ನಾನು ಮೆಚ್ಚಿದ ವಾಟ್ಸಪ್

Tuesday, January 15, 2019

ಇಂದಿನ ಇತಿಹಾಸ History Today ಜನವರಿ 15

ಇಂದಿನ ಇತಿಹಾಸ History Today ಜನವರಿ 15
2019: ನವದೆಹಲಿ: ಸಾಮಾನ್ಯ ವರ್ಗದ ಬಡವರಿಗೆ ಶೇಕಡಾ 10 ಮೀಸಲಾತಿಯನ್ನು 2019 ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುತ್ತಿದ್ದು, ರಾಷ್ಟ್ರಾದ್ಯಂ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಸೀಟುಗಳ ಸಂಖ್ಯೆಯನ್ನು ಶೇಕಡಾ 25ರಷ್ಟು ಹೆಚ್ಚಿಸಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವಾಲಯವು ಪ್ರಕಟಿಸಿತುಸಚಿವಾಲಯ, ವಿಶ್ವ ವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ತಿಳಿಸಿದರು. ‘2019-20 ಶೈಕ್ಷಣಿಕ ಸಾಲಿನಿಂದಲೇ ಆರ್ಥಿಕ ಮೀಸಲಾತಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪರಿಶಿಷ್ಟ  ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಸೀಟುಗಳ ಸಂಖ್ಯೆಯನ್ನು ಶೇಕಡಾ 25ರಷ್ಟು ಹೆಚ್ಚಿಸಲಾಗುವುದು. ದೇಶಾದ್ಯಂತ ಸುಮಾರು 40,000 ಕಾಲೇಜುಗಳು ಮತ್ತು 900 ವಿಶ್ವವಿದ್ಯಾಲಯಗಳಲ್ಲಿ ಪೂರಕ ಮೀಸಲಾತಿ ಜಾರಿಗೆ ಬರಲಿದೆ  ಎಂದು ಸಚಿವರು ನುಡಿದರು


2018: ನವದೆಹಲಿ/ ಶ್ರಿನಗರ: ಭಾರತೀಯ ಸೇನಾಪಡೆಯು ಜಮ್ಮು ಮತ್ತು ಕಾಶ್ಮೀರದ ಪಾಕ್ ಸೇನೆ ನಡೆಸಿದ ದಾಳಿಯ ವಿರುದ್ಧ ನಡೆಸಿದ ಪ್ರತಿದಾಳಿಯಲ್ಲಿ ೭ ಪಾಕ್ ಸೈನಿಕರನ್ನು ಕೊಂದು ಹಾಕಿದ್ದು, ಉರಿ ವಿಭಾಗದಲ್ಲಿ ಗಡಿಯೊಳಕ್ಕೆ ನುಸುಳಲು ಯತ್ನಿಸಿದ ೬ ಜೈಷೆ ಭಯೋತ್ಪಾದಕರನ್ನು ಬಲಿತೆಗೆದುಕೊಂಡಿತು. ಉರಿ ವಿಭಾಗದಲ್ಲಿ ಜೈಷ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಸುಸುಳುಕೋರರನ್ನು ಕೊಂದು ಹಾಕಿದ ಸುದ್ದಿ ಬಂದ ಬೆನ್ನಲ್ಲೇ ಸೇನೆ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಮೆಂಧರ್ ನಲ್ಲಿ ಪಾಕ್ ದಾಳಿಗೆ ಪ್ರತಿಯಾಗಿ ಪಾಕ್ ಸೇನೆಯ ೭ ಮಂದಿಯನ್ನು ಕೊಂದು ಹಾಕಿ ಸುದ್ದಿಯನ್ನು ಸೇನಾ ಮೂಲಗಳು ನೀಡಿದವು. ದಾಳಿಯಲ್ಲಿ ಭಾರತೀಯ ಯೋಧನನ್ನು ಜನವರಿ 13ರ ಶನಿವಾರ ಕೊಂದದ್ದಕ್ಕೆ ಪ್ರತಿಯಾಗಿ ತ್ವರಿತ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ ಏಳು ಪಾಕ್ ಸೈನಿಕರನ್ನು ಸದೆ ಬಡಿಯಿತು ಎಂದು ಮೂಲಗಳು ಹೇಳಿದವು. ಭಾರತೀಯ ಸೇನೆಯು ಪೂಂಚ್ ಜಿಲ್ಲೆಯ ಮೆಂಧರ್ ವಿಭಾಗದ ಗಡಿ ನಿಯಂತ್ರಣ ರೇಖೆಯಲ್ಲಿರುವ ಜಗ್ಲೋಟೆ ಪ್ರದೇಶದಲ್ಲಿ ಪಾಕ್ ಪಡೆಗಳ ದಾಳಿ ವಿರುದ್ಧ ಪ್ರತಿ ಕಾರ್ಯಾಚರಣೆ ನಡೆಸಿತು. ಪ್ರತಿದಾಳಿಯಲ್ಲಿ ಪಾಕಿಸ್ತಾನಿ ಪಡೆಗಳಲ್ಲಿನ ೭ ಮಂದಿ ಹತರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದರು. ‘ಸೇನಾ ದಿನದಂದು ಭಾರತೀಯ ಸೇನೆ ಸಾಧಿಸಿದ ದೊಡ್ಡ ವಿಜಯ ಇದು ಎಂದು ಭಾರತೀಯ ಸೇನೆ ಪ್ರತಿಪಾದಿಸಿದ್ದರೂ, ಪಾಕಿಸ್ತಾನದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್ ಪಿಆರ್) ಕಾಶ್ಮೀರದ ಜಾಂಡ್ರೋಟ್ ವಿಭಾಗದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ಶೆಲ್ ದಾ:ಳಿಯಿಂದ ಪಾಕಿಸ್ತಾನದ ೪ ಸೈನಿಕರು ಹತರಾಗಿದ್ದು ಗುಂಡಿನ ಘರ್‍ಷಣೆಯಲ್ಲಿ ೩ ಭಾರತೀಯ ಸೈನಿಕರೂ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿದ್ದಾರೆ ಎಂದು ಹೇಳಿಕೊಂಡಿತು. ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಪಾಕಿಸ್ತಾನದ ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಿ ನಾಯಕತ್ವವನ್ನು ಟೀಕಿಸಿದ ಕೆಲವೇ ದಿನಗಳಲ್ಲಿ ಈ ಘಟನೆಗಳು ಘಟಿಸಿವೆ. ರಾವತ್ ಅವರ ಹೇಳಿಕೆ ಬೇಜವಾಬ್ದಾರಿಯದು. ಅವರ ಹುದ್ದೆಗೆ ಒಪ್ಪುವಂತಹುದಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಅಸಿಫ್ ಹೇಳಿದರು. ಕಾಶ್ಮೀರದಿಂದ ಬಂದಿರುವ ವರದಿಗಳ ಪ್ರಕಾರ ಕಾಶ್ಮೀರ ಕಣಿವೆಯ ಉರಿ ವಿಭಾಗದಲ್ಲಿ ಗಡಿ ನಿಯಂತ್ರಣ ರೇಖೆ ದಾಟಿ ಭಾರತದೊಳಕ್ಕೆ ನುಸುಳಲ್ಲು ಯತ್ನಿಸುದ್ದ ಕನಿಷ್ಠ ೫ ಮಂದಿ ಉಗ್ರಗಾಮಿಗಳನ್ನು ಭಾರತೀಯ ಪಡೆಗಳು ಸದೆಬಡಿದಿವೆ ಎಂದು ಸೇನಾ ವಕ್ತಾರರು ನುಡಿದರು. ಉತ್ತರ ಕಾಶ್ಮೀರದಲ್ಲಿ ಗಡಿಯೊಳಕ್ಕೆ ನುಸುಳಲು ನಡೆಸಿದ ಅತ್ಯಂತ ದೊಡ್ಡ ಯತ್ನವಿದು ಎಂದು ಪ್ರಾಥಮಿಕ ವರದಿಗಳು ಹೇಳಿದವು. ಉರಿ ವಿಭಾಗದ ದುಲಿಜಾನ ಪ್ರದೇಶದಲ್ಲಿ ಘಟಿಸಿದೆ. ೬ನೇ ಉಗ್ರನ ಶವಕ್ಕಾಗಿ ಶೋಧ ನಡೆದಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ವೈದ್ ಹೇಳಿದರು.  ಉಗ್ರಗಾಮಿಗಳು ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದವರು. ಆತ್ಮಹತ್ಯಾ ತಂಡದ ಎಲ್ಲರನ್ನೂ ಪೊಲೀಸರು, ಸೇನೆ ಮತ್ತು ಸಿಆರ್ ಪಿಎಫ್ ನಡೆಸಿದ ಜಂಟಿ ಕಾರ್‍ಯಾಚರಣೆಯಲ್ಲಿ ಕೊಂದು ಹಾಕಲಾಯಿತು ಎಂದು ಅವರು ನುಡಿದರು.


2018: ಜಿಂದ್, ಹರಿಯಾಣ: ಹರಿಯಾಣದ ಜಿಂದ್‌ನಲ್ಲಿ ಹತ್ತನೇ ತರಗತಿಯ, ಹದಿಹರೆಯದ ದಲಿತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆಕೆಯ ದೇಹವನ್ನು ಛಿದ್ರಗೊಳಿಸಿದ ಅಮಾನುಷ ಘಟನೆ ಘಟಿಸಿತು. ಮಾರಣಾಂತಿಕ ಗಾಯಗಳಿಂದ ಬಾಲಕಿಯು ದಾರುಣವಾಗಿ ಸಾವನ್ನಪ್ಪಿದಳು.  ೨೦೧೨ರಲ್ಲಿ ದಿಲ್ಲಿಯಲ್ಲಿ ಸಂಭವಿಸಿದ ’ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಇದು ನೆನಪಿಸಿತು.  ಜೊತೆಗೆ ದೆಹಲಿ, ಆಸುಪಾಸಿನ ಪ್ರದೇಶ ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ಮತ್ತೊಮ್ಮೆ ಸಾಬೀತು ಪಡಿಸಿತು. ಪ್ರಾಥಮಿಕ ತನಿಖೆಯ ಪ್ರಕಾರ ಬಾಲಕಿಯ ಮೇಲೆ ಅತ್ಯಾಚಾರ ನಡಸಿದ ಬಳಿಕ ಆಕೆಯ ಗುಪ್ತಾಂಗವನ್ನು ಛಿದ್ರಗೊಳಿಸಲಾಗಿದೆ. ಆಕೆಯ ದೇಹದಲ್ಲಿ ಹಲವಾರು ಗಾಯಗಳು ಕಂಡು ಬಂದಿದ್ದು, ಆಕೆಯ ಮೇಲೆ ಆಕೆಯ ಮೇಲೆ ಕನಿಷ್ಠ ೩ರಿಂದ ೪ ಮಂದಿ ಕಾಮುಕರು ಸೇರಿ ಲೈಂಗಿಕ ದೌರ್ಜನ್ಯ, ಚಿತ್ರ ಹಿಂಸೆ ನೀಡಿರುವುದು ಸ್ಪಷ್ಟವಾಗಿದೆ ಎಂದು ರೋಹ್ಟಕ್ ನ ಪಿಜಿಐ ಡಾ. ಎಸ್.ಕೆ. ದತ್ತಾರವಾಲ್ ತಿಳಿಸಿದರು. ಬಾಲಕಿಯ ಗುಪ್ತಾಂಗದೊಳಗೆ ವಿಕೃತ ಕಾಮುಕರು ಯಾವುದೋ ಒಂದು ಗಟ್ಟಿ ವಸ್ತುವನ್ನು ತುರುಕಿದ್ದಾರೆ. ಆಕೆಯನ್ನು ನೀರಲ್ಲಿ ಮುಳುಗಿಸಿ ತೆಗೆದಿರುವ ಕುರುಹು ಕೂಡ ಕಂಡು ಬಂದಿದೆ ಎಂದು ಅವರು ಹೇಳಿದರು. ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆ.೩೦೨ರ ಪ್ರಕಾರ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಗೆ  ಎರಡು ವಿಶೇಷ ತನಿಖಾ ತಂಡಗಳನ್ನು ರೂಪಿಸಿಲಾಗಿದೆ ಎಂದು ಡಿವೈಎಸ್ಪಿ ಕಪ್ತಾನ್ ಸಿಂಗ್ ತಿಳಿಸಿದರು. 

"ನನ್ನ ಮಗಳನ್ನು ಅಪಹರಿಸಿ ರೇಪ್ ಮಾಡಲಾಗಿದೆ. ಇದನ್ನು ಮಾಡಿದವರಿಗೆ ಕಠಿನ ಶಿಕ್ಷೆಯಾಗಬೇಕು; ನಮಗೆ ನ್ಯಾಯ ಬೇಕು; ಆಡಳಿತವು ಒಂದೊಮ್ಮೆ ತನ್ನ ಕೆಲಸವನ್ನು ಸರಿಯಾಗಿ ಮಾಡಿರುತ್ತಿದ್ದರೆ ಇಂತಹ ಹೇಯ ಘಟನೆ ನಡೆಯುತ್ತಿರಲಿಲ್ಲ ಎಂದು ನತದೃಷ್ಟ ಬಾಲಕಿಯ ತಂದೆ ಹೇಳಿದರು. ನತದೃಷ್ಟ ಬಾಲಕಿ ೧೦ನೇ ತರಗತಿಯಲ್ಲಿ ಓದುತ್ತಿದ್ದಳು. ಅದೇ ಗ್ರಾಮದ ೨೦ ವರ್ಷದ ಯುವಕನ ಜೊತೆಗೆ ಪರಾರಿಯಾಗಿದ್ದಳು. ಬಳಿಕ ಸಾಮೂಹಿಕ ಅತ್ಯಾಚಾರ ಘಟಿಸಿದೆ ಎಂದು ವರದಿಗಳು ಹೇಳಿದವು.


2018: ನವದೆಹಲಿ: ಖಾಸಗಿತನ ರಕ್ಷಣೆಗೆ ಸಂಬಂಧಿಸಿದಂತೆ ವ್ಯಾಪಕ ಟೀಕೆಗಳು ವ್ಯಕ್ತವಾದ ಬಳಿಕ ’ವಾಸ್ತವ ಐಡಿ (ವರ್ಚುವಲ್ ಐಡಿ) ವ್ಯವಸ್ಥೆಯ ಜಾರಿಗೆ ಮುಂದಾದ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ೨೦೧೮ರ ಜುಲೈ ೧ರಿಂದ ಇತರ ಗುರುತುಗಳ ಜೊತೆಗೆ ಮುಖವನ್ನೂ ವಿಶಿಷ್ಟ ಗುರುತಾಗಿ ದೃಢೀಕರಿಸಲು ತೀರ್ಮಾನಿಸಿತು.  ವಯಸ್ಸಾದ ವ್ಯಕ್ತಿಗಳ ಬೆರಳಚ್ಚು ಮತ್ತು ಐರಿಸ್ (ಕಣ್ ಪೊರೆ)) ದೃಢೀಕರಣದಲ್ಲಿ ಸಮಸ್ಯೆಗಳಾಗುತ್ತಿರುವ ಬಗ್ಗೆ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ಕ್ರಮ ಕೈಗೊಂಡಿತು. ‘ಬೆರಳಚ್ಚು ಅಳಿಸಿಹೋಗುವುದರಿಂದ ಬಯೋಮೆಟ್ರಿಕ್ ವಿಧಾನದಲ್ಲಿ ವಯಸ್ಸಾದ ವ್ಯಕ್ತಿಗಳ ದೃಢೀಕರಣ ಸಾಧ್ಯವಾಗದ ಸಂದರ್ಭದಲ್ಲಿ ಮುಖವನ್ನೇ ವಿಶಿಷ್ಟ ಗುರುತಿನ ರೂಪದಲ್ಲಿ ದೃಢೀಕರಿಸುವ ಸವಲತ್ತು ಒದಗಿಸಲಾಗುತ್ತದೆ ಎಂದು ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿತು. ಎಲ್ಲ ನಿವಾಸಿಗಳಿಗೂ  ಸಮ್ಮಿಳನ ರೂಪದಲ್ಲಿ ಮುಖ ದೃಢೀಕರಣವನ್ನು ಹೆಚ್ಚುವರಿ ಅವಕಾಶವಾಗಿ ಬೆರಳಚ್ಚು ಮತ್ತು ಐರಿಸ್ ದೃಢೀಕರಣ ಇಲ್ಲವೇ ಒಟಿಪಿ ಜೊತೆ ಸೇರಿಸಲಾಗುವುದು. ಇದರಿಂದ ಆಧಾರ್ ನಂಬರ್ ಹೊಂದಿರುವ ವ್ಯಕ್ತಿಯನ್ನು ಯಶಸ್ವಿಯಾಗಿ ದೃಢೀಕರಿಸಬಹುದು. ಅಗತ್ಯದ ನೆಲೆಯಲ್ಲಿ ಮುಖ ದೃಢೀಕರಣಕ್ಕೂ ಅನುಮತಿ ನೀಡಲಾಗುವುದು ಎಂದು ಹೇಳಿಕೆ ತಿಳಿಸಿತು. ದೃಢೀಕೃತ ನೋಂದಾಯಿತ ಉಪಕರಣಗಳಿಗೆ ಮುಖದೃಢೀಕರಣ ಸವಲತ್ತು ಸೇರಿಸುವ ನಿಟ್ಟಿನಲ್ಲಿ ಬಯೋಮೆಟ್ರಿಕ್ ಉಪಕರಣ ಒದಗಿಸುವವರ ಜೊತೆಗೆ ಪ್ರಾಧಿಕಾರ ಈಗಾಗಲೇ ಕಾರ್ಯ ಆರಂಭ ಮಾಡಿದೆ. ಕಳೆದ ವಾರ ಪ್ರಾಧಿಕಾರವು ೧೬ ಯಾದೃಚ್ಛಿಕ ಅಂಕಿಗಳ ಐಡಿಯನ್ನು ಇತರ ಬಯೋಮೆಟ್ರಿಕ್ ಗುರುತುಗಳಿಗೆ ಸೇರ್ಪಡೆ ಮಾಡಿತ್ತು. ಬಳಕೆದಾರರು ತಮ್ಮ ಸರ್ವ ಮಾಹಿತಿ ಒದಗಿಸುವ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡುವ ಬದಲು ಪ್ರಾಧಿಕಾರದ ವೆಬ್ ಸೈಟಿನಿಂದ ಸ್ವತಃ ತಾವೇ ಸೃಷ್ಟಿಸಬಹುದಾದ ’ವಾಸ್ತವ ಐಡಿ ನಂಬರ್ ಪಡೆದು ಅದನ್ನು ಗುರುತು ದೃಢೀಕರಣಕ್ಕಾಗಿ ಮೊಬೈಲ್ ಕಂಪೆನಿ ಇತ್ಯಾದಿಗಳಿಗೆ ಸೇವೆ ಪಡೆಯಲು ಬಳಸಬಹುದು ಎಂದು ತಿಳಿಸಿತ್ತು. ಈ ವಾಸ್ತವ ಐಡಿಯು ಯಾವುದೇ ದೃಢೀಕರಣಕ್ಕೆ ಸಾಕಾಗಬಹುದಾದ ಹೆಸರು, ವಿಳಾಸ ಮತ್ತು ಫೊಟೋಗಳನ್ನು ಮಾತ್ರ ಹೊಂದಿರುತ್ತದೆ. ಬಳಕೆದಾರರು ಎಷ್ಟು ಬೇಕಾದರೂ ವಾಸ್ತವ ಐಡಿಯನ್ನು ಸೃಷ್ಟಿಸಬಹುದಾಗಿದ್ದು, ಹೊಸ ವಾಸ್ತವ ಐಡಿ ಸೃಷ್ಟಿ ಮಾಡಿದೊಡನೆಯೇ ಹಳೆಯ ವಾಸ್ತವ ಐಡಿ ತನ್ನಿಂದ ತಾನೇ ರದ್ದಾಗುತ್ತದೆ. ಇದರ ಜೊತೆಗೆ ಪ್ರಾಧಿಕಾರವು ಸೀಮಿತ ಕೆವೈಸಿ ಕಲ್ಪನೆಯನ್ನೂ ಅಳವಡಿಸಿದ್ದು, ಇದರ ಪ್ರಕಾರ ಅಗತ್ಯ ಆಧಾರಿತ ಮಾಹಿತಿಯನ್ನು ಮಾತ್ರವೇ ಬಳಕೆದಾರ ನಿರ್ದಿಷ್ಟ ಸೇವೆ ಒದಗಿಸುವ ಯಾವುದೇ ಅಧಿಕೃತ ಸಂಸ್ಥೆಗೆ ಕೊಟ್ಟರೆ ಸಾಕು. ಆಧಾರ್ ನೀಡುವ ಸಂಸ್ಥೆಯು ೨೦೧೮ರ ಮಾರ್ಚ್ ೧ರಿಂದ ವಾಸ್ತವ ಐಡಿಯನ್ನು ಅಂಗೀಕರಿಸಲಿದೆ. ಜೂನ್ ೧ರಿಂದ ಬಳಕೆದಾರರ ವಾಸ್ತವ ಐಡಿ ಪಡೆಯುವುದು ಎಲ್ಲ ಸಂಸ್ಥೆಗಳಿಗೂ ಕಡ್ಡಾಯವಾಗಲಿದೆ.
2018: ನವದೆಹಲಿ: ಸೈಬರ್ ಭದ್ರತೆ, ಇಂಧನ ಸೇರಿದಂತೆ ೯ ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವರ್ಧಿಸುವ ೯ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸೋಮವಾರ ಸಹಿ ಹಾಕಿದವು. ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮಧ್ಯೆ ಉಭಯ ರಾಷ್ಟ್ರಗಳ ನಡುವೆ ಆಯಕಟ್ಟಿನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ವರ್ಧನೆ ಬಗ್ಗೆ ವಿಸ್ತೃತ ಮಾತುಕತೆ ನಡೆದ ಬಳಿಕ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಉಭಯ ರಾಷ್ಟ್ರಗಳ ಪ್ರಧಾನ ಮಂತ್ರಿಗಳ ಜೊತೆಗೆ ಹಿರಿಯ ಸಂಪುಟ ಸಹೋದ್ಯೋಗಿಗಳು, ನಿಯೋಗ ಮಟ್ಟದಲ್ಲಿ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಿದರು. ಸೈಬರ್ ಭದ್ರತೆ, ಪೆಟ್ರೋಲಿಯಂ, ವೈಮಾನಿಕ ಸಾಗಣೆ, ಹೋಮಿಯೋಪಥಿ, ಚಲನಚಿತ್ರ ಸಹ ನಿರ್ಮಾಣ, ಬಾಹ್ಯಾಕಾಶ ವಿಜ್ಞಾನ, ವ್ಯವಹಾರ ಹೂಡಿಕೆ, ಮೆಟಲ್ ಏರ್ ಬ್ಯಾಟರಿಗಳು ಮತ್ತು ಸೌರ ಶಾಖ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಸಭೆಯ ಬಳಿಕ ಮೋದಿ ಮತ್ತು ನೆತನ್ಯಾಹು ನವದೆಹಲಿಯ ಹೈದರಾಬಾದ್ ಭವನದಲ್ಲಿ  ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ‘ಫಲಿತಾಂಶ ಪಡೆಯುವ ವಿಚಾರದಲ್ಲಿ ನಾನು ಅಸಮಾಧಾನಿ ಎಂಬ ಗೌರವ ನನಗಿದೆ. ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭದ್ರತೆ ಭಾರತ ಮತ್ತು ಇಸ್ರೇಲ್ ಬಾಂಧವ್ಯದ ಸ್ಥಂಭಗಳಾಗಿವೆ. ಭಾರತದ ಸಾಂಸ್ಕೃತಿಕ ಕೇಂದ್ರ್ರ ಶೀಘ್ರದಲ್ಲೇ ಇಸ್ರೇಲಿನಲ್ಲಿ ಆರಂಭವಾಗಲಿದೆ. ನಾನು ನೆತನ್ಯಾಹು ಮತ್ತು ಅವರ ಜೊತೆಗೆ ಬಂದಿರುವ ವ್ಯವಹಾರಸ್ಥರ ಬೃಹತ್ ನಿಯೋಗವನ್ನು ಸ್ವಾಗತಿಸುತ್ತೇನೆ ಎಂದು ಮೋದಿ ಹೇಳಿದರು. ನೆತನ್ಯಾಹು ಅವರು ಮಾತನಾಡಿ ’ನೀವು (ನರೇಂದ್ರ ಮೋದಿ) ಕ್ರಾಂತಿಕಾರಿ ನಾಯಕ. ಭಾರತದಲ್ಲಿನ ಯಹೂದ್ಯರು ಎಂದೂ ಇಲ್ಲಿ ಕಾನೂನು ಕ್ರಮಕ್ಕೆ ಒಳಗಾಗಿಲ್ಲ. ಭಾರತ ಮತ್ತು ಇಸ್ರೇಲ್ ಪ್ರಜಾಪ್ರಭುತ್ವ ಹೇಗೆ ಕೆಲಸ ಮಾಡುತ್ತದೆ ಎಂದು ತೋರಿಸಿಕೊಟ್ಟಿವೆ. ಕೃಷಿ ಕ್ಷೇತ್ರವನ್ನು ಕ್ರಾಂತಿಕಾರಕವನ್ನಾಗಿಸುವ ನಿಟ್ಟಿನಲ್ಲಿ ಇಸ್ರೇಲ್ ಮತ್ತು ಭಾರತ ಶ್ರಮಿಸುತ್ತಿವೆ ಎಂದು ಹೇಳಿದರು. ’ನೀವು ಯಾವುದೇ ಸಮಯದಲ್ಲಿ ಯೋಗ ಮಾಡಬಯಸಿದರೂ ನಾನು ಸೇರಿಕೊಳ್ಳುತ್ತೇನೆ ಎಂದು ನೆತನ್ಯಾಹು ನುಡಿದರು. ಮೋದಿ ಮತ್ತು ನೆತನ್ಯಾಹು ರಕ್ಷಣೆ, ವ್ಯಾಪಾರ ಮತ್ತು ಭಯೋತ್ಪಾದನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು. ಇದಕ್ಕೆ ಮುನ್ನ ನೆತನ್ಯಾಹು ಅವರು ರಾಜಘಾಟ್ ಗೆ ತೆರಳಿ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸಂಜೆ ಭಾರತ-ಇಸ್ರೇಲ್ ಸಿಇಒ ಫೋರಂ ಸಭೆ ನಡೆಯಲಿದ್ದು ದೊಡ್ಡ ಸಂಖ್ಯೆಯ ವ್ಯಾಪಾರಿಗಳು ನೆತನ್ಯಾಹು ಜೊತೆಗೆ ಈ ಸಭೆಯಲ್ಲಿ ಪಾಲ್ಗೊಳ್ಳುವರು.  ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನೆತನ್ಯಾಹು ಅವರಿಗೆ ಔಪಚಾರಿಕ ಸ್ವಾಗತ ನೀಡಲಾಯಿತು. ಪ್ರಧಾನಿ ಮೋದಿ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.  ‘ಅದು ಪ್ರಧಾನಿ ನರೇಂದ್ರ ಮೋದಿ ಅವರ ಚಾರಿತ್ರಿಕ ಇಸ್ರೇಲ್ ಭೇಟಿಯ ಜೊತೆಗೆ ಆರಂಭವಾಯಿತು. ಅದು ಸೃಷ್ಟಿಸಿದ ಅದ್ಭುತ ಉತ್ಸಾಹ ಈಗಲೂ ನನ್ನ ಇಲ್ಲಿನ ಭೇಟಿಯೊಂದಿಗೆ ಮುಂದುವರೆದಿದೆ. ನಾನು, ನನ್ನ ಪತ್ನಿ ಮತ್ತು ಇಸ್ರೇಲಿನ ಸಂಪೂರ್ಣ ಜನತೆಯನ್ನು ಇದು ಪರವಶಗೊಳಿಸಿದೆ ಎಂದು ನಾನು ಹೇಳಲೇಬೇಕು ಎಂದು ನೆತನ್ಯಾಹು ಔಪಚಾರಿಕ ಸ್ವಾಗತ ಸಮಾರಂಭದ ಬಳಿಕ ಹೇಳಿದರು. ಉಭಯ ರಾಷ್ಟ್ರಗಳ ಜನರಿಗೆ ಸಮೃದ್ಧಿ, ಶಾಂತಿ ಮತ್ತು ಪ್ರಗತಿಯನ್ನು ತರುವ ನಿಟ್ಟಿನಲ್ಲಿ ನಮ್ಮ ಪಾಲುದಾರಿಕೆ  ವರ್ಧಿಸಲಿದೆ ಎಂದು ನಾನು ಭಾವಿಸಿದ್ದೇನೆ ಎಂದೂ ಅವರು ಹೇಳಿದರು. ಭಾನುವಾರ ೬ ದಿನಗಳ ಭಾರತ ಭೇಟಿಗಾಗಿ ಆಗಮಿಸಿದ ಇಸೇಲ್ ಪ್ರಧಾನಿಯನ್ನು ಪ್ರಧಾನಿ ಮೋದಿ ಅವರು ಶಿಷ್ಟಾಚಾರವನ್ನು ಬದಿಗಿಟ್ಟು, ವಿಮಾನ ನಿಲ್ದಾಣಕ್ಕೇ ತೆರಳಿ ಸ್ವಾಗತಿಸಿದ್ದರು. ನೆತನ್ಯಾಹು ಅವರು ಭಾರತಕ್ಕೆ ಭೇಟಿ ನೀಡಿದ ಎರಡನೇ ಪ್ರಧಾನಿಯಾಗಿದ್ದು, ೧೫ ವರ್ಷಗಳ ಬಳಿಕ ಈ ಭೇಟಿ ನಡೆಯಿತು.
2018: ಮಧುರೈ:  ತಮಿಳನಾಡಿನ ಮಧುರೈಯಲ್ಲಿ ನಡೆದ ಗೂಳಿ ಪಳಗಿಸುವ ಜಲ್ಲಿಕಟ್ಟು ಕ್ರೀಡೆಯಲ್ಲಿ ಗೂಳಿ ಪಳಗಿಸುವ ಆಖಾಡದ ಹೊರಗೆ ೧೯ರ ಹರೆಯದ ತರುಣನೊಬ್ಬ ಗೂಳಿ ತಿವಿತದಿಂದ ಸಾವನ್ನಪ್ಪಿದ. ಕ್ರೀಡೆಯ ಸಂದರ್ಭದಲ್ಲಿ ಇತರ ೨೮ ಮಂದಿ ಕೂಡಾ ಗಾಯಗೊಂಡರು. ಗೂಳಿ ತಿವಿತದಿಂದ ಸಾವನ್ನಪ್ಪಿದ ತರುಣನನ್ನು ಮೊದಲ ಹಂತದಲ್ಲಿ ಪಾಲ್ಗೊಂಡು ಬಳಿಕ ಹಿಂದೆ ಸರಿದಿದ್ದ ಕಾಳಿಮುತ್ತು ಎಂಬುದಾಗಿ ಗುರುತಿಸಲಾಯಿತು.  ಗೂಳಿ ಪಳಗಿಸುವ ಕ್ರೀಡೆಯ ಕೊನೆಯ ಹಂತದಲ್ಲಿ ಕಲೆಕ್ಷನ್ ಪಾಯಿಂಟ್ ಎಂಬುದಾಗಿ ಕರೆಯಲಾಗುವ ಹಂತದಲ್ಲಿ ಆಖಾಡದ ಹೊರಗೆ ಈತನಿಗೆ ಗೂಳಿ ತಿವಿಯಿತು ಎಂದು ಹೇಳಲಾಯಿತು. ದುರಂತ ಸಂಭವಿಸಿದ ವೇಳೆಯಲ್ಲಿ ಕಾಳಿಮುತ್ತು ಆಖಾಡದ ಹೊರಗೆ ಗೂಳಿ ಜೊತೆಗೆ ಆಟವಾಡುತ್ತಿದ್ದ ಎಂದು ಮಧುರೈ ಜಿಲ್ಲಾಧಿಕಾರಿ ವೀರ ರಾಘವ ರಾವ್ ಹೇಳಿದರು. ತಮಿಳುನಾಡಿನ ಗ್ರಾಮೀಣ ಕ್ರೀಡೆಯಾದ ಗೂಳಿಕಟ್ಟು ಕಳೆದ ವರ್ಷ ನಿಷೇಧಿಸಲ್ಪಟ್ಟಾಗ ನಡೆದ ರಾಜ್ಯವ್ಯಾಪಿ ಪ್ರತಿಭಟನೆಗಳಿಂದಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಜಿಲ್ಲಾಡಳಿತವು ಗೂಳಿಕಟ್ಟು ಸಂದರ್ಭದಲ್ಲಿ ಗಾಯಾಳುಗಳಿಗೆ ಸೂಕ್ತ ಶುಶ್ರೂಷೆ ಒದಗಿಸಲು ವೈದ್ಯರು ಹಾಗೂ ಪಶುವೈದ್ಯರ ತಂಡ ಹಾಗೂ ಔಷಧದ ವ್ಯವಸ್ಥೆಯನ್ನೂ ಮಾಡಿತ್ತು. ಆಂಬುಲೆನ್ಸುಗಳನ್ನೂ ಸ್ಥಳದಲ್ಲಿ ಇರಿಸಲಾಗಿತು. ಗೂಳಿಗಳು, ಪಳಗಿಸುವವರು ಮತ್ತು ಪ್ರೇಕ್ಷಕರ ಮಧ್ಯೆ ಸುರಕ್ಷತೆ ಸಲುವಾಗಿ ಅಡ್ಡಗಟ್ಟೆಗಳನ್ನೂ ಹಾಕಲಾಗಿತ್ತು. ಗೂಳಿ ತನ್ನ ಕೊಂಬುಗಳಿಂದ ತಿವಿದ ಪರಿಣಾಮವಾಗಿ ತೀವ್ರ ಗಾಯಗೊಂಡ ಕಾಳಿಮುತ್ತುವನ್ನು ಸಮೀಪದ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ವೈದ್ಯರು ಆತ ಮೃತನಾಗಿರುವುದಾಗಿ ಘೋಷಿಸಿದರು. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಂದಿದ್ದ ೭೦೪ ಗೂಳಿಗಳ ಪೈಕಿ ತಪಾಸಣೆ ಬಳಿಕ ೬೧ ಗೂಳಿಗಳನ್ನು  ಸ್ಪರ್ಧೆಗೆ ಅಸಮರ್ಥ ಎಂದು ಕೈಬಿಡಲಾಗಿತ್ತು. ೬೪೩ ಗೂಳಿಗಳಿಗೆ ಮಾತ್ರ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಪಳಗಿಸಲು ಬಂದ ೫೭೬ ಆಟಗಾರರ ಪೈಕಿ ೯೭ ಮಂದಿಯನ್ನು ಅನರ್ಹರೆಂದು ಘೋಷಿಸಿ, ೪೭೯ ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ತಲಾ ೭೫ ಮಂದಿಯ ೬ ತಂಡಗಳನ್ನು ಗೂಳಿ ಪಳಗಿಸಲು ರಚಿಸಲಾಗಿತ್ತು. ರಾಜ್ಯದ ವಿವಿಧ ಕಡೆಗಳಲ್ಲಿ ನಡೆದ ಗೂಳಿಕಟ್ಟು ಕ್ರೀಡೆಯಲ್ಲಿ ಈವರೆಗೆ ೭೯ ಮಂದಿ ಗಾಯಗೊಂಡಿದ್ದಾರೆ. ಮೂರನೆಯ ಹಾಗೂ ಅಂತಿಮ ಗೂಳಿಕಟ್ಟು ಕ್ರೀಡೆ ಅಳಂಗನಲ್ಲೂರು ಗ್ರಾಮದಲ್ಲಿ ಮಂಗಳವಾರ ನಡೆಯಲಿದ್ದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಪಾಲ್ಗೊಳ್ಳುವ ನಿರೀಕ್ಷೆ ಇದೆ.  ಜಲ್ಲಿಕಟ್ಟು ಎಂಬುದು ಗೂಳಿಯನ್ನು ಕೊಂಬು ಇಲ್ಲವೇ ಭುಜ ಹಿಡಿದು ಪಳಗಿಸುವ ಯತ್ನದ ಆಟ.  ಜನಸಮೂಹ ಮತ್ತು ಪಳಗಿಸುವವರ ಗುಂಪಿನ ಮಧ್ಯೆ ಗೂಳಿಯನ್ನು ಬಿಡಲಾಗುತ್ತದೆ. ಜನಪ್ರಿಯ ಸುಗ್ಗಿ ಹಬ್ಬದ ಮೂರನೇ ದಿನ ಮತ್ತುಪೊಂಗಲ್ ಸಂದರ್ಭದಲ್ಲಿ ಈ ಕ್ರೀಡೆಯನ್ನು ನಡೆಸಲಾಗುತ್ತದೆ. ಕ್ರೀಡೆಯಲ್ಲಿ ಗೂಳಿಗಳ ಕೊಂಬುಗಳಿಗೆ ಕಟ್ಟಲಾಗುವ ನಾಣ್ಯಗಳ ಕಟ್ಟನ್ನ್ನು ತೆಗೆಯಲು ಸ್ಪರ್ಧಿಗಳು ಯತ್ನಿಸುತ್ತಾರೆ. ಗೂಳಿಯನ್ನು ಪಳಗಿಸಿ ನಾಣ್ಯಗಳ ಕಟ್ಟು ಕೀಳಲು ಆಗದೇ ಇದ್ದರೆ ಆ ಹಣ ಗೂಳಿಯ ಮಾಲೀಕನ ಪಾಲಾಗುತ್ತದೆ. ಗೂಳಿಗಳನ್ನು ಪಳಗಿಸುವ ಈ ಕ್ರೀಡೆಯಲ್ಲಿ ಪ್ರಾಣಿಗಳಿಗೆ ಹಿಂಸೆಯಾಗುತ್ತದೆ ಎಂದು ದೂರಿ ಪ್ರಾಣಿದಯಾ ಸಂಘಗಳು ಸಲ್ಲಿಸಿದ್ದ ಅರ್ಜಿಯನ್ನು ಮನ್ನಿಸಿ ೨೦೧೪ರಲ್ಲಿ ಸುಪ್ರೀಂಕೋರ್ಟ್ ಈ ಕ್ರೀಡೆಯನ್ನು ನಿಷೇಧಿಸಿತ್ತು. ವ್ಯಾಪಕ ಪ್ರತಿಭಟನೆಗಳ ಬಳಿಕ ತಮಿಳುನಾಡು ಸರ್ಕಾರ ತೀರ್ಪನ್ನು ಬದಿಗೆ ತಳ್ಳಿ ಕ್ರೀಡೆಯನ್ನು ಕಾನೂನು ಬದ್ಧವನ್ನಾಗಿ ಮಾಡುವ ಕಾನೂನನ್ನು ಜಾರಿಗೆ ತಂದಿತ್ತು.
2018: ಕೂಡಲ ಸಂಗಮ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ರೈತಮಹಿಳೆ ನಿಂಬೆವ್ವ ದೊರೆ ಅವರು ಸಸಿಗೆ ನೀರೆರೆಯುವ ಮೂಲಕ ನೂತನ ‘ಜನ ಸಾಮಾನ್ಯರ ಪಕ್ಷವನ್ನು ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಪಕ್ಷದ ಅಧ್ಯಕ್ಷ ಡಾ.ಅಯ್ಯಪ್ಪ ಅವರು, ಜನಸಾಮಾನ್ಯರ ಪಕ್ಷದಿಂದ ೨೦ ಕೋಟಿ ರೂಪಾಯಿ ವೆಚ್ಚ ಮಾಡಲು ಸಿದ್ಧರಿದ್ದೇವೆ. ಶ್ರಮದಾನದ ಮೂಲಕ ಕೆಲಸ ಮಾಡುತ್ತೇವೆ. ಕಳಸಾಬಂಡೂರಿ ನಾಲಾ ಕಾಮಗಾರಿಗೆ ಅನುಮತಿ ಕೊಡಿ. ಒಂದು ತಿಂಗಳಲ್ಲಿ ಕಾಮಗಾರಿ ಮಾಡಿ ಮುಗಿಸುತ್ತೇವೆ ಎಂದು ಕೇಂದ್ರ ಸರಕಾರಕ್ಕೆ ಸವಾಲು ಹಾಕಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅಯ್ಯಪ್ಪ,  ‘ದಿನಕ್ಕೆ ಐದು ತರಹ ಡ್ರೆಸ್ ಧರಿಸುವ ಪ್ರಧಾನಿ ರೈತರ ಕೈ ಹಿಡಿಯುವುದಿಲ್ಲ. ಬರೀ  ಭಾಷಣ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರು ಕೇವಲ ಯುದ್ಧದ ಬಗ್ಗೆ ಮಾತನಾಡುತ್ತಾರೆ. ನಿಮಗೆ ಅನ್ನ ಬೇಕಾ, ಯುದ್ಧ ಬೇಕಾ ಎಂದು ಪ್ರಶ್ನಿಸಿದರು.  ಆರೆಸ್ಸೆಸ್ ಒಂದು ನಿರುದ್ಯೋಗಿಗಳ ಸಂಘ. ಪ್ರಧಾನಿ ಮೋದಿ ಈ ನಿರುದ್ಯೋಗಿಗಳ ಸಂಘದ ಸದಸ್ಯ. ಯಾವಾಗಲೂ ಯಾವ ರೀತಿ ಭಾಷಣ ಮಾಡಬೇಕು ಎಂದು ಯೋಚಿಸುತ್ತಾರೆ. ಬರಿ ಭಾಷಣ ಮಾಡಿ ಜನರ ದಿಕ್ಕು ತಪ್ಪಿಸುತ್ತಾರೆ ಎಂದು ಅಯ್ಯಪ್ಪ ಟೀಕಿಸಿದರು. ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ  ಭ್ರಷ್ಟಾಚಾರದಲ್ಲಿ ಮುಳುಗಿವೆ. ಶೀಘ್ರದಲ್ಲೇ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹದಾಯಿ ಹೋರಾಟಗಾರ ವಿಜಯ ಕುಲಕರ್ಣಿ, ಪಕ್ಷದ ಸಂಸ್ಥಾಪಕ ಅಯ್ಯಪ್ಪ, ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮತ್ತಿತರರು ಪಾಲ್ಗೊಂಡಿದ್ದರು.
2018: ಬೆಳಗಾವಿ: ಗೋವಾ ನೀರಾವರಿ ಸಚಿವರಾದ ವಿನೋದ್ ಪಾಳೇಕರ್ ಹಳೆಯ ಕಾಮಗಾರಿ ಪರಿಶೀಲಿಸಿ ಸುಳ್ಳು ಆರೋಪ ಮಾಡಿದ್ದು, ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ಜನತೆಯ ಸ್ವಾಭಿಮಾನ ಕೆಣಕುವಂಥ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಇಲ್ಲಿ ಹೇಳಿದರು. ಗೋವಾ ಸಚಿವರು ಬೆಳಗಾವಿ ಜಿಲ್ಲೆಯ ಕಣಕುಂಬಿಗೆ ಭೇಟಿ ನೀಡಿ, ಕನ್ನಡಿಗರನ್ನು ಕೆಣಕುವಂತಹ ಹೇಳಿಕೆ ನೀಡಿದ ೨೪ ಗಂಟೆಗಳ ಒಳಗಾಗಿ ಅಲ್ಲಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದ ಪಾಟೀಲ, ’ಕರ್ನಾಟಕ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಕಳಸಾ ಬಂಡೂರಿ ನಾಲಾ ಕಾಮಗಾರಿ ನಡೆಸುತ್ತಿದೆ ಎಂಬ ಗೋವಾ ರಾಜ್ಯದ ಸಚಿವರ ಆರೋಪ ಸುಳ್ಳು. ಇಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಪ್ರತಿಪಾದಿಸಿದರು. ‘ರಾಜ್ಯದಲ್ಲಿ ಅಣೆಕಟ್ಟು ನಿರ್ಮಿಸಿಲ್ಲ. ಕೇವಲ ಎರಡು ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಹೀಗಿರುವಾಗ ನಮ್ಮ ಕಡೆ ನೀರು ಹರಿದು ಬರಲು ಹೇಗೆ ಸಾಧ್ಯ? ತಡೆಗೋಡೆ ತೆಗೆದಾಗ ಮಾತ್ರ ನೀರು ಬಳಕೆ ಸಾಧ್ಯ ಎಂದು ಅವರು ಹೇಳಿದರು. ಕಣಕುಂಬಿಯಲ್ಲಿ ಗೋವಾ ಸಚಿವರು ಪರಿಶೀಲಿಸಿರುವುದು ಹಳೆಯ ಕಾಮಗಾರಿ. ಆಗಸ್ಟ್ ನಂತರ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಮೂರನೇ ತಂಡದಿಂದ ಪರಿಶೀಲನೆಗೆ ನಮ್ಮ ಅಭ್ಯಂತರ ಇಲ್ಲ ಎಂದು ಪಾಟೀಲ  ನುಡಿದರು. ಮಹದಾಯಿ ವಿಚಾರ ಅನೇಕ ದಶಕಗಳ ಹೋರಾಟ. ೨೦೦ ಟಿಎಂಸಿ ನೀರಿನಲ್ಲಿ ೫೦ ಟಿಎಂಸಿ ನೀರು ಕರ್ನಾಟಕಕ್ಕೆ ಸೇರಿದ್ದು. ಗೋವಾ ಕೇವಲ ಏಳೆಂಟು ಟಿಎಂಸಿ ನೀರು ಬಳಕೆ ಮಾಡಿಕೊಂಡು ೧೮೦ ಟಿಎಂಸಿ ನೀರನ್ನು ಸಮುದ್ರದ ಪಾಲು ಮಾಡುತ್ತಿದೆ ಎಂದು ಸಚಿವರು ದೂರಿದರು. ‘ಗೋವಾ ಸಚಿವರು ಕನ್ನಡಿಗರನ್ನು ಕೆಣಕುವಂತಹ ಮಾತುಗಳನ್ನು ಆಡಿದ್ದಾರೆ. ಕರ್ನಾಟಕದವರು ಹರಾಮಿಗಳು ಎಂದು ಹೇಳಿದ್ದಕ್ಕಾಗಿ ಅವರು ತತ್ ಕ್ಷಣ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ ಪಾಟೀಲ, ಭೇಟಿ ನೀಡುವ ವಿಚಾರದಲ್ಲಿ ಗೋವಾ ರಾಜ್ಯದ ನೀರಾವರಿ ಸಚಿವರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಅವರ ಭೇಟಿ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಪಾಟೀಲ ಹೇಳಿದರು.  ಗೋವಾ ಸಚಿವರು ಕಳಸಾ ಕಾಮಗಾರಿ ವೀಕ್ಷಣೆಗೆ ಬಂದಿರುವುದೇ ತಪ್ಪು. ವಿವಾದ ನ್ಯಾಯಮಂಡಳಿಯಲ್ಲಿ ಇರುವುದರಿಂದ ಈ ಸ್ಥಳಕ್ಕೆ ಬಾರದಂತೆ ನಿರ್ಬಂಧ ಹೇರಬೇಕು. ಶಾಂತಿ ಕದಡುವ ಕೆಲಸವನ್ನು ಗೋವಾ ಜಲಸಂಪನ್ಮೂಲ ಸಚಿವ ಮಾಡಿದ್ದಾರೆ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
2018: ಅಹಮದಾಬಾದ್: ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ನಾಯಕ ಡಾ. ಪ್ರವೀಣ್ ತೊಗಾಡಿಯಾ ಅವರು ’ಕಣ್ಮರೆಯಾಗಿದ್ದಾರೆ ಮತ್ತು ಪೊಲೀಸರು ಅವರನ್ನು ಪತ್ತೆ ಹಚ್ಚಲು ನಾಲ್ಕು ತಂಡಗಳನ್ನು ರಚಿಸಿದ್ದಾರೆ ಎಂದು ಅಹಮದಾಬಾದ್ ಜಂಟಿ ಪೊಲೀಸ್ ಕಮೀಷನರ್ (ಅಪರಾಧ) ಜೆ.ಕೆ. ಭಟ್ ಇಲ್ಲಿ ಹೇಳಿದರು. ತೊಗಾಡಿಯಾ ಅವರು ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಅಹಮದಾಬಾದಿನ ಚಂದ್ರಮಣಿ ಆಸ್ಪತ್ರೆಯಲ್ಲಿ ಪತ್ತೆಯಾದರು. ಸಕ್ಕರೆ ಕಡಿಮೆಯಾಗಿ ಪ್ರಜ್ಞಾಹೀನರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಳಿಕ  ಆರೋಗ್ಯ ಸುಧಾರಿಸಿತು ಎಂದು ವರದಿಗಳು ತಿಳಿಸಿದವು. ತೊಗಾಡಿಯಾ ಅವರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮತ್ತು ಬೆಂಬಲಿಗರು ಹೇಳುತ್ತಿರುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದರು.  ‘ನಾವು ತೊಗಾಡಿಯಾ  ಅವರು ಇರುವ ಸ್ಥಳವನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದೇವೆ. ಅವರು ಬೆಳಗ್ಗೆ ೧೦.೪೫ರ ಹೊತ್ತಿಗೆ ನಗರದ ವಿ ಎಚ್ ಪಿ ಕಚೇರಿಯಿಂದ ಹೊರಕ್ಕೆ ಹೊರಟಿದ್ದರು ಎಂದು ಭಟ್ ಮಾಧ್ಯಮ ಮಂದಿಯೊಂದಿಗೆ ಮಾತನಾಡುತ್ತಾ ಹೇಳಿದ್ದರು. ದಶಕದಷ್ಟು ಹಳೆಯದಾದ ಪ್ರಕರಣ ಒಂದರಲ್ಲಿ ತೊಗಾಡಿಯಾ ಅವರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ ಎಂಬ ವದಂತಿಗಳು ಇಲ್ಲಿ ವ್ಯಾಪಕವಾಗಿ ಹರಡಿತ್ತು.  ‘ತೊಗಾಡಿಯಾ ಅವರಿಗೆ ಝಡ್ ಪ್ಲಸ್ ಭದ್ರತೆ ಇದೆ. ಆದರೆ ಸೋಮವಾರ ಬೆಳಗ್ಗೆ ಅವರು ಯಾವುದೇ ಭದ್ರತಾ ಗಾರ್ಡ್ ಇಲ್ಲದೇ ವಿಎಚ್ ಪಿ ಕಚೇರಿಯಿಂದ ಗಡ್ಡಧಾರಿ ವ್ಯಕ್ತಿಯೊಬ್ಬರ ಜೊತೆಗೆ ಆಟೋ ಒಂದರಲ್ಲಿ ತೆರಳಿದ್ದಾರೆ ಎಂದು ಭಟ್ ಹೇಳಿದ್ದರು.  ‘ವಿಎಚ್ ಪಿ ನಾಯಕನ ವಿರುದ್ಧ ಬಂಧನ ವಾರಂಟ್ ಜಾರಿಯಾದ ಬಳಿಕ ರಾಜಸ್ಥಾನ ಪೊಲೀಸ್ ತಂಡವು ಅಹಮದಾಬಾದಿಗೆ  ಬಂದಿತ್ತು. ನಮ್ಮ ಪೊಲೀಸರು ರಾಜಸ್ಥಾನ ಪೊಲೀಸರಿಗೆ ಡಾ. ತೊಗಾಡಿಯಾ ಅವರ ನಿವಾಸಕ್ಕೆ ಮತ್ತು ವಿಎಚ್ ಪಿ ಕಚೇರಿಗೆ ಭೇಟಿ ನೀಡಲು ನೆರವು ನೀಡಿದ್ದರು. ಆದರೆ ನಮಗೆ ಅವರು ಎಲ್ಲಿದ್ದಾರೆ ಎಂಬುದು ಗೊತ್ತಾಗಲಿಲ್ಲ ಎಂದು ಭಟ್ ಹೇಳಿದ್ದರು. ತೊಗಾಡಿಯಾ ಅವರು ಇರಬಹುದಾದ ಸ್ಥಳದ ಪತ್ತೆಗಾಗಿ ಅಹಮದಾಬಾದ್ ಪೊಲೀಸರು ವಿಎಚ್ ಪಿ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ ಎಂದೂ ಅವರು ತಿಳಿಸಿದ್ದರು. ತೊಗಾಡಿಯಾ ಅವರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ನೂರಾರು ಮಂದಿ ವಿ ಎಚ್ ಪಿ ಕಾರ್ಯಕರ್ತರು ಸೋಲಾ ಪೊಲೀಸ್ ಠಾಣೆಯ ಬಳಿ ಜಮಾಯಿಸಿ, ತೊಗಾಡಿಯಾ ಅವರನ್ನು ತತ್ ಕ್ಷಣ ಬಿಡುಗಡೆ ಮಾಡದೇ ಇದ್ದಲ್ಲಿ ರಾಷ್ಟ್ರವ್ಯಾಪಿ ಚಳವಳಿ ಆರಂಭಿಸುವುದಾಗಿ ಎಚ್ಚರಿಸಿದ್ದರು. ರಾಜಸ್ಥಾನ ಮತ್ತು ಗುಜರಾತ್ ಪೊಲೀಸರು ತೊಗಾಡಿಯಾ ಅವರನ್ನು ಎನ್ ಕೌಂಟರ್ ಮೂಲಕ ಮುಗಿಸಲೂಬಹುದು ಎಂದೂ ಕೆಲವು ಸ್ಥಳೀಯ ನಾಯಕರು ಭೀತಿ ವ್ಯಕ್ತ ಪಡಿಸಿದ್ದರು.  ‘ಪ್ರವೀಣ್ ಭಾಯಿ ಕಣ್ಮರೆಯಾಗಿದ್ದಾರೆ. ಅವರ ಮೊಬೈಲ್ ಸ್ಚಿಚ್ಡ್ ಆಫ್ ಆಗಿದೆ. ಅವರು ಎಲ್ಲಿದ್ದಾರೆ ಎಂದೇ ಪತ್ತೆ ಹಚ್ಚಲಾಗುತ್ತಿಲ್ಲ ಎಂದು ಗುಜರಾತ್ ವಿಎಚ್ ಪಿ ನಾಯಕ ರಾಂಛೋಡ್ ಬಾಯಿ ಭರ್‍ವಾಡ್ ಮಾಧ್ಯಮ ಮಂದಿಯೊಂದಿಗೆ ಮಾತನಾಡುತ್ತಾ ಹೇಳಿದ್ದರು.

2017: ಪುಣೆ: ನಾಯಕ ವಿರಾಟ್ ಕೊಹ್ಲಿ (122) ಮತ್ತು ಕೇದಾರ್ ಜಾಧವ್ (120) ಗಳಿಸಿದ ಭರ್ಜರಿ ಶತಕಗಳ ನೆರವಿನಿಂದ ಭಾರತ ತಂಡವು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ 3 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಗಳಿಸಿತು. ಇಂಗ್ಲೆಂಡ್ ನೀಡಿದ 351 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ 48.1 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 356 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಗುರಿಯನ್ನು ಬೆನ್ನತ್ತಿದ ಭಾರತ ಆರಂಭದಲ್ಲೇ ಆಘಾತ ಎದುರಿಸಿತು. ಇನಿಂಗ್ಸ್ ಆರಂಭಿಸಿದ ಕೆ.ಎಲ್.ರಾಹುಲ್ (8) ಮತ್ತು ಶಿಖರ್ ಧವನ್ (1) ತಂಡಕ್ಕೆ ಉತ್ತಮ ಆರಂಭ ಒದಗಿಸಲಿಲ್ಲ. ನಂತರ ಬಂದ ಯುವರಾಜ್ ಸಿಂಗ್ (15) ಮತ್ತು ಮಹೇಂದ್ರ ಸಿಂಗ್ ಧೋನಿ (6) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಭಾರತ ತಂಡ 63 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಹಂತದಲ್ಲಿ ಜತೆಯಾದ ವಿರಾಟ್ ಕೊಹ್ಲಿ ಮತ್ತು ಕೇದಾರ್ ಜಾಧವ್ 5ನೇ ವಿಕೆಟ್ಗೆ 200 ರನ್ ಜತೆಯಾಟವಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆಕರ್ಷಕ ಆಟವಾಡಿದ ಕೊಹ್ಲಿ 27ನೇ ಶತಕ ಸಿಡಿಸಿದರೆ, ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಜಾಧವ್ ಏಕದಿನ ಕ್ರಿಕೆಟ್ನಲ್ಲಿ 2ನೇ ಶತಕ ಗಳಿಸಿದರು. ಇನಿಂಗ್ಸ್ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ (40*) ಜಡೇಜಾ (13) ಮತ್ತು ಅಶ್ವಿನ್ (15*) ಜತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇಂಗ್ಲೆಂಡ್ ತಂಡದ ಪರ ಜೇಕ್ ಬಾಲ್ 3, ಸ್ಟೋಕ್ಸ್ ಮತ್ತು ವಿಲ್ಲೆ ತಲಾ 2 ವಿಕೆಟ್ ಪಡೆದರು. ಭಾನುವಾರ ಮಧ್ಯಾಹ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ತಂಡ 39 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಹಂತದಲ್ಲಿ ಜತೆಗೂಡಿದ ಜೇಸನ್ ರಾಯ್ (73) ಮತ್ತು ರೂಟ್ (78) ತಂಡಕ್ಕೆ ಆಸರೆಯಾದರು. ಇಬ್ಬರೂ ಆಟಗಾರರು ಆಕರ್ಷಕ ಆರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಇವರು ಔಟಾದ ನಂತರ ಬೆನ್ ಸ್ಟೋಕ್ಸ್(62) ವೇಗವಾಗಿ ಅರ್ಧಶತಕ ಗಳಿಸುವ ಮೂಲಕ ತಂಡದ ಮೊತ್ತವನ್ನು 300 ಗಡಿ ದಾಟಿಸಿದರು. ಉಳಿದಂತೆ ಬಟ್ಲರ್ (31), ಮೋರ್ಗನ್ (28) ಮತ್ತು ಮೋಯಿನ್ ಅಲಿ (28) ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ತಮ್ಮ ಕೊಡುಗೆ ನೀಡಿದರು. ಇಂಗ್ಲೆಂಡ್ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 350 ರನ್ ಗಳಿಸಿ, ಭಾರತಕ್ಕೆ 351 ರನ್ಗಳ ಬೃಹತ್ ಗುರಿ ನೀಡಿತ್ತು. ಭಾರತದ ಪರ ಹಾರ್ದಿಕ್ ಪಾಂಡ್ಯ (46 ಕ್ಕೆ 2) ಮತ್ತು ರವೀಂದ್ರ ಜಡೇಜಾ (50 ಕ್ಕೆ 1) ಇಂಗ್ಲೆಂಡ್ ರನ್ ವೇಗಕ್ಕೆ ಕೊಂಚ ತಡೆಯೊಡ್ಡಿದರು. ಬುಮ್ರಾ (79 ಕ್ಕೆ 2) ದುಬಾರಿಯಾದರೂ ಸಹ 2 ವಿಕೆಟ್ ಕಬಳಿಸಿದರು.
2017: ನವದೆಹಲಿ: ರಾಜಕಾರಣಿಯಾಗಿ ಬದಲಾದ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆಗೆ ಎರಡನೇ ಸುತ್ತಿನ ಮಾತುಕತೆ ಬಳಿಕ ಪಂಜಾಬ್ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿಯೇ ಈದಿನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರಿಗೆ ಅಮೃತಸರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದು ಎಂದು ಮೂಲಗಳು ಹೇಳಿದವು. 58 ಹರೆಯದ ಸಿಧು ಅವರು 2016 ಸೆಪ್ಟೆಂಬರಿನಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆಪಾದಿಸಿ ಬಿಜೆಪಿ ತ್ಯಜಿಸಿದ್ದರುನಾಲ್ಕು ದಿನಗಳ ಅವಧಿಯಲ್ಲಿ ಈದಿನ ಮಧ್ಯಾಹ್ನ ರಾಹುಲ್ ಗಾಂಧಿ ಅವರನ್ನು ಸಿಧು ಎರಡನೇ ಬಾರಿಗೆ ಭೇಟಿ ಮಾಡಿದಾಗ ರಾಹುಲ್ ಗಾಂಧಿ ಅವರು ಸಿಧು ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಕೆಲವೇ ನಿಮಿಷಗಳಲ್ಲಿ ಕಾಂಗ್ರೆಸ್ ವಕ್ತಾರ ಆರ್.ಎಸ್. ಸುರ್ಜಿವಾಲ ಅವರುಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ನವಜೋತ್ ಸಿಂಗ್ ಸಿಧು ಅವರನ್ನು ಸ್ವಾಗತಿಸುತ್ತದೆ ಮತ್ತು ಸಮಾನ ಮನಸ್ಕ ನಾಯಕರನ್ನು ಕಾಂಗ್ರೆಸ್ ಛತ್ರಿಯ ಅಡಿಯಲ್ಲಿ ಒಂದೇ ಕಡೆ ತರುತ್ತಿರುವುದಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದೆಎಂದು ಟ್ವೀಟ್ ಮಾಡಿದರು. ರಾಹುಲ್ ಗಾಂಧಿ ಜೊತೆಗೆ ಸುದೀರ್ಘ ಕಾಲದ ಮಾತುಕತೆ ಬಳಿಕ ಸಿಧು ಕಾಂಗ್ರೆಸ್ ಸೇರಿದ್ದು, ಅವರಿಗೆ ಬಿಜೆಪಿಯಿಂದ ನೀಡಲಾಗಿದ್ದ ಅಮೃತಸರ ಕ್ಷೇತ್ರವನ್ನೇ ನೀಡಲಾಗುವುದು ಎಂಬ ಭರವಸೆ ನೀಡಲಾಗಿದೆ ಎಂದು ಪಕ್ಷ ಮೂಲಗಳು ತಿಳಿಸಿದವು.  ಸಿಧು ಅವರ ಪತ್ನಿ ನವಜೋತ್ ಕೌರ್ ಅವರನ್ನು ಈಗಾಗಲೇ ಪಕ್ಷ ಅಭ್ಯರ್ಥಿಯಾಗಿ ಪ್ರಕಟಿಸಲಾಗಿದ್ದು, ಕ್ಷೇತ್ರವನ್ನು ಇನ್ನೂ ನಿರ್ಧರಿಸಿಲ್ಲ..
2017: ಮುಂಬೈ: ಡಂಗಲ್ಚಿತ್ರವು 4 ಪ್ರಮುಖ ಫಿಲಂಫೇರ್ 2017 ಪ್ರಶಸ್ತಿಗಳ ಪೈಕಿ ಮೂರು ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಂಡಿತು.  ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ನಟ ಪ್ರಶಸ್ತಿಗಳುಡಂಗಲ್ಪಾಲಾದವು. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಅಲಿಯಾ ಭಟ್ ಅವರು ಉಡ್ತಾ ಪಂಜಾಬ್ ಚಿತ್ರದಲ್ಲಿನ ತಮ್ಮ ನಟನೆಗಾಗಿ ಪಡೆದುಕೊಂಡರು. ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿರುವಡಂಗಲ್ಚಿತ್ರದಲ್ಲಿನ ನಟನೆಗಾಗಿ ಆಮೀರ್ ಖಾನ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ನಿತೇಶ್ ತಿವಾರಿ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದುಕೊಂಡರು. ಸೋನಮ್ ಕಪೂರ್ ಮತ್ತು ಶಾಹಿದ್ ಕಪೂರ್ ಅವರುಅತ್ಯುತ್ತಮ ನಟನೆಗಾಗಿ ನೀಡಲಾಗುವ ವಿಮರ್ಶಕರ ಪ್ರಶಸ್ತಿಯನ್ನು ಪಡೆದುಕೊಂಡರು. ಬಾಲಿವುಡ್ ಚಿತ್ರರಂಗದ ಬಹುತೇಕ ನಟ ನಟಿಯರು ಪಾಲ್ಗೊಂಡಿದ್ದ 62ನೇ ವರ್ಣರಂಜಿತ ಜಿಯೊ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಟ ಶಾರುಖ್ ಖಾನ್ ನಿರೂಪಣೆ ಮಾಡಿದರು. ಪ್ರಶಸ್ತಿ ವಿಜೇತರ ಪಟ್ಟಿ:  ಫಿಲ್ಮ್ ಫೇರ್ ಕ್ರಿಟಿಕ್ಸ್ ಪ್ರಶಸ್ತಿ (ಉತ್ತಮ ಚಿತ್ರ) – ನೀರ್ಜಾ ಫಿಲ್ಮ್ ಫೇರ್ ಕ್ರಿಟಿಕ್ಸ್ ಪ್ರಶಸ್ತಿ (ಶ್ರೇಷ್ಠ ನಟ)-  ಶಾಹೀದ್ ಕಪೂರ್ (ಉಡ್ತಾ ಪಂಜಾಬ್ ), ಮನೋಜ್ ಭಾಜ್ಪೇಯಿ (ಅಲೀಗಢ್) ಫಿಲ್ಮ್ ಫೇರ್ ಕ್ರಿಟಿಕ್ಸ್ ಪ್ರಶಸ್ತಿ (ಶ್ರೇಷ್ಠ ನಟಿ)- ಸೋನಂ ಕಪೂರ್ (ನೀರ್ಜಾ) ಉತ್ತಮ ನಟ (ಕಿರುಚಿತ್ರ) - ಮನೋಜ್  ಭಾಜ್ಪೇಯಿ (ತಾಂಡವ್) ಉತ್ತಮ ಕಿರುಚಿತ್ರ (ಜನರ ಆಯ್ಕೆ) -  ಖಾಮಕಾ. ಉತ್ತಮ ಕಿರುಚಿತ್ರ (ಫಿಕ್ಷನ್) – ಚಟ್ನಿ. ಉತ್ತಮ ಕಿರುಚಿತ್ರ ( ನಾನ್ ಫಿಕ್ಷನ್) - ಮಟೀಟಾಲಿ ಕುಸ್ತಿ ಉತ್ತಮ ಸಂಭಾಷಣೆ - ರಿತೇಶ್ ಷಾ  (ಪಿಂಕ್). ಉತ್ತಮ ಕಥೆ- ಶಾಕುನ್ ಬತ್ರಾ ಮತ್ತು ಅಯೇಷಾ ದಾವಿತ್ರೆ ದಿಲ್ಲೋನ್ (ಕಪೂರ್ ಆ್ಯಂಡ್ ಸನ್ಸ್ -ಸಿನ್ಸ್ 1921) ಉತ್ತಮ ಸಹ ನಟಿ -ಶಬಾನಾ ಆಜ್ಮಿ (ನೀರ್ಜಾ).  ಉತ್ತಮ ಸಹ ನಟ - ರಿಷಿ ಕಪೂರ್ (ಕಪೂರ್ ಆ್ಯಂಡ್ ಸನ್ಸ್ -ಸಿನ್ಸ್ 1921). ಜೀವಮಾನ ಸಾಧನೆ ಪ್ರಶಸ್ತಿ - ಶತ್ರುಘ್ನ ಸಿನ್ಹಾ. ಉತ್ತಮ ಮ್ಯೂಸಿಕ್ ಆಲ್ಬಂ - ದಿಲ್ ಹೈ ಮುಷ್ಕಿಲ್. ಉತ್ತಮ ಗಾಯಕ - ಅರಿಜೀತ್ ಸಿಂಗ್. ಉತ್ತಮ ಗಾಯಕಿ- ನೇಹಾ ಭಾಸಿನ್.
2017: ನವದೆಹಲಿ: ವ್ಯವಸ್ಥೆಯಲ್ಲಿನ ನಿರ್ದಿಷ್ಟ ಮಾರ್ಗಗಳ ಮೂಲಕ ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತರುವ ಬದಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಯೋಧರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸೇನಾ ದಂಡ ನಾಯಕ ಜನರಲ್ ಬಿಪಿನ್ ರಾವತ್ ಅವರು ಎಚ್ಚರಿಕೆ ನೀಡಿದರು. ದೆಹಲಿಯ ಜನರಲ್ ಕಾರಿಯಪ್ಪ ಪೆರೇಡ್ ಮೈದಾನದಲ್ಲಿಸೇನಾ ದಿನಸಮಾರಂಭದಲ್ಲಿ ಮಾತನಾಡಿದ ಅವರುತಮ್ಮ ಸಮಸ್ಯೆಗಳತ್ತ ಗಮನ ಸೆಳೆಯಲು ನಮ್ಮ ಕೆಲವು ಸಹೋದ್ಯೋಗಿಗಳು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರೆ. ಇದು ಸೈನಿಕರ ನೈತಿಕ ಸ್ಥೈರ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ, ತನ್ಮೂಲಕ ಸೇನೆಯ ಮೇಲೂ ಪರಿಣಾಮವಾಗುತ್ತದೆ. ಅಪರಾಧಕ್ಕೆ ನೀವು ಗುರಿಯಾಗಬಹುದು ಮತ್ತು ಶಿಕ್ಷೆಗೆ ಈಡಾಗಲೂ ಬಹುದುಎಂದು ರಾವತ್ ಎಚ್ಚರಿಸಿದರು. ತೊಂದರೆಗೆ ಒಳಗಾಗಿದ್ದರೆ, ಸಮಸ್ಯೆ ಇದ್ದರೆ ಯೋಧರು ನೇರವಾಗಿ ನನ್ನನ್ನೂ ಸಂಪರ್ಕಿಸಬಹುದು ಎಂದು ಅವರು ನುಡಿದರು. ನಿಯಂತ್ರಣ ರೇಖೆಯಲ್ಲಿ ಗಡಿ ಕಾಯುತ್ತಿರುವ ಗಡಿ ಭದ್ರತಾ ಪಡೆಗಳ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆಪಾದಿಸಿ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರು ಫೇಸ್ ಬುಕ್ ನಲ್ಲಿ ವಿಡಿಯೋ ಪ್ರಕಟಿಸಿದ ಬಳಿಕ ಹಲವಾರು ಯೋಧರು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಲು ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ಪ್ರಕಟಿಸಿದ್ದರು. ಒಬ್ಬ ಯೋಧನಂತೂ ಹಿರಿಯ ಅಧಿಕಾರಿಗಳ ಬಟ್ಟೆ ಒಗೆಯಲು, ಬೂಟ್ ಪಾಲಿಶ್ ಮಾಡಿಸಲು ಮತ್ತು ನಾಯಿಗಳನ್ನು ವಾಕಿಂಗ್ಗೆ ಒಯ್ಯುವಂತೆಯೂ ತನ್ನ ಮೇಲೆ ಒತ್ತಡ ಹಾಕಲಾಯಿತು ಎಂದು ಆಪಾದಿಸಿದ್ದರು. ಇದಕ್ಕೆ ಪ್ರತಿಯಾಗಿ ಅಧಿಕಾರಿಗಳು ಯೋಧರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಮಾಜಿಕ ಮಾಧ್ಯಮಗಳಲ್ಲಿ ರೀತಿ ವಿಡಿಯೋ ಹಾಕುವುದನ್ನು ಮುಂದುವರೆಸಿದರೆ ಸೇನೆಯ ಶಿಸ್ತು ಅಪಾಯಕ್ಕೆ ಗುರಿಯಾಗಬಹುದು ಎಂದು ವಿಡಿಯೋಗಳ ಮೂಲಕವೇ ಎಚ್ಚರಿಸಿದ್ದರು. ಸೇನೆಯು ವಾಟ್ಸಪ್, ಫೇಸ್ ಬುಕ್ ಅಥವಾ ಟಿವಿಗಳ ಮೂಲಕ ಕಾರ್ಯನಿರ್ವಹಿಸುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದರು.
2016:  ನವದೆಹಲಿ: ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಅತಿಯಾದ ಚಳಿಗಾಳಿ ಬೀಸುತ್ತಿದ್ದು ತಾಪಮಾನ ಅತ್ಯಂತ ಕೆಳಗಿಳಿಯಿತು. ಶ್ರೀನಗರದ ದಾಲ್ ಸರೋವರ ಸೇರಿದಂತೆ ಹಲವೆಡೆ ನೀರು ಹೆಪ್ಪುಗಟ್ಟಿತು. ಶ್ರೀನಗರದ ದಾಲ್ ಸರೋವರದ ನೀರು ಅತಿಶೀತದ ಪರಿಣಾಮವಾಗಿ ಹೆಪ್ಪುಗಟ್ಟಿದ್ದು, ಹೆಪ್ಪುಗಟ್ಟಿದ ನೀರಿದ ತುಂಡುಗಳು ಕೈಗೆ ಬಂದವು, ಇಡೀ ಪ್ರದೇಶದಲ್ಲಿ ಅತಿಯಾಗಿ ಚಳಿಗಾಳಿ ಬೀಸುತ್ತಿದ್ದು, ಹೆದ್ದಾರಿಗಳಲ್ಲೂ ಹಿಮದ ರಾಶಿ ಕಂಡು ಬಂದಿತು. ಹಿಮಾಚಲ ಪ್ರದೇಶ ಚಳಿಗಾಳಿಗೆ ನಡುಗಿತು. ಮನೆಗಳ ಛಾವಣಿಗಳ ಮೇಲೆ, ರಸ್ತೆಗಳ ಮೇಲೆ ಅತ್ಯಂತ ದಪ್ಪಕ್ಕೆ ಹಿಮದ ರಾಶಿ ಬಿದ್ದಿತು. ರಸ್ತೆಗಳು ಜಾರುವ ಕಾರಣ ವಾಹನ ಸಂಚಾರ ಸಮಸ್ಯೆಯಾಗಿದೆ ಎಂದು ನಿವಾಸಿಗಳು ಹೇಳಿದರು. ಹಲವಾರು ಮನೆಗಳ ಛಾವಣಿಗಳೂ ಹಿಮಪಾತದಿಂದ ಮುಚ್ಚಿಹೋಗಿವೆ.
2017: ನವದೆಹಲಿ: 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಮೂಲಕ ಕಪ್ಪು ಹಣದ ಕೋಟೆಗೆ ಲಗ್ಗೆ ಹಾಕಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಳಿ ಇಟ್ಟು ಕೊಂಡಿರುವಸಂಪತ್ತುಎಷ್ಟು ಎಂಬುದು  ತಿಳಿದಿದೆಯೇ? ಪ್ರಧಾನಿ ಮಂತ್ರಿಯವರ ವೆಬ್ ಸೈಟ್ನಲ್ಲಿ ಇರುವ ಮಾಹಿತಿಗಳ ಪ್ರಕಾರ ಮೋದಿ ಅವರ ಕೈಯಲ್ಲಿನ ನಗದು ಹಣದ ಮೊತ್ತ ಕೇವಲ 4,700 ರೂಪಾಯಿಗಳು. ವರ್ಷದ ಹಿಂದೆ ಅಪ್ ಡೇಟ್ ಆಗಿರುವ ವೆಬ್ಸೈಟ್ ಮಾಹಿತಿ ಪ್ರಕಾರ ಮೋದಿ ಅವರು ಕೈಯಲ್ಲಿ ನಗದು ಹಣ ಇಟ್ಟುಕೊಳ್ಳುವುದು ಅತ್ಯಂತ ಕಡಿಮೆ. ನಗದು ಹಣ ಇಟ್ಟುಕೊಳ್ಳುವುದರಲ್ಲಿ ಅವರಿಗೆ ಆಸಕ್ತಿಯೂ ಕಡಿಮೆ. ಪ್ರಧಾನಿಯವರ ಒಟ್ಟು ಆಸ್ತಿಯ ಮೌಲ್ಯ ಕೂಡಾ ಹೆಚ್ಚು ಕಡಿಮೆ 1 ಕೋಟಿ ರೂಪಾಯಿ ಮಾತ್ರ. 13 ವರ್ಷಗಳ ಹಿಂದೆ ಕೊಂಡಿದ್ದ ಅವರ ಮನೆಯ ಬೆಲೆ ಸುಮಾರು 15 ಪಟ್ಟಿನಷ್ಟು ಏರಿದ್ದರಿಂದ ಈಗ ಅದರ ಮೌಲ್ಯ ಅಂದಾಜು 1.41 ಕೋಟಿ ರೂಪಾಯಿ. 2014 ಆಗಸ್ಟ್ 18 ವೇಳೆಗೆ ಘೋಷಿಸಿಕೊಂಡಿದ್ದ ಕಾಲದಲ್ಲಿ ಮೋದಿ ಅವರ ಕೈಯಲ್ಲಿ ಇದ್ದ ಹಣದ ಮೊತ್ತ 38,700 ರೂಪಾಯಿ.  ಮೋದಿ ಅವರ ಸ್ಥಿರ ಮತ್ತು ಚರಾಸ್ತಿಯ ಒಟ್ಟು ಮೊತ್ತ 2014 ಆಗಸ್ಟ್ನಿಂದ 2015 ಮಾರ್ಚ್ವರೆಗಿನ ಅವಧಿಯಲ್ಲಿ 1,26,12,288 ರೂಪಾಯಿಗಳಿಂದ 1,41,14,893 ರೂಪಾಯಿಗಳಿಗೆ ಏರಿತ್ತು. ಅಂದರೆ ಸುಮಾರು 15,000 ರೂ ಹೆಚ್ಚು. ಮೋದಿ ಅವರು 2014 ಮೇ 26ರಂದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಪ್ರಧಾನಿಯಾದ ಬಳಿಕ ಘೋಷಿಸಿರುವ ಪ್ರಕಾರ ಮೋದಿ ಅವರ ಬಳಿ ಯಾವುದೇ ಮೋಟಾರು ವಾಹನಗಳು/ ವಿಮಾನ/ ವಿಹಾರ ನೌಕೆಗಳು/ ಹಡಗುಗಳು ಇಲ್ಲ. ಬ್ಯಾಂಕ್ ಖಾತೆ ಇರುವುದು ಗುಜರಾತಿನಲ್ಲಿ, ದೆಹಲಿಯಲ್ಲಿ ಇಲ್ಲ. ಅವರ ಹೆಸರಿನಲ್ಲಿ ಯಾವುದೇ ಸಾಲ ಇಲ್ಲ, ಅವರ ಬಳಿ ಇರುವ ಚಿನ್ನಾಭರಣಗಳು ಎಂದರೆ 4 ಚಿನ್ನದ ಉಂಗುರಗಳು ಮಾತ್ರ. ಇವುಗಳ ತೂಕ ಅಂದಾಜು 45 ಗ್ರಾಂ. ಮೌಲ್ಯ ಅಂದಾಜು 1.19 ಲಕ್ಷ ರೂಪಾಯಿ. 2014 ಆಗಸ್ಟ್ 18 ಪ್ರಕಾರ ಉಂಗುರಗಳ ಮೌಲ್ಯ 1.21 ಲಕ್ಷ ರೂ. ಇತ್ತು. 2016 ಜನವರಿ 30ರಂದು ಮಾಹಿತಿಗಳು ಅಪ್ ಡೇಟ್ ಆಗಿದ್ದವು.
2016: ನವದೆಹಲಿ: ಕಳೆದ ವರ್ಷ ಸಿಯಾಚಿನ್ ಹಿಮಪಾತಕ್ಕೆ ಸಿಲುಕಿ ವೀರ ಮರಣ ಕಂಡಿರುವ ಧಾರವಾಡ (ಕರ್ನಾಟಕ) ಲ್ಯಾನ್ಸ್ ನಾಯ್ಕ್  ಹನುಮಂತಪ್ಪ ಕೊಪ್ಪದ್ ಅವರಿಗೆ ನವದೆಹಲಿಯಲ್ಲಿ ಮರಣೋತ್ತರ ಸೇನಾ ಪದಕ ನೀಡಿ ಗೌರವಿಸಲಾಯಿತು. ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹನುಮಂತಪ್ಪ ಅವರ ಪತ್ನಿ ಮಹಾದೇವಿ ಅವರು ಸೇನಾ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ಅವರಿಂದ ಪದಕ ಸ್ವೀಕರಿಸಿದರು. ಇದೇ ವೇಳೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಹಾಗೂ ಜೀವವನ್ನೇ ಮುಡಿಪಾಗಿಟ್ಟು ಹೋರಾಟ ನಡೆಸಿರುವ ಯೋಧರಿಗೆ ಶೌರ್ಯ ಪ್ರಶಸ್ತಿ ನೀಡ ಗೌರವಿಸಲಾಯಿತು.

2017: ಜಮ್ಮು: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಅವಿತುಕೊಂಡ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ತೀವ್ರ ಗುಂಡಿನ ಕಾಳಗ ನಡೆಯಿತು. ಪಹಲ್ಗಾಮ್ ಪ್ರದೇಶದ ಅವೂರಾ ಗ್ರಾಮದಲ್ಲಿ ಉಗ್ರಗಾಮಿಗಳು ಅಡಗಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಮೇರೆಗೆ ಭದ್ರತಾ ಪಡೆಗಳು ಪ್ರದೇಶಕ್ಕೆ ಮುತ್ತಿಗೆ ಹಾಕಿದವು. ಆಗ ಭಯೋತ್ಪಾದಕರು ಗುಂಡು ಹಾರಿಸತೊಡಗಿದರು. ಸೈನಿಕರೂ ಗುಂಡು ಹಾರಿಸುವ ಮೂಲಕ ಪ್ರತ್ಯುತ್ತರ ನೀಡಿದಾಗ ಗುಂಡಿನ ಘರ್ಷಣೆ ಆರಂಭವಾಯಿತು ಎಂದು ಸುದ್ದಿ ಮೂಲಗಳು ಹೇಳಿದವು. ಭಯೋತ್ಪಾದಕರ ಇರುವಿಕೆ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದನ್ನು ಅನುಸರಿಸಿ ಭದ್ರತಾ ಪಡೆಗಳು ಪ್ರದೇಶದಲ್ಲಿ ಶೋಧಕಾರ್ಯ ಆರಂಭಿಸಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
2009: ದೀರ್ಘಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕ ತಪನ್ ಸಿನ್ಹಾ (84) ಕೋಲ್ಕತದ ಖಾಸಗಿ ಆಸ್ಪತ್ರೆಯಲ್ಲಿ ಈದಿನ ನಿಧನರಾದರು. ನ್ಯೂಮೋನಿಯಾ ದಿಂದ ಬಳಲುತ್ತಿದ್ದ ಸಿನ್ಹಾ ಅವರಿಗೆ ಜೀವರಕ್ಷಕ ಯಂತ್ರದ ಆಧಾರ ನೀಡಲಾಗಿತ್ತು. ನಟಿಯೂ ಆಗಿದ್ದ ಅವರ ಪತ್ನಿ ಅರುಂಧತಿ ದೇವಿ 1990ರಲ್ಲೇ ಮೃತರಾಗಿದ್ದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದ ತಪನ್ ಸಿನ್ಹಾ ಅತ್ಯದ್ಭುತ ಕಥಾ ನಿರೂಪಕರೆಂದು ಖ್ಯಾತರಾಗಿದ್ದರು. ಆಸ್ಕರ್ ಪ್ರಶಸ್ತಿ ಪಡೆದಿರುವ ಸತ್ಯಜಿತ್ ರೇ ಚಿತ್ರಗಳಿಗೆ ಸರಿಗಟ್ಟುವ ಚಿತ್ರಗಳನ್ನು ನಿರ್ದೇಶಿಸಿದ್ದರೂ ತಪನ್ ಸಿನ್ಹಾ ಅಷ್ಟೊಂದು ಖ್ಯಾತಿ ಗಳಿಸಲಿಲ್ಲ. ಅಮೆರಿಕದ ಚಿತ್ರಗಳು ಹಾಗೂ ನಿರ್ದೇಶಕರಿಂದ ಸ್ಫೂರ್ತಿ ಪಡೆದಿದ್ದ ಸಿನ್ಹಾ ತಂತ್ರಜ್ಞರಾಗಿ ಚಿತ್ರರಂಗ ಪ್ರವೇಶಿಸಿದರು. ಅವರು ನಿರ್ದೇಶಿಸಿದ 41 ಚಿತ್ರಗಳಲ್ಲಿ 19 ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದವು. ಲಂಡನ್, ವೆನಿಸ್, ಮಾಸ್ಕೊ, ಬರ್ಲಿನ್ ಚಿತ್ರೋತ್ಸವಗಳಲ್ಲಿ ಅವರ ಚಿತ್ರಗಳು ಪ್ರದರ್ಶನ ಕಂಡು ಅಂತಾರಾಷ್ಟ್ರೀಯ ವಿಮರ್ಶಕರ ಶ್ಲಾಘನೆಗೆ ಪಾತ್ರವಾಗಿದ್ದವು. ಸತ್ಯಜಿತ್ ರೇ ಅವರ 'ಪಥೇರ್ ಪಾಂಚಾಲಿ' ಬಿಡುಗಡೆಯಾಗುವ ಒಂದು ವರ್ಷ ಮೊದಲೇ 1954ರಲ್ಲಿ ಸಿನ್ಹಾ ಅವರ ಮೊದಲ ಚಿತ್ರ 'ಅಂಕುಶ್' ಬಿಡುಗಡೆಯಾಗಿತ್ತು. ಜಮೀನುದಾರರೊಬ್ಬರಿಗೆ ಸೇರಿದ್ದ ಆನೆಯ ಬಾಯಿಂದ ಕಥೆ ಹೇಳಿಸುವ ತಂತ್ರಗಾರಿಕೆ ಹೊಸದಾಗಿದ್ದರೂ, ಗಲ್ಲಾ ಪೆಟ್ಟಿಗೆಯಲ್ಲಿ ಈ ಚಿತ್ರ ಸೋತಿತ್ತು. 'ಕಾಬೂಲಿವಾಲಾ', 'ಏಕ್ ಡಾಕ್ಟರ್ ಕಿ ಮೌತ್', 'ಆದ್ಮಿ ಔರ್ ಔರತ್'ನಂತಹ ಉತ್ಕೃಷ್ಟ ಚಿತ್ರಗಳನ್ನು ಸಿನ್ಹಾ ನಿರ್ದೇಶಿಸಿದ್ದರು.

2009: ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ಮಹಾ ನಿರ್ದೇಶಕರಾಗಿ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಕೆ.ಎನ್.ಶ್ರೀವಾತ್ಸವ ಅವರನ್ನು ನೇಮಕ ಮಾಡಲಾಯಿತು. 2006ರಿಂದ ಕೇಂದ್ರ ಸರ್ಕಾರದಲ್ಲಿ ಸೇವೆಯಲ್ಲಿದ್ದ ಅವರು ಪ್ರಸ್ತುತ ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ.

2009: ಧರ್ಮಸ್ಥಳ ಮಂಜುನಾಥ ದೇವರ ಸನ್ನಿಧಿಯಲ್ಲಿ ಪ್ರತಿನಿತ್ಯ ದೇವರ ಹಾಗೂ ಗಣ್ಯರ ತುಲಾಭಾರ ಹಮ್ಮಿಕೊಳ್ಳುವ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಇದೇ ಮೊದಲ ಬಾರಿಗೆ ಉಡುಪಿ ಕೃಷ್ಣಮಠದಲ್ಲಿ ವಿಶೇಷ ತುಲಾಭಾರ ನೆರವೇರಿತು. ಡಾ. ಹೆಗ್ಗಡೆ ಅವರಿಗೆ 60 ವರ್ಷ ಪೂರ್ಣಗೊಂಡ ನಿಮಿತ್ತ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಸಹಸ್ರಾರು ಅಭಿಮಾನಿಗಳ ಹರ್ಷೋದ್ಘಾರಗಳ ಮಧ್ಯೆ ನಾಣ್ಯಗಳ ತುಲಾಭಾರ ನೆರವೇರಿಸಲಾಯಿತು.

2009: ಆರ್ಥಿಕ ಹಿಂಜರಿಕೆ ಪರಿಣಾಮ ಮುಂದುವರೆದು, ಕೆನಡಾ ಮೂಲದ ದೂರಸಂಪರ್ಕ ಸಾಧನ ಮತ್ತು ಮೂಲ ಸೌಕರ್ಯ ಸೇವಾ ಕಂಪೆನಿ 'ನಾರ್ಟೆಲ್ ನೆಟ್‌ವರ್ಕ್ಸ್ ಕಾರ್ಪೊರೇಷನ್ ' ಬಹುತೇಕ ದಿವಾಳಿಯಾಯಿತು. ಆ ಮೂಲಕ, ಉತ್ತರ ಅಮೆರಿಕ ಖಂಡದ ಮತ್ತೊಂದು ಬೃಹತ್ ಕಂಪೆನಿ ಆರ್ಥಿಕ ಹಿಂಜರಿತದ ತಾಪಕ್ಕೆ ಮುಕ್ಕಾಲಂಶ ಕರಗಿಹೋದಂತಾಯಿತು. ನಾರ್ಟೆಲ್ ಕಂಪೆನಿ ಅಮೆರಿಕ, ಕೆನಡಾದಲ್ಲಿನ ತನ್ನ ಕಚೇರಿಗಳು ದಿವಾಳಿ ಎದ್ದಿವೆ ಎಂದು ಒಪ್ಪಿಕೊಂಡಿತು. ನಾರ್ಟೆಲ್ ನೆಟ್‌ವರ್ಕ್ಸ್ ಕಾರ್ಪೊರೇಷನ್ ಮತ್ತು ನಾರ್ಟೆಲ್ ನೆಟ್‌ವರ್ಕ್ಸ್ ಕ್ಯಾಪಿಟಲ್ ಅಮೆರಿಕ ಸರ್ಕಾರಕ್ಕೆ ದಿವಾಳಿ ಅರ್ಜಿ ಸಲ್ಲಿಸಿ, ದಿವಾಳಿಯಿಂದ ರಕ್ಷಣೆ ನೀಡುವ 11 ಕಲಂನಡಿ ಸರ್ಕಾರದ ನೆರವು ಯಾಚಿಸಿದವು.

2009: ಕೇರಳದ ಕರಾವಳಿ ಗ್ರಾಮ ಮರಾಡಿನಲ್ಲಿ 2003 ರಲ್ಲಿ ನಡೆದ ಎಂಟು ಜನರ ಕೊಲೆಗೆ ಸಂಬಂಧಿಸಿದಂತೆ 62 ಆರೋಪಿಗಳಿಗೆ ಕೋಯಿಕ್ಕೋಡ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ (ವಿಶೇಷ ನ್ಯಾಯಾಲಯ) ಬಾಬು ಮ್ಯಾಥ್ಯೂ ಪಿ.ಜೋಸೆಫ್ ಅವರು ಮಸೀದಿಯನ್ನು ದುರುಪಯೋಗ ಪಡಿಸಿಕೊಂಡದ್ದಕ್ಕಾಗಿ ಅಬ್ದುಲ್ ಲತೀಫ್ ಎಂಬ ಆರೋಪಿಗೂ ಆರು ವರ್ಷ ಶಿಕ್ಷೆ ವಿಧಿಸಿದರು. ಈ ಎಲ್ಲ ಆರೋಪಿಗಳು ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪನ್ನು ಡಿಸೆಂಬರಿನಲ್ಲಿ ಪ್ರಕಟಿಸಿತ್ತು. ಈದಿನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಯಿತು. ಆರೋಪಿಗಳು ಜೈಲಿನಲ್ಲಿ ಕಳೆದ ಸಮಯವನ್ನು ಶಿಕ್ಷೆಯ ಒಂದು ಭಾಗ ಎಂದು ಪರಿಗಣಿಸಬೇಕು ಎಂದು ನ್ಯಾಯ ಮೂರ್ತಿಗಳು ಹೇಳಿದರು. ಮರಾಡಿನಲ್ಲಿ 2003 ರ ಮೇ 2 ರಂದು ನಡೆದ ಕೋಮುಗಲಭೆಯಲ್ಲಿ ಎಂಟು ಜನ ಮೃತರಾಗಿದ್ದರು. 2002 ರಲ್ಲಿ ಸಹ ಆರು ಜನ ಜೀವ ಕಳೆದುಕೊಂಡಿದ್ದರು. ಈ ಎರಡೂ ವರ್ಷಗಳಲ್ಲಿನ ಗಲಭೆಯ ಕುರಿತು ಕೇಂದ್ರ ಸರ್ಕಾರ ಸಿಬಿಐ ತನಿಖೆ ನಡೆಸಬೇಕು ಎಂದು ಕೇರಳ ಸರ್ಕಾರ ಮನವಿ ಮಾಡಿತ್ತು.

2009: ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬಾಂಡ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಆಮೇಥಿಯ ಗ್ರಾಮವೊಂದಕ್ಕೆ ತೆರಳಿ ಅಲ್ಲಿನ ದಲಿತರ ಮನೆಗಳಲ್ಲಿ ಆತಿಥ್ಯ ಸ್ವೀಕರಿಸಿ ವಿಶಿಷ್ಟ ಅನುಭವ ಪಡೆದರು. ಆ ದಲಿತರ ಮನೆಯಲ್ಲಿ ಅತ್ಯಾಧುನಿಕ , ಐಷಾರಾಮಿ ಶಯ್ಯಾಗೃಹವಾಗಲಿ, ಮಂಚವಾಗಲಿ ಇರಲಿಲ್ಲ. ಹುಲ್ಲಿನ ಮನೆಯಲ್ಲಿ ಇದ್ದುದು ಹಗ್ಗದಿಂದ ಮಾಡಲಾಗಿದ್ದ ಸಾಮಾನ್ಯ ಮಂಚ. ಇದರಲ್ಲೇ ಡೇವಿಡ್ ಮಲಗಿ ನಿದ್ರಿಸಿದರು. ಮನೆಯ ಪಕ್ಕದಲ್ಲೇ ಹುಲ್ಲು ಮೇಯುವ ಹಸು ಮತ್ತು ಕೋಣಗಳು ಇದ್ದವು.

2008: ಅನಿಲ್ ಧೀರೂಬಾಯಿ ಅಂಬಾನಿ ಸಮೂಹದ ರಿಲಯನ್ಸ್ ಪವರ್ ನ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಮೊದಲ ದಿನವೇ ಹೂಡಿಕೆದಾರರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತಗೊಂಡು ಸಂಗ್ರಹಿಸಲು ಉದ್ದೇಶಿಸಿದ ಮೊತ್ತಕ್ಕಿಂತ 10.8 ಪಟ್ಟು ಹೆಚ್ಚಿನ ಹಣ ಸಂಗ್ರಹವಾಯಿತು. ದೇಶದ ಇದುವರೆಗಿನ ಅತಿ ದೊಡ್ಡ ಐಪಿಒ ಇದಾಗಿದ್ದು, ನೀಡಿಕೆ ಆರಂಭವಾದ ದಿನವೇ 10 ಪಟ್ಟುಗಳಷ್ಟು (ರೂ 1.08 ಲಕ್ಷ ಕೋಟಿ) ಹೆಚ್ಚಿನ ಖರೀದಿ ಬೇಡಿಕೆ ವ್ಯಕ್ತವಾಯಿತು. ಷೇರುಪೇಟೆಯಲ್ಲಿ ಇದೊಂದು ಅಸಾಮಾನ್ಯ ಘಟನೆ ಎಂದೇ ದಾಖಲಾಯಿತು. ಒಟ್ಟು 22.80 ಕೋಟಿಗಳಷ್ಟು ಷೇರುಗಳನ್ನು ಆರಂಭಿಕ ಸಾರ್ವಜನಿಕ ಕೊಡುಗೆಗೆ ಬಿಡುಗಡೆ ಮಾಡಲಾಗಿದ್ದು, ಈದಿನ ಒಂದೇ ದಿನ 220 ಕೋಟಿ ಷೇರುಗಳಿಗೆ ಬೇಡಿಕೆ (ಬಿಡ್) ಕಂಡು ಬಂದಿತು.

2008: ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದ ಭೀರ್ ಭೂಮ್ ಮತ್ತು ದಕ್ಷಿಣ ದೀನಾಪುರ್ ಜಿಲ್ಲೆಗಳಲ್ಲಿ ಕೋಳಿಜ್ವರ ವ್ಯಾಪಕವಾಗಿ ಕಾಣಿಸಿಕೊಂಡಿರುವುದನ್ನು ದೃಢಪಡಿಸಿತು. ಈ ಪ್ರದೇಶಗಳಲ್ಲಿ ಸಾಮೂಹಿಕ ಕೋಳಿ ಹತ್ಯೆ ಸಿದ್ಧತೆ ನಡೆಯಿತು. ಈ ಭಾಗದಲ್ಲಿ ಒಂದೇ ದಿನ ಸುಮಾರು 18,000 ಕೋಳಿಗಳು ಜ್ವರದಿಂದ ಸತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಇತರ ಕೋಳಿಗಳ ಸಾಮೂಹಿಕ ಹತ್ಯೆಗೆ ಸಜ್ಜಾದರು.

2008: ನ್ಯೂಜಿಲೆಂಡಿನ ಪರ್ವತಾರೋಹಿ ಸರ್ ಎಡ್ಮಂಡ್ ಹಿಲರಿ ಅವರ ಸ್ಮರಣಾರ್ಥ ನೇಪಾಳದ ಈಶಾನ್ಯ ಪ್ರದೇಶದಲ್ಲಿರುವ ಲುಕ್ಲಾ ವಿಮಾನ ನಿಲ್ದಾಣಕ್ಕೆ `ಹಿಲರಿ ತೇನ್ ಸಿಂಗ್ ವಿಮಾನ ನಿಲ್ದಾಣ' ಎಂದು ನೇಪಾಳ ಸರ್ಕಾರ ನಾಮಕರಣ ಮಾಡಿತು. 1953ರಲ್ಲಿ ನ್ಯೂಜಿಲೆಂಡಿನ ಹಿಲರಿ ಮತ್ತು ನೇಪಾಳದ ತೇನ್ ಸಿಂಗ್ ಅವರು ಪ್ರಪಂಚದಲ್ಲೇ ಅತ್ಯಂತ ಎತ್ತರದ ಎವರೆಸ್ಟ್ ಪರ್ವತಾರೋಹಣ ಮಾಡಿ ಜಾಗತಿಕ ಮಟ್ಟದಲ್ಲಿ ನೇಪಾಳಕ್ಕೆ ಹೆಸರು ತಂದುಕೊಟ್ಟಿದ್ದರು.

2008: ಕೃಷ್ಣ ಮಠದ ಪರ್ಯಾಯ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಈದಿನ ಬೆಳಿಗ್ಗೆ ಆಶಾಭಾವನೆ ಮೂಡಿಸಿದ್ದ ಒಡಂಬಡಿಕೆ ಅಂತಿಮ ಹಂತದಲ್ಲಿ ಬಿದ್ದು ಹೋಗಿ, ಪೇಜಾವರ ಶ್ರೀಗಳ ನೇತೃತ್ವದಲ್ಲಿ ಯತಿಗಳು ಉಪವಾಸ ಆರಂಭಿಸಿದರು. ಉಪವಾಸದಲ್ಲಿ ವಿಶ್ವೇಶತೀರ್ಥರು, ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥರು, ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರು, ಅದಮಾರು ಕಿರಿಯ ಯತಿ ವಿಶ್ವಪ್ರಿಯ ತೀರ್ಥರು ಪಾಲ್ಗೊಂಡರು.

2008: ಮಹಾರಾಷ್ಟ್ರದ ದಾಬೋಲ್ ಮತ್ತು ಬೆಂಗಳೂರು ನಡುವಣ ಅನಿಲ ಸರಬರಾಜು ಕೊಳವೆ ಮಾರ್ಗ ಸ್ಥಾಪಿಸುವ ಪ್ರಸ್ತಾವಕ್ಕೆ ರಾಷ್ಟ್ರದ ಪ್ರಮುಖ ಅನಿಲ ಸರಬರಾಜು ಸಂಸ್ಥೆಯಾದ ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ (ಗೇಲ್ ಇಂಡಿಯಾ) ನಿರ್ದೇಶಕ ಮಂಡಳಿಯು ತಾತ್ವಿಕ ಒಪ್ಪಿಗೆ ನೀಡಿತು. ದಾಬೋಲ್ ಮತ್ತು ಬೆಂಗಳೂರು ನಡುವಣ 730 ಕಿಲೋ ಮೀಟರ್ ಉದ್ದದ ಈ ಕೊಳವೆ ಮಾರ್ಗದ ಮೂಲಕ ಪ್ರತಿನಿತ್ಯ 16 ದಶಲಕ್ಷ ಕ್ಯುಬಿಕ್ ಮೀಟರ್ ಅನಿಲವನ್ನು ಸಾಗಣೆ ಮಾಡುವ ಉದ್ದೇಶ ಹೊಂದಲಾಗಿದ್ದು, 2,500 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯನ್ನು 2011-12ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಕಂಪೆನಿಯ ಪ್ರಕಟಣೆ ತಿಳಿಸಿತು.

2008: ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಒಲಿಂಪಿಯನ್ ವಿರೇನ್ ರಸ್ಕಿನ ಅಂತಾರಾಷ್ಟ್ರೀಯ ಹಾಕಿಗೆ ಮುಂಬೈಯಲ್ಲಿ ವಿದಾಯ ಪ್ರಕಟಿಸಿದರು. ಶಿಕ್ಷಣವನ್ನು ಮುಂದುವರಿಸುವ ಉದ್ದೇಶದಿಂದ ಅವರು ಈ ನಿರ್ಧಾರ ಕೈಗೊಂಡರು. ಮಿಡ್ ಫೀಲ್ಡರ್ ಆಗಿದ್ದ ರಸ್ಕಿನ ಎಂಟು ವರ್ಷಗಳಿಂದ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಪ್ರೀಮಿಯರ್ ಹಾಕಿ ಲೀಗಿನಲ್ಲಿ 2004 ರಿಂದ 2007ರವರೆಗೆ ಮರಾಠಾ ವಾರಿಯರ್ ತಂಡವನ್ನು ಮುನ್ನಡೆಸಿದ್ದರು.

2008: ಕರ್ನಾಟಕ ನಾಟಕ ಅಕಾಡೆಮಿಯ ಪುಸ್ತಕ ಬಹುಮಾನಕ್ಕೆ ಲೇಖಕ ಜಯಪ್ರಕಾಶ ಮಾವಿನಕುಳಿ, `ಪ್ರಜಾವಾಣಿ'ಯ ಉಪ ಸುದ್ದಿ ಸಂಪಾದಕ ಗುಡಿಹಳ್ಳಿ ನಾಗರಾಜ, ವರದಿಗಾರ ಗಣೇಶ ಅಮಿನಗಡ, ಮತ್ತು ಎಸ್.ಎಂ.ಗಂಗಾಧರಯ್ಯ ಅವರ ಕೃತಿಗಳು ಆಯ್ಕೆಯಾದವು.

2008: ಡಾ. ಜಿಎಸ್ಸೆಸ್ ವಿಶ್ವಸ್ಥ ಮಂಡಳಿಯು 2007ನೇ ಸಾಲಿನ `ಡಾ. ಜಿಎಸ್ಸೆಸ್ ಪ್ರಶಸ್ತಿ'ಗಾಗಿ ವಿಮರ್ಶಕಿ ಡಾ.ಬಿ.ಎನ್.ಸುಮಿತ್ರಾಬಾಯಿ ಅವರನ್ನು ಆಯ್ಕೆ ಮಾಡಿತು.

2007: ಕುವೈತ್ ನ್ಯಾಯಾಲಯವೊಂದು ಆಡಳಿತ ನಡೆಸುತ್ತಿರುವ ಅಲ್-ಸಭಾ ರಾಜಕುಟುಂಬದ ಸದಸ್ಯ ಷೇಕ್ ತಲಾಲ್ ಎಂಬವರಿಗೆ ಮಾದಕ ವಸ್ತು ಕಳ್ಳಸಾಗಣೆಗಾಗಿ ಮರಣದಂಡನೆ ಹಾಗೂ 35,000 ಡಾಲರುಗಳ ದಂಡವನ್ನು ವಿಧಿಸಿತು. ಬಿಡೂನ್ ಎಂಬ ಅರಬ್ ವ್ಯಕ್ತಿ, ಒಬ್ಬ ಬಾಂಗ್ಲಾದೇಶಿ ಹಾಗೂ ಒಬ್ಬ ಭಾರತೀಯನಿಗೂ ನ್ಯಾಯಾಲಯ ಜೀವಾವಧಿ ಸಜೆ ವಿಧಿಸಿತು. ಒಬ್ಬ ಲೆಬನಾನ್ ವ್ಯಕ್ತಿ ಮತ್ತು ಒಬ್ಬ ಇರಾಕಿ ವ್ಯಕ್ತಿಗೆ ಏಳು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. ಕುವೈತಿ ಪೊಲೀಸರು ಕಳೆದ ವರ್ಷ ಏಪ್ರಿಲಿನಲ್ಲಿ ಈ ತಂಡವನ್ನು ಬಂಧಿಸಿ, ಅವರಿಂದ 10 ಕಿ.ಗ್ರಾಂ. ಕೊಕೇನ್ ಮತ್ತು 120 ಕಿ.ಗ್ರಾಂ. ಹಶಿಷ್ ಸೇರಿದಂತೆ ಭಾರಿ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದರು. ಕುವೈತಿನ ಒಳಾಡಳಿತ ಹಾಗೂ ರಕ್ಷಣಾ ಸಚಿವರಾದ ಷೇಕ್ ಅಲ್-ಮುಬಾರಕ್ ಅಲ್-ಸಭಾ ಅವರ ಆದೇಶದ ಮೇರೆಗೆ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿತ್ತು.

2007: ಕಾಡುಗಳ್ಳ ವೀರಪ್ಪನ್ ಪತ್ತೆಗಾಗಿ ನೇಮಿಸಲಾಗಿದ್ದ ಜಂಟಿ ವಿಶೇಷ ಕಾರ್ಯಪಡೆಯಿಂದ ದೌರ್ಜನ್ಯಕ್ಕೆ ಈಡಾದ 89 ವ್ಯಕ್ತಿಗಳಿಗೆ ಒಟ್ಟು 2.89 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ನೀಡುವಂತೆ ಕೇಂದ್ರ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಶಿಫಾರಸು ಮಾಡಿತು.

2007: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಅವರ ಬಲಗೈ ಬಂಟರಾಗಿದ್ದ ಅವರ ಮಲ ಸಹೋದರ ಬರ್ಜಾನ್ ಇಬ್ರಾಹಿಂ ಅಲ್ ಟಿಕ್ರಿತಿ ಮತ್ತು ಸದ್ದಾಮ್ ನಡೆಸುತ್ತಿದ್ದ ಕ್ರಾಂತಿಕಾರಿ ನ್ಯಾಯಾಲಯದ ಮುಖ್ಯಸ್ಥರಾಗಿದ್ದ ಅವಾದ್ ಅಹಮದ್ ಅಲ್ ಬಂಡರ ಈ ಇಬ್ಬರನ್ನೂ ಬೆಳಗಿನ ಜಾವ (ಭಾರತೀಯ ಕಾಲಮಾನ 5.30) ಗಲ್ಲಿಗೇರಿಸಲಾಯಿತು.

2007: ಅಣು ವಿದ್ಯುತ್ ಸೇರಿದಂತೆ ನವೀಕರಿಸಬಹುದಾದ ಇಂಧನ ಮೂಲಗಳನ್ನು ಅಭಿವೃದ್ಧಿಗೊಳಿಸಿ ಇಂಧನ ಭದ್ರತೆಗೆ ಒತ್ತು ನೀಡಲು ಭಾರತ ಸೇರಿದಂತೆ ಪೂರ್ವ ಏಷ್ಯ ಖಂಡದ 15 ರಾಷ್ಟ್ರಗಳು ಸೆಬುವಿನಲ್ಲಿ ಒಪ್ಪಿಕೊಂಡವು. ಇಂಧನ ಭದ್ರತೆಯ ಸೆಬು ಘೋಷಣೆಗೆ ಈ ಎಲ್ಲ ರಾಷ್ಟ್ರಗಳು ಸಹಿ ಮಾಡಿದವು.

2006: ಕೆ.ಕೆ. ಬಿರ್ಲಾ ಪ್ರತಿಷ್ಠಾನವು ಹಿಂದಿ ಸಾಹಿತ್ಯಕ್ಕೆ ನೀಡುವ 2005ನೇ ಸಾಲಿನ ವ್ಯಾಸ ಸಮ್ಮಾನ್ ಪ್ರಶಸ್ತಿಯು ಲೇಖಕಿ ಚಂದ್ರಕಾಂತಾ ಅವರ ಕಥಾ ಸತಿಸರ್ ಕಾದಂಬರಿಗೆ ಲಭಿಸಿತು. 2.5 ಲಕ್ಷ ರೂಪಾಯಿ ನಗದು ಪುರಸ್ಕಾರ ಹೊಂದಿರುವ ಈ ಪ್ರಶಸ್ತಿ ಹಿಂದಿ ಸಾಹಿತ್ಯದಲ್ಲಿ ನೀಡಲಾಗುತ್ತಿರುವ ಪ್ರಮುಖ ಪ್ರಶಸ್ತಿಗಳಲ್ಲಿ ಒಂದು.

2006: ತೈಲ ಸಮೃದ್ಧ ಕುವೈತ್ ರಾಷ್ಟ್ರವನ್ನು ಸುಮಾರು 30 ವರ್ಷಗಳ ಕಾಲ ಆಳಿದ ದೊರೆ ಶೇಖ್ ಜಬರ್ ಅಲ್- ಸಭಾ ನಿಧನರಾದರು. ಶೇಕ್ ಸಾದ್ ಅಲ್ - ಸಭಾ ಅವರನ್ನು ಜಬರ್ ಉತ್ತರಾಧಿಕಾರಿಯಾಗಿ ಕುವೈತ್ ಸಂಪುಟ ನೇಮಕ ಮಾಡಿತು.

2006: ಸೌರವ್ಯೂಹ ರಚನೆ ಬಗ್ಗೆ ಮಹತ್ವದ ಸುಳಿವು ನೀಡಬಹುದಾದ ಧೂಮಕೇತುವಿನ ದೂಳನ್ನು ಹೊತ್ತು ತಂದ ಅಂತರಿಕ್ಷ ಕೋಶ ಸುರಕ್ಷಿತವಾಗಿ ಅಮೆರಿಕದ ಸೇನಾ ನೆಲೆಯಲ್ಲಿ ಸುರಕ್ಷಿತವಾಗಿ ಭೂಮಿಗೆ ವಾಪಸಾಯಿತು. 2.9 ಶತಕೋಟಿ ಮೈಲುಗಳಷ್ಟು ದೀರ್ಘಪಯಣ ಪೂರ್ಣಗೊಳಿಸಿದ ಕೋಶವು ಅಮೆರಿಕದ ವಾಯುಪಡೆಯ ಉತಾಹ್ ಪರೀಕ್ಷಾ ಮತ್ತು ತರಬೇತಿ ಪ್ರದೇಶದಲ್ಲಿ ನಿಗದಿತ ಸಮಯಕ್ಕಿಂತ ಎರಡು ನಿಮಿಷ ಮೊದಲೇ ಧರೆಗೆ ಇಳಿಯಿತು. ಸ್ಟಾರ್ ಡಸ್ಟ್ ಹೆಸರಿನ ಯೋಜನೆಯಡಿ ಅಂತರಿಕ್ಷದಲ್ಲಿ ಪಯಣ ಕೈಗೊಂಡಿದ್ದ 45 ಕಿಲೋಗ್ರಾಂ ತೂಕದ (100 ಪೌಂಡ್) ಕೋಶ (ಸ್ಪೇಸ್ ಕ್ಯಾಪ್ಸೂಲ್) ವೈಲ್ಡ್-2 ಧೂಮಕೇತುವಿನ ದೂಳನ್ನು ತನ್ನ ಒಡಲಲ್ಲಿ ಹೊತ್ತು ತಂದಿದೆ. ಈ ಯೋಜನೆಯ ನಿರ್ವಾಹಕ ಟಾಮ್ ಡಕ್ಸಬರಿ. 2004ರಲ್ಲಿ ಸೌರವ್ಯೂಹದ ಅಣುಗಳನ್ನು ಹೊತ್ತು ತಂದಿದ್ದ ಜೆನೆಸಿಸ್ ಹೆಸರಿನ ಕೋಶ ಪ್ಯಾರಾಚೂಟ್ ಬಿಚ್ಚಿಕೊಳ್ಳದೆ ಅಪಘಾತಕ್ಕೆ ಒಳಗಾಗಿತ್ತು. ಸ್ಟಾರ್ ಡಸ್ಟ್ ಯೋಜನೆಯ ಅಂತರಿಕ್ಷ ಕೋಶವು ಪ್ರತಿ ಗಂಟೆಗೆ 46,440 ಕಿಮೀ (28,860 ಮೈಲು) ವೇಗದಲ್ಲಿ ಭೂಮಿಯ ವಾತಾವರಣ ಪ್ರವೇಶಿಸಿ 13 ನಿಮಿಷಗಳಲ್ಲಿ ಸೇನಾ ನೆಲೆಗೆ ಬಂದು ಇಳಿಯಿತು. ಮಾನವ ನಿರ್ಮಿತ ನೌಕೆಯೊಂದು / ಕೋಶವೊಂದು ಇಷ್ಟೊಂದು ಗರಿಷ್ಠ ವೇಗದಲ್ಲಿ ಪಯಣಿಸಿದ್ದು ಇದೇ ಮೊದಲು. ಸೌರವ್ಯೂಹದ ಹುಟ್ಟಿನ ಗುಟ್ಟು ಅರಿಯಲು ನಾಸಾ ವಿಜ್ಞಾನಿಗಳು 1999ರಲ್ಲಿ ಈ ಯೋಜನೆ ಆರಂಭಿಸಿದ್ದರು. ವೈಲ್ಡ್-2 ಧೂಮಕೇತುವಿನ ದೂಳು ಸಂಗ್ರಹಿಸಲು ಈ ಸ್ಟಾರ್ ಡಸ್ಟ್ ಕೋಶವು 480 ಕೋಟಿ ಕಿಮೀ ಕ್ರಮಿಸಿತ್ತು. ಸೂರ್ಯನಿಗೆ ಸುತ್ತು ಹಾಕಿ, ಗುರು ಗ್ರಹದ ಸಮೀಪ ಕೂಡಾ ಸುಳಿದಿತ್ತು. ಧೂಮಕೇತುಗಳು ಗ್ರಹಗಳ ಹುಟ್ಟಿನ ಪ್ರಕ್ರಿಯೆ ನಂತರ ಉಳಿದ ಅವಶೇಷಗಳು ಎಂದು ಭಾವಿಸಲಾಗಿದೆ. ಹೀಗಾಗಿ 4.5 ಶತಕೋಟಿ ವರ್ಷಗಳಷ್ಟು ಹಳೆಯ ಸೌರವ್ಯೂಹದ ಹುಟ್ಟಿನ ರಹಸ್ಯಗಳನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡಿವೆ ಎಂಬ ಗುಮಾನಿ ಇದೆ. ಈ ರಹಸ್ಯ ಭೇದಿಸುವ ಮೊದಲ ಹಂತದ ಕಾರ್ಯಾಚರಣೆ ಇದು.

2006: ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲ ಅವರಿಗೆ ಈಟಿವಿ ನೀಡುವ ವರ್ಷದ ಕನ್ನಡಿಗ-2005 ಪ್ರಶಸ್ತಿಯನ್ನು ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಪ್ರದಾನ ಮಾಡಿದರು.

1998: ಹಿರಿಯ ರಾಜಕಾರಣಿ ಗುಲ್ಜಾರಿಲಾಲ್ ನಂದಾ ನಿಧನರಾದರು. 1964 ಮತ್ತು 1966ರಲ್ಲಿ ಎರಡು ಬಾರಿ ಅವರು ಭಾರತದ ಹಂಗಾಮಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.

1986: ಸಂಪೂರ್ಣ ಮಹಿಳಾ ಸಿಬ್ಬಂದಿ ಮೂಲಕ ಮೊತ್ತ ಮೊದಲ ಭಾರತೀಯ ವಾಣಿಜ್ಯ ಪ್ರಯಾಣಿಕ ವಿಮಾನ ಹಾರಾಟವನ್ನು ಇಂಡಿಯನ್ ಏರ್ ಲೈನ್ಸ್ ನಡೆಸಿತು. ಕ್ಯಾಪ್ಟನ್ ಸೌದಾಮಿನಿ ದೇಶಮುಖ್ ಮತ್ತು ಸಹ ಪೈಲಟ್ ನಿವೇದಿತಾ ಭಾಸಿನ್ ಅವರು ಇಬ್ಬರು ಗಗನಸಖಿಯರ ನೆರವಿನೊಂದಿಗೆ ಐಸಿ 258 ವಿಮಾನವನ್ನು ಸಿಲ್ಚಾರ್ನಿಂದ ಕಲ್ಕತ್ತಾಕ್ಕೆ (ಈಗಿನ ಕೋಲ್ಕತ್ತಾ) ಹಾರಿಸಿದರು.

1962: ಸಾಹಿತಿ ಮಾನಸ ಹುಟ್ಟಿದ ದಿನ.

1956: ಕಲಾವಿದ ಪರಮೇಶ್ವರ ಹೆಗಡೆ ಜನನ.

1953 ಸಾಹಿತಿ ಗೋವಿಂದರಾಜು ಟಿ ಹುಟ್ಟಿದ ದಿನ.

1949: ಜನರಲ್ ಕೆ.ಎಂ. ಕಾರಿಯಪ್ಪ ಅವರು ಭಾರತದ ಪ್ರಪ್ರಥಮ ಸೇನಾ ದಂಡನಾಯಕರಾಗಿ ಸರ್ ರಾಯ್ ಬೌಚರ್ ಅವರಿಂದ ಅಧಿಕಾರ ವಹಿಸಿಕೊಂಡರು. ಈ ದಿನವನ್ನು ಭಾರತದಲ್ಲಿ `ಸೇನಾ ದಿನ'ಆಗಿ ಆಚರಿಸಲಾಗುತ್ತದೆ. 1986ರಲ್ಲಿ ಭಾರತದ ಪ್ರಥಮ ಸೇನಾ ದಂಡನಾಯಕರಾದ 37ನೇ ವರ್ಷಾಚರಣೆಗೆ ಸಂದರ್ಭದಲ್ಲಿ ಜನರಲ್ ಕಾರಿಯಪ್ಪ ಅವರಿಗೆ `ಫೀಲ್ಡ್ ಮಾರ್ಷಲ್' ಹುದ್ದೆಗೆ ಬಡ್ತಿ ನೀಡಲಾಯಿತು.

1929: ಅಮೆರಿಕಾದಲ್ಲಿ ನಾಗರಿಕ ಹಕ್ಕುಗಳ ಚಳವಳಿಯನ್ನು ಹುಟ್ಟು ಹಾಕಿದ ಕರಿಯ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ (1929-1968) ಹುಟ್ಟಿದ ದಿನ.

1928: ಕಲಾವಿದೆ ಲಲಿತಾ ಉಭಯಂಕರ ಜನನ.

1920: ಸಾಹಿತಿ ಆರ್. ಸಿ. ಹಿರೇಮಠ ಹುಟ್ಟಿದ ದಿನ.

1918: ಈಜಿಪ್ಟಿನ ಅಧ್ಯಕ್ಷ ಗಮೆಲ್ ಅಬ್ದುಲ್ ನಾಸೆರ್ (1918-1970) ಹುಟ್ಟಿದ ದಿನ.

1916: ಖ್ಯಾತ ನಾಟಕಕಾರ, ಸಂಗೀತಗಾರ, ವಾಗ್ಗೇಯಕಾರ ಹೊನ್ನಪ್ಪ ಭಾಗವತರ್ (15-1-1916ರಿಂದ 1-10-1992) ಅವರು ಚಿಕ್ಕಲಿಂಗಪ್ಪ- ಕಲ್ಲವ್ವ ದಂಪತಿಯ ಮಗನಾಗಿ ನೆಲಮಂಗಲ ತಾಲ್ಲೂಕಿನ ಚೌಡಸಂದ್ರದಲ್ಲಿ ಜನಿಸಿದರು.

1908: ಹಂಗೇರಿಯನ್ ಸಂಜಾತ ಅಮೆರಿಕನ್ ಪರಮಾಣು ತಜ್ಞ ಎಡ್ವರ್ಡ್ ಟೆಲ್ಲರ್ ಹುಟ್ಟಿದ ದಿನ. 1945ರಲ್ಲಿನಿರ್ಮಿಸಲಾದ ಜಗತ್ತಿನ ಮೊತ್ತ ಮೊದಲ ಪರಮಾಣು ಬಾಂಬ್ ನಿರ್ಮಾಣದಲ್ಲಿ ಪಾಲ್ಗೊಂಡಿದ್ದ ಇವರು ಜಗತ್ತಿನ ಮೊತ್ತ ಮೊದಲ ಹೈಡ್ರೋಜನ್ ಬಾಂಬ್ ನಿರ್ಮಿಸುವಲ್ಲೂ ಮುಂಚೂಣಿಯಲ್ಲಿದ್ದ.

1906: ಅರಿಸ್ಟಾಟಲ್ ಒನಾಸಿಸ್ (1906-1975) ಹುಟ್ಟಿದ ದಿನ. ಸೂಪರ್ ಟ್ಯಾಂಕರುಗಳ ಪಡೆಯನ್ನು ನಿರ್ಮಿಸಿದ ಗ್ರೀಕ್ ಶಿಪ್ಪಿಂಗ್ ಉದ್ಯಮಿಯಾದ ಇವರು ಅಮೆರಿಕಾದ ಅಧ್ಯಕ್ಷ ಕೆನಡಿ ಅವರ ವಿಧವಾ ಪತ್ನಿ ಜಾಕೆಲಿನ್ ಕೆನಡಿ ಅವರನ್ನು ವಿವಾಹವಾದರು.

1856: ಶಾಂತಕವಿ ಕಾವ್ಯನಾಮದ ಸಾಹಿತಿ ಸಕ್ಕರಿ ಬ ಬಾಳಾಚಾರ್ಯರು (1956-1920) ಸಾತೇನಹಳ್ಳಿಯಲ್ಲಿ ಜನಿಸಿದರು.

1592: ಮೊಘಲ್ ಚಕ್ರವರ್ತಿ ಶಹಜಹಾನ್ (1592-1666) ಹುಟ್ಟಿದ ದಿನ. ಈತ ವಿಶ್ವ ಖ್ಯಾತಿಯ ತಾಜ್ ಮಹಲ್ ನಿರ್ಮಿಸಿದ ವ್ಯಕ್ತಿ.

No comments:

Post a Comment