Wednesday, January 23, 2019

ಇಂದಿನ ಇತಿಹಾಸ History Today ಜನವರಿ 23

ಇಂದಿನ ಇತಿಹಾಸ History Today ಜನವರಿ 23
2019: ನವದೆಹಲಿ: ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪ್ರಧಾನ ಕಾರ್ಯರ್ಶಿಯಾಗಿ (ಉತ್ತರ ಪ್ರದೇಶ ಪೂರ್ವ ಹೊಣೆಗಾರಿಕೆ) ನೇಮಕ ಗೊಳ್ಳುವುದರೊಂದಿಗೆ ಪ್ರಿಯಾಂಕಾ ಗಾಂಧಿ ವಾದ್ರ ಅವರು ತಮ್ಮ ಜೀವನದಲ್ಲೇ ಪಕ್ಷದ ಪ್ರಪ್ರಥಮ ಅಧಿಕೃತ ಹೊಣೆಗಾರಿಕೆ ಮೂಲಕ ನೇರ ರಾಜಕೀಯಕ್ಕೆ ಧುಮುಕಿದರು. ೪೭ರ ಹರೆಯದ ಪ್ರಿಯಾಂಕಾ ಗಾಂಧಿ ವಾದ್ರ ಅವರು ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿರುವ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ, ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪ್ರಧಾನ ಕಾರ್ಯದರ್ಶಿ ಉತ್ತರ ಪ್ರದೇಶ (ಪಶ್ಚಿಮ) ಹೊಣೆಗಾರಿಕೆಯೊಂದಿಗೆ ಬಡ್ತಿ ಲಭಿಸಿತು. ಕಾಂಗ್ರೆಸ್ ಪಕ್ಷವು ಬಿಡುಗಡೆ ಮಾಡಿರುವ ಪ್ರಕಟಣೆಯು ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ (ಉತ್ರರ ಪ್ರದೇಶದ ಪೂರ್ವ) ನೇಮಕ ಮಾಡಿದ್ದಾರೆ, ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು  ಎಐಸಿಸಿ ಪ್ರಧಾನ ಕಾರ್ಯದರ್ಶಿ (ಉತ್ತರ ಪ್ರದೇಶ -ಪಶ್ಚಿಮ) ಆಗಿ ನೇಮಿಸಲಾಗಿದೆ ಎಂದು ತಿಳಿಸಿತು. ಈವರೆಗೆ ತಮ್ಮ ತಾಯಿ, ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಅಧ್ಯಕ್ಷೆ ಸೋನಿಯಾ ಗಾಂದಿ ಮತ್ತು ಸಹೋದರ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅವರು ಕ್ರಮವಾಗಿ ಪ್ರತಿನಿಧಿಸುತ್ತಿದ್ದ ರಾಯ್ ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ನಿರ್ವಹಣೆಯನ್ನು ಮಾತ್ರವೇ ನೋಡಿಕೊಳ್ಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರ ಪಾಲಿಗೆ ಇದು ಪಕ್ಷದ ಪ್ರಪ್ರಥಮ ಅಧಿಕೃತ ಹೊಣೆಗಾರಿಕೆ. ಲೋಕಸಭಾ ಚುನಾವಣೆಗಳಿಗೆ ಇನ್ನೂ ಕೆಲವು ತಿಂಗಳುಗಳು ಇರುವಾಗಲೇ ಪ್ರಿಯಾಂಕಾ ಅವರಿಗೆ ಪಕ್ಷದಲ್ಲಿ ಅಧಿಕೃತವಾಗಿ ಹೊಣೆಗಾರಿಕೆ ವಹಿಸಿದ ಪ್ರಕಟಣೆ ಹೊರಬಿದ್ದಿತು. ೫೪೩ ಸದಸ್ಯಬಲದ ಲೋಕಸಭೆಗೆ ೮೦ ಸದಸ್ಯರನ್ನು ಆಯ್ಕೆ ಮಾಡುವ ಉತ್ತರ ಪ್ರದೇಶವು ಕೇಂದ್ರದಲ್ಲಿ ಸರ್ಕಾರ ರಚಿಸಲು ಯಾವುದೇ ಪಕ್ಷಕ್ಕೆ ಅತ್ಯಂತ ಮಹತ್ವದ ಕೀಲಿ ಕೈ ಆಗಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ನೇಮಕಾತಿ ಅತ್ಯಂತ ಮಹತ್ವ ಪಡೆಯಿತು. ಪತ್ರಿಕಾ ಪ್ರಕಟಣೆಯ ಪ್ರಕಾರ ಪ್ರಿಯಾಂಕಾ ಗಾಂಧಿ ಅವರು ಫೆಬ್ರುವರಿ ಮೊದಲ ವಾರದಲ್ಲಿ ತಮ್ಮ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದಾರೆ. ರಾಹುಲ್ ಗಾಂಧಿಯವರು ತಮ್ಮ ಲೋಕಸಭಾ ಕ್ಷೇತ್ರವಾಗಿರುವ ಅಮೇಥಿಗೆ ಎರಡು ದಿನಗಳ ಪ್ರವಾಸ ಹೊರಟ ದಿನವೇ ಪ್ರಕಟಣೆ ಹೊರ ಬಿದ್ದಿತು. ಕಾಂಗ್ರೆಸ್ ಅಧ್ಯಕ್ಷರು ಕೆಸಿ ವೇಣುಗೋಪಾಲ್ ಅವರನ್ನು ಪ್ರಧಾನ ಕಾರ್ಯದರ್ಶಿ (ಸಂಘಟನೆಯ ಉಸ್ತುವಾರಿ) ಆಗಿ ನೇಮಕ ಮಾಡಿದರು. ಸ್ಥಾನವನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೊಂದಿದ್ದರು. ವೇಣುಗೋಪಾಲ್ ಅವರು ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ಹೊಣೆಯನ್ನೂ ಮುಂದುವರೆಸುವರುರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕರಾಗಿರುವ ಗುಲಾಂ ನಬಿ ಆಜಾದ್ ಅವರನ್ನು ಉತ್ತರ ಪ್ರದೇಶದ ಹೊಣೆಗಾರಿಕೆಯಿಂದ ಮುಕ್ತಗೊಳಿಸಿ, ಪಕ್ಷದ ಪ್ರಧಾನ ಕಾರ್ಯದರ್ಶಿ (ಹರಿಯಾಣ ಉಸ್ತುವಾರಿ) ಹೊಣೆಗಾರಿಕೆ ವಹಿಸಲಾಯಿತು. ಗುನಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೆಳಮನೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿಯೂ ಮುಂದುವರೆಯುವರು.ಪ್ರಿಯಾಂಕಾ ಅವರು ಈವರೆಗೆ ಪಕ್ಷದಲ್ಲಿ ಯಾವುದೇ ಅಧಿಕೃತ ಹೊಣೆಗಾರಿಕೆ ಹೊಂದಿರದೇ ಇದ್ದರೂ ನಂ.೧೫, ಗುರುದ್ವಾರ ರಾಕಮ್ ಸಿಂಗ್ ರೋಡ್ ಕಚೇರಿಗೆ ಯಾವಾಗಲೂ ತಮ್ಮ ತಾ ಸೋನಿಯಾ ಗಾಂಧಿ ಜೊತೆಗೆ ಬರುತ್ತಿದ್ದರು. ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಗಳಲ್ಲಿ ಅವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು.ಪ್ರಿಯಾಂಕಾ ಅವರ ರಾಜಕೀಯ ಪ್ರವೇಶ ಬಗ್ಗೆ ದೀರ್ಘ ಕಾಲದಿಂದ ಊಹಾಪೋಹಗಳಿದ್ದವು. ೨೦೧೬ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳ ಕಾಲದಲ್ಲಿ ಪ್ರಿಯಾಂಕಾ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲಾಗುವುದು ಎಂಬ ಮಾತುಗಳು ಕೇಳಿ ಬಂದಿದ್ದವು. ಪ್ರಿಯಾಂಕಾ ಅವರು ಇವೆಲ್ಲವನ್ನೂ ಬುಡರಹಿತ ಊಹಾಪೋಹಗಳು ಎಂಬುದಾಗಿ ಹೇಳಿ ತಳ್ಳಿ ಹಾಕಿದ್ದರು.
ಕಾಂಗ್ರೆಸ್ ಪಕ್ಷವು ಪ್ರಸ್ತುತ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕೇವಲ ಮಂದಿ ಶಾಸಕರನ್ನು ಹೊಂದಿದೆ. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ರಾಜ್ಯದಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿತ್ತು.ಪಕ್ಷದ ನಾಯಕತ್ವಕ್ಕೆ ತಮ್ಮ ಸಹೋದರಿಯನ್ನು ಸ್ವಾಗತಿಸಿದ ರಾಹುಲ್ ಗಾಂಧಿ ಅವರುಕಾಂಗ್ರೆಸ್ ಪಕ್ಷವು ಮುಂಬರುವ ಚುನಾವಣೆಯಲ್ಲಿ ಸೈದ್ಧಾಂತಿಕ ಸಮರವನ್ನು ನಡೆಸಲಿದೆ ಎಂದು ಹೇಳಿದರು.
ತಮ್ಮ ಲೋಕಸಭಾ ಕ್ಷೇತ್ರವಾದ ಅಮೇಥಿಯಲ್ಲಿ ವರದಿಗಾರರ ಜೊತೆ ಮಾತನಾಡಿದ ರಾಹುಲ್ ಗಾಂಧಿಕಾಂಗ್ರೆಸ್ ಪಕ್ಷವು ಸೈದ್ಧಾಂತಿಕ ಸಮರವನ್ನು ನಡೆಸುತ್ತಿದೆ. ಕಾಂಗ್ರೆಸ್ ಪಕ್ಷವೂ ಎಲ್ಲೂ ಹಿಂದಿನಿಂದ ಆಟವನ್ನು ಆಡುವುದಿಲ್ಲ. ಅದು ಮುಂದಿನಿಂದಲೇ ಆಟವಾಡುವುದು... ಪ್ರಿಯಾಂಕಾ ಇರಲಿ ಅಥವಾ ಜ್ಯೋತಿರಾದಿತ್ಯ ಇರಲಿ, ಅವರು ಕಾಂಗ್ರೆಸ್ಸಿನ ಪ್ರಭಾವೀ ನಾಯಕರಾಗಿದ್ದಾರೆ ಮತ್ತು ಇಬ್ಬರು ಯುವ ನಾಯಕರ ಮೂಲಕ ನಾವು ಉತ್ತರ ಪ್ರದೇಶದ ರಾಜಕೀಯವನ್ನು ಬದಲಾಯಿಸಲಿದ್ದೇವೆ ಎಂದು ರಾಹುಲ್ ಗಾಂಧಿ ನುಡಿದರು.

2019: ನವದೆಹಲಿ: ಪ್ರಿಯಾಂಕಾ ಗಾಂಧಿ ವಾದ್ರ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಂಡದ್ದಕ್ಕೆ, ತಮ್ಮ ನಾಮದಾರ್ (ವಂಶಾಡಳಿತ) ವಿರುದ್ಧ ಕಾಮ್ದಾರ್ (ಕಠಿಣ ಶ್ರಮಜೀವಿ) ಹೇಳಿಕೆಗೆ ಅನುಗುಣವಾದ ಪ್ರತಿಕ್ರಿಯೆಯನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರುಕೆಲವು ಪಕ್ಷಗಳಿಗೆ ಕುಟುಂಬವೇ ಪಕ್ಷ. ಆದರೆ ಬಿಜೆಪಿಗೆ ಪಕ್ಷವೇ ಕುಟುಂಬ ಎಂದು ಹೇಳಿದರು.ಲೋಕಸಭಾ ಚುನಾವಣೆಗಳಿಗೆ ಮುಂಚಿತವಾಗಿ ಕೈಗೊಂಡ ಅಚ್ಚರಿಯ ಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಗಾಂಧಿ ವಾದ್ರ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಉತ್ತರ ಪ್ರದೇಶ ಪೂರ್ವ) ಆಗಿ ನೇಮಿಸುವ ಮೂಲಕ ತಮ್ಮ ಸಹೋದರಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರ ಹೋರಾಟಕ್ಕೆ ಇಳಿಸಿದ್ದರು.ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಜೊತೆಗೆ ಸಂವಹನ ನಡೆಸಿದ ಪ್ರಧಾನಿ, ಕೆಲವರಿಗೆ ಕುಟುಂಬವೇ ಪಕ್ಷ, ಆದರೆ ಬಿಜೆಪಿಗೆ ಪಕ್ಷವೇ ಕುಟುಂಬ ಎಂದು ಹೇಳಿದರು.ಕಾಂಗ್ರೆಸ್ಸಿನ ನೂತನ ಪ್ರಧಾನ ಕಾರ್ಯದರ್ಶಿಯ ಹೆಸರನ್ನು ಪ್ರಧಾನಿ ಉಲ್ಲೇಖಿಸದೇ ಇದ್ದರೂ, ಅವರ ಪ್ರತಿಕ್ರಿಯೆ ದಿಕ್ಕಿನ ಕಡೆಗೇ ಮಾಡಲಾದ ಟೀಕೆ ಎಂಬುದು ಸ್ಪಷ್ಟವಿತ್ತು. ಪ್ರಧಾನಿಯವರು ಹಲವಾರು ಬಾರಿ ಕಾಂಗ್ರೆಸ್ ಪಕ್ಷವನ್ನುವಂಶಾಡಳಿತಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದರು ಹಿಂದೆ ಪ್ರಧಾನಿ ಮೋದಿಯವರುನೆಹರೂ- ಗಾಂಧಿ ಕುಟುಂಬದ ನಾಲ್ಕು ತಲೆಮಾರುಗಳ ಕಾರ್ ನಿರ್ವಹಣೆ ಮತ್ತು ಚಾಯ್ ವಾಲಾನ ವರ್ಷಗಳ ಕಾರ್ ನಿರ್ವಹಣೆ ಬಗೆಗಿನ ಚರ್ಚಾ ಸ್ಪರ್ಧೆಗೆ ತಾನು ಸಿದ್ಧ ಎಂಬುದಾಗಿ ಹೇಳಿದ್ದರು.  ಪ್ರಿಯಾಂಕಾ ಅವರನ್ನು ಪಕ್ಷದ ಹುದ್ದೆಗೆ ಅಧಿಕೃತವಾಗಿ ನೇಮಕ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ’ರಾಜ್ಯದಲ್ಲಿ ಹೊಸ ಮಾದರಿಯ ರಾಜಕೀಯದ ಉದಯಕ್ಕೆ ಇದು ನಾಂದಿ ಹಾಡಲಿದೆ ಎಂದು ಹೇಳಿದ್ದರು.

2019: ನವದೆಹಲಿ: ತಮ್ಮ ಬದುಕಿನ ಆತ್ಮಾವಲೋಕನಕ್ಕಾಗಿ ಪ್ರತಿವರ್ಷವೂ ದೀಪಾವಳಿಯ ಸಂದರ್ಭದಲ್ಲಿ ತಾವುಶುದ್ಧ ನೀರು ಇರುವ ಮತ್ತು ಜನರು ಇಲ್ಲದ ಕಾಡು ಪ್ರದೇಶಕ್ಕೆ ತೆರಳಿ ಐದು ದಿನಗಳನ್ನು ಏಕಾಂಗಿಯಾಗಿ ಕಳೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗ ಪಡಿಸಿದರು. ಜನಪ್ರಿಯವಾದದಿ ಹ್ಯೂಮನ್ಸ್ ಆಫ್ ಬಾಂಬೆ ಫೇಸ್ ಬುಕ್ ಪುಟಕ್ಕೆ ನೀಡಿದ ಸಂದರ್ಶನದಲ್ಲಿ  ಪ್ರಧಾನಿ ವಿಚಾರವನ್ನು ತಿಳಿಸಿದರು.  ‘ಈ ಹಿನ್ನೆಲೆಯಲ್ಲಿಯೇ ನಾನು ಪ್ರತಿಯೊಬ್ಬರನ್ನೂ, ವಿಶೇಷವಾಗಿ ಯುವ ಗೆಳೆಯರನ್ನು ನಿಮ್ಮ ಬಿಡುವಿಲ್ಲದ ಬದುಕಿನ ಮಧ್ಯೆ ಸ್ವಲ್ಪ ಸಮಯವನ್ನು ನಿಮ್ಮ ಆತ್ಮಾವಲೋಕನಕ್ಕಾಗಿ ತೆಗೆದಿಟ್ಟುಕೊಳ್ಳಿ ಎಂದು ಒತ್ತಾಯಿಸುತ್ತೇನೆ. ಇದು ನಿಮ್ಮ ದೃಷ್ಟಿಯನ್ನೇ ಬದಲಿಸಬಲ್ಲುದು. ನಿಮ್ಮ ಅಂತರಂಗವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಎಂದು ಮೋದಿಯವರು ತಮ್ಮ ಸಂದರ್ಶನದ ಮೂರನೇ ಭಾಗದಲ್ಲಿ ಹೇಳಿದರು.  ‘ನೀವು ನಿಮ್ಮ ಮಾತುಗಳ ನೈಜ ಅರ್ಥಕ್ಕೆ ಅನುಗುಣವಾಗಿ ಬದುಕಲು ಆರಂಭಿಸುತ್ತೀರಿ. ಅದು ನಿಮ್ಮನ್ನು ಹೆಚ್ಚು ಆತ್ಮವಿಶ್ವಾಸ ಉಳ್ಳವರನ್ನಾಗಿಯೂ, ಉಳಿದವರು ನಿಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬ ಬಗ್ಗೆ ಧೃತಿಗೆಡದ ದೃಢ ವ್ಯಕ್ತಿಗಳನ್ನಾಗಿಯೂ ಮಾಡುತ್ತದೆ ಮತ್ತು ಇವೆಲ್ಲವೂ ಮುಂಬರುವ ದಿನಗಳಲ್ಲಿ ನಿಮಗೆ ನೆರವಾಗುತ್ತವೆ. ಆದ್ದರಿಂದ ನೀವು ಪ್ರತಿಯೊಬ್ಬರೂ ನೀವು ವಿಶಿಷ್ಠ ವ್ಯಕ್ತಿಯಾಗಿದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಮತ್ತು ನಿಮ್ಮೊಳಗೆ ಈಗಾಗಲೇ ಇರುವ ಬೆಳಕಿಗಾಗಿ ಹೊರಗೆ ನೋಡಬಾರದು ಎಂದಷ್ಟೇ ನಾನು ಬಯಸುತ್ತೇನೆ ಎಂದು ಪ್ರಧಾನಿ ಹೇಳಿದರು. ಪ್ರಧಾನಿಯವರು ಸಂದರ್ಶನದ ಹಿಂದಿನ ಭಾಗಗಳಲ್ಲಿ ತಮ್ಮ ಬಾಲ್ಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ ಎಸ್) ಕಡೆಗಿನ ಒಲವು ಮತ್ತು  ೧೭ರ ಹರೆಯದಲ್ಲಿನ ತಮ್ಮ ಎರಡು ವರ್ಷಗಳ ಹಿಮಾಲಯ ಪ್ರವಾಸದ ಬಗ್ಗೆ ಮಾತನಾಡಿದ್ದರು.ಈದಿನ  ಪೋಸ್ಟಿನಲ್ಲಿ ಪ್ರಧಾನಿಯವರು ಹಿಮಾಲಯದಿಂದ ವಾಪಸಾದ ಬಳಿಕ ತಾವು ಮಾಡಿದ ಕೆಲಸಗಳ ಬಗ್ಗೆ ಮಾತನಾಡಿದರು. ಹಿಮಾಲಯದಿಂದ ವಾಪಸ್ ಬಂದ ಬಳಿಕ ನನ್ನ ಬದುಕು ಇತರರ ಸೇವೆಗೆ ಮೀಸಲಾದ ಬದುಕು ಆಗಿರಬೇಕು ಎಂಬುದನ್ನು ನಾನು ಸ್ಪಷ್ಟವಾಗಿ ಕಂಡುಕೊಂಡಿದ್ದೆ. ವಾಪಸ್ ಬಂದ ಅಲ್ಪಾವಧಿಯಲ್ಲೇ ನಾನು ಅಹ್ಮದಾಬಾದಿಗೆ ತೆರಳಿದೆ. ದೊಡ್ಡ ನಗರದಲ್ಲಿ ಅದೇ ನನ್ನ ಮೊದಲ ವಾಸದ ಅನುಭವ. ಬದುಕಿನ ಅವಧಿ ಅತ್ಯಂತ ಭಿನ್ನವಾಗಿತ್ತು. ಚಿಕ್ಕಪ್ಪನಿಗೆ ಅವರ ಕ್ಯಾಂಟೀನಿನಲ್ಲಿ ನೆರವಾಗುವ ಮೂಲಕ ನಾನು ಅಹ್ಮದಾಬಾದಿನಲ್ಲಿ ನನ್ನ ಜೀವನವನ್ನು ಆರಂಭಿಸಿದ್ದೆ ಎಂದು ಮೋದಿ ಹೇಳಿದ್ದಾರೆ. ‘ ಬಳಿಕ ದಿಢೀರನೆ ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿಯ ಪ್ರಚಾರಕನಾದೆ. ಅವಧಿಯಲ್ಲಿ ನನಗೆ ಬದುಕಿನಲ್ಲಿ ವಿಭಿನ್ನ ನಡೆಗಳ ಜನರ ಜೊತೆಗೆ ಸಂವಹನದ ಅವಕಾಶ ಲಭಿಸಿತ್ತು ಮತ್ತು ವ್ಯಾಪಕ ಪ್ರಮಾಣದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆರ್ಎಸ್ಎಸ್ ಕಚೇರಿಯನ್ನು ಸ್ವಚ್ಛಗೊಳಿಸುವ, ಸಹೋದ್ಯೋಗಿಗಳಿಗಾಗಿ ಚಹಾ ಮತ್ತು ಆಹಾರ ಸಿದ್ಧ ಪಡಿಸುವ ಮತ್ತು ಪಾತ್ರೆಗಳನ್ನು ತೊಳೆಯುವ ಕೆಲಸಗಳನ್ನು ಕಚೇರಿಯಲ್ಲಿದ್ದ ಎಲ್ಲರೂ ಸರದಿ ಪ್ರಕಾರ ಮಾಡುತ್ತಿದ್ದೆವು ಎಂದು ಪ್ರಧಾನಿ ಹೇಳಿದರು. ಆ ಬಳಿಕ ನಾನು ಸದಾಕಾಲ ಬಿಡುವಿಲ್ಲದ ವ್ಯಕ್ತಿಯಾಗಿದ್ದೆ. ಆದರೆ ಹಿಮಾಲಯದಲ್ಲಿ ಮಾಡಿದ್ದ ಶಾಂತಿಯ ಸಾಧನೆಯನ್ನು ಬಿಟ್ಟುಬಿಡಲು ನಾನು ಬಯಸಲಿಲ್ಲ. ಹೀಗಾಗಿ ಪ್ರತಿವರ್ಷವೂ ಕೆಲವು ದಿನಗಳನ್ನು ಆತ್ಮಾವಲೋಕನ ಮಾಡಿಕೊಳ್ಳುವುದಕ್ಕಾಗಿ ಮತ್ತು ಸಮತೋಲನದ ಬದುಕನ್ನು ಕಾಯ್ದುಕೊಳ್ಳುವ ಸಲುವಾಗಿ ಮೀಸಲಿಡಲು ನಿರ್ಧರಿಸಿದ್ದೆ ಎಂದು ಮೋದಿ ಹೇಳಿದರು.  ‘ಬಹಳಷ್ಟು ಜನರಿಗೆ ಇದು ಗೊತ್ತಿಲ್ಲ, ಆದರೆ ನಾವು ದೀಪಾವಳಿಯ ಸಂದರ್ಭದಲ್ಲಿ ದಿನಗಳ ಕಾಲ ಕಾಡಿನ ಯಾವುದಾದರೂ ಕೇವಲ ಶುದ್ದ ನೀರು ಇರುವ ಮತ್ತು ಜನರು ಇಲ್ಲದ ಸ್ಥಳಕ್ಕೆ ಹೋಗಿ ಬಿಡುತ್ತೇನೆ. ಐದು ದಿನಗಳಿಗೆ ಬೇಕಾಗುವಷ್ಟು ಆಹಾರವನ್ನು ನನ್ನ ಜೊತೆಗೇ ಬುತ್ತಿ  ಕಟ್ಟಿಕೊಂಡಿರುತ್ತೇನೆ. ಅಲ್ಲಿ ಯಾವುದೇ ರೇಡಿಯೋ ಇರುವುದಿಲ್ಲ, ವೃತ್ತ ಪತ್ರಿಕೆಗಳು ಇರುವುದಿಲ್ಲ ಮತ್ತು ವೇಳೆಯಲ್ಲಿ ಟಿವಿ ಇರುವುದಿಲ್ಲ, ಅಂತರ್ಜಾಲ (ಇಂಟರ್ ನೆಟ್) ಅಂತೂ ಇರುವುದೇ ಇಲ್ಲ ಎಂದು ಪ್ರಧಾನಿ ಹೇಳಿದರು. ಈ ಅವಧಿಯಲ್ಲಿನ ಆತ್ಮಾವಲೋಕನವು ನನಗೆ ಬದುಕನ್ನು ನಿರ್ವಹಿಸಲು ಈಗಲೂ ನೆರವಾಗುತ್ತಿದೆ ಮತ್ತು ವಿವಿಧ ಅನುಭವಗಳನ್ನು ನಿಭಾಯಿಸುವ ಶಕ್ತಿ ಕೊಡುತ್ತದೆ. ಜನರು ಆಗಾಗ ನನ್ನನ್ನು ಕೇಳುತ್ತಾರೆನೀವು ಯಾರನ್ನು ಭೇಟಿ ಮಾಡಲು ಹೋಗುತ್ತಿದ್ದೀರಿ?’. ಅದಕ್ಕೆ ನನ್ನ ಉತ್ತರಮೈ ಮುಜ್ ಸೆ ಮಿಲ್ನೆ ಜಾ ರಹಾ ಹೂಂ (ನಾನು ನನ್ನನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ)’ ಎಂದು ಮೋದಿ ತಿಳಿಸಿದರು.

2019: ಪುಣೆ (ಮಹಾರಾಷ್ಟ್ರ): ೧೨ ವರ್ಷ ವಯಸ್ಸಿನ ಪುಣೆ ಮೂಲದ ಬಾಲಕ ಹಾಜಿಕ್ ಕಾಜಿಎರ್ವಿಸ್ (ಇಆರ್ವಿಐಎಸ್) ಎಂಬ ಹಡಗು ಒಂದನ್ನು ವಿನ್ಯಾಸಗೊಳಿಸಿದ್ದು ಹಡಗು ಸಾಗರ/ ಸಮುದ್ರ ತ್ಯಾಜ್ಯವನ್ನು (ಸಮುದ್ರ ಪ್ಲಾಸ್ಟಿಕ್) ನಿವಾರಿಸಿ ಅವುಗಳನ್ನು ಸ್ಚಚ್ಛಗೊಳಿಸಬಲ್ಲುದು. ತನ್ಮೂಲಕ ಸಾಗರ ಜೀವಿಗಳ ಪ್ರಾಣವನ್ನೂ ಇದು ಕಾಪಾಡಬಲ್ಲುದು. ಕೆಲವು ಸಾಕ್ಷ್ಯಚಿತ್ರಗಳನ್ನು ನೋಡುತ್ತಿದ್ದಾಗ ನನಗೆ ಸಾಗರ ತ್ಯಾಜ್ಯಗಳಿಂದ ಸಾಗರ ಜೀವಿಗಳ ಮೇಲಾಗುವ  ದುಷ್ಪರಿಣಾಮಗಳ ಬಗ್ಗೆ ಗೊತ್ತಾಯಿತು. ಇದನ್ನು ತಡೆಯಲು ನಾನೇನಾದರೂ ಮಾಡಬೇಕು ಎಂದು ನನಗೆ ಅನ್ನಿಸಿತು. ನಾವು ಆಹಾರದಲ್ಲಿ ಸೇವಿಸುವ  ಮೀನುಗಳು  ಸಾಗರ/ ಸಮುದ್ರಗಳಲ್ಲಿನ  ಪ್ಲಾಸ್ಟಿಕ್ಕನ್ನು ತಿನ್ನುತ್ತವೆ. ಹೀಗಾಗಿ ಸಾಗರ ಮಾಲಿನ್ಯಚಕ್ರ ಮತ್ತೆ ನಮ್ಮ ಕಡೆಗೇ ಬರುತ್ತದೆ. ಅದೇ ಪ್ಲಾಸ್ಟಿಕ್ ಮನುಷ್ಯರ ಮೇಲೂ ದುಷ್ಪರಿಣಾಮ ಬೀರುತ್ತದೆ. ಹೀಗಾಗಿಯೇ ನಾನುಇರ್ವಿಸ್ನ್ನು ತಯಾರಿಸಿದೆ ಎಂದು ಹಾಜಿಕ್ ಕಾಜಿ ಹೇಳುತ್ತಾನೆ. ಇರ್ವಿಸ್ ಹೇಗೆ ಕೆಲಸ ಮಾಡುತ್ತದೆ ಮತ್ತು ಅದರ ವೈಶಿಷ್ಠ್ಯ ಏನು ಎಂಬುದಾಗಿ ವಿವರಿಸುವ ಕಾಜಿತಟ್ಟೆಗಳು (ಸಾಸರ್ಗಳು) ತ್ಯಾಜ್ಯವನ್ನು ಹೀರಿಕೊಳ್ಳಲು  ಸೆಂಟ್ರಿಪೆಟಲ್ ಬಲವನ್ನು ಬಳಸುತ್ತವೆನಂತರ ಅವು ನೀರು, ಸಮುದ್ರ ಜೀವಿಗಳು ಮತ್ತು ತ್ಯಾಜ್ಯಗಳನ್ನು ಬೇರ್ಪಡಿಸುತ್ತದೆಸಾಗರ ಜೀವಿಗಳು ಮತ್ತು ನೀರನ್ನು  ಸಾಗರಕ್ಕೆ ವಾಪಸ್ ಕಳಿಸಲಾಗುತ್ತದೆ, ಉಳಿದುಕೊಳ್ಳುವ  ತ್ಯಾಜ್ಯಗಳು ಐದು ಭಾಗಗಳಾಗಿ ವಿಂಗಡಿಸಲ್ಪಡುತ್ತವೆ  ಎಂದು ಹೇಳುತ್ತಾನೆ.ಹಾಜಿಕ್ ತನ್ನ ಕಲ್ಪನೆಯನ್ನು ಟೆಡೆಕ್ಸ್ ಮತ್ತು ಟೆಡ್ ಮುಂತಾದ ವಿವಿಧ ವೇದಿಕೆಗಳ ಮೂಲಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತುತಪಡಿಸಿದ್ದು, ಅನೇಕ ಅಂತಾರಾಷ್ಟ್ರೀಯ ವಿದ್ವಾಂಸರು ಮತ್ತು ಸಂಸ್ಥೆಗಳ ಮೆಚ್ಚುಗೆ  ಗಳಿಸಿದ್ದಾನೆ.ತನ್ನ ವಿನ್ಯಾಸದ ಹಡಗು ತನ್ನ ತಳದಲ್ಲಿ ಯಂತ್ರವೊಂದನ್ನು ಹೊಂದಿರುತ್ತದೆ ಎಂದು ಹಾಜಿಕ್ ಹೇಳುತ್ತಾನೆ. ಹಾಜಿಕ್ ಪ್ರಕಾರ ಯಂತ್ರವು ಸಾಗರದಿಂದ ಪ್ಲಾಸ್ಟಿಕ್ ಅನ್ನು ಹೀರಿಕೊಳ್ಳುತ್ತದೆ ಮತ್ತು ಅದರ ಗಾತ್ರಕ್ಕೆ ಅನುಗುಣವಾಗಿ ಅದನ್ನು ಪ್ರತ್ಯೇಕಿಸುತ್ತದೆ. ಸಮುದ್ರದ ಮೇಲೆ ಸಾಗುತ್ತಿರುವಾಗ ಸಾಗರ ಜೀವಿಗಳುನೀರು ಮತ್ತು ಪ್ಲಾಸ್ಟಿಕ್ಕನ್ನು  ಪತ್ತೆ ಹಚ್ಚುವಂತಹ ಸಂವೇದಕಕ ಅಥವಾ ವ್ಯವಸ್ಥೆಯನ್ನು ಹಡಗಿನ  ಕೆಳಭಾಗದಲ್ಲಿ ಮಾಡಲಾಗಿರುತ್ತದೆ. ಅದರ ಪ್ರಕಾರ ತ್ಯಾಜ್ಯ  ಪ್ರತ್ಯೇಕಗೊಳ್ಳುತ್ತದೆ.ಒಂಬತ್ತು ವರ್ಷದ ಹುಡುಗನಾಗಿದ್ದಾಗ ಹಡಗಿನ ವಿನ್ಯಾಸದ ಕಲ್ಪನೆಯು ತನ್ನ ಮನಸ್ಸಿಗೆ ಬಂದಿತು ಎಂದು ಹಾಜಿಕ್ ಹೇಳುತ್ತಾನೆಕಡಲ ಜೀವಿಗಳ ಸಲುವಾಗಿ ಏನಾದರೂ ಮಾಡಬೇಕು ಎಂಬುದಾಗಿ ಯೋಚಿಸುವ ಹಾಜಿಕ್  ಹಲವಾರು ಸಾಕ್ಷ್ಯಚಿತ್ರಗಳ ವೀಕ್ಷಣೆಯ ಬಳಿಕ  ಪ್ಲ್ಯಾಸ್ಟಿಕ್ ಮತ್ತು ಮಾಲಿನ್ಯದ ಕಾರಣದಿಂದ ಉಂಟಾಗುವ ಹಾನಿಯ ಬಗ್ಗೆ ಕೆಲವು ಸಂಗತಿಗಳನ್ನು ಅರಿತುಕೊಂಡುದಾಗಿ ವಿವರಿಸಿದ.ಪ್ರಸ್ತುತ, ಸಾಗರ ಪ್ಲಾಸ್ಟಿಕ್ ಮಾಲಿನ್ಯದ ಅಪಾಯಗಳು ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಜನರು, ಸಂಘಟನೆಗಳು ಮತ್ತು ವೇದಿಕೆಗಳೊಂದಿಗೆ ಹಾಜಿಕ್ ಕೆಲಸ ಮಾಡುತ್ತಿದ್ದಾನೆ.

2019: ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ೨೦೨೦ರಲ್ಲಿ ನಡೆಯಲಿರುವ ಚುನಾವಣೆಗೆ ಭಾರತೀಯ ಮೂಲದ ಮೊತ್ತ ಮೊದಲ ಸೆನೆಟರ್ ಕಮಲಾ ಹ್ಯಾರಿಸ್ ತಮ್ಮ ಉಮೇದುವಾರಿಕೆಯನ್ನು ಪ್ರಕಟಿಸಿದ್ದು, ಪ್ರಕಟಣೆ ಮಾಡಿದ ೨೪ ಗಂಟೆಗಳ ಒಳಗಾಗಿ ೧೦ ಲಕ್ಷ ಅಮೆರಿಕನ್ ಡಾಲರ್ ದೇಣಿಗೆ ಸಂಗ್ರಹಿಸಿದರು. ೫೪ರ ಹರೆಯ ಹ್ಯಾರಿಸ್ ಅವರು ೨೦೨೦ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತಮ್ಮ ಪ್ರಚಾರ ಅಭಿಯಾನವನ್ನು ಅಧಿಕೃತವಾಗಿ ಆರಂಭಿಸಿದರು. ಎಬಿಸಿಯಗುಡ್ ಮಾರ್ನಿಂಗ್ ಅಮೆರಿಕದಲ್ಲಿ ತಮ್ಮ ಅಭ್ಯರ್ಥನವನ್ನು ಪ್ರಕಟಿಸಿದ ೨೪ ಗಂಟೆಗಳಲ್ಲಿ ೩೮,೦೦೦ ದಾನಿಗಳು ೧೫ ಲಕ್ಷ ಅಮೆರಿಕನ್ ಡಾಲರುಗಳನ್ನು ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರಕ್ಕಾಗಿ ದೇಣಿಗೆ ನೀಡಿದರು ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿತು. ‘ನಿಮಗೆ ಧನ್ಯವಾದಗಳು. ೨೪ ಗಂಟೆಗಳ ಒಳಗಾಗಿ ನಮಗೆ ಬಂದಿರುವ ದೇಣಿಗೆಯ ಮೊತ್ತ ೧೫ ಲಕ್ಷ ಅಮೆರಿಕನ್ ಡಾಲರ್ ದಾಟಿದೆ ಎಂದು ಹ್ಯಾರಿಸ್ ಟ್ವೀಟ್ ಮಾಡಿದರು. ವಾಸ್ತವವಾಗಿ ಮೊದಲ ೧೨ ಗಂಟೆಗಳಲ್ಲಿ ಹ್ಯಾರಿಸ್ ಅವರಿಗೆ ೧೦ ಲಕ್ಷ ಅಮೆರಿಕನ್ ಡಾಲರ್ ದೇಣಿಗೆ ಹರಿದು ಬಂತು ಎಂದು ವಾಲ್ ಸ್ಟ್ರೀಟ್ ಜರ್ನಲ್ನ್ನು ಉಲ್ಲೇಖಿಸಿದ ವರದಿಯೊಂದು ತಿಳಿಸಿತು.ಹ್ಯಾರಿಸ್ ಅವರಿಗೆ ,೧೧,೦೦೦ ಡಾಲರ್ಗಳಿಗೂ ಹೆಚ್ಚಿನ ದೇಣಿಗೆ ಸರಕುಗಳ ರೂಪದಲ್ಲಿ ಬಂದಿದೆ.ಇವುಗಳಲ್ಲಿಕಮಲಾ ಹ್ಯಾರಿಸ್ ಫಾರ್ ಪೀಪಲ್ ಎಂಬುದಾಗಿ ಬರೆದಿರುವ ಬ್ಯಾಗುಗಳು, ಟೀ ಶರ್ಟ್ಗಳು ಮತ್ತು ಹ್ಯಾಟ್ಗಳು ಸೇರಿವೆ ಎಂದು ಜರ್ನಲ್ ಹೇಳಿತು. ಡೊನಾಲ್ಟ್ ಟ್ರಂಪ್ ಅವರ ಕಟು ಟೀಕಾಕಾರರಾಗಿರುವ ಹ್ಯಾರಿಸ್ ಅವರು ೨೦೨೦ರ ಚುನಾವಣೆಗಾಗಿ ಪಕ್ಷದ ಅಭ್ಯರ್ಥನಕ್ಕಾಗಿ ಸಮರಕ್ಕೆ ಇಳಿದಿರುವ ನಾಲ್ಕನೇ ಡೆಮೋಕ್ರಾಟ್ ಆಗಿದ್ದಾರೆ. ೨೦೨೦ರ ಜುಲೈ ತಿಂಗಳಲ್ಲಿ ನಡೆಯಲಿರುವ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದೊಂದಿಗೆ ಮುಕ್ತಾಯಗೊಳ್ಳುವ ಅಮೆರಿಕದ ಅಧ್ಯಕ್ಷ ಸ್ಥಾನದ ಪ್ರಾಥಮಿಕ ಚುನಾವಣೆಯ ಫಲಿತಾಂಶ ಏನಾಗಬಹುದು ಎಂದು ಈಗಲೇ ಹೇಳುವುದು ಕಷ್ಟ ಎಂದು ಭಾರತೀಯ ಅಮೆರಿಕ ಸಮುದಾಯದ ನಾಯಕರು ಹೇಳಿದ್ದಾರೆ. ಕಮಲಾ ಹ್ಯಾರಿಸ್ ಅವರು ಭಾರತ ಮತ್ತು ಕೆರಿಬಿಯನ್ ಮೂಲದ ಪಾಲಕರಿಂದ ಮಿಶ್ರ ಅನುವಂಶಿಕತೆಯನ್ನು ಹೊಂದಿದವರಾಗಿದ್ದಾರೆ.

2019: ನವದೆಹಲಿ: ಸರಕು ಮತ್ತು ಸೇವೆಗಳ ತೆರಿಗೆ ಮೇಲ್ಮ ನವಿ ರಾಷ್ಟ್ರೀಯ ನ್ಯಾಯಮಂಡಳಿ (ಜಿಎಸ್ಟಿಎಟಿ) ರಚನೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿಸಿತು. ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವ ರವಿಶಂಕರ್ ಪ್ರಸಾದ್, ಸರಕು ಮತ್ತು ಸೇವೆಗಳ ತೆರಿಗೆ ಮೇಲ್ಮನವಿ ರಾಷ್ಟ್ರೀಯ ನ್ಯಾಯಮಂಡಳಿ (ಜಿಎಸ್ಟಿಎಟಿ) ದೆಹ ಲಿಯಲ್ಲಿ ಸ್ಥಾಪನೆಯಾಗಲಿದೆ ಎಂದು ತಿಳಿಸಿದರು.  ಜಿಎಸ್ಟಿಎಟಿಗೆ ರಾಷ್ಟ್ರಪತಿಯವರು ಅಧ್ಯಕ್ಷರಾಗಲಿದ್ದು, ಕೇಂದ್ರ ಹಾಗೂ ರಾಜ್ಯದಿಂದ ತಲಾ ಓರ್ವ ತಾಂತ್ರಿಕ ಸದಸ್ಯರನ್ನು ಒಳಗೊಂಡಿದೆ. ಜಿಎಸ್ಟಿಎಟಿಯ ರಚನೆಗೆ ೯೨.೫೦ ಲಕ್ಷ ರೂ. ವೆಚ್ಚವಾಗಲಿದ್ದು, ವಾರ್ಷಿಕ .೮೬ ಕೋಟಿ ರೂಪಾ ಯಿ ಖರ್ಚಾಗಲಿದೆ ಎಂದು ಹೇಳಿದರು. ಸರಕು ಮತ್ತು ಸೇವೆಗಳ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯು ಜಿಎಸ್ಟಿ ಕಾನೂನುಗಳಲ್ಲಿ ಎರಡನೇ ಮನವಿಯ ವೇದಿಕೆಯಾಗಿದೆ ಮತ್ತು ಕೇಂದ್ರ ಹಾಗೂ ರಾಜ್ಯಗಳ ನಡುವಿನ ವಿವಾದದ ನಿರ್ಣಯದ ಮೊದಲ ಸಾಮಾನ್ಯ ವೇದಿಕೆಯಾಗಿದೆ. ಕೇಂದ್ರೀಯ ಮತ್ತು ರಾಜ್ಯ ಜಿಎಸ್ಟಿ ಕಾಯ್ದೆಯಡಿ ಮೇಲ್ಮನವಿ ಪ್ರಾಧಿಕಾರಗಳು ನೀಡುವ ಮೊದಲ ಆದೇಶದ ವಿರುದ್ಧ ಮೇಲ್ಮನವಿಗೆ ಅವಕಾಶ ಒದಗಿ ಸುತ್ತದೆ. ಇದು ಕೇಂದ್ರ ಮತ್ತು ರಾಜ್ಯಗಳ ಸಾಮಾನ್ಯ ಜಿಎಸ್ಟಿ ಕಾನೂನಿನ ವ್ಯಾಪ್ತಿಯಲ್ಲಿರುತ್ತದೆ. ಸರಕು ಮತ್ತು ಸೇವೆಗಳ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಜಿಎಸ್ಟಿ ಕಾನೂನುಗಳಲ್ಲಿ ಎರ ಡನೇ ಮನವಿಯ ವೇದಿಕೆ ಹಾಗೂ ಕೇಂದ್ರ ಹಾಗೂ ರಾಜ್ಯಗಳ ನಡುವಿನ ವಿವಾದ ನಿರ್ಣಯ ಮೊದಲನೆಯ ವೇದಿಕೆ ಎಂದು ಅವರು ವಿವರಿಸಿದರು. ಸಾಮಾನ್ಯ ವೇದಿಕೆಯಾಗಿರುವ ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿ ಜಿಎಸ್ಟಿ ಅಡಿ ಯಲ್ಲಿ ಉಂಟಾಗುವ ವಿವಾದಗಳನ್ನು ಪರಿಹರಿಸಲು ಏಕರೂಪತೆಯನ್ನು ಖಚಿತಪಡಿಸುತ್ತದೆ, ಹೀಗಾಗಿ ದೇಶಾದ್ಯಂತ ಏಕರೂಪದ ತೆರಿಗೆ ಸಂಗ್ರಹಣೆ ಅನುಷ್ಠಾನಗೊಳ್ಳುತ್ತದೆ. ಸಿಜಿಎಸ್ಟಿಯ ಅಧಿನಿಯಮದ ೧೮ನೇ ಅಧ್ಯಾ ಯದ ಪ್ರಕಾರ, ಜಿಎಸ್ಟಿ ಆಡಳಿತದ ಅಡಿಯಲ್ಲಿ ವಿವಾದ ಪರಿಹಾರಕ್ಕಾಗಿ ಮೇಲ್ಮನವಿ ಮತ್ತು ಪುನರ್ ವಿಮರ್ಶಾ ಕಾರ್ಯವಿಧಾನವನ್ನು ಒದಗಿಸುತ್ತದೆ.

2019: ನವದೆಹಲಿ: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜಯಂತಿ ಅಂಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಸುಭಾಶ್ ಚಂದ್ರ ಬೋಸ್ ವಸ್ತು ಸಂಗ್ರಹಾಲಯಕ್ಕೆ ಚಾಲನೆ ನೀಡಿದರು.  ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ) ಹಾಗೂ ಸುಭಾಶ್ ಚಂದ್ರ ಬೋಸ್ ಅವರ ಇತಿಹಾಸ ಕುರಿತು ವಸ್ತು ಸಂಗ್ರಹಾಲಯ ಮಾಹಿತಿ ಒದಗಿಸುತ್ತದೆ. ನೇತಾಜಿ ಬಳಸುತ್ತಿದ್ದ ಖಡ್ಗ, ಮರದ ಕುರ್ಚಿ, ಪದಕಗಳು, ಸಮವಸ್ತ್ರ ಹಾಗೂ ಇನ್ನಿತರ ಕಲಾಕೃತಿಗಳನ್ನು ವಸ್ತು ಸಂಗ್ರಹಾಲಯ ಒಳಗೊಂಡಿದೆ.  ದೆಹಲಿಯ ಕೆಂಪು ಕೋಟೆಯಲ್ಲಿನ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕುರಿತ ಸಂಗ್ರಹಾಲಯ ಹಾಗೂ ೧೮೫೭ರ ಭಾರತದ ಮೊದಲ ಸ್ವಾತಂತ್ರ್ಯ ಯುದ್ಧ ಮತ್ತು ಕೆಂಪು ಕೋಟೆಯಲ್ಲಿರುವ ದೃಶ್ಯಕಲಾ ಸಂಗ್ರಹಾಲಯಕ್ಕೂ ಪ್ರಧಾನಿ ಭೇಟಿ ನೀಡಿದರು.  ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರ ರಾಜಧಾನಿಯ ಈ ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೆಚ್ಚೆದೆಯ ವೀರರಿಗೆ ಪ್ರಧಾನಿ ಗೌರವ ಸಲ್ಲಿಸಿದರು.

ಸುಭಾಶ್ ಚಂದ್ರ ಬೋಸ್ ನೇತೃತ್ವದ ಆಜಾದ್ ಹಿಂದ್ ಸರ್ಕಾರದ ೭೫ನೇ ವರ್ಷಾಚರಣೆಯ ಅಂಗವಾಗಿ ೨೦೧೮ ಅಕ್ಟೋಬರ್ ೨೧ರಂದು ಪ್ರಧಾನಿ ಮೋದಿ ವಸ್ತು ಸಂಗ್ರಹಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ್ದರು. ವಿಪತ್ತು ನಿರ್ವಹಣೆ ಕಾರ್ಯಾಚರಣೆಯಲ್ಲಿ ಭಾಗಿಗಳಾಗಿದ್ದ ಹಲವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಇದೇ ಸಮಾರಂಭದಲ್ಲಿ ನೇತಾಜಿಯವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದರು.  ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ೨೦೧೮ ಡಿಸೆಂಬ್ ೩೦ರಂದು ನಡೆದ ಸಮಾರಂಭದಲ್ಲಿ ಸ್ವಾತಂತ್ರ್ಯದ ಕುರಿತು ನೇತಾಜಿ ಹಾಗೂ ಐಎನ್‌ಎ ಹೊಂದಿದ್ದ ಮೌಲ್ಯಗಳು ಹಾಗೂ ತತ್ವಗಳ ಸಂಸ್ಮರಣಾರ್ಥ ಪ್ರಧಾನಿ ಮೋದಿ ಅಂಚೆಚೀಟಿ ಹಾಗೂ ನ್ಯಾಣ್ಯ ಬಿಡುಗಡೆಗೊಳಿಸಿದ್ದರು.


2018: ದಾವೋಸ್ (ಸ್ವಿಟ್ಜರ್ಲೆಂಡ್): ಮಹತ್ವ ಕಳೆದುಕೊಳ್ಳುತ್ತಿರುವ ಜಾಗತೀಕರಣ, ಭಯೋತ್ಪಾದನೆ ಹಾಗೂ ಹವಾಮಾನ ಬದಲಾವಣೆ ಇವು ಮೂರು ಪ್ರಸ್ತುತ ಜಗತ್ತು ಎದುರಿಸುತ್ತಿರುವ ಮೂರು ಜ್ವಲಂತ ಸಮಸ್ಯೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ವಿಶ್ಲೇಷಿಸಿದರು. ೪೮ನೇ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಜಾಗತಿಕ ನಾಯಕರು, ಇಸಿಒಗಳನ್ನು ಉದ್ದೇಶಿಸಿ ಮುಖ್ಯಭಾಷಣ ಮಾಡಿದ ಮೋದಿ, ಭಾರತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಬಂಡವಾಳ ಹೂಡಲು ಮುಂದೆ ಬನ್ನಿ ಎಂದು ಕರೆ ನೀಡಿದರು. ರಾಷ್ಟ್ರಗಳ ನಡುವೆ ಇರುವ ಬಿರುಕುಗಳನ್ನು ಕಡಿಮೆ ಮಾಡಲು ನಾವೆಲ್ಲ ಪ್ರಯತ್ನಿಸಬೇಕು. ನಮ್ಮದು ವಸುದೈವ ಕುಟುಂಬಕಂ, ಇಡೀ ಜಗತ್ತು ಒಂದು ಕುಟುಂಬವಿದ್ದಂತೆ. ಈ ಜಗತ್ತೇ ಒಂದು ಕುಟುಂಬ. ನಾವೆಲ್ಲರೂ ಭೂಮಿಯ ಮಕ್ಕಳು. ನಾವೆಲ್ಲಾ ಸಹೋದರರು, ಸಹೋದರಿಯರಂತೆ ಬದುಕಬೇಕಾಗಿದೆ ಎಂದು ಅವರು ಹೇಳಿದರು. ಎರಡು ದಶಕಗಳ ಹಿಂದೆ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಆಗಿನ ಭಾರತದ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಭಾಗವಹಿಸಿದ್ದು ಬಿಟ್ಟರೆ, ಈ ವೇದಿಕೆಯಲ್ಲಿ ಪಾಲ್ಗೊಂಡ ಭಾರತದ ಪ್ರಥಮ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ. ತಮ್ಮ ಹಿಂದಿ ಭಾಷಣದಲ್ಲಿ ಎಚ್.ಡಿ. ದೇವೇಗೌಡರ ಹೆಸರನ್ನು ಸ್ಮರಿಸಿದ ಪ್ರಧಾನಿ ’೧೯೯೭ರಲ್ಲಿ ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಅಷ್ಟೊಂದು ಬೆಳೆದಿರಲಿಲ್ಲ. ಈಗ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿದೆ. ೧೯೯೭ರ ನಂತರ ಭಾರತದ ಸಮಗ್ರ ಉತ್ಪಾದನೆ ಅಥವಾ ಆಂತರಿಕ ಉತ್ಪಾದನೆ (ಜಿಡಿಪಿ) ಆರು ಪಟ್ಟು ವೃದ್ಧಿಸಿದೆ ಎಂದು ನುಡಿದರು. ದಾವೋಸ್ ಇಂದು ಜಾಗತಿಕ ಮಟ್ಟದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ನಗರ. ಆರ್ಥಿಕ ಭದ್ರತೆ, ರಾಜಕೀಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಸ್ವಿಟ್ಜರ್ಲೆಂಡ್ ಯಶಸ್ವಿಯಾಗಿದೆ ಎಂದು ಮೋದಿ ಹೇಳಿದರು. ತಂತ್ರಜ್ಞಾನ ಜೀವನ ಮಟ್ಟವನ್ನು ಬದಲಾಯಿಸುತ್ತಿದೆ. ತಂತ್ರಜ್ಞಾನ ಆಧಾರಿತ ಸಂಶೋಧನೆಗಳು ಹೆಚ್ಚಾಗಬೇಕಾಗಿದೆ. ಸೈಬರ್ ಸೆಕ್ಯೂರಿಟಿ ಈಗಿನ ಅತಿ ದೊಡ್ಡ ಸವಾಲಾಗಿದೆ. ಎಲ್ಲರೂ ಒಟ್ಟಿಗೆ ಸೇರಿ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಮೋದಿ ನುಡಿದರು. ಜಾಗತಿಕ ಸವಾಲುಗಳು, ಭಾರತದ ಕೈಗೊಂಡಿರುವ ಕ್ರಮಗಳು ಹಾಗೂ ಭಾರತದಲ್ಲಿ ಹೂಡಿಕೆ ಮತ್ತು ವಹಿವಾಟಿಗೆ ಇರುವ ಅವಕಾಶಗಳ ಬಗ್ಗೆ ವಿಶ್ವ ನಾಯಕರಿಗೆ ಮನವರಿಕೆ ಮಾಡಿದ ಮೋದಿ, ಭಯೋತ್ಪಾದನೆ ಎಂಬುದೇ ಅಪಾಯಕಾರಿ. ಅದರಲ್ಲಿಯೂ ಒಳ್ಳೆಯ ಭಯೋತ್ಪಾದನೆ ಮತ್ತು ಕೆಟ್ಟ ಭಯೋತ್ಪಾದನೆ ಎಂದು ವಿವರಣೆ ನೀಡುವುದು ಮತ್ತಷ್ಟು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು. ದೃಢ, ಪಾರದರ್ಶಕ, ಪ್ರಗತಿಶೀಲ ಭಾರತವು ಹಾಗೆಯೇ ಮುಂದುವರೆಯಲಿದೆ. ಭಾರತವು ಯಾವಾಗಲೂ ಸಾಮರಸ್ಯದ ಮತ್ತು ಏಕೀಕರಣದ ಶಕ್ತಿಯಾಗಿ ಮುಂದುವರೆಯುತ್ತದೆ ಎಂದು ವಿವರಿಸಿದ ಪ್ರಧಾನಿ, ವಿಶ್ವ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಸ್ವಾತಂತ್ರ್ಯ ಸ್ವರ್ಗದ ಕನಸು ಕಂಡಿದ್ದರು. ಅವರ ಕನಸಿನ ಸ್ವರ್ಗದಲ್ಲಿ ಸಂಕುಚಿತ ದೇಶೀ ಗೋಡೆಗಳಿರಲಿಲ್ಲ. ವಿಶ್ವವನ್ನು ಅಂತಹ ಸ್ವಾತಂತ್ರ್ಯ ಸ್ವರ್ಗವನ್ನಾಗಿ ರೂಪಿಸಲು ನಾವೆಲ್ಲರೂ ಕೈಗಳನ್ನು ಜೋಡಿಸೋಣ. ಅದನ್ನು ಒಡೆದು ತುಂಡು ತುಂಡು ಮಾಡದಿರೋಣ ಎಂದು ಮೋದಿ ಹೇಳಿದರು. ವಿಶ್ವ ಕಂಡ ಎರಡು ಜಾಗತಿಕ ಸಮರಗಳಲ್ಲಿ ಭಾರತದ ಯೋಧರು ಯಾವುದೇ ಮೈತ್ರಿಕೂಟದ ಅಂಗವಾಗಿರದೇ ಇದ್ದರೂ ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ. ಈಗಲೂ ಭಾರತೀಯ ಯೋಧರು ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಭಾಗಿಗಳಾಗಿ ಶಾಂತಿ ಸ್ಥಾಪನೆಗಾಗಿ ಶ್ರಮಿಸುತ್ತಿದ್ದಾರೆ. ವಿಶ್ವದ ಯಾವುದೇ ಮೂಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದರೂ, ಭಾರತ ಮೊದಲಿಗನಾಗಿ ಸ್ಪಂದಿಸುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ನೇಪಾಳದಲ್ಲಿ ಸಂಭವಿಸಿದ ಭೂಕಂಪ ಮತ್ತು ಯೆಮನ್ ತೆರವು ಕಾರ್ಯಾಚರಣೆಗಳು ಎಂದು ಪ್ರಧಾನಿ ಹೇಳಿದರು. ಭಾರತ ಎಂದೂ ಬೇರೆಯವರ ನೆಲ ಕಸಿಯಲು ಯತ್ನಿಸಿಲ್ಲ. ನಾವು ಯಾವಾಗಲೂ ಸಮೃದ್ಧಿ ಸಾಧನೆಗಾಗಿ ಮಾತ್ರವೇ ಬೇರೆ ರಾಷ್ಟ್ರಗಳ ಜೊತೆ ಶ್ರಮಿಸಿದ್ದೇವೆ. ನಾವು ಬಹುಸಂಸ್ಕೃತಿಯಲ್ಲಿ ನಂಬಿಕೆ ಇಟ್ಟವರು. ವಿವಿಧತೆಯ ವಿಶ್ವದಲ್ಲಿ ಏಕತೆಯೊಂದಿಗೆ ಬದುಕಲು ಜನರಿಗೆ ಸಾಧ್ಯ ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ ಎಂದು ಮೋದಿ ನುಡಿದರು. ಜಾಗತೀಕರಣದ ಮಾತುಗಳನ್ನು ಆಡುವಾಗ ಪ್ರಧಾನಿ ಮೋದಿ ಅವರು ಮಹಾತ್ಮ ಗಾಂಧಿಯವರನ್ನು ಸ್ಮರಿಸಿದರು. ಭಾರತದ ಪ್ರಾಚೀನ ಗ್ರಂಥಗಳಾದ ಉಪನಿಷತ್ತುಗಳು, ಭಗವಾನ್ ಬುದ್ಧ, ಮಹಾತ್ಮ ಗಾಂಧಿ ಇವರೆಲ್ಲರೂ ವಸ್ತುಗಳ ನ್ಯಾಯೋಚಿತ ಬಳಕೆಯ ಮಹತ್ವಕ್ಕೆ ಒತ್ತು ನೀಡಿದ್ದರು. ನಮ್ಮ ಅಗತ್ಯಕ್ಕೆ ಬೇಕಾದಷ್ಟು ಗಳಿಸೋಣ, ಅತಿಯಾಸೆಗೆ ಬೇಕಾಗುವಷ್ಟನ್ನಲ್ಲ ಎಂಬುದಾಗಿ ಮಹಾತ್ಮ ಗಾಂಧಿ ಹೇಳುತ್ತಿದ್ದುದನ್ನು ಅವರು ಉಲ್ಲೇಖಿಸಿದರು. ಭಾರತೀಯರು ಪ್ರಕೃತಿಪ್ರಿಯರು. ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗಾಗಿ ಜಾಗತಿಕ ಸೌರ ಮೈತ್ರಿಕೂಟ ಸ್ಥಾಪಿಸುವ ನಿಟ್ಟಿನಲ್ಲಿ ಭಾರತ ನೇತೃತ್ವ ವಹಿಸಿದೆ ಎಂದು ಮೋದಿ ಹೇಳಿದರು.
 
2018: ನವದೆಹಲಿ: ೨೦೧೪ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಪೆಟ್ರೋಲ್ ದರ ಗರಿಷ್ಠ ಮಟ್ಟವನ್ನು (ರೂ. ೭೨.೩೮) ತಲುಪಿತು. ಇದೇ ರೀತಿ ಡೀಸೆಲ್ ದರ ಲೀಟರಿಗೆ ದಾಖಲೆಯ ೬೩.೨೦ ರೂಪಾಯಿಗೆ ತಲುಪಿತು. ಗರಿಷ್ಠ ದರ ಹೀರಿಕೆ ಹಿನ್ನೆಲೆಯಲ್ಲಿ ತೈಲ ಸಚಿವಾಲಯವು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸುವಂತೆ ಮನವಿ ಮಾಡಿತು. ದೆಹಲಿಯಲ್ಲಿ ಈದಿನ ಪೆಟ್ರೋಲ್ ಲೀಟರ್ ದರ ಲೀಟರಿಗೆ ೭೨.೩೮ ರೂಪಾಯಿಗೆ ಏರಿದ್ದು, ಇದು ೨೦೧೪ರ ಮಾರ್ಚ್ ನಂತರದ ಗರಿಷ್ಠ ದರ ಎಂದು ಸರ್ಕಾರಿ ಒಡೆತನದ ತೈಲ ಕಂಪೆನಿಗಳ ದೈನಿಕ ಇಂಧನ ದರ ಪಟ್ಟಿ ತಿಳಿಸಿತು. ಕಳೆದ ವರ್ಷ ಡಿಸೆಂಬರ್ ಮಧ್ಯದ ಬಳಿಕ ಪೆಟ್ರೋಲ್ ದರ ೩.೩೧ ರೂಪಾಯಿಯಷ್ಟು ಏರಿದೆ. ಮುಂಬಯಿಯಲ್ಲಿ ಪೆಟ್ರೋಲ್ ದರ ೮೦ ರೂಪಾಯಿ ದಾಟಿದ್ದು ಇದು ದೇಶದಲ್ಲೇ ಅತ್ಯಂತ ದುಬಾರಿ ಎಂದು ವರದಿಗಳು ಹೇಳಿದವು. ಮುಂಬಯಿಯಲ್ಲಿ ಡೀಸೆಲ್ ಲೀಟರ್ ದರ ೬೭.೩೦ ರೂಪಾಯಿ ಆಗಿದೆ. ಮುಂಬಯಿಯಲ್ಲಿ ವ್ಯಾಟ್ ದರ ಹೆಚ್ಚಿರುವುದೇ ಈ ದರ ಏರಿಕೆಗೆ ಕಾರಣವಾಗಿದೆ. ಡಿಸೆಂಬರ್ ಮಧ್ಯದ ಬಳಿಕ ಡೀಸೆಲ್ ದರ ಲೀಟರ್‌ಗೆ ೪.೮೬ ರೂಪಾಯಿ ಏರಿದೆ ಎಂದು ತೈಲ ಕಂಪೆನಿಗಳು ತಿಳಿಸಿದವು. ಅಂತಾರಾಷ್ಟ್ರೀಯ ಕಚ್ಚಾ ತೈಲ ದರಗಳು ನಿರಂತರವಾಗಿ ಏರುತ್ತಿರುವುದೇ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಕಾರಣ ಎಂದು ಸುದ್ದಿ ಮೂಲಗಳು ತಿಳಿಸಿದವು.

2018: ನವದೆಹಲಿ: ’ಅತಿಯಾಗಿ ಜಾಲಾಧಾರಿತವಾಗಿರುವ ಆಧುನಿಕ ಸಮಾಜದಲ್ಲಿ ಆಧಾರ್ ಸಂಖ್ಯೆಯನ್ನೂ ಜೋಡಿಸುವುದರಿಂದ ಆಗುವ ಬದಲಾವಣೆಯಾದರೂ ಏನು?’ ಎಂದು ಸುಪ್ರೀಂಕೋರ್ಟ್ ಆಧಾರ್ ಯೋಜನೆಯನ್ನು ಪ್ರಶ್ನಿಸಿರುವ ಅರ್ಜಿದಾರರನ್ನು ಪ್ರಶ್ನಿಸಿತು.  ಹೇಗಿದ್ದರೂ ನಮ್ಮ ಎಲ್ಲ ಮಾಹಿತಿಯೂ ಖಾಸಗಿ ಅಸ್ತಿತ್ವಗಳೇ. ಹಾಗೆಯೇ ಆಧಾರ್ ಸಂಖ್ಯೆಯನ್ನು ಅವುಗಳ ಒಳಕ್ಕೆ ಸೇರಿಸುವುದರಿಂದ ಏನು ವ್ಯತ್ಯಾಸವಾಗುತ್ತದೆ?’ ಎಂದು ಆಧಾರ್ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸಿರುವ ವಿವಿಧ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಪಂಚಪೀಠದ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಪ್ರಶ್ನಿಸಿದರು. ಇದಕ್ಕೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ’ಸರ್ಕಾರವು (ರಾಜ್ಯವು) ಎಷ್ಟರ ಮಟ್ಟಿಗೆ ವೈಯಕ್ತಿಕ ಮಾಹಿತಿಯನ್ನು ಕೋರಬಹುದು ಎಂದು ನ್ಯಾಯಾಲಯ ನಿರ್ಧರಿಸಬೇಕು ಎಂದು ಉತ್ತರಿಸಿದರು. ‘ಹೌದು. ನಾವು ಜಾಲಾಧಾರಿತ ಜಗತ್ತಿನಲ್ಲಿ ಇದ್ದೇವೆ. ನಾವು ಮಾಹಿತಿಯನ್ನು ಹಂಚಿಕೊಳ್ಳಲೇಬೇಕು. ಆದರೆ ಜಾಲಾಧಾರಿತ ಜಗತ್ತಿನಲ್ಲಿ ರಾಜ್ಯವು ಎಷ್ಟರ ಮಟ್ಟಿನ ಮಾಹಿತಿಯನ್ನು ಕೋರಬಹುದು? ಅದೂ ಬೇರೆ ಬೇರೆ ಛತ್ರಿಗಳ ಅಡಿಯಲ್ಲಿ ಅಲ್ಲ, ಒಂದೇ ಛತ್ರಿಯ ಅಡಿಯಲ್ಲಿ? ಎಷ್ಟರ ಮಟ್ಟಿನ ವೈಯಕ್ತಿಕ ಮಾಹಿತಿಗಳನ್ನು ನಾವು ಕೊಡಬಹುದು ಮತ್ತು ಎಷ್ಟರ ಮಟ್ಟಿನ ಮಾಹಿತಿಯನ್ನು ನಮ್ಮಲ್ಲಿ ನಾವು ಸಂರಕ್ಷಿಸಿಕೊಳ್ಳಬಹುದು?’ ಎಂದು ಸಿಬಲ್ ಪೀಠಕ್ಕೆ ಮರು ಪ್ರಶ್ನೆ ಹಾಕಿದರು. ‘ಸಂಗ್ರಹಿಸಿದ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದ ಉದ್ದೇಶಕ್ಕೆ ಮಾತ್ರವೇ ಬಳಸಲಾಗುತ್ತದೆ ಎಂಬುದಾಗಿ ಬಹಿರಂಗ ಘೋಷಣೆ ಮಾಡಿದರೆ ಅರ್ಜಿದಾರರು ವ್ಯಕ್ತ ಪಡಿಸಿರುವ ಅಪಾಯವನ್ನು ನಿವಾರಿಸಬಹುದೇ? ಎಂದು ನ್ಯಾಯಮೂರ್ತಿ ಚಂದ್ರಚೂಡ್ ಪ್ರಶ್ನಿಸಿದರು. ರಾಜ್ಯಕ್ಕೆ/ ಸರ್ಕಾರಕ್ಕೆ ನಾಗರಿಕರನ್ನು ಸರ್ಕಾರೇತರ ಮತ್ತು ಸರ್ಕಾರಿ ಪ್ರತಿನಿಧಿಗಳಿಂದ ರಕ್ಷಿಸುವ ಹೊಣೆಗಾರಿಕೆ ಇದೆ ಎಂದು ಹಿರಿಯ ವಕೀಲ ಶ್ಯಾಮ್ ದಿವಾನ್ ಮತ್ತು ವಕೀಲ ವಿಪಿನ್ ನಾಯರ್ ವಾದಿಸಿದರು. ಆಧಾರ್ ಸಂವಿಧಾನಬದ್ಧವಾಗಿ ಸಮಂಜಸ ಎಂದುಕೊಳ್ಳೋಣ. ಆಗ ಆಧಾರ್ ಸಂಖ್ಯೆಯನ್ನು ಎಷ್ಟರ ಮಟ್ಟಿಗೆ ಬಳಸಬಹುದು ಎಂದು ನಾವು ನಿರ್ಧರಿಸ ಬೇಕಾಗುತ್ತದೆ. ಆಧಾರ್ ಕಾರ್ಡನ್ನು ಸಬ್ಸಿಡಿಗಳನ್ನು ಪಡೆಯಲು ಮಾತ್ರ ಬಳಸಬಹುದೇ? ನಿರ್ದಿಷ್ಟ ಸಾಂವಿಧಾನಿಕ ಗೆರೆಯನ್ನು ದಾಟಿದಾಗ ಅದು ಖಾಸಗಿತನದ ಉಲ್ಲಂಘನೆಯಾಗುವಂತಹ ಗೆರೆ ಅಲ್ಲಿದೆಯೇ?’ ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ವಿಶ್ಲೇಷಿಸಿದರು. ಪೀಠವು ಮಾಡಿದ ಪ್ರಶ್ನೆಗಳನ್ನು ಆಧಾರ್ ವಿಷಯಕ್ಕೆ ಸಂಬಂಧಿಸಿದ ಕೇಂದ್ರ ವಿಷಯಗಳು ಎಂದು ಗುರುತಿಸಿದ ಪೀಠ, ಅರ್ಜಿದಾರರು ತಮ್ಮ ವಾದಗಳನ್ನು ಈ ನಿಟ್ಟಿನಲ್ಲಿ ಕೇಂದ್ರೀಕರಿಸಬೇಕು ಎಂದು ಅಪೇಕ್ಷಿಸಿತು.  ಪ್ರಸ್ತುತ ಪರಿಸ್ಥಿತಿಯಲ್ಲಿ ಸಂಗ್ರಹಿಸಲಾದ ಮಾಹಿತಿ ಸೋರಿಕೆಯಾದರೆ, ಅಳಿಸಿ ಹೋದರೆ, ಅಥವಾ ಬೇರೇನಾದರೂ ತುರ್ತು ಸ್ಥಿತಿ ಉಂಟಾದರೆ ದೂರು ನೀಡುವಂತಹ ಶಾಸನಬದ್ಧ ಚೌಕಟ್ಟು ಇಲ್ಲ ಎಂದು ವಕೀಲ ದಿವಾನ್ ಹೇಳಿದರು.
ಸಂಗ್ರಹಿಸಲಾದ ಮಾಹಿತಿಯನ್ನು ವಿಚಾರದಲ್ಲಿ ಸೇವೆ ನೀಡುವ ಸಂಸ್ಥೆಗಗಳು ವಿಶ್ವಾಸ ಉಳಿಸಿಕೊಳ್ಳಬೇಕು. ಉದಾಹರಣೆಗೆ ಹೀಗೆ ಸಂಗ್ರಹಿಸಲಾದ ಮಾಹಿತಿಯನ್ನು ಆಧಾರ್ ಕಾರ್ಡುದಾರನ ವಿರುದ್ಧ ಹಣ ವಂಚನೆಯಂತಹ ಅಪರಾಧಕ್ಕೆ ಬಳಸಿದರೆ ಏನು ಮಾಡಬೇಕು ಎಂಬ ಅಂಶವೂ ಇದೆ ಎಂದು ಅವರು ಹೇಳಿದರು. ಆದರೆ ನೀವು ’ಪಾನ್ ಸಂಖ್ಯೆಯನ್ನು ಎಲ್ಲ ಕಡೆ ಕೊಡುತ್ತಿದ್ದೀರಲ್ಲ? ಎಂದು ನ್ಯಾಯಮೂರ್ತಿ ಚಂದ್ರಚೂಡ್ ಕೇಳಿದರು. ಇದಕ್ಕೂ ಮೊದಲಿನ ವಿಚಾರಣೆಯಲ್ಲಿ ಪೀಠವು ಮಕ್ಕಳು ಸೇರಿದಂತೆ ಪ್ರಜೆಗಳನ್ನು ರಾಜ್ಯವು ಸಾರ್ವಜನಿಕ ಹಿತಾಸಕ್ತಿಗಾಗಿ ಬಯೋಮೆಟ್ರಿಕ್ ನೀಡುವಂತೆ ಒತ್ತಾಯಿಸಬಹುದೇ ಎಂದು ಪೀಠವು ಪ್ರಶ್ನಿಸಿತ್ತು. ಅರ್ಜಿದಾರರು ಆಧಾರ್ ಯೋಜನೆಯನ್ನು ’ದೈತ್ಯ ಎಲೆಕ್ಟ್ರಾನಿಕ್ ಹಗ್ಗ ಎಂದು ಬಣ್ಣಿಸಿ ಅದು ವ್ಯಕ್ತಿಗಳನ್ನು ಕೇವಲ ನಂಬರುಗಳ ಮಟ್ಟಕ್ಕೆ ಇಳಿಸುತ್ತದೆ ಎಂದು ಬಣ್ಣಿಸಿದ್ದರು.

2018: ಅಲಾಸ್ಕ್ಕ/ಜಕಾರ್ತಾ: ಕೆನಡಾದ ಅಲಾಸ್ಕ ಹಾಗೂ ಇಂಡೋನೇಷ್ಯಾದ ಜಕಾರ್ತಾದಲ್ಲಿ ಮಂಗಳವಾರ ತೀವ್ರ ಭೂಕಂಪ ಸಂಭವಿಸಿತು. ಅಲಾಸ್ಕ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಯಿತು. ಅಲಾಸ್ಕ ಸುತ್ತಮುತ್ತಣ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ ೮.೨ ರಷ್ಟು ಭೂಕಂಪ ತೀವ್ರತೆ ದಾಖಲಾಯಿತು. ಸುನಾಮಿ ಅಪಾಯ ಇರುವುದರಿಂದ ಕರಾವಳಿ ಸಮೀಪದ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಯಿತು. ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ. ಆದರೆ ಸಾವು, ನೋವುಗಳ ವರದಿ ಬಂದಿಲ್ಲ. ರಿಕ್ಟರ್ ಮಾಪಕದಲ್ಲಿ ೬.೦ ತೀವ್ರತೆ ದಾಖಲಾಗಿದ್ದು, ಭೂಕಂಪನದ ಕೇಂದ್ರಬಿಂದು ೧೦ ಕಿ.ಮೀ ಆಳದಲ್ಲಿತ್ತು ಎಂದು ವಿಶ್ವಸಂಸ್ಥೆಯ ಭೂ ಸರ್ವೇಕ್ಷಣಾ ಸಮೀಕ್ಷೆ ತಿಳಿಸಿತು.

2018: ಭೋಪಾಲ್:  ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತಮ್ಮ ಅಧಿಕೃತ ಸಂವಹನದಲ್ಲಿ ದಲಿತ ಪದವನ್ನು ಉಪಯೋಗಿಸಬಾರದು ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಗ್ವಾಲಿಯರ್ ನ್ಯಾಯಪೀಠ ಈ ಸೂಚನೆ ನೀಡಿದ್ದು, ಭಾರತದ ಸಂವಿಧಾನದಲ್ಲಿ ದಲಿತ ಎಂಬ ಪದ ಉಲ್ಲೇಖವಾಗಿಲ್ಲ. ಹಾಗಾಗಿ ದಲಿತ ಪದದ ಬಳಕೆಯನ್ನು ತಡೆಹಿಡಿಯಬೇಕು. ಅದರ ಬದಲು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಎಂಬ ಪದ ಬಳಸಬಹುದು ಎಂದು ತಿಳಿಸಿತು.  ಸಾಮಾಜಿಕ ಕಾರ್ಯಕರ್ತ ಮೋಹನ್ ಲಾಲ್ ಮೋಹರ್ ಅವರು ಸರ್ಕಾರದ ಪರಿಭಾಷೆಯ ನಡುವೆ ಅನಧಿಕೃತವಾಗಿ ದಲಿತ ಪದ ಬಳಸುವುದನ್ನು ವಿರೋಧಿಸಿ ಡಿಸೆಂಬರ್ ತಿಂಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು ಎಂದು ಅವರ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಜಿತೇಂದ್ರ ಕುಮಾರ್ ಶರ್ಮ ಹೇಳಿದರು. ಮೇಲ್ವರ್ಗದವರು ದಲಿತ  ಪದವನ್ನು ಅವಹೇಳನಕಾರಿಯಾಗಿ ಬಳಸಿಕೊಳ್ಳುತ್ತಿದ್ದು, ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಮೋಹನ್ ಅರ್ಜಿಯಲ್ಲಿ ಹೇಳಿದ್ದರು.

 

2017: ಚೆನ್ನೈ: ತಮಿಳುನಾಡು ವಿಧಾನಸಭೆಯು ಜಲ್ಲಿಕಟ್ಟು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಇದರೊಂದಿಗೆ ಜಲ್ಲಿ ಕಟ್ಟು ಮೇಲೆ ಸುಪ್ರೀಂಕೋರ್ಟ್ ವಿಧಿಸಿದ್ದ ನಿಷೇಧ ತೆರವುಗೊಂಡಿತು. ವಿಧಾನಸಭಾಧ್ಯಕ್ಷ ಪಿ. ಧನಪಾಲ್ ಅವರು ಈದಿನ ಸಂಜೆ 5 ಗಂಟೆಗೆ ವಿಧಾನಸಭೆಯ ವಿಶೇಷ ಅಧಿವೇಶನ ಕರೆದಿದ್ದರು. ಅಧಿವೇಶನ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸರ್ವಾನುಮತದೊಂದಿಗೆ ಮಸೂದೆ ಅಂಗೀಕಾರಗೊಂಡಿತು. ಮುಖ್ಯಮಂತ್ರಿ . ಪನ್ನೀರಸೆಲ್ವಂ ಅವರು ಜಲ್ಲಿಕಟ್ಟು ಸುಗ್ರೀವಾಜ್ಞೆಗೆ ಬದಲಿಯಾಗಿ ಮಸೂದೆಯನ್ನು ಮಂಡಿಸಿದರು. ಮಸೂದೆಗೆ ಕಾಂಗ್ರೆಸ್‌, ಡಿಎಂಕೆ ಹಾಗೂ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದವು. ಇದಕ್ಕೆ ಮುನ್ನ ಜಲ್ಲಿಕಟ್ಟು ಪರವಾಗಿ ಮರೀನಾ ಬೀಚ್ನಲ್ಲಿ ಕಳೆದ 6 ದಿನಗಳಿಂದ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಯನ್ನು ಕೊನೆಗೊಳಿಸಲು ಪೊಲೀಸರು ಬಲ ಪ್ರಯೋಗಿಸಿದರು. ಪ್ರತಿಭಟನಕಾರರನ್ನು ಚದುರಿಸಿ ತೆರವುಗೊಳಿಸಲು ಬೆತ್ತ ಪ್ರಹಾರ, ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ್ದರು. ಸಂದರ್ಭದಲ್ಲಿ ಹಿಂಸೆಗೆ ಇಳಿದ ಪ್ರತಿಭಟನಕಾರರು ಪೊಲೀಸ್ ಠಾಣೆಯ ಮುಂದೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದರು. ರಾಜ್ಯದ ಇತರ ಹಲವೆಡೆಗಳಲ್ಲೂ ಪ್ರತಿಭಟನೆಗಳು ನಡೆದಿದ್ದು, ಹಲವಡೆಗಳಲ್ಲಿ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ತೆಗೆದುಕೊಂಡಿದ್ದರು. ಚಿತ್ರನಟರಾದ ರಜನಿಕಾಂತ್, ಕಮಲಹಾಸನ್ ಮತ್ತಿತರರು ಶಾಂತಿ ಕಾಯ್ದುಕೊಳ್ಳುವಂತೆ ಜನತೆಗೆ ಮನವಿ ಮಾಡಿದ್ದರು. ಹಿಂಸಾಚಾರಗಳಲ್ಲಿ ಹಲವಾರು ವಾಹನಗಳು ಅಗ್ನಗಾಹುತಿಯಾಗಿ, 12 ಪೊಲೀಸರು, 20ಕ್ಕೂ ಹೆಚ್ಚು ಪ್ರತಿಭಟನಕಾರರು ಗಾಯಗೊಂಡರು.  ಸುಗ್ರೀವಾಜ್ಞೆಗೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರ ಒಪ್ಪಿಗೆ ಸಿಕ್ಕಿದ್ದರೂ ಅದು ತಾತ್ಕಾಲಿಕ, ಕಾಯಂ ಪರಿಹಾರ ಒದಗಿಸಿ ಎಂದು ಪ್ರದರ್ಶನಕಾರರು ಆಗ್ರಹಿಸಿದ್ದರು.
2017: ನವದೆಹಲಿ: ವಿದ್ಯುತ್ ಆಘಾತಕ್ಕೆ ಸಿಲುಕಿದ್ದ ತಮ್ಮನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದ ಹುಬ್ಬಳ್ಳಿಯ ಬಾಲಕಿ ಸಿಯಾ ವಾಮನಸಾ ಖೋಡೆ ಮತ್ತು ಇಂತಹುದೇ ಶೌರ್ಯ ಮೆರೆದ ಇತರ 23 ಮಂದಿ ಮಕ್ಕಳಿಗೆ ಸೋಮವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದರು. ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್ ಶೌರ್ಯ ಪ್ರಶಸ್ತಿಯನ್ನು ನೀಡಿತ್ತು. 2015 ಏಪ್ರಿಲ್ 14 ರಂದು ಸಿಯಾಳ ತಮ್ಮ ಯಲ್ಲಪ್ಪ (ಯಶ್) ಮಹಡಿಯಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಗ್ರಿಲ್ ಹಿಡಿದಿದ್ದ. ಆಗ ಸಿಯಾ ತಮ್ಮನ ಅಂಗಿ ಹಿಡಿದು ಎಳೆದು ಆತನನ್ನು ಪಾರು ಮಾಡಿದ್ದಳು. ಈಕೆಯ ಸಮಯ ಸ್ಪೂರ್ತಿಯನ್ನು ಗುರುತಿಸಿ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಎಸ್.ಜೆ.ಎಂ.ವಿ. ಸಂಘದ ಜಗದ್ಗುರು ಗಂಗಾಧರ ಪ್ರೌಢಶಾಲೆ (ಪ್ರಾಥಮಿಕ ವಿಭಾಗ)ಯಲ್ಲಿ 7ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಿಯಾ ಓದಿನಲ್ಲೂ ಚುರುಕಾಗಿದ್ದಳು.
2017: ನವದೆಹಲಿ: ಮುಂಬರುವ ಪಂಚರಾಜ್ಯ ಚುನಾವಣೆಗಳ ಹಿನ್ನೆಲೆಯಲ್ಲಿ ಕೇಂದ್ರ
ಮುಂಗಡಪತ್ರ ಮಂಡನೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್  ವಜಾಗೊಳಿಸಿತು. ಇದರಿಂದಾಗಿ ಬಜೆಟ್ ಮುಂದೂಡುವಂತೆ ಕೋರಿದ್ದ ವಿಪಕ್ಷಗಳಿಗೆ ಮುಖಭಂಗವಾದಂತಾಯಿತು. ಕೇಂದ್ರ ಮುಂಗಡಪತ್ರ ಮಂಡನೆಯಿಂದ ರಾಜ್ಯ ವಿಧಾನಸಭಾ ಚುನಾವಣೆಗಳ ಮತದಾರರ ಮನಸ್ಸಿನ ಮೇಲೆ ಪ್ರಭಾವ ಬೀರಿದಂತಾಗುವುದು ಎಂಬುದನ್ನು ಸಮರ್ಥಿಸುವಂತಹ ಪುರಾವೆಗಳು ಇಲ್ಲದೇ ಇರುವುದರಿಂದ ನಿಗದಿಯಂತ ಮುಂಗಡ ಪತ್ರವನ್ನು ಮಂಡಿಸಬಹುದು ಎಂದು ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸುತ್ತಾ ಹೇಳಿತು. ವಿರೋಧ ಪಕ್ಷಗಳು ಮಾಡಿದ್ದ ಆಕ್ಷೇಪಗಳನ್ನು ತಳ್ಳಿ ಹಾಕಿದ ಸರ್ಕಾರ ಫೆಬ್ರುವರಿ 1ರಂದು ಕೇಂದ್ರ ಮುಂಗಡಪತ್ರವನ್ನು ಮಂಡಿಸಲು ತೀರ್ಮಾನಿಸಿತ್ತು. ಕಾಂಗ್ರೆಸ್ ಮತ್ತು ಟಿಎಂಸಿ ಸೇರಿದಂತೆ ವಿರೋಧ ಪಕ್ಷಗಳು ಚುನಾವಣಾ ಆಯೋಗವನ್ನು ಪಂಚರಾಜ್ಯ ಚುನಾವಣೆ ಘೊಷಣೆಗೆ ಕೆಲ ಗಂಟೆಗಳ ಮೊದಲು ಸಂರ್ಪಸಿ ಮುಂಗಡಪತ್ರ ಮಂಡನೆ ಮುಂದೂಡುವಂತೆ ಕೋರಿದ್ದವು. ಆದರೆ ಸರ್ಕಾರ ತನ್ನ ಕ್ರಮವನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿತ್ತು. ನಿಗದಿಯಾಗಿರುವಂತೆ ಸಂಸತ್ತಿನ ಮುಂಗಡಪತ್ರದ ಪೂರ್ವಾಧದ ಅಧಿವೇಶನ ಜನವರಿ 31ರಂದು ರಾಷ್ಟ್ರಪತಿಗಳ ಭಾಷಣದೊಂದಿಗೆ ಮತ್ತು ಆರ್ಥಿಕ ಸಮೀಕ್ಷ ಮಂಡನೆಯೊಂದಿಗೆ ಆರಂಭವಾಗುವುದು. ಮರುದಿನ ಫೆಬ್ರುವರಿ 1ರಂದು ವಿತ್ತ ಸಚಿವ ಅರುಣ್ ಜೇಟ್ಲಿ ಮುಂಗಡಪತ್ರವನ್ನು ಮಂಡಿಸುವರು. ಶತಮಾನದಷ್ಟು ಹಳೆಯ ಪರಂಪರೆಯಾದ ಪ್ರತ್ಯೇಕ ರೈಲ್ವೆ ಮುಂಗಡಪತ್ರ ಮಂಡನೆಯನ್ನು ಕೈಬಿಟ್ಟು, ಮುಂಗಡಪತ್ರದ ಜೊತೆಗೇ ಅದನ್ನೂ ಸೇರಿಸಲು ಕೇಂದ್ರ ಸಚಿವ ಸಂಪುಟ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ತೀರ್ಮಾನಿಸಿತ್ತು.
2017: ನವದೆಹಲಿ: ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಪ್ರಭಾವ ಬೀರಲು ಯತ್ನಿಸಿದ್ದಕ್ಕೆ ಸಂಬಂಧಿಸಿದಂತೆ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹ ಅವರ ವಿರುದ್ಧದ ಆರೋಪಗಳ ತನಿಖೆೆಗಾಗಿ ಸುಪ್ರೀಂಕೋರ್ಟ್ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿತು. ಇದರೊಂದಿಗೆ ಮಾಜಿ ಸಿಬಿಐ ನಿರ್ದೇಶಕರಿಗೆ ಭಾರಿ ಹಿನ್ನಡೆಯಾಯಿತು. ರಂಜಿತ್ ಸಿನ್ಹ ವಿರುದ್ಧ ಮಾಡಲಾಗಿರುವ ಕಲ್ಲಿದ್ದಲು ಹಗರಣದ ತನಿಖೆಯನ್ನು ನಿರರ್ಥಕಗೊಳಿಸಲು ಯತ್ನಿಸಿದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಮಾಜಿ ಸಿಬಿಐ ವಿಶೇಷ ನಿರ್ದೇಶಕ ಎಂ.ಎಲ್. ಶರ್ಮಾ ನೇತೃತ್ವದ ಸಮಿತಿಯು ಹೇಳಿರುವುದನ್ನು ಸುಪ್ರೀಂಕೋರ್ಟ್ ಉಲ್ಲೇಖಿಸಿತು. ಸಿಬಿಐ ನಿರ್ದೇಶಕರು ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದು, ನ್ಯಾಯಾಲಯದ ಅನುಮತಿಯೊಂದಿಗೆ ಇಬ್ಬರು ಅಧಿಕಾರಿಗಳ ನೆರವು ಪಡೆಯಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿತು. ಕಲ್ಲಿದ್ದಲು ಹಗರಣ ಪ್ರಕರಣಗಳ ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಆರ್.ಎಸ್. ಚೀಮಾ ಅವರು ಸಿಬಿಐ ನಿರ್ದೇಶಕರು ಮತ್ತು ಅವರ ತಂಡಕ್ಕೆ ಕಾನೂನು ಸಂಬಂಧಿ ವಿಚಾರದಲ್ಲಿ ವಿಶೇಷ ತನಿಖಾ ತಂಡಕ್ಕೆ ನೆರವಾಗಲಿದ್ದಾರೆ. ಸಿಬಿಐ ಮುಖ್ಯಸ್ಥರು ಈ ಹಿಂದೆ ಇದೇ ಸಿಬಿಐ ಸಂಸ್ಥೆಯ  ಮುಖ್ಯಸ್ಥನಾಗಿದ್ದ ವ್ಯಕ್ತಿಯನ್ನು ತನಿಖೆಗೆ ಗುರಿಪಡಿಸುತ್ತಿರುವುದು ಸಿಬಿಐ ಇತಿಹಾಸದಲ್ಲೇ ಇದು ಪ್ರಥಮ. ಸಿಬಿಐ ನಿರ್ದೇಶಕರಾಗಿದ್ದ ವೇಳೆ ರಂಜಿತ್ ಸಿನ್ಹಾ ಅವರು ಕಲ್ಲಿದ್ದಲು ಮತ್ತು ತರಂಗಾಂತರ ಹಗರಣಗಳ ಆರೋಪಿಗಳನ್ನು ಭೇಟಿ ಮಾಡಿದ್ದರು ಎಂಬ ಆರೋಪವಿದೆ.
2017: ನವದೆಹಲಿ
: ದೇಶದಲ್ಲಿ ಮೊಬೈಲ್ ಬಳಸುತ್ತಿರುವ ಸುಮಾರು 5 ಕೋಟಿ ಜನರ ಗುರುತು ಪತ್ತೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ 2 ವಾರಗಳ ಒಳಗಾಗಿ ತಿಳಿಸುವಂತೆ ಸುಪ್ರೀಂಕೋರ್ಟ್  ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಈಗ ಮೊಬೈಲ್ ಸಿಮ್ ಕಾರ್ಡಗಳನ್ನು ಬ್ಯಾಂಕಿಂಗ್ ಉದ್ದೇಶಕ್ಕಾಗಿಯೂ ಬಳಸಬಹುದಾದ ಕಾರಣ ಮೊಬೈಲ್ ಬಳಕೆದಾರರ ಸಮರ್ಪಕ ಗುರುತಿಸುವಿಕೆ ಅತ್ಯಂತ ಅಗತ್ಯ ಎಂಬುದಾಗಿ ಅರ್ಜಿದಾರರು ಮಾಡಿದ ಮನವಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿತು. ಮೊಬೈಲ್ ಫೋನ್ ಗ್ರಾಹಕರು ವಂಚನೆಗೆ ಒಳಗಾಗದಂತೆ ರಕ್ಷಿಸುವ ಸಲುವಾಗಿ ಮೊಬೈಲ್ ಫೋನ್ ಗುರುತಿಸುವಿಕೆಗೆ ಸೂಕ್ತ ವ್ಯವಸ್ಥೆಯೊಂದನ್ನು ಮಾಡುವಂತೆಯೂ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು.
2017: ನವದೆಹಲಿ: ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಐಎಎಸ್ಮತ್ತು ಐಪಿಎಸ್ಅಧಿಕಾರಿಗಳ  ಮೇಲಿನ ಇಲಾಖಾ ವಿಚಾರಣೆಯು ಗರಿಷ್ಠ 90 ದಿನಗಳಲ್ಲಿ ಮುಗಿಯಬೇಕು. ತಪ್ಪಿತಸ್ಥರಿಗೆ ತ್ವರಿತವಾಗಿ ಶಿಕ್ಷೆ ನೀಡುವ ನಿಟ್ಟಿನಲ್ಲಿ ಸರ್ಕಾರ ಹೊಸ ನಿಯಮಾವಳಿ ರೂಪಿಸಿತು. ಅಖಿಲ ಭಾರತೀಯ ಸೇವೆಗಳ ಅಧಿಕಾರಿಗಳ ವಿಚಾರಣೆಗೆ ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆ ಸಚಿವಾಲಯ ಹೊಸ ನಿಯಮಾವಳಿ ಸಿದ್ಧಪಡಿಸಿತು. ಭಾರತೀಯ ಆಡಳಿತ ಸೇವೆ(ಐಎಎಸ್‌), ಭಾರತೀಯ ಪೊಲೀಸ್ಸೇವೆ(ಐಪಿಎಸ್‌), ಭಾರತೀಯ ಅರಣ್ಯ ಸೇನೆ(ಐಎಫ್ಎಸ್‌) ಸೇರಿದಂತೆ ಇತರೆ ವರ್ಗದ ಅಧಿಕಾರಿಗಳ ವಿಚಾರಣೆ ತ್ವರಿತವಾಗಿ ಪೂರ್ಣಗೊಳಿಸಲು ಸಹಕಾರಿಯಾಗಲಿದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ತಿಳಿಸಿದರು.  ಹೊಸ ನಿಯಮಾವಳಿ ಪ್ರಕಾರ, ಇಲಾಖಾ ವಿಚಾರಣೆ ಮತ್ತು ವರದಿ ಸಲ್ಲಿಸಲು 6 ತಿಂಗಳ ಮಿತಿ ನಿಗದಿ ಪಡಿಸಲಾಗಿದೆ. ನಿಗದಿಯಂತೆ ವಿಚಾರಣೆ ಪೂರ್ಣಗೊಳ್ಳದಿರಲು ನ್ಯಾಯಸಮ್ಮತ ಕಾರಣಗಳಿದ್ದರೆ ಗರಿಷ್ಠ 90 ದಿನಗಳ ಕಾಲಾವಕಾಶ ವಿಸ್ತರಿಸಲಾಗುತ್ತದೆ.
2017: ಲಂಡನ್‌: ಹುಟ್ಟಿನಿಂದಲೇ ಜೊತೆಯಾಗುವ ಮಾತೃಭಾಷೆಯಲ್ಲಿ ಮಾತನಾಡಲು ಹೆಚ್ಚು ಅವಕಾಶ ಸಿಗದಿದ್ದರೂ ನೆನಪಿನಲ್ಲಿ ಅಚ್ಚಾಗಿರುತ್ತದೆ ಎಂದು ಹೊಸ ಅಧ್ಯಯನ ಬಹಿರಂಗ ಪಡಿಸಿತು. ಚಿಕ್ಕ ವಯಸ್ಸಿನಲ್ಲಿ ಮನೆಯವರು ಕಲಿಸುವ ಅಥವಾ ಮಾತನಾಡುವ ಭಾಷೆ ಸುಪ್ತ ಮನಸ್ಸಿನಲ್ಲಿ ಉಳಿಯುತ್ತದೆ. ಮಕ್ಕಳು ಬೆಳೆಯುತ್ತ ಭಾಷೆ ಬದಲಾಗಿ ಎಷ್ಟೇ ವರ್ಷಗಳು ಮಾತೃಭಾಷೆ ಆಡದಿದ್ದರೂ ನೆನಪಿನಿಂದ ಮಾಸಿರುವುದಿಲ್ಲ. ಸುಪ್ತವಾಗಿ ಉಳಿದಿಕೊಂಡಿರುವ ಭಾಷಾ ಜ್ಞಾನ ಸುಲಭವಾಗಿ ಮತ್ತೆ ಮಾತೃಭಾಷೆ ಉಚ್ಚಾರಣೆ ಕಲಿಯಲು ಸಹಾಯ ಮಾಡುತ್ತದೆ. ಕುರಿತು ನೆದರ್ಲ್ಯಾಂಡ್ ರಾಡ್ಬೌಂಡ್ವಿಶ್ವವಿದ್ಯಾಲಯ ಹಾಗೂ ಇತರೆ ವಿಜ್ಞಾನಿಗಳು ಜತೆಗೂಡಿ ದಶಕಗಳ ಕಾಲ ಸಂಶೋಧನೆ ನಡೆಸಿದ್ದರು. ಡಚ್ಭಾಷೆ ಮಾತನಾಡುವ ಕೊರಿಯಾ ಮೂಲದ 29 ಮಕ್ಕಳು ಹಾಗೂ ಅಷ್ಟೇ ಪ್ರಮಾಣದ ಸ್ಥಳೀಯ ಡಚ್ಮಾತನಾಡುವ ಮಕ್ಕಳನ್ನು ಅಧ್ಯಯನದಲ್ಲಿ ಗಮನಿಸಲಾಗಿತ್ತು. ಈ ಎಲ್ಲ ಮಕ್ಕಳಿಗೆ ಕೊರಿಯನ್ಭಾಷಾ ತರಬೇತಿ ನೀಡಿ ಪುನರ್ಉಚ್ಚರಿಸುವಂತೆ ತಿಳಿಸಲಾಗಿತ್ತು. ಪ್ರಕ್ರಿಯೆಯಲ್ಲಿ ಮೂಲ ಕೊರಿಯನ್ನರು ಹೆಚ್ಚು ಸ್ಪಷ್ಟ ಮತ್ತು ಸರಿಯಾಗಿ ಕೊರಿಯನ್ಮಾತನಾಡಿದ್ದರು.
2016: ನವದೆಹಲಿ: ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆ ಮಾಡಿ ಹಲವು ವರ್ಷಗಳಿಂದ ಬಗೆಹರಿಯದೆ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಸಾಧ್ಯವಾಗುವಂತೆ ಕೇಂದ್ರ ಕಾನೂನು ಸಚಿವಾಲಯ ಮಹತ್ವಾಕಾಂಕ್ಷೆಯ ನೂತನ ಯೋಜನೆ ರೂಪಿಸುತ್ತಿದೆ. ನ್ಯಾಯಾಲಯಗಳ ಕಾರ್ಯಭಾರ ಕಡಿಮೆ ಮಾಡುವ ಸಂಬಂಧ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು ಕೇಂದ್ರ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದು, ಸಮಿತಿಯ ಸಲಹೆಗಳನ್ನು ಜಾರಿಗೆ ತರಲು ಕೇಂದ್ರ ಚಿಂತಿಸುತ್ತಿದೆ. ಹೊಸ ಯೋಜನೆಯ ಮೂಲಕ ಮುಂದಿನ ಕೆಲವು ವರ್ಷಗಳಲ್ಲಿ ನ್ಯಾಯಾಲಯಗಳ ಕಾರ್ಯಭಾರ ಕಡಿಮೆಯಾಗಲಿದ್ದು, ನ್ಯಾಯದಾನದ ಗುಣಮಟ್ಟದಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಹೊಸ ಯೋಜನೆಯನ್ವಯ ಕೇಂದ್ರ ಸರ್ಕಾರದ ಪ್ರಮುಖ ಸಚಿವಾಲಯಗಳಿಗೆ ಕಾನೂನು ಸಲಹೆಗಾರರನ್ನು ನೇಮಿಸಲಿದೆ. ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಭಾರತೀಯ ಕಾನೂನು ಸೇವೆಯ ಹಿರಿಯ ಅಧಿಕಾರಿಗಳು ಕಾನೂನು ಸಲಹೆಗಾರರಾಗಿ ನೇಮಕವಾಗಲಿದ್ದಾರೆ. ಸಲಹೆಗಾರರು ಸಚಿವಾಲಯಗಳ ಆಡಳಿತಾತ್ಮಕ ಆದೇಶಗಳು ಮತ್ತು ಕಾನೂನುಗಳಲ್ಲಿರುವ ನ್ಯೂನತೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ಅಗತ್ಯ ಬದಲಾವಣೆ ಮಾಡಲು ಸಲಹೆ ನೀಡಲಿದ್ದಾರೆ. ಮೂಲಕ ಮುಂದಿನ ದಿನಗಳಲ್ಲಿ ಆದೇಶದ ವಿರುದ್ಧ ಕಾನೂನಿನ ಹೋರಾಟಗಳು ನಡೆಯದಂತೆ ತಡೆಯಲು ಚಿಂತಿಸಲಾಗಿದೆ. ಇದರಿಂದ ಸಮಸ್ಯೆಯನ್ನು ಮೊಳಕೆಯಲ್ಲೇ ಚಿವುಟಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಯೋಚಿಸಿದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿದವು. ಪ್ರಸ್ತುತ ವಿವಿಧ ಸಚಿವಾಲಯಗಳು ಕಾನೂನು ಸಚಿವಾಲಯದ ಸಲಹೆಗಳನ್ನು ಆಗಾಗ್ಗೆ ಕೇಳುತ್ತವೆ. ಆದರೆ ಹೊಸ ಯೋಜನೆಯಿಂದ ಆಯಾ ಸಚಿವಾಲಯಗಳಲ್ಲೇ ಕಾನೂನು ತಜ್ಞರು ನೇಮಕವಾಗುವುದರಿಂದ ತ್ವರಿತಗತಿಯಲ್ಲಿ ಕೆಲಸಗಳು ನಡೆಯುತ್ತವೆ. ಇದರಿಂದ ಆಡಳಿತ ಚುರುಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಪ್ರಸ್ತುತ 3.28 ಕೋಟಿ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ, ಇವುಗಳಲ್ಲಿ ಸುಮಾರು 2.3 ಪ್ರಕರಣಗಳು ಮೋಟಾರು ವಾಹನ ಕಾಯ್ದೆ ಮತ್ತು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಗೆ ಸಂಬಂಧಿಸಿವೆ. ಹಾಗಾಗಿ ಹೊರೆಯನ್ನು ಕಡಿಮೆ ಮಾಡಲು ಕಾಯ್ದೆಯಲ್ಲಿ ಅಗತ್ಯ ಬದಲಾವಣೆ ತರುವ ಬಗ್ಗೆ ಸಹ ಚಿಂತಿಸಲಾಗುತ್ತಿದೆ ಎಂದು ಕಾನೂನು ಸಚಿವಾಲಯದ ಅಧಿಕಾರಿಗಳು ತಿಳಿಸಿದರು.
2009: ಮತ್ತೆ ಭ್ರಷ್ಟ ಅಧಿಕಾರಿಗಳ ಕೋಟೆಯನ್ನು ಬೇಧಿಸಿದ ಕರ್ನಾಟಕ ಲೋಕಾಯುಕ್ತ ಪೊಲೀಸರು ಇದೇ ಮೊದಲ ಬಾರಿಗೆ ಡಿಐಜಿ ದರ್ಜೆಯ ಐಪಿಎಸ್ ಅಧಿಕಾರಿಯೊಬ್ಬರನ್ನು ಬಲೆಗೆ ಕೆಡವಿದರು. ಅರಣ್ಯ ಇಲಾಖೆ ಸಿಐಡಿ ಘಟಕದ ಡಿಐಜಿ ಎಂ.ಸಿ. ನಾರಾಯಣಗೌಡ ಸೇರಿದಂತೆ ರಾಜ್ಯದ ವಿವಿಧೆಡೆ ಏಳು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದು, ಒಂಬತ್ತು ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಯಿತು. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಎಸ್.ಪಿ. ರಾಜು, ಬೆಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ರೇವಣ್ಣ, ಬಿಬಿಎಂಪಿ ಸಹಾಯಕ ಎಂಜಿನಿಯರ್ ಶಿವರಾಂ, ಹೊಸಪೇಟೆಯ ವಾಣಿಜ್ಯ ತೆರಿಗೆ ಇನ್ಸ್‌ಪೆಕ್ಟರ್ ಷಣ್ಮುಖಪ್ಪ ಕೃಷ್ಣಪ್ಪ ದೊಂಬರ, ಗದಗಿನ ಆಹಾರ ಮತ್ತು ನಾಗರಿಕ ಸರ್ಗರಾಜು ಇಲಾಖೆ ವ್ಯವಸ್ಥಾಪಕ ಶಿವಪ್ಪ ಮಲ್ಲೇಶಪ್ಪ ಗಡ್ಡದವರ್ ಮತ್ತು ಪಂಚಾಯತ್ ರಾಜ್ ಇಲಾಖೆ ದೇವದುರ್ಗ ವಿಭಾಗದ ಕಿರಿಯ ಎಂಜಿನಿಯರ್ ಸೈಯದ್ ನಸರತ್ ಅಲಿ ಅವರ ಮನೆ ಮೇಲೂ ದಾಳಿ ನಡೆಯಿತು.

2009: ಎರಡನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಸಾಹಿತಿ ಎಂ.ವೀರಪ್ಪ ಮೊಯಿಲಿ ಅವರು ಬರೆದ 'ರಾಮಾಯಣ ಮಹಾನ್ವೇಷಣಂ' ಕೃತಿಯ ಎರಡನೇ ಸಂಪುಟದ ಹಿಂದಿ ಅನುವಾದದ ಬಿಡುಗಡೆ ನವದೆಹಲಿಯಲ್ಲಿ ಈ ದಿನ ನಡೆಯಿತು. ಪ್ರಧಾನ ಗುರುದತ್ತ ಅವರು ಹಿಂದಿಗೆ ಅನುವಾದಿಸಿದ ಗ್ರಂಥವನ್ನು ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಬಿಡುಗಡೆ ಮಾಡಿದರು.

2009: ಪ್ರಸಿದ್ಧ ರಂಗ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ಬಾಲಕೃಷ್ಣ ಪೈ (78) ಯಾನೆ ಕುಳ್ಳಪ್ಪು ಹೃದಯಾಘಾತದಿಂದ ಕುಂದಾಪುರದಲ್ಲಿ ನಿಧನರಾದರು. ರಾಜ್ಯನಾಟಕ ಆಕಾಡೆಮಿ, ಕೊಂಕಣಿ ನಾಟಕ ಆಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಬಾಲಕೃಷ್ಣ ಪೈ ತಮ್ಮ ಕುಳ್ಳನೆ ದೇಹಕಾಯದಿಂದಾಗಿ ಕುಳ್ಳಪ್ಪು ಎಂದೇ ಜನಾನುರಾಗಿಯಾಗಿಯಾಗಿದ್ದರು. ಹಲವು ನಾಟಕಗಳನ್ನು ನಿರ್ದೇಶಿಸಿದ್ದ ಅವರು ಕೆಲವೊಂದು ನಾಟಕಗಳನ್ನು ರಚಿಸಿದ್ದರು. ನಟನೆಯಲ್ಲಿಯೂ ಸೈ ಎನಿಸಿಕೊಂಡಿದ್ದ ಅವರು ತಮ್ಮ ಹಾಸ್ಯಾಭಿನಯದಿಂದ ಆಪಾರ ಅಭಿಮಾನಿಗಳನ್ನು ಹೊಂದಿದ್ದರು. ಜಿಲ್ಲೆಯ ಪ್ರಸಿದ್ಧ ರಂಗ ಸಂಸ್ಥೆ ರೂಪಕಲಾ ನಾಟಕ ಸಂಸ್ಥೆ ಹಾಗೂ ಲಕ್ಷ್ಮೀ ವೆಂಕಟೇಶ ಕೊಂಕಣಿ ನಾಟಕ ಸಭಾದ ಸಂಸ್ಥಾಪಕರಾಗಿದ್ದ ಅವರು 70 ರ ದಶಕದಲ್ಲಿ ನಾಟಕ ಕಂಪೆನಿಯನ್ನು ಕಟ್ಟಿ ಅದರ ಉಳಿವಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದರು. ಅವರ 'ಮೂರು ಮುತ್ತುಗಳು' ನಾಟಕ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸೇರಿ ಒಟ್ಟು 600 ಕ್ಕಿಂತಲೂ ಹೆಚ್ಚಿನ ಪ್ರಯೋಗಗಳನ್ನು ಕಂಡಿತ್ತು..

2009: ಚಲನಚಿತ್ರಗಳಲ್ಲಿ ಧೂಮಪಾನ ದೃಶ್ಯಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ದೆಹಲಿ ಹೈಕೋರ್ಟ್ ರದ್ದು ಪಡಿಸಿತು. 'ಸರ್ಕಾರದ ಇಂತಹ ಕ್ರಮ ಚಿತ್ರ ನಿರ್ಮಾಪಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಚುತ್ಯಿ ತರುತ್ತದೆ' ಎಂದು ಹೈಕೋರ್ಟ್ ಸಮನ್ವಯ ಪೀಠ ಹೇಳಿತು. 2006ರ ಅಕ್ಟೋಬರಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ 'ತೆರೆ ಮೇಲೆ ಧೂಮಪಾನ ಸಲ್ಲದು' ಎಂಬ ನಿಬಂಧನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸಮನ್ವಯ ಪೀಠದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು, ಸರ್ಕಾರದ ಈ ಕ್ರಮ ನಿರ್ದೇಶಕರು ಹಾಗೂ ನಿರ್ಮಾಪಕರ ಕತ್ತು ಹಿಸುಕುವ ಕೆಲಸವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದರು. ಹಿಂದಿನ ವರ್ಷ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರು ಸರ್ಕಾರದ ಕ್ರಮವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಮುಕುಲ್ ಮುದ್ಗಲ್ ಹಾಗೂ ಸಂಜೀವ್ ಖನ್ನಾ ಅವರು ತೀರ್ಪಿನಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಕಾರಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಸಮನ್ವಯ ನ್ಯಾಯಮೂರ್ತಿಯಾಗಿ ಸಂಜಯ್ ಕಿಶನ್ ಕೌಲ್ ಅವರನ್ನು ನೇಮಕ ಮಾಡಿದ್ದರು.

2009: ಚೀನಾದ ಆಟಿಕೆಗಳ ಆಮದು ಮೇಲೆ ಮುಂದಿನ 6 ತಿಂಗಳ ಅವಧಿಗೆ ಭಾರತ ನಿಷೇಧ ಹೇರಿತು. ಅಗ್ಗದ ದರದಲ್ಲಿ ಕೆಳ ದರ್ಜೆಯ ಆಟಿಕೆಗಳನ್ನು ರವಾನಿಸಿ ದೇಶೀಯ ಮಾರುಕಟ್ಟೆಗೆ ಕಂಟಕವಾಗಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕೇಂದ್ರ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿತು. ನಿಷೇಧಕ್ಕೆ ಆಟಿಕೆ ಆಮದು ಹೆಚ್ಚಳದ ಕಾರಣವನ್ನಷ್ಟೇ ತೋರಲಾಯಿತು. ಈ ಮೊದಲೇ ಚೀನಾದ ಕ್ಷೀರ , ಕ್ಷೀರೋತ್ಪನ್ನಗಳಿಗೆ ನಿಷೇಧ ವಿಧಿಸಲಾಗಿತ್ತು.

2009: ಪಾಕಿಸ್ಥಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಪ್ರಾಚೀನ ಮೊಹೆಂಜೊದಾರೊಕ್ಕಿಂತಲೂ ಹಳೆಯದಾದ, ಸುಮಾರು 5,500 ವರ್ಷಗಳ ಇತಿಹಾಸವಿರುವ ನಾಗರಿಕತೆಯ ಕುರುಹು ಪತ್ತೆಯಾಯಿತು. 22 ಪುರಾತತ್ವಶಾಸ್ತ್ರಜ್ಞರನ್ನು ಒಳಗೊಂಡ ತಂಡವೊಂದು ಸಿಂಧ್ ಪ್ರಾಂತ್ಯದ ಸುಕ್ಕರ್ ಜಿಲ್ಲೆಯ ಲಖಿಯಾ ಜೊ ದರೊದಲ್ಲಿ ಕೈಗೊಂಡ ಉತ್ಖನನದ ವೇಳೆ ಅಮೂಲ್ಯ ಹರಳುಗಳು, ಗೃಹೋಪಯೋಗಿ ಮಡಕೆಗಳು, ತಾಮ್ರ ಮತ್ತು ಇತರ ಲೋಹಗಳು ಪತ್ತೆಯಾದವು. 'ಇದು ಮೊಹೆಂಜೊದಾರೊ ನಾಗರಿಕತೆಗಿಂತ ಹಳೆಯದು ಎಂದು ನಾವು ಸದ್ಯ ಹೇಳಬಲ್ಲೆವು' ಎಂದು ಲಖಿಯಾ ಜೊ ದರೊ ಉತ್ಖನನ ಯೋಜನೆ ನಿರ್ದೇಶಕ ಗುಲಾಂ ಮುಸ್ತಫಾ 'ಡಾನ್' ಪತ್ರಿಕೆಗೆ ತಿಳಿಸಿದರು. ಮಣ್ಣಿನ ಪಾತ್ರೆಗಳು ಅಥವಾ ತವರ ಲೇಪಿತ ಪಾತ್ರೆಗಳು ಈ ಸ್ಥಳದಲ್ಲಿ ಪತ್ತೆಯಾದವು.

2008: ತಳಿಸಂಕರದಿಂದ ನಿರ್ಮಾಣವಾದ ಅಂಗಗಳಿಂದ (ಜಿನಟಿಕಲೀ ಎಂಜಿನಿಯರ್ಡ್ ಆರ್ಗನ್ಸ್) ಮನುಷ್ಯ ಈಗಿನ ಜೀವಿತಾವಧಿಗಿಂತ 10 ಪಟ್ಟು ಅಧಿಕ ಎಂದರೆ ಸುಮಾರು 800 ವರ್ಷ ಬದುಕುವುದು ಸಾಧ್ಯವಿದೆ ಎಂದು ಖ್ಯಾತ ಸಂಶೋಧಕ ವಾಲ್ಟರ್ ಲಾಂಗೋ ಹೇಳಿದರು. ಸಂಶೋಧಕರು ಈ ಮಾತನ್ನು ಸಾಬೀತುಪಡಿಸುವುದಕ್ಕಾಗಿ ಸಾಮಾನ್ಯವಾಗಿ ಒಂದೇ ವಾರದಲ್ಲಿ ನಾಶವಾಗುವ ಕಿಣ್ವ ಪಾಚಿ (ಈಸ್ಟ್ ಫಂಗಸ್) 10 ವಾರ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಬದುಕುಳಿಯುವುದನ್ನು ತೋರಿಸಿಕೊಟ್ಟರು. ಈಸ್ಟ್ ನಲ್ಲಿನ ಎರಡು ತಳಿಗಳನ್ನು ಹೊರತೆಗೆದು ಅದನ್ನು ಕ್ಯಾಲೊರಿ ನಿಷೇಧಿತ ವಲಯದಲ್ಲಿ ಇರಿಸಿದಾಗ ಈ ಬೆಳವಣಿಗೆ ಕಂಡುಬಂತು. ಮನುಷ್ಯನ ಆಯುಷ್ಯವನ್ನೂ ಇದೇ ರೀತಿಯಲ್ಲಿ ಹೆಚ್ಚಿಸುವುದು ಸಾಧ್ಯವಿದೆ, ಆದರೆ ಯುವ ಜನತೆಗೆ ಅವಕಾಶ ಮಾಡಿಕೊಡಲಿಕ್ಕಾಗಿ ವಯೋವೃದ್ಧರು ಸಾಯುವಂತೆ ನೋಡಿಕೊಳ್ಳುವ ತಳಿಗುಣ ಮನುಷ್ಯನಲ್ಲಿ ಸಹಜವಾಗಿ ಬೆಳೆದು ಬಂದಿರಬೇಕು ಎಂದು ಅವರು ಅಂದಾಜಿಸಿದರು.

2008: ನಕಲಿ ಛಾಪಾ ಕಾಗದದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲಾ ತೆಲಗಿಯು ಸರ್ಕಾರಕ್ಕೆ ಕೋಟಿಗಟ್ಟಲೆ ವಂಚನೆ ಮಾಡಿದ ಹಗರಣವನ್ನು ಮೊತ್ತ ಮೊದಲಿಗೆ ಬಯಲಿಗೆಳೆದ ತಮಗೆ ನಿಯಮದ ಪ್ರಕಾರ ಪತ್ತೆಯಾದ ಹಣದ ಪಾಲು ನೀಡಲು ಸರ್ಕಾರಕ್ಕೆ ಆದೇಶಿಸುವಂತೆ ಜಯಂತ್ ತಿನೇಕರ್ ಹೈಕೋರ್ಟ್ ಮೊರೆ ಹೊಕ್ಕರು. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಲು ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಆದೇಶಿಸಿತು. ಬೆಳಗಾವಿ ಜಿಲ್ಲೆಯ ಖಾನಾಪುರದ ಬಸ್ ನಿಲ್ದಾಣದ ಬಳಿ ಹಲಸಿನ ಹಣ್ಣು ಮಾರಿಕೊಂಡಿದ್ದ ತೆಲಗಿ ಏಕಾಏಕಿ ಸಿರಿವಂತನಾದುದಕ್ಕೆ ಸಂದೇಹ ಬಂದ ಕಾರಣ, ಅದರ ಬೆನ್ನಟ್ಟಿ ಹೋದ ತಮಗೆ ಆತನ ಜಾಲದ ಬಗ್ಗೆ ತಿಳಿದುಬಂತು ಎಂದು ತಿನೇಕರ್ ಅರ್ಜಿಯಲ್ಲಿ ತಿಳಿಸಿದ್ದಾರೆ. ತೆಲಗಿಯ ಕಾರ್ಯದ ಬಗ್ಗೆ 1996ರಲ್ಲಿಯೇ ಪೊಲೀಸರಲ್ಲಿ ದೂರು ದಾಖಲಿಸಿದ್ದೆ. 1998ರಲ್ಲಿ ಅಂದಿನ ರಾಷ್ಟ್ರಪತಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದೆ. ತಾವು ಈ ರೀತಿ ಮಾಡಿದ ಕಾರಣವೇ ತನಿಖೆ ನಡೆಸಲಾಯಿತು. ಸರ್ಕಾರಕ್ಕೆ ಸುಮಾರು 121 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವ ಹಗರಣ ತನಿಖೆ ನಂತರ ಬೆಳಕಿಗೆ ಬಂತು ಎಂದು ಅವರು ತಿಳಿಸಿದರು. ಇಂತಹ ಪ್ರಕರಣಗಳನ್ನು ಬಹಿರಂಗ ಪಡಿಸಿದರೆ ಆ ಮೊತ್ತದ ಇಂತಿಷ್ಟು ಪಾಲು ಬಹಿರಂಗ ಪಡಿಸಿದ ವ್ಯಕ್ತಿಗೆ ನೀಡಬೇಕು ಎಂದು ಆದಾಯ ತೆರಿಗೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸರ್ಕಾರ ತಮಗೆ ಕೇವಲ ಎರಡು ಸಾವಿರ ರೂಪಾಯಿಗಳನ್ನು ನೀಡಿ ಕೈತೊಳೆದುಕೊಂಡಿದೆ ಎಂದು ತಿನೇಕರ್ ದೂರಿದರು. ತಮಗೆ ಕನಿಷ್ಠ ಒಂದು ಕೋಟಿ ರೂಪಾಯಿ ನೀಡಲು ಆದೇಶಿಸುವಂತೆ ಏಕಸದಸ್ಯಪೀಠದ ಮುಂದೆ ಅರ್ಜಿ ಸಲ್ಲಿಸಿದಾಗ, ಪೀಠವು 2006ರ ಆಗಸ್ಟಿನಲ್ಲಿ ಸಿವಿಲ್ ಕೋರ್ಟಿನಲ್ಲಿ ದಾವೆ ಹೂಡುವಂತೆ ಆದೇಶಿಸಿತು. ಈ ಆದೇಶವನ್ನು ರದ್ದು ಮಾಡಿ, ತಮಗೆ ಸೂಕ್ತ ಮೊತ್ತ ನೀಡಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಅವರು ಕೋರಿದರು.

2008: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಅವ್ಯವಹಾರ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಅಕಾಡೆಮಿಯ ಆಡಳಿತ ಮಂಡಳಿಯನ್ನು ರದ್ದು ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿತು. ವಿಶ್ವ ಕೊಡವ ಮೇಳದ ಹೆಸರಿನಲ್ಲಿ ಸರ್ಕಾರದ ಅನುಮತಿ ಪಡೆಯದೆ ಒಂದು ಸಾವಿರ ರೂಪಾಯಿ ಮುಖ ಬೆಲೆಯ ಲಾಟರಿ ಟಿಕೆಟುಗಳನ್ನು ಮುದ್ರಿಸಿ ಮಾರಾಟ ಮಾಡಿದ್ದಲ್ಲದೆ, ಗಣ್ಯರ ಹೆಸರಿನಲ್ಲಿ ನಕಲಿ ಸಹಿ ಸೃಷ್ಟಿಸಿ ಲಕ್ಷಾಂತರ ರೂಪಾಯಿ ದುರುಪಯೋಗಪಡಿಸಿಕೊಂಡಿರುವ ಆರೋಪಗಳ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿತು.

2008: ವಿದ್ವಾಂಸರಾದ ಪಂಡಿತ ಸುಧಾಕರ ಚತುರ್ವೇದಿ, ಗುರುಮೂರ್ತಿ ಪೆಂಡಕೂರು, ಸಾಹಿತಿಗಳಾದ ಡಾ. ಬಿ.ನಂ.ಚಂದ್ರಯ್ಯ, ಪ್ರೊ.ಬಸವರಾಜ ಪುರಾಣಿಕ, ಡಾ.ಸರಜೂ ಕಾಟ್ಕರ್ ಅವರು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ 2007- 08ರ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾದರು. ಈಶ್ವರ ಚಂದ್ರ, ಸ್ನೇಹಲತಾ ರೋಹಿಡೇಕರ್ ಸೇರಿದಂತೆ ಐವರ ಕೃತಿಗಳನ್ನು ಅಕಾಡೆಮಿಯ 2006ರ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದೂ ಅಕಾಡೆಮಿ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ ಬೆಂಗಳೂರಿನಲ್ಲಿ ಪ್ರಕಟಿಸಿದರು.

2008: ಬೆಂಗಳೂರಿನ ಬಳಿಯ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಾರ್ಚ್ 2008ರ 28ರಂದು ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸುವರು ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರಕಟಿಸಿದರು.

2008: ಸತತ ಏಳು ವಹಿವಾಟಿನ ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡು ಹೂಡಿಕೆದಾರರಲ್ಲಿ ತಲ್ಲಣ ಮೂಡಿಸಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಈದಿನ ಚೇತರಿಕೆ ಹಾದಿಯಲ್ಲಿ ಸಾಗಿ ವಹಿವಾಟುದಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು. ಏಳು ದಿನಗಳಲ್ಲಿ ಕೊಚ್ಚಿಕೊಂಡು ಹೋಗಿದ್ದ ಒಟ್ಟು ಮಾರುಕಟ್ಟೆ ಮೌಲ್ಯದ ಐದರಲ್ಲಿ ಒಂದು ಭಾಗದಷ್ಟು ಸಂಪತ್ತನ್ನು ಈದಿನ ಮರಳಿ ಪಡೆದಂತಾಗಿದ್ದು ಹೂಡಿಕೆದಾರರ ಮೊಗದಲ್ಲಿ ಮತ್ತೆ ಸಂತಸ ಅರಳಿತು. 7 ದಿನಗಳ ಕುಸಿತದ ಪರಿಣಾಮವಾಗಿ 15.58 ಲಕ್ಷ ಕೋಟಿ ರೂಪಾಯಿಗಳಷ್ಟು ಸಂಪತ್ತು, ಸೂಚ್ಯಂಕ ಕುಸಿತದ ಕಾರಣಕ್ಕೆ ಕೊಚ್ಚಿಕೊಂಡು ಹೋಗಿತ್ತು. ಪೇಟೆಯಲ್ಲಿ ವಹಿವಾಟು ನಡೆಸುವ ಎಲ್ಲ ಷೇರುಗಳ ಒಟ್ಟು ಮಾರುಕಟ್ಟೆ ಮೊತ್ತವು ಹಿಂದಿನ ದಿನ 55,56,177 ಕೋಟಿ ರೂಪಾಯಿಗಳಷ್ಟಿತ್ತು. ಅದು ಈದಿನ 58,92,706 ಕೋಟಿ ರೂಪಾಯಿಗಳಿಗೆ ಏರಿತು.

2008: ಯಾವುದೇ ಒತ್ತಡ ಅಥವಾ ವಾದಕ್ಕೆ ಮಣಿದು ಸೇತುಸಮುದ್ರಂ ಕಡಲು ಕಾಲುವೆ ಯೋಜನೆಯನ್ನು ನಿಲ್ಲಿಸಬಾರದು ಎಂದು ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತು. ತಮಿಳುನಾಡು ವಿಧಾನಸಭೆಯಲ್ಲಿ ಸಾಂಪ್ರದಾಯಿಕ ಭಾಷಣ ಮಾಡಿದ ರಾಜ್ಯಪಾಲ ಎಸ್. ಎಸ್. ಬರ್ನಾಲಾ, ಈ ಯೋಜನೆ ತಮಿಳುನಾಡು ಜನರ ದೀರ್ಘಕಾಲೀನ ಕನಸಾಗಿದೆ. 1860ರಿಂದ ಈ ಯೋಜನೆ ಬಗ್ಗೆ ಅಧ್ಯಯನ ನಡೆದಿದೆ. ಎಂಜನಿಯರಿಂಗ್ ಕ್ಷೇತ್ರದ ದಿಗ್ಗಜರೆಲ್ಲ ಸೇತುಸಮುದ್ರಂ ಯೋಜನೆಯ ಕಾರ್ಯ ಸಾಧ್ಯತೆ ಬಗ್ಗೆ ಹೇಳಿದ್ದಾರೆ ಎಂದು ನುಡಿದರು.

2008: ಎಸ್ ಜಿ ಎಫ್ ಪ್ರಾದೇಶಿಕ ಪಕ್ಷವು ಈದಿನ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಂಡಿತು. ಈ ಬೆಳವಣಿಗೆಯಿಂದಾಗಿ 40 ಆಸನಗಳ ಗೋವಾ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯೆ 16ರಿಂದ 18ಕ್ಕೆ ಏರಿದಂತಾಯಿತು. ಎಸ್ ಜಿ ಎಫ್ ವಿಲೀನ ಪ್ರಕ್ರಿಯೆಯಿಂದಾಗಿ ವಿಧಾನ ಸಭೆ ಸದಸ್ಯರಾದ ಚರ್ಚಿಲ್ ಅಲೆಮಾವೊ ಮತ್ತು ಅಲೆಕ್ಸೊ ರೆಜಿನಾಲ್ಡೊ ಲಾರೆನ್ಸ್ ಕಾಂಗ್ರೆಸ್ ಪಕ್ಷ ಸೇರಿದಂತಾಯಿತು.

2008: ದೇಶದಲ್ಲಿನ ಶೇಕಡಾವಾರು ಜನಸಂಖ್ಯೆಯ ಆಧಾರದ ಮೇಲೆ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ದಲಿತರಿಗೆ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ಶಿಫಾರಸ್ಸು ಮಾಡಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು. ಪರಿಶಿಷ್ಟರಿಗೆ ಈಗ ನೀಡಲಾಗುತ್ತಿರುವ ಶೇಕಡಾ 15 ಕೋಟಾಕ್ಕೆ ಧಕ್ಕೆ ಬಾರದಂತೆ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ದಲಿತರಿಗೆ ಜನಸಂಖ್ಯೆಯ ಅಧಾರದ ಮೇಲೆ ಕೇಂದ್ರ ಸರ್ಕಾರ ಮೀಸಲಾತಿ ನೀಡಬಹುದು ಎಂದು ಆಯೋಗವು ಸರ್ಕಾರಕ್ಕೆ ಬರೆದ ಪತ್ರವನ್ನು ಸರ್ಕಾರದ ಪರ ವಕೀಲರು ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಸುಪ್ರೀಂ ಕೋರ್ಟಿನ ಆದೇಶದಂತೆ ಮೀಸಲಾತಿ ಶೇಕಡಾ 50ರಷ್ಟು ಮೀರದಂತೆ ನೋಡಿಕೊಂಡು ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗೆ ತಿಳಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

2008: ಮಾವೋವಾದಿಗಳ ಲೇಖನಗಳನ್ನು ಮುದ್ರಿಸುತ್ತಿದ್ದ ಮುದ್ರಣಾಲಯವನ್ನು ಪೊಲೀಸರು ಪತ್ತೆ ಹಚ್ಚಿ ಅದನ್ನು ಮುಟ್ಟುಗೋಲು ಹಾಕಿಕೊಂಡು ಅಪಾರ ಪ್ರಮಾಣದ ದೇಶೀಯ ಬಂದೂಕುಗಳನ್ನು ವಶಪಡಿಸಿಕೊಂಡರು. ಈ ಸಂಬಂಧ ಛತ್ತೀಸಗಢದಲ್ಲಿ ಹಲವರನ್ನು ವಶಕ್ಕೆ ತೆಗೆದುಕೊಂಡು ಡ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು.

2007: ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2005-06ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ನಟಿ ಜಯಂತಿ ಅವರಿಗೆ ರಾಜ್ ಕುಮಾರ್ ಪ್ರಶಸ್ತಿ, ವಿ. ರವಿಚಂದ್ರನ್ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಛಾಯಾಗ್ರಾಹಕ ಎಸ್. ರಾಮಚಂದ್ರ ಅವರಿಗೆ ಜೀವಮಾನದ ಸಾಧನೆಗಾಗಿ ನೀಡಲಾಗುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

2007: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಎಂ.ಎಸ್. ಚಂದ್ರಶೇಖರ್ (83) ಬೆಂಗಳೂರಿನಲ್ಲಿ ನಿಧನರಾದರು.  ಮೂಲತಃ ಮೈಸೂರಿನವರಾದ ಚಂದ್ರಶೇಖರ್ ಅವರು ಅಜಂತಾ ಗುಹೆಗಳಲ್ಲಿನ ಚಿತ್ರಕಲೆಗಳ ಪ್ರತಿಮಾಡುವಲ್ಲಿ ಖ್ಯಾತಿ ಗಳಿಸಿದ್ದರು. ಅವರ ಕಲಾಕೃತಿಗಳನ್ನು ವಿಧಾನಸೌಧ, ಸಂಸತ್ ಭವನ, ವೆಂಕಟಪ್ಪ ಕಲಾಭವನ ಹಾಗೂ ಅಮೆರಿಕದ ವಸ್ತುಸಂಗ್ರಹಾಲಯಗಳಲ್ಲಿ ಸಂಗ್ರಹಿಸಿ ಇಡಲಾಗಿದೆ.

2007: ಅಂತಾರಾಷ್ಟ್ರೀಯ ಕರೆ, ನಿಮಿಷಕ್ಕೆ ಕೇವಲ 95 ಪೈಸೆ. ಇದು ವರ್ಲ್ಡ್ ಫೋನ್ ಇಂಟರ್ನೆಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ಡಿನ ಕೊಡುಗೆ. ಯಾವುದೇ ಶಾಸನಬದ್ಧ ಇಂಟರ್ನೆಟ್ ಟೆಲಿಫೋನಿ ಜಾಲದಲ್ಲಿ ಇದು ಅತ್ಯಂತ ಅಗ್ಗ. ನಿಮಿಷಕ್ಕೆ ಕೇವಲ 95 ಪೈಸೆ ದರದ ಈ ಅಂತಾರಾಷ್ಟ್ರೀಯ ಕರೆ ಸೇವೆಯನ್ನು ವರ್ಲ್ಡ್ ಫೋನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಆರಂಭಿಸಿತು. ಈ ವ್ಯವಸ್ಥೆಯಡಿಯಲ್ಲಿ ಅಮೆರಿಕ, ಇಂಗ್ಲೆಂಡ್, ಕೆನಡಾ, ಫ್ರಾನ್ಸ್, ಜರ್ಮನಿ, ಹಾಂಕಾಂಗ್, ಇಟಲಿ, ಸಿಂಗಪುರ, ಸ್ವಿಟ್ಜರ್ ಲ್ಯಾಂಡ್ ಸೇರಿದಂತೆ 30 ರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಬಹುದು. ವರ್ಲ್ಡ್ ಫೋನಿನ ವೆಬ್ ಸೈಟಿನಿಂದ (www.worldphone.in) ಡಯಲರನ್ನು ಡೌನ್ ಲೋಡ್ ಮಾಡಿಕೊಂಡು ಗ್ರಾಹಕರು ಈ ಅತೀ ಅಗ್ಗದ ಅಂತಾರಾಷ್ಟ್ರೀಯ ಕರೆಯ ಉಪಯೋಗ ಮಾಡಿಕೊಳ್ಳಬಹುದು. ಬ್ರಾಂಡೆಡ್ ಇಂಟರ್ನೆಟ್ ಪ್ರೊಟೊಕಾಲ್ ಫೋನ್ ಅಳವಡಿಸಿಕೊಳ್ಳುವ ಮೂಲಕವೂ ಈ ಕರೆ ಮಾಡಬಹುದು. ಕಂಪೆನಿಯ ಪೂರ್ವ ಪಾವತಿ ಇಂಟರ್ನೆಟ್ ಟೆಲಿಫೋನಿ ಕಾರ್ಡುಗಳನ್ನು ರೂ. 100, ರೂ. 250, ರೂ. 500 ಮತ್ತು ರೂ. 1000ದ ಮೊತ್ತಗಳಲ್ಲಿ ಒದಗಿಸುತ್ತದೆ. ಇವುಗಳ ಅವಧಿ 100 ದಿನಗಳು. ಕಾರ್ಡುಗಳನ್ನು ವರ್ಲ್ಡ್ ಟೆಲಿಫೋನ್ ವೆಬ್ ಸೈಟ್ ಅಥವಾ ಬಿಗ್ ಬಜಾರ್, ಆಕ್ಸಿಜನ್, ಇ ಪಿ ಆರ್ ಎಸ್ ಮತ್ತು ಪೇ ವರ್ಲ್ಡ್ ಸೇರಿದಂತೆ ಬಿಡಿ ಮಾರಾಟಗಾರರಿಂದ ಪಡೆಯಬಹುದು.

2006: ಬಾಲಿವುಡ್ಡಿನ ಖ್ಯಾತನಟಿ ಶಬಾನಾ ಆಜ್ಮಿ ಪ್ರತಿಷ್ಠಿತ ಕ್ರಿಸ್ಟಲ್ ಪ್ರಶಸ್ತಿಗೆ ಆಯ್ಕೆಯಾದರು. ವಿಶ್ವ ಆಥರ್ಿಕ ವೇದಿಕೆಯ ಈ ಪ್ರಶಸ್ತಿಯನ್ನು ಕಲಾಕ್ಷೇತ್ರದಲ್ಲಿ ಶಬಾನಾ ಅವರು ತೋರಿದ ಅಸಾಧಾರಣ ಸಾಧನೆಗಾಗಿ ನೀಡಲಾಯಿತು. ಹಾಲಿವುಡ್ ಸೂಪರ್ ಸ್ಟಾರ್ ಮೈಕೆಲ್ ಡಗ್ಲಾಸ್ ಅವರ ಜೊತೆಗೆ ಶಬಾನಾ ಈ ಪ್ರಶಸ್ತಿಯನ್ನು ಹಂಚಿಕೊಂಡರು.

2006: ಬೇರೆ ಪಕ್ಷಗಳ ಮುಖಂಡರು ಜೆಡಿ(ಎಸ್) ಒಡೆಯಲು ನಡೆಸಿದ ಸಂಚನ್ನು ವಿಫಲಗೊಳಿಸಿ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಎಚ್. ಡಿ. ಕುಮಾರಸ್ವಾಮಿ ಮಾಡಿರುವ ಕೆಲಸವನ್ನು ಶ್ಲಾಘಿಸುವ ಮೂಲಕ ಜೆಡಿ(ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ತಮ್ಮ ಮಗನ ಕ್ಷಿಪ್ರಕ್ರಾಂತಿಯನ್ನು ಬೆಂಬಲಿಸಿದರು.

2006: ಕ್ಲೀವ್ ಲ್ಯಾಂಡಿನ ವೆಸ್ಟರ್ನ್ ರಿಸರ್ವ್ ಬಿಸಿನೆಸ್ ಸ್ಕೂಲನ್ನು 2003ರಲ್ಲಿ ಏಳೂವರೆ ಗಂಟೆಗಳ ಕಾಲ ಒತ್ತೆಸೆರೆ ಇಟ್ಟುಕೊಂಡು ಒಬ್ಬ ವಿದ್ಯಾರ್ಥಿಯನ್ನು ಕೊಂದು ಇನ್ನಿಬ್ಬರನ್ನು ಗಾಯಗೊಳಿಸಿದ್ದಕ್ಕಾಗಿ ಕೋಲ್ಕತ್ತಾದಲ್ಲಿ ಜನಿಸಿದ ಅಮೆರಿಕದ ನಿವಾಸಿ ಬಿಸ್ವನಾಥ ಹಲ್ದರ್ ಗೆ (65) ಓಹಿಯೋದ ನ್ಯಾಯಾಧೀಶರು ಜೀವಾವಧಿ ಸಜೆಗೆ ಶಿಫಾರಸು ಮಾಡಿದರು. 2003ರ ಮೇ 9ರಂದು ನಡೆದ ಘಟನೆಯಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡಿನ ಜೊತೆಗೆ ಸ್ಕೂಲಿಗೆ ನುಗ್ಗಿದ್ದ ಹಲ್ದರ್ ಏಳೂವರೆ ಗಂಟೆ ಕಾಲ ಸ್ಕೂಲನ್ನು ವಶಕ್ಕೆ ತೆಗೆದುಕೊಂಡು ಯದ್ವಾತದ್ವ ಗುಂಡು ಹಾರಿಸಿ ನಾರ್ಮನ್ ವ್ಯಾಲೇಸ್ ಎಂಬಾತನನ್ನು ಕೊಂದು ಇನ್ನಿಬ್ಬರನ್ನು ಗಾಯಗೊಳಿಸಿದ್ದ. ಭಾರತದ ಉದ್ಯಮಿಗಳಿಗೆ ನೆರವಾಗುವ ಸಲುವಾಗಿ ತಾನು ರೂಪಿಸಿದ್ದ ವೆಬ್ ಸೈಟನ್ನು ಈ ಶಾಲೆಯ ಕಂಪ್ಯೂಟರ್ ಲ್ಯಾಬೋರೇಟರಿಯ ನೌಕರನೊಬ್ಬ ಹಾಳುಗಡೆವಿದ್ದಾನೆ ಎಂಬ ಶಂಕೆಯಿಂದ ಆತ ಈ ಕೃತ್ಯ ಎಸಗಿದ್ದ.

1977: ಭಾರತದಲ್ಲಿ ಜನತಾ ಪಕ್ಷದ ಉದಯವಾಯಿತು. ಆಳುವ ಕಾಂಗ್ರೆಸ್ ಮತ್ತು ತುರ್ತು ಪರಿಸ್ಥಿತಿಯ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿ ಜನತಾ ಪಕ್ಷವನ್ನು ಹುಟ್ಟು ಹಾಕಿದವು. ಕಾಂಗ್ರೆಸ್ (ಸಂಸ್ಥಾ), ಜನಸಂಘ, ಭಾರತೀಯ ಲೋಕದಳ ಮತ್ತು ಸಂಯುಕ್ತ ಸಮಾಜವಾದಿ ಪಕ್ಷಗಳು ಈ ಜನತಾ ಪಕ್ಷದಲ್ಲಿ ವಿಲೀನಗೊಂಡವು.

1931: ಲಾರ್ಡ್ ಇರ್ವಿನ್ ಮೊತ್ತ ಮೊದಲ ಬಾರಿಗೆ ನವದೆಹಲಿಯ `ವೈಸ್ ರಾಯ್ ಹೌಸ್' ನಲ್ಲಿ ವಾಸ್ತವ್ಯ ಹೂಡಿದರು. ಈ ಕಟ್ಟಡ ಈಗ `ರಾಷ್ಟ್ರಪತಿ ಭವನ' ಆಗಿದೆ. ಎಡ್ವಿನ್ ಲ್ಯುಟಿಯೆನ್ಸ್ ಈ ಕಟ್ಟಡದ ವಿನ್ಯಾಸಕಾರರಾಗಿದ್ದು, 1913ರಲ್ಲಿ ಕಟ್ಟಡ ನಿರ್ಮಾಣ ಆರಂಭವಾಯಿತು. 18,580 ಚದರ ಅಡಿಗಳಷ್ಟು ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಈ ಕಟ್ಟಡದ ಒಟ್ಟು ವೆಚ್ಚ 1.40 ಕೋಟಿ ರೂಪಾಯಿಗಳು. ಲ್ಯೂಟಿಯನ್ಸನ ಶುಲ್ಕ 5000 ಪೌಂಡುಗಳು.

1927: ಬಾಳಾ ಕೇಶವ ಠಾಕ್ರೆ ಜನಿಸಿದರು. ಇವರು ವ್ಯಂಗ್ಯಚಿತ್ರಕಾರರಾಗಿ ವೃತ್ತಿ ಆರಂಭಿಸಿ ಮಹಾರಾಷ್ಟ್ರದ ಶಿವಸೇನೆ ಸ್ಥಾಪನೆ ಮೂಲಕ ಖ್ಯಾತಿ ಪಡೆದರು.

1897: ಈದಿನ ಜನಿಸಿದ ಸುಭಾಸ್ ಚಂದ್ರ ಬೋಸ್ ಅವರು ಭಾರತೀಯ ಕ್ರಾಂತಿಕಾರಿ ನಾಯಕರಾಗಿ ಎರಡನೇ ಜಾಗತಿಕ ಸಮರ ಕಾಲದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತ ರಾಷ್ಟ್ರೀಯ ಸೇನೆ (ಆಜಾದ್ ಹಿಂದ್ ಫೌಜ್/ ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಥಾಪಿಸಿದರು. `ನೇತಾಜಿ' ಎಂದೇ ಜನಪ್ರಿಯರಾದ ಇವರು 1945ರಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ಮೃತರಾದರು ಎಂಬುದಾಗಿ ಸುದ್ದಿ ಪ್ರಸಾರಗೊಂಡರೂ ಇತ್ತೀಚಿನವರೆಗೂ ಅವರು ಬದುಕಿದ್ದರು ಎಂದೇ ಬಹುತೇಕ ಭಾರತೀಯರು ನಂಬಿದ್ದರು.

1893: ಸಂಗೀತ ತಜ್ಞ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮ (23-1-1893ರಿಂದ 11-3-1979) ಅವರು ಕೃಷ್ಣಮಾಚಾರ್ಯ- ಅಲಮೇಲು ಮಂಗಮ್ಮ ದಂಪತಿಯ ಮಗನಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಂಬದೂರು ತಾಲ್ಲೂಕಿಗೆ ಸೇರಿದ ರಾಳ್ಲಪಲ್ಲಿಯಲ್ಲಿ ಜನಿಸಿದರು.

1814: ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ (1814-1893) ಹುಟ್ಟಿದ ದಿನ. ಬ್ರಿಟಿಷ್ ಸೇನಾಧಿಕಾರಿ ಹಾಗೂ ಪ್ರಾಕ್ತನ ತಜ್ಞನಾಗಿದ್ದ ಈತ ಸಾರಾನಾಥ, ಸಾಂಚಿ ಸೇರಿದಂತೆ ಭಾರತದ ಹಲವಾರು ಚಾರಿತ್ರಿಕ ಸ್ಥಳಗಳಲ್ಲಿ ಉತ್ಖನನ ನಡೆಸಿದ ವ್ಯಕ್ತಿ. ಭಾರತೀಯ ಪ್ರಾಚ್ಯವಸ್ತು ಸಮೀಕ್ಷಾ ಸಂಸ್ಥೆಯ ಮೊದಲ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ.

No comments:

Post a Comment