Thursday, January 24, 2019

ಇಂದಿನ ಇತಿಹಾಸ History Today ಜನವರಿ 24

ಇಂದಿನ ಇತಿಹಾಸ History Today ಜನವರಿ 24
2019: ನವದೆಹಲಿ: ದೇಶದ ಭದ್ರತೆ ಹಾಗೂ ರಕ್ಷಣೆಗಾಗಿ ಹೋರಾಡಿದ ವೀರ ಸೇನಾನಿಗೆ ನೀಡಲಾಗುವ ಶಾಂತಿ ಕಾಲದಅಶೋಕ ಚಕ್ರ ಶೌರ್ಯ ಪ್ರಶಸ್ತಿಗೆ, ಎಪ್ಪತ್ತನೆಯ ಗಣರಾಜ್ಯೋತ್ಸವದಲ್ಲಿ ಅಪ್ಪಟ ಭಾರತೀಯ ಯೋಧನಾಗಿ ಪರಿವರ್ತಿತನಾದ ಉಗ್ರಗಾಮಿ, ಲಾನ್ಸ್ ನಾಯಕ್ ನಜೀರ್ ವಾನಿ ಪಾತ್ರರಾದರು.  ಶಾಂತಿ ಕಾಲದ ಹೋರಾಟಕ್ಕಾಗಿ ನೀಡಲಾಗುವ ರಾಷ್ಟ್ರದ ಅತ್ಯುನ್ನತ ಶೌರ್ಯ ಪ್ರಶಸ್ತಿಗೆ ಪಾತ್ರರಾದ ಕಾಶ್ಮೀರದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.  ಒಂದಾನೊಂದು ಕಾಲದಲ್ಲಿ ಉಗ್ರಗಾಮಿಯಾಗಿದ್ದು, ಬಳಿಕ ಭಾರತೀಯ ಸೇನೆಯೇ ಪ್ರಾಯೋಜಿಸಿದ್ದ ಕಾಶ್ಮೀರದಇಖ್ವಾನಿಸ್ ಹೆಸರಿನ ಉಗ್ರಗಾಮಿ ವಿರೋಧೀ ಸಂಘಟನೆಯ ಸದಸ್ಯನಾಗಿದ್ದ ೩೯ರ ಹರೆಯದ ನಜೀರ್ ವಾನಿ, ೨೦೦೪ರಲ್ಲಿ ಭಾರತೀಯ ಪಡೆಗೆ ಸೇರ್ಪಡೆಯಾಗಿದ್ದರು. ೨೦೧೮ರ ನವೆಂಬರ್ ೨೫ರಂದು ಕರ್ತವ್ಯ ನಿರ್ವಹಿಸುತ್ತಾ ಅವರು ಹುತಾತ್ಮರಾಗಿದ್ದರುಶೋಪಿಯಾನಿನ ಬಟಾಗುಂಡ ಗ್ರಾಮದಲ್ಲಿ ನಡೆದ ಭೀಕರ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರಗಾಮಿಗಳನ್ನು ಸದೆಬಡಿದಿದ್ದ ನಜೀರ್ ವಾನಿ, ಬಳಿಕ ಸ್ವತಃ ಹುತಾತ್ಮರಾಗಿದ್ದರು. ಕಾರ್ಯಾಚರಣೆಯಲ್ಲಿ ಉಗ್ರಗಾಮಿಗಳು ಅಡಗಿರುವ ಸುದ್ದಿಯನ್ನು ಅನುಸರಿಸಿ ಮುತ್ತಿಗೆ ಹಾಕಲಾಗಿತ್ತು. ವಾನಿ ಮತ್ತು ಅವರ ತಂಡವು ಭಯೋತ್ಪಾದಕರ ಎಲ್ಲ ಪರಾರಿ ಮಾರ್ಗಗಳನ್ನೂ ಬಂದ್ ಮಾಡಿತ್ತು. ಲಷ್ಕರ್ --ತೊಯ್ಬಾ ಭಯೋತ್ಪಾದಕರು ಗುಂಡು ಹಾರಾಟದೊಂದಿಗೆ ಗ್ರೆನೇಡುಗಳನ್ನು ಎಸೆಯುತ್ತಾ  ಯೋಧರು ರಚಿಸಿದ್ದ ಭದ್ರಕೋಟೆಯ ಒಳಾವರಣವನ್ನು ಛೇದಿಸಿದ್ದರು. ಉಗ್ರಗಾಮಿಗಳ ದಾಳಿಗೆ ಜಗ್ಗದ ವಾನಿ ಗುಂಡಿನ ವಿನಿಮಯದ ಮಧ್ಯೆ ನೆಲದಲ್ಲಿ ತೆವಳುತ್ತಾ ಮುಂದಕ್ಕೆ ನುಗ್ಗಿ ಭಯೋತ್ಪಾದಕನೊಬ್ಬನನ್ನು ಕೊಂಡು ಹಾಕಿದ್ದರು. ಅಲ್ಲಿಂದ ಇನ್ನೊಬ್ಬ ಭಯೋತ್ಪಾದಕ ಅವಿತಿದ್ದ ಮನೆಯತ್ತ ಚಲಿಸಿದ ವಾನಿ, ಭಯೋತ್ಪಾದಕನೊಂದಿಗೆ ನೇರ ಘರ್ಷಣೆಗೆ ಇಳಿದಿದ್ದರು. ಹಲವಾರು ಗುಂಡೇಟುಗಳಿಂದ ಗಾಯಗೊಂಡ ವಾನಿ ಎರಡನೇ ಭಯೋತ್ಪದಕನನ್ನೂ ಕೊಂದು ಹಾಕುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆ ಮುಕ್ತಾಯದ ವೇಳೆಗೆ ಎಲ್ಲ ಆರೂ ಮಂದಿ ಭಯೋತ್ಪಾದಕರನ್ನೂ ಕೊಂದುಹಾಕುವಲ್ಲಿ ಭಾರತೀಯ ಸೇನೆಯ ಯಶಸ್ವಿಯಾಗಿತ್ತು. ಆದರೆ ತೀವ್ರವಾಗಿ ಗಾಯಗೊಂಡ ನಜೀರ್ ವಾನಿ ಬದುಕಿ ಉಳಿಯಲಿಲ್ಲ.  ‘ಯೋಧರ ಗುಂಪಿನಲ್ಲಿ ಲಾನ್ಸ್ ನಾಯಕ್ ನಜೀರ್ ವಾನಿ  ’ದಂತಕಥೆಯಾಗಿದ್ದಾರೆ ಎಂದು ಸೇನಾ ಮೂಲಗಳು ಬಣ್ಣಿಸಿವೆ. ೧೯೯೦ರ ದಶಕದಲ್ಲಿ ಸಕ್ರಿಯ ಬಂಡುಕೋರನಾಗಿದ್ದ ನಜೀರ್ ವಾನಿ, ಬಳಿಕ ಶರಣಾಗತರಾದುದಲ್ಲದೆ ಸರ್ಕಾರಿ ಪ್ರಾಯೋಜಕತ್ವದಇಖ್ವಾನಿ ಪ್ರಜಾಸೇನೆಗೆ ಸೇರ್ಪಡೆಯಾಗಿದ್ದರು. ಅಂತಿಮವಾಗಿ ಅವರನ್ನು ೨೦೦೪ರಲ್ಲಿ ಪ್ರಾದೇಶಿಕ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ನಜೀರ್ ವಾನಿ ಅವರ ೧೬೨ ಟಿಎ ಬೆಟಾಲಿಯನ್ ಮತ್ತು ಈಗ ವಿಸರ್ಜನೆಗೊಂಡಿರುವಇಖ್ವಾನಿ ಪ್ರಜಾಸೇನೆಯು ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕಕ್ಕೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಲು ಅನುಕೂಲವಾಗುವಂತೆ ಭಯೋತ್ಪಾದಕರ ಬಗ್ಗೆ ಮಾಹಿತಿ ಸಂಗ್ರಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಭಾರತೀಯ ಸೇನೆ ಸೇರಿದ ಬಳಿಕ ಲಾನ್ಸ್ ನಾಯ್ಕ್ ವಾನಿ ದೊಡ್ಡ ಪ್ರಮಾಣದ ೧೭ ಗುಂಡಿನ ಘರ್ಷಣೆಗಳಲ್ಲಿ ಪಾಲ್ಗೊಂಡಿದ್ದರು ಮತ್ತು  ಭಾರತದ ಸಲುವಾಗಿ ತೋರಿದ ತಮ್ಮ ಅಪ್ರತಿಮ ಬದ್ಧತೆಗಾಗಿ ಎರಡು ಸೇನಾ ಪದಕಗಳನ್ನು ಗಳಿಸಿದ್ದರು. ಭಯೋತ್ಪಾದಕರು ಕಾಶೀರಿ ಯೋಧರು, ಪೊಲೀಸರು ಮತ್ತು ಅವರ ಕುಟುಂಬ ಸದಸ್ಯರನ್ನೇ ಆಯ್ದುಕೊಂಡು ಅವರ ಮೇಲೆ ಆಗಾಗ ದಾಳಿಗಳನ್ನು ನಡೆಸುತ್ತಿದ್ದುದರಿಂದ ಕುಲಗಂ ನಿವಾಸಿಯಾದ ನಜೀರ್ ವಾನಿ ಅವರ ಕೆಲಸ ಸುಲಭದ್ದಾಗಿರಲಿಲ್ಲ. ‘ಲಾನ್ಸ್ ನಾಯ್ಕ್ ವಾನಿ ಅವರು ಅತ್ಯುತ್ತಮ ಯೋಧನ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಸವಾಲಿನ ಯೋಜನೆಗಳಲ್ಲಿ ಪಾಲ್ಗೊಳ್ಳಲು ಅವರು ಯಾವಾಗಲೂ ಸ್ವತಃ ಮುಂದೆ ಬರುತ್ತಿದ್ದರು. ಕರ್ತವ್ಯ ನಿರ್ವಹಿಸುವಾಗ ಪ್ರತಿಕೂಲ ಸಂದರ್ಭಗಳಲ್ಲೂ ತಮ್ಮನ್ನು ಅಪಾಯಕ್ಕೆ ಒಡ್ಡಿಕೊಂಡಾದರೂ ಸರಿ ಮಹಾನ್ ಶೌರ್ಯವನ್ನು ಪ್ರದರ್ಶಿಸುತ್ತಿದ್ದರುಎಂದು ರಾಷ್ಟ್ರಪತಿ ಭವನವು ಪ್ರಕಟಿಸಿರುವ ಪ್ರಶಸ್ತಿ ಪತ್ರವು ಬಣ್ಣಿಸಿತು.

ನವದೆಹಲಿ: ಪ್ರಸ್ತುತ ವರ್ಷದ ಜನವರಿ ೧೦ರಂದು ಕೇಂದ್ರೀಯ ತನಿಖಾ ದಳದ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಲಾಗಿರುವ ಅಲೋಕ್ ವರ್ಮ ಅವರ ಸ್ಥಾನಕ್ಕೆ ನೂತನ ನಿರ್ದೇಶಕರನ್ನು ನೇಮಿಸಲು ಸಭೆ ಸೇರಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತ್ರಿಸದಸ್ಯ ಉನ್ನತಾಧಿಕಾರ ಸಮಿತಿ ಯಾವುದೇ ನಿರ್ಧಾರ  ಕೈಗೊಳ್ಳಲಿಲ್ಲ.  ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಳಗೊಂಡ ಸಮಿತಿಯು ಮುಂದಿನ ಸಿಬಿಐ ಮುಖ್ಯಸ್ಥನ ಹೆಸರನ್ನು ಅಂತಿಮಗೊಳಿಸುವ ಸಲುವಾಗಿ ಸಭೆ ಸೇರಿತ್ತು.
ಕೇಂದ್ರೀಯ ತನಿಖಾ ದಳವು (ಸಿಬಿಐ) ಪ್ರಸ್ತುತ ಹಂಗಾಮೀ ನಿರ್ದೇಶಕ ಎಂ. ನಾಗೇಶ್ವರ ರಾವ್ ಅವರ ಕೈಕೆಳಗೆ ಕೆಲಸ ಮಾಡುತ್ತಿದೆ. ಅಲೋಕ ವರ್ಮ ಅವರನ್ನು ಭ್ರಷ್ಟಾಚಾರ ಮತ್ತು ಕತ್ಯವ್ಯ ಚ್ಯುತಿ ಆರೋಪದಲ್ಲಿ ಪ್ರಧಾನಿ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿ ವಜಾಗೊಳಿಸಿದ ಬಳಿಕ ರಾವ್ ಅವರನ್ನು ಹಂಗಾಮೀ ನಿರ್ದೇಶಕರಾಗಿ ನೇಮಿಸಲಾಗಿತ್ತು. ರಾವ್ ಅವರ ನೇಮಕಾತಿಯನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು. ನಾಗೇಶ್ವರ ರಾವ್ ನೇಮಕಾತಿಯನ್ನು ಪ್ರಶ್ನಿಸಿದ ಅರ್ಜಿಯ ವಿಚಾರಣೆಯಿಂದ ಸಿಜೆಐ ರಂಜನ್ ಗೊಗೋಯಿ ಮತ್ತು ಎರಡನೇ ಸ್ಥಾನದಲ್ಲಿದ್ದ ನ್ಯಾಯಮೂರ್ತಿ .ಕೆ. ಸಿಕ್ರಿ ಅವರು ಹಿಂದೆ ಸರಿದ ಬಳಿಕ ಉನ್ನತಾಧಿಕಾರ ಸಮಿತಿಯ ಸಭೆ ಈದಿನ ನಡೆದಿತ್ತು. ನ್ಯಾಯಮೂರ್ತಿ ಸಿಕ್ರಿ ಅವರು ಗುರುವಾರ ಬೆಳಗ್ಗೆ ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿ ಬೇರೊಂದು ಪೀಠದ ಮುಂದೆ ಪ್ರಕರಣವನ್ನು ಜನವರಿ ೨೪ರಂದು ತರುವಂತೆ ಆಜ್ಞಾಪಿಸಿದ್ದರು.

2019: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ಪೀಠದಿಂದ ಹಿಂದೆ ಸರಿದ ಎರಡೇ ದಿನಗಳ ಒಳಗಾಗಿ ನ್ಯಾಯಮೂರ್ತಿ .ಕೆ. ಸಿಕ್ರಿ ಅವರೂ ಸಿಬಿಐ ಹಂಗಾಮೀ ನಿರ್ದೇಶಕರಾಗಿ ಎಂ. ನಾಗೇಶ್ವರ ರಾವ್ ಅವರ ನೇಮಕವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದರು. ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಭ್ರಷ್ಟಾಚಾರ ಆರೋಪದಲ್ಲಿ ವಜಾಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತ್ರಿಸದಸ್ಯ ಉನ್ನತಾಧಿಕಾರ ಸಮಿತಿಯ ಸದಸ್ಯರಲ್ಲಿ ನ್ಯಾಯಮೂರ್ತಿ ಸಿಕ್ರಿ ಅವರೂ ಒಬ್ಬರಾಗಿದ್ದರು. ಸಮಿತಿಯು ಅಲೋಕ್ ವರ್ಮ ಅವರನ್ನು ವಜಾಗೊಳಿಸಿದ ಬಳಿಕ ನಾಗೇಶ್ವರ ರಾವ್ ಅವರನ್ನು ಹಂಗಾಮೀ ನಿರ್ದೇಶಕರಾಗಿ ನೇಮಿಸಲಾಗಿತ್ತು. ಪ್ರಕರಣ ವಿಚಾರಣೆಗೆ ಪೀಠದ ಮುಂದೆ ವಿಚಾರಣೆಗೆ ಬಂದ ಕೆಲವೇ ಕ್ಷಣಗಳಲ್ಲಿ ನ್ಯಾಯಮೂರ್ತಿ ಸಿಕ್ರಿ ಅವರು ವಿಷಯವನ್ನು ಜನವರಿ ೨೫ರಂದು ಬೇರೊಂದು ಪೀಠದ ಮುಂದೆ ತರುವಂತೆ ಸೂಚಿಸುವುದಾಗಿ ಪ್ರಕಟಿಸಿದರು. ಅರ್ಜಿದಾರರಾದ ಸರ್ಕಾರೇತರ ಸಂಸ್ಥೆ ಕಾಮನ್ ಕಾಸ್ ಮತ್ತು ಅಂಜಲಿ ಭಾರದ್ವಾಜ್ ಅವರ ಪರ ಹಾಜರಾಗಿದ್ದ ಹಿರಿಯ ವಕೀಲ ದುಷ್ಯಂತ್ ದವೆ ಅವರುನೂತನ ಸಿಬಿಐ ನಿರ್ದೇಶಕನ ಹೆಸರು ಶಿಫಾರಸು ಮಾಡಲು ಈದಿನವೇ ಉನ್ನತಾಧಿಕಾರ ಸಮಿತಿ ಸಭೆ ನಿಗದಿಯಾಗಿರುವುದರಿಂದ ನಾಳೆ (ಜನವರಿ ೨೫) ಪ್ರಕರಣದ ವಿಚಾರಣೆಗೆ ಅತ್ಯಂತ ವಿಳಂಬವಾಗುತ್ತದೆಎಂದು ಹೇಳಿದರು. ‘ಮೊದಲಿಗೆ ಸಿಜೆಐ ಅವರು ಪ್ರಕರಣದಿಂದ ಹಿಂದೆ ಸರಿಯುತ್ತಾರೆ ಮತ್ತು ಪ್ರಕರಣವನ್ನು ಜನವರಿ ೨೪ಕ್ಕೆ ಮುಂದೂಡುತ್ತಾರೆ. ಅದೇ ದಿನಕ್ಕೆ ಉನ್ನತಾಧಿಕಾರ ಸಮಿತಿಯ ಸಭೆಗೂ ದಿನ ನಿಗದಿಯಾಗುತ್ತದೆ. ಈಗ, ತಾವೂ ಹಿಂದೆ ಸರಿಯುತ್ತಿದ್ದೀರಿ. ಇದು ನಮ್ಮ ಉದ್ದೇಶವನ್ನೇ ವಿಫಲಗೊಳಿಸುವ ಪ್ರಯತ್ನದಂತೆ ಕಾಣುತ್ತಿದೆ ಎಂದು ದವೆ ಅವರು ಪೀಠದ ಮುಂದೆ ಪ್ರತಿಭಟಿಸಿದರು. ಮುಖ್ಯ ನ್ಯಾಯಮೂರ್ತಿ ಗೊಗೋಯಿ ಅವರು ನೀಡಿದ ಆದೇಶ ಆಡಳಿತಾತ್ಮಕವಾದ್ದಲ್ಲ, ಅದು ನ್ಯಾಯಾಲಯದಲ್ಲಿ ಪ್ರಕಟಿಸಲಾದ ನ್ಯಾಯಾಂಗ ಆದೇಶ ಎಂದು ನ್ಯಾಯಮೂರ್ತಿ ಸಿಕ್ರಿ ವಿವರಿಸಿದರು. ಪ್ರಕರಣವು ವಿಚಾರಣೆಗಾಗಿ ಬರುವವರೆಗೆ ಅದರಿಂದ ನಿರ್ಗಮಿಸಲು ತಮಗೆ ಅವಕಾಶ ಇರಲಿಲ್ಲ ಎಂದು ನ್ಯಾಯಮೂರ್ತಿ ಸಿಕ್ರಿ ನುಡಿದರು. ಇದೇನಾದರೂ ಆಡಳಿತಾತ್ಮಕ ಆದೇಶವಾಗಿದ್ದಿದ್ದರೆ, ನಾನು ನಿರಾಕರಿಸುತ್ತಿದ್ದೆ ಮತ್ತು ಪ್ರಕರಣವು ಬೇರೊಂದು ಪೀಠದ ಮುಂದೆ ಬರುತ್ತಿತ್ತು. ಅದು ನ್ಯಾಯಾಂಗ ಆದೇಶವಾದ್ದರಿಂದ ಅದು ಈದಿನ ವಿಚಾರಣೆಗೆ ಬಂದ ಬಳಿಕವಷ್ಟೇ ನನಗೆ ಅದರಿಂದ ನಿರ್ಗಮಿಸಲು ಅವಕಾಶವಿತ್ತು ಎಂದು ನ್ಯಾಯಮೂರ್ತಿ ಸಿಕ್ರಿ ಹೇಳಿದರುನ್ಯಾಯಮೂರ್ತಿ ಸಿಕ್ರಿ ಅವರು ಅರ್ಜಿಯ ವಿಚಾರಣೆ ನಡೆಸುವುದಕ್ಕೆ ಅರ್ಜಿದಾರರ ಆಕ್ಷೇಪವಿಲ್ಲ ಎಂದು ದವೆ ಹೇಳಿದರು. ಅಲೋಕ್ ವರ್ಮ ಅವರನ್ನು ವಜಾಗೊಳಿಸಿದ ಉನ್ನತಾಧಿಕಾರ ಸಮಿತಿಯ ಸದಸ್ಯರಾಗಿದ್ದ ಕಾರಣಕ್ಕಾಗಿ ನ್ಯಾಯಮೂರ್ತಿ ಸಿಕ್ರಿ ಅವರ ಬಗ್ಗೆ ಅರ್ಜಿದಾರರಿಗೆ ಯಾವುದೇ ತಪ್ಪಭಿಪ್ರಾಯಗಳಿಲ್ಲ ಎಂದು ಅವರು ನುಡಿದರುಸಿಜೆಐ  ಪ್ರತಿನಿಧಿಯಾಗಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ನ್ಯಾಯಮೂರ್ತಿ ಸಿಕ್ರಿ ಅವರ ಸರ್ಕಾರದ ಪರ ನಿಲುವು  ವರ್ಮ ವಜಾದಲ್ಲಿ ನಿರ್ಣಾಯಕವಾಗಿತ್ತು. ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರೂ ದವೆ ಮಾತುಗಳಿಗೆ ದನಿಗೂಡಿಸಿ, ಪ್ರಕರಣವನ್ನು ಆಲಿಸುವಂತೆ ನ್ಯಾಯಮೂರ್ತಿ ಸಿಕ್ರಿ ಅವರನ್ನು ಆಗ್ರಹಿಸಿದರು. ನಿರ್ಣಾಯಕ ಸಭೆಯಲ್ಲಿ ತಾವು ಪಾಲ್ಗೊಂಡಿದ್ದುದೇ ಪ್ರಕರಣದಿಂದ ತಾವು ಹಿಂದೆ ಸರಿಯಲು ಕಾರಣ ಎಂಬುದಾಗಿ ಸುಳಿವು ನೀಡಿದ ನ್ಯಾಯಮೂರ್ತಿ ಸಿಕ್ರಿ ಅವರು ಪ್ರಕರಣದ ಕೆಲವು ಆಸಕ್ತಿಕರ ವಿಷಯಗಗಳನ್ನು ನಾನು ಆಲಿಸಬಯಸುವೆ, ಆಲಿಸಬಹುದು. ಆದರೆ ನಾನು ಆಲಿಸದಿರುವುದು ಒಳ್ಳೆಯದು..’ ಎಂದು ಹೇಳಿದರು. ಹಿರಿಯ ವಕೀಲ ದವೆ ಅವರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದಾಗ, ನ್ಯಾಯಮೂರ್ತಿ ಸಿಕ್ರಿಯವರುದವೆಯವರೇ, ನಾನು ನಿಮಗಿಂತ ಹಿರಿಯ ಎಂದು ಹೇಳುವ ಮೂಲಕ ಅವರನ್ನು ಸುಮ್ಮನಾಗಿಸಲು ಯತ್ನಿಸಿದರುಆದರೆ ದವೆ ಅವರು ತಮ್ಮ ಪಟ್ಟು ಮುಂದುವರೆಸುತ್ತಾಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನೇ ಆರಂಭಿಸದೇ ಇರುವುದು ಹೇಗೆ? ವರ್ಮ ಅವರನ್ನು ಹುದ್ದೆಯಂದ ವಜಾಗೊಳಿಸಿದ ವೇಗಕ್ಕೆ ಹೋಲಿಸಿದರೆ ಪ್ರಕರಣದ ನಿಧಾನಗತಿ ಅಚ್ಚರಿ ಮೂಡಿಸುತ್ತದೆ ಎಂದು ಹೇಳಿದರು. ‘ನಾನು ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದರಿಂದ ನಾನು ಏನನ್ನೂ ಹೇಳಲಾರೆ ಎಂದು ನುಡಿದ ನ್ಯಾಯಮೂರ್ತಿ ಸಿಕ್ರಿ, ಬೇರೊಂದು ಪೀಠದ ಮುಂದೆ ಪ್ರಕರಣವನ್ನು ಜನವರಿ ೨೫ರಂದು ತನ್ನಿ ಎಂದು ಆದೇಶ ನೀಡಿದರು. ಸಿಬಿಐಯ ನೂತನ ನಿರ್ದೇಶಕನ ನೇಮಕಾತಿಗಾಗಿ ಜನವರಿ ೨೪ರಂದು ನಡೆಯುವ ಉನ್ನತಾಧಿಕಾರ ಸಮಿತಿಯ ಸದಸ್ಯನಾಗಿರುವುದರಿಂದ ತಾವು ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ಹೇಳಿ ಸಿಜೆಐ ಅವರು ಹಿಂದೆ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಕಳೆದ ವರ್ಷ ಅಕ್ಟೋಬರ್ ೨೩-೨೪ರ ನಡುವಣ ರಾತ್ರಿ ತಮ್ಮನ್ನು ಸಿಬಿಐ ನಿರ್ದೇಶಕ ಸ್ಥಾನದ ಅಧಿಕಾರದಿಂದ ಮುಕ್ತಗೊಳಿಸಿದ ಆದೇಶವನ್ನು ಪ್ರಶ್ನಿಸಿ ಅಲೋಕ್ ವರ್ಮ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನಡೆಸಿದ್ದರು. ಸರ್ಕಾರದ ಆದೇಶವನ್ನು ರದ್ದು ಪಡಿಸಿ ತೀರ್ಪು ನೀಡಿದ್ದ ಸಿಜೆಐ ಅವರು ವರ್ಮ ಅವರನ್ನು ಹುದ್ದೆಯಲ್ಲಿ ಪುನಃ ಪ್ರತಿಷ್ಠಾಪಿಸಿದ್ದರು. ಆದರೆ ಅಂತಿಮವಾಗಿ ಹುದ್ದೆಯಿಂದ ವರ್ಮ ವಜಾದೊಂದಿಗೆ ಪ್ರಕರಣ ಪರ್ಯವಸಾನೊಂಡಿತ್ತು. ನಾಗೇಶ್ವರ ರಾವ್ ಅವರನ್ನು ಹಂಗಾಮೀ ಮುಖ್ಯಸ್ಥರಾಗಿ ನೇಮಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯು ಹಂಗಾಮೀ ಮುಖ್ಯಸ್ಥರನ್ನು ಜನವರಿ ೧೦ರಂದು ನೇಮಕ ಮಾಡುವ ಮುನ್ನ, ಸರ್ಕಾರವು ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು  ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ಒಳಗೊಂಡ ಉನ್ನತಾಧಿಕಾರ ಸಮಿತಿಯ ಜೊತೆ ಸಮಾಲೋಚಿಸಬೇಕಾದ ಸ್ಥಾಯೀ ಅಗತ್ಯವನ್ನು ಸಂಪೂರ್ಣವಾಗಿ ಮೂಲೆಗೆ ತಳ್ಳಿದೆ ಎಂದು ದೂರಿತ್ತು. ಸಿಬಿಐ ನಿರ್ದೇಶಕನನ್ನು ನಿರಂಕುಶ ಮತ್ತು ಅಕ್ರಮವಾಗಿ ನೇಮಿಸುವ ಮೂಲಕ ಸರ್ಕಾರವು ಸಂಸ್ಥೆಯ ಸ್ವಾತಂತ್ರ್ಯವನ್ನು ನಿಗ್ರಹಿಸಿದೆ ಎಂದು ವಕೀಲ ಪ್ರಶಾಂತ ಭೂಷಣ್ ಅವರು ಪ್ರತಿನಿಧಿಸಿದ ಅರ್ಜಿ ಪ್ರತಿಪಾದಿಸಿತ್ತು. ಇದಲ್ಲದೆ, ಅಲೋಕ್ ವರ್ಮ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿ ನಾಗೇಶ್ವರ ರಾವ್ ಅವರನ್ನು ಹಂಗಾಮೀ ನಿರ್ದೇಶಕರಾಗಿ ನೇಮಕ ಮಾಡಿದ್ದ ಹಿಂದಿನ ಅಕ್ಟೋಬರ್ ೨೩ರ ಆದೇಶವನ್ನು ಸುಪ್ರೀಂಕೋಟ್ ಜನವರಿ ೮ರ ತೀರ್ಪಿನಲ್ಲಿ ರದ್ದು ಪಡಿಸಿತ್ತು. ಆದರೂ, ಜನವರಿ ೧೦ರ ಆದೇಶವು ಸಂಪುಟದ ನೇಮಕಾತಿ ಸಮಿತಿಯು ರಾವ್ ನೇಮಕಾತಿಯನ್ನು ಅನುಮೋದಿಸಿದೆ ಎಂಬುದಾಗಿ ಹೇಳಿತ್ತು. ಇದು ಪೂರ್ವ ಯೋಜಿತ ವ್ಯವಸ್ಥೆಯಂತಿದೆ ಎಂದು ಅರ್ಜಿ ದೂರಿತ್ತು.

2019: ನವದೆಹಲಿ: ಎಲ್ಲ ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಮುಂದಿನ ತಿಂಗಳಿನಿಂದ (ಫೆಬ್ರುವರಿ) ನೇಮಕಾತಿಗಳನ್ನು ಮಾಡುವಾಗ ಇತ್ತೀಚೆಗೆ ಅನುಮೋದನೆ ನೀಡಲಾಗಿರುವ ಆರ್ಥಿಕ ದುರ್ಬಲ ವರ್ಗಗಳ ( ಡಬ್ಲ್ಯೂ ಎಸ್) ಶೇಕಡಾ ೧೦ ಮೀಸಲಾತಿಯನ್ನು ಅನ್ವಯಿಸಿಯೇ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅಧಿಕೃತ ಆದೇಶವೊಂದು ತಿಳಿಸಿತು.  ಇಡಬ್ಲ್ಯೂಎಸ್ ಕೋಟಾ ಜಾರಿಯ ನಿಯಮಾವಳಿಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು ಎಂದು ಸಿಬ್ಬಂದಿ ಸಚಿವಾಲಯವು ಆದೇಶವೊಂದರಲ್ಲಿ ತಿಳಿಸಿತು.  ‘೨೦೧೯ರ ಫೆಬ್ರುವರಿ ಅಥವಾ ನಂತರ ಕೇಂದ್ರ ಸರ್ಕಾರದ ಎಲ್ಲ ಹುದ್ದೆಗಳು ಮತ್ತು ಸೇವೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗಾಗಿ ಮಾಡಲಾಗುವ ಎಲ್ಲ ನೇರ ನೇಮಕಾತಿಗಳಿಗೆ ಸಂಬಂಧಿಸಿದಂತೆ ಆರ್ಥಿಕ ದುರ್ಬಲ ವರ್ಗಗಳಿಗೆ ಶೇಕಡಾ ೧೦ರ ಮೀಸಲಾತಿಯನ್ನು ಒದಗಿಸಲಾಗುವುದು ಎಂದು ಮೂಲಕ ಪ್ರಕಟಿಸಲಾಗಿದೆ ಎಂದು ಆದೇಶ ಹೇಳಿತು. ಸಂಸತ್ತು ಜನವರಿ ೯ರಂದು ಅನುಮೋದಿಸಿರುವ ಸಂವಿಧಾನ (೧೨೪ನೇ ತಿದ್ದುಪಡಿ) ಮಸೂದೆಯು ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಾಮಾನ್ಯ ವರ್ಗದ ಬಡವರಿಗೆ ಶೇಕಡಾ ೧೦ರಷ್ಟು ಮೀಸಲಾತಿಯನ್ನು ಒದಗಿಸಲು ಅವಕಾಶ ನೀಡಿತ್ತು. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಪ್ರಸ್ತುತ ಮೀಸಲಾತಿ ಕಲ್ಪಿಸಲಾಗಿರುವ ಯೋಜನೆಗೆ ಒಳಪಡದ ವ್ಯಕ್ತಿಗಳು ಮತ್ತು ಯಾರ ಕೌಟುಂಬಿಕ ಆದಾಯವು ಲಕ್ಷ ರೂಪಾಯಿಗಳಿಗಿಂತ ಕೆಳಗಿದೆಯೋ ಅಂತಹವರನ್ನು ಮೀಸಲಾತಿಯ ಅನುಕೂಲಕ್ಕಾಗಿ ಇಡಬ್ಲ್ಯೂಎಸ್ ಎಂಬುದಾಗಿ ಗುರುತಿಸಲಾಗಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಆದೇಶ ತಿಳಿಸಿತು. ಇದರ ಜೊತೆಗೆ, ಯಾವ ಕುಟುಂಬವು ಐದು ಎಕರೆ ಕೃಷಿ ಭೂಮಿಯ ಮಾಲೀಕತ್ವ ಅಥವಾ ಸ್ವಾಮ್ಯವನ್ನು ಹೊಂದಿಲ್ಲವೋ ಅಂತಹ ಕುಟುಂಬದ ವ್ಯಕ್ತಿಗಳು, ಮುನಿಸಿಪಾಲಿಟಿ ಪ್ರದೇಶಗಳಲ್ಲಿ ೧೦೦೦ ಚದರ ಅಡಿಗಳು ಮತ್ತು ಹೆಚ್ಚಿನ ವಿಸ್ತಾರದ ವಸತಿ ಫ್ಲ್ಯಾಟ್ ಹೊಂದಿರುವವರು, ೧೦೦ ಚದರ ಯಾರ್ಡ್ಗಳು ಮತ್ತು ಹೆಚ್ಚಿನ ವಿಸ್ತಾರದ ವಸತಿ ಪ್ಲಾಟ್ ಹೊಂದಿರುವವರನ್ನು ಮತ್ತು ಮುನಿಸಿಪಾಲಿಟಿ ಹೊರತಾದ ಪ್ರದೇಶಗಳಲ್ಲಿ ೨೦೦ ಚದರ ಯಾರ್ಡ್ ಮತ್ತು ಹೆಚ್ಚಿನ ವಿಸ್ತಾರದ ವಸತಿ ಪ್ಲಾಟ್ ಹೊಂದಿರುವ ಕುಟುಂಬದ ಆದಾಯ ಎಷ್ಟೇ ಇದ್ದರೂ ಇಡಬ್ಲ್ಯೂಎಸ್ ಆಗಿ ಗುರುತಿಸುವುದರಿಂದ ಹೊರತು ಪಡಿಸಬೇಕು ಎಂದು ಆದೇಶ ತಿಳಿಸಿತು. ಕುಟುಂಬಗಳ ಆದಾಯ ಮತ್ತು ಆಸ್ತಿಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಹಶೀಲ್ದಾರ್ ದರ್ಜೆಗೆ ಕಡಿಮೆಯಲ್ಲದ ಅಧಿಕಾರಿಯು ಸಂಬಂಧಪಟ್ಟ ದಾಖಲಾತಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ ದೃಢೀಕರಿಸಬೇಕು ಎಂದು ಆದೇಶ ಹೇಳಿತು. ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಮೀಸಲಾತಿ ಅನ್ವಯಿಸುವ ಸಂಬಂಧ ಸೂಚನೆಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಪ್ರಕಟಿಸುವುದು ಎಂದು ಆದೇಶ ತಿಳಿಸಿತು. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಶೇಕಡಾ ೧೦ರ ಆರ್ಥಿಕ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಚಳಿಗಾಲದ ಅಧಿವೇಶನದ ಕೊನೆಯ ದಿನ ಮಂಡಿಸಿ ಅದೇ ದಿನ ಅನುಮೋದನೆ ಪಡೆದಿತ್ತು. ಕಾಂಗ್ರೆಸ್ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಅಧಿವೇಶನದ ಕೊನೆಯ ದಿನ ಮಸೂದೆ ಮಂಡಿಸಿದ್ದಕ್ಕಾಗಿ ಸರ್ಕಾರವನ್ನು ಟೀಕಿಸಿದ್ದವು. ಮತ್ತು ಅದನ್ನು ಹೆಚ್ಚಿನ ಪರಾಮರ್ಶೆಗಾಗಿ ಸಂಸತ್ತಿನ ಜಂಟಿ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದವು. ಜಂಟಿ ಆಯ್ಕೆ ಸಮಿತಿಗೆ ಕಳುಹಿಸಲು ಸರ್ಕಾರ ನಿರಾಕರಿಸಿದ ಬಳಿಕ ಬಹುತೇಕ ಪಕ್ಷಗಳು ಅದಕ್ಕೆ ಒಪ್ಪಿಗೆ ಸೂಚಿಸಿದ್ದವು.

2019: ನವದೆಹಲಿ: ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಸಾಲ ಹಗರಣದಲ್ಲಿ ಐಸಿಐಸಿಐ ಬ್ಯಾಂಕಿನ ಮಾಜಿ ಸಿಇಒ ಚಂದಾ ಕೊಚ್ಚಾರ್, ಆಕೆಯ ಪತಿ ದೀಪಕ್ ಕೊಚ್ಚಾರ್ ಮತ್ತು ವಿಡಿಯೋಕಾನ್ ಸಮೂಹದ ಎಂಡಿ ವಿ.ಎನ್. ಧೂತ್ ಹಾಗೂ ಇತರರ ವಿರುದ್ದ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿದರು. ೨೦೧೨ರಲ್ಲಿ ಐಸಿಐಸಿಐ ಬ್ಯಾಂಕಿನಿಂದ ವಿಡಿಯೋಕಾನ್ ಸಮೂಹ ,೨೫೦ ಕೋಟಿ ರೂ. ಸಾಲ ಪಡೆದ ಬಳಿಕ ವಿಡಿಯೋಕಾನ್ ಪ್ರಮೋಟರ್ ವೇಣುಗೋಪಾಲ್ ದೂತ್ ಅವರು, ಚಂದಾಕೊಚ್ಚಾರ್ ಅವರ ಪತಿ ದೀಪಕ್ ಕೊಚ್ಚಾರ್ ಅವರೊಂದಿಗೆ ಸ್ಥಾಪಿಸಿದ್ದ ನ್ಯೂಪವರ್ ಸಂಸ್ಥೆಯಲ್ಲಿ ಕೋಟಿಗಟ್ಟಲೆ ರೂ. ಹೂಡಿಕೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಶೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾಗಿರುವ ಎಸ್ಇಬಿಐ ಮಾಡಿರುವ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವ ಪ್ರಕಾರ ದೀಪಕ್ ಕೊಚ್ಚಾರ್ ಅವರಿಗೆ ವಿಡಿಯೋಕಾನ್ ಸಮೂಹದೊಂದಿಗೆ ಕಳೆದ ಹಲವು ?ಗಳಿಂದಲೂ ಅನೇಕ ವಾಣಿಜ್ಯ ವಹಿವಾಟುಗಳಿವೆ.  ದೀಪಕ್ ಮತ್ತು ವಿಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ದೂತ್ ಅವರು ನ್ಯೂಪವರ್ ಮತ್ತಿತರ ಸಂಸ್ಥೆಗಳ ಸಹ ಪ್ರಮೋಟರ್ ಆಗಿದ್ದಾರೆ. ಐಸಿಐಸಿಐ ಬ್ಯಾಂಕ್ - ವಿಡಿಯೋಕಾನ್ ಸಾಲ ಪ್ರಕರಣದಲ್ಲಿ ,೨೫೦ ಕೋಟಿ ರೂ.ಗಳ ಅಕ್ರಮ ನಡೆದಿದೆ ಎಂದು ಆರೋಪ ಮಾಡಲಾಗಿತ್ತು.  ವಂಚನೆ, ಭ್ರಷ್ಟಾಚಾರ ಮತ್ತು ಅಕ್ರಮ ಎಸಗಿದ ಪ್ರಕರಣದಡಿ ಚಂದಾ ಕೊಚ್ಚಾರ್ ಮತ್ತು ಇತರರ ವಿರುದ್ಧ ಸಿಬಿಐ ದೂರು ದಾಖಲಿಸಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಸಿಬಿಐ ಮುಂಬಯಿಯ ನಾರಿಮನ್ ಪಾಯಿಂಟ್ನಲ್ಲಿನ ವಿಡಿಯೋಕಾನ್ ಕಚೇರಿ, ಔರಂಗಾಬಾದ್ ಕಚೇರಿ ಮೇಲೂ ದಾಳಿ ನಡೆಸಲಾಗಿದೆ. ಜತೆಗೆ ದೀಪಕ್ ಕೊಚ್ಚಾರಿಯ ಕಂಪನಿ ನ್ಯೂಪವರ್ ರಿನವೇಬಲ್ಸ್ ಪ್ರೈ ಲಿ. ಮೇಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು. ಪ್ರಕರಣೆ ವಿಚಾರಣೆಯ ಸಂದರ್ಭ ಚಂದಾ ಕೊಚ್ಚಾರ್ ಸಂಬಂಧಿ ರಾಜೀವ್ ಕೊಚ್ಚಾರ್, ದೀಪಕ್ ಕೊಚ್ಚಾರ್, ವಿಡಿಯೋಕಾನ್ ಉದ್ಯೋಗಿಗಳು, ಎನ್ಆರ್ಪಿಎಲ್ ಮತ್ತು ಐಸಿಐಸಿಯ ಬ್ಯಾಂಕ್ ಉದ್ಯೋಗಿಗಳನ್ನು ಕೂಡ ಸಿಬಿಐ ಪ್ರಶ್ನಿಸಿತು

2019: ನವದೆಹಲಿ: ಟಿವಿ ಶೋದಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ, ಟೀಕೆಗೆ ಗುರಿಯಾಗಿದ್ದ ಕ್ರಿಕೆಟಿಗರಾದ ಕರ್ನಾಟಕದ ಕೆ.ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಮೇಲೆ ಹೇರಲಾಗಿದ್ದ ಅಮಾನತು ವಾಪಸ್ ಪಡೆಯಲಾಯಿತು. ತಕ್ಷಣದಿಂದಲೇ ಜಾರಿ ಬರುವಂತೆ ಅಮಾನತು ವಾಪಸ್ ಪಡೆದಿರು ವುದಾಗಿ ಕ್ರಿಕೆಟ್ ಆಡಳಿತ ಸಮಿತಿ ತಿಳಿಸಿತು. ಅಮಿಕಸ್ ಕ್ಯೂರಿ ಪಿಎಸ್ ನರಸಿಂಹ್ ಹಾಗೂ ಸಿಒಎ ಜೊತೆ ಚರ್ಚೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳಲಾಯಿತು. ಪ್ರಕರಣದ ವಿಚಾರಣೆಗಾಗಿ ಒಂಬಡ್ಸಮನ್ ಅವರನ್ನು ನೇಮಕ ಮಾಡುವಂತೆ, ಬಿಸಿಸಿಐ ಬಗ್ಗೆ ಸುಪ್ರೀಂ ಕೊರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ಫೆ. ರಂದು ನಡೆಯಲಿದೆ. ವಿಚಾರಣೆ ನಡೆದು ತೀರ್ಪು ಬರುವವರೆಗೂ ಕ್ರಿಕೆಟಿಗರ ಮೇಲೆ ಹೇರಿದ್ದ ಅಮಾನತು ಹಿಂಪಡೆಯಲಾಗಿದೆ. .೧೧, ೨೦೧೯ರಂದು ಬಿಸಿಸಿಐ ಆಟಗಾರರ ಮೇಲೆ ಹೇರಿದ್ದ ಅಮಾನತು ಆದೇಶ ಈಗ ತೆರವುಗೊಂಡಂತಾಗಿದೆಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ರಾಹುಲ್- ಹಾರ್ದಿಕ್ ರನ್ನು ತವರಿಗೆ ವಾಪಸ್ ಕರೆಸಿಕೊಳ್ಳಲಾಗಿತ್ತು. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸ್ಟಾರ್ ಆಟಗಾರರು ಅಸಭ್ಯ ಹೇಳಿಕೆ ನೀಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ರಕರಣ ಭಾರೀ ಚರ್ಚೆಗೆ ಗ್ರಾಸ ವಾಗುತ್ತಿದ್ದಂತೆ ಕ್ರಿಕೆಟ್ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ಕುಮಾರ್ ರಾಯ್ ಆಟಗಾರರ ವಿರುದ್ಧ ಎರಡು ಪಂದ್ಯಗಳ ನಿ? ಹೇರುವ ಸಲಹೆ ನೀಡಿದ್ದರು. ಆದರೆ ಮಾಜಿ ಕ್ರಿಕೆಟ್ ಆಟಗಾರ್ತಿ ಹಾಗೂ ಸಿಒಎ ಸದಸ್ಯೆ ಡಯಾನ ಎಡುಲ್ಜಿ ಪ್ರಕರಣವನ್ನು ಕಾನೂನು ಘಟಕಕ್ಕೆ ವರ್ಗಾಯಿಸಿದ್ದರು.

2019: ಅಮೇಥಿ: ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಿಸಿ ಉತ್ತರ ಪ್ರದೇಶದ ಹೊಣೆಗಾರಿಕೆ ವಹಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಒಂದು ದಿನದ ಬಳಿಕ, ಉಭಯರಿಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆಯ ಗುರಿ ನೀಡಲಾಗಿದೆ ಎಂದು ಹೇಳಿದರು. ನಾನು ಪ್ರಿಯಾಂಕ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಉತ್ತರ ಪ್ರದೇಶಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಾಡಿದ್ದೇನೆ. ಮತ್ತು ಅವರಿಗೆ ಮುಂದಿನ ಚುನಾವಣೆಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯ ಗುರಿ ಕೊಟ್ಟಿದ್ದೇನೆ. ಈಗ ನೀವು ರಾಷ್ಟ್ರಕ್ಕಾಗಿ ದುಡಿಯಲು ಮೂವರು ಯೋಧರನ್ನು ಹೊಂದಿದ್ದೀರಿ ಎಂದು ರಾಹುಲ್ ಗಾಂಧಿ ಅವರು ಅಮೇಥಿ ಭೇಟಿ ಕಾಲದಲ್ಲಿ ಸಲೋನ್ ನಲ್ಲಿ ರಸ್ತೆ ಬದಿಯ ಬಹಿರಂಗ ಸಭೆಯಲ್ಲಿ ಹೇಳಿದರು. ರಾಹುಲ್ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರದ ಎರಡು ದಿನಗಳ ಭೇಟಿ ಮುಕ್ತಾಯಗೊಳಿಸುವ ಮುನ್ನ ಶಿವ ದೇವಾಲಯ ಮತ್ತು ಒಂದು ಶಾಲೆಗೆ ಭೇಟಿ ನೀಡಿದರು. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಿಯಾಂಕ ಅವರು ನಿಮ್ಮನ್ನು ಭೇಟಿ ಮಾಡಲಿದ್ದಾರೆ ಎಂದು ಅವರು ಭರವಸೆ ನೀಡಿದರು. ಪ್ರಧಾನ ಕಾರ್ಯದಶಿಯಾಗಿ ಹುದ್ದೆ ವಹಿಸಿಕೊಂಡ ಬಳಿಕ ನಿಮ್ಮನ್ನು ಭೇಟಿ ಮಾಡುವಂತೆ ನಾನು ಪ್ರಿಯಾಂಕಾ ಅವರಿಗೆ ಹೇಳಿದ್ದೇನೆ ಎಂದು ಅವರು ನುಡಿದರು.

2019: ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಉತ್ತರ ಪ್ರದೇಶದ ಪೂರ್ವಭಾಗದ ಹೊಣೆಗಾರಿಕೆ ನೀಡಿದ ಒಂದು ದಿನದ ಬಳಿಕ ಲೋಕಸಭಾಧ್ತಕ್ಷೆ ಸುಮಿತ್ರಾ ಮಹಾಜನ್ ಅವರು ಇದನ್ನುಒಳ್ಳೆಯ ಕೆಲಸ ಎಂಬುದಾಗಿ ಬಣ್ಣಿಸಿದರು. ಆದರೆ, ಕಾಂಗ್ರೆಸ್ ನಾಯಕತ್ವದಮಾಸ್ಟರ್ ಸ್ಟ್ರೋಕ್ ಎಂಬುದಾಗಿ ಪರಿಗಣಿಸಲಾಗಿರುವ ಪ್ರಿಯಾಂಕಾ ಗಾಂಧಿ ನೇಮಕಾತಿಗೆ ಪುಟ್ಟ ಟ್ವಿಸ್ಟ್ ಕೂಡಾ ನೀಡಿದರು. ಪ್ರಿಯಾಂಕಾ ರಾಜಕೀಯ ಪ್ರವೇಶವನ್ನುಒಳ್ಳೆಯ ಕೆಲಸ ಎಂಬುದಾಗಿ ಸ್ವಾಗತಿಸುತ್ತಲೇ ತಮ್ಮ ರಾಜಕೀಯ ಪಕ್ಷವಾಗಿರುವ ಬಿಜೆಪಿಯ ನಿಲುವಿಗೂ ಸರಿಹೊಂದುವಂತೆ ಹೇಳಿಕೆ ನೀಡಿದ ಸುಮಿತ್ರಾ ಮಹಾಜನ್ ಅವರು, ’ಅವರು (ಪ್ರಿಯಾಂಕಾ ಗಾಂಧಿ ವಾದ್ರಾ) ಒಳ್ಳೆಯ ಮಹಿಳೆ ಮತ್ತು ರಾಹುಲ್ಜಿ ಅವರು ತಾವು ಏಕಾಂಗಿಯಾಗಿ ರಾಜಕೀಯ ಮಾಡಲಾಗುವುದಿಲ್ಲ ಎಂಬುದಾಗಿ ಒಪ್ಪಿದ್ದಾರೆ. ಇದಕ್ಕಾಗಿ ಅವರು ಪ್ರಿಯಾಂಕಾ ಅವರ ನೆರವು ಪಡೆದುಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಕೆಲಸ ಎಂದು ಮಹಾಜನ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು. ಪ್ರಿಯಾಂಕಾ ಗಾಂಧಿಯವರ ಸಕ್ರಿಯ ರಾಜಕಾರಣ ಪ್ರವೇಶವು ರಾಹುಲ್ ಗಾಂಧಿ ಅವರ ವೈಫಲ್ಯವನ್ನು ಕಾಂಗ್ರೆಸ್ ಪಕ್ಷವು ಒಪ್ಪಿಕೊಂಡಿರುವುದರ ದ್ಯೋತಕ ಎಂದು ಬಿಜೆಪಿ ಈಗಾಗಲೇ ಪ್ರತಿಕ್ರಿಯಿಸಿತು. ಇದಕ್ಕೆ ಮುನ್ನ ತಮ್ಮ ಸಂಸದೀಯ ಕ್ಷೇತ್ರವಾದ ಅಮೇಥಿಯತ್ತ ತೆರಳುವ ಮುನ್ನ ರಾಹುಲ್ ಗಾಂಧಿಯವರು ಅಧಿಕೃತವಾಗಿ ಪ್ರಿಯಾಂಕಾ ಗಾಂಧಿ ಅವರಿಗೆ ಉತ್ತರ ಪ್ರದೇಶದ ಪೂರ್ವ ಭಾಗದ ರಾಜಕೀಯ ಸವಾಲು ನಿರ್ವಹಿಸುವ ಹೊಣೆಗಾರಿಕೆಯನ್ನು ಒಪ್ಪಿಸಿದ್ದರು. ಕಾಂಗ್ರೆಸ್ ಪಕ್ಷವು ಉತ್ತರಪ್ರದೇಶದಲ್ಲಿ ದುರ್ಬಲ ಸಂಘಟನೆಯನ್ನು ಹೊಂದಿದ್ದು, ಇದು ರಾಜ್ಯದ  ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರ ಪ್ರಬಲ ಸಾಧನೆಯ ಕ್ಷೇತ್ರವೂ ಆಗಿದೆ. ರಾಜ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ವಾರಾಣಸಿ ಕ್ಷೇತ್ರವೂ ಇದೆ. ಉತ್ತರ ಪ್ರದೇಶದ ಪೂರ್ವ ಭಾಗವು ೨೦೧೯ರ ಲೋಕಸಭಾ ಚುನಾವಣೆಗಾಗಿ ಬಿಜೆಪಿಯ ಪ್ರಮುಖ ಕಾರ್ಯತಂತ್ರದ ಕೀಲಿಕೈ ಎಂಬುದಾಗಿಯೇ ಪರಿಗಣಿತವಾಗಿದೆ. ಪ್ರಿಯಾಂಕಾ ಗಾಂಧಿ ಅವರ ನೇಮಕವು ಪ್ರದೇಶದಲ್ಲಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಭಾರೀ ಹುರುಪನ್ನು ನೀಡಿದೆ. ಉತ್ತರ ಪ್ರದೇಶ ಪೂರ್ವಭಾಗದ ಹೊಣೆಗಾರಿಕೆಯನ್ನು ಅಧಿಕೃತವಾಗಿ ವಹಿಸಿಕೊಳ್ಳುವುದಕ್ಕೆ ಮುನ್ನ, ಪ್ರಿಯಾಂಕಾ ಗಾಂಧಿಯವರು ತಮ್ಮ ರಾಜಕೀಯ ಚಟುವಟಿಕೆಗಳನ್ನು ಅಮೇಥಿ ಮತ್ತು ರಾಯ್ ಬರೇಲಿ ಲೋಕಸಭಾ ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದರು. ಎರಡು ಕ್ಷೇತ್ರಗಳನ್ನು ಕ್ರಮವಾಗಿ ಸಹೋದರ ರಾಹುಲ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ. ಸಕ್ರಿಯ ರಾಜಕಾರಣಕ್ಕೆ ಬರುವಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಮಾಡುತ್ತಿದ್ದ ಎಲ್ಲ ಪ್ರಯತ್ನಗಳನ್ನೂ ಪ್ರಿಯಾಂಕಾ ಗಾಂಧಿಯವರು ಹಿಂದೆ ವಿರೋಧಿಸಿದ್ದರು. ಅವರು ಯಾವಾಗಲೂ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ತೆರೆಯ ಹಿಂದೆ ನಿಂತು ಕೆಲಸ ಮಾಡುವುದಕ್ಕೆ ತಮ್ಮ ಆದ್ಯತೆ ನೀಡುತ್ತಿದ್ದರು. ಕಾಂಗ್ರೆಸ್ಸಿನ ಕ್ರಮವು ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ರಾಜ್ಯದಲ್ಲಿ ಈಗ ರಾಜಕೀಯ ಆಟಕ್ಕೆ ಹೊಸ ತಿರುವು ನೀಡಿದೆ. ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ಇತ್ತೀಚೆಗೆ ತಮ್ಮ ಸೀಟು ಹೊಂದಾಣಿಕೆ ವ್ಯವಸ್ಥೆಯನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನಲ್ಲಿ ಪ್ರಿಯಾಂಕಾ ಗಾಂಧಿ ಅವರ ಹೊಸ ಪಾತ್ರವು ರಾಜಕೀಯವಾಗಿ ಅತ್ಯಂತ ಮಹತ್ವವನ್ನು ಪಡೆದಿದೆ. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ವಸ್ತುಶಃ ಕಾಂಗ್ರೆಸ್ ಪಕ್ಷವನ್ನು ನಿರ್ಲಕ್ಷಿಸಿ ಪರಸ್ಪರ ಕೈಜೋಡಿಸಿದ್ದಾರೆ. ಏನಿದ್ದರೂ ತಮ್ಮ ಮೈತ್ರಿಕೂಟವು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ವಿರುದ್ಧ ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ ಎಂದು ಉಭಯ ನಾಯಕರೂ ಪ್ರಕಟಿಸಿದ್ದರು.
 

2018: ಪಾಟ್ನಾ: ೧೯೯೨-೯೩ರ ಸಾಲಿನ (ಮೂರನೇ) ಮೇವು ಹಗರಣದಲ್ಲೂ ರಾಷ್ಟ್ರೀಯ ಜನತಾದಳ ಅಧ್ಯಕ್ಷ ಲಾಲೂ ಪ್ರಸಾದ್, ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರ ಮತ್ತು ಇತರ ೪೮ ಮಂದಿ ತಪ್ಪಿತಸ್ಥರು ಎಂದು ವಿಶೇಷ ಸಿಬಿಐ ನ್ಯಾಯಾಧೀಶ ಎಸ್.ಎಸ್. ಪ್ರಸಾದ್ ತೀರ್ಪು ನೀಡಿದರು. ಲಾಲು ಪ್ರಸಾದ್ ಮತ್ತು ಜಗನ್ನಾಥ ಮಿಶ್ರ ಇಬ್ಬರಿಗೂ ತಲಾ ಐದು ವರ್ಷಗಳ ಸೆರೆವಾಸ ಮತ್ತು ತಲಾ ೫ ಲಕ್ಷ ರೂಪಾಯಿಗಳ ದಂಡ ವಿಧಿಸಲಾಯಿತು. ಪ್ರಕರಣದ ಆರು ಮಂದಿಯನ್ನು ಖುಲಾಸೆ ಮಾಡಲಾಯಿತು. ಎರಡನೇ ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಅವರಿಗೆ ಐದು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿತ್ತು. ಪ್ರಸ್ತುತ ಜಾರ್ಖಂಡ್‌ನಲ್ಲಿ ಇರುವ ಚೈಬಾಸ ಜಿಲ್ಲಾ ಖಜಾನೆಯಿಂದ ೧೯೯೨-೯೩ರಲ್ಲಿ ವಂಚಿಸುವ ಮೂಲಕ ೩೩.೬೭ ಕೋಟಿ ರೂಪಾಯಿಗಳನ್ನು ಪಡೆದುಕೊಂಡ ಪ್ರಕರಣ ಇದು. ಪ್ರಕರಣದ ೭೬ ಮಂದಿ ಆರೋಪಿಗಳ ಪೈಕಿ ೧೪ ಮಂದಿ ವಿಚಾರಣಾ ಅವಧಿಯಲ್ಲಿ ಸಾವನ್ನಪ್ಪಿದ್ದರು.  ಮೂವರು ಮಾಫಿ ಸಾಕ್ಷಿ (ಅಪ್ರೂವರ್) ಆಗಿ ಬದಲಾಗಿದ್ದರು.  ಇಬ್ಬರು ನಿರಪರಾಧಿಗಳು ಎಂದು ವಾದಿಸಿದ್ದು, ಒಬ್ಬ ವ್ಯಕ್ತಿ ತಲೆ ತಪ್ಪಿಸಿಕೊಂಡಿದ್ದ.  ವಿಚಾರಣೆ ಎದುರಿಸಿದ ೫೬ ಮಂದಿಯ ಪೈಕಿ ೬ ಮಂದಿ ರಾಜಕಾರಣಿಗಳು, ೩ ಮಂದಿ ಐಎಎಸ್ ಅಧಿಕಾರಿಗಳು ಮತ್ತು ೬ ಮಂದಿ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು, ಒಬ್ಬ ಖಜಾನೆ ಅಧಿಕಾರಿ ಮತ್ತು ೪೦ ಮಂದಿ ಇಲಾಖೆಯ ಸರಬರಾಜುದಾರರು. ೨ನೇ ಪ್ರಕರಣ: ಲಾಲು ಪ್ರಸಾದ್ ಅವರು ೨೦೧೭ರ ಡಿಸೆಂಬರ್ ೨೩ರಿಂದ ಎರಡನೇ ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ೫ ವರ್ಷಗಳ ಸೆರೆವಾಸ ಅನುಭವಿಸುತ್ತಿದ್ದು ಪ್ರಸ್ತುತ ರಾಂಚಿಯ ಬಿರ್ಸಾ ಮುಂಡಾ ಜೈಲಿನಲ್ಲಿ ಇದ್ದಾರೆ. ಇದು ದೇವಘಡ ಜಿಲ್ಲಾ ಖಜಾನೆಗೆ ವಂಚಿಸಿದ ಪ್ರಕರಣವಾಗಿದ್ದು, ಸಿಬಿಐ ವಿಶೇಷ ನ್ಯಾಯಾಧೀಶ ಶಿವ ಪಆಲ್ ಸಿಂಗ್ ಅವರು ೨೦೧೮ರ ಜನವರಿ ೬ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ್ದರು. ಈ ತೀರ್ಪಿನ ವಿರುದ್ಧ ಲಾಲು ಪ್ರಸಾದ್ ಅವರು ರಾಂಚಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಇನ್ನೂ ೩ ಪ್ರಕರಣಗಳು: ೨೦೧೩ರ ಸೆಪ್ಟೆಂಬರ್ ೩೦ರಂದು ಮೇವು ಹಗರಣದ ಮೊದಲ ಪ್ರಕರಣದಲ್ಲಿ ಲಾಲು ಪ್ರಸಾದ್ ಅವರಿಗೆ ಐದು ವರ್ಷಗಳ ಸೆರೆವಾಸ ವಿಧಿಸುವುದರ ಜೊತೆಗೆ ೬ ವರ್ಷಗಳ ಅವಧಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ವಿಧಿಸಲಾಗಿತ್ತು. ಈವರೆಗೆ ತೀರ್ಪು ಪ್ರಕಟಗೊಂಡಿರುವ ಮೂರು ಪ್ರಕರಣಗಳಲ್ಲದೆ ಇನ್ನೂ ಮೂರು ಪ್ರಕರಣಗಳು ಲಾಲೂ ಪ್ರಸಾದ್ ವಿರುದ್ಧ ಇವೆ. ಬಿಹಾರ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಲಾಲು ಪ್ರಸಾದ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಅವರು ’ಈ ಪ್ರಕರಣದಲ್ಲೂ ನಾವು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆಯತ್ತೇವೆ. ಇದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ಒಟ್ಟಾಗಿ ಲಾಲು ಪ್ರಸಾದ್ ಅವರನ್ನು ಜೈಲಿನೊಳಗಡೆ ಇರಿಸಲು ನಡೆಸಿರುವ ಸಂಚು. ಮುಂಬರುವ ಚುನಾವಣೆಗಳಲ್ಲಿ ಲಾಲು ಪ್ರಸಾದ್ ಅವರಿಗೆ ವ್ಯಕ್ತವಾಗುವ ಜನಪ್ರಿಯತೆಗೆ ಅವರು ಬೆದರಿದ್ದಾರೆ ಎಂದು ಹೇಳಿದರು.




2018: ನವದೆಹಲಿ: ಲಾಭದಾಯಕ ಹುದ್ದೆ ಹೊಂದಿದ್ದ ಕಾರಣಕ್ಕೆ ೨೦ ಮಂದಿ ಆಮ್ ಆದ್ಮಿ ಪಕ್ಷದ (ಆಪ್) ಶಾಸಕರನ್ನು ಅನರ್ಹಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತು. ಆಪ್ ಶಾಸಕರು ಕೇಂದ್ರ ಹಾಗೂ ಚುನಾವಣಾ ಆಯೋಗ ಕ್ರಮದ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿತು. ಆದರೆ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ ೨೯ರ ಸೋಮವಾರಕ್ಕೆ ನಿಗದಿ ಪಡಿಸಿ, ಅಲ್ಲಿಯ ತನಕ ಉಪ ಚುನಾವಣೆಗಳನ್ನು ಪ್ರಕಟಿಸದಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು. ೨೦ ಆಪ್ ಶಾಸಕರನ್ನು ಅನರ್ಹಗೊಳಿಸಿರುವ ವಿಚಾರದಲ್ಲಿ ಪೆಬ್ರುವರಿ ೬ರ ಒಳಗಾಗಿ ತನ್ನ ಉತ್ತರವನ್ನು ಸಲ್ಲಿಸುವಂತೆಯೂ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು. ತಮ್ಮ ಅನರ್ಹತೆಯ ವಿರುದ್ಧ ೨೦ ಮಂದಿ ಆಪ್ ಶಾಸಕರು ಜನವರಿ 23ರ ಮಂಗಳವಾರ ದೆಹಲಿ ಹೈಕೋರ್ಟ್ ಮೆಟ್ಟಲೇರಿದ್ದರು. ಜನವರಿ ೨೧ರ ಭಾನುವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ೨೦ ಮಂದಿ ಆಪ್ ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಮಾಡಿದ್ದ ಶಿಫಾರಸಿಗೆ  ಒಪ್ಪಿಗೆ ನೀಡಿದ್ದರು.

2018: ಬೀಜಿಂಗ್: ಜಾಗತೀಕರಣದ ವಿರುದ್ಧದ ರಾಷ್ಟ್ರಗಳ ’ಆರ್ಥಿಕ ಸಂರಕ್ಷಣಾ ನೀತಿ ಭಯೋತ್ಪಾದನೆಯಷ್ಟೇ ಅಪಾಯಕಾರಿ ಎಂಬುದಾಗಿ ಬಣ್ಣಿಸಿ ದಾವೋಸ್ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂ ಡಬ್ಲ್ಯೂ ಎಫ್) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವನ್ನು ಚೀನಾ ಮೆಚ್ಚಿಕೊಂಡಿತು. ಜಾಗತೀಕರಣವನ್ನು ಬಲಗೊಳಿಸಲು ಭಾರತದೊಂದಿಗೆ ಸಹಕಾರ ವಿಸ್ತರಣೆಗೆ ಅದು ಆಸಕ್ತಿ ಪ್ರಕಟಿಸಿತು. ಸ್ವಿಟ್ಜರ್ಲೆಂಡಿನ ದಾವೋಸ್ ನಲ್ಲಿ ನಡೆಯುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಶೃಂಗಸಭೆಯಲ್ಲಿ ಕಳೆದೆರಡು ದಶಕಗಳ ಅವಧಿಯಲ್ಲಿ  ಮಾತನಾಡಿದ ಮೊತ್ತ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನರೇಂದ್ರ ಮೋದಿ ಅವರು ಜನವರಿ 23ರ ಮಂಗಳವಾರದ ತಮ್ಮ ಭಾಷಣದಲ್ಲಿ ಭಯೋತ್ಪಾದನೆ, ಹವಾಮಾನ ಬದಲಾವಣೆ ಸೇರಿದಂತೆ ವಿಶ್ವ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು. ‘ಹಲವಾರು ರಾಷ್ಟ್ರಗಳು ಆರ್ಥಿಕ ಸಂರಕ್ಷಣಾ ನೀತಿಯತ್ತ ಆಸಕ್ತವಾಗಿವೆ, ಪರಿಣಾಮವಾಗಿ ಜಾಗತೀಕರಣ ಕುಗ್ಗುತ್ತಿದೆ. ಇಂತಹ ಪ್ರವೃತ್ತಿಗಳನ್ನು ಭಯೋತ್ಪಾದನೆ ಅಥವಾ ಹವಾಮಾನ ಬದಲಾವಣೆಯಂತಹ ವಿಷಯಗಳಿಗಿಂತ ಕಡಿಮೆ ಅಪಾಯಕಾರಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದರು.  ‘ಪ್ರಧಾನಿ ಮೋದಿ ಅವರು ಆರ್ಥಿಕ ಸಂರಕ್ಷಣಾ ನೀತಿ ಬಗ್ಗೆ ಮಾತನಾಡಿರುವುದನ್ನು ನಾನು ಗಮನಿಸಿದ್ದೇನೆ. ಜಾಗತೀಕರಣ ಕಾಲದ  ಟ್ರೆಂಡ್ ಆಗಿದ್ದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಸೇರಿದಂತೆ ಎಲ್ಲ ರಾಷ್ಟ್ರಗಳ ಹಿತಾಸಕ್ತಿಗೆ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆರ್ಥಿಕ ಸಂರಕ್ಷಣಾ ನೀತಿ ವಿರುದ್ಧ ಹೋರಾಡಿ ಜಾಗತೀಕರಣವನ್ನು ಬೆಳೆಸಬೇಕಾದ ಅಗತ್ಯವಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನಿಯಿಂಗ್ ಬೀಜಿಂಗ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದರು. ಎಲ್ಲ ರಾಷ್ಟ್ರಗಳ ಅನುಕೂಲಕ್ಕಾಗಿ ಜಾಗತೀಕರಣವನ್ನು ಬಲಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಇತರ ರಾಷ್ಟ್ರಗಳ ಜೊತೆ ಶ್ರಮಿಸಲು ಚೀನಾ ಇಚ್ಛಿಸುತ್ತದೆ ಎಂದು ಅವರು ನುಡಿದರು.  ದಾವೋಸ್ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಆರ್ಥಿಕ ಸಂರಕ್ಷಣಾ ನೀತಿಯು ಭಯೋತ್ಪಾದನೆಯಂತೆಯೇ ಅಪಾಯಕಾರಿ ಎಂಬುದಾಗಿ ಬಣ್ಣಿಸಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆಯಾಗಿ ಹುವಾ ಚುನಿಯಿಂಗ್ ಅವರಿಂದ ಈ ಅಚ್ಚರಿದಾಯಕ ಪ್ರತಿಕ್ರಿಯೆ ಬಂದಿದೆ. ಗ್ಲೋಬಲ್ ಟೈಮ್ಸ್ ನಂತಹ ಕೆಲವು ದಿನ ಪತ್ರಿಕೆಗಳು ಮೋದಿ ಭಾಷಣವನ್ನು ಚಿತ್ರಸಹಿತವಾಗಿ ಮುಖಪುಟದಲ್ಲೇ ಪ್ರಕಟಿಸಿವೆ. ಜಾಗತೀಕರಣದ ಅತಿ ದೊಡ್ಡ ಫಲಾನುಭವಿಯಾಗಿರುವ ಚೀನಾ ಕಳೆದ ಮೂರು ದಶಕಗಳಲ್ಲಿ ತನ್ನ ಜಿಡಿಪಿ ಬೆಳವಣಿಗೆಯನ್ನು ಎರಡಂಕಿಯಷ್ಟು ಏರಿಸಿಕೊಂಡಿದೆ. ಜಗತ್ತಿನ ಕಾರ್ಖಾನೆಯೋಪಾದಿಯಲ್ಲಿ ಬೆಳೆದಿರುವ ಅದು ವಿಶ್ವದ ಎಲ್ಲ ಕಡೆಗಳಿಗೂ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಚೀನಾ ಕೂಡಾ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ’ಅಮೆರಿಕ ಮೊದಲು (ಅಮೆರಿಕ ಫಸ್ಟ್) ನೀತಿಯನ್ನು ದೃಢವಾಗಿ ವಿರೋಧಿಸಿದೆ. ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ದಾವೋಸ್ ನಲ್ಲಿ ಕಳೆದ ವರ್ಷ ಮಾಡಿದ್ದ ಭಾಷಣದ ಮುಖ್ಯ ವಿಚಾರ ಕೂಡಾ ಇದೇ ಆಗಿತ್ತು.  ‘ಭಾರತ ಮತ್ತು ಚೀನಾ ಹಲವಾರು ಸಾಮಾನ್ಯ ಹಿತಾಸಕ್ತಿಗಳನ್ನು ಹಂಚಿಕೊಂಡಿವೆ. ಚೀನಾವು ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳ ಜೊತೆಗೆ ಆರ್ಥಿಕ ಜಾಗತೀಕರಣವನ್ನು ತೀವ್ರಗೊಳಿಸುವ ಮೂಲಕ ವಿಶ್ವದ ಆರ್ಥಿಕ ಅಭಿವೃದ್ಧಿಗೆ ನೆರವಾಗುವಲ್ಲಿ ಸಮನ್ವಯ ಮತ್ತು ಸಹಕಾರ ಹೆಚ್ಚಿಸಲು ಉತ್ಸುಕವಾಗಿದೆ ಎಂದು ಹುವಾ ನುಡಿದರು. ಮೋದಿ ಅವರ ಭಾಷಣವು ಕಳೆದ ವರ್ಷದ ಕ್ಷಿ ಅವರು ಜಾಗತೀಕರಣಕ್ಕೆ ಒತ್ತುಕೊಟ್ಟು ಮಾಡಿದ ಭಾಷಣದ ಪ್ರತಿಧ್ವನಿ ಆಗಿದೆಯೇ ಎಂಬ ಪ್ರಶ್ನೆಗೆ ಹುವಾ ’ಕ್ಷಿ ಅವರು ಜಾಗತೀಕರಣವನ್ನು ಇನ್ನಷ್ಟು ಮುಕ್ತಗೊಳಿಸಲು, ಎಲ್ಲರನ್ನೂ ಒಳಗೊಳ್ಳುವಂತೆ ಮಾಡಲು, ವಿಶ್ವ ವ್ಯಾಪಿಯಾಗಿಸಲು ಹಾಗೂ ಗೆಲುವಿನ ದಿಕ್ಕಿನಲ್ಲಿ (ವಿನ್ ವಿನ್ ಡೈರೆಕ್ಷನ್) ಒಯ್ಯಲು ಒತ್ತು ನೀಡಿದ್ದರು ಎಂದು ಹೇಳಿದರು. ಆರ್ಥಿಕ ಸಂರಕ್ಷಣೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾದ ಸಮಾನ ನಿಲುವು ಉಭಯ ರಾಷ್ಟ್ರಗಳ ನಡುವಣ ಬಿಗಡಾಯಿಸುತ್ತಿರುವ ದ್ವಿಪಕ್ಷೀಯ ಬಾಂಧವ್ಯವನ್ನು ಸುಧಾರಿಸಲು ನೆರವಾದೀತೇ ಎಂಬ ಪ್ರಶ್ನೆಗೆ ’ನಮ್ಮ ನಿಲುವು ಸ್ಪಷ್ಟ. ಭಾರತ ಚೀನಾದ ದೊಡ್ಡ ನೆರೆಯ ರಾಷ್ಟ್ರ. ಎರಡು ದೊಡ್ಡ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ನೆರೆಹೊರೆಯ ದೇಶಗಳಾಗಿರುವುದರಿಂದ ನಮ್ಮ ದ್ವಿಪಕ್ಷೀಯ ಬಾಂಧವ್ಯಗಳನ್ನು ವೃದ್ಧಿಸಬೇಕೆಂದು ನಾವು ಬಯಸುತ್ತೇವೆ. ಇದು ಉಭಯ ಕಡೆಗಳ ಹಿತಾಸಕ್ತಿಗೂ ಪೂರಕ ಎಂದು ಅವರು ನುಡಿದರು. ‘ನಾವು ಭಾರತದೊಂದಿಗೆ ನಮ್ಮ ಸಂಪರ್ಕವನ್ನು ಮತ್ತು ಪರಸ್ಪರ ವಿಶ್ವಾಸವನ್ನು ವಿಸ್ತರಿಸುವ ನಿಟ್ಟಿನಲ್ಲಿ ಶ್ರಮಿಸಬಯಸುತ್ತೇವೆ ಮತ್ತು ತ್ವರಿತ ಅಭಿವೃದ್ಧಿಗಾಗಿ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳಬಯಸುತ್ತೇವೆ. ಇದು ನಮ್ಮ ರಾಷ್ಟ್ರಗಳ ಜನರ ಆಶಯ ಕೂಡಾ ಎಂದು ನಾನು ನಂಬಿದ್ದೇನೆ ಎಂದು ಹುವಾ ಹೇಳಿದರು.

2018: ನವದೆಹಲಿ: ಸಂಜಯ್ ಲೀಲಾ ಭನ್ಸಾಲಿ ಅವರ ’ಪದ್ಮಾವತ್ ಚಿತ್ರ ಬಿಡುಗಡೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿರುವುದರ ಹೊರತಾಗಿಯೂ ದೇಶದ ವಿವಿಧಡೆಗಳಲ್ಲಿ ಚಿತ್ರದ ವಿರುದ್ಧ ಪ್ರತಿಭಟನೆ ಭುಗಿಲೆದ್ದಿತು.  ಪ್ರತಿಭಟನೆ ಹಿಂತೆಗೆದುಕೊಳ್ಳಲು ನಿರಾಕರಿಸಿರುವ ಕರ್ಣಿ ಸೇನಾ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಲ್ವಿ ಅವರು ಚಿತ್ರವನ್ನು ನಿಷೇಧಿಸದ ರಾಜ್ಯಗಳಿಗೂ ಪ್ರತಿಭಟನೆ ಹರಡಲಿದೆ ಎಂದು ಎಚ್ಚರಿಸಿದರು. ‘ಪದ್ಮಾವತ್ ಚಿತ್ರ ಜನವರಿ ೨೫ರಂದು ಬಿಡುಗಡೆಯಾಗಲು ದಿನ ನಿಗದಿಯಾಗಿತ್ತು. ದೆಹಲಿ ಎನ್‌ಸಿಆರ್ ನಲ್ಲಿ ಹುಚ್ಚಾಟದಲ್ಲಿ ತೊಡಗಿದ್ದ ಕರ್ಣಿ ಸೇನಾ ಗೂಂಡಾಗಳು ಥಿಯೇಟರುಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದರಿಂದ ಥಿಯೇಟರ್ ಮಾಲೀಕರು ಚಿತ್ರಪ್ರದರ್ಶನ ರದ್ದು ಪಡಿಸಿದರು. ಗುರುಗ್ರಾಮದಲ್ಲಿ ಬಸ್ಸಿಗೆ ಬೆಂಕಿ ಕಲ್ಲುತೂರಾಟ, ಮೀರತ್ ನಲ್ಲಿ ಮಾಲ್ ಗೆ ಕಲ್ಲುತೂರಾಟ, ಹಲವೆಡೆ ರೈಲು ತಡೆ, ರಸ್ತೆ ತಡೆ ನಡೆದವು. ಪ್ರತಿಭಟನೆಗೆ ಹೆದರಿದ ಗುಜರಾತ್ ಥಿಯೇಟರ್ ಮಾಲೀಕರು ರಾಜ್ಯದ ಯಾವುದೇ ಕಡೆಯಲ್ಲೂ ಚಿತ್ರವನ್ನು ಪ್ರದರ್ಶಿಲಾಗುವುದಿಲ್ಲ ಎಂದು ಹೇಳಿದರು. ಪದ್ಮಾವತ್ ಬಿಡುಗಡೆಯನ್ನು ವಿರೋಧಿಸಿ ೧೯೦೦ ರಜಪೂತ ಮಹಿಳೆಯರು ’ಜೌಹರ್ (ಸಾಮೂಹಿಕ ಆತ್ಮಾಹುತಿ) ಮಾಡಿಕೊಳ್ಳಲು ಸಜ್ಜಾಗಿದ್ದಾರೆ ಎಂಬುದಾಗಿ ಹೇಳಿದ್ದ ಶ್ರೀ ರಜಪೂತ ಕರ್ಣಿಸೇನಾದ ಚಿತ್ತೋರಗಢ ಮುಖ್ಯಸ್ಥ ಗೋವಿಂದ ಸಿಂಗ್ ಕಂಗರೂಟ್ ಮತ್ತು ಉಪಾಧ್ಯಕ್ಷ ಕಮಲೇಂದು ಸಿಂಗ್ ಸೋಳಂಕಿ ಮತ್ತು ಇನ್ನೊಬ್ಬ ಪ್ರಮುಖ ಕಾರ್ಯಕರ್ತ ದೇವೇಂದ್ರ ಸಿಂಗ್ ಅವರನ್ನು ಪೊಲೀಸರು ಇಂದು ಬಂಧಿಸಿದರು. ದೆಹಲಿ-ಜೈಪುರ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ದಿಗ್ಬಂಧಿಸಿರುವ ಚಳವಳಿಕಾರರು ಕಾನೂನು ಸುವ್ಯವಸ್ಥೆಯನ್ನು ಪೂರ್ತಿಯಾಗಿ ಹಾಳುಗೆಡವಿದರು.  ರಾಜಸ್ಥಾನದಲ್ಲಿ ಚಿತ್ತೋರಗಢ ಕೋಟೆಯನ್ನು ಚಿತ್ರ ಬಿಡುಗಡೆ ವಿರುದ್ಧ ಪ್ರತಿಭಟಿಸಿ ಮುಚ್ಚಲಾಯಿತು. ಚಿತ್ರ ವಿರೋಧಿ ಪ್ರದರ್ಶನಗಳ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ತಮ್ಮ ರಾಜ್ಯಗಳಲ್ಲಿ ಚಿತ್ರಕ್ಕೆ ಭದ್ರತೆಯ ಖಾತರಿಯನ್ನು ಸರ್ಕಾರ ಒದಗಿಸದೇ ಇದ್ದಲ್ಲಿ ಹೂಡಿಕೆದಾರರು ಹಣ ಹೂಡಲು ಹೇಗೆ ಮುಂದೆ ಬಂದಾರು? ಎಂದು ಪ್ರಶ್ನಿಸಿದರು. ಪದ್ಮಾವತ್ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಐದು ಬದಲಾವಣೆ ಮತ್ತು ಚಿತ್ರ ಶೀರ್ಷಿಕೆಯನ್ನು ಬದಲಾಯಿಸಿದ ಬಳಿಕ ಯು/ಎ ಸರ್ಟಿಫಿಕೇಟ್ ನೀಡಿತ್ತು. ಇದಕ್ಕೆ ಮುನ್ನ ವಿವಿಧ ರಾಜ್ಯಗಳ ಸರ್ಕಾರಗಳು ಚಿತ್ರವನ್ನು ನಿಷೇಧಿಸಿದ್ದವು. ರಾಜ್ಯ ಸರ್ಕಾರಗಳ ಈ ಕ್ರಮವನ್ನು ಪ್ರಶ್ನಿಸಿ ಚಿತ್ರ ತಯಾರಕರು ಸುಪ್ರೀಂಕೋರ್ಟಿನ ಕದ ತಟ್ಟಿದ್ದರು. ಸುಪ್ರೀಂಕೋರ್ಟ್ ಅವರ ಪರವಾಗಿ ತೀರ್ಪು ನೀಡಿ ನಿಷೇಧವನ್ನು ತೆರವುಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಆಜ್ಞಾಪಿಸಿತ್ತು. ಆದೇಶವನ್ನು ಪುನರ್ ಪರಿಶೀಲಿಸುವಂತೆ ಕೆಲವು ರಾಜ್ಯಗಳು ಮಾಡಿದ್ದ ಮನವಿಯನ್ನೂ ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು. ಆದರೆ ಈ ತೀರ್ಪಿನ ಬಗ್ಗೆ ಕರ್ಣಿ ಸೇನೆಗೆ ಸಮಾಧಾನವಾಗಿರುವಂತೆ ಕಂಡು ಬರುತ್ತಿಲ್ಲ. ಚಿತ್ರದ ಇನ್ನೂ ಕೆಲವು ದೃಶ್ಯಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿರುವ ಇನ್ನೊಂದು ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಲು ಸುಪ್ರೀಂಕೋರ್ಟ್ ಈಗ ನಿರ್ಧರಿಸಿದೆ ಎಂದು ವರದಿಗಳು ಹೇಳಿದವು. ತೀವ್ರ ವಿವಾದಗಳ ಬಳಿಕ, ಕಳೆದ ರಾತ್ರಿ ಶ್ರೀ ರಜಪೂತ ಕರ್ಣಿಸೇನಾ ಪ್ರಮುಖರಿಗೆ ’ಪದ್ಮಾವತ್ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿತ್ರ ನೋಡಿದ ಸದಸ್ಯರು ಭಾರಿ ಕರತಾಡನದ ಪ್ರತಿಕ್ರಿಯೆ ನೀಡಿದ್ದರು. ವಿವಾದ ಬಗೆಹರಿಯಿತು ಎಂದು ಸಂಜಯ್ ಲೀಲಾ ಭನ್ಸಾಲಿ ನಿರಾಳರಾಗಿದ್ದರು. ಪ್ರತಿಭಟನೆಗಳು ಎಲ್ಲೆಲ್ಲಿ ಏನೇನು? ಮಥುರಾ: ಭೂತೇಶ್ವರ ರೈಲ್ವೇ ನಿಲ್ದಾಣದಲ್ಲಿ ರೈಲುತಡೆ. ನಾಸಿಕ್: ಚಿತ್ರದ ವಿರುದ್ಧ ಪ್ರತಿಭಟಿಸುತ್ತಿದ್ದ ೨೦ ಚಳವಳಿಕಾರರ ಬಂಧನ. ರಜಪೂತ ಸಂಘಟನೆ ಒಂದರ ನಾಯಕನಿಂದ ಗಂಗಾಪುರ ಅಣೆಕಟ್ಟಿನಲ್ಲಿ ಜಲಸಮಾಧಿ ಮಾಡಿಕೊಳ್ಳುವ ಬೆದರಿಕೆ. ಅಣೆಕಟ್ಟಿನ ಬಳಿ ಸೇರಿದವರನ್ನು ಬಂಧಿಸಿದ ನಾಸಿಕ್ ತಾಲೂಕು ಪೊಲೀಸರು. ದೆಹಲಿ: ರಜಪೂತ ಕರ್ಣಿಸೇನಾ  ಸದಸ್ಯರಿಂದ ಹಿಂಸಾತ್ಮಕ ಪ್ರತಿಭಟನೆ. ದೆಹಲಿ- ಎನ್ ಸಿ ಆರ್ ಮಲ್ಟಿಪ್ಲೆಕ್ಸ್ ಮಾಲೀಕರಿಂದ ಚಿತ್ರ ಪ್ರದರ್ಶನ ರದ್ದು ತೀರ್ಮಾನ. ಗ್ರೇಟರ್ ನೋಯ್ಡಾ, ರೋಹಿಣಿ ಪ್ರದೇಶಗಳಲ್ಲೂ ಚಿತ್ರ ಪ್ರದರ್ಶನ ರದ್ದಿಗೆ ಯೋಚನೆ. ಉತ್ತರ ಪ್ರದೇಶ: ಪದ್ಮಾವತ್ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಥಿಯೇಟರ್ ಮಾಲೀಕರಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಸಿದ್ಧಾರ್ಥನಾಥ್ ಸಿಂಗ್ ಭರವಸೆ. ಗುರುಗ್ರಾಮ: ಗುರುಗ್ರಾಮದ ಸೋಹ್ನಾ ರಸ್ತೆಯಲ್ಲಿ ಪ್ರತಿಭಟನಾ ಪ್ರದರ್ಶನ, ಬಸ್ಸಿಗೆ ಕಲ್ಲುತೂರಾಟ, ಬೆಂಕಿ.  ರೋಹಿಣಿಯಲ್ಲೂ ಪ್ರದರ್ಶನ. ಮೀರತ್: ಮೀರತ್ ಪಿವಿಎಸ್ ಮಾಲ್ ಹೊರಭಾಗದಲ್ಲಿ ಪ್ರದರ್ಶನ, ಕಲ್ಲು ತೂರಾಟ. ಮಾಲ್‌ಗೆ ಹಾನಿ. ಲಕ್ನೊದಲ್ಲೂ ಚಿತ್ರ ಮಂದಿರಗಳ ಹೊರಗೆ ಪ್ರತಿಭಟನೆ. ಚಿತ್ರದ ವಿರುದ್ಧ ’ಜನತಾ ನಿಷೇಧಾಜ್ಞೆ ವಿಧಿಸಲಾಗುವುದು ಎಂದು ಕರ್ಣಿಸೇನಾ ಎಚ್ಚರಿಕೆ. ಹಿಂಸಾಚಾರಗಳು ಕರ್ಣಿಸೇನೆಯಿಂದ ನಡೆದಿಲ್ಲ ಎಂದು ಸ್ಪಷ್ಟನೆ. ’ನಾನು ಬುಲೆಟ್ಟುಗಳನ್ನು ಎದುರಿಸುತ್ತೇನೆ, ಆದರೆ ಜನತಾ ನಿಷೇಧಾಜ್ಞೆ ಮುಂದುವರೆಯುತ್ತದೆ ಎಂದು ಕರ್ಣಿಸೇನಾ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಲ್ವಿ ಹೇಳಿಕೆ. ಮುಂಬೈ: ಮುಂಬೈಯಲ್ಲಿ ೫೦ ಮಂದಿ ಕರ್ಣಿಸೇನಾ ಪ್ರತಿಭಟನಕಾರರ ಬಂಧನ. ಪ್ರಧಾನಿ ಮೌನ ಮುರಿಯಲಿ: ಪದ್ಮಾವತ್ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ಮುರಿದು ಸರ್ಕಾರದ ನಿಲುವು ಏನೆಂದು ಬಹಿರಂಗ ಪಡಿಸಬೇಕು ಎಂದು ಯುವ ಕಾಂಗ್ರೆಸ್ ಆಗ್ರಹ.

2018: ರಾಯಪುರ: ಛತ್ತೀಸ್ ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲೀಯರ ಜೊತೆಗೆ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಇಬ್ಬರು ಸಬ್ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ ಹುತಾತ್ಮರಾದರು ಎಂದು ಪೊಲೀಸರು ತಿಳಿಸಿದರು. ಅಬ್ಹಜಮದ್ ಪ್ರದೇಶದ ಇರ್ಪನರ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಗುಂಡಿನ ಘರ್ಷಣೆ ನಡೆಯಿತು. ನಕ್ಸಲ್ ನಿಗ್ರಹ ಕಾರ್ಯಾಚರಣೆಗಾಗಿ ಬಂದಿದ್ದ ಪೊಲೀಸ್ ತಂಡದ ಜೊತೆಗೆ ಈ ಘರ್ಷಣೆ ನಡೆಯಿತು ಎಂದು ವಿಶೇಷ ಪೊಲೀಸ್ ಮಹಾನಿರ್ದೇಶಕ (ನಕ್ಸಲ್ ನಿಗ್ರಹ ಕಾರ್ಯಾಚರಣೆ ) ಡಿ.ಎಂ. ಅವಸ್ಥಿ ಹೇಳಿದರು.  ಡಿಆರ್‌ಜಿಗೆ (ಜಿಲ್ಲಾ ಮೀಸಲು ಗಾರ್ಡ್ ಆಫ್ ಪೊಲೀಸ್) ಸೇರಿದ ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳು ಮತ್ತು ಹಲವಾರು ಕಾನ್ ಸ್ಟೇಬಲ್ ಗಳು ಘರ್ಷಣೆಯಲ್ಲಿ ಪ್ರಾಣ ಕಳೆದುಕೊಂಡರು. ಹಲವರಿಗೆ ಗಾಯಗಳಾದವು ಎಂದು ಅವರು ನುಡಿದರು. 
ಡಿಆರ್ ಜಿ ಮತ್ತು ಪೊಲೀಸರ ವಿಶೇಷ ಕಾರ್ಯ ಪಡೆ (ಎಸ್ ಟಿಎಫ್)  ಇರ್ಪನರ್ ಅರಣ್ಯ ಪ್ರದೇಶದಲ್ಲಿ ಮುತ್ತಿಗೆ ಹಾಕಿದ್ದಾಗ ಈ ಘರ್ಷಣೆ ಸಂಭವಿಸಿತು ಎಂದು ಅವರು ವಿವರಿಸಿದರು. ಘರ್ಷಣೆಯ ಸುದ್ದಿ ಬರುತ್ತಿದ್ದಂತೆಯೇ ಹೆಚ್ಚುವರಿ ಪಡೆಗಳು ಸ್ಥಳಕ್ಕೆ ಧಾವಿಸಿದವು. ಗಾಯಾಳುಗಳನ್ನು ವಿಮಾನ ಮೂಲಕ ರಾಯ್ ಪುರಕ್ಕೆ ಚಿಕಿತ್ಸೆಗಾಗಿ ಒಯ್ಯಲಾಯಿತು ಎಂದು ಅವಸ್ಥಿ ಹೇಳಿದರು. ಬೆಳಗ್ಗೆ ೧೧ ಗಂಟೆಗೆ ಆರಂಭವಾದ ಘರ್ಷಣೆ ಸುಮಾರು ೨ ಗಂಟೆ ಕಾಲ ನಡೆಯಿತು ಎಂದು ಬಸ್ತಾರ್ ವಲಯದ ಐಜಿಪಿ ವಿವೇಕಾನಂದ ಸಿನ್ಹ ಹೇಳಿದರು.

2018: ನವದೆಹಲಿ: ಉತ್ತರ ಭಾರತದ ವಿವಿಧ ಕಡೆಗಳಲ್ಲಿ ದೀಪಿಕಾ ಪಡುಕೋಣೆ ಅವರು ನಟಿಸಿರುವ ಸಂಜಯ್ ಲೀಲಾ ಭನ್ಸಾಲಿ ಅವರ ’ಪದ್ಮಾವತ್ ಚಿತ್ರದ ವಿರುದ್ಧ ಮುಂದುವರೆದ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಜನವರಿ ೨೫ರ ಗುರುವಾರ ರಾಜಸ್ಥಾನ, ಗುಜರಾತ್, ಮಧ್ಯ ಪ್ರದೇಶ ಮತ್ತು ಗೋವಾ ರಾಜ್ಯಗಳಲ್ಲಿ ಚಿತ್ರ ಬಿಡುಗಡೆ ಮಾಡದೇ ಇರಲು ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ತೀರ್ಮಾನಿಸಿತು. ಶೇಕಡಾ ೭೫ರಷ್ಟು ಮಲ್ಟಿಪ್ಲೆಕ್ಸ್ ಮಾಲೀಕರನ್ನು ಪ್ರತಿನಿಧಿಸುವ ಅಸೋಸಿಯೇಶನ್ ಈದಿನ ವಿವಿಧೆಡೆಗಲ್ಲಿ ಚಿತ್ರ ಮಂದಿರಗಳು, ಮಾಲ್ ಗಳಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಮತ್ತು ಬೆದರಿಕೆಗಳನ್ನು ಅನುಸರಿಸಿ ಚಿತ್ರ ಪ್ರದರ್ಶನ ಮಾಡದೇ ಇರುವ ತೀರ್ಮಾನಕ್ಕೆ  ಬಂದಿದೆ. ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಪ್ರತಿಭಟನಕಾರರು ಆಪಾದಿಸಿದ್ದರು. ಅಹಮದಾಬಾದಿನಲ್ಲಿ ಮಾಲ್ ಗಳ ಹೊರಭಾಗದಲ್ಲಿ ಕಳೆದ ರಾತ್ರಿ ಸಂಭವಿಸಿದ ಹಿಂಸಾಚಾರಕ್ಕೆ ಸಂಭವಿಸಿದಂತೆ ೫೦ ಜನರನ್ನು ಪೊಲೀಸರು ಬಂಧಿಸಿದ್ದರೂ, ಪ್ರೇಕ್ಷಕರ ಹಿತದೃಷ್ಟಿ ಮತ್ತು ಆಸ್ತಿ ರಕ್ಷಣೆ ಸಲುವಾಗಿ ಪದ್ಮಾವತ್ ಚಿತ್ರವನ್ನು ಗುರುವಾರ ಪ್ರದರ್ಶನ ಮಾಡದೇ ಇರಲು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರು ಗುಜರಾತಿನಲ್ಲಿ ಇದಕ್ಕೆ ಮುನ್ನ ತೀರ್ಮಾನಿಸಿದ್ದರು. 


2017: ಬೆಂಗಳೂರುಸ್ಯಾಂಡಲ್ವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಪಾರೂಲ್ ಯಾಧವ್ ಅವರಿಗೆ ಈಗ ಸಂಕಷ್ಟ ಕಾಲ. ಮುಂಬೈನಲ್ಲಿ ಕುಟುಂಬದವರ ಜತೆ ಹಾಯಾಗಿದ್ದ ಬೆಡಗಿಗೆ ಬೀದಿ ನಾಯಿಗಳು ಕಚ್ಚಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹಿಂದಿನ ದಿನ ಸಂಜೆ 5.30 ವೇಳೆಗೆ ನಡೆದ ದುರ್ಘಟನೆಯಿಂದಾಗಿ ಅವರ ಕುಟುಂಬ ಸದಸ್ಯರಲ್ಲಿ ತೀವ್ರ ಆತಂಕ ಮೂಡಿತು. ಶೂಟಿಂಗ್ ಬಿಡುವಿನಲ್ಲಿ ತಮ್ಮ ಮನೆಯ ಸಾಕು ನಾಯಿ ಜತೆ ಪಾರೂಲ್ ವಾಕಿಂಗ್ ಹೊರಟಿದ್ದರು. ಆಗ ಸಾಕು ನಾಯಿಯ ಮೇಲೆ ಅಲ್ಲಿದ್ದ ಬೀದಿ ನಾಯಿಗಳು ದಾಳಿ ನಡೆಸಿದವು. ಸಾಕು ನಾಯಿಯನ್ನು ರಕ್ಷಿಸಲು ಮುಂದಾದ ಪಾರೂಲ್ರನ್ನು ಬೀದಿ ನಾಯಿಗಳು ಕಚ್ಚಿ ಘಾಸಿಗೊಳಿಸಿದವು. ತಲೆ, ಕೈ, ಕಾಲುಗಳಿಗೆ ತೀವ್ರ ಗಾಯಗಳಾಗಿ, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅವರ ಸಹಾಯಕ್ಕೆ ಅಲ್ಲಿದ್ದ ಯಾರೊಬ್ಬರೂ ಬರಲಿಲ್ಲ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದವು. 10ರಿಂದ 15 ನಿಮಿಷಗಳ ಕಾಲ 6 ನಾಯಿಗಳು ಪಾರೂಲ್ರನ್ನು ಘಾಸಿಗೊಳಿಸಿದವು. ನಂತರ ಎದುರು ಮನೆಯ ಕೆಲಸದ ಹುಡುಗನೋರ್ವ ರಕ್ಷಣೆಗೆ ಧಾವಿಸಿ ನಾಯಿಗಳನ್ನು ಓಡಿಸಿದ.. 20 ನಿಮಿಷಗಳ ಬಳಿಕ ಪಾರೂಲ್ ಕುಟುಂಬದವರಿಗೆ ವಿಷಯ ತಿಳಿದು, ಕೂಡಲೇ ಮುಂಬೈನ ಕೋಕಿಲಬೆನ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು ಎಂದು ಪಾರೂಲ್ ಸಹೋದರಿ ಶೀತಲ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು..
2017: ಲಖನೌ: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಸಾಧ್ಯವಾಗುವಂತೆ ಮಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೇರಿದಂತೆ 40 ಮಂದಿತಾರಾ ಪ್ರಚಾರಕ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತು. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಪುತ್ರಿ 45 ಹರೆಯದ ಪ್ರಿಯಾಂಕಾ ಹಿಂದಿನ ಚುನಾವಣೆಗಳಲ್ಲಿ ಕುಟುಂಬದ ಕ್ಷೇತ್ರಗಳಾದ ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಆದರೆ ಬೇರೆ ಯಾವುದೇ ಕ್ಷೇತ್ರದಲ್ಲಿ ಅವರು ಪ್ರಚಾರ ನಡೆಸಿರಲಿಲ್ಲ. ಬಾರಿ ಕೂಡಾ ಪ್ರಿಯಾಂಕಾ ಅವರು ಗಡಿಗಳನ್ನು ಮೀರುವುದಿಲ್ಲ ಎಂದು ಪಕ್ಷ ಮೂಲಗಳು ತಿಳಿಸಿವೆ.
2017: ನವದೆಹಲಿ: ಬಾಲಿವುಡ್ ನಟ ಶಾರುಖ್ ಖಾನ್ ಅವರ ರಯೀಸ್ ಪ್ರಚಾರಾರ್ಥ ರೈಲು ಪ್ರವಾಸ ಕಾಲದಲ್ಲಿ ವಡೋದರಾ ರೈಲು ನಿಲ್ದಾಣದಲ್ಲಿ ಶಾರುಖ್ ಅಭಿಮಾನಿಯೊಬ್ಬರು ಸಾವನ್ನಪ್ಪಿದ ಘಟನೆ ಬಗ್ಗೆ ತನಿಖೆ ನಡೆಸುವಂತೆ ರೈಲ್ವೆ ಸಚಿವ ಸುರೇಶ ಪ್ರಭು ಆಜ್ಞಾಪಿಸಿದರು.  ಘಟನೆ ಬಗ್ಗೆ ತನಿಖೆ ನಡೆಸಿ, ಏನಾದರೂ ಲೋಪದೋಷ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಿ ಎಂದು ರೈಲ್ವೆ ಸುರಕ್ಷತಾ ಪಡೆಯ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿರುವುದಾಗಿ ರೈಲ್ವೆ ಸಚಿವರು ಟ್ವೀಟ್ನಲ್ಲಿ ತಿಳಿಸಿದರು. ಶಾರುಖ್ ಖಾನ್ ಅವರನ್ನು ನೋಡುವ ಸಲುವಾಗಿ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಯದ್ವಾತದ್ವ ನುಗ್ಗಿದಾಗ ವಡೋದರಾದ ಫರೀದ್ ಖಾನ್ ಪಠಾಣ್ ಎಂಬವರು ಸಾವನ್ನಪ್ಪಿದ ವರದಿಗಳನ್ನು ಅನುಸರಿಸಿ ಸುರೇಶ ಪ್ರಭು ಅವರು ನಿರ್ದೇಶನ ನೀಡಿದರು. ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದರು. ಆಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್ಪ್ರಸ್ ರೈಲು ಮೂಲಕ ಮುಂಬೈಯಿಂದ ದೆಹಲಿಗೆ ಹೊರಟಿದ್ದ ಶಾರುಖ್ ಖಾನ್ ಅವರನ್ನು ನೋಡಲು ಭಾರಿ ಸಂಖ್ಯೆಯ ಜನ ಮುಗಿಬಿದ್ದಾಗ, ಪೊಲೀಸರು ಅವರನ್ನು ಚದುರಿಸಲು ಲಾಠಿ ಪ್ರಹಾರ ಮಾಡಿದ್ದರು. ಆಗ ಕೆಲವರಿಗೆ ತಲೆ, ಮುಖಕ್ಕೆ ಗಾಯಗಳಾಗಿದ್ದವು.
2016: ನವದೆಹಲಿ: ತಮಿಳುನಾಡು ಸರ್ಕಾರವು ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಿಸಿದಂತೆ ಹೊಸ ಶಾಸನ ರೂಪಿಸಿರುವ ಹಿನ್ನೆಲೆಯಲ್ಲಿ 2016 ಪ್ರಕಟಣೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿತು. ಈ ವಿಚಾರವನ್ನು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ಸುಪ್ರೀಂಕೋರ್ಟಿಗೆ ತಿಳಿಸಿದರು. ತಮಿಳುನಾಡು ಸರ್ಕಾರವು ಹೊಸದಾಗಿ ಶಾಸನ ರೂಪಿಸಿರುವ ಹಿನ್ನೆಲೆಯಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಿ 2016ರಲ್ಲಿ ಹೊರಡಿಸಲಾಗಿದ್ದ ನೋಟಿಫಿಕೇಶನ್ನ್ನು ನಾವು ಹಿಂತೆಗೆದುಕೊಂಡಿದ್ದೇವೆ ಎಂದು ರೋಹ್ಟಗಿ ಅವರು ಅರ್ಜಿಯೊಂದರಲ್ಲಿ ನ್ಯಾಯಾಲಯಕ್ಕೆ ತಿಳಿಸಿದರು. ಅರ್ಜಿ ಸಂಬಂಧ ಸಂಬಂಧ ಪಟ್ಟ ಪೀಠವು ನಿರ್ಧಾರ ಕೈಗೊಳ್ಳುವುದು ಎಂದು ಸುಪ್ರೀಂಕೋರ್ಟ್ ರೋಹ್ಟಗಿ ಅವರಿಗೆ ತಿಳಿಸಿತು.
2017: ನವದೆಹಲಿ: ಪಂಚರಾಜ್ಯ ಚುನಾವಣೆ ಹಿನ್ನೆಲೆ ಮುಂಬರುವ ಬಜೆಟ್ ಅಧಿವೇಶನದಲ್ಲಿ ಐದು ರಾಜ್ಯಗಳ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಯೋಜನೆಗಳನ್ನು ಘೊಷಣೆ ಮಾಡಬಾರದು ಎಂದು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು. ಫೆಬ್ರವರಿ 1ರಂದು ಬಜೆಟ್ ಅಧಿವೇಶನ ನಡೆಯಲಿದೆ. ಫೆಬ್ರವರಿ 4ರಿಂದ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಖಂಡ ಮತ್ತು ಮಣಿಪುರ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಆರಂಭಗೊಳ್ಳಲಿದೆ. ಹಿನ್ನೆಲೆ ಬಜೆಟ್ ಅಧಿವೇಶನವನ್ನು ಮುಂದೂಡುವಂತೆ ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೋಗಿತ್ತು.
2017: ನವದೆಹಲಿ: 2016 ನವೆಂಬರ್- ಡಿಸೆಂಬರ್ ನಡುವಣ ಅವಧಿಯಲ್ಲಿ ರೈತರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ನೀಡಲಾದ ಅಲ್ಪಾವಧಿ ಬೆಳೆ ಸಾಲಗಳ ಮೇಲಿನ ಬಡ್ಡಿ ಮನ್ನಾಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು. ಸರ್ಕಾರಿ ಬೊಕ್ಕಸದ ಮೇಲೆ ಇದರಿಂದ ಸುಮಾರು 500 ಕೋಟಿ ರೂ. ಹೊರೆ ಬೀಳುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ನಿರ್ಧಾರ ಕೈಗೊಂಡಿತು. ದೆಹಲಿಯ ಪ್ರಗತಿ ಮೈದಾನದಲ್ಲಿ (ಐಟಿಪಿಒ) ವಿಶ್ವದರ್ಜೆಯ ಸಮಾವೇಶ ಕೇಂದ್ರ ನಿರ್ಮಾಣಕ್ಕೆ ಕೂಡಾ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಷನ್ (ಐಟಿಪಿಒ) ನಿರ್ಮಿಸುವ ಸಮಾವೇಶ ಕೇಂದ್ರದ ವೆಚ್ಚ 2,254 ರೂಪಾಯಿಗಳು. ಇಂಡಿಯನ್ ಇನ್ಸ್ಟಿಟ್ಟೂಟ್ ಆಫ್ ಮ್ಯಾನೇಜ್ವೆುಂಟ್ (ಐಐಎಂ) ಮಸೂದೆಗೂ ಸಂಪುಟ ಒಪ್ಪಿಗೆ ನೀಡಿತು. ಮಸೂದೆಯು ತನ್ನ ವಿದ್ಯಾರ್ಥಿಗಳಿಗೆ ಡಿಪ್ಲೋಮ ಬದಲಿಗೆ ಪದವಿಗಳನ್ನು (ಡಿಗ್ರಿ) ನೀಡುವ ಅಧಿಕಾರವನ್ನು ಐಐಎಂಗಳಿಗೆ ನೀಡಲು ಕೋರಿದೆ. ಕ್ಯೋಟೊ ಪ್ರೊಟೋಕಾಲ್ ಎರಡನೇ ಬದ್ಧತಾ ಅವಧಿಯನ್ನು ಸ್ಥಿರೀಕರಣಕ್ಕೂ ಕೇಂದ್ರ ಸಚಿವ ಸಂಪುಟ ತನ್ನ ಒಪ್ಪಿಗೆ ನೀಡಿತು.  ಜೊತೆಗೆ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ)ಗೆ 11.35 ಎಕರೆ ಭೂಮಿಯನ್ನು ಹಸ್ತಾಂತರಿಸುವ ಪ್ರಸ್ತಾಪಕ್ಕೂ ಸಂಪುಟ ಒಪ್ಪಿಗೆ ಕೊಟ್ಟಿತು.  ಅನಿಸಾಬಾದ್ ಪ್ರಾಧಿಕಾರದ ಅಷ್ಟೇ ಪ್ರಮಾಣದ ಭೂಮಿಯನ್ನು ವಿನಿಮಯ ಮಾಡಿಕೊಂಡು ಭೂಮಿಯನ್ನು ಹಸ್ತಾಂತರಿಸಲಾಗುವುದು.
2017: ಚೆನ್ನೈ: ಯಾವುದನ್ನೂ ನಿಷೇಧಿಸಬೇಡಿ, ನಿಯಂತ್ರಿಸಿ ಎಂದು ಚೆನ್ನೈಯಲ್ಲಿ ಹೇಳಿದ ಖ್ಯಾತ ಚಿತ್ರನಟ ಕಮಲ್ ಹಾಸನ್ ಅವರುಪೊಲೀಸರೂ ಹಿಂಸಾಚಾರ ಎಸಗಿದ ಸರಣಿ ವಿಡಿಯೋಗಳನ್ನು ಕಂಡು ನನಗೆ ಆಘಾತವಾಗಿದೆಎಂದು ಹೇಳಿದರು. ಜಲ್ಲಿಕಟ್ಟು ವಿಷಯಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಲ್, ಯಾವುದೇ ರೂಪದ ನಿಷೇಧಗಳಿಗೆ ನಾನು ವಿರೋಧಿ ಎಂದರು. ಪೊಲೀಸರೂ ಹಿಂಸಾಚಾರ ಎಸಗಿದ ವಿಡಿಯೋ ಕಂಡು ನನಗೆ ಅಷ್ಟೇ ಆಘಾತವಾಗಿದೆ. ಬಗ್ಗೆ ನಮಗೆ ಸಮಾಧಾನವಾಗುವಂತಹ ವಿವರಣೆ ನೀಡುತ್ತಾರೆ ಎಂದು ಭಾವಿಸಿದ್ದೇನೆ ಎಂದು ಅವರು ನುಡಿದರು. ಮರೀನಾ ಬೀಚ್ನಲ್ಲಿ ಒಂದು ವಾರ ನಡೆದ ಶಾಂತಿಯುತ ಜಲ್ಲಿಕಟ್ಟು ಪರ ಹೋರಾಟದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಸಂದರ್ಭದಲ್ಲಿ ಯಾವುದೇ ಹಿಂಸಾಚಾರ ಸಂಭವಿಸಿರಲಿಲ್ಲ. ಬಳಿಕ ಹಿಂಸಾಚಾರ ಸಂಭವಿಸಿದ್ದು ಖೇದಕರ, ಪರಿಸ್ಥಿತಿ ನಿಯಂತ್ರಿಸಬೇಕಾದ ಪೊಲೀಸರೂ ಹಿಂಸಾಚಾರ ನಿರತರಾದ ವಿಡಿಯೋಗಳು ನಮ್ಮನ್ನು ಘಾಸಿಗೊಳಿಸಿವೆ. ದ್ವಂದ್ವ ಮಾನದಂಡ ಏಕೆ ಎಂಬುದು ನಮ್ಮ ಪ್ರಶ್ನೆ ಎಂದು ಪೊಲೀಸರು ಆಟೋಕ್ಕೆ ಬೆಂಕಿ ಹಚ್ಚಿದ ಹಾಗೂ ಮಹಿಳೆಯರತ್ತ ಲಾಠಿ ಬೀಸಿದ ವಿಡಿಯೋಗಳನ್ನು ಉಲ್ಲೇಖಿಸುತ್ತಾ ಕಮಲ್ ಹೇಳಿದರು. ನಾನು ಪಾಕಿಸ್ತಾನವನ್ನು ದ್ವೇಷಿಸಲು ಬಯಸುವುದಿಲ್ಲ. ಗಡಿಗಳನ್ನೇ ಅಳಿಸಹಾಕಬೇಕು ಎಂದು ನಾನು ಅಪೇಕ್ಷಿಸುತ್ತೇನೆ. ಗಡಿಗಳನ್ನು ಸೃಷ್ಟಿಸಿದವರು ನಾವು ಎಂದು ಕಮಲ್ ಹೇಳಿದರು. ನಾನೇನಾದರೂ 1924ರಲ್ಲಿ ಹುಟ್ಟಿರುತ್ತಿದ್ದರೆ ಮಹಾತ್ಮಾ ಗಾಂಧಿ ಅವರ ಮುಂದೆ ಕುಳಿತು ಭಾರತ- ಪಾಕಿಸ್ತಾನ ಮಧ್ಯೆ ಏಕತೆಗಾಗಿ ಪ್ರಾರ್ಥಿಸುತ್ತಿದ್ದೆ ಎಂದು ನುಡಿದರು.
2017: ಜೈಪುರ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ .8ರಂದು ತಳೆದ 500/1000 ರೂ. ಮುಖಬೆಲೆಯ ನೋಟು ನಿಷೇಧ ನಿರ್ಣಯವು ರಾಜಸ್ಥಾನ ಶಾಲೆಗಳ ಪಠ್ಯದಲ್ಲಿ ಸೇರ್ಪಡೆಗೊಳ್ಳಲಿದೆ. ವಿದ್ಯಾರ್ಥಿಗಳು ನಗದು ರಹಿತ ವ್ಯವಸ್ಥೆ ಮತ್ತು ಮೊಬೈಲ್ ವ್ಯಾಲೆಟ್ ಬಳಕೆ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. 12ನೇ ತರಗತಿ ಪಠ್ಯದಲ್ಲಿ ನೋಟು ನಿಷೇಧ ಮತ್ತು ನಗದು ರಹಿತ ವಿತ್ತೀಯ ವ್ಯವಸ್ಥೆ ಎಂಬ 2 ಪಾಠಗಳನ್ನು ಅಳವಡಿಸಲು ರಾಜಸ್ಥಾನ ಸೆಕೆಂಡರಿ ಎಜುಕೇಶನ್ ಬೋರ್ಡ್(ಆರ್ಬಿಎಸ್) ನಿರ್ಧರಿಸಿತು.   ವಿಚಾರವಾಗಿ ಆರ್ಬಿಎಸ್ ಚೇರ್ಮನ್ ಬಿಎಲ್ ಚೌಧರಿ, ಇಲ್ಲಿನ ವಿದ್ಯಾರ್ಥಿಗಳು ನಗದು ರಹಿತ ವ್ಯವಹಾರ ನಡೆಸುವ ಕುರಿತು ಮತ್ತು ಮೊಬೈಲ್ ವ್ಯಾಲೆಟ್ಗಳನ್ನು ಬಳಕೆ ಮಾಡುವ ಕುರಿತು ಒಂದು ಪಠ್ಯವಾಗಿ ಕಲಿಕೆ ನಡೆಸಲಿದ್ದಾರೆ ಎಂದು ತಿಳಿಸಿದರು. ಡಿಜಿಟಲೀಕರಣಕ್ಕೆ ಬೆಂಬಲವಾಗಿ ಈಗಾಗಲೇ ಅಜಮೀರ್ ಆರ್ಬಿಎಸ್ಇಯ ವಿದ್ಯಾರ್ಥಿ ಸೇವಾ ಕೇಂದ್ರದಲ್ಲಿ ಸ್ವೈಪಿಂಗ್ ಯಂತ್ರ ಅಳವಡಿಸಲಾಗಿದೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳನ್ನು ಸ್ವೈಪ್ ಮಾಡುವ ಮೂಲಕ ಅಗತ್ಯ ಅಂಕಪಟ್ಟಿ ಪ್ರತಿ, ಅರ್ಜಿ, ಪ್ರಮಾಣಪತ್ರ ಇತ್ಯಾದಿಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಚೌದರಿ ತಿಳಿಸಿದರು.
2017: ನವದೆಹಲಿಉದ್ಯಮಿ ವಿಜಯ್ಮಲ್ಯ ಸಾಲ ಬಾಕಿ ಪ್ರಕರಣ ಸಂಬಂಧ ಐಡಿಬಿಐನ ಮಾಜಿ ಅಧ್ಯಕ್ಷರ ಸೇರಿದಂತೆ ಎಂಟು ಮಂದಿ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತು. ಬಂಧಿತರನ್ನು ಫೆ.7 ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ದೋಷಾರೋಪ ಪಟ್ಟಿಯಲ್ಲಿರುವ ಎಂಟೂ ಮಂದಿಯನ್ನು ನ್ಯಾಯಾಂಗ ವಶಕ್ಕೆ ನೀಡಬೇಕು ಎಂದು ಸಿಬಿಐ ಕೇಳಿಕೊಂಡಿತು. ಬಳಿಕ, ಆರೋಪಿಗಳನ್ನು ಫೆ. 7ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ಸಿಬಿಐ ಮೂಲಗಳು ತಿಳಿಸಿದವು. ಬಂಧನ ವಿವರಐಡಿಬಿಐ ಬ್ಯಾಂಕ್ ಮಾಜಿ ಅಧ್ಯಕ್ಷ, ಬ್ಯಾಂಕಿನ ಮೂವರು ಮಾಜಿ ಅಧಿಕಾರಿಗಳು ಹಾಗೂ ಕಿಂಗ್ಫಿಷರ್ಏರ್ಲೈನ್ಸ್ ನಾಲ್ವರು ಅಧಿಕಾರಿಗಳನ್ನು ಸಿಬಿಐ ಬಂಧಿಸಿತ್ತುಬ್ಯಾಂಕ್ಅಧ್ಯಕ್ಷರಾಗಿದ್ದ ಯೋಗೇಶ್ ಅಗರ್ವಾಲ್, ಕಿಂಗ್ಫಿಷರ್ಏರ್ಲೈನ್ಸ್ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ . ರಘುನಾಥನ್ ಬಂಧಿತರಲ್ಲಿ ಸೇರಿದ್ದರು.

2017: ನವದೆಹಲಿ: 68ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ನವದೆಹಲಿಗೆ ಆಗಮಿಸಿದ ಯುಎಇ (ಯುನೈಟೆಡ್ಅರಬ್ಎಮಿರೇಟ್ಸ್‌) ಯುವರಾಜ ಶೇಖ್ಮೊಹಮದ್ಬಿನ್ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಸ್ವಾಗತಿಸಿದರು. ಅವರು ಭಾರತದೊಂದಿಗೆ ವಾಣಿಜ್ಯ ಹಾಗೂ ದ್ವಿಪಕ್ಷೀಯ ಬಾಂಧ್ಯವ್ಯ ವೃದ್ಧಿಗೆ ಮಾತುಕತೆ ನಡೆಸಲಿದ್ದಾರೆ. ಭಾರತದಲ್ಲಿರೂ.5.10 ಲಕ್ಷ ಕೋಟಿ (75 ಬಿಲಿಯನ್ಡಾಲರ್‌) ಹೂಡಿಕೆ ಮಾಡಲು ಉನ್ನತ ಮಟ್ಟದ ಮಾತುಕತೆ ಇದೇ ಸಂದರ್ಭದಲ್ಲಿ ನಡೆಯಲಿದೆ. ವಾಣಿಜ್ಯ ಮತ್ತು ಹೂಡಿಕೆ ವಿಷಯಗಳ ಕುರಿತು ಉಭಯ ದೇಶಗಳ ನಾಯಕರು ಹಾಗೂ ಬೃಹತ್ಉದ್ದಿಮೆದಾರರ ಸಭೆ ನಡೆಸಲಿದ್ದಾರೆ. ರಾಷ್ಟ್ರೀಯ ಭದ್ರತೆ, ರಕ್ಷಣೆ, ಜಂಟಿ ವಿಮಾನ ಉತ್ಪಾದನೆ, ಪ್ರವಾಸೋದ್ಯಮ, ಸೇರಿದಂತೆ ಸಮಗ್ರ ಪಾಲುದಾರಿಕೆ ಕುರಿತಾದ ಮಹತ್ವದ ಒಪ್ಪಂದಗಳ ಚರ್ಚೆ ನಡೆಯಲಿದೆ. ಭಾರತದಿಂದ ಬ್ರಹ್ಮೋಸ್ಕ್ಷಿಪಣಿ ಖರೀದಿಸಲು ಅರಬ್ರಾಷ್ಟ್ರಗಳು ಆಸಕ್ತಿ ಹೊಂದಿವೆ. ಭಯೋತ್ಪಾದನೆ ನಿಗ್ರಹ ಮತ್ತು ಎರಡು ದೇಶಗಳ ಗುಪ್ತಚರ ಮಾಹಿತಿ ಸಾಮರಸ್ಯ ಕಾಯ್ದುಕೊಳ್ಳಲು ಮಾತುಕತೆಗೆ ಮುಂದಾಗಲಿವೆ. ಇತ್ತೀಚೆಗೆ ಯುಎಇ ಸರ್ಕಾರವು ಭಾರತೀಯ ಅಧಿಕಾರಿಗಳ ವಿನಂತಿ ಮೇರೆಗೆ ಅರಬ್ರಾಷ್ಟ್ರದಲ್ಲಿರುವ ಭೂಗತ ಪಾತಕಿ ದಾವೂದ್ಇಬ್ರಾಹಿಂಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು.2009: ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಈದಿನ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. 'ಅವರ ಆರೋಗ್ಯ ಸ್ಥಿರವಾಗಿದ್ದು, 11 ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ತೀವ್ರ ನಿಗಾ ಘಟಕ (ಐಸಿಸಿಯು)ಕ್ಕೆ ಸ್ಥಳಾಂತರಿಸಲಾಗಿದೆ. 1990ರಲ್ಲಿ ಬ್ರಿಟನ್ನಿನಲ್ಲಿ ಅವರಿಗೆ ನಡೆದಿದ್ದ ಬೈಪಾಸ್ ಸಂದರ್ಭದಲ್ಲಿ ಕಸಿ ಮಾಡಿದ್ದ ಅಂಗಾಂಶಗಳ ಬದಲಿ ಜೋಡಣೆಯನ್ನು ಸಹ ಇಂದಿನ ಶಸ್ತ್ರಚಿಕಿತ್ಸೆ ಒಳಗೊಂಡಿತ್ತು' ಎಂದು ಏಮ್ಸ್ ವೈದ್ಯರು ತಿಳಿಸಿದರು. ಮುಂಜಾನೆ 5.30ಕ್ಕೆ ಪ್ರಧಾನಿಯನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಯಿತಾದರೂ 7.15ಕ್ಕೆ ಚಿಕಿತ್ಸೆ ಆರಂಭವಾಯಿತು. ಮುಂಬೈನ ಏಷ್ಯನ್ ಹಾರ್ಟ್ ಇನ್ಸ್‌ಟಿಟ್ಯೂಟ್ (ಎಎಚ್‌ಐ)ನ ತಜ್ಞ ರಮಾಕಾಂತ ಪಾಂಡ ನೇತೃತ್ವದ 11 ವೈದ್ಯರ ತಂಡದೊಂದಿಗೆ ಏಮ್ಸ್‌ನ ಮೂವರು ವೈದ್ಯರು ಮತ್ತು ಸಿಬ್ಬಂದಿ ಸಹಕರಿಸಿದರು.
2009: ನಕಲಿ ವೀಸಾ, ಪಾಸ್‌ಪೋರ್ಟ್ ಮತ್ತಿತರ ದಾಖಲೆಗಳನ್ನು ಸೃಷ್ಟಿಸಿ ವಿದೇಶಕ್ಕೆ ಮಾನವ ಕಳ್ಳ ಸಾಗಣೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದ ವಂಚಕರ ಜಾಲವನ್ನು ಭೇದಿಸಿದ ಬೆಂಗಳೂರು ಸಂಪಿಗೆಹಳ್ಳಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದರು. ಆರ್.ಟಿ.ನಗರದ ಸೈಯದ್ ಇಕ್ಬಾಲ್ (28), ಇಲಿಯಾಜ್ (43), ವಸೀಂ ಪಾಷಾ (24), ಸೈಯದ್ ಗೌಸ್ (37), ಚಿಕ್ಕಪೇಟೆ ಡಾ.ಟಿ.ಸಿ.ಎಂ.ರಾಯನ್ ರಸ್ತೆಯ ಸೈಯದ್ ಅಕ್ರಂ (44), ನ್ಯೂಭಾರತಿ ನಗರದ ಸಿದ್ದಿಕ್ ಹುಸೇನ್ (37) ಮತ್ತು ಮಾರಪ್ಪ ಗಾರ್ಡನ್ ಮೂರನೇ ಅಡ್ಡರಸ್ತೆಯ ಇಕ್ಬಾಲ್ ಅಹಮ್ಮದ್ (44) ಬಂಧಿತರು. ಪ್ರಕರಣದ ಇತರೆ ಎಂಟು ಆರೋಪಿಗಳು ತಲೆಮರೆಸಿಕೊಂಡರು.

2009: ಕಾಂಗ್ರೆಸ್, ಜೆಡಿಎಸ್, ಜೆಡಿಯು ಸದಸ್ಯರ ಆಕ್ಷೇಪದ ನಡುವೆ ವಿಧಾನ ಪರಿಷತ್ತಿನಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ (ಎಸ್‌ಎಎಸ್) ಜಾರಿಗೆ ಅವಕಾಶ ಮಾಡಿಕೊಡುವ ಕರ್ನಾಟಕ ಪೌರನಿಗಮಗಳ (ತಿದ್ದುಪಡಿ) ಮಸೂದೆಗೆ ಅಂಗೀಕಾರ ನೀಡಲಾಯಿತು. ತೆರಿಗೆ ನಿಗದಿ ಮಾಡುವ ಹಾಗೂ ಅದನ್ನು ಪರಿಷ್ಕರಿಸುವ ಅಧಿಕಾರವನ್ನು ಆಯುಕ್ತರಿಗೆ ನೀಡಿದ್ದು ವ್ಯಾಪಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ವಿರೋಧ ಪಕ್ಷಗಳ ಸದಸ್ಯರು ಶಂಕೆ ವ್ಯಕ್ತಪಡಿಸಿದರು. ವಾಹನ ನಿಲುಗಡೆ ಬಾಡಿಗೆ ಮೇಲೂ ತೆರಿಗೆ ವಿಧಿಸುವ ಉದ್ದೇಶಿತ ಪ್ರಸ್ತಾವದಿಂದ ನಾಗರಿಕರಿಗೆ ತೊಂದರೆಯಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

2009: 2020ನೇ ವರ್ಷದ ವೇಳೆಗೆ ದೇಶದ ಎಲ್ಲ ಸರ್ಕಾರಿ ಕಚೇರಿಗಳನ್ನು ಕಂಪ್ಯೂಟರೀಕರಣಗೊಳಿಸಬೇಕೆಂದು ಎರಡನೇ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿತು. ಕಂಪ್ಯೂಟರೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಪಾಸ್‌ಪೋರ್ಟ್, ವೀಸಾ ಮತ್ತು ಭೂದಾಖಲೆಗಳ ವಿತರಣೆಗೆ ಆದ್ಯತೆ ನೀಡಲಾಯಿತು. ಪ್ರಾಯೋಗಿಕವಾಗಿ ಬೆಂಗಳೂರು ಮತ್ತು ಚಂಡೀಗಡದಲ್ಲಿ ದೇಶದ ಮೊದಲ ಆನ್‌ಲೈನ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು 2009ನೇ ಮಾರ್ಚ್ ತಿಂಗಳೊಳಗೆ ಕಾರ್ಯಾರಂಭ ಮಾಡುವುವು. ಈ ಶಿಫಾರಸುಗಳನ್ನೊಳಗೊಂಡ ಆಯೋಗದ ಹನ್ನೊಂದನೇ ವರದಿಯನ್ನು ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಈದಿನ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ದೇಶದಲ್ಲಿ ಈಗ 345 ಪಾಸ್‌ಪೋರ್ಟ್ ಕಚೇರಿಗಳಿದ್ದು ಅವುಗಳನ್ನು 1250ಕ್ಕೆ ಹೆಚ್ಚಿಸುವುದರ ಜೊತೆಗೆ ಅದರ ಸಂಪೂರ್ಣ ಕಾರ್ಯವನ್ನು ಆನ್‌ಲೈನ್ ಮಾಡಲು ವಿದೇಶಾಂಗ ವ್ಯವಹಾರ ಇಲಾಖೆ ನಿರ್ಧರಿಸಿದೆ ಎಂದು ವರದಿ ಹೇಳಿತು.

2009: ತಿಲಕರತ್ನೆ ದಿಲ್ಶನ್ ಅವರ ಅಜೇಯ ಶತಕ (137) ಹಾಗೂ ಬೌಲರುಗಳ ಮೊನಚಾದ ದಾಳಿಯ ನೆರವಿನಿಂದ ಲಾಹೋರಿನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ಥಾನ ವಿರುದ್ಧ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 234 ರನ್ನುಗಳ ಭರ್ಜರಿ ಗೆಲುವು ಪಡೆಯಿತು. ಈ ಗೆಲುವಿನ ಮೂಲಕ ಮಾಹೇಲ ಜಯವರ್ಧನೆ ಬಳಗ ಮೂರು ಪಂದ್ಯಗಳ ಸರಣಿಯನ್ನು 2-1 ರಲ್ಲಿ ತನ್ನದಾಗಿಸಿತು. ಲಂಕಾ ತಂಡದ ವಿಶ್ವವಿಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಈ ಪಂದ್ಯದಲ್ಲಿ ಏಕದಿನ ಕ್ರಿಕೆಟಿನಲ್ಲಿ 500 ವಿಕೆಟ್ ಪಡೆದ ಸಾಧನೆ ಮಾಡಿ ಸಹ ಆಟಗಾರರ ಸಂಭ್ರಮ ಹೆಚ್ಚಿಸಿದರು.

2009: ಜಲಜನಕ ಉತ್ಪತ್ತಿಗೆ ವಿಜ್ಞಾನಿಗಳು ಹೊಸ ವಿಧಾನವೊಂದನ್ನು ಕಂಡುಹಿಡಿದರು. ಅಲ್ಯೂಮಿನಿಯಂ ಅಣುಗಳ ಆಯ್ದ ಗುಚ್ಛಗಳು ಹಾಗೂ ನೀರಿನ ನಡುವೆ ರಾಸಾಯನಿಕ ಕ್ರಿಯೆ ನಡೆಯುವಂತೆ ಮಾಡುವ ಮೂಲಕ ಈ ಹೊಸ ವಿಧಾನವನ್ನು ಕಂಡುಹಿಡಿದಿರುವುದಾಗಿ ಅವರು ವಾಷಿಂಗ್ಟನ್ನಿನಲ್ಲಿ ಪ್ರಕಟಿಸಿದರು. ಈ ಸಂಶೋಧನೆಯು ಕೇವಲ ನೀರಿನ ವಿಭಜನೆಯಲ್ಲಿ ಮಾತ್ರವಲ್ಲ; ಇತರ ಸಣ್ಣ ಕಣಗಳ ಬಂಧವನ್ನು ಬೇರ್ಪಡಿಸುವಲ್ಲಿಯೂ ಹೊಸ ಸಾಧ್ಯತೆಯನ್ನು ತೆರೆದಿಡಬಲ್ಲುದು ಎಂದು ಪೆನ್ ವಿಶ್ವವಿದ್ಯಾಲಯದ ವಿಜ್ಞಾನಿ ಇವಾನ್ ಪಗ್ ಅಭಿಪ್ರಾಯಪಟ್ಟರು.

2008: ಆಸ್ಟ್ರೇಲಿಯಾದ ಅತ್ಯಂತ ಹಳೆಯ ಪತ್ರಿಕೆಯಾದ `ದಿ ಬುಲೆಟಿನ್' ತನ್ನ ಕೊನೆಯ ಸಂಚಿಕೆಯನ್ನು ಪ್ರಕಟಿಸಿತು. ಈ ಮೂಲಕ 127ವರ್ಷಗಳಷ್ಟು ಹಳೆಯದಾದ ಈ ಪತ್ರಿಕೆ ಅಧಿಕೃತವಾಗಿ ಮುಚ್ಚಿಹೋಯಿತು. ಪತ್ರಿಕೆಯ ಪ್ರಸಾರದಲ್ಲಿ ಕುಸಿತ ಕಂಡದ್ದರಿಂದ ಪತ್ರಿಕೆಯನ್ನು ಮುಚ್ಚಬೇಕಾಯಿತು. ಈ ಪ್ರಸಿದ್ಧ ಪತ್ರಿಕೆಯಲ್ಲಿ ಹಲವು ಖ್ಯಾತನಾಮರ ಆರಂಭಿಕ ಲೇಖನಗಳು ಪ್ರಕಟವಾಗಿದ್ದವು. ಉತ್ತಮ ಗುಣಮಟ್ಟ, ನಿಷ್ಪಕ್ಷಪಾತ ವರದಿಗಳು, ಪ್ರಚಲಿತ ವಿಷಯಗಳ ವಿಶ್ಲೇಷಣೆಗೆ ಹೆಸರಾಗಿದ್ದ `ದಿ ಬುಲೆಟಿನ್' ಪತ್ರಿಕಾ ರಂಗದ ಹಲವು ಪ್ರಶಸ್ತಿಗಳನ್ನು ಗಳಿಸಿತ್ತು. ವೇಗವಾಗಿ ಬೆಳೆಯುತ್ತಿರುವ ಅಂತರ್ಜಾಲ ಪತ್ರಿಕೋದ್ಯಮದೊಂದಿಗೆ ಸ್ಪರ್ಧಿಸಲಾಗದೇ ಇದ್ದುದರಿಂದ `ದಿ ಬುಲೆಟಿನ್' ಕೊನೆಯುಸಿರು ಎಳೆಯಬೇಕಾಯಿತು ಎಂದು ಮಾಧ್ಯಮ ವಿಶ್ಲೇಷಕ ಹರೊಲ್ಡ್ ಮಿಚೆಲ್ ವಿಶ್ಲೇಷಿಸಿದರು.

2008: ಜಪಾನಿನ ಪರ್ವತಾರೋಹಿ ಸುಮಿಯೊ ತ್ಸುಜುಕಿ (40) ಹಿಮಹಾವುಗೆ ತೊಟ್ಟು(ಸ್ಕೀ) ಹಿಮದ ಮೇಲೆ ಜಾರುತ್ತಾ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಭಾಜನರಾದರು. ಸ್ಥಳೀಯ ಕಾಲಮಾನ ಬೆಳಗಿನ ಜಾವ 7.45ಕ್ಕೆ ಅವರು ದಕ್ಷಿಣ ಧ್ರುವ ಪ್ರದೇಶವನ್ನು ತಲುಪಿದರು. ನವೆಂಬರ್ 2007ರಿಂದಲೇ ದಕ್ಷಿಣ ಧ್ರುವಕ್ಕೆ (ಅಂಟಾರ್ಟಿಕಾ) ಸುಮಿಯೊ ಪ್ರಯಾಣ ಆರಂಬಿಸಿದ್ದರು.

2008: ಫ್ರಾನ್ಸಿನ ಪ್ರತಿಷ್ಠಿತ `ಆಫೀಸರ್ ಆಫ್ ದ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್' ಸಾಂಸ್ಕೃತಿಕ ಪ್ರಶಸ್ತಿಗೆ ಬಾಲಿವುಡ್ಡಿನ ಖ್ಯಾತ ನಟ ಶಾರುಖ್ ಖಾನ್ ಆಯ್ಕೆಯಾದರು. ವೃತ್ತಿ ಜೀವನದ ಉತ್ತಮ ಸಾಧನೆ ಮತ್ತು ಸಿನಿಮಾದ ಮೂಲಕ ಭಾರತ-ಫ್ರಾನ್ಸ್ ಮಧ್ಯೆ ಸಹಕಾರ ಮೂಡಿಸಿರುವ ಕಾರ್ಯವನ್ನು ಗುರುತಿಸಿ ಖಾನ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಎಂದು ಫ್ರಾನ್ಸ್ ರಾಯಭಾರ ಕಚೇರಿಯ ಪ್ರಕಟಣೆ ತಿಳಿಸಿತು. ಶಾರುಖ್ ಜತೆಗೆ ಜಾರ್ಜ್ ಕ್ಲೂನಿ, ಕ್ಲಿಂಟ್ ಈಸ್ಟ್ ವುಡ್, ಮೆರಿ ಸ್ಟ್ರೀಟ್, ಬ್ರ್ಯೂಸ್ ವಿಲ್ಸ್, ಜುಡೆ ಲಾ ಹಾಗೂ ಅರುಂಧತಿ ರಾಯ್ ಅವರನ್ನೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿತು.

2008: ವಿಜಾಪುರ ಮಹಿಳಾ ವಿವಿ ಕುಲಪತಿಯಾಗಿ ಬೆಂಗಳೂರು ವಿ.ವಿಯ ಸೂಕ್ಷ್ಮ ಜೀವಾಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಗೀತಾ ಬಾಲಿ ಅವರನ್ನು ನೇಮಕ ಮಾಡಲಾಯಿತು.

2008: `ಹೆವೆನ್ ಸೆಂಟ್ ಬ್ರಾಂಡಿ' - ಇದು ಜಗತ್ತಿನ ಅತ್ಯಂತ ಪುಟ್ಟ ನಾಯಿ. ಈ ಪುಟ್ಟ ಹೆಣ್ಣು ನಾಯಿಯ ಹೆಸರು ಚಿಚೌಹುವಾ. ಬೊಗಳಲು ಬಾರದ ಈ ನಾಯಿಯ ಕಾಲುಗಳು ಲಾಲಿ ಪಪ್ಪನ್ನು ಹೋಲುತ್ತವೆ. ಮೂಗಿನಿಂದ ಬಾಲದವರೆಗೆ ಅಳೆದರೆ, ಅದರ ಉದ್ದ ಆರು ಅಂಗುಲ. ಒಟ್ಟಾರೆ ತನ್ನ ಆಕಾರವನ್ನೇ ಬಂಡವಾಳವಾಗಿಸಿಕೊಂಡಿರುವ ಈ ಬ್ರಾಂಡಿ ನಾಯಿ, `ಉದ್ದದಲ್ಲಿ ಅತಿ ಪುಟ್ಟ ನಾಯಿ' ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿನಿಂದ 2005ರಲ್ಲಿ ಸರ್ಟಿಫಿಕೇಟ್ ಪಡೆದಿತ್ತು ಎಂದು ಲಂಡನ್ನಿನಲ್ಲಿ ಈ ದಿನ ಪ್ರಕಟಿಸಲಾಯಿತು.

2007: ಕನ್ನಡವೂ ಸೇರಿದಂತೆ ಏಳು ಭಾಷೆಗಳ ಪ್ರತ್ಯೇಕ ಸಾಫ್ಟ್ ವೇರ್ ಸಾಧನ ಮತ್ತು ಫಾಂಟ್ ಗಳ ಸಿಡಿಗಳನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಬಿಡುಗಡೆ ಮಾಡಿತು. ಕನ್ನಡ, ಉರ್ದು, ಪಂಜಾಬಿ, ಮರಾಠಿ, ಮಲೆಯಾಳಂ, ಒರಿಯಾ ಮತ್ತು ಅಸ್ಸಾಮಿ ಭಾಷೆಗಳ ಫಾಂಟ್ಸ್, ಇಮೇಲ್ ಗೆ ನೆರವಾಗುವ ಮೆಜೆಂಜರ್ ಬ್ರೌಸರ್, ಲಿಪಿ ಸಂಸ್ಕಾರಕ, ಸ್ಪೆಲ್ ಚೆಕ್, ಬಹುಭಾಷಾ ಶಬ್ಧಕೋಶದ ಸಿಡಿಯನ್ನು ಸಿ-ಡಾಕ್ ವಿವಿಧ ತಜ್ಞರ ನೆರವಿನಿಂದ ತಯಾರಿಸಿದೆ.

2007: ಹಿರಿಯ ಪತ್ರಕರ್ತ ವೈ.ಕೆ. ರಾಜಗೋಪಾಲ್ (86) ಅವರು ಬೆಂಗಳೂರಿನಲ್ಲಿ ನಿಧನರಾದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ರಾಜಗೋಪಾಲ್ `ಡೆಕ್ಕನ್ ಹೆರಾಲ್ಡ್' ಪತ್ರಿಕೆಯ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿದ್ದು `ಮದರ್ ಲ್ಯಾಂಡ್' `ಇನ್ಫಾ' ಸುದ್ದಿ ಸಂಸ್ಥೆಗಳಲ್ಲೂ ಸೇವೆ ಸಲ್ಲಿಸಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಮಹಾಜನ್ ವರದಿಯ ಶಿಫಾರಸುಗಳನ್ನು `ಸ್ಕೂಪ್' ಮಾಡಿದ ಕೀರ್ತಿ ಇವರದು.

2007: ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕಬ್ಬಿಗೆರೆಯಲ್ಲಿ ನಿರ್ಮಿಸಿರುವ 500 ಕೆ.ವಿ. ಸಾಮರ್ಥ್ಯದ ದೇಶದ ಮೊತ್ತ ಮೊದಲ ಬಯೋಮಾಸ್ ಗ್ಯಾಸಿಫೈಯರ್ ಘಟಕವನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಸಿ.ಎಂ. ಉದಾಸಿ ರಾಷ್ಟ್ರಕೆ ಸಮರ್ಪಿಸಿದರು.

2006: ಬಿಹಾರದ ಈ ಮೊದಲಿನ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದ್ದ ರಾಜ್ಯಪಾಲ ಬೂಟಾಸಿಂಗ್ ಅವರಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿತು. ರಾಜ್ಯಪಾಲರು ಕೇಂದ್ರ ಸರ್ಕಾರವನ್ನು ಹಾದಿ ತಪ್ಪಿಸಿದ್ದಾರೆ ಎಂದೂ ಮುಖ್ಯನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನಪೀಠವು 3-2ರ ಬಹುಮತದ ತೀರ್ಪಿನಲ್ಲಿ ಹೇಳಿತು. ಜನತಾದಳ (ಯು) ಅಧಿಕಾರಕ್ಕೆ ಬರದಂತೆ ತಡೆಯುವ ಏಕಮಾತ್ರ ಉದ್ದೇಶದ ರಾಜ್ಯಪಾಲರ ಕ್ರಮದ ಸತ್ಯಾಸತ್ಯತೆಯನ್ನು ಕೇಂದ್ರ ಸರ್ಕಾರವೂ ಪರಾಮರ್ಶಿಸಿ ರಾಜ್ಯಪಾಲರ ವರದಿಯ ಅಂಶವನ್ನು ದೃಢಪಡಿಸಿಕೊಳ್ಳಬೇಕಿತ್ತು ಎಂದು ನ್ಯಾಯಾಲಯ ಹೇಳಿತು.

2006: ಕುವೈತಿನ ಅಸ್ವಸ್ಥ ದೊರೆ ಶೇಖ್ ಸಾದ್ ಅಲ್ ಅಬ್ದ್ಲುಲಾ ಅವರು ಆಳುವ ಕುಟುಂಬದ ಒಳಗಿನ ಒಪ್ಪಂದಕ್ಕೆ ಅನುಗುಣವಾಗಿ ಅರಸೊತ್ತಿಗೆ ತ್ಯಜಿಸಿದರು. ಇದರಿಂದಾಗಿ ರಾಜಕುಟುಂಬದೊಳಗಿನ ಬಿಕ್ಕಟ್ಟು ಬಗೆಹರಿದು, ದೀರ್ಘಕಾಲದಿಂದ ಅಧಿಕಾರ ಇಲ್ಲದೆ ನಾಮಮಾತ್ರ ಆಳ್ವಿಕೆ ನಡೆಸುತ್ತಿದ್ದ ಪ್ರಧಾನಿ ಶೇಕ್ ಅಲ್ ಸಭಾ ಅಲ್ ಅಹಮದ್ ಅಲ್ ಸಭಾ ಅವರಿಗೆ ನೂತನ ದೊರೆಯಾಗಿ ಅಧಿಕಾರ ವಹಿಸಿಕೊಳ್ಳಲು ದಾರಿ ಸುಗಮಗೊಂಡಿತು.

2006: ಕರ್ನಾಟಕದ ರಾಜಕೀಯ ಬಿಕ್ಕಟ್ಟು ಇತ್ಯರ್ಥದ ನಿಟ್ಟಿನಲ್ಲಿ ಕಾಂಗ್ರೆಸ್ ಮುಖ್ಯಸ್ಥ ಸೋನಿಯಾಗಾಂಧಿ ಮತ್ತು ಜನತಾದಳ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಅವರ ಮಧ್ಯೆ ನವದೆಹಲಿಯಲ್ಲಿ ನಡೆದ ಮಾತುಕತೆ ಅಪೂರ್ಣಗೊಂಡಿತು.

1966: ಏರ್ ಇಂಡಿಯಾ ಬೋಯಿಂಗ್ 707 ಸ್ವಿಟ್ಜರ್ ಲ್ಯಾಂಡಿನ ಆಲ್ಫ್ ನಲ್ಲಿ ಅಪಘಾತಕ್ಕೆ ಈಡಾಗಿ 144 ಮಂದಿ ಅಸು ನೀಗಿದರು. ಭಾರತದ ಖ್ಯಾತ ಪರಮಾಣು ವಿಜ್ಞಾನಿ ಹೋಮಿ ಜಹಾಂಗೀರ್ ಬಾಬಾ ಅವರು ಈ ಅಪಘಾತದಲ್ಲಿ ಅಸುನೀಗಿದರು.

1966: ಇಂದಿರಾ ಗಾಂಧಿಯವರು ಭಾರತದ ಮೂರನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1963: ಸಾಹಿತಿ ರವೀಂದ್ರ ಶರ್ಮ ಟಿ. ಜನನ.

1950: `ಜನ ಗಣ ಮನ' ಹಾಡನ್ನು ಭಾರತದ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು. ರಾಜೇಂದ್ರ ಪ್ರಸಾದ್ ಅವರು ಭಾರತದ ಪ್ರಥಮ ರಾಷ್ಟ್ರಪತಿಯಾಗಿ ಆಯ್ಕೆಯಾದರು.

1944: ಕಲಾವಿದ ಶೇಷಚಂದ್ರ ಎಚ್. ಎಲ್. ಜನನ.

1936: ಕಲಾವಿದೆ ಶಾಂತಾ ಪೋಟಿ ಜನನ.

1895: ಲಾರ್ಡ್ ರಾಂಡೋಲ್ಫ್ ಚರ್ಚಿಲ್ (1849-1895) ತಮ್ಮ 37ನೇ ವಯಸಿನಲ್ಲಿ ನಿಧನರಾದರು. ಬ್ರಿಟಿಷ್ ರಾಜಕಾರಣಿಯಾದ ಇವರು ಹೌಸ್ ಆಫ್ ಕಾಮನ್ಸ್ ನ ನಾಯಕರೂ, ಚಾನ್ಸಲರ್ ಆಫ್ ಎಕ್ಸ್ ಚೆಕರ್ ಆಗಿಯೂ ಖ್ಯಾತಿ ಗಳಿಸಿದರು. ಇವರ ಪುತ್ರ ವಿನ್ ಸ್ಟನ್ ಚರ್ಚಿಲ್ (1874-1965) 1965ರಲ್ಲಿ ಇದೇ ದಿನ ಮೃತರಾದರು. ಬ್ರಿಟನ್ನಿನ ಪ್ರಧಾನಿಯಾಗಿ ಯುದ್ಧಕಾಲದಲ್ಲಿ ಗ್ರೇಟ್ ಬ್ರಿಟನ್ನನ್ನು ವಿಜಯದತ್ತ ಮುನ್ನಡೆಸಿದ ಚರ್ಚಿಲ್ ತಾನು ಅಪ್ಪ ಸತ್ತ ದಿನವೇ ಸಾಯುವುದಾಗಿ ಹೇಳಿದ್ದರು.!

1877: ಕಾವ್ಯವಾಚನದಲ್ಲಿ ಹೆಸರುವಾಸಿಯಾಗಿದ್ದ ಸಂ.ಗೋ. ಬಿಂದೂರಾಯರು (24-1-1877ರಿಂದ 6-9-1966) ಗೋವಿಂದ ರಾಯರು- ರಮಾಭಾಯಿ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ತಳುಕಿನಲ್ಲಿ ಜನಿಸಿದರು.

1870: ಮುದ್ದಣ ಹೆಸರಿನಿಂದಲೇ ಜನಪ್ರಿಯರಾಗಿದ್ದ ನಂದಳಿಕೆ ಲಕ್ಷ್ಮೀನಾರಣಪ್ಪ ಅವರು ಉಡುಪಿ ಮತ್ತು ಕಾರ್ಕಳ ನಡುವಣ ನಂದಳಿಕೆ ಗ್ರಾಮದಲ್ಲಿ ಪಾಠಾಳಿ ತಿಮ್ಮಪ್ಪಯ್ಯ ಮತ್ತು ಮಹಾಲಕ್ಷ್ಮಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಬಾಲ್ಯದಿಂದಲೇ ಯಕ್ಷಗಾನ ಕೃತಿಗಳ ರಚನೆಗೈದ ಮುದ್ದಣನ ಮೇರು ಕೃತಿ ರಾಮಾಶ್ವಮೇಧ. ಮುದ್ದಣ ಮನೋರಮೆಯರ ಸರಸ ಸಂಭಾಷಣೆಯೊಂದಿಗೆ ಆರಂಭವಾಗುವ ಈ ಕೃತಿ ವಿಶಿಷ್ಟವಾದುದು. ಕನ್ನಡ ನವೋದಯದ ಮುಂಜಾನೆ ಕೋಳಿ ಎಂಬ ಕೀರ್ತಿಗೆ ಭಾಜನರಾದ ಮುದ್ದಣ ಅವರನ್ನು ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು ಎಂದು ಎಸ್. ವಿ. ರಂಗಣ್ಣ ಪ್ರಶಂಸಿದ್ದರು. ಕ್ಷಯರೋಗ ತಗುಲಿ 32ನೇ ವಯಸ್ಸಿನಲ್ಲಿ 1901ರ ಫೆಬ್ರವರಿ 16ರಂದು ಮುದ್ದಣ ನಿಧನರಾದರು. 75 ವರ್ಷಗಳ ನಂತರ 1976ರಲ್ಲಿ ಅವರ ನೆನಪಿಗಾಗಿ ಮುದ್ದಣ ಪ್ರಶಸ್ತಿ ಗ್ರಂಥ ಪ್ರಕಟಿಸಲಾಯಿತು.

1826: ಜ್ಞಾನೇಂದ್ರ ಮೋಹನ್ ಟ್ಯಾಗೋರ್ (1826-1890) ಹುಟ್ಟಿದ ದಿನ. ಇವರು ಕಲ್ಕತ್ತಾ ಹೈಕೋರ್ಟಿನ ಬ್ಯಾರಿಸ್ಟರ್ ಆಗಿ ನೋಂದಣಿಯಾದ ಮೊದಲ ಭಾರತೀಯ.

No comments:

Post a Comment