ಇಂದಿನ ಇತಿಹಾಸ History Today ಜನವರಿ 18
2018:
ಬೆಂಗಳೂರು: ಅಸ್ವಸ್ಥತೆಯಿಂದ ಬಳಲುತ್ತಿದ್ದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾದರು. ಅನಾರೋಗ್ಯದಿಂದಾಗಿ ಅವರು ಎರಡು ದಿನಗಳಿಂದ ನಗರದ ಶ್ರೀ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕಾಶಿನಾಥ್ ಕೊನೆಯುಸಿರೆಳೆದರು. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಸಿನಿಮಾಗಳನ್ನು ಕಾಶಿನಾಥ್ ನಿರ್ಮಿಸಿದ್ದರು.
ಉಪೇಂದ್ರ, ವಿ.ಮನೋಹರ್ ಮತ್ತು ಸುನೀಲ್‌ಕುಮಾರ್ ದೇಸಾಯಿಯವರಂತಹ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು.
ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಸಿನಿಮಾ ನಿರ್ಮಾಣದಲ್ಲಿ ಇವರು ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಚಿತ್ರರಂಗದಲ್ಲಿ ಹೊಸ ಅಲೆಯನ್ನೆಬ್ಬಿಸಿದ್ದ ಅವರು ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಇವರು ನಟಿಸಿರುವ ‘ಅನುಭವ’, ‘ಅನಂತನ ಅವಾಂತರ’, ’ಅವಳೆ ನನ್ನ ಹೆಂಡ್ತಿ’ ಮತ್ತು ’ಹೆಂಡತಿ ಎಂದರೆ ಹೇಗಿರಬೇಕು’ ಸಿನಿಮಾಗಳು ಜನಮಾನಸವನ್ನು ತಲುಪಿದ್ದವು. ‘ಜವಾನಿ ಜಿಂದಾಬಾದ್’ ಹೆಸರಲ್ಲಿ ಹಿಂದಿಗೆ ರಿಮೇಕ್‌ಗೊಂಡ ‘ಅವಳೆ ನನ್ನ ಹೆಂಡ್ತಿ’ ಚಿತ್ರದಲ್ಲಿ ಅಮೀರ್ ಖಾನ್ ಮತ್ತು ಫರ್ಹಾ ನಟಿಸಿದ್ದರು.
2017: ನವದೆಹಲಿ: ಪ್ರೋ ಕುಸ್ತಿ ಲೀಗ್ನಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಬೀಜಿಂಗ್ ಒಲಿಂಪಿಕ್ ಬೆಳ್ಳಿ ವಿಜೇತ ಉಕ್ರೇನ್ನ ಆಂಡ್ರೆ ಸ್ಟಾಡ್ನಿಕ್ ಅವರನ್ನು ಸೋಲಿಸಿದರು. ಈದಿನ ರಾತ್ರಿ ನಡೆದ ಸ್ನೇಹಯುತ ಕುಸ್ತಿ ಪಂದ್ಯದಲ್ಲಿ ಆಂಡ್ರೆ ಅವರನ್ನು ಪರಾಭವಗೊಳಿಸಿದರು. ಮುಂಬೈ ಮಹಾಸಾರಥಿ ಮತ್ತು ಎನ್ಸಿಆರ್ ಪಂಜಾಬ್ ರಾಯಲ್ಸ್ ನಡುವಿನ 2ನೇ ಸೆಮಿಫೈನಲ್ ಆರಂಭಗೊಳ್ಳುವ ಮೊದಲು ಬಾಬಾ ರಾಮ್ ದೇವ್ ಉಕ್ರೇನ್ ಕುಸ್ತಿ ಪಟುವಿಗೆ ಯೋಗದ ಶಕ್ತಿ ಬಗ್ಗೆ ಅರಿವು ಮೂಡಿಸುವುದಾಗಿ ತಿಳಿಸಿದ್ದರು. ಯೋಗದ ಶಕ್ತಿಯ ಬಗ್ಗೆ ಅರಿವಾಗಬೇಕೆ? ಹಾಗಿದ್ದರೆ ನನ್ನ ಜತೆ ಕುಸ್ತಿಗೆ ಬನ್ನಿ! ಹೀಗೆ 2008ರ ಒಲಿಂಪಿಕ್ನಲ್ಲಿ ಬೆಳ್ಳಿ ಗೆದ್ದಿರುವ ಕುಸ್ತಿಪಟು ಆಂಡ್ರೆ ಸ್ಟಾಂಡ್ನಿಕ್ ಅವರಿಗೆ ಯೋಗ ಗುರು ಬಾಬಾ ರಾಮದೇವ್ ಪಂತಾಹ್ವಾನ ನೀಡಿದ್ದರು. ರಾಷ್ಟ್ರೀಯ ಕುಸ್ತಿಪಟುಗಳ ಜತೆ ಕುಸ್ತಿ ಮಾಡಿದ್ದೇನೆ. ಆದರೆ ವಿದೇಶಿ ಕುಸ್ತಿಪಟುಗಳ ಜತೆ ಇದುವರೆಗೆ ಕುಸ್ತಿ ಮಾಡಿಲ್ಲ. ವಿದೇಶಿ ಕುಸ್ತಿಪಟುಗಳ ಜತೆ ಕುಸ್ತಿ ಮಾಡಲು ಹೆಚ್ಚು ಉತ್ಸುಕನಾಗಿದ್ದೇನೆ. ಈ ಪಂದ್ಯದಿಂದ ಯೋಗದ ನಿಜವಾದ ಶಕ್ತಿ ಎಲ್ಲರಿಗೂ ಗೊತ್ತಾಗುತ್ತದೆ ಎಂದಿದ್ದರು. ಕಳೆದ ವರ್ಷ ಹರಿದ್ವಾರದಲ್ಲಿ ತಮ್ಮ ಆಶ್ರಮದ 20ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಭಾರತದ ಖ್ಯಾತ ಕುಸ್ತಿಪಟು ಬೀಜಿಂಗ್ ಒಲಿಂಪಿಕ್ನಲ್ಲಿ ಕಂಚು ಗೆದ್ದ ಸುಶೀಲ್ ಕುಮಾರ್ ಅವರ ಜತೆ ಕುಸ್ತಿ ಮಾಡಿದ್ದರು.
2018: ಬಾಲಸೋರ್: ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಅತ್ಯಾಧುನಿಕ ಅಗ್ನಿ-5 ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾ ಕಡಲ ತೀರದಲ್ಲಿ ಯಶಸ್ವಿಯಾಗಿ ನಡೆಸಲಾಗಿದ್ದು, ಶತ್ರು ರಾಷ್ಟ್ರಗಳ ಮೇಲೆ ದಾಳಿ ನಡೆಸುವ ದೇಶದ ಸಾಮರ್ಥ್ಯ ಮತ್ತೊಂದು ಹಂತ ಮೇಲೇರಿತು. ಈ ಯಶಸ್ಸಿನೊಂದಿಗೆ ಭಾರತವು, ಚೀನಾ ಹಾಗೂ ಐರೋಪ್ಯ ಒಕ್ಕೂಟದ ಬಹುಭಾಗವನ್ನು ತಲುಪಬಲ್ಲ ಸ್ವದೇಶಿ ನಿರ್ಮಿತ ಕ್ಷಿಪಣಿಯನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಂತಾಯಿತು. ಈಗಾಗಲೇ ವಿವಿಧ ಹಂತದಲ್ಲಿ ಈ ಕ್ಷಿಪಣಿಯನ್ನು 2012, 2013, 2015 ಮತ್ತು
2016ರಲ್ಲಿ ಉಡಾವಣಾ ಕೇಂದ್ರದಿಂದ ಹಾಗೂ ಸಂಚಾರಿ ವಾಹನದಿಂದ (ಮೊಬೈಲ್ ಲಾಂಚರ್) ಯಶಸ್ವಿಪರೀಕ್ಷೆಗೆ ಒಳಪಡಿಸಲಾಗಿದ್ದು,
ಈದಿನದ ಪ್ರಯೋಗ ಇದಕ್ಕೆ ಐದನೇ ಹಾಗೂ ಅಂತಿಮ ಸೇರ್ಪಡೆ. ಸಶಸ್ತ್ರಪಡೆಗಳಿಗೆ
ನಿಯೋಜಿಸುವ ಮುನ್ನ ನಡೆಸಿದ ಮಹತ್ವದ ಪರೀಕ್ಷೆ ಇದಾಗಿದೆ ಎಂದು ಮೂಲಗಳು ತಿಳಿಸಿದವು. ಕೆಲವೇ ನಿಮಿಷಗಳಲ್ಲಿ
5000 ಕಿ.ಮೀ ದೂರದ ಗುರಿ ತಲುಪಬಲ್ಲ ಭೂಮಿಯಿಂದ ಭೂಮಿಗೆ ಚಿಮ್ಮುವ ಸುಧಾರಿತ ಕ್ಷಿಪಣಿಯನ್ನು ಬೆಳಗ್ಗೆ 9.54ರ ಸುಮಾರಿಗೆ ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪ (ವೀಲ್ಹರ್ಸ್ ಐಲ್ಯಾಂಡ್) ಸಮಗ್ರ ಪರೀಕ್ಷಾ ವಲಯದ 4ನೇ ಲಾಂಚ್ ಪ್ಯಾಡ್‌ನಿಂದ ಪ್ರಯೋಗಿಸಲಾಯಿತು.
ಕೇವಲ 19 ನಿಮಿಷದಲ್ಲಿ
4,900 ಕಿ.ಮೀ ದೂರ ಕ್ರಮಿಸಿ ಬಳಿಕ ಸಮುದ್ರಕ್ಕೆ ಬಿತ್ತು ಎಂದು ರಕ್ಷಣಾ ಮೂಲಗಳು ಹೇಳಿದವು. 'ಕಾರ್ಯಾಚರಣೆ ಟ್ರ್ಯಾಕಿಂಗ್ ಸಿಸ್ಟಮ್ ಹಾಗೂ ರೇಡಾರ್‌ಗಳ ಮೂಲಕ ಕ್ಷಿಪಣಿಯ ಚಲನೆಯ ಕಾರ್ಯದಕ್ಷತೆಯನ್ನು ಪರಿಶೀಲಿಸಲಾಗಿದ್ದು,
ಇದೊಂದು ಯಶಸ್ವಿ ಉಡಾವಣೆಯಾಗಿದೆ,'' ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಪ್ರತಿಷ್ಠಿತ ರಾಷ್ಟ್ರಗಳ ಕ್ಲಬ್ಗೆ: ಅಗ್ನಿ -5 ಕ್ಷಿಪಣಿಯ ಇದುವರೆಗಿನ ಉಡಾವಣೆಗಳಲ್ಲಿಯೇ
ಇದು ಗರಿಷ್ಠ ಮಟ್ಟ ತಲುಪಿದ್ದು, ಈ ಮೂಲಕ ಭಾರತ ಕೂಡ ಸದ್ಯದಲ್ಲೇ 5000-5500 ಕಿ.ಮೀ ದೂರ ಕ್ರಮಿಸಬಲ್ಲ ಕ್ಷಿಪಣಿಗಳನ್ನು ಹೊಂದಿದ ಪ್ರತಿಷ್ಠಿತ ರಾಷ್ಟ್ರಗಳ ಸಾಲಿಗೆ ಸೇರಲಿದೆ ಎಂದು ಮೂಲಗಳು ಹೇಳಿದವು. ಸದ್ಯ ಅಮೆರಿಕ, ರಷ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್ ಈ ರೇಂಜ್‌ನ ಕ್ಷಿಪಣಿಗಳನ್ನು ಹೊಂದಿವೆ.
2018: ನವದೆಹಲಿ: ಜೀವದ
ಹಂಗು ತೊರೆದು ಕೆರೆಗೆ ಹಾರಿ ಬಾಲಕನನ್ನು ಬದುಕಿಸುವಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಂಡ ಕರ್ನಾಟಕದ ನೇತ್ರಾವತಿ, ಜೂಜು ಮತ್ತು ಬೆಟ್ಟಿಂಗ್ ಜಾಲವನ್ನು ಭೇದಿಸುವಲ್ಲಿ ಪೊಲೀಸರಿಗೆ ನೆರವಾದ ಉತ್ತರ ಪ್ರದೇಶದ 18ರ ತರುಣಿ ನಾಜಿಯಾ ಸೇರಿದಂತೆ 18 ಮಂದಿಗೆ 2018ರ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಿಸಲಾಯಿತು. 7
ಹುಡುಗಿಯರು ಹಾಗೂ 11 ಹುಡುಗರು ತಮ್ಮ ಅಸಾಮಾನ್ಯ ಸಾಹಸಕ್ಕಾಗಿ ಈ ಪ್ರಶಸ್ತಿಯನ್ನು ಗೆದ್ದಿದ್ದು, ಜನವರಿ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡುವರು. ಶೌರ್ಯ ಪ್ರಶಸ್ತಿ ವಿಜೇತರು ಜನವರಿ 26ರ ಗಣರಾಜ್ಯೋತ್ಸವ ಪರೇಡ್ನಲ್ಲಿಯೂ ಭಾಗವಹಿಸುವರು. ನಾಜಿಯಾ ಸಾಹಸ: ಉತ್ತರ
ಪ್ರದೇಶದ ತನ್ನ ಊರನ್ನು ದಶಕಗಳಿಂದ ಕಾಡುತ್ತಿದ್ದ ಜೂಜು ಮತ್ತು ಬೆಟ್ಟಿಂಗ್ ಜಾಲದ ವಿರುದ್ಧ ಸಿಡಿದು ನಿಂತಿದ್ದಳು ನಾಜಿಯಾ. ದುಷ್ಕರ್ಮಿಗಳು ಸಾಕಷ್ಟು ಬಾರಿ ಆಕೆಗೆ ಬೆದರಿಕೆ ಹಾಕಿದರೂ ಜಗ್ಗದೆ ಹೋರಾಡಿದ ಆಕೆ ಅಂತಿಮವಾಗಿ ಪೊಲೀಸರ ಸಹಾಯದಿಂದ ಜಾಲವನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದಳು. ಆಕೆಗೆ ಪ್ರತಿಷ್ಠಿತ ಭಾರತ್ ಪ್ರಶಸ್ತಿ ನೀಡಲಾಗುತ್ತಿದೆ.
15 ಮಕ್ಕಳ ರಕ್ಷಕಿ: ಪಂಜಾಬ್ನಲ್ಲಿ ತೊರೆಯೊಂದಕ್ಕೆ ಬಿದ್ದ ಶಾಲಾ ಬಸ್ಸಿನಿಂದ 15 ಮಂದಿ ಮಕ್ಕಳನ್ನು ರಕ್ಷಿಸಿದ 17 ವರ್ಷದ ಕರಣ್ ಬೀರ್ ಸಿಂಗ್‌ಗೆ ಸಂಜಯ್ ಚೋಪ್ರಾ ಪ್ರಶಸ್ತಿ ನೀಡಲಾಯಿತು. ಘಟನೆಯಲ್ಲಿ ತಾನೇ ಸ್ವತಃ ಗಾಯಗೊಂಡಿದ್ದರೂ ನೀರು ತುಂಬಿದ ಬಸ್ಸಿನಿಂದ ಇತರ ಮಕ್ಕಳು ಪಾರಾಗಲು ಸಹಾಯ ಮಾಡಿದ್ದಳು ಕರಣ್.
2018: ನವದೆಹಲಿ: ೨೯ ಕರಕುಶಲ ಉತ್ಪನ್ನಗಳಿಗೆ ಶೂನ್ಯ ಸರಕು ಮತ್ತು ಸೇವಾ ತೆರಿಗೆ (ಜಿಎಎಸ್ಟಿ) ಸೇರಿದಂತೆ ೪೯ ವಸ್ತುಗಳ ಮೇಲಿನ ಜಿಎಸ್ಟಿ ದರ ಕಡಿತಕ್ಕೆ ಜಿಎಸ್ ಟಿ ಮಂಡಳಿಯು ಈದಿನ ತನ್ನ ೨೫ನೇ ಸಭೆಯಲ್ಲಿ ಶಿಫಾರಸು ಮಾಡಿತು. ಇದರೊಂದಿಗೆ ಈ ಉತ್ಪನ್ನಗಳ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಸರಳಗೊಳ್ಳಲಿದೆ.
೨೦೧೮-೧೯ರ ಸಾಲಿನ ಮುಂಗಡಪತ್ರ ಮಂಡನೆಗೆ ಮುನ್ನ ಮಂಡಳಿಯು ಇನ್ನೊಮ್ಮೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿ ಇನ್ ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೇಕಣಿ ಅವರು ಸಲ್ಲಿಸಿರುವ ಹೊಸ ರಿಟರ್ನ್ ಸಲ್ಲಿಕೆ ಮಾದರಿಯನ್ನು ಪರಿಶೀಲಿಸಿ ಅಂತಿಮಗೊಳಿಸಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಿಳಿಸಿದರು. ರಿಟರ್ನ್ ಸಲ್ಲಿಕೆಯ ಹೊಸ ಮಾದರಿ ಬಗ್ಗೆ ಮಂಡಳಿಯ ಈದಿನದ ಸಭೆಯಲ್ಲಿ ಸಹಮತ ಮೂಡಲಿಲ್ಲ ಎನ್ನಲಾಗಿದ್ದು, ರಾಜ್ಯಗಳ ಒಳಗಿನ ವಿಚಾರಗಳನ್ನು ಅದು ಚರ್ಚಿಸುವ ಸಾಧ್ಯತೆಗಳಿವೆ. ಫೆಬ್ರುವರಿ ೧ರಿಂದ ಸಂಸತ್ತಿನ ಮುಂಗಡಪತ್ರ ಅಧಿವೇಶನದೊಂದಿಗೆ ಜಾರಿಗೊಳ್ಳಲಿರುವ ಇ-ವೇ ಬಿಲ್ ಬಗ್ಗೆ ಕೂಡಾ ಮಂಡಳಿ ಈದಿನ ಚರ್ಚಿಸಿತು. ಫೆಬ್ರವರಿ ೧ರಂದು ಕೇಂದ್ರ ಮುಂಗಡಪತ್ರ ಮಂಡನೆಯಾಗಲಿದ್ದು, ಇದಕ್ಕೂ ಮುನ್ನ ಈದಿನ ನಡೆದ ಮಹತ್ವದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ೨೯ ಕರಕುಶಲ ವಸ್ತುಗಳ ಮೇಲಿನ ಜಿಎಸ್ಟಿಯನ್ನು ಶೇಕಡ ೦ ವ್ಯಾಪ್ತಿಗೆ ತರಲಾಗಿದೆ ಎಂದರು ಸಚಿವರು ತಿಳಿಸಿದರು. ೩೫,೦೦೦ ಕೋಟಿ ರೂಪಾಯಿಗಳ ಐಜಿಎಸ್ ಟಿ ಸಾಲವನ್ನು ರಾಜ್ಯಗಳಿಗೆ ವರ್ಗಾಯಿಸಲಾಗುವುದು ಮತ್ತು ಜಿಎಸ್ ಟಿ ಆರ್ ೩ ಬಿಯನ್ನು ಉಳಿಸಿಕೊಳ್ಳುವ ಬಗೆಗೂ ಮಂಡಳಿ ನಿರ್ಧರಿಸಿತು ಎಂದು ಹೇಳಲಾಯಿತು. ಜಿಎಸ್ ಟಿ ಸಂಗ್ರಹ ಕಡಿಮೆಯಾದ ಹಿನ್ನೆಲೆಯಲ್ಲಿ ಮಂಡಳಿಯ ಈದಿನದ ಸಭೆ ನಡೆಯಿತು. ನವೆಂಬರ್ ತಿಂಗಳಲ್ಲಿ ಸತತ ೨ನೇ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ ಕಡಿಮೆಯಾಗಿದ್ದು ೮೦,೮೦೮ ಕೋಟಿ ರೂಪಾಯಿಗಳಿಗೆ ಇಳಿದಿತ್ತು. ಅಕ್ಟೋಬರ್ ತಿಂಗಳಲ್ಲಿ ೮೩,೦೦೦ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿತ್ತು. ಮಂಡಳಿಯು ೧೭೮ ವಸ್ತುಗಳ ದರ ಕಡಿತಗೊಳಿಸಿದ ಬಳಿಕ ಜಿಎಸ್ ಟಿ ಸಂಗ್ರಹ ಇಳಿಯಿತು. ಡಿಸೆಂಬರ್ ೧೬ರ ಸಭೆಯಲ್ಲಿ ಜಿಎಸ್ ಟಿ ಮಂಡಳಿಯು ಫೆಬ್ರುವರಿ ೧ರಿಂದ ಅಂತರರಾಜ್ಯ ಸರಕು ಸಾಗಣೆಗೆ ಇ-ವೇಬಿಲ್ ನ್ನು ಕಡ್ಡಾಯಗೊಳಿಸಲು ನಿರ್ಧರಿಸಿತ್ತು. ತೆರಿಗೆ ತಪ್ಪಿಸುವುದನ್ನು ನಿಗ್ರಹಿಸಲು ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸೋಮವಾರದಿಂದ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು. ನವೆಂಬರ್ ತಿಂಗಳಲ್ಲಿ ನಡೆದ ಜಿಎಸ್ ಟಿ ಮಂಡಳಿ ಸಭೆಯು ಚ್ಯೂಯಿಂಗ್ ಗಮ್ ನಿಂದ ಹಿಡಿದು ಚಾಕೋಲೇಟು, ಸೌಂದರ್ಯ ಸಾಧನಗಳಿಂದ ಹಿಡಿದು ವಿಗ್ಗಳು ಮತ್ತು ಕೈಗಡಿಯಾರಗಳು ಸೇರಿದಂತೆ ೨೦೦ ವಸ್ತುಗಳ ತೆರಿಗೆ ದರಗಳನ್ನು ಇಳಿಸುವ ಮೂಲಕ ಗ್ರಾಹಕರಿಗೆ ಪರಿಹಾರ ಒದಗಿಸಿತ್ತು. ಜೊತೆಗೆ ದೈನಂದಿನ ಬಳಕೆಯ ೧೭೮ ವಸ್ತುಗಳನ್ನು ಶೇಕಡಾ ೨೮ರ ತೆರಿಗೆ ದರದಿಂದ ಶೇಕಡಾ ೧೮ರ ತೆರಿಗೆ ದರ ವ್ಯಾಪ್ತಿಗೆ ಇಳಿಸಿತ್ತು. ಇದೇ ವೇಳೆಗೆ ಹವಾನಿಯಂತ್ರಿತ ಮತ್ತು ಹವಾನಿಯಂತ್ರಿತವಲ್ಲದ ಎಲ್ಲ ರೆಸ್ಟೋರೆಂಟುಗಳಿಗೆ ಶೇಕಡಾ ೫ರ ಏಕರೂಪ ತೆರಿಗೆಯನ್ನು ನಿಗದಿ ಪಡಿಸಿತ್ತು.
2017: ನವದೆಹಲಿ: ಪ್ರೋ ಕುಸ್ತಿ ಲೀಗ್ನಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಬೀಜಿಂಗ್ ಒಲಿಂಪಿಕ್ ಬೆಳ್ಳಿ ವಿಜೇತ ಉಕ್ರೇನ್ನ ಆಂಡ್ರೆ ಸ್ಟಾಡ್ನಿಕ್ ಅವರನ್ನು ಸೋಲಿಸಿದರು. ಈದಿನ ರಾತ್ರಿ ನಡೆದ ಸ್ನೇಹಯುತ ಕುಸ್ತಿ ಪಂದ್ಯದಲ್ಲಿ ಆಂಡ್ರೆ ಅವರನ್ನು ಪರಾಭವಗೊಳಿಸಿದರು. ಮುಂಬೈ ಮಹಾಸಾರಥಿ ಮತ್ತು ಎನ್ಸಿಆರ್ ಪಂಜಾಬ್ ರಾಯಲ್ಸ್ ನಡುವಿನ 2ನೇ ಸೆಮಿಫೈನಲ್ ಆರಂಭಗೊಳ್ಳುವ ಮೊದಲು ಬಾಬಾ ರಾಮ್ ದೇವ್ ಉಕ್ರೇನ್ ಕುಸ್ತಿ ಪಟುವಿಗೆ ಯೋಗದ ಶಕ್ತಿ ಬಗ್ಗೆ ಅರಿವು ಮೂಡಿಸುವುದಾಗಿ ತಿಳಿಸಿದ್ದರು. ಯೋಗದ ಶಕ್ತಿಯ ಬಗ್ಗೆ ಅರಿವಾಗಬೇಕೆ? ಹಾಗಿದ್ದರೆ ನನ್ನ ಜತೆ ಕುಸ್ತಿಗೆ ಬನ್ನಿ! ಹೀಗೆ 2008ರ ಒಲಿಂಪಿಕ್ನಲ್ಲಿ ಬೆಳ್ಳಿ ಗೆದ್ದಿರುವ ಕುಸ್ತಿಪಟು ಆಂಡ್ರೆ ಸ್ಟಾಂಡ್ನಿಕ್ ಅವರಿಗೆ ಯೋಗ ಗುರು ಬಾಬಾ ರಾಮದೇವ್ ಪಂತಾಹ್ವಾನ ನೀಡಿದ್ದರು. ರಾಷ್ಟ್ರೀಯ ಕುಸ್ತಿಪಟುಗಳ ಜತೆ ಕುಸ್ತಿ ಮಾಡಿದ್ದೇನೆ. ಆದರೆ ವಿದೇಶಿ ಕುಸ್ತಿಪಟುಗಳ ಜತೆ ಇದುವರೆಗೆ ಕುಸ್ತಿ ಮಾಡಿಲ್ಲ. ವಿದೇಶಿ ಕುಸ್ತಿಪಟುಗಳ ಜತೆ ಕುಸ್ತಿ ಮಾಡಲು ಹೆಚ್ಚು ಉತ್ಸುಕನಾಗಿದ್ದೇನೆ. ಈ ಪಂದ್ಯದಿಂದ ಯೋಗದ ನಿಜವಾದ ಶಕ್ತಿ ಎಲ್ಲರಿಗೂ ಗೊತ್ತಾಗುತ್ತದೆ ಎಂದಿದ್ದರು. ಕಳೆದ ವರ್ಷ ಹರಿದ್ವಾರದಲ್ಲಿ ತಮ್ಮ ಆಶ್ರಮದ 20ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಭಾರತದ ಖ್ಯಾತ ಕುಸ್ತಿಪಟು ಬೀಜಿಂಗ್ ಒಲಿಂಪಿಕ್ನಲ್ಲಿ ಕಂಚು ಗೆದ್ದ ಸುಶೀಲ್ ಕುಮಾರ್ ಅವರ ಜತೆ ಕುಸ್ತಿ ಮಾಡಿದ್ದರು.
2017: ಚಂಡೀಗಢ: ಕೆನಡಾದ ಅಮೆಜಾನ್ ಸಂಸ್ಥೆ ಭಾರತದ ಧ್ವಜ ಮಾದರಿಯ ಕಾಲೊರೆಸುವ ಮ್ಯಾಟ್ಗಳನ್ನು ಮಾರಾಟಕ್ಕೆ ಬಿಟ್ಟು ಅವಮಾನಿಸಿದ್ದ ಬೆನ್ನಲ್ಲೇ ಭಾರತದ ಅಮೆಜಾನ್ ಸಂಸ್ಥೆ ದೇವರು ಗಣೇಶನ ಚಿತ್ರವಿರುವ ಸ್ಕೇಟಿಂಗ್ ಬೋರ್ಡ್ ಅನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸುವ ಮೂಲಕ ಪ್ರಮಾದ ಎಸಗಿತು. ಈ ಕುರಿತು ಚಂಡೀಗಢ ಮೂಲದ ವಕೀಲ ಅಜಯ್ ಜಗ್ಗ ಎಂಬುವವರು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದರು. ಪತ್ರದಲ್ಲಿ ಗಣೇಶನ ಚಹರೆಯುಳ್ಳ ಸ್ಕೇಟ್ ಬೋರ್ಡನ್ನು ಮಾರಾಟದಿಂದ ಹಿಂತೆಗೆದುಕೊಂಡು ಹಿಂದುಗಳ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಒಂದು ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿರುವ ಅಮೆಜಾನ್ ಸಂಸ್ಥೆ ಮೇಲೆ ಎಫ್ಐಆರ್ ದಾಖಲಿಸುವಂತೆಯೂ ಒತ್ತಾಯಿಸಿದರು. ಐಪಿಸಿ ಸೆಕ್ಷನ್ 295ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ವಿನಂತಿಸಿದರು. ಸಂತಾಕ್ರೂಜ್ ಹೆಸರಿನಲ್ಲಿ ಗಣೇಶ ಚಿತ್ರವಿರುವ ಸ್ಕೇಟಿಂಗ್ ಬೋರ್ಡ್ 21 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.
http://www.amazon.in/Santa-Cruz-Skateboards-Skateboard-Multicolor/dp/B00R3OF4R0/ref=sr_1_1?ie=UTF8&qid=1484719491&sr=8-1&keywords=skate+board+ganesh ಇತ್ತೀಚೆಗಷ್ಟೇ ಕೆನಡಾ ಅಮೆಜಾನ್ ತ್ರಿವರ್ಣ ಧ್ವಜದ ಚಿತ್ರಗಳಿರುವ ಸಾಮಗ್ರಿಗಳನ್ನು ಹಿಂತೆಗೆದುಕೊಂಡಿತ್ತು.
2017: ಸಾರವಾಕ್: ಭಾರತದ ಅಗ್ರ ಕ್ರಮಾಂಕದ ಷೆಟ್ಲರ್ಗಳಾದ ಸೈನಾ ನೆಹ್ವಾಲ್ ಮತ್ತು ಅಜಯ್ ಜಯರಾಮ್ ಮಲೇಷ್ಯಾ ಮಾಸ್ಟರ್ಸ್ ಗ್ರಾನ್ ಪ್ರಿಕ್ಸ್ ಗೋಲ್ಡ್ ಟೂರ್ನಿಯ ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್ನಲ್ಲಿ ಥಾಯ್ಲೆಂಡ್ನ ಚಸೀನೆ ಕೊರೆಪಾಪ್ ವಿರುದ್ಧ 21-9, 21-8 ಗೇಮ್ ಗಳಿಂದ ಸುಲಭವಾಗಿ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದರು. ಸೈನಾ ಮುಂದಿನ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಇಂಡೋನೇಷ್ಯಾದ ಹನ್ನಾ ರಮದಿನಿಯನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಅಜಯ್ ಜಯರಾಮ್ ದಿನದ ಮೊದಲ ಪಂದ್ಯದಲ್ಲಿ ಮಲೇಷ್ಯಾದ ಜುನ್ ಹಾವೋ ಲಿಯಾಂಗ್ ವಿರುದ್ದ 21-10, 17-21, 21-14 ಗೇಮ್ ಗಳ ಅಂತರದಿಂದ ಗೆಲುವು ಸಾಧಿಸಿದರು. ಎರಡನೇ ಪಂದ್ಯದಲ್ಲಿ ಇಂಡೋನೇಷ್ಯಾದ ಸಪುತ್ರ ವಿಕ್ಕಿ ಅಗ್ಗಾ ಅವರನ್ನು 21-9, 21-12 ಗೇಮ್ ಗಳ ಅಂತರದಿಂದ ಸುಲಭವಾಗಿ ಸೋಲಿಸಿದರು. ಮುಂದಿನ ಪಂದ್ಯದಲ್ಲಿ ಜಯರಾಮ್ ಚೈನೀಸ್ ತೈಪೆಯ ಹುಸೇನ್ ಯೀ ಅವರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್ನ ಮತ್ತೊಂದು ಪಂದ್ಯದಲ್ಲಿ ಹೇಮಂತ್ ಎಂ ಗೌಡ ಚೈನೀಸ್ ತೈಪೆಯ ಚುನ್ ವೀ ಚೆನ್ ವಿರುದ್ಧ 5-21, 19-21 ಅಂತರದಿಂದ ಸೋಲನುಭವಿಸಿದರು. ಮಿಶ್ರ ಡಬಲ್ಸ್ನಲ್ಲಿ ಮನು ಅತ್ರಿ ಮತ್ತು ಜ್ವಾಲಾ ಗುಟ್ಟಾ ಜೋಡಿ ಇಂಡೋನೇಷ್ಯಾದ ಲುಖಿ ಅಪ್ರಿ ಮತ್ತು ರಿರಿನ್ ಅಮೇಲಿಯಾ ಜೋಡಿಯನ್ನು 21-19, 21-18 ಅಂತರದಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿದ್ದಾರೆ. ಮಹಿಳೆಯರ ಡಬಲ್ಸ್ನಲ್ಲಿ ಅಪರ್ಣಾ ಬಾಲನ್ ಮತ್ತು ಪ್ರಜಕ್ತಾ ಸಾವಂತ್ ಜೋಡಿ ಇಂಡೋನೇಷ್ಯಾದ ಅಘಿಸನಾ ಲಲೈ ಮತ್ತು ಪುತ್ರಿ ವರೀಲ್ಲಾ ಜೋಡಿಯನ್ನು 21-10, 21-11 ಅಂತರದಿಂದ ಸೋಲಿಸಿದರು. ಮತ್ತೊಂದು ಮಿಶ್ರ ಡಬಲ್ಸ್ ಪಂದ್ಯದಲ್ಲಿ ಬಿ. ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 17-21, 17-21 ಅಂತರಿಂದ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದರು.
2017: ಬೀಜಿಂಗ್: ಒಂದೇ ಸೆಕೆಂಡ್ನಲ್ಲಿ ಪಟಪಟನೆ 300 ಪದಗಳನ್ನು ಟೈಪಿಸಿ ಸುದ್ದಿ ಸಿದ್ಧಪಡಿಸಿ ಕೊಟ್ಟ ರೋಬೋ ಪತ್ರಕರ್ತನ ಲೇಖನ ಚೀನಾ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿತು. ಚೀನಾದ ‘ಸ್ಪ್ರಿಂಗ್ ಫೆಸ್ಟಿವಲ್ ಟ್ರಾವೆಲ್ ಸೀಸನ್’ ಕುರಿತಾದ ಲೇಖನವನ್ನು ಕ್ಸಿಯೋ ನನ್ ಹೆಸರಿನ ರೋಬೋ ರಿಪೋರ್ಟರ್ ಸಿದ್ಧಪಡಿಸಿದೆ ಎಂದು ಪೀಕಿಂಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ವ್ಯಾನ್ ಕ್ಸಿಯೋಜನ್ ತಿಳಿಸಿದರು. ಯಾವುದೇ ರಿಪೋರ್ಟರ್‌ಗಿಂತಲೂ ಹೆಚ್ಚು ವೇಗವಾಗಿ ಸುದ್ದಿ ಬರೆಯುವ ಹಾಗೂ ವಿಷಯ ಮಾಹಿತಿ ವಿಶ್ಲೇಷಣೆ ನಡೆಸುವ ಸಾಮರ್ಥ್ಯವನ್ನು ಈ
ರೋಬೋ ಹೊಂದಿದೆ. ಸದ್ಯ ನೇರ ಸಂದರ್ಶನ ನಡೆಸುವ ಸಾಮರ್ಥ್ಯವನ್ನು ಈ ರೋಬೋ ಹೊಂದಿಲ್ಲ. ಆದರೆ, ಮಾಧ್ಯಮಗಳ ಬಹಳಷ್ಟು ಕೆಲಸಗಳಲ್ಲಿ ಸಹಕಾರಿಯಾಗ ಬಲ್ಲದು ಎಂದು ಅವರು ನುಡಿದರು.
2017:
ಬೆಂಗಳೂರು: ಫ್ಲಿಪ್‌ಕಾರ್ಟ್ ಇ–ಕಾಮರ್ಸ್ ಸಂಸ್ಥೆ ತನ್ನ ಸಾಮಗ್ರಿ ವಿತರಿಸುವ ವ್ಯಕ್ತಿ (ಡೆಲಿವರಿ ಬಾಯ್ಸ್) ಗಳ ಹಿತಕ್ಕಾಗಿ ತುರ್ತು ಗುಂಡಿ ಸೇವೆ ಪ್ರಾರಂಭಿಸಿತು. ಈ ಸೇವೆಗೆ ಇತ್ತೀಚೆಗೆ ನಗರದ ವಿಜಯನಗರದಲ್ಲಿ ಹತ್ಯೆಗೀಡಾದ ಡೆಲಿವರಿ ಬಾಯ್ ನಂಜುಂಡಸ್ವಾಮಿ ಅವರ ಹೆಸರಿಡಲಾಯಿತು. ‘ಸಾಮಗ್ರಿಗಳ ವಿತರಣೆಗೆ ವಿವಿಧ ಪ್ರದೇಶಗಳಿಗೆ ತೆರಳುವ ಡೆಲಿವರಿ ಬಾಯ್ಸ್ಗಳ ಭದ್ರತೆ ದೃಷ್ಟಿಯಿಂದ ನಂಜುಂಡಸ್ವಾಮಿ ಹತ್ಯೆಯಾದ ಒಂದು ತಿಂಗಳ ಒಳಗಾಗಿ ಈ ಮಾದರಿ ಸೇವೆ ಅಭಿವೃದ್ಧಿಪಡಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ ತುರ್ತು ಸೇವೆ ಒದಗಿಸುವುದು ಇದರ ಉದ್ದೇಶವಾಗಿದೆ’ ಎಂದು ಫ್ಲಿಪ್‌ಕಾರ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತಿನ್ ಸೇಠ್ ಹೇಳಿದರು. ಭಾರಿ ಬ್ಯಾಗುಗಳನ್ನು ಹೊತ್ತು ಹೊರನಡೆಯುವ ಕೆಲಸಗಾರರ ಬಳಿಯ ಫೋನ್ನಲ್ಲಿ ತುರ್ತು ಗುಂಡಿಯನ್ನು (ಪ್ಯಾನಿಕ್ ಬಟನ್) ಅಳವಡಿಸಲಾಗಿದೆ. ಇದಕ್ಕೆ ನಂಜುಂಡ ಎಂದು ಹೆಸರಿಡಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಈ ಬಟನ್ ಒತ್ತಿದರೆ ತಕ್ಷಣವೇ ಹತ್ತಿರದ ಸೇವಾ ಕೇಂದ್ರಕ್ಕೆ ಎಸ್‌ಎಂಎಸ್, ಇ–ಮೇಲ್ ರವಾನೆಯಾಗುತ್ತದೆ. ಇದು ಫೋನಿನ ನೆಟ್‌ವರ್ಕ್ ಆಧಾರಿತ ಸೇವೆಯಾಗಿದೆ. ಭಾರತದ ಯಾವುದೇ ಭಾಗದಲ್ಲಿ ಇದನ್ನು ಬಳಸಬಹುದಾಗಿದೆ ಎಂದು ಕಂಪೆನಿ ಮೂಲಗಳು ತಿಳಿಸಿದವು.
2017: ನವದೆಹಲಿ: ಹಿರಿಯ ಕಾಂಗ್ರೆಸಿಗ ಮತ್ತು ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಮಾಜಿ ಮುಖ್ಯಮಂತ್ರಿ ನಾರಾಯಣ ದತ್ತ ತಿವಾರಿ ಬಿಜೆಪಿ ಸೇರಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಸಮ್ಮುಖದಲ್ಲಿ 91ರ ಪ್ರಾಯದ ತಿವಾರಿ ಅವರು ತಮ್ಮ ಮಗ ರೋಹಿತ್ ಶೇಖರ್ ಜತೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಫೆಬ್ರವರಿ 15 ರಂದು ನಡೆಯಲಿರುವ ಉತ್ತರಾಖಂಡ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಬ್ರಾಹ್ಮಣ ಮತಗಳನ್ನು ಸೆಳೆಯಲು ತಿವಾರಿ ಅವರಿಗೆ ಗಾಳ ಹಾಕಿತು. ಉತ್ತರ ಪ್ರದೇಶದಿಂದ ಉತ್ತರಾಖಂಡವನ್ನು ಪ್ರತ್ಯೇಕ ರಾಜ್ಯವಾಗಿಸಲು ಪ್ರಮುಖ ಪಾತ್ರ ವಹಿಸಿದ್ದ ತಿವಾರಿ ಅವಿಭಜಿತ ಉತ್ತರ ಪ್ರದೇಶ ನಂತರ ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸಿನ ಆಂತರಿಕ ಭಿನ್ನಮತದಿಂದ ತಿವಾರಿ ಕಾಂಗ್ರೆಸ್ ಎಂಬ ಪಕ್ಷ ಕಟ್ಟಿದ್ದರು. ನಂತರ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಚುಕ್ಕಾಣಿ ಹಿಡಿದ ನಂತರ ಆ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದ್ದರು.
2009: ಮಹಾರಾಷ್ಟ್ರದ ಲಾತೂರಿನಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿಗೆ ಅಗ್ನಿಸ್ಪರ್ಶ ಮಾಡಿದ 'ಮರಾಠಿ'ಗರು ಗಡಿಭಾಗದಲ್ಲಿರುವ ದೇವಣಿ ತಾಲ್ಲೂಕಿನಲ್ಲಿ ಎರಡು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ ಘಟನೆ ನಡೆಯಿತು. 'ಕರ್ನಾಟಕದಲ್ಲಿ ಇರುವ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ' ಎಂದು ಆರೋಪಿಸಿ ಶಿವಸೇನೆ ಮತ್ತು ಛಾವಾ ಸಂಘಟನೆಯ ಕಾರ್ಯಕರ್ತರು ಹುಮನಾಬಾದ್ ಡಿಪೋಗೆ ಸೇರಿದ ಬಸ್ಸಿಗೆ ಬೆಂಕಿ ಹಚ್ಚಿದರು.
2009: ಎರಡು ದಶಕಗಳಿಂದ ಕನಸಾಗಿಯೇ ಉಳಿದಿದ್ದ ಗಂಡೋರಿ ನಾಲಾ ನೀರಾವರಿ ಯೋಜನಾ ಪ್ರದೇಶದ ರೈತರ ನೀರಿನ ಕನಸು ಈಗ ನನಸಾಯಿತು. ಯೋಜನೆಯ ಎಡದಂಡೆ ಕಾಲುವೆ 66 ಕಿಮೀವರೆಗೂ ನೀರು ಹರಿಸಲಾಯಿತು. ಈ ಮೂಲಕ ಗುಲ್ಬರ್ಗ ನೀರಾವರಿ ಯೋಜನಾ ವಲಯದಲ್ಲಿಯೇ ಅತಿ ಹೆಚ್ಚು ಉದ್ದದವರೆಗೆ ನೀರು ಹರಿಸಿದ ಕಾಲುವೆ ಎಂಬ ಖ್ಯಾತಿ ಪಡೆಯಿತು. ಉದ್ಘಾಟನೆಗೆ ಮುನ್ನ ಪ್ರಾಯೋಗಿಕವಾಗಿ ನೀರು ಹರಿಸಲಾಯಿತು. ಎಡದಂಡೆ ಕಾಲುವೆಯ 25 ಕಿ.ಮೀ. ವ್ಯಾಪ್ತಿಯ 1971 ಹೆಕ್ಟೇರಿಗೆ ಮಾತ್ರ ನೀರು ಹರಿಸಲು ಈಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ದುರಸ್ತಿ ಕೈಗೊಂಡು 66 ಕಿಮೀವರೆಗೂ ನೀರು ಹರಿಸಲಾಯಿತು. 1987ರಲ್ಲಿ ಆರಂಭಿಸಲಾಗಿದ್ದ ಈ ಯೋಜನೆಯಡಿ ಗುಲ್ಬರ್ಗ, ಚಿತ್ತಾಪೂರ ಮತ್ತು ಚಿಂಚೋಳಿ ತಾಲ್ಲೂಕು ಸೇರಿ ಒಟ್ಟು 8094 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿತ್ತು. ಗುಲ್ಬರ್ಗದ ಮಹಾಗಾಂವ್ ಸಮೀಪ ಜಲಾಶಯ ನಿರ್ಮಿಸಲಾಗಿದ್ದು, 66 ಕೋಟಿ ರೂ.ಗಳಲ್ಲಿ ಆರಂಭವಾದ ಯೋಜನೆಗೆ ಈಗಿನ ಅಂದಾಜು ವೆಚ್ಚ 224 ಕೋಟಿ. ರೂ.
2009: ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಆಲಂಪಲ್ಲಿ ವೆಂಕಟರಾಮ್ (78) ಅವರು ಈದಿನ ಬೆಳಗ್ಗೆ ಬೆಂಗಳೂರಿನ ಜಯದೇವ ಹೃದ್ರೋಗ ಚಿಕಿತ್ಸಾ ಸಂಸ್ಥೆಯಲ್ಲಿ ನಿಧನರಾದರು. 1931ರ ಜೂನ್ 18ರಂದು ಜನಿಸಿದ ಅವರು ಬಿ.ಕಾಂ ಅಧ್ಯಯನ ಮಾಡಿದರು. ಅವಿವಾಹಿತರಾಗಿದ್ದ ಅವರು ತಮ್ಮ ಇಡೀ ಜೀವನವನ್ನು ಕಾರ್ಮಿಕರ ಕಲ್ಯಾಣಕ್ಕೆ ಮುಡುಪಾಗಿಟ್ಟರು. ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಮುತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದ ಅವರು 1953ರಲ್ಲಿ ಶಾಮಪ್ರಸಾದ್ ಮುಖರ್ಜಿಯವರ ನೇತೃತ್ವದಲ್ಲಿ ನಡೆದ ಕಾಶ್ಮೀರ್ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಇದರ ಹಿನ್ನೆಲೆಯಲ್ಲಿ ಮೂರು ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದರು. 1975-76ರಲ್ಲೂ ತುರ್ತು ಪರಿಸ್ಥಿತಿ ವಿರೋಧಿಸಿ ಹೋರಾಟ ನಡೆಸಿ, ಜೈಲು ಶಿಕ್ಷೆ ಅನುಭವಿಸಿದರು. ಕೇಂದ್ರ ಭವಿಷ್ಯ ನಿಧಿ ವಿಶ್ವಸ್ಥ ಮಂಡಲಿಯ ಸದಸ್ಯರಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಕಾರ್ಮಿಕರ ಕಲ್ಯಾಣ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡಿದ್ದು, ಕಾರ್ಮಿಕರ ಹಕ್ಕುಗಳಿಗೆ ಅವಿರತ ಹೋರಾಟ ನಡೆಸಿದ್ದರು.
2009: ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 12 ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮತ್ತು ಈಗಾಗಲೇ ಇರುವ ಮೂರು ವಿಶ್ವವಿದ್ಯಾಲಯಗಳನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸುಗ್ರೀವಾಜ್ಞೆ ಹೊರಡಿಸಿದರು. ಕೇಂದ್ರೀಯ ವಿಶ್ವವಿದ್ಯಾಲಯಗಳ ಮಸೂದೆ 2008ನ್ನು ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತ್ತು. ಸಂಸತ್ತಿನ ಕಳೆದ ಅಧಿವೇಶನದಲ್ಲಿ ಈ ಮಸೂದೆ ಅಂಗೀಕಾರವಾಗದ ಕಾರಣ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತು. ರಾಷ್ಟ್ರಪತಿಗಳ ಈ ಸುಗ್ರೀವಾಜ್ಞೆ ಪ್ರಕಾರ ಸಚಿವಾಲಯ ವಿವಿಗಳಿಗೆ ಕುಲಪತಿಗಳ ನೇಮಕಕ್ಕೆ ಕ್ರಮ ಕೈಗೊಂಡಿತು.
2009: ಆರೋಪಿಯೊಬ್ಬನಿಗೆ 42 ಮರಗಳನ್ನು ಕಡಿದ ತಪ್ಪಿಗೆ ಒಂದು ತಿಂಗಳ ಒಳಗಾಗಿ 210 ಸಸಿಗಳನ್ನು ನೆಡುವ ಶಿಕ್ಷೆ. ಇದು ದೆಹಲಿ ಮೆಟ್ರೊಪಾಲಿಟನ್ ನ್ಯಾಯಾಲಯ ದೆಹಲಿಯ ಸಸ್ಯ ಸಂರಕ್ಷಣಾ ಕಾಯ್ದೆ-1994ರ ಅನುಸಾರ ನೀಡಿದ ಅಪರೂಪ ಹಾಗೂ ಮಾದರಿ ತೀರ್ಪು. 'ಸಸ್ಯಗಳು ನಗರಗಳ ಶ್ವಾಸಕೋಶಗಳಿದ್ದಂತೆ. ಇವುಗಳ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ಜಗತ್ತಿನಲ್ಲಿ ಹಸಿರು ವಲಯ ಅಳಿಯುತ್ತಿದೆ ಎಂಬ ಅರಿವು ಪ್ರತಿಯೊಬ್ಬರಿಗೂ ಇರಬೇಕಾದ್ದು ಅಗತ್ಯ' ಎಂದು ದೆಹಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತು. 'ಒಂದು ತಪ್ಪನ್ನು ತಿದ್ದಲು ಸಾಧ್ಯವಿದೆ ಎಂಬ ಪೂರಕ ಮನೋಭಾವದಿಂದಲೇ ಆರೋಪಿಯು 210 ಸಸಿಗಳನ್ನು ನೆಡಲು ಈ ನ್ಯಾಯಾಲಯ ಆದೇಶಿಸುತ್ತದೆ. ಪ್ರತಿಯೊಂದು ಮರಕ್ಕೂ ಐದು ಸಸಿಗಳನ್ನು ನೆಡುವುದು ಅಗತ್ಯ' ಎಂದು ಮ್ಯಾಜಿಸ್ಟ್ರೇಟ್ ಡಿ.ಕೆ. ಜಂಗಾಲಾ ತೀರ್ಪಿನಲ್ಲಿ ವಿವರಿಸಿದರು. ಐದು ವರ್ಷಗಳ ಹಿಂದೆ ಸುರೇಂದರ್ ವಾಸುದೇವ್ ಎಂಬವರು ದಕ್ಷಿಣ ದೆಹಲಿಯ ಸೈನಿಕ ಫಾರ್ಮ್ ಪ್ರದೇಶದಲ್ಲಿ ತಮ್ಮ ಸ್ವಂತದ ಉಪಯೋಗಕ್ಕಾಗಿ 42 ಮರ ಕಡಿದಿದ್ದರು. 'ಮರ ಕಡಿಯುವುದು ಅಪರಾಧವೆಂದು ನನಗೆ ತಿಳಿದಿರಲಿಲ್ಲ' ಎಂದು ಅವರು ಕೋರ್ಟಿಗೆ ವಿಚಾರಣೆ ವೇಳೆ ತಿಳಿಸಿದ್ದರು. ಡಿಸೆಂಬರ್ 2008ರಂದೇ ಈ ತೀರ್ಪನ್ನು ಹೊರಡಿಸಲಾದರೂ ಈದಿನವಷ್ಟೇ ಇದು ಬಹಿರಂಗಗೊಂಡಿತು.
2008: ಉಡುಪಿಯ ಏಳು ಮಠಗಳ ಯತಿಗಳ ಅನುಪಸ್ಥಿತಿಯಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಈದಿನ ಉಷಃಕಾಲದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು. ಪೀಠಾರೋಹಣದ ಜೊತೆಗೇ ಪರ್ಯಾಯದ ಮೊದಲ ದಿನವೇ ಶ್ರೀಕೃಷ್ಣ ದೇವರ ಪೂಜೆ ನೆರವೇರಿಸುವ ಮೂಲಕ ಅವರು ಹೊಸ ಸಂಪ್ರದಾಯಕ್ಕೂ ನಾಂದಿ ಹಾಡಿದರು. `ಶ್ರೀಕೃಷ್ಣ ಸಂಧಾನ' ಮುರಿದು ಬಿದ್ದ ಹಿನ್ನೆಲೆಯಲ್ಲಿ ಅಷ್ಟ ಮಠಗಳ ಪೈಕಿ ಏಳು ಮಠಗಳ ಯತಿಗಳ ಅನುಪಸ್ಥಿತಿಯಲ್ಲಿ ನಸುಕಿನ 5.55ಕ್ಕೆ ಸುಗುಣೇಂದ್ರ ತೀರ್ಥರು ಪೀಠಾರೋಹಣ ಮಾಡಿದರು. ಸುಮಾರು ಎಂಟು ನೂರು ವರ್ಷಗಳ ಪರ್ಯಾಯದ ಇತಿಹಾಸದಲ್ಲಿ ಮೊದಲ ಬಾರಿಗೆ ಏಳು ಮಠದ ಯತಿಗಳು ಪರ್ಯಾಯ ಮೆರವಣಿಗೆ ಹಾಗೂ ದರ್ಬಾರಿನಲ್ಲಿ ಭಾಗವಹಿಸಲಿಲ್ಲ. ಅವರು ಬಹುಮತ ನಿರ್ಣಯಕ್ಕೆ ಬದ್ಧರಾಗಿ ಹೊರಗೆ ಉಳಿದರು. `ಪರ್ಯಾಯ ವಿವಾದ'ದ ಅಂತಿಮ ಕ್ಷಣದ ತನಕವೂ ಪುತ್ತಿಗೆ ಶ್ರೀಗಳ ಪರವಾಗಿ ನಿಂತಿದ್ದ ಶೀರೂರು ಮಠದ ಲಕ್ಷ್ಮೀವರ ತೀರ್ಥರೂ ಪರ್ಯಾಯ ಮೆರವಣಿಗೆಗೆ ಕೆಲವೇ ಕ್ಷಣಗಳು ಉಳಿದ್ದಿದಾಗ ನಿಲುವು ಬದಲಾಯಿಸಿ ಗೈರು ಹಾಜರಾದರು. ಬೆಳಿಗ್ಗೆ 4 ಗಂಟೆ ಸುಮಾರಿಗೆ ಹಿಂದಿನ ಪರ್ಯಾಯ ಮಠಾಧೀಶರಾದ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಅಕ್ಷಯಪಾತ್ರೆ, ಸಟ್ಟುಗ ಹಾಗೂ ಗರ್ಭಗುಡಿಯ ಕೀಲಿಕೈಯನ್ನು ಆಚಾರ್ಯ ಮಧ್ವರ ಮೂಲ ಪೀಠದ ಬಳಿಯಲ್ಲಿ ಇಟ್ಟು ತೆರಳಿದರು. ನಿರ್ಗಮನ ಪರ್ಯಾಯ ಮಠಾಧೀಶರು ಪರ್ಯಾಯ ಪೀಠವನ್ನೇರಲಿರುವ ಮಠಾಧೀಶರ ಕೈಗೆ ಇದನ್ನೆಲ್ಲ ಒಪ್ಪಿಸುವುದು ಅನೂಚಾನವಾಗಿ ನಡೆದು ಬಂದ ಸಂಪ್ರದಾಯ. ಈ ಬಾರಿ ಹಿಂದಿನ ಪರ್ಯಾಯ ಮಠಾಧೀಶರಿಂದ ಅಧಿಕಾರ ಹಸ್ತಾಂತರ ನಡೆಯಲಿಲ್ಲ. ಕೃಷ್ಣಾಪುರ ಶ್ರೀಗಳ ಅನುಪಸ್ಥಿತಿಯಲ್ಲಿ ಭೀಮನಕಟ್ಟೆಯ ರಘುಮಾನ್ಯ ತೀರ್ಥರು ಅಧಿಕಾರ ಹಸ್ತಾಂತರ ಪ್ರಕ್ರಿಯೆ ನೆರವೇರಿಸಿದರು. ಅಷ್ಟ ಮಠಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಅಷ್ಟ ಮಠಗಳಿಗೆ ಸೇರದ ಹೊರಗಿನ ಯತಿಯೊಬ್ಬರು ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಸಿದಂತಾಯಿತು.
2008: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಚಾವುಂಡರಾಯ ಪ್ರಶಸ್ತಿಗೆ ಮೂಡುಬಿದಿರೆಯ ಬಿ.ದೇವಕುಮಾರ ಶಾಸ್ತ್ರಿ ಹಾಗೂ ಪದ್ಮಭೂಷಣ ಡಾ.ಬಿ.ಸರೋಜಾ ದೇವಿ ಸಾಹಿತ್ಯ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಹಿರಿಯ ಲೇಖಕಿ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರು ಆಯ್ಕೆಯಾದರು.
2008: ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಎಚ್. ಕೆ. ಪಾಟೀಲ್ ಅವರಿಗೆ ನೀಡಿದ್ದ ಮಾನ್ಯತೆಯನ್ನು ಹಿಂದಕ್ಕೆ ಪಡೆದು ಸಭಾಪತಿಗಳು ಅಧಿಸೂಚನೆ ಹೊರಡಿಸಿದರು. ವಿರೋಧ ಪಕ್ಷದ ನಾಯಕನ ಸ್ಥಾನದ ಮಾನ್ಯತೆಯನ್ನು ಹಿಂದಕ್ಕೆ ಪಡೆಯುವಂತೆ ಕೋರಿ ಪಾಟೀಲರು ಸಭಾಪತಿ ಪ್ರೊ. ಬಿ.ಕೆ.ಚಂದ್ರಶೇಖರ್ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಮಾನ್ಯತೆಯನ್ನು ಹಿಂದಕ್ಕೆ ಪಡೆಯಲಾಯಿತು.
2008: ಧರ್ಮಪುರಿಯಲ್ಲಿ ಮೂವರು ವಿದ್ಯಾರ್ಥಿಗಳ ಸಜೀವ ದಹನಕ್ಕೆ ಕಾರಣವಾಗಿದ್ದ, ಬಸ್ಸಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಐಎಡಿಎಂಕೆ ಕಾರ್ಯಕರ್ತರಾದ ನೆಡುಂಚೆಳಿಯನ್, ರವೀಂದ್ರನ್ ಮತ್ತು ಸಿ.ಮುನಿಯಪ್ಪನ್ ಅವರಿಗೆ ಹೈಕೋರ್ಟ್ ನೀಡಿದ ಗಲ್ಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು. ಅಪರಾಧಿಗಳು ಸಲ್ಲಿಸಿದ ಮೇಲ್ಮನವಿ ಆಲಿಸಿ ಈ ತಡೆಯಾಜ್ಞೆ ನೀಡಲಾಯಿತು.
2008: ಸಿಂಗೂರಿನಲ್ಲಿ ಸಣ್ಣ ಕಾರು ಯೋಜನೆಗಾಗಿ ಮಾಡಿಕೊಳ್ಳಲಾದ ಭೂಸ್ವಾಧೀನವು ಸಿಂಧು ಎಂದು ಕಲ್ಕತ್ತ ಹೈಕೋರ್ಟ್ ತೀರ್ಪು ನೀಡಿತು. ವಿವಾದಾತ್ಮಕ ಸಿಂಗೂರು ಯೋಜನೆ- ಭೂಸ್ವಾಧೀನ ವಿರೋಧಿಸಿ ರೈತರು ಕಳೆದ ಒಂದು ವರ್ಷದಿಂದ ದೀರ್ಘ ಚಳವಳಿ ನಿರತರಾದ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆ ಸಮಾಧಾನದ ಉಸಿರಾಡುವಂತೆ ಮಾಡಿತು. ಟಾಟಾ ಕಂಪೆನಿ ಮುಖ್ಯಸ್ಥ ರತನ್ ಟಾಟಾ ಅವರು ವಿಶ್ವದ ಪ್ರಪ್ರಥಮ ಅಗ್ಗದ `ನ್ಯಾನೋ' ಕಾರನ್ನು ಅನಾವರಣಗೊಳಿಸಿದ ಒಂದು ವಾರದ ಬಳಿಕ ಹೈಕೋರ್ಟ್ ಈ ತೀರ್ಪು ನೀಡಿತು. `ನ್ಯಾನೋ' ಕಾರು ಸಿಂಗೂರು ಕಾರ್ಖಾನೆಯಲ್ಲಿ ನಿರ್ಮಾಣಗೊಂಡಿದೆ. ಸಿಂಗೂರಿನಲ್ಲಿ 997.11 ಎಕರೆ ಭೂಸ್ವಾಧೀನದ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲ 11 ಅರ್ಜಿಗಳನ್ನೂ ನ್ಯಾಯಮೂರ್ತಿ ಎಸ್.ಎಸ್. ನಿಜ್ಜರ್ ಮತ್ತು ನ್ಯಾಯಮೂರ್ತಿ ಪಿ.ಸಿ. ಘೋಷ್ ಅವರನ್ನು ಒಳಗೊಂಡ ಪೀಠವು ವಜಾ ಮಾಡಿತು. 2007ರ ಫೆಬ್ರುವರಿ 9ರಂದು ಅರ್ಜಿದಾರ ಜೊಯ್ ದೀಪ್ ಮುಖರ್ಜಿ ಅವರು, ಕೊಲ್ಕತ್ತ ಮಹಾನಗರದಿಂದ 40 ಕಿ.ಮೀ. ದೂರದಲ್ಲಿರುವ ಹೂಡಗಲಿ ಜಿಲ್ಲೆಯ ಸಿಂಗೂರಿನಲ್ಲಿ 997.11 ಎಕರೆ ಭೂಮಿಯ ಸ್ವಾಧೀನವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು.
2008: ಚೆಸ್ ವಿಶ್ವ ಚಾಂಪಿಯನ್ಪಟ್ಟ ಧರಿಸಿದ ಅಮೆರಿಕದ ಮೊತ್ತಮೊದಲ ಸ್ಪರ್ಧಿ ಎನಿಸಿರುವ ಬಾಬ್ಬಿ ಫಿಷರ್ ಅವರು ರೆಜಾವಿಕ್ನಲ್ಲಿ (ಐಲ್ಯಾಂಡ್) ನಿಧನರಾದರು. 64ರ ಹರೆಯದ ಅವರು ವಿವಾದಗಳಿಂದಾಗಿಯೇ ಸದಾ ಸುದ್ದಿಯಲ್ಲಿದ್ದರು. 1972ರಲ್ಲಿ ಅವರು ರಷ್ಯಾದ ಬೋರಿಸ್ ಸ್ಪಾಸ್ಕಿ ವಿರುದ್ಧ ಗೆಲುವು ಪಡೆದು ವಿಶ್ವ ಚಾಂಪಿಯನ್ ಪಟ್ಟ ತಮ್ಮದಾಗಿಸುವ ಮೂಲಕ ಈ ಸಾಧನೆ ಮಾಡಿದ ಅಮೆರಿಕದ ಮೊದಲ ಸ್ಪರ್ಧಿ ಎಂಬ ಹೆಸರು ಪಡೆದಿದ್ದರು. ತಾನು ಮುಂದಿಟ್ಟ ಬೇಡಿಕೆಗಳನ್ನು ಅಂತಾರಾಷ್ಟ್ರೀಯ ಚೆಸ್ ಸಂಸ್ಥೆ (ಫಿಡೆ) ಈಡೇರಿಸಲಿಲ್ಲ ಎಂಬ ಕಾರಣ 1975ರಲ್ಲಿ ಅವರು ವಿಶ್ವ ಚಾಂಪಿಯನ್ ಶಿಪ್ನಲ್ಲಿ ಸ್ಪರ್ಧಿಸಲು ನಿರಾಕರಿಸಿ, ಕಿರೀಟವನ್ನು ರಷ್ಯಾದ ಅನತೊಲಿ ಕಾರ್ಪೊವ್ ಅವರಿಗೆ ಬಿಟ್ಟುಕೊಟ್ಟಿದ್ದರು. 1943ರ ಮಾರ್ಚ್ 9 ರಂದು ಅಮೆರಿಕದಲ್ಲಿ ಜನಿಸಿದ ಫಿಷರ್ ತಮ್ಮ 14ರ ಹರೆಯದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ, 15ರ ಹರೆಯದಲ್ಲಿ ಗ್ರ್ಯಾಂಡ್ ಮಾಸ್ಟರ್ ಪಟ್ಟ ಧರಿಸಿದ್ದರು. 1992ರಲ್ಲಿ ಅವರು ರಷ್ಯಾದ ಬೋರಿಸ್ ಸ್ಪಾಸ್ಕಿ ಜೊತೆ `ಮರು ಪಂದ್ಯ' ಆಡುವ ಮೂಲಕ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದ್ದರು. ಬೆಲ್ಗ್ರೇಡಿನಲ್ಲಿ ಈ ಪಂದ್ಯ ನಡೆದಿತ್ತು. ಪಂದ್ಯದಲ್ಲಿ ಪಾಲ್ಗೊಂಡದ್ದಕ್ಕೆ ಫಿಷರ್ ಮೇಲೆ ಅಮೆರಿಕ ಬಂಧನ ವಾರೆಂಟ್ ಹೊರಡಿಸಿತ್ತು. ಇದರಿಂದ ಆ ಬಳಿಕ ಫಿಷರ್ ಅಮೆರಿಕಕ್ಕೆ ಕಾಲಿಡಲಿಲ್ಲ. ಹಂಗೇರಿಯಲ್ಲಿ ಕೆಲಕಾಲ ಜೀವನ ನಡೆಸಿದ ಬಳಿಕ ಜಪಾನಿಗೆ ತೆರಳಿದರು. ಬಳಿಕ ಐಲ್ಯಾಂಡಿನ ಪೌರತ್ವ ಪಡೆದು ರೆಜಾವಿಕ್ನಲ್ಲಿ ವಾಸಿಸಿದರು.
2008: ಗೋಧ್ರಾ ಹತ್ಯಾಕಾಂಡದ ನಂತರ ಗುಜರಾತಿನಲ್ಲಿ ನಡೆದ ಘೋರ ಘಟನೆಗಳಲ್ಲಿ ಒಂದಾದ ಬಿಲ್ಕಿಷ್ ಬಾನು ಅತ್ಯಾಚಾರ ಪ್ರಕರಣದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ 13 ಆರೋಪಿಗಳು ತಪ್ಪಿತಸ್ಥರೆಂದು ಮುಂಬೈನ ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಯು.ಡಿ. ಸಾಳ್ವಿ ಮಹತ್ವದ ತೀರ್ಪು ನೀಡಿದರು. ಸಾರ್ವಜನಿಕರು ಹಾಗೂ ಮಾಧ್ಯಮದವರಿಗೆ ಪ್ರವೇಶ ನೀಡದೆ ಕ್ಯಾಮರಾ ಚಿತ್ರೀಕರಣ ಸಹಿತ ಈ ಪ್ರಕರಣದ ವಿಚಾರಣೆ ನಡೆದಿತ್ತು. 2002ರ ಮಾರ್ಚ್ 3ರಂದು ದೋಹಾ ಜಿಲ್ಲೆಯ ದೇವ್ಗರ್ ಬಾರಿಯಾ ಗ್ರಾಮದಲ್ಲಿ ನಡೆದ ಹೇಯ ಕೃತ್ಯದಲ್ಲಿ ಬಿಲ್ಕಿಷ್ ಬಾನು ಕುಟುಂಬದ ಮೇಲೆ ದಾಳಿ ನಡೆಸಿ 8 ಜನರನ್ನು ಅಲ್ಲೇ ಕೊಂದು ಉಳಿದ 6 ಜನರನ್ನು ಅಪಹರಿಸಲಾಗಿತ್ತು. ಅದೇ ಸಂದರ್ಭದಲ್ಲಿ 5 ತಿಂಗಳ ಗರ್ಭಿಣಿಯಾದ ಬಿಲ್ಕಿಷ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ತೀವ್ರವಾಗಿ ಹೊಡೆದು ಆಕೆ ಸತ್ತೇ ಹೋಗುತ್ತಾಳೆಂದು ಭಾವಿಸಿ ದಾರುಣ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದರು. ``ಅವತ್ತು ಮಗಳನ್ನು ನಾನು ಎತ್ತಿಕೊಂಡು ಹೋಗುತ್ತಿದ್ದಾಗ ಅಡ್ಡಬಂದ ಆರೋಪಿಗಳು ಅವಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಕಲ್ಲಿನಿಂದ ಹೊಡೆದು ಕೊಂದರು. `ನೀವೆಲ್ಲಾ ನನ್ನ ಊರಿನವರೇ, ನನ್ನ ಸಂಸಾರವನ್ನು ಉಳಿಸಿ' ಎಂದು ಪರಿಪರಿಯಾಗಿ ಬೇಡಿಕೊಂಡರೂ ಅವರು ಕೇಳಲಿಲ್ಲ'' ಎಂದು ಬಿಲ್ಕಿಷ್ ಕೋರ್ಟಿನಲ್ಲಿ ಹೇಳಿದ್ದರು. ಆದರೂ ಗುಜರಾತ್ ಸರ್ಕಾರ ಪ್ರಕರಣವನ್ನು ರದ್ದುಗೊಳಿಸಿದ ನಂತರ ಸ್ಥಳೀಯ ನ್ಯಾಯಾಲಯ ಎಲ್ಲ ಆರೋಪಿಗಳಿಗೆ ಜಾಮೀನು ನೀಡಿತ್ತು. ನಂತರ ಬಿಲ್ಕಿಷ್ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದರು.
2007: ಜಗತ್ತಿನ ಹಿರಿಯಜ್ಜಿ ಎಂದೇ ಹೆಸರಾದ ಕೆನಡಾದ ಜೂಲಿ ವಿನ್ ಫರ್ಡ್ ಬರ್ಟ್ರೆಂಡ್ (115) ಈ ದಿನ ಮುಂಜಾನೆ ವಿಧಿವಶರಾದರು ಎಂದು ಕ್ಯಾನ್ ವೆಸ್ಟ್ ಸುದ್ದಿ ಸೇವಾ ಸಂಸ್ಥೆ ವರದಿ ಮಾಡಿತು. ಜೂಲಿ ಜಗತ್ತಿನ ಹಿರಿಯಳು ಎಂಬ ಖ್ಯಾತಿ ಪಡೆದಿದ್ದರು. ಗಿನ್ನೆಸ್ ದಾಖಲೆಯ ಪುಸ್ತಕಕ್ಕೂ ಸೇರಿದ್ದರು. ನಿದ್ದೆಯಲ್ಲಿಯೇ ಸಾವಿನ ಮನೆಗೆ ಸರಿದ ಈಕೆ 1891ರ ಸೆಪ್ಟೆಂಬರ್ 16ರಂದು ಕ್ಯೂಬಿಕ್ನಲ್ಲಿ ಜನಿಸಿದ್ದರು.
2007: ಖ್ಯಾತ ಪತ್ರಿಕೋದ್ಯಮಿ ಲಲಿತ್ ಮೋಹನ್ ಥಾಪರ್ (76) ನವದೆಹಲಿಯಲ್ಲಿ ನಿಧನರಾದರು. ಬಲ್ಲಾರ್ಪುರ್ ಇಂಡಸ್ಟ್ರೀಸ್ ಲಿಮಿಟೆಡ್ (ಬಿ ಐ ಎಲ್ ಟಿ) ಮುಖ್ಯಸ್ಥರಾಗಿದ್ದ ಥಾಪರ್ 1991ರಲ್ಲಿ ದಿ ಪಯೋನೀರ್ ಪತ್ರಿಕೆಯ ಮಾಲೀಕರಾದರು. 1998ರಲ್ಲಿ ಹಾಲಿ ಆಡಳಿತಕ್ಕೆ ಹಸ್ತಾಂತರಿಸುವವರೆಗೂ ಪತ್ರಿಕೆಯನ್ನು ಮುನ್ನಡೆಸಿದರು.
2007: ಪ್ರತಿ ಕುಟುಂಬದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಕರ್ನಾಟಕದ ಮೊದಲ ಜಿಲ್ಲೆ ಎಂಬ ಎಂಬ ಖ್ಯಾತಿಗೆ ಗುಲ್ಬರ್ಗ ಜಿಲ್ಲೆ ಪಾತ್ರವಾಯಿತು. ಇದು ಈ ಹೆಗ್ಗಳಕೆ ಹೊಂದಿರುವ ದೇಶದ ಎರಡನೇ ಜಿಲ್ಲೆ ಕೂಡಾ.
2007: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ರಾಜ್ಯಪಾಲರು ಅಂಕಿತ ಹಾಕಿದ ಹಿನ್ನೆಲೆಯಲ್ಲಿ ಹೊಸದಾಗಿ ಸೇರಿಕೊಂಡಿರುವ ಪ್ರದೇಶಗಳಲ್ಲಿ ಪಾಲಿಕೆಯು ತಾತ್ಕಾಲಿಕ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿತು.
2006: ನಾಟಕೀಯ ಬೆಳವಣಿಗೆಗಳಲ್ಲಿ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದ ಜಾತ್ಯತೀತ ಜನತಾದಳವು ಬಿಜೆಪಿ ಜೊತೆಗೂಡಿ ಪರ್ಯಾಯ ಸರ್ಕಾರ ರಚನೆಗೆ ಮುಂದಾಯಿತು. ಜೆಡಿಎಸ್ ಕಾರ್ಯಾಧ್ಯಕ್ಷ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಪುತ್ರ ಎಚ್. ಡಿ. ಕುಮಾರಸ್ವಾಮಿ ಮತ್ತು ವಿಧಾನಸಭೆಯ ವಿರೋಧಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರನ್ನು ಭೇಟಿ ಮಾಡಿ ಪರ್ಯಾಯ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಜನತಾದಳ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ, ಪುತ್ರ ಎಚ್. ಡಿ. ರೇವಣ್ಣ ಅವರಿಂದ ಇದಕ್ಕೆ ವಿರೋಧ. ಜನವರಿ 26ರ ಒಳಗೆ ಬಹುಮತ ಸಾಬೀತಿಗೆ ರಾಜ್ಯಪಾಲರಿಂದ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ಸೂಚನೆ.
1996: ತೆಲುಗು ಚಿತ್ರನಟ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ತಮ್ಮ 72ನೇ ವಯಸಿನಲ್ಲಿ ಹೈದರಾಬಾದಿನಲ್ಲಿ ನಿಧನರಾದರು.
1977: ಸೆರೆಮನೆಯಿಂದ ಮೊರಾರ್ಜಿ ದೇಸಾಯಿ ಮತ್ತಿತರ ಧುರೀಣರ ಬಿಡುಗಡೆ.
1972: ಭಾರತದ ಕ್ರಿಕೆಟ್ ಪಟು ವಿನೋದ್ ಕಾಂಬ್ಳಿ ಹುಟ್ಟಿದರು. ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ನಿರಂತರ ಡಬಲ್ ಸೆಂಚುರಿ ಸಿಡಿಸುವ ಮೂಲಕ ಅವರು ಖ್ಯಾತಿ ಪಡೆದರು.
1966: ಭರತನಾಟ್ಯ ಕಲಾವಿದೆ ವಿದ್ಯಾ ರವಿಶಂಕರ್ ಅವರು ಬಿ.ಎಸ್. ಅನಂತರಾಮಯ್ಯ- ಕಮಲಮ್ಮ ದಂಪತಿಯ ಮಗಳಾಗಿ ಶ್ರೀರಂಗಪಟ್ಟಣದಲ್ಲಿ ಜನಿಸಿದರು.
1957: ಭಾರತೀಯ ಈಜುಗಾರ್ತಿ, ಸೌಂದರ್ಯ ರಾಣಿ, ನಟಿ ನಫೀಸಾ ಅಲಿ ಹುಟ್ಟಿದರು.
1950: ಭಾರತ ಜಾತ್ಯತೀತ ರಾಷ್ಟ್ರ ಎಂದು ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ಘೋಷಣೆ.
1950: ಕಲಾವಿದ ಜನಾರ್ದನರಾವ್ ಮಾನೆ ಪಿ.ಎನ್. ಜನನ.
1947: ಭಾರತೀಯ ಗಾಯಕ, ನಟ ಕುಂದನ್ ಲಾಲ್ ಸೈಗಲ್ (1904-1947) ತಮ್ಮ 42ನೇ ವಯಸಿನಲ್ಲಿ ಜಲಂಧರಿನಲ್ಲಿ ನಿಧನರಾದರು. `ದೇವದಾಸ್' ಚಿತ್ರದ ಮೂಲಕ ಅವರು ಅಪಾರ ಖ್ಯಾತಿ ಗಳಿಸಿದರು.
1936: ಇಂಗ್ಲಿಷ್ ಸಣ್ಣ ಕಥೆಗಾರ, ಕವಿ, ಕಾದಂಬರಿಕಾರ ರುಡ್ ಯಾರ್ಡ್ ಕಿಪ್ಲಿಂಗ್ ತಮ್ಮ 71ನೇ ವಯಸಿನಲ್ಲಿ ಇಂಗ್ಲೆಂಡಿನ ಬುರ್ ವಾಶ್ನಲ್ಲಿ ನಿಧನರಾದರು.
1919: ಮೊದಲ ಜಾಗತಿಕ ಸಮರದಿಂದ ಉದ್ಭವಿಸಿದ ಸಮಸ್ಯೆಗಳ ನಿವಾರಣೆಗಾಗಿ ಪ್ಯಾರಿಸ್ ಶಾಂತಿ ಸಮ್ಮೇಳನವನ್ನು ಸಂಘಟಿಸಲಾಯಿತು. ಸಮರದಲ್ಲಿ ಪರಾಭವಗೊಂಡ ಜರ್ಮನಿಗೆ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಲಾಯಿತು. ಸಮ್ಮೇಳನದಲ್ಲಿ ವಿಜಯ ಸಾಧಿಸಿದ ನಾಲ್ಕು ಪ್ರಮುಖ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಇಟಲಿ ಮತ್ತು ಅಮೆರಿಕಾ (ಯುನೈಟೆಡ್ ಸ್ಟೇಟ್ಸ್) ಪ್ರಮುಖ ಪಾತ್ರ ವಹಿಸಿದವು.
1911: ಮೊತ್ತ ಮೊದಲ ಬಾರಿಗೆ ಹಡಗಿನಲ್ಲಿ ವಿಮಾನ ಬಂದಿಳಿಯಿತು. ಪೈಲಟ್ ಇ.ಬಿ. ಎಲಿ ತನ್ನ ವಿಮಾನವನ್ನು ಸಾನ್ ಫ್ರಾನ್ಸಿಸ್ಕೊ ಬಂದರಿನಲ್ಲಿ ಯು ಎಸ್ ಎಸ್ ಪೆನ್ಸಿಲ್ವೇನಿಯಾ ಹಡಗಿನಲ್ಲಿ ತಂದು ಇಳಿಸಿದರು.
1892: ಖ್ಯಾತ ಹಾಲಿವುಡ್ ನಟ ಅಲಿವರ್ ಹಾರ್ಡಿ (1892-1957) ಹುಟ್ಟಿದ ದಿನ. ಅಮೆರಿಕದ ಹಾಸ್ಯ ಚಿತ್ರನಟರಾದ ಇವರು ತಮ್ಮ ಸಹನಟ ಸ್ಟಾನ್ ಲಾರೆಲ್ ಜೊತೆಗೆ ನಟಿಸುತ್ತ ಜನಮನದಲ್ಲಿ ಅಚ್ಚಳಿಯದಂತೆ ತಮ್ಮ ಪ್ರಭಾವ ಬೀರಿದ್ದಾರೆ..
1842: ಭಾರತೀಯ ನ್ಯಾಯಾಧೀಶ, ಇತಿಹಾಸಕಾರ, ಸಾಮಾಜಿಕ ಹಾಗೂ ಆರ್ಥಿಕ ಸುಧಾರಕ ಮಹದೇವ ಗೋವಿಂದ ರಾನಡೆ (1842-1901) ಹುಟ್ಟಿದ ದಿನ.











No comments:
Post a Comment