ಇಂದಿನ ಇತಿಹಾಸ History Today ಜನವರಿ 06
2019: ಕೌಲಾಲಂಪುರ: ರಶ್ಯಾದ ಮಾಜಿ ಸೌಂದರ್ಯ ರಾಣಿಯನ್ನು ಮದುವೆಯಾಗಿದ್ದಾರೆ
ಎಂಬ ಪುಕಾರುಗಳ ನಡುವೆ ಮಲೇಶ್ಯಾದ ದೊರೆ ಸುಲ್ತಾನ್ ಮುಹಮ್ಮದ್ ಅವರು ಸಿಂಹಾಸನ ತ್ಯಾಗ ಮಾಡುವ ಮೂಲಕ ತಮ್ಮ ಭವಿಷ್ಯ ಕುರಿತ ಹಲವಾರು ವಾರಗಳ ಊಹಾಪೋಹಗಳಿಗೆ ತೆರೆ ಎಳೆದರು. ಅರಮನೆ ಅಧಿಕಾರಿಗಳು ಈ ವಿಷಯವನ್ನು ಬಹಿರಂಗ ಪಡಿಸಿದರು. ಸಿಂಹಾಸನ ತ್ಯಾಗದ ನಿರ್ಧಾರದೊಂದಿಗೆ ಐದನೇ ಸುಲ್ತಾನ್ ಮುಹಮ್ಮದ್ ಅವರು, ೧೯೫೭ರಲ್ಲಿ ಬ್ರಿಟನ್ನಿನಿಂದ ಸ್ವಾತಂತ್ರ್ಯ ಪಡೆದಿರುವ ಮುಸ್ಲಿಂ ಬಾಹುಳ್ಯದ ರಾಷ್ಟ್ರದಲ್ಲಿ ಸಿಂಹಾಸನ ತ್ಯಜಿಸಿದ ಮೊದಲ ದೊರೆ ಎನಿಸಿದರು. ದೊರೆ ಸುಲ್ತಾನ್ ಮುಹಮ್ಮದ್ ಅವರು ಜನವರಿ ೬ರಿಂದ ಅನ್ವಯವಾಗುವಂತೆ ೧೫ನೇ ದೊರೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ರಾಷ್ಟ್ರೀಯ ಅರಮನೆ ತಿಳಿಸಿರುವುದಾಗಿ ಅರಮನೆಯಿಂದ ನೀಡಲಾದ ಹೇಳಿಕೆ ತಿಳಿಸಿತು. ೪೯ರ ಹರೆಯದ ದೊರೆಯ ಕ್ರಮಕ್ಕೆ ಯಾವುದೇ ಕಾರಣವನ್ನೂ ಹೇಳಿಕೆ ನಮೂದಿಸಲಿಲ್ಲ. ಆದರೆ
೨೦೧೬ರಲ್ಲಿ ಸಿಂಹಾಸನ ಏರಿದ ದೊರೆ, ಕಳೆದ ನವೆಂಬರಿನಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಗೈರುಹಾಜರಾದಂದಿನಿಂದ ಅವರ ಆಡಳಿತ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಎದ್ದಿತ್ತು. ಆ ಬಳಿಕ ಅವರು ರಶ್ಯಾದ ಮಾಜಿ ಸೌಂದರ್ಯ ರಾಣಿ ’ಮಿಸ್ ಮಾಸ್ಕೋ’ ಅವರನ್ನು ಮದುವೆಯಾಗಿದ್ದಾರೆ ಎಂಬ ಸುದ್ದಿಗಳು ಅಂತರ್ಜಾಲದಲ್ಲಿ ಹರಿದಾಡಿದವು. ಆದರೆ ಮಲೇಶ್ಯಾದ ಅರಮನೆ ಅಧಿಕಾರಿಗಳು ಪುಕಾರುಗಳ ಬಗ್ಗೆ ಚಕಾರ ಎತ್ತಲಿಲ್ಲ. ರಾಷ್ಟ್ರದ ಇಸ್ಲಾಮಿಕ್ ಅರಸೊತ್ತಿಗೆಯವರು ವಿಶೇಷ ಸಭೆ ನಡೆಸಿದ ಬಳಿಕ ಈ ವಾರ ದೊರೆ ಮುಹಮ್ಮದ್ ಅವರ ಭವಿಷ್ಯದ ಬಗ್ಗೆ ಊಹಾಪೋಹಗಳು ತೀವ್ರಗೊಂಡವು. ಮಲೇಶ್ಯಾವು ಸಂವಿಧಾನಬದ್ಧ ರಾಜಪ್ರಭುತ್ವವನ್ನು ಹೊಂದಿದ್ದು, ಶತಮಾನಗಳಷ್ಟು ಹಳೆಯದಾದ ಇಸ್ಲಾಮಿಕ್ ರಾಜಪ್ರಭುತ್ವದ ನೇತೃತ್ವದಲ್ಲಿ ಇರುವ ಮಲೇಶ್ಯಾದ ೯ ರಾಜ್ಯಗಳ ಆಡಳಿತಗಾರರ ಮಧ್ಯೆ ಪ್ರತಿ ಐದು ವರ್ಷಕ್ಕೊಮ್ಮೆ ಸಿಂಹಾಸನ ಬದಲಾವಣೆಯ ವಿಶಿಷ್ಠ ವ್ಯವಸ್ಥೆಯನ್ನು ಹೊಂದಿದೆ.
2019: ನವದೆಹಲಿ: ರಫೇಲ್ ಯುದ್ಧ ವಿಮಾನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ನಡುವಣ ’ಯುದ್ಧ’ ಎಗ್ಗಿಲ್ಲದೆ ಮುಂದುವರೆಯಿತು. ರಫೇಲ್ ವಿಷಯಕ್ಕೆ ಸಂಬಂಧಿಸಿದಂಎ ಸಂಸತ್ತಿನಲ್ಲಿ ’ಸುಳ್ಳು’ ಹೇಳಿದ್ದಕ್ಕಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದರು. ಇದಕ್ಕೆ ಎದಿರೇಟು ನೀಡಿದ ಸಚಿವೆ ಸೀತಾರಾಮನ್ ಅವರು ’ಎಬಿಸಿಗಳಿಂದ ಶುರು ಮಾಡಿಕೊಳ್ಳಿ’ ಎಂದು
ರಾಹುಲ್ ಗಾಂಧಿ ಅವರಿಗೆ ಸಲಹೆ ಮಾಡಿದರು. ‘ನೀವು ಒಂದು ಸುಳ್ಳು ಹೇಳಿದಾಗ, ಮೊದಲ ಸುಳ್ಳನ್ನು ಸಮರ್ಥಿಸಲು ಹೆಚ್ಚು ಸುಳ್ಳುಗಳನ್ನು ಹೆಣೆಯಬೇಕಾಗುತ್ತದೆ.
ಪಿಎಂ (ಪ್ರಧಾನ ಮಂತ್ರಿ) ಅವರ ರಫೇಲ್
ಸುಳ್ಳನ್ನು ರಕ್ಷಿಸುವ ಭರದಲ್ಲಿ ಆರ್ ಎಂ (ರಕ್ಷಣಾ ಸಚಿವರು) ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ. ನಾಳೆ ಆರ್ ಎಂ ಅವರು ಎಚ್ ಎಎಲ್ ಗೆ ಸರ್ಕಾರ ನೀಡಿದ ೧ ಲಕ್ಷ ಕೋಟಿ ರೂಪಾಯಿಗಳ ಆದೇಶ ಗಳನ್ನು (ಆರ್ಡರ್) ಸಂಸತ್ತಿನ ಮುಂದೆ ಇರಿಸಬೇಕು, ಇಲ್ಲವೇ ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್ ಅಧ್ಯಕ್ಷರು ಟ್ವೀಟ್ ಮಾಡಿದರು. ಸೀತಾರಾಮನ್ ಅವರು ಲೋಕಸಭೆಯಲ್ಲಿ ರಫೇಲ್ ಯುದ್ಧ ವಿಮಾನ ಕುರಿತು ನಡೆದ ಚರ್ಚೆಯ ಕಾಲದಲ್ಲಿ ಪ್ರಸ್ತಾಪಿಸಿದ ಒಂದು ಲಕ್ಷ ಕೋಟಿ ರೂಪಾಯಿಗಳ ಆರ್ಡರ್ ಗಳನ್ನು ಔಪಚಾರಿಕಗೊಳಿಸಲು ಭಾರತದ ಮುಂಚೂಣಿಯ ಸರ್ಕಾರಿ ರಂಗದ ರಕ್ಷಣಾ ಸಂಸ್ಥೆ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಕಾತರದಿಂದ ಕಾಯುತ್ತಿದೆ ಎಂದು ಪತ್ರಿಕೆಯೊಂದರಲ್ಲಿ
ಬಂದಿರುವ ವರದಿಯ ಮೇಲೆ ಸಚಿವೆ ನಿರ್ಮಲಾ ಅವರನ್ನು ಪ್ರಶ್ನಿಸುತ್ತಾ ರಾಹುಲ್ ಗಾಂಧಿ ಅವರು ಹೇಳಿದರು. ಎಚ್ಎಎಲ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿದ ಪತ್ರಿಕಾ ವರದಿಯು ಈವರೆಗೆ ಒಂದೇ ಒಂದು ರೂಪಾಯಿಯ ಏಕೈಕ ನೈಜ ಆರ್ಡರ್ ನ್ನು ಕೂಡಾ ಕಂಪೆನಿಗೆ ನೀಡಲಾಗಿಲ್ಲ ತಿಳಿಸಿತ್ತು. ರಾಹುಲ್ ಗಾಂಧಿ ಅವರ ’ರಾಜೀನಾಮೆ ಆಗ್ರಹ’ದ ಕೆಲವು ಗಂಟೆಗಳ ಬಳಿಕ, ರಕ್ಷಣಾ ಸಚಿವರು ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರಿಕಾವರದಿಯನ್ನು
ಪೂರ್ತಿಯಾಗಿ ಓದಿಕೊಳ್ಳಿ ಎಂದು ಸಲಹೆ ಮಾಡಿದರು. ವರದಿಯಲ್ಲಿ ’ಸೀತಾರಾಮನ್ ಅವರು ಆರ್ಡರ್ಗಳಿಗೆ ಸಹಿ ಮಾಡಲಾಗಿದೆ ಎಂದು ಪ್ರತಿಪಾದಿಸಿಲ್ಲ.
ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ’ ಎಂದು ಹೇಳಿದ್ದಾರೆ ಎಂದು ತಿಳಿಸಲಾಗಿದೆ. ಆ ಬಳಿಕ ಸಚಿವರ ಕಚೇರಿಯು ಮಾಡಿದ ಟ್ವೀಟ್ ರಾಹುಲ್ ಗಾಂಧಿ ಅವರಿ ’ಎಬಿಸಿಗಳೊಂದ ಶುರು ಮಾಡಿ’ ಎಂದು ಛೇಡಿಸಿತು. ರಾಹುಲ್ ಗಾಂಧಿಯವರು ’ಸೀತಾರಾಮನ್ ಅವರು ವಿವಾದಾತ್ಮಕ ವ್ಯವಹಾರಕ್ಕೆ ಸಂಬಂಧಿಸಿದಂತೆ ತಮ್ಮ ಪ್ರಶ್ನೆಗಳಿಗೆ ಉತ್ತರ ಕೊಡದೆ ತಪ್ಪಿಸಿಕೊಂಡಿದ್ದಾರೆ ಎಂದು ಆಪಾದಿಸಿದ್ದರು. ಆದರೆ ಸೀತಾರಾಮನ್ ಅವರು ಭ್ರಷ್ಟಾಚಾರ ಆಪಾದನೆಗಳನ್ನು ತಳ್ಳಿಹಾಕಿ ’ಕಾಂಗ್ರೆಸ್ ಅಧ್ಯಕ್ಷರು ರಾಷ್ಟ್ರದ ದಾರಿ ತಪ್ಪಿಸುತ್ತಿದ್ದಾರೆ’ ಎಂದು ದೂರಿದ್ದರು. ಇದಕ್ಕೆ ಮುನ್ನ ಫ್ರಾನ್ಸಿನಿಂದ ೩೬ ರಫೇಲ್ ಯುದ್ಧ ವಿಮಾನ ಪಡೆಯಲು ರೂಪಿಸಲಾಗಿರುವ ಒಪ್ಪಂದವನ್ನು ಸಮರ್ಥಿಸಿ ಸೀತಾರಾಮನ್ ಅವರು ಸಂಸತ್ತಿನಲ್ಲಿ ಚರ್ಚೆ ಕಾಲದಲ್ಲಿ ಮುಂದಿಟ್ಟ ವಾದಗಳನ್ನು ತಳ್ಳಿಹಾಕಿದ ರಾಹುಲ್ ಗಾಂಧಿಯವರು ವಿವಾದಾತ್ಮಕ ವ್ಯವಹಾರಕ್ಕೆ ಸಂಬಂಧಿಸಿದಂತೆ ತಮ್ಮ ಪ್ರಶ್ನೆಗಳಿಗೆ ಸಚಿವರು ಉತ್ತರಿಸದೆ ತಪ್ಪಿಸಿಕೊಂಡಿದ್ದಾರೆ ಎಂದು ದೂರಿದ್ದರು. ’ಸುಳ್ಳು ಹೇಳುತ್ತಿರುವ ರಕ್ಷಣಾ ಸಚಿವರ ಸುಳ್ಳುಗಳು ಬಯಲಾಗಿವೆ! ರಕ್ಷಣಾ ಸಚಿವರು ’ಎಚ್‌ಎಎಲ್ ಗೆ ಒಂದು ಲಕ್ಷ ಕೋಟಿ ರೂಪಾಯಿ ಬೆಲೆಯ ಸಂಗ್ರಹಣೆ ಆದೇಶ (ಪ್ರೊಕ್ಯೂರ್ ಮೆಂಟ್ ಆರ್ಡರ್) ಒದಗಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.!
ಒಂದು ನಯಾಪೈಸೆ ಕೂಡಾ ಬಂದಿಲ್ಲ, ಒಂದೇ ಒಂದು ಆದೇಶಕ್ಕೂ ಸಹಿ ಮಾಡಲಾಗಿಲ್ಲ ಎಂದು ಎಚ್ ಎಎಲ್ ಹೇಳುತ್ತಿದೆ !’ ’ಇದೇ ಮೊದಲ ಬಾರಿಗೆ ಎಚ್ ಎಎಲ್ ವೇತನ ಪಾವತಿಗೆ ೧೦೦೦ ಕೋಟಿ ರೂಪಾಯಿ ಸಾಲ ಪಡೆಯಬೇಕಾಗಿ ಬಂದಿದೆ’ ಎಂದು
ಕಾಂಗ್ರೆಸ್ ಮುಖ್ಯ ವಕ್ತಾರ ರಣ್ ದೀಪ್ ಸುರ್ಜೆವಾಲ ಅವರೂ ಟ್ವೀಟ್ ಮಾಡಿದ್ದರು. ’ಒಂದೇ ಒಂದು ರೂಪಾಯಿ ಕೂಡಾ ಎಚ್ಎಎಲ್ ಗೆ ಬಂದಿಲ್ಲ, ಒಂದೇ ಒಂದು ಆದೇಶವೂ ಈವರೆಗೂ ಬಂದಿಲ’ ಎಂಬುದಾಗಿ ಮಾಧ್ಯಮ ವರದಿಯೊಂದು ಪ್ರತಿಪಾದಿಸಿದ್ದನ್ನು ಸುರ್ಜೆವಾಲ ಉಲ್ಲೇಖಿಸಿದ್ದರು.
2019: ನವದೆಹಲಿ: ೨೦೧೯ರ ಲೋಕಸಭಾ ಚುನಾವಣೆಗಳಿಗಾಗಿ
ಕೇಸರಿ ಪಕ್ಷದ ಸಿದ್ಧತೆಗಳಿಗೆ ಚಾಲನೆ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ೨೦ ಸದಸ್ಯರ ’ಸಂಕಲ್ಪ ಪತ್ರ’
(ಪ್ರಣಾಳಿಕೆ) ಸಮಿತಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ
ನೇಮಕ ಮಾಡಿದರು. ಪ್ರಣಾಳಿಕೆ ಸಮಿತಿ ಸೇರಿದಂತೆ ಒಟ್ಟು ೧೭ ಸಮಿತಿಗಳನ್ನು ಶಾ ರಚಿಸಿದರು. ಕೇಂದ್ರ
ಸಚಿವರಾದ ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್, ರವಿ ಶಂಕರ ಪ್ರಸಾದ್, ಪೀಯೂಶ್ ಗೋಯೆಲ್, ಮುಖ್ತಾರ್ ಅಬ್ಬಾಸ್ ನಖ್ವಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಸಮಿತಿಯ ಇತರ ಸದಸ್ಯರಿಗೆ ಪಕ್ಷದ ಚುನಾವಣಾ ಪ್ರಣಾಳಿಕೆ ಸಿದ್ಧ ಪಡಿಸುವ ಹೊಣೆಗಾರಿಕೆ ವಹಿಸಲಾಗಿದೆ ಎಂದು ಪಕ್ಷದ ಹೇಳಿಕೆ ತಿಳಿಸಿತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಾಮಾಜಿಕ ಮತ್ತು ಸ್ವಯಂಸೇವಾ ಸಂಘಟನೆಗಳನ್ನು ಸಂಪರ್ಕಿಸುವ ಸಮಿತಿಗೆ ಮುಖ್ಯಸ್ಥರಾಗಿದ್ದರೆ, ಅವರ ಸಂಪುಟ ಸಹೋದ್ಯೋಗಿ ಸುಷ್ಮಾ ಸ್ವರಾಜ್ ಅವರು ಚುನಾವಣೆಗಾಗಿ ಪ್ರಚಾರ ಸಾಹಿತ್ಯ ಸಿದ್ಧ ಪಡಿಸುವ ಸಮಿತಿಗೆ ಮುಖ್ಯಸ್ಥರಾದರು. ರವಿಶಂಕರ ಪ್ರಸಾದ್ ಅವರು ಪಕ್ಷದ ಮಾಧ್ಯಮ ತಂಡದ ಮುಖ್ಯಸ್ಥರಾಗಿದ್ದು,
ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು ಬುದ್ಧಿ ಜೀವಿಗಳ ಸಭೆಗಳನ್ನು ಸಂಘಟಿಸುವ ಸಮಿತಿಯ ನೇತೃತ್ವ ವಹಿಸುವರು. ಅತ್ಯಂತ ಕುತೂಹಲಕರವಾಗಿ, ಬಿಜೆಪಿಯು ಮೂವರು ಸದಸ್ಯರ ’ಬೈಕ್ ರ್‍ಯಾಲಿ ಸಮಿತಿ’ಯೊಂದನ್ನೂ ರಚಿಸಿತು. ಸಂಜೀವ ಚೌರಾಸಿಯಾ, ಪ್ರದೀಪ್ ಸಿಂಗ್ ಬಘೇಲಾ ಮತ್ತು ಸೌರಭ್ ಚೌಧರಿ ಅವರು ’ಬೈಕ್ ರಾಲಿ ಸಮಿತಿ’ಯ ಸದಸ್ಯರಾಗಿದ್ದಾರೆ. ಸಮಿತಿಯ ವಿವರ ಮತ್ತು ಕೆಲಸಗಳೇನು ಎಂಬುದನ್ನು ತಿಳಿಸಲಿಲ್ಲ.
2019: ತಿರುಚಿ: ತಮಿಳುನಾಡಿನ ಪುದುಕೊಟ್ಟಾಯಿ ಜಿಲ್ಲೆಯಲ್ಲಿನ ತಿರುಮಾಯಮ್ ಬೈಪಾಸಿನಲ್ಲಿ ವ್ಯಾನಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೆಲಂಗಾಣ ರಾಜ್ಯದ ೧೦ ಮಂದಿ ಅಯ್ಯಪ್ಪ ಭಕ್ತರು ಅಸು ನೀಗಿದ್ದು, ಇತರ ಐವರು ಗಾಯಗೊಂಡರು. ಅಯ್ಯಪ್ಪ ಭಕ್ತರು ಪ್ರಯಾಣ ಮಾಡುತ್ತಿದ್ದ ವ್ಯಾನಿಗೆ ಟ್ರೇಲರ್ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಅಪಘಾತ ಸಂಭವಿಸಿತು. ಮಧ್ಯಾಹ್ನ ೨.೩೦ರ ವೇಳೆಗೆ ಈ ಭೀಕರ ಅಪಘಾತ ಸಂಭವಿಸಿತು. ೧೫ ಮಂದಿ ಅಯ್ಯಪ್ಪ ಭಕ್ತರು ಶಬರಿಮಲೈಯಿಂದ ತೆಲಂಗಾಣಕ್ಕೆ ಎಪಿ೨೮ ಟಿಡಿ ೬೮೦೯ ರಿಜಿಸ್ಟ್ರೇಷನ್ ನಂಬರಿನ ವ್ಯಾನಿನಲ್ಲಿ ವಾಪಸ್ ಪಯಣ ಹೊರಟಿದ್ದರು. ಎದುರಿನಿಂದ ಬಂದ ಟ್ರೇಲರ್ ಲಾರಿ ವ್ಯಾನಿಗೆ ಮುಖಾಮುಖಿ ಡಿಕ್ಕಿ ಹೊಡೆಯಿತು. ಲಾರಿಯ ಚಾಲಕ ವಾಹನವನ್ನು ಬಿಟ್ಟು ಘಟನಾ ಸ್ಥಳದಿಂದ ಪರಾರಿಯಾದ. ವ್ಯಾನಿನ
ಒಳಗಿದ್ದವರ ಪೈಕಿ ಐವರು ಸ್ಥಳದಲ್ಲೇ ಸಾವನ್ನಪ್ಪಿದರು. ಇತರ ಐವರು ತಿರುಮಾಯಂನ ಸರ್ಕಾರಿ ಆಸ್ಪತ್ರೆಗೆ ಒಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದರು.
ಪುದುಕೊಟ್ಟಾಯಿ ಜಿಲ್ಲಾಧಿಕಾರಿ ಎಸ್. ಗಣೇಶ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೆಲ್ವರಾಜ್ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ತಿರುಮಾಯಮ್ ಪೊಲೀಸರು ಪ್ರಕರಣ ದಾಖಲಿಸಿದರು.
2019: ನವದೆಹಲಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮಗನ ಅಭ್ಯುದಯದತ್ತ ಎಷ್ಟೊಂದು ಗಮನ ಹರಿಸಿದ್ದಾರೆಂದರೆ
ಅವರು ರಾಜ್ಯ ಅಸ್ತಂಗತಗೊಳ್ಳಲು ಬೇಕಾದ ಪರಿಸರ ನಿರ್ಮಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟಾಂಗ್ ನೀಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಪಕ್ಷದ ಕಾರ್ಯಕರ್ತರ ಜೊತೆ ಸಂವಹನ ನಡೆಸಿದ ಪ್ರಧಾನಿ ’ಮುಖ್ಯಮಂತ್ರಿಯವರು
ತಮ್ಮ ಪುತ್ರನ ಅಭ್ಯುದಯಕ್ಕೆ ಎಷ್ಟು ಗಮನ ಹರಿಸುತ್ತಿದ್ದಾರೆ
ಎಂದರೆ, ತಮ್ಮ ನೀತಿಗಳು ಮತ್ತು ಭ್ರಷ್ಟಾಚಾರಗಳು ರಾಜ್ಯದ ಅಸ್ತಂಗತಕ್ಕೆ ಕಾರಣವಾಗುತ್ತವೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ.
ಅವರು ಆಂಧ್ರಪ್ರದೇಶದ ಇತರ ಪುತ್ರರು ಮತ್ತು ಪುತ್ರಿಯರ ಬಗ್ಗೆ ಮರೆತು ಬಿಟ್ಟಿದ್ದಾರೆ’ ಎಂದು ಹೇಳಿದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಮೇಲಿನ ತಮ್ಮ ದಾಳಿಯಲ್ಲಿ ಮೋದಿಯವರು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಅವರನ್ನು ಉಲ್ಲೇಖಿಸಿ, ರಾಮರಾವ್ ಅವರು ತೆಲುಗು ಸ್ವಾಭಿಮಾನದ ನಿಜವಾದ ಐಕಾನ್ ಎಂದು ಹೇಳಿದರು. ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿ ಇರುವ ವ್ಯಕ್ತಿಗಳು ಜನತೆಯನ್ನು ವಂಚಿಸುತ್ತಿರುವುದು
ಇದೇ ಮೊದಲಲ್ಲ. ಎನ್ಟಿಆರ್ ಅವರನ್ನು ಒಂದು ಬಾರಿಯಲ್ಲ ಎರಡು ಬಾರಿ ವಂಚಿಸಿದವರಿಂದ ನೀವು ಏನನ್ನು ನಿರೀಕ್ಷಿಸಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದರು. ’ಇಂದು
ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿ ಇರುವವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ಎಷ್ಟೊಂದು ಆಸಕ್ತರಾಗಿದ್ದಾರೆ
ಎಂದರೆ ಅವರು ತೆಲುಗು ಹಿತಾಸಕ್ತಿಗಳಿಗೆ
ದ್ರೋಹ ಬಗೆದರು ಮತ್ತು ಎನ್ ಟಿಆರ್ ಅವರ ಬೆನ್ನಿಗೆ ಎರಡನೇ ಬಾರಿ ಇರಿದರು’ ಎಂದು
ನುಡಿದ ಮೋದಿ, ’ತೆಲುಗು ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಮತ್ತು ತೆಲುಗು ಹಿತಾಸಕ್ತಿಗಳಿಗೆ
ದ್ರೋಹ ಬಗೆದದ್ದಕ್ಕಾಗಿ ಎನ್ಟಿಆರ್ ಅವರು ಎಂದಿಗೂ ಕಾಂಗ್ರೆಸ್ಸನ್ನು ಕ್ಷಮಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಎನ್ ಟಿಆರ್ ಅವರಿಗೆ ನಿಜವಾದ ಶ್ರದ್ಧಾಂಜಲಿ ಮತ್ತು ಎನ್ಟಿಆರ್ ಅವರು ಯಾವುದಕ್ಕಾಗಿ ನಿಂತಿದ್ದರೋ ಅದಕ್ಕೆ ನಿಜವಾದ ಗೌರವ ನೀಡುವುದು ಎಂದರೆ ಎನ್ ಟಿಆರ್ ಅವರ ಮೌಲ್ಯಗಳಿಗೆ ದ್ರೋಹ ಬಗೆದವರನ್ನು ಚುನಾವಣೆಯಲ್ಲಿ ಅಧಿಕಾರದಿಂದ ಇಳಿಸುವುದು, ಎನ್ ಟಿಆರ್ ಅವರ ನೆನಪುಗಳಿಗೆ ವಂದಿಸಿ, ಅವರ ಕೊಡುಗೆಯ ಪರ ನಿಲ್ಲುವುದು’ ಎಂದು
ಮೋದಿ ನುಡಿದರು. ಆಂಧ್ರ
ಮುಖ್ಯಮಂತ್ರಿಯ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದ ಪ್ರಧಾನಿ ’ಇಂದು ನಾನು ನಿಮ್ಮನ್ನು ಕೇಳುತ್ತಿದ್ದೇನೆ,
ಆಂಧ್ರಪ್ರದೇಶದಲ್ಲಿ ಅಧಿಕಾರವನ್ನು ಹಿಡಿದಿರುವ ಒಂದು ಕುಟುಂಬದಿಂದ ತೆಲುಗು ಸ್ವಾಭಿಮಾನ ಹೇಗೆ ಇರಲು ಸಾಧ್ಯ? ಜನರನ್ನು ನಿರ್ಲಕ್ಷಿಸುವವರಿಂದ
ಮತ್ತು ಅಧಿಕಾರಕ್ಕಾಗಿ ಜನರ ಹಿತಾಸಕ್ತಿಗಳನ್ನು
ಬಲಿ ಕೊಡುತ್ತಿರುವವರಿಂದ
ಹೇಗೆ ತೆಲುಗು ಸ್ವಾಭಿಮಾನ ಉಳಿಯಲು ಸಾಧ್ಯ? ನೀವು ಅಧಿಕಾರ ಕಳೆದುಕೊಳ್ಳುವಿರಿ
ಎಂಬ ಒಂದೇ ಕಾರಣಕ್ಕಾಗಿ ಸುಳ್ಳು ಹೇಳುತ್ತಾ ಮೋದಿಯನ್ನು ಹಗಲು ರಾತ್ರಿ ದೂಷಿಸುವುದರಿಂದ ತೆಲುಗು ಸ್ವಾಭಿಮಾನ ಬೆಳಗಲು ಹೇಗೆ ಸಾಧ್ಯ? ಮುಖ್ಯಮಂತ್ರಿಯಾಗಿ ವಿಫಲರಾಗಿರುವ ವ್ಯಕ್ತಿಯು ಪ್ರಧಾನಿಯಾಗುವ ಹಗಲುಗನಸು ಕಾಣುವುದರಿಂದ ತೆಲುಗು ಸ್ವಾಭಿಮಾನ ಹೇಗೆ ಉಳಿಯಲು ಸಾಧ್ಯ?’ ಎಂದು ಪ್ರಶ್ನೆಗಳ ಮಳೆಗರೆದರು. ಎನ್
ಟಿ ಆರ್ ಅವರು ಮಾಡಿದ್ದಂತೆ ರಾಜ್ಯದ ಎಲ್ಲ ಜನರ ಬಗ್ಗೆ ನಿಮಗೆ ಗೌರವ ಇದ್ದಾಗ ಮಾತ್ರ ತೆಲುಗು ಸ್ವಾಭಿಮಾನದ ಪುನಃಸ್ಥಾಪನೆ ಸಾಧ್ಯ. ಆಂಧ್ರಪ್ರದೇಶದ ಎಲ್ಲ ಇತರೆ ಹಿಂದುಳಿದವರು (ಒಬಿಸಿ), ದಲಿತರು, ಬುಡಕಟ್ಟು ಜನರ ಪರವಾಗಿ ನೀವು ಮಾತನಾಡಿದಾಗ ಮಾತ್ರ ತೆಲುಗು ಸ್ವಾಭಿಮಾನದ ಪುನಃಸ್ಥಾಪನೆ ಸಾಧ್ಯ ಎಂದು ಪ್ರಧಾನಿ ಹೇಳಿದರು. ನಿಮ್ಮ ಸ್ವಂತ ರಾಜಕೀಯ ಹಿತಾಸಕ್ತಿಗಳು ಮತ್ತು ಅಧಿಕಾರ ಲಾಲಸೆಯನ್ನು ಮೀರಿ ಆಂಧ್ರಪ್ರದೇಶದ ಹಿತಾಸಕ್ತಿಗಳಿಗಾಗಿ ನೀವು ನಿಂತಾಗ ಮಾತ್ರ ತೆಲುಗು ಸ್ವಾಭಿಮಾನ ಪುನಃಸ್ಥಾಪನೆ ಸಾಧ್ಯ ಎಂದು ಮೋದಿ ಹೇಳಿದರು. ಅಭಿವೃದ್ಧಿಯ ಫಲ ಒಂದು ಕುಟುಂಬಕ್ಕೆ ಅಲ್ಲ, ಆಂಧ್ರಪ್ರದೇಶದ ಎಲ್ಲ ನಾಗರಿಕರಿಗೂ ಲಭಿಸಿದಾಗ ಮಾತ್ರ ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಅವರ ಸ್ವರ್ಣ ಆಂಧ್ರಪ್ರದೇಶದ ಕನಸು ನನಸಾಗುತ್ತದೆ. ಎಲ್ಲ ತೆಲುಗರ ಯುವ ಶಕ್ತಿಯಿಂದ ಸ್ವರ್ಣ ಆಂಧ್ರಪ್ರದೇಶವನ್ನು ರೂಪಿಸಲು ಸಾಧ್ಯ ಎಂದು ಪ್ರಧಾನಿ ನುಡಿದರು.
2018: ರಾಂಚಿ: ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು ಮೇವು ಹಗರಣದಲ್ಲಿ ಮೂರುವರೆ ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿತು. ಇದರ ಜೊತೆಗೆ ೫ ಲಕ್ಷ ರೂಪಾಯಿಗಳ ದಂಡವನ್ನೂ ಲಾಲು ಪ್ರಸಾದ್ ಅವರಿಗೆ ವಿಧಿಸಲಾಯಿತು. ‘ನ್ಯಾಯಾಲಯವು ಲಾಲು ಪ್ರಸಾದ್ ಅವರಿಗೆ ಮೂರೂವರೆ ವರ್ಷಗಳ ಸೆರೆವಾಸವನ್ನು ವಿಧಿಸಿದೆ. ಜೊತೆಗೆ ೫ ಲಕ್ಷ ರೂಪಾಯಿಗಳ ದಂಡವನ್ನೂ ವಿಧಿಸಿದೆ. ದಂಡ ಪಾವತಿಗೆ ವಿಫಲರಾದಲ್ಲಿ ಮತ್ತೆ ಆರು ತಿಂಗಳುಗಳ ಸೆರೆವಾಸವನ್ನು ಅವರು ಅನುಭವಿಸಬೇಕು ಎಂದು ಕೋರ್ಟ್ ಹೇಳಿದೆ’ ಎಂದು
ಲಾಲು ಪ್ರಸಾದ್ ಅವರ ವಕೀಲ ಪ್ರಭಾತ್ ಕುಮಾರ್ ಅವರು ಮಾಧ್ಯಮ ಮಂದಿಗೆ ತಿಳಿಸಿದರು. ‘ನಾವು ಈಗ ಜಾಮೀನಿಗಾಗಿ ರಾಂಚಿ ಹೈಕೋರ್ಟಿಗೆ ಅರ್ಜಿ ಸಲ್ಲಿಸುತ್ತೇವೆ’ ಎಂದೂ ಕುಮಾರ್ ಹೇಳಿದರು. ವಿಶೇಷ ಸಿಬಿಐ ನ್ಯಾಯಾಲಯವು ಲಾಲು ಪ್ರಸಾದ್ ಸೇರಿದಂತೆ ಎಲ್ಲ ೧೬ ಮಂದಿ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಪ್ರಕಟಿಸಿತು. ನ್ಯಾಯಾಲಯವು ಎಲ್ಲ ೧೬ ಮಂದಿ ಅಪರಾಧಿಗಳಿಗೆ ೭ರಿಂದ ಮೂರೂವರೆ ವರ್ಷಗಳವರೆಗಿನ ವಿವಿಧ ಪ್ರಮಾಣದ ಶಿಕ್ಷೆಗಳನ್ನು ವಿಧಿಸಿತು. ದೇವಘಡ ಜಿಲ್ಲಾ ಖಜಾನೆಯಿಂದ ೧೯೯೧-೯೪ರ ಅವಧಿಯಲ್ಲಿ ಅಕ್ರಮವಾಗಿ ೮೪.೫ ಲಕ್ಷ ರೂಪಾಯಿಗಳನ್ನು ಪಡೆದುಕೊಂಡ ಹಗರಣಕ್ಕೆ ಸಂಬಂಧಿಸಿದ ಪ್ರಕರಣ ಇದು. ಅತ್ತ ಪಾಟ್ನಾದಲ್ಲಿ ರಾಷ್ಟ್ರೀಯ ಜನತಾದಳದ ನಾಯಕರು ಲಾಲು ಪ್ರಸಾದ್ ಪತ್ನಿ ರಾಬ್ರಿ ದೇವಿ ಅವರ ನಂ.೧೦, ಸರ್ಕ್ಯೂಲರ್ ರಸ್ತೆ ನಿವಾಸದಲ್ಲಿ ಸಭೆ ನಡೆಸಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಅವರ ಮೇಲೆ ಪೂರ್ಣ ವಿಶ್ವಾಸ ವ್ಯಕ್ತ ಪಡಿಸಿದರು. ‘ಪಾಟ್ನಾದಲ್ಲಿ ‘ಬಿಜೆಪಿ ಭಗಾವೋ, ದೇಶ್ ಬಚಾವೋ’ (ಬಿಜೆಪಿ ಓಡಿಸಿ, ದೇಶ ರಕ್ಷಿಸಿ) ಪ್ರದರ್ಶನ ನಡೆಸಿದ ಬಳಿಕ, ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ವಿರುದ್ಧ ವಿಪಕ್ಷಗಳನ್ನು ಸಂಘಟಿಸುವ ಲಾಲು ಪ್ರಸಾದ್ ಅವರ ಪ್ರಯತ್ನಗಳಿಗೆ ಬಿಜೆಪಿ, ಆರೆಸ್ಸೆಸ್ ಮತ್ತು ನಿತೀಶ್ ಕುಮಾರ್ ಹೆದರಿದ್ದಾರೆ. ಆದ್ದರಿಂದ ಲಾಲು ಅವರನ್ನು ಜೈಲಿಗೆ ಕಳುಹಿಸಲು ಸಂಚು ಹೂಡಿದ್ದಾರೆ. ಆದರೆ ಲಾಲು ಪ್ರಸಾದ್ ಅವರನ್ನು ಜೈಲಿಗೆ ಕಳಿಸಿದ್ದರಿಂದ ನಾವು ಬಗ್ಗುವುದಿಲ್ಲ, ಇನ್ನಷ್ಟು ಬಲಗೊಳ್ಳುತ್ತೇವೆ’ ಎಂದು ತೇಜಸ್ವಿ ಯಾದವ್ ನುಡಿದರು. ‘ಲಾಲು ಪ್ರಸಾದ್ ಅವರು ನಮ್ಮ ಹೃದಯದಲ್ಲಿ ನೆಲೆಸಿದ್ದಾರೆ’ ಎಂದು ಪಕ್ಷದ ಇತರ ಧುರೀಣರು ಹೇಳಿದರು.
2018: ನವದೆಹಲಿ: ರಾಷ್ಟ್ರೀಯ ಜನತಾದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರ್ತಿ ಮತ್ತು ಅವರ ಪತಿ ಶೈಲೇಶ್ ಕುಮಾರ್ ವಿರುದ್ಧ ಹಣ ವರ್ಗಾವಣೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ದೆಹಲಿ ನ್ಯಾಯಾಲಯ ಒಂದರಲ್ಲಿ ಎರಡನೇ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದು, ನ್ಯಾಯಾಲಯವು ಎರಡೂ ಚಾಜ್ಶೀಟುಗಳನ್ನು ಫೆಬ್ರವರಿ ೫ರಂದು ಪರಿಶೀಲಿಸಲಿದೆ. ಜಾರಿ ನಿರ್ದೇಶನಾಲಯವು ಮತ್ತೆ ಮತ್ತೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರಿಂದ ಇರುಸುಮುರುಸಿಗೆ ಒಳಗಾದ ವಿಶೇಷ ನ್ಯಾಯಾದೀಶ ಎನ್.ಕೆ. ಮಲ್ಹೋತ್ರ ಅವರು ವಿಚಾರಣೆ ಆರಂಭಿಸಲು ಬಿಡದೇ ಇರುವುದಕ್ಕಾಗಿ ಜಾರಿ ನಿರ್ದೇಶನಾಲಯವನ್ನು ಟೀಕಿಸಿದರು. ‘ನೀವು ವಿಚಾರಣೆ ಆರಂಭಿಸಲು ಬಿಡುತ್ತೀರೋ ಅಥವಾ ದೂರುಗಳನ್ನು ಸಲ್ಲಿಸುತ್ತಲೇ ಇರುತ್ತೀರೋ? ಎಷ್ಟು ಪೂರಕ ದೋಷಾರೋಪ ಪಟ್ಟಿಗಳನ್ನು ನೀವು ಸಲ್ಲಿಸಲಿದ್ದೀರಿ?
ನೀವು ಮುಂಚೂಣಿಯ ತನಿಖಾ ಸಂಸ್ಥೆಯಾಗಿದ್ದೀರಿ.
ನೀವು ಈ ರೀತಿ ವರ್ತಿಸಬಾರದು. ಇದು ಸರಿಯಾಗಿ ತಯಾರಿಸದ ದೂರು’ ಎಂದು
ನ್ಯಾಯಾಧೀಶರು ನುಡಿದರು. ಮಿಸಾ ಭಾರ್ತಿ ಮತ್ತು ಕುಮಾರ್ ವಿರುದ್ಧ ೨೦೧೭ರ ಡಿಸೆಂಬರ್ ೨೩ರಂದು ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿಯನ್ನೇ ಇನ್ನೂ ಪರಿಗಣಿಸಲು ಸಾಧ್ಯವಾಗದೇ ಇರುವ ನ್ಯಾಯಾಲಯ, ಜಾರಿ ನಿರ್ದೇಶನಾಲಯದ ವಿಶೇಷ ವಕೀಲ ಅತುಲ್ ತ್ರಿಪಾಠಿ ಅವರು ವಿಷಯಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಅಹವಾಲು ಮಂಡನೆಗೆ ಕಾಲವಕಾಶ ಕೋರಿದ ಬಳಿಕ ಪ್ರಕರಣದ ವಿಚಾರಣೆಯನ್ನು ಉಭಯ ದೋಷಾರೋಪ ಪಟ್ಟಿಗಳ ಪರಿಗಣನೆ ಸಲುವಾಗಿ ವಿಚಾರಣೆಯನ್ನು ಫೆಬ್ರುವರಿ ೫ಕ್ಕೆ ಮುಂದೂಡಿತು. ಚಾರ್ಟರ್ಡ್ ಅಕೌಂಟೆಂಟ್ ರಾಜೇಶ್ ಅಗರ್ವಾಲ್ ಅವರ ಪರವಾಗಿ ಹಾಜರಿದ್ದ ವಕೀಲ ವಿಜಯ್ ಅಗರ್ವಾಲ್ ಅವರು ಸುರೇಂದ್ರ ಕುಮಾರ ಜೈನ್ ಮತ್ತು ವೀರೇಂದ್ರ ಕುಮಾರ್ ಜೈನ್ ಸಹೋದರರ ಜಾಮೀನು ಅರ್ಜಿ ಬಾಕಿ ಉಳಿದಿರುವುದನ್ನು ಉಲ್ಲೇಖಿಸಿ ವಿಚಾರಣೆ ಮುಂದೂಡವಂತೆ ಕೋರಿದರು. ಇವರಿಬ್ಬರ ವಿರುದ್ಧವೂ ನಕಲಿ ಕಂಪೆನಿಗಳನ್ನು ಬಳಸಿಕೊಂಡು ಕೋಟ್ಯಂತರ ರೂಪಾಯಿಗಳನ್ನು ವರ್ಗಾವಣೆ ಮಾಡಿದ ಆರೋಪ ಹೊರಿಸಲಾಗಿದೆ. ಮಿಸಾ
ಭಾರ್ತಿ ಅವರ ಮೆ. ಮಿಶೈಲ್ ಪ್ಯಾಕರ್ಸ್ ಅಂಡ್ ಪ್ರಿಂಟರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಹೂಡಿಕೆ ಮಾಡುವ ಸಲುವಾಗಿ ಮುಂಗಡ ಹಣವಾಗಿ ಜೈನ್ ಸಹೋದರರಿಗೆ ೯೦ ಲಕ್ಷ ರೂಪಾಯಿ ನಗದು ಹಣ ಒದಗಿಸಿದ ಆಪಾದನೆಯನ್ನು ಅನುಸರಿಸಿ ರಾಜೇಶ್ ಅಗರ್ವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಇದಕ್ಕೆ ಮುನ್ನ ಮಿಸಾ ಭಾರ್ತಿ ಮತ್ತು ಆಕೆಯ ಗಂಡನ ವಿರುದ್ಧ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಯು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ತೋಟದ ಮನೆಯನ್ನು ವಶಕ್ಕೆ ತೆಗೆದುಕೊಂಡಿತ್ತು.
ದಕ್ಷಿಣ ದೆಹಲಿಯ ಬಿಜ್ವಾಸನ್ ಪ್ರದೇಶದ ನಂ.೨೬, ಪಾಲಂ ಫಾರ್ಮ್ಸ್ ನಲ್ಲಿ ಈ ತೋಟದ ಮನೆ ಇತ್ತು. ಭಾರ್ತಿ ಮತ್ತು ಕುಮಾರ್ ಅವರಿಗೆ ಸೇರಿದ ಈ ತೋಟದ ಮನೆ ಮೆ. ಮಿಶೈಲ್ ಪ್ಯಾಕರ್ಸ್ ಅಂಡ್ ಪ್ರಿಂಟರ್ಸ್ ಪ್ರೈವೇಟ್ ಹೆಸರಿನಲ್ಲಿ ಇತ್ತು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ೨೦೦೮-೦೯ರಲ್ಲಿ ವರ್ಗಾವಣೆ ಮಾಡಲಾದ ೧.೨ ಕೋಟಿ ರೂಪಾಯಿ ಹಣವನ್ನು ಬಳಸಿ ಇದನ್ನು ಖರೀದಿಸಲಾಗಿತ್ತು ಎಂದು ಜಾರಿ ನಿರ್ದೇಶನಾಲಯ ಆಪಾದಿಸಿದೆ. ತನಿಖಾ ಸಂಸ್ಥೆಯು ೨೦೧೭ರ ಜುಲೈ ತಿಂಗಳಲ್ಲಿ ಜೈನ್ ಸಹೋದರರು ಮತ್ತು ಇತರರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾರ್ಮ್ ಹೌಸ್ ಸೇರಿದಂತೆ ವಿವಿಧ ಕಡೆಗಳಲ್ಲಿ ದಾಳಿ ನಡೆಸಿತ್ತು. ಜೈನ್ ಸಹೋದರರನ್ನು ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ಕಾಯ್ದೆಯ (ಪಿಎಂಎಲ್ ಎ) ಅಡಿಯಲ್ಲಿ ಬಂಧಿಸಿತ್ತು.
2018: ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರಿ ಹಿಮಪ್ರವಾಹಕ್ಕೆ ಪ್ರಯಾಣಿಕರ ವಾಹನ ಸಿಲುಕಿದ್ದ ಜಾಗದಲ್ಲಿ, ಬಿಆರ್ ಒ ಅಧಿಕಾರಿಯೊಬ್ಬರ ಶವ ಸೇರಿ ಆರು ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಇದರೊಂದಿಗೆ ದುರಂತದ ಸಾವಿನ ಸಂಖ್ಯೆ ೧೧ಕ್ಕೆ ಏರಿತು. ವಾಹನಗಳು ಪತ್ತೆಯಾಗಲಿಲ್ಲ. ಕುಪ್ವಾರ-ಥಂಗ್ಧರ್ ರಸ್ತೆಯಲ್ಲಿ ಸಧ್ನಾ ಸಮೀಪದ ಖೂನಿ ನಾಲಾ ಸಮೀಪ ಹಿಂದಿನ ದಿನ ಸಂಭವಿಸಿದ ಭಾರಿ ಹಿಮಪ್ರವಾಹದ ಮಧ್ಯೆ ಎಂಟು ಪ್ರಯಾಣಿಕರು ಮತ್ತು ಇಬ್ಬರು ಬೀಕಾನ್ ಅಧಿಕಾರಿಗಳು ಇದ್ದ ಮೂರು ವಾಹನಗಳು ಸಿಕ್ಕಿಹಾಕಿಕೊಂಡಿದ್ದವು. ಹಿಮಪ್ರವಾಹ ಸಂಭವಿಸಿದ ಸ್ಥಳದಲ್ಲಿ ಐವರ ಶವಗಳನ್ನು ಈದಿನ ಪತ್ತೆ ಹಚ್ಚಲಾಗಿದೆ ಎಂದು ಕುಪ್ವಾರ ಜಿಲ್ಲಾಧಿಕಾರಿ ಖಾಲಿದ್ ಜೆಹಾಂಗೀರ್ ಹೇಳಿದರು. ಬಿಆರ್ ಒ(ಬೀಕಾನ್) ಅಧಿಕಾರಿಯ ಎಂ.ಪಿ ಸಿಂಗ್ ಅವರನ್ನು ಕಳೆದ ರಾತ್ರಿ ಪತ್ತೆ ಹಚ್ಚಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಅವರು ಮೃತರಾಗಿರುವುದಾಗಿ
ಘೋಷಿಸಿದರು ಎಂದು ಜೆಹಾಂಗೀರ್ ನುಡಿದರು. ಹಿಮಪ್ರವಾಹ ಸಂಭವಿಸಿದ ಸ್ಥಳದಲ್ಲಿ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ
ಮೂವರನ್ನು ಜೀವಂತವಾಗಿ ಹೊರತೆಗೆಯಲಾಯಿತು. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅವರು ನುಡಿದರು.
2018: ಶ್ರೀನಗರ: ಬಾರಾಮುಲ್ಲಾದ ಸೊಪೋರ್ ನಲ್ಲಿ ಉಗ್ರರ ಅಟ್ಟಹಾಸಕ್ಕೆ ಮತ್ತೆ ನಾಲ್ವರು ಬಲಿಯಾದರು. ಶಂಕಿತ ಉಗ್ರಗಾಮಿಗಳು ಅಡಗಿಸಿ ಇಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡ ಪರಿಣಾಮವಾಗಿ ಬೆಳಗ್ಗೆ ನಾಲ್ವರು ಪೊಲೀಸರು ಹುತಾತ್ಮರಾದರು. ಅಂಗಡಿಯೊಂದರ ಸಮೀಪ ಈ ಸುಧಾರಿತ ಸ್ಫೋಟಕ ಸಾಧನವನ್ನು ಅಡಗಿಸಿ ಇಡಲಾಗಿತ್ತು . ಪೊಲೀಸರು ಈ ಸ್ಥಳಕ್ಕೆ ತಲುಪಿದಾಗ ಅದು ಸ್ಫೋಟಗೊಂಡಿತು ಎಂದು ಪ್ರಾಥಮಿಕ ತನಿಖೆ ತಿಳಿಸಿರುವುದಾಗಿ
ಅಧಿಕಾರಿಯೊಬ್ಬರು ಹೇಳಿದರು. ಸ್ಫೋಟದಲ್ಲಿ ಮೂರು ಅಂಗಡಿಗಳೂ ನಾಶಗೊಂಡಿವೆ. ಪ್ರದೇಶಕ್ಕೆ ಬಿಗಿ ಕಾವಲು ಏರ್ಪಡಿಸಲಾಯಿತು. ಮೆಹಮೂಬಾ ದುಃಖ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಪಟ್ಟಣದಲ್ಲಿ ಸುಧಾರಿತ ಸ್ಫೋಟಕ ಸಾಧನಕ್ಕೆ ನಾಲ್ವರು ಪೊಲೀಸರು ಬಲಿಯಾಗಿರುವ ಸುದ್ದಿ ಕೇಳಿ ತೀವ್ರ ದುಃಖ ವ್ಯಕ್ತ ಪಡಿಸಿದರು. ಅವರು ಟ್ವಿಟ್ಟರ್ ಮೂಲಕ ಮೃತರ ಕುಟುಂಬಕ್ಕೆ ತಮ್ಮ ಅತೀವ ಸಂತಾಪ ವ್ಯಕ್ತ ಪಡಿಸಿದರು. ‘ಸೊಪೋರ್ ನಿಂದ ಅತ್ಯಂತ ಬೇಸರದ ಸುದ್ದಿ ಬಂದಿದೆ. ದಾಳಿಯಲ್ಲಿ ಹುತಾತ್ಮರಾದ ಜಮ್ಮು ಮತ್ತು ಕಾಶ್ಮೀರದ ನಾಲ್ವರು ಕರ್ತವ್ಯ ನಿರತ ಶೂರ ಪೊಲೀಸರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಅವರು ಹಾರೈಸಿದರು.
2018: ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಸಲ್ಲಿಸಲಾಗಿದ್ದ ಹಕ್ಕುಚ್ಯುತಿ ನೋಟಿಸನ್ನು ಚಳಿಗಾಲದ ಅಧಿವೇಶನದ ಕೊನೆಯ ದಿನ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಲೋಕಸಭೆಯ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರಿಗೆ ಕಳುಹಿಸಿಕೊಟ್ಟರು.
ಇದರಿಂದಾಗಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಂಡುಬಂದ ಕೋಪ-ತಾಪಗಳು ಮುಂಗಡಪತ್ರ ಅಧಿವೇಶನದಲ್ಲೂ ಮುಂದುವರೆಯುವ ಲಕ್ಷಣಗಳು ನಿಚ್ಚಳವಾದವು. ಪ್ರಕರಣದಲ್ಲಿ ಮೇಲ್ನೋಟಕ್ಕೆ ಹಕ್ಕುಚ್ಯುತಿ ಆಗಿರುವುದು ಕಂಡು ಬರುತ್ತಿದೆ ಎಂದು ಹೇಳಿರುವ ನಾಯ್ಡು ಅವರು ರಾಹುಲ್ ಗಾಂಧಿ ಅವರು ಲೋಕಸಭಾ ಸದಸ್ಯರಾಗಿರುವುದರಿಂದ ಅದನ್ನು ಪರಿಗಣಿಸುವ ಸಲುವಾಗಿ ಲೋಕಸಭೆಯ ಸಭಾಧ್ಯಕ್ಷರಿಗೆ ಕಳುಹಿಸಿಕೊಟ್ಟರು. ಹಿರಿಯ ಬಿಜೆಪಿ ಸದಸ್ಯ ಭೂಪೇಂದ್ರ ಯಾದವ್ ಅವರು ’ರಾಹುಲ್ ಗಾಂಧಿ ಅವರ ವಿರುದ್ಧ ಕಳೆದ ತಿಂಗಳು ಹಕ್ಕುಚ್ಯುತಿ ವಿಷಯವನ್ನು ಪ್ರಸ್ತಾಪಿಸಿದ್ದರು. ರಾಹುಲ್ ಗಾಂಧಿ ಅವರು ಅರುಣ್ ಜೇಟ್ಲಿ ಅವರ ಕುಲನಾಮದ (ಜೇಟ್ಲಿ) ಕಾಗುಣಿತವನ್ನು (ಜೇಟ್ಲೈ ಎಂಬುದಾಗಿ) ತಿರುಚಿದ್ದಾರೆ. ಇದು ಅತ್ಯಂತ ಅವಹೇಳನಕಾರಿ’ ಎಂದು ತಮ್ಮ ನೋಟಿಸ್ನಲ್ಲಿ ಪ್ರತಿಪಾದಿಸಿದ್ದರು.
ಗುಜರಾತ್ ಚುನಾವಣಾ ಪ್ರಚಾರ ಕಾಲದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಂಬಂಧಿಸಿದಂತೆ ಅವಹೇಳನಕಾರಿ ಉಲ್ಲೇಖಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ
ಭಾಷಣದಲ್ಲಿ ಮಾಡಿದ್ದಾರೆ ಎಂಬ ಆಪಾದನೆಗೆ ಸಂಬಂಧಿಸಿದಂತೆ ಮೇಲ್ಮನೆಯಲ್ಲಿ ಅರುಣ್ ಜೇಟ್ಲಿ ಅವರು ಸ್ಪಷ್ಟನೆ ನೀಡಿದ ಬಳಿಕ ರಾಹುಲ್ ಗಾಂಧಿ ಅವರು ತಮ್ಮ ಟ್ವೀಟ್ ನಲ್ಲಿ ಜೇಟ್ಲಿ ಅವರಿಗೆ ಸಂಬಂಧಿಸಿದಂತೆ ಈ ಟೀಕೆ ಮಾಡಿದ್ದರು. ’ಪ್ರಿಯ ಜೇಟ್ಲೈ, ನಮ್ಮ ಪ್ರಧಾನಿಯವರು ಎಂದಿಗೂ ಹೇಳಿದ್ದನ್ನು ಮಾಡುವುದಿಲ್ಲ ಮತ್ತು ಮಾಡಿದ್ದನ್ನು ಹೇಳುವುದಿಲ್ಲ ಎಂದು ಭಾರತಕ್ಕೆ ನೆನಪಿಸಿದ್ದಕ್ಕಾಗಿ
ನಿಮಗೆ ಧನ್ಯವಾದಗಳು’ ಎಂದು
ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಸದನದ ನಾಯಕ ಅರುಣ್ ಜೇಟ್ಲಿ ಅವರ ವರ್ತನೆಯನ್ನು ಅವರ ಹೆಸರಿನ ಕಾಗುಣಿತವನ್ನು ತಿರುಚಿ ಹೇಳುವ ಮೂಲಕ ಸೂಚಿಸಿರುವುದು ಅದರ ಹಿಂದಿನ ಉದ್ದೇಶವನ್ನು ತೋರಿಸಿದೆ ಎಂಬ ನೆಲೆಯಲ್ಲಿ ಇದು ಹಕ್ಕುಚ್ಯುತಿ ಆಗುತ್ತದೆ ಎಂದು ರಾಜ್ಯಸಭೆ ಸಭಾಪತಿಯವರ ಕಚೇರಿಯ ಮೂಲಗಳು ತಿಳಿಸಿದವು. ರಾಹುಲ್ ಗಾಂಧಿ ಅವರು ಟ್ವೀಟ್ ಮೂಲಕ ಮಾಡಿರುವ ಟೀಕೆ ಅತ್ಯಂತ ಅವಹೇಳನಕಾರಿಯಾಗಿದ್ದು, ಅವರಿಗೆ ಒಪ್ಪುವಂತಹುದಲ್ಲ. ಇಲ್ಲಿ ಸರ್ಕಾರಕ್ಕೆ ಮಸಿ ಬಳಿಯುವ ಸಲುವಾಗಿ ರಾಜ್ಯಸಭೆಯ ಕಲಾಪಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ಅಂತಿಮವಾಗಿ ಇದು ಸದನದ ಘನತೆಯನ್ನು ಹೀಗಳೆದಿದೆ. ಅಲ್ಲದೆ ಜೇಟ್ಲಿ ಅವರು ನೀಡಿದ್ದ ಹೇಳಿಕೆ ಸದನ ನಿರ್ವಹಣೆಯಲ್ಲಿನ ತೊಡಕುಗಳ ನಿವಾರಣೆಗಾಗಿ ಸರ್ಕಾರ ಮತ್ತು ವಿರೋಧ ಪಕ್ಷ ರೂಪಿಸಿದ್ದ, ಮತ್ತು ಎಲ್ಲರೂ ಒಪ್ಪಿದ್ದ ಪರಿಹಾರದ ಭಾಗವಾಗಿದ್ದುದರಿಂದ, ರಾಹುಲ್ ಗಾಂಧಿ ಅವರ ಟ್ವೀಟ್ ರಾಜಕೀಯ ಪರಿಸರವನ್ನು ಕಲುಷಿತಗೊಳಿಸುವ ಮೂಲಕ ಸದನದ ಕಾರ್ಯನಿರ್ವಹಣೆಗೆ ಅಡ್ಡಿ ಉಂಟು ಮಾಡಲು ಯತ್ನಿಸಿದೆ’ ಎಂದು ಮೂಲ ಹೇಳಿತು. ನಾಯ್ಡು
ಅವರಿಗೆ ಕಳೆದ ವಾರ ಹಕ್ಕುಚ್ಯುತಿ ನೋಟಿಸನ್ನು ಸಲ್ಲಿಸಲಾಗಿತ್ತು
ಮತ್ತು ಅವರು ಅದನ್ನು ಪರಿಶೀಲಿಸುತ್ತಿದ್ದರು. ‘ನಾನು ಇದನ್ನು ಪರಿಶೀಲಿಸಬೇಕು ಮತ್ತು ಅಭಿಪ್ರಾಯ ಪಡೆದುಕೊಳ್ಳಬೇಕು.
ಒಂದು ವಿಚಾರವನ್ನು ನಾನು ಎಲ್ಲರಿಗೂ ಹೇಳಬಯಸುವುದು ಏನೆಂದರೆ ಸದನದ ನಾಯಕ (ಜೇಟ್ಲಿ) ಮತ್ತು ವಿರೋಧ ಪಕ್ಷದ ನಾಯಕ (ಗುಲಾಂ ನಬಿ ಆಜಾದ್) ಅವರ ಮಧ್ಯೆ ಒಪ್ಪಂದ ಏರ್ಪಟ್ಟಿತ್ತು ಮತ್ತು ಇತರ ಎಲ್ಲರೂ ಅದನ್ನು ಅನುಮೋದಿಸಿದ್ದರು. ಈ ಒಪ್ಪಂದದ ಬಗ್ಗೆ ಹೊರಗಿನಿಂದ ಯಾರೇ ಟೀಕೆ ಮಾಡಿದರೂ ಅದು ಸರಿಯಲ್ಲ ಮತ್ತು ಸದನ ಮತ್ತು ನಮ್ಮ ವ್ಯವಸ್ಥೆಗೆ ಒಳ್ಳೆಯದಲ್ಲ. ಆದರೆ ನಾನು ಹಕ್ಕುಚ್ಯುತಿ ನೋಟಿಸನ್ನು ಪರಿಶೀಲಿಸುತ್ತೇನೆ ಮತ್ತು ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಎಲ್ಲರಿಗೂ ಹೇಳಬಯಸುತ್ತೇನೆ’ ಎಂದು ನಾಯ್ಡು ಹೇಳಿದ್ದರು.
2018: ನವದೆಹಲಿ: ಸರ್ಕಾರಿ ವೆಬ್ ಸೈಟುಗಳಲ್ಲಿ ಪದೇ ಪದೇ ಮಾಹಿತಿ ಉಲ್ಲಂಘನೆ ಪ್ರಕರಣಗಳಿಂದ ಆಧಾರ್ ಮಾಹಿತಿಗೆ ಅನಿರ್ಬಂಧಿತ, ಅನಧಿಕೃತ ಪ್ರವೇಶದ ಬಾಗಿಲು ತೆರೆದಿದ್ದು ೧೩೫ ಕೋಟಿ ಭಾರತೀಯರಿಗೆ ತೊಂದರೆಯಾಗಿದೆ ಮತ್ತು ‘ವಿಶಿಷ್ಠ ಗುರುತಿನ ಸಂಖ್ಯೆ’ ಎಂಬ
ಹೆಗ್ಗಳಿಕೆಯ ‘ಆಧಾರ್’ನ್ನು ಶಾಶ್ವತ ಸಮಾಧಿಯನ್ನಾಗಿಸುವ ಅಪಾಯವನ್ನು ಹೆಚ್ಚಿಸಿದೆ ಎಂದು ಆಧಾರ್ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿಗಳನ್ನು ಸಲ್ಲಿಸಿರುವ ಅರ್ಜಿದಾರರು ಸುಪ್ರೀಂಕೋರ್ಟಿನಲ್ಲಿ ಪ್ರತಿಪಾದಿಸಿದರು.
ಇದರ ಜೊತೆಗೆ ಭಾರತದ ವಿಶಿಷ್ಠ ಗುರುತಿನ ಪ್ರಾಧಿಕಾರ (ಯುಐಡಿಎಐ) ನಡೆಸಿದ ಅಧ್ಯಯನವೂ ಮಾಹಿತಿ ಉಲ್ಲಂಘನೆಗಳ ಹಲವಾರು ಘಟನೆಗಳನ್ನು ಸಾರ್ವಜನಿಕರ ಮುಂದೆ ಪ್ರಸ್ತುತಪಡಿಸಿದೆ
ಎಂದೂ ಅವರು ಹೇಳಿದರು. ದಾಖಲು ಮಾಡುವವರನ್ನು ಅಮಾನತುಗೊಳಿಸಿದ/
ಕಪ್ಪು ಪಟ್ಟಿಗೆ ಸೇರಿಸಿದ್ದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಒದಗಿಸಲಾಗಿರುವ ಮಾಹಿತಿಯ ಪ್ರಕಾರ ೨೦೧೬ರ ಅಕ್ಟೋಬರ್ ೩೧ರವರೆಗೆ ಲಂಚ, ನಕಲಿ ದಾಖಲು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸುಮಾರು ೧೪೦೦ ದೂರುಗಳು ಬಂದಿವೆ. ಆದರೆ ಪ್ರಾಧಿಕಾರವು ಈ ಪ್ರಕರಣಗಳ ಪೈಕಿ ಮೂರು ಪ್ರಕರಣಗಳಲ್ಲಿ ಮಾತ್ರ ಪೊಲೀಸರಿಗೆ ದೂರು ನೀಡಿದೆ. ಕ್ರಮ ಕೈಗೊಳ್ಳುವಲ್ಲಿನ
ವೈಫಲ್ಯಕ್ಕೆ ಯಾವುದೇ ಕಾರಣವನ್ನೂ ನೀಡುವ ಬದ್ಧತೆಯನ್ನೂ ಪ್ರಾಧಿಕಾರ ತೋರಿಲ್ಲ ಎಂದು ಅರ್ಜಿದಾರರು ಸುಪ್ರೀಂಕೋರ್ಟಿಗೆ
ತಿಳಿಸಿದರು. ಆಧಾರ್ ಬಿಜಾಂಕುರಕ್ಕೆ ಸರ್ಕಾರ ಮಾಡುತ್ತಿರುವ ಆಗ್ರಹವು, ಗುರುತಿನ ಕಳವು ಅಪಾಯವನ್ನು ಇನ್ನಷ್ಟು ಹೆಚ್ಚಿಸಿದೆ. ಆಧಾರ್ ನಂಬರ್ ಇದ್ದರೆ ಸಾಕು, ಆಧಾರ್ ಜೊತೆಗೆ ಸಂಪರ್ಕ ಕಲ್ಪಿಸಲಾಗಿರುವ ವಿವಿಧ ಮಾಹಿತಿ ಮೂಲಗಳಲ್ಲಿ ಸಂಗ್ರಹವಾಗಿರುವ ಮಾಹಿತಿಗಳಿಗೆ ಕನ್ನ ಹಾಕಲು ಮಾಹಿತಿ ಕಳ್ಳನಿಗೆ ಅವಕಾಶ ಲಭಿಸುತ್ತದೆ ಎಂದು ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲರಾದ ಶ್ಯಾಮ್ ದಿವಾನ್ ಮತ್ತು ವಿಪಿನ್ ನಾಯರ್ ವಿಸ್ತೃತವಾದ ಹೆಚ್ಚುವರಿ ಪ್ರಮಾಣಪತ್ರದಲ್ಲಿ
ನ್ಯಾಯಾಲಯಕ್ಕೆ ವಿವರಿಸಿದರು. ಆಧಾರ್ ನಿಂದ ಇರುವ ಲಾಭಗಳ ಬಗ್ಗೆ ಕೇಂದ್ರ ಸರ್ಕಾರವು ಸಲ್ಲಿಸಿರುವ ವಿವರಗಳಿಗೆ ಪ್ರತಿಕ್ರಿಯೆಯಾಗಿ
ಈ ಹೆಚ್ಚುವರಿ ಪ್ರಮಾಣಪತ್ರವನ್ನು ಸಲ್ಲಿಸಲಾಯಿತು. ಆಧಾರ್ ಯೋಜನೆ ಮತ್ತು ಅದನ್ನು ೧೩೯ ಸರ್ಕಾರಿ ಸಬ್ಸಿಡಿಗಳು, ಕಲ್ಯಾಣ ಸವಲತ್ತುಗಳು, ಮೊಬೈಲ್ ಸಿಮ್ ಕಾರ್ಡ್ಗಳು, ಬ್ಯಾಂಕ್ ಖಾತೆಗಳು, ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮತ್ತು ಇತರ ಅನುದಿನದ ಆರ್ಥಿಕ ಅಗತ್ಯಗಳು ಮತ್ತು ಸೇವೆಗಳಿಗೆ ಸಂಪರ್ಕಿಸಿದ್ದನ್ನು ಪ್ರಶ್ನಿಸಿದ ೨೦ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠ ನಡೆಸುತ್ತಿತ್ತು. ಮಾಹಿತಿ ಉಲ್ಲಂಘನೆಗಳು ಆಧಾರ್ ಕಾಯ್ದೆಯ ಸೆಕ್ಷನ್ ೨೯ ಮತ್ತು ಆಧಾರ್ (ಮಾಹಿತಿ ಹಂಚಿಕೊಳ್ಳುವಿಕೆ) ನಿಯಂತ್ರಣ ಕಾಯ್ದೆಯ ೬ ಮತ್ತು ೭ನೇ ನಿಯಮಗಳ ಎದ್ದು ಕಾಣುವ ಉಲ್ಲಂಘನೆಗಳಾಗಿವೆ.
ಹೊಸ ಮಾಹಿತಿ ರಕ್ಷಣೆ ವ್ಯವಸ್ಥೆ ಬಗ್ಗೆ ಶಿಫಾರಸು ಮಾಡುವ ಸಲುವಾಗಿ ಸರ್ಕಾರ ನೇಮಿಸಿದ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಸಮಿತಿಗೆ ತನ್ನ ಶಿಫಾರಸು ಸಲ್ಲಿಸಲು ಗಡುವನ್ನೇ ನೀಡಲಾಗಿಲ್ಲ. ಅಲ್ಲದೆ ಸರ್ಕಾರವು ಇಂತಹ ಶಿಫಾರಸುಗಳಿಗೆ ಬದ್ಧವಾಗಬೇಕಾದ್ದೂ ಇಲ್ಲ. ಹೀಗಾಗಿ ಹೆಚ್ಚಿನ ವಿಳಂಬವಿಲ್ಲದೆ ಆಧಾರ್ ಮಾನ್ಯತೆಯನ್ನು ಸುಪ್ರೀಂಕೋರ್ಟ್ ಸ್ವತಃ ತೀರ್ಮಾನಿಸಬೇಕಾಗಿದೆ
ಎಂದು ಅರ್ಜಿದಾರರು ವಾದಿಸಿದರು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ಕೆಲವು ಶಿಕ್ಷಣ ಸಂಸ್ಥೆಗಳ ೨೧೦ ವೆಬ್ ಸೈಟುಗಳು ಫಲಾನುಭವಿಗಳ ಹೆಸರುಗಳನ್ನು ಆಧಾರ್ ನಂಬರ್, ವಿಳಾಸ ಮತ್ತಿತರ ಮಾಹಿತಿಗಳ ಜೊತೆಗೆ ಬಹಿರಂಗವಾಗಿ ಪ್ರಕಟಿಸಿವೆ ಎಂದು ಆ ವೆಬ್ ಸೈಟುಗಳ ಪಟ್ಟಿ ಸಹಿತವಾಗಿ ಸರ್ಕಾರವೇ ರಾಜ್ಯಸಭೆಗೆ ಮಾಹಿತಿ ನೀಡಿದೆ ಎಂದು ಅವರು ವಿವರಿಸಿದರು. ಪ್ರಾಧಿಕಾರವೇ ಒಪ್ಪಿಕೊಂಡಿರುವಂತೆ
೪೯,೦೦೦ ಆಧಾರ್ ದಾಖಲಾತಿ ಆಪರೇಟರುಗಳನ್ನು ಉಲ್ಲಂಘನೆಗಳಿಗಾಗಿ
ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಈ ಆಪರೇಟರುಗಳಿಗೆ ೧೩೦ ಕೋಟಿ ಭಾರತೀಯರ ಅತಿಸೂಕ್ಷ್ಮವಾಧ ಬಯೊಮೆಟ್ರಿಕ್ ಮಾಹಿತಿ ಸೆರೆಹಿಡಿಯುವ ಕೆಲಸವನ್ನು ಒಪ್ಪಿಸಲಾಗಿತ್ತು. ’ಹನುಮಂತ’ ’ರಾಣಿ ಝಾನ್ಸಿ’,
ಕುರ್ಚಿಗಳು, ನಾಯಿಗಳು ಇತ್ಯಾದಿಗಳಿಗೆ ಆಧಾರ್ ನಂಬರ್ ನೀಡಿದ್ದು ಬೆಳಕಿಗೆ ಬಂದಿದೆ ಎಂದೂ ಪ್ರಮಾಣ ಪತ್ರ ಹೇಳಿತು. ವಿದ್ಯುತ್, ಇಂಟರ್ ನೆಟ್ ವೈಫಲ್ಯದ ಪರಿಣಾಮವಾಗಿ ಶೇಕಡಾ ೪೯ಕ್ಕೂ ಹೆಚ್ಚು ಬಯೋಮೆಟ್ರಿಕ್ ಗುರುತನ್ನು ಅಧಿಕೃತಗೊಳಿಸುವಿಕೆ ವಿಫಲಗೊಂಡಿರುವುದನ್ನು ೨೦೧೬-೧೭ರ ಆರ್ಥಿಕ ಸಮೀಕ್ಷೆ ಬಯಲಿಗೆಳೆದಿದೆ. ವೈಯಕ್ತಿಕ ಮಾಹಿತಿ ಮತ್ತು ಬಯೊಮೆಟ್ರಿಕ್ ಗಳನ್ನು ಏಕೈಕ ಕೇಂದ್ರೀಕೃತ ಮಾಹಿತಿ ಮೂಲದಲ್ಲಿ ಒಟ್ಟುಗೂಡಿಸುವ ಮೂಲಕ ಸರ್ಕಾರವು ೨೦೧೦ರಲ್ಲಿ ಇದೇ ಮಾದರಿಯ ‘ಐಡೆಂಟಿಟಿ ಕಾರ್ಡ್’ ಯೋಜನೆಯನ್ನು ಇಂಗ್ಲೆಂಡ್ ಜನರ ವಿರೋಧವನ್ನು ಪರಿಗಣಿಸಿ ರದ್ದುಪಡಿಸಿದ್ದನ್ನು ನಿರ್ಲಕ್ಷಿಸಿದೆ.
ಯಾವುದೇ ಮಾಹಿತಿ ಮೂಲಗಳ ಭದ್ರತೆಯ ಖಾತರಿ ನೀಡಲು ಸಾಧ್ಯವಿಲ್ಲ ಎಂದು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ವರದಿ ಸ್ಪಷ್ಟ ಪಡಿಸಿದೆ ಎಂದು ಅರ್ಜಿದಾರರು ಹೇಳಿದರು. ಅಮೆರಿಕದ ಹಲವು ಲಕ್ಷ ಮಂದಿಯ ಸಾಮಾಜಿಕ ಭದ್ರತಾ ನಂಬರುಗಳ ಸೋರಿಕೆಯ ಪರಿಣಾಮವಾಗಿ ಅಮೆರಿಕದಲ್ಲಿ ಮಾಹಿತಿ ಮೂಲದ ಬಗ್ಗೆ ಹೊಸದಾಗಿ ಚರ್ಚೆ ನಡೆದು ಕೊನೆಗೆ ಸಾಮಾಜಿಕ ಭದ್ರತಾ ಸಂಖ್ಯೆಗಳನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗಿತ್ತು ಎಂಬ ವಿವರವನ್ನೂ ಪ್ರಮಾಣ ಪತ್ರ ನೀಡಿತು. ಆಧಾರ್ ವಿಷಯವು ಕೇವಲ ಮಾಹಿತಿ ರಕ್ಷಣೆಗೆ ಸಂಬಂಧಿಸಿದ್ದಷ್ಟೇ
ಅಲ್ಲ, ಅದರಲ್ಲಿ ಖಾಸಗಿತನದ ಮೂಲಭೂತ ಹಕ್ಕಿನ ಪ್ರಶ್ನೆಯೂ ಒಳಗೊಂಡಿದೆ. ವ್ಯಕ್ತಿಗಳ ವೈಯಕ್ತಿಕ ಮಾಹಿತಿಗಳನ್ನು ಏಕೈಕ ಕೇಂದ್ರೀಕೃತ ಮಾಹಿತಿ ಮೂಲದಲ್ಲಿ ಕ್ರೋಡೀಕರಿಸುವುದರಿಂದ ಅತ್ಯಾಧುನಿಕ ಮಾಹಿತಿ ಉಲ್ಲಂಘನೆ ತಂತ್ರಗಳನ್ನು ಬಳಸಿ ದೊಡ್ಡ ಪ್ರಮಾಣದಲ್ಲಿ ಜನಸಂಖ್ಯೆಗೇ ಅಪಾಯ ಉಂಟು ಮಾಡುವ ಸಾಧ್ಯತೆಗಳಿವೆ ಎಂದೂ ಅರ್ಜಿದಾರರು ಪ್ರತಿಪಾದಿಸಿದರು.
2009: ಮುಂಬೈ ಮೇಲಿನ ಉಗ್ರರ ದಾಳಿಗೆ ಪಾಕಿಸ್ಥಾನದ ಅಧಿಕೃತ ಸರ್ಕಾರಿ ಸಂಸ್ಥೆಗಳೇ ಕಾರಣ ಎಂದು ನೇರವಾಗಿಯೇ ಆರೋಪಿಸಿದ ಪ್ರಧಾನಿ ಮನಮೋಹನ್ ಸಿಂಗ್, ಅಲ್ಲಿನ 'ದುರ್ಬಲ' ಮತ್ತು 'ಹೊಣೆಗೇಡಿ' ಸರ್ಕಾರವು ಭಾರತದೊಂದಿಗೆ ವ್ಯವಹರಿಸುವಾಗ ಭಯೋತ್ಪಾದನೆಯನ್ನೇ ತನ್ನ ರಾಷ್ಟ್ರೀಯ ನೀತಿಯ ಪ್ರಮುಖ ಸಾಧನವನ್ನಾಗಿ ಮಾಡಿಕೊಂಡಿದೆ ಎಂದು ಕಟಕಿಯಾಡಿದರು. ಮನಮೋಹನ್ ಸಿಂಗ್ ಮಾಡಿದ ಆರೋಪಗಳು ದುರದೃಷ್ಟಕರ ಎಂದು ಪ್ರತಿಕ್ರಿಯಿಸಿದ ಪಾಕಿಸ್ಥಾನ, ಮುಂಬೈ ದಾಳಿಗೆ ಸಂಬಂಧಿಸಿದಂತೆ ನೀಡಿರುವ ಸಾಕ್ಷ್ಯ ವಿಶ್ವಾಸಾರ್ಹವಾಗಿಲ್ಲ ಎಂದು ತಳ್ಳಿಹಾಕಿ, ಭಾರತ ಈ ಪ್ರದೇಶದಲ್ಲಿ ಯುದ್ಧದ ಸನ್ನಿವೇಶ ಸೃಷ್ಟಿಸುತ್ತಿದೆ ಎಂದೂ ಆರೋಪಿಸಿತು.
2009: ಮುಂಬೈ ಮೇಲಿನ ಉಗ್ರರ ದಾಳಿ ಹಾಗೂ ಪಾಕಿಸ್ಥಾನದ ನಡುವೆ ಇರುವ ಸಂಬಂಧದ ಬಗ್ಗೆ ಭಾರತವು ವಿಶ್ವದ ಎಲ್ಲ ರಾಜತಾಂತ್ರಿಕರಿಗೆ ಮಾಹಿತಿ ನೀಡಿತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳ ರಾಜತಾಂತ್ರಿಕರು ಹಾಗೂ ನೆರೆದೇಶಗಳ ನಿಯೋಗದ 7 ಮುಖ್ಯಸ್ಥರೊಂದಿಗೆ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರು ಮುಂಬೈ ದಾಳಿಗೆ ಸಂಬಂಧಿಸಿದ ಮಾಹಿತಿ ಹಂಚಿಕೊಂಡರು.
2009: ಹಿರಿಯ ಕಮ್ಯುನಿಸ್ಟ್ ಮುಖಂಡ ಎಂ.ಕೆ.ಭಟ್ (65) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಈದಿನ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಭಟ್ ಅವರ ಸ್ವಂತ ಗ್ರಾಮವಾದ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಸಮೀಪದ ತೋಡಿಕಾನ ಗ್ರಾಮದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು. ಸಮತಾವಾದ (ಕಮ್ಯುನಿಸಂ) ತತ್ವಕ್ಕಾಗಿ ತಮ್ಮ ಇಡೀ ಜೀವನವನ್ನು ಸಮರ್ಪಿಸಿಕೊಂಡಿದ್ದ ಭಟ್, ಸಿಪಿಎಂ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಬಾಂಬೆ ವಿಶ್ವವಿದ್ಯಾಲಯದಲ್ಲಿ ಭೌತ ವಿಜ್ಞಾನದ ಸ್ನಾತಕೋತ್ತರ ಪದವಿಯಲ್ಲಿ ಭಟ್ ಚಿನ್ನದ ಪದಕ ಪಡೆದಿದ್ದರು. ನಂತರ ಅಮೆರಿಕದಲ್ಲಿ 'ಪರಮಾಣು ವಿಜ್ಞಾನ' ವಿಷಯದ ಬಗ್ಗೆ ಉನ್ನತ ವ್ಯಾಸಂಗ ಕೈಗೊಂಡ ಸಂದರ್ಭದಲ್ಲಿ ಅವರು ಕಮ್ಯುನಿಸಂ ಸಿದ್ಧಾಂತದಿಂದ ಆಕರ್ಷಿತರಾದರು.
2009: ರಾಜ್ಯ ಸರ್ಕಾರ ಇತ್ತೀಚೆಗೆ ರಚಿಸಿದ ರಾಜ್ಯ ಕಾನೂನು ಆಯೋಗಕ್ಕೆ ಪ್ರಥಮ ಅಧ್ಯಕ್ಷರನ್ನಾಗಿ ಕೇರಳ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್.ಮಳೀಮಠ್ ಅವರನ್ನು ನೇಮಿಸಲು ಸರ್ಕಾರ ನಿರ್ಧರಿಸಿತು. ಈ ಆಯೋಗವು ಜನಸಾಮಾನ್ಯರಿಗೆ ತ್ವರಿತ ನ್ಯಾಯ ನೀಡಲು ಹಾಗೂ ಸುಧಾರಣೆ ತರಲು ಇರುವ ನ್ಯೂನತೆಗಳೇನು ಎನ್ನುವುದರ ಅಧ್ಯಯನ ನಡೆಸುವುದು. ಕಾನೂನು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ ಪ್ರಸ್ತುತ ವಿ.ವಿಯ ವಿಶೇಷಾಧಿಕಾರಿಯಾಗಿರುವ ಜೆ.ಎಸ್.
ಪಾಟೀಲ್ ಅವರನ್ನು ನೇಮಿಸಲಾಗುವುದು ಎಂದು ಕಾನೂನು ಸಚಿವ ಸುರೇಶ ಕುಮಾರ್ ಪ್ರಕಟಿಸಿದರು.
2008: ಚೆಲುವ ಕನ್ನಡ ನಾಡಿನ ಅನರ್ಘ್ಯ ಸಂಗೀತ ರತ್ನ, ಸಂಗೀತ- ಸಂಸ್ಕೃತಿಯ ತೊಟ್ಟಿಲಲ್ಲಿ ಬೆಳೆದ ಹುಬ್ಬಳ್ಳಿಯ ಗಾಯನಗಂಗೆ ಗಂಗೂಬಾಯಿ ಹಾನಗಲ್ಲ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲ ಎಸ್. ಎಂ. ಕೃಷ್ಣ ಈದಿನ ಹುಟ್ಟೂರಿನಲ್ಲಿ `ಈ ಟಿವಿ ವರ್ಷದ ಕನ್ನಡಿಗ' ಪ್ರಶಸ್ತಿ ನೀಡಿ ಸನ್ಮಾನಿಸಿದರು.
2008: ಆಸ್ಟ್ರೇಲಿಯಾ ತಂಡದ ಆಂಡ್ರ್ಯೂ ಸೈಮಂಡ್ಸ್ ಅವರನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಭಾರತ ತಂಡದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಮೂರು ಟೆಸ್ಟ್ ಪಂದ್ಯಗಳ ನಿಷೇಧ ಹೇರಲು ನಿರ್ಧರಿಸಿತು. ಈದಿನ ಸಿಡ್ನಿಯಲ್ಲಿ ನಡೆಸಿದ ವಿಚಾರಣೆಯ ಬಳಿಕ ಮ್ಯಾಚ್ ರೆಫರಿ ಮೈಕ್ ಪ್ರಾಕ್ಟರ್ ಅವರು ಸೈಮಂಡ್ಸ್ ಮಾಡಿರುವ ಆರೋಪವನ್ನು ಎತ್ತಿ ಹಿಡಿದರು. ಭಾರತ ತಂಡವು ನಿಷೇಧ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿತು. ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಹರಭಜನ್ ಮತ್ತು ಸೈಮಂಡ್ಸ್ ನಡುವೆ ಮಾತಿಕ ಚಕಮಕಿ ನಡೆದಿತ್ತು. ಈ ವೇಳೆ ಹರಭಜನ್ `ಮಂಕಿ' ಎಂದು ಕರೆದು ಜನಾಂಗೀಯ ನಿಂದನೆ ಮಾಡಿದ್ದಾಗಿ ಸೈಮಂಡ್ಸ್ ಆರೋಪಿಸಿದ್ದರು.
2008: ಹಾವೇರಿ ಜಿಲ್ಲೆಯ ಸಂಗೂರಿನ ಕರ್ನಾಟಕ ಸಹಕಾರ ಸಕ್ಕರೆ ಕಾರ್ಖಾನೆಯನ್ನು ದಾವಣಗೆರೆಯ ಜೆಮ್ ಲ್ಯಾಬೊರೇಟರೀಸ್ ಖಾಸಗಿ ಸಂಸ್ಥೆಗೆ 42 ಕೋಟಿ ರೂಪಾಯಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತು. ಸಂಕಷ್ಟದಲ್ಲಿರುವ ಕಾರ್ಖಾನೆಯನ್ನು ತತ್ ಕ್ಷಣ ಪುನರಾರಂಭಿಸುವಂತೆ ಒತ್ತಾಯಿಸಿ ಆ ಭಾಗದ ರೈತರು ಒಂದು ತಿಂಗಳಿನಿಂದ ನಿರಂತರ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಕ್ರಮ ಕೈಗೊಂಡಿತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.
2008: ಶ್ರೀಲಂಕೆಯ ವಾಯುವ್ಯ ಭಾಗ ಮನ್ನಾರಿನಲ್ಲಿ ಸರ್ಕಾರಿ ಪಡೆಗಳು ನಡೆಸಿದ ದಾಳಿಯಲ್ಲಿ ಎಲ್ ಟಿ ಟಿ ಇ ಆಂತರಿಕ ಬೇಹುಗಾರಿಕೆ ದಳದ ಮುಖಂಡ ಕರ್ನಲ್ ಚಾರ್ಲ್ಸ್ ಹತನಾದ. ಎಲ್ ಟಿ ಟಿ ಇ ಮೂಲಗಳೂ ಇದನ್ನು ಖಚಿತಪಡಿಸಿದವು. ಈ ದಾಳಿಯಲ್ಲಿ ಕರ್ನಲ್ ಜೊತೆಗೆ ಇತರ ಮೂವರು ಲೆಫ್ಟಿನೆಂಟ್ ಗಳು ಕೂಡ ಹತರಾದರು ಎಂದು ಕ್ರಾಂತಿಪರ ತಮಿಳು ವೆಬ್ ಸೈಟ್ ಪ್ರಕಟಿಸಿತು. ಎರಡು ತಿಂಗಳ ಹಿಂದಷ್ಟೇ ಮುಂಚೂಣಿ ನಾಯಕ ತಮಿಳ್ ಸೆಲ್ವಂ ಅವರನ್ನು ಕಳೆದುಕೊಂಡಿದ್ದ ಎಲ್ ಟಿ ಟಿ ಇ ಇದರಿಂದಾಗಿ ಇನ್ನೊಂದು ಹಿನ್ನಡೆ ಅನುಭವಿಸಿತು. ಬೇಹುಗಾರಿಕೆ ಜವಾಬ್ದಾರಿ ಹೊತ್ತಿದ್ದ ಚಾರ್ಲ್ಸ್ (43) ವ್ಯಾನಿನಲ್ಲಿ ತೆರಳುತ್ತಿದ್ದಾಗ ಈ ದಾಳಿ ನಡೆಸಲಾಗಿತ್ತು.
2008: ಪಕ್ಷೇತರ ಸದಸ್ಯರಾಗಿದ್ದರೂ ಮುಖ್ಯಮಂತ್ರಿಯಾಗಿ ನೂರು ದಿನಗಳ ಅವಧಿಯನ್ನು ಪೂರೈಸಿದ ದೇಶದ ಮೊದಲ ಮುಖ್ಯಮಂತ್ರಿಯಾಗಿ ದಾಖಲೆ ಮಾಡಿದ ಜಾರ್ಖಂಡಿನ ಮುಖ್ಯಮಂತ್ರಿ ಮಧು ಕೋಡಾ ಈ ಸಲ ಸತತ 24 ತಾಸು ದುಡಿದು ಇನ್ನೊಂದು ದಾಖಲೆ ನಿರ್ಮಿಸಿದರು. ಹಲವು ಸರ್ಕಾರಿ ಕಚೇರಿಗಳಿಗೆ ಹಠಾತ್ ದಾಳಿ ನಡೆಸಿದ ಬಳಿಕ ಕಚೇರಿಯಲ್ಲಿ ತಮ್ಮ ಎಂದಿನ ಕೆಲಸವನ್ನು ಕೋಡಾ ನಿರ್ವಹಿಸಿದರು. ಸಂಜೆಯ ವಿಶ್ರಾಂತಿ ತೆಗೆದುಕೊಳ್ಳದೆ, ರಾತ್ರಿಯ ಊಟವನ್ನೂ ಮಾಡದೆ ನಿರಂತರ 24 ತಾಸು ಕೆಲಸ ನಿರ್ವಹಿಸುವ ಮೂಲಕ ಭಾರತದಲ್ಲಿಯೇ ಯಾರೇ ವ್ಯಕ್ತಿ ಮುಖ್ಯಮಂತ್ರಿಯಾಗಿ ಮಾಡದ ಕೆಲಸವನ್ನು ಕೋಡಾ ಮಾಡಿದರು.
2008: ಕಾಲಿಲ್ಲದ ಲಕ್ಷಾಂತರ ಮಂದಿಗೆ ಕೃತಕ ಕಾಲಿನ ಭಾಗ್ಯ ಒದಗಲು ಕಾರಣರಾದ ಜೈಪುರ ಕೃತಕ ಕಾಲಿನ ಸಂಶೋಧಕ ಹಾಗೂ ಖ್ಯಾತ ಮೂಳೆ ತಜ್ಞ ಡಾ. ಪ್ರಮೋದ್ ಕರಣ್ ಸೇಥಿ (80) ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮ್ಯಾಗ್ಸೆಸೆ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸೇಥಿ 1969ರಲ್ಲಿ ಜೈಪುರ ಕೃತಕ ಕಾಲು ಸಂಶೋದಿಸಿದ್ದರು.
2008: ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಬೆಳೆಗೆರೆ ಕೃಷ್ಣಶಾಸ್ತ್ರಿ, ಸುಗಮ ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ ಹಾಗೂ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಕುವೆಂಪು ವಿವಿ ನಿರ್ಧರಿಸಿತು.
2007: ರಾಷ್ಟ್ರಕವಿ ಪ್ರೊಫೆಸರ್ ಜಿ.ಎಸ್. ಶಿವರುದ್ರಪ್ಪ, ಚಿತ್ರನಟಿ ಬಿ. ಸರೋಜಾದೇವಿ ಮತ್ತು ಸಮಾಜ ಸೇವಕಿ ರುತ್ ಮನೋರಮಾ ಅವರಿಗೆ ಬೆಂಗಳೂರು ವಿಶ್ವ ವಿದ್ಯಾಲಯವು `ಗೌರವ ಡಾಕ್ಟರೇಟ್' ಪುರಸ್ಕಾರವನ್ನು ಪ್ರದಾನ ಮಾಡಿತು.
2007: ನವದೆಹಲಿ- ದೀಬ್ರುಗಢ ರಾಜಧಾನಿ ಎಕ್ಸ್ಪ್ರೆಸ್ಸಿನಲ್ಲಿದ್ದ ಪ್ರಯಾಣಿಕರು ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ ಪವಾಡ ಸದೃಶರಾಗಿ ಪಾರಾದರು. ಆದರೆ ಅಸ್ಸಾಮಿನ ತಿನ್ ಸುಕಿಯಾ ಜಿಲ್ಲೆಯ ಸಾದಿಯಾ ಪ್ರದೇಶದ ಕೂಲಿಕಾರರ ವಸತಿ ಪ್ರದೇಶದ ಮೇಲೆ ನಡೆದ ನಿಷೇಧಿತ ಉಲ್ಫಾ ದಾಳಿಯಲ್ಲಿ 28 ಮಂದಿ ಮೃತರಾದರು.
2007: ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ. ಮೂನ್ ಅವರು ತಾಂಜಾನಿಯಾದ ವಿದೇಶಾಂಗ ವ್ಯವಹಾರಗಳ ಸಚಿವೆ ಡಾ. ಆರ್.ಎ. ಮಿಗಿರೊ (50) ಅವರನ್ನು ವಿಶ್ವಸಂಸ್ಥೆಯ ಉಪ ಮಹಾ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು.
2007: ದಿಢೀರ್ ನೂಡಲ್ ಶೋಧಿಸಿದ `ನೂಡಲ್ ದೊರೆ' ಜಪಾನಿನ ಮೊಮೊಫುಕು ಅಂಡೊ (96) ಟೋಕಿಯೋದಲ್ಲಿ ನಿಧನರಾದರು. ದ್ವಿತೀಯ ಮಹಾಯುದ್ಧ ನಂತರ ಉದ್ಭವಿಸಿದ ಆಹಾರ ಕೊರತೆಯ ದಿನಗಳಲ್ಲಿ ಜನರು ಕಾಳಸಂತೆಯಲ್ಲಿ ರೇಮನ್ಸ್ ನೂಡಲ್ಸ್ ಖರೀದಿಗೆ ಉದ್ದನೆಯ ಸಾಲಿನಲ್ಲಿ ನಿಲ್ಲುವುದನ್ನು ಕಂಡು ಅಂಡೊ `ದಿಢೀರ್ ನೂಡಲ್ ತಯಾರಿಕೆ' ವಿಧಾನ ಕಂಡು ಹಿಡಿದರು. ಗಗನಯಾನಿಗಳಿಗೆಂದೇ ವಿಶೇಷವಾಗಿ ಸಿದ್ಧ ಪಡಿಸಿದ್ದ ಕಪ್ ನೂಡಲ್ಸ್ ಪ್ರಚಾರ ಉತ್ತೇಜಿಸಲು 2005ರಲ್ಲಿ ಅವರು ಟೆಲಿವಿಷನ್ ಕಾರ್ಯಕ್ರಮದಲ್ಲೂ ಪಾಲ್ಗೊಂಡ್ದಿದರು.
2007: ಕನ್ನಡ ರಂಗಭೂಮಿಗೆ ರಾಷ್ಟ್ರೀಯ ರಂಗಭೂಮಿ ಸ್ಥಾನ ನೀಡುವಂತೆ ಆಗ್ರಹಿಸಿ ಅಭಿವ್ಯಕ್ತಿ-ಅಭಿಯಾನ ನಡೆಸಿದ ಚಳವಳಿಯ ಅಂಗವಾಗಿ ಹಿರಿಯ ರಂಗಕರ್ಮಿ ಪ್ರಸನ್ನ ಅವರು ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಆರಂಭಿಸಿದ ಆಮರಣ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿತು. ಈ ಸಂದರ್ಭದಲ್ಲಿ ಪ್ರಸನ್ನ ಅವರ ದೇಹಸ್ಥಿತಿಯಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡ ಕಾರಣ ಪೊಲೀಸರ ಸಲಹೆಯ ಮೇರೆಗೆ ವೈದ್ಯರು ಅವರ ಆರೋಗ್ಯ ತಪಾಸಣೆ ನಡೆಸಿದರು.
2006: ಚಿತ್ರನಟ ವಿಷ್ಣುವರ್ಧನ್ ಸೇರಿದಂತೆ ನಾಲ್ವರು ಗಣ್ಯರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಬೆಂಗಳೂರಿನಲ್ಲಿ ನಡೆದ 41ನೇ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರು ವಿಷ್ಣುವರ್ಧನ್, ಕೊಲಾಜ್ ಕಲಾವಿದ ವಿ. ಬಾಲು, ನೃತ್ಯ ಕಲಾವಿದೆ ಮಾಯಾರಾವ್ ಹಾಗೂ ಹಿರಿಯ ವಿದ್ವಾಂಸ ಪ್ರೊ. ಎಸ್. ಕೆ. ರಾಮಚಂದ್ರರಾವ್ ಅವರಿಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
2006: ಭಾರತೀಯ ಮೂಲದ ಕೃಷಿಕ ಎಲಿಯಾಹು ಬೆಜಾಲೆಲ್ ಅವರು ಇಸ್ರೇಲಿನ ಪ್ರತಿಷ್ಠಿತ ಪ್ರವಾಸಿ ಭಾರತೀಯ ಪ್ರಶಸ್ತಿಗೆ ಆಯ್ಕೆಯಾದರು. ಕೇರಳದ ಚೆಂದಮಂಗಳಂ ಗ್ರಾಮದಿಂದ 1955ರಲ್ಲಿ ಇಸ್ರೇಲಿಗೆ ತೆರಳಿ ರೈತನಾಗಿ ಗಣನೀಯ ಸೇವೆ ಸಲ್ಲಿಸಿದ್ದ ಬೆಜಾಲೆಲ್, ಇಸ್ರೇಲಿನ ನೆಗಿವ್ ಮರುಭೂಮಿಯಲ್ಲಿ ಕೃಷಿಸಾಧನೆ ಮಾಡಿದ್ದಕ್ಕಾಗಿ 1964ರಲ್ಲೇ ಶ್ರೇಷ್ಠ ರಫ್ತುದಾರ ಪ್ರಶಸ್ತಿಯನ್ನು ಆಗಿನ ಪ್ರಧಾನಿ ಲೆವಿ ಎಸ್ಕೋಲರಿಂದ ಪಡೆದಿದ್ದರು.
1989: ಇಂದಿರಾಗಾಂಧಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸತ್ವಂತ್ ಸಿಂಗ್ ಮತ್ತು ಕೇಹರ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಯಿತು.
1959: ಭಾರತದ ಆಲ್ ರೌಂಡರ್ ಕ್ರಿಕೆಟ್ ಪಟು ಕಪಿಲ್ ದೇವ್ ಹುಟ್ಟಿದರು. ಅವರ 434 ಟೆಸ್ಟ್ ವಿಕೆಟುಗಳು ಜಾಗತಿಕ ದಾಖಲೆ ನಿರ್ಮಿಸಿದವು. 2002ರ ಜುಲೈಯಲ್ಲಿ ಅವರು `ವಿಸ್ ಡನ್ಸ್ ಇಂಡಿಯನ್ ಕ್ರಿಕೆಟಿಯರ್ ಆಫ್ ಸೆಂಚುರಿ' ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1948: ಸಾಹಿತಿ ಎಂ.ಕೆ. ಬದರಿನಾಥ ಹುಟ್ಟಿದ ದಿನ.
1947: ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಭಾರತದ ವಿಭಜನೆಯನ್ನು 99-52 ಮತಗಳ ಅಂತರದಲ್ಲಿ ಅಂಗೀಕರಿಸಿತು.
1941: ಸಾಹಿತಿ ಪರಿಮಳಾ ಜಿ. ರಾವ್ ಹುಟ್ಟಿದ ದಿನ.
1939: ಸಾಹಿತಿ ಶ್ರೀನಿವಾಸ ಕುಲಕರ್ಣಿ ಹುಟ್ಟದ ದಿನ.
1933: ಸಾಹಿತಿ ಪಂಚಾಕ್ಷರಿ ಹಿರೇಮಠ ಅವರು ಹುಟ್ಟಿದ ದಿನ.
1933: ಸಾಹಿತಿ ಡಾ. ಅ ಸುಂದರ ಹುಟ್ಟಿದ ದಿನ.
1929: ಸಾಹಿತಿ ಎಂ.ಕೆ. ಜಯಲಕ್ಷ್ಮಿ ಹುಟ್ಟಿದ ದಿನ.
1919: ಅಮೆರಿಕದ 26ನೇ ಅಧ್ಯಕ್ಷ ಥಿಯೋಡೋರ್ ರೂಸ್ ವೆಲ್ಟ್ ಅವರು ತಮ್ಮ 60ನೇ ವಯಸ್ಸಿನಲ್ಲಿ ನ್ಯೂಯಾರ್ಕಿನಲ್ಲಿ ನಿಧನರಾದರು.
1897: ವಿಶ್ವವಿಖ್ಯಾತ ಶಿಲ್ಪಿ ರಂಜಾಳ ಗೋಪಾಲ ಶೆಣೈ (6-1-1897ರಿಂದ 1-12-1985) ಅವರು ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳ ಸಮೀಪದ ರಂಜಾಳದಲ್ಲಿ ಜನಾರ್ದನ ಶೆಣೈ ಅವರ ಪುತ್ರನಾಗಿ ಜನಿಸಿದರು. ಕುಂಚ, ಬಣ್ಣಗಳ ಜೊತೆ ಆಟವಾಡುತ್ತಾ ಬೆಳೆದ ರಂಜಾಳ ಶ್ರೀಮದ್ ಭುವನೇಂದ್ರ ಶಿಲ್ಪ ಕಲಾ ಶಾಲೆ ಸ್ಥಾಪಿಸಿ ಉಳಿ, ಸುತ್ತಿಗೆ, ಚಾಣ ಹಿಡಿದರು. ಕಾರ್ಕಳದ ವೆಂಕಟ್ರಮಣ ದೇವಾಲಯದ ಗರುಡ ಮಂಟಪದ ನಾಲ್ಕು ಕಂಬಗಳ ಕಲಾ ವೈಖರಿ ಅವರಿಗೆ ಮೊದಲ ಕೀರ್ತಿ ತಂದ ಶಿಲ್ಪ. ಧರ್ಮಸ್ಥಳಕ್ಕಾಗಿ ನಿರ್ಮಿಸಿಕೊಟ್ಟ 39 ಅಡಿಯ ಬಾಹುಬಲಿ, ಉತ್ತರ ಪ್ರದೇಶದ ಫಿರೋಜ್ ನಗರಕ್ಕೆ ನಿರ್ಮಿಸಿಕೊಟ್ಟ ಬಾಹುಬಲಿ, ಜಪಾನಿನ ತ್ಸುಬೇಸಾ ಬೌದ್ಧ ಮಂದಿರಕ್ಕಾಗಿ ನಿರ್ಮಿಸಿಕೊಟ್ಟ 67 ಅಡಿಗಳ ಬುದ್ಧ ಮೂರ್ತಿ, ಜಪಾನಿನ ನಾಲಾ ಯಾತ್ರಾಸ್ಥಳಕ್ಕಾಗಿ ನಿರ್ಮಿಸಿದ ಮಲಗಿರುವ ಬುದ್ಧ, ಮುಂಬೈಗಾಗಿ ನಿರ್ಮಿಸಿದ ರಾಮ-ಲಕ್ಷ್ಮಣ ಇತ್ಯಾದಿ ಶಿಲ್ಪಗಳು ವಿಶ್ವದಾದ್ಯಂತ ಅವರ ಕೀರ್ತಿಯನ್ನು ಪಸರಿಸಿವೆ.
1885: `ಆಧುನಿಕ ಹಿಂದಿ'ಯ ಜನಕ ಎಂದೇ ಪರಿಗಣಿತರಾಗಿದ್ದ ಭಾರತೀಯ ಕವಿ, ನಾಟಕಕಾರ, ವಿಮರ್ಶಕ, ಪತ್ರಕರ್ತ `ಭರತೇಂದು' ಹರೀಶ್ ಚಂದ್ರ ಅವರು ತಮ್ಮ 35ನೇ ವಯಸ್ಸಿನಲ್ಲಿ ನಿಧನರಾದರು.
No comments:
Post a Comment