Saturday, January 5, 2019

ಇಂದಿನ ಇತಿಹಾಸ History Today ಜನವರಿ 05

ಇಂದಿನ ಇತಿಹಾಸ History Today ಜನವರಿ 05
2019: ನವದೆಹಲಿ: ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಮುಂಬೈಯ ವಿಶೇಷ ಹಣ ವರ್ಗಾವಣೆ ನಿಗ್ರಹ ನ್ಯಾಯಾಲಯವು ’ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂಬುದಾಗಿ ಘೋಷಿಸಿತು. ಇದರೊಂದಿಗೆ ಹಣಕಾಸು ವಂಚನೆ ತಡೆಗಾಗಿ ರಚಿಸಲಾದ ನೂತನ ಕಾನೂನಿನ ಅಡಿಯಲ್ಲಿ ’ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂಬುದಾಗಿ ಘೋಷಿತರಾದ ಮೊದಲ ಉದ್ಯಮಿ ಎಂಬ ಕುಖ್ಯಾತಿಗೆ ಮಲ್ಯ ಪಾತ್ರರಾದರು. ಮಲ್ಯ ಅವರಿಗೆ ಅಂಟಿಸಲಾಗಿರುವ ಹೊಸ ಹಣೆಪಟ್ಟಿಯು ಈಗ ಸರ್ಕಾರಕ್ಕೆ ರಾಷ್ಟ್ರದಲ್ಲಿರುವ ಅವರ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ವಿಚಾರಣೆ ತಪ್ಪಿಸಿಕೊಳ್ಳಲು ದೇಶದಿಂದ ಪರಾರಿಯಾಗುವ ವ್ಯಕ್ತಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರಕ್ಕೆ ಅವಕಾಶ ಕಲ್ಪಿಸಿಕೊಡುವ ಸಲುವಾಗಿ ಹೊಸ ಕಾಯ್ದೆಯನ್ನು ರೂಪಿಸಲಾಗಿತ್ತು. ಮಲ್ಯ ಅವರು ಪ್ರಸ್ತುತ ಇಂಗ್ಲೆಂಡಿನಿಂದ ಗಡೀಪಾರು ಎದುರಿಸುತ್ತಿದ್ದಾರೆ. ಸುಸ್ತಿ ಸಂಸ್ಥೆ ಕಿಂಗ್ ಫಿಶರ್ ಏರ್ ಲೈನ್ಸ್ ಪತನದ ಬಳಿಕ ವಿರುದ್ಧ ಬಂದ ವಂಚನೆ ಆರೋಪಗಳನ್ನು ಎದುರಿಸಲು ಭಾರತಕ್ಕೆ ಹಿಂದಿರುಗುವಂತೆ ನ್ಯಾಯಾಲಯವೊಂದು ಅದೇಶ ನೀಡಿದ ಬಳಿಕ, ೨೦೧೬ರಿಂದ ಮಲ್ಯ ಅವರು ಇಂಗ್ಲೆಂಡಿನಲ್ಲಿ ವಾಸವಾಗಿದ್ದರು.  ೨೦೧೬ರ ಮಾರ್ಚ್ ತಿಂಗಳಲ್ಲಿ ಭಾರತ ತ್ಯಜಿಸಿದ ಮಲ್ಯ ಅವರು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಮರುಪಾವತಿ ಮಾಡಬೇಕಾಗಿದ್ದ ೧೦೦ ಕೋಟಿ ಡಾಲರ್ ಸಾಲದ ಹಣವನ್ನು ದುರುಪಯೋಗಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿದ್ದರು. ಸರ್ಕಾರಿ ಸ್ವಾಮ್ಯದ ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟದಿಂದ ಅವರು ತಮ್ಮ ಕಿಂಗ್ ಫಿಶರ್ ಏರ್ ಲೈನ್ಸ್ ಸಲುವಾಗಿ ಸಾಲ ಪಡೆದಿದ್ದರು. ಮಲ್ಯ ಅವರು ತಮ್ಮ ಮೇಲಿನ ಆರೋಪಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ಭಾರತದ ನ್ಯಾಯಾಲಯದ ಮುಂದೆ ’ಭೇಷರತ್ ಇತ್ಯರ್ಥದ ಕೊಡುಗೆಯನ್ನು ತಾವು ಇಟ್ಟಿದ್ದುದಾಗಿ ಜುಲೈ ತಿಂಗಳಲ್ಲಿ ಪ್ರಕಟಿಸಿದ್ದರು. ಆದರೆ ಇದು ಅಪರಾಧ ಮಾಡಿದ್ದೇನೆ ಎಂಬುದಕ್ಕೆ ತಮ್ಮ ಒಪ್ಪಿಗೆ ಎಂಬುದನ್ನು ಅವರು ನಿರಾಕರಿಸಿದ್ದರು. ನನ್ನ ಗಡೀಪಾರು ನಿರ್ಣಯ ಮಾಡಿದ್ದು ಹೇಗೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನ ಇತ್ಯರ್ಥದ ಕೊಡುಗೆಯನ್ನು ಯಾವುದೇ ರೀತಿಯಿಂದಲ್ಲೂ ಇದಕ್ಕೆ ಜೋಡಿಸಬಾರದು ಎಂದು ಮಲ್ಯ ಡಿಸೆಂಬರ್ ೧೦ರಂದು ಟ್ವೀಟ್ ಮಾಡಿದ್ದರು.  ‘ಭೌತಿಕವಾಗಿ ನಾನು ಎಲ್ಲೇ ಇದ್ದರೂ ನನ್ನ ಮನವಿ ಇಷ್ಟೇ- ’ದಯವಿಟ್ಟು ಹಣ ತೆಗೆದುಕೊಳ್ಳಿ. ನಾನು ಹಣ ಕದ್ದಿದ್ದೇನೆ ಎಂಬ ಕಥೆಯನ್ನು ನಿಲ್ಲಿಸಲು ನಾನು ಬಯಸಿದ್ದೇನೆ ಎಂದು ಅವರು ಹೇಳಿದ್ದರು. ತಮ್ಮ ಅದ್ದೂರಿಯ ಬದುಕಿನ ಶೈಲಿಗಾಗಿ ಹೆಸರಾಗಿದ್ದ ಮಲ್ಯ, ಕಿಂಗ್ ಫಿಶರ್ ಬೀಯರ್‌ನ್ನು ಜಾಗತಿಕ ಬ್ರ್ಯಾಂಡ್ ಮಾಡಿದ್ದರು. ೨೦೧೭ರಲ್ಲಿ ಅವರು ರಾಯಲ್ ಚಾಲೆಂಜರ್‍ಸ್ ಐಪಿಎಲ್ ತಂಡದ ನಿರ್ದೇಶಕ ಸ್ಥಾನದಿಂದ ಕೆಳಗಿಳಿದಿದ್ದರು. ಮಲ್ಯ ಅವರ ಹಣಕಾಸು ವಹಿವಾಟುಗಳ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದ್ದವು. ಒಂದು ಕಾಲದಲ್ಲಿ ’ಕಿಂಗ್ ಆಫ್ ಗುಡ್ ಟೈಮ್ಸ್ (ಅದೃಷ್ಟದ ದೊರೆ) ಎಂದೇ ಖ್ಯಾತರಾಗಿದ್ದ ಮಲ್ಯ, ಕಿಂಗ್ ಫಿಶರ್ ಏರ್ ಲೈನ್ಸ್ ಭಾರೀ ಸಾಲದ ಸುಳಿಯಲ್ಲಿ ಸಿಲುಕಿದ ಬಳಿಕ ೨೦೧೪ರ ’ಭಾರತದ ಅತ್ಯಂತ ಶ್ರೀಮಂತ ಪಟ್ಟಿಯಿಂದ ಹೊರ ತಳ್ಳಲ್ಪಟ್ಟಿದ್ದರು. ಆಗ್ನೇಯ ಇಂಗ್ಲೆಂಡಿನ ೧೫೦ ಲಕ್ಷ ಡಾಲರ್ ಮೌಲ್ಯದ ಐಷಾರಾಮೀ ಬಂಗಲೆಯಲ್ಲಿ ವಾಸವಾಗಿರುವ ಮಲ್ಯ, ತಾವು ತಲೆ ತಪ್ಪಿಸಿಕೊಂಡಿರುವುದಾಗಿ ಮಾಡಲಾಗಿರುವ ಆಪಾದನೆಯನ್ನು ನಿರಾಕರಿಸಿದ್ದರು. ಮುಂಬೈ ನ್ಯಾಯಾಲಯದ ಆದೇಶವು ಕಳೆದ ಒಂದು ತಿಂಗಳಲ್ಲಿ ಮಲ್ಯ ಅವರಿಗೆ ಆಗಿರುವ ಎರಡನೇ ಹಿನ್ನಡೆಯಾಯಿತು. ಡಿಸೆಂಬರಿನಲ್ಲಿ ಇಂಗ್ಲೆಂಡ್ ನ್ಯಾಯಾಲಯವು ವಂಚನೆ ಹಾಗೂ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಅವರನ್ನು ಭಾರತಕ್ಕೆ ಗಡೀಪಾರು ಮಾಡಲು ಇಂಗ್ಲೆಂಡ್ ನ್ಯಾಯಾಲಯವು ಅನುಮತಿ ನೀಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ೧೨ ಬ್ಯಾಂಕುಗಳ ಒಕ್ಕೂಟದಿಂದ ಪ್ರಸ್ತುತ ಸುಸ್ತಿಯಾಗಿರುವ ಕಿಂಗ್ ಫಿಶರ್ ಏರ್ ಲೈನ್ಸ್ ಗಾಗಿ ಪಡೆದ ಭಾರೀ ಪ್ರಮಾಣದ ಸಾಲಗಳಿಗೆ ಸಂಬಂಧಿಸಿದಂತೆ ವಿಜಯ್ ಮಲ್ಯ ಭಾರತದಲ್ಲಿ ವಿಚಾರಣೆ ಎದುರಿಸುತ್ತಿದ್ದು, ಮಲ್ಯ ಅವರನ್ನು ೨೦೧೮ರ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯ ವಿಧಿಗಳನ್ನು ಅನ್ವಯಿಸುವ ಮೂಲಕ ’ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂಬುದಾಗಿ ಘೋಷಿಸುವಂತೆ ಕೋರಿ, ಎಸ್‌ಬಿಐ ಬ್ಯಾಂಕುಗಳ ಒಕ್ಕೂಟವು ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಮೊರೆಹೊಕ್ಕಿತ್ತು. ತಾವು ದೇಶಭ್ರಷ್ಟ ಆರ್ಥಿಕ ಅಪರಾಧಿಯಲ್ಲ ಮತ್ತು ಹಣ ವರ್ಗಾವಣೆಯ ನಿಗದಿತ ಅಪರಾಧದಲ್ಲಿ ಶಾಮೀಲಾಗಿಲ್ಲ ಎಂಬುದಾಗಿ ಮಲ್ಯ ಅವರು ಮಾಡಿದ್ದ ಪ್ರತಿಪಾದನೆಯನ್ನು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮತ್ತು ಬಾಂಬೆ ಹೈಕೋರ್ಟ್ ವಜಾಗೊಳಿಸಿದ್ದವು. ಮಲ್ಯ ಅವರು ಬಳಿಕ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರು. ಸುಪ್ರೀಂಕೋರ್ಟ್ ಕಳೆದ ತಿಂಗಳು ಅವರ ಅರ್ಜಿಗೆ ಉತ್ತರ ನೀಡುವಂತೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿತ್ತು, ಆದರೆ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಕಲಾಪಕ್ಕೆ ತಡೆ ನೀಡಲು ನಿರಾಕರಿಸಿತ್ತು.  ಗಡೀಪಾರು ಪ್ರಕರಣದ ಹೊರತಾಗಿ ಮಲ್ಯ ಅವರು ಇಂಗ್ಲೆಂಡಿನಲ್ಲಿನ ತಮ್ಮ ಆಸ್ತಿಗಳ ವಿರುದ್ಧ ಬಾಕಿ ಮರುವಸೂಲಿಗಾಗಿ ಕ್ರಮಕೈಗೊಳ್ಳುವಂತೆ ಕೋರಿ ೧೩ ಭಾರತೀಯ ಬ್ಯಾಂಕುಗಳು ಸಲ್ಲಿಸಿರುವ ಪ್ರಕರಣವನ್ನೂ ಎದುರಿಸುತ್ತಿದ್ದರು. ಇನ್ನೊಂದು ಪ್ರಕರಣದಲ್ಲಿ ಮಲ್ಯ ಅವರ ವಿರುದ್ಧ ಯುಬಿಎಸ್ ಬ್ಯಾಂಕ್ ಕೇಂದ್ರ ಲಂಡನ್ನಿನ ಮನೆಗಾಗಿ ಪಡೆದ ಅಡವು ಸಾಲ ಮರುವಸೂಲಿ ಕೋರಿ ಕಾನೂನು ಪ್ರಕ್ರಿಯೆ ಜರುಗಿಸಿತ್ತು.

2019: ತಿರುವನಂತಪುರಂ: ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿಬ್ಬರು ಪ್ರವೇಶಿಸಿದ ಬಳಿಕ ಕೇರಳದಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆ, ಹಿಂಸಾಚಾರ, ಘರ್ಷಣೆಗಳು ಮುಂದುವರೆದು, ಬಿಜೆಪಿ ರಾಜ್ಯಸಭಾ ಸದಸ್ಯ ವಿ. ಮುರಳೀಧರನ್, ಸಿಪಿಐ(ಎಂ) ಶಾಸಕ ಎ.ಎನ್. ಶಂಸೀ ಮತ್ತು ಪಕ್ಷದ ಕಣ್ಣೂರು ಜಿಲ್ಲೆಯ ಮಾಜಿ ಕಾರ್ಯದರ್ಶಿ ಪಿ. ಶಶಿ ಅವರ ಮನೆಗಳ ಮೇಲೆ ನಾಡಬಾಂಬ್ ಎಸೆಯಲಾಯಿತು. ಕಣ್ಣೂರಿನ ಆರೆಸ್ಸೆಸ್ ಕಚೇರಿಗೂ ಬೆಂಕಿ ಹಚ್ಚಲಾಯಿತು. ದುಷ್ಕರ್ಮಿಗಳಿಂದ ನಡೆದಿರುವ ನಾಡಬಾಂಬ್ ದಾಳಿ ಮತ್ತಿತರ ಹಿಂಸಾಕೃತ್ಯಗಳಲ್ಲಿ ಕೆಲವರಿಗೆ ಗಾಯಗಳಾದವು. ಬಿಜೆಪಿ ಸಂಸದ, ಸಿಪಿಐ(ಎಂ) ಶಾಸಕ ಮತ್ತು ಸಿಪಿಐ(ಎಂ) ನಾಯಕ ಅಪಾಯದಿಂದ ಪಾರಾದರು. ಬಿಜೆಪಿ ಸಂಸದರ ಮನೆ ಮೇಲಿನ ದಾಳಿ ಮತ್ತು ಆರೆಸ್ಸೆಸ್ ಕಚೇರಿಗೆ ಬೆಂಕಿ ಹಚ್ಚಿದ ಘಟನೆ ಬೆಳಗ್ಗೆ ಘಟಿಸಿದ್ದರೆ, ಸಿಪಿಎಂ ಮುಖಂಡರ ಮನೆಗಳ ಮೇಲೆ ಹಿಂದಿನ ರಾತ್ರಿ ನಾಡಬಾಂಬ್ ಎಸೆಯಲಾಗಿತ್ತು ಎಂದು ವರದಿಗಳು ಹೇಳಿದವು. ರಾಜ್ಯದಲ್ಲಿ ಮೂರು ದಿನಗಳಿಂದ ಸಂಭವಿಸಿದ  ಹಿಂಸಾಚಾರ, ಘರ್ಷಣೆಗಳಿಗೆ ಸಂಬಂಧಿಸಿದಂತೆ ೧೭೦೦ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದರು. ಸಿಪಿಐ(ಎಂ) ಶಾಸಕ ಎ.ಎನ್. ಶಂಸೀ ಮತ್ತು ಪಕ್ಷದ ನಾಯಕ ಪಿ. ಶಶಿ ಅವರ ಮನೆಗಳ ಮೇಲೆ ಅಪರಿಚಿತ ವ್ಯಕ್ತಿಗಳು ಬಾಂಬ್ ಎಸೆದ ಘಟನೆಗಳ ಬಳಿಕ ಬಿಜೆಪಿ ಸಂಸದರ ಮನೆ ಮೇಲೆ ಬಾಂಬ್, ಆರೆಸ್ಸೆಸ್ ಕಚೇರಿಗೆ ಬೆಂಕಿ ಹಚ್ಚಿದ ಘಟನೆಗಳು ಘಟಿಸಿದವು. ಮುರಳೀಧರನ್ ಮನೆಯ ಮೇಲಿನ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸರು ಹೇಳಿದರು. 

2019: ನವದೆಹಲಿ: ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ವ್ಯವಹಾರದ ಮಧ್ಯವರ್ತಿ ಎಂಬುದಾಗಿ ಆಪಾದಿಸಲಾಗಿರುವ ಕ್ರಿಸ್ಟಿಯನ್ ಮೈಕೆಲ್ ಇತರ ರಕ್ಷಣಾ ವ್ಯವಹಾರಗಳಲ್ಲೂ ಪಾತ್ರ ವಹಿಸಿರುವ ವಿಚಾರ ಆತನ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಜಾರಿ ನಿರ್ದೇಶನಾಲಯವು ದೆಹಲಿಯ ನ್ಯಾಯಾಲಯಕ್ಕೆ ತಿಳಿಸಿತು. ವಿವಿಐಪಿಗಳ ಓಡಾಟಕ್ಕಾಗಿ ೧೨ ಹೆಲಿಕಾಪ್ಟರುಗಳನ್ನು ಖರೀದಿಸಲು ರೂಪಿಸಲಾದ ,೬೦೦ ಕೋಟಿ ರೂಪಾಯಿ ಮೊತ್ತದ ವ್ಯವಹಾರದಲ್ಲಿ ಲಂಚ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದುಬೈಯಿಂದ ಗಡೀಪಾರು ಮಾಡಲಾಗಿರುವ ಬ್ರಿಟಿಷ್ ಪ್ರಜೆ ಮೈಕೆಲ್ನನ್ನು ಸಿಬಿಐ ಡಿಸೆಂಬರ್ ತಿಂಗಳಲ್ಲಿ ಬಂಧಿಸಿ ಎರಡು ವಾರಗಳ ಕಾಲ ಪ್ರಶ್ನಿಸಿತ್ತು. ತಿಹಾರ್ ಸೆರೆಮನೆಯಲ್ಲಿ ಕೆಲ ದಿನಗಳ ಸೆರೆವಾಸದ ಬಳಿಕ ಜಾರಿ ನಿರ್ದೇಶನಾಲಯವು ಮೈಕೆಲ್ನನ್ನು ಬಂಧಿಸಿ, ತನ್ನ ವಶಕ್ಕೆ ಪಡೆದುಕೊಂಡು ಹಣಕಾಸು ಅಪರಾಧಗಳು ಮತ್ತು ಹಣವರ್ಗಾವಣೆಗೆ ಸಂಬಂಧಿಸಿದಂತೆ ೧೪ ದಿನಗಳ ಕಾಲ ಪ್ರಶ್ನಿಸಿತ್ತು. ೧೪ ದಿನಗಳ ತನಿಖೆಯ ಬಳಿಕ ಶನಿವಾರ ಮೈಕೆಲ್ನನ್ನು ಶನಿವಾರ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರು ಆತನಿಗೆ ಫೆಬ್ರುವರಿ ೨೬ರವರೆಗೆ ನ್ಯಾಯಾಂಗ ಬಂಧನ ವಿಧಿಸಿದರು. ನ್ಯಾಯಾಧೀಶರು ತಮ್ಮ ಆದೇಶ ನೀಡುವುದಕ್ಕೆ ಮುನ್ನ, ಜಾರಿ ನಿರ್ದೇಶನಾಲಯದ ವಕೀಲ ಡಿಪಿ ಸಿಂಗ್ ಅವರುಮೈಕೆಲ್ ತನಿಖೆಯಿಂದ ಒಳ್ಳೆಯ ಫಲಿತಾಂಶಗಳು ಲಭಿಸಿವೆ. ಇತರ ರಕ್ಷಣಾ ವ್ಯವಹಾರಗಳಲ್ಲೂ ಆತನ ಪಾತ್ರದ ಬಗ್ಗೆ ನಮಗೆ ಮಾಹಿತಿ ಲಭಿಸಿದೆ ಎಂದು ಹೇಳಿದರು. ‘ಹಣದ ಹರಿವು ಇರುವಂತೆ ಕಾಣುತ್ತಿದೆ. ಹವಾಲಾ ದಂಧೆಕೋರರೂ ಪ್ರಕರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಶಾಮೀಲಾಗಿರುವಂತೆ ಕಾಣುತ್ತದೆ ಎಂದು ಡಿಪಿ ಸಿಂಗ್ ನ್ಯಾಯಾಧೀಶರಿಗೆ ವಿವರಿಸಿದರು. ಜಾರಿ ನಿರ್ದೇಶನಾಲಯ ವಕೀಲರು ಹೆಚ್ಚು ವಿವರಿಸಲಿಲ್ಲ. ಇಟಲಿಯ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಆರೋಪಗಳಿಂದ ಮುಕ್ತನಾಗಿರುವುದರಿಂದ ಜಾಮೀನಿನಲ್ಲಿ ಮೈಕೆಲ್ ಬಿಡುಗಡೆ ಮಾಡುವಂತೆ ಕ್ರಿಸ್ಟಿಯನ್ ಮೈಕೆಲ್ ವಕೀಲರು ನ್ಯಾಯಾಧೀಶರನ್ನು ಕೋರಿದರು. ಡಿಪಿ ಸಿಂಗ್ ಅವರು ಅದನ್ನು ತೀವ್ರವಾಗಿ ವಿರೋಧಿಸಿದರು. ಇಟಲಿ ನ್ಯಾಯಾಲಯದ ತೀರ್ಪು ಕ್ರಿಸ್ಟಿಯನ್ ಮೈಕೆಲ್ ಸಲ್ಲಿಸಿದ್ದಸುಳ್ಳು ದಾಖಲೆಗಳನ್ನು ಆಧರಿಸಿದ್ದಾಗಿತ್ತು ಎಂದು ಸಿಂಗ್ ವಾದಿಸಿದರು೨೦೧೦ರಲ್ಲಿ ಭಾರತವು ಅಗಸ್ಟಾ ವೆಸ್ಟ್ ಲ್ಯಾಂಡ್ ಎಡಬ್ಲ್ಯೂ೧೦೧ ಹೆಲಿಕಾಪ್ಟರುಗಳ ಖರೀದಿ ಒಪ್ಪಂದಕ್ಕೆ ಸಹಿ ಮಾಡಿತ್ತು. ೨೦೧೩ರಲ್ಲಿ ಇಟಲಿ ಅಧಿಕಾರಿಗಳು ಅಗಸ್ಟಾ ವೆಸ್ಟ್ ಲ್ಯಾಂಡ್ ಪೋಷಕ ಸಂಸ್ಥೆಯ ಸಿಇಒ ಗಿಯುಸೆಪ್ಪೆ ಒರ್ಸಿ ಅವರನ್ನು ವ್ಯವಹಾರದಲ್ಲಿ ಅಕ್ರಮಗಳು ನಡೆದಿವೆ ಎಂದು ಆಪಾದಿಸಿ ಬಂಧಿಸಿದ್ದರು. ಬಳಿಕ ಭಾರತ ಕೂಡಾ ತನಿಖೆಗೆ ಆದೇಶಿಸಿದ್ದಲ್ಲದೆ, ನಂತರದ ವರ್ಷ ಭಾರತವು ವ್ಯವಹಾರವನ್ನು ರದ್ದು ಪಡಿಸಿತು. ವ್ಯವಹಾರದಲ್ಲಿ ನೀಡಲಾದ ಲಂಚದ ಮೊತ್ತ ೪೨೩ ಕೋಟಿ ರೂಪಾಯಿಗೂ ಮೀರಿದ್ದು ಎಂಬ ಆಪಾದನೆಗಳು ಕೇಳಿಬಂದವು ಮತ್ತು ಪೈಕಿ ೨೨೫ ಕೋಟಿ ರೂಪಾಯಿಗಳು ಸಂಸ್ಥೆಯಿಂದ ಮೈಕೆಲ್ ಕೈಸೇರಿತು ಎಂದು ಆಪಾದಿಸಲಾಯಿತು.


2018: ವಾಷಿಂಗ್ಟನ್: ಆಫ್ಘಾನ್ ತಾಲೀಬಾನ್ ಮತ್ತು ಹಖ್ಖಾನಿ ಜಾಲ ಸೇರಿದಂತೆ ಭಯೋತ್ಪಾದಕ ಗುಂಪುಗಳ ವಿರುದ್ಧ ಇಸ್ಲಾಮಾಬಾದ್ ನಿರ್ಣಾಯಕ ಕ್ರಮ ಕೈಗೊಳ್ಳುವವರೆಗೆ ಪಾಕಿಸ್ತಾನಕ್ಕೆ ನೀಡಲಾಗುವ ಎಲ್ಲ ಭದ್ರತಾ ನೆರವನ್ನು ಅಮೆರಿಕ ಅಮಾನತುಗೊಳಿಸಿತು. ಜನವರಿ ೧ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಯೋತ್ಪಾದಕರಿಗೆ ನೆರವು ನೀಡುತ್ತಿರುವುದಕ್ಕಾಗಿ ಪಾಕಿಸ್ತಾನವನ್ನು ಬಹಿರಂಗವಾಗಿ ಖಂಡಿಸಿದ್ದನ್ನು ಅನುಸರಿಸಿ ಅಮೆರಿಕದ ರಾಜ್ಯ ಮತ್ತು ವಿದೇಶಾಂಗ ಇಲಾಖೆಗಳು ನಿಟ್ಟಿನ ಪ್ರಕಟಣೆಗಳನ್ನು ಹೊರಡಿಸಿದವು. ಪಾಕಿಸ್ತಾನಕ್ಕೆ ನೀಡಲಾಗುತ್ತಿರುವ ಒಟ್ಟು ಭದ್ರತಾ ನೆರವಿನ ಮೊತ್ತ ಶತಕೋಟಿ ಡಾಲರುಗಳನ್ನು ಮೀರಬಹುದು ಎಂದು ಹೇಳಲಾಯಿತು. ಏನಿದ್ದರೂ ಮೊತ್ತದ ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿಲ್ಲ. ನಿರ್ಧಾರದ ಪರಿಣಾಮವಾಗಿ ವಿದೇಶಾಂಗ ಇಲಾಖೆಯ ವಿದೇಶ ಸೇನಾ ಹಣಕಾಸು ನೆರವಿನ ಅಡಿಯಲ್ಲಿ ಪಾಕಿಸ್ತಾನಕ್ಕೆ ನೀಡಲು ಬಾಕಿ ಇರುವ ಪಾವತಿಗಳನ್ನು ಅಮೆರಿಕ ಸರ್ಕಾರ ತಡೆ ಹಿಡಿಯಲಿದೆ ಅಥವಾ ವಿಳಂಬಗೊಳಿಸಲಿದೆ. ವಾಸ್ತವವಾಗಿ ಆಫ್ಘಾನಿಸ್ತಾನ ಸಮರದಲ್ಲಿ ಮೈತ್ರಿಕೂಟ ಬೆಂಬಲ ನಿಧಿಯಿಂದ (ಸಿಎಸ್ ಎಫ್) ಪಾಕಿಸ್ತಾನಕ್ಕೆ ಸಾಗಣೆ ಬೆಂಬಲವಾಗಿ ಅಮೆರಿಕ ನೆರವು ನೀಡುತ್ತಿತ್ತು. ಆದರೆ ಪಾಕಿಸ್ತಾನದಲ್ಲಿನ ಅಮೆರಿಕದ ನಾಗರಿಕ ನೆರವು ಕಾರ್ಯಯಕ್ರಮಗಳನ್ನು ನೆರವು ಅಮಾನತು ವ್ಯಾಪ್ತಿಗೆ ತರಲಾಗಿಲ್ಲ. ಆಯಾಯ ಪ್ರಕರಣಗಳನ್ನು ಪರಿಶೀಲಿಸಿ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅಡಳಿತದ ಅಧಿಕಾರಿಗಳು ಹೇಳಿದರುಭದ್ರತಾ ನೆರವು ಅಮಾನತು ಕಾರ್ಯಕ್ರಮದಲ್ಲಿ ೨೦೧೭ರ ಸಾಲಿನಲ್ಲಿ ಸಿಎಸ್ಎಫ್ ಸಲುವಾಗಿ ಒದಗಿಸಲಾಗುವ ಸಂಪೂರ್ಣ ನೆರವನ್ನು ಸ್ಥಗಿತಗೊಳಿಸುವ ನಿರ್ಧಾರ ಅಮೆರಿಕ ಕೈಗೊಂಡಿರುವ ಅತಿ ಕಠಿಣ ಕ್ರಮ ಎಂದು ಹೇಳಲಾಯಿತು. ೨೦೧೭ರ ಸಾಲಿಗೆ ನಿಗದಿ ಪಡಿಸಲಾಗಿದ್ದ ೯೦೦ ದಶಲಕ್ಷ ಡಾಲರ್ ಮೊತ್ತದ ಸಿಎಸ್ ಎಫ್ನಲ್ಲಿ ೪೦೦ ದಶಲಕ್ಷ ಡಾಲರ್ ಮೊತ್ತವನ್ನು ಪಾಕಿಸ್ತಾನವು ಹಖ್ಖಾನಿ ಜಾಲದ ವಿರುದ್ಧ ಕೈಗೊಂಡ ಕ್ರಮಕ್ಕಾಗಿ ನೀಡುವ ಪ್ರಮಾಣಪತ್ರಕ್ಕೆ ಅನುಗುಣವಾಗಿ ನೀಡಲಾಗುತ್ತದೆ. ೨೦೧೫ರಿಂದ ಹಖ್ಖಾನಿ ಜಾಲದ ವಿರುದ್ಧ ಕ್ರಮಕೈಗೊಂಡ ಬಗ್ಗೆ ಯಾವುದೇ ಪ್ರಮಾಣಪತ್ರ ಪಡೆಯುವಲ್ಲಿ ಪಾಕಿಸ್ತಾನ ವಿಫಲವಾಗಿರುವ ಕಾರಣ ನೆರವ ಲಭಿಸುವುದು ದುರ್ಲಭ. ೨೦೧೭ರ ಸಾಲಿಗೆ ನೀಡಲಾಗುವ ೯೦೦ ದಶಲಕ್ಷ ಡಾಲರ್ಗಳ ಪೂರ್ಣಮೊತ್ತವನ್ನು ಅಮಾನತುಗೊಳಿಸಲಾಗುವುದು ಎಂದು ಪೆಂಟಗಾನ್ ವಕ್ತಾರರೊಬ್ಬರು ತಿಳಿಸಿದರು. ಆದರೆ ಕ್ರಮಗಳನ್ನು ಹಿಂಪಡೆದುಕೊಳ್ಳಲು ಸಾಧ್ಯವಿದೆ ಮತ್ತು ಪಾಕಿಸ್ತಾನವು ತನ್ನ ವರ್ತನೆಯನ್ನು ತಿದ್ದಿಕೊಂಡು ಬದಲಾಯಿಸಿದರೆ ನೆರವು ಲಭಿಸಬಹುದು ಎಂದು ರಕ್ಷಣೆ ಮತ್ತು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದರು ನಿಧಿಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ರದ್ದು ಮಾಡಿಲ್ಲ. ಪಾಕಿಸ್ತಾನವು ಭಯೋತ್ಪಾದಕ ಮತ್ತು ಉಗ್ರಗಾಮಿಗಳ ವಿರುದ್ಧ ನಾವು ಕೋರಿರುವ ನಿರ್ಣಾಯಕ ಕ್ರಮಗಳನ್ನು ಮುಂದುವರೆಸುವುದು ಎಂಬುದು ನಮ್ಮ ಹಾರೈಕೆ ಎಂದು ನಾ ಪೆಂಟಗಾನ್ ವಕ್ತಾರ ಕಮಾಂಡರ್ ಪ್ಯಾಟ್ರಿಕ್ ಇವಾನ್ಸ್ ಹೇಳಿದರು. ೨೦೧೬ರ ಸಾಲಿನ ೨೫೫ ದಶಲಕ್ಷ ಡಾಲರುಗಳ ಎಫ್ ಎಂಎಫ್ ನಿಧಿಯನ್ನು ಸೆಪ್ಟೆಂಬರಿನಿಂದ ಪ್ರತ್ಯೇಕ ಖಾತೆಯಲ್ಲಿ ಇರಿಸಲಾಗಿದೆ. ಅದು ಅಲ್ಲೇ ಇರುತ್ತದೆ. ಇದೇ ಮಾದರಿಯ ಮೊತ್ತದ ಕುರಿತು ೨೦೧೮ರವರೆಗೆ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂದು ಅವರು ನುಡಿದರು. ಅಮಾನತು ಬಾರಿ ಕಾಯಂ ಕಡಿತವಲ್ಲ. ಭದ್ರತಾ ನೆರವು ನೀಡಿಕೆಯನ್ನು ಸ್ಥಗಿತಗೊಳಿಸಲಾಗುವುದು, ಆದರೆ ರದ್ದು ಪಡಿಸಲಾಗುವುದಿಲ್ಲ. ಭಯೋತ್ಪಾದಕ ಮತ್ತು ಉಗ್ರಗಾಮಿ ಗುಂಪುಗಳ ವಿರುದ್ಧ ನಾವು ಕೋರುವ ನಿರ್ಣಾಯಕ ಕ್ರಮವನ್ನು ಪಾಕಿಸ್ತಾನ ಕೈಗೊಳ್ಳುವುದು ಎಂದು ನಾವು ಹಾರೈಸಿದ್ದೇವೆ. ಯಾವುದೇ ಹಣವನ್ನು ನಾವು ಬಾರಿ ಮರುಹಂಚಿಕೆ ಮಾಡುವುದಿಲ್ಲ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿ ನುಡಿದರು. ಅಂದರೆ ಭವಿಷ್ಯದ ದಿನಗಳಲ್ಲಿ ನೆರವು ಪಾಕಿಸ್ತಾನಕ್ಕೆ ಲಭಿಸುವ ಸಾಧ್ಯತೆಗಳಿವೆ ಎಂದು ಅರ್ಥ. ಹೊಸ ವರ್ಷದ ದಿನ ಪಾಕಿಸ್ತಾನದ ವಿರುದ್ಧ ಟ್ವೀಟಾಸ್ತ್ರ ಪ್ರಯೋಗಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ನೀಡಿದ ನೆರವಿಗೆ ಪ್ರತಿಯಾಗಿ ಪಾಕಿಸ್ತಾನ ಸುಳ್ಳುಗಳು ಮತ್ತು ವಂಚನೆಗಳನ್ನು ಬಿಟ್ಟು ಬೇರೇನನ್ನೂ ನೀಡಿಲ್ಲ ಎಂದು ಕಟುವಾಗಿ ಟೀಕಿಸಿದ್ದರು. ಇದನ್ನು ಅನುಸರಿಸಿ ಅಧಿಕಾರಿಗಳು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡರು. ಆದರೆ ಪಾಕಿಸ್ತಾನದಲ್ಲಿನ ಪಾಕಿಸ್ತಾನಿ ತಾಲೀಬಾನ್, ಅಲ್ -ಖೈದಾ, ಐಸಿಸ್ ಇತ್ಯಾದಿ ಉಗ್ರಗಾಮಿಗಳ ದಮನಕ್ಕಾಗಿ ಪಾಕಿಸ್ತಾವನ್ನು ಶ್ಲಾಘಿಸಿರುವ ಅಮೆರಿಕನ್ ಅಧಿಕಾರಿಗಳು ಪಾಕಿಸ್ತಾನದ ಜೊತೆಗೆ ರಾಜಿಯ ಅವಕಾಶಗಳನ್ನೂ ಮುಕ್ತವಾಗಿ ಇರಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿದವು.

2018: ಪಾಟ್ನಾ: ಮೇವು ಹಗರಣದ ಅಪರಾಧಿಗಳಾದ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಇತರ ೧೫ ಜನರಿಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಬೇಕಿದ್ದ ವಿಶೇಷ ಸಿಬಿಐ ನ್ಯಾಯಾಲಯ ಸತತ ಮೂರನೇ ದಿನ ತನ್ನ ತೀರ್ಪನ್ನು ಮುಂದೂಡಿತು. ನ್ಯಾಯಾಲಯವು 06 ಜನವರಿ 2018ರ ಶನಿವಾರ ತನ್ನ ತೀರ್ಪನ್ನು ಪ್ರಕಟಿಸಲಿದೆ. ಸಿಬಿಐ ವಿಶೇಷ ನ್ಯಾಯಾಧೀಶ ಶಿವ ಪಾಲ್ ಸಿಂಗ್ ಅವರು ಲಾಲು ಪ್ರಸಾದ್ ಸೇರಿದಂತೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿತರಾಗಿರುವ ಐವರು ವ್ಯಕ್ತಿಗಳ ಅಹವಾಲು ಆಲಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪೂರ್ಣಗೊಳಿಸಿ, ನ್ಯಾಯಾಲಯ ಕಲಾಪವನ್ನು ಮಂದೂಡಿದರು. ಇತರರ ಅಹವಾಲು ಆಲಿಕೆಯನ್ನು ಅವರು ಶನಿವಾರ ಪೂರ್ಣಗೊಳಿಸಲಿದ್ದು, ಬಳಿಕ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವರು. ಇದಕ್ಕೆ ಮುನ್ನ ಲಾಲು ಪ್ರಸಾದ್ ಅವರ ವಕೀಲರು ಪ್ರಸಾದ್ ಅವರ ಅಸ್ವಸ್ಥತೆಯನ್ನು ಪರಿಗಣಿಸಬೇಕು ಎಂಬದಾಗಿ ಕೋರಿದ ಅರ್ಜಿಯನ್ನು ಸಲ್ಲಿಸಿದರು. ನ್ಯಾಯಾಧೀಶರು ಅದಕ್ಕೆ ಸ್ಪಂದಿಸಿದರು ಎನ್ನಲಾಯಿತು. ನ್ಯಾಯಾಲಯದ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಆರ್ ಜೆಡಿ ಬೆಂಬಲಿಗರು ಜಮಾಯಿಸಿದ್ದರು. ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣ, ಸುತ್ತ ಮುತ್ತ ಭಾರಿ ಪೊಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

2018: ಕರಾಚಿ: ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಎಲ್ಲ ಭದ್ರತಾ ನೆರವನ್ನೂ ಅಮಾನತುಗೊಳಿಸಿದ ಅಮೆರಿಕದ ಪ್ರಕಟಣೆಗೆ ಇಲ್ಲಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ತಾನು ಸ್ವಂತ ಸಂಪನ್ಮೂಲಗಳಿಂದಲೇ ಹೋರಾಟ ನಡೆಸಿರುವುದಾಗಿ ಪ್ರತಿಪಾದಿಸಿತು. ‘ನಿರಂಕುಶ ಗಡುವುಗಳು, ಏಕಪಕ್ಷೀಯ ಘೋಷಣೆಗಳು ಮತ್ತು ಗುರಿಗಳ ದಿಢೀರ್ ಬದಲಾವಣೆಗಳು ಸಮಾನ ಬೆದರಿಕೆಗಳ ವಿರುದ್ಧ ಸಾಧನೆ ಮಾಡುವಲ್ಲಿ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ ಎಂದು ಅದು ಹೇಳಿತು. ‘ನಾವು ಅಮೆರಿಕ ಆಡಳಿತದ ಜೊತೆಗೆ ಭದ್ರತಾ ಸಹಕಾರ ವಿಚಾರದಲ್ಲಿ ಮಾತುಕತೆ ನಡೆಸುತ್ತಿದ್ದೇವೆ ಮತ್ತು ಇನ್ನಷ್ಟು ವಿವರಗಳಿಗಾಗಿ ಕಾದಿದ್ದೇವೆ. ಸಮಾನ ಗುರಿಗಳ ಸಾಧನೆ ನಿಟ್ಟಿನಲ್ಲಿ ಅಮೆರಿಕದ ನಿರ್ಧಾರದ ಪರಿಣಾಮ ಕಾಲಕ್ರಮೇಣ ಸ್ಪಷ್ಟವಾಗುವ ಸಾಧ್ಯತೆಗಳಿವೆ ಎಂದು ಪಾಕಿಸ್ತಾನ ತಿಳಿಸಿತು. ‘ಏನಿದ್ದರೂ, ಪಾಕಿಸ್ತಾನವು ಕಳೆದ ೧೫ ವರ್ಷಗಳಲ್ಲಿ ೧೫೦ ಶತಕೋಟಿ ಡಾಲರುಗಳಿಗೂ ಹೆಚ್ಚಿನ ಹಣವನ್ನು ತನ್ನ ಸ್ವಂತ ಸಂಪನ್ಮೂಲಗಳಿಂದಲೇ ವೆಚ್ಚ ಮಾಡಿ ಭಯೋತ್ಪಾದನೆ ವಿರುದ್ಧ ಸಮರ ನಡೆಸಿದೆ ಎಂಬುದನ್ನು ಮೆಚ್ಚಬೇಕು. ನಾವು ನಮ್ಮ ನಾಗರಿಕರ ಜೀವ ರಕ್ಷಣೆ ಮತ್ತು ಪ್ರದೇಶದ ವಿಶಾಲ ಸುಸ್ಥಿರತೆಗಾಗಿ ಹೋರಾಟವನ್ನು ಮುಂದುವರೆಸಲು ದೃಢ ನಿರ್ಧಾರ ಮಾಡಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿತು. ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಪಾಕಿಸ್ತಾನ- ಅಮೆರಿಕದ ಸಹಕಾರವು ನೇರವಾಗಿ ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮತ್ತು ಅಂತರಾಷ್ಟ್ರೀಯ ಸಮುದಾಯದ ಹಿತಾಸಕ್ತಿಗಳಿಗೆ ಪೂರಕವಾಗಿದೆ ಎಂದು ಪಾಕಿಸ್ತಾನ ನಂಬಿದೆ ಎಂದು ವಿದೇಶಾಂಗ ಕಚೇರಿ ಹೇಳಿತು. ‘ಅದು ಅಲ್-ಖೈದಾವನ್ನು ಇಲ್ಲವಾಗಿಸಲು ಮತ್ತು ಆಡಳಿತ ಇಲ್ಲದ ಪ್ರದೇಶಗಳನ್ನು ವಶಪಡಿಸಿಕೊಂಡ, ಗಡಿಗಳನ್ನು ಅತಿಕ್ರಮಿಸಿದ ಮತ್ತು ಶಾಂತಿಗೆ ಸಮಾನ ಬೆದರಿಕೆ ಒಡ್ಡಿದ ಇತರ ಗುಂಪುಗಳ ವಿರುದ್ಧ ಹೋರಾಟಕ್ಕೆ (ಪಾಕಿಸ್ತಾನ- ಅಮೆರಿಕದ ಸಹಕಾರ) ನೆರವಾಗಿದೆ. ಪಾಕಿಸ್ತಾನದಲ್ಲಿನ ಭಯೋತ್ಪಾದನೆ ನಿಗ್ರಹದ ಪ್ರಮುಖ ಸರಣಿಗಳು ಸಂಘಟಿತ ಭಯೋತ್ಪಾದಕರ ಅಸ್ತಿತ್ವವನ್ನು ಅಳಿಸಿಹಾಕುವ ಪಾಕಿಸ್ತಾನದ ಹೋರಾಟಕ್ಕೆ ನೆರವಾಗಿದೆ ಮತ್ತು ಪಾಕಿಸ್ತಾನದ ಭದ್ರತೆಯನ್ನು ಗಣನೀಯವಾಗಿ ಸುಧಾರಿಸಿದೆ ಎಂದು ಪಾಕ್ ವಿದೇಶಾಂಗ ಕಚೇರಿ ತಿಳಿಸಿತು. ಶಾಂತಿ ಸ್ಥಾಪನೆಯ ಯತ್ನಕ್ಕೆ ಆಫ್ಘಾನಿಸ್ಥಾನದ ಕಡೆಯಿಂದ ಸೂಕ್ತ ಸ್ಪಂದನೆ ಬೇಕಾಗಿದೆ. ದ್ವಿಪಕ್ಷೀಯ ಗಡಿ ನಿರ್ವಹಣೆ, ಆಫ್ಘಾನ್ ನಿರಾಶ್ರಿತರ ವಾಪಸಾತಿ, ಗಸೆಗಸೆ ಬೇಸಾಯ, ಮಾದಕ ದ್ರವ್ಯಗಳ ಕಳ್ಳಸಾಗಣೆಯ ನಿಯಂತ್ರಣ, ಆಫ್ಘಾನಿಸ್ಥಾನದಲ್ಲಿ ರಾಜಕೀಯ ಸಮನ್ವಯ ಯತ್ನಗಳು ಆಗಬೇಕಾಗಿದ್ದು ನಿಟ್ಟಿನಲ್ಲಿ ಯತ್ನಗಳು ಮುಂದುವರೆದಿವೆ ಎಂದು ಪಾಕಿಸ್ತಾನ ಹೇಳಿತು. ಶಾಂತಿ ಸ್ಥಾಪನೆಯ ಯತ್ನದಲ್ಲಿ ಪರಸ್ಪರ ಗೌರವ, ವಿಶ್ವಾಸ, ತಾಳ್ಮೆ ಬೇಕಾಗುತ್ತದೆ. ದಾಯೆಶ್ ನಂತಹ ಹೊಸ ಮಾರಕ ಸಂಘಟನೆಗಳು ಆಫ್ಘಾನಿಸ್ಥಾನದಲ್ಲಿ ತಲೆ ಎತ್ತುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಹಕಾರದ ವಿಸ್ತರಣೆ ಅಗತ್ಯವಾಗಿದೆ ಎಂದು ಹೇಳಿಕೆ ತಿಳಿಸಿತು.

2018: ಚೆನ್ನೈ: ತಮಿಳುನಾಡಿನಲ್ಲಿ ಮುಷ್ಕರ ನಡೆಸುತ್ತಿರುವ ಸಾರಿಗೆ ನಿಗಮಗಳ ನೌಕರರ ಸಂಘಗಳ ಸದಸ್ಯರಿಗೆ ತತ್ ಕ್ಷಣದಿಂದಲೇ ಕೆಲಸಕ್ಕೆ ಹಾಜರಾಗುವಂತೆ ಆಜ್ಞಾಪಿಸಿದ ಮದ್ರಾಸ್ ಹೈಕೋರ್ಟ್ ಇಲ್ಲದೇ ಇದ್ದಲ್ಲಿ ನ್ಯಾಯಾಲಯ ನಿಂದನೆ ಖಟ್ಲೆಯ ಜೊತೆಗೆ ಸೇವೆಯಿಂದ ವಜಾಗೊಳ್ಳುವ ಅಪಾಯವನ್ನು ಎದುರಿಸುವಂತೆ ಎಚ್ಚರಿಕೆ ನೀಡಿತು.  ಹವ್ಯಾಸೀ ಪತ್ರಕರ್ತ ವರಾಕಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ಅವರನ್ನು ಒಳಗೊಂಡ ವಿಭಾಗೀರಯ ಪೀಠವುಮುಷ್ಕರ ಮುಂದುವರೆಸದಂತೆ ಸಾರಿಗೆ ಕಾರ್ಮಿಕರ ವಿರುದ್ಧ ಮಧ್ಯಂತರ ತಡೆಯಾಜ್ಞೆ (ಇಂಟೀರಿಯಮ್ ಇಂಜಂಕ್ಷನ್) ಮಂಜೂರು ಮಾಡಿತು. ಅಸಮಾಧಾನಗೊಂಡಿರುವ ನೌಕರರಿಗೆ ಪ್ರತಿಭಟಿಸುವ ಹಕ್ಕಿದೆ, ಆದರೆ ಪೂರ್ವ ಸೂಚನೆ ಇಲ್ಲದೆ ಮುಷ್ಕರಕ್ಕೆ ಇಳಿಯುವ ಮೂಲಕ ನೌಕರರು ಅನುಸರಿಸಿದ ಮಾರ್ಗವನ್ನು ಅಂಗೀಕರಿಸಲಾಗದು ಎಂದು ಕೋರ್ಟ್ ಹೇಳಿತು. ಮುಷ್ಕರ ನಿರತ ಕಾರ್ಮಿಕ ಸಂಘಗಳಿಗೆ ನೋಟಿಸ್ ಜಾರಿ ಮಾಡುವಂತೆ ಆಜ್ಞಾಪಿಸಿದ ಹೈಕೋರ್ಟ್ ಪ್ರಕರಣವನ್ನು 8 ಜನವರಿ 2018ರ ಸೋಮವಾರಕ್ಕೆ ಮುಂದೂಡಿತು. ಸರ್ಕಾರ ಮುಂದಿಟ್ಟ ವೇತನ ಒಪ್ಪಂದವನ್ನು ಒಪ್ಪದ ನೌಕರರ ಸಂಘಗಳ ಸದಸ್ಯರು ಗುರುವಾರ ರಾತ್ರಿಯಿಂದ ಮುಷ್ಕರ ಆರಂಭಿಸಿದ ಪರಿಣಾಮವಾಗಿ ತಮಿಳುನಾಡು ರಾಜ್ಯಸಾರಿಗೆ ನಿಗಮದ ಬಸ್ಸುಗಳ ಸಂಚಾರ ಹಲವಾರು ಜಿಲ್ಲೆಗಳಲ್ಲಿ ಸ್ಥಗಿತಗೊಂಡಿತ್ತು.  ವೇತನ ಪರಿಷ್ಕರಣೆ ಮತ್ತು ಬಾಕಿ ಪಾವತಿ ಕುರಿತು ಕಾರ್ಮಿಕ ಸಂಘಗಳ ಧುರೀಣರೊಡನೆ ಸಾರಿಗೆ ಸಚಿವ ಎಂ.ಆರ್. ವಿಜಯಭಾಸ್ಕರ್  ಅವರು ನಡೆಸಿದ ಮಾತುಕತೆ ವಿಫಲಗೊಂಡ ಬಳಿಕ ಗುರುವಾರ ಸಂಜೆ ಆರಂಭಗೊಂಡ ಮುಷ್ಕರದಿಂದ ಚೆನ್ನೈ, ಮಧುರೈ ಜಿಲ್ಲೆ, ಕೊಯಮತ್ತೂರು ಮತ್ತು ತಿರುಚಿರಾಪಳ್ಳಿಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅಧ್ಯಕ್ಷತೆಯಲ್ಲಿ ಸಾರಿಗೆ ನೌಕರರ ಮುಷ್ಕರ ಬಗ್ಗೆ ಹಿರಿಯ ಸಚಿವರ ಮತ್ತು ಅಧಿಕಾರಿಗಳ ಸಭೆ ನಡೆಯಿತು ಎಂದು ವರದಿ ಹೇಳಿತು.

2018: ನವದೆಹಲಿ: ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಇದರೊಂದಿಗೆ ಸಂಸತ್ತಿನ ಚಳಿಗಾಲದ ಅಧಿವೇಶನ ಕೊನೆಗೊಂಡಿತುಲೋಕಸಭೆಯು ತ್ರಿವಳಿ ತಲಾಖ್ ಮಸೂದೆ ಎಂದೇ ಪರಿಚಿತವಾದ ಒಂದೇ ಉಸಿರಿನಲ್ಲಿ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡುವುದನ್ನು ಅಪರಾಧವನ್ನಾಗಿಸುವ ಮುಸ್ಲಿಮ್ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ ಸೇರಿದಂತೆ ೧೨ ಮಸೂದೆಗಳಿಗೆ ಮಂಜೂರಾತಿ ನೀಡಿದರೆ, ರಾಜ್ಯಸಭೆ ಸತತ ಗದ್ದಲದಿಂದಾಗಿ ೩೪ ಗಂಟೆಗಳ ಕಲಾಪ ನಷ್ಟವನ್ನು ಅನುಭವಿಸಿತು. ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಸಂದರ್ಭದಲ್ಲಿ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರು, ಪದೇ ಪದೇ ಅಡಚಣೆಗಳಿಂದಾಗಿ ಬಾರಿ ೩೪ ಗಂಟೆಗಳ ಕಲಾಪ ನಷ್ಟವಾಗಿದ್ದು, ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಡಿಸೆಂಬರ್ ೧೫ರಂದು ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆ ೧೩ ದಿನಗಳ ಕಲಾಪ ನಡೆಸಿದ್ದು, ಸರ್ಕಾರಿ ವಿಧೇಯಕಗಳನ್ನು ಅಂಗೀಕರಿಸಿತು.  ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಮಧ್ಯಾಹ್ನ ಗಂಟೆಗೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಕಲಾಪ ಹಲವು ಏರಿಳಿತಗಳನ್ನು ಕಂಡಿದೆ. ಆದರೆ ಪದೇ ಪದೇ ಅಡಚಣೆಗಳಿಂದ ಸದನದ ಘನತೆಗೆ ಧಕ್ಕೆಯಾಗಿದೆ ಎಂದು ನಾಯ್ಡು ಅಸಮಾಧಾನ ಸೂಚಿಸಿದರು. ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ ವಾಗ್ವಾದಗಳು ಅಪೇಕ್ಷಣೀಯ. ಆದರೆ ಕಲಾಪಕ್ಕೆ ಅಡ್ಡಿಪಡಿಸುವುದು ಎಷ್ಟು ಮಾತ್ರಕ್ಕೂ ಸ್ವೀಕಾರಾರ್ಹವಲ್ಲ. ಬಗ್ಗೆ ಸದಸ್ಯರು ಗಂಭೀರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ನಾಯ್ಡು ನುಡಿದರುಸದನದಲ್ಲಿ ಬಾರಿ ೧೯ ಖಾಸಗಿ ವಿಧೇಯಕಗಳನ್ನು ಮಂಡಿಸಲಾಗಿದ್ದು, ಒಂದರ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ ಎಂದು ಅವರು ತಿಳಿಸಿದರು. ಸದನ ಒಟ್ಟು ೪೧ ಗಂಟೆಗಳ ಕಲಾಪ ನಡೆಸಿತ್ತು.  ಲೋಕಸಭೆ: ಲೋಕಸಭೆಯಲ್ಲಿ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಡಿಸೆಂಬರ್ ೧೫ರಂದು ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಸದನವು ೬೧ ಗಂಟೆ ೪೮ ನಿಮಿಷ ಕಾಲ ಒಟ್ಟು ೧೮ ಸಿಟ್ಟಿಂಗ್ ನಡೆಸಿದೆ. ಗದ್ದಲ ಹಾಗೂ ಮುಂದೂಡಿಕೆಗಳಿಂದಾಗಿ ಸದನವು ೧೫ ಗಂಟೆಗಳ ನಷ್ಟ ಅನುಭವಿಸಿದೆ ಎಂದು ಹೇಳಿದರು.  ಕೇಂದ್ರೀಯ ರಸ್ತೆ ನಿಧಿ (ತಿದ್ದುಪಡಿ) ಮಸೂದೆ, ಸ್ಥಿರ ಆಸ್ತಿ (ಸ್ವಾಧೀನ) ಮಸೂದೆ, ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿ ಕಾನೂನುಗಳು (ವಿಶೇಷ ವಿಧಿಗಳು) ದ್ವಿತೀಯ (ತಿದ್ದುಪಡಿ) ಮಸೂದೆ ಮತ್ತು ಸರಕು ಮತ್ತು ಸೇವಾ ತೆರಿಗೆ (ರಾಜ್ಯಗಳಿಗೆ ಪರಿಹಾರ) ತಿದ್ದುಪಡಿ ಮಸೂದೆಗಳು ಲೋಕಸಭೆ ಅಂಗೀಕರಿಸಿದ ಮಹತ್ವದ ಮಸೂದೆಗಳುಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ವೇತನ ಏರಿಕೆ ಮಸೂದೆಯನ್ನೂ ಸದನ ಅಂಗೀಕರಿಸಿತು.  ಸುಮಿತ್ರಾ ಮಹಾಜನ್ ಅವರು ಚಳಿಗಾಲದ ಅಧಿವೇಶನದ ಅವಧಿಯ ವಿವರಗಳನ್ನು ತಿಳಿಸಿ, ಕಲಾಪಗಳನ್ನು ಮುಂದೂಡುವಾಗ ಪ್ರಧಾನಿ ನರೇಂದ್ರ ಮೋದಿ ಅವರೂ ಸದನದಲ್ಲಿ ಹಾಜರಿದ್ದರು. ಅನುದಾನಗಳಿಗಾಗಿ ಪೂರಕ ಬೇಡಿಕೆಗಳ ಮೇಲಿನ ಚರ್ಚೆ ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು ಎಂದು ಮಹಾಜನ್ ವಿವರಿಸಿದರು.

2018: ರಾಜಕೋಟ್: ೩೬ರ ಹರೆಯದ ಸಹಾಯಕ ಪ್ರೊಫೆಸರ್ ಒಬ್ಬನನ್ನು ಪೊಲೀಸರು ತನ್ನ ೬೪ರ ಹರೆಯದ ತಾಯಿಯನ್ನು ತಾರಸಿಯಿಂದ ಕೊಂದ ಆರೋಪದಲ್ಲಿ ಬಂಧಿಸಿದರು. ಗುಜರಾತಿನ ರಾಜಕೋಟ್ ನಲ್ಲಿ ತಾನು ವಾಸವಾಗಿರುವ ವಸತಿ ಕಟ್ಟಡದಲ್ಲೇ ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಕೃತ್ಯ ಘಟಿಸಿತ್ತು. ಬಂಧಿತ ಆರೋಪಿಯನ್ನು ಸಂದೀಪ ನಥ್ವಾನಿ ಎಂದು ಗುರುತಿಸಲಾಯಿತು. ಸಂದೀಪ ನಥ್ವಾನಿ ಸ್ಥಳೀಯ ಫಾರ್ಮೆಸಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದು ತನ್ನ ತಾಯಿ ಜಯಶ್ರೀ ಬೆನ್ ಅವರನ್ನು ಸೆಪ್ಟೆಂಬರ್ ೨೭ರಂದು ತಾರಸಿಯಿಂದ ತಳ್ಳಿ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದರು. ತನ್ನ ತಾಯಿಯ ಅಸ್ವಸ್ಥತೆಯಿಂದ ಬೇಸತ್ತು ಆತ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು. ನಥ್ವಾನಿ ತನ್ನ ತಾಯಿಯನ್ನು ಮನೆಯ ಹೊರಗಿ ಮೆಟ್ಟಲುಗಳ ಮೂಲಕ ಎಳೆದುಕೊಂಡು ತಾರಸಿಗೆ ಹೋಗುತ್ತಿದ್ದುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಅದಾದ ಸ್ವಲ್ಪ ಹೊತ್ತಿಗೆ ಆಕೆ ತಾರಸಿಯಿಂದ ಬಿದ್ದು ಸಾವನ್ನಪ್ಪಿದ್ದರು. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮೆದುಳಿನ ಕಾಯಿಲೆಯಿಂದ ನರಳುತ್ತಿದ್ದ ಜಯಶ್ರೀಬೆನ್ ಅವರು ಸಮತೋಲನ ತಪ್ಪಿ ತಾರಸಿಯಿಂದ ಕೆಳಕ್ಕೆ ಬಿದ್ದು ಅಸುನೀಗಿದರು ಎಂದು ನಥ್ವಾನಿ ಕುಟುಂಬ ತಿಳಿಸಿದ್ದನ್ನು ಅನುಸರಿಸಿ ಮೊದಲಿಗೆ ಪೊಲೀಸರು ಪ್ರಕರಣವನ್ನು ಅಪಘಾತದ ಸಾವಿನ ಪ್ರಕರಣ ಎಂದು ದಾಖಲಿಸಿದ್ದರು. ಆದರೆ ತಳ್ಳರ್ಜಿಯೊಂದು ಬಂದ ಬಳಿಕ ತನಿಖೆಯ ದಿಕ್ಕು ಬದಲಿಸಿದ ಪೊಲೀಸರು ಅಪಾರ್ಟ್ಮೆಂಟಿನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅದರಲ್ಲಿ ಜಯಶ್ರೀಬೆನ್ ಅವರು ತಾರಸಿಯಿಂದ ಬೀಳುವಾಗ ಸಂದೀಪ್ ಆಕೆಯ ಜೊತೆಗಿದ್ದುದು ಸ್ಪಷ್ಟವಾಗಿ ದಾಖಲಾಗಿತ್ತು ಎಂದು ತನಿಖಾಧಿಕಾರಿ ಡಿಸಿಪಿ ಕೆ. ವಘೇಲ ಹೇಳಿದರು. ವಿಚಾರಣೆ ಕಾಲದಲ್ಲಿ ಮೊದಲಿಗೆ ಕೃತ್ಯವನ್ನು ಒಪ್ಪಿಕೊಳ್ಳದ ಸಂದೀಪ, ತಾನು ತಾಯಿಗಾಗಿ ನೀರು ತರಲು ಕೆಳಗೆ ಬಂದಿದ್ದಾಗ ಆಕೆ ತಾರಸಿಯಿಂದ ಜಿಗಿದು ಸಾವನ್ನಪ್ಪಿದ್ದಾಳೆ ಎಂದು ಪ್ರತಿಪಾದಿಸಿದ್ದ. ಆದರೆ ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ತಪ್ಪೊಪ್ಪಿಕೊಂಡ    ಎಂದು ಪೊಲೀಸರು ಹೇಳಿದರು. ಸಿಸಿಟಿವಿಯಲಿ ಬೆಳಗ್ಗೆ .೫೬ ಗಂಟೆಯಿಂದ ಆಕೆ ಸಾಯುವವರೆಗಿನ ಘಟನಾವಳಿಗಳು ದಾಖಲಾಗಿದ್ದವು.  ಜಯಶ್ರೀಬೆನ್ ಅವರು ಕೆಳಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ವೇಳೆಯಲ್ಲಿ ಸಂದೀಪ ತಾರಸಿಯಲ್ಲೇ ಇದ್ದ. ತತ್ ಕ್ಷಣವೇ ಕೆಳಕ್ಕೆ ಧಾವಿಸಿದ. ಇದು ಸಿಸಿಟಿವಿಯಲ್ಲಿ ದಾಖಲಾಗಿತ್ತು ಎಂದು ವಘೇಲ ನುಡಿದರು. ತಾಯಿಯ ಅಸ್ವಸ್ಥತೆಯಿಂದ ಬೇಸತ್ತುಹೋಗಿದ್ದೆ. ಹೀಗಾಗಿ ಆಕೆಯನ್ನು ತಾರಸಿಗೆ ಕರೆದೊಯ್ದು ಕೆಳಕ್ಕೆ ತಳ್ಳಿದೆ ಎಂದು ಸಂದೀಪ ಹೆಚ್ಚಿನ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ವಘೇಲ ಹೇಳಿದರು.

2018: ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ೧೦ ರೂಪಾಯಿ ಮುಖಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡಿತು. ಪ್ರಸ್ತುತ ಚಲಾವಣೆಯಲ್ಲಿ ಇರುವ ನೋಟಿನಷ್ಟೇ ಉದ್ದವಾಗಿದ್ದರೂ ಅಗಲ ಸ್ವಲ್ಪ ಕಡಿಮೆ ಇರುವ ಹೊಸ ನೋಟು ಮಹಾತ್ಮ ಗಾಂಧಿ ಸರಣಿಯಲ್ಲಿದ್ದು ಚಾಕಲೇಟ್ ಕಂದು ಬಣ್ಣವನ್ನು ಹೊಂದಿತ್ತು. ನೂತನ ನೋಟಿನಲ್ಲಿ ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯದ ಚಿತ್ರವಿದೆ. ಪ್ರಸಕ್ತ ಚಲಾವಣೆಯಲ್ಲಿರುವ ನೋಟಿನಲ್ಲಿ ಆನೆ, ಹುಲಿ ಹಾಗೂ ಘೇಂಡಾಮೃಗದ ಚಿತ್ರವಿದೆ. ನೋಟುಗಳ ಎರಡೂ ನಂಬರ್ ಪ್ಯಾನೆಲ್ನಲ್ಲಿ ಎಲ್ ಅಕ್ಷರ ಹಾಗೂ ಊರ್ಜಿತ್ ಪಟೇಲ್ ಅವರ ಹಸ್ತಾಕ್ಷರ ಇರುತ್ತದೆ. ಹಿಂದೆ ವಿತರಿಸಲಾಗಿರುವ ಎಲ್ಲ ೧೦ ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿ ಮುಂದುವರೆಯಲಿವೆ ಎಂದು ರಿಸರ್ವ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿತು. ಕಾಳಧನ ನಿಯಂತ್ರಣಕ್ಕಾಗಿ ೨೦೧೬ರಲ್ಲಿ ನೋಟು ಅಮಾನ್ಯೀಕರಣ ಮಾಡಿದ್ದ ಕೇಂದ್ರ ಸರಕಾರ ಇದಾದ ಬಳಿಕ ನೂತನವಾಗಿ ಬಿಡುಗಡೆಗೊಳಿಸಿದ ನೋಟುಗಳ ವಿನ್ಯಾಸ ಮತ್ತು ಬಣ್ಣವನ್ನು ಬದಲಿಸಿ ಹೆಚ್ಚಿನ ಭದ್ರತೆಯೊಂದಿಗೆ ಚಲಾವಣೆಗೆ ತರುತ್ತಿದೆ.


2009: ಮುಂಬೈ ಮೇಲೆ ನಡೆದ ಉಗ್ರರ ದಾಳಿಗೆ (26/11) ಪಾಕಿಸ್ಥಾನದ ಸಂಪರ್ಕ ಇರುವುದನ್ನು ಸಾಬೀತುಪಡಿಸುವ ನಿರಾಕರಿಸಲಿಕ್ಕಾಗದ ಗಂಭೀರ ಸ್ವರೂಪದ ಪುರಾವೆಗಳನ್ನು ಭಾರತವು ಪಾಕಿಸ್ಥಾನಕ್ಕೆ ಅಧಿಕೃತವಾಗಿ ಹಸ್ತಾಂತರಿಸಿತು. ಅವುಗಳನ್ನೆಲ್ಲ ಪರಿಶೀಲಿಸುತ್ತಿರುವುದಾಗಿ ಪಾಕಿಸ್ಥಾನವು ಕೆಲ ಗಂಟೆಗಳಲ್ಲಿಯೇ ಇಸ್ಲಾಮಮಾಬಾದಿನಲ್ಲಿ ಪ್ರತಿಕ್ರಿಯಿಸಿತು. ಎಫ್‌ಬಿಐ ಮುಂಬೈಯಲ್ಲಿ ಕಲೆಹಾಕಿರುವ ಸಾಕ್ಷ್ಯಾಧಾರಗಳನ್ನು ಇಸ್ಲಾಮಾಬಾದಿಗೆ ತೆಗೆದುಕೊಂಡು ಹೋಗಲಿದೆ ಎಂದು ಅಮೆರಿಕವೂ ಹೇಳಿತು.

2009: ಕಡಲ ಗರ್ಭದಲ್ಲಿನ ವೈರಿಗಳ ಚಲನವಲನಗಳನ್ನು ಪತ್ತೆ ಹಚ್ಚುವುದು, ವೈರಿ ಜಲಾಂತರ್ಗಾಮಿಗಳ ಧ್ವಂಸ ಸಹಿತ ಭಾರತೀಯ ನೌಕಾಪಡೆಯ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಅಮೆರಿಕದ ಬೋಯಿಂಗ್ ಸಂಸ್ಥೆಯಿಂದ 2.1 ಶತಕೋಟಿ ಡಾಲರ್ ವೆಚ್ಚದಲ್ಲಿ ಎಂಟು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಖರೀದಿಸುವ ಭಾರಿ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಸಹಿ ಹಾಕಿದವು. ಬೋಯಿಂಗ್ ಪಿ-8ಐ ದೀರ್ಘ ವ್ಯಾಪ್ತಿಯ ಸಾಗರದ ಆಯಕಟ್ಟಿನ ಸ್ಥಳಗಳ ಶೋಧನಾ ವಿಮಾನಗಳನ್ನು (ಎಲ್‌ಆರ್‌ಎಂಆರ್) ಖರೀದಿಸುವ ಈ ಒಪ್ಪಂದಕ್ಕೆ ಜ.1ರಂದು ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಬೋಯಿಂಗ್ ಕಂಪೆನಿಯ ದೇಶೀಯ ಮುಖ್ಯಸ್ಥ ವಿವೇಕ್ ಲಾಲ್ ಜತೆಗೆ ಸಹಿ ಹಾಕಿದರು ಎಂದು ನೌಕಾಪಡೆ ಮತ್ತು ಬೋಯಿಂಗ್ ಕಂಪೆನಿಯ ಮೂಲಗಳು ಈದಿನ ನವದೆಹಲಿಯಲ್ಲಿ ತಿಳಿಸಿದವು.

2009: ಜಮ್ಮು ಮತ್ತು ಕಾಶ್ಮೀರದ 11ನೇ ಮುಖ್ಯಮಂತ್ರಿಯಾಗಿ ನ್ಯಾಷನಲ್ ಕಾನ್ಫರೆನ್ಸ್ ಶಾಸಕಾಂಗ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಶ್ರೀನಗರದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕಾಂಗ್ರೆಸ್ಸಿನ ತಾರಾ ಚಂದ್ ಶರ್ಮಾ ಉಪಮುಖ್ಯಮಂತ್ರಿಯಾದರು. ರಾಜ್ಯಪಾಲ ಎನ್. ಎನ್. ವೋರಾ ಅವರು ಒಮರ್ ಅಬ್ದುಲ್ಲಾ ಮತ್ತು ಇತರ 9 ಮಂದಿ ಸಚಿವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಈ ಮೂಲಕ ನ್ಯಾಷನಲ್ ಕಾನ್ಫ್‌ರೆನ್ಸ್ ಮತ್ತು ಕಾಂಗ್ರೆಸ್ಸಿನ ತಲಾ 5 ಮಂದಿ ಸಂಪುಟಕ್ಕೆ ಸೇರಿದಂತಾಯಿತು.

2008: ದಕ್ಕಣದ ವಿಶಾಲ ಪ್ರಸ್ಥಭೂಮಿಯು ಭೂಮಿಗೆ ಬೆದರಿಕೆ ಒಡ್ಡುತ್ತಿರುವ ಜಗತಾಪ ಏರಿಕೆಯ (ಜಾಗತಿಕ ತಾಪಮಾನ) ಪೆಡಂಭೂತಕ್ಕೆ ಕಾರಣವಾಗಿರುವ ಅಂಗಾರಾಮ್ಲ (ಕಾರ್ಬನ್ ಡೈ ಆಕ್ಸೈಡ್) ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ಸಹಕಾರಿ ಆಗಬಲ್ಲುದು ಎಂಬುದಾಗಿ ಭಾರತೀಯ ಭೂಗರ್ಭ ತಜ್ಞರು ಬಹಿರಂಗಪಡಿಸಿದರು. ದಕ್ಕಣದ ಪ್ರಸ್ಥಭೂಮಿಯಲ್ಲಿ ಹರಡಿರುವ ಬಸಾಲ್ಟ್ ಶಿಲೆಗಳು ಅಂಗಾರಾಮ್ಲ ಇಲ್ಲವೇ ಇಂಗಾಲದ ಡೈ ಆಕ್ಸೈಡನ್ನು ಕಾರ್ಬೋನೇಟುಗಳಾಗಿ ಅಥವಾ ಕಾಲಾಂತರದಲ್ಲಿ ವಿವಿಧ ಬಗೆಯ ಉಪ್ಪಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳುತ್ತವೆ ಎಂಬುದನ್ನು ತಾವು ಪತ್ತೆ ಹಚ್ಚಿರುವುದಾಗಿ ಅವರು ಪ್ರಕಟಿಸಿದರು. ಕಾರ್ಖಾನೆಗಳಿಂದ ಹೊರಬರುವ ಈ ಅಂಗಾರಾಮ್ಲವನ್ನು ಕೇಂದ್ರ ಮತ್ತು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಹರಡಿರುವ ಅಂದಾಜು 5 ಲಕ್ಷ ಚದರ ಕಿ.ಮೀ. ವ್ಯಾಪ್ತಿಯ ಪ್ರಸ್ಥಭೂಮಿಯ ಶಿಲಾ ಪದರಗಳ ಎಡೆಗೆ ಸೇರಿಸಿದರೆ ಸಾಕು ಜಗತಾಪ ಏರಿಕೆಯ ಬಹುದೊಡ್ಡ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂದು ಈ ವಿಜ್ಞಾನಿಗಳು ನಂಬಿಕೆ ವ್ಯಕ್ತ ಪಡಿಸಿದರು. ಹೈದರಾಬಾದ್ ಮೂಲದ ರಾಷ್ಟ್ರೀಯ ಭೂಭೌತ ಸಂಶೋಧನಾ ಸಂಸ್ಥೆಯ (ಎನ್ ಜಿ ಆರ್ ಐ) ನಿರ್ದೇಶಕ ವಿ.ಪಿ. ದಿಮ್ರಿ ಅವರು ವಿಶಾಖಪಟ್ಟಣದಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಕಟಿಸಿದರು. ಎನ್ ಜಿ ಆರ್ ಐ ವಿಜ್ಞಾನಿಗಳು ಗುಜರಾತಿನ ಕಛ್ ಪ್ರದೇಶ, ಮಧ್ಯಪ್ರದೇಶದಲ್ಲಿನ ಜಬಲ್ ಪುರ, ಕರ್ನಾಟಕದ ಬೆಳಗಾವಿ ಮತ್ತು ಮಹಾರಾಷ್ಟ್ರದ ಇಗತಪುರಿ-ಈ ನಾಲ್ಕು ಸ್ಥಳಗಳಲ್ಲಿ ಬಸಾಲ್ಟ್ ಶಿಲಾ ರಚನೆಯನ್ನು ಅಧ್ಯಯನ ಮಾಡಿದ್ದರು. `ಈ ಅಧ್ಯಯನದ ಫಲಿತಾಂಶಗಳು ಪ್ರೋತ್ಸಾಹಕರವಾಗಿವೆ. ಮ್ಯಾಗ್ನೇಸಿಯಂ ಮತ್ತು ಕ್ಯಾಲ್ಸಿಯಂನ ಹಾನಿರಹಿತ ಕಾರ್ಬೋನೇಟುಗಳಾಗಿ ಅಂಗಾರಾಮ್ಲವು ಪರಿವರ್ತನೆಗೊಂಡ್ದದನ್ನು ನಾವು ಪತ್ತೆ ಹಚ್ಚಿದ್ದೇವೆ' ಎಂದು ದಿಮ್ರಿ ಹೇಳಿದರು. ಈ ಪ್ರದೇಶವು ಅತ್ಯಂತ ವಿಶಾಲವಾದ್ದರಿಂದ ದಕ್ಕಣದ ಪ್ರಸ್ಥಭೂಮಿಯ ಇನ್ನೂ 20 ಸ್ಥಳಗಳಲ್ಲಿ ವಿಸ್ತೃತ ಸಮೀಕ್ಷೆ ನಡೆಸಲು ತಾವು ಯೋಜಿಸಿರುವುದಾಗಿ ಭೂಗರ್ಭ ತಜ್ಞರು ಹೇಳಿದರು. ಭೂಮಿಗೆ ಅಂಗಾರಾಮ್ಲವನ್ನು ಸೇರಿಸುವ ಈ ಪ್ರಕ್ರಿಯೆಯನ್ನು `ಅಂಗಾರಾಮ್ಲ ಪೂರಣ' (ಕಾರ್ಬನ್ ಸೆಕ್ಯುಯೆಸ್ಟ್ರೇಷನ್) ಎಂದು ಕರೆಯಲಾಗುತ್ತದೆ. ಅಮೆರಿಕದ ಇಡಾಹೊ ನ್ಯಾಷನಲ್ ಲ್ಯಾಬೋರೇಟರಿಯಲ್ಲಿ ಇಂತಹುದೇ ಅಧ್ಯಯನ ನಡೆಸಲಾಗಿದೆ. ಇಲ್ಲೂ 85,000 ಚದರ ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಬಸಾಲ್ಟ್ ಶಿಲೆಗಳಿದ್ದು ಈ ಪ್ರದೇಶವು 100 ಶತಕೋಟಿ (100 ಬಿಲಿಯನ್) ಟನ್ನುಗಳಷ್ಟು ಅಂಗಾರಾಮ್ಲವನ್ನು ದಾಸ್ತಾನು ಮಾಡಬಹುದು ಎಂಬುದು ಬೆಳಕಿಗೆ ಬಂದಿದೆ.

2008: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆಯ ತನಿಖೆಯನ್ನು ತ್ವರಿತಗೊಳಿಸುವಂತೆ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಹಂಗಾಮೀ ಪ್ರಧಾನಿ ಮೊಹಮ್ಮದ್ ಮಿಯಾನ್ ಸೂಮ್ರೋ ಅವರಿಗೆ ನಿರ್ದೇಶಿಸಿದರು. ತನಿಖೆಯನ್ನು ಆದಷ್ಟೂ ಬೇಗ ಪೂರ್ಣಗೊಳಿಸಲು ಸ್ಕಾಟ್ಲೆಂಡ್ ಯಾರ್ಡ್ ತಂಡಕ್ಕೆ ಪೂರ್ಣ ಸಹಕಾರ ನೀಡುವಂತೆ ಸೂಮ್ರೋ ಅವರಿಗೆ ಪರ್ವೇಜ್ ಮುಷರಫ್ ಸೂಚಿಸಿದ್ದಾರೆ ಎಂದು `ಡಾನ್' ಪತ್ರಿಕೆ ವರದಿ ಮಾಡಿತು.

2008: ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಮೇಲುಕೋಟೆಯ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ನಸುಕಿನ ಜಾವ ದೇವರನ್ನು ಅಲಂಕರಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಯಿತು. ದೇವಸ್ಥಾನದ ಹಿಂಬಾಗಿಲಿಗೆ ಹಾಕಿದ್ದ ಬೀಗವನ್ನು ಒಡೆದು ಅದಕ್ಕೆ ಹಾಕಲಾಗಿದ್ದ ಕಬ್ಬಿಣದ ಸರಪಳಿಯನ್ನು ತೆಗೆದ ದುಷ್ಕರ್ಮಿಗಳು ಉಳಿದ ಮೂರು ದ್ವಾರಗಳಿಗೆ ಹಾಕಿದ್ದ ಅಷ್ಟೇನೂ ಭದ್ರವಲ್ಲದ ಬೀಗಗಳನ್ನೂ ಸುಲಭವಾಗಿ ತೆಗೆದು ಈ ಕಳವು ಕೃತ್ಯ ಎಸಗಿದರು. ದುಷ್ಕರ್ಮಿಗಳು ಗರ್ಭಗುಡಿ ಪ್ರವೇಶಿಸಿ ಶಂಖಚಕ್ರ, ಪೀಠ, ಪಾದುಕೆ, ಅಡ್ಡಪಟ್ಟಿ, ಕಿರೀಟ, ಹಾರಗಳೂ ಸೇರಿ ದೇವರಿಗೆ ಹಾಕಿದ್ದ ಎಲ್ಲ ಆಭರಣಗಳನ್ನು ಹೊತ್ತೊಯ್ದರು. ಕಳುವಾದ ಆಭರಣಗಳ ಮೌಲ್ಯ 6 ರಿಂದ 7 ಲಕ್ಷ ರೂಪಾಯಿಗಳು.

2008: ದೇಶಿ ಮತ್ತು ವಿದೇಶಿ ಬ್ಯಾಂಕುಗಳ ನಕಲಿ ಕ್ರೆಡಿಟ್ ಕಾರ್ಡುಗಳನ್ನು ಬಳಸಿ ಚಿನ್ನ ಖರೀದಿಸಿ ನಂತರ ಅದನ್ನು ಮಾರಾಟ ಮಾಡಿ ಗಳಿಸಿದ ಹಣವನ್ನು ಎಲ್ ಟಿ ಟಿ ಇ ಉಗ್ರಗಾಮಿಗಳಿಗೆ ಪೂರೈಕೆ ಮಾಡುವ ಜಾಲವೊಂದರ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದ ಶ್ರೀಲಂಕಾದ ಉತ್ತರ ಜಾಫ್ನಾ ನಿವಾಸಿಗಳಾದ ಬಾಲರೂಬನ್ (22) ಮತ್ತು ನಲ್ಲತಂಬಿ ಜಯಶೀಲನ್ (25) ಎಂಬ ಇಬ್ಬರು ಯುವಕರನ್ನು ಮಂಗಳೂರಿನ ಬಂದರು ಪೊಲೀಸರು ಬಂಧಿಸಿದರು.

2008: ಕರ್ನಾಟಕ ಸರ್ಕಾರದ `ಭಾಗ್ಯಲಕ್ಷ್ಮಿ' ಯೋಜನೆಯಡಿ ನೋಂದಾಯಿಸಲಾದ ಮಕ್ಕಳಿಗೆ ಉತ್ತಮ ಆರೋಗ್ಯ, ಶಿಕ್ಷಣ, ಪೋಷಣೆ, ಇತರೆ ಸೌಲಭ್ಯ ನೀಡಿ ಆ ಮಕ್ಕಳು ಸಾಗಿ ಬಂದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವ ಆನ್ ಲೈನ್ ವೆಬ್ ಸೈಟ್ ಬೆಂಗಳೂರಿನಲ್ಲಿ ಆರಂಭವಾಯಿತು. ಬನಶಂಕರಿ 3ನೇ ಹಂತದಲ್ಲಿರುವ ಎನ್ ಸಿ ಇ ಆರ್ ಟಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರ ಸಲಹೆಗಾರ ಪಿ.ಕೆ.ಎಚ್. ತರಕನ್ ಅವರು ವೆಬ್ ಸೈಟಿಗೆ ಚಾಲನೆ ನೀಡಿದರು.

2007: ಇನ್ಫೋಸಿಸ್, ವಿಪ್ರೋ ಸಂಸ್ಥೆಗಳು ಸೇರಿದಂತೆ ಬೆಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವ ಪಾಕಿಸ್ಥಾನಿ ಉಗ್ರರ ಸಂಚು ಸಂಬಂಧ ಇಮ್ರಾನ್ ಯಾನೆ ಬಿಲಾಲ್ (32) ಎಂಬ ಶಂಕಿತ ಭಯೋತ್ಪಾದಕನನ್ನು ಬೆಂಗಳೂರಿನ ಯಶವಂತಪುರದ ಗೊರಗುಂಟೆ ಪಾಳ್ಯದಲ್ಲಿ ಪೊಲೀಸರು ಬಂಧಿಸಿದರು.

2007: ಅಮೆರಿಕ ಕಾಂಗ್ರೆಸ್ಸಿನ ಮೊದಲ ಮಹಿಳಾ ಸ್ಪೀಕರ್ ಆಗಿ ಕ್ಯಾಲಿಫೋರ್ನಿಯಾ ನಿವಾಸಿ ಡೆಮಾಕ್ರಾಟ್ ಪಕ್ಷದ ನ್ಯಾನ್ಸಿ ಪೆಲೋಸಿ ಆಯ್ಕೆಯಾದರು. 435 ಸದಸ್ಯಬಲದ ಸದನದಲ್ಲಿ ನ್ಯಾನ್ಸಿ 223 ಮತಗಳನ್ನು ಪಡೆದು ವಿಜಯ ಸಾಧಿಸುವ ಮೂಲಕ 12 ವರ್ಷಗಳಿಂದ ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿದ್ದ ಸ್ಪೀಕರ್ ಸ್ಥಾನವನ್ನು ತಮ್ಮ ಪಕ್ಷಕ್ಕೆ ದಕ್ಕಿಸಿಕೊಟ್ಟ ಕೀರ್ತಿಗೆ ಭಾಜನರಾದರು.

2007: ಕನ್ನಡ ರಂಗಭೂಮಿಗೆ ರಾಷ್ಟ್ರೀಯ ರಂಗಭೂಮಿ ಸ್ಥಾನ ನೀಡುವಂತೆ ಆಗ್ರಹಿಸಿ ಅಭಿವ್ಯಕ್ತಿ-ಅಭಿಯಾನ ನಡೆಸಿದ ಚಳವಳಿಯ ಅಂಗವಾಗಿ ಹಿರಿಯ ರಂಗಕರ್ಮಿ ಪ್ರಸನ್ನ ಅವರು ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು.

2007: ತೆಹ್ರಿ ಅಧಿಪತ್ಯದ ಆರನೆಯ ಹಾಗೂ ಕೊನೆಯ ದೊರೆ ಹಾಗೂ ಪವಿತ್ರ ಬದರಿನಾಥ ದೇವಾಲಯದ ಸಂರಕ್ಷಕ ಮಹಾರಾಜ ಮನವೇಂದ್ರ ಶಹಾ (86) ಅವರು ಈದಿನ ಸಂಜೆ ನವದೆಹಲಿಯ ಆಸ್ಪತ್ರೆಯೊಂದರಲ್ಲಿ ದೀರ್ಘಕಾಲದ ಅಸ್ವಸ್ಥತೆಯ ಬಳಿಕ ನಿಧನರಾದರು. ಭಾಗೀರಥಿ ಜಲಾಶಯದ ನೀರಿನ ಅಡಿಯಲ್ಲಿ ಹಳೆಯ ತೆಹ್ರಿ ಪಟ್ಟಣ ಮುಳುಗಡೆಯಾದುದಕ್ಕಾಗಿ ಕಳೆದ ಕೆಲ ಕಾಲದಿಂದ ಅವರು ತಲೆ ಕೆಡಿಸಿಕೊಂಡಿದ್ದರು. ಈ ಪಟ್ಟಣವನ್ನು 1815ರಲ್ಲಿ ಶಹಾ ಅವರ ಮುತ್ತಜ್ಜನ ಅಜ್ಜನ ಅಜ್ಜ ನಿರ್ಮಿಸಿದ್ದರು. ಭಗವಾನ್ ವಿಷ್ಣುವಿನ ಅವತಾರ ಎಂಬ ನಂಬಿಕೆಯ ಕಾರಣ `ಬೊಳಂದ ಬದ್ರಿ' ಎಂದೇ ಜನಪ್ರಿಯರಾಗಿದ್ದ ಶಹಾ ಗಢವಾಲ್ ಪ್ರದೇಶದ ಜನತೆಯ ಅಪೂರ್ವ ಪ್ರೀತಿಗೆ ಪಾತ್ರರಾಗಿದ್ದವರು. ಗಢವಾಲ್ ಕ್ಷೇತ್ರದಿಂದ ಅವರು ಲೋಕಸಭೆಗೆ ಎಂಟು ಸಲ ಗೆದ್ದು ದಾಖಲೆ ನಿರ್ಮಿಸಿದ್ದರು. 1957ರ್ಲಲಿ ರಾಜಕೀಯ ಜೀವನಕ್ಕೆ ಅಡಿ ಇಟ್ಟ ಬಳಿಕ ಒಂದೇ ಒಂದು ಸಲ 1971ರಲ್ಲಿ ಅವರು ಸಾಮಾಜಿಕ ಕಾರ್ಯಕರ್ತ ಪರಿಪೂರ್ಣಾನಂದ ಪೈನುಲಿ ಅವರ ಎದುರಲ್ಲಿ ಪರಾಭವ ಅನುಭವಿಸಿದ್ದರು. ಪ್ರತಿಸಲ ಗೆದ್ದಾಗಲೂ ಭಾರೀ ಅಂತರದಿಂದ ವಿಜಯಿಯಾಗುತ್ತಿದ್ದುದು ಅವರ ಜನಪ್ರಿಯತೆಯ ದ್ಯೋತಕವಾಗಿತ್ತು. 1970ರಿಂದ ಅವರು ಬಿಜೆಪಿಯಲ್ಲಿ ಇದ್ದರು. 1948ರಲ್ಲಿ ಗೃಹ ಸಚಿವ ವಲ್ಲಭ ಭಾಯಿ ಪಟೇಲ್ ಅವರು ಭಾರತದೊಂದಿಗೆ ವಿಲೀನಗೊಳ್ಳುವ ಒಪ್ಪಂದಕ್ಕೆ ಸಹಿ ಹಾಕುವಂತೆ ಕರೆ ಕಳುಹಿಸಿದಾಗ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ಹಿಡಿಯಷ್ಟು ಭಾರತೀಯ ದೊರೆಗಳಲ್ಲಿ ಶಹಾ ಮೊದಲಿಗರಾಗಿದ್ದರು. ಈ ಒಪ್ಪಂದದಿಂದ ಶಹಾ ಅವರ ಒಂದೂವರೆ ವರ್ಷಗಳ ಸಂಕ್ಷಿಪ್ತ ರಾಜ್ಯಭಾರ ಕೊನೆಗೊಂಡಿತ್ತು. ಶಹಾ ನಿಧನದ ಕಾರಣ ಅವರ ಪುತ್ರ ಮನುಜೇಂದ್ರ ಶಹಾ ಅವರನ್ನು ಬದರಿನಾಥ ದೇವಾಲಯದ ನೂತನ ಸಂರಕ್ಷಕರನ್ನಾಗಿ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದವು.

2006: ಕನ್ನಡದ ಧೀಮಂತ ನಟ ವಜ್ರಮುನಿ (62) ಹೃದಯಾಘಾತದಿಂದ ಈದಿನ ಬೆಳಗ್ಗೆ 5.30ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಹತ್ತು ವರ್ಷಗಳಿಂದ ತೀವ್ರ ಅನಾರೋಗ್ಯಪೀಡಿತರಾಗಿದ್ದ ವಜ್ರಮುನಿ ಕೆಲ ವರ್ಷಗಳ ಹಿಂದೆ ಮೂತ್ರಪಿಂಡ ವೈಫಲ್ಯಕ್ಕೆ ತುತ್ತಾಗಿದ್ದರು. 1944ರ ಮೇ 10ರಂದು ಬೆಂಗಳೂರಿನ ಕನಕಪಾಳ್ಯದಲ್ಲಿ ಜನಿಸಿದ ವಜ್ರಮುನಿ, ರಂಗಭೂಮಿ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ತಮ್ಮದೇ ನಾಟಕ ತಂಡ ರಚಿಸಿಕೊಂಡು ಪೌರಾಣಿಕ, ಐತಿಹಾಸಿಕ ನಾಟಕಗಳನ್ನು ಆಡುತ್ತಿದ್ದ ವಜ್ರಮುನಿ, ದಿವಂಗತ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಲ್ಲಮ್ಮನ ಪವಾಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಚೊಚ್ಚಲ ಹೆಜ್ಜೆ ಇರಿಸಿದರು. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಾಯಕರಾಗಿ ಮಿಂಚಿದ್ದ ವಜ್ರಮುನಿ, ಚಿತ್ರನಿರ್ಮಾಣಕ್ಕೂ ಇಳಿದಿದ್ದರು. ಗಂಡಭೇರುಂಡ, ತಾಯಿಗಿಂತ ದೇವರಿಲ್ಲ, ಹಸಿದ ಹೆಬ್ಬುಲಿ, ಬ್ರಹ್ಮಾಸ್ತ್ರ, ರಣಭೇರಿ ಇವರು ನಿರ್ಮಿಸಿದ ಚಿತ್ರಗಳು. ರಾಜ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಅವರಿಗೆ ಬಂದಿದ್ದವು.

2006: ಸೌದಿ ಅರೇಬಿಯಾದ ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾದಲ್ಲಿ ಕಟ್ಟಡವೊಂದು ಕುಸಿದ ಪರಿಣಾಮವಾಗಿ 70 ಮಂದಿ ಮೃತರಾದರು. 120ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಮೆಕ್ಕಾದ ಪ್ರಮುಖ ಮಸೀದಿಗೆ ಅತಿ ಸಮೀಪದಲ್ಲೇ ಈ ಘಟನೆ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ಸ್ವಲ್ಪ ಹೊತ್ತಿನಲ್ಲೇ ಆ ಕಟ್ಟಡ ಕುಸಿದು ಬಿತ್ತು.

2006: ಟಿ.ಕೆ. ರಾವ್ ಎಂದೇ ಪತ್ರಿಕೆ ಹಾಗೂ ಕಲಾ ವಲಯದಲ್ಲಿ ಪರಿಚಿತರಾಗಿದ್ದ ಚಿತ್ರ ಕಲಾವಿದ ತಾಡ ಕೃಷ್ಣರಾವ್ (72) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಕನ್ನಡ ಪ್ರಭ, ಉದಯವಾಣಿ, ತರಂಗ, ತುಷಾರ, ಕರ್ಮವೀರ, ಕಸ್ತೂರಿ, ಸಂಯುಕ್ತ ಕರ್ನಾಟಕ, ಕಾಮಧೇನು ಮುಂತಾದ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದಿದ್ದ ರಾವ್ ಬರಹಗಾರ, ರಂಗನಟರೂ ಆಗಿ ಸೇವೆ ಸಲ್ಲಿಸಿದ್ದರು. 1999ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಿತ್ತು.

2006: ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಟೈಪಿಂಗ್ ದೋಷದಿಂದಾಗಿ 185 ರೂಪಾಯಿಗಳ ಷೇರಿನ ಬೆಲೆ 25 ಪೈಸೆ ಎಂದು ನಮೂದಾಗಿ, ಈ ಕ್ಷಣದಲ್ಲೇ 4.04 ಲಕ್ಷ ಷೇರುಗಳು ವಿಕ್ರಯವಾಗಿ ಬಿಟ್ಟ ಪರಿಣಾಮವಾಗಿ 12 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಹೂಡಿಕೆದಾರರು ಕಳೆದುಕೊಂಡರು. ಮಧ್ಯಾಹ್ನ 2.24ಕ್ಕೆ ಈ ಘಟನೆ ಘಟಿಸಿತು.

1999: ಸಿಡ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಅಂತಿಮ ಟೆಸ್ಟಿನ 4ನೇ ದಿನದ ಪಂದ್ಯದಲ್ಲಿ ತನ್ನ 157ನೇ ಕ್ಯಾಚ್ ಮೂಲಕ ಆಸ್ಟ್ರೇಲಿಯಾದ ಕ್ಯಾಪ್ಟನ್ ಮಾರ್ಕ್ ಟೇಲರ್ ಅವರು ಆಲನ್ ಬಾರ್ಡರ್ ಅವರ `ಕ್ಯಾಚ್ ದಾಖಲೆ'ಯನ್ನು ಮುರಿದರು.

1974: ಹಿಂದೂಸ್ಥಾನಿ ಸಂಗೀತಗಾರ್ತಿ ಗೀತಾ ಎಸ್. ಹೆಬ್ಳೀಕರ್ ಅವರು ದತ್ತಾತ್ರೇಯ ಮಂಡಿಗೇರಿ- ಕಲಾವತಿ ಮಂಡಿಗೇರಿ ದಂಪತಿಯ ಮಗಳಾಗಿ ಧಾರವಾಡ ಜಿಲ್ಲೆ ರೋಣ ತಾಲ್ಲೂಕಿನ ಅಸೂಟಿ ಗ್ರಾಮದಲ್ಲಿ ಜನಿಸಿದರು.

1971: ಮೆಲ್ಬೋರ್ನಿನಲ್ಲಿ ನಡೆದ ಮೊತ್ತ ಮೊದಲ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವು ಇಂಗ್ಲೆಂಡನ್ನು 5 ವಿಕೆಟ್ ಅಂತರದಲ್ಲಿ ಸೋಲಿಸಿತು.

1966: ಭಾರತೀಯ ಸಂಗೀತ ಸಂಯೋಜಕ ಎ.ಆರ್. ರಹಮಾನ್ ಹುಟ್ಟಿದ ದಿನ.

1963: ಕಲಾವಿದೆ ರಂಗಶ್ರೀ ರಂಗಸ್ವಾಮಿ ಜನನ.

1955: ತೃಣಮೂಲ ಕಾಂಗ್ರೆಸ್ ಸ್ಥಾಪಕಿ ಮಮತಾ ಬ್ಯಾನರ್ಜಿ ಹುಟ್ಟದ ದಿನ.

1941: ಭಾರತದ ಅತ್ಯಂತ ಕಿರಿಯ ಕ್ರಿಕೆಟ್ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮನ್ಸೂರ್ ಅಲಿಖಾನ್ ನವಾಬ್ ಆಫ್ ಪಟೌಡಿ ಜ್ಯೂನಿಯರ್ ಹುಟ್ಟಿದರು. 1952ರಲ್ಲಿ ಇದೇ ದಿನ ಅವರ ತಂದೆ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದ ಇಫ್ತಿಖರ್ ಅಲಿ ಖಾನ್ ನವಾಬ್ ಆಫ್ ಪಟೌಡಿ ಸೀನಿಯರ್ ಪೊಲೋ ಆಡುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು.

1928: ಕಲಾವಿದ ಶಿವಸ್ವಾಮಿ ಮಂದೇನಹಳ್ಳಿ ಜನನ.

1920: ಕಲಾವಿದ ಎಂ.ಎಸ್. ನಟರಾಜ್ ಜನನ.

1919: `ನಾಝಿ ಪಾರ್ಟಿ' ಎಂದೇ ಖ್ಯಾತಿ ಪಡೆದ ನ್ಯಾಷನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿಯನ್ನು ಆಂಟನ್ ಡ್ರೆಕ್ಸ್ಲರ್ ಎಂಬ ವ್ಯಕ್ತಿ ಸ್ಥಾಪಿಸಿದ. ಆಗ ಪಕ್ಷಕ್ಕೆ ಇಡಲಾಗಿದ್ದ ಹೆಸರು: ಜರ್ಮನ್ ವರ್ಕರ್ಸ್ ಪಾರ್ಟಿ. ಆ ವರ್ಷ ನಡೆದ ಪಕ್ಷದ ಒಂದು ಸಭೆಗೆ ಹಾಜರಾದ ಅಡಾಲ್ಫ್ ಹಿಟ್ಲರ್ ತನ್ನ ವಾಕ್ ಚತುರತೆಯಿಂದ ಪಕ್ಷದ ಮೇಲೆ ಹಿಡಿತ ಸಾಧಿಸಿದ. 1920-21ರ ವೇಳೆಗೆ ಪಕ್ಷದ ಎಲ್ಲನಾಯಕರನ್ನು ಉಚ್ಚಾಟಿಸಿದ ಆತ ಪಕ್ಷಕ್ಕೆ ನ್ಯಾಷನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ಸ್ ಪಾರ್ಟಿ ಎಂಬುದಾಗಿ ಪುನರ್ ನಾಮಕರಣ ಮಾಡಿದ.

1893: ಅಮೆರಿಕದಲ್ಲಿ `ಕ್ರಿಯಾ ಯೋಗ'ವನ್ನು ಪ್ರಚುರ ಪಡಿಸಿದ ಭಾರತೀಯ ಆಧ್ಯಾತ್ಮಿಕ ಧುರೀಣ ಪರಮಹಂಸ ಯೋಗಾನಂದ (1893-1952) ಜನ್ಮದಿನ.

1869: ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥರು (5-1-1869ರಿಂದ 22-4-1942) ಧಾರವಾಡ ಜಿಲ್ಲೆಯ ಹಾವೇರಿ ತಾಲೂಕಿನ ಗಳಗನಾಥ ಎಂಬ ಹಳ್ಳಿಯಲ್ಲಿ ಹುಟ್ಟಿದರು. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆ. ಕಮಲ ಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ ಮುಂತಾದ ಕಾದಂಬರಿ, ಗಿರಿಜಾ ಕಲ್ಯಾಣ, ಉತ್ತರ ರಾಮ ಚರಿತ್ರೆ, ಚಿದಂಬರ ಚರಿತ್ರೆ, ಸತ್ಪುರುಷರ ಚರಿತ್ರೆಗಳು, ನಿಬಂಧ- ಪ್ರಬಂಧಗಳ ರಚನೆ - ಪ್ರಕಟಣೆ. 74ನೇ ವಯಸ್ಸಿನಲ್ಲಿ ಕ್ಯಾನ್ಸರಿನಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನ.

No comments:

Post a Comment