ನಾನು ಮೆಚ್ಚಿದ ವಾಟ್ಸಪ್

Wednesday, January 9, 2019

ಜಾತಿ, ಧರ್ಮಾತೀತ ‘ಆರ್ಥಿಕ’ ಮೀಸಲಾತಿಗೆ ಸಂಸತ್ ಮುದ್ರೆ

   ಜಾತಿ, ಧರ್ಮಾತೀತ ಆರ್ಥಿಕ ಮೀಸಲಾತಿಗೆ ಸಂಸತ್ ಮುದ್ರೆ
ನವದೆಹಲಿ: ಲೋಕಸಭೆಯು ಮಂಗಳವಾರ ರಾತ್ರಿ ಅಂಗೀಕರಿಸಿದ ಸಾಮಾನ್ಯ ವರ್ಗದಲ್ಲಿನ ಎಲ್ಲ ಆರ್ಥಿಕ ದುರ್ಬಲರಿಗೆ ಜಾತಿ ಹಾಗೂ ಧರ್ಮಾತೀತವಾಗಿ ನೌಕರಿ/ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡಾ ೧೦ ಮೀಸಲಾತಿ ಕಲ್ಪಿಸುವ ೧೨೪ನೇ ಸಂವಿಧಾನ ತಿದ್ದುಪಡಿ ಮಸೂದೆಗೆ (೨೦೧೯), ರಾಜ್ಯಸಭೆ ಬುಧವಾರ (೦೯-೦೧-೨೦೧೯) ರಾತ್ರಿ ತನ್ನ ಅನುಮೋದನೆ ನೀಡಿತುಹಾಜರಿದ್ದ 165 ಮಂದಿಯೂ ಮಸೂದೆಯ ಪರವಾಗಿ  ಮತ ನೀಡಿದರು. ಇದರೊಂದಿಗೆ ೧೦ ಗಂಟೆಗಳ ಚರ್ಚೆಯ ಬಳಿಕ ಚಾರಿತ್ರಿಕ ಮಸೂದೆಗೆ ಸಂಸತ್ತಿನ ಸಮ್ಮತಿ ಮುದ್ರೆ ಬಿದ್ದಿತು

ವ್ಯಾಪಕ ಟೀಕೆಗಳ ಹೊರತಾಗಿಯೂ ವಿರೋಧ ಪಕ್ಷಗಳು ಮಸೂದೆಗೆ ಬೆಂಬಲ ವ್ಯಕ್ತ ಪಡಿಸಿದವು. ಇದಕ್ಕೆ ಮುನ್ನ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ಸೂಚಿಸಿ ಡಿಎಂಕೆ ಮಂಡಿಸಿದ್ದ ನಿರ್ಣಯದ ಮೇಲೆ ಮತದಾನ ನಡೆದು ಅದು ತಿರಸ್ಕೃತಗೊಂಡಿತು.

ಮೀಸಲಾತಿ ಮಸೂದೆಯ ಫಲಾನುಭವಿಗಳ ಆರ್ಥಿಕ ಮಾನದಂಡವನ್ನು ನಿರ್ಧರಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ. ಮೀಸಲಾತಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರಿಗಳಿಗೂ ಅನ್ವಯಿಸುತ್ತದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಚರ್ಚೆಯ ಮಧ್ಯೆ ಸ್ಪಷ್ಟ ಪಡಿಸಿದರು.

ಜನವರಿ ೯ರವರೆಗೆ ವಿಸ್ತರಣೆಗೊಂಡ ಚಳಿಗಾಲದ ಅಧಿವೇಶನದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರು ಮೀಸಲಾತಿ ಮಸೂದೆಯನ್ನು ಮಂಡಿಸಿದರು.
ಲೋಕಸಭೆಯು
ಮಸೂದೆಯನ್ನು ೩೧೯ ಪರ ಮತ್ತು ಮತಗಳ ವಿರೋಧದೊಂದಿಗೆ ಅಂಗೀಕರಿಸಿದೆ. ಸಾಮಾನ್ಯ ವರ್ಗದಲ್ಲಿನ ಆರ್ಥಿಕ ದುರ್ಬಲ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೌಕರಿ ಮತ್ತು ಶಿಕ್ಷಣದಲ್ಲಿ ಶೇಕಡಾ ೧೦ರ ಮೀಸಲಾತಿಗೆ ಮಸೂದೆಯು ಅವಕಾಶ ಕಲ್ಪಿಸುತ್ತದೆ ಎಂದು ಸಚಿವರು ವಿವರಿಸಿದರು. ಬಡವರ್ಗಗಳಿಗೆ ಮೀಸಲಾತಿಯ ಪ್ರಸ್ತಾಪ ಎಲ್ಲ ಪಕ್ಷಗಳ ಪ್ರಣಾಳಿಕೆಗಳಲ್ಲೂ ಇವೆ ಎಂದು ಅವರು ನುಡಿದರು.

ನಾವು ಮಸೂದೆಯನ್ನು ಬೆಂಬಲಿಸುತ್ತೇವೆ. ಆದರೆ ಅದನ್ನು ತಂದಿರುವ ರೀತಿ ಬಗ್ಗೆ ಬೇಸರಗೊಂಡಿದ್ದೇವೆ. ಇದು ಅತ್ಯಂತ ಮಹತ್ವದ ಮಸೂದೆ. ಇದನ್ನು ಜಂಟಿ ಸಂಸದೀಯ ಸಮಿತಿಯ ಪರಾಮರ್ಶೆಗೆ ಕಳುಹಿಸಬೇಕಾಗಿತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಕಪಿಲ್ ಸಿಬಲ್ ಹೇಳಿದರು.

ಮಹತ್ವದ ಮಸೂದೆಗಳ ಚರ್ಚೆಗಾಗಿ ಒಂದು ದಿನ ವಿಸ್ತರಣೆಗೊಂಡ ರಾಜ್ಯಸಭಾ ಅಧಿವೇಶನದಲ್ಲಿ ಸದಸ್ಯರು ಮೀಸಲಾತಿ ಮಸೂದೆ, ಪೌರತ್ವ ಮಸೂದೆ ಮತ್ತು ದಿಢೀರ್ ತ್ರಿವಳಿ ತಲಾಖ್ ಮಸೂದೆಗಳ ಬಗ್ಗೆ ಚರ್ಚಿಸಿದರು.

ಮೀಸಲು ಮಸೂದೆಯು ಮೂರು ದೊಡ್ಡ ಲೋಪಗಳಿಂದ ನರಳುತ್ತಿದೆ. ಮಸೂದೆ ರೂಪಿಸುವ ಮುನ್ನ ಸಮರ್ಪಕವಾಗಿ ಸಮೀಕ್ಷೆ ನಡೆಸಲಾಗಿದೆಯೇ? ಹೇಗೆ ಸಮೀಕ್ಷೆ ನಡೆಸಲಾಯಿತು ಮತ್ತು ಮಾಹಿತಿ ಸಂಗ್ರಹಿಸಲಾಯಿತು? ಇದನ್ನು ಹೇಗೆ ಅನುಷ್ಠಾನಗೊಳಿಸಲಾಗುತ್ತದೆ? ಎಂದು ಸಿಬಲ್ ಪ್ರಶ್ನಿಸಿದರು.

ಶೇಕಡಾ ೧೦ರ ಮೀಸಲಾತಿ ಕಲ್ಪಿಸಲು ಮತ್ತು ಲಕ್ಷ ರೂಪಾಯಿಗಳ ವಾರ್ಷಿಕ ಆದಾಯ ಮಿತಿಯನ್ನು ನಿಗದಿ ಪಡಿಸಲು ಆಧಾರವಾಗಿ ಏನು ಮಾಹಿತಿ ಸಂಗ್ರಹಿಸಲಾಗಿದೆ? ಕಳೆದ ಐದು ವರ್ಷಗಳಲ್ಲಿ ಕೇವಲ ೪೫,೦೦೦ ನೌಕರಿಗಳನ್ನು ಸೇರ್ಪಡೆ ಮಾಡಲಾಗಿದೆ. ಅಂದರೆ ಶೇಕಡಾ ೧೦ರಷ್ಟು ಫಲಾನುಭವಿಗಳಿಗೆ ೪೫೦೦ ನೌಕರಿ ಕೊಡಲಾಗುತ್ತದೆ. ೪೫೦೦ ನೌಕರಿಗಳಿಗಾಗಿ ನೀವು ಸಂವಿಧಾನ ತಿದ್ದುಪಡಿ ಮಾಡುತ್ತಿದ್ದೀರಾ? ಎಂದು ಸಿಬಲ್ ಕೇಳಿದರು.

ರಾಷ್ಟ್ರವು ನೌಕರಿಗಳನ್ನೇ ಕಳೆದುಕೊಳ್ಳುತ್ತಿರುವಾಗ ಯಾವ ಉದ್ಯೋಗಕ್ಕೆ ನೀವು ಖಾತರಿ ಕೊಡುತ್ತಿದ್ದೀರಿ. ಮೀಸಲಾತಿಗೆ ನೌಕರಿಗಳ ಅಗತ್ಯವಿದೆ. ನೌಕರಿಗಳಿಗೆ ಆರ್ಥಿಕ ಪ್ರಗತಿ ಬೇಕು. ಆದರೆ ಆರ್ಥಿಕ ಪ್ರಗತಿ ಆಗುತ್ತಿಲ್ಲ. ಹಾಗಿರುವಾಗ ಸಂವಿಧಾನ ತಿದ್ದುಪಡಿಯನ್ನು ಏತಕ್ಕೆ ತರುತ್ತಿದ್ದೀರಿ? ಎಂದು ಕಪಿಲ್ ಪ್ರಶ್ನಿಸಿದರು.

ಮಸೂದೆಯು ಸಾಮಾಜಿಕ ಹಿಂದುಳಿದ ವರ್ಗಗಳ ಬಡವರನ್ನು ಹೊರಗಿಟ್ಟಿದೆ ಎಂದು ಆಕ್ಷೇಪಿಸಿದ ಅವರು ನೋಟು ಅಮಾನ್ಯೀಕರಣದಂತೆ ಮೀಸಲಾತಿ ಮಸೂದೆಯೂ ದೋಷಪೂರಿತ ಎಂದು ನುಡಿದರು.

ಡಿಎಂಕೆ ಸಂಸದೆ ಕನಿಮೋಳಿ ಅವರು ಇದಕ್ಕೂ ಮುನ್ನ ಮೀಸಲಾತಿ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ನಿರ್ಣಯ ಮಂಡಿಸಿದರು. ನಿರ್ಣಯವನ್ನು ಎಡ ಪಕ್ಷಗಳು, ಟಿಡಿಪಿ, ಆರ್ ಜೆಡಿ, ಎಎಪಿ ಮತ್ತು ಜೆಡಿ (ಎಸ್) ಬೆಂಬಲಿಸಿದವು.

ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಈಶಾನ್ಯ ಭಾರತದ ಪರಿಸ್ಥಿತಿ ಬಗ್ಗೆ ಗೃಹ ಸಚಿವರಿಂದ ಹೇಳಿಕೆ ಬೇಕು ಎಂದು ಒತ್ತಾಯಿಸಿದವು. ಅಧಿವೇಶನವನ್ನು ಒಂದು ದಿನದ ಅವಧಿಗೆ ವಿಸ್ತರಿಸಲಾದ ರೀತಿ ಬಗೆಗೂ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ವಾಕ್ಸಮರ ನಡೆಯಿತು.

ಚರ್ಚೆಯಲ್ಲಿ ಮಧ್ಯ ಪ್ರವೇಶ ಮಾಡಿದ ಕೇಂದ್ರ ಸಚಿವ ರವಿ ಶಂಕರ ಪ್ರಸಾದ್ ಅವರು ಮಸೂದೆಯನ್ನು ಮೊದಲೇ ತರಬಹುದಾಗಿತ್ತು ಎಂದು ವಿರೋಧ ಪಕ್ಷಗಳು ಆಕ್ಷೇಪಿಸುತ್ತಿವೆ. ನಾವು ತಡವಾಗಿರಬಹುದು, ಆದರೆ ಮಸೂದೆ ತರುವ ಧೈರ್‍ಯವನ್ನಾದರೂ ತೋರಿಸಿದ್ದೇವೆ ಎಂದು ಹೇಳಿದರು.

ಆದರೆ ಗೀದರೆಗಳನ್ನು ಹೇಳುತ್ತಲೇ ವಿರೋಧ ಪಕ್ಷಗಳು ಮಸೂದೆಯನ್ನು ಬೆಂಬಲಿಸುತ್ತಿರುವುದು ಏಕೆ? ನಾವು ಮಸೂದೆಯ ಮೂಲಕ ಇತಿಹಾಸ ಬರೆಯುತ್ತಿರುವಾಗ ಆಕ್ಷೇಪಗಳಿಲ್ಲದೆಯೇ ನಾವು ಮಸೂದೆಯನ್ನು ಏಕೆ ಬೆಂಬಲಿಸುತ್ತಿಲ್ಲ? ಎಂದು ಸಚಿವರು ಪ್ರಶ್ನಿಸಿದರು.

ಪ್ರತಿಯೊಬ್ಬರೂ ಮೀಸಲಾತಿಯ ಮೇಲೆ ಶೇಕಡಾ ೫೦ರ ಮಿತಿ ಇರುವುದರ ಬಗ್ಗೆ ಮಾತನಾಡುತ್ತಿದ್ದಾರೆ. ಸಂವಿಧಾನದಲ್ಲಿ ಮಿತಿಯ ಬಗ್ಗೆ ಎಲ್ಲೂ ಪ್ರಸ್ತಾಪವಿಲ್ಲ. ತೀರ್ಪುಗಳಲ್ಲಿ ಮಾತ್ರವೇ ಇದು ಬಂದಿದೆ. ವಾಸ್ತವವಾಗಿ ಸುಪ್ರೀಂಕೋರ್ಟಿನ ಶೇಕಡಾ ೫೦ರ ಮಿತಿ ಹಿಂದುಳಿದ ವರ್ಗಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಪ್ರಸಾದ್ ಹೇಳಿದರು.

ಕೆಲವರು ಸಂಸತ್ತಿನ ಅಧಿಕಾರಗಳ ಬಗ್ಗೆ ಸಂಶಯ ವ್ಯಕ್ತ ಪಡಿಸುತ್ತಿದ್ದಾರೆ. ಸಂಸತ್ತಿಗೆ ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡುವ, ಬದಲಾಯಿಸುವ, ರದ್ದು ಪಡಿಸುವ ಅಧಿಕಾರ ಇದೆ. ಅಧಿಕಾರಕ್ಕೆ ಮಿತಿ ಇಲ್ಲ. ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸಬಾರದು ಅಷ್ಟೆ ಎಂದು ಸಚಿವರು ಪ್ರತಿಪಾದಿಸಿದರು.

ಡಿಎಂಕೆಯ ಹೊರತಾಗಿ ಪ್ರತಿಯೊಂದು ಪಕ್ಷವೂ ಮೀಸಲಾತಿ ಮಸೂದೆಯನ್ನು ಬೆಂಬಲಿಸುತ್ತಿದೆ ಎಂದು ಅವರು ನುಡಿದರು.

ಆರ್ಥಿಕ ಸ್ಥಿತಿಗತಿ ಮೀಸಲಾತಿಗೆ ಮಾನದಂಡವಲ್ಲ: ಚರ್ಚೆಯಲ್ಲಿ ಪಾಲ್ಗೊಂಡ ಡಿಎಂಕೆ ಸದಸ್ಯೆ ಕನಿಮೊಳಿ ಅವರು ಆರ್ಥಿಕ ಸ್ಥಿತಿಗತಿಯು ಮೀಸಲಾತಿಗೆ ಮಾನದಂಡವಾಗಲು ಸಾಧ್ಯವಿಲ್ಲ. ನೀವು ಒಬಿಸಿ, ದಲಿತ ಆಗಿದ್ದಾಗ ನೀವು ತಾರತಮ್ಯವನ್ನು ಎದುರಿಸುತ್ತೀರಿ. ನೀವು ಆರ್ಥಿಕವಾಗಿ ದುರ್ಬಲರಲ್ಲದೇ ಇರಬಹುದು, ಆದರೆ ನಿಮ್ಮ ಜಾತಿ ನಿಮ್ಮನ್ನು ಎಂದೂ ಬಿಡುವುದಿಲ್ಲ ಎಂದು ಹೇಳಿದರು.

ತಪ್ಪನ್ನು ಸರಿ ಪಡಿಸಲು ಮೀಸಲಾತಿ ಮಸೂದೆಯನ್ನು ತರಲಾಗಿದೆ. ಸರ್ಕಾರವು ತಾನು ಎಲ್ಲವನ್ನೂ ಏಕಪಕ್ಷೀಯವಾಗಿ ನಿರ್ಧರಿಸಲಾಗದು ಎಂದು ಯೋಚಿಸುತ್ತದೆ ಮತ್ತು ಅದನ್ನು ರಾಷ್ಟ್ರದ ಜನರ ಮೇಲೆ ಬಲವಂತವಾಗಿ ಹೇರುತ್ತದೆ ಎಂದು ಕನಿಮೊಳಿ ಟೀಕಿಸಿದರು.

ಸಂಶಯ ಬಗೆಹರಿಸಿ: ನಿರುದ್ಯೋಗ ನಿವಾರಣೆಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ? ಎಂದು ಪ್ರಶ್ನಿಸಿದ ಶಿವಸೇನೆಯ ಅನಿಲ್ ದೇಸಾಯಿ ಮಸೂದೆ ಕೇವಲ ಕಾಗದದಲ್ಲಿ ಉಳಿಯಬಾರದು, ಮಸೂದೆ ಬಗೆಗಿನ ಸಂಶಯಗಳನ್ನು ಸರ್ಕಾರ ನಿವಾರಿಸಬೇಕು ಎಂದು ಹೇಳಿದರು. ನಾವು ಚಾರಿತ್ರಿಕ ಮಸೂದೆಯನ್ನು ಬೆಂಬಲಿಸುತ್ತೇವೆ. ಆದರೆ, ಯಾರಿಗೆ ಇದರ ಲಾಭ ಸಿಗಬೇಕು ಎಂದು ನಿರ್ಧರಿಸುವ ವ್ಯವಸ್ಥೆಯನ್ನು ಬಲಪಡಿಸಬೇಕಾದ ಅಗತ್ಯ ಇದೆ ಎಂದು ಅವರು ನುಡಿದರು.

ಮೀಸಲಾತಿ ಮಸೂದೆಯು ಆರ್ಥಿಕ ಪ್ರಜಾಪ್ರಭುತ್ವದ ಕಡೆಗಿನ ದೈತ್ಯ ಹೆಜ್ಜೆ ಎಂದು ನಾಮ ನಿರ್ದೇಶಿತ ಸದಸ್ಯ ನರೇಂದ್ರ ಜಾಧವ್ ಬಣ್ಣಿಸಿದರು.

ಮಸೂದೆಯು ದಲಿತ ಹಾಗೂ ಬಡವರ ವಿರೋಧಿಯಾಗಿರುವುದರಿಂದ ನಾವು ಅದನ್ನು ವಿರೋಧಿಸುತ್ತೇವೆ ಎಂದು ಆರ್ ಜೆಡಿಯ ಮನೋಜ್ ಕುಮಾರ್ ಝಾ ನುಡಿದರು.

ನ್ಯಾಯಾಂಗ ಪರೀಕ್ಷೆಯಲ್ಲಿ ನಿಲ್ಲದು: ಮೀಸಲಾತಿ ಮಸೂದೆಯು ನ್ಯಾಯಾಂಗ ಪರಾಮರ್ಶೆಯಲ್ಲಿ ಉಳಿಯಲಾರದು. ಚುನಾವಣಾ ಉದ್ದೇಶಕ್ಕಾಗಿ ಇದನ್ನು ತರಲಾಗಿದೆ ಎಂಬುದು ದೇಶದ ಜನರಿಗೆ ಗೊತ್ತಿದೆ ಎಂದು ಸಿಪಿಐ(ಎಂ) ಸದಸ್ಯ ಎಲಮಾರಮ್ ಕರೀಮ್ ಹೇಳಿದರು. ಮೀಸಲಾತಿಯು ವರ್ಗ ಮತ್ತು ಜಾತಿ ವಂಚನೆಯನ್ನು ಕೊನೆಗೊಳಿಸುವುದಿಲ್ಲ. ಹಾವಳಿಯನ್ನು ತಡೆಯಲು ನಮಗೆ ಆರ್ಥಿಕ ಸುಧಾರಣೆ, ಭೂ ಸುಧಾರಣೆಯ ಅಗತ್ಯವಿದೆ ಎಂದು ಅವರು ನುಡಿದರು.

ನಮಗೆ ಒಂದು ನೀತಿ ಇರಬೇಕು. ನಮ್ಮ ನೀತಿಯನ್ನು ಎಚ್ಚರಿಕೆಯಿಂದ ಅವಲೋಕಿಸಬೇಕು. ಶೇಕಡಾ ೫೦ರ ಮಿತಿಗಿಂತಲೂ ಹೆಚ್ಚಿನ ಮೀಸಲಾತಿ ನೀಡಲು ಸಾಧ್ಯವಿದೆಯೇ? ಸಾಮಾನ್ಯ ನೀತಿಯನ್ನು ತನ್ನಿ ಅಥವಾ ರಾಜ್ಯಗಳಿಗೆ ಅಧಿಕಾರ ನೀಡಿ ಎಂದು ಟಿಆರ್‌ಎಸ್‌ನ ಡಾ. ಪ್ರಕಾಶ್ ಬಂಡಾ ಹೇಳಿದರು.

ಇದು ಒಳ್ಳೆಯ ಮಸೂದೆ, ಆದರೆ ಗೊಂದಲಮಯವಾಗಿದೆ. ಇನ್ನಷ್ಟು ಸುಧಾರಣೆಗಾಗಿ ಇದನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು. ಆದರೆ ಹೆಚ್ಚು ಸಮಯ ಇಲ್ಲದೇ ಇರುವುದರಿಂದ ನಾವು ಶರತ್ತು ಬದ್ಧ ಬೆಂಬಲವನ್ನು ಕೊಡುತ್ತೇವೆ ಎಂದು ಟಿಡಿಪಿಯ ವೈಎಸ್. ಚೌಧರಿ ನುಡಿದರು.

ಮೀಸಲಾತಿಗೆ ಅಂಟಿದ ಕಳಂಕವನ್ನು ಇದು ನಿವಾರಿಸುತ್ತದೆ ಎಂದು ಜೆಡಿ(ಯು) ಸದಸ್ಯ ರಾಮ ಚಂದ್ರ ಪ್ರಸಾದ್ ಸಿಂಗ್ ಹೇಳಿದರು.

ಮಸೂದೆಗೆ ನಮ್ಮ ವಿರೋಧವಿಲ್ಲ, ಆದರೆ ಇದನ್ನು ಅವಸರದಲ್ಲಿ ತಂದ ಸರ್ಕಾರದ ಉದ್ದೇಶವನ್ನು ವಿರೋಧಿಸುತ್ತೇವೆ ಎಂದು ಬಿಜೆಡಿಯ ಪ್ರಶಾಂತ ಆಚಾರ್‍ಯ ನುಡಿದರು.

ಉದ್ಯೋಗ ಸೃಷ್ಟಿಯಲ್ಲಿ ವಿಫಲವಾದುದರ ತಪ್ಪೊಪ್ಪಿಗೆ ಮೀಸಲಾತಿ ಮಸೂದೆ ಎಂದು ಟಿಎಂಸಿಯ ಡೆರೆಕ್ ಬ್ರಿಯನ್ ಹೇಳಿದರು.

ಮಸೂದೆಯು ಸಂವಿಧಾನದ ಮೂಲರಚನೆಯನ್ನೇ ಉಲ್ಲಂಘಿಸುತ್ತದೆ ಎಂದು ಎಐಎಡಿಎಂಕೆಯ . ನವನೀತ ಕೃಷ್ಣನ್ ಹೇಳಿದರು.

ಸಾಚಾರ್ ಸಮಿತಿ ವರದಿಯನ್ನು ಆಧರಿಸಿ ಮುಸ್ಲಿಮರಿಗೂ ಮೀಸಲಾತಿ ಕೊಡಿ ಎಂದು ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್ ಆಗ್ರಹಿಸಿದರು.

ನೀವು ಮುಸ್ಲಿಂ ಮೀಸಲಾತಿ ತಂದರೆ ಅರ್ಹತೆಗೆ ಧಕ್ಕೆಯಾಗುವುದಿಲ್ಲವೇ ಎಂದು ಅಮಿತ್ ಶಾ ಕುಟುಕಿದರು. ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನದಲ್ಲಿ ನೀವು ಗೆದ್ದಿದ್ದರೆ ಮೀಸಲಾತಿ ಮಸೂದೆ ತರುವ ಯೋಚನೆಯನ್ನೂ ಮಾಡುತ್ತಿರಲಿಲ್ಲ ಎಂದು ಕಾಂಗ್ರೆಸ್ಸಿನ ಆನಂದ ಶರ್ಮ ಚುಚ್ಚಿದರು.

ಪಿವಿ ನರಸಿಂಹ ರಾವ್ ಅವರೂ ಮೇಲ್ಜಾತಿಯ ಬಡವರಿಗೆ ಮೀಸಲಾತಿ ಬಯಸಿದ್ದರು. ದೀರ್ಘಕಾಲದಿಂದ ಬಾಕಿ ಇದ್ದ ಬೇಡಿಕೆಯನ್ನು ನರೇಂದ್ರ ಮೋದಿ ಅವರು ಈಡೇರಿಸುತ್ತಿದ್ದಾರೆ ಎಂದು ಬಿಜೆಪಿಯ ಪ್ರಭಾತ್ ಝಾ ಪ್ರತಿಪಾದಿಸಿದರು.

No comments:

Post a Comment