ಇಂದಿನ ಇತಿಹಾಸ History Today ಜನವರಿ 28
2019: ಉನಾ
(ಹಿಮಾಚಲ ಪ್ರದೇಶ): ಒನ್ ರ್‍ಯಾಂಕ್ ಒನ್ ಪೆನ್ಶನ್
- ’ಒರೋಪ್’ ಪದಕ್ಕೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಇಲ್ಲಿ ಹೊಸ ವಿಸ್ತರಣೆಯನ್ನು
ನೀಡಿದರು. ಅವರು ಈ ಪದಕ್ಕೆ ನೀಡಿರುವ ಹೊಸ ವಿಸ್ತರಣೆ
ಪ್ರಕಾರ ಒಆರ್‌ಒಪಿ - ಒರೋಪ್ ಅಂದರೆ ’ಓನ್ಲಿ ರಾಹುಲ್ ಓನ್ಲಿ ಪ್ರಿಯಾಂಕಾ’! ಕಾಂಗ್ರೆಸ್ ವಿರುದ್ಧ
ಪ್ರಬಲ ದಾಳಿ ನಡೆಸಲು ಅಮಿತ್ ಶಾ ಅವರು ಇದನ್ನು ಬಳಸಿಕೊಂಡರು.
ಪಕ್ಷದ ತಳಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಜೆಪಿ ಅಧ್ಯಕ್ಷರು ಉನಾ ಪಟ್ಟಣಕ್ಕೆ
ಆಗಮಿಸಿದ್ದು, ಮುಂಬರುವ ಲೋಕಸಭಾ ಚುನಾವಣೆಗಳಿಗೆ ಮುಂಚಿತವಾಗಿ ತಳಮಟ್ಟದ ಕಾರ್ಯಕರ್ತರ ಜೊತೆಗೆ ಮಾತುಕತೆ
ಹಮ್ಮಿಕೊಂಡಿದ್ದರು. ’ಕಳೆದ ೭೦ ವರ್ಷಗಳಲ್ಲಿ ಯೋಧನ
ಬಗ್ಗೆ ಕಾಳಜಿ ವಹಿಸಿದವರು ಒಬ್ಬರೂ ಇರಲಿಲ್ಲ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ನಾವು
ಒನ್ ರ್‍ಯಾಂಕ್ ಒನ್ ಪೆನ್ಶನ್ (ಒಂದು ಶ್ರೇಣಿ, ಒಂದು ಪಿಂಚಣಿ- ಒರೋಪ್) ಜಾರಿಗೊಳಿಸಿದೆವು. ಏನಿದ್ದರೂ
ಕಾಂಗ್ರೆಸ್ ಕೂಡಾ ’ಒರೋಪ್’ನ್ನು ಅನುಸರಿಸುತ್ತಿದೆ. ಕಾಂಗ್ರೆಸ್ಸಿನ ಒರೋಪ್ ಅಂದರೆ ಓನ್ಲಿ ರಾಹುಲ್
ಓನ್ಲಿ ಪ್ರಿಯಾಂಕಾ (ಕೇವಲ ರಾಹುಲ್, ಕೇವಲ ಪ್ರಿಯಾಂಕಾ)’ ಎಂದು ಅಮಿತ್ ಶಾ ವಿಮಾನ ನಿಲ್ದಾಣದಲ್ಲಿ
ಹೇಳಿದರು. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಥಾಕೂರ್ ಅವರು ಶಾ ಅವರನ್ನು ಸ್ವಾಗತಿಸಿದರು.
ರಾಷ್ಟ್ರದ ನಿವೃತ್ತ ಯೋಧರಿಗೆ ಸಮಾನ ಶ್ರೇಣಿಗೆ ಸಮಾನ ಪಿಂಚಣಿ ಒದಗಿಸುವ ವ್ಯವಸ್ಥೆ ಬಗ್ಗೆ ಅಮಿತ್
ಶಾ ಉಲ್ಲೇಖಿಸಿದರು. ಮುಂಬರುವ ಮಹಾಚುನಾವಣೆಗೆ ಮುಂಚಿತವಾಗಿ ಗುಡ್ಡಗಾಡು ರಾಜ್ಯದಲ್ಲಿ ಪಕ್ಷವು ಸಂಘಟಿಸಿದ
ಮೂರನೇ ಪನ್ನಾ ಪ್ರಮುಖ್ ಸಮ್ಮೇಳನ ಇದು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕಳೆದ ನವೆಂಬರ್
ತಿಂಗಳಲ್ಲಿ ಮಂಡಿಯಲ್ಲಿ ನಡೆದ ಪನ್ನಾ ಪ್ರಮುಖ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಕಳದ ತಿಂಗಳು ಸೋಲನ್
ನಲ್ಲಿ ನಡೆದ ಇಂತಹದೇ ಸಮ್ಮೇಳನದ ಅಧ್ಯಕ್ಷತೆಯನ್ನು ಜಗತ್ ಪ್ರಕಾಶ್ ನಡ್ಡಾ ವಹಿಸಿದ್ದರು. ಪನ್ನಾ ಪ್ರಮುಖ್ ಮಾದರಿಯಲ್ಲಿ, ಪಕ್ಷವು ಪ್ರಮುಖ್ ಅಥವಾ
ಪ್ರಭಾರಿಯನ್ನು ನೇಮಿಸುತ್ತದೆ. ಈ ಪ್ರಭಾರಿಗೆ ಒಂದು ಪಟ್ಟಿ ಅಥವಾ ಪನ್ನಾ (ಹಿಂದಿಯಲ್ಲಿ ಇದರ ಅರ್ಥ
ಪುಟ) ನೀಡಲಾಗುತ್ತದೆ. ಈ ಪಟ್ಟಿಯಲ್ಲಿ ೮-೧೨ ಕುಟುಂಬಗಳ ಹೆಸರು ಇರುತ್ತದೆ. ಪ್ರತಿಯೊಬ್ಬ ಪ್ರಮುಖ
ಅಥವಾ ಮುಖ್ಯಸ್ಥನಿಗೆ ಪಕ್ಷಕ್ಕಾಗಿ ಮತಗಳ ನೆಲೆಗಟ್ಟು
ವಿಸ್ತರಿಸುವ ನಿಟ್ಟಿನಲ್ಲಿ ಈ ಕುಟುಂಬಗಳ ಕಡೆ ಗಮನ ಹರಿಸಲು ಸೂಚಿಸಲಾಗುತ್ತದೆ. ಬಿಜೆಪಿಯು ಮೊದಲ ಮೊದಲ ಮೂರು ಅವಧಿಗಳಲ್ಲಿ ನಿರಂತರವಾಗಿ
ಅಧಿಕಾರಕ್ಕೆ ಬರಲು ಗುಜರಾತಿನಲ್ಲಿ ಈ ಮಾದರಿಯನ್ನು ಬಳಸಿತ್ತು. ಬಳಿಕ ಇದನ್ನು ೨೦೧೪ರ ಲೋಕಸಭಾ ಚುನಾವಣೆ
ಕಾಲದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್ ಎಸ್) ಯಶಸ್ವಿಯಾಗಿ ಅನುಷ್ಠಾನಗೊಳಿಸಿತ್ತು.
ಆ ಬಳಿಕ ಬಿಜೆಪಿಯು ಇತರ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ಈ ಮಾದರಿಯನ್ನು ಪುನಃ
ಪುನಃ ಪ್ರಯೋಗಿಸಿತ್ತು. ರಾಜಕೀಯ ಸಂದೇಶಗಳ ರವಾನೆ, ಮತದಾರರ ಕ್ರೋಡೀಕರಣ, ಮತದಾರರ ಜೊತೆಗೆ ವೈಯಕ್ತಿಕ
ಸಂಪರ್ಕ ಹಾಗೂ ಬುಡಮಟ್ಟದಿಂದ ಹಿಮ್ಮಾಹಿತಿ ಪಡೆಯಲು ಪಕ್ಷಕ್ಕೆ ಈ ಮಾದರಿ ಒಂದು ಸಾಧನವಾಗಿತ್ತು. ಮಾಜಿ
ಮುಖ್ಯಮಂತ್ರಿಗಳಾದ ಶಾಂತಕುಮಾರ್ ಮತ್ತು ಪ್ರೇಮ್ ಕುಮಾರ್ ಧುಮಾಲ್ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ
ಸತ್ಪಾಲ್ ಸಿಂಗ್ ಸತ್ತಿ ಅವರು ಸೇರಿದಂತೆ ಪಕ್ಷದ ಪ್ರಮುಖರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಪಕ್ಷದ
ಸಂಘಟನಾ ಕಾರ್‍ಯದರ್ಶಿ ರಾಮ್ ಲಾಲ್ ಅವರೂ ಹಾಜರಿದ್ದರು. ಹಮೀರಪುರದ ಲೋಕಸಭಾ ಸದಸ್ಯ ಅನುರಾಗ್ ಥಾಕೂರ್
ಅವರು ಕಾಂಗ್ರೆಸ್ ಪಕ್ಷವು ಕೆಸರು ಎರಚುವ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದರು. ’ನಮ್ಮ ಸರ್ಕಾರವು
ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಭಾರತದ ಜನತೆಗೆ ನೀಡಿದೆ’ ಎಂದು ಅವರು ನುಡಿದರು. ಹಿಮಾಚಲ ಪ್ರದೇಶವು
ಶಿಮ್ಲಾ, ಸೋಲನ್, ಹಮೀರಪುರ ಮತ್ತು ಮಂಡಿ ಈ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು ೨೦೧೪ರ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಈ ನಾಲ್ಕೂ ಕ್ಷೇತ್ರಗಳಲ್ಲಿ ಜಯಗಳಿಸಿತ್ತು.
2019: ನವದೆಹಲಿ: ೧೯೮೪ರ ಭೋಪಾಲ್ ಅನಿಲ
ದುರಂತದ ಸಂತ್ರಸ್ಥರಿಗೆ ಹೆಚ್ಚಿನ ಪರಿಹಾರ ನೀಡುವ ಸಲುವಾಗಿ ಯೂನಿಯನ್ ಕಾರ್ಬೈಡ್ ಕಂಪೆನಿಯ ಉತ್ತರಾಧಿಕಾರಿ
ಸಂಸ್ಥೆಗಳಿಂದ ೭,೮೪೪ ಕೋಟಿ ರೂಪಾಯಿಗಳ ಹೆಚ್ಚುವರಿ ನಿಧಿಯನ್ನು ಒದಗಿಸುವಂತೆ ಕೋರಿ ಕೇಂದ್ರ ಸರ್ಕಾರವು
ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿತು. ಯೂನಿಯನ್ ಕಾರ್ಬೈಡ್ ಕಂಪೆನಿಯ ಉತ್ತರಾಧಿಕಾರಿ
ಸಂಸ್ಥೆಗಳಿಂದ ಹೆಚ್ಚಿನ ಪರಿಹಾರ ಕೋರಿ ಕೇಂದ್ರ ಸರ್ಕಾರವು ಸಲ್ಲಿಸಿರುವ ಅರ್ಜಿಯನ್ನು ಏಪ್ರಿಲ್ ತಿಂಗಳಲ್ಲಿ
ಆಲಿಸಲಾಗುವುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿ ಸಂಜೀವ ಖನ್ನಾ
ಅವರನ್ನು ಒಳಗೊಂಡ ಪೀಠವು ತಿಳಿಸಿತು. ಯೂನಿಯನ್ ಕಾರ್ಬೈಡ್ ಮತ್ತು ಇತರ ಸಂಸ್ಥೆಗಳಿಗೆ ೪೭೦೦ ಲಕ್ಷ
ಡಾಲರ್ ಮೊತ್ತದ ಪರಿಹಾರ ನೀಡುವ ಹಿಂದಿನ ಒಪ್ಪಂದಕ್ಕಿಂತ ಹೆಚ್ಚಿನ ನಿಧಿಯನ್ನು ನೀಡುವಂತೆ ನಿರ್ದೇಶನ
ನೀಡಬೇಕು ಎಂದು ಕೇಂದ್ರವು ತನ್ನ ಮನವಿಯಲ್ಲಿ ಕೋರಿತ್ತು. ೧೯೮೪ರ ಡಿಸೆಂಬರ್ ೨ ಮತ್ತು ೩ನೇ ದಿನಾಂಕಗಳ
ನಡುವಣ ರಾತ್ರಿಯಲ್ಲಿ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್) ಕೀಟನಾಶಕ ಘಟಕದಲ್ಲಿ ಮಿಥೈಲ್
ಐಸೋಸಯನೇಟ್ (ಎಂಐಸಿ) ವಿಷಾನಿಲ ಸೋರಿಕೆಯಾದ ಪರಿಣಾಮವಾಗಿ ೩೦೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅದಕ್ಕೂ ಹೆಚ್ಚಾಗಿ ಆಸುಪಾಸಿನ ನೂರಾರು ಎಕರೆ ಪ್ರದೇಶದ ಸಹಸ್ರಾರು
ಕುಟುಂಬಗಳ ಮಂದಿ ಹಾಗೂ ಆ ಬಳಿಕ ಹುಟ್ಟಿದ ಮಕ್ಕಳ ಮೇಲೂ ಈ ವಿಷಾನಿಲದ ದುಷ್ಪರಿಣಾಮಗಳು ಕಂಡು ಬಂದಿದ್ದು,
ಸಹಸ್ರಾರು ಕುಟುಂಬಗಳು ಬೀದಿಪಾಲಾಗಿದ್ದವು.
2019: ನವದೆಹಲಿ: ’ಇದು ಮೂಲಭೂತ ಮಹತ್ವದ ಪ್ರಶ್ನೆ’ ಎಂಬುದಾಗಿ ಬಣ್ಣಿಸಿದ ಸುಪ್ರೀಂಕೋರ್ಟ್
ಶಾಲೆಗಳಲ್ಲಿ ಸಂಸ್ಕೃತ ಮತ್ತು ಹಿಂದಿ ಸ್ತ್ರೋತ್ರ ಮತ್ತು ಶ್ಲೋಕಗಳ ರೂಪದಲ್ಲಿ ಧಾರ್ಮಿಕ ಸಂದೇಶಗಳನ್ನು
ನೀಡುವ ವಿಚಾರಗಳನ್ನು ಸಂವಿಧಾನಪೀಠವು ಪರಾಂಬರಿಸುವ ಅಗತ್ಯ ಇದೆ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿತು. ನ್ಯಾಯಮೂರ್ತಿ ರೊಹಿಂಟನ್ ಎಫ್. ನಾರಿಮನ್ ನೇತೃತ್ವದ ದ್ವಿಸದಸ್ಯ
ಪೀಠವು ಕೇಂದ್ರೀಯ ವಿದ್ಯಾಲಯಗಳಲ್ಲಿ ಬೆಳಗಿನ ಸಮಾವೇಶದಲ್ಲಿ ಸಂಸ್ಕೃತ ಮತ್ತು ಹಿಂದಿ ಸ್ತೋತ್ರಗಳನ್ನು
ಕಡ್ಡಾಯವಾಗಿ ಹಾಡುವುದಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಸುತ್ತಿದ್ದಾಗ ಈ ಅಭಿಪ್ರಾಯ ವ್ಯಕ್ತ
ಪಡಿಸಿತು. ’ಇದು ಮೂಲಭೂತ ಮಹತ್ವದ ವಿಷಯ ಎಂಬುದು ನಮ್ಮ ಅನಿಸಿಕೆ. ಸಂವಿಧಾನ ಪೀಠವು ಇದನ್ನು ಪರಾಂಬರಿಸಬೇಕು’
ಎಂದು ನ್ಯಾಯಮೂರ್ತಿ ನಾರಿಮನ್ ಅವರು ಕೇಂದ್ರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ (ಎಸ್ ಜಿ)
ತುಷಾರ ಮೆಹ್ತ ಅವರಿಗೆ ಹೇಳಿದರು. ಪ್ರತಿದಿನ ಬೆಳಗ್ಗೆ ನಡೆಯುವ ಶಾಲಾ ಸಮಾವೇಶದಲ್ಲಿ ’ಅಸತೋ ಮಾ ಸದ್ಗಮಯ’
ಸಂಸ್ಕೃತ ಶ್ಲೋಕವನ್ನು ಹಾಡುವುದು ಧಾರ್ಮಿಕ ಸಂದೇಶ ನೀಡುವ ಕ್ರಿಯೆಯಾಗುವುದಿಲ್ಲ ಎಂದು ಮೆಹ್ತ ಅವರು
ಪ್ರತಿಪಾದಿಸಿದರು. ’ಅದು. ಎಲ್ಲ ಪಠ್ಯಗಳು ಮತ್ತು
ಎಲ್ಲ ಧರ್ಮಗಳಲ್ಲೂ ಮಾನ್ಯವಾಗಿರುವ ಸಾರ್ವತ್ರಿಕ ಸತ್ಯ. ಸಂಸ್ಕೃತದಲ್ಲಿ ಇದೆ ಎಂಬ ಏಕೈಕ ಕಾರಣಕ್ಕೆ
ಅದು ಧಾರ್ಮಿಕವಾಗುವುದಿಲ್ಲ. ’ಹಾನೆಸ್ಟಿ ಈಸ್ ದಿ ಬೆಸ್ಟ್ ಪಾಲಿಸಿ’ (ಪ್ರಾಮಾಣಿಕತೆಯು ಅತ್ಯುತ್ತಮ
ನೀತಿ) ಎಂಬುದಾಗಿ ಹೇಳುವ ಕ್ರೈಸ್ತ ಶಾಲೆಗಳು ನಮ್ಮಲ್ಲಿವೆ. ಅದು ಧಾರ್ಮಿಕ ಹೇಳಿಕೆಯಾಗುತ್ತದೆಯೇ?
ನನಗೆ ಹಾಗನ್ನಿಸುವುದಿಲ್ಲ’ ಎಂದು ಮೆಹ್ತ ನುಡಿದರು.
’ಆದರೆ ಈ ’ಅಸತೋ ಮಾ ಸದ್ಗಮಯ’ ಎಂಬ ಈ ಸ್ತೋತ್ರವು
ನೇರವಾಗಿ ಉಪನಿಷತ್ತಿನಿಂದ ಬಂದಿದೆ’ ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದರು. ಸುಪ್ರೀಕೋರ್ಟಿನ ಅಧಿಕೃತ ಲಾಂಛನ ಕೂಡಾ ಭಗವದ್ ಗೀತೆಯ ಸ್ತೋತ್ರವನ್ನು ಹೊಂದಿದೆ’
ಎಂದು ಸಾಲಿಟರ್ ಜನರಲ್ ಉತ್ತರಿಸಿದರು. ’ಈ ನ್ಯಾಯಾಲಯದ ಪ್ರತಿಯೊಬ್ಬ ನ್ಯಾಯಾಧೀಶರ ಹಿಂದಿರುವ ಲಾಂಛನವು
’ಯತೋ ಧರ್ಮಸ್ ತತೋ ಜಯಃ’ (ಎಲ್ಲಿ ಧರ್ಮ ಇದೆಯೋ ಅಲ್ಲಿ ಜಯವಿದೆ’ ಎಂದು ಹೇಳುತ್ತದೆ. ಇದು ಧಾರ್ಮಿಕ
ಅಥವಾ ಕೋಮು ಸ್ವರೂಪದ್ದಲ್ಲ’ ಎಂದು ಮೆಹ್ತ ನುಡಿದರು. ಏನಿದ್ದರೂ, ಈ ವಿಷಯವು ವಿಶಾಲ ಪೀಠಕ್ಕೆ ಹೋಗುವುದೇ
ಒಳಿತು ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದರು. ಈ ವಿಷಯವನ್ನು ಸೂಕ್ತ ಪೀಠ ರಚನೆಗಾಗಿ ಭಾರತದ ಮುಖ್ಯ
ನ್ಯಾಯಮೂರ್ತಿಯವರ ಮುಂದೆ ಇರಿಸಲಾಗುವುದು ಎಂದು ಅವರು ಆದೇಶ ನೀಡಿದರು. ಜಬಲ್ಪುರ ಮೂಲದ ವಕೀಲ ವಿನಾಯಕ್
ಶಾ ಅವರು ಸಲ್ಲಿಸಿರುವ ಈ ಅರ್ಜಿಯು ಕೇಂದ್ರೀಯ ವಿದ್ಯಾಲಯಗಳ ಪ್ರಾರ್ಥನೆಗಳು ಹಿಂದೂ ಧರ್ಮವನ್ನು ಪ್ರಚಾರ
ಮಾಡುತ್ತವೆ ಮತ್ತು ಸಂವಿಧಾನದ ೧೯ (ವಾಕ್ ಮತ್ತು ಅಭಿವ್ಯಕ್ತಿಯ ಹಕ್ಕು) ಮತ್ತು ೨೮(೧) (ಸಾರ್ವಜನಿಕ
ಹಣದಲ್ಲಿ ನಡೆಸಲ್ಪಡುವ ಯಾವುದೇ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಸಂದೇಶ ನೀಡುವುದನ್ನು
ನಿಷೇಧಿಸುತ್ತದೆ) ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಪಾದಿಸಿತ್ತು. ಪ್ರತಿದಿನ ಬೆಳಗಿನ ಶಾಲಾ
ಸಮಾವೇಶದಲ್ಲಿ ’ಅಸತೋ ಮಾ ಸದ್ಗಮಯ’ ಶ್ಲೋಕವನ್ನು ಕಡ್ಡಾಯವಾಗಿ ಹಾಡುವುದರಿಂದ ವೈಜ್ಞಾನಿಕ ಅನ್ವೇಷಣೆಯ
ಮನೋಭಾವವನ್ನೇ ಅದುಮಿದಂತಾಗುತ್ತದೆ ಮತ್ತು ಇದು ಸಂವಿಧಾನವು ನಿಷೇಧಿಸಿರುವ ’ಧಾರ್ಮಿಕ ಸಂದೇಶ’ವಾಗುತ್ತದೆ
ಎಂದು ಅರ್ಜಿ ವಾದಿಸಿತ್ತು. ಕೇಂದ್ರೀಯ ವಿದ್ಯಾಲಯಗಳ ಪರಿಷ್ಕೃತ ನಿಯಮಾವಳಿಗಳನ್ನು ಅರ್ಜಿಯು ಪ್ರಶ್ನಿಸಿದೆ.
೨೦೧೨ರಲ್ಲಿ ರಚಿಸಲಾಗಿರುವ ಹೊಸ ನಿಯಮಾವಳಿಗಳು ೨೦೧೩ರಿಂದ ಜಾರಿಗೆ ಬಂದಿವೆ. ಇವುಗಳ ಪ್ರಕಾರ ಪ್ರತಿದಿನ
ನಡೆಯುವ ಶಾಲಾ ಸಮಾವೇಶವು ಸಾಮಾನ್ಯವಾದ ಸಂಸ್ಕೃತ ಪ್ರಾರ್ಥನೆಯೊಂದಿಗೆ ಆರಂಭವಾಗಬೇಕು ಮತ್ತು ’ಓಂ ಸಹನಾವವತು’
(ದೇವರು ನಮ್ಮಿಬ್ಬರನ್ನೂ ರಕ್ಷಿಸಲಿ) ಸಂಸ್ಕೃತ ಶ್ಲೋಕದೊಂದಿಗೆ ಕೊನೆಗೊಳ್ಳಬೇಕು. ಈ ಪದ್ಧತಿಯು ವೈಜ್ಞಾನಿಕ
ಮನೋಭಾವ ಬೆಳೆಸಿಕೊಳ್ಳುವಲ್ಲಿ ಹಲವಾರು ಅಡೆತಡೆಗಳನ್ನು ನಿರ್ಮಿಸುತ್ತದೆ ಮತ್ತು ಪ್ರತಿದಿನ ಎದುರಾಗುವ
ಸಮಸ್ಯೆಗಳನ್ನು ಎದುರಿಸಲು ಪ್ರಯೋಗಾತ್ಮಕ ಕ್ರಮಗಳನ್ನು ಕೈಗೊಳ್ಳುವ ಬದಲಿಗೆ ಸರ್ವಶಕ್ತನ ಮೊರೆಹೋಗುವ
ಕಡೆಗೆ ವಿದ್ಯಾರ್ಥಿಗಳು ವಾಲುವಂತೆ ಮಾಡುತ್ತದೆ ಎಂದು ಅರ್ಜಿ ವಾದಿಸಿತ್ತು
2019: ನವದೆಹಲಿ: ೨೦೧೯ರ ಮಹಾಚುನಾವಣೆ
ಬಳಿಕ ಕೇಂದ್ರದಲ್ಲಿ ತಮ್ಮ ಪಕ್ಷವು ಸರ್ಕಾರ ರಚನೆ ಮಾಡಿದರೆ ದೇಶದ ಎಲ್ಲ ಬಡವರಿಗೂ ಕನಿಷ್ಠ ಆದಾಯ ಖಾತರಿಯನ್ನು
ನೀಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭರವಸೆ ನೀಡಿದರು. ಇದೇ ವೇಳೆಗೆ ರೈತ ಸಾಲದ
ವಿಷಯವನ್ನು ನಿರ್ಲಕ್ಷಿಸುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರವನ್ನು
ಅವರು ತರಾಟೆಗೆ ತೆಗೆದುಕೊಂಡರು. ೧೯೬೦ರ ಹಸಿರು ಕ್ರಾಂತಿಯನ್ನು
ಉಲ್ಲೇಖಿಸಿದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಹಲವಾರು ಚಾರಿತ್ರಿಕ ಕೆಲಸಗಳನ್ನು ಈ ಹಿಂದೆ ಮಾಡಿದೆ
ಮತ್ತು ೨೦೧೯ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಲ್ಲಿ ಇನ್ನೊಂದು ಐತಿಹಾಸಿಕ ಕೆಲಸವನ್ನು ಮಾಡಲಿದೆ
ಎಂದು ಛತ್ತೀಸ್‌ಗಢದ ನಯಾ ರಾಯ್‌ಪುರದಲ್ಲಿ ರೈತ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಕಾಂಗ್ರೆಸ್ ಪಕ್ಷವು ಹಸಿರು ಕ್ರಾಂತಿಗೆ ಅಡಿಪಾಯವನ್ನು
ಹಾಕಿತ್ತು. ನಾವು ಆಹಾರ ಭದ್ರತೆಗಾಗಿ ದುಡಿದೆವು. ನಾವು ಕ್ಷೀರ ಕ್ರಾಂತಿಯನ್ನು ತಂದೆವು, ಟೆಲೆಕಾಂ
ಕ್ರಾಂತಿಯನ್ನು ಮಾಡಿದೆವು ಎಂದು ರಾಹುಲ್ ನುಡಿದರು.
ಶ್ವೇತ ಕ್ರಾಂತಿ, ಟೆಲಿಕಾಂ ಕ್ರಾಂತಿ ಸೇರಿದಂತೆ ರಾಷ್ಟ್ರದಲ್ಲಿ ಆದ ವಿವಿಧ ಕ್ರಾಂತಿಗಳನ್ನು
ಪಟ್ಟಿ ಮಾಡಿದ ಕಾಂಗ್ರೆಸ್ ಅಧ್ಯಕ್ಷ, ತಮ್ಮ ಪಕ್ಷವು ರಾಷ್ಟ್ರದ ಬಡವರಿಗೆ ಕನಿಷ್ಠ ಆದಾಯವನ್ನು ಒದಗಿಸುವುದು
ಎಂದು ಹೇಳಿದರು. ’ನಮ್ಮ ಲಕ್ಷಾಂತರ ಮಂದಿ ಸಹೋದರ ಸಹೋದರಿಯರು
ಬಡತನದ ಬೇಗೆಯಲ್ಲಿ ನರಳುತ್ತಿರುವಾಗ ನಾವು ನವಭಾರತವನ್ನು ನಿರ್ಮಿಸಲು ಸಾಧ್ಯವಿಲ್ಲ’ ಎಂದು ಅವರು ನುಡಿದರು. ’೨೦೧೯ರಲ್ಲಿ ಅಧಿಕಾರಕ್ಕೆ ಏರಿಸಿದರೆ, ಬಡತನ ಮತ್ತು ಹಸಿವನ್ನು
ತೊಡೆದುಹಾಕಲು ನೆರವಾಗುವ ಸಲುವಾಗಿ ಕಾಂಗ್ರೆಸ್ ಪಕ್ಷವು ಪ್ರತಿಯೊಬ್ಬ ಬಡ ವ್ಯಕ್ತಿಗೆ ಕನಿಷ್ಠ ಆದಾಯ
ಖಾತರಿಗೆ ಬದ್ಧವಾಗಿದೆ. ಇದು ನಮ್ಮ ದೃಷ್ಟಿ ಮತ್ತು ಭರವಸೆ’ ಎಂದು ರಾಹುಲ್ ಗಾಂಧಿ ಹೇಳಿದರು. ೨೦೧೯ರ ಚುನಾವಣೆಯಲ್ಲಿ ಗೆದ್ದರೆ ರಾಷ್ಟ್ರದ ಎಲ್ಲ ಬಡವರಿಗೂ
ಕನಿಷ್ಠ ಆದಾಯದ ಖಾತರಿಯನ್ನು ನೀಡಲು ನಾವು ನಿರ್ಧರಿಸಿದ್ದೇವೆ. ಇದನ್ನು ಕಾಂಗ್ರೆಸ್ ಸರ್ಕಾರವು ೨೦೧೯ರಲ್ಲಿ
ಮೊತ್ತ ಮೊದಲ ಬಾರಿಗೆ ಮಾಡಲಿದೆ’ ಎಂದು ಅವರು ನುಡಿದರು.
ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದ
ರಾಹುಲ್ ಗಾಂಧಿ, ಪ್ರಧಾನಿ ಮತ್ತು ಅವರ ಸರ್ಕಾರಕ್ಕೆ ರೈತರ ಸಾಲಮನ್ನಾ ಮಾಡಲು ಹಣ ಇಲ್ಲ, ಆದರೆ ಹಿಡಿಯಷ್ಟು
ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಲು ಹಣವಿದೆ’ ಎಂದು ದೂಷಿಸಿದರು. ’ನಾವು ಛತ್ತೀಸ್‌ಗಢದಲ್ಲಿ ವಿರೋಧ
ಪಕ್ಷವಾಗಿದ್ದಾಗ ರೈತರ ಬಗ್ಗೆ ಮಾತನಾಡಿದೆವು ಮತ್ತು ರೈತ ಸಾಲಗಳನ್ನು ಮನ್ನಾ ಮಾಡುವಂತೆ ಬಿಜೆಪಿ ಸರ್ಕಾರವನ್ನು
ಕೇಳಿದೆವು. ಅದಕ್ಕೆ ಹಣ ಇಲ್ಲ ಎಂಬ ಉತ್ತರ ಬಂತು. ಮಧ್ಯಪ್ರದೇಶದಲ್ಲಿಯೂ ನಾವು ಇದನ್ನೇ ಕೇಳಿದೆವು.
ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವು ಅದಕ್ಕೆ ಹಣ ಇಲ್ಲ ಎಂದು ಹೇಳಿತು. ರಾಜಸ್ಥಾನದಲ್ಲಿಯೂ ನಮಗೆ ಇದೇ
ಉತ್ತರ ಲಭಿಸಿತು. ದೆಹಲಿಯಲ್ಲಿ ಪ್ರಧಾನಿ ಮೋದಿಯವರು ಭಾರತ ಸರ್ಕಾರದ ಬಳಿ ರೈತ ಸಾಲ ಮನ್ನಾ ಮಾಡಲು
ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ನಿಮ್ಮ ಬಳಿ ೧೫ ಪ್ರಮುಖ ಕೈಗಾರಿಕೋದ್ಯಮಿಗಳಿಗೆ ನೀಡಲು ಬೇಕಾದಷ್ಟು
ಹಣವಿದೆ’ ಎಂದು ರಾಹುಲ್ ಚುಚ್ಚಿದರು. ’ಭಾರತದ ಕಾವಲುಗಾರನ ಬಳಿ ರೈತರಿಗಾಗಿ ೬,೦೦೦ ಕೋಟಿ ರೂಪಾಯಿ
ಇಲ್ಲ, ಆದರೆ ಅನಿಲ್ ಅಂಬಾನಿಗೆ ಕೊಡಲು ೩೦,೦೦೦ ಕೋಟಿ ರೂಪಾಯಿ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಫೇಲ್
ವಹಿವಾಟನ್ನು ಉಲ್ಲೇಖಿಸುತ್ತಾ ನುಡಿದರು. ’ಏನಾದರೂ
ಸರಿ ರೈತ ಸಾಲ ಮನ್ನಾ ಮಾಡುತ್ತೇವೆ ಎಂದು ನಾವು ಭರವಸೆ ಕೊಟ್ಟೆವು. ೧೦ ದಿನಗಳಲ್ಲಿ ರೈತ ಸಾಲ ಮನ್ನಾ
ಮಾಡುತ್ತೇವೆ ಎಂದು ನಾವು ಹೇಳಿದೆವು ಮತ್ತು ನಾವು ಅದನ್ನು ಮಾಡಿದೆವು. ೧೦ ದಿನಗಳಲ್ಲಿ ನಾವು ಅದನ್ನು
ಮಾಡುತ್ತೇವೆ ಎಂದು ನಾನು ನಿಮಗೆ ಹೇಳಿದ್ದೆ. ಆದರೆ ನಾನು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಎರಡೇ
ದಿನಗಳಲ್ಲಿ ಮಾಡಲು ಹೇಳಿದೆ. ಅವರು ಅದನ್ನು ಒಂದೇ ದಿನದಲ್ಲಿ ಮಾಡಿದರು. ಬಿಜೆಪಿ ನಾಯಕರಿಗೆ ೧೫ ವರ್ಷಗಳಲ್ಲಿ
ಮಾಡಲು ಸಾಧ್ಯವಾಗದೇ ಇದ್ದದ್ದನ್ನು ನಾವು ಕೇವಲ ೨೪ ಗಂಟೆಗಳಲ್ಲಿ ಮಾಡಿದೆವು’ ಎಂದು ಗಾಂಧಿ ನುಡಿದರು. ಚಿದಂಬರಂ ಹೇಳಿಕೆ: ’ದೇಶದ ಬಡವರಿಗೆ ರಾಷ್ಟ್ರದ ಸಂಪನ್ಮೂಲಗಳಲ್ಲಿ
ಮೊದಲ ಪಾಲು ಇದೆ. ರಾಹುಲ್ ಗಾಂಧಿ ಅವರ ಭರವಸೆಯನ್ನು ಜಾರಿಗೊಳಿಸಲು ಕಾಂಗ್ರೆಸ್ ಪಕ್ಷವು ಸಂಪನ್ಮೂಲಗಳನ್ನು
ಕ್ರೋಡೀಕರಿಸುವುದು’ ಎಂದು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಹೇಳಿದರು. ’೧೪ ಕೋಟಿ ಜನರನ್ನು ೨೦೦೪ರಿಂದ
೨೦೧೪ರ ನಡುವಣ ಅವಧಿಯಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಬಡತನದಿಂದ ಮೇಲಕ್ಕೆ ಎತ್ತಲಾಗಿತ್ತು’
ಎಂದು ಚಿದಂಬರಂ ನುಡಿದರು. ಕಳೆದ ಎರಡು ವರ್ಷಗಳಲ್ಲಿ
ಸಾರ್ವತ್ರಿಕ ಮೂಲಭೂತ ಆದಾಯದ ಬಗ್ಗೆ ವ್ಯಾಪಕ ಚರ್ಚೆ ನಡೆದಿರುವ ಅಂಶವನ್ನು ಒತ್ತಿ ಹೇಳಿದ ಚಿದಂಬರಂ,
’ಈ ನೀತಿಯನ್ನು ನಮ್ಮ ಪರಿಸ್ಥಿತಿಗೆ ಅನ್ವಯಿಸಲು ಸಮಯ ಬಂದಿದ್ದು ಬಡವರಿಗಾಗಿ ಅದನ್ನು ಜಾರಿಗೊಳಿಸುವ
ಅಗತ್ಯ ಇದೆ’ ಎಂದು ಹೇಳಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ
ಇದರ ಬಗ್ಗೆ ಇನ್ನಷ್ಟು ವಿವರಣೆ ನೀಡಲಾಗುವುದು ಎಂದು ಚಿದಂಬರಂ ನುಡಿದರು. ಅರವಿಂದ ಸುಬ್ರಮಣಿಯನ್ ಕಲ್ಪನೆ: ಸಾರ್ವತ್ರಿಕ ಮೂಲಭೂತ ಆದಾಯದ
ಹೆಸರಿನಲ್ಲಿ ಈ ಕಲ್ಪನೆಯನ್ನು ಮಾಜಿ ಮುಖ್ಯ ಆರ್ಥಿಕ ಸಲೆಹಗಾರ ಅರವಿಂದ ಸುಬ್ರಮಣಿಯನ್ ೨೦೧೭ರ ಆರ್ಥಿಕ
ಸಮೀಕ್ಷೆಯಲ್ಲಿ ಮೊತ್ತ ಮೊದಲಿಗೆ ವಿವರಿಸಿದ್ದರು. ಆದರೆ ಯೋಜನೆ ಜಾರಿಗೆ ಬಾರದೇ ಮೂಲೆಗುಂಪಾಗಿತ್ತು.
’ರಾಷ್ಟ್ರದಲ್ಲಿ ಯಾರು ಕೂಡಾ ಇನ್ನು ಬಡವರಾಗಿ ಉಳಿಯುವುದಿಲ್ಲ. ಕಾಂಗ್ರೆಸ್ ಪಕ್ಷವು ಪ್ರತಿಯೊಬ್ಬರ
ಬ್ಯಾಂಕ್ ಖಾತೆಗಳಿಗೆ ಕನಿಷ್ಠ ಆದಾಯ ಪಾವತಿಯ ಭರವಸೆಯನ್ನು ಕಾಂಗ್ರೆಸ್ ಪಕ್ಷವು ನೀಡಲಿದೆ’ ಎಂದು ರಾಹುಲ್
ಗಾಂಧಿ ಹೇಳಿದರು. ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಸದ್ಯೋಭವಿಷ್ಯದಲ್ಲಿಯೇ
ಇಂತಹ ಯೋಜನೆ ಜಾರಿಗೆ ಬರಲಿದೆ ಎಂಬ ಸುಳಿವನ್ನೂ ರಾಹುಲ್ ಗಾಂಧಿ ನೀಡಿದರು. ’ನಾವು ಈ ಯೋಜನೆಯನ್ನು
ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಜಾರಿಗೊಳಿಸಲಿದ್ದು, ಬಳಿಕ ಇಡೀ ದೇಶಕ್ಕೆ ಅನ್ವಯಿಸುತ್ತೇವೆ’ ಎಂದು
ಅವರು ನುಡಿದರು. ಕೇಂದ್ರದ ಮಧ್ಯಂತರ ಬಜೆಟಿನಲ್ಲಿಯೇ
ಜಾರಿ?: ಈ ಯೋಜನೆಯನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ಕಾರವು ಫೆಬ್ರುವರಿ ೧ರ ಮಧ್ಯಂತರ ಮುಂಗಡ
ಪತ್ರದಲ್ಲಿಯೇ ಜಾರಿಗೊಳಿಸುವ ಸಾಧ್ಯತೆಗಳಿವೆ ಎಂದು ಈ ಮೊದಲು ಪತ್ರಿಕಾ ವರದಿಗಳು ಬಂದಿದ್ದವು. ಹಿಂದಿ ಪ್ರಾಬಲ್ಯದ ರಾಜ್ಯಗಳಲ್ಲಿ ಉಂಟಾದ ನಿರ್ಣಾಯಕ ಸೋಲುಗಳು
ಮತ್ತು ಕೃಷಿ ಸಂಕಷ್ಟದ ಹಿನ್ನೆಲೆಯಲ್ಲಿ ವ್ಯಕ್ತವಾದ ಆಕ್ರೋಶವನ್ನು ಶಮನಗೊಳಿಸಲು ಕೇಂದ್ರದ ಬಿಜೆಪಿ
ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ.
ಬಡವರನ್ನು ದಾರಿದ್ರ್ಯದಿಂದ ಹೊರತರಲು ಸರ್ಕಾರವು ಸಾರ್ವತ್ರಿಕ ಮೂಲಭೂತ ಆದಾಯ ಯೋಜನೆಯನ್ನು
ಪ್ರಕಟಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದರು. ರಾಜಸ್ಥಾನದಲ್ಲಿ
ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಸಾರ್ವತ್ರಿಕ ಮೂಲಭೂತ ಆದಾಯದ ಭರವಸೆ ಕೊಟ್ಟಿತ್ತು. ಪಶ್ಚಿಮದ ರಾಷ್ಟ್ರಗಳಲ್ಲಿ
ಈ ಕಲ್ಪನೆ ಬಗ್ಗೆ ಹಲವಾರು ವರ್ಷಗಳ ಕಾಲ ವ್ಯಾಪಕ ಚರ್ಚೆ ನಡೆದಿತ್ತು. ಕೆನಡಾ ಮತ್ತು ಸ್ವಿಜೆರ್ಲೆಂಡಿನಲ್ಲಿ
ಪೈಲಟ್ ಯೋಜನೆಯ ಒಂದು ಭಾಗವಾಗಿ ಇದನ್ನು ಜಾರಿಗೊಳಿಸುವ ಯತ್ನ ನಡೆದಿತ್ತು.
2019: ಲಂಡನ್: ಗಣರಾಜ್ಯೋತ್ಸವದ ದಿನ
ಲಂಡನ್ನಿನ ಭಾರತೀಯ ಹೈಕಮೀಷನ್ ಹೊರಭಾಗದಲ್ಲಿ ಖಲಿಸ್ತಾನ ಬೆಂಬಲಿಗರು ಭಾರತದ ತ್ರಿವರ್ಣ ಧ್ವಜವನ್ನು
ಸುಟ್ಟು ಹಾಕಿದ ಘಟನೆ ಬಗ್ಗೆ ಭಾರತವು ಇಂಗ್ಲೆಂಡಿಗೆ ಪ್ರಬಲ ಪ್ರತಿಭಟನೆಯನ್ನು ವ್ಯಕ್ತ ಪಡಿಸಿತು.
ಒಂದು ವರ್ಷದ ಒಳಗಿನ ಅವಧಿಯಲ್ಲಿ ಇಂತಹ ಎರಡನೇ ಘಟನೆ
ಘಟಿಸಿರುವುದಕ್ಕೆ ಬ್ರಿಟಿಷ್ ವಿದೇಶಾಂಗ ಕಚೇರಿಯು ಭ್ರಮ ನಿರಸನ ವ್ಯಕ್ತ ಪಡಿಸಿತು. ಬ್ರಿಟನ್ ವಿದೇಶಾಂಗ
ಕಚೇರಿಗೆ ಸಲ್ಲಿಸಿದ ಖಾರವಾದ ಪ್ರತಿಭಟನಾ ಪತ್ರದಲ್ಲಿ ಭಾರತವು ಭವಿಷ್ಯದಲ್ಲಿ ವಿಷಯವನ್ನು ಬೇರೆ ಹಂತಗಳಲ್ಲಿ
ಪ್ರಸ್ತಾಪಿಸಲಾಗುವುದು ಎಂದು ಎಚ್ಚರಿಕೆ ನೀಡಿತು. ಜನವರಿ ೨೬ರಂದು ಇಂತಹ ಘಟನೆ ಸಂಭವಿಸುವ ಸಾಧ್ಯತೆ
ಬಗ್ಗೆ ಭಾರತವು ಬ್ರಿಟಿಷ್ ಭದ್ರತಾ ಅಧಿಕಾರಿಗಳಿಗೆ ತಿಳಿಸಿದ ಬಳಿಕವೂ ಈ ಘಟನೆ ಘಟಿಸಿತ್ತು. ’ಯಾರೇ
ವ್ಯಕ್ತಿ ಗಣರಾಜ್ಯ ದಿನಾಚರಣೆಯ ಸಂದರ್ಭ ಬಿಡಿ, ಯಾವುದೇ ದಿನ ಧ್ವಜ ಸುಡುವ ಬಗೆಗೂ ನಮಗೆ ಭ್ರಮನಿರಸನವಾಗಿದೆ.
ನಾವು ಇದಕ್ಕಾಗಿ ವಿಷಾದಿಸುತ್ತೇವೆ’ ಎಂದು ವಿದೇಶಾಂಗ ಕಚೇರಿಯ ವಕ್ತಾರರು ಹೇಳಿದರು. ’ತನ್ನ ೬೯ನೇ
ಗಣರಾಜ್ಯೋತ್ಸವ ಆಚರಣೆಗಾಗಿ ನಾವು ಭಾರತವನ್ನು ಅಭಿನಂದಿಸುತ್ತೇವೆ ಮತ್ತು ಭವಿಷ್ಯದಲ್ಲಿ ನಮ್ಮ ಬಾಂಧವ್ಯ
ಇನ್ನಷ್ಟು ಗಾಢವಾಗುವ ಬಗ್ಗೆ ನಿರೀಕ್ಷಿಸುತ್ತೇವೆ. ನಾವು ಐರೋಪ್ಯ ಒಕ್ಕೂಟವನ್ನು ಬಿಡಲು ಸಿದ್ಧತೆ
ನಡೆಸುತ್ತಿದ್ದು ಪ್ರಮುಖ ಜಾಗತಿಕ ಮಿತ್ರರ ಜೊತೆಗೆ ಹೊಸ ಪಾಲುದಾರಿಕೆಗಳನ್ನು ಆರಂಭಿಸಲಿದ್ದೇವೆ’ ಎಂದು
ಬ್ರಿಟನ್ ವಿದೇಶಾಂಗ ಕಚೇರಿ ಹೇಳಿತು. ಇಂಡಿಯಾ ಹೌಸ್ ಹೊರಭಾಗದಲ್ಲಿ ಖಲಿಸ್ತಾನ ಪರ ಮತ್ತು ಭಾರತ ವಿರೋಧಿ
ಘೋಷಣೆಗಳನ್ನು ಕೂಗುತ್ತಿದ್ದ ಪ್ರದರ್ಶನಕಾರರ ಗುಂಪು ಭಾರತದ ತ್ರಿವರ್ಣ ಧ್ವಜ ಒಂದನ್ನು ಸುಟ್ಟು ಹಾಕಿದ
ಮತ್ತು ಇತರರು ಅದನ್ನು ತುಳಿಯುತ್ತಿದ್ದ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಆಗಿವೆ. ಪ್ರತಿಭಟನಕಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಚಿತ್ರಗಳಿದ್ದ
ಫಲಕಗಳನ್ನೂ ಕೆಲವು ಬ್ರಿಟಿಷ್ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲೇ ಹಿಡಿದುಕೊಂಡಿದ್ದುದು ವಿಡಿಯೋಗಳಲ್ಲಿ
ಕಂಡು ಬಂದಿತ್ತು. ಅಲ್ಡವಾಚ್‌ನಲ್ಲಿನ ಇಂಡಿಯಾ ಹೌಸ್ ಹೊರಭಾಗದಲ್ಲಿ ಜನವರಿ ೨೬ರ ಶನಿವಾರ ನಡೆಯಿತೆನ್ನಲಾದ
ಪ್ರತಿಭಟನಾ ಪ್ರದರ್ಶನದ ವಿಡಿಯೋಗಳನ್ನು ನಾವು ಗಮನಿಸಿದ್ದೇವೆ. ಅಪರಾಧಕ್ಕೆ ಸಂಬಂಧಿಸಿದ ಯಾವುದೇ ಆರೋಪಗಳೂ
ವರದಿಯಾಗಿಲ್ಲ. ವಿಡಿಯೋದ ನಿಖರ ಸಂದರ್ಭಗಳ ಪತ್ತೆಗೆ ನಾವು ಯತ್ನಿಸುತ್ತಿದ್ದೇವೆ ಎಂದು ವಿದೇಶಾಂಗ
ಕಚೇರಿಯ ವಕ್ತಾರ ನುಡಿದರು. ಘಟನೆಯು ಖಲಿಸ್ತಾನಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ಇನ್ನೊಂದು
ಸುತ್ತಿನ ರಾಜತಾಂತ್ರಿಕ ಪ್ರಕ್ಷುಬ್ಧತೆಗೆ ಕಾರಣವಾಗುವ ಸಾಧ್ಯತೆಗಳಿವೆ. ಈ ಘಟನೆಯು ಒಂದು ವರ್ಷದ ಒಳಗಿನ ಅವಧಿಯಲ್ಲಿ ಎರಡನೇ ಘಟನೆಯಾಗಿದೆ.
೨೦೧೮ರ ಏಪ್ರಿಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಮನ್ವೆಲ್ತ್ ಮುಖ್ಯಸ್ಥರ ಸಭೆಗಾಗಿ ಆಗಮಿಸಿದ
ಸಂದರ್ಭದಲ್ಲಿ ಸಂಸತ್ ಚೌಕದಲ್ಲಿ ಭಾರತದ ಧ್ವಜವನ್ನು ಛಿದ್ರಗೊಳಿಸಲಾಗಿತ್ತು. ಆಗ ಭಾರತದ ಪ್ರಬಲ ಪ್ರತಿಭಟನೆಯ
ಬಳಿಕ ಇಂಗ್ಲೆಂಡಿನ ವಿದೇಶಾಂಗ ಕಚೇರಿ ಕ್ಷಮೆ ಯಾಚನೆ ಮಾಡಿತ್ತು. ರಾಷ್ಟ್ರಧ್ವಜಗಳ ಸುಡುವಿಕೆಯನ್ನು
ಬ್ರಿಟನ್ ಮನ್ನಿಸುವುದಿಲ್ಲ. ಶಾಂತಿಯುತ ಪ್ರತಿಭಟನೆ ನಡೆಸುವ ವ್ಯಕ್ತಿಗಳ ಹಕ್ಕುಗಳನ್ನು ಮತ್ತು ವಾಕ್
ಸ್ವಾತಂತ್ರ್ಯವನ್ನು ರಕ್ಷಿಸುವ ರಾಷ್ಟ್ರವಾಗಿರುವುದಕ್ಕಾಗಿ ನಮಗೆ ಹೆಮ್ಮೆ ಇದೆ. ಇದು ಜಾಗೃತ ಪ್ರಜಾಪ್ರಭುತ್ವದ
ಅಂಗವಾಗಿದ್ದು, ನಮ್ಮ ಕಾನೂನಿನಲ್ಲೇ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ವಿದೇಶಾಂಗ ಕಚೇರಿ
ಕಳೆದವಾರ ಹೇಳಿತ್ತು. ರಾಷ್ಟ್ರಧ್ವಜಗಳ ಸುಡುವಿಕೆಯನ್ನು ನಾವು ಮನ್ನಿಸುವುದಿಲ್ಲ. ಇದು ಅಪರಾಧ ಎಂದೂ
ವಕ್ತಾರರು ಹೇಳಿದ್ದರು.
2018: ಮೆಲ್ಬೋರ್ನ್: ಮೆಲ್ಬೋರ್ನಿನ ರಾಡ್ ಲೇವರ್ ಅರೆನಾ ಅಂಗಳದಲ್ಲಿ ನಡೆದ ಪುರುಷರ ಸಿಂಗಲ್ಸ್
ವಿಭಾಗದ ಪೈಪೋಟಿಯಲ್ಲಿ ಕ್ರೊವೇಷ್ಯಾದ ಮರಿನ್ ಚಿಲಿಚ್ ಮಣಿಸಿದ ರೋಜರ್ ಫೆಡರರ್ ೨೦ನೇ ಗ್ರ್ಯಾನ್‌ಸ್ಲಾಂ
ತನ್ನದಾಗಿಸಿಕೊಂಡರು. ಎಟಿಪಿ ಶ್ರೇಯಾಂಕದಲ್ಲಿ ೨ನೇ
ಸ್ಥಾನದಲ್ಲಿರುವ ಸ್ವಿಟ್ಜರ್‌ಲೆಂಡಿನ ಫೆಡರರ್ ಫೈನಲ್‌ನಲ್ಲಿ ಎಟಿಪಿ ೬ನೇ ಶ್ರೇಯಾಂಕದ ಮರಿನ್ ಚಿಲಿಚ್
ಅವರನ್ನು ೬-೨, ೬-೭, ೬-೩, ೩-೬, ೬-೧ರಲ್ಲಿ ಸೋಲಿಸಿದರು. ಈ ಮೂಲಕ ಫೆಡರರ್ ೬ನೇ ಸಲ ಆಸ್ಟ್ರೇಲಿಯಾ
ಓಪನ್ ಟೆನಿಸ್ ಟೂರ್ನಿ ಪ್ರಶಸ್ತಿ ಗೆದ್ದುಕೊಂಡರು.
2018: ಮುಂಬೈ: ಮುಂಬೈ ಆಸ್ಪತ್ರೆಯೊಂದರಲ್ಲಿ
ಎಂಆರ್ ಐ ಯಂತ್ರ ಸೆಳೆದುಕೊಂಡ ಪರಿಣಾಮವಾಗಿ ೩೨ರ ಹರೆಯದ ವ್ಯಕ್ತಿಯೊಬ್ಬ ದಾರುಣವಾಗಿ ಸಾವನ್ನಪ್ಪಿದ
ಘಟನೆ ಘಟಿಸಿತು. ಆಸ್ಪತ್ರೆಯ ಸಿಬ್ಬಂದಿ ಈ ವ್ಯಕ್ತಿಯನ್ನು
ಆಮ್ಲಜನಕವಿದ್ದ ಲೋಹದ ಸಿಲಿಂಡರ್ ಹಿಡಿದುಕೊಂಡು ಎಂಆರ್ ಐ ಯಂತ್ರವಿದ್ದ ಜಾಗಕ್ಕೆ ಬಿಟ್ಟದ್ದು ಈ ದುರಂತಕ್ಕೆ
ಕಾರಣ ಎನ್ನಲಾಯಿತು. ವರದಿಗಳ ಪ್ರಕಾರ ರಾಜೇಶ್ ಮರು ಎಂಬ ವ್ಯಕ್ತಿ ಹಿರಿಯ ಬಂಧುವೊಬ್ಬರ ಜೊತೆಗೆ ಬಿವೈಎಲ್
ನಾಯರ್ ಆಸ್ಪತ್ರೆಯ ಎಂಆರ್ ಐ ಕೊಠಡಿಗೆ ಬಂದಿದ್ದರು. ಕೊಠಡಿಯ ಹೊರಗಿದ್ದ ವಾರ್ಡ್ ಬಾಯ್ ರೋಗಿಗೆ ಒಳಗೆ
ಉಸಿರಾಡಲು ಆಮ್ಲಜನಕದ ಸಿಲಿಂಡರ್ ಜೊತೆಗೆ ಒಳಕ್ಕೆ ಹೋಗಬಹುದು ಎಂದು ಹೇಳಿದ ಎಂಬುದು ಆತನ ಬಂಧುಗಳು
ಹೇಳಿಕೆ. ಕೊಠಡಿಯ
ಒಳಕ್ಕೆ ಪ್ರವೇಶಿಸುತ್ತಿದ್ದಂತೆಯೇ ಎಂಆರ್ ಐ ಯಂತ್ರದ ಅಯಸ್ಕಾಂತೀಯ ಸೆಳೆತವು ಕೈಯಲ್ಲಿ ಆಮ್ಲಜನಕದ
ಸಿಲಿಂಡರ್ ಹಿಡಿದಿದ್ದ ಮರು ಅವರನ್ನು ಎಂಆರ್ ಐ ಯಂತ್ರದತ್ತ ಸೆಳೆಯಿತು. ಮರು ಅವರ ಕೈ ಎಂಆರ್ ಐ ಯಂತ್ರ
ಮತ್ತು ಸಿಲಿಂಡರ್ ಮಧ್ಯೆ ಸಿಲುಕಿಕೊಂಡು ಜಜ್ಜಿಹೋಯಿತು ಮ್ಯಾಗ್ನ್ನೆಟಿಕ್ ಯಂತ್ರದ ಅಯಸ್ಕಾಂತೀಯ ಸೆಳೆತದ
ಪರಿಣಾಮವಾಗಿ ಮರುವಿಗೆ ಯಂತ್ರದಿಂದ ಬಿಡಿಸಿಕೊಳ್ಳುವುದು ದುಸ್ತರವಾಯಿತು. ರೋಗಿಯನ್ನು ನೋಡಿಕೊಳ್ಳಲು
ಬಂದಿದ್ದ ಮರು ಸಹಾಯಕ್ಕಾಗಿ ಕೂಗಿದರು. ಕೆಲವು ವಾರ್ಡ್ ಬಾಯ್ ಗಳು ಓಡಿ ಬಂದು ಹೇಗೋ ಮರು ಅವರನ್ನು
ಯಂತ್ರದಿಂದ ಈಚೆಗೆ ಎಳೆದರು. ರಕ್ತಸಿಕ್ತ ಮರು ಅವರನ್ನು ತುರ್ತು ಚಿಕಿತ್ಸಾ ವಾರ್ಡಿಗೆ ಒಯ್ಯಲಾಯಿತು.
ಆದರೆ ತೀವ್ರ ಗಾಯಗಳ ಪರಿಣಾಮವಾಗಿ ಅವರು ಕೆಲವೇ ನಿಮಿಷಗಳಲ್ಲಿ ಅಸು ನೀಗಿದರು. ‘ಅಸ್ವಸ್ಥರಾಗಿದ್ದ ನನ್ನ ತಾಯಿಯನ್ನು ನೋಡಲು ಅವರು ಅಲ್ಲಿಗೆ
ಹೋಗಿದ್ದರು. ಆದರೆ ಇಂತಹ ದುರವಸ್ಥೆ ತಮ್ಮದಾಗಬಹುದೆಂಬ ಕಲ್ಪನೆಯೂ ಅವರಿಗೆ ಇರಲಿಲ್ಲ. ನಾವೆಲ್ಲ ಆಘಾತಕ್ಕೆ
ಒಳಗಾಗಿದ್ದೇವೆ. ವಾರ್ಡ್ ಬಾಯ್ ಒಬ್ಬ ಆಮ್ಲಜನಕದ ಸಿಲಿಂಡರ್ ಒಯ್ಯಬಹುದೆಂದು ಹೇಳಿದ. ಎಂಆರ್ ಐ ಕೊಠಡಿಗೆ
ಲೋಹದ ವಸ್ತುಗಳನ್ನು ಒಯ್ಯಲು ಅವಕಾಶ ಇಲ್ಲದೇ ಇದ್ದರೂ ವಾರ್ಡ್‌ಬಾಯ್ ಸಿಲಿಂಡರ್ ಒಯ್ಯಬಹುದೆಂದು ಹೇಳಿದ್ದರಿಂದ
ಈ ಅವಘಡ ಸಂಭವಿಸಿತು. ಇದು ಸಂಭವಿಸಿದ್ದು ವೈದ್ಯರು ಮತ್ತು ಆಡಳಿತದ ನಿರ್ಲಕ್ಷ್ಯದಿಂದ ಎಂದು ಮರು ಅವರ
ಭಾವ ಹರೀಶ್ ಸೋಳಂಕಿ ಹೇಳಿದರು. ಮರು ಸಿಲಿಂಡರ್ ಜೊತೆಗೆ ಕೋಣೆಯ ಒಳಕ್ಕೆ ಹೋದಾಗ ಎಂಆರ್ ಐ ಯಂತ್ರ ಚಾಲನೆಯಲ್ಲಿ
ಇರಲಿಲ್ಲ. ಆದರೆ ಮ್ಯಾಗ್ನ್ನೆಟಿಕ್ ಯಂತ್ರದ ಬಲವಾದ ಸೆಳೆತದ ಪರಿಣಾಮವಾಗಿ ಅದಕ್ಕೆ ಅಪ್ಪಳಿಸಿ ಸಿಲುಕಿಕೊಂಡು
ಮರು ಸ್ಥಿತಿ ಚಿಂತಾಜನಕವಾಯಿತು ಎಂದು ಮರು ಅವರ ಸಂಬಂಧಿಯೊಬ್ಬರು ತಿಳಿಸಿದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೦೪ರ ಅಡಿಯಲ್ಲಿ ಘಟನೆಗೆ
ಸಂಬಂಧಿಸಿದಂತೆ ಅಗ್ರಿಪಾದ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಲಾಯಿತು. ಶವವನ್ನು ಜೆಜೆ ಆಸ್ಪತ್ರೆಗೆ ಮರಣೋತ್ತರ ಶಸ್ತ್ರಕ್ರಿಯೆಗಾಗಿ
ಕಳುಹಿಸಲಾಯಿತು. ಆಸ್ಪತ್ರೆ ಕಡೆಯಿಂದ ಯಾವುದೇ ಲೋಪವೂ ಆಗಿಲ್ಲ ಎಂದಿರುವ ಆಸ್ಪತ್ರೆ, ಒಳಕ್ಕೆ ಸಿಲಿಂಡರ್
ಒಯ್ಯದಂತೆ ಮರು ಅವರಿಗೆ ಸೂಚಿಸಲಾಗಿತ್ತು ಎಂದು ಹೇಳಿತು. ಏನಿದ್ದರೂ, ಘಟನೆಯ ಬಳಿಕ ಒಬ್ಬ ವೈದ್ಯರು, ಒಬ್ಬ ವಾರ್ಡ್
ಬಾಯ್ ಮತ್ತು ಕಸಗುಡಿಸುವವನನ್ನು ಅಮಾನತುಗೊಳಿಸಲಾಯಿತು.
ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾರಾದರೂ ತಪ್ಪೆಸಗಿರುವುದು ಕಂಡು ಬಂದಲ್ಲಿ ಕ್ರಮ
ಕೈಗೊಳ್ಳಲಾಗುವುದು. ಇದು ಅಪಘಾತದಂತೆ ಕಾಣುತ್ತಿದೆ, ಎಲ್ಲ ಸೂಚನೆಗಳನ್ನೂ ನೀಡಲಾಗಿತ್ತು ಎಂದು ಆಸ್ಪತ್ರೆಯ
ಡೀನ್ ಡಾ. ರಮೇಶ್ ಭರ್‍ಮಲ್ ಹೇಳಿದರು. ಮೃತನ
ಕುಟುಂಬಕ್ಕೆ ೫ ಲಕ್ಷ ರೂಪಾಯಿಗಳ ಪರಿಹಾರವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರಕಟಿಸಿದರು.
2018: ನವದೆಹಲಿ: ಜಮ್ಮು- ಕಾಶ್ಮೀರದಲ್ಲಿ ಯುವಕರನ್ನು ಐಸಿಸ್ (ಇಸ್ಲಾಮಿಕ್
ಸ್ಟೇಟ್) ಉಗ್ರಗಾಮಿಗಳೂ ಹೇಗೆ ವಿಧ್ವಂಸಕ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಗಳನ್ನು
’ಇಂಡಿಯನ್ ಸೈಬರ್ ಆರ್ಮಿ’ ಹೆಸರಿನ ಸರ್ಕಾರೇತರ
ಸಂಘಟನೆಗೆ (ಎನ್ ಜಿಒ) ಸೇರಿದ ಕೇರಳದ ನೈತಿಕ ಹ್ಯಾಕರ್‌ಗಳು ಬಯಲಿಗೆಳೆದರು. ಐಸಿಸ್ ದತ್ತಾಂಶಕ್ಕೆ
ಕನ್ನ ಹಾಕಿದ ಕೇರಳದ ಹ್ಯಾಕರುಗಳು ಅವರ ಮಾಹಿತಿಯನ್ನು ಕದ್ದು, ಸರ್ಕಾರ ಮತ್ತು ಭದ್ರತಾ ಏಜೆನ್ಸಿಗಳಿಗೆ
ನೀಡಿದ್ದು, ಅವರು ಯಾವುದೇ ಕ್ರಮ ಕೈಗೊಳ್ಳದ್ದರಿಂದ ಬೇಸರಗೊಂಡು, ಸಾರ್ವಜನಿಕರಿಗೆ ಲಭಿಸುವಂತೆ ನೇರವಾಗಿ
ಬಹಿರಂಗ ಪಡಿಸಿದರು. ಕೇರಳ ಮೂಲದ ಹ್ಯಾಕರ್‌ಗಳು ’ಮಲ್ಲು ಸೈಬರ್ ಸೋಲ್ಜರ್ಸ್’ ಹೆಸರಿನಲ್ಲಿ ೧೦ ತಿಂಗಳವರೆಗೆ ಶ್ರಮಿಸಿ ಈ
ಸಾಹಸ ಮಾಡಿದ್ದಾರೆ. ಜಮ್ಮು - ಕಾಶ್ಮೀರದಲ್ಲಿ ಉಗ್ರರು ಹೇಗೆ ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ
ಮಾಡಿಕೊಂಡು ಯುವಜನರಲ್ಲಿ ವಿಷಬೀಜ ಬಿತ್ತುತ್ತಿದ್ದರು ಎಂಬ ಮಾಹಿತಿ ಇದರಿಂದ ಇದೀಗ ಬಹಿರಂಗಗೊಂಡಿತು.
ಮಲ್ಲು ಸೈಬರ್ ಸೋಲ್ಜರ್ಸ್ ಹೇಳುವ ಪ್ರಕಾರ ಐಸಿಸ್ ಪರ ಒಲವು ಹೊಂದಿರುವ ವ್ಯಕ್ತಿಯನ್ನು ಹನಿಟ್ರ್ಯಾಪ್
ಮಾಡಲಾಗಿತ್ತು. ಅಲ್ಲದೆ ಉಗ್ರರು ಆಪ್ ಮೂಲಕ ನಡೆಸುತ್ತಿದ್ದ ಸಂಭಾಷಣೆಯನ್ನು ಹ್ಯಾಕ್ ಮಾಡಲು ಸುಮಾರು
೫೦ ಹ್ಯಾಕರ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಆರಂಭದಲ್ಲಿ ಮುಕ್ತವಾಗಿ ಮಾತುಕತೆ ನಡೆಸಿ, ಅನಂತರ ಐಸಿಸ್
ಪರ ಒಲವು ಹೊಂದಿರುವ ವ್ಯಕ್ತಿಯನ್ನು ಚಾಟ್ ಮೆಸೆಂಜರ್‌ಗಳ ಕ್ಲೋಸ್ಡ್ ಗ್ರೂಪ್‌ಗೆ ಸೇರಿಸಿಕೊಳ್ಳುತ್ತಿದ್ದರು.
ವ್ಯಕ್ತಿ ಸಕ್ರಿಯವಾಗಿ ತೊಡಗಿಸಿಕೊಂಡ ಅನಂತರ, ಹಣಕಾಸು ವಹಿವಾಟು ನಡೆಸುವ ಸಮಯದಲ್ಲಿ ಕರೆ ಮೂಲಕ ಮಾಹಿತಿ
ವಿನಿಮಯ ನಡೆಯುತ್ತಿತ್ತು. ಐಸಿಸ್ ಪರ ಒಲವು ಹೊಂದಿರುವವರ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ, ಸರ್ಕಾರ
ಮತ್ತು ಭದ್ರತಾ ಏಜೆನ್ಸಿಗಳು ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ ಗುಮಾನಿ ಪಟ್ಟುಕೊಂಡು ನಮ್ಮನ್ನೇ ಪ್ರಶ್ನಿಸಿದರು
ಎಂದು ಇಂಡಿಯನ್ ಸೈಬರ್ ಆರ್ಮಿ ಎಂಬ ಮುಖ್ಯಸ್ಥ ಕಿಸ್ಲೇ ಚೌಧರಿ ಹೇಳಿದರು. ‘ಸಕಲ ಮಾಹಿತಿ ಹೊಂದಿದ್ದೇವೆ.
ಆದರೆ ಐಸಿಸ್ ಪರ ಒಲವು ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಕೈಕಟ್ಟಿದೆ. ಈ ಹಿನ್ನೆಲೆಯಲ್ಲಿ
ಕೆಲವು ಗ್ರೂಪ್‌ಗಳ ಮೂಲಕ ಈ ಮಾಹಿತಿಗಳನ್ನ ಬಹಿರಂಗ ಪಡಿಸಲು ಆರಂಭಿಸಿದ್ದೇವೆ. ಕಾಶ್ಮೀರವನ್ನು ಸುರಕ್ಷಿತವಾಗಿ
ಇರಿಸುವ ಉದ್ದೇಶ ನಮ್ಮದು ಎಂದು ಅವರು ನುಡಿದರು. ಭದ್ರತಾ
ಏಜೆನ್ಸಿಗಳು ಬಯಸಿದರೆ ನಮ್ಮ ಮಾಹಿತಿಯನ್ನು ಬಳಸಿ ಕ್ರಮ ಕೈಗೊಳ್ಳಬಹುದು. ನಾವು ಅವರಿಗೆ ಎಲ್ಲ ನೆರವನ್ನೂ
ಒದಗಿಸುತ್ತೇವೆ ಎಂದು ಒಬ್ಬ ಹ್ಯಾಕರ್ ಹೇಳಿದರು. ಯುವಕರಿಗೆ ಉಗ್ರರಿಂದ ಹಣ: ಕಾಶ್ಮೀರದಲ್ಲಿ ಯುವಕರನ್ನು
ನೇಮಿಸಿಕೊಳ್ಳಲು ಶಿಕ್ಷಕರು, ಧಾರ್ಮಿಕ ಬೋಧಕರನ್ನು ಉಗ್ರರು ಬಳಸಿ ಕೊಳ್ಳುತ್ತಿದ್ದಾರೆ. ಯುವಕರ ಮನವೊಲಿಸಿ
ಅವರ ಖಾತೆ ಗಳನ್ನು ಬಳಸಿಕೊಂಡು ಉಗ್ರರಿಗೆ ಹಣ ನೀಡಲಾಗುತ್ತದೆ ಎಂಬ ಮಾಹಿತಿ ಹ್ಯಾಕರ್‌ಗಳಿಗೆ ಲಭಿಸಿತ್ತು.
2018: ತಿರುವನಂತಪುರಂ: ಮಲಪ್ಪುರಂ ಜಿಲ್ಲೆಯ
ಖುರಾನ್ ಮತ್ತು ಸುನ್ನತ್ ಸೊಸೈಟಿಯ ಶುಕ್ರವಾರದ ನಮಾಜ್ (ಜುಮಾ ಪ್ರಾರ್ಥನೆ) ನೇತೃತ್ವ ವಹಿಸುವ ಮೂಲಕ
ಭಾರತದ ಮೊತ್ತ ಮೊದಲ ಮಹಿಳಾ ಇಮಾಮ್ ಜಮೀದಾ ಅವರು ಜನವರಿ ೨೬ರ ಶುಕ್ರವಾರ ಇತಿಹಾಸ ಸೃಷ್ಟಿಸಿದರು. ಜುಮಾ ಪ್ರಾರ್ಥನೆ ಪ್ರತಿ ಶುಕ್ರವಾರ ನಡೆಯುತ್ತದೆ, ಮತ್ತು
ಸಾಮಾನ್ಯವಾಗಿ ಪುರುಷರೇ ಅದರ ನೇತೃತ್ವ ವಹಿಸುತ್ತಾರೆ. ‘ನನ್ನ ವಿರುದ್ದ ನಕಾರಾತ್ಮಕ ಟೀಕೆಗೆಳು ಸಾಮಾಜಿಕ ಮಾಧ್ಯಮದಲ್ಲಿ
ಬರುತ್ತವೆ ಎಂಬುದು ನನಗೆ ಗೊತ್ತಿದೆ. ಆದರೆ ನಾನು ಮಣಿಯುವುದಿಲ್ಲ’ ಎಂದು ಜಮೀದಾ ಹೇಳಿದರು.
‘ಖುರಾನ್ ಪುರುಷರು ಮತ್ತು ಮಹಿಳೆಯರ ಮಧ್ಯೆ ತಾರತಮ್ಯ ಮಾಡುವುದಿಲ್ಲ. ಅದು ಭಕ್ತರು ಎಂದಷ್ಟೇ ಹೇಳುತ್ತದೆ.
ಪುರುಷರು ಮತ್ತು ಅವರ ಅರ್ಥೈಸುವಿಕೆಯು ಮಹಿಳೆಯರ ವಿರುದ್ಧ ತಾರತಮ್ಯ ಮಾಡಿದೆ ಮತ್ತು ಅವರನ್ನು ಎರಡನೇ
ದರ್ಜೆಯ ನಾಗರಿಕರನ್ನಾಗಿ ಮಾಡಿದೆ. ಈ ಮೂಲ ಕಲ್ಪನೆ ಮತ್ತು ಪಿತೃಪ್ರಭುತ್ವಕ್ಕೆ ನಾನು ಸವಾಲು ಹಾಕಬಯಸಿದ್ದೇನೆ.
ಮಹಿಳೆಯರು ಪ್ರಾರ್ಥನೆಯ ನೇತೃತ್ವ ವಹಿಸಬಾರದು ಎಂದು ಖುರಾನ್ ಹೇಳುವುದಿಲ್ಲ ಎಂದು ಜಮೀದಾ ನುಡಿದರು.
‘ನನಗೆ ಬೆದರಿಕೆಗಳು ಬಂದಿಲ್ಲ. ಆದರೆ ಹಲವು ನಾಯಕರು ನನ್ನ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಮಾತನಾಡುತ್ತಿದ್ದಾರೆ.
ಕೆಲವರಂತೂ ನನ್ನನ್ನು ಕೊಲ್ಲಬೇಕು ಎಂದೂ ಹೇಳುತ್ತಿದ್ದಾರೆ. ನನ್ನ ಮೇಲೆ ದಾಳಿ ನಡೆಯಬಹುದು ಎಂದು ನನಗೆ
ಗೊತ್ತಿದೆ. ಆದರೆ ನಾನು ಹೆದರುವುದಿಲ್ಲ, ಬಾಗುವುದೂ ಇಲ್ಲ’ ಎಂದು ಜಮೀದಾ ಹೇಳಿದರು. ನಾವು ಶುಕ್ರವಾರದ ಪ್ರಾರ್ಥನೆಯನ್ನು ಮಹಿಳೆಯರು ಮುನ್ನಡೆಸುವ
ಕ್ರಮವನ್ನು ಮುಂದುವರೆಸುತ್ತೇವೆ. ಶುಕ್ರವಾರದ ಪ್ರಾರ್ಥನೆಗಳು ಮಹಿಳೆಯರಿಗೆ ತಮ್ಮ ಪಾತ್ರವನ್ನು ವಹಿಸಲು
ಧೈರ್ಯ ನೀಡುತ್ತವೆ ಎಂದು ಜಮೀದಾ ಅವರನ್ನು ಬೆಂಬಲಿಸಿದ ಸೊಸೈಟಿಯ ಹಿರಿಯ ಸದಸ್ಯ ರಶೀದ್ ಹೇಳಿದರು.
ಖುರಾನ್ ಸುನ್ನತ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಮೀದಾ ವೃತ್ತಿಯಲ್ಲಿ ಅಧ್ಯಾಪಕಿ. ಮೂಲತಃ
ತಿರುವನಂತಪುರದವರು. ಶುಕ್ರವಾರ ನಡೆದ ಪ್ರಾರ್ಥನೆಯಲ್ಲಿ ಸುಮಾರು ೮೦ ಮಂದಿ ಭಾಗವಹಿಸಿದ್ದರು. ಖುರಾನ್
ಸುನ್ನತ್ ಸೊಸೈಟಿಯ ಕಾರ್ಯಾಲಯದಲ್ಲಿ ಈ ಪ್ರಾರ್ಥನೆ ನಡೆಯಿತು. ಮಸೀದಿಯಲ್ಲಿಯೇ ಶುಕ್ರವಾರದ ಪ್ರಾರ್ಥನೆ ನಡೆಯಬೇಕು ಎಂಬ ನಿಯಮ
ಇಲ್ಲ ಎಂದೂ ಅವರು ಪ್ರತಿಪಾದಿಸಿದರು. ಈ ಬಗ್ಗೆ ಎಲ್ಲರ ಜತೆ ಚರ್ಚೆ ನಡೆಸಿಯೇ ಪ್ರಾರ್ಥನೆಯ ನೇತೃತ್ವ
ವಹಿಸಿದ್ದಾಗಿ ಜಮೀದಾ ಹೇಳಿದರು. ಈ ಬೆಳವಣಿಗೆ ಕೇರಳದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು.
2018: ನವದೆಹಲಿ: ಪ್ರಧಾನಿ ನರೇಂದ್ರ
ಮೋದಿ ಅವರ ವಿದೇಶ ಪ್ರವಾಸಗಳ ಕಾಲದಲ್ಲಿ ಅವರ ಜೊತೆಗೆ ತೆರಳುವ ನಿಯೋಗ ಸದಸ್ಯರ ಹೆಸರುಗಳನ್ನು ಬಹಿರಂಗ
ಪಡಿಸುವಂತೆ ಮುಖ್ಯ ಮಾಹಿತಿ ಕಮೀಷನರ್ ಆರ್.ಕೆ. ಮಾಥುರ್ ಅವರು ಪ್ರಧಾನ ಮಂತ್ರಿಗಳ ಕಚೇರಿಗೆ (ಪಿಎಂಒ)
ನಿರ್ದೇಶನ ನೀಡಿದರು. ರಾಷ್ಟ್ರೀಯ ಭದ್ರತೆಯ ನೆಲೆಯಲ್ಲಿ ಮಾಹಿತಿ ನೀಡಲು ಪಿಎಂಒ ಸಲ್ಲಿಸಿದ ಆಕ್ಷೇಪವನ್ನು
ಮಾಥುರ್ ಅವರು ತಿರಸ್ಕರಿಸಿದರು. ಎರಡು ಪ್ರತ್ಯೇಕ
ಪ್ರಕರಣಗಳನ್ನು ಇತ್ಯರ್ಥ ಪಡಿಸಿದ ಮಾಥುರ್ ಅವರು ಪ್ರಧಾನಿಯವರ ಭದ್ರತಾ ಸಿಬ್ಬಂದಿಯ ಹೆಸರುಗಳು ಮತ್ತು
ಭದ್ರತೆಗೆ ಸಂಬಂಧಿಸಿದ ಜನರ ವಿವರಗಳನ್ನು ನೀಡುವುದಕ್ಕೆ ಪಿಎಂಒಗೆ ವಿನಾಯ್ತಿ ನೀಡಿದರು. ಪ್ರಧಾನ ಮಂತ್ರಿಯವರ
ಅಂತಾರಾಷ್ಟ್ರೀಯ ಭೇಟಿಗಳ ಕಾಲದಲ್ಲಿ ಅವರ ಜೊತೆಗೆ ತೆರಳುವ ಸರ್ಕಾರೇತರ ವ್ಯಕ್ತಿಗಳ (ಭದ್ರತೆಗೆ ಸಂಬಂಧ
ಪಡದ) ಹೆಸರು/ ಪಟ್ಟಿಯನ್ನು ಮೇಲ್ಮನವಿದಾರರಿಗೆ ಒದಗಿಸಬೇಕು ಎಂಬುದು ಮಾಹಿತಿ ಆಯೋಗದ ಅಭಿಪ್ರಾಯ ಎಂದು
ಮಾಥುರ್ ನುಡಿದರು. ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದ ಈ ಪ್ರಕರಣಗಳು ಕೇಂದ್ರೀಯ ಮಾಹಿತಿ ಆಯೋಗದ
ಮುಂದೆ ವಿಚಾರಣೆಗೆ ಬಂದಿದ್ದವು. ಪ್ರಧಾನಿಯವರ ವಿದೇಶೀ ಭೇಟಿಗಳ ಕಾಲದಲ್ಲಿ ಅವರ ಜೊತೆಗೆ ತೆರಳಿದ ನಿಯೋಗ
ಸದಸ್ಯರ ಬಗ್ಗೆ ವಿವರ ಕೋರಿ ಸಲ್ಲಿಸಿದ ಅರ್ಜಿಗಳಿಗೆ ಸೂಕ್ತ ಸ್ಪಂದನೆ ಬಾರದ ಹಿನ್ನೆಲೆಯಲ್ಲಿ ನೀರಜ್
ಶರ್ಮ ಮತ್ತು ಅಯೂಬ್ ಅಲಿ ಅವರು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಶರ್ಮ ಅವರು ಪ್ರಧಾನಿ ಅವರ ಜೊತೆಗೆ ಅಂತಾರಾಷ್ಟ್ರೀಯ ಭೇಟಿ
ಕಾಲದಲ್ಲಿ ನಿಯೋಗದಲ್ಲಿ ತೆರಳಿದ ಖಾಸಗಿ ವ್ಯವಹಾರ ಸಂಸ್ಥೆಗಳ ಸಿಇಒ, ಮಾಲೀಕರು, ಪಾಲುದಾರರು, ಖಾಸಗಿ
ವ್ಯವಹಾರದ ಅಧಿಕಾರಿಗಳು ಮತ್ತಿತರರ ಪಟ್ಟಿಯನ್ನು ಕೋರಿದ್ದರು. ಅಲಿ ಅವರು ಮೋದಿ ಅವರ ನಿವಾಸ ಮತ್ತು
ಕಚೇರಿಯ ಮಾಸಿಕ ವೆಚ್ಚಗಳು, ಅವರನ್ನು ಭೇಟಿ ಮಾಡುವ ವಿಧಿ ವಿಧಾನ, ತಮ್ಮ ನಿವಾಸ ಅಥವಾ ಕಚೇರಿಯಲ್ಲಿ
ಪ್ರಧಾನಿಯವರ ಜೊತೆಗೆ ನಡೆಸಿದ ಸಾರ್ವಜನಿಕ ಸಭೆಗಳ ಸಂಖ್ಯೆ, ಮತದಾರರ ಜೊತೆಗಿನ ಬಹಿರಂಗ ಸಭೆಗಳ ಸಂಖ್ಯೆ
ಮತ್ತು ಅವುಗಳಿಗಾಗಿ ಸರ್ಕಾರ ಮಾಡಿದ ವೆಚ್ಚದ ಮಾಹಿತಿ ಕೇಳಿದ್ದರು. ೨೦೧೭ರ ಜುಲೈ ತಿಂಗಳಲ್ಲಿ ಶರ್ಮ ಅವರು ಆರ್ ಟಿಐ ಅಡಿಯಲ್ಲಿ
ಅರ್ಜಿ ಸಲ್ಲಿಸಿದ್ದರೆ, ಅಲಿ ಅವರು ೨೦೧೬ರ ಏಪ್ರಿಲ್
ತಿಂಗಳಲ್ಲಿ ಪಿಎಂಒಕ್ಕೆ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗಿನ ತಮ್ಮ ಆದೇಶ ಒಂದರಲ್ಲಿ ಮಾಥುರ್ ಅವರು
೩೦ ದಿನಗಳ ಒಳಗಾಗಿ ಮಾಹಿತಿ ನೀಡುವಂತೆ ರಾಷ್ಟ್ರದ ಉನ್ನತ ಕಚೇರಿಗೆ ಆಜ್ಞಾಪಿಸಿದ್ದರು. ಪ್ರಧಾನಿಯವರ
ದೇಶೀಯ ಮತ್ತು ವಿದೇಶೀಯ ಪ್ರವಾಸಗಳ ಕಾಲದಲ್ಲಿ ನಿಯೋಗಗಳಲ್ಲಿ ಅವರ ಜೊತೆಗೆ ತೆರಳುವ ಸದಸ್ಯರ ಪಟ್ಟಿಯನ್ನು
ಭದ್ರತಾ ನೆಲೆಯಲ್ಲಿ ಒದಗಿಸಲು ಸಾಧ್ಯವಿಲ್ಲ. ಇದಕ್ಕೆ ಆರ್ ಟಿಐ ಕಾಯ್ದೆಯ ಸೆಕ್ಷನ್ ೮(೧)(ಎ) ಅಡಿಯಲ್ಲಿ
ವಿನಾಯ್ತಿ ಇದೆ ಎಂಬ ಪತ್ರ ಪ್ರಧಾನಿ ಕಚೇರಿಯಿಂದ ಶರ್ಮ ಅವರಿಗೆ ಬಂದಿತ್ತು. ಈ ಮಾಹಿತಿಯನ್ನು ಪ್ರಧಾನಿ
ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ವೆಬ್ ಸೈಟಿನಲ್ಲಿ ಒದಗಿಸಲಾಗುತ್ತಿತ್ತು ಎಂದು ಶರ್ಮ ವಿಷಯದ
ವಿಚಾರಣೆ ಕಾಲದಲ್ಲಿ ತಿಳಿಸಿದ್ದನ್ನು ಮಾಥುರ್ ಉಲ್ಲೇಖಿಸಿದರು. ಪ್ರಧಾನಿಯವರ ಭೇಟಿಗಳ ವಿವರ ವೆಬ್
ಸೈಟಿನಲ್ಲಿ ಇರುತ್ತದೆ ಎಂದೂ ಅವರು ಬೊಟ್ಟು ಮಾಡಿದ್ದರು. ಏನಿದ್ದರೂ ವ್ಯಕ್ತಿಯಿಂದ ವ್ಯಕ್ತಿಗೆ ಬೆದರಿಕೆ
ಬದಲಾಗುವ ಕಾರಣ, ಭದ್ರತಾ ನೆಲೆಯಲ್ಲಿ ಪ್ರಧಾನಿಯವ ದೇಶೀಯ ಮತ್ತು ವಿದೇಶೀಯ ಭೇಟಿಗಳಲ್ಲಿ ಜೊತೆಗೆ ತೆರಳುವವರ
ಹೆಸರುಗಳನ್ನು ಒದಗಿಸಲಾಗದು ಎಂದು ಪಿಎಂಒ ಹೇಳಿತ್ತು.
2018: ವಾಷಿಂಗ್ಟನ್: ಆಫ್ಘಾನಿಸ್ಥಾನದ ಕಾಬೂಲ್‌ನಲ್ಲಿ
ಜನವರಿ 27ರ ಶನಿವಾರ ಸಂಭವಿಸಿದ ಉಗ್ರಗಾಮಿ ದಾಳಿಯ ಹಿನ್ನೆಲೆಯಲ್ಲಿ ತಾಲಿಬಾನ್ ಮತ್ತು ಅವರನ್ನು ಬೆಂಬಲಿಸುವ
ಭಯೋತ್ಪಾದಕ ಮೂಲಸವಲತ್ತುದಾರರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್
ಟ್ರಂಪ್ ಎಲ್ಲ ರಾಷ್ಟ್ರಗಳನ್ನು ಒತ್ತಾಯಿಸಿದರು. ತಾಲಿಬಾನ್‌ನ್ನು ಬೆಂಬಲಿಸುವ ಮೂಲಸವತ್ತುದಾರರ ವಿರುದ್ಧ
ಕ್ರಮ ಕೈಗೊಳ್ಳುವಂತೆ ಸೂಚಿಸುವ ಮೂಲಕ ಅವರ ಪರೋಕ್ಷವಾಗಿ ಪಾಕಿಸ್ತಾನವನ್ನೂ ಉಲ್ಲೇಖಿಸಿದರು. ಸಮರಗ್ರಸ್ತ
ರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ಸ್ಫೋಟಗಳಲ್ಲಿ ಒಂದಾಗಿರುವ ಜನವರಿ
27ರ ಭೀಕರ ಆಂಬುಲೆನ್ಸ್ ಬಾಂಬ್ ಸ್ಫೋಟದಲ್ಲಿ 103ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು 158ಕ್ಕೂ ಹೆಚ್ಚು
ಮಂದಿ ಗಾಯಗೊಂಡಿದ್ದರು. ಆಫ್ಘನ್ ರಾಜಧಾನಿಯಲ್ಲಿ ನಡೆದ
ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರಬಲ ಹೇಳಿಕೆ ನೀಡಿರುವ ಟ್ರಂಪ್, ’ತಾಲಿಬಾನ್ ಮತ್ತು ಅವರನ್ನು
ಬೆಂಬಲಿಸುವ ಮೂಲಸವಲತ್ತುದಾರರ ವಿರುದ್ಧ ಎಲ್ಲ ರಾಷ್ಟ್ರಗಳು ನಿರ್ಣಾಯಕ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು. ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ
ಸುರಕ್ಷಿತ ಸ್ವರ್ಗ ಇರುವುದರಿಂದಲೇ ತಾಲಿಬಾನ್ ಇಂತಹ ಯಶಸ್ವೀ ದಾಳಿಗಳನ್ನು ನಡೆಸುತ್ತಿದೆ ಎಂದು ಅಮೆರಿಕ
ಮತ್ತು ಆಫ್ಘಾನಿಸ್ಥಾನ ಪ್ರತಿಪಾದಿಸುತ್ತಲೇ ಬಂದಿದ್ದವು. ಪಾಕಿಸ್ತಾನ ಇದನ್ನು ಪದೇ ಪದೇ ನಿರಾಕರಿಸಿತ್ತು. ಟ್ರಂಪ್
ಆಡಳಿತವು ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ ೨೦೦ ಕೋಟಿ ಡಾಲರ್ ಭದ್ರತಾ ನೆರವನ್ನು ಈ ತಿಂಗಳು ಅಮಾನತುಗೊಳಿಸಿತ್ತು.
ಪಾಕಿಸ್ತಾನವು ತಾಲಿಬಾನ್ ಮತ್ತು ಹಖ್ಖಾನಿ ಜಾಲದ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ
ಎಂದು ಆಪಾದಿಸಿ ಅಮೆರಿಕವು ಈ ಕ್ರಮ ಕೈಗೊಂಡಿತ್ತು.
‘ಹಲವಾರು ಮುಗ್ಧರನ್ನು ಬಲಿತೆಗೆದುಕೊಂಡು ಹಲವರನ್ನು ಗಾಯಗೊಳಿಸಿದ ಕಾಬೂಲ್ ಬಾಂಬ್ ಸ್ಫೋಟವನ್ನು ನಾನು
ಖಂಡಿಸುತ್ತೇನೆ. ಈ ಹತ್ಯಾಕೃತ್ಯದ ದಾಳಿಯು ಆಫ್ಘಾನ್ ಜೊತೆಗಿನ ನಮ್ಮ ಮೈತ್ರಿ ಮತ್ತು ಭಯೋತ್ಪಾದನೆ
ವಿರೋಧಿ ಹೋರಾಟದ ಪ್ರತಿಜ್ಞೆಯನ್ನು ಇನ್ನಷ್ಟು ಬಲಗೊಳಿಸುತ್ತದೆ. ತಾಲಿಬಾನ್ ಕ್ರೂರತ್ವ ಉಳಿಯುವುದಿಲ್ಲ’ ಎಂದು ಹೇಳುವ ಮೂಲಕ ಆಫ್ಘಾನಿಸ್ಥಾನವನ್ನು
ಭಯೋತ್ಪಾದಕರಿಂದ ಮುಕ್ತಗೊಳಿಸುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ‘ಅಮೆರಿಕನ್ನರನ್ನು, ನಮ್ಮ ಮಿತ್ರರನ್ನು ಮತ್ತು ಅವರ ಕೆಟ್ಟ
ಸಿದ್ಧಾಂತವನ್ನು ಒಪ್ಪದವರನ್ನು ಗುರಿಯಾಗಿಟ್ಟುಕೊಂಡಿರುವ ಭಯೋತ್ಪಾದಕರಿಂದ ಆಫ್ಘಾನಿಸ್ಥಾನವನ್ನು ಮುಕ್ತಗೊಳಿಸುವ
ನಿರ್ಧಾರಕ್ಕೆ ಅಮೆರಿಕ ಬದ್ಧವಾಗಿದೆ’ ಎಂದು ಅಮೆರಿಕ ಅಧ್ಯಕ್ಷರು
ದೃಢಪಡಿಸಿದರು. ಆಫ್ಘಾನಿಸ್ಥಾನವು ಭಯೋತ್ಪಾದಕರ ಸ್ವರ್ಗವಾಗದಂತೆ ನೋಡಿಕೊಳ್ಳುವ ನಿಲುವಿಗೆ ತಮ್ಮ ಆಡಳಿತ
ಬದ್ಧವಾಗಿದೆ ಎಂದು ಟ್ರಂಪ್ ಅವರು ಇತ್ತೀಚೆಗೆ ಸ್ವಿಟ್ಜರ್ಲೆಂಡಿನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ
ವೇದಿಕೆಯ ಶೃಂಗಸಭೆ ತಮ್ಮ ಭಾಷಣದಲ್ಲೂ ಹೇಳಿದ್ದರು.
2018: ಕಾಬೂಲ್: ಆಫ್ಘಾನಿಸ್ಥಾನದ ರಾಜಧಾನಿ
ಕಾಬೂಲ್ ನಲ್ಲಿ ಜನವರಿ 27ರ ಶನಿವಾರ ಸಂಭವಿಸಿದ ಆಂಬುಲೆನ್ಸ್ ಬಾಂಬ್ ಸ್ಫೋಟದಲ್ಲಿ ಸತ್ತವರ ಸಂಖ್ಯೆ
೧೦೩ಕ್ಕೆ ಏರಿತು. ಇತರ ೨೩೫ ಮಂದಿ ಗಾಯಗೊಂಡರು. ಭದ್ತತಾ ಚೆಕ್ ಪೋಸ್ಟಿನಲ್ಲಿ ಆಸ್ಪತ್ರೆಗೆ ರೋಗಿಯನ್ನು
ಒಯ್ಯುತ್ತಿರುವುದಾಗಿ ಹೇಳುತ್ತಾ ಬಂದ ಆಂಬುಲೆನ್ಸನ್ನು ಕಡೆಗೆ ಪೊಲೀಸರು ಅಡ್ಡ ಹಾಕಿದಾಗ ಆತ್ಮಹತ್ಯಾ
ದಾಳಿಕೋರ ವಾಹನವನ್ನೇ ಸ್ಫೋಟಿಸಿದ್ದ. ಈದಿನ ಮೃತರ ಸಂಖ್ಯೆಯನ್ನು ತಿಳಿಸಿದ ಒಳಾಡಳಿತ ಸಚಿವ ವಾಯಿಸ್
ಅಹ್ಮದ ಬರ್‍ಮಾಕ್ ಅವರು ದಾಳಿಯಲ್ಲಿ ೨೩೫ ಮಂದಿ ಗಾಯಗೊಂಡಿದ್ದಾರೆ. ಮೃತರು ಮತ್ತು ಗಾಯಾಳುಗಳಲ್ಲಿ
ಪೊಲೀಸರೂ ಸೇರಿದ್ದಾರೆ ಎಂದು ಹೇಳಿದರು. ಹಲವಾರು ಅಂಗಡಿಕಾರರೂ
ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಹಲವರು ಕೈಗಳು ಇಲ್ಲವೇ ಕಾಲುಗಳನ್ನು ಕಳೆದುಕೊಂಡದ್ದನ್ನು
ನಾನು ಕಂಡಿದ್ದೇನೆ ಎಂದು ಒಬ್ಬ ಅಂಗಡಿಕಾರ ಅಹ್ಮದ್ ಫಾಹಿಮ್ ನುಡಿದರು. ಈ ದಾಳಿಯು ಅಮೆರಿಕ ಬೆಂಬಲಿತ
ಆಫ್ಘನ್ ಸರ್ಕಾರಕ್ಕೆ ಭಾರಿ ಹೊಡೆತ ಎಂದು ತಾಲಿಬಾನ್ ಹೇಳಿಕೊಂಡಿತು. ೨೦೧೪ರಲ್ಲಿ ಅಮೆರಿಕ ಮತ್ತು ನ್ಯಾಟೋ ತಾಲಿಬಾನ್ ವಿರುದ್ಧದ
ತಮ್ಮ ಕಾರ್ಯಾಚರಣೆಯನ್ನು ಹಿಂತೆಗೆದುಕೊಂಡಂದಿನಿಂದ ತಾಲಿಬಾನ್ ನಿರ್ನಾಮಕ್ಕೆ ಆಫ್ಘನ್ ಭದ್ರತಾ ಪಡೆಗಳು
ಅವಿರತ ಶ್ರಮಿಸುತ್ತಿವೆ. ಕಾಬೂಲ್ ಸ್ಫೋಟದ ಹಿನ್ನೆಲೆಯಲ್ಲಿ ಸರ್ಕಾರ ಶೋಕಾಚರಣೆಯನ್ನು ಘೋಷಿಸಿದ್ದು,
ಈದಿನ ಅಂಗಡಿಗಳನ್ನು ಮುಚ್ಚುವುದರ ಜೊತೆಗೆ ಧ್ವಜಗಳನ್ನೂ ಅರ್ಧಕ್ಕೆ ಇಳಿಸಲಾಗಿತ್ತು.
2018: ಮೀರತ್ (ಉ.ಪ್ರ): ನಿಷೇಧಾಜ್ಞೆ ವಿಧಿಸಲಾಗಿರುವ
ಉತ್ತರ ಪ್ರದೇಶದ ಕಸ್ ಗಂಜ್ ಪಟ್ಟಣದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಹೊರತಾಗಿಯೂ ಮೂರು ಅಂಗಡಿಗಳು,
ಎರಡು ಬಸ್ಸುಗಳು ಮತ್ತು ಒಂದು ಕಾರಿಗೆ ಉದ್ರಿಕ್ತರ ಗುಂಪುಗಳು ಬೆಂಕಿ ಹಚ್ಚಿದ ಘಟನೆಗಳು ಘಟಿಸಿದವು. ವದಂತಿಗಳನ್ನು ನಿಯಂತ್ರಿಸುವ ಸಲುವಾಗಿ ಸ್ಥಳೀಯ ಆಡಳಿತವು
ಪ್ರದೇಶದ ಎಲ್ಲ ಇಂಟರ್ ನೆಟ್ ಸಂಪರ್ಕಗಳನ್ನು ಅಮಾನತುಗೊಳಿಸಿತು. ಜನವರಿ ೨೭ರ ಸಂಜೆ ೫ ಗಂಟೆಯಿಂದ ಜನವರಿ
೨೮ರ ರಾತ್ರಿ ೧೦ ಗಂಟೆವರೆಗೂ ಎಲ್ಲ ಇಂಟರ್ ನೆಟ್ ಸೇವೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ
ಆರ್. ಪಿ. ಸಿಂಗ್ ನುಡಿದರು. ಒಬ್ಬ ವ್ಯಕ್ತಿಯ ಸಾವು
ಮತ್ತು ಇಬ್ಬರು ಗಾಯಗೊಳ್ಳಲು ಕಾರಣವಾದ ಕೋಮು ಘರ್ಷಣೆಯ ತನಿಖೆಗಾಗಿ ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳು
ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ರಚಿಸಿದ್ದರು. ಪೊಲೀಸರು ಪಿಸ್ತೂಲ್ ಮತ್ತು ಪೆಟ್ರೋಲ್ ಬಾಂಬ್ ಹೊಂದಿದ್ದ
ಯುವಕನನ್ನು ಬಂಧಿಸಿ ಆತನ ಮನೆ ಮೇಲೆ ದಾಳಿ ನಡೆಸಿ ನಾಡಬಾಂಬ್‌ಗಳನ್ನು ವಶ ಪಡಿಸಿಕೊಂಡರು. ಗಲಭೆಗಳಿಗೆ
ಸಂಬಂಧಿಸಿದಂತೆ ೫೦ಕ್ಕೂ ಹೆಚ್ಚು ಮಂದಿಯನ್ನು ಈವರೆಗೆ ಬಂಧಿಸಲಾಯಿತು.
2018: ನವದೆಹಲಿ: ಜನವರಿ 29ರ ಸೋಮವಾರ
ಆರಂಭವಾಗಲಿರುವ ಸಂಸತ್ತಿನ ಮುಂಗಡಪತ್ರ ಅಧಿವೇಶನದಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರಕ್ಕೆ ಸರ್ಕಾರ
ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರು
ಸುಳಿವು ನೀಡಿದರು. ಸರ್ವ ಪಕ್ಷ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅನಂತ ಕುಮಾರ್, ವಿಷಯಕ್ಕೆ
ಸಂಬಂಧಿಸಿದಂತೆ ಸಹಮತ ಮೂಡಿಸಲು ವಿಪಕ್ಷಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದರು. ಮುಂಗಡಪತ್ರ
ಅಧಿವೇಶನಕ್ಕೆ ಮುಂಚಿತವಾಗಿಯೇ ಸರ್ಕಾರ ಮತ್ತು ವಿರೋಧ ಪಕ್ಷಗಳ ಪ್ರತಿನಿಧಿಗಳು ಪ್ರಸ್ತಾಪಿತ ಮಸೂದೆಗಳು
ಸೇರಿದಂತೆ ಅಧಿವೇಶನದಲ್ಲಿ ಬರಲಿರುವ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ರಾಜ್ಯಸಭೆಯಲ್ಲಿ ಬಾಕಿ
ಉಳಿದಿರುವ ಒಂದೇ ಉಸಿರಿನ ತ್ರಿವಳಿ ತಲಾಖ್ ಮಸೂದೆಗೆ ಈ ಬಾರಿ ಅಂಗೀಕಾರ ಪಡೆದುಕೊಳ್ಳುವುದರ ಜೊತೆಗೆ,
ಇತರ ಹಿಂದುಳಿದ ವರ್ಗಗಳ ಆಯೋಗಕ್ಕೆ (ಒಬಿಸಿ ಕಮೀಷನ್) ಸಂವಿಧಾನ ಬದ್ಧ ಸ್ಥಾನಮಾನ ಒದಗಿಸುವ ಯತ್ನಕ್ಕೂ
ಒಪ್ಪಿಗೆ ಪಡೆದುಕೊಳ್ಳಲು ಸರ್ಕಾರ ಇಚ್ಛಿಸಿತು. ವಿರೋಧ ಪಕ್ಷಗಳು ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು,
ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿ ಮತ್ತು ವರ್ತಕರ ಪರಿಸ್ಥಿತಿ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ
ಯತ್ನಕ್ಕೆ ಅಡ್ಡಗಾಲು ಹಾಕಲು ಯೋಜಿಸಿದವು. ‘ಈ ವಿಷಯಗಳು ಅತ್ಯಂತ ಮಹತ್ವದ ವಿಚಾರಗಳಾದ್ದರಿಂದ ಅವುಗಳನ್ನು
ಪ್ರಸ್ತಾಪಿಸಲು ನಾವು ಬಯಸುತ್ತೇವೆ. ಸರ್ಕಾರ ಸಹಕಾರಿ ಮನೋಭಾವ ಪ್ರದರ್ಶಿಸಬೇಕು ಮತ್ತು ವಿಷಯಗಳನ್ನು
ಪ್ರಸ್ತಾಪಿಸಲು ವಿಪಕ್ಷಗಳಿಗೆ ಅವಕಾಶ ನೀಡಬೇಕು’ ಎಂದು ಕಾಂಗ್ರೆಸ್ ನಾಯಕ
ಪ್ರಮೋದ್ ತಿವಾರಿ ಸಭೆಗೆ ಮುನ್ನವೇ ಹೇಳಿದರು. ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಹಣಕಾಸು
ಸಚಿವ ಅರುಣ್ ಜೇಟ್ಲಿ ಅವರು ಸರ್ಕಾರವನ್ನು ಪ್ರತಿನಿಧಿಸಿದರೆ, ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್),
ಮುಲಾಯಂ ಸಿಂಗ್ ಯಾದವ್ (ಎಸ್ ಪಿ), ಡಿ. ರಾಜಾ (ಸಿಪಿಐ), ಕನಿಮೋಳಿ (ಡಿಎಂಕೆ), ಡೆರೆಕ್ ಒ’ಬ್ರಿಯಾನ್ ಮತ್ತು ಸುದೀಪ್ ಬಂದೋಪಾಧ್ಯಾಯ (ಟಿಎಂಸಿ)
ಹಾಗೂ ತಾರಿಖ್ ಅನ್ವರ್ (ಎನ್‌ಸಿಪಿ) ವಿರೋಧ ಪಕ್ಷಗಳನ್ನು ಪ್ರತಿನಿಧಿಸಿದ್ದರು.
2017: ಮೆಲ್ಬೋರ್ನ್: ಆಸ್ಟ್ರೇಲಿಯನ್ ಟೆನಿಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ತನ್ನ ಸಹೋದರಿ ವೀನಸ್ ವಿಲಿಯಮ್ಸ್ ಅವರನ್ನು ಪರಾಭವಗೊಳಿಸುವ ಮೂಲಕ ಸೆರೆನಾ ವಿಲಿಯಮ್ಸ್ ಅವರು 23ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದರು. ಸಹೋದರಿ ವೀನಸ್ ಅವರನ್ನು 6-4, 6-4 ಅಂತರದಲ್ಲಿ ಸೆರೆನಾ ಪರಾಭವಗೊಳಿಸಿದರು. ಇದು ಸೆರೆನಾ ಅವರು ಗೆದ್ದ 7ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯಾಗಿದ್ದು ಒಟ್ಟಾರೆ 23 ಗ್ರಾಂಡ್ ಸ್ಲಾಮ್ ಗೆಲುವಿನ ಮೂಲಕ ಇತಿಹಾಸ ಸೃಷ್ಟಿಸಿದರು. 22 ಗ್ರ್ಯಾಂಡ್ ಸ್ಲಾಮ್ ಗೆದ್ದು ಸ್ಟೆಫಿಗ್ರಾಫ್ ಅವರು ನಿರ್ಮಿಸಿದ್ದ ದಾಖಲೆಯನ್ನು ಸೆರೆನಾ ಅವರು 23ನೇ ಗ್ರಾಂಡ್ ಸ್ಲಾಮ್ ಗೆಲ್ಲುವ ಮೂಲಕ ಮೆಲ್ಬೋರ್ನಿನಲ್ಲಿ ಮುರಿದರು.
2017: ಬೆಂಗಳೂರು: ಕಾಂಗ್ರೆಸ್ಸಿನ ಹಿರಿಯ ನಾಯಕರಲ್ಲಿ ಒಬ್ಬರಾದ, ರಾಜ್ಯದ ಮಾಜಿ ಮುಖ್ಯಮಂತ್ರಿ
ಎಸ್.ಎಂ. ಕೃಷ್ಣ ಸಕ್ರಿಯ ರಾಜಕಾರಣದಿಂದ ದೂರ ಸರಿದರು. ಈ ಸಂಬಂಧ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ರಾಜಕೀಯ ಚಟುವಟಿಕೆಗಳಿಂದ ದೂರ ಉಳಿಯುವುದಾಗಿ ತಿಳಿಸಿದರು. ಪಕ್ಷದ ಸದಸ್ಯತ್ವ ನವೀಕರಣಕ್ಕೆ ಸಂಬಂಧಿಸಿ ಪತ್ರದಲ್ಲಿ ಉಲ್ಲೇಖಿಸಿರುವ ಎಸ್.ಎಂ. ಕೃಷ್ಣ, ರಾಜಕೀಯ ಚಟುವಟಿಕೆಗಳಿಂದ ದೂರ ಉಳಿಯುತ್ತಿರುವ ಕಾರಣ ಸದಸ್ಯತ್ವ ನವೀಕರಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎನ್ನುವುದನ್ನೂ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಕಾರಣದಿಂದ ದೂರ ಸರಿಯುತ್ತಿರುವ ಬಗ್ಗೆ ಶೀಘ್ರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುವುದಾಗಿಯೂ ಹೇಳಿದರು. ಹೆಚ್ಚೂಕಡಿಮೆ 60 ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿಯೇ ಇದ್ದು, ಸುದೀರ್ಘಕಾಲ ರಾಜಕಾರಣ ಮಾಡಿ, ರಾಜ್ಯದ ಮುಖ್ಯಮಂತ್ರಿಯೂ ಆಗಿ, ಕೇಂದ್ರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ ಅಪರೂಪದ ರಾಜಕಾರಣಿ ಎಸ್.ಎಂ.ಕೃಷ್ಣ.
2017:
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಸೇನಾ ಶಿಬಿರದ ಕೆಳಗೆ ಈದಿನ ಬೆಳಗ್ಗೆ ಹಿಮಕುಸಿತವಾಗಿ ಕಣ್ಮರೆಯಾಗಿದ್ದ ಐವರು ಯೋಧರನ್ನು ರಕ್ಷಿಸಲಾಯಿತು. ರಕ್ಷಿಸಲಾದ ಐವರೂ ಯೋಧರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಗ್ಗೆ ಹಿಮಕುಸಿತ ಉಂಟಾಗಿ ಯೋಧರು ಕಾಣೆಯಾಗಿದ್ದರು, ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಐವರು ಯೋಧರನ್ನು ರಕ್ಷಿಸಲಾಯಿತು ಎಂದು ಸೇನಾ ಅಧಿಕಾರಿಗಳು ತಿಳಿಸಿದರು. ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿತ್ತು. ಇದರ ಮಧ್ಯೆಯೇ ಸೇನಾ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿ ಐವರು ಯೋಧರನ್ನು ರಕ್ಷಿಸಿತು ಎಂದು ಮೂಲಗಳು ತಿಳಿಸಿದವು. ಜನವರಿ
25ರಿಂದೀಚೆಗೆ ಹಿಮಕುಸಿತಕ್ಕೆ ಸೇನೆಯ 15 ಯೋಧರು ಸೇರಿದಂತೆ ಒಟ್ಟು 21 ಮಂದಿ ಸಾವನ್ನಪ್ಪಿದ್ದರು.
2017: ನವದೆಹಲಿ: ದೆಹಲಿಯ ವಸಂತ ಕುಂಜ್ ಪ್ರದೇಶ ಸಮೀಪದ ಕಿಷನ್ ಗರ್ಹ ಗ್ರಾಮದಲ್ಲಿ ಫಿರಂಗಿ ಷೆಲ್ ಒಂದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು. ಸುಳಿವನ್ನು ಅನುಸರಿಸಿ ವಸಂತ ಕುಂಜ್ ಪೊಲೀಸ್ ಠಾಣೆಯ ಪೊಲೀಸ್ ತಂಡಗೊಂದ ಕಿಷನ್ ಗರ್ಹ ಗ್ರಾಮ ಕಸದ ತೊಟ್ಟಿಯಲ್ಲಿ ಪರಿಶೀಲಿಸಿದಾಗ ಹಳೆಯ ಫಿರಂಗಿ ಷೆಲ್ ಲಭಿಸಿತು ಎದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ತತ್ ಕ್ಷಣವೇ ಸ್ಥಳಕ್ಕೆ ರಾಷ್ಟ್ರೀಯ ಭದ್ರತಾ ಗಾರ್ಡ್ಗಳನ್ನು (ಎನ್ಎಸ್ಜಿ) ಕರೆಸಲಾಗಿದ್ದು, ಬಾಂಬ್ ನಿಷ್ಕ್ರಿಯ ಗೊಳಿಸುವ ಯತ್ನ ಚಾಲನೆಯಲ್ಲಿದೆ ಎಂದು ಅವರು ನುಡಿದರು. ಬಾಂಬ್ ಬ್ಲಾಂಕೆಟ್ನಲ್ಲಿ ಷೆಲ್ನ್ನು ಇಡಲಾಗಿದೆ. ಸುತ್ತ ಮುತ್ತಣ ನಿವಾಸಿಗಳನ್ನು ತೆರವುಗೊಳಿಸಲಾಗಿದ್ದು, ಜನರ ಚಲನವಲನವನ್ನು ನಿರ್ಹಂಧಿಸಲಾಗಿದೆ ಎಂದು ಅವರು ಹೇಳಿದರು.
2017: ನವದೆಹಲಿ: ಯೋಧರಿಗೆ ತಮ್ಮ ಸಮಸ್ಯೆಗಳನ್ನು ನೇರವಾಗಿ ಸೇನಾ ದಂಡ ನಾಯಕ ಬಿಪಿನ್ ರಾವತ್ ಅವರಿಗೆ ತಿಳಿಸುವ ಸಲುವಾಗಿ ಸೇನೆಯ ‘ವಾಟ್ಸ್ ಆಪ್’ ನಂಬರನ್ನು ವ್ಯವಸ್ಥೆ ಮಾಡಿತು. ಯೋಧರು ಈ ನಂಬರನ್ನು ಬಳಸಿ ತಮಗೇನಾದರೂ ತೀವ್ರ ಸಮಸ್ಯೆಗಳಿದ್ದಲ್ಲಿ, ಸಾಮಾಜಿಕ ಮಾಧ್ಯಮಗಳ ಮೊರೆ ಹೋಗುವ ಬದಲು ನೇರವಾಗಿ ಸೇನಾ ದಂಡನಾಯಕರಿಗೇ ವಾಟ್ಸ್ ಆಪ್ ಸಂದೇಶ ಕಳುಹಿಸಬಹುದು. ಸೇನಾ ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ಬಹಿರಂಗಪಡಿಸಲು ಸಾಮಾಜಿಕ ಜಾಲದಲ್ಲಿ ಸರಣಿ ವಿಡಿಯೋಗಳನ್ನು ಪೋಸ್ಟ್ ಮಾಡಿದ ಬಳಿಕ ಸೇನೆ ಈ ಕ್ರಮ ಕೈಗೊಂಡಿದೆ. ದೂರುಗಳನ್ನು ದಾಖಲಿಸಲು ವಾಟ್ಸ್ ಆಪ್ ನಂಬರ್: 919643300008. ತಮ್ಮ ದೂರು ದಾಖಲಿಸಲು ಸೇನೆಯಲ್ಲಿ ಪ್ರಸ್ತುತ ಆಂತರಿಕ ವ್ಯವಸ್ಥೆ ಇದೆ. ಆದರೆ ಯೋಧನೊಬ್ಬನಿಗೆ ಈ ಎಲ್ಲ ವ್ಯವಸ್ಥೆ ಬಗ್ಗೆ ಭ್ರಮನಿರಸನವಾಗಿದ್ದರೆ, ಆತ ನೇರವಾಗಿ ವಾಟ್ಸ್ ಆಪ್ ಬಳಸಿಕೊಂಡು ಸೇನಾ ದಂಡನಾಯಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಆದರೆ ಈ ವ್ಯವಸ್ಥೆ ಎಷ್ಟು ಸಮರ್ಪಕವಾಗಿ ನಡೆದೀತು ಎಂಬ ಬಗ್ಗೆ ಸೇನೆಯಲ್ಲಿ ಹಲವರಿಗೆ ಗೊಂದಲವಿದೆ. ವಾಟ್ಸ್ ಆಪ್ನಲ್ಲಿ ಬರುವ ಅನಗತ್ಯ ಸಂದೇಶಗಳನ್ನು ತಡೆಯುವುದು ಬಲು ಕಷ್ಟ. ಅಂದಾಜು 13 ಲಕ್ಷ ಸಂಖ್ಯೆಯಲ್ಲಿ ಇರುವ ಸೇನಾ ಸಿಬ್ಬಂದಿ ಈ ನಂಬರ್ನ್ನು ಬಳಸಿ ಜಗತ್ತಿನ ಯಾವ ಮೂಲೆಗೆ ಬೇಕಾದರೂ ಸಂದೇಶ ಕಳುಹಿಸಬಹುದು. ಇದರ ಮೂಲಕ ಕಳುಹಿಸಬಹುದಾದ ಸಂದೇಶ ಯಾವ ರೂಪದಲ್ಲಿ (ಅಕ್ಷರ, ವಿಡಿಯೋ) ಇರಬೇಕು ಎಂಬುದಕ್ಕೆ ಯಾವುದೇ ನಿಯಂತ್ರಣವೂ ಇರುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
2017: ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದ್ದ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾದ ನಿವೃತ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು. ಮೇಲ್ನೋಟಕ್ಕೆ ಅವರ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಕಂಡು ಬಂದಿದೆ, ಜತೆಗೆ ಅವರ ವಯಸ್ಸನ್ನೂ ಸಹ ಕೋರ್ಟ್ ಪರಿಗಣಿಸಿ ಜಾಮೀನು ನೀಡಿದೆ. ವೈಯಕ್ತಿಕ ಕಾರಣಗಳಿಂದಾಗಿ ಭಾಸ್ಕರ್ ರಾವ್ ಅವರು ಕೋರ್ಟ್ಗೆ ಹಾಜರಾಗಿಲ್ಲ ಎಂದು ಭಾಸ್ಕರ್ ರಾವ್ ಪರ ವಕೀಲರು ಹೇಳಿಕೆ ನೀಡಿದರು.ಒಂದು ಲಕ್ಷ ರೂ ಬಾಂಡ್ ನೀಡಬೇಕು, ಪಾಸ್ಪೋರ್ಟ್ ಅನ್ನು ಕೋರ್ಟ್ಗೆ ಹಾಜರು ಪಡಿಸಬೇಕು ಮತ್ತು ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿನ ಮೇರೆಗೆ ಜಾಮೀನು ನೀಡಲಾಯಿತು.. ಫೆಬ್ರವರಿ 16ಕ್ಕೆ ವಿಚಾರಣೆಯನ್ನು ಮುಂದೂಡಲಾಯಿತು.
2017: ವಾಷಿಂಗ್ಟನ್: ಏಳು ಮುಸ್ಲಿಮ್ ರಾಷ್ಟ್ರಗಳಿಂದ ಬರುವ ಪ್ರವಾಸಿಗರ ಮೇಲೆ ಹೊಸ
ನಿಯಂತ್ರಣಗಳನ್ನು ವಿಧಿಸುವ ಮತ್ತು ನಿರಾಶ್ರಿತರ ಆಗಮನವನ್ನು ಅಮಾನತುಗೊಳಿಸುವ ಹೊಸ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದರು. ಚುನಾವಣಾ ಪ್ರಚಾರ ಕಾಲದಲ್ಲಿ ಅತ್ಯಂತ ವಿವಾದಕ್ಕೆ ಒಳಗಾಗಿದ್ದ ಭರವಸೆಗಳ ಪೈಕಿ ಒಂದು ಭರವಸೆಯನ್ನು ಜಾರಿಗೆ ತರಲು ಟ್ರಂಪ್ ಈ ಮೂಲಕ ಚಾಲನೆ ನೀಡಿದರು.. ಟ್ರಂಪ್ ಅವರ ಈ ಚುನಾವಣಾ ಭರವಸೆಗಳು ಮಾನವ ಹಕ್ಕುಗಳ ಹೋರಾಟಗಾರರಿಂದ ವ್ಯಾಪಕ ಟೀಕೆಗೆ ಒಳಗಾಗಿದ್ದವು. ಅಮೆರಿಕವನ್ನು ತೀವ್ರವಾದಿ ಇಸ್ಲಾಮಿಕ್ ಭಯೋತ್ಪಾದಕರಿಂದ ಸುರಕ್ಷಿತವಾಗಿಸುತ್ತಿರುವುದಾಗಿ ಟ್ರಂಪ್ ಹೇಳಿದರು. ‘ಪೊಟೆಕ್ಷನ್ ಆಫ್ ದಿ ನೇಷನ್ ಫ್ರಮ್ ಫಾರಿನ್ ಟೆರರಿಸ್ಟ್ ಎಂಟ್ರಿ ಇನ್ ಟು ಯುನೈಟೆಡ್ ಸ್ಟೇಟ್ಸ್’ ಹೆಸರಿನ ಆದೇಶಕ್ಕೆ ಸಹಿ ಹಾಕಿದ ಬಳಿಕ ‘ಇದೊಂದು ಮಹತ್ವದ ಆದೇಶ’ ಎಂದು ಟ್ರಂಪ್ ಬಣ್ಣಿಸಿದರು. ಟ್ರಂಪ್ ಆದೇಶದ ಪರಿಣಾಮವಾಗಿ ಅಮೆರಿಕದ ನಿರಾಶ್ರಿತರ ಪುನರ್ವಸತಿ ಕಾರ್ಯಕ್ರಮ ಕನಿಷ್ಠ 120 ದಿನಗಳ ಅವಧಿಗೆ ಅಮಾನತುಗೊಂಡಿತು.
2017: ಲಖನೌ: ಉತ್ತರ ಪ್ರದೇಶ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಬಿಜೆಪಿ ತನ್ನ
ಪ್ರಣಾಳಿಕೆ ಬಿಡುಗಡೆ ಮಾಡಿತು. ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಪ್ರಣಾಳಿಕೆ ಬಿಡುಗಡೆ ಮಾಡಿ, ಬಹುಮತದೊಂದಿಗೆ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಆತ್ಮವಿಶ್ವಾಸವಿದೆ ಎಂದು ಹೇಳಿದರು. ಸಮಾಜವಾದಿ ಪಕ್ಷ ಮತ್ತು ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಷಾ, 15 ವರ್ಷಗಳಿಂದ ರಾಜ್ಯವನ್ನಾಳಿದ ಪಕ್ಷಗಳು ಏನೇನೂ ಅಭಿವೃದ್ಧಿ ಮಾಡಿಲ್ಲ. ಈಗ ನಮ್ಮನ್ನು ಟೀಕಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಉತ್ತರ ಪ್ರದೇಶ ಮುಂಬರುವ ದಿನಗಳಲ್ಲಿ ಅಭಿವೃದ್ಧಿ ರಾಜ್ಯವಾಗಿ ಗುರುತಿಸಿಕೊಳ್ಳಲಿದೆ. ಇಲ್ಲಿಯ ಜನತೆ ಬಿಜೆಪಿಗೆ ಬಹುಮತ ನೀಡಿ ಅಧಿಕಾರಕ್ಕೆ ತರಿಸಿಕೊಳ್ಳಲಿದ್ದಾರೆನ್ನುವ ವಿಶ್ವಾಸ ಇದೆ ಎಂದು ಹೇಳಿದರು. ಚುನಾವಣೆ ಹಿನ್ನೆಲೆಯ ಭಾಷಣ ಇದಾಗಿದ್ದರಿಂದ ನಿರೀಕ್ಷೆಯಂತೆ ಅಮಿತ್ ಷಾ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
2017:
ಗುವಾಹಟಿ: ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳಿಗೆ ನೂತನ ರಾಜ್ಯಪಾಲರು ಅಧಿಕಾರ ವಹಿಸಿಕೊಂಡರು. ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ವಿ.ಷಣ್ಮಗನಾಥನ್ ಅವರು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಎರಡು ದಿನಗಳ ನಂತರ ನೂತನ ರಾಜ್ಯಪಾಲರು ಜವಾಬ್ದಾರಿ ವಹಿಸಿಕೊಂಡರು. ಅಸ್ಸಾಂ ರಾಜ್ಯಪಾಲರಾದ ಬನ್ವರಿಲಾಲ್ ಪುರೋಹಿತ್ ಅವರಿಗೆ ಮೇಘಾಲಯದ ರಾಜ್ಯಪಾಲರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಯಿತು.. ನಾಗಾಲ್ಯಾಂಡ್ ರಾಜ್ಯಪಾಲರಾದ ಪಿ.ಬಿ.ಆಚಾರ್ಯ ಅವರಿಗೆ ಅರುಣಾಚಲ ಪ್ರದೇಶದ ಹೆಚ್ಚುವರಿ ಜವಾಬ್ದಾರಿ ನೀಡಲಾಯಿತು. 67 ವರ್ಷದ ವಿ.ಷಣ್ಮಗನಾಥನ್ ಅವರ ವಿರುದ್ಧ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಹಾಗೂ ರಾಜ ಭವನದ 100ಕ್ಕೂ ಹೆಚ್ಚು ಸಿಬ್ಬಂದಿ, ಅವರನ್ನು ಹುದ್ದೆಯಿಂದ ತೆರವುಗೊಳಿಸಲು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದರು. ಮೇಘಾಲಯದ ರಾಜ್ಯಪಾಲರಾಗಿ ಹಾಗೂ ಅರುಣಾಚಲ ಪ್ರದೇಶದ ಹೆಚ್ಚುವರಿ ರಾಜ್ಯಪಾಲರಾಗಿ ಷಣ್ಮಗನಾಥನ್ ಕಾರ್ಯನಿರ್ವಹಿಸುತ್ತಿದ್ದರು.
2009: ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನವದೆಹಲಿಯಲ್ಲಿ ನೆರವೇರಿತು. ಸಂಜೆ 5 ಗಂಟೆಗೆ ಯಮುನಾ ತಟದ ಏಕತಾ ಸ್ಥಳದಲ್ಲಿ ವೆಂಕಟರಾಮನ್ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.
2009: ದೇಶದ ಪ್ರತಿಯೊಬ್ಬ ಪ್ರಜೆಗೂ ಶಾಶ್ವತ ಗುರುತಿನ ಪತ್ರ ನೀಡುವ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪ್ರಾಧಿಕಾರ ರಚನೆಗೆ ಸರ್ಕಾರ ಅಧಿಸೂಚನೆ ಹೊರಡಿಸಿತು. ಈ ಗುರುತಿನ ಪತ್ರದಲ್ಲಿ ವಿಭಿನ್ನ ಸಂಖ್ಯೆ, ವ್ಯಕ್ತಿಯ ಭಾವಚಿತ್ರ ಹಾಗೂ ಜನ್ಮವೃತ್ತಾಂತದ ಮಾಹಿತಿ ಇರುತ್ತದೆ. ಅಲ್ಲದೇ ಮಕ್ಕಳಿಗೂ ಕೂಡ ಗುರುತಿನ ಪತ್ರ ನೀಡಲಾಗುತ್ತದೆ. ಗುರುತಿಗೆ ಸಂಬಂಧಿಸಿದಂತೆ ನಡೆಯುವ ಮೋಸ ಹಾಗೂ ದೇಶದ ಭದ್ರತೆ ಹಿತದೃಷ್ಟಿಯಿಂದ ಎಲ್ಲ ಪ್ರಜೆಗಳಿಗೂ ಗುರುತಿನ ಪತ್ರ ನೀಡುವುದು ಸರ್ಕಾರದ ಉದ್ದೇಶ. ಯೋಜನಾ ಆಯೋಗದ ಅಡಿಯಲ್ಲಿ ರಚನೆಯಾಗುತ್ತಿರುವ ರಾಷ್ಟ್ರೀಯ ಪ್ರಾಧಿಕಾರವು ಗುರುತಿನ ಸಂಖ್ಯೆಗಳನ್ನು ನೀಡುತ್ತದೆ. ಭಾರತೀಯ ಪೌರತ್ವ ಕಾಯ್ದೆ ಅನ್ವಯ ಜನಗಣತಿ ನಿರ್ದೇಶನಾಲಯದ ಮೂಲಕ ಹಾಗೂ ರಾಜ್ಯ ಮಟ್ಟದಲ್ಲಿ ರಚನೆಯಾಗುವ ಇಂಥದೇ ಮಾದರಿಯ ಘಟಕಗಳ ಸಹಕಾರದೊಂದಿಗೆ ಇದು ಕಾರ್ಯ ನಿರ್ವಹಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಆರಂಭಿಕ ಹಂತದಲ್ಲಿ ಈ ಗುರುತಿನ ಪತ್ರವನ್ನು ಎಲ್ಲ ಮತದಾರರಿಗೂ ನೀಡಲಾಗುತ್ತದೆ. ಕ್ರಮೇಣ ಇದನ್ನು 18 ವರ್ಷದೊಳಗಿನವರಿಗೂ ಕೊಡಲಾಗುತ್ತದೆ.
2009: ಪತ್ರಕರ್ತ ಶಿವಪ್ರಸಾದ್ ಟಿ.ಆರ್. ಬರೆದ 'ಚಂದ್ರಯಾನ' ಪುಸ್ತಕವನ್ನು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ಕನ್ನಡ ಭಾಷೆಯಲ್ಲಿರುವ ಪುಸ್ತಕದ ಒಂದು ಪುಟವನ್ನು ಲೇಖಕರಿಂದ ಓದಿಸಿ ತನ್ಮಯತೆಯಿಂದ ಕೇಳಿದ ಕಲಾಮ್, ತಾವೇ ಕೆಲವು ಪ್ಯಾರಾಗಳನ್ನು ಆಯ್ದು ಅದರ ಕನ್ನಡ ಭಾಷಾಂತರವನ್ನೂ ತಿಳಿದುಕೊಂಡರು. 'ಚಂದ್ರನ ಮೇಲೆ ಮನುಷ್ಯ ಹೋಗಲು ಸಾಧ್ಯ ಎಂದು 1860ರಷ್ಟು ಹಿಂದೆಯೇ ಕಾನ್ಸಾಂಟನ್ ಟಿಶೆಲ್ಸ್ ಎಂಬ ಕುರುಡ ವಿಜ್ಞಾನಿ ಹೇಳಿದ್ದನ್ನು ನೆನಪಿಸಿದ ಮಾಜಿ ರಾಷ್ಟ್ರಪತಿಗಳು, ಚಂದ್ರಯಾನದ ಕಲ್ಪನೆಯ ನಿಜವಾದ ರೂವಾರಿ ಕಾನ್ಸಾಂಟ್' ಎಂದರು. ವಿಜ್ಞಾನದ ವಿಷಯವನ್ನು ಕನ್ನಡದಲ್ಲಿ ಬರೆದ ಶಿವಪ್ರಸಾದ್ ಪ್ರಯತ್ನವನ್ನು ಕಲಾಮ್ ಶಾಘ್ಲಿಸಿದರು. ಬಿಡುಗಡೆಗೊಂಡ ಪುಸ್ತಕದ ಮೊದಲ ಪ್ರತಿಯನ್ನು 'ದಿ ವೀಕ್' ಪತ್ರಿಕೆಯ ಸ್ಥಾನೀಯ ಸಂಪಾದಕ ಸಚ್ಚಿದಾನಂದ ಮೂರ್ತಿ ಅವರಿಗೆ ಅಬ್ದುಲ್ ಕಲಾಂ ನೀಡಿದರು.
2009: ತಿಂಗಳು ಗಟ್ಟಲೇ ಆಕಾಶದಲ್ಲೇ ಕಾಲ ಕಳೆಯುವ ಗಗನಯಾನಿಗಳು ಮೂಳೆಗಳ ಶಕ್ತಿ ಕಳೆದುಕೊಂಡು ನಂತರದ ಜೀವನದಲ್ಲಿ ಭಾರಿ ಪ್ರಮಾಣದಲ್ಲಿ ಮೂಳೆಗಳ ಮುರಿತಕ್ಕೆ ಒಳಗಾಗುತ್ತಾರೆ ಎಂದು ಕ್ಯಾಲಿಫೋರ್ನಿಯಾದ ವಿವಿ ಹೇಳಿತು. ಆರು ದಿನಗಳಿಂದ ನಾಲ್ಕು ತಿಂಗಳು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾಲ ಕಳೆದ 13 ಯಾನಿ ಗಳನ್ನು ಪರಿಶೀಲಿಸಿದಾಗ ಅವರ ಸೊಂಟದ ಮೂಳೆಗಳ ಶಕ್ತಿ ಶೇ 14 ರಷ್ಟು ಕಡಿಮೆಯಾಗಿದ್ದುದು ಬೆಳಕಿಗೆ ಬಂತು. ಮೂವರು ಗಗನ ಯಾನಿಗಳಲ್ಲಿ ಅಸ್ಥಿ ಗಳ ತೊಂದರೆ ಹೊಂದಿರುವ ವೃದ್ಧ ಮಹಿಳೆಯರ ಮೂಳೆಗಳಿಗಿಂತ ಶೇ. 20 ರಿಂದ 30 ದುರ್ಬಲವಾಗಿದ್ದುದು ಗೊತ್ತಾಯಿತು.
2009: ನಂಬಿದ್ರೆ ನಂಬಿ ಬಿಟ್ಟರೆ ಬಿಡಿ, ಹೆಸರು ಇಟ್ಟಿರುವ ಹಸುಗಳು ಹೆಚ್ಚು ಹಾಲು ಕೊಡುತ್ತವೆ. ಇದಕ್ಕೆ ವಿರುದ್ಧವಾಗಿ ಹೆಸರಿಡದ ಹಸುಗಳು ಹಾಲು ಕೊಡುವ ಪ್ರಮಾಣ ಕಡಿಮೆ. ಈ ಸಂಗತಿ ನ್ಯೂಕ್ಯಾಸ್ಟಲ್ ವಿಶ್ವವಿದ್ಯಾಲಯದಲ್ಲಿ ಮಾಡಲಾದ ಸಂಶೋಧನೆಯಿಂದ ಹೊರಬಿದ್ದಿತು. ಹಸುಗಳಿಗೆ ಹೆಸರಿಟ್ಟು ಅವುಗಳನ್ನು ಪ್ರತ್ಯೇಕವಾಗಿ ಆರೈಕೆ ಮಾಡಿದರೆ ಅವು ಕೊಡುವ ಹಾಲಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತದೆ ಎಂದು ಅಧ್ಯಯನ ಹೇಳಿತು.
2009: ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ಸುಮಾರು 22,600 ಕಿ.ಮೀ ರಸ್ತೆ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಲೋಕೋಪಯೋಗಿ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಹೂಡಿಕೆದಾರರು ಮತ್ತು ಹಣಕಾಸು ಸಂಸ್ಥೆಗಳ ಮುಖಂಡರ ಸಭೆಗೂ ಮುನ್ನ ನಡೆದ ಸಮಾರಂಭದಲ್ಲಿ ಅವರು ಹೊಸ ಯೋಜನೆಗೆ ಹಸಿರು ನಿಶಾನೆ ತೋರಿದರು. ಒಟ್ಟು 22,600 ಕಿ.ಮೀ ರಸ್ತೆಯಲ್ಲಿ, 10 ಸಾವಿರ ಕಿ.ಮೀ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳು ಹಾಗೂ 12,600 ಕಿ.ಮೀ ಗ್ರಾಮಾಂತರ ರಸ್ತೆಗಳು ಸೇರಿವೆ.
2009: ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಹಾ ನಿರ್ದೇಶಕ ಸ್ಥಾನಕ್ಕೆ ಪಾಕ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಅವರು ರಾಜೀನಾಮೆ ನೀಡಿದರು. ಪಿಸಿಬಿ ಉನ್ನತ ಹುದ್ದೆಯಲ್ಲಿದ್ದರೂ ತಮ್ಮ ಅಧಿಕಾರವನ್ನು ಬಹಳ ಸೀಮಿತಗೊಳಿಸಿದ್ದನ್ನು ಪ್ರತಿಭಟಿಸಿ ಮಿಯಾಂದಾದ್ ಈ ತೀರ್ಮಾನ ಕೈಗೊಂಡರು.
2008: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ವಿಕೆಟ್ ಕೀಪರ್ `ಗಿಲಿ' ಈದಿನ ಮುಕ್ತಾಯಗೊಂಡ ಅಡಿಲೇಡ್ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟಿಗೆ ಗುಡ್ ಬೈ ಹೇಳಿದರು. ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುತ್ತಿದ್ದಂತೆಯೇ ಆಸೀಸ್ ತಂಡದ ಪ್ರತಿಯೊಬ್ಬ ಸದಸ್ಯರೂ ಗಿಲ್ ಕ್ರಿಸ್ಟ್ ಅವರನ್ನು ತಬ್ಬಿಕೊಂಡು ವಿದಾಯ ಹೇಳಿದರು. ಈ ವೇಳೆ ಕ್ರೀಸ್ನಲ್ಲಿದ್ದ ಭಾರತ ತಂಡದ ನಾಯಕ ಅನಿಲ್ ಕುಂಬ್ಳೆ ಅವರೂ ಗಿಲ್ಕ್ರಿಸ್ಟ್ ಅವರನ್ನು ಅಪ್ಪಿಕೊಂಡರು. ಭಾರತ ತಂಡದ ಡ್ರೆಸಿಂಗ್ ಕೋಣೆಗೆ ತೆರಳಿ ಪ್ರತಿಯೊಬ್ಬ ಆಟಗಾರನಿಗೆ ಹಸ್ತಲಾಘವ ನೀಡಿದ `ಗಿಲಿ' ಎಲ್ಲರ ಕೇಂದ್ರಬಿಂದುವಾಗಿ ಬದಲಾದರು. ಕೆಲವೊಂದು ಭಾವಪೂರ್ಣ ಕ್ಷಣಗಳಿಗೆ ಅಡಿಲೇಡಿನಲ್ಲಿ ನೆರೆದ ಪ್ರೇಕ್ಷಕರು ಸಾಕ್ಷಿಯಾದರು.
2008: ಹೈದರಾಬಾದಿನ 21ರ ಹರೆಯದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಈದಿನ ಮತ್ತೊಂದು ಮೈಲಿಗಲ್ಲು ನೆಟ್ಟು ಏಷ್ಯಾದ ನಂಬರ್ ಒನ್ ಟೆನಿಸ್ ಆಟಗಾರ್ತಿ ಎನಿಸಿದರು. ಸಾನಿಯಾ ಅವರು ಈದಿನ ಬಿಡುಗಡೆಯಾದ ಡಬ್ಲ್ಯುಟಿಎ ರ್ಯಾಂಕಿಂಗ್ ಪಟ್ಟಿಯಲ್ಲಿ 29ನೇ ಸ್ಥಾನ ಪಡೆದು ಏಷ್ಯಾದ ಅಗ್ರ ರ್ಯಾಂಕಿಂಗಿನ ಅಟಗಾರ್ತಿ ಎಂಬ ಗೌರವ ಪಡೆದುಕೊಂಡರು. ಇದುವರೆಗೂ ಈ ಗೌರವ ಚೀನಾದ ನಾ ಲೀ ಅವರ ಹೆಸರಿನಲ್ಲಿ ಇತ್ತು. ಹೊಸ ಪಟ್ಟಿಯಲ್ಲಿ ಲೀ 32ನೇ ಸ್ಥಾನಕ್ಕೆ ಕುಸಿದರು.
2008: ಜಷ್ಪುರ ಜಿಲ್ಲೆಯ ಜೈಮಾರ್ಗ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ನಕ್ಸಲರನ್ನು ಬಂಧಿಸಿ, ಅವರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡರು. ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಮಾಹಿತಿ ಆಧರಿಸಿ ಸಿ ಐ ಎಸ್ ಎಫ್ ಮತ್ತು ಪೊಲೀಸ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು ಅಶೋಕ್ ಒರಾನ್, ವಿಶ್ವೇಶ್ವರ್ ಮತ್ತು ಜಾರ್ಜ್ ಮಿಂಜ್ ಎಂಬ ಮೂವರು ನಕ್ಸಲರನ್ನು ಬಂಧಿಸಿದರು.
2008: ಥಾಯ್ಲೆಂಡ್ ಸಂಸತ್ ಪುಗ್ನೇಸಿಯಸ್ ರೈಟ್-ವಿಂಗರ್ ಸಮಕ್ ಸುಂದರವೆಜ್ ಅವರನ್ನು ಹೊಸ ಪ್ರಧಾನಿಯಾಗಿ ಆಯ್ಕೆ ಮಾಡಿತು. ಇದರಿಂದಾಗಿ 2006ರ ರಕ್ತರಹಿತ ಕ್ರಾಂತಿಯ ಬಳಿಕ ದೇಶದಲ್ಲಿ ಮತ್ತೆ ಪ್ರಾತಿನಿಧಿಕ, ನಾಗರಿಕ ಸರ್ಕಾರ ಮರಳಿದಂತಾಯಿತು. 72 ವರ್ಷದ ಈ ಮಾಜಿ ಗವರ್ನರ್, ಗಡಿಪಾರಾಗಿರುವ ಪದಚ್ಯುತ ಪ್ರಧಾನಿ ಥಕ್ಸಿನ್ ಶಿನವಾತ್ರ ಅವರನ್ನು ಮರಳಿ ಸ್ವದೇಶಕ್ಕೆ ಕರೆತರುವ ಪಣತೊಟ್ಟು, ಸೇನೆ ಮತ್ತು ರಾಜಪ್ರಭುತ್ವದ ಪ್ರಮುಖರನ್ನು ದಂಗೆಯ ರೂವಾರಿಗಳೆಂದು ದೂಷಿಸಿ, ಸಂಘರ್ಷಕ್ಕೆ ನಾಂದಿ ಹಾಡಿದ್ದರು.
2007: ಬ್ರಿಟನ್ನಿನ `ಚಾನೆಲ್ 4' ಟಿವಿ ವಾಹಿನಿ ಪ್ರಸಾರ ಮಾಡುತ್ತಿದ್ದ `ಸೆಲೆಬ್ರಿಟಿ ಬಿಗ್ ಬ್ರದರ್' ಕಾರ್ಯಕ್ರಮದಲ್ಲಿಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಟ್ಟು ಮತಗಳ ಪೈಕಿ ಶೇ 67ರಷ್ಟು ಮತಗಳನ್ನು ಗಳಿಸಿ ಗೆಲುವಿನ ನಗೆ ಬೀರಿದರು. ಇದರಿಂದಾಗಿ 85 ಲಕ್ಷ ರೂಪಾಯಿಗಳಷ್ಟು (1 ಲಕ್ಷ ಪೌಂಡ್) ನಗದು ಬಹುಮಾನ ಅವರ ಮಡಿಲಿಗೆ ಬಿದ್ದಿತು. ಕಾರ್ಯಕ್ರಮದಲ್ಲಿ ಜನಾಂಗೀಯ ನಿಂದನೆ ಆರೋಪ ಹೊತ್ತಿದ್ದ ಮಾಜಿ ಭುವನ ಸುಂದರಿ ಡೇನಿಯೆಲಾ ಲಾಯ್ಡ್ ಮತ್ತು ಜಾಕ್ ಟ್ವೀಡ್ ಅವರು ಅಂತಿಮ ಹಣಾಹಣಿಯ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಡೇನಿಯ್ಲೆಲಾ ಈ ಮೊದಲು ಜನಾಂಗೀಯ ನಿಂದನೆ ಮಾಡಿದ್ದಕ್ಕಾಗಿ ಶಿಲ್ಪಾ ಅವರ ಕ್ಷಮೆ ಯಾಚಿಸಿದ್ದರು. ಇದಕ್ಕೂ ಮುನ್ನ ಜನಾಂಗೀಯ ನಿಂದನೆಗೈದ ಆರೋಪಕ್ಕೆ ಗುರಿಯಾದ ಜೇಡ್ ಗೂಡಿ ನಿರ್ಗಮಿಸಿದ್ದರು. ಜನವರಿ 2ರಂದು ಆರಂಭಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸ್ಪರ್ಧಾಳುಗಳನ್ನು ಒಂದು ಮನೆಯಲ್ಲಿ ಇರುವಂತೆ ಮಾಡಿ, ಅವರ ನಡವಳಿಕೆಗಳನ್ನು ಹಾಗೂ ದೈನಂದಿನ ಕೆಲಸಗಳಲ್ಲಿ ಉದ್ಭವವಾಗುವ ಸಮಸ್ಯೆಗಳನ್ನು ಇವರೆಲ್ಲ ಹೇಗೆ ನಿಭಾಯಿಸುವರು ಎಂಬುದನ್ನೆಲ್ಲ ಚಿತ್ರೀಕರಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸ್ಪರ್ಧಾಳುಗಳು ಶಿಲ್ಪಾ ವಿರುದ್ಧ ಮಾಡಲಾದ ಜನಾಂಗೀಯ ಟೀಕೆಗಳ ಬಗ್ಗೆ ಸುದ್ದಿ ಮಾಧ್ಯಮಗಳ ಕಣ್ಗಾವಲು ಸಂಸ್ಥೆಯಾದ `ಆಫ್ ಕಾಮ್'ಗೆ 40 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿದ್ದವು. ವಿವಾದಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಜನ ಪ್ರತಿನಿಧಿಗಳು ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಬ್ರಿಟನ್ನಿನ ಸುದ್ದಿ ಮಾಧ್ಯಮಗಳೂ ಈ ಘಟನೆಯ ವಿರುದ್ಧ ದನಿ ಎತ್ತಿದ್ದವು.
2007: ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾಗುವ ಸಲುವಾಗಿ `ಕರಾಟೆ ಭಾನುಮತಿ' ಎಂದೇ ಖ್ಯಾತರಾಗಿರುವ 47 ವರ್ಷದ ಮಹಿಳೆ ತಮಿಳುನಾಡಿನ ಚೆನ್ನೈಯಲ್ಲಿ ಗಾಜಿನ ಚೂರು ಹಾಗೂ 1525 ಮೊಳೆಗಳಿದ್ದ ಹಲಗೆಯಲ್ಲಿ ಪವಡಿಸಿ, ತನ್ನ ಮೈಮೇಲೆ 565 ಮೋಟಾರ್ ಸೈಕಲ್ಲುಗಳನ್ನು ಓಡಿಸಿಕೊಂಡರು. ಈ ದಾಖಲೆ ಸ್ಥಾಪನೆಯ ಒಂದು ಭಾಗವಾಗಿ ಹಲಗೆಯಲ್ಲಿ ಮಲಗಿದ್ದಾಗಲೇ ಆಕೆಯ ಮೇಲೆ 500 ಕಿ.ಗ್ರಾಂ. ತೂಕದ ಗ್ರಾನೈಟ್ ಕಲ್ಲನ್ನು ಇರಿಸಿ ಒಡೆದು ಹಾಕಲಾಯಿತು. ಈ ಸಾಹಸವನ್ನು ನಗರದ ಚಾಲೆಂಜರ್ಸ್ ಅಕಾಡೆಮಿ ಸಂಘಟಿಸಿತ್ತು. ಲಿಮ್ಕಾ ದಾಖಲೆ ಸ್ಥಾಪನೆ ಸಲುವಾಗಿ ಇನ್ನೊಂದು ಸಾಹಸದಲ್ಲಿ ಎಸ್. ರಾಜಾ ಅವರು 32 ಸೆಕೆಂಡುಗಳಲ್ಲಿ ತಮ್ಮ ಒಂದೇ ತೋಳನ್ನು 32 ಸಲ ಮೇಲಕ್ಕೆ ಬೀಸಿ ದಾಖಲೆ ನಿರ್ಮಿಸಿದರು. ಈ ಹಿಂದೆ ಮುಂಬೈಯ ನಾಯಕ್ ಅವರು 41.5 ಸೆಕೆಂಡಿನಲ್ಲಿ 27 ಸಲ ತಮ್ಮ ತೋಳನ್ನು ಮೇಲಕ್ಕೆ ಬೀಸಿ ದಾಖಲೆ ಸ್ಥಾಪಿಸಿದ್ದರು.
2007: `ಜರಾ ಹೊಲ್ಲೆ ಹೊಲ್ಲೆ ಚಲೊ ಮೇರೆ ಸಾಜನಾ', `ಯೇ ಲೊ ಮೇ ಹಾರಿ ಪಿಯಾ'ದಂತಹ ಸುಮಧುರ ಗೀತೆಗಳಿಗೆ ಸಂಗೀತ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಓಂಕಾರ್ ಪ್ರಸಾದ್ ನಯ್ಯರ್ (ಒ.ಪಿ.ನಯ್ಯರ್) (82) ಈದಿನ ಮಧ್ಯಾಹ್ನ ಟಿ.ವಿ. ನೋಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಆಸ್ಪತ್ರೆಗೆ ಒಯ್ಯುವ ದಾರಿಯಲ್ಲಿಯೇ ನಿಧನರಾದರು. ಕಳೆದ ಕೆಲ ವರ್ಷಗಳಿಂದ ತೆರೆಮರೆಯಲ್ಲಿಯೇ ಇದ್ದ ನಯ್ಯರ್ ತಮ್ಮ ಕುಟುಂಬದವರಿಂದ ದೂರವಾಗಿ ಆಪ್ತರಾಗಿದ್ದ ನಖ್ವಾ ಕುಟುಂಬದ ಜೊತೆ ಥಾಣೆಯಲ್ಲಿ ವಾಸಿಸುತ್ತಿದ್ದರು. ತಮ್ಮ ಪಂಜಾಬಿ ಸೊಗಡಿನ ಮಾಂತ್ರಿಕ ಸಂಗೀತದಿಂದ ನಯ್ಯರ್ ಅವರು ಸಂಗೀತ ಪ್ರೇಮಿಗಳು ಎಂದೂ ಮರೆಯಲಾರದ ಮಾಧುರ್ಯಭರಿತ ಚಿತ್ರಗೀತೆಗಳನ್ನು ನೀಡಿದ್ದರು. ತಮ್ಮ ಸಮಕಾಲೀನರಾದ ಭಾರತದ ಕೋಗಿಲೆ ಖ್ಯಾತಿಯ ಲತಾ ಮಂಗೇಶ್ಕರ್ ಜೊತೆ ಅವರು ಒಮ್ಮೆಯೂ ಕೆಲಸ ಮಾಡಿದವರಲ್ಲ. ಆದರೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. 50-60 ದಶಕದಲ್ಲಿ ಗಾಯಕ ಮಹಮ್ಮದ್ ರಫಿ ಜೊತೆ ಮಧುರ ಗೀತೆಗಳನ್ನು ನೀಡಿದ ನಯ್ಯರ್, ಆಶಾ ಭೋಂಸ್ಲೆ ವೃತ್ತಿಜೀವನ ಉತ್ತಂಗಕ್ಕೆ ಏರಲು ಕಾರಣರಾಗಿದ್ದರು. `ಮೇರಾ ನಾಮ್ ಚಿನ್ ಚಿನ್ ಚೂ', `ಆಯಿಯೇ ಮೆಹರಬಾನ್ ಬೈಠಿಯೇ ಜಾನೆಜಾ' (ಹೌರಾ ಬ್ರಿಜ್), `ಮಾಂಗ್ ಕೆ ಸಾತ್ ತುಮ್ಹಾರಾ' (ನಯಾ ದೌರ್)ದಂತಹ ಗೀತೆಗಳು ನಯ್ಯರ್ ಪ್ರತಿಭೆಗೆ ಸಾಕ್ಷಿ. 1926ರಲ್ಲಿ ಅವಿಭಜಿತ ಲಾಹೋರಿನಲ್ಲಿ ಜನಿಸಿದ್ದ ನಯ್ಯರ್, ದೇಶ ವಿಭಜನೆಯ ಬಳಿಕ ಲಾಹೋರಿನಿಂದ ಅಮೃತಸರಕ್ಕೆ ಬಂದು ನೆಲೆಸಿದರು. ಸಂಗೀತದ ಹುಚ್ಚಿನಿಂದ 1949ರಲ್ಲಿ ಚಿತ್ರನಗರಿ ಮುಂಬೈಗೆ ಬಂದಿಳಿದರು. ಐದಾರು ವರ್ಷದ ಹೋರಾಟದ ನಂತರ ಗುರುದತ್ ಅವರ `ಆರ್ ಪಾರ್' ನಯ್ಯರ್ ಅವರಿಗೆ ಬ್ರೇಕ್ ನೀಡಿತು. ಅಲ್ಲಿಂದ ಹಿಂದಿರುಗಿ ನೋಡದ ನಯ್ಯರ್ 50-60 ದಶಕದಲ್ಲಿ ಹಿಂದಿ ಚಿತ್ರರಂಗವನ್ನು ಅಕ್ಷರಶಃ ಆಳಿದರು. `ಹೌರಾಬ್ರಿಜ್', `ಕಾಶ್ಮೀರ್ ಕಿ ಕಲಿ', ಮಿ. ಆ್ಯಂಡ್ ಮಿಸೆಸ್ 55', `ಬಾಜ್' ನಯ್ಯರ್ ಸಂಗೀತಕ್ಕೆ ಕನ್ನಡಿ. 1957ರಲ್ಲಿ `ನಯಾ ದೌರ್' ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ನಯ್ಯರ್, ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.
2007: ಬಾಲಾಪರಾಧಿ ಆಶ್ರಯಧಾಮದ ಸುಮಾರು 46 ಮಕ್ಕಳು ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ, ಧಾಮದ ಕಟ್ಟಡದ ಗೋಡೆಯ ಒಂದು ಭಾಗವನ್ನು ಒಡೆದು ಪರಾರಿಯಾದ ಘಟನೆ ಬೆಂಗಳೂರು ನಗರದ ಮಡಿವಾಳದಲ್ಲಿ ನಡೆಯಿತು. ತಪ್ಪಿಸಿಕೊಂಡ ಬಾಲಕರಲ್ಲಿ ಕೆಲವರನ್ನು ಪೋಷಕರು ಆಶ್ರಯಧಾಮಕ್ಕೆ ಒಪ್ಪಿಸಿದರೆ, ಒಬ್ಬನನ್ನು ಕೋರಮಂಗಲದ ಫೋರಂ ವಾಣಿಜ್ಯ ಮಳಿಗೆ ಬಳಿ ಪೊಲೀಸರು ಬಂಧಿಸಿದರು.
2007: ಖ್ಯಾತ ಹಿಂದಿ ಸಾಹಿತಿ, ಪತ್ರಕರ್ತ ಪದ್ಮ ಭೂಷಣ ಕಮಲೇಶ್ವರ್ (74) ಹೃದಯಾಘಾತದಿಂದ ನವದೆಹಲಿಯ ತಮ್ಮ ಮನೆಯಲ್ಲಿ ನಿಧನರಾದರು. ಕಮಲೇಶ್ವರ್ ಅವರು ಸುಮಾರು 30ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. 100ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಅವರು ಸ್ಕ್ರಿಪ್ಟ್ ರಚಿಸಿದ್ದಾರೆ.
2007: ಚೀನಾದ ಶಾಂಘಾಯಿ ದಕ್ಷಿಣ ರೈಲ್ವೆ ನಿಲ್ದಾಣದಿಂದ ಅತಿವೇಗದ ಬುಲೆಟ್ ರೈಲುಗಾಡಿಯು ಶಾಂಘಾಯಿಯಿಂದ ಪ್ರಯಾಣ ಹೊರಟಿತು. ಗಂಟೆಗೆ 250 ಕಿ.ಮೀ. ಪ್ರಯಾಣ ಮಾಡಬಲ್ಲ ಈ ರೈಲುಗಾಡಿ ಶಾಂಘಾಯಿ- ಬೀಜಿಂಗ್ ಮಧ್ಯೆ ಸಂಚರಿಸುವುದು.
2007: ಧರ್ಮಸ್ಥಳದ ರತ್ನ ಮಂಟಪದಲ್ಲಿ ಭಗವಾನ್ ಬಾಹುಬಲಿಯ ಮೂರನೇ ಮಹಾಮಸ್ತಕಾಭಿಷೇಕವನ್ನು ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
2007: ಬೆಂಗಳೂರಿನ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಸಂಸ್ಥೆಯ ವತಿಯಿಂದ ಯಡತೊರೆ ಶ್ರೀ ಶಂಕರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಸುಮಾರು ಒಂದು ಲಕ್ಷ ಮಹಿಳೆಯರು ಶಂಕರಾಚಾರ್ಯರ `ಸೌಂದರ್ಯ ಲಹರಿ'ಯನ್ನು ಸಾಮೂಹಿಕವಾಗಿ ಪಾರಾಯಣ ಮಾಡಿ ಇತಿಹಾಸ ನಿರ್ಮಿಸಿದರು.
2006: ಕರ್ನಾಟಕದ ಮುಖ್ಯಮಂತ್ರಿ ಧರ್ಮಸಿಂಗ್ ರಾಜೀನಾಮೆ. ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರಿಂದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೂತನ ಸರ್ಕಾರ ರಚನೆಗೆ ಅಧಿಕೃತ ಆಹ್ವಾನಪತ್ರ. ಫೆ.3ರಂದು ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಜನತಾದಳ (ಎಸ್) - ಬಿಜೆಪಿ ಪರ್ಯಾಯ ಸರ್ಕಾರದ ರಚನೆಗೆ ನಿರ್ಧಾರ.
2006: ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ಜಿಗಿಯುವ ಆಕಾಶ್ ಕ್ಷಿಪಣಿಯನ್ನು ಬಾಲಸೂರ್ ಮಧ್ಯಂತರ ಪರೀಕ್ಷಾ ಕೇಂದ್ರದಲ್ಲಿ ಎರಡು ಬಾರಿ ಪರೀಕ್ಷಾರ್ಥವಾಗಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
2006: ಸಂಸದರ ಪ್ರದೇಶಾಭಿವೃದ್ಧಿ ದುರ್ಬಳಕೆಯ ತನಿಖೆ ಕುರಿತ ಸಂಸದೀಯ ಸಮಿತಿಯ ಮುಖ್ಯಸ್ಥರಾಗಿ ಕಿಶೋರ್ ಚಂದ್ರ ಅವರನ್ನು ನೇಮಿಸಲಾಯಿತು.
1986: ಸ್ಪೇಸ್ ಷಟಲ್ ನೌಕೆ `ಚಾಲೆಂಜರ್' ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಸ್ವಲ್ಪ ಹೊತ್ತಿನಲ್ಲೇ ಸ್ಫೋಟಗೊಂಡಿತು. ಶಾಲಾ ಶಿಕ್ಷಕಿ ಕ್ರಿಸ್ಟಾ ಮೆಕ್ಲಿಫ್ ಸೇರಿದಂತೆ ಅದರಲ್ಲಿದ್ದ ಎಲ್ಲ 7 ಮಂದಿ ಗಗನಯಾನಿಗಳೂ ದುರಂತದಲ್ಲಿ ಸಾವನ್ನಪ್ಪಿದರು.
1953: ಡಾ. ರಾಜೇಂದ್ರ ಪ್ರಸಾದ್ ಅವರು ಭಾರತದಲ್ಲಿ ಸಂಗೀತ, ನೃತ್ಯ, ನಾಟಕ ಅಭಿವೃದ್ಧಿಗಾಗಿ ನವದೆಹಲಿಯಲ್ಲಿ ಸಂಗೀತ ನಾಟಕ ಅಕಾಡೆಮಿಯನ್ನು ಉದ್ಘಾಟಿಸಿದರು.
1950: ಭಾರತದ ಸುಪ್ರೀಂಕೋರ್ಟ್ ನವದೆಹಲಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ಸಂಸತ್ ಕಟ್ಟಡದ ಚೇಂಬರ್ ಆಫ್ ಪ್ರಿನ್ಸಸ್ಸಿನಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ದಿ ಫೆಡರಲ್ ಕೋರ್ಟ್ ಆಫ್ ಇಂಡಿಯಾ ಈ ಸ್ಥಳದಲ್ಲೇ 1937ರಿಂದ 1950ರವರೆಗೆ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಿತ್ತು. ಈಗಿನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವವರೆಗೆ ಸುಪ್ರೀಂಕೋರ್ಟ್ ಕೂಡಾ ಇದೇ ಸ್ಥಳದಿಂದ ಕಾರ್ಯ ನಿರ್ವಹಿಸಿತು.
1945: ರಂಗಭೂಮಿಯ ಪ್ರತಿಭಾನ್ವಿತ ನಟ, ಸಂಘಟಕ ರಾಜಶೇಖರ ಕದಂಬ ಅವರು ಕದಂಬರದಾಸಪ್ಪ- ವೆಂಕಟಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆಯ ಗೊಟ್ಟಿಗೆರೆಯಲ್ಲಿ ಜನಿಸಿದರು.
1933: ಲಂಡನ್ನಿನ ವಾಲ್ ಡೋರ್ಫ್ ಹೋಟೆಲಿನಲ್ಲಿ ಕೇಂಬ್ರಿಜಿನ ಭಾರತೀಯ ಮುಸ್ಲಿಂ ಪದವೀಧರ ರಹಮತ್ ಅಲಿ ಚೌಧರಿ ಭಾರತದ ವಿಭಜನೆಯ ಪ್ರಸ್ತಾವವಿದ್ದ ಟಿಪ್ಪಣಿಯೊಂದನ್ನು ಓದಿದ. `ನೌ ಆರ್ ನೆವರ್' ಎಂಬ ಪುಟ್ಟ ಪುಸ್ತಕವೊಂದನ್ನು ಬರೆದಿದ್ದ ಆತ ಪಾಕಿಸ್ಥಾನಕ್ಕೆ ಈ ಹೆಸರು ಕೊಟ್ಟಿದ್ದ. (ಪಾಕಿಸ್ಥಾನ ಅಥವಾ `ಲ್ಯಾಂಡ್ ಆಫ್ ಪ್ಯೂರ್' ಪಂಜಾಬಿಗೆೆ ಪಿ, ಆಫ್ಘಾನಿಯಾಕ್ಕೆ ಎ, ವಾಯುವ್ಯ ಗಡಿ ಪ್ರಾಂತಕ್ಕೆ ರಹಮತ್ ಅಲಿ, ಕಾಶ್ಮೀರಕ್ಕೆ ಕೆ, ಸಿಂದ್ ಗೆ ಎಸ್, ಬಲೂಚಿಸ್ಥಾನಕ್ಕೆ ತಾನ್)
1931: ಖ್ಯಾತ ಸಾಹಿತಿ ಸಾ.ಶಿ. ಮರುಳಯ್ಯ ಅವರು ಶಿವರುದ್ರಯ್ಯ- ಸಿದ್ದಮ್ಮ ದಂಪತಿಯ ಪುತ್ರನಾಗಿ ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಈದಿನ ಜನಿಸಿದರು.
1930: ಭಾರತದ ಖ್ಯಾತ ಸಂಗೀತಗಾರ ಮೋತಿರಾಮ್ ಜಸ್ ರಾಜ್ (1930) ಅವರು ಹುಟ್ಟಿದರು.
1925: ಭಾರತೀಯ ವಿಜ್ಞಾನಿ ಭಾರತೀಯ ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ರಾಜಾ ರಾಮಣ್ಣ (1925) ಹುಟ್ಟಿದ ದಿನ.
1899: ಭಾರತದ ಮೊತ್ತ ಮೊದಲ ಸೇನಾದಂಡನಾಯಕ ಫೀಲ್ಡ್ ಮಾರ್ಷಲ್ ಕೊಡಂದೇರ ಮಾದಪ್ಪ ಕಾರಿಯಪ್ಪ (1899-1993) ಅವರು ಜನಿಸಿದರು.
1865: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ (1865-1928) ಹುಟ್ಟಿದರು.
1809: ಜರ್ಮನಿಯ ಸಂಸ್ಕೃತ ವಿದ್ವಾಂಸ ಥಿಯೋಡೋರ್ ಬೆನ್ ಫೇ (1809-1881) ಹುಟ್ಟಿದರು. ಪ್ರಾಣಿಗಳ ಕಥೆಗಳನ್ನು ಒಳಗೊಂಡ ಭಾರತದ `ಪಂಚತಂತ್ರ' ಸಂಗ್ರಹ ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿದೆ.
No comments:
Post a Comment