Wednesday, January 2, 2019

ಇಂದಿನ ಇತಿಹಾಸ History Today ಜನವರಿ 02

ಇಂದಿನ ಇತಿಹಾಸ History Today ಜನವರಿ 02
೨೦೧೯: ತಿರುವನಂತಪುರಂ/ ಶಬರಿಮಲೈ: ಋತುಮತಿ ವಯಸ್ಸಿನ ಮಹಿಳೆಯರ ಪ್ರವೇಶ ನಿಷೇಧವನ್ನು ತೆರವುಗೊಳಿಸಿದ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಇದೇ ಮೊತ್ತ ಮೊದಲ ಬಾರಿಗೆ ೫೦ ವರ್ಷಕ್ಕಿಂತ ಕೆಳಗಿನ ವಯೋಮಾನದ ಇಬ್ಬರು ಮಹಿಳೆಯರು ನಸುಕಿನಲ್ಲಿ ಪೊಲೀಸರ ರಕ್ಷಣೆಯೊಂದಿಗೆ ಶಬರಿಮಲೈ ದೇವಾಲಯವನ್ನು ಪ್ರವೇಶಿಸಿದರು. ಮಹಿಳೆಯರ ಪ್ರವೇಶವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದೃಢ ಪಡಿಸಿದ್ದು, ಸುದ್ದಿ ಹರಡುತಿದ್ದಂತೆಯೇ ಕೇರಳದ ವಿವಿಧೆಡೆಗಳಲ್ಲಿ ಭಕ್ತರು ಹಾಗೂ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನಾ ಪ್ರದರ್ಶನಗಳು ನಡೆದವು, ರಾಜ್ಯವ್ಯಾಪಿ ಹರತಾಳಕ್ಕೆ ಬಿಜೆಪಿ ಕರೆ ನೀಡಿತು. ತಿರುವನಂತಪುರಂನಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ಸ್ಟನ್ ಗನ್, ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದರು. ಮಹಿಳೆಯರು ಪ್ರವೇಶಿಸಿದ ವಿಚಾರ ಖಚಿತಗೊಂಡ ತತ್ ಕ್ಷಣವೇ ದೇವಾಲಯ ಅಧಿಕಾರಿಗಳು ದೇವಾಲಯದ ಬಾಗಿಲನ್ನು ಮುಚ್ಚಿ ಶುದ್ಧೀಕರಣ ವಿಧಿಗಳನ್ನು ನೆರವೇರಿಸಿ, ಮೂರು ಗಂಟೆಗಳ ಬಳಿಕ ಬಾಗಿಲು ತೆರೆದು ಭಕ್ತರಿಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅನುವು ಮಾಡಿಕೊಟ್ಟರು. ವಕೀಲೆಯಾದ ಕೋಯಿಕ್ಕೋಡಿನ ಕೊಯಿಲಾಂಡಿ ನಿವಾಸಿ ಬಿಂದು ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿರುವ ಮಲಪ್ಪುರಂನ ಅಂಗಡಿಪುರಂ ನಿವಾಸಿ ಕನಕ ದುರ್ಗ ಅವರು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಳಿಕ ದೇಗುಲ ಪ್ರವೇಶಿಸಿದ ಮೊದಲ ಮಹಿಳೆಯರಾಗಿದ್ದಾರೆ. ಇದಕ್ಕೆ ಮುನ್ನ ದೇವಾಲಯ ಸಮುಚ್ಚಯ ಮತ್ತು ರಾಜ್ಯದ್ಯಂತ ಭಕ್ತರಿಂದ ವ್ಯಾಪಕ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ೧೦ರಿಂದ ೫೦ ವಯಸ್ಸಿನ ನಡುವಣ ಯಾವ ಮಹಿಳೆಗೂ ದೇವಾಲಯ ಪ್ರವೇಶ ಸಾಧ್ಯವಾಗಿರಲಿಲ್ಲ.  ‘ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಿಸಿರುವುದು ವಾಸ್ತವ ವಿಷಯ. ಈ ಮುನ್ನ ಅಸಮರ್ಪಕ ಭದ್ರತೆಯ ಕಾರಣ ಅವರು ದೇಗುಲ ಪ್ರವೇಶ ಯತ್ನ ವಿಫಲಗೊಂಡಿತ್ತು. ಕರ್ತವ್ಯಕ್ಕೆ ಬದ್ಧರಾದ ಪೊಲೀಸರು ಮಹಿಳೆಯರಿಬ್ಬರಿಗೂ ಭದ್ರತೆ ಒದಗಿಸಿದ್ದಾರೆ ಎಂದು ವಿಜಯನ್ ನುಡಿದರು.
ಎರಡು ವಾರಗಳ ಹಿಂದೆ ಈ ಇಬ್ಬರು ಮಹಿಳೆಯರೂ ದೇವಾಲಯ ಪ್ರವೇಶಿಸಲು ನಡೆಸಿದ್ದ ಯತ್ನವನ್ನು ಉದ್ರಿಕ್ತ ಭಕ್ತರು ವಿಫಲಗೊಳಿಸಿದ್ದರು. ತಮ್ಮ ಯಾತ್ರಾ ಯೋಜನೆಯನ್ನು ಬಹಿರಂಗ ಪಡಿಸದಂತೆ ಅವರಿಗೆ ಸಲಹೆ ಮಾಡಿದ್ದ ಪೊಲೀಸರು, ವಿವೇಚನೆ ಬಳಸಿ ಎಚ್ಚರಿಕೆಯಿಂದ ಬಂದಲ್ಲಿ ದೇವಾಲಯ ಪ್ರವೇಶಕ್ಕೆ ಎಲ್ಲ ನೆರವು ನೀಡುವುದಾಗಿ ಭರವಸೆ ಕೊಟ್ಟಿದ್ದರು. ಬಾಗಿಲು ಬಂದ್, ಶುದ್ಧೀಕರಣ: ಮುಖ್ಯಮಂತ್ರಿ ವಿಜಯನ್ ಅವರು ಮಹಿಳೆಯರಿಬ್ಬರು ದೇಗುಲ ಪ್ರವೇಶಿಸಿದ್ದನ್ನು ಖಚಿತ ಪಡಿಸಿದ ತತ್ ಕ್ಷಣವೇ ದೇವಾಲಯದ ಆಡಳಿತ ಮಂಡಳಿಯು ದೇಗುಲದ ಬಾಗಿಲನ್ನು ಮುಚ್ಚಿ ತುರ್ತು ಸಭೆ ನಡೆಸಿತು. ದೇವಾಲಯವನ್ನು ಶುದ್ಧೀಕರಿಸಬೇಕಾಗಿದೆ ಎಂದು ತಿಳಿಸಿದ ಆಡಳಿತ ಮಂಡಳಿ ಭಕ್ತರಿಗೆ ದೇವಾಲಯದ ಪ್ರಾಂಗಣವನ್ನು ತೆರವುಗೊಳಿಸುವಂತೆ ಸೂಚಿಸಿತು. ಆದರೆ ಭಕ್ತರು ಸರದಿಯ ಸಾಲು ಬಿಟ್ಟು ಕದಲಲಿಲ್ಲ. ಈದಿನ  ಬೆಳಗ್ಗೆ ೧೦.೩೫ ಗಂಟೆಗೆ ದೇವಾಲಯದ ಸನ್ನಿಧಾನವನ್ನು ’ಶುದ್ಧೀಕರಣ ವಿಧಿಗಳನ್ನು ನೆರವೇರಿಸುವ ಸಲುವಾಗಿ ಮುಚ್ಚಲಾಯಿತು ಎಂದು ದೇವಾಲಯದ ತಂತ್ರಿ ಕಂಡಾರರು ರಾಜೀವರು ಹೇಳಿದರು.  ‘ವಿಶಿಷ್ಠ ತಾಂತ್ರಿಕ ಸಂಪ್ರದಾಯಗಳು ಮತ್ತು ಧಾರ್ಮಿಕ ವಿಧಿಗಳು ಋತುಮತಿ ಮಹಿಳೆಯರಿಗೆ ಶಬರಿಮಲೈಯಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡುವುದೇ ಇಲ್ಲ. ಅದನ್ನು ಮಹಿಳೆಯರ ಬಗೆಗಿನ ತಾರತಮ್ಯ ಎಂಬುದಾಗಿ ಪರಿಗಣಿಸಬಾರದು, ಏಕೆಂದರೆ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಸಂಪೂರ್ಣ ನಿಷೇಧ ಇಲ್ಲ. ದೇವಾಲಯದ ಮುಖ್ಯ ಅರ್ಚಕನಾಗಿ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಬೇಕಾದ ಕರ್ತವ್ಯ ಬದ್ಧತೆ ನನಗಿದೆ ಎಂದು ಅವರು ನುಡಿದರು. ಇತ್ತೀಚೆಗೆ ಮಂಡಲಂ ಪೂಜೆಯ ವೇಳೆಯಲ್ಲಿ ಬಿಂದು ಮತ್ತು ಕನಕದುರ್ಗ ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದರು. ಆದರೆ ಭಕ್ತರು ಮತ್ತು ಸಂಘ ಪರಿವಾರದ ಕಾರ್ಯಕರ್ತರ ತೀವ್ರ ಪ್ರತಿಭಟನೆಗಳ ಪರಿಣಾಮವಾಗಿ ಪೊಲೀಸರು ಅವರಿಬ್ಬರನ್ನೂ ಬಲವಂತದಿಂದ ಪಂಪಾಕ್ಕೆ ಮರಳಿ ಕರೆದೊಯ್ದಿದ್ದರು. ಪುರುಷರು ವೇಷದಲ್ಲಿ ಬಂದೆವು: ಬುಧವಾರ ತಾವು ನಸುಕಿನ ೩.೪೫ ಗಂಟೆ ವೇಳೆಯಲ್ಲಿ ಬೆಟ್ಟದ ಮೇಲಿನ ದೇಗುಲ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದೆವು ಮತ್ತು ಪಂಬಾ ಮೂಲಶಿಬಿರಕ್ಕೆ ಬೆಳಗಿನ ೫ ಗಂಟೆ ವೇಳೆಗೆ ವಾಪಸಾದೆವು ಎಂದು ಬಿಂದು ಮತ್ತು ಕನಕದುರ್ಗ ಹೇಳಿದರು. ತಾವು ಪುರುಷರ ಉಡುಪು ತೊಟ್ಟುಕೊಂಡು ಬಂದೆವು. ಎರಡು ಡಜನ್ ಪೊಲೀಸರು ಸಾದಾ ಉಡುಪಿನಲ್ಲಿ ತಮ್ಮ ಜೊತೆ ರಕ್ಷಣೆಗಾಗಿ ಬಂದಿದ್ದರು ಎಂದು ಅವರು ಪ್ರತಿಪಾದಿಸಿದರು. ಮಹಿಳೆಯರಿಬ್ಬರೂ ಆಂಬುಲೆನ್ಸಿನಲ್ಲಿ ಬಂದರು ಮತ್ತು ಪೊಲೀಸರು ದೇವಾಲಯ ತಲುಪಲು ಸಾಧ್ಯವಾಗುವಂತೆ ಅತ್ಯಂತ ಬುದ್ಧಿವಂತಿಕೆಯ ಕ್ರಮಗಳನ್ನು ತೆಗೆದುಕೊಂಡು ಅವರಿಗೆ ವ್ಯವಸ್ಥೆಗಳನ್ನು ಮಾಡಿಕೊಟ್ಟರು ಎಂದು ವರದಿಗಳು ಹೇಳಿವೆ. ಪದಿನೆಟ್ಟಾಂಪಡಿ ಏರಲಿಲ್ಲ: ತಾವು ೧೮ ಪವಿತ್ರ ಮೆಟ್ಟಿಲುಗಳನ್ನು (ಪದಿನೆಟ್ಟಾಂ ಪಡಿ) ನಿವಾರಿಸಿಕೊಂಡು ದೇವಾಲಯ ಪ್ರವೇಶಿಸಿದೆವು ಎಂದು ಬಿಂದು ಹೇಳಿದರು. ಅಯ್ಯಪ್ಪಸ್ವಾಮಿ ದರ್ಶನ ಯಾತ್ರೆಯಲ್ಲಿ ’ಪದಿನಟ್ಟಾಂ ಪಡಿ  ಮೂಲಕ ದೇವಾಲಯ ಪ್ರವೇಶ ಅತ್ಯಂತ ಪವಿತ್ರ ಎಂಬುದಾಗಿ ಪರಿಗಣಿಸಲಾಗಿದೆ.  ‘ನಾವು ಮಂಗಳವಾರ ಪೊಲೀಸರನ್ನು ಸಂಪರ್ಕಿಸಿದೆವು ಮತ್ತು ಅವರು ಸಂಪೂರ್ಣ ನೆರವಿನ ಭರವಸೆ ಕೊಟ್ಟರು ಎಂದು ಬಿಂದು ನುಡಿದರು. ಕನಕದುರ್ಗ ಅವರ ಸಹೋದರ ಭರತನ್ ಅವರು ಆಕೆ ಏನೋ ಕೆಲಸಕ್ಕಾಗಿ ತಿರುವನಂತಪುರಂಗೆ ಹೋಗುತ್ತಿರುವುದಾಗಿ ಹೇಳಿ ವಾರದ ಹಿಂದೆಯೇ ಮನೆಯಿಂದ ಹೊರಟಿದ್ದಳು ಎಂದು ಹೇಳಿದರು. ಕರಾಳದಿನ - ಬಿಜೆಪಿ: ರಾಜ್ಯದ ಪಾಲಿಗೆ ಈದಿನ ಕರಾಳದಿನ ಎಂದು ಭಾರತೀಯ ಜನತಾ ಪಕ್ಷ ಹೇಳಿತು. ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ. ಸುಧಾಕರನ್ ಅವರು ಮಹಿಳಾ ಪ್ರವೇಶವು ಮುಖ್ಯಮಂತ್ರಿ ರೂಪಿಸಿದ ಸಂಚು ಎಂದು ಆಪಾದಿಸಿ, ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕೆ ಅವರು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಲ್ಲ ವಯಸ್ಸಿನ ಮಹಿಳೆಯರಿಗೂ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿ ಸೆಪ್ಟೆಂಬರ್ ೨೮ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದಂದಿನಿಂದ ದೇವಾಲಯ ಮತ್ತು ಅದರ ಮೂಲ ಶಿಬಿರಗಳಲ್ಲಿ ನಿರಂತ ಪ್ರತಿಭಟನೆಗಳು ನಡೆದಿದ್ದವು. ಅಯ್ಯಪ್ಪ ಸ್ವಾಮಿ ನೈಷ್ಠಿಕ ಬ್ರಹ್ಮಚಾರಿ ಎಂಬುದಾಗಿ ನಂಬಿರುವ ಸಂಪ್ರದಾಯವಾದಿಗಳು, ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿ, ದೇವಾಲಯ ಪ್ರವೇಶಿಸದಂತೆ ಮಹಿಳೆಯರನ್ನು ನಿರಂತರ ತಡೆಯುತ್ತಾ ಬಂದಿದ್ದರು. ರಾಜ್ಯದ ವಿವಿಧ ಕಡೆಗಳಲ್ಲಿ ಶಬರಿಮಲೈ ದೇಗುಲಕ್ಕೆ ಮಹಿಳೆಯರಿಬ್ಬರು ಪ್ರವೇಶಿಸಿದ್ದನ್ನು ಅನುಸರಿಸಿ ಪ್ರತಿಭಟನೆಗಳು ನಡೆದಿವೆ. ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ತೀವ್ರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ತಿರುವನಂತಪುರಂನಲ್ಲಿ ಸಚಿವಾಲಯಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಐವರು ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ತಿರುವನಂತಪುರಂನ ಕೇರಳ ಸಚಿವಾಲಯಕ್ಕೆ ಬಿಜೆಪಿ ಯುವ ಮೋರ್ಚಾ ಮಹಿಳೆಯರು ನುಗ್ಗಲು ಯತ್ನಿಸಿದ ಕೆಲವು ತಾಸುಗಳ ಬಳಿಕ ಸಚಿವಾಲಯದ ಮುಂಭಾಗದಲ್ಲಿ ಬಿಜೆಪಿಯ ಯುವ ಮೋರ್ಚಾ ಮತ್ತು ಆಡಳಿತಾರೂಢ ಎಡರಂಗದ ಕಾರ್ಯಕರ್ತರ ಮಧ್ಯೆ ಘರ್ಷಣೆಗಳು ಸಂಭವಿಸಿದ್ದು ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಸ್ಟನ್ ಗ್ರೆನೇಡ್, ಆಶ್ರುವಾಯು ಶೆಲ್ ಮತ್ತು ಜಲಫಿರಂಗಿ ಬಳಸಿದರು ಎಂದು ವರದಿಗಳು ಹೇಳಿದವು. ಕೇರಳದ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರಿಗೆ ಗುರುವಾಯೂರಿನಲ್ಲಿ ಬಿಜೆಪಿ ಸದಸ್ಯರು ಕಪ್ಪು ಬಾವುಟ ತೋರಿಸಿದರೆ, ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರಿಗೆ ಕಣ್ಣೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆಯ ಬಿಸಿ ತಟ್ಟಿತು. ಕಾಸರಗೋಡಿನಲ್ಲಿ ಬಿಜೆಪಿ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು. ಮಹಿಳೆಯರ ಮನೆಗಳಿಗೆ ಬಿಗಿ ಭದ್ರತೆ: ದೇವಾಲಯ ಪ್ರವೇಶಿಸಿದ ಮಹಿಳೆಯರಿಬ್ಬರ ಮನೆಗಳ ಮೇಲೆ ದಾಳಿ ನಡೆಯಬಹುದೆಂಬ ಶಂಕೆಯನ್ನು ಅನುಸರಿಸಿ ಉಭಯರ ಮನೆಗಳಿಗೂ ಬಿಗಿ ಭದ್ರತೆ ಒದಗಿಸಲಾಗಿದೆ. ಸಶಸ್ತ್ರ ಪೊಲೀಸರನ್ನು ಕನಕದುರ್ಗ ಅವರ ಮನೆಯ ಸುತ್ತ ನಿಯೋಜಿಸಲಾಗಿದೆ. ಕಳೆದ ಡಿಸೆಂಬರ್ ೨೪ರಂದು ಬಿಜೆಪಿ ಕಾರ್ಯಕರ್ತರು ಮಲಪ್ಪುರಂ ಜಿಲ್ಲೆಯ ಪಟ್ಟಣಂತಿಟ್ಟದಲ್ಲಿನ ಆಕೆಯ ಮನೆಯ ಮೇಲೆ ದಾಳಿ ನಡೆಸಿದ್ದರು. ಕೊಟ್ಟಾಯಂನಲ್ಲಿ ಬಿಂದು ಅವರ ಮನೆಯ ಸುತ್ತ ಕೂಡಾ ಪೊಲೀಸರು ಬಿಗಿ ಭದ್ರತೆಯ ವ್ಯವಸ್ಥೆ ಮಾಡಿದರು.

೨೦೧೯: ನವದೆಹಲಿ: ರಫೇಲ್ ಯುದ್ಧ ವಿಮಾನ ವ್ಯವಹಾರ ಕುರಿತ ಚರ್ಚೆಯು  ಲೋಕಸಭೆಯಲ್ಲಿ ಕೋಲಾಹಲದ ಮಧ್ಯೆ ಎರಡು ಬಾರಿ ಕಲಾಪ ಮುಂದೂಡಿಕೆ, ಎಐಎಡಿಎಂಕೆ ಸದಸ್ಯರಿಂದ ಕಾವೇರಿ ವಿಷಯದಲ್ಲಿ ಕೂಗಾಟ, ಕಾಗದದ ವಿಮಾನಗಳ ತೂರಾಟದ ಮಧ್ಯೆ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ನಡುವಣ ’ರಫೇಲ್ ಕದನಕ್ಕೆ ಸಾಕ್ಷಿಯಾಯಿತು. ರಫೇಲ್ ಯುದ್ಧ ವಿಮಾನ ಹಗರಣದ ಕುರಿತ ಚರ್ಚೆ ಆರಂಭಕ್ಕೆ ಮುನ್ನವೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಗುರಿಮಾಡಿ ಸರಣಿ ಪ್ರಶ್ನೆಗಳನ್ನು ಎಸೆದು ’ಪ್ರಧಾನಿಗೆ ಉತ್ತರಿಸುವ ಎದೆಗಾರಿಕೆ ಇಲ್ಲ ಎಂದು ಟೀಕಿಸಿದಾಗ, ಕಾಂಗ್ರೆಸ್ ಮುಖ್ಯಸ್ಥನ ಟೀಕಾಸ್ತ್ರವನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಡೆದರು.  ’ತಮ್ಮ ಕುಟುಂಬವನ್ನೇ ಗುರಿಯಾಗಿಟ್ಟುಕೊಂಡು ಅಗಸ್ಟಾ ವೆಸ್ಟ್ ಲ್ಯಾಂಡ್ ವ್ಯವಹಾರ, ನ್ಯಾಷನಲ್ ಹೆರಾಲ್ಡ್ ಪ್ರಕರಣ ಮತ್ತು ಬೊಫೋರ್ಸ್ ಪ್ರಕರಣಗಳನ್ನು ಬಳಸಲಾಗುತ್ತಿದೆ ಎಂಬುದಾಗಿ ಹೇಳುವ ಮೂಲಕ ಕಾಂಗ್ರೆಸ್ ಮುಖ್ಯಸ್ಥರು ಸುಳ್ಳಿನ ಸರಮಾಲೆಯನ್ನೇ ಪೋಣಿಸುತ್ತಿದ್ದಾರೆ ಎಂದು ಜೇಟ್ಲಿ ಪ್ರತ್ಯಸ್ತ್ರ ಎಸೆದರು. ’ಅತ್ಯಂತ ಹಳೆಯ ಮಹಾನ್ ಪಕ್ಷವು ಈಗ ಯುದ್ಧ ವಿಮಾನ ಎಂದರೇನು ಎಂಬುದನ್ನೇ ಅರಿಯದ ಮಹಾನುಭಾವನನ್ನು ಮುಖ್ಯಸ್ಥನನ್ನಾಗಿ ಹೊಂದಿರುವುದು ರಾಷ್ಟ್ರದ ದುರಂತ ಎಂದು ಜೇಟ್ಲಿ ಕುಟುಕಿದರು. ಕಳೆದ ತಿಂಗಳು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರಕ್ಕೆ ಸಮರ್ಥನೆಯಾಗಿ ಬಂದಿದೆ. ವ್ಯವಹಾರದ ಬಗ್ಗೆ ಸುಪ್ರೀಂಕೋರ್ಟ್ ತೃಪ್ತಿ ವ್ಯಕ್ತ ಪಡಿಸಿರುವಾಗ ಅದರ ಮರುಪರಿಶೀಲನೆಗೆ ಪಕ್ಷಗಳ ನೆಲೆಯಲ್ಲಿ ವಿಭಜನೆಗೊಂಡಿರುವ ಜಂಟಿ ಸಂಸದೀಯ ಸಮಿತಿ ಏಕೆ ಬೇಕು?’ ಎಂದು ಜೇಟ್ಲಿ ಪ್ರಶ್ನಿಸಿದರು. ಮೊದಲಿಗೆ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷ ಮತ್ತು ನವೀನ್ ಪಟ್ನಾಯಕ್ ಅವರ ಬಿಜೆಡಿ ಕೂಡಾ ರಫೇಲ್ ವ್ಯವಹಾರದ ವಿರುದ್ಧ ಮಾತನಾಡಿದವು. ಬಿಜೆಪಿಯ ಜಗಳಗಂಟಿ ಮಿತ್ರ ಪಕ್ಷವಾದ ಶಿವಸೇನೆ ಕೂಡಾ ವ್ಯವಹಾರದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಯ ಆಗ್ರಹವನ್ನು ಬೆಂಬಲಿಸಿತು. ಚರ್ಚೆ ಆರಂಭಿಸಿದ ರಾಹುಲ್ ಗಾಂಧಿ ’ಪ್ರಧಾನಿಯವರು ೯೫ ನಿಮಿಷಗಳ ’ನಿಗದಿತ ಸಂದರ್ಶನವನ್ನು ಕೊಡುತ್ತಾರೆ, ಆದರೆ ರಫೇಲ್ ಪ್ರಶ್ನೆ ಕುರಿತ ಪ್ರಶ್ನೆಗಳನ್ನು ಎದುರಿಸಲು ಸಂಸತ್ತಿಗೆ ಬರುವ ಎದೆಗಾರಿಕೆಯನ್ನು ಹೊಂದಿಲ್ಲ ಎಂದು ಹೇಳಿದರು. ’ನಿನ್ನೆ, ತಮ್ಮ ಸಂದರ್ಶನದಲ್ಲೇ ಪ್ರಧಾನಿಯವರು ಹೆದರಿದಂತೆ ಮತ್ತು ಬಳಲಿದಂತೆ ಕಾಣುತ್ತಿದೆ. ರಫೇಲ್ ವಹಿವಾಟಿಗೆ ಸಂಬಂಧಿಸಿದಂತೆ ಯಾರೂ ತಮ್ಮನ್ನು ಪ್ರಶ್ನಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಇಡೀ ರಾಷ್ಟ್ರವೇ ನಿಮ್ಮನ್ನು ಪ್ರಶ್ನಿಸುತ್ತಿದೆ ಎಂದು ರಫೇಲ್ ವ್ಯವಹಾರದ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂಬ ಪಕ್ಷದ ಬೇಡಿಕೆಯನ್ನು ಪುನರುಚ್ಚರಿಸುತ್ತಾ ರಾಹುಲ್ ಹೇಳಿದರು. ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಸದಸ್ಯರು ಮಾಡುತ್ತಿದ್ದ ಘೋಷಣೆಗಳ ಬಗ್ಗೆ ತಮ್ಮ ಸ್ವರವು ಸದನಕ್ಕೆ ಕೇಳುವಂತೆ ದನಿ ಎತ್ತರಿಸಿ ಮಾತನಾಡಿದ ರಾಹುಲ್ ’ರಕ್ಷಣಾ ಸಚಿವರು ತಮಿಳುನಾಡು ಪಕ್ಷದ ಪ್ರತಿಭಟನಾ ನಿರತ ಸದಸ್ಯರ ಹಿಂದೆ ’ಅಡಗಿದ್ದಾರೆ ಎಂದು ಅಬ್ಬರಿಸಿದರು. ‘ವಾಯುಪಡೆಯ ಎಂಟು ವರ್ಷಗಳ ಪರಿಶ್ರಮದ ಬಳಿಕ ರಫೇಲ್ ವಿಮಾನವನ್ನು ಆಯ್ಕೆ ಮಾಡಲಾಯಿತು. ಅವರು ೧೨೬ ವಿಮಾನ ಬೇಕೆಂದು ಬಯಸಿದ್ದರು. ವಾಯುಪಡೆಯ ಅಗತ್ಯವನ್ನು ೧೨೬ರಿಂದ ೩೬ಕ್ಕೆ ಬದಲಾಯಿಸಿದ್ದು ಯಾರು? ನಮಗೆ ೧೨೬ ಬೇಡ ಎಂದು ವಾಯುಪಡೆ ಸರ್ಕಾರಕ್ಕೆ ಹೇಳಿತ್ತೆ?’ ಎಂದು ಪ್ರಶ್ನಿಸಿದ ರಾಹುಲ್, ’ನಮಗೆ ತುರ್ತಾಗಿ ವಿಮಾನದ ಅಗತ್ಯವಿದೆ ಎಂಬ ನೆಪವನ್ನು ಸರ್ಕಾರ ನೀಡಿದೆ. ಹಾಗಿದ್ದರೆ ಒಂದೇ ಒಂದು ವಿಮಾನ ಏಕೆ ಇನ್ನೂ ಭಾರತದಲ್ಲಿ ಬಂದಿಳಿದಿಲ್ಲ?’ ಎಂದು ಪ್ರಶ್ನಿಸಿದರು. ಗೋವಾದ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ರಫೇಲ್ ಯುದ್ಧ ವಿಮಾನ ವ್ಯವಹಾರಕ್ಕೆ ಸಂಬಂಧಿಸಿದ ಕಡತಗಳು ತಮ್ಮ ಬೆಡ್ ರೂಂನಲ್ಲಿ ಇರುವುದಾಗಿ ಹೇಳಿದ್ದಾರೆ ಎಂದು ಗೋವಾದ ಸಚಿವ ವಿಶ್ವಜೀತ್ ರಾಣೆ ಅವರು ಅಪರಿಚಿತ ವ್ಯಕ್ತಿಯೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಉಲ್ಲೇಖಿಸಿದ ಆಡಿಯೋ ಟೇಪನ್ನು ಸದನದಲ್ಲಿ ನುಡಿಸಲು ತಮಗೆ ಅನುಮತಿ ಬೇಕು ಎಂದೂ ರಾಹುಲ್ ಕೋರಿದರು.
ಆದರೆ ಆಡಿಯೋ ಟೇಪಿನ ಸಾಚಾತನವನ್ನು ದೃಢಪಡಿಸಬಲ್ಲಿರಾ ಎಂಬುದಾಗಿ ಲೋಕಸಭಾಧ್ಯಕ್ಷರು ಪದೇ ಪದೇ ಪ್ರಶ್ನಿಸಿದರು. ಆಗ ಅರುಣ್ ಜೇಟ್ಲಿ ಅವರು ರಾಹುಲ್ ಗಾಂಧಿ ಕೋರಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದರು.  ‘ಆಡಿಯೋ ಟೇಪಿನ ಸಾಚಾತನವನ್ನು ಸದನದಲ್ಲಿ ನುಡಿಸುವ ಮುನ್ನ ಸಾಬೀತು ಪಡಿಸಿ ಎಂದು ಸವಾಲು ಹಾಕಿದ ಜೇಟ್ಲಿ ’ಟೇಪ್ ನಕಲಿ ಎಂಬುದಾಗಿ ಸಾಬೀತಾದರೆ ಸದನದಿಂದ ಉಚ್ಚಾಟನೆಗೊಳ್ಳುವ ’ರಿಸ್ಕ್ ತೆಗೆದುಕೊಳ್ಳಲು ಸಜ್ಜಾಗುವಿರಾ?’ ಎಂದು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದರು. ’ನೀವು ಹೆದರಿದ್ದೀರಿ ಎಂಬುದು ನನಗೆ ಅರ್ಥವಾಗುತ್ತದೆ, ನಿಮಗೆ ಖುಶಿಯಾಗುವುದಿದ್ದರೆ ನಾನು ಟೇಪ್ ನುಡಿಸುವುದಿಲ್ಲ ಎಂದು ರಾಹುಲ್ ಚುಚ್ಚಿದರು. ಕೇಂದ್ರವನ್ನು ಸುಲಿಯಬಹುದಾದಂತಹ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದ ಕಡತಗಳು ತಮ್ಮ ಬಳಿ ಇವೆ ಎಂಬುದಾಗಿ ಪರಿಕ್ಕರ್ ಹೇಳಿದ್ದಾರೆ ಎಂದು ರಾಣೆ ಹೇಳಿದ್ದು ಈ ಸಂಭಾಷಣೆಯಲ್ಲಿ ಕೇಳುತ್ತದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಆಕ್ಷೇಪಣೆಯ ಬಳಿಕ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಟೇಪ್ ನುಡಿಸಲು ಅನುಮತಿ ನಿರಾಕರಿಸಿದರು. ರಾಹುಲ್ ಗಾಂಧಿ ಅವರು ಆಗ ಟೇಪ್ ಸಂಭಾಷಣೆಯ ಲಿಖಿತರೂಪವನ್ನು ಓದಿ ಹೇಳಲು ಯತ್ನಿಸಿದರು. ಆದರೆ ಕಾಂಗ್ರೆಸ್ ಮುಖ್ಯಸ್ಥರ ಮೈಕನ್ನು ಎರಡು ಬಾರಿ ಸ್ಥಗಿತಗೊಳಿಸಲಾಯಿತು.  ತಮ್ಮ ೨೦ ನಿಮಿಷಗಳ ಭಾಷಣದಲ್ಲಿ ರಾಹುಲ್ ಅವರು ’ಯುದ್ಧ ವಿಮಾನದ ಬೆಲೆಯನ್ನು ೫೨೬ ಕೋಟಿ ರೂಪಾಯಿಗಳಿಂದ ೧೬೦೦ ಕೋಟಿ ರೂಪಾಯಿಗಳಿಗೆ ಏರಿಸಿದ್ದು ಏಕೆ? ರಕ್ಷಣಾ ಸಚಿವಾಲಯದ ಅಧಿಕಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಲಿಲ್ಲವೇ? ಗುತ್ತಿಗೆಯನ್ನು ಅನುಭವಿ ಎಚ್ ಎಎಲ್ ನಿಂದ ಕಿತ್ತುಕೊಂಡು ನಷ್ಟ ಮಾಡಿಕೊಂಡು ಅನಿಲ್ ಅಂಬಾನಿ ಅವರಿಗೆ ಕೊಟ್ಟದ್ದು ಏಕೆ? ಎಂದು ಪ್ರಶ್ನಿಸಿ, ತಮ್ಮ ಪ್ರಶ್ನೆಗಳಿಗೆ ಸದನದಲ್ಲಿ ಬಂದು ಉತ್ತರಿಸಿ ಎಂದು ಪ್ರಧಾನಿಯವರಿಗೆ ಸವಾಲು ಹಾಕಿದರು.
ರಫೇಲ್ ವ್ಯವಹಾರದಲ್ಲಿ ಪ್ರಧಾನಿಯನ್ನು ಹಿಡಿದು ಹಾಕಲು ಯತ್ನಿಸಿದ ರಾಹುಲ್ ’ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಜಂಟಿ ಸಂಸದೀಯ ಸಮಿತಿ ತನಿಖೆಯನ್ನು ತಳ್ಳಿಹಾಕಿಲ್ಲ ಎಂಬುದಾಗಿ ಪ್ರತಿಪಾದಿಸುವ ಮೂಲಕ ಜಂಟಿ ಸದನ ಸಮಿತಿ ತನಿಖೆಯ ತಮ್ಮ ಆಗ್ರಹವನ್ನು ಪುನರುಚ್ಚರಿಸಿದರು.  ತಮ್ಮ ಸವಾಲಿಗೆ ಒಪ್ಪಿ ’ರಫೇಲ್ ಚರ್ಚೆಯಲ್ಲಿ ಪಾಲ್ಗೊಳ್ಳಲು ಒಪ್ಪಿದ್ದ ಕಾಂಗ್ರೆಸ್ ಪಕ್ಷವನ್ನು ಜೇಟ್ಲಿ ತತ್ ಕ್ಷಣವೇ ತರಾಟೆಗೆ ತೆಗೆದುಕೊಂಡರು. ’ಈ ವ್ಯಕ್ತಿ ಪದೇ ಪದೇ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಕೆಲವು ವ್ಯಕ್ತಿಗಳು ಸತ್ಯವನ್ನು ಸಹಜವಾಗಿಯೇ ಇಷ್ಟ ಪಡುವುದಿಲ್ಲ. ಇದು ಸಹಜವಾಗಿಯೇ ಸತ್ಯವನ್ನು ಇಷ್ಟ ಪಡದ ಪ್ರಕರಣ ಜೇಟ್ಲಿ ಛೇಡಿಸಿದರು. ಅಗಸ್ಟಾ ವೆಸ್ಟ್ಲ್ಯಾಂಡ್ ವಹಿವಾಟು, ನ್ಯಾಷನಲ್ ಹೆರಾಲ್ಡ್ ಮತ್ತು ಬೊಫೋರ್ಸ್ ಪ್ರಕರಣಗಳನ್ನು ಪ್ರಸ್ತಾಪಿಸಿದ ವಿತ್ತ ಸಚಿವರು, ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಬರುವ ’ಒಂದು ಸಲ ಘಟಿಸಿದರೆ ಅದು ಒಂದು ಸಲ ಘಟಿಸುತ್ತದೆ, ಎರಡು ಸಲ ಘಟಿಸಿದರೆ ಅದು ಕಾಕತಾಳೀಯವಾಗುತ್ತದೆ, ಆದರೆ ಮೂರು ಬಾರಿ ಘಟಿಸಿದರೆ ಅದು ಸಂಚು ಆಗುತ್ತದೆ ಎಂಬ ಸಂಭಾಷಣೆಯನ್ನು ಉಲ್ಲೇಖಿಸಿದರು. ಜೇಟ್ಲಿ ಅವರು ಮಾತನಾಡುತ್ತಿದ್ದಾಗ ವಿರೋಧಿ ಸದಸ್ಯರು ಕಾಗದದ ವಿಮಾನಗಳನ್ನು (ಪೇಪರ್ ಪ್ಲೇನ್ಸ್) ತೂರಾಡಲು ಆರಂಭವಿಸಿದರು. ’ಇದು ಬಾಲಿಶ ವರ್ತನೆ ಎಂದು ಛೀಮಾರಿ ಹಾಕಿದ ಸಭಾಧ್ಯಕ್ಷರು ಕಲಾಪವನ್ನು ಎರಡನೇ ಬಾರಿಗೆ ಮುಂದೂಡಿದರು. ’ಚರ್ಚೆ ರಫೇಲ್ ಕುರಿತಾಗಿ ಇದ್ದುದರಿಂದ ನಾವು ಕಾಗದದ ವಿಮಾನಗಳನ್ನು ತೂರಿದೆವು ಎಂದು ಕಾಂಗ್ರೆಸ್ ಸದಸ್ಯ ಗುರುಜೀತ್ ಸಿಂಗ್ ಅಜುಲಾ ಬಳಿಕ ಸಮಜಾಯಿಷಿ ನೀಡಿದರು. ’ರಫೇಲ್ ಬಗ್ಗೆ ಮಾತನಾಡಬೇಕಾಗಿತ್ತು. ಆದರೆ ಅವರು ಬೊಫೋರ್ಸ್, ಅಗಸ್ಟಾ ಬಗ್ಗೆ ಮಾತನಾಡತೊಡಗಿದ್ದರು ಎಂದು ಅಜುಲಾ ಹೇಳಿದರು. ಸದನ ಮತ್ತೆ ಸಮಾವೇಶಗೊಂಡಾಗ ಜೇಟ್ಲಿ ಅವರು ತಾವು ರಾಹುಲ್ ಗಾಂಧಿ ಅವರ ಪ್ರಶ್ನೆಗಳ ಬಗ್ಗೆ ಮಾತನಾಡಬಯಸುವುದಾಗಿ ನುಡಿದರು. ಅಧ್ಯಕ್ಷ ಹೊಲ್ಲಾಂಡೆ ಅವರ ಜೊತೆಗಿನ ಪತ್ರಿಕಾ ಹೇಳಿಕೆಯಲ್ಲಿ ಶರತ್ತುಗಳನ್ನು ಪ್ರಸ್ತಾಪಿಸಲಾಗಿದೆ... ವಿವಿಧ ವಿವರಗಳನ್ನು ನಿರ್ಧರಿಸಲು ೭೪ ಸಭೆಗಳು ನಡೆದವು. ೭೪ ಸಭೆಗಳ ಬಳಿಕ ಒಪ್ಪಂದ ರೂಪುಗೊಂಡ ಬಳಿಕ ಡಿಎಸಿಯನ್ನು ಸೇರ್ಪಡೆ ಮಾಡಲಾಯಿತು ಎಂದು ನುಡಿದ ಜೇಟ್ಲಿ, ’ಸುಪ್ರೀಂಕೋರ್ಟಿನ ತೀರ್ಪನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಪ್ರಕ್ರಿಯೆಯಗಳನ್ನು ಸೂಕ್ತವಾಗಿ ಪಾಲಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದು ಜೇಟ್ಲಿ ವಿವರಿಸಿದರು.  ರಫೇಲ್ ದರದ ಬಗ್ಗೆ ಸುಪ್ರೀಂಕೋರ್ಟ್ ಕೇಳಿತು. ನ್ಯಾಯಾಲಯದ ಆತ್ಮಸಾಕ್ಷಿಯನ್ನು ತೃಪ್ತಿ ಪಡಿಸುವ ಸಲುವಾಗಿ ಕೇಂದ್ರವು ಮೊಹರಾದ ಲಕೋಟೆಯಲ್ಲಿ ದರಗಳನ್ನು ನೀಡಿತು. ನ್ಯಾಯಾಲಯದ ಆತ್ಮಸಾಕ್ಷಿ ಸಮಾಧಾನಗೊಂಡಿತು. ಆದರೆ ಕಾಂಗ್ರೆಸ್ ಆತ್ಮಸಾಕ್ಷಿಗೆ ಇನ್ನೂ ಸಮಾಧಾನವಾಗಿಲ್ಲ ಎಂದು ಜೇಟ್ಲಿ  ಕೂರಂಬು ಎಸೆದರು.

೨೦೧೯: ನವದೆಹಲಿ: ರಫೇಲ್ ಹಗರಣದ ದಾಖಲೆಗಳಿಗೆ ಸಂಬಂಧಿಸಿದಂತೆ ಮನೋಹರ್ ಪರಿಕ್ಕರ್ ಅವರ ಹೇಳಿಕೆ ಸಂಬಂಧಿಸಿದಂತೆ ಗೋವಾದ ಸಚಿವ ವಿಶ್ವಜಿತ್ ರಾಣೆ ಮತ್ತು ಅನಾಮಧೇಯ ವ್ಯಕ್ತಿಯೊಬ್ಬರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋವನ್ನು ಪರಿಕ್ಕರ್ ಅವರು ನಿರಾಕರಿಸಿದರು. ಅಲ್ಲದೆ, ಅದು ತಿರುಚಲ್ಪಟ್ಟದ್ದು ಎಂದು ಟ್ವೀಟ್ ಮಾಡಿದರು. ಮಾಜಿ ರಕ್ಷಣಾ ಸಚಿವ ಮತ್ತು ಹಾಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ರಫೇಲ್ ಯುದ್ಧ ವಿಮಾನ ಡೀಲ್ ಬಗ್ಗೆ ಸಾಕಷ್ಟು ಮಾಹಿತಿ ಗೊತ್ತು. ಆ ಮಾಹಿತಿಯೆಲ್ಲ ಅವರ ಬೆಡ್ ಕೆಳಗೆ ಅಡಗಿದೆ ಎಂದು ಗೋವಾ ಸಚಿವ ರಾಣೆ ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಂದು ಆಡಿಯೋ ಬಿಡುಗಡೆಗೊಳಿಸಿದ್ದರು. ಈ ಬಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪ್ರತಿಕ್ರಿಯಿಸಿದ್ದು, ಅದು ಕೃತ್ರಿಮದಿಂದ ಕೂಡಿದೆ. ಹತಾಶೆಯಿಂದ ಹೀಗೆಲ್ಲ ಕಟ್ಟುಕಥೆ ಕಟ್ಟುತ್ತಿದ್ದಾರೆ. ಅದೆಲ್ಲ ಫ್ಯಾಬ್ರಿಕೇಟೆಡ್ ಸಂಭಾ?ಣೆ ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದರು. ಗೋವಾ ಸಚಿವ ವಿಶ್ವಜಿತ್ ಪಿ ರಾಣೆ ಸಹ ಆಡಿಯೋ ವಿಚಾರವನ್ನ ಅಲ್ಲಗಳೆದರು. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ರಫೇಲ್ ಯುದ್ಧ ವಿಮಾನ ಡೀಲ್ ಕುರಿತು ನಾನು ಯಾರೊಂದಿಗೂ ಮಾತುಕತೆ ಆಡಿಲ್ಲ. ಇದೆಲ್ಲ ಕಟ್ಟುಕಥೆ ಎಂದರು.

೨೦೧೯: ನವದೆಹಲಿ: ಹಿರಿಯ ಚಿತ್ರನಟಿ ಮೌಸಮಿ ಚಟರ್ಜಿ ಅವರು ಪಕ್ಷದ ನಾಯಕರಾದ ಮುಕುಲ್ ರಾಯ್, ಕೈಲಾಸ್ ವಿಜಯ ವರ್ಗೀಯ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೇರಿದರು. ಹಿರಿಯ ಚಿತ್ರನಟಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ವರದಿ ಹೇಳಿತು. ಚಟರ್ಜಿ ಅವರು ೨೦೧೫ರಲ್ಲಿ ಅಮಿತಾಭ್ ಬಚ್ಚನ್ ನಟಿಸಿದ ’ಪಿಕು ಚಿತ್ರದಲ್ಲಿ ಕಟ್ಟ ಕಡೆಯದಾಗಿ ಕಾಣಿಸಿಕೊಂಡಿದ್ದರು. ಅವರು ಬಾಲಿವುಡ್ನ ಮುಂಚೂಣಿಯ ಚಿತ್ರನಟರಾದ ಶಶಿಕಪೂರ್, ಶಮ್ಮಿ ಕಪೂರ್, ರಾಜೇಶ್ ಖನ್ನಾ ಮತ್ತು ಜಿತೇಂದ್ರ ಅವರ ಜೊತೆಗೆ ನಟಿಸಿದ್ದರು. ಹಿಂದಿ ಚಿತ್ರಗಳಲ್ಲದೆ ಬಂಗಾಳಿ ಸಿನಿಮಾದಲ್ಲೂ ಅವರು ನಟಿಸಿದ್ದರು. ೧೯೪೮ರ ಏಪ್ರಿಲ್ ೨೬ರಂದು ಜನಿಸಿದ ಮೌಸಮಿ ಚಟರ್ಜಿ ೨೦೦೪ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಲಾಂಛನದ ಅಡಿಯಲ್ಲಿ ಸ್ಪರ್ಧಿಸಿ ಸೋತಿದ್ದರು. ಬಾಲಿಕಾ ಬಧು, ಕುಚ್ಛೆ ಧಾಗೆ, ಬೇನಾಮ್ ಇವು ಅವರ ಹಿಟ್ ಚಲನಚಿತ್ರಗಳಾಗಿದ್ದವು. ಮೌಸಮಿ ಅವರು ಬಂಗಾಳದಲ್ಲಿ ದಂತಕಥೆಯಾಗಿರುವ ಸಂಗೀತ ಸಂಯೋಜಕ ಹಾಗೂ ಗಾಯಕ ಹೇಮಂತ ಮುಖ್ಯೋಪಾಧ್ಯಾಯ ಅವರ ಸೊಸೆಯಾಗಿದ್ದಾರೆ.
  
೨೦೧೯: ಜಮ್ಮು: ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯ ಕತ್ರಾದ ತ್ರಿಕುಟಾ ಪರ್ವತಗಳಲ್ಲಿ ರುವ ವಿಶ್ವವಿಖ್ಯಾತ ಗುಹಾಂತರ ದೇವಾಲ ಯಕ್ಕೆ ೨೦೧೮ರಲ್ಲಿ ಸುಮಾರು ೮೬ ಲಕ್ಷ ಯಾತ್ರಿಕರು ಭೇಟಿ ನೀಡಿ ಪೂಜೆ ಸಲ್ಲಿಸುವು ದರ ಮೂಲಕ ಶ್ರೀ ಮಾತಾ ವೈಷ್ಣೋದೇವಿ ಯಾತ್ರೆ ೫ ವರ್ಷಗಳ ದಾಖಲೆ ಮುರಿಯಿತು. ಡಿಸೆಂಬರ್ ೩೧ರ ಮಧ್ಯರಾತ್ರಿ ವರೆಗೆ ಸುಮಾರು ೮೬ ಲಕ್ಷ ಯಾತ್ರಿಕರು ದೇವಾಲಯ ದಲ್ಲಿ ಪೂಜೆ ಸಲ್ಲಿಸಿದ್ದು, ಇದು ಐದು ವರ್ಷ ಗಳಲ್ಲೇ ಅಧಿಕ ಸಂಖ್ಯೆಯಾಗಿದೆ ಎಂದು ದೇವ ಸ್ಥಾನ ಆಡಳಿತ ಮಂಡಳಿ ತಿಳಿಸಿತು. ಕಳೆದ ವರ್ಷ ಒಟ್ಟು ೮೫,೮೬,೫೪೧ ಯಾತ್ರಿಕರು ದೇಗುಲಕ್ಕೆ ಭೇಟಿ ನೀಡಿದ್ದು, ವರ್ಷದ ಕೊನೆಯ ದಿನವಾದ ಡಿ.೩೧ರಂದು ೪೩,೧೨೩ ಯಾತ್ರಿಕರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ ಎಂದು ದೇವಸ್ಥಾನ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.



2018: ಮುಂಬೈ: ಭೀಮಾ -ಕೋರೆಗಾಂವ್ ನಲ್ಲಿ ಹಿಂದಿನ ದಿನ ಮುಕ್ತಾಯಗೊಂಡ ೧೮೧೮ರ ಐತಿಹಾಸಿಕ ಸಮರದ ೨೦೦ನೇ ವಾರ್ಷಿಕೋತ್ಸವ ಆಚರಣೆ ವೇಳೆ ಸಂಭವಿಸಿದ ಹಿಂಸಾಚಾರ ಮುಂಬೈ, ಪುಣೆ ಮತ್ತು ಮಹಾರಾಷ್ಟ್ರದ ಇತರ ಹಲವಡೆ ಈದಿನ ಪ್ರತಿಧ್ವನಿಸಿ, ತೀವ್ರ ಪ್ರತಿಭಟನೆಗೆ ಜನಜೀವನ ಕಂಪಿಸಿತು. ಕೋರೆಗಾಂವ್ ಭೀಮಾ ಗ್ರಾಮದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಒಬ್ಬ ಬಲಿಯಾಗಿದ್ದು, ಪಶ್ಚಿಮ ಮಹಾರಾಷ್ಟ್ರದ ಹಲವಾರು ಜಿಲ್ಲೆಗಳು ಮತ್ತು ಮರಾಠಾವಾಡ ಮತ್ತು ವಿದರ್ಭ ಪ್ರದೇಶಗಳಲ್ಲಿ ದಲಿತ ಸಂಘಟನೆಗಳೂ, ಸಾಮಾಜಿಕ ಸಂಘಟನೆಗಳು ಮತ್ತು ಅಂಬೇಡ್ಕರ್ ವಾದಿ ಪಕ್ಷಗಳು ಖಂಡನೆ ವ್ಯಕ್ತ ಪಡಿಸಿ ರಸ್ತೆತಡೆಗಳನ್ನು ನಡೆಸಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಮುಂಬೈಯ ಹಲವಾರು ಪ್ರದೇಶಗಳಲ್ಲಿ ಮತ್ತು ಹೊರಪ್ರದೇಶಗಳಲ್ಲಿ ಪ್ರತಿಭಟನಕಾರರು ಸ್ಥಳೀಯ ಹಾರ್ಬರ್ ಲೈನ್ ಮತ್ತಿತರ ರೈಲುಸೇವೆಗಳನ್ನು ತಡೆದದ್ದಲ್ಲದೆ, ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸಿದರು. ಟೆಲಿವಿಷನ್ ಸುದ್ದಿ ವಾಹಿನಿಯೊಂದರ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆಯೂ ಘಟಿಸಿತು.  ಕೇಂದ್ರೀಯ ರೈಲ್ವೇಯು ಹಾರ್ಬರ್ ಕಾರಿಡಾರಿನಲ್ಲಿ ಕುರ್ಲಾ ಮತ್ತು ವಾಶಿ ನಡುವಣ ಹೊರವಲಯ ಸೇವೆಗಳನ್ನು ಅಮಾನತುಗೊಳಿಸಿತು ಮತ್ತು ಸಿಎಸೆಂಟಿ-ಕುರ್ಲಾ ಮತ್ತು ವಾಶಿ- ಪನ್ವೇಲ್ ವಿಭಾಗದಲ್ಲಿ ವಿಶೇಷ ರೈಲುಗಳನ್ನು ಓಡಿಸಿತು. ಪುಣೆ, ಔರಂಗಾಬಾದ್ ಮತ್ತು ಮರಾಠಾವಾಡದ ಇತರ ಜಿಲ್ಲೆಗಳಲ್ಲಿ ಜನಾಂಗೀಯ-ಜಾತಿ ಘರ್ಷಣೆ ತಡೆಗಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಪುಣೆ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ನಾವು ರಾಜ್ಯ ಮೀಸಲು ಪೊಲೀಸ್ ಪಡೆಯ (ಎಸ್ ಆರ್ ಪಿಎಫ್) ಎರಡು ಕಂಪೆನಿಗಳನ್ನು ಮತ್ತು ಹಲವಾರು ತುರ್ತು ಪ್ರತಿಕ್ರಿಯಾ ತಂಡಗಳನ್ನು (ಕ್ಯುಆರ್ ಟಿ) ಹಿರಿಯ ಪೊಲೀಸ್ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ನಿಯೋಜಿಸಿದ್ದೇವೆ ಎಂದು ಪೊಲೀಸ್ ಕಮೀಷನರ್ ರಶ್ಮಿ ಶುಕ್ಲ ಹೇಳಿದರು. ಸಮಾಜ ವಿಭಜನಾ ಸಾಮಾಜಿಕ ಜಾಲತಾಣ ಪೋಸ್ಟ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ಸೆಲ್ ನೋಟಿಫಿಕೇಷನ್ ಜಾರಿ ಮಾಡಿತು. ಕೋರೆಗಾಂವ್-ಭೀಮಾ ಮತ್ತು ಸುತ್ತುಮುತ್ತಣ ಗ್ರಾಮಗಳಲ್ಲಿ ಮೊಬೈಲ್ ಫೋನ್ ಜಾಮರ್ ಗಳನ್ನು ಅಳವಡಿಸಲಾಯಿತು. ಕಲ್ಲುತೂರಾಟ: ಪುಣೆ ಮತ್ತು ಪಿಂಪ್ರಿ-ಚಿಂಚವಾಡದ ಹಲವಾರು ಭಾಗಗಳಲ್ಲಿ ಭೀಮಾ ಸೈನಿಕರು ಪ್ರದರ್ಶನ ಕಾಲದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಿಗೆ ಕಲ್ಲು ತೂರಿದ ಘಟನೆಗಳ ಬಳಿಕ ವಹಿವಾಟು ಮತ್ತು ಸಂಚಾರ ಸ್ಥಗಿತಗೊಂಡಿತು. ಮುಂಬೈ -ಪುಣೆ ಹೆದ್ದಾರಿಯಲ್ಲೂ ಪ್ರದರ್ಶನಗಳ ಪರಿಣಾಮವಾಗಿ ಸಂಚಾರ ಅಸ್ತವ್ಯಸ್ತಗೊಂಡಿತು. ಮಧ್ಯಾಹ್ನದ ವೇಳೆಗೆ ಪ್ರತಿಭಟನಕಾರರು ಪುಣೆಯ ಬಹುತೇಕ ಪ್ರದೇಶಗಲ್ಲಿ ಅಂಗಡಿಗಳನ್ನು ಮುಚ್ಚಿಸಿದರು. ಭೀಮಾ-ಕೋರೆಗಾಂವ್ ಸುತ್ತಮುತ್ತಣ ಗ್ರಾಮಗಳಲ್ಲಿ ಕರ್ಫ್ಯೂ ಜಾರಿ ಮುಂದುವರೆಯಿತು. ಅಹ್ಮದನಗರ ಜಿಲ್ಲೆಯಲ್ಲಿ ವ್ಯಾಪಕ ಕಲ್ಲುತೂರಾಟದ ಘಟನೆಗಳು ವರದಿಯಾದವು. ಹಲವಾರು ತಹಸಿಲ್ ಗಳಲ್ಲಿ ಅಂಗಡಿಗಳಿಗೆ ಬೀಗಮುದ್ರೆ ಮಾಡಿದ ಘಟನೆಗಳೂ ನಡೆದವು. ಪ್ರತಿಭಟನೆ ಹಿಂಸೆಗೆ ತಿರುಗಿದ ಪ್ರಕ್ಷುಬ್ಧ ಮರಾಠಾವಾಡ ಪ್ರದೇಶದಲ್ಲಿ ಅಂಗಡಿಗಳಿಗೆ ಬೀಗಮುದ್ರೆ ಮಾಡಿದ ಹೆಚ್ಚಿನ ಘಟನೆಗಳು ಘಟಿಸಿವೆ ಎಂದು ವರದಿಗಳು ಹೇಳಿದವು. ಹಿಂಗೋಲಿಯಲ್ಲಿ ಜೀಪುಗಳು ಅಗ್ನಿಗಾಹುತಿಯಾದರೆ, ಒಸಾಮಾಬಾದ್ ಜಿಲ್ಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮದ ಶಿವಶಾಹಿ ಹವಾನಿಯಂತ್ರಿತ ಬಸ್ಸು ಕಲ್ಲೇಟಿನಿಂದ ಹಾನಿಗೊಂಡಿತು. ಪ್ರಭಾನಿ ಜಿಲ್ಲೆಯಲ್ಲೂ ರಾಜ್ಯ ಸಾರಿಗೆ ಬಸ್ಸು ಕಲ್ಲೇಟಿನಿಂದ ಹಾನಿಗೊಂಡಿತು. ಜಲ್ನಾ-ಸಿಂದಖೇಡ್ ರಸ್ತೆಯಲ್ಲಿ ಭಾರಿ ರಾಸ್ತಾರೋಕೋ ನಡೆಯಿತು.   ಮಧ್ಯೆ ಹಿಂಸಾಚಾರಗಳಿಗೆ ಬಲಪಂಥೀಯ ಹಿಂದುತ್ವ ಗುಂಪುಗಳು ಕಾರಣ ಎಂದು ಭೀಮಾ-ಕೋರೆಗಾಂವ್ ಶೌರ್ಯದಿನ ಪ್ರೇರಣಾ ಅಭಿಯಾನದ ಸಂಘಟಕರು ಆಪಾದಿಸಿದರು. ಹಿಂಸಾಚಾರಕ್ಕೆ ಮೂಲಕಾರಣ: ವರದಿಗಳ ಪ್ರಕಾರ, ಡಿಸೆಂಬರ್ ೨೯ರಂದು ಕೋರೆಗಾಂವ್ - ಭೀಮಾದಿಂದ ಕಿಮೀ ದೂರದ ವಧು ಬುಡ್ರುಕ್ನಲ್ಲಿ ಗೋವಿಂದ ಗಣಪತ್ ಗಾಯಕ್ ವಾಡ್ ಸಮಾಧಿಯ ಸಮೀಪ ಹಾಕಿದ್ದ ಫಲಕದ ವಿಚಾರದಲ್ಲಿ ಮರಾಠಾ ಮೇಲ್ಜಾತಿಯ ಮಂದಿ ಮತ್ತು ದಲಿತರ ಮಧ್ಯೆ ತೀವ್ರ ಜಗಳವಾಗಿತ್ತು ಎನ್ನಲಾಗಿದೆ. ಗೋವಿಂದ ಗಣಪತ್ ಗಾಯಕ್ ವಾಡ್ ಮಹರ್ ಸಮುದಾಯದ ದಲಿತನಾಗಿದ್ದು, ಆತ ಶಿವಾಜಿಯ ಪುತ್ರ ಹತ ಮರಾಠಾ ದೊರೆ ಸಾಂಭಾಜಿಯ ಅಂತ್ಯಕ್ರಿಯೆ ನೆರವೇರಿಸಿದ್ದ ವ್ಯಕ್ತಿ. ೧೬೮೯ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ ತನ್ನಿಂದ ಚಿತ್ರಹಿಂಸೆಗೆ ಗುರಿಯಾಗಿ ಸಾವನ್ನಪ್ಪಿದ್ದ ಸಾಂಭಾಜಿಯ ಅಂತ್ಯಕ್ರಿಯೆಯನ್ನು ಯಾರೂ ನೆರವೇರಿಸಬಾರದು ಎಂದು ಆಜ್ಞಾಪಿಸಿದ್ದ. ಆದರೆ ಮೊಘಲ್ ಚಕ್ರವರ್ತಿಯ ಆದೇಶವನ್ನು ಗಾಯಕ್ ವಾಡ್ ಉಲ್ಲಂಘಿಸಿ ಸಾಂಭಾಜಿಯ ಅಂತ್ಯಕ್ರಿಯೆ ನೆರವೇರಿಸಿದ್ದ. ಇದಕ್ಕಾಗಿ ಗಾಯಕ್ ವಾಡ್ನನ್ನು ಔರಂಗಜೇಬ ಕೊಲ್ಲಿಸಿದ್ದ. ವಿಚಾರವನ್ನು ಫಲಕದಲ್ಲಿ ನಮೂದಿಸಲಾಗಿತ್ತು ಎನ್ನಲಾಗಿದೆ. ಆದರೆ ವಧು ಬುಡ್ರುಕ್ ಮರಾಠರು ವಾದವನ್ನು ಅಲ್ಲಗಳೆಯುತ್ತಾರೆ. ಇತಿಹಾಸವನ್ನು ತಿರುಚಲಾಗಿದ್ದು, ಸಾಂಭಾಜಿಯ ಅಂತ್ಯಕ್ರಿಯೆಯನ್ನು ಕುಟುಂಬಸ್ಥರೇ ನಡೆಸಿದ್ದಾರೆ ಎಂಬುದು ಅವರ ಪ್ರತಿಪಾದನೆ. ಅವರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಗಾಯಕ್ ವಾಡ್ ಸಮಾಧಿಯ ಬಳಿ ಫಲಕದ ವಿರುದ್ಧ ದೂರು ನೀಡಿದ್ದರು. ನಂಬಿಕೆಗೆ ದಾಖಲೆಗಳೂ ಇಲ್ಲ ಎಂದು ವಾದಿಸಿದ್ದರು. ಅದೇದಿನ ಗ್ರಾಮದ ೪೯ ಮಂದಿಯ ವಿರುದ್ದ ಎಸ್ಸಿ/ ಎಸ್ ಟಿ ಕಾಯ್ದೆಯ ಅಡಿಯಲ್ಲಿ ಫಲಕವನ್ನು ಹಾನಿಗೊಳಿಸಿದ್ದಕ್ಕಾಗಿ ಎಫ್ ಐಆರ್ ದಾಖಲಾಗಿತ್ತು ಎಂದು ಪೊಲೀಸರು ಹೇಳುತ್ತಾರೆ. ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಾಯತ್ ಕೂಡಾ ಪ್ರತಿದೂರು ದಾಖಲಿಸಿದೆ ಎಂದು ಹೇಳಲಾಗಿತ್ತು.

2018: ನವದೆಹಲಿ: ೨೦೧೭ರ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕವನ್ನು (ಎನ್ ಎಂಸಿ) ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸ್ಥಾಯಿ ಸಮಿತಿ ಪರಿಶೀಲನೆಗೆ ಕಳುಹಿಸಲು ಲೋಕಸಭೆ ನಿರ್ಧರಿಸಿದ್ದನ್ನು ಅನುಸರಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆಯ ಮೇರೆಗೆ ಈದಿನ ಬೆಳಗ್ಗೆ ಆರಂಭಿಸಿದ್ದ ರಾಷ್ಟ್ರವ್ಯಾಪಿ ಮುಷ್ಕರವನ್ನು ವೈದ್ಯರು ಮಧ್ಯಾಹ್ನ ಹಿಂತೆಗೆದುಕೊಂಡರು. ದೇಶಾದ್ಯಂತ ಬೆಳಗ್ಗೆ ೬ರಿಂದ ಸಂಜೆ ೬ರ ವರೆಗೆ ೧೨ ಗಂಟೆಗಳ ಮುಷ್ಕರವನ್ನು ಸುಮಾರು . ಲಕ್ಷ ವೈದ್ಯರು ಬೆಳಗ್ಗೆ ಆರಂಭಿಸಿದ್ದರು. ವಿಧೇಯಕವುಕ್ರಾಸ್ಪತಿಗೆ (ಇತರ ವೈದ್ಯರಿಗೆ ಆಲೋಪತಿ ವೈದ್ಯ ಚಿಕಿತ್ಸೆ ನೀಡಲು) ಅವಕಾಶ ನೀಡುವುದರಿಂದ ಖಾಸಗಿ ವೈದ್ಯಕೀಯ ಕಾಲೇಜುಗಳು ಸರ್ಕಾರದ ಪಾರಮ್ಯಕ್ಕೆ ಒಳಗಾಗುತ್ತವೆ ಮತ್ತು ಖಾಸಗಿ ಕಾಲೇಜುಗಳ ಕಾರ್ಯನಿರ್ವಹಣೆ ಕಷ್ಟವಾಗುತ್ತದೆ ಎಂದುಕರಾಳ ದಿನ ಆಚರಿಸುತ್ತಿದ್ದ ವೈದ್ಯರು ಆಪಾದಿಸಿದ್ದರು. ಲೋಕಸಭೆಯಲ್ಲಿ ಸಂಬಂಧ ಮಂಡಿಸಲಾದ ವಿಧೇಯಕವು ಜನ ವಿರೋಧಿ, ರೋಗಿ ವಿರೋಧಿ ಎಂದು ಜಾಗತಿಕ ಮಾನಸಿಕ ತಜ್ಞರ ಸಂಘದ ಪ್ರಧಾನ ಕಾರ್ಯದರ್ಶಿ ರಾಯ್ ಅಬ್ರಹಾಂ ಕಲ್ಲಿವಯಾಲಿಲ್ ಹೇಳಿದರು. ಅಖಿಲ ಭಾರತ ವೈದ್ಯಕೀಯ ಸಂಘಗಳ ಮನವಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ ಮತ್ತು ವಿಧೇಯಕವನ್ನು ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸಿದೆ. ಆದ್ದರಿಂದ ನಾವು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುತ್ತಿದ್ದೇವೆ. ಬೆಂಬಲ ನೀಡಿದ್ದಕ್ಕಾಗಿ ಎಲ್ಲರಿಗೂ ವಂದನೆಗಳು ಎಂದು ಭಾರತೀಯ ವೈದ್ಯಕೀಯ ಸಂಘದ ತಮಿಳುನಾಡು ರಾಜ್ಯ ಘಟಕದ ಹೇಳಿಕೆ ತಿಳಿಸಿತು. ತಮಿಳುನಾಡು ಸರ್ಕಾರಿ ವೈದ್ಯರ ಸಂಘದ ರಾಜ್ಯ ಅಧ್ಯಕ್ಷ ಕೆ. ಸೆಂಥಿಲ್ ಅವರೂ ಚಳವಳಿ ಹಿಂತೆಗೆದುಕೊಳ್ಳಲಾಗಿದೆ ಎಂದು ದೃಢ ಪಡಿಸಿದರು. ಮಿಶ್ರ ಪ್ರತಿಕ್ರಿಯೆ: ಹೊರರೋಗಿ ಚಿಕಿತ್ಸಾ ವಿಭಾಗ (ಒಪಿಡಿ) ಬಂದ್ ಗೆ ನೀಡಲಾಗಿದ್ದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರೆಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಯಿತು. ಸುಗುಣ, ಪನೇಸಿಯ ಮತ್ತು ಕಾರ್ಡ್ರಸ್ತೆ ಆಸ್ಪತ್ರೆಗಳು ತಮ್ಮ ಹೊರರೋಗಿ ಚಿಕಿತ್ಸಾ ವಿಭಾಗಗಳನ್ನು ಮುಚ್ಚಿದ್ದರೆ, ನಾರಾಯಣ ಹೆಲ್ತ್, ಮಣಿಪಾಲ, ಎಂ.ಎಸ್. ರಾಮಯ್ಯ ಮತ್ತು ಸೈಂಟ್ ಮಾರ್ಥಾಸ್, ಸಿಎಸ್ , ಬಾಪ್ಟಿಸ್ಟ್ ನಂತಹ ಮಿಷನ್ ಆಸ್ಪತ್ರೆಗಳು ಮಾಮೂಲಿಯಾಗಿ ಕಾರ್ಯ ನಿರ್ವಹಿಸಿದವು. ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆಗಳಿಗೆ ಯಾವುದೇ ಧಕ್ಕೆಯಾಗಲಿಲ್ಲ. ವಾಸ್ತವವಾಗಿ ರೋಗಿಗಳ ಸಂಖ್ಯೇ ಶೇಕಡಾ ೫ರಿಂದ ೧೦ಷ್ಟು ಹೆಚ್ಚಿತ್ತು ಎಂದು ವರದಿಗಳು ಹೇಳಿವೆ. ದೇಶದ ಇತರೆಡೆಗಳಲ್ಲೂ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ವರದಿಗಳು ಬಂದವು. ಸ್ಥಾಯಿ ಸಮಿತಿಗೆ ವಿಧೇಯಕ: ಭಾರತೀಯ ವೈದ್ಯಕೀಯ ಮಂಡಳಿ ಬದಲಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸಲು ಪ್ರಸ್ತಾಪಿಸಿರುವ ಮತ್ತು ಆಲೋಪತಿ ಹೊರತಾದ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ, ಯುನಾನಿ, ಸಿದ್ಧ ಇತ್ಯಾದಿ ಪದ್ಧತಿಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆಬ್ರಿಜ್ ಕೋರ್ಸ್ ಮಾಡಿದರೆ ಆಲೋಪತಿ ಚಿಕಿತ್ಸೆ ನೀಡಲೂ ಅನುಮತಿ ನೀಡಲು ಉದ್ದೇಶಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕವನ್ನು ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಲೋಕಸಭೆಗೆ ತಿಳಿಸಿದರು. ಸದನದ ಹಲವಾರು ಸದಸ್ಯರು ಮತ್ತು ವೈದ್ಯರ ಬೇಡಿಕೆಗಳನ್ನು ಪರಿಗಣಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕವನ್ನು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿದೆ ಎಂದು ಅವರು ನುಡಿದರು.

2018: ಬೀಜಿಂಗ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮೂಲಕ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ತನ್ನ ಸಾರ್ವಕಾಲಿಕ ಮಿತ್ರ ರಾಷ್ಟ್ರವು ಭಯೋತ್ಪಾದನೆ ನಿಗ್ರಹಕ್ಕಾಗಿ ನೀಡಿರುವ ಅಪೂರ್ವ ಕೊಡುಗೆಯನ್ನು ಜಾಗತಿಕ ಸಮುದಾಯ ಗುರುತಿಸಬೇಕು ಎಂದು ಹೇಳುವ ಮೂಲಕ ಚೀನಾ ಪಾಕಿಸ್ತಾನದ ನೆರವಿಗೆ ಧಾವಿಸಿತು. ಪಾಕಿಸ್ತಾನವು ಭಯೋತ್ಪಾದಕರಿಗೆ ಸ್ವರ್ಗವನ್ನು ನಿರ್ಮಿಸಿಕೊಟ್ಟಿದೆ ಎಂಬುದಾಗಿ ಪಾಕಿಸ್ತಾನದ ವಿರುದ್ಧ ಟ್ರಂಪ್ ಅವರು ಟ್ವೀಟಾಸ್ತ್ರ ಪ್ರಯೋಗಿಸಿದ ಒಂದು ದಿನದ ಬಳಿಕ ಚೀನಾವು ಇಸ್ಲಾಮಾಬಾದನ್ನು ಸಮರ್ಥಿಸಿ ಹೇಳಿಕೆ ನೀಡಿತು. ಕಟು ಪದಗಳನ್ನು ಬಳಸಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದ ಟ್ರಂಪ್ಪಾಕಿಸ್ತಾನವು ಬರೀ ಸುಳ್ಳು ಮತ್ತು ವಂಚನೆಗಳ ಮೂಲಕ ಅಮೆರಿಕದ ನಾಯಕರನ್ನು ಮೂರ್ಖರನ್ನಾಗಿಸುತ್ತಿದೆ ಮತ್ತು ಭಯೋತ್ಪಾದಕರಿಗೆ ಆಶ್ರಯ ಒದಗಿಸುತ್ತಿದೆ ಎಂದು ದೂರಿದ್ದರು. ‘ಅಮೆರಿಕವು ಪಾಕಿಸ್ತಾನಕ್ಕೆ ಮೂರ್ಖತನದಿಂದ ೩೩ ಶತಕೋಟಿ ಡಾಲರ್ ಗಳ ನೆರವನ್ನು ಕಳೆದ ೧೫ ವರ್ಷಗಳಲ್ಲಿ ನೀಡಿದೆ. ಇದಕ್ಕೆ ಪ್ರತಿಯಾಗಿ ಅವರು ನಮಗೆ ಸುಳ್ಳುಗಳು ಮತ್ತು ವಂಚನೆಗಳನ್ನು ಬಿಟ್ಟು ಬೇರೆ ಏನನ್ನೂ ನೀಡಿಲ್ಲ, ಅವರು ನಮ್ಮ ನಾಯಕರನ್ನು ಮೂರ್ಖರೆಂದು ಎಣಿಸಿದ್ದಾರೆ ಎಂದು ಟ್ರಂಪ್ ಹಿಂದಿನ ದಿನ ಟ್ವೀಟ್ ಮಾಡಿದ್ದರು. ನಾವು ಆಫ್ಘಾನಿಸ್ಥಾನದಲ್ಲಿ ಬೇಟೆಯಾಡುವ ಭಯೋತ್ಪಾದಕರಿಗೆ ಅವರು ಸುರಕ್ಷಿತ ಸ್ವರ್ಗವನ್ನು ನಿರ್ಮಿಸಿಕೊಟ್ಟಿದ್ದಾರೆ. ನಮ್ಮ ಹೋರಾಟಕ್ಕೆ ಅತ್ಯಂತ ಕಡಿಮೆ ನೆರವು ನೀಡಿದ್ದಾರೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು.  ಟ್ರಂಪ್ ಟೀಕೆಗೆ ನಿರೀಕ್ಷಿತ ಪ್ರತಿಕ್ರಿಯೆ ನೀಡಿದ ಚೀನಾವು, ಭಯೋತ್ಪಾದನೆ ನಿಗ್ರಹಕ್ಕೆ ಪಾಕಿಸ್ತಾನ ನೀಡಿದ ಕೊಡುಗೆಯನ್ನು ಶ್ಲಾಘಿಸಿತು. ‘ಪಾಕಿಸ್ತಾನವು ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಸಾಕಷ್ಟು ಬಲಿದಾನ ಮಾಡಿದೆ. ಉಗ್ರರ ನಿಗ್ರಹಕ್ಕೆ ತೀವ್ರ ಪ್ರಯತ್ನ ಮಾಡಿದೆ. ಭಯೋತ್ಪಾದನೆ ನಿಗ್ರಹದ ಜಾಗತಿಕ ಗುರಿಸಾಧನೆ ಸಲುವಾಗಿ ಮಹತ್ವದ ಕೊಡುಗೆ ನೀಡಿದೆ. ಅಂತಾರಾಷ್ಟ್ರೀಯ ಸಮುದಾಯವು ಇದನ್ನು ಗುರುತಿಸಬೇಕು ಎಂದು ಚೀನೀ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಅವರು ಟ್ರಂಪ್ ಅವರ ಪಾಕ್ ಟೀಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಭಯೋತ್ಪಾದನೆ ನಿಗ್ರಹ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ತೊಡಗಿಸಿಕೊಂಡಿರುವುದನ್ನು ನೋಡಲು ಚೀನಾ ಖುಷಿ ಪಡುತ್ತದೆ. ಅದು ಪರಸ್ಪರ ಗೌರವದ ಜೊತೆಗೆ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಕಾಣಿಕೆ ನೀಡುತ್ತಿದೆ ಎಂದು ಅವರು ಹೇಳಿದರು. ‘ಚೀನಾ ಮತ್ತು ಪಾಕಿಸ್ತಾನ ಸಾರ್ವಕಾಲಿಕ ಪಾಲುದಾರರು. ಉಭಯ ಕಡೆಗಳಿಗೂ ಸವಲತ್ತುಗಳನ್ನು ಒದಗಿಸುವ ಸಲುವಾಗಿ ಸರ್ವ ರೀತಿಯ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ನಾವು ಸಿದ್ಧರಾಗಿದ್ದೇವೆ ಎಂದು ಶುವಾಂಗ್ ನುಡಿದರು. ಚೀನಾವು ಪ್ರಸ್ತುತ ಪಾಕಿಸ್ತಾನದಲ್ಲಿ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಸಲುವಾಗಿ ೫೦ ಶತಕೋಟಿ ಅಮೆರಿಕನ್ ಡಾಲರ್ಗಳನನು ವ್ಯಯಿಸುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ರಸ್ತೆ ಯೋಜನೆಗೆ ಭಾರತ ಆಕ್ಷೇಪ ವ್ಯಕ್ತ ಪಡಿಸಿತ್ತು. ಚೀನಾವು ಇತ್ತೀಚೆಗೆ ಯೋಜನೆಗೆ ಆಫ್ಘಾನಿಸ್ಥಾನವನ್ನೂ ಸೇರಿಸಿಕೊಳ್ಳುವ ಮಾತುಗಳನ್ನು ಆಡಿತ್ತು.

2018: ನವದೆಹಲಿ: ಲೋಕಸಭೆಯಲ್ಲಿ ಮಹದಾಯಿ ವಿವಾದ ಪ್ರತಿಧ್ವನಿಸಿತು. ತುಮಕೂರು ಸಂಸದ ಮುದ್ದ ಹನುಮೇಗೌಡ ಅವರು ಮಾಡಿದ ಪ್ರಸ್ತಾಪಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಅವರು ನೀಡಿದ ಉತ್ತರದಿಂದ ತೃಪ್ತರಾಗದ ವಿಪಕ್ಷ ಸದಸ್ಯರು ಸದನದಲ್ಲಿ ಕೋಲಾಹಲ ಎಬ್ಬಿಸಿದರು. ಶೂನ್ಯ ವೇಳೆಯಲ್ಲಿ ಸದನದಲಿ ವಿಷಯ ಪ್ರಸ್ತಾಪಿಸಿದ ಮುದ್ದ ಹನುಮೇಗೌಡ ಅವರುಜನರಿಗೆ ಕುಡಿಯುವ ನೀರು ಪೂರೈಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದ್ದು, ಕುಡಿಯುವ ನೀರಿಗಾಗಿ ಉತ್ತರ ಕರ್ನಾಟಕ ಜನರು ಧರಣಿ ನಡೆಸಿರುವ ಹಿನ್ನೆಲೆಯಲ್ಲಿ ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು. ದಕ್ಷಿಣ ಕರ್ನಾಟಕ ಭಾಗದಲ್ಲಿ ಮೇಕೆದಾಟು ಯೋಜನೆಯ ಜಾರಿ ಆಗಬೇಕಾಗಿದೆ. ಹಾಗೆಯೇ ಉತ್ತರ ಕರ್ನಾಟಕದಲ್ಲಿ ಮಹದಾಯಿ ಯೋಜನೆ ಬೇಕು. ಎರಡೂ ಯೋಜನೆಗಳ ಜಾರಿಗೆ ಪ್ರಧಾನಿ ಮಧ್ಯಪ್ರವೇಶ ಅಗತ್ಯ ಎಂದು ಅವರು ಹೇಳಿದರು. ಮಹದಾಯಿ ವಿವಾದ ಪ್ರತಿದಿನ ರಾಜಕೀಯ ಆಯಾಮ ಪಡೆದುಕೊಳ್ಳುತ್ತಿದೆ. ಇದರಿಂದ ಜನರ ಸಮಸ್ಯೆ ಹೆಚ್ಚುತ್ತಿದೆ.  ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯವನ್ನು ಬಿಟ್ಟು ಸಮಸ್ಯೆಯನ್ನು ಬಗೆಹರಿಸಲು ಕೈಜೋಡಿಸಬೇಕೆಂದು ಅವರು ವಿನಂತಿಸಿದರು. ಇದಕ್ಕೆ ಕಾಂಗ್ರೆಸ್ ಸಂಸದರು ಧ್ವನಿಗೂಡಿಸಿದರು. ಅನಂತ ಕುಮಾರ್ ಉತ್ತರಕ್ಕೆ ಅತೃಪ್ತಿ: ಮುದ್ದ ಹನುಮೇಗೌಡ  ಅವರು ಪ್ರಸ್ತಾಪಿಸಿದ ಮಹದಾಯಿ ಕುರಿತು ಅಭಿಪ್ರಾಯ ತಿಳಿಸುವಂತೆ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ಸೂಚಿಸಿದರು. ಮಹದಾಯಿಗೆ ಸಂಬಂಧಿಸಿದಂತೆ ಗೋವಾ  ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದು, ಅದರಂತೆ ಕರ್ನಾಟಕಕ್ಕೆ .೩೫ ಟಿಎಂಸಿ ನೀರು ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಪ್ರವೇಶದ ಬಗ್ಗೆ ಮಾಡಿದ ಪ್ರಸ್ತಾಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.   ಸಮಜಾಯಿಷಿಗೆ ಸಿಟ್ಟಿಗೆದ್ದ ವಿರೋಧ ಪಕ್ಷದ ಸದಸ್ಯರು ಆಡಳಿತದಲ್ಲಿ ಇರುವವರನ್ನು ಬಿಟ್ಟು ಮಾಜಿ ಮುಖ್ಯಮಂತ್ರಿಗೆ ಏಕೆ ಪತ್ರ ಬರೆದರು ಎಂದು ಪ್ರಶ್ನಿಸುತ್ತಾ ಪ್ರತಿಭಟಿಸಿದರು. ಆಡಳಿತ ಪಕ್ಷದ ಸದಸ್ಯರೂ ವಿಪಕ್ಷ ಸದಸ್ಯರ ಜೊತೆ ವಾಗ್ವಾದಕ್ಕೆ ಇಳಿದರು. ಪರಿಣಾಮವಾಗಿ ಸದನದಲ್ಲಿ ಸ್ವಲ್ಪ ಹೊತ್ತು ಕೋಲಾಹಲ ಸೃಷ್ಟಿಯಾಯಿತು.

2018: ನವದೆಹಲಿ: ಒಂದೇ ಉಸಿರಿನ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡುವುದನ್ನು ಅಪರಾಧವನ್ನಾಗಿ ಮಾಡುವ ತ್ರಿವಳಿ ತಲಾಖ್ ಮಸೂದೆಯು ಜನವರಿ ೩ರಂದು ರಾಜ್ಯಸಭೆಯಲ್ಲಿ ಪರಿಶೀಲನೆಗಾಗಿ ಬರಲಿದ್ದು, ಸಂದರ್ಭದಲ್ಲಿ ತಿದ್ದುಪಡಿಗಳಿಗಾಗಿ ಆಗ್ರಹ ಪಡಿಸದಿರಿ ಎಂದು ಸರ್ಕಾರ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿತು. ಮುಸ್ಲಿಮ್ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಗೆ ಲೋಕಸಭೆಯು ಈಗಾಗಲೇ ತನ್ನ ಒಪ್ಪಿಗೆಯನ್ನು ನೀಡಿದೆ. ತಿದ್ದುಪಡಿಗಳಿಗಾಗಿ ಒತ್ತಾಯಿಸದೇ ಇರುವ ಮೂಲಕ ಲೋಕಸಭೆಯಲ್ಲಿ ತಳೆದ ನಿಲುವನ್ನೇ ಕಾಂಗ್ರೆಸ್ ಮುಂದುವರೆಸುವುದನ್ನು ಸರ್ಕಾರ ಇಷ್ಟಪಡುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರು ಇಲ್ಲಿ ಹೇಳಿದರು. ‘ನಾವು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಲೋಕಸಭೆಯಲ್ಲಿ ಯಾವುದೇ ತಿದ್ದುಪಡಿಗೆ ಒತ್ತಾಯಿಸದೇ ಇರುವ ಕಾರಣ, ಅದೇ ನಿಲುವನ್ನು ರಾಜ್ಯಸಭೆಯಲ್ಲೂ ತಳೆಯಬೇಕು ಎಂದು ನಾವು ಕಾಂಗೆಸ್ ಪಕ್ಷಕ್ಕೆ ಹೇಳಿದ್ದೇವೆ ಎಂದು ಕುಮಾರ್ ನುಡಿದರು. ಲೋಕಸಭೆಯಲ್ಲಿ ಮಸೂದೆಯ  ಕೆಲವು ವಿಧಿಗಳಿಗೆ ಕಾಂಗ್ರೆಸ್ ತಿದ್ದುಪಡಿಗಳನ್ನು ಸಲ್ಲಿಸಿತ್ತು. ಆದರೆ ಅವುಗಳನ್ನು ಮತಕ್ಕೆ ಹಾಕುವಂತೆ ಒತ್ತಾಯಿಸಿರಲಿಲ್ಲ. ಕಾಂಗ್ರೆಸ್ ನಿಲುವು: ಕಾಂಗ್ರೆಸ್ ರಾಜ್ಯಸಭಾ ಸದಸ್ಯೆ ರೇಣುಕಾ ಚೌಧರಿ ಅವರು ತಮ್ಮ ಪಕ್ಷವು ಸ್ವಾತಂತ್ರ್ಯ ಕಾಲದಿಂದಲೇ ಮಹಿಳಾ ಸಬಲೀಕರಣದ ಪರವಾದ ನಿಲುವನ್ನೇ ತಳೆದಿದೆ, ಆದರೆ ಮಸೂದೆಯಲ್ಲಿ ನಿಜವಾಗಿ ಏನನ್ನು ಸೇರಿಸಲಾಗಿದೆ ಎಂದು ಪಕ್ಷವು ನೋಡುವ ಅಗತ್ಯ ಇದೆ ಎಂದು ಹೇಳಿದರು. ಮಹಿಳೆಯರನ್ನು ಸಬಲರನ್ನಾಗಿ ಮಾಡುವ ಯಾವುದೇ ವಿಚಾರಕ್ಕೆ ವಿರುದ್ಧವಾಗಿ ನಿಲ್ಲುವ ಪ್ರಶ್ನೆ ಇಲ್ಲ. ಇದಕ್ಕೆ ಕಪ್ಪು ಮತ್ತು ಬಿಳುಪು ಪರಿಹಾರ ಇಲ್ಲ. ಚರ್ಚೆ ಹೇಗೆ ಸಾಗುತ್ತದೆ ಎಂದು ನಾವು ನೋಡಬೇಕು. ನಿಜವಾಗಿ ಏನನ್ನು ಸೇರಿಸಲಾಗಿದೆ ಮತ್ತು ಅದು ಹೇಗೆ ಅನುಷ್ಠಾನಯೋಗ್ಯ ಎಂಬುದನ್ನು ಪರಿಶೀಲಿಸಬೇಕು ಎಂದು ಅವರು ನುಡಿದರು. ಶಿವಸೇನೆಯಂತಹ ಬಿಜೆಪಿಯ ಕೆಲವು ಮಿತ್ರ ಪಕ್ಷಗಳು ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದರೂ, ಮಸೂದೆ ಕುರಿತು ಈಗಾಗಲೇ ಲೋಕಸಭೆ ಚರ್ಚಿಸಿರುವುದರಿಂದ ಅಂತಹ ಅಗತ್ಯ ಇಲ್ಲ ಎಂದು ಸರ್ಕಾರ ಭಾವಿಸಿದೆ. ವಿಷಯ ಈಗಾಗಲೇ ಚರ್ಚಿಸಲ್ಪಟ್ಟಿರುವುದರಿಂದ ಅದು ಯಾವುದೇ ಸಮಿತಿಯ ಮುಂದೆ ಹೋಗುವ ಅಗತ್ಯ ಇಲ್ಲ. ತ್ರಿವಳಿ ತಲಾಖ್ ನಿಂದ ಸಂತ್ರಸ್ಥರಾಗುವ ಮಹಿಳೆಯರ ಹಣೆಬರಹ ಏನು? ಮುಸ್ಲಿಮ್ ಮಹಿಳೆಯರ ರಕ್ಷಣೆಗಾಗಿ ಕಠಿಣ ಕಾನೂನು ತರುವ ಅಗತ್ಯವಿದೆ ಎಂಬ ಬಗ್ಗೆ ರಾಷ್ಟ್ರದಲ್ಲಿ ಸಹಮತ ಇದೆ. ರಾಜ್ಯಸಭೆಯಲ್ಲಿ ಎಲ್ಲ ಪಕ್ಷಗಳೂ ವಿಚಾರದಲ್ಲಿ ಸಹಕರಿಸುತ್ತವೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
2018: ಕಾಬೂಲ್: ಕಾಬೂಲಿನ ಉರುಜ್ಘನ್ ಹಾಗೂ ತ್ರೈಕೋಟ್ಪ್ರದೇಶಗಳಲ್ಲಿ ನಡೆದ ವಾಯುದಾಳಿಯಲ್ಲಿ ತಾಲಿಬಾನ್ ಸಂಘಟನೆಯ ಪ್ರಮುಖ ಸಂಚುಕೋರ ಸೇರಿದಂತೆ ಒಟ್ಟು 11 ಉಗ್ರರು ಮೃತರಾದರು. ತಾಲಿಬಾನಿನ ಮಾವ್ಲಾವಿ ವಾಲಿ ಜಾನ್, ಹಮ್ಜಾ ಸೇರಿದಂತೆ 11 ಉಗ್ರರನ್ನು ಅಫ್ಗಾನಿ ಪಡೆ ಹತ್ಯೆಗೈದಿದೆ ಎಂದು ಅಧಿಕಾರಿಗಳು ತಿಳಿಸಿದರು. ಮುಖ್ಯವಾಗಿ ಮೊದಲು ತ್ರೈಕೋಟ್ಎಂಬಲ್ಲಿ ವಾಯುದಾಳಿ ಕೈಗೊಳ್ಳಲಾಗಿತ್ತು. ವೇಳೆ ಹಲವು ವಾಹನಗಳು, ಶಸ್ತ್ರಾಸ್ತ್ರಗಳು, ಯುದ್ಧ ಸಾಮಗ್ರಿಗಳು ನಾಶಗೊಂಡವು. ಇದರಲ್ಲಿ ಮೃತನಾದ ಹಮ್ಜಾ ಉರುಜ್ಘನ್ ಹಾಗೂ ತ್ರೈಕೋಟ್ಪ್ರದೇಶಗಳಲ್ಲಿ ನಡೆಸಿದ ಉಗ್ರ ಚಟುವಟಿಕೆಗಳ ಮುಖ್ಯ ಆಯೋಜಕ ಎಂದು ಹೇಳಲಾಯಿತು.


2009: ಆರ್ಥಿಕ ಹಿಂಜರಿತದ ಪರಿಣಾಮದ ಗತಿಯನ್ನು ಬದಲಾಯಿಸಲು ನಿರ್ಧರಿಸಿದ ಕೇಂದ್ರ ಸರ್ಕಾರ ಎರಡನೇ ಬಾರಿ ಆರ್ಥಿಕ ಪರಿಸ್ಥಿತಿಯನ್ನು ಉತ್ತೇಜಿಸುವಂತಹ ಕ್ರಮ ಕೈಗೊಂಡು, ರಾಜ್ಯಗಳು ಮತ್ತು ಉದ್ಯಮ ವಲಯಕ್ಕೆ ಉತ್ತೇಜನ ನೀಡುವಂತಹ ಪ್ಯಾಕೇಜನ್ನು ವರ್ಷಾರಂಭದಲ್ಲೇ ಘೋಷಿಸಿತು. ಆರ್ಥಿಕ ಹಿಂಜರಿತದ ನೆರಳಿನಲ್ಲಿದ್ದು, ಹಿಮ್ಮುಖವಾಗಿದ್ದ ದೇಶದ ಆರ್ಥಿಕ ಪ್ರಗತಿ ಗತಿಯನ್ನು ಹಳಿಗೆ ಮರಳಿ ತರಲು ನೆರವಾಗುವಂತಹ ಸರ್ಕಾರದ ಪುನಶ್ಚೇತನ ಕ್ರಮಗಳನ್ನು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ಸಿಂಗ್ ಆಹ್ಲುವಾಲಿಯಾ ಪ್ರಕಟಿಸಿದರು.


2009: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುವ ವಿಶ್ವದ ಅತಿ ದೊಡ್ಡ ಆಹಾರ ಕಾರ್ಯಕ್ರಮ ಇಸ್ಕಾನಿನ 'ಅಕ್ಷಯ ಪಾತ್ರ' ಈಗ ಲಿಮ್ಕಾ ದಾಖಲೆಗೆ ಸೇರಿತು. ಇದು 'ಅಕ್ಷಯ ಪಾತ್ರ' ಪಾಲಿಗೆ ಇನ್ನೊಂದು ಹೆಮ್ಮೆಯ ಗರಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ದೇಶದಾದ್ಯಂತ 5700 ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಅಂಗನವಾಡಿ ಕೇಂದ್ರಗಳ 9.73 ಲಕ್ಷ ಮಕ್ಕಳಿಗೆ ನಿತ್ಯ ಮಧ್ಯಾಹ್ನದ ಊಟ ನೀಡುವ ಈ ಯೋಜನೆ ವಿಶ್ವದಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದು ಶಾಲಾ ಮಕ್ಕಳಿಗಾಗಿ ನಡೆಸುತ್ತಿರುವ ಅತಿ ದೊಡ್ಡ ಕಾರ್ಯಕ್ರಮ. 'ದೇಶದಲ್ಲಿರುವ ಯಾವುದೇ ಮಗು ಹಸಿವಿನಿಂದಾಗಿ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಗುರಿ ಹೊತ್ತಿರುವ ಈ ಯೋಜನೆ ನಿಜಕ್ಕೂ ಅನುಕರಣೀಯ' ಎಂದು ಲಿಮ್ಕಾ ವಿಶ್ವ ದಾಖಲೆಗಳ ಪುಸ್ತಕ ವರ್ಣಿಸಿತು.

2009: ಗಾಜಾ ವಲಯದ ಮೇಲಿನ ತನ್ನ ಎಡೆಬಿಡದ ವಾಯುದಾಳಿಯನ್ನು ಇಸ್ರೇಲ್ ಸತತ ಏಳನೇ ದಿನವೂ ಮುಂದುವರಿಸಿ ಇಸ್ಲಾಮ್ ತೀವ್ರಗಾಮಿ ಗುಂಪಿನ 20 ನೆಲೆಗಳ ಮೇಲೆ ದಾಳಿ ನಡೆಸಿತು. ಹಮಾಸ್ ಆಡಳಿತಗಾರರು ರಾಕೆಟ್ ಲಾಂಚರುಗಳನ್ನು ಅಡಗಿಸಿಟ್ಟಿದ್ದರು. ಅವರ ರಾಕೆಟ್ ತಯಾರಿಕಾ ಘಟಕಗಳು, ರಾಕೆಟ್ ದಾಸ್ತಾನು ತಾಣ, ಹಮಾಸ್ ಕಾರ್ಯಕರ್ತರ ನಿವಾಸಗಳನ್ನು ಮುಖ್ಯ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಯಿತು. ಇದರೊಂದಿಗೆ 7 ದಿನಗಳಲ್ಲಿ 700 ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದಂತಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದರು.

2008: ಇನ್ನೂ 34 ಹೊಸ ವಿಶೇಷ ಆರ್ಥಿಕ ವಲಯಗಳ (ಎಸ್ ಇ ಜೆಡ್) ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತು. ಇದರೊಂದಿಗೆ ಇಂತಹ ತೆರಿಗೆ ಮುಕ್ತ ಆರ್ಥಿಕ ವಲಯಗಳ ಸಂಖ್ಯೆ 600ಕ್ಕೆ ತಲುಪಿತು. ಕೇಂದ್ರ ವಾಣಿಜ್ಯ ಇಲಾಖೆ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಅವರ ಅಧ್ಯಕ್ಷತೆಯ ಅನುಮೋದನಾ ಸಮಿತಿಯು, ನಾಲ್ಕು ವಿಶೇಷ ಆರ್ಥಿಕ ವಲಯಗಳಿಗೆ ತಾತ್ವಿಕ ಒಪ್ಪಿಗೆ ನೀಡಿತು. ಇನ್ನುಳಿದ 30 ಎಸ್ ಇ ಜೆಡ್ ಗಳಿಗೂ ಇದೇ ವೇಳೆ, ಹಸಿರು ನಿಶಾನೆ ನೀಡಲಾಯಿತು. ಅಧಿಕೃತ ಅನುಮೋದನೆ ಪಡೆದ ಕಂಪೆನಿಗಳಲ್ಲಿ ತಮಿಳುನಾಡಿನ ಸೇಲಮ್ಮಿನಲ್ಲಿ ಇರುವ ಭಾರತೀಯ ಉಕ್ಕು ಪ್ರಾಧಿಕಾರ ಸಂಸ್ಥೆಯ (ಎಸ್ ಎ ಐ ಎಲ್) ಘಟಕವೂ ಒಂದು. `ಇಲ್ಲಿವರೆಗೆ ಅಧಿಕೃತ ಆದೇಶ ಪತ್ರ ಪಡೆದುಕೊಂಡ 187 ವಿಶೇಷ ಆರ್ಥಿಕ ವಲಯಗಳಿಗಾಗಿ ಒಟ್ಟು ರೂ 56000 ಕೋಟಿಗಳಷ್ಟು ಬಂಡವಾಳ ಹೂಡಿಕೆಯಾಗಿದೆ. 2008ನೇ ಸಾಲಿನಲ್ಲಿ ಅವುಗಳಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ' ಎಂಬುದು ಪಿಳ್ಳೈ ವಿವರಣೆ.

2008: ಮುಂಬೈಯಲ್ಲಿ ಜ.1ರ ನಸುಕಿನ ಸುಮಾರು 1.45ರ ವೇಳೆಯಲ್ಲಿ ಇಬ್ಬರು ಯುವತಿಯರು ತಮ್ಮ ಸ್ನೇಹಿತರೊಂದಿಗೆ ಜೆ. ಡಬ್ಲ್ಯೂ. ಮ್ಯಾರಿಯಟ್ ಹೋಟೆಲಿನಿಂದ ಜುಹು ಸಮುದ್ರ ತೀರದತ್ತ ಸಾಗುತ್ತಿದ್ದಾಗ ಸುಮಾರು 40 ಜನರ ಗುಂಪು ಅವರನ್ನು ಚುಡಾಯಿಸಿ, ಮಾನಭಂಗ ಮಾಡಲು ಯತ್ನಿಸಿತು. ಕೆಲವರು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿ, ಬಟ್ಟೆ ಹರಿದು ಹಾಕಿ ಅವರು ಕೆಳಕ್ಕೆ ಬಿದ್ದಾಗ ಅವರ ಮೇಲಕ್ಕೆ ಬಿದ್ದರು. ಇವೆಲ್ಲ ದೃಶ್ಯಗಳನ್ನು ಸೆರೆಹಿಡಿದ ಪತ್ರಿಕಾ ಛಾಯಾಗ್ರಾಹಕರೊಬ್ಬರು ಪೊಲೀಸರಿಗೆ ದೂರು ಸುದ್ದಿ ಮುಟ್ಟಿಸಿದರು. ಮರುದಿನ ಪತ್ರಿಕೆಯಲ್ಲಿ ಈ ಘಟನೆಯ ಚಿತ್ರಗಳು ಪತ್ರಿಕೆಯಲ್ಲಿ ಪ್ರಕಟವಾದಾಗ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

2008: ಖರೀದಿ ಆಸಕ್ತಿ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ವಹಿವಾಟಿನಲ್ಲಿ ದಿನದ ಗರಿಷ್ಠ ಮಟ್ಟವಾದ 20,500 ಅಂಶಗಳಿಗೆ ಏರಿ ಹೊಸ ದಾಖಲೆ ಬರೆಯಿತು. ಆರಂಭದ ವಹಿವಾಟಿನಲ್ಲಿ ಸಾಕಷ್ಟು ಏರಿಳಿತ ಕಂಡರೂ ಅಂತ್ಯದಲ್ಲಿ ಕಂಡು ಬಂದ ಖರೀದಿ ಭರಾಟೆ ಫಲವಾಗಿ ದಿನದ ಅಂತ್ಯದಲ್ಲಿ 165 ಅಂಶಗಳಷ್ಟು ಏರಿಕೆ ದಾಖಲಿಸಿ 20,465 ಅಂಶಗಳೊಂದಿಗೆ ವಹಿವಾಟು ಕೊನೆಗೊಂಡಿತು.

2008: ಸಾಂಸ್ಥಿಕ ಹೂಡಿಕೆದಾರರೂ ತಮ್ಮ ಒಡೆತನಕ್ಕೆ ಸೇರದ ಷೇರುಗಳನ್ನು ಮಾರಾಟ ಮಾಡಲು (ಶಾರ್ಟ್ ಸೆಲ್ಲಿಂಗ್) ಷೇರುಪೇಟೆಯ ನಿಯಂತ್ರಣ ಮಂಡಳಿ (ಸೆಬಿ) ಅನುಮತಿ ನೀಡಿತು.

2008: ಪಾಕಿಸ್ಥಾನದಲ್ಲಿ ಜನವರಿ 8ಕ್ಕೆ ನಿಗದಿಯಾದ ಚುನಾವಣೆಯನ್ನು ಫೆಬ್ರುವರಿ 18ಕ್ಕೆ ಮುಂದೂಡಲು ಚುನಾವಣಾ ಆಯೋಗ ನಿರ್ಧರಿಸಿತು. ಬೆನಜೀರ್ ಹತ್ಯೆ ನಂತರದ ಪ್ರತಿಭಟನೆ ವೇಳೆ ಚುನಾವಣಾ ಆಯೋಗದ ಕಚೇರಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವ ನಿರ್ಧಾರವನ್ನು ಆಯೋಗ ಕೈಗೊಂಡಿತು.

2008: ದಕ್ಷಿಣ ಚಿಲಿಯ ಅರೌಕ್ಯಾನಿಯಾ ಪ್ರದೇಶದ ಕಾಂಗ್ಯುಲಿಯೊ ರಾಷ್ಟ್ರೀಯ ಉದ್ಯಾನವನದಲ್ಲಿನ ಲೈಮಾ ಪರ್ವತದಲ್ಲಿ ಜ್ವಾಲಾಮುಖಿ ಚುರುಕುಗೊಂಡು, ಬೆಳಗ್ಗೆಯಿಂದಲೇ ಪರ್ವತದ ಶಿಖರದಲ್ಲಿ ಜ್ವಾಲೆಗಳು ಮೇಲಕ್ಕೆ ಚಿಮ್ಮಿದವು. ಸುತ್ತಲ ಪ್ರದೇಶದ ಆಕಾಶದಲ್ಲಿ ದಟ್ಟ ಹೊಗೆ ಆವರಿಸಿತು.

2008: ಮುಂಬೈ ಚಿನಿವಾರ ಪೇಟೆಯಲ್ಲಿ ಶುದ್ಧ ಚಿನ್ನದ ಬೆಲೆಯು ತಲಾ 10 ಗ್ರಾಮುಗಳಿಗೆ ರೂ 10,815ಕ್ಕೆ ಏರಿ ಸಾರ್ವಕಾಲಿಕ ದಾಖಲೆ ನಿರ್ಮಾಣಗೊಂಡಿತು.

2008: ಎರಡು ತಿಂಗಳ ಹಿಂದೆ ಕಾಡಾನೆಯೊಂದರ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಕರ್ನಾಟಕ ರಾಜ್ಯ ಪಶು ಸಂಗೋಪನೆ ಮತ್ತು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಜಿ.ಕೆ. ವಿಶ್ವನಾಥ್ (52) ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ನವೆಂಬರ್ 10ರಂದು ಉದ್ಯಾನದ ಒಳಗೆ ಸಾಕಾನೆಯ ಜತೆಯಲ್ಲಿ ಕಾಡಾನೆಯೊಂದು ಸೇರಿಕೊಂಡಿರುವುದನ್ನು ಗಮನಿಸಿದ್ದ ವಿಶ್ವನಾಥ್, ಅದನ್ನು ಹೊರಕ್ಕೆ ಅಟ್ಟಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಅವರ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಕುತ್ತಿಗೆಯ ಬಳಿ ತೀವ್ರವಾದ ಗಾಯವಾದ ಪರಿಣಾಮ ಅವರ ದೇಹ ಮತ್ತು ಬೆನ್ನುಹುರಿಯ ನಡುವಿನ ಸಂಪರ್ಕ ಕಡಿದು ಹೋಗಿತ್ತು. ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.

2008: ಸಮಾಜವಾದಿ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಉತ್ತರ ಪ್ರದೇಶದ ಬಲಿಯಾ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದರು. ಚಂದ್ರಶೇಖರ್ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಡಿಸೆಂಬರ್ 29ರಂದು ಉಪ ಚುನಾವಣೆ ನಡೆದಿತ್ತು. ಶೇ 38ರಷ್ಟು ಮತ ಚಲಾವಣೆ ಆಗಿತ್ತು. ನೀರಜ್ ಶೇಖರ್ ತಮ್ಮ ಪ್ರಬಲ ಎದುರಾಳಿ ಬಹುಜನ ಸಮಾಜವಾದಿ ಪಕ್ಷದ ವಿನಯ್ ಶಂಕರ್ ತಿವಾರಿ ಅವರನ್ನು 1.30 ಲಕ್ಷಕ್ಕಿಂತಲೂ ಅಧಿಕ ಮತಗಳ ಅಂತರದಿಂದ ಸೋಲಿಸಿದರು.

2008: ಇಡೀ ಮಲೇಷ್ಯಾವನ್ನೇ ಬೆಚ್ಚಿಬೀಳಿಸಿದ್ದ ಆರೋಗ್ಯ ಸಚಿವ ಡಾ. ಚೌ ಸೋಯಿಲೆಕ್ ಅವರ ರಹಸ್ಯ ಕಾಮಕೇಳಿ ವೀಡಿಯೋ ಚಿತ್ರದ ಪ್ರಕರಣಕ್ಕೆ ಸಚಿವರ ರಾಜೀನಾಮೆಯಿಂದಾಗಿ ಕೊನೆಗೂ ತೆರೆ ಕಂಡಿತು. ಮಲೇಷ್ಯಾ ಚೈನೀಸ್ ಅಸೋಸಿಯೇಷನ್ನಿನ ಉಪಾಧ್ಯಕ್ಷರೂ ಆದ ಸಚಿವ ಡಾ.ಚೌ ಸೋಯಿ ಲೆಕ್ ಅವರನ್ನು ಆಡಳಿತಾರೂಢ ಬರಿಸನ್ ನ್ಯಾಷನಲ್ ಪಕ್ಷದ ಎಲ್ಲ ಹುದ್ದೆಗಳಿಂದಲೂ ಕಿತ್ತು ಹಾಕಲಾಯಿತು. ಲೆಕ್ ಅವರು ಸಚಿವ ಸ್ಥಾನದ ಜೊತೆಗೆ ತಮ್ಮ ಸಂಸತ್ ಸದಸ್ಯ ಸ್ಥಾನವನ್ನೂ ತೊರೆದರು. ಲೆಕ್ ಮಹಿಳೆಯೊಬ್ಬರ ಜೊತೆ ಕಾಮಕೇಳಿಯಲ್ಲಿ ತೊಡಗಿದ್ದ 60 ನಿಮಿಷಗಳ ವೀಡಿಯೋ ಚಿತ್ರೀಕರಣದ ಕ್ಯಾಸೆಟ್ ಇಡೀ ದೇಶಾದ್ಯಂತ ಹುಯಿಲೆಬ್ಬಿಸಿತ್ತು.

2008: ಬಾಗ್ದಾದಿನ ದಿಯಾಲಾ ಪ್ರಾಂತ್ಯದ ಬಕುದಾ ಗಡಿ ಭಾಗದಲ್ಲಿ ಕಾವಲು ಪಡೆಯ ಮೇಲೆ ಮಹಿಳೆಯೊಬ್ಬಳು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 10 ಜನ ಯೋಧರು ಬಲಿಯಾದರು.

2007: ದೇವಾಲಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಿಶ್ವ ಖ್ಯಾತಿಯ ವೆಂಕಟೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಡಿಸೆಂಬರ್ 23ರ ಬಳಿಕ ಕಳೆದ 10 ದಿನಗಳಲ್ಲಿ ಪ್ರತಿದಿನ ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚಿನ `ಕಾಣಿಕೆ' ಸಂಗ್ರಹವಾಗುತ್ತಿದ್ದು, `ವೈಕುಂಠ ಏಕಾದಶಿ'ಯ ದಿನ 2.1 ಕೋಟಿ ರೂಪಾಯಿ ಹಾಗೂ ಹೊಸ ವರ್ಷದ ದಿನ 1.85 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಯಿತು. ಈ ಹತ್ತು ದಿನಗಳ ಅವಧಿಯಲ್ಲಿ ಸಂಗ್ರಹವಾದ ಒಟ್ಟು ಕಾಣಿಕೆಯ ಮೊತ್ತ 14 ಕೋಟಿ ರೂಪಾಯಿಗಳು. ವಾರ್ಷಿಕ ಬ್ರಹ್ಮೋತ್ಸವ ಕಾಲದಲ್ಲಿ ಆಗಿದ್ದ 7.84 ಕೋಟಿ ರೂಪಾಯಿಗಳ ಕಾಣಿಕೆ ಸಂಗ್ರಹದ ದಾಖಲೆಯನ್ನು ಇದು ಮುರಿಯಿತು.

2007: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರನ್ನು ಅಧಿಕೃತವಾಗಿ ನೇಮಿಸಲಾಯಿತು.

2007: ಬಕ್ರೀದ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪಾಲ್ಗೊಳ್ಳದೇ ಇದ್ದ ಕಾರಣಕ್ಕ್ಕೆ ಮುನಿಸಿಕೊಂಡ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರಿಗೆ ರಾಜೀನಾಮೆ ಸಲ್ಲಿಸಿದರು. ಅವರ ರಾಜೀನಾಮೆ ಅಂಗೀಕರಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯಪಾಲರಿಗೆ ಶಿಫಾರಸು ಮಾಡಿದರು.

2007: ಜನವರಿ 1ರಂದು ಜಾವಾ ದ್ವೀಪದಿಂದ ಸುಲವೇಸಿ ದ್ವೀಪಕ್ಕೆ ಪ್ರಯಾಣಿಸುತ್ತಿದ್ದಾಗ ಕಣ್ಮರೆಯಾದ ಇಂಡೋನೇಷ್ಯದ ಆಡಮ್ ಕಂಪೆನಿಗೆ ಸೇರಿದ ಬೋಯಿಂಗ್ 737 ವಿಮಾನ ಅಪಘಾತಕ್ಕೆ ಈಡಾಗಿ 106 ಪ್ರಯಾಣಿಕರು ಅಸು ನೀಗಿದರು. ಹವಾಮಾನ ವೈಪರೀತ್ಯದಿಂದ ವಿಮಾನ ಬಿರುಗಾಳಿಗೆ ಸಿಲುಕಿ ಪರ್ವತಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತು. 12 ಮಂದಿಯನ್ನು ರಕ್ಷಿಸಲಾಯಿತು.

2007: ಲೇಖಕಿ ಲಕ್ಷ್ಮೀದೇವಿ ಕಡಿದಾಳ್ ಅವರಿಗೆ ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರು ರಾಜಭವನದಲ್ಲಿ ಮೈಸೂರು ವಿಶ್ವ ವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

2006: ಹೊಸ ವರ್ಷದ ಮೊದಲ ದಿನ ತಿರುಪತಿ ತಿಮ್ಮಪ್ಪನ ಹುಂಡಿಗೆ 2ಕೋಟಿ ರೂಪಾಯಿಗಳ ಕಾಣಿಕೆ ಬಂದಿದ್ದು ತಿಮ್ಮಪ್ಪನ ಆದಾಯ ಚಾರಿತ್ರಿಕ ದಾಖಲೆ ಸೃಷ್ಟಿಸಿತು. ದೇಗುಲದ ಈ ಆದಾಯ ಇತಿಹಾಸದಲ್ಲೇ ಒಂದು ದಾಖಲೆ ಎಂದು ತಿರುಮಲ ತಿರುಪತಿ ದೇವಸ್ವಂ ವಿಶೇಷಾಧಿಕಾರಿ ಎ.ವಿ. ಧರ್ಮರೆಡ್ಡಿ ತಿಳಿಸಿದರು.

2006: ಬಿಜೆಪಿಯ ನೂತನ ಅಧ್ಯಕ್ಷರಾಗಿ ರಾಜನಾಥ್ ಸಿಂಗ್ ಅಧಿಕಾರ ಸ್ವೀಕರಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪಕ್ಷದ ಮಾಜಿ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಹಾಜರಿದ್ದರು.

2006: ಗುಡಿಯಾ ಅಂದರೆ ಗೊಂಬೆ. ಆದರೆ ಸಮಯದ ಗೊಂಬೆಯಾಗಿ ವಿಚಿತ್ರ ಬದುಕು ನಡೆಸಬೇಕಾಗಿ ಬಂದ ಉತ್ತರ ಪ್ರದೇಶದ ಗುಡಿಯಾ ಮೀರತಿನಲ್ಲಿ ಮೃತಳಾದಳು. ಈಕೆ ಸೈನಿಕನೊಬ್ಬನನ್ನು ಮದುವೆಯಾಗಿದ್ದಳು. ಆತ ಯುದ್ಧದಲ್ಲಿಸೆರೆಸಿಕ್ಕಿ ವೈರಿಗಳ ಕೈವಶವಾದ. ಆತನಿಗಾಗಿ ವರ್ಷಗಟ್ಟಲೆ ಕಾದ ಗುಡಿಯಾ, ಕೊನೆಗೊಮ್ಮೆ ಬದುಕಿಗೆ ಆಸರೆಯ ಅನಿವಾರ್ಯತೆ ಮನಗಂಡು ಇನ್ನೊಬ್ಬನನ್ನು ಮದುವೆಯಾದಳು. ಮಗುವೂ ಹುಟ್ಟಿತು. 2004ರಲ್ಲಿ ಈಕೆಯ ಮೊದಲ ಗಂಡ ಸೆರೆಮನೆಯಿಂದ ಬಿಡುಗಡೆಯಾಗಿ ಬಂದ. ಧರ್ಮಸಂಕಟಕ್ಕೆ ಸಿಲುಕಿ ದ್ವಂದ್ವ ಅನುಭವಿಸಿದ ಗುಡಿಯಾ ಕಡೆಗೆ ಮೊದಲ ಪತಿಯತ್ತಲೇ ತೆರಳಿದಳು. ಮತ್ತೆ ಗರ್ಭವತಿಯೂ ಆದಳು. ಅಕ್ಟೋಬರಿನಲ್ಲಿ ಭ್ರೂಣಾವಸ್ಥೆಯಲ್ಲಿದ್ದ ಮಗುವಿಗೆ ಜನ್ಮನೀಡಿದಳು. ಆಗ ಸೇನಾ ಆಸ್ಪತ್ರೆಗೆ ಸೇರಬೇಕಾಗಿ ಬಂದ ಗುಡಿಯಾಳನ್ನು ಹೀಮೋಗ್ಲೋಬಿನ್ ಕೊರತೆಯ ತೊಂದರೆ ಕಾರಣ ದೆಹಲಿಯ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಯಿತು. ಆಕೆ ಈ ದಿನ ಅಸು ನೀಗಿದಳು.

2006: ಖ್ಯಾತ ಮಲೆಯಾಳಂ ಚಿತ್ರನಟಿ ಫಿಲೋಮಿನಾ (80) ಈದಿನ ರಾತ್ರಿ ತಮಿಳುನಾಡಿನ ಚೆನ್ನೈಯಲ್ಲಿ ನಿಧನರಾದರು. ಅವರು 750ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದರು.

1975: ಸಮಷ್ಟಿಪುರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕೇಂದ್ರದ ರೈಲ್ವೇ ಸಂಪುಟ ಸಚಿವ ಲಲಿತ್ನಾರಾಯಣ್ ಮಿಶ್ರ ಹತರಾದರು. ಈ ರೀತಿ ಬಾಂಬ್ ಸ್ಫೋಟದಲ್ಲಿ ಹತರಾದ ಭಾರತದ ಮೊದಲ ಸಂಪುಟ ದರ್ಜೆ ಸಚಿವರು ಇವರು.

1968: ಅಮೆರಿಕನ್ ಚಿತ್ರನಟ ಕ್ಯೂಬಾ ಗುಡಿಂಗ್ ಜ್ಯೂನಿಯರ್ ಹುಟ್ಟಿದ ದಿನ.

1961: ಕಲಾವಿದೆ ರತ್ನಮಾಲಾ ಪುರಂದರ ಜನನ.

1959: ರಷ್ಯದ ಕೃತಕ ಉಪಗ್ರಹ ಲ್ಯೂನಾ 1 ಟೈರಾಟಮ್ನಿಂದ ಬಾಹ್ಯಾಕಾಶಕ್ಕೆ ಏರಿತು. ಇದು ಚಂದ್ರನ ಅತ್ಯಂತ ಸಮೀಪಕ್ಕೆ ತೆರಳಿದ ಮೊತ್ತ ಮೊದಲ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

1959: ರಾಜಕಾರಣಿಯಾದ ಮಾಜಿ ಕ್ರಿಕೆಟ್ ಆಟಗಾರ ಕೀರ್ತಿವರ್ಧನ್ ಭಗವತ್ ಝಾ ಆಜಾದ್ ಹುಟ್ಟಿದ ದಿನ.

1954: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ `ಭಾರತ ರತ್ನ'ವನ್ನು ಸ್ಥಾಪಿಸಲಾಯಿತು. ಚಕ್ರವರ್ತಿ ರಾಜಗೋಪಾಲಾಚಾರಿ, ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಚಂದ್ರಶೇಖರ ವೆಂಕಟರಾಮನ್ (ಸಿ.ವಿ. ರಾಮನ್) ಅವರು ಈ ಪ್ರಶಸ್ತಿ ಪಡೆದ ಮೊದಲಿಗರಾದರು.

1928: ಪಾನ್ ಅಮೆರಿಕನ್ ಏರ್ ಲೈನ್ಸ್ `ಪುರುಷ ಸೇವಕ'ರನ್ನು ನೇಮಿಸಿದ ಪ್ರಥಮ ಏರ್ಲೈನ್ಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

1928: ಖ್ಯಾತ ಕಲಾವಿದ ಅರ್ಜುನ ಸಾ ನಾಕೋಡ್ (2-1-1928ರಿಂದ 4-1-2006) ಅವರು ವೆಂಕೂಸಾ- ನಾಗೂಭಾಯಿ ದಂಪತಿಯ ಮಗನಾಗಿ ಬೆಟಗೇರಿಯಲ್ಲಿ ಜನಿಸಿದರು. ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯತ್ವದೊಂದಿಗೆ ಗಾಯಕರಾಗಿ ಅನೇಕ ರಾಗಗಳನ್ನು ಸಾಕ್ಷಾತ್ಕರಿಸಿಕೊಂಡ ಅವರು ಪಂಚಾಕ್ಷರಿ ಗವಾಯಿಗಳು ಪ್ರಾರಂಬಿಸಿದ್ದ `ಶ್ರೀ ಕುಮಾರೇಶ್ವರ ನಾಟ್ಯ ಸಂಘ'ದಲ್ಲಿ ಕಲಾವಿದರಾಗಿ ಖ್ಯಾತಿ ಗಳಿಸಿದ್ದರು.

1925: ಕಲಾವಿದ ಎಲ್. ಆರ್ ಹೆಗಡೆ ಜನನ.

1916: ಕಲಾವಿದ ಗೋಪಾಲದಾಸ ಜನನ.

1839: ಫ್ರಾನ್ಸಿನ ಲೂಯಿ ಡಾಗ್ಯುಯೆರೆ ಚಂದ್ರನ ಫೋಟೋವನ್ನು ಮೊತ್ತ ಮೊದಲ ಬಾರಿಗೆ ಸೆರೆಹಿಡಿದ.

1757: ರಾಬರ್ಟ್ ಕ್ಲೈವ್ ಕಲ್ಕತ್ತಾವನ್ನು (ಈಗಿನ ಕೋಲ್ಕತ) ಮರುವಶ ಮಾಡಿಕೊಂಡ. 1756ರ ಜೂನ್ 20ರಂದು ಸಂಭವಿಸಿದ ಬ್ಲ್ಯಾಕ್ ಹೋಲ್ ಆಫ್ ಕಲ್ಕತ್ತಾ ಘಟನೆಗೆ ಪ್ರತೀಕಾರವಾಗಿ ಕ್ಲೈವ್ ಈ ಕ್ರಮ ಕೈಗೊಂಡ ಎಂದು ನಂಬಲಾಗಿದೆ.

No comments:

Post a Comment