ಇಂದಿನ ಇತಿಹಾಸ History Today ಜನವರಿ 07
2019: ನವದೆಹಲಿ: ಮುಂಬರುವ ಮಹಾಚುನಾವಣೆಯಲ್ಲಿ ’ಗೇಮ್ ಚೇಂಜರ್’
(ಆಟ ಬದಲಿಸಬಲ್ಲ ದಾಳ) ಆಗಿ ಕೆಲಸ ಮಾಡಬಲ್ಲಂತಹ ಐತಿಹಾಸಿಕ ನಿರ್ಣಯವೊಂದರಲ್ಲಿ,
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಕೇಂದ್ರ ಸಚಿವ ಸಂಪುಟವು ಸಾಮಾನ್ಯ ವರ್ಗದಲ್ಲಿರುವ ಮೇಲ್ಜಾತಿಗಳ ಆರ್ಥಿಕ ದುರ್ಬಲರಿಗೆ ಸರ್ಕಾರಿ ಉದ್ಯೋಗ/ ನೌಕರಿ ಮತ್ತು ಶಿಕ್ಷಣದಲ್ಲಿ ಶೇಕಡಾ ೧೦ ಮೀಸಲಾತಿ ಒದಗಿಸುವ ನಿರ್ಧಾರಕ್ಕೆ ಸಮ್ಮತಿ ನೀಡಿತು. ಪ್ರಸ್ತುತ ಸಾಮಾನ್ಯ ವರ್ಗದಲ್ಲಿನ ಮೇಲ್ದರ್ಜೆಯ ಆರ್ಥಿಕ ದುರ್ಬಲರಿಗೆ ಯಾವುದೇ ಮೀಸಲಾತಿ ಇಲ್ಲ. ಪ್ರಾಥಮಿಕ ವರ್ತಮಾನಗಳ ಪ್ರಕಾರ ಪ್ರಸ್ತಾಪಿದ ಮೀಸಲಾತಿಗೆ ವಾರ್ಷಿಕ ೮ ಲಕ್ಷ ರೂಪಾಯಿಗಳಿಗಿಂತ ಕಡಿಮೆ ವರಮಾನ ಮತ್ತು
ಐದು ಎಕರೆಗಳಿಗಿಂತ ಕಡಿಮೆ ಭೂಮಿ ಹೊಂದಿರುವ ಮೇಲ್ಜಾತಿಗಳ ಆರ್ಥಿಕ ದುರ್ಬಲರು ಅರ್ಹರಾಗುತ್ತಾರೆ. ಸುಪ್ರೀಂಕೋರ್ಟ್ ವಿಧಿಸಿರುವ ಈಗಿನ ಶೇಕಡಾ ೫೦ರ ಮೀಸಲಾತಿ ಮಿತಿಯನ್ನು ಹೊರತು ಪಡಿಸಿ ಈ ಮೀಸಲಾತಿಯನ್ನು ಕಲ್ಪಿಸಲಾಗುವುದು ಎಂದು ಮೂಲಗಳು ಹೇಳಿದವು. ಹೀಗಾಗಿ ಮೀಸಲಾತಿ ಮಿತಿ ಈಗಿನ ಶೇಕಡಾ ೫೦ರಿಂದ ಶೇಕಡಾ ೬೦ಕ್ಕೆ ಏರಲಿದೆ. ಶೇಕಡಾ ೫೦ ಮಿತಿ ದಾಟಿ ನೀಡಲಾಗುವ ಈ ಮೀಸಲಾತಿ ಸೌಲಭ್ಯ ಕಲ್ಪಿಸುವ ನಿರ್ಣಯ ಜಾರಿಗೆ ಸಂವಿಧಾನದ ೧೫ ಮತ್ತು ೧೬ನೇ ಪರಿಚ್ಛೇದಗಳಿಗೆ ತಿದ್ದುಪಡಿ ಮಾಡುವ ಆವಶ್ಯಕತೆ ಇದ್ದು, ಸರ್ಕಾರವು ಸಂಸತ್ತಿನ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಮಂಗಳವಾರ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಲಿದೆ ಎನ್ನಲಾಗಿದೆ. ಮಸೂದೆಯ ಚರ್ಚೆ ಸಲುವಾಗಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಇನ್ನೆರಡು ದಿನಗಳ ಕಾಲ ವಿಸ್ತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿದವು. ರಾಷ್ಟ್ರವು ಮಹಾಚುನಾವಣೆಗೆ ಸಜ್ಜಾಗುತ್ತಿರುವ
ಹೊತ್ತಿನಲ್ಲೇ ಸರ್ಕಾರ ಅವಧಿ ಮುಗಿಯಲು ಇನ್ನೇನು ಕೆಲವೇ ತಿಂಗಳುಗಳು ಉಳಿದಿರುವಾಗ ಕೇಂದ್ರ ಸಚಿವ ಸಂಪುಟವು ಈ ಮಹತ್ವದ ನಿರ್ಧಾರ ಕೈಗೊಂಡಿತು. ಸರ್ಕಾರಿ ನೌಕರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ತಮ್ಮನ್ನು ಹಿತ ಹಿಂದುಳಿದ ವರ್ಗಗಳು ಎಂಬುದಾಗಿ ಪರಿಗಣಿಸಬೇಕು ಅಥವಾ ಶೇಕಡಾ ೨೭ ಮೀಸಲಾತಿ ಇರುವ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಎಂಬುದಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಮುಂದಿಟ್ಟಿರುವ ಸಮುದಾಯಗಳ ಜೊತೆ ವ್ಯವಹರಿಸಲು ಇದು ಅನುಕೂಲಕರವಾಗಲಿದೆ
ಎಂದು ಬಿಜೆಪಿ ನಾಯಕರೊಬ್ಬರು ಸುಳಿವು ನೀಡಿದರು. ಕ್ರಮವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ ಡಿಎ) ಮುಖ್ಯ ಅಂಗಪಕ್ಷವಾಗಿರುವ
ಬಿಜೆಪಿಯ ಬೆಂಬಲದ ನೆಲೆಯ ಮೂರು ನಿರ್ಣಾಯಕ ಸ್ತಂಭಗಳಲ್ಲಿ ಒಂದು ಎಂಬುದಾಗಿ ಪರಿಗಣಿಸಲಾಗಿರುವ ಮೇಲ್ಜಾತಿಯ ಮತಗಳನ್ನು ಕ್ರೋಡೀಕರಿಸಲು ನೆರವಾಗಲಿದೆ ಎಂದು ಭಾವಿಸಲಾಗಿದೆ. ನಿಷ್ಠೆ ಬದಲಾಯಿಸಿರುವ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಹೊಸ ದಲಿತ ಉಪಜಾತಿಗಳನ್ನು ಬಿಜೆಪಿ ಬೆಂಬಲ ನೆಲೆಯ ಇನ್ನೆರಡು ಸ್ತಂಭಗಳು ಎಂಬುದಾಗಿ ಪರಿಗಣಿಸಲಾಗಿದೆ.
ಕಳೆದ ವರ್ಷ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಲು ನಡೆದಿದ್ದ ಯತ್ನವನ್ನು ತಡೆಯುವ ನಿಟ್ಟಿನಲ್ಲಿ ಬೃಹತ್ ಪ್ರಯತ್ನ ನಡೆಸಿದ್ದ ಬಿಜೆಪಿಯ ನಡೆಯು ಮೇಲ್ಜಾತಿಗಳ ನಿರೀಕ್ಷೆ ಮೀರಿದ ಅಸಮಾಧಾನಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ಆಡಳಿತ ಬಿಟ್ಟು ಕೊಡಬೇಕಾಗಿ ಬಂದ ಮೂರು ಪ್ರಮುಖ ರಾಜ್ಯಗಳಲ್ಲಿ ಕೆಲವೆಡೆ ಬಿಜೆಪಿಯು ಮೇಲ್ಜಾತಿಗಳ ಬೆಂಬಲ ಕಳೆದುಕೊಂಡದ್ದು ಇದಕ್ಕೆ ಸಾಕ್ಷ್ಯವಾಗಿತ್ತು. ದಲಿತ ನಾಯಕ ಮತ್ತು ಕಿರಿಯ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಠವಳೆ ಅವರು ಈ ಹಿಂದೆಯೇ ಮೇಲ್ಜಾತಿಗಳಿಗೆ ಮೀಸಲಾತಿ ಒದಗಿಸಬೇಕು ಎಂದು ಸಲಹೆ ಮಾಡಿದ್ದರು. ಮೀಸಲಾತಿಗಳು ಮುಕ್ತಾಯ ಕಾಣದ ಕಾರಣ ಸಂಸತ್ತು ಮೇಲ್ಜಾತಿಗಳಿಗೆ ಶೇಕಡಾ ೨೫ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಅವರು ವಾದಿಸಿದ್ದರು. ಆರ್ಥಿಕ ದುರ್ಬಲರಿಗೆ ಮೀಸಲಾತಿ ನೀಡುವುದನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ.
ಈಗ ಮೀಸಲಾತಿಯ ಮಿತಿಯು ಶೇಕಡಾ ೫೦ರಿಂದ ಶೇಕಡಾ ೬೦ಕ್ಕೆ ಏರಲಿದೆ. ಮೀಸಲಾತಿಯ ಈ ಮಿತಿಯನ್ನು ಏರಿಸುವ ಅಧಿಕಾರ ಸಂಸತ್ತಿಗೆ ಇದೆ ಎಂದು ದಲಿತ- ಕೇಂದ್ರಿತ ವಿಷಯಗಳನ್ನು ನಿಭಾಯಿಸಿದ ಸರ್ಕಾರದ ರೀತಿ ಬಗೆಗಿನ ತಮ್ಮ ಭ್ರಮನಿರಸನವನ್ನು ಢಾಳಾಗಿಯೇ ವ್ಯಕ್ತ ಪಡಿಸಿದ್ದ ಬಿಜೆಪಿ ಸಂಸತ್ ಸದಸ್ಯ ಉದಿತ್ ರಾಜ್ ಹೇಳಿದರು. ಆದರೆ, ’ಇದು ಪಂಡೋರಾ ಬಾಕ್ಸನ್ನು ತೆರೆಯಲಿದೆ... ಈಗ ಇತರರೂ ಮೀಸಲಾತಿಗೆ ಒತ್ತಾಯಿಸಬಹುದು’ ಎಂಬ ಎಚ್ಚರಿಕೆಯ ಮಾತನ್ನೂ ಅವರು ಸೇರಿಸಿದರು. ಎನ್ ಡಿಎ ಮೈತ್ರಿಕೂಟದ ಅಂಗ ಪಕ್ಷಗಳಾಗಿರುವ ಆರ್ ಪಿಐ, ರಾಮವಿಲಾಸ್ ಪಾಸ್ವಾನ್ ಅವರ ಎಲ್ ಜೆಪಿ ಸೇರಿದಂತೆ ಹಲವು ಪಕ್ಷಗಳು ಈ ಹಿಂದೆ ಸರ್ಕಾರಿ ಉದ್ಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ಸದಸ್ಯರಿಗ ಮೀಸಲಾತಿ ಒದಗಿಸುವಂತೆ ಆಗ್ರಹಿಸಿದ್ದವು.
ಈಗ ಕೇಂದ್ರ ಸರ್ಕಾರದ ನಿರ್ಧಾರದಿಂದ ಸಾಮಾನ್ಯ ವರ್ಗದಲ್ಲಿ ಬರುವ ಆರ್ಥಿಕವಾಗಿ ಹಿಂದುಳಿದ ಜಾತಿಗಳ ಮಂದಿಗೆ ಶೇಕಡಾ ೧೦ರ ಈ ಹೆಚ್ಚುವರಿ ಮೀಸಲಾತಿ ಸೌಲಭ್ಯ ಅನ್ವಯವಾಗಲಿದೆ ಎಂದು ಮೂಲಗಳು ಹೇಳಿದವು. ನೋಟು ಅಮಾನ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಾಯ್ದೆಯಂತಹ ಕ್ರಮಗಳ ಮೂಲಕ ನರೇಂದ್ರ ಮೋದಿ ಸರ್ಕಾರವು ಇತ್ತೀಚೆಗೆ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿತ್ತು. ಹಲವಾರು ಮೇಲ್ಜಾತಿಗಳೂ ಸರ್ಕಾರದ ನಡೆ ಬಗ್ಗೆ ಅಸಮಾಧಾನಗೊಂಡಿದ್ದವು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ತನ್ನ ಬೆಂಬಲದ ನೆಲೆಯ ಮತಗಳು ತಪ್ಪದಂತೆ ನೋಡಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಭಾವಿಸಲಾಯಿತು. ಕಾಂಗ್ರೆಸ್ ಟೀಕೆ: ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ನೀಡಿದ ತನ್ನ ಮೊದಲ ಪ್ರತಿಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷವು ಅದನ್ನು ’ಚುನಾವಣಾ ಗಿಮಿಕ್’ ಎಂಬುದಾಗಿ ಟೀಕಿಸಿತು.
ಸುಪ್ರೀಂಕೋರ್ಟ್ ಮೀಸಲಾತಿ ಮೇಲೆ ಶೇಕಡಾ ೫೦ರ ಮಿತಿ ವಿಧಿಸಿರುವಾಗ, ಈ ಮೀಸಲಾತಿಯನ್ನು ಕಲ್ಪಿಸಲು ಸರ್ಕಾರ ’ಯಾವ ಕಣ್ಕಟ್ಟು (ಯಕ್ಷಿಣಿ ವಿದ್ಯೆ) ಪ್ರದರ್ಶಿಸಲಿದೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
’ಈ ಕ್ರಮವನ್ನು ಪ್ರಕಟಿಸಲು ಸರ್ಕಾರ ೪ ವರ್ಷ ೮ ತಿಂಗಳುಗಳವರೆಗೆ ಕಾದದ್ದು ಏಕೆ?’ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮೂಲಕ ಪ್ರಶ್ನಿಸಿದರು.
ಕಾಂಗ್ರೆಸ್ ಅಭಿಪ್ರಾಯವನ್ನೇ ಪ್ರತಿಧ್ವನಿಸಿದ ಸಿಪಿಐ ನಾಯಕ ಡಿ. ರಾಜಾ ಅವರು ’ನಿರ್ಧಾರವು ರಾಜಕೀಯ ಉದ್ದೇಶದ್ದು’ ಎಂದು ಟೀಕಿಸಿದರು.
2019: ನವದೆಹಲಿ: ರಫೇಲ್ ಯುದ್ಧ ವಿಮಾನ ವಹಿವಾಟಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಸರ್ಕಾರದ ಮೇಲೆ ನಡೆಸುತ್ತಿರುವ ದಾಳಿಯನ್ನು ಗೌಣಗೊಳಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ’ತಮ್ಮ ವಾಸ್ತವಾಂಶಗಳನ್ನು ಸರಿಪಡಿಸಿಕೊಳ್ಳಲು’ ಕಾಂಗ್ರೆಸ್ ಅಧ್ಯಕ್ಷರಿಗೆ ’ಬೋಧಕ’ನ
(ಟ್ಯೂಟರ್) ವ್ಯವಸ್ಥೆ ಮಾಡಿಕೊಡಲೇ? ಎಂದು ಪ್ರಶ್ನಿಸುವ ಮೂಲಕ ಚಾಟಿ ಬೀಸಿದರು. ಸುದ್ದಿ
ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸೀತಾರಾಮನ್ ಅವರು ’ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಯುದ್ಧ ವಿಮಾನಗಳ ವ್ಯವಹಾರವನ್ನು ಅಂತಿಮಗೊಳಿಸಲು ಏಕೆ ಸಾಧ್ಯವಾಗಲಿಲ್ಲ?’
ಎಂದು ಪ್ರಶ್ನಿಸಿ, ಪ್ರತಿಯೊಬ್ಬರೂ ರಾಹುಲ್ ಗಾಂಧಿಯವರಿಗೆ ಇದೇ ಪ್ರಶ್ನೆ ಕೇಳಬೇಕು ಎಂದು ಹೇಳಿದರು. ಪ್ರತಿವರ್ಷವೂ ಅವರು (ಯುಪಿಎ) ೧೦,೦೦೦ ಕೋಟಿ ರೂಪಾಯಿಗಳ ಆರ್ಡರ್ನ್ನು ಎಚ್ಎಎಲ್ಗೆ (ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್) ನೀಡಿದ್ದಾರೆ. ನಾವು ೨೦,೦೦೦ ಕೋಟಿ ರೂಪಾಯಿ ಮೌಲ್ಯದ ಆರ್ಡರ್ ಗಳನ್ನು ನೀಡಿದ್ದೇವೆ. ವಹಿವಾಟನ್ನು ಅವರು ಏಕೆ ಅಂತಿಮಗೊಳಿಸಲಿಲ್ಲ
ಎಂದು ಏಕೆ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಲಾಗುತ್ತಿಲ್ಲ?’ ಎಂದು ಸೀತಾರಾಮನ್ ಕೇಳಿದರು. ’ರಫೇಲ್
ಕಡತ ನಾಶ ಪಡಿಸಿದ್ದಕ್ಕೆ’ ಸಾಕ್ಷಿಯಾಗಿ, ತಮ್ಮ ಪೂರ್ವಾಧಿಕಾರಿ ಮನೋಹರ ಪರಿಕ್ಕರ್ ಅವರ ಬಳಿ ರಫೇಲ್ ಕಡತಗಳಿರುವುದನ್ನು
ಸಮರ್ಥಿಸಲು ಕಾಂಗ್ರೆಸ್ ಉಲ್ಲೇಖಿಸಿದ ’ಆಡಿಯೋ’ ದಾಖಲೆ
ಬಗ್ಗೆ ಪ್ರತಿಕ್ರಿಯಿಸಿದ
ಸೀತಾರಾಮನ್, ’ಅವರು (ರಾಹುಲ್ ಗಾಂಧಿ) ಎಲ್ಲ ಸಚಿವಾಲಯ ಕಡತಗಳನ್ನು ಹೊಂದಿರುವಂತೆ ಕಾಣುತ್ತದೆ. ಅವರು ಕಡತಗಳ ಮೇಲೆ ಕುಳಿತುಕೊಂಡಿದ್ದಾರೆಯೇ ಅಥವಾ ಕೆಲವು ಮೂಲಗಳು ತಮಗೆ ಸೋರಿಕೆ ಮಾಡುವಂತೆ ಮಾಡಿದ್ದಾರೆಯೇ?’
ಎಂದು ಪ್ರಶ್ನಿಸಿದರು.
ಸಂಸತ್ತಿನ ಕಲಾಪಗಳು ಅರಾಜಕಗೊಂಡದ್ದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ನಿರ್ಮಲಾ, ಸರ್ಕಾರವು ಪ್ರಶ್ನೆಗಳಿಗೆ ಉತ್ತರ ನೀಡಲು ಸಿದ್ಧವಿದೆ, ಆದರೆ ವಿಪಕ್ಷವು ಆಲಿಸಲು ಸಿದ್ಧವಿಲ್ಲ ’ ಎಂದು ಹೇಳಿದರು. ’ಉತ್ತರಿಸುವುದು ಸಂಬಂಧಪಟ್ಟ ಸಚಿವರ ಕೆಲಸ. ನೀವು ಚರ್ಚೆ ಆರಂಭಿಸಿದಿರಿ. ಸಂಬಂಧಪಟ್ಟ ಸಚಿವರು ಉತ್ತರ ನೀಡಲು ಎದ್ದು ನಿಂತಾಗ, ನೀವು ’ಪ್ರಧಾನಿಯನ್ನು ಕರೆಯಿರಿ’ ಎಂದು
ಹೇಳುತ್ತೀರಿ ಎಂದು ರಕ್ಷಣಾ ಸಚಿವರು ಚುಚ್ಚಿದರು. ಇದಕ್ಕೆ ಮುನ್ನ ಸಂಸತ್ತಿನಲ್ಲಿ ರಫೇಲ್ ವಿಷಯಕ್ಕೆ ಸಂಬಂಧಿಸಿದಂತೆ ’ಸುಳ್ಳು’ ಹೇಳಿದ್ದಕ್ಕಾಗಿ ನಿರ್ಮಲಾ ಸೀತಾರಾಮನ್ ಅವರನ್ನು ಟೀಕಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.
’ನೀವು
ಒಂದು ಸುಳ್ಳು ಹೇಳುವಾಗ, ಮೊದಲ ಸುಳ್ಳನ್ನು ಸಮರ್ಥಿಸಲು ಇನ್ನಷ್ಟು ಹೆಚ್ಚಿನ ಸುಳ್ಳುಗಳನ್ನು ಹೆಣೆಯಬೇಕಾಗುತ್ತದೆ.
ಪಿಎಂ ಅವರ ರಫೇಲ್ ಸುಳ್ಳನ್ನು ಸಮರ್ಥಿಸುವ ಕಾತರದಲ್ಲಿ ಆರ್ ಎಂ (ರಕ್ಷಣಾ ಮಂತ್ರಿ) ಅವರು ಸಂಸತ್ತಿಗೆ ಸುಳ್ಳು ಹೇಳಿದ್ದಾರೆ. ನಾಳೆ ರಕ್ಷಣಾ ಮಂತ್ರಿಯವರು ಸಂಸತ್ತಿನಲ್ಲಿ ಎಚ್ಎಎಲ್ಗೆ ಸರ್ಕಾರವು ಕೊಟ್ಟಿರುವ ೧ ಲಕ್ಷ ಕೋಟಿ ರೂಪಾಯಿಗಳ ಆರ್ಡರ್ ಗಳನ್ನು ಇರಿಸಬೇಕು, ಇಲ್ಲವೇ ರಾಜೀನಾಮೆ ಕೊಡಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ರಫೇಲ್ ಯುದ್ಧ ವಿಮಾನಗಳಿಗೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಉತ್ತರ ನೀಡುತ್ತಾ ಸೀತಾರಾಮನ್ ಅವರ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ೧ ಲಕ್ಷ ಕೋಟಿ ರೂಪಾಯಿಗಳ ಅರ್ಡರ್ಗಳಿಗಾಗಿ ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಕಾದು ಕುಳಿತಿದೆ ಎಂದು ರಾಹುಲ್ ಪತ್ರಿಕೆಯೊಂದರಲ್ಲಿ
ಬಂದ ವರದಿಯನ್ನು ಉಲ್ಲೇಖಿಸಿ ಇದಕ್ಕೆ ಮುನ್ನ ಹೇಳಿದ್ದರು.
ಎಚ್ ಎಎಲ್ ಆಡಳಿತ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರನ್ನು
ಉಲ್ಲೇಖಿಸಿ ವರದಿ ಮಾಡಿದ್ದ ಪತ್ರಿಕೆ ನೈಜ ಆರ್ಡರ್ ಇನ್ನೂ ಬಂದಿಲ್ಲ ಅಥವಾ ಒಂದೇ ಒಂದು ರೂಪಾಯಿಯನ್ನೂ ಕಂಪೆನಿಗೆ ಬಿಡುಗಡೆ ಮಾಡಲಾಗಿಲ್ಲ ಎಂದು ವಿವರಿಸಿತ್ತು. ರಾಹುಲ್ ಗಾಂಧಿ ಅವರ ಆಗ್ರಹದ ಕೆಲವು ಗಂಟೆಗಳ ಬಳಿಕ ರಕ್ಷಣಾ ಸಚಿವರು ವೃತ್ತ ಪತ್ರಿಕಾ ವರದಿಯನ್ನು ಸಂಪೂರ್ಣವಾಗಿ ಓದುವಂತೆ ಕಾಂಗ್ರೆಸ್ ಅಧ್ಯಕ್ಷರಿಗೆ ಸಲಹೆ ಮಾಡಿದ್ದರು. ಅದೇ ವರದಿಯಲ್ಲಿ ’ಸೀತಾರಾಮನ್ ಅವರು ಆರ್ಡರ್ ಗಳಿಗೆ ಸಹಿ ಹಾಕಲಾಗಿದೆ ಎಂದು ಪ್ರತಿಪಾದಿಸಿಲ್ಲ, ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದ್ದರು’ ಎಂದು ತಿಳಿಸಲಾಗಿತ್ತು.
2019: ಲಂಡನ್: ಭಾರತೀಯರು ಮತ್ತು ಐರೋಪ್ಯ ಒಕ್ಕೂಟದ (ಇಯು) ಪೌರರಲ್ಲದ ವಲಸಿಗರ ಒಟ್ಟಾರೆ ಇಂಗ್ಲೆಂಡ್ ವೀಸಾದರ ಹೆಚ್ಚಲಿದೆ. ವಿದ್ಯಾರ್ಥಿಗಳು,
ವೃತ್ತಿ ನಿರತರು ಮತ್ತು ಕುಟುಂಬ ಸದಸ್ಯರು ವೀಸಾಕ್ಕಾಗಿ ಅರ್ಜಿ ಸಲ್ಲಿಸುವಾಗ ಪಾವತಿ ಮಾಡಬೇಕಾದ ವಲಸೆ ಆರೋಗ್ಯ ಮೇಲ್ತೆರಿಗೆ ಅಥವಾ ವಲಸೆ ಆರೋಗ್ಯ ಸರ್ಚಾರ್ಜ್ನ್ನು (ಐಎಚ್ಎಸ್) ಹೆಚ್ಚಿಸಲು ಇಂಗ್ಲೆಂಡ್ ಯೋಜಿಸಿರುವುದೇ ಇದಕ್ಕೆ ಕಾರಣ ಎಂದು ವರದಿಗಳು ಹೇಳಿದವು. ೨೦೧೫ರಲ್ಲೇ ಐಎಚ್ಎಸ್ನ್ನು ಜಾರಿಗೊಳಿಸಲಾಗಿದ್ದು,
ಇದು ವಲಸೆಗಾರರಿಗೆ ಇಂಗ್ಲೆಂಡ್ ವಾಸ್ತವ್ಯ ಕಾಲದಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ (ಎನ್ ಎಚ್ ಎಸ್) ಪಡೆಯಲು ಅವಕಾಶ ನೀಡುತ್ತದೆ. ೨೦೧೫ರಿಂದೀಚೆಗೆ ಭಾರತೀಯರು ಮತ್ತು ಇಯುಯೇತರ ನಾಗರಿಕರ ಇಂಗ್ಲೆಂಡ್ ವೀಸಾಗಳ ಸರ್ಚಾರ್ಜ್ನ್ನು ೬೦೦ ದಶಲಕ್ಷ ಪೌಂಡ್ಗಳಿಗೆ ಏರಿಸಲಾಗಿದ್ದು ಇದು ೬ ತಿಂಗಳಿಗೂ ಹೆಚ್ಚು ಅವಧಿಗೆ ಕಾನೂನು ಬದ್ಧವಾಗಿರುತ್ತದೆ. ೨೦೧೯ರ ಜನವರಿ ೮ರಿಂದ ವಲಸೆ ಆರೋಗ್ಯ ಸರ್ಚಾರ್ಜ್ ದುಪ್ಪಟ್ಟಾಗಲಿದೆ ಎಂಬುದಾಗಿ ನಾವು ದೃಢ ಪಡಿಸುತ್ತೇವೆ. ಸರ್ಚಾರ್ಜ್ ವರ್ಷಕ್ಕೆ ೨೦೦ ಪೌಂಡಿನಿಂದ ೪೦೦ ಪೌಂಡುಗಳಿಗೆ ಏರಲಿದೆ. ಯುತ್ ಮೊಬಿಲಿಟಿ ಸ್ಕೀಮ್ನಲ್ಲಿ ಇರುವ ವಿದ್ಯಾರ್ಥಿಗಳಿಗೆ ಡಿಸ್ಕೌಂಟ್ ದರವಿದ್ದು ಅದು ೧೫೦ ಪೌಂಡಿನಿಂದ ೩೦೦ ಪೌಂಡುಗಳಷ್ಟು ಹೆಚ್ಚಲಿದೆ ಇಂಗ್ಲೆಂಡ್ ಅಧಿಕಾರಿಗಳು ತಿಳಿಸಿರುವುದಾಗಿ
ವರದಿ ತಿಳಿಸಿತು. ೨೦೧೯ರ
ಜನವರಿ ೮ ಅಥವಾ ಬಳಿಕ ಅರ್ಜಿ ಸಲ್ಲಿಸುವ ವಲಸೆಗಾರರು ಹೊಸ ಸರ್ಚಾರ್ಜ್ ದರವನ್ನು ಪಾವತಿ ಮಾಡಬೇಕು ಎಂದು ವರದಿ ಹೇಳಿತು. ಈ ದರ ಏರಿಕೆಯು ವೃತ್ತಿ ನಿರತರು, ವಿದ್ಯಾರ್ಥಿಗಳು ಮತ್ತು ಕುಟುಂಬ ಸದಸ್ಯರು ಸೇರಿದಂತೆ ಭಾರತದ ಎಲ್ಲ ವೀಸಾ ಅರ್ಜಿದಾರರಿಗೂ ಅನ್ವಯಿಸುತ್ತದೆ. ಉದಾಹರಣೆಗೆ ಕುಟುಂಬದ ನಾಲ್ವರು ಸದಸ್ಯರು ಇರುವ ಭಾರತದ ವೃತ್ತಿ ನಿರತರು ಉದ್ಯೋಗ ಸಲುವಾಗಿ ಇಂಗ್ಲೆಂಡಿಗೆ ಹೋಗುವುದಿದ್ದರೆ ವರ್ಷಕ್ಕೆ ೧೬೦೦ ಪೌಂಡ್ ಪಾವತಿ ಮಾಡಬೇಕಾಗುತ್ತದೆ. ಇದು ವೀಸಾ ಸಂಬಂಧಿತ ವೆಚ್ಚಗಳನ್ನು ಹೊರತು ಪಡಿಸಿದ್ದು ಎಂದು ವರದಿ ತಿಳಿಸಿತು.
2018: ಜಮ್ಮು: ಜಮ್ಮು ವಿಭಾಗದಲ್ಲಿ ಪಾಕಿಸ್ತಾನಿ ಸೇನೆಯಿಂದ ಗಡಿಯಾಚೆಯ ಗುಂಡಿನದಾಳಿ ಎದಿರುಸುತ್ತಿರುವ
ಗಡಿ ನಿವಾಸಿಗಳ ರಕ್ಷಣೆಗಾಗಿ ನಿಯಂತ್ರಣ ರೇಖೆ (ಎಲ್ ಒಸಿ) ಮತ್ತು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ (ಐಬಿ) ೧೪,೦೦೦ ಸಮುದಾಯ ಹಾಗೂ ವೈಯಕ್ತಿಕ ಕಂದಕಗಳ (ಬಂಕರ್) ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿತು. ೭,೨೯೮ ಕಂದಕಗಳನ್ನು ಪೂಂಚ್ ಮತ್ತು ರಾಜೌರಿ ಅವಳಿ ಜಿಲ್ಲೆಯ ನಿಯಂತ್ರಣ ರೇಖೆಯ ಉದ್ದಕ್ಕೂ ನಿರ್ಮಿಸಿದರೆ, ೭,೧೬೨ ಭೂಗತ ಕಂದಕಗಳನ್ನು ಜಮ್ಮು, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿನ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ನಿರ್ಮಿಸಲಾಗುವುದು.
ಈ ಕಂದಕಗಳ ಒಟ್ಟು ನಿರ್ಮಾಣ ವೆಚ್ಚ ೪೧೫.೭೩ ಕೋಟಿ ರೂಪಾಯಿಗಳು ಎಂದು ಅಧಿಕಾರಿಗಳ ತಿಳಿಸಿದರು. ಒಟ್ಟು ೧೩,೦೨೯ ವೈಯಕ್ತಿಕ ಕಂದಕಗಳು ಮತ್ತು ೧೪೩೧ ಸಮುದಾಯ ಕಂದಕಗಳನ್ನು ನಿರ್ಮಿಸಲಾಗುತ್ತದೆ.
೧೬೦ ಚದರಡಿಯ ವೈಯಕ್ತಿಕ ಕಂದಕದಲ್ಲಿ ೮ ಮಂದಿ ಇರಬಹುದಾಗಿದ್ದರೆ, ೮೦೦ ಚದರಡಿಯ ಸಮುದಾಯ ಕಂದಕವು ೪೦ ಜನರಿಗೆ ರಕ್ಷಣೆ ಒದಗಿಸಬಲ್ಲುದು. ೪೯೧೮ ವೈಯಕ್ತಿಕ ಕಂದಕಗಳನ್ನು ಮತ್ತು ೩೭೨ ಸಮುದಾಯ ಕಂದಕಗಳನ್ನು ರಾಜೌರಿಯಲ್ಲಿ ಮತ್ತು ೩,೦೭೬ ವೈಯಕ್ತಿಕ ಮತ್ತು ೨೪೩ ಸಮುದಾಯ ಕಂದಕಗಳನ್ನು ಕಥುವಾದಲ್ಲಿ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು. ಒಟ್ಟು ೬೮೮ ಸಮುದಾಯ ಮತ್ತು ೧೩೨೦ ವೈಯಕ್ತಿಕ ಕಂದಕಗಳನ್ನು ಪೂಂಚ್ನಲ್ಲಿ ನಿರ್ಮಿಸಿದರೆ, ಜಮ್ಮುವಿನಲ್ಲಿ ೧೨೦೦೦ ವೈಯಕ್ತಿಕ ಮತ್ತು ೧೨೦ ಸಮುದಾಯ ಕಂದಕಗಳನ್ನು ನಿರ್ಮಿಸಲಾಗುತ್ತದೆ.
ಸಾಂಬಾ ಜಿಲ್ಲೆಯಲ್ಲಿ ೨,೫೧೫ ವೈಯಕ್ತಿಕ ಮತ್ತು ೮ ಸಮುದಾಯ ಕಂದಕಗಳನ್ನು ನಿರ್ಮಿಸಲಾಗುವುದು
ಎಂದು ಅವರು ನುಡಿದರು. ಭಾರತ ಮತ್ತು ಪಾಕಿಸ್ತಾನ ನಡುವಣ ಗಡಿಯಲ್ಲಿ ೩,೩೨೩ ಕಿಮೀ ಉದ್ದದ ಗಡಿ ಇದ್ದು, ಈ ಪೈಕಿ ೨೨೧ ಕಿಮೀ ಉದ್ದದ ಅಂತಾರಾಷ್ಟ್ರೀಯ ಗಡಿ ಮತ್ತು ೭೪೦ ಕಿಮೀ ಉದ್ದದ ಗಡಿ ನಿಯಂತ್ರಣ ರೇಖೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬರುತ್ತದೆ. ಕಳೆದ ಒಂದೇ ವರ್ಷದಲ್ಲಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಪರಿಣಾಮವಾಗಿ ೧೯ ಮಂದಿ ಸೇನಾ ಸಿಬ್ಬಂದಿ ಹಾಗೂ ೧೨ ಮಂದಿ ನಾಗರಿಕರು ಸೇರಿ ಒಟ್ಟು ೩೫ ಮಂದಿ ಸಾವನ್ನಪ್ಪಿದ್ದರು.
ಬಿಜೆಪಿ ಸ್ವಾಗತ: ಬಿಜೆಪಿ ನಾಯಕ ಹಾಗೂ ಸಂಸದ ಜುಗಲ್ ಕಿಶೋರ ಶರ್ಮ ಅವರು ಕೇಂದ್ರ ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದರು.
‘ಕೇಂದ್ರವು ಗಡಿ ಗ್ರಾಮಗಳಲ್ಲಿ ಕಂದಕಗಳ ನಿರ್ಮಾಣಕ್ಕೆ ಮತ್ತು ಗಡಿಯಲ್ಲಿನ ಗುಂಡಿನ ಘರ್ಷಣೆಯಲ್ಲಿ ಜನರು ಅನುಭವಿಸುವ ಜೀವ, ಆಸ್ತಿಪಾಸಿನಷ್ಟಕ್ಕೆ ಪರಿಹಾರ ಒದಗಿಸಲು ಮಂಜೂರಾತಿ ನೀಡಿರುವುದು ಗಡಿ ಗ್ರಾಮಗಳ ಜನರಿಗೆ ಸಂತಸ ಮತ್ತು ಸಮಾಧಾನ ತರುವ ವಿಷಯ’ ಎಂದು ಶರ್ಮ ಹೇಳಿದರು. ಗಡಿ
ಗ್ರಾಮಗಳಲ್ಲಿ ವಾಸವಾಗಿರುವ ಜನರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿದ್ದಕ್ಕಾಗಿ
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ಶರ್ಮ ಕೃತಜ್ಞತೆ ಅರ್ಪಿಸಿದರು.
2018: ನವದೆಹಲಿ: ಭಯೋತ್ಪಾದನೆ ನಿಗ್ರಹ ಹೋರಾಟದಲ್ಲಿ ಪಾಕಿಸ್ತಾನ ಸಮರ್ಪಕ ರೀತಿಯಲ್ಲಿ ಸಹಕರಿಸುತ್ತಿಲ್ಲ
ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪಾದನೆ, ಬೆನ್ನಲ್ಲೇ ಅಮೆರಿಕ ಆಡಳಿತದಿಂದ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಭದ್ರತಾ ನಿಧಿ ಅಮಾನತಿನ ಹಿನ್ನೆಲೆಯಲ್ಲಿ ಇನ್ನು ಮುಂದೆ ಅಮೆರಿಕದ ಜೊತೆಗೆ ಯಾವ ಮೈತ್ರಿಯೂ ಇಲ್ಲ ಎಂದು ಪಾಕಿಸ್ತಾನ ಘೋಷಿಸಿತು. ವಾಲ್ ಸ್ಟ್ರೀಟ್ ಜರ್ನಲ್ ಗೆ ನೀಡಿದ ಸಂದರ್ಶನ ಒಂದರಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಅಸಿಫ್ ಅವರು ಅಮೆರಿಕದ ಜೊತೆಗಿನ ರಾಷ್ಟ್ರದ ಮೈತ್ರಿ ಕೊನೆಗೊಳ್ಳುತ್ತಿರುವಂತೆ ಕಾಣುತ್ತಿದೆ ಎಂದೂ ಹೇಳಿದರು. ‘ನಮಗೆ ಯಾವುದೇ ಮೈತ್ರಿಯೂ ಇಲ್ಲ, ಇದು ಮಿತ್ರರು ವರ್ತಿಸುವ ರೀತಿಯೂ ಅಲ್ಲ’ ಎಂದು
ಅಸಿಫ್ ಸಂದರ್ಶನದಲ್ಲಿ ನುಡಿದರು. ಡೊನಾಲ್ಡ್ ಟ್ರಂಪ್ ಅವರು ಹೊಸ ವರ್ಷದ ದಿನದ ಟ್ವೀಟ್ ನಲ್ಲಿ ಕಳೆದ ೧೫ ವರ್ಷಗಳಲ್ಲಿ ನೀಡಿದ ೩೩ ಶತಕೋಟಿ ಡಾಲರ್ ನೆರವಿಗೆ ಪ್ರತಿಯಾಗಿ ಪಾಕಿಸ್ತಾನವು ಅಮೆರಿಕಕ್ಕೆ ಸುಳ್ಳುಗಳು ಮತ್ತು ವಂಚನೆಗಳ ಹೊರತಾಗಿ ಬೇರೇನನ್ನೂ ನೀಡಿಲ್ಲ, ಬದಲಿಗೆ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವನ್ನು ಒದಗಿಸಿಕೊಟ್ಟಿದೆ
ಎಂದು ಆಪಾದಿಸಿದಂದಿನಿಂದ
ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ಹಳಸಿತ್ತು. ಟ್ರಂಪ್ ಅವರ ಟ್ವೀಟ್ ಬಳಿಕ ಅಮೆರಿಕ ಆಡಳಿತವು ಆಫ್ಘನ್ ತಾಲಿಬಾನ್ ಮತ್ತು ಹಖ್ಖಾನಿ ಜಾಲದ ಭಯೋತ್ಪಾದಕ ಗುಂಪುಗಳ ದಮನದಲ್ಲಿ ವಿಫಲವಾದುದ್ಕಾಗಿ ಮತ್ತು ಅವರ ಸುರಕ್ಷಿತ ಸ್ವರ್ಗವನ್ನು ಕೆಡವಿ ಹಾಕದೇ ಇರುವುದಕ್ಕಾಗಿ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ
೨ ಶತಕೋಟಿ ಭದ್ರತಾ ನೆರವನ್ನು ಅಮಾನತುಗೊಳಿಸಿತ್ತು.
ಇದಕ್ಕೆ ಮುನ್ನ ಅಸಿಫ್ ಅವರು ಅಮೆರಿಕವು ‘ಯಾವಾಗಲೂ ದ್ರೋಹ ಎಸಗುವ ಗೆಳೆಯನಂತೆ’ ವರ್ತಿಸುತ್ತಿದೆ ಎಂದು ಆಪಾದಿಸಿದ್ದರು.
’ಅಮೆರಿಕದ ವರ್ತನೆ ಮಿತ್ರರಾಷ್ಟ್ರದ ವರ್ತನೆಯಂತೆಯೂ ಇಲ್ಲ, ಗೆಳೆಯನ ವರ್ತನೆಯಂತೆಯೂ ಇಲ್ಲ. ಅದು ಯಾವಾಗಲೂ ದ್ರೋಹ ಎಸಗುವ ಗೆಳೆಯನಂತೆ ವರ್ತಿಸುತ್ತಿದೆ’ ಎಂದು ಅವರು ದೂರಿದ್ದರು. ಪಾಕಿಸ್ತಾನದ ಜೊತೆಗೆ ಮೈತ್ರಿ ಮಾಡಿಕೊಳ್ಳಬಲ್ಲಂತಹ ಇತರ ರಾಷ್ಟ್ರಗಳಿವೆ. ನಾವು ಏಕಾಂಗಿಗಳಲ್ಲ ಎಂದು ಅಸಿಫ್ ಹೇಳಿದ್ದರು. ಅಮೆರಿಕದ ಆಡಳಿತಕ್ಕೆ ಅಸಿಫ್ ಅವರು ನೀಡಿರುವ ಪ್ರತಿಕ್ರಿಯೆ ಅತ್ಯಂತ ಕಟುವಾಗಿದ್ದು, ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ತೆಹಮಿನಾ ಜಂಜುವಾ ಅವರು ಅಮೆರಿಕವನ್ನು ಮತ್ತೆ ಒಲಿಸಿಕೊಳ್ಳುವ ಮಾತುಗಳನ್ನು ಆಡಿದರು. ಅಮೆರಿಕವು ಭದ್ರತಾ ನೆರವನ್ನು ಅಮಾನತುಗೊಳಿಸಿದ್ದರೂ
ಪಾಕಿಸ್ತಾನವು ಅಮೆರಿಕದ ಜೊತೆ ಮಾತುಕತೆ ಮುಂದುವರೆಸುತ್ತದೆ ಎಂದು ಜಂಜುವಾ ಹೇಳಿದರು. ‘ಅಮೆರಿಕವು ಏಕೈಕ ಜಾಗತಿಕ ಶಕ್ತಿಯಾಗಿದ್ದು,
ಪ್ರದೇಶದಲ್ಲಿಯೂ ತನ್ನ ಅಸ್ತಿತ್ವವನ್ನು ಹೊಂದಿದೆ, ನಮಗಂತೂ ಅದು ನೆರೆದೇಶವಿದ್ದಂತೆ, ಈ ಕಾರಣಕ್ಕಾಗಿ ನಾವು ಅಮೆರಿಕದ ಜೊತೆ ಮಾತುಕತೆ ಮುಂದುವರೆಸುತ್ತೇವೆ’ ಎಂದು ಹೇಳುವ ಮೂಲಕ ಜಂಜುವಾ ಅಮೆರಿಕವನ್ನು ಓಲೈಸಿದರು. ಪಾಕಿಸ್ತಾನದ ವಿರುದ್ಧ ಟ್ರಂಪ್ ಅವರು ಟ್ವೀಟ್ ಮಾಡಿದ ಬೆನ್ನಲ್ಲೇ ಚೀನಾದ ವಿದೇಶಾಂಗ ಸಚಿವಾಲಯವು ಪಾಕಿಸ್ತಾನದ ಜೊತೆಗಿನ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ಸಿದ್ಧ ಎಂದು ಹೇಳಿತ್ತು.
2018: ನವದೆಹಲಿ: ಹಿಮಾಚ್ಛಾದಿತ ಸ್ವೀಡನ್ನಿನ ಸ್ಕೀ ವಿಶ್ರಾಂತಿಧಾಮ ಪಟ್ಟಣ ದಾವೋಸ್ ನಲ್ಲಿ ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ವಿಶ್ವದ ಶ್ರೀಮಂತ ಮತ್ತು ಬಲಾಢ್ಯ ರಾಷ್ಟ್ರಗಳ ಐದು ದಿನಗಳ ಸಮಾವೇಶದಲ್ಲಿ ಭಾರತದ ದೇಸೀ ತಿನಸು ಮತ್ತು ಯೋಗ ಮೊದಲ ದಿನವೇ ಎಲ್ಲರನ್ನೂ ಆಕರ್ಷಿಸಲಿದೆ. ಇದೇ ಮೊತ್ತ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಇದರೊಂದಿಗೆ ಭಾರತವು ಸಮಾವೇಶದಲ್ಲಿ ಗಮನ ಸೆಳೆಯಲಿದೆ. ಪ್ರಧಾನಿಯವರಲ್ಲದೆ ೬ ಮಂದಿ ಕೇಂದ್ರ ಸಚಿವರು, ಇಬ್ಬರು ಮುಖ್ಯಮಂತ್ರಿಗಳು, ಹಲವಾರು ಮಂದಿ ಉನ್ನತ ಸರ್ಕಾರಿ ಅಧಿಕಾರಿಗಳು, ೧೦೦ಕ್ಕೂ ಹೆಚ್ಚು ಸಿಇಒಗಳ ಪಾಲ್ಗೊಳ್ಳುವಿಕೆಯೊಂದಿಗೆ ಸಮಾವೇಶದಲ್ಲಿ ಭಾರತವು ದೊಡ್ಡ ಪ್ರಮಾಣದಲ್ಲಿ ತನ್ನ ಅಸ್ತಿತ್ವವನ್ನು ತೋರ್ಪಡಿಸಲಿದೆ. ವಿಶ್ವ ಜಾಗತಿಕ ವೇದಿಕೆಯಿಂದ (ವರ್ಲ್ಡ್ ಇಕನಾಮಿಕ್ಸ್ ಫೋರಂ- ಡಬ್ಲ್ಯೂಇಎಫ್) ಪ್ರಧಾನಿ ಮೋದಿಯವರು ಪಾಲ್ಗೊಳ್ಳುವ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಆದರೆ ಕಾರ್ಯಕ್ರಮ ಆಯೋಜಕರ ನಿಕಟ ಮೂಲಗಳು ಮೋದಿಯವರು ೨೦೧೮ರ ಡಬ್ಲ್ಯುಇಎಫ್ ವಾರ್ಷಿಕ ಸಭೆಯಲ್ಲಿ ಭಾಷಣ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಈ ಸಮಾವೇಶದಲ್ಲಿ ಉನ್ನತ ವ್ಯವಹಾರೋದ್ಯಮಿಗಳು
ಮತ್ತು ೫೦ ರಾಜ್ಯಗಳ ಮುಖ್ಯಸ್ಥರು ಸೇರಿದಂತೆ ೩೦೦೦ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಜನವರಿ ೨೨ ರಂದು ಆರಂಭವಾಗುವ ೪೮ನೇ ವಾರ್ಷಿಕ ಸಮಾವೇಶದ ಔಪಚಾರಿಕ ಕಾರ್ಯಕ್ರಮಗಳನ್ನು
ಜಿನೇವಾ ಮೂಲದ ವಿಶ್ವ ಜಾಗತಿಕ ವೇದಿಕೆ ಪ್ರಕಟಿಸಲಿದೆ. ಉದ್ಘಾಟನಾ ದಿನದ ಸಂಜೆ, ಸ್ವಾಗತ ಭಾಷಣ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕಾ ನೀತಿ ಮತ್ತು ಅಭಿವೃದ್ಧಿ ಇಲಾಖೆ ಆತಿಥ್ಯ ನೀಡಲಿದೆ. ಇಲಾಖೆಯು ಸಮಾವೇಶದ ಪ್ರತಿನಿಧಿಗಳಿಗೆ
ಭಾರತದ ರುಚಿಕರ ತಿನಸು ಮತ್ತು ಯೋಗವನ್ನು ಪರಿಚಯಿಸಲಿದೆ. ಉನ್ನತ
ಕೈಗಾರಿಕಾ ಸಂಸ್ಥೆ ಸಿಐಐ, ೧೦೦ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳ,
ಸರ್ಕಾರದ ವಿವಿಧ ಇಲಾಖಾ ಪ್ರತಿನಿಧಿಗಳ, ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ಕಾರ್ಪೋರೇಟ್ ಗಳ ನಿಯೋಗದ ನೇತತ್ವ ವಹಿಸಲಿದೆ. ಸಮಾವೇಶದ ವಿವಿಧ ಗೋಷ್ಠಿಗಳಲ್ಲಿ ’ವಿಶ್ವದಲ್ಲಿ ಭಾರತದ ಪಾತ್ರ’ ಎಂಬ
ವಿಷಯ ಸೇರಿದಂತೆ ಭಾರತಕ್ಕೆ ಸಂಬಂಧಿಸಿದ ವಿಶೇಷ ಚರ್ಚೆಗಳು ನಡೆಯಲಿವೆ. ಭಾರತದ ಆರ್ಥಿಕ ಚಿಂತನೆ, ನೀತಿ ನಿರೂಪಣೆಯಲ್ಲಿ ದೊಡ್ಡ ಮಾಹಿತಿಯ ಬಳಕೆ, ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸುವಲ್ಲಿ ಭಾರತ ಪಾತ್ರ ಇತ್ಯಾದಿ ವಿಷಯಗಳ ಮೇಲೂ ಅಧಿಕೃತ ಗೋಷ್ಠಿಗಳು ನಡೆಯಲಿವೆ. ಹಣಕಾಸು ಸಚಿವ ಅರುಣ್ ಜೇಟ್ಲಿ, ರೈಲ್ವೇ ಸಚಿವ ಪೀಯೂಶ್ ಗೋಯೆಲ್, ವಾಣಿಜ್ಯ ಸಚಿವ ಸುರೇಶ ಪ್ರಭು, ತೈಲ ಸಚಿವ ಧರ್ಮೇಂದ್ರ ಪ್ರಧಾನ್, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ. ಅಕ್ಬರ್, ಭಾರತದ ಈಶಾನ್ಯ ಪ್ರದೇಶದ ಅಭಿವೃದ್ಧಿ ಖಾತೆ ರಾಜ್ಯ ಸಚಿವ (ಸ್ವತಂತ್ರ ಹೊಣೆಗಾರಿಕೆ) ಜಿತೇಂದ್ರ ಸಿಂಗ್ ಮತ್ತಿತರರು ಈಗಾಗಲೇ ಸಮಾವೇಶದಲ್ಲಿ ಪಾಲ್ಗೊಳ್ಳಲು ತಮ್ಮ ಹೆಸರು ನೋಂದಾಯಿಸಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಸಚಿವ ಕೆ.ಟಿ. ರಾಮರಾವ್, ಹಿರಿಯ ಸರ್ಕಾರಿ ಅಧಿಕಾರಿಗಳಾದ ರಮೇಶ ಅಭಿಷೇಕ್, ಅತುಲ್ ಚತುರ್ವೇದಿ ಮತ್ತು ಅಮಿತಾಭ್ ಕಾಂತ್ ಮತ್ತಿತರರು ಚರ್ಚೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆ ಜೊತೆಗೇ ಬಹುರಾಷ್ಟ್ರೀಯ ಹಾಗೂ ದ್ವಿಪಕ್ಷೀಯ ಸಭೆಗಳನ್ನೂ ಭಾರತೀಯ ನಾಯಕರು ನಡೆಸಲಿದ್ದಾರೆ. ಜಾಗತಿಕ ಸಮ್ಮೇಳನದಲ್ಲಿ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾನ್ ಅಬ್ಬಾಸಿ ಅವರೂ ತಮ್ಮ ಸಂಪುಟ ಸಹೋದ್ಯೋಗಿಗಳು ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲವಾಲ್ ಭುಟ್ಟೋ ಜರ್ದಾರಿ ಜೊತೆಗೆ ಪಾಲ್ಗೊಳ್ಳಲಿದ್ದಾರೆ. ಚೀನೀ ನಾಯಕರೂ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
2018: ನವದೆಹಲಿ: ಭಾರತದಲ್ಲಿ ಜನಿಸಿದ್ದ, ಮೂರು ವರ್ಷಗಳ ಮಗು ಶೆರೀನ್ ಮ್ಯಾಥ್ಯೂಸ್ ಅಮೆರಿಕದಲ್ಲಿ ಸಾವನ್ನಪ್ಪಿದ ಪ್ರಕರಣದ ಹಿನ್ನೆಲೆಯಲ್ಲಿ ಆ ಮಗುವನ್ನು ದತ್ತುಪಡೆದ ಪಾಲಕರ ಗುಣನಡತೆ ಅಂದಾಜು ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂಬ ಕಾರಣಕ್ಕಾಗಿ ಅಮೆರಿಕದ ದತ್ತು ಸಂಸ್ಥೆಯನ್ನು ಕೇಂದ್ರ ಸರ್ಕಾರವು ಅಮಾನತುಗೊಳಿಸಿತು. ೨೦೧೬ರಲ್ಲಿ
ಭಾರತೀಯ ಮೂಲದ ದಂಪತಿ ದತ್ತು ಪಡೆದಿದ್ದ ಶೆರೀನ್ ಮ್ಯಾಥ್ಯೂಸ್ ೨೦೧೭ರ ಅಕ್ಟೋಬರಿನಲ್ಲಿ ದತ್ತು ತಂದೆ ಗಂಟಲು ಹಿಸುಕಿದ ಪರಿಣಾಮವಾಗಿ ಸಾವನ್ನಪ್ಪಿದ್ದಳು. ಆಕೆಯ ಕೊಲೆಯಲ್ಲಿ ದತ್ತು ತಾಯಿಯೂ ಸಹಕರಿಸಿದ್ದಳು ಎನ್ನಲಾಗಿತ್ತು. ದತ್ತು ತಂದೆ ಮತ್ತು ದತ್ತು ತಾಯಿ ಬಳಿಕ ಸೆರೆಮನೆ ಸೇರಿದರು. ಮಗುವಿನ ಶವಪರೀಕ್ಷಾ ವರದಿಯು ಶೆರೀನ್ ಮ್ಯಾಥ್ಯೂಸ್ ನರಹತ್ಯಾಕಾರಿ ಹಿಂಸೆಯಿಂದಾಗಿ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಅಧಿಕೃತ ಹೋಲ್ಟ್ ಇಂಟರ್ ನ್ಯಾಷನಲ್ ದತ್ತು ಸಂಸ್ಥೆಯನ್ನು ಅಮಾನತುಗೊಳಿಸಲು ನಿರ್ಧರಿಸಿದರು ಎಂದು ಸರ್ಕಾರಿ ಮೂಲಗಳು ಹೇಳಿದವು. ಸರ್ಕಾರದ
ನಿರ್ಧಾರವನ್ನು ಹೋಲ್ಟ್ ಇಂಟರ್ ನ್ಯಾಷನಲ್ ಮತ್ತು ಅಮೆರಿಕದಲ್ಲಿ ದತ್ತು ಪಡೆಯುವ ನೋಡಲ್ ಸಂಸ್ಥೆಯಾಗಿರುವ ಸೆಂಟ್ರಲ್ ಅಥಾರಿಟಿಗೆ ತಿಳಿಸುವಂತೆ ಸರ್ಕಾರವು ಅಮೆರಿಕದಲ್ಲಿನ ಭಾರತೀಯ ರಾಯಬಾರಿ ಕಚೇರಿಗೆ ಪತ್ರ ಬರೆಯಿತು. ದತ್ತು ಪಾಲಕರನ್ನು ಅಂದಾಜು ಮಾಡುವಲ್ಲಿ ನಿರ್ಲಕ್ಷ್ಯದಿಂದ ನಡೆದುಕೊಂಡಿರುವುದು
ನಮ್ಮ ಗಮನಕ್ಕೆ ಬಂದ ಕಾರಣ ಹೋಲ್ಟ್ ಇಂಟರ್ ನ್ಯಾಷನಲ್ ಸಂಸ್ಥೆಯ ಕಾರ್ಯಾಚರಣೆಗಳನ್ನು ನಾವು ಅಮಾನತುಗೊಳಿಸಿದ್ದೇವೆ ಎಂದು ಮಗು ದತ್ತು ಸಂಪನ್ಮೂಲ ಪ್ರಾಧಿಕಾರ ’ಸಿಎಆರ್ ಎ’ ಸಿಇಒ
ಲೆಫ್ಟಿನೆಂಟ್ ಕರ್ನಲ್ ದೀಪಕ್ ಕುಮಾರ್ ಹೇಳಿದರು. ಭಾರತೀಯ ರಾಯಭಾರ ಕಚೇರಿಯ ವಿಸ್ತೃತ ವರದಿಯ ಬಳಿಕ ಸರ್ಕಾರ ಈ ನಿರ್ಧಾರ ಕೈಗೊಂಡಿತು ಎಂದು ಅವರು ನುಡಿದರು. ವಾಸ್ತವವಾಗಿ ಶೆರೀನ್ ಮ್ಯಾಥ್ಯೂಸ್ ಸಾವಿನ ಸಮಾಚಾರ ಕಳೆದ ಅಕ್ಟೋಬರ್ ತಿಂಗಳಲ್ಲೇ ಬೆಳಕಿಗೆ ಬಂದಿತ್ತು. ಆದರೆ ನವೆಂಬರಿನಲ್ಲಿ ಇವಾಂಕಾ ಟ್ರಂಪ್ ಭಾರತ ಭೇಟಿಯ ಕಾರ್ಯಕ್ರಮ ಇದ್ದುದರಿಂದ ಉಭಯ ದೇಶಗಳ ನಡುವಣ ಬಾಂಧವ್ಯದ ಮೇಲೆ ಪರಿಣಾಮವಾಗದಂತೆ ನೋಡಿಕೊಳ್ಳುವ ಸಲುವಾಗಿ ಭಾರತ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸಿತ್ತು. ದತ್ತು ಪ್ರಕ್ರಿಯೆ ಬಗ್ಗೆ ವಿಸ್ತ್ರತ ತನಿಖೆಗೂ ಸಚಿವೆ ಸುಷ್ಮಾ ಸ್ವರಾಜ್ ಆದೇಶ ನೀಡಿದ್ದರು.
2018: ನವದೆಹಲಿ: ಆಧಾರ್ ಮಾಹಿತಿಗಳು ಅನಾಮಿಕ ಮಾರಾಟಗಾರರಿಂದ ಕೇವಲ ೫೦೦ ರೂಪಾಯಿಗಳಿಗೆ ವಾಟ್ಸ್ ಆಪ್ನಲ್ಲಿ ಲಭಿಸುತ್ತವೆ ಎಂಬುದಾಗಿ ವರದಿ ಮಾಡಿದ ಪತ್ರಿಕಾ ವರದಿಗಾರ್ತಿಯ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಿದ್ದನ್ನು ಭಾರತದ ಎಡಿಟರ್ಸ್ ಗಿಲ್ಡ್ ಖಂಡಿಸಿತು. ಪತ್ರಿಕಾ ಹೇಳಿಕೆಯೊಂದನ್ನು
ಬಿಡುಗಡೆ ಮಾಡಿರುವ ಗಿಲ್ಡ್, ’ಎಫ್ ಐ ಆರ್ ದಾಖಲಿಸಿರುವುದು ಮಹಾನ್ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯದ ಬಗ್ಗೆ ತನಿಖೆ ನಡೆಸಿದ ಪತ್ರಕರ್ತೆಯನ್ನು
ಬೆದರಿಸುವ ಉದ್ದೇಶದ್ದು. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಅನ್ಯಾಯ, ಅಸಮರ್ಥನೀಯ ಮತ್ತು ನೇರದಾಳಿ’ ಎಂದು ಬಣ್ಣಿಸಿತು. ವರದಿಗಾರ್ತಿಯನ್ನು ದಂಡನೆಗೆ ಗುರಿಪಡಿಸುವ ಬದಲು ಭಾರತದ ವಿಶಿಷ್ಠ ಗುರುತು ಪ್ರಾಧಿಕಾರವು (ಯುಐಡಿಎಐ) ಮಾಹಿತಿ ಉಲ್ಲಂಘನೆ ಆರೋಪದ ಬಗ್ಗೆ ಸಮಗ್ರ ಆಂತರಿಕ ತನಿಖೆಗೆ ಆದೇಶ ನೀಡಿ, ಅದರ ವರದಿಯನ್ನು ಬಹಿರಂಗ ಪಡಿಸಬೇಕಿತ್ತು. ಸಂಬಂಧಪಟ್ಟ ಕೇಂದ್ರ ಸಚಿವಾಲಯವು ತತ್ ಕ್ಷಣ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಿ ವರದಿಗಾರ್ತಿ ವಿರುದ್ಧ ದಾಖಲಿಸಲಾಗಿರುವ ಖಟ್ಲೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಗಿಲ್ಡ್ ಆಗ್ರಹಿಸಿತು. ಪ್ರಕರಣ:
ಕೇವಲ ೫೦೦ ರೂಪಾಯಿಗಳಿಗೆ ದೇಶದ ನಾಗರಿಕರ ಆಧಾರ್ ಮಾಹಿತಿ ವಾಟ್ಸ್ ಆಪ್ ನಲ್ಲಿ ಮಾರಾಟವಾಗುತ್ತಿರುವ ಕುರಿತು ತನಿಖಾ ವರದಿ ಪ್ರಕಟಿಸಿದ್ದ ದಿ ಟ್ರಿಬ್ಯೂನ್ ಪತ್ರಿಕೆ ಹಾಗೂ ವರದಿಗಾರ್ತಿ ರಚನಾ ಖೈರಾ ವಿರುದ್ಧ ಭಾರತದ ವಿಶಿಷ್ಠ ಗುರುತು ಪ್ರಾಧಿಕಾರ (ಯುಐಡಿಎಐ) ಎಫ್ಐಆರ್ ದಾಖಲಿಸಿತ್ತು. ರಚನಾ ಅವರು ಆರು ತಿಂಗಳು ತನಿಖೆ ನಡೆಸಿ, ದೇಶದ ನೂರು ಕೋಟಿ ಭಾರತೀಯರ ಆಧಾರ್ ಮಾಹಿತಿ ಸೋರಿಕೆಯಾಗಿರುವ ಕುರಿತು ವರದಿ ಪ್ರಕಟಿಸಿದ್ದರು. ನಿಯಮ ಉಲ್ಲಂಘನೆ ಆರೋಪದ ಮೇಲೆ ಯುಐಡಿಎಐ ಉಪನಿರ್ದೇಶಕರು ಟ್ರಿಬ್ಯೂನ್ ಪತ್ರಿಕೆ ಹಾಗೂ ರಚನಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ತನಿಖೆ ಸಂದರ್ಭದಲ್ಲಿ ರಚನಾ ಸಂಪರ್ಕ ಹೊಂದಿರುವುದಾಗಿ ಪ್ರಕಟಿಸಿದ್ದ ಅನಿಲ್ ಕುಮಾರ್, ಸುನಿಲ್ ಕುಮಾರ್ ಹಾಗೂ ರಾಜ್ ಹೆಸರುಗಳೂ ಎಫ್ ಐ ಆರ್ ನಲ್ಲಿ ದಾಖಲಾಗಿದೆ ಎಂದು ವರದಿಗಳು ತಿಳಿಸಿದ್ದವು. ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಎಫ್ಐಆರ್ ಕುರಿತು ಸ್ಪಷ್ಟಪಡಿಸಿದ್ದು, ತನಿಖೆ ಪ್ರಾರಂಭಿಸಿರುವುದಾಗಿ ತಿಳಿಸಿದ್ದರು. ಅಪರಾಧ ವಿಭಾಗದ ಸೈಬರ್ ಘಟಕದಲ್ಲಿ ಐಪಿಸಿ ಸೆಕ್ಷನ್ ೪೧೯(ವಂಚನೆಗೆ ಸಹಕಾರ), ೪೨೦(ಮೋಸ), ೪೬೮(ಸುಳ್ಳು ಸೃಷ್ಟಿ), ಐಟಿ ಕಾಯ್ದೆ ೬೬, ಆಧಾರ್ ಕಾಯ್ದೆ ಸೆಕ್ಷನ್ ೩೬/೩೭ ಸೇರಿ ಇತರ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ತನಿಖಾ ವರದಿಗಾರ್ತಿ ವಾಟ್ಸ್ ಆಪ್ ಮೂಲಕ ಮೂಲಕ ಅನಾಮಿಕ ಮಾರಾಟಗಾರನಿಂದ ಆಧಾರ್ ಮಾಹಿತಿ ಹೊಂದಿರುವ ಪೋರ್ಟಲ್‌ನ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ಪಡೆದಿದ್ದರು. ಪೇಟಿಎಂ ಮೂಲಕ ೫೦೦ ರೂಪಾಯಿ ಪಾವತಿಯಾದ ಕೆಲವೇ ಕ್ಷಣಗಳಲ್ಲಿ ಮಾರಾಟಗಾರ ಆಧಾರ್ ಮಾಹಿತಿ ಉಪಯೋಗಿಸಲು ಅಗತ್ಯವಾದ ಲಿಂಕ್ ರವಾನಿಸಿದ್ದು, ಆ ಪೋರ್ಟಲ್‌ನಲ್ಲಿ ಯಾವುದೇ ಆಧಾರ್ ಸಂಖ್ಯೆ ಟೈಪಿಸಿ ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಫೋಟೊ ಸೇರಿ ಸಂಪೂರ್ಣ ಮಾಹಿತಿ ಪಡೆಯಬಹುದಾಗಿತ್ತು. ಹೆಚ್ಚುವರಿಯಾಗಿ ೩೦೦ ರೂಪಾಯಿ ಪಾವತಿಸಿದ ಬಳಿಕ ಆಧಾರ್ ಕಾರ್ಡ್ ಪ್ರಿಂಟ್ ಪಡೆಯುವ ವ್ಯವಸ್ಥೆಯನ್ನೂ ಒದಗಿಸಿದ್ದರು ಎಂದು ವರದಿ ತಿಳಿಸಿತ್ತು. ವರದಿಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದ ಯುಐಡಿಎಐ, ಆಧಾರ್ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದೆ
ಎಂದು ಪ್ರತಿಪಾದಿಸಿತ್ತು.
2018: ನವದೆಹಲಿ: ಚುನಾವಣಾ ಬಾಂಡ್ ವ್ಯವಸ್ಥೆಯು ರಾಜಕಿಯ ನಿಧಿಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ, ಹಾಲಿ ಚುನಾವಣಾ ನಿಧಿ ವ್ಯವಸ್ಥೆಗಿಂತ ಉತ್ತಮವಾದ ಪಾರದರ್ಶಕ ವ್ಯವಸ್ಥೆಯಾಗಿದ್ದು, ಈ ಬಗ್ಗೆ ಮುಕ್ತ ಚರ್ಚೆ, ಸಲಹೆಗಳನ್ನು ಸರ್ಕಾರ ಸ್ವಾಗತಿಸುತ್ತದೆ
ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಲ್ಲಿ ಹೇಳಿದರು. ಫೇಸ್ ಬುಕ್ ಪೋಸ್ಟ್ ನಲ್ಲಿ ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದಂತೆ ಬರೆದಿರುವ ಜೇಟ್ಲಿ, ಪ್ರಸ್ತುತ ರಾಜಕೀಯ ನಿಧಿ ಸಂಗ್ರಹ ವ್ಯವಸ್ಥೆಯಲ್ಲಿ ದೇಣಿಗೆ ಸಂಗ್ರಹಿಸುವುದು ಮತ್ತು ನಗದು ರೂಪದಲ್ಲಿ ವೆಚ್ಚ ಮಾಡಲಾಗುತ್ತದೆ. ಆದರೆ ದೇಣಿಗೆ ಸಂಗ್ರಹದ ಮೂಲಗಳು ಬಹುತೇಕ ಅನಾಮಧೇಯ. ಪಡೆಯುವ ದೇಣಿಗೆಯ ಮೊತ್ತವನ್ನು ಎಂದೂ ಬಹಿರಂಗ ಪಡಿಸಲಾಗುವುದಿಲ್ಲ.
ಈ ವ್ಯವಸ್ಥೆಯಲ್ಲಿ ಸ್ವಚ್ಛವಲ್ಲದ ಹಣ ಗುರುತಿಸಲಾಗದ ಮೂಲಗಳಿಂದ ದೇಣಿಗೆ ರೂಪದಲ್ಲಿ ಬರುತ್ತವೆ ಎಂದು ಜೇಟ್ಲಿ ವಿವರಿಸಿದರು. ಈ ವ್ಯವಸ್ಥೆ ಸಂಪೂರ್ಣವಾಗಿ ಅಪಾರದರ್ಶಕ ವ್ಯವಸ್ಥೆ. ಬಹುತೇಕ ರಾಜಕೀಯ ಪಕ್ಷಗಳು ಈ ವ್ಯವಸ್ಥೆ ಬಗ್ಗೆ ಸಮಾಧಾನದಿಂದ ಇರುವಂತೆ ಅನಿಸುತ್ತದೆ ಮತ್ತು ಈ ವ್ಯವಸ್ಥೆ ಮುಂದುವರಿಯುವ ವಿಚಾರದಲ್ಲಿ ಯಾವುದೇ ಚಿಂತೆಯನ್ನೂ ಮಾಡುವುದಿಲ್ಲ. ಹೀಗಾಗಿ ರಾಜಕೀಯ ದೇಣಿಗೆ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಪರ್ಯಾಯ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ ಎಂದು ವಿತ್ತ ಸಚಿವರು ಹೇಳಿದರು. ಹಣಕಾಸು ಸಚಿವರು ಕಳೆದ ವಾರ ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡುವ ಕೌಂಟರುಗಳನ್ನು ಪ್ರಕಟಿಸಿದ್ದರು. ಈ ಚುನಾವಣಾ ಬಾಂಡ್ ಗಳನ್ನು ಕೇವಲ ೧೫ ದಿನಗಳ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಮಾರಾಟ ಮಾಡುವುದು. ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆ ನೀಡುವಿಕೆಗೆ ಪರ್ಯಾಯ ವ್ಯವಸ್ಥೆಯಾಗಿ ಈ ಬಾಂಡ್ ಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಜೇಟ್ಲಿ ತಿಳಿಸಿದ್ದರು. ಈಗ ಅತ್ಯಂತ ಪ್ರಜ್ಞಾಪೂರ್ವಕವಾಗಿ ಸ್ವಚ್ಛವಲ್ಲದ ಹಣ ಹರಿದು ಬರುವ ನಗದು ದೇಣಿಗೆ ನೀಡುವ ಹಾಲಿ ವ್ಯವಸ್ಥೆ ಮತ್ತು ಚೆಕ್, ಆನ್ ಲೈನ್ ವರ್ಗಾವಣೆ ಅಥವಾ ಚುನಾವಣಾ ಬಾಂಡ್ ಗಳಂತಹ ಪಾರದರ್ಶಕ ವ್ಯವಸ್ಥೆಯ ಆಯ್ಕೆ ಈಗ ನಮ್ಮ ಮುಂದಿದೆ. ಎಲ್ಲ ಮೂರು ವಿಧಾನಗಳಲ್ಲಿ ಸ್ವಚ್ಛ ಹಣ ಹರಿದು ಬರುತ್ತದಾದರೂ, ಮೊದಲ ಎರಡು ವಿಧಾನಗಳು ಸಂಪೂರ್ಣವಾಗಿ ಪಾರದರ್ಶಕವಾದವು ಮತ್ತು ಚುನಾವಣಾ ಬಾಂಡ್ ಪಾರದರ್ಶಕತೆಯೇ ಇಲ್ಲದ ಈಗಿನ ವ್ಯವಸ್ಥೆಗಿಂತ ಉತ್ತಮವಾದ ಸುಧಾರಿತ ಪಾರದರ್ಶಕ ವ್ಯವಸ್ಥೆ ಎಂದು ಸಚಿವರು ಪ್ರತಿಪಾದಿಸಿದರು. ಈ ಹಿನ್ನೆಲೆಯಲ್ಲಿ ಭಾರತದ ರಾಜಕೀಯ ನಿಧಿ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಸಲಹೆಗಳನ್ನು ಸರ್ಕಾರ ಮುಕ್ತವಾಗಿ ಸ್ವಾಗತಿಸುತ್ತದೆ. ಅಪ್ರಾಯೋಗಿಕ ಸಲಹೆಗಳು ನಗದು ಪ್ರಾಮುಖ್ಯತೆಯ ಹಾಲಿ ವ್ಯವಸ್ಥೆಯನ್ನು ಸುಧಾರಿಸಲಾರವು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು, ಏಳು ದಶಕಗಳಿಂದ ಪಾರದರ್ಶಕವಾದ ವ್ಯವಸ್ಥೆ ರೂಪಿಸಲು ಸಾಧ್ಯವಾಗಿಲ್ಲ ಎಂಬುದೂ ನಮ್ಮ ಗಮನದಲ್ಲಿ ಇರಬೇಕು ಎಂದು ಜೇಟ್ಲಿ ಬರೆದರು.
2009: ಹೈದರಾಬಾದ್ ಮೂಲದ ಸತ್ಯಂ ಕಂಪ್ಯೂಟರ್ ಸರ್ವಿಸಸ್ ಲಿಮಿಟೆಡ್ ಅಧ್ಯಕ್ಷ ರಾಮಲಿಂಗರಾಜು ಅವರಿಂದ, ಅವರೇ ಹುಟ್ಟುಹಾಕಿದ ಕಂಪೆನಿಗೆ 8 ಸಾವಿರ ಕೋಟಿ ರೂಪಾಯಿಗೂ ಅಧಿಕ ವಂಚನೆ ಅದದ್ದು ಬೆಳಕಿಗೆ ಬಂತು. ಸಂಸ್ಥೆಯ ಪ್ರವರ್ತಕ, ರಾಜು ತಾವು ಕಂಪೆನಿಗೆ ಎಸಗಿದ ಮೋಸದ ಬಗ್ಗೆ ತಪ್ಪೊಪ್ಪಿಕೊಂಡು ಕಂಪೆನಿಯ ನಿರ್ದೇಶಕರಿಗೆ ಸುದೀರ್ಘ ಪತ್ರ ಬರೆದರು. ತಮ್ಮ ಹ್ದುದೆಗೆ ರಾಜೀನಾಮೆಯನ್ನೂ ಸಲ್ಲಿಸಿದರು. ಆ ಮೂಲಕ ಕಳೆದ ಹಲವು ವರ್ಷಗಳಿಂದ ಕಂಪೆನಿಗೆ ಸುಳ್ಳು ಲೆಕ್ಕಪತ್ರ ತೋರಿಸುತ್ತಾ ಬಂದಿದ್ದುದನ್ನು ಹಾಗೂ ಒಟ್ಟು 4,000 ಕೋಟಿ ರೂ.ನಷ್ಟು ವಂಚಿಸಿರುವುದನ್ನೂ ವಿವರವಾಗಿ ದಾಖಲಿಸಿದರು. ಪರಿಣಾಮವಾಗಿ ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನಾಲ್ಕನೇ ಅತಿ ದೊಡ್ಡ ಪ್ರತಿಷ್ಠಿತ ಕಂಪೆನಿ ಸತ್ಯಂ ಕಂಪ್ಯೂಟರಿನಿಂದ ದೇಶಕ್ಕೆ, ಕಾನೂನಿಗೆ, ಕಂಪೆನಿಗೆ- ನಿರ್ದೇಶಕರಿಗೆ, ಹೂಡಿಕೆದಾರರಿಗೆ ಭಾರೀ ಮೋಸವಾದದ್ದು ಜಗಜ್ಜಾಹೀರಾಯಿತು. ಸತ್ಯಂನ 53 ಸಾವಿರ ಸಿಬ್ಬಂದಿ ಪರಿಸ್ಥಿತಿ ಅತಂತ್ರವಾಯಿತು.
2009: ಅತ್ಯುತ್ತಮ ಕಾರ್ಪೊರೇಟ್ ಆಡಳಿತಕ್ಕಾಗಿ ಸತ್ಯಂ ಕಂಪ್ಯೂಟರ್‌ಗೆ ನೀಡಲಾಗಿದ್ದ ದೇಶದ ಪ್ರತಿಷ್ಠಿತ ಪ್ರಶಸ್ತಿ 'ಸ್ವರ್ಣ ಮಯೂರ'ವನ್ನು ವಾಪಸ್ ಪಡೆಯಲಾಯಿತು. ವಂಚನೆ ಹಗರಣದಲ್ಲಿರುವ ಸತ್ಯಂ ಪ್ರಶಸ್ತಿಯ ಗೌರವವನ್ನೇ ಕಳೆದಿದೆ ಎಂದು ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ಸ್(ಐಒಡಿ)ಯ ಭಾರತೀಯ ಸಚಿವಾಲಯದ ನಿರ್ದೇಶಕ ಮನೋಜ್ ರಾವತ್ ವಿಷಾದ ವ್ಯಕ್ತಪಡಿಸಿದರು. ಕಂಪೆನಿ ಆಡಳಿತದ ಉನ್ನತ ರೀತಿ-ನೀತಿ ಪಾಲಿಸುವ ಸಂಸ್ಥೆಗಳನ್ನು ಗೌರವಿಸಲೆಂದೇ 'ಸ್ವರ್ಣ ಮಯೂರ' ಪ್ರಶಸ್ತಿ ನೀಡಲಾಗುತ್ತದೆ.
2009: ಮುಂಬೈ ಮೇಲೆ ದಾಳಿ ನಡೆಸಿದವರ ಪೈಕಿ ಸೆರೆ ಸಿಕ್ಕ ಏಕೈಕ ಭಯೋತ್ಪಾದಕ ಅಜ್ಮಲ್ ಕಸಾಬ್ ತನ್ನ ಪ್ರಜೆಯೇ ಹೌದು ಎಂದು ಪಾಕಿಸ್ಥಾನ ಕಡೆಗೂ ಅಧಿಕೃತವಾಗಿ ಒಪ್ಪಿಕೊಂಡಿತು. ಪಾಕಿಸ್ಥಾನದ ವಾರ್ತಾ ಸಚಿವ ಶೆರಿ ರೆಹಮಾನ್ ಲಿಖಿತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, 'ಕಸಾಬ್ ನಮ್ಮ ಪ್ರಜೆ ಎಂಬುದು ನಾವು ನಡೆಸಿದ ತನಿಖೆಗಳಿಂದ ದೃಢಪಟ್ಟಿದೆ' ಎಂದರು.
2009: ಗುಲ್ಬರ್ಗ ನಗರ ಹೊರವಲಯದ ಸೇಡಂ ರಸ್ತೆಯಲ್ಲಿ ಕುಸನೂರು ಬಳಿ ಸಿದ್ಧಾರ್ಥ ವಿಹಾರ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಬುದ್ಧ ವಿಹಾರವನ್ನು ದೀಪ ಬೆಳಗಿ ಉದ್ಘಾಟಿಸುವ ಮೂಲಕ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನಾಡಿಗೆ ಸಮರ್ಪಿಸಿದರು. 'ನಿಮ್ಮನ್ನು ನೋಡಿ ಆನಂದವಾಗಿದೆ. ನಿಮಗೆ ಹೊಸ ವರ್ಷದ ಶುಭಾಶಯಗಳು. ಈ ಬುದ್ಧ ವಿಹಾರ ಉದ್ಘಾಟಿಸಲು ನನಗೆ ಸಂತೋಷವಾಗಿದೆ' ಎಂದು ರಾಷ್ಟ್ರಪತಿಗಳು ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ಹೇಳಿದಾಗ 60 ಸಾವಿರಕ್ಕೂ ಹೆಚ್ಚು ಜನರಿಂದ ತುಂಬಿದ್ದ ಸಭೆ ಹರ್ಷೋದ್ಗಾರ ತೆಗೆಯಿತು. ಮಾಜಿ ಮುಖ್ಯಮಂತ್ರಿಗಳಾದ ಮಹಾರಾಷ್ಟ್ರದ ವಿಲಾಸರಾವ್ ದೇಶಮುಖ್ ಹಾಗೂ ಧರ್ಮಸಿಂಗ್, ರಾಜ್ಯಪಾಲ ರಾಮೇಶ್ವರ ಠಾಕೂರ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿದ್ಧಾರ್ಥ ವಿಹಾರ ಟ್ರಸ್ಟಿನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಧಾಬಾಯಿ ಖರ್ಗೆ ಹಾಜರಿದ್ದರು.
2009: ಅಮೆರಿಕದ ಅತ್ಯುನ್ನತ ಸರ್ಜನ್ ಜನರಲ್ ಹುದ್ದೆಗೆ ಭಾರತೀಯ- ಅಮೆರಿಕನ್ ಸಂಜಯ್ ಗುಪ್ತಾ ಅವರನ್ನು ನಿಯೋಜಿತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಯ್ಕೆ ಮಾಡಿದರು. ನರಶಸ್ತ್ರ ಚಿಕಿತ್ಸಾ ತಜ್ಞರಾಗಿರುವ ಸಂಜಯ್ ಅವರು ಸಿಎನ್‌ಎನ್ ವಾಹಿನಿಗೆ ಆರೋಗ್ಯ ವಿಷಯಗಳ ಕುರಿತು ವಿಶೇಷ ಬಾತ್ಮಿದಾರ.
2008: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ. ಹಿರಿಯ ರಂಗ ಕರ್ಮಿ ಹಾಗೂ ಚಲನಚಿತ್ರ ನಟ, `ವಿನೋದ ರತ್ನಾಕರ' ಎಂದೇ ಖ್ಯಾತರಾದ ಪೆರ್ಡೂರು ರಾಮಕೃಷ್ಣ ಕಲ್ಯಾಣಿ (77) ನಿಧನರಾದರು. ನಿವೃತ್ತ ಅಧ್ಯಾಪಕರಾಗಿದ್ದ ಅವರು ಪೆರ್ಡೂರಿನ ಬಿ. ಎಂ. ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ಮೃತರಾದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದ ಕಲ್ಯಾಣಿ, `ಚೋಮನ ದುಡಿ', `ಅಖಂಡ ಬ್ರಹ್ಮಾಚಾರಿಗಳು', `ಜನುಮದಾತ', `ಕೊಟ್ಟ', `ಚೆನ್ನಿ' ಮೊದಲಾದ ಕನ್ನಡ ಸಿನಿಮಾಗಳಲ್ಲಿ, 'ಕೋಟಿ ಚೆನ್ನಯ' ಮತ್ತು `ಕರಿಯಣಿ ಕಟ್ಟಂದಿ ಕಂಡನಿ' ತುಳು ಸಿನಿಮಾಗಳಲ್ಲಿ ಹಾಗೂ `ಓ ನನ್ನ ಬೆಳಕೇ' ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. 1950ರಲ್ಲಿ ಕಲಾ ಸೇವಾ ಮಂಡಳಿ ನಾಟಕ ಸಂಸ್ಥೆಯೊಂದಿಗೆ ತೊಡಗಿಸಿಕೊಂಡಿದ್ದರು. ಮಂಗಳೂರು ಆಕಾಶವಾಣಿಯಲ್ಲಿ ಅನೇಕ ನಾಟಕ, ಯಕ್ಷಗಾನ, ತಾಳ ಮದ್ದಳೆಗಳಲ್ಲಿ ಪಾತ್ರ ನಿರ್ವಹಿಸಿದ್ದರು.
2008: ಸಿಖ್ ಕೈದಿಯೊಬ್ಬರ ಬಲವಂತದ ಕೇಶಮುಂಡನ ಯತ್ನ, ಜೈಲಿನಲ್ಲಿನ ಕಳಪೆ ಜೀವನ ಮಟ್ಟ, ವೈದ್ಯಕೀಯ ಸೇವೆ ಸೇರಿದಂತೆ ಹಲವಾರು ಕೊರತೆಗಳಿಂದ ತುಂಬಿಹೋದ ಜಲಂಧರ್ ಕೇಂದ್ರ ಕಾರಾಗೃಹದ 1,500 ಕೈದಿಗಳು ದಾಂಧಲೆ ನಡೆಸಿ ವಸತಿ ಭಾಗವೊಂದನ್ನು ಸುಟ್ಟು ಹಾಕುವ ಮೂಲಕ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು. ಸುಮಾರು ಎರಡು ಗಂಟೆ ಕಾಲ ನಡೆದ ಈ ಗಲಭೆಯನ್ನು ಹತ್ತಿಕ್ಕಲು ಜೈಲು ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಅಶ್ರವಾಯು ಪ್ರಯೋಗಿಸಬೇಕಾಯಿತು. ಕಿಟಕಿ, ಬಾಗಿಲುಗಳು, ಪೀಠೋಪಕರಣಗಳನ್ನು ಮುರಿದ ಕೈದಿಗಳು ಜೈಲಿನಿಂದ ಪಲಾಯನ ಮಾಡಲು ಯತ್ನಿಸದೆ ಇದ್ದುದು ವಿಶೇಷವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಸಲಾಯಿತು. ಹಲವು ಬೇಗುದಿಗಳಿಂದ ಬಳಲುತ್ತಿದ್ದ ಕೈದಿಗಳಲ್ಲಿ ಕೆಲವರನ್ನು ಜೈಲು ಸಿಬ್ಬಂದಿ ಥಳಿಸಿದ್ದರು. ಇದನ್ನು ಖಂಡಿಸಿ ಕೆಲವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಎಲ್ಲ ಕೈದಿಗಳೂ ಆಕ್ರೋಶ ವ್ಯಕ್ತಪಡಿಸಲು ಕಾರಣವಾಯಿತು.
2008: ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ವಿರುದ್ಧದ ನಿಷೇಧ ಶಿಕ್ಷೆ ಪ್ರಕರಣವು ಮತ್ತಷ್ಟು ಬಿಗಡಾಯಿಸಿತು. ಹರಭಜನ್ ಸಿಂಗ್ ಗೆ ವಿಧಿಸಿರುವ ನಿಷೇಧ ಶಿಕ್ಷೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತಡೆಹಿಡಿಯುವವರೆಗೆ ಸಿಡ್ನಿಯಲ್ಲೇ ಉಳಿಯುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರಿಗೆ ಸೂಚನೆ ನೀಡಿತು. ಇದರಿಂದಾಗಿ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಮುಂದುವರಿಯುವುದರ ಬಗ್ಗೆ ಅನಿಶ್ಚಿತತೆ ತಲೆದೋರಿತು.
2008: ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಬುದ್ಧಿ ಕಡಿಮೆಯಾಗುತ್ತದೆ ಎಂಬ ನಂಬಿಕೆಯನ್ನು ಹುಸಿ ಎಂದು ಸಾಬೀತುಪಡಿಸುವ ವರದಿಯೊಂದು ಲಂಡನ್ನಿನಲ್ಲಿ ಪ್ರಕಟವಾಯಿತು. ವಯಸ್ಸು ಹೆಚ್ಚಾದಂತೆ ಮೆದುಳು ಹೆಚ್ಚು ಕ್ರಿಯಾಶೀಲವಾಗುತ್ತದೆ ಹಾಗೂ ಬುದ್ಧಿಮತ್ತೆಯೂ ಬೆಳೆಯುತ್ತದೆ ಎಂದು ಯೂರೋಪಿನ ಸಂಶೋಧಕ ಪ್ರಾಧ್ಯಾಪಕ ಲಾರ್ಸ್ ಲಾರ್ಸೆನ್ ಅಭಿಪ್ರಾಯಪಟ್ಟರು. `ಹದಿಹರೆಯದ ನಂತರ ಬುದ್ಧಿಮತ್ತೆ ಹಾಗೂ ಮಾತುಗಾರಿಕೆ ಮತ್ತಷ್ಟು ಚುರುಕಾಗುತ್ತದೆ' ಎಂಬುದು ಅವರ ವಿಶ್ಲೇಷಣೆ. ಸುಮಾರು 4,300 ಅಮೆರಿಕದ ಉದ್ಯೋಗಿಗಳ ಮೇಲೆ ಅಧ್ಯಯನ ನಡೆಸಿ ಅವರು ಈ ಅಭಿಪ್ರಾಯ ಮಂಡಿಸಿದರು. ಜೀವನಾನುಭವ ಹೆಚ್ಚಿದಂತೆ ಹಾಗೂ ಹಲವಾರು ಸಮಸ್ಯೆಗಳನ್ನು ಎದುರಿಸಿರುವುದರಿಂದ ಬುದ್ಧಿ ಮತ್ತಷ್ಟು ತೀಕ್ಷ್ಣವಾಗುತ್ತದೆ ಹಾಗೂ ಮಾತುಗಾರಿಕೆ ಚುರುಕಾಗುತ್ತದೆ ಎಂಬುದು ಅವರ ವಾದ.
2008: ಅಲ್ ಖೈದಾ ಸಂಪರ್ಕ ಹೊಂದಿದ ಉಗ್ರರು ಪಾಕಿಸ್ಥಾನದಲ್ಲಿ ಸರ್ಕಾರಿ ಪ್ರಾಯೋಜಿತ ಶಾಂತಿಪಾಲನಾ ಕಚೇರಿಗಳ ಮೇಲೆ ನಡೆಸಿದ ದಾಳಿಯಲ್ಲಿ 8 ಜನ ಮೃತರಾದರು. ಪಾಕಿಸ್ಥಾನದ ವಾಯವ್ಯ ಭಾಗದಲ್ಲಿರುವ ವಾನಾ ಬಜಾರ್ ಮತ್ತು ಶಿಕಾಯ್ ಶಾಂತಿ ಸಮಿತಿ ಕಚೇರಿಗಳ ಮೇಲೆ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ಮಿಲಿಟರಿ ಮೂಲಗಳು ತಿಳಿಸಿದವು.
2008: ಕುಟುಂಬಕ್ಕೆ ಒಂದೇ ಮಗು ಕಾಯ್ದೆಯನ್ನು ಉಲ್ಲಂಘಿಸಿದ ಹುಬೈ ಪ್ರಾಂತ್ಯದ 500 ಸದಸ್ಯರನ್ನು ಕಮ್ಯುನಿಸ್ಟ್ ಪಕ್ಷ ಉಚ್ಛಾಟಿಸಿತು. ಕಮ್ಯುನಿಸ್ಟ್ ಸದಸ್ಯರಲ್ಲದೆ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಸುಮಾರು ಒಂದು ಲಕ್ಷ ಕುಟುಂಬಗಳು ಈ ನೀತಿಯನ್ನು ಉಲ್ಲಂಘಿಸಿವೆ. ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ, ಜನಸಂಖ್ಯೆಯನ್ನು ನಿಯಂತ್ರಿಸಲು ಕಳೆದ ಎರಡು ದಶಕಗಳಿಂದ ಜನನ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದೆ. ನಗರದಲ್ಲಿ ವಾಸಿಸುವ ಕುಟುಂಬಗಳಿಗೆ ಒಂದು ಮಗು, ಗ್ರಾಮಾಂತರ ಕುಟುಂಬಗಳಿಗೆ ಎರಡು ಮಗು ಎಂದು ಸರ್ಕಾರ ನಿಯಂತ್ರಣ ಹೇರಿದೆ.
2008: ಖ್ಯಾತ ಸೌಂದರ್ಯತಜ್ಞೆ ಶಹನಾಜ್ ಹುಸೇನ್ ಅವರ ಮಗ ಸಮೀರ್ (30) ಪಟ್ನಾದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ತಮ್ಮ ತಾಯಿಯ ವೃತ್ತಿಯಲ್ಲಿ ಸಹಕರಿಸುತ್ತಿದ್ದ ಸಮೀರ್, ತಾವು ವಾಸಿಸುತ್ತಿದ್ದ ಆರಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದರು.
2008: ತಮಿಳುನಾಡು ಸರ್ಕಾರ 2008ರ `ತಿರುವಳ್ಳುವರ್ ಪ್ರಶಸ್ತಿ'ಯನ್ನು ಆಧ್ಯಾತ್ಮಿಕ ನೇತಾರ ಕುಂದ್ರಕುಡಿ ಪೊನ್ನಂಬಳ ಅಡಿಗರ್ ಅವರಿಗೆ ಘೋಷಿಸಿತು. `ತಂತೈ ಪೆರಿಯಾರ್' ಪ್ರಶಸ್ತಿಯನ್ನು ಕವಿತಾ ಪಿತನ್ ಅವರಿಗೆ ಹಾಗೂ `ಅರಿಗ್ನಾರ್ ಅಣ್ಣಾ' ಪ್ರಶಸ್ತಿಯನ್ನು ಶಾರದ ನಂಬಿ ಅವರಿಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕರುಣಾನಿಧಿ ಪ್ರಕಟಿಸಿದರು.
2008: ಆನೇಕಲ್ ತಾಲ್ಲೂಕಿನ ಇಗ್ಗಲೂರು ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸ್ಥಾಪಿಸಲು ಉದ್ದೇಶಿಸಲಾದ ಕಸಾಯಿಖಾನೆ ನಿರ್ಮಾಣಕ್ಕಾಗಿ ಭೂಮಾಪನಕ್ಕಾಗಿ ಬಂದಿದ್ದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಾಗೂ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದಾಗ ಮಾಜಿ ಶಾಸಕ ಎ.ನಾರಾಯಣ ಸ್ವಾಮಿ ಸೇರಿದಂತೆ ನೂರಾರು ಜನರನ್ನು ಪೊಲೀಸರು ಬಂಧಿಸಿದರು. ಬೆಂಗಳೂರಿನಲ್ಲಿರುವ ಕಸಾಯಿಖಾನೆಯನ್ನು ಬೆಂಗಳೂರು ನಗರದ ಹೊರವಲಯಕ್ಕೆ ವರ್ಗಾಯಿಸುವಂತೆ ಕರ್ನಾಟಕ ಹೈಕೋರ್ಟ್ ಆಜ್ಞಾಪಿಸಿತ್ತು. ಈ ಹಿನ್ನೆಲೆಯಲ್ಲಿ ಇಗ್ಗಲೂರಿಗೆ ಅದನ್ನು ವರ್ಗಾಯಿಸಲು ಬಿಬಿಎಂಪಿ ತೀರ್ಮಾನಿಸಿತ್ತು. ಇದಕ್ಕೆ ಸ್ಥಳೀಯರಿಂದ ತೀವ್ರ ಪ್ರತಿರೋಧ ವ್ಯಕ್ತಗೊಂಡಿತು.
2008: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 20,813 ಅಂಶಗಳಿಗೆ ಏರಿ ಇನ್ನೊಂದು ಸಾರ್ವಕಾಲಿಕ ದಾಖಲೆ ಬರೆಯಿತು. ಅಮೆರಿಕದಲ್ಲಿ ಉದ್ಭವಿಸಿದ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಳವಳಕಾರಿ ಬೆಳವಣಿಗೆ ಮತ್ತು ಜಾಗತಿಕ ಪೇಟೆಯ ನಿರುತ್ತೇಜನದ ಹೊರತಾಗಿಯೂ ಪೇಟೆಯಲ್ಲಿ ಷೇರು ಖರೀದಿ ಭರಾಟೆ ವ್ಯಕ್ತವಾಯಿತು. ಹೀಗಾಗಿ ಸೂಚ್ಯಂಕವು ಹೊಸ ಎತ್ತರಕ್ಕೆ ಏರಿಕೆ ಕಂಡಿತು.
2007: ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಕೃಷಿಭೂಮಿ ಸ್ವಾಧೀನ ವಿರುದ್ಧ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯನಂದಿಗ್ರಾಮದಲ್ಲಿ ಹಿಂಸಾಚಾರ ಭುಗಿಲೆದ್ದು 6 ಜನ ಅಸು ನೀಗಿದರು. ಇಂಡೋನೇಷ್ಯದ ಸಲೀಂ ಸಮೂಹ ಸಂಸ್ಥೆಗೆ ಕೃಷಿ ಭೂಮಿ ಒದಗಿಸುವ ವಿರುದ್ಧ ಭೂಮಿ ಉಚೇದ್ ಬಿರುದಿ ಸಮಿತಿ (ಭೂ ವಶ ತಡೆ ಸಮಿತಿ) ಮತ್ತು ಆಡಳಿತಾರೂಢ ಸಿಪಿಎಂ ಕಾರ್ಯಕರ್ತರ ಮಧ್ಯೆ ಸಂಘರ್ಷ ಆರಂಭಗೊಂಡು, ಹಿಂಸೆಗೆ ತಿರುಗಿ ಹಲವರು ಗಾಯಗೊಂಡರು.
2007: ಜೈವಿಕ ತಂತ್ರಜ್ಞಾನ ಕಾರ್ಯದರ್ಶಿ ಡಾ. ಎಂ.ಕೆ. ಭಾನ್ ಅವರನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿ ಎಸ್ ಐ ಆರ್) ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು.
2007: ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ತೀರ್ಥಹಳ್ಳಿಯ ಸಾವಿತ್ರಮ್ಮ ರಾಮಶರ್ಮ (88) ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತರೀಕರೆ ತಾಲ್ಲೂಕು ಲಿಂಗದಹಳ್ಳಿಯಲ್ಲಿ ಜನಿಸಿದ ಸಾವಿತ್ರಮ್ಮ 1956ರಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಸಲ್ಲಿಸಿದ ಸೇವೆಗಾಗಿ 1982ರಲ್ಲಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದಿದ್ದರು. 1996ರಲ್ಲಿ ಬಸವಾನಿಯ ಹೊಳೆಕೊಪ್ಪದಲ್ಲಿ ವೃದ್ಧರಿಗಾಗಿ `ಅಭಯಾಶ್ರಮ' ಅರಂಭಿಸಿದ್ದ ಅವರು ಅದಕ್ಕೂ ಮುನ್ನ ತೀರ್ಥಹಳ್ಳಿಯಲ್ಲಿ ಕಸ್ತೂರಿಬಾ ಆಶ್ರಮ ನಡೆಸಿ ಹೆರಿಗೆ ಸೌಲಭ್ಯ ಕಲ್ಪಿಸಿದ್ದರು. ಅವರ ಪತಿ ವಾಮನಶರ್ಮ ಕೂಡಾ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
2007: ಅತ್ಯಧಿಕ ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ `ಗಿನ್ನೆಸ್' ದಾಖಲೆಗೆ ಸೇರಿದ `ಹೊಟ್ಟೆ ಪಕ್ಷ' ರಂಗಸ್ವಾಮಿ (74) ಬೆಂಗಳೂರಿನಲ್ಲಿನಿಧನರಾದರು. 1967ರಲ್ಲಿ ಹೊಟ್ಟೆ ಪಕ್ಷವನ್ನು ಕಟ್ಟ್ದಿದ ರಂಗಸ್ವಾಮಿ 86 ಚುನಾವಣೆಗಳಲ್ಲಿ ಸ್ಪರ್ಧಿಸಿ `ಗಿನ್ನೆಸ್' ದಾಖಲೆಗೆ ಸೇರ್ಪಡೆಯಾದರು. ಆದರೆ ಅವರು ನಿರಂತರವಾಗಿ ಉಂಡದ್ದು ಸೋಲನ್ನೇ. 1967ರಲ್ಲಿ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ವಿರುದ್ಧ ಸ್ಪರ್ಧಿಸುವ ಮೂಲಕ ರಾಜಕೀಯ ಸೋಲಿನ ಅಭಿಯಾನ ಅರಂಭಿಸಿದ ಅವರು ನಂತರ ಪ್ರತಿಯೊಂದು ಸಾರ್ವತ್ರಿಕ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಚಿಕ್ಕಮಗಳೂರಿನಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ವಿರುದ್ಧವೂ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಡವರಿಗೆ ಕಿಲೋಗ್ರಾಂಗೆ ಒಂದು ರೂಪಾಯಿಗೆ ಅಕ್ಕಿ ವಿತರಿಸುವ ಮೂಲಕ ಪ್ರಚಾರ ನಡೆಸುತ್ತಿದ್ದುದು ಅವರ ವೈಶಿಷ್ಟ್ಯವಾಗಿತ್ತು.
2007: ಮಾಜಿ ವೇಗಿ ವಕಾರ್ ಯೂನಿಸ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದರು.
2006: ಸಾಗರೋತ್ತರ ಭಾರತೀಯರಿಗೆ ಕಿರಿಕಿರಿ ಮುಕ್ತವಾದ ಅಜೀವ ಪರ್ಯಂತ ಪ್ರವೇಶ ವೀಸಾ ಸೌಲಭ್ಯದ ಭಾರತ ಸಾಗರೋತ್ತರ ನಾಗರಿಕ (ಒಸಿಐ) ಯೋಜನೆಗೆ ಪ್ರಧಾನಿ ಮನಮೋಹನ್ ಸಿಂಗ್ ಹೈದರಾಬಾದಿನ ಅನಿವಾಸಿ ಭಾರತೀಯ ನಿವಾಸಿ ಸಮಾವೇಶದಲ್ಲಿ ಚಾಲನೆ ನೀಡಿದರು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಾದ ನಿವೃತಿ ರಾಯ್ ಮತ್ತು ಇಫ್ತಿಕಾರ್ ಷರೀಫ್ ಅವರಿಗೆ ಅನಿವಾಸಿ ಭಾರತೀಯ ಪೌರತ್ವ ಚೀಟಿಗಳನ್ನು ಪ್ರಧಾನಿ ಹಸ್ತಾಂತರಿಸಿದರು.
2006: ಖ್ಯಾತ ವಿಜ್ಞಾನಿ ಪ್ರೊ. ಸಿ. ಎನ್.ಆರ್. ರಾವ್ ಮತ್ತು ವಿಪ್ರೊ ಸಂಸ್ಥೆಯ ಮುಖ್ಯಸ್ಥ ಅಜೀಂ ಎಚ್. ಪ್ರೇಮ್ ಜಿ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ಟಿ.ಎನ್. ಚತುರ್ವೇದಿ ಪ್ರಶಸ್ತಿ ಪ್ರದಾನ ಮಾಡಿದರು.
2000: ಟಿಬೆಟಿನ ಬೌದ್ಧ ನಾಯಕ 14 ವರ್ಷದ 17ನೇ ಕರ್ಮಪಾ ಅವರು ಚೀನೀ ಆಡಳಿತಕ್ಕೊಳಪಟ್ಟ ಟಿಬೆಟಿನಿಂದ ಭಾರತಕ್ಕೆ ಪಲಾಯನಗೈದರು. 1959ರಲ್ಲಿ ದಲಾಯಿಲಾಮಾ ಅವರು ದೇಶದಿಂದ ಪಲಾಯನಗೈದ ಬಳಿಕ ಚೀನೀ ಆಡಳಿತಕ್ಕೆ ಒಳಪಟ್ಟ ಟಿಬೆಟ್ನಿಂದ ದೇಶ ತ್ಯಜಿಸಿದ ಮಹತ್ವದ ವ್ಯಕ್ತಿ ಎನಿಸಿದರು.
1999: ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ `ವಾಗ್ದಂಡನಾ ವಿಚಾರಣೆ' (ಇಂಪೀಚ್ ಮೆಂಟ್ ಟ್ರಯಲ್) ಸೆನೆಟಿನಲ್ಲಿ ಆರಂಭವಾಯಿತು. ಶ್ವೇತಭವನದಲ್ಲಿ ಕೆಲಸ ಮಾಡುತ್ತಿದ್ದ ಮೋನಿಕಾ ಲೆವೆನ್ ಸ್ಕಿ ಹಾಗೂ ಅಧ್ಯಕ್ಷರಿಗೆ ಸಂಬಂಧಿಸಿದ ಲೈಂಗಿಕ ಹಗರಣದ್ಲಲಿ ಅಧ್ಯಕ್ಷರಿಂದ ನ್ಯಾಯಕ್ಕೆ ಅಡ್ಡಿ ಉಂಟಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆಯಿತು. ವಿಚಾರಣೆ ಬಳಿಕ ಕ್ಲಿಂಟನ್ ಅವರನ್ನು ಆರೋಪಮುಕ್ತ ಗೊಳಿಸಲಾಯಿತು.
1989: ಜಪಾನ್ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಆಳ್ವಿಕೆ ನಡೆಸಿದ ಚಕ್ರವರ್ತಿ ಹಿರೊಹಿತೊ ಅವರು ಟೋಕಿಯೋದಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು. ಅವರು 1926ರಿಂದ 1989ರವರೆಗೆ ಜಪಾನನ್ನು ಆಳಿದರು.
1988: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜಾನಕಿ ರಾಮಚಂದ್ರನ್ ಅಧಿಕಾರ ಸ್ವೀಕರಿಸಿದರು.
1973: ಕಲಾವಿದೆ ವಾಣಿ ಕೃಷ್ಣಸ್ವಾಮಿ ಜನನ.
1953: ಬಾಳೆಹೊನ್ನೂರಿನ ರಂಭಾಪುರಿ ಮಠದ ವೀರಸೋಮೇಶ್ವರ ಜಗದ್ಗುರುಗಳ ಜನ್ಮದಿನ.
1951: ಕವಿ, ಚಿಂತಕ, ಸಂಘಟಕ ಬಿ.ಎಸ್ ಚಂದ್ರಶೇಖರ್ ಹುಟ್ಟಿದ ದಿನ. ಇವರ ಕಾಣುತಿಹುದೀಗಿಷ್ಟೆ ಕೃತಿಗೆ ತ.ರಾ.ಸು ಪ್ರಶಸ್ತಿ, ಪುಟ್ಟಿಯ ಕನಸು ಕೃತಿಗೆ ಆರ್ಯಭಟ ಪ್ರಶಸ್ತಿ ಲಭಿಸಿದೆ.
1948: ಲೇಖಕಿ ಈಶ್ವರಿಭಟ್ ಹುಟ್ಟಿದ ದಿನ.
1936: ಸಾಹಿತಿ ಜಿ.ಎಸ್. ಅನ್ನದಾನಿ ಹುಟ್ಟಿದ ದಿನ.
1917: ಹಾರ್ಮೋನಿಯಂ ಸ್ವತಂತ್ರ ವಾದಕರಾಗಿ ಅಪಾರ ಖ್ಯಾತಿ ಗಳಿಸಿದ ಪಂಡಿತ ಆರ್. ಕೆ. ಬಿಜಾಪೂರೆ ಅವರು ಕಲ್ಲೋಪಂತ ಬಿಜಾಪೂರೆ- ರುಕ್ಮಿಣಿಬಾಯಿ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಜನಿಸಿದರು.
1909: `ಫಿಯರ್ ಲೆಸ್ ನಾಡಿಯಾ' ಎಂದೇ ಖ್ಯಾತಿ ಪಡೆದಿದ್ದ ಭಾರತದ ಚಿತ್ರನಟಿ ಮೇರಿ ಈವಾನ್ಸ್ ನಾಡಿಯಾ (1909-1996) ಜನಿಸಿದರು.
1859: 1857ರ ದಂಗೆಯಲ್ಲಿ (ಭಾರತೀಯರ ಮೊದಲ ಮೊದಲ ಸ್ವಾತಂತ್ರ್ಯ ಸಂಗ್ರಾಮ) ಪಾಲ್ಗೊಂಡ್ದದಕ್ಕಾಗಿ ಕೊನೆಯ ಮೊಘಲ್ ಚಕ್ರವರ್ತಿ ಎರಡನೆಯ ಬಹಾದುರ್ ಶಹಾ ಅವರ ವಿಚಾರಣೆ ಆರಂಭವಾಯಿತು.
1827: ಸ್ಕಾಟಿಷ್ ಸಂಜಾತ ಕೆನಡಿಯನ್ ಸರ್ವೇಯರ್ ಹಾಗೂ ರೈಲ್ವೇ ಎಂಜಿನಿಯರ್ ಸರ್ ಸ್ಯಾಂಡ್ ಫೋರ್ಡ್ ಫ್ಲೆಮಿಂಗ್ (1827-1915) ಹುಟ್ಟಿದ ದಿನ. ಈತ ಜಗತ್ತನ್ನು `ಟೈಮ್ ಝೋನ್'ಗಳಾಗಿ ವಿಂಗಡಿಸಿದ. ಇದು ಈತನಿಗೆ `ಫಾದರ್ ಆಫ್ ಸ್ಟಾಂಡರ್ಡ್ ಟೈಮ್' ಎಂಬ ಹೆಸರನ್ನು ತಂದುಕೊಟ್ಟಿತು.
1789: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಮೊದಲ ಅಧ್ಯಕ್ಷರಾಗಿ ಜಾರ್ಜ್ ವಾಷಿಂಗ್ಟನ್ ಆಯ್ಕೆಯಾದರು. ಆದರೆ ಏಪ್ರಿಲ್ 30ರಂದು ಅಧಿಕಾರ ಸ್ವೀಕರಿಸಿದರು. 1797ರ ಮಾರ್ಚ್ 3ರವರೆಗೆ ಅವರು ಅಧ್ಯಕ್ಷರಾಗಿದ್ದರು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment