ಇಂದಿನ ಇತಿಹಾಸ History Today ಜನವರಿ 26
2019: ನವದೆಹಲಿ: ತನ್ನ ಸೇನಾ ಶಕ್ತಿಯ ಅಭೂತಪೂರ್ವ ಪ್ರದರ್ಶನ ಮತ್ತು ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯ ಪರಿಚಯವನ್ನು ರಾಜಧಾನಿಯ ಭವ್ಯ ರಾಜಪಥದ ಪರಂಪರಾಗತ ಕವಾಯತಿನಲಿ ವಿಶ್ವಕ್ಕೆ ಮಾಡಿಕೊಡುವ ಮೂಲಕ ಭಾರತವು ತನ್ನ ೭೦ನೇ ಗಣರಾಜ್ಯೊತ್ಸವವನ್ನು ಸಂಭ್ರಮೋತ್ಸಾಹದೊಂದಿಗೆ ಆಚರಿಸಿತು. ಸಮಾರಂಭದಲ್ಲಿ ಮುಖ್ಯಅತಿಥಿಯಾಗಿದ್ದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಂಫೋಸಾ ಅವರು ಗಣರಾಜ್ಯೋತ್ಸವ ಸಂಭ್ರಮವನ್ನು ಕಣ್ತುಂಬಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಭಾರತದ ಮೂರೂ ಪಡೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ಅಮರ್ ಜವಾನ್ ಜ್ಯೋತಿಗೆ ಮಾಲಾರ್ಪಣೆ ಮಾಡುವ ಮೂಲಕ ದೇಶಕ್ಕಾಗಿ ಆತ್ಮಾರ್ಪಣೆ ಮಾಡಿದ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಆ ಬಳಿಕ ಸಾಂಪ್ರದಾಯಿಕ ಕುರ್ತಾ-ಪೈಜಾಮ ಮತ್ತು ನೆಹರೂ ಜಾಕೆಟ್ ಧರಿಸಿದ್ದ ಪ್ರಧಾನಿ ಮೋದಿ ಅವರು ರಾಜಪಥಕ್ಕೆ ಆಗಮಿಸಿದರು ಮತ್ತು ಅಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಮುಖ್ಯ ಅತಿಥಿ ರಾಂಫೋಸಾ ಅವರನ್ನು ಸ್ವಾಗತಿಸಿ ಅಭಿನಂದಿಸಿದರು. ರಾಷ್ಟ್ರಗೀತೆಯ ವಾದನ ಮತ್ತು ಹಿನ್ನೆಲೆಯಲ್ಲಿ ೨೧ ಗುಂಡುಗಳ ಗೌರವ ರಕ್ಷೆಯ ಮಧ್ಯೆ ರಾಷ್ಟ್ರಧ್ವಜವನ್ನು
ಅರಳಿಸಲಾಯಿತು. ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸೇರಿದಂತೆ ಮೋದಿ ಸರ್ಕಾರದ ಬಹುತೇಕ ಸಚಿವರು, ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ದೇವೇಗೌಡ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಗುಲಾಂ ನಬಿ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು. ಬಿಗಿ ಭದ್ರತೆ: ಕೇಂದ್ರ ದೆಹಲಿಯ ಕೆಂಪುಕೋಟೆಯಿಂದ ವಿಜಯ ಚೌಕದವರೆಗೆಇನ ಗಣರಾಜ್ಯ ದಿನದ ಕವಾಯತು ನಡೆದ ರಾಜಪಥದ ೮ ಕಿಮೀ ಮಾರ್ಗದ ಆಯಕಟ್ಟಿನ ಪ್ರದೇಶಗಳಲ್ಲಿ ಮಹಿಳಾ ಕಮಾಂಡೋಗಳು, ಸಂಚಾರಿ ದಾಳಿ ಪಡೆಗಳು, ವಿಮಾನ ನಿರೋಧಿ ಬಂದೂಕುಗಳು ಮತ್ತು ಶಾರ್ಪ್ ಶೂಟರ್ಗಳನ್ನು ನಿಯೋಜಿಸುವ ಮೂಲಕ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಭದ್ರತಾ ಲೋಪವಾಗದಂತೆ ನೋಡಿಕೊಳ್ಳುವ ಸಲುವಾಗಿ ಎನ್ ಎಸ್ ಜಿ ತರಬೇತಿ ಪಡೆದ ಕಮಾಂಡೋಗಳು ಇದ್ದ ಪರಾಕ್ರಮ ವ್ಯಾನುಗಳು ಆಯಕಟ್ಟಿನ ಪ್ರದೇಶಗಳಲ್ಲಿ ಕಾವಲು ಕಾಯುತ್ತಿದ್ದವು.
ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆಯೇ ಟ್ವಿಟ್ಟರ್ ಮೂಲಕ ಗಣರಾಜ್ಯೋತ್ಸವದ ಅಂಗವಾಗಿ ಜನತೆಯನ್ನು ಅಭಿನಂದಿಸಿದ್ದರು. ಇತರ ಹಲವಾರು ನಾಯಕರೂ ಸಾಮಾಜಿಕ ಮಾಧ್ಯಮಗಳ ಮೂಲಕ ಜನತೆಗೆ ಗಣರಾಜ್ಯೋತ್ಸವ ಶುಭಾಶಯಗಳನ್ನು ಕೋರಿದ್ದರು. ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಬಾನುಲಿ/ಟಿವಿಗಳಲ್ಲಿ ಪ್ರಸಾರಗೊಂಡ ಗಣರಾಜ್ಯೋತ್ಸವದ ಮುನ್ನಾದಿನದ ತಮ್ಮ ಭಾಷಣದಲ್ಲಿ ಜನರನ್ನು ಅಭಿನಂದಿಸಿ ಮುಂಬರುವ ಮಹಾಚುನಾವಣೆಯಲ್ಲಿ
ಮತ ಚಲಾವಣೆಯ ಪವಿತ್ರ ಕರ್ತವ್ಯವನ್ನು ತಪ್ಪದೆ ನಿರ್ವಹಿಸುವಂತೆ ಕರೆ ನೀಡಿದ್ದರು. ೨೦೧೯ರ ಗಣರಾಜ್ಯೋತ್ಸವ ಆಚರಣೆಯೊಂದಿಗೆ ಸಂವಿಧಾನವು ಘೋಷಿಸಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆಯ ಆದರ್ಶಗಳನ್ನು ಎತ್ತಿ ಹಿಡಿಯುವ ನಮ್ಮ ಪಣವನ್ನು ನವೀಕರಿಸೋಣ. ಬಲಾಢ್ಯ, ಉತ್ತಮ ಭಾರತದತ್ತ ಮುನ್ನಡೆಯೋಣ. ಒಂದೇ ದನಿಯಿಂದ ಯಾವುದೇ ಭಯವಿಲ್ಲದೆ ’ಜೈಹಿಂದ್’ ಘೋಷಣೆ ಮಾಡೋಣ’ ಎಂದು ಕೇಂದ್ರ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಟ್ವೀಟ್ ಮಾಡಿದ್ದರು. ಅಮೆರಿಕದ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅಮೆರಿಕದಿಂದಲೇ ಟ್ವೀಟ್ ಮೂಲಕ ಜನತೆಗೆ ಗಣರಾಜ್ಯೋತ್ಸವ ಶುಭ ಹಾರೈಸಿದರು. ಈ ಮಧ್ಯೆ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂಡಿಯಾ ಗೇಟಿನ ಅಮರ ಜವಾನ್ ಜ್ಯೋತಿಯಲ್ಲಿ ಯೋಧರನ್ನು ಅಭಿನಂದಿಸಿದರು. ವರ್ಣರಂಜಿತ ಪೇಟಾಧರಿಸಿ ಅಲ್ಲಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಕ್ಷಣಾ ಸಚಿವರು ಸ್ವಾಗತಿಸಿದರು. ಅಮರ ಜವಾನ್ ಜ್ಯೋತಿಯಲ್ಲಿ ಹುತಾತ್ಮರಿಗೆ ಗೌರವಾರ್ಪಣೆ ಮಾಡಿದ ಬಳಿಕ ಪ್ರಧಾನಿಯವರು ರಾಜಪಥದತ್ತ ಹೊರಟರು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮುಖ್ಯ ಅತಿಥಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಂಫೋಸಾ ಅವರೊಂದಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಜಪಥಕ್ಕೆ ಆಗಮಿಸಿದರು. ಪ್ರಧಾನಿಯವರು ರಾಷ್ಟ್ರಪತಿ ಮತ್ತು ಮುಖ್ಯ ಅತಿಥಿ ರಾಂಫೋಸಾ ಅವರನ್ನು ಸ್ವಾಗತಿಸಿ ಅಭಿನಂದಿಸಿದರು. ದೇಶದ ಶಾಂತಿಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿ ಅಶೋಕ ಚಕ್ರಕ್ಕೆ ಮರಣೋತ್ತರವಾಗಿ ಪಾತ್ರರಾದ ಕಾಶ್ಮೀರದ ಪ್ರಪ್ರಥಮ ವ್ಯಕ್ತಿ ಯೋಧ ನಜೀರ್ ಅಹ್ಮದ್ ವಾನಿ (೩೮) ಅವರ ತಾಯಿ ರಾಷ್ಟ್ರಪತಿಯವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಆ ಬಳಿಕ ಪ್ರಾರಂಭವಾದ ಭಾರತದ ಶಕ್ತಿ ಪ್ರದರ್ಶನದ ಕವಾಯತಿನ ನೇತೃತ್ವವನ್ನು ಲೆಫ್ಟಿನೆಂಟ್ ಅಸಿತ್ ಮಿಸ್ತ್ರಿ ವಹಿಸಿದರು. ಹಿರಿಯ ಸಶಸ್ತ್ರ ಪಡೆ ಸಿಬ್ಬಂದಿ ಅವರನ್ನು ಅನುಸರಿಸಿದರು. ಬಳಿಕ ಆಶ್ವ ಸವಾರರು, ಟಿ-೯೦ ಭೀಷ್ಮ ಸೇರಿದಂತೆ ಸಮರ ಟ್ಯಾಂಕರುಗಳು ಕವಾಯತಿನಲ್ಲಿ ಸಾಗಿ ಬಂದವು. ಅತ್ಯಾಧುನಿಕ ಹಗುರ ಹೆಲಿಕಾಪ್ಟರುಗಳು, ವಿವಿಧ ರಾಜ್ಯಗಳ ಬೆಟಾಲಿಯನ್ಗಳು ಪಥ ಸಂಚಲನದಲ್ಲಿ ಪಾಲ್ಗೊಂಡವು. ಲೆಫ್ಟಿನೆಂಟ್ ಕಮಾಂಡರ್ ಅಂಬಿಕಾ ಸುಧಾಕರನ್ ಅವರು ಭಾರತೀಯ ನೌಕಾಪಡೆಯ ತುಕಡಿಯ ನೇತೃತ್ವ ವಹಿಸಿದರು. ಅದಕ್ಕೂ ಮುನ್ನ ವಾದ್ಯಘೋಷದೊಂದಿಗೆ
ಸಂಚಲನ ನಡೆಯಿತು. ನೌಕಾಪಡೆಯ ಬೆನ್ನಲ್ಲೇ ವಾಯುಪಡೆ ತುಕಡಿ ಹಗುರ ಯುದ್ಧ ವಿಮಾನ ಮತ್ತು ಮಧ್ಯಮ ದರ್ಜೆಯ ಕ್ಷಿಪಣಿ ವಾಹಕಗಳನ್ನು ಪ್ರದರ್ಶಿಸಿತು. ಭಾರತೀಯ ಸೇನಾ ಬಲದ ಪ್ರದರ್ಶನದಲ್ಲಿ ಅರ್ಟಿಲರಿ ಗನ್ ಸಿಸ್ಟಮ್ ಎಂ ೭೭೭, ಅಮೆರಿಕದಿಂದ ಇತ್ತೀಚೆಗೆ ಬಂದಿರುವ ಅಮೆರಿಕದ ಅಲ್ಟ್ರಾ ಲೈಟ್ ಹೊವಿಟ್ಜರ್ಗಳು, ಸ್ವಯಂಚಾಲಿತ ಅರ್ಟಿಲರಿ ಗನ್ ಕೆ೯ ವಜ್ರ ಈ ವರ್ಷದ ವಿಶೇಷ ಸೇರ್ಪಡೆಗಳಾಗಿದ್ದವು.
ಅಸ್ಸಾಂ ರೈಫಲ್ಸ್ ’ಕಮ್ ಕದಮ್ ಬಡಾಯೆ ಜಾ’ ನುಡಿಸುತ್ತಾ ಸಾಗಿದರೆ, ಕಮಾಂಡರ್ ಕುಲದೀಪ್ ಸಿಂಗ್ ನೇತೃತ್ವದ ಗಡಿ ಭದ್ರತಾ ಪಡೆಯು ವರ್ಣರಂಜಿತ ಒಂಟೆಗಳ ಮೇಲೆ ಸಾಗಿ ಬಂದಿತು. ಇವರ ಹಿಂದೆಯೇ ಮಹಿಳಾ ಎನ್ಸಿಸಿ ತುಕಡಿ ಬಂದಿತು. ರಾಜ್ಯಗಳನ್ನು ಪ್ರತಿನಿಧಿಸಿದ ಟ್ಯಾಬ್ಲೋಗಳ ಪೈಕಿ ಮೊದಲು ಸಿಕ್ಕಿಂ ಟ್ಯಾಬ್ಲೋ ಆಗಮಿಸಿದರೆ, ಅದರ ಹಿಂದೆ ಮಹಾರಾಷ್ಟ್ರದ ಟ್ಯಾಬ್ಲೋ ಆಗಮಿಸಿತು. ಅಸ್ಸಾಮಿನ ಟ್ಯಾಬ್ಲೋ ಜೊತೆಗೆ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಭೂಪೇನ್ ಹಜಾರಿಕ ಅವರ ಜನಪ್ರಿಯ ಹಾಡನ್ನು ಹಾಡುತ್ತಾ ಬರಲಾಯಿತು. ಪಂಜಾಬಿನ ಟ್ಯಾಬ್ಲೋ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು
ಬಿಂಬಿಸಿತು. ಅದರ ಹಿಂದೆ ತಮಿಳುನಾಡು ಮತ್ತು ಗುಜರಾತ್ ಟ್ಯಾಬ್ಲೋಗಳು ಬಂದವು. ರೈಲ್ವೇ ಇಲಾಖೆಯು ಸ್ವಚ್ಛ ಭಾರತ ಯೋಜನೆಯ ಅಂಗವಾಗಿ ಇಲಾಖೆಯಲ್ಲಿ ಕೈಗೊಳ್ಳಲಾದ ಉಪಕ್ರಮಗಳನ್ನು ಬಿಂಬಿಸಿತು. ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಹಲವಾರು ರಾಜ್ಯಗಳ ಈ ವರ್ಷದ ಟ್ಯಾಬ್ಲೋಗಳು ಮಹಾನ್ ಸ್ವಾತಂತ್ರ್ಯ ಯೋಧನ ಜೀವನ- ಹೋರಾಟದ ಸಂದರ್ಭಗಳನ್ನು ಬಿಂಬಿಸಿದವು. ಶಾಲಾ ಮಕ್ಕಳು ನೃತ್ಯ ಆರಂಭಿಸುವುದಕ್ಕೆ
ಮುನ್ನ ಸಾಗಿಬಂದ ಕೊನೆಯ ಟ್ಯಾಬ್ಲೋ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಪಾತ್ರರಾದ ಯುವ ವೀರರನ್ನು ಕರೆದುಕೊಂಡು ಬಂದಿತು. ಡೇರ್ ಡೆವಿಲ್ ಸಾಹಸ: ಮೋಟಾರ್ ಬೈಕಿನಲ್ಲಿ ಬಂದ ಡೇರ್ ಡೆವಿಲ್ ತಂಡವು ನಂಬಸಲದಳವಾದ ಬೈಕ್ ಸಮತೋಲನ ಮತ್ತು ಶೌರ್ಯವನ್ನು ಪ್ರದರ್ಶಿಸಿತು. ಕ್ಯಾಪ್ಟನ್ ಶಿಖಾ ಸುರಭಿ ಅವರು ಮೋಟಾರ್ ಬೈಕಿನಲ್ಲೇ ನಿಂತುಕೊಂಡು ರಾಷ್ಟ್ರಪತಿ ಮತ್ತು ಇತರ ನಾಯಕರಿಗೆ ಸೆಲ್ಯೂಟ್ ನೀಡಿದರು. ಡೇರ್ ಡೆವಿಲ್ ತಂಡದ ಸಾಹಸ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಅತಿಥಿಯ ಮುಖದಲ್ಲಿ ಮಂದಹಾಸವನ್ನು ಮೂಡಿಸಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದರು. ಡೇರ್ ಡೆವಿಲ್ ಸದಸ್ಯರು ಮೋಟಾರು ಬೈಕಿನಲ್ಲಿ ಸಾಗುತ್ತಲೇ ನವಿರೇಳಿಸುವ ವೈವಿದ್ಯಮಯ ಕವಾಯತುಗಳನ್ನು ಪ್ರದರ್ಶಿಸಿದರು, ಒಂದು
ಕಾಲಿನ ಮೇಲೆ ನಿಂತ ಯೋಧನ ಮೇಲೆ ಮಾನವ ಪಿರಮಿಡ್ ರಚಿಸಿದರು. ಡೇರ್ ಡೆವಿಲ್ ಪ್ರದರ್ಶನದ ಬೆನ್ನಲ್ಲೇ ಅಪ್ರತಿಮವಾದ ವಾಯುಪಡೆ ಪ್ರದರ್ಶನ ನಡೆಯಿತು. ಮೂರು ಹೆಲಿಕಾಪ್ಟರುಗಳು
ತ್ರಿಕೋನಾಕಾರದಲ್ಲಿ ಹಾರಾಡಿ ರೋಮಾಂಚನ ಗೊಳಿಸಿದರೆ, ಮೂರು ವಿಮಾನಗಳು ಮತ್ತು ಸಮರ ವಿಮಾನಗಳು ಅವುಗಳನ್ನು ಅನುಸರಿಸಿದವು. ಬಾಹ್ಯಾಕಾಶದಲ್ಲಿ ಪ್ರದರ್ಶನಗೊಂಡ ಯುದ್ದ ವಿಮಾನಗಳ ಚಿತ್ತಾಕರ್ಷಕ ಕವಾಯತು ಜನರನ್ನು ಮಂತ್ರಮುಗ್ಧಗೊಳಿಸಿತು. ಇದರೊಂದಿಗೆ ಸಂಭ್ರಮದ ಗಣರಾಜ್ಯೋತ್ಸವ ಕವಾಯತು ಮುಕ್ತಾಯಗೊಂಡಿತು. ವಾದ್ಯವೃಂದವು ಮತ್ತೊಮ್ಮೆ ರಾಷ್ಟ್ರಗೀತೆಯನ್ನು
ನುಡಿಸಿತು. ಸಹಸ್ರಾರು ಮಂದಿ ವಾದ್ಯವೃಂದದ ಜೊತೆಗೆ ಮನಸ್ಸಿನಲ್ಲೇ ಜನಗಣ ಮನ ಗುನುಗುನಿಸುತ್ತಿದ್ದಂತೇಯೇ ವರ್ಣರಂಜಿತ ಬಲೂನುಗಳು ನಭಕ್ಕೆ ಏರಿ ಆಗಸಕ್ಕೆ ಬಣ್ಣದ ಚಿತ್ತಾರ ನೀಡಿದವು. ಚಾರಿತ್ರಿಕ ಕೆಂಪುಕೋಟೆಯಿಂದ ವಿಜಯ ಚೌಕದವರೆಗಿನ ರಾಜಪಥದಲ್ಲಿ ಪರಂಪರಾಗತ ಗಣರಾಜ್ಯ ಕವಾಯತು ಸುಲಲಿತವಾಗಿ ನಡೆಯುವಂತೆ ನೋಡಿಕೊಳ್ಳುವ ಸಲುವಾಗಿ ದೆಹಲಿಯಲ್ಲಿ ವ್ಯವಸ್ಥಿತ ಸಂಚಾರಿ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಹಲವಾರು ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಬೇರೆ ಕಡೆಗೆ ತಿರುಗಿಸಲಾಗಿತ್ತು. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಂಫೋಸಾ ಅವರು
ಭಾರತದ ಗಣರಾಜ್ಯೋತ್ಸವ ಸಂಭ್ರಮವನ್ನು ಕಣ್ತುಂಬಿಕೊಂಡ ದಕ್ಷಿಣ ಆಫ್ರಿಕಾದ ಎರಡನೇ ಅಧ್ಯಕ್ಷರಾಗಿದ್ದಾರೆ.
೧೯೯೫ರ ಗಣರಾಜ್ಯೋತ್ಸವ ಕವಾಯತಿನಲ್ಲಿ ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇ ಅವರು ಮುಖ್ಯ ಅತಿಥಿಯಾಗಿದ್ದರು.
2019: ನವದೆಹಲಿ: ಪದ್ಮಶ್ರೀ ಪುರಸ್ಕೃತರ ಪಟ್ಟಿಯಲ್ಲಿ ಪುರಾತತ್ವ ತಜ್ಞ ಕೆ.ಕೆ. ಮುಹಮ್ಮದ್ ಅವರ ಹೆಸರು ಪ್ರಕಟವಾದ ಕ್ಷಣದಿಂದ ’ಸತ್ಯ ಹೇಳಿದ್ದಕ್ಕಾಗಿ’ ಅವರನ್ನು ಅಭಿನಂದಿಸಿ ಸಂದೇಶಗಳ ಮಹಾಪೂರ ಹರಿಯಿತು. ಮುಹಮ್ಮದ್ ಅವರು ಹೇಳಿದ ’ಸತ್ಯ’ ಯಾವುದು ಎಂದರೆ ಬಾಬರಿ ಮಸೀದಿ ನಿವೇಶನ ಮೂಲತಃ ದೇವಾಲಯದ ಜಾಗವಾಗಿತ್ತು ಎಂಬ ಮುಹಮ್ಮದ್ ಅವರ ದೃಢ ನಂಬಿಕೆ. ಜವಾಹರ ಲಾಲ್ ನೆಹರೂ ವಿಶ್ವ ವಿದ್ಯಾಲಯದ ಬೋಧನಾ ವಿಭಾಗದ ಸದಸ್ಯ ಆನಂದ ರಂಗನಾಥನ್ ಅವರು ’ಮುಹಮ್ಮದ್ ಅವರು ಬಾಬರಿ ಮಸೀದಿಯ ಒಳಗೆ ದೇವಾಲಯದ ಅವಶೇಷಗಳನ್ನು ತಾವು ಪತ್ತೆ ಹಚ್ಚಿರುವುದಾಗಿ ಬಹಿರಂಗ ಪಡಿಸಿದಾಗ ವಾಸ್ತವವನ್ನು ಬಹಿರಂಗ ಪಡಿಸಿದ್ದಕ್ಕಾಗಿ
ಅವರು ಸೇವೆಯಿಂದ ಅಮಾನತು ಗೊಳ್ಳಲಿದ್ದಾರೆ ಎಂದು ನಾನು ಹೇಳಿದ್ದೆ. ಅದಕ್ಕೆ ಅವರು ಸಂಸ್ಕೃತದಲ್ಲಿ ಲೋಕಸಂಗ್ರಾಮಮೇವಪಿ
ಸಂಪಸ್ಯಾನ್ ಕರ್ತುಮರ್ಹಸಿ. ಸ್ವಧರ್ಮೇ ನಿಧನಮ್ ಶ್ರೇಯಃ (ನಾನು ಸತ್ಯ ಹೇಳಿದ್ದೇನೆ. ಕರ್ತವ್ಯದಲ್ಲಿದ್ದಾಗ ಸಾವು ಆಯ್ಕೆಗೆ ಅರ್ಹ) ಎಂದು ಉತ್ತರಿಸಿದ್ದರು’ ಎಂದು ಟ್ವೀಟ್ ಮಾಡಿದರು. ಭಾರತೀಯ ಚಿಂತಕರಲ್ಲಿ ಜನಪ್ರಿಯರಾಗಿರುವ ಹಾಗೂ ಎಡಪಂಥೀಯರ ಕಟು ಟೀಕಾಕಾರರಾಗಿರುವ ಈ ಪುರಾತತ್ವ ತಜ್ಞ ಸಾಮಾನ್ಯವಾಗಿ ಭಾರತೀಯ ಚಿಂತಕರ ಸಭೆಗಳಲ್ಲಿ ’ದೀಪ ಜ್ಯೋತಿ, ಪರಂಜ್ಯೋತಿ, ದೀಪ ಜ್ಯೋತಿ ಜನಾರ್ದನ .. ದೀಪಜ್ಯೋತಿ ನಮಸ್ತಸೈ’ ಎಂಬ
ಶ್ಲೋಕದೊಂದಿಗೇ ಮಾತು ಆರಂಭಿಸುತ್ತಾರೆ. ಕೇರಳದ ಕಲ್ಲಿಕೋಟೆಯಲ್ಲಿ
ಜನಿಸಿದ ಮುಹಮ್ಮದ್ ಕೊಡುವಲ್ಲಿಯ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಕಲಿತವರು. ಭಾರತೀಯ ಪುರಾತತ್ವ ಸಮೀಕ್ಷೆಯ ಮಾಜಿ ಆಡಳಿತ ನಿರ್ದೇಶಕರಾಗಿದ್ದ
ಪ್ರಾಕ್ತನ ತಜ್ಞ ಬಿಬಿ ಲಾಲ್ ಅವರ ಜೊತೆಗೆ ಸಂಶೋಧನಾ ತಂಡದ ಸದಸ್ಯರಾಗಿ ಕೆಲಸ ಮಾಡಿದ್ದ ಮುಹಮ್ಮದ್ ೧೯೭೬-೭೭ರಲ್ಲಿ ಬಾಬರಿ ಮಸೀದಿಯಲ್ಲಿ ಉತ್ಕನನ ನಡೆಸಿದ್ದ ತಂಡದಲ್ಲಿ ಇದ್ದರು. ಈ ತಂಡವು ಬಾಬರಿ ಮಸೀದಿಯಲ್ಲಿ ಹಿಂದೂ ದೇವಾಲಯದ ಅವಶೇಷಗಳನ್ನು ಪತ್ತೆ ಹಚ್ಚಿರುವುದಾಗಿ ಮೊತ್ತ ಮೊದಲಿಗೆ ಪ್ರತಿಪಾದಿಸಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ಇತ್ತು ಎಂಬುದನ್ನು ನಂಬದೇ ಇರುವುದಕ್ಕಾಗಿ ತಮ್ಮ ಉಪನ್ಯಾಸಗಳಲ್ಲಿ ಎಡಪಂಥೀಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಮುಹಮ್ಮದ್, ’ಪ್ರಾಕ್ತನ ತಜ್ಞನೊಬ್ಬ ಪರಿಶೀಲನಾರ್ಹ ವಸ್ತುಗಳ ಆಧಾರದಲ್ಲಿ ಮಾತನಾಡುತ್ತಾನೆ. ಅಯೋಧ್ಯಾ ಉತ್ಕನನ ಕಾಲದಲ್ಲಿ, ನಾನು ಉತ್ಕನನ ತಂಡದ ಸದಸ್ಯನಾಗಿದ್ದೆ. ಅಲ್ಲಿ ರಾಮನ ಅಸ್ತಿತ್ವದ ಬಗ್ಗೆ ಸಾಕ್ಷ್ಯ ಇದೆ. ಆದರೆ ಎಡ ಪಂಥೀಯರು ಹುಯಿಲೆಬ್ಬಿಸುತ್ತಾರೆ’ ಎಂದು ಸಭೆಯೊಂದರಲ್ಲಿ ಹೇಳಿದ್ದರು. ರಾಮಜನ್ಮಭೂಮಿ ಕಲ್ಪನೆಯನ್ನು ಅನುಮೋದಿಸುವ ಮುಹಮ್ಮದ್, ’ನಾನು ಪ್ರಾಕ್ತನ ಕಾರ್‍ಯ ನಿರ್ವಹಿಸುವಾಗ ಧಾರ್ಮಿಕವಾದಿಯೂ ಅಲ್ಲ, ಎಡ ಪಂಥೀಯನೂ ಅಲ್ಲ. ಒಂದೆಡೆಯಲ್ಲಿ ಧಾರ್ಮಿಕವಾದಿಗಳು
’ಸಹಸ್ರ ವರ್ಷಗಳ ಹಿಂದೆ....’ ಎಂದು ಮಾತನಾಡಲು ಆರಂಭಿಸುತ್ತಾರೆ.
ಆದರೆ ನಾನು ಒಬ್ಬ ಪ್ರಾಕ್ತನತಜ್ಞ. ನಾನು ಈ ವಾದದ ಜೊತೆ ಹೋಗಲಾರೆ. ಇನ್ನೊಂದೆಡೆಯಲ್ಲಿ ಎಡಪಂಥೀಯರು ರಾಮ ಜನ್ಮಭೂಮಿಯನ್ನು ಕಟ್ಟು ಕಥೆ ಎಂದು ನಂಬುತ್ತಾರೆ. ಆದರೆ ಪ್ರಾಕ್ತನ ತಜ್ಞನಾಗಿ ಅಲ್ಲಿ ದೇವಾಲಯ ಇದ್ದ ಸತ್ಯದ ತಿರುಳು ಇರುವುದು ನನಗೆ ಗೊತ್ತಿದೆ’ ಎಂದು
ಹೇಳಿದ್ದರು. ಮುಹಮ್ಮದ್ ಅಭಿಪ್ರಾಯದ ಪ್ರಕಾರ ಅಯೋಧ್ಯೆಯ ವಿಷಯವನ್ನು ತಾಜ್ ಮಹಲ್ ಶಿವ ಮಂದಿರವಾಗಿತ್ತು ಎಂಬುದಾಗಿ ಹೇಳುವವರಿಂದ ’ರಕ್ಷಿಸಬೇಕಾದ’ ಅಗತ್ಯ ಇದೆ. ಮುಸ್ಲಿಮರು ಅಯೋಧ್ಯೆಯನ್ನು ಹಿಂದುಗಳಿಗೆ ಹಸ್ತಾಂತರಿಸಬೇಕು. ಏಕೆಂದರೆ ಅವರಿಗೆ ಮೆಕ್ಕಾ ಮತ್ತು ಮದೀನಾ ಇದೆ’ ಎಂದು ಮುಹಮ್ಮದ್ ನಂಬುತ್ತಾರೆ. ೨೦೧೬ರಲ್ಲಿ ’ಎನ್ಜನ್ ಎನ್ನ ಭಾರತೀಯನ್’ (ನಾನು ಒಬ್ಬ ಭಾರತೀಯ) ಶೀರ್ಷಿಕೆಯ ಆತ್ಮಚರಿತ್ರೆಯನ್ನು
ಮುಹಮ್ಮದ್ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಿದ್ದರು. ಭಾರತೀಯ ಪುರಾತತ್ವ ಸಮೀಕ್ಷೆಯ (ಉತ್ತರ) ಪ್ರಾದೇಶಿಕ ನಿರ್ದೇಶಕರಾಗಿ ತಮ್ಮ ಅನುಭವಗಳನ್ನು ಅವರು ಅದರಲ್ಲಿ ಬರೆದಿದ್ದಾರೆ. ಬಿಬಿ ಲಾಲ್ ನೇತೃತ್ವದ ತಂಡವು ಅಯೋಧ್ಯೆಯಲ್ಲಿ ಉತ್ಕನನ ನಡೆಸಿದ್ದಾಗ ಹಿಂದೂ ದೇವಾಲಯದ ಅವಶೇಷಗಳು ಪತ್ತೆಯಾಗಿದ್ದವು
ಎಂದು ಅವರು ತಮ್ಮ ಪುಸ್ತಕದಲ್ಲಿ ಪ್ರತಿಪಾದಿಸಿದ್ದಾರೆ.
ಮುಹಮ್ಮದ್ ಅವರು ೨೦೧೨ರಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆಯಿಂದ ನಿವೃತ್ತರಾಗಿದ್ದು, ಬಳಿಕ ಹೈದರಾಬಾದಿನ ಆಗಾಖಾನ್ ಟ್ರಸ್ಟ್ ಯೋಜನೆಯ ಕೆಲಸವನ್ನು ವಹಿಸಿಕೊಂಡಿದ್ದರು.
2019:
ಭುವನೇಶ್ವರ್:ಭಾರತದ 70ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ಪದ್ಮ ಪ್ರಶಸ್ತಿಯನ್ನು ಖ್ಯಾತ ಲೇಖಕಿ ಗೀತಾ ಮೆಹ್ತಾ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದರು. ಅಮೆರಿಕದ ನಿವಾಸಿಯಾಗಿರುವ ಗೀತಾ ಮೆಹ್ತಾ ಒಡಿಶಾ ಮೂಲದವರು. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಗೀತಾ ಮೆಹ್ತಾಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನಿಂದ ಪತ್ರಿಕಾ ಪ್ರಕಟಣೆ ನೀಡಿರುವ ಮೆಹ್ತಾ, ಈ ಸಮಯ ಸೂಕ್ತವಾದುದಲ್ಲ,
ಹೀಗಾಗಿ ಪದ್ಮ ಪ್ರಶಸ್ತಿಯನ್ನು ಸ್ವೀಕರಿಸಲಾರೆ ಎಂದು ತಿಳಿಸಿದ್ದಾರೆಂದು
ಸ್ಥಳೀಯ ವೆಬ್ ಸೈಟ್ ವರದಿ ಮಾಡಿತು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ
ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸಿದರೆ ಅಪಾರ್ಥಕ್ಕೆ ಎಡೆ ಮಾಡಿಕೊಡಲಿದೆ ಎಂದು ಮೆಹ್ತಾ ತಿಳಿಸಿದರು. ಭಾರತ ಸರ್ಕಾರ ನನ್ನ ಗುರುತಿಸಿರುವುದಕ್ಕೆ
ವಿನಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ..ಅಲ್ಲದೇ ನಾನು ಪದ್ಮಶ್ರೀ ಪ್ರಶಸ್ತಿಗೆ ಯೋಗ್ಯಳೇ ಎಂಬುದನ್ನು ಆಲೋಚಿಸುವಂತೆ ಮಾಡಿದೆ. ಆದರೆ ನಾನು ತುಂಬಾ ವಿಷಾದ ವ್ಯಕ್ತಪಡಿಸುತ್ತಿದ್ದೇನೆ, ಯಾಕೆಂದರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ
ನಿಟ್ಟಿನಲ್ಲಿ ಪ್ರಶಸ್ತಿ ಸ್ವೀಕರಿಸಲು ಇದು ಸೂಕ್ತ ಕಾಲ ಅಲ್ಲ. ಹೀಗಾಗಿ ಸರ್ಕಾರಕ್ಕೂ, ನನಗೂ ಮುಜುಗರ ಉಂಟು ಮಾಡಲು ಕಾರಣವಾಗಿದ್ದಕ್ಕೆ
ವಿಷಾದಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು. ಗೀತಾ
ಮೆಹ್ತಾ
ಯಾರು? ಗೀತಾ ಮೆಹ್ತಾ ಒಡಿಶಾದ ಮಾಜಿ ಸಿಎಂ, ದಿವಂಗತ ಬಿಜು ಪಟ್ನಾಯಕ್ ಅವರ ಪುತ್ರಿ. ಹಾಲಿ ಬಿಜೆಡಿ ವರಿಷ್ಠ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಹೋದರಿ, ಅಮೆರಿಕದ ನಿವಾಸಿಯಾಗಿರುವ ಮೆಹ್ತಾ ಖ್ಯಾತ ಲೇಖಕಿಯಾಗಿದ್ದಾರೆ. 14 ಪ್ರಮುಖ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದ್ದರು.
ಗೀತಾ ಮೆಹ್ತಾ ಅವರ ಪುಸ್ತಕ 26 ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿದೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಗೀತಾ ಮೆಹ್ತಾ ಹೆಸರೂ ಕೂಡಾ ಒಂದಾಗಿದೆ.
2019: ನವದೆಹಲಿ: ಭಾರತೀಯ ಸೇನಾ ಪಡೆಯ
ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಸೇನೆಯ ಪರಮೋಚ್ಚ ಪರಮ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾದರು..
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇದಕ್ಕೆ ಅನುಮೋದನೆ ನೀಡಿದರು. ಸಾಮಾನ್ಯವಾಗಿ, ಹಿರಿಯ ಲೆಫ್ಟಿನೆಂಟ್
ಜನರಲ್ ಗಳಿಗೆ ಅಥವಾ ನೌಕಾಪಡೆ ಇಲ್ಲವೇ ಭಾರತೀಯ ವಾಯುಪಡೆ ಕೆಳಗಿನ ಹಂತದ ಅಧಿಕಾರಿಗಳಿಗೆ ಪರಮ ವಿಶಿಷ್ಟ
ಸೇವಾ ಪದಕ ನೀಡಲಾಗುತ್ತದೆ. ಆದರೆ ರಾವತ್ ಅವರಿಗೆ ಪರಮ ವಿಶಿಷ್ಟ ಪದಕ ನೀಡಬೇಕೆಂಬ ಪ್ರಸ್ತಾವನೆ ರಕ್ಷಣಾ
ಸಚಿವಾಲ ಯದಿಂದಲೇ ಬಂದಿದೆ ಎಂಬುದನ್ನು ಸರ್ಕಾರದ ಉನ್ನತ ಮೂಲಗಳು ದೃಢ ಪಡಿಸಿದವು. ಜನರಲ್ ರಾವತ್ ಅವರು
ಈ ಹಿಂದೆ ದಕ್ಷಿಣ ಸೇನಾ ಕಮಾಂಡರ್ ಆಗಿದ್ದಾಗ ಅಥವಾ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿದ್ದಾಗ ಅವರಿಗೆ
ಈ ಪದಕ, ಗೌರವ ದೊರಕಿರಲಿಲ್ಲ . ಸಾಮಾನ್ಯವಾಗಿ ಈ ಗೌರವಕ್ಕೆ ಭಾಜನರಾದವರನ್ನು ಮಾತ್ರವೇ ಸೇನಾ ಮುಖ್ಯಸ್ಥರ
ಹುದ್ದೆಗೆ ನೇಮಕ ಮಾಡಲಾಗುತ್ತದೆ ಎನ್ನಲಾಯಿತು.
2018: ನವದೆಹಲಿ: ಕಿಕ್ಕಿರಿದ ಜನಸಮೂಹದ
ಹರ್ಷೋದ್ಘಾರ, ಕರತಾಡನದ ನಡುವೆ ನಗರದ ರಾಜಪಥದಲ್ಲಿ ನಡೆದ ೬೯ನೇ ಗಣರಾಜ್ಯೋತ್ಸವದ ಪರೇಡಿನಲ್ಲಿ ಭಾರತವು
ತನ್ನ ಸೇನಾ ಶಕ್ತಿ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸಿತು. ಅತಿಥಿಗಳಾಗಿ
ಪಾಲ್ಗೊಂಡಿದ್ದ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ಅಸಿಯಾನ್) ೧೦ ರಾಷ್ಟ್ರಗಳ ಪ್ರಮುಖರು ರಾಷ್ಟ್ರದ
೬೯ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿದರು. ಸೇನಾ ತುಕಡಿಗಳ ಶಿಸ್ತಿನ ಪಥಸಂಚನ, ಭಾರತದ ವ್ಯೂಹಾತ್ಮಕ
ರಕ್ಷಣಾ ಶಸ್ತ್ರಾಸ್ತ್ರಗಳ ಪ್ರದರ್ಶನ, ವರ್ಣರಂಜಿತ ಟ್ಯಾಬ್ಲೋಗಳು ಗಣರಾಜ್ಯೋತ್ಸವ ಸಂಭ್ರಮಕ್ಕೆ ಕಳೆ
ನೀಡಿದವು. ರಾಜಪಥದಿಂದ ಕೆಂಪುಕೋಟೆಯವರೆಗೆ ಎಂಟು ಕಿಲೋಮೀಟರ್ ಉದ್ದಕ್ಕೂ ಸಹಸ್ರಾರು ಮಂದಿ ವೀಕ್ಷಕರು
ಭಾರಿ ಬಂದೋಬಸ್ತ್ ನಡುವೆಯೇ ಸುಮಾರು ಒಂದೂವರೆ ಗಂಟೆ ಕಾಲ ನಡೆದ ಪರೇಡ್ ವೀಕ್ಷಣೆಗಾಗಿ ತುದಿಗಾಲ ಮೇಲೆ ನಿಂತಿದ್ದರು. ಭಾರತ-ಅಸಿಯಾನ್ ಶೃಂಗಸಭೆಯಲ್ಲಿ
ಪಾಲ್ಗೊಳ್ಳುವ ಸಲುವಾಗಿ ಆಗಮಿಸಿದ ೧೦ ಅಸಿಯಾನ್ ರಾಷ್ಟ್ರಗಳ ಪ್ರಮುಖರು ಗಣರಾಜ್ಯ ಪರೇಡ್ ವೀಕ್ಷಣೆಗಾಗಿ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೂಡಿದ್ದು, ಸಮಾರಂಭವನ್ನು
ಅಭೂತಪೂರ್ವವನ್ನಾಗಿ ಮಾಡಿತು. ದೆಹಲಿ
ಪ್ರದೇಶದ ಕೇಂದ್ರ ಕಚೇರಿಯ ಕಮಾಂಡಿಂಗ್ ಜನರಲ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಅಸಿತ್ ಮಿಸ್ತ್ರಿ ಅವರು
ಪರೇಡ್ ಸಾರಥ್ಯವಹಿಸಿದ್ದರು. ಭಾರತದ ಸಶಸ್ತ್ರ ಪಡೆಗಳ ಮುಖ್ಯಸ್ಥರಾದ ರಾಷ್ಟ್ರಪತಿ ಕೋವಿಂದ್ ಅವರು
ಪರೇಡ್ ಗೌರವ ವಂದನೆ ಪಡೆದರು. ಮ್ಯಾನ್ಮಾರ್
ಸ್ಟೇಟ್ ಕೌನ್ಸೆಲರ್ ಅಂಗ್ ಸಆನ್ ಸೂ ಕಿ, ವಿಯೆಟ್ನಾಮ್ ಪ್ರಧಾನಿ ನ್ಯಯೆನ್ ಕ್ಷುವಾನ ಫುಕ್, ಫಿಲಿಪ್ಪೈನ್ಸ್
ಅಧ್ಯಕ್ಷ ರೊಡ್ರಿಗೊ ಡ್ಯಟೆರ್ಟೆ, ಥಾಯ್ ಪ್ರಧಾನಿ ಜನರಲ್ ಪ್ರಯುತ್ ಚಾನ್-ಒ-ಚಾ, ಸಿಂಗಾಪುರ ಪ್ರಧಾನಿ
ಲೀ ಹಿಸೀನ್ ಲೂಂಗ್ ಮತ್ತು ಬ್ರೂನೀ ಸುಲ್ತಾನ ಹಾಜಿ ಹಸ್ಸನಲ್ ಬೊಲ್ಕಿಯಾಹ್ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದ
ಅಸಿಯಾನ್ ಪ್ರಮುಖರಲ್ಲಿ ಸೇರಿದ್ದರು. ಇಂಡೋನೇಷ್ಯದ ಅಧ್ಯಕ್ಷ ಜೊಕೊ ವಿಡೊಡೊ, ಮಲೇಷ್ಯ ಪ್ರಧಾನಿ ನಜೀಬ್
ರಜಾಕ್, ಲಾವೋಸ್ ಪ್ರಧಾನಿ ಥೊಂಗ್ಲಯುನ್ ಸಿಸೌಸಿಲತ್ ಮತ್ತು ಕಾಂಬೋಡಿಯಾದ ಪ್ರಧಾನಿ ಹುನ್ ಸೆನ್ ಕೂಡಾ
ಪರೇಡ್ ವೀಕ್ಷಿಸಿದರು. ಪರೇಡ್ ಸಂಭ್ರಮವನ್ನು ಸವಿದ ಅವರು ತಮ್ಮ ಕ್ಯಾಮರಾಗಳಲ್ಲಿ ದೃಶ್ಯಗಳನ್ನು ಸೆರೆ
ಹಿಡಿಯುತ್ತಿದ್ದುದು ಕಂಡು ಬಂತು. ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಕಾನೂನು
ಸಚಿವ ರವಿಶಂಕರ ಪ್ರಸಾದ್, ಪರಿಸರ ಸಚಿವ ಹರ್ಷವರ್ಧನ್ ಸೇರಿದಂತೆ ಮೋದಿ ಸರ್ಕಾರದ ಬಹುತೇಕ ಸಚಿವರು
ಸಮಾರಂಭದಲ್ಲಿ ಹಾಜರಿದ್ದರು. ತಮ್ಮ ತಮ್ಮ ರಾಜ್ಯಗಳ ಟ್ಯಾಬ್ಲೋಗಳು ಬಂದಾಗ ಅವರೆಲ್ಲ ಸಂಭ್ರಮಿಸುತ್ತಿದ್ದುದು
ಕಾಣಿಸಿತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಅವರು ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಮಧ್ಯದ ಸಾಲುಗಳಲ್ಲಿ ಅಸೀನರಾಗಿದ್ದ ರಾಹುಲ್ ಗಾಂಧಿ ಹಿರಿಯ
ಕಾಂಗ್ರೆಸ್ ನಾಯಕರು ಮತ್ತು ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಜೊತೆಗೆ ಮಾತುಕತೆಯಲ್ಲಿ
ತಲ್ಲೀನರಾಗಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್,
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯ ಅವರೂ ಸಮಾರಂಭದಲ್ಲಿ
ಹಾಜರಿದ್ದರು. ಪಥಸಂಚಲನ ವೇಳೆಯಲ್ಲಿ ಸೇನಾ ಸಿಬ್ಬಂದಿ
ಆಸಿಯಾನ್ ಧ್ವಜವನ್ನೂ ಹೊತ್ತು ನಡೆದರು. ಸೇನಾ ಸಿಬ್ಬಂದಿ ಪರೇಡಿನಲ್ಲಿ ೧೦ ಅಸಿಯಾನ್ ರಾಷ್ಟ್ರಗಳ ಧ್ವಜಗಳನ್ನೂ
ಹಿಡಿದಿದ್ದರು. ವಿವಿಧ ರಾಜ್ಯಗಳು, ಸಚಿವಾಲಯಗಳು, ಆಲ್ ಇಂಡಿಯಾ ರೇಡಿಯೋ (ಎಐಆರ್) ಪ್ರತಿನಿಧಿಸಿದ
೨೩ ಸ್ತಬ್ದ ಚಿತ್ರಗಳು (ಟ್ಯಾಬ್ಲೋಗಳು) ಪರೇಡಿಗೆ ಕಳೆ ನೀಡಿದವು. ೧೪ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ತಬ್ದ ಚಿತ್ರಗಳು
ರಾಷ್ಟ್ರದ ವೈವಿಧ್ಯಮಯ ಐತಿಹಾಸಿಕ, ಕಲೆ ಮತ್ತು ಸಾಂಸ್ಕೃತಿಕ ಗರಿಮೆಯನ್ನು ಪ್ರದರ್ಶಿಸಿದವು.
ಬಿಎಸ್
ಎಫ್ ನ ಮಹಿಳಾ ಯೋಧರ ’ಸೀಮಾಭವಾನಿ’ ತುಕಡಿ ಇದೇ ಮೊತ್ತ ಮೊದಲ
ಬಾರಿಗೆ ಮೋಟಾರ್ ಸೈಕಲಿನಲ್ಲಿ ಪ್ರದರ್ಶಿಸಿದ ಸಾಹಸಗಳು ಪರೇಡಿನ ವಿಶೇಷವಾಗಿತ್ತು. ಭಾರತೀಯ ಸೇನೆಯ
ಟಿ-೯೦ ಟ್ಯಾಂಕ್ (ಭೀಷ್ಮ), ಬಾಲ್ ವೇ ಮೆಷಿನ್ ಪಿಕಟೆ, ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆ, ಶಸ್ತ್ರಾಸ್ತ್ರ
ಪತ್ತೆ ಹಚ್ಚುವ ರಾಡಾರ್ (ಸ್ವಾತಿ), ಬ್ರಿಗೇಡ್ ಲೇಯಿಂಗ್ ಟ್ಯಾಂಕ್ ಟಿ-೭೨, ಸಂಚಾರಿ ಟ್ರಾನ್ಸೀವರ್
ಸ್ಟೇಷನ್, ಆಕಾಶ್ ಶಸ್ತ್ರಾಸ್ತ್ರ ವ್ಯವಸ್ಥೆ ಕೂಡಾ ಪರೇಡಿನಲ್ಲಿ ಗಮನ ಸೆಳೆದವು. ಪರೇಡ್ ವೀಕ್ಷಣೆಗಾಗಿ ದಟ್ಟ ಹಿಮ ಮತ್ತು ಚಳಿಗಾಳಿಯ ನಡುವೆಯೂ
ಭಾರಿ ಸಂಖ್ಯೆಯ ಮಂದಿ ಬೆಳ್ಳಂಬೆಳಗ್ಗೆಯೇ ಪರೇಡ್ ಮೈದಾನದತ್ತ ಹೆಜ್ಜೆ ಹಾಕಿದ್ದರು. ಪ್ರಧಾನಿ ನರೇಂದ್ರ
ಮೋದಿ ಅವರು ೧೦ ಅಸಿಯಾನ್ ರಾಷ್ಟ್ರಗಳ ಪ್ರಮುಖರನ್ನು ಸ್ವಾಗತಿಸುತ್ತಿದ್ದಂತೆಯೇ ಜನಸಮೂಹ ಹರ್ಷೋದ್ಘಾರ
ಮಾಡಿತು. ಸ್ತ್ರೀ ಶಕ್ತಿ ಪ್ರದರ್ಶನ: ಪರೇಡ್‌ನಲ್ಲಿ
ಸಾಂಸ್ಕೃತಿಕ ಮತ್ತು ಸೌಹಾರ್ದತೆ ಬಿಂಬಿಸುವ ಕಲಾಪ್ರದರ್ಶನಗಳ ಜೊತೆಗೆ ಬಿಎಸ್‌ಎಫ್‌ನ ಸೀಮಾ ಭವಾನಿ
ತಂಡ ಪ್ರದರ್ಶಿಸಿದ ಅದ್ಭುತ ಸಾಹಸಮಯ ಪ್ರದರ್ಶನ ಪ್ರೇಕ್ಷಕರ ಕಣ್ಮನ ಸೆಳೆಯಿತು. ಬಿಎಸ್‌ಎಫ್ ಮಹಿಳಾ
ಬೈಕ್ ರೈಡರ್‌ಗಳ ತಂಡವಾದ ಸೀಮಾ ಭವಾನಿ ಇದೇ ಮೊದಲ ಬಾರಿ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಸಾಹಸ ಪ್ರದರ್ಶನ
ನೀಡಿತು. ಲಡಾಕ್
ಮೂಲದ ಸಬ್ ಇನ್‌ಸ್ಪೆಕ್ಟರ್ ಸ್ಟಾನ್‌ಜಿನ್ ನರ್ಯಾಂಗ್
ನೇತೃತ್ವದ ಸೀಮಾ ಭವಾನಿ ತಂಡದ ಮೈ ನವಿರೇಳಿಸುವ ಸಾಹಸ ಪ್ರದರ್ಶನಗಳನ್ನು ನೋಡಿ ಜನ ನಿಬ್ಬೆರಗಾದರು. ಸೇನಾಪಡೆಯ
ವಿವಿಧ ದರ್ಜೆಯಲ್ಲಿರುವ ೧೧೩ ಮಹಿಳಾ ಸೈನಿಕರು ಈ ತಂಡದಲ್ಲಿದ್ದರು.
೨೫ರಿಂದ ೩೦ ವರ್ಷ ಹರೆಯದ ಮಹಿಳಾ ಸೈನಿಕರ ಈ ತಂಡದಲ್ಲಿ ೨೦ ಮಂದಿ ಪಂಜಾಬ್ ಮೂಲದವರು. ಪಶ್ಚಿಮ ಬಂಗಾಳ
(೧೫), ಮಧ್ಯ ಪ್ರದೇಶ (೧೦), ಮಹಾರಾಷ್ಟ್ರ (೯) ಮತ್ತು ಉತ್ತರ ಪ್ರದೇಶದ ೮ ಮಂದಿ ಇದ್ದಾರೆ. ಕೇರಳ,
ಕರ್ನಾಟಕ, ಉತ್ತರಾಖಂಡ ಮತ್ತು ದೆಹಲಿಯಿಂದ ತಲಾ ಇಬ್ಬರು ಮತ್ತು ಹಿಮಾಚಲ ಪ್ರದೇಶ, ಮೇಘಾಲಯದಿಂದ ತಲಾ
ಒಬ್ಬರು ಈ ತಂಡದಲಿದ್ದರು. ಈ ತಂಡದಲ್ಲಿದ್ದವರಲ್ಲಿ ಹೆಚ್ಚಿನವರಿಗೆ ಬೈಕ್ ಚಾಲನೆ ಬರುತ್ತಿರಲಿಲ್ಲ
ಆದರೆ ಬಿಎಸ್‌ಎಫ್‌ನ ವಿಶೇಷ ತರಬೇತುದಾರರಿಂದ ನಿರಂತರ ತರಬೇತಿ ಪಡೆದು ಇಲ್ಲಿ ಪ್ರದರ್ಶನ ನೀಡಿದರು.
ಗಮನಸೆಳೆದ ಕರ್ನಾಟಕದ ಸ್ತಬ್ಧಚಿತ್ರ: ಪರೇಡ್‌ನಲ್ಲಿ
ಕರ್ನಾಟಕದ ಪರಿಸರ ಮತ್ತು ವನ್ಯಜೀವಿಗಳ ಸ್ತಬ್ದ ಚಿತ್ರ ಗಣ್ಯರ ಗಮನ ಸೆಳೆಯಿತು. ರಾಜ್ಯದ ವನ್ಯಜೀವಿ
ಮತ್ತು ಪಕ್ಷಿ ಸಂಕುಲಗಳನ್ನು ಬಿಂಬಿಸಿದ ಸ್ತಬ್ದಚಿತ್ರದಲ್ಲಿ ಹುಲಿ , ಆನೆ , ಕಾಡುಕೋಣ, ಚಿರತೆ, ನವಿಲು,
ಹಾರ್ನ್ಬಿಲ್, ನೀರು ನಾಯಿಗಳ ಪ್ರತಿಮೆಗಳಿದ್ದು ಮುಂಭಾಗದಲ್ಲಿದ್ದ ೩ ಸಿಂಗಳೀಕಗಳು ಗಮನ ಸೆಳೆದವು.
ಸ್ತಬ್ದಚಿತ್ರ ಸಾಗಿ ಹೋಗುವ ವೇಳೆ ಕೇಂದ್ರ ಸಚಿವ ಅನಂತ್
ಕುಮಾರ್ ಮತ್ತು ಅವರ ಪತ್ನಿ ಎದ್ದು ನಿಂತು ಸಂಭ್ರಮಿಸಿದರು.
ಸ್ತಬ್ದಚಿತ್ರ
ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯ ೨೦೦೫ರಲ್ಲಿ ಮೊದಲ ಸ್ಥಾನ ಪಡೆದಿದ್ದು ಬಿಟ್ಟರೆ ಮತ್ತೆ ಸಿಕ್ಕಿಲ್ಲ.
ಆದರೆ ಎರಡು ಬಾರಿ ೨ನೇ ಸ್ಥಾನ ಮತ್ತು ೩ನೇ ಸ್ಥಾನ ಗೆದಿತು. ೨೦೧೫ರಲ್ಲಿ ನಮ್ಮ ರಾಜ್ಯದ ಚನ್ನಪಟ್ಟಣ
ಗೊಂಬೆಗಳ ಸ್ತಬ್ದಚಿತ್ರಕ್ಕೆ ಮೂರನೇ ಬಹುಮಾನ ಲಭಿಸಿತ್ತು.
2018: ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ
ಇಬ್ಬರು ಭಯೋತ್ಪಾದಕರನ್ನು ಗುಂಡಿಟ್ಟು ಕೊಂದ ಸಂದರ್ಭದಲ್ಲಿ ತಮ್ಮ ಪ್ರಾಣ ಬಲಿದಾನ ಮಾಡಿದ ಐಎಎಫ್ ಗರುಡ
ಕಮಾಂಡೋ ವಾಯುದಳ ಅಧಿಕಾರಿ ಕಾರ್ಪೋರಲ್ ಜ್ಯೋತಿ ಪ್ರಕಾಶ್ ನಿರಾಲಾ ಅವರಿಗೆ ಶಾಂತಿಕಾಲದ ಅತ್ಯುನ್ನತ
ಸೇನಾ ಪ್ರಶಸ್ತಿ ಅಶೋಕ ಚಕ್ರವನ್ನು ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡುವ ವೇಳೆಯಲ್ಲಿ ರಾಷ್ಟ್ರಪತಿ
ರಾಮನಾಥ ಕೋವಿಂದ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿದ ಘಟನೆ ಘಟಿಸಿತು. ವಾಯುದಳದ ಅಧಿಕಾರಿ ನಿರಾಲಾ
ಅವರ ಪತ್ನಿ ಸುಷ್ಮಾನಂದ ಮತ್ತು ಅವರ ತಾಯಿ ಮಾಲತಿ ದೇವಿ ಅವರು ರಾಜಪಥದಲ್ಲಿ ೬೯ನೇ ಗಣರಾಜ್ಯೋತ್ಸವ
ಪರೇಡ್ ಸಂದರ್ಭದಲ್ಲಿ ರಾಷ್ಟ್ರಪತಿಯವರಿಂದ ನಿರಾಲಾ ಅವರ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿ ಪ್ರದಾನದ ಬಳಿಕ ಕೋವಿಂದ್ ಅವರು ಕರವಸ್ತ್ರದಿಂದ ಮುಖ ಮತ್ತು ಕಣ್ಣುಗಳನ್ನು ಒರೆಸಿಕೊಂಡದ್ದು
ಕಂಡು ಬಂತು. ವಾಯುದಳ ಅಧಿಕಾರಿ ನಿರಾಲಾ ಅವರು ಭಾರತೀಯ ವಾಯುಪಡೆಯ ಗರುಡ ವಿಶೇಷ ಪಡೆಗಳ ಘಟಕದ ಸದಸ್ಯರಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಘಟಕವನ್ನು ರಕ್ಷಕ್ ಕಾರ್ಯಾಚರಣೆ ವೇಳೆಯಲ್ಲಿ ರಾಷ್ಟ್ರೀಯ ರೈಫಲ್ಸ್ ಜೊತೆ ಸೇರಿಸಲಾಗಿತ್ತು.
ಕಳೆದ ವರ್ಷ ನವೆಂಬರ್ ೧೮ರಂದು ಬಂಡಿಪೋರಾ ಜಿಲ್ಲೆಯ ಚಂದೇರ್ಗರ್ ಗ್ರಾಮದಲ್ಲಿ ನಿರ್ದಿಷ್ಟ ಸುಳಿವನ್ನು
ಅನುಸರಿಸಿ ಭಯೋತ್ಪಾದಕರ ವಿರುದ್ಧ ದಾಳಿ ಕಾರ್‍ಯಾಚರಣೆಯನ್ನು ನಡೆಸಲಾಗಿತ್ತು. ಗರುಡ ತಂಡವು ಭಯೋತ್ಪಾದಕರು
ಅವಿತಿದ್ದ ಮನೆಯ ಸಮೀಪಕ್ಕೆ ಬಂದು ಅತ್ಯಂತ ಸಮೀಪದಿಂದ ದಾಳಿ ನಡೆಸಿತ್ತು. ಘರ್ಷಣೆಯಲ್ಲಿ ೬ ಮಂದಿ ಭಯೋತ್ಪಾದಕರನ್ನು
ಹತ್ಯೆಗೈಯಲಾಗಿತ್ತು. ೨೬/೧೧ರ ದಾಳಿಯ ಪಾತಕಿ ಝಕಿ-ಉರ್-ರಹಮಾ ಲಖ್ವಿಯ ಅಳಿಯ ಕೂಡಾ ಹತ ಭಯೋತ್ಪಾದಕರಲ್ಲಿ
ಸೇರಿದ್ದ. ವಾಯುದಳ ಅಧಿಕಾರಿ ನಿರಾಲಾ ಅವರು ಅದ್ಭುತವಾಗಿ ಶೌರ್ಯ ಪ್ರದರ್ಶಿಸುತ್ತಾ ಭಯೋತ್ಪಾದಕರ ಅಡಗುತಾಣದ
ಅತ್ಯಂತ ಸಮೀಪಕ್ಕೆ ಬಂದಿದ್ದರು. ತನ್ಮೂಲಕ ಭಯೋತ್ಪಾದಕರಿಗೆ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವೂ ಇಲ್ಲದಂತೆ
ಮಾಡಿದ್ದರು. ‘ಇಂತಹ ಸ್ಥಳದಲ್ಲಿ ಅಷ್ಟೊಂದು ಸಮೀಪದಲ್ಲಿ ಇದ್ದುಕೊಂಡು ಘರ್ಷಣೆ ನಡೆಸಲು ಅತ್ಯಂತ ಹೆಚ್ಚಿನ
ಕೆಚ್ಚೆದೆ ಮತ್ತು ವೃತ್ತಿನಿಷ್ಠೆ ಇರಬೇಕಾಗುತ್ತದೆ’ ಎಂದು ರಕ್ಷಣಾ ಸಚಿವಾಲಯದ
ಹೇಳಿಕೆ ತಿಳಿಸಿತು. ಮನೆಯೊಳಗೆ ಅಡಗಿದ್ದ ೬ ಭಯೋತ್ಪಾದಕರು
ಹೊರಬರುವುದನ್ನೇ ಕಾಯುತ್ತಿದ್ದಾಗ, ಅವರು ಗರುಡ ತುಕಡಿಯತ್ತ ಗುಂಡು ಹಾರಿಸುತ್ತಾ ಹೊರಕ್ಕೆ ನುಗ್ಗಿದರು.
ವೈಯಕ್ತಿಕ ಭದ್ರತೆಯನ್ನು ಲೆಕ್ಕಿಸದೆ ಕಾರ್ಪೋರಲ್ ನಿರಾಲಾ ಅವರ ಭಯೋತ್ಪಾದಕರ ಗುಂಡಿನ ದಾಳಿಗೆ ಪ್ರತ್ಯುತ್ತರ
ನೀಡುತ್ತಾ ಮುಂದಕ್ಕೆ ನುಗ್ಗಿ ಇಬ್ಬರು ಭಯೋತ್ಪಾದಕರನ್ನು ಕೊಂದು ಇನ್ನಿಬ್ಬರನ್ನು ಗಾಯಗೊಳಿಸಿದರು.
ಮತ್ತು ಈ ಹಂತದಲ್ಲಿ ಭಯೋತ್ಪಾದಕರ ಗುಂಡೇಟು ತಗುಲಿ ಹುತಾತ್ಮರಾದರು’ ಎಂದು ಹೇಳಿಕೆ ತಿಳಿಸಿತು.
2018: ಲೂಧಿಯಾನ (ಪಂಜಾಬ್): ಸರ್ಕಾರಿ ಹಿರಿಯ ಮಾಧ್ಯಮಿಕ
ಶಾಲೆಯಲಿ ಗಣರಾಜ್ಯೋತ್ಸವ
ಸಮಾರಂಭ ನಡೆಯುತ್ತಿದ್ದಾಗ ಪಂಜಾಬಿನ ೪೪ರ ಹರೆಯದ ಪೊಲೀಸ್ ಕಾನ್ ಸ್ಟೇಬಲ್
ಒಬ್ಬರು ತನ್ನ ಎಕೆ-೪೭ ರೈಫಲ್ ನಿಂದ ಸ್ವತಃ ಗುಂಡು ಹಾರಿಸಿಕೊಂಡ ಘಟನೆ ಶುಕ್ರವಾರ ಲೂಧಿಯಾನದಿಂದ ೪೫
ಕಿಮೀ ದೂರದಲ್ಲಿ ಇರುವ ಜಗ್ರಾಂವ್ ನಲ್ಲಿ ಘಟಿಸಿತು. ಗುಂಡು
ಹಾರಿಸಿಕೊಂಡ ಮನಜಿತ್ ಸಿಂಗ್ ಸ್ಥಳದಲ್ಲೇ ಅಸು ನೀಗಿರುವುದಾಗಿ ಪೊಲೀಸರು ತಿಳಿಸಿದರು. ಪೊಲೀಸ್ ಕಾನ್
ಸ್ಟೇಬಲ್ ಸಿಂಗ್ ಅವರನ್ನು ಜಗ್ರಾಂವ್ ಪೊಲೀಸ್ ಠಾಣೆಯಲ್ಲಿ ಗನ್ ಮ್ಯಾನ್ ಆಗಿ ನಿಯೋಜಿಸಲಾಗಿತ್ತು.
ಸಿಂಗ್ ಕೌಟುಂಬಿಕ ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ಹೇಳಿದರು. ಘಟನೆಗೆ ಸಂಬಂಧಿಸಿದಂತೆ
ತನಿಖೆ ನಡೆಯುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು
ಅವರು ತಿಳಿಸಿದರು. 2018: ಗುರುಗ್ರಾಮ: ಶ್ರೀ ಕರ್ಣಿಸೇನಾದ ರಾಷ್ಟ್ರೀಯ ಕಾರ್ಯದರ್ಶಿ ಸೂರಜ್ ಪಾಲ್ ಅಮು ಅವರನ್ನು ಶುಕ್ರವಾರ ಪದ್ಮಾವತ್ ವಿರೋಧಿ ಹಿಂಸಾಚಾರಗಳಿಗಾಗಿ ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಸಂಘಟನೆಯ ನಾಯಕನನ್ನು ಜನವರಿ 25ರ ಗುರುವಾರ ಪ್ರಶ್ನಿಸುವ ಸಲುವಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈದಿನ ನಗರದಲ್ಲಿ ಶಾಂತಿಭಂಗ ಮಾಡುತ್ತಿರುವ ಆರೋಪದಲ್ಲಿ ಬಂಧನಕ್ಕೆ ಒಳಪಡಿಸಲಾಗಿದ್ದು, ನಾಲ್ಕು ದಿನಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಗುರುಗ್ರಾಮ ಪೊಲೀಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರವೀಂದ್ರ ಕುಮಾರ್ ಹೇಳಿದರು.
ಜನವರಿ
24ರ ಬುಧವಾರ ಗುರುಗ್ರಾಮದಲ್ಲಿ ನೂರಾರು ಮಂದಿ ಪ್ರತಿಭಟನಕಾರರು
’ಪದ್ಮಾವತ್’ ಚಲನಚಿತ್ರ ಬಿಡುಗಡೆ ವಿರುದ್ಧ ಹಿಂಸಾತ್ಮಕ
ಪ್ರತಿಭಟನೆಯಲ್ಲಿ ತೊಡಗಿ ವಾಹನಗಳಿಗೆ ಬೆಂಕಿ ಹಚ್ಚುವ ಮತ್ತು ಕಟ್ಟಡಗಳನ್ನು ಹಾನಿಪಡಿಸುವ ಕೃತ್ಯದಲ್ಲಿ
ನಿgತರಾಗಿದ್ದಾಗ ಒಂದು ಗುಂಪು ೨೦-೨೫ ಮಂದಿ ಮಕ್ಕಳು ಇದ್ದ ಶಾಲಾ ಬಸ್ಸಿನ ಮೇಲೆ ಕಲ್ಲಿನ ದಾಳಿ ನಡೆಸಿತ್ತು.
ಈ ಪ್ರತಿಭಟನೆಗಳ ನೇತೃತ್ವವನ್ನು ಕರ್ಣಿಸೇನೆ ವಹಿಸಿತ್ತು.
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರವು ಇತಿಹಾಸವನ್ನು ತಿರುಚಿದೆ ಎಂದು ಅದು ಆಪಾದಿಸಿತ್ತು.
ಏನಿದ್ದರೂ ಶಾಲಾ ಬಸ್ಸಿನ ಮೇಲೆ ನಡೆದ ದಾಳಿ ಮತ್ತು ಹರಿಯಾಣ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಸೊಹ್ನಾ
ರಸ್ತೆಯಲ್ಲಿ ಬೆಂಕಿ ಹಚ್ಚಿದ ಘಟನೆಗಳಿಗೆ ಸಂಬಂಧಿಸಿದ ಎಫ್ ಐಆರ್ ನಲ್ಲಿ ಕರ್ಣಿಸೇನೆಯ ಹೆಸರನ್ನು ನಮೂದಿಸಲಿಲ್ಲ.
‘ಸೂರಜ್ ಪಾಲ್ ಅಮು ಅವರನ್ನು ಪ್ರದೇಶದಲ್ಲಿನ ಶಾಂತಿಭಂಗ ಆರೋಪದಲ್ಲಿ ಬಂಧಿಸಲಾಗಿದೆ. ಅವರು ಎಂಜಿ ರಸ್ತೆಯಲ್ಲಿ
ತಮ್ಮ ಬೆಂಬಲಿಗರನ್ನು ಭೇಟಿ ಮಾಡಲು ಕೂಡಾ ಯತ್ನಿಸಿದ್ದರು. ಅವರನ್ನು ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು
ಅವಲೋಕಿಸಿ ಡಿಎಲ್ ಎಫ್ ಪ್ರದೇಶದ ಅವರ ನಿವಾಸದಿಂದ ವಶಕ್ಕೆ ತೆಗೆದುಕೊಳ್ಳಲಾಯಿತು’ ಎಂದು ರವೀಂದ್ರ
ಕುಮಾರ್ ಹೇಳಿದರು. ‘ಇದಕ್ಕೆ ಮುನ್ನ ೩೧ ಮಂದಿ ಪ್ರತಿಭಟನಕಾರರನ್ನು ಸೆಕ್ಷನ್ ೧೪೪ರ ಅಡಿಯಲ್ಲಿ ವಿಧಿಸಲಾಗಿದ್ದ
ನಿರ್ಬಂಧಕಾಜ್ಞೆ ಉಲ್ಲಂಘಿಸಿದ್ದಕಾಗಿ ಬಂಧಿಸಲಾಗಿತ್ತು. ಅವರ ಪೈಕಿ ೧೮ ಜನರ ವಿರುದ್ಧ ಹರಿಯಾಣ ರಸ್ತೆ
ಸಾರಿಗೆ ಸಂಸ್ಥೆ ಬಸ್ಸಿಗೆ ಕಿಚ್ಚಿಟ್ಟ ಹಾಗೂ ಶಾಲಾ ಬಸ್ಸಿಗೆ ಕಲ್ಲು ಹೊಡೆದ ಪ್ರಕರಣಗಳಿಗೆ ಸಂಬಂಧಿಸಿದ
ಆರೋಪಗಳನ್ನು ಹೊರಿಸಲಾಗಿದೆ’ ಎಂದು ಕುಮಾರ್ ಹೇಳಿದರು.
2018: ನವದೆಹಲಿ: ರಾಷ್ಟ್ರದ ವಿವಿಧ ಕಡೆಗಳಲ್ಲಿ
ರಜಪೂತ ಸಮುದಾಯದ ತೀವ್ರ ಆಕ್ರೋಶಕ್ಕೆ
ಗುರಿಯಾಗಿರುವ ದೀಪಿಕಾ ಪಡುಕೊಣೆ ನಟಿಸಿರುವ ಸಂಜಯ್ ಲೀಲಾ ಭನ್ಸಾಲಿ
ನಿರ್ದೇಶನದ ’ಪದ್ಮಾವತ್’ ಚಿತ್ರವು ವಿದೇಶಗಳಲ್ಲಿ
ಬಾಕ್ಸಾಫೀಸ್ ಹಿಟ್ ಆಗುವ ದಾರಿಯಲ್ಲಿ ಮುನ್ನಡೆದಿದೆ ಎಂದು ವರದಿಗಳು ತಿಳಿಸಿದವು. ಬೆದರಿಕೆಗಳು ಮತ್ತು ಪ್ರತಿಭಟನೆಗಳ ನಡುವೆಯೂ ಸಾಕಷ್ಟು ಸಂಖ್ಯೆಯಲ್ಲಿ
ಪ್ರೇಕ್ಷಕರು ಚಿತ್ರ ನೋಡಲು ಚಿತ್ರ ಮಂದಿರಗಳಿಗೆ ದೌಡಾಯಿಸುತ್ತಿದ್ದಾರೆ ಎಂದು ವರದಿ ತಿಳಿಸಿತು. ಚಿತ್ರಮಂದಿರಗಳಲ್ಲಿ
ಅಧಿಕೃತ ಬಿಡುಗಡೆಗೆ ಮುಂಚಿತವಾಗಿಯೇ ಪಾವತಿ ಮಾಡಿದ ಪೂರ್ವ ಪ್ರದರ್ಶನಗಳಲ್ಲಿ ಚಲನಚಿತ್ರವು ಈಗಾಗಲೇ
೫ ಕೋಟಿ ರೂಪಾಯಿಗಳನ್ನು ಗಳಿಸಿದೆ. ಸಾಗರದಾಚೆ ಕೂಡಾ ಭನ್ಸಾಲಿ ಅವರ ಚಿತ್ರ ಉತ್ತಮ ಆರಂಭದ ಮುನ್ಸೂಚನೆ
ನೀಡಿದೆ ಎಂದು ಚಲನಚಿತ್ರ ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ ಟ್ವೀಟ್ ಮಾಡಿದರು. ಜನವರಿ 25ರ ಗುರುವಾರ ಆಸ್ಟ್ರೇಲಿಯಾದಲ್ಲಿ ೩೬೭,೯೮೪ ಡಾಲರ್
(೧.೮೮ ಕೋಟಿ ರೂಪಾಯಿ) ಮತ್ತು ನ್ಯೂಜಿಲೆಂಡ್ ನಲ್ಲಿ ೬೪,೨೬೫ ಡಾಲರ್ (೨೯.೯೯ ಲಕ್ಷ ರೂಪಾಯಿ) ಹಾಗೂ ಯುನೈಟೆಡ್ ಕಿಂಗ್ಡಮ್
ನಲ್ಲಿ ಬಿಡುಗಡೆ ಪೂರ್ವ ಪ್ರದರ್ಶನಗಳಲ್ಲಿ ೯೭,೬೦೪ ಪೌಂಡ್‌ಗಳನ್ನು (೮೮.೦೮ ಲಕ್ಷ ರೂಪಾಯಿ) ಪದ್ಮಾವತ್
ಗಳಿಸಿದೆ ಎಂದು ಅವರು ಟ್ವೀಟ್ ಮಾಡಿದರು. ಪ್ರಮುಖ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ, ರಣವೀರ್ ಕಪೂರ್
ಮತ್ತು ಶಾಹಿದ್ ಕಪೂರ್ ನಟಿಸಿರುವ ’ಪದ್ಮಾವತ್’ ಚಿತ್ರ ಪ್ರಾರಂಭದಿಂದಲೇ
ವಿವಾದಗಳಿಗೆ ಒಳಗಾಗಿತ್ತು. ರಜಪೂತ ಕರ್ಣಿಸೇನೆ ಸೇರಿದಂತೆ ಹಲವಾರು ರಜಪೂತ ಸಂಘಟನೆಗಳು ಭನ್ಸಾಲಿ ಅವರು
ಇತಿಹಾಸವನ್ನು ತಿರುಚಿದ್ದಾರೆ ಎಂದು ಆಪಾದಿಸಿವೆ. ಚಿತ್ರದಲ್ಲಿ ರಜಪೂತ ಸಮುದಾಯವನ್ನು ಕೆಟ್ಟದ್ದಾಗಿ
ಚಿತ್ರಿಸಲಾಗಿದೆ ಎಂದು ಈ ಸಂಘಟನೆಗಳು ದೂರಿದ್ದವು. ಆದರೆ ಚಿತ್ರದ ಬಗೆಗಿನ ಪ್ರಾಥಮಿಕ ವಿಶ್ಲೇಷಣೆಗಳು
ಚಿತ್ರವು ರಜಪೂತ ಸಮುದಾಯದ ಹೆಮ್ಮೆ ಮತ್ತು ಘನತೆಯನ್ನು ಎತ್ತಿ ಹಿಡಿದಿದೆ ಎಂದು ಹೇಳಿವೆ. ಇದೇ ರೀತಿ
ದೀಪಿಕಾ ಮತ್ತು ಶಾಹಿದ್ ಅವರು ರಾಣಿ ಪದ್ಮಾವತಿಯಾಗಿ ಮತ್ತು ಮಹಾರಾವಲ್ ರತನ್ ಸಿಂಗ್ ಆಗಿ ಮಾಡಿರುವ
ನಟನೆಯಿಂದ ಹಲವರು ಪ್ರಭಾವಿತರಾಗಿದ್ದಾರೆ. ರಣವೀರ್ ಕಪೂರ್ ಅವರ ಖಲ್ಜಿ ಪಾತ್ರವೂ ಜನರ ಗಮನ ಸೆಳೆದಿದೆ
ಎಂದು ವಿಶ್ಲೇಷಣೆಗಳು ಹೇಳಿದವು.
2018: ಶ್ರೀನಗರ: ಕಣಿವೆಯಲ್ಲಿ ಮಹಿಳಾ ಮಾನವ ಬಾಂಬರ್ ಅಡಗಿಕೊಂಡಿದ್ದಾಳೆ ಎಂಬುದಾಗಿ
ಭದ್ರತಾ
ಸಂಸ್ಥೆಗಳು ನೀಡಿದ ಎಚ್ಚರಿಕೆಯ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹದಿ ಹರೆಯದ ಒಬ್ಬ ಯುವತಿ
ಮತ್ತು ಅಕೆಯ ಸಹಚರನನ್ನು ಕಾಶ್ಮೀರ ಕಣಿವೆಯಲ್ಲಿ ಬಂಧಿಸಿದರು. ಯುವತಿಯನ್ನು ಜನವರಿ 25ರ ಗುರುವಾರ
ಸಂಜೆ ಬಂಧಿಸಲಾಗಿದ್ದು ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್
ಮಹಾನಿರ್ದೇಶಕ ಮುನೀರ್ ಖಾನ್ ಹೇಳಿದರು. ಶಂಕಿತ ಯುವತಿ ಮಹಾರಾಷ್ಟ್ರದ ಪುಣೆಯ ನಿವಾಸಿ ಎಂದು ಪ್ರಾಥಮಿಕ
ವರದಿಗಳು ತಿಳಿಸಿದವು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಯುವತಿ ನೀಡಿರುವ ಮಾಹಿತಿಯ ಸತ್ಯಾಸತ್ಯ ಪರೀಕ್ಷೆ
ಸಲುವಾಗಿ ಮಹಾರಾಷ್ಟ್ರ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದವು. ಗಣರಾಜ್ಯೋತ್ಸವ
ದಿನ ವೇದಿಕೆ ಸ್ಫೋಟದ ಗುರಿ ಇಟ್ಟುಕೊಂಡಿರುವ ೧೮ರ ಹರೆಯದ ತರುಣಿಯ ಬಗ್ಗೆ ಪೊಲೀಸರು ಜನವರಿ 24ರ ಬುಧವಾರ
ಎಚ್ಚರಿಕೆ ನೀಡಿದ್ದರು.
ಈ
ಮಧ್ಯೆ ಶ್ರೀನಗರ ಮತ್ತು ಜಮ್ಮುವಿನಲ್ಲಿ ಗಣರಾಜ್ಯೋತ್ಸವ ದಿನದ ಎಲ್ಲ ಪ್ರಮುಖ ಸಮಾರಂಭಗಳೂ ಶಾಂತಿಯುತವಾಗಿ
ನಡೆದವು ಎಂದು ವರದಿಗಳು ತಿಳಿಸಿದವು.
2018: ನವದೆಹಲಿ: ದೀಪಾವಳಿ, ಹೊಸ ವರ್ಷದ
ಸಂದರ್ಭದಲ್ಲಿ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ
ಯೋಧರು ಸಿಹಿ ಹಂಚಿಕೊಳ್ಳುವ ಸಂಪ್ರದಾಯ ಇತ್ತು.
ಆದರೆ ಈ ಬಾರಿ ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ಪಾಕಿಸ್ತಾನ ಸೈನಿಕರ ಜೊತೆ ಸಿಹಿ ಹಂಚಿಕೊಳ್ಳಲು
ನಿರಾಕರಿಸಿದ್ದಾರೆ ಎಂದು ವರದಿಗಳು ತಿಳಿಸಿದವು. ಆದರೆ ಫುಲ್ಬರಿ ಸೇನಾ ನೆಲೆಯಲ್ಲಿ ಉಭಯ ದೇಶಗಳ ಸೈನಿಕರು
ಸಿಹಿ ಹಂಚಿಕೊಂಡಿದ್ದಾರೆ ಎಂದು ವರದಿ ಹೇಳಿತು. ವಿಶೇಷ
ಸಂದರ್ಭಗಳಲ್ಲಿ ಪ್ರತಿ ವರ್ಷವೂ ಉಭಯ ದೇಶಗಳ ಸೈನಿಕರು ಗಡಿಯಲ್ಲಿ ಸಿಹಿ ಹಂಚಿಕೊಂಡು ಶುಭಾಶಯ ವಿನಿಮಯ
ಮಾಡಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗಡಿಯಲ್ಲಿ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘನೆ
ಮಾಡಿ ಗುಂಡಿನ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆ
ಯೋಧರು ಈ ಬಾರಿ ಸಿಹಿ ವಿತರಿಸಲು ನಿರಾಕರಿಸಿದರು.
ಈ ಹಿಂದೆಯೂ ಒಂದೆರಡು ಬಾರಿ ಉಭಯ ದೇಶಗಳ ನಡುವೆ ಸಿಹಿ ವಿನಿಮಯ ನಡೆದಿರಲಿಲ್ಲ ಎಂದು ವರದಿಗಳು
ಹೇಳಿದವು.
2018: ಚೆನ್ನೈ: ಆಡಳಿತ ಶಾಹಿಯ ಕಪಿಮುಷ್ಠಿಗೆ
ಸಿಲುಕಿ ಕಳೆದ ನಾಲ್ಕು ದಶಕಗಳಿಂದ ತಮಗೆ ಬರಬೇಕಾಗಿದ್ದ
ಸ್ವಾತಂತ್ರ್ಯ ಯೋಧರ ಪಿಂಚಣಿಯಿಂದ ವಂಚಿತರಾಗಿದ್ದ
೮೯ರ ಹರೆಯದ, ನೇತಾಜಿ ಸುಭಾಶ್ ಚಂದ್ರ ಬೋಸ್ ನೇತೃತ್ವದ ಇಂಡಿಯನ್ ನ್ಯಾಷನಲ್ ಆರ್ಮಿಯ ಮಾಜಿ ಯೋಧರೊಬ್ಬರ
ಬಳಿ ವಿಷಾದ ವ್ಯಕ್ತ ಪಡಿಸಿರುವ ಮದ್ರಾಸ್ ಹೈಕೋರ್ಟ್ ಎರಡು ವಾರಗಳ ಒಳಗೆ ಅವರಿಗೆ ಸ್ವಾತಂತ್ರ್ಯ ಯೋಧರ
ಪಿಂಚಣಿ ಮಂಜೂರು ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ಆಜ್ಞಾಪಿಸಿತು. ಚೆನ್ನೈಯ ಕೆ. ಗಾಂಧಿ ಎಂಬ ಈ
ವ್ಯಕ್ತಿ ೧೯೮೦ರಲ್ಲಿ ಸ್ವಾತಂತ್ರ್ಯ ಯೋಧರ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದು, ೩೭ ವರ್ಷ ಕಾದ ಬಳಿಕ
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಗಾಂಧಿ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.
ರವಿಚಂದ್ರ ಬಾಬು ಅವರು ’ಪಿಂಚಣಿಯು ದಾನ-ದತ್ತಿ ಅಲ್ಲ. ಬದಲು ಇಂತಹ ನಿಸ್ವಾರ್ಥಿ ಸ್ವಾತಂತ್ರ್ಯ ಯೋಧರಿಗೆ
ಕೊಟ್ಟಿರುವಂತಹ ಗೌರವ. ಅದಕ್ಕಾಗಿ ಅವರು ಅರ್ಜಿ ಸಲ್ಲಿಸುವವರೆಗೆ ರಾಜ್ಯವು ಅವರನ್ನು ಕಾಯಿಸಬಾರದು’ ಎಂದು ಹೇಳಿದರು. ‘ಕ್ಷಮಿಸಿ ಸಾರ್. ನಮ್ಮ ಜನರ ಕೈಗಳಲ್ಲಿ ಕೂಡಾ ನೀವು ನರಳುವಂತಾಗಿದೆ.
ದುರದೃಷ್ಟಕರವೆಂದರೆ ಒಂದು ಕಾಲದಲ್ಲಿ ಯಾವ ದೇಶಕ್ಕಾಗಿ ಸ್ವಾತಂತ್ರ್ಯ ಗಳಿಸಲು ನೀವು ಹೋರಾಡಿದಿರೋ
ಅದೇ ದೇಶದ ಅಧಿಕಾರ ಶಾಹಿ ದೋರಣೆಯು ಹೇಗೆ ಕೆಲಸ ಮಾಡುತ್ತಿದೆ ಎಂಬದುನ್ನು ಈ ಘಟನೆ ತೋರಿಸಿದೆ’ ಎಂದು ನ್ಯಾಯಮೂರ್ತಿ ತಮ್ಮ ಇತ್ತೀಚೆಗಿನ ಆದೇಶದಲ್ಲಿ
ಹೇಳಿದರು. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವ್ಯಕ್ತಿಯೊಬ್ಬರು ಸ್ವಾತಂತ್ರ್ಯ ಲಭಿಸಿದ ಬಳಿಕ
ಕೂಡಾ ಪಿಂಚಣಿಯಂತಹ ತಮ್ಮ ಸಣ್ಣ ಪ್ರಮಾಣದ ಆರ್ಥಿಕ ನೆರವಿಗಾಗಿ ಹೋರಾಡುತ್ತಾ ಇರಬೇಕಾಗಿದೆ ಎಂಬುದು
ಅತ್ಯಂತ ದುಃಖದ ಸಂಗತಿ’ ಎಂದೂ ನ್ಯಾಯಮೂರ್ತಿ
ಬರೆದರು. ನೇತಾಜಿ ಸುಭಾಶ್ ಚಂದ್ರ ಬೋಸ್ ನೇತೃತ್ವದ ಐಎನ್ ಎ ಸೇರಿದ್ದ ಗಾಂದಿ, ಬರ್ಮಾದ (ಈಗ ಮ್ಯಾನ್ಮಾರ್)
ರಂಗೂನಿನಲ್ಲಿ (ಈಗ ಯಾಂಗೂನ್) ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಂಡಿದ್ದರು.
೧೯೪೫ರ ಮೇ ತಿಂಗಳಿನಿಂದ ಡಿಸೆಂಬರ್ ವರೆಗೆ ರಂಗೂನ್ ಸೆಂಟ್ರಲ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು. ೧೯೮೦ರ ಜುಲೈ ೬ರಂದು ಅವರು ಸ್ವಾತಂತ್ರ್ಯ ಯೋಧರಿಗೆ ನೀಡಲಾಗುವ
ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಜೊತೆಗೆ ಸಹ ಕೈದಿ ಕೆ. ಕಾಳಿಮುತ್ತು ಅವರು ತಾವಿಬ್ಬರೂ
ಬರ್ಮಾ ಜೈಲಿನಲ್ಲಿ ಜೊತೆಗೆ ಇದ್ದುದಾಗಿ ತಿಳಿಸಿದ ಸರ್ಟಿಫಿಕೇಟ್ ಮತ್ತು ಗಾಂಧಿ ಅವರು ಐಎನ್ ಎ ಯಲ್ಲಿ
ಇದ್ದರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಎಂಬುದಾಗಿ ಐಎನ್ ಎ ಯ ಕರ್ನಲ್ ಲಕ್ಷ್ಮಿ
ಸೆಹಗಲ್ ಅವರು ನೀಡಿದ್ದ ವೈಯಕ್ತಿಕ ತಿಳಿವಳಿಕೆ ಪತ್ರವನ್ನೂ ಸಲ್ಲಿಸಿದ್ದರು. ಆದರೆ ಅರ್ಜಿದಾರರ ಫೋಟೋ
ಐಡೆಂಟಿಟಿ ಕಾರ್ಡ್ ಮತ್ತು ರೇಷನ್ ಕಾರ್ಡ್‌ನಲ್ಲಿ ತಿಳಿಸಿದ್ದಂತೆ ವಯಸ್ಸಿನಲ್ಲಿ ಸಾಮ್ಯತೆ ಇಲ್ಲ ಎಂಬ
ನೆಪ ನೀಡಿ ಅಧಿಕಾರಿಗಳು ಪಿಂಚಣಿ ನೀಡದೆ ನಿರಂತರ ಸತಾಯಿಸಿದ್ದರು. ಅಧಿಕಾರಿಗಳು ನೀಡಿದ ಈ ಕಾರಣ ಅಸಂಬದ್ಧ
ಮತ್ತು ಅಮುಖ್ಯವಾದದ್ದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹೇಳಿದರು. ಅರ್ಜಿದಾರರು ಸ್ವಾತಂತ್ರ್ಯ ಹೋರಾಟದಲ್ಲಿ
ಪಾಲ್ಗೊಂಡಿದ್ದರು ಎಂಬುದು ವಿವಾದಾತೀತ ಮತ್ತು ಅವರು ಎರಡು ಮಹತ್ವದ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ್ದಾರೆ.
ಪ್ರತಿವಾದಿಗಳು ಅಸಂಬದ್ಧ ಹಾಗೂ ಅಮುಖ್ಯವಾದ ಕಾರಣ
ನೀಡಿ ಯಾಂತ್ರಿಕವಾಗಿ ಅವರ ಅರ್ಜಿಯನ್ನು ನಿರಾಕರಿಸುತ್ತಾ ಬಂದಿದ್ದಾರೆ. ಏನಾದರೂ ನೆಪ ಹೇಳಿ ಕೈತೊಳೆದುಕೊಳ್ಳುವುದು
ಮತ್ತು ಹೊಣೆಗಾರಿಕೆ ತಪ್ಪಿಸಿಕೊಳ್ಳುವುದು ಅವರ ಇರಾದೆಯಾಗಿತ್ತು. ಮನವಿ ಬಗ್ಗೆ ಧನಾತ್ಮಕವಾಗಿ ಅವರು
ಚಿಂತಿಸಲೇ ಇಲ್ಲ ಎಂದು ನ್ಯಾಯಮೂರ್ತಿ ಅಭಿಪ್ರಾಯ ಪಟ್ಟರು.
ಈ ತೀರ್ಪಿನ ದಿನಾಂಕದಿಂದ ಎರಡು ವಾರಗಳ ಒಳಗಾಗಿ ಅವರು ಅರ್ಜಿ ಸಲ್ಲಿಸಿದ ದಿನದಿಂದ ಈವರೆಗೆ
ಪಾವತಿಯಾಗಬೇಕಾದ ಪಿಂಚಣಿಯನ್ನು ಅವರ ಮನೆಬಾಗಿಲಿಗೇ ತಲುಪಿಸಲು ಸರ್ಕಾರ ಆದೇಶ ನೀಡಬೇಕು ಮತ್ತು ಬಾಕಿ
ಪಿಂಚಣಿ೪ ವಾರದೊಳಗೆ ಅವರ ಮನೆಗೆ ತಲುಪಬೇಕು ಎಂದು ನ್ಯಾಯಮೂರ್ತಿ ಆಜ್ಞಾಪಿಸಿದರು.2017: ನವದೆಹಲಿ: ವರ್ಣರಂಜಿತ ಪರೇಡ್, ಸೇನಾ ಪಡೆಗಳ ‘ಶಕ್ತಿ’ ಪ್ರದರ್ಶನ, ವಾಯುಪಡೆಯ ಸಮರ ವಿಮಾನಗಳ ಚಿತ್ತಾಕರ್ಷಕ ಕವಾಯತು, ರಾಷ್ಟ್ರದ ವಿವಿಧ ರಾಜ್ಯಗಳ ಸಂಸ್ಕೃತಿ, ಕಲಾ ವೈಭವ, ಸಾಧನೆಗಳ ಪ್ರದರ್ಶನಗಳ ಮೂಲಕ 68ನೇ ಗಣರಾಜ್ಯದ ದಿನ ಭಾರತವು ರಾಜಪಥದಲ್ಲಿ ತನ್ನ ಏಕತೆ, ಸಾಮರ್ಥ್ಯ ಕಲೆ, ಸಂಸ್ಕೃತಿ, ಸಾಧನೆಗಳನ್ನು ಜಗತ್ತಿಗೆ ಪರಿಚಯಿಸಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಧ್ವಜಾರೋಹಣದೊಂದಿಗೆ ಆರಂಭವಾದ ಗಣರಾಜ್ಯೋತ್ಸವ ಸಂಭ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕೇಂದ್ರ ಸಂಪುಟ ಸಚಿವರು ಮತ್ತಿತರ ಗಣ್ಯರು ಸಾಕ್ಷಿಯಾದರು. ಶಾಲಾ ಮಕ್ಕಳ ಚಿತ್ತಾಕರ್ಷಕ ನೃತ್ಯಗಳನ್ನು ಕಂಡು ಖುಷಿಪಟ್ಟ ಯುವರಾಜ ಶೇಖ್ ಮೊಹಮ್ಮದ್ ಅವರು ತಮ್ಮ ವಿಡಿಯೋದಲ್ಲಿ ‘ರಾಜಪಥ’ದ ಸಂಭ್ರಮದ ಕ್ಷಣಗಳನ್ನು ಸೆರೆ ಹಿಡಿದರು. ಶಾಲಾ ಮಕ್ಕಳು, ವಿವಿಧ ರಾಜ್ಯಗಳ ಜಾನಪದ ತಂಡಗಳು ರೂಪಕಗಳನ್ನು ಪ್ರದರ್ಶಿಸಿದರೆ, ಸೇನೆ, ಜಲಪಡೆ, ವಾಯುಪಡೆ, ಅರೆ ಸೇನಾ ಪಡೆಗಳ ಶಿಸ್ತು ಬದ್ಧ ಸಂಚಲನ, ಭಾರತದ ಅತ್ಯಾಧುನಿಕ ಸಮರ ಸಾಧನಗಳ ಪ್ರದರ್ಶನ, ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಸಾಧನೆಯನ್ನು ಬಿಂಬಿಸಿದ ಟ್ಯಾಬ್ಲೋಗಳ ಮೂಲಕ ಗಮನ ಸೆಳೆದವು. ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಯುಎಇ ಯೋಧರು ಇದೇ ಮೊತ್ತ ಮೊದಲ ಬಾರಿಗೆ ಪರೇಡ್ನಲ್ಲಿ ಪಾಲ್ಗೊಂಡು ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಘರ್ಷಣೆಯಲ್ಲಿ ಹುತಾತನಾದ ವೀರ ಯೋಧ ಹವಾಲ್ದಾರ್ ಹಂಗ್ ಪಾನ್ ದಾದಾ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಸೇನಾಪಡೆ, ವಾಯುಪಡೆ, ಜಲಪಡೆಗಳ ಮುಖ್ಯಸ್ಥರು ಅವರು ಮೊದಲಿಗೆ ಅಮರ ಜವಾನ್ ಜ್ಯೋತಿ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
2017: ಬೆಂಗಳೂರು: ಹಿಂದುಸ್ತಾನ್ ಎರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಪ್ರಥಮ ದೇಸಿ ನಿರ್ಮಿತ ಹಾಕ್ ಎಂಕೆ132 ಹೆಸರಿನ ಸುಧಾರಿತ 100ನೇ ವಿಮಾನವನ್ನು ಗಣರಾಜ್ಯೋತ್ಸವದ ಅಂಗವಾಗಿ ಲೋಕಾರ್ಪಣೆಗೊಳಿಸಿತು. ‘ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗವಾದ ಈ ವಿಮಾನ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ’ ಎಂದು ಎಚ್‌ಎಎಲ್ ನಿರ್ದೇಶಕ ಟಿ. ಸುವರ್ಣ ರಾಜು ಹೇಳಿದರು. ಗಣರಾಜ್ಯೋತ್ಸವದ ಸವಿನೆನಪಿನಲ್ಲಿ ಸ್ವಾವಲಂಬಿ ಮತ್ತು ಸುಧಾರಿತ ಆವೃತ್ತಿಯನ್ನು ಅಭಿವೃದ್ಧಿಪಡಿಸಲಾಗಿದೆ. ಮುಂಬರುವ ಏರೋ ಇಂಡಿಯಾ 2017 ರ ಮೇಳದಲ್ಲಿ ಹಾರಾಟ ನಡೆಸಲಿದೆ. ಸುಧಾರಿತ ಆವೃತ್ತಿಯಲ್ಲಿ ಆಂತರಿಕ ಭಾಗಗಳ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಲಾಗಿದೆ. ವಿಮಾನ ನಿರ್ವಹಣಾ ವ್ಯವಸ್ಥೆ ಮತ್ತು ವಿಮಾನ ಕಾರ್ಯಾಚರಣೆ ಕ್ಷಮತೆ ಮತ್ತು ಸಾಮರ್ಥ್ಯ ಹೆಚ್ಚಿಸಲಾಗಿದೆ. ಇದೇ ಪ್ರಥಮ ಬಾರಿಗೆ ನಿಗದಿತ ಸಮಯದಲ್ಲಿ ವಿಮಾನದ ಆವೃತ್ತಿ ಪುನರ್ ಅಭಿವೃದ್ಧಿಪಡಿಸಲಾಗಿದೆ. ವಿಮಾನದಲ್ಲಿ ಅಳವಡಿಸಿರುವ ಎರಡು ಮಾದರಿ ಕಂಪ್ಯೂಟರ್ ಸಂರಚನೆ, ಡಿಜಿಟಲ್ ಮ್ಯಾಪ್, ಕ್ಲಿಷ್ಟ ಪರಿಸ್ಥಿತಿಯಲ್ಲಿ ಎಚ್ಚರಿಕೆ ಸಂದೇಶ ರವಾನಿಸಲು ನೆರವಾಗಲಿವೆ. ಈಗಾಗಲೇ ವಾಯುಸೇನೆಯಲ್ಲಿ ಬಳಕೆಯಲ್ಲಿರುವ ವಿಮಾನಗಳ ತರಬೇತಿ ವ್ಯವಸ್ಥೆಯಲ್ಲೂ ಪ್ರಸ್ತುತ ನಿರ್ಮಿಸಿರುವ ಸುಧಾರಿತ ಆವೃತ್ತಿ ಮತ್ತಷ್ಟು ಸಹಕಾರಿಯಾಗಲಿದೆ. ಸುರಕ್ಷಿತ ಧ್ವನಿ ಸಂವಹನ ಮತ್ತು ಅಂಕಿ ಅಂಶ ದಾಖಲಾತಿಯು ಏಕರೂಪದಲ್ಲಿರುವಂತೆ ವಿನ್ಯಾಸಗೊಳಿಸಲಾಗಿದೆ. ಕಾಕ್‌ಪಿಟ್‌ನಲ್ಲಿ ಪೈಲಟ್ ಸ್ನೇಹಿ ವ್ಯವಸ್ಥೆ ರೂಪಿಸಲಾಗಿದೆ.
2017:
ನವದೆಹಲಿ: ಅಸ್ಸಾಂ ರೆಜಿಮೆಂಟ್‌ನ ಹವಾಲ್ದಾರ್ ಹಂಗಪನ್ ದಾದ ಅವರಿಗೆ
ಮರಣೋತ್ತರವಾಗಿ ಪ್ರತಿಷ್ಠಿತ ಅಶೋಕ ಚಕ್ರ ಪುರಸ್ಕಾರ ಘೋಷಿಸಲಾಗಿದ್ದು, ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹಂಗಪನ್ ದಾದ ಅವರ ಪತ್ನಿ ಚಾಸೆನ್ ಲೊವಾಂಗ್ ದಾದ ಅವರಿಗೆ ಪುರಸ್ಕಾರವನ್ನು ನೀಡಿ ಗೌರವಿಸಿದರು. ಹಂಗ್ಪನ್ ದಾದ ಅವರು 1979 ಅಕ್ಟೋಬರ್ 2ರಂದು ಅರುಣಾಚಲ ಪ್ರದೇಶದ ಬೊರಾಡುರಿಯಲ್ಲಿ ಜನಿಸಿದ್ದು, 2016ರ ಮೇ 26ರಂದು ಜಮ್ಮು–ಕಾಶ್ಮೀರದ ನಹುಗಾಮ್‌ನಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿ ಹುತಾತ್ಮರಾಗಿದ್ದರು. ಹಂಗಪನ್ ಅವರು ಭಾರತೀಯ ಸೇನೆಯ(ರಾಷ್ಟ್ರೀಯ ರೈಫಲ್ಸ್) ಅಸ್ಸಾಂ ರೆಜಿಮೆಂಟ್‌ನ ಹಲವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಹಂಗಪನ್ ದಾದ ಅವರಿಗೆ ಮರಣೋತ್ತರ ಅಶೋಕ ಚಕ್ರ ಅತ್ಯುನ್ನತ ಗೌರವ ಪುರಸ್ಕಾರವನ್ನು ಈ ಹಿಂದೆಯೇ ಘೋಷಣೆ ಮಾಡಲಾಗಿತ್ತು.
2017: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗುರೆಜ್ ವಲಯದಲ್ಲಿ ಸಂಭವಿಸಿದ ಹಿಮಕುಸಿತದ
ಎರಡು ಘಟನೆಗಳಲ್ಲಿ 10 ಯೋಧರು ಸಾವಿಗೀಡಾಗಿ, ಹಲವು ಸೈನಿಕರು ಕಾಣೆಯಾದರು. ದೇಶದಾದ್ಯಂತ ಗಣ್ಯರಾಜ್ಯೋತ್ಸವ ಆಚರಣೆ ನಡೆಯುತ್ತಿದ್ದಾಗ, ಗಡಿಯಲ್ಲಿ ರಾಷ್ಟ್ರ ಕಾಯುತ್ತಿರುವ ಯೋಧರು ದುರ್ಘಟನೆಯಲ್ಲಿ ಸಾವಿಗೀಡಾದರು. ಗಡಿ ನಿಯಂತ್ರಣ ಸಮೀಪದ ಗುರೆಜ್ ವಲಯದ ಸೇನಾ ಶಿಬಿರದ ಮೇಲೆ ಎರಡು ಬಾರಿ ಹಿಮಕುಸಿತವಾಗಿದೆ. ಹಿಂದಿನ ದಿನ ಸಂಜೆ ನಡೆದಿರುವ ಹಿಮಕುಸಿತದಲ್ಲಿ ಅನೇಕ ಸೈನಿಕರು ಸಿಲುಕಿದ್ದರು ಎಂದು ಸೇನಾಧಿಕಾರಿಗಳು ತಿಳಿಸಿದರು. 10 ಯೋಧರು ಮೃತರಾಗಿದ್ದು, ಇನ್ನೂ ಅನೇಕರು ಕಾಣೆಯಾಗಿದ್ದಾರೆ. ಸೇನಾ ಕಾರ್ಯಾಚರಣೆಯಲ್ಲಿ ಈವರೆಗೂ 7 ಯೋಧರನ್ನು ರಕ್ಷಿಸಲಾಗಿದೆ ಎಂದು
ಸೇನಾ ಮೂಲಗಳು ಹೇಳಿದವು
2017: ರಿಯಾಧ್: ಯೆಮೆನ್ ಮೇಲೆ ವಿವಾದಾತ್ಮಕ ವೈಮಾನಿಕ ದಾಳಿ ಆರಂಭಿಸಿದ ಎರಡು
ವರ್ಷಗಳ ಬಳಿಕ ಸೌದಿ ಅರೇಬಿಯಾ ತನ್ನ ಮುಂದಿನ ತಲೆಮಾರಿನ ಎಫ್-15 ಫೈಟರ್ ಬಾಂಬರ್ ಅನಾವರಣಗೊಳಿಸಿತು. 30 ಬಿಲಿಯನ್ (3000 ಕೋಟಿ) ಡಾಲರ್ ವ್ಯವಹಾರದ ಅಡಿಯಲ್ಲಿ ಯುಎಸ್ ಬೋಯಿಂಗ್ ಕಂಪೆನಿಯು ಈ ಎಫ್-15ಎಸ್ಎ ಈಗಲ್ ವಿಮಾನವನ್ನು ನಿರ್ಮಿಸಿದೆ. ಸೌದಿ ರಾಜಧಾನಿಯಲ್ಲಿ ನಡೆದ ವೈಮಾನಿಕ ಪ್ರದರ್ಶನ ಸಂದರ್ಭದಲ್ಲಿ ಎಫ್-15ಎಸ್ಎ ಈಗಲ್ ವಿಮಾನವನ್ನು ಸೌದಿ ಅರೇಬಿಯಾ ಅನಾವರಣಗೊಳಿಸಿತು. ಒಟ್ಟು 84 ಎಫ್-15ಎಸ್ಎ ಸಮರ ವಿಮಾನಗಳನ್ನು ಸೌದಿ ತನ್ನ ವಾಯುಪಡೆಗೆ ಸೇರ್ಪಡೆ ಮಾಡಲಿದೆ. ಈ ಸಮರ ವಿಮಾನದ ಹೊಟ್ಟೆಯಲ್ಲಿ ಕ್ಷಿಪಣಿಯನ್ನು ಇರಿಸಲಾಗಿದ್ದು, ಬೃಹತ್ ಸೌದಿ ಧ್ವಜದ ಹಿನ್ನೆಲೆಯಲ್ಲಿ ಸಮರ ವಿಮಾನವನ್ನು ಪ್ರದರ್ಶಿಸಲಾಗಿತ್ತು. ಸೌದಿ ದೊರೆ ಸಲ್ಮಾನ್, ಪುತ್ರ, ರಕ್ಷಣಾ ಸಚಿವ ಮತ್ತು ಉಪ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಕಿಂಗ್ ಫೈಸಲ್ ಏರ್ ಅಕಾಡೆಮಿಯಲ್ಲಿ ಸಮರ ವಿಮಾನದ ಅನಾವರಣವನ್ನು ವೀಕ್ಷಿಸಿದರು.
2017: ಶಿಲ್ಲಾಂಗ್: ರಾಜಭವನದ ಘನತೆಗೆ
ಚ್ಯುತಿ ತರುವಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಕ್ಕೆ
ಗುರಿಯಾದ ಮೇಘಾಲಯದ ರಾಜ್ಯಪಾಲ ವಿ. ಷಣ್ಮುಗನಾಥನ್ ಈದಿನ ರಾತ್ರಿ ತಮ್ಮ
ಹುದ್ದೆಗೆ ರಾಜೀನಾಮೆ ನೀಡಿದರು. ಅವರನ್ನು ಕೂಡಲೇ ಬದಲಿಸುವಂತೆ ಕೋರಿ ರಾಜಭವನ 80 ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ರಾಜ್ಯಪಾಲರ ವರ್ತನೆಯಿಂದಾಗಿ ರಾಜಭವನದ ಗೌರವಕ್ಕೆ ಧಕ್ಕೆಯುಂಟಾಗುತ್ತಿದೆ. ಅವರ ಸ್ವಭಾವ ಸಿಬ್ಬಂದಿಯ ಮನಸ್ಸಿಗೆ ನೋವುಂಟು ಮಾಡಿದೆ. ರಾಜ್ಯಪಾಲರು ರಾಜಭವನವನ್ನು ಮಹಿಳೆಯರ ಕ್ಲಬ್ ಆಗಿ ಪರಿವರ್ತಿಸಿದ್ದಾರೆ. ರಾಜ್ಯಪಾಲರು ರಾಜಭವನದ ಭದ್ರತಾ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ, ಇದರಿಂದಾಗಿ ರಾಜಭವನದ ಸಿಬ್ಬಂದಿಗೆ ಕೆಲಸ ಮಾಡಲು ತೊಂದರೆಯುಂಟಾಗುತ್ತಿದೆ. ಎಂದು ರಾಜಭವನದ ಸಿಬ್ಬಂದಿ ಪ್ರಧಾನಿಗೆ ಬರೆದಿರುವ 5 ಪುಟಗಳ ಪತ್ರದಲ್ಲಿ ದೂರಿದ್ದರು. 68 ವರ್ಷದ ಷಣ್ಮುಗನಾಥನ್ ತಮಿಳುನಾಡು ಮೂಲದವರಾಗಿದ್ದು, ಆರ್ಎಸ್ಎಸ್ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು. ಇವರನ್ನು 2015ರ ಮೇ 20 ರಂದು ಮೇಘಾಲಯದ ರಾಜ್ಯಪಾಲರಾಗಿ ನೇಮಕ ಮಾಡಲಾಗಿತ್ತು. ಇವರು 2016ರ ಸೆಪ್ಟೆಂಬರ್ 16 ರಿಂದ ಅರುಣಾಚಲ ಪ್ರದೇಶದ ಉಸ್ತುವಾರಿಯನ್ನೂ ಸಹ ವಹಿಸಿಕೊಂಡಿದ್ದರು.. ಹಾಗಾಗಿ ಇವರು ತಮ್ಮ ವಾಸ್ತವ್ಯವನ್ನು ಇಟಾನಗರಕ್ಕೆ ಬದಲಿಸಿದ್ದರು. ಷಣ್ಮುಗನಾಥನ್ ಅವರ ವಿರುದ್ಧ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿತ್ತು. ರಾಜಭವನ ಈ ಆರೋಪವನ್ನು ತಳ್ಳಿಹಾಕಿತ್ತು.
2017: ನವದೆಹಲಿ/ ಮಾಸ್ಕೊ: ಭಾರತದಲ್ಲಿನ ರಷ್ಯಾ ರಾಯಭಾರಿ ಅಲೆಗ್ಸಾಂಡರ್ ಕಡಕಿನ್ ಅವರು ಈದಿನ ನಸುಕಿನಲ್ಲಿ ಹೃದಯ ಸ್ಥಂಭನದ ಪರಿಣಾಮವಾಗಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ‘ಭಾರತ ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದೆ. 2009ರಿಂದ ಭಾರತದಲ್ಲಿ ರಷ್ಯಾದ ರಾಯಭಾರಿಯಾಗಿದ್ದ ಅಲೆಗ್ಸಾಂಡರ್ ಕಡಕಿನ್ ಅವರು ಈದಿನ ನಸುಕಿನಲ್ಲಿ ಹೃದಯ ಸ್ಥಂಭನದ ಪರಿಣಾಮವಾಗಿ ನಿಧನರಾಗಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ ಸ್ವರೂಪ್ ಟ್ವೀಟ್ ಮಾಡಿದರು. ಹಲವಾರು ದಶಕಗಳಿಂದ ರಾಯಭಾರಿಯಾಗಿ ದುಡಿಯುತ್ತಾ ಭಾರತ- ರಷ್ಯಾ ಬಾಂಧವ್ಯ ವರ್ಧನೆಗೆ ನಿರಂತರ ಶ್ರಮಿಸಿದ ಕಡಕಿನ್ ನಿಧನದಿಂದ ಭಾರತವು ಒಬ್ಬ ಶ್ರೇಷ್ಠ ಗೆಳೆಯನನ್ನು ಕಳೆದುಕೊಂಡಿದೆ ಎಂದು ವಿಕಾಸ ಸ್ವರೂಪ್ ಹೇಳಿದರು. ಹೃದಯ ಸ್ಥಂಭನಕ್ಕೆ ಮೊದಲು ಅವರನ್ನು ಅಸ್ವಾಸ್ಥ್ಯ ಕಾಡಿತ್ತೇ ಎಂಬುದು ಗೊತ್ತಾಗಿಲ್ಲ. ಕಳೆದ ವರ್ಷ ಜುಲೈ ತಿಂಗಳಲ್ಲಿ ಕಡಕಿನ್ ಅವರಿಗೆ ರಷ್ಯಾ ಅಧ್ಯಕ್ಷರ ಮುಖ್ಯ ಸಿಬ್ಬಂದಿ ಸೆರ್ಗೆ ಇವಾನೊವ್ ಅವರು ಭಾರತ- ರಷ್ಯಾ ಬಾಂಧವ್ಯ ವರ್ಧನೆ ನಿಟ್ಟಿನ ಪ್ರಯತ್ನಗಳಿಗಾಗಿ ‘ಆರ್ಡರ್ ಆಫ್ ಫ್ರಂಡ್ಶಿಪ್’ ಪ್ರಶಸ್ತಿಯನ್ನು ನೀಡಿದ್ದರು.
2017: ಗುವಾಹತಿ: ದೇಶದೆಲ್ಲಡೆ 68ನೇ ಗಣರಾಜ್ಯೊತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವಾಗಲೇ ಅಸ್ಸಾಂನಲ್ಲಿ ಉಲ್ಪಾ ಉಗ್ರರು 5 ಕಡೆ ಸರಣಿ ಬಾಂಬ್ ಸ್ಫೋಟಿಸಿದರು. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿತು. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಅಸ್ಸಾಮಿನಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಆದರೂ ಉಲ್ಪಾ ಉಗ್ರರು 5 ಕಡೆ ಬಾಂಬ್ ಸ್ಪೋಟಿಸುವಲ್ಲಿ ಯಶಸ್ವಿಯಾದರು. ಅಸ್ಸಾಂನ ಚರಾಯ್ಡೋವ್, ಸಿಬ್ಸಾಗರ್, ದೀಬ್ರುಗಢ್ ಮತ್ತು ತಿನ್ಸುಕಿಯಾ ಜಿಲ್ಲೆಗಲ್ಲಿ ಐಇಡಿ ಬಾಂಬ್ ಸ್ಫೋಟಿಸಲಾಯಿತು.. ದೀಬ್ರುಗಢದಲ್ಲಿ ಗಣರಾಜ್ಯೋತ್ಸವ ಸಮಾರಂಭ ನಡೆಯುವ ಮೈದಾನದಿಂದ 500 ಮೀ. ದೂರದಲ್ಲಿ ಬಾಂಬ್ ಸ್ಪೋಟಗೊಂಡಿತು. ಆದರೆ ಬಾಂಬ್ ಸ್ಫೋಟ ಘಟನೆಗಳಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದರು.
2017: ವಾಷಿಂಗ್ಟನ್: ಮೆಕ್ಸಿಕೋ ಗಡಿಯಲ್ಲಿ 3200 ಕಿ.ಮೀ. ಉದ್ದದ ಗೋಡೆ ನಿರ್ಮಾಣ ಮಾಡುವ
ಸಂಬಂಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈದಿನ ಆದೇಶ ಹೊರಡಿಸಿದರು. ಆಂತರಿಕ ಭದ್ರತಾ ಇಲಾಖೆಯ ಕಚೇರಿಗೆ ಭೇಟಿ ನೀಡಿದ ಟ್ರಂಪ್ ಗೋಡೆ ನಿರ್ಮಾಣ ಆದೇಶಕ್ಕೆ ಸಹಿ ಹಾಕಿದರು. ಜತೆಗೆ ದಕ್ಷಿಣ ಗಡಿಯಲ್ಲಿ ಅಕ್ರಮವಾಗಿ ಒಳನುಸುಳುವವರ ವಿರುದ್ಧ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಿದರು. ಜತೆಗೆ ಅಕ್ರಮ ವಲಸಿಗರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆಯೂ ಸಹ ತಿಳಿಸಿದರು ಎಂದು ವೈಟ್ ಹೌಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿತು. ಮೆಕ್ಸಿಕೋ ಗಡಿಯುದ್ದಕ್ಕೂ ಗೋಡೆ ನಿರ್ಮಿಸುವುದಾಗಿ ಡೊನಾಲ್ಡ್ ಟ್ರಂಪ್ ಚುನಾವಣಾ ಭಾಷಗಳಲ್ಲಿಯೂ ಸಹ ತಿಳಿಸಿದ್ದರು. ಅದರಂತೆ ಅವರು ಗೋಡೆ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಿದರು. ಅಮೆರಿಕ ಮತ್ತು ಮೆಕ್ಸಿಕೋ 3200 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿವೆ. ಈಗಾಗಲೇ ಅಮೆರಿಕ ಬಹುತೇಕ ಕಡೆಗಳಲ್ಲಿ ಬೇಲಿ ನಿರ್ಮಿಸಿದೆ. ಆದರೂ ಸಹ ಮೆಕ್ಸಿಕೋದಿಂದ ಅಮೆರಿಕಕ್ಕೆ ಅಕ್ರಮವಾಗಿ ಒಳನುಸುಳುವವರ ಪ್ರಮಾಣ ಕಡಿಮೆಯಾಗಿಲ್ಲ. ಹಾಗಾಗಿ ಟ್ರಂಪ್ ಗೋಡೆ ನಿರ್ಮಿಸುವ ಮೂಲಕ ಅಕ್ರಮ ಒಳನುಸುಳುಕೋರರನ್ನು ತಡೆಯಲು ಮುಂದಾದರು.. 2014ರ ವರದಿಯ ಪ್ರಕಾರ 58 ಲಕ್ಷ ಮೆಕ್ಸಿಕೋ ದೇಶವಾಸಿಗಳು ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ.
2017: ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿ ಹತ್ತಾರು ಉಗ್ರರನ್ನು ಕೊಂದ 4 ಮತ್ತು 9ನೇ ಪ್ಯಾರಾ ವಿಶೇಷ ಪಡೆಯ 19 ಯೋಧರಿಗೆ ಕೇಂದ್ರ ಸರ್ಕಾರ ಶೌರ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಿತು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸಿದ ತಂಡವೊಂದನ್ನು ಮುನ್ನಡೆಸಿದ 4ನೇ ಪ್ಯಾರಾ ವಿಶೇಷ ಪಡೆಯ ಮೇಜರ್ ರೋಹಿತ್ ಸೂರಿ ಅವರಿಗೆ ಕೀರ್ತಿ ಚಕ್ರ ನೀಡಿ ಗೌರವಿಸಲಾಗಿದೆ. ಇವರ ಜತೆಗೆ ಗೂರ್ಖಾ ರೈಫಲ್ಸ್ನ ಹವಾಲ್ದಾರ್ ಪ್ರೇಮ್ ಬಹಾದೂರ್ ರೇಷ್ಮಿ ಮಗರ್ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರ ಪ್ರಶಸ್ತಿ ನೀಡಲಾಗಿದೆ. 9ನೇ ಪ್ಯಾರಾ ವಿಶೇಷ ಪಡೆಯ ಕರ್ನಲ್ ಕಪಿಲ್ ಯಾದವ್ ಮತ್ತು 4ನೇ ಪ್ಯಾರಾ ವಿಶೇಷ ಪಡೆಯ ಕರ್ನಲ್ ಹರ್ಪ್ರೀತ್ ಸಂಧು ಅವರಿಗೆ ಯುದ್ಧ ಸೇವಾ ಮೆಡಲ್ ನೀಡಿ ಗೌರವಿಸಲಾಗಿದೆ. ಉಳಿದಂತೆ 5 ಯೋಧರಿಗೆ ಶೌರ್ಯ ಚಕ್ರ ಮತ್ತು 13 ಯೋಧರಿಗೆ ಸೇನಾ ಮೆಡಲ್ (ಶೌರ್ಯ) ನೀಡಿ ಗೌರವಿಸಲಾಗಿದೆ. ಇತ್ತೀಚೆಗಷ್ಟೇ ಭೂಸೇನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸದ ಜನರಲ್ ಬಿಪಿನ್ ರಾವತ್ ಅವರಿಗೆ ಪರಮ್ ವಿಶಿಷ್ಟ ಸೇವಾ ಮೆಡಲ್ ನೀಡಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 29 ರಂದು ಭಾರತೀಯ ಸೇನೆಯ ವಿಶೇಷ ಪಡೆ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಹತ್ತಾರು ಉಗ್ರರನ್ನು ಹತ್ಯೆ ಮಾಡಿದ್ದರು. ಭಾರತೀಯ ಸೇನೆ ಸೆಪ್ಟೆಂಬರ್ 18 ರಂದು ಉರಿ ಸೇನಾ ನೆಲೆ ಮೇಲೆ ನಡೆದಿದ್ದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ಸಂಘಟಿಸಿತ್ತು. ಭಾರತೀಯ ಸೇನೆ ದಿಟ್ಟ ಕ್ರಮಕ್ಕೆ ವಿಶ್ವದೆಲ್ಲೆಡೆ ಪ್ರಶಂಸೆ ಸಿಕ್ಕಿತ್ತು.
1950: ಇಂದು ಗಣರಾಜ್ಯದಿನ. 1950ರಲ್ಲಿ ಈದಿನ ಸಂವಿಧಾನವು ಜಾರಿಗೆ ಬರುವುದರೊಂದಿಗೆ ಭಾರತವು ಸಾರ್ವಭೌಮ ಪ್ರಜಾತಾಂತ್ರಿಕ ಗಣರಾಜ್ಯವಾಯಿತು. ಸಾಮ್ರಾಟ ಅಶೋಕನ ಲಾಂಛನ `ಸಿಂಹ'ವನ್ನು ರಾಷ್ಟ್ರೀಯ ಲಾಂಛನವಾಗಿ ಅಂಗೀಕರಿಸಲಾಯಿತು. 1947ರ ಆಗಸ್ಟ್ 15ರಿಂದಲೇ ಜಾರಿಗೆ ಬರುವಂತೆ ಪರಮ ವೀರ ಚಕ್ರ, ಮಹಾ ವೀರ ಚಕ್ರ ಮತ್ತು ವೀರ ಚಕ್ರ ಪ್ರಶಸ್ತಿಗಳನ್ನು ಸ್ಥಾಪಿಸಲಾಯಿತು. 1965ರಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಅಂಗೀಕರಿಸಲಾಯಿತು. 1930ರಲ್ಲಿ ಈದಿನವನ್ನು `ಪೂರ್ಣ ಸ್ವರಾಜ್' ದಿನವಾಗಿ ಆಚರಿಸಲಾಗಿತ್ತು. ಈ ದಿನವನ್ನು ಪೂರ್ಣ ಸ್ವರಾಜ್ ದಿನವಾಗಿ ಆಚರಿಸಲು 1930ರ ಜನವರಿ 17ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಧಾರ ಕೈಗೊಂಡಿತ್ತು.
2009: 'ಸಾವಯವ ಕೃಷಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಲಿದ್ದು ಮುಂದಿನ ಬಜೆಟಿನಲ್ಲಿ 200 ಕೋಟಿ ರೂಪಾಯಿ ಮೀಸಲಿಡಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಘೋಷಿಸಿದರು. ಕೃಷಿ ಇಲಾಖೆ ಮತ್ತು ರಾಜ್ಯ ಸಾವಯವ ಕೃಷಿ ಮಿಷನ್ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಬೃಹತ್ 'ಕೃಷಿ ಚೈತನ್ಯ ಸಮಾವೇಶ' ಮತ್ತು 'ನೇಗಿಲ ಯೋಗಿಯ ಪ್ರತಿಜ್ಞಾ ಸ್ವೀಕಾರ' ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾವಯವ ಕೃಷಿಗೆ ಉತ್ತೇಜನ ನೀಡಲು ಕಳೆದ ಬಾರಿ ಬಜೆಟ್‌ನಲ್ಲಿ 200 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಆದರೆ ಈ ಬಾರಿ ಬಜೆಟಿನಲ್ಲಿ ಅನುದಾನವನ್ನು ಹೆಚ್ಚಿಸಿ ಇಡೀ ರಾಜ್ಯವನ್ನು ಸಾವಯವ ಕೃಷಿಯತ್ತ ಕೊಂಡೊಯ್ಯಲಾಗುವುದು ಎಂದರು. 'ಸಾವಯವ ಕೃಷಿ ಮಿಷನ್' ವೆಬ್‌ಸೈಟಿಗೆ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಚಾಲನೆ ನೀಡಿ 'ಇಂದಿನ ಆರ್ಥಿಕ ಹಿಂಜರಿತದ ಸ್ಥಿತಿಯಲ್ಲಿ ಕೃಷಿ ಹಾಗೂ ಕೃಷಿಯೇತರ ಉತ್ಪನ್ನಗಳಿಗೆ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡಬೇಕು' ಎಂದು ಹೇಳಿದರು. ದೇಶದ ವಿವಿಧ ರಾಜ್ಯಗಳಲ್ಲಿ ಸಾವಯವ ಕೃಷಿಯಿಂದ ಯಶಸ್ಸು ಗಳಿಸಿದ ಯಶೋಗಾಥೆಯನ್ನು ಕಲಾಂ ವಿವಿರಿಸಿದರು. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ಸಿಕ್ಕಿಂ, ರಾಜಸ್ಥಾನ, ಈಗ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಸಾಯನಿಕ ಕೃಷಿಯನ್ನು ಬಿಟ್ಟು ಸಾವಯವ ಕೃಷಿಯತ್ತ ಹೊರಳಿದ್ದಾರೆ ಹಾಗೂ ಈ ಕೃಷಿಯಿಂದ ಅವರೆಲ್ಲ ಕಡಿಮೆ ಖರ್ಚಿನಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
2009: ಮುಂಬೈ ಮೇಲಿನ ನವೆಂಬರ 26 ಉಗ್ರಗಾಮಿ ದಾಳಿಯಲ್ಲಿ ಹುತಾತ್ಮರಾದ ಬೆಂಗಳೂರಿನ ಎನ್‌ಎಸ್‌ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ರಾಷ್ಟ್ರಕ್ಕಾಗಿ ಬಲಿದಾನ ಮಾಡಿದ 11 ಮಂದಿ ಭದ್ರತಾ ಸಿಬ್ಬಂದಿಯನ್ನು ರಾಷ್ಟ್ರವು ಗಣರಾಜ್ಯೋತ್ಸವ ಸಂದರ್ಭದಲ್ಲಿ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಿತು. ಮುಂಬೈ ದಾಳಿ ಕಾಲದಲ್ಲಿ ಹುತಾತ್ಮರಾದ ಮಹಾರಾಷ್ಟ್ರ ಪೊಲೀಸ್ ಎಟಿಎಸ್ ಮುಖ್ಯಸ್ಥ ಹೇಮಂತ ಕರ್ಕರೆ, ಅಡಿಷನಲ್ ಕಮೀಷನರ್ ಅಶೋಕ ಕಮ್ತೆ, ಮುಂಬೈ ಪೊಲೀಸ್ ಇನ್‌ಸ್ಪೆಕ್ಟರ್ ವಿಜಯ ಸಾಲಸ್ಕರ್, ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ತುಕಾರಾಮ್ ಓಂಬಳೆ ಮತ್ತು ಹವಿಲ್ದಾರ್ ಗಜೇಂದರ್ ಸಿಂಗ್ ಶಾಂತಿಕಾಲದ ಉನ್ನತ ಶೌರ್ಯ ಪದಕಕ್ಕೆ ಭಾಜನರಾದ ಮುಂಬೈ ದಾಳಿ ಕಾಲದ ಇತರ ಹುತಾತ್ಮ ಯೋಧರು. ಕರ್ಕರೆ, ಸಾಲಸ್ಕರ್ ಮತ್ತು ಓಂಬಳೆ ಅವರಿಗೆ ನೀಡಲಾದ ಪ್ರಶಸ್ತಿಯನ್ನು ಅವರ ಪತ್ನಿಯರು ಸ್ವೀಕರಿಸಿದರೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್‌ಗೆ ನೀಡಲಾದ ಪ್ರಶಸ್ತಿಯನ್ನು ಕಂಬನಿದುಂಬಿದ ಅವರ ತಾಯಿ ಸ್ವೀಕರಿಸಿದರು. ರಾಜಧಾನಿಯಲ್ಲಿ ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಬಟಾಲಾ ಹೌಸಿನಲ್ಲಿ ಭಯೋತ್ಪಾದಕರ ಜೊತೆಗಿನ ಕಾಳಗದಲ್ಲಿ ಮೃತರಾದ ದೆಹಲಿ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಚಂದ್ ಅವರಿಗೂ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಯಿತು.
2009: ಪಶ್ಚಿಮ ದೇಶಗಳಲ್ಲಿ 'ನೌಕರಿ ಕಡಿತ ಶಿಕ್ಷೆ' ಮುಂದುವರಿಯಿತು. ಡಚ್ ಬ್ಯಾಂಕಿಂಗ್-ವಿಮಾ ಕಂಪೆನಿ 'ಐಎನ್‌ಜಿ' 7 ಸಾವಿರ ಸಿಬ್ಬಂದಿ ಕೈಬಿಡುವುದಾಗಿ ಪ್ರಕಟಿಸಿತು. ಸಿಇಒ ಮೈಕೆಲ್ ಟಿಲ್ಮಂಟ್‌ಗೆ ಹುದ್ದೆ ತೊರೆಯಲು ಸೂಚಿಸಿತು. ಐಎನ್‌ಜಿ ಬ್ಯಾಂಕ್ ಅಲ್ಪ ಲಾಭ ಗಳಿಸಿದ್ದರೆ, ವಿಮಾ ವಿಭಾಗ 90 ಕೋಟಿ ಯೂರೋ ನಷ್ಟ ಕಂಡಿತು. ದ ಹೇಗ್ ನೆಲೆಯ ಎಲೆಕ್ಟ್ರಾನಿಕ್ಸ್ ಕಂಪೆನಿ 'ಪಿಲಿಪ್ಸ್' 24.20 ಕೋಟಿ ಡಾಲರ್ ನಷ್ಟ ಅನುಭವಿಸಿ, 6 ಸಾವಿರ ನೌಕರರಿಗೆ ಪಿಂಕ್ ಸ್ಲಿಪ್ ನೀಡಲು ನಿರ್ಧರಿಸಿತು.
2009: ಉಸಿರಾಟ ಮತ್ತು ನಡೆದಾಡಲು ತೊಂದರೆ ಉಂಟು ಮಾಡುತ್ತಿದ್ದ ಹೃದಯದ ಎಡ ಭಾಗದ ಕವಾಟವನ್ನು ತೆಗೆದು ಬದಲಿ ಕವಾಟವನ್ನು ಅಳವಡಿಸಿ ಬೆಂಗಳೂರು ಸೇಂಟ್ ಜಾನ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವುದಾಗಿ ಪ್ರಕಟಿಸಿದರು. ಹೃದಯ ಬಡಿತವನ್ನು ಕ್ಷಣ ಮಾತ್ರವೂ ನಿಲ್ಲಿಸದೇ ನಡೆಸಲಾದ ವಿಶಿಷ್ಟ ರೀತಿಯ ಶಸ್ತ್ರಚಿಕಿತ್ಸೆಯಿಂದ ತಮಿಳುನಾಡು ಮೂಲದ ದೇವಿಕಾ (32) ಅವರು ಗುಣಮುಖರಾಗಿದ್ದು, ಸಹಜ ಜೀವನ ನಡೆಸಬಹುದು. ಎಲ್ಲವೂ ಮುಗಿಯಿತು ಎಂಬ ನಿರಾಶೆಯಲ್ಲಿದ್ದ ದೇವಿಕಾ ಈಗ ದೀರ್ಘ ಕಾಲ ಜೀವನ ನಡೆಸಬಹುದು. ಕಡಿಮೆ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ನಡೆದದ್ದು, ದೇವಿಕಾ ಅವರ ಕುಟುಂಬ ಸದಸ್ಯರಲ್ಲಿ ಸಂತಸ ಮೂಡಿಸಿದೆ ಎಂದು ವೈದ್ಯರು ಹೇಳಿದರು.
2009: ಹಿರಿಯ ಕಲಾವಿದ ಮತ್ತು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿಜಿಎಂ ಕಲಾಶಾಲೆಯ ಸ್ಥಾಪಕ ಬೋಳಾರ್ ಗುಲಾಂ ಮೊಹಮ್ಮದ್ (ಬಿ.ಜಿ. ಮೊಹಮ್ಮದ್) (89) ಈದಿನ ಮಧ್ಯಾಹ್ನ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿ, ಪ್ರಸಾದ್ ಆರ್ಟ್ ಗ್ಯಾಲರಿ ಪ್ರಶಸ್ತಿ ಹಾಗೂ ಅನೇಕ ಪ್ರಶಸ್ತಿಗಳು ಅವರಿಗೆ ಲಭಿಸಿತ್ತು. ಬರೇ ಮೂವರು ವಿದ್ಯಾರ್ಥಿಗಳಿಂದ ನಗರದಲ್ಲಿ 1953ರಲ್ಲಿ ಸ್ಥಾಪಿಸಿದ ಬಿಜಿಎಂ ಕಲಾಶಾಲೆ ಸಹಸ್ರಾರು ಕಲಾವಿದರು ರೂಪುಗೊಳ್ಳಲು ಕಾರಣವಾಗಿದೆ. ಮೃತರು ಚಿತ್ರಕಲಾವಿದೆ ಪತ್ನಿ ಅಖ್ತರ್ ಬೇಗಂ, ಮೂವರು ಚಿತ್ರ ಕಲಾವಿದ ಪುತ್ರರನ್ನು ಅಗಲಿದರು.
2009: ಹಿಂದು ಧಾರ್ಮಿಕ ಸಂಪ್ರದಾಯ ಆಚರಣೆ ಇರುವಂತಹ ಯೋಗ ಅಭ್ಯಾಸಕ್ಕೆ ಮುಸ್ಲಿಮರಿಗೆ ಇಂಡೋನೇಷ್ಯಾದ ಹಿರಿಯ ಇಸಾಮ್ಲಿಕ್ ಸಂಘಟನೆಯೊಂದು ಆಡಳಿತಾತ್ಮಕ ನಿಷೇಧ ಹೇರಿತು. ಪೂರ್ವ ಸುಮಾತ್ರದಲ್ಲಿ ನಡೆದ ಮೂರು ದಿನಗಳ ಸಭೆಯಲ್ಲಿ ಭಾಗವಹಿಸಿದ್ದ ಇಂಡೋನೇಷ್ಯಾ ಕೌನ್ಸಿಲ್ ಆಫ್ ಉಲೇಮಾಸ್ (ಎಂಯುಐ) ಸಂಘಟನೆ ಮುಖಂಡರು ಯೋಗ ಮಾಡುವುದರ ವಿರುದ್ಧ ಫತ್ವಾ ಹೊರಡಿಸಿದರು. ಮುಸ್ಲಿಮರ ನಂಬಿಕೆಯನ್ನು ದುರ್ಬಲಗೊಳಿಸುವುದರಿಂದ ಮಂತ್ರಗಳ ಉಚ್ಚಾರವನ್ನು ಇಸ್ಲಾಮಿನಲ್ಲಿ ನಿಷೇಧಿಸಲಾಗಿದೆ ಎಂದು ಮುಖಂಡರು ಹೇಳಿದರು. 'ಮುಸ್ಲಿಮರು ಸಹ ಯೋಗ ಮಾಡಬಹುದು. ಆದರೆ ಅದು ಕೇವಲ ದೈಹಿಕ ವ್ಯಾಯಾಮವಾಗಿರಬೇಕು. ಆದರೆ ಅದು ಮಂತ್ರಗಳ ಉಚ್ಚಾರ ಇಲ್ಲವೇ ಧ್ಯಾನವನ್ನು ಒಳಗೊಂಡಿರಬಾರದು' ಎಂದು ಎಂಯುಐ ಅಧ್ಯಕ್ಷ ಮಾರುಫ್ ಅಮಿನ್ ಹೇಳಿದರು.
2009: ಸುಮಾರು 5,500 ವರ್ಷಗಳಿಗೂ ಹಳೆಯದಾದ ನವಶಿಲಾಯುಗಕ್ಕೆ ಸೇರಿದ್ದ ಮಾನವ ನಿರ್ಮಿತ ಗುಹೆ ಮತ್ತು ಮಡಿಕೆ ಮಾಡುವ ಸ್ಥಳಗಳನ್ನು ಪತ್ತೆ ಹಚ್ಚಿರುವುದಾಗಿ ಚೀನೀ ಪ್ರಾಕ್ತನ ತಜ್ಞರು ಪ್ರಕಟಿಸಿದರು. ವಾಯವ್ಯ ಚೀನಾದ ಶಾಂನ್ಷಿ ಪ್ರಾಂತದ ನದಿಯೊಂದರ ಕಡಿದಾದ ಪ್ರದೇಶದಲ್ಲಿ 17 ಗುಹಾಂತರ ಮನೆಗಳು ಕಂಡು ಬಂದಿವೆ ಎಂದು ಪ್ರಾಚ್ಯಶಾಸ್ತ್ರಜ್ಞ ವಾಂಗ್ ವೇಲಿನ್ ಹೇಳಿದರು. ಕ್ರಿ.ಪೂ. 35,00 ಮತ್ತು 3000 ರ ಅವಧಿಯಲ್ಲಿ ಮನೆಗಳು ನಿರ್ಮಾಣವಾಗಿವೆ ಎಂದು ನಂಬಲಾಯಿತು.
2008: ಚೀನಾದಲ್ಲಿ ದಶಕದಲ್ಲೇ ಕಂಡರಿಯದಂತಹ ಭಾರಿ ಹಿಮಪಾತ ಸಂಭವಿಸಿ, ದೇಶದ ಹಲವು ಭಾಗಗಳಲ್ಲಿ ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿತು. ಕೇಂದ್ರ ಭಾಗದ ಹುನಾನ್ ಪ್ರಾಂತದಲ್ಲಿ ಹಿಮಪಾತದಿಂದ ವಿದ್ಯುತ್ ಪೂರೈಕೆಗೆ ಧಕ್ಕೆ ಉಂಟಾಗಿ, 136 ವಿದ್ಯುತ್ ಚಾಲಿತ ಪ್ರಯಾಣಿಕ ರೈಲುಗಳು ಸ್ಥಗಿತಗೊಂಡವು ಇಲ್ಲವೇ ವಿಳಂಬವಾಗಿ ಚಲಿಸಿದವು. ಕೆಟ್ಟುಹೋದ ವಿದ್ಯುತ್ ಪೂರೈಕೆ ವ್ಯವಸ್ಥೆ ಸರಿಪಡಿಸಲು 10 ಸಾವಿರ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಬೀಜಿಂಗ್ ಮತ್ತು ಗ್ವಾಂಗ್ ಜುವಾ ನಗರಗಳನ್ನು ಸಂಪರ್ಕಿಸುವ ರೈಲು ಮಾರ್ಗದಲ್ಲೂ 40 ಸಾವಿರಕ್ಕೂ ಅಧಿಕ ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಕ್ಕಿ ಹಾಕಿಕೊಂಡರು.
2008: ಹಿರಿಯ ಕಾಂಗ್ರೆಸ್ಸಿಗ, ವಿಧಾನ ಪರಿಷತ್ ಸದಸ್ಯ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬ್ಲೇಸಿಯಸ್ ಎಂ. ಡಿಸೋಜ (69) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರು ನಗರದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಬ್ಲೇಸಿ ಪತ್ನಿ ಐರಿನ್ ಜಾಯ್ಸ್ ಡಿಸೋಜ 1979ರಲ್ಲೇ ನಿಧನರಾಗಿದ್ದರು. 1938ರ ಫೆಬ್ರವರಿ 22ರಂದು ಜನಿಸಿದ ಬ್ಲೇಸಿಯಸ್ ಡಿಸೋಜಾ ಅವರು ಬಿಕಾಂ, ಎಲ್ ಎಲ್ ಬಿ ಪದವೀಧರರು. 1980ರಿಂದ 1985ರ ತನಕ ವಿಧಾನ ಪರಿಷತ್ ಸದಸ್ಯ, 1985ರಿಂದ 1994ರ ತನಕ ವಿಧಾನಸಭೆ ಸದಸ್ಯ, ಎಂ.ವೀರಪ್ಪ ಮೊಯಿಲಿ ಅವರ ಮಂತ್ರಿ ಮಂಡಲದಲ್ಲಿ 1991-92ರಲ್ಲಿ ರಾಜ್ಯ ಕಾನೂನು ಸಚಿವ, 1992ರಿಂದ 1994ರ ತನಕ ರಾಜ್ಯ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ 1979ರಿಂದ 1992ರ ತನಕ ಹಾಗೂ 2001ರಿಂದ 2007ರ ತನಕ ಕರ್ತವ್ಯ ನಿರ್ವಹಿಸಿದ್ದರು. 1998ರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದರು. 2004ರಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು.
2008: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ ಟಿ ಟಿ ಇ ನಾಯಕ ಮುರುಳಿಧರನ್ ಅಲಿಯಾಸ್ ಕರ್ನಲ್ ಕರುಣಾ ಅವರಿಗೆ ಬ್ರಿಟನ್ ನ್ಯಾಯಾಲಯ ಒಂಬತ್ತು ತಿಂಗಳ ಸಜೆ ವಿಧಿಸಿತು. ನಕಲಿ ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿದ ಆರೋಪದ ಮೇಲೆ ಇವರನ್ನು ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಬಂಧಿಸಲಾಗಿತ್ತು.
2008: ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಅವರು ಆಗ್ರಾದ ಅಮರ ಪ್ರೇಮದ ಸಂಕೇತ ವಿಶ್ವವಿಖ್ಯಾತ ತಾಜ್ ಮಹಲಿಗೆ ಭೇಟಿ ನೀಡಿದರು. ಆದರೆ ಅವರ ಗೆಳತಿ ಹಾಗೂ ಖ್ಯಾತ ರೂಪದರ್ಶಿ ಕಾರ್ಲಾ ಬ್ರೂನಿ ಮಾತ್ರ ಜೊತೆಗೆ ಇರಲಿಲ್ಲ.
2008: ಭಾರತ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಶೀತಮಾರುತದ ತೀವ್ರತೆ ಹೆಚ್ಚಿತು. ಗುಜರಾತಿನ ಸಬರ್ ಕಾಂತ ಜಿಲ್ಲೆಯಲ್ಲಿ ಕೊರೆಯುವ ಚಳಿಯಿಂದಾಗಿ ಮೂವರು ಮೃತರಾದರು. ಕಳೆದ ಹತ್ತು ವರ್ಷಗಳಲ್ಲಿ ಗುಜರಾತಿನಲ್ಲಿ ಚಳಿ ಇಷ್ಟೊಂದು ತೀವ್ರತೆ ಪಡೆದದ್ದು ಇದೇ ಮೊದಲು.
2008: ರೈಲ್ವೆ ಅಪಘಾತ ತಪ್ಪಿಸಿದ ಚಿಕ್ಕಮಗಳೂರಿನ ಮಂಜುನಾಥ್, 200 ಮಂದಿ ಬಡ ಹೃದ್ರೋಗಿಗಳಿಗೆ ಧನ ಸಹಾಯ ಮಾಡಿದ ಬಿ.ಶಾಂತಿಲಾಲ್ ಕಂಕಾರಿಯಾ ಸೇರಿದಂತೆ 11 ಮಂದಿ ಸಾಧಕರಿಗೆ ಹಾಗೂ ಎರಡು ಸಂಸ್ಥೆಗಳಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
2008: ಅಡಿಲೇಡಿನಲ್ಲಿ ಒಂದು ದಿನ ಹಿಂದೆ ಅತಿ ಹೆಚ್ಚು ವಿಕೆಟ್ ಪತನಕ್ಕೆ ಕಾರಣರಾದ ವಿಕೆಟ್ ಕೀಪರ್ ಎನ್ನುವ ವಿಶ್ವ ದಾಖಲೆ ಶ್ರೇಯ ಪಡೆದ ಆಸ್ಟ್ರೇಲಿಯಾದ ಆಡಮ್ ಗಿಲ್ ಕ್ರಿಸ್ಟ್ ಈದಿನ ದಿಢೀರನೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು. ಹಿಂದಿನ ದಿನವಷ್ಟೇ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಅವರನ್ನು ಹಿಂದೆ ಹಾಕಿ 414 `ಬಲಿ'ಗಳ ಸಾಧನೆಯೊಂದಿಗೆ ಶ್ರೇಷ್ಠ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿಯೇ ಈ ವಿಶ್ವ ದಾಖಲೆ ನಿರ್ಮಿಸಿದ್ದರು.
2008: ಇಷ್ಟಾರ್ಥ ಸಿದ್ಧಿಯಾದ ಮೇಲೆ ದೇವತೆಗೆ ಹರಕೆ ತೀರಿಸುವ ಸಲುವಾಗಿ 24 ಅಡಿ ಎತ್ತರದ ರಥದ ಮೇಲಿಂದ ಮಕ್ಕಳನ್ನು ಕೆಳಗೆ ಎಸೆಯುವ ವಿಶಿಷ್ಟ ಸಂಪ್ರದಾಯ ವಿಜಾಪುರ ಜಿಲ್ಲೆಯಲ್ಲಿ ಜೀವಂತವಾಗಿದ್ದು ಸಮೀಪದ ವಂದಾಲ ಗ್ರಾಮದಲ್ಲಿ ಈದಿನ ಜಾತ್ರೆಯಲ್ಲಿ 20ಕ್ಕೂ ಹೆಚ್ಚು ಮಕ್ಕಳನ್ನು ರಥದಿಂದ ಕೆಳಕ್ಕೆ ಎಸೆಯಲಾಯಿತು. ಜಿಲ್ಲಾ ಕೇಂದ್ರದಿಂದ 60 ಕಿಮೀ ದೂರದಲ್ಲಿನ ವಂದಾಲ ಗ್ರಾಮದಲ್ಲಿ ಕ್ರಿಸ್ತಶಕ 1825ರಿಂದ ಗ್ರಾಮ ದೇವತೆ ಬನಶಂಕರಿ ಜಾತ್ರಾ ಮಹೋತ್ಸವ ನಡೆಯುತ್ತ ಬಂದಿದ್ದು, ರಥೋತ್ಸವದ ದಿನದಂದು ಗ್ರಾಮಸ್ಥರು ತಮ್ಮ ಹರಕೆ ಈಡೇರಿದ್ದಕ್ಕಾಗಿ ಹಸುಗೂಸುಗಳನ್ನು ಎಸೆಯುವ ಸಂಪ್ರದಾಯ ಪೋಷಿಸಿಕೊಂಡು ಬಂದಿದ್ದರು.
2008: ಅದ್ಭುತ ಟೆನಿಸ್ ಆಟದ ಪ್ರದರ್ಶನ ನೀಡಿದ ರಷ್ಯಾದ ಮರಿಯಾ ಶರ್ಪೋವಾ ಮೆಲ್ಬೋರ್ನಿನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿದರು. ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಶರ್ಪೋವಾ 7-5, 6-3 ರಲ್ಲಿ ಸರ್ಬಿಯಾದ ಅನಾ ಇವನೋವಿಕ್ ಅವರನ್ನು ಮಣಿಸಿ ಇದೇ ಮೊದಲ ಬಾರಿಗೆ ಮೆಲ್ಬೋರ್ನ್ ಪಾರ್ಕಿನ `ರಾಣಿ' ಎನಿಸಿಕೊಂಡರು. 20ರ ಹರೆಯದ ರಷ್ಯನ್ ಚೆಲುವೆ ವೃತ್ತಿಜೀವನದಲ್ಲಿ ಪಡೆದ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಇದು. ಈ ಹಿಂದೆ 2004ರಲ್ಲಿ ವಿಂಬಲ್ಡನ್ ಹಾಗೂ 2006ರಲ್ಲಿ ಅಮೆರಿಕ ಓಪನ್ನಿನಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು.
2008: ಬೆಳಗಾವಿ ಹೋಟೆಲ್ ಉದ್ಯಮಿ ಕೆ. ಅಣ್ಣೆ ಭಂಡಾರಿ ಅವರಿಗೆ ಬೆಂಗಳೂರಿನಲ್ಲಿ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಕ್ಷಿಣ ಕನ್ನಡ ಜೈನ ಮೈತ್ರಿ ಕೂಟವು ಬಸವನಗುಡಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣಮಂಟಪದಲ್ಲಿ ಏರ್ಪಡಿಸಿದ್ದ ಕೂಟದ 23ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಎ. ವಿವೇಕ ರೈ ಪ್ರಶಸ್ತಿ ಪ್ರದಾನ ಮಾಡಿದರು.
2008: ಗಣರಾಜ್ಯೋತ್ಸವದ ದಿನ ಬೆಳಗ್ಗೆ ಕೊಂಕಣಿ ಸಾಂಸ್ಕೃತಿಕ ಸಂಸ್ಥೆ ಮಾಂಡ್ ಸೊಭಾಣ್, ಮಂಗಳೂರಿನಲ್ಲಿ ನಿರಂತರ ಸಮೂಹ ಗಾಯನದ ಮೂಲಕ ವಿಶ್ವದಾಖಲೆ ಸ್ಥಾಪಿಸುವ ಸಾಹಸಕ್ಕೆ ಚಾಲನೆ ನೀಡಿತು. ಬೆಳಗಿನ ಚಳಿ ಕರಗುತ್ತಿದ್ದಂತೆಯೇ ಶಕ್ತಿನಗರ ಕಲಾಂಗಣದ ಆಂಫಿ ಥಿಯೇಟರಿನಲ್ಲಿ ಸರಿಯಾಗಿ ಆರು ಗಂಟೆಗೆ `ಕೊಂಕಣಿ ನಿರಂತರಿ' ಆರಂಭವಾಯಿತು. ವಿಶ್ವದಾಖಲೆಗೆ ಸೇರುವ ಯತ್ನವಾಗಿ ಸತತ 40 ಗಂಟೆಗಳ ಈ ನಿರಂತರ ಸಮೂಹ ಗಾಯನ ಕಾರ್ಯಕ್ರಮ `ಕೊಂಕಣಿ ನಿರಂತರಿ'ಗೆ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿ'ಸೋಜ ಶುಭ ಹಾರೈಸಿದರು.
2008: ಇನ್ಫೋಸಿಸ್ಸಿನ ಎನ್. ಆರ್. ನಾರಾಯಣ ಮೂರ್ತಿ ಅವರಿಗೆ ಫ್ರಾನ್ಸ್ ಸರ್ಕಾರದ ಅತಿ ದೊಡ್ಡ ನಾಗರಿಕ ಗೌರವವಾದ `ಆಫೀಸರ್ ಆಫ್ ದಿ ಲೆಜನ್ ಆಫ್ ಆನರ್' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
2008: ಪ್ರಜಾಕೋಟಿಗೆ ಸುಭದ್ರತೆಯ ಭರವಸೆ ನೀಡುವ ಸೇನಾ ಶಕ್ತಿಯ ಪ್ರದರ್ಶನ ಮತ್ತು ದೇಶದ ಬಹುಸಂಸ್ಕೃತಿಯ ಪರಂಪರೆಯನ್ನು ಬಿಂಬಿಸುವ ವರ್ಣರಂಜಿತ ಸ್ಥಬ್ಧಚಿತ್ರಗಳ ಮೆರವಣಿಗೆಯೊಂದಿಗೆ ನಡೆದ 59ನೇ ಗಣರಾಜ್ಯೋತ್ಸವ ಪೆರೇಡಿಗೆ ದೇಶ ಸಾಕ್ಷಿಯಾಯಿತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸೇನೆಯಿಂದ ಗೌರವವಂದನೆ ಸ್ವೀಕರಿಸುವ ಮೂಲಕ ಈ ಗೌರವ ಪಡೆದ ಮೊದಲ ಮಹಿಳೆ ಎಂಬ ದಾಖಲೆಯೂ ಈ ಬಾರಿಯ ಗಣರಾಜ್ಯೋತ್ಸವ ಇತಿಹಾಸಕ್ಕೆ ಸೇರ್ಪಡೆಯಾಯಿತು.
2007: ಬೆಂಗಳೂರು ನಗರದ ಕರ್ನಾಟಕ ಸಾಬೂನು ಕಾರ್ಖಾನೆ ಮುಂಭಾಗದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸ್ವಾತಂತ್ರ್ಯ ಯೋಧೆ ರಾಣಿ ಅಬ್ಬಕ್ಕೆ ದೇವಿ ಅವರ ಪ್ರತಿಮೆಯನ್ನು ಆರೋಗ್ಯ ಸಚಿವ ಆರ್. ಅಶೋಕ ಅನಾವರಣಗೊಳಿಸಿದರು.
2007: ಹುದ್ದೆಯ ಸೃಷ್ಟಿ ಅಥವಾ ಮಂಜೂರಾತಿ ಕಾರ್ಯಾಂಗದ ವಿಶೇಷ ಅಧಿಕಾರ. ನ್ಯಾಯಾಲಯಗಳು ಇಂತಹ ವಿಚಾರಗಳಲ್ಲಿ ಮಧ್ಯಪ್ರವೇಶ ಮಾಡಲಾಗದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಮಹಿಳೆಯೊಬ್ಬಳು ಯೋಜನೆಯೊಂದರ ಒಂದೇ ಹುದ್ದೆಯಲ್ಲಿ 29 ವರ್ಷಗಳ ಕಾಲ ದುಡಿದಿದ್ದರೂ, ಕೆಲಸದ ಕಾಯಮಾತಿ ಪಡೆಯುವ ಯಾವುದೇ ಹಕ್ಕನ್ನು ಆಕೆ ಹೊಂದುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿತು. ಪ್ರತಿವಾದಿ ಕೆ. ರಾಜ್ಯಲಕ್ಷ್ಮಿ ಸಲ್ಲಿಸಿದ್ದ ಮನವಿಯನ್ನು ಅಂಗೀಕರಿಸಿ ಆಕೆಯ ನೇಮಕಾತಿಯನ್ನು ಕಾಯಂಗೊಳಿಸುವಂತೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಮತ್ತು ಚೆನ್ನೈ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕುತ್ತಾ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತು. ಕೆ. ರಾಜ್ಯಲಕ್ಷ್ಮಿ ಅವರು 1975ರ ಏಪ್ರಿಲ್ 1ರಂದು ಒಂದು ವರ್ಷದ ಯೋಜನೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ನೇಮಕಗೊಂಡಿದ್ದರು. ಕೇಂದ್ರ ಸರ್ಕಾರದಿಂದ ಲಭಿಸುವ ಅನುದಾನವನ್ನು ಅನುಸರಿಸಿ ವರ್ಷದಿಂದ ವರ್ಷಕ್ಕೆ ಈ ನೇಮಕಾತಿಯನ್ನು ವಿಸ್ತರಿಸಬಹುದು ಎಂಬುದು ನೇಮಕಾತಿಯ ಷರತ್ತಾಗಿತ್ತು. ಈ ಯೋಜನೆ ಹಲವಾರು ವರ್ಷಗಳವರೆಗೆ ಮುಂದುವರೆಯುತ್ತಾ ಸಾಗಿತು. ಹೀಗಾಗಿ ರಾಜ್ಯಲಕ್ಷ್ಮಿ ತನ್ನ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಮನವಿ ಸಲ್ಲಿಸಿದರು. ಆದರೆ ಐಸಿಎಂಆರ್ ಆಕೆಯ ಮನವಿಯನ್ನು ತಳ್ಳಿಹಾಕಿತು. ರಾಜ್ಯಲಕ್ಷ್ಮಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದರು. 1998ರ ಫೆಬ್ರವರಿ 25ರಂದು ನ್ಯಾಯಮಂಡಳಿಯು ಆಕೆಯ ಸೇವೆಯನ್ನು ಕಾಯಂಗೊಳಿಸುವಂತೆ ಆದೇಶ ನೀಡಿತು. ಐಸಿಎಂಆರ್ ಈ ತೀರ್ಪನ್ನು ಚೆನ್ನೈ ಹೈಕೋರ್ಟಿನಲ್ಲಿ ಪ್ರಶ್ನಿಸಿತು. ರಾಜ್ಯಲಕ್ಷ್ಮಿ ಕೂಡಾ 1975ರ ಏಪ್ರಿಲ್ 1ರಿಂದ ಅನ್ವಯವಾಗುವಂತೆಯೇ ತನ್ನ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಕೋರಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. ನ್ಯಾಯದ ಆಧಾರದಲ್ಲಿ ರಾಜ್ಯಲಕ್ಷ್ಮಿ ಅವರ ಸೇವೆಯನ್ನು ನೇಮಕಾತಿ ದಿನದಿಂದಲೇ ಕಾಯಂಗೊಳಿಸಬೇಕು ಎಂದು ಆಕೆ ಪರ ವಕೀಲರು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಎರಡೂ ಕಡೆ ವಾದಿಸಿದ್ದರು. ಸೇವಾ ನ್ಯಾಯಶಾಸ್ತ್ರದ ಪ್ರಕಾರ ಯಾವುದೇ ಒಂದು ಹುದ್ದೆಯ ಸೃಷ್ಟಿ ಅಥವಾ ಮಂಜೂರಾತಿ ಕಾರ್ಯಾಂಗದ ವಿಶೇಷ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ ಸುಪ್ರೀಂಕೋರ್ಟ್ ಮಂಡಳಿಯ ಮನವಿಯನ್ನು ಎತ್ತಿ ಹಿಡಿಯಿತು.
2007: ಒರಿಸ್ಸಾದ ದಕ್ಷಿಣ ಮಲ್ಕಾನ್ ಗಿರಿ ಜಿಲ್ಲೆಯ ಎಂವಿ-126 ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಮಾವೋವಾದಿ ಉಗ್ರಗಾಮಿಗಳು ಹುದುಗಿಸಿ ಇಟ್ಟಿದ್ದ ಭೂಸ್ಫೋಟಕ ಸ್ಫೋಟಗೊಂಡ ಪರಿಣಾಮವಾಗಿ ಒಬ್ಬ ಸಿ ಆರ್ ಪಿ ಎಫ್ ಯೋಧ ಮೃತನಾಗಿ ಇತರ ಇಬ್ಬರು ಯೋಧರು ಗಾಯಗೊಂಡರು. ಸಿ ಆರ್ ಪಿ ಎಫ್ ಮತ್ತು ಪೊಲೀಸ್ ಪಡೆಗಳು ತೆಲರಾಯ್ ಮತ್ತು ಎಂವಿ-126 ಗ್ರಾಮದ ನಡುವೆ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಈ ಸ್ಫೋಟ ಸಂಭವಿಸಿತು. ಗಣರಾಜ್ಯ ದಿನೋತ್ಸವವನ್ನು ವಿರೋಧಿಸಿ ಮಾವೋವಾದಿಗಳು ಹೆದ್ದಾರಿಯಲ್ಲಿ ಕಡಿದುರುಳಿಸಿದ್ದ ಅಸಂಖ್ಯಾತ ಮರಗಳನ್ನು ತೆರವುಗೊಳಿಸುವ ಸಲುವಾಗಿ ಸಿ ಆರ್ ಪಿ ಎಫ್ ಮತ್ತು ಪೊಲೀಸರು ಹೊರಟಿದ್ದಾಗ ಈ ಘಟನೆ ನಡೆಯಿತು.
2007: ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಒತ್ತಡ ಭಯವನ್ನು ತಗ್ಗಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು `ಸಾಕ್ಷಾತ್' ಎಂಬ ಆನ್ ಲೈನ್ ಸಂವಾದ ಶಿಕ್ಷಣ ಯೋಜನೆಯನ್ನು ಆರಂಭಿಸಿತು. ಈ ಸೌಲಭ್ಯವನ್ನು 2006ರ ಅಕ್ಟೋಬರ್ 30ರಂದು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದರು. ವಿದ್ಯಾರ್ಥಿಗಳು ಈ ಅಂತರ್ಜಾಲ ವಿಳಾಸಗಳಲ್ಲಿನ "ಟಿಣಜಡಿಚಿಛಿಣ' ಪದವನ್ನು ಒತ್ತಿ ನಂತರ "ಣಚಿಟಞ ಣಠ ಣಜಚಿಛಿಜಡಿ' ಆಯ್ಕೆಯನ್ನು ಒತ್ತುವ ಮೂಲಕ ಆನ್ ಲೈನ್ ಸಂವಾದದಲ್ಲಿ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳು ಕೇಳುವ ವಿವಿಧ ವಿಷಯಗಳಿಗೆ ಅಂತರ್ಜಾಲದ ಮೂಲಕ ತಜ್ಞರು ಉತ್ತರ ನೀಡುವ ವ್ಯವಸ್ಥೆ ಇದು. ಅಂತರ್ಜಾಲದ ವಿಳಾಸ: "www.sakshat.ac.in ಅಥವಾ http.sakshat.ignou.ac.in/sakshat/index.aspx ಅಥವಾ http/www.sakshat.gov.in'.
2006: ಕರ್ನಾಟಕದ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಮುಂದುವರೆಸುವ ಬಗ್ಗೆ ಜನತಾದಳ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಮತ್ತು ಅವರ ಪುತ್ರ ಎಚ್. ಡಿ. ಕುಮಾರಸ್ವಾಮಿ ನಡುವಣ ಮಾತುಕತೆ ಮುರಿದು ಬಿದ್ದು, ಇಬ್ಬರೂ ಕವಲುದಾರಿಯಲ್ಲಿ ಸಾಗಿದರು. ಇದರಿಂದ ಜೆಡಿ(ಎಸ್) - ಬಿಜೆಪಿ ಪರ್ಯಾಯ ಸರ್ಕಾರ ರಚನೆಗೆ ಇದ್ದ ತೊಡಕು ಬಗೆಹರಿದಂತಾಯಿತು.
2006: ಬಿಹಾರಿನ ಹಿಂದಿನ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿ ವಿವಾದಕ್ಕೆ ಸಿಲುಕಿಕೊಂಡು ಸುಪ್ರೀಂಕೋರ್ಟಿನಿಂದ ಛೀಮಾರಿಗೆ ಒಳಗಾಗಿದ್ದ ಬಿಹಾರ ರಾಜ್ಯಪಾಲ ಬೂಟಾಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪಟ್ನಾದ ಚಾರಿತ್ರಿಕ ಗಾಂಧಿ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜವಂದನೆ ಸ್ವೀಕರಿಸಿದ ಕೆಲವು ಗಂಟೆಗಳ ಬಳಿಕ ಈ ದಿಢೀರ್ ಬೆಳವಣಿಗೆ ಸಂಭವಿಸಿತು.
2006: ಪ್ಯಾಲೆಸ್ಟೈನ್ ಸಂಸದೀಯ ಚುನಾವಣೆಯಲ್ಲಿ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಹಮಾಸ್ ಬಹುತೇಕ ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆಯ ಹಾದಿಯಲ್ಲಿ ಮುನ್ನಡೆಯಿತು. ಒಂದು ದಶಕದಿಂದ ಆಡಳಿತದಲ್ಲಿರುವ ಫತಾಹ್ ಪಕ್ಷದ ಎಲ್ಲ ಸಚಿವರು ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು.
2006: ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ಅವರ ಮಗ , ಭಾರತದ ಪರಮಾಪ್ತ ಮಿತ್ರ ಖಾನ್ ಅಬ್ದುಲ್ ವಲೀಖಾನ್ (89) ಪಾಕಿಸ್ಥಾನದ ಪೇಶಾವರದಲ್ಲಿ ನಿಧನರಾದರು.
2006: ಖ್ಯಾತ ವಿಜ್ಞಾನಿ ಡಾ. ವಿ.ಪಿ. ನಾರಾಯಣನ್ ನಂಬಿಯಾರ್ ತಮಿಳುನಾಡಿದ ಚೆನ್ನೈಯಲ್ಲಿ ನಿಧನರಾದರು. ಫೊಟೋಗ್ರಫಿಗೆ ಸಂಬಂಧಿಸಿದ ರಸೆಲ್ ಎಫೆಕ್ಟ್ ಮೇಲಿನ ಸಂಶೋಧನೆಗಾಗಿ ಅವರು ವಿಶ್ವದಾದ್ಯಂತ ವಿಜ್ಞಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ರಸೆಲ್ ಎಫೆಕ್ಟ್ ಮೇಲೆ ಈ ಹಿಂದೆ ರಸೆಲ್ ಹಾಗೂ ಅಮೆರಿಕ ವಿಜ್ಞಾನಿ ಎಚ್.ಡಿ. ಟೈಮನ್ ಅವರು ಕೈಗೊಂಡಿದ್ದ ಸಂಶೋಧನೆ ಸರಿಯಿಲ್ಲ ಎಂದು ನಾರಾಯಣನ್ ತಮ್ಮ ಪ್ರಯೋಗಗಳ ಮೂಲಕ ಸಾಧಿಸಿ ತೋರಿಸಿದ್ದರು.
1944: ಕಲಾವಿದ ಶ್ರೀನಿವಾಸ ಕೆ.ಆರ್. ಜನನ.
1920: ಗುಡಿಕಾರ ಚಿತ್ರಕಲೆಯಲ್ಲಿ ಅಪೂರ್ವ ಸಾಧನೆ ಮಾಡಿದ ಜಡೆ ಮಂಜುನಾಥಪ್ಪ ಅವರು ಪಾಂಡಪ್ಪ- ವರದಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಜನಿಸಿದರು.
1918: ನಿಕೊಲಾಯಿ ಸಿಯಾಸೆಸ್ಕು (1918-1989) ಹುಟ್ಟಿದ ದಿನ. ಈತ 1965ರಿಂದ 1989ರಲ್ಲಿ ನಡೆದ ಕ್ರಾಂತಿಯಲ್ಲಿ ಪದಚ್ಯುತಿಗೊಂಡು ಕೊಲೆಗೀಡಾಗುವವರೆಗೆ ರೊಮೇನಿಯಾದ ಸರ್ವಾಧಿಕಾರಿಯಾಗಿದ್ದ.
1915: ಹೆಸರಾಂತ ಕವಿ ಕೆ.ಎಸ್. ನರಸಿಂಹಸ್ವಾಮಿ (1915-2003) ಹುಟ್ಟಿದ ದಿನ.
1912: ಕಲಾವಿದ ಎಲ್. ನಾಗೇಶ ರಾಯರ ಜನನ.
1905: ಜಗತ್ತಿನಲ್ಲೇ ಅತ್ಯಂತ ದೊಡ್ಡದೆಂದು ಹೇಳಲಾದ ಗುಲಿನನ್ ವಜ್ರವು ದಕ್ಷಿಣ ಆಫ್ರಿಕಾದ ಟ್ರಾನ್ಸ್ ವಾಲಿನ ಪ್ರೀಮಿಯರ್ ಗಣಿಯಲ್ಲಿ ಪತ್ತೆಯಾಯಿತು. ಕ್ಯಾಪ್ಟನ್ ವೆಲ್ಸ್ ಕಂಡು ಹಿಡಿದ ಈ ವಜ್ರದ ಕಚ್ಚಾ ರೂಪದ ತೂಕ 3,106 ಕ್ಯಾರೆಟ್ಟುಗಳು. ಮೂರು ವರ್ಷಗಳ ಹಿಂದೆ ಈ ಗಣಿಯನ್ನು ಪತ್ತೆ ಹಚ್ಚಿದ ಸರ್ ಥಾಮಸ್ ಗುಲಿನಿನ್ ಹೆಸರನ್ನೇ ಈ ವಜ್ರಕ್ಕೆ ಇಡಲಾಯಿತು.
1556: ಪಾವಟಿಗೆಗಳಿಂದ ಬಿದ್ದು ತಲೆಗೆ ಆದ ತೀವ್ರ ಗಾಯಗಳ ಪರಿಣಾಮವಾಗಿ ಮೊಘಲ್ ಚಕ್ರವರ್ತಿ ಹುಮಾಯೂನ್ ತನ್ನ 48ನೇ ವಯಸ್ಸಿನಲ್ಲ್ಲಿಲಿ ಮೃತನಾದ.
No comments:
Post a Comment