ಇಂದಿನ ಇತಿಹಾಸ History Today ಜನವರಿ 30
2018: ನವದೆಹಲಿ: ರಾಷ್ಟ್ರವು ಮಹಾತ್ಮ
ಗಾಂಧಿ ಅವರ ೭೦ನೇ ಪುಣ್ಯತಿಥಿಯನ್ನು ಈದಿನ ಆಚರಿಸಿದ
ಹೊತ್ತಿನಲ್ಲಿ, ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳನ್ನು ಸರ್ವೋಚ್ಚ ನ್ಯಾಯಾಲಯದಿಂದ ಶಾಸನಬದ್ಧವಾಗಿ
ಆಖೈರುಗೊಳ್ಳುವುದಕ್ಕೆ ಮುಂಚಿತವಾಗಿಯೇ ಗಲ್ಲಿಗೇರಿಸಲಾಗಿದೆ ಎಂದು ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸಲಾಯಿತು. ಗಾಂಧಿ ಹತ್ಯೆಯ ಮರುವಿಚಾರಣೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ
ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟಿಗೆ ಈದಿನ ಗಾಂಧಿ ಹತ್ಯೆ ಸಂಚು ಆರೋಪಿಗಳಾದ
ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ದತ್ತಾತ್ರೇಯ ಆಪ್ಟೆ ಅವರನ್ನು ೧೯೫೦ ಜನವರಿ ೨೬ರಂದು ಭಾರತದ ಸುಪ್ರೀಂಕೋರ್ಟ್
ಅಸ್ತಿತ್ವಕ್ಕೆ ಬರುವುದಕ್ಕೆ ಕೇವಲ ೭೧ ದಿನ ಮುಂಚೆ ೧೯೪೯ರ ನವೆಂಬರ್ ೧೫ರಂದು ಗಲ್ಲಿಗೇರಿಸಲಾಯಿತು
ಎಂದು ತಿಳಿಸಲಾಯಿತು. ಅಭಿನವ ಭಾರತ ದತ್ತಿ ಸಂಸ್ಥೆಯ
ಟ್ರಸ್ಟಿ ಮುಂಬೈ ಮೂಲದ ಡಾ. ಪಂಕಜ್ ಫಡ್ನಿಸ್ ಅವರು ಸುಪ್ರೀಂಕೋರ್ಟಿಗೆ ಸಲ್ಲಿಸಲಾದ ತಮ್ಮ ಪ್ರಮಾಣಪತ್ರದಲ್ಲಿ
ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟ್ ಸಹಾಯಕ (ಅಮಿಕಸ್ ಕ್ಯೂರಿ) ಹಿರಿಯ ವಕೀಲ ಅಮರೇಂದರ್ ಶರಣ್ ಅವರು
ಸಲ್ಲಿಸಿದ ವರದಿಗೆ ಪ್ರತಿಯಾಗಿ ಅಂಶ ಅಂಶಗಳನ್ನೂ ಉತ್ತರಿಸಿದ್ದಾರೆ. ಮಹಾತ್ಮ ಗಾಂಧಿ ಅವರನ್ನು ದೆಹಲಿಯ
ಲ್ಯುಟಿಯೆನ್ಸ್‌ನ ಬಿರ್ಲಾ ಹೌಸಿನಲ್ಲಿ ೧೯೪೮ರ ಜನವರಿ ೩೦ರಂದು ಗುಂಡಿಟ್ಟು ಹತ್ಯೆಗೈಯಲಾಗಿತ್ತು. ಗೋಡ್ಸೆ
ಮತ್ತು ಆಪ್ಟೆ ಇಬ್ಬರನ್ನೂ ಪೂರ್ವ ಪಂಜಾಬ್ ಹೈಕೋರ್ಟ್ ೧೯೪೯ರ ಜೂನ್ ೨೧ರಂದು ಮರಣದಂಡನೆಯನ್ನು ದೃಢಪಡಿಸಿದ
ಬಳಿಕ ಗಲ್ಲಿಗೇರಿಲಾಯಿತು. ಆದರೆ ಜನವರಿ ೨೬ರಂದು ಭಾರತದ ಸುಪ್ರೀಂಕೋರ್ಟ್ ಅಸ್ತಿತ್ವಕ್ಕೆ ಬರುವ ಮುನ್ನವೇ
ಇತ್ಯರ್ಥಗೊಳಿಸಲು ಸಾಧ್ಯವಿಲ್ಲ ಎಂಬ ನೆಲೆಯಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಪ್ರೀವಿ
ಕೌನ್ಸಿಲ್ ಅನುಮತಿ ನೀಡಿರಲಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದರು. ಫಡ್ನಿಸ್ ಅವರು ಅಮಿಕಸ್ ಕ್ಯೂರಿ
ಅವರ ವರದಿಗೆ ಉತ್ತರವಾಗಿ ಸಲ್ಲಿಸಿರುವ ತಮ್ಮ ಪ್ರಮಾಣಪತ್ರದಲ್ಲಿ ವಕೀಲ ರಾಜನ್ ಜಯಕರ್ ಅವರನ್ನು ಉಲ್ಲೇಖಿಸಿದ್ದಾರೆ.
ರಾಜನ್ ಜಯಕರ್ ಅವರ ಗಾಂಧಿ ಹತ್ಯೆ ಪ್ರಕರಣದ ವಿಚಾರಣೆಯ ಮೂಲ ದಾಖಲೆಗಳನ್ನು ೨೦೦೦ದಲ್ಲಿ ಭಾರತದ ಸುಪ್ರೀಂಕೋರ್ಟಿನ
ಸ್ವರ್ಣ ಮಹೋತ್ಸವ ಸಂದರ್ಭದ ಪ್ರದರ್ಶನಕ್ಕಾಗಿ ಸಿದ್ಧಪಡಿಸುತ್ತಿದ್ದಾಗ ವಿಸ್ತೃತವಾಗಿ ಅಧ್ಯಯನ ನಡೆಸಿದ್ದರು.
‘ಪ್ರೀವಿ ಕೌನ್ಸಿಲ್ ಬ್ರಿಟಿಷ್ ಸಂಸತ್ತಿನ ಭಾಗವಾಗಿತ್ತು. ಇಂಗ್ಲೆಂಡಿನ ಮೇಲ್ಮನವಿಗಳನ್ನು ಹೌಸ್ ಆಫ್
ಲಾರ್ಡ್ಸ್ ಆಲಿಸುತ್ತಿದ್ದರೆ, ಬ್ರಿಟಿಷ್ ವಸಾಹತುಗಳ ಮೇಲ್ಮನವಿಗಳನ್ನು ಪ್ರಿವಿ ಕೌನ್ಸಿಲ್‌ನ ಜುಡಿಷಿಯಲ್
ಕಮೀಷನ್ ಆಲಿಸುತ್ತಿತ್ತು ಎಂದು ಜಯಕರ್ ಹೇಳಿದ್ದನ್ನು ಫಡ್ನಿಸ್ ಉಲ್ಲೇಖಿಸಿದರು. ಬ್ರಿಟಿಷ್ ಆಡಳಿತ
ಕಾಲದಲ್ಲಿ ಭಾರತದಲ್ಲಿನ ಮೇಲ್ಮನವಿಗಳನ್ನು ಆಲಿಸುವ ಅತ್ಯುನ್ನತ ಸಂಸ್ಥೆ ಪ್ರೀವಿ ಕೌನ್ಸಿಲ್ ಆಗಿತ್ತು.
ಮುಂದೆ ಅದನ್ನು ಫೆಡರಲ್ ಕೋರ್ಟ್ ಆಫ್ ಅಪೀಲ್ ಎಂಬುದಾಗಿ ಕರೆಯಲಾಯಿತು. ೧೯೫೦ರ ಜನವರಿಯಲ್ಲಿ ಭಾರತದ
ಸುಪ್ರೀಂಕೋರ್ಟ್ ಸ್ಥಾಪನೆಯೊಂದಿಗೆ ಫೆಡರಲ್ ಕೋರ್ಟ್ ಆಫ್ ಅಪೀಲ್ ರದ್ದಾಗಿತ್ತು. ಪ್ರೀವಿ ಕೌನ್ಸಿಲ್
ವ್ಯಾಪ್ತಿ ರದ್ದು ಕಾಯ್ದೆ ೧೯೪೯ ಇದೇ ವೇಳೆಗೆ ಜಾರಿಗೆ ಬಂದಿತ್ತು. ೧೯೪೯ರ ಅಕ್ಟೋಬರ್ ೨೬ರಂದು ಗೋಡ್ಸೆ
ಸೇರಿದಂತೆ ಗಾಂಧಿ ಹತ್ಯೆ ಸಂಚು ಪ್ರಕರಣದ ಆರೋಪಿಗಳ ಕುಟುಂಬ ಸದಸ್ಯರು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗೆ
(ಎಸ್ ಎಲ್ ಪಿ) ಪ್ರೀವಿ ಕೌನ್ಸಿಲ್ ಅನುಮತಿ ನಿರಾಕರಿಸಿತು. ವಿಶೇಷ ಮೇಲ್ಮನವಿ ಅಂಗೀಕರಿಸಲು ಅನುಮತಿ
ನೀಡಿದರೆ ೧೯೫೦ರ ಜನವರಿ ೨೬ರಂದು ಸುಪ್ರೀಂಕೋರ್ಟ್ ಆರಂಭವಾಗುವುದಕ್ಕೆ ಮುನ್ನವೇ ಅದನ್ನು ಇತ್ಯರ್ಥಗೊಳಿಸಲು
ಸಾಧ್ಯವಾಗದು ಎಂಬ ಕಾರಣಕ್ಕಾಗಿ ಪ್ರೀವಿ ಕೌನ್ಸಿಲ್ ಎಸ್ ಎಲ್ ಪಿ ಗೆ ಅನುಮತಿ ನಿರಾಕರಿಸಿತ್ತು. ಸುಪ್ರೀಂಕೋರ್ಟ್
ಅಸ್ತಿತ್ವಕಕ್ಕೆ ಬಂದೊಡನೆಯೇ ಎಸ್ ಎಲ್ ಪಿಯ ವಿಚಾರಣೆ ನಡೆಸುವ ಅದರ ಅಧಿಕಾರ ರದ್ದಾಗುತ್ತಿತ್ತು. ಹೀಗಾಗಿ
ಗಾಂಧಿ ಹತ್ಯೆ ಪ್ರಕರಣದ ವಿಚಾರಣೆ ಕಾನೂನುಬದ್ಧ ಅಂತಿಮತೆಯನ್ನು ಪಡೆಯಲಿಲ್ಲ ಎಂದು ಮುಂಬೈ ಮೂಲದ ಸಂಶೋಧನಕಾರ
ಪ್ರತಿಪಾದಿಸಿದರು. ತಮ್ಮ ವಾದಕ್ಕೆ ಸಮರ್ಥನೆಯಾಗಿ ಫಡ್ನಿಸ್ ಅವರು ೨೦೦೦ರ ಡಿಸೆಂಬರ್ ೨೨ರಂದು ಕೆಂಪುಕೋಟೆ
ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕೊಟ್ಟ ತೀರ್ಪನ್ನು ಉಲ್ಲೇಖಿಸಿದರು. ಈ ಪ್ರಕರಣದಲ್ಲಿ
ಸುಪ್ರೀಂಕೋರ್ಟ್ ಮರಣದಂಡನೆ ನೀಡಲಾದ ಪ್ರಕರಣಗಳಲ್ಲಿ ಪುನರ್ ಪರಿಶೀಲನೆ ಹಂತದಲ್ಲೂ ಮುಕ್ತ ನ್ಯಾಯಾಲಯ
ವಿಚಾರಣೆ ಕಡ್ಡಾಯ ಎಂದು ಹೇಳಿತ್ತು. ಸುಪ್ರೀಂಕೋರ್ಟ್ ಅಸ್ತಿತ್ವಕ್ಕೆ ಬರುವುದಕ್ಕೆ ಕೇವಲ ೭೧ ದಿನಗಳು
ಬಾಕಿ ಇದ್ದರೂ ಅಷ್ಟು ದಿನಗಳ ಅವಧಿಗೂ ಬದುಕಲು ಬಿಡದೆ, ತಾವು ನಿರಪರಾಧಿ ಎಂಬುದಾಗಿ ಪ್ರತಿಪಾದಿಸಿದ್ದ
ಎರಡನೇ ಆರೋಪಿ ನಾರಾಯಣ ದತ್ತಾತ್ರೇಯ ಆಪ್ಟೆ ಅವರಿಗೆ ಸುಪ್ರೀಂಕೋರ್ಟಿನ ಕದ ತಟ್ಟಲು ಅವಕಾಶ ನಿರಾಕರಿಸಲಾದ
ಬಗ್ಗೆ ಮುಕ್ತ ನ್ಯಾಯಾಂಗ ವಿಚಾರಣೆ ನಡೆಯಲು ಅವಕಾಶ
ನೀಡಬೇಕು ಎಂದು ಅವರು ತಮ್ಮ ಪ್ರಮಾಣಪತ್ರದಲ್ಲಿ ಪ್ರತಿಪಾದಿಸಿದರು. ಸುಪ್ರೀಂಕೋರ್ಟ್ ಅಸ್ತಿತ್ವಕ್ಕೆ
ಬರಲು ಮೂರು ತಿಂಗಳಿಗೂ ಕಡಿಮೆ ಅವಧಿ ಇದ್ದರೂ, ಅದರ ಮೆಟ್ಟಲವರೆಗೂ ತಲುಪಲು ಅವಕಾಶ ನೀಡದೆ ೧೯೪೯ರ ನವೆಂಬರ್
೧೫ರಂದು ಗೋಡ್ಸೆ ಮತ್ತು ಆಪ್ಟೆ ಅವರನ್ನು ಭಾರತದ ಪ್ರಭುತ್ವ ಗಲ್ಲಿಗೇರಿಸಿದ ಅವಸರ ಗುಮಾನಿಗಳನ್ನು
ಹುಟ್ಟು ಹಾಕುತ್ತದೆ ಎಂದು ಫಡ್ನಿಸ್
ಹೇಳಿದರು. ಗೋಡ್ಸೆ ಅವರು ಹತ್ಯೆ ಮಾಡಿದ್ದುದನ್ನು ಒಪ್ಪಿಕೊಂಡಿದ್ದರೂ, ಆಪ್ಟೆ ತಾನು ನಿರಪರಾಧಿ ಎಂಬುದಾಗಿ ಪ್ರತಿಪಾದಿಸಿದ್ದರು. ಅವರನ್ನು ಗಲ್ಲಿಗೇರಿಸಿದ್ದರ ಪರಿಣಾಮ ಅವರ ಮುಗ್ಧ ಮಕ್ಕಳ ಮೇಲಾಗಿ ಇಬ್ಬರು ಮಕ್ಕಳೂ ಅಕಾಲಿಕ ಸಾವಿಗೆ ತುತ್ತಾದರು ಎಂದು ವಿವರಿಸಿದ ಫಡ್ನಿಸ್, ಇದು ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ೧೪೨ನೇ ಪರಿಚ್ಛೇದದ ಅಡಿಯಲ್ಲಿ ತನ್ನ ಸಂವಿಧಾನದತ್ತವಾದ ಅಧಿಕಾರ ಚಲಾಯಿಸಿ ಆಪ್ಟೆ ನಿರಪರಾಧಿತ್ವಕ್ಕೆ ಸಂಬಂಧಿಸಿದಂತೆ ಮರಣೋತ್ತರವಾಗಿ ಅಂತಿಮತೆಯನ್ನು ತಂದುಕೊಡಲು ಸೂಕ್ತವಾದ ಪ್ರಕರಣ ಎಂದು ಹೇಳಿದರು.
ಹೇಳಿದರು. ಗೋಡ್ಸೆ ಅವರು ಹತ್ಯೆ ಮಾಡಿದ್ದುದನ್ನು ಒಪ್ಪಿಕೊಂಡಿದ್ದರೂ, ಆಪ್ಟೆ ತಾನು ನಿರಪರಾಧಿ ಎಂಬುದಾಗಿ ಪ್ರತಿಪಾದಿಸಿದ್ದರು. ಅವರನ್ನು ಗಲ್ಲಿಗೇರಿಸಿದ್ದರ ಪರಿಣಾಮ ಅವರ ಮುಗ್ಧ ಮಕ್ಕಳ ಮೇಲಾಗಿ ಇಬ್ಬರು ಮಕ್ಕಳೂ ಅಕಾಲಿಕ ಸಾವಿಗೆ ತುತ್ತಾದರು ಎಂದು ವಿವರಿಸಿದ ಫಡ್ನಿಸ್, ಇದು ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ೧೪೨ನೇ ಪರಿಚ್ಛೇದದ ಅಡಿಯಲ್ಲಿ ತನ್ನ ಸಂವಿಧಾನದತ್ತವಾದ ಅಧಿಕಾರ ಚಲಾಯಿಸಿ ಆಪ್ಟೆ ನಿರಪರಾಧಿತ್ವಕ್ಕೆ ಸಂಬಂಧಿಸಿದಂತೆ ಮರಣೋತ್ತರವಾಗಿ ಅಂತಿಮತೆಯನ್ನು ತಂದುಕೊಡಲು ಸೂಕ್ತವಾದ ಪ್ರಕರಣ ಎಂದು ಹೇಳಿದರು.
2018: ಚೆನ್ನೆ : ರಾಷ್ಟ್ರ ಪಿತ ಮಹಾತ್ಮ
ಗಾಂಧೀಜಿಯವರು ೭೦ ವರ್ಷಗಳ ಹಿಂದೆ ಹತ್ಯೆಗೀಡಾದಾಗ ‘ಹೇ ರಾಮ್’ ಎಂದು ಹೇಳಿರಲಿಲ್ಲ ಎಂದು
ದಶಕಗಳ ಹಿಂದೆ ಬಹಿರಂಗಪಡಿಸುವ ಮೂಲಕ ಇಡೀ ದೇಶಕ್ಕೇ
ಆಘಾತ ಉಂಟುಮಾಡಿದ್ದ ೯೬ರ ಹರೆಯದ, ಬಾಪು ಅವರ ಆಪ್ತ ಕಾರ್ಯದರ್ಶಿ ವೆಂಕಿಟ ಕಲ್ಯಾಣಂ ಅವರು "ನನ್ನ
ಮಾತುಗಳನ್ನು ಅಂದು ತಪ್ಪಾಗಿ ಗ್ರಹಿಸಲಾಗಿತ್ತು’ ಎಂದು ಹೇಳಿದರು. "ಅಂದು ನಾನು ಹೇಳಿದ್ದನ್ನು ತಪ್ಪಾಗಿ ಗ್ರಹಿಸಲಾಗಿದೆ.
ಬಾಪುಜೀ ಹೇ ರಾಮ್ ಎಂದು ಹೇಳಿರಲಿಲ್ಲ ಎಂದು ನಾನೆಂದೂ ನುಡಿದಿರಲಿಲ್ಲ; ಅವರು ಹೇ ರಾಮ್ ಎಂದು ಹೇಳಿದ್ದು
ನನಗೆ ಕೇಳಿಸಲಿಲ್ಲ ಎಂದು ಹೇಳಿದ್ದೆ. ಮಹಾತ್ಮ ಗಾಂಧೀಜಿ ಅವರು ಸಾಯುವಾಗ ಹೇ ರಾಮ್ ಎಂದು ಹೇಳಿದ್ದರೋ
ಇಲ್ಲವೋ ನನಗೆ ಗೊತ್ತಿಲ್ಲ’ ಎಂದು ವೆಂಕಿಟ ಕಲ್ಯಾಣಂ
ಹೇಳಿದರು. ಕಲ್ಯಾಣಂ ಅವರು ೧೯೪೩ರಿಂದ ೧೯೪೮ರ ವರೆಗೆ ಬಾಪು ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ೧೯೪೮ರ
ಜನವರಿ ೩೦ರಂದು ನಡೆದಿದ್ದ ಬಾಪೂಜೀ ಹತ್ಯೆಯ ಪ್ರತ್ಯಕ್ಷದರ್ಶಿ ಎಂದು ಹೇಳಿಕೊಂಡಿರುವ ಕಲ್ಯಾಣಂ
"ಗಾಂಧೀಜಿಯವರು ಗುಂಡೇಟಿನಿಂದ ನೆಲಕ್ಕೆ ಕುಸಿದು ಬಿದ್ದಾಗ ಅಲ್ಲಿ ವಿಪರೀತ ಆಕ್ರಂದನ, ಗದ್ದಲ,
ಗೊಂದಲ ಉಂಟಾಯಿತು. ಆಗ ನನಗೆ ಏನೂ ಕೇಳಿಸಲಿಲ್ಲ; ಗಾಂಧೀಜಿ ಅವರು ಸಾಯುವಾಗ ಹೇ ರಾಮ್ ಎಂದು ಹೇಳಿದ್ದಿರಬಹುದು;
ಆದರೆ ನನಗೆ ಅದು ಗೊತ್ತಿಲ್ಲ’ ಎಂದು ಕಲ್ಯಾಣಂ ಹೇಳಿದರು.
೨೦೦೬ರಲ್ಲಿ ಕಲ್ಯಾಣಂ ಅವರು ಪತ್ರಿಕಾ ಗೋಷ್ಠಿ ನಡೆಸಿ
"ಗಾಂಧೀಜಿಯವರು ಗುಂಡೇಟಿನಿಂದ ನೆಲಕ್ಕುರುಳಿ ಬೀಳುವಾಗ ಹೇ ರಾಮ್ ಎಂದು ಹೇಳಿರಲಿಲ್ಲ’ ಎಂದು ಹೇಳಿದ್ದರು. ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರು
ಕಲ್ಯಾಣಂ ಅವರ ಹೇಳಿಕೆಯಲ್ಲಿ ಹುರುಳಿಲ್ಲ ಎಂದು ಹೇಳಿದ್ದರು. ಗಾಂಧೀಜಿಯವರ ಹತ್ಯೆ ವಿಚಾರಣೆ ವೇಳೆ
ಸಾಕ್ಷ್ಯ ನುಡಿದ್ದ ಸರ್ದಾರ್ ಗುರುಬಚನ್ ಸಿಂಗ್ ಅವರ ಮಾತುಗಳನ್ನು ಉದ್ಧರಿಸಿದ ತುಷಾರ್ ಗಾಂಧಿ
"ಬಾಪು ಅವರು ಗುಂಡೇಟಿನಿಂದ ಕುಸಿದು ಬೀಳುವಾಗ ಕೈಗಳನ್ನು ಎದೆಗವುಚಿಕೊಂಡು "ಹೇ ರಾಮ್’ ಎಂದು ಹೇಳಿದ್ದರು’ ಎಂದು ಸ್ಪಷ್ಟಪಡಿಸಿದ್ದರು. ಗೋಡ್ಸೆ ಗಾಂಧೀಜಿಯವರನ್ನು
ಕೊಂದದ್ದು ಒಂದೇ ಸಲ; ಆದರೆ ರಾಜಕೀಯ ಪಕ್ಷಗಳು ಗಾಂಧೀಜಿಯವರ ಬೋಧನೆಗಳನ್ನು ಅನುಸರಿಸದೆ ನಿತ್ಯವೂ ಅವರನ್ನು
ಕೊಲ್ಲುತ್ತಿದ್ದಾರೆ ಎಂದು ಕಲ್ಯಾಣಂ ಹೇಳಿದರು.
2018: ನವದೆಹಲಿ: ಬಿಜೆಪಿಯ ಅತೃಪ್ತ ಸಂಸತ್
ಸದಸ್ಯ ಶತ್ರುಘ್ನ ಸಿನ್ಹ ಅವರು ಯಶವಂತ ಸಿನ್ಹ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ
ಉದ್ದೇಶದೊಂದಿಗೆ ಜನಿಸಿದ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹ ಅವರ ’ರಾಷ್ಟ್ರ ಮಂಚ್’ ಹೆಸರಿನ ನೂತನ ರಾಜಕೀಯ ವೇದಿಕೆಯನ್ನು ಸೇರಿದರು.
ತಮ್ಮ ಜೊತೆಗೆ ಹಲವಾರು ರಾಜಕಾರಣಿಗಳನ್ನೂ ಶತ್ರುಘ್ನ ಸಿನ್ಹ ಕರೆತಂದರು. ಈ ರಾಜಕೀಯ ವೇದಿಕೆಯು ಕೇಂದ್ರ
ಸರ್ಕಾರದ ನೀತಿಗಳ ವಿರುದ್ಧ ಚಳವಳಿ ಆರಂಭಿಸಲಿದೆ. ತೃಣಮೂಲ ಕಾಂಗ್ರೆಸ್ ಸಂಸದ ದಿನೇಶ್ ತ್ರಿವೇದಿ,
ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ, ಎನ್ ಸಿಪಿ ಸಂಸದ ಮಜೀದ್ ಮೆಮನ್, ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್
ಸಿಂಗ್, ಗುಜರಾತಿನ ಮಾಜಿ ಮುಖ್ಯಮಂತ್ರಿ ಸುರೇಶ್ ಮೆಹ್ತ ಮತ್ತು ಜನತದಾದಳ (ಯು) ನಾಯಕ ಪವನ್ ವರ್ಮ
ಅವರು ವೇದಿಕೆಯ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು. ಆರ್ ಎಲ್ ಡಿ ನಾಯಕ ಜಯಂತ್ ಚೌಧರಿ, ಮಾಜಿ
ಕೇಂದ್ರ ಸಚಿವರಾದ ಸೋಮಪಾಲ್ ಮತ್ತು ಹರ್ ಮೋಹನ್ ಧವನ್ ಅವರೂ ಸಮಾರಂಭದಲ್ಲಿ ಹಾಜರಿದ್ದರು. ಪಕ್ಷದಲ್ಲಿ
ತಮಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಲು ಅವಕಾಶ ನೀಡದ ಕಾರಣ ತಾವು ಯಶವಂತ ಸಿನ್ಹ ಅವರ ವೇದಿಕೆ
ಸೇರಿರುವುದಾಗಿ ಶತ್ರುಘ್ನ ಸಿನ್ಹ ನುಡಿದರು. ಆದರೆ ವೇದಿಕೆಯನ್ನು ಬೆಂಬಲಿಸುವ ತಮ್ಮ ನಿರ್ಧಾರವನ್ನು
ಅದು ರಾಷ್ಟ್ರೀಯ ಹಿತದ ದೃಷ್ಟಿಯಿಂದ ಕೈಗೊಂಡ ನಿರ್ಧಾರವಾದ್ದರಿಂದ ಪಕ್ಷ ವಿರೋಧಿ ಚಟುವಟಿಕೆ ಎಂದು
ಭಾವಿಸಬೇಕಾಗಿಲ್ಲ ಎಂದು ಸಿನ್ಹ ಹೇಳಿದರು. ಯಶವಂತ ಸಿನ್ಹ ಅವರು ಹಾಲಿ ಪರಿಸ್ಥಿತಿಯನ್ನು ೭೦ ವರ್ಷಗಳ
ಹಿಂದೆ ಮಹಾತ್ಮ ಗಾಂಧಿ ಅವರ ಹತ್ಯೆ ನಡೆದ ಸಂದರ್ಭದಲ್ಲಿ ಇದ್ದ ಪರಿಸ್ಥಿತಿಗೆ ಹೋಲಿಸಿದರು. ಪ್ರಜಾಪ್ರಭುತ್ವ
ಮತ್ತು ಅದರ ಸಂಸ್ಥೆಗಳು ದಾಳಿಗೆ ಈಡಾಗುತ್ತಿವೆ ಎಂದು ಅವರು ನುಡಿದರು. ನರೇಂದ್ರ ಮೋದಿ ಸರ್ಕಾರವು
ರೈತನ್ನು ’ಭಿಕ್ಷುಕರ ಸ್ಥಾನಕ್ಕೆ’ ಇಳಿಸಿದೆ ಎಂದು ಪ್ರತಿಪಾದಿಸಿದ
ಯಶವಂತ ಸಿನ್ಹ, ಸರ್ಕಾರವು ತನ್ನ ಹಿತಾಸಕ್ತಿಗಳಿಗೆ ಹೊಂದುವಂತಹ ಅಂಕಿಅಂಶಗಳನ್ನು ಮುಂದಿಡುತ್ತಿದೆ
ಎಂದು ಹೇಳಿದರು. ಏನಿದ್ದರೂ, ’ರಾಷ್ಟ್ರ ಮಂಚ್’ ರಾಜಕೀಯೇತರ ರಾಜಕೀಯ
ಕ್ರಿಯಾ ತಂಡವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಸ್ಪಷ್ಟ ಪಡಿಸಿದ ಸಿನ್ಹ, ಇದು ಯಾವುದೇ ಪಕ್ಷದ ವಿರುದ್ಧದ
ಸಂಘಟನೆ ಅಲ್ಲ, ಆದರೆ ರಾಷ್ಟ್ರೀಯ ವಿಚಾರಗಳ ಬಗ್ಗೆ ಗಮನ ಸೆಳೆಯಲಿದೆ ಎಂದು ಹೇಳಿದರು. ‘ಇದು ಸಂಘಟನೆಯಲ್ಲ,
ಆದರೆ ರಾಷ್ಟ್ರೀಯ ಚಳವಳಿ’ ಎಂದು ನುಡಿದ ಅವರು ಸರ್ಕಾರದ
ಆರ್ಥಿಕ ನೀತಿಗಳು ಮತ್ತು ವಿದೇಶೀ ನೀತಿಗಳನ್ನು ಟೀಕಿಸಿದರು. ‘ಬಿಜೆಪಿಯಲ್ಲಿ ಪ್ರತಿಯೊಬ್ಬರೂ ಭಯದಲ್ಲಿ ಬದುಕುತ್ತಿದ್ದಾರೆ,
ನಾವಲ್ಲ’ ಎಂದೂ ಅವರು ನುಡಿದರು.
2018: ನವದೆಹಲಿ: ಗುಜರಾತ್ ಮೂಲದ ಮಹಿಳೆಯೊಬ್ಬಳನ್ನು
ಬಲವಂತದಿಂದ ಮತಾಂತರ ಮಾಡಿ ಆಕೆಯನ್ನು ಸೌದಿ ಅರೇಬಿಯಾದಲ್ಲಿನ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಭಯೋತ್ಪಾದಕರಿಗೆ
ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳ ಮತ್ತು ಬೆಂಗಳೂರಿನ ೮ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ತಿಳಿಸಿತು. ೨೫ರ ಹರೆಯದ ಮಹಿಳೆ ನೀಡಿದ ದೂರನ್ನು ಆಧರಿಸಿ ಪ್ರಕರಣ
ದಾಖಲಿಸಲಾಗಿದೆ ಎಂದು ಎನ್ ಐಎ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದರು. ಮೊಹಮ್ಮದ್ ರಿಯಾಸ್ ರಶೀದ್ ಎಂಬ
ವ್ಯಕ್ತಿ ತನ್ನನ್ನು ಆಸೆಗೆ ಒಳಪಡಿಸಿ ಸೆಳೆದು, ತನ್ನ ಆಕ್ಷೇಪಾರ್ಹ ಚಿತ್ರಗಳನ್ನು ತೆಗೆದುದಲ್ಲದೆ,
ಅಕ್ರಮವಾಗಿ ದಿಗ್ಬಂಧನಕ್ಕೆ ಒಳಪಡಿಸಿದ್ದ. ಬಳಿಕ ನಕಲಿ ದಾಖಲೆಗಳನ್ನು ತಯಾರಿಸಿ ಬಳಸಿಕೊಂಡು ತನ್ನನ್ನು
ಮದುವೆಯಾಗಿ ಬಲವಂತದಿಂದ ’ಇಸ್ಲಾಮ್’ಗೆ ಮತಾಂತರಿಸಿದ್ದ ಎಂದು
ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಳು. ರಶೀದ್ ಮಹಿಳೆಯನ್ನು ೨೦೧೭ರ ಆಗಸ್ಟ್ ತಿಂಗಳಲ್ಲಿ ಐಸಿಸ್
ಗೆ ಸೇರಿಸುವ ಸಲುವಾಗಿ ಜೆಡ್ಡಾಕ್ಕೆ ಒಯ್ಯುವುದಕ್ಕೆ ಮುನ್ನ ಕೇರಳದಲ್ಲಿ ಅಕ್ರಮ ಬಂಧನದಲ್ಲಿ ಇರಿಸಿದ್ದ
ಎಂದು ಎನ್ ಐಎ ತಿಳಿಸಿತು. ರಶೀದ್ ಹೊರತಾಗಿ, ಕೇರಳದ ಕಣ್ಣೂರಿನ ಅಬ್ದುಲ್ ಮೊಹ್ಸೀನ್ ಕೆ ಮತ್ತು ನಹಸ್
ಅಬ್ದುಲ್ ಖಾದರ್, ಪೆರಿಗಡಿಯ ನಜೀಶ್ ಟಿಕೆ, ಬೆಂಗಳೂರಿನ
ಇಲಿಯಾಸ್ ಮೊಹಮ್ಮದ್, ಡಾನಿಶ್ ನಜೀಬ್ ಮತ್ತು ಗಜಿಲಾ ಮೊಯಿನ್ ಪಟೇಲ್ ಅವರನ್ನೂ ಎಫ್ ಐಆರ್ ನಲ್ಲಿ ಹೆಸರಿಸಲಾಯಿತು. ಮೂಲತಃ
ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಕ್ರಿಮಿನಲ್ ಸಂಚು ಪ್ರಕರಣ ದಾಖಲಿಸಲಾಗಿದ್ದು, ಅಕ್ರಮ ಬಂಧನ, ಸುಲಿಗೆ,
ಅತ್ಯಾಚಾರ, ಫೋರ್ಜರಿ ಜೊತೆಗೆ ಐಸಿಸ್ ಭಯೋತ್ಪಾದಕ ಸಂಘಟನೆಗೆ ನೇಮಕ ಮಾಡುವ ಸಮಾನ ಉದ್ದೇಶಕ್ಕಾಗಿ ಬಲವಂತದ
ಮತಾಂತರ ನಡೆಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಯಿತು. ಆರೋಪಿಯು ಮಹಿಳೆಯನ್ನು ವಿವಾದಾತ್ಮಕ ಇಸ್ಲಾಂ
ಧರ್ಮ ಬೋಧಕ ಝಕೀರ್ ನಾಯ್ಕ್ ಶಿಷ್ಯೆ ಆಗುವಂತೆ ಬಲವಂತ ಪಡಿಸಿದ ಎಂಬುದಾಗಿ ಮಹಿಳೆ ತನ್ನ ದೂರಿನಲ್ಲಿ
ಆಪಾದಿಸಿದ್ದುದು ಎನ್ ಐಎ ಪ್ರಕರಣ ದಾಖಲಿಸಲು ಮೂಲವಾಯಿತು ಎಂದು ಮೂಲಗಳು ತಿಳಿಸಿದವು.
2018: ಬೆಂಗಳೂರು: ನಾಡ ಕಚೇರಿ ವೆಬ್‌ಸೈಟ್ ಮೂಲಕ ಸಿದ್ಧ ಪ್ರಮಾಣಪತ್ರವನ್ನು ಯಾವುದೇ ಸ್ಥಳದಿಂದ, ಯಾವುದೇ ಸಮಯದಲ್ಲಿ ಪ್ರಿಂಟ್ ಪಡೆಯುವ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಈ ಕುರಿತು ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಬಂದಿತು. 800 ಗ್ರಾಮೀಣ ನಾಡ ಕಚೇರಿಗಳಿಂದ ಕಂದಾಯ ಇಲಾಖೆ ಪ್ರತಿ ವರ್ಷ ಸುಮಾರು 1 ಕೋಟಿ ಜಾತಿ ಪ್ರಮಾಣಪತ್ರ, ಆದಾಯ ಹಾಗೂ ವಾಸಸ್ಥಳ ಪ್ರಮಾಣಪತ್ರಗಳನ್ನು
ವಿತರಿಸುತ್ತಿದೆ. ನಾಡ ಕಚೇರಿ ಅಧಿಕೃತ ವೆಬ್ಸೈಟ್ನಲ್ಲಿ ಪ್ರಮಾಣಪತ್ರ ಪ್ರಿಂಟ್ ಪಡೆಯಲು ಲಿಂಕ್: www.nadakacheri.karnataka.gov.in2018: ನ್ಯೂಯಾರ್ಕ್: 35,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ಪ್ರಸವ ವೇದನೆಗೆ ತುತ್ತಾದ ಮಹಿಳೆಗೆ ಭಾರತೀಯ ಮೂಲದ ವೈದ್ಯರೊಬ್ಬರು ಹೆರಿಗೆ ಮಾಡಿಸಿದರು. ಪ್ಯಾರಿಸ್ನಿಂದ ಅಟ್ಲಾಂಟಿಕಾ ಮೂಲಕ ನ್ಯೂಯಾರ್ಕ್ಗೆ ಪ್ರಯಾಣಿಸುತ್ತಿದ್ದ ಏರ್ ಫ್ರಾನ್ಸ್ ವಿಮಾನದಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾದಳು. ಸದ್ಯ ಮಗು ಆರೋಗ್ಯವಾಗಿತ್ತು. ಭಾರತೀಯ ಮೂಲದ ಮೂತ್ರಶಸ್ತ್ರಜ್ಞರಾದ ಡಾ.ಸಿಜ್ ಹೇಮಲ್ ದೆಹಲಿಯಿಂದ ಕ್ಲೀವ್‌ಲ್ಯಾಂಡ್‌ಗೆ ಪ್ರಯಾಣಿಸುತ್ತಿದ್ದರು. ಸಂಪರ್ಕ ವಿಮಾನವಾದ ಏರ್ ಫ್ರಾನ್ಸ್ ವಿಮಾನ ಏರಿದ್ದರು. ಪ್ರಯಾಣದ ಮಧ್ಯದಲ್ಲಿ ಮಹಿಳೆಯೊಬ್ಬರು ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಇದ್ದನ್ನು ಅರಿತ ವಿಮಾನ ಸಿಬ್ಬಂದಿ, ಸದ್ಯ ಯಾರಾದರು ವೈದ್ಯರು ಪ್ರಯಾಣಿಸುತ್ತಿದ್ದಾರೆಯೇ ಎಂದು ಪರಿಶೀಲಿಸಿದರು. ಡಾ.ಹೇಮಲ್ ಅವರು ಫ್ರಾನ್ಸ್‌ನ ಮಕ್ಕಳ ತಜ್ಞ ಡಾ.ಸ್ಟಿಫೇನ್ ಅರ್ಟೊಲೆನ್ ಜತೆಗೂಡಿ ಗರ್ಭಿಣಿಯ ನೆರವಿಗೆ ಧಾವಿಸಿದರು. ಸಕಾಲಿಕ ವೈದ್ಯಕೀಯ ನೆರವಿನಿಂದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿಗೆ 'ಜಾಕ್' ಎಂದು ವಿಮಾನದಲ್ಲಿಯೇ ನಾಮಕರಣ ಮಾಡಲಾಯಿತು. ವೈದ್ಯ ಸಹಕಾರಕ್ಕಾಗಿ ಏರ್ ಫ್ರಾನ್ಸ್ ಡಾ.ಹೇಮಲ್ ಅವರಿಗೆ ಉಡುಗೊರೆಯಾಗಿ ಟ್ರಾವಲ್ ವೋಚರ್ ಮತ್ತು ಒಂದು ಬಾಟಲ್ ಶಾಂಪೇನ್ ನೀಡಿ ಗೌರವಿಸಿತು.
2017: ಬೆಂಗಳೂರು: ಕಂಬಳ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸಲು ಹೈಕೋರ್ಟ್ ನಿರಾಕರಿಸಿ, ವಿಚಾರಣೆಯನ್ನು 2 ವಾರ ಮುಂದೂಡಿತು. ಕಂಬಳ ಕ್ರೀಡೆಯ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ನಿಷೇಧ ತೆರವುಗೊಳಿಸಲು ನಿರಾಕರಿಸಿದರು. ಜತೆಗೆ ಈ ವಿಷಯದ ಸಂಬಂಧ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪನ್ನು ಕಾದು ನೋಡಿ ಎಂದು ತಿಳಿಸಿದರು. ಕಂಬಳದ ಮೇಲಿನ ನಿಷೇಧ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಹಿಂದಿನ ದಿನ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಜನರು ಕಂಬಳ ಆಯೋಜಿಸಲು ಅವಕಾಶ ನೀಡಬೇಕು ಎಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯ ಸರ್ಕಾರ ಸಹ ಕಂಬಳ ಕ್ರೀಡೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದು, ಕಾನೂನಿನಲ್ಲಿ ತಿದ್ದುಪಡಿ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು.
2017: ನವದೆಹಲಿ: ಮಾಜಿ ಕಂಪ್ಟ್ರೋಲರ್ ಅಂಡ್ ಅಡಿಟರ್ ಜನರಲ್ (ಸಿಎಜಿ) ವಿನೋದ ರೈ ಅವರನ್ನು ಸುಪ್ರೀಂಕೋರ್ಟ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯಸ್ಥರನ್ನಾಗಿ ನೇಮಕ ಮಾಡಿತು. ಅವರ ಜೊತೆಗೇ ಖ್ಯಾತಿ ಇತಿಹಾಸ ತಜ್ಞ ರಾಮಚಂದ್ರ ಗುಹಾ, ಭಾರತದ ಮಾಜಿ ಕ್ರಿಕೆಟಿಗರಾದ ಡಯಾನಾ ಎಡ್ಯುಲ್ಜಿ ಮತ್ತು ಐಡಿಎಫ್ಸಿ ಅಧಿಕಾರಿ ವಿಕ್ರಮ್ ಲಿಮಯೆ ಅವರನ್ನು ಮಂಡಳಿಗೆ ನೇಮಕ ಮಾಡಿತು. ಕ್ರೀಡಾ ಸಚಿವಾಲಯದ ಕಾರ್ಯದರ್ಶಿಯನ್ನು ಸಮಿತಿ ಸದಸ್ಯರಾಗಿ ನೇಮಿಸುವಂತೆ ಕೇಂದ್ರ ಮಾಡಿದ ಮನವಿಯನ್ನು ವಿಚಾರಣೆ ಕಾಲದಲ್ಲಿ ಸುಪ್ರೀಂಕೋರ್ಟ್ ತಿರಸ್ಕರಿಸಿತು. ಸಚಿವರು, ಸರ್ಕಾರಿ ನೌಕರರು ಬಿಸಿಸಿಐ ಪದಾಧಿಕಾರಿಗಳಾಗದಂತೆ ನಿಷೇಧಿಸಿ ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಅದು ಉಲ್ಲೇಖಿಸಿತ್ತು. ಬಿಸಿಸಿಐಯ ಅಮಿತಾಭ್ ಚೌಧರಿ, ಅನಿರುದ್ಧ ಚೌಧರಿ ಮತ್ತು ವಿಕ್ರಮ್ ಲಿಮಯೆ ಅವರು ಫೆಬ್ರುವರಿ ಮೊದಲ ವಾರ ನಡೆಯಲಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐಯನ್ನು ಪ್ರತಿನಿಧಿಸಬೇಕು ಎಂದೂ ಸುಪ್ರೀಂಕೋರ್ಟ್ ನಿರ್ದೇಶಿಸಿತು. ಇದಕ್ಕೆ ಮುನ್ನ ಜನವರಿ 24ರಂದು ಸುಪ್ರೀಂಕೋರ್ಟ್ ಬಿಸಿಸಿಐ ವಕೀಲರು ಸಲ್ಲಿಸಿದ ಎಲ್ಲ 9 ಹೆಸರಗಳನ್ನೂ ತಿರಸ್ಕರಿಸಿತ್ತು. ಆದರೆ ಭಾರತೀಯ ಕ್ರಿಕೆಟ್ನನ್ನು ನಡೆಸಿಕೊಡಲು ಮಧ್ಯಂತರ ಸಮಿತಿಯೊಂದಕ್ಕೆ ಸಲಹೆಗಳನ್ನು ನೀಡುವ ಅವಕಾಶವನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಕಲ್ಪಿಸಿಕೊಟ್ಟಿತ್ತು.
2017: ನವದೆಹಲಿ: ಎಟಿಎಂಗಳು ಮತ್ತು ಚಾಲ್ತಿ ಖಾತೆಗಳ ಮೇಲಿನ ಹಣ ವಾಪಸಾತಿ ಮಿತಿಗಳನ್ನು (ವಿತ್ ಡ್ರಾ ಮಿತಿ) ರದ್ದು ಪಡಿಸುವ ಮೂಲಕ 500 ಮತ್ತು 1000 ರೂ ಮುಖಬೆಲೆಯ ನೋಟುಗಳ ನಿಷೇಧ ಬಳಿಕ ವಿಧಿಸಿದ್ದ ನಿಯಂತ್ರಣಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕಿತ್ತು ಹಾಕಿತು. ಇದರೊಂದಿಗೆ ಬ್ಯಾಂಕ್ ಗ್ರಾಹಕರಿಗೆ ಭಾರಿ ನಿರಾಳತೆ ಲಭಿಸಿತು. ಎಟಿಎಂಗಳ ಮೇಲೆ ವಿಧಿಸಲಾಗಿದ್ದ ನಗದು ಹಣ ವಿತ್ಡ್ರಾ ಮಿತಿ ಫೆಬ್ರವರಿ 1ರಿಂದ ರದ್ದಾಗಲಿದ್ದು, ಚಾಲ್ತಿ ಖಾತೆ, ಕ್ಯಾಷ್-ಕ್ರೆಡಿಟ್ ಖಾತೆ, ಓವರ್ ಡ್ರಾಫ್ಟ್ ವಿತ್ಡ್ರಾ ಮೇಲೆ ವಿಧಿಸಲಾಗಿದ್ದ ಮಿತಿಗಳು ತತ್ ಕ್ಷಣದಿಂದಲೇ ರದ್ದಾಗುತ್ತವೆ. ಉಳಿತಾಯ ಖಾತೆ ಮೇಲೆ ವಿಧಿಸಲಾಗಿರುವ ವಾರಕ್ಕೆ 24,000 ರೂ.ಗಳ ಮಿತಿ ಮಾತ್ರ ಸಧ್ಯಕ್ಕೆ ಮುಂದುವರೆಯಲಿದ್ದು, ಈ ಬಗ್ಗೆ ಆರ್ಬಿಐ ಪರಿಶೀಲನೆ ನಡೆಸುತ್ತಿದೆ ಎಂದು ವರದಿಗಳು ಹೇಳಿದವು. ಮೂರು ತಿಂಗಳ ಹಿಂದೆ 500 ಮತ್ತು 1000 ರೂ. ನೋಟುಗಳ ರದ್ದು ಕ್ರಮದ ಜೊತೆಗೆ ಪ್ರತಿದಿನ, ವಾರದ ಹಣ ವಿತ್ಡ್ರಾಗಳ ಮೇಲೆ ಆರ್ಬಿಐ ನಿಯಂತ್ರಣ ವಿಧಿಸಿತ್ತು. ಎಟಿಎಂಗಳಲ್ಲಿ ದೈನಿಕ 10,000 ರೂಪಾಯಿಗಳನ್ನು ಮಾತ್ರ ವಿತ್ ಡ್ರಾ ಮಾಡಬಹುದಾಗಿತ್ತು. ವಿಧಾನಸಭಾ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಹಣ ವಿತ್ ಡ್ರಾ ಮಿತಿಯನ್ನು ಸಡಿಲಗೊಳಿಸಬೇಕು ಎಂದು ಚುನಾವಣಾ ಆಯೋಗ ಬಯಸಿತ್ತು. ಆದರೆ ಆರ್ಬಿಐ ಅದಕ್ಕೆ ಒಪ್ಪಿರಲಿಲ್ಲ
2017: ಫಿಲಿಫೈನ್ಸ್ : ಫ್ರಾನ್ಸ್ ಸುಂದರಿ ಐರಿಸ್ ಮಿಟ್ಟೆನಾರೆ ಅವರು 2017ರ ಸಾಲಿನ ಭುವನ ಸುಂದರಿ ( ಮಿಸ್ ಯೂನಿವರ್ಸ್) ಆಗಿ ಆಯ್ಕೆಯಾದರು. 64 ವರ್ಷಗಳ ನಂತರ ಫ್ರಾನ್ಸ್ಗೆ ಸಂದ ಪ್ರಶಸ್ತಿ ಇದು. ಮಿಸ್ ಫ್ರಾನ್ಸ್ ಆಗಿದ್ದ ಮಿಟ್ಟೆನಾರೆ ಈಗ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಹೈಟಿಯ ರಾಕ್ಯೂಲ್ ಮತ್ತು ಕೊಲಂಬಿಯಾದ ಆ್ಯಂಡ್ರಿಯಾ ತೋವರ್ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡರು. ಮಿಸ್ ಯೂನಿವರ್ಸ್ ಸ್ವರ್ಧೆಯಲ್ಲಿ ವಿವಿಧ ರಾಷ್ಟ್ರಗಳಿಂದ 86 ಯುವತಿಯರು ಪಾಲ್ಗೊಂಡಿದ್ದರು. ಭಾರತದಿಂದ ರೋಶ್ಮಿತಾ ಹರಿಮೂರ್ತಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
2017: ವಾಷಿಂಗ್ಟನ್: ವಲಸೆ ನಿಷೇಧಿಸಲಾಗಿರುವ ಮುಸ್ಲಿಂ ರಾಷ್ಟ್ರಗಳ ಪಟ್ಟಿಗೆ ಭವಿಷ್ಯದಲ್ಲಿ
ಪಾಕಿಸ್ತಾನವನ್ನು ಸೇರಿಸುವ ಸಾಧ್ಯತೆ ಇದೆ ಎಂದು ಶ್ವೇತ ಭವನದ ಅಧಿಕಾರಿಯೊಬ್ಬರು ಹೇಳಿದ್ದರು. ವಲಸೆ ನಿಷೇಧಿಸಲಾಗಿರುವ ರಾಷ್ಟ್ರಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂಬುದನ್ನು ಅಮೆರಿಕ ಇದೇ ಮೊದಲ ಬಾರಿಗೆ ಬಹಿರಂಗ ಪಡಿಸಿತು. ಅತ್ಯಂತ ಅಪಾಯಕಾರಿ ಭಯೋತ್ಪಾದನೆ ಜೊತೆಗೆ ಗುರುತಿಸಬಹುದಾಗಿದ್ದ ರಾಷ್ಟ್ರಗಳು ಎಂಬುದಾಗಿ ಈ ಏಳುರಾಷ್ಟ್ರಗಳನ್ನು ಒಬಾಮಾ ಆಡಳಿತ ಮತ್ತು ಕಾಂಗ್ರೆಸ್ ಗುರುತಿಸಿತ್ತು. ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಹುಳ್ಯದ ಇರಾನ್, ಇರಾಕ್, ಲಿಬಿಯಾ, ಸುಡಾನ್, ಯೆಮೆನ್, ಸಿರಿಯಾ ಮತ್ತು ಸೋಮಾಲಿಯಾ ಈ ಏಳು ಮುಸ್ಲಿಂ ರಾಷ್ಟ್ರಗಳಿಂದ ವಲಸೆಯನ್ನು ಟ್ರಂಪ್ ಆಡಳಿತ ನಿಷೇಧಿಸಿದೆ ಎಂದು ಶ್ವೇತ ಭವನದ ಸಿಬ್ಬಂದಿ ಮುಖ್ಯಸ್ಥ ರೀನ್ಸ್ ಪ್ರೀಬಸ್ ಹೇಳಿದರು. ಈಗ ಇದೇ ಮಾದರಿ ಸಮಸ್ಯೆಗಳಿರುವ ಪಾಕಿಸ್ತಾನ ಮತ್ತು ಇತರ ರಾಷ್ಟ್ರಗಳನ್ನು ನೀವು ಗುರುತಿಸಬಹುದು. ಬಹುಶಃ ಈ ಪಟ್ಟಿ ಇನ್ನಷ್ಟು ಉದ್ದವಾಗಬಹುದು ಎಂದು ಅವರು ನುಡಿದರು. ಟ್ರಂಪ್ ಆಡಳಿತ ಹೊರಡಿಸಿರುವ 7 ಮುಸ್ಲಿಂ ರಾಷ್ಟ್ರಗಳಿಂದ ವಲಸೆ ನಿಷೇಧಿಸಿದ ವಿವಾದಾತ್ಮಕ ಆದೇಶದ ಪ್ರಕಾರ ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನದಂತಹ ರಾಷ್ಟ್ರಗಳಿಂದ ಬರುವ ಪ್ರವಾಸಿಗರನ್ನು ತೀವ್ರ ಪರಿಶೀಲನೆಗೆ ಗುರಿಪಡಿಸಬಹುದು. ಸಾಕಷ್ಟು ಚಿಂತನೆ, ಯೋಜನೆಯ ಬಳಿಕವೇ ಕಾರ್ಯ ನಿರ್ವಹಣಾ ಆದೇಶಗಳಿಗೆ ಸಹಿ ಮಾಡಲಾಗಿದೆ ಎಂದು ಅವರು ಹೇಳಿದರು. ಗ್ರೀನ್ ಕಾರ್ಡ್ಗೆ ವಿನಾಯ್ತಿ: ಟ್ರಂಪ್ ಆಡಳಿತ ಹೊರಡಿಸಿರುವ 7 ಮುಸ್ಲಿಂ ರಾಷ್ಟ್ರಗಳಿಂದ ಬರುವ ವಲಸಿಗರ ನಿಷೇಧ ಆದೇಶದಲ್ಲಿ ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರುವವರಿಗೆ ವಿನಾಯ್ತಿ ಇದೆ ಎಂದು ತೀವ್ರ ಪ್ರತಿಭಟನೆಗಳ ಮಧ್ಯೆ ಟ್ರಂಪ್ ಆಡಳಿತ ಪ್ರಕಟಿಸಿತು.
2017: ನವದೆಹಲಿ: ಪಂಜಾಬ್ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಆಮ್ ಆದ್ಮಿ ಪಕ್ಷದ
ಮುಖಂಡ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಜಿ ಉಗ್ರನ ಮನೆಯಲ್ಲಿ ಹಿಂದಿನ ರಾತ್ರಿ ವಾಸ್ತವ್ಯ ಹೂಡಿದ ವಿಷಯ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದ್ದು, ಅಕಾಲಿ ದಳ ಮತ್ತು ಕಾಂಗ್ರೆಸ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದವು. ಫೆಬ್ರವರಿ 4 ರಂದು ಪಂಬಾಬ್ನಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಹಲವು ದಿನಗಳಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಹಿಂದಿನ ದಿನ ಝೀರಾ ಎಂಬಲ್ಲಿ ಪ್ರದರ್ಶನದಲ್ಲಿ ಭಾಗವಹಿಸಿದ್ದ ಕೇಜ್ರಿವಾಲ್ ರಾತ್ರಿ ಮೋಗಾದಲ್ಲಿರುವ ಖಾಲಿಸ್ತಾನ ಕಮಾಂಡೋ ಫೋರ್ಸ್ನ ಮಾಜಿ ಉಗ್ರ ಗುರಿಂದರ್ ಸಿಂಗ್ ಅವರ ಮನೆಗೆ ಗುಟ್ಟಾಗಿ ಆಗಮಿಸಿ ವಾಸ್ತವ್ಯ ಹೂಡಿದ್ದರು. ಈ ವಿಷಯ ರಾಜಕೀಯ ಕೆಸರೆರೆಚಾಟಕ್ಕೆ ಎಡೆ ಮಾಡಿಕೊಟ್ಟಿತು. ಆಪ್ ಪಕ್ಷ ಮೂಲಭೂತವಾದಿಗಳಿಗೆ ಬೆಂಬಲ ನೀಡುತ್ತಿದೆ ಕಾಂಗ್ರೆಸ್ ಮತ್ತು ಅಕಾಲಿ ದಳದ ಮುಖಂಡರು ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು. ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಎಲ್ಲಾ ವಿಧದಲ್ಲೂ ಪ್ರಯತ್ನಿಸುತ್ತಿದೆ. ಕೇಜ್ರಿವಾಲ್ ಮೂಲಭೂತವಾದಿಗಳೊಂದಿಗೆ ಕೈಜೋಡಿಸುವ ಮೂಲಕ ಗೆಲುವು ಪಡೆಯಲು ಹಂಬಲಿಸುತ್ತಿದ್ದಾರೆ. ಕೇಜ್ರಿವಾಲ್ ಅವರ ಈ ನಡೆಯಿಂದ ರಾಜ್ಯದ ಶಾಂತಿ ಸೌಹಾರ್ದತೆಗೆ ಭಂಗ ಬರುವ ಸಾಧ್ಯತೆ ಇದೆ ಎಂದು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಕೇಜ್ರಿವಾಲ್ ನಡೆಯನ್ನು ವಿರೋಧಿಸಿದ್ದಾರೆ. ಕೇಜ್ರಿವಾಲ್ ಉಗ್ರರಿಗೆ ಬೆಂಬಲ ನೀಡುವ ಮೂಲಕ ರಾಜ್ಯದಲ್ಲಿ ಮತ್ತೆ ಉಗ್ರವಾದ ತಲೆ ಎತ್ತಲು ನೆರವು ನೀಡುತ್ತಿದ್ದಾರೆ ಎಂದು ಪಂಜಾಬ್ನ ಕಾಂಗ್ರೆಸ್ ಮುಖ್ಯಸ್ಥ ಕ್ಯಾ. ಅಮರಿಂದರ್ ಸಿಂಗ್ ಕಿಡಿ ಕಾರಿದರು. ಗುರಿಂದರ್ ಸಿಂಗ್ ಮೋಗಾದ ಖಾಲ್ ಕಲನ್ ಗ್ರಾಮದ ನಿವಾಸಿ. ಈತ 6 ತಿಂಗಳ ಹಿಂದೆ ತನ್ನ ಸ್ನೇಹಿತನಿಗೆ ಮನೆಯನ್ನು ಬಾಡಿಗೆಗೆ ನೀಡಿ ಇಂಗ್ಲೆಂಡ್ ತೆರಳಿ ನೆಲೆಸಿದ್ದ. ಈತ ಖಾಲಿಸ್ತಾನ ಕಮಾಂಡೋ ಫೋರ್ಸ್ನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ. 1997ರಲ್ಲಿ ಮೋಗಾದಲ್ಲಿ ನಡೆದಿದ್ದ ಬಾಂಬ್ ಈತ ಭಾಗಿಯಾಗಿದ್ದ. ಆದರೆ ಕೋರ್ಟ್ನಲ್ಲಿ ಸಾಕ್ಷಾಧಾರಗಳ ಕೊರತೆಯಿಂದಾಗಿ ಗುರಿಂದರ್ ಆರೋಪ ಮುಕ್ತನಾಗಿದ್ದ.
2017: ಇಂಫಾಲ: ಭಾರತದ ಎಲ್. ಸರಿತಾದೇವಿ ಅವರು ವೃತ್ತಿಪರ ಬಾಕ್ಸಿಂಗ್ ನಲ್ಲಿ ಗೆಲುವಿನ ಮುನ್ನುಡಿ ಬರೆದರು. ಖುಮಾನ್ ಲಾಂಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸರಿತಾ ಅವರು ಹಂಗರಿಯ ಸೋಫಿಯಾ ಬೆಡೊ ಅವರನ್ನು ಮಣಿಸಿದರು.
2009: ವಿಶ್ವದ ಮೂರನೇ ಅತಿದೊಡ್ಡ ಸರಕು-ಸಾಗಣೆ ವಿಮಾನ ಎಫ್ ಕಾರ್ಗೊ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈದಿನ ಬಂದಿಳಿಯಿತು. ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆಯುವ ವೈಮಾನಿಕ ಪ್ರದರ್ಶನಕ್ಕೆ ಸಾಧನ-ಸರಕುಗಳನ್ನು ಈ ವಿಮಾನ ಹೊತ್ತು ತಂದಿತು. ಈಗಾಗಲೇ 30 ವಿಶ್ವದಾಖಲೆ ಮಾಡಿರುವ ಈ ವಿಮಾನ, 17,1219 ಕೆ.ಜಿ. ತೂಕದಷ್ಟು ಸರಕನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
2009: ಬಂಧನಕ್ಕೆ ಒಳಗಾದ ಬಿಜೆಪಿ ಶಾಸಕ ವೈ.ಸಂಪಂಗಿ ಅವರು 50 ಸಾವಿರ ರೂಪಾಯಿ ನಗದು ಮತ್ತು ರೂ 4.50 ಲಕ್ಷ ಮೊತ್ತದ ಚೆಕ್ ತೆಗೆದುಕೊಂಡಿರುವುದು ನಿಜ ಎಂಬುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್‌ಕುಮಾರ್ ದತ್ತ ತಿಳಿಸಿದರು. ಉದ್ಯಮಿ ಫರೂಕ್ ಮತ್ತು ನಯಾಜ್ ನಡುವಿನ ನಿವೇಶನ ವಿವಾದವನ್ನು ಬಗೆಹರಿಸುವ ದೃಷ್ಟಿಯಿಂದ, ನಯಾಜ್‌ಗೆ ನೀಡುವುದಕ್ಕಾಗಿ ಹಣ ಮತ್ತು ಚೆಕ್ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಲೋಕಾಯುಕ್ತರ ವಿರುದ್ಧವೇ ಆರೋಪ ಮಾಡಿರುವ ವಿಚಾರ ತಮಗೆ ಗೊತ್ತಿಲ್ಲ ಎಂದು ಇಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.
2009: ಮಂಗಳೂರು ನಗರ ಹೊರವಲಯದ ಗುರುಪುರ ಅಮೈ ಎಂಬಲ್ಲಿ ಈದಿನ ಬೆಳಗ್ಗೆ ಉಡುಪಿ ಜಿಲ್ಲೆಯ ನಂದಿಕೂರು ಅಡ್ವೆ ಕೋಟೆ ಬಾಳಿಕೆಯ ನಿವಾಸಿ ಧನಂಜಯ ಎಂಬಾತ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ. ರವಿ ಪೂಜಾರಿ ಸಹಚರ ಎನ್ನಲಾದ ಧನಂಜಯ ಮಂಗಳೂರಿನಲ್ಲಿ ಈಚೆಗೆ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಫ್ತಾ ವಸೂಲಿಗೆ ಪ್ರಯತ್ನಿಸಿದ್ದ ಎಂಬ ಆರೋಪವಿತ್ತು. ರಾತ್ರಿ ಎರಡು ಗಂಟೆ ಸುಮಾರಿಗೆ ಒಮ್ನಿ ಕಾರಿನಲ್ಲಿ ಸಾಗುತ್ತಿದ್ದ ಮೂವರನ್ನು ಪೊಲೀಸರು ತಡೆದರು. ಆಗ ಅವರು ವಾಹನವನ್ನು ವೇಗವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದರು. ಅಲ್ಲದೇ ಪೊಲೀಸರತ್ತ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿದಾಳಿ ನಡೆಸಿದ ಪರಿಣಾಮ ಧನಂಜಯ ಮೃತನಾದ. ಉಳಿದಿಬ್ಬರು ತಪ್ಪಿಸಿಕೊಂಡರು.
2009: ಬರಾಕ್ ಒಬಾಮ ಅವರು ಅಧ್ಯಕ್ಷರಾದುದರಿಂದ ತೆರವಾಗಿದ್ದ ಇಲಿನಾಯ್ ಸೆನೆಟ್ ಸ್ಥಾನವನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ಮಾರಾಟ ಮಾಡಿದ ಆಪಾದನೆಗಾಗಿ ಗೌರ್ನರ್ ರಾಡ್ ಬಾಗ್ಲೊಜೆವಿಕ್ ಅವರನ್ನು ವಾಗ್ದಂಡನೆಯ ಮೂಲಕ ಉಚ್ಛಾಟಿಸಲಾಯಿತು. ಬಾಗ್ಲೊಜೆವಿಕ್ ಅವರ ಸ್ಥಾನಕ್ಕೆ ಲೆ. ಗೌರ್ನರ್ ಪ್ಯಾಟ್ ಕ್ವಿನ್ ಅವರನ್ನು ಆಯ್ಕೆ ಮಾಡಲಾಯಿತು. ಇಲಿನಾಯ್ ಸೆನೆಟ್ ಬಾಗ್ಲೊಜೆವಿಕ್ ಅವರನ್ನು ಉಚ್ಛಾಟಿಸುವ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಿತು.
2009: ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡ ಆಂಗ್ಲಭಾಷಾ ಚಿತ್ರ 'ಸ್ಲಮ್‌ಡಾಗ್ ಮಿಲಿಯನೇರ್'ಗೆ ಪ್ರಶಸ್ತಿಗಳ ಸುರಿಮಳೆ ಮುಂದುವರಿಯಿತು. ಇಲ್ಲಿ ನಡೆದ ರಿಚರ್ಡ್ ಅಟೆನ್ ಬರೊ ಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿತು. ವರ್ಷದ ಅತ್ಯುತ್ತಮ ಚಿತ್ರ 'ಪ್ರಶಸ್ತಿ ಸ್ಲಮ್ ಡಾಗ್'' ಮುಡಿಗೇರಿತು. ಇದಲ್ಲದೇ, ಈ ಚಿತ್ರ ನಿರ್ದೇಶಿಸಿದ ಡ್ಯಾನಿ ಬೊಯ್ಲೆ ಅವರಿಗೆ 'ಅತ್ಯುತ್ತಮ ನಿರ್ದೇಶಕ' ಹಾಗೂ ಇದರಲ್ಲಿ ನಾಯಕ ನಟನಾಗಿ ನಟಿಸಿದ ದೇವ್ ಪಟೇಲ್‌ಗೆ 'ಉದಯೋನ್ಮುಖ ನಟ' ಪ್ರಶಸ್ತಿ ದೊರೆಯಿತು. 'ದಿ ರೀಡರ್' ಚಿತ್ರದ ಅಭಿನಯಕ್ಕಾಗಿ ನಾಯಕಿ ಕೇಟ್ ವಿನ್ಸಲೇಟ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
2008: ಪ್ರಸಿದ್ಧ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ (85) ಅವರು ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಸ್ವಂತ ಮನೆ 'ಉತ್ತರಾಯಣ'ದಲ್ಲಿ ಈದಿನ ರಾತ್ರಿ ನಿಧನರಾದರು. ಉಡುಪಿಯ ನಿಡಂಬೂರು ವ್ಯಾಸರಾಯ ಬಲ್ಲಾಳರು (ಜನನ: ಡಿ.1, 1923) ಕನ್ನಡ ಸಾರಸ್ವತ ಲೋಕದಲ್ಲಿ `ಬಂಡಾಯದ ಬಲ್ಲಾಳ' ಎಂದೇ ಪ್ರಸಿದ್ಧರು. ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಜಗತ್ತು ಹಾಗೂ ಸಂವೇದನೆಗಳನ್ನು ಪರಿಚಯಿಸಿದ `ಬಂಡಾಯ' ಬಲ್ಲಾಳರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕಾದಂಬರಿ. `ಆಕಾಶಕ್ಕೊಂದು ಕಂದೀಲು', `ಹೇಮಂತಗಾನ', `ವಾತ್ಸಲ್ಯ ಪಥ', `ಉತ್ತರಾಯಣ', `ಬಂಡಾಯ`, `ಅನುರಕ್ತೆ ', `ಹೆಜ್ಜೆ' (ಎರಡು ಭಾಗಗಳು) ಅವರ ಪ್ರಸಿದ್ಧ ಕಾದಂಬರಿಗಳು. ಬಲ್ಲಾಳರದ್ದು ಹೋರಾಟದ ಬದುಕು. ಅವರ ತಂದೆ ರಾಮದಾಸ ಸಂಸ್ಕೃತ ಹಾಗೂ ಕನ್ನಡದಲ್ಲಿ ವಿದ್ವಾಂಸರು. ಬಡತನ ಕಟ್ಟಿಕೊಟ್ಟ ನೋವಿನ ಬುತ್ತಿಯನ್ನು ಹೊತ್ತುಕೊಂಡೇ ಮುಂಬೈಗೆ ತೆರಳಿದ ಅವರು, ಆ ಮಹಾನಗರಿಯಲ್ಲಿ ಅನ್ನದ ಹಸಿವು ಹಾಗೂ ಸೃಜನಶೀಲತೆಯ ಹಸಿವನ್ನು ಇಂಗಿಸುವ ಮಾರ್ಗಗಳನ್ನು ಕಂಡುಕೊಂಡರು. ಮುಂಬೈಯ ತೈಲ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದುಕೊಂಡೇ ಮಹಾನಗರದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂಬೈ ನಗರದ ಜೀವಂತಿಕೆ ಹಾಗೂ ನಗರದ ಬದುಕಿನ ತಳಮಳಗಳನ್ನು ತಮ್ಮ ಕೃತಿಗಳಲ್ಲಿ ಕಲಾತ್ಮಕವಾಗಿ ಚಿತ್ರಿಸಿದರು. ನವೋದಯ, ಪ್ರಗತಿಶೀಲ, ನವ್ಯ- ಹೀಗೆ ಸಾಹಿತ್ಯ ಚಳವಳಿಗಳಿಗೆ ಮುಖಾಮುಖಿಯಾದರೂ ತಮ್ಮದೇ ಆದ `ವ್ಯಾಸ(ರಾಯ) ಮಾರ್ಗ' ರೂಪಿಸಿಕೊಂಡ ಹೆಗ್ಗಳಿಕೆ ಅವರದು. ಮುಂಬೈಯ `ಕರ್ನಾಟಕ ಸಂಘ', `ಸಾಹಿತ್ಯಕೂಟ', `ಕನ್ನಡ ಕಲಾ ಕೇಂದ್ರ'ಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಅವರು, `ನುಡಿ' ಪತ್ರಿಕೆಯಲ್ಲಿ ಕೆಲಸ ಮಾಡುವ ಮೂಲಕ ಬರವಣಿಗೆಯ ಇನ್ನೊಂದು ಸಾಧ್ಯತೆಗೆ ತಮ್ಮನ್ನು ತೆರೆದುಕೊಂಡವರು. `ಸಂಪಿಗೆ', `ಮಂಜರಿ', `ಕಾಡು ಮಲ್ಲಿಗೆ' ಹಾಗೂ `ಸಮಗ್ರ ಕಥೆಗಳು' ಬಲ್ಲಾಳರಿಗೆ ಹೆಸರು ತಂದುಕೊಟ್ಟ ಕೃತಿಗಳು. ಇಬ್ಸನ್, ಬರ್ನಾಡ್ ಷಾ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿರುವ ಅವರ ಪ್ರವಾಸ ಕಥನ `ನಾನೊಬ್ಬ ಭಾರತೀಯ ಪ್ರವಾಸಿ'. ನಿವೃತ್ತಿಯ ನಂತರ ಬಲ್ಲಾಳರು ಬೆಂಗಳೂರಿನಲ್ಲಿ ನೆಲೆಸಿದ್ದರು.
2008: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹುತಾತ್ಮರಾದ 60 ವರ್ಷಗಳ ಬಳಿಕ ಅವರ ಚಿತಾಭಸ್ಮವನ್ನು ಒಳಗೊಂಡ ಮತ್ತೊಂದು ಕಲಶವನ್ನು ಮುಂಬೈಯಲ್ಲಿ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಯಿತು. ಗಾಂಧೀಜಿ ಅವರ ಚಿತಾಭಸ್ಮ ಒಳಗೊಂಡ ಕಲಶವನ್ನು 2006ರ ಆಗಸ್ಟಿನಲ್ಲಿ ದುಬೈ ಮೂಲದ ಉದ್ಯಮಿ ಭರತ್ ನಾರಾಯಣ್ ಅವರು ಮುಂಬೈಯ ಮಣಿ ಭವನಕ್ಕೆ ಹಸ್ತಾಂತರಿಸಿದ್ದರು. ಉದ್ಯಮಿಯ ಹೆತ್ತವರು 1948ರಿಂದೀಚೆಗೆ ಈ ಚಿತಾಭಸ್ಮವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಚಿತಾಭಸ್ಮದ ಕಲಶವನ್ನು ವಿಸರ್ಜಿಸುವವರೆಗೂ ಗಾಂಧೀಜಿ ನಗರಕ್ಕೆ ಆಗಮಿಸುತ್ತಿದ್ದಾಗಲೆಲ್ಲಾ ತಂಗುತ್ತಿದ್ದ ಈ ಮಣಿ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಕೊನೆಯ ದಿನದ ತನಕವೂ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿದ್ದರು. ಮಹಾತ್ಮನ ಚಿತಾಭಸ್ಮವನ್ನು 1948ರ ಫೆಬ್ರುವರಿ 12ರಂದು ದೇಶದ ವಿವಿಧ ನದಿಗಳಲ್ಲಿ ಮತ್ತು ಸಮುದ್ರಗಳಲ್ಲಿ ವಿಸರ್ಜಿಸಲಾಗಿತ್ತು. ಆದರೆ ಇನ್ನೂ ಕೆಲವು ಅಸ್ತಿಕಲಶಗಳನ್ನು ವಿಸರ್ಜಿಸದ ಅಭಿಮಾನಿಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಕಳೆದ 60 ವರ್ಷಗಳಲ್ಲಿ ಹೀಗೆ ದೊರೆತ 2ನೇ ಚಿತಾಭಸ್ಮ ಇದು. 1997ರಲ್ಲಿ ಭುನವೇಶ್ವರದ ಬ್ಯಾಂಕ್ ಲಾಕರ್ ಒಂದರಲ್ಲಿ ಪತ್ತೆಯಾಗಿದ್ದ ಮಹಾತ್ಮ ಅವರ ಚಿತಾಭಸ್ಮವನ್ನು ಬಳಿಕ ಅಲಹಾಬಾದಿನಲ್ಲಿ ವಿಸರ್ಜಿಸಲಾಗಿತ್ತು.
2008: ಇಸ್ಲಾಮ್ ಅರ್ಥವನ್ನು ಅಪಾರ್ಥಗೊಳಿಸಿದ ಸಾಹಿತ್ಯ ಒಳಗೊಂಡಿದೆ ಎಂಬ ಆಪಾದನೆ ಮೇರೆಗೆ ಅಮೆರಿಕ ಪ್ರಕಟಣೆಯ 11 ಪುಸ್ತಕಗಳನ್ನು ಮಲೇಷ್ಯಾ ಸರ್ಕಾರ ನಿಷೇಧಿಸಿತು. ಮಲೇಷ್ಯಾದ ಆಂತರಿಕ ಭದ್ರತಾ ಸಚಿವಾಲಯ ಈ ಪುಸ್ತಕಗಳನ್ನು ನಿಷೇಧಿಸಿದ್ದು ಅವುಗಳಲ್ಲಿ 8 ಪುಸ್ತಕಗಳು ಇಂಗ್ಲಿಷಿನಲ್ಲಿ ಹಾಗೂ 3 ಸ್ಥಳೀಯ ಮಲಯ ಭಾಷೆಯಲ್ಲೂ ಇದ್ದವು. ಪುಸ್ತಕಗಳಲ್ಲಿ ಭಯೋತ್ಪಾದಕರ ಜೊತೆ ಮುಸ್ಲಿಮರನ್ನು ತಳಕು ಹಾಕಲಾಗಿದೆ ಹಾಗೂ ಇಸ್ಲಾಮ್ ಧರ್ಮ ಮಹಿಳೆಯರನ್ನು ಅನುಚಿತವಾಗಿ ನಡೆಸಿಕೊಳ್ಳುತ್ತದೆ ಎಂಬುದಾಗಿ ಮುದ್ರಿಸಲಾಗಿದೆ ಎಂದು ಮಲೇಷ್ಯಾ ಆಪಾದಿಸಿತು.
2008: ವೇಗದ ಬೌಲರುಗಳಾದ ಜಹೀರ್ ಖಾನ್, ಆರ್ ಪಿ ಸಿಂಗ್ ಮತ್ತು ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು `ಕ್ರಿಕ್ ಇನ್ಫೋ' ಪ್ರಶಸ್ತಿಗೆ ಆಯ್ಕೆಯಾದರು. ಭಾರತದ ಈ ಮೂವರಲ್ಲದೆ ಶ್ರೀಲಂಕಾ ತಂಡದ ಕುಮಾರ ಸಂಗಕ್ಕಾರ ಮತ್ತು ಲಸಿತ್ ಮಾಲಿಂಗ ಹಾಗೂ ಆಸ್ಟ್ರೇಲಿಯಾ ತಂಡದ ಆಡಮ್ ಗಿಲ್ ಕ್ರಿಸ್ಟ್ ಅವರೂ ಇದೇ ಮೊದಲ ಬಾರಿ `ಕ್ರಿಕ್ ಇನ್ಫೋ' ಪ್ರಕಟಿಸಿದ ಪ್ರಶಸ್ತಿಗೆ ಭಾಜನರಾದರು.
2007: ಭೋಪಾಲ್ ರಂಗಮಂಡಲದ ಹಿರಿಯ ನಟಿ- ನಿದರ್ೆಶಕಿ ವಿಭಾ ಮಿಶ್ರ ನವದೆಹಲಿಯಲ್ಲಿ ನಿಧನರಾದರು. ರಾಷ್ಟ್ರೀಯ ನಾಟಕಶಾಲೆ ನಿರ್ದೇಶಕ ದೇವೇಂದ್ರ ಕುಮಾರ್ ಅಂಕುರ್ ಹಾಗೂ ದೇಶದ ಹೆಸರಾಂತ ಕನ್ನಡದ ರಂಗ ನಿರ್ದೇಶಕ ಬಿ.ವಿ. ಕಾರಂತರ ಶಿಷ್ಯೆಯಾಗಿದ್ದ ವಿಭಾ ಮಿಶ್ರ ಎರಡು ವರ್ಷಗಳ ಹಿಂದೆ ಮೈಸೂರಿನ ರಂಗಾಯಣದಲ್ಲಿ ತಮ್ಮ ತಂಡದ ವತಿಯಿಂದ ನಾಟಕ ಪ್ರದರ್ಶಿಸಿದ್ದರು.
2007: ವಿಶ್ವದಲ್ಲೇ ಅತಿದೊಡ್ಡ ರಕ್ತದಾನ ಶಿಬಿರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಿತು. 50ಕ್ಕೂ ಹೆಚ್ಚು ಸಂಸ್ಥೆಗಳು ಸಹಯೋಗ ನೀಡಿದ್ದ ಈ ಶಿಬಿರದಲ್ಲಿ 400ಕ್ಕೂ ಹೆಚ್ಚು ಹಾಸಿಗೆ ವ್ಯವಸ್ಥೆ ಮಾಡಲಾಗಿತ್ತು. 100ಕ್ಕೂ ಹೆಚ್ಚು ತಜ್ಞ ವೈದ್ಯರು, 500ಕ್ಕೂ ಹೆಚ್ಚು ದಾದಿಯರು, 1000ಕ್ಕೂ ಹೆಚ್ಚು ಸ್ವಯಂ ಸೇವಕರು ಪಾಲ್ಗೊಂಡ ಈ ಶಿಬಿರದಲ್ಲಿ 7000ಕ್ಕೂ ಹೆಚ್ಚು ಜನ ರಕ್ತದಾನ ಮಾಡಿ ಇತಿಹಾಸ ನಿರ್ಮಿಸಿದರು. 2003ರಲ್ಲಿ ಮುಂಬೈಯಲ್ಲಿ ನಡೆದ ಈ ಮಾದರಿ ಶಿಬಿರದಲ್ಲಿ 5600 ಜನ ರಕ್ತದಾನ ಮಾಡಿದ್ದರು.
2007: ಏರ್ ಮಾರ್ಷಲ್ ಫಾಲಿ ಹೋಮಿ ಮೇಜರ್ (59) ಅವರನ್ನು ಕೇಂದ್ರ ಸರ್ಕಾರವು ವಾಯುಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿತು.
2006: ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ (ಎಎಸ್ಐ) ನೀಡುವ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ವಿಮಾನಶಾಸ್ತ್ರ ವಿಜ್ಞಾನಿ ಮತ್ತು ಬಾಹ್ಯಾಕಾಶ ಆಯೋಗದ ಸದಸ್ಯ ಪ್ರೊ. ರೊದ್ದಂ. ನರಸಿಂಹ ಆಯ್ಕೆಯಾದರು. ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
2006: ಲಾಹೋರಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ಪ್ರಪಾತಕ್ಕೆ ಉರುಳಿದ ಪರಿಣಾಮ 46 ಮಂದಿ ಮೃತರಾದರು. ಪಾಕಿಸ್ಥಾನದ ಈ ರೈಲು ರಾವಲ್ಪಿಂಡಿಯಿಂದ ಲಾಹೋರಿಗೆ ತೆರಳುತ್ತಿತ್ತು.
1991: ಟ್ರಾನ್ಸಿಸ್ಟರಿನ ಜಂಟಿ ಸಂಶೋಧಕ ಜಾನ್ ಬರ್ಡೀನ್ (1908-1991) ತನ್ನ 82ನೇ ವಯಸ್ಸಿನಲ್ಲಿ ಮೃತನಾದ. 1956ರಲ್ಲಿ ಭೌತವಿಜ್ಞಾನಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಗೆದ್ದುಕೊಂಡ ಈತ ಸೂಪರ್ ಕಂಡಕ್ಟಿವಿಟಿ ಸಂಶೋಧನೆಯಲ್ಲೂ ಪಾತ್ರ ವಹಿಸಿದ ವ್ಯಕ್ತಿ.
1965: ಸರ್ ವಿನ್ ಸ್ಟನ್ ಚರ್ಚಿಲ್ ಅಂತ್ಯಕ್ರಿಯೆ ನೆರವೇರಿತು. 90 ವರ್ಷಗಳ ಹಿಂದೆ ಅವರು ಹುಟ್ಟಿದ ಬೆನ್ಹೀಮ್ ಅರಮನೆಯ ಸಮೀಪದ ಬ್ಲಾಡನ್ ಚರ್ಚ್ ಯಾರ್ಡಿನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
1958: ಕಲಾವಿದೆ ಎಚ್.ಎಸ್. ಇಂದಿರಾ ಜನನ.
1933: ಅಡಾಲ್ಫ್ ಹಿಟ್ಲರ್ ಜರ್ಮನಿಯ ಚಾನ್ಸಲರ್ ಆದ. ಇದು ಜರ್ಮನಿಯ ಪ್ರಜಾತಾಂತ್ರಿಕ ಸಂಸದೀಯ ವ್ಯವಸ್ಥೆಯ ಶವ ಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯಾಯಿತು. ಕೆಲ ದಿನಗಳ ಒಳಗಾಗಿಯೇ ಹಿಟ್ಲರ್ ಎಲ್ಲ ಸಾರ್ವಜನಿಕ ಸಭೆಗಳನ್ನು ನಿಯಂತ್ರಿಸುವ ಹಾಗೂ ಪತ್ರಿಕೆಗಳನ್ನು ನಿಯಂತ್ರಿಸಲು ಬೇಕಾದ ಅಪರಿಮಿತ ಅಧಿಕಾರಗಳನ್ನು ಸರ್ಕಾರಕ್ಕೆ ನೀಡಿದ.
1927: ಈದಿನ ಹುಟ್ಟಿದ ಒಲೋಫ್ ಪಾಮೆ (Olof Palme) (1927-1986) ಮುಂದೆ ಸ್ವೀಡನ್ನಿನ ಪ್ರಧಾನಿಯಾದರು. ಅವರು 1986 ರಲ್ಲಿ ಹತ್ಯೆಗೀಡಾದರು.
1913: ಹಂಗೆರಿ ಸಂಜಾತ ಭಾರತೀಯ ವರ್ಣಚಿತ್ರ್ರ ಕಲಾವಿದೆ ಅಮೃತಾ ಶೆರ್ಗಿಲ್ (1913-1956) ಹುಟ್ಟಿದ ದಿನ. ನಗ್ನ ಚಿತ್ರಗಳನ್ನು ರಚಿಸಿದ ಈಕೆ ಭಾರತೀಯ ಚಿತ್ರಕಲೆಗೆ ಆಧುನಿಕತೆಯ ಸ್ಪರ್ಶ ನೀಡಿದವರು.
1901: ತೈಲವರ್ಣ ಹಾಗೂ ಜಲವರ್ಣ ಚಿತ್ರ ರಚನಯಲ್ಲಿ ಸಿದ್ಧಹಸ್ತರಾಗಿದ್ದ ಮಡಿವಾಳಪ್ಪ ವೀರಪ್ಪ ಮಿಣಜಗಿ ಅವರು ವೀರಪ್ಪ- ಶರಣವ್ವ ದಂಪತಿಯ ಮಗನಾಗಿ ವಿಜಾಪುರದಲ್ಲಿ ಜನಿಸಿದರು.
1785: ಚಾರ್ಲ್ಸ್ ಥಿಯೋಫಿಲಸ್ ಮೆಟ್ಕಾಫ್ (1785-1846) ಹುಟ್ಟಿದ ದಿನ. ಬ್ರಿಟಿಷ್ ಆಡಳಿತಗಾರನಾದ ಈತ ಭಾರತದ ಹಂಗಾಮಿ ಗವರ್ನರ್ ಜನರಲ್ ಆಗಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಇಂಗ್ಲಿಷನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಮುಖ ಸುಧಾರಣೆಗಳನ್ನು ಜಾರಿಗೆ ತಂದ.
No comments:
Post a Comment