿದೆ. ವ್ಯವಹಾರವನ್ನು ಸರಳಗೊಳಿಸಲು ಸರ್ಕಾರ ಅತ್ಯಂತ ಹೆಚ್ಚಿನ ಒತ್ತು ನೀಡಿದೆ. ಮೇಕ್ ಇನ್ ಇಂಡಿಯಾವು ಈಗ ಭಾರತದ ಅತಿದೊಡ್ಡ ಬ್ರ್ಯಾಂಡ್ ಆಗಿದೆ. ಭಾರತವು ವಿಶ್ವದಲ್ಲಿ 6ನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ ಎಂದು ವಿವರಿಸಿದರು. ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲು ನಾವು ಅತ್ಯಂತ ಆಸಕ್ತಿ ಹೊಂದಿದ್ದೇವೆ. ಇದಕ್ಕೆ ಪ್ರವಾಸೋದ್ಯಮ ಮೂಲ ಸವಲತ್ತುಗಳ ಅಗತ್ಯವಿದೆ ಎಂದು ಪ್ರಧಾನಿ ನುಡಿದರು. ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಅವರ ನೆಲವಾಗಿರುವ ಗುಜರಾತ್ ವ್ಯವಹಾರದ ಭೂಮಿ ಕೂಡಾ ಆಗಿದೆ ಎಂದು ಪ್ರಧಾನಿ ಹೇಳಿದರು. ಭಾರತ ಮತ್ತು ಇತರ ರಾಷ್ಟ್ರಗಳ ಉನ್ನತ ಕೈಗಾರಿಕೋದ್ಯಮಿಗಳು, ಜಾಗತಿಕ ನಾಯಕರು, ನೊಬೆಲ್ ಪ್ರಶಸ್ತಿ ವಿಜೇತರು ನಾಲ್ಕು ದಿನಗಳ ವೈಬ್ರೆಂಟ್ ಗುಜರಾತ್ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಗಾಂಧಿನಗರದ ಮಹಾತ್ಮ ಮಂದಿರ ಸಮಾವೇಶ ಸಭಾಂಗಣದಲ್ಲಿ ನಡೆದ ಶೃಂಗ ಸಮ್ಮೇಳನ ಪರಂಪರೆ 2003ರಲ್ಲಿ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆರಂಭಗೊಂಡಿತ್ತು. 2015ರಲ್ಲಿ 25 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯ ಪ್ರಸ್ತಾಪಗಳು ಬಂದಿದ್ದವು.

2017: ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಸಂಸತ್ ಭವನದ ಕಚೇರಿಗಳನ್ನು ಗುರಿಯಾಗಿಟ್ಟುಕೊಂಡು ನಡೆದ ಅವಳಿ ಸ್ಪೋಟಗಳಗೆ ಕನಿಷ್ಠ 27 ಮಂದಿ ಬಲಿಯಾಗಿದ್ದು, 70 ಜನ ಗಾಯಗೊಂಡಿದ್ದಾರೆ ಎಂದು ಅಘ್ಘನ್ ಅಧಿಕಾರಿಗಳು ದೃಢ ಪಡಿಸಿದರು. ಕಾಬೂಲ್ ದಾರುಲಾಮಾನ್ ರಸ್ತೆಯ ಪಿಡಿ6ರಲ್ಲಿ ಅಮೆರಿಕ ವಿಶ್ವವಿದ್ಯಾಲಯದ ಸಮೀಪ ಮೊದಲ ಸ್ಫೋಟ ಸಂಭವಿಸಿತು. ಸ್ವಲ್ಪವೇ ಹೊತ್ತಿನಲ್ಲಿ ಅದೇ ರಸ್ತೆಯಲ್ಲಿನ ನೂರ್ ಆಸ್ಪತ್ರೆ ಸಮೀಪ ಇನ್ನೊಂದು ಸ್ಫೋಟ ಸಂಭವಿಸಿತು.
 2017: ನವದೆಹಲಿ: ಪರಮಾಣು ಅಸ್ತ್ರ ಒಯ್ಯಬಲ್ಲ ಸಾಮರ್ಥ್ಯ ಉಳ್ಳ ಬಾಬರ್ ಕ್ಷಿಪಣಿಯ ಪರೀಕ್ಷಾ ಪ್ರಯೋಗದಲ್ಲಿ ತಾನು ಯಶಸ್ವಿಯಾಗಿರುವುದಾಗಿ ಹೇಳಿ ಪಾಕಿಸ್ತಾನವು ಟ್ವೀಟ್ ಮಾಡಿದ್ದ ವಿಡಿಯೋ ನಕಲಿ ಎಂದು ಭಾರತೀಯ ನೌಕಾಪಡೆಯ ಉನ್ನತ ಮೂಲಗಳು ತಿಳಿಸಿದವು. ತನ್ನ ನೌಕಾ ಪರಮಾಣು ಕಾರ್ಯಕ್ರಮದಲ್ಲಿ ಭಾರಿ ಯಶಸ್ಸು ಎಂಬ ಪ್ರತಿಪಾದನೆಯೊಂದಿಗೆ ಪ್ರಕಟಿಸಲಾದ ಬಾಬರ್ ಕ್ಷಿಪಣಿಯ ಪರೀಕ್ಷಾ ಪ್ರಯೋಗದ ವಿಡಿಯೋ ನಕಲಿ ಎಂದು ಮೂಲಗಳು ಹೇಳಿದವು.  ಜಲಾಂತರ್ಗಾಮಿಯಿಂದ ಉಡಾವಣೆ ಮಾಡಿದ ಬಳಿಕ ಕ್ಷಿಪಣಿ ನೀರಿನಿಂದ ಮೇಲಕ್ಕೆ ಚಿಮ್ಮಿ ಗುರಿಯತ್ತ ಸಾಗಿದ್ದನ್ನು ವಿಡಿಯೋ ತೋರಿಸಿತ್ತು. ವಿರೋಧಾಭಾಸವೆಂದರೆ ವಿಡಿಯೋ ಒಂದಲ್ಲ ಎರಡು ಕ್ಷಿಪಣಿಗಳನ್ನು ತೋರಿಸಿದೆ. ನೀರಿನಿಂದ ಹೊರಚಿಮ್ಮುವ ಕ್ಷಿಪಣಿ ಬೂದು ಬಣ್ಣದ್ದಾಗಿದ್ದರೆ, ಎರಡನೇ ಹಂತದಲ್ಲಿದ್ದ ಕ್ಷಿಪಣಿ ಕಿತ್ತಳೆ ಬಣ್ಣದಲ್ಲಿತ್ತು. ಪ್ರದೇಶದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರುವ ಭಾರತೀಯ ನೌಕಾಪಡೆಯ ಮೂಲಗಳ ಪ್ರಕಾರ ಜ.9ರಂದು ಪಾಕಿಸ್ತಾನ ಯಾವುದೇ ಕ್ಷಿಪಣಿಯನ್ನೂ ಪರೀಕ್ಷಿಸಿಯೇ ಇಲ್ಲ ಎಂದು ಹೇಳಲಾಯಿತು. ಹಳೆ ವಿಡಿಯೋ ಕ್ಲಿಪ್ಪಿಂಗ್ಗಳನ್ನು ಬಳಸಿ ವಿಡಿಯೋವನ್ನು ತಯಾರಿಸಿರಬಹುದು ಎಂದು ಮೂಲಗಳು ಹೇಳಿದವು.
2017: ನವದೆಹಲಿ: ಭ್ರಷ್ಟಾಚಾರ ಹಗರಣದ ಆರೋಪದ ನಡುವೆಯೂ ಸುರೇಶ್ ಕಲ್ಮಾಡಿ ಮತ್ತು ಅಭಯ್ ಸಿಂಗ್ ಚೌಟಾಲ ಅವರನ್ನು ಆಜೀವ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಗೊಂಡಿದ್ದ ಹಿನ್ನೆಲೆಯಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ನೇಮಕವನ್ನೇ ಅನೂರ್ಜಿತಗೊಳಿಸಿತು. ಈ ಇಬ್ಬರು ಅಧಿಕಾರಿಗಳು ಕಾಮನ್ವೆಲ್ತ್ ಕ್ರೀಡಾಕೂಟದ ಸಂದರ್ಭದಲ್ಲಿ ಭಾರಿ ಭ್ರಷ್ಟಾಚಾರ ಮಾಡಿರುವ ಆರೋಪಕ್ಕೆ ಗುರಿಯಾಗಿದ್ದರು. ಆದರೆ ಇಬ್ಬರನ್ನೂ ಐಒಎ ಆಜೀವ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಂಡಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಗೊಂಡಿತ್ತು. ಅಷ್ಟೇ ಅಲ್ಲ ಇಬ್ಬರ ನೇಮಕ ವಿಚಾರವಾಗಿ ತೆರೆಯ ಹಿಂದೆ ರಾಜಕೀಯವಿದೆ. ಕ್ರೀಡಾ ಸಚಿವಾಲಯ ಕೂಡ ಕಲ್ಮಾಡಿ ನೇಮಕಕ್ಕೆ ಆಕ್ಷೇಪ ಎತ್ತಿದ್ದರೂ, ನೇಮಕ ಮಾಡಿಕೊಂಡಿರುವುದು ಸಾಕಷ್ಟು ಅನುಮಾನಗಳಗೆ ಕಾರಣವಾಗಿತ್ತು. ಇಡೀ ವಿವಾದ ಮತ್ತಷ್ಟು ಚರ್ಚೆಗೆ ಕಾರಣವಾಗುತ್ತದೆನ್ನುವ ಸುಳಿವು ಸಿಗುತ್ತಿದ್ದಂತೆ ಐಒಎ ಇಬ್ಬರ ನೇಮಕವನ್ನೂ ಅನೂರ್ಜಿತಗೊಳಿಸಿತು. ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಐಒಎ,, ಆಡಳಿತದಲ್ಲಿನ ತಾಂತ್ರಿಕ ದೋಷದಿಂದ ಇಬ್ಬರ ನೇಮಕ ಆಗಿತ್ತು. ನೇಮಕ ಕ್ರಮವೇ ದೋಷದಿಂದ ಕೂಡಿತ್ತು. ಆದರೆ ಸಂಸ್ಥೆಗೂ, ಸುರೇಶ್ ಕಲ್ಮಾಡಿ ಮತ್ತು ಅಭಯ್ ಸಿಂಗ್ ಚೌಟಾಲ ಅವರಿಗೂ ಯಾವುದೇ ಸಂಪರ್ಕವಿಲ್ಲ ಎಂದು ಸ್ಪಷ್ಟಪಡಿಸಿತು.
2009: ಹಿರಿಯ ನಟಿ ಬೆಂಗಳೂರಿನ ಅರುಂಧತಿ ನಾಗ್, ಸಂಗೀತ ಕ್ಷೇತ್ರದ ಸಾಧಕ ಮೈಸೂರಿನ ಆರ್.ಸತ್ಯನಾರಾಯಣ್ ಮತ್ತು ಕೀರ್ತನಕಾರ ತುಮಕೂರಿನ ಲಕ್ಷ್ಮಣ್‌ದಾಸ್ ಅವರು 2008ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಪಾತ್ರರಾದರು. ಪ್ರೊ.ಆರ್.ಸತ್ಯನಾರಾಯಣ ಅವರಿಗೆ ಸಂಗೀತ ಕ್ಷೇತ್ರದ ಕೊಡುಗೆಗಾಗಿ, ಅರುಂಧತಿ ನಾಗ್ ಅವರಿಗೆ ನಾಟಕ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಹಾಗೂ ಲಕ್ಷ್ಮಣದಾಸ್ ಅವರಿಗೆ ಕೀರ್ತನ ಕ್ಷೇತ್ರದ ಕೊಡುಗೆಗಾಗಿ ಈ ಪ್ರಶಸ್ತಿ ಸಂದಿದೆ. ಅಕಾಡೆಮಿ ಅಧ್ಯಕ್ಷ ರಾಮ್‌ನಿವಾಸ್ ಮಿರ್ಧಾ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಕಾರ್ಯಕಾರಿ ಸಮಿತಿ ಪ್ರಶಸ್ತಿಗೆ ಆಯ್ಕೆಗಳನ್ನು ಮಾಡಿತು. ಹಿರಿಯ ರಂಗನಟಿ ಬಿ.ಜಯಶ್ರೀ ಅವರು ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿದ್ದರು.

2009: ವಿಶ್ವದ ಅತಿ ಎತ್ತರ ವ್ಯಕ್ತಿ ಚೀನಾದ ಬಾವೊ ಕ್ಸಿಶುನ್ ಈದಿನ ಪ್ರಚಾರ ರಾಯಭಾರಿಯಾಗಿ ಹಾಂಕಾಂಗ್‌ನ ಶಾಪಿಂಗ್ ಮಾಲ್‌ನಲ್ಲಿ ಕಾಣಿಸಿಕೊಂಡರು. ಇವರ ಎತ್ತರ 7 ಅಡಿ 8.95 ಅಂಗುಲ....!!

2009: ಬೆಂಗಳೂರಿನ ಯವನಿಕ ಸಭಾಂಗಣದಲ್ಲಿ ಮಾಧ್ಯಮ ಕ್ರಿಯೇಷನ್ಸ್ ವತಿಯಿಂದ ನಡೆದ 'ಮಲ್ಲ ಪ್ರಪಂಚ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕುಸ್ತಿ ಪಟುಗಳು ವೇದಿಕೆಯಲ್ಲೇ ಪರಸ್ಪರ ಸೆಣಸಾಟದ ಪ್ರಾತ್ಯಕ್ಷಿಕೆ ನೀಡಿದರು. ಎಂ. ನರಸಿಂಹಮೂರ್ತಿ ಅವರು ಬರೆದ ಈ ಪುಸ್ತಕವನ್ನು ಸಚಿವ ರಾಮಚಂದ್ರೇಗೌಡ ಬಿಡುಗಡೆ ಮಾಡಿದರು.

2009: ಕಳಂಕಿತ ಸತ್ಯಂ ಕಂಪ್ಯೂಟರ್‌ನ ನಿರ್ಗಮಿತ ಅಧ್ಯಕ್ಷ ರಾಮಲಿಂಗರಾಜು ಮತ್ತು ಅವರ ಕಿರಿಯ ಸೋದರ ರಾಮರಾಜು ಅವರನ್ನು ಹೈದರಾಬಾದ್‌ನ 6ನೇ ಮೆಟ್ರೊಪಾಲಿಟನ್ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇಬ್ಬರನ್ನೂ ಸದ್ಯ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಯಿತು.. ಈ ಮಧ್ಯೆ, ರಾಮಲಿಂಗರಾಜು ತಪ್ಪೊಪ್ಪಿಗೆ ನಂತರ ರಾಜೀನಾಮೆ ನೀಡಿ ಮರೆಯಾಗಿದ್ದ ಸತ್ಯಂ ಕಂಪ್ಯೂಟರ್‌ನ ಮುಖ್ಯ ಹಣಕಾಸು ಅಧಿಕಾರಿ ವದಲಮನಿ ಶ್ರೀನಿವಾಸ್ ಅವರನ್ನು ಸಿಐಡಿ ಪೊಲೀಸರು ಈದಿನ ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡರು.

2008: ಭ್ರಾಮಕ ಜಗತ್ತಿನ ಪರದೆಯ ಮೇಲೆ ಮೂಡಿ ಬಂದ ಟಾಟಾ ಇಂಡಿಯಾ ಮೋಟಾರ್ಸಿನ ಅಧ್ಯಕ್ಷ ರತನ್ ಎನ್. ಟಾಟಾ ಅವರು ನವದೆಹಲಿಯಲ್ಲಿ ಉನ್ನತ ತಂತ್ರಜ್ಞಾನ ಹಾಗೂ ಸೂಕ್ಷ್ಮತೆಯ ಪ್ರತೀಕವಾದ 'ನ್ಯಾನೋ' ಹೆಸರಿನ `ಜನಸಾಮಾನ್ಯ ಕಾರು' ಬಿಡುಗಡೆ ಮಾಡಿದರು. 'ನ್ಯಾನೋ' ಕಾರಿನ ಬಿಡುಗಡೆ ವೀಕ್ಷಣೆಗೆ ವಿಶ್ವದ ಮೂಲೆ ಮೂಲೆಗಳಿಂದ 3000ಕ್ಕೂ ಹೆಚ್ಚು ಮಂದಿ ಪತ್ರಕರ್ತರು ಕಿಕ್ಕಿರಿದು ಸೇರಿದ್ದರು. ನೋಡಲು ಸ್ವಲ್ಪ ಮಾರುತಿ ಸುಜುಕಿಯ ಜೆನ್ ಎಸ್ಟಿಲೋ ಕಾರನ್ನು ಹೋಲುವ `ನ್ಯಾನೊ' ಒಂದೇ ನೋಟಕ್ಕೆ ಆತ್ಮೀಯತೆಯನ್ನು ಉಕ್ಕಿಸುತ್ತದೆ. ಮೂರು ಮಾದರಿಗಳಲ್ಲಿ ನ್ಯಾನೊ ಲಭ್ಯ. ಮೂಲ ಮಾದರಿಯ ಕಾರಿನ ಡೀಲರ್ ಬೆಲೆ ಒಂದು ಲಕ್ಷ ರೂಪಾಯಿ! ಈ ಮೂಲಕ ಎಲ್ಲ ವದಂತಿಗಳನ್ನು ಟಾಟಾ ಸುಳ್ಳಾಗಿಸಿತು. `ಒಂದು ಲಕ್ಷ ರೂ. ವೆಚ್ಚದಲ್ಲಿ ಕಾರು ನೀಡುವುದಾಗಿ ಘೋಷಿಸಿದ ನಾಲ್ಕು ವರ್ಷಗಳಲ್ಲಿ ಉಕ್ಕು, ಟಯರ್ ಎಲ್ಲ ಕಚ್ಚಾವಸ್ತುಗಳ ಬೆಲೆ ಹೆಚ್ಚಾಗಿದೆ. ಆದರೆ ಇದನ್ನು ನೆಪವಾಗಿ ನಾನು ನೀಡುವುದಿಲ್ಲ. ಭರವಸೆ ಅಂದರೆ ಅದು ಈಡೇರಲೇಬೇಕು' ಎನ್ನುವುದು ರತನ್ ಟಾಟಾ ಅವರ ಸ್ಪಷ್ಟನುಡಿ. ಆದರೆ ಸಾಗಣೆ ವೆಚ್ಚ ಮತ್ತು ವ್ಯಾಟ್ ಪ್ರತ್ಯೇಕ. ಬೆಂಗಳೂರಿನಲ್ಲಿ ಕಾರಿನ ಬೆಲೆ ಸುಮಾರು 1.25 ರಿಂದ 1.35 ಲಕ್ಷ ರೂ.ಆಗಬಹುದು.

2008: ಕರ್ನಾಟಕದ ಆರನ್ ಡಿಸೋಜಾ ಅವರು ಬೆಂಗಳೂರಿನಲ್ಲಿ ನಡೆದ 21ನೇ ದಕ್ಷಿಣ ವಲಯ ಈಜು ಚಾಂಪಿಯನ್ ಶಿಪ್ನ ಬಾಲಕರ ಮೊದಲ ಗುಂಪಿನ 100 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ ಹೊಸ ಕೂಟ ದಾಖಲೆ ಸ್ಥಾಪಿಸಿದರು. ಜಯನಗರದ ಕಾರ್ಪೋರೇಷನ್ ಈಜುಕೊಳದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ಈ ದೂರವನ್ನು 58.33 ಸೆಕೆಂಡುಗಳಲ್ಲಿ ಮುಟ್ಟುವ ಮೂಲಕ 2005ರಲ್ಲಿ ಕರ್ನಾಟಕದವರೇ ಆದ ಅನಿಕೇತ್ ಡಿಸೋಜಾ ಅವರು 59.79 ಸೆಕೆಂಡುಗಳಲ್ಲಿ ಮುಟ್ಟಿ ಸ್ಥಾಪಿಸಿದ್ದ ದಾಖಲೆಯನ್ನು ಮುರಿದರು.

2008: ಕರ್ನಾಟಕದ ಮೂವರು ವಿದ್ಯಾರ್ಥಿಗಳಾದ ಮಂಜುಶ್ರೀ ಹೆಬ್ಬಾರ್, ಹಾರ್ದಿಕ ಎಸ್.ಶೆಟ್ಟಿ ಮತ್ತು ದಿವಂಗತ ಎಸ್. ಜಗದೀಶ್ 2006-07ನೇ ಸಾಲಿನ `ಇಂದಿರಾಗಾಂಧಿ ರಾಷ್ಟ್ರೀಯ ಸೇವಾ ಯೋಜನಾ ಪ್ರಶಸ್ತಿ'ಗೆ ಆಯ್ಕೆಯಾದರು. ಮಂಜುಶ್ರೀ ಹೆಬ್ಬಾರ್ ಮತ್ತು ಹಾರ್ದಿಕ ಎಸ್.ಶೆಟ್ಟಿ ಮಂಗಳೂರಿನ ಸೇಂಟ್ ಆಗ್ನೇಸ್ ಕಾಲೇಜು ವಿದ್ಯಾರ್ಥಿಗಳು. ಮರಣೋತ್ತರ ಪ್ರಶಸ್ತಿಗೆ ಆಯ್ಕೆಯಾಗಿರುವ ಜಗದೀಶ್ ಉಡುಪಿ ಜಿಲ್ಲೆಯ ಬಾರ್ಕೂರಿನ ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದವರು.

2008: ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ನೀಡುತ್ತಿದ್ದ ಸಂಬಳವನ್ನು ದ್ವಿಗುಣಗೊಳಿಸುವುದಕ್ಕೆ ಕೇಂದ್ರ ಸಂಪುಟ ಸಭೆ ಸಮ್ಮತಿ ಸೂಚಿಸಿತು. ಅದರಂತೆ ರಾಷ್ಟ್ರಪತಿಗಳ ಸಂಬಳ ತಿಂಗಳಿಗೆ ಹಾಲಿ 50 ಸಾವಿರದಿಂದ 1 ಲಕ್ಷ ರೂಪಾಯಿಗೆ ಹೆಚ್ಚಿತು. ಉಪರಾಷ್ಟ್ರಪತಿಗಳ ವೇತನ 40 ಸಾವಿರದಿಂದ 85 ಸಾವಿರಕ್ಕೆ ಹಾಗೂ ರಾಜ್ಯಪಾಲರ ವೇತನ 36 ಸಾವಿರದಿಂದ 75ಸಾವಿರಕ್ಕೆ ಏರಿಕೆಯಾಯಿತು. ಈ ವೇತನ ಹೆಚ್ಚಳ 2007ರ ಜನವರಿಯಿಂದಲೇ ಪೂರ್ವಾನ್ವಯವಾಗುವುದು.

2008: ರಾಮಸೇತು ವಿವಾದಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಲು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿನಲ್ಲಿ ಇನ್ನಷ್ಟು ಕಾಲಾವಕಾಶ ಕೋರಿತು. ಈ ವಿವಾದದ ಕುರಿತು ವಿವಿಧ ಸಚಿವಾಲಯಗಳ ಮಧ್ಯೆ ಭಿನ್ನಾಭಿಪ್ರಾಯವಿರುವುದಕ್ಕೆ ಇದು ಸಾಕ್ಷಿಯಾಯಿತು.

2008: ತಮಿಳು ಚಿತ್ರರಂಗದ ಖ್ಯಾತ ನಟ ಪಾಂಡ್ಯನ್ (48) ಮದುರೆಯ ಖಾಸಗಿ ಆಸ್ಪತ್ರೆಯಲ್ಲಿ ಕಾಮಾಲೆ ಮತ್ತು ಯಕೃತ್ ವೈಫಲ್ಯದಿಂದ ನಿಧನರಾದರು. 75ಕ್ಕೂ ಅಧಿಕ ಚಿತ್ರಗಳಲ್ಲಿ ಅವರು ನಟಿಸಿದ್ದರು. ಭಾರತೀರಾಜ ನಿರ್ದೇಶನದ ತಮ್ಮ ಮೊದಲ ಚಿತ್ರ `ಮನ್ವಸನೈ' ಚಿತ್ರದಲ್ಲೇ ಯಶಸ್ಸು ಕಂಡ ಪಾಂಡ್ಯನ್ ಬಳಿಕ ಹಲವು ಸದಭಿರುಚಿಯ ಚಿತ್ರಗಳನ್ನು ನೀಡಿದರು. 2001ರಲ್ಲಿ ಅವರು ಎಐಎಡಿಎಂಕೆ ಪಕ್ಷ ಸೇರಿದ್ದರು.

2007: ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಧ್ರುವಗಾಮಿ ಉಪಗ್ರಹ ವಾಹನ (ಪಿಎಸ್ಎಲ್ವಿ - ಸಿ 7) ಯಶಸ್ವಿಯಾಗಿ ಗಗನಕ್ಕೆ ಚಿಮ್ಮಿ ನಾಲ್ಕು ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸಿತು. ಇದರೊಂದಿಗೆ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಗರಿಯನ್ನು ತನ್ನ ಮುಡಿಗೆ ಏರಿಸಿಕೊಂಡಿತು.

2007: ಸದನದಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ದುರ್ನಡತೆಗಾಗಿ ಲೋಕಸಭೆಯ 10 ಮಂದಿ ಮತ್ತು ರಾಜ್ಯ ಸಭೆಯ ಇಬ್ಬರು ಸದಸ್ಯರನ್ನು ಉಚ್ಚಾಟಿಸಿದ ಸಂಸತ್ತಿನ ಐತಿಹಾಸಿಕ ನಿರ್ಣಯವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ತಪ್ಪೆಸಗಿದ ಸಂಸತ್ ಸದಸ್ಯರನ್ನು ಸದನದಿಂದ ಉಚ್ಚಾಟಿಸುವ ಅಧಿಕಾರ ಸಂಸತ್ತಿಗೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ನೇತೃತ್ವದ ಪಂಚಸದಸ್ಯ ಪೀಠವು 4-1ರ ಬಹುಮತದ ತೀರ್ಪು ನೀಡಿತು.

2007: ನೋಯಿಡಾದ ನಿಥಾರಿ ಗ್ರಾಮದಲ್ಲಿ ಮಕ್ಕಳ ಸರಣಿ ಕೊಲೆಯ ಹಿಂದೆ ತನ್ನ ಪಾತ್ರವಿದೆ ಆರೋಪಿ ಸುರೇಂದ್ರ ಕೊಲಿ ಮಂಪರು ಪರೀಕ್ಷೆಯ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡ.

2007: ನಾಟ್ಯಾಚಾರ್ಯ ಯು.ಎಸ್. ಕೃಷ್ಣರಾವ್ (92) ಮಂಗಳೂರಿನಲ್ಲಿ ನಿಧನರಾದರು. ಕರ್ನಾಟಕ ಕಲಾ ತಿಲಕ, ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಕೃಷ್ಣರಾವ್ ಮಂಗಳೂರಿಗೆ ನೃತ್ಯ ಕಲಾ ಸಂಪತ್ತನ್ನು ತಂದುಕೊಟ್ಟ ಮಹಾನ್ ಸಾಧಕ.

2007: ಬೆಂಗಳೂರಿನ ಉದ್ಯಮಿ ಅರುಣ್ ಭರತ್ ರಾಮ್ ಅವರಿಗೆ ಪ್ರತಿಷ್ಠಿತ ಜೆಮ್ಷೆಡ್ ಜಿ ಟಾಟಾ ಪ್ರಶಸ್ತಿ ಲಭಿಸಿತು.

2006: ಮರಾಠಾ ನಾಯಕ ಶಿವಾಜಿಯ ತೇಜೋವಧೆ ಮಾಡುವಂತಹ ವಿಷಯಗಳನ್ನು ಒಳಗೊಂಡಿದೆ ಎನ್ನಲಾದ ಅಮೆರಿಕದ ವಿದ್ವಾಂಸ ಜೇಮ್ಸ್ ಲೇನ್ ಅವರ `ಎಪಿಕ್ ಆಫ್ ಶಿವಾಜಿ' ಪುಸ್ತಕವನ್ನು ಮಹಾರಾಷ್ಟ್ರ ಸರ್ಕಾರ ನಿಷೇಧಿಸಿತು. ಈ ಪುಸ್ತಕವನ್ನು ದೆಹಲಿಯ ಓರಿಯಂಟ್ ಲಾಂಗ್ಮನ್ 2001ರಲ್ಲಿ ಪ್ರಕಟಿಸಿದೆ. ಜೇಮ್ಸ್ ಲೇನ್ ಅವರ ಹಿಂದಿನ ಪುಸ್ತಕ `ಶಿವಾಜಿ- ಹಿಂದೂ ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ' ಪುಸ್ತಕವನ್ನೂ 2004ರಲ್ಲಿ ನಿಷೇಧಿಸಲಾಗಿತ್ತು.

2006: ಯಾವ ವಿಚಾರಣೆಯೂ ಇಲ್ಲದೆ 54 ವರ್ಷಗಳ ಕಾಲ ಬಂಧನದಲ್ಲಿ ಇಟ್ಟ ತಪ್ಪಿಗಾಗಿ ಅಸ್ಸಾಂ ಸರ್ಕಾರವು ತೇಜಪುರದ ಎಲ್ ಜಿ ಪಿ ಪ್ರಾದೇಶಿಕ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿದ್ದ 78 ವರ್ಷಗಳ ವೃದ್ಧ ಲಾಲುಂಗ್ ಗೆ 3 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು. ಕೇಂದ್ರ ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಸಿಲ್ಚಾಂಗ್ ನ ಟಿನ್ ಹೊದ್ದ ಪುಟ್ಟ ಮನೆಯಲ್ಲಿ ಈಗ ಇರುವ ಈ ವೃದ್ಧನ ಪ್ರಶ್ನೆ: ಈ ಹಣ ನನ್ನ ಉಳಿದ ಜೀವನ ಪೂರ್ತಿಮೀನು ಮತ್ತು ಕೋಳಿ ತಿನ್ನಲು ಸಾಕಾಗಬಹುದೇ? 1950ರಲ್ಲಿ ಬಂಧಿತನಾಗಿದ್ದ ಈತನನ್ನು ಒಂದೇ ಒಂದು ಸಲ ಕೂಡಾ ವಿಚಾರಣೆಗೆ ಗುರಿಪಡಿಸಲಾಗಿಲ್ಲ. ಯಾರ ಮೇಲೋ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದಕ್ಕಾಗಿ ಈತನನ್ನು ಬಂಧಿಸಲಾಯಿತಂತೆ. ಆದರೆ ಅದು ಎಷ್ಟು ನಿಜ ಯಾರಿಗೂ ಗೊತ್ತಿಲ್ಲ. ಪೊಲೀಸರ ಬಳಿ ಅದಕ್ಕೆ ಸಂಬಂಧಿಸಿದ ದಾಖಲೆಗಳೂ ಇಲ್ಲ!. ಪ್ರಕರಣ ದಾಖಲಾಗಿ ಬಂಧಿತನಾದಾಗ ಈತನಿಗೆ 23 ವರ್ಷ ವಯಸ್ಸು. ತನ್ನನ್ನು ಸಮರ್ಥಿಸಿಕೊಳ್ಳಲು ಮಾನಸಿಕವಾಗಿ ಸಮರ್ಥನಾಗಿಲ್ಲ ಎಂಬ ಕಾರಣಕ್ಕಾಗಿ ಈತನನ್ನು ಗುವಾಹಟಿ ಸೆರೆಮನೆಯಿಂದ 1951ರ ಏಪ್ರಿಲ್ 14ರಂದು ತೇಜಪುರದ ಮಾನಸಿಕ ಅನಾಥಾಲಯದಲ್ಲಿ ತಂದು ಇರಿಸಲಾಯಿತು. ಕಳೆದ ವರ್ಷ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಣ್ಣಿಗೆ ಬೀಳುವವರೆಗೂ ಆತ ಅಲ್ಲೇ ಇದ್ದ. ಆರು ತಿಂಗಳ ಹಿಂದೆ ಬಿಡುಗಡೆ ಆದ ಬಳಿಕ ಸೋದರಳಿಯ ಬಡ ರೈತ ಬದನ್ ಪಟೋರಿನ ಮನೆಯಲ್ಲಿ ವಾಸವಿದ್ದಾನೆ.

2006: ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು 2005ನೇ ಸಾಲಿನ ಪ್ರತಿಷ್ಠಿತ `ಪಂಪ ಪ್ರಶಸ್ತಿ'ಗೆ ಆಯ್ಕೆಯಾದರು. ಒಂದು ಲಕ್ಷ ರೂಪಾಯಿ ನಗದು, ತಾಮ್ರ ಫಲಕ, ಪುತ್ಥಳಿಯನ್ನು ಒಳಗೊಂಡ ಈ ಪ್ರಶಸ್ತಿಯನ್ನು ಕನ್ನಡದ ಸೃಜನಶೀಲ ಕ್ಷೇತದಲ್ಲಿ ಸಲ್ಲಿಸಿದ ಸೇವೆಗಾಗಿ ನೀಡಲಾಗುತ್ತದೆ.

1987: ಕರ್ನಲ್ ಟಿ.ಪಿ.ಎಸ್. ಚೌಧರಿ ನೇತೃತ್ವದಲ್ಲಿ 37 ಅಡಿ ಉದ್ದ 10.5 ಟನ್ ತೂಕದ ಫೈಬರ್ ಗ್ಲಾಸ್ ವಿಹಾರ ನೌಕೆ ತೃಷ್ಣಾವು ಬಾಂಬೆ (ಈಗಿನ ಮುಂಬೈ) ತಲುಪುವುದರೊಂದಿಗೆ ಭಾರತೀಯರ ಮೊತ್ತ ಮೊದಲ `ನೌಕೆ ಮೂಲಕ ವಿಶ್ವ ಪ್ರದಕ್ಷಿಣಾ ಯಾನ' ಪೂರ್ಣಗೊಂಡಿತು.

1966: ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಮತ್ತು ಪಾಕಿಸ್ಥಾನದ ಅಧ್ಯಕ್ಷ ಅಯೂಬ್ ಖಾನ್ ಅವರು ರಷ್ಯಾದ ತಾಷ್ಕೆಂಟಿನಲ್ಲಿ ಭಾರತ- ಪಾಕಿಸ್ಥಾನ ನಡುವಣ 17ದಿನಗಳ ಸಮರ ಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಉಭಯ ರಾಷ್ಟ್ರಗಳು ತಮ್ಮ ತಮ್ಮ ಸೇನೆಗಳನ್ನು ಸಮರಭೂಮಿಯಿಂದ ಹಿಂತೆಗೆದುಕೊಂಡು ರಾಜತಾಂತ್ರಿಕ ಬಾಂಧವ್ಯ ಮರುಸ್ಥಾಪನೆಗೆ ಒಪ್ಪಿಕೊಂಡವು. ಮರುದಿನ ಲಾಲ್ ಬಹಾದುರ್ ಶಾಸ್ತ್ರಿ ಅವರು ಹೃದಯಾಘಾತದಿಂದ ನಿಧನರಾದರು.

1954: ಕಲಾವಿದ ನಾಗರಾಜು ಸಿ ಜನನ.

1946: ಆಗ್ರಾ ಘರಾಣೆ ಶೈಲಿಯ ಹಿಂದೂಸ್ತಾನಿ ಸಂಗೀತದ ಪ್ರಖ್ಯಾತ ಗಾಯಕಿ ವತ್ಸಲಾ ಮಾಪಾರಿ ಅವರು ದಾಸಪ್ಪ ಮಾಪಾರಿ- ಲಕ್ಷ್ಮಿ ಮಾಪಾರಿ ದಂಪತಿಯ ಮಗಳಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜನಿಸಿದರು.

1946: ವಿಶ್ವಸಂಸ್ಥೆಯ ಮೊದಲ ಮಹಾ ಅಧಿವೇಶನ (ಜನರಲ್ ಅಸೆಂಬ್ಲಿ) ಲಂಡನ್ನಿನಲ್ಲಿ ಸಮಾವೇಶಗೊಂಡಿತು.

1945: ಕಲಾವಿದ ಬಸವಲಿಂಗಯ್ಯ ಎಸ್. ಮಠ ಜನನ.

1929: ಮೊದಲ ಬಾರಿಗೆ ಡೈಲಿ ಬೆಲ್ಜಿಯನ್ ಕ್ಯಾಥೋಲಿಕ್ ವೃತ್ತ ಪತ್ರಿಕೆ `ಲೀ ಎಕ್ಸ್ ಎಕ್ಸೆ ಸೀಕ್ಲೆ' ಯಲ್ಲಿ `ಟಿನ್ ಟಿನ್' ಪ್ರಥಮ ಬಾರಿಗೆ ಪ್ರಕಟಗೊಂಡಿತು. `ಲಿ ಪೆಟಿಟ್ ವಿಂಗ್ಟೀಮ್' ಎಂದು ಅದನ್ನು ಕರೆಯಲಾಗುತ್ತಿತ್ತು. `ಹೆರ್ ಗೆ' ಎಂದೇ ಖ್ಯಾತರಾದ ರೆಮಿ ಜಾರ್ಜಸ್ ಅವರು `ಟಿನ್ ಟಿನ್' ಸೃಷ್ಟಿಕರ್ತರು.

1922: ಕಲಾವಿದ ವಿ.ಸಿ. ಮಾಲಗತ್ತಿ ಜನನ.

1920: ಜಿನೇವಾದಲ್ಲಿ `ಲೀಗ್ ಆಫ್ ನೇಷನ್ಸ್' ಉದ್ಘಾಟನೆಗೊಂಡಿತು.

1870: ಬಾಂಬೆಯ ಚರ್ಚ್ ಗೇಟ್ ನಿಲ್ದಾಣ ರೈಲ್ವೆ ಸಂಚಾರಕ್ಕಾಗಿ ತೆರವುಗೊಂಡಿತು.

1863: ಜಗತ್ತಿನ ಮೊತ್ತ ಮೊದಲ ಭೂಗತ ಪ್ಯಾಸೆಂಜರ್ ರೈಲ್ವೆ `ಲಂಡನ್ ಮೆಟ್ರೋಪಾಲಿಟನ್ ರೈಲ್ವೆ'ಯು ಲಂಡನ್ನಿನಲ್ಲಿ ಉದ್ಘಾಟನೆಗೊಂಡಿತು.

1839: ಬ್ರಿಟನ್ನಿನಲ್ಲಿ ಮೊತ್ತ ಮೊದಲ ಬಾರಿಗೆ `ಭಾರತೀಯ ಚಹಾ'ದ ಹರಾಜು ನಡೆಯಿತು.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment